Friday, January 31, 2014

ಕಥೆ ಹೇಳೊ ತಾತಯ್ಯ

ಸಂಕ್ರಾಂತಿಯ ಮುನ್ನಿನ ದಿನಗಳು. ಇಡೀ ಜಗತ್ತನ್ನು ಕಬಳಿಸಿದಂತೆ ಕಾಣುವ ಮಂಜು. ಚಳಿಗೆ ಕೈಕಾಲುಗಳೆಲ್ಲ ಮರುಗಟ್ಟಿ ಹೋಗುವಂತಹ ವಾತಾವರಣ. ಆದರೆ ತಾತಯ್ಯ ಮಾತ್ರ ರಾಶಿ ಕಣದಲ್ಲಿ ಮಲಗುವ ತನ್ನ ವಾರ್ಷಿಕ ಕಾರ್ಯಕ್ರಮವನ್ನು ನಿಲ್ಲಿಸುವನಲ್ಲ. ನಾನು ಚಿಕ್ಕವನಾಗಿದ್ದಾಗಲಿಂದಲೂ ಈ ತಾತಯ್ಯ ತನ್ನ ಅವಿಭಕ್ತ ಕುಟುಂಬದ ಎಲ್ಲ ಮಕ್ಕಳನ್ನು ಕಟ್ಟಿಕೊಂಡು ಕಣದ ಮೂಲೆಯಲ್ಲಿ ಬೆಂಕಿ ಕಾಯಿಸುತ್ತಾ, ಕಥೆ ಹೇಳುತ್ತಾ ರಂಜಿಸುವ ದೃಶ್ಯವನ್ನು ನೋಡುತ್ತಿದ್ದೇನೆ. ಆತನಿಗಿನಿತೂ ಬೇಸರವಿಲ್ಲ. ತನ್ನ ಕಥೆಯನ್ನು ಆರಂಭಿಸುತ್ತಲೇ, ತನ್ನೊಂದಿಗೆ ಕಥೆ ಕೇಳುವವರನ್ನೂ ಕಣ, ಮನೆ, ಊರು ಹೀಗೆ ಇಡೀ ಜಗತ್ತನ್ನೇ ಬಿಟ್ಟು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತಾನೆ. ಶತಕದ ಅಂಚಿನಲ್ಲಿರುವ ವಯೋವೃದ್ಧ ತಾತಯ್ಯ ಹತ್ತು ಮಕ್ಕಳ ತಂದೆ. ತನ್ನ ಮುಂದಿನ ನಾಲ್ಕು ತಲೆಮಾರುಗಳನ್ನು ಕಂಡವನು. ಆತನ ಕಿರಿಯ ಮಗನ ಕಿರಿಯ ಮಗ ನಾನು. ಚಿಕ್ಕಂದಿನಿಂದಲೂ ಅಷ್ಟೆ. ನನ್ನನ್ನು ಕಂಡರೆ ವಿಶೇಷ ಅಕ್ಕರೆ. ಆತ ಹೇಳುತ್ತಿದ್ದ ಕಥೆಗಳನ್ನು ಹೆಚ್ಚು ಉತ್ಸುಕತೆಯಿಂದ ಕೇಳುತ್ತಿದ್ದವನು ನಾನು. ಈಗೀಗ ಊರ ಮಕ್ಕಳ ಬಾಯಲ್ಲಿ ‘ಕಥೆ ಹೇಳೊ ತಾತಯ್ಯ’ನಾಗಿ ಮೊದಲಿಗಿಂತಲೂ ಹೆಚ್ಚಾಗಿ ಪ್ರಚಲಿತದಲ್ಲಿದ್ದಾನೆ. ತಾತಯ್ಯನ ಮಕ್ಕಳು ಮೊಮ್ಮಕ್ಕಳು  ಬಹುತೇಕ ಮಂದಿ ಉದ್ಯೋಗ ನಿಮಿತ್ತವಾಗಿಯೋ ಮತ್ತಾವುದೊ ಕಾರಣದಿಂದಾಗಿಯೋ ಬೇರೆ ಬೇರೆ ಊರುಗಳಲ್ಲಿ ನೆಲೆಗೊಂಡಿದ್ದಾರೆ. ಆದರೂ ನಲವತ್ತಕ್ಕೆ ಇಳಿಯದ ಸಂಸಾರದ ಸದಸ್ಯರೆಲ್ಲರೂ ತಾತಯ್ಯನ ಯಜಮಾನಿಕೆಯನ್ನು ಅನಿವಾರ್ಯವೆಂಬಂತೆ ಒಪ್ಪಿಕೊಂಡಿದ್ದಾರೆ.
ನಾನು ಕಳೆದ ಬಾರಿ ಊರಿಗೆ ಹೋದಾಗ ತಾತಯ್ಯ ಆಗಾಗ ಹೇಳುತ್ತಿದ್ದ ನಮ್ಮ ವಂಶದ ಮೂಲಪುರುಷನ ಕಥೆಯನ್ನು ಹೇಳಬೇಕೆಂದು ತಾತಯ್ಯನಲ್ಲಿ ಕೇಳಿದ್ದೆನಾದರೂ, ಕೇಳಲು ನನಗಾಗಲಿ ಹೇಳಲು ತಾತಯ್ಯನಿಗಾಗಲಿ ಬಿಡುವಾಗಿರಲಿಲ್ಲ. ಆದರೆ ಈ ಬಾರಿ ಕಣಗಾಲಕ್ಕೆ ಸರಿಯಾಗಿ ಊರಿಗೆ ಹೋಗಿದ್ದರಿಂದ, ತಾತಯ್ಯನೇ ‘ರಾತ್ರಿ ನಮ್ಮ ಮೂಲಪುರುಷನ ಕಥೆ ಹೇಳುತ್ತೇನೆ’ ಎಂದು ನಾನು ಹೋದ ತಕ್ಷಣ ಹೇಳಿಬಿಟ್ಟಿದ್ದ. ತಾತಯ್ಯ ಮಾತಿಗೆಂದೂ ತಪ್ಪಿದವನಲ್ಲ. ಈಗಲೂ ಸುತ್ತಮುತ್ತಲ ಊರಿನವರು ತಾತಯ್ಯನನ್ನು ‘ಧರ್ಮರಾಯ’ನೆಂದು ಕರೆಯುವುದನ್ನು ಕಂಡಾಗ ನನಗೆ ಖುಷಿಯಾಗುತ್ತದೆ. ನನಗನ್ನಿಸುತ್ತದೆ, ನನ್ನ ತಾತಯ್ಯನಿಗೆ ಮಾತಿಗೆ ತಪ್ಪಲೇ ಬೇಕಾದಂತ ಪರಿಸ್ಥಿತಿ ಬಂದೇ ಇಲ್ಲವೆಂದು. ಏಕೆಂದರೆ ತಾತಯ್ಯನ ಮನಸ್ಸೇ ಅಂತಹವುದು. ಅತಿಯಾಸೆಯಾಗಲಿ ದುಬಾರಿ ಕನಸುಗಳಾಗಲಿ ಇಲ್ಲದ ತಾತಯ್ಯನದು ಕೆಲವೊಮ್ಮೆ ಗಾಂಧಿಯನ್ನೂ ಮೀರಿಸುವಂತ ಸರಳತೆ.
ಸಂಜೆ ಏಳುಏಳೂವರೆಗಲ್ಲ ಊಟ ಮುಗಿಸಿದ ತಾತಯ್ಯ ಕಣಕ್ಕೆ ಹೊರಟು ನಿಂತಾಗ ಹತ್ತಾರು ಮಕ್ಕಳು ಅವನ ದಾರಿ ಹಿಡಿಯಲು ತುದಿಗಾಲಲ್ಲಿ ಕಾಯುತ್ತಿದ್ದವು. ನನ್ನ ಊಟ ಮುಗಿಯುತ್ತಲೆ, ಹೊಸದಾಗಿ ಕೊಂಡುತಂದಿದ್ದ ಒಂದು ಕಂಬಳಿಯನ್ನು ನನಗೆ ಕೊಡುತ್ತ ‘ಹೋಗಾನ’ ಎಂದ. ನಾವು ಕಣದ ಹತ್ತಿರ ಬರುವಷ್ಟರಲ್ಲಿ ಊರಿನ ಇನ್ನಿತರ ಕೆಲವು ಮಕ್ಕಳು ಮತ್ತು ದೊಡ್ಡವರು ಬೆಂಕಿ ಕಾಯಿಸುತ್ತಾ ಕಾಯುತ್ತಿದ್ದರು. ಕುಶಲೋಪರಿಗಳಾದ ತಕ್ಷಣವೇ ತಾತಯ್ಯ ಕಥೆ ಹೇಳುವುದಕ್ಕೆ ಚಡಪಡಿಸ ತೊಡಗಿದ. ಅದನ್ನು ಮನಗಂಡು ನಾನು ಒಂದೇಒಂದು ಪ್ರಶ್ನೆಯನ್ನು ಆತನ ಮುಂದಿಟ್ಟೆ. ‘ತಾತಯ್ಯ ಈ ವಯಸ್ಸಿನಲ್ಲಿ ನಿನಗೆ ಎಂದೂ ಈ ಸಂಸಾರದ ಭಾರ ಸಾಕು. ಸನ್ಯಾಸಿಯಾಗಬೇಕು. ದೇವರ ಪಾದ ಸೇರಬೇಕು. ಎಂದು ಅನ್ನಿಸಿಲ್ಲವೆ?’ ಎಂದ ನನ್ನ ಮುಖವನ್ನೇ ಮುಗುಳು ನಗುತ್ತಾ ನೋಡಿದ ತಾತಯ್ಯ ‘ನಿನ್ನ ಪ್ರಶ್ನೆಗೆ ಈ ಕಥೆಯಲ್ಲಿಯೇ ಉತ್ತರವಿದೆ. ಕೇಳು’ ಎಂದು ಕಥೆ ಹೇಳಲು ಪ್ರಾರಂಭಿಸಿದ. ಆವರಿಸಿದ ಹಿಮದ ನಡುವೆ ಚಟಿಲ್ ಚಟಿಲ್ ಎಂದು ಬೆಂಕಿಯ ನಡುವೆ ಬೆಳಗಿ ಬೂದಿಯಾಗುತ್ತಿದ್ದ ಹುಚ್ಚೆಳ್ಳು ಕಡ್ಡಿಯ ಹಿಂಬಾಗದಲ್ಲಿ ಹೊರಡುತ್ತಿದ್ದ ಹೊಗೆಯನ್ನು ಕ್ಷಣಮಾತ್ರದಲ್ಲಿ ತನ್ನ ತೆಕ್ಕೆಗೆ ತಗೆದುಕೊಳ್ಳುತ್ತಿದ್ದ ಹಿಮರಾಶಿಯಂತೆ ಕಥೆ ನಮ್ಮೆಲ್ಲರನ್ನೂ ತನ್ನ ಗರ್ಭದೊಳಗೆ ಸೇರಿಸಿಕೊಳ್ಳುತ್ತಾ ಸಾಗಲಾರಂಭಿಸಿತು.
***** ****  ***   **    *    **   ***  **** *****
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಆತ ಊರ ಗೌಡನೂ ಆಗಿದ್ದ. ಆತನೇ ನಮ್ಮ ವಂಶದ ಮೂಲಪುರುಷ ಮತ್ತು ಈ ಕಥೆಯ ನಾಯಕ. ರೈತಾಪಿ ಜನಗಳು ಕಾಲಕಾಲಕ್ಕೆ ಆಗುತ್ತಿದ್ದ ಮಳೆ ಬೆಳೆಯಿಂದಾಗಿ ಉಂಡುಟ್ಟು ಸುಖವಾಗಿ ಕಾಲ ಕಳೆಯುತ್ತಿದ್ದರು. ನಮ್ಮ ಮೂಲಪುರುಷನ ಹೆಸರು ಉತ್ತಮಗೌಡ. ಊರಿನ ಮೇಲೊಮ್ಮೆ ಶತ್ರುಗಳು ದಾಳಿ ಮಾಡಿದಾಗ, ಊರಿನವರ ಬೆಂಬಲದಿಂದ ಅವರನ್ನೆಲ್ಲ ಸದೆಬಡಿದು ರಾಜನಿಗೆ ಒಪ್ಪಿಸಿದ, ಗೌಡನಿಗೆ ಮಹರಾಜರು ಪುರುಷಸಿಂಹ ಅಂತ ಬಿರುದು ಕೊಟ್ಟಿದ್ದರು. ಹತ್ತು ತಲೆಮಾರು ಕೂತು ತಿಂದರೂ ಕರಗದ ಬಾರೀ ಆಸ್ತಿ. ಮನಮೆಚ್ಚಿದ ಮಡದಿ ಪದ್ಮವ್ವ. ಒಬ್ಬನೇ ಮಗ ರಾಯಗೌಡ. ಊರವರ ಕಣ್ಣಲ್ಲಿ ಸಾಕ್ಷತ್ ದೇವರ ಸಮಾನನಾದ ಗೌಡನು, ಅದಕ್ಕೆ ತಕ್ಕಂತೆ ಬಾಳುತ್ತಿದ್ದನು. ಮಗನಿಗೆ ಐದು ವರ್ಷಗಳಾದಾಗ, ಆತನಿಗೆ ಭಾರೀ ಅದ್ದೂರಿಯಾಗಿ ಜನ್ಮಮಹೋತ್ಸವವನ್ನು ಮಾಡಿದ. ನೂರಾರು ಜನ ಬಡವರಿಗೆ, ಸಾಧುಸಂತರಿಗೆ, ಬ್ರಾಹ್ಮಣರಿಗೆ ಕೈತುಂಬ ದಾನ ಮಾಡಿದ. ಎಲ್ಲವೂ ಸುಸೂತ್ರವಾಗಿ ನಡೆದು ಗೌಡನಲ್ಲಿ ಒಂದು ರೀತಿಯ ಧನ್ಯತೆಯ ಭಾವ ನೆಲೆಗೊಂಡಿದ್ದಾಗಲೇ ಹೆಂಡತಿ ಪದ್ಮವ್ವ ಅಕಾಲ ಮರಣಕ್ಕೆ ತುತ್ತಾದಳು. ಅದನ್ನು ಕಂಡ ಗೌಡ ಕಂಗೆಟ್ಟು ಹೋದ. ತಬ್ಬಲಿಯಾದ ಮಗನನ್ನು ತಬ್ಬಿಕೊಂಡು ಗೋಳಾಡಿದ. ಆಗ ಅಲ್ಲಿಗೆ ಬಂದ ಸನ್ಯಾಸಿಯೊಬ್ಬರು ಆತನಿಗೆ ಸಮಾಧಾನ ಮಾಡಿದರು. ‘ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಅವರು ಸತ್ತರು. ನಾಳೆ ನೀನೂ ನಾನೂ ಸಾಯಲೇಬೇಕು. ಇದೆಲ್ಲವೂ ಬರಿ ಕ್ಷಣಿಕ. ಹೆಂಡತಿ ಮಕ್ಕಳೆಂಬ ಮಾಯೆಯನ್ನು ತೊರೆ. ಆ ಭಗವಂತನಲ್ಲಿ ಮೊರೆ ಹೋಗು’ ಹೀಗೆ ಇನ್ನೂ ಏನೇನೊ ಹೇಳಿದರಂತೆ. ಎಲ್ಲವನ್ನು ಕೇಳಿಸಿಕೊಂಡ ಗೌಡ, ‘ಸ್ವಾಮಿ ನೀವು ಹೇಳುವುದೇನೊ ಸರಿ. ಆದರೆ ಈ ಐದು ವರ್ಷದ ಕಂದನಿಗೆ ಗತಿ ಯಾರು? ನಾನು ದೇವರನ್ನು ಸೇರುವುದಕ್ಕೆ ಏನೂ ಅರಿಯದ ಈ ಕಂದನನ್ನು ಅನಾಥನನ್ನಾಗಿ ಮಾಡಲೆ? ಅದಾಗದು. ನಾನೀಗ ತಂದೆಯ ಸ್ಥಾನದಲ್ಲಿದ್ದೇನೆ. ಅದನ್ನು ನಿಭಾಯಿಸಲೇ ಬೇಕು. ಕರ್ತವ್ಯ ವಿಮುಖನಾಗುವದನ್ನು ಯಾವ ದೇವರೂ ಮೆಚ್ಚಲಾರ. ಅಲ್ಲವೆ?’ ಅಂದನಂತೆ. ಅದಕ್ಕೆ ಆ ಸನ್ಯಾಸಿಯು, ‘ಅಯ್ಯಾ ಗೌಡ ನೀನು ಒಂದು ಕ್ಷಣ ಈ ಕ್ಷಣಿಕವಾದ ಜಗತ್ತಿನಿಂದ ದೂರವಾಗಿ ಯೋಚಿಸು. ನಿಜವಾಗಿಯೂ ಭಗವಂತನನ್ನು ಕಾಣುತ್ತೀಯ. ನನಗೆ ಗೊತ್ತು ನಿನಗೆ ನಿನ್ನ ಮಗನನ್ನು ಬಿಟ್ಟು ಬರಲು ಕಷ್ಟವಾಗುತ್ತದೆ ಎಂದು. ಆದರೆ ಈ ಸಣ್ಣ ಕಷ್ಟಕ್ಕೇ ಹೆದರಿ ಇದಕ್ಕಿಂತ ನೂರು ಸಾವಿರ ಪಟ್ಟು ಕಷ್ಟವನ್ನು ತಂದುಕೊಳ್ಳುತ್ತೀಯಾ? ಸಂಸಾರವೆಂಬುದು ಬಲು ಕಷ್ಟ. ನಿನ್ನ ಮಗನು ನಿನ್ನ ಮಗನಲ್ಲ. ಆತ ದೇವರ ಮಗ. ಕೊಟ್ಟ ದೇವರು ಕಾಯುವುದಿಲ್ಲವೆ? ಈಗ ನನ್ನ ವಿಷಯವನ್ನೇ ನೋಡು. ತೊಟ್ಟಿಲ ಕೂಸಿಗೆ ರಾಜ್ಯಪಟ್ಟವನ್ನು ಕಟ್ಟಿ ಸನ್ಯಾಸಿಯಾದವನು. ಇಗೊ. ನನ್ನ ಜೊತೆಯಲ್ಲಿ ಬಂದಿರುವ ಈ ಶಿಷ್ಯ, ಪೂರ್ವಾಶ್ರಮದಲ್ಲಿ ನನ್ನ ಮಗನಾಗಿದ್ದವನು. ಆತನೂ ಅಷ್ಟೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಪತ್ನಿಯ ಗರ್ಭದಲ್ಲಿದ್ದ ಕೂಸಿಗೇ ರಾಜ್ಯಪಟ್ಟವನ್ನು ಕಟ್ಟಿ ನನ್ನ ಹಿಂದೆ ಸನ್ಯಾಸಿಯಾಗಿ ಮೋಕ್ಷ ಸಾಧನೆ ಮಾಡುತ್ತಿದ್ದಾನೆ’ ಎಂದಾಗ ಅಚ್ಚರಿಗೊಂಡ ಗೌಡನು ‘ಸ್ವಾಮಿ ನೀವು ಹೇಳಿದ ಮಾತುಗಳಿಂದ ನೀವು ಮಹಾನ್ ವ್ಯಕ್ತಿಗಳಂತೆ ತೋರುತ್ತಿರುವಿರಿ. ನೀವು ಯಾರು? ಎಲ್ಲಿಯವರು? ನೀವೇನೊ ವೃದ್ದರು. ಆದರೆ ಈ ಯುವಕನು ಈ ಏರುಜವ್ವನದ ಕಾಲದಲ್ಲಿ ಏಕೆ ಸನ್ಯಾಸಿಯಾಗಿದ್ದಾರೆ? ನಿಮ್ಮ ಅಭ್ಯಂತರವಿಲ್ಲದಿದ್ದಲ್ಲಿ ತಿಳಿಸಿ. ನಿಮ್ಮ ಕಥೆಯನ್ನು ಕೇಳಿಯಾದರೂ ಈ ದುಃಖವನ್ನು ಮರೆಯುತ್ತೇನೆ’ ಎಂದು ಗೌಡನು ಪ್ರಾರ್ಥಿಸಿದ. ಅದಕ್ಕುತ್ತರವಾಗಿ ಆ ಹಿರಿಯ ಸನ್ಯಾಸಿಯು ‘ಗೌಡನೇ ಕೇಳು. ನನ್ನ ಕಥೆಯಿಂದ ನಿನ್ನ ದುಃಖ ಶಮನವಾಗುವದಾದರೆ ಆಗಲಿ. ಅಥವಾ ನಿನಗೆ ಈ ಕ್ಷಣಿಕ ಜಗತ್ತಿನ ಮೇಲಿರುವ ವ್ಯಾಮೋಹವೂ ಕಳೆಯಲಿ’ ಎಂದು ಕಥೆಯನ್ನು ಹೇಳಲು ಪ್ರಾರಂಭಿಸಿದನು.
***** ****  ***   **    *    **   ***  **** *****
ಪೂರ್ವಾಶ್ರಮದಲ್ಲಿ ನಾನು ಒಂದು ರಾಜ್ಯದ ರಾಜನಾಗಿದ್ದವನು. ವಿಶಾಲವಾದ ರಾಜ್ಯ. ಅದ್ದೂರಿಯಾದ ರಾಜಧಾನಿ. ಏಳು ಜನ ಹೆಂಡತಿಯರು. ಎಲ್ಲರೂ ಸುಂದರಿಯರೆ. ಆದರೆ ಲಗ್ನವಾಗಿ ಆರೇಳು ವರ್ಷಗಳೇ ಕಳೆದರು ಮಕ್ಕಳಾಗಲಿಲ್ಲ. ಇದೊಂದು ಚಿಂತೆಯನ್ನು ಬಿಟ್ಟು ಇನ್ನವುದೇ ಕೊರತೆ ನಮಗಿರಲಿಲ್ಲ. ರಾಜಗುರುಗಳ, ಹಿರಿಯರ ಆಸೆಯಂತೆ, ನಾನೂ ಪಟ್ಟದ ರಾಣಿಯೂ ನಲವತ್ತೆಂಟು ದಿನಗಳ ಕಾಲ ದೀಕ್ಷೆಯಲ್ಲಿದ್ದು ಸಂತಾನಲಕ್ಷ್ಮಿಯನ್ನು ಪೂಜಿಸಿದೆವು. ಆ ಸಂದರ್ಭದಲ್ಲಿ ನನ್ನ ರಾಣಿಯು ತನಗೆ ಬಿದ್ದ ಕನಸಿನ ವಿಚಾರವನ್ನು ಹೇಳಿ ತಮಗೆ ಪುತ್ರಸಂತಾನವಾಗುವುದಾಗಿ ದೇವದೂತನೊಬ್ಬನಿಂದ ಭರವಸೆ ಸಿಕ್ಕಿತು ಎಂದು ಹೇಳಿದಳು. ಆದರೆ ಆಕೆ ಕನಸಿನ ಪೂರ್ಣವಿಚಾರವನ್ನು ಯಾರಿಗೂ ಹೇಳಲಿಲ್ಲವೆಂದು ನಂತರ ತಿಳಿಯಿತು. ‘ನಿನ್ನ ಅಫೇಕ್ಷೆಯಂತೆ ನಿನಗೆ ಪುತ್ರಸಂತಾನವಾಗುವುದು. ಆದರೆ ಆ ವರಪುತ್ರನ ಮುಖದರ್ಶನಾದ ಕೂಡಲೇ ನಿನ್ನ ಪತಿಯು ಸಂಸಾರ ವೈರಾಗ್ಯದಿಂದ ಸನ್ಯಾಸಿಯಾಗುತ್ತಾನೆ. ಆ ಸನ್ಯಾಸಿಯೇ ತನ್ನ ತಂದೆಯೆಂದು ತಿಳಿದ ಕೂಡಲೆ ನಿನ್ನ ಮಗನೂ ಸನ್ಯಾಸಿಯಾಗುತ್ತಾನೆ’ ಎಂಬುದು ಆಕೆಗೆ ಕನಸ್ಸಿನಲ್ಲಿ ಸಿಕ್ಕ ಭರವಸೆಯ ಮಾತುಗಳು ಎಂದು. ಆಕೆಗೆ ಪುತ್ರಸಂತಾನವಾಗುತ್ತದೆ ಎಂದು ಸಂತೋಷವಾದರೂ, ಗಂಡನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ತನ್ನ ಅಂತಃಪುರದ ಕೆಳಗೆ ಗೌಪ್ಯವಾಗಿ ಒಂದು ನೆಲಮಾಳಿಗೆಯನ್ನು ನಿರ್ಮಿಸಿಸಿಕೊಂಡು, ತಾನು ಗರ್ಭವತಿ ಎಂದು ತಿಳಿದಾಕ್ಷಣ ತನ್ನ ನಂಬಿಕೆಯ ದಾಸಿಯೊಂದಿಗೆ ನೆಲಮನೆಯನ್ನು ಸೇರಿ ಯಾರಿಗೂ ತಿಳಿಯದಂತೆ ಇದ್ದುಬಿಟ್ಟಳು. ದಾಸಿಯೂ ಅಷ್ಟೆ. ತನ್ನ ಒಡತಿಯ ಆಸೆಯಂತೆ ಯಾರಿಗೂ ಹೇಳದೆ, ರಾಣಿಗೂ ಹೊರ ಜಗತ್ತಿಗೂ ಸೇತುವೆಯಾಗಿದ್ದಳು. ಎಷ್ಟು ದಿನವೆಂದು ಹೀಗಿರಲು ಸಾದ್ಯ. ಹೆಣ್ಣು ಎಷ್ಟೆಂದರೂ ಚಂಚಲೆ. ಅವಳಿಗೆ ಮತ್ತೊಂದು ಹೆಸರೇ ಅದು. ಶಿಶುಜನನವಾಗಿ ಹದಿನೈದು ದಿನಗಳಾದ ಮೇಲೆ ದಾಸಿಯು ನೀರು ತರಲು ಹೋಗಿದ್ದಾಗ ಯಾರಿಗೂ ಹೇಳಬೇಡವೆಂದು ತನ್ನ ಗೆಳತಿಯ ಕೂಡ ರಾಣಿಗೆ ಪುತ್ರಸಂತಾನವಾದ ವಿಷಯವನ್ನು ಬಾಯಿ ಬಿಟ್ಟಳು.
ಆದರೆ ಅಲ್ಲಿಗೆ ಬಡತನದಿಂದ ಹಸಿವಿನಿಂದ ಕಂಗೆಟ್ಟು ನೀರು ಕುಡಿಯಲು ಬಂದಿದ್ದ ಬ್ರಾಹ್ಮಣನೊಬ್ಬ ಅವರ ಮಾತುಗಳನ್ನು ಕೇಳಿಸಿಕೊಂಡು, ‘ಇನ್ನು ತನ್ನ ಬಡತನ ಅಳಿಯಿತು’ ಎಂದುಕೊಂಡು ಹೇಗೊ ಒಂದು ಮಾವಿನ ಹಣ್ಣನ್ನು ಸಂಪಾದಿಸಿಕೊಂಡು, ಅರಮನೆಗೆ ಬಂದು ರಾಜನಿಗೆ ಫಲವನ್ನಿತ್ತು ಆತನಿಗೆ ಗಂಡುಮಗುವಾಗಿರುವ ವಿಚಾರವನ್ನು ತಿಳಿಸಿದ. ರಾಜನಿಗೆ ಆಶ್ಚರ್ಯ! ಆದರೆ ಬ್ರಾಹ್ಮಣನ ಮಾತನ್ನು ತಳ್ಳಿಹಾಕುವಂತಿರಲಿಲ್ಲ. ಆತನೂ ಪುತ್ರಾಫೇಕ್ಷೆಯಿದ್ದವನಲ್ಲವೆ? ‘ನನಗೆ ತಿಳಿಯದ ವಿಚಾರ ನಿನಗೆ ಹೇಗೆ ತಿಳಿಯಿತು. ಸುಳ್ಳು ಹೇಳುತ್ತಿದ್ದೀಯ’ ಎನ್ನಲು, ಬ್ರಾಹ್ಮಣನು ನೆಲಮಾಳಿಗೆಯಲ್ಲಿ ಹಿರಿಯ ರಾಣಿ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ಬೇಕಾದರೆ ಪರೀಕ್ಷಿಸಿ ನೋಡಬಹುದು ಎಂದ. ಪರೀಕ್ಷಿಸಿ ನೋಡಿ ಬಂದವರು ಬ್ರಾಹ್ಮಣ ಹೇಳಿದ್ದು ನಿಜವೆಂದರು. ಬ್ರಾಹ್ಮಣನಿಗೆ ಜೀವನಾಶ್ರಯಕ್ಕೆ ಬೇಕಾದಷ್ಟು ದ್ರವ್ಯಗಳನ್ನು ಬಹುಮಾನವಾಗಿ ನೀಡಲಾಯಿತು.
ಸಂತೋಷಭರಿತನಾದ ರಾಜ ರಾಣಿಯನ್ನು ಅಭಿನಂದಿಸಿ, ಮಗುವನ್ನು ನೋಡಲು ಕಾತುರದಿಂದ ಹೋದ. ಮಗುವನ್ನೂ ನೋಡಿದ! ‘ನನ್ನ ಕೆಲಸವಾಯಿತು. ಈ ರಾಜ್ಯಕ್ಕೊಬ್ಬ ಉತ್ತರಾಧಿಕಾರಿ ಬಂದಾಯಿತು. ನನ್ನ ವಂಶವೂ ಮುಂದುವರೆಯುತ್ತದೆ’ ಎಂದುಕೊಂಡು ಸನ್ಯಾಸವನ್ನು ಸ್ವೀಕರಿಸಲು ಸಿದ್ದನಾದ. ರಾಣಿಯರು ಕಾಲಿಡಿದು ಬೇಡಿದರು. ಪುರಜನರು ಅಡ್ಡಿಪಡಿಸಿದರು. ಆದರೆ ಅದಾವುದನ್ನು ಗಣಿಸದೆ ರಾಜ ಸನ್ಯಾಸಿಯಾಗಿ ಅರಮನೆಯನ್ನೂ ರಾಜ್ಯಕೋಶಗಳನ್ನೂ ತೊರೆದು ಹೊರಟುಹೋದ. ಅತ್ತ ರಾಣಿಗೆ ರಾಜನ ಮೇಲೆ ವಿಪರೀತ ಕೋಪವುಂಟಾಯಿತು. ಮಗುವಿನ ಮುದ್ದಾದ ಮುಖವನ್ನು ನೋಡಿದ ಮೇಲಾದರೂ ಆತ ನಿಲ್ಲಬಹುದು ಎಂದುಕೊಂಡಿದ್ದಳು. ತಾಯಿಮಗುವನ್ನು ಅನಾಥರನ್ನಾಗಿಸಿ ಹೋದ ರಾಜನನ್ನು ‘ಕೈಲಾಗದವನು’ ಎಂದುಕೊಂಡು ಇಡೀ ರಾಜ್ಯಭಾರವನ್ನು ತನ್ನ ಕೈಗೆ ತಗೆದುಕೊಂಡಳು. ಒಂದು ಮೂವತ್ತೆರಡು ಅಂತಸ್ತಿನ ಸೌಧವನ್ನು ಕಟ್ಟಿಸಿ ಅದರಲ್ಲಿ ಸಕಲ ಸೌಕರ್ಯಗಳನ್ನು ಸಿದ್ಧಪಡಿಸಿದಳು. ರಾಜಕುಮಾರನ ಆಟಪಾಠಗಳಿಗೆ, ವಿಹಾರ ವಿನೋದಗಳಿಗೆಲ್ಲವಕ್ಕೂ ಅಲ್ಲಿಯೇ ವ್ಯವಸ್ಥೆ ಮಾಡಿದಳು. ಆತನ ವಿದ್ಯಾಭ್ಯಾಸಕ್ಕೂ ಏರ್ಪಾಡಾಯಿತು. ಅದರ ಜೊತೆಗೆ ಆ ಭವನದ ಸುತ್ತ ಯಾವ ಸಾಧು ಸನ್ಯಾಸಿಗಳೂ ಬರದಂತೆ ಕಟ್ಟೆಚ್ಚರ ವಹಿಸಿದಳು!
ಹೀಗೆ ಹದಿನೆಂಟು ವಸಂತಗಳನ್ನು ಕಳೆದ ರಾಣಿ ಅತ್ಯಂತ ಚೆಲುವೆಯರಾದ ಹತ್ತು ಜನ ಹೆಣ್ಣುಮಕ್ಕಳನ್ನು ತಂದು ರಾಜಕುಮಾರನಿಗೆ ಮದುವೆ ಮಾಡಿದಳು. ಕುಮಾರನು ಅವರೆಲ್ಲರೊಂದಿಗೆ ಶೃಂಗಾರ ವಿಹಾರ ವಿನೋದಗಳಲ್ಲಿ ಕಾಲ ಕಳೆಯುತ್ತಿದ್ದನು. ಹೀಗೆ ಆರು ತಿಂಗಳು ಕಳೆಯಲು ಒಂದು ದಿನ ಸಂಜೆ ಕುಮಾರನು ತನ್ನ ಹೆಂಡತಿಯರೊಂದಿಗೆ ಉಪ್ಪರಿಗೆಯ ಮೇಲೆ ಸರಸವಾಗಿ ಕಾಲ ಕಳೆಯುತ್ತಿದ್ದಾಗ ರಾಣಿಯೂ ಅಲ್ಲಿಗೆ ಬಂದಳು. ಆಗ ಅನತಿ ದೂರದಲ್ಲಿ ವ್ಯಕ್ತಿಯೊಬ್ಬ ನಡೆದು ಬರುತ್ತಿರುವದನ್ನು ಕಂಡ ರಾಜಕುಮಾರ, ‘ಅದಾರು? ಇಷ್ಟೊಂದು ವಿಚಿತ್ರವಾಗಿದ್ದಾನಲ್ಲ. ಈ ಮೊದಲು ಇಷ್ಟೊಂದು ವಿಚಿತ್ರವಾದ ಮನುಷ್ಯನನ್ನು ನಾನು ನೋಡಿಯೇ ಇಲ್ಲ’ ಎಂದು ತನ್ನ ರಾಣಿಯರನ್ನು ಕೇಳಿದ. ಅದನ್ನು ಗಮನಿಸಿದ ಆತನ ತಾಯಿ ‘ಮಗು, ಅದಾರೊ ಭಿಕ್ಷುಕ. ತಿರಿದು ತಿನ್ನುವವನು. ನಡೆಯಿರಿನ್ನು ಹೋಗೋಣ. ಊಟದ ಸಮಯವಾಗುತ್ತಿದೆ’ ಎಂದುಬಿಟ್ಟಳು. ಆಗ ಪಕ್ಕದಲ್ಲಿಯೇ ಇದ್ದ ದಾಸಿಯೊಬ್ಬಳು ‘ಇದೇನು ಮಹಾರಾಣಿಯವರೆ! ಹೀಗೆಂದು ಬಿಟ್ಟಿರಿ. ಅದು ನಿಮ್ಮ ದೇವರಲ್ಲವೆ?ನಮ್ಮ ಮಹಾರಾಜರಲ್ಲವೆ?’ ಎಂದು ರಾಣಿಯು ಸನ್ಹೆ ಮಾಡುತ್ತಿದ್ದಾಗ್ಯೂ ಕೌತುಕದಿಂದ ಕೇಳಿದಳು. ಆಗ ಕುಮಾರನು ‘ಏನೊ, ನೀವೆಲ್ಲ ನನ್ನಿಂದ ಮುಚ್ಚಿಡುತ್ತಿದ್ದೀರಿ. ಅದೇನೆಂದು ಹೇಳಿ’ ಎಂದು ಒತ್ತಾಯಿಸಿದನು. ಅದಕ್ಕೆ ಪ್ರತಿಯಾಗಿ ರಾಣಿಯು ಆತನಿಗೆ ಮುಖ ಕೊಟ್ಟು ಮಾತನಾಡದೆ ಆತನ ರಾಣಿಯರಿಗೆ ಉಪಾಯವಾಗಿ ಕರೆತನ್ನಿರೆಂದು ಹೇಳಿ ಹೊರಟು ಹೋದಳು. ಯುವರಾಣಿಯರು ಎಷ್ಟೆಷ್ಟು ಒತ್ತಾಯಿಸಿದರೂ ಕೇಳಲೊಲ್ಲದ ಕುಮಾರ ‘ನೀವು ಹೇಳುವವರಗೆ ನಾನು ಊಟ ಮಾಡುವುದರಿಲಿ, ಇಲ್ಲಿಂದ ಕದಲುವುದಿಲ್ಲ’ ಎಂದು ಹಠ ಹಿಡಿದು ಕೇಳಿದನು. ಆಗಿನಿಂದ ಸುಮ್ಮನೆ ನೋಡುತ್ತ ನಿಂತಿದ್ದ ದಾಸಿಯು ಇನ್ನು ತಡೆಯಲಾರೆನೆಂಬತೆ ‘ಸ್ವಾಮಿ ಆವರು ನಿಮ್ಮ ತಂದೆಯವರು. ನೀವು ಅವರ ಮುಖವನ್ನು ನೋಡಿದಾಕ್ಷಣ ಸನ್ಯಾಸಿಯಾಗುತ್ತೀರ ಎಂಬ ಭಯ ನಿಮ್ಮ ತಾಯಿಯವರಿಗೆ. ಅದಕ್ಕೆ ಅವರು ಏನನ್ನೂ ಹೇಳದೇ ಹೋದುದ್ದು’ ಎಂದು ಮೊದಲ್ಗೊಂಡು ಆತನ ಜನ್ಮವೃತ್ತಾಂತವನ್ನೆಲ್ಲಾ ವಿವರವಾಗಿ ಹೇಳಿಬಿಟ್ಟಳು.
ಎಲ್ಲವನ್ನು ಕೇಳಿಬಿಟ್ಟ ರಾಜಕುಮಾರನು ‘ಜೀವನ ಇಷ್ಟೊಂದು ಕ್ಷಣಿಕವೇ?’ ಎಂದು ತಪಸ್ಸಿಗೆ ಹೋಗುವುದಾಗಿ  ತನ್ನ ರಾಣಿಯರಿಗೆ ಹೇಳಿದ. ವಾರ್ತೆ ಇಡೀ ಭವನವನ್ನು ಕ್ಷಣಮಾತ್ರದಲ್ಲಿ ವ್ಯಾಪಿಸಿತು. ಓಡೋಡಿ ಬಂದ ತಾಯಿ ಪರಿಪರಿಯಾಗಿ ಮಗನಿಗೆ ಹೇಳಿದಳು. ‘ನೀನು ತಪಸ್ಸಿಗೆ ಹೋದರೆ ಈ ಚಿಕ್ಕ ವಯಸ್ಸಿನ ರಾಣಿಯರ ಗತಿಯೇನು? ನಿನ್ನ ತಂದೆ ಮಾಡಿದ ತಪ್ಪನ್ನು ನೀನೂ ಮಾಡಬೇಡ. ನನ್ನ ಮಾತನ್ನು ಕೇಳು. ನೀನು ಹೋದರೆ ಈ ವಂಶದ ಗತಿಯೇನು? ರಾಜ್ಯಕ್ಕೆ ವಾರಸುದಾರರು ಯಾರು?’ ಎಂದು ಮುಂತಾಗಿ ಮಗನನ್ನು ತಡೆಯಲು ಪ್ರಯತ್ನಿಸಿದಳು. ಯಾರ ಮಾತನ್ನೂ ಕೇಳದ ರಾಜಕುಮಾರನು, ಆಗಲೇ ಗರ್ಭವತಿಯಾಗಿದ್ದ ತನ್ನ ರಾಣಿಯೊಬ್ಬಳನ್ನು ಕರೆದು, ಅವಳ ಗರ್ಭದಲ್ಲಿದ್ದ ಕೂಸಿಗೇ ಪಟ್ಟಾಭಿಷೇಕವನ್ನು ಮಾಡಿ ತನ್ನ ತಂದೆಯನ್ನನುಸರಿಸಿ ತಪಕ್ಕೆ ನಡೆದು ಬಿಟ್ಟ.
***** ****  ***   **    *    **   ***  **** *****
ಕಥೆಯನ್ನು ಹೇಳಿ ಮುಗಿಸಿದ ಸ್ವಾಮೀಜಿಯು ‘ಈಗಲಾದರು ನೋಡು. ಈ ಜೀವನ ಎಷ್ಟೊಂದು ಕ್ಷಣಿಕವಾದುದೆಂದು. ಭಗವಂತನನ್ನು ಸೇರುವುದೊಂದೇ ನಿಜ. ಉಳಿದುದ್ದೆಲ್ಲ ಕೇವಲ ಭ್ರಮೆ’ ಎಂದನು. ಎಲ್ಲವನ್ನು ಶಾಂತವಾಗಿ ಕೇಳಿಸಿಕೊಂಡ ಗೌಡ ‘ಸ್ವಾಮಿ, ತಪ್ಪು ತಿಳಿಯಬೇಡಿ. ನೀವು ಹೇಳುವುದು ನಿಜವೇ ಆದರೂ ನನ್ನ ಮಗನನ್ನು ಒಂಟಿಯಾಗಿ ಬಿಟ್ಟುಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ’ ಎಂದು ಅಷ್ಟೇ ಶಾಂತನಾಗಿ ಉತ್ತರಿಸಿದ. ಅದಕ್ಕುತ್ತರವಾಗಿ ಸನ್ಯಾಸಿಯು ‘ಅದು ನಿಜವೆ. ವೈರಾಗ್ಯವೆಂಬುದು ಒಳಗಿನಿಂದ ಬರಬೇಕಾದುದ್ದು. ಅದು ಹೊರಗಿನಿಂದ ತುಂಬುವಂತವುದಲ್ಲ. ನಿನ್ನಿಚ್ಛೆಯಂತೆ ಮಾಡು ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಆಶೀರ್ವದಿಸಿ ತನ್ನ ಶಿಷ್ಯನೊಡನೆ ಹೊರಟು ಹೋದನು.
ತನ್ನ ಮಗನ ಆಟ ಪಾಠ ವಿನೋದಗಳಲ್ಲಿ ಹೆಂಡತಿ ಸತ್ತು ಹೋದ ದುಖಃವನ್ನು ಮರೆತ ಗೌಡ ಮಗನಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿದನು. ಉಳಿದ ಸಮಯವನ್ನು ಊರಿನ ಜನತೆಯ ಸೇವೆಗೆಂದು ಮೀಸಲಿಟ್ಟನು. ಜನತೆಯ ಸೇವೆಯೇ ಜನಾರ್ಧನನ ಸೇವೆ ಎಂಬುದು ಅವನ ಬಾಳಿನ ನಿತ್ಯ ಮಂತ್ರವಾಯಿತು. ಮಗನೂ ಅಷ್ಟೆ. ತಂದೆಯ ಹಾಗೆಯೆ ಸತ್ಪುತ್ರನಾಗಿ ಬೆಳದು ಸಕಲವಿದ್ಯಾಪಾರಂಗತನಾದನು. ಹೀಗೆ ಹದಿನೆಂಟು ವಸಂತಗಳನ್ನು ಕಳೆದ ಉತ್ತಮ ಗೌಡನು ತನ್ನ ಮಗನಿಗೆ ಅನುರೂಪಳಾದ ಕನ್ಯೆಯನ್ನು ಹುಡುಕಿ ವೈಭವದಿಂದ ಮದುವೆ ಮಾಡಿದನು. ಊರಿನ ಜನತೆಯೆಲ್ಲವೂ ತಮ್ಮದೇ ಮನೆಯ ಮದುವೆಯ ಕೆಲಸವೆಂಬಂತೆ ಓಡಾಡಿದರು. ಸಾಧುಸಂತರುಗಳಿಗೆ ಬ್ರಾಹ್ಮಣರಿಗೆ ಕೈತುಂಬ ಧಾನಧರ್ಮಗಳನ್ನು ಮಾಡಿದನು.
ಹೀಗೆ ಕಾಲ ದೂಡುತ್ತಿದ್ದ ಗೌಡನು ಮುಂದೆ ತನ್ನ ಮಗನಿಗೆ ಹುಟ್ಟಿದ ಇಬ್ಬರು ಮಕ್ಕಳ ಜೊತೆ ಮಗುವಿನಂತೆ ಆಟವಾಡುತ್ತಾ ಊರಿನ ಜನರ ಕಷ್ಟಗಳಿಗೆ ನೆರವಾಗುತ್ತಾ ನೂರುವರ್ಷ ಬಾಳಿ ಒಂದು ದಿನ ಮರಣವನ್ನಪ್ಪಿದನು. ಸಾಯುವ ದಿನವೂ ಅಷ್ಟೇ. ‘ನನ್ನ ಸಾವಿಗಾಗಿ ಯಾರು ಅಳಬೇಡಿರೆಂತಲೂ, ನಾನು ಇರುವವರಿಗೆ ಸಂತೋಷವಾಗಿಯೇ ಇದ್ದೆ. ಸಾಯುವಾಗಲೂ ಸಂತೋಷವಾಗಿಯೇ ಸಾಯುತ್ತೇನೆ’ ಎಂದು ಹೇಳಿ ನಗುನಗುತ್ತಲೇ ಪ್ರಾಣ ಬಿಟ್ಟನಂತೆ!
ಇತ್ತ ಉತ್ತಮಗೌಡ ಸತ್ತದಿನವೇ ಅತ್ತ ಕಾಡಿನಲ್ಲಿ ಒಂದು ವಿಚಿತ್ರ ನಡೆದು ಹೋಯಿತು. ಗೌಡನಿಗೆ ಆಶೀರ್ವದಿಸಿ ಹೋಗಿದ್ದ ಸನ್ಯಾಸಿಯೂ ಮತ್ತು ಆತನ ಶಿಷ್ಯನೂ ಅನ್ನ ಅಹಾರಾದಿಗಳನ್ನು ತೊರೆದು ಉಗ್ರವಾದ ತಪಸ್ಸನ್ನು ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಹೆಬ್ಬುಲಿಯೊಂದು, ಹಸಿದು ಕಂಗಾಲಾಗಿದ್ದರಿಂದ ತಪಸ್ಸು ಮಾಡುತ್ತಿದ್ದ ಕಿರಿಯ ಸನ್ಯಾಸಿಯನ್ನು ಅಹಾರಕ್ಕಾಗಿ ಬೇಡಿತು. ಕಿರಿಯ ಸನ್ಯಾಸಿಯು ತನ್ನಲ್ಲಿ ಕೊಡಲು ಏನೂ ಇಲ್ಲವೆಂದು ಹೇಳಿ, ಬೇಕಾದರೆ ಈ ದೇಹವನ್ನೇ ತಿನ್ನು ಎಂದು ಅರ್ಪಿಸಿಕೊಂಡುಬಿಟ್ಟನು. ಹಸಿದ ಹುಲಿಯು ತಕ್ಷಣ ಆತನನ್ನು ತಿನ್ನಲಾರಂಭಿಸಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯ ಸನ್ಯಾಸಿಯು ತನ್ನ ತಪೋಬಲದಿಂದ ಆ ಹೆಣ್ಣು ಹುಲಿಯು ಹಿಂದಿನ ಜನ್ಮದಲ್ಲಿ ತನ್ನ ಹೆಂಡತಿಯೂ ಆತನ ತಾಯಿಯೂ ಆಗಿದ್ದವಳು. ಕಳೆದ ಜನ್ಮದ ಸೇಡಿನಿಂದ ತನ್ನ ಮಗನನ್ನೇ ತಿನ್ನುತ್ತಿದೆ ಎಂದು ಭಾವಿಸಿ, ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯಿಂದ ಅದರ ತಲೆಗೆ ಹೊಡೆದು ‘ಅಯ್ಯೋ ಪಾಪಿಷ್ಟೆ. ಹೆತ್ತ ಮಗನನ್ನೇ ತಿಂದೆಯಲ್ಲ. ನೀನು ನರಕಕ್ಕೆ ಹೋಗು’ ಎಂದು ಶಪಿಸಿ, ಮತ್ತೆ ಮತ್ತೆ ಹೊಡೆದು ಕೊಂದನು. ಶವವಾಗಿ ಬಿದ್ದಿದ್ದ ಮಗನನ್ನಪ್ಪಿ ತಾನೂ ಪ್ರಾಣವನ್ನು ಬಿಟ್ಟನು.
***** ****  ***   **    *    **   ***  **** *****
ನಾಡಿನಲ್ಲಿ ಸತ್ತ ಗೌಡನೂ, ಕಾಡಿನಲ್ಲಿ ಸತ್ತ ತಂದೆ ಮಗನೂ, ಹುಲಿರೂಪದ ತಾಯಿಯೂ ದೇವಲೋಕದ ಬಾಗಿಲಲ್ಲಿ ಮತ್ತೆ ಬೇಟಿಯಾದರು. ಗೌಡನು ಅದೇ ವಿನಯಪೂರ್ವಕವಾಗಿ ಸ್ವಾಮಿಗಳಿಬ್ಬರಿಗೆ ನಮಸ್ಕರಿಸಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ದೇವದೂತನೊಬ್ಬನು ಅವರನ್ನು ವಿಚಾರಣೆಗೆಂದು ಯಮಧರ್ಮನಲ್ಲಿಗೆ ಕೊಂಡೊಯ್ದನು. ನಾಲ್ವರ ಪೂರ್ವಾಪರಗಳನ್ನು ಪರಿಶೀಲಿಸಿದ ಧರ್ಮನು ಆ ಹೆಣ್ಣು ಹುಲಿಗೂ ಗೌಡನಿಗೂ ಸ್ವರ್ಗಕ್ಕೆ ಹೋಗಿರೆಂದು, ಸನ್ಯಾಸಿಗಳಿಬ್ಬರಿಗೂ ನರಕಕ್ಕೆ ಹೋಗಿರೆಂದು ಅಪ್ಪಣೆ ಮಾಡಿಬಿಟ್ಟನು!
ಗೌಡನೂ ಹುಲಿಯೂ ಸ್ವರ್ಗದ ಕಡೆಗೆ ಹೊರಡುತ್ತಿದ್ದಾಗ್ಯೂ ಅಲ್ಲಿಂದ ಕದಲದೆ ನಿಂತಿದ್ದ ಸನ್ಯಾಸಿಗಳಿಬ್ಬರನ್ನು ಏನು? ಎಂಬಂತೆ ನೋಡಿದ ಧರ್ಮನನ್ನು ಉದ್ದೇಶಿಸಿ ಹಿರಿಯ ಸ್ವಾಮಿಯು ‘ಯಮಧರ್ಮನೇ, ನನ್ನದೊಂದು ಮನವಿ. ಭಗವಂತನ ಸಾಕ್ಷಾತ್ಕಾರಕ್ಕಾಗಿಯೇ ರಾಜ್ಯಕೋಶಗಳನ್ನು ತೊರೆದು, ಕಾಡು ಮೇಡುಗಳನ್ನಲೆಯುತ್ತ, ಗೆಡ್ಡೆಗೆಣಸುಗಳನ್ನು ತಿನ್ನುತ್ತ ಭಗವಂತನನ್ನು ಭಕ್ತಿಯಿಂದ ಸೇವಿಸುತ್ತ ಸನಾತನ ಧರ್ಮಕ್ಕನುಸಾರವಾಗಿ ಸಾತ್ವಿಕ ಜೀವನವನ್ನು ನಡೆಸಿದವರು ನಾವು. ನಮಗೆ ನರಕಕ್ಕೆ ಹೋಗಿರೆಂದು ಅಪ್ಪಣೆ ಮಾಡಿದ್ದೀಯ. ಈ ಗೌಡನು ನನ್ನ ಧರ್ಮ ಬೋದನೆಯನ್ನು ಮನಸ್ಸಿಗೆ ಹಾಕಿಕೊಳ್ಳದೆ, ತಾತ್ಕಾಲಿಕ ಸುಖವನ್ನಪ್ಪಿ, ಮದ್ಯ-ಮಾಂಸಾದಿಗಳನ್ನು ಸೇವಿಸುತ್ತ ವ್ಯರ್ಥ ಜೀವನ ನಡೆಸಿದವನು. ಇನ್ನು ಈ ಹೆಣ್ಣು ಹುಲಿ ತಪೋನ್ಮುಖರಾದ ಪತಿಯನ್ನು ತಡೆದು, ತಪಸ್ಸಿಗೆ ಹೊರಟ ಗಂಡನನ್ನು ಹಿಂಬಾಲಿಸದೆ ಕ್ಷಣಿಕ ಜೀವನದ ಆಸೆಗೆ ನಿಂತುದಲ್ಲದೆ, ತಪಸ್ಸಿಗೆ ಹೊರಟ ಮಗನನ್ನು ತಡೆದ ಪಾಪಕರ್ಮಕ್ಕಾಗಿ ಸತ್ತು ಹೆಣ್ಣುಹುಲಿಯಾಗಿ ಹುಟ್ಟಿದ್ದವಳು. ಹುಲಿಯಾದ ಮೇಲಾದರೂ ಸಾತ್ವಿಕಳಾಗಿರದೆ ಭಯಂಕರ ನರಭಕ್ಷಕಳಾಗಿ, ಕೊನೆಗೆ ತಾನೆತ್ತ ಮಗನನ್ನೇ ಕೊಂದು ತಿಂದವಳು. ಇಂತವರಿಗೆ ಸ್ವರ್ಗಕ್ಕೆ ಹೋಗಲು ಅಪ್ಪಣೆ ಮಾಡಿದ್ದೀಯ. ಇದು ನ್ಯಾಯವೇ?’ ಎಂದನು.
ಸ್ವಲ್ಪ ಹೊತ್ತು ಏನನ್ನೂ ಮಾತನಾಡದೆ ಸುಮ್ಮನೆ ಕುಳಿತಿದ್ದ ಯಮಧರ್ಮನು ‘ಬಹಳ ದಿನಗಳ ನಂತರ ನನ್ನ ತೀರ್ಮಾನವನ್ನು ಹೀಗೆ ಪ್ರಶ್ನಿಸಿದವನು ನೀನು. ಈ ಹಿಂದೆಯೂ ಸಾವಿತ್ರಿ ಮೊದಲಾದವರು ನನ್ನ ತೀರ್ಮಾನಗಳನ್ನು ಪ್ರಶ್ನಿಸಿ, ನನಗೆ ಮಂಕು ಬೂದಿಯನ್ನು ಎರಚಿ, ನನ್ನನ್ನು ಕರ್ತವ್ಯ ಭ್ರಷ್ಟನನ್ನಾಗಿ ಮಾಡಿದ್ದರು. ಆದ್ದರಿಂದ ನಾನೀಗ ನಿನ್ನ ಪ್ರಶ್ನೆಗಳಿಗೆ ಉತ್ತರ ಕೊಡದೆ, ನಿನಗೇ ಕೆಲವು ಪ್ರಶ್ನೆಗಳನ್ನು ಹಾಕುತ್ತೇನೆ. ಅವುಗಳಿಗೆ ಸರಿಯಾದ ಸಮಾಧಾನಗಳನ್ನು ನೀನಿತ್ತುದೆಯಾದರೆ, ನನ್ನ ಈ ಮೊದಲಿನ ತೀರ್ಮಾನವನ್ನು ಮರುಪರಿಶೀಲಿಸುತ್ತೇನೆ. ಇಲ್ಲವಾದರೆ ನಿಮಗೆ ನರಕವೇ ಗತಿ. ಇದಕ್ಕೆ ಒಪ್ಪಿಗೆಯೇ?’ ಎಂದು ಕೇಳಿದನು.
ಯಮನ ಮಾತಿನಲ್ಲಿದ್ದ ನಿಷ್ಟುರತೆಯನ್ನು ಗಮನಿಸಿದ ಸನ್ಯಾಸಿಯು ಒಳಗೊಳಗೆ ನಡುಕವುಂಟಾದರೂ, ಯಮಧರ್ಮ ನನ್ನ ಸಾಧನೆಯನ್ನು ಪರಿಕ್ಷಿಸಲು ಹೀಗೆ ಹೇಳುತ್ತಿರಬಹುದು. ಸುಮಾರು ನೂರು ವರ್ಷಗಳ ಕಾಲ ತಾನು ನಡೆಯಿಸಿದ ತಪಸ್ಸು, ನ್ಯಾಯ ಧರ್ಮಶಾಸ್ತ್ರಗಳ ಅಧ್ಯಯನ ತನ್ನ ವಾದಕ್ಕೆ ಬಲ ಕೊಡುತ್ತದೆಂದು ಭಾವಿಸಿ, ‘ಆಗೆಯೇ ಆಗಲಿ ಪ್ರಭು. ನನಗೆ ತಿಳಿದ ಮಟ್ಟಿಗೆ ಧರ್ಮಶಾಸ್ತ್ರಗಳ ಬಲದಿಂದ ನಿನ್ನ ಅನುಮಾನಗಳನ್ನು ಪರಿಹರಿಸುತ್ತೇನೆ’ ಎಂದು ಧರ್ಮನ ಮಾತಿಗೆ ಜವಾಬನಿತ್ತನು.
‘ದೇವರನ್ನು ಸೇರಲು ತಪಸ್ಸಿಗೇ ಹೋಗಬೇಕೆಂದು ಹೇಳಿದವರು ಯಾರು? ಗೌಡನ ಮಗನ ಮೇಲಿನ ಪ್ರೀತಿಗಿಂತ ತಪಸ್ಸೇ ಹೆಚ್ಚೆಂದು ನೀನು ಹೇಗೆ ಭಾವಿಸಿದೆ? ಒಬ್ಬ ಮನುಷ್ಯನನ್ನು ಕರ್ತವ್ಯ ವಿಮುಖನನ್ನಾಗಿಸುವುದೂ ತಪ್ಪೆಂದು ನಿನಗೆ ತಿಳಿಯಲಿಲ್ಲವೇ? ನಿನ್ನನ್ನೇ ನಂಬಿ ಕೈಹಿಡಿದು ಮದುವೆಯಾಗಿದ್ದ ಹೆಂಡತಿಯರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದು ಸರಿಯೇ? ಹಾಗೆ ನೀನು ತಪಸ್ಸಿಗೆ ಹೋಗಬೇಕೆಂದಿದ್ದರೆ ನಿನ್ನ ಪತ್ನಿಯರ ಒಪ್ಪಿಗೆಯನ್ನು ನೀನೇಕೆ ಪಡೆಯಲಿಲ್ಲ? ಮಗನು ತಪಸ್ಸಿಗೆ ಹೊರಟಾಗ ಆತನ ಚಿಕ್ಕ ವಯಸ್ಸಿನ ಹೆಂಡತಿಯರ ಪಾಡನ್ನು ನೀನೇಕೆ ಚಿಂತಿಸಲಿಲ್ಲ? ಮಗನಿಗೇಕೆ ಬುದ್ದಿವಾದ ಹೇಳಲಿಲ್ಲ? ತಪೋನ್ಮುಖರಾದ ನಿನ್ನನ್ನು, ನಿನ್ನ ಮಗನನ್ನು ತಡೆದುದ್ದು ಆಕೆಯ ಅಪರಾಧವೆಂದು ಏಕೆ ಭಾವಿಸಬೇಕು? ಅದಕ್ಕಾಗಿಯೇ ಆಕೆ ಸತ್ತು ಹೆಣ್ಣು ಹುಲಿಯಾಗಿ ಹುಟ್ಟಿದಳೆಂದು ನಿನಗೆ ಹೇಳಿದವರಾರು? ನೀನೂ ನಿನ್ನ ಮಗನೂ ಪ್ರಜಾಪ್ರತಿನಿಧಿಗಳಾಗಿ ಇದ್ದವರು. ರಾಜ್ಯದ ಜನತೆಯ ಹಿತಚಿಂತನೆ ಮಾಡದೆ, ಕೇವಲ ನೀವಿಬ್ಬರು ಮಾತ್ರ ಸ್ವರ್ಗವನ್ನು ಪಡೆಯಲು ಅಫೇಕ್ಷಿಸಿದ್ದು ಸರಿಯೆ? ನೀವು ಕೈಬಿಟ್ಟ ರಾಜ್ಯವನ್ನು, ಜನತೆಯನ್ನು ಕೈಹಿಡಿದು ಮುನ್ನೆಡೆಸಿದ ರಾಣಿಯ ಚಾಣಕ್ಷತೆ ಅಧರ್ಮವೆ? ಗೌಡನಿಗಿದ್ದ ಜೀವನ ಪ್ರೀತಿಯನ್ನು, ಮಗನ ಮೇಲಿನ ಪ್ರೇಮವನ್ನು ಕ್ಷಣಿಕವೆಂದು ನಿಮಗಾರು ಹೇಳಿದರು? ಗೌಡನು ಮದ್ಯ-ಮಾಂಸಾದಿಗಳನ್ನು ಸೇವಿಸುತ್ತಾನೆ ಎಂದೆ. ಅದನ್ನು ತಪ್ಪೆಂದು ಹೇಳಲು ನೀನಾರು? ಹುಲಿಯು ನೈಸರ್ಗಿಕವಾಗಿ ಮಾಂಸಹಾರಿ. ಅದು ತನ್ನ ಅಹಾರವನ್ನು ಪಡೆಯುವಾಗ ಅದನ್ನು ಕೊಂದಿದ್ದು ನಿನ್ನ ತಪ್ಪಲ್ಲವೇ? ಮಾಂಸಹಾರ ಮಾಡಿದ ತಪ್ಪಿಗೆ ನರಕದ ಶಿಕ್ಷೆಯೇಕೆ ಕೊಡಬೇಕು? ನಿನ್ನ ನೂರು ವರ್ಷಗಳ ತಪಸ್ಸು, ಕೊನೆಗೂ ನಿನ್ನ ಮಗನ ಮೇಲಿನ ವ್ಯಾಮೋಹವನ್ನು ಕಳೆದಿಲ್ಲವೆಂದರೆ ಅದನ್ನು ತಪಸ್ಸೆಂದು ಹೇಗೆ ಹೇಳುತ್ತೀಯ? ನನಗೆ ಗೊತ್ತು. ನನ್ನೆಲ್ಲಾ ಪ್ರಶ್ನೆಗಳಿಗೆ ನೀನು ನಿನ್ನ ಪೂರ್ವಿಕರು ರಚಿಸಿ ಇಟ್ಟಿರುವ ಶಾಸ್ತ್ರಗ್ರಂಥಗಳನ್ನು ಉಲ್ಲೇಖಿಸಿ ಸಮರ್ಥನೆಯನ್ನೊದಗಿಸಬಲ್ಲೆ ಎಂದು. ಅದಕ್ಕೂ ಪ್ರಶ್ನೆಗಳಿವೆ. ನಿನ್ನ ಧರ್ಮಶಾಸ್ತ್ರಗ್ರಂಥಗಳೇ ಪೂರ್ಣಪ್ರಾಮಾಣಿಕವಾದವಗಳು, ಪರಮಸತ್ಯಗಳು ಎಂದು ಹೇಗೆ ಹೇಳುತ್ತೀಯ? ಅವುಗಳನ್ನು ನಾನಾಗಲೀ ಪರಮಾತ್ಮನಾಗಲಿ ನಿಮ್ಮ ಪೂರ್ವಿಕರಿಗೆ ಹೇಳಿ ಬರೆಯಿಸಿದ್ದೇವೆಯೆ? ಸಾವಿರಾರು ವರ್ಷಗಳ ಹಿಂದಿನ ವಿಚಾರಗಳನ್ನು ಎಲ್ಲ ಕಾಲಕ್ಕೂ ಅನ್ವಯಿಸುವುದು ತಪ್ಪಲ್ಲವೆ? ಕಾಲಧರ್ಮಕ್ಕನುಗುಣವಾಗಿ ಬಹುಜನಹಿತವಾದ ಶಾಸ್ತ್ರಧರ್ಮಗಳೇ ನಿಜವಾದ ಧರ್ಮವಲ್ಲವೆ? ನಿಮ್ಮ ನಿಮ್ಮ ಸಮಾಧಾನಕ್ಕೆ ತಕ್ಕಂತೆ ಧರ್ಮಶಾಸ್ತ್ರಗಳನ್ನು ರಚಿಸಿಕೊಂಡು ಅದನ್ನೇ ಪರಮಸತ್ಯವೆಂದು ನಂಬಿ ಎಂದು ನಾವು ಹೇಳಿದ್ದೇವೆಯೆ? ಅಷ್ಟಕ್ಕೂ ಧರ್ಮ ಎಂದರೇನು? ಸಾವಿರಾರು ವರ್ಷಗಳ ಹಿಂದಿನ ಯಮನ ನೀತಿಯನ್ನೇ ಈಗಲೂ ಅನುಸರಿಸಿ ಕರ್ಮಾಕರ್ಮಗಳನ್ನು ನಿರ್ಧರಿಸಲು ನಾನೇನು ನಿರ್ಜೀವ ಗೊಂಬೆಯೆ? ಆದಿಯಿಂದ ಯಾವ ಬದಲಾವಣೆಯೂ ನಿಮ್ಮಲ್ಲಿ ಅಗಿಲ್ಲವೆ? ಬದಲಾವಣೆಗಳು ಭೂಲೋಕಕ್ಕೆ ಮಾತ್ರ ಸೀಮಿತವೆ?’ ಹೀಗೆ ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಿದ್ದ ಯಮಧರ್ಮನ ಮುಖವನ್ನು ನೋಡಲಾಗದೆ ತಲೆ ತಗ್ಗಿಸಿದ ಸನ್ಯಾಸಿ ಯಾವ ಮಾತನ್ನೂ ಆಡದೇ ತನ್ನ ಮಗನನ್ನು ಹೊರಡಿಸಿಕೊಂಡು ನರಕದ ಕಡೆಗೆ ಹೊರಟುಬಿಟ್ಟನು! ಇತ್ತ ಗೌಡನೂ ಹುಲಿಯೂ ಸ್ವರ್ಗದ ಕಡೆಗೆ ನಡೆದರೆ, ಯಮಧರ್ಮ ವಿಜಯದ ನಗೆ ನಕ್ಕ.
***** ****  ***   **    *    **   ***  **** *****
ತಾತಯ್ಯನ ಕಥೆ ಮುಗಿಯುವ ಹೊತ್ತಿಗೆ ಮೂರ್ನಾಲ್ಕು ಮಕ್ಕಳು ಮಲಗಿದ್ದವು. ಕಥೆ ಕೇಳಿದ ಪಕ್ಕದ ಕಣದವನು ‘ಈ ಕಥೆಯನ್ನು ಒಂದತ್ತು ಸಾರಿಯಾದ್ರು ಕೇಳಿದಿನಪ್ಪ. ಆದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ’ ಎಂದು ಅಜ್ಜನ ಕಥೆಗೆ ಮೆಚ್ಚುಗೆ ಸೂಚಿಸಿದ. ನಾನೇನನ್ನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಈ ಕಥೆಯನ್ನು ಯಾರು ಯಾವಾಗ ಕಟ್ಟಿದರೋ ಗೊತ್ತಿಲ್ಲ. ಇದು ನಿಜವಾಗಿ ನಡೆಯದಿರಬಹುದು. ಕಥೆಕಟ್ಟಿದ ಕಥೆಗಾರನನ್ನು ಬಲ್ಮೆಯನ್ನು ನಾನು ಯೊಚಿಸುತ್ತಿದ್ದೆ. ಅಜ್ಜ ‘ನಿನ್ನ ಪ್ರಶ್ನೆಗೆ ಉತ್ರ ಸಿಕ್ತೊ ಇಲ್ಲವೋ? ಇನ್ನು ಮಲ್ಗುವ ಕಣಪ್ಪ. ನಾಳೆ ಹೊತ್ತಿಗ್ಮುಂಚೆ ಎದ್ದು ಹುಲ್ಲಾಕ್ಬೇಕು. ರಾಗಿ ತೂರೋದು ಬ್ಯಾರೆ ಇನ್ನು ಐತೆ’ ಎಂದು ಏನನ್ನೋ ಹೇಳುತ್ತ ಮಲಗುವ ಸಿದ್ಧತೆ ಮಾಡುತ್ತಿದ್ದ. ನಾನು ಕಥೆಯ ಬಗ್ಗೆ ಯೋಚಿಸುತ್ತಿದ್ದರೆ, ತಾತಯ್ಯ ನಾಳೆಯ ಬಗ್ಗೆ ಮಾತನಾಡುತ್ತಿದ್ದ!
***** ****  ***   **    *    **   ***  **** *****

Tuesday, January 28, 2014

’ಕಲ್ದವಸಿ’ ಸಾಕ್ಷಿ!

ರಾಮನ ಕಿರೀಟದಾ ರನ್ನವಣಿಯೋಲೆ ರಮ್ಯಂ,
ಪಂಚವಟಿಯೊಳ್ ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ.
ಕವಿಕ್ರತು ದರ್ಶನದಲ್ಲಿ ತನ್ನ ಕಾವ್ಯದ ಉದ್ದೇಶ, ಮಾರ್ಗ, ದರ್ಶನವನ್ನು ಕುರಿತು ಹೇಳುವಾಗ ಕವಿ ಮೇಲಿನ ಮಾತುಗಳನ್ನು ಹೇಳಿದ್ದಾರೆ. ಇದು ಸರ್ವೋದಯ ಪರಿಕಲ್ಪನೆ. ಎಲ್ಲರೂ ಎಲ್ಲವೂ ಒಂದೆ ಎಂಬ ಸಮಭಾವ ಕವಿಗೆ ಇದೆ. ರಾಮನ ಕಿರೀಟದ ಮಣಿಯೂ ಒಂದೆ; ಹನಿ ಇಬ್ಬನಿಯೂ ಒಂದೆ ಕವಿಗೆ.
ಹಾಡಲು ಹೊರಟಿರುವುದು ಮಹಾಕಾವ್ಯವೇ ಆದರೂ, ಇಲ್ಲಿ ಯಾವುದೂ ಅಮುಖ್ಯವಲ್ಲ. ರಾವಣನ ಅಂತ್ಯಕ್ಕಿರುವಷ್ಟೇ ಪ್ರಾಮುಖ್ಯತೆ ಒಂದು ದಿನದ ಒಂದು ಕ್ಷಣದ ಘಟನೆಗೆ ಇದೆ. ಮಹಿಮೆ ತಾಂ ಮಾಳ್ಪುದನಿತುಂ ಮಹತ್ ಕಲೆಯಲ್ತೆ?’ ಎಂಬ ಸಾಲಿನಂತೆ ರಾಮ ಸೀತೆಯರ ಜೀವನದ, ಚಿತ್ರಕೂಟದ ಬದುಕಿನ ಒಂದು ದಿನದ ಒಂದೆರಡು ಘಟನೆಗಳು ಮಹತ್ತಾಗಿವೆ. ’ಕುಣಿದುಳುರಿಯ ಊರ್ವಶಿ’ ಎಂಬ ಸಂಚಿಕೆಯಲ್ಲಿ ಆ ಘಟನೆಗಳಿವೆ. ದೈನಂದಿನ ಬದುಕಿನಲ್ಲಿ ನಡೆಯುವ ಸಣ್ಣ ಘಟನೆಗಳು ಸಹ ನಮ್ಮ ಇಡೀ ಬದುಕನ್ನು, ನಮ್ಮ ಒಟ್ಟು ವ್ಯಕ್ತಿತ್ವವನ್ನು ನಿರೂಪಿಸುತ್ತಿರುತ್ತವೆ.
ಈ ಘಟನೆಗಳಿಗೆ ದಾಟುವ ಮೊದಲೆ ಕವಿಗೆ ’ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ ದೀನರಿಗೆ?’ ಎಂಬ ಅನುಮಾನವೂ ಕಾಡಿದೆ. ಅದಕ್ಕೆ ಅವರು ’ನನ್ನ ಈ ಕೃತಿಯನೋದುವ ಆತ್ಮರ ಆ ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ, ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ!’ ಎಂದು ಹಾಡಿದ್ದಾರೆ. ಅತ್ಯಲ್ಪದಲ್ಲೂ ಅತ್ಯುನ್ನತವಾದುದನ್ನು ದರ್ಶಿಸಬೇಕೆಂಬುದು ಕವಿಯ ಆಶಯ.

’ಅರಸುತನಂ ಎದೆಯೊಳಿರೆ ಕಾಡು ಅರಮನೆಗೆ ಕೀಳೆ?’ ಎನ್ನುವಂತೆ ರಾಮ ಸೀತೆ ಲಕ್ಷ್ಮಣರು ಚಿತ್ರಕೂಟದಲ್ಲಿ ಎಲೆಮನೆಯನ್ನು ನಿರ್ಮಿಸಿಕೊಂಡು ನೆಲೆಸಿದ್ದಾರೆ. ’ಎಲೆವನೆಯೆ ಕಲೆಯ ಮನೆ’ಯಾಗಿತ್ತಂತೆ ಅವರಿಗೆ! ಅಲ್ಲಿದ್ದ ಅಲ್ಪತನದ ವಸ್ತುಗಳೆಲ್ಲಾ ಈಗ ಅವರಿಗೆ ಚಿರಪರಿಚಿತವಾಗಿವೆ. ಕಲ್ಲು, ಮರ, ಬಳ್ಳಿಗಳೆಲ್ಲಾ ಅವರ ಸ್ಮೃತಿಕೋಶದಲ್ಲಿ ಸೇರಿಹೋಗಿವೆ. ಅವುಗಳಲ್ಲಿ ಅವರ ಎಲೆಮನೆಯ ಮುಂದೆ, ತುಸುವೇ ದೂರದಲ್ಲಿದ್ದ ಒಂದು ಕಲ್ಲು, ಯುಗಯುಗಗಳಿಂದಲೂ ಅಲ್ಲಿಯೇ ಬಿದ್ದಿದ್ದ ಕಲ್ಲು ಸೀತೆಯ ಕಣ್ಣಿಗೆ ಬೀಳುವವರೆಗೂ ಅದು ಕಲ್ಲು ಮಾತ್ರವಾಗಿತ್ತು. ಆದರೆ ಈಗ...
ಒಂದು ದಿನ ಸೀತೆ ರಾಮನೊಂದಿಗೆ ಮಾತನಾಡುತ್ತಾ ಎಲೆಮನೆಯ ಮುಂದಿದ್ದ ಕುಳಿತಿದ್ದಳು. ಸೀತೆ ನೋಡುತ್ತ ನೋಡುತ್ತ ಇದ್ದ ಹಾಗೆ ಆ ಕಲ್ಲಿಗೆ ಒಂದು ರೂಪವೇ ಬಂದಂತಾಗಿಬಿಡುತ್ತದೆ. ಅದು ಅವಳಿಗೆ ಸೋಜಿಗ, ಕೌತುಕವನ್ನುಂಟು ಮಾಡುತ್ತದೆ. ಅದು ಅವಳಿಗೆ ನಿಶ್ಚಲನಾಗಿ ಕುಳಿತ ಒಬ್ಬ ತಪಸ್ವಿಯ ಹಾಗೆ ಕಾಣುತ್ತದೆ. ಅಂದಿನಿಂದ, ಅದಕ್ಕೆ ಸೀತೆ ’ಕಲ್ದವಸಿ’ ಎಂದು ಹೆಸರಿಟ್ಟು ಕರೆಯತೊಡಗುತ್ತಾಳೆ. ರಾಮ-ಲಕ್ಷ್ಮಣರಿಗೂ ಅದು ಕಲ್ದವಸಿಯಾಗಿ ಬಿಡುತ್ತದೆ. ಯುಗಯುಗಾಂತರದಿಂದ ಕಲ್ಲು ಮಾತ್ರವಾಗಿದ್ದ ಆ ಕಲ್ಲು ಅವರೆರ್ದೆ ಬಾಳಿನಲ್ಲಿ ನಿತ್ಯತೆಯನ್ನು ಪಡೆದುಕೊಳ್ಳುತ್ತದೆ.
ಒಂದು ದಿನ, ಸಂಜೆ ಮಬ್ಬುಗತ್ತಲಿನ ಸಮಯ. ರಾಮ ಸೊಡರಿನ ಬೆಳಕಿನಲ್ಲಿ, ರಾಮ ಏನನ್ನೊ ಓದುತ್ತ ಕುಳಿತಿದ್ದ. ಸೀತೆ ಅವನನ್ನು ಕರೆದು ’ಕಲ್ದವಸಿ’ಯನ್ನು ತೋರುತ್ತಾಳೆ. ಕಲ್ದವಸಿಯ ಮೇಲೆ ಇನ್ನೊರ್ವ ತಪಸ್ವಿ ನಿಶ್ಚಲವಾಗಿ ಕುಳಿತಿರುವ ದೃಶ್ಯ ರಾಮ ಸೀತೆಯರ ಕಣ್ಣಿಗೆ ಕಟ್ಟುತ್ತದೆ. ಸೀತೆ ಕೌತುಕ ಪಡುತ್ತಿದ್ದರೆ, ರಾಮ ನಿಟ್ಟುಸಿರು ಬಿಡುತ್ತಾನೆ. ಕಲ್ದವಸಿಯ ಮೇಲೆ ಕುಳಿತವನು ಲಕ್ಷ್ಮಣ ಎಂಬುದು ರಾಮನಿಗೆ ಅರಿವಾಗುತ್ತದೆ; ಕೊನೆಗೆ ಸೀತೆಗೂ.
ಸೌದೆಯನ್ನು ಹೊತ್ತು ತಂದ ಲಕ್ಷ್ಮಣ ಸುಮ್ಮನೆ ಅದರ ಮೇಲೆ ಕುಳಿತಿರುತ್ತಾನೆ. ಅದು ರಾಮನಿಗೆ ’ಊರ್ಮಿಳೆಯ ನೆನಪಿನಲ್ಲಿ ಬೇಯುತ್ತಿರುವ ಲಕ್ಷ್ಮಣ, ದೇವರಲ್ಲಿ ಬೇಡುತ್ತಿರುವಂತೆ’ ಕಾಣುತ್ತದೆ. ಕಾಡಿಗೆ ಬಂದಂದಿನಿಂದ, ಲಕ್ಷ್ಮಣನು ಸಲ್ಲಿಸುತ್ತಿರುವ ನಿಷ್ಕಾಮವಾದ ಸೇವೆಯನ್ನು ನೆನೆದು ರಾಮ ಸೀತೆಯರಿಬ್ಬರೂ ನಿಟ್ಟುಸಿರು ಬಿಡುತ್ತಾರೆ. ಸೀತೆಗೆ ಮಾತೇ ಹೊರಡುವುದಿಲ್ಲ. ರಾಮ ಮುಂದುವರೆದು ತಮ್ಮನನ್ನು ಮಾತನಾಡಿಸಲು ಹೋಗುತ್ತಾನೆ. ಅಂದಿನಿಂದ ಆ ಕಲ್ದವಸಿ ಊರ್ಮಿಳೆಗೆ ಹಾಗೂ ಅವಳ ಸಂಯಮಕ್ಕೆ ಪ್ರತಿಮೆಯಾಗಿ ಕಾಣುತ್ತದೆ, ರಾಮ ಸೀತೆಯರಿಗೆ.
ಅಂದು ರಾಮ ಸೀತಾ ಲಕ್ಷ್ಮಣರು ಅಯೋಧ್ಯೆಯನ್ನು ಬಿಟ್ಟಂದಿನಿಂದ, ಸರಯೂ ನದಿಯ ತೀರದಲ್ಲಿ ಪರ್ಣಕುಟಿಯನ್ನು ಕಟ್ಟಿಕೊಂಡು, ಚಿರತಪಸ್ವಿನಿಯಾಗಿ, ಸೀತೆ ರಾಮರಿಗೆ, ತನ್ನಿನಿಯನಿಗೆ ಚಿತ್ತಪೋಮಂಗಳದ ರಕ್ಷೆಯನ್ನು ಕಟ್ಟಿ, ತಪಂಗೈಯುತ್ತಿರುವ ಊರ್ಮಿಳೆಯ ತ್ಯಾಗ, ಸಂಯಮಗಳು ಕಲ್ದವಸಿಯಷ್ಟೆ ಕಠಿಣ, ಕಾಲಾತೀತ ಹಾಗೂ ಮಂಗಳಕರವಾದವುಗಳು. ಆ ಕಲ್ದವಸಿ ತನ್ನ ಸುತ್ತಮುತ್ತಲಿನ, ತನ್ನ ಜಗದ ಆಗುಹೋಗುಗಳಿಗೆ ಹೇಗೆ ಸಾಕ್ಷಿರೂಪವಾದುದೊ ಹಾಗೆಯೇ ಊರ್ಮಿಳೆಯ ತಪ್ಪಸ್ಸು ರಾಮ ಸೀತೆ ಲಕ್ಷ್ಮಣರ ಮಂಗಳಕ್ಕೆ ರಕ್ಷೆಯಾದುದು. ಕಲ್ದವಸಿಗೆ ಹೇಗೆ ಪ್ರತಿಫಲಾಪೇಕ್ಷೆಯಿಲ್ಲವು ಹಾಗೆ ಊರ್ಮಿಳೆಯ ತಪ್ಪಸ್ಸಿಗೂ ಪ್ರತಿಫಲಾಪೇಕ್ಷೆಯಿಲ್ಲ!

ಕಲ್ದವಸಿ ತಾಣ ಆ ವನವಾಸಿಗಳಿಗೆ ಕುಳಿತು ಮಾತನಾಡುವ, ಮುಂಜಾನೆ ಸಂಜೆಗಳನ್ನು ಕಳೆಯುವ ಸುಂದರ ತಾವು. ಮೂವರಿಗೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು, ಆ ದಿನದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ತಾಣ.
ಋಷ್ಯಾಶ್ರಮವೊಂದರಲ್ಲಿ ಶಶಿಮೌಳಿ ಎಂಬ ಹೆಸರಿನ ಇಪ್ಪತ್ತೈದು ವರ್ಷ ವಯಸ್ಸಿನ ಋಷಿಕುಮಾರನಿದ್ದ. ವಿನೋದಶೀಲನೂ ಸ್ನೇಹಶೀಲನೂ ಆದ ಆತ ಆಗಾಗ ಇವರ ಎಲೆಮನೆಗೂ ಬರುತ್ತಿದ್ದ. ಒಂದು ದಿನ ಆತ ಗೋವನ್ನು ಅಟ್ಟುತ್ತ ಸೀತೆಯಿದ್ದಲ್ಲಿಗೆ ಬರುತ್ತಾನೆ. ಕುಳಿತು ಹರಟುತ್ತಾನೆ. ಹೊತ್ತು ಹೋದುದೇ ತಿಳಿಯುವುದಿಲ್ಲ. ಸೀತೆ ಅವನಿಗೆ ಒಂದಷ್ಟು ತಿನಿಸನ್ನೂ ನೀಡುತ್ತಾಳೆ. ಅದನ್ನೆಲ್ಲವನ್ನು ತಿಂದು, ಸೀತೆ ಬೇಡ ಬೇಡ ಎಂದರೂ ಅಡುಗೆಗೆ ಬಳಸಿದ್ದ ಮುಸುರೆ ಪಾತ್ರೆಗಳನ್ನು ತೊಳೆದುಕೊಡುತ್ತಾನೆ. ಹಾಗೆ ತೊಳೆದು ಕೊಡುವಾಗ, ಆತನ ಕೈ ಮುಖ ಎಲ್ಲವೂ ಮಸಿಯಾಗಿ ಹೋಗಿದ್ದನ್ನು, ಆಗ ಆ ಋಷಿಕುಮಾರ ಪಟ್ಟ ಪಾಡನ್ನು ಸೀತೆ ರಸವತ್ತಾಗಿ ಭಾವವಶಳಾಗಿ ವರ್ಣಿಸುತ್ತಿದ್ದಾಳೆ. ನೋಡುವವರಿಗೆ ಅಲ್ಪತನವೆಂದು ಕಾಣುವ ಆ ಕಥೆಯನ್ನು ಮತಿಭೂಮನಾದ ಶ್ರೀರಾಮನೂ, ವೀರನಾದ ಲಕ್ಷ್ಮಣನೂ ಅಳ್ಳೆ ಬಿರಿಯುವಂತೆ ನಗುತ್ತಾ ಮಹೋಲ್ಲಾಸದಿಂದ ಕೇಳುತ್ತಿದ್ದರಂತೆ! ವನವಾಸಿಗಳಾದವರಿಗೆ, ಅಥವಾ ಏಕಾಂಗಿಯಾದವರಿಗೆ ಅಂತಹ ಸಣ್ಣಪುಟ್ಟ ಘಟನೆಗಳೂ, ವಸ್ತುಗಳೂ ಅತ್ಯಂತ ಮುಖ್ಯವಾಗಿ, ಮಹತ್ತಾದವುಗಳಾಗಿ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ! ಈ ಕಥೆಯನ್ನು ಕೇಳಿ ಮುಗಿಯುತ್ತಲೇ, ಆ ಮೂವರು ಪರ್ವತದ ತುದಿಯಲ್ಲಿ ಎದ್ದ ಕಾಳ್ಗಿಚ್ಚನ್ನು ನೋಡುತ್ತಾರೆ; ’ಎಳಮಕ್ಕಳೋಲಂತೆ, ಬಾಯ್ದೆರೆದ ಬೆಳ್ಳಚ್ಚರಿಗೆ ಮನಂ ಮಾರ್ವೋದವೋಲ್!’

ಇನ್ನೊಂದು ದಿನ ಸೀತೆ ಅಡುಗೆಗೆ ತೊಡಗಿದ್ದಾಳೆ. ಹಸಿಸೌದೆಯ ದೆಸೆಯಿಂದ ಒಲೆ ಉರಿಯುತ್ತಿಲ್ಲ. ಪಾಪ! ಸೀತೆ ಒಲೆಯನ್ನು ತಿವಿದು, ಊದಿ ಏನೆಲ್ಲಾ ಮಾಡಿದರೂ ಒಲೆ ಹತ್ತಿಕೊಳ್ಳುತ್ತಿಲ್ಲ. ಅವಳ ಕೈ ಮೈ ಮೂತಿಯೆಲ್ಲಾ ಮಸಿಯಾಗಿಬಿಟ್ಟಿದೆ! ಮೂಗು ಕಣ್ಣನಿಂದ ನೀರು ಸುರಿಯುತ್ತಿದೆ. ಋಷಿಯಾಶ್ರಮಕ್ಕೆ ಅಧ್ಯಯನಕ್ಕೆಂದು ಹೋಗಿದ್ದ ರಾಮ ಹಿಂತಿರುಗಿ ಬಂದು ನೋಡುತ್ತಾನೆ, ಎಲೆಮನೆಯೆಲ್ಲಾ ಹೊಗೆಯಿಂದ ಆವೃತ್ತವಾಗಿಬಿಟ್ಟಿದೆ. ರಾಮ ಸೀತೆಯನ್ನು ಕೂಗುತ್ತಾನೆ. ಹೊಗೆಯ ಹೊಟ್ಟೆಯಲ್ಲಿ ಅಡಗಿದ್ದ ಸೀತೆ ರಾಮನ ಕೂಗಿಗೆ ಓಗೊಡುತ್ತಾಳೆ. ’ಹಸಿವಾಗುತ್ತಿದೆ, ನನಗೆ ಊಟ ನೀಡು’ ಎಂದ ರಾಮನಿಗೆ ಸೀತೆ, ’ಹಸಿ ಸೌದೆಯಿಂದ ಅಡುಗೆ ಆಗುವುದಾದರು ಹೇಗೆ? ಹೊಗೆಯನ್ನೇ ಊಟ ಮಾಡಿ’ ಎಂದು ಸವಾಲೆಸೆಯುತ್ತಾಳೆ. ಅವಳ ಧ್ವನಿಯನ್ನು ಅನುಸರಿಸಿ ಅವಳ ಬಳಿ ಸಾರಿದ ರಾಮ, ಮಸಿಯಿಡಿದ ಅವಳ ಮುಖವನ್ನು ನೋಡಿ ನಗಲಾರಂಭಿಸುತ್ತಾನೆ. ಅಳ್ಳೆ ಹಿಡಿದು ಜೋರಾಗಿ ನಗುತ್ತಾ ಹೊರಗೆ ಬರುತ್ತಾನೆ. ಆಗಷ್ಟೇ ಅಲ್ಲಿಗೆ ಬಂದ ಲಕ್ಷ್ಮಣ ಅಣ್ಣನ ಆ ಪರಿ ನಗುವಿಗೆ ಬೆರಗಾಗುತ್ತಾನೆ. ಆಗ ರಾಮ. ಲಕ್ಷ್ಮಣನಿಗೆ, ’ನೋಡು, ಒಳಗೆ ಹೋಗಿ ನೋಡು. ಅಲ್ಲಿ ನಿನ್ನ ಅತ್ತಿಗೆಯ ಬದಲು ಒಬ್ಬಳು ವಾನರಿಯಿದ್ದಾಳೆ’ ಎಂದು ಗಹಗಹಿಸಿ ನಗುತ್ತಾನೆ.
ರಾಮನ ಮಾತಿನಂತೆ ಲಕ್ಷ್ಮಣ ಒಳಗೆ ಹೋಗಿ ನೋಡುತ್ತಾನೆ. ರಾಮನಂತೆ ಆತ ನಗಲಿಲ್ಲ. ಅಲ್ಲಿನ ಧೂಮದೃಶ್ಯ ನಗೆಗೆ ಮೀರ್ದುದು! ’ಕ್ಷಮಿಸಿಮೆನ್ನಂ, ಪಸಿಯ ಸೌದೆಯ ತಂದೆನ್ ಅಪರಾಧಿಯಂ’ ಎಂದು ಹೊರಗೆ ಓಡಿದ ಲಕ್ಷ್ಮಣ ಒಣಗಿದ ಸೌದೆಯನ್ನು ತಂದು ಒಲೆಗೆ ಹಾಕಿ, ತಾನೇ ಒಲೆಯನ್ನು ಊದುತ್ತಾನೆ. ಧೂಮದಿಂದ ಬೆಂಕಿಯ ಬುಗ್ಗೆ ಉಕ್ಕುತ್ತದೆ. ಚಿಂತಾಮ್ಲಾನ ಮೈಥೀಲಿಯ ಮುಖಪದ್ಮದಿಂದ ಸಂತೋಷಕಾಂತಿ ಚಿಮ್ಮುತ್ತದೆ.

ಇನ್ನೊಮ್ಮೆ ರಾಮನು ಚಿತ್ರಕೂಟದ ಚೆಲುವನ್ನು ದರ್ಶಿಸಿ ಮಗುತ್ವವನ್ನು ಪಡೆಯುತ್ತಾನೆ.
ತಾನೆ ಹೊಳೆಯಾದಂತೆ,
ತಾನೆ ಅಡವಿಯಾದಂತೆ,
ತಾನೆ ಗಿರಿಯಾದಂತೆ,
ತಾನೆ ಬಾನಾದಂತೆ,
ತಾನೆಲ್ಲಮಾದಂತೆ
ಮೇಣ್ ಎಲ್ಲಮುಂ ತನ್ನೊಳಧ್ಯಾತ್ಮಮಾದಂತೆ
ಭೂಮಾನುಭೂತಿಯಿಂ ಮೈಮರೆದನ್
ಎನ್ನುತ್ತಾರೆ ಕವಿ. ಇಂತಹ ಬಿಡಿ ಬಿಡಿ ದೃಶ್ಯಗಳನ್ನು ಈ ಸಂಚಿಕೆಯಲ್ಲಿ ಹೆಣೆದಿರುವ ಕವಿ, ಅದರ ಹಿಂದಿನ ಆಶಯವನ್ನೂ ಸ್ಪಷ್ಟಪಡಿಸಿದ್ದಾರೆ. ಕವಿಯ ಮಾತುಗಳಲ್ಲಿಯೇ ಹೇಳುವುದಾದರೆ,
ಕೊಂದ ಕತದಿಂದೇಂ ಪೆರ್ಮನಾದನೆ ರಾಮನ್
ಆ ಮಾತನುಳಿ: ಪಗೆಯೆ? ತೆಗೆತೆಗೆ!
ಪೆರ್ಮೆಗೆ ಒಲ್ಮೆಯೆ ಚಿಹ್ನೆ.
ಮಹತ್ತಿಗೇಂ ಬೆಲೆಯೆ ಪೇಳ್ ಕೊಲೆ?
ಕೋಲಾಹಲದ ರುಚಿಯ ಮೋಹಕ್ಕೆ ಮರುಳಾದ ಮಾನವರ್
ರಾವಣನ ಕೊಲೆಗಾಗಿ ರಾಮನಂ ಕೊಂಡಾಡಿದೊಡೆ
ಕವಿಗುಂ ಆ ಭ್ರಾಂತಿ ತಾನೇಕೆ?
ಮಣಿಯುವೆನು ರಾಮನಡಿದಾವರೆಗೆ:
ದಶಶಿರನ ವಧೆಗಾಗಿಯಲ್ತು. ದೈತ್ಯನಂ ಗೆಲಿದ ಕಾರಣಕಲ್ತು,
ತನ್ನ ದಯಿತೆಯನೊಲಿದ ಕಾರಣಕೆ,
ಗುರು ಕಣಾ ರಾಮಚಂದ್ರಂ.
ರಾಮ ನಮಗೆ ಮುಖ್ಯವಾಗಬೇಕಾದುದು ರಾವಣನನ್ನು ಕೊಂದ ಎಂಬ ಕಾರಣಕ್ಕೆ ಅಲ್ಲ; ಆತ ಒಬ್ಬ ಪರಮಪುರುಷೋತ್ತಮ, ಮಾನವೀಯ ವ್ಯಕ್ತಿ ಎಂಬ ಕಾರಣಕ್ಕೆ. ರಾವಣ ಸಂಹಾರಿಯ ವೇಷದಲ್ಲೇ ರಾಮನನ್ನು ಕಾಣುವ ಮನಸ್ಥಿತಿಯ ಬಗ್ಗೆಯೇ ಕವಿಗೆ ವಿರೋಧವಿದೆ. ರಣದ ರುಚಿಗೆ ಮರುಳಾದ ಮಾನವರು ಹಾಗೆ ಮಾಡುತ್ತಾರೆ. ಆದರೆ ಕವಿಗೆ ಆ ಭ್ರಾಂತಿ ಇಲ್ಲ!

Friday, January 24, 2014

ಚತುರನ ಚಾತುರ್‍ಯ : ಅಜ್ಜ ಹೇಳಿದ್ದ ಕಥೆ ಪಠ್ಯಪುಸ್ತಕದಲ್ಲಿ ಕಂಡಾಗ

ಒಂದು ಊರಿನಲ್ಲಿ ಚತುರನಾದ ಒಬ್ಬ ನಾಪಿತನಿದ್ದನು. ಅದೇ ಊರಿನಲ್ಲಿ ಪಂಚಾಂಗವನ್ನೋದುವ ಬ್ರಾಹ್ಮಣನೊಬ್ಬನಿದ್ದ. ನಾಪಿತನಿಗೆ ಬ್ರಾಹ್ಮಣನ ಮೇಲೆ ವಿಶ್ವಾಸ. ಏನೇ ಕೆಲಸ ಮಾಡಬೇಕಾದರೂ ಆತನನ್ನು ಕೇಳಿಯೇ ಮಾಡುತ್ತಿದ್ದ.
ಆ ಊರಿನಿಂದ ನಾಲ್ಕು ಯೋಜನ ದೂರದಲ್ಲಿ ಮಹಾದೇವನ ಕ್ಷೇತ್ರವೊಂದಿತ್ತು. ವರ್ಷಕ್ಕೊಮ್ಮೆ ಅಲ್ಲಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಗೆ ತುಂಬಾ ಜನ ಸೇರುತ್ತಿದ್ದರು. ನಾಪಿತನು ತನ್ನ ವೃತ್ತಿಯ ಜೊತೆಗೆ ಒಳ್ಳೆಯ ನಾದಸ್ವರವಾದಕನೂ ಆಗಿದ್ದ. ’ಜಾತ್ರೆಯ ಸಮಯದಲ್ಲಿ ತಾನು ಅಲ್ಲಿದ್ದರೆ, ವೃತ್ತಿ-ಪ್ರವೃತ್ತಿಯಿಂದ ಒಳ್ಳೆಯ ಸಂಪಾದನೆ ಮಾಡಬಹುದು, ಜೊತೆಗೆ ದೇವರ ದರ್ಶನವೂ ಆಗುವುದು’ ಎಂಬ ಯೋಜನೆ ನಾಪಿತನದು. ಎಂದಿನಂತೆ ಬ್ರಾಹ್ಮಣನಲ್ಲಿ ಈ ವಿಷಯವನ್ನು ತಿಳಿಸಿ, ಯಾತ್ರೆಗೆ ಒಳ್ಳೆಯ ಮುಹೂರ್ತವನ್ನು ಹೇಳಬೇಕೆಂದು ಕೇಳುತ್ತಾನೆ. ಆ ದಿನ ಬ್ರಾಹ್ಮಣನಿಗೆ ಏನೂ ತೋಚುವುದಿಲ್ಲ. ಸುಮ್ಮನೆ, ’ನಾಳೆ ಸೂರ್ಯೋದಯಕ್ಕೆ ಸರಿಯಾಗಿ ಹೊರಡು’ ಎನ್ನುತ್ತಾನೆ. 


ಬ್ರಾಹ್ಮಣನ ಮಾತಿನಲ್ಲಿ ಪರಮವಿಶ್ವಾಸಿಯಾಗಿದ್ದ ನಾಪಿತನು, ಸೂರ್ಯೋದಯಕ್ಕೆ ಸರಿಯಾಗಿ ಹೊರಟು, ಸಾಕಷ್ಟು ದೂರ ನಡೆದ ಮೇಲೆ ಒಂದು ದಟ್ಟವಾದ ಕಾಡನ್ನು ಪ್ರವೇಶಿಸುತ್ತಾನೆ. ಅಲ್ಲಿ ನರಭಕ್ಷಕನಾಗಿದ್ದ ಹುಲಿಯೊಂದು ಮಹಾಉಗ್ರವಾಗಿ ಆರ್ಭಟಿಸುತ್ತಾ ಎದುರಾಗುತ್ತದೆ. ಆಗ ನಾಪಿತನು, ’ಇನ್ನು ನನಗೆ ಸಾವೇ ನಿಶ್ಚಿತ, ಹೆಂಡತಿ ಮಕ್ಕಳು ಅನಾಥರಾಗುವರು, ಇನ್ನೇನು ಗತಿ’ ಎಂದುಕೊಳ್ಳುತ್ತಾನೆ. ಹುಲಿ ಹತ್ತಿರ ಬನರುವಷ್ಟರಲ್ಲಿ ಒಂದು ಪ್ರಯತ್ನ ಮಾಡೋಣವೆಂದುಕೊಂಡು, ಕೈಗಳಿಂದ ಭುಜಗಳನ್ನು ಬಡಿದುಕೊಳ್ಳುತ್ತ, ಜೋರಾಗಿ ಅಟ್ಟಹಾಸ ಮಾಡಿ, ಎಲವೋ ಹುಲಿಯೆ, ದಷ್ಟಪುಷ್ಟವಾಗಿರುವ ನೀನು ದೇವರ ದಯೆಯಿಂದ ನನಗೆ ಸಿಕ್ಕಿದ್ದೀಯ. ಬಾ, ಮುಂದಕ್ಕಡಿ ಇಡು ಎಂದು ಕೂಗುತ್ತಾ ಕೈಯಲ್ಲಿದ್ದ ಹಗ್ಗದ ತುಂಡೊಂದನ್ನು ಹುಲಿಯ ಕೊರಳಿಗೆ ಕಟ್ಟುವವನಂತೆ ಸನ್ನೆ ಮಾಡುತ್ತಾನೆ.
ಆಗ ಹುಲಿ, ’ಇದೇನು ಅಚ್ಚರಿ! ಭಯಂಕರನಾದ ನನ್ನನ್ನೇ ಮುಂದಕ್ಕೆ ಬಾ ಎಂದು ಕರೆಯುತ್ತಾ, ಹಗ್ಗದಿಂದ ಕಟ್ಟಲು ಸಿದ್ಧನಾಗಿದ್ದಾನಲ್ಲ! ಏನು ಕಾರಣವಿರಹುದು?’ ಎಂದುಕೊಂಡು, ದಿಗಿಲಿನಿಂದ ಎಲವೋ, ಮನುಷ್ಯರನ್ನು ತಿಂದು ತೇಗುವ ನನ್ನನ್ನು ಕಂಡೂ ಅಟ್ಟಹಾಸ ಮಾಡುತ್ತಿರುವ ನೀನು ಯಾರು? ಮೊದಲು ಹೇಳು ಎನ್ನುತ್ತದೆ.


ನಾಪಿತನು, ಎಲವೋ ಕ್ಷುದ್ರ ಜಂತುವೆ, ಲೋಕಾಧಿಪತಿಯಾದ ಮಹಾದೇವನು ವ್ಯಾಘ್ರಯಜ್ಞ (ಹುಲಿಮೇಧ!) ಮಾಡುತ್ತಿದ್ದಾನೆ. ನನ್ನನ್ನೂ ಸೇರಿಸಿ ಐದು ಮಂದಿ ಗಂಧರ್ವರಿಗೆ ಭೂಲೋಕದಿಂದ ತಲಾ ನೂರು ಹುಲಿಗಳನ್ನು ಹಿಡಿದು ತರುವಂತೆ ಕಟ್ಟಪ್ಪಣೆ ಮಾಡಿದ್ದಾನೆ. ಅದಕ್ಕಾಗಿಯೆ ಮಾನವರಾಗಿ ನಾವು ಬಂದಿದ್ದೇವೆ. ನಾನೀಗಾಗಲೇ ತೊಂಭತ್ತನಾಲ್ಕು ಹುಲಿಗಳನ್ನು ಹಿಡಿದು ಮಹಾದೇವನಿಗೆ ಒಪ್ಪಿಸಿದ್ದೇನೆ. ಇನ್ನುಳಿದ ಆರು ಹುಲಿಗಳನ್ನು ಹಿಡಿಯಲು ನೆನ್ನೆ ಮತ್ತೆ ಬಂದು, ಇದೇ ಮಹಾರಣ್ಯದಲ್ಲಿ, ನಿನ್ನನ್ನೇ ಹೋಲುವ ಹುಲಿಯೊಂದನ್ನು ಹಿಡಿದು ನನ್ನ ಕಂಕುಳಲ್ಲಿ ಬಂಧಿಸಿಟ್ಟುಕೊಂಡಿದ್ದೇನೆ. ಅದೂ ನೀನು ಅವಳಿಜವಳಿಯೆ? ಈಗ ನರಭಕ್ಷಕನಾದ ನಿನ್ನನ್ನೂ ಬಂಧಿಸುತ್ತೇನೆ. ಬಾ ಬೇಗ ಮುಂದಕ್ಕಡಿಯಿಡು ಎಂದು ಮೊದಲಿಗಿಂತ ಹೆಚ್ಚಾಗಿ ಆರ್ಭಟಿಸುತ್ತಾನೆ.
ಹುಲಿಗೆ ಒಳಗೊಳಗೆ ಭಯವಾಗುತ್ತದೆ. ಮೆಲ್ಲನೆ, ಎಲ್ಲಿ? ನಿನ್ನ ಕಂಕುಳಲ್ಲಿರುವ ಹುಲಿಯನ್ನು ತೋರು ಎನ್ನುತ್ತದೆ. ಹುಲಿ ಭೀತಗೊಂಡಿರುವುದನ್ನು ಮನಗಂಡ ನಾಪಿತ, ಮನಸ್ಸಿನಲ್ಲಿಯೇ ಉತ್ಸಾಹಗೊಂಡು, ಎಲಾ ಜಂತುವೆ, ನನ್ನನ್ನೇ ಪರೀಕ್ಷಿಸುತ್ತೀಯಾ!? ನೋಡಿಲ್ಲಿ ಎನ್ನುತ್ತಾ ಕಂಕುಳಲ್ಲಿದ್ದ ಹಡಪದಿಂದ ಕನ್ನಡಿಯನ್ನು ತೆಗೆದು ತೋರುತ್ತಾನೆ.
ಕನ್ನಡಿಯಲ್ಲಿ ತನಗಿಂತಲೂ ದೊಡ್ಡದಾಗಿ ಕಾಣುತ್ತಿದ್ದ, ತನ್ನಂತೆಯೇ ಇರುವ ಹುಲಿಯನ್ನು ನೋಡಿ, ’ನನಗಿಂತ ದೊಡ್ಡದಾದ ಹುಲಿಯನ್ನು ಇಷ್ಟು ಚಿಕ್ಕ ಚೌಕಟ್ಟಿನಲ್ಲಿ ಬಂಧಿಸಿರುವ ಈತ ಮನುಷ್ಯನೇ ಅಲ್ಲ! ಶಿವಶಿವಾ! ನಾನು, ಇವನು ನರಮನುಷ್ಯ. ತಿನ್ನೋಣ ಎಂದು ಎದುರು ಬಂದು ಕೆಟ್ಟೆ! ಇನ್ನೇನು ಗತಿ’ ಎಂದು ನಡುಗುತ್ತಾ, ಆತನ ಕಾಲಿಗೆ ಬಿದ್ದು, ದಮ್ಮಯ್ಯ ನನನ್ನು ಬಿಟ್ಟುಬಿಡು. ಮನುಷ್ಯರನ್ನು ತಿಂದ ಮೇಲೆ ಅವರು ಬಳಿಯಿದ್ದ ಚಿನ್ನಾಭರಣವನ್ನು ನನ್ನ ಗುಹೆಯೊಳಗೆ ಕೂಡಿಸಿಟ್ಟಿದ್ದೇನೆ. ಅವುಗಳನ್ನೆಲ್ಲಾ ನೀಡುತ್ತೇನೆ. ನನ್ನನ್ನು ಹಿಡಿದೊಯ್ಯಬೇಡ ಎಂದು ದೈನ್ಯದಿಂದ ಬೇಡುತ್ತದೆ.
ಹೌದಾ! ಎಲ್ಲಿ? ನಿನ್ನ ಗುಹೆಯನ್ನು ನೋಡೋಣ ಎಂದ ನಾಪಿತನನ್ನು ಹುಲಿ ಗುಹೆಗೆ ಕರೆದುಕೊಂಡು ಹೋಗಿ ತೋರಿಸುತ್ತದೆ. ಮನುಷ್ಯರ ಮೂಳೆ-ಮಾಂಸಗಳಿಂದ ಕೊಳಕಾಗಿರುವ ಜಾಗದ ಒಂದೆಡೆಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ದುಡ್ಡು-ಚಿನ್ನವನ್ನು ನೋಡುತ್ತಾನೆ. ಅದರಲ್ಲಿ ತಾನು ಹೊರುವಷ್ಟನ್ನು ಕಟ್ಟಿಕೊಂಡು, ಎಲವೋ ಹುಲಿಯೆ. ನಿನ್ನನ್ನು ಉಳಿಸಿದ್ದೇನೆ. ಧರ್ಮದಿಂದ ಜೀವನ ನಡೆಸು. ನನ್ನಂತೆಯೇ ಇನ್ನೂ ನಾಲ್ವರು ಹುಲಿಗಳಿಗೋಸ್ಕರ ಹುಡುಕುತ್ತಿದ್ದಾರೆ. ಅವರ ಕಣ್ಣಿಗೆ ಬೀಳದಿರು. ಹೋಗು. ಎಂದು ಹೇಳಿ ’ಬದುಕಿದೆಯಾ ಬಡಜೀವವೆ’ ಎಂದುಕೊಂಡು ಕ್ಷಣದಲ್ಲಿ ಅಲ್ಲಿಂದ ಹೊರಟು ಊರು ಸೇರುತ್ತಾನೆ. ತಂದ ಸಂಪತ್ತಿನಲ್ಲಿ ಅರ್ಧದಷ್ಟನ್ನು ಬ್ರಾಹ್ಮಣನಿಗೆ ಕೊಡುತ್ತಾನೆ. ಉಳಿದುದರಲ್ಲಿ ತಾನೂ ಸುಖವಾಗಿರುತ್ತಾನೆ. 


ಮುಂದಿನ ವರ್ಷ ಜಾತ್ರೆ ಬಂದಾಗ ನಾಪಿತನು ’ಕಳೆದ ಭಾರಿ ದೇವತಾಯಾತ್ರೆಯನ್ನು ಮಾಡುವನೆಂದು ಹೊರಟು, ಧನದ ಆಸೆಯಿಂದ ಮೊಟಕುಗೊಳಿಸಿ, ಮಹಾಪಾಪಕ್ಕೆ ತುತ್ತಾಗಿದ್ದೇನೆ. ಈಗಲಾದರೂ ಹೋಗಿ ದೇವರ ದರ್ಶನ ಮಾಡಿ ಬರುತ್ತೇನೆ’ ಎಂದು ನಿಶ್ಚಯಿಸುತ್ತಾನೆ. ಯಥಾಪ್ರಕಾರ ಬ್ರಾಹಣನಲ್ಲಿ ಲಗ್ನನಿಶ್ಚಯಕ್ಕೆ ಕೇಳುತ್ತಾನೆ. ಬ್ರಾಹ್ಮಣನು ಮನಸ್ಸಿನಲ್ಲಿಯೇ ’ಇವನು ಧನ ಸಂಪಾದನೆಗೆ ಹೋಗುತ್ತಿದ್ದಾನೆ. ಕಳೆದ ಭಾರಿ ನನಗೇ ಅಷ್ಟೊಂದು ಕೊಟ್ಟ ಇವನು, ಇನ್ನೆಷ್ಟು ತಂದಿದ್ದನೊ, ಕಾಣೆ! ಆದ್ದರಿಂದ ಇವನೊಡನೆ ನಾನೂ ಹೋಗುವುದು ಒಳ್ಳೆಯದು’ ಎಂದು ಯೋಜಿಸಿ, ಎಲವೋ ನಾಪಿತನೆ, ನಾನೂ ಯಾತ್ರೆಯ ಸಂಕಲ್ಪವನ್ನು ಮಾಡಿ, ನಾಳೆ ಸೂರ್ಯೋದಯದಲ್ಲೆ ಹೊರಡುವವನಿದ್ದೇನೆ ಜೊತೆಯಲ್ಲೇ ಹೋಗೋಣ ಎನ್ನುತ್ತಾನೆ. ’ನಾಪಿತನು ಕಾಡಿನ ಹಾದಿ, ಹುಲಿಕಾಟ ಬೇರೆ ಇದೆ’ ಎಂದರೂ ಬ್ರಾಹ್ಮಣ ಒಪ್ಪುವುದಿಲ್ಲ. ಕೊನೆಗೆ ನಾಪಿತ ಆದುದಾಗಲಿ ಎಂದು, ಹುಲಿಯ ಭಯದಿಂದ, ಹಳೆಯ ದಾರಿಯನ್ನು ಬಿಟ್ಟು ಬೇರೊಂದು ದಾರಿಯಲ್ಲಿ ಬ್ರಾಹಣನೊಂದಿಗೆ ಹೊರಡುತ್ತಾನೆ.
ಕಳೆದ ವರ್ಷ ನಾಪಿತನ ಕೈಯಲ್ಲಿ ಸಿಕ್ಕಿಕೊಂಡು ಸಾವಿನ ದರ್ಶನ ಮಾಡಿದ್ದ ಹುಲಿ, ’ತಾನು ಇವನಿಂದ ಬಿಡುಗಡೆಗೊಂಡರೆ, ನಿನಗೆ ದೊಡ್ಡ ಸಮಾರಾಧನೆಯ್ನನು ಮಾಡಿ, ತನ್ನ ಬಂಧುಬಾಂಧವ ಹುಲಿಗಳಿಗೆಲ್ಲಾ ಔತಣ ನೀಡುತ್ತೇನೆ’ ಎಂದು ದೇವರಿಗೆ ಹರಕೆ ಮಾಡಿಕೊಂಡು, ಬೇರೆ ಕಾಡಿಗೆ ಬಂದು ಸೇರಿಕೊಂಡಿತ್ತು. ತನ್ನ ಹರಕೆಯಂತೆ, ಆ ಜಾತ್ರೆಯ ದಿವಸವೇ ಅನೇಕ ಪ್ರಾಣಿ ಪಕ್ಷಿಗಳನ್ನು ಕೊಂದು, ಔತಣಕ್ಕಾಗಿ ತನ್ನ ಬಳಗದವರನ್ನೆಲ್ಲಾ ಕರೆದುಕೊಂಡು ಹೋಗುತ್ತಿತ್ತು. ಮಾರ್ಗ ಬದಲಿಸಿ ಹೊರಟ ನಾಪಿತ-ಬ್ರಾಹ್ಮಣರಿಬ್ಬರು ಅದೇ ದಾರಿಯಲ್ಲಿ ಬಂದುದ್ದರಿಂದ ಹುಲಿಗಳ ಹಿಂಡನ್ನು ಎದುರುಗೊಳ್ಳುತ್ತಾರೆ. ’ಈ ಬ್ರಾಹ್ಮಣ ನನ್ನೊಂದಿಗೆ ಬಂದು ಹುಲಿಗೆ ತುತ್ತಾಗುವಂತಾಗುತ್ತದಲ್ಲ’ ಎಂದು ಯೋಚಿಸಿದ ನಾಪಿತ, ಅವನನ್ನು ದೊಡ್ಡ ಮರಕ್ಕೆ ಹತ್ತಿಸಿ ಅಯ್ಯಾ ಹಾರುವನೆ. ಅಂಜಬೇಡ. ಬಲವಾದ ಕೊಂಬೆಯೊಂದನ್ನು ಅಪ್ಪಿ ಅಲುಗಾಡದೆ ಕುಳಿತುಕೊ ಎಂದು ತಾನೂ ಕೊಂಬೆಯನ್ನು ತಬ್ಬಿಕೊಂಡು ಕುಳಿತುಕೊಳ್ಳುತ್ತಾನೆ. ಹುಲಿಗಳೆಲ್ಲಾ ಅವರು ಕುಳಿತಿದ್ದ ಮರದ ಕೆಳಗೆ ಬಂದು ಸೇರಿ, ಪೊದೆಯಲ್ಲಿ ಅಡಗಿಸಿಟ್ಟಿದ್ದ ಮೃತ ಪ್ರಾಣಿ ಪಕ್ಷಿಗಳನ್ನು ಎಳೆದು ತಿನ್ನಲಾರಂಭಿಸುತ್ತವೆ. ಹಾರುವನ ಪ್ರಾಣ ನೆತ್ತಿಗೆ ಬಂದಂತಾಗುತ್ತದೆ. ’ಇಂದು ಬದುಕುಳಿಯುವ ಮಾರ್ಗವೇ ಇಲ್ಲವೆ, ಶಿವಶಿವಾ’ ಎಂದು ನಾಪಿತ ಯೋಚಿಸುತ್ತಾನೆ.
ಆಗ, ಹೆಗ್ಗಡಿ ಹುಲಿಯು, ಆ ಹುಲಿಯನ್ನು ಕುರಿತು, ಏನಯ್ಯಾ, ಈ ಸಮಾರಾಧನೆಗೆ ಕಾರಣವೇನು? ಎಂದು ಕೇಳುತ್ತದೆ. ಹುಲಿಯು ಹಿಂದಿನ ಕಥೆಯನ್ನೆಲ್ಲಾ ಹೇಳಿದಾಗ, ಹೆಗ್ಗಡಿ ಹುಲಿಯು ಮನುಷ್ಯ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ನಾಟಕ ಮಾಡಿ ನಿನ್ನನ್ನು ವಂಚಿಸಿದ್ದಾನೆ ಎನ್ನುತ್ತದೆ. ಹುಲಿ, ಅಯ್ಯಾ ಹೆಗ್ಗಡಿಯೇ, ನನಗಿಂತ ಬಲವಾಗಿದ್ದ, ನಿಮ್ಮಂತೆಯೇ ಇದ್ದ ಒಂದು ದೊಡ್ಡ ಹುಲಿಯನ್ನು ಇಷ್ಟೇ ಇಷ್ಟು ಜಾಗದ ಚೌಕಟ್ಟಿನಲ್ಲಿ ಬಂಧಿಸಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಆ ಗಂಧರ್ವನನ್ನು ಬಹುವಿಧವಾಗಿ ಬೇಡಿಕೊಂಡು, ಪ್ರಾಣವುಳಿಸಿಕೊಳ್ಳುವುದಕ್ಕೋಸ್ಕರ ನನ್ನಲ್ಲಿದ್ದ ಸಂಪತ್ತೆಲ್ಲವನ್ನು ಕೊಟ್ಟೆ. ’ನನ್ನಂತೆಯೇ ಇರುವ ಇನ್ನೂ ನಾಲ್ವರ ಕಣ್ಣಿಗೆ ಬೀಳಬೇಡ’ ಎಂದು ಹೇಳಿ, ನನ್ನನ್ನು ಉಳಿಸಿದ. ಬದುಕಿದರೆ ಸಾಕೆಂದು ದೇವರಿಗೆ ಹೇಳಿಕೊಂಡಿದ್ದ ಹರಕೆಯಂತೆ ಸಮಾರಾಧನೆ ನೆಡೆಸಿದ್ದೇನೆ ಎನ್ನುತ್ತದೆ.
ಅಷ್ಟರಲ್ಲಿ ಊಟ ಮುಗಿಸಿದ ಅನೇಕ ಹುಲಿಗಳು ಒಟ್ಟೊಟ್ಟಿಗೆ ಘರ್ಜಿಸಲು ಆರಂಭಿಸುತ್ತವೆ. ಅವುಗಳ ಉತ್ಸಾಹದ ಘರ್ಜನೆಗೆ ಭೂಮಿಯೇ ಕಂಪಿಸಿ, ಕಾಡಿನಲ್ಲೆಲ್ಲಾ ಸಿಡಿಲು ಹೊಡೆದಂತಾಗುತ್ತದೆ. ಆ ಶಬ್ದಕ್ಕೆ ಮೇಲೆ ಕುಳಿತಿದ್ದ ಬ್ರಾಹ್ಮಣನು, ಭಯದಿಂದ ಎಚ್ಚರ ತಪ್ಪಿ ಹುಲಿಗಳ ಮದ್ಯಕ್ಕೆ ಬಿದ್ದುಬಿಡುತ್ತಾನೆ. ’ಅಯ್ಯೊ ಅನ್ಯಾಯವಾಗಿ ಸಾಯುತ್ತಾನಲ್ಲ’ ಎಂದುಕೊಂಡ ನಾಪಿತನು ಆದುದಾಗಲಿ ಎಂದು ’ಎಲವೋ ಗಂಧರ್ವ ನೀನು ಧುಮುಕಿದುದು ಲೇಸಾಯ್ತು. ಮುಂಚಿತವಾಗಿ ಆ ಗಡ್ಡದ ಹುಲಿಯನ್ನು ಹಿಡಿ, ಹಿಡಿ ಎಂದು ಕಾಡೆಲ್ಲಾ ಕೇಳುವಂತೆ ಕೂಗಲಾರಂಭಿಸಿದ. ಆಗಷ್ಟೇ ಕಥೆ ಕೇಳಿದ್ದ ಹುಲಿಗಳೆಲ್ಲಾ, ’ಗಂಧರ್ವನು ಎಲ್ಲರನ್ನು ಏಕಕಾಲದಲ್ಲಿ ಹಿಡಿಯುವ ಉದ್ದೇಶದಿಂದ ಅಡಗಿ ಕುಳಿತಿದ್ದಾನೆ, ನಾವೆಲ್ಲಾ ಸಿಕ್ಕಿಬಿದ್ದೆವು’ ಎಂದು ಭೀತಿಯಿಂದ ದಿಕ್ಕಾಪಾಲಾಗಿ ಓಡುತ್ತವೆ.
ಆಗ ಆ ಹುಲಿಗೆ ಎದುರಾದ ನರಿಯೊಂದು ಅಚ್ಚರಿಯಿಂದ, ಅಯ್ಯಾ, ಸಮಸ್ತ ಪ್ರಾಣಿಗಳು ನಿನಗೆ ಹೆದರಿ ಓಡುತ್ತವೆ. ಆದರೆ ನೀನೇ ಹೆದರಿ ಓಡುತ್ತಿದ್ದೀಯಾ! ನಿಂತು ವಿಷಯವೇನೆಂದು ಹೇಳು. ನಾನಿದ್ದೇನೆ. ಅಂಜಬೇಡ ಎನ್ನುತ್ತದೆ. ನರಿಯ ಮಾತಿನಿಂದ ಹುಲಿ ಸ್ವಲ್ಪ ಧೈರ್ಯಗೊಂಡು ನಡೆದುದೆಲ್ಲವನ್ನು ಹೇಳಿ, ನನ್ನನ್ನು ಹಿಡಿಯಲು ಗಂಧರ್ವನು ಬರುತ್ತಾನೆ ಎಂದು ಭಯಗೊಳ್ಳುತ್ತದೆ. ನರಿಯು ಮಾನವನು ಬಲು ಬುದ್ಧಿವಂತಿಕೆಯನ್ನು ಉಪಯೋಗಿಸಿದ್ದಾನೆ. ಪ್ರಾಣಭಯದಿಂದ ಕೆಳಗೆ ಬಿದ್ದವನು ಸಾಯುತ್ತಾನಲ್ಲಾ ಎಂದು, ಮರದ ಮೇಲಿದ್ದವನು ಚಮತ್ಕಾರದಿಂದ ಕೂಗಿದ ಮಾತ್ರಕ್ಕೆ, ನೀನು ಕಾಲಿಗೆ ಬುದ್ಧಿ ಹೇಳುವುದೆ? ನಿನ್ನ ಧೈರ್ಯಕ್ಕೆ ಬೆಂಕಿ ಬೀಳಲಿ. ತೋರಿಸು ಮನುಷ್ಯಾಧಮನ. ನಿನ್ನಿಂದಲೇ ಆತನನ್ನು ಕೊಲ್ಲಿಸುತ್ತೇನೆ ಎಂದು ಭರವಸೆ ನೀಡುತ್ತದೆ.
ಮೇಲಿಂದ ಧುಮುಕಿ, ತನ್ನನ್ನೇ ಮುಂಚಿತವಾಗಿ ಹಿಡಿಯೆಂದು ಕೂಗಿದವನು ಮನುಷ್ಯ ಮಾತ್ರದವನಲ್ಲ. ಎಂದು ಹೆದರಿ ಬರಲೊಪ್ಪದ ಹುಲಿಯನ್ನು, ನರಿ ನಾನು ಮುಂದೆ ಹೋಗುತ್ತೇನೆ. ನನ್ನ ಹಿಂದೆ ನೀನು ಬಾ ಎಂದು ಧೈರ್ಯ ತುಂಬಿ ಹಿಂದಕ್ಕೆ ಕರೆದುಕೊಂಡು ಬರುತ್ತದೆ.
ಇತ್ತ, ಹುಲಿಗಳೆಲ್ಲಾ ದೂರವಾದ ಮೇಲೆ, ನಾಪಿತನು ಮರದಿಂದ ಇಳಿದು, ಪ್ರಜ್ಞೆ ತಪ್ಪಿದ್ದ ಹಾರುವನನ್ನು ಸಂತೈಸಿ ಅಯ್ಯಾ ದಾರಿ ಒಳ್ಳೆಯದಲ್ಲ, ಬರಬೇಡಿ ಎಂದರೂ ಕೇಳಲಿಲ್ಲ. ಇಷ್ಟು ಧೈರ್ಯವಿಲ್ಲದಿದ್ದರೆ ಗತಿಯೇನು? ಕೆಳಗೆ ಹುಲ್ಲು ಇದ್ದುದರಿಂದ ಕೈಕಾಲು ಮುರಿಯಲಿಲ್ಲ! ಸಾಕಿನ್ನು ದೇವರ ಸೇವೆ. ನಡೆಯಿರಿ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೊರಟಿರುತ್ತಾನೆ. ಆಗ ಎದುರಿಗೆ ನರಿಯೂ ಹುಲಿಯೂ ಬರುತ್ತವೆ. ತಕ್ಷಣ ನಾಪಿತನಿಗೆ ’ನರಿ ಕಾಡಿನ ಪ್ರಾಣಿಗಳಲ್ಲಿ ಮಹಾಬುದ್ಧಿಶಾಲಿಯಾದುದು. ಸರ್ವಸತ್ವಗಳಲ್ಲಿ ಮಹಾಸತ್ವಶಾಲಿಯಾದುದು ಹುಲಿ. ಇವೆರಡೂ ಒಂದಾಗಿ ಬಂದ ಮೇಲೆ ನಮ್ಮನ್ನ ದೇವರೇ ಕಾಪಾಡಬೇಕು. ಆದರೂ ಪ್ರಯತ್ನ ಮಾಡಿ ನೋಡೋಣ’ ಎಂದು ನರಿಯನ್ನು ಕುರಿತು, ಎಲವೋ ಕಳ್ಳನರಿಯೇ ಮೂರು ದಿನದೊಳಗಾಗಿ ಐದು ಹುಲಿಗಳನ್ನು ತಂದು ಒಪ್ಪಿಸುವೆನೆಂದು ಹೇಳಿ, ಪ್ರತಿಜ್ಞೆ ಮಾಡಿದ್ದ ನೀನು, ಇಂದು ನೆಪಕ್ಕಾಗಿ ಒಂದು ಬಡಕಲು ಹುಲಿಯನ್ನು ಹಿಡಿದು ತಂದಿದ್ದೀಯಲ್ಲಾ? ಎಂದು ಜೋರಾಗಿ ಆರ್ಭಟಿಸುತ್ತಾ, ನೆಲದಲ್ಲಿದ್ದ ಕಲ್ಲುಗಳನ್ನು ತೆಗೆದು ನರಿಯತ್ತ ಬೀರಲಾರಂಭಿಸಿತ್ತಾನೆ. ಆಗ ಹುಲಿಯು ’ಆಹಾ! ನರಿಯು ಮೋಸದಿಂದ ಗಂದರ್ವನಿಗೆ ನನ್ನನ್ನು ಒಪ್ಪಿಸಲು ಕರೆತಂದಿದೆಯಲ್ಲಾ! ವಂಚನೆಯನ್ನರಿಯದೆ ಈ ಪಾಪಿಯನ್ನು ನಂಬಿ ಕೆಟ್ಟೆ. ಇನ್ನೇನು ಗತಿ?’ ಎಂದು ಹಿಂದಿರುಗಿ ಓಡಿ ಕಾಡಿನಲ್ಲಿ ಮರೆಯಾಗುತ್ತದೆ. ನಾಪಿತನ ಕಲ್ಲಿನ ಹೊಡೆತಕ್ಕೆ ಸಿಕ್ಕಿದ ನರಿ ಸಾಯುತ್ತದೆ. ನಾಪಿತ ಆ ಬ್ರಾಹ್ಮಣನನ್ನು ಎಳೆದುಕೊಂಡು ಊರು ಸೇರುತ್ತಾನೆ.

* ಸುಮಾರು ೩೦-೩೫ ವರ್ಷಗಳ ಹಿಂದೆ, ಬಾಲ್ಯದಲ್ಲಿ ನನ್ನ ಅಜ್ಜನಿಂದ ಕೇಳಿದ್ದ ಜಾನಪದ ಕಥೆ ಹಾಗೂ ಈಗ ಪಠ್ಯಪುಸ್ತಕವೊಂದರಲ್ಲಿ ಸೇರಿರುವ ೧೮-೧೯ನೆಯ ಶತಮಾನದ ಯಾದವಕವಿಯ ’ಕಲಾವತೀಪರಿಣಯ’ದ ’ಚತುರನ ಚಾತುರ್ಯ’ ಎಂಬ ಉಪಕಥೆ ಇವೆರಡೂ ಒಂದೇ ಆಗಿವೆ! ಜಾನಪದ ಕಥೆಯೊಂದನ್ನು ಯಾದವಕವಿ ತನ್ನ ಕೃತಿಯೊಳಗೆ ಬಳಸಿಕೊಂಡನೆ? ಅಥವಾ ನನ್ನ ಅಜ್ಜ ಕಲಾವತೀ ಪರಿಣಯದ ಈ ಕಥೆಯನ್ನು ಓದಿದ್ದರೆ ಅಥವಾ ಕೇಳಿದ್ದರೆ? ಕಥೆಯ ಸ್ವರೂಪವನ್ನು ಗಮನಿಸಿದರೆ ನನ್ನ ಮೊದಲಿನ ಅನುಮಾನವೇ ಸರಿಯೆನ್ನಿಸುತ್ತದೆ. ಆ ಕಥೆಯ ಹೊಸಗನ್ನಡ ಸಂಗ್ರಹಾನುವಾದವೇ ಈ ಕಥೆ. 

(ಫಬ್ರವರಿ 2014ರ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕಥೆ)

Monday, January 20, 2014

ಕಾಂತಾರ ರಸ! ಅಂದರೇನು?

ರಸ ಎಂದರೇನು? ಕಾವ್ಯದಲ್ಲಿ ಅದರ ಪಾತ್ರವೇನು? ಈ ಪ್ರಶ್ನೆಗಳಿಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಕೆಲಸ. ಸಾಮಾನ್ಯನೊಬ್ಬನಿಗೆ ರಸದ ಬಗ್ಗೆ ಪ್ರಶ್ನೆ ಕೇಳಿದರೆ, ಆತ ನವರಸಗಳ ಬಗ್ಗೆ ಹೇಳುತ್ತಾನೆ. ಸ್ವಲ್ಪ ಶಾಸ್ತ್ರ ಪಂಡಿತನೂ ಭೋಜನಪ್ರಿಯನೂ ಆಗಿದ್ದರೆ ಷಡ್ರಸಗಳ ಬಗ್ಗೆ ಹೇಳುತ್ತಾನೆ. ಕಾವ್ಯಗಳಲ್ಲಿ ಆಸಕ್ತಿಯಿರುವವನಾದರೆ ಭರತ ಪ್ರತಿಪಾದಿತ ಅಷ್ಟರಸಗಳ ಬಗ್ಗೆಯೂ ನಂತರ ಅಲಂಕಾರಿಕರು ಪ್ರಸ್ತಾಪಿಸಿದ ನವರಸಗಳ ಬಗ್ಗೆಯೂ ಮಾತನಾಡುತ್ತಾನೆ.
ರಸ ಎಂಬುದಕ್ಕೆ ದ್ರವವಸ್ತು, ನೀರು, ಗಿಡ ಮರ ಮೊದಲಾದವುಗಳ ಸಾರ ಎಂಬ ಸಾಮಾನ್ಯ ಅರ್ಥಗಳಿವೆ. ಆದರೆ ರಸ ಎಂಬುದು ಒಂದು ವಿಶೇಷ ಅರ್ಥವುಳ್ಳದ್ದು ಹಾಗೂ ಅತ್ಯಂತ ವಿಶಾಲವಾದದ್ದು. ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸನಿಷ್ಪತ್ತಿಃ ಎಂಬುದು ಆದಿಮೀಮಾಂಸಕ ಭರತನ ಪ್ರತಿಪಾದನೆ. ವಿಭಾವಗಳು, ಅನುಭಾವಗಳು, ಸಂಚಾರಿಭಾವಗಳು ಇವುಗಳ ಸಂಯೋಗದಿಂದ ರಸನಿಷ್ಪತ್ತಿಯಾಗುತ್ತದೆ ಎಂದರ್ಥ. ರುಚಿಕಟ್ಟಾದ ಊಟವನ್ನು ಮಾಡುತ್ತಾ ಜನರು ಹೇಗೆ ಪ್ರಸನ್ನರಾಗುತ್ತಾರೊ ಹಾಗೆಯೇ ನಾಟಕ-ಕಾವ್ಯಗಳನ್ನು ದರ್ಶಿಸಿದ ಸಹೃದಯ ಪ್ರಸನ್ನನಾಗುತ್ತಾನೆ. ಆತನಲ್ಲಿ ಈ ಪ್ರಸನ್ನತೆಗೆ ಕಾರಣವಾಗುವುದೇ ರಸ! ಇವುಗಳನ್ನು (ಸಂಖ್ಯೆ ಒತ್ತಟ್ಟಿಗಿರಲಿ) ’ನಾಟ್ಯರಸ’ ಎಂದು ಕರೆಯಲಾಗಿದೆ.
ಷಡ್ರಸಗಳೆಂದರೆ ಆರು ರಸಗಳೆಂದು ಅರ್ಥ. ಸಿಹಿ, ಹುಳಿ, ಉಪ್ಪು, ಕಾರ, ಕಹಿ ಮತ್ತು ಒಗರು ಈ ರುಚಿಗಳಿಗೆ ರಸಗಳೆಂದು ಕರೆಯುತ್ತಾರೆ. ಇವು ಅನ್ನಕ್ಕೆ ಸಂಬಂಧಿಸಿದವುಗಳಾದ್ದರಿಂದ ’ಅನ್ನರಸ’ಗಳೆಂದು ಬೇಕಾದರೆ ಕರೆಯಬಹುದು. ನಾನೀಗ ಹೇಳಲು ಹೊರಟಿರುವ ರಸದ ವ್ಯಾಪ್ತಿಗೆ ಹೊರತಾದದ್ದು ಈ ಮೇಲಿನ ಆರು ರಸಗಳು. ಇನ್ನು ಭಾರತೀಯ ಕಾವ್ಯಮೀಮಾಂಸೆಯಲ್ಲಿ ಭರತಮುನಿ ಪ್ರತಿಪಾದಿಸಿದ ರಸತತ್ವದಲ್ಲಿ ಎಂಟು ಬಗೆಯ ರಸಗಳನ್ನು ಹೇಳಿದ್ದಾನೆ. ಶೃಂಗಾರ, ಹಾಸ್ಯ, ಕರುಣ, ಅದ್ಭುತ, ವೀರ, ಭಯಾನಕ, ಬೀಭತ್ಸ ಮತ್ತು ರೌದ್ರಗಳೇ ಆ ಎಂಟು ರಸಗಳು. ಮೊದಲೆಲ್ಲ ಇದ್ದುದ್ದು ಅಷ್ಟರಸಾಶ್ರಯಗಳಾದ ನಾಟಕ-ಕಾವ್ಯಗಳು ಮಾತ್ರ. ಆದರೆ ನವರಸಾತ್ಮಕವಾದ ಕಾವ್ಯ-ನಾಟಕಗಳು ಎಂದು ಹೇಳುವ ಪರಿಪಾಠ ಬಂದದ್ದು, ನಂತರದ ಮೀಮಾಂಸಕರು ಶಾಂತರಸವನ್ನು ಸೇರಿಸಿದ ಮೇಲೆ. ನಂತರ ಅವು ’ನವರಸ’ಗಳೆಂದೇ ಪ್ರಖ್ಯಾತವಾವದುವು. ಈ ಶಾಂತರಸವನ್ನು ಪ್ರತಿಪಾದಿಸಿದವನು ರುದ್ರಟ ಎಂಬ ಮೀಮಾಂಸಕ. ಆಶ್ಚರ್ಯವೆಂದರೆ, ರುದ್ರಟ ಶಾಂತರಸದ ಜೊತೆಯಲ್ಲೇ ಹೇಳಿದ ’ಪ್ರೇಯಾನ್’ ಎಂಬ ರಸ ಹೇಳ ಹೆಸರಿಲ್ಲದಂತೆ ಕಾಲಗರ್ಭದಲ್ಲಿ ಹೂತು ಹೋಯಿತು. ’ಸಕಾಮ’ವಾದ ರತಿ ಮತ್ತು ’ಅಕಾಮ’ವಾದ ಸ್ನೇಹ ಅಥವಾ ಪ್ರೀತಿ ಈ ಎರಡನ್ನು ಪ್ರತ್ಯೇಕಿಸಿ, ಅಕಾಮವಾದ ಸ್ನೇಹಕ್ಕೆ ರುದ್ರಟ ಪ್ರೇಯಾನ್ ಎಂಬ ರಸವನ್ನು ಪ್ರತಿಪಾದಿಸಿದ್ದ. ಸರಳವಾಗಿ ಅದನ್ನು ನಿಷ್ಕಾಮ ’ಪ್ರೀತಿ’ ರಸ ಎಂದಿಟ್ಟುಕೊಳ್ಳಬಹುದು. ಈ ಜಗತ್ತಿನಲ್ಲಿ ಅಕಾಮವಾದದ್ದು ಯಾವುದೂ ಇಲ್ಲ; ಶುದ್ಧದೈವಭಕ್ತಿಯಿಂದ ಹಿಡಿದು ಎಲ್ಲವೂ ಸಕಾಮವೇ ಎಂಬುದರಿಂದಲೋ ಏನೋ ’ಪ್ರೇಯಾನ್’ ಮರೆಯಾಗಿಬಿಟ್ಟಿತು. ಇನ್ನೂ ಕೆಲವರು ’ಭಕ್ತಿ’ ರಸವನ್ನು ಪ್ರತಿಪಾದಿಸಿ ರಸಗಳ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಸಿದರಾದರೂ ಅದು ನಿಲ್ಲಲಿಲ್ಲ.

ಹಾಗಾದರೆ ಈ ’ಕಾಂತಾರ ರಸ’ ಯಾವುದು? ಏನಿದು? ಕಾಂತಾರ ಎಂದರೆ ಕಾಡು ಎಂದರ್ಥ. ಕಾಂತಾರ ರಸ ಎಂದರೆ ಕಾಡಿನ ರಸ ಎಂಬುದು ಅದರ ವಾಚ್ಯಾರ್ಥ. ಆಶ್ಚರ್ಯವೆಂದರೆ ಈ ರಸ ಕಾವ್ಯಮೀಮಾಂಸೆಯ ಪ್ರತಿಪಾದನೆಯಲ್ಲಿ ವ್ಯಕ್ತವಾಗಿಲ್ಲ. ಕಾಂತರ ರಸವನ್ನು ಯಾವುದೇ ಉದ್ದೇಶವಿಲ್ಲದೆ, ಸಕಾರಣವಾಗಿ, ಸಕಾಲದಲ್ಲಿ, ಸತ್ಪಾತ್ರವೊಂದರ ಮೂಲಕ ಸತ್ಕವಿಯೊಬ್ಬರು ಪ್ರತಿಪಾದಿಸಿದ್ದಾರೆ. ಪ್ರತಿಪಾದಿಸಿದ್ದಾರೆ ಎಂಬುದಕ್ಕಿಂತ ಉಲ್ಲೇಖಿಸಿದ್ದಾರೆ ಎಂಬುದೇ ಹೆಚ್ಚು ಸೂಕ್ತ. ಕಾರಣ ಅದು ಉಲ್ಲೇಖ ಮಾತ್ರವಾಗಿದೆ. ಅದೊಂದು ಪದವನ್ನುಳಿದು ಕವಿ ಇನ್ನೇನನ್ನೂ ಹೇಳುವುದೇ ಇಲ್ಲ. ಸಹೃದಯರು, ಮೀಮಾಂಸಕರು ಅದರ ಬಗ್ಗೆ ಯೋಚಿಸಬೇಕಷ್ಟೆ.
ಸಂದರ್ಭ ಯಾವುದು? ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಈ ಕಾಂತಾರ ರಸದ ಉಲ್ಲೇಖವಿದೆ. ಪಿತೃವಾಕ್ಯಪರಿಪಾಲನೆಗಾಗಿ ರಾಮ ಕಾಡಿಗೆ ಹೊರಟು ನಿಂತಿರುವ ಕಥಾಪ್ರಸಂಗ. ತಾಯಿಯ ಅಪ್ಪಣೆಯನ್ನು ಪಡೆದು, ಮಡದಿ ಸೀತೆಯಲ್ಲಿಗೆ ಬಂದು ಅವಳಿಗೆ ವಿಷಯ ತಿಳಿಸುತ್ತಾನೆ. ’ತಾನೂ ಕಾಡಿಗೆ ಬರುತ್ತೇನೆ’ ಎನ್ನುತ್ತಾಳೆ ಸೀತೆ. ರಾಮ ’ವನವಾಸ ನನಗೊಬ್ಬನಿಗೇ’ ಎನ್ನುತ್ತಾನೆ. ’ಗಂಡನೆಲ್ಲಿರುತ್ತಾನೊ ಹೆಂಡತಿ ಅಲ್ಲಿಯೇ ಇರಬೇಕು, ಅದೇ ಧರ್ಮ’ ಎಂದು ವಾದ ಹೂಡಿ ರಾಮನ ಬಾಯಿ ಮುಚ್ಚಿಸುತ್ತಾಳೆ ಸೀತೆ. ಆದರೆ, ಸುಕೋಮಲೆಯಾದ ಸೀತೆಯನ್ನು ಕಾಂತಾರದ ಕಷ್ಟಕ್ಕೆ ಎಳೆಸುವಷ್ಟು ಕಠಿನಲ್ಲವಲ್ಲ ರಾಮ. ಆತ ಕಾಡಿನ ಕಷ್ಟವನ್ನು ಅವಳೆದುರಿಗೆ ಬಿಡಿಸಿ ಹೇಳುತ್ತಾನೆ. ’ದೂರದ ಬೆಟ್ಟ ಕಣ್ಣಿಗೆ ನುಣ್ಣು ಎನ್ನುವಂತೆ ಕಾಡು ಸುಲಭವಲ್ಲ. ಅದು ಕವಿಯ ವರ್ಣನೆಯಂತೆ ಸುಂದರವೂ ಅಲ್ಲ. ಹುಲಿ, ಸಿಂಹ, ಚಿರತೆ, ಆನೆ, ಕರಡಿ ಮುಂತಾದವುಗಳಿಂದ ಭಯಂಕರವಾಗಿರುವಂತದ್ದು. ಕಣಿವೆ ಗುಡ್ಡಗಳಿಂದ, ಗಗನಚುಂಬಿ ಮರಗಳಿಂದ, ಭಯಂಕರವಾದ ಜಲಪಾತಗಳಿಂದ, ನದಿಗಳಿಂದ ಭೀಕರವಾಗಿ ಇರುವಂತದ್ದು. ಅಲ್ಲಿಯ ರಾತ್ರಿಯಂತೂ ಘೋರವಾದದ್ದು. ನಮ್ಮನ್ನೇ ಮೂರ್ಚೆಗೆ ಬೀಳಿಸುವಷ್ಟು ಕಠಿಣ, ಭಯಾನಕ, ಮಹಾಕ್ರೂರ. ಅಲ್ಲಿನ ಏಕಾಂತಕ್ಕೆ ನಮ್ಮ ಹೃದಯವೇ ನಮಗೆ ಭಾರವಾಗಿಬಿಡುತ್ತದೆ! ಬೇಸಗೆ ಬಿಸಿಲಿನಷ್ಟಿದ್ದರೆ, ಮಳೆಗಾಲ ಬಿಡದೆ ಹಿಡಿದು ಜಡಿಯುತ್ತದೆ. ಮಲಗಲು ಒದ್ದೆ ಬಂಡೆಯೇ ಹಾಸಿಗೆ. ಹೋಗಲಿ ಊಟವಾದರೇನು ಷಡ್ರಸದುಣಿಸೆ!? ಗೆಡ್ಡೆ ಗೆಣಸುಗಳೇ ಆಹಾರ. ಚಳಿಗೆ ಹೊದೆಯಲು ಏನೂ ಇರುವುದಿಲ್ಲ. ಸುಖದಲೇಶಮುಂ ಸುಳಿಯದತಿಕಠಿನಕ್ಕೆ ರಾಜಪುತ್ರಿ, ಲತಾಂಗಿ ನಿನ್ನನೆಂತೊಯ್ದಪೆನ್ ಪೇಳ್’ ಎಂದು ರಾಮ ಸೀತೆಯ ಮನಸ್ಸುನ್ನು ಬದಲಾಯಿಸಿ ಅವಳನ್ನು ಅಯೋಧ್ಯೆಯಲ್ಲಿಯೇ ಉಳಿಸಬೇಕೆಂದು ವಾದ ಮಾಡುತ್ತಾನೆ.

ಮಾತನಾಡುತ್ತಿರುವವನು ತನ್ನಿನಿಯನಾದ ರಾಮ. ಆತ ಹೇಳುತ್ತಿರುವುದು ಕಾಡಿನ ವಿಚಾರ. ಸ್ವತಃ ಗಿರಿವನಪ್ರಿಯನಾದ ರಾಮನಿಗೆ ಕಾಡು ಭಯಂಕರವಾಗಿ ಕಂಡಿದ್ದರಲ್ಲವೆ ಆತನ ವರ್ಣನೆಯಲ್ಲಿ ಭಯಂಕರತೆ ಇಣುಕುವುದು!? ಆತ ಹೇಳಿದ ಭಯಂಕರತೆಗಳೆಲ್ಲವೂ ಸೀತೆಗೆ ಸುಂದರ ವರ್ಣನೆಗಳಂತೆ ಕೇಳಿಸುತ್ತವೆ. ಸೀತೆ ನಗುತ್ತಾ ಉತ್ತರಿಸುತ್ತಾಳೆ; ವಾದವೇ ನಿರಾಯುಧವಾಗಿ ಸೋಲುವಂತೆ!
ನೆತ್ತರೀಂಟುವ ಜಿಗಣೆ, ಮೇಣ್
ಕರ್ಕಶಂ ಕೂಗಿಡುವ ಜೀರುಂಡೆಗಳನೇತಕೆ ಉಳಿದೆ ಪೇಳ್?
ಕರುಣಾಳಲಾ! ಕೊರ್ವಿದಾ ಪೆರ್ವಾತುಗಳ್ಗೆ ಆಂ
ಬೆದರ್ವಂತುಟ ಅಣುಗಿಯೇಂ?
ಕೇಳ್, ಹೃತ್ಕಮಲ ಕರುಣರವಿ,
ನಿನ್ನ ಬಣ್ಣನೆಗೇಳ್ದು ಕಾತರಿಸುತಿದೆ ಮನಂ
ಕಾಂತಾರ ರಸಕ್ಕೆಳಸಿ!
ಎಂದು ಕೇಳಿ ಮುಂದಕ್ಕೆ ಸಾಗಿ ಬಿಡುತ್ತಾರೆ. ಕಾಂತಾರ ರಸ ಎಂಬುದಕ್ಕೆ ಯಾವುದೇ ವಿಶೇಷವನ್ನೂ, ವಿಶೇಷ ಚಿಹ್ನೆಗಳನ್ನೂ ಕವಿ ಅಲ್ಲಿ ಕಲ್ಪಿಸಿಲ್ಲ; ಆಶ್ಚರ್ಯಸೂಚಕ ಚಿಹ್ನೆಯೊಂದನ್ನುಳಿದು! ರಾಮನ ಭಯಂಕರ ವರ್ಣನೆ, ಸೀತೆಗೆ ಸುಂದರ ಬಣ್ಣನೆ! ಆತನ ವರ್ಣನೆ ಅವಳಲ್ಲಿ ಮೂಡಿಸಿದ ರಸಗಳಾವುವು? ಕಾವ್ಯದಲ್ಲಿ ಬರುವ ಯಾವುದೊ ವರ್ಣನೆಯನ್ನು ಓದಿ ಉದಿಸಿದ ರಸದಿಂದ ಸಹೃದಯ ಆನಂದವನ್ನಪ್ಪುತ್ತಾನೆ. ಇಲ್ಲಿ ಸೀತೆ, ರಾಮನು ಮಾಡುವ ಕಾಡಿನ ವರ್ಣನೆಯನ್ನು ಕೇಳಿ ರಸಾನಂದವನ್ನು ಅನುಭವಿಸಿದ್ದಾಳೆ. ಯಾವಾವ ರಸಗಳು? ಮೇಲೆ ಹೇಳಿದ ನವ, ದಶ, ಏಕಾದಶ ರಸಗಳನ್ನೂ ಮೀರಿದ ಅನುಭವ ಅವಳದು! ಗಿರಿವನಪ್ರಿಯನಾದ ರಾಮನಿಂದ ಬಣ್ಣನೆಗೊಳಾಗದ ಕಾಡನ್ನು ತಾನೂ ನೋಡಬೇಕು ಅನ್ನಿಸಿಬಿಡುತ್ತದೆ. ಸೀತೆಯಲ್ಲಿ ಅಂತಹ ಒಂದು ಅಪೇಕ್ಷೆಯನ್ನು ಹುಟ್ಟು ಹಾಕಿದ ರಸವೇ ’ಕಾಂತಾರ ರಸ’ ಅರ್ಥಾತ್ ಕಾಡಿನ ರಸ.
ಕಾಡಿನ ದರ್ಶನಕ್ಕೆ ಹೋದರೆ, ದರ್ಶನಾರ್ಥಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳೇನು? ಅದರಿಂದ ಉತ್ಪನ್ನವಾಗುವ ರಸಗಳಾವುವು? ಹೇಳುವುದು ಕಷ್ಟ. ಕಾಡಿನ ಸರ್ವಾನುಭವವಾಗಬೇಕಾದರೆ, ಅಲ್ಲಿ ದರ್ಶಕ ಮಾತಿಲ್ಲದವನಾಗಬೇಕು; ತನ್ನನ್ನು ತಾನು ಕಳೆದುಕೊಳ್ಳಬೇಕು; ಕಾಡಿನಲ್ಲಿ ತಾನೂ ಒಂದಾಗಿ ಹೋಗಬೇಕು. ಇದನ್ನೇ ತೇಜಸ್ವಿ ’ಕಾಡಿನೊಳಗೆ ನೀವು ಹೋದ ತಕ್ಷಣ ಅಲ್ಲಿನ ಶಬ್ದಗಳೆಲ್ಲಾ ಸ್ತಬ್ಧವಾಗಿಬಿಡುತ್ತವೆ. ನೀವೂ ನಿಶ್ಯಬ್ಧವಾಗಿ ಸುಮ್ಮನೆ ಒಂದರ್ಧ ಗಂಟೆ ಕುಳಿತು ನೋಡಿ, ಕಾಡಿಗೇ ಕಾಡೇ ಜೀವಪಡೆದುಕೊಳ್ಳುತ್ತದೆ. ಎಲ್ಲ ಶಬ್ದಗಳೂ ಮೊದಲಿನಂತೆಯೇ ಕೇಳಿಸತೊಡಗುತ್ತವೆ’ ಎಂಬರ್ಥದಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದು ನೆನಪಿದೆ.
ಕಾಡಿನ ಅನುಭವದಿಂದ, ಕತೆಯಿಂದ, ಬಣ್ಣನೆಯಿಂದ, ಚಿತ್ರಣದಿಂದ ಒಟ್ಟಾರೆ ಕಾಡಿನಿಂದ ಮನಸ್ಸು ಪಡೆಯಬಹುದಾದ ರಸಾನಂದವೇ ಕಾಂತಾರ ರಸ.
ರಸ ಎಂಬುದು ಸಂಚಾರಿ ಭಾವ. ಆದರೆ ಕುವೆಂಪು ಸಾಹಿತ್ಯದ ಮಟ್ಟಿಗೆ ಕಾಂತಾರ ರಸ ಎಂಬುದು ಸ್ಥಾಯಿ ಭಾವ! ಅಷ್ಟರ ಮಟ್ಟಿಗೆ ಕಾಡು ಅವರ ಸಾಹಿತ್ಯವನ್ನು ಆವರಿಸಿ ಬಿಟ್ಟಿದೆ. ತಮ್ಮ ಮೊದಲ ಕವನಸಂಕಲನದ ಮೊದಲ ಕವಿತೆಯ ಮೊದಲ ಸಾಲೇ ಕಾಡಿನ ಕೊಳಲಿದು, ಕಾಡ ಕವಿಯು ನಾ ಎಂದಾಗಿರುವುದು ಕಾಕತಾಳಿಯವೋ ಏನೊ? ಕಾನೂರು (ಕಾನು+ಊರು) ಎಂಬ ಹೆಸರಲ್ಲಿಯೇ ಕಾಡಿದೆ. ರಾಮನಿಗೆ ಅವರು ಟಂಕಿಸಿರುವ ಬಿರುದುಗಳಲ್ಲಿ ’ಗಿರಿವನಪ್ರಿಯ’ ಮುಖ್ಯವಾದುದು ಎಂಬುದು ಗಮನಾರ್ಹ! ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ ಈ ವನ್ಯ ಸಂಸ್ಕೃತಿಯ ಮುಂದೆ? ಎಂದು ವಿಶ್ವಾಮಿತ್ರನಲ್ಲಿ ಕೇಳುವ ರಾಮ ಗಿರಿವನಪ್ರಿಯನಲ್ತೆ? ’ಗಿರಿವನಪ್ರೀತಿ ತಾಂ ದೈವಕೃಪೆ ದಲ್’ ಎನ್ನುವ ವಿಶ್ವಾಮಿತ್ರ ಕಾಡಿನ ಹಿನ್ನೆಲೆಯಲ್ಲಿಯೇ ರಸತತ್ವವನ್ನು ಕೆಳಗಿನಂತೆ ಪ್ರತಿಪಾದಿಸುತ್ತಾನೆ.
ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ?
ಪೊಣ್ಮಿದೆ ಸೃಷ್ಟಿ ರಸದಿಂದೆ;
ಬಾಳುತಿದೆ ರಸದಲ್ಲಿ;
ರಸದೆಡೆಗೆ ತಾಂ ಪರಿಯುತಿದೆ;
ಪೊಂದುವುದು ರಸದೊಳ್ ಐಕ್ಯತೆವೆತ್ತು ತುದಿಗೆ.
ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಂ ಅಮೃತಂ ರಸಂ!
ವಿಶ್ವಾಮಿತ್ರನ ಈ ರಸತತ್ವಮೀಮಾಂಸೆಯಲ್ಲಿ ಕುವೆಂಪು ಉಲ್ಲೇಖಿಸಿದ ಕಾಂತಾರರಸವೂ ಸೇರಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಲೆ, ಕಾಡು ಇವು ಕುವೆಂಪು ಅವರನ್ನು ಎಷ್ಟು ಕಾಡಿವೆ ಎಂದರೆ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಕೊನೆಗೆ ಪಟ್ಟಾಭಿಷೇಕವಾಗುವುದು ರಾಮನೆಂಬ ಮೃಣ್ ಮೂರ್ತಿಗಲ್ಲ! ನಿತ್ಯರಾಮನೆಂಬ ಕಾಂತಾರದ ನೀಲಪರ್ವತಕ್ಕೆ. ಆ ಸಾಲಿನಲ್ಲಿ ಕಾಣಿಸಿಕೊಳ್ಳುವುದು ಸೀತೆ ಲಕ್ಷ್ಮಣ ಭರತ ಶತ್ರುಘ್ನ ಆಂಜನೇಯರಲ್ಲ; ಸಸ್ಯಸುಂದರ ಬೃಹತ್ ಭೂಧರಗಳು ಅಂದರೆ ಕಾಡಿನಿಂದಾವೃತವಾಗಿರುವ ಪರ್ವತಗಳು. ಅವುಗಳೆಲ್ಲವೂ ಒಂದಾಗುವಂತೆ ಸುರಿವ ಮಳೆಯೇ ಅಭಿಷೇಕ ಜಲ! ಅದಕ್ಕೇ ಅದು ನಿತ್ಯಪಟ್ಟಾಭಿಷೇಕ! ಈ ನಿತ್ಯಪಟ್ಟಾಭಿಷೇಕ ವಿರಾಡ್ ದರ್ಶನದ ಚಿತ್ರಣವನ್ನು ಶ್ರೀ ಜೆ.ಎಸ್. ಖಂಡೇರಾವ್ ಅವರು ವರ್ಣಚಿತ್ರವೊಂದರಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ‘ಆ ಮಾನುಷ ಸ್ಥೂಲ ನಶ್ವರ ಕೃತಿಗೆ ತಾನಿದುವೆ ನಿತ್ಯ ಶಾಶ್ವತ ದಿವ್ಯ ಮಾತೃಕೆ ಕಣಾ’ ಎಂಬ ಮಾತುಗಳೇ ಸಾಕ್ಷಿ ಅವರ ಗಿರಿವನ ಪ್ರೀತಿಯ ಅಸೀಮತೆಗೆ. ಕಾಡು ಎಂಬುದು ಕುವೆಂಪು ಅವರ ಸಾಹಿತ್ಯದುದ್ದಕ್ಕೂ ಸ್ಥಾಯಿ ಭಾವಾದರೆ, ಅವರೇ ಉಲ್ಲೇಖಿಸಿರುವ ’ಕಾಂತಾರ ರಸ’ ಎಂಬ ಸಂಚಾರಿ ಭಾವ ’ಸ್ಥಾಯಿ’ ಎನ್ನುವಷ್ಟು ಚಿರಸ್ಥಾಯಿಯಾಗಿಬಿಟ್ಟಿದೆ.

Thursday, January 09, 2014

ಕಲೆಯನಲ್ಲದೆ ಶಿಲ್ಪಿ ಶಿಲಯನೇಂ ಸೃಷ್ಟಿಪನೆ?

ತುಂಬಾ ಹಿಂದೆ ಒಬ್ಬ ದರೋಡೆಕಾರನಿದ್ದ. ದಾರಿಯಲ್ಲಿ ಬಂದವರನ್ನು ಅಡ್ಡಗಟ್ಟಿ ಅವರನ್ನು ಕೊಂದು ಅವರಲ್ಲಿದ್ದುದದ್ದನ್ನು ದೋಚಿ, ಅದರಲ್ಲಿಯೇ ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ಸಾಕಿಕೊಂಡಿದ್ದನಂತೆ! ಒಂದು ದಿನ ನಾರದನೇ ಆ ದುಷ್ಟನ ಕೈಗೆ ಸಿಕ್ಕಿಹಾಕಿಕೊಂಡುಬಿಡುತ್ತಾನೆ. ಇನ್ನೇನು ಕೊಲ್ಲಬೇಕು ಅನ್ನುವಷ್ಟರಲ್ಲಿ ನಾರದ ’ಅಯ್ಯಾ ಕೊಲ್ಲುವುದು ಹೇಗಿದ್ದರೂ ಕೊಂದುಬಿಡುತ್ತೀಯಾ. ಅದಕ್ಕೂ ಮೊದಲು ನನ್ನದೊಂದು ಪ್ರಶ್ನೆಗೆ ಉತ್ತರ ಕೊಟ್ಟುಬಿಡು. ಹೀಗೆ ಸಿಕ್ಕಸಿಕ್ಕವರನ್ನೆಲ್ಲಾ ಕೊಲ್ಲುವುದು ಪಾಪವಲ್ಲವೆ? ಈ ನಿನ್ನ ಪಾಪಕ್ಕೆ ಪಾಲುದಾರರು ಯರ್‍ಯಾರು?’ ಎಂದು ಪ್ರಶ್ನಿಸಿದ. ಆಗ ಆ ದರೋಡೆಕಾರ ’ನಾನು, ನನ್ನ ಹೆಂಡತಿ, ನನ್ನ ಮಕ್ಕಳು ಚೆನ್ನಾಗಿರಬೇಕೆಂದು ಇದನ್ನೆಲ್ಲಾ ಮಾಡುತ್ತಿದ್ದೇನೆ. ನಾನು ಹೆಂಡತಿ ಮಕ್ಕಳೆಲ್ಲಾ ಇದರಲ್ಲಿ ಪಾಲುದಾರರು. ಆದ್ದರಿಂದ ಅದರಲ್ಲಿ ಪಾಪ ಪುಣ್ಯದ ಮಾತು ಬಂದರೆ ಅದರಲ್ಲೂ ಎಲ್ಲರೂ ಪಾಲುದಾರರು’ ಎನ್ನುತ್ತಾನೆ. ಆಗ ನಾರದ ’ಅದೆಲ್ಲಾ ಸುಳ್ಳು, ನೀನು ನಿನ್ನ ಹೆಂಡತಿ ಮಕ್ಕಳನ್ನು ಕೇಳಿನೋಡು. ಅವರು ಈ ಪಾಪಕಾರ್ಯದಲ್ಲಿ ಪಾಲುದಾರರು ಎಂದು ಒಪ್ಪಿಕೊಂಡರೆ ನೀನು ನನ್ನನ್ನು ಕೊಲ್ಲಬಹುದು. ಇಲ್ಲವಾದರೆ ಬಿಟ್ಟುಬಿಡಬೇಕು’ ಎನ್ನುತ್ತಾನೆ. ಆತ ಮನೆಗೆ ಓಡುತ್ತಾನೆ. ತನ್ನ ಹೆಂಡತಿ ಮಕ್ಕಳನ್ನು ಕರೆದು ಕೇಳುತ್ತಾನೆ. ’ನನ್ನ ಪಾಪದಲ್ಲಿ ನೀವೂ ಪಾಲುದಾರರಲ್ಲವೆ?’ ಎಂದು. ಅವರು, ’ನಿನ್ನ ಹೆಂಡತಿ ಮಕ್ಕಳನ್ನು ಸಾಕಬೇಕಾದ್ದು ನಿನ್ನ ಕರ್ತವ್ಯ. ಸಾಕುತ್ತಿದ್ದೀಯ. ಆದ್ದರಿಂದ ಅದು ನಿನ್ನ ಕರ್ತವ್ಯವೆಂದ ಮೇಲೆ ಅದರ ಪಾಪದ ಪೂರ್ಣಪಾಲು ನಿನ್ನದೇ! ನಮಗೆ ಇಲ್ಲ’ ಎಂದು ಬಿಡುತ್ತಾರೆ. ಆತನಿಗೆ ಜೀವನದಲ್ಲಿ ವೈರಾಗ್ಯ ಬಂದುಬಿಡುತ್ತದೆ. ಈ ಪ್ರಶ್ನೆಯನ್ನು ಹುಟ್ಟುಹಾಕಿದ್ದ ನಾರದನಿದ್ದ ಕಡೆಗೆ ಓಡುತ್ತಾನೆ. ಆತನ ಕಾಲಿಗೆ ಬಿದ್ದು ’ತಪ್ಪಾಯ್ತು’ ಎಂದು ಬೇಡುತ್ತಾನೆ. ಮುಕ್ತಿಮಾರ್ಗಕ್ಕಾಗಿ ಹಂಬಲಿಸುತ್ತಾನೆ. ಆಗ ನಾರದ ಆತನಿಗೆ ರಾಮಮಂತ್ರವನ್ನು ಬೋಧಿಸುತ್ತಾನೆ. ಆದರೆ ಆತನ ಬಾಯಲ್ಲಿ ’ರಾಮ’ ಎಂದು ಹೇಳಲು ಬರುವುದೇ ಇಲ್ಲ. ಕೊನೆಗೆ ನಾರದ ಅಲ್ಲಿದ್ದ ’ಮರ’ವನ್ನು ತೋರಿಸಿ ’ಅದೇನು?’ ಎನ್ನುತ್ತಾನೆ. ಆತ ’ಮರ’ ಎನ್ನುತ್ತಾನೆ. ಅದನ್ನೇ ಮತ್ತೆ ಮತ್ತೆ ಹೇಳುವಂತೆ ಹೇಳಿ ಹೊರಟುಹೋಗುತ್ತಾನೆ. ’ಮರಮರಮರ’ ಎಂದು ಹೇಳುತ್ತಿದ್ದುದೇ ’ರಾಮರಾಮರಾಮ’ ಎಂದಾಗುತ್ತದೆ. ಅಷ್ಟು ಆಗುವ ಹೊತ್ತಿಗೆ ನೂರಾರು ವರ್ಷಗಳೇ ಕಳೆದುಹೋದುದ್ದರಿಂದ ಅವನ ಮೈಮೇಲೆ ಹುತ್ತ ಬೆಳೆದುಕೊಂಡಿತ್ತು. ಮತ್ತೆ ನಾರದ ಬಂದು ಆತನಿಗೆ ಆಶಿರ್ವದಿಸಿ, ವಾಲ್ಮೀಕಿ ಎಂದು ಕರೆದು ರಾಮಾಯಣದ ಕಥೆಯನ್ನು ಹೇಳುತ್ತಾನೆ. ಆತನಿಗೆ ರಾಮನ ಸಾಕ್ಷಾತ್ಕಾರವಾಗುತ್ತದೆ. ಮುಂದೆ ಆತನೇ ರಾಮಾಯಣವನ್ನು ಬರೆಯುತ್ತಾನೆ.
ಇದು ನಾನು ಬಾಲ್ಯದಲ್ಲಿ ಕೇಳಿದ್ದ ಕಥೆ. ಬಹುಶಃ ಈ ಕಥೆಯ ಮೂಲಕವೇ ರಾಮಾಯಣದ ಕತೆಗಳು ನನ್ನ ಮನಃಪಟಲಕ್ಕೆ ಧಾಳಿಯಿಟ್ಟಿರಬೇಕು. ಮಂಥರೆ ಅಳುತ್ತಿದ್ದ ರಾಮನನ್ನು ಸಮಾಧಾನ ಪಡಿಸಲು ಕನ್ನಡಿ ನೀಡುವ ಕತೆಯನ್ನೂ ನಾನು ಆಗಲೇ ಕೇಳಿದ್ದೆ. ಆದ್ದರಿಂದ ರಾಮಾಯಣದ ನನ್ನ ಮೊದಲ ತಿಳುವಳಿಕೆಗೆ ಜಾನಪದ ಕತೆಗಳೇ ಕಾರಣವೆನ್ನಬಹುದು.
ಕತೆ ಕೇಳುವ ವಯಸ್ಸು ಕಳೆದ ಮೇಲೆ ನಾನೇ ಓದಿಕೊಳ್ಳುವ ವಯಸ್ಸಿನಲ್ಲಿ ರಾಮಾಯಣವನ್ನು ಓದಿಕೊಂಡಾಗ ನನಗೆ ಸಿಕ್ಕ ಕತೆಯಿದು: ಒಂದು ದಿನ ಋಷಿ ವಾಲ್ಮೀಕಿಗೆ ನಾರದನ ಭೇಟಿಯಾಗುತ್ತದೆ. ಆಗ ವಾಲ್ಮೀಕಿ ನಾರದನನ್ನು ’ತ್ರಿಲೋಕ ಸಂಚಾರಿಯಾದ ನೀವು ಯಾವುದಾದರೂ ಒಂದು ಕತೆಯನ್ನು ಹೇಳಿ. ಅದನ್ನು ಕೇಳಿ ಕೃತಾರ್ಥರಾಗುತ್ತೇವೆ’ ಎಂದು ಕೇಳುತ್ತಾರೆ. ಆಗ ನಾರದನು ರಾಮಾಯಣದ ಕಥೆಯನ್ನು ಹೇಳುತ್ತಾನೆ. ಅದಾದ ಮೇಲೆ, ಒಂದು ದಿನ ವಾಲ್ಮೀಕಿ ನದೀ ತೀರವೊಂದರಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದಾಗ, ಬೇಡನೊಬ್ಬ ಮರದ ಮೇಲೆ ಕುಳಿತಿದ್ದ ಕ್ರೌಂಚ ಪಕ್ಷಗಳಲ್ಲಿ ಗಂಡು ಹಕ್ಕಿಗೆ ಗುರಿಯಿಟ್ಟು ಹೊಡೆಯುವುದನ್ನು ನೋಡುತ್ತಾರೆ. ಬಾಣದ ಏಟು ತಿಂದ ಆ ಹಕ್ಕಿ ದೊಪ್ಪನೆ ಬಿದ್ದು ಸತ್ತು ಹೋಗುತ್ತದೆ. ಹೆಣ್ಣುಹಕ್ಕಿ ದುಃಖದಿಂದ ಕೂಗುತ್ತಾ ಹಾರಾಡತೊಡಗುತ್ತದೆ. ವಾಲ್ಮೀಕಿಗೆ ಬಹಳ ದುಃಖವಾಗುತ್ತದೆ. ಆಗ,
ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್||
ಎಂದು ಹೇಳುತ್ತಾರೆ. ನಂತರ ಆಶ್ರಮಕ್ಕೆ ಬರುವಾಗ, ತಾವು ಹೇಳಿದ ಮಾತು ಶ್ಲೋಕದ ರೂಪದಲ್ಲಿರುವುದು ಗಮನಕ್ಕೆ ಬರುತ್ತದೆ. ಅದೇ ಮಾದರಿಯನ್ನು ಅನುಸರಿಸಿ, ನಾರದರು ಹೇಳಿದ ಇಡೀ ರಾಮಾಯಣದ ಕಥೆಯನ್ನು ವಾಲ್ಮೀಕಿ ಬರೆಯುತ್ತಾರೆ.
ಕಾಲ ಕಳೆದಂತೆ ಸಿಕ್ಕ ಸಿಕ್ಕ ಪುಸ್ತಕವನ್ನೆಲ್ಲಾ ಓದುವ, ದಿನಕ್ಕೊಂದು ಪುಸ್ತಕವನ್ನು ಓದಿಮುಗಿಸುವ ಹುಚ್ಚಿಗೆ ಬಿದ್ದ ಮೇಲೆ ಒಂದು ದಿನ ದೇಜಗೌ ಅವರ ’ಶ್ರೀರಾಮಾಯಣ ದರ್ಶನಂ ವಚನಚಂದ್ರಿಕೆ’ ಎಂಬ ಪುಸ್ತಕ ಸಿಕ್ಕಿತು. ಓದಿದೆ. ಅದು ಕುವೆಂಪು ಅವರ ಮಹಾಕಾವ್ಯದ ಗದ್ಯಾನುವಾದ. ಅದನ್ನು ಓದಿದ ಮೇಲೆ, ಮೂಲ ಮಹಾಕಾವ್ಯವನ್ನೇ ಓದುವ ಮನಸ್ಸಾಗಿ ಕೇವಲ ಹದಿನೈದು ರೂಪಾಯಿಗೆ ದೊರೆಯುತ್ತಿದ್ದ ಅದನ್ನು ಕೊಂಡು ಓದಿದೆ. ಆಗ ಎಷ್ಟು ಅರ್ಥವಾಯಿತೊ ಇಲ್ಲವೊ ತಿಳಿಯದು. ಆದರೆ ೨೦೦೪ರಿಂದ ೨೦೦೭ರವರೆಗೆ ವಾರಕ್ಕೊಂದು ದಿನ ಸಮಾನ ಆಸಕ್ತರು ಸೇರಿ, ಇಡೀ ರಾಮಾಯಣದರ್ಶನಂ ಕಾವ್ಯವನ್ನು ಓದಿ, ಅನ್ವಯಿಸಿ, ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಪರಂಪರೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದು ನನ್ನ ಜೀವನದ ಒಂದು ಮಹತ್ವದ ಘಟನೆ. ಆ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದವರು, ಶಾಸನ ಮತ್ತು ಹಳಗನ್ನಡದ ವಿದ್ವಾಂಸರಾದ ಡಾ. ಕೈದಾಳ ರಾಮಸ್ವಾಮಿ ಗಣೇಶ ಅವರು. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವರಂತೆ ಬಲ್ಲವರು, ವಿವರಿಸುವವರು ನನಗಂತೂ ಇದುವರೆಗೆ ಕಂಡಿಲ್ಲ. ಅವರ ಮಾರ್ಗದರ್ಶನದಲ್ಲಿ ಮೇಲಿನ ಕಥೆಯನ್ನೇ ಕುವೆಂಪು ಅವರ ದರ್ಶನದಲ್ಲಿ ನೋಡಿದಾಗ ಒಂದು ಸುಂದರ ಚಿತ್ರಣ ನಮ್ಮ ಮುಂದೆ ಮೂಡುತ್ತದೆ.
ನಾರದನಿಂದ ರಾಮಕಥೆಯನ್ನು ಕೇಳಿ ’ಕಣ್ದಾವರೆಯೊಳಶ್ರುರಸಮುಗುವನ್ನೆಗಂ ರೋಮಹರ್ಷಂದಾಳ್ದು’ ನವಚೈತನ್ಯವನ್ನು ಧರಿಸಿದ ವಾಲ್ಮೀಕಿ ಒಂದು ದಿನ ತಮಸಾ ನದಿ ದಡದಲ್ಲಿದ್ದಾಗ ಸ್ನಾನಕ್ಕೆಂದು ಸಿದ್ಧನಾಗುತ್ತಿರುತ್ತಾನೆ. ಆಗ ’ರತಿಸುಖ ಚಾರು ನಿಸ್ವನ’ವೊಂದು ’ಗಗನವೀಣಾ ತಂತ್ರಿಯಿಂ ಮಿಡಿದ ತೆರ’ನಾಗಿ ಕೇಳಿಸಲು ಹರ್ಷಗೊಂಡು ನೋಡುತ್ತಾನೆ, ದಂಪತಿ ಕ್ರೌಂಚಪಕ್ಷಿಗಳನ್ನು. ವಿಶಾಲ ಆಕಾಶದಲ್ಲಿ ಹಾರಾಡುತ್ತಿದ್ದ ಆ ವಿಹಂಗಮ ದೃಶ್ಯವನ್ನು ನೋಡುತ್ತಿರುವಾಗಲೇ ’ಗಂಡುಕೊಂಚೆ ಒರಲ್ದು ದೊಪ್ಪನೆ ನೆಲಕ್ಕುರುಳ್ದು ಪೊರಳ್ದುದು’. ಬಾಣವೊಂದು ಅದರ ಎದೆಗೆ ಚುಚ್ಚಿಕೊಂಡಿರುತ್ತದೆ. ನೆತ್ತರು ಜೀರ್ಕೋವಿಯಂತೆ ಕಾರುತ್ತಿರುತ್ತದೆ. ಅದನ್ನು ಹೊಡೆದ ಬೇಡ ಮಾಂಸದ ಆಸೆಯಿಂದ ಅದು ಬಿದ್ದ ಜಾಗವನ್ನು ಹುಡುಕಿಕೊಂಡು ಬರುತ್ತಾನೆ. ಅತ್ತ ಆಕಾಶದಲ್ಲಿ ಹೆಣ್ಣು ಕೊಂಚೆ ’ಚಕ್ರಗತಿಯಿಂ ಪಾರ್ದು ಗಿರಿವನಚಿಚ್ಚೇತನಮೆ ಚೀತ್ಕರಿಸುವಂತೆ’ ಕೂಗುತ್ತಿರುತ್ತದೆ. ಆಗ,
ಕರಗಿತಂತೆಯೆ ಕರುಳ್ ಮುನಿಗೆ.
ಕಣ್ಬನಿಯುಣ್ಮುವೋಲ್ ವೇದನೆಯ ಕರ್ಮುಗಿಲ್ 
ತೀವಿಬರೆ ಹೃದಯೊದೊಳ್.
ಮರುಗಿದನಿಂತು ಋಷಿ, 
ಮನಕೆ ಮಿಂಚಲಾ ತನ್ನ ಪೂರ್ವಂ.
ವಾಲ್ಮೀಕಿಗೆ ತನ್ನ ಪೂರ್ವಾಶ್ರಮದ ನೆನಪು ಬರುತ್ತದೆ. ಕ್ರೌಂಚಪಕ್ಷಿಗಳಲ್ಲಿ ಹೆಣ್ಣು ಮೊಟ್ಟೆಯಿಟ್ಟು ಮರಿಯಾಗುವವರೆಗೂ ಗಂಡು ತಂದು ಕೊಡುವ ಆಹಾರದ ಮೇಲೆಯೇ ಬದುಕಿರುತ್ತದೆ. ಗೂಡಿನ ಸುತ್ತಲೂ ಗಟ್ಟಿಯಾದ ಬಲೆ ನೆಯ್ದಿರುತ್ತದೆ. ಕೊಕ್ಕು ಮಾತ್ರ ಹೊರಬರುವಷ್ಟು ಜಾಗವಿರುತ್ತದೆ. ಗಂಡು ಆಹಾರ ತಂದುಕೊಡದಿದ್ದರೆ, ಹೆಣ್ಣು ಅಲ್ಲಿಯೇ ಅಸುನೀಗಬೇಕಾಗುತ್ತದೆ. ಪೂರ್ವಾಶ್ರಮದಲ್ಲಿ ಬೇಡನಾಗಿದ್ದ ವಾಲ್ಮೀಕಿಗೆ ಇದೆಲ್ಲವೂ ತಿಳಿಯದದ್ದೇನಲ್ಲ. ಆದ್ದರಿಂದಲೇ ಆತನ ಮನಸ್ಸು ಕರುಣೆಯ ಕಡಲಾಗುತ್ತದೆ.
ಬಾಳ್ಗಬ್ಬದೊಳ್ ಕರುಣೆ ತಾಂ ಬೇನೆಗುದಿದೊಡಮಲ್ತೆ
ಮೆರೆದಪುದು ಪೊರಪೊಣ್ಮುತಾ ಮಹಾಕಾವ್ಯ ಶಿಶು ತಾಂ
ಚಾರು ವಾಗ್‌ವೈಖರಿಯ ಛಂದಶ್ಯರೀರದಿಂ?
ಶೋಕ ಶ್ಲೋಕವಾಗಿ ಹೊರಬರುತ್ತದೆ. 
ಮಾಣ್, ನಿಷಾದನೆ, ಮಾಣ್! 
ಕೊಲೆ ಸಾಲ್ಗುಮಯ್ಯೊ ಮಾಣ್!
ನಲಿಯುತಿರೆ ಬಾನ್ ಬನದ ತೊರೆ ಮಲೆಯ ಭುವನಕವನಂ
ಸುಖದ ಸಂಗೀತಕೆ ವಿಷಾದಮಂ ಶ್ರುತಿಯೊಡ್ಡಿ ಕೆಡಿಸುವಯ್?
ನಾನುಮೊರ್ ಕಾಲದೊಳ್ 
ನಿನ್ನವೊಲೆ ಕೊಲೆಯ ಕಲೆಯಲ್ಲಿ ಕೋವಿದನಾಗಿ 
ಮಲೆತಿರ್ದೆನಯ್.
ನಾರದ ಮಹಾಋಷಿಯ ದಯೆ ಕಣಾ 
ಕರುಣೆಯಂ ಕಲಿತೆನ್
ಎಂದು ಆತ್ಮಕಥೆಯ ಮೂಲಕ ಆತ್ಮತತ್ತ್ವವನ್ನು ಕಬ್ಬಿಲನಿಗೆ ಮನಸ್ಸು ಕರಗುವಂತೆ ಬೋಧಿಸುತ್ತಾನೆ.
ಕೃಪೆದೋರುತ ಆತಂಗೆ ಅಹಿಂಸಾ ರುಚಿಯನ್ನಿತ್ತು,
ಕೊಂಚೆವಕ್ಕಿಯ ಮೆಯ್ಯಿನಾ ಬಾಣಮಂ ಬಿಡಿಸಿ,
ಪ್ರಾಣಮಂ ಬರಿಸಿ ಸಂಜೀವಜೀವನದಿಂದೆ,
ತವಿಸಿ ಪೆಣ್ವಕ್ಕಿಯೊಡಲುರಿಯನ್
ಆ ವಾಲ್ಮೀಕಿ ತಮಸೆಯಿಂ ತನ್ನೆಲೆವನೆಗೆ ಮರಳ್ದು,
ಧ್ಯಾನದೊಳ್ ಮುಳುಗಿರಲ್,
ಮಿಮಚಿತಯ್ ಕಾವ್ಯ ದಿವ್ಯ ಪ್ರಜ್ಞೆ,
ನವನವೋನ್ಮೇಷಶಾಲಿನಿ, ನಿತ್ಯತಾ ಪ್ರತಿಭೆ.
ಹಕ್ಕಿಗೆ ಶುಶ್ರೂಷೆ ಮಾಡಿ, ಜೀವ ಉಳಿಸಿ, ಹೆಣ್ಣು ಹಕ್ಕಿಯ ಗೋಳನಳಿಸಿದ ವಾಲ್ಮೀಕಿಯ ಮನದಲ್ಲಿ, ಆತನ ಪ್ರತಿಭೆ ದರ್ಶನವೊಂದನ್ನು ಮೂಡಿಸುತ್ತದೆ.
ಹೊಮ್ಮಿತಾ ದರ್ಶನಂ ಬಗೆಗಣ್ಗೆ; 
ಚಿಮ್ಮಿದತ್ತೀ ವರ್ಣನಂ ನಾಲಗಗೆ:
ಪಿಡಿವೊಲ್ ಅಲ್ತಾದುದಕೆ ಕನ್ನಡಿಯನಪ್ಪುದಕೆ 
ಮುನ್ನುಡಿಯನುಲಿವಂತೆಯುಂ, 
ಕಂಡ ರಾಮಾಯಣವನೆಲ್ಲಮಂ ಕಂಡಂತೆ ಹಾಡಿದನೊ,
ಕೇಳ್ದ ಲೋಕಂಗಳೆಲ್ಲಂ ತಣಿವವೋಲ್.
ನಾರದನೊರೆದ ರಾಮಾಯಣದ ಕಥೆಯ ಹಿನ್ನೆಲೆಯಲ್ಲಿ, ತನ್ನ ಪ್ರತಿಭೆ ಕಂಡುಕೊಂಡ ದರ್ಶನವನ್ನು ವಾಲ್ಮೀಕಿ ರಾಮಾಯಣದಲ್ಲಿ ಹಾಡುತ್ತಾನೆ.
ಇದು ರಾಮಾಯಣದರ್ಶನಂ ಕಾವ್ಯದಲ್ಲಿ ಬರುವ ಕಥೆ. ಅದನ್ನು ಅಧ್ಯಯನ ದೃಷ್ಟಿಯಿಂದ ಓದುತ್ತಿದ್ದ ನನಗೆ ಒಂದು ಸುಂದರ ಚಿತ್ರಣ ಮನದಲ್ಲಿ ಮೂಡಿತ್ತು. ಗ್ರಹಿಕೆಯಲ್ಲಿ ’ಶಬ್ದಗ್ರಹಣ’ ಮತ್ತು ’ಬಿಂಬಗ್ರಹಣ’ ಎಂಬ ಎರಡು ಬಗೆಗಳುಂಟೆಂದು ಡಾ. ಚಂದ್ರಶೇಖರ ನಂಗಲಿಯವರು ಪ್ರತಿಪಾದಿಸುತ್ತಾರೆ. ’ಶಬ್ದಗ್ರಹಣ’ದಲ್ಲಿ ಕಿವಿಗಷ್ಟೇ ತಂಪಾಗಿಬಿಡುವ ಮಿತಿಯಿರುತ್ತದೆ. ಆದರೆ ’ಬಿಂಬಗ್ರಹಣ’ ನಮ್ಮ ಸರ್ವೇಂದ್ರಿಯಕ್ಕೂ ಮುದ ನೀಡಬಲ್ಲುದು ಹಾಗೂ ಎಲ್ಲ ಕಾಲಕ್ಕೂ ಮನದಲ್ಲಿ ಅಚ್ಚೊತ್ತಿನಿಲ್ಲಬಲ್ಲುದು. ಈ ಹಿನ್ನೆಲೆಯೆಲ್ಲಿ ’ಶ್ರೀರಾಮಾಯಣ ದರ್ಶನಂ’ ಕಾವ್ಯವನ್ನು ಗಮನಿಸಿದಾಗ ಇಂತಹ ನೂರಾರು ಚಿತ್ರಗಳು ಅದರಲ್ಲಿ ಅಂತರ್ಗತವಾಗಿರುವುದು ಕಂಡುಬರುತ್ತದೆ. ಅಂತಹ ಒಂದೊಂದೇ ಚಿತ್ರಗಳನ್ನು ಪ್ರತ್ಯೇಖವಾಗಿ ಗ್ರಹಿಸುತ್ತಾ ಹೋದ ಹಾಗೆ ಮಹಾಕಾವ್ಯದ ಅಖಂಡ ದರ್ಶನ ಹಾಗೂ ಭವ್ಯತೆ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಖಂಡ ಖಂಡವಾಗಿ ಅಖಂಡವನ್ನು ಗ್ರಹಿಸುವ ಆ ಮೂಲಕ ಇಡೀ ಕಾವ್ಯದಲ್ಲಿ ನನ್ನ ವ್ಯಾಪ್ತಿಗೆ ಪ್ರಾಪ್ತಿಯಾಗುವ ಚಿತ್ರಗಳನ್ನು ಕಂಡರಿಸುವ ಪ್ರಯತ್ನವನ್ನು ಮಾಡಲಾಗಿದೆ. ನಾವು ಶಿಲ್ಪಿಗಳಿದ್ದ ಹಾಗೆ. ನಮ್ಮ ನಮ್ಮ ಸಾಮರ್ಥ್ಯಕ್ಕೆ, ಕಲಾಭಿರುಚಿಗೆ, ಸಾಧನೆಗೆ ತಕ್ಕ ಹಾಗೆ ವಿಗ್ರಹಗಳನ್ನು ಕೆತ್ತಿಕೊಳ್ಳಬಹುದು. ಆದರೆ ಮೂಲಸೃಷ್ಟಿಯಾದ ಕಲ್ಲನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ! ಆದರೆ ಆ ಸಹಜ ಸೃಷ್ಟಿಯಾದ ಕಲ್ಲಿಗೂ ಒಂದು ಸೌಂದರ್ಯವಿದೆ. ಸೌಂದರ್ಯ ಆಕೃತಿಗೆ ಸಂಬಂಧಿಸಿದ್ದು ಮಾತ್ರವಲ್ಲ; ನಮ್ಮ ಭಾವಾನುಭಾವಗಳಿಗೂ ಅದು ಸಂಬಂಧಿಸಿರುತ್ತದೆ. ಇದು ಕುವೆಂಪು ಅವರದೇ ಮಾತು: ’ಕಲೆಯನಲ್ಲದೆ ಶಿಲ್ಪಿ ಶಿಲೆಯನೇನ್ ಸೃಷ್ಟಿಪನೆ?’
ಶ್ರೀರಾಮಾಯಣ ದರ್ಶನಂ ಕಾವ್ಯದ ರಚನೆ ಪ್ರಾರಂಭವಾಗಿ ಈಗ್ಗೆ ೭೭ ವರ್ಷಗಳೇ ಕಳೆದುಹೋಗಿವೆ. ಪುಸ್ತಕ ರೂಪದಲ್ಲಿ ೧೯೪೯ರಲ್ಲಿ ಮೊದಲ ಸಂಪುಟ, ೧೯೫೧ರಲ್ಲಿ ಎರಡನೇ ಸಂಪುಟ ಸಹೃದಯರ ಕೈಸೇರಿದವು. ೨೦೧೬ ಫೆಬ್ರವರಿಯ ಹೊತ್ತಿಗೆ ಕಾವ್ಯ ಪೂರ್ಣವಾಗಿ ಪ್ರಕಟೆಣೆಯಾಗಿ ೬೫ ವರ್ಷಗಳನ್ನು ಪೂರೈಸಲಿದೆ.  ಒಂದು ರೀತಿಯಲ್ಲಿ ಅಂದಿನಿಂದ ಇಂದಿನವರೆಗೂ ಆ ಮಹಾಕೃತಿ ಮತ್ತೆ ಮತ್ತೆ ಸಹೃದಯನ ಹೃದಯಲ್ಲಿ ನವನವೋನ್ಮೇಷಶಾಲಿನಿಯಾಗಿ ಪುನರ್ರಚನೆಗೊಳ್ಳುತ್ತಲೇ ಇದೆ. ಅದು ಮುಂದೆಯೂ ನಡೆಯುತ್ತಲೇ ಇರುತ್ತದೆ.

Wednesday, January 08, 2014

ಕೊನೆಗೂ ಸಿಕ್ಕಿದಳು; ರಾಜರತ್ನಂ ಅವರ 'ಪೂವಮ್ಮ!'

ಸಹೃದಯರೆ, ಜ್ಞಾನಕ್ಕೆ ನೀರಿನ ಗುಣವಿದೆ ಎಂದು ತೇಜಸ್ವಿ ಒಂದು ಕಡೆ ಬರೆದಿದ್ದಾರೆ. ಅದು ಮಾನವನ ಎದೆಯಿಂದಲೆದೆಗೆ ಹರಿಯುತ್ತಲೇ ಇರುತ್ತದೆ. ನಾನು ಮೊನ್ನೆ ಕುವೆಂಪು ಅವರ 'ಪೂವಮ್ಮ' ಕವಿತೆಯ ಪಠ್ಯವನ್ನು ದಾಖಲಿಸುವಾಗ, ರಾಜರತ್ನಂ ಅವರ 'ಪೂವಮ್ಮ' ಸಿಗದೇ ಇರುವ ವಿಷಯ ತಿಳಿಸಿದ್ದನಷ್ಟೆ. ಆದರೆ ಈಗ ನೋಡಿ: ಕೇವಲ ಒಂದೇ ದಿನದಲ್ಲಿ, 'ಕನಸು' ಕಾವ್ಯನಾಮದ, http://www.kannadakavyakanaja.blogspot.in/ ಮಾಲೀಕರು ಕವನದ ಪಠ್ಯವನ್ನು ಕಳುಹಿಸಿಕೊಟ್ಟಿದ್ದಾರೆ. ನಾನು ಅವರ ಬ್ಲಾಗಿಗೆ ತಕ್ಷಣ ಭೇಟಿ ಕೊಟ್ಟೆ. ಏನಾಶ್ಚರ್ಯ. ಹಲವಾರು ಕವಿಗಳ ಹಲವಾರು ಕವಿತೆಗಳನ್ನು ಅವರು ಸಂಗ್ರಹಿಸಿದ್ದಾರೆ; ಆ ಮೂಲಕ ಓದುಗರಿಗೆ ನೆರವಾಗಿದ್ದಾರೆ.

'ಕನಸು' ಕಾವ್ಯನಾಮ ಇವರ ಹೆಸರು ರೇಖಾ ರೋಹಿತ್.. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಮನಃ ಶಾಸ್ತ್ರಜ್ಞೆ, ಸಾಹಿತ್ಯ, ಸಂಗೀತ, ಪ್ರಕೃತಿಯೆಡೆಗೆ ಎಂದೂ ಮುಗಿಯದ ಒಲವಿರಿಸಿಕೊಂಡಿರುವ ಅವರ ಬ್ಲಾಗನ್ನು ನಾನು ಅನುಸರಿಸತೊಡಗಿದ್ದೇನೆ. ನೀವು ಅನುಸರಿಸಿ, ಕನ್ನಡ ಕವನಗಳ ರಸದೌತಣವನ್ನುಣ್ಣಬಹುದು.

ಧನ್ಯವಾದಗಳು... ಧನ್ಯವಾದಗಳು... ಧನ್ಯವಾದಗಳು 'ಕನಸು' ಅವರಿಗೆ-

ರಾಜರತ್ನಂ ಅವರ ಪೂವಮ್ಮ' ಕವಿತೆಯ ಪಾಠ ಕೆಳಗಿದೆ. ಸಹೃದಯ ಓದುಗರು ಎರಡನ್ನೂ ಓದಿ ಆನಂದಿಸಿ. ಹೋಲಿಸಿ ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ. ಮಹಾವ್ಯಕ್ತಿಗಳ(ಪ್ರತಿಭೆಗಳ) ಯೋಚನೆ ಒಂದೇ ಆಗಿರುತ್ತದಂತೆ! ಕನ್ನಡದ ಕವಿಗಳಿಬ್ಬರು ಒಂದೇ ವ್ಯಕ್ತಿಯಿಂದ, ಒಂದೇ ಸನ್ನಿವೇಶದಿಂದ ಪ್ರಭಾವಿತಗೊಂಡು ಒಂದೇ ಸಮಯದಲ್ಲಿ ರಚಿಸಿರುವ ಈ ಎರಡೂ ಕವಿತೆಗಳು, ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಪ್ರಸ್ತಾಪವಾಗುವ 'ಪ್ರತಿಭೆ' ವ್ಯುತ್ಪತ್ತಿ' ಮೊದಲಾದವುಗಳಿಗೆ ಹಾಗೂ ಕವಿತೆಯ ಹುಟ್ಟು ಹೇಗೆ ಎಂಬ ವಿಚಾರಗಳಿಗೆ ನಮ್ಮನ್ನು ಚಿಂತನೆಗೆ ಹಚ್ಚಬಲ್ಲವು!

ಪೂವಮ್ಮ
ಮಡಕೇರೀಲಿ ರತ್ನ
ಕಂಡ ಒಸಾ ಮತ್ನ.

'ಮಡಕೇರೀಲಿ ಮಡಕೆ ಯೆಂಡ
ಈರ್ದಿದ್ರ್ ಅಲ್ಲೀಗ್ ಓದ್ದೂ ದಂಡ'
ಅಂದಿ ರತ್ನ ಪಡಕಾನೇಗೆ
ಒಂಟ, ಬೆಟ್ಟದ ನೆತ್ತಿ ಮೇಗೆ
        ಓಯ್ತಿದ್ದಂಗೆ ನಿಂತ!
        ಕಲ್ಲಾದಂಗೆ ಕುಂತ!

ಸುತ್ತ ಸಾಯೋ ಬಿಸಿಲಿನ್ ಚಾಪೆ!
ಅಲ್ಲಲ್ಲೆ ಒಸಿ ನೆರಳಿನ್ ತೇಪೆ!
ಅಲೆಯಲೆಯಾಗಿ ಬಿಸಿಲಿನ್ ಜೊತ್ಗೆ
ಸುತ್ತಿನ್ ಗುಡ್ಡಗೊಳ್ ಕುಣದರ್ ಮೆತ್ಗೆ
       ಮನಸೀಗ್ ಅರ್ಸ ತರ್‍ತ-
       ರತ್ನ ಯೆಂಡ ಮರ್‍ತ!

'ಮುದುಕರ್ ಸಾವೇ ನೋಡಾಕ್ ಚಂದ!'
ಅಂದ್ರೆ ಸೂರ್‍ಯ ಸಾಯಾಲ್ಲೇಂದ;
'ಸಾಯೋ ಮುದುಕ ಸಂಜೆ ಸೂರ್‍ಯ
ನೆಗತ ನಿಲ್ಲೋಕ್ ಇವ್ಗೇನ್ ಕಾರ್‍ಯ?'
        ಅಂತ ಇಂದಕ್ ತಿರ್ಗಿ
        ನೋಡ್ದೆ - ಬತ್ತು ಗಿರ್ಕಿ!

ದೇವರದೊಂದು ಚೆಂದದ್ ಸೋತ್ರ
ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ
ಕೊಡಗಿನ್ ಒಂದ್ ಊ ಗಾಳೀಲ್ ತೇಲ್ತ
ಬಂದಂಗಿದ್ಲು ಅತ್ರ ಕಾಲ್ತಾವ್
          ಒಂದು ಕೊಡಗೀನುಡಗಿ!
          ಐದಾರೊರಸದ್ ವುಡಗಿ!

ಕೊಡಗಿನ್ ತೋಟದ್ ಕಾಪೀ ಅಣ್ಣು
ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!
ಕೆನ್ನೆ ಅನಕ ಕೊಡಗಿನ್ ಕಿತ್ಲೆ!
ಔಳೇಳಿದ್ಲು ನಾ ಕೇಳೂತ್ಲೆ:
         'ನಿಂಗೆ ಯೆಸರೇನಮ್ಮ?'
         'ನನ್ನೆಸರು ಪೂವಮ್ಮ!'

'ಪೂವಮ್ಮ!' ಹಾ! ಎಂತಾ ಯೆಸರು!
ಕಣ್ಣಿಗ್ ಚಿತ್ರ ಕಟ್ಟೋ ಯೆಸರು!
ರೂಪು ರಾಗಕ್ ತಕ್ಕಂತ್ ಯೆಸರು!
ಎಂಗ್ ನೋಡಿದ್ರು ಒಪ್ಪೋ ಯೆಸರು!
'ಪೂವಮ್ಮಾ! ಪೂವಮ್ಮಾ!'
'ಪೂವಮ್ಮಾ! ಪೂವಮ್ಮಾ!'

ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!
ಔಳ್ ಮಾತ್ಕೇಳಿ ಒಂದ್ ಅತ್ತಾಯ್ತು!
ಔಳ್ ಮಾತ್ ಇನ್ನಾ ಕೇಳ್ಬೇಕೂಂತ
'ನಾನ್ಯಾರ್ ಗೊತ್ತೆ?' ಅಂದ್ರೆ 'ಹ್ಞೂ'oತ
          'ನೀ ಯೆಂಡಕುಡಕ' ಅಂದ್ಲು
           ನೆಗ್ತ ಅತ್ರ ಬಂದ್ಲು.

'ನೀ ನಾ ಕುಡಿಯೋದ್ನ್ ಎಲ್ ನೋಡ್ದೇಮ್ಮ?'
ಅಂದ್ರೆ, 'ಯಾವೋನ್ಗೈತೆ ಜಮ್ಮ
ಔನ್ಗೆ ಯೇಳ್ತೀವ್ ಕೊಡವಾಂತಂದಿ!
ಕುಡದಂಗ್ ಆಡೋನ್ ಕುಡಕಾಂ'ತ್ ಅಂದಿ
          ತೊಡೇನ್ ಅತ್ತಿದ್ಲು ಮೆಲ್ಗೆ!
          ಕುಡದೋನ್ ಅಂದ್ರೆ ಸಲ್ಗೆ!

ಕತ್ತಿನ್ ಸುತ್ತ ಕೈ ಆಕ್ಕೊಂಡಿ
'ಅಣ್ಣ ರತ್ನ' ಅಂತ್ ನೆಕ್ಕೊಂಡಿ
'ಯೆಂಡದ ಪದಗೊಳ್ ಏಳ್ ನೋಡಾನೆ!
ನಾನೂ ನಿನ್ನಂಗ್ ಕಲ್ತ್ ಆಡಾನೆ!'
          ಅಂದ್ಲು ಮೊಕಾನ್ ನೋಡಿ!
          ಕಣ್ಣ ದೊಡ್ದುಮಾಡಿ!

ಇಲ್ದಿದ್ ತಂಗಿ ಆಗ್ ವುಟ್ಟಿದ್ಲು
ಪೂವಮ್ಮಾನೆ ನಂಗೆ ಮೊದಲು!
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ದೆ ಯೆಂಗೀಸ್ ಇಡದಂಗ್ ತಾಲಿ-
      ಸೂರ್‍ಯ ಮುಳಗಿದ್ ಕಾಣ್ದೆ!
      ಯೆಂಡ ಬೇಕಂತ್ ಅನ್ದೆ!

ಬಯಲುಸೀಮೆಯಲ್ಲೂ ಮಂಜು ಮಡುಗಟ್ಟೀತು!






Tuesday, January 07, 2014

ಪೂವಮ್ಮ - ಕುವೆಂಪು ಮತ್ತು ರಾಜರತ್ನಂ ಅವರ ಮನಸ್ಸು ಕದ್ದ ಮುದ್ದುಬಾಲೆ!

ಮಡಿಕೇರಿಯ 1932ರ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಬರೆದಿರುವ ಹಿಂದಿನ ಬರಹದಲ್ಲಿ ಹೀಗೆ ದಾಖಲಾಗಿತ್ತು.
ತಿರುಗಾಟದಲ್ಲಿ 'ಪೂವಮ್ಮ' ಎಂಬ ಬಾಲೆಯನ್ನು ಸಂಧಿಸುತ್ತಾರೆ, ಆ ಬೇಟಿಯ ನಂತರ ಕುವೆಂಪು ಮತ್ತು ರಾಜರತ್ನಂ ಅದೇ ಹೆಸರಿನಲ್ಲಿ ಒಂದೊಂದು ಕವಿತೆ ಬರೆದಿರುತ್ತಾರೆ. ಆ ಕವಿತೆಗಳನ್ನು ಕುರಿತು ಕುವೆಂಪು 'ಪ್ರತ್ಯೇಕವಾಗಿ, ಸ್ವತಂತ್ರವಾಗಿ: ಅವರು ಬರೆಯುತ್ತಾರೆ ಎಂಬುದು ನನಗಾಗಲಿ, ನಾನು ಬರೆಯುತ್ತೇನೆ ಎಂಬುದು ಅವರಿಗಾಗಲಿ ತಿಳಿದಿರಲಿಲ್ಲ. ನಮ್ಮ ಕವನಗಳು ಅಚ್ಚಾದ ಮೇಲೆ ಅದು ಗೊತ್ತಾದದ್ದು. ಅವರದ್ದು ಎಂಡ್ಕುಡ್ಕ ರತ್ನನ ಶೈಲಿಯಲ್ಲಿದೆ. ನನ್ನದು ಸಾಹಿತ್ಯ ಭಾಷೆಯಲ್ಲಿದೆ. ಆದರೂ ಸಾಮ್ಯ ಎಷ್ಟು ಅದ್ಭುತವಾಗಿದೆ? ಕೆಲವು ಉಪಮೆಗಳಂತೂ ಒಂದು ಮತ್ತೊಂದರ ಭಾಷಾಂತರ ಎಂಬಂತಿವೆ' ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
ಅಂದು ಕುವೆಂಪು ಅವರಿಂದ ರಚಿತವಾದ ಪೂವಮ್ಮ ಕವಿತೆಯ ಪಾಠವನ್ನು ಸಹೃದಯರಿಗಾಗಿ ಕೆಳಗೆ ನೀಡುತ್ತಿದ್ದೇನೆ. ಆದರೆ, ನನ್ನ ಇದುವರೆಗಿನ ವ್ಯರ್ಥ ಪ್ರಯತ್ನವೆಂದರೆ ರಾಜರತ್ನಂ ಅವರ ಕವಿತೆಯ ಪಾಠ ಸಿಗದಿರುವುದು. ಪುಸ್ತಕಗಳಲ್ಲಿ ಹುಡುಕಿದ್ದೂ ಆಯಿತು, ಕೊನೆಗೆ ಬಲ್ಲವರು ತಿಳಿಸುವಂತೆ ಫೇಸ್ ಬುಕ್ಕಿನಲ್ಲಿ ಕೇಳಿದ್ದೂ ಆಯಿತು. ಸಿಗಲಿಲ್ಲ. ಆದರೆ ರಾಜರತ್ನಂ ಅವರ ಪ್ರಸಿದ್ಧ ಪದ್ಯ 'ಮಡಿಕೇರಿಲಿ ಮಂಜು'ವಿನಲ್ಲಿ 'ಪೂವಮ್ಮ - ನನ್ ತಂಗೀದ್ದಂಗೆ' ಎಂಬ ಸಾಲು ಬಂದಿರುವುದನ್ನು ಸಹೃದಯರು ಗಮನಿಸಬಹುದಾಗಿದೆ.
ಷೋಡಶಿ ಸಂಕಲನದಲ್ಲಿ ಸೇರಿರುವ ಕುವೆಂಪು ಅವರ 'ಪೂವಮ್ಮ'

ಮಡಿಕೇರಿಯ ಸಿರಿಮಲೆಗಳ ಮೇಲೆ
ಬಾಲ ದಿನೇಶನ ಕೋಮಲ ಲೀಲೆ
ಹಸುರಿನ ಕೆನ್ನೆಗೆ ಹೊನ್ನಿನ ಮುತ್ತು
ಕೊಡುತ್ತಿತ್ತು.
ಜನವಿಲ್ಲದ ಕಿರುದಾರಿಯೊಳಾನು
ಮೆಲ್ಲನೆ ನಡೆದಿರೆ, ಪವ‍್ತಸಾನು
ಅಲೆಯಲೆಯಲೆ ಮುಗಿಲಿಗೆ ಏರಿತ್ತು;
ಮೀರಿತ್ತು!

ಸುತ್ತಲು ಕಾಡಿನ ಹೂಗಳು ಕಣ್ನಿಗೆ
ನಲಿನಲಿದುವು ಹೊಂಬಿಸಲಲಿ ನುಣ್ಣಗೆ;
ಖಗಗಾನವು ಮೌನವ ಕಡೆದಿತ್ತು;
ಮಿಡಿದಿತ್ತು.
ತಪ್ಪಲ ಮೇಯುವ ಮಂಜಿನ ಮಂದೆ
ತೇಲುತಲಿದ್ದುದು ಹಿಂದೆ ಮುಂದೆ.
ನಡೆದನು ಕೊಡಗಿಗೆ ನಾ ಮನಸೋತು;
ಮೇಣೋತು.

ನಡೆದಿರೆ ದಾರಿಯ ತಿರುಗಣೆಯಲ್ಲಿ
ಪರ್ವತ ಕಾನನ ಕಂದರದಲ್ಲಿ
ಫಕ್ಕನೆ ಕಂಡಿತು ನನ್ನಯ ಕಣ್ಣು:
ಮುದ್ದಿನ ಮಲೆಹೆಣ್ಣು!
ಹೆಣ್ಣಂಎಬೆನೆ? ಅಲ್ಲಾ, ಕಿರುಹುಡುಗಿ!
ಕೊಡಗಿಗೆ ಕನ್ನಡಿಯೋ ಎನೆ ಬೆಡಗಿ!
ಐದು ವಸಂತಗಳಂದದ ಕೊಡಗಿ,
ಹೊಸ ಹೂ ಆ ಹುಡುಗಿ!

ಬೆಡಗಿನ ಕೊಡಗಿನ ಮಲೆಯಿಂದೊಯ್ಯನೆ
ಕಿರುದೊರೆಯುರುಳುವ ತೆರೆದಲಿ ರಯ್ಯನೆ
ಕಲ್ಲು ಹಾದಿಯಲಿ ಬಂದಳು ಚಿಮ್ಮ
ಮಿಗವರಿಯೊಲು ಹೊಮ್ಮಿ!
ನಿಂತಳು ಬೆರಗಾಗೆನ್ನನು ಕಂಡು:
ಅಂತು ನಿಲ್ಲುವುದು ದುಂಬಿಗೆ ಬಂಡು!
ಕಣ್ಣೊಳೆ ನಾನಾ ಚೆಲುವನು ಹೀರಿ
ನಿಂತೆನು ಎದೆಹಾರಿ!

ತುಂಬಿದ ಮೊಗ, ಮೈ; ತುಳುಕುವ ಕಣ್ಣು;
ಕೆನ್ನೆಗಳೆರಡೂ ಕಿತ್ತಿಳೆ ಹಣ್ಣು!
ಕೊಡಗಿಗೆ ಕನ್ನಡಿ ನಿನ್ನಯ ಕೆನ್ನೆ
ದಿಟವೈಸಲೆ ಚೆನ್ನೆ!
ಒಲ್ಮೆಯು ನಲ್ಮೆಯು ಚೆಲುವೂ ಬೆಡಗೂ
ನಿನ್ನಲಿವೆ; ಇದೆ ಎಲ್ಲಾ ಕೊಡಗೂ!
ಗಿರಿ ತಲಕಾವೇರಿಗಳಿನ್ನೇಕೆ?
ನೀನಿರೆ ಅವು ಬೇಕೆ?

ಮಲೆಗಳ ಕತ್ತಲೆ ಕವಲೊಡೆದಂದದಿ
ಜಡೆ ಕಂಗೊಳಿಸಿತ್ತೆರಡಾಗಂದದಿ.
ಕೇಳಿದೆನಾಕೆಯ "ಹೆಸರೇನಮ್ಮಾ?"
ನುಡಿದಳು "ಪೂವಮ್ಮ!"
ನುಡಿಸುವ ಹುಚ್ಚಿಗೆ ಹೆಸರನು ಕೇಳಿದೆ;
ಆಲಿಸಿ ಪರಮಾಹ್ಲಾದವ ತಾಳಿದೆ.
ದನಿಯೂ ಹೆಸರೂ ಎರಡೂ ಹೂವೆ!
ಅವಳಂತೂ ಹೂವೆ!

ಕೊಡಗದು ಹಿರಿಮಲೆಗಳ ಸಿರಿನಾಡು:
ಮೇಲಾಕಾಶವು, ಕೆಳಗಡೆ ಕಾಡು!
ಅಂತೆಯೆ ಇರುವುದು ನನ್ನಾ ಬೀಡು,
ನಚ್ಚಿನ ಮಲೆನಾಡು!
ಮಲೆನಾಡೆನಗಿದೆ ಹತ್ತಿರದಲ್ಲೆ,
ಅದರಿಂ ಕೊಡಗನು ಮರೆಯಲು ಬಲ್ಲೆ!
ಆದರೆ ಮರೆಯೆನು ನಿನಗಾಗಮ್ಮ
ಮುದ್ದಿನ ಪೂವಮ್ಮಾ!

Monday, January 06, 2014

ಕತ್ತೆ ಏಕೆ ಮಾಂಸ ತಿನ್ನುವುದಿಲ್ಲ?

Photo: ಕತ್ತೆ ಏಕೆ ಮಾಂಸ ತಿನ್ನುವುದಿಲ್ಲ?
First Published (Khushi - Kannadaprabha): 05 Jan 2014 02:00:00 AM IST 
ಆರಂಭದಲ್ಲಿ ಎಲ್ಲಾ ಪ್ರಾಣಿಗಳೂ ಮಾಂಸಾಹಾರಿಗಳೇ ಆಗಿದ್ದುವು. ಒಮ್ಮೆ ಒಂದು ಕಾಡಿನಲ್ಲಿ ಒಂದು ಸಿಂಹ, ಒಂದು ಕತ್ತೆ ಮತ್ತು ಒಂದು ನರಿ ಸ್ನೇಹಿತರಾಗಿ ಒಟ್ಟಿಗೆ ಇದ್ದವು. ವಯಸ್ಸಾಗುತ್ತಾ ಬಂದಂತೆ ಅವುಗಳಿಗೆ ಒಬ್ಬೊಬ್ಬರೇ ಬೇಟೆಯಾಡಿ ಆಹಾರ ಗಳಿಸುವುದು ಕಷ್ಟವಾಯಿತು. ಮೂರೂ ಪ್ರಾಣಿಗಳು ಸಮಾಲೋಚಿಸಿ, ಮೂವರೂ ಒಟ್ಟಿಗೆ ಸೇರಿ ಬೇಟೆಯಾಡುವುದು. ದೊರಕಿದ ಆಹಾರವನ್ನು ಮೂರು ಸಮಭಾಗಗಳಾಗಿ ಹಂಚಿಕೊಳ್ಳುವುದು ಎಂದು ತೀರ್ಮಾನಿಸಿದವು.
ಮೊದಲ ದಿನವೇ ಮೂರೂ ಪ್ರಾಣಿಗಳು ಸೇರಿ ಒಂದು ದೊಡ್ಡ ಜಿಂಕೆಯನ್ನು ಬೇಟೆಯಾಡಿದವು. ಬೇಟೆಯಾದ ಮೇಲೆ ಸಿಂಹವು ಕತ್ತೆಯನ್ನು ಕುರಿತು, ಕತ್ತೆಯಣ್ಣ ಈ ಜಿಂಕೆಯ ಮಾಂಸವನ್ನು ಮೂರೂ ಭಾಗ ಮಾಡುವ ಕೆಲಸ ನಿನ್ನದು, ಎಂದಿತು. ತನಗೆ ಮೊದಲ ಆದ್ಯತೆ ಸಿಕ್ಕಿದ್ದಕ್ಕೆ ಕತ್ತೆಗೆ ತುಂಬಾ ಸಂತೋಷವಾಯಿತು. ತನ್ನ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕೆಂದು ನಿರ್ಧರಿಸಿ, ಮಾಂಸವನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಮಾಡಿತು. ನಂತರ ಸಿಂಹ ಮತ್ತು ನರಿಗಳನ್ನು ಕುರಿತು, ನೋಡಿ ನೀವು ಹೇಳಿದಂತೆ ಸರಿಯಾಗಿ ಮೂರು ಭಾಗ ಮಾಡಿದ್ದೇನೆ. ನಿಮ್ಮ ಭಾಗಗಳನ್ನು ನೀವು ಆರಿಸಿಕೊಂಡು ಬಿಡಿ. ಉಳಿದ ಭಾಗವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ತುಸು ಹೆಮ್ಮೆಯಿಂದಲೇ ನುಡಿಯಿತು.
ಕತ್ತೆ ತನ್ನ ಮಾತು ಮುಗಿಸಿತ್ತೋ ಇಲ್ಲವೊ, ಅಷ್ಟರಲ್ಲಿ ದಿಗ್ಗನೆ ಕತ್ತೆಯ ಮೇಲೆರೆಗಿದ ಸಿಂಹ ಅದನ್ನು ಕಾಲಿನಿಂದ ಪರಚಿ, ಹಲ್ಲಿನಿಂದ ಕಚ್ಚಿ ಹಿಂಸೆ ಮಾಡಿಬಿಟ್ಟಿತು. ಕತ್ತೆಯಂತೂ ಅರೆಜೀವವಾಗಿ ಧೂಳಿನಲ್ಲಿ ಬಿದ್ದುಬಿಟ್ಟಿತು. ಆಗ ಸಿಂಹ ನರಿಯನ್ನು ಕುರಿತು, ನರಿಯಣ್ಣ, ಈ ಕತ್ತೆಗೆ ಸರಿಯಾಗಿ ಹಂಚಲು ಬರಲಿಲ್ಲ. ಈಗ ನೀನೇ ಆ ಕೆಲಸ ಮಾಡು, ಎಂದಿತು. ತಕ್ಷಣ ಕಾರ್ಯ ಪ್ರವೃತ್ತವಾದ ನರಿ, ಮಾಂಸದ ಮೂರೂ ಗುಡ್ಡೆಗಳನ್ನು ಒಟ್ಟು ಸೇರಿಸಿ, ಅದರಲ್ಲಿ ಒಂದೇ ಒಂದು ಸಣ್ಣ ಚೂರನ್ನು ತೆಗೆದು ತನ್ನ ಮುಂದೆ ಇಟ್ಟುಕೊಂಡು, ಉಳಿದುದೆಲ್ಲವನ್ನೂ ಸಿಂಹದ ಮುಂದೆ ಸರಿಸಿ ತನ್ನ ಕೆಲಸ ಮುಗಿಯಿತು ಎಂದಿತು. ಸಿಂಹಕ್ಕೆ ತುಂಬಾ ಸಂತೋಷವಾಯಿತು. ನರಿಯಣ್ಣ ನೀನು ತುಂಬಾ ಬುದ್ಧಿವಂತ. ಹಂಚಿಕೆಯನ್ನು ಸರಿಯಾಗಿ ಮಾಡಿದ್ದೀಯಾ. ನಿನಗೆ ಇದೆಲ್ಲವನ್ನು ಕಲಿಸಿದ ಆ ಗುರು ಯಾರು ಎಂದು ಗುಡ್ಡೆಯಲ್ಲಿದ್ದ ಮಾಂಸವನ್ನು ಕರಗಿಸತೊಡಗಿತು. ನರಿ ಮರುಕದಿಂದ ಕತ್ತೆಯ ಕಡೆ ನೋಡಿ, ಈ ಕತ್ತೆಯಣ್ಣನೇ ನನ್ನ ಗುರು ಎಂದಿತು.
ಮೆಚ್ಚಿದೆ ನಿನ್ನ ಬುದ್ಧಿವಂತಿಕೆಗೆ. ನೀನು ಇನ್ನು ಮೇಲೆ ನನ್ನ ಮಂತ್ರಿಯಾಗಿರು ಎಂದು ನರಿಗೆ ಹೇಳಿ, ಕತ್ತೆಯ ಕಡೆ ತಿರುಗಿ, ಮರುಕದಿಂದ ಒಂದು ಚೂರು ಮಾಂಸವನ್ನು ಅದರ ಮುಂದೆಸೆದು, ತಿನ್ನುವಂತೆ ಸೂಚಿಸಿತು. ಆಗ ಕತ್ತೆ ಸಿಂಹರಾಜನೇ, ನಿಮಗೆ ಗೊತ್ತಿಲ್ಲವೆನ್ನಿಸುತ್ತದೆ. ಈಗ್ಗೆ ಸ್ವಲ್ಪ ಹೊತ್ತಿನ ಮಂಚೆಯಿಂದ ನಾನು ಮಾಂಸಾಹಾರವನ್ನು ತ್ಯಜಿಸಿ, ಸಸ್ಯಹಾರದ ವ್ರತವನ್ನು ಕೈಗೊಂಡಿದ್ದೇನೆ. ಆದ್ದರಿಂದ ಈ ಮಾಂಸವೂ ನಿಮಗೆ ಅರ್ಪಿತವಾಗಲಿ ಎಂದು ನಮಸ್ಕರಿಸಿ, ಪಕ್ಕದಲ್ಲಿದ್ದ ಒಣಹುಲ್ಲಿಗೆ ಬಾಯಿ ಹಾಕಿತು.
ಅಂದಿನಿಂದ ಸಿಂಹ ಕಾಡಿನ ರಾಜನಾಯಿತು. ನರಿಯು ಅದರ ಹಿಂಬಾಲಕನಾಗಿ, ಸಿಂಹ ತಿಂದು ಬಿಟ್ಟ ಮಾಂಸದ ಚೂರನ್ನು ತಿನ್ನುತ್ತಾ ಜೀವಿಸಲಾರಂಭಿಸಿತು. ಕತ್ತೆ ಅವರೆಡರಿಂದಲೂ ದೂರವಾಗಿ ತನ್ನ ಸಸ್ಯಹಾರದ ವ್ರತವನ್ನು ಪಾಲಿಸುತ್ತಾ ಬದುಕಿಕೊಂಡಿತು.ಆರಂಭದಲ್ಲಿ ಎಲ್ಲಾ ಪ್ರಾಣಿಗಳೂ ಮಾಂಸಾಹಾರಿಗಳೇ ಆಗಿದ್ದುವು. ಒಮ್ಮೆ ಒಂದು ಕಾಡಿನಲ್ಲಿ ಒಂದು ಸಿಂಹ, ಒಂದು ಕತ್ತೆ ಮತ್ತು ಒಂದು ನರಿ ಸ್ನೇಹಿತರಾಗಿ ಒಟ್ಟಿಗೆ ಇದ್ದವು. ವಯಸ್ಸಾಗುತ್ತಾ ಬಂದಂತೆ ಅವುಗಳಿಗೆ ಒಬ್ಬೊಬ್ಬರೇ ಬೇಟೆಯಾಡಿ ಆಹಾರ ಗಳಿಸುವುದು ಕಷ್ಟವಾಯಿತು. ಮೂರೂ ಪ್ರಾಣಿಗಳು ಸಮಾಲೋಚಿಸಿ, ಮೂವರೂ ಒಟ್ಟಿಗೆ ಸೇರಿ ಬೇಟೆಯಾಡುವುದು. ದೊರಕಿದ ಆಹಾರವನ್ನು ಮೂರು ಸಮಭಾಗಗಳಾಗಿ ಹಂಚಿಕೊಳ್ಳುವುದು ಎಂದು ತೀರ್ಮಾನಿಸಿದವು.
ಮೊದಲ ದಿನವೇ ಮೂರೂ ಪ್ರಾಣಿಗಳು ಸೇರಿ ಒಂದು ದೊಡ್ಡ ಜಿಂಕೆಯನ್ನು ಬೇಟೆಯಾಡಿದವು. ಬೇಟೆಯಾದ ಮೇಲೆ ಸಿಂಹವು ಕತ್ತೆಯನ್ನು ಕುರಿತು, ಕತ್ತೆಯಣ್ಣ ಈ ಜಿಂಕೆಯ ಮಾಂಸವನ್ನು ಮೂರೂ ಭಾಗ ಮಾಡುವ ಕೆಲಸ ನಿನ್ನದು, ಎಂದಿತು. ತನಗೆ ಮೊದಲ ಆದ್ಯತೆ ಸಿಕ್ಕಿದ್ದಕ್ಕೆ ಕತ್ತೆಗೆ ತುಂಬಾ ಸಂತೋಷವಾಯಿತು. ತನ್ನ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕೆಂದು ನಿರ್ಧರಿಸಿ, ಮಾಂಸವನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಮಾಡಿತು. ನಂತರ ಸಿಂಹ ಮತ್ತು ನರಿಗಳನ್ನು ಕುರಿತು, ನೋಡಿ ನೀವು ಹೇಳಿದಂತೆ ಸರಿಯಾಗಿ ಮೂರು ಭಾಗ ಮಾಡಿದ್ದೇನೆ. ನಿಮ್ಮ ಭಾಗಗಳನ್ನು ನೀವು ಆರಿಸಿಕೊಂಡು ಬಿಡಿ. ಉಳಿದ ಭಾಗವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ತುಸು ಹೆಮ್ಮೆಯಿಂದಲೇ ನುಡಿಯಿತು.
ಕತ್ತೆ ತನ್ನ ಮಾತು ಮುಗಿಸಿತ್ತೋ ಇಲ್ಲವೊ, ಅಷ್ಟರಲ್ಲಿ ದಿಗ್ಗನೆ ಕತ್ತೆಯ ಮೇಲೆರೆಗಿದ ಸಿಂಹ ಅದನ್ನು ಕಾಲಿನಿಂದ ಪರಚಿ, ಹಲ್ಲಿನಿಂದ ಕಚ್ಚಿ ಹಿಂಸೆ ಮಾಡಿಬಿಟ್ಟಿತು. ಕತ್ತೆಯಂತೂ ಅರೆಜೀವವಾಗಿ ಧೂಳಿನಲ್ಲಿ ಬಿದ್ದುಬಿಟ್ಟಿತು. ಆಗ ಸಿಂಹ ನರಿಯನ್ನು ಕುರಿತು, ನರಿಯಣ್ಣ, ಈ ಕತ್ತೆಗೆ ಸರಿಯಾಗಿ ಹಂಚಲು ಬರಲಿಲ್ಲ. ಈಗ ನೀನೇ ಆ ಕೆಲಸ ಮಾಡು, ಎಂದಿತು. ತಕ್ಷಣ ಕಾರ್ಯ ಪ್ರವೃತ್ತವಾದ ನರಿ, ಮಾಂಸದ ಮೂರೂ ಗುಡ್ಡೆಗಳನ್ನು ಒಟ್ಟು ಸೇರಿಸಿ, ಅದರಲ್ಲಿ ಒಂದೇ ಒಂದು ಸಣ್ಣ ಚೂರನ್ನು ತೆಗೆದು ತನ್ನ ಮುಂದೆ ಇಟ್ಟುಕೊಂಡು, ಉಳಿದುದೆಲ್ಲವನ್ನೂ ಸಿಂಹದ ಮುಂದೆ ಸರಿಸಿ ತನ್ನ ಕೆಲಸ ಮುಗಿಯಿತು ಎಂದಿತು. ಸಿಂಹಕ್ಕೆ ತುಂಬಾ ಸಂತೋಷವಾಯಿತು. ನರಿಯಣ್ಣ ನೀನು ತುಂಬಾ ಬುದ್ಧಿವಂತ. ಹಂಚಿಕೆಯನ್ನು ಸರಿಯಾಗಿ ಮಾಡಿದ್ದೀಯಾ. ನಿನಗೆ ಇದೆಲ್ಲವನ್ನು ಕಲಿಸಿದ ಆ ಗುರು ಯಾರು ಎಂದು ಗುಡ್ಡೆಯಲ್ಲಿದ್ದ ಮಾಂಸವನ್ನು ಕರಗಿಸತೊಡಗಿತು. ನರಿ ಮರುಕದಿಂದ ಕತ್ತೆಯ ಕಡೆ ನೋಡಿ, ಈ ಕತ್ತೆಯಣ್ಣನೇ ನನ್ನ ಗುರು ಎಂದಿತು.
ಮೆಚ್ಚಿದೆ ನಿನ್ನ ಬುದ್ಧಿವಂತಿಕೆಗೆ. ನೀನು ಇನ್ನು ಮೇಲೆ ನನ್ನ ಮಂತ್ರಿಯಾಗಿರು ಎಂದು ನರಿಗೆ ಹೇಳಿ, ಕತ್ತೆಯ ಕಡೆ ತಿರುಗಿ, ಮರುಕದಿಂದ ಒಂದು ಚೂರು ಮಾಂಸವನ್ನು ಅದರ ಮುಂದೆಸೆದು, ತಿನ್ನುವಂತೆ ಸೂಚಿಸಿತು. ಆಗ ಕತ್ತೆ ಸಿಂಹರಾಜನೇ, ನಿಮಗೆ ಗೊತ್ತಿಲ್ಲವೆನ್ನಿಸುತ್ತದೆ. ಈಗ್ಗೆ ಸ್ವಲ್ಪ ಹೊತ್ತಿನ ಮಂಚೆಯಿಂದ ನಾನು ಮಾಂಸಾಹಾರವನ್ನು ತ್ಯಜಿಸಿ, ಸಸ್ಯಹಾರದ ವ್ರತವನ್ನು ಕೈಗೊಂಡಿದ್ದೇನೆ. ಆದ್ದರಿಂದ ಈ ಮಾಂಸವೂ ನಿಮಗೆ ಅರ್ಪಿತವಾಗಲಿ ಎಂದು ನಮಸ್ಕರಿಸಿ, ಪಕ್ಕದಲ್ಲಿದ್ದ ಒಣಹುಲ್ಲಿಗೆ ಬಾಯಿ ಹಾಕಿತು.
ಅಂದಿನಿಂದ ಸಿಂಹ ಕಾಡಿನ ರಾಜನಾಯಿತು. ನರಿಯು ಅದರ ಹಿಂಬಾಲಕನಾಗಿ, ಸಿಂಹ ತಿಂದು ಬಿಟ್ಟ ಮಾಂಸದ ಚೂರನ್ನು ತಿನ್ನುತ್ತಾ ಜೀವಿಸಲಾರಂಭಿಸಿತು. ಕತ್ತೆ ಅವರೆಡರಿಂದಲೂ ದೂರವಾಗಿ ತನ್ನ ಸಸ್ಯಹಾರದ ವ್ರತವನ್ನು ಪಾಲಿಸುತ್ತಾ ಬದುಕಿಕೊಂಡಿತು.
ಚಿತ್ರಕೃಪೆ - ಕನ್ನಡಪ್ರಭ(ಖುಷಿ)

Saturday, January 04, 2014

"ಶ್ರೀ ರಾಮಾಯಣ ದರ್ಶನಂ" ಗಮಕ ವಾಚನವನ್ನಿಲ್ಲಿ ಕೇಳಿ!

ಕುವೆಂಪು ಅವರ ಮಹಾಕಾವ್ಯ "ಶ್ರೀರಾಮಾಯಣದರ್ಶನಂ" ಮಹಾಕಾವ್ಯದ ಗಮಕ ವಾಚನ-ವ್ಯಾಖ್ಯಾನದ ಡಿ.ವಿ.ಡಿ. ಕೇಳುಗರಿಗೆ ಲಭ್ಯವಾಗುತ್ತಿವೆ. 35ಕ್ಕೂ ಹೆಚ್ಚು ಜನ ಗಮಕಿಗಳು, 25ಕ್ಕೂ ಜನ ವ್ಯಾಖ್ಯಾನಕಾರರು ಈ ಧ್ವನಿಮುದ್ರಿಕೆಗಳನ್ನು ತಯಾರಿಕೆಯಲ್ಲಿ ಭಾಗವಹಿಸಿದ್ದಾರೆ. ಸುಶ‍್ರಾವ್ಯವಾಗಿ ಮೂಡಿಬಂದಿರುವ ಗಮಕ ವಾಚನದ ಮೂಲಕ ಮಹಾಕಾವ್ಯವನ್ನು ಕೇಳುಗರು, ಓದುಗರು ತಮ್ಮದಾಗಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ.
ಮಹಾಕಾವ್ಯವನ್ನು ಈಗಾಗಲೇ ಓದಿರುವವರು, ಓದಲು ಸಮಯಾಭಾವವಿರುವವರಿಗೆ ಎಲ್ಲರಿಗೂ ಈ ಧ್ವನಿಮುದ್ರಿಕೆಗಳು ಉಪಯೋಗವಾಗಲಿವೆ. ಪ್ರಯಾಣ ಮಾಡುವಾಗ, ಬಿಡುವಾದಾಗ ಅಥವಾ ಕೆಲಸ ಮಾಡುತ್ತಲೇ ಕಾವ್ಯವನ್ನು ಕೇಳುವ ಅವಕಾಶ ಕಾವ್ಯಾಸಕ್ತರಿಗೆ ಸಿಕ್ಕಿದೆ.
ನಾಲ್ಕು ಡಿ.ವಿ.ಡಿ.ಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಗಂಟೆಗಳ ಅವಧಿಯಲ್ಲಿ ಕಾವ್ಯವನ್ನು ಅಡಕಗೊಳಿಸಲಾಗಿದೆ.
ಅದರ ಒಂದು ಸ್ಯಾಂಪಲ್ ಅನ್ನು ಇಲ್ಲಿ ಕೇಳಿ :https://sites.google.com/site/nandondmatu/mp3/1.1.2.MP3


Record and upload audio >>


Record audio or upload mp3 >>


Record and upload voice >>


Voice Recorder >>

Thursday, January 02, 2014

1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು

ಇಲ್ಲಿಗೆ 81 ವರ್ಷಗಳ ಹಿಂದೆ, ಅಂದರೆ, 1932 ಡಿಸೆಂಬರ್ 28ರಿಂದ 31ರವರೆಗೆ ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಿತ್ತು. ಸಮ್ಮೇಳನಾಧ್ಯಕ್ಷತೆಯನ್ನು ಶ್ರೀಯುತ ಡಿ.ವಿ.ಜಿ. ವಹಿಸಿದ್ದರು. 2014ರಲ್ಲಿ ಅದೇ ಮಡಿಕೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ, ಅಂದಿನ ಸಮ್ಮೇಳನದ ಕೆಲವು ನೆನಪುಗಳು ಇಲ್ಲಿವೆ. [ಆಧಾರ : ಕುವೆಂಪು ಅವರ 'ನೆನಪಿನ ದೋಣಿಯಲ್ಲಿ']
27.12.1932 ರಂದು ಮೈಸೂರಿನಿಂದ ಬರುವವರಿಗೆಂದೇ ಒಂದು ಬಸ್ಸನ್ನು ಗೊತ್ತು ಮಾಡಿದ್ದರು. ಆ ಬಸ್ಸಿನಲ್ಲಿ, ವೆಂಕಣ್ಣಯ್ಯ, ಬಿ.ಎಂ.ಶ್ರೀ, ರಾಜರತ್ನಂ, ಶ್ರೀನಿವಾಸ, ವಿಜಯದೇವ ಅವರೊಂದಿಗೆ ಕುವೆಂಪು ಇದ್ದರು. ಮಡಿಕೇರಿಯ ದಾರಿಯಲ್ಲಿ ಫ್ರೇಸರ್ಪೇಟೆ ಎಂಬಲ್ಲಿ ತಿಂಡಿಗೆಂದು ಇಳಿದಿದ್ದಾಗ ಎಲ್ಲರೂ ಬೆಣ್ಣೆದೋಸೆ ತಿನ್ನುತ್ತಾರೆ. ಆಗ ರಾಜರತ್ನಂ ಅವರು ಹೆಚ್ಚು ದೋಸೆ ತಿನ್ನುವ ಸಾಹಸವನ್ನೂ ಮಾಡುತ್ತಾರೆ. ಅಂದೇ ಸಂಜೆ ಈ ಸಾಹಿತಿಗಳ ದಂಡು ರಾಜಾಸೀಟಿಗೆ ಹೋಗಿ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತದೆ.
28.12.1932 ಬೆಳಿಗ್ಗೆ ಅಧಿವೇಶನ ಅರಂಭ. ಡಿ.ವಿ.ಜಿ. ಅಧ್ಯಕ್ಷ ಭಾಷಣ ಮಾಡುತ್ತಾರೆ. ಜನರು ಉತ್ಸಾಹದಿಂದ ಭಾಗವಹಿದ್ದರು. 'ಏನುಉತ್ಸಾಹ ಇಲ್ಲಿಯ ಜನಕ್ಕೆ! ಕಿಕ್ಕಿರಿದಿದ್ದರು' ಎಂದು ಕುವೆಂಪಿಉ ದಾಖಲಿಸಿದ್ದಾರೆ. ಸಾಯಂಕಾಲ ಸಾಹಿತ್ಯ ಚರ್ಚೆ ಆರಂಭವಾಗುತ್ತದೆ. ಆಗ ಮಡಿಕೇರಿಯ ಶಂಭುಶಾಸ್ತ್ರಿ ಎಂಬುವವರು ಹೊಸ ರೀತಿಯ ನವೋದಯದ ಕವನಗಳನ್ನೆಲ್ಲಾ ಖಂಡಿಸಿ ಮಾತನಾಡುತ್ತಾರೆ. ಕುವೆಂಪು ಹೇಳುವಂತೆ 'ಗಾಂಭೀರ್ಯ ತಪ್ಪಿ'. ಅವರು ತನ್ನ ಖಂಡನೆಗೆ ಬಳಸಿಕೊಂಡಿದ್ದು ಕುವೆಂಪು ಅವರ 'ಕೊಳಲು' ಕವನ ಸಂಕಲನದ ಮೊದಲ ಪದ್ಯದ ಮೊದಲ ಎರಡು ಸಾಲಗಳು!
ಕಾಡಿನ ಕೊಳಲಿದು, ಕಾಡ ಕವಿಯು ನಾ,
ನಾಡಿನ ಜನರೊಲಿದಾಲಿಪುದು.
ಅವರ ಖಂಡನೆ ಮಂಡನೆ ಎಲ್ಲಾ ಮುಗಿದ ಮೇಲೆ ಮಾಸ್ತಿ, ಸಿ.ಕೆ. ವೆಂಕಟರಾಮಯ್ಯ, ಟಿ.ಎಸ್.ವೆಂಕಣ್ಣಯ್ಯ, ತೀ.ನಂ.ಶ್ರೀ. ಮೊದಲಾದವರು ಒಬ್ಬರಾದ ಮೇಲೆ ಒಬ್ಬರು ವೇದಿಕೆ ಏರಿ ಶಂಭುಶಾಸ್ತ್ರಿಯ ವಾದವನ್ನು ವಿರೋಧಿಸಿ ಮಾತನಾಡುತ್ತಾರೆ.
29.12.1932 ರಾಜರತ್ನಂ ನೇತೃತ್ವದಲ್ಲಿ ಮಡಿಕೇರಿಯ ದರ್ಶನ ನಡೆಯುತ್ತದೆ. ಮೊದಲು ಓಂಕಾರೇಶ್ವರ ದೇವಾಲಯಕ್ಕೆ ಹೋಗುತ್ತಾರೆ. ಅದರ ಬಗ್ಗೆ ಕುವೆಂಪು 'ಅಲ್ಲಿಯ ಸರೋವರ ಬಹಳ ಮನೋಹರವಾಗಿದೆ. ಅಲ್ಲಿಯ ವಿಗ್ರಹ ತುರುಕಣ್ಣಗೆ ಜುಟ್ಟು ಬಿಡಿಸಿ ಲಿಂಗ ಕಟ್ಟಿ ಬಿಟ್ಟಿದ್ದಾರೆ! ಅದು ಮೊದಲು ಮಸೀದಿಯಾಗಿದ್ದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ' ಎಂದು ಬರೆದಿದ್ದಾರೆ.
ಅಲ್ಲಿಂದ ಕಾಡು ತಿರಗಲು ಹೊರಡುತ್ತಾರೆ. ಆ ತಿರುಗಾಟದಲ್ಲಿ 'ಪೂವಮ್ಮ' ಎಂಬ ಬಾಲೆಯನ್ನು ಸಂಧಿಸುತ್ತಾರೆ, ಆ ಬೇಟಿಯ ನಂತರ ಕುವೆಂಪು ಮತ್ತು ರಾಜರತ್ನಂ ಅದೇ ಹೆಸರಿನಲ್ಲಿ ಒಂದೊಂದು ಕವಿತೆ ಬರೆದಿರುತ್ತಾರೆ. ಆ ಕವಿತೆಗಳನ್ನು ಕುರಿತು ಕುವೆಂಪು 'ಪ್ರತ್ಯೇಕವಾಗಿ, ಸ್ವತಂತ್ರವಾಗಿ: ಅವರು ಬರೆಯುತ್ತಾರೆ ಎಂಬುದು ನನಗಾಗಲಿ, ನಾನು ಬರೆಯುತ್ತೇನೆ ಎಂಬುದು ಅವರಿಗಾಗಲಿ ತಿಳಿದಿರಲಿಲ್ಲ. ನಮ್ಮ ಕವನಗಳು ಅಚ್ಚಾದ ಮೇಲೆ ಅದು ಗೊತ್ತಾದದ್ದು. ಅವರದ್ದು ಎಂಡ್ಕುಡ್ಕ ರತ್ನನ ಶೈಲಿಯಲ್ಲಿದೆ. ನನ್ನದು ಸಾಹಿತ್ಯ ಭಾಷೆಯಲ್ಲಿದೆ. ಆದರೂ ಸಾಮ್ಯ ಎಷ್ಟು ಅದ್ಭುತವಾಗಿದೆ? ಕೆಲವು ಉಪಮೆಗಳಂತೂ ಒಂದು ಮತ್ತಯೊಂದರ ಭಾಷಾಂತರ ಎಂಬಂತಿವೆ' ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
30.12.1932 ಮಿತ್ರರೊಂದಿಗೆ ಕುವೆಂಪು ತಲಕಾವೇರಿ ನೋಡಲು ಹೋಗುತ್ತಾರೆ. ಬ್ರಹ್ಮಗಿರಿಯನ್ನು ಹತ್ತಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾರೆ. (ಅಂದು ಅವರಿಗುಂಟಾದ ದರ್ಶನ ಒಂದು ಮಹೋಪಮೆಯಾಗಿ ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಬಳಕೆಯಾಗಿದೆ)
31.12.1932 ಪ್ರೊ. ವೆಂಕಣ್ಣಯ್ಯನವರ ಸಲಹೆಯಂತೆ ಕವನ ವಾಚನ ನಡೆಯುತ್ತದೆ. ರಾಜರತ್ನಂ ಮತ್ತು ಕುವೆಂಪು ಇಬ್ಬರೂ ವೇದಿಕೆಯಲ್ಲಿದ್ದರು. ಕೊನೆಯಲ್ಲಿ ಕುವೆಂಪು ಸುಮಾರು ಒಂದೂವರೆ ಗಂಟೆಗಳ ಕಾಲ ಕವನ ವಾಚನ ಮಾಡುತ್ತಾರೆ!
ಆಗ ಸತ್ಯಾಗ್ರಹದ ಕಾಲ. ಕೊಡಗು ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಕುವೆಂಪು ಮೊದಲಾದ ಕವಿಗಳು ದೇಶೀ ಸಂಸ್ಥಾನವಾದ ಮೈಸೂರಿನಿಂದ ಹೋಗಿದ್ದವು. ಕೊಡಗಿನಲ್ಲಿದ್ದಷ್ಟು ಸತ್ಯಾಗ್ರಹದ ಕಾವು ಇವರಿಗೆ ತಟ್ಟಿರಲೇ ಇಲ್ಲ. ಮೊದಲೇ ದೇಶಪ್ರೇಮಿಗಳಾಗಿದ್ದ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಕೊಡಗಿನವರಿಗೆ ಕುವೆಂಪು ವಾಚಿಸಿದ 'ಸತ್ಯಾಗ್ರಹಿ' 'ಇಂದಿನ ದೇವರು', 'ಮಹಾತ್ಮ ಗಾಂಧಿ' 'ಮತಿಲಾಲ ನೆಹರು', 'ಭರತಮಾತೆಗೆ' 'ಕಲ್ಕಿ', 'ಪಾಂಚಜನ್ಯ' ಕವಿತೆಗಳು ಅಲ್ಲಿ ನೆರೆದಿದ್ದವರಿಗೆ ಭಾವಸ್ಫೋಟಕ್ಕೆ ಕಾರಾಣವಾಗಿಬಿಟ್ಟಿದ್ದವು. ಕೊನೆಯಲ್ಲಿ, 'ಭಾರತ ತಪಸ್ವಿನಿಗೆ' ಎಂಬ ಸಾನೆಟ್ಟನ್ನು ವಾಚಿಸುವಾಗ ಸಭೆಯ ನಡುವೆಯೇ ಸತ್ಯಾಗ್ರಹಿಗಳಾಗಿದ್ದ ಕೆಲವು ಯುವಕರು ಎದ್ದು 'ಮಹಾತ್ಮ ಗಾಂಧೀ ಕೀ ಜೈ!' 'ಭಾರತ ಮಾತಾ ಕೀ ಜೈ!' 'ಕಾಂಗ್ರೆಸ್ ಜಿಂದಾಬಾದ್' ಬ್ರಿಟಿಷರಿಗೆ ಧಿಕ್ಕಾರ!' ಇತ್ಯಾದಿ ಇತ್ಯಾದಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಯಾರ ಸಮಾಧಾನಕ್ಕೂ ಅವರು ಬಗ್ಗಲಿಲ್ಲ! ಅಲ್ಲಿಯೇ ಮಪ್ತಿಯಲ್ಲಿದ್ದ ಪೊಲೀಸಿನವರು ಅವರನ್ನೆಲ್ಲಾ ದಸ್ತಗಿರಿ ಮಾಡಿ ಹೊರಗೆ ಕರೆದುಕೊಂಡು ಹೋದರು. ಯಾವಾಗಲೂ ಕುವೆಂಪು ಅವರ ಜೊತೆಯಲ್ಲೇ ಇದ್ದು, ಅವರ ಕವನಗಳನ್ನು ಕೇಳುತ್ತಾ ಹೊಗಳುತ್ತಾ ಇದ್ದವರೊಬ್ಬರೇ ಸಿ.ಐ.ಡಿ. ಪೊಲೀಸರಾಗಿದ್ದರಂತೆ! ಕೊನೆಯಲ್ಲಿ ಅವರು ಕುವೆಂಪು ಅವರಿಗೆ 'ಪುಟ್ಟಪ್ಪನವರೆ, ಈ ಕೊಡಗಿನ ಜನ ಮೈಸೂರಿನಂಥವರಲ್ಲ. ನಿಮ್ಮ ಕವನಗಳನ್ನು ತಪ್ಪುತಪ್ಪಾಗಿ ತಿಳಿದು ರಾಜಕೀಯಕ್ಕೆ ಪರಿವರ್ತಿಸಿ ಬಿಡುತ್ತಾರೆ. ಆದ್ದರಿಂದ ಇಲ್ಲಿ ಅಂತಹ ಕವನಗಳನ್ನು ಓದದಿರುವುದೇ ಲೇಸು' ಎಂದು ಮುಸುಗಿನ ಎಚ್ಚರಿಕೆ ಕೊಟ್ಟರಂತೆ!





1981ರಲ್ಲಿ ಮಡಿಕೇರಿಯಲ್ಲಿ 54ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದರ ಅಧ್ಯಕ್ಷತೆ ವಹಿಸಿದ್ದವರು ಶ್ರೀ ಶಂ.ಬಾ.ಜೋಶಿಯವರು.








 
ಈಗ 80ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆಯುತ್ತಿದೆ. ನಾ.ಡಿಸೋಜಾ ಅವರು ಅಧ್ಯಕ್ಷತೆ ವಹಿಸಿದ್ದಾರೆ. ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸೋಣ.




Wednesday, January 01, 2014

ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ಪ್ರಧಾನ ಸಮಾರಂಭ 29.12.2013

 ಶ್ರೀ ರಾಮಾಯಣ ದರ್ಶನಂ 'ಗಮಕವಾಚನ ಮತ್ತು ವ್ಯಾಖ್ಯಾನ' ಡಿ.ವಿ.ಡಿ. ಬಿಡುಗಡೆ
 ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ಒಳಗೊಂಡಿರುವ ಸರಸ್ವತೀ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ಪುರಸ್ಕಾರ ಮೊತ್ತದ ಚೆಕ್
ಚೊಚ್ಚಲ ಪ್ರಶಸ್ತಿ ಸ್ವೀಕರಿಸುತ್ತಿರುವ ಶ್ರೀ ಸಚ್ಚಿದಾನಂದನ್
 ಧನ್ಯತಾ ಭಾವದಲ್ಲಿ ಮುಳುಗಿಹೋಗಿರುವ ಶ್ರೀ ಸಚ್ಚಿದಾನಂದನ್
 ಶ್ರೀ ಸಚ್ಚದಾನಂದನ ಅವರ ಮಾತು
ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕಾಗಿ ಅರವತ್ತು ಲಕ್ಷ ರೂಪಾಯಿಗಳ ಪುದುವಟ್ಟನ್ನು ಇಟ್ಟಿರುವ ಶ್ರೀಮತಿ ಸರೋಜಾ ಚಂದ್ರಶೇಖರ್ (ಮುಂದೆ ನಿಂತಿರುವವರು ಜಸ್ಟೀಸ್ ಸದಾಶಿವ)