Friday, June 22, 2018

ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ

ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ:
ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?.....
ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ನೂರರ ಲೆಕ್ಕದಲ್ಲಿ ಪಟ್ಟಿ ಮಾಡಬಹುದು, ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ!
***
ಸೀತೆಯ ಪ್ರಭಾವಕ್ಕೊಳಗಾದ ತಂಗಿ ಚಂದ್ರನಖಿಯೂ ರಾವಣನಿಗೆ ಬುದ್ಧಿವಾದ ಹೇಳುವಷ್ಟರಮಟ್ಟಿಗೆ ಧೈರ್ಯವಹಿಸುತ್ತಾಳೆ. ರಾವಣ ಕೆರಳುತ್ತಾನೆ, ಒಳಗೊಳಗೆ ಬೆವರುತ್ತಾನೆ! ಮೇಲ್ಮೇಲೆ ಬೆದರಿಸುತ್ತಾನೆ!!
ನೀನಾದೊಡಂ,
ಅನಲೆಯಾದೊಡಂ
ಮತ್ತಂ ಇನ್ನಾರಾದರೊಡಂ
ಇತ್ತಲ್ ಈ ಬನಕೆ ಕಾಲಿಟ್ಟುದಂ
ಕೇಳ್ದೆನಾದೊಡೆ.....
ಎಂದು ಮಾತು ಮುಂದುವರಿಸುತ್ತಿರುವಾಗಲೇ, ಆತ ನಿಂತಿದ್ದ ಆಲಿವಾಣದ ಮರದ ಮೇಲಿಂದ ಹೂಕುಡಿವ ಹಕ್ಕಿ ಕೆಡಹಿದ ಆಲಿವಾಣದ ಕೆಂಪು ಹೂ ದೊಪ್ಪನೆ ರಾವಣನ ಮೇಲೆ ಬಿದ್ದು ಆತನ ಮಾತಿಗೆ ಅಡ್ಡಿಯಾಗುತ್ತದೆ. ಅದರಿಂದ ಕಿನಿಸಿ ತಲೆಕೊಡಹಿ, ಮೇಲಕ್ಕೊಂದು ಸಾರಿ ನೋಡಿ ಮತ್ತೆ ಮಾತು ಮುಂದುವರಿಸಿ-
.......ಕೊರಳ್ ಉರುಳ್ದಪುದು
ಎಂದು ವಾಕ್ಯವನ್ನು ಪೂರ್ಣಗೊಳಿಸುತ್ತಾನೆ. ಕವಿ “ಪೂರೈಸಿದನ್ ತನ್ನ ದುರ್ವಾಕ್ಯಮಂ” ಎನ್ನುತ್ತಾರೆ! ಇದೊಂದು ಅತ್ಯದ್ಭುತವಾದ ಪ್ರತಿಮಾಸೃಷ್ಟಿ. ಮುಂದೆ ರಾವಣನಿಗೊದಗಲಿರುವ ಅವಸಾನದ ಸೂಚನೆ. ಕೆಂಪು ಹೂವನ್ನು (ಕೆಂಪುಕಣಿಗಿಲೆ ಅಥವಾ ಆಲಿವಾಣ) ಬಲಿಯ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. ಬಲಿಯಾಗುವ ಪ್ರಾಣಿಯ ಮೇಲೆ ಕೆಂಪುಹೂವನ್ನು ಹಾಕಿ ಬಲಿಗೆ ಒಪ್ಪಿಗೆ ಸೂಚಿಸಲಾಗುತ್ತದೆ. ಇಲ್ಲಿ ಹೂವು ಬಿದ್ದಿರುವುದು ರಾವಣನ ತಲೆಯ ಮೇಲೆ. ಆದರೆ ರಾವಣನೇ ‘ಕೊರಳ್ ಉರುಳ್ದಪುದು’ ಎನ್ನುತ್ತಿದ್ದಾನೆ! ಅವನ ಮಾತಿನ ವಾಚ್ಯಾರ್ಥ ತನ್ನ ಮಾತನ್ನು ಮೀರಿ ಸೀತೆಯ ಬೇಟಿಗೆ ಬರುವ ಅನಲೆ ಚಂದ್ರನಖಿಯ ಮೊದಲಾದವರನ್ನು ಕುರಿತು. ಅದು ತನ್ನ ಮೇಲೆ ಹೂವನ್ನು ಕೆಡವಿದ ಹಕ್ಕಿಗೂ ಅನ್ವಯಿಸಿರಬಹುದು. ಆದರೆ, ನಿಜದಲ್ಲಿ ಕೊರಳು ಉರುಳುವುದು ರಾವಣನದು!
***
‘ನಿನ್ನನ್ನು ಉಳಿದ ರಾಮನು, ಕಿಷ್ಕಿಂದೆಯಲ್ಲಿ ಇನ್ನಾವಳನ್ನೊ ಕಟ್ಟಿಕೊಂಡು ಸುಖವಾಗಿದ್ದಾನೆ’ ಎಂಬ ಸುಳ್ಳಿನಿಂದ ಆರಂಭಿಸಿ, “ಇಲ್ಲದಿರ್ಕೆ ಬಯಸಿ ಎಳಸದಿರ್, ಇರ್ಪುದನೊಪ್ಪಿ ಸೊಗವನುಣ್” ಎಂಬ ತರ್ಕವನ್ನು ರಾವಣ ಸೀತೆಯ ಮುಂದಿಡುತ್ತಾನೆ. ಅಷ್ಟರವರೆಗೆ ರಾವಣನ ಮಾತಿಗೆ ಕ್ಷಣಮಾತ್ರವೂ ಪ್ರತಿಕ್ರಿಯೆ ತೋರದಿದ್ದ ಸೀತೆ-
.....ಭಿತಿಯಂ ಕೆಲಕೊತ್ತಿ,
ದುಕ್ಕಮಂ ಮೆಟ್ಟಿಕ್ಕಿ,
ಸುಯ್ದೋರಿದುದು ಕೋಪಫಣಿ
ಜನಕನಂದಿನಿಯ ಮೌನವಲ್ಮೀಖದಿಂ.....
ಎಂಬಂತೆ ಸಿಡಿಯುತ್ತಾಳೆ, ತ್ರಿಜಟೆಗೆ ಹೇಳುವಂತೆ, ರಾವಣನನ್ನು ಉದ್ದೇಶಿಸಿ ಮಾತನಾಡುತ್ತಾಳೆ. ಭಾಗಶಃ ಬಯ್ಯುತ್ತಾಳೆ (ಅಲ್ಪಪ್ರಾಣಿ, ನಾಯಿ, ಕತ್ತೆ ಎಂದೆಲ್ಲಾ ರಾವನೆದುರಿಗೇ ರಾವಣನನ್ನು ಹೀಯಾಳಿಸುವುದು, ಅಸಹಾಯಕ ಸ್ಥಿತಿಯಲ್ಲಿ ಸಿಡಿದೇಳುವ ಸಾತ್ವಿಕ ಮನೋಭಾವದ ಸ್ತ್ರೀಯರ ಪ್ರತಿನಿಧಿಯಂತೆ ಕಾಣುತ್ತಾಳೆ ಸೀತೆ); ಬಹುಶಃ ರಾಮಾಯಣ ದರ್ಶನಂ ಕಾವ್ಯದಲ್ಲಿ ಈ ಭಾಗದಷ್ಟು ಕಠಿಣವಾದ ವಾಕ್ಯಗಳನ್ನು ಬೇರೆಲ್ಲೂ ಕಾಣಲಾಗುವುದಿಲ್ಲ. ಸೀತೆ ಮಾತಿನ ಸೊಬಗನ್ನು ಇಡಿಯಾಗಿ ಓದಿಯೇ ಅನುಭವಿಸಬೇಕು:
“ಪೇಳ್, ತ್ರಿಜಟೆ,
ಪಿತ್ತೋತ್ಪನ್ನ ಜಲ್ಪಕೆ ಉತ್ತರವಿದಂ
ನಿನ್ನ ಅನ್ನದಾತಂಗೆ:
ಕತ್ತೆಯ ತತ್ತ್ವಮಂ ಕತ್ತೆ ಕತ್ತೆಗಳ್ಗೆ ಉಪದೇಶಿಸಲ್ವೇಳ್ಕುಂ ಅಲ್ಲದೆಯೆ
ಉತ್ತಮ ರಘುಕುಲೋತ್ತಮನ ಸತಿಯ ಮುಂದದಂ ಗಳಪಲ್ ಪ್ರಯೋಜನಮೆ?
ಪ್ರತ್ಯುತ್ತರಕ್ಕಮೀ ಅರ್ಹನಲ್ತಲ್ಪಾಸು!
ಮರುಕಮಂ, ಕರುಣೆಯಂ, ವಿನಯಮಂ, ಸೌಜನ್ಯಮಂ
ನಟಿಸುವೀ ನಟನ ಶುನಕಾಭಿನಯಕೆ ಧಿಕ್!
ಪುಸಿವೇಳ್ವ ನಾಲಗೆಗೆ ಧಿಕ್, ಧಿಕ್! ಕೋಟಿ ಧಿಕ್!
ಇವನ ಪೊಲೆಸಿರಿಗೆ ಧಿಕ್! ಇವನ ಬಲ್ಮೆಗೆ ಲಕ್ಷಧಿಕ್!
ಉಗುಳುಮಪವಿತ್ರಮಕ್ಕು, ಈತಂಗೆ ಪೇಸಿ ಆ ದಿಕ್ಕಿಗೆಂಜಲನೆಸೆಯೆ ನಾಂ!
ಶ್ರೀ ರಾಮಚಂದ್ರನೆಲ್ಲಿರ್ದೊಡಂ ನನಗೆ ಪತಿ!
ಶ್ರೀ ರಾಮನೆಂತಿರ್ದೊಡಂ ನನಗೆ ಪತಿ!
ಸತ್ತೆ ನಾಂ ಸೇರ್ದಪೆನಾತನೊಡನೆ;
ಬದುಕಮೇಧ್ಯಮೆ ದಿಟಂ ಇನ್ನರಿರ್ಪೀ ಜಗದಿ!#
ಈ ಸೊಣಗಮರಿಯದಾ ಭೀಮ ವಿಕ್ರಮಿ ರಾಮ ಮಹಿಮೆಯಂ.
ಬಲ್ಲೆನಾಂ. ಪೇಳ್, ತ್ರಿಜಟೆ, ನಿನ್ನನ್ನದಾತಂಗೆ.
ಕೂಳ್ ಕೊಟ್ಟು ಸಲಹಿದಾ ಜೋಳವಾಳಿಗೆ ಉಪಕೃತಿಯನೆಸಗಿ ಋಣಮುಕ್ತೆಯಾಗು.
ಪಾಪಿಗೆ ಮೋಕ್ಷಮೆಂತಂತೆ ದುರ್ಲಭಳ್ ನಾನೀ ನಿಶಾಚರಗೆ.
ನಾಂ ಮುನ್ನೆ ಗೆಂಟರಿಂ ಕೇಳ್ದ ರಾಕ್ಷಸವಿಕೃತಿ, ಪೊರಗಲ್ತು, ಒಳಗಿರ್ಪುದೀತಂಗೆ.
ಕೇಳದೊ ವಿಹಂಗಮಂ ಕುಕಿಲಿದೆ ಭವಿಷ್ಯಮಂ:
ತರುವುದೀ ಸಾಗರಂ ತಾನೆ ಸೇತುವೆಯಾಗಿ ರಾವಣನ ಮೃತ್ಯುವಂ,
ಬೇಗಂ ಇವನೆನ್ನನಾ ಮುನ್ನಮೊಪ್ಪಿಸದಿರಲ್ ಆ ಕೃಪಾಕರನಡಿಗೆ ಮುಡಿಯಿಟ್ಟು!”
ಸೀತೆಯ ಮಾತಿನ ತೀಕ್ಷ್ಣತೆಗೆ, ಅದರಲ್ಲಿನ ತಿರಸ್ಕೃತಿಯ ಘಾತಕ್ಕೆ ರಾವಣ ಕಣ್ಣು ಮುಚ್ಚಿದನಂತೆ. ಮತ್ತೆ ಕಣ್ಣುತೆರದನಂತೆ ಸತ್ತು ಹುಟ್ಟಿದ ರೀತಿಯಲ್ಲಿ!!
#(ಜನ್ನನ ಅನಂತನಾಥಪುರಾಣದಲ್ಲಿ ಸುನಂದೆ 'ವಸುಷೇಣನೇ ನನ್ನ ಬದುಕು; ವಸುಷೇಣನೇ ನನ್ನ ಸಾವು; ವಸುಷೇಣನೇ ನನ್ನ ಚಿತೆಗೊಡೆಯ" ಎಂದು ಚಂಡಶಾಸನನಿಗೆ ಉತ್ತರನೀಡುವ ದೃಶ್ಯವಿದೆ)
***
ರಾವಣ ಎಂದೂ ಈಡೇರದ ಪ್ರತಿಜ್ಞೆಯೊಂದನ್ನು ಮಾಡುತ್ತಾನೆ- ಸೀತೆಗೆ ಹೇಳುವಂತೆ ತ್ರಿಜಟೆಗೆ ಹೇಳುತ್ತಾನೆ!
ತ್ರಿಜಟೆ, ಕೇಳ್ ಲಂಕೇಶನಾಜ್ಞೆಯಂ. ಮತ್ತೆ ಪೇಳ್,
ಉಣಿಸಿಲ್ಲದೀ ಮೆದುಳ್ಗೆಟ್ಟಳ್ಗೆ ಬುದ್ಧಿಸ್ಥಿರತೆ ಮರಳ್ದಾಮೇಲೆ.
ಮೊದಲ್, ಇಲ್ಲಿ ಬಂದಿರ್ದರಾರೆಂಬುದಂ. ಪೇಳ್ದುದೇನೆಂಬುದಂ ಮತ್ತೆ.
ಇನ್ನೆರಳ್ ತಿಂಗಳಿಹುದಿತ್ತವಧಿ.
ಆ ಮೇರೆಯೊಳ್ ಪುರ್ಚಿನೀ ಬಗೆಕದಡು ಹಣಿಯದಿರೆ,
ಭೇಷಜಂ ಬರ್ಪುದು ಬಲಾತ್ಕಾರ ರೂಪಮಂ ತಾಳ್ದು! ಮೇಣ್,”
(ಸುಯ್ದು ನಿಡುನೋಡುತಾ ಸೀತೆಯಂ ವಿರಳಾಕ್ಷರದಿ ತಡೆತಡೆದು ನುಡಿದನಿಂತು)
“ಮೇಣ್, ನಿರಶನವ್ರತರೂಪದ ಆತ್ಮಹತ್ಯೆಯಿನ್ ಆಕೆ ಮಡಿಯುವೊಡೆ,
ಅದೆ ಚಿತೆಯನೇರುವೆನ್;
ಪೆಣದೆಡೆಯೆ ಪವಡಿಪೆನ್;
ಭಸ್ಮರೂಪದಿನಾದೊಡಂ ಕೂಡಿ ಪೊಂದುವೆನ್ ಸಾಯುಜ್ಯಮಂ!”
(ಇಲ್ಲಿ ರಾವಣನ ಈ ಪ್ರತಿಜ್ಞೆ ಈಡೇರುವುದಿಲ್ಲ; ಆದರೆ ಜನ್ನನ ಅನಂತನಾಥಪುರಾಣದಲ್ಲಿ ಚಂಡಶಾಸನ "ನಿನ್ನ ಚಿತೆಗೊಡೆಯ ವಸುಷೇಣನಲ್ಲ; ಚಂಡಶಾಶನ" ಎಂದು ಹೇಳಿದಂತೆ ಸನುಂದೆಯ ಹೆಣದೊಂದಿಗೆ ಚಿತೆಗೇರುತ್ತಾನೆ!!!!)

ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?

ಅಶೋಕವನದಲ್ಲಿ ಆಂಜನೇಯ ಹುಡುಕುತ್ತಿದ್ದ, ಸೀತೆಯನ್ನಿಟ್ಟಿದ್ದ ಎಲೆವನೆ ಹೇಗಿತ್ತು?
ಎಲ್ಲ ಚೆಲ್ವಿಂಗೆ ಮುಡಿಯಾಗಿ,
ಮರುತಜನ ಕಣ್ಗುರಿಗೆ ಗುಡಿಯಾಗಿ,
ಕಡಲ ನೀರ್ನಡೆಗೆ ನಿಲ್’ಗಡಿಯಾಗಿ,
ಮಾರುತಿಯ ನಿಃಶ್ರೇಯಕೊಂದು ಮುನ್ನುಡಿಯಾಗಿ
ಕುಳ್ತುದು ಎಲೆವನೆವಕ್ಕಿ,
ತನ್ನ ಬೆಚ್ಚನೆ ಗರಿಯ ರೆಕ್ಕೆತಿಪ್ಪುಳೊಳಿಕ್ಕಿ
ರಕ್ಷಿಪ್ಪವೋಲ್ ದುಃಖಿ ಭೂಜಾತೆಯಂ!
ದುಃಖಿತಳಾಗಿರುವ ಸೀತೆಯನ್ನು, ತನ್ನ ಗರಿಯ ತಿಪ್ಪುಳೊಳಗೆ ಹುದುಗಿಸಿಕೊಂಡು ರಕ್ಷಿಸುತ್ತಿರುವ ಹಕ್ಕಿಯಂತೆ ಎಲೆವನೆ ಕಾಣುತ್ತಿತ್ತಂತೆ!
*
ಎಲೆವನೆಯಿಂದ ಹೊರಬರುವ ಸೀತೆಗಾಗಿ ಕಾದು ಕುಳಿತಿದ್ದ ಆಂಜನೇಯನಿಗೆ ಅತ್ಯಂತ ಅನಿರೀಕ್ಷಿತವಾಗಿ (ರಾವಣನಾಗಮನದ ಮುನ್ಸೂಚನೆಯಾಗಿ) ಕೇಳಿಬರುವ ಸಂಗೀತ ಸುಧೆ (ತಂತಿಯಿಂಚರದೈಂದ್ರಜಾಲಿಕಂ!) ರೋಮಾಂಚನವನ್ನುಂಟು ಮಾಡುತ್ತದೆ.
ಅಕ್ಕಜಂ ಇಂಪಿನೊಡನೆ ಮೇಣ್
ಆಶ್ಚರ್ಯಂ ಆನಂದದೊಡನೆ
ಹೊಯ್ ಕಯ್ಯಾಗೆ ಸೊಗಸಿತು
ಆ ತಾನ ತಾನ ಸ್ವನದ ಸಂತಾನ:
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?
ಬೇರುಗಳ ಮುಖಾಂತರ ಮರದ ಕಾಂಡ ಕೊಂಬೆ ಎಲೆಗಳಿಗೆ ರಸ ಪ್ರವಹಿಸುವ ಗತಿಯಲ್ಲಿ ಆ ಸಂಗೀತ ಆಂಜನೇಯನ ಮೈಮನಕ್ಕೆ ರೋಮಾಂಚನವನ್ನುಂಟು ಮಾಡಿತಂತೆ!!
(ಬಹುಶಃ ಇಂತಹುದೊಂದು ಅಲಂಕಾರವನ್ನು ಯಾವ ಕವಿಯೂ ಸೃಷ್ಟಿಸಿರಲಾರ)
*
ಆ ಸಂಗೀತ ಆಂಜನೇಯನ ಮೈಮನಗಳಿಗೆ ಇಳಿದು ಏರಿ ಉಂಟಾದ ಪರಿಣಾಮ ಸುತ್ತಲಿನ ಪರಿಸರಕ್ಕೂ ಆಯ್ತೇನೊ!:
ರಸಸುಖ ಆಕಸ್ಮಿಕಕೆ ಕಿವಿಸೋಲ್ತನ್ ಅನಿಲಜಂ:
ಲೋಕದೋಲವ ತೂಗಿ ತೊನೆದುದು
ಆ ತಾನ ತಾನ ಸ್ವನದ ಸಂತಾನ!
*
ಸೂರ್ಯನ ಪ್ರಥಮಕಿರಣಗಳು ಸೀತೆಯಿದ್ದ ಎಲೆವನೆಯ ತರಗೆಲೆಯ ತಡಿಕೆಗೋಡೆಯ ಬಿರುಕಿನೊಳಗಿಂದ ಪ್ರವೇಶಿಸಿ ಸೀತೆಯ ಮೇಲೆ ಬಿದ್ದುದು ಕವಿಗೆ ಕಂಡದ್ದು ಹೀಗೆ:
ಆ ಮರುಕ ಎದೆಯ ಬಿಸಿಲ ಪಸುಳೆ
ತನ್ನ ಕೋಮಲ ಕರದ ಕಿಸಲಯೋಪಮ
ಮೃದುಲ ರೋಚಿಯ ಬೆರಲ್ಗಳಿಂ ಸೋಂಕಿ ಸಂತಯ್ಸಿದುದೊ
ಸೀತೆಯ ತಪಃಕ್ಲಾಂತ ಚರಣಾರವಿಂದಂಗಳಂ.
ಅಲ್ಲಿಯವರೆಗೆ ಸೀತೆ ಇದ್ದ ಸ್ಥಿತಿ ಹೇಗಿತ್ತು ಗೊತ್ತೆ?
ಹೈಮ ಶೈಲ ಶಿರ ಗುಹೆಯ ಗರ್ಭದಿ,
ಕಳ್ತಲಿಡಿದ ಕರ್ಗ್ಗವಿಯಲ್ಲಿ,
ಶೈತ್ಯದೈತ್ಯನ ಭಯಕೆ ಹೆಪ್ಪುಗಟ್ಟಿರ್ದ ನೀರ್.....
ಹಿಮಪರ್ವತದ ತುದಿಯಲ್ಲಿರುವ ಕಗ್ಗತ್ತಲೆಯ ಗವಿಯಲ್ಲಿ ಚಳಿಯ ರಕ್ಕಸನ ಭಯದಿಂದ ಮುದುಡಿಕೊಂಡು ಹೆಪ್ಪುಗಟ್ಟಿದ್ದಂತೆ!
(ಶೈತ್ಯದೈತ್ಯ=ರಾವಣ! ಹರಿವ ನೀರು=ಸೀತೆ!! ಆತನ ಭಯದಿಂದ ಹೆಪ್ಪುಗಟ್ಟಿದಂತೆ ಮುರುಟಿಕೋಮಡು ಬಿದ್ದಿದ್ದಾಳೆ!!!)
ತನ್ನ ವಂಶದ ಸೊಸೆ ಸೀತೆಗೆ ಚೈತನ್ಯವನ್ನೀಯಲು ಬಂದನೋ ಎಂಬಂತೆ ಬಂದ ಸೂರ್ಯನ ಕಿರಣಗಳು ಸೀತೆಯ ಕಾಳುಗಳನ್ನು ಸೋಂಕಿದ್ದೇ ತಡ.......
...... ಉತ್ತರಾಯಣ ರವಿಯ ಛವಿಯ ಚುಂಬನಕೆ
ಎಂತು ಮಂಜುಗಡ್ಡೆಯ ತನ್ನ ಘನನಿದ್ರೆಯಂ ದ್ರವಿಸಿ,
ಪೆಡೆನಿಮಿರ್’ದೊಯ್ಯನೆ ಸುರುಳಿವಿರ್ಚ್ಚುವೊಲ್ ಸ್ರವಿಸಿ ಪರಿವಂತೆ...
ಸೀತೆಗೆ ಎಚ್ಚರವಾಯಿತಂತೆ!

Monday, June 04, 2018

ಟಿಪ್ಪಣಿ-8: ಕಬಂಧ ವಧೆ, ಖಿನ್ನತೆ, ವರ್ತಮಾನ ಇತ್ಯಾದಿ

[ಚಂದನ್ ಎಂಬುವವರ ಕುಟುಂಬದ ದುರಂತ ಅಂತ್ಯದ ಹಿನ್ನೆಲೆಯಲ್ಲಿ]
ಮೂಲ ವಾಲ್ಮಿಕಿ ರಾಮಾಯಣದಲ್ಲಿ ಕಬಂಧ ಎಂಬ ರಾಕ್ಷಸನ್ನು, ಸೀತೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ರಾಮ-ಲಕ್ಷ್ಮಣರು ವಧಿಸುವ ಕಥೆ ಬರುತ್ತದೆ. ಅದರಲ್ಲಿ ಕಬಂಧನೊಡನೆ ನೇರ ಹೋರಾಟಕ್ಕಿಳದ ರಾಮಲಕ್ಷ್ಮಣರ ಕೈ ಸೋಲಾಗುತ್ತಾ ಸಾಗುತ್ತದೆ. ಆಗ, ರಾಮ, ಲಕ್ಷ್ಮಣನಿಗೆ ‘ನನ್ನ ಕಥೆ ಮುಗಿಯಿತು. ನೀನಾನಾದರು ತಪ್ಪಿಸಿಕೊಂಡು ಹೋಗು. ಅಯೋಧ್ಯೆಗೆ ವಿಷಯ ತಿಳಿಸು’ ಎಂದು ನಿರಾಶೆಯಿಂದ ನುಡಿಯುತ್ತಾನೆ. ಆದರೆ, ಲಕ್ಷ್ಮಣನ ಸಂದರ್ಭೋಚಿತ ಮಾತುಗಳಿಂದ ಸಾಹಸದಿಂದ ಇಬ್ಬರೂ ಸೇರಿ ಕಬಂಧನ ಬಾಹುಗಳನ್ನು ಕತ್ತರಿಸಿ ಅಪಾಯದಿಂದ ಪಾರಾಗುತ್ತಾರೆ. ಶ್ರೀರಾಮಾಯಣ ದರ್ಶನದಲ್ಲಿ ಕುವೆಂಪು ಅದನ್ನು ಆಧುನಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಹೊಸತಾಗಿ ಚಿತ್ರಿಸಿದ್ದಾರೆ. ಇಲ್ಲಿ ಕಬಂಧನ ಭೌತರೂಪ ನೇರವಾಗಿ ಪ್ರವೇಶಿಸುವುದಿಲ್ಲ. ರಾಮನ ಮನಸ್ಸಿನಲ್ಲಿಯೇ ನಡೆಯುವ ಹೋರಾಟ! ಇಲ್ಲಿಯ ಕಬಂಧ ಮನುಷ್ಯನ ಅಸಹಾಯಕ ಸ್ಥಿತಿಯಲ್ಲಿ ತೋರುವ ಖಿನ್ನತೆಯಂತೆ ಚಿತ್ರಿತವಾಗಿದೆ! ಅದೇ ಒಂದು ಪುಟ್ಟ ನಾಟಕದಂತಿದೆ ಎಂಬುದು ಇನ್ನೊಂದು ವಿಶೇಷ

ಹಿಂದಿನ ದಿನ ನಡೆಯಬಾರದ್ದೆಲ್ಲ ನಡೆದಿದೆ. ಸೀತಾಪಹರಣವಾಗಿದೆ. ಜಟಾಯು ಸತ್ತು ಹೋಗಿದ್ದಾನೆ. ರಾಮ ನಿರಾಶೆಯಲ್ಲಿ ಮುಳುಗಿದ್ದಾನೆ. ಜನಕಜಾಶೂನ್ಯರಾದ ರಾಮಲಕ್ಷ್ಮಣರಿಬ್ಬರೂ “ನರಳುವ ನೆರಳುಗಳಂತೆ ಮಸಣದಿಂ ಮರಳಿದರ್, ಮತ್ತೊಂದು ಮಸಣಕೆನೆ, ಪರ್ಣಶಾಲೆಯ ಶವದಶೂನ್ಯಕ್ಕೆ”. ರಾತ್ರಿಯಿಡೀ ನಿದ್ರೆಯಿಲ್ಲ. ನಿರಾಶೆ, ನಿಟ್ಟುಸಿರು, ಅರೆನಿದ್ದೆ, ಕನವರಿಕೆ ಮೊದಲಾದವುಗಳ ನಡುವೆಯೇ ಬೆಳಗಾಗುತ್ತದೆ. ರಾಮನಿಗೆ ಜಟಾಯು ಹೇಳಿದ ನೈರುತ್ಯ ಎಂಬುದಷ್ಟೇ ನೆನಪಾಗುತ್ತದೆ. ನಿರ್ಜನತೆ ನೈರಾಶದ ಆಕಳಿಕೆಯಾಗಿ ತೋರುತ್ತದೆ. ನಿಶ್ಯಬ್ಧ ರವದ ಶವವಾಗಿ ಕಾಣುತ್ತದೆ. (ರವಶವ - ಹೊಸ ರೂಪಕ) ರಾಮ ಖಿನ್ನತೆಗೊಳಗಾಗಿ ಹತಾಶೆಯ ಮಂಕು ಬಡಿದಂತೆ ಕಡಿದು ಕುಳಿತು ಮಾತನಾಡುತ್ತಾನೆ
ರಾಮ:
ಏತಕೆ? ಎಲ್ಲಿಗೆ? ಎತ್ತ ಹೋಗುತಿಹೆವು ಆವ್ ಇಂತು? ಸೌಮಿತ್ರಿ?

ಲಕ್ಷ್ಮಣ:
(ಭಯದಿಂದ) ಬೇಡ, ಬೇಡಣ್ಣಯ್ಯ; ನಿನ್ನಚಲ ಧೈರ್ಯಮಂ ನೈರಾಶ್ಯಕೌತಣಂಗೆಯ್ಯದಿರ್.
ನೆನ ಭರದ್ವಾಜ ಋಷ್ಯಾಶ್ರಮಂ; ಅತ್ರಿಯಂ, ಅನಸೂಯೆಯಂ; ನೆನ ಅಗಸ್ತ್ಯ ಗುರುದೇವನಂ;
ಬಗೆಗೆ ತಾರಯ್ಯ ವಿಶ್ವಾಮಿತ್ರ ಮಂತ್ರಮಂ!
ನಿನ್ನ ಮೈಮೆಯೆ ನೀನೆ ಮರೆವೆಯೇನ್?
ತನಗೆ ತಾಂ ನಿಂದೆಯಪ್ಪುದೆ ಕೊಂದುಕೊಂಡಂತೆ; ನನ್ನನುಂ ಕೊಂದಂತೆ!
ನಿನ್ನ ಮಹಿಮೆಯ ನೆನಹೆ ನನಗಿಂತು ವಜ್ರ ಚಿತ್ರವನಿತ್ತು ಹೊರೆಯುತಿರೆ,
ನೀನಿಂತು ಕಳವಳಿಸುತಾಸೆಗೇಡಿನ ಕಿಬ್ಬಿಗುರುಳುವೆಯ,
ಚಂದ್ರಚೂಡನ ರುಂದ್ರ ಕೋದಂಡಮಂ ಮುರಿದು ಮೈಥಿಲಯನೊಲಿದ ಜಗದೇಕೈಕವೀರ,
ಹೇ ಲೋಕ ಸಂಗ್ರಹ ಶಕ್ತಿಯವತಾರ?

ಇಲ್ಲಿ ಲಕ್ಷ್ಮಣನ ಮಾತುಗಳು ಖಿನ್ನತೆಗೆ ಒಳಗಾಗುತ್ತಿರುವ ರಾಮನ ಮನಸ್ಸಿಗೆ ಬಹಳ ಮುಖ್ಯ. ಲಕ್ಷ್ಮಣ ಇಲ್ಲಿ ಸೂರ್ಯವಂಶ, ಅಯೋಧ್ಯೆ ದಶರಥ, ಕೌಸಲ್ಯೆ, ಕೈಕೆ ಮೊದಲಾದವರ ಹೆಸರು ಎತ್ತುವುದಿಲ್ಲ. ರಾಮನ ಮನಸ್ಸಿಗೆ ಯಾವಾಗಲೂ ಸಂತೋಷವನ್ನುಂಟು ಮಾಡಿದ್ದ ಋಷ್ಯಾಶ್ರಮಗಳ ಋಷಿಗಳ ಹೆಸರನ್ನು ಮಾತ್ರ ಎತ್ತಿ ಸಂತೈಸುತ್ತಾನೆ! ಲಕ್ಷ್ಮಣನ ಮಾತುಗಳನ್ನು ಕೇಳುತ್ತಲೇ ರಾಮನಿಗೆ ಒಂದು ಮಾನಸಿಕ ಅನುಭವವಾಗುತ್ತದೆ. ಆಕಾರವೇ ಇರದ ಒಂದು ಆಕೃತಿ ಕಾಣಿಸುತ್ತದೆ. ರಾಹು, ಸರೀಸೃಪ, ಶ್ಲೇಷ್ಮಚರ್ಮ, ತಿರ್ಯಗ್ಯೋನಿ, ಕುಕ್ಷಿಗ, ವ್ಯಾಳ ಮುಂತಾದ ಪದಗಳಿಂದ ಅದರ ಭೀಕರತೆಯನ್ನು ಕವಿ ಕಟ್ಟಿಕೊಡುತ್ತಾರೆ. ಅಮೂರ್ತವಾದುದನ್ನು ಅನುಭವವೇದ್ಯಗೊಳಿಸಲು ಮೂರ್ತಕಲ್ಪನೆಯನ್ನು, ಉಪಮೆಗಳನ್ನು ತರುತ್ತಾರೆ. ಇನ್ನು ಮುಂದಿನದೆಲ್ಲವೂ ರಾಮನ ಪ್ರಜ್ಞಾವಸ್ಥೆಯಲ್ಲೇ ನಡೆಯುವ ಹೋರಾಟ!
ಕೊನೆಗೆ ಹೊಟ್ಟೆಯೇ ತಲೆಯೂ ಆದ, ಕಾಲುಗಳೇ ಕೈಗಳೂ ಆದ ರೂಪ ತೋರುತ್ತದೆ. ಕೈಗಳೂ ಯೋಜನ ಯೋಜನ ಉದ್ದವಿರುತ್ತವೆ. ಗುಹೆಯಂತಹ ಕಣ್ಣಿರುತ್ತದೆ. ತನ್ನ ನಿರಾಶೆಯೇ ತನಗೆ ಕಬಂಧನ ರೂಪದಲ್ಲಿ ಕಾಣಿಸುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಭಯ ಕಾಡುತ್ತದೆ. ನಡುಕು ಉಂಟಾಗುತ್ತದೆ. ಪೌರುಷದ ಫಣಿಯ ಹೆಡೆ ಮುಚ್ಚುತ್ತದೆ. ಪಲಾಯನವೆಂಬ ಕುದುರೆಯನ್ನೇರಲು ಮನಸ್ಸು ತವಕಿಸುತ್ತದೆ! ಆದರೆ ಓಡಲಾರದೆ, ಕಾಲ್ ಕೀಳಲಾರದೆ ಭಯದಿಂದ ಮೂರ್ಚೆ ಬಿದ್ದುಬಿಡುತ್ತಾನೆ. ಲಕ್ಷ್ಮಣ ಆತನನ್ನು ತನ್ನ ತೋಳಿನ ಆಶ್ರಯಕ್ಕೆ ತೆಗೆದುಕೊಳ್ಳುತ್ತಾನೆ.

ರಾಮ:
ಕೆಟ್ಟೆನಯ್, ಲಕ್ಷ್ಮಣಾ! ಪಿಡಿದನಸುರಂ.
ಕೈಯೆ ಬಾರದಯ್. ನೆಗಹಲೆಳಸಲ್ ಮೇಲೇಳದಿದೆ ಕತ್ತಿ.
ಓಡಲುಂ ಆರೆನಯ್ಯಯ್ಯೊ ಕೆಟ್ಟುದಯ್ ಕಾಲ್ ಬಲಂ.
ದೂರ ಸಾರ್, ದೂರ ಸಾರ್; ಬಾರದಿರೆನಗೆ ಹತ್ತೆ. ನಿನ್ನನುಂ ಪಿಡಿವನೀ ರಾಕ್ಷಸಂ.
ನೀನಾದಡಂ ಪೋಗಯೋಧ್ಯೆಯಂ ಸೇರಯ್ಯ. ಸಂತಯ್ಸು ಭರತನಂ. ಮಾತೆಯಂ.
ನನಗಿದೆ ವಲಂ ಒಲಿದ ಗತಿ. ಮೈಥಿಲಿಯನುಳಿದು ನನಗಿನ್ನಯೋಧ್ಯೆಯೇಂ ಮರಣಮೇಂ?
ಸಾವೆ ದಲ್ ದಿಟಮೆನಗೆ ಬಾಳ್ಕೆ!

ರಾಮನ ಎಚ್ಚರಿಕೆಯನ್ನೂ ಲೆಕ್ಕಿಸದೆ ಲಕ್ಷ್ಮಣ ಆ ರಾಕ್ಷಸನ ಕೈಗಳನ್ನು ಕತ್ತರಿಸತೊಡಗುತ್ತಾನೆ. ಕಣ್ಣುಗಳನ್ನು ಇರಿಯುತ್ತಾನೆ... ರಾಮನಿಗೆ ಬಿರಿದ ಕೆಟ್ಟ ಕನಸಿನಂತೆ ಆ ರಕ್ಕಸ ಮಾಯವಾಗುತ್ತಾನೆ. ರಾಮನಿಗೆ ಪೂರ್ತಿ ಎಚ್ಚರವಾಗುತ್ತದೆ. ಬೆವೆತು ಹೋಗಿರುತ್ತಾನೆ. ನೆಗೆದು ಎದ್ದು ಕೂತು, ಪೂರ್ತಿ ಕಣ್ದೆರೆದು, ನಿಟ್ಟುಸಿರು ಬಿಟ್ಟು ಲಕ್ಷ್ಮಣನೊಂದಿಗೆ ಮಾತಿಗೆ ತೊಡಗುತ್ತಾನೆ.

ರಾಮ:
ಬದುಕಿದೆನೊ ನಿನ್ನಿಂದೆ, ಸೌಮಿತ್ರಿ.

ಲಕ್ಷ್ಮಣಂ:
ತಿಳಿದವಂ ತನ್ನ ನೆರಳಿಗೆ ತಾನೆ ಹೆದರುವನೆ

ರಾಮ:
ತಿಳಿದವಂ! ತಿಳಿದ ಮೇಲಲ್ತೆ?

ಲಕ್ಷ್ಮಣ:
ಪೃಥ್ವಿಗೆ ರಾಹು ಬೇರೆಯೇಂ ತನ್ನ ನೆಳಲಲ್ಲದೆಯೆ

ರಾಮ:
ಅದ್ರಿಯಾದೊಡಮೊರ್ಮೆ ಭೂಮಿ ಕಂಪಿಸೆ ದೃಢತೆ ಹಿಂಗದಿರ್ಪುದೆ?
ಅಂತೆ ತಾಂ ನಡುಗುತಿದೆ ರಾಮಧೈರ್ಯಂ, ತಮ್ಮ, ಆ ಭೂಮಿ ಸುತೆಗಾಗಿ.
ನಿಲ್ಲುವುದು ನಿನ್ನ ನೆಮ್ಮಿರಲದ್ರಿ, ಕೇಳ್, ಸುಸ್ಥಿರಂ. ನಿನ್ನಿಂದೆ ಸತ್ತನೊ ನಿಶಾಚರಂ;
ಕೊಂದೆನೊ ನಿರಾಶೆಯಂ; ಗೆಲ್ದೆನೊ ಕಬಂಧನಂ;
ಹತವಾದುದೊ ಹತಾಶೆ. ಕಿರಣದೋರಿದುದಾಶೆ.
ಬಾ, ನಡೆವಮಿಲ್ಲಿಂದೆ; ಬಲ್ಗಜ್ಜಮಿದಿರಿರ್ಪುದಯ್ ಮುಂದೆ, ಸೌಮಿತ್ರಿ!

ಎಂದು ಹೊಸಚೈತನ್ಯದಿಂದ ತನ್ನನ್ನು ಅಪ್ಪಿದ ರಾಮನನ್ನು ಲಕ್ಷ್ಮಣನೂ ಅಪ್ಪಿಕೊಳ್ಳುತ್ತಾನೆ. ಮೂಡಿದ ಆಸೆಯ ಅವಳಿಗಳು ಜೋಡಿಯಾಗಿ ನಡೆಯುವಂತೆ ಅವರಿಬ್ಬರೂ ಮುಂದೆ ನಡೆಯುತ್ತಾರೆ.

ಇಲ್ಲಿ ಕಬಂಧ ಭೌತಿಕ ರೂಪವನ್ನು ಹೊತ್ತು ಬರುವುದೇ ಇಲ್ಲ. ಮನಸ್ಸಿನ ಖಿನ್ನತೆಯ ರೂಪದಲ್ಲಿ ಬಂದು, ಕಷ್ಟಕ್ಕೊದಗುವವರ ಸಹಾಯದಿಂದ ಖಿನ್ನತೆ ದೂರವಾಗುವಂತೆ, ಲಕ್ಷ್ಮಣನ ನೆರವಿಂದ ದೂರವಾಗುತ್ತದೆ. ಮಾನವ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಮನಸ್ಸು ಖನ್ನತೆಗೊಳಗಾಗುವುದು ಸಹಜ. ಆದರೆ ಬಂಧು ಮಿತ್ರರ, ಹಿತಚಿಂತಕರ ಸಹಾಯದಿಂದ ಸಹಚಾರ್ಯದಿಂದ ಹೊರಬರುವುದೂ ಸಾಧ್ಯ. ಎಂತಹ ಅವಘಡವೇ ಆದರೂ ಮನುಷ್ಯ ನಿರಾಶೆಯಿಂದ ತನ್ನನ್ನು ತಾನು ಕೊಂದುಕೊಳ್ಳಬೇಕಿಲ್ಲ. ಬದುಕು ದೊಡ್ಡದೇ ಹೊರತು, ಬದುಕಿನ ಒಂದು ಕ್ಷಣದ ಘಟನೆಯಲ್ಲ!
ಮಹಾಕಾವ್ಯದ ಈ ಘಟನೆಯ ಓದು ಮನುಕುಲಕ್ಕೆ ಒದಗಿಸಬಹುದಾದ ದೊಡ್ಡ ಉಪಕಾರಗಳಲ್ಲಿ, ರಾಮನನ್ನು ಮಾನವೀಯವಾಗಿ ಚಿತ್ರಿಸಿ, ರಾಮನಂತವನಿಗೆ ಕಷ್ಟ ಬಂತು; ನಮ್ಮದು ಯಾವ ಲೆಕ್ಕ, ಕಷ್ಟವನ್ನು ಗೆಲ್ಲಬೇಕು ಎಂಬ ಎಚ್ಚರ ಮೂಡಿಸುವುದು!
ಮೊನ್ನೆ ಅಪಘಾತದಲ್ಲಿ ಚಂದನ್ ಎಂಬುವವರು ಮಡಿದರೆಂಬ ಸುದ್ದಿ ಬಂದಿತ್ತು. ಅದಾದ ಒಂದೆರಡು ದಿವಸದಲ್ಲಿ ಅವರ ಪತ್ನಿ, ತಮ್ಮ(ಹತ್ತು ವರ್ಷದ?) ಏನೂ ಅರಿಯದ ಮಗನ ಕೊರಳು ಕೊಯ್ದು, ತಾನೂ ಅತ್ಮಹತ್ಯೆ ಮಾಡಿಕೊಳ್ಳುತ್ತಾರೆ! ಹೌದು ಅವರ ದುಃಖ ದೊಡ್ಡದೆ. ಆದರೆ, ಅವರ ಬದುಕು, ಅವರ ಮಗನ ಬದುಕು ಅದಕ್ಕಿಂತ ದೊಡ್ಡದಿತ್ತು ಅನ್ನಿಸುತ್ತದೆ. ಆಕೆಗೊದಗಿದ ಖಿನ್ನತೆಯ ಕಬಂಧನನ್ನು ಕೊಲ್ಲುವ ಲಕ್ಷ್ಮಣರು ಸಕಾಲದಲ್ಲಿ ಒದಗಿಬರಲಿಲ್ಲವೆ ಎಂದು ಮನಸ್ಸು ಭಾರವಾಗುತ್ತದೆ.