Wednesday, May 22, 2013

ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಅಪರೂಪದ ಕಥೆ


ಹೌದು. ಅದು ಗುತ್ತಿ ಪೋಲೀಸಿನವರಿಗೆ ಕೈಕೊಟ್ಟ ಕಥೆ ಮತ್ತು ಆ ಕಥೆಯ ಹಿಂದಿನ ಕಥೆ!
ಮೇಗರವಳ್ಳಿಯಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿ, ಇಬ್ಬರು ಪೋಲೀಸಿನವರ ನಡುವೆ ಬಂಧಿತನಾಗಿ ನಡೆಯುತ್ತಿದ್ದ ಗುತ್ತಿ, ಆ ಇಬ್ಬರಿಗೂ ಕೈಕೊಟ್ಟು, ಒಬ್ಬನನ್ನು ಕ್ಯಾದಗೆ ಹಿಂಡಲ ಹತ್ತಿರದ ಕೆರೆಯಂಗಳದ ಕಂಪದಲ್ಲಿ ಸಿಕ್ಕಿಸಿ, ಇನ್ನೊಬ್ಬನನ್ನು ಮುಳ್ಳು ಪೊದೆಯ ಮೇಲೆ ಬೀಳುವಂತೆ ಮಾಡಿ ತಪ್ಪಿಸಿಕೊಂಡು ಕಾಡು ಸೇರಿದ ಘಟನೆ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಓದುಗರಿಗೆ ನೆನಪಿದ್ದೇ ಇರುತ್ತದೆ. ಕಾದಂಬರಿ ಅಕ್ಷರರೂಪ ತಾಳುವ ಪೂರ್ವದಲ್ಲಿಯೇ ಅಂದರೆ ಸುಮಾರು ೭೦-೮೦ ವರ್ಷಗಳಷ್ಟು ಹಿಂದೆ ನಡೆದ ಘಟನೆಯೊಂದರಿಂದ ಅದು ಪ್ರೇರೇಪಿತವಾಗಿದೆ; ಹಾಗೂ ಸರಿ ಸುಮಾರು ಅದೇ ಕಾಲದಲ್ಲಿ ನಡೆದಿರುವಂತೆ ಕಲಾತ್ಮಕವಾಗಿ ಚಿತ್ರಿತವಾಗಿದೆ.
ಮೊದಲು ಕಾದಂಬರಿಯ ಸನ್ನಿವೇಶವನ್ನು ಗಮನಿಸಬಹುದು. ಗುತ್ತಿಯ ಬಿಡಾರದಲ್ಲಿದ್ದ ಗಬ್ಬದ ಆಡನ್ನು ವಸೂಲಿ ಸಾಬರ ತಂಡ ಕದ್ದು ಕೊಂದು ತಿಂದು ಮುಗಿಸಿತ್ತು. ಹಳ್ಳವೊಂದರ ಒಡಲಿನ ಮಳಲಿನ ರಾಶಿಯಲ್ಲಿ ಹುದುಗಿದ್ದ, ಗಬ್ಬದ ಆಡಿನ ಹೊಟ್ಟೆಯಲ್ಲಿದ್ದ ಪ್ರಸವಪೂರ್ವ ಮರಿಗಳ ಶವ, ಕಳ್ಳು-ಪಚ್ಚಿ, ತೊಳ್ಳೆ, ತಲೆ ಮೊದಲಾದ ಜೀವಂತ ಸಾಕ್ಷಿಗಳನ್ನು ನೋಡಿದ ಗುತ್ತಿಯ ಪರಿವಾರ ವಸೂಲಿ ಸಾಬರ ಮೇಲೆ ಬಯ್ಗುಳ ಮಳೆಯನ್ನೇ ಸುರಿಸುತ್ತದೆ. ಅವರ ಪಚ್ಚೀನೂ ಹೀಂಗೆ ತೆಗಿಬೇಕು, ಬಾವ, ಬಿಡಬಾರ್ದು ಇವತ್ತು, ಏನೇ ಆಗ್ಲಿ! ಎಂಬ ಮಾತಿನಿಂದ ಪ್ರೇರಣೆ ಪಡೆದವರಂತೆ, ಎಲ್ಲರೂ ಒಟ್ಟಾಗಿ ಸಾಬರ ಮೇಲೆ ಧಾಳಿ ಮಾಡುತ್ತಾರೆ. ಸಾಬರಿಗೂ ಗುತ್ತಿಯ ಪರಿವಾರದವರಿಗೂ ಒಂದು ಸಣ್ಣ ಯುದ್ಧವೇ ಆಗಿ ಹೋಗುತ್ತದೆ. ಎರಡೂ ಕಡೆಯವರಿಗೂ ಚೆನ್ನಾಗಿಯೇ ಪೆಟ್ಟುಗಳು ಬೀಳುತ್ತವೆ. ಗುತ್ತಿಗೆ, ಚೂರಿಯಿಂದ ಒಂದೆರಡು ಕಡೆ ಗಾಯಗಳೂ ಆಗಿರುತ್ತವೆ. ಆದರೆ, ಆತನ ದುರಾದೃಷ್ಟ! ಆತನ ಭಾವನ ಸಂಚಿನಿಂದ, ಸಾಬರಿಗೆ ಬಿದ್ದ ಹೊಡೆತಕ್ಕೆ ಗುತ್ತಿಯೇ ಕಾರಣ ಎಂಬಂತೆ ಬಿಂಬಿತವಾಗುತ್ತದೆ. ಸಾಬಿಯ ಸ್ಥಿತಿ ಅತ್ತಲೊ ಇತ್ತಲೊ ಎನ್ನುವಂತೆ ಆದಾಗ, ಆತ ಸತ್ತರೆ ಕೊಲೆ ಕೇಸು ಗುತ್ತಿಯ ಮೇಲೆ ಬೀಳುವ ಸಂಭವವಿರುತ್ತದೆ. ಎಲ್ಲದಕ್ಕೂ ಪರಿಹಾರವೆಂಬಂತೆ, ತನ್ನ ಒಡೆಯ ಸಿಂಭಾವಿ ಭರಮೈ ಹೆಗ್ಗಡೆಯ ಕೈಗೆ ತನ್ನ ಬದುಕನ್ನು ಕೊಡುತ್ತಾನೆ ಗುತ್ತಿ. ಹೆಗ್ಗಡೆ ನಡೆಸಿದ ಕಾರಾಸ್ಥಾನ, ಪೋಲೀಸಿನವರಿಗೆ ನೀಡಿದ ಇನಾಮು ಯಾವುದೂ ಗುತ್ತಿಯ ಬಂಧನವನ್ನು ತಪ್ಪಿಸುವುದಿಲ್ಲ. ಕೊನೆಗೆ ತನ್ನ ಒಡೆಯನಿಂದ ಬೀಳ್ಕೊಡುವಾಗ, ಮತ್ತೆ ಓಡಿಗೀಡಿ ಹೋಗಲು ಪ್ರಯತ್ನಿಸೀಯಾ? ಹುಷಾರು! ಎಂಬ ಮಾತಿನೊಂದಿಗೆ ಕಣ್ಣು ಮಿಟುಕಿಸಿದ್ದೊಂದನ್ನೇ ತನ್ನ ಧೈರ್ಯಕ್ಕೆ ಆಧಾರವಾಗಿಟ್ಟುಕೊಂಡು ಪೋಲೀಸಿನವರಿಗೆ ಕೈಕೊಡಲು ಗುತ್ತಿ ನಿರ್ಧರಿಸುತ್ತಾನೆ.
ಕಾಡಿನ ಒಳಗನ್ನು ಚೆನ್ನಾಗಿ ಬಲ್ಲ ಗುತ್ತಿಯ ಮನಸ್ಸಿನಲ್ಲಿ ನಿಂತಿದ್ದು, ಮೇಗರವಳ್ಳಿ ತೀರ್ಥಹಳ್ಳಿ ರಸ್ತೆಯ ಬದಿಯಲ್ಲಿರುವ ಕ್ಯಾದಗೆ ಹಿಂಡಲ ಬಳಿಯ ಒಂದು ಸಣ್ಣ ಕೆರೆಯ ಅಂಗಳ. ಅದರ ನಡುವಿದ್ದ ಒಂದು ಕಂಪ! ಅದರಲ್ಲಿ ಹಿಂದೊಮ್ಮೆ ಒಂದು ಕಡ ಸಿಕ್ಕಿ ಹಾಕಿಕೊಂಡಿದ್ದನ್ನು ಸ್ವತಃ ಕಂಡಿದ್ದ ಗುತ್ತಿ, ಅದರಲ್ಲಿ ಗಿರ್ಲು ಮೀಸೆಯ ದಡಿಯ ಪೋಲೀಸಿನವನು ಹೂತು ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಕೊಳ್ಳುತ್ತಾನೆ. ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡು, ಡುರಕ್ ಡುರಕ್ಕೆಂದು ಹೂಸಿನ ಮೇಲೆ ಹೂಸು ಕೊಡುತ್ತಾನೆ. ಪೋಲೀಸಿನವರಿಬ್ಬರೂ ದೂರ ನೆಗೆದು ಮೂಗುಮುಚ್ಚಿಕೊಳ್ಳುತ್ತಾರೆ. ಇತ್ತ ಗುತ್ತಿ ರಸ್ತೆಯ ಮಧ್ಯೆಯೇ ಕುಳಿತು ಹೊಟ್ಟೆ ಕಿವುಚಿಕೊಳ್ಳುತ್ತಾ ಮುಖದ ಮೇಲೆ ಯಮಯಾತನಾ ಭಂಗಿಯನ್ನು ಪ್ರದರ್ಶಿಸುತ್ತಾನೆ. ಗಿರ್ಲುಮೀಸೆಯ ಪೋಲೀಸು ಮಾನನಾಯಕ ಏನಾಯ್ತೊ ಎಂದು ವಿಚಾರಿಸುತ್ತಾನೆ. ಹೊಟ್ಟೆ ಕಚ್ತದೆ. ಒಂದು ಚೂರು ಕೆರೆ ಕಡೆಗೆ ಹೋಗಬೇಕು ನನ್ನೊಡೆಯಾ ಎಂದು ಗುತ್ತಿ ಗೋಳಿಡುತ್ತಾನೆ. ಹುನಾರ್ ತೆಗಿತಾನೆ! ಬೋಳಿಮಗನೆ ಒದಿತೀನಿ ನೋಡು ಎಂದು ಬೋಳು ಮೀಸೆಯ ಪೊಲೀಸು ಮಾಯಿಂದಪ್ಪು ಹಾರಾಡುತ್ತಾನೆ. ಆದರೆ ಗುತ್ತಿಯ ಅಭಿನಯ, ಬೇಕೆಂದಾಗ ಹೂಸು ಕೊಟ್ಟು ವಾಸನೆ ಹಬ್ಬಿಸಬಲ್ಲ ಅವನ ತಂತ್ರಗಾರಿಕೆ ಅವರಿಬ್ಬರನ್ನೂ ನಂಬಿಸುತ್ತದೆ! ಹೊರಕಡೆ ಹೋಗಲು ಇಬ್ಬರೂ ಸಮ್ಮತಿಸುತ್ತಾರೆ.
ತನ್ನ ಅವಸರವನ್ನು ಅಭಿನಯಿಸುತ್ತಲೇ, ಪಂಚೆ ಎತ್ತಿ, ಲಂಗೋಟಿ ಕಳಚಿ, ಕುಂಡೆದರ್ಶನವನ್ನು ಪೋಲೀಸಿನವರಿಗಿತ್ತು, ಕೆರೆಯ ನಡುವಿನ ಕಂಪವನ್ನು ಬಳಸಿ ಓಡುತ್ತಾನೆ. ಬೀಡಿ ಹಚ್ಚುವ ವಿಫಲ ಪ್ರಯತ್ನ ನಡೆಸಿದ್ದ ಪೋಲೀಸಿನವರಿಗೆ ವಾಸ್ತವದ ಅರಿವಾಗುವಷ್ಟರಲ್ಲಿ ಆತ ಓಡುತ್ತಿರುತ್ತಾನೆ. ಕೊಟ್ಟ ಕಣೋ ಸೂಳೆಮಗ ಕೈಯ! ಎಂದು ಮಾನನಾಯಕ ನೇರವಾಗಿ ಕೆರೆಯೆಡೆಗೆ ಓಡುತ್ತಾ, ಅಡ್ಡ ಬಳಸಿ ಬರುವಂತೆ ಮಾಯಿಂದಪ್ಪುವಿಗೆ ಕೂಗುತ್ತಾನೆ. ಆ ಭರಾಟೆಯಲ್ಲಿ ಕೆರೆಯ ನಡುವಿದ್ದ ಕಂಪದ ನಡುವೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಅಡ್ಡಬಳಸಿ ಬರುವಾಗ ಇತ್ತ ಮಾಯಿಂದಪ್ಪು ಮುಳ್ಳಿನ ಗಿಜರಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದಲ್ಲದೆ, ತನ್ನ ಸ್ವಾಮಿಯನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದ ಸ್ವಾಮಿನಿಷ್ಠ ನಾಯಿ ಹುಲಿಯನ ಧಾಳಿಗೂ ಸಿಕ್ಕಿಹಾಕಿಕೊಳ್ಳುತ್ತಾನೆ. ಸುಧಾರಿಸಿಕೊಂಡು ಸಂದರ್ಭವನ್ನು ಸರಿಯಾಗಿ ಗ್ರಹಿಸುವಷ್ಟರಲ್ಲಿ ಮಾಯಿಂದಪ್ಪುವಿಗೆ, ತನ್ನ ದಫೇದಾರ ಮಾನನಾಯಕ ಕೆರೆಯ ನಡುವೆ ಕಂಪದಲ್ಲಿ ಸಿಕ್ಕಿಹಾಕಿಕೊಂಡು ಮುಳುಗುತ್ತಿರುವುದು ಕಾಣುತ್ತದೆ. ತನ್ನ ರುಮಾಲನ್ನೇ ಬಿಚ್ಚಿ ಆತನ ರಕ್ಷಣೆಗೆ ನಿಲ್ಲುತ್ತಾನೆ. ಆದರೆ ಕ್ಷಣಕ್ಷಣಕ್ಕೂ ಮಾನನಾಯಕನ ದೇಹ ಆ ಕಂಪದಲ್ಲಿ ಅಂತರ್ಧಾನವಾಗುತ್ತಲೇ ಹೋಗುತ್ತದೆ. ಆತನ ಅದೃಷ್ಟ, ಅದೇ ದಾರಿಯಲ್ಲಿ ತೀರ್ಥಹಳ್ಳಿಗೆ ಹೋಗಲು ಬರುತ್ತಿದ್ದ ಮುಕುಂದಯ್ಯ ಮತ್ತು ದೇವಯ್ಯಗೌಡರಿದ್ದ ಗಾಡಿ ಅಲ್ಲಿಗೆ ಬರುತ್ತದೆ. ಪೋಲೀಸಿನವನ ಜೀವ ಉಳಿಯುತ್ತದೆ! ತಮ್ಮ ಹೊಲಗೇರಿಯ ಹೆಣ್ಣನ್ನು ಹಾರಿಸಿಕೊಂಡು ಹೋಗಿದ್ದ ಗುತ್ತಿಯ ಬಂಧನವನ್ನು ಆಶಿಸಿದ್ದ ದೇವಯ್ಯಗೌಡನೇ ನಿಮ್ಮ ಪೋಲೀಸಿನವರನ್ನೆಲ್ಲ ಕರಕೊಂಡು ಬಂದು ಷಿಕಾರಿ ನುಗ್ಗಿದರೂ ಅಂವ ಇನ್ನು ಬಡಪಟ್ಟಿಗೆ ಸಿಕ್ಕೋದಿಲ್ಲ. ಅಂವ ಏನು ಸಾಮಾನ್ಯ ಅಂತ ಮಾಡಿರೇನು? ಪುಂಡ! ಜಗಪುಂಡ! ಎಂದು ಒಂದು ರೀತಿಯಲ್ಲಿ ಗುತ್ತಿಯ ಧೈರ್ಯ ಸಾಹಸಗಳನ್ನು ಪೋಲೀಸಿನವರಿಗೆ ಮನದಟ್ಟು ಮಾಡಿಸುತ್ತಾನೆ. ಇಂತಹ ಒಂದು ಸಂದರ್ಭವನ್ನು ಸೃಷ್ಟಿಸಲು ಕಾದಂಬರಿಕಾರರಿಗೆ ಇದ್ದ ಪ್ರೇರಣೆ ಏನು? ಕಾಡಿನ ನಡುವೆ, ಪೋಲೀಸರಿಗೆ ಕೈಕೊಟ್ಟು ತಪ್ಪಿಸಿಕೊಳ್ಳುವ ಖದೀಮರಿಗೇನು ಆ ಕಾಲದಲ್ಲಿ, ಅಂದರೆ ಈಗ್ಗೆ ಸುಮಾರು ನೂರು ನೂರಿಪ್ಪತ್ತು ವರ್ಷಗಳ ಹಿಂದೆ ಕೊರತೆಯಿರಲಿಲ್ಲ.
ಆದರೆ ಹಾಗೆ ಪೋಲೀಸಿನವನನ್ನು ಕೆರೆಯ ನಡುವೆ ಕಂಪದಲ್ಲಿ ಸಿಕ್ಕಿಸಿ, ರಾಬಿನ್ ಹುಡ್ ಮಾದರಿಯಲ್ಲಿ ತಪ್ಪಿಸಿಕೊಂಡು ಹೋಗುವ ಗುತ್ತಿಯ ಜಾಣ್ಮೆಗೆ ಏನೆನ್ನಬೇಕು? ಹೌದು. ಸರಿಸುಮಾರು ಅಂತಹುದೇ ಒಂದು ಘಟನೆ, ಕಾದಂಬರಿಯ ರಚನೆಯ ಕಾಲಕ್ಕೆ ಸುಮಾರು ೭೦-೮೦ ವರ್ಷಗಳ ಹಿಂದೆ ನಡೆದಿತ್ತು. ಅದರ ಕತೆ ಮಲೆನಾಡಿನಲ್ಲಿ ಜನರ ಮಾತಿನಲ್ಲಿ ಆಗಾಗ ಬಂದು ಹೋಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ವಾಲೆಕಾರನ ಕಂಪ ಎಂಬ ಸ್ಥಳವೊಂದು ಕಾದಂಬರಿಕಾರರಿಗೆ ಚಿರಪರಿಚಿತವಾಗಿತ್ತು. ಆ ಹೆಸರಿನ ಹಿನ್ನೆಲೆಯೇ ಆ ಕಥೆ, ಆ ಕಥೆಯೇ ಕಾದಂಬರಿಕಾರರಿಗೆ ಪ್ರೇರಣೆ!
ಶ್ರೀ ಅಮ್ಮಡಿ ಆರ್. ನಾಗಪ್ಪನಾಯಕ
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ, ಅಲಿಗೆ ಪುಟ್ಟಯ್ಯನಾಯಕರ ಪುಸ್ತಕದ ವಿಷಯವಾಗಿ ಕ್ಷೇತ್ರಕಾರ್ಯಕ್ಕೆ ಹೋದಾಗ ನನಗೆ ಪರಿಚಿತರಾದವರು ಸುಮಾರು ೯೩ ವರ್ಷ ವಯಸ್ಸಿನ ಶ್ರೀ ಅಮ್ಮಡಿ ಆರ್. ನಾಗಪ್ಪನಾಯಕರು. ಸ್ವತಃ ಕುವೆಂಪು ಅವರ ಬಂದುಗಳು. ಕುವೆಂಪು ಅವರ ತಾಯಿಯ ಸಹೋದರ (ದೊಡ್ಡಪ್ಪನ ಮಗ) ಅಮ್ಮಡಿ ರಂಗಪ್ಪನಾಯಕರ ಮಗ. ಅಂದರೆ ಸ್ವತಃ ಕುವೆಂಪು ಅವರ ಸೋದರಮಾವನ ಮಗ ಈ ನಾಗಪ್ಪನಾಯಕರು. ಶಿವಮೊಗ್ಗದಲ್ಲಿ ವಾಸ. ಪುಟ್ಟಯ್ಯನಾಯಕರ ಒಡನಾಡಿಗಳೂ ಹೌದು. ನಾವು ಕುಪ್ಪಳಿಗೆ ಹೋದಾಗ, ಅಲ್ಲಿಗೆ ಬಂದು ಎರಡೂ ದಿನಗಳು ನಮ್ಮೊಂದಿಗೆ ಇದ್ದು ಪುಟ್ಟಯ್ಯನಾಯಕ ಹಾಗೂ ಕುವೆಂಪು ಅವರ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದರು. ಆಗಲೇ ಗುತ್ತಿ ಪೋಲೀಸಿನವರಿಗೆ ಕೈಕೊಟ್ಟ ಸನ್ನಿವೇಶ ಮತ್ತು ವಾಲೇಕಾರನ ಕಂಪದ ಬಗ್ಗೆ ಮಾಹಿತಿ ನೀಡಿದ್ದರು. ಮೊನ್ನೆ ನಾನು ಪೋನ್ ಮಾಡಿ ಕೇಳಿಕೊಂಡಾಗ ಟಿಪ್ಪಣಿಯ ರೂಪದಲ್ಲಿ ಅದನ್ನು ಬರೆದೂ ಕಳುಹಿಸಿದ್ದಾರೆ. ಅವರ ಸಹಕಾರವನ್ನು ನೆನೆಯುತ್ತ ಆ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಮುಂದಿನ ಕಥೆಯನ್ನು ನಾಗಪ್ಪನಾಯಕರ ಮಾತಿನಲ್ಲೇ ಕೇಳಿ.
ಸುಮಾರು ಒಂದು ನೂರು ವರ್ಷಗಳ ಹಿಂದೆ, ಅಮ್ಮಡಿ ಮನೆಯ ಸುತ್ತ ನೂರಾರು ಎಕರೆಗಳಷ್ಟು ವ್ಯವಸಾಯ ಯೋಗ್ಯಭೂಮಿ ಇತ್ತು. ಅದರಲ್ಲಿ ಸುಮಾರು ನಲವತ್ತು ಎಕರೆಯಷ್ಟು ಭತ್ತದ ಗದ್ದೆಗಳೇ ಆಗಿದ್ದವು. ವಾರ್ಷಿಕ ಸುಮಾರು ೨೫೦ರಿಂದ ೩೦೦ ಇಂಚಿನಷ್ಟು ಭಾರಿ ಮಳೆಯಾಗುತ್ತಿದ್ದ ದಟ್ಟ ಮಲೆನಾಡಿನ ಪ್ರದೇಶ. ಆದ್ದರಿಂದ ತಗ್ಗಿನಲ್ಲಿದ್ದ ಕೆಲವು ಗದ್ದೆಗಳಲ್ಲಿ ಭಯಂಕರವಾದ ಉಸುಬಿನ ಹೊಂಡಗಳು ನಿರ್ಮಾಣವಾಗಿಬಿಟ್ಟಿದ್ದವು. ಈ ಗದ್ದೆಗಳನ್ನು ಯಾವುದೇ ಎತ್ತು, ಕೋಣಗಳಿಂದ ಉಳುಮೆ ಮಾಡಲು ಸಾಧ್ಯವೇ ಇರಲಿಲ್ಲ. ಬೇಸಿಗೆಯಲ್ಲೂ ಹಸಿ ಆರುತ್ತಿರಲಿಲ್ಲ. ಜೊಂಡುಗಳು ಒತ್ತೊತ್ತಾಗಿ ಬೆಳೆದಿರುತ್ತಿದ್ದವು. ಒಂದು ಒಂದೂವರೆ ಅಡಿ ಬೆಳೆದಿರುತ್ತಿದ್ದ ಜೊಂಡಿನ ಕೆಳಗೆ ಸುಮಾರು ಹತ್ತು ಹನ್ನೆರಡು ಅಡಿ ಆಳದ ಉಸುಬು ತುಂಬಿರುತ್ತಿತ್ತು. ಅಂತ ಕಡೆ ಗದ್ದೆ ನಾಟಿ ಮಾಡಲು ಒಂದು ಮಾರ್ಗ ಕಂಡುಕೊಂಡಿದ್ದರು. ಎರಡು ಎರಡೂವರೆ ಅಡಿ ಅಗಲದ, ಹತ್ತು ಹನ್ನೆರಡು ಅಡಿ ಉದ್ದ ಮರದ ಹಲಗೆಗಳನ್ನು ಕಂಪದ ಮೇಲೆ ಹಾಕಲಾಗುತ್ತಿತ್ತು. ಅದರ ಮೇಲೆ ನಿಂತುಕೊಂಡು, ಉದ್ದವಾದ ಕಾವು ಹಾಕಿದ ಗುದ್ದಲಿಗಳಿಂದ ಜೊಂಡನ್ನು ಕೊಚ್ಚಿ ಅದೇ ಉಸುಬಿನಲ್ಲಿ ಮುಳುಗಿಸಲಾಗುತ್ತಿತ್ತು. ಅದು ಕೊಳೆತ ನಂತರ ಅದೇ ರೀತಿ ಹಲಗೆಯ ಮೇಲೆ ನಿಂತುಕೊಂಡೇ ಭತ್ತ ನಾಟಿ ಮಾಡಬೇಕಿತ್ತು.
ನಮ್ಮ ಮನೆ ಕೊಪ್ಪ ಟೌನಿನಿಂದ ಕೇವಲ ಒಂದೆರಡು ಮೈಲಿಗಳ ದೂರದಲ್ಲಿದೆ. ಹೆದ್ದಾರಿಯ (ಕೊಪ್ಪ ತೀರ್ಥಹಳ್ಳಿ ರಸ್ತೆ) ಪಕ್ಕದಲ್ಲೇ ಇದ್ದುದರಿಂದ ಕೊಪ್ಪದ ಸರ್ಕಾರಿ ಅಧಿಕಾರಿಗಳು, ವ್ಯಾಪಾರಸ್ಥರು ಎಲ್ಲರಿಗೂ ಸುಲಭವಾಗಿ ಎಟಕುತ್ತಿತ್ತು. ಹಿಂದೆ ಬಹಳ ಜಬರದಸ್ತಿ ಕಾಲ. ಸಬಲರು ದುರ್ಬಲರ ಮೇಲೆ ನಿರಾತಂಕವಾಗಿ ಅಧಿಕಾರ ಚಲಾಯಿಸುತ್ತಿದ್ದರು. ಕೊಪ್ಪದ ಯಾವುದೇ ಅಧಿಕಾರಿಗಳು, ಪೋಲೀಸ್, ರೆವಿನ್ಯೂ ಇಲಾಖೆಯ ಯಾವುದೇ ಅಧಿಕಾರಿಯ ಸೇವೆಗೆ ಏನೇ ವಸ್ತುಗಳೇ ಆಗಲೀ – ಬಾಳೆಎಲೆ, ಬಾಳೆಕಂಬ, ಹಣ್ಣು, ತರಕಾರಿ, ಮರಮುಟ್ಟು, ಅಡಿಕೆ ಇತ್ಯಾದಿ – ಕೆಲಸಕ್ಕೆ ಆಳುಕಾಳುಗಳೆ ಆಗಲೀ ಅಮ್ಮಡಿಯ ಮನೆಯೇ ಮೊದಲ ಆಯ್ಕೆಯಾಗಿತ್ತು. ಎಲ್ಲವನ್ನೂ ಪುಕ್ಕಟ್ಟೆಯಾಗಿ ತರಿಸಿಕೊಳ್ಳುತ್ತಿದ್ದರು. ಸುಮಾರು ಮುನ್ನೂರು ಮುನ್ನೂರೈವತ್ತು ವರ್ಷಗಳಷ್ಟು ಹಳೆಯದಾದ ದೊಡ್ಡ ಮನೆತನ ಅದು.
ಮನೆಯ ಜನ ಶ್ರೀಮಂತರೂ, ಸ್ವಾಭಿಮಾನಿಗಳೂ ಆಗಿದ್ದರೂ, ಆಗಿನ ಕಾಲಕ್ಕೆ ಸಹಜವಾಗಿಯೇ ಇದ್ದ, ಸರಕಾರೀ ಅಧಿಕಾರಿಗಳ, ಪೋಲೀಸಿನವರ ಭಯದಿಂದ ಮುಕ್ತರಾಗಿರಲಿಲ್ಲ. ಎಷ್ಟು ಬೇಕೊ ಅಷ್ಟನ್ನು ಕೊಡುತ್ತಾ ಬಂದ ಅಧಿಕಾರಿಗಳನ್ನೊ, ಅವರ ಜವಾನರನ್ನೊ ಸಾಗಹಾಕುತ್ತಿದ್ದರು. ಒಮ್ಮೆ ಕಂಪದ ಗದ್ದೆಯೊಂದರ ಬಳಿ ಕೆಲಸ ನಡೆಯುತ್ತಿದ್ದಾಗ ಒಬ್ಬ ಪೋಲೀಸ್ ವಾಲೆಕಾರ ಬಂದು ಬಹಳ ಜಬರ‍್ದಸ್ತಿಯಿಂದ ಅಲ್ಲಿದ್ದವರನ್ನು ಗದರಿಸಿ, ನಾಳೆ ಸಹೇಬರ ಮನೆಗೆ ನಾಲ್ಕು ಜನ ಬಿಟ್ಟಿ ಬರಬೇಕಂತಲೂ, ಬರದಿದ್ದರೆ, ಒದ್ದು ಎಳೆದುಕೊಂಡು ಹೋಗುತ್ತೇನೆಂತಲೂ ಹೇಳಿದ್ದಾನೆ. ಆ ವಾಲೆಕಾರನ ಜಬರದಸ್ತು ಅದೇ ಮೊದಲಿನದಾಗಿರಲಿಲ್ಲ. ಆಳುಕಾಳಿಗೂ ಬಹಳ ತೊಂದರೆ ಕೊಡುತ್ತಿದ್ದ. ತಿರ್ಕೊಂಡು ತಿನ್ನೋನ ಹತ್ರ ತರ್ಕೊಂಡು ತಿನ್ನೋನ ಹಾಗೆ, ಅವರ ಕೈಲಿದ್ದುದನ್ನೂ ಕಿತ್ತುಕೊಂಡು ಬಹಳ ದಬ್ಬಾಳಿಕೆ ನಡೆಸೋನು. ಬಿಟ್ಟಿ ಎಂದರೆ, ಬಿಟ್ಟಿ! ಕೂಲಿಗೀಲಿ ಇಲ್ಲ. ಅಮ್ಮಡಿ ಮನೇದೆ ಭತ್ಯ ಅವರಿಗೆ ಸಿಗಬೇಕಿತ್ತು.
ಮನೆ ಸೇರೆಗಾರರು ಸಹಜವಾಗಿಯೇ ಇದರಿಂದ ಬೇಸತ್ತಿದ್ದರು. ಆವತ್ತು ಅಲ್ಲಿದ್ದ ಆಳು ಕಾಳು ಎಲ್ಲ ಸೇರಿ ಈ ವಾಲೆಕಾರನಿಗೆ ಒಂದು ಗತಿ ಕಾಣಿಸಬೇಕು ಅಂತ ಮಾತಡ್ಕಂಡ್ರು. ಮನೆ ಹಿರಿಯರಿಗೆ ವಿಷಯ ತಿಳಿದರೆ ಅವರು ಒಪ್ಪೋದಿಲ್ಲ ಅಂತ, ಆಗ ತಾನೆ ಮನೆ ಯಜಮಾನಿಕೆ ವಹಿಸಿಕೊಂಡಿದ್ದ ನಮ್ಮ ದೊಡ್ಡಪ್ಪ ನಾಗೇನಾಯ್ಕರ ಕಿವಿಗೆ ಸೇರೆಗಾರರ ಮುಖಾಂತರ ಹಾಕಿಸಿದರು. ಬಿಸಿರಕ್ತದ ನಾಗೇನಾಯ್ಕರು ಅದೇನು ಮಾಡ್ತಿರೋ ಮಾಡಿ. ಆ ನನ್ಮಕ್ಕಳ ಕಾಟ ತಪ್ಪಿದರೆ ಸಾಕು ಎಂದು ಒಪ್ಪಿಗೆ ಕೊಟ್ಟರು.
ಮಾರನೆ ದಿನ ಬೆಳಿಗ್ಗೆ ಎದ್ದವರೇ ನಾಗೇನಾಯ್ಕರು ಕೊಪ್ಪ ಪೇಟೆಗೆ ನಡೆದುಬಿಟ್ಟರು. ಎಷ್ಟು ಹೊತ್ತಾದರೂ ಬಿಟ್ಟಿ ಆಳು ಬರದೇ ಇದ್ದಾಗ, ಸಾಹೇಬ ಸಿಟ್ಟಿಗೆದ್ದು ವಾಲೇಕಾರನಿಗೆ ಬಯ್ದಿದ್ದ ಅಂತ ಕಾಣುತ್ತೆ. ಅವನು ಉರಿ ಉರಿ ಉರಿಯುತ್ತಲೇ ಕಂಪದ ಗದ್ದೆ ಹತ್ತಿರ ದೌಡಾಯಿಸಿದ. ಹೆಚ್ಚಿನ ಜನ ಆಳುಕಾಳು ಇಲ್ಲ. ಕೆಲವೇ ಜನ ಹಾಕಿದ್ದ ಹಲಗೆಗಳ ಮೇಲೆ ನಿಂತು ಕಂಪದ ಕೆಸರು ಕದಡುತ್ತಿದ್ದರು. ವಾಲೇಕಾರ ಬಂದವನೇ ಅವರ ಮೇಲೆ ಹಾರಾಡತೊಡಗಿದ. ಒಬ್ಬ ಆಳಿನ ಮೇಲೆ ಯಾವುದೋ ಹಳೆಯ ದ್ವೇಷದಿಂದ ಹರಿಹಾಯ್ದ. ಆ ಆಳು ವಾಲೆಕಾರನನ್ನು ಕಿಚಾಯಿಸುತ್ತಾ, ಹತ್ತಿರ ಬರುವಂತೆ ಪ್ರಚೋದಿಸುತ್ತಾ ಹಲಗೆಯ ಮೇಲೆ ನಿಂತು ಬಿಟ್ಟಿದ್ದ. ಪೋಲೀಸಿನವನಿಗೇನು ಗೊತ್ತು? ಇದು ನನ್ನ ಕೊನೇ ದಿನ ಅಂತ! ಆ ಆಳಿನ ಮೇಲೆ ಉರಿದು ಬಿದ್ದ. ನೆಗೆದು ಅವನ ಜುಟ್ಟು ಹಿಡಿದು ಎಳೆದುಕೊಂಡು ಹೋಗಬೇಕೆಂದು ಅವನತ್ತ ಸಾಗಿದ. ಒಂದೆರಡು ಹಜ್ಜೆ ಅಷ್ಟೆ. ತನ್ನ ತೂಕಕ್ಕೆ ತಾನೇ ಕೆಸರಿನಲ್ಲಿ ಇಳಿಯತೊಡಗಿದ.
ಆಗ ಅವನಿಗೆ ಸಾವು ಆತನ ಕಣ್ಣಮುಂದೆ ಕಾಣಿಸಿತೇನೊ. ಮೊದಲು ಸ್ವಲ್ಪ ಹಾರಾಡಿದರೂ, ಹೆಚ್ಚು ಹೆಚ್ಚು ಕೆಸರಿನಲ್ಲಿ ಇಳಿಯುತ್ತಿದ್ದಂತೆ ಗೋಗರೆಯತೊಡಗಿದ. ಅವನಿಂದ ಶೋಷಣೆಗೆ ಒಳಗಾಗಿದ್ದ ಆಳುಗಳು ಅಲುಗಾಡದೆ ಸುಮ್ಮನೆ ಹಲಗೆಗಳ ಮೇಲೆ ನಿಂತಿದ್ದರು. ಎಲ್ಲರೂ ನೋಡು ನೋಡುತ್ತಿದ್ದಂತೆ, ವಾಲೆಕಾರ ಕೆಸರಿನಲ್ಲಿ ಪೂರ್ತಿ ಮುಳುಗಿ ಹೋಗಿದ್ದ. ಎಲ್ಲವೂ ಎಂಟ್ಹತ್ತು ನಿಮಿಷದಲ್ಲಿ ಮುಗಿದು ಹೋಗಿತ್ತು. ಸ್ವಲ್ಪವೇ ಹೊತ್ತಿನ ಮುಂಚೆ, ಆರ್ಭಟಿಸುತ್ತಿದ್ದ ವಾಲೆಕಾರ ಕೆಸರಿನಲ್ಲಿ ತಣ್ಣಗೆ ಮುಳುಗಿಬಿಟ್ಟಿದ್ದ. ಅವನು ಮುಳುಗಿದ ಜಾಗದಲ್ಲಿ ಯಾವುದೇ ಗುರುತು ಕೂಡಾ ಉಳಿಯಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮಾಮೂಲಿನಂತೆ ಜೊಂಡು ಕೊಚ್ಚಿ ಕರಗಿಸಲು ಹಾಕಿದರು. ಮುಂದೆ ನಾಟಿಯನ್ನೂ ಮಾಡಿದರು. ಆಗ್ಗೆ ಜನಸಂಚಾರವೂ ಕಡಿಮೆಯಿತ್ತಾದ್ದರಿಂದ, ಆ ವಿಷಯ ಬೆಳಕಿಗೆ ಬರಲೇ ಇಲ್ಲ. ಅದರ ಬಗ್ಗೆ ಪತ್ತೆ ವಗೈರೆ ನಡೆಯಲೂ ಇಲ್ಲ. ಆದರೆ ಸ್ವಲ್ಪ ವರ್ಷಗಳ ನಂತರ ಆ ಗದ್ದೆಯನ್ನು ಆಳುಗಳೆ ವಾಲೆಕಾರನ ಕಂಪ, ವಾಲೆಕಾರನ ಕಂಪ ಎಂದು ಕರೆಯತೊಡಗಿದರು. ಆ ಗದ್ದೆಗೆ ಅದೇ ಹೆಸರು ನಿಂತಿತ್ತು. ಮುಂದೆ ನಾವು ಹುಟ್ಟಿ, ಬೆಳದಂತೆ ಅದೊಂದು ಕತೆಯಂತೆ ಮಾತ್ರ ಪ್ರಚಲಿತದಲ್ಲಿತ್ತು. ಈಗಲೂ ಕೆಲ ಹಳಬರು ಆ ಜಾಗವನ್ನು ವಾಲೆಕಾರನ ಕಂಪ ಎಂದೇ ಕರೆಯತ್ತಾರೆ. ಆದರೆ ಅಲ್ಲಿ ಈಗ ಮೊದಲಿನ ಹಾಗೆ ಉಸುಬಿಲ್ಲ; ಕಂಪಗಳೆಲ್ಲಾ ಒಣಗಿಹೋಗಿವೆ. ಕಾರಣ – ಕಡಿಮೆಯಾಗಿರುವ ಮಳೆ, ಹೆಚ್ಚಿರುವ ಬೋರ್‌ವೆಲ್ಲುಗಳು, ಕುಸಿದಿರುವ ಅಂತರ್ಜಲಮಟ್ಟ.
ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬ ಗಾದೆಯೇ ಇದೆ. ಸುಮಾರು ಒಂದುನೂರು ವರ್ಷಗಳ ಹಿಂದೆ ಕೊಪ್ಪ ಮಲೆನಾಡಿನ ಮೂಲೆ. ಮಲೇರಿಯಾದ ಕೊಂಪೆಯಾಗಿತ್ತು. ವರ್ಷದ ಆರುತಿಂಗಳ ಅಲ್ಲಿಯ ಜೀವನವಂತೂ ನರಕ. ಅಲ್ಲಿಗೆ ಸರ್ಕಾರಿ ಅಧಿಕಾರಿಗಳಾಗಿ ಹೋದವರಿಗೆ ಯಾರ ಮೇಲೆ ಸಿಟ್ಟಿರುತ್ತಿತ್ತೊ ಏನೊ. ಅಂತೂ ಕೈಗೆ ಸಿಕ್ಕ ಜನರನ್ನು ಶೋಷಣೆ ಮಾಡುವ ಮೂಲಕ ಅದನ್ನು ತೀರಿಸಿಕೊಳ್ಳುತ್ತಿದ್ದರೇನೊ. ಪಾಪ ಬಡಪಾಯಿ ವಾಲೆಕಾರ ತನ್ನ ಜೀವನವನ್ನೇ ಕಳೆದುಕೊಳ್ಳಬೇಕಾಯಿತು. ಕಂಪದಲ್ಲಿ ಪೋಲೀಸಿನವನನ್ನು ಸಿಕ್ಕಿ ಹಾಕಿಸುವ ಸನ್ನಿವೇಶಕ್ಕೆ, ಹಿರಿಯರಾದ ನಾಗಪ್ಪನಾಯಕರು ಹೇಳುವಂತೆ ಈ ಕಥೆಯೇ ಕುವೆಂಪು ಅವರಿಗೆ ಪ್ರೇರಣೆಯಾಗಿರಬಹುದು. ಆದರೆ, ಜೀವಪರ ನಿಲುವನ್ನುಳ್ಳ ಕಾದಂಬರಿಕಾರ ಉದ್ದೇಶಪೂರ್ವಕವಾಗಿಯೋ ಅಥವಾ ಅನೈಚ್ಛಿಕವಾಗಿಯೋ ಪೋಲೀಸು ದಫೇದಾರ ಮಾನನಾಯಕನ ಜೀವವನ್ನುಳಿಸಿದ್ದಾರೆ. ಕಂಪದಲ್ಲಿ ಪೂರ್ತಿ ಮುಳುಗಿದರೂ, ಆತ ಸಾಂದರ್ಭಿಕ ಸಹಾಯದಿಂದ ಬದುಕಿ ಉಳಿಯುತ್ತಾನೆ.