Friday, June 22, 2018

ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ

ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ:
ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?.....
ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ನೂರರ ಲೆಕ್ಕದಲ್ಲಿ ಪಟ್ಟಿ ಮಾಡಬಹುದು, ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ!
***
ಸೀತೆಯ ಪ್ರಭಾವಕ್ಕೊಳಗಾದ ತಂಗಿ ಚಂದ್ರನಖಿಯೂ ರಾವಣನಿಗೆ ಬುದ್ಧಿವಾದ ಹೇಳುವಷ್ಟರಮಟ್ಟಿಗೆ ಧೈರ್ಯವಹಿಸುತ್ತಾಳೆ. ರಾವಣ ಕೆರಳುತ್ತಾನೆ, ಒಳಗೊಳಗೆ ಬೆವರುತ್ತಾನೆ! ಮೇಲ್ಮೇಲೆ ಬೆದರಿಸುತ್ತಾನೆ!!
ನೀನಾದೊಡಂ,
ಅನಲೆಯಾದೊಡಂ
ಮತ್ತಂ ಇನ್ನಾರಾದರೊಡಂ
ಇತ್ತಲ್ ಈ ಬನಕೆ ಕಾಲಿಟ್ಟುದಂ
ಕೇಳ್ದೆನಾದೊಡೆ.....
ಎಂದು ಮಾತು ಮುಂದುವರಿಸುತ್ತಿರುವಾಗಲೇ, ಆತ ನಿಂತಿದ್ದ ಆಲಿವಾಣದ ಮರದ ಮೇಲಿಂದ ಹೂಕುಡಿವ ಹಕ್ಕಿ ಕೆಡಹಿದ ಆಲಿವಾಣದ ಕೆಂಪು ಹೂ ದೊಪ್ಪನೆ ರಾವಣನ ಮೇಲೆ ಬಿದ್ದು ಆತನ ಮಾತಿಗೆ ಅಡ್ಡಿಯಾಗುತ್ತದೆ. ಅದರಿಂದ ಕಿನಿಸಿ ತಲೆಕೊಡಹಿ, ಮೇಲಕ್ಕೊಂದು ಸಾರಿ ನೋಡಿ ಮತ್ತೆ ಮಾತು ಮುಂದುವರಿಸಿ-
.......ಕೊರಳ್ ಉರುಳ್ದಪುದು
ಎಂದು ವಾಕ್ಯವನ್ನು ಪೂರ್ಣಗೊಳಿಸುತ್ತಾನೆ. ಕವಿ “ಪೂರೈಸಿದನ್ ತನ್ನ ದುರ್ವಾಕ್ಯಮಂ” ಎನ್ನುತ್ತಾರೆ! ಇದೊಂದು ಅತ್ಯದ್ಭುತವಾದ ಪ್ರತಿಮಾಸೃಷ್ಟಿ. ಮುಂದೆ ರಾವಣನಿಗೊದಗಲಿರುವ ಅವಸಾನದ ಸೂಚನೆ. ಕೆಂಪು ಹೂವನ್ನು (ಕೆಂಪುಕಣಿಗಿಲೆ ಅಥವಾ ಆಲಿವಾಣ) ಬಲಿಯ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. ಬಲಿಯಾಗುವ ಪ್ರಾಣಿಯ ಮೇಲೆ ಕೆಂಪುಹೂವನ್ನು ಹಾಕಿ ಬಲಿಗೆ ಒಪ್ಪಿಗೆ ಸೂಚಿಸಲಾಗುತ್ತದೆ. ಇಲ್ಲಿ ಹೂವು ಬಿದ್ದಿರುವುದು ರಾವಣನ ತಲೆಯ ಮೇಲೆ. ಆದರೆ ರಾವಣನೇ ‘ಕೊರಳ್ ಉರುಳ್ದಪುದು’ ಎನ್ನುತ್ತಿದ್ದಾನೆ! ಅವನ ಮಾತಿನ ವಾಚ್ಯಾರ್ಥ ತನ್ನ ಮಾತನ್ನು ಮೀರಿ ಸೀತೆಯ ಬೇಟಿಗೆ ಬರುವ ಅನಲೆ ಚಂದ್ರನಖಿಯ ಮೊದಲಾದವರನ್ನು ಕುರಿತು. ಅದು ತನ್ನ ಮೇಲೆ ಹೂವನ್ನು ಕೆಡವಿದ ಹಕ್ಕಿಗೂ ಅನ್ವಯಿಸಿರಬಹುದು. ಆದರೆ, ನಿಜದಲ್ಲಿ ಕೊರಳು ಉರುಳುವುದು ರಾವಣನದು!
***
‘ನಿನ್ನನ್ನು ಉಳಿದ ರಾಮನು, ಕಿಷ್ಕಿಂದೆಯಲ್ಲಿ ಇನ್ನಾವಳನ್ನೊ ಕಟ್ಟಿಕೊಂಡು ಸುಖವಾಗಿದ್ದಾನೆ’ ಎಂಬ ಸುಳ್ಳಿನಿಂದ ಆರಂಭಿಸಿ, “ಇಲ್ಲದಿರ್ಕೆ ಬಯಸಿ ಎಳಸದಿರ್, ಇರ್ಪುದನೊಪ್ಪಿ ಸೊಗವನುಣ್” ಎಂಬ ತರ್ಕವನ್ನು ರಾವಣ ಸೀತೆಯ ಮುಂದಿಡುತ್ತಾನೆ. ಅಷ್ಟರವರೆಗೆ ರಾವಣನ ಮಾತಿಗೆ ಕ್ಷಣಮಾತ್ರವೂ ಪ್ರತಿಕ್ರಿಯೆ ತೋರದಿದ್ದ ಸೀತೆ-
.....ಭಿತಿಯಂ ಕೆಲಕೊತ್ತಿ,
ದುಕ್ಕಮಂ ಮೆಟ್ಟಿಕ್ಕಿ,
ಸುಯ್ದೋರಿದುದು ಕೋಪಫಣಿ
ಜನಕನಂದಿನಿಯ ಮೌನವಲ್ಮೀಖದಿಂ.....
ಎಂಬಂತೆ ಸಿಡಿಯುತ್ತಾಳೆ, ತ್ರಿಜಟೆಗೆ ಹೇಳುವಂತೆ, ರಾವಣನನ್ನು ಉದ್ದೇಶಿಸಿ ಮಾತನಾಡುತ್ತಾಳೆ. ಭಾಗಶಃ ಬಯ್ಯುತ್ತಾಳೆ (ಅಲ್ಪಪ್ರಾಣಿ, ನಾಯಿ, ಕತ್ತೆ ಎಂದೆಲ್ಲಾ ರಾವನೆದುರಿಗೇ ರಾವಣನನ್ನು ಹೀಯಾಳಿಸುವುದು, ಅಸಹಾಯಕ ಸ್ಥಿತಿಯಲ್ಲಿ ಸಿಡಿದೇಳುವ ಸಾತ್ವಿಕ ಮನೋಭಾವದ ಸ್ತ್ರೀಯರ ಪ್ರತಿನಿಧಿಯಂತೆ ಕಾಣುತ್ತಾಳೆ ಸೀತೆ); ಬಹುಶಃ ರಾಮಾಯಣ ದರ್ಶನಂ ಕಾವ್ಯದಲ್ಲಿ ಈ ಭಾಗದಷ್ಟು ಕಠಿಣವಾದ ವಾಕ್ಯಗಳನ್ನು ಬೇರೆಲ್ಲೂ ಕಾಣಲಾಗುವುದಿಲ್ಲ. ಸೀತೆ ಮಾತಿನ ಸೊಬಗನ್ನು ಇಡಿಯಾಗಿ ಓದಿಯೇ ಅನುಭವಿಸಬೇಕು:
“ಪೇಳ್, ತ್ರಿಜಟೆ,
ಪಿತ್ತೋತ್ಪನ್ನ ಜಲ್ಪಕೆ ಉತ್ತರವಿದಂ
ನಿನ್ನ ಅನ್ನದಾತಂಗೆ:
ಕತ್ತೆಯ ತತ್ತ್ವಮಂ ಕತ್ತೆ ಕತ್ತೆಗಳ್ಗೆ ಉಪದೇಶಿಸಲ್ವೇಳ್ಕುಂ ಅಲ್ಲದೆಯೆ
ಉತ್ತಮ ರಘುಕುಲೋತ್ತಮನ ಸತಿಯ ಮುಂದದಂ ಗಳಪಲ್ ಪ್ರಯೋಜನಮೆ?
ಪ್ರತ್ಯುತ್ತರಕ್ಕಮೀ ಅರ್ಹನಲ್ತಲ್ಪಾಸು!
ಮರುಕಮಂ, ಕರುಣೆಯಂ, ವಿನಯಮಂ, ಸೌಜನ್ಯಮಂ
ನಟಿಸುವೀ ನಟನ ಶುನಕಾಭಿನಯಕೆ ಧಿಕ್!
ಪುಸಿವೇಳ್ವ ನಾಲಗೆಗೆ ಧಿಕ್, ಧಿಕ್! ಕೋಟಿ ಧಿಕ್!
ಇವನ ಪೊಲೆಸಿರಿಗೆ ಧಿಕ್! ಇವನ ಬಲ್ಮೆಗೆ ಲಕ್ಷಧಿಕ್!
ಉಗುಳುಮಪವಿತ್ರಮಕ್ಕು, ಈತಂಗೆ ಪೇಸಿ ಆ ದಿಕ್ಕಿಗೆಂಜಲನೆಸೆಯೆ ನಾಂ!
ಶ್ರೀ ರಾಮಚಂದ್ರನೆಲ್ಲಿರ್ದೊಡಂ ನನಗೆ ಪತಿ!
ಶ್ರೀ ರಾಮನೆಂತಿರ್ದೊಡಂ ನನಗೆ ಪತಿ!
ಸತ್ತೆ ನಾಂ ಸೇರ್ದಪೆನಾತನೊಡನೆ;
ಬದುಕಮೇಧ್ಯಮೆ ದಿಟಂ ಇನ್ನರಿರ್ಪೀ ಜಗದಿ!#
ಈ ಸೊಣಗಮರಿಯದಾ ಭೀಮ ವಿಕ್ರಮಿ ರಾಮ ಮಹಿಮೆಯಂ.
ಬಲ್ಲೆನಾಂ. ಪೇಳ್, ತ್ರಿಜಟೆ, ನಿನ್ನನ್ನದಾತಂಗೆ.
ಕೂಳ್ ಕೊಟ್ಟು ಸಲಹಿದಾ ಜೋಳವಾಳಿಗೆ ಉಪಕೃತಿಯನೆಸಗಿ ಋಣಮುಕ್ತೆಯಾಗು.
ಪಾಪಿಗೆ ಮೋಕ್ಷಮೆಂತಂತೆ ದುರ್ಲಭಳ್ ನಾನೀ ನಿಶಾಚರಗೆ.
ನಾಂ ಮುನ್ನೆ ಗೆಂಟರಿಂ ಕೇಳ್ದ ರಾಕ್ಷಸವಿಕೃತಿ, ಪೊರಗಲ್ತು, ಒಳಗಿರ್ಪುದೀತಂಗೆ.
ಕೇಳದೊ ವಿಹಂಗಮಂ ಕುಕಿಲಿದೆ ಭವಿಷ್ಯಮಂ:
ತರುವುದೀ ಸಾಗರಂ ತಾನೆ ಸೇತುವೆಯಾಗಿ ರಾವಣನ ಮೃತ್ಯುವಂ,
ಬೇಗಂ ಇವನೆನ್ನನಾ ಮುನ್ನಮೊಪ್ಪಿಸದಿರಲ್ ಆ ಕೃಪಾಕರನಡಿಗೆ ಮುಡಿಯಿಟ್ಟು!”
ಸೀತೆಯ ಮಾತಿನ ತೀಕ್ಷ್ಣತೆಗೆ, ಅದರಲ್ಲಿನ ತಿರಸ್ಕೃತಿಯ ಘಾತಕ್ಕೆ ರಾವಣ ಕಣ್ಣು ಮುಚ್ಚಿದನಂತೆ. ಮತ್ತೆ ಕಣ್ಣುತೆರದನಂತೆ ಸತ್ತು ಹುಟ್ಟಿದ ರೀತಿಯಲ್ಲಿ!!
#(ಜನ್ನನ ಅನಂತನಾಥಪುರಾಣದಲ್ಲಿ ಸುನಂದೆ 'ವಸುಷೇಣನೇ ನನ್ನ ಬದುಕು; ವಸುಷೇಣನೇ ನನ್ನ ಸಾವು; ವಸುಷೇಣನೇ ನನ್ನ ಚಿತೆಗೊಡೆಯ" ಎಂದು ಚಂಡಶಾಸನನಿಗೆ ಉತ್ತರನೀಡುವ ದೃಶ್ಯವಿದೆ)
***
ರಾವಣ ಎಂದೂ ಈಡೇರದ ಪ್ರತಿಜ್ಞೆಯೊಂದನ್ನು ಮಾಡುತ್ತಾನೆ- ಸೀತೆಗೆ ಹೇಳುವಂತೆ ತ್ರಿಜಟೆಗೆ ಹೇಳುತ್ತಾನೆ!
ತ್ರಿಜಟೆ, ಕೇಳ್ ಲಂಕೇಶನಾಜ್ಞೆಯಂ. ಮತ್ತೆ ಪೇಳ್,
ಉಣಿಸಿಲ್ಲದೀ ಮೆದುಳ್ಗೆಟ್ಟಳ್ಗೆ ಬುದ್ಧಿಸ್ಥಿರತೆ ಮರಳ್ದಾಮೇಲೆ.
ಮೊದಲ್, ಇಲ್ಲಿ ಬಂದಿರ್ದರಾರೆಂಬುದಂ. ಪೇಳ್ದುದೇನೆಂಬುದಂ ಮತ್ತೆ.
ಇನ್ನೆರಳ್ ತಿಂಗಳಿಹುದಿತ್ತವಧಿ.
ಆ ಮೇರೆಯೊಳ್ ಪುರ್ಚಿನೀ ಬಗೆಕದಡು ಹಣಿಯದಿರೆ,
ಭೇಷಜಂ ಬರ್ಪುದು ಬಲಾತ್ಕಾರ ರೂಪಮಂ ತಾಳ್ದು! ಮೇಣ್,”
(ಸುಯ್ದು ನಿಡುನೋಡುತಾ ಸೀತೆಯಂ ವಿರಳಾಕ್ಷರದಿ ತಡೆತಡೆದು ನುಡಿದನಿಂತು)
“ಮೇಣ್, ನಿರಶನವ್ರತರೂಪದ ಆತ್ಮಹತ್ಯೆಯಿನ್ ಆಕೆ ಮಡಿಯುವೊಡೆ,
ಅದೆ ಚಿತೆಯನೇರುವೆನ್;
ಪೆಣದೆಡೆಯೆ ಪವಡಿಪೆನ್;
ಭಸ್ಮರೂಪದಿನಾದೊಡಂ ಕೂಡಿ ಪೊಂದುವೆನ್ ಸಾಯುಜ್ಯಮಂ!”
(ಇಲ್ಲಿ ರಾವಣನ ಈ ಪ್ರತಿಜ್ಞೆ ಈಡೇರುವುದಿಲ್ಲ; ಆದರೆ ಜನ್ನನ ಅನಂತನಾಥಪುರಾಣದಲ್ಲಿ ಚಂಡಶಾಸನ "ನಿನ್ನ ಚಿತೆಗೊಡೆಯ ವಸುಷೇಣನಲ್ಲ; ಚಂಡಶಾಶನ" ಎಂದು ಹೇಳಿದಂತೆ ಸನುಂದೆಯ ಹೆಣದೊಂದಿಗೆ ಚಿತೆಗೇರುತ್ತಾನೆ!!!!)

ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?

ಅಶೋಕವನದಲ್ಲಿ ಆಂಜನೇಯ ಹುಡುಕುತ್ತಿದ್ದ, ಸೀತೆಯನ್ನಿಟ್ಟಿದ್ದ ಎಲೆವನೆ ಹೇಗಿತ್ತು?
ಎಲ್ಲ ಚೆಲ್ವಿಂಗೆ ಮುಡಿಯಾಗಿ,
ಮರುತಜನ ಕಣ್ಗುರಿಗೆ ಗುಡಿಯಾಗಿ,
ಕಡಲ ನೀರ್ನಡೆಗೆ ನಿಲ್’ಗಡಿಯಾಗಿ,
ಮಾರುತಿಯ ನಿಃಶ್ರೇಯಕೊಂದು ಮುನ್ನುಡಿಯಾಗಿ
ಕುಳ್ತುದು ಎಲೆವನೆವಕ್ಕಿ,
ತನ್ನ ಬೆಚ್ಚನೆ ಗರಿಯ ರೆಕ್ಕೆತಿಪ್ಪುಳೊಳಿಕ್ಕಿ
ರಕ್ಷಿಪ್ಪವೋಲ್ ದುಃಖಿ ಭೂಜಾತೆಯಂ!
ದುಃಖಿತಳಾಗಿರುವ ಸೀತೆಯನ್ನು, ತನ್ನ ಗರಿಯ ತಿಪ್ಪುಳೊಳಗೆ ಹುದುಗಿಸಿಕೊಂಡು ರಕ್ಷಿಸುತ್ತಿರುವ ಹಕ್ಕಿಯಂತೆ ಎಲೆವನೆ ಕಾಣುತ್ತಿತ್ತಂತೆ!
*
ಎಲೆವನೆಯಿಂದ ಹೊರಬರುವ ಸೀತೆಗಾಗಿ ಕಾದು ಕುಳಿತಿದ್ದ ಆಂಜನೇಯನಿಗೆ ಅತ್ಯಂತ ಅನಿರೀಕ್ಷಿತವಾಗಿ (ರಾವಣನಾಗಮನದ ಮುನ್ಸೂಚನೆಯಾಗಿ) ಕೇಳಿಬರುವ ಸಂಗೀತ ಸುಧೆ (ತಂತಿಯಿಂಚರದೈಂದ್ರಜಾಲಿಕಂ!) ರೋಮಾಂಚನವನ್ನುಂಟು ಮಾಡುತ್ತದೆ.
ಅಕ್ಕಜಂ ಇಂಪಿನೊಡನೆ ಮೇಣ್
ಆಶ್ಚರ್ಯಂ ಆನಂದದೊಡನೆ
ಹೊಯ್ ಕಯ್ಯಾಗೆ ಸೊಗಸಿತು
ಆ ತಾನ ತಾನ ಸ್ವನದ ಸಂತಾನ:
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?
ಬೇರುಗಳ ಮುಖಾಂತರ ಮರದ ಕಾಂಡ ಕೊಂಬೆ ಎಲೆಗಳಿಗೆ ರಸ ಪ್ರವಹಿಸುವ ಗತಿಯಲ್ಲಿ ಆ ಸಂಗೀತ ಆಂಜನೇಯನ ಮೈಮನಕ್ಕೆ ರೋಮಾಂಚನವನ್ನುಂಟು ಮಾಡಿತಂತೆ!!
(ಬಹುಶಃ ಇಂತಹುದೊಂದು ಅಲಂಕಾರವನ್ನು ಯಾವ ಕವಿಯೂ ಸೃಷ್ಟಿಸಿರಲಾರ)
*
ಆ ಸಂಗೀತ ಆಂಜನೇಯನ ಮೈಮನಗಳಿಗೆ ಇಳಿದು ಏರಿ ಉಂಟಾದ ಪರಿಣಾಮ ಸುತ್ತಲಿನ ಪರಿಸರಕ್ಕೂ ಆಯ್ತೇನೊ!:
ರಸಸುಖ ಆಕಸ್ಮಿಕಕೆ ಕಿವಿಸೋಲ್ತನ್ ಅನಿಲಜಂ:
ಲೋಕದೋಲವ ತೂಗಿ ತೊನೆದುದು
ಆ ತಾನ ತಾನ ಸ್ವನದ ಸಂತಾನ!
*
ಸೂರ್ಯನ ಪ್ರಥಮಕಿರಣಗಳು ಸೀತೆಯಿದ್ದ ಎಲೆವನೆಯ ತರಗೆಲೆಯ ತಡಿಕೆಗೋಡೆಯ ಬಿರುಕಿನೊಳಗಿಂದ ಪ್ರವೇಶಿಸಿ ಸೀತೆಯ ಮೇಲೆ ಬಿದ್ದುದು ಕವಿಗೆ ಕಂಡದ್ದು ಹೀಗೆ:
ಆ ಮರುಕ ಎದೆಯ ಬಿಸಿಲ ಪಸುಳೆ
ತನ್ನ ಕೋಮಲ ಕರದ ಕಿಸಲಯೋಪಮ
ಮೃದುಲ ರೋಚಿಯ ಬೆರಲ್ಗಳಿಂ ಸೋಂಕಿ ಸಂತಯ್ಸಿದುದೊ
ಸೀತೆಯ ತಪಃಕ್ಲಾಂತ ಚರಣಾರವಿಂದಂಗಳಂ.
ಅಲ್ಲಿಯವರೆಗೆ ಸೀತೆ ಇದ್ದ ಸ್ಥಿತಿ ಹೇಗಿತ್ತು ಗೊತ್ತೆ?
ಹೈಮ ಶೈಲ ಶಿರ ಗುಹೆಯ ಗರ್ಭದಿ,
ಕಳ್ತಲಿಡಿದ ಕರ್ಗ್ಗವಿಯಲ್ಲಿ,
ಶೈತ್ಯದೈತ್ಯನ ಭಯಕೆ ಹೆಪ್ಪುಗಟ್ಟಿರ್ದ ನೀರ್.....
ಹಿಮಪರ್ವತದ ತುದಿಯಲ್ಲಿರುವ ಕಗ್ಗತ್ತಲೆಯ ಗವಿಯಲ್ಲಿ ಚಳಿಯ ರಕ್ಕಸನ ಭಯದಿಂದ ಮುದುಡಿಕೊಂಡು ಹೆಪ್ಪುಗಟ್ಟಿದ್ದಂತೆ!
(ಶೈತ್ಯದೈತ್ಯ=ರಾವಣ! ಹರಿವ ನೀರು=ಸೀತೆ!! ಆತನ ಭಯದಿಂದ ಹೆಪ್ಪುಗಟ್ಟಿದಂತೆ ಮುರುಟಿಕೋಮಡು ಬಿದ್ದಿದ್ದಾಳೆ!!!)
ತನ್ನ ವಂಶದ ಸೊಸೆ ಸೀತೆಗೆ ಚೈತನ್ಯವನ್ನೀಯಲು ಬಂದನೋ ಎಂಬಂತೆ ಬಂದ ಸೂರ್ಯನ ಕಿರಣಗಳು ಸೀತೆಯ ಕಾಳುಗಳನ್ನು ಸೋಂಕಿದ್ದೇ ತಡ.......
...... ಉತ್ತರಾಯಣ ರವಿಯ ಛವಿಯ ಚುಂಬನಕೆ
ಎಂತು ಮಂಜುಗಡ್ಡೆಯ ತನ್ನ ಘನನಿದ್ರೆಯಂ ದ್ರವಿಸಿ,
ಪೆಡೆನಿಮಿರ್’ದೊಯ್ಯನೆ ಸುರುಳಿವಿರ್ಚ್ಚುವೊಲ್ ಸ್ರವಿಸಿ ಪರಿವಂತೆ...
ಸೀತೆಗೆ ಎಚ್ಚರವಾಯಿತಂತೆ!

Monday, June 04, 2018

ಟಿಪ್ಪಣಿ-8: ಕಬಂಧ ವಧೆ, ಖಿನ್ನತೆ, ವರ್ತಮಾನ ಇತ್ಯಾದಿ

[ಚಂದನ್ ಎಂಬುವವರ ಕುಟುಂಬದ ದುರಂತ ಅಂತ್ಯದ ಹಿನ್ನೆಲೆಯಲ್ಲಿ]
ಮೂಲ ವಾಲ್ಮಿಕಿ ರಾಮಾಯಣದಲ್ಲಿ ಕಬಂಧ ಎಂಬ ರಾಕ್ಷಸನ್ನು, ಸೀತೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ರಾಮ-ಲಕ್ಷ್ಮಣರು ವಧಿಸುವ ಕಥೆ ಬರುತ್ತದೆ. ಅದರಲ್ಲಿ ಕಬಂಧನೊಡನೆ ನೇರ ಹೋರಾಟಕ್ಕಿಳದ ರಾಮಲಕ್ಷ್ಮಣರ ಕೈ ಸೋಲಾಗುತ್ತಾ ಸಾಗುತ್ತದೆ. ಆಗ, ರಾಮ, ಲಕ್ಷ್ಮಣನಿಗೆ ‘ನನ್ನ ಕಥೆ ಮುಗಿಯಿತು. ನೀನಾನಾದರು ತಪ್ಪಿಸಿಕೊಂಡು ಹೋಗು. ಅಯೋಧ್ಯೆಗೆ ವಿಷಯ ತಿಳಿಸು’ ಎಂದು ನಿರಾಶೆಯಿಂದ ನುಡಿಯುತ್ತಾನೆ. ಆದರೆ, ಲಕ್ಷ್ಮಣನ ಸಂದರ್ಭೋಚಿತ ಮಾತುಗಳಿಂದ ಸಾಹಸದಿಂದ ಇಬ್ಬರೂ ಸೇರಿ ಕಬಂಧನ ಬಾಹುಗಳನ್ನು ಕತ್ತರಿಸಿ ಅಪಾಯದಿಂದ ಪಾರಾಗುತ್ತಾರೆ. ಶ್ರೀರಾಮಾಯಣ ದರ್ಶನದಲ್ಲಿ ಕುವೆಂಪು ಅದನ್ನು ಆಧುನಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಹೊಸತಾಗಿ ಚಿತ್ರಿಸಿದ್ದಾರೆ. ಇಲ್ಲಿ ಕಬಂಧನ ಭೌತರೂಪ ನೇರವಾಗಿ ಪ್ರವೇಶಿಸುವುದಿಲ್ಲ. ರಾಮನ ಮನಸ್ಸಿನಲ್ಲಿಯೇ ನಡೆಯುವ ಹೋರಾಟ! ಇಲ್ಲಿಯ ಕಬಂಧ ಮನುಷ್ಯನ ಅಸಹಾಯಕ ಸ್ಥಿತಿಯಲ್ಲಿ ತೋರುವ ಖಿನ್ನತೆಯಂತೆ ಚಿತ್ರಿತವಾಗಿದೆ! ಅದೇ ಒಂದು ಪುಟ್ಟ ನಾಟಕದಂತಿದೆ ಎಂಬುದು ಇನ್ನೊಂದು ವಿಶೇಷ

ಹಿಂದಿನ ದಿನ ನಡೆಯಬಾರದ್ದೆಲ್ಲ ನಡೆದಿದೆ. ಸೀತಾಪಹರಣವಾಗಿದೆ. ಜಟಾಯು ಸತ್ತು ಹೋಗಿದ್ದಾನೆ. ರಾಮ ನಿರಾಶೆಯಲ್ಲಿ ಮುಳುಗಿದ್ದಾನೆ. ಜನಕಜಾಶೂನ್ಯರಾದ ರಾಮಲಕ್ಷ್ಮಣರಿಬ್ಬರೂ “ನರಳುವ ನೆರಳುಗಳಂತೆ ಮಸಣದಿಂ ಮರಳಿದರ್, ಮತ್ತೊಂದು ಮಸಣಕೆನೆ, ಪರ್ಣಶಾಲೆಯ ಶವದಶೂನ್ಯಕ್ಕೆ”. ರಾತ್ರಿಯಿಡೀ ನಿದ್ರೆಯಿಲ್ಲ. ನಿರಾಶೆ, ನಿಟ್ಟುಸಿರು, ಅರೆನಿದ್ದೆ, ಕನವರಿಕೆ ಮೊದಲಾದವುಗಳ ನಡುವೆಯೇ ಬೆಳಗಾಗುತ್ತದೆ. ರಾಮನಿಗೆ ಜಟಾಯು ಹೇಳಿದ ನೈರುತ್ಯ ಎಂಬುದಷ್ಟೇ ನೆನಪಾಗುತ್ತದೆ. ನಿರ್ಜನತೆ ನೈರಾಶದ ಆಕಳಿಕೆಯಾಗಿ ತೋರುತ್ತದೆ. ನಿಶ್ಯಬ್ಧ ರವದ ಶವವಾಗಿ ಕಾಣುತ್ತದೆ. (ರವಶವ - ಹೊಸ ರೂಪಕ) ರಾಮ ಖಿನ್ನತೆಗೊಳಗಾಗಿ ಹತಾಶೆಯ ಮಂಕು ಬಡಿದಂತೆ ಕಡಿದು ಕುಳಿತು ಮಾತನಾಡುತ್ತಾನೆ
ರಾಮ:
ಏತಕೆ? ಎಲ್ಲಿಗೆ? ಎತ್ತ ಹೋಗುತಿಹೆವು ಆವ್ ಇಂತು? ಸೌಮಿತ್ರಿ?

ಲಕ್ಷ್ಮಣ:
(ಭಯದಿಂದ) ಬೇಡ, ಬೇಡಣ್ಣಯ್ಯ; ನಿನ್ನಚಲ ಧೈರ್ಯಮಂ ನೈರಾಶ್ಯಕೌತಣಂಗೆಯ್ಯದಿರ್.
ನೆನ ಭರದ್ವಾಜ ಋಷ್ಯಾಶ್ರಮಂ; ಅತ್ರಿಯಂ, ಅನಸೂಯೆಯಂ; ನೆನ ಅಗಸ್ತ್ಯ ಗುರುದೇವನಂ;
ಬಗೆಗೆ ತಾರಯ್ಯ ವಿಶ್ವಾಮಿತ್ರ ಮಂತ್ರಮಂ!
ನಿನ್ನ ಮೈಮೆಯೆ ನೀನೆ ಮರೆವೆಯೇನ್?
ತನಗೆ ತಾಂ ನಿಂದೆಯಪ್ಪುದೆ ಕೊಂದುಕೊಂಡಂತೆ; ನನ್ನನುಂ ಕೊಂದಂತೆ!
ನಿನ್ನ ಮಹಿಮೆಯ ನೆನಹೆ ನನಗಿಂತು ವಜ್ರ ಚಿತ್ರವನಿತ್ತು ಹೊರೆಯುತಿರೆ,
ನೀನಿಂತು ಕಳವಳಿಸುತಾಸೆಗೇಡಿನ ಕಿಬ್ಬಿಗುರುಳುವೆಯ,
ಚಂದ್ರಚೂಡನ ರುಂದ್ರ ಕೋದಂಡಮಂ ಮುರಿದು ಮೈಥಿಲಯನೊಲಿದ ಜಗದೇಕೈಕವೀರ,
ಹೇ ಲೋಕ ಸಂಗ್ರಹ ಶಕ್ತಿಯವತಾರ?

ಇಲ್ಲಿ ಲಕ್ಷ್ಮಣನ ಮಾತುಗಳು ಖಿನ್ನತೆಗೆ ಒಳಗಾಗುತ್ತಿರುವ ರಾಮನ ಮನಸ್ಸಿಗೆ ಬಹಳ ಮುಖ್ಯ. ಲಕ್ಷ್ಮಣ ಇಲ್ಲಿ ಸೂರ್ಯವಂಶ, ಅಯೋಧ್ಯೆ ದಶರಥ, ಕೌಸಲ್ಯೆ, ಕೈಕೆ ಮೊದಲಾದವರ ಹೆಸರು ಎತ್ತುವುದಿಲ್ಲ. ರಾಮನ ಮನಸ್ಸಿಗೆ ಯಾವಾಗಲೂ ಸಂತೋಷವನ್ನುಂಟು ಮಾಡಿದ್ದ ಋಷ್ಯಾಶ್ರಮಗಳ ಋಷಿಗಳ ಹೆಸರನ್ನು ಮಾತ್ರ ಎತ್ತಿ ಸಂತೈಸುತ್ತಾನೆ! ಲಕ್ಷ್ಮಣನ ಮಾತುಗಳನ್ನು ಕೇಳುತ್ತಲೇ ರಾಮನಿಗೆ ಒಂದು ಮಾನಸಿಕ ಅನುಭವವಾಗುತ್ತದೆ. ಆಕಾರವೇ ಇರದ ಒಂದು ಆಕೃತಿ ಕಾಣಿಸುತ್ತದೆ. ರಾಹು, ಸರೀಸೃಪ, ಶ್ಲೇಷ್ಮಚರ್ಮ, ತಿರ್ಯಗ್ಯೋನಿ, ಕುಕ್ಷಿಗ, ವ್ಯಾಳ ಮುಂತಾದ ಪದಗಳಿಂದ ಅದರ ಭೀಕರತೆಯನ್ನು ಕವಿ ಕಟ್ಟಿಕೊಡುತ್ತಾರೆ. ಅಮೂರ್ತವಾದುದನ್ನು ಅನುಭವವೇದ್ಯಗೊಳಿಸಲು ಮೂರ್ತಕಲ್ಪನೆಯನ್ನು, ಉಪಮೆಗಳನ್ನು ತರುತ್ತಾರೆ. ಇನ್ನು ಮುಂದಿನದೆಲ್ಲವೂ ರಾಮನ ಪ್ರಜ್ಞಾವಸ್ಥೆಯಲ್ಲೇ ನಡೆಯುವ ಹೋರಾಟ!
ಕೊನೆಗೆ ಹೊಟ್ಟೆಯೇ ತಲೆಯೂ ಆದ, ಕಾಲುಗಳೇ ಕೈಗಳೂ ಆದ ರೂಪ ತೋರುತ್ತದೆ. ಕೈಗಳೂ ಯೋಜನ ಯೋಜನ ಉದ್ದವಿರುತ್ತವೆ. ಗುಹೆಯಂತಹ ಕಣ್ಣಿರುತ್ತದೆ. ತನ್ನ ನಿರಾಶೆಯೇ ತನಗೆ ಕಬಂಧನ ರೂಪದಲ್ಲಿ ಕಾಣಿಸುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಭಯ ಕಾಡುತ್ತದೆ. ನಡುಕು ಉಂಟಾಗುತ್ತದೆ. ಪೌರುಷದ ಫಣಿಯ ಹೆಡೆ ಮುಚ್ಚುತ್ತದೆ. ಪಲಾಯನವೆಂಬ ಕುದುರೆಯನ್ನೇರಲು ಮನಸ್ಸು ತವಕಿಸುತ್ತದೆ! ಆದರೆ ಓಡಲಾರದೆ, ಕಾಲ್ ಕೀಳಲಾರದೆ ಭಯದಿಂದ ಮೂರ್ಚೆ ಬಿದ್ದುಬಿಡುತ್ತಾನೆ. ಲಕ್ಷ್ಮಣ ಆತನನ್ನು ತನ್ನ ತೋಳಿನ ಆಶ್ರಯಕ್ಕೆ ತೆಗೆದುಕೊಳ್ಳುತ್ತಾನೆ.

ರಾಮ:
ಕೆಟ್ಟೆನಯ್, ಲಕ್ಷ್ಮಣಾ! ಪಿಡಿದನಸುರಂ.
ಕೈಯೆ ಬಾರದಯ್. ನೆಗಹಲೆಳಸಲ್ ಮೇಲೇಳದಿದೆ ಕತ್ತಿ.
ಓಡಲುಂ ಆರೆನಯ್ಯಯ್ಯೊ ಕೆಟ್ಟುದಯ್ ಕಾಲ್ ಬಲಂ.
ದೂರ ಸಾರ್, ದೂರ ಸಾರ್; ಬಾರದಿರೆನಗೆ ಹತ್ತೆ. ನಿನ್ನನುಂ ಪಿಡಿವನೀ ರಾಕ್ಷಸಂ.
ನೀನಾದಡಂ ಪೋಗಯೋಧ್ಯೆಯಂ ಸೇರಯ್ಯ. ಸಂತಯ್ಸು ಭರತನಂ. ಮಾತೆಯಂ.
ನನಗಿದೆ ವಲಂ ಒಲಿದ ಗತಿ. ಮೈಥಿಲಿಯನುಳಿದು ನನಗಿನ್ನಯೋಧ್ಯೆಯೇಂ ಮರಣಮೇಂ?
ಸಾವೆ ದಲ್ ದಿಟಮೆನಗೆ ಬಾಳ್ಕೆ!

ರಾಮನ ಎಚ್ಚರಿಕೆಯನ್ನೂ ಲೆಕ್ಕಿಸದೆ ಲಕ್ಷ್ಮಣ ಆ ರಾಕ್ಷಸನ ಕೈಗಳನ್ನು ಕತ್ತರಿಸತೊಡಗುತ್ತಾನೆ. ಕಣ್ಣುಗಳನ್ನು ಇರಿಯುತ್ತಾನೆ... ರಾಮನಿಗೆ ಬಿರಿದ ಕೆಟ್ಟ ಕನಸಿನಂತೆ ಆ ರಕ್ಕಸ ಮಾಯವಾಗುತ್ತಾನೆ. ರಾಮನಿಗೆ ಪೂರ್ತಿ ಎಚ್ಚರವಾಗುತ್ತದೆ. ಬೆವೆತು ಹೋಗಿರುತ್ತಾನೆ. ನೆಗೆದು ಎದ್ದು ಕೂತು, ಪೂರ್ತಿ ಕಣ್ದೆರೆದು, ನಿಟ್ಟುಸಿರು ಬಿಟ್ಟು ಲಕ್ಷ್ಮಣನೊಂದಿಗೆ ಮಾತಿಗೆ ತೊಡಗುತ್ತಾನೆ.

ರಾಮ:
ಬದುಕಿದೆನೊ ನಿನ್ನಿಂದೆ, ಸೌಮಿತ್ರಿ.

ಲಕ್ಷ್ಮಣಂ:
ತಿಳಿದವಂ ತನ್ನ ನೆರಳಿಗೆ ತಾನೆ ಹೆದರುವನೆ

ರಾಮ:
ತಿಳಿದವಂ! ತಿಳಿದ ಮೇಲಲ್ತೆ?

ಲಕ್ಷ್ಮಣ:
ಪೃಥ್ವಿಗೆ ರಾಹು ಬೇರೆಯೇಂ ತನ್ನ ನೆಳಲಲ್ಲದೆಯೆ

ರಾಮ:
ಅದ್ರಿಯಾದೊಡಮೊರ್ಮೆ ಭೂಮಿ ಕಂಪಿಸೆ ದೃಢತೆ ಹಿಂಗದಿರ್ಪುದೆ?
ಅಂತೆ ತಾಂ ನಡುಗುತಿದೆ ರಾಮಧೈರ್ಯಂ, ತಮ್ಮ, ಆ ಭೂಮಿ ಸುತೆಗಾಗಿ.
ನಿಲ್ಲುವುದು ನಿನ್ನ ನೆಮ್ಮಿರಲದ್ರಿ, ಕೇಳ್, ಸುಸ್ಥಿರಂ. ನಿನ್ನಿಂದೆ ಸತ್ತನೊ ನಿಶಾಚರಂ;
ಕೊಂದೆನೊ ನಿರಾಶೆಯಂ; ಗೆಲ್ದೆನೊ ಕಬಂಧನಂ;
ಹತವಾದುದೊ ಹತಾಶೆ. ಕಿರಣದೋರಿದುದಾಶೆ.
ಬಾ, ನಡೆವಮಿಲ್ಲಿಂದೆ; ಬಲ್ಗಜ್ಜಮಿದಿರಿರ್ಪುದಯ್ ಮುಂದೆ, ಸೌಮಿತ್ರಿ!

ಎಂದು ಹೊಸಚೈತನ್ಯದಿಂದ ತನ್ನನ್ನು ಅಪ್ಪಿದ ರಾಮನನ್ನು ಲಕ್ಷ್ಮಣನೂ ಅಪ್ಪಿಕೊಳ್ಳುತ್ತಾನೆ. ಮೂಡಿದ ಆಸೆಯ ಅವಳಿಗಳು ಜೋಡಿಯಾಗಿ ನಡೆಯುವಂತೆ ಅವರಿಬ್ಬರೂ ಮುಂದೆ ನಡೆಯುತ್ತಾರೆ.

ಇಲ್ಲಿ ಕಬಂಧ ಭೌತಿಕ ರೂಪವನ್ನು ಹೊತ್ತು ಬರುವುದೇ ಇಲ್ಲ. ಮನಸ್ಸಿನ ಖಿನ್ನತೆಯ ರೂಪದಲ್ಲಿ ಬಂದು, ಕಷ್ಟಕ್ಕೊದಗುವವರ ಸಹಾಯದಿಂದ ಖಿನ್ನತೆ ದೂರವಾಗುವಂತೆ, ಲಕ್ಷ್ಮಣನ ನೆರವಿಂದ ದೂರವಾಗುತ್ತದೆ. ಮಾನವ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಮನಸ್ಸು ಖನ್ನತೆಗೊಳಗಾಗುವುದು ಸಹಜ. ಆದರೆ ಬಂಧು ಮಿತ್ರರ, ಹಿತಚಿಂತಕರ ಸಹಾಯದಿಂದ ಸಹಚಾರ್ಯದಿಂದ ಹೊರಬರುವುದೂ ಸಾಧ್ಯ. ಎಂತಹ ಅವಘಡವೇ ಆದರೂ ಮನುಷ್ಯ ನಿರಾಶೆಯಿಂದ ತನ್ನನ್ನು ತಾನು ಕೊಂದುಕೊಳ್ಳಬೇಕಿಲ್ಲ. ಬದುಕು ದೊಡ್ಡದೇ ಹೊರತು, ಬದುಕಿನ ಒಂದು ಕ್ಷಣದ ಘಟನೆಯಲ್ಲ!
ಮಹಾಕಾವ್ಯದ ಈ ಘಟನೆಯ ಓದು ಮನುಕುಲಕ್ಕೆ ಒದಗಿಸಬಹುದಾದ ದೊಡ್ಡ ಉಪಕಾರಗಳಲ್ಲಿ, ರಾಮನನ್ನು ಮಾನವೀಯವಾಗಿ ಚಿತ್ರಿಸಿ, ರಾಮನಂತವನಿಗೆ ಕಷ್ಟ ಬಂತು; ನಮ್ಮದು ಯಾವ ಲೆಕ್ಕ, ಕಷ್ಟವನ್ನು ಗೆಲ್ಲಬೇಕು ಎಂಬ ಎಚ್ಚರ ಮೂಡಿಸುವುದು!
ಮೊನ್ನೆ ಅಪಘಾತದಲ್ಲಿ ಚಂದನ್ ಎಂಬುವವರು ಮಡಿದರೆಂಬ ಸುದ್ದಿ ಬಂದಿತ್ತು. ಅದಾದ ಒಂದೆರಡು ದಿವಸದಲ್ಲಿ ಅವರ ಪತ್ನಿ, ತಮ್ಮ(ಹತ್ತು ವರ್ಷದ?) ಏನೂ ಅರಿಯದ ಮಗನ ಕೊರಳು ಕೊಯ್ದು, ತಾನೂ ಅತ್ಮಹತ್ಯೆ ಮಾಡಿಕೊಳ್ಳುತ್ತಾರೆ! ಹೌದು ಅವರ ದುಃಖ ದೊಡ್ಡದೆ. ಆದರೆ, ಅವರ ಬದುಕು, ಅವರ ಮಗನ ಬದುಕು ಅದಕ್ಕಿಂತ ದೊಡ್ಡದಿತ್ತು ಅನ್ನಿಸುತ್ತದೆ. ಆಕೆಗೊದಗಿದ ಖಿನ್ನತೆಯ ಕಬಂಧನನ್ನು ಕೊಲ್ಲುವ ಲಕ್ಷ್ಮಣರು ಸಕಾಲದಲ್ಲಿ ಒದಗಿಬರಲಿಲ್ಲವೆ ಎಂದು ಮನಸ್ಸು ಭಾರವಾಗುತ್ತದೆ.

Saturday, June 02, 2018

ಕಾವ್ಯದೊಗಿನ ನಾಟಕ - ರಾಮನ ದುಃಖ; ಜಟಾಯು ಮರಣ; ಲಕ್ಷ್ಮಣನ ಅಸಹಾಯಕತೆ

(ತನ್ನನ್ನು ಹುಡುಕಿ ಬಂದ ಲಕ್ಷ್ಮಣ ಕಣ್ಣಿಗೆ ಬಿದ್ದ ತಕ್ಷಣ)
ರಾಮ: ಓ ಲಕ್ಷ್ಮಣಾ. ಕೇಡಾಯ್ತಲಾ! ದೇವಿಯೊರ್ವಳಂ ಬಿಟ್ಟೇಕೆ ಬಂದೆ?
ಕೊರಳಂ ಕೊಯ್ದೆ! ಹಾ ಕೊಂದೆ ನೀ ಕೊಂದೆ!
ಪಿಂತಿರುಗು; ನಡೆ ಬೇಗಮೆಲೆವನೆಗೆ!
ಶಿವ ಶಿವಾ ಸೂರೆವೋದೆವೊ ನಾಂ ನಿಶಾಚರರ ಕೈತವಕೆ!
(ಲಕ್ಷ್ಮಣನೊಂದಿಗೆ ಪರ್ಣಕುಟಿಯಿದ್ದೆಡೆಗೆ ನಡೆಯುತ್ತಲೇ)

ಲಕ್ಷ್ಮಣ: ಕೂಗಿದುದು ನೀನಲ್ತೆ?

ರಾಮ: ಸತ್ತನ್ ಆ ರಾಕ್ಷಸಂ!

ಲಕ್ಷ್ಮಣ: ಅದು ನಿಶಾಚರ ಮಾಯೆ ಎಂದು ನಾನೆಂತೆಂತು ಪೇಳ್ದೊಡಂ....

ರಾಮ: ಅಂತಾಡಿ ನಿನ್ನನೆಳ್ಬಿದಳೆ?

ಲಕ್ಷ್ಮಣ: ಅಲ್ಲದಾನಿಂತು ಬಂದಪೆನೆ?

ರಾಮ: ಎಂತಾದೊಡಂ ತಪ್ಪಿ ನಡೆದೆ. ಪೆಣ್ಣೆಂದುದಕೆ ಮುನಿದೆ; ನನ್ನಾಣೆಯಂ ಮೀರ್ದೆ.

ಲಕ್ಷ್ಮಣ: ಅಹುದಣ್ಣಯ್ಯ. ತಪ್ಪಾಯ್ತು. ಬಗೆಯಂ ಕದಡಿತತ್ತಿಗೆಯ ನುಡಿಯ ಕೂರ್ಪು.

ರಾಮ: ಕೌಸಲ್ಯೆಯಾಶೀರ್ವಾದಮಿರ್ಕೆಮಗೆ! ಸತಿಗೆ ಕೇಡಾಗದಿರ್ಕೆ!”

ಲಕ್ಷ್ಮಣ: ಅಣ್ಣಾ, ಜಟಾಯುವಿರೆ ರಕ್ಷೆಗೆಮಗೇವುದಯ್ ಭೀತಿ?”

ರಾಮ: ಆದೊಡಮೇಕೊ, ಸೌಮಿತ್ರಿ, ನಾನೆಂದುಮನುಭವಿಸದ ಒಂದಳ್ಕು ಕರುಳ ಕಿಮುಳ್ಚುತಿದೆ!

ಲಕ್ಷ್ಮಣ: ನನಗುಮಂತೆಯೆ ಭಯಂ!

ರಾಮ: ಸದ್ದದೇನದು, ತಮ್ಮ?

ಲಕ್ಷ್ಮಣ: ಭೋರ್ಗರೆಯುತಿದೆ ದೂರ ಬಿರುಗಾಳಿ!

ರಾಮ: ಚೀತ್ಕಾರಮಾಯ್ತಲ್ತೆ?

ಲಕ್ಷ್ಮಣ: ಅಲ್ತಲ್ತು, ಕೊಂಬೆಗುಜ್ಜಿತು ಕೊಂಬೆ!

ರಾಮ: ಆರೊ ಕರೆದಂತಾಯ್ತು!

ಲಕ್ಷ್ಮಣ: ಮಂಗಟ್ಟೆವಕ್ಕಿ ಕೂಗಿತು; ಬೇರೆಯೇನಲ್ಲಯ್!

ರಾಮ: ಆಗಳಿರದಾತಪಂ ಈಗಳೆಂತಳುರುತಿದೆ! ಏಂ ಸೇದೆ!”

ಲಕ್ಷ್ಮಣ: ಪಾಳ್ದಿನಂ!

ರಾಮ: ಊರ್ಗೆ ಮರಳುವ ದಿನಮೆ ಏಂ ಕಷ್ಟಮೊದಗಿತಯ್!...

ಲಕ್ಷ್ಮಣ: ಬಳಿಸಾರ್ದುದಾಶ್ರಮಂ!

ರಾಮ: ಪೆರ್ಚುತಿಹುದೆನ್ನೆರ್ದೆಯ ಕಳವಳಂ!...

ಲಕ್ಷ್ಮಣ: ಅದೊ ಅಲ್ಲಿ! ಶಾಂತಿಯಿಂದಿಹುದೆಂತು ಪರ್ಣಕುಟಿ!
ಸಾಲ್ಗುಮಾ ದುಃಸ್ವಪ್ನಮ್; ಇನ್ನೆಂದುಮುಲ್ಲಂಘಿಸೆನ್ ನಿನ್ನ ಕಟ್ಟಾಣೆಯಂ!
ಇದುವೆ ಮೊದಲ್; ಇದುವೆ ಕೊನೆ!

ರಾಮ: ದೇವಿ ಕಾಣಿಸಳೆ!

ಲಕ್ಷ್ಮಣ: ಒಳಗಿರಲ್ ಪೇಳ್ದು ಬಂದೆನ್.

ರಾಮ: ಅದೇಕೆ......

ಲಕ್ಷ್ಮಣ: ಏನು?

ರಾಮ: ನೋಡಲ್ಲಿ ಆ ಬಳ್ಳಿ!
(ಕಿತ್ತುಬಿದ್ದಿದ್ದ ಬಳ್ಳಿಯನ್ನು ಕಂಡು ರಾಮ ‘ಹಾ ಸೀತೆ! ಹಾ ಸೀತೆ! ಹಾ ಸೀತೆ!’ ಎಂದೆಂದು ನಿಟ್ಟುಸಿರುಗರೆಯುತ್ತಾನೆ. ಮತಿವಿಕಲನಂತಾದ ರಾಮ ಸಿಕ್ಕ ಸಿಕ್ಕಲ್ಲಿ ಸೀತೆಯನ್ನು ಹುಡಕಲು ಆರಂಭಿಸುತ್ತಾನೆ)

ಲಕ್ಷ್ಮಣ: ತಾಳ್ಮೆ ತಾಳ್ಮೆ, ಹೇ ಆರ್ಯ! ದೇವಿ ಗೋದಾವರಿಗೆ...

ರಾಮ: (ಮಾತನ್ನು ಅರ್ಧಕ್ಕೆ ತಡೆದು) ಗೋದಾವರಿಗೆ ದಿಟಂ! ಗೋದಾವರಿಗೆ ದಿಟಂ!
(ನದಿಯೆಡೆಗೆ ಓಡುತ್ತಾ) ಓ ಸೀತೆ! ಓ ಸೀತೆ! ಓ ಸೀತೆ! ಓ ಓ ಸೀತೆ!
(ಧ್ವ ದಶದಿಕ್ಕುಗಳಿಂದ ಪ್ರತಿಧ್ವನಿಗಯ್ಯುತ್ತದೆ)
ಓ ಸೀತೆ! ಓ ಸೀತೆ! ಓ ಸೀತೆ! ಓ ಸೀತೆ! ಓ!
(ಲಕ್ಷ್ಮಣನನ್ನು ಉದ್ಧೇಶೀಸಿ)
ಕಂಡೆಯಾ ಸೌಮಿತ್ರಿ, ಮೈಥಿಲಿಯ ಮಾಯೆಯಂ?
ಪುಸಿಯಲ್ತು ದಿಟಮಾಕೆ ಭೂಮಿಜಾತೆಯೆ ವಲಂ!
ತಾಯ್ಮರೆಗೆ ಮಗು ನಿಂತು ಕಣ್ಣುಮುಚ್ಚಾಲೆಯಾಡುವವೋಲೆ ನಮ್ಮೊಡನಣಕವಾಡುತಿಹಳಲ್ತೆ?
ಶೈಲಗತೆ ತಾನೊರ್ಮೆ, ಕಾಂತಾರಗತೆಯೊರ್ಮೆ, ತರುಗತೆಯೊರ್ಮೆ;
ಒರ್ಮೆ ಖಗಗತೆ, ಒರ್ಮೆ ಮೃಗಗತೆ, ತರಂಗಗತೆ ಇನ್ನೊರ್ಮೆ!
ಒರ್ಮೆ ಖಂಜನ ಪಕ್ಷಿಕೂಜಿತಳ್; ಒರ್ಮೆ ಕೋಕಿಲ ಕಂಠ ಭಾಷಿತಳ್.
ಅದೊ ಅಲ್ಲಿ ಸುಸಮೀರ ಲೋಲ ಕುಸುಮಿತ ಲತಾ ರಾಜಿತಳ್;
ಇದೊ ಇಲ್ಲಿ......
(ರಾಮನ ಸ್ಥಿತಿಯನ್ನು ಕಂಡು ಲಕ್ಷ್ಮಣ ಕಣ್ಣೀರಾಗುತ್ತಾನೆ. ಆಗ)
ಕಣ್ಬನಿಗರೆವೆಯೇಕೆ, ಲಕ್ಷ್ಮಣಾ?

ಲಕ್ಷ್ಮಣ: (ದುಃಖದಿಂದ) ಇದೇನಣ್ಣಯ್ಯ, ಮತಿವಿಕಲರಂತಾಡುತಿಹೆ?
ವಿಷಮ ಸಮಯದೊಳ್ ಸಮತೆಗೆಟ್ಟುದೆ ನಿನ್ನ ಮೇರುಸಮ ಸುಸ್ಥಿರತೆ?
ದೇವಿ ತಾನೆಲ್ಲಿರ್ದಳೇನಾದಳೆಂದರಿವುದಂ ಮಾಣ್ದೆ, ಇಂತು ಕಾಲಹರಣಂ ಗೆಯ್ವುದನುಚಿತಂ
ಭಾವಜಭ್ರಾಂತಿಗೆ ಮಾರುವೋಗಿ.

ರಾಮ: ಅಯ್ಯೊ ಓ ಲಕ್ಷ್ಮಣಾ! ಏನು ಮಾಡಿದೆಯಯ್ಯ?
ನನ್ನ ಸೀತೆಯನಯ್ಯೊ ಏನು ಮಾಡಿದೆಯಯ್ಯ?
ಎಲ್ಲಿ ಬೈತಿಟ್ಟೆಯಯ್? ಹೇಳಯ್ಯ, ದಮ್ಮಯ್ಯ, ಓ ನನ್ನ ಲಕ್ಷ್ಮಣಾ!
ನಿನಗೆ ಕೈಯೆಡೆ ಮಾಡಿ, ನಿನ್ನ ರಕ್ಷೆಯೊಳಿಟ್ಟು ಹೋದೆನ್, ಎಲ್ಲಿಹಳೊರೆಯೊ ನನ್ನ ಮನದನ್ನೆ?
ಕೊಂದರೊ ಕೋಮಲಾಂಗಿಯಂ? ತಿಂದರೊ ನಿಶಾಚರರ್?
ಹಾ ಸೀತೆ! ಹಾ ಸೀತೆ! ಹೋದೆಯೆಲ್ಲಿಗೆ ತೊರೆಯುತೆನ್ನಂ?
(ಬೀಳಲಿದ್ದ ರಾಮನನ್ನು ಮಗುವಿನಂತೆ ಲಕ್ಷ್ಮಣ ತಬ್ಬಿ ಹಿಡಿದುಕೊಳ್ಳುತ್ತಾನೆ)

ಲಕ್ಷ್ಮಣ: (ಶುಶ್ರೂಷೆಯಿಂದ ರಾಮ ಎಚ್ಚರಗೊಂಡಾಗ)
ಶಾಂತಿ, ಹೇ ಧೀರಮತಿ! ಕಾತರಿಸದಿರೊ, ದಾಶರಥಿ!
ವಿಹಂಗೇಂದ್ರನಿಂ ದೇವಿ ಎಲ್ಲಿಹಳ್ ಎತ್ತಲೈದಿದಳ್ ಎನಿಪ್ಪುದಂತಿಳಿವಂ
ಅಲ್ಲಿಂ ಬಳಿಕಮೇಂ ಕಜ್ಜಮೆಂಬುದಂ ನಿಚ್ಚಯಿಸುವಂ.
ಬರಿದೆ ಪಲವಂ ಪಲುಂಬಿದೊಡೆ. ಫಲವೇನ್?

ರಾಮ: (ದಿಗ್ಗನೆದ್ದು ಓಡುತ್ತಾ) ಜಟಾಯೂ! ಜಟಾಯೂ! ಓ ಜಟಾಯೂ!
(ಪ್ರತ್ಯುತ್ತರ ಬರದಿದ್ದಾಗ ಕೋಪಗೊಂಡು)
ಲಕ್ಷ್ಮಣ, ತಿಳಿಯಿತೀಗಳಾ ಖಳಖಗಮೆ ಕಾರಣಂ ಸತಿಯಿಲ್ಲಮೆಗೆ.

ಲಕ್ಷ್ಮಣ: ಅಯ್ಯೊ, ಅಣ್ಣಯ್ಯ, ಏನ್ಮಾತನಾಡುತಿಹೆ?

ರಾಮ: (ಭೀಷಣನಾಗಿ) ಸಾಕು ಬಿಡು, ಸೌಮಿತ್ರಿ, ಜಗಮನಿತುಮಾ ಕೈಕೆ! ಕೈತವಮದರ ಹೃದಯಂ!
ಪಸುಮೊಗದ ಬಗ್ಗನಾ ಖೂಳನಾತನ ಕುಲಕೆ ತಕ್ಕುದನೆ ನೆಗಳ್ದುದಾ ರಣಹದ್ದು!
ಅಯ್ಯೊ ಹಾ ದುರುಳ ಪರ್ದ್ದಿಗೆ ಮರುಳುವೋದಳೆ ದಿಲೀಪಕುಲ ಸಂಭವನ ಸತಿ?
ಕೊಲ್ವೆನಾತನಂ; ನೀಚನಂ, ಮಾರೀಚಗಿಂ ಮಿಗಿಲ್ ಪಾಪಿಯಂ,
ಜವನೆಡೆಗೆ ಜವದಿಂದೆ ಕಳುಹದಿರೆ ಸುಡಲಿ ನನ್ನೀ ಬಾಳ್ಕೆ.
ಓ ಬಾರ ಲಕ್ಷ್ಮಣಾ; ಈ ಮಹದ್ವಿಪಿನಮಂ ಸೋದಿಸುವಮೆಲ್ಲೆಲ್ಲಿಯುಂ.
ಕಂಡೊಡನೆ ಪರ್ದ್ದು ಗಂಟಲಂ ಮುರಿದು, ಕಾಲಂ ತಿರುಪಿ ತಿಪ್ಪುಳಂ ಪರಿದು,
ಬರಿಯಂ ಬಗಿದು, ಮೂಳೆಯಂ ನುರಿಗೆಯ್ದು, ಕ್ರಿಮಿಕೀಟಕಂಗಳಿಗೆ ಬಿರ್ದ್ದಿಕ್ಕುವೆನ್,
ಬಸಿದು ಕೆನ್ನತ್ತರಂ!
[ಜಟಾಯುವನ್ನು ಹುಡುಕುತ್ತಾ ಮುಂದುವರೆಯುತ್ತಾರೆ. ಒಂದೆಡೆ ಒಂದು ಎರಡು ಮೂರು ನಾಲ್ಕು ಐದು ಗರಿಗಳು ಬಿದ್ದಿರುತ್ತವೆ. ಮುಂದೆ ಜಟಾಯು ಇನ್ನೇನು ಸಾಯುವ ಸ್ಥಿತಿಯಲ್ಲಿ ಬಿದ್ದಿರುತ್ತಾನೆ]

ರಾಮ: ಏನಿದಯ್, ಸೌಮಿತ್ರಿ?
ಸಾಹಸಿ ಜಟಾಯುವಂ ಬಯ್ದುದನ್ನೆಯವೆಂದು ತೋರುತಿದೆ!

ಲಕ್ಷ್ಮಣ: ಅಯ್ಯೊ ಅಣ್ಣಯ್ಯ!
(ಚೀರುತ್ತಾನೆ. ಇಬ್ಬರೂ ಹೋಗಿ ಜಟಾಯುವನ್ನು ನೋಡುತ್ತಾರೆ)

ರಾಮ: (ಕೊರಳು ಜೋಲುತ್ತಿದ್ದ ಜಟಾಯುವನ್ನು ಹಿಡಿದು)
ಏನಿದಯ್, ವಿಹಗೇಂದ್ರ, ಏನಿದೀ ಸ್ಥಿತಿ ನಿನಗೆ?
ಪೂಜ್ಯನೆ, ಪರಾಭವಂ ನಿನಗೆಂತೊ?
ಪೇಳಾವನಿಂದಾದುದೀ ಘೋರಕೃತಿ? ಏಕೆ?
ನಿನ್ನ ಮಗಳೆಲ್ಲಿ? ಪೇಳಯ್ಯ, ದಶರಥ ಮಿತ್ರ, ರಘುಕುಲದರಸಿಯೆಲ್ಲಿ?
ರಾಮನ ಮಡದಿಯೆಲ್ಲಿ? ಪೇಳೆತ್ತವೋದಳೊ ನನ್ನ ಮನದನ್ನೆ?
ರಾಜರ್ಷಿ ಜನಕದೇವನ ಧರಾಕನ್ಯೆ?

ಜಟಾಯು: (ನೋವಿನಿಂದ ತೊದಲುತ್ತಾ) ದೇವಿಯಂ....
ನೈ... ಋ... ತ್ಯ... ವಿತ್ತೇಶನವರಜಂ...
(ಎನ್ನುತ್ತಲೇ ಪ್ರಾಣ ಬಿಡುತ್ತಾನೆ)

ರಾಮ: ಮುಂದೆ ಹೇಳಯ್ಯ; ನಿಲ್ಲಯ್ಯ. ಖಗವರ್ಯ!.....................
(ಮುಂದೆ ಮಾತಿಲ್ಲ; ಜಟಾಯುವಿಗೆ ರಾಮ ಅಂತ್ಯಸಂಸ್ಕಾರ ನಡೆಸುತ್ತಾನೆ; ಲಕ್ಷ್ಮಣ ಸಹಕರಿಸುತ್ತಾನೆ)
(ತೆರೆ ಬೀಳುವುದು)

ಟಿಪ್ಪಣಿ - 6: ಕಾವ್ಯದೊಳಗಿನ ನಾಟಕ


ಕವಿ-ಕಾವ್ಯಕರ್ಮಗಳನ್ನೇ ಬಳಸಿ ಅಲಂಕಾರ ಸೃಜಿಸುವುದಕ್ಕೆ ಇನ್ನೊಂದು ಉಪಮಾಲಂಕಾರ ಸಾಕ್ಷಿಯದಗಿಸುತ್ತಿದೆ ಇಲ್ಲಿ: “ನಾಗರಿಕ ನಗರಂ ಮಹಾಕವಿಯನೋಲೈಸಿ ಮನ್ನಣೆಯನೀವಂತೆವೋಲ್”
ನಾಟಕಗಳಲ್ಲಿ ಕಾವ್ಯ ನಾಟಕಗಳದ್ದೇ ಒಂದು ಪ್ರಕಾರವುಂಟು. ಆದರೆ ಮಹಾಕಾವ್ಯದಳೊಗೆ ಅದರಲ್ಲೂ ವರ್ಣಕದೊಳಗೆ ನಾಟಕಗಳಿರುವುದು, ಕಾವ್ಯವನ್ನೇ ನಾಟಕೀಯಗೊಳಿಸುವುದು, ಹೆಚ್ಚು ಹೆಚ್ಚು ಸಂಭಾಷಣೆಯನ್ನಡಕಗೊಳಿಸುವುದು ಸ್ವಲ್ಪ ಕಷ್ಟ ಸಾಧ್ಯ. ಮೊದಲಿಗೆ ಛಂದಸ್ಸು, ಪಾದಗಳ ಮಿತಿ, ಕ್ರಿಯಾಪದ ನಾಮಪದಗಳ ಬಳಕೆಯಲ್ಲಿ ಆಗುವ ಗೊಂದಲ ಇವೆಲ್ಲವೂ ಅದಕ್ಕೆ ಕಾರಣ. ಪೂರ್ವದ ಕನ್ನಡ ಕವಿಗಳಲ್ಲಿ ರನ್ನ ಇಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾನೆ. ನಂತರ ರಾಘವಾಂಕ, ಕುಮಾರವ್ಯಾಸರು ಬರುತ್ತಾರೆ. ರನ್ನನ ಸಾಹಸಭೀಮವಿಜಯಂ ಎಂಬ ಪುಟ್ಟ ಕಾವ್ಯದೊಳಗಿನಿಂದಲೇ ಬಿ.ಎಂ.ಶ್ರೀ.ಯವರಂತಹ ಸಹೃದಯ ಪ್ರತಿಭೆ ‘ಅಶ್ವತ್ಥಾಮನ್’ ಮತ್ತು ‘ಗದಾಯುದ್ದ’ ಎಂಬ ಎರಡು ನಾಟಕಗಳನ್ನು ಸೃಜಿಸಿದೆ. ಹೊಸಗನ್ನಡದಲ್ಲಿ ಈ ಪರಂಪರೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದ ಹಿರಿಮೆ ಕುವೆಂಪು ಅವರಿಗೆ ಸಲ್ಲುತ್ತದೆ. ರಾಮಾಯಣದರ್ಶನಂದಂತಹ ವರ್ಣಕದೊಳಗೆ ಹಲವಾರು ನಾಟಕದ ದೃಶ್ಯಗಳನ್ನು, ಒಂದೆರಡು ಸಣ್ಣ ನಾಟಕಗಳನ್ನೇ ಅವರು ಅಡಕಗೊಳಿಸಿದ್ದಾರೆ ಎನ್ನಬಹುದು.
ರಾಮ-ಲಕ್ಷ್ಮಣ-ವಿಶ್ವಾಮಿತ್ರರ ನಡುವಿನ ಸಂಭಾಷಣೆ, ಶಿವಧನಸ್ಸು ಬೇದಿಸುವ ಪೂರ್ವದಲ್ಲಿಯೇ ಸೀತೆ ರಾಮನನ್ನು ಕಾಣುವುದು, ಸಹೋದರಿಯರೊಡನೆ ಮಾತನಾಡುವುದು, ರಾಮನ ಯಶಸ್ಸಿಗೆ ಪ್ರಾರ್ಥಿಸುವುದು. ಚಂದ್ರನಖಿ-ರಾಮ-ಲಕ್ಷ್ಮಣರ ನಡುವಿನ ಸಂಭಾಷಣೆ, ರಾವಣ-ಮಾರೀಚರ ನಡುವಿನ ಸಂಭಾಷಣೆ ಇಂತಹ ನೂರಾರು ಸನ್ನಿವೇಶಗಳು ನಾಟಕದ ದೃಶ್ಯಗಳಂತೆ ಚಿತ್ರಿತವಾಗಿವೆ. ಓ ಲಕ್ಷ್ಮಣಾ ಸಂಚಿಕೆ, ರಾಮ ಸುಗ್ರೀವ ಅಂಜನೇಯರ ನಡುವಿನ ಮಾತುಕತೆ, ವಾಲವಧೆ*, ರಾವಣನ ರಾಕ್ಷಸ ಸಭೆ, ಅನಲೆ-ರಾವಣ-ವಿಭೀಷಣರ ನಡುವಿನ ಮಾತುಕತೆಗಳು ಪುಟ್ಟ ಪುಟ್ಟ ನಾಟಕಗಳಂತೆಯೇ ಚಿತ್ರಿತವಾಗಿವೆ. ಅದರಲ್ಲೂ ಓ ಲಕ್ಷ್ಮಣಾ ಸಂಚಿಕೆಯಲ್ಲಿ; ಮಾಯಾಮೃಗದ ಪ್ರವೇಶ, ಸೀತೆಯ ಬೇಡಿಕೆ, ರಾಮನ ನಿರ್ಗಮನ, ಮಾರೀಚನ ಬಾಯಿಂದ ರಾಮನ ಧ್ವನಿಯಲ್ಲಿ “ಓ ಲಕ್ಷ್ಮಣಾ! ಓ ಸೀತಾ!” ಎಂದು ಖೇಳಿದ ಮೇಲೆ ಸೀತೆ ಲಕ್ಷ್ಮಣರ ನಡುವಿನ ಮಾತುಕತೆ, ಲಕ್ಷ್ಮಣನ ನಿರ್ಗಮನ, ರಾವಣನ ಪ್ರವೇಶ, ರಾವಣ-ಸೀತೆಯರ ನಡುವಿನ ಚರ್ಚೆ, ಸೀತಾಪಹರಣ, ಜಟಾಯು-ರಾವಣರ ಯುದ್ಧ, ಜಟಾಯು ಬೀಳುವುದು, ರಾಮಲಕ್ಷ್ಮಣರ ಮಾತುಕತೆ, ರಾಮನ ಮಾನವ ಸಹಜ ನಡುವಳಿಕೆ, ಜಟಾಯುವಿನ ಮೇಲೆ ಕೋಪ, ನಿಜವರಿತ ರಾಮನ ಗೋಳಾಟ, ಜಟಾಯುವಿನ ಅಂತ್ಯಸಂಸ್ಕಾರ, ಸೀತೆಗಾಗಿ ರಾಮನ ಪ್ರಲಾಪ, ಲಕ್ಷ್ಮಣನ ಸಂತೈಕೆ ಈ ಸನ್ನಿವೇಶಗಳಲ್ಲಿ ಬರುವ ಸಂಭಾಷಣೆ ಸಹಿತವಾದ ಚಿತ್ರಣ ಒಂದು ದುರಂತ ನಾಟಕವನ್ನೇ ಹೋಲುತ್ತದೆ. ದುರಂತ ನಾಟಕಕ್ಕೆ ಬೇಕಾದ ಕರಣ ಕಾರಣ ಸನ್ನಿವೇಶ ಸಂಘರ್ಷ ಪರಿಣಾಮ ಎಲ್ಲವೂ ಇಲ್ಲಿದೆ. ವೀರ ಮತ್ತು ಕರುಣ ರಸಗಳ ಕೋಡಿವೆರೆದಿದೆ.
ನೆನಪಿರಲಿ: ‘ಓ ಲಕ್ಷ್ಮಣಾ! ಓ ಲಕ್ಷ್ಮಣಾ!’ ಎಂದು ಕವಿಯ, ಮಾರೀಚನ, ಸೀತೆಯ, ರಾಮನ ಪ್ರಲಾಪನದೊಂದಿಗೆ ಆರಂಭವಾಗುವ ಈ ಸಂಚಿಕೆ ಪರ್ಯಾವಸನಗೊಳ್ಳುವುದು ರಾಮನ ಓ ಸೀತಾ! ಓ ಸೀತಾ! ಎಂಬ ಪ್ರಲಾಪದೊಂದಿಗೆ!
ಒಂದೆರಡು ಉದಾಹರಣೆಗಳು: ರಾಮನ ಧ್ವನಿಯಲ್ಲಿ ಓ ಲಕ್ಷ್ಮಣಾ! ಆ ಸೀತಾ! ಎಂಬ ಕೂಗನ್ನು ಕೇಳಿದಾಗ
ಸೀತೆ: (ದುಃಖಾತಂಕದಿಂದ) ಅಯ್ಯಯ್ಯೊ ಕೆಟ್ಟೆನಯ್, ಲಕ್ಷ್ಮಣಾ!
ಕೇಡಾಯ್ತು ಆರ್ಯಂಗೆ! ಓಡು, ನಡೆ! ನಡೆ ಬೇಗ! ನೆರವಾಗು, ನಡೆ, ಹೋಗು!
ರಾಘವಂಗೇನಾಯ್ತೊ ಕಾಣೆನಾನಯ್ಯಯ್ಯೊ!
ಲಕ್ಷ್ಮಣ: (ತುಸು ಕಿನಿಸಿನಿಂದ) ತಾಳ್ಮೆ, ತಾಯೀ, ತಾಳ್ಮೆ.
ರಕ್ಕಸನಸುರ ಮಾಯೆ ಕೂಗುತಿದೆ; ಅಗ್ರಜಧ್ವನಿ ಅದಲ್ತು.
ಭ್ರಾಂತಿಯಿಂ ನಡೆಯದಿರಿತರೆಯಂತೆ.
ಸೀತೆ: ಅಯ್ಯಯ್ಯೊ, ಆಲಿಸದೊ; ನಿನ್ನಣ್ಣನುಲಿಹವೆ ದಿಟಂ.
ನಿನ್ನನೆ ಪೆಸರ್ವಿಡಿದೆ ಕೂಗುತಿಹುದಾಲಿಸಾ!
ಕಿವಿಗೆಟ್ಟುದೇಂ; ನಿನಗೆ ಮತಿಗೆಟ್ಟುದೇಂ?
ಓಡು, ನೆರವಾಗು, ನಡೆ, ಹೋಗು; ದಮ್ಮಯ್ಯ, ಹೋಗು!
ಲಕ್ಷ್ಮಣ: ಅಣ್ಣನ ಆಜ್ಞೆ, ನಿಮ್ಮಡಿಯ ರಕ್ಷಣೆಗೆ ನನ್ನನಿಲ್ಲಿಟ್ಟು ಹೋಗಿಹನ್
ಅದಂ ಮೀರಿ ನಡೆಯಲ್ಕೆನಗೆ ಬಾರದು ಮನಂ.
ಸೀತೆ: ಕರುಳೆನಗೆ ಬೇಯುತಿಹುದು ಎನ್ನನ್ನಾತ್ಮ ಸೀಯುತಿಹುದು
ಅಯ್ಯಯ್ಯೊ ದಮ್ಮಯ್ಯ, ಲಕ್ಷ್ಮಣಾ, ಕಾಲ್ವಿಡಿವೆನ್ ಓಡು ನಡೆ;
ರಕ್ಷಿಸೆನ್ನಿನಿಯನಂ, ಪ್ರಾಣಸರ್ವಸ್ವನಂ,
ಕೌಸಲೆಯ ಕಂದನಂ, ಕೋಸಲಾನಂದನಂ, ನಿನ್ನಣ್ಣನಂ!
ಲಕ್ಷ್ಮಣ: (ಕೋಪದಿಂದ; ಸ್ವಗತ) ಹೆಣ್ಣಿನ ಹಣೆಯ ಬರಹಮಿಂತುಟೆ ವಲಂ!
(ಸಂತೈಸುವ ಧ್ವನಿಯಲ್ಲಿ) ದೇವಿ ರಾಮನಪ್ರಾಕೃತಂ! ರಾಮನಕ್ಷಯ ಮಹಿಮನ್
ಆತಂಗೆ ಪೇಳೆಣೆಯೆ ದೇವರ್ಕಳುಂ? ದನುಜರಾವ ಹೊಯಿಕೈ?
ತಮ್ಮ ನಿಧಿಯ ಬೆಲೆ ತಮಗರಿಯದವರವೋಲಾಡುವಿರಿ!
ಸಾಲ್ಗುಮೀ ಕಳವಳಂ; ಮಾಣ್ಬುದಾಶಂಕೆಯಂ; ಬಿಡಿಮನ್ನೆಯದ ಭೀತಿಯಂ.
(ಮತ್ತೆ ಮತ್ತೆ “ಓ ಲಕ್ಷ್ಮಣಾ! ಓ ಲಕ್ಷ್ಮಣಾ! ಓ ಲಕ್ಷ್ಮಣಾ ಓ!” ಎಂಬ ಧ್ವನಿ ಹಿನ್ನೆಲಯೆಲ್ಲಿ ಕೇಳಿ ಬರುತ್ತದೆ. ಇಬ್ಬರೂ ದಿಗಿಲುಗೊಳ್ಳುತ್ತಾರೆ)
ಸೀತೆ: (ಕೋಪದಿಂದ) ಭ್ರಾತೃಘಾತಕ ಪಾಪಿ, ಸಾಯಿ, ನಡೆ, ತೊಲಗು ಕಣ್ಬೊಲದಿಂ!
ಸುಮಿತ್ರಾತ್ಮಜಾತ ಪಾತಕವೊ ನೀಂ!
ಗೋಮುಖವ್ಯಾಘ್ರನೊಲ್ ಬಂದೆಯೆಮ್ಮೊಡಗೂಡಿ,
ಪೂರ್ವಜನ್ಮದ ಪಾಪದಾ ಕರ್ಮಪಾಕಂ ಬರ್ಪವೋಲ್!....
ಲಕ್ಷ್ಮಣ: (ಮುಂದೆ ಮಾತನಾಡಲು ಬಿಡದೆ, ನಿರ್ಧಾರದ ಧ್ವನಿಯಲ್ಲಿ)
ಸಾಲ್ಗುಮೀ ನಿಂದೆ, ರಾಜರ್ಷಿ ಜನಕಸುತೆ!
(ನಿಟ್ಟುಸುರಿಗರೆಯುತ್ತಾ ಕೋಪದಿಂದ)
ನೀಮಣ್ಣನಂ ಪ್ರೀತಿಸುವ ಮೊದಲೆ ಪ್ರೀತಿಸಿದೆ ನಾನಾತನಂ!
ಪೊಲ್ಲನುಡಿಗೆಡೆಗೊಟ್ಟರೀಗಳಾ ಬಳಿಕ್ಕೆ ನೀಂ ನೋವನುಣ್ಬಿರಿ...”
ಸೀತೆ: ಎಲವೊ ಲಕ್ಷ್ಮಣಾ, ಎಳೆಯ ಮುಳ್ ಚುಚ್ಚಲ್ಕೆ ನೋವಲ್ತದುವೆ ಮೆಚ್ಚು;
ಬೆಳೆದರಾ ಮುಳ್, ಅದರ ಕಚ್ಚು ಮುತ್ತಹುದೆ ಪೇಳ್?
ಎಳೆಯ ಕರು ಬೆಳೆದ ಮೇಲದರ ತಾಯನೆ ಬೆದೆಗೆ ಬಯಸಿದಪುದಯ್ಯೊ!...
ಮನದನ್ನ, ನಿನ್ನಂ ನಾನೆ ಕೊಲಿಸಿದೆನೆ?
ತನ್ನೈದೆದಾಳಿಯಂ ತನ್ನ ಕಯ್ ಕಿತ್ತೆಸೆದುದಯ್ಯಯ್ಯೊ!
(ಬಾಯಿ ಬಡಿದುಕೊಂಡು ಗೋಳಾಡುತ್ತಾಳೆ)
ಲಕ್ಷ್ಮಣ: (ದಿಗ್ಭ್ರಾಂತಿಯಿಂದ) “ಪೆಣ್ತನದ ಕಲ್ತನಕ್ಕೆಲ್ಲೆ ಮೇಣೆಣೆಯುಂಟೆ?-
ಹೇ ದೇವಿ, ಹೇ, ಮಾತೆ, ಮನ್ನಿಸೆನ್ನಂ.
ರಾಮನಾಣೆಯಂ ಮೀರಲಾರದೆ ಪೇಳ್ದೆನನ್
ಆದೊಡಂ, ನಿಮ್ಮಾಣೆ! ಹೋಗಿ ಬರುವೆನು ಬೇಗದಿಂ; ನಡೆಯಿಮೆಲೆವನೆಗೆ!
(ಲಕ್ಷ್ಮಣನ ನಿರ್ಗಮನ)
[ಲಕ್ಷ್ಮಣ ರಾಮನನ್ನು ಸಮೀಪಿಸಿದ ನಂತರ ಅವರಿಬ್ಬರ ನಡುವೆ ಆರಂಭವಾಗಿ, ಜಟಾಯುವಿನ ಅಂತ್ಯ ಸಂಸ್ಕಾರದವರೆಗಿನ ಸುಮಾರು ನೂರೈವತ್ತು ಸಾಲುಗಳು (ನಡುವೆ ಸುಮಾರು ಅರವತ್ತು ಸಾಲುಗಳ ಮಹೋಪಮೆ ಬರುತ್ತದೆ; ಅದನ್ನು ಬಿಟ್ಟು) ಕರುಣ ರಸವೇ ಪ್ರಧಾನವಾದ ಅತ್ಯತ ನಾಟಕೀಯ ಸನ್ನಿವೇಶವಿದೆ]
[*ಎಂ ಗಣೇಶ್ ಅವರು ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಆಧರಿಸಿ ವಾಲಿವಧೆ ಎಂಬ ರಚಿಸಿ ನಿರ್ದೇಶಿಸಿರುವುದು, ಅದರ ಯಶಸ್ಸು, ಅದಕ್ಕೆ ಸಿಕ್ಕಿರುವ ಮನ್ನಣೆ ಇವುಗಳನ್ನು ಗಮನಿಸಬಹುದು)

Friday, June 01, 2018

ಟಿಪ್ಪಣಿ-5 - ಕವಿ ಸೃಷ್ಟಿಸಿದ ಕಥಾವಸ್ತುವೊಂದನ್ನು ಬೆಳೆಸುವ ಪರಿ

ನೆನ್ನೆ ಪಂಚವಟಿಯಲ್ಲಿ ಪರ್ಣಕುಟಿಯ ಸಮೀಪ, ಸೀತೆ ಕಾಡು ಹೂಬಳ್ಳಿಯೊಂದನ್ನು ನಟ್ಟು ಬೆಳೆಸಿದ್ದಳು ಎಂಬ ವಿಚಾರ ಬಂತು. ಮಹಾಕವಿ ತಾನು ಸೃಷ್ಟಿಸಿ ಪಾತ್ರವಿರಲಿ ವಸ್ತುವಿರಲಿ ಅದನ್ನು ಬೆಳೆಸುವ ರೀತಿಯೇ ಅನನ್ಯ. ಆ ಹೂಬಳ್ಳಿಯ ವಿಷಯ ಅಲ್ಲಿಗೆ ಮುಗಿಯುವುದಿಲ್ಲ. ರಾವಣ ಸೀತಾಪಹಣಕ್ಕೆ ಬಂದಾಗ, ತನ್ನ ಭಯವನ್ನು ನಿವಾರಿಸಲೋ ಎಂಬಂತೆ ಸೀತೆ ಅವಲಂಬಿಸಿ ನಿಲ್ಲುವುದು ಆ ಬಳ್ಳಿಯನ್ನು! (ತಾಂ ನಟ್ಟು ನಡಪಿದಾ ಬಳ್ಳಿಯನಿರದೆ ನೆಮ್ಮಿ ತಳ್ಕಯಿಸಿ ನಿಂದಳು ಲತಾಂಗಿ)
ಇದು ಇಷ್ಟಕ್ಕೆ ಮುಗಿಯುವುದಿಲ್ಲ. ರಾವಣ ಅವಳನ್ನು ಹೊತ್ತಯ್ಯಲು ಮುಂದೆ ಬಂದು ಕೈಚಪ್ಪಳಿಸಿ ಮಂಜಿನ ಮೋಡವೊಂದನ್ನು ಸೃಷ್ಟಿಸುತ್ತಾನೆ. ಆಗ ಸೀತೆ ತೇಲುಗಣ್ಣಾಗುತ್ತಾಳೆ. ಆಗ ಅವಳು ಆಸೆರೆಗೆ ಬಳ್ಳಿಯನ್ನೇ ಆಸ್ರಯಿಸುತ್ತಾಳೆ. (ತಬ್ಬಿದಳು ಬೆಬ್ಬಳಿಸಿ ಪರ್ಣಶಾಲೆಯ ಲತಾಭಗಿನಿಯಂ!). ಅದನ್ನು ಕಂಡು ಕವಿ “ಹೇ ಹತಭಾಗ್ಯೆ, ಲಕ್ಷ್ಮಣ ಮಹಾಬಾಹು ರಕ್ಷೆಯಂ ನೂಂಕಿದಾ ನಿನಗೆ ಪೇಳೆಂತು ರಕ್ಷಣೆ ಬಳ್ಳಿತೋಳ್? ಅಯ್ಯೊ (ಕೈಲಾಸಮಂ ನೆಗಹಿ ತೂಗಿತಿನೆದಾ ಬಾಹುಗಳಿಂದ ರಾಹುವಿನಂತೆ ಎಳೆಯುವಾಗ). ಎಂದು ಉದ್ಘರಿಸುತ್ತಾರೆ. ಹಾಗೆಯೇ ಆಗುತ್ತದೆ. ರಾವಣ ಮುನ್ನುಗ್ಗಿ ಸೀತೆಯ ಕೂದಲನ್ನು ಹಿಡಿದು ಅವಳನ್ನು ಎತ್ತುಕೊಳ್ಳುತ್ತಾನೆ. ಸೀತೆ ಬಿಗಿಯಾಗಿ ಅಪ್ಪಿದ ಬಳ್ಳಿ ಅವಳ ಜೊತೆಯಲ್ಲಿಯೇ ಕಿತ್ತು ಬರುತ್ತದೆ? ರಾವಣ ಅಂಬರಕ್ಕೆ ನೆಗೆದ ರಭಸಕ್ಕೆ “ಬೀಳ್ವುದು ಬಳ್ಳಿಯಂಗಳಕೆ, ಮುಳ್ಳುವೇಲಿಯುಂ ಬರಂ ನೀಳ್ದು! ರಾವಣನೆಂಬ ಮುಳ್ಳು ಸೀತೆಯನ್ನು ಹಿಡಿಯಿತು. ಇತ್ತ ಬಳ್ಳಿ ಮುಳ್ಳುಬೇಲಿಯ ಮೇಲೆ ಬಿತ್ತು!
ಬಳ್ಳಿಯನ್ನು ಕವಿ ಅಷ್ಟಕ್ಕೇ ಬಿಡುವುದಿಲ್ಲ. ಅದರ ಸೃಷ್ಟಿ ಸಾರ್ಥಕವಾಗಬೇಕಾದರೆ, ಅದು ಕಾವ್ಯೋದ್ದೇಶದ ಮೂಲಕ್ಕೆ ಯಾವುದಾದರೊಂದು ರೀತಿಯಲ್ಲಿ ನೆರವನ್ನೀಯಬೇಕು (ಕುವೆಂಪು ರಾಮಾಯಣದ ಶಿಷ್ಟ ದುಷ್ಟ ಎಲ್ಲ ಪಾತ್ರಗಳು ಇಂತಹ ನೆರವನ್ನು ನೀಡುತ್ತವೆ). ಪರ್ಣಕುಟಿಗೆ ಹಿಂತಿರುಗಿದ ರಾಮ ಲಕ್ಷ್ಮಣರು ಸೀತೆಯನ್ನು ಇಲ್ಲೆ ಎಲ್ಲೊ ಇರಬಹುದು ಎಂಬ ಭಾವದಿಂದ ಒಳಗೆ ಹೊರಗೆಲ್ಲಾ ಹುಡುಕುವಾಗ ಆ ಬಳ್ಳಿ ರಾಮನ ಕಣ್ಣಿಗೆ ಬೀಳುತ್ತದೆ. ರಾಮ ನೋಡಲ್ಲಿ ಎಂದಾಗ ಲಕ್ಷ್ಮಣ ನೋಡುತ್ತಾನೆ: ಕಾಣಿಸಿತು ಪರಿಗೊಂಡ ಪರ್ಣಶಾಲೆಯ ಲತಾಭಗಿನಿ! ಅಂಗಳದುದ್ದಮಾ ಬೇಲಿಯನ್ನೆಗಂ ದಿಂಡುರುಳಿ ಪರಿದೆಲೆ ತರಂಟಾಗಿ, ನಿಡುಚಾಚಿ ಕೆಡದಿರ್ದ ಬಳ್ಳಿ ತೋಳಿನ ಬೆರ್ಚು ಸಾಕ್ಷಿಯಂ! ಈ ಸಾಕ್ಷಿಯಿಂದಲೇ ಸೀತೆ ಇಲ್ಲ. ಅವಘಡ ನಡೆದಿದೆ ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ. ಸೀತೆ ನಟ್ಟು ನಡಪಿದಾ ಆ ಬಳ್ಳಿಯ ಬದುಕು, ಮಾಹಾಕಾವ್ಯದ ಒಂದು ಬಿಂದುವಾಗಿ, ಈ ರೀತಿಯಲ್ಲಿ ಸಾರ್ಥಕತೆಯನ್ನು ಕಾಣುತ್ತದೆ.
ಗಾಳಿದೇರು ಭೂಮಿಗಿಳಿಯುವಾಗಿನ ಸಂದರ್ಭದ ಸರ್ಪೋಪಮಾವರ್ತವಾದ ಸುಂಟರಗಾಳಿಯ ಭೂತನರ್ತನದ ವರ್ಣನೆ:
ಕುಣಿದಿಲ್ಲಿ, ನೆಗೆದಲ್ಲಿ, ಹಾರುತ್ತಂ, ಓಡುತ್ತಂ,
ಆಡುತಂ ನಿಲುತೊಮ್ಮೆ ಹೆಡೆಯೆತ್ತಿ ನಾಗರದವೋಲಾಡಿ,
ಮತ್ತೊಮ್ಮೆ ನಡುಬಳುಕಿ ನಟಿಯಂತೆ ಓಲಾಡಿ,
ಒಮ್ಮೆ ತುಂಬುರುಗೊಳ್ಳಿಯನೆ ಚಿಮ್ಮಿ,
ಮತ್ತಂತೆ ಗಣಬಂದವನ ತೆರದಿ ರಿಂಗಣಗುಣಿದು ಹೊಮ್ಮಿ
ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ
(ಸೀತೆಯೊಡಲಿನ ನಾಳನಾಳದಲಿ ಹೆದರಿಕೆಯ ಚಳಿ ಹರಿಯುವಂತೆ)!
ಜಟಾಧಾರಿಯಾಗಿ ಬಂದ ರಸಿಕರಾಕ್ಷಸ, ಪರವಧೂ ಪ್ರೇಮಿ ಆ ಚೆಲ್ವಿಯಂ (ಸೀತೆಯನ್ನು) ನೋಡುವ ನೋಟವನ್ನು ಕಂಡದ್ದೇ ತಡ ಸೀತೆ ಬರವಟ್ಟು ಬಳ್ಳಿಯನ್ನಾಶ್ರಯಿಸಿ ನಿಂತುಬಿಡುತ್ತಾಳೆ. ಆಗಿನ ವರ್ಣನೆ:
ನಿಂತುದು ಗಾಳಿ ಬೆದರಿ.
ಗೋದಾವರಿಯ ಹೊನಲ ನಡೆ ಹೆಪ್ಪಾಯ್ತು.
ಚಲನೆಗಳನುಡುಗಿದುವು ಮರಬಳ್ಳಿಗಳ್.
ಖಗಗಳಿಗೆ ಮಳ್ಗಿಚತ್ತಿಂಚರಂ.
ಪರ್ವತಾರಣ್ಯಗಳ್ ಸ್ತಬ್ಧಮಾದುವು
ರೌದ್ರಮಾ ದೈತ್ಯ ದೃಷ್ಟಿಯ ಭೀತಿ ಬಡಿದಂತೆ!
(ಈ ಮೇಲಿನ ಎರಡೂ ವರ್ಣನೆಗಳು ಮೂಲರಾಮಾಯಣದಲ್ಲಿ ಹಾಗೂ ಪಂಪರಾಮಾಯಣದಲ್ಲಿ ಇಲ್ಲ!)
ಕೆಲವು ಸಿನಿಮಾಗಳಲ್ಲಿ ನಾನು ನೋಡಿದಂತೆ: ಆಘಾತಕರವಾದ ಸುದ್ದಿಯೊಂದನ್ನು ಕೇಳಿದಾಗ, ನಾಯಕಿ ಅಥವಾ ನಾಯಕನ ಮನಸ್ಸಿನ ಮೇಲೆ ಆದ ಪರಿಣಾಮವನ್ನು ಸೂಚಿಸಲೆಂಬಂತೆ, ತೂಗಿ ತೊನೆಯುತ್ತಿರುವ ಮರಗಿಡಗಳು ಸ್ತಬ್ಧವಾದಂತೆ; ಹರಿಯುತ್ತಿರುವ ನದಿಯನೀರು, ಜಲಪಾತ ಸ್ತಬ್ಧವಾದಂತೆ ಆರ್ಭಟಿಸುತ್ತಿರುವ ಸಮುದ್ರ ಸ್ತಬ್ಧವಾದಂತೆ, ಹಾರುತ್ತಿರುವ ಹಕ್ಕಿ-ಪಕ್ಷಿಗಳು ಅಚಲವಾಗಿ ನಿಂತುಬಿಟ್ಟಂತೆ, ಓಡುತ್ತಿರುವ ಪ್ರಾಣಿಗಳು ಅಲುಗದೆ ನಿಂತಂತೆ ತೋರಿಸುತ್ತಾರೆ. ಈ ತಂತ್ರವನ್ನು ಏನೆಂದು ಕರೆಯುತ್ತಾರೊ ನನಗೆ ತಿಳಿಯದು (ಫ್ರೀಜಿಂಗ್ ಟೆಕ್ನಾಲಜಿ?) ಆದರೆ ಕುವೆಂಪು ಇದನ್ನು ವರ್ಣನ ಮಹಾಕಾವ್ಯದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ (ಬಹುಶಃ ಮೂಕಿಚಿತ್ರಗಳ ಕಾಲದಲ್ಲೇ) ಪ್ರಯೋಗಿಸಿದ್ದರು!
ರಾವಣನ ಮೇಲೆ ಎರಗಲು ಬಂದ ಜಟಾಯುವಿಗೆ, ರಾವಣನ ಹೆಗಲ ಮೇಲೆ ಮೂರ್ಛೆ ಬಿದ್ದಿದ್ದ ಸೀತೆ ಕಣ್ಣೀಗೆ ಬಿದ್ದಾಗ, ನಾನು ಎರಗಿದರೆ ಸೀತೆಗೆ ಗಾಯವಾಗುವಬಹುದು ಅನ್ನಿಸಿದಾಗ ಆತನ ಉದ್ಗಾರ: “ರಕ್ಷೆಯಾದಳೆ ದೇವಿ ರಾಕ್ಷಸಗೆ? ಹಾ”
ರಾವಣನ ಖಡ್ಗದಿಂದ ಗಾಯಗೊಂಡು ಕೆಳಗೆ ಬಿದ್ದ ಜಟಾಯುವನ್ನು ಕಂಡು ‘ಕಾಡುಗೋಳಾಗಿ ಬಿದ್ದನು ಜಟಾಯು’ ಎನ್ನುತ್ತಾರೆ ಕವಿ. ಅದನ್ನು ಅಷ್ಟಕ್ಕೆ ನಿಲ್ಲಿಸಿದ್ದರೆ ಕುವೆಂಪು ಕವಿ ಮಾತ್ರ ಆಗುತ್ತಿದ್ದರು. ಆದರೆ ಅವರು ಮಹಾಕವಿ! ಅದಕ್ಕೆ “ಕಾಡುಗೋಳಾಗಿ ಬಿದ್ದನು ಜಟಾಯು, ರಾವಣನ ಆಯು ಬೀಳ್ವಂತೆ” ಎಂದು ಮುಗಿಸುತ್ತಾರೆ!
ರಾವಣ-ಸೀತೆಯರ ನಡುವೆ ನಡೆಯುವ ಸಂಭಾಷಣೆ ಒಂದು ದುರಂತ ನಾಟಕದ ದೃಶ್ಯದಂತೆ ಕಾಣುತ್ತದೆ. ಅದೇ ಒಂದು ಲೇಖನವಾಗುತ್ತದೆ

ಟಿಪ್ಪಣಿ: 4 ಕಾವ್ಯಸಾಮಗ್ರಿ & ಕವಿವ್ಯಾಪಾರ ಆಧರಿಸಿದ ಅಲಂಕಾರ ಇತ್ಯಾದಿ

* ಕಟ್ಟಲಿಹ ಕಬ್ಬಕೆ ಮೊದಲ್ ಗುದ್ದಲಿಯ ಪೂಜಿಪೋಲ್.
* ಕಲೆಯನಲ್ಲದೆ ಶಿಲ್ಪಿ ಶಿಲೆಯನೇನ್ ಸೃಷ್ಟಿಪನೆ?
* ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!
* ಕಾವ್ಯಯಾತ್ರೆಗೆ ತೇರುಕುದುರೆಯ ನೆರಂ ಬೇಕೆ?
* ರಸಾವೇಶಂ ಇಳಿದ ಸಮಯದ ಕವಿಯ ರಚನೆಯ ಉದಾಸೀನತಾ ವೇಗದಲಿ
* ಗಮಕಿವರ್ಯನ ವೇಣುವಾಣಿಗೆ ಕಲಾರಮಣಿ ವರ್ಣ ಲಯ ರಾಗಮಯ ನವರಸಾವೇಶದಿಂ ಮಮಕಾವ್ಯ ವೇದಿಕೆಯನೇರಿ ನರ್ತಿಸುವಂತೆ ನಲಿದುದಾ ಪೊನ್ಮಿಗಂ
* ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣುಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚಚ್ಉವ ಮಹಾಕವಿ ಮಾರ್ಗದಿಂ
* ಶಾಶ್ವತವನರಿಯಲ್ಕೆ ನಶ್ವರದ ಹೃದಯಮಂ ಭೇದಿಸುವ ಕವಿಯ ದರ್ಶನದಂತೆ
* ಲಘುವೆಣಿಸಿ ಗುರುವಾಯ್ತಲಾ! (ಕೇವಲ ಒಂದು ಹದ್ದು ಎಂದು ಉದಾಸೀನ ಮಾಡಿದ ರಾವಣ ಜಟಾಯುವಿನ ಉಗುರುಘಾತಕ್ಕೆ ಒಳಗಾದಾಗ ರಾವಣನಿಗೆ ಅನ್ನಿಸಿದ್ದು)
ಈ ಮೇಲಿನ ಅಲಂಕಾರಗಳೆಲ್ಲಾ (ಹೆಚ್ಚಿನವು ಉಪಮಾಲಂಕಾರ) ರಾಮಾಯಣ ದರ್ಶನಂನ ಮೊದಲ ಸಂಪುಟದವು. ಕೊನೆಯ ನಾಲ್ಕು ಎರಡನೆಯ ಸಂಪುದ ಮೊದಲೆರಡು ಸಂಚಿಕೆಯವರು. ನೂರಾರು ಅಲಂಕಾರಗಳ ನಡುವಿನಿಂದ ಆರಿಸಿ ಇಲ್ಲಿ ಪಟ್ಟಿ ಮಾಡಿರುವ ಇವುಗಳ ವಿಶೆಷವೇನೆಂದರೆ, ಕವಿಯೊಬ್ಬ ಕಾವ್ಯಪರಿಕರಗಳನ್ನು ಹಾಗೂ ಕವಿಕರ್ಮಗಳನ್ನು ಬಳಸಿಕೊಂಡು ಸೃಷ್ಟಿಸಿರುವ ಈ ಅಲಂಕಾರಗಳು ನವನವೀನವಾಗಿವೆ. ಬಹುಶಃ ರನ್ನನೊಬ್ಬನನ್ನು (’ಗುರು-ಲಘುಮಿಶ್ರಿತಂ ದೊರೆಕೊಳೆ ತದ್ಗುರು ತಚ್ಛಂದೋವೃತ್ತಿಗೆ ದೊರೆಯೆನಿಸಿರ್ದುದು’) ಬಿಟ್ಟು ಬೇರಾವ ಕನ್ನಡ ಕವಿಯೂ ಈ ಮಟ್ಟಿಗೆ ಕಾವ್ಯಸಾಮಗ್ರಿ ಮತ್ತು ಕವಿಕರ್ಮವನ್ನು ಅನುಸರಿಸಿ ಅಲಂಕಾರಗಳನ್ನು ಸೃಷ್ಟಿಸಿಲ್ಲ. ಇವುಗಳು ಒಂದೊಂದೂ ಬಂದಿರುವ ಸಂದರ್ಭ ಮತ್ತು ಅವುಗಳ ಸ್ವಾರಸ್ಯವನ್ನು ಗಮನಿಸಿದರೆ ಕವಿಯ ಕಲಾಸೃಷ್ಟಿಸಾಮರ್ಥ್ಯದ ವಿರಾಡ್’ದರ್ಶನವಾಗುತ್ತದೆ.
ಉದಾ: “ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣುಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚ್ಚುವ ಮಹಾಕವಿ ಮಾರ್ಗದಿಂ” ಇದು ರಾಮ ಮಾಯಾಜಿಂಕೆಯನ್ನು ಬೆನ್ನತ್ತಿ ಹೋಗಿ, ಹಿಡಿಯಲು ಸಾಧ್ಯವಾಗದೆ, ಸುಸ್ತಾಗಿ, ಕೊನೆಗೆ ಅನ್ಯಮಾರ್ಗ ಕಾಣದೆ ತನ್ನ ಬಿಲ್ಲಿಗೆ ಬಾಣವನ್ನು ಊಡುವ ಸನ್ನಿವೇಶದ ಚಿತ್ರಣ. ವ್ಯಾಕರಣ ಛಂದಸ್ಸು ಅಲಂಕಾರ ಇವುಗಳು ಕಾವ್ಯಕ್ಕೆ ಬೇಕು, ನಿಜ. ಆದರೆ ಅವಷ್ಟರಿಂದಲೇ ಕಾವ್ಯವನ್ನು ಕಟ್ಟಲಾಗುವುದಿಲ್ಲ. ಅವುಗಳನ್ನೇ ನೆಚ್ಚಿ ಕಾವ್ಯ ಕಟ್ಟಿದರೆ ಅದೊಂದು ಶಾಸ್ತ್ರ ಪಾಂಡಿತ್ಯದ ಜೊತೆಗೆ ಶುಷ್ಕ ಕವಿತೆಯಾಗುತ್ತದೆ, ಅಷ್ಟೆ. ನಿಜವಾಗಿ ಕಾವ್ಯಕ್ಕೆ ಬೇಕಾಗಿರುವುದು ಹೃದಯದಾವೇಶ. ಹೃದಯದಾವೇಶವನ್ನು ನೆಚ್ಚಿ ನಡೆಯುವವನು ಮಹಾಕವಿ. ಉಳಿದಂತೆ ವ್ಯಾಕರಣ ಛಂದಸ್ಸು ಅಲಂಕಾರ ಇವುಗಳು ಕಾವ್ಯಸೌಂದರ್ಯವನ್ನು ಸ್ವಲ್ಪ ಹೆಚ್ಚಿಸಬಹುದೇ ಹೊರತು, ಮೂಲ ಕಾವ್ಯದರ್ಶನವನ್ನಲ್ಲ! ಜಿಂಕೆಯನ್ನು ಅದರಲ್ಲೂ ನಿರ್ದಿಷ್ಟ ಉದ್ದೇಶದ ಮಾಯಾಜಿಂಕೆಯನ್ನು ಹಿಡಿಯಲು ಅದನ್ನು ಹಿಂಬಾಲಿಸಿ ಹೋದರೆ ವಿಫಲತೆ ಕಟ್ಟಿಟ್ಟ ಬುತ್ತಿ. ಅದಕ್ಕೆ ಮಂಗಳ ಹಾಡಬೇಕೆಂದರೆ ಬಾಣ ಊಡಲೇಬೇಕು. ವ್ಯಾಕರಣ ಛಂದಸ್ಸು ಅಲಂಕಾರ ಇವುಗಳ ಹಿನ್ನೆಲೆ ಕವಿಗಿರಬೇಕು; ಆದರೆ ಅವುಗಳನ್ನು ಸದಾ ಹೊತ್ತು ಹೊತ್ತು ಕವಿ ಕುಗ್ಗಬಾರದು; ಕಾವ್ಯ ಸೊರಗಬಾರದು!

ಮೆಚ್ಚಿದನ್; ಬೆಚ್ಚಿದನ್; ಕಿಚ್ಚೆದ್ದು ತುಟಿಗಚ್ಚಿದನ್! ವಾಹ್! ಎಂಥ ಅದ್ಭುತ ಅನುಪ್ರಾಸಸಹಿತ ಶಬ್ದಾಲಂಕಾರವಿದು. ವಿಶೇಷವೇನೆಂದರೆ ಇದು ಅರ್ಥಾಲಂಕಾರವೂ ಹೌದು. ಜಿಂಕೆಯ ಸೊಬಗಿಗೆ ಸೋತು ಲಕ್ಷ್ಮಣನನ್ನು ಬಿಲ್ಲು ಬಾಣ ತೆಗೆದುಕೊಂಡು ಬಾ ಎಂದು ಸೀತೆ ಕೂಗಿದಾಗ, ರಾಮಲಕ್ಷ್ಮಣರು ಗಾಬರಿಯಿಂದ ಹೊರಗೆ ಬರುತ್ತಾರೆ. ಆಗ ಅವರನ್ನು ಮೋಡದ ಮರೆಯಲ್ಲಿ ಪುಷ್ಪಕದಲ್ಲಿದ್ದ ರಾವಣ ನೋಡುತ್ತಾನೆ. ಆಗಿನ ಅವನಲ್ಲಿ ಉಂಟಾದ ಭಾವವನ್ನು ಕವಿ ಈ ನಾಲ್ಕು ಪದಗಳಲ್ಲಿ ಕಟ್ಟಿದ್ದಾರೆ. ಪುರುಷ ಪೌರುಷದ ಆರಾಧಕನಾದ ರಾವಣ, ರಾಮ ಲಕ್ಷ್ಮಣರ ಭದ್ರಾಕಾರವನ್ನು ಕಂಡು ಮೊದಲಿಗೆ ಮೆಚ್ಚುತ್ತಾನೆ; ತಾನು ಅಕಾರ್ಯಕ್ಕೆ ಬಂದಿರುವುದರಿಂದ, ಮುಂದೆ ಒದಗಬಹುದಾದ ಶತ್ರುತ್ವದ ಕಾರಣದಿಂದ ಬೆಚ್ಚುತ್ತಾನೆ. ಸ್ವತಃ ಪರಾಕ್ರಮಿಯಾದ ಕಾರಣದಿಂದ ಕಿಚ್ಚಿನಿಂದ ಅವಡುಗಚ್ಚುತ್ತಾನೆ!
ಮಹಾಕವಿಪ್ರಯೋಗಗಳ ಅರ್ಥವೈಶಾಲ್ಯತೆ ನಮ್ಮ ನಮ್ಮ ಓದಿನ ಅರಿವಿನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ!

ಟಿಪ್ಪಣಿ 3: ಹೊಸ ಸನ್ನಿವೇಶ ಸೃಷ್ಟಿ - ಮರುಪ್ರಯಾಣದ ಸಿದ್ಧತೆ, ಚಿತ್ರಭಾನುಗ್ರಸ್ತ ಇತ್ಯಾದಿ...

ಮಾರೀಚನ ಮನಸ್ಸನ್ನು ಒಲಿಸುವ ಕಾರ್ಯಾರ್ಥವಾಗಿ ಹೊರಟ ರಾವಣನನ್ನು ಕವಿ ‘ಚಿತ್ರಭಾನುಗ್ರಸ್ತ ಚೈತ್ರಸುಂದರ ಮಹಾ ಚಂದನಶ್ರಿಗಂಧ ಕಾನನೋಜ್ವಲನ್ ಆ ದೈತ್ಯೇಂದ್ರನ್’ ಎಂದು ಮಾರೀಚನಿಗೆ ಕಾಣಿಸುತ್ತಾರೆ! ಇಲ್ಲಿ ಚಿತ್ರಭಾನುಗ್ರಸ್ತ ಎಂದರೆ ಏನು? ಇದಕ್ಕೆ ಕವಿಯೇ ಕೊಟ್ಟಿರುವ ಉತ್ತರ: ಬೆಂಕಿ ಹತ್ತಿದ ಚೈತ್ರಮಾಸದ ಶ್ರೀಗಂಧದ ಕಾಡು ಉಜ್ವಲವಾಗಿ ಉರಿಯುವಂತೆ ರಾವಣನ ಬಾಹ್ಯಾಕಾರ ಥಳಥಳಿಸುತ್ತಿತ್ತು. ನೋಡಿದವರ ಕಣ್ಣನ್ನು ಕುಕ್ಕುತ್ತಿತ್ತು. ಅವನು ಚೈತ್ರ ಸುಂದರ ಚಿತ್ರವಿಚಿತ್ರವಾದ ರಂಗುರಂಗಿನ ಹೊಳೆಯುವ ಉಡಿಗೆ ತೊಡಿಗೆಗಳನ್ನು ತೊಟ್ಟುಕೊಂಡು ಬಂದಿದ್ದನು. ‘ಚಿತ್ರಭಾನು’ ಪದ ಸೂಚಿಸುವ ಅರ್ಥವೇ ಇದು. ಆದುದರಿಂದಲೇ ಆ ಪದಕ್ಕೆ ಬದಲಾಗಿ ಅಷ್ಟೇ ಮಾತ್ರೆಯ ಪದಗಳಿದ್ದರೂ ಹಾಕಿಲ್ಲ. ಅವನ ಮೈಯಿಂದ ಪರಿಮಳ ದ್ರವ್ಯಗಳ ವಾಸನೆ ಎರಚುತ್ತಿದೆ. ಚಂದನ ಶ್ರೀಗಂಧ ಈ ಅರ್ಥವನ್ನು ಸೂಚಿಸುತ್ತದೆ. ಮದನತಾಪದಿಂದ ರಾವಣ ಪರಿತಪಿಸುತ್ತಿದ್ದನೆಂದೂ ಈ ತಾಪಕ್ಕನುಗುಣವಾಗಿ ಅವನು ವೇಷಭೂಷಣಗಳನ್ನು ತೊಟ್ಟುಕೊಂಡಿದ್ದನೆಂದೂ ಈ ವಾಕ್ಯಸಮೂಹದ ಭಾವ. ಈ ಭಾವ ಆಲೋಚನಾಪೂರ್ವಕವಾಗಿ ನನಗೆ ಪ್ರತ್ಯಕ್ಷವಾಯಿತು ಎಂದು ತಿಳಿಯಬೇಡಿ, ನಾನು ಬರೆದಾಗಲಂತು ಈ ಅರ್ಥವನ್ನು ಬುದ್ದಿಪೂರ್ವಕವಾಗಿ ಕಲ್ಪಿಸಿಕೊಂಡೇ ಇರಲಿಲ್ಲ. ಇಲ್ಲಿಯ ಪಂಕ್ತಿಗಳಲ್ಲಿ ಒಂದಾದರೂ ಯೋಚಿಸಿ ಬರೆದುದಲ್ಲ; ಅನುಭವದ ಪರಿಣಾಮವಾಗಿ ಮೂಡಿದ್ದು. ಮಾರೀಚನ ಬಾಯಿಯ ಮಾತುಗಳನ್ನು ಬರೆಯುವಾಗ ನಾನು ಮಾರೀಚನಾಗಿ ಬರೆದಿದ್ದೇನೆ. ರಾವಣನ ಮಾತುಗಳನ್ನು ರಾವಣನಾಗಿ ಬರೆದಿದ್ದೇನೆ.
[ಸೀತೆಯನ್ನು ಎದುರುಗೊಳ್ಳಲಿದ್ದೇನೆ ಎಂಬ ಭಾವವೇ ರಾವಣನಿಗೆ ಅತ್ಯಂತ ಪ್ರಿಯವಾದುದು; ಅದಕ್ಕೇ ಈ ಬಾಹ್ಯ ಅಲಂಕಾರ; ಪರಿಮಳ ದ್ರವ್ಯಗಳ ಪ್ರೋಕ್ಷಣೆ! ಮನಸ್ಸು ಒಂದು ಮಾರೀಚನ ಓಲೈಸುವುದು ಹೇಗೆ? ಎಂಬ ಮಂಥನ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸೀತೆಯ ನೆನಪಿನಿಂದ ಸುಖಿಸುತ್ತಿರುತ್ತದೆ. ಆಗಿನ ಆತನ ಮನಸ್ಥಿತಿಗೆ ಚಿತ್ರಭಾನುಗ್ರಸ್ತ ಎಂಬ ರೂಪಕ]
ಪುಲಿ ಪುಲಿಯ ಮೋರೆಗೆ ಮೋರೆಯನ್ನಿಟ್ಟು ನೆಕ್ಕಿ ಮುಂಡಾಡುವೋಲ್ ಆಡಿ.......... ಕಾಡು ಪಕ್ಷಿ ಪ್ರಾಣಿಗಳ ಬಗ್ಗೆ ಒಲವಿರುವ ಕುವೆಂಪು ಮಾತ್ರ ಸೃಷ್ಟಿಸಬಹುದಾದ ಒಂದು ಉಪಮಾಲಂಕಾರ
ನೆನ್ನೆಯ ಟಿಪ್ಪಣಿಗೆ ಸೇರಿಸಬಹುದಾದ ಇನ್ನೆರಡು ಪದಗಳು ಸೊಗಬರವು (ಸುಸ್ವಾಗತ), ಬಡವು ಬಡಗನ್ (ಉತ್ತರದ ಬಡವಾ=ರಾಮ! ಇದು ರಾವಣನ ಮಾತು)
ಇನ್ನೊಂದು ಸಂಗತಿ ನಾನು ಗಮನಿಸಿದ್ದು: ಸೀತೆ ಪಂಚವಟಿಯ ಪರ್ಣಕುಟಿಯ ಸಮೀಪವೇ ತಾನು ಒಂದು ಕಾಡುಹೂವಿನ ಬಳ್ಳಿಯನ್ನು ನೆಟ್ಟು ಬೆಳೆಸಿದ್ದ ವಿಚಾರ. ಬಹುಶಃ ಇದೂ ಮೂಲರಾಮಯಾಣದಲ್ಲಿ ಇಲ್ಲ. ಕಾಡಿನ ನಡುವೆಯೇ ಇದ್ದ ಸೀತೆಗೆ ಹೂವುಗಳು ಸಿಕ್ಕುವುದು ಕಷ್ಟವೇನಲ್ಲ. ಆದರೆ, ಮನೆಯ ಮುಂದೆ ಒಂದು ಗಿಡ ನೆಟ್ಟು ಹೆತ್ತಮ್ಮನಂತೆ ಅದನ್ನು ಪೋಷಿಸುವುದು ಸದ್ಗೃಹಣಿಗೆ ಸಂತೋಷ ಕೊಡಬಹುದಾದ ಕೆಲಸ. ಸೀತೆ ಅದನ್ನು ಮಾಡಿದ್ದಾಳೆ. ಅದನ್ನು ಬಿಟ್ಟು ಹೊರಡಬೇಕಲ್ಲ ಎಂಬ ವ್ಯಥೆಯೂ ಅವಳನ್ನು ಕಾಡುತ್ತದೆ! ಒಂದು ಮಹಾಕಾವ್ಯದ ನಡುವೆ ಇಂತಹುದೊಂದು ಶ್ರೀಸಾಮಾನ್ಯವಾದ ವಿಚಾರ ಕಾಡಿನ ಕವಿಗೆ ಮಾತ್ರ ಸಾಧ್ಯವೇನೊ?
ರಾ. ಗಣೇಶ್ ವ್ಯಾಖ್ಯಾನದಿಂದ ತಿಳಿದ ಒಂದು ವಿಚಾರ: ಮೂಲ ಅಥವಾ ಇನ್ನಾವುದೇ ರಾಮಾಯಣದಲ್ಲೂ ಇರದ ಒಂದು ಸನ್ನಿವೇಷವನ್ನು ಕುವೆಂಪು ಕಾವ್ಯಸಹಜವಾಗಿ ಸೃಷ್ಟಿಸಿದ್ದಾರೆ. ಅದು, ವನವಾಸದ ಅವಧಿ ಹದಿಮೂರು ವರ್ಷ ಕಳೆದು, ಪಂಚವಟಿಯಿಂದ, ಅಯೋಧ್ಯೆಗೆ ಹಿಂತಿರುಗಲು ರಾಮ, ಸೀತೆ, ಲಕ್ಷ್ಮಣರು ಸಿದ್ಧತೆ ಮಾಡಿಕೋಳ್ಳುವ ಸನ್ನಿವೇಶ. ಹದಿನಾಲ್ಕು ವರ್ಷ ಕಳೆದ ಮಾರನೆಯ ದಿನ ಸೂರ್ಯೋದಯದ ಜೊತೆಯಲ್ಲಿಯೇ ರಾಮೋದಯ ಆಗದಿದ್ದರೆ ಅಗ್ನಿ ಪ್ರವೇಶ ಮಾಡುವುದಾಗಿ ಭರತ ಪ್ರತಿಜ್ಞೆ ಮಾಡಿದ್ದಾನೆ. ಆದ್ದರಿಂದ ಪಂಚವಟಿಯಿಂದ ಹೊರಟು ದಾರಿಯಲ್ಲಿ ಋಷಿಗಳ ಆಶ್ರಮಗಳಿಗೆ ಭೇಟಿ ಕೊಟ್ಟು ಅಲ್ಲ್ಲಿ ತಂಗುತ್ತಾ ಅಯೋಧ್ಯೆ ಸೇರಲು ಒಂದು ವರ್ಷ ಬೇಕು ಎನ್ನುವ ಲೆಕ್ಕಾಚಾರ! ಬೇಕಾದುದನ್ನೆಲ್ಲಾ ಗಂಟು ಕಟ್ಟುವ ಕೆಲಸವೂ ನಡೆತ್ತದೆ. ಸೀತೆ ಬುತ್ತಿಯನ್ನೂ ಸಿದ್ಧಪಡಿಸಿ ಕಟ್ಟುವ ಕೆಲಸ ಮಾಡುತ್ತಳೆ. (ಇನ್ನೊಂದು ದಿವಸ ತಡವಾಗಿದ್ದರೂ ರಾವಣನಿಗೆ ಸೀತೆ ಪಂಚವಟಿಯಲ್ಲಂತೂ ಸಿಗುತ್ತಿರಲಿಲ್ಲ!- ಇದು ದೈನಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಪರಿಕಲ್ಪನೆ) ಎಲೆವನೆಯಿಂದ ಹೊರಬಂದ ಸೀತೆ, ಋಷಿಗಳೊಬ್ಬರು ಕೊಟ್ಟಿದ್ದ ವಲ್ಕಲವನ್ನು ಲಕ್ಷ್ಮಣ ಒಣ ಹಾಕಿ, ಅದನ್ನು ತೆಗೆದುಕೊಳ್ಳದೆ ಬಿಟ್ಟಿದ್ದಾನೆ ಎಂದು ಭಾವಿಸಿ, ಅವನಿಗೆ ತಿಳಿಸುತ್ತಾಳೆ. ಒಣಗಿದ ಮೇಲೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ. ಆಗ ಸೀತೆ, ನೆರಳಿನಲ್ಲಿ ಒಣಹಾಕಿದ್ದೀಯಾ ಎನ್ನುತ್ತಾಳೆ. ಲಕ್ಷ್ಮಣನಿಗೆ ಆಶ್ಚರ್ಯ. ಬೇಸಗೆಯ ಆರಂಭದ ವಸಂತಮಾಸದ ದಿನಗಳು ಶುಭ್ರವಾಗಿದ್ದ ಆಕಾಶ. ಆದರೆ, ಆಕಾಶದಲ್ಲಿ ಅಕಾಲಿಕವಾಗಿ ದೊಡ್ಡ ಮೋಡವೊಂದು ಬಂದುಬಿಟ್ಟಿದೆ! (ಇದೇನಯ್ ಇಂದು ಎಂದಿಲ್ಲದೀ ಮೋಡವೀ ಪಚ್ಚೆಬಾಂಬೊಚ್ಚದೊಳ್?)ಅದು ರಾವಣ ಸೀತಾಪಹರಣಕ್ಕಾಗಿ ಪುಷ್ಪಕದಲ್ಲಿ ಬಂದು ಅಡಗಿ ನಿಂತಿದ್ದ ಕೃತಕ ಮೋಡ! (ರಾವಣರಥಂ ನಿಶ್ಚಲಂ, ಕೆರೆಯ ಮೇಲ್ಗಡೆ ನಭದಿ ಹಾರಿಯುಂ ಮೀನಿಗೆರಗುವ ಮುನ್ನ ನಿಲ್ಲುವ ಕುರರಿಯಂತೆ!) ಮೀನಿಗೆರಗುವ ಉದ್ದೇಶದಿಂದ ಹಾರುತ್ತಿದ್ದರೂ ನಿಶ್ಚಲವಾಗಿ ನಿಂತಿರುವ ಹಕ್ಕಿಯಂತೆ ಪುಷ್ಪಕ ನಿಂತಿದಿಯಂತೆ! ಇಂತಹ ಒಂದು ನವೀನ ಸನ್ನಿವೇಶವನ್ನು ಸೃಷ್ಟಿಸಿದ್ದಲ್ಲದೆ, ಅದನ್ನು ಮುಖ್ಯಕಾವ್ಯಧಾರೆಗೆ ಜೋಡಿಸಿರುವ ರೀತಿಯೂ ವಿಶೇಷವಾಗಿದೆ.
'ಠುವ್ವಿ' ಎಂಬ ಶಬ್ದವನ್ನು ಹಳಗನ್ನಡದ ಯಾವ ಕಾವ್ಯದಲ್ಲೂ ಬಳಸಲಾಗಿಲ್ಲ. ಅದನ್ನು ವಿಶೇಷವಾಗಿ ಕಾವ್ಯದಲ್ಲಿ ಬಳಸಿ ಅದನ್ನು ಜನಪ್ರಿಯಗೊಳಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಕಾವ್ಯದಲ್ಲಿ ಕುವೆಂಪು ಹೆಸರಿಸಿದ, ಚಿತ್ರಿಸಿದ, ಅನುಕರಿಸಿದ ಪಕ್ಷಿಗಳ ಸಂಖ್ಯೆ ಅದೆಷ್ಟು? ಬಹುಶಃ ಮತ್ತಾವ ಕವಿಯೂ ಕಾವ್ಯದಲ್ಲಿ ಇಂತಹ ಸಾಹಸ ಮಾಡಿರಲಾರ.

ಟಿಪ್ಪಣಿ-2: ರೂಪಕಸಾಮ್ರಾಜ್ಯದ ಸಾರ್ವಭೌಮ

ಟಿಪ್ಪಣಿ-2: ರೂಪಕಸಾಮ್ರಾಜ್ಯದ ಸಾರ್ವಭೌಮ
ಕುಮಾರವ್ಯಾಸ - ರೂಪಕಸಾಮ್ರಾಜ್ಯದ ಚಕ್ರವರ್ತಿ ಎಂಬ ಮಾತನ್ನು ಎಸ್.ವಿ. ರಂಗಣ್ಣನವರು ಹೇಳಿ 80-90 ವರ್ಷಗಳೇ ಕಳೆದಿವೆ. 2011ರಲ್ಲಿ ಆರ್. ಗಣೇಶ್ ಅವರು ರೂಪಕಸಾಮ್ರಾಜ್ಯದ ಸಾರ್ವಭೌಮ ಎನ್ನುವ ಮಾತನ್ನು ಕುವೆಂಪು ಅವರಿಗೆ ಹೇಳಿದ್ದರು. ಈ ಮಾತನ್ನು ಅವರು ಸುಮ್ಮನೆ ಹೇಳಿರಲಿಲ್ಲ. ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹರಡಿರುವ ನೂರಾರು ರೂಪಕಗಳನ್ನು ತಮ್ಮ ವ್ಯಾಖ್ಯಾನದ ಸಂದರ್ಭದಲ್ಲಿ ಗುರುತಿಸುತ್ತಾ ಬಂದು, ಒಂದು ಹಂತದಲ್ಲಿ- ಗಾಯಗೊಂಡಿದ್ದ ಚಂದ್ರನಖಿಯ ಮುಖವನ್ನು ರಾವಣ ಕಾಣುವ ಸಂದರ್ಭದಲ್ಲಿನ ರೂಪಕವೊಂದನ್ನು ಗಮನಿಸಿ (ಚುಂಗುಳಂ ತಿನೆ ಮೊಗಂಗೆಟ್ಟು ಸಂಮ್ಲಾನಮಾದ ಮಲರಂತಿರ್ದಾಕೆ - ಇದು ಮಲೆನಾಡಿನ, ತೋಟತುಡಿಕೆಗಳಲ್ಲಿ ಅಲೆದು ಸೂಕ್ಷ್ಮಕ್ರಿಮಿಕೀಟಾದಿಗಳನ್ನು ಗಮನಿಸಿದ ಕವಿ ಮಾತ್ರ ಸೃಷ್ಟಿಸಬಹುದಾದ ರೂಪಕ) ಕುವೆಂಪು ರೂಪಕಸಾಮ್ರಾಜ್ಯದ ಸಾರ್ವಭೌಮ ಎನ್ನುವ ಮಾತನ್ನು ಹೇಳಿದ್ದಾರೆ.
ಕಳಿತ ಪಣ್ಮಳೆಗರೆದು ಸೋರ್ದ ರಸಕೆ ನೆಲಂ ಕೆಸರೇಳುತಿದೆ
ಅವರ ಇನ್ನೊಂದು ಟಿಪ್ಪಣಿ ಕುವೆಂಪು ಸೃಷ್ಟಿಸಿರುವ ನೂರಾರು ನುಡಿಗಟ್ಟುಗಳು, ಅಚ್ಚಗನ್ನಡ ಪದಗಳು/ಪದಗುಚ್ಛಗಳ ಬಗ್ಗೆ: ಕುಮಾರವ್ಯಾಸ ಅದ ಮೇಲೆ ಸುಮಾರು 500 ವರ್ಷಗಳ ಕಾಲ ಕನ್ನಡ ಕಾವ್ಯಭಾಷೆ ಸವಕಲೆದ್ದು ಹೋಗಿತ್ತು. ಅದಕ್ಕೆ ಮತ್ತೆ ಹೊಸಚೈತನ್ಯ, ಹೊಸ ಮೆರಗು, ಹೊಸ ರಭಸ ಬಂದಿದ್ದೇ ಕುವೆಂಪು ಅವರಿಂದ. ನೀರ್ಬೀಳ (ಜಲಪಾತ) ಕಲ್ದವಸಿ (ಶಿಲಾತಪಸ್ವಿ) ನೆಲಗುವರಿ (ಭೂಜಾತೆ-ಸೀತೆ) ಗಾಳಿದೇರು, ಗಗನರಥ (ಪುಷ್ಪಕವಿಮಾನ) ಎಲೆವನೆ (ಪರ್ಣಕುಟಿ) ಐಕಿಲ್ ಸೋನೆ (ಹಿಮವರ್ಷ) ಹೀಗೆ ನೂರಾರು ಪದಗಳು ಕಾಣಸಿಗುತ್ತವೆ. ಆದರೆ ಕಾಣುವ ಸಹೃದಯ ಪ್ರತಿಭೆ ಬೇಕು ಅಷ್ಟೆ. ಒಂದು ಭಾಷೆಯಲ್ಲಿ ಒಂದು ಮಹೋನ್ನತವಾದ ಕೃತಿ ಸೃಷ್ಟಿಯಾದ ಕಾಲಘಟ್ಟದ ನಂತರ ಒಂದೆರಡು ಶತಮಾನಗಳ ಕಾಲ, ಆ ಭಾಷೆಯಲ್ಲಿ ಮತ್ತೆ ಮಹತ್ತರವಾದ ಹೊಸದೇನೂ ಹುಟ್ಟಲಾರದು ಎಂಬಂತೆ (ಎಲಿಯಟ್) ಕನ್ನಡ ಸಾಹಿತ್ಯಕ ಭಾಷೆ ಮತ್ತೆ ಒಂದು ರೀತಿಯಲ್ಲಿ ಚೈತನ್ಯರಹಿತವಾಗುವತ್ತ ಸಾಗುತ್ತಿದೆ. ಇನ್ನು ತಿಕ್ತಕಥೆ, ರುದ್ರರಮಣೀಯ, ಕೃಪಾಕೇತು, ಮುಕ್ತಿರಾಹು, ಶ್ರೀಸಾಮಾನ್ಯ, ವಿಪಿನರಾಜೇಶ್ವರಿ, ಬನ್ನಿಗಂಬ, ಹುತ್ತದೆರೆ, ಮಿದುಳ್’ಬಿಳಿ, ಹಸುರ್’ನೆತ್ತರ್, ಮೀಸೆಗೈಯಾಗು ಇಂತಹ ನೂರಾರು ಪದಗಳನ್ನೂ ಗುರುತಿಸಬಹುದು. ರುಂದ್ರ ಎಂಬ ಪದವನ್ನು ಪಂಪನಾದ ಮೇಲೆ ಬಳಸಿದವರು ಕುವೆಂಪು ಮಾತ್ರವಂತೆ!
ಅವರ ಇನ್ನೊಂದು ಮಾತು: ಕುವೆಂಪು ಅವರ ಮೇಲಿನ ಅತಿಯಾದ ಅಭಿಮಾನದಿಂದ ಕೆಲವರು, ಶ್ರೀರಾಮಾಯಣದರ್ಶನಂ ಓದದೆಯೇ ಹಲವರು; ಓದಿಯೂ ಕುತ್ಸಿತ ಮನೋಭಾವದಿಂದ, ವ್ಯಕ್ತಿದ್ವೇಷದಿಂದ ಕೆಲವರು ನಡೆಸಿದ ವಿಮರ್ಶೆಯಿಂದ ಕುವೆಂಪು ಅವರ ಕಾವ್ಯಪ್ರತಿಭೆಗೆ, ಶ್ರೀರಾಮಾಯಣ ದರ್ಶನಂ ಅನನ್ಯತೆಗೆ ನ್ಯಾಯ ಸಿಕ್ಕಿಲ್ಲ. ಕೆಲವು ಕಡೆ ಸಣ್ಣ ಸಣ್ಣ ವಿವರಗಳು ಎಷ್ಟು ಮಹತ್ವದವುಗಳಾಗಿರುತ್ತವೆ ಎಂದರೆ, ಭಾರತದ ಇನ್ನಾವ ಮಹಾಕಾವ್ಯದಲ್ಲೂ ಕಾಣಸಿಗುವುದಿಲ್ಲ. ಒಂದು ಉದಾಹರಣೆ: ಲಂಕೆ ಒಂದು ದ್ವೀಪ ರಾಷ್ಟ್ರ. ದ್ವೀಪಗಳಲ್ಲಿ ತೆಂಗಿನ ಮರಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಆದರೆ, ಮೂಲ ವಾಲ್ಮೀಕಿ ರಾಮಾಯನದಲ್ಲಿ ತೆಂಗಿನ ಮರದ ಪ್ರಸ್ತಾಪವೇ ಬರುವುದಿಲ್ಲ. ಅದನ್ನು ಕುವೆಂಪು ‘ಕಡಲತಡಿಯಂ ತುಂಬಿ ಲಂಕೆಗಂಚಂ ಕಟ್ಟಿದೊಲ್ ಬೆಳೆದ ತೋಂಟದಿಂ ಮೂಡಿದತ್ತಡಕೆ ತೆಂಗಿನ ಗರಿಯ ಮರ್ಮರ’ ಎಂದು ಹೇಳಿ ಕೊರತೆಯನ್ಉ ನೀಗಿಸಿಬಿಟ್ಟಿದ್ದಾರೆ.

ಟಿಪ್ಪಣಿ 1: ಅಳುವುದಕ್ಕಾಗಿ ಕಾವ್ಯ ಓದಬೇಕಿಲ್ಲ; ಓದಿ ಅಳುಬಂದರೆ....

ನಾನು ಮೊದಲು ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ವಚನಚಂದ್ರಿಕೆಯ ಮೂಲಕ ಪ್ರವೇಶಿಸಿದ್ದೆ. ನಂತರ ನನಗೆ ನಾನೇ ಮೂಲಕಾವ್ಯವನ್ನು ಓದಿಕೊಂಡೆ. ಆನಂತರ, ಸುಮಾರು ಮೂರುವರೆ ವರ್ಷಗಳ ಕಾಲ ವಾರಕ್ಕೊಂದು ದಿವಸ ಒಂದೆರಡು ಗಂಟೆಗಳ ಕಾಲ ಗುರುಗಳ ಮಾರ್ಗದರ್ಶನದಲ್ಲಿ ಸಮಾನ ಮನಸ್ಕರೊಡನೆ ಕೂಡಿ ಅಧ್ಯಯನ ನಡೆಸಿದ್ದೆ. ಆಮೇಲೆ ಅದೆಷ್ಟೋ ಬಾರಿ ಪೂರ್ಣವಾಗಿ, ಭಾಗಭಾಗವಾಗಿ ಓದಿಕೊಂಡಿದ್ದೇನೆ. ಓದುತ್ತಿದ್ದೇನೆ. (ರಾಮಾಯಣಂ ಅದು ವಿರಾಮಾಯಣಂ ಕಾಣಾ!)
ಓದಿನ ಜೊತೆಗೆ, ಅದರ ಗಮಕ ವಾಚನ ವ್ಯಾಖ್ಯಾನವನ್ನೂ ಕೇಳಿದ್ದೇನೆ. ಕುಪ್ಪಳಿ ಟ್ರಸ್ಟ್ ಐದು ಡಿವಿಡಿಗಳಲ್ಲಿ ಸುಮಾರು 80 ಗಂಟೆಗಳ ಗಮಕ-ವ್ಯಾಖ್ಯಾನವನ್ನು ಸುಮಾರು ನಲವತ್ತು ಜನ ಗಾಯಕ-ವ್ಯಾಖ್ಯಾನಕಾರರ ಸಹಕಾರದಿಂದ ಸಿದ್ಧಪಡಿಸಿದೆ. ಕಳೆದ ತಿಂಗಳು ಶ್ರೀಮತಿ ತಾರಿಣಿ ಮತ್ತು ಶ್ರೀ ಚಿದಾನಂದಗೌಡರನ್ನು ಭೇಟಿಯಾದಾಗ ಅವರು, ಗೋಕಲೆ ಸಾರ್ವಜನಿಕ ಕೇಂದ್ರದವರು ಸಿದ್ಧಪಡಿಸಿರುವ ಐದು ಸೀಡಿಗಳ ಬಗ್ಗೆ ತಿಳಿಸಿ, ಅವುಗಳನ್ನು ಕೇಳಿದರೆ ಶ್ರೀರಾಮಾಯಣ ದರ್ಶನಂ ಬಗ್ಗೆ ಒಂದು ತೌಲನಿಕ ಅಧ್ಯಯನವನ್ನು ಮಾಡಿದಂತಾಗುತ್ತದೆ. ಚಂದ್ರಶೇಖರ ಕೆದಿಲಾಯರ ಗಮಕ ಮತ್ತು ಆರ್. ಗಣೇಶರ ವ್ಯಾಖ್ಯಾನವಿದೆ ಎಂದಿದ್ದರು. ಈಗ ಅವುಗಳನ್ನು ಕೊಂಡು ಅದರಲ್ಲಿ ಮೊದಲನೆಯ ಸೀಡಿಯನ್ನು ಕೇಳುತ್ತಿದ್ದೇನೆ. ಕಥಾಂಶಕ್ಕೆ ಹೆಚ್ಚು ಒತ್ತು ಕೊಡದೆ, ಕಾವ್ಯ ವಿಶೇಷಗಳು, ದಟ್ಟ ಕಾವ್ಯವಿವರಗಳು, ವರ್ಣನೆಗಳು, ಮಹೋಪಮೆಗಳು, ಕುವೆಂಪು ಅವರಿಗೇ ವಿಶೇಷವಾದ ವರ್ಣನೆಗಳಿರುವ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ಕಾವ್ಯಭಾಗಗಳನ್ನು ಆಯ್ಕೆ ಮಾಡಲಾಗಿದೆ. ಗಮಕ ಮತ್ತು ಕೊಳಲು ವಾದನವಂತೂ ಅದ್ಭುತವಾಗಿದೆ. ಶ್ರೀ ಆರ್. ಗಣೇಶ ಅವರ ವ್ಯಾಖ್ಯಾನ ಸುಮಾರು ಹತ್ತಕ್ಕೂ ಹೆಚ್ಚು ಬೇರೆ ಬೇರೆ ಭಾಷೆಗಳ ನೂರಾರು ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಶ್ರೀ ರಾಮಾಯಣ ದರ್ಶನಂನ ಹೆಚ್ಚುಗಾರಿಕೆ, ಕುವೆಂಪು ಅವರ ಪ್ರತಿಭೆ, ಕಲಾಸೃಷ್ಟಿ, ಭಾಷಾಶ್ರೀಮಂತಿಕೆ, ರೂಪಕಗಳ ಮಹಾಪೂರ ಇವುಗಳ ಬಗ್ಗೆ ತೌಲನಾತ್ಮಿಕವಾಗಿ ಗಮನಸೆಳೆಯುತ್ತದೆ.
ನೆನ್ನೆ ನಾನು ಕೇಳುತ್ತಿದ್ದ ಒಂದು ಭಾಗ ನನ್ನನ್ನು ನನಗರಿವಿಲ್ಲದೆ ಅಳಿಸಿಬಿಟ್ಟಿತು. ಅಳುವುದಕ್ಕೆ ಕಾವ್ಯ ಓದಬೇಕೆ? ಕೇಳಬೇಕೆ? ಎಂದರೆ ಹೌದು. ಅಳುವುದಕ್ಕೆ ಕಾವ್ಯವನ್ನು ಓದಬೇಕಾಗಿಲ್ಲ; ಆದರೆ ಕಾವ್ಯವನ್ನು ಓದಿ ರಸಾವಿಷ್ಟರಾಗಿ ಕಣ್ಣೀರು ಕರೆದರೆ ಅದು ಕಾವ್ಯದ, ಕಲಾಭಿವ್ಯಕ್ತಿಯ ಶ್ರೇಷ್ಟತೆಗೆ ಹಿಡಿದ ಕನ್ನಡಿಯಾಗುತ್ತದೆ.
ಕಾವ್ಯವನ್ನು ಆಲಿಸುತ್ತಿದ್ದ ಸಂದರ್ಭವೂ ಮುಖ್ಯ! ನೆನ್ನೆ ನಾನು ಊರಿನಿಂದ ಒಬ್ಬನೇ ಕಾರಿನಲ್ಲಿ ಬರುತ್ತಿದ್ದೆ. ಹೊರಗಡೆ ಸಣ್ಣದಾಗಿ ಮಳೆ. ಎಂಬಂತ್ತನ್ನು ದಾಟದ ನಿರುದ್ವಿಜ್ಞ ಚಾಲನೆ. ತುಸು ಹೆಚ್ಚೇ ಎನ್ನಿಸುವಂತೆ ಕೊಟ್ಟಿದ್ದ ವಾಲ್ಯೂಂ. ಅದ್ಭುತವಾದ ಕೊಳಲ ಧ್ವನಿಯ ಹಿನ್ನೆಲೆ. ಪಾದುಕಾಕಿರೀಟಿ ಭಾಗ ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಅಟ್ಲಾಂಟಿಕ್-ಫೆಸಿಪಿಕ್ ಮಹಾಸಾಗರಗಳ ತಾಡಿತದಿಂದ ಉದ್ಭವಗೊಂಡ ಹೊಸ ಭೂಶಿರವೊಂದರ ಮಹೋಪಮೆಯ ಮೂಲಕ ಶ್ರೀರಾಮ-ಭರತರ ಸಮಾಗಮವನ್ನೂ, ದಶರಥನ ಮರಣವಾರ್ತೆಯಿಂದ ಜರ್ಜಿತರಾದ ಅವರ ಮನಸ್ಥಿತಿಯನ್ನು ಕವಿ ಚಿತ್ರಿಸಿದ್ದಾರೆ. ನಂತರ ನಿತ್ಯ ತಾನು ಉಣುತ್ತಿದ್ದ ವಸ್ತುಗಳಿಂದಲೇ ತಂದೆಗೆ ತರ್ಪಣವನ್ನು ಕೊಡುತ್ತಾನೆ. ಆಮೇಲೆ ತನ್ನ ತಾಯಿ ಕೌಸಲ್ಯೆ, ಸುಮಿತ್ರೆಯರ ಜೊತೆಮಾತನಾಡುತ್ತಾನೆ. ಹಾಗೆ ಮಾತನಾಡುತ್ತಲೇ ಆತನ ಕಣ್ಣುಗಳು ಕೈಕೆಯನ್ನು ಹುಡುಕುತ್ತವೆ. ದೂರದಲ್ಲಿ ಪಶ್ಚಾತ್ತಾಪ ಶೋಕ ಭಾರಾಕ್ರಾಂತ ಗಾತ್ರೆಯಾಗಿ ತಲೆತಗ್ಗಿಸಿ ನಿಂತಿದ್ದ ಆಕೆಯ ಬಳಿ ಧಾವಿಸಿ ಪಾಪಿಯನ್ನು ಬೆಂಬಿಡದೆ ಹಿಂಬಾಲಿಸಿ ಹಿಡಿಯುವ ಕೃಪಾಕೇತುವಿನಂತೆ ಅವಳ ಕಾಲಿಗೆ ನಮಸ್ಕರಿಸುತ್ತಾನೆ. ಅಷ್ಟರಲ್ಲಿ ಕೈಕೆಯೂ ರಾಮನ ಪಾದಗಳ ಮೇಲೆ ಕುಸಿದು ಬೀಳುತ್ತಾಳೆ. ಭಗವಂತನ ಪ್ರೀತಿ ಭಕ್ತನ ಆತ್ಮವನ್ನು ಎತ್ತುವಂತೆ ರಾಮ ಆಕೆಯನ್ನು ಎತ್ತುತ್ತಾನೆ. ಮಾತಿಲ್ಲದವಳಾಗಿದ್ದ ಕೈಕೆಯನ್ನು ರಾಮ ಸಂತೈಸುವ ಚಿತ್ರಣ ಬರುತ್ತದೆ. ಈ ಭಾಗವನ್ನು ಕೇಳುತ್ತಿದ್ದ ನಾನು ನನಗರಿವಿಲ್ಲದೆ ಕಣ್ಣೀರು ಸುರಿಸಿದ್ದೆ. ಬಹುಶಃ ಆ ಗಾಯನ ನಡೆಯುವಾಗ, ಗೋಕಲೆ ಸಾರ್ವಜನಿಕ ಕೇಂದ್ರದ ಸಭಾಂಗಣದಲ್ಲಿದ್ದವರೂ ಅತ್ತಿರಬಹುದು. ಏಕೆಂದರೆ ನಂತರ ವ್ಯಾಖ್ಯಾನ ಮಾಡಿದ ಆರ್. ಗಣೇಶ್ ಅವರು ಕಾವ್ಯದ ಓದಿನಿಂದ ಉದ್ಭವಿಸುವ ಕಣ್ಣೀರಿನ ಬಗ್ಗೆಯೇ ಹೆಚ್ಚಿಗೆ ಮಾತನಾಡಿದರು. ಸತ್ಕಾವ್ಯದ ಕೆಲಸವೇ ಇದು; ಸಹೃದಯನನ್ನು ಭಾವಾವಿಷ್ಟಗೊಳಿಸುವುದು. ಅದು ಒಳ್ಳೆಯ ಸಂಗೀತದೊಂದಿಗೆ ಸೇರಿದಾಗ ಇನ್ನೂ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ.