Monday, December 23, 2013

ಪ್ರವಾಸಿಗರ ನಿರೀಕ್ಷೆಯಲ್ಲಿ ನುಗ್ಗೇಹಳ್ಳಿ ದೇವಾಲಯಗಳು

ಭಾರತೀಯ ಪ್ರವಾಸೋದ್ಯಮಕ್ಕೆ ಕರ್ನಾಟಕದ ಕೊಡುಗೆ ಅಪಾರ. ಶಿಲ್ಪಕಲೆಯ ಮಾತು ಬಂತೆಂದರೆ ಹಾಸನ ಜಿಲ್ಲೆ ನೆನಪಾಗುತ್ತದೆ. ಬೇಲೂರು ಹಳೇಬೀಡು ಮತ್ತು ಶ್ರವಣಬೆಳಗೊಳಗಳಲ್ಲಿನ ಹೊಯ್ಸಳ ಶಿಲ್ಪಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಶ್ರವಣಬೆಳಗೊಳಕ್ಕೆ ಬಂದವರು ಕೇವಲ ಇಪ್ಪತ್ತೈದು ಕಿಲೋಮೀಟರ್‌ಗಳ ದೂರ ಪ್ರಯಾಣಿಸುವ ಉತ್ಸಾಹವಿದ್ದರೆ ಸಾಕು; ಹೊಸಹೊಳಲು ಮತ್ತು ಸೋಮನಾಥಪುರದ ತ್ರಿಕೂಟ ದೇವಾಲಯಗಳನ್ನೇ ಹೋಲುವ, ಸೋಮನಾಥಪುರದ ಕೇಶವದೇವಾಲಯಕ್ಕಿಂತ ಚಿಕ್ಕದಾದರೂ, ಅದಕ್ಕಿಂತ ಇಪ್ಪತ್ತು ವರ್ಷ ಹಳೆಯದಾದ ನುಗ್ಗೆಹಳ್ಳಿಯ ಲಕ್ಷ್ಮೀನರಸಿಂಹ ಮತ್ತು ಸದಾಶಿವ ದೇವಾಲಯಗಳನ್ನು ನೀವು ನೋಡಬಹುದು. ಹೊಯ್ಸಳ ಶೈಲಿಯ ದೇವಾಲಯಗಳ ಎಲ್ಲ ಲಕ್ಷಣಗಳನ್ನು ಮೈವೆತ್ತು ನಿಂತಿರುವ ಲಕ್ಷ್ಮೀನರಸಿಂಹ ದೇವಾಲಯದ ರಚನೆಯ ಕಾಲ ಕ್ರಿ.ಶ. ೧೨೪೬. ಇದಕ್ಕಿಂತ ಮೂರು ವರ್ಷ ಇತ್ತೀಚಿನದಾದ ಅಂದರೆ ಕ್ರಿ.ಶ. ೧೨೪೯ ರಲ್ಲಿ ನಿರ್ಮಿತವಾಗಿರುವ ಇಲ್ಲಿನ ಸದಾಶಿವ ದೇವಾಲಯವೂ ತನ್ನ ವಿಶಿಷ್ಟ ಶೈಲಿಯ ಶಿಖರದಿಂದಾಗಿ ಕಲಾವಿಮರ್ಶಕರ ಗಮನ ಸೆಳೆದಿದೆ.
ಲಕ್ಷ್ಮೀನರಸಿಂಹ ದೇವಾಲಯ
ನುಗ್ಗೇಹಳ್ಳಿಯು ಒಂದು ಪ್ರಾಚೀನ ಪಟ್ಟಣವಾಗಿದೆ. ೧೧೨೧ಕ್ಕೆ ಸೇರಿದ ವಿಷ್ಣುವರ್ಧನನ ಶಾಸನವು ಇಲ್ಲಿಂದ ಪ್ರಕಟವಾಗಿದೆ. ಕ್ರಿ.ಶ. ೧೨೪೬ ಕ್ಕೂ ಮುಂಚೆಯೇ ಹೊಯ್ಸಳ ಸೋಮೇಶ್ವರನ ದಂಡನಾಯಕನಾಗಿದ್ದ ಬೊಮ್ಮಣ್ಣನು ನುಗ್ಗೇಹಳ್ಳಿಯನ್ನು ‘ಸೋಮನಾಥಪುರ’ವೆಂಬ ಅಗ್ರಹಾರವನ್ನಾಗಿ ಮಾಡಿ, ದಾನ ಕೊಟ್ಟಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಇದೇ ಬೊಮ್ಮಣ್ಣ ದಂಡನಾಯಕನು ಪ್ರಸನ್ನಕೇಶವ ಮತ್ತು ಸದಾಶಿವ ದೇವಾಲಯಗಳೆರಡನ್ನೂ ಕಟ್ಟಿಸಿದ್ದಾನೆ.
ರತಿ-ಮನ್ಮಥ
ಶಾಸನಗಳಲ್ಲಿ ‘ಪ್ರಸನ್ನಕೇಶವ ದೇವಾಲಯ’ ಎಂದೇ ಉಲ್ಲೇಖವಿದ್ದರೂ ಈಗ ಜನಮನದಲ್ಲಿ ‘ಲಕ್ಷ್ಮೀನರಸಿಂಹ ದೇವಾಲಯ’ ಎಂದು ಖ್ಯಾತವಾಗಿದೆ. ಹಳೇಬೀಡಿನ ದೇವಾಲಯದ ನಕ್ಷತ್ರಾಕಾರದ ಹೊರಬಿತ್ತಿಯಲ್ಲಿ ಇರುವಂತೆಯೇ ಆನೆ ಕುದುರೆಗಳ ಸಾಲುಗಳಲ್ಲದೆ ಲತಾಪಟ್ಟಿಕೆ, ಸಿಂಹಮುಖ, ಕಪಿ, ಪಕ್ಷಿ, ಜಿಂಕೆ ಇತ್ಯಾದಿಗಳಿವೆ. ಇದರ ಮೇಲಿನ ಪಟ್ಟಿಯಲ್ಲಿ ಪೌರಾಣಿಕ ಕಥೆಗಳು ಕೆತ್ತಲ್ಪಟ್ಟಿವೆ. ಉತ್ತರದ ಗರ್ಭಗುಡಿಯ ಬಿತ್ತಿಯಲ್ಲಿ ಭಾಗವಾತ ಕಥೆಯ ಚಿತ್ರಣವಿದೆ. ಕೃಷ್ಣನು ಬಾಯ್ದೆರೆದು ಯಶೋದೆಗೆ ವಿಶ್ವವನ್ನು ತೋರಿಸುವುದು, ಯಶೋದೆಯು ಕೃಷ್ಣನನ್ನು ದಂಡಿಸುತ್ತಿರುವುದು, ಪೂತನೀಸಂಹಾರ, ನವನೀತ ಕೃಷ್ಣ ಮತ್ತು ಬೆಕ್ಕು ಬೆಣ್ಣೆ ಕದಿಯುವುದು ಮುಂತಾದ ಶಿಲ್ಪಗಳಿವೆ. ದಕ್ಷಿಣದಲ್ಲಿ ಕಾಳಿಂಗಮರ್ದನ, ಗೋವರ್ಧನಗಿರಿಯನ್ನು ಎತ್ತುವುದು ಮುಂತಾದ ಶಿಲ್ಪಗಳಿವೆ. ಪಶ್ಚಿಮದಲ್ಲಿ ರಾಸಕ್ರೀಡೆ, ವಸ್ತ್ರಾಪಹರಣ, ಅಕ್ರೂರನಿಗೆ ವಿಶ್ವರೂಪದರ್ಶನ ಮಾಡಿಸುವುದು, ಕಂಸವಧೆ ಮುಂತಾದ ಚಿತ್ರಗಳಿವೆ.  ಈ ಪಟ್ಟಿಕೆಗಳ ಮೇಲೆ ಮಕರಗಳ ಸಾಲು, ಅದರ ಮೇಲೆ ಹಂಸಗಳ ಸಾಲುಗಳಿವೆ.
ಅಷ್ಟಭುಜ ನೃತ್ಯ ಸರಸ್ವತೀ
ಪಟ್ಟಿಕೆಗಳ ಮೇಲ್ಭಾಗದಲ್ಲಿ ಸುಮಾರು ಒಂದು ನೂರಕ್ಕೂ ಹೆಚ್ಚು ವಿಗ್ರಹಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಮೋಹಿನಿ, ಕೇಶವ ತ್ರಿವಿಕ್ರಮ ಮೊದಲಾದ ವಿಷ್ಣುವಿನ ಇಪ್ಪತ್ತನಾಲ್ಕು ರೂಪಗಳು ಹಾಗೂ ಕುಲಾವಿ, ನಿಲುವಂಗಿ, ಪಾದುಕೆಗಳನ್ನು ಧರಿಸಿ ದಂಡಚಕ್ರಗಳನ್ನು ಹಿಡಿದಿರುವ ವಿಶಿಷ್ಟವಾದ ದಕ್ಷಿಣಾಮೂರ್ತಿ, ರತಿಮನ್ಮಥ, ಮಾಧವ ಲಕ್ಷ್ಮೀ, ತಾಂಡವ ಗಣೇಶ, ಯೋಗನರಸಿಂಹ, ಗರುಡ, ಪ್ರಹ್ಲಾದ, ವರಾಹ, ಭೂದೇವಿ, ವೇಣುಗೋಪಾಲ, ಸೂರ್ಯ, ಮುಂತಾದ ದೇವದೇವಿಯರ ವಿಗ್ರಹಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕುಸುರಿ ಕೆಲಸದಲ್ಲಿ ಬೇಲೂರು ಹಳೇಬೀಡು ದೇವಾಲಯಗಳ ಶಿಲ್ಪಗಳನ್ನೇ ಹೋಲತ್ತವೆ.
ಮೋಹಿನೀ ಅಥವಾ ವಿಷಕನ್ಯೆ
ದೇವಾಲಯದ ದಕ್ಷಿಣ ಭಾಗದ ವಿಗ್ರಹಗಳನ್ನು ರೂವಾರಿ ಬೈಚೋಜ ಮಾಡಿದ್ದರೆ ಉತ್ತರ ಭಾಗದ ವಿಗ್ರಹಗಳನ್ನು ಮಲ್ಲಿತಮ ಮಾಡಿರುವುದು ವಿಶೇಷ. ದಕ್ಷಿಣದಲ್ಲಿರುವ ಬಹುತೇಕ ವಿಗ್ರಹಗಳು ಉತ್ತರದಲ್ಲಿಯೂ ಇವೆ. ಅವುಗಳ ಜೊತೆಗೆ ನಾಟ್ಯಸರಸ್ವತಿ, ನಾಟ್ಯಲಕ್ಷ್ಮೀ, ಅರ್ಜುನ ಮತ್ಸ್ಯಯಂತ್ರ ಭೇದಿಸುತ್ತಿರುವಾಗ ಹಾರ ಹಿಡಿದು ನಿಂತಿರುವ ದ್ರೌಪದಿ, ರಾಮ-ಲಕ್ಷ್ಮಣ-ಸೀತೆ-ಆಂಜನೇಯ ಮುಂತಾದ ವಿಗ್ರಹಗಳು ಕಲಾತ್ಮಕವಾಗಿವೆ. ಪಶ್ಚಿಮದ ಗೂಡಿನಲ್ಲಿರುವ ಹರಿಹರ ಮೂರ್ತಿ ಗಮನ ಸೆಳೆಯುತ್ತದೆ.

 ಮೂಲ ಗರ್ಭಗುಡಿಯಲ್ಲಿ ಪ್ರಸನ್ನಕೇಶವ, ದಕ್ಷಿಣ ಗರ್ಭಗುಡಿಯಲ್ಲಿ ವೇಣುಗೋಪಾಲ, ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹ ವಿಗ್ರಹಗಳಿವೆ. ಮೂರೂ ವಿಗ್ರಹಗಳು ಸುಮಾರು ಐದು ಅಡಿ ಎತ್ತರವಾಗಿದ್ದು ಅತ್ಯಂತ ಸೂಕ್ಷ್ಮ ಕುಸುರಿ ಕೆಲಸಗಳಿಂದ ಅಲಂಕೃತವಾಗಿವೆ. ನವರಂಗವು ಒಂಬತ್ತು ಅಂಕಣದ್ದಾಗಿದ್ದು, ಒಂದೊಂದು ಅಂಕಣವೂ ಭಿನ್ನವಾದ ಮತ್ತು ಆಳವಾದ ಭುವನೇಶ್ವರಗಳಿಂದ ಕೂಡಿದೆ. ಮೂಲ ಗರ್ಭಗುಡಿಯ ಗೋಪುರ ಹೊಯ್ಸಳ ಶೈಲಿಯಲ್ಲಿದೆ. ಉತ್ತರ-ದಕ್ಷಿಣದ ಗೋಪುರಗಳೆರಡೂ ಇತ್ತೀಚಿನ ರಚೆನೆಗಳಾಗಿದ್ದು ಇಟ್ಟಿಗೆಯಿಂದ ಕಟ್ಟಲ್ಪಟ್ಟಿವೆ.

ಸದಾಶಿವ ದೇವಾಲಯ
ಸದಾಶಿವ ದೇವಾಲಯವು ಅಷ್ಟಕೋನ ನಕ್ಷತ್ರಾಕಾರದ ತಳವಿನ್ಯಾಸವಿರುವ ದೇವಾಲಯವಾಗಿದೆ. ಹೊರಬಿತ್ತಿಯಲ್ಲಿ ಶಿಲ್ಪಗಳಿಲ್ಲ. ಆದರೆ ಈ ದೇವಾಲಯದ ವೈಶಿಷ್ಟವಿರುವುದು ಅದರ ಶಿಖರದಲ್ಲಿ. ಆಷ್ಟಕೋನದ ಮೂಲೆಗಳಲ್ಲಿ ನಕ್ಷತ್ರಗಳು, ಅಷ್ಟಮುಖ ಸ್ತಂಭಗಳು, ಬಗ್ಗಿದ ರೇಖೆಯಂತಿರುವ ಬಳಪದ ಕಲ್ಲಿನ ಶಿಖರ ವಿಶಿಷ್ಟವಾಗಿದೆ. ಅಷ್ಟಾಸ್ರವಾದ ಆಮಲಕ ಕಲಶ, ಶಿಖರಕ್ಕೊಂದು ಶೋಭೆಯನ್ನಿತ್ತಿದೆ. ಶಿಖರದಲ್ಲಿ ಪೂರ್ವಾಭಿಮುಖವಾಗಿ ಕೆತ್ತಿರುವ ನಟರಾಜನ ಉಬ್ಬುಶಿಲ್ಪ ಮನಮೋಹಕವಾಗಿದೆ. ಇನ್ನೆಲ್ಲಿಯೂ ಈ ವಿನ್ಯಾಸ ಕಂಡುಬರುವುದಿಲ್ಲ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ದೇವಾಲಯದ ನವರಂಗದಲ್ಲಿ ಸೂರ್ಯ-ಛಾಯಾದೇವಿ, ಸಪ್ತಮಾತೃಕಾ, ವೀರಭದ್ರ, ಗಣೇಶ, ಭೈರವ, ಸರಸ್ವತಿ, ಮಹಿಷಾಸುರಮರ್ದಿನಿ, ಷಣ್ಮುಖ ಮೊದಲಾದ ವಿಗ್ರಹಗಳಿವೆ. ಸೇರ್ಪಡೆಯಾಗಿರುವ ಪಾರ್ವತಿ ಗುಡಿಯಲ್ಲಿ ಪಾರ್ವತಿಯ ವಿಗ್ರಹ ಸುಂದರವಾಗಿದೆ. ಜಾಲಂದ್ರಗಳಿಂದ ಕೂಡಿರುವ ನಂದಿಮಂಟಪದಲ್ಲಿ ಆಕರ್ಷಕವಾದ ನಾಲ್ಕು ಅಡಿ ಎತ್ತರದ ನಂದಿಯಿದೆ.
ಎರಡೂ ದೇವಾಲಯಗಳ ಮಹಾದ್ವಾರ, ಸ್ತಂಭಗಳು, ಪಾತಾಳಾಂಕಣ, ಮುಖಮಂಟಪ, ಹೊರಗಿನ ನವರಂಗಗಳು ವಿಜಯನಗರ ಮತ್ತು ಪಾಳೆಯಗಾರರ ಕಾಲದ ಸೇರ್ಪಡೆಯಾಗಿವೆ. ಈ ದೇವಾಲಯದ ಈಶಾನ್ಯಕ್ಕೆ ಕೂಗಳತೆಯ ದೂರದಲ್ಲಿ ಬೊಮ್ಮಣ್ಣದಂಡನಾಯಕನ ಅಕ್ಕ ಲಕ್ಕವ್ವೆಯಕ್ಕ ಕಟ್ಟಿಸಿದ ಹಿರಿಯಕೆರೆ ಇಂದಿಗೂ ಸುಸ್ಥಿತಿಯಲ್ಲಿ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ತುಂಬಿದ್ದಿಲ್ಲ.
ದಕ್ಷಿಣಭಾರತದಲ್ಲೇ ವಿಶೇಷವೆನ್ನಬಹುದಾದ ಶಿಖರ - ಸದಾಶಿವ ದೇವಾಲಯ

ಪ್ರಸನ್ನಕೇಶವ ದೇವಾಲಯವು ಕೇಂದ್ರ ಪುರಾತತ್ವ ಇಲಾಖೆಗೂ, ಸದಾಶಿವ ದೇವಾಲಯ ರಾಜ್ಯ ಪುರಾತತ್ವ ಇಲಾಖೆಗೂ ಸೇರಿವೆ. ಎರಡೂ ದೇವಾಲಯಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲಾಗಿದೆ. ಇಷ್ಟೆಲ್ಲಾ ಆಕರ್ಷಣೆಯಿರುವ ಇಲ್ಲಿನ ಪ್ರಮುಖ ಕೊರತೆಯೆಂದರೆ ಪ್ರವಾಸಿಗರು. ಈ ದೇವಾಲಯದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮೌನವಾಗಿದೆ. ಈ ಊರನ್ನು ಪ್ರವಾಸಿಗರಿಗೆ ತೋರಿಸುವ ಯಾವ ಏರ್ಪಾಡೂ ಇಲ್ಲ. ಹಿರಿಯಕೆರೆಯಿಂದ ಅಲ್ಪ ದೂರದಲ್ಲಿ ಹೇಮಾವತಿ ಎಡದಂಡೆ ನಾಲೆಯಿದೆ. ಅದರಿಂದ ಶಾಶ್ವತವಾಗಿ ಈ ಕೆರೆಗೆ ನೀರೊದೊಗಿಸಿದ್ದೇ ಆದರೆ, ಸಾವಿರಾರು ಎಕರೆ ಭೂಮಿಗೆ, ಜನ-ಜಾನುವಾರುಗಳಿಗೆ ಹಾಗೆಯೇ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಉಪಯೋಗವಾಗುತ್ತದೆ.
ಮಾರ್ಗ: ಶ್ರವಣಬೆಳಗೊಳದಿಂದ ಹಿರಿಸಾವೆ ಮೂಲಕ ನುಗ್ಗೆಹಳ್ಳಿಗೆ ಹೋಗಬಹುದು. ಚೆನ್ನರಾಯಪಟ್ಟಣದಿಂದ ನುಗ್ಗೆಹಳ್ಳಿಗೆ ಬಸ್ ಸೌಕರ್ಯ ಅನುಕೂಲಕರವಾಗಿದೆ.

Thursday, December 19, 2013

ಅಧ್ಯಾಪನ ವೃತ್ತಿ ಅಂದು - ಇಂದು

ಅಂದು 1934-35
ಅವರಿಗೆ ಅರಮನೆಯಲ್ಲಿ ಪ್ರೈವೇಟ್ ಟ್ಯೂಷನ್ ಹೇಳಲು ನನಗೆ ಆಹ್ವಾನ ಬಂದಿತ್ತು. ನನ್ನನ್ನು ಕಾರಿನಲ್ಲಿ ಕೊಂಡೊಯ್ದು ಮತ್ತೆ ಕಾರಿನಲ್ಲಿ ತಂದು ಮನೆಗೆ ಬಿಡುವುದಾಗಿಯೂ ಒಳ್ಳೆಯ ಸಂಭಾವನೆ ಕೊಡುವುದಾಗಿಯೂ ಕಾಲೇಜಿನ ಮುಖ‍್ಯಾಧಿಕಾರಿ ಹೇಳಿದರು...... I have got better business than teaching Princes! (ಈ ರಾಜಕುಮಾರರುಗಳಿಗೆ ಪಾಠ ಹೇಳುವುದಕ್ಕಿಂತಲೂ ನನಗೆ ಬೇರೆ ಉತ್ತಮತರ ಕೆಲಸವಿದೆ!) ಎಂದು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಟ್ಟೆ. ಎಲ್ಲರಿಗೂ ಆಶ್ಚರ್ಯ. ಅರಮನೆಯಿಂದ ಅಂತಹ ಕರೆ ಬರುವುದೇ ಎಂದು ಇತರರು ಹಾತೊರೆಯುತ್ತಿದ್ದರೆ ಇವನು ತಿರಸ್ಕರಿಸುತ್ತಾನಲ್ಲ ಎಂದು!
- ಕುವೆಂಪು 'ನೆನಪಿನ ದೋಣಿಯಲ್ಲಿ' ಪುಟ 1067
ಅಂದು 1969-70
ೆಲ್ಲರಂತೆ ನನಗೂ ಯುವ ಸ್ಫೂರ್ತಿ ಮಿಡಿಯುತ್ತಿತ್ತು. ಇಂತಹ ಸಂದರ್ಭದಲ್ಲೇ ನನಗೊಂದು ಅಪೂರ್ವ ಅವಕಾಶ ೊದಗಿಬಂದಿತು. ಅದೇ ಮೈಸೂರು ಸಂಸ್ಥಾನದ ಮಹಾರಾಜರ ಸುಪುತ್ರನಿಗೆ ಪಾಠ ಹೇಳಿಕೊಡುವ ಜವಾಬ್ದಾರಿ. ನಾನು ಅಳುಕಿನಿಂದಲೇ ಒಪ್ಪಿಕೊಂಡೆ.....
ಪ್ರಾಧ್ಯಾಪಕರ ಬಡಾವಣೆಯಿಂದ ಅರಮನೆಗೆ ನನ್ನನ್ನು ಕರೆದೊಯ್ಯಲು ಅರಮನೆಯಿಂದ ಕಾರು ಬರುತ್ತಿತ್ತು. ಅದು ಒಂದಲ್ಲಾ ಎರಡು. ಕಾರ್ಯದರ್ಶಿಗಳೇ ಈ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಇದು ನನಗೆ ಸಂಕೋಚಕ್ಕೆ ತಳ್ಳುತ್ತಿತ್ತು. ಆಗಿನ ಕಾಲದಲ್ಲಿ ಕಾರುಗಳೇ ವಿರಳ. ಅವು ಬಂದಿತೆಂದರೆ ಬಡಾವಣೆಯ ಜನರೆಲ್ಲಾ ಹೊರಗೆ ಬಂದು ನೋಡುತ್ತಿದ್ದರು. ಇದು ಸ್ವಲ್ಪ ದಿನ ಮಾತ್ರ ನಡೆಯಿತು. ನಾನು ದೃಢಮನಸ್ಸು ಮಾಡಿ, ನನ್ನ ವಿದ್ಯಾರ್ಥಿಗೆ ಹೇಳಿಬಿಟ್ಟೆ 'ನಾನು ಇನ್ಮುಂದೆ ಕಾರಿನಲ್ಲಿ ಬರುವುದಿಲ್ಲ. ನನಗೊಂದು ಸ್ಕೂಟರ್ ಬೇಕು. ಅದಕ್ಕಾಗಿ ಸಹಾಯ ಮಾಡಿ'
ಆಗ ಐಡಿಯಲ್ ಜಾವಾ ಸ್ಕೂಟರ್‍ ಗಳು ಉತ್ತುಂಗದಲ್ಲಿದ್ದ ಕಾಲ. ಬುಕ್ ಮಾಡಿದರೂ ಸ್ಕೂಟರ್ ಸಿಗಲು ಕನಿಷ್ಠ ನಾಲ್ಕು ತಿಂಗಳು ಸಮಯ ಬೇಖಿತ್ತು. ಆಗ ಅರಮನೆ ಆಡಳಿತ ವರ್ಗ ನನ್ನ ಸಹಾಯಕ್ಕೆ ಬಂದಿತು. ನೇರವಾಗಿ ಕಾರ್ಖಾನೆಯಿಂದಲೇ ಸ್ಕೂಟರ್ ಪಡೆಯಲು ಮತ್ತು ಇದಕ್ಕಾಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ 3600 ರೂ ಸಾಲ ದೊರಕಲು ಒಡೆಯರ್ ನೆರವಾದರು. ಇದು ನನ್ನ ಪಾಲಿಗೆ ದೊಡ್ಡ ಮೈಲಿಗಲ್ಲು.
ಪ್ರೊ. ಚಂಬಿ ಪುರಾಣಿಕ್ 'ತರಂಗ' ವಾರಪತ್ರಿಕೆ 26.12.2013
ಇಂದು............
ಹೆಚ್ಚಿನ ಉಪನ್ಯಾಸಕರು ಕಾಲೇಜುಗಳಲ್ಲಿ ಕೆಲಸ ಮಾಡುವುದು ನೆಪ ಮಾತ್ರಕ್ಕೆ! ವಿಶ್ವವಿದ್ಯಾಲಯಗಳ ಪ್ರಾದ್ಯಾಪಕರುಗಳು ನಿಯೋಜನೆ ಮೇಲೆ ಮಂತ್ರಿ ಮಹೋದಯರ ಜೊತೆ ಕೆಲಸ ಮಾಡುತ್ತಾರೆ. ಅಕಾಡೆಮಿಗಳ ಅಧ್ಯಕ್ಷರಾಗಿ ನಿಯೋಜಿತರಾಗುತ್ತಾರೆ. ಉಪನ್ಯಾಸಕರುಗಳು ನಾಯಿಕೊಡೆಗಳಂತೆ ಬೆಳೆದಿರುವ ಟ್ಯೂಷನ್ ಸೆಂಟರುಗಳಲ್ಲಿ ಹಲವು ಬ್ಯಾಚುಗಳಲ್ಲಿ ಪಾಠ ಮಾಡುತ್ತಾರೆ. ಕೆಲವರಂತೂ ವಿದ್ಯಾರ್ಥಿಗಳ ಮನೆಗೇ ಹೋಗಿ ಸಿ.ಇ.ಟಿ. ಸಂದರ್ಭದಲ್ಲಿ ಟ್ಯೂಷನ್ ಮಾಡಿ ಲಕ್ಷಾಂತರ ಗಳಿಸುತ್ತಾರೆ!
ಅಧ್ಯಾಪನ ವೃತ್ತಿ ಬದಲಾಗಿದೆಯೆ?
ಅಥವಾ
ನಾವು ಬದಲಾಗಿಲ್ಲವೆ?

Tuesday, December 17, 2013

ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ ಎಫಿಗ್ರಾಫಿಯಾ ಕರ್ನಾಟಿಕ ಸಂಪುಟ ೫ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ನಾನು ಮೇಳೆ ಕೊಟ್ಟಿರುವ ಶೀರ್ಷಿಕೆಗೆ ಅನುಗುಣವಾಗಿ ಕೆಳಗಿನ ಪಟ್ಟಿಯನ್ನು ನೀಡಿದ್ದೇನೆ. ಒಮ್ಮೆ ನೋಡಿ!

ಅದಕ್ಕೆ ಮೊದಲು ಆ ಚೂರ್ಣಿಕೆಯನ್ನು ಸಿದ್ಧಪಡಿಸಿದ ಕಲಾವಿದನ ಪರಿಚಯ ಮಾಡಿಕೊಂಡುಬಿಡಿ.

ಸಾರಿಗೆ ಚೆನ್ನಬಸಪ್ಪನ ಮೊಮ್ಮಗ, ಚಿತ್ರದ ರಾಮಪ್ಪನ ಮಗ, ಶಿಲ್ಪ ವಿಭಾಗದ ಅಧಿಕಾರಿಯಾಗಿದ್ದ ಚಿತ್ರಗಾರ ತಿಪ್ಪಣ್ಣ ಚೂರ್ಣಿಕೆಯನ್ನು ಸಿದ್ಧಪಡಿಸಿದ್ದು.

Adi (first) Yaduraya 3 wives and 2 sons.

Hiri Bettachchamaraja-vaderu, 4 wives and 1 son.

Timmapparaja-vader 3 wives and 1 son.

Hiri Chamarajarasa-vaderu 2 wives and 1 son.

Hiri Bettachchamaraja-vader 3 wives, 4 sons and 4 daughters.

Yimmadi Timmapparaja-vader 2 wives and 1 son.

Bolu Chamaraja-vader 4 wives, 4 sons and 4 daughters.

Bettachchamaraja-vader 13 wives, 5 sons and 1 daughter.

Raja-vader 8 wives, 5 sons and 1 daughter.

Chamaraja-vader 65 wives and no issue.

Immadi Raja-vader 19 wives and no issue.

Ranadhira Kanthirava Narasaraja-vader 182 wives and 3 sons.

Dodda-Devaraja-vader 53 wives and 8 sons and 3 daughters.

Chikka Devaraja-vader 22 wives, 1 son and 1 daughter.

Kanthirava-maharaja-vader 3 wives and 5 sons.

Vammadi Dodda Krishnaraja-vader 45 wives and 2 sons.

Vammadi Chamaraja-vader 3 wives and no issue.

YimmadiKrishnaraja-vader 8 wives, 5 sons and 4 daughters.

Nanjaraja-vader He had no wives.

Immadi Bettachchamaraja-vadeya He had no wives.

Mummadi Khasa Chamaraja-vader 10 wives and 4 sons; growth of the family.

Mummadi Sri Krishnarajendra

vadeyar-bahadar 20 wives (sons and daughters unkonown)

Monday, December 09, 2013

ಕುವೆಂಪು-ತೇಜಸ್ವಿ ಇಬ್ಬರನ್ನೂ ಕಾಡಿದ ಲಿಂಗನ ಭೂತದ ಕಥೆ!

೧೯೫೭ರಲ್ಲಿ ಬಂದ ’ಲಿಂಗ ಬಂದ’ ತೇಜಸ್ವಿಯವರ ಮೊದಲ ಕಥೆ. ಮನೆಯ ಕೆಲಸದಾಳಿನ ಲಿಂಗ ಮನೆಯ ಮಕ್ಕಳಿಗೆ ಹೇಳಿದ್ದ ಒಂದು ಸಾಂದರ್ಭಿಕ ಕಥೆ, ಆ ಕಥೆಗೊಂದು ಆವರಣವನ್ನು ಕಲ್ಪಿಸುವ ಕತ್ತಲು ಆ ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುವ ಪರಿ, ಅದು ಕೊನೆಯಲ್ಲಿ ಪರ್‍ಯಾವಸಾನಗೊಳ್ಳುವ ರೀತಿ ಓದುಗನನ್ನು ಹಿಡಿದು ಓದಿಸಿಕೊಳ್ಳುತ್ತದೆ.
ಸರಿಸುಮಾರು ಇದೇ ಭಿತ್ತಿಯನ್ನುಳ್ಳ ಒಂದು ಕಥೆ ಕುವೆಂಪು ಅವರಿಂದ ೧೯೨೬-೨೭ರಲ್ಲೇ ಬರೆಯಲ್ಪಟ್ಟಿತ್ತು. ಆದರೆ, ಅದು ಮುದ್ರಣಗೊಂಡಿದ್ದು ೧೯೮೫ರಲ್ಲಿ! ’ಕತೆಗಳೊಡನೆ ಆರಂಭದಲ್ಲಿ’ ಎಂಬ ಸಂಕಲನ ಹೊರಬಂದಾಗ. ಅದರಲ್ಲಿ ಮೂರು ಟಾಲ್‌ಸ್ಟಾಯ್ ಕತೆಗಳ ಅನುವಾದ, ಟಾಗೂರರ ಒಂದು ಕತೆಯ ಅನುವಾದ ಮತ್ತು ಉಳಿದ ನಾಲ್ಕು ಕತೆಗಳು ಕುವೆಂಪು ಅವರ ಸ್ವತಂತ್ರ ಸೃಷ್ಟಿ. ಆ ಸಂಕಲನದ ’ಅಂದಿನ ರಾತ್ರಿ’ ಎಂಬ ಕತೆಯಲ್ಲಿ ’ಲಿಂಗ’ ಎಂಬ ಪಾತ್ರವಿದೆ. ಮಲೆನಾಡಿನ ತುಂಬುಕುಟುಂಬವೊಂದರ ಚಿತ್ರಣವಿದೆ. ಆ ಮನೆಯ ಕೆಲಸಗಾರ ಲಿಂಗ. ಕತೆಯ ನಿರೂಪಕನಾಗಿರುವ ಹುಡುಗನ ಜೊತೆಯಲ್ಲಿ ತಿಮ್ಮು, ಸುಬ್ಬು, ಸೀತೆ, ಕಿಟ್ಟು ಮತ್ತು ಜಾನಕಿ ಎಂಬ ಮಕ್ಕಳು ಆ ಮನೆಯಲ್ಲಿವೆ. ಮನೆಕೆಲಸದ ಲಿಂಗನಿಗೆ ಕತೆ ಹೇಳುವ ಹವ್ಯಾಸ. ಅದರಲ್ಲೂ ದೆವ್ವ ಭೂತದ ಕೆತಗಳನ್ನು ಹೇಳುವುದರಲ್ಲಿ ಆತ ನಿಸ್ಸೀಮ. ಆತನಿಗೆ ಪಿಶಾಚಿಗಳ ವಿಷಯವೆಂದರೆ ಬಹಳ ಸಂತೋಷ! ನೋಡ್ತಾ ಇದ್ದಂಗೆ ಒಂದು ಭೂಮಿಗೂ ಆಕಾಸಕ್ಕೂ ಒಂದಾಗಿ ನಿಂತು ಬಿಡ್ತು ಎಂದು ಆತ ಹೇಳಿದ್ದ ಒಂದು ಭೂತದ ಕತೆ ಮಕ್ಕಳ ಕುತೂಹಲವನ್ನು ಕೆರಳಿಸಿಬಿಟ್ಟಿರುತ್ತದೆ. ಅದರಲ್ಲಿ ಚಿಕ್ಕವಳಾದ ಜಾನಕಿಗೆ ಭಯವನ್ನೂ ಹುಟ್ಟಿಸಿರುತ್ತದೆ. ಮಕ್ಕಳೆಲ್ಲ ಭಯದಿಂದ ಕತೆಯನ್ನು ತುಂಡುಗಡಿಯುವ ಮನಸ್ಸುಳ್ಳವರಾದರೂ ಲಿಂಗ ಅವರನ್ನು ಬಿಡುವುದಿಲ್ಲ. ಮನೆಯ ಯಜಮಾನರ ಪ್ರವೇಶ ಆ ಕತೆ ತುಂಡುಗಡಿಯಲು ಹಾಗೂ ಚಿಕ್ಕಹುಡುಗಿ ಜಾನಕಿ ಭಯಮುಕ್ತಳಾಗಲು ಸಹಕಾರವಾಗುತ್ತದೆ. ಆದರೆ, ಜಾನಕಿಯನ್ನು ಆಡಿಕೊಳ್ಳುತ್ತಿದ್ದ ಮಕ್ಕಳ ಸೈನ್ಯಕ್ಕೆ, ಅಡುಗೆ ಮನೆಗೆ ಹೋಗಿ ಅಮ್ಮಂದಿರ, ಅಜ್ಜಿಯರನ್ನು ಕೂಡಿಕೊಳ್ಳುವ ಕಾತರ. ಆಗ ದಾಟಬೇಕಾದ ಮಾಣಿಗೆ ಮನೆಯ ದೆವ್ವದ ನೆನಪು ಬರುತ್ತದೆ. ಆಗ ಅವರೊಳಗಿನ ಪುಕ್ಕಲುತನ ಹೊರಬೀಳುತ್ತದೆ. ಆ ಕತೆಯನ್ನು ಲಿಂಗನೇ ಹೇಳಿರುತ್ತಾನೆ, ಮಾಣಿಗೆ ಮನೆಯಲ್ಲಿ ದೆವ್ವ ಇದೆ ಎಂದು. ಹೇಗೋ ಉಪಾಯ ಮಾಡಿ, ಚಿಕ್ಕಮನೊಂದಿಗೆ ಮಾಣಿಗೆ ಮನೆ ದಾಟಿ ಅಡುಗೆ ಮನೆ ಸೇರಿಕೊಳ್ಳುವ ಧಾವಂತದಲ್ಲಿದ್ದ ಮಕ್ಕಳ ಮನಸ್ಸಿನ ಭಯ, ಅವರ ಚಿಕ್ಕಮ್ಮನಿಗೂ ಆವರಿಸಿಬಿಡುವುದು, ಭಯ ಎಂಬುದು ಸಾಂಕ್ರಾಮಿಕ ಎಂಬುದಕ್ಕೆ ಸಾಕ್ಷಿಯಂತಿದೆ.
ಆ ಗಲಾಟೆಯೆಲ್ಲ ಮುಗಿದು ಪರಿಸ್ಥಿತಿ ಶಾಂತವಾದರೂ ಮಕ್ಕಳ ಭಯ ದೂರವಾದರೂ ಮಕ್ಕಳ ತುಂಟಾಟ ನಡೆಯುತ್ತದೆ. ಆಗ ಬಂದ ಲಿಂಗ, ’ಮಾಣಿಗೆ ಮನೆಯಲ್ಲಿ ಆದ ಅವಾಂತರಕ್ಕೆ ಅಲ್ಲಿರುವ ದೆವ್ವವೇ ಕಾರಣ’ ಎನ್ನುತ್ತಾನೆ. ಮಕ್ಕಳಿಗೂ ಅದು ನಿಜ ಅನ್ನಿಸಿಬಿಡುತ್ತದೆ. ಏಕೆಂದರೆ ದೆವ್ವ ಪಿಶಾಚ ಭೂತ ಇವುಗಳ ವಿಷಯಿಕವಾಗಿ ಸಂದೇಹ ಬಂದಾಗ, ಆ ಮಕ್ಕಳಿಗೆ ಲಿಂಗನೇ ಪ್ರಮಾಣ. ಪ್ರತ್ಯಕ್ಷ ಪ್ರಮಾಣವೂ ಹೌದು, ಪರೋಕ್ಷ ಪ್ರಮಾಣವೂ ಹೌದು!
ಮನೆಯವರ ಮಾತಿನ ನಡುವೆಯೂ ದೆವ್ವದ ವಿಚಾರ ಬರುತ್ತದೆ. ಮನೆಯ ಹಿರಿಯರೆಲ್ಲಾ ದೆವ್ವ ಭೂತಗಳನ್ನು ಪ್ರತ್ಯಕ್ಷ ಕಂಡವರೆ! ಆದರೆ, ’ಈಗೇತಕೆ ಅಂಥ ವಿಷಯಗಳು ಜರಗುವುದಿಲ್ಲ’ ಎಂಬುದಕ್ಕೆ ಅವರದು ಹಾರಿಕೆಯ ಉತ್ತರ; ಕಲಿಗಾಲ, ನಂಬಿಕೆಯಿಲ್ಲ, ನಿಮ್ಮ ಭಕ್ತಿಯೂ ಅಷ್ಟೆ ಅವುಗಳ ಶಕ್ತಿಯೂ ಅಷ್ಟೆ!

ಕಥೆಯ ನಿರೂಪಕನಿಗೆ ಕೊನೆಯಲ್ಲಿ ಅನ್ನಿಸುವುದಿಷ್ಟು: ಆಹಾ! ಅಂದಿನ ದಿನದ ರಾತ್ರಿಯು ಇನ್ನೊಮ್ಮೆ ಬರುವುದೇ?
ಈಗ ತೇಜಸ್ವಿಯವರ ಲಿಂಗ ಬಂದ ಕತೆಗೆ ಬರೋಣ. ಇಲ್ಲಿ ಅಲ್ಲಿಯಂತೆ ಕೂಡು ಕುಟುಂಬವೊಂದರ ಹಿನ್ನೆಲೆಯಿಲ್ಲದಿದ್ದರು ತುಂಬು ಕುಟುಂಬವಿದೆ. ಗಂಡ ಹೆಂಡತಿ ಮತ್ತು ಮೂವರು ಮಕ್ಕಳು. ಜೊತೆಗೆ ಮನೆಗೆಲಸದ ಲಿಂಗ. ಇಲ್ಲಿಯೂ ಆತ ದೆವ್ವ-ಭೂತಗಳ ಕತೆಯನ್ನು ಹೇಳಿ ಮಕ್ಕಳನ್ನು ವಿಷ್ಮಯಲೋಕಕ್ಕೆ ತಳ್ಳುವವನೇ ಆಗಿದ್ದಾನೆ. ಆ ಮನೆಯ ಹಿರಿಯ ಮಗ ಕಿಟ್ಟಿ ಸುಮಾರು ಒಂಭತ್ತು ವರ್ಷದವ, ಲಿಂಗ ಹೇಳಿದ ಕತೆಯನ್ನೇ ತನ್ನ ತಂಗಿ ಸುಭದ್ರಳಿಗೆ ಹೇಳಿ ಹೆದರಿಸುವವ. ಹಾಗೇ ಹೇಳುತ್ತಲೇ ಸ್ವತಃ ತಾನೇ ಭಯಪಡುವವ! ಕತೆಗೆ ಪೂರಕವಾಗಿ ಮಲೆನಾಡಿನ ಕತ್ತಲು, ಮಳೆ ಇಲ್ಲಿಯೂ ಇದೆ.
’ಜಾಗ ಹೆಚ್ಚಿಗೆ ಬೇಕು. ಇನ್ನೂ ಒತ್ತು’ ಎಂದು ಪೀಡಿಸುವ ಮುದ್ದಿನ ತಂಗಿಯನ್ನು ಹೆದರಿಸಲು, ತಾನೂ ಹಾಗೆ ಕೇಳಿದಾಗ ಲಿಂಗ ಹೇಳಿದ್ದ ಕತೆಯನ್ನೇ ಕಿಟ್ಟಿ ಇಲ್ಲಿ ಹೇಳುತ್ತಾನೆ. ಇಂಗ್ಲಾದಿಯಲ್ಲಿ, ಸಿಕ್ಕಿಸಿಕ್ಕಿದ್ದನ್ನೆಲ್ಲಾ ಹೆಚ್ಗೆ ಬೇಕು ಅನ್ನುತ್ತಿದ್ದವನೊಬ್ಬನಿಗೆ ಹುಟ್ಟಿದ ಮಗು, ನಾಲ್ಕೈದು ದಿನಗಳಲ್ಲೇ ಹಲ್ಲು, ಉಗುರು ಕೂದಲು ಎಲ್ಲಾ ಬೆಳೆಸಿಕೊಂಡು, ತೊಟ್ಟಿಲಿಗಿಂತ ದೊಡ್ಡದಾಗಿ, ತೊಟ್ಟಿಲೇ ಒಡೆದು ಹೋಗುತ್ತದೆ. ಆ ಮಗು ಬೆಳೆದು ಬೆಳೆದು ಪೂರಾ ದೊಡ್ಡದಾಗಿಬಿಡುತ್ತದೆ, ರಾಕ್ಷಸನಂತೆ. ಆ ರಾಕ್ಷಸನನ್ನು ಕೊಂದು ಹಾಕುವುದು ಇದೇ ಲಿಂಗನ ಅಜ್ಜ! ಇತ್ತು ಕತೆಯಲ್ಲಿ ಮಗು ಬೆಳೆಯುತ್ತಾ ಹೋದಂತೆ ಅತ್ತ ಮನಸ್ಸಿನಲ್ಲಿ ಭಯವೂ ಹೆಚ್ಚುತ್ತಾ ಹೋಗುತ್ತದೆ. ’ಅಂದಿನ ರಾತ್ರಿ’ ಕತೆಯಲ್ಲಿ ’ಈಗೇತಕೆ ಅಂಥ ವಿಷಯಗಳು ನಡೆಯುವುದಿಲ್ಲ’ ಎಂದು ಮಕ್ಕಳು ಕೇಳುತ್ತವೆ. ಆದರೆ ಇಲ್ಲಿ ಕಿಟ್ಟಿ, ತೊಟ್ಟಿಲಲ್ಲಿ ಮಲಗಿದ್ದ ಸ್ವಂತ ತಮ್ಮ ಸದಾನಂದನನ್ನು ತಂಗಿಗೆ ತೋರಿಸಿ, ಅದು ಬೆಳೆಯುತ್ತಿದೆ ಎಂದು ನಂಬಿಸಿ ಭಯಬೀಳಿಸುತ್ತಾನೆ. ತಂಗಿಯನ್ನು ಭಯಬೀಳಿಸುವ ಯತ್ನದಲ್ಲಿ ತಾನೂ ಆ ಭಯದೊಳಗೆ ಸೇರಿಕೊಂಡುಬಿಡುತ್ತಾನೆ. ದೀಪ ಅಲುಗಿದಂತೆಲ್ಲಾ, ಅಲ್ಲಾಡುತ್ತಿದ್ದ, ಗಿಡ್ಡ-ಉದ್ದವಾಗುತ್ತಿದ್ದ ಮನೆಯೊಳಗಣ ವಸ್ತುಗಳ ನೆರಳು ಆತನ ವರ್ಣನೆ ಹಾಗೂ ಕಲ್ಪನೆಗೆ ಹಿನ್ನೆಲೆಯನ್ನೊದಗಿಸುತ್ತವೆ. ತನ್ನ ಕಲ್ಪನೆಗೆ ತಾನೇ ಮೊದಲು ಭಯ ತಡೆಯಲಾರದೆ ಅಮ್ಮಾ ಎಂದು ಕಿರುಚಿಕೊಳ್ಳುತ್ತಾನೆ. ನಿಜವಾಗಿ ಹೆದರುತ್ತಿದ್ದ ತಂಗಿ ಸುಭದ್ರೆ ಅಣ್ಣ ಕಿರುಚಿದ ಮೇಲೆ ಕಿರುಚುತ್ತಾಳೆ. ಅಷ್ಟರಲ್ಲಿ ಮನೆಯ ಹೊರಗಡೆ ಲಿಂಗ ಬಂದಿರುತ್ತಾನೆ, ಕಿಟ್ಟಿಯ ತಂದೆಯ ಜೊತೆಯಲ್ಲಿ. ಕಿಟ್ಟಿಗೆ ಧೈರ್ಯವಾಗುತ್ತದೆ. ಏಕೆಂದರೆ, ’ಎಷ್ಟಾದರೂ ರಾಕ್ಷಸನನ್ನು ಕೊಲ್ಲಿಸಿದವನ ಮೊಮ್ಮಗನೇ ಲಿಂಗ’ ಎಂದು!
ಕುವೆಂಪು ಅವರ ’ಅಂದಿನ ರಾತ್ರಿ’ ಕತೆ ರಚನೆಯಾಗಿದ್ದು ಸುಮಾರು ೧೯೨೬-೨೭ರಲ್ಲಿ. ಅಲ್ಲಿಂದ ಸುಮಾರು ಮೂವತ್ತು ವರ್ಷಗಳ ನಂತರದಲ್ಲಿ ಬಂದಿದ್ದು ತೇಜಸ್ವಿಯವರ ’ಲಿಂಗ ಬಂದ’ ಕತೆ.
ತೇಜಸ್ವಿಯವರು ’ಅಂದಿನ ರಾತ್ರಿ’ ಕತೆಯನ್ನು ಓದಿದ್ದರೆ? ಬಹುಶಃ ಇರಲಾರದು. ಏಕೆಂದರೆ, ಕುವೆಂಪು ಎಂಬ ಮಹಾಕವಿ ಪ್ರತಿಭೆ ತನ್ನ ಶೈಶವಾವಸ್ಥೆಯಲ್ಲಿ ಸಣ್ಣಕತೆಗಳೊಡನೆ ಗುದ್ದಾಡಿದಂತೆ ರಚಿಸಿರುವ ಈ ಸಂಕಲನದ ಕತೆಗಳನ್ನು ಪ್ರಕಟಿಸುವ ಇಚ್ಛೆಯೇ ಕುವೆಂಪು ಅವರಿಗೆ ಇರಲಿಲ್ಲವಂತೆ! ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಹಾಗೂ ದೇಜಗೌ ಅವರ ಒತ್ತಾಯಕ್ಕೆ ಕಟ್ಟು ಬಿದ್ದು ಅನುಮತಿ ನೀಡಿದ್ದರೆಂದು ದೇಜಗೌ ಅವರು ಆ ಸಂಕಲನದ ಮೊದಲ ಮಾತುಗಳಲ್ಲಿ ಹೇಳಿದ್ದಾರೆ. (ತೇಜಸ್ವಿ ಅಂದಿನ ರಾತ್ರಿಯನ್ನು ಓದಿದ್ದರೆ, ಅದನ್ನು ಹಸ್ತಪ್ರತಿ ರೂಪದಲ್ಲಿಯೇ ಓದಿರಬಹುದು, ಅಷ್ಟೆ.)
1936ರಲ್ಲಿ ಪ್ರಕಟವಾದ ಕುವೆಂಪು ಅವರ ‘ಸಂನ್ಯಾಸಿ ಮತ್ತು ಇತರ ಕತೆಗಳು’ ಕಥಾಸಂಕಲನದಲ್ಲಿ ‘ಯಾರೂ ಅರಿಯದ ವೀರ’ ಎಂಬ ಕತೆಯಿದೆ. ಈ ಕತೆಯನ್ನು ತೇಜಸ್ವಿಯವರು ಓದಿರುವ ಸಾಧ್ಯತೆಯೂ ಇದೆ. ಈ ಕತೆಯಲ್ಲೂ ‘ಲಿಂಗ ಬಂದ’ ಕತೆಯ ಬೀಜಗಳಿವೆ! ಇದರಲ್ಲೂ ತುಂಬುಕುಟುಂಬವಿದೆ. ಎಂಟು ವರ್ಷದ ಹುಡುಗ ತಿಮ್ಮು, ಆರು ವರ್ಷದ ಹುಡುಗಿ ಸೀತೆ ಇದ್ದಾಳೆ. ಇಬ್ಬರಿಗೂ ಲಿಂಗನೆಂದರೆ ತುಂಬಾ ಪ್ರೀತಿ. ಹೆಚ್ಚಿನಂಶವೆಂದರೆ, ಈ ಕತೆಯಲ್ಲಿ ಲಿಂಗ ಮಾಜಿ ಕೈದಿ! ಜೊತೆಗೆ ವಿಧುರ. ಆತನಿಗೆ ನಾಗ ಎಂಬ ಮಗನಿದ್ದಾನೆ. ಮುಖ್ಯಾಂಶವೆಂದರೆ ಈ ಕತೆಯಲ್ಲೆಲ್ಲೂ ಭೂತದ ಪ್ರಸ್ತಾಪವಿಲ್ಲ. ಆದರೆ ತುಂಬಿ ಹರಿಯುತ್ತಿರುವ ಹೊಳೆಯೇ ಭೂತದ ಪಾತ್ರವನ್ನು ನಿರ್ವಹಸಿದೆ. ತಾನೂ ಜೈಲಿನಿಂದ ಬಂದವನೆಂದೂ ತಿಳಿದೂ ತನಗೆ ಆಶ್ರಯ ಕೊಟ್ಟ ಸುಬ್ಬಣ್ಣಗೌಡನ ಮನೆತನ ಮಹಾಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಯ ಪಾಲಾಗುವುದನ್ನು ತಪ್ಪಿಸಲೋಸುಗ ತನ್ನ ಪ್ರಾಣಾರ್ಪಣೆಗೂ ಸಿದ್ಧನಾಗುವ ಲಿಂಗ ಇಲ್ಲಿ ‘ಯಾರೂ ಅರಿಯದ ವೀರ’. ತಾನು ದೋಣಿಯಿಂದ ಹೊಳೆಗೆ ಹಾರಿ ತನ್ನ ಒಡೆಯನ ಕುಟುಂಬವನ್ನು ಕಾಪಾಡುವ ಸಂಕಲ್ಪ ಮಾಡಿ ಹಾಗೆಯೇ ನಡೆದುಕೊಳ್ಳುತ್ತಾನೆ. ಸುರಕ್ಷಿತವಾಗಿ ದಡ ಸೇರಿದ ಸುಬ್ಬಣ್ಣಗೌಡರ ಕುಟುಂಬಕ್ಕೆ ಲಿಂಗ ನಮ್ಮ ಜೊತೆ ಇಲ್ಲ ಎಂಬುದು ತಿಳಿದಾಗ ಅತೀವ ದುಃಖವಾಗುತ್ತದೆ. ಲಿಂಗನ ಮಗ ನಾಗನಂತೂ ತೀವ್ರವಾಗಿ ದುಃಖಿಸುತ್ತಾನೆ. ಆಗ ತಿಮ್ಮು ಮತ್ತು ಸೀತೆ ಇಬ್ಬರೂ ‘ಲಿಂಗ ಬಂದೇ ಬರುತ್ತಾನೆ ಸುಮ್ಮನಿರೊ’ ಎಂದು ಸಮಾಧಾನ ಮಾಡುತ್ತಿರುತ್ತಾರೆ. ಮೂವರೂ ಮಕ್ಕಳ ಮನಸ್ಸಿನ ಮೇಲೆ ಲಿಂಗನ ಗೈರು ತೀವ್ರತರವಾದ ಪರಿಣಾಮ ಬೀರಿರುತ್ತದೆ.
ಲಿಂಗನ ಹಿನ್ನೆಲೆಯನ್ನು ತಿಳಿದ ತಿಮ್ಮು ಮತ್ತು ಸೀತೆ ‘ಇನ್ನು ಮನೆ ಬಿಟ್ಟು ಎಲ್ಲೂ ಹೋಗಬೇಡ, ನಮ್ಮ ಮನೆಯಲ್ಲೇ ಇರು’ ಎಂದು ಹೇಳಿದ್ದ ಒಂದೇ ದಿನದಲ್ಲಿ ಲಿಂಗ ಅವರಿಂದ ದೂರವಾಗಿರುತ್ತಾನೆ. ಆದರೆ, ಕತೆಯ ಕೊನೆಯಲ್ಲಿ ಲಿಂಗ ಬರುತ್ತಾನೆ. ಹೊಳೆಗೆ ಧುಮುಕಿದ ಆತನ ಕಾಲಿಗೆ ಗಟ್ಟಿ ನೆಲ ಸಿಕ್ಕು, ರಾತ್ರಿಯೆಲ್ಲಾ ಹಾಗೆ ಕಳೆದು ಬೆಳಿಗ್ಗೆ ಹೇಗೂ ಅವರನ್ನು ಸೇರಿಕೊಳ್ಳುತ್ತಾನೆ. ‘ಲಿಂಗ ಬಂದ, ಲಿಂಗ ಬಂದ’ ಎಂದು ಮಕ್ಕಳು ಸಂತೋಷದಿಂದ ಕುಣಿದಾಡುತ್ತಾರೆ. ಆದರೆ ತನ್ನ ಸಂಕಲ್ಪವನ್ನು ಅವರಿಂದ ಮುಚ್ಚಿಡುತ್ತಾನೆ. ಗೌಡರಿಗೆ ಸಣ್ಣ ಅನುಮಾನ ಬಂದರೂ ಲಿಂಗ ಅದನ್ನು ‘ದೇವರಿಗೇ ಗೊತ್ತು’ ಎಂದು ಹೊಡೆದು ಹಾಕುತ್ತಾನೆ. ‘ಸದ್ಯ ಲಿಂಗ ಬಂದನಲ್ಲ’ ಎಂದು ಗೌಡರೂ ಸುಮ್ಮನಾಗುತ್ತಾರೆ. ಮನೆಯೊಡತಿಯೂ ‘ಅಂತೂ ಲಿಂಗ ಬಂದನಲ್ಲ. ಅಷ್ಟೇ ಸಾಕು’ ಎನ್ನುತ್ತಾಳೆ. ಒಟ್ಟಿನಲ್ಲಿ ‘ಲಿಂಗನ ಬರುವು’ ಆವರೆಲ್ಲರ ಮನಸ್ಸಿನ ದುಗುಡವನ್ನು ಭಯವನ್ನು ಕಳೆಯುತ್ತದೆ. ‘ಲಿಂಗ ಬಂದ’ ಕತೆಯಲ್ಲೂ ಲಿಂಗನ ಆಗಮನ ಕಿಟ್ಟು ಮತ್ತು ಸುಭದ್ರೆಯರ ಭಯವನ್ನು ಹೋಗಲಾಡಿಸುವುದು ಗಮನಾರ್ಹ! ಒಟ್ಟಿನಲ್ಲಿ ‘ಲಿಂಗ ಬಂದ’ ಎಂಬುದು ಒಂದು ಸಂಕೇತ! ಲಿಂಗನ ಆಗಮನ ಆ ಕ್ಷಣದ ಸಮಸ್ಯೆಯ ಪರಿಹಾರ!
ಆದರೆ ಅದಕ್ಕಿಂತ ಹೆಚ್ಚಾಗಿ, ಮೂರೂ ಕತೆಗಳ ಮುಖ್ಯ ಪಾತ್ರ ಲಿಂಗ ಇಂಗ್ಲಾದಿ, ಕುಪ್ಪಳಿ ಅಥವಾ ದೇವಂಗಿ ಪರಿಸರದಲ್ಲಿ ಇದ್ದ ಪಾತ್ರವಾಗಿದ್ದಿರಬಹುದು. ಆ ಪ್ರದೇಶದಲ್ಲಿ ಮಕ್ಕಳಿಗೆ ಹೇಳುವ ಕತೆಗಳಲ್ಲಿ, ಆತನ ಹಾಗೂ ಆತನ ಕತೆಗಳ ಪ್ರಸ್ತಾಪ ಹೆಚ್ಚಾಗಿ ಇದ್ದಿರಲೂಬಹುದು. ಕುವೆಂಪು ಅವರು ಚಿಕ್ಕವನಾಗಿದ್ದಾಗ ಆತನನ್ನು ನೋಡಿರುವ ಸಾಧ್ಯತೆಯೂ ಇದ್ದಿರಬಹುದು. ಕುವೆಂಪು ಅವರ ಇನ್ನೊಂದು ಕತೆ ’ಕಥೆಗಾರ ಮಂಜಣ್ಣ’ದಲ್ಲಿ, ಮಂಜಣ್ಣ ಚಳಿ ಕಾಯಿಸಿಕೊಳ್ಳಲು ಮಕ್ಕಳ ನಡುವೆ ಜಾಗ ಮಾಡಿಕೊಳ್ಳುವ ಸಂದರ್ಭಕ್ಕೂ ’ಲಿಂಗ ಬಂದ’ ಕತೆಯಲ್ಲಿ ಲಿಂಗ ಕಿಟ್ಟಿ-ಸುಭದ್ರೆಯರ ನಡುವೆ ಜಾಗ ಮಾಡಿಕೊಳ್ಳುವ ಸಂದರ್ಭಕ್ಕೂ ಸ್ವಲ್ಪಮಟ್ಟಿನ ಹೋಲಿಕೆಯಿದೆ. ಅಲ್ಲಿ ಕುಂಬಳಕಾಯಿ ಬೆಳೆಯುತ್ತಾ ಹೋಗುತ್ತದೆ; ಇಲ್ಲ ತೊಟ್ಟಿಲಲ್ಲಿದ್ದ ಮಗು ಸದಾನಂದನೇ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದಲ್ಲಿ ಯಾರಿಂದಲಾದರೂ (ಅವರ ಅಜ್ಜಿ, ತಾಯಿ ಅಥವಾ ಕುವೆಂಪು!) ಕತೆ ಕೇಳುವಾಗಲೋ, ಮಾತುಕತೆಯ ನಡುವೆಯೊ ತೇಜಸ್ವಿಯೊಳಗೆ ಲಿಂಗ ಬಂದಿರಬಹುದು! ಬಾಲ್ಯದಲ್ಲಿ ಕೇಳಿರಬಹುದಾದ ಕತೆಯೊಂದು ಕುವೆಂಪು ತೇಜಸ್ವಿಯವರನ್ನು ಆವರಸಿಕೊಂಡಿರುವ ಹಾಗೂ ಅಭಿವ್ಯಕ್ತಗೊಂಡಿರುವ ರೀತಿ ಅಸಮಾನ್ಯವಾದುದು.

Monday, November 11, 2013

ಶೂರ್ಪನಖಿಯಾದಳಾ ಚಂದ್ರನಖಿ!


ಪಂಚವಟಿಯಲ್ಲಿದ್ದ ರಾಮ ಸೀತಾ ಲಕ್ಷ್ಮಣರು, ಅಲ್ಲಿಗೆ ಒಟ್ಟು ಹನ್ನೊಂದು ವರ್ಷಗಳನ್ನು ಕಳೆದಿದ್ದರು. ಇನ್ನು ಅಯೋಧ್ಯೆಗೆ ಹಿಂತಿರುಗುವ ಯೋಚನೆ ಕೂಡಾ ನೆಡೆಸಿದ್ದರು. ಅಯೋಧ್ಯೆಯಿಂದ ಹೊರಟು, ತಾವು ಸಂದರ್ಶಿಸುತ್ತಾ ಬಂದ ತಪೋಧನರನ್ನು ಮತ್ತೊಮ್ಮೆ ಕಂಡು, ಆಶೀರ್ವಾದ ಪಡೆದು, ಅಲ್ಲಲ್ಲಿ ತಂಗುತ್ತಾ ಅಯೋಧ್ಯೆಯನ್ನು ಸೇರುವಷ್ಟರಲ್ಲಿ ಇನ್ನೊಂದು ವರ್ಷ ಕಳೆಯುತ್ತದೆ ಎಂದು ಯೋಚಿಸಿದ್ದರು. ಅದನ್ನೆ ರಾಮನು ಲಕ್ಷ್ಮಣನಿಗೆ
ನಾಮಿಲ್ಲಿಂದೆ ಪಿಂತೆ ಮರಳುವ ಪೊಳ್ತು ಸನಿಹಮಾದುದು, ತಮ್ಮ.
ನಾಳೆ ನಾಡಿದರೊಳಗೆ ಮಂಗಳ ಮುಹೂರ್ತಮಂ ಪಾರ್ದು ಪೊರಮಟ್ಟರೆ
ಅವಧಿಯ ಕೊನೆಗೆ,
ಭರತಂಗೆ ಪೂಣ್ಕೆನುಡಿಗೊಟ್ಟಂತೆ, ಮುಟ್ಟುವೆವು ಅಯೋಧ್ಯೆಯಂ.
ಬಂದ ಮಾರ್ಗಂಬಿಡಿದು
ಋಷಿವರ್ಯರಂ ಕಂಡು,
ವಂದಿಸಿ, ನುಡಿಸಿ ಮುಂದೆ ತೆರಳುವಂ

ಎಂದು ಹೇಳಿರುತ್ತಾನೆ.
ಬೆಳಿಗ್ಗೆ ಹೊಳೆಯಲ್ಲಿ ಮಿಂದು ನಾರ್ಮುಡಿಯುಟ್ಟು, ಹೀಗೆ ಮಾತನಾಡುತ್ತಾ ಪರ್ಣಕುಟಿಗೆ ಬರುತ್ತಿರಬೇಕಾದರೆ, ಬಿದಿರ ಮೆಳೆಯ ಮೇಲೆ ಕುಳಿತಿದ್ದ ಕಾಮಳ್ಳಿಗಳ ಗುಂಪೊಂದು, ಒಮ್ಮೆಲೆ ಇವರ ಬರುವಿಕೆಯಿಂದ ಎಚ್ಚೆತ್ತವಂತೆ ಹಾರಿಬಿಡುತ್ತವೆ. ಬಿದಿರ ಎಲೆಗಳಲ್ಲಿ ಹನಿಗಟ್ಟಿದ್ದ ಮಂಜುಹನಿಗಳು ಸಿಡಿದು, ಮೂವರ ಮೇಲೆ ಮುತ್ತಿನ ಮಳೆಯಂತೆ ಸುರಿದುಬಿಡುತ್ತದೆ. ಅದನ್ನು ಕಂಡ ಲಕ್ಷ್ಮಣನು, ದೇವಿಯರನು ಅಭಿನಂದಿಸುತ್ತಿಹಳು ಅರಣ್ಯಸಖಿ! ಎನ್ನುತ್ತಾನೆ. ಆಗ ತಕ್ಷಣ ಸೀತೆ,

ಅಲ್ತಲ್ತು.
ತಂಗಿ ಊರ್ಮಿಳೆಯ ಕಣ್ಣೀರುಗಳ್,
ಮುನ್ ಬರ್ಪ ಸೊಗಕೆ ಉರ್ಕಿ,
ಮುಂಗಾಣ್ಕೆಗಳನು ಅರ್ಪಿಸಿಹವೈ
ಪ್ರಾಣೇಶ್ವರನ ಚರಣತಲಕೆ!

ಎನ್ನುತ್ತಾಳೆ. ಲಕ್ಷ್ಮಣನಿಗೆ ಏಂ ಜಾಣ್ಮೆ ನುಡಿ ಎನ್ನಿಸಿತಾದರೂ ಅದಕ್ಕಿಂತ ಹೆಚ್ಚಾಗಿ ನಾಚಿಕೆಯಾಗುತ್ತದೆ. ಅದನ್ನು ಮರೆಸಲೆಳಸುವಂತೆ, ರಾಮನ ಕಡೆ ತಿರುಗಿ,

ಅಣ್ಣಯ್ಯ,
ನಿಮ್ಮ ಪಟ್ಟಾಭಿಷೇಕಕ್ಕೆ ಇಂತುಟೆ ವಲಂ ಮುತ್ತಿನ ಮಳೆಗಳಕ್ಕೆ
ಎಂದು ಪರಸಿದಳಲ್ತೆ ಸರ್ವಮಂಗಳೆ, ಜಗಜ್ಜನನಿ!

ಎನ್ನುತ್ತಾನೆ. ಆಗ ರಾಮನು ಹೇಳುವ ಮಾತುಗಳು ಮುಂದೆ ಒದಗಲಿರುವ ಆಘಾತಕ್ಕೆ ಮುನ್ನುಡಿಯಿಡುವಂತಿವೆ.

ತಾತ್ಪರ್ಯಮಂ ಪೇಳ್ವೆಯಾದೊಡಂ
ಏಕೋ ತಳ್ಳಂಕಗೊಳ್ಳುತ್ತಿದೆ ಮನ್ಮನಂ!
ಲೋಕದ ಅನುಭವಂ ಇಂತೆ:
ಗುರಿ ಬಳಿಗೆ ಸಾರಿ ಬರೆ ಪೆರ್ಚಿದಪುದು ಎರ್ದೆಯ ಕುದಿದಾಟಮುಂ!

ನಂತರ ಮೌನವನ್ನೆ ಹೊತ್ತು ಅವರು ಪರ್ಣಕುಟಿಗೆ ಬರುವಷ್ಟರಲ್ಲಿ. ಅಲ್ಲಿ ಕಿತ್ತಡಿಗಳ ಕೂಟವೊಂದು ನೆರೆದಿರುತ್ತದೆ. ನೆನ್ನೆಯ ದಿನ ಯಾರೋ ಮಾಯಾವಿಗಳು ಬಂದು ಅವರಿಗೆ ತೊಂದರೆ ಕೊಟ್ಟಿದ್ದರಂತೆ. ಅದನ್ನು ಪರಿಹರಿಸಬೇಕು ಎಂದು ತಪಸ್ವಿಗಳು ಬೇಡಿಕೊಳ್ಳುತ್ತಾರೆ. ಜಡೆವೊತ್ತವರಿಗೆ ಅಭಯವನ್ನಿತ್ತು ಕಳುಹಿಸಿದ ರಾಮ ಲಕ್ಷ್ಮಣನಿಗೆ

ಸೌಮಿತ್ರಿ, ಸುತ್ತಣ ಅರಣ್ಯಮಂ ಸುತ್ತಿ ಬಾ...
ಬೆನ್ಗಿರಲಿ ಋಷಿ ಅಗಸ್ತ್ಯನ ಕೊಟ್ಟ ಶರಧಿ...
ಶರಭಂಗ ಮುನಿಯಿತ್ತ ಕೋದಂಡಮಂ ಕೈಕೊಂಡು ನಡೆ...
ಮತ್ತೆ ಮೊದಲಾಗುವಂತೆವೋಲ್ ತೋರುತಿಹುದೆಮ್ಮ ಕಾಂತಾರ ಕಷ್ಟಂ!

ಎಂದು ತಡೆತಡೆದು ಕಳವಳದಿಂದ ಹೇಳುತ್ತಾನೆ.! ಲಕ್ಷ್ಮಣನಿಗೆ ರಾಮನ ಬಗೆಯ ಮಾತು ಅಚ್ಚರಿ ಮೂಡಿಸುತ್ತದೆ. ಆದರೆ ಅದನ್ನು ಬೆಳೆಸದೆ, ಅಣ್ಣನ ಆಜ್ಞೆಯನ್ನು ಮತ್ತು ತನ್ನ ಕೋದಂಡವನ್ನು ಹೊತ್ತು ಹೊರಡುತ್ತಾನೆ. ಸಂದರ್ಭದಲ್ಲಿ ರಾಮನ ಮನಸ್ಸಿನಲ್ಲಿ ಉಂಟಾಗುವ ಕಳವಳ ಮನಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಯೋಗ್ಯ. ಎಷ್ಟೋ ಬಾರಿ ಏನಾದರೂ ದುರ್ಘಟನೆ, ಅಥವಾ ಮುಖ್ಯವಾದ ಘಟನೆ ನಡೆಯುವ ಮೊದಲು ಮನಸ್ಸಿನಲ್ಲಿ ಇಂತಹ ಕಳವಳ ಮೂಡುವುದು ಸಹಜ; ಚಂಡಮಾರುತ ಹೇಳುವ ಮೊದಲು ಕಡಲಿನಲ್ಲಿ ಶಾಂತಿ ನೆಲೆಸಿರುವಂತೆ!
ಇತ್ತ ಕಾಡಿನಲ್ಲಿ ಅಲೆದು, ಆಯಾಸಗೊಂಡ ಲಕ್ಷ್ಮಣ ಸಂಜೆಯ ತಂಪಾದ ಗಾಳಿಗೆ ಮೈಯೊಡ್ಡಲು ಬಯಸಿ, ಪರ್ವತದ ತುದಿಯ ಕಲ್ಲೊಂದರ ಮೇಲೆ ಏರಿ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದ. ಆಗ ಆತನ ಕಿವಿಗೆ ಜೇನಿಳಿದಂತೆ ಒಂದು ಗಾನ ಬಹುದೂರದಿಂದ ಕೇಳಿಸಿತು. ಹೇಮಂತ ಋತುವಿನ ಕಾಡಿನ ಪುಷ್ಪಗಳ ಪರಿಮಳ ಆವರಿಸಿತ್ತು. ಸಂಜೆಯ ಆಕಾಶದಿಂದ ಕಾಡಿನೆಡೆಗೆ ಇಳಿದು ಭೂಮಿಯನ್ನು ಅಲಂಕರಿಸಿತ್ತು ಒಂದು ಕಾಮನಬಿಲ್ಲು! ಅರೆರೆ! ಇದೇನಿದು ಎಂದು ಲಕ್ಷ್ಮಣ ನೋಡುತ್ತಿರುವಂತೆ, ರಥವೋ ಎಂಬಂತೆ ಒಂದು ಬಣ್ಣಬಣ್ಣ ಮುಗಿಲು ಮಳೆಬಿಲ್ಲಿನ ಮುಖಾಂತರ ಇಳಿದು ಹತ್ತಿರ ಹತ್ತಿರವಾಗತೊಡಗಿತು. ಹೊನಲಿನ ಗಾನ ಹೆಚ್ಚಾಯಿತು. ಬೆಳಕು ಹೆಚ್ಚಾಗಿ ಸಂಜೆಯ ಕಾಡಿನ ಕಾಂತಿ ಬೆಳಗತೊಡಗಿತು. ಹಾಗೆಯೇ ಅದೆಲ್ಲವೂ ಪರ್ಣಕುಟಿಯಿದ್ದೆಡೆಗೆ ಇಳಿಯುತ್ತಿರುವಂತೆ ಕಂಡಿತು. ಕಳವಳಗೊಂಡ ಲಕ್ಷ್ಮಣ ಬೆಟ್ಟದ ತುದಿಯನ್ನು ಬಿಟ್ಟು ಬೇಗ ಬೇಗ ಪರ್ಣಕುಟಿಯ ಕಡೆಗೆ ನಡೆಯತೊಡಗಿದ.
ಇತ್ತ ರಾಮ ಮತ್ತು ಸೀತೆ ನೋಡು ನೋಡುತ್ತಿರುವಂತೆಯೇ, ಮಂಜಿನಂತೆ ಹರಡಿದ್ದ ಮುಗಿಲ ತೇರಿನಿಂದ ಸುಂದರವಾದ ಒಂದು ಸ್ತ್ರೀ ಮೂರ್ತಿ ನಯವಿನಯಮೊಯ್ಯಾರ ಸಂಸ್ಕೃತಿಗಳೊಂದಾಗಿ ಮೆಯ್ವೆತ್ತವೊಲ್ ಮೂಡಿಬಿಡುತ್ತದೆ! ಪಜ್ಜೆಗೆಜ್ಜೆಗಳುಲಿಯ ಜೊತೆಗೆ ಬಿಂಕವನ್ನು ಮಾಡುತ್ತಾ, ಬಲೆಯನ್ನು ಬೀಸುವಂತೆ ಆಕೆ

ಸುಸ್ವಾಗತಂ ನಿನಗೆ ಕೋಸಲೇಶ್ವರ. ನಮ್ಮ ದಕ್ಷಿಣಾವನಿಗೆ.
ಎಮಗೆ ನೀನ್ ಅತಿಥಿ.
ಚಂದ್ರನಖಿ ನಾಂ; ಲಂಕೇಶ್ವರ ಭಗಿನಿಯೆಂ!

ಎನ್ನುತ್ತಾಳೆ. ಸೀತೆಗೆ ಕಳವಳವಾಗುತ್ತದೆ. ಆಕೆ ರಾಮನ ಕಣ್ಣಭಾವವನ್ನು ಕಾಣಲೆಳೆಸುತ್ತಾಳೆ. ’ರಾವಣನ ನಾಮಶ್ರವಣ ಮಾತ್ರದಿಂ ತನ್ನ ಮನಕೆಂತು ತೋರ್ದುದೊ ಭಯಾನಕಂ, ತನ್ನ ರಮಣಂಗಂತೆ ಮೊಗದೊಳೆಸೆದುದು ಮಚ್ಚರದ ಕಿಚ್ಚುಎನ್ನಿಸುತ್ತದೆ. ಮೊದಲು ರಾಮನಿಗೆ, ನಂತರ ಲಕ್ಷ್ಮಣನಿಗೆ, ಈಗ ಸೀತೆಗೆ ಕಳವಳ ಕಾಡುತ್ತದೆ; ಮುಂದಿನ ಘೊರತೆಗೊಂದು ರೂಪ ಮೂಡುವಂತೆ! ಸೀತೆ ಕಂಡಂತೆ ರಾಮನಿಗೆ ಸಿಟ್ಟು ಬಂದಿತ್ತು. ಕೋಪದಲ್ಲಿ ಆತ ಬೀಸಿದ ನುಡಿಗತ್ತಿ ಇದು!

ರಾವಣನ ತಂಗೆ,
ತಳುವಿ ಬಂದೆಯೆಲಾ ಸುಖಾಗಮನಮಂ ಬಯಸೆ!
ನಾಳೆಯೋ ನಾಡಿದೋ ಬೀಳ್ಕೊಂಡಪೆವು ನಿಮ್ಮ ಅಡವಿ ಪೊಡವಿಯಂ.
ಅಯ್ಯೊ, ಆತಿಥ್ಯಮಂ ಸವಿವ ಸೌಭಾಗ್ಯಮನೆಗಿಲ್ಲಾಯ್ತಲಾ!

ರಾಮನ ಮಾತಿಗೆ ನಗುತ್ತಲೇ ಉತ್ತರಿಸುತ್ತಾಳೆ ಚಂದ್ರನಖಿ:

ಹೊಣೆ ನಮತು,
ನಂಟರ ಮನೆಗೆ ಹೋಗುವನ್ನೆಗಂ;
ಹೋದಂದು ನಾವವರ ಸೆರೆಯಲ್ತೆ ಬಿರ್ದ್ದನಿಕ್ಕುವವರೆಗೆ,
ಮೇಣ್ ಅವರೆ ಬೀಳುಕೊಡುವನ್ನೆಗಂ?
ನೀಮೆಂತು ಪಿಂತಿರುಗುವಿರಿ ನಾಮಿಕ್ಕುವಾ ಬಿರ್ದ್ದನುಣ್ಣದೆಯೆ?
ನಿಮಗುಂ ಅದು ತಗದು;
ನಮಗೆ ಅಪಕೀರ್ತಿ!

ರಾಮ ಮತ್ತೆ ಸಿಡಿಯುತ್ತಾನೆ:

ವಿಚಿತ್ರಂ,
ದಾಕ್ಷಿಣಾತಿಥ್ಯಂ
ಬಲತ್ಕಾರ ಸತ್ಕಾರಂ!
ದನುಜನನುಜೆ ಬಗ್ಗಿಯಾಳೆ? ಅವಳೂ ವಾದ ಹೂಡುತ್ತಾಳೆ.
ದಿಟದೊಲ್ಮೆ ಹಠವಾದಿ.
ಔಪಚಾರಿಕಮಲ್ತು, ಕೇಳ್,
ರಾಕ್ಷಸ ಕುಲದ ಛಲದ ದೃಢನಿಶ್ಚಲ ಪ್ರೀತಿ.
ಊಟದೊಳ್ ಕದನದಾಟದೊಳ್ ಅಂತೆ ಬೇಟದೊಳ್
ಬಲನಿಷ್ಠೆ ಎಮ್ಮ ಸಲ್ಲಕ್ಷಣಂ!
ಮಾಳ್ಪುದಂ ರಸಪೂರ್ಣಮೆನೆ ರಾಗಪೂರ್ವಕಮಾಗಿ ಮಾಳ್ಪುದದೆ ನಮಗೆ ನಲ್!
ಕೋಸಲೇಶ್ವರ,
ನಮ್ಮ ಪ್ರೇಮಮಂ ತಣಿಯುಣದೆ
ನೀಂ ಪಿಂತಿರುಗಿ ಪೋಪುದು ಅಸದಳಂ!

ಎನ್ನುತ್ತಾಳೆ. ಅವಳ ಮಾತಿನಲ್ಲಿ ಕೋರಿಕೆಯ ಜೊತೆಗೆ ಎಚ್ಚರಿಕೆಯೂ ಇದೆ! ಅದಕ್ಕೆ ರಾಮನ ಉತ್ತರ:

ಬಿರ್ದ್ದಿನೌತಣಮೇಕೆ?
ಮೇಣ್ ಅರಸು ಸೊಗಂ ಏಕೆ?
ನಾಡಿನೊಳವೆಲ್ಲಮಂ ತೊರೆದು, ನೋಂಪಿಗೆ ನೋಂತು
ಕಾಡನ್ ಅಲೆವ ಎಮಗೆ?

ಚಂದ್ರನಖಿ:

ಮೈತ್ರಿಯೆ ಕೊಡುಗೆಯಾಗುವೊಡೆ
ನೋಂಪಿಗೆ ಅದರಿಂ ಕೇಡೆ?

ರಾಮ:

ಉಂಟೆ?
ನೋಂಪಿಯ ಮುಡಿಗೆ ಪರಿಮಳದ ಪೂವಲ್ತೆ ಮೈತ್ರಿ!
ಅದಕೋಸುಗಮೆ, ಹಗೆತನವನಳಿಸುತ ಅಕ್ಕರೆಯನುಕ್ಕಿಸಲಿಕೆ
ಆಂ ತೊರೆದು ದೊರೆಗದ್ದುಗೆಯನ್ ಇಲ್ಲಿಗೈತಂದೆನೈಸೆ!

ಚಂದ್ರನಖಿ:

ನಿನ್ನವೋಲ್ ಆಣುಂ ಅದನರಸಿ ಬಂದಿಹೆನಿಂದು ನಿನ್ನೆಡೆಗೆ,
ಕೇಳ್, ಸರಸಿ. ನೀಂ ಕರುಣಿ, ಧರ್ಮಮತಿ, ದಾನರುಚಿ.
ನಾಥನಿಲ್ಲದ ತರುಣಿಯಾಂ.
ನನ್ನ ಬಾಳ್ ಬರಿಯ ಪಾಳ್.
ಮಡಿದನ್ ಎನ್ನಾಣ್ಮನ್ ಎನ್ನಣ್ಣನಿಂ ತನ್ನ ಕಿರುವರೆಯದೊಳ್.
ಪಾತಾಳಯುದ್ಧದೊಳ್ ತೊಡಗಿರ್ದರ್ ಇರ್ವರುಂ.
ಕಳ್ತಲೆಯ ಕುರುಡಿಂದೆ ಒರ್ವರ್ ಒರ್ವರನ್ ಅರಿಗೆ ಗೆತ್ತು ಪುರುಡಿಸಿ ಕಾದಿದರ್.
ಗಂಡನ್ ಅಳಿದನ್ ಗಂಡುಗಲಿ ರಾವಣನ ಕೈದುವಲಿಯಾಗಿ.

ಹೀಗೆ ತನ್ನ ಬಗ್ಗೆ ರಾಮನಿಗೆ ಕರುಣೆ ಮೂಡುವಂತೆ ತನ್ನ ಗಂಡ ಸ್ವತಃ ತನ್ನ ಅಣ್ನನಿಂದಲೇ ಹತನಾಗಿದ್ದನ್ನು ಹೇಳುತ್ತಾಳೆ. ನಂತರ ಮುಂದುವರೆದು ತನ್ನ ನಿಜದ ಮನದಿಚ್ಛೆಯನ್ನು ಬಿಚ್ಚಿಡುತ್ತಾಳೆ.

ನಾನು ಅಂದಿನಿಂದ ಈವರೆಗೆ
ಮಳೆಯ ನೀರ್ಗಾಣದೆ
ಬಂಜರಾದೊಳ್ನೆಲದ ಪಾಂಗಿಂದೆ ಬರ್ದುಕುತಿಹೆನ್
ಎಂತೊ ರಿಕ್ತತೆಗೆ ಅತ್ತು ಸತ್ತು ಬೇಸತ್ತು.
ನನ್ನೆರ್ದೆಯ ನೀರಸದ ಇಳೆಗೆ ನೀಂ ಮಳೆಯಾಗಿ ಕರೆಯಯ್ಯ,
ಹೊಳೆಯಾಗಿ ಹರಿಯಯ್ಯ;
ಹಚ್ಚನೆಯ ಹಸುರು ಪಯಿರಿನ ಬೆಳೆಯ ಸಿರಿಯಾಗಿ ಬಾರಯ್ಯ.
ಕಲ್ಪತರು ನೀನಲ್ತೆ ಬೇಳ್ಪರಿಗೆ?

ಹೀಗೆ ಹೇಳುತ್ತಲೇ ಮಿಂಚಿನ ಅಂಚನ್ನುಳ್ಳ ಮೋಡದಂತೆ ಹತ್ತಿರ ಬರುತ್ತಿದ್ದ ಮೇಘಾಂಗಿಯನ್ನು ರಾಮ ಪರ್ವತದಂತೆ ತಡೆಯುತ್ತಾನೆ:

ಅನಾರ್ಯೆ,
ನೀನ್ ಅನ್ಯಬಾರ್ಯೆ!
ರಾಕ್ಷಸ ವಿವಾಹಕ್ರಮಂ,
ಕೇಳ್ ನಮಗಸಹ್ಯಂ!

ಎಂದು ನಗುತ್ತಲೇ ನುಡಿದು, ಸೀತೆಯ ಕಡೆಗೆ ನೋಡಿ, ಚಂದ್ರನಖಿಯನ್ನು ಹಾಸ್ಯ ಮಾಡುವವನಂತೆ,

ಪತ್ನಿಯಿಹಳ್ ಎನಗಿವಳ್;
ಪ್ರಿಯೆಯುಂ ವಲಂ;
ಮೇಣ್ ಚೆಲ್ವಿಗೇನಲ್ಲಿ ಕೊರೆಯಿಲ್ಲ!
ತುಂಬಿಹ ಹೊಡೆಗೆ ಸೇರದು ಅಮೃತಾನ್ನಮುಂ.

ಎನ್ನುತ್ತಾನೆ.
ಚಂದ್ರನಖಿ:

ಒಪ್ಪಿದೆನ್.
ಸತಿಗೆ ಹೆಗಲೆಣೆಯನ್ ಆಂ ಕಂಡೆನಿಲ್ಲ.
ನನ್ನತ್ತಿಗೆಯ ರೂಪಿರ್ಪುದು ಇದಕೆ ಹೊಯಿಕೈಯಪ್ಪುದು
ಆದೊಡಂ ಗುಣಕೆ ಮಚ್ಚರಮೇಕೆ?-
ಸಿಹಿಗೆಂತು ರುಚಿಯಿಹುದೊ
ಕಹಿಗುಂ ಅಂತೆಯೆ ಬೇರೆ ರುಚಿಯಿರದೆ?
ಭೋಜನದ ರಸಿಕಂಗೆ ಬೇರೆ ಬೇರೆಯ ರುಚಿಯ ರಸಗಳೊಳ್ ಭೇದಭಾವಂ ಅದೇಕೆ?
ನಿಮ್ಮ ಉತ್ತರದ ರತಿಯ ಸಾತ್ವಿಕ ರಸದ ಜೊತೆಗೆ
ನಮ್ಮ ದಕ್ಷಿಣ ರತಿಯ ರಾಜಸವನು ಅನುಭವಿಸಿ ನೋಳ್ಪಡೆ
ಕಳಂಕಮೇಂ ರಾಜ ರಸಿಕತೆಗೆ?

ಹೀಗೆ ಕಾಮಾತುರಳಾದ ಚಂದ್ರನಖಿ ನಗೆ ಕೊಂಕಿಸುತ್ತಾ, ಹೂವಿನಾಕೃತಿಯ ಹಾವಿನಂದದಲಿ ಹೆಡೆಯೆತ್ತಿ ನಲಿಯುತ್ತಿದ್ದಾಗ, ಮೈಥಿಲಿಯ ಮನದನ್ನನಾದ ರಾಮನಿಗೆ ಕೋಪದಿಂದ ಹುಬ್ಬುಗಂಟಿಕ್ಕಿತು. ಅದು ನುಡಿರೂಪವನ್ನಾಂತುದು ಹೀಗೆ:

ನಿಲ್,
ನುಡಿಯದಿರ್ ಪೊಲ್ಲಮಂ.
ಸಾಲ್ಗುಮೀ ಪಾಣ್ಬೆಜಾಣ್/
ನೀನೆತ್ತಣಿಂದರಿವೆ, ಸಿತಗೆ,
ಹದಿಬದೆತನದ ನಿರ್ಮಲಾನಂದಮಂ?
ಹದಿಬದೆಗೆ ತೋರ್ದುಪುದು
ತನ್ನಿನಿಯನೊರ್ವನೊಳೆ ಸರ್ವ ಮನುಜರ,
ಮತ್ತೆ ಸರ್ವಲೋಕದ ಸರ್ವ ವೈವಿಧ್ಯಮುಂ.
ಪ್ರೇಮನಿಷ್ಠೆಯ ಪತಿಗುಂ
ಅಂತೆ ತನ್ನ ಸತಿಯೊಳೆ ತೋರ್ದಪುದು
ಸರ್ವ ಲಲನೆಯರ ಸರ್ವಶೃಂಗಾರಮುಂ!
ಲಂಕೇಶ್ವರನ ತಂಗೆ ನೀನಾಗಿಯುಂ ನುಡಿವೆ
ನಾಡಾಡಿ ಬೆಲೆವೆಣ್ಗಳುಂ ನಾಣ್ಚುವ ಅಳಿ ನುಡಿಗಳಂ;
ಸೋಜಿಗಂ!...
ಇಹಳಿಲ್ಲಿ ಮರ್ಯಾದೆವೆಣ್,
ಜನಕ ರಾಜರ್ಷಿಯ ಕುಮಾರ್ತೆ.
ಮಾತು ಸಾಕು.
ಇಲ್ಲಿರದೆ ನಡೆ, ಸಹೋದರ ಲಕ್ಷ್ಮಣಂ ಬರ್ಪನಿತರೊಳ್.
ಬಂದೊಡಪ್ಪುದು ನಿನಗೆ ತಗುವವೊಲ್ ಮದುವೆ ಮರಿಯಾದೆ!

ಮೊದಲು ರಾವಣನ ಹೆಸರು ಕೇಳಿದಾಗ, ಸೀತೆ ರಾಮನ ಮೊಗವನ್ನು ನೋಡಿದಾಗ, ಆಕೆ ಅಲ್ಲಿ ಕಂಡದ್ದು, ಮಚ್ಚರದ ಕಿಚ್ಚು! ಬಹುಷಃ ಅದು ಸೀತೆಯ ಗ್ರಹಿಕೆ ಮಾತ್ರ. ಆದರೆ ಸ್ವತಃ ರಾಮನಿಗೆ ರಾವಣನ ಬಗ್ಗೆ ಸದಭಿಪ್ರಾಯವೇ ಇದೆ. ಏಕೆಂದರೆ ಸೀತೆಯನ್ನು ಹೊತ್ತೊಯ್ಯುವವರೆಗೂ ರಾವಣನ ಕೀರ್ತಿ ಕಳಂಕವಿಲ್ಲದುದೇ ಆಗಿತ್ತು! ರಾಮ ಲಕ್ಷ್ಮಣನ ಹೆಸರೆತ್ತುತ್ತಿರುವಾಗಲೇ, ಚಂದ್ರನಖಿಗೆಇನ್ನೊಬ್ಬ ಸುಂದರ ಇಲ್ಲಿದ್ದಾನೆಎನ್ನುವುದು ಮನಕ್ಕೆ ನಾಟುವಷ್ಟರಲ್ಲೇ, ಸಂಜೆಯ ಮಂಜಿನಲ್ಲಿ ಲಕ್ಷ್ಮಣ ಮೂಡಿ ಬರುತ್ತಾನೆ. ಬಂದವನೇ ಏನೋ ಶಂಕೆಯಿಂದ ಚಂದ್ರನಖಿಯನ್ನು ಅಪಾದಮಸ್ತಕ ನೋಡುತ್ತಾನೆ. ಚಂದ್ರನಖಿಯೂ ನೋಡುತ್ತಾಳೆ. ’ರಾಜಸಗುಣದಲ್ಲಿ ತನಗೆಣೆಯಾದ ಜೊತೆಗಾರ ಸಿಕ್ಕಎಂದು ಆಕೆಯ ಮನ ಪುಳಕಗೊಳ್ಳುತ್ತದೆ. ರಾಮನಿಗಾದರೊ ಇಲ್ಲಿ ಸತಿಯಿದ್ದಾಳೆ. ಈತನಿಗೆ ಸತಿಯಿಲ್ಲ. ’ಸತಿಯಿಲ್ಲದಾತಂಗೆ ರತಿಯಾಗುವಾಸೆಗೆ ಮನಂ ಮಿಂಚಿತೆಂಬಂತೆ!’ ಆಕೆ ಸಂತೋಷಗೊಳ್ಳುತ್ತಾಳೆ. ’ಹೆಣ್ಣಿನಿಂದಣ್ಣಂಗೆ ಕಣ್ದಿರುಹಿದಲಕ್ಷ್ಮಣನಿಗೆ ರಾಮ ನಡೆದುದೆಲ್ಲವನ್ನೂ ಹೇಳುತ್ತಾನೆ. ಕೇಳಿದ ಲಕ್ಷ್ಮಣನಿಗೆ ಕಿಚ್ಚು ಹೆಚ್ಚುತ್ತದೆ. ತಕ್ಷಣ ತೊಲಗೆಲೆ ನಿಶಾಚರಿಯೆ! ಎಂದು ತೋಳನ್ನು ಬೀಸುತ್ತಾನೆ. ಬೆಟ್ಟದಿಂದ ಇಳಿದು ಬರುವಾಗ ಆಶಂಕೆಯಿಂದ ಬಾಣವನ್ನು ಕೈಯಲ್ಲಿಡದೇ ಬಂದಿರುತ್ತಾನೆ. ಇಲ್ಲಿಗೆ ಬಂದಾಗ, ಅಪರಿಚಿತ ಚಂದ್ರನಖಿಯನ್ನು ಕಂಡಾಗ, ರಾಮನು ಹೇಳಿದ್ದನ್ನು ಕೇಳಿದಾಗ ಕೈಯಲ್ಲಿದ್ದ ಬಾಣ ಆತನಿಗೆ ಮರೆತೇ ಹೋಗಿರುತ್ತಾನೆ. ಅದರ ಸಮೇತ ತನ್ನ ತೋಳನ್ನು ಬೀಸುತ್ತಾನೆ; ತೊಲಗೆಲೆ ನಿಶಾಚರಿಯೆ! ಎಂದು. ಪ್ರಮಾದ ಆಗಿಯೇ ಹೋಗುತ್ತದೆ. ಬಾಣ ಚಂದ್ರನಖಿಯ ಮುಖಕ್ಕೆ ಆಳವಾದ ಗಾಯ ಮಾಡಿಬಿಡುತ್ತದೆ. ನೆತ್ತರು ಉಕ್ಕಿದಂತೆ ಆಕೆಯ ಕೋಪವೂ ಉಕ್ಕುತ್ತದೆ. ’ತೆಕ್ಕನೆಯೆ ಶೂರ್ಪನಖಿಯಾದಾಳಾ ಚಂದ್ರನಖಿ!’ ಭೀಷಣಾಕೃತಿ ಮೂಡುತ್ತದೆ. ಸೀತೆ ಭಯದಿಂದ ಕಂಪಿಸುತ್ತಾಳೆ. ರಾಮನ ಮೇಲಿನ ಮೋಹದಿಂದ ಶೂರ್ಪನಖಿಗೆ ಮೋಹನಾಕೃತಿ ದೊರೆತು ಚಂದ್ರನಖಿಯಾಗಿದ್ದವಳುವೀಗ ವೈರದಿಂದ ವೈರೂಪ್ಯಳಾಗಿ ಮತ್ತೆ ಶೂರ್ಪನಖಿಯಾಗುತ್ತಾಳೆ. ’ನಖಚಯಂ ಮೊರದವೋಲಗುರ್ವಾದುವು’ ’ಕಾಮರೂಪದ ಭೀಮ ಭೀಕರಾಕಾರಮಂ ತಾಳ್ದುದೆ ತಡಂ’, ಲಕ್ಷ್ಮಣ ಬಾರಿ ಗುರಿಯಿಟ್ಟೇ ಆಕೆಯ ಮೂಗು ಕತ್ತರಿಸಿ ಬೀಳುವಂತೆ ಕತ್ತಿಯನ್ನು ಬೀಸುತ್ತಾನೆ. ತಕ್ಷಣ ಶೂರ್ಪನಖಿಯಾದ ಚಂದ್ರನಖಿ ಅಂಬರಕೆ ನೆಗೆಯುತ್ತಾಳೆ, ’ವರ್ಷಾಭ್ರವೇಷದಿಂ ರೋಷರವದಿಂದ ಅಶನಿ ಘೋಷದಿಂ, ನೆಲಂ ನಡುಗಿ ಗುಡುಗೆ ಗಿರಿಗಹ್ವರಂ!’.