Monday, October 31, 2011

ಪುಟ್ಟಪ್ಪ ಆಶ್ರಮ ಸೇರಿ ಸಂನ್ಯಾಸಿಯಾಗಿ ಬಿಟ್ಟ!ಸಿದ್ಧೇಶ್ವರಾನಂದ ಸ್ವಾಮೀಜಿ, ನಾ. ಕಸ್ತೂರಿ, ತಾತಗಾರು ಮೊದಲಾದವರ ಸ್ನೇಹ ಪ್ರೀತಿ ಕಾಳಜಿ ಹಾಗೂ ಕೆ.ಆರ್.ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ವಿಶೇಷೋಪಚಾರದಿಂದ ಕವಿ ’ಕ್ರಾನಿಕ್ ಮಲೇರಿಯಾ’ದಿಂದ ಗುಣಮುಖರಾಗುತ್ತಿದ್ದರಷ್ಟೆ. ಆದರೆ ಆಸ್ಪತ್ರೆಯಿಂದ ಆದಷ್ಟು ಬೇಗ ಹೊರಬೀಳಲು ಕವಿಯ ವರಾತ ದಿನವೂ ಹೆಚ್ಚುತ್ತಲೇ ಇತ್ತು. ಕೊನೆಗೊಂದು ದಿನ ಸ್ವಾಮೀಜಿ ನೀವು ಒಪ್ಪುವುದಾದರೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ನಾನು ಒಂದು ವಿವೇಕದ ಮಾರ್ಗ ಸೂಚಿಸುತ್ತೇನೆ. ನಿಮ್ಮನ್ನು ನೇರವಾಗಿ ಆಶ್ರಮಕ್ಕೆ ಕರೆದೊಯ್ಯುತ್ತೇನೆ. ನೀವು ಚೆನ್ನಾಗಿ ಗುಣಹೊಂದಿದ ಮೇಲೆ ಮತ್ತೆ ನಿಮ್ಮ ಸಂತೆಪೇಟೆ ರೂಮಿಗೆ ಹೋಗುವಿರಂತೆ ಎನ್ನುತ್ತಾರೆ. ಸಧ್ಯ ಆಸ್ಪತ್ರೆ ಸಹವಾಸ ತಪ್ಪಿದರೆ ಸಾಕು ಎನ್ನುತ್ತಿದ್ದ ಕವಿ ಒಪ್ಪಿಬಿಡುತ್ತಾರೆ! ನೆನಪಿನ ದೋಣಿಯಲ್ಲಿ ಈ ಘಟನೆಯನ್ನು ಕುರಿತು ಬರೆಯುವಾಗ ಭಗವಂತನ ಉದ್ದೇಶ ಸಾಧನೆ ಅದೆಂತಹ ಸಹಜ ಸಾಧಾರಣವಾಗಿ ತೋರುವ ಮತ್ತು ಮೇಲು ನೋಟಕ್ಕೆ ಯಾವ ವಿಶೇಷತೆಯೂ ಪ್ರದರ್ಶಿತವಾಗದ ರೀತಿಯಲ್ಲಿ ನೆರವೇರುತ್ತದೆ! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಸ್ವಾಮೀಜಿಯ ರೂಮಿಗೆ ಸಂವಾದಿಯಾಗಿದ್ದ ಒಂದು ಕೊಠಡಿಯಲ್ಲಿ ರೋಗಶಯ್ಯೆ ಸಿದ್ಧವಾಗುತ್ತದೆ. ಸ್ಕೌಟುಗಳು ಶುಶ್ರೂಷೆಗೆ ನಿಲ್ಲುತ್ತಾರೆ. ಒಮ್ಮೊಮ್ಮೆ ಯಾರೂ ಒದಗದಿದ್ದಾಗ ಸ್ವತಃ ಸ್ವಾಮೀಜಿಯೇ ಬಟ್ಟೆ ಒಗೆದು ಒಣಗಿಸಿಕೊಡುವ ಮೊದಲಾದ ಕೆಲಸಗಳನ್ನು ಮಾಡಿಕೊಡುತ್ತಾರೆ! (ಸ್ವಾಮಿ ಸಿದ್ಧೇಶ್ವರಾನಂದ ಅವರು ಕುವೆಂಪು ಅವರಿಗಿಂತ ವಯಸ್ಸಿನಲ್ಲಿ ಕೇವಲ ಏಳು ವರ್ಷ ದೊಡ್ಡವರಷ್ಟೆ! ರಾಜಮನೆತನದಲ್ಲಿ ಹುಟ್ಟಿ ಬೆಳೆದು, ರಾಮಕೃಷ್ಣಾಶ್ರಮ ಸೇರಿ ಸಂನ್ಯಾಸಿಯಾಗಿದ್ದ ಅವರು ರಾಜಯೋಗಿಯಾಗಿದ್ದರಿಂದಲೇ ಸಾಮಾನ್ಯ ವಿದ್ಯಾರ್ಥಿಯೊಬ್ಬನ ವಿಷಯದಲ್ಲಿ ಇಷ್ಟೊಂದು ನಿರಹಂಕಾರಿಯಾಗಿ ವರ್ತಿಸಲು ಸಾಧ್ಯವಾಗಿತ್ತೇನೊ? ಆಶ್ರಮದಲ್ಲಿ ಕಸಗುಡಿಸುವ ಕೆಲಸದಿಂದ ಅಡುಗೆ ಕೆಲಸದವರೆಗೆ ಎಲ್ಲವನ್ನೂ ಮಾಡುತ್ತಿದ್ದ, ಭಿಕ್ಷಾನ್ನದ ವಿದ್ಯಾರ್ಥಿಗಳು ತಂದೆ ಭಿಕ್ಷಾನ್ನವನ್ನೂ ಸಂತೋಷದಿಂದ ಸ್ವೀಕರಿಸುತ್ತಿದ್ದ ಸ್ವಾಮೀಜಿ ಉನ್ನತ ವ್ಯಕ್ತಿಯಾಗಿದ್ದರು. ಮುಂದೆ ಫ್ರಾನ್ಸಿನ ರಾಮಕೃಷ್ಣಾಶ್ರಮಕ್ಕೆ ಹೋದ ಅವರು ಆಗಲೂ ಕುವೆಂಪು ಅವರ ಕ್ಷೇಮಾತುರರಾಗಿದ್ದರು ಎಂಬುದು ಅವರ ಪತ್ರಗಳಿಂದ ವ್ಯಕ್ತವಾಗುತ್ತದೆ. ಫ್ರೆಂಚ್ ಭಾಷೆಯಲ್ಲಿ ಉನ್ನತವಾದ ಪಾಂಡಿತ್ಯ ಪಡೆದರು. Meditation According to Yoga - a Vedanta ಮತ್ತು Some aspects of Vedanta Philosophy  ಇವು ಫ್ರೆಂಚ್‌ನಿಂದ ಇಂಗ್ಲಿಷಿಗೆ ಅನುವಾದ ಆದ ಅವರ ಕೃತಿಗಳು. ಶಂಕರ ಎಂಬ ಕೇರಳದ ಹುಡುಗನೊಬ್ಬನಿಗೆ, ಕುವೆಂಪು ಅವರ ಧೀಕ್ಷಾಗುರು ಸ್ವಾಮಿ ಶಿವಾನಂದರಿಂದ ಧೀಕ್ಷೆ ಕೊಡಿಸಿ ಸ್ವಾಮಿ ರಂಗನಾಥಾನಂದರನ್ನಾಗಿಸಿದ್ದು ಇದೇ ಸಿದ್ಧೇಶ್ವರಾನಂದರು. ಕುವೆಂಪು ಮತ್ತು ರಂಗನಾಥಾನಂದರು ಸಿದ್ಧೇಶ್ವರಾನಂದರಿಂದ ಪ್ರೇರಿತರಾಗಿ ಶಿವಾನಂದರಿಂದ ಧಿಕ್ಷೆ ಪಡೆದು ಶ್ರೀರಾಮಕೃಷ್ಣ ಮಠದ ಕೀರ್ತಿ ದಿಗಂತಗಳನ್ನು ವಿಸ್ತರಿಸಿದ್ದುದು ಈಗ ಇತಿಹಾಸ!)
ಅದುವರೆಗೆ ಕವಿ ಉದ್ದುದ್ದವಾಗಿ ಕೂದುಲು ಬಿಟ್ಟು ಬೈತಲೆ ಬಾಚುತ್ತಿದ್ದರು. ಆಶ್ರಮಕ್ಕೆ ಬಂದಾಗ, ’ರೋಗಿಯಾಗಿರುವವನಿಗೆ ಇಷ್ಟುದ್ದ ಕೂದುಲು ತೊಂದರೆಯಾಗುತ್ತದೆ, ಸ್ನಾನ ಮಾಡಿ ಶುಚಿಯಾಗಿಟ್ಟುಕೊಳ್ಳುವುದು ಒಣಗಿಸುವುದು ಕಷ್ಟ. ಆದ್ದರಿಂದ ಅದನ್ನು ಈಗ ಬೋಳಿಸಿ, ಸಂಪೂರ್ಣ ಗುಣವಾದ ಮೇಲೆ ಮತ್ತೆ ನಿಮಗಿಷ್ಟವಾದ ರೀತಿಯಲ್ಲಿ ಉದ್ದುದ್ದ ಕ್ರಾಪು ಬಿಡಬಹುದು’ ಎಂಬ ಸ್ವಾಮೀಜಿಯ ಸಲಹೆಯನ್ನು ಒಪ್ಪಿ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಬಿಡುತ್ತಾರೆ. ಒಡನೆಯೇ ಒಂದು ಸುದ್ದಿ ಹಬ್ಬಿಬಿಡುತ್ತದೆ. ’ಪುಟ್ಟಪ್ಪ ಆಶ್ರಮ ಸೇರಿ ಸಂನ್ಯಾಸಿಯಾಗಿ ಬಿಟ್ಟ’ ಎಂದು! ಆ ಸುದ್ದಿಯ ತೀವ್ರತೆ ಎಷ್ಟಿತ್ತೆಂದರೆ, ದೂರದ ಮಲೆನಾಡಿನವರೆಗೂ ಅದು ಹಬ್ಬಿ, ಕುಪ್ಪಳಿಯ ಮನೆಯವರೆಲ್ಲಾ ಚಿಂತಾಕ್ರಾಂತರಾಗಿ, ಅಲ್ಲಿಂದ ತಿಮ್ಮಯ್ಯ ಮತ್ತು ದೇವಂಗಿ ಮಾನಪ್ಪನವರನ್ನು ಮೈಸೂರಿಗೆ ಕಳುಹಿಸಿ ಪುಟ್ಟಪ್ಪನವರನ್ನು ಊರಿಗೆ ಕರೆಸಿಕೊಳ್ಳುಲು ಯೋಚಿಸುವಷ್ಟರ ಮಟ್ಟಿಗೆ! ತಮ್ಮಯ್ಯ ಮತ್ತು ಮಾನಪ್ಪ ಅವರೇನೋ ಮೈಸೂರಿಗೆ ಬಂದರು. ಆಶ್ರಮಕ್ಕೂ ಬಂದರು. ಅಲ್ಲಿ ನಿಜ ಸಂಗತಿ ತಿಳಿದು, ಸ್ವಾಮಿ ಸಿದ್ಧೇಶನಾದಂರ ಸರಳತೆಗೆ ಸ್ನೇಹಪೂರ್ವಕ ಅಕ್ಕರೆಗೆ ಸೋತುಹೋದರಂತೆ. ಮಾನಪ್ಪನವರರಂತೂ ಸ್ವಾಮೀಜಿಗೆ ಶಿಷ್ಯನಾಗಿಬಿಟ್ಟರಂತೆ! ಅವರಿಬ್ಬರು ಅಲ್ಲಿದ್ದಾಗಲೇ ಸ್ವಾಮೀಜಿ, ’ಇವರಿಬ್ಬರು ಮನೆಗೆ ಹೋಗಿ ನಿಜ ವಿಷಯ ತಿಳಿಸುತ್ತಾರೆ. ಸಂತೆಪೇಟೆ ರೂಮನ್ನು ಖಾಯಮ್ಮಾಗಿ ಬಿಟ್ಟು ಆಶ್ರಮದಲ್ಲಿಯೇ ನೆಲೆಸಿಬಿಡಿ’ ಎಂದು ಸಲಹೆ ಮಾಡಿದರಂತೆ. ಕೃಪೆಯ ವ್ಯೂಹ ಸಫಲವಾಗದೆ ಇರುತ್ತದೆಯೆ? ಯಾರು ಪುಟ್ಟಪ್ಪನವರನ್ನು ಆಶ್ರಮದಿಂದ ಬಿಡಿಸಿ ಊರಿಗೆ ಕರೆದೊಯ್ಯಲು ಬಂದಿದ್ದರೋ ಅವರೇ, ಸಂತೆಪೇಟೆಯ ರೂಮನ್ನು ಖಾಲಿ ಮಾಡಿ ಪುಟ್ಟಪ್ಪನವರನ್ನು ಅಧಿಕೃತವಾಗಿ ಆಶ್ರಮದಲ್ಲಿ ಸಂಸ್ಥಾಪಿಸಿ ಹೋಗುವಂತಾಯಿತು!
ಮಲೇರಿಯಾದ ಜ್ವರಗಡ್ಡೆ ಕರಗಲು ಸ್ವಾಮೀಜಿ ಕೊಲ್ಕತ್ತಾದಿಂದ ’ಗಲಂಚಾ’ ಎಂಬ ಔಷಧವನ್ನು ತರಿಸುತ್ತಾರೆ. ಕಜ್ಜಿ ಶಾಶ್ವತವಾಗಿ ತೊಲಗುವಂತೆ ತಾವೇ ಒಂದು ನಾಟಿ ಔಷಧಿಯನ್ನು ತಯಾರು ಮಾಡಿ ಲೇಪಿಸುತ್ತಾರೆ. ದೈಹಿಕವಾಗಿ ಸದೃಢರಾಗುತ್ತಾ ಸಾಗಿದ್ದ ಪುಟ್ಟಪ್ಪನವರೊಳಗಿನ ಕವಿ ಕುವೆಂಪು ಜಾಗೃತನಾಗುತ್ತಾನೆ. ಸ್ವಾಮೀಜಿ ರೋಗಿಗೆ ಮಾನಸಿಕ ಶ್ರಮವಾಗಬಾರದೆಂದು ಓದು ಬರಹವನ್ನು ನಿಲ್ಲಿಸಲು ಸೂಚಿಸಿರುತ್ತಾರೆ. ಆಗಿನ ಮನಸ್ಥಿತಿಯನ್ನು ಕವಿಯ ಮಾತುಗಳಲ್ಲೇ ಕೇಳಬೇಕು: ನನ್ನ ಮನಸ್ಸು ಮತ್ತು ಹೃದಯ ಎರಡೂ ಅಪೂರ್ವವೂ ಆಧ್ಯಾತ್ಮಿಕವೂ ಆದ ಚಿಂತನ ಮತ್ತು ಭಾವನಗಳ ಸುಳಿಗೆ ಸಿಕ್ಕು ಅಭಿವ್ಯಕ್ತಿಗಾಗಿ ಹಾತೊರೆಯುತ್ತಿದ್ದವು. ಭಕ್ತಿ, ಜ್ಞಾನ ಮತ್ತು ಆನಂದಗಳ ಬುಗ್ಗೆಯೆ ಚಿಮ್ಮುತ್ತಿತ್ತು ನನ್ನ ಚಿದ್‌ಭೂಮಿಕೆಯಲ್ಲಿ. ಕವನ ರಚನಾ ಪ್ರತಿಭೆ ಹೊರಹೊಮ್ಮಲೆಂದು ರಸಾನುಭವ ಮಂದಿರದ ಬಾಗಿಲನ್ನು ದಬ್ಬುತ್ತಿತ್ತು; ಗುದ್ದುತ್ತಿತ್ತು; ತೆರೆಯದಿದ್ದರೆ ಮುಂದೂಡಿಕೊಂಡೆ ಹೊರನುಗ್ಗುತ್ತೇನೆ ಎಂಬ ರಭಸಾವೇಶದಲ್ಲಿ!
ಇನ್ನು ತಡೆಯಲಾರೆ ಎನ್ನಿಸಿದಾಗ ನಾ.ಕಸ್ತೂರಿಯವರಲ್ಲಿ ತಮ್ಮ ಕಷ್ಟವನ್ನು ನಿವೇದಿಸಿಕೊಳ್ಳುತ್ತಾರೆ. ಆಗ ಕಸ್ತೂರಿಯವರು, ’ಸ್ವಾಮೀಜಿ, ಕವಿಗೆ ತಲೆಯಲ್ಲಿ ಬಂದದ್ದನ್ನು ಕಾಗದಕ್ಕೆ ಇಳಿಸಿಬಿಡಲು ಅನುಮತಿ ನೀಡಿದರೆ ವಾಸಿ; ಇಲ್ಲದಿದ್ದರೆ ಆ ಭಾರವನ್ನು ಹೊತ್ತುಕೊಂಡೇ ಇರಬೇಕಾಗಿ ಬಂದು ನಿದ್ದೆಗೇಡಾಗುತ್ತದೆ’ ಎಂದು ಹೇಳಿ ಒಪ್ಪಿಸುತ್ತಾರೆ. ರುಗ್ಣಶಯ್ಯೆಯಲ್ಲಿ ಬರೆದ ಅತ್ಯಂತ ಮುಖ್ಯವಾದ ನೀಳ್ಗವಿತೆ ’ಹಾಳೂರು’. ೫೩೮ ಸಾಲುಗಳಿವೆ. ಆ ಕವಿತೆಯ ವಿವರಗಳಿಗೆ ಹೋಗದೆ, ಅದರ ಬಗ್ಗೆ ಕವಿಯ ಅಭಿಪ್ರಾಯವನ್ನಷ್ಟೇ ದಾಖಲಿಸಿ, ಆ ಸಂದರ್ಭದ ಬೇರೆ ಕವಿತೆಗಳನ್ನು ಗಮನಿಸಬಹುದು. ರುಗ್ಣಶಯ್ಯೆಯ ಮೇಲೆ ಕುಳಿತೇ ರಚಿಸಿದ್ದ ದೀರ್ಘಕವನವೆಂದರೆ ’ಹಾಳೂರು’. ಅದು ಗೋಲ್ಡ್ ಸ್ಮಿತ್ ಕವಿಯ ’ಆeseಡಿಣeಜ ಗಿiಟಟಚಿge’ನ ಭಾಷಾಂತರವೂ ಅಲ್ಲ, ಸರಳಾನುವಾದವೂ ಅಲ್ಲ. ಆಗ ನನ್ನ ಬಳಿ ಆ ಪುಸ್ತಕವೂ ಇರಲಿಲ್ಲ. ಅದನ್ನು ಹಿಂದೆ ಓದಿದ್ದರ ಪ್ರಭಾವವೆಷ್ಟೊ ಅಷ್ಟೆ. ಸಂಪೂರ್ಣವಾಗಿ ನಮ್ಮ ಹಳ್ಳಿಯ ಜೀವನ ಮತ್ತು ಹಳ್ಳಿಗಳಿಂದ ಪೇಟೆಗೆ ಬಂದು ನೆಲಸುತ್ತಿದ್ದ ಹಳ್ಳಿಗರ ದಾರುಣವಾದ ಬದುಕು ಇವುಗಳನ್ನು ಕುರಿತದ್ದು. ಅದನ್ನು ಬರೆದಂತೆಲ್ಲ ನನ್ನ ಕೊಟಡಿಗೆ ಬಂದು ದೇಹಸ್ಥಿತಿ ವಿಚಾರಿಸುತ್ತಿದ್ದ ಮಿತ್ರರಿಗೆಲ್ಲ ಓದುತ್ತಿದ್ದೆ. ಸ್ವಾಮೀಜಿ ಮತ್ತು ಕಸ್ತೂರಿಯವರೂ ತುಂಬಾ ಮೆಚ್ಚಿ ಆಸ್ವಾದಿಸುತ್ತಿದ್ದರು!

ಕವಿತಾ ರಚನೆಗೆ ಸ್ವಾಮೀಜಿ ಸಮ್ಮತಿಸಿದ ನಂತರ ಸಾಲುಸಾಲಾಗಿ ಕವಿತೆಗಳು ರಚನೆಯಾಗಿವೆ. ೨೫.೧೦.೧೯೨೬ರಂದು ಒಂದು, ೨೬.೧೦.೧೯೨೬ರಂದು ನಾಲ್ಕು, ೨೭.೧೦.೧೯೨೬ರಂದು ಒಂದು, ೨೯.೧೦.೧೯೨೬ರಂದು ಎರಡು ಕವಿತೆಗಳು ರಚನೆಯಾಗಿವೆ. ಇವುಗಳಲ್ಲಿ ’ಆಟ ಮುಗಿಯುವ ಮುನ್ನ’ ಎಂಬ ಕವಿತೆಯೊಂದನ್ನು ಉಳಿದ ಕವಿತೆಗಳು ಅಪ್ರಕಟಿತವಾಗಿವೆ!
ರೋಗಿಯ ಮನಸ್ಸಿಗೆ ಆಹ್ಲಾದವೂ ಒಂದು ಮಾನಸಿಕ ಭೇಷಜವಾಗಿ ರೋಗ ಬೇಗ ಗುಣವಾಗುವುದಕ್ಕೆ ನೆರವಾಗುತ್ತದೆ ಎಂಬ ಉದ್ದೇಶದಿಂದ ಆಶ್ರಮದ ಆವರಣದಲ್ಲಿದ್ದ ಹೂವಿನ ಗಿಡಗಳಿಂದ ಹೂವುಗಳನ್ನು ಸ್ವಾಮೀಜಿ ಕುಯ್ದು ತಂದು ರೋಗಿಯ ಕೊಠಡಿಯಲ್ಲಿ ಮನೋಹರವಾಗಿ ಜೋಡಿಸಿಡುತ್ತಿದ್ದರಂತೆ! ’ರೋಗಶಯನದೊಳಿದ್ದಾಗ ಪೂಜೊಂಪ ನೋಡಿ ಬರೆದುದು’ ಎಂಬ ಟಿಪ್ಪಣಿಯಿರುವ, ಶಿರ್ಷಿಕೆಯಿಲ್ಲದ ಕವಿತೆ ಆ ಸಂದರ್ಭದ್ದು:
ಮುದ್ದು ಹೂಗಳೆ, ನಿಮ್ಮ ನೋಡೆನ್ನ ರೋಗ
ಜಾರಿಹೋದುದು ಬೇಗ; ಹರುಷವೊಂದೀಗ
ಬಂದಂತೆ ಭಾಸವಾಯಿತು; ನಿಮ್ಮ ಚೆಂದ
ರುಜೆಗೆಲ್ಲ ಬಂಧ, ಮೇಣಾತ್ಮಾನಂದ!
ವೈದ್ಯರೌಷಧಿ ಕೊಡುವರಾದರೂ ಒಮ್ಮೆ
ನಿಮ್ಮಗಳ ಮುಂದವರ ಪಾಂಡಿತ್ಯ ಹೆಮ್ಮೆ!
ಕವಿಯ ರುಜೆಗಾವಗಂ ಪಂಡಿತರು ನೀವು!
ಸೌಂದರ‍್ಯವೌಷಧವು! ವರ ವೈದ್ಯ-ಹೂವು!
ಕೊಠಡಿಯಲ್ಲಿ ಮಲಗಿದ್ದಾಗ ಹೊರಗೆ ಕಾಣುತ್ತಿದ್ದ ಹೋದೋಟವನ್ನು, ಅದರಿಂದ ತನಗಾಗುತ್ತಿದ್ದ ಆನಂದವನ್ನು ’ಹೂದೋಟ’ ಎಂಬ ಕವಿತೆಯಲ್ಲಿ ಬಿಡಿಸಿಟ್ಟಿದ್ದಾರೆ. ಜೀವ ಜಗತ್ತು ಈಶ್ವರ ಜನ್ಮಾಂತರ ಕರ್ಮ ಮೊದಲಾದ ವಿಚಾರಗಳ ಮಂಥನ ಮನಸ್ಸಿನಲ್ಲಿ ಯಾವಾಗಲೂ ನಡೆಯುತ್ತಿತ್ತು ಕವಿಗೆ. ಸ್ವಾಮೀಜಿಯ ಜೊತೆಯಲ್ಲೂ ವಿಚಾರ ವಿನಿಮಯ ನಡೆಯುತ್ತಿತ್ತು. ಆದರೆ ಅದು ಎಲ್ಲಿ ವಿಸ್ಮೃತವಾಗಿಬಿಡುವುದೊ ಸುಖದ ಸಮಯದಲ್ಲಿ ಎಂದು ಜೀವ ಎಚ್ಚರಿಕೆ ಹೇಳುತ್ತಿತ್ತು. ಹಾಗಾಗದಂತೆ ದುಃಖ ಸಮಯದಲ್ಲಿ ಎಂತೋ ಅಂತೆ ಸುಖದ ಸಮಯದಲ್ಲಿಯೂ ನಾನು ನಿನ್ನನ್ನು ಮರೆಯದಂತೆ ಕೃಪೆ ಮಾಡು ಎಂದು ಬೇಡುವ ಇನ್ನೊಂದು ಕವಿತೆ ಹೀಗಿದೆ:
ದುಃಖವೈತರೆ ನಿನ್ನ ನೆನೆಯುವೆವು ಬಿಡದೆ,
ಮರೆಯುವೆವು ಸುಖದೊಳಿರಲು;
ಸಂತಸದೊಳಿರುವಾಗ ನಿನ್ನ ನೆನೆವಂತೆ
ಮನವ ದಯಪಾಲಿಸೆನಗೆ!
ನಿತ್ಯತತ್ವವು ನೀನು ಚಿತ್ತದೊಳು, ತಾಯೆ,
ನಿತ್ಯವೂ ನಿನ್ನ ನೆನೆವೆ!
ಸುಖವಿರಲಿ ದುಃಖವೇ ಇರಲಿ ಮತಿಯೀಯು
ನಿನ್ನ ನಾ ಮರೆಯದಂತೆ!
ಆ ಸಂದರ್ಭದಲ್ಲಿ ಕವಿ ನಡೆಯುತ್ತಿರಲಿ, ನುಡಿಯುತ್ತಿರಲಿ ಆಡುತ್ತಿರಲಿ ಓದುತ್ತಿರಲಿ ಚಿಂತನೆ ಮಾಡುತ್ತಿರಲಿ- ತಾಯಿಯ ಅನಿರ್ವಚನೀಯ ರಹಸ್ಯಮಯ ಸಾನಿಧ್ಯ ಸರ್ವದಾ ಕವಿಯ ಬಳಿ ಸುತ್ತುತ್ತಿರುವ ಅನುಭವವಾಗುತ್ತಿತ್ತಂತೆ. ಅದನ್ನು ಪ್ರಸ್ತುತಪಡಿಸುವ ಕವಿತೆ ಹೀಗಿದೆ:
ಒಂದು ರಹಸ್ಯವು ಪೀಡಿಪುದೆನ್ನ
ಒಂದಾನಂದವು ಬಾಧಿಪುದೆನ್ನ!
ನಡೆಯುತಲಿರಲಿ ನುಡಿಯುತಲಿರಲಿ, ಸದಾ;
ಆಡುತಲಿರಲಿ ಓದುತಲಿರಲಿ
ಕವಿತೆಯ ರಚಿಸುತ ನಾನಿರಲಿ;
ಎಲ್ಲೇ ಇರಲಿ, ಎಂತೇ ಇರಲಿ,
ಏನನೆ ಮಾಡುತಲಿರಲಿ, ಸದಾ
ಒಂದು ರಹಸ್ಯವು ಪೀಡಿಪುದೆನ್ನ!
ಒಂದಾನಂದವು ಬಾಧಿಪುದೆನ್ನ!
ಬಳಿಯೊಳಗಾರೋ ಇರುವರು ಎಂಬ
ಒಂದು ರಹಸ್ಯವು ಪೀಡಿಪುದೆನ್ನ!
ಯಾರಾನಂದವೊ ಎನಗಾಗೆಂಬ
ಒಂದಾನಂದವು ಬಾಧಿಪುದೆನ್ನ!
ಈ ಲೋಕ, ಇದರ ಬದುಕು, ಈ ಸಂಸಾರ ಎಲ್ಲವನ್ನೂ ಹಳಿಯುವ ಮನೋಧರ್ಮವನ್ನು ಒಪ್ಪದೆ, ಸಾಕು ಮಾಡೋ ಜನ್ಮ ಎನ್ನುವ ದಾಸಯ್ಯನನ್ನು ಸಂಬೋಧಿಸಿ ಬರೆದಿರುವ ಶಿರ್ಷಿಕೆಯಿಲ್ಲದ ಕವಿತೆ ಗಮನಸೆಳೆಯುತ್ತದೆ; ಕವಿಯ ಜೀವನಪ್ರೀತಿಗೂ ಸಾಕ್ಷಿಯಾಗಿದೆ.
ಸುಖವಿಲ್ಲವೆನಬೇಡ
ದುಃಖವೆನಬೇಡ;
ತಾಯ ತೊಡೆಯಿದು, ದಾಸ
ಹರುಷದಾವಾಸ.
ಪಾಪಿ ತಾನೆನಬೇಡ,
ದಾಸನೆನಬೇಡ;
ತಾಯಿ ಸುತರಾವೆಲ್ಲ,
ಬರಿಯ ದಾಸರಲ್ಲ!
ಸಂಸಾರ ಬರಿ ಮೋಸ
ಎನಬೇಡ, ದಾಸ.
ತಾಯ ಲೀಲೆಯ ನೀನು
ಬಲು ಬಲ್ಲೆಯೇನು?
ಜೀವವಿದು ಬರಿ ವೇಷ
ಅಲ್ಲವೋ ದಾಸ!
ತಾಯ ತೊಡೆಯಿದು, ದಆಸ
ಹರುಷದಾವಾಸ!
’ಆಟ ಮುಗಿಯುವ ಮುನ್ನ’ ಎಂಬ ಪ್ರಕಟಿತ ಕವಿತೆ (ಮರಿವಿಜ್ಞಾನಿ), ಕಾಯಿಲೆಯಾಗಿ ಮಲಗಿದ್ದಾಗ ಎಲ್ಲ ಸತ್ತು ಹೋಗಿಬಿಡುವೆನೋ ಎಂಬ ಆಲೋಚನೆ ಬಂದಾಗ ತಾಯಿಗೆ ಹೇಳಿಕೊಳ್ಳುವಂತೆ ರಚನೆಯಾಗಿದೆ. ಅದು ಸಾವು ಆತ್ಮದ ವಿನಾಶ ಎಂಬ ಹೆದರಿಕೆಯಿಂದಲ್ಲ; ಸಾಧಿಸಬೇಕಾದುದು ಇನ್ನೂ ಬಹಳಷ್ಟು ಇರುವಾಗ ಅದನ್ನೆಲ್ಲ ಕೈಗೂಡಿಸದೆ ಹೋಗುವ ನಷ್ಟಕ್ಕೆ ನನ್ನ್ನು ಗುರಿಪಡಿಸದಿರು ಎಂಬ ಭಾವದಿಂದ ಮೂಡಿದುದು.
ಆಟ ಮುಗಿಯುವ ಮುನ್ನ
ಕರೆಯಬೇಡೆನ್ನ!
ಆಟ ಮುಗಿಯಲು ನಾನೆ
ಬರುವೆನಮ್ಮಾ!
ಇದ್ದರೂ ಸವಿಯೂಟ
ಬೇಡವೆನಗೀಗ;
ಪೂರೈಸಲೀ ಆಟ
ಬರುವೆನಾಗ!
ಆಟ ತೊಲಗುವುದಲ್ಲಾ
ಎಂಬುವಳಲಿಲ್ಲ;
ಆಟ ಮುಗಿಯಲು ನಾನೆ
ಬರುವೆನಮ್ಮಾ!
ಬರಲೆನಗೆ ಭಯವಿಲ್ಲ;
ತಾಯೆ, ನಿನ್ನಾನಂದ
ನಿನ್ನ ಕಂದ!
ಇನ್ನೊಮ್ಮೆ ರೋಗಿ ವಿಶ್ರಾಂತಿ ಪಡೆಯುತ್ತಿದ್ದಾಗ, ಆಶ್ರಮದ ಆವರಣದಲ್ಲಿದ್ದ ಗಿಡದ ಮೇಲೆ ಕುಳಿತು ಸಿಳ್ಳು ಹಾಕುತ್ತಿದ್ದ ಮಡಿವಾಳ ಹಕ್ಕಿ (ಹಂಡ ಹಕ್ಕಿ) ಕವಿಗೆ ವಿದ್ಯುತ್ ಸಂಚಾರವನ್ನೇ ಉಂಟುಮಾಡಿಬಿಡುತ್ತದೆ. ’ನನಗೆ ನಮ್ಮೂರಿನ ಒಂದು ಅರಣ್ಯಕ ಚೇತನವೆ ಹಕ್ಕಿಯಂತೆ ನನ್ನ ಕ್ಷೇಮಸಮಾಚಾರ ವಿಚಾರಿಸಲು ಬಂದಂತಾಗಿ, ಅದನ್ನು ಮಾತಾಡಿಸಿದೆ’ ಎಂದು ಬರೆದಿದ್ದಾರೆ.  ಕವಿತೆಯ ಶೀರ್ಷಿಕೆ ’ಮಡಿವಾಳ’:


ಬಂದಿರುವೆ ಎಲ್ಲಿಂದ?
ಸಂದೇಶವಾರಿಂದ
ತಂದಿರುವೆ, ಎಲೆ ಮುದ್ದು ಮಡಿವಾಳ ಹಕ್ಕಿ?
ಹಿಂದಿನಾ ದಿನಗಳಾ-
ನಂದವನು ತಂದಿಹೆಯಾ?
ಮುಂದಿನಾನಂದವನು ತಂದಿರುವೆ ಏನು?
ತಂದಿಹೆಯ ತಾಯ್ನುಡಿಯ?
ಬಂದಿಹೆಯ ಇನಿಯಳಾ
ಸಂದೇಶವನು ಕೊಂಡು ಭರದಿಂದ ನೀನು?
ಗುರುವಿನಾದೇಶವನು
ಭರದಿಂದ ತಂದಿಹೆಯ?
ವರಕವಿಗಳಾವೇಶವನು ತಂದೆಯೇನು?
ಯಾರಾದೊಡೇನು? ನೀ-
ನೂರಿಂದ ಬಂದವನು!
ಸಾರುತಿಹೆ ನಮ್ಮೂರ ಹಾಡುಗಳನಿಲ್ಲಿ!
ಸಾರಲೈ ಮಡಿವಾಳ;
ಸೇರಿ ನಾವಿರ್ವರೂ
ಸಾರೋಣ ನಮ್ಮೂರ ಹಾಡುಗಳನ್ನಿಲ್ಲಿ!
ಈ ಮೊದಲೇ ಹೇಳಿದ ಹಾಗೆ, ಆ ದಿನಗಳಲ್ಲಿ ಕವಿಗೆ ಬದುಕುತ್ತೇನೋ ಇಲ್ಲವೋ ಎಂಬ ಆಶಂಕೆ ಆಗಾಗ ಬರುತ್ತಲೇ ಇತ್ತೆಂದು ಕಾಣಿಸುತ್ತದೆ. ಆಟ ಮುಗಿಸುವ ಕವಿತೆಯಲ್ಲಿ ಬೇಡಿದಂತೆ ಒಮ್ಮೆ ಬೇಡಿದರೆ ಇನ್ನೊಮ್ಮೆ ಎಲ್ಲದಕ್ಕೂ ಸಿದ್ಧ ಎಂಬ ಕೆಚ್ಚು ಮೂಡುತ್ತದೆ. ಅಂತಹುದೇ ಕೆಚ್ಚಿನಲ್ಲಿ ಮೂಡಿದ ಒಂದು ಕವಿತೆಯಿದೆ; ಶೀರ್ಷಿಕೆಯಿಲ್ಲ. ಅದನ್ನು ಕುರಿತು ಕವಿ ಹೇಳುವುದು ಹೀಗೆ: ೨೯.೧೦.೧೯೨೬ನೆಯ ರಾತ್ರಿ. ಬಹಳ ಹೊತ್ತು ನಿದ್ದೆ ಬರಲಿಲ್ಲ. ಏನೇನೋ ಯೋಚನೆಗಳು; ಲೌಖಿಕ ಮತ್ತು ತಾತ್ವಿಕ. ಒಮ್ಮೊಮ್ಮೆ ನಾನು ಬದುಕುತ್ತೇನೆಯೋ ಇಲ್ಲವೊ ಎಂಬ ಅಶಂಕೆ. ತಾಯಿ ಏಕೆ ಹೀಗೆಲ್ಲ ಮಾಡುತ್ತಿದ್ದಾಳೆ ಎಂದು ಅವಳ ಮೇಲೆ ಮುನಿಸು. ’ನೀನು ಏನು ಬೇಕಾದರೂ ಮಾಡು ನಾನೇನು ಹೆದರುವನಲ್ಲ’ ಎಂಬ ಗರ್ವಭಂಗಿ ಅವಳೊಡನೆ. ನಾನು ಎಲ್ಲಕ್ಕೂ ಸಿದ್ಧ ಎಂಬ ಕೆಚ್ಚು. ಆ ಮಧ್ಯರಾತ್ರಿಯಲ್ಲಿ ಒಂದು ಕವನ ಮೂಡಿತು; ಆಗಲೆ ದೀಪಹೊತ್ತಿಸಿ ಅದನ್ನು ಬರೆದುಬಿಟ್ಟೆ: ಕವನದ ಕೆಳಗೆ ತಾರೀಖು ಹಾಕಿ ಬ್ರಾಕೆಟ್ಟಿನಲ್ಲಿ (ಓighಣ) ಎಂದೂ ಹಸ್ತಪ್ರತಿಯಲ್ಲಿ ಬರೆದಿದೆ.
ಸಿದ್ಧವಾಗಿಹೆ ನಾನು, ಕಾಳಿ!
ಎದೆಯೊಡ್ಡಿ ನಿಂತಿಹೆನು;
ಆದುದಾಗಲಿ, ದೇವಿ,
ನಿರ್ಭೀತ ನಾನು!
ಬರಸಿಡಿಲ ಬೀಸು,
ಕಾರ್ಮಿಂಚ ಸೂಸು;
ಶೋಣಿತವ ಚೆಲ್ಲು,
ಜೀವವನೆ ಮೆಲ್ಲು;
ಬರಲೆನಗೆ ಸಾವು,
ಬರಲೆನಗೆ ನೋವು;
ದುಃಖಗಳ ಭೀರು,
ಸುಖಗಳನು ಹೀರು;
ನಿನ್ನ ಖಡ್ಗದಿ ಎದೆಯ ಸೀಳು;
ಶೂನ್ಯವಾಗಲಿ ನನ್ನ ಬಾಳು;
ಸಿದ್ಧವಾಗಿಹೆ ನಾನು, ಕಾಳಿ!
ಎದೆಯೊಡ್ಡಿ ನಿಂತಿಹೆನು;
ಆದುದಾಗಲಿ, ದೇವಿ
ನಿರ್ಭೀತ ನಾನು!
ಖಡ್ಗದಿಂದ ಸೀಳು ಎಂದು ಎದೆಯೊಡ್ಡಿ ನಿಂತ ತನ್ನ ಧೀರಕಂದನನ್ನು ತಾಯಿ ತನ್ನ ಮಡಿಲಿಗೆಳೆದುಕೊಂಡಳು, ಕನ್ನಡ ತಾಯ ಬಯಕೆಯಂತೆ!

Monday, October 24, 2011

ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?

ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?
ನೋವೆ ಬಾಳಿಗೆ ಸಾಣೆಯಲ್ತೆ?
ಮಣಿಕರ್ಣಿಕೆಯಲ್ಲಿ ಮಸಣಗಾಹಿಯು ನೀನಲ್ತೆ?
ಬೃಂದಾವನದಲ್ಲಿ ತುರುಗಾಹಿಯೂ ನೀನಲ್ತೆ?
ಅದರಿಂದಲೆ ನಾನು ನಿನ್ನನ್ನು
ಸುಖದಲ್ಲಿಯೂ ದುಃಖದಲ್ಲಿಯೂ ಕಂಡು ಆರಾಧಿಸಬಲ್ಲೆ.
೫.೯.೧೯೩೦ರಂದು ಬರೆದ ಸಾಲುಗಳಿವು. ಆದರೆ ೧೯೨೬ರ ಹೊತ್ತಿಗಾಗಲೇ ಈ ತೆರನಾದ ಮನೋಭೂಮಿಕೆ ಕುವೆಂಪು ಅವರಿಗೆ ಸಿದ್ಧಿಸಿತ್ತು ಎಂಬುದಕ್ಕೆ ಹಲವಾರು ಕವನಗಳು ಸಾಕ್ಷಿಯಾಗಿವೆ. ಮೈಸೂರಿನ ಸಂತೇಪೇಟೆಯ ಗಲಾಟೆ ಗೊಂದಲಗಳ ಗೂಡಿನಂತಿದ್ದ ರೂಮಿನಲ್ಲಿ ವಾಸವಾಗಿದ್ದ ತರುಣ ಕವಿ ಪುಟ್ಟಪ್ಪ, ಮಹಾಕವಿ ಕುವೆಂಪು ಆಗಿ ಬದಲಾಗುವ ಮಹತ್ ಘಟನೆ ಘಟಿಸುವ ಮೊದಲು ಅಂದರೆ ೫.೧೦.೧೯೨೬ರಂದು ಪ್ರಾರ್ಥನಾ ಎಂಬ (ಅಪ್ರಕಟಿತ) ಕವಿತೆಯನ್ನು ಬರೆದಿದ್ದರು. ಅಂದು ಅವರು ತೀವ್ರತರವಾದ ಜ್ವರದಿಂದ ಬಳಲಿಹೋಗಿದ್ದರು. ಅದು ಹೀಗಿದೆ.
ಕ್ಷಣಮಾತ್ರ ಹೀನಬಯಕೆಗಳ ಬಿಸುಡು, ಮನವೆ!
ಕ್ಷಣಮಾತ್ರ ಪರಮ ಬಯಕೆಯನು ಬಯಸು, ಮನವೆ!
ಧೂಮಪರಿವೃತಮಾದ ಭೂಮಿಯಿಂ ಮೇಲೇರು
ನಿರ್ಮಲಾನಿಲ ಭರಿತ ನೀಲ ಗಗನವ ಸೇರು.
ಕೊಳೆತು ನಾರುವ ತಿಪ್ಪೆಯಂ ತ್ಯಜಿಸಿ ಹಾರು.
ರಮಣೀಯತರ ಸುಮದ ನವಮಧುವ ಹೀರು.
ಕ್ಷಣಮಾತ್ರ ಹೀನಬಯಕೆಗಳ ಬಿಸುಡು, ಮನವೆ!
ಕ್ಷಣಮಾತ್ರ ಪರಮ ಬಯಕೆಯನು ಬಯಸು, ಮನವೆ!
ಮೇಲಿನ ಕವಿತೆ ಸೃಷ್ಟಿಯಾಗುವುದಕ್ಕೆ ಹತ್ತು ದಿನ ಮೊದಲೆ (೨೬.೯.೧೯೨೬) ’ಕೃಪೆ’ ಎಂಬ ಕವನ ಸೃಷ್ಟಿಯಾಗಿದ್ದು ಅದರಲ್ಲಿ ಅಭದ್ರತೆಯಿಂದ ಪಾತಾಳಕ್ಕಿಳಿದಿರುವ ತನ್ನ ಮೇಲೆ ಕೃಪೆ ಮಾಡುವಂತೆ ತಾಯಿಯನ್ನು ಕೋರುವ ಚಿತ್ರಣವಿದೆ.
ಪ್ರಾರ್ಥಾನಾರೂಪದ ಇಂತಹ ಕವಿತೆಗಳು ಸೃಷ್ಟಿಯಾದ ನಂತರ ನಡೆದ ಘಟನಾವಳಿಗಳ ಬಗ್ಗೆ ನೆನಪಿನದೋಣಿಯಲ್ಲಿ ಕವಿ ನನ್ನ ಪ್ರಾರ್ಥನೆಗೆ ಓಗೊಡುವಂತೆ ಕ್ಲೇಶರೂಪಿ ಭಗವತ್ ಕೃಪೆಯ ಗದೆಯಾಘಾತ ಬಂದೆರಗಿರು. ಕೊಳೆತು ನಾರುವ ತಿಪ್ಪೆಯಿಂದ ನನ್ನನ್ನು ರಮಣೀಯತರ ಸುಮದ ನವಮಧುವಿರುವ ಉದ್ಯಾನದೆಡೆಗೆ ಕಚ್ಚಿ ಹಾರಿತು ವಿಧಿಯ ಉಗುರುಗೊಕ್ಕು! ಎಂದು ಬರೆದಿದ್ದಾರೆ.
ಅಂದು ಸಂಜೆ ಶ್ರೀರಾಮಕೃಷ್ಣಾಶ್ರಮದಲ್ಲಿ, ನಾ. ಕಸ್ತೂರಿಯವರ ನೇತೃತ್ವದ ’ವಿವೇಕಾನಂದ ರೋವರ್ ಸ್ಕೌಟ್ಸ್’ ದಳದ ಉದ್ಘಾಟನೆಯಾಗುತ್ತದೆ. ಅಲ್ಲಿ ಕುವೆಂಪು ಅವರ ’ಶ್ರೀ ವಿವೇಕಾನಂದ ಬಾಲಚಾರರ ಹಾಡು’ ಸಾಮೂಹಿಕವಾಗಿ ಹಾಡಲ್ಪಡುತ್ತದೆ. ಆದರೆ ಕವಿಯ ಪತ್ತೆಯೇ ಇಲ್ಲ!. ಅದನ್ನರಿತ ಸ್ವಾಮಿ ಸಿದ್ಧೇಶ್ವರಾನಂದರು, ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಪುಟ್ಟಪ್ಪ ತೀವ್ರ ಜ್ವರಗ್ರಸ್ತನಾಗಿ ಮಲಗಿರುವ ಹಾಗೂ ವೈದ್ಯರ ಬಳಿಗೂ ಹೋಗದಿರುವ ಸಮಾಚಾರ ದೊರೆಯುತ್ತದೆ. ಸಮಾರಂಭ ಮುಗಿದ ಮೇಲೆ ಸ್ವಾಮೀಜಿ, ತಾತಗಾರು (ನಿವೃತ್ತ ರೈಲ್ವೆ ಅಧಿಕಾರಿ ವೆಂಕಟಸುಬ್ಬಯ್ಯನವರು) ಮತ್ತು ನಾ. ಕಸ್ತೂರಿಯವರು ಅವರನ್ನು ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ಫೀಟನ್ (ನಾಲ್ಕು ಚಕ್ರದ ಕುದುರೆಯ ಕೋಚ್, ಸ್ವಲ್ಪ ದೊಡ್ಡದು) ತೆಗೆದುಕೊಂಡು ಹೊರಡುತ್ತಾರೆ. ಆಗ ಕಸ್ತೂರಿಯವರು, ’ನಮ್ಮ ವಿವೇಕಾನಂದ ರೋವರ್ ಸ್ಕೌಟ್ದಳದ ಮೊತ್ತಮೊದಲನೆಯ ಗುಡ್ ಟರ್ನ್ ಅದೇ ಆಗಲಿ, ಪುಟ್ಟಪ್ಪನವರ ಸೇವೆ!’ ಎಂದು ತಮ್ಮ ಸಂತೋಶಶೀಲದ ವಿನೋದಾತ್ಮಕ ರೀತಿಯಲ್ಲಿ ಹೇಳಿ, ಲಕ್ಷ್ಮಣ ಮತ್ತು ಚಂದ್ರ ಎಂಬ ಇಬ್ಬರು ಸ್ಕೌಟ್ ಹುಡುಗರನ್ನು ಕರೆದುಕೊಂಡು ಹೊರಟರಂತೆ!
ಅವರೆಲ್ಲಾ ಸಂತೆಪೇಟೆಯ ಕೊಠಡಿ ತಲುಪಿದಾಗ, ಗೌರವ ಸೂಚಿಸುವುದಕ್ಕಾದರೂ ಏಳಲಾಗದಷ್ಟು ಜ್ವರಪೀಡಿತರಾಗಿ ಕವಿ ಮಲಗಿದ್ದರು. ಜ್ವರ ೧೦೪-೧೦೫ ಡಿಗ್ರಿ ಇತ್ತಂತೆ. ಅಲ್ಲಿಯ ಕೊಳಕು ವಾತಾವರಣ, ಹಾಸಿಗೆಯಲ್ಲಿ ಹುದುಗಿ ಮಲಗಿದ್ದ ಕವಿ, ಪಕ್ಕದಲ್ಲಿ ಗುಡ್ಡೆಹಾಕಿಕೊಂಡಿದ್ದ ಪುಸ್ತಕಗಳು... ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ಸ್ವಾಮೀಜಿ ಆಸ್ಪತ್ರೆಗೆ ಸೇರಿಸಲು ಬಂದಿರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರಂತೆ. (ಅದಕ್ಕೆ ಮುಂಚೆಯೇ, ಅಂದರೆ ೧೭.೨.೧೯೨೬ರಂದು ಮೊದಲಬಾರಿಗೆ ತಾತಗಾರು ಅವರ ಜೊತೆಯಲ್ಲಿ ಆ ರೂಮಿಗೆ ಬಂದಿದ್ದಾಗಲೇ, ಅದರ ಕೊಳಕುತನವನ್ನು, ಅಲ್ಲಿನ ಗಲಾಟೆಯ ವಾತಾವರಣವನ್ನು ಕಂಡು ಸ್ವಾಮೀಜಿ ’Puttappa how can a poet like you live in this dingy place?’ ಎಂದಿದ್ದರಂತೆ! ಆಗ ಅಲ್ಲಿದ್ದ ಸಂಪಿಗೆ ಮರವೊಂದನ್ನು ತೋರಿಸಿ ಕುವೆಂಪು ಅವರು ’Why Swamiji, what is wrong with the place? There is a beautiful Champak Tree!’ ಎಂದು ಉತ್ತರಿಸಿದ್ದರಂತೆ!) ಸುಮಾರು ಅರ್ಧಮುಕ್ಕಾಲು ಗಂಟೆ ಪುಸಲಾಯಿಸಿದರೂ ಕೊಠಡಿಯನ್ನು ಬಿಡಲು ಒಪ್ಪದಿದ್ದ ಕವಿಗೆ, ಸ್ವಾಮೀಜಿಯವರು, ’ಪುಟ್ಟಪ್ಪ ನಿಮಗೆ ಆಸ್ಪತ್ರೆಯಲ್ಲಿ ಮೇಲಿನ ಮಹಡಿಯಲ್ಲಿ ಅತ್ಯಂತ ಸೊಗಸಾದ ರೂಮ್ ಕೊಡಿಸುತ್ತೇನೆ. ಅಲ್ಲಿಂದ ನೋಡಿದರೆ ಮೈಸೂರು ಚಾಮುಂಡುಬೆಟ್ಟ ದೀಪದ ಸಾಲುಗಳು ಎಲ್ಲಾ ಕಾಣಸಿಗುತ್ತವೆ’ ಎಂದು ಮುಂತಾಗಿ ಪುಸಲಾಯಿಸಿದರೆ, ತಾತಗಾರು ವಿವೇಕದ ಮಾತುಗಳನ್ನು ಹೇಳಿ, ಆಸ್ಪತ್ರೆ ಸೇರುವಂತೆ ಒತ್ತಾಯಿಸಿದರಂತೆ. ’ತಾಯಿ ಇದ್ದಾಳೆ. ಯೋಗಕ್ಷೇಮವೆಲ್ಲ ಅವಳ ಕೈಲಿ’ ಎಂಬುದು ಕವಿಯ ಧೋರಣೆ! ಆದರೆ ’ನನ್ನ ಹಟಮಾರಿತನದ ಅವಿವೇಕ ಬಿಲ್‌ಕುಲ್ ಆಸ್ಪತ್ರೆಗೆ ಹೋಗಲು ಒಪ್ಪಲಿಲ್ಲ’ ಎನ್ನುತ್ತಾರೆ ಕವಿ. ಆಗ ಸ್ವಾಮೀಜಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತುಬಿಟ್ಟರಂತೆ. ಆ ಕ್ಷಣ ಸ್ವಲ್ಪಹೊತ್ತು ಯಾರೂ ಮಾತನಾಡಲಿಲ್ಲ. ’ಆ ಕ್ಷಣ’ವನ್ನು ಕುರಿತು ಕವಿ ಹೇಳುವುದು ಹೀಗೆ: ’ನನ್ನ ಭವಿಷ್ಯಜ್ಜೀವನದ ಹಣೆಯ ಬರಹದ ನಿರ್ಣಯದ ವಿಷಯದಲ್ಲಿ ಅಸುರೀ ಶಕ್ತಿಗಳೀಗೂ ದೈವೀ ಶಕ್ತಿಗಳೀಗೂ ತೂಗುಯ್ಯಾಲೆಯ ಕಾದಾಟ ನಡೆಯುತಿತ್ತೆಂದು ತೋರುತ್ತದೆ! ದೇವರ ಪಾದ ಸೇರಿದ್ದ ನನ್ನ ತಂದೆ ತಾಯಿಯರು ಆತನಲ್ಲಿ ಮೊರೆಯಿಟ್ಟಿರಬಹುದು! ಕನ್ನಡ ತಾಯಿ ತನ್ನ ಕೈಜೋಡಿಸಿ ಸರ್ವಭಾಷಾಮಯೀ ಮಹಾಸರಸ್ವತಿಗೆ ತನ್ನ ಕಂದನ ಪರವಾಗಿ ನಮನಗೈದಳೋ ಏನೊ? ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮಧುಮಗಳು, ಸ್ವಾಮಿ ವಿವೇಕಾನಂದ, ಶ್ರೀರಾಮಕೃಷ್ಣಪರಮಹಂಸ, ಶ್ರೀರಾಮಾಯಣದರ್ಶನಂ ಇತ್ಯಾದಿ ಕೃತಿರೂಪಿ ಅಲೋಕಚೇತನಗಳು ತಮ್ಮ ಆಗಾಮೀ ಅವತರಣ ಪಾತ್ರದ ಶಾರೀರಿಕ ಕ್ಷೇಮಕ್ಕಾಗಿ ತಪೋಲೋಕಯಾತ್ರಿಗಳಾಗಿದ್ದುವೊ ಏನೊ? ವಿಶಾಲ ಜಗಜ್ಜೀವನದಲ್ಲಿ ಒಂದು ಯಃಕಶ್ಚಿತ ನಗರದ ಯಃಕಶ್ಚಿತ ಬೀದಿಯ ಒಂದು ಯಃಕಶ್ಚಿತ ಹೋಟೆಲಿನ ಉಪ್ಪರಿಗೆಯ ಕಿರುಕೊಠಡಿಯಲ್ಲಿ ಒಬ್ಬ ಯಃಕಶ್ಚಿತ ವಿದ್ಯಾರ್ಥಿಯ ಕ್ಷೇಮಕ್ಕಾಗಿ ಆ ಸಂಜೆ ಜರುಗುತ್ತಿದ್ದ ಆ ಘಟನೆ ತಾತ್ಕಾಲಿಕ ಬಾಹ್ಯ ದೃಷ್ಟಿಗೆ ಅತ್ಯಂತ ಯಃಕಶ್ಚಿತವಾಗಿ ತೋರುತ್ತಿದ್ದರೂ ನನ್ನನ್ನು ಗುರುವಿನೆಡೆಗೆ ಕರೆದ ಗುರಿವಿಗೆ - ಆ ಸಂನ್ಯಾಸಿಗೆ- ಆತನ ಯೋಗದೃಷ್ಟಿಗೆ- ಅದಾಗಿತ್ತು ಒಂದು ಮಹದ್ ಘಟನೆ!’
ಸ್ವಾಮೀಜಿ ತುಸು ಗದರಿಸುತ್ತಲೇ ಒತ್ತಾಯಿಸಿದಾಗ, ಅಂತೂ ಕೊನೆಗೆ ಆಸ್ಪತ್ರೆ ಸೇರಲು ಕವಿ ಒಪ್ಪಿಕೊಳ್ಳುತ್ತಾರೆ. ಫೀಟನ್ ಏರಿ ಕೃಷ್ಣರಾಜೇಂದ್ರ ಆಸ್ಪತ್ರೆ ಸೇರುತ್ತಾರೆ. ಸ್ವಾಮೀಜಿ ಹೇಳಿದ್ದಂತೆ ಮೇಲಿನ ಮಹಡಿಯ ಸೊಗಸಾದ ಸ್ಥಳದಲ್ಲಿ ಸುಪ್ಪತ್ತಿಗೆಯ ಮಂಚ ದೊರಕಿತಂತೆ! ಆದರೆ ಒಂದೇ ದಿನದಲ್ಲಿ, ಆ ಸಮಯದಲ್ಲಿ ಅವರಿಗೆ ಕಜ್ಜಿಯೂ ಇದ್ದುದರಿಂದ ಆಸ್ಪತ್ರೆಯ ಮುಖ್ಯ ಕಟ್ಟಡದ ಹಿಂಬದಿಯಲ್ಲಿ ಸ್ವಲ್ಪ ದೂರದಲ್ಲಿದ್ದ ಷೆಡ್ಡುಗಳಿಗೆ ವರ್ಗಾಯಿಸಿದರಂತೆ. ಆ ಸಮಯದಲ್ಲಿ ಮಾನಸಿಕ ಖಿನ್ನತೆಯೂ ಉಂಟಾಗುತ್ತಿತ್ತಂತೆ. ಸ್ವಾಮೀಜಿ ತಂದುಕೊಟ್ಟಿದ್ದ ಶ್ರೀಗುರುಮಹರಾಜ್, ಶ್ರೀಮಹಾಮಾತೆ ಮತ್ತು ಶ್ರೀ ವಿವೇಕಾನಂದರು ಇದ್ದ ಮಡಿಸಿಟ್ಟುಕೊಳ್ಳಬಹುದಾಗಿದ್ದ ಒಂದು ಚಿತ್ರಪಟವನ್ನು ನೋಡುತ್ತಾ ನೋಡುತ್ತಾ ಧೈರ್ಯ ತಂದುಕೊಳ್ಳುತ್ತಿದ್ದರಂತೆ. ಅದನ್ನು ಎದೆಗೂ ಹಣೆಗೂ ಒತ್ತಿಕೊಳ್ಳುತ್ತಾ ಶ್ರೀಗುರುವನ್ನು ಬೇಡಿಕೊಳ್ಳುತ್ತಿದ್ದರಂತೆ! (ಆ ಚಿತ್ರಪಟ ನೆನಪಿನ ದೋಣಿಯಲ್ಲಿ ಬರೆಯುವಾಗಲೂ ಅವರ ಬಳಿಯಿತ್ತಂತೆ). ಮಾನಸಿಕವಾಗಿ ಅತ್ಯಂತ ಕ್ಷೋಭೆಗೊಳಗಾಗಿದ್ದ ಕವಿಯ ಮನಸ್ಸಿಗೆ ಸ್ವಾಮೀಜಿಯ ಸಾಂತ್ವಾನ ಹಿತವಾಗುತ್ತಿತ್ತು. ಅವರ ಪ್ರಭಾವದಿಂದ ವಿಶೇಷ ಔಷಧ ಉಪಚಾರಗಳು ನಡೆದಿದ್ದವು. ಆಗ ಒಬ್ಬ ಯುವ ಡಾಕ್ಟರ್ ಒಬ್ಬರು, ತರುಣಿಯಾದ ನರ್ಸಿಗೆ ಸಲಹೆ ಸೂಚನೆ ಕೊಡುತ್ತಿದ್ದಾಗ, ಕುವೆಂಪುವನ್ನು ತೋರಿಸುತ್ತಾ ’You have got a beautiful patient to nurse!’ ಎನ್ನುತ್ತಿದ್ದರಂತೆ. ಅಂತಹ ಸರಸ ಸಂಭಾಷಣೆಯ ಮಾತುಗಳು, ಆವೊತ್ತಿನ ಕವಿಯೆ ಮನಸ್ಥಿತಿಗೆ, ಅತಿರೇಕದ ನೀತಿಪ್ರಜ್ಞೆಗೆ ಅಸಹ್ಯವಾಗಿ ಜುಗುಪ್ಸೆ ಹುಟ್ಟಿಸುತ್ತಿದ್ದುವಂತೆ! ಈ ತೆರನಾದ ಅಸ್ಥಿರ ಮನಸ್ಥಿತಿಯ ಸಮಯದಲ್ಲೇ (೨೧.೧೦.೧೯೨೬) ಬರೆದ ಎರಡು ಕವಿತೆಗಳು ’ನನ್ನ ಹೃದಯದಲ್ಲಿ ಉಂಟಾಗಿದ್ದ ಕ್ಷೋಭೆ, ಭೀತಿ, ದುಃಖ, ಧೈನ್ಯಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತವೆ’ ಎನ್ನುತ್ತಾರೆ. ಆ (ಅಪ್ರಕಟಿತ) ಕವಿತೆಗಳು ಹೀಗಿವೆ.

ಘೋರ ಘನ ನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
ಮೇಲೆ ನೋಡೆ ಶಶಿ ತಾರೆಗಳಿಲ್ಲ
ಕಾರ ಮುಗಿಲೋ ಮುತ್ತಿದೆ ಎಲ್ಲ.
ಚಂಡ ಅನಿಲ ಗರ್ಜಿಸಿ ಭೋರೆದು
ಧರೆಯ ತಲ್ಲಣಿಸಿ ಬೀಸುವನಿಂದು.
ಗುಡುಗು ಅಂಬರದಿ ಆರ್ಭಟಿಸುತಿದೆ
ಮಿಂಚು ಥಳಥಳಿಸಿ ಓಡುತಲಿಹುದು.
ಘೋರ ಘನ ನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
ಕೂಗಿದರೆ ನಾನು, ಮರುದನಿಯಿಲ್ಲ;
ಆಪ್ತವಚನದಾ ಭರವಸೆಯಿಲ್ಲ!
ತಿರುಗಾಡುವವರ ಸುಳಿವೇ ಇಲ್ಲ;
ಬಹು ಕಾಳರಾತ್ರಿಯಿದು, ಹೇ ಜನನಿ!
ಕೇಳಿಬರುತಲಿದೆ ಕಿವಿಗಿಂಪಾಗಿ!
ಕಂಡರು ಕಾಣದ ತೆರದೊಳು ನೀನು
ಮಿಂಚಿನ ಬೆಳಕಲಿ ಅಡಗುವೆ ತೋರಿ!
ಅಂಧನಂತೆ ನಾ ಬೇಡುವೆ ನಿನ್ನ;
ಕೈಹಿಡಿದೆನ್ನನು ನಡೆಸೌ, ತಾಯೆ!
ಘೋರ ಘನ ನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!

ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ಸುತ್ತ ನೋಡೆ ನಿರ್ಜನ ಮರುಭೂಮಿ
ಎತ್ತಿಕೊಳ್ಳುವರನೊಬ್ಬರ ಕಾಣೆ!
ಜೊತೆಗಾರರೆಲ್ಲ ನಡೆದರು ಮುಂದೆ
ಏಕಾಂಗಿಯಾಗಿ ಉಳಿದೆನು ಹಿಂದೆ.
ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ತಾಳಲಾರೆ ನಾನಿದು ಘೋರ ಮೌನ,
ಬಾಲನ ಕರುಣಿಸಿ ಕಾಯೌ, ತಾಯೆ.
ನಿನ್ನೆರಡು ಕರಕಮಲಗಳಿಗೆ ಮನವು
ಹಂಬಲಿಸುತಿಹುದು ಕಂಬನಿ ತುಂಬಿ.
ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ಆ ಚಿತ್ರಪಟವನ್ನು ನೋಡುತ್ತಾ ಮೊರೆಯಿಡುತ್ತಾ ಕೃಪಾಹಸ್ತಕ್ಕಾಗಿ ಹಂಬಲಿಸುತ್ತಿದ್ದಾಗಲೇ (೨೩.೧೦.೧೯೨೬) ರಚಿತವಾದ ಇನ್ನೊಂದು ಅಪ್ರಕಟಿತ ಕವನ ಹೀಗಿದೆ.
ಹೃದಯ ಸರಸಿಜನ ಜಲವು
ಆರಿಹೋಗಿದೆ, ಜನನಿ;
ಕಮಲ ನೈದಿಲೆ ಎಲ್ಲ
ಬಳಲಿ ಬೆಂಡಾಗಿಹವು.
ಅರಸಂಜೆಗಳು ಎಲ್ಲ
ಹಾರಿಹೋದವು ದೂರ
ಅಂಚಿನೊಳು ನಲಿನಲಿವ
ಹಸುರಿಲ್ಲ! ಕಳೆಯಿಲ್ಲ!
ಅಳಿದಿಹುದು ಸೊಬಗೆಲ್ಲ,
ಮಸಣದಂತಿಹುದೆಲ್ಲ;
ಕರುಣ ಸರಿಯನು ಸುರಿಸು!
ಭಕುತಿ ಬುಗ್ಗೆಯ ಬರಿಸು!
ಜಲ ತುಂಬಿ ತುಳುಕಾಡಿ,
ಮುನ್ನಿನಂದದಿ ಗಾಡಿ
ಮೆರೆಯಲಾನಂದದಿಂದ,
ಶೋಭಿಸಲಿ ಚೆಂದದಿಂದ!
ಕವಿಯ ಕರ್ಮ ನಿಂತುಹೋಗಿತ್ತು. ಅಭದ್ರತೆ ಕಾಡುತ್ತಿತ್ತು. ಖಿನ್ನತೆ ಆವರಿಸಿತ್ತು. ಭರವಸೆ ಬತ್ತುತ್ತಿತ್ತು. ಆಗೆಲ್ಲಾ ಗುರುವಿನ ಕೃಪಾಕಟಾಕ್ಷಕ್ಕಾಗಿ ಕವಿ ಹಂಬಲಿಸುತ್ತಿದ್ದರು. ಹೀಗೆ ಆರ್ತನಾದ ಹೊಮ್ಮುತ್ತಿದ್ದರೂ ಕವಿಯ ಅಂತರಾಳದಲ್ಲಿ ಅಂತರಾತ್ಮನಿಗೆ ಸಹಜವಾಗಿರುವ ಆಶಾವಾದ ತಲೆಯೆತ್ತಿ ಧೈರ್ಯಘೋಷ ಮಾಡಿ ಹುರಿದುಂಬಿಸುತ್ತಿತ್ತಂತೆ! ಮೇಲಿನ ಕವಿತೆ ರಚಿತವಾದಂದೇ (೨೩.೧೦.೧೯೨೬) ಪ್ರಸಿದ್ಧವಾದ, ತನಗೆ ತಾನೇ ಹೇಳಿಕೊಳ್ಳುವಂತೆ ಬರೆದ ’ನಡೆಮುಂದೆ’ ಎಂಬ ಕವಿತೆ ರಚಿತವಾಗಿದ್ದು. ಅದು ಕೊಳಲು ಸಂಗ್ರಹದಲ್ಲಿ ಪ್ರಕಟವಾಗಿತ್ತು. ಅ ಇಡೀ ಕವಿತೆಯನ್ನು ಅವಲೋಕಿಸಿದರೆ ಕವಿಯ ಆತ್ಮವಿಶ್ವಾಸ, ಕೆಚ್ಚು, ಧೈರ್ಯ, ಮನೋಬಲ, ಧೀರೋದಾತ್ತ ನಿಲುವು, ದರ್ಶನ ಎಲ್ಲವೂ ವಿಧಿತವಾಗುತ್ತವೆ! ಈ ಕವಿತೆ ರಚಿತವಾದ ಮೇಲೆ, ಕೆಲ ದಿನಗಳಲ್ಲೇ ಕೆ.ಆರ್.ಆಸ್ಪತ್ರೆಯಿಂದ ನೇರವಾಗಿ ರಾಮಕೃಷ್ಣಾಶ್ರಮದ ಮಡಿಲಿಗೆ ಕುವೆಂಪು ಬರುತ್ತಾರೆ!! ಅಲ್ಲಿಂದ ಮುಂದೆ ನಡೆದುದೆಲ್ಲವೂ ಈಗ ಇತಿಹಾಸ!!!
ನಡೆ ಮುಂದೆ
ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ, ನಡೆ!
ವೇದಾಂತ ಕೇಸರಿಯೆ, ನುಗ್ಗಿ ನಡೆ ಮುಂದೆ!
ಗರ್ಜಿಸುತ ನಡೆ ಮುಂದೆ,
ನಿರ್ಭಯದಿ ನಡೆ ಮುಂದೆ.
’ತತ್ವಮಸಿ’ ’ಬ್ರಹ್ಮಾಸ್ಮಿ’ ’ಶಿವ ನಾನು’ ಎಂದು,
ವೀರಾತ್ಮ, ಧೀರಾತ್ಮ, ನಡೆ ನುಗ್ಗು ಮುಂದೆ!
ಹಿಂದಿರುಗಿ ನೋಡದಿರು, ಅಭಯಾತ್ಮನೀನು;
ಬೆದರದಿರು! ಬೆದರದಿರು! ಅಮೃತಾತ್ಮ ನೀನು!
ಆದ್ಯಂತವಿಲ್ಲದವ ನೀನು,
ಆನಂದಶೀಲನೈ ನೀನು!
ಹಂಗಿಸಿಯದೃಷ್ಟವಂ ನುಗ್ಗು ನಡೆ ಮುಂದೆ,
ಭಂಗಿಸುತ ಮೃತ್ಯುವಂ ನಡೆ ಮುಂದೆ, ಮುಂದೆ.
ಜಗದಿ ನಿನ್ನನು ತಡೆವ ಧೀರರಾರಿಲ್ಲ;
ನಿನ್ನ ನಾದಕೆ ಕಂಪಿಪುದು ಲೋಕವೆಲ್ಲ.
ಅದ್ವೈತವಿಲಯಾಗ್ನಿ ನಿನ್ನ
ಹೃದ್ವನವ ತುಂಬಿಹುದು ಮುನ್ನ!
ಅಶುಚಿಯೆಲ್ಲವ ದಹಿಸಿ ನುಗ್ಗಿ ನಡೆ ಬೇಗ,
ಪಾಪಪುಣ್ಯಗಳಿರಲಿ ನಡೆ ಮುಂದಕೀಗ.
ಪಾಪಿ ನಾನೆಂದಳಲು ಇದು ಕಾಲವಲ್ಲ!
ಎದ್ದೇಳು, ವಿಶ್ವಾತ್ಮ, ಹೇಡಿ ನೀನಲ್ಲ!
ಸೋಹಮೆನ್ನುತ ಏಳು! ಏಳು!
ಅಚಲಾತ್ಮ, ಎದದೇಳು! ಏಳು!
ನಿದ್ದೆಯನು ಬಿಡು; ನುಗ್ಗು ನಡೆ ಮುಂದೆ, ಮುಂದೆ,
ಎದ್ದೇಳು! ಎದ್ದೇಳು! ಎದ್ದು ನಡೆ ಮುಂದೆ!
ವೇದಾಂತಕೇಸರಿಯೆ, ಗರ್ಜಿಸುತ ಹೋಗು;
ಘೋರ ವಿಪಿನಗಳೆಲ್ಲ ಕಂಪಿಸಲಿ, ಕೂಗು!
ಕಾಳನಿಶೆ ಕವಿದರೇನು?
ಕಾರ್ಮುಗಿಲು ಮುಸುಗಲೇನು!
ಮಿಚ್ಚು ಥಳಿಸಲಿ, ಗರ್ಜಿಸಲಿ ಗುಡುಗು ಘೋರ;
ಧರೆಯ ತುಂಬಿದರೇನು ಕಾರ ಹಾಕಾರ?
ದಾರಿತೋರ್ಪುದು ನಿನ್ನ ನಯನಗಳ ಕಾಂತಿ;
ಹರುಷವೀವುದು ನಿನ್ನ ಹೃದಯದಾ ಶಾಂತಿ!
ಜನನ ಮರಣಾತೀತ ನೀನು;
ಹರ್ಷ ದುಃಖಾತೀತ ನೀನು;
ಅಳಿವಿಲ್ಲ; ಉಳಿವಿಲ್ಲ; ಬಾಳು ಬೇರಿಲ್ಲ;
ಉಂಟು ಇಲ್ಲೆಂಬುವಾ ಹಾಳು ಗೋಳಿಲ್ಲ!
ಧಿರಾತ್ಮ, ವೀರಾತ್ಮ, ನುಗ್ಗು ನಡೆ ಮುಂದೆ!
ಅಚಲಾತ್ಮ, ಅಮೃತಾತ್ಮ, ನಡೆ ಮುಂದೆ, ಮುಂದೆ!
ಗರ್ಜಿಸುತ ನಡೆ ಮುಂದೆ;
ನಿರ್ಭಯದಿ ನಡೆ ಮುಂದೆ!
ಎದ್ದೇಳು! ಎದ್ದೇಳು! ಏಳು! ನಡೆ ಮುಂದೆ!
ವೇದಾಂತಕೇಸರಿಯೆ, ನಡೆ ನುಗ್ಗು ಮುಂದೆ!
ಯುಗದಂತ್ಯದಲ್ಲಿ, ಎಂಬತ್ತೈದು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಅಂದು ತನ್ನನ್ನು ತಾನೇ ಉದ್ಬೋಧಗೊಳಿಸಿಕೊಂಡ ಕವಿ- ನಡೆದ ದಾರಿ, ಏರಿದ ಎತ್ತರ ಎಲ್ಲವೂ ಸಹೃದಯರನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸುತ್ತವೆ! ಅಂದ ಹಾಗೆ ಈ ಕವಿತೆ ಬರೆದಾಗ ಕವಿಗೆ ಇಪ್ಪತ್ತೆರಡು ವರ್ಷ!!!

Saturday, October 22, 2011

ಶಮೀವುಲ್ಲಾನ ಸೈಕಲ್ ಷಾಪಿನಲ್ಲಿ ಯಡ್ಯೂರಪ್ಪನ ಪೋಸ್ಟರ್!

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಲವತ್ತೆಂಟನ್ನು ಮೈಸೂರು ಶಿವಮೊಗ್ಗ ರಸ್ತೆ ಛೇದಿಸುವಲ್ಲಿರುವುದೇ ವರಗೂರು ಹ್ಯಾಂಡ್ ಪೋಸ್ಟ್. ನೀವು ಆ ಮಾರ್ಗವಾಗಿ ಓಡಾಡುವ ಬಸ್ಸುಗಳಲ್ಲಿ ಅಥವಾ ನಿಮ್ಮ ನಿಮ್ಮ ಕಾರುಗಳಲ್ಲಿ ಪ್ರಯಾಣಿಸುವಾಗ ಈ ಹ್ಯಾಂಡ್ಪೋಸ್ಟಿನಲ್ಲಿ ಆಕಡೆ ಈಕಡೆ ಕಣ್ಣಾಡಿಸಿದ್ದರೆ ನಿಮ್ಮ ಕಣ್ಣಿಗೆ ಕಾಣುವುದು, ಮೊದಲ ಸುತ್ತಿನಲ್ಲಿ ಹತ್ತಾರು ಪೆಟ್ಟಿಗೆ ಅಂಗಡಿಗಳು. ಎರಡನೆಯ ಸುತ್ತಿನಲ್ಲಿ ಒಂದೈವತ್ತು ಹೆಂಚಿನ-ಆರ‍್ಸಿಸಿಯ ಮನೆಗಳು, ಸ್ಕೂಲು, ಮಸೀದಿ, ರೈಸ್ ಮಿಲ್ಲು. ಮೂರನೆಯ ಸುತ್ತಿನಲ್ಲಿ ಸುಣ್ಣದ ಕಾರ್ಖಾನೆ, ಹಾಲೋಬ್ಲಾಕ್ಸ್ ಮಾಡುವ ಫ್ಯಾಕ್ಟರಿಗಳು, ಡಾಬಾ ಇತ್ಯಾದಿ ಇತ್ಯಾದಿ . . .

ಆದರೆ ನನಗೆ ಇಲ್ಲಿ ಮುಖ್ಯವಾಗುವುದು ಹತ್ತಿಪ್ಪತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಒಂದಾದ ಶಮೀವುಲ್ಲಾನ ಮಾಡರ‍್ನ್ ಸೈಕಲ್ ಷಾಪ್! ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಈ ಶಮೀವಲ್ಲಾನನ್ನು ನೋಡಿದ್ದೆ. ಆದರೆ ಆ ಮಾರ್ಗದಲ್ಲಿ ನಾನು ಪ್ರಯಾಣಿಸುವಾಗ, ಚನ್ನರಾಯಪಟ್ಟಣಕ್ಕೆ ಹೋಗುವಾಗ ಬಸ್ಸಿನಲ್ಲಿ ಎಡಗಡೆ ಕುಳಿತಿದ್ದರೆ, ನನ್ನ ಊರಿಗೆ ಹೋಗುವಾಗ ಬಲಗಡೆ ಕುಳಿತಿದ್ದರೆ, ಆತನ ಅಂಗಡಿಯ ಕಡೆ ಕಣ್ಣಾಡಿಸದೇ ಬಿಡುತ್ತಿರಲಿಲ್ಲ. ಆಗೆಲ್ಲಾ ನನ್ನ ಕಣ್ಣಿಗೆ ಬೀಳುತ್ತಿದ್ದ ಕೆಲವು ದೃಶ್ಯಗಳೆಂದರೆ, ತುಸು ವಾಲಿಕೊಂಡಿದ್ದ ಒಂದು ಹಳೆಯ ಪೆಟ್ಟಿಗೆ ಅಂಗಡಿ, ಅದರ ಮುಂದೆ ನಿಂತಿದ್ದ ನಾಲ್ಕಾರು ಸೈಕಲ್ಲುಗಳು, ಪಂಚರ್ ಹಾಕುತ್ತಲೋ, ಚಕ್ರದ ಬೆಂಡ್ ತೆಗೆಯುತ್ತಲೋ ಕುಳಿತಿರುತ್ತಿದ್ದ ಶಮೀವುಲ್ಲಾ, ಒಮ್ಮೊಮ್ಮೆ ಪಂಚರ್ ಹಾಕುತ್ತಿದ್ದ ಸುಮಾರು ಹತ್ತು ಹದಿನೈದು ವರ್ಷದ ಹುಡಗ (ಬಹುಶಃ ಅವನ ಮಗನಿರಬಹುದು), ಪೆಟ್ಟಿಗೆ ಅಂಗಡಿಯ ಮುಂದೆ ಎರಡು ಮರದ ತುಂಡುಗಳ ಮೇಲೆ ಇನ್ನೊಂದು ಮರದ ತುಂಡು ಇಟ್ಟು ಭದ್ರಪಡಿಸಿದ್ದ ಬೆಂಚಿನ ಮೇಲೆ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಾ, ಬೀಡಿ ಸೇದುತ್ತಾ ಬಸ್ಸಿಗೋ ಇನ್ಯಾವುದಕ್ಕೋ ಕಾಯುತ್ತಿದ್ದ ರೈತಾಪಿ ಜನಗಳು ಹೀಗೇ . . . ಆ ಚಿತ್ರಗಳು ಕಣ್ಣಮುಂದೆ ಚಲಿಸಿ ಮಾಯವಾಗುತ್ತವೆ.

ಆಗ, ಇಪ್ಪತ್ತೈದು ವರ್ಷಗಳ ಹಿಂದೆ, ನನಗೆ ಈತನ ಹೆಸರು ಕುಲ ಗೋತ್ರ ಯಾವುದೂ ಗೊತ್ತಿರಲಿಲ್ಲ. ನಾನೀಗಾಗಲೇ, ನನ್ನ ಹೈಸ್ಕೂಲು ದಿನಗಳು ಪುಸ್ತಕದಲ್ಲಿ ದಾಖಲಿಸಿರುವಂತೆ, ಮಂಜಣ್ಣ ನನಗೆ ಓಡಿಸಲು ಅವಕಾಶ ಮಾಡಿಕೊಟ್ಟಿದ್ದ ಹಿರೋಮೆಜೆಸ್ಟಿಕ್ ಮೋಟರ್ ಸೈಕಲ್ಲಿನ ಸ್ಟಾರ‍್ಟಿಂಗ್ ಪ್ರಾಬ್ಲೆಮ್ಮನ್ನು ಕ್ಷಣಾರ್ಧದಲ್ಲಿ ಸರಿಮಾಡಿಕೊಟ್ಟಿದ್ದ ಈ ಶಮೀವುಲ್ಲ ಆಗಿನ್ನೂ ಮೂವತ್ತು ಮೂವತ್ತೈದರ ಪ್ರಾಯದವ. ಈಗ ನಾನು ಮೊನ್ನೆ, ಅವನನ್ನು ಭೇಟಿಯಾದಾಗ ನೋಡಿದ್ದು, ಸುಮಾರು ಅರವತ್ತು ವರ್ಷಗಳ, ಹೊಟ್ಟೆಯಲ್ಲಿ ಬೊಜ್ಜು ತುಂಬಿಕೊಂಡ, ಬೀಡಿ ಎಳೆದೂ ಎಳೆದೂ ಒಳ ಹೋಗಿದ್ದ ಕೆನ್ನೆಗಳ, ದಾಡಿಯೆಲ್ಲಾ ಮೆಹಂದಿಯ ಬಣ್ಣದಿಂದ ಕೆಂಚಗಾಗಿದ್ದ ಶಮೀವುಲ್ಲಾನನ್ನು.

ನಾನು ಬೆಂಗಳೂರಿನಲ್ಲಿ ಕುಳಿತು, ನನ್ನ ತೋಟದಲ್ಲಿ ಅತ್ಯಂತ ಕಡಿಮೆ ದುಡ್ಡಿನಲ್ಲಿ ಕೊಬ್ಬರಿ ಶೆಡ್ ಮಾಡಲು ರೂಪಿಸಿದ ಹತ್ತಾರು ಯೋಜನೆಗಳಲ್ಲಿ ಒಂದನ್ನು ಕಾರ್ಯಗತಗೊಳಿಸಲು ಹಾಲೋಬ್ಲಾಕ್ಸುಗಳ ಬೆಲೆ ತಿಳಿದುಕೊಳ್ಳಬೇಕಾಗಿತ್ತು. ಅದಕ್ಕಾಗಿ ವರಗೂರು ಹ್ಯಾಂಡ್ಪೋಸ್ಟಿನಲ್ಲಿ ಪೈಪೋಟಿಯಲ್ಲಿ ನಡೆಯುತ್ತಿದ್ದ ಮೂರು ಫ್ಯಾಕ್ಟರಿಗಳಲ್ಲಿ ವಿಚಾರಿಸಿ, ಮತ್ತೆ ನನ್ನೂರಿಗೆ ಬಸ್ ಹತ್ತಲು ಅಲ್ಲಿಗೆ ಹೋಗಿದ್ದೆ. ಸಣ್ಣದಾಗಿ ಮಳೆ ಪ್ರಾರಂಭವಾಗಿದ್ದರಿಂದ ಹತ್ತಿರವೇ ಇದ್ದ ಶಮೀವುಲ್ಲಾನ ಸೈಕಲ್ ಷಾಪಿನ ಮುಂಗಟ್ಟಿಗೆ ಧಾವಿಸಿದ್ದೆ. ಶಮೀವುಲ್ಲಾ ಸೈಕಲ್ಲುಗಳನ್ನೆಲ್ಲಾ ಅಂಗಡಿಯೊಳಗೆ ಒತ್ತೊತ್ತಾಗಿ ಜೋಡಿಸಿ ಅಂಗಡಿ ಮುಚ್ಚುವ ಸನ್ನಾಹದಲ್ಲಿದ್ದ. ಮಳೆ ಬಂದಿದ್ದರಿಂದ ಅಂಗಡಿ ಮುಚ್ಚುವುದನ್ನು ನಿಲ್ಲಿಸಿ ಮತ್ತೆ ಅಂಗಡಿಯ ಹೊರಗೆ ನಿಂತುಕೊಂಡ. ನಾನು ಒಮ್ಮೆ ಅಂಗಡಿಯಲ್ಲೆಲ್ಲಾ ಕಣ್ಣಾಡಿಸಿದೆ. ಪೆಟ್ಟಿಗೆ ಅಂಗಡಿಯಲ್ಲಿ ಬರೀ ಸೈಕಲ್ಲುಗಳೇ ತುಂಬಿಹೋಗಿದ್ದವು. ಇನ್ನು, ಒಂದೇ ಒಂದು ಸೈಕಲ್ಲಗಲೀ, ಒಬ್ಬ ವ್ಯಕ್ತಿಯಾಗಲೀ ಆ ಅಂಗಡಿಯಲ್ಲಿ ಪ್ರವೇಶ ಪಡೆಯುವಂತಿರಲಿಲ್ಲ! ಒಂದು ತಗಡಿನ ಮೇಲೆ `ಮಾಡರ‍್ನ್ ಸೈಕಲ್ ಷಾಪ್, ಪ್ರೊ. ಶಮೀವುಲ್ಲ`ಎಂದು ಬರೆದಿತ್ತು. ಅಂಗಡಿಯ ಮೂಲೆಯೊಂದರಲ್ಲಿ ಯಡ್ಯೂರಪ್ಪನ ಚಿತ್ರ ನಗುತ್ತಿತ್ತು! ನನಗೋ ಆಶ್ಚರ್ಯ. ಆದರೆ ಅವನನ್ನು ಹೇಗೆ ಕೇಳುವುದು? ಅದಕ್ಕೆ ನನ್ನ ಅವನ ಮೊದಲ ಭೇಟಿಯ ಸಂದರ್ಭವನ್ನು ನೆನಪಿಸಿ ಪರಿಚಯಕ್ಕೆ ಮುಂದಡಿಯಿಟ್ಟೆ.

`ದಿನಕ್ಕೆ ಹತ್ತಾರು ಜನ ಬಂದು ಹೋಗೋ ಜಾಗ. ಇಪ್ಪತ್ತೈದು ವರ್ಷದ ಹಿಂದೆ ಮೋಟ್ರುಸೈಕಲ್ಲು ರಿಪೇರಿ ಮಾಡಿಕೊಟ್ಟಿದ್ದನ್ನು ಹೇಗೆ ನೆನಪಿಟ್ಟುಕೊಳ್ಳಲಿ ಹೇಳಿ?`ಎಂದು ಮಾತಿಗೆ ಮೊದಲಿಟ್ಟ.

ಸೋನೆ ಸ್ವಲ್ಪ ಬಿರುಸಾಗಿಯೇ ಬರುತ್ತಿದ್ದುದರಿಂದ ನನಗೂ ಮಾತನಾಡಲು ಸಾಕಷ್ಟು ಸಮಯ ಸಿಕ್ಕಿತ್ತು. `ವರಗೂರು ಮಂಜಣ್ಣ, ಕುಂದೂರುಮಠದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ, ಇಬ್ಬರನ್ನು ಮದುವೆಯಾಗಿದ್ದ`ಎಂದು ನೆನಪು ಮಾಡಿಕೊಡಲು ಪ್ರಯತ್ನಿಸಿದೆ.

ತಕ್ಷಣ, `ಆ ಮಂಜಣ್ಣನ ಗಾಡಿಯಾ? ಗೊತ್ತಾಯ್ತು ಬಿಡಿ. ಆಗ ನೀವು ಬಂದಿದ್ದಿರಾ? ಯಾವ್ದೋ ಸ್ಕೂಲು ಮಕ್ಕಳಲ್ಲವಾ? ಆ ಮಂಜಣ್ಣ ಈಗ ಎಲ್ಲಿದ್ದಾನೋ? ಇನ್ನೇನೇನು ವೇಷ ಹಾಕಿದ್ದಾನೋ? ಗಾರೆ ಕೆಲ್ಸ ಆಯ್ತು. ಮೇಸ್ತ್ರಿಕೆಲಸ್ ಆಯ್ತು. ಹೋಟೆಲ್ ಆಯ್ತು`ಎಂದ.

ನಾನು `ಅದೇ, ಆ ಸ್ಕೂಲು ಮಕ್ಕಳಲ್ಲಿ ಇದ್ದವನು ನಾನೆ ನೋಡು`ಎಂದೆ. ಮುಂದುವರೆದು, `ಬಹಳ ಸೈಕಲ್ಲುಗಳಿವೆಯಲ್ಲಾ, ಬ್ಯುಸಿನೆಸ್ ಜೋರೋ`ಎಂದೆ.

`ಹೌದು, ಎಲ್ಲಾ ಯಡ್ಯೂರಪ್ಪನ ದಯೆ`ಎಂದು ಯಡ್ಯೂರಪ್ಪನ ಫೋಟೋ ಕಡೆ ಕೈತೋರಿಸಿದ! ನನಗೆ ಬೇಕಿದ್ದುದೂ ಅದೆ.

`ಯಡ್ಯೂರಪ್ಪನ ಫೋಟೋ ಇಟ್ಟುಕೊಂಡಿದ್ದೀಯಲ್ಲ, ಅದು ಹೇಗೆ?`ಎಂದು ಕೇಳಿದೆ.

ಆತ ಬೀಡಿಯೊಂದನ್ನು ಹಚ್ಚುತ್ತಿದ್ದವನು ನಿಲ್ಲಿಸಿ `ಯಾಕೆ ಇಟ್ಟುಕೋಬಾರದಾ? ಅವರು ನಮ್ಮ ಸಿ.ಎಂ. ಅಲ್ಲವಾ?`ಎಂದು ಬೀಡಿ ಹಚ್ಚಿಕೊಂಡ. `ಈಗ ಹೇಳ್ತೀನಿ ಕೇಳಿ. ಊರತುಂಬಾ ಬರೀ ಮೋಟ್ರುಸೈಕಲ್ಲುಗಳೇ ಆಗಿ ಈ ಲಡಕಾಸಿ ಸೈಕಲ್ಲುಗಳನ್ನ ಕೇಳುವವರೇ ಇಲ್ಲದೆ, ನನ್ನ ಸೈಕಲ್ ಶಾಪ್ ಬಂದ್ ಆಗೋ ಹೊತ್ತಿನಲ್ಲಿ, ಈ ಆಪತ್ಬಾಂಧವ ಬಂದು ಈ ಇಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡೊ ಯೋಜನೆ ತಂದಿದ್ದು, ನನ್ನಂತಹ ಎಷ್ಟೋ ಮಂದಿಗೆ ಒಳ್ಳೆದಾಯ್ತು ನೋಡಿ. ದಿನಕ್ಕೆ ಐವತ್ತು ರೂಪಾಯಿ ಯಾಪಾರ ಇಲ್ದೆ ಒಪ್ಪತ್ತಿನ ಊಟಕ್ಕೆ ಲಾಟ್ರಿ ಹೊಡಿತಿದ್ದೆ. ಈಗ ದಿನಕ್ಕೆ ಸಾವ್ರ ಕಲೆಕ್ಷನ್ನು ಆದ್ರು ಆತು`ಎಂದ.

ದಂ ಎಳೆದು ಹೊಗೆ ಬಿಡುತ್ತಾ ಮಾತು ಮುಂದುವರೆಸಿದ. ನಾನೂ ಉತ್ತೇಜಕರಕವಾಗಿಯೇ ಪ್ರತಿಕ್ರಿಯಿಸುತ್ತಿದ್ದೆ. ಆದರೆ ನನ್ನ ಗಮನವೆಲ್ಲಾ ಆತನ ಮಾತಿನ ಮೇಲೆಯೇ ಇತ್ತು. `ನೋಡಿ. ಈ ಸುತ್ತಮುತ್ತ ಆರು ಹೈಸ್ಕೂಲು ಅವೆ. ಒಂದೊಂದು ಇಸ್ಕೂಲಲ್ಲಿ ನೂರು ಮಕ್ಕಳಂದ್ರು ಆರನೂರು ಮಕ್ಕಳಿದಾವೆ. ಅಷ್ಟಕ್ಕೆಲ್ಲಾ ನನ್ನದೊಂದೆ ಸೈಕಲ್ ಷಾಪ್. ಈಗ ಅರ್ಥವಾಗಿರ‍್ಬೇಕಲ್ಲ ನಿಮ್ಗೆ`ಅಂದ.

`ಆಹಾ! ಅದ್ಯಾವ ಪುಣ್ಯಾತ್ಮ ಐಡಿಯಾ ಕೊಟ್ಟನಪ್ಪ ಸೈಕಲ್ ಕೊಡೋದಿಕ್ಕೆ. ಈಯಪ್ಪ ಕೊಟ್ಟಿದ್ದೆ ಕೊಟ್ಟಿದ್ದು. ಅದೂ ಎಂಥಾ ಸೈಕಲ್ ಅಂತೀರಿ? ನಾನು ಹತ್ತಿ ಕೂತ್ಕೊಂಡು ಹೊಡೆದ್ರೆ ಸೈಕಲ್ ಚಕ್ರ ಖಲ್ಲಾಸ್! ಈ ಇಸ್ಕೂಲು ಮಕ್ಳಿಗೆ ಕೊಟ್ಟ ಮೂರೇ ವಾರದಲ್ಲಿ ಚಕ್ರ ಮುರ‍್ಕೊಂಡು, ಹ್ಯಾಂಡಲ್ ಬೆಂಡ್ ಮಾಡಿಕೊಂಡು, ಚೈನ್ ಹರ‍್ದುಕೊಂಡು ಇಲ್ಲಿಗೆ ತಂದು ಹಾಕ್ತವೆ. ಈಗಿನ ಮಕ್ಳು, ಈ ಬೈಕ್ ಜಮಾನದಲ್ಲಿ ಹುಟ್ಟಿ ಬೆಳೆದವು, ಭರ್ರ್ ಅಂತ ಹೋಗೋದೆ ಅವಕ್ಕೆ ಖುಷಿ. ಈ ಹಳ್ಳಿ ರಸ್ತೆಲಿ ಅವರ ಹೊಡತನೆಲ್ಲ ಈ ಲಡಕಾಸಿ ಸೈಕಲ್ಲು ಎಲ್ಲಿ ತಡಿತಾವೆ ಹೇಳಿ? ಇನ್ನು ಅವರ ಅಪ್ಪಂದಿರಿದಾರೆ ನೋಡಿ, ಸೈಕಲ್ ಮನೆಗೆ ಬಂದಿದ್ದ ತಡ, ಮಿಲ್ಲಿಗೆ, ರೇಷನ್ ತರೋಕೆ, ದನಿಗೆ ಮೇವು ತರಾಕೆ ಎಲ್ಲಕ್ಕೂ ಈ ಮಕ್ಳ ಸೈಕಲ್ಲೇ ಆಗ್ಬೇಕು. ಮೊದಲೇ ಲೋ ಕ್ವಾಲಿಟಿ ಐಟಮ್ಮು. ಇನ್ನು ಅವರ ಅಪ್ಪಂದಿರ ಕೈಗೆ ಸಿಕ್ಕಿದರೆ ಉಳಿಯೋದುಂಟಾ! ಜೊತೆಗೆ ಈ ಇಸ್ಕೂಲು ಮೇಷ್ಟ್ರುಗಳೋ ಕೊಟ್ಟಿರೋ ಸೈಕಲ್ಲನ್ನ ದಿನಾ ತರಲೇ ಬೇಕು ಅಂತ ಮಕ್ಳಿಗೆ ಒಂದೇ ತಾರೀಪು ಮಾಡ್ತಾರೆ. ಅವು ರಿಪೇರಿಗೆ ಅಂತ ಇಲ್ಲಿಗೆ ತಂದಾಕ್ತಾವೆ. ಒಟ್ಟಲ್ಲಿ ನನ್ನ ಅದೃಷ್ಟ. ಅಂಗಡಿ ಮುಚ್ಚಿ ಚನ್ನರಾಯಪಟ್ಟಣದಲ್ಲಿ ಆಟೋ ಓಡುಸ್ಕೊಂಡಿರೂ ಮಗನ ಮನೇಲಿ ಇದ್ಕೊಂಡು ಏನಾರ ವ್ಯಾಪಾರ ಮಾಡ್ಕೊಂಡು ಇರಾನ ಅಂದ್ಕೊಂಡಿದ್ದೆ. ಆದ್ರೆ ಈಗ ನೋಡಿ ಮಗನೇ ಆಟೋ ಓಡ್ಸೋದು ಬಿಟ್ಟು ಇಲ್ಲಿ ಬಂದು ಸೆಟ್ಲಾಗಿದಾನೆ. ಇಬ್ಬರು ಬೆಳಿಗ್ಗೆಯಿಂದ ಸಂಜೆವರ‍್ಗೂ ರಿಪೇರಿ ಮಾಡಿದ್ರೂ ಕೆಲ್ಸ ಮುಗಿಯಲ್ಲ`ಎಂದು ಅಂಗಡಿಯಲ್ಲಿ ಪೇರಿಸಿಟ್ಟ ಸೈಕಲ್ಲಿನ ರಾಸಿಯ ಕಡೆ ಕೈತೋರಿಸಿದ.

ಮಳೆ ನಿಂತಿದ್ದರೂ ಬಸ್ ಅಥವಾ ಆಟೋ ಬರದೆ ನಾನು ಹೋಗುವಂತಿರಲಿಲ್ಲ. ಮಾತಿನ ಲಹರಿಗೆ ಒಳಗಾಗಿಬಿಟ್ಟಿದ್ದ ಶಮೀವುಲ್ಲಾ ಮಾತು ನಿಲ್ಲಿಸುವಂತೆಯೂ ಇರಲಿಲ್ಲ.

ನಾನೇ `ಮತ್ತೆ ಈ ಫೋಟೋ ನಿನ್ನ ಅಂಗಡಿಗೆ ಹೇಗೆ ಬಂತು? ನಿಜವಾಗ್ಲೂ ನೀನು ಯಡ್ಯೂರಪ್ಪಗೆ ಓಟ್ ಮಾಡ್ತೀಯಾ`ಎಂದೆ.

`ನೋಡಿ ಸ್ವಾಮಿ. ನಾನು ಯಾರಿಗೆ ಓಟ್ ಹಾಕ್ತಿನೋ, ಬಿಡ್ತಿನೋ ಅದಲ್ಲ. ಆದ್ರೆ ಈವಯ್ಯನಿಂದ ನನ್ಗೆ ಉಪ್ಯೋಗ ಆಗಿದೆ, ಅದು ಮುಖ್ಯ. ಇನ್ನೂ ಹತ್ತಾರು ವರ್ಷ ಈವಯ್ಯನೇ ಸಿಎಮ್ಮಾಗಿರ‍್ಲಿ ಬಿಡಿ. ಇಲ್ಲ ಮುಂದೆ ಬರೋರು ಯಾರಾದ್ರೂ ಸರಿ. ಸೈಕಲ್ ಕೊಡೋದು ಮಾತ್ರ ನಿಲ್ಸೋದು ಬ್ಯಾಡ ಅಷ್ಟೆ' ಎಂದು ಬಾಗಿಲು ಮುಚ್ಚಲು ಅನುವಾದ.

`ಅದ್ಸರಿ ಈ ಫೋಟೋ ಬಂದ ಕಥೆ ಹೇಳಲೇ ಇಲ್ಲ ನೀನು' ಎಂದೆ.

`ಅದಾ. ಇಲ್ಲಿ ಬರೋ ಸೆಟ್ಲ್ ಬಸ್ ಹಿಂದೆ, ಯಡ್ಯೂರಪ್ಪ ಹೆಂಗಸ್ರಿಗೆ ಸೀರೆ ಕೊಡ್ತಾ ಇರೋ ಫೊಟೋ ಇತ್ತು. ಅದ್ರ ಎರಡ ಕಡೆ ಸ್ಕ್ರೂ ಕಿತ್ತೋಗಿ, ಅದು ಬಡಾ ಬಡಾ, ಬಡಾ ಬಡಾ ಅಂತ ಸೌಂಡ್ ಮಾಡ್ತಿತ್ತು. ಇಲ್ಲಿ ಟೀ ಕುಡಿಯೋಕೆ ಅಂತ ನಿಲ್ಸಿದ್ದಾಗ ಅದ್ರ ಡ್ರೈವರ್, ಸಾಬಣ್ಣ ಇದನ್ನ ಕಿತ್ತಾಕೋ ಅಂದ್ರು. ಕಿತ್ತಾಕಿದ ಮೇಲೆ ಅದನ್ನ ಏನು ಮಾಡೋದು. ಯಡ್ಯೂರಪ್ಪನ ಚಿತ್ರಾನ ಕತ್ತರಿಸಿ ಒಳಗೆ ಅಂಟಿಸ್ದೆ. ಉಳಿದಿದ್ದನ್ನ, ಇಗೋ ಇಲ್ನೋಡಿ ನಿಮ್ಮ ನೆತ್ತಿ ಮೇಲೆ, ಅಲ್ಲಿಗೆ ಹಾಕಿದೆ`ಎಂದು ಅಂಗಡಿ ಮುಂಗಟ್ಟಿಗೆ ಹಾಕಿದ್ದ ಚಪ್ಪರವನ್ನು ತೋರಿಸಿದ.

ಶೂನ್ಯದಿಂದ ಚಾಚಿರುವ ಎರಡು ಕೈಗಳಿಂದ ಸೀರೆ ತೆಗೆದುಕೊಂಡು ನಗುತ್ತಿರುವ ಇಬ್ಬರು ಹೆಂಗಸರ ಚಿತ್ರ ಅಂತರಿಕ್ಷದಲ್ಲಿ ತೇಲುತ್ತಿರುವಂತೆ ಕಾಣುತ್ತಿತ್ತು. ಶಮೀವುಲ್ಲ ಅಂಗಡಿಗೆ ಬೀಗ ಜಡಿದು, ಇನ್ನೊಂದು ಬೀಡಿ ಹಚ್ಚಿಕೊಂಡು, ಹೊರಡಲನುವಾದ. ಬರದ ಆಟೋ ಬಸ್ಸುಗಳನ್ನು ಶಪಿಸುತ್ತಾ ನಾನು ಬಂದು ಎಷ್ಟು ಹೊತ್ತು ಆಯಿತೆಂದು ಲೆಕ್ಕ ಹಾಕುತ್ತಿದ್ದೆ. ಆಗ ಇದ್ದಕಿದ್ದಂತೆ ಮೊನ್ನೆ ನನ್ನ ಮಗಳೊಂದಿಗೆ ನೋಡಿದ್ದ 'ನೈಟ್ ಅಟ್ ಮ್ಯೂಸಿಯಮ್' ಚಿತ್ರ ನೆನಪಾಯಿತು. ಪೆಟ್ಟಿಗೆ ಅಂಗಡಿಯ ಕತ್ತಲ ಮೂಲೆಯಲ್ಲಿ ನಗುತ್ತಿರುವ ಯಡ್ಯೂರಪ್ಪನ ಪೋಸ್ಟರ್ ಕೂಡಾ ನೆನಪಾಯಿತು. ಪೋಸ್ಟರಿನಲ್ಲಿದ್ದ ಯಡ್ಯೂರಪ್ಪಗೆ ಜೀವ ಬಂದು, ರಿಪೇರಿಗಾಗಿ ಪೇರಿಸಿಟ್ಟ ಸೈಕಲ್ಲುಗಳನ್ನು ಲೆಕ್ಕ ಹಾಕುತ್ತಿರಬಹುದೆ!?

Friday, October 21, 2011

ಮುಂದಿನ ವಾರದ ಲೇಖನಕ್ಕೊಂದು ಮುನ್ನುಡಿ!

ಸಹೃದಯರೆ,
ಮುಂದಿನ ಸೋಮವಾರ (24.10.2011) ಪೋಸ್ಟ್ ಆಗಲಿರುವ ಲೇಖನದ ಶೀರ್ಷಿಕೆ 'ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?'. ದೈಹಿಕವಾಗಿ ಮಾನಸಿಕವಾಗಿ ಬಳಲಿದ್ದಾಗ ಕವಿ ಮಾಡುತ್ತಿದ್ದುದೇನು? ಅದರಿಂದಾಗುತ್ತಿದ್ದ ಉಪಯೋಗವೇನು? ಕನ್ನಡದಲ್ಲಿಯೂ ಬರೆಯುವ ದೀಕ್ಷೆ ಪಡೆದ ಮೇಲೆ ಕವಿಗೆ ಒಂದು ನಿರ್ಧಿಷ್ಟ ಗೊತ್ತು ಗುರಿ ಆಶ್ರಯ ದೊರಕಿದ್ದು ಹೇಗೆ? ಮೈಸೂರಿನ ರಾಮಕೃಷ್ಣಾಶ್ರಮ ಹಾಗೂ ಅದರ ಆಗಿನ ಸ್ವಾಮೀಜಿ ಸಿದ್ಧೇಶ್ವರಾನಂದರ ಪ್ರಭಾವವೇನು? ಮಹಾನ್ ಯೋಗಿಯಾಗಿದ್ದ ಸ್ವಾಮಿ ಸಿದ್ಧೇಶ್ವರಾನಂದರ ಕೊಡುಗೆಯೇನು? ಎಲ್ಲವನ್ನೂ ಲೇಖನ ಒಳಗೊಳ್ಳಲಿದೆ. ಮತ್ತೆ ಎಂದಿನಂತೆ ಮೇಲಿನೆಲ್ಲಾ ಪ್ರಶ್ನೆಗಳಿಗೆ ಉತ್ತರರೂಪದಲ್ಲಿರುವಕವಿತೆಗಳು ಇರಲಿವೆ. ಕವಿಯ ಇಚ್ಛಾಶಕ್ತ, ಕೆಚ್ಚು, ನೆಚ್ಚು ಎಲ್ಲವೂ ಬಿಂಬಿತವಾಗಲಿವೆ. ಸೋಮವಾರ ಭೇಟಿಯಾಗೋಣ, ಲೇಖನದೊಂದಿಗೆ. ಅಲ್ಲಿಯವರೆಗೂ ಶುಭಮಸ್ತು, ವಾರಾಂತ್ಯದ ಶುಭಹಾರೈಕೆಗಳು.
ಇಂತಿ ಪ್ರೀತಿಯಿಂದ
ಸತ್ಯನಾರಾಯಣ

Monday, October 10, 2011

ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ದೊರೆವುದು ನೋಬೆಲ್!

ಪ್ರತಿಮಾವಿಧಾನದಿಂದ ಸೃಷ್ಟಿಯಾಗಿರುವ ನಾಟಕ ’ಶ್ಮಶಾನ ಕುರುಕ್ಷೇತ್ರ’. ಯುದ್ಧದ ಪರಿಣಾಮವನ್ನು ತೀವ್ರತರವಾಗಿ ಕಟ್ಟಿಕೊಡುವ ನಾಟಕ ಅದು. ಮೊದಲನೆಯ ಮಹಾಯುದ್ಧ ಮಗಿದುಹೋಗಿತ್ತು. ಅದರ ಪರಿಣಾಮದಿಂದಾಗಿ ಪ್ರಪಂಚದಲ್ಲೆಲ್ಲಾ ಯುದ್ಧವಿರೋಧಿ ಮಾತುಗಳು ಕೇಳುತ್ತಿದ್ದಾಗ ಶ್ಮಶಾನ ಕುರುಕ್ಷೇತ್ರ ನಾಟಕ ಬಂದಿತ್ತು. ’ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!’ ಎನ್ನುವ ಭೀಮನ ಮಾತುಗಳಲ್ಲಿ ಇಡೀ ಮಹಾಭಾರತ ಯುದ್ಧದ ನಿರರ್ಥಕತೆ ಬಿಂಬಿತವಾಗಿದೆ. ಕುರುಕ್ಷೇತ್ರ ಯುದ್ಧವೇ ನಾಟಕದ ವಸ್ತುವಾದರೂ, ಅದನ್ನು ಯಾವ ಯುದ್ಧಕ್ಕಾದರೂ ಅನ್ವಯಿಸಿಕೊಳ್ಳಬಹುದಾದಂತಹ ನಾಟಕ. ಕನ್ನಡದ ರಂಗನಿರ್ದೇಶಕರೊಬ್ಬರು ಕಾರ್ಗಿಲ್ ಯುದ್ಧಕ್ಕೂ ಅದನ್ನು ಅನ್ವಯಿಸಿ ರಂಗಪ್ರದರ್ಶನ ನೀಡಿದ್ದನ್ನು ಗಮನಿಸಿದರೆ, ಆ ನಾಟಕದ ಸಾರ್ವಕಾಲಿಕತೆ ಮನದಟ್ಟಾಗುತ್ತದೆ.
ಇಂತಹ ನಾಟಕವನ್ನು ಸಹೃದಯರ ಒತ್ತಾಯದ ಮೇರೆಗೆ ಸ್ವತಃ ಕವಿಯೇ ವಾಚನ ಮಾಡುತ್ತಾರೆ. ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ, ಗ್ರಂಥಪಾಲಕ ಎನ್.ಎಸ್.ನರಸಿಂಹಮೂರ್ತಿ, ವರ್ಣಶಿಲ್ಪಿ ಕೆ.ವೆಂಕಟಪ್ಪ ಮತ್ತು ಎ.ಸೀತಾರಾಂ (ಆನಂದ) ಮೊದಲಾದವರು ಆ ಸಹೃದಯಗೋಷ್ಠಿಯಲ್ಲಿ ಇರುತ್ತಾರೆ. ಸ್ವತಃ ಕವಿಯೇ ಅಭಿನಯಪೂರ್ವಕವಾಗಿ ಅತ್ಯಂತ ಪ್ರಬುದ್ಧವಾಗಿ ವಾಚಿಸಿದ ನಾಟಕ ಕೇಳಿದ ಸಹೃದಯರು ಸಂತುಷ್ಟರಾಗುತ್ತಾರೆ. ಆಗ ಎ.ನರಸಿಂಹಮೂರ್ತಿಯವರು ’ಶ್ಮಶಾನಕುರುಕ್ಷೇತ್ರ’ವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದರೆ ಖಂಡಿತ ನೊಬೆಲ್ ದೊರೆಯುತ್ತದೆ’ ಎಂದು ಅಭಿಪ್ರಾಯ ಪಡುತ್ತಾರೆ. ಈ ಹಿಂದೆಯೂ ಕೆಲವು ಮಿತ್ರರು ಕೆಲವು ಕವಿತೆಗಳನ್ನು ಕೇಳಿದಾಗ ಇಂತಹ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಆದರೆ ಸ್ವತಃ ಕವಿಗೆ ಇದರಿಂದ ಏನನ್ನಿಸುತ್ತಿತ್ತು ಎಂಬುದು ಮುಖ್ಯ. ಕವಿಯ ಮಾತುಗಳು ನೆನಪಿನ ದೋಣಿಯಲ್ಲಿ ಹೀಗೆ ದಾಖಲಾಗಿವೆ. ’ನನಗೆ ಅದು ಅಷ್ಟು ಹಿತವಾಗಲಿಲ್ಲ, ಅವರು ಹಾಗೆ ಅಂದದ್ದು. ಏಕೆಂದರೆ ’ಶ್ಮಶಾನಕುರುಕ್ಷೇತ್ರ’ದ ಯೋಗ್ಯತೆಗೆ ನೊಬೆಲ್ ಬಹುಮಾನದ ಬೆಲೆ ಕಟ್ಟುವುದು ಆ ನನ್ನ ಕೃತಿಗೆ ಅವಮಾನ ಮಾಡಿದಂತೆ ಎಂಬುದು ನನ್ನ ಭಾವನೆಯಾಗಿತ್ತು.’ ಎನ್ನುತ್ತಾರೆ. ಈ ಘಟನೆ ನಡೆದದ್ದು೧೬-೧-೧೯೩೨ರಲ್ಲಿ!
ಈ ತರದ ಪ್ರತಿಕ್ರಿಯೆಗಳು ಇದೇ ಮೊದಲಾಗಿರಲಿಲ್ಲ. ಈ ಹಿಂದೆಯೂ ಆಗಾಗ ಇಂತಹ ಮಾತುಗಳನ್ನು ಕೇಳುತ್ತಿದ್ದ ಕವಿ ಒಂದು ದಿನ (೪.೧೦.೧೯೩೧; ಮೇಲಿನ ಘಟನೆ ನಡೆಯುವ ಎರಡೂವರೆ ತಿಂಗಳ ಮುಂಚೆಯೇ!) ಬೆಳಿಗ್ಗೆ ವಾಯು ಸಂಚಾರದಲ್ಲಿದ್ದಾಗ ಕೋಗಿಲೆಯ ಹಾಡು ಕೇಳಿಸುತ್ತದೆ. ಆಗ ಹುಟ್ಟಿಕೊಂಡಿದ್ದೇ ’ಬಹುಮಾನ’ ಎಂಬ ಕವಿತೆ. ’ನವಿಲು’ ಕವನಸಂಗ್ರಹದಲ್ಲಿದೆ. ಕವಿತೆಯ ಪೂರ್ಣಪಾಠ ಇದು.

ಕುಹೂ! ಕುಹೂ! -ಕೋಕಿಲವಾಣಿ!
ಜಗಜುಮ್ಮೆಂದುದು ಅದ ಕೇಳಿ!
ನೀರವ ಪರ‍್ವತ ಕಾನನ ಶ್ರೇಣಿ
ಮರುದನಿಗೈದಿತು ಮುದತಾಳಿ.-
ಗಾನವಕೇಳಿ ಮಹಾಂಬರ ಸುಮ್ಮನೆ
ಮಾತಾಡದೆ ಬಣ್ಣಿಸುತಿತ್ತು!
ಕಂದರದಲ್ಲಿದ್ದೊಂದು ಸರೋವರ
ತೆರೆಗಳ ಕೈಪರೆಯಿಕ್ಕಿತು!
ಮಾಧುರ್ಯದಿ ಪಿಕ ತನ್ನನೆ ಮರೆಯುತೆ
ಕುಹೂ! ಕುಹೂ! ಕೂಗಿತ್ತು!
ಆಲಿಸಿದೊರ‍್ವನು ಗಾನಕೆ ನೊಂದು
ಸೂಚನೆ ಕೊಟ್ಟನು ಇಂತೆಂದು:-
ಮಲೆಗಳಲುಲಿಯುವ ಓ ಕೋಗಿಲೆಯೇ,
ಬಲು ಚೆಲುವಿದೆ ನಿನ್ನೀ ಗಾನ!
ಇಂಗ್ಲೀಷಿಗೆ ತರ್ಜುಮೆ ಮಾಡಿದರೆ
ದೊರೆವುದು ನೋಬೆಲ್ ಬಹುಮಾನ!
ಅರಣ್ಯ ರೋದನ! ಸುಮ್ಮನೆ ಹಾಡುವೆ!
ಕೇಳುವರಾರಿಲ್ಲಿ?-
ಕೂಗಿತು ಕೋಗಿಲೆ ಕುಹೂ ಎಂದು!
ತಲ್ಲಣಿಸಿತು ಜಗ ಜುಮ್ಮೆಂದು!

ತನ್ನ ಕಾವ್ಯವನ್ನು ಕುರಿತ ಬಂದ ಪ್ರತಿಕ್ರಿಯೆಗೆ, ಜಗವೇ ಜುಮ್ಮೆನ್ನುವಂತೆ ಹಾಡುತ್ತಿರುವ ಕೋಗಿಲೆಯ ಹಾಡನ್ನು ಎದಿರೊಡ್ಡಿ, ಇಂಗ್ಲಿಷ್ ಭಾಷೆಗೆ ಅನುವಾದವಾಗಬೇಕು, ನೋಬೆಲ್ ದೊರೆಯಬೇಕು ಎಂಬ ಅಭಿಲಾಷೆಯ ನಿರರ್ಥಕತೆಯನ್ನು ಸಾರುವ ಈ ಕವಿತೆಯ ರಚನೆಯ ಹಿನ್ನೆಲೆ ಸ್ಪಷ್ಟವಾಗಿಯೇ ಇದೆ. ಇಲ್ಲಿ ಕವಿ, ’ಕೋಗಿಲೆಗೆ ನೋಬೆಲ್ ಬಹುಮಾನ ಬರಲೇಬೇಕು ಎಂದು ಹೇಳುವ ಮೂಲಕ, ತನಗೆ ಬರಬೇಕು ಎಂಬ ಅಭಿಲಾಷೆಯನ್ನು ಹೊಂದಿದವರಾಗಿಲ್ಲ’ ಎಂಬುದು ಸಹೃದಯ ಓದುಗನಿಗಿರಲಿ ಒಬ್ಬ ಸಾಮಾನ್ಯ ಸಾಹಿತ್ಯಾಸಕ್ತನಿಗೂ ಮನದಟ್ಟಾಗುತ್ತದೆ. ಅದೊಂದು ವಿಡಂಬನಾತ್ಮಕ ಕವಿತೆ. ಇಂಗ್ಲಿಷ್, ನೊಬೆಲ್ ಇವಿಷ್ಟೇ ಶ್ರೇಷ್ಟತೆಗಳಲ್ಲ ಎಂಬುದೂ ಗೋಚರಿಸುತ್ತದೆ. ಆದರೆ ವಿಮರ್ಶೆ ಮಾಡಲೇಬೇಕು, ಆ ಮೂಲಕ ಈ ಕವಿಯನ್ನು ಅಣಿಯಬೇಕು ಎಂದು ಕಾದು ಕುಳಿತಿದ್ದವರು ಸುಮ್ಮನಿರುತ್ತಾರೆಯೇ? ’ಬಹುಮಾನ’ ಕವಿತೆ ಪ್ರಕಟವಾಗುತ್ತಿದ್ದಂತೆಯೇ, ಅಸೂಯಾಪರರಾದ ಕೆಲವರು ’ಈ ಕವಿ ಈಗಾಗಲೆ ನೊಬೆಲ್ ಬಹುಮಾನ ತನಗೆ ದೊರಕಲು ತಾನು ಅರ್ಹನೆಂಬುದಾಗಿ ಅಹಂಕಾರಿಯಾಗಿದ್ದಾನೆ’ ಎಂಬ ಆರೋಪಣೆ ಮಾಡಿ ಸಂತೋಷಪಟ್ಟುಕೊಂಡರಂತೆ! ಆಗಿನ್ನು ಕವಿಗೆ ಕೇವಲ ೨೫-೨೬ ವರ್ಷ. ಇನ್ನೂ ಕಾನೂರು ಹೆಗ್ಗಡತಿ, ರಾಮಾಯಣದರ್ಶನಂ, ಮಲೆಗಳಲ್ಲಿ ಮದುಮಗಳು, ಚಿತ್ರಾಂಗದಾ ಯಾವುವೂ ಸೃಷ್ಟಿಯಾಗಿರಲಿಲ್ಲ! ಮೊಗ್ಗರಳಿ ಹೂವಾಗುವಷ್ಟರಲ್ಲೇ ಚಿವುಟಿ ಹಾಕುವ ಕಿಡಿಗೇಡಿತನ ಅಂತಹ ಟೀಕೆಗಳಲ್ಲಿ ಕಾಣುತ್ತದೆ, ಅಷ್ಟೆ. ಅಳ್ಳೆದೆಯ ಕವಿಯಾಗಿದ್ದರೆ ಬರವಣಿಗೆ ಬಿಟ್ಟುಬಿಡುತ್ತಿದ್ದರೇನೋ! ಆದರೆ ಕುವೆಂಪು ಶ್ರೀರಾಮಕೃಷ್ಣ-ವಿವೇಕಾನಂದರ ಶ್ರೇಷ್ಠ ಚಿಂತನೆಗಳಿಂದ ಸದೃಡಗೊಂಡಿದ್ದ ಮನಸ್ಸುಳ್ಳವರು; ಮುಖ್ಯವಾಗಿ ನಿರ‍್ಲಿಪ್ತರು!
ಒಂದು ಕಲಾಕೃತಿಯ ಶ್ರೇಷ್ಠತೆ ಮತ್ತು ಪರಿಪೂರ್ಣತೆ ಅದು ಸಹೃದಯನ ಹೃದಯದಲ್ಲಿ ಉಂಟುಮಾಡುವ ಪರಿಣಾಮದಲ್ಲಿದೆ. ಆದರೆ ಅದು ಹಾಗಿರಬೇಕಿತ್ತು, ಹೀಗಿರಬೇಕಿತ್ತು, ಅದು ಇಂಗ್ಲಿಷಿನಲ್ಲಿ ಬರಬೇಕಿತ್ತು, ಬಹುಮಾನ ಪ್ರಶಸ್ತಿ ಬರಬೇಕಿತ್ತು ಎಂದು ಅಭಿಪ್ರಾಯ ಪಡುವುದು ಸಹೃದಯನ ತಪ್ಪಲ್ಲ. ಆದರೆ ಅದೇ ಜಪವಾದಾಗ ಆತ ಮಹತ್ತರವಾದುದನ್ನು ಕಳೆದುಕೊಳ್ಳುತ್ತಾನೆ. ಸಹೃದಯರಲ್ಲಿ, ವಿಮರ್ಶಕರಲ್ಲಿ ಇರಲೇಬೇಕಾದ ಗುಣ ಉದಾರತೆ. ಎಲ್ಲಿ ಅನುದಾರತೆ ಇರುತ್ತದೆಯೋ ಅಲ್ಲೆಲ್ಲಾ ಇಂತಹ ಅಪಾರ್ಥಗಳು, ಆರೋಪಗಳು ಇರುತ್ತವೆ.
ಹೀಗೆ ಅಸೂಯಾಪರವಾದ ವಿಮರ್ಶೆಗಳು ಆಗಾಗ ಬರುತ್ತಲೇ ಇರುತ್ತವೆ. ’ಮುಂಗಾರು’, ’ಕಾಜಾಣ’, ’ಕೊಳಲು’, ’ತಳಿರು’ ಮತ್ತು ’ಅರುಣಗೀತ’ ಮುಂತಾದ ಕೊಳಲು ಸಂಗ್ರಹದ ಕವಿತೆಗಳ ಬಗ್ಗೆ ಈ ತರದ ವಿಮರ್ಶೆ ಪತ್ರಿಕೆಯೊಂದರಲ್ಲಿ ಬಂದಿರುತ್ತದೆ. ಆ ಸಂದರ್ಭದಲ್ಲಿ ಎ.ಸೀತಾರಾಂ ಅವರು ಕುವೆಂಪು ಅವರಿಗೆ ಹೀಗೆ ಕಾಗದ ಬರೆದಿದ್ದಾರೆ. ನನಗೆ ತೋರುವುದೇನೆಂದರೆ ಅವನು ಪುಸ್ತಕದ ವಿಮರ್ಶೆಗಿಂತ, ತನ್ನ ಪಾಂಡಿತ್ಯ ಪ್ರದರ್ಶನವನ್ನು ಹೆಚ್ಚಾಗಿ ಮಾಡಿಕೊಂಡಂತೆ ತೋರುತ್ತದೆ. ಅವನ ವಿಮರ್ಶೆಯನ್ನು ಓದುತ್ತ ಓದುತ್ತ ಅವನ ತಲೆಯಲ್ಲಿರುವುದು ಮೆದುಳೋ-ಮಣ್ಣೋ ಎಂದು ಸಂದೇಹವಾಗುತ್ತದೆ. ನನ್ನ ಸಿದ್ಧಾಂತವು ಅದು ಮಣ್ಣೇ ಎಂದು! ಆ ಮಣ್ಣು ಮೆದುಳಿನ ಆಕೃತಿಯಲ್ಲಾದರೂ ಇದ್ದಿದ್ದಿರೆ ಅವನ ವಿಮರ್ಶೆಯ ಸರಣಿ ಬೇರೆಯಾಗಿರುತ್ತಿತ್ತು. ಅಂತೂ ಆ ವಿಮರ್ಶಕನ ವಿವೇಕಶೂನ್ಯವಾದ ವಿಮರ್ಶೆಯನ್ನು ಓದಿ ನಾವೆಲ್ಲಾ ಪಟ್ಟಾಗಿ ನಕ್ಕೆವು! ಅವನಿಂದ ದೂರದಲ್ಲಿದ್ದೇವೆ! - ಇನ್ನೇನು ಮಾಡಲು ಸಾಧ್ಯ? ಅವನೊಬ್ಬ ಪ್ರಾಂತಿಕಭಾವನೆ(ಪ್ರಾವಿನ್ಸಿಯಲಿಸಮ್)ಗೆ ಬಲಿಬಿದ್ದ ಅಂಧಪಶು. ನಿಮ್ಮ ಕವನಗಳಲ್ಲಿ ದೋಷವನ್ನು ಹುಡುಕಿದನೆಂದು ನನಗೆ ಅವನಲ್ಲಿ ಆಗ್ರಹವಿಲ್ಲ. ಏಕೆಂದರೆ ಅಲ್ಲಲ್ಲಿ ದೋಷವಿರಬಹುದು. -ಇದೆ- ಎಂಬ ಭಾವನೆಯನ್ನು ’ಕವಿತೆಗೆ’ ಎಂಬ ಕವನದಲ್ಲಿ ನೀವೇ ನುಡಿದಿದ್ದೀರಿ. ವಿಮರ್ಶಕನ ಕಣ್ಣಿಗೆ ಆ ಸುಂದರವಾದ ಕವನವು ಬಿದ್ದಂತೆ ತೋರುವುದಿಲ್ಲ. ಅವನಿಗೆ ಪಂಚೇಂದ್ರಿಯಗಳ ಶಕ್ತಿಯೂ ಪಲ್ಲಟವಾದಂತಿದೆ. ಅಂತು ಅವನ ವಿಮರ್ಶೆಯಿಂದ ಒಂದು ಉಪಯೋಗವು ಕಾಣಬರುತ್ತದೆ. ಮುಂದೆ ಒಂದು ಕಾಲದಲ್ಲಿ, ಕಾವ್ಯ ವಿಮರ್ಶೆಗಳ ಚರ್ಚೆ ಬಂದಾಗ ’ಹೀನವಿಮರ್ಶೆ’ ಎಂದರೇನು ಅನ್ನುವುದಕ್ಕೆ ನಮ್ಮ -ದ ವಿಮರ್ಶಕನ ವಿಮರ್ಶೆಯನ್ನು ಉತ್ತಮವಾದ ಉದಾಹರಣೆಯಾಗಿ ಹೇಳಬಹುದು. ಅದು ಬಿಟ್ಟು, ಅವನ ವಿಮರ್ಶೆಗಳಿಂದ ಇನ್ನು ಯಾವ ಉಪಯೋಗವೂ ಕಾಣಬರುವುದಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಅವನು ಕಾವ್ಯರಸಾನುಭವ ಮಾಡಲಾರದ ಷಂಡನೆನ್ನಬಹುದು! ಸಾಕು-ಅವನ ಮಾತು
ಇಂತಹುದೇ ಇನ್ನೊಂದು ಪತ್ರ ಬರೆದಿದ್ದವರು ಭೂಪಾಳಂ ಚಂದ್ರಶೇಖರಯ್ಯನವರು. ಅವರ ಅಭಿಪ್ರಾಯ ಹೀಗಿದೆ.
ಜಯಕರ್ಣಾಟಕದಲ್ಲಿನ ವಿಮರ್ಶೆಯನ್ನು ಓದಿದ್ದೇವೆ (ನಾನು ಚಿದಂಬರ ಸೀತಾರಾಂ ಶ್ರೀಹರಿ ಜೋಯಿಸ ಈಶ್ವರ) ವಿಮರ್ಶಕನ ವಿಷಯದಲ್ಲಿ ನಮಗೆ ಸಿಟ್ಟು ಬರಲಿಲ್ಲಾ; ಜುಗುಪ್ಸೆಯೂ ಹುಟ್ಟಲಿಲ್ಲಾ; ಆದರೆ ನಗುಬಂತು. ಬಹಳ ಗಟ್ಟಿಯಾಗಿಯೆ ನಕ್ಕುಬಿಟ್ಟೆವು....... ’ಸೋದರಿಯರೆ ನೀವೆಲ್ಲರು ಬನ್ನಿ’ ಎಂಬ ಕವನದ ಮೇಲಿನ ವಿಮರ್ಶೆಯಲ್ಲಿ ಈ ಸೋದರಿಯರು ಯಾರು? ಹಕ್ಕಿಗಳಾಗುತ್ತಾರೆ. ಬಾಲಕರಾಗುತ್ತಾರೆ ವಗೈರೆ ಮಾತುಗಳು. ಮತ್ತು ’ರತಿ’ ’...ಗೆ’ ’ಗುರಿ’ ಈ ಕವನಗಳ ಮೇಲಣ ವಿಮರ್ಶೆಯಲ್ಲಿ ’ಮತ್ತು ಪುಟ್ಟಪ್ಪನವರಂತಹ ಯುವಕರು ಮುದುಕರಂತೆ... ಸರಿಯಲ್ಲಾ ಈ ಮಾತುಗಳು ನಮ್ಮನ್ನು ನಗುವಿನ ಸಮುದ್ರದಲ್ಲಿಯೇ ಮುಳಿಗಿಸಿವೆ..... ನೀವು ಬರೆದಂತೆ ಆ ವಿಮರ್ಶೆಯಲ್ಲಿ ಕೆಲವು ಪದ್ಯಗಳು ವಿನಹ ಉಳಿದ ಪದ್ಯಗಳ ಯಿಂಗ್ಲಿಷ್ ಮೂಲಗಳೆಂದು ಕೊಟ್ಟಿರುವ ಪದ್ಯಗಳು ಸ್ವಲ್ಪವೂ ಸಮಂಜಸವಾಗಿಲ್ಲಾ; ಹೊಂದುವಂತಿಲ್ಲಾ; ಅದಿರಲಿ. ’ಕೊಳಲಿಗೆ ನಿಮ್ಮದೊಂದು ಪ್ರಸ್ತಾವನೆ ಯಿದ್ದಿದ್ದರೆ ಚೆನ್ನಾಗಿತ್ತು. ಅದರಲ್ಲಿ ಕೆಲವು ವಿಚಾರಗಳು ವಿವರಿಸಿ ಬರೆದಿದ್ದರೆ ವಿಮರ್ಶಕನಿಗೆ ಹೆಚ್ಚು ಬರೆಯಲವಕಾಶವಿರುತ್ತಿರಲಿಲ್ಲಾ.
ಕೊಳಲು ಸಂಗ್ರಹಕ್ಕೆ ಬಂದ ಅಸೂಯಾಪರವಾದ ವಿಮರ್ಶೆಯನ್ನು ಕುರಿತು ಪರವಿರೋದವಾದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವಂತೆ. ಅದನ್ನು ಕುರಿತು ಕವಿ ಹೇಳುವುದಿಷ್ಟು: ನಾನು ಅವನ್ನೆಲ್ಲ ನೋಡುವ ಗೋಜಿಗೇ ಹೋಗಲಿಲ್ಲ.

Monday, October 03, 2011

ಕಾಜಾಣ = ಇದೊಂದು ಜಾತಿಯ ಕ್ರಿಮಿ!

’ಮುಂಗಾರು’ ಕವಿತೆ ರಚಿತವಾದ ಕಾಲದಲ್ಲೇ, ಕುಪ್ಪಳಿಯ ಉಪ್ಪರಿಗೆಯಲ್ಲೇ ಲಾಂದ್ರದ ಬೆಳಕಿನಲ್ಲಿ ರಚಿತವಾದ ಕವಿತೆ ’ಕಾಜಾಣ’. ಕವಿತೆಗಿರುವ ಅಡಿಟಿಪ್ಪಣಿಯಲ್ಲಿ ’ಕುಪ್ಪಳಿಯ ಉಪ್ಪರಿಗೆಯಲ್ಲಿ ರಾತ್ರಿಯ ಕಗ್ಗತ್ತಲೆ ಕವಿದು ಮುಂಗಾರುಮಳೆ ಭೋರ್ಗರೆಯುತ್ತಿತ್ತು ಈ ಕವನ ರಚಿಸುತ್ತಿದ್ದಾಗ. ೧೮ನೆಯ ಪಂಕ್ತಿ ಮುಗಿಯುತ್ತಿದ್ದಾಗ ಒಂದು ಕೋಗಿಲೆ ದನಿ ಏರುಲಿಯಾಗಿ ಕೇಳಿಸಿತು. ಆ ಹೊತ್ತಲ್ಲದ ಹೊತ್ತಿನಲ್ಲಿ, ಅದರಲ್ಲಿಯೂ ಮುಂಗಾರು ಮಳೆ ಮುಸಲಧಾರೆಯಾಗಿ ಸುರಿಯುತ್ತಿದ್ದ ಅತ್ಯಂತ ಅವೇಳೆಯಲ್ಲಿ, ಕಾಗೆಗಳ ವಿರಳತೆಯಿಂದಾಗಿ ಕೋಗಿಲೆಗಳೆ ಅಪೂರ್ವವಾಗಿದ್ದ ಅಲ್ಲಿ, ಈ ಕೋಗಿಲೆಯ ದನಿ ಎಲ್ಲಿಂದ ಬಂದಿತೋ ಅಚ್ಚರಿ! ಮುಂದೆ ಕಂಸದೊಳಗಿರುವ ೨೮ ಪಂಕ್ತಿಗಳು ಆ ಕೋಗಿಲೆಯನ್ನು ಸಂಬೋಧಿಸಿ ಬರೆದ ಪಂಕ್ತಿಗಳಾಗಿವೆ.’ ಎಂದು ಬರೆದಿದ್ದಾರೆ.
ಇಂದು ಕಾಜಾಣ ಅಪರಿಚಿತ ಹಕ್ಕಿಯೇನಲ್ಲ. ಕುವೆಂಪು ಸಾಹಿತ್ಯ ಓದಿದವರಿಗೂ, ಉದಯರವಿ ಪ್ರಕಾಶನದ ಪುಸ್ತಕಗಳನ್ನು ನೋಡಿದವರಿಗೂ ಈ ಪಕ್ಷಿ ಚಿರಪರಿಚಿತ. ಕಾಜಾಣ ಪಕ್ಷಿಯ ಬಗ್ಗೆ ಕವಿ ಕುವೆಂಪು ಅವರ ಗ್ರಹಿಕೆಯನ್ನು ಮೊದಲು ತಿಳಿಯೋಣ.
ಆಗ ಅದೊಂದು ಅಜ್ಞಾತ ಪಕ್ಷಿ. ಹಳ್ಳಿಗರು ಅದನ್ನು ಏಕೆ ’ಕಾಜಾಣ’ ಎಂದು ಕರೆಯುತ್ತಾರೋ ಗೊತ್ತಿಲ್ಲ. ಕಿಟ್ಟೆಲ್ ನಿಘಂಟಿನಲ್ಲಿ ಆ ಹೆಸರಿಲ್ಲ. ನಾನೊಮ್ಮೆ ಭಾಸನ ಒಂದು ನಾಟಕ (ಸ್ವಪ್ನವಾಸವದತ್ತ ಇರಬಹುದೊ ಏನೊ) ಓದುತ್ತಿರುವಾಗ ’ಖಂಜನ ಪಕ್ಷ್ಮ ಕವಾಟ’ ಎಂಬ ಸಮಾಸ ಪದವನ್ನು ಎದುರುಗೊಂಡೆ. ನಿಘಂಟಿನಲ್ಲಿ ’ಖಂಜನ’ಕ್ಕೆ ’ಕಾಡಿಗೆ ಬಣ್ಣದ ಹಕ್ಕಿ’ ಎಂದು ಅರ್ಥವಿತ್ತು. ಅಂದರೆ ಕಾಡಿಗೆ ಹಚ್ಚಿದ ಹೆಣ್ಣಿನ ಕಣ್ಣಿನ ರೆಪ್ಪೆಗಳ ಕಣ್ಣಿಗೆ ಬಾಗಿಲುಗಳಾಗಿ ಅವು ಮುಚ್ಚಿ ತೆರೆಯುತ್ತವೆ ಎಂಬ ಭಾವ. ಆಗ ನನಗೆ ಬಹುಶಃ ಖಂಜನವೆ ಕಾಜಾಣವಾಗಿರಬಹುದೆ ಎಂದೆನ್ನಿಸಿತು. ಏಕೆಂದರೆ ಕಾಜಾಣದ ಬಣ್ಣ ಅಚ್ಚ ಮಿರುಗುಗಪ್ಪು. ಮತ್ತೊಮ್ಮೆ, ವಾಲ್ಮೀಕಿ ರಾಮಾಯಣದಲ್ಲಿಯೂ ಈ ಖಂಜನಪಕ್ಷಿಯನ್ನು ಎದುರುಗೊಂಡೆ. ಆದ್ದರಿಂದ ಬಹುಶಃ ಖಂಜನದಿಂದಲೆ ಕಾಜಾಣ ಬಂದಿರಬಹುದೆಂದು ಊಹಿಸಿದೆ. ಮತ್ತೆ ನನ್ನ ಕನ್ನಡ ಹೆಮ್ಮೆ ಎಚ್ಚತ್ತು ಕಾಜಾಣದಿಂದಲೆ ಏಕೆ ಬಂದಿರಬಾರದು ’ಖಂಜನ’ ಎಂದು ತರ್ಕ್ಕಿಸಿದ್ದುಂಟು. ಇರಲಿ, ಹೆಸರು ಎಲ್ಲಿಂದಲೆ ಬರಲಿ, ಈಗಂತೂ ಕನ್ನಡ ಸಾಹಿತ್ಯದಲ್ಲಿ ಕಾಜಾಣಕ್ಕೆ ಭದ್ರಸ್ಥಾನ ದೊರಕಿದೆ! ಕಾಜಾಣಕ್ಕೆ ಕಾಕಳಿಚಿಟ್ಟೆ ಎಂಬ ಹೆಸರೂ ಇದೆ. ಕವಿತೆ ಹೀಗೆ ಪ್ರಾರಂಭವಾಗುತ್ತದೆ.
ಕೋಗಿಲೆಯಂತೆಯೆ ಬಣ್ಣವು ನಿನಗಿದೆ.
ಕೋಗಿಲೆಯಿಂಚರಕಿಮ್ಮಡಿಯಿಂಚರ!
ಕೋಗಿಲೆಗೆಲ್ಲಿದೆ ನಿನಗಿರುವಂತಹ
ಪುಕ್ಕದ ನೇಲುವ ಗರಿಯೆರಡು?
ಕೋಗಿಲೆಯಿನಿದನಿಯೊಂದೇ ಆಗಿದೆ
ನಿನ್ನದು ಬಹುವಿಧವಾಗಿಹುದು!
(ಕೋಗಿಲೆ ಸಾಮಾನ್ಯವಾಗಿ ಕುಹೂ ಕುಹೂ ಎಂದು ಕೂಗುತ್ತದೆ. ಕಾಜಾಣದ ಆಲಾಪನೆ ತರತರವಾಗಿರುತ್ತದೆ. ’ಉದಯಗಗನದಲಿ ಅರುಣನ ಛಾಯೆ’ ಎಂದು ಪ್ರಾರಂಭವಾಗುವ ನನ್ನ ಇನ್ನೊಂದು ಗೀತೆಯಲ್ಲಿ ಅದರ ದಿವ್ಯತೆ ವರ್ಣಿತವಾಗಿದೆ. ಅಲ್ಲದೆ ಇತ್ತೀಚಿಗೆ ’ಚದುರಂಗ’ರಿಂದ ಚಿತ್ರಿತವಾಗಿರುವ ’ರಾಷ್ಟ್ರಕವಿ ಕುವೆಂಪು’ ಸಾಕ್ಷ್ಯಚಿತ್ರದಲ್ಲಿ ಕಾಜಾಣದ ಉಲಿಹವನ್ನು ಹಿಡಿದಿಡುವ ಪ್ರಯತ್ನ ತಕ್ಕಮಟ್ಟಿಗೆ ಸಫಲವಾಗಿದೆ)
ಕೋಗಿಲೆಯಂದದಿ ಹೆರವರ ಮನೆಯಲಿ
ಹುಟ್ಟಿದ ತಬ್ಬಲಿ ನೀನಲ್ಲ!
ಕೋಗಿಲೆಯಂದದಿ ಹೊಲಸನು ತಿನ್ನುವ
ಕಾಗೆಗೆ ನೀ ಋಣಿಯಾಗಿಲ್ಲ!
(ಅದಂತೂ ಎಲ್ಲರಿಗೂ ಗೊತ್ತಿರುವ ವಿಷಯ. ಕಾಗೆಯ ಗೂಡಿನಲ್ಲಿರುವ ಅದರ ಮೊಟ್ಟೆಯನ್ನು ತಿಂದುಹಾಕಿಯೋ ಹೊರಗೆ ಎಸೆದೋ ಕೋಗಿಲೆ ತನ್ನ ಮೊಟ್ಟೆಯನ್ನು ಅಲ್ಲಿ ಇಡುತ್ತದೆ. ಬೆಪ್ಪುಕಾಗೆ ಕಾವು ಕೂತು ಮರಿ ಮಾಡಿ ತುತ್ತುಕೊಟ್ಟು ಸಾಕುತ್ತದೆ. ಆ ತುತ್ತಿನಲ್ಲಿ ಇಲಿ ಹೆಗ್ಗಣ ಹಲ್ಲಿ ಹಾವು ಮಾಂಸ ಏನುಬೇಕಾದರೂ ಇರಬಹುದು. ಸ್ವಲ್ಪವೂ ಬ್ರಾಹ್ಮಣಿಕೆ ಇಲ್ಲ!)
ಶೂದ್ರನೆ ಹುಟ್ಟಿಸಿ, ಶೂದ್ರನೆ ಬೆಳೆಯಿಸಿ,
ಶೂದ್ರನು ಕೊಟ್ಟಾಹಾರವ ತಿಂದಿಹ
ಕೋಗಿಲೆಗೆಲ್ಲಿಯ ದ್ವಿಜತನವು?
(ಇಲ್ಲಿ ’ದ್ವಿಜ’ ಪದದ ಎರಡು ಅರ್ಥಗಳಲ್ಲಿಯೂ ಹೊಮ್ಮುತ್ತದೆ ಧ್ವನಿ!
ಕಾಗೆಯ ಮರಿಗಳ ಸಂಗದಿ ಬಳೆದಿಹ
ಆ ಪರಪುಟ್ಟನು ನಿನಗೆಣೆಯೆ?
ಬನದೆಲೆವನೆಯಲಿ ರಿಸಿಕುವರರವೊಲು
ಜನಿಸಿದ ಪರಿಶುದ್ಧಾತ್ಮನು ನೀನಹೆ;
ಸಾಟಿಯೆ ನಿನಗಾ ದೇಸಿಗನು?
[ಈ ಪಂಕ್ತಿ ಮುಗಿದಾಗ ರಾತ್ರಿ ೮ ಗಂಟೆಯಾಗಿತ್ತು. ನನ್ನ ಹಸ್ತಪ್ರತಿಯ ಅಂಚಿನಲ್ಲಿ ’ರಾತ್ರಿ ೮ ಗಂಟೆ. ಕೋಗಿಲೆ ಕೂಗಿತು!’ ಎಂದು ಬರೆದಿದೆ. ರಾತ್ರಿ, ಘನಘೋರ ಮುಂಗಾರಿನ ಕತ್ತಲೆ. ಮಳೆ ಭೋರೆಂದು ಸುರಿಯುತ್ತಿದೆ. ಆ ಸದ್ದನ್ನೆಲ್ಲ ಮೀರಿ ಮುಳುಗಿಸುವಂತೆ ಒಂದು ಕೋಗಿಲೆ, ಎಲ್ಲಿಂದ ಬಂತೋ ಎಲ್ಲಿತೋ ದೇವರೇ ಬಲ್ಲ, ಸುಮ್ಮನೆ ಕೂಗತೊಡಗಿತು! ’ನಾನು ದಿಗಿಲುಗೊಂಡಂತೆ ಎಚ್ಚತ್ತೆ, ನನ್ನ ಕಾವ್ಯ ಸಮಾಧಿಯಿಂದ! ಕೂಗು ನಿಂತಿತು. ನಾನು ನಿಜವಾಗಿಯೂ ಕೋಗಿಲೆ ಕೂಗಿತೋ ಅಥವಾ ನನ್ನ ಕಲ್ಪನಾರಾಜ್ಯದಲ್ಲಿ ಹಾಗೆ ಕೂಗಿದಂತಾಯಿತೋ ಎಂದು ಆಲೋಚಿಸುತ್ತಿದ್ದಂತೆ ಮತ್ತೆ ಸ್ಪಷ್ಟವಾಗಿ ಆಶ್ಚರ‍್ಯಕರವಾಗಿ ನೀಳಿಂಚರದಿಂದ ಕೂಗಿ ಕೂಗಿ ನಿಲ್ಲಿಸಿಬಿಟ್ಟಿತು!]
ಮುಂದಿನ ೨೮ ಸಾಲುಗಳು, ಕವಿ ಕೋಗಿಲೆಯ ಕ್ಷಮೆ ಕೇಳುತ್ತಿರುವಂತೆಯೂ, ಪರರ ಹೊಗಳಿಕೆಯನ್ನು ಸಹಿದ ಅದರ ಮಾತ್ಸರ‍್ಯ ಅದಕ್ಕೆ ತಕ್ಕುದಲ್ಲವೆಂಬಂತೆಯೂ ರಚಿತವಾದುಗಳಾಗಿವೆ.
[ಮನ್ನಿಸು ಕೋಗಿಲೆ! ಕೂಗುವೆ ಏತಕೆ?
ಹೆರರನು ಹೊಗಳಲು ನಿನ್ನನು ಬೈದೆನೆ?
ಮನ್ನಿಸು ಕವಿಯಪರಾಧವನು!
ನಿಶೆಯಲ್ಲೇತಕೆ ಕೂಗುತಿಹೆ?
ಬೆಳಗುವ ತಿಂಗಳ ಬೆಳಕಿಲ್ಲ!
ತಿರೆಯನು ಸಿಂಗರಿಸೈತಹ ಪೆಂಪಿನ
ಸುಗ್ಗಿಯು ಬಂದಿಹ ಕನಸಾಯ್ತೆ?
ಹಿಂದಿನ ಹರುಷದ ನೆನಸಾಯ್ತೆ?
ಹೆಮ್ಮೆಯ ಮಧುನೃಪ ಬಂದಿಹನೆಂದು?
ಚೈತ್ರನು ಶಿಶಿರನ ಕೊಂದಿಹನೆಂದು?
ಸಂತಸವೇ ಸೆರೆ ತೊಲಗಿತು ಎಂದು?
ಸೊಕ್ಕೇ ಬಿಡುಗಡೆ ದೊರಕಿತು ಎಂದು?
ಇತರರ ಸೊಬಗನು ಬಣ್ಣಿಸಲಿನಿಯನು
ಕರುಬುವ ಹೆಣ್ಣಿನ ತೆರದಿಂದೆ,
ಕಾಜಾಣವ ನಾ ಬಣ್ಣಿಸುತ್ತಿದ್ದರೆ
ಮಚ್ಚರವೇತಕೆ ನಿನಗೆಲೆ ಹಕ್ಕಿ?
ಗುಣವಿರುವೆಡೆ ಮತ್ಸರವೇಕೆ?
ಹಿಂದೆಯೆ ನಿನ್ನನು ಹೊಗಳಿಹೆನಲ್ಲಾ;
ಸಾಲದೆ ಮಾಡಿಹ ಹೊಗಳಿಕೆಯೆಲ್ಲಾ?
ರಾತ್ರಿಯ ಕಾಲದೊಳೂಳುವುದೇತೆಕೆ?
ಗೂಬೆಯ ಜಾತಿಯೆ ನೀನೇನು?
ಕಬ್ಬಿಗರೆಲ್ಲರು ಹೊಗಳಿಹರೆಂದು
ಹೆಮ್ಮೆಯು ತಲೆಗೇರಿರುವುದೆ ಇಂದು?
ಮುದ್ದಿನ ಕೋಗಿಲೆ, ನೆಚ್ಚಿನ ಕೋಗಿಲೆ,
ಕಬ್ಬಿಗರೊಲ್ಮೆಯ ಕೋಗಿಲೆಯೆ!
ಹೊಗಳಿದೆನಲ್ಲವೆ? ಸುಮ್ಮನಿರು!
ಕಾಜಾಣವ ನಾ ಬಣ್ಣಿಪೆ ಕೇಳು!
ಪರರೊಳ್ಜಸದಲಿ ಸಂತಸ ತಾಳು!]
ಇಲ್ಲಿಂದ ಮುಂದಕ್ಕೆ ಮತ್ತೆ ಕಾಜಾಣ ಕವಿತೆ ಮುಂದುವರೆದಿದೆ.
ಕಾಜಾಣವೆ, ಕೋಗಿಲೆಗಿರುವಂದದಿ
ಮಾಗಿಯ ಬಂಧನ ನಿನಗಿಲ್ಲ!
ಸೆರೆಬಿಡಿಸಲು ಮಧು ಬರುವನು ಎಂಬಾ
ಬಯಕೆಯ ದಾಸ್ಯವು ನಿನಗಿಲ್ಲ!
ನಿತ್ಯ ವಿಮುಕ್ತನೆ ನಿಜ ನೀನು!
ನೀನಿಂತಿರುತಿರೆ, ಕಬ್ಬಿಗರಂದು,
ಕಬ್ಬಿಗರೆನ್ನಿಸಿಕೊಳ್ಳುವರಿಂದು,
ಕೋಗಿಲೆ! ಕೋಗಿಲೆ! ಕೋಗಿಲೆ ಎಂದು
ಕೂಗುವರೇಕೋ ನಾನರಿಯೆ!
ನಾನೂ ಕೂಗಿದೆ ನಿನ್ನನು ಮರೆತು;
ಮರೆಯೆನು ನಾನಿನ್ನೆಂದೆಂದೂ!
ಬನಗಳಲೊರ‍್ವನೆ ಕುಳಿತಿರುವಾಗ,
ಕವಿತೆಯ ಬರೆದುಲಿಯುತಲಿರುವಾಗ,
ಮರಗಳ ನೆತ್ತಿಯನೇರುತ ನಾನು
ಸುತ್ತಣ ಸೊಬಗನು ಬಣ್ಣಿಸುವಾಗ,
ನಿನ್ನಿಂಚರವನು ಕೇಳಿಹೆನು,
ಹಿಗ್ಗುತ ಮುದವನು ತಾಳಿಹೆನು.
ಪಿಕ ಪಾಡಿದರೇನಾಗುವುದಂತೆಯೆ
ನಿನ್ನಿಂಚರದಿಂದಾಗುವುದು!
ನೀ ಮಲೆನಮಾಡಿನ ಕೋಗಿಲೆಯು!
ಹೆಮ್ಮೆಯನರಿಯದ ಕೋಗಿಲೆ ನೀನು!
ಕೋಗಿಲೆ ಎನೆ ವೈಯಾರದ, ಬೆಡಗಿನ,
ಬಿಂಕದ ಕಾಜಾಣವು ತಾನು!
ಅಂದು ರಾತ್ರಿ ಮುಂಗಾರು ಸಾಕ್ಷಿಯಾಗಿ ಕವಿತೆಯಲ್ಲಿ ಕಾಜಾಣಕ್ಕೆ ಕೊಟ್ಟ ಮಾತು ’ಮರೆಯೆನು ನಾನಿನ್ನೆಂದೆಂದೂ!’ ಎಂಬುದನ್ನು ಕವಿ ಮರೆಯಲಿಲ್ಲ. ಮುಂದೆ ’ಉದಯರವಿ’ ಪ್ರಕಾಶನ ಸಂಸ್ಥೆ ಹುಟ್ಟಿಕೊಂಡಾಗ ಅದರ ಮುದ್ರಿಕೆಯಲ್ಲಿ ಜೋಡಿ ಕಾಜಾಣಗಳ ಚಿತ್ರಗಳನ್ನು ಬಳಸಿಕೊಳ್ಳಲಾಯಿತು. ಇಂದಿಗೂ ಜೋಡಿ ಕಾಜಾಣದ ಮುದ್ರೆಯೇ ಉದಯರವಿ ಪ್ರಕಾಶನಕ್ಕೆ ಇದೆ!
ಕವಿತೆಯ ಸ್ವಾರಸ್ಯವನ್ನಂತೂ ನೋಡಿಯಾಯಿತು. ಇನ್ನು ಆ ಕವನದ ಚರಿತ್ರೆಯ ಸ್ವಾರಸ್ಯವನ್ನು ನೋಡದೆ ಇರಲಾದೀತೆ? ಈ ಕವಿತೆ ಮೊದಲು ’ಪ್ರಬುದ್ಧ ಕರ್ನಾಟಕ’ದಲ್ಲಿ ಪ್ರಕಟವಾಯಿತು. ಸ್ವತಃ ಕವಿಯೇ ಅಲ್ಲಲ್ಲಿ ವಾಚನ ಮಾಡಿಯೂ ಪ್ರಸಿದ್ಧವಾಯಿತು. ಮುಂದೆ ಅದು ಹೈಸ್ಕೂಲಿನ ಪಠ್ಯಪುಸ್ತಕಕ್ಕೆ ಸೇರಿಬಿಟ್ಟಿತು. ಆಗ ಶುರುವಾಯಿತು ಅದಕ್ಕೆ ಜಾತಿಭ್ರಾಂತರ ಕೀಟಲೆ. ಅದನ್ನು ಕವಿ ’ಶ್ರಾದ್ಧ’ ಎಂದು ಕರೆದಿದ್ದಾರೆ. ಆಗ ಪಾಠ ಮಾಡುತ್ತಿದ್ದವರಲ್ಲಿ ಹೆಚ್ಚಿನವರು ಮಡಿವಂತರಾದ ಪಂಡಿತರು. ಅವರಿಗೆ ಹೊಸ ಛಂದಸ್ಸಿನ ಹೊಸ ಶೈಲಿಯ ಆಧುನಿಕ ಕವಿತೆಗಳೆಂದರೆ ಅಲರ್ಜಿ. ಅವುಗಳನ್ನು ಪಾಠ ಮಾಡುವಾಗಲೇ ಬರೆದವನನ್ನು ಹೀಯಾಳಿಸಿ ತೆಗಳುವ ಕಾರ್ಯ ನಡೆಯುತ್ತಿತ್ತು. ಇನ್ನು ಬರೆದಿದ್ದವನು ಶೂದ್ರನೆಂದು ಗೊತ್ತಾದರಂತೂ ಕೇಳುವಂತೆಯೇ ಇಲ್ಲ. ಹೊರಗಡೆ ಆ ಕವಿತೆಯಲ್ಲಿ ಬ್ರಾಹ್ಮಣರನ್ನು ಕುರಿತು ಮೂದಲಿಸಿ ವಿಡಂಬನೆ ಮಾಡಿದ್ದಾರೆ ಎಂಬ ಹುಯಿಲೆದ್ದಿತು. ಆ ಸಂದರ್ಭವನ್ನು ಕುರಿತು ಕವಿ ಹೇಳುವುದು ಹೀಗೆ. ’ಆ ವಿಚಾರವಾಗಿ ನಾನು ಸಂಪೂರ್ಣ ಮುಗ್ಧನಾಗಿದ್ದೆ. ನನಗೆ ಆಗಿನ್ನೂ ಈ ಬ್ರಾಹ್ಮಣ ಬ್ರಾಹ್ಮಣೇತರ ಪಿಡುಗು ಇದೆ ಎಂಬುದೇ ತಿಳಿದಿರಲಿಲ್ಲ. ನಾನು ಆಶ್ರಮದಲ್ಲಿದ್ದು ನನಗೆ ಜಾತೀಯತೆಯ ಅಸ್ತಿತ್ವವೆ ಪ್ರಜ್ಞಾಗೋಚರವಾಗುವಂತಿರಲಿಲ್ಲ. ಏನಿದ್ದರೂ ನನ್ನ ಆಲೋಚನೆಗಳೂ ಭಾವನೆಗಳೂ ಆಧ್ಯಾತ್ಮಿಕದತ್ತ ಹರಿಯುತ್ತಿದ್ದುವೆ ಹೊರತು ಈ ಲೌಕಿಕದ ಕಚ್ಚಾಟದ ಅರ್ಥವೂ ಆಗುತ್ತಿರಲಿಲ್ಲ.
ಅದು ಕವಿಯ ಗಮನಕ್ಕೆ ಬಂದಿದ್ದು ಸಹ ಹಿರಿಯರಾದ ಮಾಸ್ತಿಯವರಿಂದ! ಅದರ ಬಗ್ಗೆ ಕವಿ ಹೇಳುವುದು ಹೀಗೆ. "ಒಂದು ದಿನ ಆಶ್ರಮಕ್ಕೆ ಬಂದಿದ್ದ ಮಾಸ್ತಿ ವೆಂಕಟೇಶ ಐಯ್ಯಂಗಾರರು ನನ್ನನ್ನು ಕೇಳಿದರು ಹೌದೇನ್ರೀ, ನಿಮ್ಮ ಆ ಕವನ ’ಕಾಜಾಣ’ದಲ್ಲಿ ಬ್ರಾಹ್ಮಣರನ್ನು ಕುರಿತು ಮೂದಲಿಸಿ ವಿಡಂಬನೆ ಮಾಡಿರುವಿರಂತೆ? ಎಂದು! ನಾನು ಕಕ್ಕಾವಿಕ್ಕಿಯಾದೆ. ಅದು ನನ್ನ ತಲೆಗೇ ಹೊಳೆದಿರಲಿಲ್ಲ. ಆದ್ದರಿಂದ ನಕ್ಕುಬಿಟ್ಟು ’ಯಾರು ಹೇಳಿದರು ನಿಮಗೆ? ನನಗೆ ಆ ಭಾವನೆ ತಲೆಯಲ್ಲಿಯೇ ಸುಳಿದಿರಲಿಲ್ಲ.’ ಎಂದೆ. ಅವರು ಹೊರಟು ಹೋದ ಮೇಲೆ, ನೋಡೋಣ ಎಂದುಕೊಂಡು ’ಕಾಜಾಣ’ ಕವನವನ್ನು ತೆಗೆದುಕೊಂಡು ಮತ್ತೆ ಮತ್ತೆ ಓದಿದೆ, ಹೊಸದೃಷ್ಟಿಯಿಂದ, ಅಂದರೆ ಬ್ರಾಹ್ಮಣ ಶೂದ್ರ ಭೇದ ಭಾವನೆಯ ದೃಷ್ಟಿಯಿಂದ. ನನಗೇನಾಯಿತು ಗೊತ್ತೇ? ಆ ದೃಷ್ಟಿಯನ್ನಿಟ್ಟುಕೊಂಡು ಓದಿದರೆ ಅದು ಹಾಗೆಯೆ ತೋರತೊಡಗಿತು: ನಾನು ಅದನ್ನು ರಚಿಸಿದಾಗ ನನಗೆ ಒಂದಿನಿತೂ ಇರದಿದ್ದ ದೃಷ್ಟಿ!"
ಒಟ್ಟಾರೆ, ತಮ್ಮ ಕೆಲವು ಕವಿತೆ ನಾಟಕಗಳಿಗೆ ಕುಹಕಿಗಳಿಂದ ಹತ್ತಿದ ಈ ಜಾತಿಭೇದ ಭಾವನೆಯನ್ನು ಕುರಿತು ನನ್ನ ಅನೇಕ ಕವನಗಳಿಗೂ ನಾಟಕಗಳಿಗೂ ಕೆಲವರು ’ಬ್ರಾಹ್ಮಣ-ಶೂದ್ರ’ ಭೇದ ದೃಷ್ಟಿಯಿಂದಲೇ ವ್ಯಾಖ್ಯಾನ ಮಾಡಿ ಅವುಗಳ ಸಾಹಿತ್ಯ ಮೌಲ್ಯವನ್ನೆ ಕಲುಷಿತಗೊಳಿಸಿರುವುದು ವಿಷಾದದ ವಿಷಯವಾಗಿದೆ: ಜಲಗಾರ, ಶುದ್ರತಪಸ್ವಿಗಳು ಪ್ರಕಟವಾದಗಲೂ ಪ್ರಕಟವಾದದ್ದು ಇಂತಹ ಪ್ರತಿಕ್ರಿಯೆಯೆ! ಎಂದಿದ್ದಾರೆ.
’ಕಾಜಾಣ’ ಕವಿತೆಯ ಬಗ್ಗೆ ಅವರೇ ದಾಖಲಿಸಿರುವ ಒಂದು ಘಟನೆ ಇನ್ನೂ ಸ್ವಾರಸ್ಯಕರವಾಗಿದೆ! ಕಾಜಾಣ ಕವನವನ್ನು ಓದುವ ಎಂತಹ ಶುಂಠನಿಗಾದರೂ ಅದೊಂದು ಪಕ್ಷಿ ಇರಬೇಕು ಎಂಬಷ್ಟಾದರೂ ಅರ್ಥವಾಗುತ್ತದೆ. ಒಮ್ಮೆ ನನ್ನ ಮಿತ್ರರೊಬ್ಬರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಬ್ಬ ಹೈಸ್ಕೂಲು ವಿದ್ಯಾರ್ಥಿ ಎದುರಿಗೆ ಕೂತು ಒಂದು ಪುಸ್ತಕ ಓದುತ್ತಿದ್ದನಂತೆ. ’ಏನಯ್ಯಾ ಓದುತ್ತಿದ್ದೀಯಾ?’ ಎಂದಾಗ ’ಕನ್ನಡ ನೋಟ್ಸ್’ ಎಂದನಂತೆ. ಇವರು ಕುತೂಹಲಕ್ಕೆ ಅದನ್ನು ಈಸಿಕೊಂಡು ಸುಮ್ಮನೆ ಕಣ್ಣುಹಾಯಿಸಿದರಂತೆ. ’ಕಾಜಾಣ’ ಕವನದ ಮೇಲೆಯೂ ನೋಟ್ಸ್ ಇದ್ದದ್ದನ್ನು ನೋಡಿದರಂತೆ. ’ಕಾಜಾಣ = ಇದೊಂದು ಜಾತಿಯ ಕ್ರಿಮಿ!’ ಎಂದು ಪ್ರಾರಂಭಿಸಿದ್ದನಂತೆ ಆ ಬೃಹಸ್ಪತಿ ಪಂಡಿತ!
ಕಾಜಾಣದ ತರತರವಾದ ಆಲಾಪನೆಯ ಕುರಿತು ಹೇಳುವಾಗ ಕವಿ ’ಉದಯಗಗನದಲಿ ಅರುಣನ ಛಾಯೆ’ ಎಂದು ಪ್ರಾರಂಭವಾಗುವ ನನ್ನ ಇನ್ನೊಂದು ಗೀತೆಯಲ್ಲಿ ಅದರ ದಿವ್ಯತೆ ವರ್ಣಿತವಾಗಿದೆ ಎಂದಿದ್ದಾರೆ. ೫-೫-೧೯೩೧ರ ರಚನೆಯಾಗಿರುವ ಆ ಕವಿತೆ ಇಲ್ಲಿದೆ ನೋಡಿ. ಕವಿತೆಯ ಶೀರ್ಷಿಕೆ ’ವನಗಾಯಕ’.
ಉದಯ ಗಗನದಲಿ ಅರುಣನ ಛಾಯೆ
ಜಗದ ಜೀವನಕೆ ಚೇತನವೀಯೆ
ನಿನ್ನಯ ಗಾನದ ಸುಮಧುರ ಮಾಯೆ
ಬನದಿಂದಂಬರಕೇರುವುದು:
ಕೋರಿಕೆಗಳ ಬಾಯಾರುವುದು:
ಪ್ರಭಾತಮೌನವನೆಚ್ಚರ ಮಾಡಿ
ಕಾಡು ನಾಡುಗಳ ತುಂಬಿ ತುಳುಕಾಡಿ
ಜಗನ್ನಿದ್ರೆಗೆ ಜೋಗುಳ ಹಾಡಿ
ಬ್ರಹ್ಮವನೇ ತೂಗಾಡುವುದು;
ಕ್ರಾಂತಿಯ ಶಾಂತಿಯನೂಡುವುದು.
ಓ ವನಗಾಯಕ ವರವಾಗೀಶ,
ನಿನ್ನಾ ಕಾನನ ಕೂಜನ ಪಾಶ
ಕಬ್ಬಿಗನಿಗೆ ಮುಕ್ತಿಯ ಆವೇಶ:
ಸ್ಮರ ಚಾಪಕೆ ನೀ ಸ್ವರಬಾಣ!
ಕೇಳಿದರಲ್ಲದೆ ತಿಳಿಯದು ನಿನ್ನ
ಕಂಠದ ವೈಖರಿ. ತುದಿಯಲಿ ನನ್ನ
ಸಾವಿನ ಬಯಕೆಯು ನಿನ್ನಾ ಗಾನ:
ನಿನಗೆ ನಮೋ ಓ ಕಾಜಾಣ!