Monday, August 13, 2012

ಬ್ರಾಹ್ಮನಾಯಿ-ಶೂದ್ರಕೋಳಿ

ಮನೆಗಳಲ್ಲಿ ಸಾಕುಪ್ರಾಣಿಗಳಿದ್ದರೆ, ಮನೆಯಲ್ಲಿನ ಮಕ್ಕಳು ಅವುಗಳೊಂದಿಗೆ ಕಾಲ ಕಳೆಯುವುದು ಹೆಚ್ಚು. ಪ್ರಾಣಿಗಳೊಂದಿಗೆ ಬೆಳೆಯುವ ಮಕ್ಕಳಲ್ಲಿ ಪ್ರಾಣಿ-ಪರಿಸರ ಪ್ರಜ್ಞೆ ಸಹಜವಾಗಿಯೇ ಬೆಳೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ರೈತಕುಟುಂಬಗಳಲ್ಲಿ ಮಕ್ಕಳು ಸಹಜವಾಗಿಯೇ ಹತ್ತಾರು ಪ್ರಾಣಿಗಳ ಒಡನಾಟದಲ್ಲಿ ಬೆಳೆಯುತ್ತವೆ. ನಾವು ಚಿಕ್ಕವರಾಗಿದ್ದ ನಮ್ಮ ಅಜ್ಜಿ ಸಾಕಿದ್ದ ಕೋಳಿಗಳಲ್ಲಿ, ಒಂದೊಂದು ಕೋಳಿಗಳಿಗೆ ನಮ್ಮ ಹೆಸರಿಟ್ಟು ಅದರ ಉಸ್ತುವಾರಿ ನೋಡಿಕೊಳ್ಳುವಂತೆ ಮಾಡಿದ್ದರು. ನಾವು ಊಟದ ಕೊನೆಯಲ್ಲಿ ಸ್ವಲ್ಪ ಮುದ್ದೆ-ಅನ್ನ ಉಳಿಸಿ ನಮ್ಮ ಕೋಳಿಗಳಿಗೆ ಪ್ರತ್ಯೇಕವಾಗಿ ತಿನ್ನಿಸಲು ಪ್ರಯತ್ನಿಸುತ್ತಿದ್ದೆವು. ಕಡ್ಲೆಪುರಿ ತಿನ್ನಿಸಿದರೆ ಹೆಚ್ಚು ಕೊಬ್ಬಿ ಬೆಳೆಯುತ್ತವೆ ಎಂಬ ನಂಬಿಕೆಯಿಂದ, ವಾರಕ್ಕೊಮ್ಮೆ ಸಂತೆಯ ದಿನ ಮನೆಗೆ ತರುತ್ತಿದ್ದ ಪುರಿಗಡಲೆಯ ನಮ್ಮ ಭಾಗದಲ್ಲಿ ಒಂದಷ್ಟನ್ನು ಉಳಿಸಿ ಕೋಳಿಗಳಿಗೆ ತಿನ್ನಿಸುತ್ತಿದ್ದೆವು. ಸ್ವಲ್ಪ ದೊಡ್ಡವರಾದ ಮೇಲೆ ಒಂದೊಂದು ಟಗರು ಮರಿಯನ್ನು ನಾವು ಮುತುವರ್ಜಿ ವಹಿಸಿ ಸಾಕುವಂತೆ ನಮ್ಮ ಅಜ್ಜ-ಅಜ್ಜಿ ಏರ್ಪಾಡು ಮಾಡಿದ್ದರು. ಮನೆಯಲ್ಲಿದ್ದ ಮೂರು ನಾಯಿಗಳಲ್ಲಿ ಒಂದೊಂದನ್ನು ಒಬ್ಬರು ಹಂಚಿಕೊಂಡು, ನಮ್ಮವುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದೆವು. ಹೀಗೆ ಸಾಕುತ್ತಿದ್ದ ಸಾಕು ಪ್ರಾಣಿಗಳು ಸಹ ಪರಸ್ಪರ ಸ್ನೇಹದಿಂದ ಇರುತ್ತಿದ್ದವು. ನಾಯಿ ನಾಯಿಗಳಿರಲಿ, ಬೆಕ್ಕು-ನಾಯಿಗಳು, ನಾಯಿ-ಕೋಳಿಗಳು ಪರಸ್ಪರ ಸ್ನೇಹದಿಂದ ಇರುವುದನ್ನು ನಾನು ನೋಡಿದ್ದೇನೆ. ನಮ್ಮ ಮನೆಯಲ್ಲಿದ್ದ ನಾಯಿ ಮತ್ತು ಬೆಕ್ಕು ಒಂದೇ ತಟ್ಟೆಯಲ್ಲಿ ಹಾಲು ಕುಡಿಯುತ್ತಿರುವ ಪೋಟೋ ಕೂಡಾ ತೆಗೆದಿಟ್ಟಿದ್ದೇನೆ. ನಾಯಿಯ ಬೆನ್ನ ಮೇಲೆ ಸವಾರಿ ಮಾಡುತ್ತಿರುವ ಕೋಳಿಯ ಚಿತ್ರಣ ಇನ್ನೂ ನನ್ನ ಮನಃಪಟಲದಲ್ಲಿ ಉಳಿದಿದೆ.

ಕವಿ ಕುವೆಂಪು, ರೈತಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ಕುಪ್ಪಳಿ ಮನೆಯಲ್ಲಿದ್ದ ನಾಯಿಗಳ ಸಂಖ್ಯೆ ಎರಡಂಕಿಗಿಂತ ಕಡಿಮೆಯಿರಲಿಲ್ಲ ಎಂಬುದು ಗಮನಾರ್ಹ. ಅವರು ನಾಯಿಗಳನ್ನು, ವಿಶೇಷವಾಗಿ ಬೇಟೆಯಲ್ಲಿ ಪಳಗಿದ್ದ ನಾಯಿಗಳನ್ನು ಹೆಚ್ಚು ಹಚ್ಚಿಕೊಳ್ಳುತ್ತಿದ್ದರು. ಅಂತಹ ಒಂದು ನಾಯಿ, ಹಂದಿಯಿಂದ ಗಾಯಗೊಂಡು ಮೃತಪಟ್ಟಾಗ ಅದಕ್ಕೆ ಒಂದು ಚರಮಗೀತೆಯನ್ನೂ ಕುವೆಂಪು ರಚಿಸಿರುವುದನ್ನು ನೋಡಿದ್ದೇವೆ. ಕಾನೂರು ಹೆಗ್ಗಡತಿಯಲ್ಲಿ, ಪುಟ್ಟಣ್ಣ ಸತ್ತ ನಾಯಿಯ ವಿಷಯದಲ್ಲಿ ತೋರುವ ಭಕ್ತಿ-ಗೌರವಗಳಲ್ಲಿಯೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಹುಲಿಯನ ಬಗೆಗಿನ ಗುತ್ತಿಯ ಪ್ರೇಮದಲ್ಲೂ ಕುವೆಂಪು ಅವರ ನಾಯಿಗಳ ಬಗೆಗಿನ, ಅವುಗಳ ’ಸೈಕಾಲಜಿ’ ಬೆಗೆಗಿನ ಅರಿವನ್ನು ಮನಗಾಣಬಹುದಾಗಿದೆ.
ಕುವೆಂಪು ಮೈಸೂರಿನ ಉದಯರವಿಯಲ್ಲಿದ್ದರೂ ಮಲೆನಾಡಿನ, ತಮ್ಮ ಮನೆಯ ಕನಸನ್ನೂ ಎಂದೂ ಬಿಟ್ಟವರಲ್ಲ. ತಮ್ಮ ಮನೆಯಲ್ಲಿ ಕೋಳಿ, ನಾಯಿ, ಹಸು, ಬೆಕ್ಕು ಮೊದಲಾದ ಸಾಕು ಪ್ರಾಣಿಗಳನ್ನು ಸಾಕುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಕೇವಲ ಸಾಕುಪ್ರಾಣಿಗಳನ್ನು ಮಾತ್ರವಲ್ಲದೆ, ಮನೆಯ ಮುಂದಿನ ಹೂದೋಟದಲ್ಲಿ ಬರುತ್ತಿದ್ದ ಹಕ್ಕಿ, ಅಳಿಲು ಮೊದಲಾದವುಗಳನ್ನು ಗಮನಿಸುತ್ತಿದ್ದರು. ಅವು ಮೊಟ್ಟೆ ಇಟ್ಟಾಗ, ಮರಿ ಮಾಡಿದಾಗ ಮಕ್ಕಳನ್ನು ಕರೆದು ತೋರಿಸುತ್ತಿದ್ದರು. ಒಮ್ಮೆ ದಾರಿಯಲ್ಲಿ ಇಲಿಯ ಬಿಲವೊಂದರಲ್ಲಿ ಅದು ಹೊರಗೆ ತಂದು ಹಾಕಿರುವ ಮಣ್ಣನ್ನು ತೋರಿಸಿ, ತೇಜಸ್ವಿ-ಚೈತ್ರರಿಗೆ ಇಲಿಯ ಬಿಲದ ಬಗ್ಗೆ ಆಸಕ್ತಿ ಮೂಡಿಸಿರುತ್ತಾರೆ. ಹುಡುಗಾಟದ ಈ ಇಬ್ಬರು, ತಂದೆ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆ, ಆ ಇಲಿಯ ಬಿಲವನ್ನು ಮಣ್ಣಿನಿಂದ ಮುಚ್ಚಿ ಏನೂ ಆಗದವರಂತೆ ಮುಂದೆ ಹೋಗಿರುತ್ತಾರೆ. ಮಾರನೆಯ ದಿನ ಹೋದಾಗ, ಇಲಿಯ ಬಿಲದಲ್ಲಿ ಅವರು ಮುಚ್ಚಿದ್ದ ಮಣ್ಣು ಪಕ್ಕಕ್ಕೆ ಸರಿಸಿ, ಇಲಿ ರಾಜಾರೋಷವಾಗಿ ಓಡಾಡಿಕೊಂಡಿರುವುದು ಗಮನಕ್ಕೆ ಬರುತ್ತದೆ. ಆ ವಿಷಯ ಕುವೆಂಪು ಅವರ ಗಮನಕ್ಕೆ ಬಂದಾಗ, ಇನ್ನೊಮ್ಮೆ ಹಾಗೆ ಮಾಡಬಾರದೆಂದು ತಿಳಿಸಿ ಹೇಳುತ್ತಾರೆ. ಸ್ವತಃ ತೇಜಸ್ವಿಯವರೇ ಒಂದು ಕಡೆ, ನನಗೆ ಪ್ರಾಣಿ-ಪರಿಸರದ ಆಸಕ್ತಿಯನ್ನು ಮೊದಲು ಮೂಡಿಸಿದವರೇ ನನ್ನ ತಂದೆ ಎಂದು ಹೇಳಿದ್ದಾರೆ.

ಉದಯರವಿಯಲ್ಲಿ ಒಮ್ಮೆ ಸಾಕಲು ತಂದಿದ್ದ ಕೋಳಿಮರಿಗಳನ್ನು, ನಾಲ್ಕೂ ಜನ ಮಕ್ಕಳಿಗೆ ಒಂದೊಂದು ಎಂದು ಹೇಳಿ, ಅವುಗಳ ಯೋಗಕ್ಷೇಮವನ್ನು ಅವರವರೇ ನೋಡಿಕೊಳ್ಳುವಂತೆ ಮಾಡಿರುತ್ತಾರೆ. ಚೈತ್ರ ಮತ್ತು ಕಲಾ ಅವರದು ಹೇಟೆಗಳಾದರೆ, ತೇಜಸ್ವಿ ಮತ್ತು ತಾರಿಣಿಯವರದು ಹುಂಜಗಳು. ನಾಲ್ಕೂ ಜನ ಪೈಪೋಟಿಯಲ್ಲೇ ಕೋಳಿಗಳನ್ನು ಸಾಕುತ್ತಿರುತ್ತಾರೆ. ಕೋಳಿಗಳು ಕೊಬ್ಬಿ ಬೆಳೆಯಲಾರಂಭಿಸುತ್ತವೆ. ಹೇಟೆಗಳು ಮೊಟ್ಟೆ ಇಡಲಾರಂಭಿಸುತ್ತವೆ. ಮಕ್ಕಳಿಗೆ ಅದನ್ನು ಕಂಡು ಖುಷಿಯೋ ಖುಷಿ. ಅಂತಹ ಖುಷಿಯ ದಿನಗಳಲ್ಲಿ ಒಂದು ದಿನ (೧೦.೬.೧೯೫೦) ಮನೆಯ ಕೈತೋಟದಲ್ಲಿದ್ದ ಹಲಸಿನ ಮರದ, ಮೊದಲ ಹಣ್ಣನ್ನು ಕತ್ತರಿಸಿ, ದೇವರಿಗೆ ಅರ್ಪಿಸಿ, ತಾವೂ ತಿನ್ನುವ ಕಾರ್ಯದಲ್ಲಿ ಮನೆಯವರೆಲ್ಲ ಮುಳುಗಿರುತ್ತಾರೆ. ಸ್ವತಃ ಹೇಮಾವತಿಯವರು ಹಲಸನ್ನು ಕತ್ತರಿಸುತ್ತಿದ್ದರೆ, ಕುವೆಂಪು ಹಾಗೆ ಹೀಗೆ ಎಂದು ಸಲಹೆ ಕೊಡುತ್ತಿರುತ್ತಾರೆ. ತೇಜಸ್ವಿ-ಚೈತ್ರ ಹೊರಗೆ ಆಡಲು ಹೋಗಿರುತ್ತಾರೆ. ತಾರಿಣಿ-ಕಲಾ ಇಬ್ಬರೂ ತಾಯಿಗೆ ಸಹಕರಿಸುತ್ತಿರುತ್ತಾರೆ. ದೇವರಿಗೆ ಅರ್ಪಣೆಯಾಗಿ, ಇನ್ನೇನು ತೊಳೆಯನ್ನು ಬಿಡಿಸ ಬಾಯಿಗಿಡಬೇಕು ಎನ್ನುವಷ್ಟರಲ್ಲಿ, ಹೊರಗಡೆ, ಒಮ್ಮೆಲೆ ಎಲ್ಲಾ ಕೋಳಿಗಳು ಕೂಗಲಾರಂಬಿಸುತ್ತವೆ. ಮನೆಯ ಒಳಗಿದ್ದವರು, ಹೊರಗಿದ್ದವರು ಎಲ್ಲರೂ ಒಮ್ಮೆಲೆ ಧಾವಿಸಿ ಬರುತ್ತಾರೆ. ನಾಯಿಯೊಂದು ಕೋಳಿಯನ್ನು ಹಿಡಿದುಬಿಟ್ಟಿರುತ್ತದೆ. ಅದು ಅವರ ಮನೆಯ ಸಾಕು ನಾಯಿಯಲ್ಲ. ಮನೆಯ ಸಾಕು ನಾಯಿಯ ಜೊತೆ ಕೋಳಿಗಳು ಸಲುಗೆಯಿಂದಲೇ ವರ್ತಿಸುತ್ತಿದ್ದವು. ಈಗ ಹಿಡಿದಿರುವುದು ಯಾವುದೊ ಕಂತ್ರಿನಾಯಿ. ಕಲಾ-ತಾರಿಣಿ ಇಬ್ಬರು ನನ್ನ ಕೋಳಿ ಹೋಯಿತು ಎಂದು ರೋಧಿಸುತ್ತಿರುತ್ತಾರೆ. ಸೇರಿದ್ದವರೆಲ್ಲರ ಕೂಗಾಟದ ನಡುವೆ, ಚೈತ್ರ-ತೇಜಸ್ವಿ ಬರುವಷ್ಟರಲ್ಲಿ, ಕುವೆಂಪು ಅವರೇ ನಾಯಿಯ ಬೆನ್ನು ಹತ್ತುತ್ತಾರೆ. ಅದು ಹಿಂದಿನ ಮನೆಯ ಕಡೆ ನುಗ್ಗುತ್ತದೆ. ಅವರ ಮನೆಯವರು ಹೊರಗೆ ಬಂದು ನಿಂತಿರುತ್ತರಾದರೂ, ನಾಯಿಯನ್ನು ಗದರಿಸುವ, ಕೋಳಿಯನ್ನು ಬಿಡಿಸುವ ಗೋಜಿಗೆ ಹೋಗದೆ, ಕೋಳಿ ಹಿಡಿದಿರುವ ನಾಯಿಯ ಬೆನ್ನು ಅಟ್ಟಿರುವ ಕುವೆಂಪು ಅವರನ್ನು ನೋಡುತ್ತಾ, ನಗುತ್ತಾ ಮೋಜನ್ನು ಅನುಭವಿಸುತ್ತ ನಿಂತಿರುತ್ತಾರೆ. ಅಷ್ಟರಲ್ಲಿ ನಾಯಿ ಅವರ ಮನೆಯೊಳಗೇ ನುಗ್ಗಲಾರಂಭಿಸುತ್ತದೆ. ನಾಯಿ ಕೋಳಿ ಹಿಡಿದು ಅವರ ಮನೆಯೊಳಗೆ ನುಗ್ಗುವ ಹಾಗೆ ಮುಂದುವರೆಯುತ್ತದೆ. ಅವರು ಬ್ರಾಹ್ಮಣರಾದ್ದರಿಂದ, ಕಲ್ಲು ಹೊಡೆದು, ನಾಯಿಯನ್ನು ಬೆದರಿಸಿ, ಓಡಿಸುವ ಹಾಗೂ ಕೋಳಿ ಬಿಡಿಸುವ ಯಾವ ಸಾಹಸಕ್ಕೂ ಅವರು ಕೈಹಾಕುವುದಿಲ್ಲ. ನಾಯಿ ಆ ಮನೆಯೊಳಗೆ ನುಗ್ಗುವಷ್ಟರಲ್ಲಿ ಅದನ್ನು ಬೆನ್ನು ಹತ್ತಿದ್ದ ಕುವೆಂಪು ಅಡ್ಡ ಬಂದಿದ್ದರಿಂದ, ನಾಯಿ ಗಾಬರಿಯಾಗಿ ಕೋಳಿಯನ್ನು ಅಲ್ಲೇ ಬಿಟ್ಟು ಆ ಮನೆಯ ಕಾಂಪೋಂಡು ನೆಗೆದು ಓಡಿ ಹೋಗಿರುತ್ತದೆ. ಅಷ್ಟರಲ್ಲಾಗಲೇ ಕೋಳಿ ತನ್ನ ಕೊನೆಯ ಉಸಿರನ್ನೆಳೆದಿರುತ್ತದೆ. ಕುವೆಂಪು ಆ ಕೋಳಿಯನ್ನು ಹಿಡಿದು ಮನೆಯ ಕಡೆ ಹೆಜ್ಜೆ ಹಾಕುತ್ತಾರೆ. ಅಷ್ಟರಲ್ಲಿ ತೇಜಸ್ವಿ-ಚೈತ್ರರೂ ಬರುತ್ತಾರೆ. ಸತ್ತಿರುವುದು ತಾರಿಣಿ ಸಾಕುತ್ತಿದ್ದ ಕೋಳಿ ಎಂದು ತಿಳಿದಾಗ, ತಾರಿಣಿಯ ದುಃಖ ಹೆಚ್ಚಾಗುತ್ತದೆ. ಅಳುತ್ತಾ, ನಾಯಿಯನ್ನು ಶಪಿಸುತ್ತಾ ತಾರಿಣಿ ರೋಧಿಸುತ್ತಾರೆ. ಇನ್ನುಳಿದವರು ಸಧ್ಯ ನಮ್ಮ ಕೋಳಿ ಸಿಕ್ಕಿಹಾಕೊಳ್ಳಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುತ್ತಾರೆ. ಪ್ರೀತಿಯಿಂದ ಸಾಕಿದ್ದ ಕೋಳಿ ಸತ್ತು, ತುಳಸಿಕಟ್ಟೆಗೆ ಅನತಿ ದೂರದಲ್ಲಿ ನಿಷ್ಪಂದವಾಗಿ ಬಿದ್ದಿದ್ದನ್ನು ಕಂಡು ತಾರಿಣಿ ಅಳುತ್ತಲೇ ಇರುತ್ತಾರೆ. ಮಗಳ ಅಳುವನ್ನು ನಿಲ್ಲಿಸಲು, ಕುವೆಂಪು ಅವರು ದೇವರ ಮನೆಗೆ ಹೋಗಿ ಹೂವೊಂದನ್ನು ತಂದು, ಆ ಸತ್ತಕೋಳಿಯ ಮೇಲೆ ಇಟ್ಟು, ’ಅಳಬೇಡ, ನಿನ್ನ ಕೋಳಿ ದೇವರ ಹತ್ತಿರ ಹೋಯಿತು’ ಎಂದು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ತಾರಿಣಿಯ ದುಃಖವೇನು ಕಡಿಮೆಯಾಗುವುದಿಲ್ಲ. ಕೊಯ್ದು ಇಟ್ಟಿದ್ದ ಹಲಸಿನ ತೊಳೆ ಹಾಗೆಯೇ ಉಳಿದುಬಿಡುತ್ತದೆ.

ಅದೇ ದಿನ ಸಂಜೆ ಎಳುಗಂಟೆಯ ಹೊತ್ತಿಗೆ ಕುವೆಂಪು ಮಗಳನ್ನು ಕರೆದು, ಪಕ್ಕದ ಕುರ್ಚಿಯಲ್ಲಿ ಕೂರಿಸಿಕೊಂಡು ಅಂದು ಬರೆದಿದ್ದ ಕವಿತೆಯನ್ನು ಓದುತ್ತಾರೆ. ಆ ಪದ್ಯದ ಅರ್ಥ ಎಷ್ಟು ಅರ್ಥವಾಯಿತೊ ಇಲ್ಲವೊ ತಾರಿಣಿಗೆ ಮಾತ್ರ ಸಮಾಧಾನವಾಗುತ್ತದೆ. ತನ್ನ ಪ್ರೀತಿಯ ಕೋಳಿಯ ಮೇಲೆ ಬರೆದಿದ್ದ ಪದ್ಯದ ದೆಸೆಯಿಂದ ಆಕೆಯ ದುಃಖ ಕಡಿಮೆಯಾಗುತ್ತದೆ. ಆ ಕವಿತೆಯ ಶೀರ್ಷಿಕೆ ’ಬ್ರಾಹ್ಮನಾಯಿ-ಶೂದ್ರಕೋಳಿ’. ಅದು ’ಪ್ರೇತ-ಕ್ಯೂ’ ಕವನಸಂಕಲನದಲ್ಲಿ ’ಸಂಭವಿಸಿದ ಒಂದು ಘಟನೆಯಿಂದ ಪ್ರೇರಿತ’ ಎಂಬ ಅಡಿಟಿಪ್ಪಣಿಯೊಂದಿಗೆ ಪ್ರಕಟವಾಗಿದೆ.

ಪದ್ಯದ ಮೊದಲ ಭಾಗದಲ್ಲಿ ಅವರ ಮನೆಯಲ್ಲಿದ್ದ ಕೋಳಿ, ಅದನ್ನು ಹಿಡಿಯಲು ಹೊಂಚುತ್ತಿದ್ದ ಕಂತ್ರಿನಾಯಿ, ಹಾಗೂ ತಮ್ಮನೆಯ ನಾಯಿ ಮತ್ತು ಕೋಳಿಯಲ್ಲಿದ್ದ ಸ್ನೇಹದ ವಿಷಯ ಬರುತ್ತದೆ. ಎರಡನೆಯ ಭಾಗದಲ್ಲಿ ಅಂದು ನಡೆದ ಘಟನೆಯ ಚಿತ್ರಣವಿದ್ದರೆ, ಮೂರನೆಯ ಭಾಗದಲ್ಲಿ, ತನ್ನ ಕೋಳಿಯ ಸಾವಿಗಾಗಿ ಮರುಗುವ ಪುಟ್ಟಹುಡುಗಿಯ ಚಿತ್ರಣ ಮತ್ತು ನಾಯಿಯನ್ನು ಗದರಿಸಿ ಕೋಳಿಯನ್ನು ಉಳಿಸಬಹುದಾದರೂ, ಆ ನಿಟ್ಟಿನಲ್ಲಿ ಏನನ್ನೂ ಮಾಡದೇ ಇದ್ದರೂ, ಇಡೀ ಘಟನೆಯನ್ನು ಮೋಜು ಎಂಬಂತೆ ನೋಡಿ ನಗುತ್ತಿದ್ದವರ ಚಿತ್ರಣವಿದೆ.

ಶೂದ್ರಕೋಳಿ ಮೇಯುತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮನಾಯಿ ಹೊಂಚುತಿತ್ತು
ಅಲ್ಲಿ ಇಲ್ಲಿ.
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತಿತ್ತು.
ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನಪಟ್ಟೆ;
ಒಡಲಿನಲ್ಲಿ ಖಾಲಿಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿಹತ್ತೆ ಬಂತು;
ಸಾಧು ಎಂದು ಶೂದ್ರಕೋಳಿ
ನೋಡೆ ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್ವವೀಡಿನೊಂದು ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ಗೆ ಶೂದ್ರಕೋಳಿ
ಭಕ್ಷ್ಯವಾಯ್ತು!
ಮರಿಯತನದಿ ಮೊದಲುಗೊಂಡು
ಸಾಕಿ ಸಲಹಿ ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೊಳೋ ಎಂದು ಹುಡುಗಿಯೊಂದು
ಅಳುತಲಿತ್ತು.
’ಶುದ್ಧ ಶೂದ್ರ ಹುಡುಗಿ’ ಎಂದು
ಹಾರ್ವನೊಡನೆ ಹಾರ್ತಿ ನಿಂದು,
ಕೇಳಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚೆಂದ ನೋಡಿ
ನಗುತಲಿತ್ತು!

ಪದ್ಯವನ್ನು ಕೇಳಿ ಪುಟ್ಟ ಬಾಲಕಿಗೆ ತನ್ನ ಪ್ರೀತಿಯ ಹುಂಜದ ಸಾವಿನ ದುಃಖದ ತೀವ್ರತೆ ಕಡಿಮೆಯಾಗುತ್ತದೆ. ಅದನ್ನು ಕುರಿತು ತಾರಿಣಿಯವರು ಹೀಗೆ ಹೇಳಿದ್ದಾರೆ. ನನ್ನ ಕೋಳಿ ಬಗ್ಗೆ ತಂದೆಯವರು ಕವನ ಬರೆದದ್ದು ಮನಸ್ಸಿನ ದುಃಖ ಕಡಿಮೆ ಮಾಡಿತು. ಅದಕ್ಕೆ ಸಂದಿರುವ ಗೌರವಕ್ಕೆ ಹೆಮ್ಮೆಯಾಯಿತು. ತುಂಬ ಪ್ರೀತಿಯಿಂದ ಸಾಖಿದ ಕೋಳಿಯ ದುರಂತ ಅಂತ್ಯದ, ದುಃಖ ವೇದನೆಗಳು ಕಡಿಮೆಯಾದವು. ಚೈತ್ರ-ತೇಜಸ್ವಿ ಅನೇಕ ದಿನಗಳವರೆಗೆ ಆ ನಾಯಿಗೆ ಸರಿಯಾಗಿ ಚಚ್ಚಬೇಕೆಂದು ಹುಡುಕುತ್ತಿದ್ದರು. ಆದರೆ ಪರಮಕುತಂತ್ರಿ ನಾಯಿ ಅವರಿಗೆ ಕಾಣಲು ಸಿಗುತ್ತಿರಲಿಲ್ಲ. ಇನ್ನುಮುಂದೆ ನಮ್ಮ ಮನೆಯಲ್ಲಿ ಕೋಳಿ ಮರಿ ತರುವುದನ್ನು ನಿಲ್ಲಿಸಿದರು. ನನ್ನ ದುಃಖ ಅಳುವಿನಿಂದಾಗಿ ಅಂದಿಗೆ ನಮ್ಮ ಕೋಳಿ ಸಾಕಣೆಗೆ ಪೂರ್ಣವಿರಾಮವಾಯಿತು.
ಕೋಳಿ ಸಾಕುವುದನ್ನು ಇವರು ನಿಲ್ಲಿಸಿರಬಹುದು. ಆದರೆ ಹಲಸಿನ ಮರ ಹಣ್ಣು ಕೊಡುವುದನ್ನು ನಿಲ್ಲಿಸಿಲ್ಲ. ಪ್ರತಿವರ್ಷ ಹಣ್ಣು ಕತ್ತರಿಸುವಾಗಲೆಲ್ಲಾ, ನನ್ನ ಕೋಳಿಯ ಅಂತ್ಯದ ದುರಂತ ಘಟನೆಯೊಂದಿಗೆ ತಂದೆಯವರು ಬರೆದ ಕವನ ಇಂದಿಗೂ ನೆನಪಾಗುವುದು ಎನ್ನುತ್ತಾರೆ ತಾರಿಣಿಯವರು.

Monday, August 06, 2012

ಹೆಸರಿಟ್ಟು ಹರಸುವೆನು ಚೈತ್ರನಂ


೧೯೪೧ನೆಯ ಇಸವಿ. ಜಗತ್ತನ್ನು ಎರಡನೆಯ ಮಹಾಯುದ್ಧದ ಕಾರ್ಮೋಡಗಳು ಆವರಿಸಿದ್ದ ದಿನಗಳು. ಇತ್ತ ಮೈಸೂರು ವಿಶ್ವವಿದ್ಯಾಲಯ ಮಾತ್ರ ತನ್ನ ಜ್ಞಾನಪ್ರಸಾರದ, ಸಾಹಿತ್ಯ ಪ್ರಚಾರದ, ಕನ್ನಡ ಕಾಯಕದ ಕರ್ತವ್ಯಕ್ಕೆ ಕಿಂಚಿತ್ತೂ ಚ್ಯುತಿ ಬರದ ರೀತಿಯಲ್ಲಿ ಶ್ರೀಕಾರ್ಯೋನ್ಮುಖವಾಗಿತ್ತು. ಆ ವರ್ಷದ ಮೇ ತಿಂಗಳ ಮೊದಲವಾರದಲ್ಲೇ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ (ಆಗಿನ್ನು ಪ್ರಸಾರಾಂಗ ಎಂಬ ಹೆಸರು ಬಂದಿರಲಿಲ್ಲವಂತೆ) ಸಾಗರದಲ್ಲಿ ವಸಂತ ಸಾಹಿತ್ಯೋತ್ಸವ ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಲು ಪ್ರೊ. ವೆಂಕಣ್ಣಯ್ಯ, ತೀನಂಶ್ರೀ, ಎ.ಎನ್.ಮೂರ್ತಿರಾವ್ ಮೊದಲಾದವರೊಂದಿಗೆ ಕುವೆಂಪು ಶಿವಮೊಗ್ಗಕ್ಕೆ ಬಂದು ಉಳಿದಿದ್ದರು. ಶಿವಮೊಗ್ಗದಲ್ಲಿಯೇ ಅವರ ಶ್ರೀಮತಿ ತಮ್ಮ ತವರು ಮನೆಯಲ್ಲಿ ಎರಡನೆಯ ಹೆರಿಗೆಗಾಗಿ ಬಂದಿದ್ದರು. ಮೇ ೨ನೆಯ ತಾರೀಖು ಬೆಳಗಿನ ಜಾವ ೪.೪೫ಕ್ಕೆ ಶ್ರೀಮತಿ ಹೇಮಾವತಿಯವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಪುತ್ರೋತ್ಸವದ ಸಂತೋಷದಲ್ಲಿ ಮುಳುಗೇಳುತ್ತಿದ್ದ ಕುವೆಂಪು, ಏನೂ ಆಗದವರಂತೆ ನಿಗದಿತವಾಗಿದ್ದ ಪ್ರವಾಸ ಕಾರ್ಯಕ್ರಮವೊಂದಕ್ಕೆ ಹೊರಟೇ ಬಿಡುತ್ತಾರೆ. ತೀನಂಶ್ರೀ, ಮೂರ್ತಿರಾವ್ ಮೊದಲಾದ ಗೆಳೆಯರೊಂದಿಗೆ, ಮಾನಪ್ಪನವರ ಸಾರಥ್ಯದಲ್ಲಿ ಶಿವಮೊಗ್ಗಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿದ್ದ ತುಂಗಾ ನದಿಯ ಏಳುಸೀಳು ಎಂಬಲ್ಲಿಗೆ ಹೋಗಿ ಈಜುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ವೆಂಕಣ್ಣಯ್ಯ ಮತ್ತು ಒಂದಿಬ್ಬರು ನೀರಿಗಳಿಯದೆ ಹೊಳೆಯ ದಡದಲ್ಲಿ ಕುಳಿತು ಹರಟುತ್ತಿರುತ್ತಾರೆ. ನೀರಿಗಿಳಿದವರಲ್ಲಿ ಕೆಲವರು ಸ್ವಲ್ಪ ಹೊತ್ತು ಈಜಾಡಿ ಮೇಲೆ ಬಂದು ಕುಳಿತವರೊಡನೆ ಸೇರಿಕೊಳ್ಳುತ್ತಾರೆ. ಆಗ ಬಹುಶಃ ಮಾನಪ್ಪನವರಿಂದ, ಅಂದು ಬೆಳಗಿನ ಜಾವ ಕುವೆಂಪು ಅವರಿಗೆ ಪುತ್ರೋತ್ಸವಾಗಿದ್ದ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಅಲ್ಲಿ ನೆರೆದಿದ್ದವರಿಗೆಲ್ಲಾ ಆಶ್ಚರ್ಯವಾಗಿತ್ತು. ಬೆಳಗಿನ ಜಾವ ಪುತ್ರ ಜನನವಾದ ಸುದ್ದಿ ತಿಳಿದು ಏನೂ ಆಗಿಲ್ಲ ಎಂಬಂತೆ ಎಲ್ಲರೊಡನೆ ಈಜಲು ಬಂದ ಕವಿಯ ವರ್ತನೆ ಎಲ್ಲರಿಂದಲೂ ತರಾಟಗೆ ಒಳಗಾಯಿತು. ತೀನಂಶ್ರೀಯವರು ’ಪುಟ್ಟಪ್ಪ, ನಿಮ್ಮ ಧೈರ್ಯವೇ ಧೈರ್ಯ ಬಿಡಿ ಎಂದು ಕವಿಯ ಔದಾಸೀನ್ಯವನ್ನು ಛೇಡಿಸಿದ್ದರಂತೆ!
ಕವಿಯ ಬಾಹ್ಯ ವರ್ತನೆಯಲ್ಲಿ ಬೇಜವಾಬ್ದಾರಿ ಇದ್ದಿತಾದರೂ, ಅಂತರಂಗದಲ್ಲಿ ಮಾತ್ರ ಆಗಿರಲಿಲ್ಲ. ಕವಿಯೇ ಹೇಳುವಂತೆ ಮೇಲುನೋಟಕ್ಕೇನೊ ನನ್ನ ವರ್ತತನೆ ಹಾಗೆ ಕಾಣಿಸಿತ್ತಾದರೂ ನನ್ನ ಮಗನ ಜನನದ ವಿಚಾರದಲ್ಲಿ ನಾನು ಅಷ್ಟೇನೂ ನಿಷ್ಕಾಮನೂ ಉದಾಸೀನನೂ ಆಗಿರಲಿಲ್ಲ. ಅದಕ್ಕೆ ’ಕೋಕಿಲೋದಯ ಚೈತ್ರ’ ಎಂದು ಅವನು ಹುಟ್ಟಿದ ಮರುದಿನ ೩.೫.೧೯೪೧ರಂದು ಹಾಗೂ ಅವನನ್ನು ತೊಟ್ಟಿಲಿಗೆ ಹಾಕಿ ಹೆಸರಿಟ್ಟ ದಿನ ೧೨.೫.೧೯೪೧ರಂದು ’ಹೆಸರಿಟ್ಟು ಹರಸುವೆನು ಚೈತ್ರನಂ’ ಎಂದು ಬರೆದಿರುವ ಕವನಗಳೇ ಸಾಕ್ಷಿ ಎನ್ನುತ್ತಾರೆ.
ಬಂದನಿದೊ ಕೋಕಿಲೋಲ್ಲಾಸ ಚೈತ್ರಂ, ಕವಿಯ
ಜೀವನ ಸುಖ ವಹಿತ್ರಂ. ಆಗಮನ ಸಂಭ್ರಮಕೆ
ಸಮೆದಿಹಳ್ ಲೋಕಮಾತೆಯೆ ವಸಂತೋದಾರ
ಸಹ್ಯಸೀಮೆಯ ವಿಪಿನರಂಗಮಂ.
ಎಂದು ಕವಿತೆ ಆರಂಭವಾಗುತ್ತದೆ. ಮೇ ಮೊದಲ ವಾರವೆಂದರೆ ವಸಂತಕಾಲದ ಸಂಭ್ರಮದ ಕಾಲ. ಕವಿಪುತ್ರನ ಜನನನ್ನಕ್ಕಾಗೆ ಲೋಮಮಾತೆ ಸಹ್ಯಾದ್ರಿಯ ವನರಂಗದಲ್ಲಿ ವಸಂತೋತ್ಸವವನ್ನು ನಡೆಸುತ್ತಿದ್ದಾಳೆ. ಮುಂದೆ ವಸಂತದ ವರ್ಣನೆ ಬರುತ್ತದೆ. ಅಂತಹ ವಸಂತಕಾಲದಲಿ ಜನಿಸಿದ ಪುತ್ರನಿಗೆ ಕೋಕಿಲೋದಯ ಚೈತ್ರ ಎಂಬ ಹೆಸರನ್ನು ಕವಿ ಟಂಕಿಸುತ್ತಾರೆ. ಮಗನ ಸ್ವಾಗತಕ್ಕೆ ಹೊಂಗೆ, ನೆಳಲ ನೆಯ್ಯುವ ಪಸುರ ಪೊಸತಳಿರುಡುಗೆಯನುಟ್ಟು, ತನ್ನ ಪಾದಕೆ ತಾನೆ ಕುಸುಮ ಧವಳಾಕ್ಷತೆಯ ರಂಗವಲ್ಲಿಯನಿಕ್ಕಿ ಸಿದ್ಧವಾಗಿತ್ತಂತೆ! ಹಳದಿಯ ಸಾಲ್ಮರ ಹೊನ್ನರಿಲ ಸೇಸೆಯ ಸೂಸಿ ಶುಭಕೋರಿ ಆಶೀರ್ವದಿಸಿತ್ತಂತೆ!
ಉಲಿಯಿರೈ,
ಮಲೆಯ ನೋಟದ ಚೆಲ್ವು ತಾಂ ಬೀಣೆಯಾಗಲಾ
ಶಾಂತಿ ಮೌನದ ತಂತಿಯಂ ಮೀಂಟೆ ಮಿಡಿಯುತ್ತೆ
ಕವಿಗೆ ರಸರೋಮಾಂಚನವನೀವ, ಓ ಮಲೆಯ
ಗರಿವೆತ್ತ ರಸಿಕರಿರ, ಮುಂದೆ ನಿಮ್ಮೊಡನುಲಿವ
ಗಿರಿವನಪ್ರಿಯ ಸಖನ ಪುಣ್ಯ ಜನ್ಮೋತ್ಸವಂ
ಸಂಭವಿಸಿತಿಂದು!
ಎಂದು ಸಂಭ್ರಮಿಸುತ್ತಾರೆ. ತ್ರಿಮೂರ್ತಿಗಳು ತಮ್ಮ ತಮ್ಮ ಹೆಂಡತಿಯರ ಜೊತೆಯಲ್ಲಿ ಬಂದು ಕಂದನನ್ನು ಆಶೀರ್ವದಿಸಬೇಕೆಂದು ಬಯಸುತ್ತಾರೆ. ಜೊತೆಗೆ ತಮ್ಮ ಗುರುಗಳು, ಕವಿಗಳು ಬರಬೇಕೆನ್ನುತ್ತಾರೆ.
ಬಲ್ಲ
ಋಷಿಗಳುಂ, ಮತ್ತೆಲ್ಲ ಗುರುಗಳುಂ, ಮೇಣಖಿಲ
ಕವಿಗಳುಂ ಸರ್ವದೇವತೆಗಳುಂ ಬಂದಿಲ್ಲಿ
ಹರಸುತಿರೆ ದಿವ್ಯ ಕಂದನ ಜೀವಮಾನಮಂ,
ನೀಡುತಿರೆ ತಮ್ಮ ತಮ್ಮಾತ್ಮೀಯ ದಾನಮಂ,
ನಾನೀವೆನಿದೊ ನಿನಗೆ ಈ ಪ್ರೀತಿತಾನಮಂ,
ಮಂತ್ರಛಂದಃಪೂರ್ಣ ಕವಿಹೃದಗಾನಮಂ!
ಎಂದು ಮಗನಿಗೆ ಮೊದಲ ಕಾಣಿಕೆಯ ಕವನಪುಷ್ಪವನ್ನು ಅರ್ಪಿಸುತ್ತಾರೆ. ಅಲ್ಲಿಂದ ಹತ್ತು ದಿನಗಳ ನಂತರ ಮಗಿವಿಗೆ ನಾಮಕರಣವಾಗುತ್ತದೆ. ಕವಿ ಮಗ ಹುಟ್ಟಿದಂದೇ ಕೋಕಿಲೋದಯ ಚೈತ್ರ ಎಂದ ಹೆಸರಿಟ್ಟುಬಿಟ್ಟಿರುತ್ತಾರೆ. ಅಂದು ಸಹ ಅದೇ ಹೆಸರನ್ನು ಮಗನಿಗಿಟ್ಟು ಹರಸುತ್ತಾರೆ ’ಹೆಸರಿಟ್ಟು ಹರಸುವೆನು ಚೈತ್ರನಂ’ ಎಂಬ ಕವಿತೆಯ ಮೂಲಕ. ವಸಂತಸಂಭ್ರದಲ್ಲಿ ಹುಟ್ಟಿದ ಮಗನಾದ್ದರಿಂದ, ಮತ್ತೆ ವಸಂತದ ವರ್ಣನೆ ಕವಿತೆಯಾರಂಭದಲ್ಲಿ ತೆರೆದುಕೊಳ್ಳುತ್ತದೆ. ಆದರೆ ಆ ಸಂಭ್ರಮವೆಲ್ಲಾ ಮಗನ ನಾಮಕರಣಕ್ಕಾಗಿಯೇ! 'ಪೊಸಮಲರ ಕಂಪಾಂತ ತಂಬೆಲರ ಸೊಂಪು, ಮಲ್ಲಿಗೆ ಹೊದರಿನಲ್ಲಿ ಮಡಿವಳ ಹಕ್ಕಿಯ ಸಂಗೀತ, ಜಗದ ಜಡನಿದ್ದೆಯಂ ಬಡಿದೆಚ್ಚರಿಸುವಂತೆವೋಲ್ ಬಡಿದುಕೊಳ್ಳುತ್ತಿರುವ ಕ್ರೈಸ್ತ ದೇವಾಲಯದ ಗಂಟೆ' ಇವುಗಳ ನಡುವೆಯೇ ಮಗನ ನಾಮಕರಣ ನಡೆಯುತ್ತದೆ.
ತೇಜಸ್ವಿ ಸೋದರನೆ,
ಹೇಮಾಂಗಿನಿಯ ತನೂಭವನೆ, ಹೇ ನನ್ನಾತ್ಮ
ನವ್ಯತಾ ದೇವತಾ ಪ್ರತ್ಯಕ್ಷರೂಪಿ, ಓ
ಕೋಕಿಲೋದಯ ಚೈತ್ರ, ಹರಸುವೆನು ಹೆಸರಿಟ್ಟು,
ಹೆಸರಿನ ಹಿರಿಮೆ ಉಸಿರಿಗೂ ಬರಲಿ ಎಂದೊಲಿದು
ಬಯಸಿ:
ಮಗನನ್ನು ಆಶೀರ್ವದಿಸುತ್ತಾರೆ. ವಿಂಧ್ಯ ಸಹ್ಯಾದ್ರಿ ಮಲಯ ಪರ್ವತಗಳು, ಗಂಗಾ ಯಮುನ ತುಂಗಭದ್ರಾ ನದಿಗಳು ನಿನಗಕ್ಕೆ ಭಾರತದ ಬಾಲ್ಯದಾಡುಂಬೊಲದ ಸಂಗಾತಿಗಳ್! ಎನ್ನುತ್ತಾರೆ.
ಸರ್ವಲೋಕ ಶೈಲೇಶ್ವರಂ
ನಿನಗಕ್ಕೆ ತಾಂ ಪ್ರತಿಸ್ಪರ್ಧಿ, ಹೈಮಾಚಲಂ,
ಧವಳಗಿರಿ ಶಿರವರೇಣ್ಯಂ, ಮಾನಸ ಸರೋ
ಜನ್ಮ ಮಹಿಮಂ! ಶ್ವಾಸಕೋಶಗಳಕ್ಕೆ ನಿನಗೆ
ಸಾಗರಾಕಾಶಂಗಳ್!
ತನ್ನ ಕಂದನಿಗೆ ಶಂಕರರ ಶ್ರೀಬುದ್ಧಿ, ರಾಮಾನುಜರ ಹೃದ, ಕ್ರಿಸ್ತ ಬುದ್ಧರ ಮಹಾಸಾತ್ವಿಕ ಕೃಪಾಸ್ಥೈರ್ಯ, ಗಾಂಧಿಯ ದಯಾ ಧೈರ್ಯ, ಶ್ರೀರಾಮಕೃಷ್ಣ ಮತ್ತು ವಿವೇಕನಂದರ ಧರ್ಮದೌದಾರ್ಯದ ಸಮಸ್ತ ಶ್ರೇಯಸ್ಸುಗಳು ಬಂದು ಆಶೀರ್ವದಿಸಬೇಕೆಂದು ಬಯಸುತ್ತಾರೆ.  ಮುಂದುವರೆದು,
ನಿಖಿಲ ಭುವನ ಶ್ರೇಷ್ಠ ಗಾಯಕರ್
ಶಿಲ್ಪಿಗಳ್ ವರ್ಣಶಿಲ್ಪಿಗಳೆಲ್ಲರೈತಂದು
ತಂತಮ್ಮ ದಿವ್ಯಕಲೆಯಂ ಪ್ರಚೋದಿಸಲಿ ಮೇಣ್
ಪ್ರಿಯದಿಂ ಪ್ರತಿಷ್ಠಿಸಲಿ ಈ ನನ್ನ ಚಿಣ್ಣನೀ
ಕೋಕಿಲೋದಯ ಚೈತ್ರನಾತ್ಮಮಂದಿರದಮೃತ
ಪೀಠದಲಿ!
ಇಲ್ಲಿಯವರೆಗೆ ಮಗನ ಭವಿಷ್ಯತ್ತಿಗೆ ಆಶೀರ್ವಾದದ ತೋರಣವನ್ನೈದುತ್ತಿದ್ದ ಕವಿಯ ಮನಸ್ಸು, ಇದ್ದಕ್ಕಿದ್ದಂತೆ, ಫ್ರಾನ್ಸಿನಲ್ಲಿದ್ದ ತನ್ನ ಶ್ರೀಗುರು ಸಿದ್ದೇಶ್ವರಾನಂದರ ಕಡೆಗೆ ತಿರುಗುತ್ತದೆ. ಎರಡನೆಯ ಮಹಾಯುದ್ಧದ ಮಾರಕ ಯಜ್ಞದ ಮಧ್ಯೆ ಸಿಕ್ಕಿದ್ದ ಅವರ ಕ್ಷೇಮಕ್ಕಾಗಿ ಕಾತರಿಸಿ ಪ್ರಾರ್ಥಿಸುತ್ತದೆ. ಮಗನ ಹರಕೆಯೆಂತೆಯೇ ಹಿರಿಯ ಹರಕೆ ಗುರುವಿನ ಕ್ಷೇಮ ಎಂದು ಭಾವಿಸುತ್ತದೆ.
ಈ ಹರಕೆಗಿಂ ಮಿಗಿಲ್ ಹಿರಿಹರಕೆ
ಇರ್ಪೊಡಾ ಹರಕೆಯಂ ಯೋಗ ದಿವ್ಯಜ್ಞಾನಿ
ಜಗದೀಶ್ವರಗೆ ಬಿಡುವೆನೈ; ಬೇಡಿಕೊಳ್, ಕಂದಾ!
ಎಂದು ತನ್ನ ಗುರುವಿನ ಕ್ಷೇಮಕ್ಕಾಗಿ ನನ್ನ ಜೊತೆ ನೀನು ಬೇಡಿಕೊ ಎಂದು ತನ್ನ ಮಗನನ್ನು ಕೇಳಿಕೊಳ್ಳುತ್ತಾರೆ. ಈ ಪ್ರಾರ್ಥನೆಯ ಕಾಲಕ್ಕಾಗಲೇ ಹಿಟ್ಲರನ ಗೂಢಚರ ಸೇನೆ ಪ್ರಾನ್ಸನ್ನು ಆಕ್ರಮಿಸಿತ್ತು. ಪಾರಂಪರಿಕವಾದ ಪ್ಯಾರಿಸ್ ನಗರ ಹಾಳಾಗಬಾರದೆಂದು ಅದನ್ನು 'ತೆರೆದನಗರ'ವೆಂದು ಘೋಷಿಸಲಾಗಿತ್ತು. ಸ್ವಾಮೀಜಿ ಸರ್ಕಾರದ ಅಧೀನದಲ್ಲಿರಬೇಕಾಗಿತ್ತು. ಅವರ ಕ್ಷೇಮಕ್ಕಾಗಿ ಕವಿಯ ಪ್ರಾರ್ಥನೆಯೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.
ನೀನ್ ಬಂದ ಈ ಜಗಂ ನೀನ್ ಬಿಡುವ ಆ ಜಗಕೆ
ಕೀಳಾಗುವಂತೆ ಬಾಳ್: ಇಂದಲ್ಲಿ, ಪಶ್ಚಿಮದಿ
ಮಾನವೀಯತೆ ಮಾಣ್ದು ತಾಂಡವಂಗೈಯುತಿದೆ
ನೀಚ ರಾಕ್ಷಸತೆ, ಯಾಂತ್ರಿಕ ಕ್ರೌರ್ಯದಾ ರುದ್ರ
ರಣದಲಿ. ಪೆಣ್ಗಳಂ ಮಕ್ಕಳಂ ಬಲಿಗೆಯ್ದು
ತಣಿಸುತಿರುವರು ಸಮರಚಂಡಿಯಂ. ಸೆಣಸುತಿವೆ
ಹಣೆಗೆ ಹಣೆ ಘಟ್ಟಿಸುತ್ತಿರೆಡು ದುಶ್ಯಕ್ತಿಗಳ್
ಲೋಕ ಚಕ್ರಾಧಿಪತ್ಯಕ್ಕೆ. ಆ ದುಷ್ಕರ್ಮ
ಶಕ್ತಿದ್ವಯಂಗಳುಂ ಹೇಳ ಹೆಸರಿಲ್ಲದೆಯೆ
ಒಂದರಿಂದೊಂದಳಿದು ಶೋಕವೊಂದುಳಿಯಲಾ
ಶೋಕಕೊಂದೊಳ್ಪಿನಾಕಾರಮಂ ನೀಡಲ್ಕೆ
ನೀಂ ಸತ್ಕೃತಿಯ ಲಸಚ್ಛಲ್ಪಿವರನಾಗೆಂದು
ಹರಸುವೆನು; ಹರಸುವೆನೊ ಗುರುದೇವನಂ ನುತಿಸಿ; ಮೇಣ್
ನನ್ನನಾಶೀರ್ವದಿಸಿ ಗೃಹಸ್ಥಾಶ್ರಮಕ್ಕೊಯ್ಸು,
ಧರ್ಮದೌದಾರ್ಯಮಂ ಪೇಳೆ ಪಶ್ಚಿಮಕೆಯ್ದಿ,
ಐರೋಪ್ಯ ಯುದ್ಧದಾ ಕ್ರೌರ್ಯ ಭೂಮಿಯೊಳಿರ್ಪ
ನನ್ನ ಆ ಸಿದ್ಧೇಶ್ವರಾನಂದ ಸ್ವಾಮೀಜಿಗೆ
ಸುಕ್ಷೇಮಮಕ್ಕೆಂದು ಬಯಸಿ ನಲ್ಬಯಕೆಯಂ!
ಕವಿಯ ಪ್ರಾರ್ಥನೆ ಹುಸಿಯಾಗಲಿಲ್ಲ. ಪ್ರಭಾವಶಾಳಿ ಭಕ್ತಮಿತ್ರರ ನೆರವಿನಿಂದ ಸ್ವಾಮೀಜಿ ಪಾರಾದರು. ಯುದ್ಧಾನಂತರ 1945ರಲ್ಲಿ ಮತ್ತೆ ಪ್ಯಾರಿಸ್ಸಿಗೆ ಬಂದು ಗ್ರಟ್ಸ್'ನಲ್ಲಿ 'ಸೆಂಟರ್ ಫಾರ್ ವೇದಾಂತಿಕ್ ರಾಮಕೃಷ್ಣ'  ಸಂಸ್ಥೆಯನ್ನು ಪುನರುಜ್ಜೀವನಗೊಳಿಸುತ್ತಾರೆ. ಮುಂದೆ 1957ರಲ್ಲಿ ಅವರು ನಿಧನರಾಗುವವರೆಗೂ ಕವಿಯೊಂದಿಗೆ ಪತ್ರ ಸಂಪರ್ಕದಲ್ಲಿದ್ದ ಸ್ವಾಮಿಗಳು, ಪುಸ್ತಕಗಳನ್ನು ಕಳುಹಿಸುತ್ತಾ ತಮ್ಮ ಪ್ರಿಯ ಶಿಷ್ಯನಿಗೆ ಜಗತ್ತಿನ ಜ್ಞಾನದ ಹೊಸ ಹೊಸ ಮುಖಗಳಿಗೆ ಬಾಗಿಲುಗಳನ್ನು ತೆರೆದು ಹೊಸಬೆಳಕಿನ ವಲಯಕ್ಕೆ ಕವಿಯನ್ನು ನೂಕುತ್ತಿದ್ದರು. "ನನ್ನ ಚೇತನೋದ್ಬೋಧಕ್ಕೆ ಅವರಿಂದಾದ ದೈವೀ ಉಪಕಾರವನ್ನು ನೆನೆದು ನನ್ನ ಭಕ್ತಿ 9.1.1960ರಲ್ಲಿ ಉದಯರವಿಯ ದೇವರ ಮನೆಯಲ್ಲಿ ಧ್ಯಾನದ ಕಾಲದಲ್ಲಿ ರಚಿಸಿದ 'ಕೃತಜ್ಞತೆ' ಎಂಬ ಕವನವನ್ನು ಇಲ್ಲಿ ಅರ್ಪಿಸುತ್ತಿದ್ದೇನೆ" ಎಂದು ನೆನಪಿನ ದೋಣಿಯಲ್ಲಿ ದಾಖಲಿಸಿದ್ದಾರೆ. ಹಾಗೆ ಅರ್ಪಿಸಿದ ಕವಿತೆಯ ಪೂರ್ಣಪಾಠ ಇಲ್ಲಿದೆ.
1
ಗುರುವಿನೆಡೆಗೆ ಕರೆದ ಗುರುವೆ,
ನನ್ನ ಜೀವ ದೇವತರುವೆ,
ನಿಮ್ಮನೆಂತು, ಹೇಳಿ ಮರೆವೆ?
ನೆ  ನೆ  ವೆ
ಕೃತಜ್ಞತೆಯೊಳನುದಿನ!
2
ಮಾನ್ಯರಲ್ಲಿ ಪರಮ ಮಾನ್ಯ!
ಸಾಮಾನ್ಯರಲಿ ಸಾಮಾನ್ಯ!
ನಿಮ್ಮ ಕೃಪೆಯೊಳಾದೆ ಧನ್ಯ.
ನಿ  ಮ್ಮ
ನೆನೆವುದೆನೆಗೆ ಪೂಜನ!
3
ಸತಿಯನೊಲಿದು ನಿಮ್ಮ ನೆನೆವೆ;
ಸುತರ ನಲಿಸಿ ನಿಮ್ಮ ನೆನೆವೆ;
ಕೃತಿಯನೋದಿ ನಿಮ್ಮ ನೆನೆವೆ;
ನಿ  ಮ್ಮ
ನೆನೆವುದಾತ್ಮ ಸಾಧನೆ!
4
ಅಹೈತುಕೀ ಕೃಪಾಸಿಂಧು,
ನಿಷ್ಕಾರಣ ಆತ್ಮಬಂಧು,
ಅಂದಿನಂತೆ ಇಂದು ಮುಂದು
ಇರಲಿ ನನಗೆ ಎಂದೆಂದೂ,
ನಿ   ಮ್ಮ
ಮೈತ್ರಿಯ ಅನುಮೋದನೆ!