Tuesday, June 29, 2010

ಮುತ್ತಿನೆ ತೆನೆ : ಜಾನಪದ ಹಾಡುಗಳ ಸಂಗ್ರಹ

ಗೆಳೆಯ ಬಂಡ್ಲಹಳ್ಳಿ ವಿಜಯಕುಮಾರ್ ‘ಮುತ್ತಿನ ತೆನೆ’ ಎಂಬ ಹೆಸರಿನಲ್ಲಿ ಒಂದುನೂರ ಮೂವತ್ತಮೂರು ಜಾನಪದ ಹಾಡುಗಳನ್ನು ಒಂದೆಡೆ ಸಂಪಾದಿಸಿದ್ದಾರೆ. ಜಾಗೃತಿ ಪ್ರಿಂಟರ‍್ಸ್ ಪ್ರಕಟಣೆ ಮಾಡಿದೆ. ಸ್ವತಃ ಜಾನಪದ ಕಲಾವಿದರೂ ತಜ್ಞರೂ ಆದ ವಿಜಯಕುಮಾರ್ ಅತ್ಯಂತ ಪರಿಶ್ರಮದಿಂದ ಸಾಧ್ಯವಾದಷ್ಟೂ ಪಾಠದ ಗೊಂದಲಗಳನ್ನು ನಿವಾರಿಸಿ, ಕಾಗುಣಿತದ ತಪ್ಪುಗಳನ್ನು ಇಲ್ಲವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಜನಪ್ರಿಯ ಗೀತೆಗಳಿಂದ ಹಿಡಿದು, ಜನಪ್ರಿಯವಲ್ಲದಿದ್ದರೂ ಅತ್ಯಂತ ಮೌಲಿಕವಾದ ಗೀತೆಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜಯಕುಮಾರ್ ಅಭಿನಂದನಾರ್ಹರು.

ಆಯ್ದ ಒಂದೆರಡು ಗೀತೆಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ಸರಸ್ವತಿ

ಸರಸೋತಿ ಎಂಬೋಳು ಸರುವಕ್ಕೆ ದೊಡ್ಡೋಳು

ಸ್ವರವ ಹಾಕ್ಯವ್ಳೆ ಐನೂರು - ವಜ್ರಾವ

ತಿರುವೌಳೆ ಕುಣಿಕೆ ಕೊರಳಲ್ಲಿ


ನಗ್ಗಾಲ ಮರದಡಿ ನಿದ್ರೆ ಮಾಡೋದ ಬಿಟ್ಟು

ಎಗ್ಗಿಲ್ದೆ ಬಂದೆ ನಿನ ಬಳಿಗೆ - ಸರಸೋತಿ

ಚೆಂದುಳ್ಳ ಹಾಡ ಕಲಿಸಮ್ಮ


ಏಳೆಲೇ ಮಾವೀನ ತಾಳಿನಲ್ಲಿರುವೋಳೆ

ತಾಳಾದ ಗತಿಗೆ ನಲಿಯೋಳೆ - ಸರಸೋತಿ

ನಾಲಿಗ್ಯಕ್ಷರವ ನಿಲಿಸವ್ವ


ಹಟ್ಟೀಯ ಮನೆಯೋಳೆ ಪಟ್ಟೆದುಂಗರದೋಳೆ

ಪಟ್ಟೆಯ ಸೀರೆ ನೆರಿಯೋಳೆ - ಸರಸೋತಿ

ಗುಟ್ಟಿನಲಿ ಮತಿಯ ಕಲಿಸವ್ವ


೨. ಯಾತಕೆ ಮಳೆ ಹೋದವೋ

ಯಾತಕೆ ಮಳೆ ಹೋದವೋ

ಶಿವಶಿವ ಲೋಕ ತಲ್ಲಣಿಸುತಾವೋ

ಬೇಕಿಲ್ಲದಿದ್ದರೆ ಬೆಂಕಿಯ ಮಳೆಸುರಿದು

ಉರಿಸಿ ಕೊಲ್ಲು ಬಾರದೆ


ಹೊಟ್ಟೆಗ ಅನ್ನ ಇಲ್ಲಾದೆಲೆ

ನಡೆದರೆ ಜೋಲಿ ಹೊಡೆಯುತಲೆ

ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ

ಸೀರೆ ನಿಲ್ಲೋದಿಲ್ಲ ಸೊಂಟಾದಲಿ


ಹಸಗೂಸು ಹಸಿವಿಗೆ ತಾಲಾದೆಲೆ

ಅಳುತಾವೆ ರೊಟ್ಟಿ ಕೇಳುತಲೆ

ಹಡೆದ ಬಾಣಂತಿಗೆ ಅನ್ನವು ಇಲ್ಲದೆಲೆ

ಏರುತಾವೆ ಮೊಣಕೈಗೆ ಬಳೆ


ಒಕ್ಕಾಲು ಮಕ್ಕಳಂತೆ

ಅವರಿನ್ನು ಮಕ್ಕಳನ್ನು ಮಾರುಂಡರು

ಮುಕ್ಕಣ್ಣ ಮಳೆ ಕರುಣಿಸೋ

ಮಕ್ಕಳನ್ನು ಮಾರುಂಡು ದುಃಖವನು ಮಾಡುತಾರೆ


೩. ಸಾಲಕ್ಕೆ ಹೋಗವ್ನೆ ಮಳೆರಾಯ

ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.


ಮಳೆಹೋಯ್ತು ಅಂತ ಮಳೆರಾಯ್ನ ಬೈಬೇಡ

ಒಕ್ಕಳ ಹೊನ್ನ ಸೆರಗೇಲಿ - ಕಟ್ಟಿಕೊಂಡು

ಸಾಲಕ್ಕೆ ಹೋಗವ್ನೆ ಮಳೆರಾಯ


ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.


ಅಂಬು ಕೊಡುವವನೆ ಗೊಂಬೆ ಹಚ್ಚಡದವನೆ

ರಂಬೆ ತೊಡೆಮ್ಯಾಲೆ ಮಲಗಿರುವ - ಮಳೆದೇವ

ಅಂಬಾರದಿಂದ ಕರುಣಿಸೋ


ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.


ಊರಿಗೆ ಮಳೆಊದೋ ಏರ್‌ಕಟ್ಟು ತಮ್ಮಯ್ಯ

ಊರು ಮುಂದಿರುವ ಬಸವಣ್ಣಗೆ - ಕೈಮುಗಿದು

ಏರ್‌ಕಟ್ಟೊ ಮುದ್ದುಮುಖದವನೆ


ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.

Friday, June 11, 2010

ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು : ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವನ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ಅವರಿಬ್ಬರೂ ಊರಿನಲ್ಲಿದ್ದ ಅಮರೇಶ್ವರ (ಶಿವ) ದೇವರ ಸೇವೆಯಲ್ಲಿ ನಿರತರಾಗಿದ್ದರು. ನಾಡಿನಾದ್ಯಂತ ಪ್ರಸರಿಸುತ್ತಿದ್ದ ಕಲ್ಯಾಣದ ಸಮಾಚಾರ, ಬಸವಣ್ಣ ಕೀರ್ತಿ ಮಾರಯ್ಯ ದಂಪತಿಗಳಿಗೂ ತಲುಪಿತು. ಮಹಾನ್ ಶಿವಭಕ್ತನಾದ ಬಸವಣ್ಣನನ್ನು ಕಾಣುವ ದಂಪತಿಗಳಿಬ್ಬರಿಗೂ ಅತಿಯಾಗಿ ಒಂದೇ ಚಿತ್ತದಿಂದ ಕಲ್ಯಾಣದ ದಾರಿ ಹಿಡಿದು ನಡದೇಬಿಟ್ಟರು. ನೇರವಾಗಿ ಮಹಾಮನೆಗೆ ಬಂದು ಅಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅನ್ನದಾಸೋಹದ ನಂತರ ಆ ಜಾಗದಲ್ಲಿ ಚೆಲ್ಲಾಡಿ ಹೋಗಿದ್ದ ದವಸ ಧಾನ್ಯಗಳನ್ನು ಗುಡಿಸಿ, ಮನೆಗೆ ತಂದು ಸ್ವಚ್ಛಗೊಳಿಸಿ, ಅದರಿಂದ ತಮ್ಮ ಮನೆಯಲ್ಲೂ ಅನ್ನ ದಾಸೋಹ ನಡೆಸತೊಡಗಿದರು. ಶಿವನ ಅನುಗ್ರಹದಿಂದ ಅವರ ಇಚ್ಛೆಯ ಅನ್ನ ದಾಸೋಹ ಕಾರ್ಯಕ್ರಮ ಯಾವುದೇ ತೊಂದರೆಯಿಲ್ಲದೆ ನಡೆದುಕೊಂಡು ಬರುತ್ತಿತ್ತು. ಆಯ್ದ ಅಕ್ಕಿಯಿಂದ ಅನ್ನ ದಾಸೋಹ ನಡೆಸುತ್ತಿದ್ದ ದಂಪತಿಗಳಿಬ್ಬರಿಗೂ ಆಯ್ದಕ್ಕಿ ಎಂಬುದು ಅನ್ವರ್ಥ ನಾಮವಾಯಿತು. ಮಹಾಮನೆಯಲ್ಲಿ ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು. ಶಿವಭಕ್ತರಾದ ಆ ದಂಪತಿಗಳಿಗೆ ಅದೂ ಸಂತೋಷದ ವಿಚಾರವೇ ಆಗಿತ್ತು.
ಹೀಗಿರಲಾಗಿ ಒಮ್ಮೆ ಬಸವಣ್ಣನಿಗೆ, ಮಾರಯ್ಯ ದಂಪತಿಗಳ ನಿಷ್ಕಲ್ಮಶ ಕಾಯಕ ಭಕ್ತಿಯನ್ನು ಜಗತ್ತಿಗೆ ತೋರಿಸಬೇಕು ಎನ್ನಿಸಿತು. ಒಂದು ದಿನ ಒಂದಷ್ಟು ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸಿ ಏನೂ ತಿಳಿಯದವನಂತೆ ಬಸವಣ್ಣ ಸುಮ್ಮನಿದ್ದನು. ಎಂದಿನಂತೆ ಕೆಲಸ ಮುಗಿಸಿ ಬಂದ ಮಾರಯ್ಯ ಅಂಗಳವನ್ನೆಲ್ಲಾ ಗುಡಿಸಿ, ಚೆಲ್ಲಿದ್ದ ಅಕ್ಕಿಯನ್ನೆಲ್ಲಾ ಆರಿಸಿ ಮನೆಗೆ ತೆಗೆದುಕೊಂಡು ಹೋದನು. ಎಂದಿಗಿಂತ ಅಕ್ಕಿ ತುಸು ಹೆಚ್ಚೇ ಇರುವುದು ಲಕ್ಕಮ್ಮನ ಗಮನಕ್ಕೆ ಬಂತು. ಅದರಿಂದ ಅವಳಿಗೆ ಖುಷಿಯಾಗದೇ ಗಂಡನ ಮೇಲೆ ಕೋಪವುಂಟಾಯಿತು. ಜೊತೆಗೆ ಬಸವಣ್ಣನ ಮೇಲೆ ಅನುಮಾನವೂ ಬಂತು. ಇದು ಬಸವನ ಕೆಲಸವೇ ಎಂಬುದು ಅವಳ ಮನಸ್ಸಿಗೆ ಹೊಳೆದು ಹೋಗಿತ್ತು. ಗಂಡನಿಗೆ ‘ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೋ, ಬಸವಣ್ಣನ ಅನುಮಾನದ ಚಿತ್ತವೋ?’ ಎಂದು ಪ್ರಶ್ನಿಸುತ್ತಾಳೆ. ಗಂಡನಿಗೂ ಇದು ಬಸವನ ಕೆಲಸ ಎಂಬುದು ಮನವರಿಕೆಯಾಯಿತು. ಬಸವಣ್ಣ ನಮ್ಮನ್ನು ಪರೀಕ್ಷಿಸಲೆಂದೇ ಈ ಕೆಲಸ ಮಾಡಿದ್ದಾನೆ ಎಂಬುದೂ ಗೊತ್ತಾಯಿತು. ಲಕ್ಕಮ್ಮ ಮುಂದುವರೆದು ‘ಆಸೆ ಎಂಬುದು ರಾಜರಿಗೆ ಸರಿ. ಶಿವಭಕ್ರಿಗೇಕೆ ಬೇಕು? ಇಷ್ಟೊಂದು ಅಕ್ಕಿಯಾಸೆ ನಮಗೇಕೆ? ಇದನ್ನು ಶಿವನು ಒಪ್ಪುವುದಿಲ್ಲ. ಇದರಿಂದ ಮಾಡಿದ ಪ್ರಸಾದವನ್ನೂ ಶಿವನು ಒಪ್ಪುವುದಿಲ್ಲ. ನಮಗೆ ನಿತ್ಯ ದೊರೆಯುತ್ತಿದ್ದಷ್ಟೇ ಅಕ್ಕಿ ಸಾಕು. ತೆಗೆದುಕೊಂಡು ಹೋಗಿ ಇದನ್ನು ಅಲ್ಲಿಯೇ ಚೆಲ್ಲಿ ಬನ್ನಿ’ ಎಂದು ಗಂಡನಿಗೆ ಒಪ್ಪಿಸಿದಳು. ಹೆಂಡತಿಯ ಯೋಚನೆಗೆ ತಲೆದೂಗಿದ ಮಾರಯ್ಯ ಹೆಚ್ಚಿನ ಅಕ್ಕಿಯೊಂದಿಗೆ ಹೊರಟುನಿಂತ. ಆಗ ಲಕ್ಕಮ್ಮನಿಗೆ ‘ತಮ್ಮನ್ನು ತೂಗಬೇಕೆನಿಸಿದ ಬಸವಣ್ಣನನ್ನೇ ಮನೆಗೆ ಪ್ರಸಾದಕ್ಕೆ ಕರೆಯಬೇಕೆನ್ನಿಸಿ ಗಂಡನಿಗೆ ‘ಬಸವನಿಗೆ ಹೇಳಿ. ಬೇಕಾದರೆ ತನ್ನ ಸುತ್ತಣ ಜಂಗಮರನ್ನೆಲ್ಲಾ ಕರೆದುಕೊಂಡು ನಮ್ಮ ಮನಗೆ ಊಟಕ್ಕೆ ಬರಲಿ’ ಎಂದು ಆಹ್ವಾನ ಕೊಡಲು ಹೇಳಿದಳು.

ಮಾರಯ್ಯನಿಂದ ಆಹ್ವಾನವನ್ನು ಸ್ವೀಕರಿಸಿದ ಬಸವಣ್ಣ ಅಲ್ಲಮನೊಂದಿಗೆ ಊರಿನಲ್ಲಿದ್ದ ಜಂಗಮರನ್ನೆಲ್ಲಾ ಕರೆದುಕೊಂಡು ಬಂದ. ಇದಷ್ಟೇ ಅಕ್ಕಿಯಿಂದ ಅನ್ನವ ಮಾಡಿ, ಮೊದಲು ಶಿವನಿಗೆ ಆರೋಗಿಸಿ ಜಂಗಮರಿಗೆ ಲಕ್ಕಮ್ಮ ಬಡಿಸಿದಳು. ಶಿವನ ಮಹಿಮೆಯೋ ಎಂಬಂತೆ ಅಷ್ಟೇ ಅನ್ನ ಬಂದಿದ್ದವರಿಗೆಲ್ಲಾ ಸಾಕಾಯಿತು. ದಂಪತಿಗಳು ಶಿವಭಕ್ತಿಯನ್ನು ಮೆಚ್ಚಿದ ಅಲ್ಲಮ ‘ಈಗ ನೋಡು ನಿಜದ ಕಾಯಕದ ಮಹಿಮೆ ಅರ್ಥವಾಯಿತು’ ಎಂದು ಹೇಳಿದರೆ ಬಸವಣ್ಣ ‘ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು’ ಎಂದು ಹೊಗಳಿದ.

ಆಯ್ದಕ್ಕಿ ದಂಪತಿಗಳು ನೂರಾರು ವಚನಗಳನ್ನು ಬರೆದಿದ್ದಾರೆ. ಮಾರಯ್ಯನ ಅಂಕಿತನಾಮ ‘ಅಮರೇಶ್ವರಲಿಂಗ’ ಎಂಬುದಾದರೆ ಪತಿಯನ್ನೇ ಅನುಸಿರಿಸಿದ ಸತಿ ಲಕ್ಕಮ್ಮನ ಅಂಕಿತ ‘ಮಾರಯ್ಯಪ್ರಿಯ ಅಮರೇಶ್ವರಲಿಂಗ’ ಎಂಬುದಾಗಿದೆ. ‘ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ’, ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತಿಗುಂಟೆ?’ ‘ಮಾಡಿ ನೀಡಿ ಹೋದೆಹೆನೆಂಬಾಗ ಕೈಲಾಸವೇನು ಕೈಕೂಲಿಯೇ’ ಮೊದಲಾದ ಗಮನಸೆಳೆಯುವ ವಚನಗಳು ಲಕ್ಕಮನವಾಗಿವೆ. ತನ್ನ ದಾಸೋಹಕಾಯಕವನ್ನು ಸೂಚಿಸುವ ವಚನವೊಂದು ಹೀಗಿದೆ.

ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ

ನೇಮ ನಿತ್ಯ ಕೃತ್ಯ ಸಕಲಸಮೂಹ ನಿತ್ಯನೇಮದ

ಜಂಗಮಭಕ್ತರು ಗಂಣಂಗಳು ಮುಂತಾದ ಸಮೂಹಸಂಪದಕ್ಕೆ

ನೈವೇಧ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ

ಅಮಲೇಶ್ವರಲಿಂಗದ ಮನೆಯಲ್ಲಿ ಆದಿಹಿತೆಂದು


‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು’ ಎಂಬ ವಚನ ಮಾರಯ್ಯನ ಕಾಯಕದ ಪ್ರೀತಿಯನ್ನು ಸೂಚಿಸುತ್ತದೆ. ‘ಎನಗೆ ಮನೆಯಿಲ್ಲ ಎನಗೆ ಧನವಿಲ್ಲ’, ‘ತನುವೀವೆಡೆ ತನು ಎನಗಿಲ್ಲ ಮನವೀವೆಡೆ ಮನವೆನಗಿಲ್ಲ’ ಮೊದಲಾದ ವಚನಗಳು ಗಮನಸೆಳೆಯುತ್ತವೆ. ಆಯ್ದಕ್ಕಿ ವೃತ್ತಿಯನ್ನು ಸೂಚಿಸುವ ಮಾರಯ್ಯನ ವಚನ ಹೀಗಿದೆ.

ಎನಗೆ ಮನೆಯಿಲ್ಲ ಎನಗೆ ಧನವಿಲ್ಲ

ಮಾಡುವುದೇನು? ನೀಡುವುದೇನು?

ಮನೆ ಧನ ಸಕಲಸಂಪದಸೌಖ್ಯವುಳ್ಳ

ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು

ಎನ್ನೊಡಲ ಹೊರೆವನಾಗಿ

ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ

Monday, June 07, 2010

ಸಮವಸ್ತ್ರ : ಒಂದು ಹಳೆಯ ಕಥೆ

[ಇಂದು ನಮ್ಮ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ತರಗತಿಗಳು ಪ್ರಾರಂಭವಾದವು. ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಂಭ್ರಮದಿಂದ (ಆತಂಕದಿಂದಲೂ ಹೌದು) ಕಾಲೇಜಿನ ಒಳಗೆ ಕಾಲಿಡುತ್ತಿದ್ದ ಹುಡುಗ-ಹುಡುಗಿಯರನ್ನು ನೋಡಿ ನಾನು ಸುಮಾರು ಒಂಬತ್ತು ವರ್ಷಗಳ [15.08.2001] ಹಿಂದೆ ಬರೆದಿದ್ದ ಸಮವಸ್ತ್ರ ಎಂಬ ಕಥೆ ನೆನಪಾಯಿತು. ಆ ಕಥೆಗೂ ಹೀಗೇ ಸಂಭ್ರಮದಿಂದ ಕಾಲೇಜಿಗೆ ಬಂದ ಸೀಮಾ ಎಂಬ ಹುಡುಗಿಯೊಬ್ಬಳು ಪ್ರೇರಣೆಯಾಗಿದ್ದಳು! ತನ್ನ ಸ್ನಿಗ್ಧ ಚೆಲುವಿನಿಂದ, ಮುಗ್ಧಮುಖದಿಂದ ಅದಕ್ಕಿಂತಲೂ ಹೆಚ್ಚಾಗಿ ಬೇರೆ ಬೇರೆ ತರಗತಿಗಳ ಹಿರಿ ಯಹುಡುಗರ ಜೊತೆಯಲ್ಲೂ ಅವಳು ಬೆರೆಯುತ್ತಿದ್ದ ರೀತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಳು. ಅದೇ ಸಮಯದಲ್ಲಿ ಕಾಲೇಜಿರುವುದೇ ಹುಡುಗಿಯರ ಬೇಟೆಯಾಡಲು ಎಂದು ಭಾವಿಸಿರುವ ಹಸಿಹಸಿ ಕನಸುಗಳ ಮೊತ್ತವೇ ಆಗಿರುವ ಹುಡುಗರ ಗುಂಪುಗಳೂ ಗಮನ ಸೆಳೆಯುತ್ತವೆ. ಅಂತಹ ಪೂರ್ವಾಪರ ವಿವೇಚನೆಯಿಲ್ಲದ ಹುಡುಗರ ಗುಂಪಿನಲ್ಲಿ ಈ 'ಸೀಮಾ'ನಂತಹ ಮುಗ್ಧೆಯರು ಸಿಕ್ಕಿಬಿದ್ದರೆ... ಎಂಬ ಯೋಚನೆಯೇ ಈ ಕಥೆಗೆ ಹುಟ್ಟಿಗೆ ಕಾರಣವಾಗಿತ್ತು. ಆದರೆ ಒಮ್ಮೆ ಟೈಪಿಸಲು ಕುಳಿತ ಮೇಲೆ ಅದು ತನ್ನದೇ ರೂಪ ಪಡೆದು 'ಸಮವಸ್ತ್ರ' ಸಿದ್ಧವಾಗಿ ಕನ್ನಡಪ್ರಭದಲ್ಲಿ ಪ್ರಕಟವೂ ಆಗಿತ್ತು. ಇಂದು ನನ್ನ ಬ್ಲಾಗ್ ಓದುಗರೊಂದಿಗೆ ಆ ಕಥೆಯನ್ನು ಹಂಚಿಕೊಳ್ಳಬೇಕೆನ್ನಿಸಿ ಇಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸಿತು ತಿಳಿಸಿ.]

ಕೈಯಲ್ಲಿ ತಿಂಡಿ ಹಿಡಿದು ಅಡುಗೆ ಮನೆಯಿಂದ ರಾಜಮ್ಮ ಗೊಣುಗುತ್ತಲೆ ಹೊರಬಂದರು. ‘ಇವತ್ತೆ ಕಾಲೇಜು ಓಪನ್ನು. ಮೊದಲ ದಿನವೆ ಲೇಟಾಗೋದ್ರೆ ಏನ್ ಚಂದ?’ ಎಂದು. ‘ಶಮಿ. ಶಮಿ. ಬೇಗ ಬಾರೆ. ತಿಂಡಿ ತಣ್ಣಗಾಗುತ್ತೆ. ಈಗ್ಲೆ ಲೇಟಾಗಿದೆ. ನೀನಿನ್ನು ರೆಡಿಯಾಗಿಲ್ಲ’ ಎಂದರು. ರೂಮಿನಿಂದ ಏನೂ ಪ್ರತಿಕ್ರಿಯೆ ಬರದಿದ್ದಾಗ ತಾವೆ ಒಳ ಹೋಗಿ ನೋಡಿದರು. ಶಮಿ ಅಲ್ಲಿರಲಿಲ್ಲ. ಆಶ್ಚರ್ಯದಿಂದ ‘ಇವಳೆಲ್ಲಿ ಹೋದಳೊ!’ ಎಂದುಕೊಂಡು ಹೊರ ಬರುತಿದ್ದವರಿಗೆ ಕಂಡಿದ್ದು, ಮನೆಯ ಹೊರಗಿನಿಂದ ಒಳ ಬರುತಿದ್ದ ಮಗಳು ಶಮಿ. ಆಗಲೆ ಸಿದ್ದಳಾಗಿ ಕೈಯಲ್ಲಿ ನೋಟ್ ಬುಕ್ ಹಿಡಿದು ನಿಂತಿದ್ದಳು. ಮಗಳ ಸರಳವಾದ ಅಲಂಕಾರ, ಅವಳ ಎತ್ತರವನ್ನು ಗಮನಿಸಿದ ರಾಜಮ್ಮ ‘ಹೆಣ್ಣು ಮಕ್ಕಳು ಅದೆಷ್ಟು ಬೇಗ ಬೆಳೆಯುತ್ತವೊ’ ಎಂದುಕೊಂಡು, ‘ಶಮಿ ನೀನು ಇನ್ನು ತಿಂಡಿ ತಿಂದಿಲ್ಲ. ನಿಮ್ಮಪ್ಪ ಆಗಲೆ ರೆಡಿಯಾಗಿ ಕಾಯ್ತಿದಾರೆ. ಬೇಗ ತಿನ್ನು.’ ಎಂದು ತಟ್ಟೆಯನ್ನು ಅವಳ ಕೈಗಿತ್ತರು.

‘ನನಗೆ ಹಸಿವೆ ಇಲ್ಲಮ್ಮ. ನೀನು ನೋಡಿದರೆ ಇಷ್ಟೊಂದು ತಿಂಡಿ ಹಾಕಿದ್ದಿಯ’ ಎಂದು ಮುಕ್ಕಾಲು ಭಾಗದಷ್ಟು ತಿಂಡಿಯನ್ನು ತಟ್ಟೆಯಲ್ಲಿಯೆ ಒಂದು ಕಡೆ ತಳ್ಳಿ, ಮಿಕ್ಕಿದ್ದನ್ನು ನಾಲ್ಕೆ ತುತ್ತಿಗೆ ತಿಂದ ಮಗಳನ್ನು ನೋಡುತ್ತಲೆ ನಿಂತಿದ್ದ ರಾಜಮ್ಮ, ಮಗಳು ‘ತಟ್ಟೆ ತಗೊಳಮ್ಮ’ ಎಂದಾಗ ಎಚ್ಚೆತ್ತು ‘ಹುಶಾರಾಗಿ ಹೊಗ್ಬಾಮ್ಮ’ ಎಂದು ತಟ್ಟೆ ತಗೆದುಕೊಂಡು ಹೊರಟರು.

‘ಮೊನ್ನೆ ಮೊನ್ನೆಯವರೆಗೂ ಇವಳಿಗೆ ಯೂನಿಫಾರ್ಮ್ ಹಾಕಿ ಸ್ಕೂಲ್ ಬಸ್ಸಿಗೆ ಹತ್ತಿಸುವಷ್ಟರಲ್ಲಿ ಸಾಕುಸಾಕಾಗುತಿತ್ತು. ಇಂದಿನಿಂದ ಅವಳು ಕಾಲೇಜಿಗೆ ಹೋಗುತ್ತಾಳೆ. ಏನು ಖುಷಿನೊ? ಅವಳೆ ಬೇಗ ರೆಡಿಯಾಗಿದಾಳೆ. ಯೂನಿಫಾರ್ಮ್ ಹಾಕ್ಕೊಂಡ್ರೆ ಚಿಕ್ಕ ಹುಡುಗಿ, ಬಣ್ಣದ ಚೂಡಿದಾರ್ ಹಾಕ್ಕೊಂಡ್ರೆ ದೊಡ್ಡ ಹುಡುಗಿ’ ಎಂದು ತಮ್ಮ ಯೋಚನೆಗೆ ತಾವೆ ನಕ್ಕರು ರಾಜಮ್ಮ.

ಈಗಾಗಲೆ ತಿಂಡಿ ಮುಗಿಸಿ ಎರಡನೆ ಬಾರಿಗೆ ಪೇಪರ್ ತಿರುವಿ ಹಾಕುತ್ತಿದ್ದ ಶಿವಣ್ಣನಿಗೆ ‘ಅಪ್ಪ ನಾನ್ ರೆಡಿ’ ಎಂದ ಮಗಳ ಕೂಗು ಮೊದಲ ಬಾರಿಗೆ ಕೇಳಿಸಲೇ ಇಲ್ಲ. ‘ಕಾಲೇಜು ತಲುಪಿದರೆ ಸಾಕು ತಿಗ ಊರೋದುಕ್ಕು ಪುರುಸೊತ್ತು ಇರೋದಿಲ್ಲ. ಕಾಲೆಜುಗಳಲ್ಲಿ ಯಾವ ಕೆಲಸ ಬೇಕಾದ್ರು ಮಾಡ್ಬೌಹುದು. ಆದರೆ ಈ ಗುಮಾಸ್ತನ ಕೆಲಸ ಮಾತ್ರ ಮಾಡಕ್ಕಾಗೊಲ್ಲ’ ಎನ್ನುತ್ತಿದ್ದರು ಶಿವಣ್ಣ. ಮಗಳ ಎರಡನೆ ಕೂಗಿಗೆ ಎಚ್ಚೆತ್ತು, ಕೈಯಲ್ಲಿ ಹೆಲ್ಮೆಟ್ ಹಿಡಿದು ಹೊರಟರು.

ಮದುವೆಯಲ್ಲಿ ಮಾವ ಕೊಡಿಸಿದ್ದ ಬಜಾಜ್ ಸ್ಕೂಟರ್ ಹಲವಾರು ಮಾರ್ಪಾಟುಗಳನ್ನು ಹೊಂದಿದ್ದರು, ತನ್ನ ಮೂಲ ಸ್ವರೂಪವನ್ನು ಮಾತ್ರ ಉಳಿಸಿಕೊಂಡಿತ್ತು. ಅದನ್ನು ಹೊರತೆಗೆದು, ನಲವತ್ತೈದು ಡಿಗ್ರಿಗೆ ಬಾಗಿಸಿ ಸ್ಟಾರ್ಟ್ ಮಾಡುವದನ್ನು ನೋಡಿದ ಶಮಿ ‘ಅಪ್ಪ ಈ ಹಳೆ ಸ್ಕೂಟರನ್ನು ಮಾರಿ ಒಂದು ಹೊಸದನ್ನು ತಗೊ ಬಾರದೆ?’ ಎಂದಳು. ಒಂದೆರಡು ಒದೆತಕ್ಕು ಜೀವ ತಳೆಯದಿದ್ದ ಸ್ಕೂಟರನ್ನು ಸೊಂಟಕ್ಕೆ ತಾಗಿಸಿಕೊಂಡು ನಿಂತು ‘ಶಮಿ, ನಿಮ್ಮಪ್ಪ ಒಬ್ಬ ಗುಮಾಸ್ತ ಕಣಮ್ಮ. ಅದೂ ಕಾಲೇಜಿನಲ್ಲಿ. ಬರೋದು ಆರೇಳು ಸಾವಿರ ಸಂಬಳ. ಈಗ ನಿನಗೆ ಹದಿನೈದು ಸಾವ್ರ ಡೊನೇಶನ್ ಕೊಡೊ ಹೊತ್ತಿಗೆ ಸಾಕಾಗೋಗಿದೆ. ಇನ್ನು ಮುಂದಿನ ವರ್ಷ ಮತ್ತೆ ಕಟ್ಟೋಕೆ ಹತ್ತು ಸಾವ್ರ ರೆಡಿ ಮಾಡ್ಕೊಬೇಕು. ಅದ್ರೊಳಗೆ ಈ ಸ್ಕೂಟರ್ ಇದೆಲ್ಲ ಆಗೊ ಕೆಲಸ ಅಲ್ಲಮ್ಮ‘ ಎಂದು ಸ್ಕೂಟರ್ ಸ್ಟಾರ್ಟ್ ಮಾಡಿದರು. ವಿಷಯ ತನ್ನ ಕಡೆಗೆ ತಿರುಗಿದ್ದರಿಂದ ಮರುಮಾತನಾಡದೆ ಶಮಿ ಅಪ್ಪನ ಹಿಂದೆ ಸ್ಕೂಟರ್ ಹತ್ತಿದಳು. ಗೇರು ಬದಲಾಯಿಸುತ್ತ ಶಿವಣ್ಣ ಯೋಚಿಸಿದರು. ‘ಯೂನಿಫಾರ್ಮ್ ಕಳಚಿ ಬಣ್ಣದ ಬಟ್ಟೆ ಹಾಕ್ಕೊಳ್ಳದೆ ತಡ, ಈ ಮಕ್ಕಳೂ ಬಣ್ಣದ ಕನಸು ಕಾಣದಿಕ್ಕೆ ಶುರು ಮಾಡುತ್ತವೆ’ ಎಂದು.

* * *
ಮೊದಲ ದಿನ ವೆಲ್ಕಂ ಪಾರ್ಟಿ, ಎರಡನೆ ದಿನ ಫ್ರೆಷರ್ಸ್ ಡೆ ಹೀಗೆ ಕಳೆದು, ಮೂರನೆ ದಿನವೆ ಒಂದಿಷ್ಟು ತರಗತಿಗಳು ಪ್ರಾರಂಭವಾಗಿದ್ದವು. ನಾಲ್ಕನೆ ದಿನ. ಎರಡು ಪೀರಿಯಡ್ಡು ಕಳೆದ ನಂತರ ಇದ್ದ ಅರ್ಧ ಗಂಟೆ ವಿರಾಮದಲ್ಲಿ ಶಮಿಯೊಬ್ಬಳೆ ಬಾಗಿಲ ಬಳಿ ನಿಂತಿದ್ದಳು. ಆಗ ಅವಳ ಮುಂದೆ ನಾಲ್ಕು ಜನ ಹುಡುಗರು ಬಂದು ನಿಂತು ಮಾತನಾಡಿಸಿದರು. ‘ಹಲೊ ಫ್ರೆಂಡ್, ನಾನು ರಾಕೇಶ್. ಇವನು ಪರೇಶ್, ರಾಜು, ವಿಕ್ಕಿ. ನಾವೆಲ್ಲ ಸೆಕೆಂಡಿಯರ್ ಸ್ಟೂಡೆಂಟ್ಸ್. ನಿಮ್ಮ ಹೆಸರು ಶಮಿ. ಸರಿ ತಾನೆ?’ ಎಂದು ಕೈ ನೀಡಿದ. ವೆಲ್ಕಂ ಪಾರ್ಟಿಯಲ್ಲಿ ಮೂಳೆ ಇಲ್ಲದವನಂತೆ ಡ್ಯಾನ್ಸ್ ಮಾಡಿದ್ದ ರಾಕೇಶನನ್ನು ಶಮಿ ನೋಡಿದ್ದಳು. ಹುಡುಗರೆಲ್ಲ ‘ಹೋ’ ಎಂದು ಚಪ್ಪಾಳೆ ತಟ್ಟಿ ಕೂಗುತ್ತಿದ್ದರೆ, ಮನಸ್ಸಿನಲ್ಲೆ ಅವನೊಂದಿಗೆ ನರ್ತಿಸುತ್ತಿದ್ದ ಶಮಿ ‘ಎಷ್ಟೊಂದು ಚೆನಾಗಿದಾನೆ’ ಅಂದು ಕೊಂಡಿದ್ದಳು. ಈಗ ಅವನಾಗೆ ಬಂದು ಮಾತನಾಡಿಸುತ್ತಿದ್ದರೆ ಅವಳ ಮೈಯಲ್ಲಿ ಸಣ್ಣಗೆ ಕಂಪನ ಶುರುವಾಗಿಬಿಟ್ಟಿತ್ತು. ಅವನು ನೀಡಿದ್ದ ಕೈಯಿಗೆ ತಾನು ಕೈ ನೀಡಲು ಸ್ವಲ್ಪ ಆತಂಕವೆನಿಸಿದರೂ ತೋರಿಸದೆ ‘ಹಲೊ’ ಎಂದು ಕೈ ನೀಡಿದಳು. ಆತ ಸ್ವಲ್ಪ ಬಿಗಿಯಾಗಿಯೆ ಹಿಡಿದು ಕುಲುಕಿದ. ಬೇರೆಯವರೆಲ್ಲ ಅವನನ್ನೆ ಅನುಸರಿಸಿದರು. ನಾಲ್ಕು ಜನರ ಕೈ ಕುಲುಕುವಷ್ಟರಲ್ಲಿ ಕೈ ಕೆಂಪಗಾಗಿ ಬಿಟ್ಟಿತ್ತು. ಮುಖವೂ ಕೂಡ.

ಕ್ಲಾಸ್ ಬೆಲ್ಲಾಗುವವರಗೆ ಅವರ ಮಾತುಕಥೆ ಸಾಗಿತ್ತು. ಇಂತಹುದೇ ವಿಷಯ ಎಂದೇನಿರಲಿಲ್ಲ. ಸಿನಿಮಾ, ಕ್ರಿಕೆಟ್, ಇಂಟರ್‌ನೆಟ್ ಹೀಗೆ ಬದಲಾಗುತಿತ್ತು. ಬೆಲ್ಲಾದಾಗ ಮತ್ತೊಮ್ಮೆ ಎಲ್ಲರ ಕೈಯನ್ನು ಮುಟ್ಟಿದಂತೆ ಮಾಡಿ ಕ್ಲಾಸಿಗೆ ಬಂದ ಶಮಿಗೆ ಸ್ವಲ್ಪ ಹೊತ್ತು ಕ್ಲಾಸ್ ರೂಂ, ಪಕ್ಕ ಕುಳಿತಿದ್ದ ಹುಡುಗರು ಎಲ್ಲ ಮರೆಯಾಗಿ ರಾಕೇಶನೊಬ್ಬನೆ ಕಾಣುತ್ತಿದ್ದ.

* * *
ಎರಡನೆ ಪಿರಿಯಡ್ಡು ಮುಗಿಯಲು ಇನ್ನು ಐದು ನಿಮಿಷಗಳಿವೆ ಎನ್ನುವಾಗಲೆ ರಾಕೇಶ್ ಅಂಡ್ ಕೊ ಬಾಗಿಲ ಬಳಿ ಠಳಾಯಿಸುತ್ತಿದ್ದರು. ಅದನ್ನು ಕಂಡ ಶಮಿ ‘ನೆನ್ನೆಯಷ್ಟೆ ಪರಿಚಯವಾದ ಅವರು ನನಗಾಗೆ ಕಾಯುತ್ತಿದ್ದಾರೆ’ ಎಂಬ ಯೋಚನೆಯಿಂದಲೇ ಮೈ ಬಿಸಿಯೆನಿಸಿತು. ಹೊರಬಂದ ತಕ್ಷಣ ಮತ್ತದೆ ಕೈ ಕುಲುಕಾಟ. ನೆನ್ನೆ ಮಾತನಾಡಿದ ವಿಷಯಗಳೆ. ಯಾರಿಗೂ ಬೇಸರವಿಲ್ಲ. ಮಾತು ನಗು, ನಗು ಮಾತು ಇವುಗಳ ನಡುವೆ ಶಮಿ ಗಮನಿಸಿದಳು. ರಾಕೇಶ್ ಶಮಿಯ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಿದ್ದ. ವಿಕ್ಕಿ ಮತ್ತು ಪರೇಶ್ ಇಬ್ಬರೂ ಶಮಿಯ ಮೈಗೆ ತಾಕುವಷ್ಟು ಹತ್ತಿರ ನಿಂತಿದ್ದರು. ರಾಜು ಕೂಡ ಅಷ್ಟೆ. ಆಗಾಗ ಶಮಿಯ ಭುಜದ ಮೇಲೆ ಹೊಡೆಯುತಿದ್ದ. ಅವರ ಮನೆಯ ವಾತಾವರಣ, ಅವಳ ತಾಯಿ ತಂದೆ ಇವರು ರೂಪಿಸಿದ್ದ ಸಂಸ್ಕಾರವುಳ್ಳ ಮನಸ್ಸು ‘ಯಾರಾದರು ನೋಡಿದರೆ’ ಎಂದು ಒಂದು ಕ್ಷಣ ಆತಂಕಗೊಂಡಿತು. ಆದರೆ ಅವಳಿದ್ದ ಪರಿಸರ, ಸಮಾಜದಿಂದ ರೂಪ ಪಡೆದಿದ್ದ ಮನಸ್ಸು ‘ನೋಡಿದರೇನು? ನಾವೇನು ತಪ್ಪು ಮಾಡುತ್ತಿಲ್ಲವಲ್ಲ’ ಎಂದು ಸಮಾಧಾನ ಪಟ್ಟುಕೊಂಡಿತು. ಕ್ಲಾಸ್ ಮುಗಿದ ಮೇಲೆ ಪಿಚ್ಚರಿಗೆ ಹೋಗುವ ಮಾತನ್ನು ವಿಷಯವನ್ನು ರಾಕೇಶ್ ಎತ್ತಿದಾಗ ಶಮಿ ‘ಸಾರಿ ಫ್ರೆಂಡ್ಸ್. ನಾನಿವತ್ತು ಮನೆಯಲ್ಲಿ ಹೇಳಿ ಬಂದಿಲ್ಲ. ನಾಳೆ ಬೇಕಾದರೆ ಹೋಗೋಣ’ ಎಂದಳು. ಅದಕ್ಕೆ ಎಲ್ಲರ ಒಪ್ಪಿಗೆಯೂ ಬಿತ್ತು.

* * *
ಮೂರು ಬೈಕುಗಳಲ್ಲಿ ಪಿಚ್ಚರಿಗೆ ಹೊರಟ ಆರು ಜನರಲ್ಲಿ ಸೆಕೆಂಡಿಯರಿನ ರೋಹಿಣಿಯೂ ಸೇರಿದ್ದಳು. ಅವಳ ಪರಿಚಯವಾಗಿ, ಅವಳು ಸಿನಿಮಾಕ್ಕೆ ಬರುತ್ತಾಳೆ ಎಂದಾಗ ತುಸು ಸಮಾಧಾನವಾಯಿತಾದರು, ಅವಳು ತನ್ನ ಸ್ಕೂಟಿಯನ್ನು ಅಲ್ಲೆ ನಿಲ್ಲಿಸಿ ಪರೇಶನ ಬೈಕ್ ಹತ್ತಿದಾಗ ಹೊಟ್ಟೆಯೊಳಗೆ ಸಣ್ಣಗೆ ನಡುಕವುಂಟಾಯಿತು. ಬೇರೆ ದಾರಿ ಕಾಣದೆ ರಾಕೇಶನ ಬುಲ್ಲೆಟ್ ಹತ್ತಿ ಅವನಿಗೆ ತಗುಲಿಸಿಕೊಳ್ಳದಂತೆ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಬುಲ್ಲೆಟ್ ವೇಗ ಹೆಚ್ಚಾದಂತೆ ಅವಳ ಮನಸ್ಸಿನ ಆತಂಕ ಕಡೆಮೆಯಾಗುತ್ತಾ ಹೋಗಿ ಅವರಿಬ್ಬರ ನಡುವಿನ ಅಂತರವೂ ಕಡಿಮೆಯಾಯಿತು. ಹೆಚ್ಚಿದ್ದ ವೇಗ, ಆಗಾಗ ಸಡನ್ನಾಗಿ ಬ್ರೇಕು ಹಾಕುತ್ತಿದ್ದರಿಂದ ಉಂಟಾಗುತ್ತಿದ್ದ ಅವನ ಸ್ಪರ್ಶ ಇಷ್ಟವಾಗತೊಡಗಿ ‘ಭಯಪಡುವಂತದ್ದೇನಿಲ್ಲ’ ಎಂದುಕೊಂಡಳು.

ಪರ್ಸನಲ್ಲಿ ಕೇವಲ ಹತ್ತೇ ರೂಪಾಯಿ ಇರುವದನ್ನು ನೆನೆದು ಮತ್ತೊಮ್ಮೆ ಆತಂಕಗೊಂಡಳಾದರು, ರಾಕೇಶನೆ ಎಲ್ಲರಿಗು ಟಿಕೆಟ್ ತಂದಾಗ ಸಮಾಧಾನಗೊಂಡಳು. ಒಳಗೆ ವಿಕ್ಕಿಯ ಪಕ್ಕದಲ್ಲಿ ಕುಳಿತಿದ್ದ ರೋಹಿಣಿಯ ಪಕ್ಕದಲ್ಲಿ ತಾನು ಕುಳಿತುಕೊಳ್ಳಬೇಕೆಂದು ಯೋಚಿಸುತ್ತಿರುವಾಗಲೆ ರಾಕೇಶ್ ಅಲ್ಲಿ ಕುಳಿತು ‘ಕಮಾನ್ ಶಮಿ’ ಎಂದು ಕೈ ಹಿಡಿದು ಶಮಿಯನ್ನು ಪಕ್ಕಕ್ಕೆ ಕೂರಿಸಿಕೊಂಡ. ಇನ್ನೊಂದು ಪಕ್ಕಕ್ಕೆ ಪರೇಶ್, ರಾಜು ಕುಳಿತುಕೊಂಡರು. ಸಿನಿಮ ಶುರುವಾಯಿತು.

* * *
ಅಂದಿನಿಂದ ಶಮಿಗೆ ಬಣ್ಣದ ಕನಸುಗಳ ಕಾಟ ಶುರುವಾಯಿತು. ಮನೆಯಲ್ಲಿದ್ದರೂ ರಾಕೇಶನದೆ ಕನಸು. ಸಿನಿಮಾ ಮಂದಿರದ ಕತ್ತಲಿನಲ್ಲಿ ಅವನು ಸಣ್ಣಗೆ ಪಿಸುಗುಟ್ಟುತ್ತಿದ್ದಾಗ ತಾಗುತ್ತಿದ್ದ ಬಿಸಿಯುಸಿರಿನ ನೆನಪು ಮನೆಯಲ್ಲಿಯೂ ಅವಳ ಮೈಯನ್ನು ಬಿಸಿಯಾಗಿಸುತಿತ್ತು. ತಿಂಗಳೆರಡು ಕಳೆಯುವದರಲ್ಲಿ ಅವರೆಲ್ಲ ಹತ್ತು ಬಾರಿ ಸಿನಿಮಾ ಯಾತ್ರೆ ಮಾಡಿ ಬಂದಿದ್ದರು.

ನೆನ್ನೆಯೆ ತೀರ್ಮಾನವಾಗಿದ್ದ ಹಾಗೆ ಇಂದು ಕ್ಲಾಸಿಗೆ ಚಕ್ಕರ್ ಹೊಡೆದು ಹೊಸದಾಗಿ ಬಂದಿದ್ದ ಹಿಂದಿ ಪಿಚ್ಚರಿಗೆ ಹೋಗಬೇಕಾಗಿತ್ತು. ಏಕೊ? ಶಮಿಗೆ ಬೆಳಿಗ್ಗೆಯಿಂದ ಒಂದು ರೀತಿಯ ಅನ್ಯಮನಸ್ಕತೆ. ಅದು ಅವಳು ಬಂದಿದ್ದ ರೀತಿಯಲ್ಲೂ ವ್ಯಕ್ತವಾಗುತಿತ್ತು. ಒಂದು ರೀತಿಯಲ್ಲಿ ಮೈ ಮನಸುಗಳೆರಡೂ ಅಸ್ತವ್ಯಸ್ತವಾಗಿದ್ದವು. ಅಂದು ರೋಹಿಣಿ ಬರದೇ ಇರುವುದನ್ನು ಗಮನಿಸಿದಾಗ ಇನ್ನೂ ಬೇಸರವಾಗಿ ‘ರಾಕೇಶ್ ಇವತ್ತು ಪ್ರೋಗ್ರಾಮ್ ಕ್ಯಾನ್ಸಲ್ ಮಾಡೋಣ. ನಾಳೆ ಹೋಗೋಣ’ ಎಂದಳು. ‘ನೋ ನೊ ಶಮಿ. ಈಗಾಗಲೆ ಟಿಕೆಟ್ ರಿಸರ್ವ್ ಮಾಡಿಸಿ ಹಾಗಿದೆ. ಇವತ್ತೆ ಹೋಗಬೇಕು’ ಎಂದು ಬುಲ್ಲೆಟ್ ಸ್ಟಾರ್ಟ್ ಮಾಡಿದ. ಶಮಿ ಹತ್ತಿದಳು. ಬುಲ್ಲೆಟ್ ತಗೆದುಕೊಂಡ ವೇಗ ಅವಳ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತ್ತು.

ಇಂಟರ್‌ವೆಲ್ ಬಿಡುವ ವೇಳೆಗೆ ಶಮಿಗೆ ಭಯವಾಗತೊಡಗಿತು. ಸಿನಿಮಾ ನೋಡುತ್ತಲೆ ಅವಳು ಗಮನಿಸಿದ್ದಳು. ರಾಕೇಶ್ ಪರೇಶ್ ನಡುವೆ ಕುಳಿತಿದ್ದ ಅವಳ ಬೆನ್ನು ಹೆಗಲುಗಳ ಮೇಲೆ ಆಗಾಗ ಕೈ ಬೀಳುತಿತ್ತು. ಅದು ಒಮ್ಮೊಮ್ಮೆ ಸೊಂಟದವರೆಗೂ ಬರುತಿತ್ತು. ಒಮ್ಮೆಯಂತು ಅವಳ ಎದೆಯನ್ನೆ ಹಿಚಿಕಿದಂತಾಗಿ ಬೆಚ್ಚಿ ಬಿದ್ದಳು. ಇಬ್ಬರಲ್ಲಿ ಅದು ಯಾರ ಕೈ ಎಂದು ಅವಳಿಗೆ ತಿಳಿಯಲಿಲ್ಲ. ಪಿಚ್ಚರ್ ಕೂಡ ಅಷ್ಟೆ ಕೆಟ್ಟದಾಗಿತ್ತು. ‘ತಾನು ನೂರಾರು ಜನರ ನಡುವೆ ಬೆತ್ತಲಾಗಿ ನಿಂತಿದ್ದೇನೆ’ ಎನ್ನಿಸಿ, ಮೊತ್ತಮೊದಲ ಬಾರಿಗೆ ಶಮಿ ನಾನಿವರ ಜೊತೆ ಸೇರಲೇ ಬಾರದಾಗಿತ್ತು’ ಅನ್ನಿಸಿತು.

ಚಿತ್ರ ಮುಗಿಸಿ ಎಲ್ಲರು ಬೈಕುಗಳ ಬಂದಾಗ ರಾಕೇಶ್ ಹೇಳಿದ. ‘ಫ್ರೆಂಡ್ಸ್. ಈಗ ನಮ್ಮ ಮನೆಗೆ ಹೋಗೋಣ. ಶಮೀನ ನಮ್ಮ ಮಮ್ಮಿಗೆ ಪರಿಚಯ ಮಾಡೆ ಕೊಟ್ಟಿಲ್ಲ‘. ಅದಕ್ಕೆ ಎಲ್ಲರು ಹೋ ಎಂದು ಸಮ್ಮತಿ ಸೂಚಿಸಿದರು. ಶಮಿಯನ್ನು ಯಾರೂ ಕೇಳಲಿಲ್ಲ.

ಭವ್ಯವಾದ ಅಪಾರ್ಟ್‌ಮೆಂಟೊಂದರ ಬೇಸಮೆಂಟಿನಲ್ಲಿ ಬೈಕುಗಳನ್ನು ಪಾರ್ಕ್ ಮಾಡಿ ಲಿಫ್ಟ್ ಹತ್ತಿದಾಗಲೆ ರಾಕೇಶ್ ಚಳಿ ಹಿಡಿದವರಂತೆ ನಡುಗುತ್ತ ಡ್ಯಾನ್ಸ್ ಮಾಡುತೊಡಗಿದ. ಪರೇಶನು ಅವನನ್ನೆ ಅನುಸರಿಸುತಿದ್ದ. ಶಮಿಯ ಮನಸ್ಸಿನಲ್ಲಿ ಬೆಳಿಗ್ಗೆಯಿಂದ ತೋರಿ ಮರೆಯಾಗುತ್ತಿದ್ದ ಭಯದ ಭೂತ ಮತ್ತೆ ದುತ್ತೆಂದು ತಲೆಯತ್ತಿ ನಿಂತಿತ್ತು. ‘ಇಂದು ಇವರ ತಾಯಿಯನ್ನು ನೋಡಿಕೊಂಡು ಹೋದ ಮೇಲೆ ಮತ್ತೆ ಇವರ ಜೊತೆ ಸೇರಬಾರದು’ ಅಂದುಕೊಂಡಳು.

ಆಶ್ಚರ್ಯ! ಮನೆಯಲ್ಲಿ ರಾಕೇಶನ ತಾಯಿಯೆ ಇರಲಿಲ್ಲ. ರಾಕೇಶ್ ‘ಮಮ್ಮಿ ಇಲ್ಲ’ ಎಂದು ಉದ್ಗಾರ ತೆಗೆದು, ಅವರ ಮೊಬೈಲಿಗೆ ಪೋನ್ ಮಾಡುವವನಂತೆ ನಟಿಸತೊಡಗಿದ. ಪರೇಶ್ ಟೇಪ್ ರೆಕಾರ್ಡರ್ ಹಾಕಿ ಲಿಪ್ಟಿನಲ್ಲಿ ನಿಂತು ಹೋಗಿದ್ದ ಡ್ಯಾನ್ಸ್ ಮುಂದುವರೆಸುವನಂತೆ ಕುಣಿಯತೊಡಗಿದ. ವಿಕ್ಕಿ ರಾಜು ಕೂಡ ಅವನನ್ನೆ ಅನುಸರಿಸಿದರು. ಪರೇಶ್ ‘ಶಮಿ. ಕಮಾನ್. ನೀನು ನಮ್ಮ ಜೊತೆ ಡ್ಯಾನ್ಸ್ ಮಾಡು’ ಎಂದು ಕೈ ಹಿಡಿದು ಎಳೆಯತೊಡಗಿದ. ‘ನನಗೆ ಡ್ಯಾನ್ಸ್ ಬರೋಲ್ಲ’ ಎನ್ನುತಿದ್ದ ಶಮಿಯನ್ನು, ‘ಮಮ್ಮಿ ಮೊಬೈಲ್ ಆಫ್ ಮಾಡಿದಾರೆ’ ಅಂದುಕೊಂಡು ಬಂದ ರಾಕೇಶ್ ‘ಕಮಾನ್ ಶಮಿ. ನಾನ್ ನಿನಗೆ ಡ್ಯಾನ್ಸ್ ಹೇಳಿ ಕೊಡ್ತಿನಿ’ ಎಂದು ಸೊಂಟಕ್ಕೇ ಕೈ ಹಾಕಿದ!. ಶಮಿ ಯೋಚಿಸಿದಳು. ‘ನಾನು ಎಂತ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದೀನಿ’ ಎಂದು. ‘ನಾನಿವರ ಜೊತೆ ಸೇರಲೇ ಬಾರದಾಗಿತ್ತು’ ಎಂದು ಮತ್ತೆ ಮತ್ತೆ ಅಂದು ಕೊಂಡಳು. ‘ಏನಾದರು ಮಾಡಿ ಇವತ್ತೊಂದು ದಿನ ಈ ನಾಯಿಗಳಿಂದ ತಪ್ಪಿಸಿಕೊಂಡು ಹೋದರೆ ಸಾಕು. ಇನ್ನೆಂದು ಇವರ ಜೊತೆ ಸೇರಬಾರದು’ ಅಂದುಕೊಂಡಳು.

ರಾಕೇಶನ ಹಿಡಿತದಿಂದಾದ ಮುಜುಗರವನ್ನು ತೋರಿಸಿಕೊಳ್ಳದೆ ‘ರಾಕೇಶ್, ಮನೆಗೆ ಬಂದವರಿಗೆ ಒಂದು ಗ್ಲಾಸ್ ನೀರು ಕೊಡುವುದಿಲ್ಲವೆ?’ ಎಂದಳು. ‘ಓ.. ಸ್ಸಾರಿ ಡಿಯರ್, ಸ್ಸಾರಿ. ನಾನೀಗಲೆ ನಿನಗೆ ಜ್ಯೂಸ್ ಮಾಡಿಕೊಡುತ್ತೇನೆ’ ಎಂದು ಅವಳ ಸೊಂಟವನ್ನು ಬಿಡದೆ ರೆಪ್ರಿಜಿರೇಟರ್ ಕಡೆಗೆ ಸಾಗಿದ. ಜ್ಯೂಸ್ ರೆಡಿಯಾಗಿ ಅವಳಿಗೆ ಕೊಡುವಂತೆ ಮಾಡಿ ಕೊಡದೆ, ‘ಡಿಯರ್. ಅದಕ್ಕು ಮೊದಲು ಒಂದು ಕಿಸ್ ಮಾಡಿಬಿಡು’ ಎಂದು ತುಟಿಯನ್ನು ಮುಂದೆ ಚಾಚಿದ. ಮಾತುಮಾತಿಗೆ ‘ಡಿಯರ್’ ಅನ್ನುವದನ್ನು ಕಂಡು ಅವಳ ಮೈ ಉರಿದು ಹೋಯಿತು. ‘ನಾಯಿಗಳೆ ವಾಸಿ’ ಎಂದುಕೊಂಡು ‘ರಾಕೇಶ್, ನಾನು ನಿನ್ನ ಜೊತೆ ಇರೋದಿಕ್ಕೆ ಇಷ್ಟಪಡ್ತಿನಿ. ನಿನಗೆ ಕಿಸ್ ಮಾಡೋದಿಕ್ಕಾಗಲಿ ಮತ್ತೊಂದುಕ್ಕಾಗಲಿ ನನ್ನ ಅಭ್ಯಂತರ ಇಲ್ಲ. ಆದರೆ ಅದೆಲ್ಲ ನೀನೊಬ್ಬನೆ ಇದ್ದಾಗ ಮಾತ್ರ. ಇಷ್ಟು ಜನದ ಎದುರಿಗೆ ಅಲ್ಲ. ಅದು ಅಲ್ಲದೆ ನಾನೀಗಲೆ ಮನೆಗೆ ಹೋಗ್ಬೇಕು. ಅಮ್ಮ ಕಾಯ್ತಿರ್ತಾರೆ’ ಎಂದು ಅವನಿಗೆ ಮಾತ್ರ ಕೇಳಿಸುವಂತೆ ಮೆಲ್ಲಗೆ ಹೇಳಿದಳು. ರಾಕೇಶ್ ಖುಷಿಯಲ್ಲಿ ಉಬ್ಬಿ ಹೋದ. ಒಂದು ಕ್ಷಣ ಯೋಚಿಸಿ ತನ್ನ ಮಿತ್ರರ ಕಡೆ ತಿರುಗಿ ‘ಫ್ರೆಂಡ್ಸ್, ನಾವಿನ್ನು ಹೊರಡೋಣ. ಶಮಿಗೆ ಅರ್ಜೆಂಟ್ ಮನೆಗೆ ಹೋಗ್ಬೇಕಾಗಿದೆಯಂತೆ. ಬೇಕಾದರೆ ನಾಳೆ ವಿಕ್ಕಿ ಮನೇಲೊ ಪರೇಶ್ ಮನೇಲೊ ಸೇರೋಣ. ಏನಂತೀರ?’ ಎಂದ. ಮಿಕ್ಕವರಿಗೆಲ್ಲ ನಿರಾಶೆಯಾಗಿದ್ದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು. ವಿಕ್ಕಿ ‘ನಾಳೆ ಸೇರೋದು ಇದ್ದೆ ಇರುತ್ತೆ. ಬೇಕಾದ್ರೆ ನಮ್ಮ ಮನೇಲೆ ಸೇರೋಣ. ಇವತ್ತು ಇನ್ನು ಸ್ವಲ್ಪ ಹೊತ್ತು ಇಲ್ಲೆ ಇರೋಣ’ ಎಂದ. ‘ನೊ ವಿಕ್ಕಿ. ನಾನೀಗ ಹೋಗಲೇಬೇಕು.’ ಎಂದ ಶಮಿಯ ದ್ವನಿಯಲ್ಲಿ ಸಿಡುಕು ಎದ್ದು ಕಾಣುತಿತ್ತು. ನಾಳೆ ವಿಕ್ಕಿಯ ಮನೆಯಲ್ಲಿ ಸೇರುವುದೆಂದು ತೀರ್ಮಾನಿಸಿದಾಗ ಶಮಿ ನಿಟ್ಟುಸಿರು ಬಿಟ್ಟು, ಮುಖ ತೊಳೆಯುವದಕ್ಕೆಂದು ಬಾತ್ ರೂಂ ಕಡೆಗೆ ಹೊರಟಳು. ಮಿತ್ರರೆಲ್ಲ ಸಿಕ್ಕಿದ ಚಾನ್ಸ್ ಮಿಸ್ಸಾಗಿದ್ದಕ್ಕೆ ಬೇಸರಪಟ್ಟುಕೊಂಡು ಅದೇ ವಿಷಯವನ್ನು ಮಾತನಾಡುತ್ತಿದ್ದರು. ಮುಖ ತೊಳೆದುಕೊಂಡು ಹೊರಬರುತ್ತಿದ್ದ ಶಮಿಗೆ, ವಿಕ್ಕಿ ‘ಎಂಥ ಚಾನ್ಸ್ ಹಾಳು ಮಾಡಿದ್ಯೊಲೊ ನೀನು’ ಎಂದಿದ್ದು ಮತ್ತು ರಾಕೇಶ್ ‘ನಾನೇನೊ ಮಾಡ್ಲಿ. ಅವಳು ಮನೆಗೆ ಹೋಗ್ಬೇಕಂತೆ. ಇವತ್ತಿಲ್ಲದಿದ್ರೆ ಇನ್ನೊಂದು ದಿವ್ಸ. ಎಲ್ಲೋಗ್ತಾಳೆ ಬಿಡೊ’ ಎಂದಿದ್ದು ಕಿವಿಗಪ್ಪಳಿಸಿ ನಡುಗಿ ಹೋದಳು. ‘ಇದೆಲ್ಲ ಪೂರ್ವನಿಯೋಜಿತ’ ಎಂದು ಹೊಳೆದು ಕಣ್ಣು ಕತ್ತಲಿಟ್ಟಂತಾಯಿತು. ಹೇಗೊ ಸಾವರಿಸಿಕೊಂಡು ಎಲ್ಲರಿಗು ಕೈಕುಲುಕಿ ರಾಕೇಶನ ಬೈಕ್ ಹತ್ತಿ ಬಸ್ ಸ್ಟ್ಯಾಂಡಿಗೆ ಬಂದಳು.

* * *
ಬಸ್ಸಿನಲ್ಲಿ ಸೀಟಿಗೊರಗಿ ಕುಳಿತುಕೊಂಡ ಶಮಿಗೆ ಮತ್ತೊಮ್ಮೆ ‘ತಾನು ಬೆತ್ತಲಾಗಿಯೇ ಕುಳಿತಿರುವಂತೆ, ಈ ಬಸ್ಸಿನ ಎಲ್ಲರು ತನ್ನನ್ನೆ ನೋಡುತ್ತಿರುವಂತೆ’ ಬಾಸವಾಗಿ ಹೊಟ್ಟೆಯೊಳಗೆ ನಡುಕ ಹುಟ್ಟಿಕೊಂಡಿತು. ತನ್ನ ಮೈ ಮೇಲೆ ಬಟ್ಟೆ ಇದೆಯೊ ಇಲ್ಲವೊ ಎಂದು ಮುಟ್ಟಿ ಮುಟ್ಟಿ ನೋಡಿಕೊಂಡಳು. ತಾನು ತೊಟ್ಟಿದ್ದ ಬಣ್ಣದ ಚೂಡಿದಾರನ್ನು ಕಂಡು ಅವಳ ಮೈಯಲ್ಲಿ ಉರಿಯೆದ್ದಿತು. ‘ನಾನು ಯೂನಿಫಾರ್ಮ್ ಹಾಕುವಾಗ ಎಂದೂ ಈಗಾಗಿರಲಿಲ್ಲ!. ಈ ಬಣ್ಣದ ಬಟ್ಟೆ ಹಾಕಿದ ದಿನದಿಂದಲೇ ನನಗೆ ಈ ರೀತಿ ಮನೋವಿಕಾರವುಂಟಾಗುತ್ತಿದೆ’ ಎಂದು ಕೊಂಡಳು. ‘ಇನ್ನೆಂದು ಈ ನಾಯಿಗಳ ಜೊತೆ ಸೇರುವುದಿರಲಿ ಅವರೊಡನೆ ಮಾತನಾಡುವುದೂ ಬೇಡ’ ಎಂದು ಮತ್ತೆ ಶಪಥ ಮಾಡಿಕೊಡಳು.

ಮನೆಗೆ ಬಂದ ತಕ್ಷಣ ತಾನುಟ್ಟಿದ್ದ ಬಟ್ಟೆ ಬದಲಿಸಿ, ಕಳೆದ ವರ್ಷ ಹಾಕಿಕೊಳ್ಳುತ್ತಿದ್ದ ಯೂನಿಫಾರ್ಮ್ ಹುಡುಕಿ ತಗೆದು ಹಾಕಿಕೊಂಡಳು. ಸ್ವಲ್ಪ ಬಿಗಿಯೆನಿಸಿದರೂ ಮನಸ್ಸಿಗೆ ನಿರಾಳವೆನಿಸಿತು. ಮುಖ ತೊಳೆದು ಅಡುಗೆ ಮನೆಗೆ ನುಗ್ಗಿ ‘ಅಮ್ಮ ತಿಂಡಿ ಕೊಡಮ್ಮ. ಹೊಟ್ಟೆ ಹಸಿತಾ ಇದೆ’ ಎಂದಳು. ಮಗಳನ್ನು ನೋಡಿದ ರಾಜಮ್ಮ ಆಶ್ಚರ್ಯದಿಂದ ‘ಏನಮ್ಮ ಇದು. ಹಳೆ ಯೂನಿಫಾರ್ಮ್ ಹಾಕ್ಕೊಂಡಿದಿಯ. ಬೇರೆ ಬಟ್ಟೆ ಇರ್ಲಿಲ್ವೆ?’ ಎಂದು ತಟ್ಟೆಗೆ ತಿಂಡಿ ಹಾಕಿಕೊಟ್ಟರು. ‘ನನಗೆ ಇದೆ ಸರಿ’ ಎಂದು ತಿಂಡಿ ತಿಂದು ಮುಗಿಸಿ ಇನ್ನಷ್ಟು ಕೇಳಿ ಹಾಕಿಸಿಕೊಂಡಾಗ ರಾಜಮ್ಮನವರಿಗೆ ಖುಷಿಯಾಯಿತು. ಅವಳು ಹೀಗೆ ಕೇಳಿ ಹಾಕಿಸಿಕೊಂಡು ತಿಂದು ಬಹಳದಿನವಾಗಿತ್ತು.

* * *
ರಾತ್ರಿ ಊಟಕ್ಕೆ ಕುಳಿತುಕೊಳ್ಳುವಾಗ ಶಿವಣ್ಣನವರು ‘ಶಮಿ. ಈ ತಿಂಗಳ ಸಂಬಳ ಬಂದಾಗ ನಿನಗೆ ಒಂದು ಡ್ರೆಸ್ಸ್ ಕೊಡಿಸುತ್ತೇನೆ ಅಂದಿದ್ದೆ. ನಾಳೆ ಶನಿವಾರ ಹೋಗಿ ತರೋಣ’ ಎಂದರು. ‘ಥ್ಯಾಂಕ್ಸ್ ಅಪ್ಪಾ’ ಎಂದ ಶಮಿ ಸ್ವಲ್ಪ ಯೋಚಿಸಿ ‘ಅಪ್ಪ ನಾನೀಗ ಹಾಕಿದಿನಲ್ಲ. ಅಂತದೆ ಇನ್ನೊಂದು ಜೊತೆ ಯೂನಿಫಾರ್ಮ್ ಕೊಡಿಸಿಬಿಡಿ ಸಾಕು. ಬೇರೆ ಡ್ರೆಸ್ಸ್ ಬೇಡ’ ಎಂದಳು. ‘ಯಾಕಮ್ಮಾ!’ ಎಂದು ತಂದೆ ತಾಯ ಒಟ್ಟಿಗೆ ಕೇಳಿದರು. ‘ಯಾಕು ಇಲ್ಲಪ್ಪ ನನಗೆ ಈ ಯೂನಿಫಾರ್ಮ್ ಅಂದರೆ ತುಂಬ ಇಷ್ಟ. ಅಷ್ಟೆ’ ಎಂದರು, ಇನ್ನೂ ಅಚ್ಚರಿಯಿಂದ ತನ್ನನ್ನೆ ನೋಡುತ್ತಿದ್ದ ತಂದೆಗೆ, ಗಂಟಲು ಸರಿಪಡಿಸಿಕೊಳ್ಳುತ್ತ ಕೇಳಿದಳು, ‘ಅಪ್ಪ, ಈ ಜಗತ್ತಿನಲ್ಲಿ ಈಗ ಇರುವ ಅಸ್ತ್ರಗಳಲ್ಲಿ ಯಾವುದು ಅತ್ಯಂತ ಪ್ರಬಲವಾದುದ್ದು?’ ಎಂದು. ಶಿವಣ್ಣ ನಕ್ಕು ‘ಇನ್ಯಾವುದು? ಅಣುಬಾಂಬ್’ ಎಂದರು. ಇಲ್ಲವೆಂದು ತಲೆಯಾಡಿಸಿದ ಶಮಿ ಭಾಷಣ ಮಾಡುವವರಂತೆ ಎತ್ತರದ ದನಿಯಲ್ಲಿ ‘ಈ ಜಗತ್ತಿನಲ್ಲಿ ಈಗಿರುವ ಅತ್ಯಂತ ಪ್ರಬಲವಾದ ಅಸ್ತ್ರ ಯಾವುದು ಗೊತ್ತೆ? ಅದು ಸಮವಸ್ತ್ರ! ದೇಶಕ್ಕೆ ಮಿಲಿಟರಿ, ಅಣುಬಾಂಬುಗಳಿದ್ದಂತೆ. ಈ ಸಮವಸ್ತ್ರ! ವಿವಿಧತೆಯಲ್ಲಿ ಏಕತೆಯನ್ನು ತೋರಲು ಬೇಕು ಸಮವಸ್ತ್ರ!!. ನಿಮ್ಮ ಮಾನ ಪ್ರಾಣಗಳ ರಕ್ಷಣೆಗೆ ಬೇಕು ಈ ಸಮವಸ್ತ್ರ!!!’ ಎಂದಳು. ಶಿವಣ್ಣ ಜೋರಾಗಿ ನಕ್ಕುಬಿಟ್ಟರು. ರಾಜಮ್ಮನವರೂ ಅವರನ್ನೆ ಅನುಸರಿಸಿದಾಗ ಶಮಿಯ ಮುಖದಲ್ಲೂ ನಗೆಯ ಹೂವರಳಿತ್ತು.

* * *
[ನೆನಪು: ದ್ವಿತೀಯ ಪಿ.ಯು.ಸಿ.ಯ ಕೊನೆಯಲ್ಲಿ ಗ್ರಂಥಾಲಯದ ಒಂದು ಪುಸ್ತಕವನ್ನು ಸೀಮಾ ಕಳೆದುಬಿಟ್ಟಿದ್ದಳು. ಅದರ ಹಣವನ್ನು ಪಾವತಿಸಿ ಎನ್.ಒ.ಸಿ. ತೆಗೆದುಕೊಳ್ಳುವಾಗ ಅವರ ತಂದೆ ಬಂದಿದ್ದರು. ಆಗ ಅವರಾಡಿದ 'ಕೋಟಿಗಟ್ಟಲೆ ಕೊಳ್ಳೆಯೊಡೆಯುವ ವೀರಪ್ಪನ್ ಅಂತವರನ್ನು ಏನೂ ಮಾಡಲಾಗುವುದಿಲ್ಲ. ಮಕ್ಕಳು ಒಂದು ಪುಸ್ತಕ ಕಳೆದರೆ ಹಣ ಕೇಳುತ್ತೀರಾ? ಆ ವೀರಪ್ಪನ್ನನ್ನು ಹಿಡಿಯಿರಿ ನೋಡೋಣ' ಎಂದು ಮಾತನಾಡಿದ್ದು ನೆನಪಾಯಿತು. ಸೀಮಾ ಸ್ವಿತೀಯ ಪಿ.ಯು.ಸಿ.ಯಲ್ಲಿ ಫೇಲ್ ಆಗಿದ್ದಳು. ಪರೀಕ್ಷೆ ಕಟ್ಟಿಸಲು ಬಂದಿದ್ದ ಆಕೆಯ ತಾಯಿ 'ನನ್ನ ಮಗಳು ರಾತ್ರಿಯೆಲ್ಲಾ ಕುಳಿತು ಓದಿದ್ದಳು. ಆದರೂ ಮ್ಯಾಥಮೆಟಿಕ್ಸಿನಲ್ಲಿ ಕೇವಲ ಒಂದೇ ಒಂದು ಮಾರ್ಕ್ಸ್ ಕೊಟ್ಟಿದ್ದಾರಲ್ಲ' ಎಂದು ಕ್ಲರ್ಕ್ ಹತ್ತಿರ ಹೇಳುತ್ತಿದ್ದುದು ಆಗ ಒಂದು ಜೋಕಿನಂತೆ ಪ್ರಚಾರದಲ್ಲಿತ್ತು.]

Thursday, June 03, 2010

ಯಾವುದು ಆ ರಾಷ್ಟ್ರೀಯ ಸ್ಮಾರಕ?

ಈ ಕಲಾಕೃತಿ ರಾಷ್ಟ್ರೀಯ ಸ್ಮಾರಕವೊಂದರ ಭಾಗವಾಗಿದೆ.
ಯಾವುದು ಆ ರಾಷ್ಟ್ರೀಯ ಸ್ಮಾರಕ?
ಹೇಳಬಲ್ಲಿರಾ?