Monday, March 17, 2014

ಜನಪದ ರಾಮಾಯಣದ ಕೆಲವು ಕಥೆಗಳು

ಹಳ್ಳಿಯ ಕಡೆ, ಜನರು ತುಂಬಾ ಸುಸ್ತಾಗಿ ನಿಟ್ಟುಸಿರು ಬಿಡುವಾಗ, ತಮ್ಮ ಕೈಮೀರಿ ಹೋದ ಸಂಕಟದ ಸಂದರ್ಭಗಳನ್ನು ನೆನೆಪಿಸಿಕೋಳ್ಳುವಾಗ, ಯಾವುದಾದರು ಒಂದು ಬಂಧನದಿಂದ ಕಳಚಿಕೊಳ್ಳುವಾಗ “ಓ ಲಕ್ಷ್ಮಣಾ” ಎಂದು ಉದ್ಘಾರ ತೆಗೆಯುತ್ತಾರೆ. ಈ ಉದ್ಘಾರ ಮೊದಲು ಬಂದಿದ್ದು ಮರೀಚನ ಬಾಯಿಯಿಂದ; ರಾಮನ ಧ್ವನಿಯ ರೂಪದಲ್ಲಿ! ಮಾರೀಚನ ಶರೀರ, ರಾಮನ ಶಾರೀರ ಇವೆರಡರ ಸಂಯೋಗದಿಂದ ಹುಟ್ಟಿದ ಈ ಉದ್ಘಾರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಿದೆ. “ಓ ಲಕ್ಷ್ಮಣಾ ಒಲೆಗೆ ಸೌದೆಯಿಲ್ಲ” ಎಂಬ ಉದ್ಘಾರವೂ ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿನ ಜನರ ಉದ್ಘಾರವಾಗಿ ಹೊರಹೊಮ್ಮುವುದನ್ನು ಕಾಣಬಹುದು.
ಕೇಳಬಾರದ್ದನ್ನು ಕೇಳಿದಾಗ, ಅನಪೇಕ್ಷಿತವಾದುದನ್ನು ಕಂಡಾಗ, ಕೇಳಿದಾಗ ಜನರು “ರಾಮ ರಾಮ” ಎಂದು ಎರಡೂ ಕೈಗಳಿಂದ ಕಿವಿ ಮುಚ್ಚಿಕೊಳ್ಳುತ್ತಾರೆ. ಕಣ್ಣುಗಳು ತಂತಾನೆ ಮುಚ್ಚಿಕೊಳ್ಳುತ್ತವೆ. ಈ “ರಾಮ ರಾಮ” ಎಂಬ ಉದ್ಘಾರವನ್ನು ಮೊದಲ ಭಾರಿಗೆ ಉದ್ಘರಿಸಿದವರು ಯಾರು? ಜನಪದ ರಾಮಾಯಣದಲ್ಲಿ ಈ ಪ್ರಶ್ನೆಗೆ ಒಂದು ಕಥಯೇ ಉತ್ತರರೂಪದಲ್ಲಿದೆ. ರಾಮ-ಲಕ್ಷ್ಮಣರು ಕಪಿಸೈನ್ಯದ ನೆರವಿನೊಂದಿಗೆ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಪ್ರವೇಶ ಪಡೆಯುತ್ತಾರೆ. ಅಂದು ಸಂಜೆ ರಾಮ ಏಕಾಂತದಲ್ಲಿದ್ದಾಗ ಒಂದು ವಿಚಾರ ಹೊಳೆಯುತ್ತದೆ. ರಾವಣನನ್ನು ಕೊಂದು ಸೀತೆಯನ್ನು ಕಾಪಾಡುವದಕ್ಕೋಸ್ಕರ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಬಂದಿದ್ದೇವೆ. ಸೀತೆಯೇನೊ ನಮ್ಮ ನಿರೀಕ್ಷೆಯಲ್ಲೇ ಇದ್ದಾಳೆ ಎಂದು ಆಂಜನೇಯ ಹೇಳಿದ್ದಾನೆ. ಆಳು ಮಾಡಿದ್ದು ಹಾಳು! ಜೊತೆಗೆ ಕೋತಿ ಬೇರೆ!! ಅವನ ಮಾತನ್ನಷ್ಟೇ ನಂಬಿ, ನಾನು ಲಂಕೆಯ ಮೇಲೆ ಯುದ್ಧ ಸಾರಿದ್ದೇನೆ. ರಾವಣನನ್ನೇನೊ ಕೊಲ್ಲಬಹುದು. ಆದರೆ… ಒಂದು ಪಕ್ಷ ಸೀತೆಯೇನಾದರೂ ರಾವಣನಿಗೆ ಮನಸೋತಿದ್ದರೆ ನನ್ನ ಹೋರಾಟವೇ ನಿರರ್ಥಕವಾಗುತ್ತದೆಯಲ್ಲವೆ? ಆದ್ದರಿಂದ ಮೊದಲು ಸೀತೆಯ ಮನಸ್ಸಿನಲ್ಲೇನಿದೆ ಎಂದು ತಿಳಿದುಕೊಳ್ಳಬೇಕು. ಎಂದು ಆಲೋಚಿಸಿದ ರಾಮ ಜೋಗಿಯ ವೇಷ ಧರಿಸಿ, ಸೀತೆಯನ್ನಿಟ್ಟಿದ್ದ ಅಶೋಕವನಕ್ಕೆ ಬರುತ್ತಾನೆ. ಅಲ್ಲಿ ಆತನ ಕಿಂದರಿಯ ನಾದಕ್ಕೆ, ಸೀತೆಯ ಕಾವಲಿಗಿದ್ದವರೆಲ್ಲಾ ಮಾಯದ ನಿದ್ದೆಗೆ ಹೋಗುತ್ತಾರೆ.
ಕಿಂದರಿಯ ನಾದದೊಂದಿಗೆ ರಾಮನಾಮವನ್ನು ಸೇರಿಸಿ ಹಾಡುತ್ತಿದ್ದುದರಿಂದ ಸೀತೆಗೆ ಸಂತೋಷವಾಗುತ್ತದೆ. ಜೋಗಿರಾಮನು, ರಾಮನನ್ನು ಹೊಗಳಿ ಹೊಗಳಿ ಹಾಡುತ್ತಾನೆ. ಸೀತೆ ಸಂತೋಷದಿಂದ ಕೇಳುತ್ತಾಳೆ. ಕೊನೆಯಲ್ಲಿ ಜೋಗಿರಾಮ, “ನೋಡಮ್ಮ. ರಾಮ ಎಷ್ಟೇ ಒಳ್ಳೆಯವನಿರಬಹುದು. ಆದರೆ ಕಡಲನ್ನು ದಾಟಿ ಬಂದು, ರಾಕ್ಷಸರನ್ನೆಲ್ಲಾ ಕೊಂದು, ನಿನ್ನನ್ನು ಬಿಡಿಸಿಕೊಂಡು ಹೋಗುತ್ತಾನೆ ಎನ್ನುವುದು ದೂರದ ಮಾತು. ಬಿಡಿಸಿಕೊಂಡು ಹೋದರೂ ಇಷ್ಟು ದಿನ ದೂರವಿದ್ದ ನಿನ್ನ ಮೇಲೆ ಆತನಿಗೆ ಪ್ರೀತಿ ಉಳಿದಿರುತ್ತದೊ? ಇಲ್ಲವೊ? ಆದ್ದರಿಂದ ಸುಮ್ಮನೆ ನೀನು ಅವನನ್ನು ಮರೆತು ನನ್ನನ್ನೇ ಏಕೆ ಮದುವೆಯಾಗಬಾರದು?” ಎನ್ನುತ್ತಾನೆ. ತಕ್ಷಣ ಸೀತೆ ತನ್ನೆರಡು ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು, “ರಾಮ ರಾಮ” ಎಂದು ಉದ್ಘರಿಸುತ್ತಾಳೆ. ಜೋಗಿಯನ್ನು ನೋಡಲಾರದೆ ಮುಚ್ಚಿಕೊಂಡಿದ್ದ ಕಣ್ಣುಗಳು ತೆರೆಯುವಷ್ಟರಲ್ಲಿ ಜೋಗಿರಾಮ ಅಲ್ಲಿಂದ ಮರೆಯಾಗಿಬಿಟ್ಟಿರುತ್ತಾನೆ. ಮಾರುವೇಷದಲ್ಲಿದ್ದ ರಾಮನ ಎದುರಿಗೇ ಸ್ವತಃ ಸೀತೆಯ ಬಾಯಿಂದ ಹೊರ ಬಿದ್ದ ಈ ಉದ್ಘಾರ ಇಂದಿಗೂ ಜನಸಾಮಾನ್ಯರು ಕೇಳಬಾರದ್ದನ್ನು ಕೇಳಿದಾಗ ಬಳಸುತ್ತಾರೆ ಎಂಬುದು ಜನಪದರ ನಂಬಿಕೆ.
‘ಇಂದ್ರಜಿತುವು ಶತ್ರು ಸಂಹಾರಾರ್ಥ, ಶಕ್ತಿಯ ಸಿಧ್ಧಿಗಾಗಿ ನಡೆಸುತ್ತಿದ್ದ ನಿಕುಂಬಿಲಾ ಯಾಗವನ್ನು ಪೂರೈಸದಂತೆ ತಡೆದರೆ ಮಾತ್ರ ನಮಗೆ ಗೆಲುವು ಇಲ್ಲದಿದ್ದರೆ ಇಲ್ಲ’ ಎಂಬ ವಿಭೀಷಣನ ಸಲಹೆಯನ್ನು ಸ್ವೀಕರಿಸಿ ಲಕ್ಷ್ಮಣ, ಆಂಜನೇಯ-ಅಂಗದರ ಸಹಾಯದಿಂದ ಆ ಯಾಗಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆ ಯಾಗವನ್ನು ಅರ್ಧಕ್ಕೆ ತಡೆದುದರಿಂದಲೇ ಇಂದ್ರಜಿತುವನ್ನು ಲಕ್ಷ್ಮಣ ಕೊಲ್ಲುವಲ್ಲಿ ಯಶಸ್ವಿಯೂ ಆಗುತ್ತಾನೆ. ಇದು ಶಿಷ್ಟರಾಮಾಯಣಗಳ ಕಥೆ. ಆದರೆ ಜನಪದ ರಾಮಾಯಣದ ಕಥೆ ಇದೇ ಘಟನೆಯನ್ನು ಬೇರೊಂದು ರೂಪದಲ್ಲಿ ಅಭಿವ್ಯಕ್ತಿಗೊಳಿಸಿವೆ.
ಇಂದ್ರಜಿತುವಿನೊಂದಿಗಿನ ಯುದ್ಧದಲ್ಲಿ ರಾಮನ ಸೈನ್ಯಕ್ಕೆ ಹಿನ್ನೆಡೆಯಾಗಿರುತ್ತದೆ. ಆಗ, ಇಂದ್ರಜಿತುವನ್ನು ಕೊಲ್ಲುವ ಬಗ್ಗೆ ಮಂತ್ರಾಲೋಚನೆ ನೆಡೆಯುತ್ತಿರುತ್ತದೆ. ವಿಭೀಷಣ, “ಯಾರು ಹದಿನಾಲ್ಕು ವರ್ಷಗಳ ಕಾಲ ನಿರಂತರವಾಗಿ ಉಪವಾಸ ಮಾಡಿರುತ್ತಾರೊ, ಬ್ರಹ್ಮಚರ್ಯ ಪಾಲಿಸಿರುತ್ತಾರೊ ಅಂಥವರು ಮಾತ್ರ ಇಂದ್ರಜಿತುವನ್ನು ಸುಲಭವಾಗಿ ನಿಗ್ರಹಿಸಬಹುದು” ಎಂದು ಸೂಚನೆ ಕೊಡುತ್ತಾನೆ. ಆಗ ಎಲ್ಲರಿಗೂ ಯೋಚನೆಯಾಗುತ್ತದೆ, ಹದಿನಾಲ್ಕು ವರ್ಷ ಉಪವಾಸ ಮಾಡಿರುವ ವ್ಯಕ್ತಿ ಸಿಗುವುದು ದುರ್ಲಭ ಎನ್ನಿಸುತ್ತದೆ. ತಕ್ಷಣ ಮೇಲೆದ್ದ ಲಕ್ಷ್ಮಣ “ನಾನು ಇಂದ್ರಜಿತುವನ್ನು ಕೊಲ್ಲಬಲ್ಲೆ” ಎನ್ನುತ್ತಾನೆ. ರಾಮನಿಗೆ ಆಶ್ಚರ್ಯ! “ಲಕ್ಷ್ಮಣ ನೀನು ಹದಿನಾಲ್ಕು ವರ್ಷ ಬ್ರಹ್ಮಚರ್ಯವನ್ನು ಪಾಲಿಸಿದ್ದೀಯ. ಆದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಉಪವಾಸವನ್ನೂ ಮಾಡಿದ್ದೀಯಾ?” ಎಂದು ಪ್ರಶ್ನಿಸುತ್ತಾನೆ. ಲಕ್ಷ್ಮಣ “ಹೌದು” ಎನ್ನುತ್ತಾನೆ. ವನವಾಸದ ಉದ್ದಕ್ಕೂ, ಲಕ್ಷ್ಮಣ ತನ್ನೆದುರಿಗೆ ಕುಳಿತು ಊಟ ಮಾಡಿದ್ದು ರಾಮನ ನೆನಪಿಗೆ ಬರುವುದಿಲ್ಲ. ಆದರೂ ರಾಮನಿಗೆ ಸಂದೇಹ.
ಏನೋ ನೆನಪಿಸಿಕೊಂಡವನಂತೆ, “ಲಕ್ಷ್ಮಣ ಒಂದು ಗುಡ್ಡದ ಮೇಲೆ, ನಾವಿಬ್ಬರೂ ಹಸಿವು ನೀರಡಿಕೆಯಿಂದ ಬಳಲಿದ್ದಾಗ, ಸಿಕ್ಕ ಒಂದೇ ಒಂದು ಬೋರೆ ಹಣ್ಣನ್ನು ನಾನೇ ಎರಡು ಭಾಗ ಮಾಡಿ ನಿನಗೊಂದು ಭಾಗ ಕೊಟ್ಟಿದ್ದೆ. ಅದನ್ನು ನೀನು ತಿಂದೆಯಲ್ಲವೆ?” ಎನ್ನುತ್ತಾನೆ. ಆಗ ಲಕ್ಷ್ಮಣ, “ಅಣ್ಣ ನಾನು ವನವಾಸದ ಮೊದಲ ದಿನದಿಂದಲೇ ಉಪವಾಸದ ವ್ರತವನ್ನು ಕೈಗೊಂಡಿದ್ದೆ. ಅಂದು ನೀನು ಹಣ್ಣು ಕೊಟ್ಟಾಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ನೀರು ಹುಡುಕಿ ತರುತ್ತೇನೆ ಎಂದು ಎದ್ದು ಹೋದೆ. ನೀನು ನಿನ್ನ ಕೈಯಾರೆ ಕೊಟ್ಟ ಹಣ್ಣನ್ನು ಎಸೆಯಲು ಮನಸ್ಸು ಬರಲಿಲ್ಲ. ಆದರೆ ತಿಂದು ವ್ರತಭಂಗ ಮಾಡಿಕೊಳ್ಳಲೂ ಮನಸ್ಸಾಗಲಿಲ್ಲ. ತಿನ್ನದೆ, ಬೇರೆ ಯಾವ ರೂಪದಲ್ಲಾದರೂ ಸರಿ ಆ ಹಣ್ಣನ್ನು ನನ್ನ ದೇಹದ ಒಳಗೆ ಸೇರಿಸಿಬಿಟ್ಟರೆ ವ್ರತವೂ ಉಳಿಯುತ್ತದೆ; ನೀನು ಕೊಟ್ಟ ಹಣ್ಣನ್ನು ನಿರಾಕರಿಸಿದಂತೆಯೂ ಆಗುವುದಿಲ್ಲ ಎಂದುಕೊಂಡು, ನನ್ನ ಎಡದ ತೊಡೆಯ ಒಂದು ಭಾಗವನ್ನು ಬಾಣದಿಂದ ಸೀಳಿ, ಅದರೊಳಗೆ ಆ ಹಣ್ಣನ್ನು ಇಟ್ಟುಬಿಟ್ಟೆ. ಅದು ಈಗಲೂ ಹಾಗೆಯೇ ಇದೆ. ಈಗ ಅದನ್ನು ತೆಗೆದು ತೋರಿಸಲೆ” ಎಂದು ಬಾಣದಿಂದ ತೊಡೆಯನ್ನು ಸೀಳಲು ಮುಂದಾಗುತ್ತಾನೆ. ರಾಮ, ವಿಭೀಷಣ ಮೊದಲಾದವರು ಅದರ ಅಗತ್ಯವಿಲ್ಲ ಎನ್ನುತ್ತಾರೆ. ರಾಮನಿಗೆ ಎಲ್ಲವೂ ನೆನಪಾಗುತ್ತದೆ. ಅಂದು ತುಂಬಾ ಬಳಲಿದ್ದ ತನಗೆ, ನೀರು ಹುಡುಕಿ ತಂದು ಸೇವೆ ಮಾಡಿದ ತಮ್ಮನಿಗೆ ಏನಾದರೂ ಕೊಡಬೇಕೆನ್ನಿಸಿ, ತನ್ನಲ್ಲಿದ್ದ ಒಂದು ವಿಶೇಷ ಬಾಣವನ್ನು ವರವಾಗಿ ನೀಡಿದ್ದು ನೆನಪಾಗುತ್ತದೆ. ಎಲ್ಲರ ಹರಕೆಯೊಂದಿಗೆ, ಲಕ್ಷ್ಮಣ ಯುದ್ಧದಲ್ಲಿ ಇಂದ್ರಜಿತುವನ್ನು, ಅಂದು ರಾಮ ಕೊಟ್ಟ ಬಾಣದಿಂದಲೇ ಕೊಲ್ಲುತ್ತಾನೆ.
ಈ ಕಥೆಯನ್ನು ಎಂದೂ ಮರೆತು ಹೋಗದಂತೆ ನನ್ನಲ್ಲಿ ಉಳಿಸಿದ್ದು “ಬಾಣಾವರ” ಎಂಬು ಊರು ಮತ್ತು ಅದರ ಸ್ಥಳಪುರಾಣ! ಆ ಊರು ಇರುವ ಜಾಗದಲ್ಲೇ ರಾಮ ಲಕ್ಷ್ಮಣನಿಗೆ ಬಾಣವನ್ನು ವರವಾಗಿ ನೀಡಿದ್ದು. ಆದ್ದರಿಂದಲೇ ಆ ಊರಿಗೆ “ಬಾಣಾವರ” ಎಂಬ ಹೆಸರು ಎಂಬ ಇನ್ನೊಂದು ಜನಪದ ಐತಿಹ್ಯದ ಕಾರಣದಿಂದ ಈ ಕಥೆ ಇಂದಿಗೂ ನನ್ನ ಮನದಲ್ಲಿ ಅಚ್ಚ ಹಸುರಾಗಿದೆ. ಜೊತೆಗೆ, ನಾನು ಬಾಣಾವರ ಮಾರ್ಗದಲ್ಲಿ ಪ್ರಯಾಣ ಮಾಡುವಾಗಲೆಲ್ಲಾ ಅಲ್ಲಿ ಕಾಣುವ ಒಂದು ಸಣ್ಣ ಗುಡ್ಡದ ಮೇಲೆಯೇ ರಾಮ ಲಕ್ಷ್ಮಣನಿಗೆ ಬಾಣವನ್ನು ವರವಾಗಿ ಕೊಟ್ಟಿರಬೇಕು ಎಂದು ಚಿತ್ರಿಸಿಕೊಳ್ಳುತ್ತೇನೆ!
ಉತ್ತರ ರಾಮಾಯಣದ ಕಥೆಯು ಮೂಲ ವಾಲ್ಮೀಕಿ ಕೃತವಲ್ಲ ಎಂಬ ಮಾತೂ ಇದೆ. ಅದು ನಿಜವೂ ಇರಬಹುದು. ಭಾರತೀಯ ಸಮಾಜದಲ್ಲಿ ಜಾತಿವ್ಯವಸ್ಥೆಯ ಬಗೆಗಿನ ಶ್ರದ್ಧೆ ತೀವ್ರವಾಗಿದ್ದ ಕಾಲದಲ್ಲಿ ಅದು ಸೇರ್ಪಡೆ ಗೊಂಡಿರಲೂಬಹುದು. ತಪಸ್ಸು ಮಾಡಿದನೆಂಬ ಕಾರಣದಿಂದ ರಾಮನಿಂದಲೇ ಕೊಲೆಯಾಗುವ ಶೂದ್ರ ಶಂಭೂಕ, ಸೀತೆ ಮತ್ತೆ ಕಾಡುಪಾಲಾಗುವುದಕ್ಕೆ ಕಾರಣನಾದ ಅಗಸನ ಕಥೆ ಇವೆಲ್ಲವೂ ಅದಕ್ಕೆ ಸಾಕ್ಷಿಯಾಗಿವೆ. ಶಿಷ್ಟ ಪರಂಪರೆಯಲ್ಲಿ ಅಗಸನ ಮಾತಿನಿಂದ ನೊಂದ ರಾಮ, ಸೀತೆಯನ್ನು ಮತ್ತೆ ಕಾಡಿಗೆ ಅಟ್ಟುತ್ತಾನೆ. ಆದರೆ ಜನಪದ ರಾಮಾಯಣದ ಕಥೆಗಳು ಬೇರೆಯದನ್ನೇ ಹೇಳುತ್ತವೆ.

ಅಯೋಧ್ಯೆಗೆ ಹಿಂತಿರುಗಿ ಬಂದು ರಾಮ ಪಟ್ಟಾಭಿಷಕ್ತನಾಗಿರುತ್ತಾನೆ. ಸೀತೆ ತನ್ನ ತಂಗಿಯರೊಂದಿಗೆ, ಅತ್ತೆಯರೊಂದಿಗೆ, ಸಖಿಯರೊಂದಿಗೆ ಸುಖವಾಗಿ ಕಾಲ ಕಳೆಯುತ್ತಿರುತ್ತಾಳೆ. ಅವಕಾಶ ಸಿಕ್ಕಾಗಲೆಲ್ಲಾ ಅವರು ಸೀತೆಯಿಂದ ವನವಾಸದ, ಲಂಕೆಯ ವಿಷಯಗಳನ್ನು ಕಥೆಯ ರೂಪದಲ್ಲಿ ಕೇಳುತ್ತಿರುತ್ತಾರೆ. ಸೀತೆ ಲಂಕೆ ಮತ್ತು ರಾವಣನ ಬಗ್ಗೆ ಎಷ್ಟು ವರ್ಣಿಸಿದರೂ ಅವರಿಗೆ ಕುತೂಹಲ. ಹತ್ತು ತಲೆ, ಇಪ್ಪತ್ತು ಕೈಗಳಿರುವ ರಾವಣನ ಬಗ್ಗೆ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಒಂದು ದಿನ ಸೀತೆ, ಅವರಿಗೆ ಹೇಳುತ್ತಲೇ, ಅವರ ಕುತೂಹಲ ತಣಿಸಲೊ ಎಂಬಂತೆ ರಾವಣನ ಒಂದು ಚಿತ್ರವನ್ನು ಬಿಡಿಸುತ್ತಾಳೆ. ದಶಕಂಠನ ಚಿತ್ರವನ್ನು ಸಖಿಯರೆಲ್ಲರೂ ನೋಡುತ್ತಿರುವಾಗಲೇ ರಾಮ ಬಂದುಬಿಡುತ್ತಾನೆ. ಗಡಿಬಿಡಿಯಲ್ಲಿ ಅವರೆಲ್ಲಾ ಎದ್ದು ಹೋಗುವಾಗ, ಒಬ್ಬ ಸಖಿ ಆ ಚಿತ್ರವನ್ನು ಸೀತೆ ಕುಳಿತಿದ್ದ ಪಲ್ಲಂಗದ ಕೆಳಗೆ ತಳ್ಳಿಬಿಡುತ್ತಾಳೆ. ಯಾವುದೋ ಸಂದರ್ಭದಲ್ಲಿ ಅದು ರಾಮನ ಕಣ್ಣಿಗೆ ಬೀಳುತ್ತದೆ. ರಾಮನಿಗೆ ‘ಸೀತೆ ಇನ್ನೂ ಆ ದಶಕಂಠನನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದಾಳೆ. ಆದ್ದರಿಂದಲೇ ಆತನ ಚಿತ್ರವನ್ನು ಎರಕ ಹೊಯ್ದಂತೆ ಬರೆದು ಪಲ್ಲಂಗದ ಕೆಳಗೆ ಇಟ್ಟುಕೊಂಡಿದ್ದಾಳೆ’ ಎನ್ನಿಸುತ್ತದೆ. ಅವಳ ಮನಸ್ಸಿನಲ್ಲಿರುವ ಆ ಕೆಟ್ಟ ನೆನಪು ಕಳೆದು, ಆಕೆ ಪರಿಶುದ್ಧವಾಗುವವರೆಗೂ ಮತ್ತೆ ಆಕೆಗೆ ವನವಾಸವನ್ನು ವಿಧಿಸುತ್ತಾನೆ. ಅಂತೂ ಸೀತೆ ಎರಡನೆಯ ಬಾರಿಗೆ ಕಾಡು ಪಾಲಾಗುತ್ತಾಳೆ! ಇಲ್ಲಿಯೂ ರಾಮನ ಪಾತ್ರದ ಔನ್ನತ್ಯ, ಅಗಸನ ಕತೆಯಲ್ಲಿ ಆದಂತೆ ಕಡಿಮೆಯೇ ಆಗುತ್ತದೆಯಾದರೂ, ಈ ಕತೆಯಲ್ಲಿ ಜಾತಿವ್ಯವಸ್ಥೆಯ ಸೋಂಕು ಇಲ್ಲ ಎಂಬುದನ್ನು ಗಮನಿಸಬಹುದು.
ಶಿಷ್ಟರಾಮಾಯಣ ಪರಂಪರೆಯಲ್ಲಿ, ವಶಿಷ್ಠ ಮೊದಲಾದವರು ನಿರ್ಧರಿಸಿದ ಒಂದು ನಿರ್ಧಿಷ್ಟ ದಿವಸ ರಾಮನಿಗೆ ಪಟ್ಟಾಭಿಷೇಕವಾಗುತ್ತದೆ. ಆದರೆ ಜನಪದ ಪರಂಪರೆಯಲ್ಲಿಯೂ ಪುರೋಹಿತರು (ವಶಿಷ್ಠ) ಪಟ್ಟಾಭಿಷೇಕದ ದನವನ್ನು ನಿಗಧಿ ಪಡಿಸುತ್ತಾರಾದರೂ ಅದು ಒಂದು ದಿನ ತಡವಾಗಿ ನೆರವೇರುತ್ತದೆ! ರಾಮಪಟ್ಟಾಭಿಷೇಕಕ್ಕೆ ಒಂದು ದಿನದ ತಡೆಯಾದುದಕ್ಕೆ ಯಾರಿಗೂ ಬೇಸರವಾಗದೆ ಒಂದು ಹರ್ಷದ ವಾತಾವರಣವನ್ನೆ ಆ ಕಂಟಕ ಸೃಷ್ಟಿಸುತ್ತದೆ ಎಂಬುದು ಜನಪದ ಕಥೆಯಲ್ಲಿನ ವೈಶಿಷ್ಟ್ಯ.
ಪಟ್ಟಾಭಿಷೇಕದ ಮುನ್ನಾದಿನ ರಾಮ ಕಪಿಸೈನ್ಯಕ್ಕೇ ಒಂದು ಭಾರೀ ಭೋಜನಕೂಟ ಏರ್ಪಡಿಸಿದ್ದ. ಸಮಸ್ತ ಕಪಿಸೈನ್ಯ ಭೋಜನಕ್ಕೆ ಆಗಮಿಸಿದ್ದು ಪಂಕ್ತಿ ಪಂಕ್ತಿಗಳಲ್ಲಿ ಕುಳಿತಿತ್ತು. ಅಗ್ರಭಾಗದಲ್ಲಿ ಜಾಂಬವ, ಆಂಜನೇಯ, ಸುಗ್ರೀವ, ಅಂಗದ ಮುಂತಾದವರು ಕುಳಿತಿದ್ದರು. ನಂತರ ಕಪಿಗಳ ಗಾಥ್ರ ಶಕ್ತಿಯನ್ನು ಅನುಸರಿಸಿ ಕಪಿಗಳು ಕುಳಿತಿದ್ದರು. ತೀರಾ ಕೊನೆಯಲ್ಲಿ ಒಂದು ತೀರಾ ಚಿಕ್ಕದಾದ ಕಪಿ ಕುಳಿತಿತ್ತು. ಆರಂಭದಲ್ಲೇ ಉಪ್ಪಿನಕಾಯಿಯನ್ನು ಬಡಿಸಲಾಯಿತು. ನಂತರ ಬೇರೆ ಭಕ್ಷ್ಯಗಳು ಬರಲಾರಂಭಿಸಿದವು. ಅಷ್ಟರಲ್ಲಿ ಕೊನೆಯಲ್ಲಿದ್ದ ಕಪಿ, ತನ್ನ ತಟ್ಟೆಯಲ್ಲಿದ್ದ ಉಪ್ಪಿನಕಾಯಿಯನ್ನು ಹಿಡಿದು ಹಿಂದೆ ಮುಂದೆ ತಿರುಗಿಸಿ, ನೋಡುತ್ತಿತ್ತು. ಹಾಗೆ ನೋಡುತ್ತಲೇ ಅದನ್ನು ಬಲವಾಗಿ ಅದನ್ನು ಹಿಚುಕಿಬಿಟ್ಟಿತು. ಉಪ್ಪಿನಕಾಯಿಯಲ್ಲಿದ್ದ ಬೀಜ ಒಂದಷ್ಟು ಎತ್ತರಕ್ಕೆ ಎಗರಿಬಿಟ್ಟಿತು. ಅದನ್ನು ಕಂಡ ಕಪಿ ‘ಎಲಾ, ನನ್ನ ಎದುರಿಗೇ ಎಗರುತ್ತೀಯಾ? ನೋಡು ನಾನು ನಿನಗಿಂತ ಎತ್ತರೆಕ್ಕೆ ಎಗರಬಲ್ಲೆ’ ಎಂದು ನೆಗೆದೇ ಬಿಟ್ಟಿತು. ಅದರ ಪಕ್ಕದಲ್ಲಿ ಕುಳಿತಿದ್ದ ಕಪಿ, ‘ನಿನಗಿಂತ ನಾನು ಎತ್ತರಕ್ಕೆ ಹಾರಬಲ್ಲೆ ನೋಡು’ ಎಂದು ನೆಗೆಯಿತು. ಹೀಗೆ ಎಲ್ಲಾ ಕೋತಿಗಳು ಒಂದಕ್ಕಿಂತ ಒಂದು ಎತ್ತರಕ್ಕೆ ನೆಗೆಯಲಾರಂಭಿಸಿದವು. ಈ ಚೇಷ್ಟೆ ಅಂಗದ ಸುಗ್ರೀವರನ್ನೂ ಬಿಡಲಿಲ್ಲ. ಕೊನೆಯಲ್ಲಿ ಕುಳಿತು ಇದೆಲ್ಲವನ್ನೂ ನೋಡುತ್ತಿದ್ದ ಆಂಜನೇಯ ‘ಎಲಾ, ಸಮುದ್ರನ್ನು ಹಾರಿ ಲಂಕೆಗೆ ಹೋಗಿ ಬಂದವನು ನಾನು. ನನ್ನ ಎದುರಿಗೇ ಹಾರುತ್ತೀರಲ್ಲಾ’ ಎಂದವನೇ ಜಾಂಬವ ತಡೆಯುತ್ತಿದ್ದರೂ ನೆಗೆದೇ ಬಿಟ್ಟ. ಹೇಗೆ ನೆಗೆದನೆಂದರೆ ಆತ ಎಷ್ಟು ಹೊತ್ತಾದರೂ ವಾಪಸ್ಸು ಬರಲೇ ಇಲ್ಲ. ಆಂಜನೇಯ ಬರದೆ ಭೋಜನ ಕೂಟವೇ ನಡೆಯಲಿಲ್ಲ. ಅವನು ಬರುವವರೆಗೂ ಪಟ್ಟಾಭಿಷೇಕವೂ ನಡೆಯುವಂತಿಲ್ಲ. ಎಲ್ಲರೂ ಆಂಜನೇಯನಿಗೆ ಕಾದು ಕುಳಿತಿದ್ದರು. ಒಂದು ದಿನ ಕಳೆದ ಮೇಲೆ ಆಂಜನೇಯ ಆಕಾಶದಿಂದ ಇಳಿದ. ತನ್ನ ಕೃತ್ಯದ ಬಗ್ಗೆ ತನಗೇ ನಾಚಿಕೆಯಾಗಿತ್ತು ಆತನಿಗೆ. ಎಲ್ಲರ ಕ್ಷಮೆ ಕೇಳಿದ. ಎಲ್ಲರು ನಕ್ಕು, ಮುಂದೆ ನಡೆಯಬೇಕಾಗಿದ್ದ ಪಟ್ಟಾಭಿಷೇಕಕ್ಕೆ ಸಿದ್ಧರಾಗುತ್ತಾರೆ. ಅಂತೂ ಆಂಜನೇಯನ ಕಾರಣದಿಂದ ಒಂದು ದಿನ ತಡವಾಗಿ ರಾಮನಿಗೆ ರಾಜ್ಯೇಭಿಷೇಕವಾಗುವ ಈ ಕಥೆ ಯಾರಲ್ಲೂ ಯಾರ ಬಗ್ಗೆಯೂ ಕಹಿ ಭಾವನೆಗಳನ್ನು ಉಳಿಸುವುದಿಲ್ಲ ಎಂಬುದು ಗಮನಾರ್ಹ. ಕಪಿಗಳಿಗೆ ಸಹಜವಾದ ಚಂಚಲಚಿತ್ತ ಮನಸ್ಥಿತಿಯನ್ನು ರಾಮಾಯಣದ ಮಹೋನ್ನತ ಪಾತ್ರಗಳನ್ನೇ ಬಳಸಿಕೊಂಡು ಜನಪದ ಪ್ರಜ್ಞೆ ಚಿತ್ರಿಸಿದೆ ಎನ್ನಬಹುದು. ಜೊತೆಗೆ ಆಂಜನೇಯನ ಮೇಲೆ ರಾಮ ಮತ್ತು ಆತನ ಪರಿವಾರದ ಜನರಿಗಿದ್ದ ಗೌರವವೂ ವ್ಯಕ್ತವಾಗುತ್ತದೆ.
ರಾಮಾಯಣ ಕೇವಲ ಒಂದು ಕಾವ್ಯವಲ್ಲ; ಬರೀ ರಾಮನ ಕಥೆಯಲ್ಲ. ಅದು ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಅವರ ಬದುಕಿನಲ್ಲಿಯೇ ಅಂತರ್ಗತವಾಗಿದೆ ಎಂಬುದಕ್ಕೆ ಸಾಕ್ಷಿಯಂತಿವೆ ಈ ಕಥೆಗಳು

Saturday, March 01, 2014

ರಾಮನ ಬಾಲಲೀಲೆಗಳು ಮತ್ತು ಜನಪದ ಪರಂಪರೆ

ಸಾಮಾನ್ಯವಾಗಿ ಬಾಲಲೀಲೆಗಳು ಎಂದರೆ ನಮಗೆ ನೆನಪು ಬರುವುದು ಕೃಷ್ಣನವು ಮಾತ್ರ. ಶ್ರೀರಾಮನ ಬಾಲಲೀಲೆಗಳೂ ಸಾಕಷ್ಟು ಇದ್ದರೂ ಅಷ್ಟು ಚಿರಪರಿಚಿತವೇನಲ್ಲ. ಮೊನ್ನೆ ನಮ್ಮ ವಾರಂತ್ಯದ ಅಧ್ಯಯನದ ತರಗತಿಯಲ್ಲಿ ಇಂತಹ ಕೆಲವೊಂದು ಬಾಲಲೀಲೆಗಳು ಪ್ರಸ್ತಾಪವಾದುವು. ಈಗ ನಾವು ಅಧ್ಯಯನ ಮಾಡುತ್ತಿರುವುದು ಅಭಿನವಪಂಪನೆಂದೇ ಖ್ಯಾತನಾಗಿರುವ ನಾಗಚಂದ್ರನ ಪಂಪರಾಮಾಯಣ ಅರ್ಥಾತ್ ರಾಮಚಂದ್ರಚರಿತಪುರಾಣ. ಅದರಲ್ಲೇನೂ ರಾಮ ಬಾಲಲೀಲೆಗಳ ಪ್ರಸ್ತಾಪವಿಲ್ಲವಾದರೂ, ಆ ಕಾವ್ಯದ ನೆಪದಲ್ಲಿ ನಾವು ರಾಮನ ಬಾಲಲೀಲೆಗಳನ್ನು ನೆನಪಿಸಿಕೊಳ್ಳುವಂತಾಗಿದ್ದು ಒಂದು ಸುಸಂದರ್ಭವೇ ಸರಿ!
ನಮ್ಮ ಸ್ನೇಹಿತರಾದ ಡಾ. ಜಿ.ಮನೋಜ್ ಅವರು, ಅವರ ಅಜ್ಜಿ ಹೇಳಿದ್ದೆಂದು ಎರಡು ರಾಮನ ಬಾಲಲೀಲೆಗಳನ್ನು ಹೇಳಿದರು. ಅದರಲ್ಲಿ ಒಂದು ರಾಮನ ಕಾಲಂದಿಗೆಗಳು ಸವೆದು ಹೋಗಿದ್ದರ ಬಗ್ಗೆ. ಕೌಸಲ್ಯೆಗೆ ರಾಮನನ್ನು ಕಂಡರೆ ಪಂಚಪ್ರಾಣ. ಏನಾದರೂ ನೆಪವೊಡ್ಡಿ ಅವನನ್ನು ನೋಡುವುದು, ಮಾತನಾಡಿಸುವುದು, ಮುದ್ದುಮಾಡುವುದು, ಲಲ್ಲೆಗರೆಯುವುದು ಮಾಡುತ್ತಿರುತ್ತಾಳೆ. ಒಂದು ದಿನ ಸುಮ್ಮನೇ ಬಾಲರಾಮನೊಂದಿಗೆ ಹರಟೆ ಹೊಡೆಯುತ್ತಾ, ಆತನ ಕೈಕಾಲುಗಳನ್ನು ನೀವುತ್ತಾ, ಮುದ್ದು ಮಾಡುತ್ತ ಕುಳಿತಿರುತ್ತಾಳೆ. ಆಗ ಸುಮ್ಮನೆ, “ಮಗು, ಏಕೆ ನಿನ್ನ ಕಾಲಂದಿಗೆಗಳು ಇಷ್ಟೊಂದು ಸವೆದು ಹೋಗಿಬಿಟ್ಟಿವೆಯಲ್ಲಾ?’ ಎಂದು ಕೇಳುತ್ತಾಳೆ. ಅವು ನಿಜವಾಗಿ ಸವೆದು ಹೋಗಿದ್ದವೋ, ಅಥವಾ ಆಕೆಗೆ ಮಾತನಾಡುವುದಕ್ಕೆ ಒಂದು ನೆಪ ಬೇಕಾಗಿತ್ತೋ ತಿಳಿಯದು. ಆದರೆ ರಾಮ ತನ್ನ ಬಾಲಭಾಷೆಯಲ್ಲಿ ‘ಅಮ್ಮಾ, ನಾನೇನು ಮಾಡಲಮ್ಮಾ, ಎಲ್ಲರೂ ನನ್ನ ಕಾಲುಗಳನ್ನು ತಮ್ಮ ಕೈಗಳಿಂದ ಮುಟ್ಟುತ್ತಿರುತ್ತಾರೆ. ಅವರು ಮುಟ್ಟಿ ಮುಟ್ಟಿಯೇ ನನ್ನ ಕಾಲಂದಿಗೆಗಳು ಸವೆದು ಹೋಗಿವೆ. ಇದರಲ್ಲಿ ನನ್ನ ತಪ್ಪೇನು ಇಲ್ಲಮ್ಮಾ’ ಎಂದು ಹೇಳುತ್ತಾನೆ.
ರಾಮನು ದೈವಾಂಶಸಂಭೂತನೆಂಬುದು ಜನಪದರ ನಂಬಿಕೆ. ಆದ್ದರಿಂದ, ಆತನು ಬಾಲಕನಾದರೂ ನಮಸ್ಕಾರಕ್ಕೆ ಅರ್ಹ ಎಂದಾಯಿತು. ಬಾಲರಾಮನಿಗೆ ಆತನ ಜೊತೆಗಾರರು, ಅರಮನೆಯಲ್ಲಿದ್ದವರು, ಜನಸಾಮಾನ್ಯರು ಬಾಲಕನಾಗಿದ್ದಾಗಲೂ ನಮಸ್ಕರಿಸುತ್ತಿದ್ದರು, ಗೌರವಿಸುತ್ತಿದ್ದರು. ಆದರೆ, ಸ್ವತಃ ರಾಮನಾದರೊ ಎಲ್ಲಾ ಮಕ್ಕಳಂತೆ ಆತನೂ ಒಬ್ಬ. ಜನ ತನ್ನ ಕಾಲುಗಳನ್ನು ಏಕೆ ಮುಟ್ಟುತ್ತಾರೆ ಎಂದು ಆತನಿಗೆ ತಿಳಿಯುವುದಿಲ್ಲ. ಆದರೆ ಜನ ಹಾಗೆ ಮುಟ್ಟುವುದರಿಂದಲೇ ತನ್ನ ಕಾಲಂದಿಗೆಗಳು ಸವೆದು ಹೋಗಿವೆ ಎಂಬ ತರ್ಕ ಬಾಲಕನ ಮಗ್ಧತೆಗೆ ಸಾಕ್ಷಿಯಾಗಿದೆ.
ಇನ್ನೊಂದು ಕಥೆಯೂ ತಾಯಿ ಮಗನ ಅನೋನ್ಯತೆಯನ್ನೇ ಎತ್ತಿ ಹಿಡಿಯುತ್ತದೆ. ಒಂದು ದಿನ ಬೇರೆ ಮಕ್ಕಳೊಂದಿಗೆ ಆಡಲು ಹೋಗಿದ್ದ ರಾಮ ಅಳುತ್ತಲೇ ವಾಪಸ್ಸು ಬರುತ್ತಾನೆ. ಕೌಸಲ್ಯೆ ಎಷ್ಟು ಸಮಾಧಾನ ಮಾಡಿದರೂ ಆತ ಸುಮ್ಮನಾಗುವುದಿಲ್ಲ. ಬಹಳ ಹೊತ್ತಿನ ನಂತರ ಆತನ ಅಳುವಿಗೆ ಕಾರಣವೇನೆಂದು ತಿಳಿಯುವಲ್ಲಿ ಕೌಸಲ್ಯೆ ಸಫಲಳಾಗುತ್ತಾಳೆ. ರಾಮನ ಪ್ರಕಾರ, ಆತ ತನ್ನ ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುತ್ತಾನೆ. ಕಣ್ಣು ಮುಚ್ಚಿಸಿಕೊಂಡವನು, ಕಣ್ಣು ಬಿಟ್ಟ ಕೂಡಲೇ, ರಾಮ ಎಲ್ಲೇ ಅವಿತುಕೊಂಡಿದ್ದರೂ ನೇರವಾಗಿ ಬಂದು ರಾಮನನ್ನೇ ಹಿಡಿಯುತ್ತಿರುತ್ತಾನೆ. ಒಬ್ಬ ಹುಡುಗುನಲ್ಲ; ಕಣ್ಣು ಕಟ್ಟಿಸಿಕೊಂಡ ಎಲ್ಲಾ ಮಕ್ಕಳಿಗೂ ರಾಮ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾನೆ. ಅದೇ ಕಾರಣದಿಂದ ರಾಮನಿಗೆ ಅಳು ಬಂದಿರುತ್ತದೆ. ಕೌಸಲ್ಯೆ ರಾಮನಿಗೆ ಸಮಾಧಾನ ಹೇಳುತ್ತಾಳೆ. ‘ಮಗು, ನೀನು ಎಷ್ಟು ಚಂದ ಇದ್ದೀಯಾ, ಎಷ್ಟೊಂದು ಪ್ರಕಾಶಮಾನವಾಗಿ ಇದ್ದೀಯ ಎಂದರೆ, ನಿನ್ನ ಸುತ್ತಲೂ ಒಂದು ಪ್ರಭಾವಳಿಯೆ (ಬೆಳಕಿನ ವಲಯ) ಇದೆ. ನೀನು ಎಲ್ಲೇ ಇದ್ದರು, ಆ ಬೆಳಕಿನ ದೆಸೆಯಿಂದ ಬೇಗ ಎಲ್ಲರಿಗೂ ಕಾಣಿಸಿಂಡು ಬಿಡುತ್ತೀಯಾ ಅಷ್ಟೆ. ನೀನು ಅಷ್ಟೊಂದು ಚೆಂದ ಇರುವುದು ನಿನಗೆ ಖುಷಿಯಲ್ಲವೆ? ಹೇಳು’ ಎನ್ನುತ್ತಾಳೆ. ಆಗ ರಾಮನಿಗೆ ಖುಷಿಯಾಗುತ್ತದೆ. ನಾನು ಎಲ್ಲರಿಗಿಂತ ಚೆನ್ನಾಗಿದ್ದೇನೆ, ವಿಶೇಷವಾಗಿದ್ದೇನೆ ಎಂಬ ಸಮಾಧಾನದಿಂದ ರಾಂ ತನ್ನ ಅಳಲನ್ನು ಮರೆಯುತ್ತಾನೆ! ಆದ್ದರಿಂದಲೇ ಆತ ‘ರಾಮ’ ಮಾತ್ರನಲ್ಲ; ರಾಮಚಂದ್ರನೂ ಹೌದು! ಚಂದ್ರ ಬೆಳಕನ್ನು ಸೂಸುವವನು, ಜೊತೆಗೆ ಆತನ ಸುತ್ತಲೂ ಬೆಳಕಿನ ವಲಯ ಇರುತ್ತದೆ. ಕೌಸಲ್ಯೆ ಮತ್ತು ರಾಮ ಇಬ್ಬರೂ ಜನಮನದ ದೃಷ್ಟಿಯಲ್ಲಿ ಜಗದ್ವಂದ್ಯರಾದರೂ, ಕೌಸಲ್ಯೆ ರಾಮನ ತಾಯಿ; ರಾಮ ಕೌಸಲ್ಯೆಯ ಮಗ ಮಾತ್ರ!
ಇಲ್ಲಿಯೇ ಈ ಕಥೆಗೆ ಇರುವ ವೈರುದ್ಧ್ಯವೊಂದನ್ನು ಗಮನಿಸಬಹುದು. ಶಿಷ್ಟಕಾವ್ಯದಲ್ಲಿ ರಾಮ ಕೃಷ್ಣವರ್ಣದವನು. ಅಚ್ಚಗನ್ನಡದಲ್ಲಿ ಹೇಳುವುದಾದರೆ ಆತ ‘ಕರಿಯ’. ನಮ್ಮ ಜನಪದರಲ್ಲಿ ಕಪ್ಪಗಿರುವವರನ್ನು ಸ್ವಲ್ಪ ಹೀಯಾಳಿಸಿ ಮಾತನಡುವಾಗ, ‘ತೊಳೆದ ಕೆಂಡ’, ‘ನೀನಿದ್ರೆ ಕತ್ತಲೆ ಮನೆಗೆ ಬೆಳಕೆ ಬೇಡ’ ಎಂಬ ಮಾತುಗಳನ್ನು ಬಳಸುತ್ತಾರೆ. ಕತ್ತಲೆ ಮನೆಗೆ ಬಳಕೇ ಬೇಡ ಎಂದೆನ್ನಿಸಿಕೊಳ್ಳುವ ಕಪ್ಪುಬಣ್ಣದ ರಾಮನಿಗೆ, ಅದೇ ಜನಪದ ಪ್ರತಿಭೆ ಬೆಳಕಿನ ಪ್ರಭಾವಳಿಯನ್ನು ಸೃಷ್ಟಿಸುತ್ತದೆ! ಕಪ್ಪುಬಣ್ಣ ಬೆಳಕನ್ನು ಚೆನ್ನಾಗಿ ಹೀರಿಕೊಳ್ಳುತ್ತದೆಯೆ ಹೊರತು, ಹೊರಚೆಲ್ಲುವುದಿಲ್ಲ. ಆದರೆ ಜನಪದ ಪ್ರಜ್ಞೆಗೆ ರಾಮ ಕೇವಲ ‘ರಾಮ’ನಲ್ಲ!
ಇದೇ ಸಂದರ್ಭದಲ್ಲಿ ನೆನಪಾದ ಪ್ರಸಂಗವೆಂದರೆ, ಚಂದ್ರನಿಗಾಗಿ ರೋಧಿಸುತ್ತಿದ್ದ ರಾಮನಿಗೆ ಮಂಥರೆ ಕನ್ನಡಿಯೊಂದನ್ನು ಕೊಟ್ಟು ಸಮಾಧಾನ ಮಾಡಿದ, ಶ್ರೀರಾಮಾಯಣ ದರ್ಶನಂ ಕಾವ್ಯಭಾಗದ್ದು. ಆ ಕಾವ್ಯದ ಅಧ್ಯಯನ ಸಂದರ್ಭದಲ್ಲಿ ಚರ್ಚೆಯಾಗಿತ್ತು. ಮೂಲತಃ ಅದೊಂದು ಜನಪದ ಕಥೆ. ಅದನ್ನು ಅತ್ಯಂತ ಧ್ವನಿಪೂರ್ಣವಾಗಿ ದರ್ಶನಾತ್ಮಕವಾಗಿ ಕುವೆಂಪು ಅವರು ಶಿಷ್ಟ ಕಾವ್ಯದ ಪರಿಧಿಗೆ ಅಳವಡಿಸಿರುವ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆ ಕಥೆಯನ್ನೊಮ್ಮೆ ಇಲ್ಲಿ ಗಮನಿಸಬಹುದಾಗಿದೆ.
ಒಂದು ದಿನ ಬೆಳದಿಂಗಳ ರಾತ್ರಿ, ಅಂತಃಪುರದ ಎಲ್ಲರೂ ಉದ್ಯಾನವನದಲ್ಲಿ ಸೇರಿರುತ್ತಾರೆ. ಎಲ್ಲ ಮಕ್ಕಳು, ತಾಯಂದಿರು ‘ಉದ್ಯಾನ ಶಾದ್ವಲ ಶ್ಯಾಮ ವೇದಿಕೆಯಲ್ಲಿ’ ವಿಹರಿಸುತ್ತಿರುತ್ತಾರೆ. ಆಗ ಶಿಶುರಾಮ ಆಕಾಶದಲ್ಲಿದ್ದ ಪೂರ್ಣಚಂದ್ರನನ್ನು ನೋಡಿ, ಅದು ನನಗೆ ಬೇಕೆಂದು ಅಳಲಾರಂಬಿಸುತ್ತಾನೆ. ‘ನೋಡಿ, ಮೋಹಿಸಿ, ಪಡೆಯೆ ಹಲುಬಿ, ಹಂಬಲಿಸಿ ಕಾಡಿದನು ಕೌಸಲ್ಯಯಂ’ ಎಂದು ಒಂದೇ ವಾಕ್ಯದಲ್ಲಿ ಕವಿ ಆತನ ಗೋಳಾಟವನ್ನು ಹಿಡಿದಿಟ್ಟಿದ್ದಾರೆ. ‘ನಭದಚಂದ್ರಂ ನರರ ಧರಣಿಗೈತರನ್’ ಎಂದು ಕೌಸಲ್ಗಯೆ ಹೇಳಿದ ಸಮಾಧಾನ ರಾಮನ ಅಳುವನ್ನು ನಿಲ್ಲಿಸುವುದಿಲ್ಲ. ಅಲ್ಲಿದ್ದವರೆಲ್ಲಾ ರಾಮನಿಗೆ ಚಿನ್ನದ ಆಟದ ಸಾಂಆನುಗಳನ್ನು, ಗೊಂಬೆಗಳನ್ನು, ತಿನ್ನಲು ಸಿಹಿಗಳನ್ನು, ಹಣ್ಣುಗಳನ್ನು ಕೊಟ್ಟು ಸಮಾಧಾನ ಮಾಡುವ ಯತ್ನ ಮಾಡುತ್ತಾರೆ. ರಾಮ ಅಳು ನಿಲ್ಲಿಸುವುದಿಲ್ಲ. “ದಮ್ಮಯ್ಯ, ದಮ್ಮಯ್ಯ, ಸುಮ್ಮನಿರೊ, ಓ ನನ್ನ ಕಣ್ಮಣಿಯೆ, ಕಂದಯ್ಯ, ಕೈಮುಗಿವೆನ್ ಅಳಬೇಡ” ಎಂದು ಕೌಸಲ್ಯೆ ತಾನೂ ಅಳುತ್ತಾ, ‘ರವಿವಂಶದವನು ಎಂಬ ಕರುಬಿಂದ ನೀನು ಹೀಗೆ ರಾಮನನ್ನು ಗೋಳಾಡಿಸುತ್ತಿದ್ದೀಯ’ ಎಂದು ಚಂದ್ರನಿಗೆ ಬಯ್ಯುತ್ತಿರುತ್ತಾಳೆ!
ಭೂಮಿಯೇ ಬೆಚ್ಚುವಷ್ಟು ಆರ್ತವಾಗಿದ್ದ ಆತನ ಅಳು ಕೇಳಿದ ದಶರಥ ಓಡೋಡಿ ಬರುತ್ತಾನೆ. ವಿಷಯ ತಿಳಿದು ದಶರಥ ‘ಮಗನಾಸೆ ತನ್ನ ಬಲ್ಮೆಗೆ ಮೀರಿ ಕೈಗೂಡಲಸದಳಮಲಾ’ ಎಂದು ಮರುಕಗೊಳ್ಳುತ್ತಾನೆ. ‘ತನ್ನ ಸಿರಿ ಇನಿತು ಪುಸಿಯಾಯ್ತೆ’ ಎಂದುಕೊಂಡು ಕೌಸಲ್ಯೆಯಿಂದ ರಾಮನನ್ನು ಕರೆದುಕೊಂಡು ಉದ್ಯಾನವನದಲ್ಲಿದ್ದ ಜಿಂಕೆಗಳನ್ನು ತೋರಿಸಲು ಹೋಗುತ್ತಾನೆ. ಆದರೂ ರಾಮ ಚಂದ್ರನಿಗಾಗಿ ಅಳುವುದನ್ನು ನಿಲ್ಲಿಸಲಿಲ್ಲ. ದಶರಥನ ಮಂತ್ರಿ ಸುಮಂತ್ರನೂ ನಿರುತ್ತರನಾಗುತ್ತಾನೆ.
ಆಗ ಎಲ್ಲಿದ್ದಳೊ ಮಂಥರೆ, ಭರ್ರನೆ ಬರುತ್ತಾಳೆ. ಆಕೆಯ ಕಂಕುಳಲ್ಲಿ ಭರತನಿರುತ್ತಾನೆ. ಅವಳು ಬಂದಿದ್ದನ್ನು ಕಂಡು ಕೈಕೆಯನ್ನುಳಿದು ಇತರರು ಮುಖ ತಿರುಗಿಸುತ್ತಾರೆ – ಅಮಂಗಳವನ್ನೀಕ್ಷಿಸಿದಂತೆ! ಇದಾವುದನ್ನೂ ಗಮನಿಸದ ಮಂಥರೆ ತನ್ನ ಮಡಿಲಿನಿಂದ ಒಂದು ಕನ್ನಡಿಯನ್ನು ತೆಗೆದು ಅಳುತ್ತಿದ್ದ ರಾಮನ ಕೈಯಲ್ಲಿಡುತ್ತಾಳೆ. ಕನ್ನಡಿಯಲ್ಲಿ ಚಂದ್ರನ ಪ್ರತಿಬಿಂಬವನ್ನು ಕಂಡ ರಾಮ, ಚಂದ್ರನೇ ತನ್ನ ಕೈಯಲ್ಲಿ ಇದ್ದಾನೆ ಎಂದುಕೊಂಡು ಕುಣಿಕುಣಿದು ನಲಿಯುತ್ತಾನೆ. ಪಾಪ, ಮಂಥರೆ ರಾಮನ ಸಂಭ್ರಮವನ್ನು ತಾನೂ ಅನುಭವಿಸಿ ತನ್ನನ್ನು ತಾನು ಮರೆತುಬಿಡುತ್ತಾಳೆ. ಆ ಸಂಭ್ರಮದ ಸ್ಥಿತಿಯಲ್ಲಿಯೇ ರಾಮನನ್ನು ಎತ್ತಿಕೊಳ್ಳಲು ಮುಂದಾಗುತ್ತಾಳೆ. ‘ಕಂದಂಗೆ ಅಮಂಗಳಂ, ಮುಟ್ಟದಿರ್ ಮುಟ್ಟದಿರ್, ಬೇಡ ಬೇಡ’ ಎನ್ನುತ್ತಾ ಕೌಸಲ್ಯೆ ಮಂಥರೆಯನ್ನು ತಡೆಯುತ್ತಾಳೆ. ಮಂಥರೆಯ ಸಂಭ್ರಮ ಕುಸಿಯುತ್ತದೆ. ಒಲುಮೆ ಮುರಿಯುತ್ತದೆ. ಕಣ್ಣೀರು ಚಿಮ್ಮುತ್ತದೆ. ಭರತನನ್ನು ಬಿಗಿದು ಅಪ್ಪಿಕೊಂಡು ‘ತುಳಿದ ಸರ್ಪಿಣಿಯಂತೆ ಮುಳಿಸಿನುರಿಯಿಂ ಪೊಗೆದು, ಸುಯ್ದು, ಹೆಡೆಯೆತ್ತಿ’ ಹೊರಟು ಬಿಡುತ್ತಾಳೆ.
ರಾಮನ ಅಳು ನಿಲ್ಲಿಸುವವರೆಗೆ ಮಾತ್ರವಿದ್ದ ಜಾನಪದ ಕಥೆಯನ್ನು ಬಳಸಿಕೊಂಡು, ಕೌಸಲ್ಯೆಯ ಬಗ್ಗೆ ಮಂಥರೆಗಿದ್ದ ಅಸಮಧಾನಕ್ಕೆ ಕಾರಣವನ್ನೊದಗಿಸುವಂತೆ, ಮಂಥರೆಗೆ ಆಗುವ ಒಲುಮೆ ಭಂಗವಾಗುವಂತೆ ಸನ್ನಿವೇಶ ಸೃಷ್ಟಿಸಿ, ಮುಂದೆ ಪತಿತಪಾತ್ರಖಳಾದ ಮಂಥರೆಯಾತ್ಮವನ್ನೂ ಉದ್ಧಾರಪಥದತ್ತ ಹೊರಳಿಸುವ ಸಾಹಸಕ್ಕೆ ತೊಡಗುತ್ತಾರೆ ಕವಿ.
ಮೂಲ ವಾಲ್ಮೀಕಿ ರಾಮಾಯಣದಲ್ಲಿ ರಾಮ ಲಕ್ಷ್ಮಣರ ಸ್ನೇಹದ ಬಗ್ಗೆ ಹೇಳುತ್ತ, ರಾಮನಿಗೆ ಲಕ್ಮಣನಲ್ಲಿ ವಿಶೇಷವಾದ ಪ್ರೀತಿ, ಆಟ ಪಾಟ ಊಟ ನಿದ್ರೆ ಎಲ್ಲದಕ್ಕೂ ಲಕ್ಷ್ಮಣ ಆತನ ಜೊತೆಗಿರಬೇಕಿತ್ತು ಎಂಬ ಚಿತ್ರಣವಿದೆ. ಇದನ್ನೇ ಸ್ವಲ್ಪ ವಿಸ್ತರಿಸಿರುವ ಶ್ರೀ ವೀರಪ್ಪ ಮೊಯಿಲಿಯವರು, ಕೌಸಲ್ಯೆ ರಾಮನಿಗೆ ಊಟ ತಿನ್ನಿಸಲು ಬಂದಾಗ, ಆತ, ಲಕ್ಷ್ಮಣನನ್ನು ಮುಂದೆ ನಿಲ್ಲಿಸಿ, ಆತನಿಗೆ ಕೌಸಲ್ಯೆ ತಿನ್ನಿಸುವುದನ್ನು, ಆತ ತಿನ್ನುವುದನ್ನು ನೋಡಿ ರಾಮ ಸಂತಸದಿ ಕುಣಿಯುತ್ತಿದ್ದ ಎಂದಿದ್ದಾರೆ.
‘ಶ್ರೀಲಕ್ಷ್ಮಣ ಮಹಾನ್ವೇಷಣೆಯ ಮಹಾಕಾವ್ಯ’ವನ್ನಾಗಿಸುವ ಭರದಲ್ಲಿ ಮೊಯಿಲಿಯವರು, ಲಕ್ಷ್ಮಣನಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ತೋರಿಸುವುದಕ್ಕೋ ಏನೊ ಒಂದು ಕಥೆಯನ್ನು ಸೃಷ್ಟಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ, ಮೂಲ ರಾಮಾಯಣದಲ್ಲಾಗಲೀ, ಕನ್ನಡ ರಾಮಾಯಣಗಳ ಪರಂಪರೆಯಲ್ಲಾಗಲೀ ಲಕ್ಷ್ಮಣ ತಂದೆಯ ಪ್ರೀತಿಯಿಂದ ವಂಚಿತನಾಗಿದ್ದನು, ನಿರ್ಲಕ್ಷಕ್ಕೊಳಗಾಗಿದ್ದನು ಎಂಬ ಮಾಹಿತಿಯಿಲ್ಲ. ಕವಿಗೆ ಜಾನಪದ ಮೂಲದಲ್ಲೇನಾದರೂ ಈ ಕಥೆ ಸಿಕ್ಕಿದೆಯೆ ಎಂಬುದಕ್ಕೆ ಸಧ್ಯಕ್ಕಂತೂ ಆಧಾರಗಳಿಲ್ಲ. ಧ್ರುವನ ಕಥೆ ಅವರಿಗೆ ಈ ಪ್ರೇರಣೆಯನ್ನು ಒದಗಿಸಿರಬಹುದು.ಆದರೆ, ‘ಸೌಮಿತ್ರಿಯ ಚರಣಕ್ಕೆರಗಿ ಲಕ್ಷ್ಮಣಾಯಣಮಾಗಿಸುವ’ ಉದ್ದೇಶದಿಂದ ಈ ಕಥೆಯನ್ನು ಸೃಷ್ಟಿಸಿದ್ದಾರೆ. ಬಿಡಿಯಾಗಿ ಒಂದು ಸುಂದರ ಚಿತ್ರಣವಾಗಿ ಈ ಕಥೆ ಮೂಡಿಬಂದಿದೆ.
ಒಂದು ದಿನ ದಶರಥ ವಿರಮಿಸುತ್ತಿದ್ದಾಗ, ರಾಮ ಲಕ್ಷ್ಮಣ ಭರತ (ಶತ್ರುಘ್ನ ಇಲ್ಲ!) ಮೂವರೂ ಓಡಿ ಆತನ ಬಳಿಗೆ ಬರುತ್ತಾರೆ. ದಶರಥ ಮೂವರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾನೆ. ರಾಮ ಬಲದ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಭರತ ಎಡದ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಪಾಪ ಲಕ್ಷ್ಮಣನಿಗೆ ಯಾವ ತೊಡೆ? ಆತನಿಗೆ ದುಃಖವಾಗುತ್ತದೆ. ಹೃದಯ ತೊಯ್ದಾಡುತ್ತದೆ. ಕಣ್ಣು ತೇವವಾಗುತ್ತದೆ. ‘ತಾನಾವ ತೊಡೆಯನೇರಲಿ, ತನಗೆಲ್ಲಿದೆ ಸ್ಥಾನ’ ಎಂದು ಹಂಬಲಿಸುತ್ತಾನೆ ಲಕ್ಷ್ಮಣ. ‘ಬಲವಿಲ್ಲ ಎಡವಿಲ್ಲ ಯಾವ ಹೃದಯವು ಇಲ್ಲ ಶೂನ್ಯವಾಗಿದೆ ಪ್ರೇಮ ಮನವು ಮರ್ಕಟವಾಗಿ ಚಡಪಡಿಸಿ ಹೊಯ್ದಾಡೆ ಪ್ರೇಮದನ್ವೇಷಣೆಯು ಮರದ ರೆಂಬೆಗಳಲಿ ಹಾರಾಡಿ ಮತ್ತಲ್ಲಿಯೆ ಚಡಪಡಿಸಿ ನಿಂತಿಹುದು’ ಎಂದು ಲಕ್ಷ್ಮಣನ ಆಗಿನ ಸ್ಥಿತಿಯನ್ನು ಕವಿ ಮಾತಾಗಿಸಿದ್ದಾರೆ. ಆಗ ರಾಮ ತೊಡೆಯಿಂದ ಇಳಿದು, ಲಕ್ಷ್ಮಣನನ್ನು ಬಿಗಿದಪ್ಪಿ, ಕಣ್ಣೀರನೊರೆಸಿ ‘ತನ್ನೆದೆಯ ಕಾವನ್ನು ಸೋದರತೆಗೆ ನೀಡುತ್ತ’ ಲಕ್ಷ್ಮಣನಿಗೆ ಪ್ರೀತಿಯಲ್ಲಿ ಕಾಣಿಸಿಕೊಂಡಿದ್ದ ಶೂನ್ಯತೆಯನ್ನು ಹೋಗಲಾಡಿಸುತ್ತಾನೆ. ರಾಮ ಪ್ರತಿಮೆಯ ುಪ್ಪು ಗೊಂಬೆಯಲಿ ಕರಗಿ ಹೋದ ಲಕ್ಷ್ಮಣ ಭಾತೃಪ್ರೇಮದ ಸಾಗರದಲ್ಲಿ ಐಕ್ಯವಾಗುತ್ತಾನೆ ಎನ್ನುತ್ತಾರೆ ಕವಿ.
ರಾಮನ ಬಾಲಲೀಲೆಗೆ ಸಂಬಂದಿಸಿದಂತೆ ಜಾನಪದ ಪ್ರಜ್ಞೆ ಮೆರೆದಿರುವ ಪಾರಮ್ಯವನ್ನು ಇದುವರೆಗೆ ಗಮನಿಸಿದ್ದೇವೆ. ಮೂಲತಃ ರಾಮಾಯಣ, ಮಹಾಭಾರತಗಳು ಜನಪದ ಕಥೆಗಳು ಮಾತ್ರವಾಗಿದ್ದು, ಯಾವುದೋ ಕಾಲಘಟ್ಟದಲ್ಲಿ ಅವು ವಾಲ್ಮೀಕಿ ವ್ಯಾಸರಿಂದ ಶಿಷ್ಟತೆಯ ಆವರಣದೊಳಕ್ಕೆ ಬಂದಿವೆ ಎಂಬ ವಾದವೊಂದಿದೆ. ಜಗತ್ತಿನ ಪುರಾತನ ಮಹಾಕಾವ್ಯಗಳಲ್ಲಿ ಒಂದಾದ ‘ಗಿಲ್ಗಿಮೆಶ್’ ಕೂಡಾ ಜನಪದ ಮಹಾಕಾವ್ಯವೇ ಆಗಿದೆ. ಹೋಮರನ ಈಲಿಯಡ್ ಕೂಡಾ ಹಾಡುಗಬ್ಬವೆ! ಇವೆಲ್ಲವನ್ನು ಗಮನಿಸಿದಾಗ ಜಗತ್ತಿನ ವಸ್ತುಕ ಮಹಾಕಾವ್ಯಗಳೆಲ್ಲವೂ ಮೂಲತಃ ಮೌಖಿಕ ಪರಂಪರೆಗೆ ಸೇರಿದವುಗಳಾಗಿದ್ದು, ನಂತರ ಶಿಷ್ಟಪರಂಪರೆಗೆ ವರ್ಗಾವಣೆಗೊಂಡಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.