Friday, April 23, 2010

ಅಲ್ಲಮಪ್ರಭು

ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಬಳ್ಳಿಗಾವೆಯೇ ಅಲ್ಲಮಪ್ರಭುವಿನ ಜನ್ಮಸ್ಥಳ. ಅಲ್ಲಮನ ಬಾಲ್ಯದ ದಿನಗಳ ಬಗ್ಗೆಯಾಗಲೀ ತಂದೆ-ತಾಯಿಗಳ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕೆಲವು ವೀರಶೈವ ಕಾವ್ಯಗಳಲ್ಲಿ ಅಲ್ಲಮನ ತಂದೆಯ ಹೆಸರು ನಿರಹಂಕಾರನೆಂಬುವವನು. ತಾಯಿ ಸುಜ್ಞಾನದೇವಿ. ನಿರಹಂಕಾರನು ಮೂಲತಃ ಕರುವೂರಿನವನು. ಬಳ್ಳಿಗಾವೆಗೆ ಬಂದು ಅಲ್ಲಿನ ರಾಜನ ಅರಮನೆಯಲ್ಲಿ ಅಂತಃಪುರದ ಅಧಿಕಾರಿಯಾಗಿದ್ದನು. ನಿರಹಂಕಾರ ಮತ್ತು ಸುಜ್ಞಾನದೇವಿಯರಿಬ್ಬರೂ ಶಿವಭಕ್ತರಾಗಿದ್ದರು.

ಅಲ್ಲಮನಿಗೆ ಬಾಲ್ಯದಲ್ಲಿಯೇ ಅರವತ್ತನಾಲ್ಕು ವಿದ್ಯೆಗಳ ಪರಿಚಯವಾಯಿತು. ಮದ್ದಳೆ ಬಾರಿಸುವುದು ವಂಶಪಾರಂಪರಿಕವಾಗಿ ಬಂದ ವಿದ್ಯೆಯಾಗಿತ್ತು. ಹಾಗಾಗಿ ಅಲ್ಲಮ ಒಬ್ಬ ಮದ್ದಳೆ ಬಾರಿಸುವ ಕಲಾವಿದನಾಗಿದ್ದ. ಯೌವ್ವನಕ್ಕೆ ಬಂದ ಅಲ್ಲಮನಿಗೆ ಮದುವೆ ಮಾಡಲು ತಾಯಿ ತಂದೆಯರು ನಿರ್ಧರಿಸಿ ಹೆಣ್ಣು ನೋಡತೊಡಗಿದರು. ಆಗ ಬಳ್ಳಿಗಾವೆ ಧನದತ್ತ ಎಂಬುವವನ ಮಗಳಾದ ಕಾಮಲತೆಯನ್ನು ನೋಡಿ ಇವಳೇ ನಮ್ಮ ಮಗನಿಗೆ ಸರಿಯಾದ ವರ ಎಂದು ನಿರ್ಧರಿಸಿ ಅಲ್ಲಮನಿಗೆ ಮದುವೆ ಮಾಡಿದರು. ಅಲ್ಲಮ-ಕಾಮಲತೆಯರ ಸಾಂಸಾರಿಕ ಜೀವನ ಸಂತೋಷದಿಂದ ಕೂಡಿತ್ತು. ಆದರೆ ಕಾಮಲತೆ ಎಳೆಯ ವಯಸ್ಸಿನಲ್ಲೇ ಜ್ವರಪೀಡಿತಳಾಗಿ ಸತ್ತು ಹೋದಳು. ಅಲ್ಲಮನಿಗೆ ಜೀವನ ನಿಸ್ಸಾರವೆನಿಸಿತು. ವೈರಾಗ್ಯವೆಂಬುದು ಅವನ ಮೈಮನಸ್ಸುಗಳನ್ನು ಆವರಿಸಿತು. ವಿಶ್ವವೆಲ್ಲ ಶೂನ್ಯವೆನಿಸಿತು. ಅದೇ ಶೂನ್ಯತೆಯಲ್ಲಿ ಬಳಲುತ್ತ ಬಳ್ಳಿಗಾವಿಯ ಹೊರಗಿದ್ದ ಕಣಗಿಲೆ ತೋಟಕ್ಕೆ ಬಂದು ಕುಳಿತುಕೊಂಡ. ಅಲ್ಲಿದ್ದ ಹಾಳು ಶಿವಾಲಯವೊಂದು ಅವನ ಕಣ್ಣಿಗೆ ಬಿತ್ತು. ಅದು ನೋಡಲು ಬೀಕರವಾಗಿತ್ತಾದರೂ, ಜೀವನವೇ ಬೇಸರವಾಗಿ ಬಂದಿದ್ದ ಅಲ್ಲಮ ತುಸುವೂ ಎದೆಗುಂದದೆ, ಆ ಹಾಳು ಶಿವಾಲಯದೊಳಗೆ ಹೋಗೀ ನೋಡಿದ. ಅಲ್ಲಿ ಒಬ್ಬ ಅತೀವ ವೃದ್ಧರು ಧ್ಯಾನದಲ್ಲಿ ನಿರತರಾಗಿದ್ದರು. ಅವರಿಗೆ ನಮಸ್ಕರಿಸಿ ಕುಳಿತ ಅಲ್ಲಮ ಅವರು ಕಣ್ತೆರೆಯುವುದನ್ನೇ ಕಾಯತೊಡಗಿದ. ಬಹಳ ಹೊತ್ತಿನ ನಂತರ ಕಣ್ತೆರೆದ ಅನಿಮಿಷಯೋಗಿ ಅಲ್ಲಮನನ್ನು ಪ್ರೀತಿಯಿಂದಲೇ ಮಾತನಾಡಿಸಿದರು. ಅವರ ಜೊತೆಯಲ್ಲಿ ಮಾತನಾಡುತ್ತಾ ಅಲ್ಲಮ ತನ್ನ ಇತಿವೃತ್ತವನ್ನೆಲ್ಲಾ ಹೇಳಿದ. ಅದನ್ನು ಕೇಳಿದ ಅನಿಮಿಷಯೋಗಿಯು ಅಲ್ಲಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವರಿಗೆ ಗೊತ್ತಿದ್ದ ವಿದ್ಯೆಯನ್ನೆಲ್ಲಾ ಅಲ್ಲಮನಿಗೆ ಕಲಿಸಿದರು. ಕೊನೆಗೆ ಒಂದು ತಾವು ಪೂಜಿಸುತ್ತಿದ್ದ ಇಷ್ಟಲಿಂಗವನ್ನು ಅಲ್ಲಮನ ಕೈಯಲ್ಲಿತ್ತು. ಕಣ್ಮುಚ್ಚಿದರು.

ಕಾಮಲತೆಯ ಅಕಾಲ ಮರಣದಿಂದ ಜೀವನವೇ ಬೇಡವೆಂದಿದ್ದ ಅಲ್ಲಮನಿಗೆ ಅನಿಮಿಷದೇವ ಎಂಬುವವನು ಗುರುವಾಗಿ ದೊರೆತು ಸಾಧಕನಾಗುತ್ತಾನೆ. ದಾರಿ ತೋರಿದ ಗುರು ಅನಿಮಿಷಯೋಗಿ ಸತ್ತಿದ್ದು ಅಲ್ಲಮನಿಗೆ ಮತ್ತೆ ಜೀವನದ ನಶ್ವರತೆಯನ್ನು ತೋರಿಸಿತು. ಕೇವಲ ಅಲ್ಲಮನಾಗಿದ್ದ ಆತ ಅಲ್ಲಮಪ್ರಭುವಾಗುವುದು ಇದೇ ಅನಿಮಿಷ ಗುರುವಿನ ಸಾಕ್ಷಾತ್ಕಾರದಿಂದ. ದಿಗ್ಮೂಢನಾಗಿ ಬಳ್ಳಿಗಾವಿಯನ್ನು ತೊರೆದು, ಗುರು ಕೊಟ್ಟ ಇಷ್ಟಲಿಂಗವನ್ನು ಕೈಯಲ್ಲಿಡಿದು ಬನವಾಸಿಗೆ ಬಂದನು. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ತನ್ಮಯನಾಗಿ ಮದ್ದಳೆ ನುಡಿಸುವುದು ಅವನ ಇಷ್ಟದ ಕಾಯಕವಾಯಿತು. ಅವನ ಮದ್ದಳೆ ಕಾಯಕವನ್ನು ಮೆಚ್ಚಿದ ಬನವಾಸಿಯ ಮಾಯಾದೇವಿಯು ಅವನನು ಮೋಹಿಸುತ್ತಾಳೆ. ಆದರೆ ಮಾಯಾದೇವಿಯ ಮಾಯೆಗೆ ಸಿಲುಕದ ಅಲ್ಲಮ ದೇಶ ಸಂಚಾರಕ್ಕೆ ಹೊರಡುತ್ತಾನೆ.

ಅಲ್ಲಮ ದೇಶ ಸಂಚಾರ ಕೈಗೊಂಡು ಶಿವಭಕ್ತರನ್ನು ಸಂದರ್ಶಿಸುತ್ತಾ ಅವರನ್ನು ಹರಸುತ್ತಾ ಬರುತ್ತಾನೆ. ಬನವಾಸಿಯಿಂದ ಹೊರಟು ರಾಮೇಶ್ವರಕ್ಕೆ ಬರುತ್ತಾನೆ. ಅಲ್ಲಿಂದ ಕುಡಗಿಗೆ ಬಂದು ಮತ್ತೆ ಬಳ್ಳಿಗಾವಿಗೆ ಬರುತ್ತಾನೆ. ಬಳ್ಳಿಗಾವಿಯಿಂದ ಅಡಕ ಎಂಬ ಊರಿಗೆ ಬರುತ್ತಾನೆ. ಅಲ್ಲಿ ಅಜಗಣ್ಣ ಎಂಬ ಶಿವಭಕ್ತನಿದ್ದು ಅಲ್ಲಮ ಅಲ್ಲಿಗೆ ಬರುವ ಹೊತ್ತಿಗೆ ಮರಣ ಹೊಂದಿರುತ್ತಾನೆ. ಅಜಗಣ್ಣನ ಸಹೋದರಿಯಾದ ಮುಕ್ತಾಯಕ್ಕ ಅಣ್ಣನ ಮರಣದ ದುಃಖದಿವಂದ ಕಂಗಾಲಾಗಿ ಕುಳಿತಿರುತ್ತಾಳೆ. ಶಿವಭಕ್ತೆಯಾದ ಅವಳನ್ನು ಸಂದರ್ಶಿಸಿದ ಅಲ್ಲಮ ಅವಳಿಗೆ ಸಮಾಧಾನ ಮಾಡಿ, ಅವಳಿಗೆ ಕಲ್ಯಾಣದ ದಾರಿ ತೋರಿಸುತ್ತಾನೆ. ಅಲ್ಲಿಂದ ಸೊನ್ನಲಿಗೆಗೆ ಬಂದು ಕರ್ಮಯೋಗದಲ್ಲಿ ನಿರತನಾಗಿದ್ದ ಸಿದ್ಧರಾಮ ಎಂಬ ಶಿವಭಕ್ತನನ್ನು ಬೇಟಿಯಾಗುತ್ತಾನೆ. ಸಿದ್ಧರಾಮ ಊರಿನ ಕೆಲಸ ಮಾಡುತ್ತಾ, ಕೆರೆ ಕಟ್ಟಿಸುತ್ತಾ, ತೋಟ ಮಾಡಿಸುತ್ತಾ ತನ್ನ ಜೀವಮಾನವನ್ನೆಲ್ಲಾ ಕಳೆಯುತ್ತಿರುತ್ತಾನೆ. ಅಲ್ಲಮ ಸಿದ್ಧರಾಮ ಕರ್ಮಯೋಗದ ಜೊತೆಗೆ ಭಕ್ತಿಯೋಗವನ್ನು ಸಿದ್ಧರಾಮನಿಗೆ ಉಪದೇಶ ಮಾಡಿ ಉದ್ಧಾರರ ಮಾಡುತ್ತಾನೆ. ಸೊನ್ನಲಿಗೆಯಿಂದ ಕಲ್ಯಾಣಕ್ಕೆ ಬಂದು ಸ್ವಲ್ಪ ದಿನಗಳ ಕಾಲ ಅಲ್ಲಿಯೇ ಬಸವಾದಿ ಶರಣ ಸಂಗಡ ನೆಲೆಸುತ್ತಾನೆ. ನಂತರ ಮತ್ತೆ ದೇಶ ಸಂಚಾರ ಹೊರಟು ಕಾಶಿ, ಕೇದಾರ, ಗಯಾ, ನೇಪಾಳ, ಹಿಮಾಲಯ ಎಲ್ಲವನ್ನೂ ಸುತ್ತಿ ಶ್ರೀಶೈಲಕ್ಕೆ ಬರುತ್ತಾನೆ. ಶ್ರೀಶೈಲದಲ್ಲಿ ಗೋರಕ್ಷ ಎಂಬ ಶಿವಭಕ್ತ ಗೋವುಗಳನ್ನು ಪಾಲಿಸುತ್ತಿರುತ್ತಾನೆ. ಗೋರಕ್ಷ ಅಂಗಸಾಧನೆ ಮಾಡಿ ತನ್ನ ದೇಹವನ್ನು ಹುರಿಗಟಿಸಿ ವಜ್ರದೇಹಿಯಂಬಂತೆ ಬೀಗುತ್ತಿರುತ್ತಾನೆ. ಅಲ್ಲಿಗೆ ಬಂದ ಅಲ್ಲಮ ಗೋರಕ್ಷನ ದೇಹವ್ಯೋಮೋಹವನ್ನು ಕಳೆದು ಅವನಿಗೆ ನಿಜದ ಸಾಕ್ಷಾತ್ಕಾರ ಮಾಡಿಸುತ್ತಾನೆ. ಗೋರಕ್ಷ ಅಲ್ಲಮನ ಅನುಯಾಯಿಯಾಗಿ, ಅವನನ್ನನುಸರಿಸಿ ಕಲ್ಯಾಣಕ್ಕೆ ಬರುತ್ತಾನೆ.

ಜ್ಞಾನಿಯಾದ ಅಲ್ಲಮ ಕಲ್ಯಾಣಕ್ಕೆ ಬಂದು ಬಸವಣ್ಣ ಕೈಗೆತ್ತಿಕೊಂಡಿದ್ದ ಮಹಾ ಅಂದೋಲನದ ಭಾಗವಾಗಿ ಜನರ ಉದ್ದಾರಕ್ಕಾಗಿ ಮಾತ್ರವಲ್ಲದೆ, ಎಲೆಮರೆಯ ಕಾಯಿಯಂತಿದ್ದ ನೂರಾರು ಸಾಧಕರ ಉದ್ಧಾರಕ್ಕೂ ಶ್ರಮಿಸುತ್ತಾನೆ. ಕೊನೆಗೆ ಕಲ್ಯಾಣಕ್ಕೆ ಬಂದು ಮಹಾಕಾರ್ಯವನ್ನು ಕೈಗೊಂಡಿದ್ದ ಬಸವನ ಹೆಗಲಿಗೆ ಹೆಗಲು ಕೊಡುತ್ತಾನೆ. ಶೂನ್ಯಸಿಂಹಾಸನದ ಅಧ್ಯಕ್ಷನಾಗಿ ಶರಣ ಸಮುದಾಯಕ್ಕೆ ಮಾರ್ಗದರ್ಶಿಯಾಗುತ್ತಾನೆ. ಅನುಭಾವಿಯಾಗುತ್ತಾನೆ. ಮಹಾಮನೆಗೆ ಬಂದ ಅಕ್ಕಮಹಾದೇವಿಯನ್ನು ವಿಧವಿಧವಾಗಿ ಪ್ರಶ್ನಿಸಿ, ಅವಳ ಮಹತ್ವವನ್ನು ಜಗತ್ತಿಗೆ ಕಾಣಿಸುತ್ತಾನೆ. ಆತನು ತನ್ನ ಕೊನೆಗಾಲವನ್ನು ಶ್ರೀಶೈಲದಲ್ಲಿ ಕಳೆದಿರಬಹದು ಎನ್ನಲಾಗಿದೆ.

ಒಂದು ಸಾವಿರದ ಆರನೂರ ಮೂವತ್ತು ವಚನಗಳು ಅಲ್ಲಮನ ಹೆಸರಿನಲ್ಲಿ ದೊರಕಿವೆ. ಗುಹೇಶ್ವರ ಎಂಬುದು ಅವನ ವಚನಗಳ ಅಂಕಿತ. ಪ್ರಖರ ವೈಚಾರಿಕತೆ, ಯೌಗಿಕ ನಿಲುವು, ಆಧ್ಯಾತ್ಮಿಕ ಔನ್ನತ್ಯಗಳು ಅವನ ಹೆಚ್ಚಿನ ವಚನಗಳಲ್ಲಿ ತುಂಬಿ ಬಂದಿವೆ.

ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ
ಆತನ ಕಂಡು ಬೆರಗಾದೆನವ್ವಾ
ಎನ್ನಂತರಂಗದ ಆತುಮನೊಳಗೆ
ಅನುನಿಮಿಷ ನಿಜೈಕ್ಯ ಗುಹೇಶ್ವರನ ಕಂಡು!

ಎಂಬಂತಹ ಲಿಂಗಪತಿ-ಶರಣಸತಿ ಭಾವದ ವಚನಗಳು ಕಡಿಮೆ. ಅನುಭಾವಿಯಾದರೂ ಸಮಾಜವನ್ನು, ಜನಸಾಮಾನ್ಯರನ್ನು ಕಡೆಗಣಿಸಿದವನಲ್ಲ. ಅವನ ವಚನಗಳಲ್ಲಿ ಸಮಾಜಿಕ ವಿಡಂಬನೆಯೂ ವ್ಯಕ್ತವಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಒಂದೆರಡು ವಚನಗಳನ್ನು ನೋಡಬಹುದು.

‘ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡದವಂಗೆ ನಾಯನರಕ ಗುಹೇಶ್ವರಾ!


ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ
ತನುವೆಲ್ಲ ಹುಸಿಸ್ಥಲ - ಶರಣನೆಂತೆಂಬೆ?
ಮಾತಿನಂತುಟಲ್ಲ ಕ್ರಿಯಾಸಮಸ್ಥಲ
ಊತ್ಪತ್ಯ ಸ್ಥಿತಿ ಲಯರಹಿತ ನಿಜಸ್ಥಲ
ಗುಹೇಶ್ವರನೆಂಬ ಲಿಂಗೈಕವೈಕ್ಯ.

ಸರಳವಾದ ಆದರೆ ಅರ್ಥಪೂರ್ಣವಾದ ಭಾವಗೀತೆಗಳಂತಹ ವಚನಗಳು ಅಲ್ಲಮನಲ್ಲಿ ಸಿಗುತ್ತವೆ. ಅವುಗಳಲ್ಲೂ ಅಲ್ಲಮನ ವೈಚಾರಿಕತೆಯೇ ಪ್ರಮುಖ ಕೇಂದ್ರವಾಗಿರುವುದನ್ನು ಕಾಣಬಹುದು. ಪ್ರಾತಿನಿಧಿಕವಾಗಿ ಮೂರು ವಚನಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತಣ ಸಂಬಂಧವಯ್ಯಾ?
ಬೆಟ್ಟದ ಮೇಲಣ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತಣ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೆಯೂ ನಮಗೆಯೂ
ಎತ್ತಣಿಂದೆತ್ತಣ ಸಂಬಂಧವಯ್ಯಾ?

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆನೇರ ಬಯಸುವವರು
ವೀರರೂ ಅಲ್ಲ ಧಿರರೂ ಅಲ್ಲ, ಇದು ಕಾರಣ
ನೆರೆ ಮೂರು ಲೋಕವೆಲ್ಲವೂ ಹಲ್ಲಣವ
ಹೊತ್ತುಕೊಂಡು ತುಳಲುತ್ತ ಇದ್ದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?


ಸುಖವಿಲ್ಲ ಸೂಳೆಗೆ ಪಥವಿಲ್ಲ ಶಿಲಕ್ಕೆ
ಮಾಡಲಾಗದು ನೇಮವ ನೋಡಲಾಗದು ಶೀಲವ
ಸತ್ಯವೆಂಬುದೆ ಸತ್‌ಶೀಲ
ಗುಹೇಶ್ವರಲಿಂಗವನರಿಯ ಬಲ್ಲಂಗೆ!

ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳು ವಿಶೇಷ ಸ್ಥಾನವನ್ನು ಪಡೆಯುತ್ತವೆ. ಅಂತಹ ಬೆಡಗಿನ ವಚನಗಳು ಅಲ್ಲಮನಲ್ಲಿ ಬಹಳವಾಗಿ ಸಿಗುತ್ತವೆ. ಆ ಬೆಡಗಿನ ವಚನಗಳು ಅಲ್ಲಮನ ಅನುಭಾವಿತನದ ಅದ್ಭುತ ಅಭಿವ್ಯಕ್ತಿಗಹಳಾಗಿವೆ ಎನ್ನಬಹುದು. ಉದಾಹರಣೆಗೆ,

ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ
ಈ ಎರಡರ ನಡು ಒಂದಾಯಿತ್ತು!
ಹುಲಿಯಲ್ಲ, ಹುಲ್ಲೆಯಲ್ಲ.
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದೊಡೆ
ಎಲೆ ಮರೆಯಾಯಿತ್ತು ಕಾಣಾ ಗುಹೇಶ್ವರಾ!

ಎಂಬ ವಚನ ಆತನ ಬೆಡಗಿನ ವಚನಗಳ ಮಹತ್ತನ್ನು ಸೂಚಿಸುವುದನ್ನು ಕಾಣಬಹುದಾಗಿದೆ. ಅನುಭಾವಿ ಅಲ್ಲಮ ಎಲ್ಲ ಕಾಲಕ್ಕೂ ಕವಿಗಳನ್ನು ವಿಚಾರವಂತರನ್ನು ಕಾಡಿದ್ದಾನೆ. ಹರಿಹರ ‘ಪ್ರಭುದೇವರ ರಗಳೆ’ ಬರೆದಿದ್ದರೆ, ಚಾಮರಸ ಪ್ರಭುಲಿಂಗಲೀಲೆ ಎಂಬ ಷಟ್ಪದಿ ಕಾವ್ಯವನ್ನು ಬರೆದಿದ್ದಾನೆ. ಮಹಾಲಿಂಗದೇವ ಎಂಬುವವನು ವನ ಬೆಡಗಿನ ವಚನಗಳಿಗೆ ಟೀಕು ಮತ್ತು ವ್ಯಾಖ್ಯಾನಗಳನ್ನು ಬರೆದಿದ್ದಾನೆ. ಆಧುನಿಕ ವಿಚಾರವಂತರೂ ಅಲ್ಲಮನ ವೈಚಾರಿಕ ಧೋರಣೆಯನ್ನು ಒಪ್ಪುತ್ತಾರೆ ಎಂಬುದು ಅವನ ಸಾರ್ವಕಾಲಿಕತನವನ್ನು ಸೂಚಿಸುತ್ತದೆ.

Saturday, April 10, 2010

ನಾಯಿಗೂ ಒಂದು ಸ್ಮಾರಕ!

ಈ ಹಿಂದೆ ಎಲ್ಲೋ, ಕರಾವಳಿಯಲ್ಲಿರುವ ಒಂದು ನಾಯಿಸ್ಮಾರಕದ ಬಗ್ಗೆ ಓದಿದ್ದೆ. ಇಂದು ದಟ್ಟ್ ಕನ್ನಡ.ಕಾಂನಲ್ಲಿ ಚೆನ್ನಪಟ್ಟಣದಲ್ಲಿ ನಾಯಿಗೂ ಒಂದು ದೇವಸ್ಥಾನವಿರುವುದು ತಿಳಿಯಿತು. (ಅದರ ಫೋಟೋ ಮಾತ್ರ ಹಾಕಿದ್ದಾರೆ). ಇದಾದ ಮೇಲೆ ಒಂದು ನಾಯಿಯ ಸ್ಮಾರಕವೃತ್ತಾಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿದೆ.
ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕ ಶಾಸನವೊಂದು ಮಂಡ್ಯಜಿಲ್ಲೆಯ ಆತಕೂರಿನಲ್ಲಿದೆ (ಈಗ ಅದನ್ನು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ). ಶಾಸನದ ಜೊತೆಯಲ್ಲಿ(ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣ ಮತ್ತು ಚೋಳದೊರೆ ಮೂರನೇ ರಾಜಾದಿತ್ಯನ ನಡುವೆ ತಕ್ಕೋಲ ಎಂಬಲ್ಲಿ ಯುದ್ಧದಲ್ಲಿ ರಾಜಾದಿತ್ಯ ಹತನಾಗುತ್ತಾನೆ. ರಾಜಾದಿತ್ಯನನ್ನು ಕೊಂದವು ಕೃಷ್ಣನ ದಂಡನಾಯಕನಾದ ಗಂಗದೊರೆ ಬೂತುಗ. ಈ ಬೂತುಗನಿಗೆ ನೆರವಾದವನು ಆತನ ಅಂಕಕಾರನಾದ ಮಣೆಲರ ಆತನ ಸಾಹಸವನ್ನು ಮೆಚ್ಚಿದ ಕೃಷ್ಣನು ‘ನಿನಗೆ ಏನು ಬೇಕು ಬೇಡಿಕೋ’ ಎಂದು ಕೇಳುತ್ತಾನೆ. ಆಗ ಮಣೆಲರ ಕೃಷ್ಣನ ಬಳಿಯಿದ್ದ ‘ಕಾಳಿ’ ಎಂಬ ಹೆಣ್ಣುನಾಯಿಯನ್ನು (ಶಿಲ್ಪದಲ್ಲೂ ಹೆಣ್ಣು ನಾಯಿಯನ್ನು ಕೆತ್ತಲಾಗಿದೆ) ಬೇಡಿ ಪಡೆದುಕೊಳ್ಳುತ್ತಾನೆ. (ದತ್ತಿ, ಜಹಗೀರು, ಸೇನಾಪತಿ ಮುಂತಾದವುಗಳನ್ನು ಬೇಡದೆ ಕೇವಲ ನಾಯಿಯನ್ನು ಮಣೆಲರ ಬೇಡಿದನೆಂದರೆ ಆ ನಾಯಿಯ ಸಾಹಸ ಎಂಥದ್ದಿರಬಹುದು!? ಹರಿ ಎಂಬುದು ಮಣೆಲರನ ಕುದುರೆಯ ಹೆಸರು. ಬಹುಶಃ ಮಣೆಲರ ಪ್ರಾಣಿಪ್ರಿಯನಾಗಿದ್ದರಬಹುದು).
ಆ ನಾಯಿಯೊಂದಿಗೆ ತನ್ನ ಸಹಯೋಧರ ಜೊತೆ ಊರಿಗೆ ಮಣೆಲರ ವಾಪಸ್ಸಾಗುತ್ತಿದ್ದಾಗ, ಕೆಳಲೆನಾಡಿನ ಬೆಳತೂರಿನ ಪಶ್ಚಿಮಕ್ಕೆ ಇರುವ ಕಲ್ಲುಗುಡ್ಡವೊಂದರಲ್ಲಿ ಹಂದಿಯೊಂದಕ್ಕೆ ಮುಖಾಮುಖಿಯಾಗುತ್ತಾರೆ. ‘ಕಾಳಿ’ ನಾಐಇಯನ್ನು ಹಂದಿಯ ಮೇಲೆ ಛೂ ಬಿಡುತ್ತಾಋಎ. ಹಂದಿಗೂ ನಾಯಿಘೂ ಭಯಂಕರವಾದ ಹೋರಾಟ ನಡೆಯುತ್ತದೆ. ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ಮಣೆಲರನಿಗೆ ಅತೀವ ದುಃಖವಾಗುತ್ತದೆ. ನಾಯಿಯ ಶವವನ್ನು ತನ್ನ ಊರಾದ ಆತಕೂರಿಗೆ ತಂದು ಚಲ್ಲೇಶ್ವರ ದೇವಾಲಯದ ಎದುರಿಗೆ ಸಂಸ್ಕಾರ ಮಾಡುತ್ತಾನೆ. ನಂತರ ಅದಕ್ಕೆ (ಹಂದಿ ನಾಯಿ ಹೋರಾಡುತ್ತಿರುವ ಹಾಗೂ ವಿವರಗಳನ್ನುಳ್ಳ) ಸ್ಮಾರಕಶಿಲೆಯನ್ನು ಮಾಡಿಸಿ ನೆಡೆಸುತ್ತಾನೆ. ಊರಿನ ಹಿರಿಯಕೆರೆಯ ಕೆಳಗೆ ಮತ್ತಿಮರಗಳ ಬಳಿಯ ಕಾಲುವೆಯ ಸಮೀಪದಲ್ಲಿದ್ದ ಎರಡು ಖಂಡುಗ ಬೆಳೆಯುವ ಗದ್ದೆಯನ್ನು ದತ್ತಿಯಾಗಿ ಬಿಟ್ಟು ಕಾಳಿ ಸಮಾಧಿಯ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ.
ನಾಯಿಗಾಗಿ ಬಿಟ್ಟ ದತ್ತಿಯನ್ನು ಯಾರಾದರೂ ಹಾಳು ಮಾಡುತ್ತಾರೆ ಎಂಬ ಭಯದಿಂದ ಉಗ್ರವಾದ ಶಾಪಾಶಯವನ್ನು (ಶಾಸನದ ಕೊನೆಯಲ್ಲಿ ಶಾಪಾಶಯವಿರುವುದು ರೂಢಿ) ‘ದತ್ತಿಯನ್ನು ಹಾಳು ಮಾಡಿದವನು ನಾಯಿಯನ್ನು ಸಂಭೋಗಿಸಿದ ಪಾಪಕ್ಕೆ ಗುರಿಯಾಗುತ್ತಾನೆ’ ಎಂದೂ ಬರೆಸಿದ್ದಾನೆ.
 
ಇತಿಹಾಸದಲ್ಲಿ ದಾಖಲಾಗಿರುವ ಇಂತಹ ಹಲವಾರು ವಿಷಯಗಳನ್ನು ತಿಳಿಯಬಯಸುವವರಿಗೆ ಈ ಕೆಳಗಿನ ಪುಸ್ತಕ ಒಂದು ಕೈದೀವಿಗೆ.
ಪುಸ್ತಕ: ಶಾಸನ ಸರಸ್ವತಿ
ಲೇಖಕರು: ಡಾ.ಕೈದಾಳ ರಾಮಸ್ವಾಮಿ ಗಣೇಶ, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು
ಪ್ರಕಾಶಕರು: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, ೨೦೦೭-೨೦೦೮
ಪುಟಗಳು: ೧೯೦
ಬೆಲೆ: ರೂಪಾಯಿ ಎಪ್ಪತ್ತೈದು ಮಾತ್ರ

Saturday, April 03, 2010

T-10 : ತೇಜಸ್ವಿ ಟೆನ್

ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗೆ ಚಿಮ್ಮಿಸುತ್ತಾರೆ ಎಂಬ ಕುತೂಹಲ ನಿಮಗಿದ್ದರೆ, ಅವರ ‘ಪಾಕಕ್ರಾಂತಿ’ ಓದಬೇಕು. ಆ ನೀಳ್ಗತೆಯ ಹತ್ತು ಪಂಚಿಂಗ್ ಲೈನುಗಳನ್ನು ತೇಜಸ್ವಿ ಟೆನ್ (T-10)ಎಂದು ಇಲ್ಲಿ ಸಂಗ್ರಹಿಸಿದ್ದೇನೆ. ನಕ್ಕು ನಗಿಸುತ್ತಾ ತೇಜಸ್ವಿಯವರನ್ನು ಸ್ಮರಿಸೋಣ. ತೇಜಸ್ವಿ ನಮ್ಮನ್ನಗಲಿ ಇಂದಿಗೆ (ಮೇ ೫) ಮೂರು ವರ್ಷಗಳೇ ಕಳೆದುಹೋದವು. ಆದರೂ ನಮ್ಮ ಬದುಕಿನಲ್ಲಿ, ನಮ್ಮ ಯೋಚನಾ ಕ್ರಮದಲ್ಲಿ ಅವರ ಚಿಂತನೆ ಆದರ್ಶಗಳು ಸದಾ ಜೀವಂತ. ಈ ನಡುಡವೆ ಕುಪ್ಪಳಲ್ಳಿಯಲ್ಲಿ ೪ ಮತ್ತು ೫ ನೇ ತಾರೀಖಿನಂದು ಎರಡುದಿನದ ತೇಜಸ್ವಿ ಹಬ್ಬ ನೆರವೇರಲಿದೆ. ನಾಲ್ಕರಂದು ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ವಿಚಾರ ಸಂಕಿರಣವಿದ್ದರೆ, ೫ರಂದು ಅವರ ಸ್ಮಾರಕ ಲೋಕಾರ್ಪಣೆಯಾಗಲಿದೆ. ಈ ಸ್ಮಾರಕವಿರುವ ಜಾಗವಂತೂ ಅರ್ಥಪೂರ್ಣ ಎಂದು ನನಗನ್ನಿಸಿದೆ. ಕೊಪ್ಪ-ತೀರ್ಥಹಳ್ಳಿ ಮುಖ್ಯರಸ್ತೆಯಿಂದ ಕುಪ್ಪಳ್ಳಿಯ ಕವಿಮನೆಗೆ ಹೋಗುವ ರಸ್ತೆ ಮಧ್ಯದಲ್ಲಿ ಕವಿಶೈಲಕ್ಕೆ ಹೋಗಲು ಬಲಭಾಗಕ್ಕೆ ಕವಲೊಡೆಯುತ್ತದೆ. ಅದೇ ಜಾಗದಲ್ಲಿ ಎಡಬದಿಯಲ್ಲಿ ಸ್ಮಾರಕ ಸರಳವಾಗಿ ನಿರ್ಮಾಣಗೊಂಡಿದೆ. ಸುತ್ತ ಒತ್ತೊತ್ತಾಗಿ ಆವರಿಸಿಕೊಂಡಿರುವ ಪೊದೆ ಮರ ಗಿಡಗಳು. ಆಗಾಗ ಕಿವಿಗಪ್ಪಳಿಸುವ ಹಕ್ಕಿಗಳ ಕೂಗು. ನಡುವೆ ನಮ್ಮ ತೇಜಸ್ವಿ!

ಪಾಕಕ್ರಾಂತಿಯ ಈ ಹತ್ತು ಲೈನುಗಳನ್ನು ಓದಿ ಎಂಜಾಯ್ ಮಾಡಿ. ವಿಪರೀತವಾದ ಅರ್ಥ ಗೋಚರಿಸಿದರೆ, ಅದನ್ನು ಸ್ವೀಕರಿಸುವ ಮೊದಲು ಮೂಲಕಥೆ ಪಾಕಕ್ರಾಂತಿಯನ್ನು ಓದಿ, ಡಬಲ್ ಬೆನಿಫಿಟ್ ಪಡೆದುಕೊಳ್ಳಿ.

  1. ಅಡಿಗೆಯ ರುಚಿಗೂ ಪಾತ್ರಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಬಂಧವಿದೆಯೇ? 
  2. [ಪೋನಿನಲ್ಲಿ ಮಾತನಾಡಿ ಬರುವಷ್ಟರಲ್ಲಿ ಒಲೆಯ ಮೇಲಿದ್ದ ಹಾಲು ಉಕ್ಕಿ ಇಡೀ ಪಾತ್ರೆಯೇ ಹೊತ್ತಿ ಉರಿಯುತ್ತಿದ್ದುದಕ್ಕೆ] ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ. 
  3. ಹಾಲಿನ ಪ್ಯಾಕೆಟ್ಟುಗಳ ಮೇಲೂ ತಲೆಬುರುಡೆಯ ಚಿತ್ರವನ್ನೋ ಹ್ಯಾಂಡಲ್ ವಿತ್ ಕೇರ್ ಎನ್ನುವ ಸೂಚನೆಯನ್ನೋ ಕೊಡುವುದು ಒಳ್ಳೆಯದಲ್ಲವೆ? 
  4. ಅದನ್ನು [ಒಣಮೀನನ್ನು] ಎಣ್ಣೆ ಹಾಕಿ ಹೆಂಚಿನ ಮೇಲೆ ಹುರಿದರೆ ಇಡೀ ತಾಲ್ಲೂಕಿನ ನಾಯಿಗಳೆಲ್ಲಾ ನನ್ನ ಮನೆ ಎದುರು ಕ್ಯೂ ನಿಲ್ಲುವುದರಲ್ಲಿ ಸಂಶಯ ಇರಲಿಲ್ಲ. 
  5. [ಬ್ರೆಡ್ಡಿಗೆ ಸೇರಿಕೊಂಡಿದ್ದ ಇರುವೆಗಳನ್ನು ನಿವಾರಿಸಲಾಗದ್ದಕ್ಕೆ] ಬ್ರೆಡ್ಡು ಇರುವೆಗಳಿಗೆ ಬಹು ಅಂತಸ್ತಿನ ಕಟ್ಟಡ ಇದ್ದ ಹಾಗೆ. ಅದರೊಳಗೆ ಇರುವೆ ಸೇರಿದರಂತೂ ಅವನ್ನು ಅಲ್ಲಿಂದ ಉಚ್ಛಾಟಿಸುವುದು ಬಾಡಿಗೆ ಮೆನಯವರನ್ನು ಬಿಡಿಸಿದ ಹಾಗೆ ಅಸಾಧ್ಯವೇ ಸರಿ.  
  6. [ತಾವು ಮಾಡಿದ ಅಡುಗೆ ತಿನ್ನದೆ ಅನೇಕ ದಿನಗಳಿಂದ ಉಪವಾಸವಿದ್ದ ನಾಯಿ, ಒಣ ಮೀನಿನ ವಾಸನೆ ಬಂದ ತಕ್ಷಣ ಕುಣಿದಾಡಿದ್ದಕ್ಕೆ] ಆವರೆಗೂ ಕಪಟ ಸನ್ಯಾಸಿಯ ಹಾಗೆ ವೈರಾಗ್ಯ ನಟಿಸುತ್ತ ಬಿದ್ದದ್ದ ಅದು ಪ್ಯಾಕೆಟ್ ಬಿಚ್ಚುತ್ತಿದ್ದ ಹಾಗೇ ಮೇನಕೆಯ ಕ್ಯಾಬರೆ ನೋಡಿದ ವಿಶ್ವಾಮಿತ್ರನ ರೀತಿ ತನ್ನ ಉಪವಾಸ ವ್ರತ ಗಾಳಿಗೆ ತೂರಿ ಅನೇಕ ದಿನಗಳಿಂದ ಅನ್ನವನ್ನೇ ಕಾಣದ ಪ್ರಾಣಿ ತರ ಅಯ್ಯಯ್ಯೋ ಎಂದು ಕೂಗುತ್ತ ಶೆಡ್ಡಿನಿಂದಲೇ ಸರಪಳಿ ಜಗ್ಗತೊಡಗಿತು. 
  7. [ಹಗಲು ಹೊತ್ತಿನಲ್ಲಿ ಸ್ಕೂಟರ್ ಹೆಡ್ ಲೈಟ್ ಉರಿಸಿದ್ದರೆ ಸಂಜ್ಞೆ ಮಾಡುವ ಹಿಂದಿನಿಂದ ಕೂಗಿ ಹೇಳುವ ಮೂಲಕ ಕಿರಿ ಕಿರಿ ಮಾಡುವವರ ಬಗ್ಗೆ] ಒಮ್ಮೆ ಬೇಕೆಂದೇ ದೀಪ ಹಾಕಿಕೊಂಡು ಪೇಟೆಯ ಎಲ್ಲಾ ಬೀದಿಗಳಲ್ಲೂ ತಿರುಗಾಡಿ ಊರಿಗೆ ಊರೇ ಹುಚ್ಚು ಹಿಡಿದಂತೆ ಚಪ್ಪಾಳೆ ತಟ್ಟುತ್ತಾ ಕಿರಿಚಾಡುವುದನ್ನು ನೋಡಬೇಕೆಂದಿದ್ದೇನೆ. 
  8. [‘ನೀವು ಬರಹಗಾರರಾಗಿರುವುದರಿಂದ ನನ್ನ ಮಗುವಿಗೆ ಒಳ್ಳೆಯ ಒಂದು ಹೆಸರನ್ನು ಸೂಚಿಸಬೇಕು’ - ಎಂದು ಪೀಡಿಸುತ್ತಿದ್ದವನ ಬಗ್ಗೆ] ಹುಟ್ಟಿಸಿದವರೇ ಹೆಸರಿಡಬೇಕು. ಇಲ್ಲದಿದ್ದರೆ ಹೆಸರು ಯಾರ‍್ದೋ ಬಸರು ಯಾರ‍್ದೋ ಅಂತ ಗಾದೆ ಮಾತಾಗುತ್ತೆ. ಕತೆ ಬರೆಯುವವರ ನಾಲಗೆ ತುದಿಯಲ್ಲಿ ಇವರು ಹುಟ್ಟಿಸಿದ ಮಕ್ಕಳ ಹೆಸರೆಲ್ಲಾ ಇರುತ್ತ? 
  9. ಜಿ.ಎಚ್.ನಾಯಕರನ್ನೂ ಟಿ.ಪಿ.ಅಶೋಕರನ್ನೂ ಇಲ್ಲಿಗೆ ಸೀನಿಯಾರಿಟಿ ಪ್ರಕಾರ ಸರ್ಕಲ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರಾಗಿ ನೇಮಿಸಿ ಬ್ರಹ್ಮಸೃಷ್ಟಿಯ ಈ ಪಾತ್ರಗಳಿಗೆಲ್ಲ ಚೆನ್ನಾಗಿ ಚರ್ಚಿಸಿ ಸರಿಯಾಗಿ ವರ್ತಿಸುವಂತೆ ಹೇಳಿಕೊಡದಿದ್ದರೆ ಇಲ್ಲಿ ತುಂಬಿ ತುಳುಕುತ್ತಿರುವ ಅಸಂಬದ್ಧ ಪಾತ್ರಗಳೆಲ್ಲಾ ಕತೆ ಕಾದಂಬರಿಗಳೊಳಗೆ ನುಸುಳುವುದನ್ನು ಒಬ್ಬ ಲೇಖಕನಿಂದ ತಡೆಯಲು ಸಾಧ್ಯವೇ? 
  10. [‘ಹೆಂಡತಿಗೆ ಗೊತ್ತಿಲ್ಲದಂತೆ ಗಂಡ, ಗಂಡನಿಗೆ ಗೊತ್ತಿಲ್ಲದಂತೆ ಹೆಂಡತಿ ಎಷ್ಟೋ ಸಾರಿ ಉಗ್ರಗಾಮಿಯಾಗಿರೋ ಸಂದರ್ಭಗಳಿದ್ದಾವೆ’ - ಎಂದ ಪೋಲಿಸು ಅಧಿಕಾರಿಯ ಮಾತಿನ ಬಗ್ಗೆ] ಇನ್ನು ಮುಂದೆ ಹೆಂಡತಿ ಮಕ್ಕಳ ಬಗ್ಗೆ ಕೊಂಚ ನಿಗಾ ಇಡುವುದು ಒಳ್ಳೆಯದೆಂದು ಯೋಚಿಸಿದೆ. ಹೆಂಗಸರು ತಾಳಿ ಬದಲು ಸಯನೈಡ್ ಗುಳಿಗೆ ಕುತ್ತಿಗೆಗೆ ಕೊಟ್ಟಿಕೊಂಡು ಓಡಾಡುವುದನ್ನು ಕಲ್ಪಿಸಿಕೊಂಡು ಭಯವಾಯ್ತು.
ಮತ್ತಷ್ಟು ತೇಜಸ್ವಿ ಸಂಬಂಧಿತ ಲೇಖನಗಳು
ತೇಜಸ್ವಿ ನೆನಪು : ಮರೆತಿದ್ದರೆ ತಾನೆ! http://nandondmatu.blogspot.com/2009/04/blog-post.html

ಮತ್ತೆ ಮತ್ತೆ ತೇಜಸ್ವಿ http://nandondmatu.blogspot.com/2009/04/blog-post_16.html

ತೇಜಸ್ವಿ ಮಾತು ಮೂರು ಅರ್ಥ ನೂರಾರು http://nandondmatu.blogspot.com/2008/12/blog-post_10.html

T20=ತೇಜಸ್ವಿ ಟ್ವೆಂಟಿ : ಸಹಜಕೃಷಿ http://nandondmatu.blogspot.com/2009/09/t20.html

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್ http://nandondmatu.blogspot.com/2009/12/t20.html

T20 = ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್ http://nandondmatu.blogspot.com/2010/02/t20.html