Monday, March 22, 2010

ಲೋಹಿಯಾ - 100

ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.’
ಈ ಸಾಲುಗಳನ್ನು ಮೊದಲ ಬಾರಿ ಓದಿದ ಮೇಲೆ ನನ್ನಲ್ಲಿ ಮೊದಲಿಗೇ ಎದ್ದ ಪ್ರಶ್ನೆ ‘ಈ ಲೋಹಿಯಾ ಯಾರು?’ ಎಂಬುದು. ಹೀಗೆ ಲೋಹಿಯಾರನ್ನು ಹುಡುಕುತ್ತಾ ಅವರ ಬಗ್ಗೆ ಕನ್ನಡದಲ್ಲಿ ದೊರೆಯುತ್ತಿದ್ದ ಸಣ್ಣಪುಟ್ಟ ಮಾಹಿತಿಗಳನ್ನು ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋದ ನನಗೆ, ಬಹುಶಃ ಭಾರತಮಟ್ಟದ ನಾಯಕರೊಬ್ಬರು ಕರ್ನಾಟಕದ ಮೇಲೆ ಇಷ್ಟೊಂದು ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪ್ರಭಾವ ಬೀರಿದ್ದು ಲೋಹಿಯಾ ಒಬ್ಬರೆ ಅನಿಸಿತ್ತು. ಆಗ ತೇಜಸ್ವಿ ಮತ್ತು ಎಂ.ಡಿ.ಎನ್. ಅನುವಾದಿಸಿರುವ ಲೋಹಿಯಾ ಎನ್ನುವ ಪುಸ್ತಕ ನನಗೆ ಲೋಹಿಯಾ ಅವರ ಚಿಂತನ ಜಗತ್ತನ್ನು ತೆರೆದಿಟ್ಟಿತ್ತು. ಮುಂದೆ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದ ಐದು ಸಂಪುಟಗಳು ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡದಲ್ಲಿ ಓದುವಂತೆ ಮಾಡಿ ಲೋಹಿಯಾ ಅವರನ್ನು ಇನ್ನಷ್ಟು ಹತ್ತಿರ ಮಾಡಿಬಿಟ್ಟವು.

 ೧೯೧೦ ಮಾರ್ಚ್ ೨೩ ರಂದು ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್‌ಪುರದಲ್ಲಿ ಜನಿಸಿದ ಲೋಹಿಯಾ ಅಕ್ಬರ್‌ಪುರ, ಮುಂಬಯಿ, ಕಲ್ಕತ್ತಾ ಮತ್ತು ಜರ್ಮನ್ ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಜೀವನದಿಂದಲೂ ಹೋರಾಟದ ಕೆಚ್ಚು ರೂಢಿಸಿಕೊಂಡಿದ್ದ ಲೋಹಿಯಾ ಅವರು ಜಿನೀವಾದಲ್ಲಿ ನಡೆದ ‘ಲೀಗ್ ಆಫ್ ನೇಷನ್ಸ್’ ಸಭೆಯಲ್ಲಿ ಬಿಕನೇರಿನ ಮಹಾರಾಜ ಬಾರತದ ಪ್ರತಿನಿಧಿಯಾಗಿ ಮಾತನಾಡಲು ಎದ್ದು ನಿಂತಾಗ ಸಿಳ್ಳೆ ಹೊಡೆದಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದರೂ, ಗಾಂಧೀಜಿಯವರೂ ಸೇರಿದಂತೆ ನೆಹರೂ, ಸುಭಾಷ್, ಸರ್ದಾರ್ ಮೊದಲಾದವರೊಂದಿಗೆ ತಾತ್ವಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಎಲ್ಲರೊಂದಿಗೂ ನಿರ್ಭಯರಾಗಿ ಮಾತನಾಡಿ ತಮಗನ್ನಿಸಿದ್ದನ್ನು ಹೇಳುತ್ತಿದ್ದರು.

ಸ್ವಾತಂತ್ರೋತ್ತರ ಭಾರತದ ಆಡಳಿತವರ್ಗಕ್ಕೆ ಎಚ್ಚರಿಕೆಯ ಗಂಟೆಯಂತೆ ಲೋಹಿಯಾ ಇದ್ದರು. ಹತ್ತಕ್ಕೂ ಹೆಚ್ಚು ಸಲ ಅವರನ್ನು ಜೈಲಿಗಟ್ಟಲಾಗಿತ್ತು ಎಂಬುದನ್ನು ಮನಗಂಡರೆ ಅವರ ಹೋರಾಟದ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು. ದೂರದ ಅಮೆರಿಕೆಯ ಮಿಸಿಸಿಪ್ಪಿಯಲ್ಲಿ ಹೋಟೆಲ್ ಪ್ರವೇಶದಲ್ಲಿದ್ದ ತಾರತಮ್ಯವನ್ನು ವಿರೋಧಿಸಿ (ಅಂದು ನೆಹರು ನಿಧನರಾದ ದಿನ) ಪ್ರತಿಭಟನೆ ನೆಡೆಸಿದಂತೆ ಕರ್ನಾಟಕದ ಕಾಗೋಡು ಎಂಬ ಕುಗ್ರಾಮದ ರೈತರ ಪರವಾಗಿಯೂ ಧ್ವನಿಯೆತ್ತಿ ಹೋರಾಟಕ್ಕೆ ಧುಮುಕಿದ್ದರು. ಮೈನ್ ಕೈಂಡ್ ಪತ್ರಿಕೆಯ ಸಂಪಾದಕರಾಗಿದ್ದರು. ನೆಹರೂ ವಿರುದ್ದ ಫೂಲ್‌ಪುರದಿಂದ ಚುನಾವಣೆಗೆ ನಿಲ್ಲುವ ಮೂಲಕ ವ್ಯಕ್ತಿಪೂಜೆಯನ್ನು ವಿರೋಧಿಸಿದರು. ೧೯೬೩ ರಲ್ಲಿ ಫರೂಕಬಾದ್ ಕ್ಷೇತ್ರದಿಂದ ೧೯೬೭ರಲ್ಲಿ ಕನೂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆಗೆ ಪ್ರವೇಶ ಪಡೆದು ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಅವರು ನಾಯಕರುಗಳ ನಾಯಕ. ತಾವು ಹೋದಲ್ಲೆಲ್ಲಾ ನಾಯಕರುಗಳನ್ನು ರೂಪಿಸುತ್ತಾರೆ. ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲ, ಗಣಪತಿಯಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಮೊದಲಾದವರು ಕರ್ನಾಟಕದಿಂದ ಮೂಡಿಬಂದ ಲೋಹಿಯಾ ಅನುಯಾಯಿಗಳು. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಕಡಿದಾಳ ಶಾಮಣ್ಣ, ಪ್ರೊ.ರಾಮದಾಸ್, ಎಂ.ಡಿ.ನಂಜುಂಡಸ್ವಾಮಿ, ದೇವನೂರು ಮಹಾದೇವ, ರವಿವರ್ಮಕುಮಾರ್, ಅಗ್ರಹಾರ ಕೃಷ್ಣಮೂರ್ತಿ, ರೈತಸಂಘದ ಸುಂದರೇಶ್, ನಟರಾಜ್ ಹುಳಿಯಾರ್ ಮೊದಲಾದವರು ಲೋಹಿಯಾ ಅವರ ಪ್ರಭಾವ ಪ್ರೇರಣಗಳಿಗೆ ಒಳಗಾಗಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ಮತ್ತು ವಿಶ್ವಮಾನವ ಸಂದೇಶ ಇವುಗಳ ಬಗ್ಗೆ ಕೇಳಿ, ಅವರನ್ನು ಬೇಟಿಯಾಗಿ ನಿಮ್ಮಂತವರು ರಾಜಕೀಯಕ್ಕೆ ಬರಬೇಕು, ಬನ್ನಿ ಎಂದು ಆಹ್ವಾನ ನೀಡಿ ಸಂಚಲನವನ್ನೇ ಸೃಷ್ಟಿಸುವ ಲೋಹಿಯಾ ಒಂದು ರೀತಿಯಲ್ಲಿ ದರ್ಶನವಾದಿ. ಕರ್ನಾಟಕದ ಮಟ್ಟಿಗೆ ಲೋಹಿಯಾವಾದ ರೈತಸಂಘದ ಚಳುವಳಿಗೆ ಹುರುಪು ಹುಮ್ಮಸ್ಸು ನೀಡಿದ್ದು ಈಗ ಇತಿಹಾಸ.

 ‘ನನ್ನ ಬಳಿ ನನ್ನದೇಂಬುದೇನೂ ಇಲ್ಲ. ಭಾರತದ ಬಡವರು ಹಾಗೂ ಶ್ರೀಸಾಮನ್ಯರು ನನ್ನನ್ನು ತಮ್ಮವನು ಅಂದುಕೊಂಡಿರುವ ಒಂದು ಭಾವನೆಯನ್ನು ಬಿಟ್ಟರೆ ನನ್ನ ಬಳಿ ಇನ್ನೇನೂ ಉಳಿದಿಲ್ಲ’ ಎಂಬುದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ. ಅವರು ತೀರಿಕೊಂಡಾಗ (೧೨.೦೨೧೯೬೭) ಯಾವ ಆಸ್ತಿಪಾಸ್ತಿಯೂ ಇರಲಿಲ್ಲ; ಕುಟುಂಬವೂ ಇರಲಿಲ್ಲ. ಅವರು ಬಿಟ್ಟು ಹೋದದ್ದು ಕೇವಲ ತಮ್ಮ ಆದರ್ಶಗಳನ್ನು ಮಾತ್ರ!
ಇಂತಹ ಲೋಹಿಯಾ ಬದುಕಿದ್ದು ಕೇವಲ ೫೭ ವರ್ಷಗಳು ಮಾತ್ರ. ಅವರು ಇದ್ದಿದ್ದರೆ ಇಂದಿಗೆ (೨೩.೦೩.೨೦೧೦) ನೂರು ವರ್ಷ ತುಂಬುತ್ತಿತ್ತು. ಅವರ ನೆನಪಲ್ಲಿ ಅವರದೇ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
 • ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜ ದಬ್ಬಾಳಿಕೆಯ ಎದುರು ಮಂಡಿಯೂರಿ ಕುಳಿತು ಬಿಡಬೇಕೇ ಅಥವಾ ಅದನ್ನು ಪ್ರತಿಭಟಿಸಬೇಕೆ? (೧೯೪೨ ಆಗಸ್ಟ್ ೧೯೪೪ ಮೇ ವರೆಗೆ ಭೂಗತರಾಗಿದ್ದ ಲೋಹಿಯಾ ಅವರು ಅಂದಿನ ಭಾರತದ ವೈಸರಾಯ್ ಲಾರ್ಡ್ ಲಿನ್‌ಲಿಥ್‌ಗೊ ಅವರಿಗೆ ೧೯೪೨ರಲ್ಲಿ ಬರೆದ ಪತ್ರ. ಸ್ವಾತಂತ್ರ್ಯದ ಅಂತರ್ಜಲ ಹೆಸರಿನಲ್ಲಿ ಪ್ರಕಟವಾಗಿದೆ.)
 • ನಾನು ಯಾವಾಗಲೂ ಸರಿಯಾಗಿ ತಿಳಿದುಕೊಂಡೇ ನನ್ನ ಕರ್ತವ್ಯ ಮಾಡುತ್ತಿರುತ್ತೇನೆ. ಗಂಆಧೀಜಿಯವರ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನದೆಂಬುದು ನಿಶ್ಚಿತ. ಆದರೆ ಪಕ್ಷದ ಮೂಲಕ ಸ್ವೀಕೃತವಾದ ಗೊತ್ತುವಳಿಗಿಂತ (ಗಾಂಧೀಜಿಯವರು ಮಂಡಿಸಿದ್ದ ಗುತ್ತುವಳಿಯಲ್ಲಿದ್ದ ‘ಆಫ್ರಿಕಾದಲ್ಲಿದ್ದ ಬ್ರಿಟೀಷ್ ಭಾರತೀಯರು’ ಎಂಬ ಉಲ್ಲೇಖದಿಂದ ಬ್ರಿಟಿಷ್ ಪದವನ್ನು ಕೈಬಿಡುವಂತೆ ಲೋಹಿಯಾ ಸೂಚಿಸಿದ್ದ ತಿದ್ದುಪಡಿ) ಗಾಂಧೀಜಿಯವರ ಸಂಕಲ್ಪ ಶಕ್ತಿ ಇನ್ನೂ ಹೆಚ್ಚು ದೊಡ್ಡದಾಗಿತ್ತು. (ಸಭೆಯ ನಂತರ ಸುಭಾಷ್ಚಂದ್ರಬೋಸ್ ಅವರು ‘ನೀವೇನು ತಿಳಿದಿರಿ, ಮಹಾತ್ಮಾ ಗಾಂಧಿಯವರು ಶಕ್ತಿವಂತರೋ? ಅಥವಾ ಕಾಂಗ್ರೆಸ್ ಪಕ್ಷವೋ?’ ಎಂಬ ಪ್ರಶ್ನೆಗೆ ಉತ್ತರವಾಗಿ ಲೋಹಿಯಾ ಹೇಳಿದ ಮಾತುಗಳಿವು.)
 • ಆ ದಿನ ನಾನು ನಿಜವಾದ ಅರ್ಥದಲ್ಲಿ ಅನಾಥನಾದೆನೆಂದು ಮೊದಲ ಸಲ ನನಗೆ ಅನ್ನಿಸಿತು. ದೇಶದ ರಕ್ಷಕ ಕಣ್ಣೆದುರೇ ಸತ್ತು ಬಿದ್ದಿದ್ದ, ಹಾಗೂ ದೇಶದ ದೊರೆಗಳೆನಿಸಿಕೊಂಡವರು ಕಣ್ಣೀರು ಹರಿಸುತ್ತಿದ್ದರು. ಗಂಆಧೀಜಿಯವರ ನೆಚ್ಚಿನ ಶಿಷ್ಯರಾದ ನೆಹರೂ, ಪಟೇಲರು ಅಧಿಕಾರದ ಗದ್ದುಗೆಯಲ್ಲಿರುವಾಗಲೇ ಗಾಂಧೀಜಿಯವರ ಹತ್ಯೆಯಾಗಿತ್ತು. ‘ನೀವು ನಡು ನೀರಿನಲ್ಲಿ ನಾಡಿನ ಜನತೆಯನ್ನು ಕೈಬಿಟ್ಟು ಹೋದದ್ದೇಕೆ? ಹೀಗೇಕೆ ಮೋಸ ಮಾಡಿದಿರಿ. ಬಾಪೂ’ ಎಂದು ಬಾಪೂ ಅವರನ್ನು ಕೇಳಬೇಕೆನ್ನಿಸಿತು. ಗಾಂಧೀಜಿ ಸದಾಕಾಲ ಜೀವಿಸಿರುತ್ತಾರೆ ಎಂದು ನಾನು ಮೂರ್ಖನಂತೆ ಭಾವಿಸಿಕೊಂಡಿದ್ದೆ. (ಗಾಂಧಿ ಸತ್ತ ದಿನ)
 • ಹೆಂಗಸಿಗೂ ನಾಲ್ವರು ಗಂಡಂದಿರನ್ನು ಹೊಂದುವ ಅಧಿಕಾರವನ್ನು ಕೊಡದಿರುವ ಧರ್ಮ, ಅದು ಯಾವ ಧರ್ಮವೇ ಆಗಿರಲಿ, ಗಂಡಿಗೆ ನಾಲ್ವರು ಹೆಂಗಸರನ್ನು ಹೊಂದುವ ಅಧಿಕಾರ ನೀಡುವುದನ್ನು ನಾಣು ಒಪ್ಪುವುದಿಲ್ಲ. (ದ್ರೌಪದಿಯೋ? ಸಾವಿತ್ರಿಯೋ? ಎಂಬ ಲೇಖನದಲ್ಲಿ)
 • ರಾಮ, ಕೃಷ್ಣ, ಶಿವ - ಈ ಮೂವರು ಇಂಡಿಆಯದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ಮೂವರೂ ತಂತಮ್ಮದೇ ಹಾದಿಯುಳ್ಳವರು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ. ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ. ಶಿವನದಾದರೋ ಪ್ರಮಾಣಾತೀತ ವ್ಯಕ್ತಿತ್ವದಲ್ಲಿ ಪೂಣ್ತೆ. ಇವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಡಿಮೆ ಎಂಬ ಮಾತೇ ಇಲ್ಲ. ಪೂರ್ಣತೆಗೆ ಹೆಚ್ಚು ಕಮ್ಮಿಯ ಮಾತೆಲ್ಲಿ? (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
 • ಸೀಮಿತ ವ್ಯಕ್ತಿತ್ವ ನಿಯಮಗಳ ವೃತ್ತದಲ್ಲೇ ತಿರುಗುತ್ತದೆ. ಸಮೃದ್ಧ ವ್ಯಕ್ತಿತ್ವ ಮಾತ್ರ ತನಗೆ ಇಚ್ಛೆಯಿರುವ ಪರ‍್ಯಂತ ನಿಯಮಗಳನ್ನೂ ಘಟನೆಗಳನ್ನೂ ಮನ್ನಿಸುತ್ತದೆ. ಅದು ತನಗೆ ಕಂಟಕವಾಯಿತೆಂದರೆ ತಕ್ಷಣದಲ್ಲೇ ಅದನ್ನು ಧಿಕ್ಕರಿಸಿಬಿಡುತ್ತದೆ. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
 • ರಾಮ ಸೀಮಿತನೂ ಆಗಿ ಅಲ್ಪನೂ ಆಗಿ, ಕೃಷ್ಣ ಸಮೃದ್ಧನೂ ಆಗಿ ಕಾಮುಕನೂ ಆಗಿ, ಶಿವ ಗಾತ್ರಾತೀತನೂ ಆಗಿ ಕಾಲ್ಪನಿಕನೂ ಆಗಿ ಇಬ್ಬಂದಿ ಬದುಕು ಬಾಳುತ್ತಾರೆ. ಇದಕ್ಕೆ ಒಂದು ಪರಿಹಾರ ಸೂಚಿಸುವ ಮೂರ್ಖತನಕ್ಕೆ ಹೋಗದೆ ಇಷ್ಟೇ ಪ್ರಾರ್ಥಿಸುತ್ತೇನೆ. ‘ಓ ತಾಯಿ ಭಾರತಿ, ನಮಗೆ ಶಿವನ ಮನಸ್ಸನ್ನು ಕೃಷ್ಣನ ಹೃದಯವನ್ನು ರಾಮನ ಕಾರ‍್ಯಪ್ರಪಂಚವನ್ನು ಕೊಡು; ಪ್ರಮಾಣಾತೀತವಾದ ಮನಸ್ಸು, ಸಮೃದ್ಧ ಹೃದ, ಆದರೆ ಸೀಮಿತವಾದ ಬದುಕು ಇವುಗಳಿಂದ ನಮ್ಮನ್ನು ನಿರ್ಮಿಸು. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
 • ಸಾರ್ವಜನಿಕವಾಗಿ ಒಬ್ಬ ಇನ್ನೊಬ್ಬನ ಕಾಲು ತೊಳೆಯುವುದು ಅಸಹ್ಯಕರವಾದದ್ದು. (ಕಾಶಿಯಲ್ಲಿ ಭಾರತದ ರಾಷ್ಟ್ರಪತಿಗಳು ಇನ್ನೂರು ಜನ ಬ್ರಾಹ್ಮಣರ ಕಾಲು ತೊಳೆದಿದ್ದರ ಬಗ್ಗೆ)
 • ಆ ಅನಾಗರಿಕ ರಾಕ್ಷಸ ಪಂಧ್ಯದಲ್ಲಿ ಮನುಷ್ಯನಂತೆ ವರ್ತಿಸಿದ ಏಕೈಕ ವ್ಯಕ್ತಿ ಈತ (ರಾಷ್ಟ್ರಪತಿಗಳಿಂದ ಕಾಲು ತೊಳೆಸಿಕೊಳ್ಳಲು ನಿಯಮಿತರಾಗಿದ್ದ ಇನ್ನೂರು ಜನರಲ್ಲಿ, ಆ ಕ್ರಿಯೆಯಿಂದ ಹಿಂದೆ ಸರಿದ ಏಕೈಕ ಬ್ರಾಹ್ಮಣನ ಬಗ್ಗೆ)
 • ಇಂಗ್ಲಿಷ್ ಭಾಷೆಯು ಭಾರತಕ್ಕೆ ಅಪಾಯ ಮಾಡುತ್ತಿರುವುದಕ್ಕೆ ಅದು ವಿದೇಶಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಸಂದರ್ಭದಲ್ಲಿ ಅದು ಯಜಮಾನಿಕೆಯ ಭಾಷೆಯಾಗಿರುವುದೇ ಪ್ರಮುಖ ಕಾರಣ.
 • ಬೇರೆ ಬೇರೆ ಕ್ಷೇಥ್ರಗಳಲ್ಲಿದ್ದಂತೆ ಆರ್ಧಯಾತ್ಮಿಕ ಸಮಾನತೆಯಲ್ಲಿ ಮುಂಚೂಣಿಯಲ್ಲಿರುವ ಮಹಾನ್ ಮಹಿಳೆಯೊಬ್ಬಳಿದ್ದಾಳೆ. ಈಕೆ ಕಥೆಗಳಲ್ಲಿ ಬರುವ ಹೆಂಗಸಲ್ಲ. ಎಂಟನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿದ್ದಳು. ಅವಳೇ ಅಕ್ಕಮಹಾದೇವಿ. ವೈರಾಗ್ಯ ಸಾಧು ಸ್ವಭಾವ ಮತ್ತು ದರ್ಶನ ಇತ್ಯಾದಿಗಳಲ್ಲಿ ಗಂಡಸು ಕೊನೆಯ ಎತ್ತರದ ತನಕ ತಲಪಿ ವಿರಕ್ತನಾಗುವಂತೆ, ಹೆಣ್ಣಾದ ತಾನೂ ಆ ಎತ್ತರಕ್ಕೆ ಯಾಕೆ ಏರಲು ಸಾಧ್ಯವಾಗುವುದಿಲ್ಲ ಎಂದು ಅವಳು ಪ್ರಶ್ನಿಸಿದ್ದಳು. (ದ್ರೌಪದಿಯೋ? ಸಾವಿತ್ರಿಯೋ? ಲೇಕನದಿಂದ)
 • ಹಿಂದೂ ಮುಸಲ್ಮಾನಿರಿಬ್ಬರೂ ಬದಲಾಗಬೇಕಿದೆ. ಅದೆಷ್ಟು ಜನ ಹಿಂದೂಗಳು ಶೇರಶಹನನ್ನು ತಮ್ಮ ಪೂರ್ವಜ ಎಂದು ಪರಿಗಣಿಸುತ್ತಾರೆ. ಅದೆಷ್ಟು ಜನ ಮುಸಲ್ಮಾನರು ಗಜನಿ ಗೋರಿ ಸುಲಿಗೆಕೋರರಾಗಿದ್ದರು ಎಂದು ಹೇಳಬಲ್ಲರು? (ಹಿಂದೂ ಮುಸ್ಲಿಂ ಎಂಬ ಲೇಖನದಿಂದ)
 • ಮಹಾತ್ಮನೊಬ್ಬ ಅರ್ಧಶತಮಾನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಜೀವನಕ್ಕೆ ಸಂಬಂಧಪಟ್ಟಿದ್ದರೆ ಪರಸ್ಪರ ವಿರೋಧವಾಗಿ ಕಣಬಲ್ಲ ಹೇಳಿಕೆಗಳನ್ನು ಕೊಟ್ಟಿರುತ್ತಾನೆ. ಮಹಾತ್ಮಗಾಂಧಿ ತಮ್ಮ ಅಪೂರ್ವವಾದ ಅಂತರ್‌ದೃಷ್ಟಿಯನ್ನೂ ಮೀರಿ, ಪರಸ್ಪರ ವಿರೋಧವೆಂಬತೆ ಕಾಣುವ ಹಲವು ಹೇಳಿಕೆಗಳನ್ನು ಬ್ರಿಟಿಷ್ ಸಾಮ್ರಜ್ಯದ ಮೇಲೂ, ಜಾತಿಪದ್ಧತಿಯ ಮೇಲೂ, ಬಂಡವಾಳ ಹಾಗೂ ಕೆಲಸಗಾರನ ಸಂಬಂಧದ ಮೇಲೂ ನೀಡಿದ್ದಾರೆ. (ಗಾಂಧಿವಾದ ಮತ್ತು ಸಮಾಜವಾದ ಲೇಖನದಿಂದ)

8 comments:

PARAANJAPE K.N. said...

ಉತ್ತಮ ವ್ಯಕ್ತಿ ಚಿತ್ರಣ

shivu.k said...

ಸರ್,

ಲೋಹಿಯಾ ಬಗ್ಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದೀರಿ. ನಾನು ಲೋಹಿಯಾರನ್ನು ಓದಿಕೊಂಡಿಲ್ಲ. ಬಿಡುವಾದರೆ ಓದಬೇಕೆನಿಸುತ್ತದೆ.

Dr. HARISH KUMARA BK (BANUGONDI) said...

ಅದ್ಬುತವಾಗಿ ಮೂಡಿ ಬಂದಿದೆ...ಧನ್ಯವಾದಗಳು

ಮನದಾಳದಿಂದ............ said...

ಲೋಹಿಯಾ ಅವರ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಾ. ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲ, ಗಣಪತಿಯಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಕಡಿದಾಳ ಶಾಮಣ್ಣ, ಪ್ರೊ.ರಾಮದಾಸ್, ಎಂ.ಡಿ.ನಂಜುಂಡಸ್ವಾಮಿ, ದೇವನೂರು ಮಹಾದೇವ, ರವಿವರ್ಮಕುಮಾರ್, ಅಗ್ರಹಾರ ಕೃಷ್ಣಮೂರ್ತಿ, ರೈತಸಂಘದ ಸುಂದರೇಶ್, ನಟರಾಜ್ ಹುಳಿಯಾರ್ ಮೊದಲಾದವರು ಲೋಹಿಯಾ ಅವರಿಂದ ಪ್ರಭಾವಿತರು ಎಂಬುದು ಸಂತೋಷದ ಸಂಗತಿ.
ಅರಿವು ಮೂಡಿಸುವ ಲೇಖನಕ್ಕೆ ಧನ್ಯವಾದಗಳು.

ಬಿಸಿಲ ಹನಿ said...

ನಾನು ಲೋಹಿಯಾ ಬಗ್ಗೆ ಲಂಕೇಶ್ ಬರೆದಿದ್ದನ್ನು ಅಲ್ಪ ಸ್ವಲ್ಪ ಓದಿದ್ದೆ. ಆದರೆ ಇದೀಗ ಅವರ ಒಟ್ಟು ವ್ಯಕ್ತಿತ್ವದ ಸಾರಾಂಶವನ್ನು ಹಾಗೂ ಅವರ ಚಿಂತನೆಗಳನ್ನು ಓದಿ ಖುಶಿಯಾಯಿತು.
ಅಂದಹಾಗೆ < ಅವರು ನಾಯಕರುಗಳ ನಾಯಕ. ತಾವು ಹೋದಲ್ಲೆಲ್ಲಾ ನಾಯಕರುಗಳನ್ನು ರೂಪಿಸುತ್ತಾರೆ.> ಈ ಸಾಲಿನಲ್ಲಿ “ನಾಯಕರುಗಳು” ಎನ್ನುವ ಪದದ ಬಳಕೆ ಸರಿಯೆ? ನಾಯಕರು ಎನ್ನುವ ಪದ ಈಗಾಗಲೇ ಬಹುವಚನದಲ್ಲಿರುವದರಿಂದ ಅದಕ್ಕೆ ಮತ್ತೆ “ಗಳು” ಸೇರಿಸಬೇಕೆ? ಅಥವಾ ಹಾಗೆ ಬಳಸುವದು ಸಾಮಾನ್ಯವಾಗಿಬಿಟ್ಟಿದೆಯೆ? ಏಕೆಂದರೆ ಈಗೀಗ ಇಂಥ ಪದಗಳ ಬಳಕೆ ಹೆಚ್ಚಾಗುತ್ತಿದೆ. ಹೀಗೆ ಬಳಸುವದು ಸರಿಯೋ? ತಪ್ಪೋ? ತಿಳಿಸಿ

Unknown said...

ನಾಯಕರುಗಳು ಪ್ರಯೋಗ ವ್ಯಾಕರಣರೀತ್ಯ ತಪ್ಪು ಪ್ರಯೋಗ. ನೀವುಬ ಹೇಳಿದಂತೆ ನಾಯಕರು ಎಂಬುದೆ ಸರಿಯಾದ ಪ್ರಯೋಗ.
ಜನ ಬಳಕೆಯಲ್ಲಿ ಇಂತಹ ಪ್ರಯೋಗ ಹೆಚ್ಚಾದರೆ ಆತಂಕ ಪಡುವ ಅಗತ್ಯವಿಲ್ಲ. ವ್ಯಾಕರಣಕ್ಕೂ ಮೊದಲೇ ಹುಟ್ಟಿರುವ ಹಾಗೂ ಮೂಲವಾದ ಭಾಷೆಯೇ ಬದಲಾಗುವ ಪ್ರಕ್ರಿಯೆಯೆಲ್ಲಿ ತನ್ನ ಜೀವಂತಿಕೆಯನ್ನು ತೋರಿಸುತ್ತದೆ. ಮುಂದೆ ಯಾವಾಗಲಾದರೂ ಅದನ್ನು ಹಿಂಬಾಲಿಸಿಯೇ ವ್ಯಾಕರಣವೂ ಬದಲಾಗುತ್ತದೆ.

ದೀಪಸ್ಮಿತಾ said...

ಒಳ್ಳೆಯ ವ್ಯಕ್ತಿ ಚಿತ್ರಣ. ಲೋಹಿಯಾ ಬಗ್ಗೆ ಕೇಳುತ್ತಿದ್ದೆವು ಆದರೆ ಅವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ

ಬಿಸಿಲ ಹನಿ said...

ಹೌದು ನೀವು ಹೇಳಿದ್ದು ಸರಿ. ಇಂಗ್ಲೀಷಿನಲ್ಲೂ ಇಂಥ ಅನೇಕ ತಪ್ಪುಗಳಿವೆ. ಅದರೆ ಬಳಸುತ್ತಾ ಬಳಸುತ್ತಾ ಅವೇ ಸರಿಯೇನೋ ಎನ್ನುವಷ್ಟರಮಟ್ಟಿಗೆ ಹಾಸುಹೊಕ್ಕಾಗಿವೆ. ಉದಾಹರಣೆಗೆ "Drinker" ಎನ್ನುವ ಪದ ಮೊದಲು ಇರಲಿಲ್ಲ. ಅದಕ್ಕೆ ಬದಲಾಗಿ "Drunkard" ಎನ್ನುತ್ತಿದ್ದೆವು. ಆದರೆ ಇದೀಗ ಬಳಸಿ ಬಳಸಿ ಮೊದಲಿನ ಪದ ಸವಕಳಿಯಾಗಿ ಆ ಜಾಗವನ್ನು ಹೊಸ ಪದ ಆಕ್ರಮಿಸಿಕೊಂಡಿದೆ. ಭಾಷೆ ಬದಲಾಗುವದೆಂದರೆ ಇದೆಯೇನೋ?
ಮಾಹಿತಿಗೆ ಧನ್ಯವಾದಗಳು.