Thursday, December 31, 2015

ಕವಿಶೈಲದುನ್ನತಿಗೆ ತೇಜಸ್ವಿ ಮಾರ್ಗ!


ಡಿಸೆಂಬರ್ ೨೯ ಕುವೆಂಪು ಅವರ ಜನ್ಮದಿನವನ್ನು ಸರ್ಕಾರ ’ವಿಶ್ವಮಾನವ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿ, ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದೆ. ಕುವೆಂಪು ಬರವಣಿಗೆಯ ವರ್ತಮಾನದಲ್ಲಿ ಹಾಗೂ ನಂತರ ಅವರ ಸಾಹಿತ್ಯ ಪ್ರವೇಶ, ಗ್ರಹಿಕೆ, ಚರ್ಚೆ ಎಲ್ಲವೂ ಈಗ ಇತಿಹಾಸ. ಪ್ರಸ್ತುತ ಹೊಸ ತಲೆಮಾರು ಕುವೆಂಪು ಅವರನ್ನು ಹೇಗೆ ಗ್ರಹಿಸುತ್ತಿದೆ? ಅವರಿಗಿರುವ ಸವಾಲುಗಳೇನು? ಮಾರ್ಗೋಪಾಯಗಳೇನು? ಇದರ ಬಗ್ಗೆ ಒಂದಿಷ್ಟು ಯೋಚಿಸಬೇಕಾಗಿದೆ.

ನವೋದಯದ ಸಂದರ್ಭದಲ್ಲೇ, ಕುವೆಂಪು ಅವರ ಸಾಹಿತ್ಯದ ಬಗ್ಗೆ ಎರಡು ಅತಿರೇಕಗಳು ಕೆಲಸ ಮಾಡುತ್ತಿದ್ದವು. ಒಂದು ಅವರನ್ನು ಅತಿ ಆರಾಧನಾ ಭಾವದಿಂದ ವೈಭವೀಕರಿಸುತ್ತಿದ್ದು; ಇನ್ನೊಂದು ಅತಿ ಖಂಡನೆಗೆ ಒಳಪಡಿಸುತ್ತಿದ್ದುದು. ಈ ಎರಡು ಅತಿರೇಕಗಳಿಗೂ ಜಾತಿಪ್ರೇರಣೆಯೂ ಕಾರಣವಾಗಿತ್ತು ಎಂಬುದು ಸುಳ್ಳಲ್ಲ. ಸ್ವತಃ ಕುವೆಂಪು ಅವರೇ, ಶೂದ್ರತಪಸ್ವಿ ನಾಟಕದ ಮುನ್ನುಡಿಯಲ್ಲಿ “ಯಾವ ಕಾರಣದಿಂದಾಗಲಿ, ಯಾವ ಪೂರ್ವಗ್ರಹದಿಂದಾಗಲಿ, ಯಾವ ದುರಾಗ್ರಹದಿಂದಾಗಲಿ ಹೃದಯಪ್ರವೇಶ ಮಾಡುವ ದಾರಿದ್ರ್ಯವನ್ನು ದೂರೀಕರಿಸಿ, ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಅದನ್ನು ಓದಿದರೆ ಕೃತಿಗೂ ಕೃತಿಕಾರನಿಗೂ ನ್ಯಾಯ ಮಾಡಿದಂತಾಗುತ್ತದೆ” ಎಂದು ಬರೆದಿದ್ದರೂ, ನಂತರ ನಡೆದ ಘಟನಾವಳಿಗಳು ಹಾಗೂ ಮಾರ್ನುಡಿಯಲ್ಲಿ “ಬ್ರಾಹ್ಮಣೇತರರಲ್ಲಿ ಕೆಲವರು ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟು ಕೊಡುತ್ತದೆ ಎಂಬ ಅಸತ್ಯವೂ ಅಪ್ರಕೃತವೂ ಅವಿವೇಕವೂ ಆದ ಕಾವ್ಯವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಸ್ತುತಿಸಿದರೆಂದು ಕೇಳಿದ್ದೇನೆ” ಎಂದು ಬರೆಯಲು ಕಾರಣವಾದ ಅಂಶಗಳು ಈಗ ತೆರೆದ ಇತಿಹಾಸ.
೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಶಂಭುಶಾಸ್ತ್ರಿ ಎಂಬುವವರು ಕುವೆಂಪು ಅವರ ಮೊದಲ ಸಂಕಲನದ ಮೊದಲ ಕವಿತೆಯ ಮೊದಲೆರಡು ಸಾಲುಗಳನ್ನೇ ಹಿಡಿದು ಅತಿಖಂಡನೆ ಮಾಡಿದ್ದೂ ಉಂಟು. ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು ಎಂಬ ಸಾಲನ್ನು ಹಿಡಿದು, ’ಈ ಜವನಿಕೆಯನ್ನು ಉಡುವ ತಿರೆವೆಣ್ಣಿನ ದಪ್ಪ ಸೊಂಟ ಎಷ್ಟು ಮೈಲಿ ವಿಸ್ತಾರದ್ದಿರಬೇಕು?’ ಎಂದು ಕು-ವಿಮರ್ಶೆ ಮಾಡಿದವರೂ ಇದ್ದರು. ಬಹುಶಃ ಇಂತಹ ಘಟನೆಗಳೇ ಕುವೆಂಪು ಅವರಿಗೆ-
“ನೀನೇರಬಲ್ಲೆಯಾ ನಾನೇರುವೆತ್ತರಕೆ?
ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ?
ಎಂಬ ಸಾಲುಗಳನ್ನು ಬರೆಯಲು ಕಾರಣವಾಗಿರಬಹುದು.
ಅವರ ಈ ಸವಾಲು ಕೇವಲ ಅತಿಖಂಡನಕಾರರಿಗೆ ಮಾತ್ರವಲ್ಲ; ಅತಿ ಆರಾಧಕರಿಗೂ ಅನ್ವಯಿಸುತ್ತದೆಯಲ್ಲವೆ? ಕುವೆಂಪು ಈ ಎರಡೂ ಅತಿರೇಖಗಳ ಬಗ್ಗೆ ಹೆಚ್ಚಿನಂಶ ನಿರ್ಲಿಪ್ತರಾಗಿದ್ದರೂ, ಒಬ್ಬ ಬರಹಗಾರನಾಗಿ ಸಂದರ್ಭ ಬಂದಾಗ ಪ್ರತಿಕ್ರಿಯಿಸಲು ಹಿಂಜರಿಯುತ್ತಿರಲಿಲ್ಲ ಎಂಬುದು ಸ್ಪಷ್ಟ. ’ಶೂದ್ರತಪಸ್ವಿ’ಯ ಮಾರ್ನುಡಿಯಲ್ಲದೆ, ’ನನ್ನ ಶೈಲಿ’, ’ನನ್ನ ಕವಿತೆ ತನ್ನ ವಿಮರ್ಶಕನಿಗೆ’, ’ಕವನ ಕೇಳುವವನಿಗೆ’, ’ಗ್ರಾಮಸಿಂಹ’, ’ಎಚ್ಚರಿಕೆ!’, ’ವಾಲ್ಮೀಕಿಗೊಂದು ಎಚ್ಚರಿಕೆ!’, ’ಧರ್ಮಸ್ಥಲ’, ’ಅಖಂಡ ಕರ್ಣಾಟಕ’ ಮೊದಲಾದ ಕವಿತೆಗಳನ್ನು ಕುವೆಂಪು ಅವರ ಸಾತ್ವಿಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ.
ಮೇಲಿಂದ ಮೇಲೆ ಇಂತಹ ಘಟನೆಗಳು ಜರುಗುತ್ತಿದ್ದುದರ ಪರಿಣಾಮವೋ ಏನೋ, ‘ಪಕ್ಷಿಕಾಶಿ’ ಕವನದಲ್ಲಿ ನೇರವಾಗಿ ತಮ್ಮ ಕಾವ್ಯ ಪ್ರವೇಶ ಹೇಗಿರಬೇಕೆಂದು ಕವಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ.
ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು
ಅಲ್ಲೆ ಇಟ್ಟು ಬಾ;
ಬಿಂಕದುಕುತಿಯನು ಕೊಂಕು ಯುಕುತಿಯನು
ಎಲ್ಲ ಬಿಟ್ಟು ಬಾ;
ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,
ಹಮ್ಮನುಳಿದು ಬಾ:
ಇಕ್ಷು ಮಧುರಮೆನೆ ಮೋಕ್ಷ ಪಕ್ಷಿಯಲಿ
ನಾಡಿನಾಡಿಯಲಿ ಹಾಡಿ ಹರಿದು ನಲಿ-
ದಾಡಬಹುದು ಬಾ!
ಹಿಂದೆ ಕವಿ ಹಾಕಿದ್ದ ಸವಾಲಿನಂತೆ, ಕುವೆಂಪು ಅವರ ಈ ಸ್ವಾಗತವೂ ಸಹ ಎರಡೂ ವರ್ಗಗಳಿಗೂ ಅನ್ವಯಿಸುವಂತದ್ದೇ ಆಗಿದೆ. ನಂತರದ ದಿನಗಳಲ್ಲಿ ನವ್ಯ ಸಾಹಿತ್ಯ ಪ್ರಚಾರಕ್ಕೆ ಬಂದ ಮೇಲೆ, ಹೆಚ್ಚು ಖಂಡನೆಗೆ ಗುರಿಯಾದ ಕವಿ ಕುವೆಂಪು ಅವರೇ ಆಗಿದ್ದರು! ಅದಕ್ಕೆ ಸಾಹಿತ್ಯೇತರ ಕಾರಣಗಳೇ ಹೆಚ್ಚಾಗಿದ್ದವು ಎಂಬುದು ಅತ್ಯಂತ ಸ್ಪಷ್ಟ. ಅಂತಹ ಸಂದರ್ಭವೊಂದರಲ್ಲಿಯೇ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕುವೆಂಪು ಅವರ ಸಾಹಿತ್ಯ ಕುರಿತ ವಿಚಾರಸಂಕಿರಣದಲ್ಲಿ ಉದ್ಘಾಟನಾ ಭಾಷಣ ಮಾಡಿದ್ದ ತೇಜಸ್ವಿ, ಕುವೆಂಪು ಅವರ ಸಾಹಿತ್ಯವನ್ನು ಕುರಿತಂತೆ ಇದ್ದ ಇಂತಹ ಅತಿರೇಕಗಳ ಸೂಕ್ಷ್ಮತೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.
“ಕುವೆಂಪುರವರ ಮೇಲೆ ಈಗ ಎರಡು ಬಗೆಯ ಟೀಕೆಗಳು ಕಂಡುಬರುತ್ತವೆ. ಮೊದಲನೆಯದು ಕುವೆಂಪು ಶೂದ್ರವಾದಿ; ಬ್ರಾಹ್ಮಣ ಅಥವಾ ವೈದಿಕ ಸಂಪ್ರದಾಯ ವಿರೋಧಿ ಎಂದು. ಎರಡನೆಯದು ಕುವೆಂಪುರವರ ಬ್ರಾಹ್ಮಣ ವಿರೋಧ ಕೇವಲ ಸಾಮಾಜಿಕ; ಅವರು ಆಳದಲ್ಲಿ ಪ್ರತಿಪಾದಿಸುವುದು ಆರ್ಯಸಂಸ್ಕೃತಿಯನ್ನೇ, ಆದ್ದರಿಂದ ಕೊನೆಗೂ ವೈದಿಕ ಸಂಸ್ಕೃತಿಗೆ ಅದರಿಂದ ಲಾಭ ಎಂದು” ಹೀಗೆ ಆರಂಭವಾಗುವ ಲೇಖನದಲ್ಲಿ ಕುವೆಂಪು ಸಾಹಿತ್ಯ ಪ್ರವೇಶಕ್ಕೆ ಬೇಕಾದ ಕೀಲಿಕೈಗಳು ಸಿಗುತ್ತವೆ. “ಒಬ್ಬ ಕವಿ ಪ್ರಜ್ಞಾಪೂರ್ವಕವಾಗಿ ತಾನು ಯಾವ ಜಾತಿ ಯಾವ ಸಂಪ್ರದಾಯಸ್ಥ ಯಾವ ಪಂಥದವನು ಎಂದು ಘೋಷಿಸಿಕೊಂಡರೂ ಅವನ ಸಾಹಿತ್ಯ ಪರಂಪರೆಯನ್ನು ವಿಶ್ಲೇಷಿಸ ಹೊರಟಾಗ ಇವೆಲ್ಲಾ ಗೌಣವಾಗುತ್ತವೆ. ಅಲ್ಲಿ ನಮಗೆ ಮುಖ್ಯವಾದುದು ಕವಿ ತನ್ನ ಕಲಾನಿರ್ಮಿತಿಯ ಸಂದರ್ಭದಲ್ಲಿ ವ್ಯಕ್ತಪಡಿಸುವ ಚಾರಿತ್ರಿಕ ಪ್ರಜ್ಞೆ ಮತ್ತು ಕಾರ್ಯ ಪ್ರವೃತ್ತವಾಗಿರುವ ಚಾರಿತ್ರಿಕ ಒತ್ತಡಗಳು” ಮತ್ತು “ಕುವೆಂಪು ತಮ್ಮ ಕಲಾನಿರ್ಮಿತಿಯ ಸಂದರ್ಭದಲ್ಲಿ ಪ್ರತಿಪಾದಿಸಿದ ಮತ್ತು ವಿರೋಧಿಸಿದ ತತ್ವ ಸಂಪ್ರದಾಯಗಳು ಬೇರೆ.
ಕುವೆಂಪುರವರ ಕಲಾನಿರ್ಮಿತಿಯಯನ್ನು ಇಡಿಯ ಕರ್ಣಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಶಾಲ್ಯತೆಯಲ್ಲಿ ಅರ್ಥಮಾಡಿಕೊಳ್ಳುವುದರಿಂದ ನಮಗೆ ಉಂಟಾಗುವ ಕುವೆಂಪುರವರ ಹಿಂದಿನ ಪರಂಪರೆಯ ಅರಿವು ಬೇರೆ” ಎನ್ನುವ ಅವರ ಮಾತುಗಳು ಹೊಸ ತಲೆಮಾರಿನ ಓದುಗರಿಗೆ ದಿಕ್ಸೂಚಿಯಾಗಬಲ್ಲವು. ಸ್ವತಃ ತೇಜಸ್ವಿಯವರ ಬದುಕು-ಬರಹಗಳು ನಮ್ಮನ್ನು ಕುವೆಂಪು ಸಾಹಿತ್ಯದೆಡೆಗೆ ಸೆಳೆಯಬಲ್ಲವು ಕೂಡಾ.
ಜಾಗತೀಕರಣದ ಹಿನ್ನೆಲೆಯಲ್ಲಿ, ಹೊಸ ತಲೆಮಾರಿನ ಓದುಗರಿಗೆ ಹಲವು ಅನುಕೂಲಗಳೂ ಇವೆ. ಜಾತಿ ಧರ್ಮದ ಸೋಂಕಿಲ್ಲದೆ, ಭಾಷೆಯ ಗಡಿಯೂ ಪ್ರಾಂತೀಯ ಭಾವನೆಯೂ ಇಲ್ಲದೆ ಆಲೋಚಿಸುವ ಶಕ್ತಿ ಈ ತಲೆಮಾರಿಗಿದೆ; ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗನಿಗೆ, ಅಜ್ಜನಿಗಿಂತ ಹೆಚ್ಚಿನ ದೃಷ್ಟಿವೈಶಾಲ್ಯತೆ ಸಿಗುವಂತೆ! ಕುವೆಂಪು ಸಾಹಿತ್ಯದ ಪುನರ್‌ಮನನ, ಹೊಸ ಓದು, ಪುನರ್‌ಮೌಲ್ಯಮಾಪನ ಇವೆಲ್ಲವೂ ಪ್ರಸ್ತುತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಗತ್ಯವಾಗಿ ನಡೆಯಬೇಕಾದ ಕಾರ್ಯವಾಗಿವೆ.
ಜೊತೆಗೆ, ಕುವೆಂಪು ಸಾಹಿತ್ಯ ಪ್ರಚಾರದಲ್ಲಿಯೂ ಹೊಸತನ ಅಗತ್ಯವಾಗಿ ಆಗಬೇಕಿದೆ. ಕೆಲವರ ಕೈಯಲ್ಲಾದರೂ ಇರುತ್ತಿದ್ದ ಪುಸ್ತಕಗಳು ಕಣ್ಮರೆಯಾಗಿ, ಇಂದು ಎಲ್ಲರ ಕೈಯಲ್ಲೂ ’ಸ್ಮಾರ್ಟ್ ಪೋನು’ಗಳು, ’ಈ-ಬುಕ್ ರೀಡರ್’ಗಳು ಕಾಣಿಸುತ್ತಿವೆ. ಓದುವುದು ಬರೆಯುವುದು ಎಲ್ಲವೂ ಕಾಲಾತೀತವಾಗಿ, ದೇಶಾತೀತವಾಗಿ ನಡೆಯುತ್ತವೆ. ’ಪುಸ್ತಕ’ ’ಈ-ಪುಸ್ತಕ’ವಾಗಿ ಬದಲಾದರೆ ಬಹುಜನರ ಕೈಯನ್ನೂ ಸೇರಿದಂತಾಗುತ್ತದೆ.
ಇಂದು, ಕುವೆಂಪು ಅವರ ಸಮಗ್ರ ಸಾಹಿತ್ಯ ಅಂತರ್ಜಾಲದಲ್ಲಿ ಉಚಿತವಾಗಿಯೇ ಸಿಗುತ್ತೆದೆಯಾದರೂ ಸಮರ್ಪಕವಾಗಿಲ್ಲ. ಅದನ್ನೇ ’ಈ-ಪುಸ್ತಕ’ಗಳನ್ನಾಗಿ ಪರಿವರ್ತಿಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರ ಕೈಸೇರುವಂತೆ ಮಾಡಬಹುದು. ಸಹೃದಯರ ಅಂಗೈ ಸೇರಿ ಮಸ್ತಕಕ್ಕೂ ಏರಬಹುದು! ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸುವ ಅಗತ್ಯವಿದೆ. ಏಕೆಂದರೆ, ಮೇಲಿನೆರಡು ಅಗತ್ಯಗಳು ನಮ್ಮ ಕನ್ನಡ ಸಾಹಿತ್ಯ ಪರಂಪರೆಯ ದಿಕ್ಕು-ದೆಸೆಯನ್ನು ನಿರ್ಧರಿಸುವಂತಹವುಗಳಾಗಿವೆ!

Tuesday, December 15, 2015

ಅವಿವೇಕಿ ನರಿ - ಈ ಪುಸ್ತಕ

Book titled 'Aviveki Nari (Foolish Fox)'Read this free book made on StoryJumper