Wednesday, December 29, 2010

ಕುವೆಂಪು ಜನುಮದಿನ: ಒಂದಷ್ಟು ಕವಿತೆಗಳ ಮೆಲುಕು

ಕುವೆಂಪು
ಹಕ್ಕಿಯುಲಿಗಳುಕ್ಕುವಿಂಪು
ಸುಗ್ಗಿದಳಿರ ಸಗ್ಗಸೊಂಪು
ಹೊಸಹೊಂಗೆಯ ನೆಳಲ ತಣ್ಪು
ಚಿಂಗೆನ್ನೆಯ ಚೆಲುವು ನುಣ್ಪು
ಸುರಹೊನ್ನೆಯ ಗೊಟ್ಟಿಗಂಪು
ಉಸಯಾಸ್ತದ ಬೈಗುಗೆಂಪು
ನಿರ್ಝರಿಣಿಯ ನೆರೆಯ ತಿಣ್ಪು
ಗಿರಿಶೃಂಗದ ಬರ್ದಿಲ ಬಿಣ್ಪು
ಗಡಿಕಾಣದ ಕಡಲ ಗುಣ್ಪು
ಉಡು ರವಿ ಶಶಿ ನಭದ ಪೆಂಪು
ಆದಿ ಆತ್ಮದ ಸಿರಿ ಅಲಂಪು
ಎಲ್ಲವೊಂದುಗೂಡಲೆಂದು
ವಿಧಿಯ ಮನಸು ಕಡೆದ ಕನಸು
ಕಾಣ್ಬ ಕಣಸೆ, ಕಾಣ್: ಕುವೆಂಪು!
ಭಕ್ತಿಯಡಿಯ ಹುಡಿ - ಕುವೆಂಪು!
ಗುರುಹಸ್ತದ ಕಿಡಿ - ಕುವೆಂಪು!
ನುಡಿರಾಣಿಯ ಗುಡಿ - ಕುವೆಂಪು!
ಸಿರಿಗನ್ನಡ ಮುಡಿ - ಕುವೆಂಪು!
ಇರ್ದುಮಿಲ್ಲದೀ ಕುವೆಂಪು!
ಶ್ರೀ ರಾಮಾಯಣ ದರ್ಶನಂ
ಪಂಪನಾ ಗಾಂಭೀರ‍್ಯ
ರನ್ನ ವೀರ‍್ಯ
ಜನ್ನನಾ ಋಜು ಕುಶಲ
ಕಥನಕಾರ‍್ಯ
ನಾಗವರ‍್ಮನ ಕಲ್ಪನಾ
ಕಂದಂಬರೀ ಚಂದ್ರಿಕಾ
ಸ್ವಾಪ್ನ ಸೌಂದರ‍್ಯ
ರಾಘವಾಂಕನ ನಾಟಕೀಯ ಚಾತುರ‍್ಯ
ನಾರಣಪ್ಪನ ದೈತ್ಯರುಂದ್ರತಾ ದಿವ್ಯಧೈರ‍್ಯ
ಲಕ್ಷ್ಮೀಶನಾ ಮೃದುಲ ಮಂಜುಲ ನಾದಮಾದುರ‍್ಯ
ರತ್ನಾಕರನ ಯೋಗದೃಷ್ಟಿಯ ಸಾಗರೌದಾರ‍್ಯ
ಸಕಲ ಛಂದಸ್ ಸರ್ವ ಮಾರ್ಗ ಶೈಲಿಗಳಮರ ಐಶ್ವರ‍್ಯ
ಸರ್ವವೂ ಸಂಗಮಿಸಿದೀ ’ದರ್ಶನಂ’ ತಾನಕ್ಕೆ ಕೃತಿಗಳಾಚಾರ‍್ಯ!
ಅನಾದಿಕವಿ ಊವಾಚ
ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನೆಗೆ ಬಾಹುಮಾತ್ರಗಳಲ್ತೆ?
ಬಹು ನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೂನುಂ ನಾನೆಯೆ, ಕುವೆಂಪು!
ನಾನೊರೆದುದಲ್ಲದೆಯೆ ನೀನ್ ಬರೆದುದೇನ್ ವತ್ಸ?
ನಿನ್ನಹಂಕಾರದಲ್ಪತೆ ಗೆಯ್ದ ದೋಷಗಳ್, ಕೇಳ್,
ನಿನ್ನವಲ್ಲದೆ ಕೃತಿಯ ಪೆರ‍್ಮೆಗೇಂ ಕವಿಯೆ ನೀನ್?
ಏಳ್, ಏಳ್! ತೊರೆ ಆ ಅವಿದ್ಯೆಯಂ! ನತೋರ್ಪೆನದೊ
ಕಾಣ್!
ಪೂರ್ಣದೃಷ್ಟಿಯ ಮಹಾಕಾದಂಬರಿ
ಸರಸ್ವತಿಯ ಸಹಸ್ರಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ ಕಾದಂಬರಿಯೆ ಮಹಾಸದನ!
ಒಂದಷ್ಟು ಚುಟುಕಗಳು
ಮಠಾಧಿಪತಿ
ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ‍್ಮವ ಮೆರೆವರ ನೋಡಯ್ಯ!
ದೆವ್ವ-ದೇವ
ಕಾಡಿಸುವ ಕಾಡುದೇವತೆಗೆ ಹೊಗಳಿಕೆ ಬೇಕು;
ಪ್ರೇಮನಿಧಿಯಾಗಿರುವ ದೇವರಿಗೊಲುಮೆ ಸಾಕು.
ಕಲೆ-ನೆಲೆ
ಮಾತು ನನ್ನ ಕಲೆ
ಮೌನ ನನ್ನ ನೆಲೆ
ವ್ಯಾಕರಣ
ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು:
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!
ಅವಿದ್ಯಾ
ಆಶ್ಚರ್ಯಗಳ ಮಧ್ಯೆ
ಪ್ರಶ್ನಚಿಹ್ನೆ;
ಸರ್ವವನು ಸುತ್ತಿಹುದು
ಒಂದು ಸೊನ್ನೆ!
ದೊರೆ ಮತ್ತು ಪುರೋಹಿತ
ಕೂಡಿದಾಗ ಹುಟ್ಟಿತು ಮತ!
ಮೊದಲ ಠಕ್ಕ ಮೊದಲ ಬೆಪ್ಪ
ಕೂಡಿದಾಗ ಮೂಡಿತು ಮತ!
ಯಾವುದನೃತ? ಯಾವುದ ಋತ?
ಅಂತೂ ನಡೆಯಿತದ್ಭುತ!
(ಭಾರತ-ಚೀನಾ ಯುದ್ಧಕಾಲದಲ್ಲಿ)
ಚೀಣಿಯರ ಧಾಳಿ
ಬರಿ ಹಿಮದ ಧೂಳಿ!
ತೂರಿ ಹೋಗುವುದು
ಸ್ವಲ್ಪ ತಾಳಿ!
ಆದರೀ ಕರಾಳಿ
ಇಂಗ್ಲೀಷಿನ ಗಾಳಿ
ಬೀಸಿ ಹೋಗುವುದೆ?
ಸ್ವಲ್ಪ ಕೇಳಿ!
ಸಾಕು, ತಾಯೀ, ಸಾಕು, ಈ ಸಾವು, ಈ ನೋವು;
ಚೀಣೀ ಪಿಶಾಚಿಯಿಂ ಬುದ್ಧಿ ಕಲಿತೆವು ನಾವು!
ಚೀಣೀ ರಾಕ್ಷಸ ದಳವನು ಸೀಳಿ
ಓ ಬಾ ಬಾ ಬಾ , ಹೇ ಮಹಾ ಕಾಳಿ!

ರಣ! ರಣ! ರಣ! ರಣ!
ಹಿಮಾಲಯದಿ ರಕ್ಕಸ ಗಣ
ಕುಣಿಯುತಿಹುದು ರಿಂಗಣ!
ಕೊಡು ಹಣ; ತೊಡು ಪಣ;
ತೀರಿಸು ನಾಡೃಣ!
ಇಲ್ಲಗೈ ನಿನ್ನ ನೀನು
ದೇವರಲ್ಲದುಳಿವುದೇನು?
ಚುನಾವಣೆ
ಅಂದು ಹೂವಿನ ಹಾರ
ಇಂದು ಕಲ್ಲೇಟು:
ಏನಿದೀ ಗ್ರಹಚಾರ?
ಹಾಳು ಈ ಓಟು!
ಕೇಂದ್ರ ಆಕಾಶವಾಣಿಯಲ್ಲಿ ಸುದ್ದಿ
ಹತ್ತುಸಾವಿರ ಜನರು ಅಮರನಾಥದ ಗುಹೆಗೆ
ಯಾತ್ರೆ ದರ್ಶನವಿತ್ತು ಸಂದರ್ಶಿಸಿದರಂತೆ
ಐಕಿಲಿನ ಶಿವಲಿಂಗವನು ಪೂಜಿಗೈಯಲ್ಕೆ
ಮತ್ತೆ ಅಚ್ಚರಿಯೆ ಅನ್ನ ಸಮಸ್ಯೆ ಈ ದೇಶಕ್ಕೆ?
[ಆಕರ : ಕುವೆಂಪು ಸಮಗ್ರಕಾವ್ಯ ಸಂಪುಟಗಳು ಮತ್ತು ಶ್ರೀ ರಾಮಾಯಣ ದರ್ಶನಂ]

Monday, December 13, 2010

ನೇಮಿನಾಥನ ಸರಸ್ವತೀ ದರ್ಶನ

ಶೃಂಗಾರವೇ ಪ್ರಧಾನವಾದ ಕಾವ್ಯ ಲೀಲಾವತಿ ಪ್ರಬಂಧ. ನೇಮಿನಾಥಪುರಾಣ ನೇಮಿನಾಥ ತೀರ್ಥಂಕರನ ಕಥೆಯನ್ನುಳ್ಳದ್ದು. ಲೀಲಾವತಿಯಲ್ಲಿ ನೇಮಿನಾಥನ ಸರಸ್ವತೀ ದರ್ಶನ ವಿಸ್ತೃತವೂ ವಿಶೇಷವೂ ಆಗಿ ಹೊರಹೊಮ್ಮಿದೆ. ಕವಿ ತನ್ನನ್ನು ತಾನು ವಿಶ್ವವಿದ್ಯಾವಿನೋದಂ ಭಾರತೀಚಿತ್ತಚೋರ ಎಂದು ಕರೆದುಕೊಂಡಿದ್ದಾನೆ. ತನ್ನ ಕೃತಿಯನ್ನು ಕಲಾನರ್ತಕಿಯ ನೃತ್ಯರಂಗವೇದಿಕೆ (ಸರಸಕೃತಿ ಕಲಾನರ್ತಕಿ ನೃತ್ಯರಂಗಂ) ಎಂದು ವರ್ಣಿಸಿಕೊಂಡಿರುವ ನೇಮಿಚಂದ್ರ, ಇನ್ನೊಂದು ಪದ್ಯದಲ್ಲಿ, ತನ್ನ ಕೃತಿಯುವತಿಯನ್ನು ಸರಸ್ವತಿಯ ವಿಶೇಷಣಗಳಿಂದ ವರ್ಣಿಸಿದ್ದಾನೆ. ಈಗಾಗಲೇ ನಾಗಚಂದ್ರ ತನ್ನ ಕೃತಿ ಪಂಪರಾಮಾಯಣವನ್ನು ವಚಶ್ರೀನರ್ತಕೀ ನೃತ್ಯವೇದಿಕೆ ಎಂದು ಕರೆದಿರುವುದನ್ನು ಗಮನಿಸಿದ್ದೇವೆ. ಅಲ್ಲಿ ಮಾತೆಂಬ ಲಕ್ಷ್ಮಿ ನರ್ತಿಸುತ್ತಿದ್ದರೆ, ನೇಮಿಚಂದ್ರನಲ್ಲಿ ಸರಸ್ವತಿಯು ಕಲಾನರ್ತಕಿಯಾಗಿದ್ದಾಳೆ. ಕಾವ್ಯಾರಂಭದ ಸರಸ್ವತೀ ಸ್ತುತಿಯೇ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.
ಜಿನಪದಬೋಧವಾರ್ದಿಭವೆ ಭವ್ಯ ಮನೋಹರಕಾಂತೆ ಕಾಮಸಂ
ಜನನಿ ಯಶೋವಿಕಾಸಿನಿ ಗುಣೀಕೃತ ಸಂಸ್ಕೃತಿದೋಷೆ ಪುಣ್ಯ ಭಾ
ಗಿನಿ ಭುವನಪ್ರಬೋಧಿನಿ ಸುಖಾಮೃತದಾಯಿನಿ ಬಂದು ನೇಮಿಚಂ
ದ್ರನ ಮುಖಪದ್ಮದೊಳ್ ಸಿರಿವೊಲಿರ್ಪ ಸರಸ್ವತಿ ನಿಲ್ಕೆ ನಲ್ಮೆಯಿಂ
ಜಿನನ ಮಾತು ಎಂಬ ಜ್ಞಾನಸಮುದ್ರದಲ್ಲಿ ಹುಟ್ಟಿದ, ಜಿನಪದದ ಬಗೆಗಿನ ಅರಿವನ್ನು ಹೆಚ್ಚಿಸುವ, ಜಿನಭಕ್ತರಿಗೆ ಮನೋಹರವಾಗಿ ಕಾಣಿಸುವ ಭವ್ಯಸ್ವರೂಪದ, ಅರಿಷಡ್ವರ್ಗಳಲ್ಲಿ ಮೊದಲನೆಯದಾದ ಕಾಮಕ್ಕೆ ಕಾರಣಳಾಗಿರುವ, ಯಶಸ್ಸನ್ನು ಹೆಚ್ಚಿಸುವ, ತಿದ್ದಿದ ಗುಣಶಾಲಿಯಾದ ನಡವಳಿಕೆಯಿಂದ ಸಂತಸಗೊಳ್ಳುವ, ಭುವನಕ್ಕೆ ಸಮೃದ್ಧಿಯನ್ನುಂಟು ಮಾಡುವ, ಸುಖವೆಂಬ ಅಮೃತವನ್ನು ದಯಪಾಲಿಸುವ, ಲಕ್ಷ್ಮಿಯಂತಿರುವ ಸರಸ್ವತಿಯು ನೇಮಿಚಂದ್ರನ ಮುಖಪದ್ಮದಲ್ಲಿ ನೆಲೆಸಲಿ ಎಂಬುದು ಕವಿಯ ಆಶಯ. ಇಲ್ಲಿ ಬಂದಿರುವ ಕಾಮಸಂಜನನಿ ಎಂಬ ವಿಶೇಷಣ ಪ್ರಮುಖವಾದುದು. ಶೃಂಗಾರವೇ ಪ್ರಧಾನವಾದ, ಶೃಂಗಾರಗೃಹವಾದ ತನ್ನ ಕಾವ್ಯದ ಉದ್ದೇಶಕ್ಕೆ ಅನುಗುಣವಾಗಿ ಸರಸ್ವತಿಯನ್ನು ಸ್ತುತಿಸುವುದಕ್ಕಾಗಿ, ಕಾಮಸಂಜನನಿ ಎನ್ನುತ್ತಾನೆ. ಸರಸ್ವತಿಯು ಹುಟ್ಟಿಸುವ ಕಾಮವಾದ್ದರಿಂದ ಅದು ವಿಕೃತವಲ್ಲ ; ಬದಲಿಗೆ ಯಶಸ್ಸನ್ನು ವಿಸ್ತರಿಸುವಂತದ್ದು, ಸಂಸಾರದ ದೋಷಗಳನ್ನು ಗುಣಗಳನ್ನಾಗಿ ಪರಿವರ್ತಿಸಿ ತೋರಿಸುವಂತದ್ದು. ಸಂಸಾರದಲ್ಲಿ ಕಾಮವು ನಗಣ್ಯವಲ್ಲ ಎಂಬುದು ಕಾವ್ಯದುದ್ದಕ್ಕೂ ನೇಮಿಚಂದ್ರ ಪಾಲಿಸಿಕೊಂಡು ಬಂದಿರುವ ತತ್ವವೇ ಆಗಿದೆ. ಪುಣ್ಯವನ್ನು ದಯಪಾಲಿಸುವವಳು, ಇಡೀ ಜಗತ್ತನ್ನು ಎಚ್ಚರಗೊಳಿಸುವವಳು, ಸುಖವೆಂಬ ಅಮೃತವನ್ನು ದಯಪಾಲಿಸುವವಳು ಆದ ಸರಸ್ವತಿ, ಸಂಪತ್ತಿನಂತೆ ಇರುವ ನೇಮಿಚಂದ್ರನ ಮುಖಕಮಲದಲ್ಲಿ ಪ್ರೀತಿಯಿಂದ ನೆಲಸಲಿ ಎಂಬುದು ಕವಿಯ ಪ್ರಾರ್ಥನೆ. ಋಗ್ವೇದದಲ್ಲಿ ಸರಸ್ವತಿಯು ಪ್ರೇರಣಾದೇವತೆಯಾಗಿರುವುದನ್ನು, ಮತ್ತು ಸರಸ್ವತಿಯನ್ನು ಚೋದಯತ್ರೀ ಅಂದರೆ ಮನುಷ್ಯರನ್ನು ಪ್ರೇರೇಪಿಸುವವಳು ಎಂದು ಕರೆದಿರುವುದನ್ನು ಹಿಂದೆ ಗಮನಿಸಿದ್ದೇವೆ. ಆ ಹಿನ್ನೆಲೆಯಲ್ಲಿ ಭುವನಪ್ರಬೋಧಿನಿ ಎಂಬ ವಿಶೇಷಣ ಮಹತ್ವದ್ದಾಗಿದೆ. ಈಗಾಗಲೇ ನಾಗಚಂದ್ರನ ಸರಸ್ವತಿಯನ್ನು ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ ಎಂದು ಕರೆದಿರುವುದನ್ನು ಗಮನಿಸಿದ್ದೇವೆ. ಜಿನಪದ ಅಂದರೆ ಮೋಕ್ಷ; ಕೈವಲ್ಯ. ಜಿನಪದಬೋಧವಾರ್ದಿಭವೆ ಎಂಬ ಮಾತು ಸರಸ್ವತಿಯು ಮೋಕ್ಷಕ್ಕೂ ಕಾರಣವಾಗುವವಳು ಎಂಬುದನ್ನು ಸೂಚಿಸುತ್ತದೆ. ಇನ್ನೊಂದು ಪದ್ಯದಲ್ಲಿ ಸರಸ್ವತಿಯು ಕುಕವಿಗಳನ್ನಾಶ್ರಯಿಸದೆ, ನೇಮಿಚಂದ್ರನನ್ನು ಏಕೆ ಆಶ್ರಯಿಸಬೇಕೆಂದು ಶ್ಲೇಷೆಯ ಮೂಲಕ ಹೇಳುತ್ತಾನೆ.
ಬಱದೆ ಮರಲ್ದರಲ್ದ ಕುಕವಿವ್ರಜಶಾಲ್ಮಲಿಯಂ ಮಲಂಗದೆ
ೞ್ಚಱಸದೆ ದುರ್ವಿವೇಕಮುಖಕುಟ್ಮಲದಿಂದವಗಂಧಮಂ ಮರು
ಳ್ದೆಱಗದೆ ಮುಗ್ಧಚಂಪಕದೊಳೊಲ್ದು ಸರಸ್ವತಿಯೆಂಬ ತುಂಬಿ ಬಂ
ದೆಱಗುಗೆ ನೇಮಿಚಂದ್ರನ ನವಸ್ಮಿತಜಾತಮುಖಾಂಬುಜಾತದೊಳ್
ವ್ಯರ್ಥವಾಗಿ ಅರಳಿರುವ ಬೂರುಗದ ಹೂವಿಗೆ ಮರುಳಾಗದೆ, ಕೆಟ್ಟುಹೋಗಿರುವ ಮೊಗ್ಗಿನಿಂದ ಸುವಾಸನೆಯನ್ನು ಬಯಸದೆ, ಮುಗ್ಧೆ ಎಂದು ಸಂಪಗೆಯ ವಾಸನೆಗೆ ಮರುಳಾಗದೆ ಸರಸ್ವತಿ ಎಂಬ ದುಂಬಿಯು ಮುಗುಳ್ನಗೆಯಿಂದ ಕೂಡಿದ ನೇಮಿಚಂದ್ರನ ಮುಖವೆಂಬ ಕಮಲದ ಹೂವಿನಲ್ಲಿ ಆಟವಾಡಲಿ ಎಂಬುದು ಕವಿಯ ಪ್ರಾರ್ಥನೆ. ಆದರೆ ಕವಿ ಅದನ್ನು ನಯವಾಗಿ ಕುಕವಿಗಳ ನಿಂದೆಗಾಗಿ ಬಳಸಿಕೊಂಡಿದ್ದಾನೆ. ಅಂತಃಶಕ್ತಿಯಿಲ್ಲದ ಕುಕವಿಸಮೂಹವನ್ನು ಆಶ್ರಯಿಸದೆ, ಅವರ ದುರ್ವಿವೇಕದಿಂದ ಕೂಡಿದ ಮುಖದಲ್ಲಿ ಒಡನಾಡದೆ, ಏನೂ ತಿಳಿಯದವರೆಂದು ಭಾವಿಸಿ ಮರುಳಾಗಿ ಅಂತಹವರ ಸಹವಾಸವನ್ನು ಪಡೆಯದೆ ಸರಸ್ವತಿಯು ಮುಗುಳ್ನಗೆಯಿಂದ ಕೂಡಿದ ನೇಮಿಚಂದ್ರನ ಮುಖದಲ್ಲಿ ಬಂದು ಆಟವಾಡಲಿ ಎಂಬಲ್ಲಿ ಕುಕವಿಗಳಿಗಿರಬೇಕಾದ ಗುಣಗಳ ನಿರೂಪಣೆಯೂ ಇದೆ.
ಸರಸ್ವತಿಯನ್ನು ಕಾವ್ಯಪರಿಕರಗಳಿಗಾಗಿ ಬೇಡುವ ಅವನ ಇನ್ನೊಂದು ಸರಸ್ವತಿಯ ಸ್ತುತಿ ಕೆಳಗಿನಂತಿದೆ.
ರಸಭಾವಂ ಪೊಣ್ಮೆ ವಕ್ತ್ರಂ ತೊಳಗೆ ವಿಕಸಿತಂ ಜಾತ್ಯಲಂಕಾರಮಾಳೋ
ಕಿಸೆ ಕೊಂಕು ರೇಖೆಯುಂ ರಂಜಿಸೆ ಮಿಸುಗೆ ಪದನ್ಯಾಸಮಿಂಬಾಗೆ
ವೃತ್ತಿ ಪ್ರಸರಂ ದೃಷ್ಟಿಪ್ರಸಾದಂ ಪಸರಿಸೆ ಸತತಂ ಭಾರತೀದೇವಿಯೆನ್ನೀ
ರಸನಾರಂಗಾಗ್ರದೊಳ್ ನರ್ತಿಸುಗೆ ಬುಧಜನಸ್ತೋತ್ರತೂರ‍್ಯಂಗಂಳಿಂದಂ
ರಸಭಾವಗಳು ಹೊಮ್ಮುತ್ತಿರುವುದರಿಂದ ಮುಖವು ಬೆಳಗುತ್ತಿರಲು, ಪ್ರಕಾಶ ಹೆಚ್ಚಾಯಿತು. ನೃತ್ಯದ ಬೇರೆ ಬೇರೆ ಭಂಗಿಗಳು ದೃಷ್ಟಿಯ ಮೂಲಕ ಹೊಮ್ಮುತ್ತಿರಲು, ದೇಹದ ಚಲನೆಯ ವಕ್ರ(ಸೌಂದರ್ಯ)ರೇಖೆಗಳು ರಂಜಿಸುತ್ತಿರಲು, ಪದಚಲನೆಯ ಭಂಗಿ ವಿಜೃಂಭಿಸುತ್ತಿರಲು ಕಣ್ಣಿಗೆ ನೋಟದ ಗುಣ ಹರಡುತ್ತಿರಲು, ವ್ಯಾಖ್ಯಾನ ಮಾಡುವುದು ಆ ಭಂಗಿಗಳಿಗೆ ಒತ್ತಾಸೆ ನೀಡುತ್ತಿರಲು, ವಿದ್ವಾಂಸರು ಮಾಡುವ ಸ್ತುತಿಗಳ ತೂರ‍್ಯಶಬ್ದಗಳ ಹಿನ್ನೆಲೆಯಲ್ಲಿ ಭಾರತಿಯು ರಸೋತ್ಪತ್ತಿ ಸ್ಥಾನವಾದ ನಾಲಗೆಯ ತುದಿಯಲ್ಲಿ ನಿರಂತರವಾಗಿ ನರ್ತಿಸುತ್ತಿರಲಿ. ಕಾವ್ಯಗುಣಗಳನ್ನು ಅನ್ವಯಿಸಿಯೂ ಈ ಪದ್ಯವನ್ನು ಅರ್ಥೈಸಬಹುದು. ವಕ್ರವ್ಯಾಪಾರದಿಂದ ಶೋಭಿಸುವ ಸ್ವಭಾವಾಲಂಕಾರಗಳನ್ನು, ಕಂಗೊಳಿಸುವ ಪದಗಳ ರಚನೆಗೆ ಅನುಕೂಲಕರವಾಗಿ ವಾಚ್ಯ, ಲಕ್ಷ್ಯ ಮತ್ತು ವ್ಯಂಗ್ಯಾರ್ಥಗಳನ್ನು ಕೊಡುವ ಶಬ್ದದ ಸಾಮರ್ಥ್ಯ; ವೃತ್ತಿಯನ್ನು ಹರಡಿ, ಕೃಪಾದೃಷ್ಟಿಯನ್ನು ಸುರಿಸಿ, ಭಾರತಿದೇವಿಯು ಬುಧರ ಸ್ತೋತ್ರವೆಂಬ ತುತ್ತೂರಿಯ ದನಿಗಳೊಂದಿಗೆ ನಿರಂತರವಾಗಿ ನನ್ನ ನಾಲಗೆಯ ತುದಿಯಲ್ಲಿ ನರ್ತಿಸಲಿ. ಜಾತ್ಯಾಲಂಕಾರ ಎಂದರೆ ಸ್ವಭಾವಾಲಂಕಾರವೆಂದರ್ಥ. ನೋಡುವುದಕ್ಕೆ ಸ್ವಭಾವಾಲಂಕಾರದಂತಿದ್ದರೂ ಕೊಂಕು ರೇಖೆ ಅಂದರೆ ವಕ್ರವ್ಯಾಪಾರದಿಂದ ಕೂಡಿರಬೇಕು. ವೃತ್ತಿ ಎಂದರೆ ವಾಚ್ಯ, ಲಕ್ಷ್ಯ ಮತ್ತು ವ್ಯಂಗ್ಯಾರ್ಥಗಳನ್ನು ಕೊಡುವ ಶಬ್ದದ ಸಾಮರ್ಥ್ಯ. ಅದನ್ನು ತನ್ನ ಕಾವ್ಯಕ್ಕಾಗಿ ಕವಿ ಬೇಡುತ್ತಾನೆ. ಅಂತಹ ಕಲಾನರ್ತಕಿಯನ್ನು, ಪಂಡಿತರ ಸ್ತೋತ್ರತೂರ‍್ಯಗಳೊಂದಿಗೆ ತನ್ನ ನಾಲಗೆಯ ತುದಿಯಲ್ಲಿ ನರ್ತಿಸುವುದಕ್ಕೆ ಕೋರುತ್ತಾನೆ. ಆ ಅಧ್ಯಾಯದ ಮತ್ತು ಕಾವ್ಯದ ಕೊನೆಗೆ ಕಲಾನರ್ತಕಿ ನೃತ್ಯ ಮಾಡುವ ರಂಗಭೂಮಿ ತನ್ನ ಕೃತಿ ಎನ್ನುತ್ತಾನೆ. ಕವಿಯ ಕೋರಿಕೆಯಂತೆ ಸರಸ್ವತಿಯು ನಾಲಗೆಯ ತುದಿಯಲ್ಲಿ ನರ್ತಿಸಿದ್ದರಿಂದಲೇ, ಕಲಾನರ್ತಕಿಯ ನರ್ತನಕ್ಕೆ ರಂಗಭೂಮಿಯಾಗುವಂತೆ ಆತನ ಕಾವ್ಯರಚನೆ ಮುಂದುವರಿಯುತ್ತಿದೆ; ಮುಂದುವರೆದು ನರ್ತನಕ್ಕೆ ಭೂಮಿಕೆಯೂ ಆಯಿತು ಎನ್ನಬಹುದಲ್ಲವೆ!?
ಸರಸ್ವತಿಯ ನರ್ತನಕ್ಕೆ ವೇದಿಕೆಯಾದ ಕೃತಿಯನ್ನು ಕೃತಿಯುವತಿ ಎಂದು ಕರೆದು, ಕಾವ್ಯಸರಸ್ವತಿಯ ವಿಶೇಷಣಗಳಿಂದ ಕೃತಿಯುವತಿಯನ್ನು ಹೊಗಳುತ್ತಾ ಹೆಮ್ಮೆಪಡುವ ಪದ್ಯ ಸೊಗಸಾಗಿದೆ.
ಲಳಿತಾಲಂಕಾರೆಯಂ ಚಾತುರವಚನೆಯನತ್ಯಾಯತೋತ್ಪ್ರೇಕ್ಷೆಯಂ ಕೋ
ಮಳೆಯಂ ವೃತ್ತಸ್ತನಾಕ್ರಾಂತೆಯನಖಿಲ ಕಲಾಪ್ರೌಢೆಯಂ ಕಾಮ ಕೇಳೀ
ಕಳೆಯೊಳ್ ಜಾಣ್ಬೆತ್ತುವಂದೀ ಕೃತಿಯುವತಿಯನಾರ್ ಕಂಡು ಕಣ್ಬೇಟದಿಂತಾ
ಮೊಳಗಾಗರ್ ಕೂರ್ತು ಕೇಳ್ದಾರ್ ಬಗೆವುಗೆ ಕಿವಿವೇಟಕ್ಕೆ ಪಕ್ಕಾಗದಿರ್ಪರ್
ಲಲಿತವಾದ ಅಲಂಕಾರ, ಚತುರವಾದ ಮಾತುಗಳ, ಅತಿಸುಂದರವಾದ ಉತ್ಪ್ರೇಕ್ಷೆ, ಕೋಮಳೆ, ವೃತ್ತಾಕಾರದ ಸ್ತನ (ವೃತ್ತಾದಿ ಪದ್ಯಗಳನ್ನು), ಸಕಲಕಲಾಪ್ರೌಢಿಮೆ ಇವುಗಳೆಲ್ಲವನ್ನೂ ಸೊಗಸಾದ ಪಂಕ್ತಿಗಳ ತೇಜಸ್ಸಿನಲ್ಲಿ ಚಾತುರ್ಯದಿಂದ ಕಟ್ಟಿದಂತಿರುವ, ಕಾಮಕೇಳಿ ಕಲೆಯಲ್ಲಿ ಜಾಣತನವನ್ನು ಪಡೆದು ಬಂದ ಈ ಕೃತಿಸ್ವರೂಪದ ಯುವತಿಯನ್ನು ಕಂಡು ಕಣ್ಣಿನ ಆಕರ್ಷಣೆಗೆ ಯಾರು ಒಳಗಾಗುವುದಿಲ್ಲ? ಕುಳಿತು ಕೃತಿಯನ್ನು ಕೇಳಿದ ಯಾರ ಮನಸ್ಸು ಉತ್ಸಾಹಗೊಳ್ಳುವುದಿಲ್ಲ? ಅವರು ಕಿವಿಯಾಕರ್ಷಣೆಗೆ ಒಳಗಾಗದಿರುತ್ತಾರೆಯೇ? ಎಂದು ಪ್ರಶ್ನಿಸುತ್ತಾನೆ ಕವಿ. ಶೃಂಗಾರಪ್ರಧಾನವಾದ ಕೃತಿ ರಚನೆಗೆ ತೊಡಗಿಕೊಂಡ ಕವಿ, ಸರಸ್ವತಿಯನ್ನು ಕಾಮಸಂಜನನಿ ಎಂದು ಕರೆಯುವುದರಲ್ಲಿನ ಪ್ರಾರಂಭದ ಉತ್ಸಾಹ ಕೊನೆಯವರೆಗೂ, ತನ್ನ ಕೃತಿಯನ್ನು ಶೃಂಗಾರರಸಪೂರ್ಣವಾಗಿ ಸಿಂಗರಿಸುವವರೆಗೂ ವಿರಮಿಸುವುದಿಲ್ಲ. ಭಾರತೀಚಿತ್ತಚೋರನಾದ ಕವಿ ತನ್ನ ಮುಖಚಂದ್ರಿಕೆಯು ಭಾರತಿಯ ಚಂದ್ರಿಕೆಯಂತೆ ಭೂಲೋಕವನ್ನು ನಿತ್ಯವೂ ಬೆಳಗಲಿ೧೨೩ ಎಂದು ಆಶಿಸುತ್ತಾನೆ.
ನೇಮಿಚಂದ್ರನು ತನ್ನ ಇನ್ನೊಂದು ಕಾವ್ಯ ನೇಮಿನಾಥಪುರಾಣದಲ್ಲಿ ಪೌರಾಣಿಕ ಘಟನೆಯೊಂದರ ಮೂಲಕ ಸರಸ್ವತಿಯನ್ನು ಕಾಮಧೇನು ರೂಪದಲ್ಲಿ ಸ್ತುತಿಸಿದ್ದಾನೆ. ಋಗ್ವೇದ ಮತ್ತು ಬೃಹದಾರಣ್ಯಕಗಳ ಪರಿಶೀಲನೆಯಿಂದ ಸರಸ್ವತಿಗೆ ಕಾಮಧೇನು ಸ್ವರೂಪ ಇತ್ತೆಂಬುದನ್ನು ಈಗಾಗಲೇ ಗಮನಿಸಿದ್ದೇವೆ.
ಪರಮತಮತ್ತಹೈಹಯಮುಖಚ್ಯುತೆ ವಿಶ್ರುತ ಜೈನಶಾಸನಾ
ಮರಭುವನಪ್ರತಿಷ್ಠಿತೆ ರಸಾನುಭವೋಚಿತೆ ವತ್ಸಲತ್ವದಿಂ
ತೊರೆದ ಕುಚಂಬೊಲ್ ಒಪ್ಪುವ ಚತುರ್ವಿಧಭಾಷೆಯೊಳಂ ಸರಸ್ವತೀ
ಸುರಭಿ ನಿರಂತರಂ ಕಱೆಗೆ ಕಾಮಿತಮಂ ಕವಿರಾಜಮಲ್ಲನಾ
ಪರಧರ್ಮದ ಮದದಿಂದ ಕೂಡಿದ ಹೈಹಯ ವಂಶದ ದೊರೆಗಳಿಂದ ದೂರವಾದವಳು, ಪ್ರಸಿದ್ಧವಾದ ಜೈನಧರ್ಮದ ಶಾಶ್ವತವಾದ ಲೋಕದಲ್ಲಿ ಪ್ರತಿಷ್ಠೆಗೊಂಡವಳು, ರಸಾನುಭವದಿಂದ ಔಚಿತ್ಯವನ್ನು ಪಡೆದವಳಾದ ಸರಸ್ವತಿಯು ವಾತ್ಸಲ್ಯ(ತಾಯಿ)ಭಾವದಿಂದ ತುಂಬಿದ ಕುಚಗಳಿಂದ ಹಾಲನ್ನು ಕರೆಯುವ ಸುರಭಿ(ಕಾಮಧೇನು)ಯಂತೆ ನಾಲ್ಕುಭಾಷೆಯಲ್ಲಿಯೂ ಕವಿರಾಜಮಲ್ಲನಾದ ನೇಮಿನಾಥನ ಇಷ್ಟಾರ್ಥವನ್ನು ಸದಾ ನೆರವೇರಿಸುತ್ತಿರಲಿ ಎಂಬುದು ನೇಮಿನಾಥನ ಪ್ರಾರ್ಥನೆ. ಆತನಿಗೆ ನಾಲ್ಕುಭಾಷೆಗಳಲ್ಲಿ ಪರಿಶ್ರಮವಿತ್ತೆಂದು ಊಹಿಸಲು ಸಾಧ್ಯವಿದೆ. ಜೈನಮತಕ್ಕನುಗುಣವಾಗಿ ಸರ್ವಭಾಷಾಮಯಿಯಾದ ಸರಸ್ವತಿಯನ್ನು ನಾಲ್ಕೂ ಭಾಷೆಗಳಲ್ಲಿ ಇಷ್ಟಾರ್ಥವನ್ನು ನೆರವೇರಿಸುವಂತೆ ಕೋರಿರುವುದು ಸಮಂಜಸವಾಗಿದೆ. ಸರಸ್ವತಿಯನ್ನು ಸುರಭಿ ಎಂಬ ಧೇನುವಿಗೆ ಹೋಲಿಸಿರುವುದಕ್ಕೆ ಸರಸ್ವತಿಗಿರುವ ಕಾಮಧೇನು ಸ್ವರೂಪವೂ ಕಾರಣ. ಹೈಹಯವಂಶದ ದೊರೆಯಾದ ಕಾರ್ತವೀರ‍್ಯನು ಜಮದಗ್ನಿಯ ಆಶ್ರಮದಲ್ಲಿದ್ದ ಕಪಿಲೆ ಎಂಬ ಹೋಮಧೇನುವನ್ನು ಬಯಸಿ ಅಪಹರಿಸಿದರೂ ಅದು ಆತನಿಗೆ ದಕ್ಕಲಿಲ್ಲ.೧೨೫ ಹೈಹಯಮುಖಚ್ಯುತೆ ಎಂಬ ಮಾತು ಮೇಲಿನ ಕಥೆಯಿಂದ ಪ್ರೇರಿತವಾಗಿರುವಂತಿದೆ. ಪರಮತಮತ್ತನಾದ ಹೈಹಯನಿಗೆ ಒಲಿಯದೇ ಪ್ರಸಿದ್ಧವಾದ ಜೈನಧರ್ಮದ ಶಾಶ್ವತವಾದ ಲೋಕದಲ್ಲಿ ಪ್ರತಿಷ್ಠಾಪಿತಳಾಗಿದ್ದಾಳೆ ಎಂಬುದು ಜೈನಧರ್ಮೀಯನಾದ ನೇಮಿನಾಥನ ಕಲ್ಪನೆ.