Saturday, April 04, 2015

ಶಿವರಾಮು ಕಾಡನಕುಪ್ಪೆ ಅವರ ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’

ಮೊನ್ನೆ ಊರಿನಲ್ಲಾದ ಹತ್ತಿರದ ಬಂಧುವೊಬ್ಬರ ಸಾವು, ಅಂತ್ಯಸಂಸ್ಕಾರ ಮುಗಿಸಿಕೊಂಡು ಮಂಗಳವಾರ ಬೆಳಿಗ್ಗೆ ಕಾಲೇಜಿಗೆ ಬಂದಾಗ ಟೇಬಲ್ಲಿನ ಮೇಲೆ ಪುಸ್ತಕವೊಂದು ಕುಳಿತಿತ್ತು. ಮೈಸೂರಿನಿಂದ ಹಿರಿಯರಾದ ಶ್ರೀರಾಮ್ ಅವರು ವಿಶ್ವಾಸಪೂರ್ವಕವಾಗಿ ಕಳುಹಿಸದ್ದ ಆ ಪುಸ್ತಕವನ್ನು ಕೈಗೆತ್ತಿಕೊಂಡೆ. ’ತೇಜಸ್ವಿಯನ್ನು ಹುಡುಕುತ್ತಾ…..’ ಕೃತಿ ಬಿಡುಗಡೆಯ ಸಂದರ್ಭದಲ್ಲೇ ಶ್ರೀಯುತ ಶ್ರೀರಾಮ್ ಅವರು ಹೇಳಿದ್ದ, ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’ ಪುಸ್ತಕದ ವಿಷಯವನ್ನು, ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳು, ನನ್ನ ತಿಂಗಳ ಮಗಳ ಹಾರೈಕೆ, ಊರಿನ ಜಂಜಡಗಳ ನಡುವೆ ಮರೆತೇ ಬಿಟ್ಟಿದ್ದೆ!
ಹೌದು. ಈ ಪುಸ್ತಕದ ಹೆಸರು. ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’. ಲೇಖಕರು ಹಿರಿಯರಾದ ಶ್ರೀ ಶಿವರಾಮು ಕಾಡನಕುಪ್ಪೆ. ಪುಸ್ತಕದ ಕಟ್ಟು ಬಿಚ್ಚಿದೊಡನೆ ಓದಲು ಆರಂಬಿಸಿದ್ದೆ. ಕೇವಲ ಒಂದೆರಡು ಗಂಟೆಯೊಳಗೆ ಇಡೀ ಪುಸ್ತಕವನ್ನು ಓದಿ ಮುಗಿಸಿದ್ದೆ. ಆಗ, ಅದೆಷ್ಟೊ ಬಾರಿ ನನಗೆ ಅರಿವಿಲ್ಲದೆ ಕಣ್ಣಿರ ಕೋಡಿ ಹರಿಸಿದ್ದೆ!
ಶ್ರೀ ಶಿವರಾಮು ಕಾಡನಕುಪ್ಪೆ ಅವರ ಬಗ್ಗೆ ನನಗೆ ಗೊತ್ತಿತ್ತು. ಆದರೆ ಅವರನ್ನೆಂದು ನಾನು ಭೇಟಿಯಾಗಿಲ್ಲ. ಆದರೆ, ಪುಸ್ತಕ ಓದತೊಡಗಿದಂತೆ ಇಡೀ ಕಥೆಯನ್ನು ಅವರೇ ನನ್ನ ಮುಂದೆ ನಿಂತು, ಆಸ್ಪತ್ರೆಯಲ್ಲಿ ಮಲಗಿ, ವೀಲ್ ಚೇರಿನಲ್ಲಿ ಕುಳಿತು, ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿಕೊಂಡೇ ನನಗೆ ಹೇಳುತ್ತಿದ್ದಾರೆನಿಸಿ ಮನಸ್ಸು ಭಾರವಾದುದ್ದು ಅದೆಷ್ಟು ಸಲವೊ!
ಕೃತಿಯ ಶೀರ್ಷಿಕೆಯೇ ಹೇಳುತ್ತದೆ: ಈ ಪುಸ್ತಕ ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳ ಕಾಲ ಕಳೆದ ವ್ಯಕ್ತಿ, ತಾನು ಆಸ್ಪತ್ರೆಯಲ್ಲಿ ತನ್ನನ್ನು ತಾನು ಕಂಡುಕೊಂಡ, ಆ ವಾತಾವರಣದಲ್ಲಿ ಪಡೆದ ಅನುಭಗಳ ಕೃತಿಯೆಂದು. ಆ ವ್ಯಕ್ತಿ ಸ್ವತಃ ಶ್ರೀ ಶಿವರಾಮ ಕಾಡನಕುಪ್ಪೆಯವರೆ! ಸರ್ ಸ್ವತಃ ಬರಹಗಾರರು. ಆಸ್ಪತ್ರೆಯಲ್ಲಿ ರೋಗಿಯಾಗಿ ಅಗಾಧ ನೋವಿನ ನಡುವೆ ಮಲಗಿದ್ದರೂ ಅವರ ಸೃಜನಶೀಲ ಮನಸ್ಸು ಎಚ್ಚರವಾಗಿಯೇ ಇತ್ತು! ತನ್ನ ಸುತ್ತಮುತ್ತಲಿನ ಎಲ್ಲವನ್ನೂ ತನ್ನ ಸ್ಮೃತಿಕೋಶದಲ್ಲಿ ದಾಖಲಿಸಿಕೊಳ್ಳುತ್ತಿತ್ತು. ಅದರ ಮೂರ್ತರೂಪವೇ ಈ ಕೃತಿ.
ಐಸಿಯುನಲ್ಲಿ ಕಳೆದ ದಿನಗಳಲ್ಲಿ ಅವರ ಮನಸ್ಸು ದಾಖಲಿಸಿಕೊಂಡಿರುವ ಮರಿರಾಜಕಾರಣಿಯ ಮಾತುಗಳು ಒಂದು ಕಡೆ ನಗೆ ಉಕ್ಕಿಸುತ್ತಿದ್ದರೆ ಇನ್ನೊಂದು ಕಡೆ ನಮ್ಮ ವ್ಯವಸ್ಥೆಯ ಕರಾಳರೂಪವಾಗಿ ಗಾಬರಿಹುಟ್ಟಿಸುತ್ತವೆ! ಜೊತೆಗೆ, ಪಕ್ಕದ ಬೆಡ್ಡಿನಲ್ಲಿದ್ದ ಪುಟ್ಟಮಗು ಮತ್ತು ಅದನ್ನು ನೋಡಿಕೊಳ್ಳುವ ಶುಶ್ರೂಷಕಿಯರು, ಅವರ ಸಹಾಯಕ್ಕೆ ನಿಂತಿದ್ದ ಮಗುವಿನ ತಾಯಿ, ಅವರ ನಡುವಿನ ಸಂಭಾಷಣೆ ನಮ್ಮನ್ನು ಕರಗಿಸಿಬಿಡುತ್ತವೆ. ಐಸಿಯುನಲ್ಲಿದ್ದ ಏಕತಾನತೆ, ಕ್ಷೌರಿಕ ಮುನಿಸ್ವಾಮಿ(ಸೋಮಶೇಖರ)ಯ ಆಗಮನದಿಂದ ತೊಲಗಿ ಲವಲವಿಕೆ ಮೂಡಿದ್ದನ್ನು ಓದುವಾಗ, ಇದ್ದಕ್ಕಿದ್ದಂತೆ ಕೃತಿ ಬೇರೆಯೇ ಆಯಾಮ ಪಡೆದುಕೊಳ್ಳುವುದನ್ನು ನೋಡಿ ಬೆರಗು ಮೂಡುತ್ತದೆ. ಐಸಿಯುನಲ್ಲಿ ಒಬ್ಬ ವ್ಯಕ್ತಿ ಶೇವಿಂಗ್ ಮಾಡಿಸಿಕೊಳ್ಳತ್ತ ಕುಳಿತಿರುವ ಚಿತ್ರ ಕಣ್ಣಿಗೆ ಕಟ್ಟುತ್ತದೆ! ಕ್ಷೌರ ಮತ್ತಿತರ ಕೆಲಸಗಳಿಂದಾಗಿ ತಮ್ಮ ಸಂಪರ್ಕಕ್ಕೆ ಬರುತ್ತಿದ್ದವರ ವೃತ್ತಿ, ಬದುಕು, ಇಂತಹ ಘಟನೆಗಳ ಬಗ್ಗೆಯೂ ತಿಳಿದುಕೊಳ್ಳುತ್ತಾ ಕ್ರಿಯಾಶೀಲರಾಗುವ ಶಿವರಾಮು ಸರ್ ಅವರ ಜಾಗೃತ ಮನಸ್ಥಿತಿ ಗಮನ ಸೆಳೆಯುತ್ತದೆ. ನಮ್ಮ ಬದುಕು ಅದೆಷ್ಟು ಇಷ್ಟ-ಕಷ್ಟಗಳನ್ನು ನಂಬಿಕೆಗಳನ್ನು, ಆಚರಣೆಗಳನ್ನು ಕಟ್ಟಿಕೊಂಡು ರೂಪಗೊಂಡಿರುತ್ತದೆ. ಆದರೆ ಆಸ್ಪತ್ರೆಯಲ್ಲಿ ಮಲಗಿ, ಆ ಏಕಾಂತತೆಯನ್ನು ಅನುಭವಿಸಿ ಮರುಜನ್ಮ ಪಡೆಯುವುದರಲ್ಲಿ ಅವುಗಳಲ್ಲಿ ಕೆಲವು ನಾಶವಾಗಿರುತ್ತವೆ, ಕೆಲವು ಮರುವ್ಯಾಖ್ಯಾನಕ್ಕೊಳಪಟ್ಟಿರುತ್ತವೆ! ಒಟ್ಟಾರೆ ಮನುಷ್ಯ ಹೊಸರೂಪವನು ಪಡೆದಿರುತ್ತಾನೆ. ಇದನು ಸಾಂಕೇತಿಕವಾಗಿ, ಈ ಶೆವಿಂಗ್ ಘಟನೆ ನಿರೂಪಿಸುತ್ತದೆ. ಎಂಐಸಿಯು ಅನ್ನು ಸಾವು ಬದುಕಿನ ತ್ರಿಶಂಕು ನೆಲೆಯೆಂದು ಗುರುತಿಸಿರುವ ಅವರ ಮಾತು ಎಷ್ಟೊಂದು ಅರ್ಥ ಆಯಾಮಗಳನ್ನು ಪಡೆದುಕೊಳ್ಳುತ್ತದೆ! ಇಂತಹ ಹಲವಾರು ಘಟನೆಗಳನ್ನು ಓದಿದ ಯಾರೇ ಆಗಲಿ, ಶಿವರಾಮು ಸರ್ ಅವರ ಸೃಜನಶೀಲ ಮನಸ್ಸಿಗೆ ಒಂದು ಅಭಿನಂದನೆಯನ್ನು ಸಲ್ಲಿಸಲೇಬೇಕು.
ಪುಸ್ತಕದ ಅರ್ಪಣೆಯಾಗಿರುವುದೇ ’ಜಗತ್ತಿನಾದ್ಯಂತ ಸಾವಿರಾರು ಆಸ್ಪತ್ರೆಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ಲಕ್ಷಾಂತರ ಬ್ರದರ್‌ಗಳ ಮತ್ತು ಸಿಸ್ಟರ್‌ಗಳ ನಿಸ್ವಾರ್ಥ ನರ್ಸಿಂಗ್ ಸೇವೆಗೆ’! ಆಸ್ಪತ್ರೆಯಿಂದ ಮನೆಗೆ ಮರಳುತ್ತಿರುವ, ಗುಣಮುಖವಾಗಿರುವ ವ್ಯಕ್ತಿಯಿಂದ ಹಾಗೂ ಆ ವ್ಯಕ್ತಿಯ ಕಡೆಯವರಿಂದ ಸಲ್ಲುವ, ಕೇವಲ ಒಂದು ’ಥ್ಯಾಂಕ್ಸ್’ನಲ್ಲಿ ಮುಗಿದು ಹೋಗುವ ಸಂಬಂಧ ಇಲ್ಲಿ ಕೃತಿ ಅರ್ಪಣೆಯವರೆಗೂ ಬಂದು ನಿಂತಿದೆ! ಆಸ್ಪತ್ರೆಯಲ್ಲಿ ರೋಗಿಗಳಾಗಿಯೊ, ಅವರ ಸಹಾಯಕ್ಕೆ ಇರುವವರಾಗಿಯೊ ಒಂದಷ್ಟು ದಿನಗಳ ಕಾಲ ಕಳೆದಿರುವವರೆಗೆ ಈ ಮಾತು ಚೆನ್ನಾಗಿ ಅರ್ಥವಾಗುತ್ತದೆ. ಇಂದು ಹೆಚ್ಚಿನ ಆಸ್ಪತ್ರೆಗಳಲ್ಲಿ, ಡಾಕ್ಟರುಗಳ ಕಾರ್ಯನಿರ್ವಹಣೆ, ಬ್ರದರ್‍ಸ್ ಮತ್ತು ಸಿಸ್ಟರ್‍ಸ್ ಇವರುಗಳ ಕೆಲಸಕ್ಕೂ ಆಸ್ಪತ್ರೆಯ ಆಡಳಿತ ವರ್ಗದ ಹಣಕಾಸು ವಿಚಾರಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಅವರ ಮನಸ್ಸು ಪೂರ್ಣ ರೋಗಿಯನ್ನು ಗುಣಪಡಿಸುವುದರ ಕಡೆಗಷ್ಟೇ ಇರುತ್ತದೆ. ಅವರವರು ತಮ್ಮ ತಮ್ಮ ಪಾಲಿನ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿಕೊಂಡು ಹೋಗುತ್ತಿರುತ್ತಾರೆ. ಯಾವ ವ್ಯವಸ್ಥೆ, ಹಣಸುಲಿಗೆಯ ಯೋಜನೆ ಎಂದು ಕೆಲವರು ಆಪಾದಿಸುತ್ತಾರೊ ಅದೇ ವ್ಯವಸ್ಥೆಯ ಮಾನವೀಯ ಮುಖ ಇದಾಗಿದೆ!
ಕಳೆದ ತಿಂಗಳು ನಡೆದ ಒಂದು ಪುಟ್ಟ ಅಪಘಾತದಲ್ಲಿ ನನ್ನ ಮಗಳ ಒಂದು ಬೆರಳೇ ತುಂಡಾಗಿ ಹೋಯಿತು. ಆಗ ಶಸ್ತ್ರಚಿಕಿತ್ಸೆಗಾಗಿ ನಾನೂ ಆಸ್ಪತ್ರೆಯಲ್ಲಿ ಮಗಳ ಜೊತೆಯಲ್ಲಿ ಎರಡು ದಿವಸ ಕಳೆದೆ. ಈಗಲೂ ನನಗೆ ಆ ಆಸ್ಪತ್ರೆಯ (ಹಾಸ್ಮ್ಯಾಟ್) ಸಿಸ್ಟರ್‍ಸುಗಳ, ವೈದ್ಯರುಗಳ ನಗುಮೊಗದ ಸೇವೆ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿ ಕೇಳುತ್ತಿದ್ದ ’ಅಣ್ಣಾ…, ಅಕ್ಕಾ…’ ಎಂಬ ಕೂಗುಗಳು ಆಗ ನನಗೆ ಕಾಣಿಸದಿದ್ದ ಆಯಾಮಗಳನ್ನು, ಈ ಪುಸ್ತಕದಲ್ಲಿ ದಾಖಲಾಗಿರುವ ಅಣ್ಣ… ಅಕ್ಕಾ… ಕೂಗುಗಳು ಕಾಣಿಸಿವೆ! ಅವರೆಲ್ಲರನ್ನು ನಾನು ಮತ್ತೆ ಮತ್ತೆ ಪ್ರೀತಿಯಿಂದ ಸ್ಮರಿಸಿಕೊಳ್ಳುವಂತೆ ಮಾಡಿವೆ.
ಐಸಿಯುನಲ್ಲಿ ಮಲಗಿದ್ದ ಶಿವರಾಮು ಅವರಿಗೆ ಒಮ್ಮೆ ತಾತ್ವಿಕ ಯೋಚನೆಗಳೇ ಮನಸ್ಸನ್ನು ತುಂಬಿಕೊಳ್ಳುತ್ತವೆ. ತಾನೇನಾದರು ಸತ್ತರೆ, ತನ್ನ ಅಂತ್ಯಸಂಸ್ಕಾರದ ವಿಚಾರದಲ್ಲಿ ಮನೆಯಲ್ಲಿ ನಡೆಯಬಹುದಾದ ಘಟನಾವಳಿಗಳನ್ನು ಕಣ್ಣಮುಂದೆ ತಂದುಕೊಳ್ಳುತ್ತಾರೆ. ಅದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆಯಿಲ್ಲ. ಏಕೆಂದರೆ ನೆನ್ನೆಯಷ್ಟೇ ನಾನು ಒಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಬಂದಿದ್ದೆ. ಆ ಸಂದರ್ಭದಲ್ಲಿ ತಲೆಗೊಂದು ಮಾತನಾಡುವವ ಬಂಧುಗಳು, ಅನಿಸಿದ್ದೆಲ್ಲವನ್ನು ಸಲಹಾರೂಪದಲ್ಲಿ ಮಂಡಿಸುವವರು, ಸತ್ತವರ ವ್ಯಕ್ತಿತ್ವವನ್ನು ದೈವತ್ವಕ್ಕೇರಿಸುವ ಅತಿಭಾವುಕರ ನಡುವೆ, ಸತ್ತವರ ಇಡೀ ಬದುಕನ್ನು ಕೇವಲ ಆ ಅರ್ಧ ಗಂಟೆಯಲ್ಲಿ ಪೋಸ್ಟಮಾರ್‍ಟಮ್ ಮಾಡುವವರು ಎಲ್ಲವನ್ನೂ ನೆನ್ನೆಯಷ್ಟೇ ಕಂಡಿದ್ದೆ. ಅಬ್ಬಾ… ಸಾವೇ, ನೀನು ಕ್ರೂರಿ, ನೀನು ಬಿಡುಗಡೆ, ನೀನು ಪ್ರಭಾವಿ, ನೀನು ಪ್ರೇರಕ ಶಕ್ತಿ, ಇನ್ನೂ ಏನೇನೊ!
ಸಾಮಾನ್ಯವಾಗಿ ನಾನು ಒಂದು ಪುಸ್ತಕವನು ಕೈಗೆತ್ತಿಕೊಂಡರೆ, ಮೊದಲು ಅದರ ಮುನ್ನುಡಿ ಹಿನ್ನುಡಿಯ ಮೇಲೆ ಕಣ್ಣಾಡಿಸುತ್ತೇನೆ. ಆಶ್ಚರ್ಯವೆಂದರೆ, ಈ ಕೃತಿಯನ್ನು ಪೂರ್ಣ ಓದಿದ ಮೇಲೆಯೇ ನನಗೆ ಅದರ ಹಿನ್ನುಡಿ-ಮುನ್ನುಡಿಗಳ ನೆನಪಾಗಿದ್ದು. ಕೃತಿಗೆ ಮುನ್ನುಡಿ ಬರೆದಿರುವ ರಾಗೌ ಅವರು ’ಶಿವರಾಮು ಕಾಡನಕುಪ್ಪೆ ಅವರ ಆಸ್ಪತ್ರೆಯ ಅನುಭವದ ಈ ಕಥನವನ್ನು ಕಂಬನಿಯ ಮಿಡಿತಗಳಿಲ್ಲದೆ ಓದುವುದು ಕಷ್ಟ’ ಎಂಬ ಮಾತು, ಈ ಕೃತಿಯನ್ನು ಓದುವವರೆಲ್ಲರ ಮಾತೂ ಕೂಡಾ ಹೌದು!
ಇನ್ನು ಲೇಖಕರ ಮಾತು ಮತ್ತು ಕೃತಜ್ಞತೆಗಳ ಅರ್ಪಣೆಯ ಭಾಗವನ್ನು ಓದುತ್ತಿದ್ದಂತೆಯೇ ಹಲವಾರು ನಿತ್ಯಸತ್ಯಗಳು ಓದುಗನಿಗೆ ಗೋಚರಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಇಲ್ಲಿ ಉಲ್ಲೇಖಿತರಾಗಿರುವವರು ತಮ್ಮ ಅಧಿಕಾರ-ಅಂತಸ್ತು, ಪೀಠ-ಕಿರೀಟ, ಬಿರುದು-ಬಾವಲಿಗಳನ್ನು ಕಳೆದುಕೊಂಡು ಕೇವಲ, ಅತ್ಯಂತ ಅಂತಃಕರಣವುಳ್ಳ ಮನುಷ್ಯರಾಗಿ ನಮಗೆ ಗೋಚರಿಸುತ್ತಾರೆ. ಈ ಜಗತ್ತು ನಿಂತಿರುವುದೇ ಪರಸ್ಪರ ನಂಬಿಕೆಯ ಮೇಲೆ. ಅಂತಹ ನಂಬಿಕೆಯ ಬಲವೇ ಶ್ರೀಯುತರಿಗೆ ಮರುಜನ್ಮ ನೀಡಿದೆ. ಜೊತೆಗೆ ಇಂತಹ ಮಹತ್ತಾದ ಕೃತಿಯನ್ನೂ ನಮ್ಮ ಕೈಗಿತ್ತಿದೆ. ಕೃತಿಯ ಓದು ನಮ್ಮ ಬದುಕಿನೆಡೆಗಿನ, ವ್ಯಕ್ತಿಗಳೆಡೆಗಿನ ದೃಷ್ಟಿಕೋನಕ್ಕೆ ಹೊಸತೊಂದು ಆಯಾಮವನ್ನು ನೀಡುತ್ತದೆ.
ಈ ಕೃತಿಯ ಇನ್ನೊಂದು ಹೆಚ್ಚುಗಾರಿಕೆಯೆಂದರೆ, ಪುಸ್ತಕದಲ್ಲಿ ಉಲ್ಲೇಕವಾಗಿರುವ ವೈದ್ಯಲೋಕದ ಪಾರಿಭಾಷಿಕ ಪದಗಳಿಗೆ ಅರ್ಥಪೂರ್ಣವಾದ ಟಿಪ್ಪಣಿಗಳನ್ನು ಒದಗಿಸಿರುವುದು. ಇದು ಕೃತಿಯನ್ನು ಸಹೃದಯನಿಗೆ ಮುಟ್ಟಿಸುವಲ್ಲೂ ಹಾಗೂ ಓದುಗನ ವೈದೈಕೀಯ ಅನುಭವಕೋಶವನ್ನು ವಿಸ್ತರಿಸುವಲ್ಲೂ ನೆರವಾಗಿದೆ. ಡಾ. ಸುಶಿಕಾ ಕಾಡನಕುಪ್ಪೆಯವರ ಶ್ರಮಕ್ಕೆ, ಕಾಳಜಿಗೆ, ಅವರು ತಂದೆಯವರ ಮೇಲಿಟ್ಟಿರುವ ಪ್ರೀತಿಗೆ ಅಭಿನಂದನೆಗಳು ಸಲ್ಲಲೇಬೇಕು.
ಯಾವುದೇ ಕೃತಿಯನ್ನು ಓದಿದರೂ ಅದರ ಲೇಖಕರಿಗೆ ಫೊನಾಯಿಸಿ ಮಾತನಾಡುವ ಅಭ್ಯಾಸವೇನು ನನಗಿಲ್ಲ. ಆದರೆ, ಈ ಕೃತಿಯನ್ನು ಓದಿದ ತಕ್ಷಣ ನನಗೆ ಸರ್ ಜೊತೆ ಮಾತನಾಡಬೇಕೆನ್ನಿಸಿ ಫೊನಾಯಿಸಿಬಿಟ್ಟೆ. ದುಃಖ ಉಮ್ಮಳಿಸಿ ಬರುತ್ತಿದ್ದ ನನ್ನ ಮಾತಿನ ನಡುವೆಯೇ ಅವರ ಮಾತಿನಲ್ಲಿದ್ದ ದೃಢತೆ, ಒಂದು ರೀತಿಯ ಛಲ, ಆತ್ಮವಿಶ್ವಾಸ ನನ್ನನ್ನು ಬೆರಗಾಗಿಸಿತ್ತು. ರೋಗಿಯೊಬ್ಬ ತನ್ನ ಖಾಯಿಲೆ, ಅದರ ಚಿಕಿತ್ಸೆಯ ಅನುಭವಗಳನ್ನು ಕೇವಲ ಒಂದು ವರದಿಯಂತೆ, ದಿನಚರಿಯಂತೆ ದಾಖಲಿಸುವ ಬದಲು ಅದನ್ನು ಒಂದು ಸೃಜನಶೀಲ ಕೃತಿಯಂತೆ ಸೃಷ್ಟಿಸಿದ್ದರ ಬಗ್ಗೆ ಅವರು ಮಾತನಾಡಿದರು. ಈ ಕೃತಿಯನ್ನು ಓದಿದ ಯಾರಿಗೇ ಆಗಲಿ, ಅವರ ಈ ಮಾತು ಅನುಭವವೇದ್ಯವಾಗಲಿದೆ.
ಶಿವರಾಮು ಸರ್ ಅವರ ಹಾರೈಕೆಯಲ್ಲಿ, ಈ ಕೃತಿ ಒಡಮೂಡುವಲ್ಲಿ ಅವರ ಕುಟುಂಬವರ್ಗದವರ ಶ್ರಮ, ಪ್ರೀತಿ ಕಾಳಜಿ ಅನುಕರಣೀಯ ಆದರ್ಶ. ಅವರೂ, ಅವರ ಅಪಾರ ಸ್ನೇಹ ಸಮುದಾಯದವರೂ ಅಭಿನಂದನಾರ್ಹರು.
ಕೃತಿಯ ಒಂದು ಕಡೆ ದಾಖಲಾಗಿರುವಂತೆ, ನಿವೃತ್ತರಾದ ನಂತರ ಒಂದೆರಡು ವೈಚಾರಿಕ ಕೃತಿಗಳು ಹಾಗೂ ನಾಲ್ಕೈದು ಕಾದಂಬರಿಗಳನ್ನು ಬರೆಯಬೇಕೆಂದುಕೊಂಡಿದ್ದರಂತೆ. ಶಿವರಾಮು ಸರ್ ಅವರ ಕನಸು ಬೇಗ ಈಡೇರಲಿ. ಈಡೇರಿಯೇ ಈಡೇರುತ್ತದೆ ಎಂಬುದಕ್ಕೆ ಮುನ್ನಡಿಯ ರೂಪದಲ್ಲಿ ಈ ಕೃತಿ ಸಾಕ್ಷಿಯನ್ನೊದಗಿಸುತ್ತಿದೆ.
’ಸರ್, ನಿಮ್ಮ ಕನಸು ಈಡೇರಲಿ, ಆರೋಗ್ಯ ವೃದ್ಧಿಸಲಿ’ ಎಂದು ಇಲ್ಲಿಂದಲೇ ’ಚಿತ್ತಪೋಮಂಗಳದ ರಕ್ಷೆಯಂ’ ಕಟ್ಟುತ್ತಿದ್ದೇವೆ.