Monday, December 26, 2011

ಆ ಚೇತನಕೀ ಸಹ್ಯಾದ್ರಿಯೆ ಲಿಂಗಶರೀರ!

ನಮ್ಮ ಊರಿನ ಹತ್ತಿರ ಕತ್ತರಿಘಟ್ಟ ಎಂಬಲ್ಲಿ ಪ್ರತೀವರ್ಷ ಜಾತ್ರೆ ನಡೆಯುತ್ತದೆ. ಅಂದು ಮಳೆ ಬಂದೇ ಬರುತ್ತದೆ ಎಂಬುದು ಜನರಲ್ಲಿನ ಅಚಲವಾದ ನಂಬಿಕೆ. 'ಉಂಡ ಎಲೆ ಕೊಚ್ಚಬೇಕು' ಎಂಬ ನಾಣ್ಣುಡಿಯೇ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಅಲ್ಲಿ ತಪ್ಪದೆ ಮಳೆ ಬರುತ್ತಿತ್ತೊ ಏನೊ? ಆದರೆ ಈಗ ಆ ಸ್ಥಳದ ಸುತ್ತ ಹತ್ತಿಪ್ಪತ್ತು ಮೈಲಿಯಲ್ಲಿ ಎಲ್ಲೇ ಮಳೆಯಾದರೂ ಜನ ಕತ್ತರಿಘಟ್ಟದ ಜಾತ್ರೆಯ ಮಹಿಮೆ ಎಂದು ಕೈಮುಗಿಯುತ್ತಾರೆ. ನನ್ನ ಹುಟ್ಟೂರಿನಲ್ಲಿ ನಡೆಯುತ್ತಿದ್ದ ಭಕ್ತ ಪ್ರಹ್ಲಾದ ಎಂಬ ಬಯಲು ಸೀಮೆಯ ಯಕ್ಷಗಾನದಲ್ಲಿ, ನರಸಿಂಹಾವತಾರ ಆಗುವಷ್ಟರಲ್ಲಿ ಬೆಳಗಾಗುತ್ತಿತ್ತಂತೆ. ಆಗ ಗರುಡ ಪಕ್ಷಿ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಿತ್ತಂತೆ. ಗರುಡ ಕಾಣಿಸಿಕೊಳ್ಳುವವರೆಗೂ ನಾಟಕ ಮುಂದುವರೆಯುತ್ತಿರಲಿಲ್ಲವಂತೆ. ಎಂದು ಹೇಳುವುದನ್ನು ಕೇಳಿದ್ದೇನೆ. ಹೀಗೆ ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳನ್ನು ತಮ್ಮ ಬದುಕಿನಲ್ಲಿ ನಡೆಯುವ ಘಟನೆಗಳೊಂದಿಗೆ ತಳುಹಾಕಿಕೊಳ್ಳುವುದು ಮನುಷ್ಯಪ್ರಜ್ಞೆಯ ಅನುವಂಶಿಕ ಗುಣ. ಈ ಮಾತು ಲೋಕರಂಗಕ್ಕೆ ಸಲ್ಲುವ ಹಾಗೆ ಕಲಾರಂಗಕ್ಕೂ ಸಲ್ಲುತ್ತದೆ.
ಸುಮಾರು ಏಂಟತ್ತು ವರ್ಷದ ಬಾಲಕ ಪುಟ್ಟಪ್ಪ, ತೀರ್ಥಹಳ್ಳಿಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಾಗಿನ ಘಟನೆ. ಒಂದು ಸಂಜೆ, ಚಾಟರ್‌ಬಿಲ್ಲನ್ನು ಹಿಡಿದು, ಅದಕ್ಕೆ ಬೇಕಾದ ಕಲ್ಲುಗಳನ್ನು ಒಂದು ಜೇಬಿನಲ್ಲಿ ತುಂಬಿಕೊಂಡು, ಇನ್ನೊಂದು ಜೇಬಿನಲ್ಲಿ ಪೆಪ್ಪರಮೆಂಟು ಬಾಳೆ ಹಣ್ಣು ತುಂಬಿಕೊಂಡು ಕಾಡು ಅಲೆಯುತ್ತಿದ್ದ. ಪೆಪ್ಪರ್‌ಮೆಂಟು ಎಲ್ಲಾ ಮುಗಿದು ಬಾಳೆ ಹಣ್ಣು ಕೈಗೆ ಬಂತು. ಆಗ ಬಾಲಕನ ಮನಸ್ಸಿಗೆ ಒಂದು ವಿಚಿತ್ರ ಹೊಳೆಯುತ್ತದೆ. ’ಈ ಕಾಡು ಗುಡ್ಡ ಮೋಡ ಆಕಾಶ ಎಲ್ಲವನ್ನೂ ಮಾಡಿದ್ದಾನಲ್ಲ ಆ ದೇವರು ಅದೆಷ್ಟು ಶಕ್ತಿಶಾಲಿ’ ಎಂಬುದೇ ಆ ವಿಚಿತ್ರ. ಅಷ್ಟರಲ್ಲಿ ತಿಂದು ಮುಗಿದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಯಾಂತ್ರಿಕವಾಗಿ ದಾರಿ ಬದಿಗೆ ಬಿಸಾಕಿ ಮುಂದೆ ನಡೆಯುತ್ತಾನೆ. ಒಂದಷ್ಟು ದೂರ ಹೋದ ತಕ್ಷಣ, ’ಯಾವುದೋ ತೋಟದಲ್ಲಿ ಬೆಳೆದು, ಯಾರಿಂದಲೋ ಮಾರಲ್ಪಟ್ಟು, ನಾನು ಕೊಂಡು, ನನ್ನ ಹೊಟ್ಟೆ ಸೇರಿದ ಈ ಬಾಳೆಹಣ್ಣಿನ ಸಿಪ್ಪೆ ಇಂತಿಲ್ಲೇ ಬೀಳಬೇಕೆಂಬುದು ದೇವರ ಇಚ್ಛೆ’ ಎನ್ನಿಸುತ್ತದೆ. ತಕ್ಷಣ ದೇವರ ನಿರಂಕುಶ ಇಚ್ಛಾಶಕ್ತಿಗೆ ದಂಗೆಯೇಳುವ ರೀತಿಯಲ್ಲಿ ಹುಡುಗನ ಮನಸ್ಸು ರೇಗುತ್ತದೆ. ’ದೇವರ ಇಚ್ಛೆಗೆ ಭಂಗ ತರಲೇಬೇಕು’ ಎಂದು ಸಿಪ್ಪೆ ಎಸೆದಲ್ಲಿಗೆ ಬಂದು, ಅದನ್ನು ಎತ್ತಿ ಬೇರೆಡೆಗೆ ಬಿಸಾಕಿ ವಿಜಯದ ನಗೆ ಬೀರುತ್ತಾನೆ. ಆದರೆ ಸ್ವಲ್ಪ ಹೊತ್ತಿನಲ್ಲೇ, ’ಅಯ್ಯೋ ಆ ಸಿಪ್ಪೆ ಈಗ ಬಿದ್ದಿರುವಲ್ಲೇ ಬೀಳಬೇಕಿತ್ತೇನೊ! ಅದನ್ನು ಮೊದಲು ಹಾಕಿದ ಜಾಗದಿಂದ ತಂದು ಇಲ್ಲಿಗೆ ಹಾಕುವ ವಿಧಿಯ ಇಚ್ಛೆಗೆ ನಾನು ದಾಸನಾದೆನಲ್ಲ’ ಎನ್ನಿಸುತ್ತದೆ. ಅಸಹಾಯಕತೆ ಮೂಡುತ್ತದೆ. ಕಣ್ಣುಗಳಲ್ಲಿ ಹನಿಯುದುರುತ್ತವೆ!

ಅಂದು ಬಾಲಕನ ಮನಸ್ಸಿನಲ್ಲಿ ಹುಟ್ಟಿದ ವಿಶ್ವನಿಯಾಮಕನ ಕೌತುಕ ಯಾವತ್ತೂ ಮುಂದುವರೆದಿರುವುದನ್ನು ನೋಡಬಹುದಾಗಿದೆ. ನಮ್ಮ ಅತಿ ಸಣ್ಣ ಕಾರ್ಯವೂ ವಿಶ್ವನಿಯಮಕ್ಕೆ ಬದ್ಧವಾಗಿಯೇ ನಡೆಯುತ್ತಿರುತ್ತದೆ ಮತ್ತು ವಿಶ್ವನಿಯಾಮಕನ ಕಣ್ಣಳತೆಯಲ್ಲೇ ಇರುತ್ತವೆ. ಎಂತಹ ಸಣ್ಣ ಘಟನೆಯಾದರೂ ಅದು ಇಡೀ ವಿಶ್ವದ ಸಮಸ್ತ ಕ್ರಿಯೆಯ ಸಂವಾದಿಯಾಗಿಯೇ ಇರುತ್ತದೆ. ’ಯಾವ ಜನ್ಮದ ಮೈತ್ರಿ’ ಎಂಬ ಪ್ರಸಿದ್ಧ ಸಾನೆಟ್ಟಿನಲ್ಲಿ ಬರುವ ಸಾಲುಗಳಿವು.
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು:
ಮೇಲೆ ತೆರೆ ನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿವೆ ಪ್ರೇಮತೀರ್ಥದಿ ಮಿಂದು!
ಇಹದಲ್ಲಿ ನಡೆಯುವ ಪ್ರೀತಿ, ಜಗಳ, ದ್ವೇಷ, ವಂಚನೆ, ಸ್ನೇಹ, ಸಂಬಂಧ ಎಲ್ಲವೂ ಅಂತಿಮವಾಗಿ ವಿಶ್ವಪ್ರೇಮದಲ್ಲಿಯೇ ಸೇರಿಹೋಗುತ್ತವೆ. ಯಾವುದೇ ಘಟನೆ ಮೇಲ್ನೋಟಕ್ಕೆ ಕನಿಷ್ಠವೆನಿಸಿದರೂ, ನಮ್ಮನ್ನು ಬಂಧಿಸಿರುವ ವಿಶ್ವಪ್ರೇಮತತ್ವದ ದೃಷ್ಟಿಯಿಂದ ಅದು ಮಹತ್ವವೆನ್ನಿಸುತ್ತದೆ. (ಮನುಷ್ಯಪ್ರಜ್ಞೆ ಸ್ವತಂತ್ರವೊ ಪರಾಧೀನವೊ ಎಂಬ ಪ್ರಶ್ನೆ ತೇಜಸ್ವಿಯವರ ’ಚಿದಂಬರ ರಹಸ್ಯ’ ಕೃತಿಯಲ್ಲಿ ಚರ್ಚಿತವಾಗುವುದನ್ನು ನೋಡಬಹುದು).

ದೈವೀ ಪುರುಷರು ಅವತಾರವೆತ್ತುವಾಗ, ಮಹಾ ವ್ಯಕ್ತಿಗಳ ಜನನವಾಗುವಾಗ, ಮಹತ್ವದ ಘಟನೆಗಳು ಸಂಭವಿಸುವಾಗ... ಅದು ಮಹತ್ತಾಗಿರುವುದರಿಂದ ಸುತ್ತಣ ನಿಸರ್ಗವೂ ಅದಕ್ಕೆ ಪೂರಕವಾಗಿ ಪ್ರವರ್ತಿಸುತ್ತದೆ ಎಂಬುದು ಕಾವ್ಯಲೋಕದ ಸತ್ಯ. ಆಂಶಿಕವಾಗಿ ವೈಜ್ಞಾನಿಕ ಸತ್ಯವೂ ಹೌದು - ಭೂಕಂಪ, ಸುನಾಮಿ ಆಗುವ ಮುಂಚೆ ಪ್ರಾಣಿ ಪಕ್ಷಿಗಳ ನಡವಳಿಕೆ, ಸಮದ್ರದ ನಡುವೆ ಚಂಡಮಾರುತ ಆರಂಭವಾಗು ವಮುನ್ನ ನೆಲೆಸುವ ಶಾಂತತೆ ಇತ್ಯಾದಿ.

ಇನ್ನು ಕಾವ್ಯಲೋಕಕ್ಕೆ ಬಂದರೆ-
ಕರ್ಣಾರ್ಜುನರ ಯುದ್ಧ ಸಂದರ್ಭ, ವಿಶ್ವದ ಯಾವುದೋ ಒಂದು ಕಿರುಮೂಲೆಯಲ್ಲಿ ನಡೆಯುವ, ವಿಶ್ವದ ಅಗಾದತೆಗೆ ಹೋಲಿಸಿದಾಗ ತೀರಾ ಯಕಃಶ್ಚಿತ್ ಎನ್ನಬಹುದಾದ ಒಂದು ಘಟನೆ. ಆದರೆ ಅದಕ್ಕೆ ಸಾಕ್ಷಿಯಾಗಲು ಇಂದ್ರ ಸೂರ್ಯರಾದಿಯಾಗಿ ಸಮಸ್ತ ದೇವತೆಗಳು ಅಂತರಿಕ್ಷದಲ್ಲಿ ನೆರೆಯುತ್ತಾರೆ.

ಭೀಮ ದುಶ್ಯಾಸನನ್ನು ವಧಿಸಿ ದ್ರೌಪದಿಯ ಪ್ರತಿಜ್ಞೆಯನ್ನು ಈಡೇರಿಸಿದಾಗ ಪುಷ್ಪವೃಷ್ಟಿಯಾಗುತ್ತದೆ.

ಸೂರ್ಯನು ದಿನವೂ ಉದಯಿಸುತ್ತಾನೆ; ಅಸ್ತಮಿಸುತ್ತಾನೆ. ಆದರೆ ಕವಿ 'ಎನ್ನುಮನ್ ಅಸುರಾರಿಯ ಪಿಡಿವುನ್ನತ ಕರಚಕ್ರಂ' ಎಂದು ಭಾವಿಸಿ ಭೀಷ್ಮ ನಾಶ ಮಾಡುತ್ತಾನೆ ಎಂದು ಹೆದರಿ ಪಶ್ಚಿಮಾಂಬುಧಿಯಲ್ಲಿ ಮುಳುಗಿದ ಎನ್ನುತ್ತಾನೆ.

ಆದಿದೇವನ ಜನ್ಮೋತ್ಸವ ಕಾಲದಲ್ಲಿ ’ಎಲ್ಲ ಋತುಗಳು ಏಕಕಾಲದಲ್ಲಿ ಕಾಣಿಸಿಕೊಂಡುವು, ಆಕಾಶವೆಲ್ಲವೂ ಮೇಲಕ್ಕೆದ್ದ ಚಲ್ಲೆಹಿಟ್ಟಿನ ಹೊಂಬಣ್ಣದಿಂದ ಮೆರೆಯಿತು. ಕುಲಪರ್ವತಗಳ ಸಮೂಹವೆಲ್ಲ ತೂರ್ಯಧ್ವನಿಗಳಿಂದ ತುಂಬಿದ್ದಿತು. ನಾಭಿರಾಜಪುತ್ರನ ಜನ್ಮೋತ್ಸವವು ಜಗತ್ತಿಗೆಲ್ಲ ಅತ್ಯಾಶ್ಚರ್ಯಕರವಾಯಿತು’ ಎನ್ನುತ್ತಾನೆ ಪಂಪ.

ಐತಿಹಾಸಿಕ ವ್ಯಕ್ತಿ ಬಸವಣ್ಣನನ್ನು ಹರಿಹರ ಕವಿ ನೇರವಾಗಿ ಕೈಲಾಸದಿಂದಲೇ ಇಳಿಸುತ್ತಾನೆ.

’ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷದಾ ಕ್ಷೀರಸಾಗರದಿಂ ಕಿಶೋರತತಿ ಬರುವಂತೆ, ಪ್ರತಿಭಾ ಮನದಿಂ ಮಹಾ ಕಾವ್ಯಮುದ್ಭವಿಪಂತೆ’ ಚೈತ್ರನವಮಿಯ ದಿನ ಶ್ರೀರಾಮನ ಜನನವಾಗುತ್ತದೆ.

ರಾವಣ ಸೀತೆಯನ್ನು ಕದ್ದೊಯ್ಯಲು ಬರುವಾಗ ಬೀಸುವ ಬಲವಾದ ಗಾಳಿ ’ಕುಣಿದಿಲ್ಲಿ, ನೆಗೆದಲ್ಲಿ, ಹಾರುತ್ತಮೋಡುತ್ತಮಾಡುತಂ, ನಿಲುತ್ತೊಮ್ಮೆ ಹೆಡೆಯೆತ್ತಿ ನಾಗರದವೋಲಾಡಿ, ಮತ್ತೊಮ್ಮೆ ನಡುಬಳುಕಿ ನಟಿಯಂತೆವೋಲಾಡಿ, ಒಮ್ಮೆ ತುಂಬುರುಗೊಳ್ಳಿಯೆನೆ ಚಿಮ್ಮಿ, ಮತ್ತಂತೆಗಣಬಂದವನ ತೆರದಿ ರಿಂಗಣಗುಣಿದು ಹೊಮ್ಮಿ ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ’ಯಾಗಿ ಕವಿ ಕಾಣುತ್ತದೆ.

ಮೇಲಿನ ಇಷ್ಟೆಲ್ಲಾ ಪೀಠಿಕೆಗೆ ಕಾರಣ ಕುವೆಂಪು ಅವರ ’ವರ್ಧನ್ತಿ’ ಎಂಬ ಕವಿತೆ. ಕವಿಯ ಐವತ್ತನಾಲ್ಕನೇ ಹುಟ್ಟುಹಬ್ಬಕ್ಕೆ ಮೂರುದಿಗಳಿದ್ದಾಗ, ಅಂದರೆ ೨೬.೧೨.೧೯೫೭ ರಂದು ಈ ಕವಿತೆ ರಚಿತವಾಗಿದೆ. [ಇಂದಿಗೆ (೨೬.೧೨.೨೦೧೧) ವರ್ಷಗಳ ಹಿಂದಿನೆ ಕವಿತೆ!] ಹುಟ್ಟಿದ್ದ ಹಬ್ಬ ಮೂರು ದಿನವಿದ್ದಾಗ ಕವಿಗೆ ತಾನು ಐವತ್ತಮೂರು ವರ್ಷಗಳ ಹಿಂದೆ ದೂರದ ಹಿರೇಕೂಡಿಗೆಯಲ್ಲಿ ಜನ್ಮತಾಳಿದ್ದು ನೆನಪಾಗುತ್ತದೆ. ಯಾರೊಬ್ಬರು ಹುಟ್ಟುವಾಗ ಪ್ರಕೃತಿ ಹೇಗಿತ್ತೆಂದು ಯಾರಿಗೂ ತಿಳಿಯುವುದಿಲ್ಲ. ಯಾವ ತಾಯಂದಿರು ಅದರ ವರ್ಣನೆಗೆ ಇಳಿಯುವುದಿಲ್ಲ. ಹೆಚ್ಚೆಂದರೆ ’ನೀನು ಹುಟ್ಟುವಾಗ ಮಳೆ ಸುರಿಯುತ್ತಿತ್ತು’ ಎಂದೊ, ’ಹೊಳೆಗೆ ಪ್ರವಾಹ ಬಂದಿತ್ತು’ ಎಂದೊ ವಾಚ್ಯವಾಗಿ ಹೇಳುಬಹುದು ಅಷ್ಟೆ. ಐವತ್ತಮೂರು ವರ್ಷಗಳಾಗುವಷ್ಟರಲ್ಲಿ ಕವಿ ಕುವೆಂಪು, ಕನ್ನಡನಾಡಿನಲ್ಲಿ ಮಹಾಕವಿಯಾಗಿ ಜನಮಾನಸಲದಲಿ ನೆಲೆನಿಂತಿದ್ದರೂ, ಅವರು ಹುಟ್ಟಿದ ಸಂದರ್ಭ ಎಲ್ಲರ ಹುಟ್ಟಿನ ಸಂದರ್ಭದಂತೆಯೇ ಒಂದು ಸಂದರ್ಭ ಅಷ್ಟೆ! ಆದರೆ, ಸ್ವತಂತ್ರವಾಗಿ ಕಾಲದೇಶಗಳನ್ನು ಮೀರಿ ಅಲೆಯುವ, ಆದ್ಯಾತ್ಮ-ಅಲೌಕಿಕತೆಗಳಲ್ಲಿ ಮುಳುಗಿ ಏಳುವ ಕವಿಯ ಮನಸ್ಸು, ತನ್ನ ಹುಟ್ಟಿನ ಸಂದರ್ಭಕ್ಕೊಂದು ವಿಶೇಷ ಪರಿವೇಷವನ್ನು ಕಲ್ಪಿಸಿಬಿಡುತ್ತದೆ. ಲೋಕರಂಗದಲ್ಲಿ ಅಸಹಜವೂ ಅಸಂಭವವೂ ಆಗಿದ್ದಿರಬಹುದಾದರೂ ಕಲಾರಂಗದಲ್ಲಿ ಸಹಜವಾಗಿ ಸಲ್ಲುವ ಅಲೌಕಿಕತೆಯನ್ನು ತನ್ನ ಹುಟ್ಟಿನ ಸಂದರ್ಭಕ್ಕೂ ಆರೋಪಿಸಿ ರಚಿಸಿರುವ ಕವಿತೆ ಇದಾಗಿದೆ.

ಮೊದಲ ಭಾಗದಲ್ಲಿ, ಸಹ್ಯಾದ್ರಿಯ ಮಡಿಲಲ್ಲಿ ನಾಗರಿಕತೆಯಿಂದ ದೂರವಿರುವ ಹಿರೇಕೂಡಿಗೆ ಎಂಬ ಕುಗ್ರಾಮದಲ್ಲಿ ತನ್ನ ಚೊಚ್ಚಲು ಕಂದನ ನಿರೀಕ್ಷೆಯಲ್ಲಿರುವ ತಾಯಿಯ ಚಿತ್ರಣ ಬಂದರೆ, ಎರಡನೆಯ ಭಾಗ, ಹಿರೇಕೂಡಿಗೆಯನ್ನು ದೂರದ ಕಲ್ಕತ್ತೆಗೆ ಬೆಸೆಯುತ್ತದೆ.
ಇಂದಿಗೈವತ್ತುಮೂರು ವರುಷಗಳಾಚೆ ಅಲ್ಲಿ,
ಹಿರಿಕೂಡಿಗೆಯಲ್ಲಿ,
ಸಹ್ಯಾದ್ರಿಯ ಕಾನ್ಮಲೆಗಳ ಮಡಿಲೊಳಗಿದ್ದ
ಆ ಕುಗ್ರಾಮದಲ್ಲಿ,
ಒಂದೆಮನೆ ಹಳ್ಳಿಯಲ್ಲಿ:
ನೆತ್ತಿಮೇಲೆ ಶೀಖರಪಂಕ್ತಿ ಪರಿಧಿಯಾದ ನೀಲಶರಧಿ ಬಾನು;
ಸುತ್ತಮುತ್ತ ಕಾಫಿಕಾನು;
ಮತ್ತೆ, ಬತ್ತದ ಗದ್ದೆ, ಅಡಕೆ ಬಾಳೆಯ ತೋಟ:
ಗುಡ್ಡ ಬೆಟ್ಟ ಕಾಡು ತೆರೆಬಿದ್ದು ಎದ್ದ ಚೆಲ್ವು ನೋಟ:
ನಾಗರಿಕತೆಗತಿದೂರದ ಅಜ್ಞಾತದ
ಆ ಹಿರಿಕೂಡಿಗೆಯಲ್ಲಿ
ನನ್ನಮ್ಮ, ದೇವಿ ಸೀತಮ್ಮ, ಚೊಚ್ಚಲೆನ್ನಂ ಪಡೆವ ತಪದೊಳಿರೆ:

ಓ ಆ ದೂರದ, ಬಹುದೂರದ, ಬಂಗಾಳದ,
ಕಲ್ಕತ್ತದ ದಕ್ಷಿಣೇಶ್ವರದಿಂದ ಹುಟ್ಟಿ,
ಬಾನ್ಗೇರಿ ಬಾಗಿ
ಯೋಜನಂಗಳ ಮೀಟಿ ದಾಟಿ,
ಕುಪ್ಪಳಿಯಾಚೆಯ ಕೊಪ್ಪದೆಡೆಯ ಹಿರಿಕೂಡಿಗೆಯ ಮುಟ್ಟಿ
ನಿಂದುದೊಂದು ಮಹಾ ಮಳೆಬಿಲ್ಲು, ಕಮಾನು ಕಟ್ಟಿ,
ಶ್ರೀಗುರುವಿನ ಕೃಪೆಯ ಬರವಿಗೊಂದು ದೇವಸೇತುವಾಗಿ,
ಅಲ್ಲಿಂದಿಲ್ಲಿಗೆ ಬೀಸಿದೊಂದೆ ರುಂದ್ರ ಕಮಾನು ಬಾಗಿ!
ರಾಮಕೃಷ್ಣಾಶ್ರಮದ ಆಶ್ರಯ, ಪ್ರಭಾವದಿಂದಲೇ ತನ್ನ ಉನ್ನತಿಯನ್ನು ಕಂಡುಕೊಂಡ, ಜಗದ್ಧಾತ್ರಿಯನ್ನು ಆರಾಧಿಸುತ್ತಿದ್ದ, ಮನಃಪೂರ್ವಕವಾಗಿ ರಾಮಕೃಷ್ಣರನ್ನು ಗುರು ಎಂದು ಸ್ವೀಕರಿಸಿ ಧೀಕ್ಷೆಯನ್ನು ಪಡೆದ, ’ಪರಬ್ರಹ್ಮ ಎನಗೆ ತಂದೆ, ಮಹಾಕಾಳಿ ಎನ್ನ ತಾಯಿ; ರಾಮಕೃಷ್ಣರೆನಗೆ ಗುರುವು, ಶ್ರೀ ವಿವೇಕಾನಂದರೆನಗೆ ಗುರುಭಾಯಿ! ಎಂದು ಹಾಡಿದ, ತನ್ನನ್ನು ತಾನು ’ರಾಮಕೃಷ್ಣಗೋತ್ರಸಂಜಾತ’ ಎಂದು ಪರಿಭಾವಿಸಿದ ಕವಿಯ ಚೇತನ, ತನ್ನ ಹುಟ್ಟು, ಮಾತೆಯ ಹಾಗೂ ಗುರುವಿನ ಸಂಕಲ್ಪದಿಂದಲೇ ಆಗಿದೆ ಎಂದು ಭಾವಿಸುತ್ತದೆ. ಆದ್ದರಿಂದಲೇ ದಕ್ಷಿಣೇಶ್ವರದಿಂದ ಹಿರೇಕೂಡಿಗೆಯವರಿಗೆ ದೇವಸೇತುವಾಗಿ ಮಹಾ ಕಾಮನಬಿಲ್ಲು ಮೂಡಿದೆ. ಆ ಕಮಾನಿನ ಮುಖಾಂತರವೆ, ಅಲ್ಲಿಂದಿಲ್ಲಿಗೆ ದೈವಕೃಪೆ ಬಂದಿಳಿಯುತ್ತದೆ, ಮಳೆಯ ರೂಪದಲ್ಲಿ - ಭವತಾರಿಣಿ ಜಗದಂಬೆಯಿಂದ ಆದೇಶಿತವಾಗಿ. ಮಳೆಯ ರೂಪದ ತಾಯಿ! ಸಹ್ಯಾದ್ರಿಗೂ ಮಳೆಗೂ ಆದ್ಯಂತ್ಯದ ನಂಟು! ಆಗ, ಮುಂದೆ ಕವಿಯನ್ನು ಸಾಕಿ, ಪೋಷಿಸಿ ಸಲುಹಲಿರುವ ಸಹ್ಯಾದ್ರಿ ತಾಯಿ ಮಹಾಬಿಲ್ಲಿನಿಂದಿಳಿದ ತಾಯಿಯನ್ನು ಸಂಧಿಸುತ್ತಾಳೆ.

ಅಮ್ಮ ನೋವಿನ ಸಮಾಧಿಯೊಳಿರೆ
ಕೇಳಿಸಿತೊಂದು ಇಂಪಿನ ಕರೆ,
ಆಕಾಶದಿಂದಿಳಿದಾ ಗಂಗೆಯ ಮೊರೆ:
ಆರಮ್ಮ ನೀನು?
ಶ್ರೀಗುರುಕೃಪೆ ನಾನು!
ಎಲ್ಲಿಂದ ಬಂದೆ?
ದಕ್ಷಿಣೇಶ್ವರದಿಂದಲೈತಂದೆ. . . .
ನೀನಾರಮ್ಮಾ, ಇಲ್ಲಿ ಸಂಭ್ರಮಿಸುತಿರ್ಪೆಯಲ್ಲಾ?
ಅಕ್ಕ, ನಾನ್ ಸಹ್ಯಾದ್ರಿಯ ಅಧಿದೇವಿ.
ನನ್ನ ಗರ್ಭದೊಳೊಂದು
ದಿವ್ಯಕೃತಿ ಆವಿರ್ಭವಿಪುದೆಂದು
ಆಕಾಶದಾದೇಶವನು ಆಲಿಸಿದೆನಿಂದು.
ಅದಕಾಗಿ ಅರಸಿ ಬಂದು ನೋಡುತಿಹೆನಿಲ್ಲಿ ನಿಂದು.
ಪರಸ್ಪರ ಪರಿಚಯವಾಗುತ್ತದೆ. ದಿವ್ಯಕೃತಿ ಆವಿರ್ಭವಿಸುವ ವಿಷಯ ತಿಳಿದ ಸಹ್ಯಾದ್ರಿ ತಾಯಿ ಸಂಭ್ರಮದಿಂದ ಗುರುಕೃಪಾಮಾತೆಗೆ ಹೇಳುತ್ತಾಳೆ. ಅದಕ್ಕೆ ಪ್ರತ್ಯುತ್ತರವಾಗಿ, ಜಗದಂಬೆಯಿಂದ ಆಶೀರ್ವಾದವನ್ನು ತಂದಿರುವ ತಾಯಿ ಕೇಳುತ್ತಾಳೆ.

ಇಲ್ಲೆಲ್ಲಿಯೊ ಹುಟ್ಟಿಹನಂತಮ್ಮಾ ಅವನು.
ಕಳುಹಿದಳೆನ್ನನು ಭವತಾರಿಣಿ ಜಗದಂಬೆ.
ಆಶೀರ್ವಾದವ ತಂದಿಹೆನು.
ತೋರುವೆಯೇನ್, ಅಮ್ಮಾ?
ತೋರುವೆ, ಬಾರಮ್ಮಾ...
ಅವನಾರೌ, ತಾಯೀ?
ಈ ಕೌತುಕವನ್ನು ಕಂಡ ಸಹ್ಯಾದ್ರಿ ’ಅವನಾರೌ ತಾಯೀ?’ ಎನ್ನುತ್ತದೆ! ಅದಕ್ಕುತ್ತರವಾಗಿ ಹೀಗೆ ಹೇಳುತ್ತಾಳೆ, ಆ ಜಗದಂಬೆಯ ದೂತಿ.

ಶ್ರೀಗುರು ಕೃಪೆಮಾಡಿಹ ವಾಗ್ದೇವಿಯ ಹೃದಯ ಶಿಶು;
ಯುಗಯುಗವೂ ದೇಶದೇಶದಲಿ ಸಂಭವಿಸುವ ಆವೇಶದ ಯಜ್ಞಪಶು:
ಇವನ ಗುರುವಹನಿಹನು ಕಾಶಿಯಲಿ,
ಭೀಷಣ ತಪೋಮಗ್ನ.
ಗುರುವಿನೆಡೆಗೊಯ್ವಾತನಿಹನು
ಮಲೆಯಾಳದಾ ಕೊಚ್ಚಿಯಲಿ,
ಅರಮನೆಯೊಳೂ ಅಣುಗ ಚಿಂತಾನಿಮಗ್ನ.
ಇವನ ಕೈಹಿಡಿದು ನಡಸೆ,
ಆಲಿಸಮ್ಮಾ,
ನನಗಿಹುದು ಇವನೊಡನೆ ಸಹಧರ್ಮಿಣಿಯ ಯೋಗಲಗ್ನ!
ಹುಟ್ಟಲಿರುವ ಶಿಶು ಗುರುಕೃಪೆ ಮಾಡಿರುವ ಸರಸ್ವತಿಯ ಪ್ರೀತಿಯ ಶಿಶು! ಇವನ ದೀಕ್ಷಾ ಗುರು (ಸ್ವಾಮಿ ಶಿವಾನಂದ) ಕಾಶಿಯಲ್ಲಿ ಸಾಧನೆ ಮಾಡುತ್ತಿದ್ದಾನೆ. ಆ ಗುರುವಿನೆಡೆಗೆ ಕರೆದೊಯ್ಯಲಿರುವಾತ ಕೇರಳದ ಅರಮನೆಯೊಂದರಲ್ಲಿ (ಸ್ವಾಮಿ ಸಿದ್ಧೇಶ್ವರಾನಂದ) ಆಗಲೇ ಹುಟ್ಟಿದ್ದಾನೆ. ಅಂತ ಮಹಾ ವ್ಯಕ್ತಿಯನ್ನು ನೀನು ಸಲುಹಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆತನೊಂದಿಗೆ ಸಹಧರ್ಮಿಣಿಯ ಯೋಗಲಗ್ನ ನನಗಿದೆ ಎನ್ನುತ್ತಾಳೆ. "ಭವತಾರಿಣಿಯ ಆಶೀರ್ವಾದಿಂದ, ಗುರುಕೃಪೆಯಿಂದ ಜನ್ಮತಾಳಿರುವ ನನಗೆ ಸತಿಯಾಗಿ ಬರುವವಳೂ ಜಗದಂಬೆಗೆ ಪ್ರೀತಿ ಪಾತ್ರಳೇ ಆಗಿರುತ್ತಾಳೆ; ಅವಳಿಗೂ ತಾಯಿಯ ಗುರುವಿನ ಆಶೀರ್ವಾದವಿರುತ್ತದೆ" ಎಂಬುದರ ಸೂಚನೆ. ಸಹ್ಯಾದ್ರಿ ತಾಯಿಗೆ ಸಂದೇಹ! ಕಾಡು ಕೊಂಪೆಯಲ್ಲೇಕೆ ಕವಿಯವತಾರವಾಗಬೇಕು? ಅದಕ್ಕಿಲ್ಲಿದೆ ಉತ್ತರ.

ಎಲ್ಲಿಂದೆಲ್ಲಿಗೆ, ತಾಯಿ?
ಜನವಿಲ್ಲದ ಈ ಕಾಡಿನ ಕೊಂಪೆಯೊಳೇಕೊ
ಆ ಕವಿಯವತಾರ?
ಓಃ! ಆ ಚೇತನಕೀ ಸಹ್ಯಾದ್ರಿಯೆ ಲಿಂಗಶರೀರ!
ಮುಂದವನಿಂದಾಗುವ ಕಜ್ಜಕೆ ಇಂದೀ
ಕಾಡೇ
ಹಾಡುತ್ತಿದೆ ನಾಂದಿ!
ಶಕ್ತಿಯ ವಿಕಸನಕಾವಶ್ಯವೀ ಸಂಸ್ಕಾರ:
ಹುಲಿಯಾರ್ಭಟೆ, ಹಕ್ಕಿಯ ಇಂಚರ, ಮೋಡದ ಸಂಚಾರ,
ದುಮುದುಮುಕುವ ಹೊಳೆನೀರಾಟ,
ಹಸುರಿನ ಹೂವಿನ ಹಣ್ಣಿನ ರಸದೂಟ!...
ನೀನ್ ಅವನೊಡನಾಡಿ;
ನೀ ದಾದಿ;
ಅವನರಳುವ ಸಿರಿನೋಟವೆ ನಿನಗೊದಗುವ ಔತಣವಾಗಿರೆ,
ಅದನಿಂದೇ ಅರಿಯುವ ಅವಸರವೇಕಮ್ಮಾ? -
ಈ ಸಹ್ಯಾದ್ರಿಯ ಘೋರಾರಣ್ಯದ ಮರೆಯ ಬಾಹುರಕ್ಷೆಯಲಿ
ತನ್ನಾ ಮಾತೃವಕ್ಷದೊಳಿರ್ಪಾತನನು ನನಗೆ ತೋರಮ್ಮಾ,
ಬೇಗ ತೋರಮ್ಮಾ!

ತೋರುವೆ, ಬಾರಮ್ಮಾ...
ನಾ ಧನ್ಯೆ!... ಬಾರಮ್ಮಾ!...
ಅದೊ ಓ ಕಾಣಮ್ಮಾ!
ಸಹ್ಯಾದ್ರಿ ಪರಿಸರದಿಂದ ಕವಿ ಕುವೆಂಪು ಪಡೆದಿರುವ ಅನುಭವ, ತನ್ಮಯತೆ, ಪ್ರೇರಣೆ, ಯಶಸ್ಸು ಎಲ್ಲವನ್ನು ಗಮನಿಸಿದಾಗ ಮೇಲಿನ ಸಾಲುಗಳು ಹೆಚ್ಚು ಅರ್ಥವತ್ತಾಗುತ್ತವೆ. ಹುಟ್ಟಿಗೊಂದು ದೈವೀ ಕಾರಣ (ಪ್ರತಿಭೆ) ಇರಬಹುದಾದರೂ, ಸಾಧನೆಗೆ ಈ ಜಗತ್ತಿನ ಸಂಸ್ಕಾರ, ವಿದ್ಯೆ, ಅನುಭವ (ವ್ಯುತ್ಪತ್ತಿ) ಇರಲೇಬೇಕು. ನಮ್ಮ ಉನ್ನತಿಗೆ ನಾವೇ ಮೆಟ್ಟಿಲಾಗಬೇಕು!

ವರ್ತಮಾನದಲ್ಲಿ ನಿಂತು, ಭೂತಕಾಲವನ್ನು ಹೊಕ್ಕು ಭವಿಷತ್‌ಕಾಲವನ್ನು ತೋರಿಸುವ ಕಾವ್ಯತಂತ್ರಗಾರಿಕೆ! 'ಶ್ಮಶಾನ ಕುರುಕ್ಷೇತ್ರಂ' ನಾಟಕದ ಕೊನೆಯ ದೃಶ್ಯವನ್ನೊಮ್ಮೆ ನೆನಪು ಮಾಡಿಕೊಳ್ಳಿ. 'ತ್ರೈಲೋಕ್ಯಸ್ಯಾಸ್ಯ ಸರ್ವಸ್ಯ ಕಾವ್ಯಂ ಭಾವಾನುಕೀರ್ತನಂ', 'ನಿಯತಿಯನಾರ್ ಮೀರ‍್ದಪರ್' ಎಂಬ ಕವಿಮಾತಿಗೆ 'ನಿಯತಿಯನ್ ಕವಿಗಳ್ ಮೀರ‍್ದಪರ್' ಎಂಬುದೇ ಉತ್ತರ! 'ಕವಿ ವರ್ಣಿಸುವ ಸಂಗತಿಗಳು ಹಿಂದೆ ನಡೆದಿರಬೇಕಾಗಿಲ್ಲ; ಅವುಗಳಲ್ಲಿ ಹಲವು ಯಥಾವತ್ತಾಗಿ ಲೋಕದಲ್ಲಿ ನಡೆಯುವ ಸಂಭವವೂ ಕಡಮೆ' ಎಂದು ಹೇಳುತ್ತಾ, ತೀನಂಶ್ರೀಯವರು ತಮ್ಮ 'ಕಾವ್ಯಮೀಮಾಂಸೆ' ಗ್ರಂಥದಲ್ಲಿ 'ನೇಮಿಚಂದ್ರ'ನ ಸುಪ್ರಸಿದ್ಧ ಪದ್ಯವನ್ನು ಉಲ್ಲೇಖಿಸುತ್ತಾರೆ. 'ಕವಿಗಳು ಅನಭಿಷಕ್ತ ಶಾಸನಕರ್ತರು' ಎಂಬ ಷೆಲ್ಲಿಯ ಮಾತುಗಳನ್ನು ಹಾಗೂ 'ಅಭಿನವ ಸೃಷ್ಟಿಕರ್ತರು' ಎನ್ನುವ ಭಾರತೀಯ ಕಾವ್ಯಮೀಮಾಂಸಕರ ದೃಷ್ಟಿಕೋನವನ್ನು ನೇಮಿಚಂದ್ರ ಒಂದು ವೃತ್ತದಲ್ಲಿ ಕಟ್ಟಿಕೊಟ್ಟಿದ್ದಾನೆ. ಅದು ಹೀಗಿದೆ:
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ
ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ನಭಮಂ
ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ
ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್ ಮುಟ್ಟಿದರ್ ಇಕ್ಕಿ ಮೆಟ್ಟಿದರ್
ಅದೇನ್ ಕವೀಂದ್ರರಾ ಅಳವೊ ಅಗ್ಗಳಮೋ!!
ಈ ಮೊದಲೆ ಹೇಳಿದಂತೆ ಲೋಕರಂಗಕ್ಕೆ ಅಸಹಜವೂ ಅಸಂಭವವೂ ಆಗಿದ್ದಿರಬಹುದಾದರೂ ಕಲಾರಂಗಕ್ಕೆ ಸಹಜವಾಗಿ ಸಲ್ಲುವ ಈ ಕವಿತೆ (ವರ್ಧನ್ತಿ) ಕಲಾಸೃಷ್ಟಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
[ಡಿಸೆಂಬರ್ 29 ಕವಿ ಜನ್ಮದಿನ. ನನ್ನ ಮುಂದಿನ ಪೋಸ್ಟ್ ಪ್ರಸಿದ್ಧ 'ಪಾಂಚಜನ್ಯ' ಕವಿತೆಯ ಸಂದರ್ಭವನ್ನು ಕುರಿತದ್ದು. ಅಷ್ಟರಲ್ಲಿ 2011 ಮುಗಿದು 2012 ಆರಂಭವಾಗಿರುತ್ತದೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು]

Monday, December 19, 2011

ಹಂಪೆಯಿದು ಕಲಿಯುಗದ ಹಸಿಯ ಹಿರಿಮಸಣ!

ಕುಪ್ಪಳಿ ಮನೆಯ ಕೌಟುಂಬಿಕ ಸರ್ವ ಸಂಕಷ್ಟಗಳ ನಡುವೆಯೇ ೧೯೨೯ರಲ್ಲಿ ಕುವೆಂಪು ಕನ್ನಡ ಎಂ.ಎ. ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆಯ ನಂತರ ಊರಿಗೆ ಓಡುವ ಅವರ ಧಾವಂತಕ್ಕೆ ಈ ಬಾರಿ ಕಡಿವಾಣ ಬೀಳುತ್ತದೆ. ಕನ್ನಡ ಎಂ.ಎ. ಡಿಗ್ರಿಯ ಒಂದು ಅವಶ್ಯ ಅಂಗವಾಗಿದ್ದ ಸಂಸ್ಕೃತಿ ಪ್ರವಾಸಕ್ಕೆ ಹೋಗಲೇಬೇಕಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಹಂಪೆಗೆ ಪ್ರವಾಸ ಹೋಗುವುದೆಂದು ತೀರ್ಮಾನವಾಗುತ್ತದೆ. ಕುವೆಂಪು ಅವರ ಜೊತೆಗೆ ಶ್ರೀಯುತರಾದ ಡಿ.ಎಲ್.ಎನ್. ಕೆ.ವೆಂಕಟರಾಮಪ್ಪ, ಬಿ.ಎಸ್.ವೆಂಕಟರಾಮಯ್ಯ, ಎನ್. ಅನಂತರಂಗಾಚಾರ್, ನಂಜುಂಡಯ್ಯ, ಭೀಮಸೇನರಾವ್ ಮತ್ತು ಮಾರ್ಗದರ್ಶಕರಾಗಿ ಶ್ರೀನಿವಾಸಚಾರ್ಲು ಎಂಬುವವರಿರುತ್ತಾರೆ. ಇಡೀ ಪ್ರವಾಸವನ್ನು ಮುಗಿಸಿ ಬಂದು 'ನಮ್ಮ ಹಂಪೆಯ ಯಾತ್ರೆ' ಎಂಬ ಸುದೀರ್ಘ ಪ್ರಬಂಧವನ್ನು ಬರೆಯುವ ಆಲೋಚನೆಯಿಂದ, ನೋಟ್ ಬುಕ್ ಕೊಂಡು ಬರೆಯಲಾರಂಭಿಸುತ್ತಾರೆ. ಆದರೆ ಅದು ಅವರು ಹೊಸಪೇಟೆಯವರೆಗಿನ ರೈಲುಪ್ರಯಾಣ ಮುಗಿಸಿ, ಹಂಪೆಗೆ ಹೋಗಲು ಬಾಡಿಗೆ ಕಾರು ಹತ್ತುವಲ್ಲಿಗೆ ಕೊನೆಗೊಳ್ಳುತ್ತದೆ. ಕಾರಣಾಂತರಗಳಿಂದ ಮುಂದುವರೆಯುವುದೇ ಇಲ್ಲ.

ಹಂಪೆಯಲ್ಲಿಯೇ ರಚಿತವಾದ ಎರಡು ಕವಿತೆಗಳ ಬಗ್ಗೆ ನೆನಪಿನ ದೋಣಿಯಲ್ಲಿ ಬರೆಯುವಾಗ ಕವಿ ಆ ಪ್ರವಾಸದ ಪ್ರಯಾಸವನ್ನು ಹೀಗೆ ಬಿಚ್ಚಿಟ್ಟಿದ್ದಾರೆ: ಇಂದೇನೊ (೧೯೭೪) ಅದನ್ನು ಒಂದು ರಕ್ಷಿತಪ್ರದೇಶವೆಂದು ಘೋಷಿಸಿ ಪ್ರಾಚೀನ ಅವಶೇಷಗಳನ್ನೆಲ್ಲ ಅಚ್ಚುಕಟ್ಟಾಗಿ ಇಟ್ಟಿದ್ದಾರಂತೆ. ಆದರೆ ಅಂದು (೧೯೨೯) ನಾವು ಕಂಡದ್ದು ದಿಕ್ಕಿಲ್ಲದ ಅನಾಥ ಪ್ರದೇಶವೆಂಬಂತಿತ್ತು. ಹೊಲಗಳ ನಡನಡುವೆ ಪೊದೆಗಳು ಕಿಕ್ಕಿರಿದು ಸುತ್ತುವರಿದ ಜಾಗಗಳಲ್ಲಿ ಅಲ್ಲೊಂದು ಇಲ್ಲೊಂದು ಮುರಿದ ವಿಗ್ರಹ, ಹಾಳುಬಿದ್ದ ಕಟ್ಟಡ ಪ್ರೇತವತ್ ನಿಂತಿದ್ದುವು. ಜೊತೆಗೆ ಆ ಉರಿಬಿಸಿಲ ಬೇಸಗೆಯಲ್ಲಿ ಏನನ್ನೂ ಶಾಂತವಾಗಿ ಸಮಾಧಾನದಿಂದ ನೋಡಲೂ ಸಾಧ್ಯವಿರಲಿಲ್ಲ. ಒಮ್ಮೆಯಂತೂ ಬಾಯಾರಿಕೆ ಹೆಚ್ಚಿ ಏನಾದರೂ ಸರಿಯೆ ಎಂಥ ನೀರಾದರೂ ಸರಿಯೆ ಸಿಕ್ಕಿದರೆ ಸಾಕು ಕುಡಿಯುತ್ತೇವೆ ಎಂದು ದೂರದಲ್ಲಿ ಹಸುರೆದ್ದು ಕಾಣುತ್ತಿದ್ದ ಒಂದು ಕಬ್ಬಿನ ಹೊಲದತ್ತ ಓಡಿದೆವು. ನೀರೇನೊ ಇತ್ತು. ಆದರೆ ಹುಳು ಮಿಜಿಮಿಜಿ ಎನ್ನುತ್ತಿತ್ತು. ಆಚಾರ್ಲು ಅವರು ನಮ್ಮನ್ನು ತಡೆದು, 'ಸ್ವಲ್ಪ ತಡೆಯಿರಿ ಕುಡಿಯಬೇಡಿ. ನಾನು ನನ್ನ ವಸ್ತ್ರದಿಂದ ಸೋಸಿ ಕೊಡುತ್ತೇನೆ. ಹುಳುಗಳಾದರೂ ಹೊಟ್ಟೆಗೆ ಹೋಗದಿರಲಿ, ನೀರು ಕೆಟ್ಟದ್ದಾದರೂ!' ಎಂದು ಅವರ ಉತ್ತರೀಯವನ್ನೆ ಸೋಸಣಿಗೆ ಮಾಡಿ ನೀರು ಹಿಂಡಿದರು, ನಮ್ಮ ಬೊಗಸೆಗಳಿಗೆ. ಆ ಕೊಳಕು ಬಗ್ಗಡದ ನೀರನ್ನೆ ಹೊಡೆತುಂಬೆ ಕುಡಿದೆವು! ಬಟ್ಟೆಗಳನ್ನು ಒದ್ದೆ ಮಾಡಿ ತಲೆಮೇಲೆ ಹಾಕಿಕೊಂಡೆವು. ಹಾಳು ಹಂಪೆ ಎಂದು ಬೈದೆವು ಅದರ ಹೆಸರನ್ನೆ ಹಿಡಿದು!

ಹೀಗೆ ಪರಿಪಾಟಲಿನಿಂದ ಕೂಡಿದ ಪ್ರವಾಸದ ನಡುವೆಯೂ ಕವಿ ಕುವೆಂಪು ಎಚ್ಚರವಾಗಿದ್ದರು! ಒಂದೇ ದಿನ, ೯.೪.೧೯೨೯ರಂದು ಎರಡು ಕವಿತೆಗಳು ಹಂಪೆಯ ಕುರಿತಂತೆ ರಚಿತವಾಗಿವೆ. 'ಹಂಪೆಯ ಭೀಮ' ಎಂಬ ಕವಿತೆ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘವು 'ಕಿರಿಯ ಕಾಣಿಕೆ'ಯ ತರುವಾಯ ಮರುವರ್ಷ ಪ್ರಕಟಿಸಿದ 'ತಳಿರು' ಎಂಬ ಕವನಸಂಗ್ರಹದಲ್ಲಿ ಅಚ್ಚಾಗಿ, ನಂತರ ಕವಿಯ 'ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ' ಕವನ ಸಂಕಲನದಲ್ಲಿ ಸೇರಿದೆ.

ಆಗ ಹಂಪೆಯ ಪ್ರದೇಶವನ್ನು ಪ್ರವೇಶಿಸುವ ಜಾಗದಲ್ಲಿ ಕೋಟೆಯ ಹೆಬ್ಬಾಗಿಲೊಂದು ಅವಶೇಷರೂಪವಾಗಿ ಉಳಿದಿರುತ್ತದೆ. ಆ ಹೆಬ್ಬಾಗಿಲಲ್ಲಿ ಕಾವಲು ನಿಂತಿರುವ ಪ್ರತಿಮೆಯನ್ನು ಭೀಮನದು ಎಂದು ಆಗ್ಗೆ ನಂಬಲಾಗಿತ್ತು. ಆಗಿನ ಆ ಪ್ರತಿಮೆಯಿದ್ದ ಸ್ಥಿತಿಯನ್ನು ಕಂಡು, 'ಅವನ ಮುಖವೆಲ್ಲ ಮುಸಲ್ಮಾನರ ದಸ್ಯುತನಕ್ಕೆ ಸಿಕ್ಕಿ ಸಿಡುಬಿನ ಕಲೆಗಳಿಂದ ಕನಿಕರ ಹುಟ್ಟಿಸುವಷ್ಟು ವಿಕಾರವಾಗಿತ್ತು, ಸುತ್ತ ಹಳು ಹಬ್ಬಿ' ಎನ್ನುತ್ತಾರೆ ಕವಿ. ಅಂದು ಅವರು ಉಳಿದುಕೊಂಡಿದ್ದ ಜಾಗದಲ್ಲಿದ್ದ ಒಂದು ಕೃತಕ ಕೊಳದ ಮೆಟ್ಟಿಲುಗಳ ಮೇಲೆ ಕುಳಿತು 'ಹಂಪೆಯ ಭೀಮ' ಕವಿತೆಯನ್ನು ಬರೆಯುತ್ತಾರೆ. ಕೋಟೆಯ ಹೆಬ್ಬಾಗಿಲನಲ್ಲಿ ನಿಟ್ಟುಸಿರು ಬಿಡುತ್ತಿರುವಂತೆ ಕಾಣುತ್ತಿರುವ ಪ್ರತಿಮೆಯನ್ನು ಕುರಿತು ಹೀಗೆ ಹೇಳುತ್ತಾರೆ.
ಕೋಟೆ ಹೆಬ್ಬಾಗಿಲಲಿ ಬಿಸುಸುಯ್ವನಿವನಾರು?
ಬಲ್ಗದೆಯ ಮೈಗಲಿಯು! ಭೀಮನೇನು?
ಕಂಬನಿಯ ಕರೆಯುತ್ತ ಮೂಕನಾಗೇಕಿಂತು
ನಿಂತಿರುವೆ, ಮಾರುತಿಯೆ? ಮಾತನಾಡು.
ಕಲ್ಲಾಗಿ, ಆದರೆ ನಿಟ್ಟುಸಿರಿಡುತ್ತಾ ಕಂಬನಿಗರೆಯುತ್ತಾ ಇರುವಂತೆ ಕಾಣುವ ಬಲ್ಗದೆಯ ಮೈಗಲಿಯ ಭೀಮನ ಪ್ರತಿಮೆ ಕವಿಗೆ ಹಲವು ಸಂದೇಹಗಳನ್ನು ಹುಟ್ಟುಹಾಕುತ್ತದೆ. ಭೀಮ ಅಳುವುದೆಂದರೇನು? ಆದರೆ ಆ ವಿಗ್ರಹದ ಮುಖದ ಮೇಲೆ ಬಿದ್ದಿದ್ದ ಏಟುಗಳು ಕಣ್ಣಿಗೂ ಬಿದ್ದು ಕಣ್ಣಿನ ಕೆಳಗೂ ಕಲ್ಲು ಚೆಕ್ಕೆಯೆದ್ದು ಕಂಬನಿ ಉದುರುವಂತೆ ತೋರುತ್ತಿತ್ತು. ಆ ಪ್ರತಿಮೆಯ ದೃಷ್ಟಿ ಶೂನ್ಯತೆಯನ್ನು ದೃಷ್ಟಿಸುತ್ತಿರುವಂತೆ ಕವಿಗೆ ಕಂಡಿದೆ. ಅಷ್ಟಕ್ಕೂ ವೀರರ ವೀರನಾದ ಭೀಮ ಹಾಳೂರನ್ನು ಪಾಳ್ನೆಲವನ್ನು ಕಾಯುವುದೆಂದರೇನು?
ಬೀರ, ಬೀರರ ಬೀರ, ಕಲ್ಲಾಗಿ ನೀನಿಂತು
ಹಾಳೂರ ಬಾಗಿಲನು ಕಾಯುತಿಹೆಯೇನು?
ಧರಣಿಪರು, ಮಂತ್ರಿಗಳು, ಸೈನಿಕರು, ಕಬ್ಬಿಗರು
ಬಿಟ್ಟಳಿದ ಪಾಳ್ನೆಲವ ಕಾಯುತಿಹೆಯೇನು?
ಸೊನ್ನೆ ದಿಟ್ಟಿಯನಟ್ಟಿ ಶೂನ್ಯತರ ಶೂನ್ಯವನು
ಮನದಿ ಮರುಕವನಾಂತು ನೆನೆವೆಯೇನು?
ನೀನು ಬಾಗಿಲ ಕಾಯುತಿರ್ದೊಡಂ ಹಂಪೆಯಿದು
ಮುಸಲರಿಂ ಹಸಿಮಸಣವಾದುದೇನು?
ನಿನ್ನಣ್ಣ ಹನುಮಂತನಿಲ್ಲಿರ್ದೊಡಂ ಬಂದು
ನಿನಗೆ ನೆರವಾಗಿದನು ಪೊರೆಯಲಿಲ್ಲೇನು?
ಭೀಮ ಕಾವಲು ಕಾಯುವುದೇ ಹೆಚ್ಚಿನ ಸೋಜಿಗಕ್ಕೆ ಕಾರಣವಾಗಿರುವಾಗ, ಭೀಮ ಕಾವಲಿಗಿದ್ದರೂ ಹಂಪೆ ಹಸಿಮಸಣವಾಗಬೇಕಾಯಿತೆ ಎಂಬುದು ಇನ್ನಷ್ಟು ಸೋಜಿಗವನ್ನುಂಟುಮಾಡುತ್ತದೆ. ಅದಕ್ಕೂ ಹೆಚ್ಚಾಗಿ ಹಂಪಿಯ ಭೂ ಪ್ರದೇಶವನ್ನು ರಾಮಾಯಣದ ಕಿಷ್ಕಿಂಧೆಯ ಜೊತೆಗೆ ಸಮೀಕರಿಸಲಾಗುತ್ತದೆ. ಕಿಷ್ಕಿಂಧೆ ಹನುಮನಿದ್ದ ಜಾಗ. ಹನುಮ ಭೀಮನ ಅಣ್ಣ! ಆ ಅಣ್ಣನೂ ಈ ತಮ್ಮನ ಸಹಾಯಕ್ಕೆ ಬರಲಿಲ್ಲವೇ? ಎಂಬುದು ಕವಿಯ ಪ್ರಶ್ನೆ. ಕವಿಯ ಮನೋಭಿತ್ತಿಯಲ್ಲಿ, ಪಂಪ-ರನ್ನರ ಮಹಾಕಾವ್ಯಗಳಲ್ಲಿ, ಮಹಾಭಾರತದ ಯುದ್ಧರಂಗದಲ್ಲಿ ರುದ್ರಭಯಂಕರನಾಗಿ, ವೀರಾವೇಶದಿಂದ ಕಾದಾಡಿದ, ಕಾದಾಡಿ ಗೆಲ್ದು, ದುಶ್ಯಾಸನನ ರಕ್ತವನ್ನು ಕುಡಿದ ದೈತ್ಯಭಯಂಕರನಾಗಿ ಚಿತ್ರಿತವಾಗಿದ್ದ ಭೀಮ, ಇಲ್ಲಿ ಈ ಹಾಳು ಹಂಪೆಯಲ್ಲಿ ಕಣ್ಣಿರು ಸುರಿಸುತ್ತ ನಿಲ್ಲಬೇಕಾಯಿತೆ ಎಂದು ವಿಸ್ಮಿತರಾಗುತ್ತಾರೆ.
ರನ್ನಪಂಪರ ಮಹಾಕಾವ್ಯರಸರಂಗದಲಿ
ಭಾರತದ ಕೊಳುಗುಳದಿ ನಿನ್ನ ನೋಡಿಹೆನು.
ಕಂಬನಿಯ ಕರೆವ ಭೀಮನನಲ್ಲಿ ಕಂಡಿಲ್ಲ;
ಜಯಮತ್ತ ರುದ್ರ ಮಾರುತಿಯ ಕಂಡೆ!
ನಮಿಸುವ ಹಿಮಾಲಯವ ಕಂಡು ವಿಸ್ಮಿತನಾದೆ,
ಹಂಪೆಯಲಿ, ಭೀಮ, ನೀನಳುವುದನು ಕಂಡು!
ತಿರುಗವೀ ಗದೆಯೇಕೆ ನಿಸ್ಪಂದವಾಗಿಹುದು?
ಮೈಮರೆತು ಗೋಳಿಡುತ ನೀನಾರ ನೆನೆವೆ?
ಇಲ್ಲಿಗೈತಹ ಯಾತ್ರಿಕರ ಎದೆಯ ಮೂಷೆಯಲಿ
ಹಾಳಾದ ಐಸಿರಿಯ ಕಿಚ್ಚ ಮರುಕೊಳಿಸು!
ಅಣಕಿಸೆಮ್ಮನು, ವೀರ; ಹೆಂಬೇಡಿಗಳು ನಾವು!
ನಿನ್ನ ಗದೆಯಾಘಾತದಿಂದೆಚ್ಚರುವೆವು!
ಹೇ ವೀರಮೂರ್ತಿಯೇ, ಹಂಪೆಯೀ ಮಸಣದಲಿ
ಭೈರವಾಶ್ರುವ ಚೆಲ್ಲಿ ಮೌನದಲಿ ನಿಲ್ಲು!
ಯಾತ್ರಿಕರ ಹೃದಯದಲಿ ಕೆಚ್ಚೂರಿ, ನೆಚ್ಚೂರಿ,
ಹೆಂಬೇಡಿಗಳನೆಲ್ಲ ನಿನ್ನೆಡೆಗೆ ಗೆಲ್ಲು!
ಪ್ರತಿಮೆಯ ಕೈಯಲ್ಲಿರುವ ಬಲ್ಗದೆ ಈಗ ಕಲ್ಲಿನ ಗದೆ ಮಾತ್ರ; ನಿಷ್ಪಂದವಾಗಿದೆ. ಆ ಗದೆ ಚಲಿಸಬೇಕು. ಅದರ ಚಲನೆಯಿಂದ ಹೆಂಬೇಡಿಗಳಾದ ನಮ್ಮ ಜಡತೆ ತೊಲಗಬೇಕು. ಇಲ್ಲಿ ಬರುವ ಪ್ರತಿಯೊಬ್ಬ ಯಾತ್ರಿಕನ ಎದೆಯಲ್ಲಿ ಕೆಚ್ಚನ್ನೂ ನೆಚ್ಚನ್ನೂ ಈ ಪ್ರತಿಮೆ ದಯಪಾಲಿಸುತ್ತದೆ ಎಂದು ಕವಿ ನಂಬುತ್ತಾರೆ.

ಎರಡನೆಯ ಕವಿತೆ 'ಹಂಪೆಯಲ್ಲಿ' ಎಂಬುದು ಮೊದಲು 'ಕದರಡಕೆ' ಸಂಕಲನದಲ್ಲಿದ್ದು, ನಂತರ 'ಪ್ರೇತ ಕ್ಯೂ' ಸಂಕಲನಕ್ಕೆ ಮೊದಲ ಕವಿತೆಯಾಗಿ ವರ್ಗಾಯಿಸಲ್ಪಟ್ಟಿದೆ. ಕವಿತೆ, ಹಂಪೆಯನ್ನು ನೋಡಲು ಬರುವ ಯಾತ್ರಿಕನನ್ನು ಉದ್ದೇಶಿಸಿ, ಹಂಪೆಯ ಮಹತ್ವವನ್ನು ಕುರಿತು ಮಾತನಾಡುತ್ತದೆ. ಹಂಪೆಯ ಮಹಿಮೆ ಗೊತ್ತಿಲ್ಲದಿದ್ದರೂ ಹುಳು ಹಿಡಿದ ಅದರ ಹೆಣವನ್ನಾದರೂ ಯಾತ್ರಿಕರು ಬಂದು ನೋಡಬೇಕು ಎಂದು ಆಶಿಸುತ್ತಾರೆ.
ಬಾ ಇಲ್ಲಿ, ಬಾ ಇಲ್ಲಿ; ಕನ್ನಡಿಗ, ಬಾ ಇಲ್ಲಿ:
ಮೈಮೆಯನು ಕಂಡರಿಯದಿಹ ನೀನು, ನೋಡದರ
ಹುಳು ಹಿಡಿದ ಹೆಣವನಾದರು, ನೋಡು ಬಾ ಇಲ್ಲಿ!
ಸ್ಮಶಾಣದಲ್ಲಿ ಸಾಧನೆ ಮಾಡುವ ಸಾಧಕರಿಗೆ ಹಂಪೆ ಕಲಿಯುಗದ ಹಸಿಯ ಹಿರಿಮಸಣ ಎನ್ನುತ್ತಾರೆ. ಮಸಣದಲ್ಲಿ ಶವಗಳನ್ನು ದಹಿಸುವಾಗ ಶವದ ತಲೆಬುರುಡೆ ಸಿಡಿಯುತ್ತದೆ. ಆದರೆ ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಈ ಹಂಪೆಯಲ್ಲೇ ಎನ್ನುತ್ತಾರೆ! ಕಂಬನಿಯಿರುವ ಕಬ್ಬಿಗ ಕಣ್ಣೀರು ಸುರಿಸಬೇಕಾಗಿರುವುದು ಇಲ್ಲಿಯೇ ಎಂದು ಭಾವಿಸುತ್ತಾರೆ
ಮಸಣದಲಿ ಜಾನಿಪೊಡೆ, ಸಾಧಕನೆ, ಬಾ ಇಲ್ಲಿ:
ಹಂಪೆಯಿದು ಕಲಿಯುಗದ ಹಸಿಯ ಹಿರಿಮಸಣ!
ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಇಲ್ಲೆ:
ನಿನಗೆ ಕಂಬನಿ ಇದೆಯೆ? ಕಬ್ಬಿಗನೆ ಸುರಿಸು ಬಾ.
ತೀರ್ಥಯಾತ್ರೆಗೆಂದು ಕಾಶಿಗೆ ಹೋಗುವ ಯಾತ್ರಿಕರು ಅಲ್ಲಿಗೆ ಹೋಗಬೇಕಾಗಿಲ್ಲ; ಅವರು ಬರಬೇಕಾದ್ದು ಇಲ್ಲಿಗೆ. ಏಕೆಂದರೆ ಇದು ದಕ್ಷಿಣದ ಕಾಶಿ. ಇಲ್ಲಿಯ ಮಣ್ಣು ಮರಣದಿಂದ ಪವಿತ್ರವಾಗಿದೆ. ಸಾವೂ ಪವಿತ್ರವಾಗಿರುವುದು ಇಲ್ಲಿ ಮಾತ್ರ. ಇಲ್ಲಿ ವಿರೂಪಾಕ್ಷನಿದ್ದಾನೆ; ದುರಂತವೆಂದರೆ, ಆತನೇ ಭಕ್ತನೆದುರು ಕಣ್ಣೀರು ಸುರಿಸುತ್ತಿದ್ದಾನೆ!
ಕಾಶಿಗೇತಕೆ ಹೋಗುತಿಹೆ ಯಾತ್ರಿಕನೆ ನೀನು?
ಹಂಪೆ ತೆಂಕಣ ಕಾಶಿ: ಬೀರದಿಂ ಪುಡಿಪುಡಿಯೂ
ಮರಣದಿ ಪವಿತ್ರತರವಾದ ಕಾಶಿಯಿದು ಕೇಳ್.
ಯೋಗಿ ವಿದ್ಯಾರಣ್ಯನಡಿಯ ಪುಡಿ ಇಹುದಿಲ್ಲಿ;
ಮೃತ್ಯು ಪಾವನಗೈದ ಶುಭತರಕ್ಷೇತ್ರವಿದು!
ಪಾಳಾದ ಕನ್ನಡಾರಾಮವಿದು! ಕನ್ನಡಿಗ
ಯಾತ್ರಿಕನೆ, ಬಾ ಇಲ್ಲಿ! ಬೇಡುವೆನು, ಬಾ ಇಲ್ಲಿ!
ಹಂಪೆಯ ವಿರೂಪಾಕ್ಷ ಭಕ್ತರನೆದುರು ನೋಡಿ
ಕಂಬನಿಯ ಸೂಸುತಿಹನಿಲ್ಲಿ; ಬಾ ಇಲ್ಲಿ!
ಏಕಾಂಗಿಯಾಗಿಹನು! ಅಯ್ಯೊ ಬೇಸತ್ತಿಹನು
ಭಗವಂತ! ಓಡಿ ಬಂದಪ್ಪುವನು ಭಕ್ತನನು!
ಬಾ, ಇಲ್ಲಿ ಬಾ! ಬಾ, ಇಲ್ಲಿ ಬಾ!
ಈ ಕವಿತೆಗಳೊಂದಿಗೆ ಹಂಪಿಯ ಪ್ರವಾಸವನ್ನು ಕವಿ ಕೈವಾರಿಸುವುದು ಹೀಗೆ: ಒಟ್ಟಿನಲ್ಲಿ ನಾವು ಕಂಡದ್ದು ಹುಳುಹಿಡಿದ ಹೆಣದಂತಿದ್ದರೂ ವಿರೂಪಾಕ್ಷ ದೇವಸ್ಥಾನ, ಮತ್ತು ಮತಂಗ ಪರ್ವತದ ಪಾದವನ್ನು ತೊಳೆಯುತ್ತಾ ಹರಿಯುತ್ತಿರುವ ತುಂಗಭದ್ರೆಯ ಮಳಲದಿಣ್ಣೆಯ ಮೇಲೆ ಕುಳಿತು ಕಂಡ ದೃಶ್ಯದಂತಹುಗಳು ನಮ್ಮ ಪ್ರವಾಸದ ಹರ್ಷಬಿಂದುಗಳಾಗಿದ್ದುವು. ಸಹ್ಯಾದ್ರಿಯ ರುದ್ರ ರಮಣೀಯ ಪ್ರಕೃತಿ ಸೌಂದರ್ಯದ ಮಧ್ಯೆ ಹುಟ್ಟಿ ಬೆಳೆದು ಅದನ್ನು ಹೀರಿಕೊಂಡ ಕವಿಯ ಚೇತನಕ್ಕೆ ಅಲ್ಲಿಯ ನಿಸರ್ಗ ಅಷ್ಟೇನೂ ಆಕರ್ಷಣೀಯವಾಗಿರಲಿಲ್ಲ. ಹಿಂದೆ ಇದ್ದುದರ ನೆನಪಿನಿಂದಲೆ ಅದು ನಮ್ಮ ಹೃದಯಕ್ಕೂ ಮನಕ್ಕೂ ತುಷ್ಟಿಯೊದಗಿಸಬೇಕಾಗಿತ್ತು.
ಹಾಗಾದರೆ, ಯಾತ್ರೆಯ ದೃಷ್ಟಿಯಿಂದ ಹಂಪೆಯ ಪ್ರವಾಸ ಕವಿಗೆ ನಿರುಪಯೋಗವೇ? ಕಾಣುವ ಕಣ್ಣಿರುವ ಕವಿಗೆ ಯಾವುದೂ ವ್ಯರ್ಥವಲ್ಲ; ನೀರೆಲ್ಲವೂ ತೀರ್ಥ! ಸುಗ್ರೀವ-ಆಂಜನೇಯರ ಆತಿಥ್ಯದಲ್ಲಿ ಕಿಷ್ಕಿಂದೆ(ಹಂಪೆ)ಯಲ್ಲಿ ಸೀತಾನ್ವೇಷಣೆಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಒಂದು ಸಂಜೆಯ ಚಿತ್ರಣ ಹೀಗೆ ಬಂದಿದೆ.
ಹಂಪೆಯ ಸರೋವರಂ ಪೆಂಪಿನೋಕುಳಿಯಾಗೆ
ಕೆಂಪೆರಚಿದುದು ಸಂಜೆ. ನಿಂದುದಪ್ರತಿಹತಂ
ತೀರರುಹ ದೈತ್ಯಗಾತ್ರದ ತಾಳತರುಪಂಕ್ತಿ.
ಬೈಗುವಿಸಿಲಾನ್ತದರ ನೆತ್ತಿಯ ನೆಳಲ ನೀಳ್ಪು
ಜಂಗಮತೆವೆತ್ತಿರ್ದುದುದಯಗಿರಿ ಯಾತ್ರಿ: ಹಾ,
ಭಂಗವಾದುದೆ ಯಾತ್ರೆ?
'ಶ್ರೀ ರಾಮಾಯಣದರ್ಶನಂ' ಮಹಾಕಾವ್ಯದಲ್ಲಿ ಹಾಳುಹಂಪೆಯ ಉಪಮೆಯನ್ನು ಸಾಂದರ್ಭಿಕವಾಗಿ ಪ್ರಯೋಗಿಸುವುದನ್ನು ನೋಡಿದಾಗ, ಹಾಳುಹಂಪೆಯ ಚಿತ್ರ ಕವಿಯ ಮನೋಭಿತ್ತಿಯಿಂದ ಎಂದೂ ದೂರವಾಗಲೇ ಇಲ್ಲವೇನೋ ಅನ್ನಿಸುತ್ತದೆ. ರಾಮ ಕಾಡಿಗೆ ಹೋದ ಮೇಲೆ, ದಶರಥನ ಮರಣವಾದ ಮೇಲೆ, ಕೇಕಯಪುರದಲ್ಲಿ ಅಜ್ಜನ ಮನೆಯಲ್ಲಿದ್ದ ಭರತ-ಶತ್ರುಘ್ನರು ಅಯೋಧ್ಯೆಗೆ ಬರುತ್ತಾರೆ. ಪುರಪ್ರವೇಶಕ್ಕೂ ಮುನ್ನ ಪ್ರತಿಮಾಗೃಹಕ್ಕೆ ಹೋಗಿ ಪಿತೃದೇವತೆಗಳಿಗೆ ನಮಸ್ಕರಿಸುವಾಗ ಸಾಲಿನ ಕಡೆಯಲ್ಲಿದ್ದ ದಶರಥನ ಪ್ರತಿಮೆ, ಅವರಿಗೆ ದಶರಥನ ಮರಣವನ್ನು ಖಚಿತಪಡಿಸುತ್ತದೆ. ಅಲ್ಲಿಂದ ಅಯೋಧ್ಯಾನಗರಿಯನ್ನು ಪ್ರವೇಶ ಮಾಡಿದ ಭರತ-ಶತ್ರುಘ್ನರ ಸ್ಥಿತಿಯನ್ನು ಹಾಳುಹಂಪೆಯನ್ನು ಹೊಕ್ಕ ಕನ್ನಡಿಗರ ಸ್ಥಿತಿಗೆ ಕವಿ ಹೋಲಿಸುತ್ತಾರೆ. ಆ ಸಾಲುಗಳು ಹೀಗಿವೆ:
................ ಗುಡಿಸದಿವೆ ಬೀದಿಗಳು.
ಮುಚ್ಚದಿವೆ ಮನೆಮನೆಯ ಬಾಗಿಲ್ಗಳುಂ, ಪೆಣಂ
ಬಾಯ್ವಿಟ್ಟವೋಲಂತೆ, ಬದುಕಿರ್ಪ ಚಿಹ್ನೆಯನೆ
ನೀಗಿ. ರಂಗೋಲಿಗಳ ಕುರುಹಿಲ್ಲ; ಪೊಸತಳಿರ್
ತೋರಣದ ಸುಳಿವಿಲ್ಲ. ಕೇಳಿಸದು ಗುಡಿಗಳಲಿ
ಗಂಟೆದನಿ. ಪರಿಮಳದ್ರವ್ಯಗಳ ಕಂಪಿಲ್ಲ. ಮೇಣ್
ಮಂದಿಯ ಚಲನೆಯಿಲ್ಲ: ಹಾಳು ಹಂಪೆಯ ಹೊಕ್ಕ
ಕನ್ನಡಿಗರಂತಾದರೈ ಕುದಿವೆದೆಯ ಭರತನುಂ
ಶತ್ರುಘ್ನನುಂ!...........
ಯಾರೋ ಯಾವಾಗಲೋ ರಚಿಸಿದ ಯಾವುದೋ ಕಲಾಕೃತಿ ಕಾಲ-ದೇಶಗಳನ್ನು ಮೀರಿ ಸಹೃದಯನ ಸ್ವತ್ತಾಗುವುದೇ ಹೀಗೆ!

Saturday, December 17, 2011

'ಅನ್ನರತ್ನಾಕರ'ಗೆ ಶ್ರದ್ಧಾಂಜಲಿ

'ನೇಗಿಲಯೋಗಿ' ಕವಿತೆ ಸೃಷ್ಟಿಯಾದ ಸಂದರ್ಭದ ಬಗ್ಗೆ ಬರೆಯುತ್ತಿದ್ದಾಗ, ಇನ್ನೆರಡು ರೈತಪರ ಗೀತೆಗಳನ್ನು ಗಮನಿಸಿದ್ದೆ, 'ನೇಗಿಲಯೋ'ಗಿ ಲೇಖನವೇ ದೀರ್ಘವಾದ್ದರಿಂದ, ಆ ಎರಡೂ ಕವಿತೆಗಳ ಬಗ್ಗೆ ಬರವಣಿಗೆಯನ್ನು ಮುಂದೂಡಿದ್ದೆ. ಅದರಲ್ಲಿ ಒಂದು ಅನ್ನರತ್ನಾಕರಗೆ' ಎಂಬುದು. ಆಗ, ನನಗೆ ಮುಂದೊಂದು ದಿನ ಈ ಕವಿತೆಯ ಕೇಂದ್ರಬಿಂದುವಾಗಿದ್ದ ರತ್ನಾಕರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಈ ಕವಿತೆಯ ಬಗ್ಗೆ ಬರೆಯಬೇಕಾಗುತ್ತದೆ ಎಂಬ ಕಲ್ಪನೆ ಇರಲಿಲ್ಲ.

ಹೌದು. ಶ್ರೀ ದೇವಂಗಿ ರಾಮಣ್ಣಗೌಡ ರತ್ನಾಕರ ಅವರು ೧೬.೧೨.೨೦೧೧ ಶುಕ್ರವಾರ ಬೆಳಿಗ್ಗೆ ನಿಧನರಾದರೆಂಬ ಸುದ್ದಿ ಬಂದಿದೆ. ರತ್ನಾಕರ ಅವರು ಕುವೆಂಪು ಅವರ 'ಪೂರ್ಣಾಂಗಿ' ಶ್ರೀಮತಿ ಹೇಮಾವತಿಯವರ ಕಿರಿಯ ಸಹೋದರ. ಶಿವಮೊಗ್ಗೆಯಲ್ಲಿ ದೇವಂಗಿ ರಾಮಣ್ಣಗೌಡರು ವಾಸವಾಗಿದ್ದ ಮನೆಯಲ್ಲಿಯೇ ವಾಸಿಸುತ್ತಿದ್ದರು. ಹಾಕಿ, ಪುಟ್ಬಾಲ್, ಕ್ರಿಕೆಟ್ ಕ್ರೀಡೆಗಳಲ್ಲಿ ಉತ್ತಮ ಆಟಗಾರರಾಗಿದ್ದ ರತ್ನಾಕರ ಅವರು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಶಿವಮೊಗ್ಗವನ್ನು ಪ್ರತಿನಿಧಿಸಿದ್ದರು.

ವಿದ್ಯಾರ್ಥಿಯಾಗಿದ್ದಾಗಲೇ ಸ್ವತಂತ್ರ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಸ್ವತಂತ್ರದ ರಜತಮಹೋತ್ವ ವರ್ಷದಲ್ಲಿ ಸರ್ಕಾರ ಇವರನ್ನು ಗೌರವಿಸಿತ್ತು. ಶಿವಮೊಗ್ಗೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಸ್ಥಾಪಕ ಸದಸ್ಯರಾಗಿದ್ದರು. ಹಾಲಿ ಅಧ್ಯಕ್ಷರಾಗಿದ್ದರು. ತಂದೆಯವರಿಂದ ಬಂದಿದ್ದ ಅಡಿಕೆ ಮಂಡಿಯನ್ನು ನಡೆಸುತ್ತಿದ್ದರು. ಮಂಡಿ ಮರ್ಚೆಂಟ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿದ್ದರು. ಮಂಡಿ ಮರ್ಚೆಂಟ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಂಘದ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು. ಶಿವಮೊಗ್ಗ ಹತ್ತು ಹಲವಾರು ಸಂಘಸಂಸ್ಥೆಗಳೊಂದಿಗೆ ಒಡನಾಟವಿಟ್ಟುಕೊಂಡು ಶಿವಮೊಗ್ಗದ ಸಾಮಾಜಿಕ ಹಾಗೂ ಶೈಕ್ಷಣಿಕ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ.

ಚಿಕ್ಕಂದಿನಿಂದಲೂ ಕುವೆಂಪು ಅವರೊಂದಿಗೆ ಒಡನಾಟವಿತ್ತು. ನವಿಲುಕಲ್ಲು ಗುಡ್ಡಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗುತ್ತಿದ್ದ ಕವಿಯ ಹಿಂದೆ ಕೋವಿ ಹೊತ್ತು, ಅವರಿಗಿಂತ ಸುಮಾರು ಇಪ್ಪತ್ತು ವರ್ಷ ಚಿಕ್ಕವರಾಗಿದ್ದ ರತ್ನಾಕರ ಹೋಗುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಕುವೆಂಪು ಅವರು ಉಳಿಯುತ್ತಿದ್ದುದ್ದು ರತ್ನಾಕರ ಅವರ ಮನೆಯಲ್ಲಿಯೇ. ಆಗೆಲ್ಲಾ ಕುವೆಂಪು ಅವರ ಜೊತೆ, ಕಾಡು ಸುತ್ತುವುದಕ್ಕೆ, ಕುವೆಂಪು ಅವರನ್ನು ವಾಕಿಂಗಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಒಮ್ಮೆ ವಾಕಿಂಗ್ ಹೋಗಿದ್ದಾಗಲೇ ಬಲವಾದ ಹಂದಿಯೊಂದನ್ನು ಬೇಟೆಯಾಡಿದ್ದನ್ನು ತಾರಿಣಿಯವರು ಉಲ್ಲೇಖಿಸಿದ್ದಾರೆ. ಕುವೆಂಪು ಅವರನ್ನು 'ಪುಟ್ಟಬಾವ' ಎಂದು ಕರೆಯುತ್ತಿದ್ದ ರತ್ನಾಕರ ಅವರು, ಕುವೆಂಪು ಅವರೊಂದಿಗೆ ಹಲವಾರು ಬಾರಿ ನವಿಲುಕಲ್ಲು ಗುಡ್ಡಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗಿದ್ದರು.

ರತ್ನಾಕರ ಅವರು ಒಳ್ಳೆಯ ಬೇಟೆಗಾರರಾಗಿದ್ದರು. ನರಭಕ್ಷಕಗಳಾಗಿದ್ದ ಹುಲಿಗಳನ್ನು ಕೊಂದು ಶಿವಮೊಗ್ಗೆ ಜಲ್ಲೆಯಲ್ಲಿ ಮನೆಮಾತಾಗಿದ್ದರು. ಶಿಕಾರಿಪುರ ಪ್ರದೇಶದಲ್ಲಿ ನರಭಕ್ಷಕ ಹುಲಿಯೊಂದನ್ನು ಹೊಡೆದಾಗ ಅವರಿನ್ನೂ ಅಪ್ರಾಪ್ತ ವಯಸ್ಸಿನ ಬಾಲಕರಾಗಿದ್ದರು. ಹುಲಿಬೇಟೆಗೆ ಒಪ್ಪಿಗೆ ಪಡೆಯಲು ಡಿ.ಸಿ. ಮುನಿನಂಜಪ್ಪ ಎಂಬುವವರು ಮೊದಲಿಗೆ ಒಪ್ಪದಿದ್ದರೂ ಜನರ ಒತ್ತಾಯದ ಮೇರೆಗೆ ಒಪ್ಪಿಗೆ ಕೊಟ್ಟಿದ್ದರಂತೆ. ಕೆದಂಬಾಡಿ ಜತ್ತಪ್ಪರೈ ಅವರ ಶಿಕಾರಿ ಅನುಭವಗಳು ಪುಸ್ತಕ ಪ್ರಕಟವಾದ ಮೇಲೆ ಅದನ್ನು ಓದಿದ ಕುವೆಂಪು ಅವರು, ಶ್ರೀ ಸುಬ್ಬರಾಯಾಚಾರ್ಯ ಎಂಬುವವರನ್ನು ಬೇಟೆಯ ಅನುಭವಗಳನ್ನು ಕೇಳಿ ಬರೆದುಕೊಂಡಬರಲು ರತ್ನಾಕರ ಅವರಲ್ಲಿಗೆ ಕಳುಹಿದ್ದರಂತೆ. ಸರಿಯಾಗಿ ಎಲ್ಲಾ ಅನುಭವಗಳನ್ನು ಹೇಳಲು ರತ್ನಾಕರ ಅವರಿಗಿದ್ದ ಸಮಯಾಭಾವದಿಂದ ಪುಸ್ತಕ ಬರುವುದು ನಿಂತು ಹೋಯಿತಂತೆ. ಕುವೆಂಪು ಶಿವಮೊಗ್ಗೆಗೆ ಪೋನು ಮಾಡಿದಾಗಲೆಲ್ಲಾ, ರತ್ನಾಕರ ಇತ್ತೀಚಿಗೆ ಏನು ಶಿಕಾರಿ ಮಾಡಿದ್ದಾನೆ ಎಂದು ವಿಚಾರಿಸುತ್ತಿದ್ದರಂತೆ. ರತ್ನಾಕರ ಅವರಿಗೆ ಅರವತ್ತು ವಯಸ್ಸಾದಾಗ, ಇನ್ನು ಶಿಕಾರಿ ಸಾಕು ಎಂದು ಹೇಳಿದ್ದರಂತೆ.

ರತ್ನಾಕರ ಅವರು ಪ್ರಗತಿಪರ ರೈತರಾಗಿದ್ದರು. ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯಿತ್ತು. ಕೃಷಿಯನ್ನು ಒಂದು ತಪಸ್ಸಿನಂತೆ ಅವರು ಧ್ಯಾನಿಸುತ್ತಿದ್ದರು. ೧೯೫೭ರಲ್ಲಿಯೆ, ಅವರ ಕೃಷಿ ಸಾಧನೆಯನ್ನು ಗಮನಿಸಿ, ಅಂದಿನ ಮೈಸೂರು ಸರ್ಕಾರ ಸನ್ಮಾನಪತ್ರ ನೀಡಿ ಗೌರವಿಸಿತ್ತು. ೧೯೬೭ರಲ್ಲಿ ಬತ್ತದ ಬೆಳೆಯಲ್ಲಿ ದಾಖಲೆ ನಿರ್ಮಿಸಿದ್ದರು. ಆ ಸಂದರ್ಭದಲ್ಲಿ, ೨೩.೧೦.೧೯೬೭ ಸೋಮವಾರ ಶಿವಮೊಗ್ಗಕ್ಕೆ ಬಂದ ಕುವೆಂಪು ಅವರು, ರತ್ನಾಕರ ಅವರ ಬತ್ತದ ಗದ್ದೆಗೆ ಬೇಟಿ ಕಡೊತ್ತಾರೆ. ಆಗ ರಚಿತವಾದುದ್ದೇ 'ಅನ್ನರತ್ನಾಕರಗೆ' ಎಂಬ ಕವಿತೆ.
ನೀ ಬರಿಯ ಹೆಸರಿಂದೆ ರತ್ನಾಕರನೆ? ಅಲ್ತು:
ತಾಯಿ ಭಾರತಿಗುದರ ನೈವೇದ್ಯಮಂ ನೀಡಿ
ಹೊರೆಯುತಿಹ ಅನ್ನರತ್ನಾಕರನೆ ದಲ್! ದರ್ಶಿಸುತೆ
ನಿನ್ನ ಈ ಶಾಲಿ ಸಂಪನ್ ಮಹೀಲಕ್ಷ್ಮಿಯಂ
ಕೈಮುಗಿದೆ, ಮಣಿದೆ, ಬೆರಗಾದೆ! ನಿನ್ನಂತೆವೋಲ್
ಬೆಳೆವರಿದ್ದರೆ ಅಮ್ಮ ಭಾರತಿಗೆ ಇಂದಿರುತಿತ್ತೆ
ಅನ್ನಭಿಕ್ಷಾಟನೆಯ ಗೋಳ್?-
(ಅರವತ್ತರ ದಶಕದಲ್ಲಿ ಭಾರತದಲ್ಲಿ ದುರ್ಬಿಕ್ಷವಿತ್ತು. ಆಹಾರ ದಾನ್ಯಗಳಿಗಾಗಿ ಮುಂದುವರೆದ ದೇಶಗಳ ಮೇಲೆ ಭರತದ ಅವಲಂಬನೆ ಮುಂದುವರೆದಿತ್ತು. ಅದನ್ನು ಅನ್ನಬಿಕ್ಷಾಟನೆ ಎಂದು ಕರೆದಿದಿದ್ದಾರೆ.)
ಓಡುವನ್ನೆಗ ಚಕ್ಷು
ದಟ್ಟಯ್ಸಿ ಹಚ್ಚನೆಯ ಕಂಗೊಳಿಸುವೀ ಇಕ್ಷು
ನಾಡೆದೆಗೆ ಕೆಚ್ಚೀವ ಸಕ್ಕರೆಯ ಸಾಕ್ಷಿ!-
ಸಮರ ಸನ್ನದ್ಧ ಐನಿಕ ವೀರ ಭಂಗಿಯಿಂ
ಗೊನೆ ಹೊತ್ತು ನಿಂತಿರುವ ಈ ಕೌಂಗು ತರುಪಂಕ್ತಿಗಳ್
ಅರ್ಥ ರಕ್ಷೆಗೆ ದೀಕ್ಷೆವೆತ್ತಿವೆ, ಕವಾತಿನೊಲ್,
ಕೋವಿಹೆಗಲಾದಂತೆ ವಾಣಿಜ್ಯ ಸಾಮ್ರಾಜ್ಯದೊಂದು ದಂಡು:
ಒಂದೊಂದು ಅಡಕೆಯೂ ದಾರಿದ್ರ್ಯದೆದೆಗೆ ಗುರಿಯಿಟ್ಟ ಗುಂಡು!
ಚೀಣ ಪಾಕಿಸ್ತಾನಗಳಿಗೆ ಮಾರಾಂತ ಕಲಿ ಕೃಷಿಕ ಗಂಡು!
ಪತ್ರಿಕೆಗೆ ಹೆಸರೀಯೆ, ಹೆರರ ದುಡಿಮೆಯನುಂಡು,
ಬರಿದೆ ಭಾಷಣ ಬಿಗಿವ ರಾಜಕಾರಣಿ ಹಿಂಡು
ಯಾತ್ರೆ ಬಂದೀ ಕ್ಷೇತ್ರದರ್ಶನಕೆ ಕಲಿಯಲಿ ನಿನ್ನ ಕಂಡು!
* * *
'ಅನ್ನರತ್ನಾಕರಗೆ' ಶುಭವಿದಾಯ.

Friday, December 16, 2011

ವೆನಿಲ್ಲಾ ಬಗ್ಗೆ ತೇಜಸ್ವಿ ಅಂದೇ ಹೇಳಿದ್ದರು!2003ರಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಂವಾದದಲ್ಲಿ "ರೈತನಿಗೆ ಕೃಷಿ ಏಕೆ ಹೊರೆಯಾಗುತ್ತಿದೆ?" ಎಂಬ ಪ್ರಶ್ನೆಗೆ ತೇಜಸ್ವಿ ನೀಡಿದ್ದ ಇಡೀ ಉತ್ತರವನ್ನು ನೋಡಿ:
ವಿಪರೀತ ದೊಡ್ಡ ಪ್ರಶ್ನೆ ಕಂಡ್ರೀ ಇದು! ಇಷ್ಟುದ್ದ ಇದೆ ಅಷ್ಟೆ ಇದು! ಮೊಟ್ಟಮೊದಲನೆಯದಾಗಿ, ಕೃಷಿ ಏಕೆ ಭಾರವಾಗುತ್ತಿದೆ ಅಂದರೆ, ನಮಗೆ, ಅವನಲ್ಲಿ ನಾವು ಏನು ಮಾಡಿದರೂ ಹಿಂಗಿಸಲಾಗದೇ ಇರುವಂತಹ ಒಂದು ದಾಹವನ್ನು ಎಬ್ಬಿಸಿದ್ದೇವೆ. ಓವರ್ ಎಕ್ಸ್‌ಪೆಕ್ಟೇಷನ್ -  ರೈತನಿಗೆ ಜೀವನಮಟ್ಟವನ್ನೆಲ್ಲಾ ಓವರ್ ಎಕ್ಸ್‌ಪೆಕ್ಟೇಷನ್ ಮಾಡೋ ಹಾಗೆ ಮಾಡಿದ್ದೇವೆ ನಾವು. ಇದರಲ್ಲಿ ಅಷ್ಟು ಕೋಟಿ ರುಪಾಯಿ ಬರುತ್ತೆ.... ದಿನ ಬೆಳಗಾದರೆ ಆ ದೂರದರ್ಶನ ಅವರು ಇವರು ಎಲ್ಲಾ... ಮಲ್ಲಿಗೆ ಹೂವು ಬೆಳದರೆ ಅಷ್ಟು ಕೋಟಿ ರುಪಾಯಿ ಮಾಡಬಹುದು, ಇನ್ನೊಂದು ಬೆಳದರೆ ಅಷ್ಟು ಕೋಟಿ ಮಾಡಬಹುದು ಅಂತ, ಆ ರೈತರ ಸಮೇತ ಹೇಳುತ್ತಾ ಇರುತ್ತಾರೆ. ಆದರೆ, ವಾಸ್ತಾವಾಂಶ ಏನು ಅಂತ ಗೊತ್ತಿಲ್ಲ! ಆದರೆ ಸುಮಾರು ಜನ ರೈತರು, ’ಅಷ್ಟು ಕೋಟಿ ಬರುವ ಹಾಗಿದ್ದರೆ ಏಕೆ ಬಿಡಬೇಕು’ ಅಂತ ನೆಗೆದಾಡುತ್ತಾರೆ. ಇನ್ನಷ್ಟು ಜನ ಅದೂ ಬೇಡ, ನೆಟ್ಟಗೆ ಆನ್‌ಲೈನ್ ಲಾಟರಿಗೆ ಹಾಕುತ್ತಾರೆ. ಸ್ಥೂಲವಾಗಿ ಹೇಳುತ್ತಾ ಇರುವುದು ನಾನು ಅಷ್ಟೇನೆ. ಇದು ರೈತನಿಗೆ ಇನ್ಸೆಂಟೀವ್ ಕ್ರಿಯೇಟ್ ಮಾಡುವುದಕ್ಕೆ ಅಗತ್ಯ ಇದೆ. ಇಲ್ಲದೇ ಇರೋವನು ಮಲಗಿಬಿಡುತ್ತಾನೆ ಅಷ್ಟೆ! ಹಾಳಾಗಿ ಹೋಗಲಿ ಅಂತ ಒಂದಷ್ಟು ಕಳ್ಳಭಟ್ಟಿ ಕುಡಿದುಕೊಂಡು ನಿದ್ದೆ ಮಾಡಿಬಿಡುತ್ತಾನೆ! ಇದರಲ್ಲಿಯಾದರೂ ಕೊನೆಪಕ್ಷ ಒಂದಷ್ಟು ದುಡ್ಡಾದರೂ ಸಂಪಾದನೆ ಮಾಡೋಣ ಅಂತ ಹೇಳಿ, ಏನಾದರೂ ಮಾಡುವುದಕ್ಕೆ ಹೋಗುತ್ತಾನೆ. ಅಂದರೆ ಆ ಮಿತಿಯನ್ನು ಮೀರಿ ನಾವು ಅವನಲ್ಲಿ ಆಸೆ ಆಕಾಂಕ್ಷೆಗಳನ್ನು ಗೋಜಲನ್ನು ಎಬ್ಬಿಸಿದ್ದೇವೆ. ಈಗ ವೆನಿಲ್ಲಾ ಬೆಳೆಯೋದಿಕ್ಕೆ ಅಂತ ಕಂಡಾಪಟ್ಟೆ ಓಡಾಡುತ್ತಾ ಇದ್ದಾರೆ. ಇವತ್ತು ಬೇಕಾದರೆ ನಾನು ಹೇಳುತ್ತಾ ಇದ್ದೇನೆ; ’ಮೂರು ವರ್ಷ ಆದ ಮೇಲೆ ವೆನಿಲ್ಲಾ ಬೆಳೆದು ಅಲ್ಲಿ ನೇಣು ಹಾಕಿಕೊಂಡರಂತೆ, ಇಲ್ಲಿ ನೇಣು ಹಾಕಿಕೊಂಡರಂತೆ. ಸರ್ಕಾರದವರು ಅವರಿಗೆ ಬೆಂಬಲ ಬೆಲೆ ಡಿಕ್ಲೇರ್ ಮಾಡಬೇಕು, ಸಹಾಯ ಧನ ಕೊಡಬೇಕು’ ಅಂತಾರೆ. ಹಿಂದು ಮುಂದು ನೋಡದೆ ನೆಗೆದು ಹಾರುವವರು ಇವರು. ಆಮೇಲೆ ಗೌರ‍್ನಮೆಂಟಿನೋರು ಬಂದು ಇವರಿಗೆ ಬೆಂಬಲ ಬೆಲೆ ಸಹಾಯಧನ ಎಲ್ಲಾ ಕೊಡಬೇಕು ಅಂತ ಗಲಾಟೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಇದು ವೆನ್ನಿಲ್ಲಾಗೂ ಆಗುತ್ತೆ! (ಈ ಮಾತು ನೂರಕ್ಕೆ ನೂರು ನಿಜವಾಗಿರುವುದನ್ನು ನಾವು ಗಮನಿಸಬೇಕಾಗಿದೆ) ಇವೆಲ್ಲಾ ನಾವೇ ಮಾಡುತ್ತಿರುವಂತಹ ಅನಾಹುತ. ಹಾಗೆ ಮಾಡಿ ಹೀಗೆ ಮಾಡಿ ಕ್ಷಣಮಾತ್ರದಲ್ಲಿ ಕೋಟ್ಯಾಧಿಪತಿ ಆಗಬಹುದು ಅಂತ ಆಸೆ ಎಬ್ಬಿಸಿದರೆ, ಅವನು ನೇಣು ಹಾಕಿಕೊಳ್ಳುವ ಲೆವೆಲ್ಲಿಗೆ ಹೋಗುತ್ತೆ!

Monday, December 12, 2011

ಜನನ ಮರಣಾತೀತವಾಗಿರುವುದಾತ್ಮ! ಎರಡು ಚರಮಗೀತೆಗಳು

ಪ್ರತೀ ಪರೀಕ್ಷೆಯ ನಂತರ ಬರುತ್ತಿದ್ದ ರಜಾದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮಲೆನಾಡಿಗೆ ಕವಿ ಓಡುತ್ತಿದ್ದುದು ಸರಿಯಷ್ಟೆ. ಅಲ್ಲಿಯ ಮಲೆ, ಕಾಡು, ನದಿ, ಹಕ್ಕಿ, ಪ್ರಾಣಿ, ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ, ಗೆಳೆಯರ ಜೊತೆ ಅಲೆದಾಟ, ಬೇಟೆ, ಕಾಡು, ಕಾಡುಹರಟೆ, ತನ್ನ ಸಾಹಿತ್ಯ ಸಾಧನೆ, ಆದ್ಯಾತ್ಮ ಇವುಗಳಲ್ಲಿ ಕವಿಚೇತನ ಮುಳುಗೇಳುತ್ತಿತ್ತು. ಆದರೆ ಕವಿಯೇ ಹೇಳುವಂತೆ, ಮನೆಯಲ್ಲಿ ನಡೆಯುತ್ತಿದ್ದ ಮದುವೆ, ಹುಟ್ಟು, ಸಾವುಗಳ ವಿಚಾರದಲ್ಲಿ ಅವರು ಅತ್ಯಂತ ಉದಾಸೀನರಾಗಿದ್ದರು. ತಂದೆಯ ಮರಣ ಇನ್ನೂ ಚಿಕ್ಕವನಿದ್ದಾಗಲೇ ಘಟಿಸಿಬಿಟ್ಟಿತ್ತು. ಆದರೆ ಯೌವ್ವನಕ್ಕೆ ಕಾಲಿಟ್ಟ ಮೇಲೆ ಘಟಿಸಿದ ತಾಯಿಯ ಮರಣ, ತಂಗಿಯರಿಬ್ಬರ ಮದುವೆ, ಮರಣ, ಅಜ್ಜಯ್ಯನ ಸಾವು, ಜೊತೆಗೆ ಮನೆಯಲ್ಲಿದ್ದ ಇತರ ಅಮ್ಮಂದಿರ ಸಾವು ಇವೆಲ್ಲವನ್ನೂ ಕವಿಚೇತನ ನಿರ್ಲಕ್ಷಿಸಿದ ಹಾಗೆ ಪುಟ್ಟಪ್ಪನವರ ದಿನಚರಿಯೂ ನಿರ್ಲಕ್ಷಿಸಿಬಿಟ್ಟಿದೆ. ದಿನಚರಿಯಲ್ಲಿ ಉಲ್ಲೇಖವಾಗಿದ್ದರೂ ಅದು ಒಂದೆರಡು ಸಾಲಿನ ಮಟ್ಟಿಗೆ ಮಾತ್ರ! ಹೀಗೆ ದಿನಚರಿ ಲೆಕ್ಕಿಸದಿದ್ದರೂ, ಅಪ್ರಕಟಿತವಾಗಿರುವ ಎರಡು ಕವಿತೆಗಳು ಮನೆಯಲ್ಲಿ ನಡೆದ ಎರಡು ಸಾವಿನ ಸಂದರ್ಭಗಳನ್ನು ಅನುಲಕ್ಷಿಸಿ ರಚಿತವಾದ ಚರಮಗೀತೆಗಳಾಗಿವೆ.

'ಮೋಕ್ಷಗತನಾದ ನನ್ನ ಮುದ್ದು ಸೋದರ ವಾಸುವ ನೆನಪಿಗೆ ಬರೆದ ಚರಮಗೀತೆ’ ಎಂಬ ಟಿಪ್ಪಣಿಯನ್ನೊಳಗೊಂಡ ’ಶ್ರೀವಾಸ’ ಎಂಬುದು ೧೬.೧.೧೯೨೭ರ ರಚನೆಯಾಗಿದ್ದು, ಸೋದರ ವಾಸಪ್ಪನ ಅಕಾಲ ಮರಣವನ್ನು ಕಂಡು ದುಃಖಿಸುತ್ತದೆ. ಕವಿಯ ದೊಡ್ಡ ಚಿಕ್ಕಪ್ಪಯ್ಯನವರ ಹಿರಿಯ ಹೆಂಡತಿಯ ಕಿರಿಯಮಗ ವಾಸಪ್ಪ. ದೇವಂಗಿಯ ಮಿಷನ್ ಸ್ಕೂಲಿನಲ್ಲಿ ಓದಿ, ದೇವಂಗಿ ರಾಮಣ್ಣಗೌಡರ ಆಶ್ರಯದಲ್ಲಿ ಮುಂದಿನ ಓದಿಗಾಗಿ ಶಿವಮೊಗ್ಗಕ್ಕೆ ಕಳುಹಿಸಿದ್ದರು. ಅಲ್ಲಿ ಟೈಫಾಯ್ಡ್ ಆಗಿದ್ದ ಆತ, ಒಂದು ದಿನ ನಡುರಾತ್ರಿಯಲ್ಲಿ ಈ ಲೋಕದ ನಂಟನ್ನು ಕಡಿದುಕೊಂಡು ಹೊರಡುತ್ತಾನೆ.

ಮೈಸೂರಿನಲ್ಲಿ ಓದುತ್ತಿದ್ದ ಅಣ್ಣ ಊರಿಗೆ ಬಂದಾಗಲೆಲ್ಲಾ ಮನೆಯಲ್ಲಿ ಕಿರಿಯನಾಗಿದ್ದ ವಾಸುವಿಗೆ ಸಂಭ್ರಮವೇ ಸಂಭ್ರಮ. ಅವನ ಮುಗ್ಧ ಆಟಪಾಟ ನಡೆನುಡಿ ಹುಡುಗಾಟ ಅಣ್ಣನಿಗೂ ಇಷ್ಟವಾಗುತ್ತಿದ್ದುವು. ಕಾಡಿನಲ್ಲಿ ಅಲೆದಾಡಲು, ಕವಿಶೈಲಕ್ಕೆ ಹೋದಾಗ, ತೋಟದಲ್ಲಿ ತಿರುಗಾಡುವಾಗ, ಕೆರೆಯಲ್ಲಿ ಈಜಾಡುವಾಗ ತಮ್ಮನ ಸಾನಿಧ್ಯ ಅಣ್ಣನಿಗಿರುತ್ತಿತ್ತು. ಅವೆಲ್ಲವನ್ನೂ ನೆನೆಯುತ್ತಾ, ಚಿಕ್ಕವಯಸ್ಸಿನಲ್ಲೇ ಅಸ್ತಂಗತನಾದ ತಮ್ಮನಿಗಾಗಿ ಹಂಬಲಿಸುತ್ತದೆ ಕವಿಮನ. ಶ್ರೀವಾಸ ಚರಮಗೀತೆ ಅತ್ಯಂತ ದೀರ್ಘವಾಗಿದ್ದು, ೨೨೭ ಸಾಲುಗಳವರೆಗೆ ವಿಸ್ತರಿಸಿದೆ. ಹಲವಾರು ಪ್ರಶ್ನೆಗಳನ್ನೆತ್ತುತ್ತಲೇ ಕವಿತೆ ಪ್ರಾರಂಭವಾಗುತ್ತದೆ.
ಶ್ರೀವಾಸನಳಿದನೇ? ಬಾಡಿತೇ ಎಳೆಯಲರು
ಹೂವಾಗಿ ಕಾಯಾಗಿ ಫಲಿಸುವಾ ಮುನ್ನ?
ಏಕಿಂತುಟೊಣಗಿದೈ, ಮಲ್ಲಿಕಾ ಬಾಲಲತೆ,
ಚೈತ್ರಮಾಸವು ಬಂದು ಮುದ್ದಿಡುವ ಮುನ್ನ?
ಬೇಸರಾಯಿತೆ ನಿನಗೆ ಧರೆಯ ಹೂದೋಟ?
ಬೇಡವಾದುದೆ ನಿನಗೆ ತಂಬೆಲರ ತೀಟ?
ಪೂರೈಸಿತೇ ನಿನ್ನ ಇಹಲೋಕದಾಟ?
ನಿನಗಿನ್ನು ಪರಲೋಕವೇ ಪರಮಪೀಠ?................
ಅಕಾಲದಲ್ಲಿ ಶ್ರೀವಾಸನಳಿದುದ್ದರಿಂದ ಪ್ರಕೃತಿಯೂ ಶೋಕಿಸುತ್ತಿರುವ ಚಿತ್ರಣವನ್ನು ಕಟ್ಟಿಕೊಡುತ್ತಲೇ, ಮತ್ತೆ ಪ್ರಶ್ನಿಸುತ್ತಾರೆ.
ಹೋದನೇ? ಹಾ! ಇನ್ನು ಹಿಂತಿರುಗಿ ಬಾರನೇ?
ಇನ್ನು ತನ್ನಣ್ಣನಿಗೆ ಬಂದು ಮೊಗದೋರನೇ?
’ಅಣ್ಣಯ್ಯ, ಬಾ!’ ಎಂದು ಕರೆಯನೇ ಎನ್ನ?
ತೊರೆದೆಯಾ ನೀನೆನ್ನ, ಮುದ್ದಿನೆನ ತಮ್ಮಾ?
ಶ್ರೀವಾಸ, ಎನ್ನ ಹೃದಯದ ಹರುಷದಾವಾಸ,.......................
ಕವಿತೆಯ ಈ ಭಾಗದ ಓಟ, ಸೀತೆಯ ಅಗಲಿಕೆಯಿಂದ ವಿಸ್ಮೃತಿಗೆ ಒಳಗಾಗಿ ಗೋಳಾಡುವ ರಾಮನ ಚಿತ್ರಣವನ್ನು ನೆನಪಿಸುತ್ತದೆ. ಮುಂದೆ, ಕವಿ ತಮ್ಮನೊಡನೆ ಕಳೆಯುತ್ತಿದ್ದ ಕಾಲವನ್ನು ನೆನಪಿಸಿಕೊಳ್ಳುತ್ತಾರೆ.
ಎನ್ನೊಡನೆ ವನಗಳಿಗೆ ಬರುವರಿನ್ನಾರು?
ಹೊಲಗದ್ದೆಯೊಳು ಕೂಡಿ ತಿರುಗಾಡುವವರಾರು?
ಮನೆಯ ಮುಂದಿನ ಕೆರೆಯೊಳೀಜುತಿರೆ ನಾನು
ನಿಂತು ಎನ್ನ ಹೊಗಳುವವರಾರು?
ನೀರಿಗಿಳಿಯಲು ಬೇಡ ಎಂದಾರ ಬೆದರಿಸಲಿ?
..................
ಆ ಮರವ ನೋಡಣ್ಣ! ಈ ಹೂವ ನೋಡಣ್ಣ!
ಕೋಗಿಲೆಯ ಕೇಳಣ್ಣ! ಹಾಡೆಷ್ಟು ಇಂಪಣ್ಣ!
ಅಲ್ಲಿ ಹಣ್ಣಿವೆ, ಅಣ್ಣ! ನಾನು ಕಂಡಿಹೆನಣ್ಣ!
ಮಳೆಬಿಲ್ಲ ನೋಡಣ್ಣ! ಬಾ ಎನ್ನ ಜೊತೆ, ಅಣ್ಣ!
ಅಣ್ಣ ತಮ್ಮಂದಿರ ಒಡನಾಟಕ್ಕೆ ಸಾಕ್ಷಿಯಾಗಿವೆ ಮೇಲಿನ ಸಾಲುಗಳು. ಮುಂದೆ, ತಮ್ಮನ ಸಾವಿನಿಂದ ತಮಗೆ ಕವಿದ ಶೂನ್ಯತೆಯ ಬಗ್ಗೆ ಹೇಳಿ, ಸಾವು ಸಂಭವಿಸಿದ ಕ್ಷಣವನ್ನು ಕಣ್ಣ ಮುಂದೆ ನಿಲ್ಲಿಸುತ್ತಾರೆ.
ನಡುರಾತ್ರಿ ಒಯ್ದಿತೇ ನಿನ್ನನೆಲೆ ಸೋದರನೆ?
ಹಗಲೊಳೊಯ್ಯಲು ಯಮನು ಬೆದರಿದನು ನಿನಗೆ;
ಕಳ್ಳನಾದನೆ ಮೃತ್ಯು? ಧರ್ಮವಂ ಮೀರಿದನೆ
ನಿನ್ನ ಮಹಿಮೆಗೆ ಬೆದರಿ? ಸುಡು ಯಮನ ಬಾಳ!
ಹೀಗೆ ಯಮನ ಅಕೃತ್ಯವನ್ನು ಖಂಡಿಸುತ್ತಾ, ಅದನ್ನು ಖಗ-ಮೃಗ, ತರು-ಲತೆ, ಮಲೆ-ಕಾಡು ಮೊದಲಾದವುಗಳು ನಿದ್ರಿಸುತ್ತಿರುವಾಗ ಯಮ ಕದ್ದೊಯ್ದನಲ್ಲ! ಆತ ಹಾಗೆ ಮಾಡಲು ನನ್ನ ಸಹೋದರ ಧೀರಾತ್ಮನಾಗಿದ್ದುದೇ ಕಾರಣವೆನ್ನುತ್ತಾರೆ. ಮುಂದುವರೆದು ಸಾವಿನ ಅನಂತತೆಯ, ಅನಿವಾರ್ಯತೆಯ ಕಡೆಗೆ ತಿರುಗುತ್ತಾರೆ.
ಬಾರನೇ? ಹೋದನೇ? ಶೂನ್ಯಗತನಾದನೇ?
ಆಟವೋ? ನಾಟಕವೊ? ಭೂತಳವಿದೇನು?
ಪಾತ್ರಧಾರರೊ ನಾವು ಸೂತ್ರಧಾರನ ಕೈಲಿ?
ಎಲ್ಲಿಂದ ಬಂದಿಹೆವು? ಹೋಗುತಿಹೆವಾವೆಡೆಗೆ?
ಮಾಯೆಯೋ? ಸ್ವಪ್ನವೋ ಸತ್ಯವೋ ನಿತ್ಯವೋ?
ಪಥವಾವುದೆಮಗೆಲ್ಲ? ಗತಿಯಾವುದು?
ಶೂನ್ಯದಿಂದಲೆ ಬಂದು ಶೂನ್ಯಗತವಾಗುವೆವೆ?
ಸತ್ಯದಿಂದಲೆ ಬಂದು ಮಿಥ್ಯೆಯೊಳು ನಿಂದು
ಸತ್ಯಗತವಾಗುವೆವೆ ಮತ್ತೆ? ಬಲ್ಲವರದಾರು?
ಮೃತ ಎಂಬುದದು ಸುಳ್ಳೆ? ಅಮೃತವದು ಸತ್ಯವೇ?
ಸಂದೇಹದಲಿ ಕುಂದಿ ಕೊರಗುವೆವು ನಾವು!
ಹೀಗೆ ಸಂದೇಹದಲ್ಲಿ, ಶೂನ್ಯದಲ್ಲಿ ಕವಿಯ ಜೀವ ತೊಳಲಾಡುತ್ತದೆ. ಆದರೆ, ಕವಿಯ ವಿವೇಕದ ವಾಣಿ, ಗುರುವಿನ ಅಭಯ, ದೇವನ ಕೃಪೆ ಸಮಾಧಾನ ಹೇಳುತ್ತದೆ, ಕೆಳಗಿನಂತೆ!
’ಬೆದರ ಬೇಡಲೆ ಜೀವ ಬೆದರಬೇಡ;
ಸಂದೇಹವನು ಬಿಡು, ನಿರಾಶನಾಗದಿರು.
ಶೂನ್ಯವಲ್ಲದು ಸತ್ಯ; ಅಮೃತ, ಅದು ನಿತ್ಯ!
ಜನನವಲ್ಲವು ಮೊದಲು, ಮರಣವಲ್ಲವು ತುದಿಯು,
ಜನನ ಮರಣಾತೀತವಾಗಿರುವುದಾತ್ಮ!
ಮೇಲ್ನೋಟಕ್ಕೆ ನಶ್ವರದಂತೆ ಕಾಣುವ ಈ ಬದುಕಿಗೆ ಒಂದು ಘನ ಉದ್ದೇಶವಿರುತ್ತದೆ. ನಮ್ಮ ಚಿಂತನಾನಿಲುವಿಗೆ ಅಸದಳವಾದ ಶಕ್ತಿಯೊಂದು ಈ ವಿಶ್ವವನ್ನು ಧರ್ಮದಿಂದಾಳುತ್ತಿದೆ! ಆದ್ದರಿಂದ ಇಲ್ಲಿ ನಡೆಯುವ ರವಿಯುದಯ, ತಾರೆಗಳ ಚಲನೆ, ಗಾಳಿ, ಬೆಂಕಿ ಎಲ್ಲವೂ ಗತಿಯನಗಲದೆ ಧರ್ಮದಿಂದ ಕಾರ್ಯವನ್ನಾಚರಿಸುತ್ತಿವೆ. ಅಂತೆಯೆ ಸಾವೂ ಕೂಡಾ! ಅದೂ ಕೂಡಾ ವಿಶ್ವನಿಯಾಮಕನ ಮನೋಗತವೇ ಆಗಿದೆ.
ಆನಂದದಿಂದುದಿಸಿ ಆನಂದದೊಳೆ ಬೆಳೆದು
ಆನಂದದೊಳಗೈಕ್ಯವಾಗುವುದು ಈ ಸೃಷ್ಟಿ!
ಸಾವು ಸಾವಲ್ಲವೈ, ಅದು ಪರಮ ಬಾಳು,
ಸಂಶಯಾತ್ಮಕನಾಗದಿರು, ಜೀವ, ಮೇಲೇಳು!
ಆದ್ದರಿಂದ,
ಶ್ರೀವಾಸನಳಿದಿಲ್ಲ; ಶೂನ್ಯಗತನಾಗಿಲ್ಲ:
ಸಾವು ಸತ್ತಿತು, ವಾಸನಳಿದಿಲ್ಲ, ಇಲ್ಲ!
ಬೊಮ್ಮದೊಳಗೊಂದಾಗಿ ಆನಂದದಿಂದಿಹನು;
ಹೀಗೆ ಸಮಾಧಾನ ಹೇಳುತ್ತಲೇ ಸಾವಿಗಾಗಿ ದುಃಖಿಸುವುದು ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಶೋಕಿಸೆನು ನಿನಗಾಗಿ; ಕಂಬನಿಯ ಕರೆಯೆ;
ಮರುಳುತನವೈ ವ್ಯಸನ; ದುಃಖವದು ಮಾಯೆ!
ಎಲೆ ಮುದ್ದು ಸೋದರನೆ, ಎನ್ನಾತ್ಮದಾತ್ಮ,
ನೀನಿರುವೆ! ನೀನಿರುವೆ! ಎಲ್ಲಿಯೂ ಇರುವೆ!
ಎಂದು ತನ್ನ ಸುತ್ತ ಮುತ್ತ ಕಾಣುವ ಶಶಿ, ತಾರೆ, ರವಿ, ನಭ, ಧರೆ, ಕಾಲ, ದೇಶ ಎಲ್ಲವುಗಳಲ್ಲಿಯೂ ತಮ್ಮನಿದ್ದಾನೆ ಎನ್ನುತ್ತಾರೆ. ಕೊನೆಯಲ್ಲಿ,
ಹರ್ಷವಾಗಲಿ ಶೋಕ! ಮೋದವಾಗಲಿ ಖೇದ!
ದುಃಖಾಶ್ರು ಸುಖದ ಕಂಬನಿಯಾಗಲಿ!
ಮರಣವೆಂಬುದು ಮಧುರ! ಮೃತ್ಯು ಮಾತೆಯ ಉದರ!
ಸುಖಿಯಾದೆಯೈ ನೀನು ಸುಖ ದುಃಖಗಳ ಮೀರಿ!
ಕಾಲ ದೇಶವ ಮೀರಿದೂರು ನಿನ್ನದು, ತಮ್ಮ,
ಅದು ನಮ್ಮ ತವರೂರು! ಅಲ್ಲಿಹಳು ಅಮ್ಮ
ಜಗದಂಬೆ ಜೋಗುಳದಿ ಕರೆಯುತೆಮ್ಮ!
ಆಲಿಸುವೆನಮ್ಮನಾ ಜೋಗುಳವ ನಾನು,
ಎಂದಾದರೊಂದು ದಿನ ಸೇರುವೆನು ನಿನ್ನ.
ಅಲ್ಲಿಗಾನೈತರಲು ಮರೆಯದಿರು ನನ್ನ!
ಅಣ್ಣ ಬಂದಾ ಅಣ್ಣ! ಅಮ್ಮ, ನೋಡೆಂದು
ಅಪ್ಪಿಕೊಂಡೆನ್ನ ಕರೆದೊಯ್ಯೆಲೈ ತಮ್ಮ!
ತಾಯಿಯಂಕದ ಮೇಲೆ ನಾವಿರ್ವರೂ ಕೂಡಿ
ಮನ ಬಂದವೊಲು ತೊದಲು ಮಾತುಗಳನಾಡಿ
ನಿತ್ಯತೆಯ ಪೀಡಿಸುವ ಚೆಲ್ಲಾಟವಾಡಿ!
ಎಂದು ತಮ್ಮನಾತ್ಮವನ್ನು ಜಗದಂಬೆಯ ಉದರಕ್ಕೆ ಹಾಕುತ್ತಾರೆ. ಮುಂದೊಂದು ದಿನ ತಾನು ಅಲ್ಲಿಗೆ ಹೋಗುವಷ್ಟರಲ್ಲಿ, ತಮ್ಮನೇ ಅಣ್ಣನನ್ನು ಜಗದಂಬೆಗೆ ಪರಿಚಯಿಸುತ್ತಾನೆ ಎಂಬ ಭಾವದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ. ಈ ಚರಮಗೀತೆಯ ವಸ್ತು ವಿಷಯ ಭಾವ ಪ್ರಸ್ತುತಿ ಕುರಿತಂತೆ ಕವಿಯ ಮಾತುಗಳೇ ಅಂತಿಮ; ಬೇರೆ ವಿಮರ್ಶೆ ವಿವರಣೆ ಒಗ್ಗರಣೆ ಏಕೆ ಬೇಕು!? ಕವಿಯ ಮಾತುಗಳು ನೆನಪಿನ ದೋಣಿಯಲ್ಲಿ ಹೀಗೆ ದಾಖಲಾಗಿವೆ.
ಈ ಸುದೀರ್ಘ ಚರಮಗೀತೆಯಲ್ಲಿ ತತ್ಕಾಲದಲ್ಲಿ ಕವಿಗೆ ಜೀವ, ಜಗತ್ತು, ದೇವರು, ಹುಟ್ಟು, ಸಾವು, ಸೃಷ್ಟಿಯ ಉದ್ದೇಶ ಇತ್ಯಾದಿಗಳ ವಿಚಾರದಲ್ಲಿ ಇದ್ದ ಭಾವನೆಗಳೆಲ್ಲ ಚೆಲ್ಲಿ ಸೂಸಿದಂತಿದೆ. ಭಾವೋತ್ಕರ್ಷದ ಅಭಿವ್ಯಕ್ತಿಯಲ್ಲಿ ಸಂಯಮಭಾವ ತೋರಿರುವುದು ಆವೇಶದ ದುರ್ದಮ್ಯತೆಯನ್ನೂ ಅನುಭವದ ಹೃತ್ಪೂರ್ವಕತೆಯನ್ನೂ ಸೂಚಿಸುತ್ತದೆ. ಬೆಳೆಯುತ್ತಿರುವ ಕವಿಯ ಮನಸ್ಸು ಸೃಷ್ಟಿಯ ರಹಸ್ಯಗಳೊಡನೆ ಮಲ್ಲಗಾಳೆಗವಾಡುತ್ತಿತ್ತೆಂದು ತೋರುತ್ತದೆ. ಆಶ್ರಮವಾಸದ ಪ್ರಭಾವವನ್ನೂ ಚೆನ್ನಾಗಿ ಗುರುತಿಸಬಹುದು.
ಭದ್ರಾವತಿಯ ಡಾ. ಚೊಕ್ಕಂ ಅವರ ಆಸ್ಪತ್ರೆಯಲ್ಲಿ ನ್ಯೂಮೋನಿಯಾದಿಂದ ಮುಕ್ತಿ ಪಡೆದು, ಊರಿಗೆ ಹೊರಡುತ್ತಾರೆ. ಶಿವಮೊಗ್ಗದಲ್ಲಿ ಸ್ವಲ್ಪ ದಿನಗಳಿದ್ದು, ಸಂಪೂರ್ಣ ಚೇತರಿಸಿಕೊಂಡು ಕುಪ್ಪಳ್ಳಿಗೆ ಹೋಗುವ ಹಾದಿಯಲ್ಲಿ ಇಂಗ್ಲಾದಿಗೆ ಹೋಗಿ ತಂಗುತ್ತಾರೆ. ಅಲ್ಲಿನ ಮಿತ್ರವರ್ಗದವರೊಡನೆ ಸೇರಿ ಬೇಟೆಗೆ ಹೋಗುತ್ತಾರೆ. ಆಗ ನಡೆದ ಒಂದು ದುರ್ಘಟನೆಯೇ ಇನ್ನೊಂದು ಚರಮಗೀತೆಯ ಹುಟ್ಟಿಗೆ ಕಾರಣವಾಗುತ್ತದೆ. ಈ ಚರಮಗೀತೆಯ ವಿಶೇಷವೆಂದರೆ, ಅದು ಮನುಷ್ಯನಿಗೆ ಸಂಬಂಧಿಸದೆ ’ಕೇಸರಿ’ ಹೆಸರಿನ ಬೇಟೆ ನಾಯಿಗೆ ಸಂಬಂಧಿಸಿರುವುದು. ತಾವು ಸಾಕಿದ ನಾಯಿಗಳು ಮರಣವೊಂದಿದಾಗ ಅವುಗಳಿಗೆ ಗೌರವಪೂರ್ವಕ ಸಂಸ್ಕಾರ ನಡೆಸುವ, ಸ್ಮಾರಕಗಳನ್ನು ನಿರ್ಮಿಸಿರುವ ನೂರಾರು ಉದಾಹರಣೆಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಯುದ್ಧದಲ್ಲಿ ತುರುಗೋಳು, ಪೆಣ್ಬುಯಲು ಮೊದಲಾದ ಕಾದಾಟದಲ್ಲಿ ಹೋರಾಡಿ ಮರಣ ಹೊಂದಿದ್ದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಬಹುದೊಡ್ಡ ಪರಂಪರೆಯೇ ಕನ್ನಡ ನಾಡಿನಲ್ಲಿರುವುದನ್ನು ನೋಡಬಹುದಾಗಿದೆ. ಮಂಡ್ಯಜಿಲ್ಲೆಯ ಆತಕೂರಿನಲ್ಲಿದ್ದ ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕವನ್ನು ಈಗ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.  ಶಾಸನದ ಜೊತೆಯಲ್ಲಿ (ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನ ಬಳಿಯಿದ್ದ ಕಾಳಿ ನಾಯಿಯನ್ನು ವೀರ ಮಣೆಲರ ಬೇಡಿ ಪಡೆದುಕೊಳ್ಳುತ್ತಾನೆ. ಕಲ್ಲುಗುಡ್ಡವೊಂದರಲ್ಲಿ ಹಂದಿಗೂ ‘ಕಾಳಿ’ ನಾಯಿಗೂ ಹೋರಾಟವಾಗಿ, ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ನಾಯಿಯ ಶವವನ್ನು ಆತಕೂರಿಗೆ ತಂದು ಸಂಸ್ಕಾರ ಮಾಡಿ ಶಾಸನ-ಸ್ಮಾರಕಶಿಲೆಯನ್ನು ನೆಡೆಸುತ್ತಾನೆ.

ಇಲ್ಲಿಯೂ, ಕವಿಗೆ ಅಚ್ಚುಮೆಚ್ಚಾಗಿದ್ದ ’ಕೇಸರಿ’ ಜೂಲುನಾಯಿ, ಒಂಟಿಗ ಹಂದಿಯೊಂದನ್ನು ತಡೆದು ಹೋರಾಡಿ, ಅದರ ಕೋರೆಗೆ ತುತ್ತಾಗುತ್ತದೆ. ಹೊಟ್ಟೆಯಿಂದ ಹೊರಕ್ಕೆ ಬಂದಿದ್ದ ಕರುಳಿನ ಭಾಗ, ನಾಯಿ ಬಿದ್ದು ಹೊರಳಾಡಿದಾಗ ಮಣ್ಣು ಕಸ ಕಡ್ಡಿಗಳಿಂದ ಆವೃತ್ತವಾಗುತ್ತದೆ. ಅದರ ಯಮಯಾತನೆಯನ್ನು ನೋಡಿ, ಅದು ಬದುಕುವುದಿಲ್ಲವೆಂದು ತಿರ್ಮಾನಿಸಿ ಅದರ ತಲೆಗೆ ಗುಂಡು ಹೊಡೆದು ಕೊಲ್ಲಲು ಕವಿಯೇ ಸೂಚನೆ ನೀಡುತ್ತಾರೆ. ಆದರೆ ಗುಂಡು ಹೊಡೆಯುವ ಎದೆಗಾರಿಕೆ ಅಲ್ಲಿ ಯಾರಿಗೂ ಇಲ್ಲ. ಕೇಸರಿಗೆ ಆ ಸ್ಥಿತಿಯನ್ನು ತಂದಿದ್ದ ಹಂದಿಯನ್ನು ಕೊಂದು ಅಂದಿನ ’ಹೀರೊ’ ಅಗಿದ್ದ ಈಡುಗಾರ ಮರಾಠಿ ’ಯಲ್ಲು’ ಎಂಬಾತ ಅದಕ್ಕೆ ಶುಶ್ರೂಷೆ ಮಾಡಲು ತೊಡಗುತ್ತಾನೆ. ಹೊರಬಂದಿದ್ದ ಕರುಳನ್ನು, ತಕ್ಕಮಟ್ಟಿಗೆ ಕೈಯಿಂದ ಸ್ವಚ್ಛಗೊಳಿಸಿ, ಹೊಟ್ಟೆಯೊಳಗೆ ತಳ್ಳಿ, ಸೂಜಿದಾರದಿಂದ ಹೇಗೆ ಹೇಗೋ ಒಲಿದುಬಿಡುತ್ತಾನೆ, ಮೂಟೆ ಹೊಲಿಯುವಂತೆ! ಅಷ್ಟೂ ಹೊತ್ತು ಕೇಸರಿ ಪಿಳುಪಿಳನೆ ಕಣ್ಣು ಬಿಟ್ಟುಕೊಂಡು ಉಳಿದವರ ಕಡೆ ದೈನ್ಯದೃಷ್ಟಿ ಬೀರುತ್ತಿತ್ತು. ಹಳ್ಳದಿಂದ ನೀರು ತಂದು ಕುಡಿಸಿದ ನಂತರ ಕಂಬಳಿಯೊಂದನ್ನು ಡೋಲಿಯ ರೀತಿಯಲ್ಲಿ ಮಾಡಿಕೊಂಡು ಮನೆಗೆ ಹೊತ್ತು ತರುತ್ತಾರೆ. ರಾತ್ರಿ ತುಂಬಾ ಹೊತ್ತು ನೋವಿನಿಂದ ಅಳುತ್ತಿದ್ದ ಕೇಸರಿ, ಬೆಳಗಿನ ಜಾವ ನೋಡಿದಾಗ ಸಂಪೂರ್ಣ ನಿಃಶಬ್ದವಾಗಿತ್ತು, ಪ್ರಾಣ ಹೋಗಿ! ಕೇಸರಿಗೆ ವೀರೋಚಿತವಾದ ಸಂಸ್ಕಾರ ಸಲ್ಲುತ್ತದೆ. (ಏನೋ ಕಾರಣದಿಂದ, ಹೀಗೆಯೆ ಹೊಟ್ಟೆಯ ಭಾಗದಲ್ಲಿ ಸ್ವಲ್ಪಮಾತ್ರ ಹೊರಬಂದಿದ್ದ ಕರುಳನ್ನು ಒಳಗೆ ತಳ್ಳಿ ನಮ್ಮ ಮನೆಯ ನಾಯಿಯೊಂದಕ್ಕೆ ನಮ್ಮ ತಂದೆಯವರೂ ಹೊಲಿಗೆ ಹಾಕಿದ್ದನ್ನು ನಾನು ನೋಡಿದ್ದೇನೆ. ಆಶ್ಚರ್ಯವೆಂದರೆ ಆ ನಾಯಿ ವರ್ಷಗಳ ಕಾಲ ಬದುಕಿತ್ತು).

ಕೇಸರಿಯ ಹೋರಾಟ, ಅದರ ಕೆಚ್ಚು ಮೊದಲಾದವನ್ನು ಕಂಡ ಬೇಟೆಗಾರ ಪುಟ್ಟಪ್ಪ; ಕವಿ ಕುವೆಂಪು ಆಗಿ ಕೇಸರಿಗೆ ಚರಮಗೀತೆ ಹಾಡುತ್ತಾರೆ. ಈ ಚರಮಗೀತೆ ಅಪ್ರಕಟಿತವಾಗಿದ್ದು, ಶೀರ್ಷಿಕೆಯೂ ಇರುವುದಿಲ್ಲ. ಆದರೆ, ’ಬೇಟೆಯಲ್ಲಿ ಕಾಡುಹಂದಿಯೊಡನೆ ಹೋರಾಡಿ ಮಡಿದ ಮುದ್ದು ನಾಯಿ ’ಕೇಸರಿ’ಯ ನೆನಪಿಗಾಗಿ ಬರೆದುದು’ ಎಂಬ ಟಿಪ್ಪಣಿಯನ್ನೊಳಗೊಂಡಿದೆ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ,
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ನಿನ್ನ ಬಾಳಿನ ಪಯಣ ಪೂರೈಸಿತಿಂದು
ಇನ್ನು ವಿಶ್ರಾಂತಿಯೈ ಮುಂದೆ ನಿನಗೆಂದೂ!
ನಿನ್ನ ಗೋರಿಯ ತೋರಲಾವ ಗುರುತಿಲ್ಲ;
ನಿನ್ನ ಕೀರ್ತಿಯ ಸಾರೆ ಬಡ ಚೈತ್ಯವಿಲ್ಲ.
ಆದರೇನಾ ಪೂತ ಪೊದೆ ಸಹಜ ಚೈತ್ಯ;
ನಿನ್ನ ಕೀರ್ತಿಯ ಕಲ್ಲೆ ಶಾಶ್ವತವು ನಿತ್ಯ.
ತಿಳಿನೀಲ ಬಾಂದಳವು ಮೆರೆಯುವುದು ಮೇಲೆ;
ಮುಗಿಲು ಕೊಡೆ ಹಿಡಿಯುವುದು, ಮೋಡಗಳು ತೇಲೆ.
ಇನಿದನಿಯ ಬೀರುವುದು ಲಾವುಗೆಯು ಇಲ್ಲಿ;
ಚೀರುಲಿಯ ಕೋಗಿಲೆಯು ವನದಳಿರಿನಲ್ಲಿ.
ಪೂತ ಪೊದೆಯನ್ನೇ ನಿತ್ಯಸ್ಮಾರಕವಾಗಿಸಿ, ಕೊಡೆ ಹಿಡಿದ ಮುಗಿಲು, ಚೀರುಲಿಯ ಕೋಗಿಲೆ ಮೊದಲಾದವನ್ನು ಜೊತೆಗಿರಿಸಿ ಕೇಸರಿಗೆ ವಿದಾಯ ಹೇಳುತ್ತಾರೆ. ಕೊಳಲೂದುವ ಗೋಪಾಲಕರು ಮುಂದೆ ಕೇಸರಿಯ ಸಾಹಸವನ್ನು ಕಥೆಯಾಗಿಸಿ ಹೇಳುತ್ತಾರೆ, ಕೇಳುತ್ತಾರೆ ಎಂಬ ಆಶೆಯೂ ಕವಿಗಿದೆ.
ಬೇಸರಾಗದು ನಿನಗೆ: ಗೋಪಾಲರಿಲ್ಲಿ
ಕೊಳಲೂದಿ ನಲಿಯುವರು ಬಯಲ ಹಸುರಲ್ಲಿ.
ವರುಷಗಳ ಮೇಲವರು ನಿನ್ನ ಕತೆ ಹೇಳಿ
ನಿಟ್ಟುಸಿರು ಬಿಡುವರೈ ಕಿವಿಗೊಟ್ಟು ಕೇಳಿ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಯುವೀ ನೆಲದಾಳದಲ್ಲಿ!
ಯುದ್ಧದಲ್ಲಿ ಹೋರಾಡಿ ಮಡಿದ ವೀರನನ್ನು ಅಪ್ಸರೆಯರು ಬಂದು ಸ್ವರ್ಗಕ್ಕೇ ಕರೆದೊಯ್ಯುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ವೀರಗಲ್ಲುಗಳನ್ನು ಅದೇ ರೀತಿ ಚಿತ್ರಿಸಿರುತ್ತಾರೆ. ಇಲ್ಲಿ ಕವಿಯು ಆ ಹಿನ್ನೆಲೆಯಲ್ಲಿ
ಘೋರ ಸೂಕರದೊಡನೆ ಮಡಿದೆ ಕಾದಾಡಿ;
ನಾಕದೊಳು ನಲಿವೆ ನೀ ವೀರರೊಡಗೂಡಿ
ಸುಖದಿಂದ ನಿದ್ರಿಸೈ ಗಲಭೆ ಇಲ್ಲಿಲ್ಲ;
ಇಲ್ಲಿ ಹೊಗಳುವವರಿಲ್ಲ, ನಿಂದಿಸುವವರಿಲ್ಲ.
ಮೇಲಾಟ ಹೋರಾಟವೆಂಬುವಿಲ್ಲಿಲ್ಲ,
ಸಿರಿಸುತರು ಬಡವರೆಂಬುವ ಭೇದವಿಲ್ಲ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ಎಂದು ಹಾಡುತ್ತಾರೆ. ಘೋರ ಸೂಕರದೊಡನೆ ಮಡಿದೆ ಕಾದಾಡಿ ಎಂಬ ಸಾಲು ಹಂದಿಯೂ ಸತ್ತಿತು ಎಂಬುದನ್ನು ಸೂಚಿಸುತ್ತದೆ. ಸಾವಿನಲ್ಲಿ ಎಲ್ಲರೂ - ಮನುಷ್ಯ ಪ್ರಾಣಿ ಪಕ್ಷಿ ಗಿಡ ಮರಗಳೆಲ್ಲವೂ ಸಮಾನರು; ಅದಕ್ಕೆ ಬಡವ ಬಲ್ಲಿದ ಎಂಬ ಬೇದವಿಲ್ಲ! ಮುಂದುವರೆದು, ಅದರ ಮರ್ತ್ಯದ ಸಾಹಸದ ಹಿನ್ನೆಲೆಯನ್ನು ತಿಳಿಸುತ್ತಲೇ, ಈಗ ಅವಾವೂ ಸಾಧ್ಯವಿಲ್ಲ ಎನ್ನುತ್ತಾರೆ.
ಮುಂದೆ ನೀ ಜಿಂಕೆಗಳನೋಡಿಸುವುದಿಲ್ಲ;
ನೀನಿನ್ನು ಹುಲಿಗಳನು ಅಟ್ಟುವುದು ಇಲ್ಲ.
ನಿನ್ನ ಕೂಗಿಗೆ ಕಾಡು ಗಿರಿ ಗುಹೆಗಳೆಲ್ಲ
ಇನ್ನೆಂದು ಮಾರ್ದನಿಯ ಬೀರುವುದೆ ಇಲ್ಲ.
ಬೇಟೆಗಾರರ ಕೂಗ ನೀ ಕೇಳಲಾರೆ;
ಸಿಡಿದ ಗುಂಡಿನ ಸದ್ದನಾಲಿಸಲು ಆರೆ,
ನಿತ್ಯ ಮೌನತೆ ನಿನ್ನ ನುಂಗಿರುವುದೀಗ;
ನಿನ್ನ ಗಂಟಲಿಗಾಯ್ತು ಮಿರ‍್ತುವಿನ ಬೀಗ.
ಹೋಗುವೆವು ನಾವೆಲ್ಲ ಮನೆಗೆ; ಮಲಗಿಲ್ಲ
ಹೊಸ ಹಸುರಿನಿಂದೆಸೆಯುವೀ ಪಸಲೆಯಲ್ಲಿ!
ಆದರೆ, ನೀನು ಹಿಂದೆಯೂ ಇದ್ದೆ, ಮುಂದೆಯೂ ಇರುತ್ತೀಯ ಬೇರೆ ಬೇರೆ ರೂಪದಲ್ಲಿ. ನಿನಗೆ ಸನ್ಮಾನವೂ ಉಂಟು; ಗೌರವವೂ ಉಂಟು ಎಂದು ಹೇಳುತ್ತಾ ಕೇಸರಿಯಾತ್ಮಕ್ಕೆ ಮಂಗಳವೆನ್ನುತ್ತಾ ಕವಿತೆ ಮುಕ್ತಾಯವಾಗುತ್ತದೆ.
ಇಲ್ಲ; ನೀನಿಲ್ಲಿಲ್ಲ, ನಿತ್ಯ ಸಂಚಾರಿ!
ನಲಿಯುತಿಹೆ ಯಾರು ಕಾಣದ ಊರ ಸೇರಿ.
ಪೂರ್ವ ಜನ್ಮದೊಳಾವ ವೀರನೋ ನೀನು?
ಕರ್ಮದಿಂದೀ ಜನ್ಮವೆತ್ತಿದೆಯೊ ಏನು?
ಯಾರು ಬಲ್ಲರು ಎಲ್ಲಿ ಜನಿಸಿಹೆಯೊ ಈಗ?
ಮುದ್ದು ಕೇಸರಿಯೆ, ನೀ ಎಲ್ಲಿದ್ದರೇನು?
ಯಾವ ಲೋಕವ ಸೇರಿ ಎಂತಿದ್ದರೇನು?
ಗುಂಡುಗಳು ಹಾರುವುವು ಸನ್ಮಾನಕಾಗಿ!
ಜಯವೆನ್ನುವೆವು ನಿನ್ನ ಗೌರವಕೆ ಕೂಗಿ!
ಶಾಂತಿ ಸುಖಗಳು ಬರಲಿ, ವೀರಾತ್ಮ, ನಿನಗೆ!
ಮಂಗಳವೊ ಮಂಗಳವು, ಕೇಸರಿಯೆ, ನಿನಗೆ!

Monday, December 05, 2011

ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!

೧೯೨೪, ಜೂನ್ ೧೯ರಿಂದ ೨೨ರವರೆಗೆ ಊರಿನಲ್ಲಿದ್ದು, ಬೇಸಗೆ ರಜ ಮುಗಿಸಿಕೊಂಡು, ೨೩ರಂದು ಮೈಸೂರಿಗೆ ಬರುತ್ತಾರೆ. ತಮ್ಮ ಐಚ್ಛಿಕ ವಿಷಯಗಳು ಪಿ.ಸಿ.ಎಂ. ಆಗಿದ್ದರೂ ಕಾಲೇಜು ಕಲಿಕೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಾಗೂ ಕವಿಚೇತನಕ್ಕೆ ಹೆಚ್ಚು ಅಪೇಕ್ಷಣೀಯವೂ ಪ್ರಯೋಜಕರವೂ ಆಗುತ್ತದೆಂಬ ಕಾರಣಕ್ಕಾಗಿ ಆರ್ಟ್ಸ್ ವಿಭಾಗವನ್ನು ಆಯ್ದುಕೊಂಡು ಮಹಾರಾಜಾ ಕಾಲೇಜನ್ನು ಸೇರುತ್ತಾರೆ. ಅಲ್ಲಿಂದ ಆರು ದಿನಗಳ ನಂತರದ, ಜೂನ್ ೨೯ರ ದಿನಚರಿ ಹೀಗಿದೆ. "ನನ್ನ ತಾಯಿಗೆ ತುಂಬ ಖಾಯಿಲೆಯಾಗಿದೆ ಎಂದು ಡಿ.ಎನ್.ಹಿರಿಯಣ್ಣ ಕಾಗದ ಬರೆದಿದ್ದಾನೆ. ನನಗೇನೊ ಅಳುಕುಹುಟ್ಟಿ, ಮನಸ್ಸಿನಲ್ಲಿ ಭಯ ಸಂಚಾರವಾಯಿತು. (I felt it and my heart gave way to formless fears.) ಆದರೆ ಮತ್ತೆ ಮನಸ್ಸಿಗೆ ಸಮಾಧಾನ ತಂದುಕೊಂಡು, ನನ್ನ ತಾಯಿಯ ಕ್ಷೇಮವನ್ನು ನನ್ನ ಮಹಾಮಾತೆ ಜಗಜ್ಜನನಿಯ ಕೈಗೆ ಅರ್ಪಿಸಿದೆ. ಮತ್ತೆ ನನಗೆ ನಾನೆ ಅಂದುಕೊಂಡೆ: ನನ್ನ ತಾಯಿ ಸತ್ತರೂ ಅವರು ಬೇರೆಯ ಲೋಕದಲ್ಲಿ ಬದುಕಿಯೆ ಇರುತ್ತಾರೆ. ಓ ಸ್ವಾಮೀ, ನೀನು ನನಗೆ ತಂದೊಡ್ಡುವ ಕಷ್ಟಗಳನ್ನೆಲ್ಲ ಎದೆಗೆಡದೆ ಸಹಿಸುವಂತೆ ಧೈರ್ಯವನ್ನು ದಯಪಾಳಿಸು. ಸಮಸ್ತ ಜಗತ್ತನ್ನೂ ನೀನು ತಂದೆಯಂತೆ ಕಾಯುತ್ತಿರುವಲ್ಲಿ ನನ್ನ ಚೇತನ ಭಯಗಳಿಗೆ ತುತ್ತಾಗದಿರಲಿ. ಎಲೈ ಭಾರವೆ, ತೊಲಗಾಚೆ!" ಮಾರನೆಯ ದಿನದ ದಿನಚರಿಯಲ್ಲಿ "ಓ ತಾಯೀ, ನನ್ನ ಅವ್ವನ ಸಂರಕ್ಷಣೆ ನಿನಗೆ ಸೇರಿದ್ದು? ನಾನೇಕೆ ದುಃಖಿಸಲಿ?' ಎಂದು ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಈ ಎಲ್ಲಾ ಆತಂಕಗಳ ನಡುವೆಯೇ, 2.7.1924ರಂದು ಐರಿಸ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಬೇಟಿ ಮಾಡುವುದು!

ಅಲ್ಲಿಗೆ ಸರಿಸುಮಾರು ಒಂದು ತಿಂಗಳಿಗೆ ಅವರ ತಾಯಿ ನಿಧನರಾಗುತ್ತಾರೆ. ಅದಕ್ಕೂ ಮೊದಲು, ಸುಮಾರು ೨೦ ವರ್ಷದ ಯುವಕ ಪುಟ್ಟಪ್ಪನಿಗೆ, ಸಾವಿನ ವಿಷಯದಲ್ಲಿ ಇದ್ದ ಮನೊಭಾವ, ಸ್ವಲ್ಪಮಟ್ಟಿನ ಆತಂಕ, ಬಹುಮಟ್ಟಿನ ನಿರ್ಲಿಪ್ತತೆ, ಉದಾಸೀನತೆ, ಆಧ್ಯಾತ್ಮಿಕ ಸಮರ್ಥನೆ ಇವೆಲ್ಲವೂ ಗಮನಾರ್ಹ. ಆ ಬೇಸಗೆ ರಜಕ್ಕೆ ಊರಿಗೆ ಹೋಗಿದ್ದರೂ, ಅಲ್ಲಿಯೂ ಸಾಹಿತ್ಯ, ಆಧ್ಯಾತ್ಮ, ಪ್ರಕೃತಿ, ಗೆಳೆಯರು ಇವುಗಳಲ್ಲಿ ಮುಳುಗಿಹೋಗುವ ಕವಿ ತನ್ನ ತಾಯಿ ಮತ್ತು ತಂಗಿಯರನ್ನು ಭೇಟಿಯಾಗುವುದೇ ಇಲ್ಲ. ಅವರು ಆಗ ಹಿರೆಕೂಡಿಗೆಯಲ್ಲಿ ಇದ್ದರು. ಅಲ್ಲಿಗೆ ಹೋಗಿ ಅವರನ್ನು ಕಂಡು ಮಾತನಾಡಿಸುವ ಕುಪ್ಪಳಿಗೆ ಕರೆತರುವ ಯಾವ ಕೆಲಸವನ್ನೂ 'ಕಿಶೋರಚಂದ್ರವಾಣಿ'ಯಾಗಿದ್ದ ಕವಿ ಪುಟ್ಟಪ್ಪ ಮಾಡುವುದೇ ಇಲ್ಲ. 'ಕುಪ್ಪಳಿ ರಾಮಣ್ಣಗೌಡರೊಂದಿಗಿನ ಮನಸ್ತಾಪವೇ ಕಾರಣವಾಗಿ ಅವರು ತವರು ಮನೆಗೆ ಮಕ್ಕಳೊಂದಿಗೆ ಹೋಗಿದ್ದಾರೆ' ಎಂಬ ಕಾರಣವೂ ಕವಿಗೆ ಗೊತ್ತಿತ್ತು! ಈ ಹಿಂದೆಯೇ ಸ್ವತಃ ರಾಮಣ್ಣಗೌಡರು, ಮೈಸೂರಿನಲ್ಲಿದ್ದ ಕವಿಗೆ ಕಾಗದ ಬರೆದು ಈ ವಿಷಯವನ್ನು ತಿಳಿಸಿದ್ದರು. ಆ ದಿನಗಳಲ್ಲಿ ಕವಿಯ ಸಮಸ್ತಚೇತನವನ್ನು ಒಂದು ಅಲೌಕಿಕತೆ ಆಕ್ರಮಿಸಿಕೊಂಡಿದ್ದರಿಂದ, ಹೋಗಿ ಅವರನ್ನು ಕಂಡು ವಿಚಾರಿಸಿ ವಿಷಯ ಏನೆಂದು ತಿಳಿಯುವ ಯಾವುದೇ ಗೋಜಿಗೆ ಹೋಗುವುದಿಲ್ಲ. ಮುಂದೆ ಅಲಿಗೆ ಪುಟ್ಟನಾಯ್ಕರು ಬರೆದಂತೆ, 'ಕುಪ್ಪಳಿಗೆ ಬಂದ ಮಗ, ಹಿರೆಕೂಡಿಗೆಗೆ ತಮ್ಮನ್ನು ನೋಡಲು ಬರಲಿಲ್ಲ' ಎಂಬುದನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರಂತೆ. ಆಗಿನ ತಮ್ಮ ಆಧ್ಯಾತ್ಮಿಕ ಅಲೌಕಿಕ ಮನಸ್ಥಿತಿಯ ಬಗ್ಗೆ ಕವಿ 'ಅರ್ಧ ವಿವೇಕ ಅರ್ಧ ಅವಿವೇಕಗಳಲ್ಲಿ ನನ್ನ ಪ್ರಜ್ಞೆ ಅರ್ಧಮೂರ್ಛಿತ ಸ್ಥಿತಿಯಲ್ಲಿ ಮುಂದುವರಿಯುತ್ತಿತ್ತೆಂದು ಭಾಸವಾಗುತ್ತದೆ' ಎನ್ನುತ್ತಾರೆ.

ತಾಯಿಯ ಕಾಯಿಲೆ ವಿಷಯ ತಿಳಿದಾಗ, ಊರಿಗೆ ಹೋಗಬೇಕೆನ್ನುವ ಯಾವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. ಮಲೆನಾಡಿನಲ್ಲಿ ಆಗ ಕಾಯಿಲೆ ಬೀಳುವುದು ಸಮಾನ್ಯ ವಿಷಯವಾಗಿದ್ದರಿಂದ, ಹಾಗೂ 'ಕಾಯಿಲೆ ಬಿದ್ದ ಮಾತ್ರಕ್ಕೆ ಅವ್ವ ಸತ್ತೇ ಹೋಗುತ್ತದೆ' ಎಂದು ಎಣಿಸದಿದ್ದುರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತೆ ಸ್ಥಾವರಪ್ರಕೃತಿಯೇ ಹುಟ್ಟುಗುಣವಾಗಿದ್ದ ಅವರಿಗೆ, ಊರಿನಿಂದ ಬಂದ ಒಂದು ವಾರದೊಳಗಾಗಿಯೇ ಮತ್ತೆ ಊರಿಗೆ ಹೋಗುವ ಮನಸ್ಸು ಹೇಗೆ ಬಂದೀತು? ಅಲ್ಲಿಂದ ಮುಂದೆ ಹದಿನೈದು ದಿನಗಳಲ್ಲಿ ಅವರ ಅಜ್ಜ ಬಸಪ್ಪಗೌಡರು ತೀರಿಕೊಂಡರು. ಆಗಲೂ ಊರಿಗೆ ಹೋಗಲಿಲ್ಲ. ಆಗ ಹೋಗಿದ್ದರೆ, ತನ್ನ ತಾಯಿ ಸಾಯುವ ಮೊದಲೊಮ್ಮೆ ಅವರನ್ನು ನೋಡುವ ಅವಕಾಶ ಕವಿಗಿರುತ್ತಿತ್ತು. ಏಕೆಂದರೆ, ಅಜ್ಜಯ್ಯ ತೀರಿಕೊಂಡ ಹದಿನೈದೇ ದಿನದಲ್ಲಿ ತಾಯಿಯೂ ತೀರಿಕೊಂಡಿದ್ದರು!

ತಾಯಿಯ ನಿಧನದ ವಾರ್ತೆಯನ್ನು ಹೊತ್ತ ಟೆಲಿಗ್ರಾಂ ಬಂದಾಗ ಸಂತೇಪೇಟೆಯ ಆನಂದಮಂದಿರ ಹೋಟೆಲಿನ ಉಪ್ಪರಿಗೆಯ ಕೊಠಡಿಯಲ್ಲಿ ಸಹವಾಸಿಗಳೊಡನೆ ಇಸ್ಪೀಟು ಆಡುತ್ತಾ ಕುಳಿತಿದ್ದರು. ಆಗಿನ ಅವರ ವರ್ತನೆಯನ್ನು ಅವರ ಮಾತುಗಳಲ್ಲಿಯೇ ನೋಡಬಹುದು. "ಯಾವುದು ಆದರೇನು ಗತಿ ಎಂದು ಭೀತನಾಗಿದ್ದೆನೋ ಅದು ನಡೆದುಹೋಗಿತ್ತು. ಯಾರ ಸ್ತನ್ಯಪಾನ ಲಾಲನೆ ಪಾಲನೆಗಳಿಂದ ನಾನೂ ಒಬ್ಬ ಮಾನವ ವ್ಯಕ್ತಿಯಾಗಿ ಬೆಳೆದುಬಂದಿದ್ದೆನೋ ಆ ಬ್ರಹ್ಮಮಯೀ ಮಾತೆ ದೇಹತ್ಯಾಗ ಮಾಡಿದ್ದರು! ಶೋಕಾಘಾತದಿಂದ ಚೇತನ ತತ್ತರಿಸಿತು, ಒಂದು ಕ್ಷಣ! ಒಡನೆಯೆ ನನ್ನ ಅದ್ವೈತಬುದ್ಧಿಯ ಅನೆಸ್ತೀಶಿಯಾ ಕೆಲಸ ಮಾಡಿತು. ಟೆಲಿಗ್ರಾಂ ಅನ್ನು ಜೇಬಿನಲ್ಲಿಟ್ಟುಕೊಂಡು, ಏನು ಎಂತು ಎಂದು ಪ್ರಶ್ನಿಸಿದ ಮಿತ್ರರಿಗೆ ಏನೂ ವಿಶೇಷದ್ದಲ್ಲ ಎಂಬಂತೆ ಉತ್ತರಿಸಿ, ಮತ್ತೆ ಆಟದಲ್ಲಿ ತೊಡಗಿದೆ. ಏನೂ ನಡೆದಿಲ್ಲ ಎಂಬಂತೆ ಆಟ ಮುಂದುವರಿದು ಬಹಳ ಹೊತ್ತಿನ ಮೇಲೆ ಮುಗಿಯಿತು."

ಆಟ ಮುಗಿದ ಮೇಲೆ, ವಿಷಯ ತಿಳಿದ ಗೆಳೆಯರು ದಿಗ್ಭ್ರಾಂತರಾದರು. ತಾಯಿಯ ಸಾವನ್ನು ಕೇಳಿ ದುಃಖಿಸಲಿಲ್ಲ! ಅಳಲಿಲ್ಲ, ಮುಖಭಾವದಲ್ಲಿ ವ್ಯಸನ ಸೂಚಿಸಲೂ ಇಲ್ಲ. 'ಇವನೇನು ಮನುಷ್ಯನೋ ಕಲ್ಲೋ' ಎನ್ನಿಸಿರಬೇಕು ಅವರಿಗೆ. ಬೆಳಿಗ್ಗೆ, ಇವರು ಊರಿಗೆ ಹೊರಡಬಹುದು ಎಂದು ನೋಡುತ್ತಿದ್ದ ಅವರಿಗೆ, ಕಾಲೇಜಿಗೆ ಹೊರಡಲು ಸಿದ್ಧರಾಗುತ್ತಿದ್ದ ಇವರನ್ನು ಕಂಡು ಗಾಬರಿಯೂ ಆಯಿತು. ಎಲ್ಲರೂ ಸರ್ವಸಮ್ಮತಿಯಿಂದ ಇವರ ನಿರ್ಧಾರವನ್ನು ವಿರೋಧಿಸಿದರು. 'ಆಗುವುದೆಲ್ಲ ಆಗಿಹೋಗಿರುತ್ತದೆ; ನಾನು ಹೋಗಿ ಏನು ಪ್ರಯೋಜನ?' ಎಂದರು. ಆಗ ಗೆಳೆಯರು ಸತ್ತವರಿಗಾಗಿ ಬೇಡ, ನಿಮ್ಮ ತಂಗಿಯರನ್ನಾದರೂ ಸಂತೈಸಲು ಹೋಗಿ ಬನ್ನಿ' ಎಂದರು. 'ಕೂಡುಕುಟುಂಬದ ನಡುವೆ ಬೆಳೆಯುತ್ತಿರುವ ಅವರಿಗೆ ಅದರ ಅಗತ್ಯವಿಲ್ಲ' ಅನ್ನಿಸಿಬಿಡುತ್ತದೆ ಈ ಅದ್ವೈತಿಗೆ! ಒಟ್ಟು ಘಟನೆಯ ಬಗ್ಗೆ ನೆನಪಿನ ದೋಣಿಯಲ್ಲಿ ಹೀಗೆ ಬರೆಯುತ್ತಾರೆ. "ನನ್ನ ತಾಯಿ ಸತ್ತಿಲ್ಲವೆಂದೇ ನನ್ನ ದೃಢ ನಂಬುಗೆಯಾಗಿತ್ತು, ಅವರ ದೇಹ ಭಸ್ಮೀಭೂತವಾಗಿದ್ದರೂ ಅವರಾತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತಾ ಮಕ್ಕಳ ಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬಹುದಾದುದನ್ನು ಮಾಡುತ್ತಿರುತ್ತದೆ ಎಂದು."

ಒಂದು ವಿಷಯದಲ್ಲಿ ಅವರ ಸ್ನೇಹಿತರು ಯಶಸ್ವಿಯಾಗುತ್ತಾರೆ. ಊರಿನಿಂದ, 'ಹನ್ನೊಂದನೇ ದಿನದ ಕಟ್ಟಳೆಗಾದರೂ, ಹಿರಿಯ, ಒಬ್ಬನೆ ಗಂಡುಮಗನಾದ ನೀನು ಬರಲೇಬೇಕು' ಎಂದು ಕಾಗದ ಬಂದಿರುತ್ತದೆ. ಆದರೆ ತಿಥಿ ಮುಂತಾದ ಅಪರಕರ್ಮಗಳಲ್ಲಿ ಒಂದಿನಿತೂ ನಂಬಿಕೆಯಿಲ್ಲದ ಇವರು ಅದನ್ನೂ ವಿರೋಧಿಸುತ್ತಾರೆ. ಗೆಳೆಯರ ಒತ್ತಾಯದ ನಡುವೆ ಒಂದೆರಡು ದಿನಗಳು ಒದ್ದಾಡಿ, ಕೊನೆಗೂ ಊರಿಗೆ ಹೋಗಿಬರಲು ಸಮ್ಮತಿಸುತ್ತಾರೆ.

ದಹನ ಸಂಸ್ಕಾರಾದಿಗಳೆಲ್ಲಾ ಮುಗಿದು, ಹನ್ನೊಂದನೇ ದಿನದ ಕ್ರಿಯೆಗೆ ಸಿದ್ಧವಾಗುತ್ತಿದ್ದ ಮನೆಯಲ್ಲಿ ಇವರ ಪ್ರಕಾರ ಇವರು ಮಾಡಬೇಕಾಗಿದ್ದ ಕೆಲಸಗಳಾವು ಇರಲಿಲ್ಲ. ಆದರೆ, ತಾಯಿಯ ಸಾವಿನಿಂದ ತತ್ತರಿಸಿ, ಅಣ್ಣನ ಬರುವಿಕೆಗಾಗಿ ಕಾದು ಕುಳಿತಿದ್ದ ತಂಗಿಯರಿಬ್ಬರು ಎದುರಿಗೆ ಬಂದಾಗ ಇವರು ನಡೆದುಕೊಂಡ ರೀತಿ ಮಾತ್ರ ಅವರು ನಿರೀಕ್ಷಿಸಿದಂತೆ ಇರಲಿಲ್ಲ. ಒಟ್ಟು ಕುಟುಂಬದಲ್ಲಿ ಹುಟ್ಟಿ ಬೆಳೆದು, ಎಂದೂ ಏಕಾಂತದಲ್ಲಿ ಕಾಲಕಳೆಯದ, ಅಣ್ಣನೊಂದಿಗೆ ಮಾತನಾಡದ ತಂಗಿಯರು, ತಾಯಿಯ ಸಾವಿನ ಸಮಯದಲ್ಲೂ ಅಣ್ಣ ಎದುರಾದಾಗ ಮಾತನಾಡುವುದಿಲ್ಲ; ಆದರೆ ದುಃಖಿಸುತ್ತಾರೆ. ಆಗ ಇವರು ಅವರನ್ನು ಗದರಿಸಿ ಸುಮ್ಮನಾಗಿಸುತ್ತಾರೆ! ಆ ಘಟನೆಯನ್ನು ಕುರಿತು ಹೀಗೆ ಹೇಳುತ್ತಾರೆ. "ಅದನ್ನು ನೆನೆದರೆ ನನಗೆ ಈಗಲೂ ನಾಚಿಕೆಯಾಗುತ್ತದೆ; ನನ್ನ ಮೇಲೆ ತುಂಬ ಸಿಟ್ಟು ಬರುತ್ತದೆ; ಎಂತಹ ವ್ಯವಹಾರಜ್ಞಾನ ಲವಲೇಶವೂ ಇಲ್ಲದ ಅವಿವೇಖಿಯಾಗಿದ್ದೆ ಎನ್ನಿಸುತ್ತದೆ; ಎಷ್ಟು ನೊಂದುಕೊಂಡುವೊ ಆ ತಂಗಿಯರಿಬ್ಬರ ಕೋಮಲ ಹೃದಯಗಳು - ತಾಯಿಯ ಸಾವಿನ ದುಃಖದಲ್ಲಿ ಬೆಂದು, ಅಣ್ಣನ ಸಹಾನುಭೂತಿಗೂ ಅನುಕಂಪಕ್ಕೂ ಅಕ್ಕರೆಗೂ ಹಾತೊರೆಯುತ್ತಿದ್ದ ಆ ಸುಮಕೋಮಲ ಹೃದಯಗಳು -  ಎಂದು ಹೃದಯ ಮಮ್ಮಲ ಮರುಗುವಂತಾಗುತ್ತದೆ." ಅತ್ತ ಮನೆಯೊಳಗೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಇತ್ತ ಇವರು ಆಸಕ್ತರೊಂದಿಗೆ, ಭಗವದ್ಗೀತೆ, ಉಪನಿಷತ್ತು, ಅಂದಿನ ರಾಜಕೀಯ ಸ್ಥಿತಿಗತಿ, ಗಾಂಧಿ ವಿಷಯ, ಕಾವ್ಯಗಳ ಸ್ವಾರಸ್ಯ ಕುರಿತು ಮಾತನಾಡುತ್ತಾ ಕಾಲಕಳೆಯುತ್ತಿದ್ದರಂತೆ, ಉಪ್ಪರಿಗೆಯಲ್ಲಿ!

ಸಾಮಾನ್ಯವಾಗಿ ತಾಯಿಯ ತಿಥಿಕರ್ಮದಲ್ಲಿ ಮಗ ಮಾಡಬಹುದಾದ ಕಾರ್ಯಗಳನ್ನು ಮಾಡಲೂ ಮನಸ್ಸು ಮಾಡಲಿಲ್ಲ. ಆದರೆ ಮನೆಯವರ ಸ್ನೇಹಿತರ ಒತ್ತಾಯಕ್ಕೆ ಮಣಿದು, ದಹನ ನಡೆದ ಸ್ಥಳಕ್ಕೆ ಹೋಗಿ ಹಾಲು ಎರೆಯುತ್ತಾರೆ. ಆದರೆ ಪುರೋಹಿತ ಹೇಳಿಕೊಡುತ್ತಿದ್ದ ಮಾತುಗಳನ್ನು ಹೇಳದೆ, ಬಾಯಿಗೆ ಬರುತ್ತಿದ್ದ ಉಪನಿಷತ್ತಿನ ಮಂತ್ರಗಳನ್ನು, ಭಗವದ್ಗೀತೆಯ ಅಮೃತತ್ವ ಪ್ರತಿಪಾದನೆಯ ಮಹಾಶ್ಲೋಕಗಳನ್ನು ಹೇಳಿ ತಾಯಿಗೆ ನಮಿಸುತ್ತಾರೆ. ಅಂದು ರಾತ್ರಿ, ಈ ಹಿಂದೆಯೇ ಸತ್ತವರ ಆತ್ಮಗಳ ಪಂಕ್ತಿಗೆ, ಈಗ ಸತ್ತಿರುವವರ ಆತ್ಮವನ್ನು ಸೇರಿಸುವ 'ಕೊಲೆಗಿಡುವುದು' ಎಂಬ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಮಲೆನಾಡಿನವರ ಪದ್ಧತಿಯಂತೆ, ಎಡೆಯಲ್ಲಿ ಹೆಂಡ ಮಾಂಸ ಮೊದಲಾದ ವಸ್ತುಗಳನ್ನೆಲ್ಲಾ ಇಟ್ಟು, ಹಿರಿಯ ಮಗನೆ ಮೊದಲ್ಗೊಂಡು ಎಲ್ಲರೂ ಪೂಜಿಸಿ ಅಡ್ಡ ಬೀಳುವುದೇ ಆ ಕಾರ್ಯಕ್ರಮ. ಅದರ ನಂತರವೇ ಬಂದವರಿಗೆ ಊಟ. ಮನೆಯವರ ಸ್ನೇಹಿತರ ಒತ್ತಾಯಕ್ಕೆ ಮಣಿದ ಕವಿ, ಎಡೆಯಲ್ಲಿಟ್ಟಿದ್ದ ವಸ್ತುಗಳನ್ನೆಲ್ಲ ತೆಗೆಸಿ ಭಗವದ್ಗೀತೆ ಮತ್ತು ವಿವೇಕಾನಂದರದ್ದೋ ಅಥವಾ ರಾಮಕೃಷ್ಣರದ್ದೋ ಚಿತ್ರಪಟವನ್ನಿಟ್ಟು ಹೂವು ಮಡಿಸಿ, ಮಾತೆಗೆ ಶಾಂತಿ ಕೋರಿ ನಮಿಸುತ್ತಾರೆ! 'ತನ್ನ ತಾಯಿ ಪ್ರೇತವಾಗಿ ಬರುತ್ತಾರೆ' ಎಂಬ ಭಾವನೆಯೇ ಅವಗರಿಗೆ ಅಸಹ್ಯಕರವಾಗಿತ್ತು. 'ಉತ್ತಮ ಲೋಕಗಳಲ್ಲಿ ಅವರ ಪಯಣ ಮಂಗಳಕರವಾಗಿ, ಅವರು ಜಗನ್ಮಾತೆಯ ಮಡಿಲನ್ನು ಸೇರಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುವುದೊಂದೇ ತಾನು ಮಾಡಬಹುದಾದ್ದುದು' ಎಂಬ ನಂಬುಗೆ ಅವರದ್ದಾಗಿತ್ತು. ಮೇಲಿನ ಕ್ರಿಯೆಗಳಲ್ಲಿ ಒಂದು ವಿಷಯ ಮಾತ್ರ ಕವಿಯ ಭಾವಕೋಶವನ್ನು ಭಾವಮಯವನ್ನಾಗಿ ಮಾಡಿಬಿಡುತ್ತದೆ. ಸುಡುಗಾಡಿನಲ್ಲಿ, ಏಳೆಂಟು ವರ್ಷಗಳ ಹಿಂದೆ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆದ ಜಾಗದಲ್ಲಿಯೇ ತಾಯಿಯ ಅಂತ್ಯಸಂಸ್ಕಾರ ನಡೆದಿದ್ದ ಸಂಗತಿ ತಿಳಿದ ಕವಿ ಅಂತರ್ಮುಖಿಯಾಗುತ್ತಾರೆ.

ತಾಯಿಯ ಮರಣದಿಂದ ತೊಳಲಾಡಿದ ಕವಿಯ ಮೇಲಿನ ಮನಸ್ಥಿತಿಯೆಲ್ಲಾ, ಆಮೇಲೆ, ಅಂದರೆ ಸುಮಾರು ನಲವತ್ತು ವರ್ಷಗಳ ನಂತರದಲ್ಲಿ ದಾಖಲಾಗಿರುವುದು. ಆದರೆ ಆಗಿನ ಅವರ ಮನಸ್ಥಿತಿಯನ್ನು ಅರಿಯಲು ಸಹಾಯಕವಾಗುವಂತಹ ಒಂದು ಅಪ್ರಕಟಿತ ಕವಿತೆಯಿದೆ. ೨೧.೮.೧೯೨೪ರಂದು, ಅಂದರೆ ತಾಯಿಯ ಮರಣದ ಸುಮಾರು ಇಪ್ಪತ್ತು ದಿನಗಳ ನಂತರದಲ್ಲಿ ರಚಿತವಾಗಿರುವ 'ಅನಾಥ ಬಾಲ' ಶಿರ್ಷಿಕೆಯ ಈ ಕವಿತೆಗೆ, 'ನನ್ನ ಜನನಿಯ ಮರಣವಾರ‍್ತೆಯನ್ನು ಕೇಳಿ ಬರೆದುದು' ಎಂಬ ಟಿಪ್ಪಣಿಯೂ ಹಸ್ತಪ್ರತಿಯಲ್ಲಿದೆ. ೧ ೨ ೪ ೫ನೇ ಸಾಲುಗಳಲ್ಲಿ ಐದೈದು ಮಾತ್ರೆಯ ಎರಡೆರಡು ಗಣಗಳು ಹಾಗೂ ೩ ಮತ್ತು ೬ನೆಯ ಸಾಲುಗಳಲ್ಲಿ ಐದೈದು ಮಾತ್ರೆಯ ಮೂರು ಗಣಗಳು ಮತ್ತು ಕೊನೆಯಲ್ಲಿ ಒಂದು ಗುರು ಬರುವ, ಆದಿಪ್ರಾಸದಿಂದ ಕೂಡಿರುವ 'ಕುಸುಮ ಷಟ್ಪದಿ'ಯ ಲಯದಲ್ಲಿರುವ ಕವನ ಇದಾಗಿದೆ. ಹತ್ತು ಪದ್ಯಗಳಿವೆ. ತನ್ನ ತಾಯಿ ಸತ್ತಿಲ್ಲ; ಬೀಸುವ ಗಾಳಿಯಾಗಿ ಗಗನದಲ್ಲಿ, ಗಿರಿಗಳಲ್ಲಿ, ಕಾಡಿನಲ್ಲಿ, ಜೇನ್ದನಿಯಲ್ಲಿ, ಸಂಪಗೆಯ ಮರದಲ್ಲಿ... ಹೀಗೆ ಎಲ್ಲೆಲ್ಲಿಯೂ ಇದ್ದುಕೊಂಡು, ಹೆದರಬೇಡ ನಾನಿದ್ದೇನೆ ಎಂಬ ಅಭಯವನ್ನು ಮಗನಿಗೆ ಕೊಡುತ್ತಾ ಮುದ್ದಾಡುತ್ತಿದ್ದಾಳೆ ಎಂಬ ಭಾವವಿದೆ, ಕವಿತೆಯಲ್ಲಿ. ಕೆಲವು ಪದ್ಯಗಳನ್ನಿಲ್ಲಿ ಗಮನಿಸಬಹುದಾಗಿದೆ.
ಎಲೆ ಜನನಿ, ಎಲ್ಲಿರುವೆ?
ಬಿಳಿದಾದ ಮಲ್ಲಿಗೆಯು
ಪೊಳೆಯುತಿಹ ಮರದಲ್ಲಿ ನಗೆ ಬೀರುತ
ಅಲರ ರೂಪವ ತಾಳಿ
ತಳಿರ ಸೊಬಗನು ಹೊಂದಿ
ಇಳೆಯ ನಾಕದೊಳು ನೀಂ ನೆಲೆಸಿರ್ಪೆಯಾ?
ಗಗನದೊಳು ತೇಲುತಿಹ
ಮುಗಿಲಾಗಿ ನೀ ಬಂದು
ಮಗುವಾದ ನನ್ನ ನೀಂ ಮುದ್ದಿಸುವೆಯಾ?
ಹಗರಣವ ಮಾಡದಾಂ
ಹಗಲೆಲ್ಲ ಅಳುತಿರಲು
ಮಗುವೆ ಬಾ ಎಂದು ನೀ ಚುಂಬಿಸುವೆಯಾ?
ಸೊಂಪಾಗಿ ಬೆಳೆದಿರುವ
ಸಂಪಗೆಯ ಮರದಲ್ಲಿ
ಇಂಪಾಗಿ ಗಾನವಂ ನೀ ಹಾಡುವೆ
ತಂಪಾದ ಸಂಜೆಯೊಳು
ಸೊಂಪಾದ ತೋಟದೊಳು
ಇಂಪಾದ ಗಾನದಿಂ ನೀ ಕರೆಯುವೆ!
ಉನ್ನತಾದ್ರಿಯನೇರಿ
ಮುನ್ನಿನಾ ದಿನಗಳನು
ಚಿನ್ತಿಸುತ, ಜನನಿಯೇ, ಕುಳಿತಿರಲು ನಾ
'ಇನ್ನೇಕೆ ಅಳುತಿರುವೆ
ನಿನ್ನಲ್ಲಿ ನಾನಿಹೆನು!'
ಎನ್ನುತೈತಂದು ನೀಂ ಸಂತೈಸುವೆ!
ಮುಗಿಲ ಛೇದಿಸಿ ಬರುವ
ಗಗನ ಕಿರಣದಿ ಬಂದು
'ಮಗುವೆ, ನಾನಿಹೆನು ನೀ ಬೆದರಬೇಡೈ!
ನಗುತ ನೀ ನಲಿದಾಡು
ಖಗಪತಿ ಗಮನನಿಹನು,
ಮಗುವೆ.' ಎಂದೆನುತ ನೀ ಮುದ್ದಾಡುವೆ!
ಮೇಲಿನ ಕವಿತೆ ರಚನೆಯಾಗಿರುವ ಮಾರನೆಯ ದಿನವೇ (೨೨.೮.೧೯೨೪) ರಚಿತವಾಗಿರುವ ಇನ್ನೊಂದು ಕವಿತೆಗೆ ಶೀರ್ಷಿಕೆಯಿಲ್ಲ; ಪ್ರಕಟವೂ ಆಗಿಲ್ಲ. ಅಲ್ಲಿರುವ ಎರಡು ಪದ್ಯಗಳೂ ತಾಯಿಯನ್ನು ಸಂಬೋಧಿಸಿಯೆ ಪ್ರಾರಂಭವಾಗುತ್ತವೆ. ಆ ಸಂಬೋಧನೆ ಹೆತ್ತ ತಾಯಿಗೋ ಅಥವಾ ಜಗಜ್ಜನನಿಗೋ ಎಂಬುದು ಸ್ಪಷ್ಟವಾಗುವುದಿಲ್ಲ. ಹೆತ್ತಮ್ಮ ಮತ್ತು ಜಗದಮ್ಮರಿಗೆ ಅಭೇದ ಕಲ್ಪಿಸಿದ ಅದ್ವೈತ ಪರಿಣಾಮದ್ದು ಎಂದು ಭಾವಿಸಿದರೆ ಕವಿತೆಯ ಮಹತ್ವ ಹೆಚ್ಚಾಗುತ್ತದೆ.

ತಾಯಿ ನಿಧನರಾಗಿ ಏಳು ವರ್ಷಗಳಾದ ಮೇಲೆ, ಆಶ್ರಮದಲ್ಲಿ ನೆಲೆನಿಂತು ಐದುವರ್ಷಗಳಾದ ಮೇಲೆ, ಕೆಲಸಕ್ಕೆ ಸೇರಿ ಎರಡು ವರ್ಷಗಳಾದ ಮೇಲೆ... ಅಂದರೆ ೧೯೩೧ರಲ್ಲಿ ಒಂದು ದಿನ (೩೦.೧೦.೧೯೩೧) ಸಂಜೆ ಕುಕ್ಕರಹಳ್ಳಿ ಕೆರೆಯ ಅಂಚಿನ ಹಸುರಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದಾಗ, ತಂದೆ ತಾಯಿ ತಂಗಿಯರ ನೆನಪು ಒತ್ತರಿಸಿ ಬರುತ್ತದೆ. ಹಿಂದಿನದನ್ನೆಲ್ಲ ನೆನೆದು ಕಣ್ಣೀರು ಕರೆಯುತ್ತಾರೆ. ಕಣ್ಣೀರಿನ ಜೊತೆ ಅವರೆಲ್ಲರಿಗೂ ಕಾವ್ಯಾಂಜಲಿಯನ್ನೂ ಸಲ್ಲಿಸಿಬಿಡುತ್ತಾರೆ. ಆಗ ರಚಿತವಾದ ಕವಿತೆಯೇ ಜನನಿಗೆ ಎಂಬುದು.
ಜನನಿಗೆ
ಜನನಿಯೇ, ವರುಷವೇಳರ ಹಿಂದೆ ನೀನಗಲಿ
ಹೋದೆ; ಕಣ್ಮರೆಯಾದೆ. ನಾನಂದು ಸುರಿಯದಾ
ಕಂಬನಿಗಳೆಲ್ಲವೂ ಹಿರಿಯ ಹೊಳೆಯಾಗಿಂದು
ನನ್ನೆದೆಯ ನೊಂದ ದಡಗಳ ಕೊಚ್ಚಿ ಹರಿಯುತಿದೆ.
ನೀನು ಮಡಿದಂದು ನಾನದ್ವೈತ ದರ್ಶನದ
ಮದಿರೆಯಲಿ ಮುಳುಗಿದ್ದೆ: ನನ್ನ ಕಿರುಬಾಳಿನಲಿ
ನನ್ನದಲ್ಲದ ಹಿರಿಯ ಶಕ್ತಿಯೊಂದಿರುತ್ತಿತ್ತು.
ವಿಶ್ವವೆಲ್ಲವು ಮಾಯೆ; ಜೀವರೆಂಬುವರೆಲ್ಲ
ಸುಳ್ಳಿನಲಿ ಕೆತ್ತಿರುವ ಗುಳ್ಳೆಗಳು; ಶಿವ ನಾನು;
ಎಂಬ ತತ್ತ್ವದ ಮತ್ತಿನಲಿ ನೀನು, ಯಾರೆದೆಯ
ಹಾಲುಂಡು ಬದುಕಿದೆನೊ ಆ ನೀನು, ಮಡಿದುದನು
ಸುಳ್ಳೆಂದು ಬಗೆದೆ. ನನ್ನ ತಂಗಿಯರು ಬಂದು
ನನ್ನೆದುರು ನಿಂತು ಕಂಬನಿಗರೆದು ಗೋಳಿಡಲು
ಅವರನಾಲಿಂಗಿಸುತೆ ಸಂತಸವಿಡುವುದನುಳಿದು
ಗದರಿದೆನು, ಕರುಣೆಯಿಲ್ಲದ ಕಠಿಣವಾಣಿಯಲಿ.
ಶಿವ ಶಿವಾ, ಅವರಿರ್ವರೂ ನನ್ನ ಬೆನ್ನುಗಡೆ
ಬಂದು ನನ್ನಯ ಕಣ್ಣ ಮುಂಗಡೆಯೆ ತೆರಳಿದರು!
ನಿಡುಸುಯ್ದು ಪ್ರಾರ್ಥಿಸಿದೆ; ಕಂಬನಿಗೆರೆಯಲಿಲ್ಲ.
ಆದರಿಂದೆ ನಾಂ ಜಗದ ರಂಗದಲಿ ಏಕಾಂಗಿ:
ತಂದೆ ತಾಯಿಗಳಿಲ್ಲ; ಅಣ್ಣನಿರಲೇ ಇಲ್ಲ;
ಇದ್ದ ತಂಗಿಯರಿಲ್ಲ: ಸಾಧು ಸಂಗದೊಳಿಂದು
ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!
ಇಂದು ಈ ಬೈಗಿನಲಿ, ಈ ಬಯಲು ಹಸುರಿನಲಿ,
ಹುಟ್ಟಿದೂರಿಗೆ ದೂರದೀ ರಾಜಧಾನಿಯಲಿ,
ನೀರವದ ನಿರ್ಜನದ ಗಂಭೀರ ಶಾಂತಿಯಲಿ,
ಚಿತ್ತದಲಿ ಮರಳಿ ಮೂಡಿದ ಕಳೆದ ಕಾಲದಾ
ಚಿತ್ರಭಿತ್ತಿಯಲಿ ಹೊಳೆಹೊಳೆದು ಮೈದೋರುತಿದೆ
ಮತ್ತೆ ನಿನ್ನಾ ಮೂರ್ತಿ! ಮೊಗದಲ್ಲಿ ಮುಗುಳುನಗೆ;
ಕಣ್ಗಳಲಿ ಚಿರಶಾಂತಿ; ಕೈಯೆತ್ತಿ ಹರಸುತಿಹೆ
ನಿನ್ನ ಮುದ್ದಿನ ಶಿಶುವ; ಹರಸು ಓ ಹರಸಮ್ಮಾ,
ನೀನೆನಗೆ ಶೂಭದ ಆಶೀರ್ವಾದ ಮೂರ್ತಿಯೌ:
ನಿನ್ನಡಿಗೆ ಇದೊ ಮಣಿದು ಬೀಳುವೆನು! ನನ್ನೊಳಿಹ
ಶಕ್ತಿಯುಕ್ತಿಗಳೆಲ್ಲ ನಿನ್ನ ಪದತೀರ್ಥದಲಿ
ಭಕ್ತಿ ಬಿಂದುಗಳಾಗಿ ಸಂಗಮಿಸಲಿ!