Monday, February 02, 2015

ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 1
 
 ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿರುವ 'ಶ್ರೀ ಕವಿರನ್ನ' ಎಂಬ ಕನ್ನಡ ಲಿಪಿ. ಇದರ ಎದುರಿಗೆ 'ಚಾವುಂಡರಾಯ' ಎಂಬ ಬರಹವಿದೆ. ಈ ಲಿಪಿವಿನ್ಯಾಸ ಹತ್ತನೇ ಶತಮಾನದ ಲಿಪಿಯನ್ನೇ ಹೋಲುವುದರಿಂದ ಸ್ವತಃ ರನ್ನ ಮತ್ತು ಚಾವುಂಡರಾಯರೇ ಇದನ್ನು ಬರೆದಿರಬಹುದು ಎಂದು ನಂಬಲಾಗಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ

ನಮಗೆ ಸ್ವಾತಂತ್ರ್ಯ ಬಂದಿದ್ದು ೧೯೪೭ರಲ್ಲಿ. ಅಲ್ಲಿಗೆ ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಮದುವೊಳಲು ಎಂಬ ಊರಿನಲ್ಲಿ ರನ್ನನ ಜನನ. ಈಗ ಮುಧೋಳ್ ಎಂಬ ಹೆಸರಿನಿಂದ ಗುರುತಿಸುವ ಅಂದಿನ ಮುದುವೊಳಲು ಘಟಪ್ರಭ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ, ತೊರೆಗೆರೆಗೆ ಉತ್ತರಕ್ಕೂ ಇದ್ದ ಬೆಳಗುಲಿ-೫೦೦ ಎಂಬ ಸೀಮೆಯಲ್ಲಿ ಜಂಬುಖಂಡಿ ಪ್ರಾಂತ್ಯದಲ್ಲಿತ್ತು. ರನ್ನನ ತಂದೆ ‘ಜಿನೇಂದ್ರಪಾದ ಕಮಲಭ್ರಮರ ಜಿನವಲ್ಲಭ’. ತಾಯಿ ‘ಪತಿವ್ರತಾಗುಣದಿಂದ ಪ್ರಸಿದ್ಧಳಾದ ಅಬ್ಬಲಬ್ಬೆ’. ರೇಚಣ ಮತ್ತು ಮಾರಮಯ್ಯ ಎಂಬ ಇಬ್ಬರು ಅಣ್ಣಂದಿರು ರನ್ನನಿಗಿದ್ದರು. ಜಿನಧರ್ಮಾವಲಂಬಿಯಾಗಿದ್ದ ಈ ಕುಟುಂಬದವರದು ಬಳೆಗಾರ ವೃತ್ತಿ. ಬಳೆಗಳನ್ನು ಕೊಂಡು ತಂದು ಹೊತ್ತು ಮಾರಿ ಬಂದ ಲಾಭದಿಂದ ಜೀವನ ಸಾಗಿಸಬೇಕಾದ ಪರಿಸ್ಥಿತಿ. ಸಹಜವಾಗಿಯೇ ಬಡತನವಿತ್ತು. ವಿದ್ಯೆಯೆಂಬುದು ಕನಸಿನ ಮಾತಾಗಿತ್ತು.
(ಬಂಕಾಪುರದಲ್ಲಿರುವ ಪ್ರಾಚೀನ ದೇವಾಲಯ)

ಬಾಲಕ ರನ್ನನಿಗೆ ವಿದ್ಯೆ ಕಲಿಯಬೇಕೆಂಬ ಅದಮ್ಯ ಬಯಕೆ. ಮನೆಯಲ್ಲಿ ವಾತಾವರಣ ಅದಕ್ಕೆ ಪೂರಕವಾಗಿರಲಿಲ್ಲ. ಆತನೂ ಬಳೆ ವ್ಯಾಪಾರಕ್ಕೆ ಇಳಿಯಲೇಬೇಕಾದ ಪರಿಸ್ಥಿತಿ. ಅಂತಹ ಸಂದರ್ಭದಲ್ಲಿ ರನ್ನ ಹೇಗೋ ಬಂಕಾಪುರದಲ್ಲಿದ್ದ ಜೈನಗುರುಕುಲದ ಜಾಡು ತಿಳಿದು ಮನೆಗೆ ತಿಳಿಸಿ ವಿದ್ಯಾಭ್ಯಾಸದ ಕನಸು ಹೊತ್ತು ಹೊರಟೇಬಿಟ್ಟ. ಬಂಕಾಪುರ ತಲುಪಿದಷ್ಟು ಸುಲಭವಾಗಿರಲಿಲ್ಲ ವಿದ್ಯೆ ಕಲಿಯುವುದು. ಆದರೆ ರನ್ನನ ವಿದ್ಯೆ ಕಲಿಯಬೇಕೆಂಬ ಹಸಿವು ಅವನನ್ನು ಸುಮ್ಮನೆ ಕೂರಿಸಲಿಲ್ಲ. ಗುರುಕುಲದ ಬಾಗಿಲು ಬಡಿದು ನಿಂತ ರನ್ನನನ್ನು ಅಲ್ಲಿನ ವಿದ್ಯಾರ್ಥಿಸಮೂಹ ತಿರಸ್ಕಾರದಿಂದಲೇ ಕಂಡಿತು. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಬಾಲಕ ರನ್ನ ಹೆದರಿಕೊಳ್ಳುವಂತಹ ಸನ್ನವೇಶ ಸೃಷ್ಟಿಯಾಯಿತು.

“ಯಾರು ನೀನು?”

“ವಿದ್ಯಾರ್ಥಿ”

“ಹೆಸರೇನು?”

“ರನ್ನಮಯ್ಯ”

“ಓಹೋ, ರನ್ನ! ನಿನ್ನ ತಂದೆ ತಾಯಿ ಯಾರು”

“....”

“ಏನು ವೃತ್ತಿ”

“ಬಳೆಗಾರರ ವೃತ್ತಿ”

“ಬಳೆಗಾರ ವೃತ್ತಿ ಮಾಡಿಕೊಂಡಿರುವುದನ್ನು ಬಿಟ್ಟು ವಿದ್ಯೆ ಕಲಿಯಬೇಕೆಂಬ ಚಪಲವೋ”

“...”

“ಪಂಡಿತ ರನ್ನಮಯ್ಯ ಅನ್ನಿಸಿಕೊಳ್ಳುವ ಚಪಲವೋ”

“...”

“ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನು ಬಳೆಯ ಮಲಾರವೆ?”

“ವೃತ್ತಿ ಹೊಟ್ಟೆ ಪಾಡಿನದಾಯಿತು. ಕಲಿಯಬೇಕೆಂಬುದು ನನ್ನ ಆತ್ಮದ ಹಸಿವು”

“ಓಹೋ, ಆತ್ಮ ಪರಮಾತ್ಮ ಎಲ್ಲ ತಿಳಿದಿದ್ದೀಯೋ. ಹೋಗಯ್ಯಾ ಹೋಗು. ಬಳೆ ಮಾರಿಕೊಂಡೇ ಜೀವನ ನಡೆಸು. ನೀನು ವಿದ್ಯೆ ಕಲಿಯಲು ಬಂದರೆ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ. ಹೋಗಯ್ಯಾ”

ಹೀಗೇ ಮೂದಲಿಕೆ ಮುಂದುವರೆಯಿತು.

ರನ್ನ ಹತಾಶನಾದ. ಗುರುಕುಲದಿಂದ ಹೊರಗೆ ಬಂದು ಆಕಾಶದತ್ತ ಮೊಗ ಮಾಡಿ ನಿಂತ. ಯಾರೋ ಕೂಗುತ್ತಿದ್ದಾರೆ ಅನ್ನಿಸಿ ಮೊಗತಿರುಗಿಸಿ ನೋಡಿದ. ವಯಸ್ಸಿನಲ್ಲಿ ತನಗಿಂತ ಸ್ವಲ್ಪ ದೊಡ್ಡವನಾದ ಹಾಗೂ ತೇಜೋವಂತನಾದ ಒಬ್ಬ ಯುವಕ ತನ್ನತ್ತ ಬರುತ್ತಿದ್ದ.

“ನಿನ್ನ ಹೆಸರು ರನ್ನಮಯ್ಯನೆಂದೆ, ಅಲ್ಲವೆ?” ನಗುತ್ತ ಕೇಳಿದ ಆ ಯುವಕ.

“ಹೌದು”

“ವಿದ್ಯೆ ಕಲಿಯಬೇಕೆಂಬುದು ಕೇವಲ ಕ್ಷಣಿಕ ಆಕರ್ಷಣೆಯೋ ಹೇಗೆ?”

“ಆಗಲೇ ಹೇಳಿದೆನಲ್ಲ. ಅದು ನನ್ನ ಆತ್ಮದ ಹಸಿವು”

“ಉದ್ದೇಶ”

“ಜ್ಞಾನಾರ್ಜನೆ, ಕಾವ್ಯಾಭ್ಯಾಸ, ಕಾವ್ಯರಚನೆ...”

“ಓಹೋ ನಿನ್ನ ದೃಷ್ಟಿ ಹಿಮಾಲಯದತ್ತ!”

“ಯಾಕಾಗಬಾರದು?”

“ಹೌದು ಯಾಕಾಗಬಾರದು?! ಆಗಲಿ. ಆದರೆ ನಿನಗಿಲ್ಲಿ ಪ್ರವೇಶವೇ ದೊರಕುತ್ತಿಲ್ಲವಲ್ಲ”

“ನನಗೆ ಪ್ರತಿಭೆಯಿಲ್ಲವೆಂದಲ್ಲ. ನನ್ನ ಜಾತಿಯ ಕಾರಣದಿಂದ”

“ಆದ್ದರಿಂದಲೇ ಇದು ನಿನಗೆ ಪ್ರತಿಕೂಲ ವಾತಾವರಣ. ಕಲಿಯಲೇಬೇಕೆಂಬ ಹಸಿವು ನಿನಗಿದ್ದುದೇ ಆದರೆ ಶ್ರವಣಬೆಳಗೊಳಕ್ಕೆ ಹೋಗು. ಅಲ್ಲಿ ಅಜಿತಸೇನಾಚಾರ್ಯರೆಂಬ ಮಹಾಗುರುಗಳಿದ್ದಾರೆ. ಬಹುಶಃ ಅವರು ನಿನ್ನ ಕೈ ಹಿಡಿಯಬಹುದು.” ಆತ್ಮವಿಶ್ವಾಸದಿಂದ ನುಡಿದ ಯುವಕನನ್ನು ರನ್ನ ಸಂತೋಷ ಆಶ್ಚರ್ಯದಿಂದ ನೋಡಿದ.

“ಅಲ್ಲಿ ನನಗಾರು ಆಶ್ರಯ ಕೊಡುವವರು”

“ಸಮರಪರಶುರಾಮನಾದ ಚಾಮುಂಡರಾಯನಿದ್ದಾನೆ. ಕೊನೆಗೆ ಎಲ್ಲರನ್ನೂ ಸಲಹುವ ಆ ಬಾಹುಬಲಿಯಿದ್ದಾನೆ”

“ಸಂತೋಷ ಪರಮಸಂತೋಷ! ನಿಮ್ಮ ನಾಮಧೇಯ ತಿಳಿಯಬಹುದೆ”

“ಅದಕ್ಕೇನಂತೆ! ನನ್ನ ಹೆಸರು ಲಲಿತಕೀರ್ತಿ. ನಾನೂ ಅಜಿತಸೇನಾಚಾರ್ಯರ ವಿದ್ಯಾರ್ಥಿ. ನೀವು ಹೋಗಿ ನಾನು ಕಳಿಸಿದೆನೆಂದೇ ಹೇಳಿ. ಆದರೆ ನಾನು ಕಳಿಸಿದವನು ಎಂದ ಮಾತ್ರಕ್ಕೆ ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ ಎಂಬ ಭರವಸೆ ನನಗಿಲ್ಲ. ನಿಮ್ಮ ಪರೀಕ್ಷೆ ನಡೆಯುತ್ತದೆ. ನಿಮ್ಮ ಇಚ್ಛೆ ಕರವಾಳವೋ ಮರವಾಳವೋ ತೀರ್ಮಾನವಾಗುತ್ತದೆ. ಕರವಾಳವಾದರೆ, ಗುರುಗಳು ತೃಪ್ತರಾದರೆ ನಿಮಗೆ ಪ್ರವೇಶ ಖಂಡಿತ.”

“ತುಂಬಾ ಸಂತೋಷ. ನಾನಿನ್ನು ಬರಲೆ”

“ಎಲ್ಲಿಗೆ? ಶ್ರವಣಬೆಳಗೊಳವೇನು ಪಕ್ಕದ ಊರಲ್ಲ. ದೂರದ ಕಾಣದ ದೇಶ. ಹೋಗಿ ತಲಪಲೇ ಮೂರ‍್ನಾಲ್ಕು ತಿಂಗಳಾದರು ಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಆಗಿದೇಯೇನು?”

“ಇಲ್ಲ. ಹೇಗೋ ಏನೋ ನನಗೆ ಗೊತ್ತಿಲ್ಲ. ನಾನು ಅಲ್ಲಿಗೆ ತಲಪುತ್ತೇನೆ ಎಂದಷ್ಟೇ ಹೇಳಬಲ್ಲೆ”

“ಒಳ್ಳೆಯದು ಹೋಗಿಬನ್ನಿ. ಅರ್ಹಂತನು ಕಾಪಾಡಲಿ”

(ಮುಂದಿನ ವಾರ: ಶ್ರವಣಬೆಳಗೊಳದಲ್ಲಿ ರನ್ನ)