Wednesday, July 11, 2012

ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ!

ದಿನಾಂಕ : ೧೮.೧೧.೧೯೫೬, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು.
ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು
ಕಾಲದೇಶ ಲಗ್ಗೆಗೆ ಕ್ಷಣಕ್ಷಣಕ್ಷಣಕ್ಕೆ ಮೈಲಿ ಮೈಲಿ ಮೈಲಿ
ಹಾರುತ್ತಿತ್ತು ಕವಿಯ ಕಾರು:
ತೇಲುತಿತ್ತು ಚಿಮ್ಮುತಿತ್ತು ಈಜುತಿತ್ತು ಮಿಂಚುತಿತ್ತು
ಸಿಮೆಂಟು, ಟಾರು!
ಉಬ್ಬು ತಗ್ಗು ನೇರ ಡೊಂಕು
ಕರಿಯ ರಸ್ತೆ ಹಾವು ಹರಿಯುತಿತ್ತು
ಸರ್ಪಿಸಿ!
ದೂರದ ಪಯಣ. ವೇಗವಾಗಿ ಚಲಿಸುತ್ತಿರುವ ಕಾರು. ಅದರೊಳಗೆ ಕುಳಿತ ಕವಿಗೆ ಉಂಟಾಗಿದ್ದ ದೀರ್ಘ ಪಯಣದ ಏಕತಾನತೆಯ ಬೇಸರ ’ಕರಿಯ ರಸ್ತೆ ಹಾವು ಹರಿಯುತಿತ್ತು ಸರ್ಪಿಸಿ’ ಎಂಬ ಸಾಲಿನಲ್ಲಿ ವ್ಯಕ್ತವಾಗಿದೆ. ಆಗ ಆ ಕಾರಿನಲ್ಲಿ ಇನ್ನೂ ಯಾರ‍್ಯಾರು ಇದ್ದರು? ಕಾರು ಯಾವುದು? ಡ್ರೈವರ್ ಯಾರು?
ಕವಿ: ವೈಸ್ ಛಾನ್ಸಲರ್!
ಕಾರ್ : ಸ್ಟುಡಿಬೇಕರ್!
ಸದ್ಯದ ಡ್ರೈವರ್ : ಪೂರ್ಣಚಂದ್ರ ತೇಜಸ್ವಿ!
ಅವನ ಪಕ್ಕ ನಿಜ ಡ್ರೈವರ್!
ಇವರುಗಳ ಜೊತೆಯಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ಪಯಣಿಸುತ್ತಿದ್ದ ಕವಿಗೆ, ಕಾರಿನ ವೇಗ ’ಜವದ ಹುಚ್ಚೆ ಹಿಡಿಯಿತೇನೊ ಪೆಟ್ರೋಲಿಗೆ’ ಅನ್ನಿಸಿಬಿಟ್ಟಿದೆ. ಅವುಗಳ ನಡುವೆಯೂ ಕಾರ‍್ತಿಕ ಮಾಸಜ ನೆಲ, ಮುಗಿಲು, ನೀಲ ಬಾನು, ಎಪ್ಪತ್ತೈದು ಮೈಲಿಯ ವೇಗದಲ್ಲಿರುವ ಕಾರು ಎಲ್ಲವನ್ನೂ ಕವಿ ಗಮನಿಸುತ್ತಿದ್ದಾರೆ. ಕಾರಿನ ಸ್ಪೀಡಾಮೀಟರ್ ಕಡೆ ಕಣ್ಣು ಹಾಯಿಸುತ್ತಾರೆ. ಕಾರಿನ ಹೆಚ್ಚಿದ ವೇಗವನ್ನು ’ಗೂಳಿಗಣ್ಣ ಸ್ಪೀಡಾಮೀಟರ್ ಕೂಗಿ ಹೇಳುತ್ತಿತ್ತು.’
"ಬೇಡ ಕಣೋ ಇಷ್ಟು ಸ್ಪೀಡು!
ಬಿಡಿ, ಅಣ್ಣಾ, ಸುಮ್ಮನಿರಿ,
ನನಗೆ ಗೊತ್ತಿದೆ!"
ಎಂದಿನಂತೆ ತೇಜಸ್ವಿಯ ಉಡಾಫಿ ಉತ್ತರ!
ಚಾಲಕನಾಗಿ ಕುಳಿತಿದ್ದ ತೇಜಸ್ವಿಗೆ ಆಗಿನ್ನೂ ಹದಿನೆಂಟು ವರ್ಷ ತುಂಬಿದೆ ಅಷ್ಟೆ. ಬಹುಶಃ ಡೈವಿಂಗ್ ಲೈಸೆನ್ಸ್ ಬಂದು ಕೆಲವು ದಿನಗಳಷ್ಟೇ ಕಳೆದಿದ್ದರಬಹುದು. ಆದರೂ ಕಾರು ಚಾಲನೆಯಲ್ಲಿ ತೇಜಸ್ವಿ ಫಳಗಿಬಿಟ್ಟಿದ್ದಾರೆ. ನಿಜವಾದ ಡ್ರೈವರ್ ಇದ್ದರೂ, ಆತನನ್ನು ಪಕ್ಕದಲ್ಲಿ ಕುಳ್ಳಿರಿಸಿ, ಕಾರು ಚಾಲನೆಗಿಳಿದಿರುವ ತೇಜಸ್ವಿಯ ಮೇಲಿನ ನಂಬಿಕೆಯಿಂದ ಕವಿ ಕುಳಿತಿದ್ದಾರೆ. ಮಗನ ಉಡಾಫಿ ಉತ್ತರ ಬಹುಶಃ ಅವರಿಗೆ ದಿಗಿಲಿಕ್ಕಿಸಿರಬಹುದು. ಅದಕ್ಕೆ ’ಸರಿ, ಕಣ್ಣು ಮುಚ್ಚಿ ಕುಳಿತೆ:’ ಎನ್ನುತ್ತಾರೆ. ದೇವರ ಮೇಲೆ ಭಾರ ಹಾಕಿದ್ದಿರಬಹುದು! ಹಾಗೆ ಕಣ್ಣು ಮುಚ್ಚಿ ಕುಳಿತ ಕವಿ ಕಂಡಿದ್ದು ಮಾತ್ರ ಜಗದ್ಬವ್ಯ ದೃಶ್ಯವನ್ನು.
ದಕ್ಷಿಣೇಶ್ವರ! ಭವತಾರಿಣಿ!
ಜಗದಂಬೆಗೆ ಚವರಿ ಬೀಸುತಿಹರು ಪರಮಹಂಸರು!
ಕೈಯ ಮುಗಿದು ನಿಂತು ನೋಡಿ ಧನ್ಯನಾಗುತ್ತಿದ್ದೆ.
ಅಷ್ಟರಲ್ಲಿ ಕಾರಿನ ಚಕ್ರದಲ್ಲಿ ಏನೋ ಕಿರ್ರ್ ಎಂಬ ಶಬ್ದ! ’ಗಾಲಿ ವಾಲಿ ಸದ್ದು ಮಾಡತೊಡಗಿದೆ!’ ಆ ಶಬ್ದದ ನಡುವೆ ಮುಂದಿನ ಸೀಟಾಸೀನರಾಗಿದ್ದ ತೇಜಸ್ವಿ ಮತ್ತು ಡ್ರೈವರ್ ನಡುವೆ ನಡೆಯುವ ಸಂಭಾಷಣೆ ಕವಿಯ ಕಿವಿಯನ್ನಪ್ಪಳಿಸುತ್ತದೆ.
"ಸ್ಟೀರಿಂಗೇಕೊ ಸರಿ ಇಲ್ಲ; ಸ್ವಲ್ಪ ಎಣ್ಣೆ ಬಿಡಬೇಕಿತ್ತೊ?"
"ನಿನ್ನೆ ಅಲ್ಲ ಮೊನ್ನೆ ತಾನೆ ಲೂಬ್ರಿಕೇಷನ್ ಆಗಿದೆ"
ಎಂದ ಡ್ರೈವರ್, ಡ್ರೈವ್ ಮಾಡುತ್ತಿದ್ದ ತೇಜಸ್ವಿಗೆ.
"ಚಕ್ರವೇಕೊ ಎಡದ ಕಡೆಗೆ ವಾಲುತ್ತಿದೆ!"
ಗಾಡಿ ನಿಲ್ಲುತ್ತದೆ. ಎಲ್ಲರೂ ಕೆಳಗಿಳಿಯುತ್ತಾರೆ. ಪರೀಕ್ಷೆ ನಡೆಯುತ್ತದೆ. ಮೆಷಿನರಿಗಳ ಮರಿ ಡಾಕ್ಟರ್ ತೇಜಸ್ವಿ ಸುಮ್ಮನಿರುತ್ತಾರೆಯೇ!?
ಜಾಕ್ ಹೊರಗೆ ಬಂದಿತು
ಗಾಡಿ ಮೇಲಕೆದ್ದಿತು.
ಚಕ್ರ ಬಿಚ್ಚಿದರು.
ಸ್ಪ್ಯಾನರ್-ಸ್ಕ್ರೂ ಡ್ರೈವರ್-ವ್ಹೀಲ್ ಸ್ಪ್ಯಾನರ್- ಟಕ್ ಟಕ್ ಟಕ್....
ಅರ್ಧ ಗಂಟೆ ರಿಪೇರಿ ನಂತರ ಮತ್ತೆ ಎಲ್ಲರೂ ಕಾರು ಏರಿ ಹೊರಡುತ್ತಾರೆ. ಸ್ವಲ್ಪ ದೂರ ಅಷ್ಟೆ. ಮತ್ತೆ ಚಕ್ರದಿಂದ ಕಿರೋ ಕಿರೋ ಶಬ್ದ ಬರುತ್ತದೆ. "ಫಿಷ್ ಪ್ಲೇಟ್...... ಟೈರ್ ರಾಡ್ ಎಂಡ್....." ಇನ್ನೂ ಏನೇನೊ ಶಬ್ದಗಳು ಕವಿಯ ಕಿವಿಗೆ ಬೀಳುತ್ತವೆ. ಆದರೆ, ಏನೆಂದು ಕವಿಗೆ ಅರ್ಥವಾಗುವುದಿಲ್ಲ. ಈ ಬಾರಿ ತೇಜಸ್ವಿ ಡ್ರೈವರ್ ಇಬ್ಬರೇ ಇಳಿಯುತ್ತಾರೆ. ಸ್ವಲ್ಪ ಒತ್ತಿನ ನಂತರ ಕವಿಯೂ ಬೇಸರದಿಂದಲೇ ಇಳಿಯುತ್ತಾರೆ; ಒಳಗೆ ಕೂರುವ ಬೇಸರದಿಂದ ತಪ್ಪಿಸಿಕೊಳ್ಳಲು. ಅವರಿಬ್ಬರ ಸಂಭಾಷಣೆ, ಅದರೊಂದಿಗೆ ರಿಪೇರಿ ಕಾರ್ಯಭಾರ ಮುಂದುವರೆಯುತ್ತದೆ.
"ಚಕ್ರ ವಾಲಿ ಹೀಗೆ ಗಾಡಿ ನಡೆದರೆ
ಬಹಳ ಕೆಟ್ಟದು" ಎಂದ ತೇಜಸ್ವಿ.
"ಹೌದು ಅಣ್ಣ" ಎಂದು ಡ್ರೈವರ್ ಪಲ್ಲವಿ!
ಮತ್ತೆ ಜಾಕು ಕೊಟ್ಟು ಕಾರು ಎದ್ದಿತು.
ಡ್ರೈವರ್ ಕಾರಿನ ಹೊಟ್ಟೆ ಅಡಿ ಅಡಗಿದ.
ದಾರವಿಟ್ಟು ಅಳೆದರು: ಏಕೊ ಏನೊ?
ಅದರ ಬದಲು ಕುಂಕುಮ ಹಚ್ಚಿದ್ದರೂ
ಆಗುತಿತ್ತೇನೊ!
ಈ ಎಲ್ಲಾ ರಿಪೇರಿ ಕರ್ಮವನ್ನು ಹುಡುಗರ ಬೇಜವಬ್ದಾರಿಯನ್ನು ಕಂಡು ಕವಿಗೆ ರೇಗುತ್ತದೆ.
"ಮೊನ್ನೆ ತಾನೆ ಲ್ಯೂಬ್ರಿಕೇಷನ್ ಮಾಡಿಸಿದೆ.
ಇಂದು ಕಾರು ದಾರಿಯಲ್ಲಿ ತೊಂದರೆ ಕೊಡುತ್ತಿದೆ.
ನಿನಗೆ ತಲೆ ನೆಟ್ಟಗಿದ್ದರೆ ಹೀಗಾಗುತಿತ್ತೆ?
ನೀನೊಬ್ಬ ಡ್ರೈವರ್... ಕೆಲಸಕ್ಕೆ ಬಾರದವ...
ಬೆಪ್ಪು ಮುಂಡೇದು!...
ಹೀಗೆ ಸಹಸ್ರನಾಮ!....
ಇನ್ನೆಂದಿಗೂ ಈ ಡ್ರೈವರು ಈ ಕಾರು ನಂಬಿ
ದೂರ ಪಯಣಕ್ಕೆ ಹೊರಡುವುದಿಲ್ಲ.
ಇದೇ ಕೊಟ್ಟಕೊನೆ! ಇದೇ ಕೊಟ್ಟ ಕೊನೆ!"
ರೇಗಿದ ಕವಿಯಿಂದ ಡ್ರೈವರನಿಗೆ ಕಾರಿಗೆ ಸಹಸ್ರಾರ್ಚನೆ! ಜೊತೆಗೆ ಭೀಷ್ಮ ಪ್ರತಿಜ್ಞೆ ಬೇರೆ. ರಿಪೇರಿಯಲ್ಲೇ ಎರಡು ಗಂಟೆ ಕಳೆದ ಬೇಸರ. ಆದರೂ ಒಂದು ಸಲಹೆ ಕವಿಯಿಂದ ಬರುತ್ತದೆ.
"ಹೇಗಾದರು ಅರಸಿಕೆರೆಯವರೆಗೆ ಹೋಗಿ
ವರ್ಕ್‌ಷಾಪಿನಲ್ಲಿ ತೋರಿಸಿ ಸರಿಪಡಿಸೋಣ!"
ಸಂಜೆಯಾಗಿದೆ. ಆ ಸಮಯದಲ್ಲಿ ಪ್ರತಿನಿತ್ಯ ಮೈಸೂರಿನ ಉದಯರವಿಯಲ್ಲಿ ದೀಪ ಹೊತ್ತಿಸುತ್ತಿದ್ದುದು ಕವಿಯ ನೆನಪಿಗೆ ಬರುತ್ತದೆ.
ಅದೇ ಹೊತ್ತಿನಲ್ಲಿ
ದೂರ ಮೈಸೂರಿನಲ್ಲಿ, ಮನೆ ’ಉದಯರವಿ’ಯಲ್ಲಿ,
ಮಗಳು ತಾರಿಣಿ ಗುಡಿಸಿ, ದೇವರ ಮನೆಯ ತೊಳೆದು,
ಹೂ ಮುಡಿಸಿ, ಸೊಡರ ಹೊತ್ತಿಸಿ, ಊದುಕಡ್ಡಿಯಿಟ್ಟು
ಒಂದು ವಾರದ ವರೆಗೆ ದೂರ ಪಯಣಕೆ ಹೋದ
ತಂದೆಯನು ನೆನೆದು
"ಸುಗಮವಾಗಲಿ ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ನ ತಿರುಗಿ ಬರಲಿ!"
ಎಂದು ಮಗಳು ಅತ್ತ ಪ್ರಾರ್ಥನೆ ಮಾಡುತ್ತಿದ್ದರೆ, ಇತ್ತ ಡ್ರೈವರನ ಅನುಭವದ ತಲೆಗೆ ಏನೋ ಹೊಳೆದಂತಾಯ್ತು! "ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಬೇಕಿತ್ತಣ್ಣಾ..." ಎಂದು ರಾಗವೆಳೆಯುತ್ತಾನೆ. "ನಿನ್ನ ಬೆಪ್ಪುತಕ್ಕಡಿತನವ ಮುಚ್ಚಿಕೊಳ್ಳಲು ಏನೇನೋ ಬೊಗಳ್ತೀಯಾ!" ಎಂಬ ಕವಿಯ ಮಾತಿನ ನಡುವೆ ಮತ್ತೆ ಕಾರು ಚಕ್ರದ ಕೀರಲು ಸ್ವರ ಕೇಳಿಸುತ್ತದೆ. ಮರಿ ಯಂತ್ರಜ್ಞನಾಗಿದ್ದ ತೇಜಸ್ವಿ ಮಾತ್ರ ಆ ಸಂದರ್ಭದಲ್ಲಿ ಕವಿಗಿಂತಲೂ ಸ್ಥಿತಪ್ರಜ್ಞನಾಗಿ-
"ಇಲ್ಲ, ಅಣ್ಣಾ, ಕಾರು ಹಾಳಾಗುತ್ತದೆ
ಹೀಗೇ ನಾವು ಮುಂದುವರಿದರೆ.
ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಿದರೆ
ಸರಿಹೋಗಬಹುದೇನೋ!"
ಎನ್ನುತ್ತಾನೆ. ರಸ್ತೆ ಎಡಕ್ಕೆ ಕಾರು ನಿಲ್ಲುತ್ತದೆ. ಮತ್ತೆ ಎಲ್ಲರೂ ಕೆಳಗಿಳಿಯುತ್ತಾರೆ. ಕೆಳಗಿಳಿದ ಕವಿಗೆ ಕಂಡ ನೋಟವಿದು.
ಗಡ್ಡ ಬಿಳಲಿಳಿದ ಹಸುರಿನ ದಟ್ಟ ಹೇರಾಲಗಳ ಹಂತಿ
ಸಾಲು ಸಾಲಾಗಿ ನಿಂತು ರಸ್ತೆಯಿಕ್ಕೆಲದಲ್ಲಿ
ನಮಗೆ ಗೌರವ ರಕ್ಷೆ ನೀಡಿದ್ದುವು.
ಕಾರ‍್ತಿಕದ ಹಿತ ಬಿಸಿಲು ಹಸುರು ಹೊಲಗಳ ಮೇಲೆ
ಹುಲುಸಾಗಿ ಹಸರಿಸಿತ್ತು.
ಹಣ್ಣು ತುಂಬಿದ ಆಲ ಹಕ್ಕಿಗಳನೌತಣಕೆ ಕರೆದಿತ್ತು:
ಲಕ್ಷ ಪಕ್ಷಿಯ ಕೊರಲು ಕಿವಿಗಿಂಪ ಸುರಿದಿತ್ತು.
ದಾರಿ ಬದಿ ಕಲ್ಲಬೋರ್ಡಿನೊಳಿತ್ತು ಬರೆಹ:
"ಸಿಡ್ಲೆಹಳ್ಳಿ!"
ಕವಿ ಸಿಡ್ಲೆಹಳ್ಳಿಯನ್ನು ಸುತ್ತಲೂ ಹುಡುಕುತ್ತಾರೆ. ಹಳ್ಳಿ ಕಾಣುವುದಿಲ್ಲ. ಆದರೆ ಹತ್ತಿರದಲ್ಲೆಲ್ಲೋ ಹಳ್ಳಿಯಿದ್ದಿರಬೇಕು ಎನ್ನುವುದಕ್ಕೆ ಸಾಕ್ಷಿಯಾಗಿ ಏಳೆಂಟು ವರ್ಷದ ಹುಡುಗನೊಬ್ಬ ಕುತೂಹಲದಿಂದ ಕಾರನ್ನು ನೋಡುತ್ತಾ ನಿಲ್ಲುತ್ತಾನೆ. ಡ್ರೈವರ್-ತೇಜಸ್ವಿ ಮಾತ್ರ ಕರ್ಮಯಜ್ಞದಲ್ಲಿ ತಲ್ಲೀನರಾಗಿಬಿಟ್ಟಿರುತ್ತಾರೆ.
ಜಾಕ್-ಟೈರ್ ಲಿವರ್-ಸ್ಪಾನರ್-ಚಕ್ರಕ್ಕೆ ಕಲ್ಲಾಪು.
ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಲಿಕ್ಕೆ
ಕಾರಿನಡಿ ಹೊಟ್ಟೆ ಮೇಲಾಗಿ ಮಲಗಿದನು ಡ್ರೈವರ್.
"ಓ ಹೋ ಹೋ ಹೋ ಅಣ್ಣಾ!"
"ಏನೋ?" ಕೇಳಿದನು ತೇಜಸ್ವಿ.
"ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ಅಲ್ಲ...."
"ಮತ್ತೇನೋ?"
"ಫ್ರಂಟ್ ವ್ಹೀಲ್ ಮೆಯ್ನ್ ಸ್ಪ್ರಂಗ್ ಸ್ಕ್ರೂ ಬಿದ್ದು ಹೋಗಿದೆ!"
ಆ ಕ್ಷಣ ಕವಿಗನ್ನಿಸಿದ್ದು "ಛೆ ಛೆ ಛೆ! ಏನಪಾಯವಾಗುತಿತ್ತು!!...." ಎಂದು. ಇತ್ತ ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ, ಅತ್ತ ಉದಯರವಿಯಲ್ಲಿ ತಾರಿಣಿಯ ಪ್ರಾರ್ಥನೆ ಮುಂದುವರೆದು ಮುಗಿಯುವ ಹಂತ ತಲುಪಿತ್ತು!
’ಉದಯರವಿ’ಯ ದೇವರ ಮನೆಯಲ್ಲಿ
ಪ್ರಾರ್ಥಿಸುತ್ತಿದ್ದ ತಾರಿಣಿಯ ಕೈ ಮುಗಿಯುತಿತ್ತು.
ಆಗಳಾಗಳೆ ಮುಗಿಯುತಿತ್ತು
ಪ್ರಾರ್ಥನೆಯೂ:
"ಸುಮಗಮವಾಗಲಿ, ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ಣ ಹೋಗಿಬರಲಿ!"
ತಾರಿಣಿಯ ಪ್ರಾರ್ಥನೆ, ಕವಿಯ ಕನಸು, ಡ್ರೈವರನ ಅನುಭವ, ತೇಜಸ್ವಿಯ ಕ್ರಿಯಾಶೀಲತೆಯ ಫಲವಾಗಿ ಕಾರು ಸರಿ ಹೋಗುತ್ತದೆ. ಪಯಣ ಮುಂದುವರೆಯುತ್ತದೆ. ಪಯಣ ಮುಗಿದು, ಬಹುಶಃ ಒಂದು ವಾರದ ನಂತರ ಮೈಸೂರಿಗೆ ಹಿಂದಿರುಗಿದ ಮೇಲೆ, ೨೬.೧೧.೧೯೫೬ರಂದು ಪ್ರಯಾಣದ ಅನುಭವವನ್ನು, ಕಾರಿನಿಂದ ಉಂಟಾದ ಪರಿಪಾಟಲನ್ನು ಮನೆಯಲ್ಲಿ ಮಾತನಾಡುತ್ತಿದ್ದಾಗ, ಆ ಸಮಯದಲ್ಲಿ ಉದಯರವಿಯ ದೇವರ ಮನೆಯಲ್ಲಿ ತಾರಿಣಿ ದೀಪ ಬೆಳಗಿಸುತ್ತಿದ್ದ ವಿಚಾರ ಕವಿಗೆ ತಿಳಿದಿರಬೇಕು. ಅಂದೇ ’ಸಿಡ್ಲೆಹಳ್ಳಿ ಮತ್ತು ತಾರಿಣಿಯ ಪ್ರಾರ್ಥನೆ’ ಎಂಬ ಮೇಲಿನ ಕವಿತೆ ರಚಿತವಾಗಿದೆ.
'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯದಲ್ಲಿ, ಕಾಡಿಗೆ ಹೊರಟ ಅಣ್ಣ-ಅತ್ತಿಗೆಯರ ಜೊತೆ ಲಕ್ಷ್ಮಣನೂ ನಿಂತ ನಿಲುವಿನಲ್ಲಿ ಹೊರಡುತ್ತಾನೆ. ಇತ್ತ ಅರಮನೆಯಲ್ಲಿ ಲಕ್ಷ್ಮಣನ ಸತಿ ಊರ್ಮಿಳೆ ಒಂಟಿಯಾಗುತ್ತಾಳೆ. ಆಗ ಕವಿ ಊರ್ಮಿಳೆಯನ್ನು ಕೇಳುತ್ತಾರೆ-
-ಸೌಮಿತ್ರಿ ತಾಂ
ನಿನ್ನನುಮತಿಯನಣ್ಣನೊಡನಡವಿಗೈದಲ್ಕೆ ಪೇಳ್
ಬೇಡಿದನೆ? ಭ್ರಾತೃಭಕ್ತಿಯ ಸಂಭ್ರಮಾಧಿಕ್ಯದೊಳ್
ಪ್ರೀತಿಯಿಂ ಬೀಳ್ಕೊಳ್ವುದಂ ತಾಂ ಮರೆಯನಲ್ತೆ?
ಮರೆಯನೆಂದುಂ ಸುಮಿತ್ರಾತ್ಮಜಂ! ಪೇಳ್ದನೇನಂ,
ಪೇಳ್, ಬನಕೆ ನಡೆವಂದು?
’ಪೇಳ್ವಳೆಂತಯ್ ಮಂತ್ರಮಂ’ ಎನ್ನುವ ಕವಿ, ಸತಿಶಿರೋಮಣಿಯಾದ ಊರ್ಮಿಳೆ ತಳೆದ ದಿಟ್ಟ ನಿಲುವನ್ನು ಹೀಗೆ ಪ್ರತಿಪಾದಿಸಿದ್ದಾರೆ.
ಪ್ರಾಣೇಶ
ಲಕ್ಷ್ಮಣಂ ರಾಮ ಸೀತೆಯರೊಡನಯೋಧ್ಯೆಯಂ
ಬಿಟ್ಟಂದುತೊಟ್ಟು, ಸರಯೂನದಿಯ ತೀರದೊಳ್
ಪರ್ಣಕುಟಿಯಂ ರಚಿಸಿ, ಚಿರ ತಪಸ್ವಿನಿಯಾಗಿ
ಕಟ್ಟಿದಳ್ ಚಿತ್ತಪೋಮಂಗಳದ ರಕ್ಷೆಯಂ
ಮೈಥಿಲಿಗೆ ರಾಮಂಗೆ ಮೇಣ್ ತನ್ನಿನಿಯ ದೇವನಿಗೆ!
ಅಂದು ಊರ್ಮಿಳೆ ಕಟ್ಟಿದ ಚಿತ್ತಪೋಮಂಗಳದ ಶ್ರೀರಕ್ಷೆಯಿದ್ದುದರಿಂದಲೇ ರಾಮ ಲಕ್ಷ್ಮಣರಿಗೆ, ಸೀತೆಗೆ ಎಲ್ಲ ರೀತಿಯ ಅಗ್ನಿ ಪರೀಕ್ಷೆಯನ್ನು ಗೆದ್ದು ಬರಲು ಸಾಧ್ಯವಾಯಿತು. ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮದುವೆ ಮನೆಯಿಂದ, ಪೀಂಚಲು ಜೊತೆ ಹೊರಬಿದ್ದ ಚಿನ್ನಮ್ಮ, ಮಾರಿಯಮ್ಮನ ಗುಡಿಯಲ್ಲಿ, ತನ್ನ ಮತ್ತು ತನ್ನಿನಿಯನ ಕ್ಷೇಮ ಕಾತರಳಾಗಿ ಮಾರಿಯಮ್ಮನ ಪದತಲದಲ್ಲಿ ದೀನಳಾಗಿ ಬೇಡುತ್ತಿರುವುದನ್ನು, ಅದೇ ಸಮಯದಲ್ಲಿ, ದೂರದ ಕಲ್ಕತ್ತಾದ ವರಾಹನಗರದಲ್ಲಿದ್ದ ಹಾಳುಮನೆಯ ಮಠದಲ್ಲಿ, ತರುಣ ಸನ್ಯಾಸಿಯೊಬ್ಬನು, ತಾನು ಗುರುಕೃಪೆಯಿಂದ ಕಂಡ ದರ್ಶನದ ಫಲವಾಗಿ, ತಾನು ಕಂಡ ಆ ಹೆಣ್ಣುಮಗಳ ಸಂಕಟ ಏನಿದ್ದರೂ ಪರಿಹಾರವಾಗಿ, ಆಕೆಗೆ ತಾಯಿ ಕೃಪೆಮಾಡಲಿ! ಎಂದು ತಪೋರಕ್ಷೆಯನ್ನು ಕಟ್ಟುತ್ತಾನೆಯಲ್ಲವೆ!? ಕಾವ್ಯರಂಗದಲ್ಲಿಯಂತೊ, ಅಂತೆಯೇ ಲೋಕರಂಗದಲ್ಲಿ ಯಾರ‍್ಯಾರ ಮಂಗಳಕ್ಕಾಗಿ ಯಾರ‍್ಯಾರು, ಕಾಲ ದೇಶಗಳನ್ನು ಮೀರಿ ತಪೋಮಂಗಳದ ಶ್ರೀರಕ್ಷೆಯನ್ನು ಕಟ್ಟುತ್ತಿದ್ದಾರೋ ಬಲ್ಲವರು ಯಾರು? ಅಣ್ಣನ ಕ್ಷೇಮಕ್ಕಾಗಿ ಮಾಡಿದ ತಾರಿಣಿಯ ಪ್ರಾರ್ಥನೆಯೂ ಅಂತಹುದೊಂದು ತಪೋಶ್ರೀರಕ್ಷೆಯೇ ಆಗಿದ್ದಿರಬಹುದಲ್ಲವೆ?
ರಾಮನ ಕಿರೀಟದಾ
ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್
ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ.
ಎನ್ನುವ ವಿಶ್ವಭಾವದ ಕವಿಗೆ, ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮೊದಲಲ್ಲಿ ಹೇಳಿರುವಂತೆ-
ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆ ಮುಟ್ಟುವುದೂ ಇಲ್ಲ!
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲ ಊ ತೀರ್ಥ!

Friday, July 06, 2012

ಕಂಡ ಕವಿಗೆ, ಅಖಂಡ ದೇವಿ ಕಣಾ ಕರ್ಣಾಟಕ!

ಮದರಾಸು, ಬಾಂಬೆ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಭಾಗಗಳನ್ನು ಸೇರಿಸಿಕೊಂಡು ವಿಶಾಲ ಮೈಸೂರು ರಾಜ್ಯ ’ಅಖಂಡ ಕರ್ನಾಟಕ’ ಆಗಿದ್ದು, ೨೦ನೆಯ ಶತಮಾನದ ಕರ್ನಾಟಕದ ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಶತಮಾನದ ಹೋರಾಟದ ಫಲವಾಗಿ ೧೯೫೬ರಲ್ಲಿ ಏಕೀಕರಣಗೊಂಡರೂ, ಕರ್ನಾಟಕ ಎಂಬ ಹೆಸರಿಗಾಗಿ ೧೯೭೩ರವರೆಗೆ ಅಂದರೆ ಸುಮಾರು ೧೭ ವರ್ಷಗಳನ್ನು ಕಾಯಬೇಕಾಯಿತು.
ಮೈಸೂರು ರಾಜ್ಯ ಅಭಿವೃದ್ಧಿಯ ಪಥದಲ್ಲಿ ಮುನ್ನುಗಿತ್ತು. ಸ್ವತಃ ಮಹಾತ್ಮ ಗಾಂಧಿಯವರಿಂದ ’ರಾಜರ್ಷಿ’ ಎಂದು ಕರೆಸಿಕೊಂಡಿದ್ದ ರಾಜನ ಆಡಳಿತವಿತ್ತು. ಮೈಸೂರಿನಂತಹ ಸಂಸ್ಥಾನವಿದ್ದರೆ, ಸಾಂಸ್ಥಿಕ ಆಡಳಿತವನ್ನು ಬದಿಗೊತ್ತಿ ಭಾರತವನ್ನು ಒಗ್ಗೂಡಿಸುವ ಅಗತ್ಯವೇ ಇರಲಿಲ್ಲ ಎಂದು ವಲ್ಲಭಬಾಯಿ ಪಟೇಲರು ಉದ್ಘರಿಸಿದ್ದರು. ಅಂತಹ ಮೈಸೂರು ರಾಜ್ಯದಲ್ಲಿದ್ದುದು, ಈಗಿನ ಕರ್ನಾಟಕದ ಎಂಟೂವರೆ- ಒಂಬತ್ತು ಜಿಲ್ಲೆಗಳು ಮಾತ್ರ! ಇನ್ನೂ ಅದರ ಎರಡು ಪಟ್ಟು ಭೂಮಿಯನ್ನು ಒಟ್ಟಾಗಿ ಸೇರಿಸಿ ಅಖಂಡ ಕರ್ನಾಟಕವನ್ನು ಕಟ್ಟಬೇಕಾಗಿತ್ತು. ಸಾಂಸ್ಕೃತಿಕವಾಗಿ ಯಾವಾಗಲೂ ಒಂದಾಗಿದ್ದ ಕರ್ನಾಟಕ ಭೌಗೋಳಿಕವಾಗಿ ಮಾತ್ರ್ರ ಖಂಡತುಂಡವಾಗಿತ್ತು. ಕರ್ನಾಟಕದ ಸಹಸ್ರಾರು ಜನ ಚಿಂತಕರು, ಸಾಹಿತಿಗಳು, ಮಹನೀಯರು ಏಕೀಕರಣಕ್ಕಾಗಿ ಹೋರಾಡುತ್ತಿದ್ದರು. ಅಭಿವೃದ್ಧಿಯ ದೃಷ್ಟಿಯಿಂದ ಮುಂದಿದ್ದ ಮೈಸೂರು ಪ್ರಾಂತ್ಯದವರು ಕರ್ನಾಟಕದ ಏಕೀಕರಣವನ್ನು ವಿರೋದಿಸುತ್ತಿದ್ದರು. ಏಕೀಕರಣವಾದರೆ ಮೈಸೂರು ಪ್ರಾಂತ್ಯದಲ್ಲಿ ಪ್ರಬಲರಾಗಿದ್ದ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯದ ಬಲ ಕ್ಷಿಣಿಸುತ್ತದೆ ಎಂಬುದೇ ಅವರ ವಿರೋಧಕ್ಕಿದ್ದ ಏಕೈಕ ಕಾರಣ. ಸಾಹಿತಿ ದಿಗ್ಗಜರಾಗಿದ್ದ ಡಿ.ವಿ.ಜಿ., ರಾಜಕೀಯ ನೇತಾರರಾಗಿದ್ದ, ವೀರಣ್ಣಗೌಡ, ಶಂಕರೇಗೌಡ ಮೊದಲಾದವರು ಬೇಕಾದರೆ ಎರಡು ಕರ್ನಾಟಕಗಳಾಗಲಿ ಎನ್ನುತ್ತಿದ್ದರು. ಆರಂಭದಲ್ಲಿ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ ಮೊದಲಾದ ಮೈಸೂರು ಪ್ರಾಂತ್ಯದ ಕಾಂಗ್ರೆಸ್ ನಾಯಕರುಗಳೂ ಏಕೀಕರಣದ ವಿರೋಧಿಗಳಾಗೇ ಇದ್ದರು. ’ಏಕೀಕರಣದ ವಿಷಯದಲ್ಲಿ ಡಿ.ವಿ.ಜಿ.ಯವರು ಒಕ್ಕಲಿಗರ ಗುರುಗಳಂತಿದ್ದರು’ ಎನ್ನುತ್ತಾರೆ ಅನಂತಮೂರ್ತಿಯವರು. ’ಒಂದು ಕರ್ನಾಟಕ ಕೊಡ್ತೀವಿ ಅಂದರೆ ಒನ್ ಬೈ ಟೂ ಕೇಳ್ತಾರಲ್ಲ’ ಎಂದು ಬೀಚಿಯವರು ಏಕೀಕರಣದ ವಿರೋಧಿಗಳನ್ನು ಕುರಿತು ಹೇಳುತ್ತಿದ್ದರಂತೆ. 
ಬ್ರಾಹ್ಮಣ ಸಮುದಾಯದ ಧುರೀಣ ಹಾರನಹಳ್ಳಿ ರಾಮಸ್ವಾಮಿ ಮಾತ್ರ ಏಕೀಕರಣದ ಪರವಾಗಿದ್ದರು. ಇಡೀ ಮೈಸೂರು ಪ್ರಾಂತ್ಯದಲ್ಲಿ ಏಕೀಕರಣದ ಪರವಾಗಿದ್ದ ಇಬ್ಬರು ಒಕ್ಕಲಿಗ ಸಮುದಾಯದ ಪ್ರಮುಖರೆಂದರೆ ಒಬ್ಬರು ರಾಷ್ಟ್ರಕವಿ ಕುವೆಂಪು; ಇನ್ನೊಬ್ಬರು ರಾಜಕೀಯ ಕ್ಷೇತ್ರದ ಸಂತ ಶಾಂತವೇರಿ ಗೋಪಾಲಗೌಡ. 
ಸ್ವತಂತ್ರಪೂರ್ವದಲ್ಲಿಯೇ ಏಕೀಕರಣದ ಕನಸನ್ನು ಕಂಡಿದ್ದ ಕವಿ ಕುವೆಂಪು ಆ ನಿಟ್ಟಿನಿಲ್ಲಿ ಹಲವಾರು ಕವಿತೆಗಳನ್ನು ಬರೆದಿದ್ದಾರೆ. ಭಾಷಣಗಳನ್ನು ಮಾಡಿದ್ದಾರೆ. ೧೯೨೫ರ ರಚನೆಯಾದ ’ಕರ್ಣಾಟ ರಾಷ್ಟ್ರಗೀತೆ’ಯಲ್ಲಿಯೇ (ಈಗಿನ ನಾಡಗೀತೆ ’ಜಯ ಹೇ ಕರ್ಣಾಟಕ ಮಾತೆ’ ಗೀತೆಗೆ ಮೂಲ ಆಕರವಾಗಿರುವ ಗೀತೆ ಇದು) ಅಖಂಡ ಕರ್ನಾಟಕದ ಅಭಿಲಾಷೆ ವ್ಯಕ್ತವಾಗಿದೆ. ’ಪುಲಕೇಶೀ ಯದು ಕಂಠೀರವ ಕಂಪೇನೃಪಶೇಖರ ಭೂಮಿ’, ’ಕೃಷ್ಣ ಶರಾವತಿ ವರ ತುಂಗಾ, ಕಪಿನಿ ಕಾವೇರಿಗಳ ತರಂಗ’ ’ಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೆ’ ಮೊದಲಾದ ಸಾಲುಗಳನ್ನು ಆ ನಿಟ್ಟಿನಲ್ಲಿ ಗಮನಿಸಬಹುದಾಗಿದೆ. 
೧೬.೧೦.೧೯೪೧ರಲ್ಲಿಯೇ ’ಏಕೈಕ ಕರ್ನಾಟಕ’ ಎಂಬ ಕವಿತೆಯನ್ನು ರಚಿಸಿ, 
ಕನಸು ನನಸಾಯಿತಿದೊ ಏಕೈಕ ಕರ್ನಾಟಕ:
ಕಣ್‌ನಟ್ಟು ಬಯಸಿ ಕಾಣ್ ದಿಕ್‌ತಟಧ್ವಜಪಟ!
ಕವಿಯ ದೃಷ್ಟಿಯಲ್ಲಿ ಒಂದಾಗಿದ್ದ ಸಾಂಸ್ಕೃತಿಕ ಕರ್ನಾಟಕವನ್ನು ತೋರಿಸುತ್ತಾರೆ. ೨೩-೧೨-೧೯೪೨ರ ’ಅಳುಕದೀ ಕನ್ನಡಂ’ ಎಂಬ ಕವಿತೆಯಲ್ಲಿ 
ಪಂಪರನ್ನರ್ ಕುಮಾರವ್ಯಾಸ ಲಕ್ಷ್ಮೀಶ
ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ
ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ
ಉಳಿವುದೀ ಕನ್ನಡಂ!
ಎಂದು ಘೊಷಿಸಿದ್ದರು.
ಸ್ವತಂತ್ರ್ಯಾನಂತರ, ಮೈಸೂರು ಸಂಸ್ಥಾನ ಭಾರತ ಸರ್ಕಾರದಲ್ಲಿ ವಿಲೀನಗೊಂಡು, ಇಲ್ಲೂ ಪ್ರಜಾಸರ್ಕಾರ ಸ್ಥಾಪನೆಯಾಯಿತು. ಕೆ.ಸಿ.ರೆಡ್ಡಿಯವರು ಮುಖ್ಯಮಂತ್ರಿಯಾದರು. ಭಾರತದ ಸ್ವತಂತ್ರ್ಯಾನಂತರ ಕರ್ನಾಟಕ ಏಕೀಕರಣದ ಕೂಗು ಇನ್ನೂ ಹೆಚ್ಚಾಯಿತು. ಮೈಸೂರು ವಿಶ್ವವಿದ್ಯಾಲಯದೊಳಗೆ ಬಿ.ಎಂ.ಶ್ರೀ. - ಕುವೆಂಪು ನೇತೃತ್ವದ ಏಕೀಕರಣ ಪರವಾದ ಧ್ವನಿ ಜೋರಾಗಿಯೇ ಸದ್ದು ಮಾಡಿತು. ೧೯೪೯ರಲ್ಲಿ ಮಹಾರಾಜ ಕಾಲೇಜಿನಲ್ಲಿ ನಡೆದ ಸಭೆಯೊಂದರಲ್ಲಿ ಕುವೆಂಪು ಏಕೀಕರಣವನ್ನು ಬೆಂಬಲಿಸಿ ಭಾಷಣ ಮಾಡಿದರು. “ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟುದಲ್ಲ; ಕಾಲವಿಸ್ತೀರ್ಣವನ್ನೂ ನಾವು ಪ್ರಮುಖವಾಗಿ ಭಾವಿಸುತ್ತೇವೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರವರ್ಷಗಳಿಂದಲೂ ಗುರುತಿಸಬೇಕು. ವ್ಯಷ್ಟಿರೂಪವಾದ ವ್ಯಕ್ತಿಗೆ ಕೋಶಗಳಿರುವಂತೆ ಸಮಷ್ಟಿ ರೂಪವಾದ ದೇಶಕ್ಕೂ ಕೋಶಗಳಿವೆ ಎಂದು ಭಾವಿಸುವುದಾದರೆ ಕರ್ಣಾಟಕಕ್ಕೆ ಅನ್ನಮಯ ರೂಪವಾದ ಭೂ ಪ್ರದೇಶವಿರುವಂತೆಯೆ ಪ್ರಾಣಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ ಆಧಾತ್ಮಿಕವೂ ಆಗಿರುವ ಆ ಸಂಸ್ಕೃತಿಕೋಶವೆ ಕರ್ಣಾಟಕ ದೇವಿಯ ಸೂಕ್ಷ್ಮ ಶರೀರ. ನಶ್ವರವೂ ಚಂಚಲವೂ ಕಾಲಸನ್ನಿವೇಶವಶವೂ ಆಗಿರುವ ಭೂವಿಸ್ತೀರ್ಣ ರೂಪವಾದ ಲೀಲಾಸ್ಥೂಲ ಶರೀರವನ್ನು ಸರ್ವದಾ ಧಾರಣೆ ಮಾಡುತ್ತಿರುತ್ತದೆ ಆ ನಿತ್ಯ ಭಾವತನು. ಆ ಜ್ಯೋತಿಶ್ಶರೀರಿಯೆ ದೇವಿ. ಆ ದೇವಿಯ ಉಪಾಸನೆಯೆ ಕವಿ ಕಲಾವಿದ ತತ್ವಜ್ಞ ಸಾಧಕರಾದಿಯಾಗಿ ಸಕಲರ ಗಂತವ್ಯ ಮತ್ತು ಗಮ್ಯ. ಕರ್ಣಾಟಕದ ಕಾವ್ಯ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಲಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ?.ಕನ್ನಡ ಕಾವ್ಯಗಳನ್ನೋದುವಾತನು ಅಮೆರಿಕೆಯಲ್ಲಿದ್ದರೂ ಅದು ‘ಕರ್ಣಾಟಕವೆ’ ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ‘ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ನಾಟಕದ ನೆಲದ ಎಲ್ಲೆ ಇಂದು ಭೌಗೋಲಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ನಾವು ಪರಿತಪಿಸುವುದು ಅನಾವಶ್ಯಕ. ಕಾವೇರಿ ಮತ್ತು ಗೋದಾವರಿಗಳು ನಿತ್ಯವೂ ನಿರ್ದಿಗಂತವಾಗಿ ವಿಸ್ತರಿಸುತ್ತಿರುವ ಕರ್ಣಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಭೂಮಿಕೆಯ ಗಡಿಗಳಿಗೆ ಸಂಕೇತ ಮಾತ್ರಗಳಾಗಿರಲಿ. ಅವು ಭಾವೋಪಯೋಗಿಗಳೆ ಹೊರತು ಲೋಕೋಪಯೋಗಿಗಳಾಗುವುದಿಲ್ಲ. ಏಕೆಂದರೆ ಮೈಸೂರಿನ ಎಲ್ಲೆ ರಾಜಕೀಯದಿಂದ ಭೌಗೋಲಿಕವಾಗಿ ನಿರ್ಣಯವಾಗಿದ್ದರೂ ಕರ್ಣಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್ಣಯವಾಗುತ್ತಿರುತ್ತದೆ. ಕನ್ನಡಿಗರ ಸಂಸ್ಕೃತಿಗೆ ಪ್ರತಿಮಾರೂಪವಾಗಿರುವ ಕರ್ಣಾಟಕದ ವಿಸ್ತಾರ ನಿರ್ದಿಗಂತವಾದದ್ದು: ಅದರ ಔನ್ನತ್ಯ ನಿಶ್ಶಿಖರವಾದದ್ದು. ಅಂತಹ ಸಾಂಸ್ಕೃತಿಕ ಕರ್ಣಾಟಕದ ಸ್ಥಾಪನೆ ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿಯೆ ಸಹೃದಯ ಸಮಷ್ಟಿರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಾಗಿದೆ. ಏಕೆಂದರೆ ಭೌಗೋಲಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೆ ವಿಫಲವಾಗುತ್ತದೆ.” ಎಂಬ ಆಶಯದ ಕುವೆಂಪು ಅವರ ನುಡಿಗಳು ಏಕೀಕರಣ ವಿರೋಧಿ ಬಣದವರನ್ನು ಕಂಗೆಡೆಸಿದ್ದವು. ಮೈಸೂರು ಪ್ರಾಂತ್ಯದ ನಾಯಕರ ಮೇಲೆ ಹೆಚ್ಚಿನ ಒತ್ತಡವಿತ್ತು. ಕೆ.ಸಿ.ರೆಡ್ಡಿಯವರ ನೇತೃತ್ವದ ಮೈಸೂರು ಸರ್ಕಾರ ಕುವೆಂಪು ಅವರ ಧ್ವನಿಯನ್ನು ಅಡಗಿಸುವ ದುಸ್ಸಾಹಸಕ್ಕೆ ಕೈ ಹಾಕಿತು. ಕುವೆಂಪು ಅವರಿಗೆ ಎಚ್ಚರಿಕೆಯ ನೋಟೀಸೊಂದನ್ನು ನೀಡಿ ’ಕರ್ನಾಟಕ ಏಕೀಕರಣದ ಪರವಾಗಿ ಯಾವುದೇ ಹೇಳಿಕೆ ನೀಡಬಾರದು’ ಎಂದು ಎಚ್ಚರಿಸಿತು. ಇದು ಕುವೆಂಪು ಅವರನ್ನು ಕೆರಳಿಸಿತು. ನೋಟೀಸಿಗೆ ಉತ್ತರ ಕೊಟ್ಟರೊ ಬಿಟ್ಟರೊ. (ಬಹುಶಃ ಕೊಟ್ಟಿರಲಿಲ್ಲ. ಮುಂದೆ ಕೆಂಗಲ್ ಹನುಮಂತಯ್ಯನವರ ಸರ್ಕಾರ ಅದನ್ನು ಹಿಂಪಡೆಯುತ್ತದೆ.) ಆದರೆ ಕರ್ನಾಟಕ ಏಕೀಕರಣವನ್ನು ವಿರೋಧಿಸುತ್ತಿದ್ದ ರಾಜಕೀಯ ಮುತ್ಸದ್ದಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ’ಅಖಂಡ ಕರ್ಣಾಟಕ!’ ಎಂಬ ಪದ್ಯವನ್ನು ೨.೫.೧೯೪೯ರಂದು ಬರೆದು ಪ್ರತಿಕ್ರಿಯಿಸಿದರು. 
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ!
ಹರುಸಿತಿಹನು ದೇವ ಗಾಂಧಿ;
ಮಂತ್ರಿಸಿಹುದು ಋಷಿಯ ನಾಂದಿ;
ತನಗೆ ತಾನೆ ಋತಸ್ಯಂದಿ
ಅವಂದ್ಯೆ ಕವಿಯ ಕಲ್ಪನೆ!
ಒರ್ವನಾದೊಡೋರ್ವನಲ್ತು:
ಶಕ್ತಿ ಸರ್ವನಲ್ಪನೆ?
ಹಿಂದದೊಂದು ಹಿರಿಯ ಕನಸು:
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು!
ತಡೆವುದೇನೊ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ?
ಭುವನ ವಂದ್ಯೆ, ಕೇಳ್, ಅವಂಧ್ಯೆ
ಕವಿಯ ವಿಂಧ್ಯಕಲ್ಪನೆ!
ಎಂದು, ಹಿಂದೆ ಹಿರಿಯ ಕನಸಾಗಿದ್ದ ಏಕೀಕರಣ ಇಂದು ಕೋಟಿ ಕೋಟಿ ಜನರ ಕನಸಾಗಿದೆ. ಅದಕ್ಕೆ ಹಿನ್ನೆಲೆಯಾಗಿ ಗಾಂಧಿಯ ಮಾರ್ಗವಿದೆ. ಆದರೂ ಅದೊಂದು ರಾಜಕೀಯ ನಾಟಕವಾಗಿದೆ. ಮುಂದುವರೆದು, 
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಗನ್ನಡ ಸರಸ್ವತಿಯ
ವಜ್ರಕರ್ಣಕುಂಡಲ!
ಬೂಟಾಟದ ರಾಜಕೀಯ ನಾಟಕ ತೊಲಗಿ ಹೊಸತೊಂದು ಸಚಿವ ಮಂಡಲವನ್ನು ಕವಿ ರಚಿಸುತ್ತಾರೆ. ನಾಡಿನ ಸಾಂಸ್ಕೃತಿಕ ಹಿನ್ನೋಟ-ಮುನ್ನೋಟಗಳಿಲ್ಲದ, ಇಂದು ಬಂದು ನಾಳೆ ಹೋಗುವ ಮಂತ್ರಿಗಳ ಗುಂಪೊಂದು ಏಕೀಕರಣವನ್ನು ವಿರೋಧಿಸಿರುವುದು ಕವಿಯನ್ನು ಕುಪಿತಗೊಳಿಸಿದೆ. ಅದಕ್ಕೆ ಅವರೇ ಸಾಂಸ್ಕೃತಿಕ ಕರ್ನಾಟಕದ ನಿತ್ಯ ಸಚಿವಮಂಡಲವೊಂದನ್ನು ರಚಿಸುತ್ತಾರೆ:
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ,
ತನಗೆ ರುಚಿರ ಕುಂಡಲ!
ಸಾವಿರಾರು ವರ್ಷದಿಂದ ಸಾಂಸ್ಕೃತಿಕವಾಗಿ ಕರ್ನಾಟಕವನ್ನಾಳಿದ ಮಹೋನ್ನತ ವ್ಯಕ್ತಿತ್ವಗಳನ್ನು ಸೇರಿಸಿ ಕಟ್ಟಿದ ಸಚಿವ ಮಂಡಲದ ಗೊತ್ತು ಗುರಿಗಳನ್ನು ಸ್ಪಷ್ಟಪಡಿಸುತ್ತಾರೆ. ತನ್ಮೂಲಕ ಈಗಿನ ಸಚಿವ ಮಂಡಲದ ಹುಳುಕು-ಕೊಳಕುಗಳನ್ನು ಬಿಚ್ಚಿಡುತ್ತಾರೆ
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ
ಬರಿಯ ಹೊಟ್ಟೆ ಬಟ್ಟೆಗಲ್ತೊ;
ಪಕ್ಷ ಜಾತಿ ಕಲಹಕಲ್ತೊ;
ಹಮ್ಮು ಬಿಮ್ಮು ಸೊಮ್ಮಿಗಲ್ತೊ;
ಬಣ್ಣ ಚಿಟ್ಟೆ ಬಾಳಿಗಲ್ತೊ;
ಜೋಳವಾಳಿ ಕೂಳಿಗಲ್ತೊ;
ದರ್ಪ ಸರ್ಪ ಕರ್ಕೋಟಕ
ಸ್ವಾರ್ಥ ಫಣಾ ಕ್ರೀಡೆಗಲ್ತೊ;
ರಾಜಕೀಯ ಪೇಟಕ,
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ:ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ!
ಮೆರೆಯಲಾತ್ಮ ಸಂಸ್ಕೃತಿ;
ಬೆಳಗೆ ಜೀವ ದೀಧ್ಮಿತಿ;
ಪರಮಾತ್ಮನ ಚರಣದೀಪ್ತಿ
ಶರಣ ಹೃದಯಗಳಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
ಉರಿಯಲೆಂದು ತಣ್ಣಗೆ;
ಬಾಳ ಸೊಡರ್ಗುಡಿಯ ನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಸ್ಫೂರ್ತಿ
ಭಗವಂತನ ಕಣ್ಣಿಗೆ;
ಹಾಡುತಿಹೆನು ಕಂಡ ನಾನು;
ದಿಟ್ಟಗೇಡೊ? ಹುಟ್ಟು ಕುರುಡೊ?
ಬುದ್ಧಿ ಬರಡೊ? ಬೇರೆ ಹುರುಡೊ?
ಮೆಳ್ಳಗಣ್ಣ, ಕಾಣೆ ನೀನು!
ಹೇಳು! ತಪ್ಪು ನನ್ನದೇನು?
ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಪ ಕಣ್ಣಿಗೆ!
ವಿರೋಧಿಗಾಸ್ಪೋಟಕ,
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!
ಸರಸ್ವತಿಯೆ ರಚಿಸೊಂದರಾಜಕೀಯ ತ್ರೋಟಕ!
ವಿರೋಧಿಗಾಸ್ಫೋಟಕ,
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನರ್ತಿಪೊಂದು ರಾಜಕೀಯ ನಾಟಕ!
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ!
ಜಯ್ ಜಯ್ ಜಯ್ ಅಖಂಡ ಕರ್ಣಾಟಕ!
ಕಣ್ಣಿದ್ದೂ ಕಾಣದ, ಬೇಕೆಂದೇ ವಕ್ರವಾಗಿ ಕಾಣುವ ರಾಜಕಾರಣಿಗಳನ್ನು ಮೆಳ್ಳಗಣ್ಣ ಎಂದು ಕರೆದಿದ್ದಾರೆ. ಕರ್ಣಾಟಕ ಎಂಬುದು ಕೇವಲ ಭೌಗೋಳಿಕ ವಿಸ್ತಾರವನ್ನು ಸೂಚಿಸುವ ಮಣ್ಣಲ್ಲ ಎಂಬುದಕ್ಕೆ ಒತ್ತು ಕೊಟ್ಟು ’ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ!’ ಎಂದು ಎಚ್ಚರಿಸುತ್ತಾರೆ. ಕನ್ನಡ, ಕರ್ನಾಟಕ ಎಂಬುದು ಕೇವಲ ಭಾಷೆ, ನಾಡು ಎಂಬ ಸೀಮಿತಾರ್ಥವನ್ನು ಮೀರಿದ, ಭಾವನಾತ್ಮಕವಾದ ಮತ್ತು ಸಾಂಸ್ಕೃತಿಕವಾದ ಪರಿಭಾಷೆ ಎಂಬುದನ್ನು ಮನಗಾಣಿಸುತ್ತಾರೆ. ಈ ಕವಿತೆ ಸಭೆ ಸಮಾರಂಭಗಳಲ್ಲಿ ಓದಲ್ಪಟ್ಟು ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಾಗುತ್ತದೆ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರಾಜಕಾರಣಿಗಳು ಮಾತ್ರ ಸುಮ್ಮನಿರಲಿಲ್ಲ. ಅವರದೇ ಕ್ರಮದಲ್ಲಿ ಕಾರ್ಯೋನ್ಮುಖರಾಗುತ್ತಾರೆ. ೧೯೪೯ರಲ್ಲಿ ’ಮೈಸೂರಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ಏಕೀಕರಣಕ್ಕೆ ಇದು ಸಕಾಲವಲ್ಲ’ ಎಂಬ ನಿರ್ಣಯ ಅಂಗೀಕರಿಸುತ್ತಾರೆ. ಅವರು ರಾಜಕೀಯವಾಗಿ ನೀಡಿದ ಪ್ರತಿಕ್ರಿಯೆಗೆ ಕುವೆಂಪು ಸಾಂಸ್ಕೃತಿಕವಾಗಿ ೧.೧೧.೧೯೪೯ರಂದು ’ಕರ್ಣಾಟಕ ಮಂತ್ರದೀಕ್ಷೆ’ ಎಂಬ ಕವಿತೆಯ ಮೂಲಕ ಪ್ರತಿಕ್ರಿಯಿಸುತ್ತಾರೆ. 
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೇ!
ನೃಪತುಂಗನ ದೊರೆಮುಡಿ ಸಾಕ್ಷಿ!ಪಂಪನ ಪದ ಧೂಳಿಯ ಸಾಕ್ಷಿ!
ಕೂಡಲ ಸಂಗನ ಅಡಿ ಸಾಕ್ಷಿ!
ಗದುಗಿನ ಕವಿದೇವನ ಸಾಕ್ಷಿ!
ದೀಕ್ಷೆಯ ತೊಡು ಇಂದೇ . . . .
ಇಡು ಸಹ್ಯಾದ್ರಿಯ ಮೇಲಾಣೆ!ಇಡು ಕಾವೇರಿಯ ಮೇಲಾಣೆ!
ಇಡು ಚಾಮುಂಡಿಯ ಮೇಲಾಣೆ!
ಇಡು ಗೊಮ್ಮಟ ಗುರುದೇವಾಣೆ!
ದೀಕ್ಷೆಯ ತೊಡು ಇಂದೆ . . . .
ಕಾಣಲಿ ಕನ್ನಡ ವ್ಯೋಮಾಕ್ಷಿ!ನಿಲ್ಲಲಿ ರವಿ ಚಂದ್ರರ ಸಾಕ್ಷಿ!
ಕೇಳಲಿ ಕನ್ನಡ ಪಶು ಪಕ್ಷಿ!
ಸರ್ವ ದೇವರೂ ಶ್ರೀ ಸಾಕ್ಷಿ!
ದೀಕ್ಷೆಯ ತೊಡು ಇಂದೆ . . . .
ಇಡು ನಿನ್ನಯ ಸತಿಯಾಣೆ!ಇಡು ನಿನ್ನಯ ಪತಿಯಾಣೆ!
ಮಕ್ಕಳ ಮೇಲಾಣೆ!
ಅಕ್ಕರೆ ಮೇಲಾಣೆ!
ಗುರುದೇವರ ಆಣೆ!
ನನ್ನಾಣೆ!
ನಿನ್ನಾಣೆ!
ಕನ್ನಡ ಜನರೆಲ್ಲರ ಮೇಲಾಣೆ!
ಕನ್ನಡ ನಾಡೊಂದಾಗದೆ ಮಾಣೆ!
ತೊಡು ದೀಕ್ಷೆಯ! ಇಡು ರಕ್ಷೆಯ!
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದೇ!
ಕನ್ನಡ ನಾಡೊಂದೇ!
ಕುವೆಂಪು ಅವರ ಏಕೀಕರಣ ಪರವಾದ ನಿಲುವನ್ನು ರಾಜಕೀಯ ಕಾರಣದಿಂದ ವಿರೋಧಿಸುತ್ತಿದ್ದವರೆಲ್ಲರೂ, ವೈಯಕ್ತಿಕವಾಗಿ ಕವಿಯ ಬಗ್ಗೆ ಗೌರವಾಧರಗಳನ್ನು ಇಟ್ಟುಕೊಂಡಿದ್ದವರೆ. ಇಲ್ಲದಿದ್ದರೆ ಅಧಿಕಾರ ರಾಜಕಾರಣದ ಮನಸ್ಸುಗಳು ಅಷ್ಟು ಬೇಗ ಬದಲಾಗುವುದಿಲ್ಲ. ಕುವೆಂಪು ಅವರಂತೆ ಏಕೀಕರಣಕ್ಕೆ ತಪೋಶ್ರೀರಕ್ಷೆಯನ್ನು ಕಟ್ಟಿದ ಸಹಸ್ರಾರು ಮಹನೀಯರ ಕಾರಣದಿಂದ ಹಾಗೂ ಐತಿಹಾಸಿಕ ಕಾರಣದಿಂದ ಕರ್ನಾಟಕ ಏಕೀಕರಣವಾಗುವ ಸಂದರ್ಭ ಬಂದೇ ಬಿಡುತ್ತದೆ. ೧೯೫೩ ಜನವರಿ ೩ರಂದು ಹೈದರಾಬಾದ್‌ನ ನಾನಲ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಇಡೀ ಚಿತ್ರಣವೇ ಬದಲಾಗುತ್ತದೆ. ಕಾರ್ಯಸೂಚಿಯಲ್ಲಿ ನಿರ್ಣಯ ಮಂಡನೆಗೆ ಅವಕಾಶ ವಿಲ್ಲದಿದ್ದಾಗ್ಯೂ, ಹಾರನಹಳ್ಳಿ ರಾಮಸ್ವಾಮಿಯವರು ಮಂಡಿಸಿದ ’ಕರ್ಣಾಟಕ ಏಕೀಕರಣ ನಿರ್ಣಯ’ವನ್ನು ಮಂಡಿಸುತ್ತಾರೆ. ಏಕೀಕರಣಕ್ಕೆ, ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ ಅವರಿಗೆ ಮೊದಲಿದ್ದ ವಿರೋಧವನ್ನು ತಿಳಿದಿದ್ದ ನೆಹರೂ ಅವರು, ಏಕೀಕರಣ ನಿರ್ಣಯಕ್ಕೆ ಉತ್ತರಿಸುವಾಗ,, ’ಏಕೀಕರಣದ ಪರ ಅರವತ್ತಕ್ಕೂ ಹೆಚ್ಚು ಜನ ಶಾಸಕರು ಸಹಿ ಹಾಕಿರಬಹುದು. ಆದರೆ ನಿಮ್ಮ ಮುಖ್ಯಮಂತ್ರಿಗಳೇ ಏಕೀಕರಣದ ಪರವಾಗಿಲ್ಲ. ಇನ್ನು ಏಕೀಕರಣ ಹೇಗೆ ಸಾಧ್ಯ?’ ಎಂದು ಪ್ರಶ್ನಿಸುತ್ತಾರೆ. ’ಅವಕಾಶ ಕೊಟ್ಟರೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ’ ಎಂದ ಕೆಂಗಲ್ ಅವರು ಕನ್ನಡ ಭಾಷೆ ಸಾಹಿತ್ಯ ಇತಿಹಾಸ ಇವುಗಳ ಹಿರಿಮೆ ಗರಿಮೆಗಳನ್ನು ಕುರಿತು ಮಾತನಾಡಿ, ’ಅಖಂಡ ಕರ್ನಾಟಕ ರಚನೆಗೆ, ಕಾಯಾ, ವಾಚಾ, ಮನಸಾ ನನ್ನ ಬೆಂಬಲವಿದೆ. ಪ್ರಧಾನಿ ಪಂಡಿತ್ ನೆಹರು ಅವರು ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಿ ಕರ್ನಾಟಕ ಏಕೀಕರಣಕ್ಕೆ ಪೂರಕ ಭೂಮಿಕೆ ಸಿದ್ಧಪಡಿಸಲು ನೆರವಾಗಬೇಕು’ ಎನ್ನುತ್ತಾರೆ. ಸ್ವತಂತ್ರ್ಯಾನಂತರ ಆರು ವರ್ಷಗಳ ಬಳಿಕ ಕರ್ನಾಟಕ ಏಕೀಕರಣಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ವೇದಿಕೆ ಸಿದ್ಧವಾಗುತ್ತದೆ. ಪ್ರಾರಂಭದಲ್ಲಿ ವಿರೋಧಿಸಿದ್ದ ಕೆಂಗಲ್ ಹನುಮಂತಯ್ಯನವರು ಪೂರ್ವಾಗ್ರಹ ಪೀಡಿತರಾಗದೆ ಜನಗಳ ಭಾವನೆಗೆ ಸ್ಪಂದಿಸಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗಲೇ, ಅಂದರೆ ೧೯೫೬ರಲ್ಲೇ ಕರ್ನಾಟಕದ ಏಕೀಕರಣದ ಕನಸು ನನಸಾಗುವಂತೆ ಮಾಡಿದರು.
ಕರ್ನಾಟಕದ ಏಕೀಕರಣವಾದಾಗ, ೧.೧೧.೧೯೫೬ರಂದು ’ಕರ್ಣಾಟಕ ರಾಜ್ಯೋದಯ ಶ್ರೀಗೀತೆ’ಯನ್ನು ಬರೆದು, 
ಓ ತಾಯಿ ಭಾರತಿಯೆ, ನಿನ್ನ ಮಗಳನು ಹರಸು.
ವರುಷ ಒಂಬತ್ತರಾಚೆಯಲಿ ಬಂಧಮುಕ್ತಳಾದಂದು
ನೀ ಕಂಡ ಕನಸು,
ಎರಡು ಕೋಟಿಯ ಹೃದಯದಲಿ ಶತಮಾನದಿಂ ಕುದಿದ ಒಮ್ಮನಸು,
ದುರ್ಮುಖಿಯೆ ಸುಮುಖಿ ತಾನಾದ ದೀವಳಿಯ ಸುದಿನದಂದು
ತಾನಾಗಿಹುದು ನನಸು!
ಎಂದು ಹಾಡುತ್ತಾರೆ.
ಓ ಏಳು, ನೃಪತುಂಗದೇವ,
ಕೃಪೆಯಿಟ್ಟು ಕವಿರಾಜದರಮನೆಯ ಸಿಂಹಾಸನವನಿಳಿದು ಬಾ
ಕರ್ಣಾಟಕದ ನಿನ್ನ ಈ ಹೆಸರ ತಾಯ್ನೆಲಕೆ.
ನೀನಂದು ಹಾಡಿದಾ ಕನ್ನಡದ ನಾಡು
ಒಂದುಗೂಡಿದೆ ಇಂದು ಇದೊ ಬಂದು ನೋಡು.
ಎಂದು ಏಕೀಕರಣದ ಕನಸು ಸಾವಿರ ವರ್ಷಕ್ಕೂ ಹಿಂದಿನದು ಎಂಬುದನ್ನು ಮನಗಾಣಿಸುತ್ತಾರೆ.
ಕರ್ನಾಟಕವೇನೋ ಒಂದಾಯಿತು. ಆದರೆ ಮನಸುಗಳು ಒಂದಾದವೆ? ಉತ್ತರ ದಕ್ಷಿಣ ಎಂದು ಕಿತ್ತಾಡುತ್ತಿದ್ದ ಕನ್ನಡ ಮಂದಮತಿಗಳನ್ನು ಕಂಡು ಕವಿಗೆ ’ಇವರನ್ನು ಸರಿಪಡಿಸಲು ಶಿವನೇ ಬರಬೇಕು’ ಅನ್ನಿಸುತ್ತದೆ. ೨೮.೪.೧೯೬೦ರಂದು ’ಮಾನಸಗಂಗೋತ್ರಿ’ಯ ಪ್ರಾರಂಭೋತ್ಸವ ಸಂದರ್ಭದಲ್ಲಿ ಹಾಡಿದ ’ಕನ್ನಡ ಡಿಂಡಿಮ’ ಕವಿತೆ ಪರೋಕ್ಷವಾಗಿ ಪ್ರಸ್ತಾಪಿಸುತ್ತದೆ.
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ!
ಕರ್ನಾಟಕ ಏಕೀಕರಣವಾಗಿ ಹದಿನೇಳು ವರ್ಷಗಳ ನಂತರ ’ವಿಶಾಲ ಮೈಸೂರು ರಾಜ್ಯ’ ’ಕರ್ನಾಟಕ’ ಎಂದು ಕರೆಸಿಕೊಂಡಿತು. ಏಕೀಕರಣಕ್ಕೆ ಮೊದಲು ವಿರೋಧವಿದ್ದರೂ, ತಮ್ಮ ಹೃದಯ ವೈಶಾಲ್ಯತೆಯಿಂದ, ಏಕೀಕರಣಕ್ಕೆ ಕಾರಣಕರ್ತರಾದ ಕೆಂಗಲ್ ಹನುಮಂತಯ್ಯನವರಂತೆಯೇ, ಹಿಂದೆ ಏಕೀಕರಣಕ್ಕೆ ವಿರೋಧಸಿದ್ದ ಇನ್ನೊಬ್ಬ ನಾಯಕ, ದೇವರಾಜ ಅರಸು ಅವರು ’ಕರ್ನಾಟಕ’ ಎಂದು ಹೆಸರು ಬದಲಾಯಿಸುವಲ್ಲಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಯಿತು.