Wednesday, September 30, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 25

ರಾಜಕೀಯ ಪಕ್ಷದ ರ್ಯಾಲಿಗೆ ಲಾರಿಪ್ರವಾಸ

ಕುಂದೂರುಮಠ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಒಟ್ಟಾರೆಯಾಗಿ ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಪ್ರಭಾವ ಎಂಬತ್ತರ ದಶಕದಲ್ಲಿ ತುಂಬಾ ಇತ್ತು. ನಮಗೆ ಯಾರೂ ಹೇಳದಿದ್ದರೂ ನಾವೆಲ್ಲಾ ನೇಗಿಲು ಹೊತ್ತ ರೈತನ ಗುರುತಿನ ಜನತಾಪಕ್ಷದ ಪರವಾಗಿ ಮಾತನಾಡುತ್ತಿದ್ದೆವು. ‘ನೇಗಿಲು ಇಲ್ಲದೆ ಈ ಜಗತ್ತಿನಲ್ಲಿ ಬದುಕಲು ಸಾಧ್ಯವೇ ಇಲ್ಲ; ಬೇಕಾದರೆ ಕೈ (ಹಸ್ತ) ಇಲ್ಲದೇ ಬದುಕಬಹುದು. ನೇಗಿಲನ್ನು ಹೇಗೋ ಹಿಡಿದು ಹುಕ್ಕೆ (ಆರು) ಹೊಡೆಯಬಹುದು’ ಎಂಬುದು ನಮ್ಮ ವಾದವಾಗಿತ್ತು. ಖಂಡಿತಾ! ನಮಗೆ ಯಾರೂ ‘ಜನತಾಪಕ್ಷವನ್ನು ಬೆಂಬಲಿಸಿ’ ಎಂದು ಹೇಳಿರಲಿಲ್ಲ. ಓಟು ಮಾಡುವ ಅಧಿಕಾರವಿಲ್ಲದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಾರು ತಾನೆ ತಮ್ಮ ಪಕ್ಷವನ್ನು ಬೆಂಬಲಿಸಲು ಹೇಳುತ್ತಾರೆ? ಆದರೆ ಒಟ್ಟಾರೆ ಪರಿಸರದ ಪ್ರಭಾವದಿಂದಲೋ ಏನೋ ಆಗ ಬಹುತೇಕ ಎಲ್ಲ ಹಾಸ್ಟೆಲ್ಲಿನ ವಿದ್ಯಾರ್ಥಿಗಳು ಜನತಾಪಕ್ಷವನ್ನು ಬೆಂಬಲಿಸುತ್ತಿದ್ದೆವು. ದೇವೇಗೌಡರು ನೇರವಾಗಿ ಹಾಸ್ಟೆಲ್ಲಿಗೆ ಬಂದು ‘ನನ್ನನ್ನು ಬೆಂಬಲಿಸಿ, ನನ್ನ ಪಕ್ಷದ ರ‍್ಯಾಲಿಗಳಿಗೆ ಬನ್ನಿ’ ಎಂದು ಕರೆದಿರಲಿಲ್ಲವಾದರೂ ಸ್ಥಳೀಯ ಮುಖಂಡರು ಹಾಸ್ಟೆಲ್ ವಿದ್ಯಾರ್ಥಿಗಳನ್ನು ‍ರ್ಯಾಲಿಗಳಿಗೆ ಕರೆದುಕೊಂಡು ಹೋಗುವುದು ನಡದೇ ಇತ್ತು.


ಒಮ್ಮೆ ಜನತಾಪಕ್ಷದ ರ‍್ಯಾಲಿಯೊಂದು ಹೊಳೇನರಸೀಪುರದಲ್ಲಿ ಏರ್ಪಾಡಾಗಿತ್ತು. ದೇವೇಗೌಡರ ಜೊತೆಯಲ್ಲಿ ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್ ಮೊದಲಾದವರು ಭಾಗವಹಿಸಲಿದ್ದರು. ಯಥಾಪ್ರಕಾರ ಸ್ಥಳೀಯ ಮುಖಂಡರು ಲಾರಿ ಬಸ್ಸುಗಳಲ್ಲಿ ತಮ್ಮ ತಮ್ಮ ಹಿಂಬಾಲಕರನ್ನು, ಊರಿನವರುಗಳನ್ನು ತುಂಬಿಕೊಂಡು ಹೊಳೇನರಸೀಪುರಕ್ಕೆ ಬರಬೇಕಾಗಿತ್ತು. ಕುಂದೂರುಮಠದಿಂದ ಹೋಗುವವರಿಗೆ ಒಂದು ಲಾರಿಯನ್ನು ಗೊತ್ತು ಮಾಡಲಾಗಿತ್ತು. ಎಷ್ಟು ಹೊತ್ತಾದರೂ ಲಾರಿ ತುಂಬುವ ಹಾಗೆ ಕಾಣಲಿಲ್ಲ. ಆಗ ಅಲ್ಲಿದ್ದ ಮುಖಂಡರೊಬ್ಬರು ಹಾಸ್ಟೆಲ್ಲಿನ ಹುಡಗುರನ್ನೆಲ್ಲಾ ಲಾರಿಗೆ ಹತ್ತುವಂತೆ ಹೇಳಿದರು. ಭಾನುವಾರವಾದ್ದರಿಂದ, ಕೇವಲ ಇಪ್ಪತ್ತು ಇಪ್ಪತ್ತೈದು ಮಂದಿಯಷ್ಟೇ ಇದ್ದವರು, ಎಲ್ಲರೂ ಲಾರಿ ಹತ್ತಿ ನಡದೇಬಿಟ್ಟೆವು.

ಚನ್ನರಾಯಪಟ್ಟಣದ ಮಾರ್ಗವಾಗಿ ಲಾರಿ ಹೊಳೇನರಸೀಪುರಕ್ಕೆ ಹೊರಟಿತು. ಯಾರಾದರು ಕೈ ತೋರಿದರೆ ಅವರನ್ನೂ ಹತ್ತಿಸಿಕೊಳ್ಳುತ್ತಾ, ಊರುಗಳು ಇದ್ದಲ್ಲಿ ಅಲ್ಲೆಲ್ಲಾ ‘ಜನತಾಪಕ್ಷಕ್ಕೆ ಜಯವಾಗಲಿ’, ‘ದೇವೇಗೌಡರಿಗೆ ಜಯವಾಗಲಿ’ ಎಂದು ಕೂಗುತ್ತಾ ಘನ್ನಿಕಡ ಎಂಬ ಊರಿನ ಬಳಿ ಬಂದೆವು. ಆ ಊರು ಹೇಮಾವತಿ ನದಿಯ ದಂಡೆಯಲ್ಲಿದೆ. ಅಲ್ಲಿ ಲಾರಿ ನಿಲ್ಲಿಸಿ ಬಂದವರೆಲ್ಲರಿಗೂ ಊಟವನ್ನು ಕೊಡಿಸಲಾಯಿತು. ಹುಡುಗರೆಲ್ಲರಿಗೂ ಲಾರಿಯ ನಂಬರ್ ಬರೆದಿಟ್ಟುಕೊಳ್ಳುವಂತೆ ಹೇಳಿದ್ದರು. ಇಲ್ಲದಿದ್ದರೆ ನೂರಾರು ಲಾರಿಗಳ ನಡುವೆ ನಮ್ಮ ಲಾರಿಯನ್ನು ಗುರುತಿಸದೆ ನಾವು ಕಳೆದುಹೋಗುವ ಅಪಾಯವಿತ್ತು. ಸ್ಥಳೀಯ ಮುಖಂಡರೇ ಮುಂದೆ ನಿಂತು ನಮಗೂ ಊಟ ಹಾಕಿಸಿದರು. ಊಟ ಮುಗಿಸಿ ಲಾರಿಯ ಕಡೆಗೆ ಹೊರಟ ನಮಗೆ ಅಲ್ಲಿ, ಹೊಳೆದಂಡೆಯ ನರ್ಸರಿಯೊಳಗೆ ಬೀರು, ಬ್ರಾಂಡಿಯನ್ನು ಹಂಚುತ್ತಿರುವುದು ಕಂಡಿತು. ಆಗಲೇ ಬಹುತೇಕ ಎಲ್ಲರೂ ಕುಡಿದು ತೂರಾಡುತ್ತಿದ್ದರು. ಅದರಲ್ಲಿ, ಕುಂದೂರಿನ ಮಿಡ್ಲಿಸ್ಕೂಲಿನ ಹುಡಗನೊಬ್ಬ ಚನ್ನಾಗಿ ಕುಡಿದು ವಾಂತಿ ಮಾಡಿಕೊಂಡು ರಸ್ತೆಯಲ್ಲಿ ಬಿದ್ದಿದ್ದ. ಆ ಊರಿನ ಕೆಲವರು ಅವನಿಗೆ ಮಜ್ಜಿಗೆ ಅದು ಇದು ಕುಡಿಸಿ ವಾಂತಿ ಮಾಡಿಸಲು ಪ್ರಯತ್ನ ಮಾಡುತ್ತಿದ್ದರು. ನಾವೊಂದಿಷ್ಟು ಜನ ಅದನ್ನು ಅಸಹ್ಯಿಸುತ್ತಾ, ಹೊಳೆಯ ಕಡೆಗೆ ಇಳಿದು ಹೋದೆವು. ಹೊಳೆಯಲ್ಲಿ ನೀರಾಟಕ್ಕೆ ಇಳಿದ ನಮಗೆ ನಮ್ಮ ಲಾರಿ ಹೊರಟು ಹೋಗಿದ್ದೇ ತಿಳಿಯಲಿಲ್ಲ. ವಾಪಸ್ ಹೋಗಲು ಜೇಬಿನಲ್ಲಿ ಒಂದು ಪೈಸೆಯೂ ಇರಲಿಲ್ಲ. ಕೊನೆಗೆ ಬೇರೊಂದು ಲಾರಿ ಹತ್ತಿ ಹೇಗೋ ಹೊಳೇನರಸೀಪುರ ಸೇರಿದೆವು. ಅಲ್ಲಿ ದೇವೇಗೌಡರ ಭಾಷಣ ಕೇಳುವ ಮೊದಲು ನಮ್ಮ ಲಾರಿಯಿದ್ದ ಜಾಗವನ್ನು ಹುಡುಕಿ ಪತ್ತೆಮಾಡಿಕೊಂಡೆವು. ನಂತರ ಭಾಷಣ ನಡೆಯುತ್ತಿದ್ದ ಜಾಗಕ್ಕೆ ಬಂದೆವು. ಅಷ್ಟರಲ್ಲಿ ಹೆಗಡೆ ಮಾತನಾಡುತ್ತಿದ್ದರು.

ಮತ್ತೆ ಲಾರಿಯಲ್ಲಿ ಹೊರಟಾಗ ಜನ ಸಭೆಗೆ ಸೇರಿದ್ದ ಅಗಾಧ ಜನರ ಬಗ್ಗೆ ಕೆಲವರು ಮಾತನಾಡಿಕೊಳ್ಳುತ್ತಿದ್ದರು. ವಾಪಸ್ ಬರುವಾಗ ದಾರಿಯಲ್ಲಿ ಹಳ್ಳಿಗಳು ಸಿಕ್ಕರೆ, ಹೋಗುವಾಗ ಕೂಗಿದಂತೆ ಜಯಕಾರ ಕೂಗುತ್ತಿರಲಿಲ್ಲ! ಕೆಲವರು, ಕುಡಿದ ಮತ್ತಿನಲ್ಲೇ ಇದ್ದವರು ಗೊರಕೆ ಹೊಡೆಯುತ್ತಿದ್ದರು. ಕೊನೆಗೆ ಸಂಜೆಯ ವೇಳೆಗೆ ನಮ್ಮನ್ನು ಹಾಸ್ಟೆಲ್ಲಿನ ಬಳಿ ಇಳಸಿ ಲಾರಿ ಹೊರಟು ಹೋಯಿತು. ಹೀಗೆ ಹಾಸ್ಟೆಲ್ಲಿನ ವಿದ್ಯಾರ್ಥಿಗಳು ರಾಜಕೀಯ ಸಭೆ ಸಮಾರಂಭಗಳಿಗೂ ಬಳಕೆಯಾಗುತ್ತಿದ್ದರು. ಸ್ಕೂಲ್ ಮಕ್ಕಳನ್ನು ಹೀಗೆ ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯ ಮುಖಂಡರು ಬಳಸಿಕೊಳ್ಳುತ್ತಿದ್ದುದ್ದು ದೇವೇಗೌಡರಿಗೆ ಗೊತ್ತಿತ್ತೋ ಇಲ್ಲವೋ ನಮಗೆ ತಿಳಿದಿಲ್ಲ. ಆಗ, ಈಗಿನಂತೆ ಎಲೆಕ್ಟ್ರಾನಿಕ್ ಮೀಡಿಯಾಗಳಿದ್ದಿದ್ದರೆ, ಸ್ಕೂಲ್ ಮಕ್ಕಳನ್ನು ಬಳಸಿಕೊಂಡಿದ್ದಕ್ಕೆ ಹೆಚ್ಚು ಪ್ರಚಾರ ಸಿಗುತ್ತಿತ್ತು, ಅಷ್ಟೆ!

ಛೇರ್ಮನ್ನರ ಚಿಲ್ಲರೆ ಅಂಗಡಿ

ಕುಂದೂರುಮಠದಲ್ಲಿದ್ದ ಇನ್ನೊಂದು ದಾಖಲಿಸಬಹುದಾದ ಸ್ಥಳವೆಂದರೆ, ಮಾಜಿ ಛೇರ್ಮನ್ನರ ಅಂಗಡಿ. ಈ ಮಾಜಿ ಛೇರ್ಮನ್ನರಿಗೆ ಕುಂದೂರುಮಠದಲ್ಲಿ ಅಂಗಡಿಯನ್ನು ಇಡುವ ಐಡಿಯಾವನ್ನು ಯಾರು ಕೊಟ್ಟರೋ ಗೊತ್ತಿಲ್ಲ. ಯಾವ ಕೆಲಸವೂ ಇಲ್ಲದೆ ಹಗಲೆಲ್ಲಾ ಕುಂದೂರುಮಠದಲ್ಲೇ ಕಾಲ ಕಳೆಯುತ್ತಿದ್ದ ಅವರು ತಮ್ಮ ಮನೆಗೆ ಹೋಗುತ್ತಿದ್ದುದ್ದೇ ಸಂಜೆ. ಆಗ ಅಂಗಡಿ ಇಟ್ಟ ಮೇಲೂ ದಿನಚರಿ ಹಾಗೇ ಮುಂದುವರೆಯಿತು ಅಷ್ಟೆ. ಅವರು ತಾವು ಅನಾವಶ್ಯಕವಾಗಿ ಕಳೆಯುತ್ತಿದ್ದ ಕಾಲವನ್ನು ಚೆನ್ನಾಗಿಯೇ ಕ್ಯಾಷ್ ಮಾಡಿಕೊಂಡಿದ್ದರು. ಸ್ವತಃ ಸ್ವಾಮೀಜಿಗಳೇ ಮಠದ ಆವರಣದಲ್ಲೇ ಅವರಿಗೆ ಅಂಗಡಿ ತೆರೆಯಲು ಜಾಗ ಮಾಡಿಕೊಟ್ಟಿದ್ದರು. ಕುರಿಗಳನ್ನು ಕೂಡಿ ಹಾಕುವ ಮನೆಗೆ ಹೊಂದಿಕೊಂಡಂತೆ ಇದ್ದ ಒಂದು ರೂಮಿಗೆ ದೊಡ್ಡದಾಗಿ ಬಾಗಿಲು ಇಡಿಸಿ ಅಂಗಡಿಯ ರೂಪಕೊಟ್ಟಿದ್ದರು. ಸಾಕಷ್ಟು ದೊಡ್ಡದಾಗಿಯೇ, ಎಲ್ಲಾ ಸಾಮಾನುಗಳು ಸಿಗುವಂತೆ ಅಂಗಡಿಯನ್ನು ಛೇರ್ಮನ್ನರು ತೆರೆದೇ ಬಿಟ್ಟರು.


ಸ್ವಾಮೀಜಿಗಳೊಂದಿಗೆ ಮಠದ ಒಳಗೆ ನಡೆಯುತ್ತಿದ್ದ ಅವರ ಕಾಡು ಹರಟೆ ಈಗ ಅಂಗಡಿ ಮುಂಗಟ್ಟಿಗೆ ಬದಲಾಗಿತ್ತು. ಆದರೆ ಆಗಲೇ ವಯಸ್ಸಾಗಿದ್ದ ಛೇರ್ಮನ್ನರಿಗೆ ಸಕ್ಕರೆ ಖಾಯಿಲೆ ಕಾಡುತ್ತಿತ್ತು. ಜೊತೆಗೆ ಸ್ವಾಮೀಜಿಗಳೊಂದಿಗೆ ಯಾವಾಗಲೂ ಎಲ್ಲಾ ವಿಷಯವನ್ನು ಬಹಿರಂಗವಾಗಿ ಕುಳಿತು ಮಾತನಾಡುವಂತಿರಲಿಲ್ಲವೇನೂ? ಆಗಾಗ ಮಠದೊಳಗೂ ಹೋಗಿಬರಬೇಕಾಗಿತ್ತು. ಅಂತಹ ಸಮಯದಲ್ಲಿ ಅಂಗಡಿ ನೋಡಿಕೊಳ್ಳಲು ಯಾರಾದರೂ ಒಬ್ಬರು ಬೇಕಾಗಿದ್ದರು. ಅವರಿಗೆ ನಾಲ್ಕೋ ಐದೋ ಮಂದಿ ಗಂಡು ಮಕ್ಕಳಿದ್ದರು. ಆದರೆ ಅವರಲ್ಲಿ ದೊಡ್ಡವರು ಯಾರೂ ಅಂಗಡಿ ನೋಡಿಕೊಳ್ಳಲು ಒಪ್ಪದಿದ್ದಾಗ, ಹಿಂದಿನ ವರ್ಷವಷ್ಟೇ ನಮ್ಮ ಹೈಸ್ಕೂಲಿನಲ್ಲೇ ಹತ್ತನೇ ತರಗತಿಯಲ್ಲಿ ಡುಮ್ಕಿ ಹೊಡೆದಿದ್ದ ಕಿರಿಯ ಮಗನನ್ನು ಅಂಗಡಿ ನೋಡಿಕೊಳ್ಳಲು ಕರೆದು ತರುತ್ತಿದ್ದರು.

ಅಲ್ಲಿಂದ ಅಂಗಡಿಯ ಚಿತ್ರಣವೇ ಬದಲಾಯಿತು. ಹಾಸ್ಟೆಲ್ ಹುಡುಗರಿಗೆ ಅದೂ ಕಾಲಕಳೆಯುವ ತಾಣವಾಗಿ ಪರಿವರ್ತಿತವಾಯಿತು. ಅಲ್ಲಿ ಅಂಗಡಿಗೆ ಒಳ್ಳೆಯ ವ್ಯಾಪಾರ ಆಗುತ್ತಿದ್ದರೂ ಗಿರಾಕಿಗಳು ಯಾವಾಗಲೂ ಇರುತ್ತಿರಲಿಲ್ಲ. ಆದ್ದರಿಂದ ಅವರ ಮಗನಿಗೂ ಜೊತೆಗೆ ಹುಡುಗರು ಇರವುದು ಇಷ್ಟವೇ ಆಗುತ್ತಿತ್ತು. ಅಲ್ಲಿ ಕಾಲ ಕಳೆಯಲು ಬರುತ್ತಿದ್ದ ಹುಡುಗರಿಗೆ ಕಡ್ಲೆಬೀಜ, ಪೆಪ್ಪರ್‌ಮೆಂಟು ಮೊದಲಾದವನ್ನೂ ಆತ ಕೊಡಲು ಆರಂಭಿಸಿದ ಮೇಲೆ ಅಲ್ಲಿ ಜಮಾಯಿಸುವವರ ಸಂಖ್ಯೆ ಹೆಚ್ಚೇ ಆಯಿತು. ಚನ್ನರಾಯಪಟ್ಟಣಕ್ಕೆ ಸಾಮಾನು ತರಲು ಹೋಗುವಾಗ ಜೊತೆಗೆ ಹುಡುಗರನ್ನು ಕರೆದುಕೊಂಡು ಹೋಗುವುದು, ಸಿನಿಮಾ ನೋಡುವುದು ಅಭ್ಯಾಸವಾಯಿತು. ಪ್ರಾರಂಭದಲ್ಲಿ ಇದ್ಯಾವುದೂ ಅಷ್ಟೇನು ದೊಡ್ಡ ವಿಷಯವಾಗಿರಲಿಲ್ಲ. ಆದರೇ ಮೂರೇ ವರ್ಷದಲ್ಲಿ ಲಾಸ್ ಆಗಿ ಅಂಗಡಿ ಮುಚ್ಚುವಂತಾದಾಗ ಕಾಲ ಮಿಂಚಿ ಹೋಗಿತ್ತು.

ಅವರ ಅಂಗಡಿ ಮುಚ್ಚಿ ಹೋಗಿದ್ದಾಗಲೀ, ಅದಕ್ಕೆ ಅವರ ಮಗನೇ ಕಾರಣ ಎಂಬುದಾಗಲೀ ಇಲ್ಲಿ ಮುಖ್ಯವಲ್ಲ. ಆದರೆ ಒಂದು ವಿಷಯದಲ್ಲಿ ಛೇರ್ಮನ್ನರಿಗೂ, ಹಾಸ್ಟೆಲ್ ವಾರ್ಡನ್ನರಿಗೂ ನಡೆದ ಜಟಾಪಟಿಯಷ್ಟೇ ನನಗೆ ಮುಖ್ಯ. ಆ ಜಟಾಪಟಿಯಿಂದಾಗಿ, ಛೇರ್ಮನ್ನರ ದುರಾಸೆ, ಜಿಪುಣತನ ಹಾಗೂ ವಾರ್ಡನ್ ಜಟಗೊಂಡ ಅವರ ಬುದ್ಧಿವಂತಿಕೆ ನಮಗರಿವಾಗಿತ್ತು!

ಹಬ್ಬ ಹರಿದಿನಗಳಲ್ಲಿ ಹಾಸ್ಟೆಲ್ ಹುಡುಗರು ಊರಿಗೆ ಹೋಗುತ್ತಿದ್ದುದ್ದು ಸಾಮಾನ್ಯವಾದ ವಿಚಾರ. ಆದರೆ ಹತ್ತಿಪ್ಪತ್ತು ಮಂದಿಯಾದರೂ ಊರಿಗೆ ಹೋಗದೆ ಹಾಸ್ಟೆಲ್ಲಿನಲ್ಲಿಯೇ ಉಳಿದುಬಿಡುತ್ತಿದ್ದರು. ಅವರಿಗೆ ಮಾಮೂಲಿನಂತೆ ಊಟ ತಿಂಡಿ ಎಲ್ಲಾ ಇರುತ್ತಿತ್ತು. ಯಾವುದೋ ಒಂದು ಹಬ್ಬದಲ್ಲಿ ವಾರ್ಡನ್ ಕೂಡಾ ಊರಿಗೆ ಹೋಗಿದ್ದರು. ನಾನು ಊರಿಗೆ ಹೋಗಿದ್ದೆ. ಊರಿಗೆ ಹೋಗದೆ ಅಲ್ಲಿಯೇ ಓಡಾಡಿಕೊಂಡಿದ್ದ ಹುಡುಗರನ್ನು ನೋಡಿದ, ಛೇರ್ಮನ್ನರೊಂದಿಗೆ ಮಾತನಾಡುತ್ತಾ ಕುಳಿತಿದ್ದ ಸ್ವಾಮೀಜಿ ‘ಏಕೋ ಊರಿಗೆ ಹೋಗಲಿಲ್ವಾ?’ ಎಂದು ಪ್ರಶ್ನಿಸಿದ್ದಾರೆ. ಅವರೆಲ್ಲಾ ‘ಇಲ್ಲಾ ಸ್ವಾಮೀಜಿ’ ಎಂದಿದ್ದಕ್ಕೆ, ಛೇರ್ಮನ್ನರು, ‘ಏನೋ ಹಬ್ಬಕ್ಕೆ ಹಾಸ್ಟೆಲ್ಲಿನಲ್ಲಿ ಏನು ವಿಶೇಷ ಮಾಡಿದ್ದಾರೆ’ ಎಂದಿದ್ದಾರೆ. ಹುಡುಗರು ‘ಏನೂ ಇಲ್ಲ’ ಎಂದಿದ್ದಕ್ಕೆ ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು, ‘ಏನೋ ವರ್ಷಕ್ಕೆ ಒಂದು ಹಬ್ಬ. ಒಂದು ಒಳ್ಳೆಯ ಊಟ ಹುಡುಗರಿಗೆ ಹಾಕಿಸಬೇಡವೆ? ನಿಮ್ಮ ಭಟ್ಟರನ್ನು ಕರೆದುಕೊಂಡು ಬನ್ನಿ. ನಾನು ಸಾಮಾನು ಕೊಡುತ್ತೇನೆ. ಹೋಳಿಗೆ ಮಾಡಿಸಿಕೊಂಡು ತಿನ್ನಿ’ ಎಂದಿದ್ದಾರೆ. ಹೊಸದಾಗಿ ಬಂದಿದ್ದ ಭಟ್ಟ ಗೋಪಿನಾಥ ಅವರು ಕೊಟ್ಟ ಸಾಮಾನನ್ನು ಪಡೆದು, ತನಗೆ ಮಾಡಲು ಬರದೇ ಇದ್ದರೂ ಹೇಗೋ ಹೋಳಿಗೆ ಅಂತ ಮಾಡಿ ಹುಡುಗರಿಗೆ ಬಡಿಸಿಬಿಟ್ಟಿದ್ದಾನೆ.

ಇದು ಇಷ್ಟಕ್ಕೆ ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲ. ಹುಡುಗರೆಲ್ಲಾ ಮಾಜಿ ಛೇರ್ಮನ್ನರ ಮಕ್ಕಳ ಬಗೆಗಿನ ಪ್ರೀತಿಯನ್ನು ಕಂಡು, ಅವರು ಸಿಕ್ಕಲ್ಲಿ ನಮಸ್ಕಾರ ಹೊಡೆಯುತ್ತಿದ್ದರು. ಆದರೆ ಆ ಛೇರ್ಮನ್ ಮಹಾಶಯ, ವಾರ್ಡನ್ ಊರಿನಿಂದ ಬಂದಾಗ, ತಾನು ಕೊಟ್ಟ ಸಾಮಾನಿಗೆ ಒಂದಕ್ಕೆರಡು ಬರೆದು ಬಿಲ್ ಕಳಿಸಿಬಿಟ್ಟಿದ್ದ. ವಾರ್ಡನ್ ಗೋಪಿನಾಥನನ್ನು ಕರೆದು ಬಯ್ದರು.

‘ನಾನಿಲ್ಲದಾಗ ಬೇರೆಡೆಯಿಂದ ಸಾಮಾನನ್ನು ಹೆಂಗೆ ತಂದಿ. ಹದಿನೈದು ಇಪ್ಪತ್ತು ಹುಡುಗರಿಗೆ ಹೋಳಿಗಿ ಮಾಡಲು ನೂರೈವತ್ತು ರೂಪಾಯಿ ಸಾಮಾನು ಏಕೆ ಬೇಕು?’ ಎಂದೆಲ್ಲಾ ವಿಚಾರಿಸಿದರು.

ಆತ ಆಣೆ ಪ್ರಮಾಣ ಮಾಡಿ, ‘ಸಾರ್ ನಾನು ನಮ್ಮ ವಾರ್ಡನ್ ಇಲ್ಲ ಎಂದರೂ ಕೇಳದೆ, ಸ್ವಾಮೀಜಿಯವರೇ ಹೇಳಿದ್ದಾರೆ ಎಂದು ಸಾಮಾನು ಕಳಿಸಿದರು. ಅವರು ಅಷ್ಟೊಂದು ಸಾಮಾನು ಕೊಟ್ಟೇ ಇಲ್ಲ. ಸುಳ್ಳು ಸುಳ್ಳೇ ಲೆಕ್ಕ ಕೊಟ್ಟಿದ್ದಾರೆ. ಬೇಕಾದರೆ ಸಾಮಾನು ತಂದ ಹುಡುಗರನ್ನೇ ನೀವು ಕೇಳಿ’ ಎಂದ. ವಾರ್ಡನ್ ಅವತ್ತು ಇದ್ದ ಹುಡುಗರನ್ನೆಲ್ಲಾ ಕರೆದು ಎಷ್ಟಷ್ಟು ಸಾಮಾನನ್ನು ಕೊಟ್ಟಿದ್ದರು ಎಂದು ಕೇಳಿ ತಿಳಿದುಕೊಂಡು ಸುಮ್ಮನಾದರು. ನಾವು ‘ನೋಡೋಣ ಏನು ಮಾಡುತ್ತಾರೆ’ ಎಂದು ಕಾಯುತ್ತಾ ಕುಳಿತೆವು.

ಒಂದೆರಡು ದಿನ ಕಳೆಯಿತು. ಛೇರ್ಮನ್ನರು ಮಠದ ಒಬ್ಬ ಆಳನ್ನು ‘ದುಡ್ಡು ಕೊಡುತ್ತಾರೆ ತೆಗೆದುಕೊಂಡು ಬಾ’ ಎಂದು ಕಳಿಸಿದ್ದರು. ವಾರ್ಡನ್ ಅವನನ್ನು ಕುಳ್ಳಿರಿಸಿ ‘ನೋಡಪ್ಪ ಅಮಾಸಿ, ಇದು ಹಾಸ್ಟೆಲ್. ಇಲಾಖೆಯಿಂದ ನನ್ನ ಕೈಗೆ ರೊಕ್ಕ ಬರಾಂಗಿಲ್ಲ. ಅವರು ಏನಾದರೂ, ಎಷ್ಟು ಬೇಕೋ ಅಷ್ಟೇ ರೇಷನ್ನು ನನಗೆ ಕೊಡುವುದು. ಈಗ ನಾನು ಹಾಸ್ಟೆಲ್ಲಿನಿಂದ ಸಾಮಾನನ್ನಾಗಲೀ, ನನ್ನ ಕೈಯಿಂದ ರೊಕ್ಕನಾಗಲೀ ಕೊಡೋಕೆ ಬರಾಂಗಿಲ್ಲ. ಹಾಂಗೆಂದು ನಾನು ಹೇಳಿದೆ ಎಂದು ನಿಮ್ಮ ಛೇರ್ಮನ್ನರಿಗೆ ಹೇಳು’ ಎಂದು ಆತನನ್ನು ಕಳುಹಿಸಿಕೊಟ್ಟರು.

ಮತ್ತೆ ಒಂದೆರಡು ದಿನ ಯಾವುದೇ ಸುದ್ದಿ ಇರಲಿಲ್ಲ. ಮಠದ ಆಳೊಬ್ಬ ಬಂದು ವಾರ್ಡನ್ನರನ್ನು ‘ಸ್ವಾಮೀಜಿ ಕರೆಯುತ್ತಿದ್ದಾರೆ ಬರಬೇಕಂತೆ’ ಎಂದು ಕರೆದು ಹೋದ. ವಾರ್ಡನ್ ಐದಾರು ಜನ ಹುಡುಗರನ್ನು ಕರೆದುಕೊಂಡು ಹೊರಟರು.

ಅಂಗಡಿಯ ಮುಂದೆ ಸ್ವಾಮೀಜಿ ಮತ್ತು ಛೇರ್ಮನ್ನರು ಮತ್ತೆ ಒಂದಿಬ್ಬರು ಕುಳಿತಿದ್ದರು. ಸ್ವಾಮೀಜಿ ‘ಛೇರ್ಮನ್ನರಿಗೆ ಯಾವುದೋ ಬಾಕಿ ಕೊಡಬೇಕಂತೆ. ಕೊಟ್ಟುಬಿಡಬಾರದೆ’ ಎಂದರು. ಆಗ ವಾರ್ಡನ್ ಅತ್ಯಂತ ಸ್ಪಷ್ಟವಾಗಿ, ನಿಧಾನವಾಗಿ ‘ಸ್ವಾಮೀಜಿ, ನಾನು ಈ ಹಾಸ್ಟೆಲ್ಲಿನಾಗ ವಾರ್ಡನ್ ಮಾತ್ರ ಇದ್ದೀನಿ. ಇಲಾಖೆಯವರು ಕೊಟ್ಟ ರೇಷನ್ನಷ್ಟನ್ನೇ ತಂದು ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಕೊಡೋದು ಅಷ್ಟೆ ನನ್ನ ಕರ್ತವ್ಯ. ಇಲಾಖೆಯವರು ಯಾವುದೇ ಕಾರಣಕ್ಕು ನನಗೆ ರೊಕ್ಕ ಕೊಡೋದಿಲ್ಲ. ನನಗೆ ಬರುವ ಪಗಾರದಲ್ಲಿ ನಾನೇ ಸಂಸಾರ ನಡೆಸುವುದು ಕಷ್ಟವಾಗಿದೆ. ಏನು ಮಾಡಲಿ ಹೇಳಿ’ ಎಂದರು. ಸ್ವಾಮೀಜಿ ಮಾತನಾಡಲಿಲ್ಲ.

ಆಗ ಛೇರ್ಮನ್ನರು, ‘ನೋಡಿ, ಹೇಗೂ ನೀವು ಸಕ್ಕರೆ, ಬೇಳೆ, ಎಣ್ಣೆ ತಂದೇ ತರುತ್ತೀರಿ. ಅದರಲ್ಲಿ ನಾವು ಕೊಟ್ಟಿರುವಷ್ಟನ್ನು ವಾಪಸ್ ಕೊಟ್ಟುಬಿಡಿ’ ಎಂದರು.

ಛೇರ್ಮನ್ನರ ಕಡೆಗೆ ತಿರುಗಿದ ವಾರ್ಡನ್ನರು ಸಂಯಮದಿಂದಲೇ ‘ಸಾರ್ ನೋಡಿ. ಹಾಸ್ಟೆಲಿನಿಂದ ಹೊರಕ್ಕೆ ಏನೇ ಸಾಮಾನು ಕೊಡೋದು ಅಪರಾಧ ಎಂದು ಹಾಸ್ಟೆಲ್ಲಿನ ರೂಲ್ಸ್ ಹೇಳುತ್ತದೆ. ಹಾಗೆ ನಿಮಗೆ ಸಾಮಾನು ಕೊಟ್ಟರೆ ನನ್ನ ನೌಕರಿ ಹೋಗ್ತದೆ. ನಾನು ಬಡವ ಇದ್ದೀನಿ. ನೀವು ಛೇರ್ಮನ್ನರು, ನೀವೆ ಹಣವನ್ನು ಮಕ್ಕಳಿಗೆ ಎಂದು ಮಾಫಿ ಮಾಡಬಾರದೆ’ ಎಂದರು.

ತಕ್ಷಣ ಸ್ವಾಮೀಜಿ, ‘ಹಾಗೇ ಮಾಡಿ ಛೇರ್ಮನ್ನರೆ’ ಎಂದು ಎದ್ದು ಬಿಟ್ಟರು. ಛೇರ್ಮನ್ನರು ಏನೂ ಮಾತನಾಡದಂತಾಯಿತು. ಮೂಕಪ್ರೇಕ್ಷಕರಾಗಿದ್ದ ನಾವು ನಮ್ಮ ವಾರ್ಡನ್ನರ ಬುದ್ಧಿವಂತಿಕೆಗೆ ಅವರನ್ನು ಹೊಗಳುತ್ತಲೇ ಹಾಸ್ಟೆಲ್ಲಿಗೆ ಬಂದೆವು. ಆಗ ವಾರ್ಡನ್ ‘ಅಲ್ಲವ್ರೋ, ಹಾಸ್ಟೆಲ್ ಹುಡುಗ್ರು ಇನ್ನು ಚಿಕ್ಕವ್ರಿರ್ತಾರೆ. ಅವಕ್ಕೆ ಬುದ್ದಿ ಇರಂಗಿಲ್ಲ. ಏನೋ ಪೆಪ್ಪರ್‌ಮೆಂಟ್ ತಿನ್ನೋ ಆಸೆಗೆ ಇವರು ಹೇಳಿದ ಕೆಲಸ ಮಾಡ್ತಾರೆ ಅಂತ, ಷಾಣ್ಯರಾದ ಇವ್ರು ಮಾಡಿಸಿಕೊಂಡಿದ್ದೇ ಮಾಡಿಸಿಕೊಂಡಿದ್ದು. ಕೊಡ್ಲಿ ಬಿಡ್ರಿ ನೂರೈವತ್ತು ರೂಪಾಯಿ. ಹಂಗ ನೋಡಿದ್ರೆ ಅವ ಕೊಟ್ಟಿರೋದು ಕೇವಲ ಅರವತ್ತುರೂಪಾಯಿ ಸಾಮಾನೂನು ಇಲ್ಲ’ ಎಂದರು. ಹುಡುಗರು ನಿರುತ್ತರರಾದೆವು!
(ಮುಂದಿನ ವಾರ ಈ ಪುಸ್ತಕದ ಕೊನೆಯ ಕಂತು. ನಂತರ ಒಬ್ಬರು ರಂಗನಿರ್ದೇಶಕರು ಮತ್ತು ಇಬ್ಬರು ಲೇಖಕರು  ಈಪುಸ್ತಕವನ್ನು ಕುರಿರತು ಬರೆದಿರುವ ಲೇಖನಗಳು ಪ್ರಕಟವಾಗಲಿವೆ.)
ಚಿತ್ರಕೃಪೆ:ಅಂತರಜಾಲ

Friday, September 25, 2009

ಸರಸ್ವತಿಯ ಬಗ್ಗೆ ಒಂದಿಷ್ಟು ಮಾತು... ಭಾಗ-2

‘ಸಂವಹನ’ ಎಂಬುದು ಆಧುನಿಕ ಜಗತ್ತಿನ ಅತ್ಯಗತ್ಯ ಚಟುವಟಿಕೆಯಾಗಿದೆ. ಸಂಕೇತಗಳು, ನಿರ್ದಿಷ್ಟ ಶಬ್ದಗಳು ಸಂವಹನಕ್ರಿಯೆಗೆ ಆಧಾರವಾಗಿದ್ದ ಕಾಲದಿಂದಲೂ ನಿರಂತರ ಬದಲಾವಣೆಯೊಂದಿಗೆ, ಈ ಯುಗವನ್ನು ‘ಸಂವಹನಯುಗ’ವೆಂದು ಪ್ರಭಾವಿಸುವಷ್ಟರ ಮಟ್ಟಿಗೆ ಅದಕ್ಕೆ ವ್ಯಾಪ್ತಿ ಮತ್ತು ಪ್ರಾಮುಖ್ಯ ಉಂಟಾಗಿದೆ. ಸಂವಹನ ಕ್ರಿಯೆಗೆ ಅತ್ಯಗತ್ಯವಾಗಿದ್ದ ಶಬ್ದಗಳೇ ಒಂದು ನಿಶ್ಚಿತ ಧ್ವನಿರೂಪವನ್ನು ತಳೆಯುವುದರೊಂದಿಗೆ ಭಾಷೆಯ ಉಗಮಕ್ಕೆ ನಾಂದಿಯಾಯಿತು. ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಭಾಷೆಯ ಉಗಮಕ್ಕೆ ಕಾರಣೀಭೂತವಾದ ಹಾಗೂ ಸಂವಹನ ಕ್ರಿಯೆಗೆ ಅತ್ಯಗತ್ಯವಾದ ವಾಕ್ ಅಥವಾ ಮಾತು, ಭಾರತೀಯ ಸಂಸ್ಕೃತಿಯಲ್ಲಿ ದೈವತ್ವಕ್ಕೇರಿತು. ವಾಕ್‌ನ ಉಪಯೋಗ, ಪ್ರಭಾವ, ಆಯತಪ್ಪಿದರೆ ಅದರಿಂದಾಗುವ ಅನಾಹುತ....... ಇವುಗಳಿಂದಾಗಿ ಮಾತಿಗೆ ಮಹತ್ವದ ಸ್ಥಾನ ಲಭ್ಯವಾಗಿದೆ.
ಇಂತಹ ಮಾತು ದೈವತ್ವಕ್ಕೇರಿದಾಗ, ವಾಕ್ಕಿಗೇ ಒಂದು ದೇವತೆಯೂ ಸೃಷ್ಟಿಯಾಗಬೇಕಾಗುತ್ತದೆ. ಅಂತಹ ವಾಗ್ದೇವಿಯ ಸೃಷ್ಟಿ ಭಾರತೀಯ ಸಂಸ್ಕೃತಿಯಲ್ಲಿ ವಿಭಿನ್ನವಾಗಿಯೇ ಇದೆ. ಜನೋಪಯೋಗಿಯಾದ ಸರಸ್ವತೀ ನದಿಯು ದೈವತ್ವಕ್ಕೇರಿದ ಪರಿಣಾಮವಾಗಿ ನದಿದೇವತೆಯಾಗಿ ಆರಾಧನೆಗೊಳಗಾಗುತ್ತಾಳೆ. ತನ್ನ ಹರಿಯುವ ಪಾತ್ರವನ್ನು ಬದಲಿಸುವ ನದಿಯಂತೆ, ನದಿಯಾಗಿದ್ದ ಸರಸ್ವತಿಯು ತನ್ನ ಪಾತ್ರವನ್ನು ಬದಲಿಸಿ ವಾಗ್ದೇವಿಯಾಗಿದ್ದು, ನಂತರದ ದಿನಗಳಲ್ಲಿ ವಿದ್ಯಾದೇವತೆ, ಸಾಹಿತ್ಯದೇವತೆ, ಸಕಲಕಲಾದೇವತೆಯಾಗಿ ಭಾರತೀಯರ ಜನಮಾನಸದಲ್ಲಿ ನೆಲೆನಿಂತದ್ದು ಒಂದು ಮಹಾಕಥನ. ಹಾಗೊಂದು ವೇಳೆ ಸರಸ್ವತಿಯು ತನ್ನ ಪಾತ್ರವನ್ನು ಬದಲಿಸದಿದ್ದರೆ, (ಬೇರೊಂದು ದೇವತೆ ವಾಗ್ದೇವಿಪಟ್ಟವನ್ನು ಅಲಂಕರಿಸುತ್ತಿದ್ದುದು ನಿಜವಾದರೂ,) ಮರಳುಗಾಡಿನಲ್ಲಿ ಕಣ್ಮರೆಯಾದ ಸರಸ್ವತೀ ನದಿಯಂತೆ, ಭಾರತೀಯರ ಮನಸ್ಸಿನಿಂದ ಈಗಾಗಲೇ ಕಾಣೆಯಾಗಿರುವ ವೇದೋಕ್ತವಾದ ಹಲವಾರು ದೇವತೆಗಳಂತೆ ಸರಸ್ವತಿಯೂ ಕಣ್ಮರೆಯಾಗಬೇಕಾಗುತ್ತಿತ್ತು. ಸರಸ್ವತೀ ನದಿಯು ಮಾತ್ರ ತನ್ನ ಪಾತ್ರವನ್ನು ಬದಲಿಸದೆ ಮರಳುಗಾಡಿನಲ್ಲಿ ಇಂಗಿಹೆಗಿದ್ದು ಮಹಾನಾಗರಿಕತೆಯೊಂದರ ದುರಂತವೇ ಸರಿ.
‘ಸರಸ್ವತಿ’ ಎಂದರೆ ಈಗ ಕಣ್ಣಮುಂದೆ ನಿಲ್ಲುವುದು, ನಾವು ನೋಡಿರುವ ಯಾವುದೋ ಶಿಲ್ಪದ ಇಲ್ಲವೇ ಚಿತ್ರಪಟದ ಇಲ್ಲವೇ ಸಾಹಿತ್ಯವರ್ಣನೆಯಿಂದ ನಮ್ಮ ಮನಸ್ಸಿನಲ್ಲಿ ರೂಪಗೊಂಡ ಸುಂದರ ‘ಸ್ತ್ರೀ’ ದೇವತೆಯೊಬ್ಬಳ ಚಿತ್ರ. ಅರಳಿದ ಬೆಳ್ದಾವರೆಯ ಮೇಲೆ ವೀಣೆ-ಪುಸ್ತಕ-ಅಕ್ಷಮಾಲೆಗಳನ್ನು ಹಿಡಿದು ಶುಭ್ರವರ್ಣದ, ಪ್ರಸನ್ನವದನಳಾದ ಚತುರ್ಭುಜ ದೇವತೆಯ ಚಿತ್ರ. ಹತ್ತಿರದಲ್ಲಿ ಹಂಸ, ಕೆಲವೊಮ್ಮೆ ನವಿಲು ಇರುತ್ತದೆ. ಆದರೆ ಇಂದು ನಾವು ಕಾಣುತ್ತಿರುವ ಈ ಚಿತ್ರ ರೂಪುಗೊಂಡಿದ್ದಕ್ಕೆ ಸುಮಾರು ನಾಲ್ಕುಸಾವಿರ ವರ್ಷಗಳ ಇತಿಹಾಸವಿದೆ ಎಂದು ಅರಿತಾಗ ಆಶ್ಚರ್ಯ, ಸಂತೋಷ, ಹೆಮ್ಮೆ ಒಟ್ಟಿಗೇ ಉಂಟಾಗುತ್ತದೆ. ಸರಸ್ವತಿಯು ನಡೆದು ಬಂದ ನಾಲ್ಕುಸಾವಿರ ವರ್ಷಗಳ ಹಾದಿಯ ಅವಲೋಕನವೇ ಒಂದು ಚೇತೋಹಾರಿ ಅನುಭವ.

ಆಸೀನ ಚತುರ್ಭುಜ ಸರಸ್ವತಿ - ಬಗ್ಗವಳ್ಳಿ
ಸಂಸ್ಕೃತ ಕವಿಗಳು ತಮ್ಮ ಕಾವ್ಯಗಳಲ್ಲಿ ಸರಸ್ವತಿಯನ್ನು ನದಿಯಾಗಿ ಸ್ತುತಿಸಿದ್ದರೂ ವಾಗ್ದೇವತೆಯಾಗಿ ಹೆಚ್ಚು ಪ್ರಚಲಿತದಲ್ಲಿದ್ದಾಳೆ. ಶಬ್ದ ಮತ್ತು ಅರ್ಥಗಳಿಗೆ ಅಧಿದೇವತೆ. ‘ಶಬ್ದಾರ್ಥೌಸಹಿತೌಕಾವ್ಯಂ’ ಎಂಬಂತೆ ಕಾವ್ಯದ ಅಧಿದೇವತೆಯೂ ಹೌದು. ಅಕ್ಷರ, ಭಾಷೆ, ವಿದ್ಯೆ, ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ ಮೊದಲಾದವಕ್ಕೂ ಸರಸ್ವತೀ ಅಧಿದೇವತೆ. ಸರಸ್ವತಿಯ ಕಟಾಕ್ಷವಿಲ್ಲದವನು ಪಶುವಿಗೆ ಸಮಾನ. ಸರಸ್ವತಿಯು ಬ್ರಹ್ಮನಿಗೆ ಮಗಳು. ಆದರೆ ತಪಸ್ಸು ಮಾಡಿ ಅವನಿಂದ ಕಾವ್ಯಪುರುಷ ಎಂಬ ಮಗನನ್ನು ಪಡೆಯುತ್ತಾಳೆ. ಅವನನ್ನು ಗೌರಿಯ ಮಾನಸಪುತ್ರಿ ಕಾವ್ಯವಿದ್ಯಾವಧೂ ವರಿಸುತ್ತಾಳೆ. ಪುರಾಣಗಳ ಕಲ್ಪನೆಯಂತೆ ಆಕೆ ದೇವಲೋಕದಿಂದ ಶಾಪವಿಮೋಚನೆಗಾಗಿ ಭೂಲೋಕಕ್ಕೆ ಬರುತ್ತಾಳೆ. ಇಲ್ಲಿಯ ಋಷಿ ದಧೀಚನಿಂದ ಸಾರಸ್ವತ ಎಂಬ ಮಗನನ್ನು ಪಡೆದು ಆತನನ್ನು ವೇದಪಂಡಿತನನ್ನಾಗಿ ಮಾಡುತ್ತಾಳೆ. ಅವಳು ವೀಣಾವಾದಕಿ, ಸಂಗೀತ ಶಿಕ್ಷಕಿ, ಮಹಾ ಕವಯಿತ್ರಿ ಮತ್ತು ನ್ಯಾಯಧೀಶೆ. ಅಭಿನವಬ್ರಹ್ಮರಾದ ಕವಿಗಳ ಮುಖದಲ್ಲಿ ಸದಾ ನೆಲೆಸಿರುತ್ತಾಳೆ. ‘ಸರ್ವಭಾಷಾಸರಸ್ವತೀ’ ಎಂಬುದು ಮೀಮಾಂಸಕರ ಮತ್ತು ಕವಿಗಳ ಅಭಿಮತ. ಕಾಶ್ಮೀರದ ಅಧಿದೇವತೆಯಾಗಿರುವ ಶಾರದೆ, ಕಾಶ್ಮೀರದಲ್ಲಿ ಹಂಸರೂಪಿಯಾಗಿ ನೆಲೆನಿಂತಿದ್ದಾಳೆ ಎಂಬುದು ಕಾಶ್ಮೀರಿಮೂಲದ ಕವಿಗಳ ನಂಬಿಕೆ. ಹಂಸ ಅವಳ ವಾಹನ. ಸರ್ವಶುಕ್ಲೆಯಾದ ಆಕೆಯ ವಸ್ತ್ರಾಭರಣಗಳೂ ಶ್ವೇತವರ್ಣದವುಗಳು. ಆದಿಜಿನರ ಮುಖದಿಂದುಯಿಸಿದ ಸರಸ್ವತಿಯು ಸರ್ವಲೋಕವನ್ನೂ ವ್ಯಾಪಿಸಿದಳು ಎಂಬುದು ಜೈನಕವಿಗಳ ಅಭಿಪ್ರಾಯ.

ಸ್ಥಾನಕ ಚತುರಭುಜ ಸರಸ್ವತಿ ಹಳೇಬೀಡು
ಕನ್ನಡದಲ್ಲಿ ಜೈನ ವೈದಿಕ ವೀರಶೈವ ಪರಂಪರೆಯ ಕವಿಗಳು ತಮ್ಮ ತಮ್ಮ ದರ್ಶನಗಳಿಗನುಗುಣವಾಗಿ ಸರಸ್ವತಿಯನ್ನು ಸ್ತುತಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಮೀರಿದ ಮಾನವಧರ್ಮವೊಂದಿದೆ. ಆ ಹಿನ್ನೆಲೆಯಲ್ಲೂ ಸರಸ್ವತಿಯನ್ನು ಪ್ರತಿಭಾವಂತರಾದ ಕವಿಗಳು ಕಂಡಿದ್ದಾರೆ. ಸರಸ್ವತಿಯು ವಾಗ್ದೇವತೆ, ಕಾವ್ಯದೇವತೆ, ಜ್ಞಾನದೇವತೆ ಎಂಬ ಪ್ರಾರಂಭದ ಸೀಮಿತ ಚೌಕಟ್ಟನ್ನು ಮೀರಿ, ಸಂಸಾರಸಂಭಾವಿತಾತ್ಮೆ, ಕಾಮಸಂಜನನಿ, ಪ್ರೇಮಭೈರವಿ, ಶೃಂಗಾರಮೂರ್ತಿ, ರಸರಾಣಿ, ರಸಸರಸ್ವತಿ, ಕಲಾಸುಂದರಿ, ವಾಕ್ಸುಂದರಿ, ನುಡಿರಾಣಿ, ವಿಜ್ಞಾನನೇತ್ರಿ, ಸರ್ವಪಾರದರ್ಶಿಕೆ ಎಂದು ಮೊದಲಾದ ವಿಶೇಷಣಗಳನ್ನು ಧರಿಸಿ ಸರಸ್ವತಿಯು ಬೆಳೆದಿದ್ದಾಳೆ. ಕಾವ್ಯವಾಸಿಯಾಗಿದ್ದ ಸರಸ್ವತಿಯು ವಿದ್ಯಾಲಯವಾಸಿಯೂ, ವಿದ್ಯಾಲಯೆಯೂ, ಕವಿದೇಹವಾಸಿಯೂ ಆಗಿದ್ದಾಳೆ. ಕಾವ್ಯರಂಗಸ್ಥಳದಲ್ಲಿ, ಕವಿಗಳ ನಾಲಗೆಯಲ್ಲಿ ಮಾತ್ರ ನಟಿಸುತ್ತಿದ್ದ ಸರಸ್ವತಿಯು ಕವಿಮನೋಮಂದಿರದಲ್ಲಿ, ಕವಿಯಾತ್ಮಜಿಹ್ವೆಯಲ್ಲಿ ನರ್ತಿಸಿದ್ದಾಳೆ. ಹಂಸವಾಹನೆ ಮಾತ್ರವಲ್ಲದೆ, ನವಿಲುವಾಹನೆಯಾಗಿಯೂ ದರ್ಶನವಿತ್ತಿದ್ದಾಳೆ. ಸರ್ವಭಾಷಾಮಯಿಯೂ, ವಿಶ್ವಮಾತೆಯೂ ಆಗಿ ಸರಸ್ವತಿಯ ದರ್ಶನ ಬೆಳೆದಿದೆ. ಬಹುಶಃ, ಬೇರಾವ ಭಾಷೆಗಳಲ್ಲೂ ಸಿಗದಿದ್ದ ‘ಅನಾದಿಕವಿ’ಯ ‘ಪಟ್ಟಗೌರವ’ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಿಕ್ಕಿದೆ.

ತ್ರಿಭಂಗಿ ಚತುರ್ಭುಜ ಸರಸ್ವತಿ ಬೇಲೂರು
ಜನಪದ ಸಾಹಿತ್ಯದಲ್ಲಿ ವಾಗ್ದೇವತೆಯ ಪರಿಕಲ್ಪನೆ ಇಲ್ಲದಿದ್ದರೂ ವಾಕ್ ಅಂದರೆ ಮಾತಿನ ಮಹತ್ವ ಅಭಿವ್ಯಕ್ತಗೊಂಡಿದೆ. ಶಾರದೆ ಮತ್ತು ಸರಸ್ವತಿ ಎಂಬವುಗಳು, ಒಂದೇ ದೇವತೆಯ ಎರಡು ಹೆಸರುಗಳಷ್ಟೆ; ಸರಸ್ವತಿ ಎಂಬುದಕ್ಕೆ ಸರಸೋತಿ, ಸರಸಾತಿ, ಸರಸತಿ ಮೊದಲಾದ ಪ್ರಯೋಗಗಳಿವೆ. ರಾಗಿಕಲ್ಲನ್ನೇ ಸರಸ್ವತಿಯೆಂದು ಪೂಜಿಸುವ ಪರಿಕಲ್ಪನೆ ನವೀನವಾಗಿದೆ. ಅಲ್ಲದೆ ಬೀಸುವ ಕ್ರಿಯೆಯಲ್ಲಿ ಸರಸ್ವತಿಯು (ಹಾಡಿನ ರೂಪದಲ್ಲಿ) ಜತೆಯಾಗಿ ಇರುತ್ತಾಳೆ, ಬೀಸುವುದರಿಂದ ಆಗುವ ಆಯಾಸವನ್ನು ಸರಸ್ವತಿಯು (ಹಾಡು) ಕಳೆಯುತ್ತಾಳೆ ಎಂಬ ಭಾವನೆ ವ್ಯಕ್ತವಾಗಿದೆ. ಸರಸ್ವತಿಯು ಬ್ರಹ್ಮನ ಮಗಳೇ? ಹೆಂಡತಿಯೇ? ಎಂಬ ಯಾವುದೇ ದ್ವಂದ್ವಗಳಿಲ್ಲ. ಜನಪದರ ದೃಷ್ಟಿಯಲ್ಲಿ ಸರಸ್ವತಿಯು ಬ್ರಹ್ಮನ ಹೆಂಡತಿ ಮಾತ್ರ. ಸರಸ್ವತಿಯು ಮಾತು, ಅಕ್ಷರ, ವಿದ್ಯೆ ಮತ್ತು ಹಾಡುಗಳನ್ನು ಕಲಿಸುವ ಅಧ್ಯಾಪಿಕೆ; ದೇವತೆ. ಸರಸ್ವತಿಯು ದೇವತೆಯಾಗಿದ್ದರೂ, ಶಿಷ್ಟ ಸಂಪ್ರದಾಯದಂತೆ ಬೇರೊಂದು ಲೋಕದವಳಲ್ಲ. ತಮ್ಮೊಂದಿಗೇ ಬದುಕುತ್ತಿರುವ, ತಮ್ಮಂತೆಯೇ ಕೆಲಸ ಮಾಡುತ್ತಿರುವ ಆದರೆ ತಮಗೆ ಹಾಡು ಕಲಿಸುವ ಸಹವಾಸಿ ಎಂದೇ ಪರಿಭಾವಿಸಲಾಗಿದೆ. ಮಾತು, ವಿದ್ಯೆ, ಹಾಡು ಇವಿಷ್ಟೇ ಅಲ್ಲದೆ ಒಟ್ಟಾರೆಯಾಗಿ ಕಲಿಯುವ ಇಡೀ ಕ್ರಿಯೆಯನ್ನೇ ಸರಸ್ವತಿ ಎಂದು ಪರಿಭಾವಿಸಿರುವುದನ್ನು ಕಾಣಬಹುದು.

ನೃತ್ಯ ದಶಭುಜ ಸರಸ್ವತಿ ಹಳೇಬೀಡು
ಚಿತ್ರಕಲೆಯಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯ ಸ್ವರೂಪದಲ್ಲಿ ಮಾತ್ರ ಅಭಿವ್ಯಕ್ತಿಸಲಾಗಿದೆ. ವಸ್ತ್ರಾಭರಣಗಳಲ್ಲಿ ವೈವಿಧ್ಯಯಿರುವುದಿಲ್ಲ. ಭಾರತೀಯ ಸ್ತ್ರೀಯರು ಪಾರಂಪರಿಕ ತೊಡುಗೆಯಾದ ಸೀರೆ, ರವಿಕೆ ಸರಸ್ವತಿಯ ಚಿತ್ರಗಳಲ್ಲಿಯೂ ಕಂಡು ಬರುತ್ತದೆ. ಬಹುತೇಕ ಆಧುನಿಕ ಸರಸ್ವತಿಯ ಚಿತ್ರಗಳಿಗೆ ರವಿವರ್ಮನ ಸರಸ್ವತಿಯ ಚಿತ್ರವೇ ಮೂಲ ಆಕರವಾಗಿದೆ. ಮೈಸೂರು ಮತ್ತು ತಂಜಾವೂರು ಶೈಲಿಯ ಸರಸ್ವತಿಯ ಚಿತ್ರಗಳು ಮಂಟಪಗಳಲ್ಲಿರುವಂತೆ ಸಂಯೋಜಿತವಾಗಿದ್ದರೆ, ಆಧುನಿಕ ಚಿತ್ರಗಳೆಲ್ಲವೂ ಪ್ರಕೃತಿಯ ನಡುವಿನಲ್ಲಿರುವಂತೆ ಚಿತ್ರಿತವಾಗಿವೆ. ಕೆಲವು ನವ್ಯವೆನ್ನಬಹುದಾದ ರಚನೆಗಳಲ್ಲಿ ರೇಖೆಗಳೇ ಪ್ರಧಾನವಾಗಿರುತ್ತವೆ. ಚಿತ್ರಕಲೆಯಲ್ಲಿ ವಿದ್ಯಾದೇವತೆಯಾಗಿ ಮಾತ್ರ ಚಿತ್ರಿತಳಾಗಿದ್ದಾಳೆ. ಕೆಲವೇ ಕೆಲವು ರೇಖೆಗಳನ್ನು ಬಳಸಿ, ಸರಸ್ವತಿಯನ್ನು ವಿದ್ಯಾದೇವತೆಯನ್ನಾಗಿಯೂ, ನದಿದೇವತೆಯನ್ನಾಗಿಯೂ ಬಿಂಬಿಸುವಲ್ಲಿ ಹುಸೇನರ ಚಿತ್ರ ಯಶಸ್ವಿಯಾಗಿದೆ. ಇನ್ನೊಬ್ಬ ಕಲಾವಿದ ರುದ್ರಕುಮಾರ್ ಝಾ ಅವರ ಚಿತ್ರದಲ್ಲೂ ಸರಸ್ವತಿ ನಗ್ನವಾಗಿಯೇ ಇದ್ದಾಳೆ. ಪ್ರಾಚೀನ ಶಿಲ್ಪಗಳಲ್ಲು ನಗ್ನತೆಯಿದೆ; ಆದರೆ ಅಶ್ಲೀಲತೆಯಿಲ್ಲ ! ಆದರೆ ಹುಸೇನರ ಚಿತ್ರವೊಂದಕ್ಕೆ ವಿರೋಧ ವ್ಯಕ್ತವಾಗಿದ್ದು ಮಾತ್ರ ದುರದೃಷ್ಟಕರ. ಹಾಗೆ ನೋಡಿದರೆ ಪುರಾಣಗಳಲ್ಲಿಯೇ ಸರಸ್ವತಿಯನ್ನು ಅತ್ಯಂತ ಕೆಟ್ಟದ್ದಾಗಿ ಚಿತ್ರಿಸಿರುವುದನ್ನು ಕಾಣಬಹುದಾಗಿದೆ!

ಬ್ರಹ್ಮನ ಜೊತೆಯಲ್ಲಿ ಸರಸ್ವತಿ ಹಳೇಬೀಡು
ಕರ್ನಾಟಕದಲ್ಲಿ ಪೂರ್ಣರೂಪದ ಬೌದ್ಧ ದೇವಾಲಯಗಳಾಗಲೀ ಸರಸ್ವತೀ ಶಿಲ್ಪಗಳಾಗಲೀ ದೊರೆತಿಲ್ಲ. ಬೌದ್ಧಾಲಯಗಳ ಅವಶೇಷಗಳು ಗುಲ್ಬರ್ಗಾ ಜಿಲ್ಲೆಯ ಸನ್ನತಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಘಟ್ಟ ಮುಂತಾದ ಕಡೆ ಕಂಡುಬಂದರೂ ಸರಸ್ವತೀ ಶಿಲ್ಪಗಳು ವರದಿಯಾಗಿಲ್ಲ. ಜೈನಬಸದಿಗಳಲ್ಲಿ ಸಿಗುವ ಸರಸ್ವತಿಶಿಲ್ಪಗಳ ಲಕ್ಷಣಗಳೇ ಶಿವ ಅಥವಾ ಕೇಶವ ದೇವಾಲಯಗಳಲ್ಲಿನ ಸರಸ್ವತಿಶಿಲ್ಪಗಳಲ್ಲೂ ಕಾಣುತ್ತವೆ. ತಾಂತ್ರಿಕಸರಸ್ವತಿಯ ಶಿಲ್ಪಗಳು ದೊರೆಯುವುದಿಲ್ಲವಾದರೂ, ದುರ್ಗಿಯೇ ಪುಸ್ತಕವನ್ನು ಹಿಡಿದು ಸರಸ್ವತಿಯಾಗಿ ನಿಂತಿರುವುದನ್ನು ಕಾಣಬಹುದು. ಶಿಲ್ಪಿಗಳು ಸರಸ್ವತಿಯನ್ನು ಬ್ರಹ್ಮನ ರಾಣಿಯೆಂದೇ ಚಿತ್ರಿಸಿದ್ದಾರೆ. ಆಕೆ ಬ್ರಹ್ಮನ ಮಗಳೆಂಬ ಕಲ್ಪನೆ ಶಿಲ್ಪಗಳಲ್ಲಿ ಎಲ್ಲಿಯೂ ಬಿಂಬಿತವಾಗಿಲ್ಲ. ‘ಪರಮಜಿನೇಂದ್ರವಾಣಿಯೇ ಸರಸ್ವತೀ’ ಆಗಿದ್ದರೂ, ಜೈನಧರ್ಮೀಯರೂ ಸಹ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ; ಪೂಜಿಸಿದ್ದಾರೆ. ಸರಸ್ವತೀ ಶಿಲ್ಪಗಳಿಗೆ ನಿರ್ದಿಷ್ಟವಾದ ಶಿಲ್ಪಲಕ್ಷ್ಷಣಗಳಿದ್ದರೂ ಸಾಹಿತ್ಯಕ ಆಧಾರಗಳಿದ್ದಾಗ್ಯೂ, ಕರ್ನಾಟಕದ ಶಿಲ್ಪಾಚಾರ್ಯರು ಸ್ವತಂತ್ರವಹಿಸಿ ಹತ್ತು ಹಲವಾರು ಸ್ವರೂಪಗಳಲ್ಲಿ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಸರಸ್ವತಿಗೆ ಬೇರೆ ಬೇರೆ ಸ್ವರೂಪಗಳು, ಬ್ರಹ್ಮನ ಪತ್ನಿ ಮತ್ತು ಮಗಳು ಎಂಬ ಪರಿಕಲ್ಪನೆಗಳು ಇದ್ದಾಗ್ಯೂ, ಆಕೆ ವಿದ್ಯಾದೇವತೆಯೆಂಬ ಭಾವನೆ ಮಾತ್ರ ಸಾರ್ವತ್ರಿಕವಾದದ್ದು, ಸಾರ್ವಕಾಲಿಕವಾದದ್ದು.
ಕೊನೆಯ ಮಾತು....
ಮೊದಲ ಕಂತಿಗೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು.
ಅಂತರಂಗದ ಮಾತುಗಳು ಬ್ಲಾಗಿನ ಶಾಮಲಾ ಜನಾರ್ಧನ್ ಅವರು 'ಈ ಬಾರಿ ದುರ್ಗಾಷ್ಟಮಿಯಂದೇ ಸರಸ್ವತಿ ಪೂಜೆ ಬಂದಿದೆ' ಎಂದಿದ್ದಾರೆ. ಹಾಸನ ಜಿಲ್ಲೆ ಮೊಸಳೆಯ ದೇವಾಲಯದ ಭಿತ್ತಿಯಲ್ಲಿ ಪುಸ್ತಕವನ್ನು ಹಿಡಿದಿರುವ ದುರ್ಗೆಯ ಶಿಲ್ವಿದೆ. ಅದನ್ನು ವಿದ್ವಾಂಸರು Durga Standing as Saraswati ಎಂದು ಕರೆದಿದ್ದಾರೆ. ಅದರ ಚಿತ್ರ ಈ ಬಾರಿಯ ದುರ್ಗಾಷ್ಟಮಿ-ಸರಸ್ವತೀ ಪೂಜೆಗೆ ವಿಶೇಷವೆನ್ನಿಸಬಹುದು, ನೋಡಿ.

Thursday, September 24, 2009

ನೇತಾಜಿ ಹೆಸರಿಗೂ ಕೈಯಿಕ್ಕಿದ ಸಂಸದ ಮತ್ತು ಪತ್ರಿಕೆಗಳ ಅಜ್ಞಾನ!

ನೆನ್ನೆ ಬೆಳಿಗ್ಗೆ ಪ್ರಜಾವಾಣಿ ಮತ್ತು ವಿಜಯಕರ್ನಾಟಕ ಪತ್ರಿಕೆ ಓದಿದ ನನಗೆ ಶಾಕ್ ಆಗಿತ್ತು. “ಆಸ್ಟ್ರೀಯಾದಲ್ಲಿ ನೇತಾಜಿ ಕುಟುಂಬ!” ಓದಿ, ಸಂಸದ ಅನಂತಕುಮಾರ ಹೆಗಡೆಯವರು ಅದನ್ನೊಂದು ಹೊಸ ವಿಷಯ, ತಮ್ಮದೇ ಶೋಧನೆ ಎಂಬಂತೆ ಪತ್ರಕಾಗೋಷ್ಠಿಯಲ್ಲಿ ಹೇಳಿರುವುದನ್ನು ನೋಡಿ ಆಶ್ಚರ್ಯವಾಯಿತು.

ಹಲವಾರು ಪುಸ್ತಕ, ಅಂತರಜಾಲಗಳನ್ನು ಹುಡುಕಾಡಿ ಸಿಕ್ಕಿದಷ್ಟು ಮಾಹಿತಯನ್ನು ಕ್ರೋಢೀಕರಿಸಿ ಎರಡೂ ಪತ್ರಿಕೆಗಳ ಕಛೇರಿಗೆ ಕೆಳಕಂಡತೆ ಮಾಹಿತಿ ರವಾನಿಸಿದೆ. ಇದೆಲ್ಲ ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ನಡೆದುಹೋಯಿತು.

ಈ ವಿಷಯಗಳಾವುವೂ ಹೊಸ ಶೋಧನೆಗಳಲ್ಲ! ನೇತಾಜಿ ಜರ್ಮನಿಯಲ್ಲಿ ನೆಲೆಸಿದ್ದ ಆಸ್ಟ್ರೀಯಾದ ಪ್ರಜೆ ಎಮಿಲಿ ಶೆಂಕ್ಲ್ (Emilie Schenkl) ಎಂಬುವವರನ್ನು ಮದುವೆಯಾಗಿದ್ದು, ಅವರಿಗೆ ಅನಿತಾ ಬೋಸ್ ಎಂಬ ಮಗಳು ಇರುವುದು, ಅನಿತಾ ಬೋಸ್ ಅವರು ಅರ್ಥಶಾಸ್ತ್ರ ಪ್ರೊಫೆಸರ್ ಆಗಿ Augsburg Universityಯಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿದ್ದೇ ಆಗಿದೆ.


ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿರುವ ಸಿಸಿರ್ ಕುಮಾರ್ ಬೋಸ್ ಅವರ ‘ನೇತಾಜಿ ಸುಭಾಸ್ ಚಂದ್ರ ಬೋಸ್’ ಎಂಬ ಪುಸ್ತಕದಲ್ಲಿ, ನೇತಾಜಿ ಅವರ ಹೆಂಡತಿ ಮಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ Oxford University Press ಪ್ರಕಟಿಸಿರುವ Letters to Emilie Schenkl ೧೯೩೪-೧೯೪೨ ಎಂಬ ಪುಸ್ತಕದಲ್ಲಿ ಅನಿತಾ ಬೋಸ್ ಅವರ ಮಗಳು ಮಾಯಾ ಫಾಪ್ (Pfaff) ಅವರು ಪತ್ರಗಳ ಪ್ರಕಟಣೆಗೆ ಒಪ್ಪಿದ್ದನ್ನೂ ತಿಳಿಸಲಾಗಿದೆ.


ಶ್ರೀಮತಿ ಎಮಿಲಿ ಮತ್ತು ನೇತಾಜಿ ಅವರು ಒಟ್ಟಿಗೆ ಇರುವ ಫೋಟೋಗಳು ಪ್ರಕಟವಾಗಿವೆ. ಶ್ರೀಮತಿ ಅನಿತಾ ಬೋಸ್ ಮತ್ತು ಮಾಯಾ ಫಾಫ್ ಅವರ ಹಲವಾರು ಛಾಯಾಚಿತ್ರಗಳೂ ನೋಡ ಸಿಗುತ್ತವೆ. ಶ್ರೀಮತಿ ಅನಿತಾ ಫಾಫ್ (ಬೋಸ್) ಅವರು ಮೂರು ವರ್ಷದ ಕೆಳಗೆ ಭಾರತಕ್ಕೆ ಭೇಟಿ ನೀಡಿದ್ದರು. DUÀ The Tribune ಪತ್ರಿಕೆಯು ಅವರ ಸಂದರ್ಶವನ್ನು (ಜನವರಿ ೨೯, ೨೦೦೬) ಪ್ರಕಟಿಸಿತ್ತು. ಮೇ ೩೧ ೨೦೦೩ರ The Tribune ಪತ್ರಿಕೆಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಮ್ಯೂನಿಚ್ ನಲ್ಲಿ ಅನಿತಾ ಬೋಸ್ ಭೇಟಿಯಾಗಿದ್ದ ವಿಚಾರ ಪ್ರಕಟವಾಗಿದೆ.


ಇವೆಲ್ಲದರ ನಡುವೆ ಸಂಸದ ಅನಂತಕುಮಾರ ಹೆಗಡೆಯವರು ಅದನ್ನೊಂದು ಹೊಸ ವಿಷಯವೆಂದು, ಅದಕ್ಕಿಂತ ಹೆಚ್ಚಾಗಿ ತನ್ನದೇ ಸಂಶೋಧನೆಯೆಂದು ಪತ್ರಿಕಾಗೋಷ್ಠಿ ನೆಡೆಸಿರುವುದು ಅವರ ಅಗ್ಗದ ಜನಪ್ರಿಯತೆಯ ಹುಚ್ಚು ಮಾತ್ರ ಎನ್ನಬಹುದು.

ನಂತರವೂ ನನಗೆ ಸುಮ್ಮನೆ ಕೂರಲಾಗಲಿಲ್ಲ. ದಿನವಿಡೀ ಅಂತರಜಾಲದಲ್ಲಿ ಹುಡುಕಾಡುತ್ತಾ ಕಳೆದೆ. ಹಲವಾರು ನಗ್ನಸತ್ಯಗಳು ಅಲ್ಲಿ ಕಾಣಸಿಕ್ಕವು. ಅವುಗಳನ್ನೆಲ್ಲ ಸಂಗ್ರಹಿಸಿ ಕೊಡಬೇಕೆನ್ನುವಷ್ಟರಲ್ಲಿ ಈದಿನದ ಪತ್ರಿಕೆಗಳು ಕಣ್ಣ ಮುಂದಿವೆ. ಸದ್ಯ ಬೆಳಿಗ್ಗೆ ಆ ಎರಡೂ ಪತ್ರಿಕೆಗಳು ಮರುಲೇಖನಗಳನ್ನು ಪ್ರಕಟಿಸಿವೆ. ‘ನೇತಾಜಿ ಸುಭಾಷ್‌ಚಂದ್ರ ಬೋಸ್ ರಿಸರ್ಚ್ ಅಂಡ್ ಮಲ್ಟಿ ಡೆವಲಪ್‌ಮೆಂಟ್ ಟ್ರಸ್ಟ್’ನವರು ಪತ್ರಿಕಾ ಗೋಷ್ಠಿ ನಡೆಸಿ ಸಂಸದರ ಅಜ್ಞಾನವನ್ನು ಹುಂಬತನವನ್ನು ಜಾಲಾಡಿಬಿಟ್ಟಿದ್ದಾರೆ. ಆ ಮಾಹಿತಿಗಳನ್ನು ಆಧರಿಸಿ, ನಂತರ ಅಂತರಜಾಲವನ್ನು ಹುಡುಕಿ ಪತ್ರಿಕೆಗಳು ಇನ್ನಷ್ಟು ಮಾಹಿತಿಗಳನ್ನು ಹೆಕ್ಕಿ ಇಂದು ಪ್ರಕಟಿಸಿವೆ. ಆದರೆ ಎಲ್ಲಾ ತಪ್ಪು ಸಂಸದರು ಎನ್ನುವ ಪತ್ರಿಕೆಗಳ ಧೋರಣೆ ಮಾತ್ರ ಪ್ರಶ್ನಾರ್ಹ!

ಸಂಸದರೇನೋ ತಮ್ಮ ದಡ್ಡತನದಿಂದ, ಪ್ರಚಾರದ ಹುಚ್ಚಿನಿಂದ ಈ ರೀತಿ ವರ‍್ತಿಸಿದ್ದಾರೆ ಎಂಬುದೇನೋ ಸರಿ. ಆದರೆ ಪತ್ರಿಕೆಗಳ ಸಾಮಾಣ್ಯ ಜ್ಞಾನ ಎಲ್ಲಿ ಹೋಗಿತ್ತು. ಶಿರಸಿಯ ವರದಿಗಾರರು ದಡ್ಡರಿರಬಹುದು. ಆದರೆ ಸಂಪಾದಕರೇನು ದಡ್ಡರೇ!? ವರದಿಗಾರರು ಕಳುಹಿಸಿದ ಮಾಹಿತಿಯನ್ನು, ಅದರ ಇತ್ಯೋಪರಿಗಳನ್ನು ಪರಿಶೀಲಿಸುವ ಸಂಯಮ, ಚಾಕಚಕ್ಯತೆ ಸಂಪಾದಕರ ಕರ‍್ತವ್ಯವಲ್ಲವೇ? ನೆನ್ನೆ ಸಂಸದರ ಸುಳ್ಳುಗಳನ್ನು ಮುಖಪುಟದಲ್ಲಿ ಪ್ರಕಟಿಸಿದ್ದ ಪತ್ರಿಕೆ, ಇಂದು ಟ್ರಸ್ಟ್ ನೀಡಿರುವ ‘ನಿಜ’ ವರದಿಗಳನ್ನು ನಾಲ್ಕನೇ ಪುಟಕ್ಕೆ ತಳ್ಳಿಬಿಟ್ಟಿದೆ! ಅಣ್ಣನ ನೆನಪು ಪುಸ್ತಕದಲ್ಲಿ ತೇಜಸ್ವಿ, ಬಸವಲಿಂಗಪ್ಪನವರ ಬೂಸಾ ಪ್ರಕರಣದ ಬಗ್ಗೆ ಬರೆಯುವಾಗ ಪತ್ರಿಕೆಗಳ ಈ ಬಗೆಯ ರಾಜಕಾರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪತ್ರಿಕಾಲೋಕಕ್ಕೂ ಜಡ್ಡು ಹಿಡಿದುಬಿಟ್ಟಿದೆ. ಅವರೂ ಬದಲಾಗುವುದಿಲ್ಲ! ಕನ್ನಡ ಪತ್ರಿಕೋದ್ಯಮಕ್ಕೆ ಇದೆಂಥಾ ದುರ್ಗತಿ ಅಲ್ಲವೆ?

Tuesday, September 22, 2009

ಸರಸ್ವತಿಯ ಬಗ್ಗೆ ಒಂದಿಷ್ಟು ಮಾತು... ಭಾಗ-1

ಸರಸ್ವತಿಗೂ ಮುನ್ನ...
ಮೊನ್ನೆ ಸ್ನೇಹಿತರೊಬ್ಬರು ‘ಏನ್ರಿ ಸರಸ್ವತೀ ಪೂಜೆ ಮಾಡೋಲ್ಲವೆ?’ ಎಂದರು. ಅವರ ಮಾತಿನ ಅರ್ಥ ನಾನು ಸರಸ್ವತಿಯ ಬಗ್ಗೆ ಪಿಹೆಚ್.ಡಿ. ಮಾಡಿರುವುದರಿಂದ ಸರಸ್ವತಿಯ ಪೂಜೆ ಮಾಡಲೇಬೇಕು ಎಂಬುದಾಗಿತ್ತು! ನಾನು ನಕ್ಕು ಸುಮ್ಮನಾಗಿದ್ದೆ. (ನಾನು ನಾಸ್ತಿಕ ಮಾತ್ರ; ಆದರೆ ನಾಸ್ತಿಕವಾದಿಯಲ್ಲ ಎಂಬುದು ಗೊತ್ತಿದ್ದುದರಿಂದ ಅವರೂ ಸುಮ್ಮನಾದರು.) ನವರಾತ್ರಿಯಲ್ಲಿ ಯಾವುದೋ ಒಂದು ದಿನ ಸರಸ್ವತಿಯನ್ನು ವಿಶೇಷವಾಗಿ ಪೂಜೆ ಮಾಡುತ್ತಾರೆಂದು ನನಗೆ ಗೊತ್ತಿತ್ತು. ಆದರೆ, ಪೂಜೆಯ ವಿಚಾರ ನನ್ನ ಅಧ್ಯಯನದಿಂದ ಹೊರತಾಗಿತ್ತು ಹಾಗೂ ಸಂಪೂರ್ಣವಾಗಿ ಸರಸ್ವತಿಯ ಹುಟ್ಟು, ವಿಕಾಸ, ಸಾಂಸ್ಕೃತಿಕ ಆಯಾಮಗಳು, ಮುಖ್ಯವಾಗಿ ಸರಸ್ವತಿ ವಾಗ್ದೇವತೆ-ವಿದ್ಯಾದೇವತೆ ಎಂಬ ಸ್ವರೂಪ, ಕಲಾಭಿವ್ಯಕ್ತಿ ಮುಂತಾದವುಗಳಿಗೆ ಮಾತ್ರ ನನ್ನ ಅಧ್ಯಯನ ಸೀಮಿತವಾಗಿತ್ತು. ಕುತೂಹಲದಿಂದ ಕ್ಯಾಲೆಂಡರ್ ಹಿಡಿದು ನೋಡಿದರೆ ಆಯುಧಪೂಜೆಯ ಹಿಂದಿನ ದಿನ (ಅಷ್ಟಮಿ) ‘ಸರಸ್ವತೀ ಪೂಜೆ’ ಎಂದಿತ್ತು. ಸರಿ, ನಾನಂತೂ ಪೂಜೆ ಮಾಡುವುದಿಲ್ಲ. (ಹಾಗೆ ನೋಡಿದರೆ ನನ್ನ ಅಧ್ಯಯನವೇ ಒಂದು ಪೂಜೆ!) ಮತ್ತೆ ನನ್ನ ಮಹಾಪ್ರಬಂಧವನ್ನು ಹಿಡಿದು ಒಮ್ಮೆ ಓದಬೇಕೆನ್ನಿಸಿತ್ತು. ಮೌಲ್ಯಮಾಪಕರ ವರದಿ ನನ್ನ ಕೈಸೇರಿದ್ದರಿಂದ ಅದರಲ್ಲಿ ಮೌಲ್ಯಮಾಪಕರು ಹೇಳಿರುವ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಓದಿದೆ. ನಂತರ ಅದರ ಪ್ರಮುಖಾಂಶಗಳನ್ನು ನನ್ನ ಓದುಗ ಮಿತ್ರರೊಂದಿಗೆ ಹಂಚಿಕೊಂಡರೆ ಹೇಗೆ ಎಂಬ ವಿಚಾರ ಮನಸ್ಸಿಗೆ ಹೊಳೆಯಿತು. ಅದರ ಪ್ರತಿಫಲವೇ ಈ ಬರಹ. ಹೇಗೆ ಸಂಗ್ರಹಿಸಿದರೂ ಲೇಖನ ಮೂರು ಪುಟಗಳನ್ನೂ ಮಿರಿಬಿಟ್ಟಿತು. ಕಂಪ್ಯೂಟರ್ ಪರದೆಯ ಮೇಲೆ ದೀರ್ಘಲೇಖನಗಳನ್ನು ಓದುವ ಕಷ್ಟದ ಅರಿವು ನನಗಿರುವುದರಿಂದ ಎರಡು ಕಂತುಗಳಲ್ಲಿ ಈ ಬರಹ ನಿಮ್ಮ ಮುಂದೆ ಬರಲಿದೆ.

ಸಾಮಾನ್ಯ ಗ್ರಹಿಕೆಯ ಸರಸ್ವತಿ...
ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು. ನದಿ, ನದಿದೇವತೆ, ವಾಗ್ದೇವತೆ, ವಿದ್ಯಾದೇವತೆ, ಜ್ಞಾನದೇವತೆ..... ಹೀಗೆ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯು ಪರಿಚಿತಳು. ಬ್ರಹ್ಮನ ಮಗಳೆಂದೂ, ಬ್ರಹ್ಮನ ಸೃಷ್ಟಿಯಾದ ವೇದಗಳಿಗೆ ಅಧಿದೇವತೆಯೆಂದೂ, ವೇದಮಾತೆಯೆಂದೂ ಸರಸ್ವತಿಯನ್ನು ಸ್ತುತಿಸಲಾಗಿದೆ. ಬ್ರಹ್ಮನ ಮಗಳು ಎಂಬ ಪರಿಕಲ್ಪನೆಯನ್ನು ಮೀರಿ, ಸರಸ್ವತಿಗೆ ‘ಬ್ರಹ್ಮನ ಶಕ್ತಿ’ ಎಂಬ ಸ್ವರೂಪವೂ ಬೆಳೆದು ಬಂದಿದೆ. ‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಆಸೀನಳಾಗಿರುವ ಶುಭ್ರವರ್ಣದ ಸರಸ್ವತಿಯ
ಬೌದ್ಧ ಧರ್ಮದಲ್ಲಿ...
ಬೌದ್ಧಧರ್ಮದ  ‘ಕಾರಂಡವ್ಯೂಹ’ ಎಂಬ ಗ್ರಂಥದಲ್ಲಿ ದೇವತೆಗಳ ಸೃಷ್ಟಿಯನ್ನು ಕುರಿತು ಹೇಳಲಾಗಿರುವ ಪ್ರಕಾರ, ಆದಿಬುದ್ಧನ ಆದೇಶದ ಮೇರೆಗೆ ಪದ್ಮಪಾಣಿಯು ಮುಖ್ಯವಾಗಿ ಮೂರು ಗುಣ(ಕ್ರಿಯಾತತ್ವ)ಗಳನ್ನು - ಅಂದರೆ ಬ್ರಹ್ಮ (ದೇವತೆಗಳ ಮಾನವರ ಸೃಷ್ಟಿಕರ್ತ), ವಿಷ್ಣು (ರಕ್ಷಕ) ಮತ್ತು ಮಹಾದೇವ (ಲಯಕರ್ತ) ಇವರನ್ನು ಸೃಷ್ಟಿಸುತ್ತಾನೆ. ಬೋಧಿಸತ್ವನಿಂದ ವಾಯು, ಭೂಮಿ, ನೀರು, ಮಳೆ, ಸೂರ್ಯ, ಚಂದ್ರ ಮೊದಲಾದವರು ಸೃಷ್ಟಿಯಾಗುತ್ತಾರೆ. ಇವರ ಜತೆಯಲ್ಲಿಯೇ ಸಂಗೀತ ಮತ್ತು ಕಾವ್ಯದ ದೇವತೆಯಾಗಿ ಸರಸ್ವತಿ ಹಾಗೂ ಸೌಂದರ್ಯ ಮತ್ತು ಸಂಪತ್ತಿನ ದೇವತೆಯಾಗಿ ಲಕ್ಷ್ಮಿಯರು ಸೃಷ್ಟಿಯಾಗುತ್ತಾರೆ. ಆದರೆ ಬೌದ್ಧಧರ್ಮದ ಇನ್ನೊಂದು ಸೃಷ್ಟಿಪುರಾಣವಾದ ‘ಗುಣ-ಕಾರಂಡವ್ಯೂಹ’ ಪ್ರಕಾರ- ಪದ್ಮಪಾಣಿಯ ಭುಜಗಳ ನಡುವಿನಿಂದ ಬ್ರಹ್ಮ, ಆತನ ಎರಡು ಕಣ್ಣುಗಳಿಂದ ಸೂರ್ಯ ಚಂದ್ರರು, ಬಾಯಿಯಿಂದ ಗಾಳಿ, ಹಲ್ಲುಗಳಿಂದ ಸರಸ್ವತಿ, ಮಂಡಿಯಿಂದ ಲಕ್ಷ್ಮಿ, ಪಾದದಿಂದ ಭೂಮಿ, ನಾಭಿಯಿಂದ ನೀರು ಮೊದಲಾದವು ಸೃಷ್ಟಿಯಾಗುತ್ತವೆ. ಇದು ಹಿಂದೂ ಪುರಾಣಗಳಲ್ಲಿ ಬರುವ ಸರಸ್ವತಿಯ ಸೃಷ್ಟಿ ವಿಚಾರವನ್ನೇ ಅಲ್ಪಸ್ವಲ್ಪ ಹೆಲುತ್ತದೆ. ಆಸನ, ಭುಜಸಂಖ್ಯೆ, ಆಯುಧಗಳು, ಮುದ್ರೆಗಳು ಇವುಗಳನ್ನು ಆಧರಿಸಿ ವಜ್ರಸರಸ್ವತಿ, ಮಹಾಸರಸ್ವತಿ, ವಜ್ರವೀಣಾಸರಸ್ವತಿ, ವಜ್ರಶಾರದೆ, ಆರ್ಯಾಸರಸ್ವತಿ, ರಕ್ತಸರಸ್ವತಿ, ಸಿತಸರಸ್ವತಿ, ನೀಲಸರಸ್ವತಿ ಮೊದಲಾದ ಸ್ವರೂಪಗಳನ್ನು ಹೇಳಲಾಗಿದೆ.
ವಿದೇಶಗಳ ಬೌದ್ಧಧರ್ಮೀಯರಲ್ಲಿ ಸರಸ್ವತಿ...
ಸರಸ್ವತಿಯನ್ನು, ಚೀನಾದ ಬೌದ್ಧಧರ್ಮೀಯರು Ta-pien-ts’ai-t’iennu ಮತ್ತು Miao-yin mu ಎಂಬ ಹೆಸರುಗಳಿಂದ ಪೂಜಿಸುತ್ತಾರೆ. ಜಪಾನಿನಲ್ಲಿ Benten, ಮಂಗೋಲಿಯಾದಲ್ಲಿ Kele-yin ukin tegri ಎಂದೂ ಹಾಗೂ ಟಿಬೆಟ್‌ನಲ್ಲಿ Nag-gi-lha-mo ಮತ್ತು dByangs-can-ma (Yangchenma - English Phonetics) ಎಂಬ ಹೆಸರುಗಳಿಂದಲೂ ಆರಾಧಿಸುತ್ತಾರೆ. ಈ ಪದಗಳ ಅರ್ಥ ಸುಂದರವಾದ ಸ್ತ್ರೀ (Melodious Lady) ಮತ್ತು ಸುಂದರವಾದ ಧ್ವನಿ ಅಥವಾ ಸ್ವರ (Melodious voice) ಎಂಬುದಾಗಿದೆ. ಜಪಾನಿಯರ ಪರಿಕಲ್ಪನೆಯ ಏಳುಮಂದಿ ಅದೃಷ್ಟದೇವತೆಗಳಲ್ಲಿ Benten ಒಬ್ಬಳು. ಸರಸ್ವತಿಯ ಪೂರ್ಣ ಹೆಸರು Dai-ben-Zai-ten, ಅಂದರೆ Great Divinity of Reasoning Faculty ಎಂದರ್ಥ.
ಜೈನಧರ್ಮದಲ್ಲಿ...
ಆದಿಜಿನರ ಮುಖದಿಂದುದಯಿಸಿ, ಜಿನರ ಮುಖದಲ್ಲಿ ನೆಲೆನಿಂತ ಸರಸ್ವತಿಯ ಉಗಮ ಮತ್ತು ಶ್ರೇಷ್ಠತೆಯನ್ನು ಜೈನರ ಪವಿತ್ರಗ್ರಂಥವಾದ ‘ಮಹಾಪುರಾಣ’ದಲ್ಲಿ ವಿವರವಾಗಿ ವರ್ಣಿಸಲಾಗಿದೆ. ಜೈನತತ್ವದ ಬಗ್ಗೆ ಭರತನಿಗುಂಟಾದ ಸಂಶಯವನ್ನು ನಿವಾರಿಸಲು ಆದಿಜಿನನಾದ ವೃಷಭದೇವನು ಮಾತನಾಡುತ್ತಾನೆ.
ಅಪರಿಸ್ಪಂದತಾಲ್ವಾದೇರಸ್ಪಷ್ಟದಶನುದ್ಯುತೇಃ
ಸ್ವಯಂಭುವೋ ಮುಖಾಂಭೋಜಾಜ್ಜಾತಾ ಚಿತ್ರಂ ಸರಸ್ವತೀ
‘ಅಕ್ಷರೋತ್ಪತ್ತಿಸ್ಥಾನವಾದ ತಾಲು(ದವಡೆ) ಮೊದಲಾದವುಗಳ ಚಲನೆಯಿಲ್ಲದಿರುವುದೂ, ಹಲ್ಲುಗಳ ಕಾಂತಿಯೂ ಸ್ಪಷ್ಟವಾಗಿ ತೋರದಿರುವುದೂ ಆದ ಸ್ವಯಂಭೂ (ಆದಿಬ್ರಹ್ಮ)ನ ಮುಖಕಮಲದಿಂದ ಸರಸ್ವತಿಯು ಹೆರಟಳು.’ ಅಂದರೆ ಇಲ್ಲಿ ಸರಸ್ವತಿಯು ಆದಿಜಿನರ ನಾಲಗೆಯಿಂದ ಜನಿಸಲಿಲ್ಲ; ಬದಲಿಗೆ ನೇರವಾಗಿ ಮುಖದಿಂದಲೇ ಜನಿಸಿದ್ದಾಳೆ.
ವೈದಿಕಧರ್ಮದಲ್ಲಿ...
ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ. ಕ್ರಿ.ಪೂ. ಸುಮಾರು ೩೫೦೦ ವರ್ಷಗಳಷ್ಟು ಸುದೀರ್ಘ ಪ್ರಾಚೀನತೆ ಋಗ್ವೇದಕ್ಕಿದೆ. ಸರಸ್ವತಿಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಇರುವ ಅತ್ಯಂತ ಪ್ರಾಚೀನವಾದುದೂ, ಅಧಿಕೃತವೂ ಆದ ಆಕರವು ಋಗ್ವೇದವೇ ಆಗಿದೆ. ಇದರಲ್ಲಿ ಸರಸ್ವತಿಯು ಪ್ರಧಾನ ದೇವತೆಯಾಗಿಯೂ ಸ್ತುತಿಗೊಂಡಿದ್ದಾಳೆ. ಇಂದ್ರ, ಅಗ್ನಿ, ರುದ್ರ, ವಿಷ್ಣು ಮೊದಲಾದ ಪ್ರಧಾನ ದೇವತೆಗಳ ಜೊತೆಯಲ್ಲಿಯೂ ಸ್ತುತಿಗೊಂಡಿದ್ದಾಳೆ. ಸುಮಾರು ತೊಂಬತ್ತಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತಿಯು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ತುತಿಗೊಂಡಿದ್ದಾಳೆ. ಆರನೇ ಮಂಡಲದ ೬೧ನೆಯ ಸೂಕ್ತದ ಎಲ್ಲಾ ಹದಿನಾಲ್ಕು ಋಕ್ಕುಗಳೂ ಸರಸ್ವತಿಗೆ ಸಂಬಂಧಿಸಿದ್ದಾಗಿವೆ.
ವೇದಗಳಲ್ಲಿ ಸರಸ್ವತಿಯನ್ನು ನದಿ ಮತ್ತು ನದೀದೇವತೆ, ದೇವತೆ ಅಥವಾ ಯಜ್ಞದೇವತೆ, ಇಳಾ, ಕಾಮಧೇನು, ವಾಗ್ದೇವತೆ, ಯುದ್ಧದೇವತೆ ಅಥವಾ ರಕ್ಷಣಾದೇವತೆ, ಶಾಂತಿದೇವತೆ, ಅಹಿಂಸಾದೇವತೆ, ಅನ್ನಪೂರ್ಣೆ, ಭಾಗ್ಯದೇವತೆ, ಆರೋಗ್ಯದೇವತೆಯಾಗಿ ಮಾತ್ರವಲ್ಲದೆ ತಾಯಿ, ಸಹೋದರಿ, ಮಗಳು, ಸ್ನೇಹಿತೆ, ಪತ್ನಿ, ಸ್ವರೂಪದಲ್ಲಿ ಸ್ತುತಿಸಲಾಗಿದೆ. ಸರಸ್ವತೀ ರಹಸ್ಯೋಪನಿಷತ್ ಎಂಬ ಉಪನಿಷತ್ತು ಕೂಡಾ ಇದೆ.
ಪುರಾಣಗಳಲ್ಲಿ ಬರುವ ಸರಸ್ವತಿಯ ವಿಷಯಗಳು ಒಂದಕ್ಕೊಂದು ಪೂರಕವಾಗಿರದೆ ತುಂಬಾ ಗೊಂದಲ ಮೂಡಿಸುತ್ತವೆ. ಪುರಾಣದಲ್ಲಿ ಇಣುಕಿರುವ ಅಶ್ಲೀಲತೆಯ ಸೋಂಕನ್ನು ಇಂದಿನ ಕೆಲವರು ಪ್ರಶ್ನಿಸಿ, ಸರಸ್ವತಿಯನ್ನೂ ಪುರಾಣಗಳನ್ನೂ ತಿರಸ್ಕರಿಸುವಂತೆ ಕರೆಕೊಟ್ಟಿರುವುದೂ ಉಂಟು.
ಒಟ್ಟು ಭಾರತೀಯ ಸಂಸ್ಕೃತಿಯಲ್ಲಿ...
ಬೌದ್ಧಧರ್ಮದಲ್ಲಿ ಸರಸ್ವತಿಯು ಆದಿಬುದ್ಧನ ಹಲ್ಲುಗಳಿಂದಲೂ, ಜೈನಧರ್ಮದಲ್ಲಿ ಆದಿಜಿನರ ಮುಖದಿಂದಲೂ, ಹಿಂದೂಧರ್ಮದಲ್ಲಿ ಆದಿಬ್ರಹ್ಮನ ನಾಲಗೆ ಅಥವಾ ಮುಖದಿಂದಲೂ ಸೃಷ್ಟಿಯಾದಳು ಎಂದಿರುವುದನ್ನು ಗಮನಿಸಿದರೆ, ಸರಸ್ವತಿಯ ಜನನಸ್ಥಾನ ವಾಕ್ ಅಂದರೆ ಮಾತು ಜನಿಸುವ ಸ್ಥಳವೇ ಆಗಿದೆ. ಆದ್ದರಿಂದ ಸರಸ್ವತಿಯ ವಾಗ್ದೇವಿಯ ಸ್ವರೂಪ ಮೂರೂ ಧರ್ಮಗಳಿಗೂ ಸ್ವೀಕೃತ ಆಗಿದೆ ಎನ್ನಬಹುದು. ಮೂರೂ ಧರ್ಮಗಳಲ್ಲಿ ಸರಸ್ವತಿಗಿರುವ ಇನ್ನೊಂದು ಸಮಾನ ವಿಚಾರವೆಂದರೆ ವಿದ್ಯಾದೇವತೆ ಮತ್ತು ಜ್ಞಾನದೇವತೆ ಎಂಬ ಅಂಶಗಳು.
ಹಾಗೆಯೇ ಆಯಾಯ ಧರ್ಮದ ಧಾರ್ಮಿಕ ಗ್ರಂಥಗಳೇ ಸರಸ್ವತಿ ಎಂಬ ವಿಚಾರದಲ್ಲೂ ಸಾಮ್ಯತೆಯಿದೆ. ಬೌದ್ಧಧರ್ಮದಲ್ಲಿ ಮಂಜುಶ್ರೀಯ ಕೈಯಲ್ಲಿರುವ ‘ಪ್ರಜ್ಷಾಪಾರಮಿತ’ (ಬೌದ್ಧಧರ್ಮದ ಶಾಸ್ತ್ರಗ್ರಂಥ) ಗ್ರಂಥವೇ ಸರಸ್ವತಿಯಾಗಿದ್ದರೆ, ಜೈನಧರ್ಮದಲ್ಲಿ ಆದಿಜಿನೇಶ್ವರರ ವಾಣಿ ಮತ್ತು ಅದರಿಂದ ಉತ್ಪನ್ನವಾದ ‘ಜೈನವೇದ’ಗಳಾದ ‘ಶ್ರುತ’ಗಳೇ ಸರಸ್ವತಿಯಾಗಿವೆ. ವೈದಿಕಪರಂಪರೆಯಲ್ಲೂ ಬ್ರಹ್ಮನ ಸೃಷ್ಟಿಯಾದ ‘ವೇದ’ಗಳ ಅಧಿದೇವತೆ ಸರಸ್ವತಿಯೇ ಆಗಿದ್ದಾಳೆ. ಮೂರೂ ಧರ್ಮಗಳಲ್ಲೂ ಸರಸ್ವತಿಯನ್ನು ಒಳ್ಳೆಯ ವಾಕ್ಕಿಗೆ, ವಿದ್ಯೆಗೆ, ಜ್ಞಾನಕ್ಕೆ, ಕಾವ್ಯಾವೇಶಕ್ಕೆ ಪ್ರಾರ್ಥಿಸಲಾಗುತ್ತದೆ. ಧರ್ಮಗಳ ಒಳಪಂಗಡಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು, ತಾಂತ್ರಿಕ ಆಚರಣೆಯಲ್ಲಿ ಕಂಡುಬರುವ ಪ್ರಾದೇಶಿಕ ವೈವಿಧ್ಯತೆಗಳು ಇವುಗಳನ್ನು ಬಿಟ್ಟರೆ, ಒಟ್ಟಾರೆ ಭಾರತೀಯ ಸಂದರ್ಭದಲ್ಲಿ ಸರಸ್ವತಿಯ ಸ್ವರೂಪ ‘ಒಂದೇ’ ಆಗಿದೆ. ಗ್ರೀಕ್ ಸಂಸ್ಕೃತಿಯಲ್ಲಿ ಅಥೀನಾ ದೇವತೆ ಕೂಡಾ ಸ್ಯೂಸದೇವನ ತಲೆಯಿಂದಲೇ ಜನಿಸುತ್ತಾಳೆ.
ಈಜಿಪ್ಟ್ ಮತ್ತು ಗ್ರೀಕ್ ನಾಗರಿಕತೆಗಳನ್ನು ಅತ್ಯಂತ ಪ್ರಾಚೀನ ನಾಗರಿಕತೆಗಳೆಂದು ಗುರುತಿಸುತ್ತಾರೆ. ಈಜಿಪ್ಟ್‌ನಲ್ಲಿ ಈಸಿಸ್ (Isis) ದೇವತೆ ಸರಸ್ವತಿಯ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ಹೆಂದಿದ್ದರೆ, ಗ್ರೀಕ್ ನಾಗರಿಕತೆಯಲ್ಲಿ ಅಥೀನಾ ದೇವತೆ ಹಾಗೂ ರೋಮನ್ ಸಂಸ್ಕೃತಿಯಲ್ಲಿ ಮಿನರ್ವಾ ಸರಸ್ವತಿಗೆ ಸಂವಾದಿಯಾದ ದೇವತೆಯಾಗಿದ್ದಾರೆ.
[ಮುಂದಿನ ಭಾಗದಲ್ಲಿ ಸರಸ್ವತಿಯನ್ನು ಕುರಿತು ಸಂಸ್ಕೃತ, ಕನ್ನಡ ಕವಿಗಳು ಏನು ಹೇಳುತ್ತಾರೆ? ನಮ್ಮ ಜನಪದರ ಅಭಿಪ್ರಾಯಗಳೇನು? ಶಿಲ್ಪಿಗಳು ಖಂಡರಿಸಿರುವ ಸರಸ್ವತಿಯ ಸ್ವರೂಪಗಳೇನು? ಚಿತ್ರಕಲಾವಿದರ ಕಣ್ಣಲ್ಲಿ ಸರಸ್ವತಿ ಹೇಗೆ ಕಾಣುತ್ತಾಳೆ? ಎಂಬ ವಿಚಾರಗಳನ್ನು ತಿಳಿಸುತ್ತೇನೆ.]

Wednesday, September 16, 2009

ಶ್ರವಣಬೆಳಗೊಳದಲ್ಲಿ ರನ್ನ - ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 2

  ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 1 "ಬೆಳೆಯುವ ಸಿರಿ ಮೊಳಕೆಯಲ್ಲಿ"  ಕ್ಲಿಕ್ ಮಾಡಿ

ಶ್ರವಣಬೆಳಗೊಳದಲ್ಲಿ ರನ್ನ
ಹಗಲು-ರಾತ್ರಿ. ಬಿಸಿಲು-ಮಳೆ, ಚಳಿ-ಗಾಳಿ, ಕಾಡು-ಮೇಡು ಎನ್ನದೆ ರನ್ನ ಶ್ರವಣಬೆಳಗೊಳ ತಲುಪಿದ.

ಒಂದು ಶೂಭಮೂಹೂರ್ತದಲ್ಲಿ ಅಜಿತಸೇನಾಚಾರ್ಯರನ್ನು ಕಂಡು ಮನದಾಸೆಯನ್ನು ಬಿಚ್ಚಿಟ್ಟ. ಆತನ ಮಾತಿನಲ್ಲಿದ್ದ ಪ್ರಾಮಾಣಿಕತೆ, ದೃಢತೆ, ಆತ್ಮವಿಶ್ವಾಸ ಅಜಿತಸೇನಾಚಾರ್ಯರ ಗಮನಸೆಳೆದವು. ಒಂದೆರಡು ಪಕ್ಷ ತಮ್ಮಲಲಿರುವಂತೆ ಹೇಳಿ, ಆತನ ಪ್ರತಿಭೆಯನ್ನು ಮನದಟ್ಟು ಮಾಡಿಕೊಂಡ ಗುರುಗಳು ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಒಪ್ಪಿದರು. ಆಶ್ರಯಕ್ಕೆ ಚಾಮುಂಡರಾಯನನ್ನು ಕಾಣುವಂತೆ ಹೇಳಿದರು.

ಒಂದು ದಿನ ಮುಂಜಾನೆ ಚಾಮುಂಡರಾಯನನ್ನು ಕಂಡ ರನ್ನ ತನ್ನ ಉದ್ದೇಶವನ್ನು ಗುರುಗಳ ಬಯಕೆಯನ್ನು ಅವನಿಗೆ ತಿಳಿಸಿದ. ಮೊದಲ ನೋಟದಲ್ಲೇ ಸ್ನೇಹ ಸ್ಫುರಿಸುವಂತೆ ಮಾತನಾಡಿದ ಚಾವುಂಡರಾಯ ರನ್ನನ ವಿದ್ಯಾಭ್ಯಾಸಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟ.

ಸತತ ದ್ವಾದಶ ವರ್ಷಗಳ ಕಾಲ ಕನ್ನಡ, ಸಂಸ್ಕೃತ ಭಾಷೆಗಳ ವ್ಯಾಕರಣ, ಛಂದಸ್ಸು, ಜೈನಶಾಸ್ತ್ರ, ಆಗಮ ಮೊದಲಾದವುಗಳ ಅಭ್ಯಾಸವಾಯಿತು. ವಿದ್ಯಾರ್ಥಿ ದೆಸೆಯಿಂದಲೇ ವೃತ್ತ-ಕಂದಪದ್ಯಗಳಲ್ಲಿ ಪರಿಣಿತಿ ಸಾಧಿಸಿ ಬಿಡಿ ಪದ್ಯಗಳನ್ನು ರಚಿಸಿ ಸೈ ಎನಿಸಿಕೊಂಡ ರನ್ನನಿಗೆ ಕಾವ್ಯಸರಸ್ವತಿ ಒಲಿದು ಬಂದಳು. ಗುರುಗಳು ಆ ಮಾರ್ಗದಲ್ಲಿಯೇ ಮುಂದುವರೆಯುವಂತೆ ಆಶೀರ್ವದಿಸಿದರು.

ವಾಲ್ಮೀಕಿ, ವ್ಯಾಸ, ಭಾಸ, ಬಾಣ, ಕಾಳಿದಾಸ, ಪಂಪ, ಪೊನ್ನ ಮೊದಲಾದವರ ಕಾವ್ಯಗಳನ್ನು ಅಭ್ಯಾಸ ಮಾಡಿದ ರನ್ನನ ಗುರಿ ಸ್ಪಷ್ಟವಾಗಿತ್ತು. ತಾನೂ ಆ ಮಹಾಕವಿಗಳ ಸಾಲಿನಲ್ಲಿ ನಿಲ್ಲಬೇಕೆಂಬುದು ಅವನ ಕನಸಾಯಿತು. ಅದಕ್ಕಾಗಿ ಬಿಡಿ ಪದ್ಯಗಳ ರಚನೆಗಳನ್ನು ನಿಲ್ಲಿಸಿದ ರನ್ನ ಮಹಾಕಾವ್ಯರಚನೆಗೆ ಒತ್ತು ಕೊಟ್ಟ.

ಮೊದಲು ಅವನ ಮನದಲ್ಲಿ ಸುಳಿದು, ಕಣ್ಣೆದುರಿಗೆ ನಿಂತ ಮಹಾವ್ಯಕ್ತಿಯೆಂದರೆ ಚಾಮುಂಡರಾಯನೆ! ಕಲಿಯೂ ಕವಿಯೂ ಆಗಿದ್ದ ಚಾಮುಂಡರಾಯನ “ಚಾಮುಂಡರಾಯ ಪುರಾಣ” ಆಗಲೇ ವಿದ್ವತ್ ಲೋಕದಲ್ಲಿ ಹೆಸರು ಪಡೆದಿತ್ತು. ಜೈನಧರ್ಮೀಯರಲ್ಲಿ ಆ ಕೃತಿಗೆ ಹೆಚ್ಚಿನ ಮಹತ್ವವಿತ್ತು. ದೊರೆ ಗಂಗರಾಚಮಲ್ಲನ ಮಂತ್ರಿಯಾಗಿದ್ದುಕೊಂಡು ಹಲವಾರು ಯುದ್ಧಗಳಲ್ಲಿ ಗೆಲುವು ತಂದುಕೊಟ್ಟಿದ್ದ ಕಲಿ ಚಾಮುಂಡರಾಯ ‘ವೀರಮಾರ್ತಾಂಡದೇವ’, ‘ಸಮರಪರುಶರಾಮ’ ಎಂಬ ಹೆಸರುಗಳನ್ನು ಗಳಿಸಿದ್ದನು. ಬಾಹುಬಲಿಯ ಏಕಶಿಲಾವಿಗ್ರಹವನ್ನು ಮಾಡಿಸಿ, ಜೈನಧರ್ಮಕ್ಕೆ ಮಹಾಪೋಷಕನಾಗಿ ‘ಸಮ್ಯಕ್ತ್ವ ರತ್ನಾಕರ’ ಎಂಬ ಬಿರುದನ್ನು ಧರಿಸಿದ್ದ. ಇವುಗಳಲ್ಲದೆ ಸ್ವತಃ ರನ್ನನಿಗೆ ಆಶ್ರಯ ಕೊಟ್ಟಿದ್ದ.

ಅಷ್ಟೊತ್ತಿಗಾಗಲೇ ಆಶ್ರಿತ ಅರಿಕೇಸರಿಯನ್ನು ಅರ್ಜುನನೊಂದಿಗೆ ಸಮೀಕರಿಸಿದ ಪಂಪನ ‘ವಿಕ್ರಾಮಾರ್ಜುನ ವಿಜಯ’ ಪ್ರಸಿದ್ಧವಾಗಿತ್ತು. ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು, ರಾಮಾಯಣ, ಮಹಾಭಾರತಗಳಲ್ಲಿ ಬರುವ ಪರುಶಾಮನೊಂದಿಗೆ ಚಾಮುಂಡರಾಯನನ್ನು ಸಮೀಕರಿಸಿ ‘ಪರಶುರಾಮ ಚರಿತೆ’ ಎಂಬ ಮಹಾಕಾವ್ಯದ ರಚನೆಯಲ್ಲಿ ತೊಡಗಿಸಿಕೊಂಡ.

ಪರಶುರಾಮಚರಿತೆಯ ರಚನೆ ಪೂರ್ಣಗೊಂಡು ವಿದ್ವತ್ ಸಭೆಗಳಲ್ಲಿ ಗೌರವಿಸಲ್ಪಟ್ಟಿತು. ಜಿನಧರ್ಮಸಮಯಪಾಲಕನಾದ ಚಾಮುಂಡರಾಯನ ಕಥೆ ಜೊತೆಗೆ ಜೈನಧರ್ಮದ ತತ್ವಸಾರ ಎಲ್ಲವೂ ಮಿಳಿತಗೊಂಡ ರಚನೆಯಾದ್ದರಿಂದ ಜೈನಧರ್ಮೀಯರಲ್ಲಿಯೂ ಕೃತಿ ಮಾನ್ಯತೆಗಳಿಸಿಕೊಂಡಿತು. ರನ್ನನ ಹೆಸರು ಮನೆ ಮಾತಾಯಿತು.

ಹೀಗಿರುವಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಸುವ ದಿನಗಳು ಹತ್ತಿರ ಬಂದವು. ದೇಶದ ಮೂಲೆಮೂಲೆಗಳಿಂದ ಜಿನಭಕ್ತರು ಶ್ರವಣಬೆಳಗೊಳಕ್ಕೆ ಬರಲಾರಂಭಿಸಿದರು. ರಾಜರು, ಮಾಂಡಳಿಕರು, ಸಾಮಂತರು, ಜೈನಧರ್ಮದ ಪ್ರಮುಖರು ಶ್ರವಣಬೆಳಗೊಳಕ್ಕೆ ಬರುವವರಿದ್ದರು. ಹಾಗೆ ಬರುವವರ ಪಟ್ಟಿಯಲ್ಲಿ ಅತ್ತಿಮಬ್ಬೆಯ ಹೆಸರೂ ಇತ್ತು. ರನ್ನ ಅತ್ತಿಮಬ್ಬೆಯ ಹೆಸರನ್ನು ಕೇಳಿದ್ದನಾದರೂ ನೋಡಿರಲಿಲ್ಲ. ಚಾಲುಕ್ಯ ತೈಲಪನ ನಾಡಿನಲ್ಲಿ ‘ಜಿನಧರ್ಮಪ್ರದೀಪಿಕೆ’ಯೆಂದು ಹೆಸರಾಗಿದ್ದ ಅತ್ತಿಮಬ್ಬೆಯನ್ನು ಕಾಣುವ ಅವನ ಕಾತರ ಕೊನೆಗೊಳ್ಳುವ ಕಾಲ ಮಹಾಮಸ್ತಕಾಭಿಷೇಕದ ನೆವದಲ್ಲಿ ಕೂಡಿಬಂದಿತ್ತು.
ಸ್ವತಃ ಚಾಮುಂಡರಾಯನೇ ಒಂದು ಸುಮೂಹರ್ತದಲ್ಲಿ ರನ್ನನನ್ನು ಅತ್ತಿಮಬ್ಬೆಯ ಸಾನಿಧ್ಯಕ್ಕೆ ಕರೆದುಕೊಂಡು ಹೋಗಿ ಪರಿಚಯಿಸಿದ. ದೀರ್ಘದಂಡ ನಮಸ್ಕಾರ ಹಾಕಿದ ರನ್ನನನ್ನು ಪ್ರೀತಿಯಿಂದ ಮೈದಡವಿ ಆಶೀರ್ವದಿಸಿದ ಅತ್ತಿಮಬ್ಬೆ ‘ನಿಮ್ಮ ಪರಶಮುರಾಮಚರಿತೆಯನ್ನು ನಾನು ಓದಿದ್ದೇನೆ. ಸ್ವತಃ ಕಥಾನಾಯಕನನ್ನು ಹಾಗೂ ಕವಿವರ್ಯರನ್ನು ಒಟ್ಟಿಗೇ ನೋಡುವ ಭಾಗ್ಯ ನನ್ನದಾಗಿದೆ’ ಎಂದು ಸಂತೋಷಪಟ್ಟಳು. ಮಾತು ಕಳೆದುಕೊಂಡು ನಿಂತಿದ್ದ ರನ್ನನಿಗೆ ಸಂತೋಷ ರೋಮಾಂಚನ ಎಲ್ಲವೂ ಆಯಿತು. ‘ನಿಮ್ಮೆದುರಿಗೆ ಬಂದು ನಿಲ್ಲುವ ಭಾಗ್ಯ ನಮ್ಮದಾಗಿದೆ ತಾಯಿ. ಅದೂ ಈ ಪರಶುರಾಮರ ದೆಸೆಯಿಂದಲೇ’ ಎಂದು ಚಾಮುಂಡರಾಯನ ಕಡೆಗೆ ಕೈತೋರಿಸಿದ.
ವೈಭವದಿಂದ ಮಹಾಮಸ್ತಕಾಭಿಷೇಕ ನಡೆಯಿತು. ಅತ್ತಿಮಬ್ಬೆಯು ಎಲ್ಲಾ ಕೆಲಸಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿದ್ದಳು. ರನ್ನ ಅವಳ ಉತ್ಸಾಹ, ಅವಳ ಸಾನಿಧ್ಯದಿಂದ ಸಿಗುತ್ತಿದ್ದ ದೈವಿಕ ಆನಂದ, ತನ್ನ ಸುತ್ತ ಇರುವವರ ಮೇಲೆ ಅವಳು ಬೀರುತ್ತಿದ್ದ ಪ್ರಭಾವ ಎಲ್ಲವೂ ಏನೋ ಒಂದು ಅಲೌಕಿಕತೆಯನ್ನು ರನ್ನನ ಎದೆಯಲ್ಲಿ ಉಂಟುಮಾಡುತ್ತಿದ್ದವು. ಅವಳನ್ನೇ ಸ್ತುತಿಸುವ ಕೆಲವು ಪದ್ಯಗಳು ತಲೆಯಲ್ಲಿ ಹೊಳೆದು, ಎದೆಯಲ್ಲಿ ರೂಪುಗೊಂಡು, ಬಾಯಲ್ಲಿ ದ್ವನಿಪಡೆದುಕೊಳ್ಳುತ್ತಿದ್ದವು.

ಮತ್ತೊಮ್ಮೆ ಬೇಟಿಯಾಗಿದ್ದಾಗ, ‘ನಿಮ್ಮ ಬರವಣಿಗೆ ಸುಸೂತ್ರವಾಗಿ ನಡೆಯುತ್ತಿದೆಯೆ’ ಎಂದು ಅತ್ತಿಮಬ್ಬೆ ಕೇಳಿದ್ದಳು. ರನ್ನನೂ ಹೌದೆಂದು ಉತ್ತರಿಸಿದ್ದ. ಆಗ ಅತ್ತಿಮಬ್ಬೆಯು ‘ನೋಡಿ ಈ ದಕ್ಷಿಣ ದೇಶದಲ್ಲಿ ಗಂಗರಾಜ, ಚಾಮುಂಡರಾಯ ಮೊದಲಾದವರ ಆಸಕ್ತಿ ಪ್ರೋತ್ಸಾಹ ಇವುಗಳಿಂದಾಗಿ ಜೈನಧರ್ಮ ಸುಸ್ಥಿರವಾಗಿದೆ. ಬೆಳಗೊಳದ ಈ ಉನ್ನತ ಪರ್ವತದ ಮೇಲೆ ಬಾಹುಬಲಿಯೂ ಸ್ಥಿರನಾಗಿದ್ದಾನೆ. ಆದರೆ ನಮ್ಮ ಕಡೆ ಇದುವರೆಗೂ ನಡೆಯುತ್ತಿದ್ದ ರಾಜಕೀಯ ಮೇಲಾಟದಿಂದಾಗಿ ಒಂದು ರೀತಿಯ ಮಂಕು ಕವಿದು ಬಿಟ್ಟಿದೆ. ಯಾವುದೇ ಧಾರ್ಮಿಕ ಚಟುವಟಿಕೆಗಳೂ ಕ್ರಿಯಾಶೀಲವಾಗಿಲ್ಲ. ಆದರೆ ಈಗ ತೈಲಪನ ಆಡಳಿತ ನಿಧಾನವಾಗಿ ತಳವೂರುತ್ತಿದೆ. ಎಲ್ಲ ಕ್ಷೇತ್ರಗಳೂ ಕ್ರಿಯಾಶೀಲವಾಗಬೇಕೆಂದು ತೈಲಪರು ಬಯಸುತ್ತಿದ್ದಾರೆ. ಅತ್ತ ವೆಂಗಿಯ ಕಡೆ ನಮ್ಮವರೇ ಆದ ಪಂಪ. ಇತ್ತ ಪೊನ್ನ ಮಹಾಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಜಿನಧರ್ಮವೂ ಕ್ರಿಯಾಶೀಲವಾಗುತ್ತಿದೆ. ನೀವು ಅತ್ತಕಡೆ ಬಂದುಬಿಡಿ. ತೈಲಪರೂ ಕವಿಜನಾಶ್ರಿತರಾಗಿದ್ದಾರೆ. ಚಕ್ರವರ್ತಿಯ ಆಶ್ರಯ ದೊರೆತರೆ ನಿಮ್ಮ ಬರವಣಿಗೆ ಇನ್ನೂ ಹೆಚ್ಚು ಹೆಚ್ಚು ಕ್ರಿಯಾಶಿಲವಾಗಿ ಮುಂದುವರೆದೀತು’ ಎಂದು ದೀರ್ಘವಾಗಿ ಮಾತನಾಡಿದ್ದರು.

ಆದರೆ ರನ್ನನಿಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ. ಸ್ವತಃ ರನ್ನನಿಗೆ ಚಕ್ರವರ್ತಿಯ ಆಶ್ರಯ ಪಡೆದು ಮಹಾಕವಿಯಾಗುವ ಹಂಬಲವಿತ್ತಾದರೂ ತನಗೆ ಆಶ್ರಯವಿತ್ತಿರುವ ಗೆಳೆಯ ಚಾಮುಂಡರಾಯನನ್ನು ಬಿಟ್ಟು ಹೋಗುವ ವಿಚಾರ ಮನಸ್ಸಿಗೆ ನೋವುಂಟುಮಾಡುತ್ತಿತ್ತು.

ರನ್ನನ iನಸ್ಸನ್ನು ಅರಿತವಳಂತೆ ಅತ್ತಿಮಬ್ಬೆ ‘ಮಹಾಕವಿಗಳು ಆತಂಕಪಡಬೇಕಾಗಿಲ್ಲ. ನಿಮಗೆ ಇಲ್ಲಿ ಒಗ್ಗಿಹೋಗಿದೆ. ಹೊಸ ಸ್ಥಳ ಹೇಗೋ ಏನೋ ಎನ್ನುವ ಭಯವಿದೆ. ಅಲ್ಲವೆ? ನಿಮಗೆ ಆ ಯಾವ ಯೋಚನೆಯೂ ಬೇಡ. ಸ್ವತಃ ನಾವೇ ಚಾಮುಂಡರಾಯರಲ್ಲಿ ಮಾತನಾಡುತ್ತೇವೆ. ನೀವು ಕವಿಚಕ್ರವರ್ತಿಯಾಗುವ ಅವಕಾಶವನ್ನು ಅವರು ಹಾಳುಗೆಡುವವರಲ್ಲ. ಆ ನಂಬಿಕೆ ನಮಗಿದೆ’ ಎಂದು ಸಮಾಧಾನಪಡಿಸಿದ್ದಳು.

ಮತ್ತೊಂದು ದಿನ ಅತ್ತಿಮಬ್ಬೆಯಿಂದ ರನ್ನನಿಗೆ ಕರೆಬಂದಾಗ ಸಂತೋಷದಿಂದ, ಆತಂಕದಿಂದ ಕೂಡಿದವನಾಗಿಯೇ ಬಂದ. ಅಲ್ಲಿ ಅತ್ತಿಮಬ್ಬೆ, ಚಾಮುಂಡರಾಯ ಇನ್ನೂ ಕೆಲವರು ಇದ್ದುರಿಂದ ರನ್ನನಿಗೆ ಸಂದರ್ಭದ ಗಂಭೀರತೆಯ ಅರಿವುಂಟಾಯಿತು.

ಸ್ವತಃ ರಾಯನೇ ರನ್ನನನ್ನು ಬರಮಾಡಿಕೊಂಡು ‘ತಾಯಿಯವರು ಎಲ್ಲವನ್ನೂ ಹೇಳಿದರು. ನೀನು ನನ್ನ ಮಿತ್ರ. ನಿನ್ನ ಶ್ರೇಯಸ್ಸನ್ನು ಬಯಸುವವನು ನಾನು. ನೀನಿನ್ನು ಯುವಕ. ಬೆಳೆಯಬೇಕಾದವನು. ತಾಯಿಯವರ ಇಚ್ಛೆಯಂತೆ ನೀನು ತೈಲಪನ ಆಶ್ರಯಕ್ಕೆ ಹೋಗುವುದು. ನೀನು ಕವಿರತ್ನ! ಚಕ್ರವರ್ತಿಯಲ್ಲಿರಬೇಕಾದ ರತ್ನ! ಕವಿಚಕ್ರವರ್ತಿಯಾಗಬೇಕಾದ ರತ್ನ! ಅದು ಈಡೇರಬೇಕಾದರೆ ನೀನು ತೈಲಪರ ಆಶ್ರಯಕ್ಕೆ ಬರಬೇಕಾದ್ದೇ ನ್ಯಾಯ’ ಎಂದು ಸಂಭ್ರಮಪಟ್ಟನು.

ಅತ್ತಿಮಬ್ಬೆಯು ಹೊರಡುವ ದಿನಗಳು ಹತ್ತಿರವಾಗುತ್ತಿದ್ದವು. ರನ್ನನಿಗೆ ತಾನು ಬೆಳಗೊಳವನ್ನು, ಚಾಮುಂಡರಾಯನನ್ನು ಬಿಟ್ಟುಹೋಗಬೇಕಾದ ವ್ಯಥೆ ಕಾಡುತ್ತಿತ್ತು. ಅದನ್ನು ದೂರಮಾಡಲೆಂದೇ ಚಾಮುಂಡರಾಯ ಒಂದು ದಿನ ಸಂಜೆ ಆತನನ್ನು ಚಂದ್ರಗಿರಿಗೆ ಕರೆದುಕೊಂಡು ಹೋಗಿ ಆತನೊಂದಿಗೆ ಮಾತನಾಡುತ್ತಾ ಕಳೆದ. ಇಬ್ಬರೂ ಸೇರಿ, ಎದುರುಬದರಾಗಿ ಕುಳಿತುಕೊಂಡರು.

ತಮ್ಮ ಸ್ನೇಹದ ಗುರುತನ್ನು ಈ ಬೆಟ್ಟದ ಮೇಲೆ ನಿಲ್ಲಿಸಬೇಕೆಂದು ತೀರ್ಮಾನಿಸಿ, ಚಾಮುಂಡರಾಯನ ಹೆಸರನ್ನು ರನ್ನನು, ರನ್ನ ಹೆಸರನ್ನು ಚಾಮುಂಡರಾಯನು ಬಂಡೆಯ ಮೇಲೆ ಉಳಿಯಿಂದ ಕೆತ್ತಿ ಸಂಭ್ರಮಿಸಿದರು.  ಎದುರಿಗೆ ಇಂದ್ರಗಿರಿಯ ತುದಿಯಲ್ಲಿ ಬಾಹುಬಲಿ ನಗುತ್ತಿದ್ದ! ನಾಳೆಯೇ ಊರಿಗೆ ಹೊರಡುತ್ತಿರುವ ಗೆಳೆಯನಿಗೆ ಚಾಮುಂಡರಾಯ ಬೆಟ್ಟದ ತುದಿಯಲ್ಲಿ ನಿಂತು ಶುಭಕೋರಿದ.

ಮರುದಿನ ಶುಭಗಳಿಗೆಯಲ್ಲಿ ಅತ್ತಿಮಬ್ಬೆ ಮತ್ತು ಸಂಗಡಿಗರನ್ನು ರನ್ನನೊಂದಿಗೆ ಚಾಮುಂಡರಾಯ ಬೀಳ್ಕೊಟ್ಟ.

ಮುಂದಿನ ಕಂತು : ರಾಜಾಶ್ರಯದಲ್ಲಿ ಕವಿರನ್ನ

Saturday, September 12, 2009

ಸ್ವಾಮಿಯೇ ಶರಣಂ ಅಯ್ಯಪ್ಪ ‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - ೨೪

ಎಂಬತ್ತರ ದಶಕದಲ್ಲಿ ಅಯ್ಯಪ್ಪ ಸ್ವಾಮಿಯ ಯಾತ್ರೆಗೆ ಹೋಗುವವರ ಸಂಖ್ಯೆ ಬಯಲುಸೀಮೆಯಲ್ಲಿ ಅಗಾಧವಾಗಿ ಹೆಚ್ಚುತ್ತಿತ್ತು. ಈಗಲೂ ಆ ಸಂಖ್ಯೆಯೇನು ಕಡಿಮೆಯಾಗಿಲ್ಲ. ಆದರೆ ಮೊದಲಿನಂತೆ ನಲವತ್ತೆಂಟು ದಿನಗಳ ಕಾಲ ವ್ರತ ಹಿಡಿದು ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಅಷ್ಟೆ! ಈಗ, ಹಿಂದಿನ ದಿನ ಮಾಲೆ ಧರಿಸಿ ಹೊರಡುವುದು, ಶಬರಿಮಲೆಗೆ ಹೋಗಿ ಅಲ್ಲಿಯೇ ಮಾಲೆ ಧರಿಸುವುದು ಫ್ಯಾಷನ್ ಆಗಿದೆ. ಅದಕ್ಕಿಂತ ಹೆಚ್ಚಾಗಿ, ಅಲ್ಲಿಯೇ ಸ್ಥಳೀಯವಾಗಿ ಸ್ಥಾಪಿತವಾಗಿರುವ ಅಯ್ಯಪ್ಪನ ಗುಡಿಗಳಿಗಷ್ಟೇ ಹೋಗಿಬರುವುದೂ ಇದೆ! ಇದೊಂದು ರೀತಿಯಲ್ಲಿ, ಜನರು ಮೂಡನಂಬಿಕೆಗಳನ್ನು ತಕ್ಕಮಟ್ಟಿಗಾದರೂ ನಿರಾಕರಿಸಿ, ವಿಚಾರವಂತರಾಗುತ್ತಿರುವುದನ್ನು ಸೂಚಿಸುತ್ತದೆ, ಅಲ್ಲವೆ?

ಕುಂದೂರುಮಠದ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಅಯ್ಯಪ್ಪಸ್ವಾಮಿಯ ಖಾಯಿಲೆ ಚೆನ್ನಾಗಿಯೇ ಹಬ್ಬಿಬಿಟ್ಟಿತ್ತು. ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದ ಅಗ್ರಹಾರ ಎಂಬ ಊರಿನ ಕೆಲವರು ಮಠದಲ್ಲಿ ಕಾಲಕಳೆಯುತ್ತಿದ್ದ ಸೋಮಾರಿಗಳ ಗುಂಪಿನ ಖಾಯಂ ಸದಸ್ಯರಾಗಿದ್ದರು. ಅವರೆಲ್ಲರು, ಇನ್ನೂ ಕೆಲವರನ್ನು ಸೇರಿಸಿ ಅಯ್ಯಪ್ಪಸ್ವಾಮಿ ಯಾತ್ರೆ ಮಾಡುವುದಕ್ಕೆ ಸಿದ್ಧತೆ ನಡೆಸಿದರು. ಮಠದ ಹೊರ ಬಯಲಿನಲ್ಲಿ ತಾತ್ಕಾಲಿಕವಾಗಿ ಒಂದು ಚಪ್ಪರವನ್ನು ನಿಲ್ಲಿಸಿ, ಎಲ್ಲರೂ ಮಾಲೆ ಧರಿಸಿ ಕಪ್ಪುವಸ್ತ್ರಧಾರಿಗಳಾದರು. ಕೇವಲ ರಾತ್ರಿ ಮಾತ್ರ ಮನೆಗೆ ಹೋಗುವ ಅಭ್ಯಾಸವಿದ್ದವರಿಗೆ ಈಗ ರಾತ್ರಿಯೂ ಇಲ್ಲಿಯೇ ಉಳಿಯುವ ಸುಯೋಗ!

ಆಗ ಅವರು ಆಚರಿಸುತ್ತಿದ್ದ ಕೆಲವೊಂದು ನಿಯಮಗಳು ಹೀಗಿವೆ. ಹೆಂಗಸರು ಮಾಡಿದ ಅಡುಗೆ ತಿನ್ನುವಂತಿಲ್ಲ. ದೊಡ್ಡವಳಾಗದ ಹುಡುಗಿ ಅಥವಾ ಮುಟ್ಟು ನಿಂತಿರುವ ಹೆಂಗಸು ಮಾಡಿದರೆ ಪರವಾಗಿಲ್ಲ. ಸೂರ್ಯೋದಯಕ್ಕೆ ಮುಂಚೆಯೇ ಎದ್ದು ತಣ್ಣೀರು ಸ್ನಾನ ಮಾಡಿ, ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಹಾಡಿ, ಅಡುಗೆ ಮಾಡಿಕೊಂಡು ಊಟ ಮಾಡಬೇಕು. (ಮಧ್ಯಾಹ್ನ ಊಟ ಮಾಡುವವರಿಗಾಗಿ ಮಂಜಣ್ಣ ತನ್ನ ಹೋಟೆಲ್ಲಿನಲ್ಲಿ ಬಾಳೆ ಎಲೆಗೆ ಚಿತ್ರಾನ್ನ ಹಾಕಿ ಕೊಡುತ್ತಿದ್ದ!) ಮಧ್ಯ, ಮಾಂಸ, ಬೀಡಿ, ಸಿಗರೇಟು, ಹೊಗೆಸೊಪ್ಪು ಮುಂತಾದವನ್ನು ಮುಟ್ಟುವಂತೆಯೂ ಇಲ್ಲ. ಕಾಲಿಗೆ ಚಪ್ಪಲಿಯನ್ನು ಧರಿಸುವಂತೆ ಇರಲಿಲ್ಲ. ಇವೇ ಮೊದಲಾದ ಅನೇಕ ನಿಯಮಗಳನ್ನು ಅವರು ಪಾಲಿಸುತ್ತಿದ್ದರು. ನಲವತ್ತೆಂಟು ದಿಗಳ ಮಟ್ಟಿಗಾದರೂ ಕೆಟ್ಟ ಅಭ್ಯಾಸಗಳಿಂದ ದೂರ ಇರುವುದಕ್ಕೆ ಇದೊಂದು ಅವಕಾಶ!

ಇನ್ನೊಂದು ತಮಾಷೆಯ ನಿಯಮವೆಂದರೆ, ‘ಅವರನ್ನು ಎಲ್ಲರೂ ‘ಸ್ವಾಮಿ’ ಎಂದು ಕರೆಯಬೇಕು; ಹಾಗೆ ಅವರೂ ಬೇರೆಯವರನ್ನು ‘ಸ್ವಾಮಿ’ ಎಂದೇ ಕರೆಯಬೇಕು’ ಎಂಬುದು. ಆಗ ನಮಗೆಲ್ಲಾ ಒಂದು ತರಾ ಮೋಜೆನಿಸಿ ಅವರೆಲ್ಲರನ್ನೂ ‘ಸ್ವಾಮಿ’ ಎಂದೇ ಸಂಬೋಧಿಸುತ್ತಿದ್ದೆವು. ಅವರೂ ನಮ್ಮನ್ನು ನಮ್ಮ ಹೆಸರಿನ ಮುಂದೆ ‘ಸ್ವಾಮಿ’ ಎಂದು ಸೇರಿಸಿ ಕರೆಯುತ್ತಿದ್ದರು. ಸುರೇಶಸ್ವಾಮಿ, ಹೊನ್ನೆಗೌಡಸ್ವಾಮಿ, ಪುಷ್ಪಾಚಾರಿಸ್ವಾಮಿ ಹೀಗೆ ಎಲ್ಲರೂ ‘ಸ್ವಾಮಿ’ಗಳಾಗುತ್ತಿದ್ದರು. ಮೇಷ್ಟ್ರುಗಳನ್ನು ‘ಮೇಷ್ಟ್ರುಸ್ವಾಮಿಗಳೇ’ ಎಂದು, ಕಂಡಕ್ಟರ್ಗಳನ್ನು ‘ಕಂಡಕ್ಟರ್ಸ್ವಾಮಿಗಳೇ’ ಎಂದು, ಡ್ರೈವರ್ಗಳನ್ನು ‘ಡ್ರೈವರ್ಸ್ವಾಮಿಗಳೇ’ ಎಂದು, ವಾರ್ಡನ್ನರನ್ನು ‘ವಾರ್ಡನ್ಸ್ವಾಮಿಗಳೇ’ ಎಂದು ಕರೆದು ಅವರವರ ಉದ್ಯೋಗಕ್ಕೂ ‘ಸ್ವಾಮಿ’ಯನ್ನು ಗಂಟುಹಾಕುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಮಠದ ಸ್ವಾಮೀಜಿಗಳನ್ನು ‘ಸ್ವಾಮೀಜಿಸ್ವಾಮಿಗಳು’ ಎಂದು ಕರೆಯುವುದು ತಮಾಷೆಯಾಗಿರುತ್ತಿತ್ತು. ಹೆಸರು ಗೊತ್ತಿರದ ಹುಡುಗನನ್ನು ‘ಏ ಹುಡುಗ ಸ್ವಾಮಿ’ ಎಂದು ಕೂಗುತ್ತಿದ್ದರು. ಆಗ ನಾವೆಲ್ಲಾ, ‘ಹುಡುಗಿಯರನ್ನು ಕರೆಯುವುದಕ್ಕೆ ಏನನ್ನುತ್ತಾರೆ ಎಂದು ಕಲ್ಪನೆ ಮಾಡಿಕೊಂಡು ಸಂತೋಷಪಡುತ್ತಿದ್ದೆವು! ಅವರ ‘ಸ್ವಾಮೀ’ ಪದದ ಹುಚ್ಚು ಎಲ್ಲಿಗೆ ಮುಟ್ಟಿತು ಎಂದರೆ, ಅಡುಗೆ ಮಾಡುವ ಸಾಮಾನುಗಳಿಗೂ ಸ್ವಾಮೀ ಎಂದೇ ಸಂಬೋಧಿಸುವಷ್ಟು! ಪಾತ್ರೆಸ್ವಾಮಿ, ಸೌಟುಸ್ವಾಮಿ, ತರಕಾರಿಸ್ವಾಮಿ, ಅಕ್ಕಿಸ್ವಾಮಿ, ಸಾರುಸ್ವಾಮಿ, ಪಾಯಸಸ್ವಾಮಿ..... ಹೀಗೆ! ಒಂದು ದಿನ ನಮ್ಮೆದುರಿಗೇ ಒಬ್ಬ, ಅಲ್ಲಿಗೆ ಬಂದಿದ್ದ ತನ್ನ ತಾಯಿಯ ಜೊತೆ ಹೀಗೆ ಮಾತನಾಡುತ್ತಿದ್ದ. ‘ಏನು ಅವ್ವಸ್ವಾಮಿ. ಬರೇ ಇಪ್ಪತ್ತು ರೂಪಾಯಿ ತಂದಿದ್ದೀರಲ್ಲ. ನನ್ನ ಹೆಂಡತಿಸ್ವಾಮಿಗೆ ಹೇಳಿ, ಒಂದೈವತ್ತು ರೂಪಾಯಿ ತರಬಾರದಾಗಿತ್ತ. ಅಂದಂಗೆ ಮಕ್ಕಳುಸ್ವಾಮಿ ಹೇಗಿದ್ದಾವೆ. ಕುರಿದನ ಸ್ವಾಮಿಗಳನ್ನ ಚೆನ್ನಾಗಿ ನೋಡ್ಕಳ್ಳಾಕೆ ಹೇಳಿ ಅವ್ವಸ್ವಾಮಿ......’ ಹೀಗೆ ಸಾಗಿತ್ತು.

ವ್ರತದಿಂದಾಗಿ ಕೆಲವು ಸೋಮಾರಿಗಳಿಗೆ ಮೂರುಹೊತ್ತು ಉಂಡಾಡಿಗುಂಡಪ್ಪಗಳಾಗಿ ಕಾಲ ಕಳೆಯುವುದು ಇಷ್ಟವಾಗಿರಬೇಕು. ಅಯ್ಯಪ್ಪಸ್ವಾಮಿಯ ಯಾತ್ರೆಯ ಸಂಭ್ರಮ ಮುಂದಿನ ವರ್ಷಕ್ಕೂ ಮುಂದುವರೆಯಿತು. ಆದರೆ ಹಿಂದಿನ ವರ್ಷವಿದ್ದಷ್ಟು ನಿಷ್ಠೆ ಮಾತ್ರ ಇರಲಿಲ್ಲ. ಎರಡನೇ ವರ್ಷ ಒಂದೆರಡು ವಾರಗಳಲ್ಲಿಯೇ, ಕೆಲವು ಚಪಲಚನ್ನಿಗರಾಯರಿಗೆ ಬೇಸರವಾಗತೊಡಗಿತು. ಬೆಳಿಗ್ಗೆ, ಸಂಜೆ ಭಜನೆ ಮಾಡಿದರೆ ಮುಗಿದುಹೋಯಿತು. ಹೊತ್ತು ಕಳೆಯಲು ಎಷ್ಟು ಎಂದು ಮಾತನಾಡಲಾಗುತ್ತದೆ. ಇಸ್ಪೀಟು ಶುರು ಮಾಡಿಯೇಬಿಟ್ಟರು. ಮೊದಲಿಗೆ ದುಡ್ಡು ಕಟ್ಟಿಕೊಂಡು ಆಡುವುದು ಬೇಡವೆಂದರು. ಕೊನೆಗೆ ದುಡ್ಡೂ ಬಂತು. ಕೆಲವರು ಬೀಡಿ ಹಚ್ಚಿದರು. ಇನ್ನು ಕೆಲವರು ಸಂಜೆಯಾಗುತ್ತಿದ್ದಂತೆ ಸೆರಾಪನ್ನೂ ಕುಡಿಯುತ್ತಿದ್ದರು.

ಒಂದು ದಿನ ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ, ಇಸ್ಪೀಟು ಆಟ ಕಳೆ ಕಟಿತ್ತೋ ಏನೂ? ಜಗಳ ಶುರುವಾಗಿದೆ. ಅಷ್ಟೂ ದಿನದಿಂದ ತಡೆಹಿಡಿದುಕೊಂಡಿದ್ದ ಬಯ್ಗುಳಗಳೆಲ್ಲ ಒಮ್ಮೆಲೆ ಹೊರಗೆ ನುಗ್ಗುತ್ತಿದ್ದುದ್ದರಿಂದ ಅವರ ಕೂಗಾಟ ಹಾಸ್ಟೆಲ್ಲಿನವರೆಗೂ ಕೇಳಿಸುತ್ತಿತ್ತು. ನಾವೆಲ್ಲಾ ಎದ್ದು, ಓಡಿ ಚಪ್ಪರ ಹಾಕಿದ್ದಲ್ಲಿಗೆ ಬರುವಷ್ಟರಲ್ಲಿ ಜಗಳ ತಾರಕಕ್ಕೇರಿತ್ತು. ಮಾಲೆ ಧರಿಸಿದ್ದವನೊಬ್ಬ, ಮಾಲೆ ಧರಿಸದೇ ಕೇವಲ ಇಸ್ಪೀಟು ಆಟಕ್ಕೆ ಬಂದಿದ್ದವನೊಬ್ಬನಿಗೆ ಚಪ್ಪಲಿಯಲ್ಲಿ ಚೆನ್ನಾಗಿ ಬಾರಿಸಿಬಿಟ್ಟ! ಹೊಡೆಸಿಕೊಂಡವನು ಸುಮ್ಮನಿರುತ್ತಾನೆಯೇ? ಆತನೂ ಕೈಗೆ ಸಿಕ್ಕ ಚಪ್ಪಲಿಯಿಂದ ಮಾಲೆಧರಿಸಿದವನಿಗೂ ಬಾರಿಸಿದ! ಏನೋ ಮಹಾಪರಾಧವಾಯಿತೆಂದು ಜನರೆಲ್ಲಾ ಒಂದು ಕ್ಷಣ ಅವಕ್ಕಾದರು. ಬೇರಾವ ದುಶ್ಚಟಗಳೂ ಅವರಿಗೆ ತಪ್ಪೆನಿಸದಿದ್ದರೂ, ಮಾಲೆ ಧರಿಸಿದವನಿಗೆ ಚಪ್ಪಲಿಯಲ್ಲಿ ಹೊಡೆದಿದ್ದು ಮಹಾಪರಾಧವಾಗಿ ಕಂಡಿತ್ತು. ಜಗಳ ಒಂದು ಹಂತಕ್ಕೆ ಬರುವುದಕ್ಕೆ ಒಂದೆರಡು ಗಂಟೆಗಳೇ ಬೇಕಾಯಿತು. ರಾತ್ರಿ ಊಟದ ಹೊತ್ತಾಗಿದ್ದರಿಂದ ನಮ್ಮನ್ನೆಲ್ಲಾ ‘ವಾರ್ಡನ್ಸ್ವಾಮಿ’ ಹಾಸ್ಟೆಲ್ಲಿಗೆ ವಾಪಸ್ ಕರೆದುಕೊಂಡು ಬಂದರು. ನಂತರ ಏನಾಯಿತೋ ಗೊತ್ತಿಲ್ಲ. ಮಾರನೆಯ ದಿನ ‘ಚಪ್ಪಲಿಯಲ್ಲಿ ಹೊಡೆಸಿಕೊಂಡ ಅಯ್ಯಪ್ಪನ ಭಕ್ತ, ಮಾಲೆಯನ್ನು ತೆಗೆದು ಹಾಕಿ, ಮುಂದಿನ ವರ್ಷ ಹೊಸದಾಗಿ ಮಾಲೆಧರಿಸಿ ಬರುವುದಾಗಿ ತಪ್ಪೊಪ್ಪಿಗೆ ಹರಕೆ ಕಟ್ಟಿಕೊಂಡು ಹೊರಟುಹೋದ!’ ಎಂದು ಸುದ್ದಿಯಾಯಿತು, ಅಷ್ಟೆ.

ಕುಂದೂರುಮಠಕ್ಕೆ ಹೊರತಾದರೂ, ನಾನು ಹೈಸ್ಕೂಲಿನಲ್ಲಿದ್ದಾಗಲೇ ನಡೆದ, ಅಯ್ಯಪ್ಪಸ್ವಾಮಿ ಯಾತ್ರೆಗೆ ಸಂಬಂಧಿಸಿದ ವಿಷಯವೊಂದನ್ನು ನಾನಿಲ್ಲಿ ಹೇಳಲೇಬೆಕು. ಕುಂದೂರುಮಠದಿಂದ ಪೂರ್ವಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಒಂದು ಹಳ್ಳಿಯಿದೆ. ಅದು ನಮ್ಮ ತೋಟದಿಂದ ಕೇವಲ ಒಂದೂವರೆ ಕಿಲೋಮೀಟರ್ ಆಗಬಹುದು ಅಷ್ಟೆ. ಅಲ್ಲಿಯೂ ಈ ಅಯ್ಯಪ್ಪಸ್ವಾಮಿ ಯಾತ್ರೆಗೆ ಹೊರಟ ಗೊಂಪೊಂದಿತ್ತು. ಅಲ್ಲಿಯ ಕ್ರಾಂತಿಕಾರಕತನವೆಂದರೆ ದಲಿತರೂ ಅಯ್ಯಪ್ಪಸ್ವಾಮಿಗೆ ಹೊರಟಿದ್ದು. ಮೇಲ್ಜಾತಿಯವರೂ, ಕೆಳಜಾತಿಯವರೂ ಒಟ್ಟಿಗೆ ಒಂದೇ ಚಪ್ಪರದಲ್ಲಿ ಭಜನೆ ಮಾಡುತ್ತಾ, ಸಹಪಂಕ್ತಿ ಭೋಜನ ಮಾಡುವುದನ್ನು ಆಗ ನೋಡಬಹುದಿತ್ತು. ನಮ್ಮ ಸುತ್ತೆಲ್ಲಾ ಆಗ ಅದೊಂದು ಚರ್ಚೆಯ ವಿಚಾರವಾಗಿತ್ತು. ಬಹುಶಃ ಆಗ ಶಬರಿಮಲೆಯೊಂದೇ ದಲಿತರಿಗೆ ಮುಕ್ತ ಅವಕಾಶ ನೀಡಿದ್ದ ಸ್ಥಳವಾಗಿತ್ತೇನೋ ಅನ್ನಿಸುತ್ತದೆ.

ಹಳ್ಳಿಗಳಲ್ಲಿ ಅಸ್ಪೃಷ್ಯತೆ ಜಾರಿಯಿದ್ದ ಕಾಲವದು. ನಮ್ಮ ಮನೆಗೆ, ನಮ್ಮ ಜೊತೆ ಓದುತ್ತಿದ್ದ ಕೆಳಜಾತಿಯ ಹುಡುಗರು ಬರುತ್ತಿದ್ದುದ್ದನ್ನು ಮೊದಲೇ ಹೇಳಿದ್ದೇನೆ. ತಹಸೀಲ್ದಾರರಾಗಿದ್ದ ನಮ್ಮ ಚಿಕ್ಕಪ್ಪನ ಜೊತೆಯಲ್ಲಿ ಬರುತ್ತಿದ್ದ ಅನೇಕ ಜನ ಕೆಳಜಾತಿಯವರೂ ನಮ್ಮ ಮನೆಯ ಒಳಗೆ ಬಂದು ಹೋಗುತ್ತಿದ್ದರು. ಹೀಗಾಗಿ ಅಷ್ಟೊಂದು ಕಟ್ಟುನಿಟ್ಟಿನ ಅಸ್ಪೃಷ್ಯತೆ ನಮ್ಮ ಮನೆಯಲ್ಲಿಲ್ಲ. ಆದರೆ ನಮ್ಮ ತೋಟದಲ್ಲಿ ಕೆಲಸಕ್ಕೆ ಬರುತ್ತಿದ್ದವರು ಮಾತ್ರ, ನಾವಾಗೇ ಕರೆದರೂ ಒಳಗೆ ಬರಲು ನಿರಾಕರಿಸುತ್ತಿದ್ದರು. ಆಗ ಅವರು ಕೊಡುತ್ತಿದ್ದುದ್ದು ಎರಡು ಕಾರಣಗಳನ್ನು. ಒಂದು, ‘ನಾವೇಕೆ ನಿಮ್ಮ ಜಾತಿಯನ್ನು ಕೆಡಿಸಬೇಕು?!’ ಎಂಬುದು. ಎರಡನೆಯದು, ‘ನಾವು ಒಳಗೆ ಬಂದರೆ, ನಮಗೇ ಒಳ್ಳೆಯದಾಗುವುದಿಲ್ಲ!’ ಎಂಬುದು.

ಯಾತ್ರೆಗೆ ಹೊರಡುವ ಹಿಂದಿನ ದಿನ ಕರೆದವರ ಮನೆಗಳಿಗೆ ಹೋಗಿ, ಕಾಣಿಕೆ ಪಡೆದುಕೊಂಡು ಬರುವುದು ಈ ಗುಂಪಿನವರ ವಿಶೇಷ. ಶಬರಿಮಲೆಗೆ ಹೋಗದವರು ತೆಂಗಿನಕಾಯಿ, ಕಾಣಿಕೆ ಎಂದು ತಮ್ಮ ತಮ್ಮ ಕೈಲಾದಷ್ಟನ್ನು ಹೋಗುವವರ ಕೈಯಲ್ಲಿ ಕಳುಹಿಸುತ್ತಿದ್ದರು. ಗುಂಪಿನಲ್ಲಿ ಬರುವ ‘ಸ್ವಾಮಿ’ಗಳನ್ನು, ಜಾತಿಯ ಕಾರಣದಿಂದ ಒಳಗೆ ಬರಬೇಡಿರೆಂದು ಹೇಳುವಂತಿಲ್ಲ. ಆ ಹಳ್ಳಿಯ ಜನತೆಯೂ ಆಗ ಅದನ್ನು ಮಹಾಪರಾಧವೆಂದು ಪರಿಗಣಿಸದೆ, ಎಲ್ಲಾ ಜಾತಿಯವರನ್ನೂ ಒಳಗೆ ಸೇರಿಸಿ, ಸತ್ಕರಿಸುತ್ತಿದ್ದರು. ಯಾತ್ರೆ ಮುಗಿಸಿ ಬಂದ ಮೇಲೆ ಯಥಾಪ್ರಕಾರ ಅಸ್ಪೃಷ್ಯತೆ ಮತ್ತೆ ಜಾರಿಗೆ ಬಂದಿದ್ದು ಮಾತ್ರ ದುರಾದೃಷ್ಟಕರ. ಇನ್ನೊಂದು ಆಘಾತಕಾರಿ ವಿಷಯವೆಂದರೆ, ‘ಮಾಲೆ ಧರಿಸಿಯಾದರೂ ಮೇಲ್ಜಾತಿಯವರ ಮನೆಯೊಳಗೆಲ್ಲಾ ಓಡಾಡಿ ಬಂದೆ’ ಎಂದು ಕೆಳಜಾತಿಯ ಹುಡುಗನೊಬ್ಬ ಹೇಳಿದ್ದು, ಮೇಲ್ಜಾತಿಯವರನ್ನು ಕೆರಳಿಸಿಬಿಟ್ಟಿತ್ತು. ಆದರೆ ಈ ಕಾರಣದಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಿದ್ದುದ್ದು ಮಾತ್ರ ಒಳ್ಳೆಯ ಬೆಳವಣಿಗೆಯಾಗಿತ್ತು. ಹಾಗೆ ಜಂಭ ಕೊಚ್ಚಿಕೊಂಡವನು, ಆಗಾಗ ನಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದವನೂ, ನಾವು ಒಳಗೆ ಬರಬಹುದೆಂದು ಹೇಳಿದರೂ ಬರದೆ, ಮೊದಲು ಹೇಳಿದ ಎರಡು ಕಾರಣಗಳನ್ನು ಕೊಟ್ಟವರಲ್ಲಿ ಒಬ್ಬನಾಗಿದ್ದ!

Tuesday, September 08, 2009

T20=ತೇಜಸ್ವಿ ಟ್ವೆಂಟಿ : ಸಹಜಕೃಷಿ

ಶೀರ್ಷಿಕೆ ನೋಡಿ ‘ಇದೇನಪ್ಪ ತೇಜಸ್ವಿಗೂ 20:20 ಕ್ರಿಕೆಟ್ಟಿಗೂ ಏನು ಸಂಬಂಧ’ ಎಂದು ತಲೆಕೆರೆದುಕೊಳ್ಳಬೇಡಿ. ಇಂದು (08.09.2009) ನಮ್ಮ ತೇಜಸ್ವಿಯವರ 72ನೇ ಹುಟ್ಟಿದ ಹಬ್ಬ. ನನ್ನ ಬ್ಲಾಗಿನಲ್ಲಿ ಅವರ ಬಗ್ಗೆ ಏನಾದರೂ ಬರೆಯಬೇಕೆಂಬ ಆಸೆ ನನಗೆ. ಆದರೆ ಏನು ಬರೆಯುವುದು? ತೇಜಸ್ವಿ ಮತ್ತು ಅವರ ಸಾಹಿತ್ಯದ ನಿತ್ಯವಿದ್ಯಾರ್ಥಿಯಾದ ನನಗೆ ಅವರ ಬಗ್ಗೆ ಬರೆಯುವುದೆಂದರೆ ಭಾರೀ ಸಂಭ್ರಮ ಜೊತೆಗೇ ಭಯವೂ ಕೂಡಾ! ಬರೆಯುವುದಕ್ಕಿಂತ ಅವರ ಸಾಹಿತ್ಯವನ್ನು ಓದುತ್ತಾ ಮನಸ್ಸಿನಲ್ಲಿಯೇ ಅನುಸಂಧಾನ ಮಾಡಿ ಆನಂದಿಸುವುದೇ ನನಗೆ ಹೆಚ್ಚು ಇಷ್ಟ.
ಅವರ ಪುಸ್ತಕಗಳನ್ನು ಓದುವಾಗ ನನಗೆ ‘ಪಂಚಿಂಗ್ ಲೈನ್’ ಎಂದು ಕಂಡು ಬಂದ ವಾಕ್ಯಗಳನ್ನು ಅಡಿಗೆರೆ ಎಳೆಯುವುದು, ಬರೆದಿಟ್ಟುಕೊಳ್ಳುವುದು ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಓದುವಾಗ ಆ ವಿಷಯವೇ ಮರೆತು ಅವರ ಕೃತಿಗಳೊಳಗೆ ನಾನು ಇಳಿದುಬಿಡುತ್ತಿದ್ದೆ. ಇಲ್ಲ ಬಲವಂತವಾಗಿ ಅಡಿಗೆರೆ ಎಳೆಯಲು ಹೊರಟರೆ, ಓದುವುದೇ ನಿಂತುಹೋಗುತ್ತಿತ್ತು; ಜೊತೆಗೆ ಎಲ್ಲವೂ ಪಂಚಿಂಗ್ ಲೈನ್‌ಗಳಂತೆಯೇ ಕಾಣುತ್ತಿದ್ದವು! ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಮರುಓದಿಗೆ ಒಳಪಡಿಸುವಾಗ ಈ ರೀತಿಯ ಚಡಪಡಿಕೆ ಕಡಿಮೆಯಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ಇತ್ತೀಚಿಗೆ ನಾನು ಮತ್ತೆ ಓದಿದ ‘ಸಹಜಕೃಷಿ’ ಪುಸ್ತಕದಲ್ಲಿ ಈ ಅಡಿಗೆರೆ ಎಳೆಯುವ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಯಶಸ್ಸು ನನ್ನದಾಗಿದೆ. ಹಾಗೆ ಅಡಿಗೆರೆ ಎಳೆದ ಸಾಲುಗಳಲ್ಲಿ ಇಪ್ಪತ್ತನ್ನು ಆಯ್ದು ಇಂದು ನಿಮ್ಮೆದುರಿಗೆ ಇಡುತ್ತಿದ್ದೇನೆ. ಅದಕ್ಕೇ ಈ T20=ತೇಜಸ್ವಿ ಟ್ವೆಂಟಿ!
ಸಹಜಕೃಷಿಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಸಹಜಕೃಷಿಯನ್ನು ಓದಿದವರೂ ಮತ್ತೊಮ್ಮೆ ಸಹಜಕೃಷಿಯನ್ನು ಓದುವಂತಾದರೆ ಡಬಲ್ ಖುಷಿ ನನ್ನದು.

ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು. 
 • ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ.
 • ದಿನವೂ ನೂರಾರು ವಸ್ತುಗಳನ್ನು ಉತ್ಪಾದಿಸಿ ಜಾಹಿರಾತುಗಳ ಮುಖಾಂತರ ಪ್ರಚೋದಿಸುವ ಆಧುನಿಕ ಕೈಗಾರಿಕೆಗಳಿಗೆ   ಸರಳ ಜೀವನ ಸೋಂಕು ರೋಗದಂತೆ ಭಯಾನಕವಾಗಿ ಕಾಣುತ್ತದೆ.
 • ಪೃಥ್ವಿಯ ಮೇಲೆ ಮಾನವ ಉದಿಸುವುದಕ್ಕೂ ಮೊದಲೇ ರೂಪುಗೊಂಡ ಈ ಗಿಡಮರಗಳಿಗೆ ಮಾನವನ ಕೃತಕ ಕೃಷಿಯ ಅಗತ್ಯವಿಲ್ಲ.
 • ಭೂಮಿ ಮಿಲಿಯಗಟ್ಟಲೆ ವರ್ಷಗಳಿಂದ ಜೀವಸೃಷ್ಟಿ ಮಾಡುತ್ತಾ ಬಂದ ಅದಮ್ಯ ಚೈತನ್ಯದ ಅಕ್ಷಯ ಪಾತ್ರೆ.
 • ಹಾಲು ಅಗತ್ಯವಾದರೆ ಹಾಲಿಗಾಗಿಯೇ ಇರುವ ತಳಿಗಳನ್ನು ಸಾಕಿ ಅವುಗಳಿಗೆ ಅಗತ್ಯವಾದ ಮೇವನ್ನು ರೈತನೇ ಬೆಳೆದು ನೋಡಿಕೊಳ್ಳುವುದು ವಿಹಿತವೇ ಹೊರತು ಒಣ ಹುಲ್ಲು ತಿಂದು ಮುರುಟಿಕೊಂಡ ಈ ಕ್ಷುದ್ರ ದನಗಳ ಮಂದೆಗಳಿಂದ ರೈತರು ಮುಕ್ತರಾಗುವುದೇ ಒಳ್ಳೆಯದು.
 • ಬುದ್ಧ, ಶಂಕರರಿಂದ ಹಿಡಿದು ಇಂದಿನವರೆಗೆ ಅನೇಕಾನೇಕ ಮಾಹಾನುಭಾವರು, ಪೂಜ್ಯರು ಭಾರತದಲ್ಲಿ ಈಗಾಗಲೇ ಯಥೇಚ್ಛವಾಗಿ ಇರುವುದರಿಂದ ಈ ಪೂಜ್ಯರ ಸಮುದಾಯಕ್ಕೆ ಫುಕೋಕಾ ಒಬ್ಬರನ್ನು ಸೇರಿಸಿಸುವುದು ನಮ್ಮ ರೈತ ಕೋಟಿಗೂ, ಫುಕೋಕಾರವರಿಗೂ ನಾನು ಅನ್ಯಾಯ ಮಾಡಿದಂತೆ.
 • ಭಾರತದ ರೈತರಲ್ಲಿ ಕೆಲವರು ಎಂಥ ದುರಾಸೆಯವರೂ ಲೋಭಿಗಳೂ ಆಗಿದ್ದಾರೆಂದರೆ ಸಬ್ಸಿಡಿ ಸಾಲ ಎಂದರೆ ಸಾಕು ಅದು ಒಳ್ಳೆಯದೋ ಕೆಟ್ಟದ್ದೋ ಎಂದೂ ಯೋಚಿಸದೆ ನುಂಗಿ ನೀರು ಕುಡಿಯುತ್ತಾರೆ.
 • ಒಂದು ವಿಷ ಒಂದು ಜೀವ ಸಮುದಾಯವನ್ನು ಮಾತ್ರ ಕೊಂದು ಇನ್ನೊಂದನ್ನು ಬಿಡುತ್ತದೆ ಎಂದು ಹೇಳುವ ಸಿದ್ಧಾಂತವೇ ತಪ್ಪು.
 • ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತಿತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ.
 • ನಮ್ಮ ಸರ್ಕಾರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಲಾಭಕರ ಬೆಲೆ ನೀಡುವುದೊಂದನ್ನುಳಿದು ಮಿಕ್ಕಿದ್ದನ್ನೆಲ್ಲಾ ಮಾಡುತ್ತದೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅತಿ ಸೂಕ್ತ ಮಾರ್ಗವೆಂದರೆ ರೈತನಿಗೆ ಲಾಭಕರ ಬೆಲೆಯೇ ಹೊರತು ಮಿಕ್ಕುದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ.
 • ಟ್ರ್ಯಾಕ್ಟರ್ ಸಾಲ, ಟಿಲ್ಲರ್ ಸಾಲ, ಗೋಬರ್ ಗ್ಯಾಸ್ ಸಾಲ, ಪಂಪ್ ಸೆಟ್ ಸಾಲ, ಸ್ಪ್ರೆಯರ್ ಸಾಲ ಹೀಗೇ ನೂರಾರು. ರೈತ ಒಂದು ತೀರಿಸಲು ಇನ್ನೊಂದು ಸಾಲಕ್ಕೆ ನೆಗೆಯುತ್ತಾ ಬಾಣಲೆಯಿಂದ ಬಾಣಲೆಗೆ ಹಾರುತ್ತಿದ್ದಾನೆ. ಬಾಣಲೆಗಳ ಸರಣಿ ಮುಗಿದು ಬೆಂಕಿಗೆ ಯಾವಾಗ ಹಾರುತ್ತಾನೋ ನೋಡಬೇಕಾಗಿದೆ.
 • ದಿಲ್ಲಿಯಲ್ಲಿ ಕುಳಿತು ಹಳ್ಳಿಗರ ಉದ್ಧಾರಕ್ಕೆ ಶಿಫಾರಸ್ ಮಾಡುವ ಕ್ರಮದಿಂದಲೇ ಯೋಜನೆಗಳು ಹಾಳಾದವು. ಹಳ್ಳಿಯವರ ಪೂರ್ವಾರ್ಜಿತ ವಿವೇಕ ಹಾಗೂ ಉದ್ಯಮಗಳೂ ನಾಶವಾದವು.
 • ಒಂದು ರಾಷ್ಟ್ರದ, ಸರ್ಕಾರದ ಸಂಕ್ಷಿಪ್ತ ರೂಪವೇ ಪ್ರಜೆ.
 • ಹುಲ್ಲು ಬೆಳೆದ ಭೂಮಿ ಮಾತ್ರ ದನ ಎಷ್ಟು ಮೆಯ್ದರೂ ಸಾರಹೀನವಾಗುವುದಿಲ್ಲ. ಧಾನ್ಯ ತರಕಾರಿ ಬೆಳೆದ ಭೂಮಿ ಮಾತ್ರ ಬಂಜರು ಬೀಳುತ್ತದೆಯೇ?
 • ನಿರ್ದಿಷ್ಟ ಹಾಗೂ ಖಚಿತ ಅರ್ಥ ಉದ್ಧೇಶಗಳಿಲ್ಲದ ಈ ಶಾಸ್ತ್ರ ಆಚಾರಗಳಿಂದ ಇವತ್ತಿನ ಅತಿ ಸಂಕೀರ್ಣ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಬಹುದೆಂದು ನಾನು ತಿಳಿದಿಲ್ಲ.
 • ಒಂದು ಸಾರಿ ನಾವು ವೈಜ್ಞಾನಿಕ ವಿವೇಚನೆಯನ್ನು ತ್ಯಜಿಸಿ ಶಾಸ್ತ್ರಚಾರಗಳ ಅನುಸರಣೆಗಿಳಿದೆವೆಂದರೆ ಅಲ್ಲಿಗೆ ಅಂಧಶ್ರದ್ಧೆಯ ಅಂಕುರಾರ್ಪಣೆಯಾಯ್ತೆಂದೇ ತಿಳಿಯಿರಿ.
 • ಕೈಗಾರಿಕೀಕರಣದ ಮುಂಚೂಣಿಯಲ್ಲಿರುವ ಮುಂದುವರೆದ ದೇಶಗಳಲ್ಲಿ ವೈಜ್ಞಾನಿಕ ಆಧಾರದ ಮೇಲೆಯೇ ರಾಸಾಯನಿಕ ಕೃಷಿಯ ಅನಿಷ್ಟಗಳ ವಿರುದ್ಧ ಆಂದೋಳನ ಸಂಭವಿಸುತ್ತಿರುವಾಗ ನಾವೇಕೆ ಗೊಡ್ಡು ಸಂಪ್ರದಾಯಗಳ ಬೆಂಬಲ ತೆಗೆದುಕೊಳ್ಳಬೇಕು?
 • ಒಂದು ಸಿಗರೇಟನ್ನಾಗಲಿ, ನಶ್ಯವನ್ನಾಗಲಿ ಬಿಡುವುದಕ್ಕೆ ಸಾಧ್ಯವಾಗದ ನಮ್ಮಂಥ ಕ್ಷುದ್ರಜೀವಿಗಳಿಗೆ ಪರಂಪರಾಗತವಾಗಿ ಬೆಳೆದು ಬಂದಿರುವ ರೈತನ ಅಭ್ಯಾಸಗಳನ್ನು ಬಿಡುವಂತೆ ಹೇಳುವ ನೈತಿಕ ಸ್ಥೈರ್ಯ ಸಹ ಕಡಿಮೆಯಾಗಿದೆ.
 • ಸಹಜ ಕೃಷಿ ಪದ್ಧತಿಯಿಂದ ಬೆಳೆದು ತೋರಿಸುವ ಒಂದೇ ಒಂದು ಎಕರೆ ಹೊಲ ಅಥವಾ ಗದ್ದೆ ಸಹಜ ಕೃಷಿ ಆಂದೋಳನದ ಕಾಳ್ಗಿಚ್ಚಿಗೆ ಕಿಡಿಯಾಗುತ್ತದೆ. ಈ ಕ್ರಾಂತಿಯನ್ನು ಸಾದ್ಯಮಾಡಿ ತೋರಿಸುವ ಮಹಾನುಭಾವ ಯಾರಿರಬಹುದೆಂದು ನಾನು ಕುತೂಹಲದಿಂದ ಯೋಚಿಸುತ್ತೇನೆ!
 • ಫುಕೋಕಾ ತಮ್ಮ ಗುರಿಸಾಧನೆಯಲ್ಲಿ ಗಾಂಧಿ, ಲೋಹಿಯಾ ಜೇಪಿ ಮುಂತಾದವರಿಗಿಂತ ಹೆಚ್ಚು ಸಫಲರಾಗಿದ್ದಾರೆ. ಬಹುಶಃ ಇದಕ್ಕೆ ಕಾರಣ ಫುಕೋಕಾ ಕಾರ್ಯಸಾಧನೆಯೆಲ್ಲ ಮರ ಗಿಡಗಳ ಬಳಿಯೇ ಆದ್ದರಿಂದ, ಸುಳ್ಳು ಹೇಳುವ, ದ್ರೋಹ ಬಗೆಯುವ ಮಾನವರಿಂದ ಕೂಡಿದ ಸಾಮಾಜಿಕ ಪರಿಸರದಲ್ಲಿ ಗಾಂಧಿ, ಲೋಹಿಯಾ, ಜೇಪಿ ಮುಂತಾದವರು ಅನುಭವಿಸಿದ ತೊಂದರೆಗಳನ್ನು ಅನುಭವಿಸಿರಲಾರರು.
ಪುಸ್ತಕದ ಹೆಸರು : ಸಹಜಕೃಷಿ
ಲೇಖಕರು : ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು : ಪುಸ್ತಕ ಪ್ರಕಾಶನ, ಮೈಸೂರು.
                   ೧೯೯೧ರಲ್ಲಿ ಮೊದಲ ಮುದ್ರಣವಾಗಿದ್ದ ಈ ಕೃತಿ ೨೦೦೪ರ ಹೊತ್ತಿಗೆ ಹತ್ತನೇ ಮುದ್ರಣ ಕಂಡಿತ್ತು.

ಕೃತಿಯ ಬೆನ್ನುಡಿಯಿದು:

ಫುಕೋಕಾ ತಮ್ಮ ಸಹಜ ಕೃಷಿ ಹಿನ್ನೆಲೆಯಲ್ಲಿ ಮಂಡಿಸುವ ತತ್ವ ಮತ್ತು ಸಿದ್ಧಾಂತಗಳು ಕೇವಲ ರೈತರ ಕೃಷಿ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿರದೆ ಕಲೆ, ಸಾಹಿತ್ಯ, ಸಂಗೀತ ಮತ್ತು ತತ್ವಮೀಮಾಂಸೆಯ ಮೇಲೆ ದೂರಗಾಮಿಯಾದ ಪರಿಣಾಮಗಳನ್ನು ಬೀರುವುದರಲ್ಲಿ ಸಂಶಯವಿಲ್ಲ. ಸಹಜ ಕೃಷಿ ರಾಸಾಯನಿಕ ಕೃಷಿಯಂತೆ ಆಹಾರ ಬೆಳೆಯುವ ಸಿದ್ಧಸಮೀಕರಣವನ್ನು ನೀಡುವುದಿಲ್ಲ. ಅದು ಒಂದು ಜೀವನ ಕ್ರಮ, ಆಲೋಚನಾ ವಿಧಾನ, ಆಧ್ಯಾತ್ಮಿಕ ದೃಷ್ಟಿಯನ್ನೂ ಬೋಧಿಸುತ್ತದೆ. ಆದರೆ ರಾಸಾಯನಿಕ ಕೃಷಿಯಿಂದ ತೊಂದರೆಗೊಳಗಾಗಿರುವ ಭಾರತದ ಕೃಷಿ ಕ್ಷೇತ್ರಕ್ಕೆ ಮುಖ್ಯವಾಗಿ ಬೇಕಾಗಿರುವುದು ಅವರ ಕೃಷಿ ಪದ್ಧತಿ. ಅದನ್ನು ಪ್ರಮುಖವಾಗಿಟ್ಟುಕೊಂಡು ಇಲ್ಲಿ ಸಹಜ ಕೃಷಿಯನ್ನು ವಿವೇಚಿಸಲಾಗಿದೆ.

Saturday, September 05, 2009

ಶಿಕ್ಷಕರ ದಿನದ ವಿಶೇಷ ಸಣ್ಣಕಥೆ : ಬಸವ ಮತ್ತು ದೇವರು

ಢಣ ಢಣ, ಢಣ ಢಣ ಎಂದು ಲಾಂಗ್ ಬೆಲ್ಲು ಹೊಡೆದುದ್ದೇ ತಡ, ಬಸವ ದಡಕ್ಕನೆದ್ದು ಕುಳಿತುಕೊಂಡ. ಸುಮಾರು ಒಂದು ಗಂಟೆಗಳಿಂದ ಮಿಂಚು ಗುಡುಗುಗಳ ಬಗ್ಗೆ ಅದೇ ಧಾಟಿಯಲ್ಲಿ ಪಾಠ ಮಾಡುತ್ತಿದ್ದ ಕೇಡಿ ಮಾಸ್ಟರರ ಗುಡುಗಿನಂತ ದನಿಗೂ ಎಚ್ಚರವಾಗದಿದ್ದ ಬಸವ ಲಾಂಗ್ ಬೆಲ್ ಕೇಳಿ ಎಚ್ಚರವಾಗಿದ್ದು ಹಿಂದಿನ ಡೆಸ್ಕಿನವರಿಗೆ ಬಿಟ್ಟು ಬೇರಾರಿಗೂ ತಿಳಿಯಲಿಲ್ಲ. ತನ್ನ ಅತಿರೇಕದ ವರ್ತನೆಗಳಿಂದ ವಿಜ್ಞಾನದ ಮಾಸ್ಟರ್ ಕೆ. ದೇವರಾಜು ಅನ್ನುವವರು ಹುಡುಗರ ಬಾಯಲ್ಲಿ ಕೇಡಿ ಆಗಿ ಚಿರಪರಿಚಿತರಾಗಿದ್ದವರು. ಎಲ್ಲಾ ಕ್ಲಾಸುಗಳಿಗೂ ಮುಂದಿನ ಡೆಸ್ಕಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಸವ ಕೇಡಿ ಕ್ಲಾಸಿಗೆ ಮಾತ್ರ ಹಿಂದಿನ ಬೆಂಚಿಗೆ ಹೋಗುತ್ತಿದ್ದ. ಇಂದು ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬೀಳದಿದ್ದರಿಂದಲೂ, ಬೆಳಿಗ್ಗೆ ಹೆಡ್ಮಿಸ್ ನಾಳೆ ಫೀಸ್ ಕಟ್ಟದಿದ್ದರೆ ಕ್ಲಾಸಿಗೆ ಬರಬೇಡ ಎಂದಿದ್ದರಿಂದಲೂ ಬಸವ ಹೆಚ್ಚು ಸುಸ್ತಾಗಿ ಹೋಗಿದ್ದ. ಆದ್ದರಿಂದಲೇ ಹಿಂದಿನ ಬೆಂಚಿನಲ್ಲಿ, ಹೊಟ್ಟೆಯಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ಹತ್ತಿಕ್ಕಲೋ ಎಂಬಂತೆ ಒಂದು ಕೈಯನ್ನು ಹೊಟ್ಟೆಗೆ ಕೊಟ್ಟುಕೊಂಡು ನಿದ್ದೆ ಹೋಗಿದ್ದ. ಹುಡುಗರ ಸಂಖ್ಯೆ ನೂರರ ಗಡಿ ದಾಟಿದ್ದರಿಂದ ವಿಜ್ಞಾನದ ಮಾಸ್ಟರವರ ಕಣ್ಣಿಗೆ ಬೀಳುವ ಭಯವಿರಲಿಲ್ಲ.

ಹುಡುಗರೆಲ್ಲ ‘ಹೋ’ ಎಂದು ಹೊರಗೆ ಹೋಗಿಯಾಗಿತ್ತು. ಬಸವ ಎದ್ದು ನಿಲ್ಲಲು ಹೋದರೆ ಕಾಲುಗಳು ಮುಷ್ಕರ ಹೂಡುತ್ತಿದ್ದವು. ‘ಗತಿಯಿಲ್ಲದಿದ್ದ ಮೇಲೆ ಯಾವ್ದಾದ್ರು ಗೌರ್ನಮೆಂಟ್ ಸ್ಕೂಲಿಗೆ ಹೋಗ್ಬೇಕಾಗಿತ್ತು’ ಎಂದಿದ್ದ ಹೆಡ್ಮಿಸ್ಸಿನ ಮಾತು ನೆನಪಿಗೆ ಬಂದು, ‘ಯಾಕೆ? ಬಡವರೇನು ಒಳ್ಳೆ ಸ್ಕೂಲಲ್ಲಿ ಓದಬಾರದಾ?’ ಎನ್ನುವ ತನ್ನ ಪ್ರಶ್ನೆಯನ್ನು ಶಬ್ದ ರೂಪಕ್ಕೆ ಇಳಿಸಲಾಗದ್ದಕ್ಕೆ ಈಗ ಬೇಜಾರು ಮಾಡಿಕೊಂಡ. ಹೇಗೋ ಧೈರ್ಯವಹಿಸಿ ಎದ್ದು ಹೆಗಲಿಗೆ ಬ್ಯಾಗನ್ನು ತೂಗಿಸಿಕೊಂಡು ಹೊರಬಿದ್ದವನ ಕಣ್ಣಿಗೆ ಬಿದ್ದವರು ಕನ್ನಡ ಮಿಸ್ಸು ಅನಿತ. ಈತನ ತೂಗಡಿಕೆಯ ನಡಿಗೆಯನ್ನು ಗಮನಿಸಿದ ಅನಿತ ‘ಏಕೊ ಬಸವ ಹುಷಾರಿಲ್ಲವಾ? ನಿದ್ದೆ ಮಾಡಿದಂತೆ ಕಾಣುತ್ತೀಯಾ’ ಎಂದಾಗ ಬಸವನಿಗೆ ಸಕತ್ ಆಶ್ಚರ್ಯವಾಯಿತು. ನಾನು ನಿದ್ದೆ ಮಾಡುತ್ತಿದ್ದುದ್ದು ಕೇಡಿ ಮಾಸ್ಟರಿಗೇ ಗೊತ್ತಾಗಲಿಲ್ಲ! ಆದರೆ ಈ ಅನಿತ ಮಿಸ್ಸಿಗೆ ಗೊತಾದುದ್ದು ಹೇಗೆ? ಎಂದು ತಲೆಕೆಡಿಸಿಕೊಂಡ ಬಸವ ‘ಇಲ್ಲ ಮಿಸ್. ಹೊಟ್ಟೆ ಹಸಿವು’ ಎಂದು ಅಪ್ರಯತ್ನಪೂರ್ವಕವಾಗಿ ಹೇಳಿ ‘ಇಲ್ಲ ಮಿಸ್. ನನ್ಗೇನು ಆಗಿಲ್ಲ’ ಎಂದುಬಿಟ್ಟ ಅದೇ ಉಸಿರಿನಲ್ಲಿ. ಕ್ಷಣಮಾತ್ರವೂ ಯೋಚಿಸದೆ ‘ಒಂದ್ನಿಮಿಷ ಇರು ಬಂದೆ’ ಎಂದು ಮತ್ತೆ ಸ್ಟಾಫ್ ರೂಮಿನ ಕಡೆಗೆ ಹೋದರು. ಅದೇ ರೂಮಿನಿಂದ ತಮ್ಮ ಸೀಮೇಸುಣ್ಣದ ಕೈಯನ್ನು ತೊಳೆಯಲು ಬಂದ ಕೇಡಿ ಮಾಸ್ಟರ್ ‘ಏಕೊ ಬಡವಾ. ನನ್ನ ಕ್ಲಾಸಿಗೆ ಬಂದಿರ್ಲಿಲ್ಲ?’ ಎಂದು ಗುಡುಗಿದರು. ತೊಡೆಯಲ್ಲುಂಟಾದ ನಡುಕವನ್ನು ತಡೆಯುತ್ತ ‘ಇಲ್ಲ ಸಾರ್. ಬಂದಿದ್ದೆ ಸಾರ್. ನಿಮ್ಮ ಗುಡುಗು ಮಿಂಚು ಕೇಳಿದೆ ಸಾರ್’ ಎಂದು ತಡಬಡಿಸಿದ. ತಾವು ಕೇಳಿದ್ದ ಪ್ರಶ್ನೆಯನ್ನು ಆಗಲೇ ಮರೆತಿದ್ದ ಕೇಡಿ ಮಾಸ್ಟರ್, ಬಸವನನ್ನು ಒಂದು ಪ್ರಾಣಿಯೋ ಎಂಬಂತೆ ನೋಡಿ ಒಳಗೆ ಹೋದರು. ಆಗ ಹೊರಗೆ ಬಂದ ಅನಿತ ಮಿಸ್, ‘ತಗಳೊ. ಇಲ್ಲಿ ಒಂದ್ನಾಲ್ಕು ಬಿಸ್ಕೆಟ್ ಇದೆ ತಿಂದ್ಕೊ. ಹಾಗೆ ಅಲ್ಲಿ ಎಲ್ಲಾದ್ರು ಕಾಫಿನೊ ಟೀನೊ ಕುಡ್ಕೊ’ ಎಂದು, ಒಂದು ಅರ್ಧ ಖಾಲಿಯಾಗಿದ್ದ ಬಿಸ್ಕೆಟ್ ಪ್ಯಾಕನ್ನು, ಐದು ರೂಪಾಯಿ ನೋಟನ್ನು ಕೊಟ್ಟರು. ಅದನ್ನು ತಗೆದುಕೊಳ್ಳುತ್ತಲೇ, ನಮಸ್ಕರಿಸುವವನಂತೆ ತಮ್ಮ ಮುಖವನ್ನೇ ನೋಡಿದ ಬಸವನ ತಲೆಯನ್ನು ಸವರಿ ಮುಗುಳ್ನಕ್ಕು ಹೊರಟರು. ಅನಿತ ಮೇಡಂ ಬಸವನಿಗೆ ತಿಂಡಿ ಕೊಡುವುದು ಇದೇ ಮೊದಲೇನಾಗಿರಲಿಲ್ಲ. ವಾರಕ್ಕೆ ಒಂದೆರಡು ದಿನವಾದರೂ ಆತನಿಗೆ ಕರೆದು ತಿಂಡಿ ಕೊಡುತ್ತಿದ್ದರಲ್ಲದೆ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿಯೂ ತಿಂಡಿ ಮುಂತಾದವನ್ನು ಕೊಡುತ್ತಿದ್ದರು. ಕೆಲವು ಬಾರಿ ನೋಟ್ ಪುಸ್ತಕಗಳನ್ನು, ಓದಲು ಕಾಮಿಕ್ಸ್ ಪುಸ್ತಕಗಳನ್ನು ಕೊಟ್ಟಿದ್ದರು. ಆದರೆ ಎಂದೂ ತನ್ನನ್ನು ಕೇಡಿ ಮಾಸ್ಟರಂತೆ ‘ಬಡವಾ’ ಎಂದಾಗಲಿ, ಹೆಡ್ಮಿಸ್ಸಿನಂತೆ ‘ಗತಿಯಿಲ್ಲದವನು’ ಎಂದಾಗಲಿ ಕರೆದಿರಲಿಲ್ಲ. ಅನಿತ ಮೇಡಂ ಮರೆಯಾಗುವವರೆಗೂ ನೋಡುತ್ತಿದ್ದ ಬಸವನಿಗೆ ‘ಅನಿತ ಮಿಸ್ ದೇವರೇ ಇರ್ಬೇಕು. ನಾನು ನಿದ್ದೆ ಮಾಡಿದ್ದು ಅವರಿಗೆ ಗೊತ್ತಾಗುತ್ತೆ. ನಾನು ಪಾಠ ಓದುವಾಗ ತಪ್ಪಾದ್ರೆ ತಕ್ಷಣ ಅವ್ರಿಗೆ ಗೊತ್ತಾಗುತ್ತೆ. ನಾನು ಹಸ್ಗೊಂಡಿದ್ರೆ ಗೊತಾಗುತ್ತೆ. ದೇವ್ರಿಗೆ ಎಲ್ಲಾ ಗೊತ್ತಾಗುತ್ತೆ ಅಂತೆ ಅವ್ವ ಹೇಳ್ತಿರ್ತಾಳೆ’ ಅಂದುಕೊಂಡ ಬಸವನಿಗೆ ತನ್ನ ಅವ್ವ, ತಂಗಿ ಪುಟ್ಟಿಯ ನೆನಪು ಬಂದು ಮನೆಯ ಕಡೆಗೆ ಹೊರಟ. ಕೈಯಲ್ಲಿದ್ದ ಬಿಸ್ಕೆಟ್ಟನ್ನು ತಿನ್ನಬೇಕನಿಸಲಿಲ್ಲ. ಮನೆಗೆ ಹೋಗಿ ತಂಗಿಗೂ ಒಂದೆರಡು ಕೊಟ್ಟು ತಿನ್ನ ಬೇಕು. ಅವಳೂ ಬೆಳಿಗ್ಗೆಯಿಂದ ಹಸಿದುಕೊಂಡಿರಬಹುದು. ಬೆಳಿಗ್ಗೆ ಬರುವಾಗ ಮನೇಲಿ ಏನೂ ಇಲ್ಲದೆ ಅವ್ವ ‘ನೀನು ಸ್ಕೂಲಿಂದ ಬರೊವೊತ್ಗೆ ಏನಾದ್ರು ಮಾಡಿರ್ತಿನಿ’ ಎಂದು ಹೇಳಿದ್ದು ಜ್ಞಾಪಕಕ್ಕೆ ಬಂದು, ನಡೆಯುತ್ತಿದ್ದವನು ಓಡತೊಡಗಿದ.

* * * * * * * * * * * * *

ಮನೆ ತಲಪಿದಾಗ ಬಸವನ ಕಣ್ಣಿಗೆ ಬಿದ್ದುದ್ದು ನಿತ್ಯ ಚಿತ್ರವೆ. ತಾಯಿ ಬಾಗಿಲ ಬಳಿಯಲ್ಲಿ ಕುಳಿತುಕೊಂಡು, ಎರಡೂ ಕಾಲನ್ನು ನೀಡಿಕೊಂಡು, ಪಕ್ಕದಲ್ಲಿ ಮೊರವನ್ನು, ಅದರಲ್ಲಿ ಹೊಗೆಸೊಪ್ಪು ಮತ್ತು ಕತ್ತರಿಸಿದ ತೂಪ್ರದ ಎಲೆಯನ್ನು ಇಟ್ಟುಕೊಂಡು ಬೀಡಿ ಕಟ್ಟುತ್ತಿದ್ದಳು. ತಂಗಿ ಪುಟ್ಟಿ ಅವ್ವನ ತೊಡೆಯ ಮೇಲೆ ಮಲಗಿಕೊಂಡು ಕೈಯಲ್ಲಿ ಒಂದು ತೂಪ್ರದ ಎಲೆಯನ್ನು ಹಿಡಿದುಕೊಂಡು ಆಡತ್ತಿದ್ದಳು. ‘ಪುಟ್ಟಿ. ಅಣ್ಣ ಬಂದ. ಏಳು ಅವನಿಗೊಂದಿಷ್ಟು ಹೊಟ್ಟೆಗೇನಾದ್ರು ಮಾಡುವ’ ಎಂದು ಮೇಲೇಳುತ್ತಿದ್ದ ಅವ್ವನನ್ನು ತಡೆದ ಬಸವ, ‘ಅವ್ವ ನಮ್ಮ ಅನಿತ ಮಿಸ್ ಬಿಸ್ಕೆಟ್ ಕೊಟ್ಟವರೆ. ಈಗ ಅದನ್ನೆ ತಿಂತಿನಿ. ಅಮೇಲೆ ಊಟ ಮಾಡ್ತಿನಿ’ ಎಂದ. ‘ಅಣ್ಣ ನಂಗೆ ಕೊಡಲ್ವ?’ ಎಂದು ತನ್ನೆಡೆಗೆ ಬಂದ ಪುಟ್ಟಿಯನ್ನು ಎತ್ತಿಕೊಂಡ ಬಸವ, ‘ನಿನಗೆ ಕೊಡೊದಿಕ್ಕೆ ಅಂತಲೆ ನಾನು ಅಲ್ಲಿಂದ ಇಲ್ಲಿವರೆಗೂ ತಿಂದಲೆ ಬಂದಿರೋದು’ ಎಂದು ಬಿಸ್ಕೆಟ್ ಪ್ಯಾಕ್ ಕಳಚಿ ಅವಳಿಗೆ ಎರಡು ಕೊಟ್ಟು ತಾನು ಎರಡು ತಿಂದು ಮುಗಿಸಿದ. ಬಿಸ್ಕೆಟ್ ಮುಗಿಯುವ ಹೊತ್ತಿಗೆ ಹೆಡ್ಮಿಸ್ ಹೇಳಿದ್ದ ಮಾತುಗಳು ನೆನಪಿಗೆ ಬಂದು, ‘ಅವ್ವ ನಾಳೆ ಫೀಸು ಕಟ್ಟದಿದ್ದರೆ ಸ್ಕೂಲಿಗೆ ಬರ್ಬೇಡ ಅಂದವರೆ ಹೆಡ್ಮಿಸ್ಸು’ ಎಂದು ತನ್ನ ಅವ್ವ ಏನು ಹೇಳುತ್ತಾಳೆ ಎಂದು ಅವಳ ಮುಖವನ್ನೇ ನೋಡಿದ. ಅವಳು ಒಮ್ಮೆ ಅವನ ಮುಖವನ್ನಷ್ಟೆ ನೋಡಿ ಮತ್ತೆ ಬೀಡಿ ಕಟ್ಟುವ ತನ್ನ ಕಾಯಕದಲ್ಲಿ ತೊಡಗಿದ್ದನ್ನು ಕಂಡು, ‘ಅವ್ವ ಎರಡು ತಿಂಗಳಿಂದು ಫೈನ್ ಸೇರಿ ನೂರೈದು ರೂಪಾಯಿ ಕೊಡ್ಬೇಕಂತೆ’ ಎಂದನು. ಈಗ ಮಾತನಾಡಿದ ಅವ್ವ, ‘ಬಸವ ನಾನೇನ್ಮಾಡ್ಲಪ್ಪ. ಮನೇಲಿ ಮೂರು ಅಕ್ಕಿ ಕಾಳಿಲ್ಲ. ನಿಮ್ಮಪ್ಪ ನೋಡಿದ್ರೆ ಕುಡ್ದು ಕುಡ್ದು ಒಂದ್ರುಪಾಯಿನೂ ಕೊಡಲ್ಲ. ಇವಂತ್ತೊಂದಿನ ಆದ್ರು ಅವನು ಕುಡಿದು ಬರ್ಲಿಲ್ಲ ಅಂದ್ರೆ ನಾಳೆ ಏನಾರ ಮಾಡಿ ಪೀಸು ಕಟ್ಟಬಹುದು’ ಎಂದು ಬೀಡಿ ಕಟ್ಟುವದನ್ನು ನಿಲ್ಲಿಸಿ ಮೇಲೆದ್ದು ‘ತಡಿ ನೋಡುವಾ’ ಎಂದು ಬೀಡಿ ಕಟ್ಟುಗಳನ್ನು ತುಂಬಿಟ್ಟಿದ್ದ ಕುಕ್ಕೆಯನ್ನು ತಂದು ನೆಲಕ್ಕೆ ಸುರಿದಳು. ‘ಬಸವ ಇದನ್ನ ಲೆಕ್ಕ ಮಾಡು. ನೋಡಾನ ಅದಾದ್ರು ವಸಿ ಆದ್ರೆ ಹೆಂಗಾದ್ರು ಮಾಡಿ ಫೀಸು ಕಟ್ಟಬಹುದು’ ಎಂದಳು. ಬಸವನ ಲೆಕ್ಕ ಸಾಗಿ ಮುನ್ನೂರರ ಗಡಿ ದಾಟುವಷ್ಟರಲ್ಲಿ ಬೀಡಿಕಟ್ಟಿನ ರಾಶಿ ಕರಗಿತ್ತು. ‘ಅವ್ವ ಮುನ್ನೂರು ಕಟ್ಟೈತೆ’ ಎಂದ ಬಸವನಿಗೆ, ‘ಹೆಂಗೊ ಎಪ್ಪೈತ್ತೈದು ರುಪಾಯಿ ಆಗುತ್ತೆ. ಇನ್ನು ಮೂವತ್ರುಪಾಯಿಗೇನು ಮಾಡದು? ಇವೊತ್ತೊಂದಿನ ಆದ್ರು ಕುಡಿದಲೆ ಬಂದ್ರೆ ಏನಾರ ಮಾಡ್ಬೌದು’ ಎನ್ನುತ್ತ ಎದ್ದು ಬೀಡಿಕಟ್ಟುಗಳನ್ನು ಚೀಲಕ್ಕೆ ತುಂಬತೊಡಗಿದಳು. ಅವ್ವನ ಕಾರ್ಯವನ್ನೇ ಗಮನಿಸುತ್ತಿದ್ದ ಬಸವನಿಗೆ ತನ್ನ ಜೇಬಿನಲ್ಲಿದ್ದ ಐದು ರುಪಾಯಿಗಳು ನೆನಪಿಗೆ ಬಂದು, ‘ಅವ್ವ ಅನಿತ ಮಿಸ್ ಕಾಫಿ ಕುಡಿ ಅಂತ ಐದು ರುಪಾಯಿ ಕೊಟ್ಟಿದ್ರು. ಅದನ್ನು ಸೇರಿಸಿದ್ರೆ ಎಂಬತ್ತು ರುಪಾಯಿ ಆಗುತ್ತೆ. ಇನ್ನು ಇಪ್ಪತ್ತೈದು ರುಪಾಯಿ ಬೇಕು’ ಎಂದ. ‘ಇರ್ಲಿ ನೋಡಾನ. ಈಗ ನೀನು ಕತ್ಲಾಗದ್ರಲ್ಲಿ ವಸಿ ಓದ್ಕೊ ಹೊಗು’ ಎಂದು ಮತ್ತೆ ಬೀಡಿ ಕಟ್ಟುವ ಕಡೆಗೆ ಗಮನ ನೀಡಿದಳು.

ಬಸವ ವಿಜ್ಞಾನದ ಕೇಡಿ ಮಾಸ್ಟರು ಮಾಡಿದ್ದ ಮಿಂಚು-ಗುಡುಗು ಪಾಠ ತಗೆದು ಓದಲು ಆರಂಭಿಸಿದ. ಸ್ವಲ್ಪ ಹೊತ್ತು ಓದುವಷ್ಟರಲ್ಲಿ ಮತ್ತೆ ಅನಿತ ಮೇಡಂ ನೆನಪಿಗೆ ಬಂದರು. ಪುಸ್ತಕ ಮಡಚಿಟ್ಟು ಕನ್ನಡದ ಪುಸ್ತಕ ಎತ್ತಿಕೊಂಡು, ‘ನಡೆ ಮುಂದೆ ನಡೆಮುಂದೆ ಹಿಗ್ಗದಯೆ ಕುಗ್ಗದಯೆ ನಡೆಮುಂದೆ’ ಎಂದು ಪದ್ಯವನ್ನು ರಾಗವಾಗಿ ಓದತೊಡಗಿದ. ಅನಿತ ಮೇಡಂ ಹೆಸರು ಎಷ್ಟು ಚನ್ನಾಗಿದೆ ಎನ್ನಿಸಿ ಪದ್ಯ ಓದುವುದನ್ನು ನಿಲ್ಲಿಸಿ ಯೋಚಿಸಿದ. ಅನಿತ ಅಂದರೆ ಏನು? ತಿಳಿಯದೆ ತಲೆ ಕೊಡವಿದಂತೆ ಮಾಡಿದ. ಯಾವುದೋ ದೇವರ ಹೆಸರೇ ಇರಬೇಕು ಅನ್ನಿಸಿತು. ನನ್ನ ಹೆಸರು ಬಸವ. ಬಸವ ಅಂದ್ರೆ ಎತ್ತು. ನನಗೆ ಯಾರು ಈ ಎತ್ತು ಅನ್ನೊ ಹೆಸರಿಟ್ಟರು ಎಂದುಕೊಂಡು ಅವ್ವನ ಕಡೆಗೆ ತಿರುಗಿ, ‘ಅವ್ವ ನನಗೆ ಯಾರು ಬಸವ ಅಂತ ಹೆಸರಿಟ್ಟಿದ್ದು?’ ಎಂದ. ಮಗ ಓದುವದನ್ನು ನಿಲ್ಲಿಸಿ ತಲೆ ಕೊಡವಿದ್ದನ್ನು ನೋಡುತ್ತಲೇ ಇದ್ದ ಅವ್ವ ಒಂದು ಕ್ಷಣ ತಡೆದು, ‘ಇನ್ನಾರು? ನಿಮ್ಮ ಚಿಕ್ಕಪ್ಪನೆ ಹೆಸರಿಟ್ಟಿದ್ದು. ಅದಾರೊ ಬಸವಣ್ಣನಂತೆ. ದೇವರ ಸಮಾನವಂತೆ. ಪ್ರತಿಯೊಬ್ಬರಲ್ಲಿನೂ ದೇವರನ್ನೆ ಕಾಣುತ್ತಿದ್ದನಂತೆ. ಅದಕ್ಕೆ ನೀನು ಅವನಾಗೆ ಆಗ್ಬೇಕು ಅಂತ ಬಸವ ಅಂತೆ ಹೆಸರಿಟ್ಟು ನಿನ್ನ ಸ್ಕೂಲಿಗೆ ಸೇರಿಸ್ದ’ ಎಂದಳು. ಬಸವನಿಗೆ ತನಗೊಬ್ಬ ಚಿಕ್ಕಪ್ಪ ಇದ್ದುದ್ದು, ಆತ ಸತ್ತಿದ್ದು ಗೊತ್ತಿತ್ತು. ಆದ್ರು ಕೇಳಿದ ‘ಅವ್ವ ಚಿಕ್ಕಪ್ಪನೆ ನನ್ನ ಸ್ಕೂಲಿಗೆ ಸೇರ್ಸಿದ್ದಾ?’ ಎಂದು. ‘ಹೂಂನಪ್ಪ. ಅವನಿಗೊ ನಿನ್ನನ್ನ ಬಾರಿ ಒದುಸ್ಬೇಕು ಅಂತ ಆಸೆ. ಆದ್ರೆ ದೇವ್ರು ಅವನನ್ನ ಬೇಗ ಕರಿಸ್ಕಂಡ. ಸಾಯೋವಾಗ ನನ್ಕೈಲಿ ಮಾತ ತಗೊಂಡ, ಏನಾದ್ರು ಮಾಡಿ ಬಸವನ್ನ ಚನ್ನಾಗಿ ಓದ್ಸಿ, ಸ್ಕೂಲ್ ಬಿಡಿಸ್ಬೇಡಿ. ಅಂತ. ಅದಕ್ಕೆ ನಾನು ಹೊಟ್ಟೆ ಬಟ್ಟೆ ಕಟ್ಟಿ ನಿನ್ನನ್ನ ಒದಸ್ತೈದಿನಿ’ ಎಂದು ಕಣ್ಣು ಮೂಗು ಒರೆಸಿಕೊಂಡಳು. ತುಂಬಾ ಹೊತ್ತು ಏನೂ ಮಾತನಾಡದೆ ಚಿಕ್ಕಂದಿನಲ್ಲಿ ತಾನು ಕಂಡಿದ್ದ ತನ್ನ ಚಿಕ್ಕಪ್ಪನನ್ನೇ ಕಾಣತೊಡಗಿದ. ತನಗೆ ಹೆಸರಿಟ್ಟ ಚಿಕ್ಕಪ್ಪ ಪುಟ್ಟಿಗೆ ಏಕೆ ಹೆಸರಿಡಲಿಲ್ಲ? ಎಂದುಕೊಂಡ. ಪುಟ್ಟಿ ಹುಟ್ಟೊ ಹೊತ್ಗೆ ಚಿಕ್ಕಪ್ಪ ಸತ್ತು ಹೋಗಿದ್ದು ಅವನಿಗೆ ಮರತೇ ಹೋಗಿತ್ತು. ‘ಅವ್ವ ಪುಟ್ಟಿಗೆ ಏಕೆ ಇನ್ನು ಹೆಸರಿಟ್ಟಿಲ್ಲ?’ ಎಂದ. ‘ಅವ್ಳಿಗೇನ ಈಗ ಅವಸ್ರ. ಏನೊ ಒಂದು ಇಟ್ಟಿದ್ರಾಯ್ತು. ಈಗ ನೀನು ಓದ್ಕೊ’ ಎಂದಳು. ‘ಆಗಲ್ಲ ಕಣವ್ವ. ಪುಟ್ಟಿಗೆ ಏನೊ ಒಂದು ಹೆಸ್ರಿಡದ್ ಬ್ಯಾಡ. ನನ್ನ ತಂಗಿಗೆ ನಾನೆ ಒಂದು ಒಳ್ಳೆ ಹೆಸ್ರು ಇಡ್ತಿನಿ’ ಎಂದು ಮತ್ತೆ ಪುಸ್ತಕ ಎತ್ತಿಕೊಂಡ.

ಕತ್ತಲಾಗಿ ಅಕ್ಷರಗಳು ಕಾಣಿಸದಂತಾದಾಗ ಅಪ್ಪ ಮನೆಗೆ ಕಾಲಿಟ್ಟ. ಅವನು ಒಳಗೆ ಬರುವ ಮೊದಲೇ ಸೆರಾಪಿನ ವಾಸನೆ ಬಂತು. ಬಂದವನೇ ಗೋಡೆಗೆ ವೊರಗಿ ಗುಟುರು ಹಾಕತೊಡಗಿದ. ಎದರಿದ ಪುಟ್ಟಿ ಅಣ್ಣನ ಕೈಹಿಡಿದು ಕುಳಿತುಕೊಂಡಳು. ಅದವಾದನ್ನೂ ಗಮನಿಸಿಯೇ ಇಲ್ಲವೆನ್ನುವಂತೆ ಬೀಡಿ ಚೀಲ ತಗೆದುಕೊಂಡು ಹೊರಟ ತಾಯಿಯನ್ನು ಬಸವ ಪುಟ್ಟಿಯ ಕೈಹಿಡಿದು ಹಿಂಬಾಲಿಸಿದ.

* * * * * * * * * * * * *

ಬೆಳಿಗ್ಗೆ ಸ್ಕೂಲಿಗೆ ಹೊರಟಾಗ ಬಸವನ ಬಳಿಯಿದ್ದ ಐದು ರುಪಾಯಿಯನ್ನು ಸೇರಿಸಿ, ಎಂಬತ್ತು ರುಪಾಯಿಗಳನ್ನು ಬಸವನ ಕೈಗೆ ಕೊಡುತ್ತ, ‘ನಿಮ್ಮ ಹೆಡ್ಮಿಸ್ಸಿಗೆ ಹೇಳಪ್ಪ. ಇರೋದೆ ಇಷ್ಟು. ಇನ್ನು ಹೇಗಾದ್ರು ಮಾಡಿ ಉಳ್ದಿದ್ದು ಇಪ್ಪತ್ತೈದ್ರುಪಾಯಿನ ಮುಂದಿನ ವಾರ ಕೊಡ್ತಿವಿ ಅಂತ’ ಎಂದ ಅವ್ವನಿಗೆ ಏನು ಹೇಳಬೇಕೆಂದು ಬಸವನಿಗೆ ತೋಚಲಿಲ್ಲ. ಪುಟ್ಟಿಗೆ ‘ಇವತ್ತು ಶನಿವಾರ. ಬೇಗ ಬರ್ತಿನಿ. ಆಟ ಆಡುವ’ ಎಂದು ಬ್ಯಾಗನ್ನು ಹೆಗಲಿಗೇರಿಸಿ ಹೊರಟೇಬಿಟ್ಟ. ‘ಹುಷಾರು’ ಎಂದ ಅವ್ವನ ದ್ವನಿ ಅಸ್ಪಷ್ಟವಾಗಿ ಬಸವನ ಕಿವಿಗೆ ಬಿತ್ತು.

ಸ್ಕೂಲಿಗೆ ಬಂದವನೆ, ಪ್ರೆಯರಿಗಿಂತ ಮುಂಚೆಯೇ ಫೀಸು ಕಟ್ಟಿಬಿಟ್ಟರೆ ಒಳ್ಳೆದು ಅಂದುಕೊಂಡು ಹೆಡ್ಮಿಸ್ಸಿನ ರೂಮಿಗೆ ನುಗ್ಗಿದ. ತನ್ನನ್ನು ಒಂದು ಪ್ರಾಣಿಯೆಂಬಂತೆ ನೋಡುತ್ತಿದ್ದ ಹೆಡ್ಮಿಸ್ಸಿನ ಮುಂದೆ ಕೈಕಟ್ಟಿ ನಿಂತು, ‘ಮಿಸ್ ನಮ್ಮವ್ವ ಹೇಳಿದ್ರು, ಈಗ ಇರೋದೆ ಎಂಬತ್ರುಪಾಯಿಯಂತೆ. ಉಳ್ದಿದ್ದನ್ನ ಮುಂದಿನ ವಾರ ಕೊಡ್ತರಂತೆ’ ಎಂದು ಒಂದೇ ಉಸಿರಿಗೆ ಹೇಳಿ, ಜೇಬಿನಿಂದ ನೋಟುಗಳನ್ನು ತಗೆದು ಕೈ ನೀಡಿದ. ಆತ ನೀಡಿದ ಕೈ ಕಡೆಗೆ ನೋಡದೆ ಹೆಡ್ಮಿಸ್ ಗುಡುಗಿದರು. ‘ಇದೇನ್ ತರ್ಕಾರಿ ವ್ಯಪಾರ ಅಂದ್ಕೊಡಿದಿಯಾ ನೀನು ಇವತ್ತತ್ತು ನಾಳೆ ಹತ್ತು ಕೊಡದಿಕ್ಕೆ. ಹೋಗು. ನಾಲ್ಕು ದಿನ ಸ್ಕೂಲಿಗೆ ಸೇರಸ್ದಿದ್ರೆ ಆಗ ಗೊತ್ತಾಗುತ್ತೆ ನಿಮ್ಮವ್ವನಿಗೆ. ಗತಿಯಿಲ್ಲದ ಮೆಲೆ ಯಾವ್ದಾದ್ರು ಗೌರ್ನಮೆಂಟ್ ಸ್ಕೂಲಲ್ಲಿ ಹೋಗಿ ಸಾಯದ್ ಬಿಟ್ಟು ಇಲ್ಲಿ ಬಂದು ನನ್ನ ತಲೆ ತಿಂತವೆ. ಇಲ್ಲಿ ಇವರ ಕಾಟ, ಅಲ್ಲಿ ಮೇನೆಜ್ಮೆಂಟಿನವರ ಕಾಟ, ಮನೇಲಿ ಗಂಡ ಮಕ್ಕಳ ಕಾಟ’ ಎಂದು ಸ್ಕೂಲಿನ ಹೆಂಚು ತುಸು ಅಳ್ಳಾಡುವಂತೆಯೇ ಕೂಗು ಹಾಕಿದರು. ನಡಗುವ ತೊಡೆಯನ್ನು ಮರೆತು ನಿಂತಿದ್ದ ಬಸವನಿಗೆ ‘ನಾನು ಎಂಬತ್ತು ರುಪಾಯಿ ತಂದಿದ್ದೀನಿ. ಹತ್ತು ರುಪಾಯಿ ಅಲ್ಲ’ ಎಂದು ಕೂಗಿ ಹೇಳಬೇಕೆನಿಸಿದರೂ ನಾಲಗೆ ಹೊರಳಲೇ ಇಲ್ಲ. ಆಗ ಬಾಗಿಲಲ್ಲಿ ಪ್ರತ್ಯಕ್ಷರಾದ ಅನಿತ ಮಿಸ್ಸು, ‘ಏನಿದು?’ ಎಂದು ನೋಡುತ್ತಿದ್ದರೆ, ಬಸವನಿಗೆ ಸ್ವಲ್ಪ ಧೈರ್ಯ ಬಂದು, ‘ಮಿಸ್, ನೂರೈದ್ರುಪಾಯಿ ಫೀಸು ಕಟ್ಟಬೇಕು. ಅವ್ವ ಎಂಬತ್ರುಪಾಯಿ ಅಷ್ಟೆ ಕೊಟ್ಟಿದ್ದು. ಉಳ್ದಿದ್ದನ್ನ ಮುಂದಿನ ವಾರ ಕೊಡುತ್ತಂತೆ’ ಎಂದು ಒಂದೇ ಉಸಿರಿಗೆ ಹೇಳಿದ. ಆತನನ್ನೆ ತಿನ್ನುವಂತೆ ನೊಡಿದ ಹೆಡ್ಮಿಸ್ ‘ನೋಡಿ ಅನಿತ. ಎರಡು ತಿಂಗಳಿನಿಂದ ಫೀಸ್ ಕಟ್ಟಿಲ್ಲ. ಕೇಳಿದ್ರೆ ಇವತ್ತಿಷ್ಟು ನಾಳೆಯಿಷ್ಟು ಅಂತಾನೆ. ಫೀಸ್ ಕಟ್ಟಾಕಾಗದ್ಮೇಲೆ ಏಕೆ ಪ್ರವೈಟ್ ಸ್ಕೊಲಿಗೆ ಬಂದು ಒದ್ದಾಡಬೇಕು’ ಅಂದರು. ಹೆಡ್ಮಿಸ್ಸಿನ ಮಾತಿಗೆ ಏನನ್ನೂ ಹೇಳದ ಅನಿತ ಬಸವನ ಕಡೆಗೆ ತಿರುಗಿ ‘ಎಲ್ಲೊ ಆ ದುಡ್ಡು ಎಷ್ಟಿದೆ ಕೊಡು’ ಎಂದರು. ಬಸವ ಕೊಟ್ಟ ನೋಟುಗಳನ್ನು ಎಣಿಸಿ ನೋಡುವಾಗ ನೆನ್ನೆ ತಾವು ಕೊಟ್ಟ ಐದು ರುಪಾಯಿ ನೋಟು ಅಲ್ಲಿದ್ದುದನ್ನು ಗಮನಿಸಿದ ಅನಿತ ಮಿಸ್ ಹೆಡ್ಮಿಸ್ಸಿನ ಕಡೆ ತಿರುಗಿ ‘ನೋಡಿ ಮೇಡಂ, ನೆನ್ನೆ ಇವ್ನು ಹೊಟ್ಟೆಗೇನು ತಿನ್ನದೆ ಹಾಗೇ ಸ್ಕೂಲಿಗೆ ಬಂದಿದ್ದ. ನಾನೆ ಐದು ರುಪಾಯಿ ಕೊಟ್ಟು ಏನಾದ್ರು ತಿನ್ನು ಅಂದಿದ್ದೆ. ನೋಡಿ ಇಲ್ಲಿ. ಇದೇ ನೋಟು. ಅದನ್ನು ಖರ್ಚು ಮಾಡದೆ ಹೇಗಾದ್ರು ಮಾಡಿ ಫೀಸು ಕಟ್ಟಬೇಕು ಅಂತ ಹೇಗೊ ಇದ್ದುದ್ರಲ್ಲಿ ಅಡ್ಜಸ್ಟ್ ಮಾಡಿ ಎಂಬತ್ತು ರುಪಾಯಿ ಕೊಟ್ಟು ಕಳ್ಸಿದಾರೆ ಅವರ ತಾಯಿ. ಏನೊ ಬಡತನ. ಅದ್ರಲ್ಲೂ ಮಗನ್ನ ಓದಸ್ಬೇಕು ಅನ್ನೊ ಆಸೆಯಿಂದ ಬಸ್‌ಸ್ಟ್ಯಾಂಡಲ್ಲಿ ಮೂಟೆ ಹತ್ತು, ಬೀಡಿ ಕಟ್ಟಿ ಇವನ ತಂದೆ ತಾಯಿ ಸ್ಕೊಲಿಗೆ ಕಳ್ಸಿದಾರೆ. ನಿಮ್ಮಂತವರೆ ಹೀಗೆ ಮಕ್ಳನ್ನ ಡಿಸಪಾಯಿಂಟ್‌ಮೆಂಟ್ ಮಾಡಿದ್ರೆ ಹೇಗೆ’ ಎಂದವರೆ ಬರಬರನೆ ಹೊರಗೆ ಹೋದರು. ಅನಿತ ಮೇಡಂ ಹೇಳೊ ಮಾತುಗಳನ್ನೇ ಕೇಳುತ್ತಿದ್ದ ಬಸವನಿಗೆ ಅವರು ಹೋದ ನಂತರ ಏನು ಮಾಡಬೇಕೆಂದು ತಿಳಿಯಲಿಲ್ಲ. ಹಾಗೆ ಹೆಡ್ಮಿಸ್ಸಿನ ಕಡೆಗೆ ನೋಡುವುದಕ್ಕೂ ಭಯವಾಯಿತು. ಇಲ್ಲೇ ನಿಲ್ಲಲೋ ಹೊರಗೆ ಓಡಲೋ ಎಂದು ಒಂದು ಕ್ಷಣ ಗೊಂದಲಕ್ಕೀಡಾದ. ಅಷ್ಟರಲ್ಲಿ ಮತ್ತೆ ಅಲ್ಲಿಗೆ ಬಂದ ಅನಿತ ಮಿಸ್ಸು ಹೆಡ್ಮಿಸ್ಸಿಗೆ ‘ತಗೊಳ್ಳಿ ಮೇಡಂ. ನೂರೈದು ರುಪಾಯಿಯಿದೆ. ಬಸವನ ಫೀಸು’ ಎಂದು ಹೇಳಿ, ಬಸವನ ಕೈಹಿಡಿದು ಹೊರಬಂದರು.

* * * * * * * * * * * * * * * * *

ಮದ್ಯಾಹ್ನ ಕಡೇ ಬೆಲ್ಲಾಗುವುದನ್ನೇ ಕಾಯುತ್ತಿದ್ದ ಬಸವ ಬಿಟ್ಟ ಬಾಣದಂತೆ ರೊಯ್ಯನೆ ಮನೆಯ ಕಡೆಗೆ ಓಡಿದ. ಮನೆಯಲ್ಲಿ ಅವ್ವ ಬೀಡಿ ಕಟ್ಟುತ್ತಿದ್ದರೆ, ಪುಟ್ಟಿ ಅವ್ವನ ಹೆಗಲಿಗೆ ಹೊರಗಿ ದೂರಿ ತೂಗಿಕೊಳ್ಳುತ್ತಿದ್ದಳು. ಬಂದವನೆ ಬ್ಯಾಗನ್ನು ಮೂಲೆಗೆಸೆದು, ‘ಅವ್ವ ಅವ್ವ ಎಲ್ಲಾ ಫೀಸುನ್ನು ಅನಿತ ಮಿಸ್ಸೆ ಕಟ್ಟಿದ್ರು. ಇಪ್ಪತ್ತೈದ್ರುಪಾಯಿನ ಕೊಡೋದು ಬ್ಯಾಡವಂತೆ. ಇನ್ಮೇಲೆ ನನ್ನ ಎಲ್ಲ ಫೀಸು ಅವರೆ ಕಟ್ಟಿ ಅವರೆ ಓದುಸ್ತಾರಂತೆ. ಅನಿತ ಮಿಸ್ಸಿನ ಗಂಡನೂ ಸ್ಕೂಲಿನ ಹತ್ರ ಬಂದಿದ್ರು. ಅವ್ರು ನಾವೇ ಒದುಸ್ತೀವಿ ಚೆನ್ನಾಗಿ ಓದ್ಬೇಕು ಅಂದ್ರು’ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟ. ಕಟ್ಟುತ್ತಿದ್ದ ಬೀಡಿಯನ್ನು ಪಕ್ಕಕ್ಕಿರಿಸಿ ಬಸವನನ್ನು ಬರಸೆಳೆದು ಅಪ್ಪಿಕೊಂಡ ಅವ್ವ ‘ಆ ನನ್ನ ತಾಯಿ ಹೊಟ್ಟೆ ತಣ್ಣಗಿರ್ಲಪ್ಪ. ನನ್ಕೈಲಿ ಎಷ್ಟಾಗುತ್ತೋ ಅಷ್ಟುನ್ನ ನಾನು ಮಾಡ್ತಿನಿ. ನೀನು ಮಾತ್ರ ಚನ್ನಾಗಿ ಓದಪ್ಪ’ ಎಂದು ಕಣ್ಣೀರನ್ನೊರೆಸಿಕೊಂಡಳು. ಬಳಿಗೆ ಬಂದ ಪುಟ್ಟಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತ ಬಸವ ತನ್ನ ಅವ್ವನಿಗೆ ‘ ಅವ್ವ. ಪುಟ್ಟಿಗೆ ಅನಿತ ಅಂತಲೆ ಹೆಸರಿಡುವ. ಇವ್ಳು ಅವ್ರ ಹಾಗೆ ಚನ್ನಾಗಿ ಓದಿ ಟೀಚರ್ ಆಗ್ಬೇಕು. ಅವ್ರ ತರ ದೇವ್ರಾಗ್ಬೇಕು. ಮಕ್ಕಳ ಮನಸ್ಸಿನಲ್ಲಿರೊ ದೇವ್ರನ್ನು ಕಾಣತರ ಆಗ್ಬೇಕು. ಅಲ್ವೇನವ್ವ’ ಎಂದು ತಂಗಿಯನ್ನು ಮುದ್ದಿಸಿದ. ‘ಹಾಗೆ ಆಗ್ಲಪ್ಪ. ಪುಟ್ಟಿ ಇವೊತ್ತಿಂದ ಅನಿತ’ ಎಂದು ಆಕೆಯೂ ಮಗಳನ್ನು ಮುದ್ದುಸಿದಳು. ಮದ್ಯಾಹ್ನದ ಊಟದ ವಿಷಯ ಅವರಾರ ಗಮನಕ್ಕೂ ಬರಲೇ ಇಲ್ಲ.

* * * * * * * * * * * *