Wednesday, December 23, 2009

ಮೂಗಿಗೆ ಮೂಗು, ಕಿವಿಗೆ ಕಿವಿ : ಪಾಕಿಸ್ತಾನ ನ್ಯಾಯಾಲಯದ ತೀರ್ಪು

ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟಿನ ಆದೇಶದ ಮೇರೆಗೆ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ತೀರ‍್ಮಾನ ನೀಡಿದೆ. ಶೇರ್ ಮೊಹಮದ್ ಮತ್ತು ಅಮಾನತ್ ಅಲಿ ಎಂಬಿಬ್ಬರು ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳನ್ನು ಅಪಹರಿಸಿ ಆಕೆಯ ಮೂಗು ಕಿವಿಗಳನ್ನು ಕತ್ತರಿಸಿ ಹಾಕಿದ್ದರು. ಈಗ ನ್ಯಾಯಾಲಯ, ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಇಸ್ಲಾಂ ಧರ‍್ಮದ ಶಿಕ್ಷೆಯ ಭಾಗವಾಗಿ ಈ ಶಿಕ್ಷೆ ನೀಡಿದೆ. ಇದರ ಜೊತೆಗೆ ಇಬ್ಬರು ಅಪರಾಧಿಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳ ದಂಡ ಮತ್ತು ಜೀವಾವಧಿ ಶಿಕ್ಷೆಯನ್ನೂ ನೀಡಿದೆ. ಯುವಿಗೆ ಒಟ್ಟು ಏಳು ಲಕ್ಷ ರೂ ಪರಿಹಾರ ಕೊಡಿಸಿದೆ.
ಈ ಘಟನೆ ನನಗೆ ಇತಿಹಾಸದ ಒಂದು ಘಟನೆಯನ್ನು ನೆನಪಿಗೆ ತಂದಿತು. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ತಮಿಳು ಸೆಲ್ವಿ ಅವರ ‘ನೇಪಥ್ಯ’ ಪುಸ್ತಕದಲ್ಲಿ ಇದನ್ನು ಓದಿದ್ದೆ. ಅವರ ಪುಸ್ತಕದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮೂಗು ಕತ್ತರಿಸುವ ಪ್ರಕ್ರಿಯೆ’ ಎನ್ನುವ ಲೇಖನವಿದೆ. ಅದರಲ್ಲಿ ಹರಿಹರ ಮಹಾಕವಿಯ ‘ಕಳಚೆಂಗಪೆರುಮಾಳೆಯರ ರಗಳೆ’ ಹಾಗೂ ‘ಕಳರ್‌ಸಿಂಗ ನಾಯನಾರ್ ಪುರಾಣ’ದ ಘಟನೆಯೊಂದನ್ನು ವಿವರಿಸಲಾಗಿದೆ.
ಘಟನೆ ಹೀಗಿದೆ.
‘ಕಳಚೆಂಗ ಪೆರುಮಾಳ್’ ಅಥವಾ ‘ಕಳರ್ ಸಿಂಗ ನಾಯನಾರ್’ ಹೆಸರಿನ ದೊರೆ ಇತಿಹಾಸದಲ್ಲಿ ದಾಖಲಾಗಿರುವ ‘ವೀರನರಸಿಂಹ’. ಈತನ ಹೆಂಡತಿ ‘ಚೊಲ್ಲಡಿಯನಾಚಿ’ ಅಥವಾ ‘ಚೊಲ್ಲಡಿಯದೇವಿ’. ಇವಳು ಒಂದು ದಿನ ತನ್ನ ಪರಿವಾರದೊಂದಿಗೆ ಶಿವಾಲಯಕ್ಕೆ ಬರುತ್ತಾಳೆ. ಆ ಶಿವಾಲಯದಲ್ಲಿ ಮಹಾನ್ ಶಿವಭಕ್ತನಾದ ‘ಚಿರುತೊಣೆಯಾಂಡ’ ಎಂಬುವವನು ಇರುತ್ತಾನೆ. ಅಲ್ಲಿ ಶಿವನಿಗೆ ಅಲಂಕರಿಸಲು ಹಲವಾರು ವಿಧದ ಹೂವುಗಳನ್ನು ಮಾಲೆಯಾಗಿ ಕಟ್ಟಲಾಗಿರುತ್ತದೆ. ಪ್ರದಕ್ಷಿಣೆಯಲ್ಲಿ ಬರುತ್ತಿದ್ದ ‘ಚೊಲ್ಲಡಿಯನಾಚಿ’ಯ ಕಣ್ಣಿಗೆ ಆ ಹೂವುಗಳ ಮಧ್ಯ ಕಣ್ಣಿಗೆ ಕುಕ್ಕುವಂತಿದ್ದ ‘ಚೆಂಗಣಿಗಿಲೆ’ ಹೂವು ಬೀಳುತ್ತದೆ. ಅವಳು ಅದನ್ನು ಆಸೆಯಿಂದ ಕೈಗೆತ್ತಿಕೊಂಡು ಮೂಗಿನ ಬಳಿ ಕೊಂಡೊಯ್ದು ಅದರ ಸುವಾಸನೆಯನ್ನು ಆಘ್ರಾಣಿಸುತ್ತಾಳೆ. ಅದನ್ನು ಗಮನಿಸಿದ ‘ಚಿರುತೊಣೆಯಾಂಡ’ನು ‘ಶಿವದ್ರೋಹಿ! ಶಿವನ ಮುಡಿಗೇರಿಸಲು ತಂದಿದ್ದ ಪುಷ್ಪವನ್ನು ವಾಸಿಸಿದೆ’ ಎಂದು ನಿಂದಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ‘ಇದೇ ಮೂಗಲ್ಲವೆ ಹೂವನ್ನು ಮೂಸಿದ್ದು’ ಎಂದು ಆಕೆಯ ಮೂಗನ್ನೇ ಕತ್ತರಿಸಿ ಹಾಕುತ್ತಾನೆ! “ಘರಿಲನರಿದಂ ಮೂಗನಂ ಅಮ್ಮಮ್ಮ ತೊಣೆಯಾಂಡನ್” ಎಂದು ಕವಿ ಉದ್ಘರಿಸುತ್ತಾನೆ!
ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ರಾಜ ‘ವೀರನರಸಿಂಹ’ನಿಗೆ ವಿಷಯ ತಿಳಿಯುತ್ತದೆ. ರಕ್ತಸಿಕ್ತವಾದ ಮೂಗಿನೊಂದಿಗೆ ರಾಣಿ ರಾಜನ ಮುಂದೆ ನಿಲ್ಲುತ್ತಾಳೆ. ಆಕೆಯ ಪರಿವಾರದವರು ‘ರಾಣಿಯ ಮೂಗನ್ನು ಅರಿದವನಿಗೆ ಶಿಕ್ಷೆಯಾಗಲಿ’ ಎಂದು ಅಪೇಕ್ಷಿಸುತ್ತಾರೆ. ಆದರೆ ‘ವೀರನರಸಿಂಹ’ ಪಾಕಿಸ್ತಾನದ ನ್ಯಾಯಾಲಯದಂತೆ ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಸಿದ್ಧಾಂತದವನಲ್ಲ. ‘ಚಿರುತೊಣೆಯಾಂಡ’ನನ್ನು ಕರೆಸಿ ಹೀಗೆ ಹೇಳುತ್ತಾನೆ. ‘ಚಿರುತೊಣೆಯಾಂಡರೆ, ಹೂವನ್ನು ಮೊದಲು ತೆಗೆದುಕೊಟ್ಟಿದ್ದು ಹಸ್ತ. ಆಮೇಲೆ ತಾನೆ ಮೂಗು ಅದನ್ನು ಮೂಸಿದ್ದು. ಇದನ್ನು ಮರೆತು ಮೂಸಿದ ಮೂಗನ್ನು ಮಾತ್ರ ಕತ್ತರಿಸಿ ಬಿಟ್ಟಿರಿ’ ಎಂದು ಹೇಳುತ್ತಾನೆ. ಹಾಗೆ ಹೇಳಿ ಸ್ವತಃ ತಾನೇ ಮುಂದುವರೆದು ‘ಚೊಲ್ಲಡಿಯನಾಚಿ’ಯ ಬಲಗೈಯನ್ನು ಕತ್ತರಿಸಿ ಹಾಕುತ್ತಾನೆ. ಆತನೂ ಶಿವಭಕ್ತ! ತನ್ನ ಶಿವಭಕ್ತಿಯನ್ನು ಈ ರೀತಿಯಲ್ಲಿ ಪ್ರಕಟಿಸುತ್ತಾನೆ.
ಇನ್ನು ನಮ್ಮ ದೇವನಾದ ‘ಶಿವ’ ಸುಮ್ಮನಿರುತ್ತಾನೆಯೇ? ಸ್ವತಃ ಕೈಲಾಸದಿಂದ ಇಳಿದು ಬರುತ್ತಾನೆ. ತನ್ನ ಭಕ್ತರ ಸಾಹಸವನ್ನು ಮೆಚ್ಚಿಕೊಳ್ಳುತ್ತಾನೆ. ಇತ್ತ ರಾಣಿಯ ಮೂಗನ್ನು ಸರಿಪಡಿಸುತ್ತಾನೆ!
ಸ್ತ್ರೀಸಹಜವಾದ ಆಸೆಯಿಂದ ಹೂವನ್ನು ಇಷ್ಟಪಟ್ಟಿದ್ದೇ ರಾಣಿ ಮಾಡಿದ ತಪ್ಪು. ಅದಕ್ಕೆ ಈ ಮಹಾನ್ ಶಿವಭಕ್ತರು ನೀಡುವ ಶಿಕ್ಷೆ ಶಿವಭಕಿಯ ಪ್ರತೀಕ! ಪಾಪ ‘ಚೊಲ್ಲಡಿಯನಾಚಿ’. ಸ್ವತಃ ಶಿವಭಕ್ತೆಯಾದರೂ ಕೆಲ ಕಾಲವಾದರೂ ಮೂಗು ಹಾಗೂ ಬಲಗೈ ಕತ್ತರಿಸಿಕೊಂಡ ನೋವನ್ನು ಅನುಭವಿಸಬೇಕಾಯಿತು. ಇತಿಹಾಸದುದ್ದಕ್ಕೂ ಹೀಗೆ. ಮಹಿಳೆ ಪುರುಷರ ದೌರ್ಜನ್ಯಕ್ಕೆ ವಿನಾಕರಾಣ ಗುರಿಯಾಗುತ್ತಾಳೆ. ಏಕೆಂದರೆ ಆಕೆ ಸಹನಾ ಧರಿತ್ರಿ!
ಮೂಗು ಕೈ ಕತ್ತರಿಸಿದ ಘಟನೆಯಲ್ಲಿ ವಾಸ್ತವಾಂಶ ಇದೆಯೆನ್ನಬಹುದು. ಆದರೆ ಶಿವ ಬಂದು ಆಕೆಗೆ ಕತ್ತರಿಸಿದ್ದ ಮೂಗನ್ನು ಕೈಯನ್ನು ವಾಪಸ್ ಕೊಟ್ಟ ಎಂಬುದರಲ್ಲಿ ವಾಸ್ತಾವಾಂಶ ಇದೆ ಎನ್ನಲಾದೀತೆ? ಮೊದಲನೆಯದು ಮೂರ್ತವಾದರೆ ಎರಡನೆಯದು ಅಮೂರ್ತ! ಬಹುಶಃ ಆಕೆಯ ಸಹನೆಯೇ ಶಿವಸ್ವರೂಪದ್ದು! ಆಕೆ ಅವರು ಮಾಡಿದ್ದು ಸರಿ ಎಂದು ತನ್ನ ನವನ್ನು ತಾನೇ ಅನುಭವಿಸಿರುವುದೇ ಹೆಚ್ಚು ವಾಸ್ತವ ಎನ್ನಿಸುತ್ತದೆ. ಅತ್ತ ಪಾಕಿಸ್ತಾನದ ಯುವತಿಯದೂ ಅದೇ ಕಥೆಯಲ್ಲವೆ? ಧನಪರಿಹಾರವೇನೋ ಸಿಕ್ಕಿತು. ಆದರೆ ಕಳೆದುಕೊಂಡ ಮೂಗು ಕವಿಗಳನ್ನು ಸರಿಪಡಿಸಲಾದೀತೆ? ಈ ದೇವರು (ಇದ್ದರೆ) ಎಷ್ಟು ಕಟುಕನಪ್ಪ? ಜನರಲ್ಲಿ ಇಂತಹ ನೀಚ ಪ್ರವೃತ್ತಿಯನ್ನು ಆತ ಪ್ರೇರೇಪಿಸುವುದಾದರೂ ಏಕೆ?
ಈ ಎರಡೂ ಘಟನೆ ಪರಸ್ಪರ ಹೋಲಿಕೆ ಮಾಡಿ ಸರಿ ಯಾವುದು ತಪ್ಪು ಯಾವುದು ಎಂದು ನಿರ‍್ಧಾರ ಮಾಡುವುದಕ್ಕಲ್ಲ. ಇತಿಹಾಸದಲ್ಲಿ ಎಂತೆಂತಹ ಘಟನೆಗಳು ನಡೆದು ಹೋಗಿವೆ, ಅಥವಾ ನಮ್ಮ ಸಾಹಿತ್ಯ ಪರಂಪರೆ ಏನನ್ನು ಪೋಷಿಸಿಕೊಂಡು ಬಂದಿದೆ ಎಂಬುದನ್ನು ಪರಿಭಾವಿಸಲು, ಅಷ್ಟೆ.

Tuesday, December 15, 2009

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.

ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ತಮಿಳು ಸೆಲ್ವಿ ಅವರ ‘ನೇಪಥ್ಯ’ ಎಂಬ ಸಂಶೋಧನಾ ಲೇಖನಗಳನ್ನೊಳಗೊಂಡ ಪುಸ್ತಕದಲ್ಲಿ ಈ ರೀತಿಯ ಹಲವಾರು ವಿಷಯಗಳು ಬೆಳಕು ಕಂಡಿವೆ.

೧೬ನೇ ಶತಮಾನದ ಪೂರ್ವಾರ್ಧದಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನ ಒಂದು ಕ್ಷಣದ ದುಡುಕಿನಿಂದ ಉಂಟಾದ ಪ್ರಮಾದ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮೂರನೆಯ ನೆಪೋಲಿಯನ್ ಮತ್ತು ಅಂದಿನ ಪಾಂಡಿಚೆರಿಯ ಗೌರ್ನರ್ ಆಗಿದ್ದ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಅವರಿಂದ ತೊಡೆದು ಹೋಗುತ್ತದೆ! ಇತಿಹಾಸದಲ್ಲಿ ವಿಶಿಷ್ಟವಾಗಿ ದಾಖಲೂ ಆಗುತ್ತದೆ.

ಇದರ ಪೂರ್ಣ ಕಥೆ ಹೀಗಿದೆ.

ಕೃಷ್ಣದೇವರಾಯ ತನ್ನ ಅಮಾತ್ಯನಾದ ಅಪ್ಪಾಜಿ ಎಂಬುವವನೊಂದಿಗೆ ದೇಶ ಸಾಂಚಾರ ಕೈಗೊಳ್ಳುತ್ತಾನೆ. ರಾಯವೇಲೂರಿನಿಂದ ಹೊರಟು ಪಾಮಡಿಚೆರಿಯಲ್ಲಿರುವ ವಿಲ್ಲಿಯನಲ್ಲೂರು (ವಿಲ್ವನಲ್ಲೂರು) ಎಂಬಲ್ಲಿ ತನ್ನ ಪರಿವಾರದೊಂದಿಗೆ ಬಿಡಾರ ಹೂಡುತ್ತಾನೆ. ಒಳಗೆರೆ (ಉಳವರೈಕೆರೈ) ಎಂಬಲ್ಲಿ ಉಯ್ಯಗುಂಡ ವಿಶ್ವರಾಯ ಮೊದಲಿಯಾರ್ ಎಂಬುವವರ ಅಂಗಾಲಿನಲ್ಲಿ ಕೂದಲು ಬೆಳೆದಿದೆ ಎಂಬ ವಿಚಿತ್ರ ವಿಷಯ ಆತನ ಕಿವಿಗೆ ಬೀಳುತ್ತದೆ.


ಕೃಷ್ಣದೇವರಾಯ ಮಂತ್ರಿ ಅಪ್ಪಾಜಿಯೊಂದಿಗೆ ಹೋಗಿ ಅದನ್ನು ನೋಡಿ ಹೀಂದಿರುಗಿ ಬರುವಾಗ ಒಂದು ದೇವಸ್ಥಾನದಂತೆ ಶೋಭಿಸುತ್ತಿದ್ದ ಭವ್ಯವಾದ ಸೌಧವನ್ನು ನೋಡುತ್ತಾರೆ. ದೀಪ ಧೂಪ ಗಂಧದ ಪರಿಮಳವನ್ನು ಕಂಡು ಅದನ್ನು ದೇವಸ್ಥಾನವೆಂದೇ ಭ್ರಮಿಸಿ ಇಬ್ಬರೂ ಅದಕ್ಕೆ ಕೈಮುಗಿದು ನಮಸ್ಕರಿಸುತ್ತಾರೆ. ಆಗ ಜೊತೆಯಲ್ಲಿದ್ದವರು ‘ಅದು ದೇವಸ್ಥಾನವಲ್ಲ, ಆಯಿ ಎಂಬ ಗಣಿಕೆಯೊಬ್ಬಳ ಮನೆ’ ಎಂದು ತಿಳಿಸುತ್ತಾರೆ. ಇದರಿಂದ ಕೃಷ್ಣದೇವರಾಯನಿಗೆ ಅಸಾಧ್ಯವಾದ ಕೋಪ ಬಂದು ‘ಗಣಿಕೆಯೊಬ್ಬಳ ಮನೆ ಈ ರೀತಿ ಇರಬಹುದೆ?’ ಎಂದು ದುಡುಕಿ ‘ಅದನ್ನು ಕೆಡವಿ ಹಾಕಿ. ಅಲ್ಲಿ ಒಂದು ಕೊಳವನ್ನು, ಬಾವಿಯನ್ನು ನಿರ್ಮಿಸಿ’ ಎಂದು ಆಜ್ಞಾಪಿಸುತ್ತಾನೆ.

[ಅರಸರು ಪ್ರಜೆಗಳೊಂದಿಗೆ ನಡೆದುಕೊಳ್ಳುತ್ತಿದ್ದ ಕ್ರೂರ-ದರ್ಪದ ಪ್ರತೀಕದಂತೆ ಹೊರಟಿತು ಈ ಆಜ್ಞೆ! ಮಾಡದ ಅಪರಾಧಕ್ಕೆ ಆಯಿ ಗುರಿಯಾದಳು. - ಡಾ. ತಮಿಳು ಸೆಲ್ವಿ]


ಆಯಿಗೆ ದಿಕ್ಕು ತೋಚದಂತೆ ಆಯಿತು. ಸ್ವಭಾವತಃ ಒಳ್ಳೆಯವಳಾದ ಆಕೆ ನೇರವಾಗಿ ರಾಜನ ಬಳಿ ಹೋಗಿ ‘ತನ್ನ ಸಂಪತ್ತಿನಿಂದಲೇ ಕೊಳವನ್ನು, ಬಾವಿಯನ್ನು ತೋಡಿಸುತ್ತೇನೆ’ ಎಂದು ಬೇಡಿಕೊಂಡು ರಾಜನನ್ನು ಒಪ್ಪಿಸುತ್ತಾಳೆ. ನಂತರ ತನ್ನ ಮಾತಿನಂತೆ ಮುತ್ತುರೈಯರ್ ಪಾಳ್ಯ ಎಂಬಲ್ಲಿ ದೊಡ್ಡದಾದ ಕೊಳವನ್ನು, ಒಂದು ಬಾವಿಯನ್ನು ನಿರ್ಮಾಣ ಮಾಡಿಸುತ್ತಾಳೆ. ಆ ಕೊಳ ‘ಆಯಿಕೊಳ’ ಎಂದೇ ಪ್ರಖ್ಯಾತವಾಗುತ್ತದೆ.

ಮುಂದೊಂದು ದಿನ ಆಯಿ ಸತ್ತು ಹೋಗುತ್ತಾಳೆ. ಆದರೆ ಆಕೆ ನಿರ್ಮಾಣ ಮಾಡಿಸಿದ ಕೊಳ ಮತ್ತು ಬಾವಿ ಉಳಿದುಕೊಳ್ಳುತ್ತವೆ.

ಕಾಲಾನಂತರದಲ್ಲಿ ಪಾಂಡಿಚೆರಿ ಫ್ರೆಂಚರ ಆಡಳಿತಕ್ಕೆ ಸೇರಿಹೋಗುತ್ತದೆ. ಆಗ ನಗರ ನಿರ್ಮಾಣಕ್ಕೆ ಮುಂದಾರ ಪ್ರೆಂಚರಿಗೆ ಆಯಿಕೊಳ ಉಪಯೋಗಕ್ಕೆ ಬರುತ್ತದೆ. ಆಯಿಕೊಳದ ಕಥೆಯನ್ನು ಕೇಳಿದ ಗೌರ್ನರ್ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಮತ್ತು ಮೂರನೆಯ ನೆಪೋಲಿಯನ್ ಅವಳ ಹೆಸರಿನಲ್ಲೊಂದು ಸ್ಮಾರಕ ನಿರ್ಮಿಸಲು ತೀರ್ಮಾನಿಸಿ ಅದರ ನಿರ್ವಹಣೆಯನ್ನು ಲಮಾರಸ್ ಎಂಬುವವನಿಗೆ ವಹಿಸುತ್ತಾರೆ. ಆತ ಪಾಂಡಿಚೆರಿಯ ಕೋಟೆಯ ಭಾಗದಲ್ಲಿ ಅಂದರೆ ಕಡಲ ತಡಿಯ ಪೂರ್ವಭಾಗದಲ್ಲಿ (ಆಯಿಯ ಮನೆಯಿದ್ದ ಜಾಗ) ಅವಳ ನೆನಪಿನಾರ್ಥ ಜಲಮಾಳಿಗೆಯೊಂದನ್ನು ನಿರ್ಮಾಣ ಮಾಡುತ್ತಾನೆ. ಆಯಿಕೊಳದಿಂದ ನೀರನ್ನು ಕಾಲುವೆಯಲ್ಲಿ ಹರಿಸಿ, ಏತದ ಮೂಲಕ ಜಲಮಾಳಿಗೆಗೆ ಹರಿಸಲಾಗುತ್ತಿತ್ತು. ಪಾಂಡಿಚೆರಿ ನಗರಕ್ಕೆ ಪ್ರಮುಖ ನೀರು ಸರಬರಾಜು ವ್ಯವಸ್ಥೆ ಇದಾಗಿತ್ತು. ಆಯಿಯ (ಸ್ವತಃ ರಾಜನೇ ಕೈಯೆತ್ತಿ ಮುಗಿಯುವಂತೆ ಪ್ರೇರೇಪಿಸುವ ರೀತಿಯಲ್ಲಿ ಕಲಾತ್ಮಕವಾಗಿ ತನ್ನ ಮನೆಯನ್ನು ಇಟ್ಟುಕೊಂಡಿದ್ದ) ಕಲಾ ಸೌಂದರ್ಯ ಪ್ರಜ್ಞೆಯನ್ನು ಮೆಚ್ಚಿ ಜಲಮಾಳಿಗೆಯ ಬಳಿ ಗ್ರೀಕ್-ರೋಮನ್ ಶೈಲಿಯ ಒಂದು ಮಂಟಪವನ್ನೂ ನಿರ್ಮಿಸಿ, ಆಯಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಭಂಗಿಯಲ್ಲಿರುವ ಒಂದು ಶಿಲ್ಪವನ್ನೂ ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲದೆ ತಮಿಳು ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಶಾಸನವನ್ನೂ ಕೆತ್ತಿಸಿ ಆಯಿಯ ವ್ಯಕ್ತಿತ್ವವನ್ನು ಉಲ್ಲೇಖಿಸಲಾಗುತ್ತದೆ. ಆ ಮಂಟಪ ಈಗ ‘ಆಯಿಮಂಟಪ’ಎಂದೇ ಖ್ಯಾತವಾಗಿದೆ. ಈಗ ಅಲ್ಲಿ ದೊಡ್ಡ ಉದ್ಯಾನವನ (ಭಾರತಿ ಉದ್ಯಾನವನ) ನಿರ್ಮಾಣವಾಗಿದೆ. ಆಯಿಮಂಟಪ ಈಗಲೂ ಭಾರತಿ ಉದ್ಯಾನವನದ ನಡುವೆ ವಿರಾಜಮಾನವಾಗಿದೆ.


ಕೊಸರು: ತನ್ನ ಮನೆಯನ್ನು ದೇವಸ್ಥಾನದಂತೆ ಶೋಭಾಯಮಾನವಾಗಿ ಇಟ್ಟುಕೊಂಡಿದ್ದ ಆಯಿಯ ಸೌಂದರ್ಯಪ್ರಜ್ಞೆಯನ್ನು ಕೃಷ್ಣದೇವರಾಯ ಗುರುತಿಸಬಹುದಾಗಿತ್ತು. ಆ ಹೆಣ್ಣಿಗೆ ಗೌರವ ತೋರಬಹುದಾಗಿತ್ತು. ಆದರೆ ಆತನ ಅಧಿಕಾರದ ಅಹಂ ಇದಕ್ಕೆ ಅವಕಾಶ ಕೊಡಲಿಲ್ಲ. ಹಿಂದೂ ಧರ್ಮ ಸಂರಕ್ಷಕರೆಂದು ಕರೆದುಕೊಂಡು, ಕಂಡ ಕಂಡ ದೇವಾಲಯಗಳಿಗೆಲ್ಲಾ ಕೊಳಗಗಟ್ಟಲೆ ಮುತ್ತು ರತ್ನ ಬಂಗಾರವನ್ನು ಅಳೆದುಕೊಟ್ಟ ವಿಜಯನಗರದ ಅರಸು ಕೃಷ್ಣದೇವರಾಯ ಒಂದು ಹೆಣ್ಣಿಗೆ ಗೌರವ ತೋರುವ ವಿಚಾರದಲ್ಲಿ ಕುರುಡಾಗಿಬಿಟ್ಟನಲ್ಲ! ಧರ್ಮವೆಂಬುದು ದೇವಾಲಯ ವ್ಯವಸ್ಥೆಯಲ್ಲಿ ಮಾತ್ರ ಇದೆಯೆ? ಮನುಷ್ಯ ಮನುಷ್ಯನನ್ನು, ರಾಜ ಪ್ರಜೆಯನ್ನು, ಗಂಡು ಹೆಣ್ಣನ್ನು ಗೌರವಿಸುವುದರಲ್ಲಿ ಇಲ್ಲವೆ? ಅಥವಾ ಇದನ್ನು ಕಾಲಧರ್ಮ ಎನ್ನಬೇಕೆ?

ಸ್ವತಃ ಸೈನ್ಯವನ್ನು ಮುನ್ನೆಡೆಸಿದಂತಹ ರಾಜ ಕೃಷ್ಣದೇವರಾಯನ ಬಗೆಗಿನ ಅಭಿಮಾನದ ಬಲೂನಿಗೆ ಸೂಜಿ ಚುಚ್ಚಿದಂತಹ ಅನುಭವ!
(ಚಿತ್ರಕೃಪೆ : ಅಂತರಜಾಲ)

Tuesday, December 08, 2009

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

T20 = ತೇಜಸ್ವಿ ಟ್ವೆಂಟ ಮಾಲಿಕೆಯಲ್ಲಿ ಇದು ನನ್ನ ಎರಡನೆಯ ಪ್ರಯತ್ನ. ಈ ಮೊದಲಿಗೆ ಸಹಜಕೃಷಿ ಪುಸ್ತಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದೆ. ಈಗ 'ಅಲೆಮಾರಿಯ ಅಂಡಮಾನ್' ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. (ಈ ಕೃತಿಯಲ್ಲಿ ಅಲೆಮಾರಿಯ ಅಂಡಮಾನ್ ಬರಹವಲ್ಲದೆ, ಮಹಾನದಿ ನೈಲ್' ಎಂಬ ಬರಹವೂ ಸೇರಿದೆ. ಪ್ರಸ್ತುತ ನಾನು ಅಲಮೇರಿಯ ಅಂಡಮಾನ್ ಕಥೆಯನ್ನು ಮಾತ್ರ ಈ 20-20ಯಲ್ಲಿ ಬಳಸಿಕೊಂಡಿದ್ದೇನೆ.)
ಮತ್ತೊಮ್ಮೆ ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.
ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
  ***
 1. ಯಾರಿಗೆ ತಾವಿರುವಲ್ಲೇ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ.
 2. ನನಗಂತೂ ಪುಣ್ಯಕ್ಷೇತ್ರಗಳಿಗೆ, ಪವಿತ್ರ ತೀರ್ಥಗಳಿಗೆ, ಚಾರಿತ್ರಿಕ ಸ್ಥಳಗಳಿಗೆ, ಪ್ರವಾಸಿಧಾಮಗಳಿಗೆ ಭೇಟಿಕೊಡುವ ಹಂಬಲವಂತೂ ಕೊಂಚವೂ ಇಲ್ಲ.
 3. (ಪುಣ್ಯಕ್ಷೇತ್ರಗಳ) ಅಲ್ಲಿನ ಅರ್ಚಕರ ದೇವಸ್ಥಾನದ ಏಜಂಟರುಗಳ, ವಸತಿಗೃಹಗಳ ಜನ ಕಾಟ ಗಲಭೆಗಳನ್ನು ಕಂಡು ಹೇಸಿಹೋಗಿದ್ದೇನೆ.
 4. ತಲೆ ಬೋಳಿಸಿಕೊಂಡು, ಕಿಟಕಿಗಳಿಗೆಲ್ಲಾ ತಮ್ಮ ಒದ್ದೆ ಬಟ್ಟೆಗಳನ್ನು ನೇತುಹಾಕಿಕೊಂಡು, ಬಸ್ಸಿನೊಳಗೆಲ್ಲಾ ವಾಂತಿಮಾಡಿಕೊಳ್ಳುತ್ತಾ ಸಾಗುವ ಈ ಪ್ರವಾಸಿಗಳ ಜೊತೆ ಕಣ್ಣು ಮೂಗು ಇರುವ ನರಮನುಷ್ಯ ಪ್ರವಾಸ ಹೋಗಲು ಸಾಧ್ಯವೇ?
 5. ಪಕ್ಕಾ ಐಹಿಕವಾದಿಗಳಾದ ಈ ಅರ್ಚಕರು, ಏಜಂಟುರುಗಳು ಇವರ ಸ್ಪೆಷಲ್ ಪೂಜೆ, ಸೂಪರ್ ಪೂಜೆಗಳಿಂದ ಇವರ ಹುಂಡಿಗಳಿಗೆ ಹಣ ಹಾಕುವುದರಿಂದ ಯಾರಿಗಾದರೂ ಪುಣ್ಯ ಪ್ರಾಪ್ತಿ ಸಾಧ್ಯವೇ?
 6. ಮಾನವ ಪ್ರತಿಯೊಬ್ಬನೂ ಕೊನೆಗೂ ಸಾವಿನಲ್ಲಿ ಏಕಾಂಗಿ ಎನ್ನುವ ಕಠೋರ ಸತ್ಯವನ್ನು ಮರೆಸಲು ಹಿಂದೂಧರ್ಮ ಈ ರೀತಿ ಗಲಾಟೆ ಗದ್ದಲ ದೊಂಬಿ ಮೈಕುಗಳ ಮರೆ ಹೊಕ್ಕಿದೆಯೆ ಎನ್ನುವ ಅನುಮಾನ ಬರುತ್ತದೆ.
 7. ಈಗಿನ ಅವತಾರಪುರುಷರು ಬಿಡಿ, ಹುಟ್ಟುವಾಗಲೇ ಹುಂಡಿ ಕಾಣಿಕೆ ಡಬ್ಬಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟುತ್ತಾರೆ.
 8. ಈ ಪ್ರವಾಶಿಧಾಮಗಳ ಒಳಚರಂಡಿ ವ್ಯವಸ್ಥೆಗಳೆಲ್ಲಾ ನಿರೋಧ್‌ಗಳು ಸಿಕ್ಕಿಹಾಕಿಕೊಂಡು ನೀರು ಹೋಗದಂತೆ ಕೆಟ್ಟಿರುತ್ತವೆ.
 9. ಅವ್ಯವಹಾರಗಳ ಆಗರಗಳಾಗಿರುವ ಈ ವಿಹಾರಧಾಮಗಳಿಗೆ ಹೋಗಿ ನಮ್ಮನ್ನು ಅವರೂ ಅವರನ್ನು ನಾವೂ ಪರಸ್ಪರ ಶಂಕೆಯಿಂದ ನೋಡುವುದರ ಬದಲು ಅಲ್ಲಿಗೆ ಹೋಗದಿರುವುದೇ ಮೇಲಲ್ಲವೇ?
 10. ಈ ಪುಣ್ಯಕ್ಷೇತ್ರಗಳು ದೇವಸ್ಥಾನಗಳು ಯಾವುವೂ ಇಲ್ಲದ ಜಾಗ ಅಂಡಮಾನ್ ಆಗಿದ್ದರೆ ನನ್ನಂಥ ಅಲೆಮಾರಿಗೆ ಅದೇ ಸರಿ.
 11. ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸವಿರುವುದರಿಂದಲೇ ನಮ್ಮ ಫೋಟೋಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.
 12. ದರಿದ್ರ ದೇಶ! ನೋಡಿ ಹೇಗಿದೆ. ಆ ಬಡತನ! ಆ ರಾಜಕಾರಣಿಗಳೂ! ಆ ಭ್ರಷ್ಟಾಚಾರ! ಆ ಜನಸಂಖ್ಯೆ! ಆ ಪರಿಸರ ನಾಶ! ಸಾಕಪ್ಪಾ! ಈ ಶನಿಯನ್ನು ಬಿಟ್ಟು ದೂರ ಹೋಗುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ.
 13. ಕಂತ್ರಿ ರಾಜಕಾರಣಿಗಳ ಮುಖಾಂತರ, ಭ್ರಷ್ಟ ಅಧಿಕಾರಿಶಾಹಿಯ ಮುಖಾಂತರ, ಲಂಪಟ ಓಟುದಾರರ ಮುಖಾಂತರ ಕ್ಷಣಕ್ಷಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದೇಶವನ್ನು ಪೃಏಮಿಸುವುದು ನಮಗೆ ಅಸಾಧ್ಯವಾಗಿ ಕಂಡಿತು.
 14. ಸಹಸ್ರಾರು ಮೈಲಿ ದೂರದ ಅಂಡಮಾನಿಗೆ ಶಿಕ್ಷೆ ಅನುಭವಿಸಲು ಅಥವಾ ಮರಣದಂಡನೆಗೆ ಹಿಂದೆಲ್ಲಾ ಹೋಗುತ್ತಿದ್ದ ಖೈದಿಗಳಿಗೆ ಏನೆನ್ನಿಸಿರಬಹುದು? ಭಾರತಕ್ಕೆ ಹೋರಾಡಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಏನೆನ್ನಿಸಿರಬಹುದು? ವೀರಸಾವರ್ಕರ್‌ಗೆ ಈ ಕ್ಷಣಗಳು ಹೇಗೆ ಕಂಡಿರಬಹುದು?
 15. ಸಾರ್ವಜನಿಕ ಸ್ವತ್ತು ಎಂದಾದ ಕೂಡಲೇ ಏನಾದರೂ ಮಾಡಿ ಅದನ್ನು ಹಾಳುಮಾಡುತ್ತಾರೆ. ಸಮುದ್ರದ ಮಧ್ಯೆ ಮುಳುಗಿಹೋಗುತ್ತೇವೆನ್ನುವ ಭಯ ಇಲ್ಲದಿದ್ದರೆ ಪ್ರಯಾಣಿಕರು ಹಡಗನ್ನೇ ತಮ್ಮ ಸೂಟ್ ಕೇಸಿಗೆ ತುಂಬಿಕೊಳ್ಳುತ್ತಿದ್ದರೋ ಏನೋ!
 16. ನನಗೆ ನನ್ನ ಕ್ಯಾಬಿನ್ನಿನಲ್ಲಿ ಇದ್ದ ಲೈಫ್ ಜಾಕೆಟ್ಟನ್ನು ನೋಡಿದಾಗೆಲ್ಲ ಕರಿ ನೀಲಿಯ ಸಮುದ್ರದ ಕರೆ ಕೇಳಿದಂತಾಗುತ್ತಿತ್ತು.
 17. ನಾವು ಎಲ್ಲಿಗಾದರೂ ಹೋದರೆ ಪ್ರವಾಸ ಮುಗಿಸಿ ವಾಪಸಾದ ನಂತರ ನಮ್ಮನ್ನು ವಿಚಾರಿಸಿ ವಿವರಗಳನ್ನು ಕೇಳುವ ಮಿತ್ರರ ದೃಷ್ಟಿಯನ್ನೂ ನಾವೂ ಪ್ರವಾಸದಲ್ಲಿ ಪರಿಗಣಿಸುತ್ತೇವೆ.
 18. ರಾಜೀವ್‌ಗಾಂಧಿ ನಮ್ಮ ಜನತೆಗೆ ಹತ್ತಿಸಿರುವ ಇಪ್ಪತ್ತೊಂದನೆಯ ಶತಮಾನದ ಪಿತ್ತ ನೋಡಿದರೆ ಇನ್ನು ಹತ್ತು ವರ್ಷಗಳೊಳಗಾಗಿ ಅಂಡಮಾನ್ ನಾಶವಾಗಬಹುದೆಂದು ನನಗನ್ನಿಸುತ್ತದೆ.
 19. ಮರಗಳಿದ್ದಲ್ಲಿ ಮಲೆಯಾಳಿಗಳನ್ನು ನೋಡಿದರೆ ಶಕುನ ನೋಡಿದಂತಾಗುತ್ತದೆ.
 20. ಪೂಜೆಯ ಭಟ್ಟನಿಗೆ ತೆಂಗಿನಕಾಯಿ ಒಡೆಯಲು ಸುತ್ತಮುತ್ತ ಯಾವ ಕಲ್ಲಾಗಲೀ ಕತ್ತಿಯಾಗಲೀ ಕಾಣಲಿಲ್ಲ. ಹಾಗಾಗಿ ಆತ ಕಾಯನ್ನು ಪಂಪ್ ಸೆಟ್ಟಿನ ಉಕ್ಕಿನ ಕವಚದ ಮೇಲೆ ಕುಕ್ಕಿದ. ಭಟ್ಟನ ಕೈಯಲ್ಲಿದ್ದ ತಿಪಟೂರಿನ ತೆಂಗಿನಕಾಯಿ ಹೇಗಿತ್ತೋ ಹಾಗೇ ಇತ್ತು! ಕಿರ್ಲೋಸ್ಕರ್ ಪಂಪ್ ಸೆಟ್ಟು ಮಾತ್ರ ಸರಿಯಾಗಿ ಎರಡು ಹೋಳಾಯ್ತು!
ಕೃತಿಯ ಹೆಸರು         :    ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ಲೇಖಕರು                 :    ಕೆ.ಪಿ. ಪೂರ್ಣಚಂದ್ರ ತೇಜಸ್ವಿ


ಪ್ರಕಾಶಕರು               :    ಪುಸ್ತಕ ಪ್ರಕಾಶನ, ಮೈಸೂರು

1990ರಲ್ಲಿ ಮೊದಲ ಮುದ್ರಣವಾಗಿದ್ದ ಈ ಕೃತಿ 2008ರ ಹೊತ್ತಿಗೆ ಒಂಬತ್ತು ಮುದ್ರಣಗಳನ್ನು ಕಂಡಿದೆ.

ಕೃತಿಯ ಬೆನ್ನುಡಿಯಿದು:
'ಅಲೆಮಾರಿಯ ಅಂಡಮಾನ್' ಕನ್ನಡ ಸಾಹಿತ್ಯದಲ್ಲಿ ಈವರೆಗೂ ಬಂದಿಲ್ಲದಹೊಸರೀತಿಯ ಪ್ರವಾಸ ಕಥನ. ಕಾಲ ಮತ್ತು ದೇಶಗಳಲ್ಲಿ ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ ಒಮ್ಮೆಲೇ ಚಲಿಸುವ ಬರಹಗಾರರ ಪ್ರಜ್ಞೆ ಅನುಭವುಗಳ ಅನೇಕ ಆಯಾಮಗಳನ್ನು ಒಟ್ಟೊಟ್ಟಿಗೇ ಸೃಷ್ಟಿಸುತ್ತದೆ. ಅಲೆಮಾರಿಯ ಅಂಡಮಾನ್ ಹೊಸರೀತಿಯ ಕಥನತಂತ್ರವನ್ನೇ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಸಿದೆ.
***

Friday, December 04, 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!


ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ. ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ. ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ ಕಾಣುತ್ತಿಲ್ಲ. ಮನಸಿಜನ ಮಾಯೆ ವಿಧಿವಿಳಸನದ ನರಂಬಡೆಯೆ, ಕೊಂದು ಕೂಗದೆ ನರರನ್ನು. ಓ ವಿಧಿಯೆ, ಈಕೆಯಷ್ಟು ಹಠಮಾರಿ. ಹೆಣ್ಣೊಬ್ಬಳು ನನ್ನ ವಿಷಯದಲ್ಲಿ ಇಷ್ಟೊಂದು ಕಠಿಣಳಾಗುತ್ತಿರುವುದು ಇದೇ ಮೊದಲು. ನಾನವಳನ್ನು ಪೌದನಪುರದರಮನೆಯಲ್ಲಿ ಕಂಡಾಗ ಅವಳು ಹೇಗಿದ್ದಳು. ಚಂದ್ರೋದಯವಾಗಿತ್ತು ನನ್ನ ಮನದಂಗಳಕ್ಕೆ. ಅವಳ ನಗೆ, ನಡೆ, ನುಡಿ ಸುರಸ್ತ್ರೀಯರನ್ನೂ ನಾಚಿಸಿದ್ದವು. ಕಣ್ಗಳನ್ನು ಹಿಡಿದು ನಿಲ್ಲಿಸುವ ಹೂವಿನ ಕಾಂತಿ, ಗಂಧ, ಸುಗಂಧ. ಓ ನಂದೆ, ನನ್ನ ಸುನಂದೆ ನೀನೆಷ್ಟು ಸುಂದರವಾಗಿದ್ದೆ, ಸರಸಳಾಗಿದ್ದೆ, ಸರಸಿಯಾಗಿದ್ದೆ.

ಆದರೆ ಯಾವ ಗಳಿಗೆಯಲ್ಲಿ ನನ್ನ ಮನದೊಳಗೆ ಆ ಸ್ಮರನೊಕ್ಕನೋ? ಅವಳನೆಗೆ ಕಾಮದರಗಿಣಿಯಾಗಿ ನನ್ನ ಹುಚ್ಚನನ್ನಾಗಿಸಿದ್ದಳಲ್ಲ. ಆ ಆನಂದ, ಆ ಭಾವ ಉತ್ಕರ್ಷಗಳನ್ನು ಏನೆಂದು ಹೇಳಲಿ? ಕಡುನಂಟನ ಸತಿಯ ರೂಪು ಸೋಲಿಸಿತೆನ್ನನು, ಬೇಟೆಗಾರನ ಬಿಲ್ಲಿನಿಂದ ಹೊರಟ ಬಾಣ ಹುಲ್ಲೆಯ ಕೊಂದಂತೆ.

ಯಾರಲ್ಲಿಯೂ ಹೇಳಬಾರದ, ಹೇಳಲಾಗದ ಸ್ಥಿತಿ. ಆದರೂ ಈ ಅಂತರಂಗದ ಮಿತ್ರರಿರುತ್ತಾರಲ್ಲ, ನರ್ಮಸಚಿವರು! ಇವರು ರಾಜರ ಪತನಕ್ಕೆ ಘೋರಿ ತೋಡುವ ಸ್ಮಶಾಣರುದ್ರರು! ಸುದರ್ಶನ, ಆಗ ನೀನು ಏನೆಂದು ಹೇಳಿದೆ? ‘ಸುನಂದೆಯೂ ನಿನ್ನನ್ನು ಕೂಡುವ ಭಾವದಿಂದ ನೋಡುತ್ತಾಳೆ’ ಎಂದು ನನ್ನ ಕಾಮಾಗ್ನಿಗೆ ತುಪ್ಪವನ್ನು ಸುರಿದುಬಿಟ್ಟೆಯಲ್ಲ. ನೀನು ಹೇಳಿದ್ದೇ ನಿಜವಾಗಿದ್ದರೆ ಇಲ್ಲಿ ಇವಳೇಕೆ ಇಷ್ಟು ಹಠ ಮಾಡುತ್ತಿದ್ದಾಳೆ? ನೀನು ಸುಳ್ಳಾಡಿದ್ದೆ. ಅವಳನ್ನು ಕದ್ದು ತಂದು ನಾನು ಮಿತ್ರದ್ರೋಹಿಯಾದೆ! ನನ್ನ ಪಥನಕ್ಕೆ ನಾಂದಿ ಹಾಡಿ ನೀನೂ ಮಿತ್ರ ದ್ರೋಹಿಯಾದೆ!

ಬೇಟೆಗೆಂದು ಹೋದಾಗ ಸಂದರ್ಭವೂ ನನಗೆ ಅನುಕೂಲವಾಗಿ ವಿಧಿಯೂ ತನ್ನ ಬೇಳೆ ಬೇಯಿಸಿಕೊಂಡಿತಲ್ಲ! ಇವಳಿಗಾಗಿ, ಈ ಸುನಂದೆಗಾಗಿ ಮಿತ್ರ ದ್ರೋಹ ಮಾಡಿದೆ. ಸ್ವಾಮಿನಿಷ್ಟ ಸಿಂಹಚೂಡನ ಕೊರಳ ಕೊಯ್ದೆ. ನನ್ನ ಕೀರ್ತಿಪತಾಕೆಯನ್ನು ಕೆಳಕ್ಕೆ ಕೆಡವಿದೆ. ನರಕದಲ್ಲಿ ಸ್ಥಳ ಕಾಯ್ದಿರಿಸಿಕೊಂಡೆ. ಯಾವ ಮಿತ್ರನನ್ನು ಆಲಂಗಿಸಿ ಮೈದಡವಬೇಕಾಗಿತ್ತೋ ಅದೇ ಕೈಯಲ್ಲಿ, ಅದೇ ಮಿತ್ರನ ಮೇಲೆ ಯುದ್ಧಮಾಡಬೇಕಾಗಿದೆ. ಇದರಿಂದಲೂ ನಿನಗೆ ತಿಳಿಯುತ್ತಿಲ್ಲವೆ. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು!

ಸುನಂದೆ, ದೇವಿ ಸುನಂದೆ, ನಾನದೆಷ್ಟು ಪ್ರಲೋಭನೆಗಳನ್ನು ಒಡ್ಡಿದೆ? ನೀನು ಸೋಲಲಿಲ್ಲ. ನಿಜವಾಗಿಯೂ ನೀನು ವಸುವನ್ನು ಅಷ್ಟೊಂದು ಪ್ರೀತಿಸುತ್ತೀಯ? ನಾನು ಅವನಿಗಿಂತ ಯಾವುದರಲ್ಲಿ ಕಡಿಮೆ ಹೇಳು? ದೇವಿ, ನನಗೆ ನನ್ನ ಕೀರ್ತಿ ಕಪ್ಪಾದ ಭಯವಿಲ್ಲ. ವಸುವಿನ ಭಯವಿಲ್ಲ. ನನಗೆ ನಿನ್ನದೇ ಭಯ! ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲು ಭಯವಾಗುತ್ತಿದೆ.

ವಸುವಿನ ಮೇಲಿನ ಪ್ರೀತಿಯೋ, ಇಲ್ಲ ಈ ವಯಸ್ಸಿಗೇ ವೈರಾಗ್ಯವೋ. ನಾನು ನಿನ್ನನ್ನು ಹೊತ್ತು ತರುವಾಗ ನೀನೇನು ಹೇಳಿದೆ?

‘ಹಾಳು ಮನೆಯಲ್ಲಿ ತುಪ್ಪದ ಮಡಕೆಯನ್ನು ಹುಡುಕುವ ನಾಯಿ’ ಎಂದೆ. ಬಯ್ದೆ. ಅಥವಾ ಸಂಪದ್ಭರಿತವಾಗಿದ್ದ ಮನೆ ಮನಸ್ಸು ನನ್ನ ಸ್ಪರ್ಶಮಾತ್ರದಿಂದಲೇ ಹಾಳಾಯಿತೆ? ಆದರೂ ನನ್ನನ್ನು ಕಂಡಾಗ, ತನ್ನತ್ತಲೇ ಬೀಳುತ್ತಿರುವ ತುಪ್ಪದ ಕಡೆಗೆ ನುಗ್ಗುವ ಬೆಂಕಿಯ ಜ್ವಾಲೆಗಳಂತೆ ಉರಿದು ಬೀಳುತ್ತೀಯ. ಅಂದರೆ, ಅಂದರೆ ನೀನಿನ್ನೂ ಖಾಲಿಯಾಗಿಲ್ಲ.

ನೀನು ನನ್ನನ್ನು ‘ದೋಷಕಾರ’ ಎಂದೆ. ಕೋಪವಿಲ್ಲ ದೇವಿ ನನಗೆ. ಕಮಲೆ ದಿನಕರನಿಗೆ ಮೊಗವೊಡ್ಡಬಹುದು. ಆದರೆ ದೋಷಕಾರನಿಗೆ ಆ ಅಗಾದ ಜಲರಾಶಿಯೇ ಮೊಗವೊಡ್ಡುವುದಿಲ್ಲವೆ? ‘ಮಾವಿನ ಮರದಲ್ಲಿ ರಮಿಸುತ್ತದೆಯಲ್ಲದೆ, ಕೋಗಿಲೆ ಬೇವಿನಮರದಲ್ಲಿ ರಮಿಸುವುದಿಲ್ಲ’ ಎಂದೆ. ಹೀಗೆ ಚುಚ್ಚು ಮಾತಿನಿಂದ ನೀನು ನನ್ನೇಕೆ ಕೊಲ್ಲುತ್ತಿದ್ದೀಯ? ನೀನು, ನಿನ್ನ ಚೆಲುವು ನನ್ನ ಹೃದಯವನ್ನಷ್ಟೇ ಅಪಹರಿಸಿದಿರಿ. ನಾನು ನಿನ್ನನ್ನೇ ಅಪಹರಿಸಿದೆ. ಇಬ್ಬರೂ ಅಪರಾದಿಗಳಲ್ಲವೇ?

* * *

ಬಾ, ಸೃಷ್ಟಿ ಬಾ. ವಿಷಯ ತಿಳಿಯಿತಷ್ಟೆ. ಬ್ರಾಹ್ಮೀ ಸಮೀಪಿಸುತ್ತಿದೆ. ಎರಡು ದಿನಗಳಿಂದ ನಡೆದ ಊಹಿಸಲಸಾದ್ಯವಾದ ಘಟನೆಗಳಿಂದ ಜರ್ಜಳಿತಳಾಗಿ, ದೇಹಾಯಾಸದಿಂದ ವಿಸ್ಮೃತಿ ಹೋಗಿದ್ದ ಸುನಂದೆಯು ಈಗ ಎಚ್ಚರವಾಗಿದ್ದಾಳೆ. ಅವಳ ಮನಸ್ಸಿನಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿರಬೇಕು. ಅವಳ ಮನಸ್ಸಿನಲ್ಲಿರುವುದೇನೆಂದು ತಿಳಿದು ಬಾ. ಆಗ ನಿನಗೊಂದು ಪೂರ್ಣಚಿತ್ರಣ ದೊರೆಯಬಹುದು.

* * *

ಅಯ್ಯೋ ದೇವರೆ. ಏನೆಲ್ಲಾ ಆಗಿಹೋಯಿತು. ನನ್ನ ಸ್ವಾಮಿ ಎಷ್ಟೊಂದು ನೊಂದನೋ ಏನೋ. ವಿಷಯವೊಂದು ತಿಳಿಯುತ್ತಿಲ್ಲ. ನೆನ್ನೆ ಹೊರಗೆ ಯುದ್ಧದ ಕೋಲಾಹಲವಿತ್ತು. ನನ್ನ ದೇವರೇ ಬಂದಿರಬೇಕು. ಇಂದು ಖಂಡಿತ ನನ್ನ ಬಿಡುಗಡೆಯಾಗುತ್ತದೆಯಲ್ಲವೆ? ದೇವರೇ, ನಾನು ನನ್ನ ಸ್ವಾಮಿಯನ್ನು ಸೇರುವಂತಾದರೆ ಸಾಕು. ಮತ್ತೆ ನಾನೇನ್ನೂ ನಿನ್ನಲ್ಲಿ ಬೇಡುವುದಿಲ್ಲ.

ಈ ಪಾಪಿಯು ಎಂಥ ನೀಚ ಕೆಲಸಕ್ಕೆ ಕೈ ಹಚ್ಚಿದ್ದಾನೆ. ಅರಮನೆಗೆ ಬಂದ ಮೊದಲ ದಿನದಿಂದಲೇ ಈ ನಾಯಿಯ ನೋಟದಲ್ಲಿ ಅಸಹಜತೆಯನ್ನು ಕಂಡೆ. ಮನಸ್ಸು ಕೇಡನ್ನು ಶಂಕಿಸಿತ್ತಾದರೂ, ಸುರಮ್ಯಪತಿ ವಸುಷೇಣನ ಕಡುನಂಟನಾದ್ದರಿಂದ ಅಪಾಯವಿಲ್ಲವೆಂದುಕೊಂಡೆ. ಮೊನ್ನೆ ನನ್ನವರು ವನಭೋಜನದ ವ್ಯವಸ್ಥೆಗೆ, ಸ್ವತಃ ನನ್ನನ್ನೇ ಬರಲು ಹೇಳಿದಾಗ ಅನುಮಾನಿಸುತ್ತಲೇ ಹೋದೆ. ಆಗ ಆಗಿದ್ದೇನು? ಈ ಪಾಪಿ ತನ್ನ ನೀಚ ಕೈಗಳಿಂದ ನನ್ನ ತೋಳು ತೊಡೆಗಳನ್ನು ಹಿಡಿದು, ಎತ್ತಿ ರಥದಲ್ಲಿ ಹಾಕಿಕೊಂಡು ಹೊರಟನಲ್ಲ. ಆಗಲೇ ನನ್ನ ಸರ್ವಸ್ವವೆಲ್ಲಾ ಸೋರಿಹೋಯಿತು. ಆತನಿಗೆ ಬೇಡಿಕೊಂಡೆ, ಕಾಲಿಡಿದುಕೊಂಡು. ‘ನಾನು ಪರಸ್ತ್ರೀ. ನಿನ್ನ ಕಡುನಂಟನ ಸತಿ. ನಿನ್ನ ಸವಸಹೋದರಿಯೆಂದುಕೊಂಡು ಕನಿಕರಿಸು. ನಿನಗೆ ಇಹಪರದ ಭಯವಾದರೂ ಇಲ್ಲವೆ?’ ಹೀಗೆ ಇನ್ನು ಏನೇನೊ, ಪರಿಪರಿಯಾಗಿ ಬೇಡಿಕೊಂಡೆ. ಬಡಬಡಿಸಿದೆ. ಬಯ್ದೆ. ಉಗಿದೆ. ಆದರೂ ಪಾಪಿ ಕರಗಲಿಲ್ಲ.

ಜೊತೆಯಲ್ಲಿದ್ದ ಚಿತ್ರಲತೆ ಮತ್ತು ಮದನಪತಾಕೆಯರು ಏನೆಂದುಕೊಂಡರೊ. ಇಂಥ ವಿಷಯಗಳಲ್ಲಿ ಹೆಂಗಸಿನದೇ ತಪ್ಪಾಗಿ ಎಣಿಸಲ್ಪಡುತ್ತದೆ, ಈ ಕ್ರೂರ ಜಗತ್ತಿನಲಿ!

ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ, ಸುರಮ್ಯದ ಗಡಿಯಲ್ಲಿ, ಸಾಮಂತ ಸಿಂಹಚೂಡ ಈ ನಾಯಿಯನ್ನೆದುರಿಸಿದಾಗ ನಾನೆಷ್ಟು ದೇವರನ್ನು ಬೇಡಿದ್ದೆ. ಆತನ ಧೀರನಡೆ, ನುಡಿ ನನ್ನ ಮನದಲ್ಲೊಂದಿಷ್ಟು ಆಸೆ ಮೂಡಿತ್ತು. ಆದರೆ ಇಲ್ಲಿಯೂ ಕತ್ತಲೆಯ ಕೈ ಬಲವಾಯಿತು. ‘ಸಿಂಹಚೂಡನಿಗೆ ಸದ್ಗತಿ ದೊರೆಯಲಿ’ ಎಂದು ಪ್ರಾರ್ಥಿಸುವದನ್ನು ಬಿಟ್ಟರೆ ಬೇರೇನನ್ನು ಮಾಡಲಾಗದ ಅಸಹಾಯಕ ಸ್ಥಿತಿ ನನ್ನದು.

ನಾನಿಷ್ಟು ಹಠ ಮಾಡುತ್ತಿದ್ದರೂ ಈ ಪಾಪಿಗೇಕೆ ಅರ್ಥವಾಗುತ್ತಿಲ್ಲ. ‘ಜನ್ಮಜನ್ಮಾಂತರದಲ್ಲಿಯೂ, ಇಹಪರದಲ್ಲಿಯೂ ಪತಿ ವಸುಷೇಣನೇ ನನ್ನ ಬದುಕು, ನನ್ನ ಸಾವು ಮತ್ತು ನನ್ನ ಚಿತೆಗೊಡೆಯ’ ಎಂದು.

* * *

ಸೃಷ್ಟಿ, ಈಗ ಅರ್ಥವಾಯಿತೆ? ನೀನೆಷ್ಟು ಘೋರಕತ್ತಲನ್ನು ಸೃಷ್ಟಿಸಿದ್ದೀಯ ಎಂದು. ಈ ತರದ ಘಟನೆಗಳು ಲೆಕ್ಕವಿಲ್ಲದಷ್ಟು ಪ್ರತಿದಿನ, ಪ್ರತಿದೇಶದಲ್ಲಿಯೂ ನಡೆಯುತ್ತಿವೆ. ಆದರೂ ಜನ ‘ಕಾಲ ಕೆಟ್ಟುಹೋಯಿತು’ ಎಂದು ಬೊಬ್ಬೆ ಹೊಡೆಯುತ್ತಾರೆ! ಇರಲಿ ಬಿಡು. ನಾವಿದಕ್ಕೆ ಉತ್ತರ ಹೇಳಬೇಕಾಗಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ ‘ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ.’ ನಾವು ನಮ್ಮ ನಮ್ಮ ಕರ್ಮಗಳನ್ನು ಮಾಡೋಣ. ಫಲಾಫಲಗಳನ್ನು ‘ಆತ’ನಿಗೆ ಬಿಟ್ಟುಬಿಡೋಣ.

ಹೊ, ಯುದ್ಧದ ಕಹಳೆಯ ಸದ್ದು. ಯುದ್ಧ ಮೊದಲಿಟ್ಟಿತೋ ಏನೊ. ಆದರೆ ಅಲ್ಲಿ ನೋಡಲ್ಲಿ, ಈ ಚಂಡಶಾಸನನು ಸುನಂದೆಯತ್ತ ಹೋಗುತ್ತಿದ್ದಾನೆ. ನಡೆ, ಏನು ನಡೆಯುತ್ತಿದೆ ಎಂದು ನೋಡೋಣ.

* * *

ದೇವಿ ಸುನಂದೆ, ಇಂದು ಕಡೆಯ ದಿನ. ನಿನಗಾಗಿ ನನ್ನ ಹೆಸರು, ಕೀರ್ತಿ, ರಾಜ್ಯ, ಸತಿಯರು, ಇಹಪರ ಸರ್ವಸ್ವವನ್ನೂ ತೊರೆಯಲು ನಾನು ಸಿದ್ಧನಾಗಿದ್ದೇನೆ. ನಿನ್ನ ಸಾವು ಕೂಡಾ ವಸುಷೇಣನದೆಂದೆ. ಆದರೆ ನಾನು ಬಿಡುವುದಿಲ್ಲ, ನಿನ್ನನ್ನು ಸಾಯಲು ಅವನೊಡನೆ. ನೀನು ಸತ್ತರೆ ನಾನೂ ಸಾಯುತ್ತೇನೆ. ಆದರೆ ನೀನು ಸಾಯಬಾರದು. ನೀನು ನನ್ನ ಮನೆಯಲ್ಲಿದ್ದೀಯ ಎಂಬುದಷ್ಟೇ ನನಗೆ ಸಾಕು. ಬೇರಾವ ಸತಿಯೂ, ಸುಖವೂ ನನಗೆ ಬೇಡ. ಇದೋ ಯುದ್ಧಕ್ಕೆ ಹೊರಟೆ. ನಾನೀಗ ಹಿಂದಕ್ಕೆ ಬರುವುದಿರಲಿ ತಿರುಗಿ ನೋಡದಷ್ಟು ದೂರ ಬಂದುಬಿಟ್ಟಿದ್ದೇನೆ. ಇಂದು ನಿರ್ಧಾರದ ದಿನ. ವಸು, ಇಲ್ಲ ಚಂಡ.

* * *

ನೋಡಿದೆಯಾ ಸೃಷ್ಟಿ. ಈ ಹುಂಬನನ್ನು. ಕಾಮದ ಹುಚ್ಚಿನಿಂದ ಏನೇನೋ ಬಡಬಡಿಸಿದ. ಸುನಂದೆಯನ್ನು ಆಗಲೇ ತನ್ನ ಹೆಂಡತಿಯೆಂದು ಬಗೆದಿದ್ದಾನೆ. ದೇವಿ ಎಂದು ಸಂಬೋದಿಸುತ್ತಿದ್ದಾನೆ. ಆದರೆ ಅವಳು ಮಣಿಯಲಾರಳು ಎಂಬ ಹತಾಶೆಯೂ ಅವನಲ್ಲಿದೆ ಅಲ್ಲವೆ? ಅಲ್ಲಿ ನೋಡಲ್ಲಿ. ಯುದ್ಧ ಪ್ರಖರವಾಗುತ್ತಿದೆ. ನಡೆ ನಾವಲ್ಲಿಯೇ ನಿಂತು ಗಮನಿಸುವ.

ಸಹೋದರಿ, ಅಲ್ಲೇನೊ ನಡೆಯುತ್ತಿದೆ. ಕೇಳಿಸುತ್ತಿದೆಯೆ? ಅರಮನೆಯ ಹೊರಬಾಗಿಲ ಬಳಿ ಗದ್ದಲ! ನೋಡು ಅದು ಸುರಮ್ಯ ದೇಶದ ಪತಾಕೆಯಲ್ಲವೆ? ನೋಡಿದೆಯಾ ವಸುಷೇಣನನ್ನು, ಬಾರ್ಯೆ, ಮಿತ್ರನಿಂದ ಅಪಹೃತಳಾದ ಸುದ್ದಿಯನ್ನು ತಿಳಿದು, ತುತ್ತನ್ನು ಎತ್ತದೆ ಬಂದು ಗುರಿಯನ್ನು ತಲಪುತ್ತಿದ್ದಾನೆ.

ಅರಮನೆಯ ಒಳಗೆಲ್ಲಾ ವಸುಷೇಣ ಸತ್ತನೆಂದು ಸುದ್ದಿ ಹರಡಿದೆ. ಅಲ್ಲಿ ಹೊರಗೆ ಆತ ಇನ್ನೂ ಯುದ್ಧ ಮಾಡುತ್ತಲೇ ಇದ್ದಾನೆ! ಇತ್ತ ನೋಡು, ಆ ಚಂಡಶಾಸನ ಸುನಂದೆಯತ್ತ ಹೋಗುತ್ತಿದ್ದಾನೆ. ಓ! ನಿಂತು ಅದೇನು ನಡೆಸಿದ್ದಾನೆ ಈ ಚಂಡಶಾಸನ? ಮಾಯೆಯಿಂದ ರಕ್ತಸಿಕ್ತವಾದ ತಲೆಯೊಂದನ್ನು ಸೃಷ್ಟಿಸಿದ್ದಾನೆ! ಅದೂ ವಸುಷೇಣನದು! ಮಾಯಾವಿ. ಈಗ ಅರ್ಥವಾಯಿತೆ ಸೃಷ್ಟಿ ಈ ಖಳನ ಉದ್ದೇಶ. ಗಾಬರಿಯಾಗಬೇಡ. ನಿನ್ನ ಗರ್ಭಸಂಜಾತನೊಬ್ಬನ ಕುಟಿಲಬುದ್ಧಿಯನ್ನು ಕಂಡು. ಸೋಲು ಖಚಿತವಾದಾಗ ಮನುಷ್ಯ ಈ ರೀತಿ ಅಡ್ಡದಾರಿಗಿಳಿಯುತ್ತಾನೆ. ಮೋಸದಿಂದಲಾದರೂ ಸರಿ ಸುನಂದೆಯನ್ನು ಕೂಡುವ ಹಂಬಲ ಈ ಮೂಢನಿಗೆ. ಎಲ್ಲ ಕಾಲಕ್ಕೂ ಈ ಗಂಡಸು ಹೆಂಗಸಿನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಅನಾಹುತಕ್ಕೆಡೆಮಾಡಿಕೊಟ್ಟಿದ್ದಾನೆ. ಮಾಯಾಶಿರಸ್ಸನ್ನು ತೋರಿಸಿ ವಸು ಸತ್ತನೆಂದು ಸುನಂದೆಯನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾನೆ, ನೋಡಲ್ಲಿ.

* * *

ಅಯ್ಯೋ, ದುರ್ವಿಧಿಯೆ. ಕೊನೆಗೂ ಪಾಪಿಯ ಕೈಯೇ ಬಲವಾಯಿತಲ್ಲ. ಅಳಿದುಳಿದಿದ್ದ ಬೆಳಕಿಗೂ ಕತ್ತಲು ತುಂಬಿಕೊಂಡಿತಲ್ಲ. ಪಾಪಿ, ನನ್ನ ದೇವರ ತಲೆ ಕಡಿದರೆ ನನ್ನನ್ನು ಒಲಿಸಿಕೊಳ್ಳಬಹುದೆಂದು ನೀನು ತಪಾಗಿ ತಿಳಿದಿದ್ದೀಯ. ಆದರೆ ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... .

ಅಯ್ಯೋ, ದೇವಿ ಸುನಂದೆ. ನಾನೊಂದು ಬಗೆದರೆ, ದೈವವೊಂದು ಬಗೆಯಿತು! ಕಾಮಾತುರನಾಗಿ ನಾನು ದಹಿಸುತ್ತಿದ್ದರೆ, ವಿಧಿ ಮಾಡಿದ್ದನ್ನುಣ್ಣುವವರು ಯಾರು? ನನ್ನ ಮುನ್ನಿನ ಸತಿಯರನ್ನು ತೊರೆದು, ನಿನ್ನನ್ನೇ ನನ್ನ ಸತಿಯೆಂದು ಭಾವಿಸಿದೆ! ಆದರೆ ನೀನದಕ್ಕೆ ಸ್ವಲ್ಪವೂ ಅವಕಾಶ ಕೊಡಲಿಲ್ಲ. ಈ ಮೈಯೊಳಗಿಲ್ಲವಾದರೇನಂತೆ? ಮರುಮೈಯೊಳಗಾದರೂ ನಿನ್ನನ್ನು ಕೂಡದೆ ಬಿಡುವುದಿಲ್ಲ. ನಾನೂ ನಿನ್ನ ಚಿತೆಯನ್ನೇರುತ್ತೇನೆ. ನಿನ್ನ ಚಿತೆಗೊಡೆಯ ವಸುಷೇಣನಲ್ಲ! ಚಂಡಶಾಸನ!

* * *

ನೊಡಿದಿರಾ, ಸಹೃದಯರೆ ಈ ವಿಚಿತ್ರವನ್ನು! ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... ಎಂದು ಮೊರೆಯಿಡುತ್ತಿದ್ದಳು. ಸುನಂದೆಯ ಕೊನೆಯ ಮಾತನ್ನು ಸುಳ್ಳಾಗಿಸಿಬಿಟ್ಟಿತಲ್ಲ ಈ ವಿಧಿ! ಶಾಸನ ಮಾಡುವಾತನೇ ಅದನ್ನು ಮುರಿದು ದುರಂತಕ್ಕೀಡು ಮಾಡಿದ್ದರೂ, ತನ್ನ ಕೊನೆಯ ಮಾತನ್ನೇ ನಡೆಸಿಕೊಂಡುಬಿಟ್ಟ, ಬಲವಂತವಾಗಿಯಾದರು. ಇದು ವೈಯಕ್ತಿಕ ದುರಂತ ಮಾತ್ರವಲ್ಲ, ಸಮೂಹಿಕ ದುರಂತ! ಅಂತಃಪುರದ ಸ್ತ್ರೀಯರು, ಲೆಂಕರು ಚಂಡಶಾಸನನ ಹಿಂದೆಯೇ ಸಾಲುಸಾಲಾಗಿ ಚಿತೆಯೇರಿದರು. ಸುನಂದೆಯನ್ನು ಹೊತ್ತು ತಂದಾಗ, ತಮ್ಮರಸನ ಅವಿವೇಕತನಕ್ಕೆ ದೂಷಿಸಿದ್ದ ಪುರಜನರೂ ದುಃಖಪಟ್ಟರು. ಹೆಣ್ಣಿನ ಜೊತೆ ಚಿತೆಯೇರಿದ ಮೊದಲ ಪುರುಷನೀತ!!!

ಸಹೃದಯರೆ, ಈ ಪ್ರಪಂಚದಲ್ಲಿ ಒಳಿತು ಕೆಡಕುಗಳೆರಡೂ ಸಮವಾಗಿರುತ್ತವೆ. ಸಮವಾಗಿರಲೇಬೇಕು. ಅವುಗಳಲ್ಲಿ ಕೆಡಕು ಒಂದಿಷ್ಟು ಹೆಚ್ಚಾದರೂ, ಸೃಷ್ಟಿಯ ಉತ್ಪಾದಕ ಸಾಮರ್ಥ್ಯ ಮತ್ತು ನನ್ನ ತಾಳುವಿಕೆಯ ಸಾಮರ್ಥ್ಯದಲ್ಲಿ ಹೆಚ್ಚುಕಡಿಮೆಯಾದಾಗ ಉಂಟಾಗುವ ಅನಾಹುತವೇ ಆಗುತ್ತದೆ. ಅದರ ಪರಿಣಾಮವನ್ನು ಮಾತ್ರ ಈ ವ್ಯವಸ್ಥೆ ತಾಳಲಾರದು.

ಸೃಷ್ಟಿ, ಈ ಮನುಷ್ಯ ಯಾವುದಾದರು ಒಂದು ವಿಷಯದಲ್ಲಿ ಉನ್ನತಿ ಸಾಧಿಸಿದರೆ ಸಾಕು, ಸಮಷ್ಟಿಯನ್ನು ಮರೆತುಬಿಡುತ್ತಾನೆ. ಸಮಷ್ಟಿಯುನ್ನತಿಯೊಂದಿಗೇ ತನ್ನುನ್ನತಿಯೆಂಬದನ್ನು ಮರೆತುಬಿಡುತ್ತಾನೆ. ಮನುಷ್ಯರು ನಮ್ಮನ್ನು ಮರೆತಾಗಲೆಲ್ಲಾ, ನಾವು ನಮ್ಮ ಇರುವನ್ನು ಅವರ ಅರಿವಿಗೆ ತರಲೇಬೇಕು. ಇದನ್ನು ನಾನು ನಿನಗೆ ಹೇಳಬೇಕೆ? ನೀನೆಷ್ಟು ಸುಂದರಳೊ, ಸೌಮ್ಯಳೊ, ಒಳ್ಳೆಯವಳೊ ಅಷ್ಟೇ ರೌದ್ರಭಯಂಕರಳೂ ಎಂಬುದಕ್ಕೆ ನೀನು ಇತ್ತೀಚಿಗೆ ಪ್ರಸವಿಸಿದ ಭೂಕಂಪವೇ ಸಾಕ್ಷಿ !!!
***