Monday, July 25, 2011

ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ


’ಕವಿಕುಮಾರಸಂಭವ’ವಾದ ಮೇಲೆ ನಾಮಕರಣವೂ ’ನಾಮಕರಣೋತ್ಸವ’ ಎಂಬ ಕವಿತೆಯೊಂದಿಗೆ ನೆರವೇರಿತು.
’ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ
ಕವಿಯ ಸಂತೋಷದೊಳಗೊಂದು ಬಿಂದು?’
ಎಂಬ ಸಾಲುಗಳು ಕುಮಾರಸಂಭವ ಹಾಗೂ ಕುಮಾರನಿಗೆ ನಾಮಕರಣ ನಡೆಯುತ್ತಿರುವುದರಿಂದ ಸಂತುಷ್ಟಗೊಂಡಿರುವ ಕವಿಗೆ ಚಕ್ರವರ್ತಿಗಳ ಸುಖ ತನ್ನ ಸಾಗರದಷ್ಟು ಸುಖದ ಮುಂದೆ ಒಂದು ಹನಿ ಎಂಬಂತೆ ಭಾಸವಾಗುತ್ತಿದೆ. ಮುಂದುವರೆದು,
ವಿದ್ಯೆ ಕೀರ್ತಿಗಳೊಂದುಗೂಡಿದಂದದೊಳಿಂದು
ಲೋಕಕೈತಂದಿಹನು ಪೂರ್ಣ-ಇಂದು!
ಎನ್ನುತ್ತಾರೆ. ಕವಿಗೆ ವಿದ್ಯೆ ಇದೆ. ಆದರೆ ಕೀರ್ತಿ! ಅದೂ ಇತ್ತು. ಆದರೆ ಅದನ್ನು ’ಕೀರ್ತಿ ಶನಿ ತೊಲಗಾಚೆ’ ಎಂದು ದೂರಮಾಡಿಬಿಟ್ಟಿದ್ದಾರೆ! ವಿದ್ಯೆ ಕೀರ್ತಿ ಎರಡು ಸಮ್ಮಿಳಿತಗೊಂಡಂತಹ ರೂಪದಲ್ಲಿ ಪೂರ್ಣ-ಇಂದು (ಪೂರ್ಣಚಂದ್ರ) ಬಂದುಬಿಟ್ಟಿದ್ದಾನೆ. ಆತ ಬಂದುದು ಸಂದವರ ಪುಣ್ಯವೋ? ಬಂದವರ ಪುಣ್ಯವೋ? ಅನ್ನಿಸಿಬಿಟ್ಟಿದೆ ಕವಿಗೆ! ಯಾವ ತಂದೆ-ತಾಯಿಯರಿಗೇ ಆಗಲಿ ಮಕ್ಕಳ ಮುಖಾಂತರ ಬರುವ ಕೀರ್ತಿ ಅಚ್ಚುಮೆಚ್ಚು!
ನಂತರದ ಅನೇಕ ಕವಿತೆಗಳಲ್ಲಿ ತಮ್ಮ ಕಂದ, ಬಾಲಕ ತೇಜಸ್ವಿಯ ಆಟಪಾಠಗಳನ್ನು, ಅವುಗಳಿಂದ ಕವಿಗಾಗುತ್ತಿದ್ದ ಸಂತೋಷವನ್ನು, ಅದರಿಂದ ಅವರು ಅನುಭವಿಸುತ್ತಿದ್ದ ದಿವ್ಯಾನಂದವನ್ನು ಕುವೆಂಪು ಕಟ್ಟಿಕೊಟ್ಟಿದ್ದಾರೆ. ’ತನಯನಿಗೆ’ ಎಂಬ ಕವಿತೆಯಲ್ಲಿ ತೇಜಸ್ವಿಗೆ ಸೂರ್ಯೋದಯದ ಚೆಲುವನ್ನು ಕವಿ ಪರಿಚಯ ಮಾಡಿಕೊಡುವುದು ಹೀಗೆ.
ಮೂಡಿ ಬಂದಾ ಉದಯರವಿ ನೂಡು ಕಂದಾ!
ಬಿಸಿಲ ನೆವದಲಿ ಶಿವನ ಕೃಪೆಯ ತಂದ!
ಹಬ್ಬುತಿದೆ ಜಗಕೆಲ್ಲ ಹೊಂಬೆಳಕಿನಾನಂದ:
ಏನು ಚಂದಾ ಲೋಕವಿದು ಏನು ಚಂದ!
ಮುಂದುವರೆದು ಸೂರ್ಯೋದಯದ ವರ್ಣವೈಭವವನ್ನು, ಸೂರ್ಯೋದಯದ ನಂತರ ಚೈತನ್ಯಮಯವಾಗುವ ಜಗತ್ತನ್ನೂ, ಹಕ್ಕಿಗಳ ಹಾಡನ್ನೂ ಮಗುವಿಗೆ ಕೇಳು ಕಂದಾ ಎಂದು ಹೇಳುವ ಬಗೆ ಹೀಗಿದೆ.
ಓಕುಳಿಯನಾಡುತಿದೆ ಕೆನೆಮುಗಿಲ ಲೋಕದಲಿ
ನಿನ್ನ ಕೆನ್ನೆಯ ಕೆಂಪು: ಕಾಣು, ಕಂದಾ!
ಜೋಗುಳವನುಲಿಯುತಿದೆ ಹಕ್ಕಿಗಳ ಹಾಡಿನಲಿ
ನಿನ್ನ ಸವಿಗೊರಲಿಂಪು: ಕೇಳು, ಕಂದಾ!
ಕವಿಗೆ ಇಷ್ಟೆಲ್ಲಾ ಆನಂದವನ್ನುಣ್ಣಿಸುತ್ತಿರುವ ಕಂದನಿಗೆ ಕೊನೆಗೆ ಕವಿಯಿಂದ ಬಂದ ಶುಭ ಹಾರೈಕೆ ಏನು ಗೊತ್ತೇ?
ವಿಶ್ವವೆಲ್ಲಾ ಸೇರಿ ವಿಶ್ವಾಸದಲಿ ಕೋರಿ
ಪಡೆದಂದವೀಯೊಡಲ ಚಂದ, ಕಂದಾ.
ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,
ವಿಶ್ವದಾನಂದವಾಗೆನ್ನ ಕಂದಾ!
ತನ್ನ ಕಂದ ವಿಶ್ವದ ಆನಂದವಾಗಬೇಕು ಎನ್ನುವ ಹಾರೈಕೆ-ಆಶೀರ್ವಾದಕ್ಕಿಂತ ಹೆಚ್ಚಿನದೇನು ಬೇಕು?
’ತನುಜಾತನಹುದಾತ್ಮಜಾತನುಂ’ ಎಂಬುದೊಂದು ಕವಿತೆಯಿದೆ. ದಂಪತಿಗಳ ಶರೀರದಿಂದ ಹುಟ್ಟಿದ ಮಗು ಎನ್ನುವುದಕ್ಕಿಂತ ಅವರಿಬ್ಬರ ಆತ್ಮದಿಂದ ಹುಟ್ಟಿದ ಮಗು ಎಂಬುದನ್ನು ಅದ್ಭುತವಾಗಿ ಕವಿ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ
ಬರಿಯ ತನುಜಾತನಲ್ಲಹುದಾತ್ಮಜಾತನುಂ.
ಮೆಯ್ಯ ಭೋಗಕೆ ಮನದ ಯೋಗದ ಮುಡಿಪನಿತ್ತು
ನಮ್ಮಾಶೆ ಬಿಜಯಗೈಸಿದೆ ನಿನ್ನನೀ ಜಗಕೆ
ಪೆತ್ತು. ತನುವಿನ ಭೀಮತೆಗೆ ಮನದ ಭೂಮತೆಯೆ
ಕಾರಣಂ. ಕಾಯ ಕಾಂತಿಗೆ ತಾಯಿ ತಂದೆಯರ
ಮೆಯ್ಯ ತೇಜಂ ಮಾತ್ರಮಲ್ತಾತ್ಮದೋಜಮುಂ
ಕಾರಣಂ.
ಇದೊಂದು ಅದ್ಭುತವಾದ ಹಾಗೂ ಭವ್ಯವಾದ ಪರಿಕಲ್ಪನೆ. ತಾಯಿ-ತಂದೆ ಮತ್ತು ಮಗುವಿನ ಸಂಬಂಧವನ್ನು ಆಧ್ಯಾತ್ಮಿಕವಾಗಿ ಕವಿ ಕಂಡಿರುವ ಹಾಗೂ ಅದನ್ನು ಸರಳವಾಗಿ ಸಹೃದಯರಿಗೆ ಮನಗಾಣಿಸಿರುವ ಪರಿ ಅನನ್ಯವಾಗಿದೆ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ, ಭೋಗ ಇವುಗಳ ಜೊತೆಗೆ ಮನದ ಯೋಗದ ಮುಡಿಪನ್ನು ಕಟ್ಟುವುದರ ಹಂಬಲದ ಮೂರ್ತರೂಪವೇ ಮಗು! ಶರೀರದ ಸೌಂದರ್ಯಕ್ಕೆ ಮನಸ್ಸಿನ ಭೂಮತೆಯೇ ಕಾರಣ! ಮಗುವಿನ ಶರೀರದ ತೇಜಸ್ಸಿಗೆ, ತಾಯಿ ತಂದೆಯರ ಶರೀರದ ತೇಜಸ್ಸು ಮಾತ್ರ ಕಾರಣವಲ್ಲ; ಆತ್ಮದ ತೇಜಸ್ಸೂ ಕಾರಣ! ಕವಿತೆಯಲ್ಲಿ, ಕವಿಗೆ ತನ್ನ ಮಗನು ತನುಜಾತನು ಅನ್ನುವುದಕ್ಕಿಂತ ಆತ್ಮಜಾತನು ಎಂಬುದರಲ್ಲೇ ಹೆಚ್ಚು ಒಲುಮೆ. ಅದಕ್ಕೆ ಕವಿ ಕಂಡುಕೊಂಡ ಕಾರಣಗಳು ಸಕಾರಣಗಳೇ ಆಗಿವೆ.
ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ‍್ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ’ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯದಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ: ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ,
ತೇಜಸ್ವಿ: ತನುಜಾತನಹುದಾತ್ಮಜಾತನುಂ!
ಕವಿ ತನಗೆ ಲಭಿಸಿದ ದರ್ಶನದಿಂದ, ತಾನು ಪಡೆದಿದ್ದು ಕೇವಲ ಮಗುವಲ್ಲ; ಒಂದು ವ್ಯಕ್ತಿತ್ವವನ್ನೇ ಪಡೆದಿದ್ದೇನೆ ಎಂಬ ಭಾವ ಸ್ಫುರಿಸಿದೆ. ಎಲ್ಲಾ ತಾಯಿ ತಂದೆಯರಿಗೆ ತಮ್ಮ ತಮ್ಮ ಮಗುವನ್ನು ಕಂಡಾಗ, ಅದರ ಆಟಪಾಠಗಳನ್ನು ನೋಡಿದಾಗ ಯಾವುದೋ ಒಂದು ಕ್ಷಣದಲ್ಲಿ ಅಲೌಖಿಕವಾದ ಆನಂದ ಲಭ್ಯವಾಗುತ್ತದೆ. ಆದರೆ ಅದು ಆ ಕ್ಷಣಕ್ಕೆ ಕಾಣುತ್ತದೆ; ಮರೆಯಾಗುತ್ತದೆ! ದರ್ಶನಕಾರನಾದ ಕವಿ ಮಾತ್ರ ಅಂತಹ ಅನುಭವವನ್ನು ಕಲಾರೂಪದಲ್ಲಿ ಅಭಿವ್ಯಕ್ತಿಗೊಳಿಸಬಲ್ಲ.
’ಅಮೃತಕಾಗಿ’ ಎನ್ನುವ ಕವಿತೆಯಲ್ಲಿ ಅಳುತ್ತಿರುವ ಮಗು
ಹಸಿವಾಗುತಿದೆ ಅಮ್ಮಾ,
ಹಾಲನೂಡಮ್ಮಾ:
ಎಂದು ಕೇಳುತ್ತಿರುವಂತೆ ಕವಿಗೆ ಭಾಸವಾಗುತ್ತದೆ.
ನಿನಗರಿದೆ ನನ್ನ ನೆಲೆ?
ನಿನಗರಿದೆ ನನ್ನ ಬೆಲೆ?
ಶಿಶುವಾನು ಶಿವನ ಕಳೆ;
ಕವಿ ಕಲೆಯ ಕೀರ್ತಿ ಬೆಳೆ;
ಒಲುಮೆ ಹಣ್ಣಾಗಿ,
ಅಮೃತದ ಕುಮಾರನಾಂ
ಜನಿಸಿಹೆನಮೃತಕಾಗಿ!
ಎಂದು ಕೇಳುತ್ತಿರುವಂತೆ ಕವಿಗೆ ಮನಸ್ಸಿಗೆ ಗೋಚರಿಸುತ್ತದೆ! ಮಗು ತೇಜಸ್ವಿಯನ್ನು ಕವಿ ’ಕುಣಿಯುತ ಬಾ, ಕಂದಯ್ಯ’ ಎಂದು ಆಟವಾಡಿಸುವಾಗ, ವಿಶೇಷವಾಗಿ ನವಿಲು, ಜಿಂಕೆಮರಿ, ಹಕ್ಕಿ, ಹಕ್ಕಿಗಳ ಹಾಡು ಮೊದಲಾದವನ್ನು ಮಗುವನ್ನಾಡಿಸುತ್ತಲೇ ಮಗುವಿಗೆ ಪರಿಚಯ ಮಾಡಿಸುವ ತಂದೆಯಾಗಿ ಕುವೆಂಪು ಕಾಣುತ್ತಾರೆ.
’ಕಂದನ ಮೈ’ ಕವಿತೆಯಲ್ಲೂ ಮಗುವಿನಿಂದುಂಟಾದ ದಿವ್ಯಾನಂದವನ್ನು ಕಟ್ಟಿ ಕೊಟ್ಟಿದ್ದಾರೆ.
ದೇವರ ಹರಕೆಯ ಬಾನಿಂ ಭೂಮಿಗೆ
ನೀಡಿದ ಕೈ ಈ ಕಂದನ ಮೈ!
ಈ ಮುದ್ದೀ ಸೊಗಸೀ ಪೆಂಪಿಂಪಂ
ಮಾಡಬಲ್ಲುದೇನನ್ಯರ ಕೈ?
ದೇವರ ಹರಕೆಗೆ ಕೈ ಬಂದು, ಆಕಾಶದಿಂದ ಭುಮಿಗೆ ಚಾಚಿರುವಂತೆ ಮಗು ತೇಜಸ್ವಿ ಕವಿಗೆ ಕಂಡಿದೆ. ಅದರ ಒಂದು ಸ್ಪರ್ಷ ಬೇರೆಯಾರಿಂದಲೂ ಸಿಗದಂತಹ ಅನುಭವವನ್ನು ನೀಡುತ್ತದೆ. ಮುಂದೆ ಮಗು ತೇಜಸ್ವಿಯ ವರ್ಣನೆ ಬರುತ್ತದೆ.
ನೋಡಾ, ತುಂಬು ಸರೋವರವೀ ಕಣ್:
ಆಕಾಶದ ಶಿವನಂ ಪ್ರತಿಫಲಿಸಿ
ಅತ್ತಿಂದಿತ್ತಲ್ ಇತ್ತಿಂದತ್ತಲ್
ಚಲಿಸುತ್ತಿವೆ ಸಾಗರಗಳ ಸಂಚಲಿಸಿ!
ಅಣ್ಣನ ಕಾಲಿದು ಪುಣ್ಯದ ಕಾಲು:
ಮೇರುಪರ್ವತವನೇರಿದ ಕಾಲು;
ದೇವಗಂಗೆಯೊಳೀಜಿದ ಕಾಲು;
ಹೊನ್ನಿನ ಹುಡಿಯಲಿ, ಹಾಲ್‌ಕೆನೆ ಕೆಸರಲಿ
ಸಿಂಗರಗೊಂಡಿವೆ ಈ ಕಾಲು!
ಕನ್ನಡಿ ಹಿಡಿದಿದೆ ಬ್ರಹ್ಮಾಂಡಕೆ ಈ
ಕಂದನ ಮುಖದರ್ಪಣ ಕಾಣಾ!
ಸೂರ್ಯ ಚಂದ್ರರಲೆಯುತ್ತಿಹರಲ್ಲಿ;
ಉರಿದಿವೆ ತಾರಾ ಕೋಟಿಗಳಲ್ಲಿ;
ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;
ಪರ್ವತ, ಕಾನನ, ಖಗಮೃಗ ಮೆರೆದಿವೆ;
ಸೃಷ್ಟಿಯೊಳೇನೇನಿಹುದೋ ಎಲ್ಲಾ
ಈ ಮುಖದೊಳೆ ಕವಿ ಕಾಣಲು ಬಲ್ಲ:
ನಿನಗೂ ಕಾಣುವ ಕಣ್ಣಿದ್ದರೆ ಕಾಣಾ,
ಬರೆದುದನೋದುವ ಬಲ್‌ಜಾಣಾ!

Monday, July 18, 2011

ಪೂವು : ಕುವೆಂಪು ಅವರ ಮೊದಲ ಕನ್ನಡ ಪದ್ಯ - 11

ಕುವೆಂಪು ಅವರು ಮೊದಲು ಇಂಗ್ಲಿಷ್‌ನಲ್ಲಿ ಕವಿತೆಗಳನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ’ಬಿಗಿನರ್ಸ್ ಮ್ಯೂಸ್’ (Beginer’s Muse) ಮತ್ತು ’ಎಲಿಯನ್ ಹಾರ್ಪ್’ (Alien Harp) ಎಂಬ ಎರಡು ಸಂಕಲನಗಳಲ್ಲಿ ಅವರ ಇಂಗ್ಲಿಷ್ ಕವಿತೆಗಳು ಬೆಳಕು ಕಂಡಿವೆ. ೧೯೨೪ ಜುಲೈ ೨ನೆಯ ತಾರೀಖು ಬುಧವಾರ, ಇತಿಹಾಸದ ಅಧ್ಯಾಪಕರಾಗಿದ್ದ ಎಂ.ಎಚ್.ಕೃಷ್ಣ ಐಯಂಗಾರರ  ಸಲಹೆಯಂತೆ ತಮ್ಮ ಇಂಗ್ಲಿಷ್ ಕವಿತೆಗಳ ಕಟ್ಟನ್ನು, ಜೇಮ್ಸ್ ಎಚ್. ಕಸಿನ್ಸ್ ಅವರಿಗೆ ತೋರಿಸಲು, ಗೆಳೆಯ ಮಲ್ಲಪ್ಪ ಎಂಬುವವರ ಜೊತೆಗೂಡಿ ಆಗಿನ ಮೈಸೂರಿನ ನಿಷಾದ್‌ಬಾಗ್‌ನಲ್ಲಿದ್ದ ಗೌರ್ನಮೆಂಟ್ ಗೆಸ್ಟ್ ಹೌಸಿಗೆ ಕುವೆಂಪು ಅವರು ಹೋಗಿರುತ್ತಾರೆ. ಮುಂದೆ ೧೯೩೬ರಲ್ಲಿ ’ಹಲ್ಮಿಡಿ ಶಾಸನ’ವನ್ನು ಪತ್ತೆ ಹಚ್ಚಿದ ಹಾಗೂ ಚಂದ್ರವಳ್ಳಿ ಉತ್ಖನನ ನಡೆಸಿದ ಇತಿಹಾಸತಜ್ಞ ಎಂ. ಎಚ್. ಕೃಷ್ಣ ಅವರು ಕುವೆಂಪು ಅವರಿಗೆ ಪ್ರೀತಿಪಾತ್ರ ಗುರುಗಳಾಗಿರುತ್ತಾರೆ. ಕುವೆಂಪು ಅವರ ಿಂಗ್ಲಿಷ್ ಕವಿತೆಗಳನ್ನು ಓದಿ, ವಿಮರ್ಶಿಸಿ ಪ್ರೋತ್ಸಾಹಿಸುತ್ತಿರುತ್ತಾರೆ. 'ಪುಟ್ಟಪ್ಪ ನಿಮ್ಮಲ್ಲಿ ಕವಿಗೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ವಸ್ತು inspiration (ಸ್ಫೂರ್ತಿ) ಇದೆ. ಅದನ್ನು ಬೆಳೆಸಿಕೊಳ್ಳಿ! (Develop it). ಎಂದು ಹೇಳಿದ್ದುದಲ್ಲದೆ, ಆಗ್ಗೆ ವೈಸ್ ಛಾನ್ಸಲರ್ ಆಗಿದ್ದ ಶ್ರೀ ಬ್ರಜೇಂದ್ರನಾಥ್ ಅವರಿಗೆ ಪರಿಚಯ ಮಾಡಿಸಿಕೊಡುವುದಾಗಿಯೂ ಹೇಳಿರುತ್ತಾರೆ. ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಬೇಟಿ ಮಾಡಲು ಸಹಕರಿಸುವ ಮೂಲಕ, ಕುವೆಂಪು ಅವರ ಬದುಕಿನ ಮಾರ್ಗದಲ್ಲಿ ಬಹುದೊಡ್ಡ ತಿರುವಿಗೆ ಕಾರಣಕರ್ತರಾಗಿದ್ದಾರೆ.

ಕಸಿನ್ಸ್ ಅವರು ಐರಿಷ್ ಕವಿ ಹಾಗೂ ಸ್ವದೇಶಿ ಚಳುವಳಿಯ ಪ್ರತಿಪಾದಕರಾಗಿದ್ದರು. ಕುವೆಂಪು ಅವರ ಇಂಗ್ಲಿಷ್ ಕವಿತೆಗಳನ್ನು ಪರಿಶೀಲಿಸಿ, "ಏನಿದೆಲ್ಲ ಕಗ್ಗ? (ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತ್ರಗಳೆ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?" ಎಂದು ಕೇಳುತ್ತಾರೆ. ಈ ಅನಿರೀಕ್ಷಿತ ಪ್ರಶ್ನೆಗೆ, ಈಗಾಗಲೇ ಕನ್ನಡದಲ್ಲಿ ಅಮಲನ ಕಥೆ' ಎಂಬ ದೀರ್ಘಕವಿತೆಯನ್ನು ರಚಿಸುತ್ತಿದ್ದರೂ 'ಇಲ್ಲ' ಎಂದೇ ಉತ್ತರಿಸುತ್ತಾರೆ. ನಂತರ ಇಬ್ಬರ ನಡುವೆ ಕಾವ್ಯ, ಇಂಗ್ಲಿಷ್ ಭಾಷೆ ಮತ್ತು ಕನ್ನಡ ಭಾಷೆ ಮೊದಲಾದ ವಿಚಾರಗಳ ಮಾತುಗಳಾಗುತ್ತವೆ. ಒಟ್ಟಾರೆ ಮಾತುಕತೆಯ ಫಲಶೃತಿ, ’ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂಬ ಕಸಿನ್ಸ್ ಮಾತಿನ ಪ್ರಕಾರ ಕುವೆಂಪು ಅವರು ತಮ್ಮ ಸ್ವಂತ ಭಾಷೆಯಲ್ಲೇ ಬರೆಯಬೇಕು ಎಂದಾಗುತ್ತದೆ. ಇಪ್ಪತ್ತರ ವಯಸ್ಸಿನ ಯುವಕ ಕುವೆಂಪು, ಆಕ್ಷಣಕ್ಕೆ ಸಹಜವಾಗಿಯೇ ಕುಪಿತರಾಗುತ್ತಾರೆ. ಕುಪಿತ ಮನಸ್ಥಿತಿಯಲ್ಲೇ ಅವರಿಂದ ಬೀಳ್ಕೊಡುತ್ತಾರೆ. ಆದರೆ ಇಂದು ಈ ತುದಿಯಲ್ಲಿ ನಿಂತು ನೋಡಿದಾಗ ಅದೊಂದು ಮಹತ್ವದ ಹಾಗೂ ಸ್ಮರಣೀಯವಾದ ದಿನ! ನೆನಪಿನ ದೋಣಿಯಲ್ಲಿ ಕುವೆಂಪು ಆ ಸಂದರ್ಭವನ್ನು ಕುರಿತು ಕಸಿನ್ಸ್ ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು! ಹಿಂತಿರುಗಿ ಬರುವಾಗಲೇ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆ ರಚಿಸುತ್ತಾ ಗುನುಗುತ್ತಾ ಬಂದೆ ಎಂದು ಬರೆದಿದ್ದಾರೆ.
ಹೀಗೆ ಆ ಕ್ಷಣಕ್ಕೆ ಕುವೆಂಪು ಅವರಿಂದ ರಚಿತವಾದ ಕವಿತೆಯೇ ’ಪೂವು’.

ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು||
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು|| ಪಲ್ಲವಿ ||
ಮಜ್ಜನವ ಮಂಜಿನೊಳು|
ನೀ ಮಾಡಿ ನಲಿವಾಗ|
ಉಜ್ಜುಗದಿ ಸಂಜೆಯೊಳು|
ನರರೆಲ್ಲ ಬರುವಾಗ||
ತಳಿರೊಳಗೆ ಕೋಕಿಲೆಯು|
ಕೊಳಲನು ನುಡಿವಾಗ|
ಎಳೆದಾದ ರವಿಕಿರಣ|
ಇಳೆಯನ್ನು ತೊಳೆವಾಗ||
ಕವಿವರನು ಹೊಲಗಳಲಿ|
ತವಿಯಿಂದ ತೊಳಗುತಿಹ|
ಭುವನವನು ಸಿಂಗರಿಸಿ|
ಸವಿಯಾಗಿ ಬೆಳಗುತಿಹ||
ಅಲರುಗಳ ಸಂತಸದಿ|
ತಾ ನೋಡಿ ನಲಿವಾಗ|
ನಲಿ ಪೂವೆ ಎನ್ನುತ್ತಲಿ|
ರಾಗದಿಂ ನುಡಿವಾಗ||
ಗೀತವನು ಗೋಪಾಲ|
ಏಕಾಂತ ಸ್ಥಳದೊಳು|
ಪ್ರೀತಿಯಿಂ ನುಡಿವಾಗ|
ನಾಕವನು ಸೆಳೆಯುತ್ತ||
ವನದಲ್ಲಿ ಪಕ್ಷಿಗಳು|
ಇನನನ್ನು ಸವಿಯಾಗಿ|
ಮನದಣಿವ ಗೀತದಿಂ|
ಮನದಣಿಯೆ ಕರೆವಾಗ||
ಮೋಡಗಳು ಸಂತಸದಿ|
ಮೂಡುತಿಹ ಮಿತ್ರನನು|
ನೋಡಿ ನೋಡಿ ನಲಿಯಲು
ನಾಡ ಮೇಲ್ ನಡೆವಾಗ||
ಮುಂಜಾನೆ ಮಂಜಿನೊಳು|
ಪಸುರಲ್ಲಿ ನಡೆವಾಗ|
ಅಂಜಿಸುವ ಸಂಜೆಯೊಳು|
ಉಸಿರನ್ನು ಎಳೆವಾಗ||
ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು|
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು||

ಅದನ್ನು ತಮ್ಮ ಸಹನಿವಾಸಿಗಳ ಎದುರು ರಾಗವಾಗಿ ಹಾಡಿದಾಗ ಅವರೆಲ್ಲರೂ ಅತಿಯಾಗಿ ಹಿಗ್ಗು ವ್ಯಕ್ತಪಡಿಸುತ್ತಾರೆ. ನಂತರದ ದಿನಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕವಿತಾ ರಚನೆ ಮುಂದುವರೆದು, ಮುಂದೊಂದು ದಿನ ಇಂಗ್ಲಿಷ್‌ನಲ್ಲಿ ಬರೆಯುವುದು ಪೂರ್ಣವಾಗಿ ನಿಂತೇ ಹೋಗುತ್ತದೆ. ಕನ್ನಡ ಪ್ರಕಾಶಿಸುತ್ತದೆ! ಆ ’ಪೂವು’ ಕವಿತೆಯ ಬಗ್ಗೆ ಸ್ವತಃ ಕುವೆಂಪು ಅವರ ಅಭಿಪ್ರಾಯಗಳನ್ನು ತಿಳಿಯುವ ಮೊದಲು ಇಡೀ ಕವಿತೆಯನ್ನೊಮ್ಮೆ ನೋಡಬಹುದು. ಐದು ಮಾತ್ರೆಗಳ ಗಣಗಳು, ದ್ವಿತೀಯಾಕ್ಷರ ಪ್ರಾಸ ಹಾಗೂ ಕೆಲವು ಪಂಕ್ತಿಗಳಲ್ಲಿ ಕಾಣುವ ಅಂತ್ಯಪ್ರಾಸದಿಂದ ಕೂಡಿದ ಕವನ ಪೂವು.
೧೯೨೪ ಜುಲೈ ೧೦ನೆಯ ಗುರುವಾರದಂದು ತಮ್ಮ ದಿನಚರಿಯಲ್ಲಿ ಹೀಗೆ ದಾಖಲಿಸಿದ್ದಾರೆ.
This is the precious day for which I was striving for a time when I received inspiration to write in my own language in a different style so as to bring I think a new era in the annals of Kannada literature. I have rebelled against convention in the sense that I have followed my own metre etc. The themes are my themes which I would have otherwise written in English. I composed a tiny beautiful poem and I named it ‘PUVU’ or (‘The flower’). It was gailed by my friends and casual admires. Many for the music, few for the theme and still few for the new style. “Mother, guide me! Let thy fire burn in my heart! Vande Swami Vivekanadam!”

ಹಾಗೆ ಇಂಗ್ಲಿಷಿನಲ್ಲಿ ಬರೆದುದನ್ನು ಕನ್ನಡಕ್ಕೆ ಅನುವಾದಿಸಿ ನೆನಪಿನ ದೋಣಿಯಲ್ಲಿ ಕೊಟ್ಟಿದ್ದಾರೆ.
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ನನಗನ್ನಿಸುತ್ತದೆ, ಒಂದು ನೂತನ ಶಕವನ್ನೆ ತರುವಂತೆ, ಸಂಪ್ರದಾಯ ದೂರವಾದ ಬೇರೆಯ ರೀತಿಯಲ್ಲಿ, ಸ್ಫೂರ್ತಿಗೊಂಡಾಗ ನನ್ನ ನುಡಿಯಲ್ಲಿಯೆ ನಾನು ಬರೆಯಬೇಕೆಂದು ಸ್ವಲ್ಪ ಕಾಲದಿಂದಲೂ ಯಾವುದಕ್ಕಾಗಿ ಹೆಣಗುತ್ತಿದ್ದೆನೋ ಅದು ಸಾರ್ಥಕವಾಗಿರುವ ಒಂದು ಅದ್ಭುತ ಸುಮೂಲ್ಯ ದಿನ. ನಾನು ಸಂಪ್ರದಾಯಕ್ಕೆ ವಿರುದ್ಧವಾಗಿ ದಂಗೆಯೆದ್ದಿದ್ದೇನೆ, ಯಾವ ಅರ್ಥದಲ್ಲಿ ಎಂದರೆ, ನನ್ನದೇ ಆಗಿರುವ ಛಂದಸ್ಸು ಇತ್ಯಾದಿಗಳನ್ನು ಅನುಸರಿಸುವಲ್ಲಿ, ಕಾವ್ಯದ ವಸ್ತು ಭಾವಗಳೆಲ್ಲ ನನ್ನವೆ, ಕನ್ನಡದಲ್ಲಿ ಅಲ್ಲದಿದ್ದರೆ ಅವನ್ನೆಲ್ಲ ಇಂಗ್ಲಿಷಿನಲ್ಲಿಯೆ ಬರೆಯುತ್ತಿದ್ದೆ. ಒಂದು ಪುಟ್ಟ ಸಂದರ ಕವನ ರಚಿಸಿದೆ. ಅದಕ್ಕೆ ’ಪೂವು’ ಎಂದು ಕೊಟ್ಟಿದ್ದೇನೆ. ನನ್ನ ಸ್ನೇಹಿತರೂ ಇತರ ಕೆಲವು ಪರಿಚಿತರೂ ಅದನ್ನು ಹೊಗಳಿದ್ದೇ ಹೊಗಳಿದ್ದು! ಅನೇಕರು ಅದರ ನಾದ ಮಾಧೂರ‍್ಯಕ್ಕಾಗಿ, ಕೆಲವರು ಅದರ ವಸ್ತುಭಾವಗಳಿಗಾಗಿ, ಒಬ್ಬಿಬ್ಬರು ಅದರ ನೂತನ ಶೈಲಿಗಾಗಿ. ತಾಯೀ ದಾರಿ ತೋರು! ನಿನ್ನ ಅಗ್ನಿ ನನ್ನ ಹೃದಯದಲ್ಲಿ ಪ್ರಜ್ವಲಿಸಲಿ! ವಂದೇ ಸ್ವಾಮಿ ವಿವೇಕಾನಂದಮ್!
ಮೇಲಿನ ಮಾತುಗಳ ಬಗ್ಗೆ, ನೆನಪಿನ ದೋಣಿಯಲ್ಲಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಜುಲೈ ೧೦ನೆಯ ಗುರುವಾರ, ೧೯೨೪ನೆಯ ದಿನಚರಿಗೆ ನನ್ನ ಸಾಹಿತ್ಯಜೀವನದಲ್ಲಿ ಒಂದು ಐತಿಹಾಸಿಕ ಸ್ಥಾನವಿದೆ. ಈ ದಿನಚರಿ ಬರೆಯದೆ ಇದ್ದಿದ್ದರೆ ಅಥವಾ ಅದು ಉಳಿದು ಈಗ ನನಗೆ ದೊರೆಯದೆ ಇದ್ದಿದ್ದರೆ, ನಾನು ಆ ಪ್ರಾರಂಭಿಕ ಶೈಶವಾವಸ್ಥೆಯಲ್ಲಿ ಅಷ್ಟು ದಿಟ್ಟತನದಿಂದ ಸಾಹಿತ್ಯ ಶಕಪುರುಷನಾಗಿ ಬಿಡುತ್ತೇನೆ ಎಂದು ಬರೆಯಲು ಸಾಧ್ಯ ಎಂಬುದನ್ನೆ ನಂಬಲು ಅಸಾಧ್ಯವಾಗುತ್ತಿತ್ತು. ಯಾವ ಧೈರ‍್ಯದಿಂದ ಹಾಗೆ ಬರೆದೆನೋ ಆ ದೇವೀ ಸರಸ್ವತಿಗೇ ಗೊತ್ತು!
ಮುಂದುವರೆದು, ಮೇಲಿನ ಮಾತುಗಳಿಗೆ ಒಂದು ರೀತಿಯಲ್ಲಿ ಪ್ರೇರಕವಾಗಿದ್ದ ’ಪೂವು’ ಕವಿತೆಯ ಬಗ್ಗೆ ದಿನಚರಿಯಲ್ಲಿ ಬರೆದಿಡುವ ಅಂತಹ ಕ್ರಾಂತಿಕಾರಕವಾದ ಧೀರಪ್ರತಿಜ್ಞೆಯ ವೀರ ವಾಕ್ಯಗಳಿಗೆ ನಿಮಿತ್ತಮಾತ್ರವಾದ ಆ ’ಪೂವು’ ಕವನವನ್ನು ಈಗ ನೋಡಿದರೆ ಕನಿಕರ ಪಡುವಂತಿದೆ! ಅಷ್ಟು ಬಡಕಲು, ಅಷ್ಟು ಸೊಂಟಮುರುಕ! ಕನ್ನಡ ಭಾಷೆಯೂ ಅದುವರೆಗಿನ ನನ್ನ ಇಂಗ್ಲಿಷ್ ಕವನಗಳ ಭಾಷೆಯ ಪ್ರಯೋಗದ ಮುಂದೆ ಬರಿಯ ಅಂಬೆಗಾಲು, ತಿಪ್ಪತಿಪ್ಪದಂತಿದೆ! ವಿದೇಶೀ ಭಾಷೆಯನ್ನೇ ಅಷ್ಟಾದರೂ ಸಮರ್ಥವಾಗಿ ಬಳಸಬಲ್ಲ ಕವಿಗೆ ತನ್ನ ನುಡಿಯನ್ನೇ ಸಾಧಾರಣವಾಗಿಯಾದರೂ ಬಳಸಲಾರದಷ್ಟು ದಾರಿದ್ರ್ಯವಿದ್ದುದನ್ನು ನೋಡಿದರೆ ನಮ್ಮ ವಿದ್ಯಾಭ್ಯಾಸ ಪದ್ಧತಿ ಎಂತಹ ಗುಲಾಮಗಿರಿಯಲ್ಲಿತ್ತು ಎಂಬುದು ಗೊತ್ತಾಗುತ್ತದೆ. ಎಂದು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಆ ಧೀರ ಪ್ರತಿಜ್ಞೆ, ಉನ್ಮೇಷನ, ಸಂತೋಷ, ಹೆಮ್ಮೆ ಪೂವು ಪದ್ಯದ ವಿಚಾರದಲ್ಲಿ ಏಕೆ ಎಂಬುದುಕ್ಕೆ ಅದನ್ನು ಇಂಪಾಗಿ ಹಾಡಿ ಭಾವಪೂರ್ವಕವಾಗಿ ಸಹೃದಯರಲ್ಲಿ ಸಂವಹನ ಉಂಟುಮಾಡಿದ್ದಕ್ಕಾಗಿಯೂ ಇರಬಹುದು. ಆದರೂ ಆ ಕಾರಣ ಸಾಲದಾಗಿದೆ. ಈಗ ಆಲೋಚಿಸಿದರೆ ನನಗನ್ನಿಸುತ್ತದೆ, ಆ ಕವನದ ಭಾಷಾಭಿವ್ಯಕ್ತಿಗಾಗಿ ಅಲ್ಲ, ಅದರ ಹಿಂದಿರುವ ಕನ್ನಡ ಛಂದಸ್ಸಿನ ಸ್ವರೂಪರಹಸ್ಯ ಅಂತಃಪ್ರಜ್ಞಾಗೋಚರವಾದುದರಿಂದಲೆ ಕವಿಗೆ ಅಂತಹ ಆತ್ಮಪ್ರತ್ಯಯವೂ ಕನ್ನಡ ಸಾಹಿತ್ಯದಲ್ಲಿ ನೂತನ ಶಕಾರಂಭ ಸಾಧ್ಯ ಎಂಬ ಭರವಸೆಯೂ ಮೂಡಿದುದು. ಇಂಗ್ಲಿಷ್ ಭಾವಗೀತೆಗಳ ನಾನಾರೂಪದ ವೈವಿಧ್ಯದ ಪ್ರಯೋಗತಃ ಪರಿಚಯವಿದ್ದ ನನಗೆ ಕನ್ನಡದಲ್ಲಿಯೂ ಆ ಎಲ್ಲ ರೂಪಗಳನ್ನೂ ವೈವಿಧ್ಯವನ್ನೂ ಸಾಧಿಸಲು ಸಾಧ್ಯ ಎಂಬುದು ಮನಸ್ಸಿಗೆ ಸ್ಫುರಿಸಿರಬೇಕು. ಟ್ರೈಮೀಟರ್, ಟೆಟ್ರಾಮೀಟರ್, ಪೆಂಟಾಮೀಟರ್, ಹೆಕ್ಸಾಮೀಟರ್ ಮೊದಲಾದುವುಗಳಿಗೆ ಸಂವಾದಿಯಾಗಿ ಮೂರು ಮಾತ್ರೆ, ನಾಲ್ಕು ಮಾತ್ರೆಯ, ಮೂರುನಾಲ್ಕು ಮಾತ್ರೆಯ, ಐದು ಮಾತ್ರೆಯ, ಆರು ಮಾತ್ರೆಯ ಗಣಗಳನ್ನು ಉಪಯೋಗಿಸಬಹುದೆಂಬ ತತ್ವ ಗೋಚರವಾಗಿ ಆ ಧೀರಪ್ರತಿಜ್ಞೆಯ ವೀರೋಕ್ತಿ ಹೊಮ್ಮಿತೆಂದು ತೋರುತ್ತದೆ! ಎಂದು ಬರೆದಿದ್ದಾರೆ.
ಮೇಲಿನ ಕವಿಯ ಆತ್ಮಪ್ರತ್ಯಯವೆನ್ನಿಸಬಹುದಾದ ಮಾತುಗಳು, ಅವುಗಳಲ್ಲಿ ವ್ಯಕ್ತವಾಗಿರುವ ಕೆಚ್ಚು, ಆತ್ಮವಿಶ್ವಾಸ ಎಲ್ಲವೂ, ಆ ಕ್ಷಣದ ಒತ್ತಡದಿಂದ ಹೊಮ್ಮಿದವುಗಳಲ್ಲ ಎಂಬುದು, ಮುಂದಿನ ಕೆಲವೇ ದಿನಗಳಲ್ಲಿ ಗೋಚರಿಸಲ್ಪಡುತ್ತದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನಾವಿಲ್ಲಿ ನೋಡಬಹುದು. ಹೀಗೆ ಕ್ರಾಂತಿಕಾರಕ ಮಾತುಗಳನ್ನು ದಿನಚರಿಯಲ್ಲಿ ದಾಖಲಿಸಿದ ದಿನದಿಂದ, ಕೇವಲ ಒಂದೇ ತಿಂಗಳಿನಲ್ಲಿ  (6.8.1924) ಬ್ಲಾಂಕ್ ವರ್ಸ್ ಛಂದಸ್ಸನ್ನು ಮೊತ್ತ ಮೊದಲ ಬಾರಿಗೆ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಮನೆಯ ತಾರಸಿಯ ಮೇಲೆ ನಿಂತಿ ಬೆಂಲದಿಂಗಳನ್ನು ಸವಿಯುತ್ತಾ ಒಂದು ಸಾನೆಟ್ ರಚಿಸಲು ಯೋಚಿಸುತ್ತಾರೆ. This sky, this moon, these clouds, these stars etc ಎಂದು ಹೇಳಿಕೊಳ್ಳುತ್ತಲಿರುವಾಗಲೇ, ಅದನ್ನು ಹಿಂಬಾಲಿಸಿ, ಅನೈಚ್ಛಿಕವಾಗಿ 'ಈ ಗಗನವೀ ಚಂದ್ರನೀ ಮುಗಿಲು' ಎಂಬ ಸಾಲು ಮೂಡಿಬಿಡುತ್ತದೆ. ಆದರೆ ಅದು ಸಾನೆಟ್ಟಿನ ಹದಿನಾಲ್ಕು ಸಾಲನ್ನು ಮೀರಿ ಹದಿನೇಳು ಸಾಲಿಗೆ ಬೆಳೆದುಬಿಡುತ್ತದೆ. ಅದರ ಮಾರನೆಯ ದಿನವೇ (7.8.1924) ಕನ್ನಡದಲ್ಲಿಯೇ 'ಸೊಬಗು' ಎಂಬ  ಸಾನೆಟ್ ರಚನೆಯ ಸಾಹಸಕ್ಕಿಳಿಯುತ್ತಾರೆ. ಯಶಸ್ವಿಯೂ ಆಗುತ್ತಾರೆ. ಕನ್ನಡದ ಮೊದಲನೆಯ ಸಾನೆಟ್! ಕವಿಯೇ ಹೇಳುವಂತೆ 'ಅದು ಬರಿಯ ಅಭ್ಯಾಸ ಮಾತ್ರ ರೂಪದ್ದು'. ಆದರೆ ಕವಿಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದು. 27.9.1924ರಲ್ಲಿ ರಚಿತವಾಗಿರುವ 'ಕರ್ಣಾಟಕ ಮಾತೆಗೆ-(ಕವಿಯೆ ಭರವಸೆ)' ಎಂಬುದು, ಇದರಲ್ಲಿಯೂ ಕ್ರಾಂತಿಕಾರಕವಾದ ಮಾತುಗಳಿವೆ, ನಿರ್ಧಾರಗಳಿವೆ. ಕರ್ನಾಟಕ ಮಾತೆಗೆ ಮಗುವೊಂದು ಭರವಸೆ ನೀಡುತ್ತಿರುವಂತೆ ರಚಿತವಾಗಿದೆ.
ಬೆದರದಿರು; ಬೆದರದಿರು; ನಾನಿಹೆನು, ಓ ದೇವಿ!
ಉದಯಿಸುವನೊರ್ವ ಕವಿ ನಿನ್ನುದರ ಭೂಮಿಯಿಂ-
ದದುಭುತದಿ ಧಾರಿಣಿಯ ಜನಗಳಿಗೆ ಮೈದೋರಿ,
ಉದಯಭಾಸ್ಕರತೇಜದಿಂ ಮೆರೆದು ಕಂಗಳಿಗೆ!
ಕುಡಿಯುವಂ ಮಹಾ ತತ್ವಾಂಬುಧಿಯ; ಸಾಹಿತ್ಯ
ದೊಡಲ ಭೇದಿಸುತ ಕವಿತೆಯಾನಂದಮಂ ತಾಂ
ಪಡೆಯುವಂ! ಧರೆಯ ಜನಕೀಯುವಂ ತತ್ವಗಳ
ಬಿಡದೆ; ಪರಲೋಕಮಂ ಹಿಡಿದೆಳೆಯುವನು ಧರೆಗೆ!
ದೇವಿ, ನಿನ್ನುಡಿಯ ಮೇಲವನೊಲಿದು ಪಾಡುವಂ
ಜೀವ ಪರಮರ ವರ ವಿನೋದಮಂ! ಮಾಯೆಯಂ
ಭಾವನೆಯ ಕನ್ನಡಿಯನೊಡೆಯುವಂತೊಡೆಯುವಂ!
ಏಳುವಂ ಜೀವಾರ್ಣವ ತರಂಗ ಗಿರಿಯಂತೆ;
ಕಾಲನ ಕರಾಳಮಂ ಅದೃಷ್ಟದಾ ದಾಡೆಯಂ
ಸೀಳುವಂ ಸುಕವಿತಾ ಪೂಗೊಡಲಿಯಿಂ ಬಡಿದು!
ಈ ಸಾನೆಟ್ ಕುರಿತು ಕವಿ ಹೀಗೆ ಹೇಳುತ್ತಾರೆ. "ತೊದಲುನುಡಿಯ, ತಿಪ್ಪತಿಪ್ಪ ಹೆಜ್ಜೆಯ ಹಸುಳೆ ಕವಿ ಕರ್ಣಾಟಕದ ಮಾತೆಗೆ ಕೊಡುವ ಭರವಸೆಯನ್ನು ಆಲಿಸಿದರೆ ಹೊಟ್ಟೆ ಹುಣ್ಣಾಗುವಂತೆ ನಗಲೂಬಹುದು, ಅಥವಾ ಕಾಲದ ಈ ದೂರದಲ್ಲಿ ನಿಂತು ನೋಡಿ ಅಚ್ಚರಿಗೊಳ್ಳಲೂಬಹುದು. ಅಂತೂ ಯಾವ ಭವಿಷ್ಯದ ದುರ್ದಮ್ಯ ಧೈರ್ಯವು ಅಂದಿನ ಬಾಲಕವಿ ಹೃದಯದಲ್ಲಿ ವಾಮನನಂತೆ ಮೂಡಿ ತನ್ನ ಮುಂದಿನ ತ್ರಿವಿಕ್ರಮ ವಿಕ್ರಮವನ್ನು ಘೊಷಿಸುವಂತೆ ಪ್ರೇರಿಸಿತೊ ಅದು ಅತಿಮಾನುಷವೆಂಬಂತೆ ತೋರುತ್ತದೆ. ಅಂದು ಕೊಟ್ಟ ಭರವಸೆ ಇಂದಿಗೂ (22.5.1972) ಪೂರ್ತಿಯಾಗಿ ಕೈಗೂಡಿಲ್ಲ, ಕೈಗೂಡದಿದ್ದರೂ ಚಿಂತೆಯಿಲ್ಲ. ಮಗುವಿನ ಒಲವಿನ ಭರವಸೆಯೆ ಅದರ ಕೈಗೂಡಿಕೆಗಿಂತ ತಾಯಿಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ."

ಮುಂದೆ ಒಂದು ದಿನ 'ಪೂವು' ಕವಿತೆಯನ್ನು ಹಲವಾರು ಕನ್ನಡ ಕವಿತೆಗಳ ಜೊತೆ ಸೇರಿಸಿದ, ’ಪುಷ್ಪಗೀತೆ’ ಎಂಬ ತಲೆಬರಹದ ಕವಿತೆಯ ಕಟ್ಟನ್ನು, ಕನ್ನಡದ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಬಿ.ಕೃಷ್ಣಪ್ಪನವರಿಗೆ ಕೊಡುತ್ತಾರೆ. ’ನಾನಾಗಿದ್ದರೆ ಅದನ್ನು ವಂದನೆಗಳೊಂದಿಗೆ ಹಿಂದಿರುಗಿಸುತ್ತಿದ್ದೆ. ಅವರು ಶ್ರಮವಹಿಸಿ ಆ ಕಸದ ರಾಶಿಯಲ್ಲಿಯೂ ರಸವನ್ನು ಕಾಣುವ ಸಹೃದಯ ಸುಹೃದಯತೆಯನ್ನು ಪ್ರದರ್ಶಿಸಿ, ಕೆಲವು ಕವನಗಳ ಭಾಷೆಯನ್ನು ತಿದ್ದಲು ಪ್ರಯತ್ನಿಸಿದ್ದಾರೆ’ ಎನ್ನುತ್ತಾರೆ. ಪೂವು ಕವಿತೆಗೆ ಬಿ.ಕೃಷ್ಣಪ್ಪನವರು ಸೂಚಿಸಿದ್ದ ಬದಲಾವಣೆಗಳನ್ನು ಹೀಗೆ ಪಟ್ಟಿ ಮಾಡಬಹುದು.
ಪೂವು ಎಂಬುದರ ಬದಲು ’ಪೂ’
’ಕೊಳಲನ್ನು ನುಡಿವಾಗ’ ಎಂಬ ಸಾಲಿಗೆ ಬದಲಾಗಿ ’ಕೊಳಲುಲಿಯನುಲಿವಾಗ’
’ಎಳೆದಾದ ರವಿಕಿರಣ| ಇಳೆಯನ್ನು ತೊಳೆವಾಗ’ ಎಂಬುದಕ್ಕೆ ಬದಲಾಗಿ ’ಎಳದಾದ ರವಿಕಿರಣ| ವಿಳೆಯನ್ನು ತೊಳೆವಾಗ’ (ಎಳೆ>ಎಳ; ರವಿಕಿರಣ+ಇಳೆ=ರವಿಕಿರಣವಿಳೆ)
’ಕವಿವರನು ಹೊಲಗಳಲಿ’ ಎಂಬಲ್ಲಿ ಕವಿವರನು ಎಂಬುದಕ್ಕೆ ಅಡಿಗೆರೆ ಮತ್ತು ಪ್ರಶ್ನಾರ್ಥಕ ಚಿಹ್ನೆ
’ಏಕಾಂತ ಸ್ಥಳದೊಳು’ ಎಂಬುದರಲ್ಲಿನ ಒಂದು ಮಾತ್ರೆಯ ಕೊರತೆಯನ್ನು ತುಂಬಲಿಕ್ಕಾಗಿ ’ಏಕಾಂತ ಸ್ಥಾನದೊಳು’
’ಮನದಣಿವ ಗೀತದಿಂ’ ಎನ್ನವಲ್ಲಿ ’ಮನವೊಲಿವ ಗೀತದಿಂ’
ಇಷ್ಟೆಲ್ಲಾ ತಿದ್ದುಪಡಿ ಸೂಚಿಸಿ, ಕವನ ಪಾಸಾಗಿದೆ ಎಂದು ಸುಚಿಸುವಂತೆ ಬಣ್ಣದ ಪೆನ್ಸಿಲ್ಲಿನಲ್ಲಿ ರೈಟ್ ಮಾರ‍್ಕ್ ಹಾಕಿದ್ದರಂತೆ.
ಗುರುವಿನ ಹಾರೈಕೆ. ಕನ್ನಡದ ಸುದೈವ. ಕವಿತೆಯೂ ಪಾಸಾಯಿತು; ಶಿಷ್ಯನೂ ಪಾಸಾದ!

Monday, July 11, 2011

ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ

’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ ಮೂಡಿವೆ. ಮೊದಲಿಗೆ ತೀವ್ರವಾಗಿ ನನ್ನ ಗಮನ ಸೆಳೆದ ಕವಿತೆ ’ಗರ್ಭಗುಡಿ’. ತನ್ನ ಸತಿ ಗರ್ಭಿಣಿ ಎಂದು ತಿಳಿದಾಗ ಕವಿಯ ಮನಸ್ಸಿನಲ್ಲಾದ ಸಂತೋಷ ಭಾವ ಕವನ ರೂಪದಲ್ಲಿ ಸಾಕ್ಷಾತ್ಕಾರಗೊಂಡಿದೆ. ಈ ಕವಿತೆಯ ಬಗ್ಗೆ ಹಿರಿಯರಾದ ಎಸ್.ವಿ.ಪರಮೇಶ್ವರಭಟ್ಟರು ತನ್ನ ಸತಿ ಗರ್ಭಿಣಿಯಾದಾಗ ಗರ್ಭದಲ್ಲಿ ಅರ್ಭಕನಿರುವುದನ್ನು ಅರಿತವರು ತನ್ನ ಸತಿಯನ್ನು ’ಗರ್ಭಗುಡಿ’ಯೆಂದೇ ಪರಿಗಣಿಸುತ್ತಾರೆ. ’ತೇಜಸ್ವಿ ಪೂರ್ಣಚಂದ್ರ ಶರೀರೆ ಶಿವಕೃತಿ ಕಲಾರಂಗಮೆನಗೆ ನೀನ್ ಓ ನೀರೆ!’ ತಮ್ಮ ಸತಿಯನ್ನು ಯಾವ ದಿವ್ಯೌನ್ನತ್ಯದಲ್ಲಿ ಕಾಣುತ್ತಿದ್ದಾರೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬಹುದು’ ಎಂದು ಬರೆದಿದ್ದಾರೆ. ’ಪ್ರಿಯ ಸತಿಗೆ’ ಎಂಬ ಕವಿತೆಯಲ್ಲಿ ಕುವೆಂಪು ’ಹೇಮಾ’ ಎಂಬುದನ್ನು ’ಹೇ ಮಾ ಸತಿಯೆ’ ಎಂದು ಬರೆದಿರುವುದರಲ್ಲಿಯೂ, ಸತಿಯನ್ನು ’ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಛಕ್ತಿ; ಕಲೆಗೆ ವಿದ್ಯಾಶಕ್ತಿ; ಪ್ರಾಣಕೆ ಪ್ರೇಮಶಕ್ತಿ!’ ಎಂದು ಸಂಬೋಧಿಸಿರುವುದರಲ್ಲಿಯೂ ಈ ಔನ್ನತ್ಯವನ್ನು ಕಾಣಬಹುದಾಗಿದೆ.
ತಮ್ಮ ಸತಿ ಶಾರದಾದೇವಿಯವರನ್ನು ದೇವಿಯ ರೂಪದಲ್ಲಿ ಕಂಡವರು ಶ್ರೀ ರಾಮಕೃಷ್ಣ ಪರಮಹಂಸರು. ಅವರ ಗೋತ್ರಸಂಜಾತರಾದ (ಶ್ರೀರಾಮಕೃಷ್ಣ ಭಗವದ್‌ಗೋತ್ರಸಂಜಾತನಂ - ಶ್ರೀರಾಮಯಾಣದರ್ಶನಂ) ಕುವೆಂಪು ಅವರಿಗೆ ಅವರ ಶ್ರೀಮತಿಯೂ ಅಷ್ಟೆ, ಕವಿಯ ಶಿವಕೃತಿಗೆ ಕಲಾರಂಗವಾಗಿ ಕಾಣುತ್ತಾರೆ!
ಬಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ
ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ; ಪೂಜ್ಯೆ
ನೀನೆನಗೆ. ಓ ಲಕ್ಷ್ಮಿ, ಓ ಸೃಷ್ಟಿಸಾಮ್ರಾಜ್ಯೆ,
ನಿನ್ನ ಕರ್ಮದ ಮಹಿಮೆ ನಿನಗರಿಯದಿದೆ: ಬಳ್ಳಿ

ಹೂ ಹಡೆವುದಲ್ತೆ? ಸಾಮಾನ್ಯ ಪಾಮರ ದೃಷ್ಟಿಕಾಣದದರಲಿ ಕೃತಿರಹಸ್ಯದ ಪವಾಡಮಂ;ಬ್ರಹ್ಮಶಿಲ್ಪಿಯ ಪರಮ ಕಲೆಯ ಕೈವಾಡಮಂಕಂಡು ರೋಮಾಂಚ ರಸವಶನು ಕವಿ! ತವ ಸೃಷ್ಟಿ
ಕವಿಕೃತಿಗೆ ಕೀಳಲ್ಲ. ಪೇಳ್ವವಂಗರಿಯದಿರೆ
ಕೇಳ್ವ ರಸಿಕಂಗರಿಯದಿಹುದೆ ವರಕೃತಿ ಮಹಿಮೆ?
ತನ್ನ ತಾನರಿಯದು ಮಹತ್ತು, ಕೈಮುಗಿಯದಿರೆ
ಜಗತ್ತು: ರಾಮಾನುಚರನಾಂಜನೇಯಂಗುಪಮೆ!

ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ,ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ!
ದಿವ್ಯಶಿಶುವನ್ನು ತನ್ನುದರದಲ್ಲಿ ಧರಿಸಿ ನಿಂತಿರುವ ಗರ್ಭಿಣಿ ದೇವಾಲಯದಂತೆಯೇ ಕವಿಗೆ ಕಂಡು ಪೂಜನೀಯಳಾಗಿದ್ದಾಳೆ. ಆಕೆ ಲಕ್ಷ್ಮಿ. ಸೃಷ್ಟಿಯ ಸಾಮ್ರಾಜ್ಯೆ! ಆದರೆ ಅದರ ಮಹತ್ವ ಆಕೆಗೆ ಅರಿವಿಲ್ಲ; ಗರ್ಭವತಿಯಾಗುವುದು, ಮಗುವಿಗೆ ಜನ್ಮ ನೀಡುವುದು ಬಳ್ಳಿ ಹೂವನ್ನು ಬಿಡುವಷ್ಟೇ ಸಹಜಕ್ರಿಯೆಯಂತೆ ಆಕೆ ಭಾವಿಸುತ್ತಾಳೆ. ಬೇರೆಯವರು ಕೈ ಎತ್ತಿ ಮುಗಿಯುವವರೆಗೂ ಮಹತ್ತಿಗೂ ತನ್ನ ಮಹತ್ವ ಗೊತ್ತಿರುವುದಿಲ್ಲವಂತೆ! ಶಿಶುಜನನವಾಗುವುದು, ಹೂವು ಬಳ್ಳಿಯಲ್ಲಿ ಅರಳುವುದು ಕೃತಿರಹಸ್ಯದ ಪವಾಡವಿದ್ದಂತೆ. ಆ ಕೃತಿ ರಹಸ್ಯದ ಪವಾಡ ಪಾಮರದೃಷ್ಟಿಗೆ ಕಾಣುತ್ತದೆಯೇ? ಕಾಣುವುದಿಲ್ಲ. ಆದರೆ ಕವಿ! ಬ್ರಹ್ಮಶಿಲ್ಪಿಯ ಪರಮ ಪವಿತ್ರವಾದ ಕಲೆಯ ಕೈವಾಡವನ್ನು ಕಂಡು, ದರ್ಶನಗೊಂಡು ರೋಮಾಂಚನಾಗುತ್ತಾನೆ, ರಸವಶನಾಗುತ್ತಾನೆ.

ನರರೂಪದಲ್ಲಿ ಮಾತ್ರವಲ್ಲ; ಕೃತಿರೂಪದಲ್ಲೂ ಭಗವಂತನ ಅವತಾರವಾಗುತ್ತದೆ ಎಂಬ ದರ್ಶನದ ಕವಿ ಕುವೆಂಪು. ಶಿಶುಜನನ ಸೃಷ್ಟಿಯ ಬೆರಗು. ಅದು ಕವಿಕೃತಿಗೆಂದೂ ಕೀಳಲ್ಲ. ಆದರೆ ಅಂತಹ ಅದ್ಭುತವಾದ ಮಹತ್ವ ಅದರ ಕರ್ತೃವಿಗೇ ಕಾಣುವುದಿಲ್ಲ! ಆದರೆ ರಸಿಕನಾದ ಕವಿಗೆ, ಸಹೃದಯನಿಗೆ ಅದು ಕಾಣುತ್ತದೆ. ಯಾವುದು ಯಾವುದಕ್ಕೆ ಹೋಲಿಕೆ. ರಾಮನನ್ನು ಅನುಸರಿಸಿದವರೆಲ್ಲಾ ಅಂಜನೇಯನಿಗೆ ಉಪಮೆಯೇ?

ಕವನದ ಕೊನೆಯ ಎರಡು ಸಾಲುಗಳಂತು ದರ್ಶನದಿಂದ ಆವಿರ್ಭವಿಸಿದಂತವು. ಸಾಮಾನ್ಯವಾಗಿ ಹೆಂಡತಿಯನ್ನು ಅರ್ಧಾಂಗಿ ಎಂದು ಕರೆಯುತ್ತಾರೆ. ಇಲ್ಲಿ ಕವಿ ’ಪೂರ್ಣಾಂಗಿ’ ಎಂಬ ಕವಿಯೆ ಸಂಬೋಧನೆ ವಿಶೇಷವಾದುದು. ತಮ್ಮ ಪೂರ್ಣಾಂಗಿ, ಮಂಗಳಕೃತಿಗೆ ಕಲಾರಂಗವೆಂದು ಭಾವಿಸುತ್ತಾರೆ. ’ತೇಜಸ್ವಿ ಪೂರ್ಣಚಂದ್ರ ಶರೀರೆ’ ಎಂಬ ಮಾತು ಗರ್ಭವತಿಯಾದ್ದರಿಂದ ನಿನ್ನ ಶರೀರ ಪೂರ್ಣಚಂದ್ರ ಸಮವಾದ ತೇಜಸ್ಸಿನಿಂದ ಕೂಡಿದೆ ಎಂಬುದನ್ನು ಧ್ವನಿಸುತ್ತದೆ. ಆದರೆ ದರ್ಶನದ ಅಂತರತಮನ್ನು ಅರಿತವರಾರು? ಕವಿಗೆ ತನ್ನ ಪೂರ್ಣಾಂಗಿಯ ಉದರದಲ್ಲಿರುವ ಶಿಶು ಗಂಡು ಎಂಬುದು ದರ್ಶನವಾಗಿತ್ತೋ ಏನೋ!? ಕವಿತೆ ಪ್ರಾರಂಭದಲ್ಲಿಯೇ ’ದಿವ್ಯಾರ್ಭಕಂ’ ಎಂಬ ಮಾತು ಬಂದಿದೆ. ಅರ್ಭಕ ಎಂಬುದಕ್ಕೆ ಸಣ್ಣದು; ಚಿಕ್ಕದು, ಮೊಲೆಗೂಸು, ಎಳೆಯ ಕೂಸು ಎಂಬ ಅರ್ಥಗಳ ಜೊತೆಗೆ ಪುಲ್ಲಿಂಗ ಭಾವವನ್ನು ಸ್ಫುರಿಸುವ ಪುಟ್ಟ ಬಾಲಕ, ಸಣ್ಣ ಹುಡುಗ ಮೊದಲಾದ ಅರ್ಥಗಳೂ ಇವೆ. ಮುಂದೆ ಹುಟ್ಟಲಿರುವ ಕೂಸಿಗೆ ’ಪೂರ್ಣಚಂದ್ರ ತೇಜಸ್ವಿ’ ಎಂಬ ಹೆಸರನ್ನು ಮೊದಲೇ ಸೂಚಿಸಿರುವಂತೆ ಕಾಣುತ್ತದೆ! ಮುಂದೆ ಮಗು ಹುಟ್ಟಿದಾಗ ’ಕುಮಾರ ಸಂಭವ’ ಕವಿತೆಯಲ್ಲಿ ’ಪ್ರೇಮಾಂಗಿನಿಯೇ ನನ್ನ ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ: ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ!’ ಎಂಬ ಮಾತು ಬರುತ್ತದೆ.
ಈ ಕವಿತೆಯ ಶಿಲ್ಪದ ಬಗ್ಗೆ ಒಂದೆರಡು ಮಾತು ಹೇಳಬೇಕೆನ್ನಿಸುತ್ತದೆ. ನಾಲ್ಕು ನಾಲ್ಕು ಸಾಲುಗಳಂತೆ ಮೊದಲ ಮೂರು ಪದ್ಯಗಳು ಹಾಗೂ ಕೊನೆಯಲ್ಲಿ ಎರಡು ಸಾಲುಗಳು ಬಂದಿರುತ್ತವೆ. ಮೊದಲ ಮೂರೂ ಪದ್ಯಗಳ ಒಟ್ಟು ದರ್ಶನ ಕೊನೆಯ ಎರಡು ಸಾಲಿನಲ್ಲಿ ಕೆನೆಗಟ್ಟಿದಂತಿದೆ. ಮೊದಲ ಮೂರು ಪದ್ಯಗಳನ್ನು ಬೇರೆ ಬೇರೆಯಾಗಿ ಓದಲು ಸಾಧ್ಯವೇ ಇಲ್ಲ! ಮೊದಲ ಪದ್ಯದ ಕೊನೆಯ ಸಾಲಿನ ಕೊನೆಯ ಪದ ’ಬಳ್ಳಿ’ ಎಂಬುದು ಅರ್ಥವಾಗಬೇಕಾದರೆ ಎರಡನೆಯ ಪದ್ಯದ ಮೊದಲ ಸಾಲಿನ ’ಹೂ ಹಡೆವುದಲ್ತೆ?’ ಎಂಬುದನ್ನು ಓದಿಕೊಳ್ಳಲೇ ಬೇಕು. ಹಾಗೆಯೇ ಎರಡನೆಯ ಪದ್ಯದ ಕೊನೆಯ ಸಾಲಿನ ’ತವ ಸೃಷ್ಟಿ’ ಎಂಬುದು ಮೂರನೆಯ ಪದ್ಯದ ಮೊದಲ ಸಾಲಿನಲ್ಲಿ ’ಕವಿಕೃತಿಗೆ ಕೀಳಲ್ಲ’ ಎಂದು ಮುಂದುವರೆಯುತ್ತದೆ. (ಈ ರೀತಿಯ ಪದ್ಯದಿಂದ ಪದ್ಯಕ್ಕೆ ಮುಂದುವರೆಯುವ ಪದ್ಧತಿ ಪಂಪನ ಕಾವ್ಯದಲ್ಲೂ ಇದೆ. ಪಂಪನಲ್ಲಿ ಕಂದ ಪದ್ಯದಿಂದ ಮತ್ತೊಂದು ಕಂದ ಪದ್ಯಕ್ಕೆ, ಕೆಲವೊಮ್ಮೆ ಪದ್ಯದಿಂದ ಗದ್ಯಕ್ಕೆ(ವಚನಕ್ಕೆ), ಗದ್ಯದಿಂದ ಪದ್ಯಕ್ಕೆ, ವೃತ್ತದಿಂದ ವೃತ್ತಕ್ಕೆ ಈ ರೀತಿಯ ಮುಂದುವರಿಕೆಯನ್ನು ಕಾಣಬಹುದು.)

ಜೇನಾಗುವ ಸಂಕಲನದ ಇನ್ನೊಂದು ಕವಿತೆ ’ಬಿನ್ನಯ್ಸಿದಳು ತಾಯಪ್ಪಳಿಂತು’ ಎಂಬುದು. ತನ್ನೊಡಲಿನಲ್ಲಿರುವ ಕಂದನ ಬಗ್ಗೆ ಕನಸು ಕಾಣುವ ತಾಯಿಯ ಚಿತ್ರ. ತನ್ನ ಮಗ ಹೇಗಿರಬೇಕು? ಏನಾಗಬೇಕು? ಎಂದು ಸಂಕಲ್ಪಿಸುವ ಚಿತ್ರ. ಗಮನಿಸಬೇಕು. ಈ ಕವಿತೆಯುದ್ದಕ್ಕೂ ಕವಿ ಮಗುವನ್ನು ಪುಲ್ಲಿಂಗವಾಚಿಯಾಗಿಯೇ ಸಂಬೋಧಿಸಿದ್ದಾರೆ. ’ಕಳುಹು ಆವೇಶದ ಪುತ್ರನನು’ ಎಂದು ನೇರವಾಗಿಯೇ ಪ್ರಾರ್ಥಿಸಿರುವ ಸಾಲುಗಳುಂಟು. ಈ ಕವಿತೆಯ ವಿಶೇಷವೆಂದರೆ, ಇಂದು ಈ ತುದಿಯಲ್ಲಿ ನಿಂತು ನೋಡುವಾಗ ಕುವೆಂಪು ದಂಪತಿಗಳ ಸಂಕಲ್ಪ ಮತ್ತು ತೇಜಸ್ವಿ ಬದುಕಿದ ರೀತಿಯ ನಡುವೆ ಸೂಕ್ಷ್ಮತೆರನಾದ ಸಂಬಂಧವಿರುವುದು! ಈ ಪದ್ಯಕ್ಕೆ ಯಾವುದೇ ವಿವರಣೆಯ ಅಗತ್ಯವೇ ಇಲ್ಲ. ಅಷ್ಟೊಂದು ಸರಳವಾದ ಪದಗಳಲ್ಲಿ ಸಂಕಲ್ಪಗೊಂಡ ಪ್ರಾರ್ಥನೆ ಇದಾಗಿದೆ. ಅದನ್ನು ಇಡಿಯಾಗಿ ಇಲ್ಲಿ ಉಲ್ಲೇಖಿಸಬಯಸುತ್ತೇನೆ.
ಕಳುಹಿಸು ಯೋಗ್ಯನನು,ಹೇ ಗುರುವೇ,ಕಳುಹಿಸು ಭಾಗ್ಯನನು,ಶ್ರೀ ಗುರುವೇ. 
ಕಳುಹಿಸು ಮಂಗಳ ಚೆಲುವನನು,
ಲೋಕವನೊಲಿವನನು;
ಬಾಳಿನ ಬವರವ ಗೆಲುವನನು,

ನಿನ್ನೊಳೆ ನಿಲುವನನು.-
ಕಳುಹು ಆವೇಶದ ಪುತ್ರನನು,
ದೇಶದ ಮಿತ್ರನನು;
ಕಳುಹು ಪವಿತ್ರ ಚರಿತ್ರನನು,
ಗೌರವ ಪಾತ್ರನನು.-
ಕಳುಹು ಕಲಾರಸ ಭಕ್ತನನು
ಕಾವ್ಯಾಸಕ್ತನನು;
ಕನ್ನಡ ಸೇವಾ ಶಕ್ತನನು

ನಿನ್ನಡಿ ಯುಕ್ತನನು.-
ಕಳುಹು ನಿರಂಕುಶ ಮುಕ್ತನನು,
ಮೌಢ್ಯ ವಿರಕ್ತನನು;
ಕಳುಹು ಮನೋ ಸ್ವಾತಂತ್ರ್ಯನನು,

ಶಿವ ಪರ ತಂತ್ರನನು.-
ಕಳುಹಿಸು ನಿತ್ಯ ನವೀನನು,
ಸತ್ಯಾಧೀನನನು;

ಮಹಿಮೆಗೆ ಮಾತ್ರವೆ ದೀನನನು,
ಕವಿ ಸಮಗಾನನನು.-
ಕೃಪೆ ಅನಂತಕೆ ಪಾತ್ರನನು,
ಪ್ರಿಯ ರುಚಿ ಗಾತ್ರನನು;
ಕಳುಹು ಸದಿಚ್ಛಾ ಸೂತ್ರನನು,
ಚೇತನ ನೇತ್ರನನು!

ಕುವೆಂಪು ದಂಪತಿಗಳ ಸಂಕಲ್ಪದಂತೆ, ಪ್ರಾರ್ಥನೆಯಂತೆ, ಆಶಯದಂತೆಯೇ ’ಕುಮಾರ ಸಂಭವ’ ಆಗುತ್ತದೆ. ಅದೇ ಹೆಸರಿನ ಕವಿತೆಯಲ್ಲಿ ಕುವೆಂಪು ಪುತ್ರೋದಯದ ಸಂತೋಷವನ್ನು ಉತ್ಕಟವಾಗಿ ಬಿಡಿಸಿಟ್ಟಿದ್ದಾರೆ. ಐದೈದು ಮಾತ್ರೆಗಳ ನಾಲ್ಕು ನಾಲ್ಕು ಗಣಗಳ ಪಂಕ್ತಿಗಳು ಕವಿತೆಗೆ ವಿಶಿಷ್ಟವಾದ ಆವೇಗವನ್ನು ತಂದುಕೊಟ್ಟಿವೆ. ಕವಿಯ ಸಂತೋಷ, ಉದ್ವೇಗ ಪ್ರತಿ ಪದದಲ್ಲೂ, ಪಂಕ್ತಿಯಲ್ಲೂ ಮಡುಗಟ್ಟಿವೆ!
ಕೇಳ್ದೊಡನೆ ಚಿಮ್ಮಿತಾನಂದದೋಕಳಿಬುಗ್ಗೆ
ತುಂಬಿದೆದೆ ಬಾನಲ್ಲಿ ಮಳೆಯ ಬಿಲ್ಲನು ಕಟ್ಟಿ!
ನಂದನ ವನದ ಕಲ್ಪತರು ಶಿಖರವನು ಮುಟ್ಟಿ
ಕವಿಯ ಕಲ್ಪನೆ, ಇಂದ್ರನಮರಾವತಿಗೆ ಲಗ್ಗೆ
ನುಗ್ಗಿತೆನೆ, ನೆಗೆಯುತೈರಾವತದ ಬೆನ್ಗೇರಿ,
ದೇವಗಂಗೆಯ ಮೀಯುತಮೃತದ ಮಡುವನೀಂಟಿ,
ದಿಕ್ಪಾಲ ಪುರಗಳಂ ಚರಿಸುತೆಲ್ಲೆಯ ದಾಂಟಿ,
ಮೈಮರೆತುದೆನ್ನ ಗುರುದೇವನಂಘ್ರಿಯ ಸಾರಿ
ನಮಿಸುತೆ ಕೃತಜ್ಞತಾ ಭಕ್ತಿಯಲಿ!-
ಎಂದು ಭೋರ್ಗರೆದು ಒಮ್ಮೆಲೆ ತನ್ನ ಗುರುದೇವನಲ್ಲಿ ಕವಿಯ ಮನಸ್ಸು ನಿಂತು-
-ಗುರು, ನಿನ್ನ
ಕೃಪೆ ನನ್ನ ಸತಿಸುತರ ಮೇಣೆನ್ನ ಮೇಲಿರಲಿ
ಸರ್ವದಾ. ಶ್ರದ್ಧೆ ಬಳುಕದೆ ನಿತ್ಯವಾಗಿರಲಿ
ನಿನ್ನ ಮಹಿಮೆಯೊಳೆಮಗೆ.-
ಎಂದು ಗುರುದೇವನಲ್ಲಿ ಆಶಿರ್ವಾದವನ್ನು ಬಯಸಿ, ಪೂರ್ಣಚಂದ್ರಸಮನಾದ ತೇಜಸ್ಸನ್ನುಳ್ಳ ಪುತ್ರನನ್ನು ದಯಪಾಲಿಸಿದ ತನ್ನ ಶ್ರೀಮತಿಯನ್ನು
-ಪ್ರೇಮಾಂಗಿನಿಯೇ-
ಎಂದು ಸಂಬೋಧಿಸಿ,
-ನನ್ನ
ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ:
ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ!
ಎಂದು ಮಗುವಿಗೆ ಆಶೀರ್ವಾದವನ್ನು ಸಂಕಲ್ಪಿಸಿ ನಿಲುಗಡೆಗೆ ಬರುತ್ತದೆ ಕವಿಯ ಮನಸ್ಸು.

ಮುಂದೆ ’ಸ್ವಾಗತ ನಿನಗೆಲೆ ಕಂದಯ್ಯ’ ಎಂಬ ಕವನದಲ್ಲಿ ’ಜನ್ಮಾಂತರದ ಬಂಧುವು ಕಲ್ಪಾಂತರದ ಬಂಧವೂ, ಶೃಂಗಾರ ಸಾಗರ ಸಾಕ್ಷಾತ್ಕಾರವೂ’ ಆದ ಮಗನಿಗೆ,
ಸುಂದರ ಪೃಥ್ವಿಗೆ ಸ್ವಾಗತವಯ್ಯ,
ಪುಣ್ಯಭಾರತಕ್ಕೆ ಸ್ವಾಗತವಯ್ಯ,
ನನ್ನ ಕನ್ನಡಕೆ ಸ್ವಾಗತವಯ್ಯ,
ಎಂದು ಸ್ವಾಗತಗೀತೆ ಹಾಡುತ್ತಾರೆ.
ಭೋಗಿಯೊ, ಯೋಗಿಯೊ? ಮುಕ್ತನೊ, ಬದ್ಧನೊ?
ರಾಮನೊ? ಕೃಷ್ಣನೊ? ಕ್ರಿಸ್ತನೊ? ಬುದ್ಧನೊ?
ಯಾರೂ ಬೇರೆಯ ಕವಿಯೋ ಸಿದ್ಧನೊ?
ಯಾರನು ಕಳುಹಿಸಿದನೋ ಕಾಣೆ!
ಯಾರಾದರು ಆಗದಕೇನಂತೆ?
ನಮ್ಮೊಲುಮೆಯ ಕುಡಿ ನಮಗೆಮ್ಮಂತೆ:
ಕಂದಾ, ನೀನೆಮಗಿಂಪಿನ ಸಂತೆ;
ಸಲಹುತ್ತೊಲಿವೆವೋ, ಶಿವನಾಣೆ!
ಎಂದು ಮಗನನ್ನು ಸಲಹುವ ಸಂಕಲ್ಪ ಮಾಡುತ್ತಾರೆ. ರಾತ್ರಿಯಿಡೀ ಆಳುತ್ತಿದ್ದ ಮಗುವಿಗೆ ಕವಿ ಹೇಳುವ ಮಾತುಗಳಲ್ಲಿ ಸ್ವಾರಸ್ಯವಿದೆ. ಕವಿಯ ಕಣ್ಣಲ್ಲಿ ದೇವರ ಸಮಾನವಾದ ಮಗು ಈ ಲೋಕದ್ದೇ ಅಲ್ಲ! ಆದರೆ ಈ ಲೋಕದ ಮಹತ್ವವನ್ನು ತಿಳಿಸುತ್ತಾ ಮಗುವನ್ನು ಸಮಾಧಾನ ಮಾಡಲೆಳೆಸುವ ತಂದೆಯಾಗಿ ಕವಿ ಕಾಣುತ್ತಾರೆ.
ಆ ಲೋಕವ ನೆನೆದಳದಿರೊ, ಕಂದ.
ಕೋಳೇನ್? ಈ ಲೋಕವಿದೂ ಚಂದ:
ರವಿ, ಶಶಿ, ಗಗನಂ, ತಾರಾವೃಂದ,
ಸಾಗರ, ನದಿ, ವನ, ಗಿರಿಧಾತ್ರಿ,
ಕವಿಕೃತಿ, ಕನ್ನಡ ನುಡಿ, ನಿನ್ನಮ್ಮ,
ತಂಬೆಲರ್, ಆನ್, ಅಲರ್, ಅಂತೆಯೆ ನಮ್ಮ
ಗಾಂಧಿಜಿಯಿರುವರೊ! ಆಳದಿರೊ, ತಮ್ಮಾ,
ಕೊನೆಗಾಣುವುದೋ ಈ ರಾತ್ರಿ!
ಈ ರಾತ್ರಿ ಕಳೆಯುವುದು ಅಳಬೇಡ ಎಂದು ಹೇಳುತ್ತ ಕೊನೆಯಲ್ಲಿ,
ಮೂಡಲಿ ನಿನ್ನಿಂದೊಳ್ಪಿಗೆ ಕೋಡು;
ತಿಳಿಯಲಿ, ಹೊಳೆಯಲಿ, ನಮ್ಮೀ ನಾಡು;
ತೊಲಗಲಿ ಕತ್ತಲೆ, ಬತ್ತಲೆ, ಕೇಡು;
ಮಂಗಳನಾಗಯ್ ಲೋಕಕ್ಕೆ!
ಎಂದು ಮಗುವಿಗೊಂದು ಗುರಿಯನ್ನು ಸಂಕಲ್ಪಿಸಿ,
ನಮ್ಮೆದೆ ಬಾನಿನ ಚಂದಯ್ಯ
ಸ್ವಾಗತ ನಿನಗೆಲೆ ಕಂದಯ್ಯ!
ಎಂದು ಹಾಡುತ್ತಾರೆ.

Monday, July 04, 2011

ಚಕ್ರ ಚರಣೆಗೆ ಸ್ವಾಗತಂ!

ದಾರ್ಶನಿಕ ಕವಿಯಾದವನಿಗೆ ಜಡವೆಂಬುದು ಇಲ್ಲವೇ ಇಲ್ಲ; ಚೇತನವೇ ಎಲ್ಲ. ಕಲ್ಲು ಮಣ್ಣು ಎಲ್ಲವೂ ಚೇತನವೇ. ಹಾಗೆ ನೋಡಿದರೆ ಮಣ್ಣು ಜೀವಚೈತನ್ಯದ ಅದಮ್ಯ ಚಿಲುಮೆಯೇ ಅಲ್ಲವೇ? ಕುವೆಂಪು ಅವರೂ ಈ ಸರ್ವಚೈತನ್ಯ ತತ್ವದ ಪ್ರತಿಪಾದಕರೇ ಆಗಿದ್ದಾರೆ. ಮನೆಯ ಹೂದೋಟದಲ್ಲಿ ಅರಳಿದ ಹೂವೊಂದರಲ್ಲಿ ಅವರು ಭಗವತಿಯ ಆವಿರ್ಭಾವವನ್ನು ಕಂಡು ಅನುಭವಿಸಬಲ್ಲರು. ಹುಲ್ಲು ಎಸಳನ್ನು ತೃಣಸುಂದರಿಯ ರೂಪದಲ್ಲಿ ಕಂಡು ಸಂತೋಷ ಪಡಬಲ್ಲರು. ಅವರಿಗೆ ಯಾವುದೂ ಜಡವಲ್ಲ. ಯಾವುದೂ ಅಮುಖ್ಯವಲ್ಲ. ಪ್ರತಿಯೊಂದರಲ್ಲೂ ಚೈತನ್ಯವನ್ನು ಕಾಣುವ, ಕಂಡು ಆನಂದಿಸುವ, ಆ ಆನಂದವನ್ನು ಇತರರೂ ಅನುಭವಿಸಬೇಕೆಂದು ಅದಕ್ಕೆ ವಾಗ್ರೂ(ಕಲಾ)ಪವನ್ನು ದಯಪಾಲಿಸುವ ಶಕ್ತಿ ಕುವೆಂಪು ಅವರಿಗೆ ಸಿದ್ದಿಸಿತ್ತು.

ಕುವೆಂಪು ಅವರಿಗೆ ಕಾರಿನ ಬಗ್ಗೆ ತುಂಬಾ ವ್ಯಾಮೋಹವಿತ್ತು. ಆಗ್ಗೆ ಮೈಸೂರಿನಲ್ಲಿ ಮೊದಲು ಕಾರು ಕೊಂಡ ಪ್ರೊಪೆಸರ್ ಇವರೇ ಆಗಿದ್ದರು. ಕುವೆಂಪು ಅವರ ಕಾರು ಮೈಸೂರಿನ ರಸ್ತೆಗಳಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡುತ್ತಿತ್ತು ಎಂಬುದನ್ನು ಶ್ರೀಮತಿ ತಾರಿಣಿ ಮತ್ತು ರಾಜೇಶ್ವರಿಯರಿಬ್ಬರೂ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಎಷ್ಟೋ ವೇಳೆ, ಹೊರ ಹೋಗಿದ್ದ ಸಂದರ್ಭದಲ್ಲಿ ಕುವೆಂಪು ಅವರು ಮನೆಯವರಿಗಾಗಿ ಕಾಯಬೇಕಾಗಿದ್ದಾಗ ಕಾರಿನಲ್ಲೇ ಕುಳಿತಿರುತ್ತಿದ್ದರಂತೆ ; ಕೆಲವೊಮ್ಮೆ ಓದುತ್ತಾ, ಕೆಲವೊಮ್ಮೆ ಸುತ್ತಲಿನ ದೃಶ್ಯಗಳನ್ನು ನೋಡುತ್ತಾ! ಒಮ್ಮೆ ಮಹಾರಾಜಾ ಕಾಲೇಜಿನಲ್ಲಿ ಪಾಠ ಮಾಡಲು ಬಂದಿದ್ದಾಗ ಮಕ್ಕಳಾದ ತೇಜಸ್ವಿ ಮತ್ತು ಚೈತ್ರರನ್ನು ಕಾರಿನಲ್ಲಿಯೇ ಬಿಟ್ಟು ತರಗತಿಗೆ ಬಿಟ್ಟು ಬಂದಿದ್ದನ್ನು, ಎರಡು ಗಂಟೆಗಳ ಕಾಲ ಮಕ್ಕಳು ಕಾರಿನೊಳಗೇ ಇದ್ದುದನ್ನು, ಅದಕ್ಕೆ ಪ್ರಭುಶಂಕರರು ಆಕ್ಷೇಪಿಸಿದ್ದನ್ನು, ಆಗ ಕುವೆಂಪು ಅವರು ’ಅವರು ತರಗತಿಗೆ ಬಂದಿದ್ದರೆ, ನಾನು ಇಂದು ಮಾಡಿದ ಪಾಠ (ಗೋವಿನ ಹಾಡು) ಕೇಳಿ ಅಣ್ಣ ಕಾಲೇಜಿನಲ್ಲಿ ನಾವು ಓದುವಂತಹ ಗೋವಿನ ಹಾಡು ಪದ್ಯವನ್ನೇ ಪಾಠ ಮಾಡುವುದು ಎಂದು ಆಡಿಕೊಳ್ಳುತ್ತಿದ್ದರು’ ಎಂದು ತಮಾಷೆ ಮಾಡಿದ್ದನ್ನು ಸ್ವತಃ ಪ್ರಭಶಂಕರ ಅವರೇ ದಾಖಲಿಸಿದ್ದಾರೆ. ಹೊಸ ಕಾರು (ಬಹುಶಃ ಇದು ಅವರು ಕೊಂಡ ಎರಡನೆಯ ಕಾರು - ಸ್ಟುಡಿಬೇಕರ್ ಕಮ್ಯಾಂಡರ್-ಇರಬಹುದು) ಬಂದ ಹೊಸದರಲ್ಲಿ ಆಗಾಗ ಹೋಗಿ ಅದನ್ನು ನೋಡುವ, ಮುಟ್ಟುವ, ಸಂತೋಷ ಪಡುವ ಕುವೆಂಪು ಅವರ ಚಿತ್ರಣವನ್ನು ಸ್ವಾರಸ್ಯಕರವಾಗಿ ಸರಸವಾಗಿ ತಾರಿಣಿಯವರು ದಾಖಲಿಸಿದ್ದಾರೆ. ಅದನ್ನು ತಾರಿಣಿಯವರ ಮಾತುಗಳಲ್ಲೇ ಕೇಳೋಣ. 
”ದೊಡ್ಡ ಕಾರು ಹೊಸದಾಗಿ ಬಂದಿತ್ತು. ಷೆಡ್‌ನಲ್ಲಿ ನಿಲ್ಲಿಸಿದ್ದರು. ಆ ದಿನ ತಂದೆಯವರು ಆಗಾಗ್ಗೆ ಷೆಡ್‌ಗೆ ಹೋಗಿ ಕಾರು ನೋಡಿ ಬರುತ್ತಿದ್ದರು. ಕಾರಿನ ಮೇಲೆ ಬಿದ್ದಿದ್ದ ಧೂಳು ಒರೆಸುವುದು, ಒಳಗೆ ಕುಳಿತು ನೋಡುವುದು ಮಾಡುತ್ತಿದ್ದರು. ಸಣ್ಣ ಕಾರಿಗೂ ದೊಡ್ಡಕಾರಿಗೂ ಬಿಡುವುದರಲ್ಲಿ ಇರುವ ವ್ಯತ್ಯಾಸವನ್ನು ಮನನ ಮಾಡುತ್ತಿದ್ದರೋ ಏನೋ. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮ ಅದನ್ನೆಲ್ಲ ಗಮನಿಸುತ್ತಿದ್ದರು. ತಂದೆಯವರು ಒಳಗೆ ಬಂದಾಗ ’ಏನು ಅಷ್ಟೊಂದು ಸಂಭ್ರಮ. ಮತ್ತೆ ಮತ್ತೆ ಷೆಡ್‌ಗೆ ಹೋಗಿ ಬರುವುದು? ಹೋಗಿ ಕಾರು ಮುಟ್ಟಿ ಮುಟ್ಟಿ ನೋಡಿ ಬರುವಿರಾ?’ ಎಂದರು. ತಂದೆಯವರು ’ಹೌದು ಯಾವುದು ಹೊಸತು ಬಂದರೂ ಮತ್ತೆ ಮತ್ತೆ ನೋಡುವೆ. ಮುಟ್ಟಿಮುಟ್ಟಿ ನೋಡುವೆ. ನೀನೂ ಹೊಸದಾಗಿ ಬಂದಾಗ ಮಾಡುತ್ತಿರಲಿಲ್ಲವೇ? ನಿನಗೆ ಮಾತ್ರಾ ಎಂದು ತಿಳಿದೆಯಾ?’ ಎಂದು ತಮಾಷೆ ಮಾಡಿದರು. ಅಮ್ಮ ’ಸಾಕು ಸುಮ್ಮನಿರಿ ನಿಮ್ಮ ತಮಾಷೆ. ಹೋಗಿ ಮತ್ತೆಮತ್ತೆ ಮುಟ್ಟಿ ಸವರಿ ಬನ್ನಿ. ಯಾರು ಬೇಡ ಎನ್ನುವರು’ ಎಂದು ಹೇಳಿದರು. ಅಪ್ಪ ನಗುತ್ತಾ ಅವರ ರೂಮಿನ ಕಡೆ ಹೋದರು.”

ಕುವೆಂಪು ಅವರಿಗೆ ಹೊಸದರ ಬಗ್ಗೆ ಯಾವಾಗಲೂ ಅದಮ್ಯ ಕತೂಹಲ. ಹೊಸ ಸ್ಟ್ರಾಪನ್ನು ಹಾಕಿಸಿದ್ದ ವಾಚನ್ನು ಕಟ್ಟಿಕೊಂಡು ತರಗತಿಗೆ ಬಂದಿದ್ದ ಕುವೆಂಪು ಅವರು ಅಂದು ಆಗಾಗ ಕೈ ಮೇಲೆತ್ತಿ ವಾಚನ್ನು ನೋಡಿಕೊಳ್ಳುತ್ತಿದ್ದುದನ್ನು ಅವರ ಶಿಷ್ಯರೊಬ್ಬರು ದಾಖಲಿಸಿದ್ದಾರೆ. 

ತಾರಿಣಿಯವರ ಚಿಕ್ಕಮ್ಮನ ಮಗ ಹಿಮಾಂಶು ಒಮ್ಮೆ ’ಏಕೆ ಈ ತಗಡಿನ ಚಕ್ರಕ್ಕೆ ಪೂಜೆ ಮಾಡುವಿರಿ ?’ ಎಂದು ಕುವೆಂಪು ಅವರಿಗೆ ಕೇಳಿದಾಗ ’ಎಲ್ಲದರಲ್ಲಿಯೂ ಭಗವಂತನ ಅಂಶ ಇರುತ್ತದೆ. ಅದನ್ನು ನೋಡುವ ದೃಷ್ಟಿ ಇರಬೇಕು. ಶಕ್ತಿರೂಪದಲ್ಲಿ ದೇವಿ ನಮ್ಮಲ್ಲಿಗೆ ಬಂದಿದ್ದಾಳೆ. ಅದಕ್ಕೇ ’ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ’ ಎಂದು ಹೇಳುವುದು ಅದರಲ್ಲಿಯೂ ಭಗವಂತನ ಅಂಶವನ್ನು ಕಾಣಬೇಕು’ ಎಂದು ವಿವರಿಸಿದ್ದರಂತೆ.


ಇಂತಹ ಕುವೆಂಪು ತನ್ನ ಮನೆಗೆ ಹೊಸ ಕಾರು ಬಂದಾಗ ಕವಿಯಾಗಿ ಅದನ್ನು ಹೇಗೆ ಕಂಡಿರಬಹುದು? ಎಂಬ ಕುತೂಹಲ ಸಹಜ ತಾನೆ? ಅದಕ್ಕೆ ಇಲ್ಲಿದೆ ಉತ್ತರ : ಚಕ್ರಚರಣೆಗೆ ಸ್ವಾಗತಂ!

೧೪.೧.೫೧ ಸಂಕ್ರಾಂತಿಯ ದಿನ ಭಾನುವಾರ ಹೊಸ ಕಾರು ಬಂದಾಗ ಬಯಸಿದ ಸ್ವಾಗತಪೂಜೆಯ ಸಂದರ್ಭದಲ್ಲಿ ಎಂಬ ಅಡಿಟಿಪ್ಪಣಿಯೊಂದಿಗೆ ’ಚಕ್ರಚರಣೆಗೆ ಸ್ವಾಗತಂ!’ ಎಂಬ ಕವಿತೆ ರಚಿತವಾಗಿದೆ. ಬಂದಿರುವುದು ಕಾರಾದರೂ ಅದು ಕವಿಗೆ ಶಕ್ತಿ ರೂಪದ ದೇವಿಯೇ ಆಗಿದೆ. ಮೊದಲ ಚರಣದಲ್ಲೇ ದೇವಿಗೆ ಸ್ವಾಗತವನ್ನು ಬಯಸುತ್ತಾರೆ.
ಸ್ವಾಗತಂ ಸುಸ್ವಾಗತಂ,
ಚಕ್ರಚರಣೆಗೆ ಸ್ವಾಗತಂ!
ಗೆಲ್ಗೆ ಕವಿ ಮನೋರಥಂ;
ಬಾಳ್ಗೆ ನಮ್ಮ ನವರಥಂ!
ಕಾರು ಕೊಳ್ಳಬೇಕೆಂಬುದು ಕವಿಯ ಮನೋರಥ. ಅದಕ್ಕೆ ಇಂದು ಸಂಕ್ರಾಂತಿಯ ದಿನ ಗೆಲುವಾಗಿದೆ. ಆ ಹೊಸ ಕಾರು - ನವರಥ - ಬಾಳಲಿ ಎಂದು ಸಂಕಲ್ಪಿಸಲಾಗಿದೆ. ಮುಂದಿನ ಚರಣಗಳಲ್ಲಿ ಕಾರನ್ನು ದೇವಿಯ ರೂಪದಲ್ಲಿ ಪರಿಭಾವಿಸಲಾಗಿದೆ.
ಬಂದಳಿಂದು ಮನೆಗೆ ಶಕ್ತಿ,
ನೂತ್ನ ಯಂತ್ರ ರೂಪಿಣಿ :
ಲೋಹಕಾಯೆ, ವೇಗತಂತ್ರೆ,
ಅಗ್ನಿ ತೈಲ ವಾಹಿನಿ !
ಚಿಕ್ಕ ಪದಗಳಲ್ಲಿ ಪಂಕ್ತಿಗಳಲ್ಲಿ ಯಂತ್ರರೂಪದಲ್ಲಿ ಮನೆಗೆ ಬಂದಿರುವ ಶಕ್ತಿ ಎಂದು ಕಾರನ್ನು ಕರೆದಿದ್ದಾರೆ. ಕಾರಿನ ಶರೀರ ಲೋಹದಿಂದ ಮಾಡಿದ್ದು ಎಂಬುದಕ್ಕೆ ಲೋಹಕಾಯೆ ಎಂಬ ಪದವನ್ನು ಟಂಕಿಸಿದ್ದಾರೆ. ವೇಗತಂತ್ರೆ ಎಂಬುದು ಅಷ್ಟೆ. ಪೆಟ್ರೋಲಿನಿಂದ ಉತ್ಪನ್ನವಾಗುವ ಬೆಂಕಿ(ಶಕ್ತಿ)ಯಿಂದ ಚಲಿಸುವಂತಹದ್ದು ಎಂಬುದನ್ನು ’ಅಗ್ನಿ ತೈಲ ವಾಹಿನಿ’ ಎಂಬ ಸಾಲು ಹಿಡಿದಿಟ್ಟಿದೆ.
ಆವ ದೇವಿ ರವಿಯ ಸುತ್ತ
ಭೋಗೋಲವ ತಿರುಗಿಸುತ್ತ
ತನ್ನ ರುಂದ್ರ ಲೀಲೆಯತ್ತ
ಸಾಗುತಿರುವಳೋ,
ಖನಿಜ ಸಸ್ಯ ಪ್ರಾಣಿವರ್ಗ
ಮನುಜ ದನುಜ ಸುರ ನಿಸರ್ಗ
ಯಂತ್ರ ತಂತ್ರ ಮಂತ್ರವಾಗಿ
ನಿಯಂತ್ರಿಸಿರುವಳೋ,
ಅವಳೆ ಇಂದು ಮನೆಗೆ ಬಂದು
ಇಂತು ನಮ್ಮ ಮುಂದೆ ನಿಂದು
ಹರಸುತಿಹಳು ಭಕ್ತಬಂಧು,
ಈ ವಾಹನ ವೇಷದಿ !

ಸೌರಮಂಡಲದಲ್ಲಿ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿವೆ. ಅವುಗಳನ್ನೆಲ್ಲಾ ನಿಯಂತ್ರಿಸುತ್ತಿರುವ ಶಕ್ತಿಯೇ ಖನಿಜ, ಸಸ್ಯ, ಪ್ರಾಣಿ, ಮನುಷ್ಯ, ರಾಕ್ಷಸ, ದೇವರು, ಪ್ರಕೃತಿ, ಯಂತ್ರ, ತಂತ್ರಜ್ಞಾನ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾಳೆ. ಆ ಶಕ್ತಿಯೇ ಇಂದು ಕಾರಿನ ವೇಷದಲ್ಲಿ ಬಂದು ನಮ್ಮನ್ನು ಹರಸುತ್ತಿದ್ದಾಳೆ ಎಂದು ಕವಿ ಹಾಡಿದ್ದಾರೆ. 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯದಲ್ಲಿ 'ಯುಗಯುಗದಿ ಸಂಭವಿಪೆನೆಂಬ ಭಗವದ್ದಿವ್ಯಮಾ ವಚನಮೇಂ ನರರೂಪಮಾತ್ರಕ್ಕೆ ಮುಡಿಪೆ ಪೇಳ್? ನರಸಿಂಹ ಮತ್ಸ್ಯ ಕೂರ‍್ಮಾದಿ ಚರಮಾ ಲೇಲೆಗೇಂ ಪೊರತೆ ಈ ಕೃತಿರೂಪಮಾ ಭಗವದಾವಿರ್ಭಾವ ಬಹುರೂಪ ಸೂತ್ರತೆಗೆ?’ ಎಂದು ಕೃತಿ ರೂಪದಲ್ಲೂ ಭಗವಂತನ ಆವಿರ್ಭಾವವನ್ನು ಪರಿಭಾವಿಸುವ ಕವಿಹೃದಯಕ್ಕೆ ಉಪಕಾರಿಯಾಗಿ ಬಂದಿರುವ ಕಾರಿನ ರೂಪದಲ್ಲಿ ಶಕ್ತಿದೇವತೆಯನ್ನು ಕಾಣುವುದು ಸಹಜವಾಗಿಯೇ ಇದೆ.

ಭಗವತಿಯ ಸ್ವರೂಪವಾದ ಕಾರಿಗೆ ಕವಿ ಹೀಗೆ ನಮಸ್ಕರಿಸುತ್ತಾರೆ.
ನಮಸ್ಕರಿಸಿ ಸಮರ್ಪಿಪೆನ್,
ಚಕ್ರ ಚರಣೆ, ಜನನಿ, ಇದೆಕೊ
ತವ ಪವಿತ್ರ ಚತುಷ್ಪದಕೆ
ಪ್ರಾಕ್ ಮಂತ್ರ ಘೋಷದೀ
ವಾಕ್ ಪವಿತ್ರ ಪುಷ್ಪಮಂ !
ಎಂದು ಮಾತೆಂಬ ಪವಿತ್ರ ಪುಷ್ಪವನ್ನು ಅರ್ಪಿಸಿ ಪ್ರಾಚೀನವಾದ ಮಂತ್ರಗಳನ್ನು ಘೊಷಿಸುತ್ತಾರೆ. ಆ ಮಂತ್ರ ಹೀಗಿದೆ.
“ಓಂ
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ!
ಯಾದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥೀತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ!
ಚಿತಿರೂಪೇಣ ಯಾ ಕೃತ್ಸ್ನಮೇತದ್ ವ್ಯಾಪ್ಯಸ್ಥಿತಾ ಜಗತ್
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ!
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರೈಂಬಕೇ ಗೌರಿ ನಾರಾಯಣಿ ನಮಸ್ತು ತೇ!
ಸರ್ವಸ್ವರೂಪವೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ!”
                                     ಓಂ ಶಾಂತಿಃ ಶಾಂತಿಃ ಶಾಂತಿಃ
ನನ್ನ ಮಾತು! : ಇಂದು (೨೯.೦೬.೨೦೧೧) ಈ ಕವಿತೆಯ ನೆನಪಾಗಲು, ಮತ್ತೆ ಓದಲು, ಅದರ ಬಗ್ಗೆ ಒಂದೆರಡು ಸಾಲು ಬರೆಯಲು ಕಾರಣ- ಇಂದು ನನ್ನ ಮನೆಗೂ ಚಕ್ರಚರಣೆಯ ಆಗಮನವಾಯಿತು. ನಾನು ಇಂದಿನಿಂದ ಚತುಷ್ಚಕ್ರಿಯಾದೆ! ಅಂದು ಕವಿಮನೋರಥಕ್ಕೆ ಗೆಲುವಾದಂತೆ ಇಂದು ನನ್ನ ಮನೋರಥಕ್ಕೂ ಗೆಲವುವಾಗಿದೆ. ಕವಿಯ ಆಶಯದಂತೆ ’ಬಾಳ್ಗೆ ನಮ್ಮ ನವರಥಂ’.
ಚಿತ್ರಕೃಪೆ: www.kuvempu.com