Saturday, June 20, 2009

ನರಿ ಮತ್ತು ಕಾಗೆ ಕಥೆ - ಪ್ರಾಸ ರಹಿತ ಭೋಗಷಟ್ಪದಿ

ಆತ್ಮೀಯ ಮಿತ್ರರೇ,
ಹಲವಾರು ತಾಂತ್ರಿಕ ಕಾರಣಗಳಿಂದಾಗಿ ನನ್ನ ಬ್ಲಾಗನ್ನು ಸರಿಯಾಗಿ ಮೇಂಟೇನ್ ಮಾಡಲಾಗುತ್ತಿಲ್ಲ ಹಾಗೂ ಬೇರಾವುದೇ ಬ್ಲಾಗುಗಳಿಗೆ ಬೇಟಿ ಕೊಡಲಾಗುತ್ತಿಲ್ಲ. ಬಹುಶಃ ಇದು ಇನ್ನೊಂದು ಇಪ್ಪತ್ತು ದಿನಗಳಿಗಾದರೂ ಮುಂದುವರೆಯುತ್ತದೆ. ಆದ್ದರಿಂದ ಈ ಪೋಸ್ಟನ್ನು ನಾನು ಬೇರೆಡೆಯಿಂದ ಅಪ್‌ಲೋಡ್ ಮಾಡುತ್ತಿದ್ದೇನೆ. ಒಮ್ಮೆ ನಮ್ಮ ನೆಟ್‌ವರ್ಕ್ ಸರಿಯಾಗಿ ಅಂತರ್ಜಾಲದ ಸಮಸ್ಯೆ ದೂರವಾದರೆ ಮತ್ತೆ ಎಂದಿನಂತೆ ಬ್ಲಾಗ್ ಆಕ್ಟಿವಿಟೀಸಿನಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಲ್ಲಿಯವರೆಗಿನ ತೊಂದರೆಗಾಗಿ ಕ್ಷಮೆಯಿರಲಿ.

ಸದ್ಯಕ್ಕೆ ಇನ್ನೊಂದು ಮಕ್ಕಳ ಕಥೆಯನ್ನು ಭೋಗ ಷಟ್ಪದಿಯಲ್ಲಿ ಬರೆದಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಕಾಗಿ ಪ್ರಾರ್ಥನೆ.

1
ಒಂದು ಕಾಡಿನಲ್ಲಿ ಇದ್ದ
ಕಾಗೆಯೊಂದು ಒಂದು ದಿವಸ
ತಿನ್ನಲಿಕ್ಕೆ ಏನು ಸಿಗದೆ ಹಸಿದು ಹೋಯಿತು
ಹಸಿದ ಕಾಗೆ ಊಟ ಹುಡುಕಿ
ಊರ ಕಡೆಗೆ ಹಾರಿ ಬಂದು
ಮಾಂಸ ಕಡಿಯೊ ಜಾಗದಲ್ಲಿ ಚೂರು ಕಂಡಿತು
2
‘ಹಸಿದ ಒಡಲ ತಣ್ಣಗಿಡಲು
ಇಷ್ಟು ಸಾಕು ಸದ್ಯ ಎನುತ’
ಚೂರು ಮಾಂಸ ಕಚ್ಚಿಕೊಂಡು ಹಾರಿ ಹೋಯಿತು
ಒಂದು ಮರದ ಕೊಂಬೆಗಿಳಿದು
ಕುಳಿತುಕೊಂಡು ಮಾಂಸ ತಿನಲು
ತವಕದಿಂದ ಮರವನರಸಿ ಕುಳಿತುಕೊಂಡಿತು
3
‘ಚೂರು ಮಾಂಸ ಕಚ್ಚಬೇಕು
ತೃಪ್ತಿಯಿಂದ ಜಿಗಿಯಬೇಕು
ಸವಿಯಬೇಕು’ ಎಂದುಕೊಂಡು ಬಾಯಿಗಿಟ್ಟಿತು
ಅಷ್ಟರಲ್ಲಿ ಹಳೆಯ ಗೆಳೆಯ
ನರಿಯು ಬಂದು ಹರುಷದಿಂದ
ಕೈಯ ಬೀಸಿ ‘ಕಾಗೆಯಣ್ಣ’ ಎಂದು ಕರೆಯಿತು
4
‘ನಿನ್ನ ನೋಡಿ, ಮಾತನಾಡಿ
ನಿನ್ನ ಕೂಡೆ ಲಲ್ಲೆ ಹೊಡೆದು
ನಿನ್ನ ಹಾಡು ಕೇಳಿ ಹಲವು ವರ್ಷವಾಯಿತು
‘ಈಗ ನೋಡು ಸಮಯ ಬಂತು
ನಿನ್ನ ನೆನೆದು ಓಡಿ ಬಂದೆ
ಒಂದೆ ಹಾಡು ಸಾಕು, ಒಮ್ಮೆ ಹಾಡು’ ಎಂದಿತು
5
ನೆನೆಯಿತಾಗ ಕಾಗೆಯಣ್ಣ
ಹಿಂದೆ ಹೀಗೆ ಒಂದು ನರಿಯು
ತನ್ನ ತಾತನಿಂದ ತಿಂಡಿ ಕಸಿದ ಕಥೆಯನು
ನರಿಯ ಕಪಟ ಬಲ್ಲ ಕಾಗೆ
ಕುಶಲದಿಂದ ಬಾಯಿ ಬಿಡದೆ
ಬಾಯಿಯಿಂದ ಕಾಲ್ಗೆ ತಂತು ಮಾಂಸ ಚೂರನು
6
‘ಮರೆಯಲಾರೆ ಗೆಳೆಯ ನಾನು
ನಿನ್ನ ತಾತ ಹೀಗೆ ಹೇಳಿ
ನನ್ನ ತಾತನಿಂದ ತಿಂಡಿ ಕಸಿದ ಕಥೆಯನು
ಮತ್ತೆ ನಾನು ಮೋಸ ಬಿದ್ರೆ
ಜಗದಿ ಬದುಕೊ ಹಕ್ಕು ಇಲ್ಲ
ಎಂಬ ಅರಿವು ನನಗೆ ಈಗ ಮನದಿ ಮೂಡಿದೆ
7
ನಿನ್ನ ನಂಬೆ ನಾನು ಇನ್ನು
ಬಲ್ಲೆ ನಿನ್ನ ಮನದ ಕಪಟ
ನಯದ ನುಡಿಯು ಸಾಕು ತೊಲಗು ನಾನು ಹಾಡೆನು
ಅಸಮರೊಡನೆ ಸ್ನೇಹ ಮಾಡಿ
ಮೂರ್ಖನಾಗೊ ಇಚ್ಛೆ ಇಲ್ಲ
ಹಿರಿಯರಿಂದ ಕಲಿತ ಪಾಠ ನಾನು ಮರೆಯೆನು’
8
ಎಲ್ಲ ಕಾಲದಲ್ಲು ಮೋಸ
ಮಾಡಿ ಬದುಕಲಾಗದೆಂಬ
ನಗ್ನಸತ್ಯವರಿತು ನರಿಯು ಹೊರಟು ಹೋಯಿತು
ಕಾಲಧರ್ಮ ಉರುಳೊ ಭೂಮಿ
ಒಮ್ಮೆ ಮೇಲೆ ಒಮ್ಮೆ ಕೆಳಗೆ
ಸತ್ಯವಿದನು ಅರಿತ ಜನರ ಕಷ್ಟ ಕಳೆವುದು

Saturday, June 13, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 18

ಬೋಂಡ, ಬಿಸ್ಕತ್ ತಯಾರಿ
ಶನಿವಾರ ಭಾನುವಾರ ಹಾಸ್ಟೆಲ್ಲಿನಲ್ಲೇ ಉಳಿದಿರುತ್ತಿದ್ದ ನಾವು ಮಾಡುತ್ತಿದ್ದ ಘನಕಾರ್ಯಗಳಲ್ಲಿ ಕೆಲವನ್ನು ಇಲ್ಲಿ ಹೇಳುತ್ತೇನೆ. ಹಾಸ್ಟೆಲ್ಲಿನವರೇನೋ ಚೆನ್ನಾಗಿಯೇ ಊಟ ತಿಂಡಿ ಕೊಡುತ್ತಿದ್ದರು. ಆದರೆ ಬಾಯಿ ರುಚಿಗೆ ಏನಾದರೂ ಮಾಡಿಕೊಂಡು ತಿನ್ನಬೇಕೆಂದು ನಮಗೆ ಆಸೆಯಾಗುತ್ತಿತ್ತು. ಧರ್ಮಣ್ಣ ಏನಾದರು ಆ ದಿನಗಳಲ್ಲಿ ಇದ್ದರೆ, ನಾವೆಲ್ಲಾ ಚಂದಾ ಹಾಕಿಕೊಂಡು ಏನಾದರು ಸಮಾನು ತಂದುಕೊಟ್ಟರೆ, ತಿಂಡಿ ಮಾಡಿಕೊಡುತ್ತಿದ್ದ. ಬೇರೆ ಭಟ್ಟರ ಬಳಿ ನಮ್ಮ ಆಟ ಏನೂ ನಡೆಯುತ್ತಿರಲಿಲ್ಲ. ಹೆಚ್ಚಾಗಿ ಮಾಡುತ್ತಿದ್ದ ತಿಂಡಿಗಳೆಂದರೆ, ಪುರಿ ಉಪ್ಪಿಟ್ಟು, ಕೇಸರಿಬಾತ್, ಬೋಂಡ ಇವುಗಳಲ್ಲಿ ಯಾವುದಾದರು ಒಂದನ್ನು ಮಾತ್ರ ಒಂದು ದಿನ ಮಾಡುತ್ತಿದ್ದೆವು. ಧರ್ಮಣ್ಣ ಇಲ್ಲದ ದಿನಗಳಲ್ಲಿ ನಾವೇ ತಯಾರು ಮಾಡಿಕೊಂಡು ತಿನ್ನಬೇಕಾಗಿತ್ತು. ಅದೂ ಹಾಸ್ಟೆಲ್ಲಿನಿಂದ ಹೊರಗೆ.
ಒಮ್ಮೆ ಬೋಂಡ ಮಾಡಬೇಕೆಂದು ಕಡ್ಲೆಹಿಟ್ಟು, ಈರುಳ್ಳಿ, ಮೆಣಸಿನಕಾಯಿ ಎಲ್ಲವನ್ನೂ ತಂದು ಹದ ಮಾಡಿ ಇಟ್ಟುಕೊಂಡಿದ್ದೆವು. ಒಂದಿಬ್ಬರನ್ನು ಕುಂದೂರಿಗೆ ಕಳುಹಿಸಿ ಎಣ್ಣೆ ಮಾರುವವನಿಂದ ಅರ್ಧಲೀಟರ್ ಎಣ್ಣೆಯನ್ನು ತರಿಸಿದ್ದೆವು. ಚೆನ್ನಾಗಿ ಕಾದ ಎಣ್ಣೆಗೆ ಕಲಸಿದ ಹಿಟ್ಟನ್ನು ಹಾಕಿದ್ದೇ ತಡ, ಬುಗ್ಗನೆ ನೊರೆಯೆದ್ದು ಎಣ್ಣೆಯೆಲ್ಲಾ ಒಲೆಯಲ್ಲಿ ಚೆಲ್ಲಿ ಹೊಗೆ ಸುತ್ತಿಕೊಂಡು ಎಣ್ಣೆ ಬಾಂಡಲಿಗೂ ಬೆಂಕಿ ಹಚ್ಚಿಕೊಂಡಿಬಿಟ್ಟಿತ್ತು. ಸಧ್ಯ! ಯಾರಿಗೂ ಏನೂ ಆಗಿರಲಿಲ್ಲ. ಯಾರೋ ಒಂದು ಬಕೆಟ್ ನೀರನ್ನು ಎಣ್ಣೆ ಬಾಂಡಲಿ ಸಮೇತ ಒಲೆಗೆ ಸುರಿದಿದ್ದರು.
ಮತ್ತೆ ಒಲೆ ಹತ್ತಿಸಿ, ಉಳಿದಿದ್ದ ಎಣ್ಣೆಯನ್ನು ಕಾಯಿಸಿ ಹಿಟ್ಟನ್ನು ಹಾಕಿದಾಗಲೂ ಎಣ್ಣೆ ಬುಗ್ಗನೆ ಉಕ್ಕುತ್ತಿತ್ತು. ಈ ಬಾರಿ ಉರಿ ಕಡಿಮೆ ಮಾಡಿದ್ದರೂ ಒಂದೊಂದು ಚೂರು ಹಿಟ್ಟನ್ನು ಹಾಕಿದಂತೆ ಎಣ್ಣೆ ಉಕ್ಕಿ ಉಕ್ಕಿ ಚೆಲ್ಲುವ ಹಂತಕ್ಕೆ ಬರುತ್ತಿತ್ತು. ಕೊನೆಗೆ ಅಂದು ಬೋಂಡ ಮಾಡುವ ಆಸೆಯನ್ನು ಕೈ ಬಿಟ್ಟೆವು. ದುಡ್ಡನ್ನೂ ಕಳೆದುಕೊಂಡೆವು. ಮುಂದೆ ಧರ್ಮಣ್ಣನಿಗೆ ಈ ವಿಷಯ ತಿಳಿಸಿದಾಗ, ‘ಎಣ್ಣೆಯವನು ಯಾವುದೋ ಕಲಬೆರೆಕೆ ಎಣ್ಣೆಯನ್ನೋ ಹುಚ್ಚೆಳ್ಳು ಎಣ್ಣೆಯನ್ನೋ ಕೊಟ್ಟಿದ್ದಾನೆ’ ಎಂದು ಹೇಳಿದ.
ಇನ್ನೊಮ್ಮೆ ಒಬ್ಬ ಹುಡುಗನ ಮಾತು ಕಟ್ಟಿಕೊಂಡು ಬೆಣ್ಣೆ ಬಿಸ್ಕತ್ ಮಾಡಲು ತೀರ್ಮಾನಿಸಿದ್ದೆವು. ಆ ಹುಡುಗ ಹೇಳಿದಂತೆ ರವೆ, ತುಪ್ಪ ಮತ್ತು ಸಕ್ಕರೆಯನ್ನು ತಲಾ ಕಾಲು ಕೇಜಿಯಂತೆ ತಂದು ಚೆನ್ನಾಗಿ ಕಲೆಸಿದೆವು. ಒಂದು ಬಾಣಲೆಯಲ್ಲಿ ಮರಳನ್ನು ತುಂಬಿ ಅದನ್ನು ಒಲೆಯ ಮೇಲೆ ಇಟ್ಟು ಬೆಂಕಿ ಕೊಟ್ಟೆವು. ಕಲೆಸಿ ಸಿದ್ಧಪಡಿಸಿದ ಹಿಟ್ಟನ್ನು ಬಿಸ್ಕತ್ ಆಕಾರಕ್ಕೆ ತಟ್ಟಿ, ತುಪ್ಪ ಸವರಿದ ತಟ್ಟೆಗಳಿಗೆ ಜೋಡಿಸಿ, ಕಾದ ಮರಳಿನ ಮೇಲೆ ಇಡುತ್ತಿದ್ದೆವು. ಮೇಲೊಂದು ತಟ್ಟೆಯನ್ನೂ ಮುಚ್ಚಿದ್ದೆವು. ಕಾಲು ಗಂಟೆಯ ಹೊತ್ತು ಚೆನ್ನಾಗಿ ಉರಿ ಹಾಕಿ ಬೇಯಿಸಿದೆವು. ಏನೋ ಸುಟ್ಟ ಸುಟ್ಟ ತುಪ್ಪದ ವಾಸನೆ ಬಂದಾಗ ಕೆಳಗಿಳಿಸಿ ನೋಡಿದೆವು. ಆಹಾ! ಏನು ಹೇಳುವುದು? ನಾವು ಬಿಸ್ಕೆಟ್‌ನ ಆಕಾರದಲ್ಲಿ ಇಟ್ಟಿದ್ದೆಲ್ಲಾ ಕಲೆಸಿ ಒಂದುಗೂಡಿಬಿಟ್ಟಿತ್ತು. ಎತ್ತಿಕೊಳ್ಳಲು ಹೋದರೆ ಹುಡಿಹುಡಿಯಾಗಿ ಉದುರುತ್ತಿತ್ತು. ಬಾಯಿಗೆ ಇಟ್ಟರೆ ಮಣ್ಣನ್ನು ತಿಂದಂತಾಗುತ್ತಿತ್ತು. ಸಕ್ಕರೆ ಹಾಕಿದ್ದರಿಂದ ಸಿಹಿಯಾಗೇನೋ ಇತ್ತು! ಆದರೆ ನಾವು ನಿರೀಕ್ಷಿಸಿದ ಬಿಳಿ ಅಥವಾ ಹಳದಿ ಬಣ್ಣದ ನಯವಾದ ಬೆಣ್ಣೆ ಬಿಸ್ಕತ್ ನಮಗೆ ಸಿಗಲಿಲ್ಲ.
ಇದನ್ನೂ ಧರ್ಮಣ್ಣನ ಬಳಿ ಹೇಳಿದಾಗ ‘ಹೇ ಬಡ್ಡೆತ್ತವಾ! ಬಿಸ್ಕತ್ತಿಗೆ ಯಾವನಾರ್ರು ರವೆ ಹಾಕ್ತಾನ? ಕಡ್ಲೆಹಿಟ್ಟನ್ನು ಗೋಧಿಹಿಟ್ಟನ್ನು ಹಾಕಬೇಕಾಗಿತ್ತು’ ಎಂದ. ಮೊದಲೇ ದುಡ್ಡು ಕಳೆದುಕೊಂಡು ಬೆಣ್ಣೆ ಬಿಸ್ಕತ್ ತಿನ್ನಲು ಆಗದೆ ಬೇಜಾರಿನಲಿದ್ದ ನಮಗೆ ಧರ್ಮಣ್ಣ ಬಯ್ದಿದ್ದು ಇನ್ನೂ ಬೇಜಾರಾಗಿತ್ತು. ನಾವೆಲ್ಲಾ ಇಂಗು, ಅಲ್ಲಲ್ಲ ರವೆ ತಿಂದ ಮಂಗನಂತಾಗಿದ್ದೆವು. ಆದರೆ ಮುಂದೊಂದು ದಿನ ಧರ್ಮಣ್ಣನ ಕೈಯಲ್ಲೇ ಗರಿಗರಿಯಾದ ಬೆಣ್ಣೆ ಬಿಸ್ಕತ್‌ಗಳನ್ನು ಮಾಡಿಸಿಕೊಂಡು ತಿಂದು ಅವನು ಬಯ್ದದ್ದನ್ನು ಮರೆತುಬಿಟ್ಟೆವು!
‘ಬಾಂಬ್’ ಮಾಡುವ ಸಾಹಸ!
ಹಾಸ್ಟೆಲ್ಲಿನಲ್ಲಿ ನಮಗೆ ರಾತ್ರಿಯ ಉಪಯೋಗಕ್ಕೆ ಕೊಡುತ್ತಿದ್ದ ಸೀಮೆಎಣ್ಣೆ ದೀಪ ಮತ್ತು ಕ್ಯಾಂಡಲ್‌ಗಳನ್ನು ಬಳಸಿಕೊಂಡು ಏನೇನೋ ಸಂಶೋಧನೆಗಳನ್ನು ನಾವು ಮಾಡುತ್ತಿದ್ದೆವು. ಕ್ಯಾಂಡೆಲ್‌ಗಳನ್ನು ಉಳಿತಾಯ ಮಾಡಬಹುದೆಂದು ಒಂದು ಲೋಟದೊಳಗೆ ಅದನ್ನು ನಿಲ್ಲಿಸಿ, ಅದರ ಕುತ್ತಿಗೆಯವರೆಗೂ ನೀರು ತುಂಬಿ ನಂತರ ಉರಿಸುತ್ತಿದ್ದೆವು. ಸೊಳ್ಳೆಗಳನ್ನು ದೂರ ಮಾಡಲು ಬಳಸುತ್ತಿದ್ದ ಗಂಧದಕಡ್ಡಿಗಳನ್ನು ನೀರಿನಲ್ಲಿ ನೆನೆಸಿ ಉರಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಹೆಚ್ಚು ಹೊತ್ತು ಉರಿಯುತ್ತದೆ ಎಂದು ಸಂಶೋಧಿಸಿದ್ದೆವು.
ಒಂದು ಶೀಷದ ಮುಚ್ಚಳಕ್ಕೆ ಸ್ವಲ್ಪ ಸೀಮೆಎಣ್ಣೆ ಸುರಿದು, ಅದಕ್ಕೆ ಒಂದು ಚೂರು ಕಾಗದ ಹಾಕಿ ಬೆಂಕಿ ಹಚ್ಚುತ್ತಿದ್ದೆವು. ಬೆಂಕಿ ಧಗಧಗಿಸಿ ಉರಿಯುವಾಗ ಇಂಕ್ ಪೆನ್ನಿನಿಂದ ಇಂಕನ್ನು ಆ ಬೆಂಕಿಗೆ ಕೊಡವುತ್ತಿದ್ದೆವು. ಆಗ ಬೆಂಕಿ ದಿಗ್ಗನೆಂದು ಒಂದು ಮೀಟರ್ ಗೋಳಾಕಾರವಾಗಿ ವಿಚಿತ್ರ ಶಬ್ದ ಮಾಡುತ್ತಾ ಆವರಿಸುತ್ತಿತ್ತು. ಇಂಕನ್ನು ಹಾಸ್ಟೆಲ್ಲಿನಿಂದಲೇ ಕೊಡುತ್ತಿದ್ದರಿಂದ ಇಂತಹ ಕೆಲಸಗಳಿಗೆ ಅದನ್ನು ಧಾರಾಳವಾಗಿ ಉಪಯೋಗಿಸಲು ನಮಗೆ ಯಾವುದೇ ಜಿಪುಣತನವಿರಲಿಲ್ಲ. ಇಂಕನ್ನು ಜಾಸ್ತಿ ಹಾಕಿದಂತೆಲ್ಲಾ ಬೆಂಕಿಯ ಜ್ವಾಲೆಗಳ ಅರ್ಭಟ, ಆಗ ಹಿತವಾಗಿ ಕೇಳಿಸುತ್ತಿದ್ದ ಶಬ್ದ ನಮ್ಮನ್ನು ಪ್ರಚೋದಿಸುವಂತಿತ್ತು. ಒಮ್ಮೆ ಪೆನ್ನಿನ ನಿಬ್ಬನ್ನೇ ತೆಗೆದು ಪೆನ್ನಿನಲ್ಲಿದ್ದ ಇಡೀ ಇಂಕನ್ನು ಒಮ್ಮೆಯೇ ಸುರಿದಿದ್ದರಿಂದ ನಾವು ಊಹಿಸಿದ್ದಕ್ಕಿಂತ ಹೆಚ್ಚಾಗಿ ಹಾಗೂ ವೇಗವಾಗಿ ಜ್ವಾಲೆಗಳು ನಮ್ಮೆಡೆಗೆ ನುಗ್ಗಿ ನಮ್ಮ ತಲೆಕೂದಲೆಲ್ಲಾ ಸುಟ್ಟು ಕರಕಲಾಗಿದ್ದವು!
ನಮ್ಮ ಈ ರೀತಿಯ ಯಾವುದೇ ನಿರ್ಬಂಧವಿಲ್ಲದ ಸಾಹಸ ಪ್ರವೃತ್ತಿ ಒಮ್ಮೆ ಅತ್ಯಂತ ಅಪಾಯಕರ ಸನ್ನಿವೇಶವನ್ನು ಸೃಷ್ಟಿಸಿತ್ತು. ಯಾವುದೋ ಸಿನಿಮಾದಲ್ಲಿ ಬಾಟಲಿಗೆ ಬೆಂಕಿ ಹಚ್ಚಿಕೊಂಡು ಎಸೆಯುವುದು, ಅದು ‘ಢಮ್’ ಎಂದು ಶಬ್ದ ಮಾಡುತ್ತಾ ಬೆಂಕಿಯ ಗೋಳವನ್ನು ನಿರ್ಮಿಸಿದ್ದನ್ನು ನೋಡಿದ ನಾವು, ಬಾಟಲಿ ಬಾಂಬ್ ತಯಾರಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದೆವು. ಸೀಮೆಎಣ್ಣೆಗೆ ಯೋಚನೆ ಮಾಡುವಂತಿರಲಿಲ್ಲ. ಸಿನಿಮಾಗಳಲ್ಲಿ ಪೆಟ್ರೋಲ್ ಬಳಸುತ್ತಾರೆಂದು ನಮಗೆ ಗೊತ್ತಿರಲಿಲ್ಲ. ಇನ್ನು ಖಾಲಿ ಬಾಟಲಿಗೇನೂ ನಾವು ಯೋಚನೆ ಮಾಡುವಂತಿರಲಿಲ್ಲ. ಮೆಳೆಯಮ್ಮನಿಗೆ ಬಲಿ ಕೊಟ್ಟು, ಬಾಡೆಸರು (ಮಾಂಸದ ಸಾರು) ಮಾಡಿಕೊಂಡು, ಉಂಡು ಹೋಗುವವರಲ್ಲಿ ಬಹುತೇಕರು ಚೆನ್ನಾಗಿ ಬೀರು, ಬ್ರ್ಯಾಂಡಿಗಳನ್ನು ಕುಡಿದು ಎಲ್ಲೆಂದರಲ್ಲಿ ಖಾಲಿ ಬಾಟಲಿಗಳನ್ನು ಬಿಸಾಕಿ ಹೋಗುತ್ತಿದ್ದರು. ಹಾಸ್ಟೆಲ್ಲಿನ ಕೆಲವು ಹುಡುಗರು, ಐಸ್ಕ್ಯಾಂಡಿಯನ್ನು ತಿನ್ನಲಿಕ್ಕಾಗಿ ಈ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದರು. ಹುಡುಗರು ಸಂಗ್ರಹಿಸಿ ಬಚ್ಚಿಟ್ಟಿದ್ದ ಬಾಟಲಿಗಳನ್ನು ನಾವು ಕೆಲವರು ಕದ್ದು ಐಸ್ಕ್ಯಾಂಡಿಯನ್ನು ತಿನ್ನುತ್ತಿದ್ದೆವು! ಒಂದು ಬಾಟಲಿಗೆ ಎರಡೆರಡು ಐಸ್ಕ್ಯಾಂಡಿಗಳನ್ನು ಮಾರುವವನು ಕೊಡುತ್ತಿದ್ದ ಕೊಡುತ್ತಿದ್ದ!
ಒಂದು ಭಾನುವಾರ ಒಂದು ಲೀಟರ್‌ನಷ್ಟು ಸೀಮೆಣ್ಣೆಯನ್ನೂ ಒಂದೆರಡು ಬಾಟಲ್‌ಗಳನ್ನೂ ತೆಗೆದುಕೊಂಡು ಹತ್ತಿರದ ಕುರುಚಲು ಕಾಡನ್ನು ಸೇರಿದೆವು. ಬಾಟಲಿಗೆ ಕಾಲುಭಾಗದಷ್ಟು ಸೀಮೆ ಎಣ್ಣೆ ಹಾಕಿ ಬಟ್ಟೆಯ ತುಂಡನ್ನು ಅದರೊಳಗೆ ತುರುಕಿ ಬೆಂಕಿ ಕಡ್ಡಿ ಗೀರಿ ಅದರೊಳಕ್ಕೆ ಹಾಕಿ ಮುಚ್ಚಳ ಹಾಕುವುದೆಂದು ನಿರ್ಧರಿಸಿದ್ದೆವು. ಆದರೆ ನಾವು ಎಷ್ಟೇ ಬೆಂಕಿ ಕಡ್ಡಿ ಹಾಕಿದರೂ ಬಾಟಲಿಯೊಳಗೆ ಬೆಂಕಿ ಹಚ್ಚಿಕೊಳ್ಳಲೇ ಇಲ್ಲ! ಒಂದು ಹಂತದಲ್ಲಿ ನಮಗೆ ಸೀಮೆಣ್ಣೆಯ ಮೇಲೇ ಅನುಮಾನ ಬಂದು, ಬೇರೆಯಾಗಿ ಬಟ್ಟೆಯನ್ನು ಸೀಮೆಣ್ಣೆಯಲ್ಲಿ ನೆನೆಸಿ ಕಡ್ಡಿ ಗೀರಿದಾಗ ದಿಗ್ಗನೆ ಹಚ್ಚಿಕೊಂಡು ಉರಿದುಹೋಯಿತು. ಕೊನೆಗೆ ಸೀಮೆಣ್ಣೆಯನ್ನು ಅರ್ಧಕ್ಕಿಂತ ಜಾಸ್ತಿ ಹಾಕಿ, ಅದರೊಳಗೆ ಸ್ವಲ್ಪವೇ ಬಟ್ಟೆ ತುಂಡನ್ನು ಹಾಕಿ ಬೆಂಕಿ ಕಡ್ಡಿ ಗೀರಿ ಹಾಕಿದೆವು. ಬಾಟಲಿಯೊಳಗೆ ಹಾಕುವವರೆಗೂ ನಮ್ಮ ಕೈಯಲ್ಲಿ ಚೆನ್ನಾಗಿ ಉರಿಯುತ್ತಿದ್ದ ಬೆಂಕಿಕಡ್ಡಿ ಅದರೊಳಗೆ ಬೀಳುತ್ತಲೇ ತಣ್ಣಗಾಗಿಬಿಡುತ್ತಿತ್ತು. ಹೀಗೆ ಸುಮಾರು ಎರಡು ಮೂರು ಗಂಟೆಗಳ ನಮ್ಮ ನಿಷ್ಫಲ ಪ್ರಯತ್ನವನ್ನು ನಿಲ್ಲಿಸಿ ಉಳಿದಿದ್ದ ಸೀಮೆಣ್ಣೆ, ಬಾಟಲಿ, ಬಟ್ಟೆತುಂಡು ಎಲ್ಲವನ್ನೂ ಎಸೆದು ಹಿಂದಿರುಗಲು ನಿರ್ಧರಿಸಿದೆವು. ನಾನು ವಿಜ್ಞಾನ ಪಾಠದಲ್ಲಿ ಓದಿದ್ದ ಒಂದು ತತ್ವವನ್ನು ಅಲ್ಲಿ ವಿವರಿಸಿ ಆ ಕಾರಣದಿಂದ ಬೆಂಕಿ ಹಚ್ಚಿಕೊಳ್ಳುತ್ತಿಲ್ಲ ಎಂದು ತೀರ್ಮಾನ ಕೊಟ್ಟೆ! ಹೊರಗೆ ಬೆಂಕಿ ಹಚ್ಚಿದರೆ ಉರಿಯುತ್ತಿದ್ದ ಸೀಮೆಣ್ಣೆ ಬಾಟಲಿಯ ಒಳಗೆ ಉರಿಯದಿರಲು ಅಲ್ಲಿ ಉಂಟಾಗುತ್ತಿದ್ದ ಆಮ್ಲಜನಕದ ಕೊರತೆಯೇ ಕಾರಣವಾಗಿತ್ತು! ಸರಿ, ನನ್ನ ವೈಜ್ಞಾನಿಕ ವಿಶ್ಲೇಷಣೆಯನ್ನು ಒಪ್ಪಿ ಅಲ್ಲಿಂದ ಹಿಂತಿರುಗುವಾಗ, ಸೋಮಶೇಖರ ತನ್ನ ಕೈಯಲ್ಲಿದ್ದ ಬೆಂಕಿಕಡ್ಡಿಯನ್ನು ಗೀರಿ ನಾವು ಬಿಸಾಡಿದ್ದ ಬಾಟಲಿಯೆಡೆಗೆ ಎಸೆದ. ನಾವು ಸ್ವಲ್ಪ ದೂರ ಬರುವಷ್ಟರಲ್ಲಿ ‘ಢಮ್’ ಎಂದು ಕೋವಿಯಿಂದ ಈಡು ಹೊಡೆದಂತೆ ಶಬ್ದ ಹಾಗೂ ದೊಡ್ಡದಾದ ಬೆಂಕಿಯ ಗೋಳ ಎರಡೂ ಒಟ್ಟಿಗೆ ಉಂಟಾಗಿತ್ತು. ನಾವೆಲ್ಲಾ ಕಣ್ಣೆವೆ ಮುಚ್ಚುವಷ್ಟರಲ್ಲಿ ಪಾರಾಗಿಬಿಟ್ಟಿದ್ದೆವು. ಸೋಮಶೇಖರ ಒಂದೆರಡು ಘಳಿಗೆ ಮುಂಚೆ ಏನಾದರೂ ಬೆಂಕಿಕಡ್ಡಿ ಗೀರಿ ಎಸೆದಿದ್ದರೆ ಇನ್ನೂ ಹತ್ತಿರದಲ್ಲೇ ಇದ್ದ ಕೆಲವರಿಗಾದರೂ ಬೆಂಕಿಯ ಜ್ವಾಲೆಗಳು ಬಡಿಯುತ್ತಿದ್ದವು; ಇಲ್ಲಾ ಬಾಟಲಿಯ ಚೂರುಗಳು ಬಂದು ಅಪ್ಪಳಿಸುತ್ತಿದ್ದವು. ಆಗ ನನ್ನ ವೈಜ್ಞಾನಿಕ ವಿಶ್ಲೇಷಣೆಯೇ ತಪ್ಪೆಂದು ಕೆಲವರು ವಾದ ಮಾಡಿದ್ದರು. ನಾವು ಇನ್ನೊಮ್ಮೆ ಪ್ರಯತ್ನ ಪಟ್ಟಿದ್ದರೆ ಖಂಡಿತಾ ಬಾಂಬ್ ಸಿಡಿಯುತ್ತಿತ್ತು ಎಂಬುದು ಅವರ ವಾದವಾಗಿತ್ತು. ಆದರೆ ಆ ಸ್ಫೋಟಕ್ಕೆ ಕಾರಣ ನನಗೆ ಸ್ಪಷ್ಟವಾಗಿತ್ತು. ಅಳಿದುಳಿದ ಸೀಮೆಎಣ್ಣೆ ಬಟ್ಟೆಚೂರು ಎಲ್ಲವನ್ನೂ ಒಂದೆಡೆಗೆ ಚೆಲ್ಲಿ, ಮುಚ್ಚಳ ಹಾಕದೆ, ಆದರೆ ಸೀಮೆಎಣ್ಣೆ ಮತ್ತು ಬಟ್ಟೆ ಚೂರುಗಳಿದ್ದ ಬಾಟಲಿಯನ್ನು ಅದರ ಪಕ್ಕದಲ್ಲೇ ಎಸೆದು ಬಂದಿದ್ದರಿಂದ, ಬೆಂಕಿ ನಿಧಾನವಾಗಿ ದಹಿಸುತ್ತಾ ಬಾಟಲಿಯಲ್ಲಿದ್ದ ಬಟ್ಟೆಗೆ ಆವರಿಸಿ ಬಾಟಲಿ ಸ್ಫೋಟಗೊಂಡಿತ್ತು!

Tuesday, June 09, 2009

ಪಂಪಭಾರತದಲ್ಲಿ ಸೂರ್ಯಾಸ್ತ! - ಭಾಗ : 2

{ಕಳೆದ ವಾರದಿಂದ ಮುಂದುವರೆದಿದೆ......}
ಸೂರ್ಯನ ಮಗನಾದ ಕರ್ಣನ ಸಾವಿನ ದಿನದ ಸೂರ್ಯಾಸ್ತ ಹೇಗಿತ್ತು? ‘ಮಹಾಭಾರತದಲ್ಲಿ ಯಾರನ್ನಾದರು ನೆನಯುವುದಾದರೆ ಕರ್ಣನನ್ನು ನೆನೆ’ ಎಂದು ಹಾಡಿದ ಪಂಪ ಆ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಿದ್ದಾನೆ. ಕರ್ಣ ಸತ್ತಾಗ,
ಪೞುಗೆಯನ್ ಉಡುಗಿ
ರಥಮಂ ಪೆೞವನನ್ ಎಸಗಲ್ಕೆವೇೞ್ದು
ಸುತಶೋಕದ ಪೊಂಪುೞಯೊಳ್ ಮೆಯ್ಯಱಯದೆ
ನೀರಿೞವಂತೆವೊಲ್ ಇೞದನ್ ಅಪರಜಳಧಿಗೆ ದಿನಪಂ
[ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಧಿಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ಸ್ನಾನಮಾಡುವ ಹಾಗೆ ಪಶ್ಚಿಮಸಮುದ್ರಕ್ಕೆ ಇಳಿದನು.]
ಪುತ್ರಶೋಕ ನಿರಂತರಂ ಎಂಬ ಮಾತಿದೆ. ಅದು ಸ್ವತಃ ಸೂರ್ಯನಿಗೂ ತಪ್ಪಿದ್ದಲ್ಲ! ಏಕೆಂದರೆ ಕಾವ್ಯ ಪ್ರಪಂಚದಲ್ಲಿ ಸೂರ್ಯ ಒಂದು ಮಾನವ ನಿರ್ಮಿತ ಪಾತ್ರ ಮಾತ್ರ. ಮಾನವನ ಅಳತೆಯನ್ನು ಆತನೂ ಮೀರಲಾರ!
ದುರ್ಯೋಧನ ಭೀಷ್ಮನ ಆಣತಿಯಂತೆ ವೈಶಂಪಾಯನ ಸರೋವರದಲ್ಲಿ ಮುಳುಗಿದ್ದನ್ನು ಪಂಪ ಸೂರ್ಯಾಸ್ತದೊಂದಿಗೆ ಸಮೀಕರಿಸಿದ್ದಾನೆ.
ಸಮಸ್ತಭೂವಳಯಮಂ ನಿಜ ತೇಜದಿನ್ ಬೆಳಗಿ
ಆಂತ ದೈತ್ಯರಂ ತಳವೆಳಗಾಗೆ ಕಾದಿ
ಚಳಿತೆಯ್ದಿ ಬೞಲ್ದು
ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್
ಆ ಕೊಳದೊಳ್ ಫಣಿರಾಜಕೇತನಂ ಮುೞುಗಿದನ್
ಆರ್ಗಂ ಏಂ? ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ!?
[ಸಮಸ್ತ ಭೂಮಂಡಲವನ್ನೂ ತನ್ನ ತೇಜಸ್ಸಿನಿಂದ ಪ್ರಕಾಶಗೊಳಿಸಿ ಬಳಲಿ ಪಶ್ಚಿಮಸಮುದ್ರದಲ್ಲಿ ಮುಳುಗುವ ಸೂರ್ಯನ ಹಾಗೆ ತನಗೆ ಪ್ರತಿಭಟಿಸಿದ ಶತ್ರುಗಳನ್ನು ತಲೆಕೀಳಾಗುವಂತೆ ಮಾಡಿ (ಕೊನೆಗೆ ತಾನು) ಕಾಂತಿಹೀನನಾಗಿ ಪೂರ್ಣವಾಗಿ ದುರ್ಯೋಧನನು ಆ ಸರೋವರದಲ್ಲಿ ಮುಳುಗಿದನು, ಎಂದ ಮೇಲೆ ಯಾರಿಗಾದರೇನು? ವಿಧಿಯು ಕಟ್ಟಿಟ್ಟಿರುವುದನ್ನು ಕಳೆಯುವುದಕ್ಕೆ ತೀರುತ್ತದೆಯೇ!?]
ಜಗತ್ತಿಗೇ ಬೆಳಕ್ಕನು ಕೊಡುವ ಸೂರ್ಯ ಪಶ್ಚಿಮಾಂಬುದಿಯಲ್ಲಿ ಇಳಿದರೆ, ಶತ್ರುರಾಜರಿಗೆ ಸಿಂಹಸ್ವಪ್ನವಾಗಿದ್ದ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಇಳಿಯುತ್ತಾನೆ! ವಿಧಿ ನೆಯ್ದಿರುವ ಬಲೆಯಿಂದ ಯಾರಿಗೂ ಬಿಡುಗಡೆಯೇ ಇಲ್ಲ. ಸಮಸ್ತ ಜಗತ್ತನ್ನು ತನ್ನ ಬೆಳಕಿನಿಂದ ಬೆಳಗುವ, ಶಾಖದಿಂದ ಸಲಹುವ ಸ್ವತಃ ಸೂರ್ಯನೇ ವಿಧಿಯ ವಶನಾಗಿರುವಾಗ ಉಳಿದಿರುವ ಪಾಡೇನು? ಎಂಬುದು ಕವಿಯ ಆಶಯ.
ತೊಡೆ ಮುರಿದುಕೊಂಡು ಬಿದ್ದಿದ್ದ ದುರ್ಯೋಧನನ ಬಳಿ ಬಂದ ಅಶ್ವತ್ಥಾಮ ಕೋಪೋದ್ರಿಕ್ತನಾಗಿ ಪಾಂಡವರ ತಲೆಗಳನ್ನು ಕಡಿದು ತುರುತ್ತೇನೆ ಎಂದು ಹೊರಡುತ್ತಾನೆ. ಆಗ ಸೂರ್ಯಾಸ್ತವಾಗುತ್ತದೆ. ಅದನ್ನು ಕವಿ
ಮಗನ ಅೞಲೊಳ್ ಕರಂ ಮಱುಗುತಿರ್ಪಿನಂ
ಎನ್ನ ತನೂಜನ ಆಳ್ವ ಸಾಮಿಗಂ
ಅೞವಾಗೆ ಶೋಕರಸಂ ಇರ್ಮಡಿಸಿತ್ತು ಜಳಪ್ರವೇಶಂ
ಇಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನ್
ಅನಾಥನಾಗಿ ತೊಟ್ಟಗೆ ಮುೞುಪಂತೆವೋಲ್
ಮುೞುಗಿದಂ ಕಡುಕೆಯ್ದಪರಾಂಬುರಾಶಿಯೊಳ್

[‘ನಾನು ನನ್ನ ಮಗನ ಮರಣದುಃಖದಿಂದಲೇ ವಿಶೇಷ ದುಃಖಪಡುತ್ತಿರಲು, ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸ ಇಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು’ ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು].
ಕರ್ಣನ ಸ್ವಾಮಿ ದುರ್ಯೋಧನ. ಮಗನಾದ ಕರ್ಣನ ಸಾವಿನ ದುಃಖವೇ ಇನ್ನೂ ಸೂರ್ಯನಿಗೆ ಆರದಿರುವಾಗ, ಆತನ ಮಗನ ಸ್ವಾಮಿಯಾದ ದುರ್ಯೋಧನನಿಗಾದ ಪಾಡನ್ನು ನೋಡಿ ಸೂರ್ಯನೇ ಪರಿತಪಿಸುತ್ತಾನೆ. ಬಹುಶಃ ಕರ್ಣನೇನಾದರು ದುರ್ಯೋಧನನ ಈ ರೀತಿಯ ಅಂತ್ಯವನ್ನು ನೋಡಿದ್ದರೆ! ಅದನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ಆತನ ತಂದೆಯಾಗಿ ಸೂರ್ಯ ಪರಿತಪಿಸುವುದು ಕರ್ಣನ ಸ್ವಾಮಿಭಕ್ತಿಯ ಔನ್ಯತ್ಯಕ್ಕೆ ಪೂರಕವಾಗಿದೆ.
ಇಡೀ ಮಹಾಭಾರತವನ್ನು ಸಂಗ್ರಹಿಸಿ ಕಾವ್ಯರಚನೆ ಮಾಡಿದ ರನ್ನಕವಿಯು ದುರ್ಯೋಧನನ ಅವಸಾನವನ್ನು ಸೂರ್ಯಾಸ್ತದ ಹೋಲಿಕೆಯೊಂದಿಗೆ ಮುಕ್ತಾಯ ಮಾಡಿದ್ದಾನೆ.
ಪಂಕಜಮುಮ್
ಸುಹೃದ್ ವದನ ಪಂಕಜಮುಮ್ ಮುಗಿವನ್ನಮ್
ಉಗ್ರ ತೇಜಂ ಕಿಡುತಿರ್ಪಿನಂ
ನಿಜ ಕರಂಗಳನ್ ಅಂದು ಉಡುಗುತ್ತುಮಿರ್ಪ
ಚಕ್ರಾಂಕಮ್ ಅಗಲ್ವಿನಂ
ಕ್ರಮದಿನ್ ಅಂಬರಮಂ ಬಿಸುಟು
ಉರ್ವಿಗೆ ಅಂಧಕಾರಂ ಕವಿತರ್ಪಿನಂ
ಕುರುಕುಲಾರ್ಕನುಮ್
ಅರ್ಕನುಮ್ ಅಸ್ತಮೆಯ್ದಿದರ್!
[ತಾವರೆಯೂ,
ಮಿತ್ರವರ್ಗದವರ ಮುಖತಾವರೆಯೂ,
ಸೂರ್ಯನ ಉಗ್ರ ತೇಜಸ್ಸೂ,
ದುರ್ಯೋಧನನ ಭೂಜಬಲವೂ - ಕುಗ್ಗುತ್ತಿರಲು,
ಚಕ್ರವಾಕ ಪಕ್ಷಿಗಳೂ
ತನಗೆ ಚಕ್ರವರ್ತಿ ಎಂಬ ಹೆಸರೂ - ಅಗಲುತ್ತಿರಲು,
ಕ್ರಮವಾಗಿ
ಸೂರ್ಯನು ಆಕಾಶವನ್ನೂ
ದುಯೋಧನನು ದೇಹವೆಂಬ ಬಟ್ಟೆಯನ್ನೂ
ಬಿಟ್ಟು,
ಭೂಲೋಕಕ್ಕೆಲ್ಲಾ ಕತ್ತಲು ಕವಿಯುತ್ತಿದ್ದಂತೆಯೇ
ಸೂರ್ಯನೂ ಅಸ್ತಮಿಸಿದನು!
ಕುರುಕುಲದ ಸೂರ್ಯ(ದುರ್ಯೋಧನ)ನೂ ಅಸ್ತಮಿಸಿದನು!]
ಕುಮಾರವ್ಯಾಸಭಾರತದಲ್ಲಿ ಭೀಷ್ಮ ಶರಶಯ್ಯೆಯಲ್ಲಿ ಮಲಗಿರುವಾಗ ಪಾಂಡವ ಮತ್ತು ಕೌರವರು ಬಂದು ನೋಡಿಕೊಂಡು ಹೋಗುತ್ತಾರೆ. ಆ ದಿನದ ಸೂರ್ಯಾಸ್ತ ಹೇಗಿತ್ತು ಎಂಬುದನ್ನು ಕುಮಾರವ್ಯಾಸ ಒಂದೇ ಸಾಲಿನಲ್ಲಿ
"ಪಡುವಣಶೈಲ ವಿಪುಳಸ್ತಂಭದೀಪಿಕೆಯಂತೆ ರವಿ ಮೆಱೆದ"
ಎಂದು ಕೈವಾರಿಸಿಬಿಡುತ್ತಾನೆ. ಶರಶಯ್ಯೆಯಲ್ಲಿದ್ದ ಭೀಷ್ಮರನ್ನು ದಾಯಾದಿಗಳೇನೋ ಬಂದು ವಿಚಾರಿಸಿಕೊಂಡರು. ಹೋದರು. ಆದರೆ ಭೀಷ್ಮರ ಜೊತೆಗೆ ಯಾರು? ಕವಿಯ ಮನಸ್ಸು ಕಳವಳಗೊಳ್ಳುತ್ತದೆ. ಆಗ ಪಶ್ಚಿಮಾದ್ರಿಯ ತುದಿಯಲ್ಲಿ ದೀಪದಂತೆ ಕಾಣುತ್ತಿದ್ದ ಸೂರ್ಯ ಕವಿಗೆ ಕಾಣುತ್ತಾನೆ. ಭೀಷ್ಮನ ಬಳಿ ಒಂದು ದೀಪವಾದರೂ ಬೇಡವೆ? ಅದಕ್ಕೆ ಕವಿ ಆ ಸೂರ್ಯನನ್ನೇ ದೀಪವನ್ನಾಗಿಸಿ, ಪಶ್ಚಿಮಾದ್ರಿಯನ್ನೇ ದೀಪಸ್ತಂಭವಾಗಿಸಿ ಆ ವೀರನ ಜೊತೆಗಿರಿಸಿ ಸಮಾಧಾನ ಪಡುತ್ತಾನೆ!
ಕರ್ಣಾವಸಾನದ ಸಮಯದಲ್ಲಿ ಪಂಪನಂತೆ ಕುಮಾರವ್ಯಾಸನೂ ಸೂರ್ಯಾಸ್ತವನ್ನು ರೂಪಕವಾಗಿ ಬಳಸಿಕೊಳ್ಳುತ್ತಾನೆ. ಕೌರವನ ಕಡೆಯವರು ಕರ್ಣನ ಕಳೇಬರವನ್ನು ದಂಡಿಗೆಯಲ್ಲಿ ಎತ್ತಿಕೊಂಡು ಹೋಗುವುದನ್ನು ನೋಡಿದ ಸೂರ್ಯ- "ಮಗನು ಪ್ರಾನವನು ತೆತ್ತನೇ! ಅಕಟಾ!" ಎನ್ನುತ್ತಾ ಚಿಂತಾರಂಗದಲ್ಲಿ ಅಂಬುಜಮಿತ್ರನು ಪರವಶವಾಗಿ ಕಡಲತ್ತ ಹಾಯ್ದನು; ಅಂಬರವನ್ನು ತೊರೆದುಬಿಟ್ಟನು" ಎನ್ನುತ್ತಾನೆ ಕುಮಾರವ್ಯಾಸ. ಮುಂದುವರೆದು,
ದ್ಯುಮಣಿ ಕರ್ಣದ್ಯುಮಣಿಯೊಡನೆ ಅಸ್ತಮಿಸೆ
ಕಮಲಿನಿ ಕೌರವನ ಮುಖಕಮಲ ಬಾಡಿತು
ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋತ್ತಮನ ವಿಜಯಾಂಗನೆಗೆ
ಅಗಲಿಕೆ ಸಮನಿಸಿತು
[ಸೂರ್ಯನು ಕರ್ಣಸೂರ್ಯನೂಂದಿಗೆ ಅಸ್ತಮಿಸಿದ್ದರಿಂದ, ಕಮಲವು ಕೌರವನ ಮುಖಕಮಲದೊಂದಿಗೆ ಬಾಡಿತು! ಕತ್ತಲಿನ ಜೊತೆಗೆ ಶೋಕವೆಂಬ ಕತ್ತಲೂ ಹೆಚ್ಚಾಯಿತು! ಅಮಳಚಕ್ರಾಂಗಕ್ಕೂ ವಿಜಯಾಂಗನೆಗೂ ಅಗಲಿಕೆಯಾಯಿತು]
ಸೂರ್ಯನು ಅಸ್ತಮಿಸುವುದರೊಂದಿಗೆ ಕಮಲದ ಹೂವೂ ಬಾಡುತ್ತದೆ. ಕರ್ಣನೆಂಬ ಸೂರ್ಯ ಅಸ್ತಮಿಸಿದ್ದರಿಂದ ದುರ್ಯೋಧನನ ಮುಖಕಮಲ ಬಾಡಿತು; ಸೂರ್ಯ ಮುಳುಗುವುದರೊಂದಿಗೆ ಕತ್ತಲು ಆವರಿಸುತ್ತದೆ; ಕರ್ಣನೆಂಬ ಸೂರ್ಯ ಮುಳುಗಿದ್ದರಿಂದ ಶೋಕವೆಂಬ ಕತ್ತಲು ಆವರಿಸುತ್ತದೆ ಎಂಬ ರೂಪಕ ಗಮನಸೆಳೆಯುತ್ತದೆ.

Saturday, June 06, 2009

ಪಂಪಭಾರತದಲ್ಲಿ ಸೂರ್ಯಾಸ್ತ! - ಭಾಗ : 1

ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ;
ಬಾ ಫಾಲ್ಗುಣ ರವಿ ದರ್ಶನಕೆ!
ಕುವೆಂಪು ಅವರ ಸೂರ್ಯೋದಯ ವರ್ಣನೆಯ ಈ ಗೀತೆಯ ಸಾಲುಗಳನ್ನು ವೀಣೆಯ ನಿನಾದದೊಂದಿಗೆ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ. ಒಂದೊಂದು ಪದಗಳೂ ಸೂರ್ಯೋದಯದ ವರ್ಣದೋಕುಳಿಯನ್ನು ಕಟ್ಟಿಕೊಡುತ್ತವೆ. ಸೂರ್ಯೋದಯದ ವರ್ಣವೈಭವಕೆ ಮಾರುಹೋಗದ ಕವಿಗಳೇ ಇಲ್ಲ. ಕನ್ನಡದ ಎಲ್ಲಾ ಕವಿಗಳು ಒಂದಿಲ್ಲೊಂದು ಸಮಯದಯಲ್ಲಿ ಸೂರ್ಯೋದಯದವನ್ನು ಅನುಭವಿಸಿದವರೆ; ಬರೆದವರೆ! ಅಂತೆಯೇ ಸೂರ್ಯಾಸ್ತವನ್ನೂ ಕವಿಗಳು ಬಿಟ್ಟಿಲ್ಲ. ಆದರೆ ಇಲ್ಲಿ ಸೂರ್ಯೋದಯದ ಸೌಂದರ್ಯದ ವರ್ಣನೆಯಂತೆ ಬಣ್ಣನೆಗಿಳಿಯದೆ ಗಹನವಾದ ಸಮಯದಲ್ಲಿ ಸೂರ್ಯಾಸ್ತವನ್ನು ಒಂದು ಸಾರ್ಥಕ ಉಪಮೆಯಾಗಿ ಬಳಸಿಕೊಂಡಿರುವುದೇ ಹೆಚ್ಚು.
ಮೊನ್ನೆ ಪಂಪಭಾರತದ ದ್ವಿತೀಯಾಶ್ವಾಸದ ೮೬ನೇ ಪದ್ಯದ ಅಧ್ಯಯನ ನಡೆಯುತ್ತಿದ್ದಾಗ, ಪಂಪ ಸೂರ್ಯಾಸ್ತವನ್ನು ಒಂದು ಕಾವ್ಯಸತ್ಯವನ್ನು ಮುಂಗಾಣ್ಕೆಯಾಗಿ ಸಹೃದಯ ಓದುಗನಿಗೆ ದರ್ಶನ ಮಾಡಿಸಲು ಬಳಸಿಕೊಂಡಿರುವದು ಗಮನಕ್ಕೆ ಬಂತು. ಆಗ ಗುರುಗಳಾದ ಡಾ.ಕೆ.ಆರ್.ಗಣೇಶ ಅವರು ‘ಪಂಪಭಾರತದಲ್ಲೇ ಹಲವಾರು ಬಾರಿ ಸೂಯಾಸ್ತವನ್ನು ಪಂಪ ಚಿತ್ರಿಸಿದ್ದಾನೆ. ರನ್ನ ಕುಮಾರವ್ಯಾಸರೂ ಸೂರ್ಯಾಸ್ತವನ್ನು ಬಳಸಿಕೊಂಡಿದ್ದಾರೆ’ ಎಂದಿದ್ದರು.
ನಾನೂ ಈ ಮೂರೂ ಕವಿಗಳ ಸೂರ್ಯಾಸ್ತಮಯದ ಸನ್ನಿವೇಶ ಬರುವ ಪದ್ಯಗಳನ್ನು ಒಟ್ಟಿಗೆ ಓದಿದಾಗ, ಆ ಕವಿಗಳ ದರ್ಶನ ನನಗೆ ಮೆಚ್ಚುಗೆಯಾಯಿತು. ವಿಶೇಷವಾಗಿ ಪಂಪಭಾರತದಲ್ಲಿ ಯುದ್ಧದ ಸನ್ನಿವೇಶದಲ್ಲಿ ಆಯಾಯ ಸಂದರ್ಭಕ್ಕೆ ಅನುಗುಣವಾಗಿ ಸೂರ್ಯಾಸ್ತವನ್ನು ಹಲವಾರು ಬಾರಿ ಪಂಪ ಬಳಸಿಕೊಂಡಿದ್ದಾನೆ. ಆ ಪದ್ಯಗಳ ಓದು ನನ್ನಲ್ಲಿ ಹೆಚ್ಚಿನ ಸಂತೋಷವನ್ನುಂಟು ಮಾಡಿತು. ಆ ಸಂತೋಷವನ್ನು ನನ್ನ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ಪಂಪಭಾರತದಲ್ಲಿ ಬರುವ ಸೂರ್ಯಸ್ತದ ಸನ್ನಿವೇಶಗಳನ್ನು ನೋಡೋಣ. ಕೌರವರ ಮತ್ತು ಪಾಂಡವರ ಶಸ್ತ್ರವಿದ್ಯೆಯ ಪ್ರದರ್ಶನಕ್ಕೆ ಏರ್ಪಾಟಾಗಿದ್ದ ವೇದಿಕೆಯಲ್ಲಿ ಅರ್ಜುನನಿಗೆ ಎದುರಾಗಿ ಕರ್ಣ ಬಂದು ನಿಂತಾಗ ದುರ್ಯೋಧನನೊಬ್ಬನನ್ನುಳಿದು ಮಿಕ್ಕವರೆಲ್ಲಾ ಸೂತನೆಂದು ಛೇಡಿಸುತ್ತಾರೆ. ಆಗ ದುರ್ಯೋಧನ ಆತನಿಗೆ ಅಂಗರಾಜ್ಯದ ಅಧಿಪತಿಯನ್ನಾಗಿ ವೈಭವದಿಂದ ಪಟ್ಟವನ್ನು ಕಟ್ಟುತ್ತಾನೆ. ಆಗ ಆ ದಿನದ ಸೂರ್ಯಾಸ್ತ ಕವಿಗೆ ಹೀಗೆ ಕಾಣುತ್ತದೆ.
ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮುಯ್ವಾಂತು ಇರದಿರ್
ಗುಣಾರ್ಣವನಿನ್ ಅಸ್ತಮಯಕ್ಕಿದು ಸಾಲ್ಗುಂ ಈಗಳ್ ಎಂಬಂತೆವೊಲ್
ಅಂದು ಮುಂದಱದು ತನ್ನ ಮಗಂಗೆ ಸಮಂತು ಬುದ್ಧಿವೇೞ್ವಂತೆವೊಲ್
ಅತ್ತಲ್ ಅಸ್ತಗಿರಿಯಂ ಮಱೆಗೊಂಡುದು ಸೂರ್ಯಮಂಡಲಂ
[‘ಹೀಗೆ ದುರ್ಯೋಧನನು ಮಾಡಿದ ರಾಜ್ಯವೈಭವಕ್ಕೆ ಸುಮ್ಮನೆ ಉಬ್ಬಿಹೋಗಬೇಡ. ಗುಣಾರ್ಣವ(ಅರ್ಜುನ)ನಿಂದ ನೀನು ಸಾಯುವುದಕ್ಕೆ ಈಗ ಇಷ್ಟೇ ಸಾಕು’ ಎಂದು ಸೂರ್ಯನು ಮುಂದೆ ತನಗಾಗುವುದನ್ನು ಇಂದೇ ಪೂರ್ಣವಾಗಿ ಬುದ್ಧಿ ಹೇಳುವ ಹಾಗೆ ಅಸ್ತಮಯನಾದನು.]
ಕರ್ಣ ಸೂರ್ಯನ ಮಗ. ತನ್ನ ಮಗ ದುರ್ಯೋಧನನ ಸ್ನೇಹವನ್ನು ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅದರಿಂದಾಗಿ ಮುಂದೆ ಆತ ಅರ್ಜುನನಿಂದ ಹತನಾಗಬೇಕಾಗುತ್ತದೆ ಎಂಬ ಸತ್ಯವನ್ನು ಬಲ್ಲ ಸೂರ್ಯ, ಈಗ ನಾನು ಅಸ್ತಂಗತನಾಗುತ್ತಿರುವ ಹಾಗೆ ನೀನೂ ಅಸ್ತಂಗತನಾಗುತ್ತೀಯೇ ಎನ್ನುವ ರೀತಿಯಲ್ಲಿ ಅಸ್ತಮಿಸಿಬಿಡುತ್ತಾನೆ. ಆ ಸೂರ್ಯಾಸ್ತಮಯವು ಕರ್ಣನಿಗೆ ಸದ್ಬುದ್ಧಿಯನ್ನುಂಟು ಮಾಡಬೇಕಾಗಿತ್ತು; ಮಾಡಲಿಲ್ಲ. ಆದ್ದರಿಂದ ಮುಂದೆ ಕರ್ಣನೂ ಕುರುಕ್ಷೇತ್ರ ಯುದ್ಧದಲ್ಲಿ ಅಸ್ತಮಿಸಬೇಕಾಗುತ್ತದೆ ಎಂಬುದು ಕವಿಯ ಆಶಯ!
ಮುಂದೆ ಯುದ್ಧಭೂಮಿಯಲ್ಲಿ ಭೀಷ್ಮ ಮತ್ತು ಶ್ವೇತ (ವಿರಾಟನ ಮಗ ಹಾಗೂ ಉತ್ತರನ ಅಣ್ಣ) ಇವರ ನಡುವೆ ಯುದ್ಧ ನಡೆಯುತ್ತದೆ. ಆಗ ಶಿವಸ್ವರೂಪಿಯಾದ ಬಿಲ್ಲನ್ನು ಧರಿಸಿ, ರಣಭಯಂಕರನಾಗಿ ಯುದ್ಧ ಮಾಡುತ್ತಿದ್ದ ಶ್ವೇತನನ್ನು ಕಂಡು ಭೀಷ್ಮನು ನಮಸ್ಕಾರ ಮಾಡುತ್ತಾನೆ. ಅದನ್ನು ಗೌರವಿಸಿ ಶಿವಸ್ವರೂಪಿ ಬಿಲ್ಲನ್ನು ಪಕ್ಕಕ್ಕೆ ಇಟ್ಟು ಬೇರೊಂದು ಶಕ್ತ್ಯಾಯುಧವನ್ನು ಭೀಷ್ಮನ ಮೇಲೆ ಪ್ರಯೋಗಿಸುತ್ತಾನೆ. ಅದನ್ನು ಕತ್ತರಿಸಿದ ಭೀಷ್ಮ ಶ್ವೇತನ ಕತ್ತನ್ನು ಕತ್ತರಿಸಿ ಹಾಕುತ್ತಾನೆ. ಅದೇ ವೇಳೆಗೆ ಸೂರ್ಯಾಸ್ತಮಿಸುತ್ತಿರುತ್ತಾನೆ. ಆಗ ಕವಿ
ಶ್ವೇತನ ಬೀರಮನ್
ಉಪಮಾತೀತಮನ್
ಈ ಧರೆಗೆ ನೆಗೞೆ ನೆಗೞ್ದುದನ್
ಇದನಾಂ ಪಾತಾಳಕ್ಕೆ ಅಱಪುವೆನ್
ಎಂಬ ಈ ತೆಱದೊಳೆ ದಿನಪನ್ ಅಪರಜಲನಿಧಿಗಿೞದಂ
[‘ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವನ್ನು ನಾನು ಪಾತಾಳಕ್ಕೂ ತಿಳಿಸುತ್ತೇನೆ’ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು] ಎಂದು ಆ ದಿನದ ಯುದ್ಧಸಮಾಪ್ತಿವಾಕ್ಯವನ್ನು ನುಡಿಯುತ್ತಾನೆ.
ಮಾರನೆಯ ದಿನ ಭೀಷ್ಮನಿಗೆ ಸ್ವತಃ ಅರ್ಜುನನೇ ಎದುರಾಗಿ ಯುದ್ಧ ಮಾಡುತ್ತಾನೆ. ಅವರಿಬ್ಬರ ನಡುವಿನ ಯುದ್ಧ ಭಯಂಕರವಾಗಿ ನಡೆಯುತ್ತಿರುತ್ತದೆ. ಭೀಷ್ಮನ ಕೋಪಕ್ಕೆ ದೇವತೆಗಳೇ ಭಯಗೊಳ್ಳುತ್ತಾರೆ. ಆಗ ಸೂರ್ಯಾಸ್ತದ ಸಮಯ. ಆಗ ಕವಿ
ಎನ್ನುಮನ್ ಅಸುರಾರಿಯ ಪಿಡಿವುನ್ನತ
ಕರಚಕ್ರಂ ಎಂದು ಭೀಷ್ಮಂ ತಱಗುಂ
ಮುನ್ನಂ ಅಡಂಗುವೆನ್ ಎಂಬವೊಲ್
ಅನ್ನೆಗಂ ಅಸ್ತಾಚಳಸ್ಥನಾದಂ ದಿನಪಂ
[‘ನನ್ನನ್ನು ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ. ಮೊದಲೇ ಮರೆಯಾಗುತ್ತೇನೆ’ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಅಸ್ತವಾದನು] ಎಂದು ಉದ್ಗರಿಸುತ್ತಾನೆ.
ಭೀಷ್ಮನ ಪರಾಕ್ರಮಕ್ಕೆ ಸ್ವತಃ ಕೃಷ್ಣನೇ ಚಿಂತಾಕ್ರಾಮತನಾಗಿರುತ್ತಾನೆ. ಕೃಷ್ಣನ ಸಮೇತ ಅರ್ಜುನನ ಕುದುರೆಯನ್ನು ಇನ್ನೂರು ಗಜ ಹಿಂದಕ್ಕೆ ಭೀಷ್ಮ ತಳ್ಳಿರುತ್ತಾನೆ. ಅಂತಹ ಭೀಷ್ಮನು ಕೋಪದಿಂದ ನನ್ನನ್ನೇ(ಸೂರ್ಯನನ್ನೇ) ಕೃಷ್ಣ ಹಿಡಿದಿರುವ ಚಕ್ರವೆಂದು ಭಾವಿಸಿ ಪುಡಿಮಾಡಿಬಿಟ್ಟರೆ ಎಂಬ ಭಯ ಸೂರ್ಯನಿಗಾಗುತ್ತದೆ. ಬೇಗ ಮರೆಯಾಗಿಬಿಡುತ್ತೇನೆ ಎಂದು ಆತ ಅಸ್ತಂಗತನಾಗುತ್ತಾನಂತೆ!
ಮುಂದೆ ಭೀಷ್ಮನು ಶರಶಯ್ಯೆಯಲ್ಲಿ ಮಲಗಿದ ಮೊದಲ ದಿನದ ಸೂರ್ಯಾಸ್ತ ಪಂಪನಿಗೆ ಹೀಗೆ ಕಾಣುತ್ತದೆ.
ನೆರೆದ ವಿರೋಧಿನಾಯಕರನ್
ಆಹವದೊಳ್ ತಱದು ಒಟ್ಟಲ್ ಒಂದಿದ ಒಡ್ಡು ಉರುಳ್ವಿನಂ
ಆ ಗುಣಾರ್ಣವನ್ ಅಡುರ್ತಿಱದಲ್ಲಿ ಸಿಡಿಲ್ದ ನೆತ್ತರೊಳ್ ಪೊರೆದು
ನಿರಂತರಂ ಪೊಲಸು ನಾಱುವ ಮೆಯ್ಯನೆ ಕರ್ಚಲೆಂದು
ಚೆಚ್ಚರಂ ಅಪರಾಂಬುರಾಶಿಗಿೞವಂತೆ ಇೞದಂ ಕಮಳೈಕಬಾಂಧವಂ
[ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ ಸಿಡಿದ ರಕ್ತದಿಂದ ಲೇಪನಗೊಂಡು, ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು ತೊಳೆಯಬೇಕೆಂದು ಸೂರ್ಯನು ಜಾಗ್ರತೆಯಾಗಿ ಪಶ್ಚಿಮಸಮುದ್ರಕ್ಕೆ ಇಳಿದನೋ ಎಂಬಂತೆ ಸೂರ್ಯನು ಮುಳುಗಿದನು.]
ಯುದ್ಧಭೂಮಿಯಲ್ಲಿ ಸಿಡಿಯುವುದು ಹರಿಯುವುದು ಕೆಂಪು ರಕ್ತ. ಸೂರ್ಯಾಸ್ತವಾಗುವಾಗ ಪಶ್ಚಿಮದ ಬಣ್ಣ ಕೆಂಪು. ಆ ಸೂರ್ಯನ ಕೆಂಪಿಗೆ ಕಾರಣ ಅರ್ಜುನ ಶತ್ರುಗಳನ್ನು ಇರಿಯುವಾಗ ಮೇಲೆ ಚಿಮ್ಮಿದ ರಕ್ತ. ಅದು ಸೂರ್ಯನಿಗೂ ತಗುಲಿಬಿಟ್ಟಿದೆ! ಆ ಕೆಂಪನ್ನು ತೊಳೆದುಕೊಳ್ಳಲೋ ಎಂಬಂತೆ ಸೂರ್ಯ ಕಡಲಿಗಿಳಿಯುತ್ತಾನೆ!
ಮುಂದೆ ಅರ್ಜುನನು ಅಭಿಮನ್ಯುವಿನ ಸಾವಿಗೆ ಪ್ರತಿಕಾರವೆಂಬಂತೆ ಸೈಂಧವನ ತಲೆಯನ್ನು ಕತ್ತರಿಸಿದಾಗ ಅದು ಆಕಾಶಾಭಿಮುಖವಾಗಿ ಹಾರುತ್ತದೆ. ಅದೇ ವೇಳೆಗೆ ಸೂರ್ಯನು ಮುಳುಗುವುದರಲ್ಲಿದ್ದ. ಅದು ಕವಿಗೆ ಹೀಗೆ ಕಾಣುತ್ತದೆ.
ತೆಗೆನೆಱೆದೂಱಕೊಂಡಿಸೆ,
ಶಿರಂ ಪರಿದತ್ತ ವಿಯತ್ತಳಂಬರಂ ನೆಗೆದೊಡೆ,
ರಾಹು ಬಾಯ್ದೆಱೆದು ನುಂಗಲೆ ಬಂದಪುದೆಂಬ ಶಂಕೆಂದಗಿದು
ದಿನೇಶನ್ ಅಸ್ತಗಿರಿಯಂ ಮಱೆಗೊಂಡನ್ .......

[ಅರ್ಜುನನು ಬಾಣವನ್ನು ದೀರ್ಘವಾಗಿ ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು, ಸೈಂಧವನ ತಲೆಯು ಕತ್ತರಿಸಿ ಆಕಾಶದೆಡೆ ಹಾರಲು, ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು.]
ದಿನಚರಿಯ ಮುಗಿಸಿ ಹೊರಡುವುದರಲ್ಲಿದ್ದ ಸೂರ್ಯನಿಗೆ ಹಾರಿ ತನ್ನತ್ತ ಬರುತ್ತಿರುವ ಸೈಂದವನ ತಲೆ ಸೂರ್ಯನಿಗೆ ರಾಹುಗ್ರಹದಂತೆ ಕಂಡಿತು ಎಂಬ ಪಂಪನ ಕಲ್ಪನೆ ಮಹತ್ತರವಾದದ್ದು. ಇಲ್ಲಿ ಸೈಂಧವ ಅಧರ್ಮದ ಪ್ರತಿನಿಧಿಯಾಗಿದ್ದಾನೆ. ಆತನ ತಲೆ ಸೂರ್ಯನನ್ನು ಹಿಡಿದು ಕತ್ತಲನ್ನು ಉಂಟುಮಾಡುವ ರಾಹುವನ್ನು ಹೋಲುತ್ತಿತ್ತು ಎಂಬುದು ಪಂಪನ ಮಹಾಕವಿಪ್ರತಿಭೆಗೆ ಸಾಕ್ಷಿಯಾಗಿದೆ.
ದ್ರೋಣಾಚಾರ್ಯನು ಸತ್ತ ನಂತರ ಅಶ್ವತ್ತಾಮನು ನಾರಾಯಣಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ. ಕೃಷ್ಣನ ಸಲಹೆಯಂತೆ ಎಲ್ಲರೂ ಅದಕ್ಕೆ ನಮಸ್ಕರಿಸಿ ಅಪಾಯದಿಂದ ಪಾರಾಗುತ್ತಾರೆ. ಆ ದಿನದ ಸೂರ್ಯಾಸ್ತವನ್ನು ಕವಿ-
ಕವಿದೆರಡುಂ ಪತಾಕಿನಿಗಳಾಗಡುಂ
ಎನ್ನನೆ ಸಕ್ಕಿ ಮಾಡಿ ಕಾದುವುದಱನ್
ಇಲ್ಲಿ ಸತ್ತ ಅರಸುಮಕ್ಕಳ ಪಾಪಂ ಇದೆಲ್ಲಂ ಎನ್ನನ್ ಎಯ್ದುವುದು
ಉಪವಾಸದಿಂ ಜಪದಿನ್ ಆನ್ ಅದನ್ ಓಡಿಸಿ ಶುದ್ಧನ್ ಅಪ್ಪೆನ್
ಎಂಬವೊಲ್ ಅಪರಾಂಬುರಾಶಿಗಿೞದಂ ನಳಿನೀವರಜೀವಿತೇಶ್ವರಂ

[‘ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ ಯುದ್ಧಮಾಡುವುದರಿಂದ, ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ’ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು.]
ಹಗಲಿನಲ್ಲಿ ಮಾತ್ರ ಯುದ್ಧ ನಡೆಯುತ್ತಿತ್ತು. ಅದಕ್ಕೆ ಸೂರ್ಯನೇ ಸಾಕ್ಷಿ. ಯುದ್ಧದಂತಹ ಪಾಪಕಾರ್ಯಕ್ಕೆ ಸಾಕ್ಷಿಯಾಗಿರುವುದು ಪಾಪದ ಕೆಲಸ! ಅಂತಹ ಪಾಪವನ್ನು ಸೂರ್ಯ ಕಳೆದುಕೊಳ್ಳಲು ಇಚ್ಛಿಸಿದ ಎಂಬ ಕಲ್ಪನೆ ನವೀನತರನಾಗಿದೆ.
{................ಮುಂದಿನ ವಾರ ಮುಂದುವರೆಯುವುದು. ಪಂಪನೊಂದಿಗೆ ರನ್ನ ಮತ್ತು ಕುಮಾರವ್ಯಾಸರ ಸೂರ್ಯಾಸ್ತ ದರ್ಶನವನ್ನೂ ಗಮನಿಸಲಾಗುವುದು}

Wednesday, June 03, 2009

ಭಾಮಿನಿ - ಹೊಸಕಟ್ಟು

[ಸುಮಾರು ಏಳು ವರ್ಷಗಳ ಹಿಂದೆ ಬರೆದಿದ್ದ ಕವಿತೆ 'ಭಾಮಿನಿ'. ಅದನ್ನು ಮೊನ್ನೆ 'ಭಾಮಿನಿ - ಹೊಸ ಕಟ್ಟು' ಎಂಬ ಶಿರ್ಷಿಕೆಯೊಂದಿಗೆ KANNADA BLOGGERSನಲ್ಲಿ ಹಾಕಿದ್ದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಗಳೂ ಬಂದವು. ಡಾ.ಎಂ.ಎಸ್.ತಿಮ್ಮಪ್ಪ ಅಂತಹ ಹಿರಿಯರೂ ಪ್ರೋತ್ಸಾಹಕ ಮಾತುಗಳನ್ನಾಡಿದರು. ಇವೆಲ್ಲದರ ನಡುವೆ ಗೆಳೆಯ ಮಲ್ಲಿಕಾರ್ಜುನ್ 'ಈ ಪದ್ಯವನ್ನು ನಿಮ್ಮ ಬ್ಗಾಗಿನಲ್ಲೂ ಹಾಕಿ' ಎಂದಿದ್ದರು. ಅವರ ಮಾತಿನಂತೆ 'ಭಾಮಿನಿ - ಹೊಸ ಕಟ್ಟು' ಈಗ ನಿಮ್ಮ ಮುಂದಿದೆ. ಅದಕ್ಕೆ ಪೂರಕವಾದ ಚಿತ್ರವೊಂದನ್ನು ಹಾಕಬೇಕೆನ್ನಿಸಿ, ಅಂತರ್ಜಾಲದಲ್ಲಿ ಜಾಲಾಡಿದೆ. ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ಬರೆಯಬೇಕೆಂಬ ಯೋಚನೆ ಒಂದು ಮಿಂಚಿನಂತೆ ಬಂದು, ಬರೆದಾದ ಮೇಲೆ ಹೊರಟೇ ಹೋಯಿತು! ಮತ್ತೆ ಬರೆಯಬೇಕೆಂದರೆ ಅದು ಸಾಧ್ಯವೇ ಎನ್ನುವಂತಾಗಿದೆ. ಆದ್ದರಿಂದ ಮಿಂಚಿನದೇ ಒಂದು ಚಿತ್ರವನ್ನು ಸಾಂಕೇತಿಕವಾಗಿ ಇಲ್ಲಿ ಬಳಸಿಕೊಂಡಿದ್ದೇನೆ. ಚಿತ್ರಕೃಪೆ: NASA]


ಇಳಿದು ಬಂದಳು ವರ್ಷೆಯಂದದಿ
ಒಲಿದು ಬಂದಳು ನಲ್ಲೆಯಂದದಿ
ತೊಳೆದು ಬಂದಳು ಮನದ ಕಲ್ಮಶ ಹರಿಯ ಮೆರೆಸಲು ತಾ-
ನಿಳೆಯ ರೂಪದಿ ಸಹನೆಯಿಂದಾ
ಕಳೆಯ ಬಂದಳು ಮೋಹ ಮತ್ಸರ
ಗಳನು ಭಾಮಿನಿ ನಾರಣಪ್ಪನಿಗೊಲಿದಳಿಂದುಮುಖೀ

ವೀರಾನಾರಾಯಣ ಭಕ್ತಿಯ
ಸಾರ ಸಾಗರದ ಸವಿಯನುಣಿಸಿ
ಮೀರಿಸಿ ಭವದ ಆಸೆಯನು ತೊರೆಸಿದನು ಮನವನು ಆ
ವೀರನಾರಾಯಣನ ಪಾದದ-
ಲೂರಿಸಿದನು ಕುಸುಮದ ತೆರದಲಿ
ತೋರಿಸಿದನು ಗದುಗಿನ ನಾರಾಯಣನ ಒಲುಮೆಯನೂ

ಧರ್ಮನಂದನನ ನಿಜಮಾರ್ಗ ಸು-
ಧರ್ಮವಾದುದು ಕೃಷ್ಣ ಕೃಪೆಯಲಿ
ಭೀಮ ಮುರಿದನು ಕೌರವನ ತೊಡೆಗಳನು ಕುರುಕುಲ ಕೀ-
ರ್ತಿರ್ಮಣಿಯ ಚೆದುರಿದನು ಪಾರ್ಥನು
ಆ ಮುರುಳಿಯನಭಯವನೊತ್ತವ-
ನೊಲ್‌ಮೆಯಲಿ ನಕುಲ ಸಹದೇವರರೆದರು ವೈರಿಗಳಾ

ಕುರುಕುಲ ನೃಪನ ವೈಭವವಿರಲಿ
ತರುಲತೆ ಮೃಗಖಗಗಳ ವರ್ಣನೆ-
ಯಿರಲಿ ಪಾಂಡುತನಯರ ಸತ್ಯವಿರಲಿ ಶಕುನಿ ತಂತ್ರ-
ವಿರಲಿ ಭೀಮಾಕ್ರೋಶ ಮತ್ಸರ-
ವಿರಲಿ ಏನೇ ಇರಲಿ ಬಿಡದೆ ಉ-
ಸುರಿದನು ವ್ಯಾಸಕುವರನು ನಿನ್ನ ಬಳಸಿ ಬೆಳಸಿದಾ

ಭಾಮಿನಿ ಸುಮಧುರ ಸುಭಾಷಿಣಿ
ನೀ ಮೃದುನುಡಿಯ ಪೋಷಕಿ ಇಳಿದು
ನೀ ಮೆರೆದು ಗದುಗಿನ ಕುಮಾರವ್ಯಾಸನಿಗೊಲಿದು ನೀ
ರಮ್ಯಗೊಳಿಸಿದೆ ಕೃಷ್ಣ ಕಥೆಯನು
ನಮ್ಮ ಕನ್ನಡ ನುಡಿಯಲಿ ಉಸುರಿ
ನಮ್ಮ ಜನಪದದೊಳಗೆ ನಿಲಿಸಿದೆ ಕೃಷ್ಣಭಕ್ತಿಯನೂ

Monday, June 01, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - ೧೭

ಬೆಂಕಿ ದೆವ್ವ
ನಾವು ಒಂಬತ್ತನೇ ತರಗತಿಯಲ್ಲಿದ್ದಾಗಲೇ ಹೈಸ್ಕೂಲ್ ಬಿಲ್ಡಿಂಗ್ ಕೆಲಸ ಮುಗಿದಿತ್ತು. ಸ್ಕೂಲ್ ಜವಾನ ನಂಜಪ್ಪನ ಮಗನೂ ಹಾಸ್ಟೆಲಿನ ವಿದ್ಯಾರ್ಥಿಯಾಗಿದ್ದ. ಆತನೇ ಬೆಳಿಗ್ಗೆ ಎದ್ದು ಬೇಗ ಸ್ಕೂಲಿನ ಕೊಠಡಿಗಳ ಕಸ ಗುಡಿಸುತ್ತಿದ್ದ. ಇಡೀ ಸ್ಕೂಲಿನ ಬೀಗದ ಕೈಗಳೆಲ್ಲಾ ಅವನ ಬಳಿಯೇ ಇರುತ್ತಿದ್ದವು! ಆತನ ಅಪ್ಪ ಮಾತ್ರ ಯಾವಾಗ ಬೇಕೋ ಆಗ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಿದ್ದ. ಕೇಳಿದರೆ ‘ಕಸ ಗುಡಿಸಿದೆಯಲ್ಲ’ ಎಂದು ಹೆಡ್ಮಾಸ್ಟರಿಗೇ ರೋಫು ಹಾಕುತ್ತಿದ್ದ. ವೆಂಕಟಪ್ಪನವರು ಇದ್ದ ದಿನಗಳಲ್ಲಿ ಸರಿಯಾಗಿಯೇ ಇದ್ದ ಅವನು, ಅವರು ವರ್ಗವಾಗಿ ಹೋಗುತ್ತಲೇ ಕೆಲವು ಮೇಷ್ಟ್ರುಗಳಂತೆ ತನ್ನ ಸ್ವಾತಂತ್ರ್ಯವನ್ನು ತಾನೇ ಘೋಷಿಸಿಕೊಂಡುಬಿಟ್ಟಿದ್ದ! ಆತನ ಅಸಡ್ಡಾಳತನದಿಂದಾಗಿ, ಡಸ್ಟರ್, ಸೀಮೆಸುಣ್ಣ, ಕೋಲು ತಂದು ಕೊಡುವುದು, ಬೋರ್ಡ್ ಒರೆಸುವುದು, ಮೇಷ್ಟ್ರಿಗೆ ಕುಡಿಯಲು ನೀರು, ಹೋಟೆಲಿನಿಂದ ತಿಂಡಿ ತಂದು ಕೊಡುವುದು ಹುಡುಗರ ಕೆಲಸವಾಗಿತ್ತು. ಸ್ಕೂಲಿನ ಸುತ್ತಮುತ್ತಲಿನ ಗಲೀಜನ್ನೂ ಸಹ ಹುಡುಗರೇ ಗುಂಪಿನಲ್ಲಿ ಕ್ಲೀನ್ ಮಾಡಬೇಕಾಗಿತ್ತು. ನಂಜಪ್ಪ ಮಾತ್ರ ತಾನು ಸರ್ಕಾರಿ ಕೆಲಸದಲ್ಲಿದ್ದರೂ ಹೇಗೋ ತನ್ನ ಮಗನಿಗೆ ಹಾಸ್ಟೆಲ್ಲಿನಲ್ಲಿ ಸೀಟು ಕೊಡಿಸಿದ್ದ.
ನಂಜಪ್ಪನ ಮಗನ ಹೆಸರು ಮಂಜುನಾಥ. ಅವನದೇ ಒಂದು ಗುಂಪಿತ್ತು. ಅವರೆಲ್ಲರೂ ಹತ್ತಿರದ ಚೌಳಗಾಲ ಎಂಬ ಊರಿನವರು. ಅವರು ರಾತ್ರಿ ವೇಳೆ, ಹಾಸ್ಟೆಲ್ಲಿನಲ್ಲಿ ಮಲಗದೆ ಸ್ಕೂಲಿಗೆ ಹೋಗಿ ಒಂದು ಕ್ಲಾಸ್ ರೂಮಿನಲ್ಲಿ ಬೆಂಚ್‌ಗಳನ್ನು ಜೋಡಿಸಿಕೊಂಡು ಮಲಗುತ್ತಿದ್ದರು. ಬೆಂಚ್‌ಗಳ ಆಕರ್ಷಣೆಯೋ ಏನೋ ನಾವೂ ಒಂದಷ್ಟು ಜನ ಆ ಗುಂಪಿಗೆ ಸದಸ್ಯರಾಗಿಬಿಟ್ಟೆವು. ದಿನಾ ರಾತ್ರಿ ಊಟ ಮುಗಿಸಿ, ಹಾಸಿಗೆಗಳನ್ನು ಹೊತ್ತುಕೊಂಡು ಹೋಗಿ, ಬೆಂಚ್‌ಗಳನ್ನು ಜೋಡಿಸಿಕೊಂಡು ಮಂಚದ ಮೇಲೆ ಮಲಗಿದಂತೆ ಮಲಗುತ್ತಿದ್ದೆವು. ಬೆಳಿಗ್ಗೆ ಎದ್ದು ಮತ್ತೆ ಜೋಡಿಸಿ ಬರುತ್ತಿದ್ದೆವು. ನಮಗೆ ಅಲ್ಲಿ ಹೆಚ್ಚು ಸ್ವಾತಂತ್ರ್ಯವಿತ್ತು. ಎಷ್ಟು ಬೇಕಾದರೂ ಗಲಾಟೆ ಮಾಡಬಹುದಾಗಿತ್ತು. ಪೋಲಿ ಜೋಕು ಹೇಳಬಹುದಿತ್ತು! ಬೆಳಿಗ್ಗೆ ಯಾರೂ ವಾರ್ಡನ್ ಹತ್ತಿರ ಕಂಪ್ಲೇಂಟ್ ಮಾಡುವಂತಿರಲಿಲ್ಲ. ನಾವು ವಾರ್ಡನ್ ಹತ್ತಿರ ‘ಅಲ್ಲಿ ಓದಿಕೊಳ್ಳಲು ಹೋಗುತ್ತೇವೆ’ ಎಂದು ಹೇಳಿ ಪರ್ಮಿಷನ್ ತೆಗೆದುಕೊಂಡಿದ್ದೆವು. ಹದಿನೈದು ಜನ ಅಲ್ಲಿಗೆ ಓದಿಕೊಳ್ಳಲು ಹೋಗುವುದರಿಂದ, ಒಂದೇ ಹಾಲ್‌ನಲ್ಲಿ ಐವತ್ತು ಜನ ಇರುವುದು ತಪ್ಪುತ್ತದೆಂದು ಅವರೂ ಸುಮ್ಮನಾಗಿಬಿಟ್ಟಿದ್ದರು!
ನಾವು ಅಲ್ಲಿಗೆ ಹೋಗಿ ಓದುತ್ತಿದ್ದೆವೋ ಬಿಡುತ್ತಿದ್ದೆವೋ ಅದು ಮುಖ್ಯವಾಗಲೇ ಇಲ್ಲ. ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಎಂ.ಕೆ.ಸ್ವಾಮಿ, ಚಿಕ್ಕಯ್ಯ ಮತ್ತು ನನ್ನಣ್ಣ ಇವರಿಗೆಲ್ಲಾ ನಮ್ಮ ಸ್ವಾತಂತ್ರ್ಯವನ್ನು ಸಹಿಸಲಾಗಲಿಲ್ಲ. ಒಂದು ಮಧ್ಯರಾತ್ರಿ ನಾವು ಮಲಗಿದ್ದಾಗ ಬಂದು ಹೆಂಚಿನ ಮೇಲೆ ಸಣ್ಣ ಸಣ್ಣ ಕಲ್ಲುಗಳನ್ನೆಲ್ಲಾ ತೂರಿದ್ದರು. ನಮಗೇನು ಗೊತ್ತು? ಅದು ಅವರ ಕೆಲಸ, ಎಂದು! ನಾವೆಲ್ಲಾ ಭಯದಿಂದ ನಡುಗಿ ಹೋಗಿದ್ದೆವು. ಮಾರನೇ ದಿನ ಅವರೆಲ್ಲರೂ ರಾತ್ರಿ ಹಾಸ್ಟೆಲ್ಲಿನ ಮೇಲೆ ರಣ(ದೆವ್ವ) ಓಡಾಡಿದ್ದನ್ನು ನೋಡಿದ್ದಾಗಿ ಮಾತನಾಡಿಕೊಳ್ಳುತ್ತಿದ್ದರು. ನಾವೆಲ್ಲಾ ಅದನ್ನು ನಿಜವೆಂದು ನಂಬಿದ್ದರೂ, ರಾತ್ರಿ ಮಲಗಲು ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಇನ್ನೊಂದು ರಾತ್ರಿ ಕಲ್ಲು ಮಣ್ಣು ತೂರುವುದರ ಜೊತೆಗೆ, ಬೆಂಕಿ ಪಂಜುಗಳನ್ನು ಉರಿಸುವುದನ್ನು ಮಾಡಿದ್ದಾರೆ. ನಾವೆಲ್ಲಾ ಒಬ್ಬರ ಕೈಗಳನ್ನು ಇನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದೆವು. ಸೀಮೆಎಣ್ಣೆಯನ್ನು ಬಾಯಿಯಲ್ಲಿ ತುಂಬಿಕೊಂಡು ಪಂಜಿನ ಮೇಲೆ ಊದಿದಾಗ ಬೆಂಕಿಯ ಒಂದು ಗೋಳಾಕಾರ ನಿರ್ಮಾಣವಾಗುತ್ತದೆ. ಹಳ್ಳಿಯಲ್ಲಿ ನಾಟಕ ಆಡುವಾಗ, ಶನಿದೇವರು, ಚಂಡಿ ಮೊದಲಾದವರು ಪ್ರತ್ಯಕ್ಷವಾಗುವಾಗ ಈ ತಂತ್ರವನ್ನು ಬಳಸುತ್ತಿದ್ದರು. ಅಂತದ್ದೇ ಒಂದು ಪ್ರಯತ್ನವನ್ನು ಎಂ.ಕೆ.ಸ್ವಾಮಿ ಮಾಡಿದ್ದಾನೆ. ಬಾಯಿಯ ತುಂಬಾ ಸೀಮೆಎಣ್ಣೆ ತುಂಬಿಕೊಂಡು ಉರಿಯುತ್ತಿದ್ದ ಪಂಜಿನ ಮೇಲೆ ಬುರ್‌ರ್‌ರ್‌ರ್... ಎಂದು ಉಗುಳಿದ್ದಾನೆ. ಇಡೀ ಸ್ಕೂಲ್ ಬಿಲ್ಡಿಂಗ್ ಬೆಂಕಿ ಹೊತ್ತಿಕೊಂಡಂತೆ ಜ್ವಲಿಸಿದಾಗ, ಹೆಂಚಿನ ಸಂದಿಗೊಂದುಗಳೊಳಗೆಲ್ಲಾ ಬೆಂಕಿಯ ಜ್ವಾಲೆ ನುಗ್ಗಿದಂತಾಯಿತು. ನಮ್ಮ ಗುಂಪಿನಲ್ಲಿದ್ದ ಆನೆಕೆರೆ ರಮೇಶ ಎಂಬ ಪುಕ್ಕಲ ‘ಅಯ್ಯಯ್ಯಪ್ಪೋ ಸತ್ತೆ’ ಎಂದು ಜೋರಾಗಿ ಕಿರುಚಿದ. ಆ ಕಿರುಚಾಟ ನಿಲ್ಲುವಷ್ಟರಲ್ಲಿ ಯಾರೋ ಕಿಸಕ್ಕನೆ ನಕ್ಕಂತಾಯಿತು! ಹಾಗೆ ನಗುವುದು ಚಿಕ್ಕಯ್ಯ ಎಂದು ಎಲ್ಲರಿಗೂ ಗೊತ್ತಾಯಿತು. ಮಾತಿಗೆ ಮೊದಲು ನಗುತ್ತಲೇ ಮಾತನಾಡುವ ಅಭ್ಯಾಸವಿದ್ದ ಚಿಕ್ಕಯ್ಯನ ನಗು ಕೇಳಿದ ಮೇಲೆ ನಾವೆಲ್ಲಾ ಧೈರ್ಯದಿಂದ ಹೊರಗೆ ಬಂದೆವು. ಆದರೂ ನಾವು ಏನು ಮಾಡುವಂತಿಲ್ಲ. ಏಕೆಂದರೆ ಹದಿನೈದು ಜನರನ್ನು ಅವರು ಮೂವರೇ ಹೊಡೆದು ಸುಮ್ಮನಾಗಿಸುತ್ತಿದ್ದುದರಲ್ಲಿ ಅನುಮಾನವಿರಲಿಲ್ಲ! ಆದರೆ ವಾರ್ಡನ್‌ಗೆ ಗೊತ್ತಾಗಿಬಿಡುತ್ತದೆ ಎಂಬ ಭಯ ಅವರಿಗೂ ಇತ್ತು. ಕೊನೆಗೆ ‘ವಾರ್ಡನ್‌ಗೆ ವಿಷಯ ತಿಳಿಸಬಾರದೆಂದು, ಇನ್ನು ಮುಂದೆ ಬೇರಾವ ರೀತಿಯಲ್ಲೂ ಹೆದರಿಸಲು ಬರುವುದಿಲ್ಲ’ವೆಂದು ಎಂ.ಕೆ.ಸ್ವಾಮಿ ಹೇಳಿದ್ದರಿಂದ ವಿಷಯವನ್ನು ಅಲ್ಲಿಗೆ ಬಿಟ್ಟೆವು.
ಕದ್ದಿದ್ದಕ್ಕೆ ಮಾಫಿ; ಕದಿಯದ್ದಕ್ಕೆ ಶಿಕ್ಷೆ!
ನಾವು ಕ್ಲಾಸ್ ರೂಮಿಗೆ ಮಲಗಲು ಹೋಗುವ ಪದ್ಧತಿ ಮುಂದುವರೆಯಿತು. ಆದರೆ ನಮ್ಮಲ್ಲಿ ಕೆಲವರಿಗೆ ಕಳ್ಳತನ ಮಾಡಿಯಾದರೂ ಮಜಾ ಉಡಾಯಿಸುವ ಹುಚ್ಚು. ಅವರೆಲ್ಲರೂ ಒಂದು ರಾತ್ರಿ ಬೆಳಗುಲಿಯವರೊಬ್ಬರು ಬೆಳೆದಿದ್ದ ಕಡಲೆ ಗಿಡಗಳನ್ನು ಕದ್ದು ಕಿತ್ತುಕೊಂಡು ಬರುವುದೆಂದು ಪ್ಲಾನ್ ಮಾಡಿದರು. ಕಳ್ಳತನದ ಮಜಾ ಉಡಾಯಿಸುವ ಬಯಕೆ ನಮಗೂ ಇತ್ತು. ಆದರೂ ಭಯದಿಂದ ನಾವು ಬರುವುದಿಲ್ಲ ಎಂದು ನಾನು ಮತ್ತು ರಮೇಶ ಹೇಳಿದರೆ, ಮಲಗಲು ಬರುವಂತಿಲ್ಲ ಎಂದುಬಿಟ್ಟರು. ಅಂದಿನ ನಮ್ಮ ಒಳಮನಸ್ಸಿನ ಧ್ವನಿಗೆ ಓಗೊಟ್ಟ ನಾವೂ ಕಳ್ಳತನಕ್ಕೆ ಹೊರಟೆವು!
ನಡು ರಾತ್ರಿ. ಯುಕ್ತಾಯುಕ್ತ ವಿವೇಚನೆಯಿಲ್ಲದ ಹದಿನೈದು ಹದಿನಾರು ವಯಸ್ಸಿನ ಹುಡುಗರ ಗುಂಪು ಒಂದು ಕಡ್ಲೆಕಾಯಿ ಹೊಲಕ್ಕೆ ನುಗ್ಗಿದರೆ ಏನಾಗಬೇಕೋ ಅದೇ ಆಯಿತು. ಸುಮಾರು ಒಂದು ಸಣ್ಣ ಗಾಡಿ ತುಂಬವಷ್ಟು ಗಿಡಗಳನ್ನು ಕಿತ್ತುಕೊಂಡು, ನೇರವಾಗಿ ಸ್ಕೂಲಿಗೆ ಬರದೆ ಯಾವದೋ ಹಳ್ಳದ ಕಡೆಗೆ ಹೋದೆವು. ಅಲ್ಲಿ, ಸುಮಾರು ಬೆಳಗಿನ ಜಾವದವರೆಗೂ ಕುಳಿತು ಒಂದೂ ಮಾತನಾಡದೆ ಅರ್ಧಂಬರ್ಧ ಕಾಯಿಗಳನ್ನು ಕಿತ್ತು ತಿಂದು, ಮತ್ತೆ ಸ್ಕೂಲಿಗೆ ವಾಪಸ್ ಬಂದು ಏನೂ ಗೊತ್ತಿಲ್ಲದವರಂತೆ ಮಲಗಿಬಿಟ್ಟೆವು. ಎರಡು ಮೂರು ದಿನಗಳ ನಂತರ ‘ಯಾರೋ ಕಳ್ಳರು ಗಿಡಗಳನ್ನು ಕಿತ್ತು ತಿಂದು ಹೋಗಿದ್ದಾರೆ’ ಎಂದು ಜನ ಮಾತನಾಡಿಕೊಂಡರು. ಆ ಹೊಲದವರು ಅಲ್ಲಿ ಒಂದು ಗುಡಿಸಲು ಹಾಕಿ ಕಾವಲು ನಿಂತರು. ಆದ್ದರಿಂದ ಮತ್ತೆ ನಮಗೆ ಕಳ್ಳತನದ ಮಜಾ ಉಡಾಯಿಸಲು ಆಗಲಿಲ್ಲ.
ನಮ್ಮ ದುರಾದೃಷ್ಟಕ್ಕೆ, ಇದಾದ ಹದಿನೈದೇ ದಿನಗಳಲ್ಲೇ ಬೇರೆ ದಿಕ್ಕಿನಲ್ಲಿದ್ದ ಒಂದು ಹೊಲದಲ್ಲಿ ಆಲೂಗೆಡ್ಡೆಯ ಗಿಡಗಳನ್ನು ಯಾರೋ ಕಿತ್ತೊಯ್ದರು. ಕಡ್ಲೆ ಗಿಡಗಳ ಕಳ್ಳತನದಲ್ಲೇ ನಮ್ಮ ಕೈವಾಡವಿದೆಯೆಂದು ಹಾಸ್ಟೆಲ್ಲಿನ ಕೆಲವರು ಗುಸುಗುಟ್ಟಿದ್ದರು. ಆದರೆ ಅದು ಅಷ್ಟೊಂದು ಬಲವಾಗಿರಲಿಲ್ಲ. ಆಲೂಗಡ್ಡೆ ಕಳ್ಳತನದಲ್ಲಿ ನಮ್ಮ ಕೈವಾಡವಿದೆಯೆಂದು ಯಾರಿಗೆ ಮೊದಲು ಅನ್ನಿಸಿತೋ ಆತ ಏನಾದರೂ ನಮಗೆ ಒಂಟಿಯಾಗಿ ಸಿಕ್ಕಿದ್ದರೆ ಅವನನ್ನು ಕೊಲ್ಲಲೂ ನಾವು ಅಂದು ಹೇಸುತ್ತಿರಲಿಲ್ಲವೇನೊ?! ಒಟ್ಟಾರೆ, ಒಂದು ದಿನ ಮಠದಿಂದ, ಸ್ಕೂಲಿಗೆ ಮಲಗಲು ಹೋಗುವ ಹುಡುಗರನ್ನು ಕರೆದುಕೊಂಡು ಬರಲು ಬುಲಾವ್ ಬಂತು.
ವಾರ್ಡನ್ ನಮ್ಮನ್ನು ಬರಲು ಹೇಳಿದರು. ಹೋಗುವ ಮುಂಚೆ ಅವರು ನಮ್ಮನ್ನು ಪ್ರತ್ಯೇಕವಾಗಿ ಕರೆದು, ‘ನನ್ನ ಬಳಿ ನಿಜ ಹೇಳಿಬಿಡಿ. ನೀವು ಕಳ್ಳತನ ಮಾಡಿದ್ದು ನಿಜವಾದರೆ ನಾನೇ ಸ್ವಾಮೀಜಿಯವರ ಬಳಿ ಮಾತನಾಡಿ ಹೇಗೋ ಸಮಸ್ಯೆ ಬಗೆ ಹರಿಸುತ್ತೇನೆ’ ಎಂದರು. ನಾವು ಪ್ರಾಮಾಣಿಕವಾಗಿ, ಹಿಂದೆ ಕಡ್ಲೆ ಗಿಡ ಕಿತ್ತಿದ್ದು ನಾವೇ ಎಂದೂ, ಆದರೆ ಈಗ ಆಲೂಗೆಡ್ಡೆ ಕಿತ್ತಿದ್ದು ನಾವಲ್ಲವೆಂದು ನಮಗೆ ತಿಳಿದ ದೇವರುಗಳ ಮೇಲೆ ಆಣೆ ಮಾಡಿದೆವು. ಆಗ ವಾರ್ಡನ್ ಅವರು ಯಾರಲ್ಲೂ ಕಡ್ಲೆ ಗಿಡದ ವಿಷಯ ಬಾಯಿ ಬಿಡಬೇಡಿರೆಂದೂ, ಅದರ ವಿಚಾರಣೆಯನ್ನು ನಾನೇ ಮಾಡುತ್ತೇನೆಂದು ಹೇಳಿ ನಮ್ಮನ್ನು ಕರೆದುಕೊಂಡು ಮಠಕ್ಕೆ ಬಂದರು. ಕೆಲವು ಸೋಮಾರಿಗಳು ಆಗಲೇ ಮಠದಲ್ಲಿ ಜಮಾಯಿಸಿದ್ದರು. ಚಿಕ್ಕಯ್ಯನೋರು ದೊಡ್ಡಯ್ಯನೋರು ಇಬ್ಬರೂ ಕುಳಿತಿದ್ದರು. ವಿಚಾರಣೆ ಪ್ರಾರಂಭವಾಯಿತು. ನಾವೇ ಕದ್ದಿದ್ದೆಂದು ನೇರವಾಗಿ ನಮ್ಮನ್ನು ದೂಷಿಸಲು, ಶಿಕ್ಷಿಸಲು ಕೆಲವರು ಮುಂದಾರು. ಆಗ ನಮ್ಮನ್ನು ಕಾಪಾಡಿದ್ದು ನಮ್ಮ ವಾರ್ಡನ್.
ಅವರು ‘ಅಷ್ಟೊಂದು ಆಲೂಗಡ್ಡೆಗಳನ್ನು ಕಿತ್ತುಕೊಂಡು ಅವರೇನು ಮಾಡುತ್ತಾರೆ. ಬೇಕಾದರೆ ಹಾಸ್ಟೆಲ್ಲಿನಲ್ಲಿ ಚೆಕ್ ಮಾಡಿ. ಅಷ್ಟೊಂದನ್ನು ಸುಟ್ಟು ತಿಂದಿದ್ದರೆ ಅವರಿಗೆ ಹೊಟ್ಟೆ ಕೆಡುತ್ತಿರಲಿಲ್ಲವೆ?’ ಎಂದು ಮುಂತಾಗಿ ವಾದಿಸಿ, ‘ಬೇಕಾದರೆ ಅವರ ಕೈಯಲ್ಲಿ ದೇವರ ಮೇಲೆ ಪ್ರಮಾಣ ಮಾಡಿಸಿ’ ಎಂದುಬಿಟ್ಟರು.
ಸ್ವಾಮೀಜಿಗಳಿಬ್ಬರೂ ಅದೇ ಸರಿಯೆಂದರು. ನಮ್ಮನ್ನು ಸಾಲಾಗಿ ನಿಲ್ಲಿಸಿ, ಒಂದು ತೆಂಗಿನ ಕಾಯಿಯನ್ನು ಕೊಟ್ಟು ಪ್ರಮಾಣ ಮಾಡಲು ಹೇಳಲಾಯಿತು. ‘ನಾವು ಆಲೂಗಡ್ಡೆ ಕಳ್ಳತನ ಮಾಡಿದ್ದರೆ ನಮಗೆ ವಾಂತಿಭೇದಿ ಆಗಲಿ’ ಎಂದು ಧೈರ್ಯವಾಗಿ ಪ್ರಮಾಣ ಮಾಡಿದೆವು.
ಹಾಸ್ಟೆಲ್ಲಿಗೆ ಬಂದ ನಂತರ ವಾರ್ಡನ್ ನಮಗೆ ಚೆನ್ನಾಗಿ ಬಯ್ದರು. ಅಂದಿನಿಂದಲೇ ಸ್ಕೂಲಿಗೆ ಮಲಗಲು ಹೋಗುವುದನ್ನು ನಿಲ್ಲಿಸಿಬಿಟ್ಟರು!
ಕಲ್ಲಂಗಡಿ ಕಾಯಿ ಕೊಯ್ದು ಸಿಕ್ಕಿಬಿದ್ದುದ್ದು!
ಶನಿವಾರ ಭಾನುವಾರ ಬಂತೆಂದರೆ ಹಾಸ್ಟೆಲ್ಲಿನ ಹುಡುಗರಿಗೆ ಎಲ್ಲವೂ ಬೋರು ಬೋರು. ಹಾಸ್ಟೆಲ್ಲಿನಲ್ಲಿ ಮುದ್ದೆ ತಿನ್ನುವುದು; ನಿದ್ದೆ ಮಾಡುವುದು, ಎರಡೇ ಕೆಲಸ. ಆದರೆ ಕಾಲಿನಲ್ಲಿ ಚಕ್ರ ಕಟ್ಟಿಕೊಂಡಿದ್ದ ನನ್ನಂಥವನಿಗೆ ಆದು ಆಗಿ ಬರದ ವಿಚಾರ. ಕಾಡು ಮೇಡು ಅಲೆಯುವುದು, ಊರೂರು ಸುತ್ತುವುದು ನನ್ನ ಮೆಚ್ಚಿನ ಹವ್ಯಾಸ.
ಹೀಗೆ ಒಂದು ಭಾನುವಾರ ನಾವು ನಾಲ್ಕು ಮಂದಿ ಹತ್ತಿರವಿದ್ದ ಚಿಕ್ಕಕರಡೇವು ಎಂಬ ಗ್ರಾಮಕ್ಕೆ ಹೋದೆವು. ಹಾಗೆ ಬರುತ್ತೇವೆ ಎಂದು ಅದೇ ಊರಿನವನಾಗಿದ್ದ ಕುಮಾರ ಎಂಬ ಹುಡುಗನಿಗೆ ಹೇಳಿದ್ದೆವು. ಆತನೂ ಬನ್ನಿ ಎಂದಿದ್ದ. ಡಿಸೆಂಬರ್ ಅಥವಾ ಜನವರಿ ತಿಂಗಳು ಇರಬಹುದು. ನಾವು ಆ ಊರಿಗೆ ಹೋದಾಗ, ಆತ ಕಣದ ಬಳಿ ಇದ್ದಾನೆಂದು ತಿಳಿಯಿತು. ಅಲ್ಲಿ ಹೋದರೆ ಆತ ಅಲ್ಲಿಗೆ ಬಂದೇ ಇಲ್ಲ ಎಂದು ತಿಳಿಯಿತು. ಅವನನ್ನು ಇನ್ನೆಲ್ಲಿ ಹುಡುಕುವುದು? ಕೊನೆಗೆ ಅದೇ ಊರಿನ ಇನ್ನೊಬ್ಬ ವಿದ್ಯಾರ್ಥಿ ನೇತ್ರ ಅನ್ನುವನನ್ನು ಹುಡುಕಿಕೊಂಡು ಹೊರಟೆವು. ಆತನು ಅವರ ಕಣದ ಬಳಿ ಸಿಕ್ಕ.
ಆ ಕಣದ ಪಕ್ಕದಲ್ಲೇ ಕಲ್ಲಂಗಡಿ ಹೊಲವಿತ್ತು. ದಪ್ಪದಾದ ಕಲ್ಲಂಗಡಿ ಹಣ್ಣುಗಳು ಇದ್ದವು. ನೇತ್ರನ ಕಣದ ಪಕ್ಕದಲ್ಲೇ ಇದ್ದುದ್ದರಿಂದ, ಆ ಹೊಲವೂ ಅವನದೆ ಎಂದು ಭಾವಿಸಿ ಅವನನ್ನು ಕೇಳುವ ಗೋಜಿಗೂ ಹೋಗದೆ ಎರಡು ಕಾಯಿಗಳನ್ನು ಕೊಯ್ದೇ ಬಿಟ್ಟೆವು. ಅವು ಹಣ್ಣಾಗಿವೆಯೋ ಇಲ್ಲವೋ ಒಂದನ್ನೂ ನಾವು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಆಗ ನೇತ್ರ ‘ಅಯ್ಯೋ ಅದು ನಮ್ಮ ಹೊಲವಲ್ಲ. ಬೇರೆಯವರದು’ ಎಂದ. ನಮಗೂ ಗಾಬರಿಯಾಗಿ, ‘ಸರಿ. ನಾವೀಗ ಹೋಗುತ್ತೇವೆ. ಆ ಹೊಲದವರು ಬಂದಾಗ ನೀನು ಹೇಳಬೇಡ ಅಷ್ಟೆ’ ಎಂದು ಕಾಯಿಗಳನ್ನು ಹೊತ್ತುಕೊಂಡು ಹೊರಟೆವು.
ಒಂದರ್ಧ ಕಿಲೋಮೀಟರ್ ನಡೆದಿದ್ದೆವೋ ಇಲ್ಲವೋ ಹಿಂದಿನಿಂದ ಯಾರೋ ಎಮ್ಮೆ ಕೂಗಿದಂತೆ ಕೂಗುತ್ತಿದ್ದರು. ನೋಡಿದರೆ ದೈತ್ಯಾಕಾರದ ಒಬ್ಬ, ಪ್ರಯಾಸದಿಂದ ಸೈಕಲ್ ತುಳಿಯುತ್ತಾ ಬರುತ್ತಿದ್ದ. ನಾವು ತಕ್ಷಣ ಕಾಯಿಗಳನ್ನು ಪಕ್ಕದಲ್ಲಿದ್ದ ಬೇಲಿಯ ಒಳಗೆ ಎಸೆದುಬಿಟ್ಟೆವು. ಆದರೆ ಅದನ್ನು ಗಮನಿಸಿದ್ದ ಆತ ಬಂದವನೆ ನೇರವಾಗಿ ನಮ್ಮ ಕೊರಳಪಟ್ಟಿಗಳನ್ನು ಹಿಡಿದುಕೊಂಡು, ಇಬ್ಬರ ಕೈಯಲ್ಲಿ ಕಾಯಿಗಳನ್ನು ಹೊರೆಸಿಕೊಂಡು ವಾಪಸ್ಸು ಊರ ಕಡೆಗೆ ಹೊರಟು ಬಿಟ್ಟ. ನಾವು ಅತ್ತೆವು. ಬೇಡಿಕೊಂಡೆವು ಆತ ಬಿಡಲಿಲ್ಲ. ಒಂದೂ ಮಾತನಾಡಲಿಲ್ಲ! ಊರಿಗೆ ಕರೆದುಕೊಂಡು ಹೋಗಿ ಒಂದು ಮರದ ನೆರಳಿನಲ್ಲಿ ನಮ್ಮನ್ನು ನಿಲ್ಲಿಸಿ ತಾನೂ ನಿಂತುಕೊಂಡ. ಎಷ್ಟು ಹೊತ್ತಾದರೂ ಒಂದೂ ಮಾತನಾಡಲಿಲ್ಲ. ಯಾರೂ ಬರಲಿಲ್ಲ.!
ನಾವು ಮೊಂಡು ಧೈರ್ಯ ಮಾಡಿ ಆಗ ಬೇಡಿಕೊಳ್ಳುವುದನ್ನು, ಅಳುವುದನ್ನು ನಿಲ್ಲಿಸಿದ್ದೆವು. ಪಕ್ಕದಲ್ಲಿದ್ದ ಸೋಮಶೇಖರ ‘ಲೋ, ನಮ್ಮ ಸ್ಕೂಲಿನ ಮೂವರು ಹುಡುಗಿಯರು ಇದೇ ಊರಿನವರು. ಅವರು ಬಂದರೆ ಮರ್ಯಾದೆ ಹೋಗುತ್ತದೆ. ಏನು ಮಾಡೋಣ’ ಎಂದ.
ಆತ ಸ್ವಲ್ಪ ಜೋರಾಗಿಯೇ ಮಾತನಾಡಿದರೂ ನಮ್ಮನ್ನು ಹಿಡಿದುಕೊಂಡು ಬಂದಾತ ನಮ್ಮೆಡಗೆ ತಿರುಗಿ ನೋಡಲಿಲ್ಲ. ಆಗ ನಾವು ಪರಸ್ಪರ ಮಾತನಾಡಿಕೊಂಡು ಬೇರೆ ಬೇರೆ ದಿಕ್ಕಿಗೆ ಓಡಿ, ನಂತರ ಕುಂದೂರುಮಠದಲ್ಲಿ ಸಂಧಿಸುವುದೆಂದು ತೀರ್ಮಾನಿಸಿದೆವು. ಇಷ್ಟಾದರೂ ಆ ಪ್ರಾಣಿ ಸುಮ್ಮನೇ ನಿಂತಿತ್ತು. ಒಂದು ಬಾರಿ ಮಾತ್ರ ‘ಹೋ’ ಎಂದು ಜೋರಾಗಿ ಕಿರುಚಿದ ಅಷ್ಟೆ. ಆಗ ನಮಗೆ ಆತ ನಿಜವಾಗಿಯೂ ಕಿವುಡನೂ ಮೂಗನೂ ಇರಬೇಕೆಂದು ಸ್ಪಷ್ಟವಾಗಿತ್ತು.
‘ಇನ್ನು ತಡ ಮಾಡಬೇಡಿ. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಓಡಿ’ ಎಂದು ಜೋರಾಗಿಯೇ ಕಿರುಚಿ, ನಾನೂ ಒಂದು ದಿಕ್ಕಿನಲ್ಲಿ ಓಡಿದೆ. ಇದನ್ನು ನಿರೀಕ್ಷಿಸಿರದ ಆತ ಯಾವ ಕಡೆಗೆ ಓಡಬೇಕೆಂದು ತಿಳಿಯದೆ ನಿಂತುಬಿಟ್ಟಿರಬೇಕು! ನಾವಂತೂ ಓಡೋಡಿ ಸುಮಾರು ಒಂದು ಗಂಟೆಯ ನಂತರ ಕುಂದೂರುಮಠಕ್ಕೆ ಬಂದೆವು.
ಬೆಳಿಗ್ಗೆ ಸ್ಕೂಲಿಗೆ ಬಂದಾಗ ನೇತ್ರನಿಗೆ ಚೆನ್ನಾಗಿ ಗೂಸ ಕೊಡಬೇಕೆಂದು ತೀರ್ಮಾನಿಸಿದ್ದೆವು. ಆದರೆ ಬೆಳಿಗ್ಗೆ ಆತ ಬಂದವನು ನಾವು ಹೊಡೆಯಲು ಹೋದಾಗ ‘ನೀವು ಹೊಡೆದರೆ ನಾನು ನಾಳೆ ಅವರ ಮನೆಯವರನ್ನು ಇಲ್ಲಿಗೇ ಕರೆದುಕೊಂಡು ಬರುತ್ತೇನೆ’ ಎಂದು ನಮ್ಮನ್ನೇ ಹೆದರಿಸಿದ! ನಾವೂ ಸುಮ್ಮನಾದೆವು. ‘ಆತನೇನಾದರೂ ಮೂಗ ಮತ್ತು ಕಿವುಡನಾಗದಿದ್ದರೆ ಅಥವಾ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆತ ಕಾಯುತ್ತಿದ್ದವರು ಬಂದಿದ್ದರೆ ನಿಮಗೆ ಖಂಡಿತಾ ಧರ್ಮದೇಟು ಬೀಳುತ್ತಿದ್ದವು, ಗೊತ್ತಾ?’ ಎಂದು ನೇತ್ರ ಹೇಳಿದ್ದಕ್ಕೆ ಸೋಮಶೇಖರ ‘ಆಗಲಾದರೂ ನಾವು ನಿನಗೆ ಚೆನ್ನಾಗಿ ಹೊಡೆಯಬಹುದಿತ್ತು ಬಿಡು’ ಎಂದು ಎಲ್ಲರನ್ನೂ ನಗಿಸಿದ್ದ.