Monday, February 27, 2012

ಶ್ರೀಗುರುದೇವಗೆ ನೀನೆ ನಿವೇದಿಸು ಕಬ್ಬಿಗನಿಂಚರಗಾಣ್ಕೆಯಿದು!

ಮಲೆನಾಡಿನ ಚಿತ್ರಗಳು ಕೃತಿಯನ್ನೋದಿದವರಿಗೆ ತಿಮ್ಮು ಎಂಬ ಪಾತ್ರದ ಪರಿಚಯವಿದ್ದೇ ಇರುತ್ತದೆ. ಇರುಳು ಬೇಟೆಗೆ ಹೋಗಿ ಕವಿಗಳಾಗಿ ಹಿಂತಿರುಗಿದ ಕಥನವುಳ್ಳ ’ಕಾಡಿನಲ್ಲಿ ಕಳೆದ ಒಂದಿರುಳು’ ಲೇಖನದಲ್ಲಿ ಬರುವ ಮೂವರು ವ್ಯಕ್ತಿಗಳಲ್ಲಿ ಈ ತಿಮ್ಮುವೂ ಒಬ್ಬರು. ’ರಾಮರಾವಣರ ಯುದ್ಧ’ದಲ್ಲಿ ಆಂಜನೇಯ ಎತ್ತುತ್ತಿದ್ದ ಕೈಲಾಸಪರ್ವತವನ್ನು ಮೆಟ್ಟಿದ ಶಿವನ ಪಾತ್ರದಾರಿಯೂ ಈ ತಿಮ್ಮುವೆ! ಶಿಲಾತಪಸ್ವಿ ಬಂಡೆಯ ಮೇಲೆ ಅಕ್ಷರರೂಪದಲ್ಲಿ ಅಮರನಾಗಿರುವ ತಿಮ್ಮು, ಕುವೆಂಪು ಅವರ ದೊಡ್ಡ ಚಿಕ್ಕಪ್ಪಯ್ಯ ರಾಮಯ್ಯಗೌಡರ ಮಗ. ಕುವೆಂಪು ಅವರು ಮೈಸೂರಿನಲ್ಲಿ ಓದುತ್ತಿದ್ದಾಗ, ರಾಮಯ್ಯಗೌಡರ ನಿಧನಾನಂತರ ಕುವೆಂಪು ಅವರಿಗೆ ಸಂಬಂಧಿಸಿದ ಆಸ್ತಿಯನ್ನು ನೋಡಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಕುವೆಂಪು ಅವರ ಬಾಲ್ಯದ ಒಡನಾಡಿ, ಬಾಲ್ಯದ ನಾನಾ ಚೇಷ್ಟೆಗಳ ಜೊತೆಗಾರ, ಬೇಟೆಯ ಸಹಪಾಠಿ, ಕವಿಯ ಮೊದಲ ಸಹೃದಯ ಕೇಳುಗ!

ಆಶಾವಾದಿಯಾಗಿದ್ದ ಆಧ್ಯಾತ್ಮಿಕನ ಶ್ರದ್ಧೆಯಿಂದ ಊರ್ಧ್ವಮುಖಿಯಾಗಿ ಪ್ರಶಾಂತವಾಗಿದ್ದ ಕವಿಚೇತನ ಮನೆಯ ವಿಚಾರದಲ್ಲಿ ಉದಾಸೀನವಾಗಿತ್ತು. ಆದರೆ ಆ ಸರವೋರದ ಪ್ರಶಾಂತಿಗೆ ಆಗಾಗ ಭಂಗಬರುತ್ತಿತ್ತು ಎಂಬುದು ಕವಿಯ ಮಾತುಗಳಿಂದಲೇ ವ್ಯಕ್ತವಾಗುತ್ತದೆ. ದೊಡ್ಡಚಿಕ್ಕಪ್ಪಯ್ಯನ ಮರಣಾನಂತರ ಇಷ್ಟಮಿತ್ರರ-ನೆಂಟರ ಸಹಾಯದಿಂದ ಕುಪ್ಪಳಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದ ತಿಮ್ಮುವಿಗೆ ಅನಾರೋಗ್ಯವೆಂದು ೧.೧.೧೯೨೯ ಒಂದು ಕಾಗದ ಬರುತ್ತದೆ. ಅದು ಬಂದ ದಿನವೇ, ತಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ದುಃಖ ಮಲಗಿಹುದೆಮ್ಮ ಸುಖದ ಎದೆಯಲ್ಲಿ!
ಪಾಪವಡಗಿಹುದೆಮ್ಮ ಪುಣ್ಯದೆದೆಯಲ್ಲಿ!
ಎಂದು ಎರಡು ಸಾಲಿನ ಮಂತ್ರಾಕ್ಷತೆಯನ್ನು ದಿನಚರಿಯಲ್ಲಿ ಬರೆಯುತ್ತಾರೆ. ಆ ದಿನಕ್ಕೆ ಕೇವಲ ಎಂಟು ದಿನಗಳ ಮುಂಚೆ ಬರೆದಿದ್ದ, ’ಕೈಬಿಟ್ಟರೆ ನೀ ಗತಿಯಾರೈ? ಕಿರುದೋಣಿಯಿದು ಮುಳುಗದೇನೈ?’ ಎಂದು ಆರಂಭವಾಗುವ ’ನಾವಿಕ’ ಪದ್ಯದಲ್ಲಿ ನೊರೆನೊರೆಯಾಗಿಹ ತೆರೆತೆರೆಯಲ್ಲಿ ಮೃತ್ಯುವು ನೃತ್ಯವ ಮಾಡುತಿದೆ! ಎಂಬ ಸಾಲನ್ನು ಬರೆದಿರುತ್ತಾರೆ! ಅದರಿಂದ ಮನಸ್ಸು ಒಂದು ರೀತಿಯ ಅವ್ಯಕ್ತ ಆತಂಕಕ್ಕೆ ಈಡಾಗುತ್ತದೆ. ಪತ್ರ ಬಂದ ನಂತರ ೩.೧.೧೯೨೯ರಲ್ಲಿ ರಚಿಸಿರುವ ’ದಾರಿ ತೋರೆನೆಗೆ’ ಕವಿತೆಯಲ್ಲಿ,
ಕವಲೊಡೆದ ಹಾದಿಗಳು;
ಕವಿದಿಹುದು ಕತ್ತಲೆಯು;
ಕಿವಿಗೊಟ್ಟು ಕೇಳಿದರೆ
ಕರೆವ ದನಿಯಿಲ್ಲ;
ಕಣ್ಣಿಟ್ಟು ನೋಡಿದರೆ
ಹೊಳೆವ ಸೊಡರಿಲ್ಲ!
ಹೆಪ್ಪಗಟ್ಟಿಹುದಿರುಳು!
ಮರಳಿನಲಿ ಕೆಸರಿನಲಿ
ಮುಂದೆ ತೆರಳಿದ ಜನರ
ಹೆಜ್ಜೆಗಳ ಕಾಣೆ;
ಕತ್ತಲಲಿ ಕೈಹಿಡಿದು
ಕಾಯುವರ ಕಾಣೆ!
ಎಂದ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ಹಿಂದೆ ತಾಯಿಗೆ ಹುಷಾರಿಲ್ಲ ಎಂಬ ಪತ್ರ ಬಂದಾಗ ಉದಾಸೀನ ಮಾಡಿದಂತೆ ಮಾಡಲು ಈಗ ಸ್ವಾಮೀಜಿ ಬಿಡುವುದಿಲ್ಲ. ಹಿತವಚನ ಹೇಳಿ ಊರಿಗೆ ಹೊರಡಿಸುತ್ತಾರೆ. ಆದರೆ, ಇವರು ಅಲ್ಲಿಗೆ ತಲುಪುವಷ್ಟರಲ್ಲಿ ಆಗಬಾರದ್ದು ಆಗಿ ಹೋಗಿರುತ್ತದೆ. ತಿಮ್ಮು ತೀರಿಕೊಂಡಾಗಿತ್ತು. ದಹನಸಂಸ್ಕಾರವೂ ಪೂರೈಸಿತ್ತು. (ಆಗ ತಿಮ್ಮುವಿನ ಚಿಕ್ಕವಯಸ್ಸಿನ ಹೆಂಡತಿ ಗರ್ಭಿಣಿಯಾಗಿದ್ದಳು. ಮುಂದೆ ಶೊಕಾಗ್ನಿಯಲ್ಲಿ ಬೆಂದ ಅವಳು ಹೆತ್ತ ಕೂಸೂ ಬದುಕಲಿಲ್ಲ - ಕುವೆಂಪು). ತಮ್ಮ ತಾಯಿ ಸತ್ತಾಗ ಯಾವ ಸ್ಥಿತಿಪ್ರಜ್ಞೆಯನ್ನು ತೋರಿಸಿದ್ದರೋ ಈಗಲೂ ಅದೇ ಮನಸ್ಥಿತಿಯನ್ನು ಪ್ರದರ್ಶಿಸುತ್ತಾರೆ. ಆತ್ಮದ ಅಮೃತತ್ವದ ಶ್ರದ್ಧೆ ನನಗೆ ಅನುಭವದ ದಿಟದ ವಸ್ತುವಾಗಿತ್ತು ಎನ್ನುತ್ತಾರೆ. ದುಃಖದ ಕಡಲಿನಲ್ಲಿ ಮುಳುಗಿದ ಮನೆಯವರನ್ನು ಜಗಲಿಯಲ್ಲಿ ಸೇರಿಸಿ, ಭಗವದ್ಗೀತೆಯನ್ನೋದುತ್ತಾರೆ.

ಆಗ ಅವರ ಮೊದಲ ಕವನ ಸಂಕಲನದ ಪ್ರಕಟಣೆಯ ಸಿದ್ಧತೆಗಳು ನಡೆಯುತ್ತಿರುತ್ತವೆ. ಅದಕ್ಕೆ ಮುನ್ನುಡಿಯ ರೂಪದಲ್ಲಿ ಗೊಲ್ಲನ ಬಿನ್ನಹ ಎಂಬ ಕವನ ೨೫.೩.೧೯೨೯ರಲ್ಲಿ ರಚನೆಯಾಗುತ್ತದೆ. ಅದರಲ್ಲಿ ತಿಮ್ಮುವಿನ ಮರಣದ ದುಃಕದ ತೀವ್ರತೆಯನ್ನು, ಕವಿಯೇ ಹೇಳಿದ ಆತ್ಮದ ಅಮೃತತ್ವ ಶ್ರದ್ಧೆಯನ್ನು ಕಾಣಬಹುದು.
ಕಾಡಿನ ಕೊಳಲಿದು, ಕಾಡ ಕವಿಯು ನಾ,
ನಾಡಿನ ಜನರೊಲಿದಾಲಿಪುದು
ಬೃಂದೆಯ ನಂದನ ಕಂದನೆ ಬಂದು
ಗೊಲ್ಲನ ಕೊಳಲಿ ನಿಂದಿಹನೆಂದು
ಭಾವಿಸಿ ಮನ್ನಿಸಿ ಲಾಲಿಪುದು.
ಎಂದು ಕವಿತೆ ಆರಂಭವಾಗುತ್ತದೆ. ಕವಿತೆಯ ನಾಲ್ಕನೆಯ ವಿಭಾಗದಲ್ಲಿ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.
ಬನಗಳ ಹೂಗಳ ಸೊಬಗನು ಮೀರುವ
ಚೆಲುವಿನ ಹೊಲಬಿಗ ಬಾಲೆಯರೆ;
ಬನದಲಿ ಬಯಲಲಿ ಹೊಳೆಯಲಿ ಮಳೆಯಲಿ
ನನ್ನೊಡನಾಡಿದ ಬಾಲಕರೆ;
ನಡೆಯಲಿ ಮೆಲ್ಲೆದೆ, ನುಡಿಯಲಿ ಮೆಲುದನಿ,
ನಿಮ್ಮದು ಮಲೆಗಳ ಸೋದರರೆ;
ರಂಗು, ತಿಮ್ಮು, ಗೌರಿ, ಗಿರಿಜೆ,
ಚಂದದ ಹೆಸರಿನ ಸೋದರರೆ;
ನಿಮ್ಮೊಡನಾಡಿದ ಗುಟ್ಟಿನ ನುಡಿಗಳ
ಬಯಲಿಗೆ ಬೀರುವೆ, ಮನ್ನಿಸಿರಿ!
ನಿಮ್ಮಂತೆಯೆ ನಾ ಹಾಡಲು ಬರದಿರೆ
ಪಾಮರ ಗೋಪನ ಮನ್ನಿಸಿರಿ!
ನಿಮ್ಮೆಲ್ಲರ ಶಿಷ್ಯನು ನಾ, ನಮಿಸುವೆ;
ಆಶೀರ್ವಾದವ ಬೇಡುವೆನು.
ತಮ್ಮ ಬಾಲ್ಯದ ಅನುಭವ ಶ್ರೀಮಂತಿಕೆಯನ್ನು ಹೆಚ್ಚಿಸಿದ ಬಾಲ್ಯದ ಕೆಳೆಯರನ್ನು ಸ್ಮರಿಸುವುದು, ಅವರನ್ನು ಗುರುವೆಂದು ಭಾವಿಸುವುದು ಕನ್ನಡ ನವೋದಯ ಸಂದರ್ಭದಲ್ಲಿ ಮೂಡುತ್ತಿದ್ದ ಹೊಸಬೆಳಕಿಗೆ ಸಾಕ್ಷಿಯಾಗಿವೆ. ಇಲ್ಲಿಂದ ಮುಂದಕ್ಕೆ ಕವಿತೆ ಪೂರ್ಣವಾಗಿ ತಿಮ್ಮುವಿಗೆ ಸಂಬಂಧಿಸಿದ್ದುದಾಗಿದೆ. ಈ ಗೊಲ್ಲನ ಕೊಳಲು ನುಡಿಯುವಾಗ, ಆ ಕೊಳಲನ್ನು ಸಿದ್ಧಮಾಡಿಕೊಟ್ಟ, ಅದಕ್ಕೆ ಕಣ್ಣನ್ನು ಕೊರೆದುಕೊಟ್ಟ ಸಹೋದರನು ಇಲ್ಲದಿರುವ ದುಃಖ ಐದನೆಯ ಭಾಗದಲ್ಲಿ ಬಿಂಬಿತವಾಗಿದೆ.
ಬನದೊಳು ಮೊದಲೀ ವೇಣುವನಕಟಾ
ಕೇಳಿದ ಕಿವಿಗಳನೊಡೆದೆಯ, ದೇವ?
ಗೊಲ್ಲನ ಕೊಳಲಿಗೆ ಉಸಿರನು ಕೊಟ್ಟಾ
ಎದೆಯಲರೊಂದನು ಕೊಯ್ದೆಯ, ಶಿವನೆ!
ಗೊಲ್ಲನ ಹಾಡನು ಹುರಿದುಂಬಿಸಿದಾ
ತಮ್ಮನ ತಿಮ್ಮುವನೊಯ್ದೆಯ, ಹರಿಯೆ!
ಕೊಳಲನು ಮೆಳೆಯಿಂ ಕೊಯ್ದವ ನೀನೆ,
ಕೊಳಲಿಗೆ ಕಣ್ಗಳ ಸಮೆದವ ನೀನೆ,
ನಚ್ಚಿನ ಮೆಚ್ಚಿನ ಸೋದರನೆ!
ಗೊಲ್ಲನ, ಅಣ್ಣನ ಗಾನವ ಕೇಳಿ
ಹೆಮ್ಮೆಯೊಳುಬ್ಬುತ ಮುದವನು ತಾಳಿ
ನಲಿದೈ ಮುದ್ದಿನ ಸೋದರನೆ!
ಆ ಕಣ್ಣಿನ ಬೆಳಕಳಿದುದೆ ಅಕಟಾ!
ಆ ಬಾಯ್ಬೆಂದುದೆ ಅಕಟಕಟಾ!
ಆ ಎದೆಯೊರತೆಯು ಬತ್ತಿತೆ ಹಾ! ಹಾ!
ಬಾಳಿ ಜಾತ್ರೆಯು ಮುಗಿದುದೆ ಹಾ!
ಗೊಲ್ಲನ ಕೊಳಲನು ಕೇಳುತ ನಲಿವರು
ಏನನು ಬಲ್ಲರು ಸೋದರನೆ?
ಗೊಲ್ಲನ ಜಸದಲಿ ಅರೆಪಾಲೆಲ್ಲಾ
ನಿನ್ನದೆ, ನಿನ್ನದೆ, ಸೋದರನೆ!
ಕವಿಪ್ರತಿಭೆಗೆ ಬಾಲ್ಯದಲ್ಲಿ ದೊರೆತ ವ್ಯುತ್ಪತ್ತಿಯಲ್ಲಿ ಅರೆಪಾಲು ಆ ಸಹೋದರನದೇ ಆಗಿದೆ. ಆತನೊಡನೆ ಕಳೆದ ದಿನಗಳು, ಮಾಡಿದ ಸಾಹಸಗಳು, ಬೇಟೆಯ ಮೋಜು, ಅದರಲ್ಲಿ ತಿಮ್ಮು ಸಾಧಿಸಿದ್ದ ಪರಿಣಿತಿ ಎಲ್ಲವೂ ಅಡಕವಾಗಿವೆ.
ಕಾಡಿನೊಳಿಬ್ಬರೆ ತಿರುಗಿದೆವಂದು,
ಹೂಗಳ ಕೊಯ್ದೆವು ಹಣ್ಗಳ ತಂದು.
ಬಣ್ಣದ ಚಿಟ್ಟೆಗಳನು ಹಿಡಿವಾಗ
ಮುದ್ದಿನ ತಿಮ್ಮುವೆ ಮುಂದಾಳು;
ಕೋಗಿಲೆಗಳ ನಾವಣಕಿಸುವಾಗ
ಅಲ್ಲಿಯು ನಾನೇ ಹಿಂದಾಳು;
ಕಡಿದಾದರೆಗಳನೇರುವ ಸಮಯದಿ,
ಹುತ್ತದ ಜೇನನು ಕೀಳುವ ಸಮಯದಿ,
ಬಿರುಸಿನ ಬೇಟೆಯನಾಡುವ ಸಮಯದಿ,
ಎಲ್ಲಿಯು ತಿಮ್ಮುವೆ ಕೆಚ್ಚಾಳು!
ನನಗಾತನೆ ನಮ್ಮೂರಿನ ಕಣ್ಣು;
ಈಗವನಾದನೆ ಬೇಳಿದ ಮಣ್ಣು!
ನನ್ನೆದೆಗಾತನೆ ಕನ್ನಡಿಯಂತೆ.
ಸೋದರನೆನ್ನಯ ಪಡಿನೆಳಲಂತೆ.
ಕನ್ನಡಿಯೊಡೆದುದು ಬರುಗನ ಸಂತೆ.
ಮೂಡಿತು ಮನದಲಿ ಮುರಿಯದ ಚಿಂತೆ.
ಒಂದೇ ವೀಣೆಯ ತಂತಿಗಳಂತೆ,
ಕಾಮನಬಿಲ್ಲಿನ ಬಣ್ಣಗಳಂತೆ,
ಹಾಡುವ ಕೊಳಲಿನ ಕಣ್ಣುಗಳಂತೆ
ಕೂಡಿದೆವಾಡಿದೆವೆಲೆ ತಮ್ಮಾ!
ಪರುಷವು ಹರಿದೀ ವೀಣೆಯ ವಾಣಿ.
ಬಡ ಮಳೆಬಿಲ್ಬಗೆಗೊಳಿಸದು ಇಂದು!
ಕಣ್ಣೊಂದಿಲ್ಲದ ಕೊಳಲಿದು ಇಂದು
ಕೊಡದಂದಿನ ಗಾನವ ತಮ್ಮಾ!
ಮೆಳೆಯಿಂದ ಬಿದಿರು ಕಡಿದು, ಕೊಳಲನ್ನು
ಮಾಡಿಕೊಟ್ಟ ತಮ್ಮನೇ ಆ ಕೊಳಲಿನ ಒಂದು ಕಣ್ಣಾಗಿದ್ದನು. ಅದರಿಂದ ಹೊಮ್ಮತ್ತಿದ್ದ ನಾದ ಮಾಧುರ್ಯವಾಗಿದ್ದು ಆತನಿಂದಲೆ! ಆದರೆ ಕೊಳಲಿನ ಒಂದು ಕಣ್ಣು ಈಗ ಹೋಗಿಬಿಟ್ಟಿದೆಯೇನೋ ಅನ್ನಿಸುತ್ತದೆ ಕವಿಗೆ. ಮುಂದಿನ ಭಾಗದಲ್ಲಿ ಆತ್ಮದ ಅಮೃತತ್ವನ್ನು ನೆನೆದು ಕೃತಿಯನ್ನು ತಿಮ್ಮುವಿಗೆ ಅರ್ಪಿಸುತ್ತಾರೆ.
ಹೋದವರೆಲ್ಲರ ಊರನು ಸೇರಿದೆ,
ತಮ್ಮಾ, ಗೊಲ್ಲನ ದುಃಖಕೆ ಮಾರಿದೆ!
ನಾ ಸಾವಿಗೆ ಅಂಜುವೆನೆಂದಲ್ಲ,
ಅದರರ್ಥವ ತಿಳಿಯದನೆಂದಲ್ಲ;
ನಿನ್ನಾ ಸಂಗಕೆ ಕೊರಗುವೆನು;
ನಿನ್ನಾ ಪ್ರೇಮಕೆ ಮರುಗುವೆನು!
ಶ್ರೀಗುರುದೇವನ ಪಾದವ ಸೇರಿದೆ;
ಬಲ್ಲೆನು ನಾನೂ ಸೇರುವೆನು.
ಮಾಡುವ ಕೆಲಸವ ಮುಗಿಯಿಸಿ ಬೇಗನೆ
ಬಲ್ಲೆನು ನಾನೂ ಸೇರುವೆನು.
ನಿನ್ನಯ ನೆನಪಿಗೆ ಗೊಲ್ಲನು ನೀಡುವ
ಪ್ರೇಮದ ಗಾನದ ಕಾಣ್ಕೆಯಿದು!
ಶ್ರೀಗುರುದೇವಗೆ ನೀನೆ ನಿವೇದಿಸು
ಕಬ್ಬಿಗನಿಂಚರಗಾಣ್ಕೆಯಿದು!
ಕವಿಯು ತನ್ನ ಮೊದಲ ಕೃತಿಪುಷ್ಪವನ್ನು ತನ್ನ ಗುರುದೇವನಿಗೆ ನಿವೇದಿಸಬೇಕಾಗಿದೆ. ಆದರೆ ಹಾಗೆ ನಿವೇದಿಸುವ ತನ್ನನ್ನು, ತನ್ನ ಕೊಳಲನ್ನು ರೂಪಿಸಿದ ತನ್ನ ಸಹೋದರನೇ ಹೆಚ್ಚು ಅರ್ಹ ಎಂದು ಕವಿ ಭಾವಿಸುತ್ತಾರೆ.

Monday, February 20, 2012

ಶಿವರಾತ್ರಿಯ ನೆಪ; ಜಲಗಾರನ ಜಪ

೧೯೨೭-೨೮ ಕುವೆಂಪು ಅವರ ಸಾಹಿತ್ಯಕ ಜೀವನದ ಮಹತ್ತರ ಘಟ್ಟ. ಅವರು ಎಂ.ಎ. ಕನ್ನಡ ತರಗತಿಗೆ ಸೇರಿದ್ದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದ ಅವಕಾಶ ಲಭಿಸಿತು. ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿದಂತಾಗಿತ್ತು. ಕನ್ನಡದಲ್ಲಿ ಇಂಗ್ಲೀಷಿನಂತೆ ಸರ್ವವಿಧವಾದ ಛಂದೋವೈವಿಧ್ಯತೆಯಿಂದ ಕೂಡಿದ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಅವರ ಹಂಬಲ ಕ್ಷಣಿಕವಾದುದಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ, ಓದುವಾಗ, ಬರೆಯುವಾಗ - ಕೊನೆಗೆ ನಿದ್ದೆ ಮಾಡುವಾಗಲೂ ಅದರ ಬಗ್ಗೆ ಚಿಂತಿಸಿತ್ತಿದ್ದರು. ಸಾನೆಟ್ ಮತ್ತು ಬ್ಲಾಂಕ್‌ವರ್ಸ್ ಛಂದಸ್ಸುಗಳಲ್ಲಿ ಪರಿಣಿತಿ ಸಾಧಿಸುತ್ತಿದ್ದಂತೆ, ಅವುಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮನಸ್ಸು ಹಾತೊರೆಯುತ್ತಿತ್ತು. ಬ್ಲಾಂಕ್‌ವರ್ಸ್ ಗತಿಯಲ್ಲಿ ಆಗಲೇ ಕರಿಸಿದ್ದ ಮತ್ತು ಪ್ರಾಯಶ್ಚಿತ್ತ ಎಂಬ ದೀರ್ಘ ಕಥನಕವನಗಳು ರಚಿತವಾಗಿದ್ದವು. ಆಗ ಕವಿಗೆ, ಈ ಬ್ಲಾಂಕ್‌ವರ್ಸ್ ಛಂದೋಶೈಲಿಯನ್ನು ಬಳಸಿಕೊಂಡು ಕನ್ನಡದಲ್ಲಿ ನಾಟಕ ರಚಿಸಬಹುದಲ್ಲ ಎಂಬ ಯೋಚನೆ ಪ್ರಬಲವಾಗಿ, ಒಳಗಿನ ಒತ್ತಡವಾಗಿ ಬೆಳೆಯತೊಡುಗುತ್ತದೆ. ಅದುವರೆಗೆ ಯಾರೂ ಕನ್ನಡದಲ್ಲಿ ನಾಟಕಕ್ಕೆ ಬ್ಲಾಂಕ್‌ವರ್ಸ್ ಪ್ರಯೋಗ ಮಾಡಿರಲೂ ಇಲ್ಲ. ಅದಕ್ಕೆ ಅನುಗುಣವಾದ ನಾಟಕದ ವಸ್ತು, ವಿಷಯ, ರೂಪ ಇವುಗಳ ಬಗ್ಗೆ ಏನೊಂದೂ ಹೊಳೆಯದೆ ಕವಿ ಭಾವಶೂನ್ಯನಾಗಿದ್ದಾಗಲೇ ಒಂದು ದಿನ ಅಸಮಾನ್ಯವೆನ್ನಬಹುದಾದ ಘಟನೆಯೊಂದು ನಡೆದುಬಿಡುತ್ತದೆ.

ದಿವಾನರ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಶ್ರಮದಲ್ಲಿ ಕವಿಯ ವಾಸ. ಮನೆ ಚಿಕ್ಕದಾಗಿದ್ದುದರಿಂದ, ಪ್ರತ್ಯೇಕ ದೇವರ ಮನೆಯಿರಲಿಲ್ಲ. ಪೂಜೆ ಮುಗಿದ ಮೇಲೆ, ಪರದೆಯೊಂದನ್ನು ಅಡ್ಡ ಎಳೆದು, ದೇವರ ಕಡೆ ತಲೆ ಹಾಕಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದರು. ಒಂದು ಭಾನುವಾರ ಹಗಲು ವೇಳೆಯಲ್ಲಿಯೇ ಕವಿ ಗಡದ್ದಾದ ನಿದ್ದೆಯಲ್ಲಿ ಮುಳುಗಿಬಿಟ್ಟಿರುತ್ತಾರೆ. ಕನ್ನಡ, ನಾಟಕ, ಬ್ಲಾಂಕ್‌ವರ್ಸ್ ಈ ವಿಚಾರಗಳೇ ತಲೆಯಲ್ಲಿದ್ದುರಿಂದಲೋ ಏನೋ ಕವಿಗೆ ಅದರದೇ ಒಂದು ಕನಸು ಬೀಳುತ್ತದೆ. ಅದು ಹೀಗಿತ್ತು: ನಾನೊಂದು ಬೃಹದ್‌ಗಾಥ್ರದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ (ಎಪಿಕ್) ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ! ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ಅದರ ಕ್ಯಾಲಿಕೊ ಬೈಂಡಿನ ಸೌಂದರ್ಯವೊ ಹೇಳತೀರದು! ಹಾಳೆಗಳನ್ನು ಮಗುಚಿ ನೋಡುತ್ತಿದ್ದೇನೆ: ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ....

ಅಷ್ಟರಲ್ಲಿ ರೀ, ರೀ ಪುಟ್ಟಪ್ಪ! ಎಷ್ಟು ನಿದ್ದೆ ಮಾಡ್ತೀರ್ರಿ? ಏಳ್ರಿ! ಎಂದು ಭುಜ ಹಿಡಿದು ಅಲುಗಿಸುತ್ತ ಎಚ್.ಬಿ.ನಂಜಯ್ಯ ಎಂಬುವವರು ಕವಿಯ ನಿದ್ರೆಗೂ ಅದಕ್ಕಿಂತ ಹೆಚ್ಚಾಗಿ ಕನಸಿಗೂ ಭಂಗ ತಂದುಬಿಡುತ್ತಾರೆ. ಪಾಪ! ಆತನಿಗೆ ಹೇಗೆ ಗೊತ್ತಾಗಬೇಕು ತಾನೆಸಗಿದ ಮಹಾ ಅನರ್ಥ? - ಕವಿಯ ಪ್ರತಿಕ್ರಿಯೆಯಿದು. ಆದರೂ ಕವಿಗೆ ಸಂತೋಷವಾಗುತ್ತದೆ; ಕನಸಿನಲ್ಲಾದರೂ ಎಪಿಕ್ಕಿಗೆ ಬೇಕಾದ ಅಪ್ರಾಸ ಛಂದಸ್ಸಿನ ಗುಟ್ಟು ಸಿಕ್ಕಿತಲ್ಲಾ ಎಂದು. ಆದರೆ ಕನಸಿನಲ್ಲಿ ಕಂಡಿದ್ದ ಪುಸ್ತಕದಲ್ಲಿದ್ದ ಭಾಷೆ ಲಿಪಿ ಯಾವುದೂ ನೆನಪಾಗುವುದಿಲ್ಲ. ಅದರ ಒಂದು ಸಾಲನ್ನಾದರೂ ನೆನಪಿಗೆ ತಂದುಕೊಳ್ಳುವ ಪ್ರಯತ್ನ ಸಫಲವಾಗುವುದಿಲ್ಲ.

ಅಂದು ಕನಸಿನಲ್ಲಿ ಸಿಕ್ಕ ಅಪ್ರಾಸ ಛಂದಸ್ಸಿನ ಗುಟ್ಟು ವ್ಯರ್ಥವಾಗಲಿಲ್ಲ. ಆ ಛಂದೋಲಯದಲ್ಲಿ ಹಿಡಿತ ಸಾಧಿಸಿದ ಕವಿ ಕೇವಲ ನಾಲ್ಕು ದಿನಗಳಲ್ಲಿ ’ಜಲಗಾರ’, ’ಯಮನಸೋಲು’ ಮತ್ತು ’ಮಹಾರಾತ್ರಿ’ ಎಂಬ ಮೂರು ನಾಟಕಗಳನ್ನು ಬರೆದು ಮಗಿಸಿಬಿಡುತ್ತಾರೆ. ಇವುಗಳಲ್ಲಿ ಮೊದಲನೆಯದೇ ಅಪ್ರಾಸ ಛಂದಸ್ಸಿನ ’ಸರಳರಗಳೆ’ ರೂಪದಲ್ಲಿರುವ, ಕೇವಲ ಎರಡು ದೀರ್ಘ ದೃಶ್ಯಗಳಿರುವ ಜಲಗಾರ ಎಂಬ ನಾಟಕ. ನಾಟಕ ರಚನೆಯಾದ ದಿನವೇ, ರಚಿಸುವಾಗ ಇದ್ದ ಆವೇಶದಲ್ಲಿಯೇ, ಆಶ್ರಮದಲ್ಲಿ ಸ್ವಾಮೀಜಿ, ನಾ.ಕಸ್ತೂರಿ ಮುಂತಾದವರ ಮುಂದೆ ಓದುತ್ತಾರೆ. ಅದರಲ್ಲಿದ್ದ ಹೊಸ ಆಲೋಚನೆಗಳು, ಹೊಸ ಭಾವಗಳು ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ಕನ್ನಡದ ಮೊತ್ತಮೊದಲ ಸರಳರಗಳೆಯ ನಾಟಕ ಸಿದ್ಧವಾಗುತ್ತದೆ.

ಮಹಾಶಿವರಾತ್ರಿಯ ದಿನ ಶರತ್ಕಾಲದ ಸುಂದರ ಮುಂಜಾನೆ. ಊರಿನ ಕಾಯಕಯೋಗಿಜಲಗಾರನು ಸಂತೋಷವಾಗಿ ’ಮಂಜು ಹರಿಯುವವರೆಗೆ ಕುಳಿತಿಲ್ಲಿ, ನಲಿಯುವೆನು ನಲ್ಗಬ್ಬಗಳ ಹಾಡಿ’ ಎಂದು ಹಾಡುತ್ತಿದ್ದಾನೆ. ಮುಂಜಾವಿನ ಸೊಬಗಿಗೆ ಆತನೂ ಮಾರುಹೋಗಿದ್ದಾನೆ. ’ಸೃಷ್ಟಿಕರ್ತನನೆಮಗೆ ಸಾಧಿಸಲು, ತೋರಿಸಲು, ಸೃಷ್ಟಿಯಿದು ಸಾಲದೇ? ..... ಬಿಜ್ಜೆಯೇಂ ತೋರ್ಕುಮೇ ಎದೆಯರಿವು ತೋರದಾ ಪರಮನಂ?’ ಎನ್ನಿಸಿಬಿಡುತ್ತದೆ. ಆಗ ’ನೇಗಿಲ ಯೋಗಿಯು ನಾನು; ಮಣ್ಣಿನ ಭೋಗಿಯು ನಾನು!’ ಎಂದು ಹಾಡುತ್ತಾ ಒಬ್ಬ ರೈತನ ಆಗಮನವಾಗುತ್ತದೆ. ಆಗ ಜಲಗಾರ ’ಮುಂಜಾನೆಯೊಳಗೆಲ್ಲಿ ಹೋಗುತಿಹೆ, ರೈತ?’ ಎನ್ನುತ್ತಾನೆ. ಆಗ ರೈತ-
ಓಹೊ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.
ಎಂದು ಆ ದಿನದ ಮಹತ್ವವನನು ಹೇಳುತ್ತಾನೆ. ’ನನಗೇಕೆ ಶಿವಗುಡಿಯ ಜಾತ್ರೆ? ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು’ ಎನ್ನುತ್ತಾನೆ ಜಲಗಾರ. ಪಾಪ ರೈತನಿಗೆ ಜಲಗಾರನ ಮಾತುಗಳಲ್ಲಿದ್ದ ನೋವು ಅರ್ಥವಾಗುವುದಿಲ್ಲ. ’ದೂರದಲ್ಲಿಯೇ ನಿಂತು ಕೈಮುಗಿದು ಬಾ.’ ಎನ್ನುತ್ತಾನೆ. ಶಿವದರ್ಶನಕ್ಕೆ ದೇವಾಲಯಕ್ಕೆ ಹೋಗುವ ಅವಶ್ಯಕತೆ ಜಲಗಾರಿನಿಗೆ ಕಾಣುವುದಿಲ್ಲ.

ಶಿವಗುಡಿಯ ಶಿವನು ಜೋಯಿಸರ ಶಿವನಂತೆ; ನನ್ನ ಶಿವನೀ ಮಣ್ಣಿನಲ್ಲಿಹನು. ಕಪ್ಪುರದೊಳಗಿಲ್ಲ, ಮಂಗಳಾರತಿಯೊಳಗಿಲ್ಲ, ಹೂವುಗಳಲ್ಲಿಲ್ಲ; ಕೊಳೆತ ಕಸದೊಳಗಿಹನು ನನ್ನ ಶಿವ’ ಎಂದು ’ಲೋಕ ನಗಬೇಕಾದರೆ ಆರಾದರೂ ಅಳಬೇಕು’ ಎನ್ನುವಂತೆ ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತಾನೆ. ರೈತ ’ಪೂಜೆಯೆಂಬುದನರಿಯ; ದೇವನೆಂಬುದನರಿಯ; ಹುಟ್ಟುಗುಣ ಸುಟ್ಟರೂ ಹೋಗುವುದೆ?’ ಎಂದು ತಾನು ತಂದಿದ್ದ ಹೂವು ಹಣ್ಣುಗಳೊಂದಿಗೆ ಶಿವಾಲಯದೆಡೆಗೆ ಹೊರಡುತ್ತಾನೆ. ’ತಿರೆಗಿಂತ ದೇಗುಲವದೊಳದೇನ್?’ ಎಂದು ಜಲಗಾರ ಹಾಡುತ್ತಾನೆ.

ಆಗ ಇಬ್ಬರು ಪಾರ್ವರ ಪ್ರವೇಶವಾಗುತ್ತದೆ. ದೂರದಿಂದ ಹಾಡು ಕೇಳಿದ ಅವರಲ್ಲೊಬ್ಬ
ಕೊಳಲಿನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದೆನಿತಿಂಪು! ಹಾಡಿದವರಾರೊ?
ಎನ್ನುತ್ತಾನೆ. ಎರಡನೆಯವನು-
ಯಾರೋ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಹೊಮ್ಮಲರಿಯದು! ಗುಡಿಯ ಬಳಿಯಾದರೂ
ಹಾಡಿದನೆ!
ಎನ್ನುತ್ತಾನೆ. ಜಲಗಾರನನ್ನು ನೋಡಿ ಹಾಡಿದವನು ಅವನೇ ಎಂದು ತಿಳಿಯುತ್ತಿದ್ದ ಹಾಗೆ ಅವರ ವರ್ತನೆಯೇ ಬದಲಾಗಿಬಿಡುತ್ತದೆ.
ಸಂಗೀತವನಿತೇನು ಮನಮೋಹಿಪಂತೆ
ಇರಲಿಲ್ಲ. ಗಾನದೇವಿಯು ಹೀನ ಜಲಗಾರನನ್
ಒಲಿಯುವಳೇ? ಎಂದಿಗೂ ಇಲ್ಲ
ಎಂದು ಒಬ್ಬನು,
ಶೂದ್ರರೊಳ್
ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್?
ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್?
ಅಸದಳಂ! ಹೊತ್ತಾಯ್ತು ಹೋಗೋಣ
ಎಂದು ಹೊರಡುತ್ತಾರೆ. ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಸಫಲರಾದರೂ, ಸಾಮಾಜಿಕ ಕಾರಣದಿಂದ ಅದನ್ನು ಸ್ವೀಕರಿಸುವ ಮನೋಭಾವ ಅವರಿಗಿರುವುದಿಲ್ಲ.

ಮುಂದೆ ಒಬ್ಬ ಯುವಕ ಬಂದು ಜಲಗಾರನಿಗೆ ’ಒಂದು ದಿನವಾದರೂ ವಿಶ್ರಾಂತಿಯಿರಲಿ; ಬಾ, ಹೋಗೋಣ’ ಎನ್ನುತ್ತಾನೆ. ಆದರೆ ಜಲಗಾರ ’ನೀನು ಶಿವನ ಗುಡಿಯೊಳಗರಸು; ನಾನು ಪುಡಿಯೊಳಗರಸುವೆನು’ ಎಂದು ಬೀಳ್ಕೊಡುತ್ತಾನೆ. ’ತ್ವಮೇವ ಮಾತಾ ಚಿ ಪಿತಾ ತ್ವಮೇವ!’ ಎಂದು ಮಂತ್ರ ಹೇಳುತ್ತ ಬರುವ ಭಟ್ಟನೊಬ್ಬ, ’ಕಣ್ಣಿಲ್ಲ, ಧರ್ಮರೇ, ಕಾಸು ಕೊಡಿರಪ್ಪಾ!’ ಎನ್ನುತ್ತಾ ಬರು ತಿರುಕನಿಗೆ ’ನೀ ಸತ್ತರೆನಗೇನೊ? ಮಡಿಬಟ್ಟೆ ಮುಟ್ಟುವೆಯಾ? ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು’ ಎಂದು, ಮತ್ತೆ ’ತ್ವಮೇವ ಮಾತಾ ಚ......’ ಹೇಳುತ್ತಾ ಸಾಗಿ ಹೋಗುತ್ತಾನೆ. ನಂತರ ವಿಚಾರವಾದಿಗಳಂತೆ ಕಾಣುವ ಇಬ್ಬರು ತರುಣರ ಪ್ರವೇಶವಾಗುತ್ತದೆ. ’ಜಗವೆಲ್ಲ ದೇವನಿಹ ಗುಡಿಯಲ್ಲವೇ, ಗೆಳೆಯ?’ ಎನ್ನುವ ಒಬ್ಬ;
ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲುಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾ ವರೆಗೆ ಸುಖವಿಲ್ಲ ಈ ಧರೆಗೆ!
ಎನ್ನುವ ಇನ್ನೊಬ್ಬ ತಮ್ಮ ವಿಚಾರಧಾರೆಯನ್ನು ಹರಿಯಬಿಡುತ್ತಾರೆ. ತಿರುಕ ಅವರ ಬಳಿ ಭಿಕ್ಷೆ ಬೇಡಿದಾಗ ಕೊಡುವಂತೆ ನಟಿಸಿ, ಕೊಡದೆ ಆತನನ್ನು ಗೋಳು ಹುಯ್ದುಕೊಳ್ಳುತ್ತಾರೆ. ’ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! ಲೋ! ನಿನ್ನ ಕಣ್ಣು ಕುರುಡೇನೊ, ಠಕ್ಕ!’ ಎಂದು ಆತನನ್ನು ಹಿಂಸಿಸುತ್ತಾರೆ. ಜಲಗಾರ ಬಂದು ತಿರುಕನನ್ನು ಬಿಡಿಸಿಕೊಳ್ಳುತ್ತಾನೆ. ಆ ಯುವ ವಿಚಾರವಾದಿಗಳ ವಿಚಾರ ಕೇವಲ ಪುಸ್ತಕದ ಬದನೆಯಾಗುತ್ತದೆ!
ಎದ್ದೇಳು ಭಿಕ್ಷುಕನೆ, ನನ್ನನ್ನದೊಳೆ, ಮುಷ್ಟಿ
ನಿನಗಿಕ್ಕಿ, ಶಿವಪೂಜೆ ಮಾಡುವೆನು. ನೀನೆನ್ನ
ಸೋದರ, ನೀನೆನ್ನ ದೇಗುಲ!...........
ಎನ್ನುತ್ತಾನೆ ಜಲಗಾರ. ಮುಂದೆ, ಎರಡನೆಯ ದೃಶ್ಯದಲ್ಲಿ ಜಲಗಾರ ತನ್ನ ಸಂಜೆಯ ಕೆಲಸವನ್ನು ಮಾಡುತ್ತಿರುತ್ತಾನೆ. ಜಾತ್ರೆಗೆ ಹೋದವರೆಲ್ಲಾ ಹಿಂತಿರುಗುತ್ತಿರುತ್ತಾರೆ. ಜಾತ್ರೆಯ ವೈಭವ, ಆಡಂಬರದ್ದೇ ಮಾತು! ’ಜಲಗಾರ ಪುಣ್ಯವಿಲ್ಲವೊ ನಿನಗೆ!’ ಎನ್ನುತ್ತಾನೆ ರೈತ. ’ಶಿವಗುಡಿಯಿಂದ ಏನು ತಂದೆ’ ಎಂಬ ಜಲಗಾರನ ಮಾತಿಗೆ ’ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ’ ಎನ್ನುತ್ತಾನೆ; ದೇವಾಲಯದ ಕಲಾವೈಭವವನ್ನು ವರ್ಣಿಸುತ್ತಾನೆ! ತನ್ನ ಬದುಕಿನ ಕಷ್ಟವನ್ನು ಹಾಡುತ್ತಾ ಹುಡುಗಿಯೊಬ್ಬಳು ಹೋಗುತ್ತಾಳೆ. ಪಾರ್ವರಿಬ್ಬರು ಬರುತ್ತಾರೆ. ಅಂದಿನ ಅವರ ದಕ್ಷಿಣೆ, ಹಣ್ಣುಕಾಯಿನ ದುಡ್ಡು, ತೀರ್ಥ ಮಾರಿದ ದುಡ್ಡುಗಳ ಬಾರಿ ಲೆಕ್ಕಾಚಾರದಲ್ಲಿ ಅವರಿಬ್ಬರೂ ಮುಳುಗಿರುತ್ತಾರೆ. ’ಅಂತೂ ನಮಗೆಲ್ಲ ಶಿವಗುಡಿಯ ದೆಸೆಯಿಂದ ಹಿಟ್ಟು ಹೊಟ್ಟೆಗೆ, ದುಡ್ಡು ಬಟ್ಟೆಗೆ’ ಎಂದು ಒಬ್ಬ; ’ಗುಟ್ಟು ಬಿಟ್ಟರೆ ಕೆಟ್ಟೆ. ನಡೆ ಬೇಗ’ ಎಂದು ಇನ್ನೊಬ್ಬ ಹೇಳುತ್ತಾ ಹೋಗುತ್ತಾರೆ. ಇವರ ಮಾತು ಕೇಳಿದ ಜಲಗಾರ-
ಜೋಯಿಸರು
ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ
ನುಗ್ಗುವರು. ಶಿವಶಿವಾ ಗುಡಿಯೊಳಿದ್ದರು ಕೂಡ
ದೇವರಿಂದತಿ ದೂರವಿಹ ಪಾಪಿಯೆಂಥವನು?
ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಕವಿಯೊಬ್ಬ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವಂತೆ ’ಕೊರಗಲೇಕೆ? ಮರುಗಲೇಕೆ? ಬರಿದೆ ಬಾಳನು ಜರೆವುದೇಕೆ? ಎಂದು ಹಾಡುತ್ತಾನೆ. ಹುಡುಗರ ಗುಂಪೊಂದು ’ನಾವು ಮರುಳರು, ನಾವು ಕುಡುಕರು, ಮರುಳುತನವೆಮ್ಮಾಟವು’ ಎಂದು ಹಾಡುತ್ತಾ ಸಾಗುತ್ತದೆ! ಇವೆಲ್ಲವನ್ನೂ ಕಂಡ, ಕೆಲಸ ಮುಗಿಸಿದ ಜಲಗಾರ ’ಕುಳಿತಿಲ್ಲಿ ಶಿವನಂ ಧ್ಯಾನಿಸುವೆ’ ಎಂದು ಮಧುರವಾಗಿ ಹಾಡತೊಡಗುತ್ತಾನೆ. ಜಲಗಾರನ ವೇಷದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಜಲಗಾರ-
ನೀನಾರು ಆಕೃತಿಯೆ! ನೀನಾರು? ಯಾರು?
ಮಾನುಷವಾಗಿ ಕಂಡರೂ ಅಮಾನುಷವಾಗಿ
ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ
ಕಂಗಳಿಂದೇಕೆನ್ನ ನೋಡುತಿಹೆ ಇಂತು?
ನೀನಾರು? ಆಕೃತಿಯೆ?
ಎಂದು ಹೆದರುತ್ತಲೇ ಕೇಳುತ್ತಾನೆ. ಆಗ ಶಿವ-
ನಾನೊಬ್ಬ ಜಲಗಾರ.
ಅಂಜದಿರು, ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
........................................................
ರುದ್ರನೆಂಬರು ಎನ್ನ; ಶಿವನೆಂಬರೆನ್ನ;
ಹೇಸುವರು, ಅಂಜುವರು, ಜಲಗಾರನೆನಲು!
ಎನ್ನುತ್ತಾನೆ. ಆಗ ಜಲಗಾರ ಮುಗ್ಧವಾಗಿ, ವಿನಯದಿಂದ-
ನಿನ್ನನಾ ಶಿವನೆಂದು ನಂಬುವುದೆಂತು? ಹೇ ದೇವ,
ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ
ಕಂಡರಿಯೆ, ಕೇಳರಿಯೆ. ತಿಳಿದವರು, ಪಂಡಿತರು,
ಬೇರೊಂದು ರೀತಿಯಲ್ಲಿ ಬಣ್ಣಿಸಿರುವರು ನಿನ್ನ
ಎಂದು ಕೇಳುತ್ತಾನೆ. ಆಗ ಶಿವ, ’ನಾನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ, ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ, ನಿಂತು ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು’ ಎನ್ನುತ್ತಾನೆ. ಆದರೂ, ”ಪಂಡಿತರದೇಕಂತು ಬಣ್ಣಿಪರು ನಿನ್ನ?’ ಎಂಬ ಜಲಗಾರನ ಪ್ರಶ್ನೆಗೆ, ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು ಎಂದೆಲ್ಲಾ ಹೇಳಿ,
ಚಂದ್ರನಿಲ್ಲದೆ, ಗೆಂಗೆ
ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,
ಜಿನವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!
ಎನ್ನುತ್ತಾನೆ. ’ನೀನು ಮತ್ತೆಲ್ಲಿರುವೆ?’ ಎಂಬ ಜಲಗಾರನ ಪ್ರಶ್ನೆಗೆ-
ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,
ಕುರುಡರನು, ದೀನರನು, ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ................
....................................
ಊರ ತೋಟಿಯು ನೀನು; ಜಗದ ತೋಟಿಯು ನಾನು!
ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!
ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!
ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!
ಶಿವ ನೀನು! ಶಿವ ನೀನು!
ಎಂದು ಜಲಗಾರ ರೂಪಿಯಾದ ಶಿವ ಹಾಡುತ್ತಾನೆ. ಆಗ ಭಾವಪರವಶನಾದ ಜಲಗಾರ ’ಶಿವ ನಾನು! ಶಿವ ನಾನು!’ ಎಂದು ಹೇಳುತ್ತಾ ಶಿವನ ತೆಕ್ಕೆಯೊಳಗಾಗುತ್ತಾನೆ. ನಾಟಕ ಮುಗಿಯುತ್ತದೆ.

ಈ ನಾಟಕ ಆರಂಭದಲ್ಲಿಯೇ, ಮೈಸೂರಿನ ಸಾಹಿತ್ಯ ವಲಯದಲ್ಲಿ ಹಲವರ ಪ್ರಶಂಸೆಯನ್ನೂ ಕೆಲವರ ನಿಂದನೆಯನ್ನೂ ಎದುರಿಸಬೇಕಾಯಿತು. ನಾ.ಕಸ್ತೂರಿಯವರು ಸ್ವತಃ ತಾವೇ ನಿರ್ದೇಶಿಸಿ, ಸ್ಕೌಟು ದಳದ ವಾರ್ಷಿಕೋತ್ಸವದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಮುಂದೆ ಪ್ರದರ್ಶಿಸುತ್ತಾರೆ. (ನಾನು ನನ್ನ ರೂಢಿಯಂತೆ ಆ ನಾಟಕ ಪ್ರದರ್ಶನಕ್ಕೆ ಹೋಗಿರಲಿಲ್ಲ-ಕುವೆಂಪು) ಅದಕ್ಕೆ ಸಾಕಷ್ಟು ಶ್ಲಾಘನೆಯೂ ವ್ಯಕ್ತವಾಗುತ್ತದೆ. ಆದರೆ ಆಗ್ಗೆ ಮೈಸೂರಿನ ವೃದ್ಧಪಿತಾಮಹರೆಂದು ಪ್ರಸಿದ್ಧರಾಗಿದ್ದ ಎಂ.ವೆಂಕಟಕೃಷ್ಣಪ್ಪಯ್ಯನವರು ತಮ್ಮ ಪತ್ರಿಕೆಯಲ್ಲಿ, ’ಆ ನಾಟಕ ಬ್ರಾಹ್ಮಣರನ್ನು ಅವಹೇಳನ ಮಾಡುವುದಕ್ಕೆ ಬರೆಯಲಾಗಿದೆ’ ಎಂದೂ ’ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ’ ಎಂದೂ ಟೀಕಿಸಿದ್ದರಂತೆ. ಆದರೆ, ನಾಟಕದಲ್ಲಿ ವ್ಯಕ್ತವಾಗಿದ್ದ ಹೊಸ ವಿಚಾರಗಳಿಂದಾಗಿ ನಾಟಕ ದಿನದಿಂದ ದಿನಕ್ಕೆ ಆಸಕ್ತರನ್ನು ಸೆಳೆಯುತ್ತಲೇ ಹೋಯಿತು. ಎಷ್ಟೋ ದಿನಗಳವರೆಗೂ ನಾಟಕಕ್ಕೆ ವ್ಯಕ್ತವಾಗಿದ್ದ ಪ್ರಶಂಸೆ-ನಿಂದನೆಗಳು ಕವಿಗೆ ತಿಳಿಯಲೇ ಇಲ್ಲ! ತಿಳಿದಾಗಲೂ ಒಂದು ನಗುವಷ್ಟೇ ಕವಿಯ ಉತ್ತರವಾಗಿತ್ತು.

೧೯೨೮ ಅಥವಾ ೧೯೨೯ನೆಯ ವರ್ಷದ ಶಿವರಾತ್ರಿಯ ದಿನ ಹಲವರ ಒತ್ತಾಯದ ಮೇರೆಗೆ ಜಲಗಾರ ನಾಟಕವನ್ನು ಸ್ವತಃ ಕವಿಯ ಬಾಯಿಂದ ಕೇಳುವ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು. ನಾಟಕದ ಕೊನೆಯಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ ಎಂಬುದರಿಂದಲೋ ಅಥವಾ ಶಿವರಾತ್ರಿಯಾಗಿದ್ದರಿಂದಲೋ ಏನೋ ಸಾಕಷ್ಟು ಜನ ಸೇರಿದ್ದರು. ಕವಿಯೂ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರು ಅಭಿನಯಪೂರ್ವಕವಾಗಿ ವಾಚಿಸಿದರು. ಜನರೆಲ್ಲಾ ಮೆಚ್ಚಿಕೊಂಡರು. ಆದರೆ ಲಿಂಗಾಯಿತ ಶಿವಭಕ್ತರೊಬ್ಬರು ಮಾತ್ರ ಕುವೆಂಪು ಕಡೆಗೆ ಕೈದೋರುತ್ತಾ, ಭಯಂಕರವಾಗಿ ’ಶಿವದ್ರೋಹಿ! ಶಿವದ್ರೋಹಿ!’ ಎಂದು ಆರ್ಭಟಿಸುತ್ತಾ, ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುವಂತೆ ಸಭಾತ್ಯಾಗ ಮಾಡಿದರಂತೆ! ಮೊದಲು ವಿಷಯ ತಿಳಿಯದೆ, ಶಿವಭಕ್ತರ ಆರ್ಭಟದಿಂದ ಗಾಬರಿಯಾಗಿದ್ದ ಸ್ವಾಮೀಜಿಗಳು, ತಾತಗಾರು, ನಾ.ಕಸ್ತೂರಿಯವರು ಮತ್ತಿತರರು ಜೋರಾಗಿ ನಕ್ಕುಬಿಟ್ಟರಂತೆ!

ಕುವೆಂಪು ಅವರು ನಿಧನರಾದಾಗ, ಅಂತಿಮದರ್ಶನಕ್ಕಾಗಿ ಉದಯರವಿಯ ಮುಂದೆ ಸಾಲುಗಟ್ಟಿದ ಸಾವಿರಾರು ಜನರುಗಳಲ್ಲಿ ಜಾಡಮಾಲಿಗಳ ಗುಂಪೊಂದು ಸಹ ಸಾಲಿನಲ್ಲಿ ನಿಂತಿತ್ತು. ಅವರಾರು ಕುವೆಂಪು ಅವರಿಗೆ ಪರಿಚಿತರಲ್ಲ, ಅವರ ಸಾಹಿತ್ಯವನ್ನು ಓದಿದವರೂ ಅಲ್ಲ. ಅದನ್ನು ನೋಡಿ, ಕುತೂಹಲದಿಂದ ರಾಮದಾಸ್ ಮೊದಲಾದವರು ಅವರನ್ನು ಮಾತನಾಡಿಸಿದಾಗ, ಅವರೆಲ್ಲರೂ ಕುವೆಂಪು ಮತ್ತು ಜಲಗಾರ ನಾಟಕದ ಹೆಸರುಗಳನ್ನು ಹೇಳಿದರಂತೆ! ಒಬ್ಬ ಬರಹಗಾರ ಅಥವಾ ಆತನ ಒಂದು ಕೃತಿ ಜನರ ಸ್ವತ್ತಾಗಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.

ಇಂದು ಶಿವರಾತ್ರಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಹಾಡಿದ ಬಸವನ ಹೆಸರನ್ನು ಹೇಳಿಕೊಂಡು, ಆತನ ಧರ್ಮದ ವಾರಸುಧಾರರೆನಸಿಕೊಂಡವರು, ರಾಜಕಾರಣಿಗಳು, ಮಠಾಧಿಪತಿಗಳು ನೂರು - ಇನ್ನೂರು ಅಡಿಯ ಶಿವಮೂರ್ತಿಗಳನ್ನು ಲಿಂಗಗಳನ್ನು ಮಾಡಿಸುತ್ತಾ - ಎದೆಯೊಳಗಿನ ಶಿವನಿಗೆ ಸಮಾಧಿ ಕಟ್ಟುತ್ತಾ - ಕಾಂಕ್ರೀಟ್ ಶಿವನ ಆರಾಧಕರಾಗುತ್ತಿದ್ದಾರೆ. ’ನಿಜಶಿವನಾರು?’ ಎಂಬುದನ್ನು ಅರಿಯುವುದೇ ನಿಜವಾದ ಶಿವರಾತ್ರಿಯಲ್ಲವೆ?

ಚಿತ್ರಗಳು : ಲಕ್ಷ್ಮಣ್. ಸಿ. (picasa web albums)

Saturday, February 18, 2012

ಪೆಜತ್ತಾಯ ಅವರ ಕಾಗದದ ದೋಣಿ ಯಾನ - 1 & 2 ಪುಸ್ತಕಗಳ ಬಿಡುಗಡೆ

ಹಿರಿಯರಾದ ಎಸ್.ಎಂ. ಪೆಜತ್ತಾಯ ಅವರು, ವರ್ಷಗಳ ಹಿಂದೆ, ಅವರ ಯಾವತ್ತೂ ಕನ್ನಡ ಬರಹಗಳನ್ನು ನನಗೆ ಕಳುಹಿಸಿ, ಇವುಗಳನ್ನು ಏನಾದರೂ ಮಾಡಿ; ಎಲ್ಲವೂ ನಿಮಗೆ ಸೇರಿದ್ದು ಎಂದುಬಿಟ್ಟಿದ್ದರು. ಅನುಭವವೇ ಹರಳುಗಟ್ಟಿದ್ದಂತಹ ಆ ಬರಹಗಳನ್ನು ಒಂದೆಡೆ ಸಂಕಲಿಸಿದಾಗ, ಬಿಡಿಬಿಡಿಯಾಗಿದ್ದರೂ ಒಂದು ಸಂಸ್ಕೃತಿಯ ಒಂದು ಕಾಲಘಟ್ಟದ ಒಂದು ವ್ಯಕ್ತಿತ್ವದ ಮೂಲಕ ಅನಂತತೆಯತ್ತ ಈ ಬರಹಗಳು ಬೆರಳು ಮಾಡಿವೆ ಅನ್ನಿಸತೊಡಗಿತ್ತು. ಈ ನಿಟ್ಟಿನಲ್ಲಿ, ಅಪ್ರಕಟಿತ ಹಾಗೂ ಇತ್ತೀಚಿಗೆ ಬರೆಯುತ್ತಿರುವ ಲೇಖನಗಳ ಜೊತೆಯಲ್ಲಿ ಅವರ ಸಮಗ್ರ ಲೇಖನಗಳನ್ನು ಇಡಿಯಾಗಿ ಗಮನಿಸುವ ಅಗತ್ಯ ಇದೆ. ಇದುವರೆಗಿನ ಸಮಗ್ರ ಲೇಖನಗಳನ್ನು ಎರಡು ಭಾಗಗಳಲ್ಲಿ ಸಂಪಾದಿಸುವ ಯೋಚನೆಯನ್ನು ಗೆಳೆಯ ನಾಗೇಶನೊಂದಿಗೆ, ಶ್ರೀ ಪೆಜತ್ತಾಯ ಅವರ ಬಳಿ ತಿಳಿಸಿದಾಗ, ಅವರು ಸಂತೋಷದಿಂದ ಒಪ್ಪಿಗೆ ಸೂಚಿಸಿದರು. ನಮ್ಮ ರಕ್ಷಕ ರಕ್ಷಾ ಮತ್ತು ರೈತನಾಗುವ ಹಾದಿಯಲ್ಲಿ ಪುಸ್ತಕಗಳು ಇತ್ತೀಚಿಗಷ್ಟೆ ಪ್ರಕಟವಾಗಿರುವುದರಿಂದ ಅವುಗಳನ್ನು ಹೊರಗಿಟ್ಟು ಇನ್ನುಳಿದ ಲೇಖನಗಳನ್ನು ಈ ಎರಡು ಸಂಪುಟಗಳಲ್ಲಿ ಸಂಕಲಿಸಲಾಗಿದೆ. ಯಾನ-೧ರ ನಂತರ ರೈತನಾಗುವ ಹಾದಿಯಲ್ಲಿ ಪುಸ್ತಕವನ್ನು, ಯಾನ-೨ರ ನಡುವೆ ಯಾವಾಗ ಬೇಕಾದರೂ, ಕೊನೆಗಾದರೂ ನಮ್ಮ ರಕ್ಷಕ ರಕ್ಷಾ ಪುಸ್ತಕವನ್ನು ಓದಬಹುದು. ಓದನ್ನು ಮೊದಲ ಲೇಖನದಿಂದಲೇ ಆರಂಭಿಸಬೇಕಂತಲೂ ಇಲ್ಲ. ಯಾವುದೇ ಲೇಖನದಿಂದ ಆರಂಭಿಸಬಹುದು; ಮುಗಿಸಬಹುದು. ಆದರೂ, ಶ್ರೀಯುತರ ಬದುಕಿನ ಇದುವರೆಗಿನ ಓಟ ಮತ್ತು ಅನುಭವಗಳ ಮೊತ್ತ ಓದುಗನದಾಗುತ್ತದೆ. ತೇಜಸ್ವಿಯವರು ಮಾಯಾಲೋಕದ ಆರಂಭದಲ್ಲಿ ಹೇಳಿದಂತೆ, ಇದೊಂದು ಕೊಲಾಜ್ ಮಾದರಿಯ ಕಲಾಕೃತಿ. ವ್ಯಕ್ತಿಚಿತ್ರಗಳು, ಸಂದರ್ಭಗಳು, ದೃಶ್ಯಗಳು ಕಥೆಯಾಗಿ ಒಂದರ ಮೇಲೊಂದು ಸಂಯೋಜನೆಗೊಳ್ಳುತ್ತಾ ಒಂದು ವಿಶಿಷ್ಟ ಪರಿವೇಶವನ್ನು ಕಲ್ಪಿಸುತ್ತವೆ.



ಈ ಪುಸ್ತಕಗಳಿಗೆ ಬಳಸಿರುವ ಸ್ಕೆಚ್ ಮತ್ತು ರೇಖಾಚಿತ್ರಗಳನ್ನು (ಕೆಲವು ಕಡೆ ಲೇಖನಗಳ ಸಾಂದರ್ಭಿಕ ವಿವರಣೆಯಂತೆ ಕಂಡರೂ) ಆಯಾಯ ಲೇಖನದ ಹಿನ್ನೆಲೆಯಲ್ಲಿ ಮಾತ್ರ ಗಮನಿಸಬಾರದು. ಒಟ್ಟು, ಈ ಲೇಖಕನ ಅನುಭವ, ಮತ್ತು ಅದು ನಮಗೆ ಒದಗಿಸುವ ಅನಂತ ಅನುಭವದ ಒಂದು ಭಾಗವಾಗಿ ಪರಿಭಾವಿಸಬಹುದು.

ಈ ಎರಡೂ ಸಂಪುಟಗಳನ್ನು ಓದುವುದೆಂದರೆ ಒಂದು ರೀತಿಯಲ್ಲಿ ಬಿಡಿ ಬಿಡಿಯಾಗಿ ಇಡಿಯನ್ನು ಗ್ರಹಿಸುವ ಪ್ರಕ್ರಿಯೆ. ಒಟ್ಟಾಗಿಯೇ ಎಲ್ಲವನ್ನೂ ಅಪ್ಪಿಕೊಳ್ಳುತ್ತೇನೆ ಎಂದು ಹೊರಟರೆ ಗಾಳಿಯನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಆದರೆ ಒಂದೊಂದನ್ನು ಎತ್ತಿಕೊಳ್ಳುತ್ತಲೇ ಎಲ್ಲವನ್ನೂ ಬಾಚಿಕೊಳ್ಳಬಹುದು! ಇಲ್ಲಿ ವಿಶ್ಲೇಷಣೆಗಿಂತ ಸಂಶ್ಲೇಷಣೆಯೇ ಪ್ರಧಾನ. ಹೋಲಿಕೆಗಳಿಗಿಂತ ಅನುಭವವೇ ಪ್ರಧಾನ. ಕೆಡುಕುಗಳಿಗಿಂತ ಒಳಿತುಗಳೇ ಪ್ರಧಾನ. ಶ್ರೀಯುತರ, ಬಹುತೇಕ ಬರಹಗಳು ಮನುಷ್ಯನ ವ್ಯಕ್ತಿತ್ವದ, ಬದುಕಿನ ಒಳಿತುಗಳಿಗೆ ಹಿಡಿದ ಕನ್ನಡಿ. ಒಟ್ಟಿನಲ್ಲಿ ಒಳಿತು ಎಂಬುದೇ ಈ ಲೇಖಕರ ಬರಹಗಳಲ್ಲಿನ ಸ್ಥಾಯಿಭಾವ ಎನ್ನಬಹುದು.
 
ಕಾಗದದ ದೋಣಿ ಯಾನ - 1 & 2 ಪುಸ್ತಕಗಳ ಜೊತೆಯಲ್ಲಿ, ಅವರೇ ಬರೆದಿರುವ 'ನಮ್ಮ ರಕ್ಷಕ ರಕ್ಷಾ' ಎಂಬ ಪುಸ್ತಕ - ಮೂರೂ ಪುಸ್ತಕಗಳು 19.2.2012 ಭಾನುವಾರ ಸಂಜೆ ಬಿಡುಗಡೆಯಾಗುತ್ತಿವೆ. ಸ್ಥಳ : ಕಿದಿಯೂರು ಹೋಟೆಲ್ ಹಾಲ್; ಉಡುಪಿ.
ಸರ್ವರಿಗೂ ಆದರದ ಸ್ವಾಗತ.

Monday, February 13, 2012

ನೆಲೆಸು ನಮ್ಮೆರ್ದೆಗಳಲಿ ನಿನ್ನಾ ತಪೋರೂಪದಿಂ

ಮೈಸೂರಿನಿಂದ ಕೇವಲ ೨೫ ಕಿಲೋಮೀಟರ್ ದೂರದಲ್ಲಿದ್ದರೂ ಶತಮಾನಗಳ ಕಾಲ ಅಜ್ಞಾತವಾಗಿದ್ದ ಜೈನ ಕ್ಷೇತ್ರ ಗೊಮ್ಮಟಗಿರಿ, ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿಯಲ್ಲಿದೆ. ಪ್ರಾಕೃತಿಕ ವೈಪರೀತ್ಯ, ಐತಿಹಾಸಿಕ ಹಾಗೂ ಧಾರ್ಮಿಕ ಕಾರಣಗಳಿಂದಾಗಿ ಅಲ್ಲೊಂದು ಜೈನಕ್ಷೇತ್ರ ಇದೆ, ಸುಮಾರು ಹದಿನೇಳು ಅಡಿ ಎತ್ತರದ ಗೊಮ್ಮಟ ಮೂರ್ತಿಯಿದೆ ಎಂಬುದೇ ಮರೆತುಹೋಗಿತ್ತು. ಸುಮಾರು ಇನ್ನೂರು ಅಡಿ ಏಕಶಿಲಾ ಬಂಡೆಯ ಮೇಲೆ ಈ ಮೂರ್ತಿಯಿದೆ. ಹತ್ತಿ ಹೋಗಲು ಮೆಟ್ಟಿಗಳೂ ಇವೆ. ಆದರೆ ಯಾವಾಗಲೋ ಸಂಭವಿಸಿದ ಪ್ರಾಕೃತಿಕ ವೈಪರಿತ್ಯದಿಂದಾಗಿ, ಬಂಡೆ ಎರಡು ಭಾಗಗಳಾಗಿ ದೊಡ್ಡ ಪ್ರಪಾತವೇರ್ಪಟ್ಟಿದೆ. ಇಡೀ ಗುಡ್ಡದ ಸುತ್ತ ಕಾಡು ಬೆಳೆದು ಸುತ್ತಮುತ್ತಲಿನ ಜನರಿಗೆ ಅಲ್ಲೊಂದು ಜೈನಕ್ಷೇತ್ರ ಇರುವ ಬಗ್ಗೆ ಯಾವೊಂದು ಸುಳಿವು ಕೂಡ ಸಿಗದಂತೆ ಅಡಗಿಕುಳಿತುಬಿಟ್ಟಿತ್ತು. ೧೯೪೫-೫೦ರ ಅವಧಿಯಲ್ಲಿ, ಕಾಡಿಗೆ ದನ ಮೇಯಿಸಲು ಹೋಗುತ್ತಿದ್ದ ಹುಡುಗರ ತುಂಟತನ ಹಾಗೂ ಸಾಹಸ ಮನೋಭಾವದಿಂದಾಗಿ, ಅಲ್ಲಿ ಬಾಹುಬಲಿಯ ವಿಗ್ರಹ ಇರುವುದು ಬೆಳಕಿಗೆ ಬಂತು. ಈ ಸುದ್ದಿಯ ಬಾಯಿಂದ ಬಾಯಿಗೆ ಹರಡಿ, ಹಳ್ಳಿಯನ್ನು ಮೀರಿ ಮೈಸೂರನ್ನೂ ತಲುಪಿತು. ಕೆಲವು ಆಸಕ್ತರ ಪ್ರಯತ್ನದಿಂದಾಗಿ ಕುವೆಂಪು ಅವರಿಗೂ ವಿಷಯ ತಲುಪಿ ಅವರು ಅದರಲ್ಲಿ ಆಸಕ್ತಿ ವಹಿಸಿದರು. ಸ್ವತಃ ತಾವೇ ಅಲ್ಲಿಗೆ ಬೇಟಿಕೊಟ್ಟು ಗೊಮ್ಮಟನಿದ್ದ ಬರ್ಬರ ಸ್ಥಿತಿಯನ್ನು ಕಂಡುಬಂದರು. ವಿಷಯಕ್ಕೆ ಹೆಚ್ಚಿನ ಪ್ರಚಾರ ದೊರೆಯಿತು. ಅದರ ಪರಿಣಾಮವಾಗಿ ಮೈಸೂರಿನ ಜೈನ ಸಂಸ್ಥೆಗಳವರು ಪ್ರಾಥಮಿಕ ದುರಸ್ತಿಕ್ರಮ ಕೈಗೊಂಡು ಅಲ್ಲಿಗೆ ಹೋಗಿಬರಲು ಅನುಕೂಲವಾಗುವಂತೆ ಮಾಡಿದರು. ಬಂಡೆಯಲ್ಲಿ ಉಂಟಾಗಿದ್ದ ದೊಡ್ಡ ಬಿರುಕನ್ನು ಕಲ್ಲು ಮಣ್ಣುಗಳಿಂದ ಮುಚ್ಚಿ ಸುಲಭವಾಗಿ ಬೆಟ್ಟ ಹತ್ತಿ ಇಳಿಯಲು ಅನುಕೂಲವಾಯಿತು.

ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತಲಿನ ದೃಶ್ಯ ಮನಮೋಹಕವಾಗಿದೆ. ಕೆ.ಆರ್.ಎಸ್. ಅಣೆಕಟ್ಟಿನ ಹಿನ್ನೀರು ರಚಿಸಿದ ಅಭೂತಪೂರ್ವ ಚಿತ್ರವಳಿಯನ್ನು ಇಲ್ಲಿಂದ ಕಾಣಬಹುದು. ತೆರೆದ ಛಾವಣಿಯಲ್ಲಿ ನಿಂತಿರುವ ವೈರಾಗ್ಯಮೂರ್ತಿಯ ಶಿಲ್ಪ ಮನಮೋಹಕವಾಗಿದೆ. ಅದರ ಸುತ್ತಲೂ ಬಂಡೆಗಯ ಮೇಲೆ ೨೪ ತೀರ್ಥಂಕರರ ಪಾದಗಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಆರಂಭಿಕ ಜೀರ್ಣೋದ್ಧಾರ ಕಾರ್ಯ ನೆರವೇರಿದ ಕೂಡಲೆ ಪ್ರಥಮ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಾಯಿತು. ನಾಡಿನ ಹೆಸರಾಂತ ಧಾರ್ಮಿಕ ಮುಖಂಡರು, ರಾಜಕಾರಣಿಗಳು ಸಾಹಿತಿಗಳು ಅದರಲ್ಲಿ ಭಾಗವಹಿಸಿದ್ದರು. ಕುವೆಂಪು, ದ.ರಾ.ಬೇಂದ್ರೆ, ಜಿ.ಪಿ.ರಾಜರತ್ನಂ ಅವರು ಮುಖ್ಯರಾಗಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು. ಜೈನಧರ್ಮದ ಸಂಪ್ರದಾಯಕ್ಕನುಗುಣವಾಗಿ ನಡೆದ ಮಹಾಮಸ್ತಕಾಭಿಷೇಕವನ್ನು ತದೇಕಚಿತ್ತದಿಂದ ಪೂರ್ಣ ಮುಗಿಯುವವರೆಗೂ ವೀಕ್ಷಿಸಿದ ಕವಿಗೆ ದಕ್ಕಿದ ದರ್ಶನ ’ಶ್ರೀ ಗೋಮಟ ಮಹಾಮಸ್ತಕಾಭಿಷೇಕ ಪ್ರಗಾಥಂ’ ಎಂಬ ಸುದೀರ್ಘ ಕವಿತೆಯಲ್ಲಿ ಕಂಡರಿಸಲ್ಪಟ್ಟಿದೆ.

ಆರು ಭಾಗಗಳಲ್ಲಿ, ಪಂಪನ ಪದ್ಯಗಳ ಸಾಲುಗಳೂ ಸೇರಿದಂತೆ ಒಟ್ಟು ಸುಮಾರು ೧೩೨ ಸಾಲುಗಳಲ್ಲಿ ಈ ಪ್ರಗಾಥವಿದೆ.
ಓ ಕರೆಯುತಿದೆ ನಿನ್ನನೀ ನಮ್ಮ ತಪ್ತ ಭೂಮಿ;
ಓ ಏಳು, ಶ್ರೀ ಗೋಮಟಸ್ವಾಮಿ!
ಏಳು, ಓ ಏಳು, ಕಡೆದು ಜಡತಾ ಅಚಿನ್ನಿದ್ರೆಯಂ;
ಏಳು, ಓ ಏಳು, ಒಡೆದು ಶತಶತಮಾನ ಮೌನದ ಶಿಲಾಮುದ್ರೆಯಂ!
ಎಂದು ಆರಂಭವಾಗಿ, ಮುಂದೆ ಗೋಮಟ ಏಳಬೇಕಾಗಿರುವುದು ಯಾರಿಗಾಗಿ ಏತಕ್ಕಾಗಿ ಎಂಬುದನ್ನು ಹೇಳುತ್ತದೆ.
ಕರುಣೆಯಿಂದೆಮಗಾಗಿ ಏಳಯ್ಯ ನಿರ್ವಾಣ ಸುಪ್ತಿಯಿಂ,
ನಿನ್ನೊಂದು ಪರಿಪೂರ್ಣತಾ ದಿವ್ಯ ತೃಪ್ತಿಯಿಂ!
ನಮ್ಮ ಹೃದಯದ ಬೃಹಚ್ಚೇತನದ ಮೂರ್ತಿಯಾಗೇಳು ಬಾ;
ಜನ್ಮ ಜನ್ಮಾಂತರದ ಸಂಸ್ಕಾರ ಸರ್ವಸ್ವ ಸ್ಪರ್ಶಮಣಿಯಾಗೇಳು ಬಾ!
ಹಿಂದಣಾಲಸ್ಯದ ತಮಿಸ್ರಕ್ಕೆ ರವಿದೇವನಾಗಿ ಓ ಮೂಡಿ ಬಾ;
ಮುಂದಣ ಅಭೀಪ್ಸೆಯಾ ಕೈರವಕೆ ಕುಮುದೇಂದುವೋಲುದಿಸಿ ಬಾ!
ಎಂದು ಗೋಮಟನನ್ನು ಅಹ್ವಾನಗೈಯುತ್ತಾರೆ. ಈಗ ಜೀಣೋದ್ಧಾರವಾಗಿರುವುದು ಆ ನಿರ್ವಾಣ ಮೂರ್ತಿಗೆ ಆದರೂ, ಇನ್ನು ಮುಂದೆ ಆಗಬೇಕಿರುವುದು ನಿಜವಾಗಿ ನಮ್ಮ ಜೀರ್ಣೋದ್ಧಾರ! ’ನಿನ್ನ ಜೋರ್ಣೋದ್ಧಾರವೆಮ್ಮ ಜೀರ್ಣೋದ್ಧಾರವಾಗೆ ಆಶೀರ್ವದಿಸು ಬಾ!’ ಎಂಬ ಸಾಲು ಪ್ರಗಾಥವನ್ನು ಇನ್ನೊಂದು ದಿಕ್ಕಿಗೆ ತಿರುಗಿಸಿಬಿಡುತ್ತದೆ. ದೇವತಾ ವಿಗ್ರಹಕ್ಕೆ, ದೇವಾಲಯಕ್ಕೆ ಜೀರ್ಣೋದ್ಧಾರ ಮಾಡಬಹುದು. ಆದರೆ ದೇವರಿಗೆ ಜೀರ್ಣೋದ್ಧಾರ ಎಂದರೆ ಎಂತಹ ಅಭಾಸವಲ್ಲವೆ?
ನಿನ್ನಜೀರ್ಣೋದ್ಧಾರಮಂ?
ನಗದಿರು, ಮಹಾಗುರುವೆ; ನಮ್ಮದಿದು ಮರ್ತ್ಯಾವಿವೇಕಂ!
ನಿತ್ಯನೂತನನಪ್ಪ ನೀಂ ಜೀರ್ಣನೆಂತಪ್ಪೆಯಯ್?
ಸರ್ವಪರಿಪೂರ್ಣನಿಗೆ ನಿನಗೆ ಉದ್ಧಾರವೆಂದರರ್ಥವೇನಯ್?
ಅಲ್ತಲ್ತು;
ನಿನ್ನ ಜೀರ್ಣೋದ್ಧಾರಮಲ್ತು:
ಹಾಳಾದುದೆಮ್ಮ ಬಾಳಿಂದು ತಾಂ ಮರಳಿ ಪಡೆಯುತಿದೆ ತನ್ನುದ್ಧಾರಮಂ!
ಕೊಳೆ ತಳ್ತುದೆಮ್ಮ ಬಾಳ್ಗಿಂದಾಗುತ್ತಿದೆ ಮೀಹದೋಲ್ ಮಸ್ತಕಾಭಿಷೇಕಂ:
ಜ್ಞಾನ ಮೇಣ್ ಭಕ್ತಿ ಮೇಣ್ ವೈರಾಗ್ಯ ಸಂಕೇತದಾ
ಅಮೃತ ಘೃತ ದಧ್ಯಾದಿ ಪುಣ್ಯಾಭಿಷೇಕಂ!
ಕನ್ನಡದ ಆದಿಕವಿ ಪಂಪ ತನ್ನ ಆದಿಪುರಾಣದಲ್ಲಿ ಕಂಡರಿಸಿರುವ ವೈರಾಗ್ಯಮೂರ್ತಿ ಬಾಹುಬಲಿಯ ಚಿತ್ರಣವನ್ನು ಮನದಲ್ಲಿ ಕೆತ್ತಿಕೊಂಡ ಕವಿಕಲಿ ಚಾವುಂಡರಾಯ ’ಆ ಭವ್ಯತೆಗೊರ್ ಪ್ರತಿಮೆಯನಾಶಿಸಿ ಪುಡುಕುತಿರೆ ಅನುಭವ ಭೂಮತೆಗಾಕಾರವ ಕೋರುತ್ತಿರೆಯಿರೆ’ ಶ್ರವಣಬೆಳಗೊಳದ ಆ ಮಹಾ ಕಲ್ವೆಟ್ಟಿನ ಕೋಡಿನಲ್ಲಿ ನಿನ್ನ ಸ್ವರೂಪವನ್ನು ಕಾಣುತ್ತಾನೆ.
ಬಯ್ಗಿನ ಬಾನ್ಗಿದಿರೆದ್ದು ಆ ಶ್ರವಣನ ಗಿರಿಚೂಡಂ,
ಭೀಮಂ, ರುಂದ್ರಂ, ಆಕಾಶೋನ್ನತ ಗೂಢಂ!
ನಿಂದನ್ ನಟ್ಟಾ ಎಡೆಯೊಳೆ ರಸಯೋಗಪ್ರತಿಭಾರೂಢಂ:
ಕಂಡನ್; ಕಂಡನ್; ಕಂಡನ್; ಕಂಡನ್;
ಕೊರೆಯುವವೋಲ್ ಕರೆಯುವವೋಲ್ ನೋಡಿದನಾ ಕಲ್ ಗುಂಡನ್.
ಕಾಣ್ಕೆಯೆ ಕಂಡರಿಸಿದವೋಲ್ ಮೂಡಿದನಾ ಗೋಮಟೇಶಂ,
ತುಂಬಿದ ಶ್ರೀಗಾತ್ರಕೆ ಕುನಿಯಿತೊ ಎನೆ ದಿಗ್‌ದೇಶಂ,
ಸಾರ್ಥಕಮಾಗಲ್ ಚಾವುಂಡೇಶ್ವರ ಭೂಮಾವೇಶಂ!
ಆ ಕಂಡುದನೆಯೆ ಕಂಡರಿಸಿದನೈಸಲೆ ಶಿಲ್ಪಿ,
ಕನ್ನಡನಾಡಿಗೆ ಕಣ್ಣಾಗಲ್ ಪೆರ‍್ಮೆಯ ಪೆರ್‌ಬಂಡೆಯ ಕಲ್ ಕಲ್ಪಿ!
ಶ್ರವಣಬೆಳಗೊಳದ ಗೊಮ್ಮಟಮೂರ್ತಿಯು ಮೂಡಿರಬಹುದಾದ ಸಂದರ್ಭದ ಸಾಕ್ಷಾತ್ಕಾರವಾದ ಮೇಲೆ, ಬಾಹುಬಲಿಯ ವೀರ-ತ್ಯಾಗಗಳ ದರ್ಶನ ಕವಿತೆಯಲ್ಲಿದೆ. ದಿಗ್ವಿಜಯದಿಂದ ಮತ್ತನಾದ ಭರತ ತನ್ನ ಗೆಲುವಿಗೆ ’ಆ ವೃಷಭಗಿರಿ ಮೇಖಳಾಭಿತ್ತಿಯೊಳ್ ಆತ್ಮೀಯ ವಿಶ್ವ ವಿಶ್ವಂಭರಾ ವಿಜಯಪ್ರಶಸ್ತಿಯಂ’ ಕೆತ್ತಿಸಲೆಂದು ಹೋಗಿ ನೋಡಿದರೆ, ಅಲ್ಲಿ ಜಾಗವೇ ಇಲ್ಲವೆನ್ನುವಷ್ಟು ವಿಜಯಪ್ರಶಸ್ತಿಗಳನ್ನು ಅವನಿಗಿಂತ ಹಿರಿಯ ರಾಜರು ಕೆತ್ತಿಸಿಬಿಟ್ಟದ್ದರಂತೆ! ಅದರಿಂದಲೂ ನಿರಾಶನಾಗದ ಭರತ
ಕೀರ್ತಿವಶನಾಗಿ
ಹಮ್ಮಿಗಡಿಯಾಳಾಗಿ ಬಿದಿಯ ನಗೆಗೀಡಾಗುವೋಲ್
ದಂಡರತ್ನದಿ ಸೀಂಟಿ ಆ ಪ್ರಶಸ್ತಿಯೊಳಂದನಳಿಸಿ
ಕಂಡರಣೆಗೈಸಿದನ್ ತನ್ನೀ ಪ್ರಶಸ್ತಿಯಂ,
ಶಾಶ್ವತವನರಿಯದೀ ನಶ್ವರ ಪ್ರಶಸ್ತಿಯಂ:
ಮುಂದೆ ಭರತನ ವಿಜಯಪ್ರಶಸ್ತಿ ಆರು ಕಂದ ಪದ್ಯಗಳಲ್ಲಿ ಬರೆಯಲ್ಪಟ್ಟಿದೆ. ಕೊನೆಯ ಪದ್ಯದಲ್ಲಿ ’ಭರತೇಶ್ವರನಿಂತೀ ತೆರದಿಂ ನೆಗೞ್ದ ತನ್ನ ಕೀರ್ತಿಯನೀ ವಿಖ್ಯಾತ ವೃಷಭಾದ್ರಿಯೊಳ್ ಸುರಗೀತಯಶಂ ನಿಳಿಸಿದಂ ನೆಲಂ ನಿಲ್ವಿನೆಗಂ’ ಎಂದು ಬರುತ್ತದೆ. ಭೂಮಿಯಿರುವವರೆಗೂ ಭರತನ ಯಶಸ್ಸು ನಿಲ್ಲಬೇಕೆಂಬುದು ಆತನ ಆಸೆ. ಅಂತಹ ಆಸೆಗಳೇ ನಮ್ಮ ಇಂದಿನ ದುರ್ದಶೆಗೆ ಕಾರಣವಾಗಿವೆ ಎಂಬುದನ್ನು ಮನಗಾಣಬಹುದು.
’ನಿಲ್ವಿನೆಗಂ ನೆಲಂ!’
ಅಧಿಕಾರ ಮೋಹಕ್ಕೆ ದರ್ಪಕ್ಕೆ ಏಂ ಪೈತ್ಯಮೇಂ ಚಲಂ?
ಅಂದಿನಾ ಶನಿಯೆ ತಾನಿಂದಿಗೂ ಕದಡುತಿಹುದೆಮ್ಮ ಬಾಳಂ.
ಆ ರೋಷ ಆ ದ್ವೇಷ ಆ ಅಹಂಕಾರದಾವೇಶಗಳೆ
ಪಿಡಿದಿರ್ಪವಲ್ತೆ ಪೇಳಿಂದಿಗೂ ರಾಜ್ಯಸೂತ್ರಂಗಳಂ?
ವಹಿಸಿರ್ಪವಲ್ತೆ ರಣನಾಕಕೆ ಶಕುನಿಪಾತ್ರಂಗಳಂ?
ಆದರೆ ಅಂದು ಅಣ್ಣ ಭರತನ ರೋಷ ದ್ವೇಷ ಅಹಂಕಾರ ಕೀರ್ತಿಲೋಭ ರಾಜ್ಯದಾಹಗಳನ್ನು ಅಹಿಂಸಾ ಪರಮ ಧರ್ಮ ಕಲಿಯಾದ ಬಾಹುಬಲಿ ಗೆದ್ದಿದ್ದು ಹೇಗೆ? ಭರತನೂ ಸೇರಿದಂತೆ ವಿಶ್ವವೇ ನಿನ್ನ ಮುಡಿಗೆರಗುವಂತಾಗಿದ್ದು ಹೇಗೆ?
ನಿನ್ನಣ್ಣ ಭರತನೊಳ್ ಮೂರ್ತಿವೆತ್ತಿದಿರಾದ
ಆ ತಿಮಿರ ಅಸುರೀ ದೂತರ್ಕಳಂ
ನೀನಂದು ಧವಳಸತ್ತ್ವದಿ ಗೆಲ್ದೆಯಲ್ತೆ,
ಭರಂತವೆರಸಿ ವಿಶ್ವಮಡಿಗೆರಗುವೋಲ್!
ಭೋಗಶಿಖರದಿ ತ್ಯಾಗದಾ ಗೆಲ್ಗಂಬಮಂ ಮೆರೆದೆಯಲ್ತೆ
ಲೋಕಸರ್ವಂ ಮಣಿದು ಬೆರಗಾಗುವೋಲ್!
ಎಂದು ಪಂಪನ ಆದಿಪುರಾಣದಲ್ಲಿ ಬಾಹುಬಲಿ ಭರತನಿಗೆ ಹೇಳುವ ಮಾತುಗಳನ್ನೊಳಗೊಂಡ ಪದ್ಯಗಳನ್ನು ಉದ್ಧರಿಸಲಾಗಿದೆ. ಮುಂದೆ ಪರಮವೈರಾಗ್ಯಮೂರ್ತಿಗೆ ಲೋಕಕಲ್ಯಾಣಾರ್ಥವಾಗಿ ಕವಿ ಸಲ್ಲಿಸುವ ಪ್ರಾರ್ಥನೆ ಬರುತ್ತದೆ.
ನಿನ್ನ ನೆನೆವುದೆ ನಮಗೆ ಚೇತನೋದ್ಬೋಧನಂ;
ನಿನ್ನ ಪೂಜೆಯೆ ನಮಗೆ ಆಧ್ಯಾತ್ಮ ಸಾಧನಂ;
ಆ ದಿವ್ಯ ನಿಷ್ಕ್ರಿಯಾ ಕ್ರಿಯೆಗನ್ಯ ಕರ‍್ಮಂಗಳೆಲ್ಲ ಹಿಮಗಿರಿಯಿದಿರ ವಿಂಧ್ಯಂ!
ಹೇ ಸಾಧುಕುಲ ಶಾಶ್ವತ ಸ್ಫೂರ್ತಿ.
ಹೇ ವಿರಾಡ್ ಭವ್ಯ ಗುರುಮೂರ್ತಿ,
ನೆಲೆಸು ನಮ್ಮೆರ್ದೆಗಳಲಿ ನಿನ್ನಾ ತಪೋರೂಪದಿಂ;
ಜ್ಯೋತಿಯೆಡೆಗೆತ್ತು ನಮ್ಮಾತ್ಮಂಗಳಂ ಸ್ವಾರ್ಥತೆಯ ಈ ತಮಃಕೂಪದಿಂ;
ಭೂಮವಾಗಲ್ ನಮ್ಮ ಚೈತನ್ಯವನುದ್ಧರಿಸು ಈ ಅಲ್ಪತ್ವದಭಿಶಾಪದಿಂ!
ನಿನ್ನ ಕನ್ನಡ ನಾಡನೊಂದುಗೂಡಿಸಿ ಕಾಯಿ;
ನಿನ್ನ ಕನ್ನಡನುಡಿಯನಾಡಿ ಧನ್ಯವಾಗಲಿ ನಮ್ಮ ಬಾಯಿ;
ಅನ್ಯಭಾಷಾಮೋಹದಾಸ್ಯಕ್ಕೆ ಪಕ್ಕಾಗದಿರಲೆಮ್ಮ ತಾಯಿ!
ನಿನ್ನ ಭಾರತಭೂಮಿ ನಿನ್ನುನ್ನತಿಗೆ ಬೆಳೆದು ನಿಲ್ಗೆ;
ಪೃಥಿವಿಯ ಸುಧಕಾಂಕ್ಷೆ ಭಾರತೀಯ ಶಾಂತಿಮಯ ವಕಷ್ದಿಂ ಸಲ್ಗೆ;
ಮರ್ತ್ಯಾಮಾನಸಕೋಶಕವತರಿಸಿ ನಿತ್ಯಮತಿಮಾನಸಂ ಗೆಲ್ಗೆ;
ಪೂರ್ಣತಾ ಸಿದ್ಧಿಯಿಂದೀ ಧರೆಯನೇಗಳುಂ ಕ್ಷೀರಕೈವಲ್ಯಮಾಳ್ಗೆ;
ಶ್ರೀ ಮಸ್ತಕಾಬಿಷೇಕದೊಳುದಿಸಿ ನದನದಿಗಳೆಮ್ಮಿಳೆಯ ಸಿರಿಸೊಗಂ ಚಿರಂ ಬಾಳ್ಗೆ!
ಮುಂದೆ ಕುವೆಂಪು ಆಗಾಗ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಗೊಮ್ಮಟಗಿರಿಗೆ ಬೇಟಿಕೊಡುತ್ತಿರುತ್ತಾರೆ. ಬೇರೆಡೆಯ ಗೊಮ್ಮಟ ಮೂರ್ತಿಗೆ ೧೨ ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆದರೆ, ಇಲ್ಲಿ ಮೂರ್ತಿಗೆ ಪ್ರತಿವರ್ಷ ನಡೆಯುತ್ತದೆ. ೨೦೧೧ ಅಕ್ಟೋಬರ್ ೧೬ನೆಯ ತಾರೀಖು ೬೨ನೆಯ ಮಹಾಮಸ್ತಕಾಭಿಷೇಕ ನಡೆದದ್ದನ್ನು ಇಲ್ಲಿ ಸ್ಮರಿಸಬಹುದು.

Monday, February 06, 2012

ದೇವರು ರುಜು ಮಾಡಿದ ಸಿಬ್ಬಲುಗುಡ್ಡೆ!

ಜಡವೆಂಬುದೆ ಇಲ್ಲ; ಚೇತನವೇ ಎಲ್ಲ ಎಂದು ಸೃಷ್ಟಿಯ ಸರ್ವದರಲ್ಲಿಯೂ ಚೇತನವನ್ನು ಕಾಣುವ ಕವಿಯ ಮನೋಧರ್ಮ ನೂರಾರು ಕವಿತೆಗಳಲ್ಲಿ ವ್ಯಕ್ತವಾಗಿದೆ. ಹುಲ್ಲಿನೆಸಳ ತುದಿಯ ಹನಿಯನ್ನು ತೃಣಸುಂದರಿ ಮೂಗಿನ ಮುತ್ತಿಗೆ ಹೋಲಿಸಿದಂತೆ ಮಲೆನಾಡಿನ ಮಳೆಗಾಲದಲ್ಲಿ ತೊಯ್ಯುವ ಸಹ್ಯಾದ್ರಿ ಪರ್ವತ ಶಿಖರಗಳನ್ನು ಪಟ್ಟಾಭಿಷಕ್ತರಾಗುತ್ತಿರುವ ರಾಮ ಸೀತೆಯರಿಗೆ ಹೋಲಿಸುವಲ್ಲಿಯೂ, ಕಿರುಉಪೆಮಗಳನ್ನು ಸೃಷ್ಟಿಸಿದಂತೆ ಮಹೋಪಮೆಗಳನ್ನು ಸೃಷ್ಟಿಸುವಲ್ಲಿಯೂ ಕವಿಪ್ರತಿಭೆ ಹಲವಾರು ಸಂಧರ್ಭಗಳಲ್ಲಿ ಬೆರಗುವೊಡೆದಿರುವುದನ್ನು ಕಾಣಬಹುದು.

ಈ ಹಿನ್ನೆಲೆಯಲ್ಲಿ ಸಿಬ್ಬಲು ಗುಡ್ಡೆ ಮತ್ತು ದೇವರು ರುಜು ಮಾಡಿದನು ಈ ಎರಡು ಕವಿತೆಗಳು ಸಾಕ್ಷಿಯಾಗಿವೆ. ಸಿಬ್ಬಲುಗುಡ್ಡೆಯ ಹೊಳೆಯಲ್ಲಿ ಈಜುವಾಗಲೇ ದೇವರ ರುಜು ಕವಿಗೆ ಕಂಡಿದ್ದು!

ತೀರ್ಥಹಳ್ಳಿಯಿಂದ ಸುಮಾರು ಎರಡೂವರೆ ಮೈಲಿ ದೂರದಲ್ಲಿ ಮೇಳಿಗೆ ಎಂಬ ಹಳ್ಳಿ. ಅಲ್ಲಿಂದ ಒಂದೂವರೆ ಮೈಲಿ ಕಾಡಿನ ಕಾಲುದಾರಿಯಲ್ಲಿ ನಡೆದು ಹೋದರೆ ಸಿಬ್ಬಲುಗುಡ್ಡೆ ಸಿಕ್ಕುತ್ತದೆ. ಈ ಸ್ಥಳ ಹಳ್ಳಿಯೂ ಅಲ್ಲ, ಊರೂ ಅಲ್ಲ. ಅಲ್ಲಿ ಇರುವುದೊಂದೇ ಕಟ್ಟಡ: ಗುಡಿಸಲಿನಂತೆ ತೋರುವ ಗಣೇಶನ ಗುಡಿ. ಅಲ್ಲಿಯ ಗುಡಿಯ ಅರ್ಚಕ. ಬೇರೆ ಮನೆಗಳಿಲ್ಲ, ಜನವಿಲ್ಲ. (ಈಗ ದೇವಾಲಯ ನಿರ್ಮಾಣವಾಗಿದೆ). ನವಿಲುಕಲ್ಲಿನಿಂದ ಸಿಬ್ಬಲುಗುಡ್ಡೆಗೆ ಹೋಗಬಹುದು.

ಗುಡಿಯ ಹಿಂದೆ ನಿಬಿಡ ನಿರ್ಜನಾರಣ್ಯಗಳ ನಡುವೆ ಹರಿಯುವ ತುಂಗೆ. ಆಚೆ ದಡದಲ್ಲಿ ತುಸು ಹಳದಿ ಬಣ್ಣದ ಮಳಲ ರಾಶಿ, ಅದರಂಚಿನಲ್ಲಿ ಹಚ್ಚ ಹಸುರಿನ ವನಪಂಕ್ತಿ. ಗುಡಿಯ ಹಿಂಭಾಗದ ನೀರಿನಲ್ಲಿ ನಿರ್ಭೀತಿಯಿಂದ ಚಲಿಸುವ ದೊಡ್ಡ ದೊಡ್ಡ ಮೀನುಗಳು. ಈ ದೇವರ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ. ಅವು ವಿಘ್ನೇಶನ ರಕ್ಷೆಯಲ್ಲಿ ಬೆಳೆದು ವಿಹರಿಸುತ್ತಿವೆ. ಮಲೆನಡುವಣ ಹೊಳೆಯ ಸೊಬಗಹುದಾಣ ಸಿಬ್ಬಲುಗುಡ್ಡೆಯನ್ನು ಕುರಿತು ಅದೇ ಹೆಸರಿನ ಸಾನೆಟ್ಟೊಂದು ೨೯-೪-೧೯೩೬ರಲ್ಲಿ ರಚಿತವಾಗಿದೆ.
ಮೇಲೆ ಬಾನುಕ್ಕುನೀಲಿಯಲಿ ತೇಲುತಿದೆ ರವಿ;
ಸುತ್ತುಂ ದಿಗಂತಲೀನಮನಂತ ವನಪಂಕ್ತಿ
ರಾಜಿಸಿದೆ, ಹೊಳೆಗೆ ಹಸುರಂಚಾಗಿ. ಸುಖ ಶಾಂತಿ
ಜೊತೆಗೂಡಿ ಪರಿವಂತೆ ಸೌಂದರ‍್ಯಮತ್ತ ಕವಿ.
ಹೃದಯದಲಿ, ಹಬ್ಬಿದ ಮಳಲುಹಳದಿಯನಪ್ಪಿ
ಪ್ರವಹಿಸಿದೆ ತುಂಗಾ ಸಲಿಲ ನೀಲಿಮಾಪ್ರೀತಿ
ಪ್ರೇಮ ಸಂಗೀತಮಂ ಪಾಡಿ . . . . ಏಂ ನಿರ್ಭೀತಿ
ಮೀಂಗಳಿಗೆ! . . . . 
ಇದು ಸಿಬ್ಬಲುಗುಡ್ಡೆಯ ಚಿತ್ರಣ. ಈ ಚಿತ್ರದೊಳಗೆ ಕವಿಯೂ ಸೇರಿದ್ದಾನೆ. ನಿಸರ್ಗದೊಳಗೆ ತಾನೂ ಸೇರಿಹೋದಾಗಲೇ ಕಬ್ಬಿಗನಿಗಾಗಲೀ ಸಹೃದಯನಿಗಾಗಲೀ ಅದರ ವಿಸ್ಮಯ ತೆರೆದುಕೊಳ್ಳುವುದು. ಮುಂದಿನ ಭಾಗದಲ್ಲಿ ಕವಿ ಸಂಪೂರ್ಣ ಪರವಶರಾಗಿ ಹೋದ ಚಿತ್ರಣ ಬರುತ್ತದೆ.
ರಮ್ಯತೆಗೆ ತಿಲಕವಿಟ್ಟಂತೊಪ್ಪಿ
ಅದೊ ಹಾರಿ ಬರುತಲಿವೆ ನೀರ‍್ಕಾಗೆ ಬೆಳ್ಳಕ್ಕಿ,
ವನಪಟದ ಭಿತ್ತಿಯಲಿ ನೂರು ಕರಿಬಿಳಿ ಚುಕ್ಕಿ,
ಪ್ರಾಣವೇ ವರ್ಣಚಿತ್ರಂ ಬರೆಯುತಿರುವಂತೆ
ಪ್ರಾಣಮಯವಾಗಿ! ದರ್ಶನಕೆ ಕಬ್ಬಿಗನ ಮೈ
ಹೊಳೆಯುವಂತೆ, ನೀರಂತೆ, ಬಾನಂತೆ, ಬನದಂತೆ
ಪುಲಕಿತಂ, ಪರವಶಂ, ಪಸುಳೆವೋಲ್ ತಕ್ಕತೈ!
ರಮ್ಯತೆಗೆ ತಿಲಕವಿಟ್ಟಂತೊಪ್ಪಿ ಅದೊ ಹಾರಿ ಬರುತಲಿವೆ ನೀರ‍್ಕಾಗೆ ಬೆಳ್ಳಕ್ಕಿ, ವನಪಟದ ಭಿತ್ತಿಯಲಿ ನೂರು ಕರಿಬಿಳಿ ಚುಕ್ಕಿ - ಈ ದೃಶ್ಯ ಅಲ್ಲಿ ಸರ್ವಸಾಮಾನ್ಯವಾಗಿತ್ತು ಅನ್ನಿಸುತ್ತದೆ. ೨೮-೧-೧೯೩೭ರ ರಚನೆಯಾಗಿರುವ ದೇವರು ರುಜು ಮಾಡಿದನು ಕವಿತೆಗೆ ಕಾರಣವಾಗಿರುವುದು ಇದೇ ದೃಶ್ಯ! ಈ ದೃಶ್ಯವನ್ನು ಕವಿ ಮತ್ತೆ ಮತ್ತೆ ಕಂಡಿದ್ದಾರೆ. ಕವಿಯ ಕಮಲಯಾನದ ಕಲಾವಿಮಾನ ಬಂದಿಳಿಯುವ ಒಂದು ವಿಮಾನ ನಿಲ್ದಾಣ ಎನ್ನಬಹುದು ಸಿಬ್ಬಲುಗುಡ್ಡೆಯ ಈ ದೃಶ್ಯ!

ಸೂರ್ಯೋದಯ, ಸೂರ್ಯಾಸ್ತ, ಪ್ರಕೃತಿ ವೀಕ್ಷಣೆ, ಬೇಟೆಯಂತೆಯೇ ಕವಿಗಿದ್ದ ಮತ್ತೊಂದು ಆಸಕ್ತಿಯೆಂದರೆ ಈಜುವುದು. ಅದರಲ್ಲೂ ತುಂಗಾನದಿಯಲ್ಲಿ ಈಜುವುದೆಂದರೆ ಕವಿಗೆಲ್ಲಿಲ್ಲದ ಪ್ರೀತಿ. ಆದಿನ ಕವಿ ನೀರಿನಲ್ಲಿ ಮನದಣಿಯೆ ಈಜಿ, ಕೊನೆಯಲ್ಲಿ ನೀರಿನಲ್ಲಿ ಮೇಲ್ಮುಖವಾಗಿ ಮಲಗಿ ತೇಲುತ್ತಿರುತ್ತಾರೆ. ಆಗ ಕಣ್ಣೀಗೆ ಬೀಳುತ್ತದೆ ನೀಲಿಯಾಕಾಶ. ಅದಕ್ಕೆ ಆಧಾರಕೊಟ್ಟು ನಿಂತಿರುವಂತೆ ಕಾಣುವ ಹಸಿರು ವನರಾಜಿ. ಆ ನೀಲಿಯಾಕಾಶದ ಹಿನ್ನೆಲೆಯಲ್ಲಿ ಆಗಾಗ ಹಕ್ಕಿಗಳ ಪಂಕ್ತಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿರುತ್ತವೆ. ಅವುಗಳನ್ನು ಬೆಸೆದಿದ್ದ ರೇಖಾವಿನ್ಯಾಸ ಕವಿಗೆ ದೇವರು ಮಾಡಿದ ರುಜುವಿನಂತೆ ಕಾಣುತ್ತದೆ. ಕವಿ ರಸವಶನಾಗಿಬಿಡುತ್ತಾನೆ. ಆ ರಸ ಸಮಾಧಿಯಿಂದೇಳುವಷ್ಟರಲ್ಲಿ, ಕವಿ ಕಂಡ ದರ್ಶನದ ವಾಗ್ರೂಪವೇ ಈ ಕವಿತೆ.
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!
ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!
ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು.
ಹೂಬಿಸಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ‍್ತೊದಲು
ರಂಜಿಸೆ ಇಕ್ಕೆಲದಲಿ ಹೊಮ್ಮಳಲು
ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲೆಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!
ಇದು ದೇವರ ರುಜುವನ್ನು ಕವಿ ಕಂಡಾಗ ಇದ್ದ ಬಾಹ್ಯ ಜಗತ್ತು! ಆದರೆ ಆ ಬಾಹ್ಯ ಜಗತ್ತು ಸಚೇತವಾಗಿತ್ತು. ಆಕಾಶದ ನೀಲಿನಗೆ, ಹಕ್ಕಿಗಳಿಂಚರ, ಬಂಡೆಗಳ ನಡುವೆ ಹರಿಯುತ್ತಿರುವ ನೀರಿನ ಮಂಜುಳ ನಿನಾದ, ನದಿ, ನದಿಯ ಮರಳು ಎಲ್ಲವೂ ಸಚೇತನವಾಗಿಯೇ ಇದ್ದವು. ಇವೆಲ್ಲವೂ ಸಚೇತನವಾಗಿಯೇ ಇರುವಂತೆ ಮಾಡಿರುವ ಪರಾತ್ಪರವಸ್ತು ಯಾವುದೋ ಅದೇ ಪರಾತ್ಪರ ತನ್ನನ್ನು ತಾನು ಪ್ರಕಟಗೊಳಿಸಿಕೊಳ್ಳುತ್ತಿರುವುದಾಗಿ ಹೇಳಿಕೆಯೋಂದನ್ನು ಇತ್ತು ಆ ತನ್ನ ಮಧುಸೌಂದರ್ಯದ ಮಧುರ ಪ್ರಣಾಳಿಕೆಗೆ ಬೆಳ್ಳಕ್ಕಿಯ ಹಾರಾಟದ ಪಂಕ್ತಿಯ ನೆಪದಲ್ಲಿ ರುಜು ಹಾಕಿದಂತೆಯೂ ಕವಿ ದರ್ಶನಕ್ಕೆ ಹೊಳೆಯುತ್ತದೆ (ಎಸ್.ವಿ.ಪಿ). ಚಿರಚೇತನ ತಾನಿಹೆನೆಂದು ಹೇಳುತ್ತಿರುವಂತೆ, ತಾನು ರಚಿಸಿದ ಕಲಾಕೃತಿಗೆ ತನ್ನ ಸಹಿಯನ್ನು ಹಾಕುವ ಕಲೆಗಾರನಂತೆ ದೇವರು ಇಲ್ಲಿ ತಾನು ಸಚೇತನವಾಗಿರಿಸಿರುವ ಸುಂದರ ಪ್ರಕೃತಿಯ ಚಿತ್ರಕ್ಕೆ ತನ್ನ ಸಹಿಯನ್ನು ಹಾಕುತ್ತಾನೆ; ಹಾರುವ ಹಕ್ಕಿಗಳ ಪಂಕ್ತಿಯ ನೆಪದಲ್ಲಿ!
ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,
ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!
ಈ ಕವಿತೆಯ ಬಗ್ಗೆ ಎಸ್.ವಿ.ಪಿ.ಯವರ ಮನದುಂಬಿದ ಮಾತುಗಳು ಹೀಗಿವೆ: ಈ ಕವನದಲ್ಲಿ ಕುವೆಂಪು ಅವರ ಕಾವ್ಯಕಲೆ ವಿಶ್ವತಾಸಂಸ್ಪರ್ಶಿಯೂ ಬ್ರಹ್ಮದರ್ಶಿಯೂ ಆಗಿರುವುದನ್ನು ನಾವು ಕಾಣುತ್ತೇವೆ. ಇಂತಹ ಕವನಗಳಲ್ಲಿ ನಾವು ಪದಗಳನ್ನು ಕಾಣುವುದಿಲ್ಲ. ಸರಸ್ವತಿಯ ಚರಣಚಿಹ್ನೆಗಳನ್ನೆ ಕಾಣುತ್ತೇವೆ.

ನಾನು ಪದವಿ ತರಗತಿಯಲ್ಲಿದ್ದಾಗ ಈ ಕವನ ಪಠ್ಯಪುಸ್ತಕದಲ್ಲಿತ್ತು. ಅದನ್ನು ಪಾಠ ಮಾಡಲು ಪ್ರಾರಂಭಿಸುವ ಮೊದಲು ಟಿ.ಕೆ. ಶಿವಣ್ಣ ಎಂಬ ಪ್ರಾಧ್ಯಪಕರು, ಈ ಜಗತ್ತಿನಲ್ಲಿ ಎಷ್ಟೊಂದು ಜನರಿದ್ದಾರೊ ಅಷ್ಟೊಂದು ವೆರೈಟಿ ಸಹಿಗಳಿದ್ದಾವೆ. ಏನು ಚೆಂದ, ಏನು ಅಂದ! ಇನ್ನು ದೇವರ ರುಜು ಹೇಗಿದ್ದಿರಬಹುದು? ಹೇಗಿದ್ದರಿಬಹುದು ಎನ್ನುವುದಕ್ಕಿಂತ ದೇವರಿಗೊಂದು ರುಜುವನ್ನು ಕಲ್ಪಿಸಿರುವುದರಲ್ಲಿ ಹಾಗೂ, ಬಿಡಿಸಿದ ಚಿತ್ರದ ಮೂಲೆಯೊಂದರಲ್ಲಿ ಸಹಿ ಮಾಡುವ ಕಲಾವಿದನಂತೆ, ಸೃಷ್ಟಿಯೆಂಬ ಮಹದ್‌ಚಿತ್ರವನ್ನೇ ರಚಿಸಿದ ದೇವರೆಂಬ ಕಲೆಗಾರನ ಸಹಿಯ ಕಲ್ಪನೆಯಲ್ಲಿ ಕವಿಯ ಅನನ್ಯತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದ ಮಾತುಗಳು, ಇಂದಿಗೂ ಹಾರುವ ಹಕ್ಕಿಗಳನ್ನು ನೋಡಿದಾಗ ಮತ್ತೆ ಮತ್ತೆ ನೆಪಾಗುತ್ತವೆ.