Tuesday, March 30, 2010

ಶಬ್ದಗಾರುಡಿಗ ಬೇಂದ್ರೆಯವರ ಮೂರು-ಮೂರೇ ಸಾಲುಗಳು

ಬದುಕಿನಲ್ಲಿ ಬೆಂದರೆ ಬೇಂದ್ರೆಯಾಗುತ್ತಾನಂತೆ! ಹಾಗೆ ಬದುಕಿನುದ್ದಕ್ಕೂ ಬೇಯುತ್ತಲೇ ಇದ್ದ ಬೇಂದ್ರೆಯವರನ್ನು ವಿಶೇಷ ಕವಿಯಾಗಿ ಕನ್ನಡ ಎಂ.ಎ. ಮಾಡುವಾಗ ಓದಬೇಕಾಯಿತು. ಆಗಿನ ನನ್ನ ದರದೃಷ್ಟವೆಂದರೆ ಬೇಂದ್ರೆಯವರ ಯಾವುದೇ ಸಾಹಿತ್ಯಕೃತಿ ಮರುಮುದ್ರಣವಾಗಿರಲಿಲ್ಲ. ಹಳೆಯ ಪ್ರತಿಗಳು ಸಿಗುತ್ತಿರಲಿಲ್ಲ. ಆದ್ದರಿಂದ ವಿಧಿಯಿಲ್ಲದೆ, ವಿ.ವಿ.ಯವರು ಪೂರೈಕೆ ಮಾಡಿದ್ದ ಪಾಠಗಳಲ್ಲಷ್ಟೇ ಬೇಂದ್ರೆಯವರನ್ನು ಓದಬೇಕಾಯಿತು. ಹಾಗಾಗಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೇನೋ! ಏಕೆಂದರೆ ಬೇಂದ್ರೆಯವರ ಸಾಹಿತ್ಯವನ್ನು ಮೂಲದಲ್ಲೇ ಓದಬೇಕು ಎಂಬ ‘ಹೆಬ್ಬಯಕೆ’ ನನ್ನಲ್ಲಿ ಆಗಿನಿಂದಲೂ ಮೂಡಿಬಿಟ್ಟಿತು. ಅವರ ಸಮಗ್ರ ಕಾವ್ಯವನ್ನು ಸೇರಿಸಿ ‘ಔದುಂಬರ ಗಾಥೆ’ ಎಂಬ ಹೆಸರಿನಲ್ಲಿ ಆರು ಸಂಪುಟಗಳು ಪ್ರಕಟವಾದಾಗ ನನ್ನ ಆಸೆ ಈಡೇರುವ ಕಾಲ ಬಂದಿತೆಂದು ಸಂತೋಷವಾಯಿತು. ಹೀಗೆ ನಮ್ಮ ಗ್ರಂಥಾಲಯಕ್ಕೆ ಬಂದ ಆರು ಸಂಪುಟಗಳನ್ನು ನನ್ನ ಸುಪರ್ದಿನಲ್ಲಿಯೇ ಇಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಮೊನ್ನೆ ಬಿ.ಎ. ಹುಡುಗರಿಗೆ ಬೇಂದ್ರೆಯವರ ಬಗ್ಗೆ ಅಸೈನ್‌ಮೆಂಟ್ ಕೊಟ್ಟಿದ್ದರೆಂದು ಕಾಣುತ್ತದೆ. ಇದ್ದಕ್ಕಿದ್ದಂತೆ ಆ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಯಿತು. ಅವರೆಲ್ಲಾ ಬರೆದುಕೊಂವೋ ಕ್ಸೆರಾಕ್ಸ್ ಮಾಡಿಸಿಕೊಂಡೋ ಹೋದ ನಂತರ ಆರು ಸಂಪುಟಗಳೂ ನನ್ನ ಟೇಬಲ್ಲಿನ ಮೇಲೆ ಬಿದ್ದಿದ್ದವು. ನಾನು ಅವುಗಳ ಮೇಲೆ ನೆನ್ನೆಯಿಂದ ಕಣ್ಣಾಡಿಸುತ್ತಲೇ ಇದ್ದೆ. ಆಗ ಈ ಮೂರು ಮೂರು ಸಾಲಿನ ಪುಟ್ಟ ಪುಟ್ಟ ಪದ್ಯಗಳು ನನ್ನ ಗಮನ ಸೆಳೆದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಎನ್ನಿಸಿ ಇಲ್ಲಿ ಬ್ಲಾಗಿಗೇರಿಸಿದ್ದೇನೆ. ಓದಿ ಬೇಂದ್ರೆಯವರ ಕಾವ್ಯಾಮೃತದ ಕೆಲವು ಹನಿಗಳನ್ನು. ಇದು ಅವರ ಹೆಚ್ಚಿನ ಸಾಹಿತ್ಯವನ್ನು ಓದುವಂತೆ ನಿಮ್ಮಲ್ಲಿ ಪ್ರೇರೇಪಿಸಿದರೆ ನಾನು ಧನ್ಯ.
1
ರಸವೆ ಜನನ
ವಿರಸ ಮರಣ
ಸಮರಸವೇ ಜೀವನ
2
ಒಂದೇ ಒಂದು ರಾಡಿ
ಬರಿದು ಓರಂದ ಇರದು ಮಕರಂದ
ರಸವು ಹುಡಿಯ ಜೋಡಿ
3
ಆತನು!
ನೂಲು ನೂತನು
ಯಾವಾತನು
4
ಆ ಮೈ ಕತ್ತಲು ನಾಮ
ಈ ಮೈ ಬೆಳಕು ರೂಪ
ದೇಹರೂಪ
5
ಬೆಣ್ಣೆಯೊಳಗ ಬಟ್ಟು ಅದ್ದಿ ಮೂಗಿಗೆ
ಹಚ್ಚಿಗೊಂಬಾವ್ರು ಬಹದ್ದೂರ ಜನಾ!
ಇದು ಮಾತಿನ ಪವಾಡಲ್ಲ, ಮುಖವಾಡ
6
ದಶಕಂಠಗಿಲ್ಲ ಆರಾಮ.
ಸಂಹಾರ ವಿಶ್ರಾಮ,
ಜಯದ ವಿಜಯದ್ವಾರ- ಜಯ ವಿಜಯ ಆಕಾರ
7
ಸಾಗು ಮಾಗು ಗುರುಪಾದ
ಸೇವಕ ನಾಗು ಹಾಗೂ ಹೀಗೂ
ಮಂಗಾಟ ನಿಲ್ಲಿಸು ಹನುಮಂತನಾಗು
8
ಕತ್ತಿಗೆ ಹಾಕೋದಿಲ್ಲ ನತ್ತು
ಮೂಗಿಗೆ ಇರೋದಿಲ್ಲ ಮುತ್ತು
ಹರಕು ಮುರುಕ ಕಳ್ಳಗತ್ತು
9
ಆರು ಏಳು ಎಂಟು
ಹೊರಗೊಂದು ಒಳಗೊಂದು
೨೮ ಉಂಟು ಹಾಂಗೂ ಹೀಂಗೂ
10
ನಾನೆಲ್ಲಿ ಹೋಗಿದ್ದೆ?
ನಿಮ್ಮ ಹೃದಯದೊಳಗಿದ್ದೆ
ವಿವೇಕ ಅಂತ ಹೊರಗ ಬಂದೆ
11
ಯಾವುದರ ಬೋಧ ಇಲ್ಲವೋ
ಅದರ ಶೋಧವು
ಸಫಲವೆನಿಸಲಾರದು
12
ಕಿಲಿಕಿಲಿ ಹಕ್ಕಿಯ
ಕಲಕಲರವದಲಿ
ಧ್ವನಿಸುವ ಬಗೆಯಾಕೆ
13
ಅಂಚೆ ಏರಿ ನೀರಿನಾಕೆ
ಗಾಳಿಯಲ್ಲಿ ಸುಳಿದಳೋ
ಬೆಳಕಿನಲ್ಲಿ ಬೆಳೆದಳು
14
ಕಾಮದೊಳಗೆ ಹೊತ್ತಿದೆ ಪ್ರೇಮಾ
ಅದಕ್ಕಾವ ನೇಮಾ ಗೀಮಾ
ಅದು ಬಾಳೋ ಸೀಮಾ ನಿತ್ಯಾನಂದ ಧಾಮಾ
15
ಬೀರ ನೆತ್ತರ ಸವಿದು
ಸುರುಚಿ ಸುಮಧುರವೆಂದೆ
ನಿನ್ನ ಹನಿಯೇ ಬೇರೆ ತಣಿವಿನರಸ
16
ಉಂಡು ನೈವೇದ್ಯದ ಮುದ್ದೀ
ಬ್ರಹ್ಮಚೈತನ್ಯರ ಶುದ್ಧಿ
ಹಂಚ್ಯಾಡು ಶ್ರೀರಾಮ ಋದ್ಧೀ
17
ಇದು ಬುದ್ಧನ ಅವತಾರ
ಜೀವನದುದ್ಧಾರ
ಶೂನ್ಯದ ಹೊಲದಲಿ ಬೆಳೆಯುವ ಆತ್ಮದಶೃಂಗಾರ

Monday, March 22, 2010

ಲೋಹಿಯಾ - 100

ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.’
ಈ ಸಾಲುಗಳನ್ನು ಮೊದಲ ಬಾರಿ ಓದಿದ ಮೇಲೆ ನನ್ನಲ್ಲಿ ಮೊದಲಿಗೇ ಎದ್ದ ಪ್ರಶ್ನೆ ‘ಈ ಲೋಹಿಯಾ ಯಾರು?’ ಎಂಬುದು. ಹೀಗೆ ಲೋಹಿಯಾರನ್ನು ಹುಡುಕುತ್ತಾ ಅವರ ಬಗ್ಗೆ ಕನ್ನಡದಲ್ಲಿ ದೊರೆಯುತ್ತಿದ್ದ ಸಣ್ಣಪುಟ್ಟ ಮಾಹಿತಿಗಳನ್ನು ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋದ ನನಗೆ, ಬಹುಶಃ ಭಾರತಮಟ್ಟದ ನಾಯಕರೊಬ್ಬರು ಕರ್ನಾಟಕದ ಮೇಲೆ ಇಷ್ಟೊಂದು ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪ್ರಭಾವ ಬೀರಿದ್ದು ಲೋಹಿಯಾ ಒಬ್ಬರೆ ಅನಿಸಿತ್ತು. ಆಗ ತೇಜಸ್ವಿ ಮತ್ತು ಎಂ.ಡಿ.ಎನ್. ಅನುವಾದಿಸಿರುವ ಲೋಹಿಯಾ ಎನ್ನುವ ಪುಸ್ತಕ ನನಗೆ ಲೋಹಿಯಾ ಅವರ ಚಿಂತನ ಜಗತ್ತನ್ನು ತೆರೆದಿಟ್ಟಿತ್ತು. ಮುಂದೆ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದ ಐದು ಸಂಪುಟಗಳು ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡದಲ್ಲಿ ಓದುವಂತೆ ಮಾಡಿ ಲೋಹಿಯಾ ಅವರನ್ನು ಇನ್ನಷ್ಟು ಹತ್ತಿರ ಮಾಡಿಬಿಟ್ಟವು.

 ೧೯೧೦ ಮಾರ್ಚ್ ೨೩ ರಂದು ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್‌ಪುರದಲ್ಲಿ ಜನಿಸಿದ ಲೋಹಿಯಾ ಅಕ್ಬರ್‌ಪುರ, ಮುಂಬಯಿ, ಕಲ್ಕತ್ತಾ ಮತ್ತು ಜರ್ಮನ್ ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಜೀವನದಿಂದಲೂ ಹೋರಾಟದ ಕೆಚ್ಚು ರೂಢಿಸಿಕೊಂಡಿದ್ದ ಲೋಹಿಯಾ ಅವರು ಜಿನೀವಾದಲ್ಲಿ ನಡೆದ ‘ಲೀಗ್ ಆಫ್ ನೇಷನ್ಸ್’ ಸಭೆಯಲ್ಲಿ ಬಿಕನೇರಿನ ಮಹಾರಾಜ ಬಾರತದ ಪ್ರತಿನಿಧಿಯಾಗಿ ಮಾತನಾಡಲು ಎದ್ದು ನಿಂತಾಗ ಸಿಳ್ಳೆ ಹೊಡೆದಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದರೂ, ಗಾಂಧೀಜಿಯವರೂ ಸೇರಿದಂತೆ ನೆಹರೂ, ಸುಭಾಷ್, ಸರ್ದಾರ್ ಮೊದಲಾದವರೊಂದಿಗೆ ತಾತ್ವಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಎಲ್ಲರೊಂದಿಗೂ ನಿರ್ಭಯರಾಗಿ ಮಾತನಾಡಿ ತಮಗನ್ನಿಸಿದ್ದನ್ನು ಹೇಳುತ್ತಿದ್ದರು.

ಸ್ವಾತಂತ್ರೋತ್ತರ ಭಾರತದ ಆಡಳಿತವರ್ಗಕ್ಕೆ ಎಚ್ಚರಿಕೆಯ ಗಂಟೆಯಂತೆ ಲೋಹಿಯಾ ಇದ್ದರು. ಹತ್ತಕ್ಕೂ ಹೆಚ್ಚು ಸಲ ಅವರನ್ನು ಜೈಲಿಗಟ್ಟಲಾಗಿತ್ತು ಎಂಬುದನ್ನು ಮನಗಂಡರೆ ಅವರ ಹೋರಾಟದ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು. ದೂರದ ಅಮೆರಿಕೆಯ ಮಿಸಿಸಿಪ್ಪಿಯಲ್ಲಿ ಹೋಟೆಲ್ ಪ್ರವೇಶದಲ್ಲಿದ್ದ ತಾರತಮ್ಯವನ್ನು ವಿರೋಧಿಸಿ (ಅಂದು ನೆಹರು ನಿಧನರಾದ ದಿನ) ಪ್ರತಿಭಟನೆ ನೆಡೆಸಿದಂತೆ ಕರ್ನಾಟಕದ ಕಾಗೋಡು ಎಂಬ ಕುಗ್ರಾಮದ ರೈತರ ಪರವಾಗಿಯೂ ಧ್ವನಿಯೆತ್ತಿ ಹೋರಾಟಕ್ಕೆ ಧುಮುಕಿದ್ದರು. ಮೈನ್ ಕೈಂಡ್ ಪತ್ರಿಕೆಯ ಸಂಪಾದಕರಾಗಿದ್ದರು. ನೆಹರೂ ವಿರುದ್ದ ಫೂಲ್‌ಪುರದಿಂದ ಚುನಾವಣೆಗೆ ನಿಲ್ಲುವ ಮೂಲಕ ವ್ಯಕ್ತಿಪೂಜೆಯನ್ನು ವಿರೋಧಿಸಿದರು. ೧೯೬೩ ರಲ್ಲಿ ಫರೂಕಬಾದ್ ಕ್ಷೇತ್ರದಿಂದ ೧೯೬೭ರಲ್ಲಿ ಕನೂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆಗೆ ಪ್ರವೇಶ ಪಡೆದು ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಅವರು ನಾಯಕರುಗಳ ನಾಯಕ. ತಾವು ಹೋದಲ್ಲೆಲ್ಲಾ ನಾಯಕರುಗಳನ್ನು ರೂಪಿಸುತ್ತಾರೆ. ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲ, ಗಣಪತಿಯಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಮೊದಲಾದವರು ಕರ್ನಾಟಕದಿಂದ ಮೂಡಿಬಂದ ಲೋಹಿಯಾ ಅನುಯಾಯಿಗಳು. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಕಡಿದಾಳ ಶಾಮಣ್ಣ, ಪ್ರೊ.ರಾಮದಾಸ್, ಎಂ.ಡಿ.ನಂಜುಂಡಸ್ವಾಮಿ, ದೇವನೂರು ಮಹಾದೇವ, ರವಿವರ್ಮಕುಮಾರ್, ಅಗ್ರಹಾರ ಕೃಷ್ಣಮೂರ್ತಿ, ರೈತಸಂಘದ ಸುಂದರೇಶ್, ನಟರಾಜ್ ಹುಳಿಯಾರ್ ಮೊದಲಾದವರು ಲೋಹಿಯಾ ಅವರ ಪ್ರಭಾವ ಪ್ರೇರಣಗಳಿಗೆ ಒಳಗಾಗಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ಮತ್ತು ವಿಶ್ವಮಾನವ ಸಂದೇಶ ಇವುಗಳ ಬಗ್ಗೆ ಕೇಳಿ, ಅವರನ್ನು ಬೇಟಿಯಾಗಿ ನಿಮ್ಮಂತವರು ರಾಜಕೀಯಕ್ಕೆ ಬರಬೇಕು, ಬನ್ನಿ ಎಂದು ಆಹ್ವಾನ ನೀಡಿ ಸಂಚಲನವನ್ನೇ ಸೃಷ್ಟಿಸುವ ಲೋಹಿಯಾ ಒಂದು ರೀತಿಯಲ್ಲಿ ದರ್ಶನವಾದಿ. ಕರ್ನಾಟಕದ ಮಟ್ಟಿಗೆ ಲೋಹಿಯಾವಾದ ರೈತಸಂಘದ ಚಳುವಳಿಗೆ ಹುರುಪು ಹುಮ್ಮಸ್ಸು ನೀಡಿದ್ದು ಈಗ ಇತಿಹಾಸ.

 ‘ನನ್ನ ಬಳಿ ನನ್ನದೇಂಬುದೇನೂ ಇಲ್ಲ. ಭಾರತದ ಬಡವರು ಹಾಗೂ ಶ್ರೀಸಾಮನ್ಯರು ನನ್ನನ್ನು ತಮ್ಮವನು ಅಂದುಕೊಂಡಿರುವ ಒಂದು ಭಾವನೆಯನ್ನು ಬಿಟ್ಟರೆ ನನ್ನ ಬಳಿ ಇನ್ನೇನೂ ಉಳಿದಿಲ್ಲ’ ಎಂಬುದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ. ಅವರು ತೀರಿಕೊಂಡಾಗ (೧೨.೦೨೧೯೬೭) ಯಾವ ಆಸ್ತಿಪಾಸ್ತಿಯೂ ಇರಲಿಲ್ಲ; ಕುಟುಂಬವೂ ಇರಲಿಲ್ಲ. ಅವರು ಬಿಟ್ಟು ಹೋದದ್ದು ಕೇವಲ ತಮ್ಮ ಆದರ್ಶಗಳನ್ನು ಮಾತ್ರ!
ಇಂತಹ ಲೋಹಿಯಾ ಬದುಕಿದ್ದು ಕೇವಲ ೫೭ ವರ್ಷಗಳು ಮಾತ್ರ. ಅವರು ಇದ್ದಿದ್ದರೆ ಇಂದಿಗೆ (೨೩.೦೩.೨೦೧೦) ನೂರು ವರ್ಷ ತುಂಬುತ್ತಿತ್ತು. ಅವರ ನೆನಪಲ್ಲಿ ಅವರದೇ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
 • ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜ ದಬ್ಬಾಳಿಕೆಯ ಎದುರು ಮಂಡಿಯೂರಿ ಕುಳಿತು ಬಿಡಬೇಕೇ ಅಥವಾ ಅದನ್ನು ಪ್ರತಿಭಟಿಸಬೇಕೆ? (೧೯೪೨ ಆಗಸ್ಟ್ ೧೯೪೪ ಮೇ ವರೆಗೆ ಭೂಗತರಾಗಿದ್ದ ಲೋಹಿಯಾ ಅವರು ಅಂದಿನ ಭಾರತದ ವೈಸರಾಯ್ ಲಾರ್ಡ್ ಲಿನ್‌ಲಿಥ್‌ಗೊ ಅವರಿಗೆ ೧೯೪೨ರಲ್ಲಿ ಬರೆದ ಪತ್ರ. ಸ್ವಾತಂತ್ರ್ಯದ ಅಂತರ್ಜಲ ಹೆಸರಿನಲ್ಲಿ ಪ್ರಕಟವಾಗಿದೆ.)
 • ನಾನು ಯಾವಾಗಲೂ ಸರಿಯಾಗಿ ತಿಳಿದುಕೊಂಡೇ ನನ್ನ ಕರ್ತವ್ಯ ಮಾಡುತ್ತಿರುತ್ತೇನೆ. ಗಂಆಧೀಜಿಯವರ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನದೆಂಬುದು ನಿಶ್ಚಿತ. ಆದರೆ ಪಕ್ಷದ ಮೂಲಕ ಸ್ವೀಕೃತವಾದ ಗೊತ್ತುವಳಿಗಿಂತ (ಗಾಂಧೀಜಿಯವರು ಮಂಡಿಸಿದ್ದ ಗುತ್ತುವಳಿಯಲ್ಲಿದ್ದ ‘ಆಫ್ರಿಕಾದಲ್ಲಿದ್ದ ಬ್ರಿಟೀಷ್ ಭಾರತೀಯರು’ ಎಂಬ ಉಲ್ಲೇಖದಿಂದ ಬ್ರಿಟಿಷ್ ಪದವನ್ನು ಕೈಬಿಡುವಂತೆ ಲೋಹಿಯಾ ಸೂಚಿಸಿದ್ದ ತಿದ್ದುಪಡಿ) ಗಾಂಧೀಜಿಯವರ ಸಂಕಲ್ಪ ಶಕ್ತಿ ಇನ್ನೂ ಹೆಚ್ಚು ದೊಡ್ಡದಾಗಿತ್ತು. (ಸಭೆಯ ನಂತರ ಸುಭಾಷ್ಚಂದ್ರಬೋಸ್ ಅವರು ‘ನೀವೇನು ತಿಳಿದಿರಿ, ಮಹಾತ್ಮಾ ಗಾಂಧಿಯವರು ಶಕ್ತಿವಂತರೋ? ಅಥವಾ ಕಾಂಗ್ರೆಸ್ ಪಕ್ಷವೋ?’ ಎಂಬ ಪ್ರಶ್ನೆಗೆ ಉತ್ತರವಾಗಿ ಲೋಹಿಯಾ ಹೇಳಿದ ಮಾತುಗಳಿವು.)
 • ಆ ದಿನ ನಾನು ನಿಜವಾದ ಅರ್ಥದಲ್ಲಿ ಅನಾಥನಾದೆನೆಂದು ಮೊದಲ ಸಲ ನನಗೆ ಅನ್ನಿಸಿತು. ದೇಶದ ರಕ್ಷಕ ಕಣ್ಣೆದುರೇ ಸತ್ತು ಬಿದ್ದಿದ್ದ, ಹಾಗೂ ದೇಶದ ದೊರೆಗಳೆನಿಸಿಕೊಂಡವರು ಕಣ್ಣೀರು ಹರಿಸುತ್ತಿದ್ದರು. ಗಂಆಧೀಜಿಯವರ ನೆಚ್ಚಿನ ಶಿಷ್ಯರಾದ ನೆಹರೂ, ಪಟೇಲರು ಅಧಿಕಾರದ ಗದ್ದುಗೆಯಲ್ಲಿರುವಾಗಲೇ ಗಾಂಧೀಜಿಯವರ ಹತ್ಯೆಯಾಗಿತ್ತು. ‘ನೀವು ನಡು ನೀರಿನಲ್ಲಿ ನಾಡಿನ ಜನತೆಯನ್ನು ಕೈಬಿಟ್ಟು ಹೋದದ್ದೇಕೆ? ಹೀಗೇಕೆ ಮೋಸ ಮಾಡಿದಿರಿ. ಬಾಪೂ’ ಎಂದು ಬಾಪೂ ಅವರನ್ನು ಕೇಳಬೇಕೆನ್ನಿಸಿತು. ಗಾಂಧೀಜಿ ಸದಾಕಾಲ ಜೀವಿಸಿರುತ್ತಾರೆ ಎಂದು ನಾನು ಮೂರ್ಖನಂತೆ ಭಾವಿಸಿಕೊಂಡಿದ್ದೆ. (ಗಾಂಧಿ ಸತ್ತ ದಿನ)
 • ಹೆಂಗಸಿಗೂ ನಾಲ್ವರು ಗಂಡಂದಿರನ್ನು ಹೊಂದುವ ಅಧಿಕಾರವನ್ನು ಕೊಡದಿರುವ ಧರ್ಮ, ಅದು ಯಾವ ಧರ್ಮವೇ ಆಗಿರಲಿ, ಗಂಡಿಗೆ ನಾಲ್ವರು ಹೆಂಗಸರನ್ನು ಹೊಂದುವ ಅಧಿಕಾರ ನೀಡುವುದನ್ನು ನಾಣು ಒಪ್ಪುವುದಿಲ್ಲ. (ದ್ರೌಪದಿಯೋ? ಸಾವಿತ್ರಿಯೋ? ಎಂಬ ಲೇಖನದಲ್ಲಿ)
 • ರಾಮ, ಕೃಷ್ಣ, ಶಿವ - ಈ ಮೂವರು ಇಂಡಿಆಯದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ಮೂವರೂ ತಂತಮ್ಮದೇ ಹಾದಿಯುಳ್ಳವರು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ. ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ. ಶಿವನದಾದರೋ ಪ್ರಮಾಣಾತೀತ ವ್ಯಕ್ತಿತ್ವದಲ್ಲಿ ಪೂಣ್ತೆ. ಇವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಡಿಮೆ ಎಂಬ ಮಾತೇ ಇಲ್ಲ. ಪೂರ್ಣತೆಗೆ ಹೆಚ್ಚು ಕಮ್ಮಿಯ ಮಾತೆಲ್ಲಿ? (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
 • ಸೀಮಿತ ವ್ಯಕ್ತಿತ್ವ ನಿಯಮಗಳ ವೃತ್ತದಲ್ಲೇ ತಿರುಗುತ್ತದೆ. ಸಮೃದ್ಧ ವ್ಯಕ್ತಿತ್ವ ಮಾತ್ರ ತನಗೆ ಇಚ್ಛೆಯಿರುವ ಪರ‍್ಯಂತ ನಿಯಮಗಳನ್ನೂ ಘಟನೆಗಳನ್ನೂ ಮನ್ನಿಸುತ್ತದೆ. ಅದು ತನಗೆ ಕಂಟಕವಾಯಿತೆಂದರೆ ತಕ್ಷಣದಲ್ಲೇ ಅದನ್ನು ಧಿಕ್ಕರಿಸಿಬಿಡುತ್ತದೆ. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
 • ರಾಮ ಸೀಮಿತನೂ ಆಗಿ ಅಲ್ಪನೂ ಆಗಿ, ಕೃಷ್ಣ ಸಮೃದ್ಧನೂ ಆಗಿ ಕಾಮುಕನೂ ಆಗಿ, ಶಿವ ಗಾತ್ರಾತೀತನೂ ಆಗಿ ಕಾಲ್ಪನಿಕನೂ ಆಗಿ ಇಬ್ಬಂದಿ ಬದುಕು ಬಾಳುತ್ತಾರೆ. ಇದಕ್ಕೆ ಒಂದು ಪರಿಹಾರ ಸೂಚಿಸುವ ಮೂರ್ಖತನಕ್ಕೆ ಹೋಗದೆ ಇಷ್ಟೇ ಪ್ರಾರ್ಥಿಸುತ್ತೇನೆ. ‘ಓ ತಾಯಿ ಭಾರತಿ, ನಮಗೆ ಶಿವನ ಮನಸ್ಸನ್ನು ಕೃಷ್ಣನ ಹೃದಯವನ್ನು ರಾಮನ ಕಾರ‍್ಯಪ್ರಪಂಚವನ್ನು ಕೊಡು; ಪ್ರಮಾಣಾತೀತವಾದ ಮನಸ್ಸು, ಸಮೃದ್ಧ ಹೃದ, ಆದರೆ ಸೀಮಿತವಾದ ಬದುಕು ಇವುಗಳಿಂದ ನಮ್ಮನ್ನು ನಿರ್ಮಿಸು. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
 • ಸಾರ್ವಜನಿಕವಾಗಿ ಒಬ್ಬ ಇನ್ನೊಬ್ಬನ ಕಾಲು ತೊಳೆಯುವುದು ಅಸಹ್ಯಕರವಾದದ್ದು. (ಕಾಶಿಯಲ್ಲಿ ಭಾರತದ ರಾಷ್ಟ್ರಪತಿಗಳು ಇನ್ನೂರು ಜನ ಬ್ರಾಹ್ಮಣರ ಕಾಲು ತೊಳೆದಿದ್ದರ ಬಗ್ಗೆ)
 • ಆ ಅನಾಗರಿಕ ರಾಕ್ಷಸ ಪಂಧ್ಯದಲ್ಲಿ ಮನುಷ್ಯನಂತೆ ವರ್ತಿಸಿದ ಏಕೈಕ ವ್ಯಕ್ತಿ ಈತ (ರಾಷ್ಟ್ರಪತಿಗಳಿಂದ ಕಾಲು ತೊಳೆಸಿಕೊಳ್ಳಲು ನಿಯಮಿತರಾಗಿದ್ದ ಇನ್ನೂರು ಜನರಲ್ಲಿ, ಆ ಕ್ರಿಯೆಯಿಂದ ಹಿಂದೆ ಸರಿದ ಏಕೈಕ ಬ್ರಾಹ್ಮಣನ ಬಗ್ಗೆ)
 • ಇಂಗ್ಲಿಷ್ ಭಾಷೆಯು ಭಾರತಕ್ಕೆ ಅಪಾಯ ಮಾಡುತ್ತಿರುವುದಕ್ಕೆ ಅದು ವಿದೇಶಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಸಂದರ್ಭದಲ್ಲಿ ಅದು ಯಜಮಾನಿಕೆಯ ಭಾಷೆಯಾಗಿರುವುದೇ ಪ್ರಮುಖ ಕಾರಣ.
 • ಬೇರೆ ಬೇರೆ ಕ್ಷೇಥ್ರಗಳಲ್ಲಿದ್ದಂತೆ ಆರ್ಧಯಾತ್ಮಿಕ ಸಮಾನತೆಯಲ್ಲಿ ಮುಂಚೂಣಿಯಲ್ಲಿರುವ ಮಹಾನ್ ಮಹಿಳೆಯೊಬ್ಬಳಿದ್ದಾಳೆ. ಈಕೆ ಕಥೆಗಳಲ್ಲಿ ಬರುವ ಹೆಂಗಸಲ್ಲ. ಎಂಟನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿದ್ದಳು. ಅವಳೇ ಅಕ್ಕಮಹಾದೇವಿ. ವೈರಾಗ್ಯ ಸಾಧು ಸ್ವಭಾವ ಮತ್ತು ದರ್ಶನ ಇತ್ಯಾದಿಗಳಲ್ಲಿ ಗಂಡಸು ಕೊನೆಯ ಎತ್ತರದ ತನಕ ತಲಪಿ ವಿರಕ್ತನಾಗುವಂತೆ, ಹೆಣ್ಣಾದ ತಾನೂ ಆ ಎತ್ತರಕ್ಕೆ ಯಾಕೆ ಏರಲು ಸಾಧ್ಯವಾಗುವುದಿಲ್ಲ ಎಂದು ಅವಳು ಪ್ರಶ್ನಿಸಿದ್ದಳು. (ದ್ರೌಪದಿಯೋ? ಸಾವಿತ್ರಿಯೋ? ಲೇಕನದಿಂದ)
 • ಹಿಂದೂ ಮುಸಲ್ಮಾನಿರಿಬ್ಬರೂ ಬದಲಾಗಬೇಕಿದೆ. ಅದೆಷ್ಟು ಜನ ಹಿಂದೂಗಳು ಶೇರಶಹನನ್ನು ತಮ್ಮ ಪೂರ್ವಜ ಎಂದು ಪರಿಗಣಿಸುತ್ತಾರೆ. ಅದೆಷ್ಟು ಜನ ಮುಸಲ್ಮಾನರು ಗಜನಿ ಗೋರಿ ಸುಲಿಗೆಕೋರರಾಗಿದ್ದರು ಎಂದು ಹೇಳಬಲ್ಲರು? (ಹಿಂದೂ ಮುಸ್ಲಿಂ ಎಂಬ ಲೇಖನದಿಂದ)
 • ಮಹಾತ್ಮನೊಬ್ಬ ಅರ್ಧಶತಮಾನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಜೀವನಕ್ಕೆ ಸಂಬಂಧಪಟ್ಟಿದ್ದರೆ ಪರಸ್ಪರ ವಿರೋಧವಾಗಿ ಕಣಬಲ್ಲ ಹೇಳಿಕೆಗಳನ್ನು ಕೊಟ್ಟಿರುತ್ತಾನೆ. ಮಹಾತ್ಮಗಾಂಧಿ ತಮ್ಮ ಅಪೂರ್ವವಾದ ಅಂತರ್‌ದೃಷ್ಟಿಯನ್ನೂ ಮೀರಿ, ಪರಸ್ಪರ ವಿರೋಧವೆಂಬತೆ ಕಾಣುವ ಹಲವು ಹೇಳಿಕೆಗಳನ್ನು ಬ್ರಿಟಿಷ್ ಸಾಮ್ರಜ್ಯದ ಮೇಲೂ, ಜಾತಿಪದ್ಧತಿಯ ಮೇಲೂ, ಬಂಡವಾಳ ಹಾಗೂ ಕೆಲಸಗಾರನ ಸಂಬಂಧದ ಮೇಲೂ ನೀಡಿದ್ದಾರೆ. (ಗಾಂಧಿವಾದ ಮತ್ತು ಸಮಾಜವಾದ ಲೇಖನದಿಂದ)

Thursday, March 18, 2010

‘ಜೂರ’ ಪ್ರಶಸ್ತಿ ಶಾಸನದ ಹೆಗ್ಗಳಿಕೆ

ದೂರದ ಮಧ್ಯಪ್ರದೇಶದ ಮೈಹಾರ್ ರೈಲ್ವೆ ನಿಲ್ದಾಣದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಜೂರ ಎಂಬ ಹಳ್ಳಿಗೂ, ಕನ್ನಡ ನಾಡಿಗೂ, ಕನ್ನಡ ನಾಡನ್ನು ಆಳಿದ ಹತ್ತನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನಿಗೂ ಎಲ್ಲಿಗೆಲ್ಲಿಯ ಸಂಬಂಧ! ಹೌದು ಅಂತಹ ಒಂದು ಪ್ರತ್ಯಕ್ಷ ಸಾಕ್ಷಿ ನಮ್ಮ ಕಣ್ಣ ಮುಂದಿದೆ. ೧೯೨೧ರಲ್ಲೇ ಶ್ರೀ ಆರ್.ಡಿ.ಬ್ಯಾನರ್ಜಿ ಎನ್ನುವವರು ಆ ಸಾಕ್ಷಿಯನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ.

ಮೂರನೇ ಕೃಷ್ಣ (ಎಲ್ಲೋರದ ಕೈಲಾಸನಾಥ ದೇವಾಲಯದ ನಿರ್ಮಾಣಕ್ಕೆ ಈತನ ಕೊಡುಗೆ ಅಪಾರ) ಉತ್ತರ ಭಾರತಾದ್ಯಂತ ತನ್ನ ರಾಜ್ಯವನ್ನು ವಿಸ್ತರಿಸಿದ್ದ ಕಥೆ ಇತಿಹಾಸದಲ್ಲಿ ದಾಖಲಾಗಿದೆ. ಆತನ ಯುದ್ಧಾಳುಗಳು ಹಾಗೂ ಕುದುರೆಗಳು ಗಂಗಾ-ಯಮುನ ನದಿಗಳ ನೀರನ್ನು ಕುಡಿದವು ಎಂಬ ವರ್ಣನೆಯೇ ಆತ ಅಲ್ಲಿಯವರೆಗೆ ರಾಜ್ಯವನ್ನು ವಿಸ್ತರಿಸಿದ್ದ ಎಂಬುದನ್ನು ಸೂಚಿಸುತ್ತದೆ. ಆದರೆ ಅಲ್ಲಿಗೆಲ್ಲಾ ಹೋಗಿದ್ದ ಒಬ್ಬ ಕನ್ನಡಿಗ ದೊರೆ ಆತನ ಪ್ರಭಾವ ಎಂಥಹದ್ದು ಎಂದು ತಿಳಿಯುವುದು ಹೇಗೆ? ಜೂರ ಗ್ರಾಮದ ಮನೆಯೊಂದರಲ್ಲಿ ಕಿಟಕಿಗೆ ಚೆಜ್ಜವಾಗಿ ಹಾಕಲಾಗಿದ್ದ ಕಲ್ಲಿನ ಮೇಲೆ ಕೆತ್ತಿದ್ದ ಕನ್ನಡ ಶಾಸನವೊಂದು ಇದಕ್ಕೆ ಸಾಕ್ಷಿಯಾಗಿ ಇನ್ನೂ ಅಲ್ಲೇ ನಿಂತಿದೆ ಸುಮಾರು ೧೦೫೦ ವರ್ಷಗಳಿಂದ!

ಹೌದು. ಆ ಶಾಸನದಲ್ಲಿ ಏನಿದೆ? ಮೂರನೇ ಕೃಷ್ಣನ ಹಲವಾರು ಬಿರುದುಗಳು. ಆತನ ದಿಗ್ವಿಜಯ. ಆತನ ಸಾಧನೆ. ಇಷ್ಟೇ ಆಗಿದ್ದರೆ ಸಾವಿರಾರು ಶಾಸನಗಳಂತೆ ಅದೂ ಒಂದು ಶಾನವಾಗಿ ಮಾತ್ರ ದಾಖಲಾಗಿರುತ್ತಿತ್ತು. ಆದರೆ ಅದು ಆತನ ಶೌಚಗುಣವನ್ನು ಪರನಾರೀ ಗೌರವವನ್ನು ವಿಶೇಷವಾಗಿ ಪ್ರಸ್ತಾಪಿಸುತ್ತದೆ. ಭಾರತ ಅಷ್ಟೇ ಏಕೆ? ಪ್ರಪಂಚ ಯಾವುದೇ ರಾಜನ ಬಗ್ಗೆ ಇಂತಹುದೊಂದು ಶಾಸನ ಸಿಕ್ಕಿದ್ದರೆ ಅದು ಇದೊಂದೆ!

ಪರಾಂಗನಾ ಪುತ್ರ ಎಂಬುದು ಆತನಿಗಿದ್ದ ವಿಶೇಷವಾದ ಬಿರುದು. ಅವನು ಅನ್ಯವನಿತೆಯರನ್ನು ನೋಡುತ್ತಿರಲಿಲ್ಲ. ಮಾತನಾಡಿಸುತ್ತಿರಲಿಲ್ಲ. ಮನಸ್ಸಿನಲ್ಲೂ ಕಾಮಿಸುತ್ತಿರಲಿಲ್ಲ. ಈ ಆಶಯದ ಒಂದು ಪದ್ಯ ಹೇಗಿದೆ ನೋಡಿ.

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ

ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋತುದ್ದಿಲ್ಲವಂತೆ!

ಇನ್ನೊಂದು ಪದ್ಯದಲ್ಲಿ -

ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ

ರಾಜನಾದ ಅವನಿಗೆ ಪರಸ್ತ್ರೀಯನ್ನು ನೋಡಿದರೆ ಏನನ್ನಿಸುತ್ತಿತ್ತು? ತಾನು ಮಗುವಾಗಿದ್ದಾಗ ಮೊಲೆಹಾಲನ್ನೂಡಿಸಿದ ತಾಯಿ, ಸರದಿಯಲ್ಲಿ ತನ್ನನ್ನು ಎತ್ತಿ ಆಡಿಸಿದ ತಾಯಿಯ ತೋಳುಗಳು, ಆ ತಾಯಿಯ ಬಸಿರಲ್ಲಿ ತಾನು ಮಗುವಾಗಿರುವಂತಹ ಭಾವ ಆತನಲ್ಲಿ ಸ್ಫುರಿಸುತ್ತಿತ್ತಂತೆ!

ಇದು ನಿಜಕ್ಕೂ ಕೃಷ್ಣರಾಜನಿಗೆ ಪ್ರಶಸ್ತಿಯಲ್ಲವೆ? ಕೃಷ್ಣರಾಜ ಎಲ್ಲ ಕಾಲಕ್ಕೂ ಅನುಕರಣೀಯ ದೊರೆ ಹಾಗೂ ವ್ಯಕ್ತಿಯಲ್ಲವೆ? ನಾವೂ ಅವನಿಗೊಂದು ಬಹುಫರಾಕ್ ಹೇಳೋಣವೆ?

‘ಸ್ವಸ್ತಿ ಪರಮಭಟ್ಟಾರಕ ಪರಮೇಶ್ವರ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜಂ

ನಲ್ಲರಮರುಳನ್

ಆನೆವೆಡಂಗಂ

ಚಲಕೆನಲ್ಲಾತಂ

ವೈರಿವಿಳಾಸಂ

ಮದಗಜಮಲ್ಲಂ

ಪರಾಂಗನಾಪುತ್ರಂ

ಗಣ್ಡಮಾರ್ತ್ತಂಡಂ

ಅಕಾಳವರಿಷಂ

ನೃಪತುಂಗಂ

ಕಚ್ಚೆಗಂ

ಶ್ರೀಮತ್ ಕನ್ನರದೇವಂ (ಕೃಷ್ಣ)

ಗೆಲ್ಗೆ ಬಾಳ್ಗೆ ಗೆಲ್ಗೆ’

ಇತಿಹಾಸದಲ್ಲಿ ದಾಖಲಾಗಿರುವ ಇಂತಹ ಹಲವಾರು ವಿಷಯಗಳನ್ನು ತಿಳಿಯಬಯಸುವವರಿಗೆ ಈ ಕೆಳಗಿನ ಪುಸ್ತಕ ಒಂದು ಕೈದೀವಿಗೆ.

ಪುಸ್ತಕ: ಶಾಸನ ಸರಸ್ವತಿ

ಲೇಖಕರು: ಡಾ.ಕೈದಾಳ ರಾಮಸ್ವಾಮಿ ಗಣೇಶ, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು

ಪ್ರಕಾಶಕರು: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, ೨೦೦೭-೨೦೦೮

ಪುಟಗಳು: ೧೯೦

ಬೆಲೆ: ರೂಪಾಯಿ ಎಪ್ಪತ್ತೈದು ಮಾತ್ರ

Wednesday, March 10, 2010

ವೈಯಕ್ತಿಕ ದ್ವೇಷ ಅಸೂಯೆ ವ್ಯಂಗ್ಯಗಳ ನಡುವೆ ಕಳೆದು ಹೋಗುವ ವಾಸ್ತವಾಂಶಗಳು

ಮಾರ್ಚ್ ೧ ಪ್ರಜಾವಾಣಿ ದಿನಪತ್ರಿಕೆಯ ವಾಚಕರವಾಣಿಯಲ್ಲಿ ಡಾ.ಸಿ.ಪಿಕೆ.ಯವರು ‘ಗೋಹತ್ಯೆ ನಿಷೇದ ಮತ್ತು ಕುವೆಂಪು’ ಎಂಬ ಪತ್ರದಲ್ಲಿ ಕುವೆಂಪು ಅವರ ಲೇಖನದ (ತ್ರಿಕಾಲ ಸಾಹಿತ್ಯ - ಸಕಾಲ ಸಾಹಿತ್ಯ: ಕುವೆಂಪು ಸಮಗ್ರ ಸಾಹಿತ್ಯ ಸಂಪುಟ - ೨, ಹಂಪಿಕನ್ನಡ ವಿಶ್ವವಿದ್ಯಾಲಯ ಪ್ರಕಟಣೆ, ೨೦೦೪. ಪುಟ ೨೬೮-೩೭೪) ಕೆಲವು ಭಾಗಗಳನ್ನು ಉದಾಹರಿಸಿ ಒಂದಷ್ಟು ಸತ್ಯಾಂಶಗಳನ್ನು ತೆರೆದಿಟ್ಟರು.
ಇಲ್ಲಿ ಕುವೆಂಪು ಹೇಳಿರುವ ವಿಷಯದ ಸತ್ಯಾಸತ್ಯತೆ ಮುಖ್ಯವಾಗಬೇಕೆ ಹೊರತು, ಕುವೆಂಪು ಅವರ ವೈಯಕ್ತಿಕ ಬದುಕಾಗಲೀ ವಿಚಾರವಾಗಲೀ ಚರ್ಚೆಯಾಗಬೇಕಿಲ್ಲ ಎಂಬುದನ್ನು ಸಹೃದಯರೆಲ್ಲರೂ ಒಪ್ಪುತ್ತಾರೆ ಎಂಬುದು ನನ್ನ ಅಭಿಪ್ರಾಯ.
ಆದರೆ ಆಗಿದ್ದೇನು?
ಮಾರ್ಚ್ ೫ ವಾಚಕಾರವಾಣಿಗೆ ಪತ್ರ (‘ದುರದೃಷ್ಟಕರ ಅವಿಚಾರಗಳು’) ಬರೆದ ಎ.ಶ್ರೀನಿವಾಸಮೂರ್ತಿ ಎನ್ನುವವರು ಮೊದಲಿಗೆ ವಿಷಯದ ಹಾದಿ ತಪ್ಪಿಸುವುದಕ್ಕೇ ಪ್ರಯತ್ನಿಸಿದರು. ತಾವೂ ಓದಿರುವ ಪುಸ್ತಕಗಳನ್ನೇ ಇತರರೂ ಓದಬೇಕೆಂಬುದು ಅವರ ಬಯಕೆಯಾಗಿದೆ. ಅದಕ್ಕೆ ಒಂದು ಪಟ್ಟಿಯನ್ನೂ ಕೊಡುತ್ತಾರೆ. ಅದಕ್ಕೂ ಮೊದಲು ‘ವೇದಗಳಲ್ಲಿ ಪ್ರಸ್ತಾಪವಿರುವುದು ಇದುವರೆಗೂ ನನ್ನ ಗಮನಕ್ಕೆ ಬಂದಿಲ್ಲ’ ಎನ್ನುತ್ತಾರೆ. ಅಂದರೆ ಇವರ ಗಮನಕ್ಕೆ ಬಂದಿಲ್ಲ ಎಂದ ಮಾತ್ರಕ್ಕೆ ಅದು ವೇದದಲ್ಲಿ ಇಲ್ಲವೇ ಇಲ್ಲ ಎಂಬುದು ಅವರ ತೀರ್ಮಾನವಾಗಿರುವಂತೆ ಕಾಣುತ್ತದೆ!
‘ವೇದಕಾಲದಲ್ಲಿ ಗೋವಧೆ ಇತ್ತು ಎನ್ನೋಣ. ಆದರೆ ಈಗ ಅದು ಏಕಿರಬೇಕು?’ ಎಂಬುದು ಶ್ರೀಯುತರ ಇನ್ನೊಂದು ಪ್ರಶ್ನೆ. ‘ಯಾಕಿರಬಾರದು?’ ಎಂಬ ಮರುಪ್ರಶ್ನೆಗೆ ಶ್ರೀಯುತರು ಏನು ಹೇಳುತ್ತಾರೆ. ಏಕಿರಬೇಕು ಎಂದರೆ ಅದೊಂದು ಸಾವಿರಾರು ವರ್ಷಗಳಿಂದ ರೂಪಗೊಂಡು ಉಳಿದುಕೊಂಡು ಬಂದಿರುವ ಆಹಾರಪದ್ಧತಿ ಅದಕ್ಕೆ!
‘ಆಗ ಇದ್ದ ಜಾತಿಪದ್ಧತಿ ಈಗಲೂ ಇರಲಿ ಎಂದಂತೆಯೇ ಗೋವಧೆ ಇರಲಿ ಎಂಬುದು’ ಶ್ರೀಯುತರ ಇನ್ನೊಂದು ವಾಕ್ ಬಾಂಬ್! ಇವರ ಗೋವುಗಳ ಬಗೆಗಿನ ಪ್ರೀತಿ ಜಾತಿಪದ್ಧತಿ ಬೇಡ ಎನ್ನುವವರಿಗೆ ಉತ್ತರ ಮಾತ್ರವೇ!?
ಕೊನೆಗೆ ಅವರು ಕುವೆಂಪು ಅವರ ತಿಳುವಳಿಕೆಯ ಬಗ್ಗೆಯೇ ಅನುಮಾನವೆತ್ತಿ ‘ಅವರು ಸಂಸ್ಕೃತ ಮತ್ತು ವೇದ ವಿದ್ವಾಂಸರಲ್ಲ’ ಎಂದು ತೀರ್ಪು ಕೊಡುತ್ತಾರೆ. ಕುವೆಂಪು ಅವರಿಗೆ ವೇದ ಉಪನಿಷತ್ತುಗಳ ಜ್ಞಾನ ಎಷ್ಟಿತ್ತು ಎಂಬುದು ಅವರ ಸಾಹಿತ್ಯವನ್ನು ಓದಿದವರಿಗೆಲ್ಲಾ ತಿಳಿದಿದೆ. ಕುವೆಂಪು ಅವರ ಸಾಹಿತ್ಯ ಬೇಡ; ಯಾವ ಲೇಖನದ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೋ ಆ ಲೇಖನವನ್ನೂ ಪೂರ್ತಿ ಓದುವ ವ್ಯವಧಾನ ಶ್ರೀನಿವಾಸಮೂರ್ತಿಯವರಿಗೆ ಇದ್ದಂತಿಲ್ಲ. ಏಕೆಂದರೆ ಆ ಲೇಖನ ಪೂರ್ತಿ ಓದಿದ್ದರೆ ಅವರಲ್ಲಿ ಈ ತಪ್ಪು ಅಭಿಪ್ರಾಯ ರೂಪಗೊಳ್ಳುತ್ತಿರಲಿಲ್ಲ!
ಇನ್ನು ಮಾರ್ಚ್ ೯ರಂದು ಈ ವಿಷಯವಾಗಿ ಎರಡು ಪತ್ರಗಳು ವಾಚಕರವಾಣಿಯಲ್ಲಿ ಪ್ರಕಟವಾಗಿವೆ. ಡಾ.ಲತಾ ಮೈಸೂರು ಅವರು ‘ಜಗತ್ತಿನ ಪುರೋಹಿತಶಾಹಿ, ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಡಭಾವನೆಗಳ ಆಶ್ರಯದಲ್ಲಿ ಶ್ರೀಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ’ (ಎಂಬ ಮಾತುಗಳನ್ನು ಉದಾಹರಿಸಿ) ‘ಎಂಬುದನ್ನು ಜನತೆಗೆ ಕುವೆಂಪು ತಮ್ಮ ಜೀವಮಾನವಿಡೀ ಮನಗಾಣಿಸಲೆತ್ನಿಸಿದರು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅದೇ ದಿನ ಸಿ.ಎನ್. ಕೃಷ್ಣಮಾಚಾರಿ ಎಂಬುವವರು ‘ಅಭಿಪ್ರಾಯ ಸಮರ್ಥನೀಯವಲ್ಲ’ ಎನ್ನುತ್ತಾ ‘ಇದೂ ಕೇವಲ ಕವಿವರ್ಯರ ಕಾವ್ಯಸೃಷ್ಟಿಯಷ್ಟೇ’ ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿಯೂ ಕುವಂಪು ಅವರ ವಿಚಾರಗಳ ಸತ್ಯಾಸತ್ಯತೆಯನ್ನು ಅರಿಯುವ ಮನಸ್ಸಿಗಿಂತ ವ್ಯಂಗ್ಯ ಮಾಡುವುದೇ ಉದ್ದೇಶವಾಗಿರುವಂತೆ ಕಾಣುತ್ತಿದೆ. ಕುವೆಂಪು ಕವಿಯಾಗಿದ್ದರು; ಆದರೆ ಅವಿಚಾರಿಯಾಗಿರಲಿಲ್ಲ ಎಂಬುದು ಕೃಷ್ಣಮಾಚಾರಿಯವರಿಗೂ ಗೊತ್ತು!
ಬರಹಗಾರರು ವಿದ್ವಾಂಸರಾಗಿರುವುದಿಲ್ಲ; ಕೇವಲ ಕಾವ್ಯಸೃಷ್ಟಿಯಷ್ಟೇ ಅವರ ಕೆಲಸ ಎಂಬ ಅ(ದುರ)ಭಿಪ್ರಾಯದ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳುತ್ತೇನೆ.
ನಮ್ಮ ಕಾಲದ ಪ್ರಮುಖ ಕಾದಂಬರಿಕಾರರಾದ ಶ್ರೀ.ಎಸ್.ಎಲ್.ಭೈರಪ್ಪ ಅವರು ಯಾವುದೇ ಕಾದಂಬರಿಯನ್ನು ಅದರಲ್ಲಿಯೂ ಇತಿಹಾಸ, ಸಂಸ್ಕೃತಿ ಇಂಥದ್ದಕ್ಕೆ ಸಂಬಂಧಿಸಿದ ಕಾದಂಬರಿಯನ್ನು ಬರೆಯುವಾಗಲೆಲ್ಲಾ ಸಾಕಷ್ಟು ಹೋಂ ವರ್ಕ್ ಮಾಡುತ್ತಾರೆ. ಸಂಶೋಧನೆ, ಅಧ್ಯಯನ, ಪ್ರವಾಸ ಎಲ್ಲವೂ ಅದರಲ್ಲಿ ಸೇರಿರುತ್ತದೆ. ಸಾರ್ಥ ಕಾದಂಬರಿಯನ್ನು ಬರೆಯುವಾಗ ಸಂಸ್ಕೃತವನ್ನು ಕಲಿಯುತ್ತಾರೆ. ಪರ್ವ ಕಾದಂಬರಿಯನ್ನು ಬರೆಯುವಾಗ ಇಡೀ ಉತ್ತರಭಾರತವನ್ನು ಪ್ರವಾಸ ಮಾಡುತ್ತಾರೆ. ವ್ಯಾಸಭಾರತವನ್ನು ತಲಷ್ಪರ್ಶಿಯಾಗಿ ಅಧ್ಯಯನ ಮಾಡುತ್ತಾರೆ. ವೇದ-ಉಪನಿಷತ್ತುಗಳು ಹಾಗೂ ವೇದೋತ್ತರ ಕಾಲದ (ಅಂದರೆ ಮಹಾಭಾರತದ ಕಾಲದ) ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳನ್ನು ಸಂಶೋಧನೆ ಮಾಡಿ ಸಿದ್ಧರಾಗುತ್ತಾರೆ. ಅದೇ ಕಾದಂಬರಿಯಲ್ಲಿ ಗೋಮಾಂಸ ಸೇವನೆಯ ಬಗ್ಗೆ ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಶೂದ್ರರಿರಲಿ - ಕ್ಷತ್ರಿಯರೂ, ಬ್ರಾಹ್ಮಣರೂ, ನಾವು ಇಂದು ದೇವರು ಎಂದು ಪೂಜಿಸುವ ಕೃಷ್ಣ-ಬಲರಾಮರೂ ಎಲ್ಲರೂ ಗೋಮಾಂಸ ಸೇವನೆಯನ್ನು ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಅನರ್ತದೇಶದ ಅಭೀರರು (ಯಾದವರು ದ್ವಾರಕಾ ನಗರ ಸ್ಥಾಪಿಸುವ ಮೊದಲು ಅಲ್ಲಿದ್ದ ಜನರು) ‘ಹಿಂಡು ಹಿಂಡು ಹಸುಗಳನ್ನು ಸಾಕುವುದು, ಹೋರಿ ಮುದಿಹಸುಗಳ ಮಾಂಸ, ಹಸುಗಳ ಹಾಲು ಗೆಡ್ಡೆ ಗೆಣಸು ಹಣ್ಣು ಹಂಪುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು’ (ಪುಟ ೨೭೯, ಮುದ್ರಣ ೧೯೯೫) ಎಂಬ ವಿಚಾರ ಬರುತ್ತದೆ.
ದುರ್ಯೋಧನ ಯಾದವರ ಬೆಂಬಲ ಪಡೆಯಲು ದ್ವಾರಕೆ ಹೋಗಿದ್ದಾಗ ಕೃಷ್ಣನ ಚಿಕ್ಕಪ್ಪ ಸತ್ಯಕ ದುರ್ಯೋಧನನ್ನು ಊಟಕ್ಕೆ ಅಹ್ವಾನಿಸುತ್ತಾನೆ. ಆಗ ಊಟದ ತಯಾರಿ ನಡೆಸುವಾಗ ‘ಈಗಲೇ ಹೋಗಿ ಒಂದು ಎಳೆಹೋರಿ ತರುವಂತೆ ಇನ್ನೊಬ್ಬನಿಗೆ ಅಜ್ಞಾಪಿಸಿದ’ (ಪುಟ ೨೮೮).
ದುರ್ಯೋಧನನ ಪರವಾಗಿ ಯುದ್ಧ ಮಾಡಲು ಮದ್ರ ದೇಶದ ರಾಜ ಶಲ್ಯನೊಡನೆ ಅವನ ಮಕ್ಕಳಾದ ಅಜಯ, ವಜ್ರರು ಬಂದಿರುತ್ತಾರೆ. ಶಲ್ಯನ ಹೆಸರಿನಲ್ಲಿ ಹೋಮ ಮಾಡಲು ಅವನ ಪುರೋಹಿತನೂ (ಅವನ ಹೆಸರಿಲ್ಲ ಕೇವಲ ಬ್ರಾಹ್ಮಣ ಎಂದಿದೆ) ಬಂದಿರುತ್ತಾನೆ. ಒಂದು ದಿನ ಹೋಮವಾದ ಮೇಲೆ ಈ ನಾಲ್ವರೂ ಒಟ್ಟಿಗೆ ಊಟಕ್ಕೆ ಕುಳಿತು ಊಟ ಮಾಡುತ್ತಲೇ ಅಂದಿನ ಊಟದ ಬಗ್ಗೆ ಮಾತನಾಡುತ್ತಾರೆ. ಆಗ
ವಜ್ರ ‘ಅಡಿಗೆ ಹೊಸತರ ಇದೆ. ಪರಿವಾಪವಂತೂ ಊರಿನಲ್ಲಿ ಅರಮನೆ ಅಡಿಗೆಯವರು ಮಾಡುವುದಕ್ಕಿಂತ ಹೆಚ್ಚು ರುಚಿಯಾಗಿದೆ’ (ಎಂದ)
‘ಅಡಿಗೆಯವನಿಗೂ ಒಂದು ಬಹುಮಾನ ಕೊಡೋಣ’ ಶಲ್ಯ ಒಪ್ಪಿಕೊಂಡ.
‘ಎತ್ತು, ಮೇಕೆ ಎರಡರ ಮಾಂಸವನ್ನೂ ಮಾಡಿದಾರಲ್ಲ ಏನು ವಿಶೇಷ?’ ಅಜಯ ಕೇಳಿದ.
'ವಿಶೇಷದಿನ ಅಂತ ಇರಬಹುದು’ ಬ್ರಾಹ್ಮಣ ಊಹೆಮಾಡಿದ. (ಪುಟ ೩೨೧)
ಪರ್ವದಲ್ಲಿ ಇಷ್ಟೊಂದು ವಿವರಗಳನ್ನು ನೀಡಿರುವ ಭೈರಪ್ಪನವರು ಸುಳ್ಳು ಹೇಳಿದ್ದಾರೆ, ಅದು ಕೇವಲ ಕಾವ್ಯಸೃಷ್ಟಿ ಎಂದರೆ ಮೂರ್ಖತನವೆನ್ನದೆ ವಿಧಿಯಿಲ್ಲ!
ಮಾನವನು ಆದಿಕಾಲದಿಂದಲೂ ಸಸ್ಯಾಹಾರದಂತೆ ಮಾಂಸಾಹಾರವನ್ನೂ ರೂಢಿಸಿಕೊಂಡು ಬಂದಿದ್ದಾನೆ. ಅದೇನೂ ಒಂದೇ ದಿನ ಇದ್ದಕ್ಕಿದ್ದಂತೆ ತೀರ್ಮಾನವಾದುದಲ್ಲ, ಅಲ್ಲವೆ? ಮಾಂಸಾಹಾರವೆಂದರೆ ಮಾಸಾಹಾರ. ಅದು ದನ, ಕುರಿ, ಮೇಕೆ, ಕೋಳಿ, ಹಂದಿ, ಮೀನು ಎಲ್ಲದರ ಮಾಂಸವನ್ನೂ ಒಳಗೊಳ್ಳುತ್ತದೆ. ಸಸ್ಯಾಹಾರದಂತೆ ಮಾಂಸಾಹಾರವೂ ಒಂದು ಆಹಾರಪದ್ಧತಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಬಂದಾಗ ಮಾತ್ರ ಇನ್ನೊಬ್ಬರ ಆಹಾರಪದ್ಧತಿಯ ಬಗ್ಗೆ ಅನಗತ್ಯ ಅಸಹನೆ ಮೂಡುವುದಿಲ್ಲ.
ಇನ್ನು ಗೋಹತ್ಯೆ ಮಸೂದೆಯಲ್ಲಿ ಪ್ರಸ್ತಾಪವಾಗಿದ್ದ ಒಂದು ವಿಚಾರವನ್ನು ಗಮನಿಸಬಹುದು. ಇದು ಭಾವನೆಗೆ ಸಂಬಂಧಿಸಿದ್ದಲ್ಲ. ತಾಂತ್ರಿಕ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯಗೆ ಸಂಬಂಧಿಸಿದ್ದು.
ಒಂದು ಗೋವುಗಳನ್ನು ಸಾಗಾಟ ಮಾಡಲು ತಹಸಿಲ್ದಾರ್ ಹಾಗೂ ಅವರಿಗಿಂತ ಉನ್ನತ ಮಟ್ಟದ ಅಧಿಕಾರಿಗಳಿಂದ ಲಿಖಿತ ಒಪ್ಪಿಗೆ ಪಡೆಯಬೇಕೆನ್ನುವ ವಿಚಾರಕ್ಕೆ ಸಂಬಂಧಪಟ್ಟದ್ದು. ಒಬ್ಬ ರೈತ ಒಂದೆರಡು ಜೊತೆ ಎತ್ತುಗಳನ್ನು ಕೊಂಡುಕೊಳ್ಳುತ್ತಾನೆ. ಅವುಗಳನ್ನು ಸಂತೆಯಿಂದ ತನ್ನ ದೂರದ ಊರಿಗೆ ಸಾಗಿಸಲು ವಾಹನ ಬೇಕಾಗುತ್ತದೆ. ಜೊತೆಗೆ ಅಧಿಕಾರಿಗಳಿಂದ ಅನುಮತಿ ಪತ್ರ! ತಾನು ಕೊಂಡುಕೊಂಡ ಎತ್ತುಗಳನ್ನು ಆತ ಎಲ್ಲಿ ಬಿಟ್ಟು ಅನುಮತಿ ಪತ್ರ ತರಲು ಹೋಗಬೇಕು? ಆತ ಎತ್ತುಗಳನ್ನು ಸಂತೆಯಲ್ಲಿ ಜಾತ್ರೆಯಲ್ಲಿ ಸಹರೈತರ ಮನೆಯಲ್ಲಿ ಕೊಂಡುಕೊಂಡಿರಬಹುದು. ಅವುಗಳನ್ನು ಅಲ್ಲಿಯೇ ಬಿಟ್ಟು ತಾಲ್ಲೋಕು ಕೇಂದ್ರಕ್ಕೆ ಹೋಗಿ ಅಧಿಕಾರಿಯನ್ನು ಕಂಡು ಅನುಮತಿ ಪತ್ರ ತರಬೇಕೆ? ರೈತ ಅನುಮತಿ ಪಡೆಯಲು ಬರುತ್ತಾನೆಂದು ಅಧಿಕಾರಿಗಳು ಕಾಯುತ್ತಾ ಕೂತಿರುತ್ತಾರೆಯೇ? ಮೊದಲೇ ಅನುಮತಿ ಪತ್ರ ಪಡೆದು ಹೋಗೋಣವೆಂದರೆ, ಅಂದು ಸತ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ ಏನು ಮಾಡುವುದು? ಇನ್ನು ಅಧಿಕಾರಿಗಳು ಭ್ರಷ್ಟರಾಗಿರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ಇನ್ನು ಗೋವುಗಳನ್ನು ಸಾಗಿಸಬೇಕಾದರೆ ಆಯಾಯ ಸ್ಥಳದ ಪೊಲೀಸರು ತೊಂದರೆ ಕೊಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ಅಧಿಕಾರಿಗಳಿಗೆ ಭ್ರಷ್ಟರಾಗಲು ಇನ್ನೊಂದು ಅವಕಾಶವನ್ನು ಸರ‍್ಕಾರವೇ ಕಲ್ಪಿಸಿಕೊಟ್ಟಂತಾಗುವುದಿಲ್ಲವೆ? ಇದು ತಾಂತ್ರಿಕ ಸಮಸ್ಯೆ ಅಲ್ಲವೇ?
ಗೋವುಗಳನ್ನು ಕೇವಲ ಕೃಷಿ ಮಾಡುವ ರೈತರು ಕೇವಲ ಕೃಷಿಗಾಗಿಯೇ ಸಾಕುತ್ತಾರೆ ಎಂದೇನಿಲ್ಲ. ಅದೊಂದು ಉದ್ಯಮವಾಗಿಯೂ ಕೆಲವು ಕಡೆ ನಡೆಯುತ್ತಿದೆ. ಒಳ್ಳೆಯ ಜಾತಿಯ ಹಸುಗಳನ್ನು, ಹೋರಿಗಳನ್ನು ಉತ್ಪಾದಿಸಿ ಮಾರುವವರೂ ಇದ್ದಾರೆ. ಅದು ಮಾರಾಟವಾಗುವ ತನಕ ಮಾತ್ರ ಅವುಗಳನ್ನು ತಮ್ಮಲ್ಲಿ ಕೃಷಿ ಕೆಲಸಕ್ಕೆ ಬಳಸುವವರೂ ಇದ್ದಾರೆ. ಅವರೆಲ್ಲರನ್ನೂ ದನಗಳನ್ನು ಮಾರಬೇಡಿ ಎಂದರೆ ಹೇಗೆ? ಅಥವಾ ಮಾರುವಾಗ ಅವುಗಳನ್ನು ಕೊಂಡುಕೊಳ್ಳುವವನ ಪೂರ್ವಾಪರಗಳನ್ನು ವಿಚಾರಿಸುವುದು ಹೇಗೆ? ನೀನು ಅವುಗಳನ್ನು ಸಾಕಲು ಕೊಂಡುಕೊಳ್ಳುತ್ತೀಯಾ? ಕಸಾಯಿಖಾನೆಗೆ ಕೊಂಡುಕೊಳ್ಳುತ್ತೀಯಾ? ಎಂದು ವಿಚಾರಿಸುವುದು ಹೇಗೆ? ಒಂದು ಪಕ್ಷ ವಿಚಾರಿಸಿದೆ ಆತ ನಿಜವನ್ನು ಹೇಳುತ್ತಾನೆ ಎಂಬುದಕ್ಕೆ ಏನು ಗ್ಯಾರಂಟಿ? ಎಷ್ಟೋಜನ ತಮ್ಮ ತುರ್ತು ಅಗತ್ಯಗಳಿಗಾಗಿ ತಾವು ಸಾಕಿದ ಜಾನುವಾರುಗಳನ್ನು ಮಾರಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ನಾಮಕರಣ, ಬೀಜ ಗೊಬ್ಬರಗಳಿಗಾಗಿ, ಸಾಲ ಮರುಪಾವತಿಗಾಗಿ ಹೀಗೇ ತಾವು ಸಾಕಿದ ಜಾನುವಾರುಗಳನ್ನು ಮಾರಲು ನೂರಾರು ಕಾರಣಗಳಿರುತ್ತವೆ. ಅವುಗಳೆಲ್ಲವನ್ನೂ ಅಂದರೆ ಅವರ ಆರ್ಥಿಕ ಸಂಕಷ್ಟಗಳೆಲ್ಲವನ್ನು ನಿರ್ಲಕ್ಷ್ಯ ಮಾಡುವುದು ಅಥವಾ ಅದರ ಬಗ್ಗೆ ಜಾಣ ಮರೆವು ವ್ಯಕ್ತಪಡಿಸುವುದು ಎಷ್ಟು ಸರಿ?
ಈಗ ಒಂದು ಪಕ್ಷ ಸಾಕಿದ ಗೋವುಗಳನ್ನು ಮಾರುವುದೇ ಇಲ್ಲ. ವು ಮುದಿಯಾದರೂ, ಗೊಡ್ಡಾದರೂ, ಮನೆಯಲ್ಲಿಯೇ ಇಟ್ಟುಕೊಳ್ಳುತ್ತೇನೆ ಎನ್ನುವ ರೈತರು ಇದ್ದಾರೆ ಎಂದುಕೊಳ್ಳೋಣ. ಅವರು ಎಷ್ಟು ದಿನ ಅವನ್ನು ಇಟ್ಟುಕೊಳ್ಲಲು ಸಾಧ್ಯ? ಒಂದು ದನವನ್ನು ಸಾಕಲು ಎಷ್ಟೊಂದು ಖರ್ಚು ಬೇಕಾಗುತ್ತದೆ. ಹುಲ್ಲು ನೀರು ನೆರಳು ಜೊತೆಗೆ ಮಾನವಸಂಪನ್ಮೂಲ! ಇವು ರೈತರ ಬಳಿಯೇನೂ ಬೇಕಾದಷ್ಟು ಕೊಳೆಯುತ್ತಾ ಬಿದ್ದಿರುತ್ತವೆಯೇ? ಇಂದು ಕೃಷಿ ಕೆಲಸಕ್ಕೆ ಮಾನವಸಂಪನ್ಮೂಲದ ಕೊರತೆಯುಂಟಾಗಿ ದೇಶದ ಆಹಾರ ಉತ್ಪತ್ತಿಯ ಪ್ರಮಾಣ ಇಳಿಮುಖವಾಗಿದೆ ಎಂಬುದನ್ನೂ ಗಮನಿಸಬೇಕು? ಇನು ಬರಗಾಲ ಬಂದಾಗ ಬಡ ರೈತ ಏನು ಮಾಡಬೇಕು. ತನ್ನ ಹೊಟ್ಟೆ ತುಂಬಿಸಿಕೊಳ್ಳಲು ದೇಶಾಂತರ ಹೋಗುವ ಸಂದರ್ಭ ಬಂದರೂ ಬರಬಹುದು. ಆಗ ಈ ದನಗಳನ್ನು ಆತ ಏನು ಮಾಡಬೇಕು? ಮಾರಿ ಒಂದಷ್ಟು ದುಡ್ಡು ಪಡೆದು ಜೀವ ಉಳಿಸಿಕೊರ್ಳಳಬೇಕಾ? ಅಥವಾ ಅವನ್ನು ಹಾಗೇ ಬಿಟ್ಟು ಆತ ದೇಶಾಂತರ ಹೋಗಬೇಕಾ? ಹಾಗೆ ಬಿಟ್ಟು ಹೋದ ದನಗಳನ್ನು ಸರ್ಕಾರ ತಂದು ಸರ್ಕಾರೀ ಗೋಶಾಲೆಗಳಲ್ಲಿ ಸಾಕುತ್ತದೆಯೇ? ಸರ್ಕಾರೀ ಅಧಿಕಾರಿಗಳು ಮೇವು ಖರೀದಿ, ನೀರು ಪೂರೈಕೆ ನೆರಳು ನಿರ್ಮಾಣ ಮೊದಲಾದುವಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ? ಈಗಲೇ ಲೀಟರ್ ಹಾಲಿಗೆ ಘೊಷಣೆಯಾಗಿರುವ ಎರಡು ರೂಪಾಯಿ ಸಹಾಯಧನ ಪಡೆಯಲು ರೈತ ಪಡಬೇಕಾಗಿರು ಪಾಡು ದೊಡ್ಡದಾಗಿದೆ! ರಾತ್ರೋ ರಾತ್ರಿ ಜಾಹಿರಾತಿನಲ್ಲಿ ‘ರೈತರಿಗೆ ಲೀಟರ್ ಹಾಲಿಗೆ ಎರಡು ರೂಪಾಯಿ ಸಹಾಯ ಧನ’ ಎಂದು ತಮ್ಮ ಸಾಧನೆಯನ್ನು ಬಿಂಬಿಸುವಾಗಿನ ಆತುರ ಹಣ ಬಿಡುಗಡೆ ಮಾಡುವಾಗ, ಅದನ್ನು ವಿತರಿಸುವಾಗ ಇರುವುದಿಲ್ಲ.
ಒಂದು ವೇಳೆ ಹಾಗೆ ಬಿಟ್ಟ ದನಗಳು ಊರಿನಲ್ಲಿ ಬೀಡಾಡಿಯಾಗಿ ಅಲೆಯುತ್ತಿದ್ದರೆ ಆಗುವ ಅನಾಹುತಗಳ ಪಟ್ಟಿಯೇ ಬೆಳೆಯುತ್ತದೆ. ಅವುಗಳಿಂದ ಹರಡುವ ಸಾಂಕ್ರಾಮಿಕ ರೋಗ, ಅವುಗಳಿಗೆ ಹುಚ್ಚು ಹಿಡಿದು ನಡೆಸುವ ಧಾಳಿ ಜೀವಂತವಾಗಿರುವಾಗಲೇ ರಣಹದ್ದುಗಳಿಂದ ಕುಕ್ಕಿಸಿಕೊಳ್ಳುತ್ತಾ ಸಾಯಬೇಕಾದ ಅವುಗಳ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ರಣಹದ್ದುಗಳಿಂದ ಕುಕ್ಕಿಸಿಕೊಳ್ಳುತ್ತಾ ಕಿವಿ ಬಾಲಗಳನ್ನು ಮಾತ್ರ ಅಲ್ಲಾಡಿಸುತ್ತಾ ಹೃದಯವಿದ್ರಾವಕವಾಗಿ ಸಾಯುತ್ತಾ ಬಿದ್ದಿರುವ ದನಗಳನ್ನು ನೋಡಿದಾಗಲೇ ‘ಕಟುಕನ ಕತ್ತಿಯ ಕ್ರೌರ್ಯವೇ ಜಗದ್ಗುರಗಳ ಕನಿಕರಕ್ಕಿಂತಲೂ ಅವುಗಳಿಗೆ ದಯಾಮಯವಾಗುತ್ತದೆ ಅಲ್ಲವೇ?’ ಅನ್ನಿಸುವುದು.
ಅಹಿಂಸಾ ತತ್ವದ ಪ್ರತಿಪಾದಕರಾಗಿದ್ದ ಮಹಾತ್ಮ ಗಾಂಧಿಯವರೇ ತಮ್ಮ ಆಶ್ರಮದಲ್ಲಿದ್ದ ಕರು ಮರಣಯಾತನೆ ಅನುಭವಿಸುವುದನ್ನು ನೋಡಲಾಗದೆ, ಬೇಗ ಸಾವುಂಟು ಮಾಡುವ ಇಂಜೆಕ್ಷನ್ ಕೊಡಿಸುತ್ತಾರೆ ಏಕೆ? ಎಂಬುದನ್ನು ನಿಷ್ಪಕ್ಷಪಾತವಾಗಿ ವಿಚಾರಿಸಿದಾಗ ಪರಿಸ್ಥಿತಿ ತಕ್ಕಮಟ್ಟಿಗೆ ತಿಳಿಯಾಗಬಹುದು ಎಂದುಕೊಳ್ಳುತ್ತೇನೆ.
ಕುವೆಂಪು ಅವರ ಪ್ರಸ್ತುತ ಲೇಖನವನ್ನು ಓದಿದರೆ ಒಂದು ವಿಷಯ ಮನದಟ್ಟಾಗುತ್ತದೆ. ಕುವೆಂಪು ಗೋಮಾಂಸ ಸೇವನೆ ಪರವಾಗಲೀ ವಿರೋಧವಾಗಲೀ ವಾದ ಮಂಡಿಸುತ್ತಿಲ್ಲ; ಆದರೆ ಅದನ್ನು ಒಂದು ನೆವವಾಗಿಟ್ಟು ಕೊಂಡು ನಡೆಯುತ್ತಿರುವ ರಾಜಕೀಯ, ಸಾಮಾಜಿಕ ಸಂಘರ್ಷಕ್ಕೆ, ಅದನ್ನು ರೂಪಿಸುತ್ತಿರುವ ನಿಭಾಯಿಸುತ್ತಿರುವ ಮನಸ್ಥಿತಿಗೆ ವಿರೋಧವಾಗಿದ್ದಾರೆ ಎಂಬುದೇ ಆ ವಿಷಯ. (ಗೊಹತ್ಯೆ ನಿಷೇಧ ಕಾನೂನನ್ನು ತಂದೇ ತರುವುದಾಗಿ ಹೇಳಿಕೊಂಡಿದ್ದ ಕಾರ್ನಟಕ ಸರ್ಕಾರ ವಿಧಾನ ಶಬೆಯಲ್ಲಿ ಮಂಡಿಸದ್ದ ಮಸೂದೆಯನ್ನು ಚಚೆಗೆ ಕೈಗೆತ್ತಿಕೊಳ್ಲುವ ಮೊದಲೇ ಹಿಂದಕ್ಕೆ ಪಡೆದುದ್ದೇಕೆ? ಗೋಮಾಂಸಪ್ರಿಯರಿಗೆ ಇಷ್ಟವಾಗುವುದಿಲ್ಲ ಎನ್ನುವುದಕ್ಕೋ ಅಥವಾ ಸರ್ಕಾರದ ಒಳಗೇ ಇದು ಕಾರ್ಯಸಾಧುವಲ್ಲ ಎನ್ನುವ ಅಭಿಪ್ರಾಯ ದಟ್ಟವಾಗಿದ್ದರಿಂದಲೋ ಅದು ಬೇರೆ ವಿಚಾರ.[ಈ ಲೇಖನ ಿಲ್ಲಿ ಪ್ರಕಟವಾಗು ಹೊತ್ತಿಗೆ ಅಂದರೆ ನೆನ್ನೆ ಮತ್ತೆ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ!] ಆದರೆ ಕಾನೂನು ರೂಪಿಸುವುದಾಗಿ ಹೇಳಿದ್ದರಲ್ಲೂ, ಮಸೂದೆಯನ್ನು ಹಿಂದಕ್ಕೆ ಪಡೆದಿದ್ದರಲ್ಲೂ ರಾಜಕೀಯ ಇಲ್ಲವೆ? ಇಂತಹ ಮನಸ್ಥಿತಿಯನ್ನೇ ಕುವೆಂಪು ವಿರೋಧಿಸಿದ್ದು!) ಆದರೆ ಲೇಖನವನ್ನೋ/ಕೃತಿಯನ್ನೋ ಪೂರ್ತಿ ಓದದೇ ಅದರ ಲೇಖಕನ/ಕವಿಯ ಬಗ್ಗೆ ತೀರ್ಪು ನೀಡುವುದು ವ್ಯಂಗ್ಯವಾಗಿ ಅವರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತೇನಲ್ಲ.
ಯಾವುದೇ ವಿಷಯದ ಬಗ್ಗೆ ಬರೆದಾಗ, ಮಾತನಾಡಿದಾಗ ಆತನಿಗೆ ಎರಡರಲ್ಲಿ ಒಂದು ಸ್ಥಾನವನ್ನು ಮೀಸಲಾಗಿಡಲು ಜನ ಕಾಯುತ್ತಿರುತ್ತಾರೆ. ‘ಪರ’ ಅಥವಾ ‘ವಿರೋಧ’! ಇವೆರಡೂ ಅಲ್ಲದ, ಕೇವಲ ವಾಸ್ತವಾಂಶ, ಸತ್ಯಾಂಶದ ಅರಿಯುವಿಕೆಗೂ ಜನ (ಅವರ ಸಂಖ್ಯೆ ಕಡಿಮೆಯಿರಬಹುದು) ಕಾತರರಾಗಿರುತ್ತಾರೆ ಎಂಬುದನ್ನೂ ನಾವು ಮನಗಾಣಬೇಕಿದೆ.

Monday, March 08, 2010

‘ತ್ರಿಪದಿ’ಯಲ್ಲಿ ತ್ರಿವಿಧ

ತ್ರಿಪದಿ ಎಂಬುದು ಹೆಸರೇ ಸೂಚಿಸುವಂತೆ ಮೂರು ಪಾದಗಳುಳ್ಳ ಪದ್ಯ. ಇದನ್ನು ತಿಪದಿ, ತಿವದಿ, ತ್ರಿವುಡೆ, ತ್ರಿಪದಿಕಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಬೇಂದ್ರೆಯವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಇವುಗಳು ಅಚ್ಚಗನ್ನಡದ ಮಟ್ಟುಗಳು. ಜಾನಪದ ಸಾಹಿತ್ಯದಲ್ಲಿ ಇವುಗಳ ವಿರಾಟ್‌ಸ್ವರೂಪವನ್ನು ಕಂಡಾಗ ಇವುಗಳ ಇತಿಹಾಸವನ್ನು ನಿಖರವಾಗಿ ಗುರುತಿಸುವುದು ಕಷ್ಟವೆನ್ನಿಸುತ್ತದೆ. ಶಾಸನಗಳಲ್ಲಿ ಆಲ್ಲಲ್ಲಿ ಕಾಣಿಸಿಕೊಳ್ಳುತ್ತಾ, ಪಂಪ ಪೊನ್ನರ ಕೃತಿಗಳಲ್ಲಿ ಇಣುಕಿ, ಮುಂದಿನ ಕವಿಕೃತಿಗಳಲ್ಲಿ ಕಾಣಿಸಿಕೊಂಡು ಸರ್ವಜ್ಞನ ಕಾಲಕ್ಕೆ ಬೃಹತ್ತಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಂಡಿವೆ. ಕನ್ನಡ ಜಾನಪದ ಸಾಹಿತ್ಯಪ್ರಕಾರಗಳಲ್ಲಿ ತ್ರಿಪದಿಗಳದೇ ಸಿಂಹಪಾಲು.
ತ್ರಿಪದಿಗಳ ಲಕ್ಷಣಗಳನ್ನು ಈ ರೀತಿ ಸರಳೀಕರಿಸಬಹುದು.-
 • ಮೂರು ಪಾದಗಳು. 
 • ಹನ್ನೊಂದು ಗಣಗಳು. 
 • 6 ಮತ್ತು 10ನೇ ಗಣಗಳು ಬ್ರಹ್ಮಗಣಗಳು; ಉಳಿದವು ವಿಷ್ಣುಗಣಗಳು.  
 • ಕ್ವಚಿತ್ತಾಗಿ ವಿಷ್ಣುವಿಗೆ ಬದಲಾಗಿ ರುದ್ರ ಬರಬಹುದು. 
 • 1 ಮತ್ತು 2ನೇ ಪಾದದಲ್ಲಿ ನಾಲ್ಕು ನಾಲ್ಕು ಗಣಗಳು ಬಂದರೆ, 3ನೇ ಪಾದದಲ್ಲಿ ಮೂರು ಗಣಗಳು ಬರುತ್ತವೆ.
ಅಂಶ ತ್ರಿಪದಿಗೆ ಬಾದಾಮಿ ಶಾಸನದ (ಏಳನೇ ಶತಮಾನ) ಒಂದು ತ್ರಿಪದಿಯನ್ನು ನೋಡಬಹುದು.
ವಿ      ವಿ        ವಿ      ವಿ
ಸಾಧುಗೆ/ಸಾಧುಮಾ/ಧುರ್ಯಂಗೆ/ಮಾಧುರ್ಯಂ
ವಿ      ಬ್ರ       ವಿ       ವಿ
ಬಾಧಿಪ್ಪ/ಕಲಿಗೆ/ ಕಲಿಯುಗ/ವಿಪರೀತನ್
ವಿ       ಬ್ರ      ವಿ
ಮಾಧವ/ನೀತನ್/ಪೆಱನಲ್ಲ
ತ್ರಿಪದಿಗಳಲ್ಲಿ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,-
ಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಮೊದಲ ಗಣವು ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ರು       ವಿ        ವಿ      ವಿ
ಹೇಸಿನಿನ್ನ / ಬದುಕೀಗೆ/ ಆಶೆ ನಾ/ ಮಾಡಿಲ್ಲ
ವಿ        ಬ್ರ        ವಿ      ವಿ
ರೇಸಿಮೆ/ ಉಡುವ /ದೊರಿನನ್ನ/ ರಾಯರ
ವಿ        ಬ್ರ      ವಿ
ಆಶೆಮಾ/ಡೇನ /ಅನುಗಾಲ//
ವಿಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಕೊನೆಯ ಗಣ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ವಿ        ವಿ       ವಿ      ವಿ
ಹಲ್ಲೀಗೆ/ ಹಲಪೂಡಿ /ಗಲ್ಲಾಕೆ /ಹರಿಷಾಣ
ವಿ       ಬ್ರ       ವಿ      ವಿ
ಗೊಲ್ಲರೋ/ಣ್ಯಾಗ/ ಬರುವೊಳು/ ಕಂದವ್ವ
ವಿ       ಬ್ರ      ರು
ನಲ್ಲ್ಯಾರ/ ಒಳಗ/ಕರಚೆಲುವಿ//
ಚಿತ್ರಲತೆ
ಮೊದಲ ಮತ್ತು ಕೊನೆಯ ಗಣಗಳೆರಡೂ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತವೆ.
ರು      ವಿ      ವಿ      ವಿ
ಚೆಲುವಗಾತಿ/ ಚೆನ್ನವ್ವ/ ಒಲವಲ್ಲೆ/ ಬೆಳೆದೋಳು
ವಿ       ಬ್ರ      ವಿ      ವಿ
ಒಲವಿಗೆ /ಮನಸ/ ಕೊಟ್ಟೋಳು/ ಚೆಲುವಮ್ಮ
ವಿ       ಬ್ರ      ರು
ಒಲವಲ್ಲೆ /ಚೆಲುವ /ಕಂಡವಳು/
ಆಂಶಿಕವಾಗಿ ಮಾತ್ರಾಗಣವಾಗಿ ಪರಿವರ್ತಿತವಾಗಿರುವ ತ್ರಿಪದಿಗಳೂ ಇವೆ. ಅದರ ಲಕ್ಷಣಗಳು, 6 ಮತ್ತು 10ನೇ ಗಣಗಳು ಬ್ರಹ್ಮ ಗಣಗಳಾಗೇ ಉಳಿದುಕೊಂಡು, ಉಳಿದ ಗಣಗಳು 5 ಮಾತ್ರೆಯ ಗಣಗಳಾಗಿವೆ. ಅಕ್ಕಮಹಾದೇವಿಯ ಯೋಗಾಂಗತ್ರಿವಿಧಿಯಲ್ಲಿ ಇಂತಹ ತ್ರಿಪದಿಗಳು ಸಿಗುತ್ತವೆ. ಪ್ರಾರಂಭದಿಂದ ಅಂಶಗಣಾತ್ಮಕವಾಗಿದ್ದು, ಸುಮಾರು 12ನೇ ಶತಮಾನದ ಹೊತ್ತಿಗೆ ಮಾತ್ರಾಗಣಾತ್ಮಕವಾಗುವ ಪ್ರಕ್ರಿಯೆಯನ್ನು ತೋರುತ್ತಿರುವುದು ಗೊತ್ತಾಗುತ್ತದೆ.
5       5       5     5
ಮಾಘಮಾ/ಸವುಪೋಗೆ/ಮೇಲೆಬಂ/ದಿತುಚೈತ್ರ
5       ಬ್ರ      5     5
ಬೇಗಮಾ/ಮರವು/ತಳಿರೇರೆ/ಅದಕಂಡು
5       ಬ್ರ       5
ಕೂಗಿಕರೆ/ಯಿತ್ತು/ಕಳಕಂಠ/
12ನೇ ಶತಮಾದಿಂದೀಚಿಗೆ ಮಾತ್ರಾತ್ರಿಪದಿಗಳು ಹೆಚ್ಚಾಗಿ ದೊರೆಯುತ್ತವೆ. 6 ಮತ್ತು 10ನೇ ಗಣಗಳು 3 ಮಾತ್ರೆಯ ಗಣಗಳಾಗಿದ್ದರೆ, ಉಳಿದವು 5 ಮಾತ್ರೆಯ ಗಣಗಳಾಗಿವೆ. ಒಟ್ಟು 51 ಮಾತ್ರೆಗಳು.
5        5       5      5
ಸಾಲವನು/ಕೊಂಬಾಗ/ಹಾಲೋಗ/ರುಂಡಂತೆ
5        3       5      5
ಸಾಲಿಗನು/ಬಂದು/ಎಳೆವಾಗ/ಕಿಬ್ಬದಿಯ
5        3      5
ಕೀಲುಮುರಿ/ದಂತೆ/ ಸರ್ವಜ್ಞ
6 ಮತ್ತು 10ನೇ ಗಣಗಳಲ್ಲಿ ಕ್ವಚಿತ್ತಾಗಿ 3 ಮಾತ್ರೆಯ ಬದಲು 4 ಮಾತ್ರೆಗಳು ಬರಬಹುದು. ಆಗ ಒಟ್ಟು ಮಾತ್ರೆಗಳು ೫೨/೫೩ ಆಗುತ್ತವೆ.
ಅಂಶಗಣ ಮತ್ತು ಮಾತ್ರಾಗಣಗಳೆರಡರ ಲಕ್ಷಣಗಳಿಗೂ ಹೊಂದುವ ತ್ರಿಪದಿಗಳೂ ಇವೆ.
ವಿ/5    ವಿ/5     ವಿ/5    ವಿ/5
ತೊಟ್ಟೀಲ/ಹೊತ್ಕೊಂಡು/ತೌರ್ಬಣ್ಣ/ಉಟ್ಕೊಂಡು
ವಿ/5    ಬ್ರ/3     ವಿ/5    ವಿ/5
ಅಪ್ಪಕೊ/ಟ್ಟೆಮ್ಮೆ/ಹೊಡ್ಕೊಂಡು/ತಂಗ್ಯಮ್ಮ
ವಿ/5   ಬ್ರ/3    ವಿ/5
ತಿಟ್ಹತ್ತಿ/ ತಿರುಗಿ/ನೋಡ್ಯಾಳು//

Monday, March 01, 2010

ಸರಸ್ವತೀ ಮಣಿಹಾರನಾದ ಪಂಪ ಮಹಾಕವಿ

ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ ವಾಗ್ವಿಳಾಸ ಸರಸ್ವತಿಯ ವಿಷಯದಲ್ಲಿಯೂ ಉದಾರವಾಗಿಯೇ ಇದೆ. ‘ಆದಿಪುರಾಣ’ ಕೃತಿರಚನೆಯ ಶಿಸ್ತಿನಲ್ಲೇ ಸರಸ್ವತಿಯು ನೆಲೆಯಾಗಿರುವುದನ್ನು ಕಾಣಬಹುದು. ಮೊದಲನೆಯ ಆಶ್ವಾಸವೊಂದನ್ನು ಉಳಿದು ಪ್ರತಿ ಆಶ್ವಾಸದ ಪ್ರಾರಂಭದ ಪದ್ಯದಲ್ಲಿ ತನ್ನ ಕಾವ್ಯದ ಮುಖ್ಯಪಾತ್ರಗಳಾದ ಮಹಾಬಲ, ಲಲಿತಾಂಗ, ವಜ್ರಜಂಘ, ಸುವಿಧಿ, ಪುರುದೇವ, ಶ್ರೀಪತಿ, ಆದಿನಾಥ, ಭರತ ಮೊದಲಾದವರನ್ನು ಸರಸ್ವತಿಗೆ ಮಣಿಹಾರವನ್ನಾಗಿಸಿದ್ದಾನೆ. ಸ್ವತಃ ತನ್ನನ್ನೇ ಮೂರು ಪದ್ಯಗಳಲ್ಲಿ ಸರಸ್ವತೀಮಣಿಹಾರನೆಂದು ಕರೆದುಕೊಳ್ಳುತ್ತಾನೆ. ಅದರಲ್ಲಿ ಒಂದು ಪದ್ಯವಂತೂ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.

ಅತಿಸುಭಗೆಗೆ ಸಂದಂ ಸರ

ಸ್ವತಿಗೀತನ ಲಲಿತಾವಾಗ್ವಿಳಾಸಮೆ ದಲಂ

ಕೃತಿಯವೊಲೆಸೆದಪುದು ಜಗ

ತ್ಪ್ರತೀತನೀತನೆ ಸರಸ್ವತೀ ಮಣಿಹಾರಂ

ಈತನ ಲಲಿತವಾದ ವಾಗ್ವಿಳಾಸ, ಅತಿಸುಭಗಳಾದ ಸರಸ್ವತಿಗೆ ವಿಶೇಷವಾದ ಅಲಂಕಾರವಾಗುತ್ತದೆ. ಜಗತ್ಪ್ರಸಿದ್ಧನಾದ ಪಂಪ ಸರಸ್ವತಿಯ ಕಂಠದ ಮಣಿಹಾರ. ‘ಆದಿಪುರಾಣ’ದ ಪ್ರಾರಂಭದಲ್ಲಿಯೇ ಬಂದಿರುವ ಸರಸ್ವತಿಯ ಸ್ತುತಿ ಜೈನ ಕಾವ್ಯಪ್ರಪಂಚಕ್ಕೆ ದಿಕ್ಸೂಚಿಯಾಗಿ, ಜೈನಪರಂಪರೆಯ ಸರಸ್ವತಿಯ ಪರಿಕಲ್ಪನೆಯನ್ನು ಒಂದು ಸೂತ್ರಬದ್ಧವಾಗಿಸಿದೆ.

ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಱದು ಪೆಣ್ಣರೂಪಮಂ

ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ

ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ

ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಿಯೆ ವಾಗ್ವಿಳಾಸಮಂ

‘ಪರಮಜಿನೇಂದ್ರವಾಣಿಯೇ ಸರಸ್ವತಿ, ಅದು ಬೇರೆಯಲ್ಲ. ಹೆಣ್ಣಿನ ರೂಪವನ್ನು ಧರಿಸಿ ನಿಂತಿಲ್ಲ. ಅಂತಹ ಜಿನವಾಣಿಯು ಭಾವಿಸಿ ಓದುವ ಕೇಳುವ ಪೂಜಿಸುವ ಆದರಿಸುವ ಭವ್ಯಕೋಟಿಗೆ (ಜಿನಭಕ್ತರಿಗೆ) ನಿರಂತರ ಸೌಖ್ಯವನ್ನು ಕೊಡುವುದು. ಅಂತಹ ಸರಸ್ವತಿಯು ನಮಗೆ ವಾಗ್ವಿಳಾಸವನ್ನು ಮಾಡಲಿ’ ಎಂದು ಬೇಡಿಕೊಳ್ಳುತ್ತಾನೆ. ನದಿಯಾಗಿ, ನದಿದೇವತೆಯಾಗಿ ಮೊದಮೊದಲು ಪ್ರಚಲಿತದಲ್ಲಿದ್ದ ಸರಸ್ವತಿಯು ವಾಗ್ದೇವತೆಯಾಗಿ, ವಿದ್ಯಾದೇವತೆಯಾಗಿ ನಂತರ ಹೆಚ್ಚು ಪ್ರಸಿದ್ಧಳಾಗಿದ್ದಾಳೆ. ವಾಗ್ದೇವತೆಯನ್ನು ಸ್ತ್ರೀರೂಪದಲ್ಲಿಯೇ ಆರಾಧಿಸುತ್ತಾ ಬಂದಿರುವವರಿಗೆ ಪಂಪನ ‘ಪರಮಜಿನೇಂದ್ರನವಾಣಿಯೆ ಸರಸ್ವತಿ, ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತಿರುವುದಲ್ಲ’ ಎಂಬ ಪರಿಕಲ್ಪನೆ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಜೈನ ಪರಿಕಲ್ಪನೆಯಲ್ಲಿ, ಜೈನವೇದವೇ ಸರಸ್ವತಿ. ಅವುಗಳು ಶ್ರೇಷ್ಠರಾದ ತೀರ್ಥಂಕರರ ವಾಣಿಯಲ್ಲದೆ ಬೇರೆಯಲ್ಲ. ಸಂಸ್ಕೃತ ‘ಮಹಾಪುರಾಣ’ದಲ್ಲಿ ಆದಿಜಿನನ ಮೊಗದಿಂದ ಉದಯಿಸಿದ ಮಾತೇ ಸರಸ್ವತಿಯಾಯಿತು ಎಂಬ ಪರಿಕಲ್ಪನೆಯಿದೆ. ಜಿನನು ರಾಗದ್ವೇಷದಿಂದ ಮುಕ್ತನಾದ ಸಿದ್ಧ. ಅವನು ಕಾವ್ಯವನ್ನಾಗಲಿ, ಶಾಸ್ತ್ರವನ್ನಾಗಲಿ ಸೃಷ್ಟಿಸುವುದಿಲ್ಲ. ಅವನು ಮಾತನಾಡಿದ್ದೆಲ್ಲ ಕಾವ್ಯವಾಗುತ್ತದೆ ಹಾಗೂ ಶಾಸ್ತ್ರವಾಗುತ್ತದೆ. ಜೈನರ ನಂಬಿಕೆಯಂತೆ ಆ ಶಾಸ್ತ್ರಗಳೇ ಸರಸ್ವತಿ. ವೈದಿಕ ಪರಂಪರೆಯಲ್ಲೂ ಸರಸ್ವತಿಯ ಸೃಷ್ಟಿಕರ್ತ ಬ್ರಹ್ಮನೇ ಆಗಿದ್ದಾನೆ. ಬ್ರಹ್ಮ ಸರಸ್ವತಿಯ ಸೃಷ್ಟಿಕರ್ತನಾದರೆ, ಕವಿಗಳು ಸರಸ್ವತಿಯ ರೂಪಗಳಾದ ಕಾವ್ಯಗಳ ಸೃಷ್ಟಿಕರ್ತರು. ಆದ್ದರಿಂದ ಕವಿಗಳು ಅಭಿನವ ಸೃಷ್ಟಿಕರ್ತರು.

ಸರಸ್ವತಿ ಎಂದರೆ ಹೆಣ್ಣರೂಪವನ್ನು ಧರಿಸಿದ ದೇವತೆ ಎಂಬ ಪೌರಾಣಿಕ ಕಲ್ಪನೆಯನ್ನು ನಿರಾಕರಿಸಿ, ಪಂಪನು ಜೈನಪರಂಪರೆಗೆ ಅನುಗುಣವಾಗಿ ಸರಸ್ವತಿಯನ್ನು ಪರಿಭಾವಿಸಿದ್ದಾನೆ. ಆದರೆ ವೈದಿಕ ಪಂರಂಪರೆಯಂತೆಯೇ ಜೈನರಲ್ಲಿಯೂ ಸರಸ್ವತಿಯು ವಾಗ್ದೇವತೆ; ವಿದ್ಯಾಧಿದೇವತೆಯೂ ಹೌದು. ಭಾವಿಸುವ, ಓದುವ, ಆಲಿಸುವ ಪೂಜಿಸುವ ಆದರಿಸುವವರಿಗೆ ನಿತ್ಯಸೌಖ್ಯವನ್ನು ಉಂಟುಮಾಡುವುದು ವಾಕ್. ಆ ವಾಕ್ಕಿಗೆ ದೇವತೆಯಾದ ಸರಸ್ವತಿಯು ಎಲ್ಲರಿಗೂ ವಾಗ್ವಿಳಾಸವನ್ನು ಮಾಡಲಿ ಎಂಬಲ್ಲಿ ಸರಸ್ವತಿಯನ್ನು ಕುರಿತಾದ ವೈದಿಕ ಪರಿಕಲ್ಪನೆ ಮುಂದುವರೆದಿದೆ.

‘ಪರಮಜಿನೇಂದ್ರವಾಣಿಯೆ ಸರಸ್ವತಿ, ಅವಳು ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತವಳಲ್ಲ’ ಎಂದು ಸಾರಿದ ಪಂಪ ತನ್ನ ಕಾವ್ಯಗಳಲ್ಲಿಯೇ ಸರಸ್ವತಿಗೆ ಹೆಣ್ಣಿನ ರೂಪವನ್ನು ತೊಡಿಸಿರುವುದುಂಟು. ‘ಅತಿಸುಭಗಗೆ ಸಂದ.......’ ಎಂಬ ಪದ್ಯದಲ್ಲಿ ಪಂಪ ಮಾಡಿಕೊಂಡಿರುವ ಆತ್ಮಶ್ಲಾಘನೆಯಲ್ಲಿ ಸರಸ್ವತಿಯು ಸ್ತ್ರೀರೂಪದಲ್ಲಿದ್ದಾಳೆ. ಆತನು ‘ತಾನೇ ಆಕೆಗೆ ಮಣಿಹಾರ’ ಎನ್ನುತ್ತಾನೆ. ಪ್ರತಿ ಅಧ್ಯಾಯದ ಮೊದಲ ಪದ್ಯದಿಂದಲೇ ಚಕ್ರವರ್ತಿಯಾದ ಭರತ, ಜಿನನಾದ ಆದಿನಾಥ ಮೊದಲಾದವರನ್ನೆಲ್ಲಾ ಸರಸ್ವತಿಯ ಕೊರಳಿನ ಮಣಿಹಾರವಾಗಿಸುತ್ತಾನೆ. ಹೀಗೇಕೆ? ಆದರೆ, ಆತನೆಲ್ಲೂ ‘ಸರಸ್ವತಿಯನ್ನು ಸ್ತ್ರೀರೂಪದಲ್ಲಿ ಚಿತ್ರಿಸುವುದಿಲ್ಲ’ ಎಂದು ಹೇಳಿಲ್ಲ. ‘ಹೆಣ್ಣರೂಪದಲ್ಲಿ ಸರಸ್ವತಿಯನ್ನು ಬಣ್ಣಿಸಲೇಬಾರದೆಂದು ಅವನೇನು ಹಟತೊಟ್ಟಿರಲಿಲ್ಲವೆಂದೂ, ಮೂಲಭೂತ ಅರ್ಥವನ್ನು ನಿರ್ವಚನ ಮಾಡಬೇಕೆಂದು ಬಯಸಿದ್ದನೆಂದೂ ತಿಳಿದುಕೊಳ್ಳಬಹುದು.’ ಕವಿ ಪ್ರತಿಮಾಪ್ರಿಯ ಮತ್ತು ಪ್ರಯೋಗಪ್ರಿಯ. ಕವಿ ಹೊಸಹೊಸತನ್ನು ಸೃಷ್ಟಿಸುವ ಅಭಿನವ ಸೃಷ್ಟಿಕರ್ತ ಎಂಬ ಮಾತಿಗೆ ಪಂಪನೇ ಸಾಕ್ಷಿ. ಪರಮಜಿನೇಂದ್ರವಾಣಿಯೆ ಸರಸ್ವತಿ ಎಂದು ಹೇಳಿದ ‘ಆದಿಪುರಾಣ’ದಲ್ಲಿಯೇ ಪಂಪ, ಸರಸ್ವತಿಯನ್ನು ವಾಗ್ವಧುವನ್ನಾಗಿಯೂ ಚಿತ್ರಿಸಿದ್ದಾನೆ. ‘ವಾಗ್ವಧೂಮುದ್ರೆಯೊಳ್ ಮುದ್ರಿಸಿ ನಿಂದತ್ತು ಆದಿತೀರ್ಥೇಶ್ವರ ಚರಿತದೊಳ್ ವಾಕ್ಯಮಾಣಿಕ್ಯಕೋಶಂ’ ಎನ್ನುತ್ತಾನೆ. ಆದಿತೀರ್ಥೇಶ್ವರ ಚರಿತ್ರೆಯಲ್ಲಿ ವಾಕ್ಯಗಳೆಂಬ ಮಾಣಿಕ್ಯಗಳ ಕೋಶಕ್ಕೆ ವಾಗ್ವಧೂ ಅಂದರೆ ಸರಸ್ವತಿಯೇ ಮುದ್ರೆಯೊತ್ತಿದ್ದಾಳಂತೆ! ಪಂಪನಿಗೆ ತನ್ನ ಕಾವ್ಯಗಳ ಶ್ರೇಷ್ಠತೆಯ ಬಗ್ಗೆ ಅಷ್ಟೊಂದು ವಿಶ್ವಾಸ.

ಪಂಪನು ತನ್ನ ‘ವಿಕ್ರಮಾರ್ಜುನವಿಜಯ’ ಕೃತಿಯಲ್ಲಿ,

ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾನಾವನುಮಿಲ್ಲೆನಲ್ ತದ

ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ

ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ

ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ

ಎಂದು ಪ್ರಾರ್ಥಿಸಿದ್ದಾನೆ. ಸರಸ್ವತಿಯು, ಅರಿಗ ಅಂದರೆ ಅರಿಕೇಸರಿಗೆ ನಿಷ್ಕಲ್ಮಷವಾದ ಬುದ್ಧಿಯನ್ನು ಕೊಡಲಿ ಎಂಬುದು ಕವಿಯ ಆಶಯ. ಆದರೆ ಆತ ಸರಸ್ವತಿಗೆ ಆರೋಪಿಸಿರುವ ಒಂದೊಂದು ಗುಣವೂ ವಿಚಾರಯೋಗ್ಯ. ವಾಙ್ಮಯಕ್ಕೆ ನಾಶವೆಂಬುದು ಒಂದಿನಿತೂ ಇಲ್ಲ. ಕೇಳಿದ ಮಾತ್ರಕ್ಕೇ ವಾಙ್ಮಯದ ಕೊನೆಯನ್ನು ತಿಳದವನು ಯಾವನೂ ಇಲ್ಲ. ವಾಙ್ಮಯ ಎಂಬುದು ತನಗೆ ತಾನೇ ಅಕ್ಷಯನಿಧಿ ಆಗಿರುವುದು. ಪ್ರೀತಿಯಿಂದ ಸೇವಿಸಿದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆನ್ನಿಸುವುದು ವಾಙ್ಮಯ. ಅಂತಹ ಸಮಸ್ತ ವಾಙ್ಮಯಕ್ಕೆ ಸರಸ್ವತಿಯು ತಾಯಿಯಾಗಿದ್ದಾಳೆ. ಒಬ್ಬ ವ್ಯಕ್ತಿ ಗಳಿಸಿದ ಆಸ್ತಿಯನ್ನು ಕಳೆದುಕೊಳ್ಳಬಹುದು. ಬೇರೆಯವರು ಕಿತ್ತುಕೊಳ್ಳಬಹುದು. ಅದು ತನ್ನಿಂದ ತಾನೇ ನಾಶವಾಗಬಹುದು. ಗಳಿಸಿದಾತನ ಮರಣಾನಂತರ ಅದು ಬೇರೆಯವರಿಗೆ ವರ್ಗವಾಗಬಹುದು. ಆದರೆ, ವಿದ್ಯೆ ಎಂಬ ಅಕ್ಷಯ ನಿಧಿ ಮಾತ್ರ ಮನುಷ್ಯ ತಾನು ಬದುಕಿರುವವರೆಗೂ ಕಳೆದುಕೊಳ್ಳಲಾರದ ಸಂಪತ್ತು. ಅದನ್ನು ಬೇರೆಯವರಿಗೆ ವರ್ಗಾಯಿಸಿದಷ್ಟೂ ಬೆಳೆಯುತ್ತಲೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಂತೆ ಮುಂದಿನ ತಲೆಮಾರಿಗೆ ಬಿಡಲಾಗುವುದಿಲ್ಲ. ಅಂತಹ ವಾಙ್ಮಯಕ್ಕೆ ಸರಸ್ವತಿಯು ‘ತಾಯಿ’ ಎಂಬ ಪರಿಕಲ್ಪನೆ ಪಂಪನದು. ‘ಅಂಬಿಕೆ ಸರಸ್ವತಿ’ ಎಂಬಲ್ಲಿ ತಾಯಿಯಂತೆ ಅವಳು ಪ್ರೇಮಮಯಿ. ಹೀಗೆ ಜಿನೇಂದ್ರವಾಣಿಯಾಗಿ ಕಾಣಿಸಿಕೊಂಡ ಸರಸ್ವತಿ, ಆದಿಪುರಾಣದಲ್ಲಿ ವಾಗ್ವಧು ಆಗಿ, ಪಂಪಭಾರತದಲ್ಲಿ ಅಂಬಿಕೆಯಾಗಿ ಪರಿಪೂರ್ಣತೆಯತ್ತ ಸಾಗುತ್ತಾಳೆ.

ಸುಮಾರು ಹತ್ತನೇ ಶತಮಾನದಲ್ಲಿಯೇ, ‘ಮಾನವಜಾತಿ ತಾನೊಂದೆ ವಲಂ’ ಎಂದು ಸಾರಿದ ಪಂಪ ಮಹಾನ್ ಮಾನವತಾವಾದಿ; ಒಬ್ಬ ಶ್ರೇಷ್ಠ ಕವಿ. ಅವನ ಕಾವ್ಯಗಳು ಈ ಲೋಕಕ್ಕೆ ಅಲಂಕಾರಪ್ರಾಯವಾಗಿರುವವು. ‘ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಪಂಪನ ವಾಗ್ವಿಲಾಸ’ ಶ್ರೇಷ್ಠ ತರಗತಿಯದ್ದು. ಅಂತೆಯೇ ಆತನ ಸರಸ್ವತೀ ದರ್ಶನವೂ ಸಹ.