Showing posts with label ಡಾ.ಬಿ.ಆರ್.ಸತ್ಯನಾರಾಯಣ. Show all posts
Showing posts with label ಡಾ.ಬಿ.ಆರ್.ಸತ್ಯನಾರಾಯಣ. Show all posts

Monday, February 02, 2015

ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 1




 
 ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿರುವ 'ಶ್ರೀ ಕವಿರನ್ನ' ಎಂಬ ಕನ್ನಡ ಲಿಪಿ. ಇದರ ಎದುರಿಗೆ 'ಚಾವುಂಡರಾಯ' ಎಂಬ ಬರಹವಿದೆ. ಈ ಲಿಪಿವಿನ್ಯಾಸ ಹತ್ತನೇ ಶತಮಾನದ ಲಿಪಿಯನ್ನೇ ಹೋಲುವುದರಿಂದ ಸ್ವತಃ ರನ್ನ ಮತ್ತು ಚಾವುಂಡರಾಯರೇ ಇದನ್ನು ಬರೆದಿರಬಹುದು ಎಂದು ನಂಬಲಾಗಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ

ನಮಗೆ ಸ್ವಾತಂತ್ರ್ಯ ಬಂದಿದ್ದು ೧೯೪೭ರಲ್ಲಿ. ಅಲ್ಲಿಗೆ ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಮದುವೊಳಲು ಎಂಬ ಊರಿನಲ್ಲಿ ರನ್ನನ ಜನನ. ಈಗ ಮುಧೋಳ್ ಎಂಬ ಹೆಸರಿನಿಂದ ಗುರುತಿಸುವ ಅಂದಿನ ಮುದುವೊಳಲು ಘಟಪ್ರಭ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ, ತೊರೆಗೆರೆಗೆ ಉತ್ತರಕ್ಕೂ ಇದ್ದ ಬೆಳಗುಲಿ-೫೦೦ ಎಂಬ ಸೀಮೆಯಲ್ಲಿ ಜಂಬುಖಂಡಿ ಪ್ರಾಂತ್ಯದಲ್ಲಿತ್ತು. ರನ್ನನ ತಂದೆ ‘ಜಿನೇಂದ್ರಪಾದ ಕಮಲಭ್ರಮರ ಜಿನವಲ್ಲಭ’. ತಾಯಿ ‘ಪತಿವ್ರತಾಗುಣದಿಂದ ಪ್ರಸಿದ್ಧಳಾದ ಅಬ್ಬಲಬ್ಬೆ’. ರೇಚಣ ಮತ್ತು ಮಾರಮಯ್ಯ ಎಂಬ ಇಬ್ಬರು ಅಣ್ಣಂದಿರು ರನ್ನನಿಗಿದ್ದರು. ಜಿನಧರ್ಮಾವಲಂಬಿಯಾಗಿದ್ದ ಈ ಕುಟುಂಬದವರದು ಬಳೆಗಾರ ವೃತ್ತಿ. ಬಳೆಗಳನ್ನು ಕೊಂಡು ತಂದು ಹೊತ್ತು ಮಾರಿ ಬಂದ ಲಾಭದಿಂದ ಜೀವನ ಸಾಗಿಸಬೇಕಾದ ಪರಿಸ್ಥಿತಿ. ಸಹಜವಾಗಿಯೇ ಬಡತನವಿತ್ತು. ವಿದ್ಯೆಯೆಂಬುದು ಕನಸಿನ ಮಾತಾಗಿತ್ತು.
(ಬಂಕಾಪುರದಲ್ಲಿರುವ ಪ್ರಾಚೀನ ದೇವಾಲಯ)

ಬಾಲಕ ರನ್ನನಿಗೆ ವಿದ್ಯೆ ಕಲಿಯಬೇಕೆಂಬ ಅದಮ್ಯ ಬಯಕೆ. ಮನೆಯಲ್ಲಿ ವಾತಾವರಣ ಅದಕ್ಕೆ ಪೂರಕವಾಗಿರಲಿಲ್ಲ. ಆತನೂ ಬಳೆ ವ್ಯಾಪಾರಕ್ಕೆ ಇಳಿಯಲೇಬೇಕಾದ ಪರಿಸ್ಥಿತಿ. ಅಂತಹ ಸಂದರ್ಭದಲ್ಲಿ ರನ್ನ ಹೇಗೋ ಬಂಕಾಪುರದಲ್ಲಿದ್ದ ಜೈನಗುರುಕುಲದ ಜಾಡು ತಿಳಿದು ಮನೆಗೆ ತಿಳಿಸಿ ವಿದ್ಯಾಭ್ಯಾಸದ ಕನಸು ಹೊತ್ತು ಹೊರಟೇಬಿಟ್ಟ. ಬಂಕಾಪುರ ತಲುಪಿದಷ್ಟು ಸುಲಭವಾಗಿರಲಿಲ್ಲ ವಿದ್ಯೆ ಕಲಿಯುವುದು. ಆದರೆ ರನ್ನನ ವಿದ್ಯೆ ಕಲಿಯಬೇಕೆಂಬ ಹಸಿವು ಅವನನ್ನು ಸುಮ್ಮನೆ ಕೂರಿಸಲಿಲ್ಲ. ಗುರುಕುಲದ ಬಾಗಿಲು ಬಡಿದು ನಿಂತ ರನ್ನನನ್ನು ಅಲ್ಲಿನ ವಿದ್ಯಾರ್ಥಿಸಮೂಹ ತಿರಸ್ಕಾರದಿಂದಲೇ ಕಂಡಿತು. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಬಾಲಕ ರನ್ನ ಹೆದರಿಕೊಳ್ಳುವಂತಹ ಸನ್ನವೇಶ ಸೃಷ್ಟಿಯಾಯಿತು.

“ಯಾರು ನೀನು?”

“ವಿದ್ಯಾರ್ಥಿ”

“ಹೆಸರೇನು?”

“ರನ್ನಮಯ್ಯ”

“ಓಹೋ, ರನ್ನ! ನಿನ್ನ ತಂದೆ ತಾಯಿ ಯಾರು”

“....”

“ಏನು ವೃತ್ತಿ”

“ಬಳೆಗಾರರ ವೃತ್ತಿ”

“ಬಳೆಗಾರ ವೃತ್ತಿ ಮಾಡಿಕೊಂಡಿರುವುದನ್ನು ಬಿಟ್ಟು ವಿದ್ಯೆ ಕಲಿಯಬೇಕೆಂಬ ಚಪಲವೋ”

“...”

“ಪಂಡಿತ ರನ್ನಮಯ್ಯ ಅನ್ನಿಸಿಕೊಳ್ಳುವ ಚಪಲವೋ”

“...”

“ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನು ಬಳೆಯ ಮಲಾರವೆ?”

“ವೃತ್ತಿ ಹೊಟ್ಟೆ ಪಾಡಿನದಾಯಿತು. ಕಲಿಯಬೇಕೆಂಬುದು ನನ್ನ ಆತ್ಮದ ಹಸಿವು”

“ಓಹೋ, ಆತ್ಮ ಪರಮಾತ್ಮ ಎಲ್ಲ ತಿಳಿದಿದ್ದೀಯೋ. ಹೋಗಯ್ಯಾ ಹೋಗು. ಬಳೆ ಮಾರಿಕೊಂಡೇ ಜೀವನ ನಡೆಸು. ನೀನು ವಿದ್ಯೆ ಕಲಿಯಲು ಬಂದರೆ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ. ಹೋಗಯ್ಯಾ”

ಹೀಗೇ ಮೂದಲಿಕೆ ಮುಂದುವರೆಯಿತು.

ರನ್ನ ಹತಾಶನಾದ. ಗುರುಕುಲದಿಂದ ಹೊರಗೆ ಬಂದು ಆಕಾಶದತ್ತ ಮೊಗ ಮಾಡಿ ನಿಂತ. ಯಾರೋ ಕೂಗುತ್ತಿದ್ದಾರೆ ಅನ್ನಿಸಿ ಮೊಗತಿರುಗಿಸಿ ನೋಡಿದ. ವಯಸ್ಸಿನಲ್ಲಿ ತನಗಿಂತ ಸ್ವಲ್ಪ ದೊಡ್ಡವನಾದ ಹಾಗೂ ತೇಜೋವಂತನಾದ ಒಬ್ಬ ಯುವಕ ತನ್ನತ್ತ ಬರುತ್ತಿದ್ದ.

“ನಿನ್ನ ಹೆಸರು ರನ್ನಮಯ್ಯನೆಂದೆ, ಅಲ್ಲವೆ?” ನಗುತ್ತ ಕೇಳಿದ ಆ ಯುವಕ.

“ಹೌದು”

“ವಿದ್ಯೆ ಕಲಿಯಬೇಕೆಂಬುದು ಕೇವಲ ಕ್ಷಣಿಕ ಆಕರ್ಷಣೆಯೋ ಹೇಗೆ?”

“ಆಗಲೇ ಹೇಳಿದೆನಲ್ಲ. ಅದು ನನ್ನ ಆತ್ಮದ ಹಸಿವು”

“ಉದ್ದೇಶ”

“ಜ್ಞಾನಾರ್ಜನೆ, ಕಾವ್ಯಾಭ್ಯಾಸ, ಕಾವ್ಯರಚನೆ...”

“ಓಹೋ ನಿನ್ನ ದೃಷ್ಟಿ ಹಿಮಾಲಯದತ್ತ!”

“ಯಾಕಾಗಬಾರದು?”

“ಹೌದು ಯಾಕಾಗಬಾರದು?! ಆಗಲಿ. ಆದರೆ ನಿನಗಿಲ್ಲಿ ಪ್ರವೇಶವೇ ದೊರಕುತ್ತಿಲ್ಲವಲ್ಲ”

“ನನಗೆ ಪ್ರತಿಭೆಯಿಲ್ಲವೆಂದಲ್ಲ. ನನ್ನ ಜಾತಿಯ ಕಾರಣದಿಂದ”

“ಆದ್ದರಿಂದಲೇ ಇದು ನಿನಗೆ ಪ್ರತಿಕೂಲ ವಾತಾವರಣ. ಕಲಿಯಲೇಬೇಕೆಂಬ ಹಸಿವು ನಿನಗಿದ್ದುದೇ ಆದರೆ ಶ್ರವಣಬೆಳಗೊಳಕ್ಕೆ ಹೋಗು. ಅಲ್ಲಿ ಅಜಿತಸೇನಾಚಾರ್ಯರೆಂಬ ಮಹಾಗುರುಗಳಿದ್ದಾರೆ. ಬಹುಶಃ ಅವರು ನಿನ್ನ ಕೈ ಹಿಡಿಯಬಹುದು.” ಆತ್ಮವಿಶ್ವಾಸದಿಂದ ನುಡಿದ ಯುವಕನನ್ನು ರನ್ನ ಸಂತೋಷ ಆಶ್ಚರ್ಯದಿಂದ ನೋಡಿದ.

“ಅಲ್ಲಿ ನನಗಾರು ಆಶ್ರಯ ಕೊಡುವವರು”

“ಸಮರಪರಶುರಾಮನಾದ ಚಾಮುಂಡರಾಯನಿದ್ದಾನೆ. ಕೊನೆಗೆ ಎಲ್ಲರನ್ನೂ ಸಲಹುವ ಆ ಬಾಹುಬಲಿಯಿದ್ದಾನೆ”

“ಸಂತೋಷ ಪರಮಸಂತೋಷ! ನಿಮ್ಮ ನಾಮಧೇಯ ತಿಳಿಯಬಹುದೆ”

“ಅದಕ್ಕೇನಂತೆ! ನನ್ನ ಹೆಸರು ಲಲಿತಕೀರ್ತಿ. ನಾನೂ ಅಜಿತಸೇನಾಚಾರ್ಯರ ವಿದ್ಯಾರ್ಥಿ. ನೀವು ಹೋಗಿ ನಾನು ಕಳಿಸಿದೆನೆಂದೇ ಹೇಳಿ. ಆದರೆ ನಾನು ಕಳಿಸಿದವನು ಎಂದ ಮಾತ್ರಕ್ಕೆ ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ ಎಂಬ ಭರವಸೆ ನನಗಿಲ್ಲ. ನಿಮ್ಮ ಪರೀಕ್ಷೆ ನಡೆಯುತ್ತದೆ. ನಿಮ್ಮ ಇಚ್ಛೆ ಕರವಾಳವೋ ಮರವಾಳವೋ ತೀರ್ಮಾನವಾಗುತ್ತದೆ. ಕರವಾಳವಾದರೆ, ಗುರುಗಳು ತೃಪ್ತರಾದರೆ ನಿಮಗೆ ಪ್ರವೇಶ ಖಂಡಿತ.”

“ತುಂಬಾ ಸಂತೋಷ. ನಾನಿನ್ನು ಬರಲೆ”

“ಎಲ್ಲಿಗೆ? ಶ್ರವಣಬೆಳಗೊಳವೇನು ಪಕ್ಕದ ಊರಲ್ಲ. ದೂರದ ಕಾಣದ ದೇಶ. ಹೋಗಿ ತಲಪಲೇ ಮೂರ‍್ನಾಲ್ಕು ತಿಂಗಳಾದರು ಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಆಗಿದೇಯೇನು?”

“ಇಲ್ಲ. ಹೇಗೋ ಏನೋ ನನಗೆ ಗೊತ್ತಿಲ್ಲ. ನಾನು ಅಲ್ಲಿಗೆ ತಲಪುತ್ತೇನೆ ಎಂದಷ್ಟೇ ಹೇಳಬಲ್ಲೆ”

“ಒಳ್ಳೆಯದು ಹೋಗಿಬನ್ನಿ. ಅರ್ಹಂತನು ಕಾಪಾಡಲಿ”

(ಮುಂದಿನ ವಾರ: ಶ್ರವಣಬೆಳಗೊಳದಲ್ಲಿ ರನ್ನ)

Monday, February 28, 2011

ಪರಾಂಜಪೆಯವರ ಕಣ್ಣಲ್ಲಿ ಸರಸ್ವತಿ : ವಿಸ್ಮಯ ಸಂಸ್ಕೃತಿ

ಸರಸ್ವತಿ-ವಿಸ್ಮಯ ಸ೦ಸ್ಕ್ರತಿ


ಇದೊ೦ದು ಅಪರೂಪದ ಸ೦ಶೋಧನಾತ್ಮಕ ಕೃತಿ. "ಸರಸ್ವತಿ" ಪದದ ನಿಷ್ಪತ್ತಿ ಮತ್ತು ಅರ್ಥಸ್ವರೂಪದ ವಿಶ್ಲೇಷಣೆಯೊ೦ದಿಗೆ ಆರ೦ಭವಾಗುವ ವ್ಯಾಖ್ಯಾನ ಸಾದ್ಯ೦ತವಾಗಿ ಆ ಪದದ ಹಿ೦ದಿರುವ ಮಹತ್ತು, ವಿಶಿಷ್ಟತೆ ಮತ್ತು ಹತ್ತು ಹಲವು ಆಸಕ್ತಿದಾಯಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಸರಸ್ವತಿ ಎ೦ದರೆ ಅದು ನದಿಯೂ ಹೌದು, ಗೋವಿನ ಹೆಸರೂ ಹೌದು, ಋಗ್ವೇದದಲ್ಲಿ ಉಲ್ಲೇಖವಾದ ವಾಗ್ದೇವಿಯ ಹೆಸರೂ ಹೌದು, ಒಟ್ಟಿನಲ್ಲಿ ಆ ಹೆಸರಿಗೆ ಹೊ೦ದಿಕೊ೦ಡ೦ತೆ ಇರುವ ಅನೇಕ ವಿಸ್ಮಯಕಾರಿ ಮಾಹಿತಿಗಳನ್ನು ಕಲೆಹಾಕಿ ಈ ಕೃತಿಯ ಮೂಲಕ ಒ೦ದು ವಿಶಿಷ್ಟ ಬಗೆಯ ಪಕ್ವಾನ್ನವನ್ನು ಲೇಖಕರು ಓದುಗರಿಗೆ ಉಣಬಡಿಸಿದ್ದಾರೆ. ಋಗ್ವೇದ, ಸ್ಕ೦ದಪುರಾಣ, ಜೈನ ಮತ್ತು ಬೌದ್ಧ ಧರ್ಮಗ್ರ೦ಥಗಳು, ಕನ್ನಡ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ, ಹಳೆಗನ್ನಡ ಶಾಸನಗಳು ಇವನ್ನೆಲ್ಲ ಆಕರವಾಗಿಸುವ ಜೊತೆಗೆ ಸುಮಾರು ಒ೦ದುಸಾವಿರ ವರ್ಷಗಳ ಕಾಲಾವಧಿ ನೂರಾರು ಸರಸ್ವತಿಯ ಶಿಲ್ಪಗಳ ಅಧ್ಯಯನ ಮಾಡಿ

Tuesday, May 11, 2010

ನಾಗಚಂದ್ರನ ಪರಮೋಚ್ಛ ಕಲ್ಪನೆಯ 'ಸರಸ್ವತೀ'

‘ಅಭಿನವಪಂಪ’ನೆಂದೇ ಖ್ಯಾತನಾಗಿರುವ ನಾಗಚಂದ್ರನು ಸರಸ್ವತಿಯ ವಿಷಯದಲ್ಲಿಯೂ ಅಭಿನವಪಂಪನೇ ಆಗಿರುವುದು, ಅವನ ಎರಡೂ ಕಾವ್ಯಗಳಲ್ಲಿ ಪ್ರಕಟಗೊಂಡಿರುವ ಸರಸ್ವತೀ ದರ್ಶನದಿಂದ ವ್ಯಕ್ತವಾಗುತ್ತದೆ. ‘ಮಲ್ಲಿನಾಥಪುರಾಣ’ ಮತ್ತು ‘ರಾಮಚಂದ್ರಚರಿತಪುರಾಣ’ (ಪಂಪರಾಮಾಯಣ) ಈತನ ಕೃತಿಗಳು. “ನಾಗಚಂದ್ರನು ‘ಮಲ್ಲಿನಾಥಪುರಾಣ’ದಲ್ಲಿ ತನ್ನ (ಸರಸ್ವತಿ) ದರ್ಶನದ ಪ್ರಥಮದರ್ಶನ ಮಾಡಿಸಿ ಅದರ ಪರಿಣಿತಸ್ವರೂಪವನ್ನು ‘ಪಂಪರಾಮಾಯಣ’ದಲ್ಲಿ ತೋರಿದ್ದಾನೆ. ‘ಮಲ್ಲಿನಾಥಪುರಾಣ’ದಲ್ಲಿ ಬರುವ ಸರಸ್ವತೀ ಸ್ತುತಿ ಹೀಗಿದೆ.


ಪದವಿನ್ಯಾಸವಿಲಾಸಮಂಗವಿಭವಂ ಚೆಲ್ವಾದ ದೃಷ್ಟಿಪ್ರಸಾ

ದದೊಳೊಂದಾದ ನಯಂ ಮೃದೂಕ್ತಿ ವನಿತಾಸಾಮಾನ್ಯವಲ್ತೆಂಬ ಕುಂ

ದದ ವರ‍್ಣಂ ನಿಜವೆಂಬ ರೂಪೆಸೆಯೆ ನಾನಾಭಂಗಿಯಂ ಬೇಱೆ ತಾ

ಳ್ದಿ ವಾಗ್ದೇವತೆ ಮಾೞ್ಕೆ ಮತ್ಕೃತಿಗೆ ಲೋಕಾಶ್ಚರ‍್ಯಚಾತುರ‍್ಯಮಂ||

ಪದಗಳ ವಿನ್ಯಾಸ, ವಿಲಾಸ, ಅಂಗವೈಭವ, ಚೆಲುವನ್ನು ಹೆಚ್ಚಿಸುವ ನಯ-ನಾಜೂಕು, ಮೃದುವಾದ ಉಕ್ತಿ, ವನಿತೆಯರಿಗೆ ಸಾಮಾನ್ಯವಾಗಿಯೇ ಇರುವ ವರ್ಣಕ್ಕಿಂತಲೂ ಹೆಚ್ಚು ತೇಜಸ್ಸುಳ್ಳ, ಆದರೆ ಕುಂದದ ನಿಜವಾದ ಸೌಂದರ್ಯವನ್ನು ವಾಗ್ದೇವತೆ ಪಡೆದಿದ್ದಾಳೆ. ವರ್ಣ ಎಂದರೆ ಅಕ್ಷರ ಎಂಬ ಅರ್ಥವೂ ಇದೆ. ಕಾವ್ಯ ಕವಿಸೃಷ್ಟಿಯಾದರೂ ಅದೂ ಪೂರ್ಣ ಸಾಕಾರಗೊಳ್ಳುವುದು ಅಕ್ಷರರೂಪದಲ್ಲಿಯೆ. ಇವೆಲ್ಲವುಗಳನ್ನು ಒಳಗೊಂಡ ಕಾವ್ಯದ ದೃಷ್ಟಿಯೇ ಸರಸ್ವತಿಯ ಮುಖಲಕ್ಷಣ. ‘ನಾನಾಭಂಗಿಯಂ ಬೇಱೆ ತಾಳ್ದಿ’ ಎಂಬಲ್ಲಿ ಸರಸ್ವತಿಯ ವ್ಯಾಪಕತೆ ಪ್ರಕಟವಾಗಿದೆ. ‘ಸರ್ವಭಾಷಾಸರಸ್ವತಿ’ ವಿವಿಧಪ್ರಕಾರಗಳನ್ನು ತಾಳಿ ಪ್ರಕಟವಾಗುವ ಚಿತ್ರ, ನಾಟ್ಯಸರಸ್ವತಿಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ.

‘ಮಲ್ಲಿನಾಥಪುರಾಣ’ದ ಕೊನೆಯ ಪದ್ಯ ಹೀಗಿದೆ.

ಸುಕೃತಿಪ್ರೀತಿಲತಾಸಮುತ್ಕಳಿಕೆ ವಿದ್ವನ್ಮಂಡಳೀರತ್ನಕಂ

ಠಿಕೆ ಧರ್ಮಾಮೃತಮೇಘಮಾಳಿಕೆ ವಚಶ್ರೀನರ್ತಕೀ ನೃತ್ಯವೇ

ದಿಕೆ ಸಾಹಿತ್ಯಸರೋಜಕರ್ಣಿಕೆ ಯಶಶ್ಯ್ರೀಕೇಕರಾಳೋಕ ಚಂ

ದ್ರಿಕೆ ನಿಲ್ಕೀಕೃತಿ ಕಲ್ಪಕೋಟಿವರೆಗಂ ಭದ್ರಂ ಶುಭಂ ಮಂಗಳಂ||

ಪುಣ್ಯವಂತರಾದ ರಸಿಕರ ಪ್ರೀತಿಯ ಬಳ್ಳಿಗೆ ಬಿಟ್ಟ ಮೊಗ್ಗೆ, ವಿದ್ವಾಂಸರ ಮಂಡಳಿಯ ಕೊರಳಲ್ಲಿಯ ರತ್ನಹಾರ, ಧರ್ಮವೆಂಬ ಅಮೃತದ ಮಳೆಗರೆಯುವ ಮೇಘಮಾಲೆ, ಮಾತಿನ ಲಕ್ಷ್ಮಿಯೆಂಬ ನರ್ತಕಿ ಕುಣಿಯುವ ನೃತ್ಯವೇದಿಕೆ, ಸಾಹಿತ್ಯವೆಂಬ ಕಮಲದ ಬೀಜಕೋಶ, ಯಶೋಲಕ್ಷ್ಮಿಯ ಕುಡಿಗಣ್ಣಿನ ಬೆಳದಿಂಗಳು ಆಗಿರುವ ಈ ಕೃತಿ ಕಲ್ಪಕೋಟಿಯವರೆಗೆ ನಿಲ್ಲಲಿ. ಭದ್ರಂ ಶುಭಂ ಮಂಗಳಂ. ತನ್ನ ಕಾವ್ಯವನ್ನು ತಾನೇ ಸ್ತುತಿಸಿಕೊಳ್ಳುತ್ತಿರುವ ನಾಗವರ್ಮನ ಈ ಪದ್ಯ, ಸ್ವಕಾವ್ಯಸ್ತುತಿ ಮಾತ್ರವಾಗಿರದೇ, ಯಾವುದೇ ಒಂದು ಒಳ್ಳೆಯ ಕಾವ್ಯದ ಹಿಂದಿನ ಮಹೋದ್ದೇಶವನ್ನು ನಿರೂಪಿಸುತ್ತದೆ. ಇಲ್ಲಿ ನಮಗೆ ಮುಖ್ಯವಾಗಿರುವುದು ‘ವಚಶ್ರೀನರ್ತಕೀನೃತ್ಯವೇದಿಕೆ’ ಎಂಬ ವಿಶೇಷಣ. ಒಂದು ಒಳ್ಳೆಯ ಕಾವ್ಯದ ಹುಟ್ಟಿಗೆ ಒಳ್ಳೆಯ ವಾಕ್ ಹಾಗೂ ಒಳ್ಳೆಯ ಭಾಷೆ ಬಹಳ ಮುಖ್ಯ. ಲಯಬದ್ಧವಾದ ಪದಗಳ ವಿಲಾಸವು ಕಾವ್ಯದ ಓದಿಗೆ ಅನುಕೂಲವನ್ನು ಒದಗಿಸುತ್ತದೆ. ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಒಳ್ಳೆಯ ಮಾತೂ ಸಹ ಒಂದು ಸಂಪತ್ತು. ಆದರೆ ಧನಸಂಪತ್ತಿನಂತೆ ನಾಶವಾಗುವುದಿಲ್ಲ. ನಾಗವರ್ಮನು ಧನಸಂಪತ್ತಿನಂತೆ ನಾಶವಾಗದ ಮಾತಿಗೆ ಅಧಿದೇವತೆಯಾದ ಸರಸ್ವತಿಯನ್ನು ವಚಶ್ರೀ ಅಂದರೆ ಮಾತಿನ ಲಕ್ಷ್ಮಿ ಎಂದು ಕರೆದಿದ್ದಾನೆ. ‘ತನ್ನ ಕಾವ್ಯವು ವಚಶ್ರೀ ಅಂದರೆ ಮಾತಿನ ಲಕ್ಷ್ಮಿಯಾದ ಸರಸ್ವತಿಯು ನರ್ತನ ಮಾಡುವ ನೃತ್ಯವೇದಿಕೆ’ ಎಂದು ಹೇಳಿರುವುದು ವಿನೂತನವಾಗಿದೆ.

ಪರಿಣಿತಕವೀಂದ್ರವದನಾ

ಜಿರದೊಳ್ ಮೃದುಪದವಿಲಾಸ ವಿನ್ಯಾಸಾಲಂ

ಕರಣಂ ರಂಜಿಸೆ ನರ್ತಿಪ

ಸರಸ್ವತೀಲಾಸ್ಯ ಭೇದಮಂ ಜಡನಱಯಂ||

ಮೃದುವಾದ ಪದಗಳ ವಿಲಾಸ ವಿನ್ಯಾಸದಿಂ ಆಲಂಕೃತಳಾಗಿರುವ ಸರಸ್ವತಿಯು ಪರಿಣಿತರಾದ ಕವಿಗಳ ಮೊಗದಲ್ಲಿ ಲಾಸ್ಯವಾಡುತ್ತಿರುತ್ತಾಳೆ; ಆದರೆ ಅದನ್ನು ಜಡರು ಅರಿಂiiಲಾಗುವುದಿಲ್ಲ. ಸರಸ್ವತಿಯ ನರ್ತನಕ್ಕೆ ತನ್ನ ಕಾವ್ಯವನ್ನೇ ವೇದಿಕೆಯನ್ನಾಗಿಸಿರುವ ನಾಗಚಂದ್ರನ ಈ ಕಲ್ಪನೆಯೂ ವಿನೂತನವಾಗಿಯೇ ಇದೆ. ಬ್ರಹ್ಮನ ಮುಖಕಮಲದಲ್ಲಿ ವಾಸವಾಗಿರುವ ಸರಸ್ವತಿಯು ತಮ್ಮ ಮುಖದಲ್ಲಿ ಬಂದು ನೆಲಸಲಿ ಎಂಬ ಕಲ್ಪನೆಗಿಂತ, ‘ಮೃದುಪದವಿಲಾಸವಿನ್ಯಾಸಾಲಂಕರಣ’ದಿಂದ ಪರಿಣಿತ ಕವಿಗಳ ಮೊಗದಲ್ಲಿ ಲಾಸ್ಯವಾಡಲಿ ಎಂಬ ಪರಿಕಲ್ಪನೆ ಹೊಸದಾಗಿಯೂ, ಅರ್ಥಪೂರ್ಣವಾಗಿಯೂ ಕಾಣಿಸುತ್ತದೆ.

ನಾಗಚಂದ್ರನ ಸರಸ್ವತಿಯ ದರ್ಶನ ಆತನ ‘ಪಂಪರಾಮಾಯಣ’ದಲ್ಲೂ ಮುಂದುವರೆದಿದೆ. ಆ ಕೃತಿಯ ಆರಂಭದ ಪ್ರಾರ್ಥನಾಪದ್ಯದಲ್ಲಿಯೇ ‘ವಿದ್ಯಾನಟೀನಾಟ್ಯವೇದೀಕಲ್ಪಂ ಮುಖಚಂದ್ರಬಿಂಬಂ’ ಎಂಬ ವಿವರಣೆಯಿದೆ.

ಪರಬ್ರಹ್ಮ ಶರೀರಪುಷ್ಟಿ ಜನತಾಂತರ್ದೃಷ್ಟಿ ಕೈವಲ್ಯಬೋ

ಧರಮಾ ಮೌಕ್ತಿಕಹಾರಯಷ್ಟಿ ಕವಿತಾವಲ್ಲೀ ಸುಧಾವೃಷ್ಟಿ ಸ

ರ್ವರಸೋತ್ಪಾದ ನವೀನಸೃಷ್ಟಿ ಬುಧಹರ್ಷಾಕೃಷ್ಟಿ ಸರ್ವಾಂಗಸುಂ

ದರಿ ವಿದ್ಯಾನಟಿನಾಟಕಂ ನಲಿಗೆ ಮತ್ಕಾವ್ಯಸ್ಥಲೀರಂಗದೊಳ್||

ಈ ಪದ್ಯ ‘ಸರಸ್ವತಿಗೆ ತೊಡಿಸಿದ ರತ್ನಕಿರೀಟ’ ಎನ್ನಬಹುದು. ‘ಮಲ್ಲಿನಾಥಪುರಾಣ’ವನ್ನು ವಚಶ್ರೀ ನರ್ತಕಿಯ ನರ್ತನಕ್ಕೆ ನೃತ್ಯವೇದಿಕೆಯನ್ನಾಗಿ ಮಾಡಿದ್ದ ನಾಗಚಂದ್ರ, ‘ಪಂಪರಾಮಾಯಣ’ದಲ್ಲಿ ಇನ್ನೂ ಮುಂದುವರೆದು, ‘ಸರ್ವಾಂಗಸುಂದರಿಯಾದ ವಾಗ್ದೇವತೆ ಎಂಬ ವಿದ್ಯಾನಟಿಯ ನಾಟಕ ತನ್ನ ಕಾವ್ಯ’ ಎಂದು ಹೇಳಿ ಕಾವ್ಯಸರಸ್ವತಿಗೆ ರತ್ನಕಿರೀಟವನ್ನು ತೊಡಿಸಿದ್ದಾನೆ. ಈ ಪದ್ಯದ ಸರಸ್ವತಿಯ ದರ್ಶನದ ಬಗ್ಗೆ ಕನ್ನಡದ ಇಬ್ಬರು ಹಿರಿಯ ಕವಿಗಳಾದ, ದ.ರಾ.ಬೇಂದ್ರೆ ಮತ್ತು ರಂ.ಶ್ರೀ.ಮುಗಳಿ ವಿಸ್ತಾರವಾಗಿ ಚರ್ಚಿಸಿದ್ದಾರೆ. ಸಮಗ್ರವಾಗಿ ಪದ್ಯದ ದರ್ಶನಾಂಶವನ್ನು ವ್ಯಾಖ್ಯಾನಿದ್ದಾರೆ. ಅವರಿಬ್ಬರ ದರ್ಶನಮೀಮಾಂಸೆಯ ವಿವರಗಳನ್ನು ಕೆಳಗಿನಂತೆ ಸಂಗ್ರಹಿಸಲಾಗಿದೆ.

ರಂ.ಶ್ರೀ.ಮುಗಳಿಯವರು ‘ಮಲ್ಲಿನಾಥಪುರಾಣದ ವಚಶ್ರೀನರ್ತಕೀನೃತ್ಯವೇದಿಕೆ ಎಂಬಲ್ಲಿ ವಿಶಿಷ್ಟಕೃತಿಯೊಂದನ್ನು ಮೆಚ್ಚಿದ ಮಾತು ವಿಸ್ತರಗೊಂಡು ‘ವಿದ್ಯಾನಟಿನಾಟಕ’ದ ಸಮಗ್ರರೂಪವಾಗಿ ಇಲ್ಲಿ (ಪಂಪರಾಮಾಯಣ) ಅವತಾರ ತಾಳಿದೆ. ಇಡಿಯ ಪದ್ಯವು ನಾಗಚಂದ್ರನು ಪಡೆದ ಸರಸ್ವತಿಯ ಭವ್ಯದರ್ಶನವನ್ನು ಸಮಗ್ರವಾಗಿ ನಿರೂಪಿಸುತ್ತದೆ. ವಿದ್ಯಾನಟಿನಾಟಕ ಎಂದರೆ ಸರಸ್ವತಿ ಎಂಬ ನಟಿಯ ನೃತ್ಯನಾಟಕ.’ ಎನ್ನುತ್ತಾರೆ. ಅವರು ಮುಂದುವರೆದು ಆರು ಹಂತಗಳಲ್ಲಿ ಪದ್ಯವನ್ನು ವಿಶ್ಲೇಷಿಸಿದ್ದಾರೆ
  • ‘ಪರಬ್ರಹ್ಮ ಶರೀರಪುಷ್ಟಿ’ - ಪರಮಜಿನನ ಶರೀರಕ್ಕೆ, ಸರಸ್ವತಿಯಿಂದ ದೊರೆಯುವ ಆನಂದದ ಅನ್ನ, ರಸದ ಅಮೃತ ಪುಷ್ಟಿಯನ್ನು ಒದಗಿಸುತ್ತದೆ. ಈ ಜಗತ್ತು ಅಥವಾ ಸೃಷ್ಟಿಯೇ ಪರಮಾತ್ಮನ ಶರೀರ. ಸರಸ್ವತಿಯು ಆನಂದದ ಆಹಾರದಿಂದ ಈ ಸೃಷ್ಟಿಯನ್ನು ಪೋಷಿಸುತ್ತಾಳೆ. ‘ಪ್ರಜಾಪತಿಯು ವಾಕ್ಕಿನಿಂದಲೇ ಶಕ್ತಿಯನ್ನು ತೃಪ್ತಿಯನ್ನು ಪಡೆಯುತ್ತಾನೆ’ ಎಂಬುದು ವೈದಿಕಮತದ ನಂಬುಗೆಯೂ ಆಗಿದೆ.
  • ‘ಜನತಾಂತರ್ದೃಷ್ಟಿ’ - ಜನಸಾಮಾನ್ಯನ ಒಳಗಣ್ಣು. ಹೊರಗಣ್ಣಿನಿಂದ ನೋಡಿದರೆ ಕಾಣದ ಕಾವ್ಯಸತ್ಯ ಮತ್ತು ಸೌಂದರ್ಯ ಒಳಗಣ್ಣಿಗೆ ಕಾಣುತ್ತದೆ. ‘ಜನತೆಯ ಅಂತರ್ದೃಷ್ಟಿ ಎಂದರೆ ಸರಸ್ವತಿ.’ ಆದರೆ ‘ಮುಕ್ತರಿಗೆ ಮಾತ್ರ ಅಂತರ್ದೃಷ್ಟಿ, ಅವರಿಗೇ ಸರಸ್ವತಿಯು ಪ್ರಸನ್ನವಾಗುವವಳು.’
  • ‘ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’ - ಕೇವಲಜ್ಞಾನವೆಂಬ ಲಕ್ಷ್ಮಿಯ ಕೊರಳಿಗೆ ಮುತ್ತಿನಹಾರದಂತೆ ಸರಸ್ವತಿಯು ಇದ್ದಾಳೆ. ಮುಕ್ತಾವಸ್ಥೆಯಲ್ಲಿ ಪಡೆಯುವ ಜ್ಞಾನಕ್ಕೆ ಸರಸ್ವತಿಯು ಒಂದು ಅಲಂಕಾರ. ಜ್ಞಾನವು ಹೆಚ್ಚುತ್ತಾ ಹೋದಂತೆ ಆನಂದವು ಅದರೊಡನೆ ಸೇರಿಕೊಂಡು ಶೋಭೆಯನ್ನು ಹೆಚ್ಚಿಸುತ್ತದೆ. ಕೈವಲ್ಯಬೋಧಲಕ್ಷ್ಮಿ ತನ್ನಷ್ಟಕ್ಕೆ ತಾನು ಸುಂದರಿಯಾದರೂ, ಸರಸ್ವತಿಯೆಂಬ ಮುತ್ತಿನಹಾರದ ತೊಡುಗೆಯಿಂದ ಮಾತ್ರ ಅವಳ ಸೌಂದಂiiಕ್ಕೆ ಪರಿಪೂರ್ಣತೆ ಲಭಿಸುತ್ತದೆ.
  • ‘ಕವಿತಾವಲ್ಲೀ ಸುಧಾವೃಷ್ಟಿ’ - ಕವಿತೆ ಎಂಬ ಬಳ್ಳಿಗೆ ಅಮೃತದ ಮಳೆಗರೆಯುವವಳು ಸರಸ್ವತಿ. ವಸ್ತು ವಿಷಯ ಪ್ರತಿಭೆ ಎಲ್ಲಾ ಇದ್ದರೂ, ಸರಸ್ವತಿಯ ಸುಧಾವೃಷ್ಟಿ ಇಲ್ಲದಿದ್ದರೆ ಕವಿತೆ ಎಂಬ ಬಳ್ಳಿ ಬಾಡಿಹೋಗುತ್ತದೆ. ಒಂದು ಪಕ್ಷ ಅದು ಉಳಿದರೂ ಅದರ ಹೂವುಗಳಿಗೆ ಸುವಾಸನೆಯಿರುವುದಿಲ್ಲ. ಸರಸ್ವತಿಯ ಕೃಪೆಯಿದ್ದರಷ್ಟೇ ಕಾವ್ಯ ಅಮರವಾಗುವುದು.
  • ‘ಸರ್ವರಸೋತ್ಪಾದ ನವೀನ ಸೃಷ್ಟಿ’ - ಸರಸ್ವತಿಯು ಸರ್ವರಸಗಳಿಂದ ಕೂಡಿದ ನವೀನಸೃಷ್ಟಿಯನ್ನೇ ಬೆಳಕಿಗೆ ತರುವವಳು. ಜೀವನದ ಸರ್ವವಿಧ ಚಿತ್ರಣ, ಸಮಗ್ರದರ್ಶನ, ಆಳ-ಅಗಲಗಳ ನಿರೂಪಣ ಸರ್ವರಸೋತ್ಪಾದದಿಂದ ಆಗುತ್ತದೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ ಕವಿಯಾದವನು ನವೀನಸೃಷ್ಟಿಯನ್ನು ನಿರ್ಮಿಸುತ್ತಾನೆ. ಪ್ರತಿ ಕವಿಗೂ ಅದು ನವನವೀನವಾಗಿಯೇ ಇರುತ್ತದೆ.
  • ‘ಬುಧಹರ್ಷಾಕೃಷ್ಟಿ’ - ಬಲ್ಲವರ, ಸಹೃದಯರ ಹರ್ಷವನ್ನು ಆಕರ್ಷಿಸುವ ಶಕ್ತಿಯಾಗಿರುವವಳು ಸರಸ್ವತಿ. ಕಾವ್ಯ ಒಳ್ಳೆಯವರನ್ನಷ್ಟೇ ಆಕರ್ಷಿಸುವುದಿಲ್ಲ. ಆದರೆ ಕಾವ್ಯದಿಂದ ಆಕರ್ಷಿತರಾದವರೆಲ್ಲಾ ಒಳ್ಳೆಯವರಾಗುತ್ತಾರೆ, ಸಹೃದಯರಾಗುತ್ತಾರೆ. ‘ಸಮಸ್ತಚೆಲುವನ್ನು ಹೊಂದಿರುವ ಸರ್ವಾಂಗಸುಂದರಿಯಾದ ವಿದ್ಯಾನಟಿಯ ನಾಟಕವು ತನ್ನ ಕಾವ್ಯವೆಂಬ ರಂಗಸ್ಥಳದಲ್ಲಿ ನಡೆಯಲಿ’ ಎಂಬುದು ನಾಗಚಂದ್ರನ ಆಶಯ.
ದ.ರಾ.ಬೇಂದ್ರೆಯವರು ಈ ಪದ್ಯದ ದರ್ಶನವನ್ನು ಗ್ರಹಿಸಿರುವ, ತನ್ಮೂಲಕ ಸರಸ್ವತಿಗೆ ಸುವರ್ಣಕಿರೀಟವನ್ನು ತೊಡಿಸಿರುವ ರೀತಿ ಕೆಳಗಿನಂತಿದೆ.
  1. ಈ ಸೃಷ್ಟಿಯೆಂಬ ಕೃತಿಯನ್ನು ರಚಿಸುವಲ್ಲಿ ವಿದ್ಯೆಯೇ ಒಳಗಿಂದ ಪೋಷಣೆ ಕೊಡುವವಳು.
  2. ಆಕೃತಿಯ ರಸರಹಸ್ಯದ ಅರಿಕೆಯುಂಟಾಗುವಂತೆ ಜನತೆಯಲ್ಲಿ ಅಂತರ್ದೃಷ್ಟಿಯಾಗುವಳು.
  3. ತಾನೇ ತಾನಾದ ತನ್ಮಯತೆಯಲ್ಲಿ ಬೋಧರೂಪವಾಗುವವಳು.
  4. ಬ್ರಹ್ಮಪ್ರಕೃತಿಗೆ ಪ್ರತಿಬಿಂಬವಾದ ಕಲಾಸೀಮೆಯಾದ ಕಾವ್ಯಕೃತಿಗಳ ವಿವಿಧರೂಪ ತಳೆವಳು.
  5. ನವೋನವರಸಸೃಷ್ಟಿಯಾಗುವಳು.
  6. ಬಲ್ಲವರಿಗೂ ವಲ್ಲಭೆಯಂತೆ ಸೋಲಿಸುವಳು.
  7. ಅಂಗಾಂಗದಲ್ಲಿ ಸುಂದರಿಯಾಗಿರುವಳು.

ಇಂತು ಈ ಸಪ್ತಭಂಗಿ ನಯದಲ್ಲಿ ನಯವಾಗಿ ನೃತ್ಯವಾಡುವ ವಿದ್ಯಾನಟಿಯು ಕವಿಗಳ ಉಪಾಸನಾದೇವತೆಯಾಗಿರುವಳು.

‘ಮಲ್ಲಿನಾಥಪುರಾಣ’ದಲ್ಲಿ ‘ಪರಿಣಿತ ಕವಿಗಳ ಮುಖದಲ್ಲಿ ಲಾಸ್ಯವಾಡುವ ಮೃದುಪದವಿಲಾಸವಿನ್ಯಾಸಗಳಿಂದ ಆಲಂಕೃತಗೊಂಡ ಸರಸ್ವತಿಯು ಲಾಸ್ಯವಾಡುವುದನ್ನು ಜಡರು ಅರಿಯಲಾರರು’ ಎಂದಿದ್ದ ನಾಗಚಂದ್ರನೇ ‘ಜನತಾಂತರ್ದೃಷ್ಟಿ’ಯನ್ನು ಸರಸ್ವತಿಗೆ ಸಮೀಕರಿಸಿರುವುದು ಆತನ ಸರಸ್ವತಿಯ ಭವ್ಯದರ್ಶನಕ್ಕೆ ಸಾಕ್ಷಿಯಾಗಿದೆ. ಸರಸ್ವತಿದರ್ಶನದ ವಿಚಾರವೈಭವದಲ್ಲಿ ಪಂಪನಿಗಿಂತ ನಾಗಚಂದ್ರ ಒಂದು ಹೆಜ್ಜೆ ಮುಂದೆಯೇ ಇದ್ದಾನೆ; ಉಳಿದೆಲ್ಲಾ ಕವಿಗಳಿಗಿಂತ ಹಲವಾರು ಹೆಜ್ಜೆ ಮುಂದಿದ್ದಾನೆ

Saturday, April 03, 2010

T-10 : ತೇಜಸ್ವಿ ಟೆನ್

ಎಂತಹಾ ಗಂಭೀರವಾದ ವಿಷಯವನ್ನು ಹೇಳುವಾಗಲೂ ಬರೆಯುವಾಗಲೂ ವಿಶೇಷವಾದ ಪಂಚಿಂಗ್ ಲೈನುಗಳನ್ನು ಸೇರಿಸಿ ನಗಿಸುವ ಶೈಲಿ ತೇಜಸ್ವಿಯವರದ್ದಾಗಿತ್ತು. ಅಂತಹ ತೇಜಸ್ವಿ ಸ್ವಲ್ಪ ಲಘುಬರಹ ಅಥವಾ ಹರಟೆಯನ್ನು ಬರೆಯುವಾಗ ಹೇಗೆ ನಗೆ ಬುಗ್ಗೆ ಚಿಮ್ಮಿಸುತ್ತಾರೆ ಎಂಬ ಕುತೂಹಲ ನಿಮಗಿದ್ದರೆ, ಅವರ ‘ಪಾಕಕ್ರಾಂತಿ’ ಓದಬೇಕು. ಆ ನೀಳ್ಗತೆಯ ಹತ್ತು ಪಂಚಿಂಗ್ ಲೈನುಗಳನ್ನು ತೇಜಸ್ವಿ ಟೆನ್ (T-10)ಎಂದು ಇಲ್ಲಿ ಸಂಗ್ರಹಿಸಿದ್ದೇನೆ. ನಕ್ಕು ನಗಿಸುತ್ತಾ ತೇಜಸ್ವಿಯವರನ್ನು ಸ್ಮರಿಸೋಣ. ತೇಜಸ್ವಿ ನಮ್ಮನ್ನಗಲಿ ಇಂದಿಗೆ (ಮೇ ೫) ಮೂರು ವರ್ಷಗಳೇ ಕಳೆದುಹೋದವು. ಆದರೂ ನಮ್ಮ ಬದುಕಿನಲ್ಲಿ, ನಮ್ಮ ಯೋಚನಾ ಕ್ರಮದಲ್ಲಿ ಅವರ ಚಿಂತನೆ ಆದರ್ಶಗಳು ಸದಾ ಜೀವಂತ. ಈ ನಡುಡವೆ ಕುಪ್ಪಳಲ್ಳಿಯಲ್ಲಿ ೪ ಮತ್ತು ೫ ನೇ ತಾರೀಖಿನಂದು ಎರಡುದಿನದ ತೇಜಸ್ವಿ ಹಬ್ಬ ನೆರವೇರಲಿದೆ. ನಾಲ್ಕರಂದು ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ವಿಚಾರ ಸಂಕಿರಣವಿದ್ದರೆ, ೫ರಂದು ಅವರ ಸ್ಮಾರಕ ಲೋಕಾರ್ಪಣೆಯಾಗಲಿದೆ. ಈ ಸ್ಮಾರಕವಿರುವ ಜಾಗವಂತೂ ಅರ್ಥಪೂರ್ಣ ಎಂದು ನನಗನ್ನಿಸಿದೆ. ಕೊಪ್ಪ-ತೀರ್ಥಹಳ್ಳಿ ಮುಖ್ಯರಸ್ತೆಯಿಂದ ಕುಪ್ಪಳ್ಳಿಯ ಕವಿಮನೆಗೆ ಹೋಗುವ ರಸ್ತೆ ಮಧ್ಯದಲ್ಲಿ ಕವಿಶೈಲಕ್ಕೆ ಹೋಗಲು ಬಲಭಾಗಕ್ಕೆ ಕವಲೊಡೆಯುತ್ತದೆ. ಅದೇ ಜಾಗದಲ್ಲಿ ಎಡಬದಿಯಲ್ಲಿ ಸ್ಮಾರಕ ಸರಳವಾಗಿ ನಿರ್ಮಾಣಗೊಂಡಿದೆ. ಸುತ್ತ ಒತ್ತೊತ್ತಾಗಿ ಆವರಿಸಿಕೊಂಡಿರುವ ಪೊದೆ ಮರ ಗಿಡಗಳು. ಆಗಾಗ ಕಿವಿಗಪ್ಪಳಿಸುವ ಹಕ್ಕಿಗಳ ಕೂಗು. ನಡುವೆ ನಮ್ಮ ತೇಜಸ್ವಿ!

ಪಾಕಕ್ರಾಂತಿಯ ಈ ಹತ್ತು ಲೈನುಗಳನ್ನು ಓದಿ ಎಂಜಾಯ್ ಮಾಡಿ. ವಿಪರೀತವಾದ ಅರ್ಥ ಗೋಚರಿಸಿದರೆ, ಅದನ್ನು ಸ್ವೀಕರಿಸುವ ಮೊದಲು ಮೂಲಕಥೆ ಪಾಕಕ್ರಾಂತಿಯನ್ನು ಓದಿ, ಡಬಲ್ ಬೆನಿಫಿಟ್ ಪಡೆದುಕೊಳ್ಳಿ.

  1. ಅಡಿಗೆಯ ರುಚಿಗೂ ಪಾತ್ರಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಬಂಧವಿದೆಯೇ? 
  2. [ಪೋನಿನಲ್ಲಿ ಮಾತನಾಡಿ ಬರುವಷ್ಟರಲ್ಲಿ ಒಲೆಯ ಮೇಲಿದ್ದ ಹಾಲು ಉಕ್ಕಿ ಇಡೀ ಪಾತ್ರೆಯೇ ಹೊತ್ತಿ ಉರಿಯುತ್ತಿದ್ದುದಕ್ಕೆ] ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ. 
  3. ಹಾಲಿನ ಪ್ಯಾಕೆಟ್ಟುಗಳ ಮೇಲೂ ತಲೆಬುರುಡೆಯ ಚಿತ್ರವನ್ನೋ ಹ್ಯಾಂಡಲ್ ವಿತ್ ಕೇರ್ ಎನ್ನುವ ಸೂಚನೆಯನ್ನೋ ಕೊಡುವುದು ಒಳ್ಳೆಯದಲ್ಲವೆ? 
  4. ಅದನ್ನು [ಒಣಮೀನನ್ನು] ಎಣ್ಣೆ ಹಾಕಿ ಹೆಂಚಿನ ಮೇಲೆ ಹುರಿದರೆ ಇಡೀ ತಾಲ್ಲೂಕಿನ ನಾಯಿಗಳೆಲ್ಲಾ ನನ್ನ ಮನೆ ಎದುರು ಕ್ಯೂ ನಿಲ್ಲುವುದರಲ್ಲಿ ಸಂಶಯ ಇರಲಿಲ್ಲ. 
  5. [ಬ್ರೆಡ್ಡಿಗೆ ಸೇರಿಕೊಂಡಿದ್ದ ಇರುವೆಗಳನ್ನು ನಿವಾರಿಸಲಾಗದ್ದಕ್ಕೆ] ಬ್ರೆಡ್ಡು ಇರುವೆಗಳಿಗೆ ಬಹು ಅಂತಸ್ತಿನ ಕಟ್ಟಡ ಇದ್ದ ಹಾಗೆ. ಅದರೊಳಗೆ ಇರುವೆ ಸೇರಿದರಂತೂ ಅವನ್ನು ಅಲ್ಲಿಂದ ಉಚ್ಛಾಟಿಸುವುದು ಬಾಡಿಗೆ ಮೆನಯವರನ್ನು ಬಿಡಿಸಿದ ಹಾಗೆ ಅಸಾಧ್ಯವೇ ಸರಿ.  
  6. [ತಾವು ಮಾಡಿದ ಅಡುಗೆ ತಿನ್ನದೆ ಅನೇಕ ದಿನಗಳಿಂದ ಉಪವಾಸವಿದ್ದ ನಾಯಿ, ಒಣ ಮೀನಿನ ವಾಸನೆ ಬಂದ ತಕ್ಷಣ ಕುಣಿದಾಡಿದ್ದಕ್ಕೆ] ಆವರೆಗೂ ಕಪಟ ಸನ್ಯಾಸಿಯ ಹಾಗೆ ವೈರಾಗ್ಯ ನಟಿಸುತ್ತ ಬಿದ್ದದ್ದ ಅದು ಪ್ಯಾಕೆಟ್ ಬಿಚ್ಚುತ್ತಿದ್ದ ಹಾಗೇ ಮೇನಕೆಯ ಕ್ಯಾಬರೆ ನೋಡಿದ ವಿಶ್ವಾಮಿತ್ರನ ರೀತಿ ತನ್ನ ಉಪವಾಸ ವ್ರತ ಗಾಳಿಗೆ ತೂರಿ ಅನೇಕ ದಿನಗಳಿಂದ ಅನ್ನವನ್ನೇ ಕಾಣದ ಪ್ರಾಣಿ ತರ ಅಯ್ಯಯ್ಯೋ ಎಂದು ಕೂಗುತ್ತ ಶೆಡ್ಡಿನಿಂದಲೇ ಸರಪಳಿ ಜಗ್ಗತೊಡಗಿತು. 
  7. [ಹಗಲು ಹೊತ್ತಿನಲ್ಲಿ ಸ್ಕೂಟರ್ ಹೆಡ್ ಲೈಟ್ ಉರಿಸಿದ್ದರೆ ಸಂಜ್ಞೆ ಮಾಡುವ ಹಿಂದಿನಿಂದ ಕೂಗಿ ಹೇಳುವ ಮೂಲಕ ಕಿರಿ ಕಿರಿ ಮಾಡುವವರ ಬಗ್ಗೆ] ಒಮ್ಮೆ ಬೇಕೆಂದೇ ದೀಪ ಹಾಕಿಕೊಂಡು ಪೇಟೆಯ ಎಲ್ಲಾ ಬೀದಿಗಳಲ್ಲೂ ತಿರುಗಾಡಿ ಊರಿಗೆ ಊರೇ ಹುಚ್ಚು ಹಿಡಿದಂತೆ ಚಪ್ಪಾಳೆ ತಟ್ಟುತ್ತಾ ಕಿರಿಚಾಡುವುದನ್ನು ನೋಡಬೇಕೆಂದಿದ್ದೇನೆ. 
  8. [‘ನೀವು ಬರಹಗಾರರಾಗಿರುವುದರಿಂದ ನನ್ನ ಮಗುವಿಗೆ ಒಳ್ಳೆಯ ಒಂದು ಹೆಸರನ್ನು ಸೂಚಿಸಬೇಕು’ - ಎಂದು ಪೀಡಿಸುತ್ತಿದ್ದವನ ಬಗ್ಗೆ] ಹುಟ್ಟಿಸಿದವರೇ ಹೆಸರಿಡಬೇಕು. ಇಲ್ಲದಿದ್ದರೆ ಹೆಸರು ಯಾರ‍್ದೋ ಬಸರು ಯಾರ‍್ದೋ ಅಂತ ಗಾದೆ ಮಾತಾಗುತ್ತೆ. ಕತೆ ಬರೆಯುವವರ ನಾಲಗೆ ತುದಿಯಲ್ಲಿ ಇವರು ಹುಟ್ಟಿಸಿದ ಮಕ್ಕಳ ಹೆಸರೆಲ್ಲಾ ಇರುತ್ತ? 
  9. ಜಿ.ಎಚ್.ನಾಯಕರನ್ನೂ ಟಿ.ಪಿ.ಅಶೋಕರನ್ನೂ ಇಲ್ಲಿಗೆ ಸೀನಿಯಾರಿಟಿ ಪ್ರಕಾರ ಸರ್ಕಲ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರಾಗಿ ನೇಮಿಸಿ ಬ್ರಹ್ಮಸೃಷ್ಟಿಯ ಈ ಪಾತ್ರಗಳಿಗೆಲ್ಲ ಚೆನ್ನಾಗಿ ಚರ್ಚಿಸಿ ಸರಿಯಾಗಿ ವರ್ತಿಸುವಂತೆ ಹೇಳಿಕೊಡದಿದ್ದರೆ ಇಲ್ಲಿ ತುಂಬಿ ತುಳುಕುತ್ತಿರುವ ಅಸಂಬದ್ಧ ಪಾತ್ರಗಳೆಲ್ಲಾ ಕತೆ ಕಾದಂಬರಿಗಳೊಳಗೆ ನುಸುಳುವುದನ್ನು ಒಬ್ಬ ಲೇಖಕನಿಂದ ತಡೆಯಲು ಸಾಧ್ಯವೇ? 
  10. [‘ಹೆಂಡತಿಗೆ ಗೊತ್ತಿಲ್ಲದಂತೆ ಗಂಡ, ಗಂಡನಿಗೆ ಗೊತ್ತಿಲ್ಲದಂತೆ ಹೆಂಡತಿ ಎಷ್ಟೋ ಸಾರಿ ಉಗ್ರಗಾಮಿಯಾಗಿರೋ ಸಂದರ್ಭಗಳಿದ್ದಾವೆ’ - ಎಂದ ಪೋಲಿಸು ಅಧಿಕಾರಿಯ ಮಾತಿನ ಬಗ್ಗೆ] ಇನ್ನು ಮುಂದೆ ಹೆಂಡತಿ ಮಕ್ಕಳ ಬಗ್ಗೆ ಕೊಂಚ ನಿಗಾ ಇಡುವುದು ಒಳ್ಳೆಯದೆಂದು ಯೋಚಿಸಿದೆ. ಹೆಂಗಸರು ತಾಳಿ ಬದಲು ಸಯನೈಡ್ ಗುಳಿಗೆ ಕುತ್ತಿಗೆಗೆ ಕೊಟ್ಟಿಕೊಂಡು ಓಡಾಡುವುದನ್ನು ಕಲ್ಪಿಸಿಕೊಂಡು ಭಯವಾಯ್ತು.
ಮತ್ತಷ್ಟು ತೇಜಸ್ವಿ ಸಂಬಂಧಿತ ಲೇಖನಗಳು
ತೇಜಸ್ವಿ ನೆನಪು : ಮರೆತಿದ್ದರೆ ತಾನೆ! http://nandondmatu.blogspot.com/2009/04/blog-post.html

ಮತ್ತೆ ಮತ್ತೆ ತೇಜಸ್ವಿ http://nandondmatu.blogspot.com/2009/04/blog-post_16.html

ತೇಜಸ್ವಿ ಮಾತು ಮೂರು ಅರ್ಥ ನೂರಾರು http://nandondmatu.blogspot.com/2008/12/blog-post_10.html

T20=ತೇಜಸ್ವಿ ಟ್ವೆಂಟಿ : ಸಹಜಕೃಷಿ http://nandondmatu.blogspot.com/2009/09/t20.html

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್ http://nandondmatu.blogspot.com/2009/12/t20.html

T20 = ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್ http://nandondmatu.blogspot.com/2010/02/t20.html

Monday, March 22, 2010

ಲೋಹಿಯಾ - 100

ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.’
ಈ ಸಾಲುಗಳನ್ನು ಮೊದಲ ಬಾರಿ ಓದಿದ ಮೇಲೆ ನನ್ನಲ್ಲಿ ಮೊದಲಿಗೇ ಎದ್ದ ಪ್ರಶ್ನೆ ‘ಈ ಲೋಹಿಯಾ ಯಾರು?’ ಎಂಬುದು. ಹೀಗೆ ಲೋಹಿಯಾರನ್ನು ಹುಡುಕುತ್ತಾ ಅವರ ಬಗ್ಗೆ ಕನ್ನಡದಲ್ಲಿ ದೊರೆಯುತ್ತಿದ್ದ ಸಣ್ಣಪುಟ್ಟ ಮಾಹಿತಿಗಳನ್ನು ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋದ ನನಗೆ, ಬಹುಶಃ ಭಾರತಮಟ್ಟದ ನಾಯಕರೊಬ್ಬರು ಕರ್ನಾಟಕದ ಮೇಲೆ ಇಷ್ಟೊಂದು ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪ್ರಭಾವ ಬೀರಿದ್ದು ಲೋಹಿಯಾ ಒಬ್ಬರೆ ಅನಿಸಿತ್ತು. ಆಗ ತೇಜಸ್ವಿ ಮತ್ತು ಎಂ.ಡಿ.ಎನ್. ಅನುವಾದಿಸಿರುವ ಲೋಹಿಯಾ ಎನ್ನುವ ಪುಸ್ತಕ ನನಗೆ ಲೋಹಿಯಾ ಅವರ ಚಿಂತನ ಜಗತ್ತನ್ನು ತೆರೆದಿಟ್ಟಿತ್ತು. ಮುಂದೆ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದ ಐದು ಸಂಪುಟಗಳು ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡದಲ್ಲಿ ಓದುವಂತೆ ಮಾಡಿ ಲೋಹಿಯಾ ಅವರನ್ನು ಇನ್ನಷ್ಟು ಹತ್ತಿರ ಮಾಡಿಬಿಟ್ಟವು.

 ೧೯೧೦ ಮಾರ್ಚ್ ೨೩ ರಂದು ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್‌ಪುರದಲ್ಲಿ ಜನಿಸಿದ ಲೋಹಿಯಾ ಅಕ್ಬರ್‌ಪುರ, ಮುಂಬಯಿ, ಕಲ್ಕತ್ತಾ ಮತ್ತು ಜರ್ಮನ್ ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಜೀವನದಿಂದಲೂ ಹೋರಾಟದ ಕೆಚ್ಚು ರೂಢಿಸಿಕೊಂಡಿದ್ದ ಲೋಹಿಯಾ ಅವರು ಜಿನೀವಾದಲ್ಲಿ ನಡೆದ ‘ಲೀಗ್ ಆಫ್ ನೇಷನ್ಸ್’ ಸಭೆಯಲ್ಲಿ ಬಿಕನೇರಿನ ಮಹಾರಾಜ ಬಾರತದ ಪ್ರತಿನಿಧಿಯಾಗಿ ಮಾತನಾಡಲು ಎದ್ದು ನಿಂತಾಗ ಸಿಳ್ಳೆ ಹೊಡೆದಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದರೂ, ಗಾಂಧೀಜಿಯವರೂ ಸೇರಿದಂತೆ ನೆಹರೂ, ಸುಭಾಷ್, ಸರ್ದಾರ್ ಮೊದಲಾದವರೊಂದಿಗೆ ತಾತ್ವಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಎಲ್ಲರೊಂದಿಗೂ ನಿರ್ಭಯರಾಗಿ ಮಾತನಾಡಿ ತಮಗನ್ನಿಸಿದ್ದನ್ನು ಹೇಳುತ್ತಿದ್ದರು.

ಸ್ವಾತಂತ್ರೋತ್ತರ ಭಾರತದ ಆಡಳಿತವರ್ಗಕ್ಕೆ ಎಚ್ಚರಿಕೆಯ ಗಂಟೆಯಂತೆ ಲೋಹಿಯಾ ಇದ್ದರು. ಹತ್ತಕ್ಕೂ ಹೆಚ್ಚು ಸಲ ಅವರನ್ನು ಜೈಲಿಗಟ್ಟಲಾಗಿತ್ತು ಎಂಬುದನ್ನು ಮನಗಂಡರೆ ಅವರ ಹೋರಾಟದ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು. ದೂರದ ಅಮೆರಿಕೆಯ ಮಿಸಿಸಿಪ್ಪಿಯಲ್ಲಿ ಹೋಟೆಲ್ ಪ್ರವೇಶದಲ್ಲಿದ್ದ ತಾರತಮ್ಯವನ್ನು ವಿರೋಧಿಸಿ (ಅಂದು ನೆಹರು ನಿಧನರಾದ ದಿನ) ಪ್ರತಿಭಟನೆ ನೆಡೆಸಿದಂತೆ ಕರ್ನಾಟಕದ ಕಾಗೋಡು ಎಂಬ ಕುಗ್ರಾಮದ ರೈತರ ಪರವಾಗಿಯೂ ಧ್ವನಿಯೆತ್ತಿ ಹೋರಾಟಕ್ಕೆ ಧುಮುಕಿದ್ದರು. ಮೈನ್ ಕೈಂಡ್ ಪತ್ರಿಕೆಯ ಸಂಪಾದಕರಾಗಿದ್ದರು. ನೆಹರೂ ವಿರುದ್ದ ಫೂಲ್‌ಪುರದಿಂದ ಚುನಾವಣೆಗೆ ನಿಲ್ಲುವ ಮೂಲಕ ವ್ಯಕ್ತಿಪೂಜೆಯನ್ನು ವಿರೋಧಿಸಿದರು. ೧೯೬೩ ರಲ್ಲಿ ಫರೂಕಬಾದ್ ಕ್ಷೇತ್ರದಿಂದ ೧೯೬೭ರಲ್ಲಿ ಕನೂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆಗೆ ಪ್ರವೇಶ ಪಡೆದು ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಅವರು ನಾಯಕರುಗಳ ನಾಯಕ. ತಾವು ಹೋದಲ್ಲೆಲ್ಲಾ ನಾಯಕರುಗಳನ್ನು ರೂಪಿಸುತ್ತಾರೆ. ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲ, ಗಣಪತಿಯಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಮೊದಲಾದವರು ಕರ್ನಾಟಕದಿಂದ ಮೂಡಿಬಂದ ಲೋಹಿಯಾ ಅನುಯಾಯಿಗಳು. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಕಡಿದಾಳ ಶಾಮಣ್ಣ, ಪ್ರೊ.ರಾಮದಾಸ್, ಎಂ.ಡಿ.ನಂಜುಂಡಸ್ವಾಮಿ, ದೇವನೂರು ಮಹಾದೇವ, ರವಿವರ್ಮಕುಮಾರ್, ಅಗ್ರಹಾರ ಕೃಷ್ಣಮೂರ್ತಿ, ರೈತಸಂಘದ ಸುಂದರೇಶ್, ನಟರಾಜ್ ಹುಳಿಯಾರ್ ಮೊದಲಾದವರು ಲೋಹಿಯಾ ಅವರ ಪ್ರಭಾವ ಪ್ರೇರಣಗಳಿಗೆ ಒಳಗಾಗಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ಮತ್ತು ವಿಶ್ವಮಾನವ ಸಂದೇಶ ಇವುಗಳ ಬಗ್ಗೆ ಕೇಳಿ, ಅವರನ್ನು ಬೇಟಿಯಾಗಿ ನಿಮ್ಮಂತವರು ರಾಜಕೀಯಕ್ಕೆ ಬರಬೇಕು, ಬನ್ನಿ ಎಂದು ಆಹ್ವಾನ ನೀಡಿ ಸಂಚಲನವನ್ನೇ ಸೃಷ್ಟಿಸುವ ಲೋಹಿಯಾ ಒಂದು ರೀತಿಯಲ್ಲಿ ದರ್ಶನವಾದಿ. ಕರ್ನಾಟಕದ ಮಟ್ಟಿಗೆ ಲೋಹಿಯಾವಾದ ರೈತಸಂಘದ ಚಳುವಳಿಗೆ ಹುರುಪು ಹುಮ್ಮಸ್ಸು ನೀಡಿದ್ದು ಈಗ ಇತಿಹಾಸ.

 ‘ನನ್ನ ಬಳಿ ನನ್ನದೇಂಬುದೇನೂ ಇಲ್ಲ. ಭಾರತದ ಬಡವರು ಹಾಗೂ ಶ್ರೀಸಾಮನ್ಯರು ನನ್ನನ್ನು ತಮ್ಮವನು ಅಂದುಕೊಂಡಿರುವ ಒಂದು ಭಾವನೆಯನ್ನು ಬಿಟ್ಟರೆ ನನ್ನ ಬಳಿ ಇನ್ನೇನೂ ಉಳಿದಿಲ್ಲ’ ಎಂಬುದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ. ಅವರು ತೀರಿಕೊಂಡಾಗ (೧೨.೦೨೧೯೬೭) ಯಾವ ಆಸ್ತಿಪಾಸ್ತಿಯೂ ಇರಲಿಲ್ಲ; ಕುಟುಂಬವೂ ಇರಲಿಲ್ಲ. ಅವರು ಬಿಟ್ಟು ಹೋದದ್ದು ಕೇವಲ ತಮ್ಮ ಆದರ್ಶಗಳನ್ನು ಮಾತ್ರ!
ಇಂತಹ ಲೋಹಿಯಾ ಬದುಕಿದ್ದು ಕೇವಲ ೫೭ ವರ್ಷಗಳು ಮಾತ್ರ. ಅವರು ಇದ್ದಿದ್ದರೆ ಇಂದಿಗೆ (೨೩.೦೩.೨೦೧೦) ನೂರು ವರ್ಷ ತುಂಬುತ್ತಿತ್ತು. ಅವರ ನೆನಪಲ್ಲಿ ಅವರದೇ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
  • ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜ ದಬ್ಬಾಳಿಕೆಯ ಎದುರು ಮಂಡಿಯೂರಿ ಕುಳಿತು ಬಿಡಬೇಕೇ ಅಥವಾ ಅದನ್ನು ಪ್ರತಿಭಟಿಸಬೇಕೆ? (೧೯೪೨ ಆಗಸ್ಟ್ ೧೯೪೪ ಮೇ ವರೆಗೆ ಭೂಗತರಾಗಿದ್ದ ಲೋಹಿಯಾ ಅವರು ಅಂದಿನ ಭಾರತದ ವೈಸರಾಯ್ ಲಾರ್ಡ್ ಲಿನ್‌ಲಿಥ್‌ಗೊ ಅವರಿಗೆ ೧೯೪೨ರಲ್ಲಿ ಬರೆದ ಪತ್ರ. ಸ್ವಾತಂತ್ರ್ಯದ ಅಂತರ್ಜಲ ಹೆಸರಿನಲ್ಲಿ ಪ್ರಕಟವಾಗಿದೆ.)
  • ನಾನು ಯಾವಾಗಲೂ ಸರಿಯಾಗಿ ತಿಳಿದುಕೊಂಡೇ ನನ್ನ ಕರ್ತವ್ಯ ಮಾಡುತ್ತಿರುತ್ತೇನೆ. ಗಂಆಧೀಜಿಯವರ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನದೆಂಬುದು ನಿಶ್ಚಿತ. ಆದರೆ ಪಕ್ಷದ ಮೂಲಕ ಸ್ವೀಕೃತವಾದ ಗೊತ್ತುವಳಿಗಿಂತ (ಗಾಂಧೀಜಿಯವರು ಮಂಡಿಸಿದ್ದ ಗುತ್ತುವಳಿಯಲ್ಲಿದ್ದ ‘ಆಫ್ರಿಕಾದಲ್ಲಿದ್ದ ಬ್ರಿಟೀಷ್ ಭಾರತೀಯರು’ ಎಂಬ ಉಲ್ಲೇಖದಿಂದ ಬ್ರಿಟಿಷ್ ಪದವನ್ನು ಕೈಬಿಡುವಂತೆ ಲೋಹಿಯಾ ಸೂಚಿಸಿದ್ದ ತಿದ್ದುಪಡಿ) ಗಾಂಧೀಜಿಯವರ ಸಂಕಲ್ಪ ಶಕ್ತಿ ಇನ್ನೂ ಹೆಚ್ಚು ದೊಡ್ಡದಾಗಿತ್ತು. (ಸಭೆಯ ನಂತರ ಸುಭಾಷ್ಚಂದ್ರಬೋಸ್ ಅವರು ‘ನೀವೇನು ತಿಳಿದಿರಿ, ಮಹಾತ್ಮಾ ಗಾಂಧಿಯವರು ಶಕ್ತಿವಂತರೋ? ಅಥವಾ ಕಾಂಗ್ರೆಸ್ ಪಕ್ಷವೋ?’ ಎಂಬ ಪ್ರಶ್ನೆಗೆ ಉತ್ತರವಾಗಿ ಲೋಹಿಯಾ ಹೇಳಿದ ಮಾತುಗಳಿವು.)
  • ಆ ದಿನ ನಾನು ನಿಜವಾದ ಅರ್ಥದಲ್ಲಿ ಅನಾಥನಾದೆನೆಂದು ಮೊದಲ ಸಲ ನನಗೆ ಅನ್ನಿಸಿತು. ದೇಶದ ರಕ್ಷಕ ಕಣ್ಣೆದುರೇ ಸತ್ತು ಬಿದ್ದಿದ್ದ, ಹಾಗೂ ದೇಶದ ದೊರೆಗಳೆನಿಸಿಕೊಂಡವರು ಕಣ್ಣೀರು ಹರಿಸುತ್ತಿದ್ದರು. ಗಂಆಧೀಜಿಯವರ ನೆಚ್ಚಿನ ಶಿಷ್ಯರಾದ ನೆಹರೂ, ಪಟೇಲರು ಅಧಿಕಾರದ ಗದ್ದುಗೆಯಲ್ಲಿರುವಾಗಲೇ ಗಾಂಧೀಜಿಯವರ ಹತ್ಯೆಯಾಗಿತ್ತು. ‘ನೀವು ನಡು ನೀರಿನಲ್ಲಿ ನಾಡಿನ ಜನತೆಯನ್ನು ಕೈಬಿಟ್ಟು ಹೋದದ್ದೇಕೆ? ಹೀಗೇಕೆ ಮೋಸ ಮಾಡಿದಿರಿ. ಬಾಪೂ’ ಎಂದು ಬಾಪೂ ಅವರನ್ನು ಕೇಳಬೇಕೆನ್ನಿಸಿತು. ಗಾಂಧೀಜಿ ಸದಾಕಾಲ ಜೀವಿಸಿರುತ್ತಾರೆ ಎಂದು ನಾನು ಮೂರ್ಖನಂತೆ ಭಾವಿಸಿಕೊಂಡಿದ್ದೆ. (ಗಾಂಧಿ ಸತ್ತ ದಿನ)
  • ಹೆಂಗಸಿಗೂ ನಾಲ್ವರು ಗಂಡಂದಿರನ್ನು ಹೊಂದುವ ಅಧಿಕಾರವನ್ನು ಕೊಡದಿರುವ ಧರ್ಮ, ಅದು ಯಾವ ಧರ್ಮವೇ ಆಗಿರಲಿ, ಗಂಡಿಗೆ ನಾಲ್ವರು ಹೆಂಗಸರನ್ನು ಹೊಂದುವ ಅಧಿಕಾರ ನೀಡುವುದನ್ನು ನಾಣು ಒಪ್ಪುವುದಿಲ್ಲ. (ದ್ರೌಪದಿಯೋ? ಸಾವಿತ್ರಿಯೋ? ಎಂಬ ಲೇಖನದಲ್ಲಿ)
  • ರಾಮ, ಕೃಷ್ಣ, ಶಿವ - ಈ ಮೂವರು ಇಂಡಿಆಯದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ಮೂವರೂ ತಂತಮ್ಮದೇ ಹಾದಿಯುಳ್ಳವರು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ. ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ. ಶಿವನದಾದರೋ ಪ್ರಮಾಣಾತೀತ ವ್ಯಕ್ತಿತ್ವದಲ್ಲಿ ಪೂಣ್ತೆ. ಇವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಡಿಮೆ ಎಂಬ ಮಾತೇ ಇಲ್ಲ. ಪೂರ್ಣತೆಗೆ ಹೆಚ್ಚು ಕಮ್ಮಿಯ ಮಾತೆಲ್ಲಿ? (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
  • ಸೀಮಿತ ವ್ಯಕ್ತಿತ್ವ ನಿಯಮಗಳ ವೃತ್ತದಲ್ಲೇ ತಿರುಗುತ್ತದೆ. ಸಮೃದ್ಧ ವ್ಯಕ್ತಿತ್ವ ಮಾತ್ರ ತನಗೆ ಇಚ್ಛೆಯಿರುವ ಪರ‍್ಯಂತ ನಿಯಮಗಳನ್ನೂ ಘಟನೆಗಳನ್ನೂ ಮನ್ನಿಸುತ್ತದೆ. ಅದು ತನಗೆ ಕಂಟಕವಾಯಿತೆಂದರೆ ತಕ್ಷಣದಲ್ಲೇ ಅದನ್ನು ಧಿಕ್ಕರಿಸಿಬಿಡುತ್ತದೆ. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
  • ರಾಮ ಸೀಮಿತನೂ ಆಗಿ ಅಲ್ಪನೂ ಆಗಿ, ಕೃಷ್ಣ ಸಮೃದ್ಧನೂ ಆಗಿ ಕಾಮುಕನೂ ಆಗಿ, ಶಿವ ಗಾತ್ರಾತೀತನೂ ಆಗಿ ಕಾಲ್ಪನಿಕನೂ ಆಗಿ ಇಬ್ಬಂದಿ ಬದುಕು ಬಾಳುತ್ತಾರೆ. ಇದಕ್ಕೆ ಒಂದು ಪರಿಹಾರ ಸೂಚಿಸುವ ಮೂರ್ಖತನಕ್ಕೆ ಹೋಗದೆ ಇಷ್ಟೇ ಪ್ರಾರ್ಥಿಸುತ್ತೇನೆ. ‘ಓ ತಾಯಿ ಭಾರತಿ, ನಮಗೆ ಶಿವನ ಮನಸ್ಸನ್ನು ಕೃಷ್ಣನ ಹೃದಯವನ್ನು ರಾಮನ ಕಾರ‍್ಯಪ್ರಪಂಚವನ್ನು ಕೊಡು; ಪ್ರಮಾಣಾತೀತವಾದ ಮನಸ್ಸು, ಸಮೃದ್ಧ ಹೃದ, ಆದರೆ ಸೀಮಿತವಾದ ಬದುಕು ಇವುಗಳಿಂದ ನಮ್ಮನ್ನು ನಿರ್ಮಿಸು. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
  • ಸಾರ್ವಜನಿಕವಾಗಿ ಒಬ್ಬ ಇನ್ನೊಬ್ಬನ ಕಾಲು ತೊಳೆಯುವುದು ಅಸಹ್ಯಕರವಾದದ್ದು. (ಕಾಶಿಯಲ್ಲಿ ಭಾರತದ ರಾಷ್ಟ್ರಪತಿಗಳು ಇನ್ನೂರು ಜನ ಬ್ರಾಹ್ಮಣರ ಕಾಲು ತೊಳೆದಿದ್ದರ ಬಗ್ಗೆ)
  • ಆ ಅನಾಗರಿಕ ರಾಕ್ಷಸ ಪಂಧ್ಯದಲ್ಲಿ ಮನುಷ್ಯನಂತೆ ವರ್ತಿಸಿದ ಏಕೈಕ ವ್ಯಕ್ತಿ ಈತ (ರಾಷ್ಟ್ರಪತಿಗಳಿಂದ ಕಾಲು ತೊಳೆಸಿಕೊಳ್ಳಲು ನಿಯಮಿತರಾಗಿದ್ದ ಇನ್ನೂರು ಜನರಲ್ಲಿ, ಆ ಕ್ರಿಯೆಯಿಂದ ಹಿಂದೆ ಸರಿದ ಏಕೈಕ ಬ್ರಾಹ್ಮಣನ ಬಗ್ಗೆ)
  • ಇಂಗ್ಲಿಷ್ ಭಾಷೆಯು ಭಾರತಕ್ಕೆ ಅಪಾಯ ಮಾಡುತ್ತಿರುವುದಕ್ಕೆ ಅದು ವಿದೇಶಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಸಂದರ್ಭದಲ್ಲಿ ಅದು ಯಜಮಾನಿಕೆಯ ಭಾಷೆಯಾಗಿರುವುದೇ ಪ್ರಮುಖ ಕಾರಣ.
  • ಬೇರೆ ಬೇರೆ ಕ್ಷೇಥ್ರಗಳಲ್ಲಿದ್ದಂತೆ ಆರ್ಧಯಾತ್ಮಿಕ ಸಮಾನತೆಯಲ್ಲಿ ಮುಂಚೂಣಿಯಲ್ಲಿರುವ ಮಹಾನ್ ಮಹಿಳೆಯೊಬ್ಬಳಿದ್ದಾಳೆ. ಈಕೆ ಕಥೆಗಳಲ್ಲಿ ಬರುವ ಹೆಂಗಸಲ್ಲ. ಎಂಟನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿದ್ದಳು. ಅವಳೇ ಅಕ್ಕಮಹಾದೇವಿ. ವೈರಾಗ್ಯ ಸಾಧು ಸ್ವಭಾವ ಮತ್ತು ದರ್ಶನ ಇತ್ಯಾದಿಗಳಲ್ಲಿ ಗಂಡಸು ಕೊನೆಯ ಎತ್ತರದ ತನಕ ತಲಪಿ ವಿರಕ್ತನಾಗುವಂತೆ, ಹೆಣ್ಣಾದ ತಾನೂ ಆ ಎತ್ತರಕ್ಕೆ ಯಾಕೆ ಏರಲು ಸಾಧ್ಯವಾಗುವುದಿಲ್ಲ ಎಂದು ಅವಳು ಪ್ರಶ್ನಿಸಿದ್ದಳು. (ದ್ರೌಪದಿಯೋ? ಸಾವಿತ್ರಿಯೋ? ಲೇಕನದಿಂದ)
  • ಹಿಂದೂ ಮುಸಲ್ಮಾನಿರಿಬ್ಬರೂ ಬದಲಾಗಬೇಕಿದೆ. ಅದೆಷ್ಟು ಜನ ಹಿಂದೂಗಳು ಶೇರಶಹನನ್ನು ತಮ್ಮ ಪೂರ್ವಜ ಎಂದು ಪರಿಗಣಿಸುತ್ತಾರೆ. ಅದೆಷ್ಟು ಜನ ಮುಸಲ್ಮಾನರು ಗಜನಿ ಗೋರಿ ಸುಲಿಗೆಕೋರರಾಗಿದ್ದರು ಎಂದು ಹೇಳಬಲ್ಲರು? (ಹಿಂದೂ ಮುಸ್ಲಿಂ ಎಂಬ ಲೇಖನದಿಂದ)
  • ಮಹಾತ್ಮನೊಬ್ಬ ಅರ್ಧಶತಮಾನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಜೀವನಕ್ಕೆ ಸಂಬಂಧಪಟ್ಟಿದ್ದರೆ ಪರಸ್ಪರ ವಿರೋಧವಾಗಿ ಕಣಬಲ್ಲ ಹೇಳಿಕೆಗಳನ್ನು ಕೊಟ್ಟಿರುತ್ತಾನೆ. ಮಹಾತ್ಮಗಾಂಧಿ ತಮ್ಮ ಅಪೂರ್ವವಾದ ಅಂತರ್‌ದೃಷ್ಟಿಯನ್ನೂ ಮೀರಿ, ಪರಸ್ಪರ ವಿರೋಧವೆಂಬತೆ ಕಾಣುವ ಹಲವು ಹೇಳಿಕೆಗಳನ್ನು ಬ್ರಿಟಿಷ್ ಸಾಮ್ರಜ್ಯದ ಮೇಲೂ, ಜಾತಿಪದ್ಧತಿಯ ಮೇಲೂ, ಬಂಡವಾಳ ಹಾಗೂ ಕೆಲಸಗಾರನ ಸಂಬಂಧದ ಮೇಲೂ ನೀಡಿದ್ದಾರೆ. (ಗಾಂಧಿವಾದ ಮತ್ತು ಸಮಾಜವಾದ ಲೇಖನದಿಂದ)

Monday, March 08, 2010

‘ತ್ರಿಪದಿ’ಯಲ್ಲಿ ತ್ರಿವಿಧ

ತ್ರಿಪದಿ ಎಂಬುದು ಹೆಸರೇ ಸೂಚಿಸುವಂತೆ ಮೂರು ಪಾದಗಳುಳ್ಳ ಪದ್ಯ. ಇದನ್ನು ತಿಪದಿ, ತಿವದಿ, ತ್ರಿವುಡೆ, ತ್ರಿಪದಿಕಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಬೇಂದ್ರೆಯವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಇವುಗಳು ಅಚ್ಚಗನ್ನಡದ ಮಟ್ಟುಗಳು. ಜಾನಪದ ಸಾಹಿತ್ಯದಲ್ಲಿ ಇವುಗಳ ವಿರಾಟ್‌ಸ್ವರೂಪವನ್ನು ಕಂಡಾಗ ಇವುಗಳ ಇತಿಹಾಸವನ್ನು ನಿಖರವಾಗಿ ಗುರುತಿಸುವುದು ಕಷ್ಟವೆನ್ನಿಸುತ್ತದೆ. ಶಾಸನಗಳಲ್ಲಿ ಆಲ್ಲಲ್ಲಿ ಕಾಣಿಸಿಕೊಳ್ಳುತ್ತಾ, ಪಂಪ ಪೊನ್ನರ ಕೃತಿಗಳಲ್ಲಿ ಇಣುಕಿ, ಮುಂದಿನ ಕವಿಕೃತಿಗಳಲ್ಲಿ ಕಾಣಿಸಿಕೊಂಡು ಸರ್ವಜ್ಞನ ಕಾಲಕ್ಕೆ ಬೃಹತ್ತಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಂಡಿವೆ. ಕನ್ನಡ ಜಾನಪದ ಸಾಹಿತ್ಯಪ್ರಕಾರಗಳಲ್ಲಿ ತ್ರಿಪದಿಗಳದೇ ಸಿಂಹಪಾಲು.
ತ್ರಿಪದಿಗಳ ಲಕ್ಷಣಗಳನ್ನು ಈ ರೀತಿ ಸರಳೀಕರಿಸಬಹುದು.-
  • ಮೂರು ಪಾದಗಳು. 
  • ಹನ್ನೊಂದು ಗಣಗಳು. 
  • 6 ಮತ್ತು 10ನೇ ಗಣಗಳು ಬ್ರಹ್ಮಗಣಗಳು; ಉಳಿದವು ವಿಷ್ಣುಗಣಗಳು.  
  • ಕ್ವಚಿತ್ತಾಗಿ ವಿಷ್ಣುವಿಗೆ ಬದಲಾಗಿ ರುದ್ರ ಬರಬಹುದು. 
  • 1 ಮತ್ತು 2ನೇ ಪಾದದಲ್ಲಿ ನಾಲ್ಕು ನಾಲ್ಕು ಗಣಗಳು ಬಂದರೆ, 3ನೇ ಪಾದದಲ್ಲಿ ಮೂರು ಗಣಗಳು ಬರುತ್ತವೆ.
ಅಂಶ ತ್ರಿಪದಿಗೆ ಬಾದಾಮಿ ಶಾಸನದ (ಏಳನೇ ಶತಮಾನ) ಒಂದು ತ್ರಿಪದಿಯನ್ನು ನೋಡಬಹುದು.
ವಿ      ವಿ        ವಿ      ವಿ
ಸಾಧುಗೆ/ಸಾಧುಮಾ/ಧುರ್ಯಂಗೆ/ಮಾಧುರ್ಯಂ
ವಿ      ಬ್ರ       ವಿ       ವಿ
ಬಾಧಿಪ್ಪ/ಕಲಿಗೆ/ ಕಲಿಯುಗ/ವಿಪರೀತನ್
ವಿ       ಬ್ರ      ವಿ
ಮಾಧವ/ನೀತನ್/ಪೆಱನಲ್ಲ
ತ್ರಿಪದಿಗಳಲ್ಲಿ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,-
ಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಮೊದಲ ಗಣವು ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ರು       ವಿ        ವಿ      ವಿ
ಹೇಸಿನಿನ್ನ / ಬದುಕೀಗೆ/ ಆಶೆ ನಾ/ ಮಾಡಿಲ್ಲ
ವಿ        ಬ್ರ        ವಿ      ವಿ
ರೇಸಿಮೆ/ ಉಡುವ /ದೊರಿನನ್ನ/ ರಾಯರ
ವಿ        ಬ್ರ      ವಿ
ಆಶೆಮಾ/ಡೇನ /ಅನುಗಾಲ//
ವಿಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಕೊನೆಯ ಗಣ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ವಿ        ವಿ       ವಿ      ವಿ
ಹಲ್ಲೀಗೆ/ ಹಲಪೂಡಿ /ಗಲ್ಲಾಕೆ /ಹರಿಷಾಣ
ವಿ       ಬ್ರ       ವಿ      ವಿ
ಗೊಲ್ಲರೋ/ಣ್ಯಾಗ/ ಬರುವೊಳು/ ಕಂದವ್ವ
ವಿ       ಬ್ರ      ರು
ನಲ್ಲ್ಯಾರ/ ಒಳಗ/ಕರಚೆಲುವಿ//
ಚಿತ್ರಲತೆ
ಮೊದಲ ಮತ್ತು ಕೊನೆಯ ಗಣಗಳೆರಡೂ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತವೆ.
ರು      ವಿ      ವಿ      ವಿ
ಚೆಲುವಗಾತಿ/ ಚೆನ್ನವ್ವ/ ಒಲವಲ್ಲೆ/ ಬೆಳೆದೋಳು
ವಿ       ಬ್ರ      ವಿ      ವಿ
ಒಲವಿಗೆ /ಮನಸ/ ಕೊಟ್ಟೋಳು/ ಚೆಲುವಮ್ಮ
ವಿ       ಬ್ರ      ರು
ಒಲವಲ್ಲೆ /ಚೆಲುವ /ಕಂಡವಳು/
ಆಂಶಿಕವಾಗಿ ಮಾತ್ರಾಗಣವಾಗಿ ಪರಿವರ್ತಿತವಾಗಿರುವ ತ್ರಿಪದಿಗಳೂ ಇವೆ. ಅದರ ಲಕ್ಷಣಗಳು, 6 ಮತ್ತು 10ನೇ ಗಣಗಳು ಬ್ರಹ್ಮ ಗಣಗಳಾಗೇ ಉಳಿದುಕೊಂಡು, ಉಳಿದ ಗಣಗಳು 5 ಮಾತ್ರೆಯ ಗಣಗಳಾಗಿವೆ. ಅಕ್ಕಮಹಾದೇವಿಯ ಯೋಗಾಂಗತ್ರಿವಿಧಿಯಲ್ಲಿ ಇಂತಹ ತ್ರಿಪದಿಗಳು ಸಿಗುತ್ತವೆ. ಪ್ರಾರಂಭದಿಂದ ಅಂಶಗಣಾತ್ಮಕವಾಗಿದ್ದು, ಸುಮಾರು 12ನೇ ಶತಮಾನದ ಹೊತ್ತಿಗೆ ಮಾತ್ರಾಗಣಾತ್ಮಕವಾಗುವ ಪ್ರಕ್ರಿಯೆಯನ್ನು ತೋರುತ್ತಿರುವುದು ಗೊತ್ತಾಗುತ್ತದೆ.
5       5       5     5
ಮಾಘಮಾ/ಸವುಪೋಗೆ/ಮೇಲೆಬಂ/ದಿತುಚೈತ್ರ
5       ಬ್ರ      5     5
ಬೇಗಮಾ/ಮರವು/ತಳಿರೇರೆ/ಅದಕಂಡು
5       ಬ್ರ       5
ಕೂಗಿಕರೆ/ಯಿತ್ತು/ಕಳಕಂಠ/
12ನೇ ಶತಮಾದಿಂದೀಚಿಗೆ ಮಾತ್ರಾತ್ರಿಪದಿಗಳು ಹೆಚ್ಚಾಗಿ ದೊರೆಯುತ್ತವೆ. 6 ಮತ್ತು 10ನೇ ಗಣಗಳು 3 ಮಾತ್ರೆಯ ಗಣಗಳಾಗಿದ್ದರೆ, ಉಳಿದವು 5 ಮಾತ್ರೆಯ ಗಣಗಳಾಗಿವೆ. ಒಟ್ಟು 51 ಮಾತ್ರೆಗಳು.
5        5       5      5
ಸಾಲವನು/ಕೊಂಬಾಗ/ಹಾಲೋಗ/ರುಂಡಂತೆ
5        3       5      5
ಸಾಲಿಗನು/ಬಂದು/ಎಳೆವಾಗ/ಕಿಬ್ಬದಿಯ
5        3      5
ಕೀಲುಮುರಿ/ದಂತೆ/ ಸರ್ವಜ್ಞ
6 ಮತ್ತು 10ನೇ ಗಣಗಳಲ್ಲಿ ಕ್ವಚಿತ್ತಾಗಿ 3 ಮಾತ್ರೆಯ ಬದಲು 4 ಮಾತ್ರೆಗಳು ಬರಬಹುದು. ಆಗ ಒಟ್ಟು ಮಾತ್ರೆಗಳು ೫೨/೫೩ ಆಗುತ್ತವೆ.
ಅಂಶಗಣ ಮತ್ತು ಮಾತ್ರಾಗಣಗಳೆರಡರ ಲಕ್ಷಣಗಳಿಗೂ ಹೊಂದುವ ತ್ರಿಪದಿಗಳೂ ಇವೆ.
ವಿ/5    ವಿ/5     ವಿ/5    ವಿ/5
ತೊಟ್ಟೀಲ/ಹೊತ್ಕೊಂಡು/ತೌರ್ಬಣ್ಣ/ಉಟ್ಕೊಂಡು
ವಿ/5    ಬ್ರ/3     ವಿ/5    ವಿ/5
ಅಪ್ಪಕೊ/ಟ್ಟೆಮ್ಮೆ/ಹೊಡ್ಕೊಂಡು/ತಂಗ್ಯಮ್ಮ
ವಿ/5   ಬ್ರ/3    ವಿ/5
ತಿಟ್ಹತ್ತಿ/ ತಿರುಗಿ/ನೋಡ್ಯಾಳು//

Monday, March 01, 2010

ಸರಸ್ವತೀ ಮಣಿಹಾರನಾದ ಪಂಪ ಮಹಾಕವಿ

ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ ವಾಗ್ವಿಳಾಸ ಸರಸ್ವತಿಯ ವಿಷಯದಲ್ಲಿಯೂ ಉದಾರವಾಗಿಯೇ ಇದೆ. ‘ಆದಿಪುರಾಣ’ ಕೃತಿರಚನೆಯ ಶಿಸ್ತಿನಲ್ಲೇ ಸರಸ್ವತಿಯು ನೆಲೆಯಾಗಿರುವುದನ್ನು ಕಾಣಬಹುದು. ಮೊದಲನೆಯ ಆಶ್ವಾಸವೊಂದನ್ನು ಉಳಿದು ಪ್ರತಿ ಆಶ್ವಾಸದ ಪ್ರಾರಂಭದ ಪದ್ಯದಲ್ಲಿ ತನ್ನ ಕಾವ್ಯದ ಮುಖ್ಯಪಾತ್ರಗಳಾದ ಮಹಾಬಲ, ಲಲಿತಾಂಗ, ವಜ್ರಜಂಘ, ಸುವಿಧಿ, ಪುರುದೇವ, ಶ್ರೀಪತಿ, ಆದಿನಾಥ, ಭರತ ಮೊದಲಾದವರನ್ನು ಸರಸ್ವತಿಗೆ ಮಣಿಹಾರವನ್ನಾಗಿಸಿದ್ದಾನೆ. ಸ್ವತಃ ತನ್ನನ್ನೇ ಮೂರು ಪದ್ಯಗಳಲ್ಲಿ ಸರಸ್ವತೀಮಣಿಹಾರನೆಂದು ಕರೆದುಕೊಳ್ಳುತ್ತಾನೆ. ಅದರಲ್ಲಿ ಒಂದು ಪದ್ಯವಂತೂ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.

ಅತಿಸುಭಗೆಗೆ ಸಂದಂ ಸರ

ಸ್ವತಿಗೀತನ ಲಲಿತಾವಾಗ್ವಿಳಾಸಮೆ ದಲಂ

ಕೃತಿಯವೊಲೆಸೆದಪುದು ಜಗ

ತ್ಪ್ರತೀತನೀತನೆ ಸರಸ್ವತೀ ಮಣಿಹಾರಂ

ಈತನ ಲಲಿತವಾದ ವಾಗ್ವಿಳಾಸ, ಅತಿಸುಭಗಳಾದ ಸರಸ್ವತಿಗೆ ವಿಶೇಷವಾದ ಅಲಂಕಾರವಾಗುತ್ತದೆ. ಜಗತ್ಪ್ರಸಿದ್ಧನಾದ ಪಂಪ ಸರಸ್ವತಿಯ ಕಂಠದ ಮಣಿಹಾರ. ‘ಆದಿಪುರಾಣ’ದ ಪ್ರಾರಂಭದಲ್ಲಿಯೇ ಬಂದಿರುವ ಸರಸ್ವತಿಯ ಸ್ತುತಿ ಜೈನ ಕಾವ್ಯಪ್ರಪಂಚಕ್ಕೆ ದಿಕ್ಸೂಚಿಯಾಗಿ, ಜೈನಪರಂಪರೆಯ ಸರಸ್ವತಿಯ ಪರಿಕಲ್ಪನೆಯನ್ನು ಒಂದು ಸೂತ್ರಬದ್ಧವಾಗಿಸಿದೆ.

ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಱದು ಪೆಣ್ಣರೂಪಮಂ

ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ

ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ

ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಿಯೆ ವಾಗ್ವಿಳಾಸಮಂ

‘ಪರಮಜಿನೇಂದ್ರವಾಣಿಯೇ ಸರಸ್ವತಿ, ಅದು ಬೇರೆಯಲ್ಲ. ಹೆಣ್ಣಿನ ರೂಪವನ್ನು ಧರಿಸಿ ನಿಂತಿಲ್ಲ. ಅಂತಹ ಜಿನವಾಣಿಯು ಭಾವಿಸಿ ಓದುವ ಕೇಳುವ ಪೂಜಿಸುವ ಆದರಿಸುವ ಭವ್ಯಕೋಟಿಗೆ (ಜಿನಭಕ್ತರಿಗೆ) ನಿರಂತರ ಸೌಖ್ಯವನ್ನು ಕೊಡುವುದು. ಅಂತಹ ಸರಸ್ವತಿಯು ನಮಗೆ ವಾಗ್ವಿಳಾಸವನ್ನು ಮಾಡಲಿ’ ಎಂದು ಬೇಡಿಕೊಳ್ಳುತ್ತಾನೆ. ನದಿಯಾಗಿ, ನದಿದೇವತೆಯಾಗಿ ಮೊದಮೊದಲು ಪ್ರಚಲಿತದಲ್ಲಿದ್ದ ಸರಸ್ವತಿಯು ವಾಗ್ದೇವತೆಯಾಗಿ, ವಿದ್ಯಾದೇವತೆಯಾಗಿ ನಂತರ ಹೆಚ್ಚು ಪ್ರಸಿದ್ಧಳಾಗಿದ್ದಾಳೆ. ವಾಗ್ದೇವತೆಯನ್ನು ಸ್ತ್ರೀರೂಪದಲ್ಲಿಯೇ ಆರಾಧಿಸುತ್ತಾ ಬಂದಿರುವವರಿಗೆ ಪಂಪನ ‘ಪರಮಜಿನೇಂದ್ರನವಾಣಿಯೆ ಸರಸ್ವತಿ, ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತಿರುವುದಲ್ಲ’ ಎಂಬ ಪರಿಕಲ್ಪನೆ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಜೈನ ಪರಿಕಲ್ಪನೆಯಲ್ಲಿ, ಜೈನವೇದವೇ ಸರಸ್ವತಿ. ಅವುಗಳು ಶ್ರೇಷ್ಠರಾದ ತೀರ್ಥಂಕರರ ವಾಣಿಯಲ್ಲದೆ ಬೇರೆಯಲ್ಲ. ಸಂಸ್ಕೃತ ‘ಮಹಾಪುರಾಣ’ದಲ್ಲಿ ಆದಿಜಿನನ ಮೊಗದಿಂದ ಉದಯಿಸಿದ ಮಾತೇ ಸರಸ್ವತಿಯಾಯಿತು ಎಂಬ ಪರಿಕಲ್ಪನೆಯಿದೆ. ಜಿನನು ರಾಗದ್ವೇಷದಿಂದ ಮುಕ್ತನಾದ ಸಿದ್ಧ. ಅವನು ಕಾವ್ಯವನ್ನಾಗಲಿ, ಶಾಸ್ತ್ರವನ್ನಾಗಲಿ ಸೃಷ್ಟಿಸುವುದಿಲ್ಲ. ಅವನು ಮಾತನಾಡಿದ್ದೆಲ್ಲ ಕಾವ್ಯವಾಗುತ್ತದೆ ಹಾಗೂ ಶಾಸ್ತ್ರವಾಗುತ್ತದೆ. ಜೈನರ ನಂಬಿಕೆಯಂತೆ ಆ ಶಾಸ್ತ್ರಗಳೇ ಸರಸ್ವತಿ. ವೈದಿಕ ಪರಂಪರೆಯಲ್ಲೂ ಸರಸ್ವತಿಯ ಸೃಷ್ಟಿಕರ್ತ ಬ್ರಹ್ಮನೇ ಆಗಿದ್ದಾನೆ. ಬ್ರಹ್ಮ ಸರಸ್ವತಿಯ ಸೃಷ್ಟಿಕರ್ತನಾದರೆ, ಕವಿಗಳು ಸರಸ್ವತಿಯ ರೂಪಗಳಾದ ಕಾವ್ಯಗಳ ಸೃಷ್ಟಿಕರ್ತರು. ಆದ್ದರಿಂದ ಕವಿಗಳು ಅಭಿನವ ಸೃಷ್ಟಿಕರ್ತರು.

ಸರಸ್ವತಿ ಎಂದರೆ ಹೆಣ್ಣರೂಪವನ್ನು ಧರಿಸಿದ ದೇವತೆ ಎಂಬ ಪೌರಾಣಿಕ ಕಲ್ಪನೆಯನ್ನು ನಿರಾಕರಿಸಿ, ಪಂಪನು ಜೈನಪರಂಪರೆಗೆ ಅನುಗುಣವಾಗಿ ಸರಸ್ವತಿಯನ್ನು ಪರಿಭಾವಿಸಿದ್ದಾನೆ. ಆದರೆ ವೈದಿಕ ಪಂರಂಪರೆಯಂತೆಯೇ ಜೈನರಲ್ಲಿಯೂ ಸರಸ್ವತಿಯು ವಾಗ್ದೇವತೆ; ವಿದ್ಯಾಧಿದೇವತೆಯೂ ಹೌದು. ಭಾವಿಸುವ, ಓದುವ, ಆಲಿಸುವ ಪೂಜಿಸುವ ಆದರಿಸುವವರಿಗೆ ನಿತ್ಯಸೌಖ್ಯವನ್ನು ಉಂಟುಮಾಡುವುದು ವಾಕ್. ಆ ವಾಕ್ಕಿಗೆ ದೇವತೆಯಾದ ಸರಸ್ವತಿಯು ಎಲ್ಲರಿಗೂ ವಾಗ್ವಿಳಾಸವನ್ನು ಮಾಡಲಿ ಎಂಬಲ್ಲಿ ಸರಸ್ವತಿಯನ್ನು ಕುರಿತಾದ ವೈದಿಕ ಪರಿಕಲ್ಪನೆ ಮುಂದುವರೆದಿದೆ.

‘ಪರಮಜಿನೇಂದ್ರವಾಣಿಯೆ ಸರಸ್ವತಿ, ಅವಳು ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತವಳಲ್ಲ’ ಎಂದು ಸಾರಿದ ಪಂಪ ತನ್ನ ಕಾವ್ಯಗಳಲ್ಲಿಯೇ ಸರಸ್ವತಿಗೆ ಹೆಣ್ಣಿನ ರೂಪವನ್ನು ತೊಡಿಸಿರುವುದುಂಟು. ‘ಅತಿಸುಭಗಗೆ ಸಂದ.......’ ಎಂಬ ಪದ್ಯದಲ್ಲಿ ಪಂಪ ಮಾಡಿಕೊಂಡಿರುವ ಆತ್ಮಶ್ಲಾಘನೆಯಲ್ಲಿ ಸರಸ್ವತಿಯು ಸ್ತ್ರೀರೂಪದಲ್ಲಿದ್ದಾಳೆ. ಆತನು ‘ತಾನೇ ಆಕೆಗೆ ಮಣಿಹಾರ’ ಎನ್ನುತ್ತಾನೆ. ಪ್ರತಿ ಅಧ್ಯಾಯದ ಮೊದಲ ಪದ್ಯದಿಂದಲೇ ಚಕ್ರವರ್ತಿಯಾದ ಭರತ, ಜಿನನಾದ ಆದಿನಾಥ ಮೊದಲಾದವರನ್ನೆಲ್ಲಾ ಸರಸ್ವತಿಯ ಕೊರಳಿನ ಮಣಿಹಾರವಾಗಿಸುತ್ತಾನೆ. ಹೀಗೇಕೆ? ಆದರೆ, ಆತನೆಲ್ಲೂ ‘ಸರಸ್ವತಿಯನ್ನು ಸ್ತ್ರೀರೂಪದಲ್ಲಿ ಚಿತ್ರಿಸುವುದಿಲ್ಲ’ ಎಂದು ಹೇಳಿಲ್ಲ. ‘ಹೆಣ್ಣರೂಪದಲ್ಲಿ ಸರಸ್ವತಿಯನ್ನು ಬಣ್ಣಿಸಲೇಬಾರದೆಂದು ಅವನೇನು ಹಟತೊಟ್ಟಿರಲಿಲ್ಲವೆಂದೂ, ಮೂಲಭೂತ ಅರ್ಥವನ್ನು ನಿರ್ವಚನ ಮಾಡಬೇಕೆಂದು ಬಯಸಿದ್ದನೆಂದೂ ತಿಳಿದುಕೊಳ್ಳಬಹುದು.’ ಕವಿ ಪ್ರತಿಮಾಪ್ರಿಯ ಮತ್ತು ಪ್ರಯೋಗಪ್ರಿಯ. ಕವಿ ಹೊಸಹೊಸತನ್ನು ಸೃಷ್ಟಿಸುವ ಅಭಿನವ ಸೃಷ್ಟಿಕರ್ತ ಎಂಬ ಮಾತಿಗೆ ಪಂಪನೇ ಸಾಕ್ಷಿ. ಪರಮಜಿನೇಂದ್ರವಾಣಿಯೆ ಸರಸ್ವತಿ ಎಂದು ಹೇಳಿದ ‘ಆದಿಪುರಾಣ’ದಲ್ಲಿಯೇ ಪಂಪ, ಸರಸ್ವತಿಯನ್ನು ವಾಗ್ವಧುವನ್ನಾಗಿಯೂ ಚಿತ್ರಿಸಿದ್ದಾನೆ. ‘ವಾಗ್ವಧೂಮುದ್ರೆಯೊಳ್ ಮುದ್ರಿಸಿ ನಿಂದತ್ತು ಆದಿತೀರ್ಥೇಶ್ವರ ಚರಿತದೊಳ್ ವಾಕ್ಯಮಾಣಿಕ್ಯಕೋಶಂ’ ಎನ್ನುತ್ತಾನೆ. ಆದಿತೀರ್ಥೇಶ್ವರ ಚರಿತ್ರೆಯಲ್ಲಿ ವಾಕ್ಯಗಳೆಂಬ ಮಾಣಿಕ್ಯಗಳ ಕೋಶಕ್ಕೆ ವಾಗ್ವಧೂ ಅಂದರೆ ಸರಸ್ವತಿಯೇ ಮುದ್ರೆಯೊತ್ತಿದ್ದಾಳಂತೆ! ಪಂಪನಿಗೆ ತನ್ನ ಕಾವ್ಯಗಳ ಶ್ರೇಷ್ಠತೆಯ ಬಗ್ಗೆ ಅಷ್ಟೊಂದು ವಿಶ್ವಾಸ.

ಪಂಪನು ತನ್ನ ‘ವಿಕ್ರಮಾರ್ಜುನವಿಜಯ’ ಕೃತಿಯಲ್ಲಿ,

ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾನಾವನುಮಿಲ್ಲೆನಲ್ ತದ

ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ

ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ

ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ

ಎಂದು ಪ್ರಾರ್ಥಿಸಿದ್ದಾನೆ. ಸರಸ್ವತಿಯು, ಅರಿಗ ಅಂದರೆ ಅರಿಕೇಸರಿಗೆ ನಿಷ್ಕಲ್ಮಷವಾದ ಬುದ್ಧಿಯನ್ನು ಕೊಡಲಿ ಎಂಬುದು ಕವಿಯ ಆಶಯ. ಆದರೆ ಆತ ಸರಸ್ವತಿಗೆ ಆರೋಪಿಸಿರುವ ಒಂದೊಂದು ಗುಣವೂ ವಿಚಾರಯೋಗ್ಯ. ವಾಙ್ಮಯಕ್ಕೆ ನಾಶವೆಂಬುದು ಒಂದಿನಿತೂ ಇಲ್ಲ. ಕೇಳಿದ ಮಾತ್ರಕ್ಕೇ ವಾಙ್ಮಯದ ಕೊನೆಯನ್ನು ತಿಳದವನು ಯಾವನೂ ಇಲ್ಲ. ವಾಙ್ಮಯ ಎಂಬುದು ತನಗೆ ತಾನೇ ಅಕ್ಷಯನಿಧಿ ಆಗಿರುವುದು. ಪ್ರೀತಿಯಿಂದ ಸೇವಿಸಿದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆನ್ನಿಸುವುದು ವಾಙ್ಮಯ. ಅಂತಹ ಸಮಸ್ತ ವಾಙ್ಮಯಕ್ಕೆ ಸರಸ್ವತಿಯು ತಾಯಿಯಾಗಿದ್ದಾಳೆ. ಒಬ್ಬ ವ್ಯಕ್ತಿ ಗಳಿಸಿದ ಆಸ್ತಿಯನ್ನು ಕಳೆದುಕೊಳ್ಳಬಹುದು. ಬೇರೆಯವರು ಕಿತ್ತುಕೊಳ್ಳಬಹುದು. ಅದು ತನ್ನಿಂದ ತಾನೇ ನಾಶವಾಗಬಹುದು. ಗಳಿಸಿದಾತನ ಮರಣಾನಂತರ ಅದು ಬೇರೆಯವರಿಗೆ ವರ್ಗವಾಗಬಹುದು. ಆದರೆ, ವಿದ್ಯೆ ಎಂಬ ಅಕ್ಷಯ ನಿಧಿ ಮಾತ್ರ ಮನುಷ್ಯ ತಾನು ಬದುಕಿರುವವರೆಗೂ ಕಳೆದುಕೊಳ್ಳಲಾರದ ಸಂಪತ್ತು. ಅದನ್ನು ಬೇರೆಯವರಿಗೆ ವರ್ಗಾಯಿಸಿದಷ್ಟೂ ಬೆಳೆಯುತ್ತಲೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಂತೆ ಮುಂದಿನ ತಲೆಮಾರಿಗೆ ಬಿಡಲಾಗುವುದಿಲ್ಲ. ಅಂತಹ ವಾಙ್ಮಯಕ್ಕೆ ಸರಸ್ವತಿಯು ‘ತಾಯಿ’ ಎಂಬ ಪರಿಕಲ್ಪನೆ ಪಂಪನದು. ‘ಅಂಬಿಕೆ ಸರಸ್ವತಿ’ ಎಂಬಲ್ಲಿ ತಾಯಿಯಂತೆ ಅವಳು ಪ್ರೇಮಮಯಿ. ಹೀಗೆ ಜಿನೇಂದ್ರವಾಣಿಯಾಗಿ ಕಾಣಿಸಿಕೊಂಡ ಸರಸ್ವತಿ, ಆದಿಪುರಾಣದಲ್ಲಿ ವಾಗ್ವಧು ಆಗಿ, ಪಂಪಭಾರತದಲ್ಲಿ ಅಂಬಿಕೆಯಾಗಿ ಪರಿಪೂರ್ಣತೆಯತ್ತ ಸಾಗುತ್ತಾಳೆ.

ಸುಮಾರು ಹತ್ತನೇ ಶತಮಾನದಲ್ಲಿಯೇ, ‘ಮಾನವಜಾತಿ ತಾನೊಂದೆ ವಲಂ’ ಎಂದು ಸಾರಿದ ಪಂಪ ಮಹಾನ್ ಮಾನವತಾವಾದಿ; ಒಬ್ಬ ಶ್ರೇಷ್ಠ ಕವಿ. ಅವನ ಕಾವ್ಯಗಳು ಈ ಲೋಕಕ್ಕೆ ಅಲಂಕಾರಪ್ರಾಯವಾಗಿರುವವು. ‘ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಪಂಪನ ವಾಗ್ವಿಲಾಸ’ ಶ್ರೇಷ್ಠ ತರಗತಿಯದ್ದು. ಅಂತೆಯೇ ಆತನ ಸರಸ್ವತೀ ದರ್ಶನವೂ ಸಹ.

Thursday, February 18, 2010

ಬೆಂಗಳೂರು ಸುತ್ತಮುತ್ತ ಜಮೀನು ಪಡೆಯುವುದು ಇಷ್ಟೊಂದು ಸುಲಭವೇ!? 'ಅಮ್ಮ'

ನೆನ್ನೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಸಂಜೆ ಪತ್ರಿಕೆಗಳಲ್ಲಿ ಮತ್ತು ಇಂದಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಒಂದು ಸುದ್ದಿ ಫೋಟೋ ಸಮೇತ ಪ್ರಕಟವಾಗಿದೆ. ‘ಅಮ್ಮ’ ರಾಯಚೂರಿನ ಬಳಿ ಡೊಂಗುಪುರದಲ್ಲಿ ಕಟ್ಟಿಸಿಕೊಟ್ಟಿರುವ 100 ಮನೆಗಳ ಬೀಗದ ಕೈಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ. ನೆರೆಪೀಡಿತರಿಗೆ ತತ್ತಕ್ಷಣವಾಗಿ ಮನೆಗಳ ಅವಶ್ಯಕತೆಯಿದ್ದು, ಅದನ್ನು ಆದಷ್ಟು ಭೇಗ ನೆರವೇರಿಸಿದ ‘ಅಮ್ಮ’ ಹಾಗೂ ಆ ಕಾರ್ಯಕ್ರಮಕ್ಕೆ ಅಲ್ಲಿಯವರೆಗೂ ಹೋಗಿ ಬಂದ ಮುಖ್ಯಂತ್ರಿಗಳನ್ನು ಮೊದಲು ಅಭಿನಂದಿಸೋಣ.

‘ಅಮ್ಮ’ ಈಗ ಕೇವಲ 100 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಮುಂದೆ ಇನ್ನೂ 600 ಮನೆಗಳನ್ನು ಕಟ್ಟಿಸಿಕೊಡುವವರಿದ್ದಾರಂತೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯಂತೆ ಸುಮಾರು ೨೫೦ ಚದುರ ಅಡಿಗಳಷ್ಟಿರುವ ಈ ಮನೆಗಳು ರೈತರ ಅನುಕೂಲಕ್ಕೆ ತಕ್ಕನಾಗಿ ಇವೆಯೇ ಇಲ್ಲವೇ ಎಂಬುದು ಬೇರೆ ಪ್ರಶ್ನೆ. ಆದರೆ ಒಂದು ಮನೆಗೆ ಸುಮಾರು 1 ಲಕ್ಷದ 45 ಸಾವಿರ ರೂಪಾಯಿಗಳನ್ನು ಖರ‍್ಚು ಮಾಡಲಾಗಿದೆಯಂತೆ. ಅಂದರೆ 100 ಮನೆಗಳಿಗೆ ಸುಮಾರು 1 ಕೋಟಿ 45 ಲಕ್ಷ ರೂಪಾಯಿಗಳನ್ನು ‘ಅಮ್ಮ’ ಆಶ್ರಮ ಖರ್ಚು ಮಾಡಿದೆ.

ಇನ್ನು ಮೊದಲು ಮಾತು ಕೊಟ್ಟಿದ್ದಂತೆ 700 ಮನೆಗಳಲ್ಲಿ ಉಳಿದ 600 ಮನೆಗಳನ್ನು ಮುಂದೆ ಕಟ್ಟಿಸಿಕೊಡಲಾಗುತ್ತದಂತೆ. ಅದಕ್ಕೆ ತಗುಲುವ ಅಂದಾಜು ವೆಚ್ಚ ಸುಮಾರು 8 ಕೋಟಿ 70 ಲಕ್ಷ ರೂಪಾಯಿಗಳು. ಭಲೇ ‘ಅಮ್ಮ’ ಎಂದು ಬಿಡೋಣ.

ಆದರೆ ನೆನ್ನೆಯ ಈ ಸುದ್ದಿಯ ಜೊತೆಗೆ ಇನ್ನೊಂದು ಸುದ್ದಿ ಮುಖ್ಯವಾಗಿ ಕೆಲವು ಪತ್ರಿಕೆಗಳಲ್ಲಿ ತಲೆಬರಹದಲ್ಲೂ ಕಾಣಿಸಿಕೊಂಡಿದೆ. ಅದೇನೆಂದರೆ, ರಾಜ್ಯ ಸರ‍್ಕಾರ ‘ಅಮ್ಮ’ಗೆ ಕೊಡುಗೆಯಾಗಿ ಬೆಂಗಳೂರಿನ ಹೊರವಲಯದಲ್ಲಿ ಕೆಂಗೇರಿ ಬಳಿ 15ಎಕರೆ ಸರ‍್ಕಾರಿ ಜಮೀನು ಮತ್ತು 5 ಕೋಟಿ ಹಣವನ್ನು ನೀಡಲಿದೆ ಎಂಬ ಸುದ್ದಿ. ಇಷ್ಟೆಲ್ಲಾ ಉಚಿತ ಕಾಣಿಕೆ ‘ಉಚಿತ’ ಆಸ್ಪತ್ರೆ ಕಟ್ಟಿಸುವುದಕ್ಕೆ ಎಂಬ ಸುದ್ದಿಯೂ ಬಂದಿದೆ.

ಅಮ್ಮ ಈಗ ಕಟ್ಟಿರುವ 100 ಮನೆಗಳು ಹಾಗೂ ಮುಂದೆ ಕಟ್ಟಿಕೊಡಲಿರುವ(?) 600ಮನೆಗಳಿಗೆ ಆಗುವ ಒಟ್ಟು ಖರ್ಚು 10 ಕೋಟಿ 15 ಲಕ್ಷ ರೂಪಾಯಿಗಳು ಮಾತ್ರ. ಅದಕ್ಕೆ ಪ್ರತಿಯಾಗಿ ಸರ್ಕಾರದಿಂದ ಗಿಟ್ಟಿಸಿರುವ ಕಾಣಿಕೆ 15 ಎಕರೆ ಜಮೀನು ಮತ್ತು 5 ಕೋಟಿ ರೂಪಾಯಿ ಹಣ. ಬೆಂಗಳೂರಿನ ಹೊರವಲಯದ ಕೆಂಗೇರಿ ಬಳಿ 15 ಎಕರೆ ಜಮೀನಿನ ಮುಕ್ತ ಮಾರುಕಟ್ಟೆ ಬೆಲೆಯನ್ನು ಕೋಟಿಗಳಲ್ಲಿ ನೀವೇ ಲೆಕ್ಕ ಹಾಕಿಕೊಳ್ಳಿ! ಇಷ್ಟು ಹಣವನ್ನು ನೆರೆ ಪೀಡಿತ ಪ್ರದೇಶದಲ್ಲಿ ಮನೆಕಟ್ಟಲು ಸರ್ಕಾರವೇ ಬಳಸಬಹುದಾಗಿತ್ತಲ್ಲವೆ?

ಇನ್ನು ರಾಜ್ಯದಲ್ಲಿ ಎಷ್ಟೊಂದು ಉಚಿತ ಆಸ್ಪತ್ರೆಗಳಿಗೆ ಜಮೀನು ಇತ್ಯಾದಿ ಸಹಾಯವನ್ನು ಸರ್ಕಾರಗಳು ಹಲವಾರು ವರ್ಷದಿಂದ ಮಾಡುತ್ತಾ ಬಂದಿವೆ. ಆದರೆ ಎಷ್ಟು ಆಸ್ಪತ್ರೆಗಳಲ್ಲಿ ಅವುಗಳ ಘೋಷಿತ ಉದ್ಧೇಶ ಈಡೇರಿದೆ ಹಾಗೂ ಈಡೇರುತ್ತಿದೆ? ಇದು ಚಿದಂಬರ ರಹಸ್ಯ.

ನಮ್ಮ ಊರಿನವರೊಬ್ಬರು ತಮ್ಮ ತಾಯಿಗೆ ಆಗಬೇಕಿದ್ದ ಉದರ ಸಂಬಂಧಿ ಶಸ್ತ್ರಚಿಕಿತ್ಸೆಗೆ ಯಾರದೋ ಮಾತು ಕೇಳಿಕೊಂಡು ವೈಟ್ ಫೀಲ್ಡಿನಲ್ಲಿರುವ ಉಚಿತ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮೂರು ತಿಂಗಳ ನಂತರದ ಒಂದು ದಿನಾಂಕ (ಆಪರೇಷನ್ ಮಾಡಿಸಿಕೊಳ್ಳಲು) ಹಾಗೂ ಒಂದಷ್ಟು ಮಾತ್ರೆಗಳ ಪ್ರಿಸ್ಕ್ರಿಪ್ಷನ್ ಬರೆದು ಕಳುಹಿಸಲಾಗಿತ್ತು. ಮೂರು ತಿಂಗಳು ಬಿಟ್ಟು ಆಪರೇಷನ್ ಮಾಡಿಸಿಕೊಳ್ಳುವವರೆಗೆ ಖಾಯಿಲೆಯಾಗಲೀ, ರೋಗಿಯಾಗಲೀ ಕಾಯುವುದಿಲ್ಲ ಎಂದು ಅದಷ್ಟು ಬೇಗ ಅರ್ಥ ಮಾಡಿಕೊಂಡು ಆ ಯೋಚನೆಯನ್ನೇ ಕೈಬಿಟ್ಟು ಬೇರೆ ಕಡೆ ಹೋದರು!

ಇದೆಲ್ಲವನ್ನೂ ಗಮನಿಸುತ್ತಿದ್ದರೆ, ಬೆಂಗಳೂರು ಸುತ್ತಮುತ್ತ ಜಮೀನು ಬೇಕಿದ್ದರೆ ನೆರೆಪೀಡಿತ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಡಬೇಕು ಎಂಬ ಒಳ ಒಪ್ಪಂದ ಏರ್ಪಟ್ಟಿರಬಹುದಾ ಎಂಬ ಗುಮಾನಿ ಬರುವುದಿಲ್ಲವೆ!?

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಮಾತಿದೆ. ಈಗ ಅದಕ್ಕೆ ಇನ್ನೊಂದನ್ನು ಸೇರಿಸಬಹುದಾ?

'ಎಡಗೈಯಲ್ಲಿ ತೆಗೆದುಕೊಂಡಿದ್ದು ಬಲಗೈಗೂ ಗೊತ್ತಾಗಬಾರದು' ಅಂತ.

ಹಗಲು ದರೋಡೆ ಎಂಬುದಕ್ಕೆ ತಾಜಾ ಉದಾಹರಣೆ.

ಹೆಸರು ಯಾರದೋ ಬಸಿರು ಇನ್ಯಾರದೋ?

ಜೈ‘ಅಮ್ಮ’; ಜೈ ಯಡಿಯೂರು‘ಅಪ್ಪ’

ಕೊಸರು: ಕೃಷ್ಣದೇವರಾಯನ ಪಟ್ಟಾಭಿಷೇಕಕ್ಕಾಗಿ 75 ಕೋಟಿ ಖರ್ಚು ಮಾಡಿರುವ ಸುದ್ದಿ ವಿ.ಕ.ದಲ್ಲಿ ಬಂದಿದೆ. 75 ಕೋಟಿ ಹಣದಲ್ಲಿ ಎಷ್ಟು ಮನೆ ಕಟ್ಟಿಕೊಡಬಹುದಿತ್ತು?

Tuesday, February 02, 2010

‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!

“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು ದೊಡ್ಡ ವಿಷಯ? ನಾನೇ ಸ್ವತಃ ಬೆಳಗ್ಗೆ ಮತ್ತು ಸಾಯಂಕಾಲ ಸ್ವಲ್ಪ ಹಾಲು ಕರೆದು, ಉಳಿಕೆಯ ಹಾಲನ್ನು ಕರುವಿಗೆ ಉಣ್ಣಲು ಬಿಡುತ್ತೇನೆ” ಎಂದೆ.

ಮರು ದಿನ ಬೆಳಗಾಗುತ್ತಲೇ ಎಳೇ ಕರುವಿನ ದನ ಕೆಂಪಿ ‘ಅಂಬಾ, ಅಂಬಾ!’ ಎಂದು ಅರಚುತ್ತಾ ಇತ್ತು. ನಾನು ನನ್ನ ನಿತ್ಯದ ಯೂನಿಫಾರ್ಮ್ ಆದ ಅರ್ಧ ಪ್ಯಾಂಟ್(ಶಾರ್ಟ್ಸ್), ಟೀ ಶರ್ಟ್, ಮಣಿಗಂಟಿನ ವರೆಗೆ ಕವರ್ ಮಾಡುತ್ತಾ ಇದ್ದ ಬಾಟಾ ಕಂಪನಿಯ ‘ಹಂಟರ್ ಬೂಟ್” ಹಾಗೂ ಬೆಂಗಳೂರಿನಲ್ಲಿ ನಾನು ಕೊಂಡಿದ್ದ ಅಗಲ ಬ್ರಿಮ್‌ನ ಹ್ಯಾಟು ಧರಿಸಿ ಹಟ್ಟಿಗೆ ಹೋದೆ.

ಹಿಂದಿನ ದಿನ ಸಾಯಂಕಾಲವೇ ಕೆಂಪಿ ದನವನ್ನು ಪ್ರತ್ಯೇಕವಾಗಿ ಕರುಗಳ ಕೋಣೆಯಲ್ಲೇ ಬಾಲು ಕಟ್ಟಿ ಹೋಗಿದ್ದ. ನಾನು ನನ್ನ ಬಿಡಾರದಿಂದ ಹಾಲು ಕರೆಯಲು ಒಂದು ಪಾತ್ರೆ. ಅದರಲ್ಲಿ ಅರ್ಧವಾಸಿ ತಣ್ಣೀರು ತೆಗೆದುಕೊಂಡು ಹಟ್ಟಿಯ ಕಡೆ ಹೊರಟೆ. ನನ್ನ ತಾಯಿಯವರು ದನಗಳನ್ನು ಕರೆಯುವ ಮೊದಲು ಅವಕ್ಕೆ ಆಹಾರ ಕೊಟ್ಟು ಅವುಗಳ ಕೆಚ್ಚಿಲನ್ನು ತೊಳೆದು ಹಾಲು ಹಿಂಡುತ್ತಾ ಇದ್ದುದು ನೆನಪಿನಲ್ಲಿ ಇತ್ತು. ನಾನು ಕೂಡಾ ಹಾಗೆಯೇ ಮಾಡಲು ಹೊರಟಿದ್ದೆ.

ನನಗೆ ಆ ದಿನಗಳಲ್ಲಿ ಹುಲಿಯ ಹಾಲನ್ನು ಕರೆಯುವ ಸ್ಥೈರ್ಯ ಹಾಗೂ ಹುಮ್ಮಸ್ಸು ಇತ್ತು. ’ಯಕಶ್ಚಿತ್ ಒಂದು ನಾಟಿದನದ ಹಾಲು ಕರೆಯುವದೇನು ಮಹಾ!’ ಎಂದು ಕೊಳ್ಳುತ್ತಾ ನಮ್ಮ ಕೆಂಪಿ ದನ ಮತ್ತು ಕರು ಇದ್ದ ಹಟ್ಟಿಯನ್ನು ಪ್ರವೇಶಿಸಿದೆ.

ಧೈರ್ಯವಾಗಿ ‘ಕೆಂಪಿ, ಕೆಂಪಿ!’ ಎನ್ನುತ್ತಾ ಅದರ ಬಳಿ ಹೋದೆ. ಎರಡು ಸಲ ದನದ ಹೆಸರು ಹಿಡಿದು ಕರೆದಾಗಲೇ ‘ಹಾಲುಕರೆಯುವ ಕೆಲಸ ಅರ್ಧ ಮುಗಿಸಿದೆ’ ಎಂಬ ಭಾವನೆ ನನ್ನಲ್ಲಿ ಮೂಡಿತ್ತು.

ಕೆಂಪಿ ದನ ತನ್ನ ಕರುವಿನ ಮೈ ನೆಕ್ಕುತ್ತಾ ನಿಂತಿತ್ತು. ಅದು ನನ್ನ ಕಡೆಗೆ ಗಮನ ಕೊಡಲೇ ಇಲ್ಲ. ಅಟ್ಟದ ಏಣಿ ಹತ್ತಿ ಅದರ ಎದುರಿಗೆ ಒಂದು ಕಟ್ಟು ಒಣ ಹುಲ್ಲು ತಂದು ಹಾಕಿದೆ. ಅದು ಖುಷಿಯಿಂದ ಆ ಹುಲ್ಲನ್ನು ತಿನ್ನ ತೊಡಗಿತು.

ಅದರ ಪುಟ್ಟ ಕರು ಆಗಲೇ ಹೊಟ್ಟೆತುಂಬಾ ಆಗಲೇ ಹಾಲು ಕುಡಿದಿದ್ದರಿಂದ ಸಂತೋಷವಾಗಿ ನನ್ನ ಕಡೆ ಪಿಳಿ ಪಿಳಿ ನೋಡುತ್ತಾ ಇತ್ತು.

ನಾನು ದನದ ಎಡ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ತಂಬಿಗೆಯಲ್ಲಿ ಇದ್ದ ತಣೀರನ್ನು ಅದರ ಕೆಚ್ಚಲಿಗೆ ಎರಚಿ ಕೆಚ್ಚಲನ್ನು ತೊಳೆಯಲು ಕೈ ಹಾಕುವ ಮೊದಲೇ ಮಿಂಚಿನ ವೇಗದಲ್ಲಿ ಏನೇನೋ ನಡೆದು ಬಿಟ್ಟಿತು.

ನನ್ನ ಕಣ್ಣಿನ ಇದುರು ಏನೋ ಕಪ್ಪಗಿನ ವಸ್ತು ಸುಳಿದಂತೆ ಆಯಿತು.

ಅದು ನನ್ನ ಮುಖದ ಮೇಲೆಯೇ ಬಂದು ಇಳಿಯಿತು.

ಲಟ್! ಎಂಬ ಶಬ್ದ ಕೂಡಾ ಆಯಿತು.

ನಾನು ಆ ಕ್ಷಣದಲ್ಲೇ ಆಯತಪ್ಪಿ ಹಟ್ಟಿಯ ಶಿಲೆ ಹಾಸಿದ ನೆಲದ ಮೇಲೆ ಬಿದ್ದುಬಿಟ್ಟಿದ್ದೆ.

ನೆಲದಲ್ಲಿ ಬಿದ್ದಿದ್ದ ಸೆಗಣಿ ನನ್ನ ಮೈಗೆ ಮೆತ್ತಿಕೊಳ್ಳುತ್ತಾ ಇತ್ತು.

ನನ್ನ ಕೈಯ್ಯಲ್ಲಿ ಇದ್ದ ಪಾತ್ರೆ ಎಲ್ಲೋ ಹಾರಿ ಹೋಗಿತ್ತು.

ನನ್ನ ತಲೆಯಲ್ಲಿ ಅಗಲ ಬ್ರಿಮ್ ಉಳ್ಳ ಹ್ಯಾಟು ಇದ್ದಿದ್ದರಿಂದ ತಲೆ ನೆಲಕ್ಕೆ ಹೊಡೆದ ವೇಗಕ್ಕೆ ನನ್ನ ತಲೆ ಒಡೆದು ಹೋಗಲಿಲ್ಲ. ಬಿದ್ದ ರಭಸಕ್ಕೆ ನನ್ನ ಹ್ಯಾಟ್ ತಲೆಯಿಂದ ಕಳಚಿ ಸೆಗಣಿಯ ಮೇಲೆ ಅಂಗಾತ ಬಿದ್ದಿತು.

‘ನಾನಗೆ ಏನಾಯಿತು?’ ಎಂದು ಊಹಿಸುವ ಮೊದಲೇ ನನ್ನ ಮುಖದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. ಹೇಗೋ ಸುಧಾರಿಸಿಕೊಂಡು ಎದ್ದೆ. ನನ್ನ ತಲೆ ‘ಧಿಂ!’ ಎನ್ನುತ್ತಿತ್ತು. ಬಲ ಕಣ್ಣಿನ ಕೆಳಗೆ ಕೆಳದವಡೆಯ ತನಕ ತಡೆಯಲಾರದ ನೋವು ಪಸರಿಸಿತು. ಮುಖ ಮುಟ್ಟಿ ನೋಡಿಕೊಂಡಾಗ ಮುಖದ ಬಲಭಾಗ ಊದಿಕೊಳ್ಳುತ್ತಾಇರುವುದು ಸ್ಪಷ್ಟವಾಯಿತು.

ಮೆಲ್ಲನೆ ಕೆಳಗೆ ಬಿದ್ದಿದ್ದ ಹ್ಯಾಟ್ ಎತ್ತಿಕೊಂಡೆ. ಎಲ್ಲಿಗೋ ಹಾರಿ ಹೋಗಿದ್ದ ಪಾತ್ರೆಯನ್ನು ಹುಡುಕದೇ ‘ಅದು ಹಾಳಾಗಿ ಹೋಗಲಿ!’ ಎಂದು ಶಪಿಸುತ್ತಾ ಮೇಲೆ ಎದ್ದೆ. ಮೈ ಮೇಲೆ ಪಸರಿಸಿದ್ದ ಹಸೀ ಸೆಗಣಿಯ ವಾಸನೆ ತಡೆಯಲು ಅಸಾಧ್ಯ ಎನಿಸಿತು.

ನಾನು ದನದ ಕಡೆ ನೋಡಿದೆ. ಅದು ಏನೂ ನಡೆದಿಲ್ಲವೇನೋ ಎಂಬಂತೆ ತನ್ನ ಕರುವನ್ನು ನೆಕ್ಕುತ್ತಾ ಇತ್ತು. ನನಗೆ ದನದ ಮೇಲೆ ಸಿಟ್ಟು ಉಕ್ಕಿಬಂದಿತ್ತು.

ಪೆಟ್ಟು ತಿಂದ ನೋವಿನಿಂದಾಗಿ ನನ್ನಲ್ಲಿ ನಿಧಾನವಾಗಿ ವಿವೇಕವೂ ಮೂಡಿ ಬರುತ್ತಿತ್ತು. ‘ಆ ಪುಟ್ಟ ಕರುವಿಗೆ ಸೇರಿದ ಹಾಲನ್ನು ಹಿಂಡಿ ತೆಗೆಯುವ ಅಧಿಕಾರ ನಿನಗೆಲ್ಲಿ?’ ಎಂದು ನನ್ನ ಒಳಮನಸ್ಸು ನನ್ನನ್ನು ಕೇಳುತ್ತಾ ಇತ್ತು.

ಮುಖವನ್ನು ಇನ್ನೊಮ್ಮೆ ಸವರಿಕೊಂಡು ನೋಡಿದೆ. ‘ಯಾವ ಹಲ್ಲೂ ಕಿತ್ತು ಹೋಗಿಲ್ಲ. ದವಡೆಯ ಎಲುಬು ಮುರಿದಿಲ್ಲ’ ಎಂದು ಖಾತ್ರಿ ಮಾಡಿಕೊಂಡೆ. ದಪ್ಪವಾಗಿ ಪೊದೆಯಂತೆ ಬೆಳೆದಿದ್ದ ಗಡ್ದದ ಕೂದಲುಗಳು ನನ್ನ ದವಡೆಯ ಎಲುಬು ಮತ್ತು ಹಲ್ಲುಗಳನ್ನು ಕಾಪಾಡಿದ್ದುವು.

‘ಕನ್ನಡಿ ನೋಡಿಕೊಳ್ಳೋಣ!’ ಎಂದರೆ, ಗಡ್ದ ಧಾರಿಯಾದ ನನ್ನ ಮನೆಯಲ್ಲಿ ಕನ್ನಡಿಯೇ ಇರಲಿಲ್ಲ. ಶೇವಿಂಗ್ ಅಗತ್ಯವೇ ಇಲ್ಲದ ಮುಖ! ತಲೆಯಲ್ಲಿ ಬಾಚಣಿಗೆ ಬೇಡದ "ಕ್ರೂ"ಕಟ್! ಗುಡಿಸಲಿಗೆ ಹೋಗಿ ಸ್ಟೈನ್‌ಲೆಸ್ ಸ್ಟೀಲಿನ ಊಟದ ತಟ್ಟೆಯಲ್ಲಿ ಮುಖ ನೋಡಿಕೊಂಡೆ. ಯಾರದೋ ಮುಖ ಬಲ ಬದಿ ಊದಿಕೊಂಡಂತೆ ಕಂಡಿತು. ಬಲಕಣ್ಣು ಊದಿಕೊಂಡು ಅರ್ಧ ಮುಚ್ಚಿತ್ತು.

ನಾನು ಮಾಮೂಲಿಯಾಗಿ ಸ್ನಾನಕ್ಕೆ ಉಪಯೋಗಿಸುತ್ತಾ ಇದ್ದ ಮಾರ್ಗೋ ಸೋಪ್ ಹಿಡಿದು ನೇರವಾಗಿ ನದಿಯ ಬದಿಗೆ ನಡೆದೆ, ಶೂ ಮತ್ತು ಹ್ಯಾಟ್ ಸಮೇತ ನೀರಿಗಿಳಿದು ಮೈಗೆ ಮೆತ್ತಿದ ಸೆಗಣಿ ತೊಳೆದುಕೊಂಡೆ. ಹರಿಯುವ ನೀರಿನಲ್ಲಿ ಹ್ಯಾಟ್ ಮತ್ತು ಬೂಟ್ ತೊಳೆದು ಬದಿಗೆ ಇರಿಸಿದೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದು ಬಟ್ಟೆ ಬದಲಾಯಿಸಿದೆ.

ಬೆಳಗ್ಗಿಗೆ ಇಟ್ಟುಕೊಂಡ ಹಿಂದಿನ ದಿನದ ಹಾಲು ಆಗಲೇ ಮುಂಜಾನೆಯ ಟೀ ಮಾಡಿದಾಗ ಖರ್ಚಾಗಿತ್ತು. ಬಿಸಿ ಬಿಸಿಯಾಗಿ ಒಂದು ಮಗ್ ಕಪ್ಪು ಚಹಾ ಮಾಡಿ ಕುಡಿದೆ.

ಹೊಳೆಯ ನೀರಿನ ಅಭಿಷೇಕದಿಂದ ಮುಖದ ಊತ ಕಡಿಮೆ ಆಗುತ್ತಾ ಇತ್ತು.

ಕೆಲಸದ ಆಳುಗಳು ಇನ್ನೂ ಬಂದಿರಲಿಲ್ಲ. ಗಂಟೆ ನೋಡಿದರೆ ಏಳೂವರೆ! ಅರೆ! ನನ್ನ ಕೈಯ್ಯಲ್ಲಿ ಇದ್ದ ಸ್ವಿಸ್ “ಎನಿಕಾರ್” ವಾಚ್ ಇನ್ನೂ ನಡೆಯುತ್ತಾ ಇತ್ತು! ಅದು ನೀರು ಕುಡಿದಿರಲೂ ಇಲ್ಲ!

ಪೆಟ್ಟು ತಿಂದ (ಒದೆಸಿಕೊಂಡ) ಮುನಿಸು ಇನ್ನೂ ಕಡಿಮೆ ಆಗಿರಲಿಲ್ಲ. ಆ ಕೆಂಪಿ ಎಂಬ ದನಕ್ಕೆ ಚೆನ್ನಾಗಿ ಹೊಡೆದು ಬಿಡೋಣಾಂತ ಒಮ್ಮೆ ಅನ್ನಿಸಿತು. ‘ಎಲೋ ಬುದ್ಧಿಯುಳ್ಳ ಮನುಷ್ಯ ಪ್ರಾಣಿಯೇ! ದನದ ಮೇಲೆ ಯಾಕೆ ಸಿಟ್ಟು ಮಾಡುತ್ತೀಯಾ? ತಪ್ಪು ನಿನ್ನದೇ ಅಲ್ಲವೇ? ನಿನಗೂ ಅದು ಹಾಲು ಹಿಂಡಲು ಬಿಡುತ್ತಿತ್ತೋ ಏನೋ? ನಿನ್ನ ವಿಚಿತ್ರ ವೇಷ! ಮುಖ ತುಂಬ ಗಡ್ಡ! ತಲೆಯ ಮೇಲೆ ಒಂದು ಅಗಲ ಹ್ಯಾಟು! ಅದರ ಮೇಲೆ, ಚಳಿಗಾಲದ ಈ ಹವಾಮಾನದಲ್ಲಿ ಅದರ ಕೆಚ್ಚಲಿಗೆ ಮಹಾ ಬುದ್ಧಿವಂತನಂತೆ ತಣ್ಣೀರು ಎರೆಚಿದೆ! ನೀನು ಮಾಡಿದ್ದು ತಪ್ಪಲ್ಲವೇ?’ ಎಂದಿತು ಸುಪ್ತ ಮನಸ್ಸು.

‘ಹೌದು! ನಾನು ಉಗುರು ಬೆಚ್ಚನೆಯ ನೀರು ಕೊಂಡೊಯ್ಯ ಬೇಕಿತ್ತು! ಹೊಳೆಯಲ್ಲೇ ದಿನಾ ತಣ್ಣೀರಲ್ಲಿ ಮುಳುಗಿ ಸ್ನಾನ ಮಾಡುವ ಈ ನರ ಪ್ರಾಣಿಗೆ, ಒಂದೆರಡು ದಿನಗಳ ಹಿಂದಷ್ಟೇ ಕರು ಹಾಕಿದ ಆ ದನಕ್ಕೆ ಚಳಿ ಆಗಬಹುದೆಂಬ ಪರಿಜ್ಞಾನವೇ ಇರಲಿಲ್ಲ! ಸರಿ! ನಾನು ತಪ್ಪೇ ಮಾಡಿರಬಹುದು. ಆದರೆ, ಆ ದನ ನನಗೆ ಅಷ್ಟು ಜೋರಾಗಿ ಒದೆಯಬೇಕಿರಲಿಲ್ಲ! ನಿಧಾನವಾಗಿ ಕಾಲು ಝಾಡಿಸಿ ಅದು ಹೆದರಿಸಿದ್ದರೆ ಸಾಕಿತ್ತು!’ ಅಂತ ನನ್ನೊಳಗೇ ಸ್ವಲ್ಪ ಸಮಾಧಾನ ಮಾಡಿಕೊಂಡೆ.

ನನ್ನ ಮನೆಯೊಳಗೆ ಒಂದು ಚಿಕ್ಕ ನೀಲಿ ಪೈಂಟ್‌ನ ಡಬ್ಬಿ ಮತ್ತು ಬ್ರಶ್ ಇತ್ತು. ಅದನ್ನು ಒಪಯೋಗಿಸಿ ನನ್ನ ಮನೆಗೆ K ಸ रि ಎಂಬ ಹೆಸರನ್ನು ಬರೆದಿದ್ದೆ. ಕೂಡಲೇ ಆ ಡಬ್ಬವನ್ನು ಹುಡುಕಿ ನಮ್ಮ ಹಟ್ಟಿಗೆ zoo ಎಂಬ ಹೆಸರನ್ನು ಬರೆದು ಅಂದು ತಿಂದ ಒದೆಗೆ ಸೇಡು ತೀರಿಸಿಕೊಂಡೆ.
 
ಆನಂತರ ನಾನು ಅಂದಿನ ಒದೆ ತಿಂದ ಪ್ರಸಂಗವನ್ನು ಬಲವಂತವಾಗಿ ಮರೆತೇ ಬಿಟ್ಟೆ!
 
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಹಲವಾರು ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ


(ಚಿತ್ರಗಳು: ಲೇಖಕರವು)

Friday, January 29, 2010

ಬರ್ತ್ ಡೇ ತಾತ ಬೇಂದ್ರೆ ನೆನಪಲ್ಲಿ

ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ ಗೊತ್ತಾಯಿತು. ಸ್ವಲ್ಪ ದೂರದಲ್ಲಿದ್ದ ಚಿತ್ರ ಯಾವ ಕೋನದಿಂದ ನೋಡಿದರೂ ನಮ್ಮ ತಾತನದೇ ಚಿತ್ರದಂತೆ ಕಾಣುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ನಮ್ಮ ತಾತ ತಲೆಗೆ ರುಮಾಲು ಸುತ್ತುತ್ತಿದ್ದರು. ಚಿತ್ರದಲ್ಲಿದ್ದ ತಾತ ಟೋಪಿ ಹಾಕಿಕೊಂಡಿದ್ದರು. ಕೊನೆಗೆ ತಡೆಯಲಾರದೇ ಎದ್ದು ಹೋಗಿ ನೋಡಿದಾಗ ಅದರ ಮೇಲೆ ದ.ರಾ.ಬೇಂದ್ರೆ ಎಂದು ಬರೆದಿತ್ತು. ನಮ್ಮ ತಾತನಿಗೂ ಅದೇ ವಯಸ್ಸು, ಸುರುಳಿಗೂದಲು, ಮೀಸೆ ಮತ್ತು ಮುಗ್ದಮುಖವಿದ್ದುದರಿಂದ ಬೇಂದ್ರೆ ಚಿತ್ರ ನನಗೆ ನನ್ನ ತಾತನ ಚಿತ್ರದಂತೆಯೇ ಕಾಣುತ್ತಿತ್ತು. ಹೀಗೆ ಬೇಂದ್ರೆ ಚಿತ್ರ ಅಂದು ನನ್ನ ಮನಸ್ಸಿನಲ್ಲಿ ದಾಖಲಾಯಿತು. ಅಂದಿನಿಂದ ಇಂದಿನವರೆಗೂ ಬೇಂದ್ರೆ ಎಂದರೆ ನನಗೆ ಮೊದಲು ನೆನಪಾಗುವುದು ಅದೇ ಚಿತ್ರದ ತಾತ! ಜನವರಿ 31 ಅವರು ಹುಟ್ಟಿದ ದಿನ.

ನಂತರ ಪಠ್ಯಪುಸ್ತಕಗಳಲ್ಲಿದ್ದ ಕವನಗಳ ಮೂಲಕ ಬೇಂದ್ರೆ ಹತ್ತಿರವಾದರು. ಸಾಹಿತ್ಯದಲ್ಲಿ ಆಸಕ್ತಿ ಮೂಡುತ್ತಾ ಹೋದಂತೆ ಬೇಂದ್ರೆ ಪ್ರೀತಿಯ ಕವಿಯಾದರು. ೧೯೯೮-೨೦೦೦ನೇ ಇಸವಿಯಲ್ಲಿ ಕನ್ನಡ ಎಂ.ಎ. ಮಾಡುವಾಗ ನನ್ನ ಸುಯೋಗವೋ ಏನೋ? ಬೇಂದ್ರೆಯವರನ್ನು ವಿಶೇಷಕವಿಯಾಗಿ ಅಧ್ಯಯನ ಮಾಡಬೇಕಾಗಿತ್ತು. ಆಗಿನ್ನು ಅವರ ಸಮಗ್ರಸಾಹಿತ್ಯ ಪ್ರಕಟವಾಗಿರಲಿಲ್ಲ. ಆದರೂ ಆಗ ಸಿಕ್ಕ ಅವರ ಎಲ್ಲಾ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದೆ. ಅದರಿಂದಾದ ಸಂತೋಷ ಪದಗಳಿಗೆ ನಿಲಕದ್ದು.

ಅವರ ಯಾವುದೋ ಬರಹವೊಂದರಲ್ಲಿ ‘ಸಣ್ಣ ಸೋಮವಾರ’ ಎಂಬ ಪ್ರಯೋಗ ಬಂದಿತ್ತು. ನಾನು ಆ ಪದದ ಬಗ್ಗೆ ತಲೆಕೆಡಿಸಿಕೊಂಡು ಸಿಕ್ಕ ಸಿಕ್ಕ ನಿಘಂಟುಗಳನ್ನೆಲ್ಲಾ ಜಾಲಾಡಿದ್ದೆ. ಕೊನೆಗೆ ವರ್ಷದ ಕೊನೆಯಲ್ಲಿ ಪ್ರೊ.ಶಿವಕುಮಾರ್ ಎಂಬುವವರಲ್ಲಿ ಈ ಪದದ ಬಗ್ಗೆ ಕೇಳಿದೆ. ಅವರು ‘ಈ ಸಮಸ್ಯೆ ನಿನಗೂ ಕಾಡಿದೆ ಎಂದರೆ ನೀನು ಬೇಂದ್ರೆಯವರನ್ನು ಸೀರಿಯಸ್ಸಾಗಿ ಓದುತ್ತಿದ್ದೀಯಾ ಎಂದರ್ಥ. ಈ ಪದ ಹಲವಾರು ವಿದ್ವಾಂಸರನ್ನು ಓದುಗರನ್ನು ಕಾಡಿದೆ. ಅದಕ್ಕೆ ಒಬ್ಬ ಬಸ್ ಕಂಡಕ್ಟರ್ ಉತ್ತರ ಹುಡುಕಿದ್ದರು. ಧಾರವಾಡ ಕಡೆ ಸಣ್ಣ ಸೋಮವಾರ ಮಾಡುವುದು ಎಂಬ ಆಚರಣೆಯೇ ಇದೆ. ಸಣ್ಣ ಅಂದರೆ ಶ್ರಾವಣ ಅಂತ ಅಷ್ಟೆ! ಅಂದರೆ ಶ್ರಾವಣ ಸೋಮವಾರ’ ಎಂದು ಅದರ ಇತಿಹಾಸವನ್ನೇ ಬಿಚ್ಚಿಟ್ಟಿದ್ದರು. ಬೇಂದ್ರೆಯವರು ಈ ನೆಲದ ಸೊಗಡನ್ನು ತಮ್ಮದಾಗಿಸಿಕೊಂಡಿದ್ದಕ್ಕೆ ಇದೊಂದು ಚಿಕ್ಕ ಉದಾಹರಣೆ.

ಆಗ ಉಪನ್ಯಾಸ ನೀಡಿದ್ದ ಇನ್ನೊಬ್ಬ ವಿದ್ವಾಂಸರು ಸಾಂಸ್ಕೃತಿಕ ವೈರುದ್ಧ್ಯಗಳಂತಿದ್ದ ವ್ಯಕ್ತಿತ್ವಗಳು ಅರ್ಥಪೂರ್ಣ ಮುಖಾಮುಖಿಯಾಗುವುದು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ ಎಂದು ಹೇಳಿ ಮೂರು ಉದಾಹರಣೆ ಕೊಟ್ಟಿದ್ದರು. ‘ಕನಕದಾಸ-ಪುರಂದರದಾಸ, ಗಾಂಧಿ - ಅಂಬೇಡ್ಕರ್, ಕುವೆಂಪು-ಬೇಂದ್ರೆ’ ಎಂದು.

ಗಾಂಧಿ ಸೂಟುಬೂಟು ತ್ಯಜಿಸಿದ್ದು ಹಾಗೂ ಅಂಬೇಡ್ಕರ್ ಸೂಟುಬೂಟು ಒಪ್ಪಿಕೊಂಡಿದ್ದು, ಕುವೆಂಪು ಭಾಷೆ ಸಂಸ್ಕೃತಭೂಯಿಷ್ಟವಾದುದ್ದು ಹಾಗೂ ಬೇಂದ್ರೆ ಭಾಷೆ ಜಾನಪದೀಯವಾದದ್ದು, ಪುರಂದರದಾಸರು ಕೇವಲ ದಾಸರಾಗಿದ್ದು ಹಾಗೂ ಕನಕದಾಸರು ದಾಸರಾಗುವುದರ ಜೊತೆಗೆ ಕವಿಯೂ ಆದದ್ದು. . . . ಹೀಗೇ ಅವರ ಹೋಲಿಕೆ ನಡೆದಿತ್ತು. ಆದರೆ ಅವರ ವಿಮರ್ಶೆ ಕುಚೋದ್ಯದಿಂದ ಕೂಡಿದೆ ಎಂದೇ ಅನ್ನಿಸಿತ್ತು. ಈಗಲೂ ಅದನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಕುವೆಂಪು-ಬೇಂದ್ರೆ ಭಾಷಾವಿಚಾರದಲ್ಲಿ ಅದೊಂದು ತೀರಾ ಸಾಮಾನ್ಯ ವಿವರಣೆ ಅನ್ನಿಸದಿರದು. ಸಹಜಕವಿಯಾದವನಿಗೆ ಭಾಷೆಯೇ ಒಂದು ತೊಡಕು ಎಂದು ಎಲ್ಲೋ ಓದಿದ ನೆನಪು. ಕವಿಯ ಮನಸ್ಸಿನಲ್ಲಿ ಕವಿತೆಯಾದುದೆಲ್ಲಾ ಭಾಷೆಯಲ್ಲಿ ಅಭಿವ್ಯಕ್ತಿಯಾಗುವುದು ಕಷ್ಟ! ಬೇಂದ್ರೆ-ಕುವೆಂಪು ಇಬ್ಬರೂ ಭಾಷೆಯನ್ನು ಯಾವ ಗರಿಷ್ಠಮಟ್ಟಕ್ಕಾದರೂ ಕೊಂಡಯ್ದು ಬಳಸಬಲ್ಲ ಕವಿಗಳಾಗಿದ್ದರು. ಹಾಗೇ ಜಾನಪದೀಯವಾಗಿಯೂ ಬಳಸಬಲ್ಲವರಾಗಿದ್ದವರು. ಇಷ್ಟನ್ನೇ ಆಧಾರವಾಗಿರಿಸಿಕೊಂಡು ಸಾಂಸ್ಕೃತಿಕ ವೈರುದ್ಧ್ಯವುಳ್ಳ ವ್ಯಕ್ತಿತ್ವಗಳು ಹಾಗೂ ಅವುಗಳ ಮುಖಾಮುಖಿ ಎಂದು ಭಾವಿಸುವುದು ಅಷ್ಟು ಸಮಂಜಸವೇನಲ್ಲ ಎಂಬುದು ನನ್ನ ಅನಿಸಿಕೆ.

ನಾನು ಬೇಂದ್ರೆಯವರನ್ನು ಅಧ್ಯಯನ ಮಾಡುವಾಗ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು ಅವರ ‘ಕನ್ನಡ ಮೇಘದೂತ’ ಖಂಡಕಾವ್ಯ. ಅದು ಕಾಳಿದಾಸನ ಮೇಘದೂತದ ಕನ್ನಡ ಅವತರಣಿಕೆ. ಒಂದೊಂದು ಪದ್ಯವೂ ಬಿಡಿಮುತ್ತಿನಂತೆ ಸರಳ ಛಂದಸ್ಸ್ಸಿನಲ್ಲಿ ಮೂಡಿಬಂದಿವೆ. ಅದರ ನಾಲ್ಕು ಪದ್ಯಗಳನ್ನು ಇಲ್ಲಿ ಕೊಡುತ್ತೇನೆ, ರಸಗ್ರಹಣಕ್ಕಾಗಿ!

ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ

ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು?
ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು
ಆ ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
ಅವರ ಕಣ್ಣಕುಡಿಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು

ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಡ ಮಾವು ಸುರಿದಾವು ಗೊಂಚಲಲ್ಲಿ ಬೆಟ್ಟದೆದೆಯ ಮೇಲೆ
ಅಮರ ಮಿಥುನಗಳ ಪ್ರಣಯ ದೃಷ್ಟಿ ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ

ಮರದ ನಡುವೆ ಬಿಳಿ ಹಾಸಗಲ್ಲು ಬಂಗಾರ ಕೋಲು ನಡುಕೆ
ಎಳೆಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ
ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
ಕೈ ತಟ್ಟಿ ಮಾಟ ಬಳೆ ತಕಲಾಟ ಥಕಥೈಯ ಥಾಟಿನಲ್ಲಿ

ಈ ಮೇಘದೂತದ ಗುಂಗಿನಲ್ಲೇ ನಾನು ಮೇಘದೂತನ ಕಾವ್ಯಸಿರಿ ಎಬ ಕವಿತೆಯೊಂದನ್ನು ಬರೆದಿದ್ದೆ. ಅದನ್ನಿಲ್ಲಿ ಕೊಟ್ಟು ಈ ಲೇಖನವನ್ನು ಮುಗಿಸುತ್ತೇನೆ. ಹಾಗೆ ನೋಡಿದರೆ ಮೊನ್ನೆ ಹೆಚ್.ಎಸ್.ವೆಂಕಟೇಶಮೂರ್ತಿಯವರು ಹೇಳಿದಂತೆ ಸ್ಮರಣೆಯೊಂದೇ ಮರಣದ ದುಃಖವನ್ನು ಮರೆಯಾಗಿಸುವ ಸಾಧನ!

ಮೇಘದೂತನ ಕಾವ್ಯಸಿರಿ

ಕೆರೆಯ ಅಂಚಿಗೆ ಚಾಚಿದ್ದ ಬಿಳಿಯ ಕಲ್ಲು
ತೊಳೆದು ಹೊಳೆವ ಬಿಂದಿಗೆ ನಡುವಿಗೆ
ಎಳೆಯ ರಶ್ಮಿಯ ಹೊಳಪಿನಿಂದ
ಬೆಳಕ ಚಿತ್ತಾರ ನೀರಕನ್ನಡಿಗೆ.

ಬಿಂದಿಗೆಯ ಮುಳುಗಿಸಿ ನೀರ
ತುಂಬುವಳು ಚೆಲುವೆ ಬಿಂಕದಿಂದ
ಅದ ನಡುವಿಗಿಟ್ಟು ನೆರಿಗೆ ಎತ್ತಿ ಕಟ್ಟಿ
ನಡೆವಳು ಚೆಲುವೆ ವೈಯಾರದಿಂದ.

ತಾವರೆಯ ವರಿಸಿದ ದುಂಬಿ, ಮರೆತು
ಬಂದಿತೋ ಅವಳಿಂದೆ; ಅವಳೊಂದು ಪುಷ್ಪ.
ಮುಂಜಾನೆಯ ಮಂದ ಮಾರುತಕೆ
ಚೆಲ್ಲಿದಳೋ ಮಕರಂದ, ಅವಳೊಂದು ಪುಷ್ಪ

ವಾಯುವಿಹಾರಿ ವಾಯಿಸಂಚಾರಿ
ಮನುಜ ಗಂಧರ್ವರೆಲ್ಲ ಬೆರಗಾದರೋ,
ಕನಕಪುತ್ಥಳಿ ಮಕರಂದಪುಷ್ಪ
ನಿಜ ಚೆಲುವಕಂಡು ಧನ್ಯರಾದರೋ.

ದತ್ತೂ ಮಾಸ್ತರರ ಕನ್ನಡ ಕಸ್ತೂರಿಯ
ಸೊಗಸನು ಮೇಘದೂತದಿ ಕಂಡು
ಮೈಮನ ನಿಮಿರಿ ರೋಮಾಂಚನದಲಿ
ಪುಲಕಗೊಂಡವು ಆ ಸೊಗಸನುಂಡು.

Monday, January 04, 2010

ಆರು ಸಾಲಿನ ಷಟ್ಪದಿಯಲ್ಲೂ ಇಷ್ಟೊಂದು ಬಗೆಯ ಚೆಲುವೆ!?

ಈ ಷಟ್ಪದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ! ಕನ್ನಡ ದೇಸಿ ಛಂದಸ್ಸಿನಲ್ಲಿ ತ್ರಿಪದಿಯನ್ನು ಬಿಟ್ಟರೆ ಅತ್ಯಂತ ಜನಪ್ರಿಯ ಪ್ರಕಾರ ಇದು. ಆದರೆ ತ್ರಿಪದಿಗಿಂತ ಹೆಚ್ಚು ಕಾವ್ಯಗಳು ಈ ಷಟ್ಪದಿ ಪ್ರಕಾರದಲ್ಲಿ ಬಂದಿವೆ.

ದೇಸಿ ಛಂದಸ್ಸಿನ ಮುಖ್ಯ ಲಕ್ಷಣದಂತೆ ಷಟ್ಪದಿಯೂ ಅಂಶ ಛಂದಸ್ಸೇ ಆಗಿತ್ತು. ಬ್ರಹ್ಮ, ವಿಷ್ಣು, ರುದ್ರ ಎಂದು ಮೂರು ಬಗೆಯ ಅಂಶಗಳನ್ನು ಒಳಗೊಂಡಿರುವುದೇ ಅಂಶ ಛಂದಸ್ಸು. ಅಂಶ ಷಟ್ಪದಿಯ ಒಂದು ಉದಾಹರಣೆ:

ವಿ ವಿ               
ವಿ ವಿ               
ವಿ ವಿ ರು           
ವಿ ವಿ               
ವಿ ವಿ               
ವಿ ವಿ ರು           

ಅದುಪರ/ಮಾಸ್ಪದ
ಮದುಪುಣ್ಯ/ಸಂಪದ
ಮದುಮಹಾ/ಭ್ಯುದಯವಿ/ಲಾಸಾವಾಸಂ
ಅದುದಿಬ್ಯಂ/ಮದುಸೇಬ್ಯ
ಮದುಸೌಮ್ಯ/ಮದುರಮ್ಯ
ಮದುಸುಖಾ/ಧಾರಸಂ/ಸಾರಸಾರಂ

ಸುಮಾರು ಹನ್ನೆರಡನೇ ಶತಮಾನದಲ್ಲಿ ಉಂಟಾದ ದೇಸಿ ಛಂದಸ್ಸಿನ ಪುರುಜ್ಜೀವನ ಮತ್ತು ನವೀಕರಣದ ಫಲವಾಗಿ ತ್ರಿಪದಿಯಂತೆಯೇ ಷಟ್ಪದಿಯೂ ಮಾತ್ರಗಣಾತ್ಮಕವಾಗಿ ಬದಲಾಯಿತು. ಅಕ್ಷರಬಂದ ಸಂಪೂರ್ಣ ಮಾತ್ರಗಳ ಸಂಖ್ಯೆಯನ್ನೇ ಆದರಿಸುವಂತಾಯಿಯತು. ಲಘುವಿಗೆ ಒಂದಾ ಮಾತ್ರೆ, ಗುರುವಿಗೆ ಎರಡು ಮಾತ್ರೆ ಲೆಕ್ಕ.

ಆದರೆ ಈ ಮಾತ್ರಾಷಟ್ಪದಿಯಲ್ಲಿ ದೊಡ್ಡ ಕ್ರಾಂತಿಯೇ ಆಗಿಹೋಯಿತು. ಪ್ರಮುಖವಾಗಿ ಆರು ವಿಧಗಳು ಬೆಳೆದು ಬಂದವು. ಒಂದೇ ಮಾತ್ರೆಯ ವ್ಯತ್ಯಾಸವಾದರೂ ಅವುಗಳ ಲಯ, ಸೊಗಸು ಅದ್ಭುತವಾದುದ್ದು. ಕೆಳಗೆ ಕೊಟ್ಟಿರುವ ಉದಾಹರಣೆಗಳನ್ನು ಓದಿಕೊಳ್ಳುವಾಗ ಹಾಡಿಕೊಳ್ಳುವಾಗ ಅವುಗಳ ಲಯದ ವ್ಯತ್ಯಾಸ, ಸೊಗಸು ನಿಮಗೇ ಮನದಟ್ಟಾಗುತ್ತದೆ.

ಶರ ಷಟ್ಪದಿ
4 4                         
4 4                          
4 4 4  ಗುರು              
4 4                          
4 4                           
4 4 4 ಗುರು               

ಈಶನ/ಕರುಣೆಯ
ನಾಶಿಸು/ವಿನಯದಿ
ದಾಸನ/ಹಾಗೆಯೆ/ನೀಮನ/ವೇ
ಕ್ಲೇಶದ/ವಿಧವಿಧ
ಪಾಶವ/ಹರಿದು ವಿ
ಲಾಸದಿ/ಸತ್ಯವ/ತಿಳಿಮನ/ವೇ

ಕುಸುಮ ಷಟ್ಪದಿ
5 5                       
5 5                       
5 5 5 ಗುರು            
5 5                       
5 5                       
5 5 5 ಗುರು            

ಅವರವರ/ದರುಶನಕೆ
ಅವರವರ/ವೇಷದಲಿ
ಅವರವರಿ/ಗೆಲ್ಲ ಗುರು/ನೀನೊಬ್ಬ/ನೆ
ಅವರವರ/ಭಾವಕ್ಕೆ
ಅವರವರ/ಪೂಜೆಗಂ
ಅವರವರಿ/ಗೆಲ್ಲ ಶಿವ/ನೀನೊಬ್ಬ/ನೆ

ಭೋಗ ಷಟ್ಪದಿ
3 3 3 3                  
3 3 3 3                  
3 3 3 3 3 3 ಗುರು    
3 3 3 3                   
3 3 3 3                   
3 3 3 3 3 3 ಗುರು            

ಮೆರೆಯು/ತಿದ್ದ/ಭಾಗ್ಯ/ವೆಲ್ಲ
ಹರಿದು/ಹೋಯಿ/ತೆನುತ/ತಿರುಕ
ಮರಳಿ/ನಾಚಿ/ಹೋಗು/ತಿದ್ದ/ಮರುಳ/ನಂತೆಯೇ
ಧರೆಯ/ಭೋಗ/ವನ್ನು/ಮೆಚ್ಚಿ
ಪರವ/ಮರೆತು/ಕೆಡಲು/ಬೇಡ
ಧರೆಯ/ಭೋಗ/ಕನಸಿ/ನಂತೆ/ಕೇಳು/ಮಾನ/ವಾ

ಭಾಮಿನಿ ಷಟ್ಪದಿ
3 4 3 4                 
3 4 3 4                 
3 4 3 4 3 4 ಗುರು  
3 4 3 4                 
3 4 3 4                  
3 4 3 4 3 4 ಗುರು   

ಇಳಿದು/ಬಂದಳು/ವರ್ಷೆ/ಯಂದದಿ/
ಒಲಿದು/ಬಂದಳು/ನಲ್ಲೆ/ಯಂದದಿ/
ತೊಳೆಯ/ಬಂದಳು/ಮನದ/ಕಲ್ಮಶ/ಹರಿಯ/ಮೆರೆಸಲು/ತಾ
ನಿಳೆಯ/ರೂಪದಿ/ಸಹನೆ/ಯಿಂದಾ/
ಕಳೆಯ/ಬಂದಳು/ಮೋಹ/ಮತ್ಸರ/
ಗಳನು/ಭಾಮಿನಿ/ನಾರ/ಣಪ್ಪನಿ/ಗೊಲಿದ/ಳಿಂದುಮು/ಖೀ

ಪರಿವರ್ಧಿನಿ ಷಟ್ಪದಿ
4 4 4 4
4 4 4 4
4 4 4 4 4 4 ಗುರು
4 4 4 4
4 4 4 4
4 4 4 4 4 4 ಗುರು

ಸ್ಮರ ರಾ/ಜ್ಯದ ಮೈ/ಸಿರಿ ಶೃಂ/ಗಾರದ
ಶರನಿಧಿ/ರತಿ ನಾ/ಟ್ಯದ ರಂ/ಗ ಸ್ಥಳ
ವಿರಹದ/ನೆಲೆವೀ/ಡೋಪರ/ಕೂರಾ/ಟದ ಕೊಸ/ರಿನ ಗೊ/ತ್ತು
ಸರಸರ/ಸಂತವ/ಣಿಯ ಮನೆ/ಸುಗ್ಗಿಯ
ಪುರವಾ/ಗರ ಭೂ/ಪಾಲಯ/ವಪ್ಪಂ
ತಿರೆಪೇ/ಳಿದನಮ/ರುಕವನು/ದೇಪಮ/ಹೀಪತಿ/ಕನ್ನಡಿ/ಸಿ

ವಾರ್ಧಕ ಷಟ್ಪದಿ
5 5 5 5
5 5 5 5
5 5 5 5 5 5 ಗುರು
5 5 5 5
5 5 5 5
5 5 5 5 5 5 ಗುರು

ಪುರದಪು/ಣ್ಯಂಪುರುಷ/ರೂಪಿಂದೆ/ಪೋಗುತಿದೆ
ಪರಿಜನದ/ಭಾಗ್ಯವಡ/ವಿಗೆನಡೆಯು/ತಿದೆಸಪ್ತ
ಶರಧಿಪರಿ/ವೃತಧರೆಯ/ಸಿರಿಯಸೊಬ/ಗಙತ/ವಾಸಕ್ಕೆ/ಪೋಗುತಿದೆ/ಕೋ
ಎರೆವದೀ/ನಾನಾಥ/ರಾನಂದ/ವಡಗುತಿದೆ
ವರಮುನೀಂ/ದ್ರರಯಾಗ/ರಕ್ಷೆಬಲ/ವಳಿಯುತಿದೆ
ನಿರುತವೆಂ/ದೊಂದಾಗಿ/ಬಂದುಸಂ/ದಿಸಿನಿಂದ/ಮಂದಿನೆಱೆ/ಮೊಱೆಯಿಟ್ಟು/ದು

ಉದ್ಧಂಡ ಷಟ್ಪದಿ
ಕೇವಲ ಈ ಆರು ವಿಧಗಳಿಗೇ ಷಟ್ಪದಿಯ ಬೆಳವಣಿಗೆ ಸೀಮಿತವಾಗಿ ಉಳಿಯಲಿಲ್ಲ. ಬೇರೆ ಇನ್ನೊಂದು ಉದ್ಧಂಡ ಷಟ್ಪದಿ ಎನ್ನುವ ಪ್ರಕಾರವೂ ಬೆಳಕಿಗೆ ಬಂತು. ಅದರಲ್ಲಿಯೇ ಎರಡು-ಮೂರು ಕವಲುಗಳಾದವು. ಆದರೆ ಅದು ಅಷ್ಟೊಂದು ಜನಪ್ರಿಯವಾಗಿ ಬೆಳೆಯಲಿಲ್ಲ. ಒಂದೆರಡು ಉದಾಹರಣೆಗಳನ್ನು ನೋಡಬಹುದು.

4 4 4 4 4
4 4 4 4 4
4 4 4 4 4 4 4 ಗುರು
4 4 4 4 4
4 4 4 4 4
4 4 4 4 4 4 4  ಗುರು

ಬಂದಳು/ಬಂದಳು/ಚಿನ್ನದ/ಚಿಗರೆಯ/ತೆರದಲಿ
ತಂದಳು/ತಂದಳು/ಕಣ್ಮಣಿ/ಸೊಬಗನು/ಸಿರಿಯಲಿ
ಚೆಂದವೊ/ಚೆಂದವೊ/ಈಜಗ/ಎನ್ನುತ/ಕುಣಿಯುತ/ಕುಣಿಸುತ/ಹಾಡಿದ/ಳು

4 4 4 4 4
4 4 4 4 4
4 4 4 4 4 4 4 4
4 4 4 4 4
4 4 4 4 4
4 4 4 4 4 4 4 4

ಪರಿಣಾ/ಮದಕಣಿ/ಶಾಂತಿಯ/ನಿಧಿಭ/ಕ್ತಿಯಸಾ
ಗರುಮೇ/ಕೋನಿ/ಷ್ಟೆಯಹರ/ಗತಿಸಾ/ಮರ್ಥ್ಯದ
ತರುನೀ/ತಿಯಕಡೆ/ಉದಯಾ/ಗಾರಂ/ಪುಣ್ಯದ/ಪಂಜಂ/ಸತ್ಯದ/ಸದನಾ

ಈ ಉದಾಹರಣೆಗಳಲ್ಲಿ ನಿಮಗಿಷ್ಟವಾದುದನ್ನು ಮೇಲಿಂದ ಮೇಲೆ ಹಾಡಿಕೊಳ್ಳಿ. ನೀವೇನಾದರು ಕವಿತೆ ಬರೆಯುವವರಾಗಿದ್ದರೆ, ನಿಮ್ಮಿಂದ ಅದೇ ಲಯದ ಕವಿತೆ ಹುಟ್ಟುತ್ತದೆ. ಪಂಡಿತರಿಂದ ತಿಣುಕಿ ಸೃಷ್ಟಿಯಾದುದಲ್ಲ; ಜನಪದರಿಂದ ಸಹಜವಾಗಿ ಸೃಷ್ಟಿಯಾದ ಛಂದೋಗಂಗೋತ್ರಿ! ಇದೇ ದೇಸಿ ಛಂದಸ್ಸಿನ ವೈಶಿಷ್ಟ್ಯ.



Wednesday, December 23, 2009

ಮೂಗಿಗೆ ಮೂಗು, ಕಿವಿಗೆ ಕಿವಿ : ಪಾಕಿಸ್ತಾನ ನ್ಯಾಯಾಲಯದ ತೀರ್ಪು

ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟಿನ ಆದೇಶದ ಮೇರೆಗೆ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ತೀರ‍್ಮಾನ ನೀಡಿದೆ. ಶೇರ್ ಮೊಹಮದ್ ಮತ್ತು ಅಮಾನತ್ ಅಲಿ ಎಂಬಿಬ್ಬರು ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳನ್ನು ಅಪಹರಿಸಿ ಆಕೆಯ ಮೂಗು ಕಿವಿಗಳನ್ನು ಕತ್ತರಿಸಿ ಹಾಕಿದ್ದರು. ಈಗ ನ್ಯಾಯಾಲಯ, ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಇಸ್ಲಾಂ ಧರ‍್ಮದ ಶಿಕ್ಷೆಯ ಭಾಗವಾಗಿ ಈ ಶಿಕ್ಷೆ ನೀಡಿದೆ. ಇದರ ಜೊತೆಗೆ ಇಬ್ಬರು ಅಪರಾಧಿಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳ ದಂಡ ಮತ್ತು ಜೀವಾವಧಿ ಶಿಕ್ಷೆಯನ್ನೂ ನೀಡಿದೆ. ಯುವಿಗೆ ಒಟ್ಟು ಏಳು ಲಕ್ಷ ರೂ ಪರಿಹಾರ ಕೊಡಿಸಿದೆ.
ಈ ಘಟನೆ ನನಗೆ ಇತಿಹಾಸದ ಒಂದು ಘಟನೆಯನ್ನು ನೆನಪಿಗೆ ತಂದಿತು. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ತಮಿಳು ಸೆಲ್ವಿ ಅವರ ‘ನೇಪಥ್ಯ’ ಪುಸ್ತಕದಲ್ಲಿ ಇದನ್ನು ಓದಿದ್ದೆ. ಅವರ ಪುಸ್ತಕದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮೂಗು ಕತ್ತರಿಸುವ ಪ್ರಕ್ರಿಯೆ’ ಎನ್ನುವ ಲೇಖನವಿದೆ. ಅದರಲ್ಲಿ ಹರಿಹರ ಮಹಾಕವಿಯ ‘ಕಳಚೆಂಗಪೆರುಮಾಳೆಯರ ರಗಳೆ’ ಹಾಗೂ ‘ಕಳರ್‌ಸಿಂಗ ನಾಯನಾರ್ ಪುರಾಣ’ದ ಘಟನೆಯೊಂದನ್ನು ವಿವರಿಸಲಾಗಿದೆ.
ಘಟನೆ ಹೀಗಿದೆ.
‘ಕಳಚೆಂಗ ಪೆರುಮಾಳ್’ ಅಥವಾ ‘ಕಳರ್ ಸಿಂಗ ನಾಯನಾರ್’ ಹೆಸರಿನ ದೊರೆ ಇತಿಹಾಸದಲ್ಲಿ ದಾಖಲಾಗಿರುವ ‘ವೀರನರಸಿಂಹ’. ಈತನ ಹೆಂಡತಿ ‘ಚೊಲ್ಲಡಿಯನಾಚಿ’ ಅಥವಾ ‘ಚೊಲ್ಲಡಿಯದೇವಿ’. ಇವಳು ಒಂದು ದಿನ ತನ್ನ ಪರಿವಾರದೊಂದಿಗೆ ಶಿವಾಲಯಕ್ಕೆ ಬರುತ್ತಾಳೆ. ಆ ಶಿವಾಲಯದಲ್ಲಿ ಮಹಾನ್ ಶಿವಭಕ್ತನಾದ ‘ಚಿರುತೊಣೆಯಾಂಡ’ ಎಂಬುವವನು ಇರುತ್ತಾನೆ. ಅಲ್ಲಿ ಶಿವನಿಗೆ ಅಲಂಕರಿಸಲು ಹಲವಾರು ವಿಧದ ಹೂವುಗಳನ್ನು ಮಾಲೆಯಾಗಿ ಕಟ್ಟಲಾಗಿರುತ್ತದೆ. ಪ್ರದಕ್ಷಿಣೆಯಲ್ಲಿ ಬರುತ್ತಿದ್ದ ‘ಚೊಲ್ಲಡಿಯನಾಚಿ’ಯ ಕಣ್ಣಿಗೆ ಆ ಹೂವುಗಳ ಮಧ್ಯ ಕಣ್ಣಿಗೆ ಕುಕ್ಕುವಂತಿದ್ದ ‘ಚೆಂಗಣಿಗಿಲೆ’ ಹೂವು ಬೀಳುತ್ತದೆ. ಅವಳು ಅದನ್ನು ಆಸೆಯಿಂದ ಕೈಗೆತ್ತಿಕೊಂಡು ಮೂಗಿನ ಬಳಿ ಕೊಂಡೊಯ್ದು ಅದರ ಸುವಾಸನೆಯನ್ನು ಆಘ್ರಾಣಿಸುತ್ತಾಳೆ. ಅದನ್ನು ಗಮನಿಸಿದ ‘ಚಿರುತೊಣೆಯಾಂಡ’ನು ‘ಶಿವದ್ರೋಹಿ! ಶಿವನ ಮುಡಿಗೇರಿಸಲು ತಂದಿದ್ದ ಪುಷ್ಪವನ್ನು ವಾಸಿಸಿದೆ’ ಎಂದು ನಿಂದಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ‘ಇದೇ ಮೂಗಲ್ಲವೆ ಹೂವನ್ನು ಮೂಸಿದ್ದು’ ಎಂದು ಆಕೆಯ ಮೂಗನ್ನೇ ಕತ್ತರಿಸಿ ಹಾಕುತ್ತಾನೆ! “ಘರಿಲನರಿದಂ ಮೂಗನಂ ಅಮ್ಮಮ್ಮ ತೊಣೆಯಾಂಡನ್” ಎಂದು ಕವಿ ಉದ್ಘರಿಸುತ್ತಾನೆ!
ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ರಾಜ ‘ವೀರನರಸಿಂಹ’ನಿಗೆ ವಿಷಯ ತಿಳಿಯುತ್ತದೆ. ರಕ್ತಸಿಕ್ತವಾದ ಮೂಗಿನೊಂದಿಗೆ ರಾಣಿ ರಾಜನ ಮುಂದೆ ನಿಲ್ಲುತ್ತಾಳೆ. ಆಕೆಯ ಪರಿವಾರದವರು ‘ರಾಣಿಯ ಮೂಗನ್ನು ಅರಿದವನಿಗೆ ಶಿಕ್ಷೆಯಾಗಲಿ’ ಎಂದು ಅಪೇಕ್ಷಿಸುತ್ತಾರೆ. ಆದರೆ ‘ವೀರನರಸಿಂಹ’ ಪಾಕಿಸ್ತಾನದ ನ್ಯಾಯಾಲಯದಂತೆ ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಸಿದ್ಧಾಂತದವನಲ್ಲ. ‘ಚಿರುತೊಣೆಯಾಂಡ’ನನ್ನು ಕರೆಸಿ ಹೀಗೆ ಹೇಳುತ್ತಾನೆ. ‘ಚಿರುತೊಣೆಯಾಂಡರೆ, ಹೂವನ್ನು ಮೊದಲು ತೆಗೆದುಕೊಟ್ಟಿದ್ದು ಹಸ್ತ. ಆಮೇಲೆ ತಾನೆ ಮೂಗು ಅದನ್ನು ಮೂಸಿದ್ದು. ಇದನ್ನು ಮರೆತು ಮೂಸಿದ ಮೂಗನ್ನು ಮಾತ್ರ ಕತ್ತರಿಸಿ ಬಿಟ್ಟಿರಿ’ ಎಂದು ಹೇಳುತ್ತಾನೆ. ಹಾಗೆ ಹೇಳಿ ಸ್ವತಃ ತಾನೇ ಮುಂದುವರೆದು ‘ಚೊಲ್ಲಡಿಯನಾಚಿ’ಯ ಬಲಗೈಯನ್ನು ಕತ್ತರಿಸಿ ಹಾಕುತ್ತಾನೆ. ಆತನೂ ಶಿವಭಕ್ತ! ತನ್ನ ಶಿವಭಕ್ತಿಯನ್ನು ಈ ರೀತಿಯಲ್ಲಿ ಪ್ರಕಟಿಸುತ್ತಾನೆ.
ಇನ್ನು ನಮ್ಮ ದೇವನಾದ ‘ಶಿವ’ ಸುಮ್ಮನಿರುತ್ತಾನೆಯೇ? ಸ್ವತಃ ಕೈಲಾಸದಿಂದ ಇಳಿದು ಬರುತ್ತಾನೆ. ತನ್ನ ಭಕ್ತರ ಸಾಹಸವನ್ನು ಮೆಚ್ಚಿಕೊಳ್ಳುತ್ತಾನೆ. ಇತ್ತ ರಾಣಿಯ ಮೂಗನ್ನು ಸರಿಪಡಿಸುತ್ತಾನೆ!
ಸ್ತ್ರೀಸಹಜವಾದ ಆಸೆಯಿಂದ ಹೂವನ್ನು ಇಷ್ಟಪಟ್ಟಿದ್ದೇ ರಾಣಿ ಮಾಡಿದ ತಪ್ಪು. ಅದಕ್ಕೆ ಈ ಮಹಾನ್ ಶಿವಭಕ್ತರು ನೀಡುವ ಶಿಕ್ಷೆ ಶಿವಭಕಿಯ ಪ್ರತೀಕ! ಪಾಪ ‘ಚೊಲ್ಲಡಿಯನಾಚಿ’. ಸ್ವತಃ ಶಿವಭಕ್ತೆಯಾದರೂ ಕೆಲ ಕಾಲವಾದರೂ ಮೂಗು ಹಾಗೂ ಬಲಗೈ ಕತ್ತರಿಸಿಕೊಂಡ ನೋವನ್ನು ಅನುಭವಿಸಬೇಕಾಯಿತು. ಇತಿಹಾಸದುದ್ದಕ್ಕೂ ಹೀಗೆ. ಮಹಿಳೆ ಪುರುಷರ ದೌರ್ಜನ್ಯಕ್ಕೆ ವಿನಾಕರಾಣ ಗುರಿಯಾಗುತ್ತಾಳೆ. ಏಕೆಂದರೆ ಆಕೆ ಸಹನಾ ಧರಿತ್ರಿ!
ಮೂಗು ಕೈ ಕತ್ತರಿಸಿದ ಘಟನೆಯಲ್ಲಿ ವಾಸ್ತವಾಂಶ ಇದೆಯೆನ್ನಬಹುದು. ಆದರೆ ಶಿವ ಬಂದು ಆಕೆಗೆ ಕತ್ತರಿಸಿದ್ದ ಮೂಗನ್ನು ಕೈಯನ್ನು ವಾಪಸ್ ಕೊಟ್ಟ ಎಂಬುದರಲ್ಲಿ ವಾಸ್ತಾವಾಂಶ ಇದೆ ಎನ್ನಲಾದೀತೆ? ಮೊದಲನೆಯದು ಮೂರ್ತವಾದರೆ ಎರಡನೆಯದು ಅಮೂರ್ತ! ಬಹುಶಃ ಆಕೆಯ ಸಹನೆಯೇ ಶಿವಸ್ವರೂಪದ್ದು! ಆಕೆ ಅವರು ಮಾಡಿದ್ದು ಸರಿ ಎಂದು ತನ್ನ ನವನ್ನು ತಾನೇ ಅನುಭವಿಸಿರುವುದೇ ಹೆಚ್ಚು ವಾಸ್ತವ ಎನ್ನಿಸುತ್ತದೆ. ಅತ್ತ ಪಾಕಿಸ್ತಾನದ ಯುವತಿಯದೂ ಅದೇ ಕಥೆಯಲ್ಲವೆ? ಧನಪರಿಹಾರವೇನೋ ಸಿಕ್ಕಿತು. ಆದರೆ ಕಳೆದುಕೊಂಡ ಮೂಗು ಕವಿಗಳನ್ನು ಸರಿಪಡಿಸಲಾದೀತೆ? ಈ ದೇವರು (ಇದ್ದರೆ) ಎಷ್ಟು ಕಟುಕನಪ್ಪ? ಜನರಲ್ಲಿ ಇಂತಹ ನೀಚ ಪ್ರವೃತ್ತಿಯನ್ನು ಆತ ಪ್ರೇರೇಪಿಸುವುದಾದರೂ ಏಕೆ?
ಈ ಎರಡೂ ಘಟನೆ ಪರಸ್ಪರ ಹೋಲಿಕೆ ಮಾಡಿ ಸರಿ ಯಾವುದು ತಪ್ಪು ಯಾವುದು ಎಂದು ನಿರ‍್ಧಾರ ಮಾಡುವುದಕ್ಕಲ್ಲ. ಇತಿಹಾಸದಲ್ಲಿ ಎಂತೆಂತಹ ಘಟನೆಗಳು ನಡೆದು ಹೋಗಿವೆ, ಅಥವಾ ನಮ್ಮ ಸಾಹಿತ್ಯ ಪರಂಪರೆ ಏನನ್ನು ಪೋಷಿಸಿಕೊಂಡು ಬಂದಿದೆ ಎಂಬುದನ್ನು ಪರಿಭಾವಿಸಲು, ಅಷ್ಟೆ.

Friday, December 04, 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!


ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ. ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ. ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ ಕಾಣುತ್ತಿಲ್ಲ. ಮನಸಿಜನ ಮಾಯೆ ವಿಧಿವಿಳಸನದ ನರಂಬಡೆಯೆ, ಕೊಂದು ಕೂಗದೆ ನರರನ್ನು. ಓ ವಿಧಿಯೆ, ಈಕೆಯಷ್ಟು ಹಠಮಾರಿ. ಹೆಣ್ಣೊಬ್ಬಳು ನನ್ನ ವಿಷಯದಲ್ಲಿ ಇಷ್ಟೊಂದು ಕಠಿಣಳಾಗುತ್ತಿರುವುದು ಇದೇ ಮೊದಲು. ನಾನವಳನ್ನು ಪೌದನಪುರದರಮನೆಯಲ್ಲಿ ಕಂಡಾಗ ಅವಳು ಹೇಗಿದ್ದಳು. ಚಂದ್ರೋದಯವಾಗಿತ್ತು ನನ್ನ ಮನದಂಗಳಕ್ಕೆ. ಅವಳ ನಗೆ, ನಡೆ, ನುಡಿ ಸುರಸ್ತ್ರೀಯರನ್ನೂ ನಾಚಿಸಿದ್ದವು. ಕಣ್ಗಳನ್ನು ಹಿಡಿದು ನಿಲ್ಲಿಸುವ ಹೂವಿನ ಕಾಂತಿ, ಗಂಧ, ಸುಗಂಧ. ಓ ನಂದೆ, ನನ್ನ ಸುನಂದೆ ನೀನೆಷ್ಟು ಸುಂದರವಾಗಿದ್ದೆ, ಸರಸಳಾಗಿದ್ದೆ, ಸರಸಿಯಾಗಿದ್ದೆ.

ಆದರೆ ಯಾವ ಗಳಿಗೆಯಲ್ಲಿ ನನ್ನ ಮನದೊಳಗೆ ಆ ಸ್ಮರನೊಕ್ಕನೋ? ಅವಳನೆಗೆ ಕಾಮದರಗಿಣಿಯಾಗಿ ನನ್ನ ಹುಚ್ಚನನ್ನಾಗಿಸಿದ್ದಳಲ್ಲ. ಆ ಆನಂದ, ಆ ಭಾವ ಉತ್ಕರ್ಷಗಳನ್ನು ಏನೆಂದು ಹೇಳಲಿ? ಕಡುನಂಟನ ಸತಿಯ ರೂಪು ಸೋಲಿಸಿತೆನ್ನನು, ಬೇಟೆಗಾರನ ಬಿಲ್ಲಿನಿಂದ ಹೊರಟ ಬಾಣ ಹುಲ್ಲೆಯ ಕೊಂದಂತೆ.

ಯಾರಲ್ಲಿಯೂ ಹೇಳಬಾರದ, ಹೇಳಲಾಗದ ಸ್ಥಿತಿ. ಆದರೂ ಈ ಅಂತರಂಗದ ಮಿತ್ರರಿರುತ್ತಾರಲ್ಲ, ನರ್ಮಸಚಿವರು! ಇವರು ರಾಜರ ಪತನಕ್ಕೆ ಘೋರಿ ತೋಡುವ ಸ್ಮಶಾಣರುದ್ರರು! ಸುದರ್ಶನ, ಆಗ ನೀನು ಏನೆಂದು ಹೇಳಿದೆ? ‘ಸುನಂದೆಯೂ ನಿನ್ನನ್ನು ಕೂಡುವ ಭಾವದಿಂದ ನೋಡುತ್ತಾಳೆ’ ಎಂದು ನನ್ನ ಕಾಮಾಗ್ನಿಗೆ ತುಪ್ಪವನ್ನು ಸುರಿದುಬಿಟ್ಟೆಯಲ್ಲ. ನೀನು ಹೇಳಿದ್ದೇ ನಿಜವಾಗಿದ್ದರೆ ಇಲ್ಲಿ ಇವಳೇಕೆ ಇಷ್ಟು ಹಠ ಮಾಡುತ್ತಿದ್ದಾಳೆ? ನೀನು ಸುಳ್ಳಾಡಿದ್ದೆ. ಅವಳನ್ನು ಕದ್ದು ತಂದು ನಾನು ಮಿತ್ರದ್ರೋಹಿಯಾದೆ! ನನ್ನ ಪಥನಕ್ಕೆ ನಾಂದಿ ಹಾಡಿ ನೀನೂ ಮಿತ್ರ ದ್ರೋಹಿಯಾದೆ!

ಬೇಟೆಗೆಂದು ಹೋದಾಗ ಸಂದರ್ಭವೂ ನನಗೆ ಅನುಕೂಲವಾಗಿ ವಿಧಿಯೂ ತನ್ನ ಬೇಳೆ ಬೇಯಿಸಿಕೊಂಡಿತಲ್ಲ! ಇವಳಿಗಾಗಿ, ಈ ಸುನಂದೆಗಾಗಿ ಮಿತ್ರ ದ್ರೋಹ ಮಾಡಿದೆ. ಸ್ವಾಮಿನಿಷ್ಟ ಸಿಂಹಚೂಡನ ಕೊರಳ ಕೊಯ್ದೆ. ನನ್ನ ಕೀರ್ತಿಪತಾಕೆಯನ್ನು ಕೆಳಕ್ಕೆ ಕೆಡವಿದೆ. ನರಕದಲ್ಲಿ ಸ್ಥಳ ಕಾಯ್ದಿರಿಸಿಕೊಂಡೆ. ಯಾವ ಮಿತ್ರನನ್ನು ಆಲಂಗಿಸಿ ಮೈದಡವಬೇಕಾಗಿತ್ತೋ ಅದೇ ಕೈಯಲ್ಲಿ, ಅದೇ ಮಿತ್ರನ ಮೇಲೆ ಯುದ್ಧಮಾಡಬೇಕಾಗಿದೆ. ಇದರಿಂದಲೂ ನಿನಗೆ ತಿಳಿಯುತ್ತಿಲ್ಲವೆ. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು!

ಸುನಂದೆ, ದೇವಿ ಸುನಂದೆ, ನಾನದೆಷ್ಟು ಪ್ರಲೋಭನೆಗಳನ್ನು ಒಡ್ಡಿದೆ? ನೀನು ಸೋಲಲಿಲ್ಲ. ನಿಜವಾಗಿಯೂ ನೀನು ವಸುವನ್ನು ಅಷ್ಟೊಂದು ಪ್ರೀತಿಸುತ್ತೀಯ? ನಾನು ಅವನಿಗಿಂತ ಯಾವುದರಲ್ಲಿ ಕಡಿಮೆ ಹೇಳು? ದೇವಿ, ನನಗೆ ನನ್ನ ಕೀರ್ತಿ ಕಪ್ಪಾದ ಭಯವಿಲ್ಲ. ವಸುವಿನ ಭಯವಿಲ್ಲ. ನನಗೆ ನಿನ್ನದೇ ಭಯ! ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲು ಭಯವಾಗುತ್ತಿದೆ.

ವಸುವಿನ ಮೇಲಿನ ಪ್ರೀತಿಯೋ, ಇಲ್ಲ ಈ ವಯಸ್ಸಿಗೇ ವೈರಾಗ್ಯವೋ. ನಾನು ನಿನ್ನನ್ನು ಹೊತ್ತು ತರುವಾಗ ನೀನೇನು ಹೇಳಿದೆ?

‘ಹಾಳು ಮನೆಯಲ್ಲಿ ತುಪ್ಪದ ಮಡಕೆಯನ್ನು ಹುಡುಕುವ ನಾಯಿ’ ಎಂದೆ. ಬಯ್ದೆ. ಅಥವಾ ಸಂಪದ್ಭರಿತವಾಗಿದ್ದ ಮನೆ ಮನಸ್ಸು ನನ್ನ ಸ್ಪರ್ಶಮಾತ್ರದಿಂದಲೇ ಹಾಳಾಯಿತೆ? ಆದರೂ ನನ್ನನ್ನು ಕಂಡಾಗ, ತನ್ನತ್ತಲೇ ಬೀಳುತ್ತಿರುವ ತುಪ್ಪದ ಕಡೆಗೆ ನುಗ್ಗುವ ಬೆಂಕಿಯ ಜ್ವಾಲೆಗಳಂತೆ ಉರಿದು ಬೀಳುತ್ತೀಯ. ಅಂದರೆ, ಅಂದರೆ ನೀನಿನ್ನೂ ಖಾಲಿಯಾಗಿಲ್ಲ.

ನೀನು ನನ್ನನ್ನು ‘ದೋಷಕಾರ’ ಎಂದೆ. ಕೋಪವಿಲ್ಲ ದೇವಿ ನನಗೆ. ಕಮಲೆ ದಿನಕರನಿಗೆ ಮೊಗವೊಡ್ಡಬಹುದು. ಆದರೆ ದೋಷಕಾರನಿಗೆ ಆ ಅಗಾದ ಜಲರಾಶಿಯೇ ಮೊಗವೊಡ್ಡುವುದಿಲ್ಲವೆ? ‘ಮಾವಿನ ಮರದಲ್ಲಿ ರಮಿಸುತ್ತದೆಯಲ್ಲದೆ, ಕೋಗಿಲೆ ಬೇವಿನಮರದಲ್ಲಿ ರಮಿಸುವುದಿಲ್ಲ’ ಎಂದೆ. ಹೀಗೆ ಚುಚ್ಚು ಮಾತಿನಿಂದ ನೀನು ನನ್ನೇಕೆ ಕೊಲ್ಲುತ್ತಿದ್ದೀಯ? ನೀನು, ನಿನ್ನ ಚೆಲುವು ನನ್ನ ಹೃದಯವನ್ನಷ್ಟೇ ಅಪಹರಿಸಿದಿರಿ. ನಾನು ನಿನ್ನನ್ನೇ ಅಪಹರಿಸಿದೆ. ಇಬ್ಬರೂ ಅಪರಾದಿಗಳಲ್ಲವೇ?

* * *

ಬಾ, ಸೃಷ್ಟಿ ಬಾ. ವಿಷಯ ತಿಳಿಯಿತಷ್ಟೆ. ಬ್ರಾಹ್ಮೀ ಸಮೀಪಿಸುತ್ತಿದೆ. ಎರಡು ದಿನಗಳಿಂದ ನಡೆದ ಊಹಿಸಲಸಾದ್ಯವಾದ ಘಟನೆಗಳಿಂದ ಜರ್ಜಳಿತಳಾಗಿ, ದೇಹಾಯಾಸದಿಂದ ವಿಸ್ಮೃತಿ ಹೋಗಿದ್ದ ಸುನಂದೆಯು ಈಗ ಎಚ್ಚರವಾಗಿದ್ದಾಳೆ. ಅವಳ ಮನಸ್ಸಿನಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿರಬೇಕು. ಅವಳ ಮನಸ್ಸಿನಲ್ಲಿರುವುದೇನೆಂದು ತಿಳಿದು ಬಾ. ಆಗ ನಿನಗೊಂದು ಪೂರ್ಣಚಿತ್ರಣ ದೊರೆಯಬಹುದು.

* * *

ಅಯ್ಯೋ ದೇವರೆ. ಏನೆಲ್ಲಾ ಆಗಿಹೋಯಿತು. ನನ್ನ ಸ್ವಾಮಿ ಎಷ್ಟೊಂದು ನೊಂದನೋ ಏನೋ. ವಿಷಯವೊಂದು ತಿಳಿಯುತ್ತಿಲ್ಲ. ನೆನ್ನೆ ಹೊರಗೆ ಯುದ್ಧದ ಕೋಲಾಹಲವಿತ್ತು. ನನ್ನ ದೇವರೇ ಬಂದಿರಬೇಕು. ಇಂದು ಖಂಡಿತ ನನ್ನ ಬಿಡುಗಡೆಯಾಗುತ್ತದೆಯಲ್ಲವೆ? ದೇವರೇ, ನಾನು ನನ್ನ ಸ್ವಾಮಿಯನ್ನು ಸೇರುವಂತಾದರೆ ಸಾಕು. ಮತ್ತೆ ನಾನೇನ್ನೂ ನಿನ್ನಲ್ಲಿ ಬೇಡುವುದಿಲ್ಲ.

ಈ ಪಾಪಿಯು ಎಂಥ ನೀಚ ಕೆಲಸಕ್ಕೆ ಕೈ ಹಚ್ಚಿದ್ದಾನೆ. ಅರಮನೆಗೆ ಬಂದ ಮೊದಲ ದಿನದಿಂದಲೇ ಈ ನಾಯಿಯ ನೋಟದಲ್ಲಿ ಅಸಹಜತೆಯನ್ನು ಕಂಡೆ. ಮನಸ್ಸು ಕೇಡನ್ನು ಶಂಕಿಸಿತ್ತಾದರೂ, ಸುರಮ್ಯಪತಿ ವಸುಷೇಣನ ಕಡುನಂಟನಾದ್ದರಿಂದ ಅಪಾಯವಿಲ್ಲವೆಂದುಕೊಂಡೆ. ಮೊನ್ನೆ ನನ್ನವರು ವನಭೋಜನದ ವ್ಯವಸ್ಥೆಗೆ, ಸ್ವತಃ ನನ್ನನ್ನೇ ಬರಲು ಹೇಳಿದಾಗ ಅನುಮಾನಿಸುತ್ತಲೇ ಹೋದೆ. ಆಗ ಆಗಿದ್ದೇನು? ಈ ಪಾಪಿ ತನ್ನ ನೀಚ ಕೈಗಳಿಂದ ನನ್ನ ತೋಳು ತೊಡೆಗಳನ್ನು ಹಿಡಿದು, ಎತ್ತಿ ರಥದಲ್ಲಿ ಹಾಕಿಕೊಂಡು ಹೊರಟನಲ್ಲ. ಆಗಲೇ ನನ್ನ ಸರ್ವಸ್ವವೆಲ್ಲಾ ಸೋರಿಹೋಯಿತು. ಆತನಿಗೆ ಬೇಡಿಕೊಂಡೆ, ಕಾಲಿಡಿದುಕೊಂಡು. ‘ನಾನು ಪರಸ್ತ್ರೀ. ನಿನ್ನ ಕಡುನಂಟನ ಸತಿ. ನಿನ್ನ ಸವಸಹೋದರಿಯೆಂದುಕೊಂಡು ಕನಿಕರಿಸು. ನಿನಗೆ ಇಹಪರದ ಭಯವಾದರೂ ಇಲ್ಲವೆ?’ ಹೀಗೆ ಇನ್ನು ಏನೇನೊ, ಪರಿಪರಿಯಾಗಿ ಬೇಡಿಕೊಂಡೆ. ಬಡಬಡಿಸಿದೆ. ಬಯ್ದೆ. ಉಗಿದೆ. ಆದರೂ ಪಾಪಿ ಕರಗಲಿಲ್ಲ.

ಜೊತೆಯಲ್ಲಿದ್ದ ಚಿತ್ರಲತೆ ಮತ್ತು ಮದನಪತಾಕೆಯರು ಏನೆಂದುಕೊಂಡರೊ. ಇಂಥ ವಿಷಯಗಳಲ್ಲಿ ಹೆಂಗಸಿನದೇ ತಪ್ಪಾಗಿ ಎಣಿಸಲ್ಪಡುತ್ತದೆ, ಈ ಕ್ರೂರ ಜಗತ್ತಿನಲಿ!

ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ, ಸುರಮ್ಯದ ಗಡಿಯಲ್ಲಿ, ಸಾಮಂತ ಸಿಂಹಚೂಡ ಈ ನಾಯಿಯನ್ನೆದುರಿಸಿದಾಗ ನಾನೆಷ್ಟು ದೇವರನ್ನು ಬೇಡಿದ್ದೆ. ಆತನ ಧೀರನಡೆ, ನುಡಿ ನನ್ನ ಮನದಲ್ಲೊಂದಿಷ್ಟು ಆಸೆ ಮೂಡಿತ್ತು. ಆದರೆ ಇಲ್ಲಿಯೂ ಕತ್ತಲೆಯ ಕೈ ಬಲವಾಯಿತು. ‘ಸಿಂಹಚೂಡನಿಗೆ ಸದ್ಗತಿ ದೊರೆಯಲಿ’ ಎಂದು ಪ್ರಾರ್ಥಿಸುವದನ್ನು ಬಿಟ್ಟರೆ ಬೇರೇನನ್ನು ಮಾಡಲಾಗದ ಅಸಹಾಯಕ ಸ್ಥಿತಿ ನನ್ನದು.

ನಾನಿಷ್ಟು ಹಠ ಮಾಡುತ್ತಿದ್ದರೂ ಈ ಪಾಪಿಗೇಕೆ ಅರ್ಥವಾಗುತ್ತಿಲ್ಲ. ‘ಜನ್ಮಜನ್ಮಾಂತರದಲ್ಲಿಯೂ, ಇಹಪರದಲ್ಲಿಯೂ ಪತಿ ವಸುಷೇಣನೇ ನನ್ನ ಬದುಕು, ನನ್ನ ಸಾವು ಮತ್ತು ನನ್ನ ಚಿತೆಗೊಡೆಯ’ ಎಂದು.

* * *

ಸೃಷ್ಟಿ, ಈಗ ಅರ್ಥವಾಯಿತೆ? ನೀನೆಷ್ಟು ಘೋರಕತ್ತಲನ್ನು ಸೃಷ್ಟಿಸಿದ್ದೀಯ ಎಂದು. ಈ ತರದ ಘಟನೆಗಳು ಲೆಕ್ಕವಿಲ್ಲದಷ್ಟು ಪ್ರತಿದಿನ, ಪ್ರತಿದೇಶದಲ್ಲಿಯೂ ನಡೆಯುತ್ತಿವೆ. ಆದರೂ ಜನ ‘ಕಾಲ ಕೆಟ್ಟುಹೋಯಿತು’ ಎಂದು ಬೊಬ್ಬೆ ಹೊಡೆಯುತ್ತಾರೆ! ಇರಲಿ ಬಿಡು. ನಾವಿದಕ್ಕೆ ಉತ್ತರ ಹೇಳಬೇಕಾಗಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ ‘ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ.’ ನಾವು ನಮ್ಮ ನಮ್ಮ ಕರ್ಮಗಳನ್ನು ಮಾಡೋಣ. ಫಲಾಫಲಗಳನ್ನು ‘ಆತ’ನಿಗೆ ಬಿಟ್ಟುಬಿಡೋಣ.

ಹೊ, ಯುದ್ಧದ ಕಹಳೆಯ ಸದ್ದು. ಯುದ್ಧ ಮೊದಲಿಟ್ಟಿತೋ ಏನೊ. ಆದರೆ ಅಲ್ಲಿ ನೋಡಲ್ಲಿ, ಈ ಚಂಡಶಾಸನನು ಸುನಂದೆಯತ್ತ ಹೋಗುತ್ತಿದ್ದಾನೆ. ನಡೆ, ಏನು ನಡೆಯುತ್ತಿದೆ ಎಂದು ನೋಡೋಣ.

* * *

ದೇವಿ ಸುನಂದೆ, ಇಂದು ಕಡೆಯ ದಿನ. ನಿನಗಾಗಿ ನನ್ನ ಹೆಸರು, ಕೀರ್ತಿ, ರಾಜ್ಯ, ಸತಿಯರು, ಇಹಪರ ಸರ್ವಸ್ವವನ್ನೂ ತೊರೆಯಲು ನಾನು ಸಿದ್ಧನಾಗಿದ್ದೇನೆ. ನಿನ್ನ ಸಾವು ಕೂಡಾ ವಸುಷೇಣನದೆಂದೆ. ಆದರೆ ನಾನು ಬಿಡುವುದಿಲ್ಲ, ನಿನ್ನನ್ನು ಸಾಯಲು ಅವನೊಡನೆ. ನೀನು ಸತ್ತರೆ ನಾನೂ ಸಾಯುತ್ತೇನೆ. ಆದರೆ ನೀನು ಸಾಯಬಾರದು. ನೀನು ನನ್ನ ಮನೆಯಲ್ಲಿದ್ದೀಯ ಎಂಬುದಷ್ಟೇ ನನಗೆ ಸಾಕು. ಬೇರಾವ ಸತಿಯೂ, ಸುಖವೂ ನನಗೆ ಬೇಡ. ಇದೋ ಯುದ್ಧಕ್ಕೆ ಹೊರಟೆ. ನಾನೀಗ ಹಿಂದಕ್ಕೆ ಬರುವುದಿರಲಿ ತಿರುಗಿ ನೋಡದಷ್ಟು ದೂರ ಬಂದುಬಿಟ್ಟಿದ್ದೇನೆ. ಇಂದು ನಿರ್ಧಾರದ ದಿನ. ವಸು, ಇಲ್ಲ ಚಂಡ.

* * *

ನೋಡಿದೆಯಾ ಸೃಷ್ಟಿ. ಈ ಹುಂಬನನ್ನು. ಕಾಮದ ಹುಚ್ಚಿನಿಂದ ಏನೇನೋ ಬಡಬಡಿಸಿದ. ಸುನಂದೆಯನ್ನು ಆಗಲೇ ತನ್ನ ಹೆಂಡತಿಯೆಂದು ಬಗೆದಿದ್ದಾನೆ. ದೇವಿ ಎಂದು ಸಂಬೋದಿಸುತ್ತಿದ್ದಾನೆ. ಆದರೆ ಅವಳು ಮಣಿಯಲಾರಳು ಎಂಬ ಹತಾಶೆಯೂ ಅವನಲ್ಲಿದೆ ಅಲ್ಲವೆ? ಅಲ್ಲಿ ನೋಡಲ್ಲಿ. ಯುದ್ಧ ಪ್ರಖರವಾಗುತ್ತಿದೆ. ನಡೆ ನಾವಲ್ಲಿಯೇ ನಿಂತು ಗಮನಿಸುವ.

ಸಹೋದರಿ, ಅಲ್ಲೇನೊ ನಡೆಯುತ್ತಿದೆ. ಕೇಳಿಸುತ್ತಿದೆಯೆ? ಅರಮನೆಯ ಹೊರಬಾಗಿಲ ಬಳಿ ಗದ್ದಲ! ನೋಡು ಅದು ಸುರಮ್ಯ ದೇಶದ ಪತಾಕೆಯಲ್ಲವೆ? ನೋಡಿದೆಯಾ ವಸುಷೇಣನನ್ನು, ಬಾರ್ಯೆ, ಮಿತ್ರನಿಂದ ಅಪಹೃತಳಾದ ಸುದ್ದಿಯನ್ನು ತಿಳಿದು, ತುತ್ತನ್ನು ಎತ್ತದೆ ಬಂದು ಗುರಿಯನ್ನು ತಲಪುತ್ತಿದ್ದಾನೆ.

ಅರಮನೆಯ ಒಳಗೆಲ್ಲಾ ವಸುಷೇಣ ಸತ್ತನೆಂದು ಸುದ್ದಿ ಹರಡಿದೆ. ಅಲ್ಲಿ ಹೊರಗೆ ಆತ ಇನ್ನೂ ಯುದ್ಧ ಮಾಡುತ್ತಲೇ ಇದ್ದಾನೆ! ಇತ್ತ ನೋಡು, ಆ ಚಂಡಶಾಸನ ಸುನಂದೆಯತ್ತ ಹೋಗುತ್ತಿದ್ದಾನೆ. ಓ! ನಿಂತು ಅದೇನು ನಡೆಸಿದ್ದಾನೆ ಈ ಚಂಡಶಾಸನ? ಮಾಯೆಯಿಂದ ರಕ್ತಸಿಕ್ತವಾದ ತಲೆಯೊಂದನ್ನು ಸೃಷ್ಟಿಸಿದ್ದಾನೆ! ಅದೂ ವಸುಷೇಣನದು! ಮಾಯಾವಿ. ಈಗ ಅರ್ಥವಾಯಿತೆ ಸೃಷ್ಟಿ ಈ ಖಳನ ಉದ್ದೇಶ. ಗಾಬರಿಯಾಗಬೇಡ. ನಿನ್ನ ಗರ್ಭಸಂಜಾತನೊಬ್ಬನ ಕುಟಿಲಬುದ್ಧಿಯನ್ನು ಕಂಡು. ಸೋಲು ಖಚಿತವಾದಾಗ ಮನುಷ್ಯ ಈ ರೀತಿ ಅಡ್ಡದಾರಿಗಿಳಿಯುತ್ತಾನೆ. ಮೋಸದಿಂದಲಾದರೂ ಸರಿ ಸುನಂದೆಯನ್ನು ಕೂಡುವ ಹಂಬಲ ಈ ಮೂಢನಿಗೆ. ಎಲ್ಲ ಕಾಲಕ್ಕೂ ಈ ಗಂಡಸು ಹೆಂಗಸಿನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಅನಾಹುತಕ್ಕೆಡೆಮಾಡಿಕೊಟ್ಟಿದ್ದಾನೆ. ಮಾಯಾಶಿರಸ್ಸನ್ನು ತೋರಿಸಿ ವಸು ಸತ್ತನೆಂದು ಸುನಂದೆಯನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾನೆ, ನೋಡಲ್ಲಿ.

* * *

ಅಯ್ಯೋ, ದುರ್ವಿಧಿಯೆ. ಕೊನೆಗೂ ಪಾಪಿಯ ಕೈಯೇ ಬಲವಾಯಿತಲ್ಲ. ಅಳಿದುಳಿದಿದ್ದ ಬೆಳಕಿಗೂ ಕತ್ತಲು ತುಂಬಿಕೊಂಡಿತಲ್ಲ. ಪಾಪಿ, ನನ್ನ ದೇವರ ತಲೆ ಕಡಿದರೆ ನನ್ನನ್ನು ಒಲಿಸಿಕೊಳ್ಳಬಹುದೆಂದು ನೀನು ತಪಾಗಿ ತಿಳಿದಿದ್ದೀಯ. ಆದರೆ ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... .

ಅಯ್ಯೋ, ದೇವಿ ಸುನಂದೆ. ನಾನೊಂದು ಬಗೆದರೆ, ದೈವವೊಂದು ಬಗೆಯಿತು! ಕಾಮಾತುರನಾಗಿ ನಾನು ದಹಿಸುತ್ತಿದ್ದರೆ, ವಿಧಿ ಮಾಡಿದ್ದನ್ನುಣ್ಣುವವರು ಯಾರು? ನನ್ನ ಮುನ್ನಿನ ಸತಿಯರನ್ನು ತೊರೆದು, ನಿನ್ನನ್ನೇ ನನ್ನ ಸತಿಯೆಂದು ಭಾವಿಸಿದೆ! ಆದರೆ ನೀನದಕ್ಕೆ ಸ್ವಲ್ಪವೂ ಅವಕಾಶ ಕೊಡಲಿಲ್ಲ. ಈ ಮೈಯೊಳಗಿಲ್ಲವಾದರೇನಂತೆ? ಮರುಮೈಯೊಳಗಾದರೂ ನಿನ್ನನ್ನು ಕೂಡದೆ ಬಿಡುವುದಿಲ್ಲ. ನಾನೂ ನಿನ್ನ ಚಿತೆಯನ್ನೇರುತ್ತೇನೆ. ನಿನ್ನ ಚಿತೆಗೊಡೆಯ ವಸುಷೇಣನಲ್ಲ! ಚಂಡಶಾಸನ!

* * *

ನೊಡಿದಿರಾ, ಸಹೃದಯರೆ ಈ ವಿಚಿತ್ರವನ್ನು! ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... ಎಂದು ಮೊರೆಯಿಡುತ್ತಿದ್ದಳು. ಸುನಂದೆಯ ಕೊನೆಯ ಮಾತನ್ನು ಸುಳ್ಳಾಗಿಸಿಬಿಟ್ಟಿತಲ್ಲ ಈ ವಿಧಿ! ಶಾಸನ ಮಾಡುವಾತನೇ ಅದನ್ನು ಮುರಿದು ದುರಂತಕ್ಕೀಡು ಮಾಡಿದ್ದರೂ, ತನ್ನ ಕೊನೆಯ ಮಾತನ್ನೇ ನಡೆಸಿಕೊಂಡುಬಿಟ್ಟ, ಬಲವಂತವಾಗಿಯಾದರು. ಇದು ವೈಯಕ್ತಿಕ ದುರಂತ ಮಾತ್ರವಲ್ಲ, ಸಮೂಹಿಕ ದುರಂತ! ಅಂತಃಪುರದ ಸ್ತ್ರೀಯರು, ಲೆಂಕರು ಚಂಡಶಾಸನನ ಹಿಂದೆಯೇ ಸಾಲುಸಾಲಾಗಿ ಚಿತೆಯೇರಿದರು. ಸುನಂದೆಯನ್ನು ಹೊತ್ತು ತಂದಾಗ, ತಮ್ಮರಸನ ಅವಿವೇಕತನಕ್ಕೆ ದೂಷಿಸಿದ್ದ ಪುರಜನರೂ ದುಃಖಪಟ್ಟರು. ಹೆಣ್ಣಿನ ಜೊತೆ ಚಿತೆಯೇರಿದ ಮೊದಲ ಪುರುಷನೀತ!!!

ಸಹೃದಯರೆ, ಈ ಪ್ರಪಂಚದಲ್ಲಿ ಒಳಿತು ಕೆಡಕುಗಳೆರಡೂ ಸಮವಾಗಿರುತ್ತವೆ. ಸಮವಾಗಿರಲೇಬೇಕು. ಅವುಗಳಲ್ಲಿ ಕೆಡಕು ಒಂದಿಷ್ಟು ಹೆಚ್ಚಾದರೂ, ಸೃಷ್ಟಿಯ ಉತ್ಪಾದಕ ಸಾಮರ್ಥ್ಯ ಮತ್ತು ನನ್ನ ತಾಳುವಿಕೆಯ ಸಾಮರ್ಥ್ಯದಲ್ಲಿ ಹೆಚ್ಚುಕಡಿಮೆಯಾದಾಗ ಉಂಟಾಗುವ ಅನಾಹುತವೇ ಆಗುತ್ತದೆ. ಅದರ ಪರಿಣಾಮವನ್ನು ಮಾತ್ರ ಈ ವ್ಯವಸ್ಥೆ ತಾಳಲಾರದು.

ಸೃಷ್ಟಿ, ಈ ಮನುಷ್ಯ ಯಾವುದಾದರು ಒಂದು ವಿಷಯದಲ್ಲಿ ಉನ್ನತಿ ಸಾಧಿಸಿದರೆ ಸಾಕು, ಸಮಷ್ಟಿಯನ್ನು ಮರೆತುಬಿಡುತ್ತಾನೆ. ಸಮಷ್ಟಿಯುನ್ನತಿಯೊಂದಿಗೇ ತನ್ನುನ್ನತಿಯೆಂಬದನ್ನು ಮರೆತುಬಿಡುತ್ತಾನೆ. ಮನುಷ್ಯರು ನಮ್ಮನ್ನು ಮರೆತಾಗಲೆಲ್ಲಾ, ನಾವು ನಮ್ಮ ಇರುವನ್ನು ಅವರ ಅರಿವಿಗೆ ತರಲೇಬೇಕು. ಇದನ್ನು ನಾನು ನಿನಗೆ ಹೇಳಬೇಕೆ? ನೀನೆಷ್ಟು ಸುಂದರಳೊ, ಸೌಮ್ಯಳೊ, ಒಳ್ಳೆಯವಳೊ ಅಷ್ಟೇ ರೌದ್ರಭಯಂಕರಳೂ ಎಂಬುದಕ್ಕೆ ನೀನು ಇತ್ತೀಚಿಗೆ ಪ್ರಸವಿಸಿದ ಭೂಕಂಪವೇ ಸಾಕ್ಷಿ !!!
***

Monday, November 30, 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ ಜಿಲ್ಲೆಯ ಪರಿಸರದಲ್ಲಿ ಹುಟ್ಟಿ ಬೆಳೆದು ಕವಿಚಕ್ರವರ್ತಿ ಎನಿಸಿಕೊಂಡವನು.
ಕನ್ನಡ ಕವಿಚಕ್ರವರ್ತಿಗಳು ಮೂವರು. ಪೊನ್ನ, ರನ್ನ ಮತ್ತು ಜನ್ನ.
ಕನ್ನಡ ರತ್ನತ್ರಯರು ಮೂವರು. ಪಂಪ, ಪೊನ್ನ ಮತ್ತು ರನ್ನ.
ಆದರೆ ನಿಜವಾಗಿಯೂ ಈ ಎರಡೂ ಪಟ್ಟಿಯಲ್ಲಿ ಇರಬೇಕಾದವರು, ಪಂಪ, ರನ್ನ ಮತ್ತು ಜನ್ನ! ಇದು ನನ್ನ ಅನಿಸಿಕೆ. ಇರಲಿ ಬಿಡಿ. ಇಲ್ಲಿ ನಾನು ಯಾವ ಕವಿಯ ಸ್ಥಾನನಿರ್ದೇಶನಕ್ಕೂ ನಿಂತಿಲ್ಲವಾದ್ದರಿಂದ ಮತ್ತೆ ಜನ್ನನೆಡೆಗೆ ಬರುತ್ತೇನೆ.
ಈಗ್ಗೆ ಮೂರ್ನಾಲ್ಕು ತಿಂಗಳ ಹಿಂದೆ, ಅಂದರೆ ಉದಯ ಇಟಗಿಯವರು ಲಿಬಿಯಾದಿಂದ ಭಾರತಕ್ಕೆ ಬಂದು, ಬ್ಲಾಗ್ ಮಿತ್ರರನ್ನು ಒಂದೆಡೆ ಸೇರಿಸಿ ಊಟ ಹಾಕಿಸಿದ್ದರು. ಆ ದಿನ ಪ್ರಕಾಶ ಹೆಗಡೆ ಮೊದಲಾದವರು, ಹಳಗನ್ನಡ ಕಾವ್ಯಗಳ ನನ್ನ ಆಸಕ್ತಿಯಬಗ್ಗೆ ಮಾತನಾಡುತ್ತಾ, (ಅಷ್ಟೊತ್ತಿಗಾಗಲೇ ರನ್ನ ಜೀವನ ಚರಿತ್ರೆ ನನ್ನ ಬ್ಲಾಗಿನಲ್ಲಿ ಪ್ರಕಟವಾಗಿತ್ತು) ‘ಸಾರ್ ಜನ್ನನ ಬಗ್ಗೆ ಬರೆಯಿರಿ. ಆತನ ಬಗ್ಗೆ ಕೇಳಿದ್ದೇವೆ. ನೀವು ವಿವರವಾಗಿ ಬರೆಯಿರಿ’ ಎಂದು ಹೇಳಿದ್ದರು. ಹಲವಾರು ಕಾರ‍್ಯನಿಮಿತ್ತವಾಗಿ ಅದಕ್ಕಿಂತ ಹೆಚ್ಚಾಗಿ ನನ್ನ ಸೋಮಾರಿತನದಿಂದಾಗಿ ನಾನು ಆ ಕಡೆ ತಲೆ ಕೂಡಾ ಹಾಕಿ ಮಲಗಲಿಲ್ಲ!
ಮೊನ್ನೆ ಪದವಿ ತರಗತಿಯೊಂದಕ್ಕೆ, (ಕನ್ನಡ ಉಪನ್ಯಾಸಕರೊಬ್ಬರು ದೀರ್ಘಾವಧಿ ರಜೆ ಹೋಗಿದ್ದರಿಂದ) ‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್’ ಎಂಬ ಜನ್ನನ ಯಶೋಧರ ಚರಿತ್ರೆಯ ಪದ್ಯಭಾಗವನ್ನು ಪಾಠ ಮಾಡುವ ಅವಕಾಶ ಸಿಕ್ಕಿತ್ತು. ಅಂದಿನಿಂದ ಜನ್ನ ಮತ್ತೆ ಮತ್ತೆ ಕಾಡುತ್ತಿದ್ದಾನೆ. ಆತನ ಬದುಕಿನ ವಿವರಗಳನ್ನು ಕುರಿತು ವಿವರಗಳನ್ನು ಸಂಗ್ರಹಿಸಲು, ಓದಲು ಪ್ರಾರಂಭಿಸಿದ್ದೇನೆ.

ವಿಶೇಷಕವಿಯಾಗಿ ಜನ್ನನನ್ನು ಅಧ್ಯಯನ ಮಾಡುವಾಗ ಆತನ ಅನಂತನಾಥಪುರಾಣ ಕಾವ್ಯದ ಭಾಗವಾದ ಚಂಡಶಾಸನ ವೃತ್ತಾಂತ ನನ್ನ ಮೇಲೆ ತೀವ್ರವಾದ ಪರಿಣಾಮ ಬೀರಿದ್ದಲ್ಲದೇ ಮುಂದೆ ಒಂದು ಸಣ್ಣ ಕಥೆಯಾಗಿ ನನ್ನಿಂದ ಬರೆಯಿಸಿಕೊಂಡಿತ್ತು. ಚಂಡಶಾಸನ ಕಥೆಗೂ, ರಾವಣ ಸೀತಾಪಹರಣ ಮಾಡಿದ ಕಥೆಗೂ ಅಲ್ಲಲ್ಲಿ ಹೋಲಿಕೆಯನ್ನು ವಿಮರ್ಶಕರು ಗುರುತಿಸುತ್ತಾರೆ. ಅಪಹರಣದ ಸಮಯದಲ್ಲಿ ಅಲ್ಲಿ ಜಟಾಯು ಅಡ್ಡ ಬರುತ್ತಾನೆ; ಇಲ್ಲಿ ಸಿಂಹಚೂಡ ಎಂಬ ಸಾಮಂತ ಅಡ್ಡ ಬರುತ್ತಾನೆ! ರಾವಣ ರಾಮನ ಮಾಯಾಶಿರಸ್ಸನ್ನು ತಂದು ತೋರಿದಾಗ ಸೀತೆ ಮೂರ್ಛೆ ಹೋಗುತ್ತಾಳೆ. ಆದರೆ ಇಲ್ಲಿ ಸುನಂದೆ ಸತ್ತೇ ಹೋಗುತ್ತಾಳೆ! ರಾವಣ ಯುದ್ಧ ಮುಂದುವರೆಸಿ ರಾಮನಿಂದ ಹತನಾದರೆ ಇಲ್ಲಿ ಚಂಡಶಾಸನ ಸುನಂದೆಯ ಜೊತೆಯಲ್ಲಿಯೇ ಚಿತೆಯೇರುತ್ತಾನೆ!

ಕಥೆ ಸೃಷ್ಟಿಯಾಗುವ ಕೆಲವು ದಿನಗಳ ಹಿಂದಷ್ಟೇ ಗುಜರಾತಿನಲ್ಲಿ ಭಯಂಕರ ಭೂಕಂಪ ಸಂಭವಿಸಿತ್ತು. ಪ್ರಕೃತಿ ಸೃಷ್ಟಿಸಬಹುದಾದ ವಿಕೋಪಗಳ ಜೊತೆಯಲ್ಲಿ ಮಾನವ ಸೃಷ್ಟಿಸುತ್ತಿದ್ದ ವಿಕೋಪಗಳೂ ಭಯಾನಕವೇ ಆಗಿದ್ದವು. ಪ್ರಾಕೃತಿಕ ವಿಕೋಪಗಳು ಸೃಷ್ಟಿಸಬಹುದಾದ ಭಯಂಕರ ಅನಾಹುತಗಳು, ಅದರ ಮುಂದೆ ಮಾನವನ ಅಲ್ಪತೆ, ಕ್ಷುದ್ರತೆಗಳು ನನ್ನ ಮನಸ್ಸನ್ನು ಆವರಿಸಿದ್ದ ಕಾಲ. ಆ ಹಿನ್ನೆಲೆಯಲ್ಲಿ ಚಂಡಶಾಸನ ವೃತ್ತಾಂತ ಕಥೆ ರಚನೆಯಾಗಿತ್ತು. ಕಥೆಗೆ ಒಂದು ರೀತಿಯ ನಾಟಕೀಯತೆ ಆವರಿಸಿಕೊಂಡು ಹೊಸತನದಿಂದ ಕೂಡಿತ್ತು. ಈ ಹಿಂದೆ ನನ್ನ ಒಂದೆರಡು ಸಣ್ಣಕಥೆಗಳು ಸಣ್ಣಪುಟ್ಟ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ (ಈಗ ಅವುಗಳ ಪ್ರತಿ ಸಹ ನನ್ನಲ್ಲಿಲ್ಲ!) ಕನ್ನಡ ಪ್ರಭದಲ್ಲಿ ಪ್ರಕಟವಾದ ಈ ಕಥೆ ನನಗೆ ‘ಕಥೆಗಾರ’ ಎಂಬ ಗುರುತಿನ ಚೀಟಿಯನ್ನು ನೀಡಿತ್ತು! (ಪ್ರಕಟವಾಗಿ ಮೂರು ತಿಂಗಳ ನಂತರ ನನಗೆ ಓದುಗರೊಬ್ಬರಿಂದ ಈ ವಿಷಯ ತಿಳಿಯಿತು!)

ಜನ್ನನ ಬದುಕು ಬರಹದ ಬಗ್ಗೆಯೇ ಲೇಖನ ಬರೆಯಲು ಸಿದ್ಧತೆ ನಡೆಸುತ್ತಿದ್ದಾಗ ಇದೆಲ್ಲಾ ನೆನಪಾಯಿತು. ಲೇಖನ ಸಿದ್ಧವಾಗಲು ಇನ್ನೂ ಕೆಲವಾರು ದಿನಗಳು ಬೇಕು ಅಷ್ಟರಲ್ಲಿ ನಿಮಗೆ ಈ ಚಂಡಶಾಶನವೃತ್ತಾಂತವನ್ನು ಒಮ್ಮೆ ಓದಿಸಬೇಕೆಂದು ಬ್ಲಾಗಿಗೆ ಎರಡು ಕಂತುಗಳಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸುತ್ತದೆ ಎಂಬುದು ನನಗೆ ಮುಖ್ಯ.
* * *

ಮಾವಿಂಗೆ ಮಾಲ್ಲಿಗೆಗಳ್ ಕೂರ್ತಡೆ, ಮಾವು ಕೂರ್ತುದು ವಸಂತಶ್ರೀಗೆ- ಅನಂತನಾಥ ಪುರಾಣ : ಜನ್ನ

ಭಾಗ - ೧

ಸಹೃದಯರೆ, ನಾನು ಕಾಲ. ವ್ಯಂಗದಿಂದಲೋ, ಗೌರವದಿಂದಲೋ ಕೆಲವರು ನನ್ನನ್ನು ಕಾಲರಾಯನೆಂದು ಕರೆಯುತ್ತಾರೆ. ಈಕೆ ಸೃಷ್ಟಿ. ನನ್ನ ಸಹೋದರಿ. ಈಕೆಯ ಗರ್ಭದಿಂದುದಯಿಸಿದ ಒಳಿತು ಕೆಡುಕುಗಳನ್ನು ನಾನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತೇನೆ. ನಿರಂತರ ಸೃಷ್ಟಿಕಾರ್ಯದಲ್ಲಿ ನಿರತಳಾದ ಇವಳಿಗೆ ವರ್ತಮಾನದಲ್ಲಿ ಹೆಜ್ಜೆ, ಭವಿಷ್ಯದಲ್ಲಿ ದೃಷ್ಟಿ. ಭೂತದ ಕಡೆಗೆ ನೋಡಲಿವಳಿಗೆ ಸಮಯವಾಗಲಿ, ಸಹನೆಯಾಗಲಿ ಇಲ್ಲ. ನಿರಂತರತೆಯಲ್ಲೊಮ್ಮೆ ಬಿಡುವು ಬೇಸರಗಳಾದಾಗ ನನ್ನ ಬಳಿಬಂದು ‘ಕಾಲರಾಯ ಒಂದಿಷ್ಟು ಇತಿಹಾಸವನ್ನಾದರು ಹೇಳು’ ಎಂದು ದಂಬಾಲು ಬೀಳುತ್ತಾಳೆ. ತನ್ನ ಗರ್ಭದಲ್ಲಿಯೇ ಅಗಣಿತ ವ್ಯಾಪಾರಗಳನ್ನಿಟ್ಟುಕೊಂಡಿರುವ ಇವಳಿಗೆ, ತಾನೇ ಪ್ರಸವಿಸಿದ ಇತಿಹಾಸವನ್ನು ಇಣುಕುವ ಚಪಲ ನನ್ನ ಗರ್ಭದಲ್ಲಿಳಿದು. ನಾನೂ ಒಪ್ಪಿದ್ದೇನೆ. ನಿಮ್ಮನ್ನೂ ಕರೆದಿದ್ದೇನೆ. ಈಕೆಯೊಬ್ಬಳಿಗೆ ನಾನು ಕಥೆ ಹೇಳಿದರೆ ಆಗುವ ಶ್ರಮ ಮತ್ತು ಸಾರ್ಥಕತೆ ನಿಮಗೆ ಹೇಳುವುದರಿಂದ ಹೆಚ್ಚೇನು ಆಗುವುದಿಲ್ಲ. ಒಮ್ಮೊಮ್ಮೆ ಸಾರ್ಥಕತೆಯ ತೂಕ ಹೆಚ್ಚಾಗುತ್ತದೆಯಾದರೂ, ಇಂದು ಇತಿಹಾಸದಿಂದ ಪಾಠ ಕಲಿಯುವವರೆಷ್ಟು ಮಂದಿ ಇದ್ದಾರೆ ಹೇಳಿ. ಇತಿಹಾಸವೆಂಬುದು ರಂಜನೆಯ ವಸ್ತುವಾಗಿದೆ. ವರ್ತಮಾನದಲ್ಲಿ ನಿಂತು, ಭೂತವನ್ನು ಮರೆತು, ಭವಿಷ್ಯವನ್ನು ನೋಡುತ್ತಿರುವ ಈಕೆಯ ಗರ್ಭಸಂಜಾತರಿಗೆ!
ಸೃಷ್ಟಿ ಕೇಳು, ನೀನು ಈಗಿನ ನಿನ್ನ ಇರುವಿಕೆಯಿಂದ ‘ನಾನೆಷ್ಟು ಸುಂದರಿ’ ಎಂದು ಅಹಂಕಾರ ಪಡುತ್ತಿದ್ದೀಯ. ನಿನ್ನೊಳಗೇನಿದೆಯೆಂಬುದೇ ನಿನಗೆ ಗೊತ್ತಿಲ್ಲ. ಪ್ರಸವದ ನಂತರ ತಿರುಗಿ ನೋಡದ ನಿನಗೆ, ನೀನು ಪ್ರಸವಿಸಿ ನನ್ನ ತೆಕ್ಕೆಗೆ ಬಂದ ‘ವಸ್ತು’ ಏನೆಂಬುದು ತಿಳಿಯುವುದೇ ಇಲ್ಲ. ನೀನು ಪ್ರಸವಿಸಿದ್ದೆಲ್ಲವೂ ಒಳಿತಲ್ಲ, ಕೆಡಕೂ ಇದೆ; ಸುಂದರವಲ್ಲ, ಕುರೂಪವೂ ಇದೆ; ಸತ್ಯವಲ್ಲ, ಅಸತ್ಯವೂ ಇದೆ. ಇದು ಎಲ್ಲ ಕಾಲಕ್ಕೂ ಇದ್ದದ್ದೆ. ಆದರೆ ಈ ವರ್ತಮಾನದ ಮಕ್ಕಳು ಅವಘಡಗಳು ನಡೆದಾಗ, ‘ಕೆಟ್ಟಕಾಲ’ ‘ಕಲಿಗಾಲ’ ‘ಕಾಲದ ಮಹಿಮೆ’ ಮುಂತಾಗಿ ಉದ್ಗರಿಸುತ್ತಾರೆ. ಪಾಪ! ಇವರಿಗೆ ಗೊತ್ತಿಲ್ಲ. ಇವರಂದುಕೊಂಡಿರುವ ಈ ನಾಗರೀಕತೆಯ ಒಂದೊಂದು ಪೊರೆ ಕಳಚಿದಾಗಲೂ ಬದಲಾಗುತ್ತಿರುವುದು ಅದರ ಹೊರಮೈಯಷ್ಟೇ ಎಂದು. ಅದರ ಸುಪ್ತಮನಸ್ಸಿನಾಳದಲ್ಲಿರುವ ಈ ಒಳಿತು ಕೆಡಕುಗಳು ವಾಸನಾರೂಪದಲ್ಲಿ ಉಳಿದುಬಿಡುತ್ತವೆ ಎಂದು.
ಸೃಷ್ಟಿ, ಈಗ ಹೇಳುತ್ತೇನೆ ಕೇಳು. ಪುರಾಣವೋ, ಇತಿಹಾಸವೋ ಅದು ಒತ್ತಟ್ಟಿಗಿರಲಿ. ಪುರಾಣದೊಳಗಿನ ಇತಿಹಾಸ, ಇತಿಹಾಸದೊಳಗಿನ ಪುರಾಣ ಅದೂ ನನಗೆ ಸಂಬಂಧಿಸಿದ್ದಲ್ಲ. ನನ್ನ ಪ್ರಕಾರ ಈ ಕ್ರಿಯೆಗೆ ಹಿಂದು, ಇಂದು ಮತ್ತು ಮುಂದು ಎಂಬ ವಿಶೇಷಣಗಳೇ ಬೇಡ.
ಬಾ ಸೃಷ್ಟಿ, ಇತ್ತ ಬಾ. ನನ್ನೊಳಗೆ ಇಣುಕಿ ನೋಡು. ಅದೋ ಅಲ್ಲಿ ನೋಡು. ಕಾಣಿಸುತ್ತದೆಯೆ ಇದು ಯುದ್ಧಭೂಮಿ. ಬೆಳಗಿನಿಂದ ಸಂಜೆಯವರೆಗೂ ಪ್ರಾಣದ ಹಂಗು ತೊರೆದು ಹೋರಾಡಿದ ಸೈನಿಕರು ನಿದ್ರಾಮಾತೆಯ ಮಡಿಲಲ್ಲಿದ್ದಾರೆ. ಗಾಯಗೊಂಡ ಯೋಧರಿಗೆ ಉಪಚಾರವೂ ನಡೆದಿದೆ. ಸಾಕಷ್ಟು ಬೆವೆರಿಳಿಸಿದ ಆನೆ ಕುದುರೆಗಳು ವಿಶ್ರಾಂತಿಯನ್ನುಣ್ಣುತ್ತಿವೆ. ಇದೆಲ್ಲಾ ಆ ಸೂರ್ಯದೇವನ ಕೃಪೆ ನೋಡು. ಹೆಣ್ಣು, ಹೊನ್ನು ಮತ್ತು ಮಣ್ಣು ಇಂತದ್ದಕ್ಕೆಲ್ಲಾ ಲಜ್ಜಾಹೀನರಾಗುವ ರಾಜರು, ಕಾನೂನು ಕಟ್ಟಳೆಗಳನ್ನು ಮುರಿದರೂ, ಸೂರ್ಯ ಮುಳುಗಿದ ಮೇಲೆ ಯುದ್ಧ ನಿಲ್ಲಿಸಿಬಿಡುತ್ತಾರೆ. ಇದು ಯುದ್ಧದ ಕಟ್ಟಳೆಗಳ ಬಗ್ಗೆ ಅವರಿಗಿರುವ ನಿಷ್ಟೆಗಿಂತ, ನಾಳೆ ಮತ್ತೆ ಕಚ್ಚಾಡಲು ಶಕ್ತಿ ಸಂಚಯಮಾಡಲಿಕ್ಕೆ ಮಾಡಿಕೊಂಡಿರುವ ಸಂಚು. ಅದನ್ನೇ ಅವರು ಕಾನೂನು, ಕಟ್ಟಳೆ, ಯುದ್ಧವಿಧಿವಿಧಾನಗಳೆಂದು ಹೇಳುತ್ತಾರೆ. ಆದರೆ ಅದನ್ನೂ ಮುರಿದ ‘ವೀರ ಯೋಧ’ರು ನನ್ನ ತೆಕ್ಕೆಯಲ್ಲಿದ್ದಾರೆ. ಅದಿರಲಿ, ಇಲ್ಲಿ ಕೇಳು. ಅಲ್ಲಿ ಪಂಜುಗಳುರಿಯುತ್ತಿರುವ ಬಿಡಾರವನ್ನು ನೋಡು. ರಾತ್ರಿಕಾವಲೂ ಇದೆ. ಬಿಡಾರದೊಳಗೆ ಅತ್ತಿಂದಿತ್ತ ತಿರುಗುತ್ತಿರುವವನು ವಸುಷೇಣ. ಸುರಮ್ಯ ದೇಶದ ಅರಸು. ಈಗ ಈತನ ಯುದ್ಧ ಈ ಮಕರಗ್ರಾಹಪುರದ ಅರಸು ಚಂಡಶಾಸನ ಮೇಲೆ. ಕಾರಣ! ನಾನು ಹೇಳುವುದಕ್ಕಿಂತ ನೀನೆ ತಿಳಿಯುವುದು ಉತ್ತಮ. ಹೋಗು, ಸ್ವಲ್ಪ ಹೊತ್ತು ಈತನ ಮಾನಸಸರೋವರದಲ್ಲಿ ವಿಹರಿಸಿ ಬಾ. ನಾನಿಲ್ಲಿಯೇ ಕಾಯುತ್ತಿರುತ್ತೇನೆ.
* * *

ನಾನು ಯಾರು? ನಾನು ಯಾರು? ಭರತವರ್ಷದ ಸುರಮ್ಯ ದೆಶದ ಅರಸು. ಪೌದನಪುರವರಾಧೀಶ್ವರ ವಸುಷೇಣ. ನನ್ನಂತವನ ವಿಷಯದಲ್ಲೂ ಹೀಗಾಗಬೇಕೆ? ಲತೆಯೆಂದು ಅಪ್ಪಿದ್ದು ಹಾವಾಗಿ ಕಚ್ಚಬೇಕೆ? ಅ ಹಾವು ಕಚ್ಚಿ ಮೈಯೆಲ್ಲಾ ವಿಷವೇರುತ್ತಿದೆ. ಅದು ನನ್ನ ಮೈಯನ್ನು ಪೂರ್ಣ ಆವರಿಸುವ ಮುನ್ನ ಆ ಜಂತುವನ್ನು ಹಿಡಿದು ಈ ವಿಷವನ್ನು ಇಳಿಸಬೇಕು. ಇಲ್ಲ, ಅದನ್ನು ಕೊಲ್ಲಬೇಕು. ಛೇ! ಈ ಸೂರ್ಯ ಇನ್ನೊಂದೆರಡು ಗಳಿಗೆ ತಡವಾಗಿ ಅಸ್ತಮಿಸಬಾರದೆ. ಇಂದೇ ಆ ಕ್ಷುದ್ರಜಂತುವನ್ನು ಇಲ್ಲವಾಗಿಸಿಬಿಡುತ್ತಿದ್ದೆ.
ಏನೆಲ್ಲಾ ಆಯಿತು ಈ ಐದು ದಿನಗಳಲ್ಲಿ. ಒಂದೇ ಗುರುವಿನ ಶಿಷ್ಯರಿಬ್ಬರಲ್ಲಿ ನಾಳೆ ಒಬ್ಬ ಸಾಯಬೇಕು, ಇನ್ನೊಬ್ಬನಿಂದ. ಇದು ನನ್ನ ಕನಸು ಮನಸುಗಳಲ್ಲೂ ಸುಳಿದಿರದ ಕಲ್ಪನೆ. ಆದರಿಂದು ವಾಸ್ತವವಾಗಿ ಬಂದು ನನ್ನೆದುರೇ ನಿಂತು ನನ್ನನ್ನೇ ಅಣಕಿಸುತ್ತಿದೆ.
ಓ ಚಂಡಶಾಸನ, ನನ್ನ ಪ್ರಿಯಮಿತ್ರ ಚಂಡಶಾಸನ. ನೀನೇಕೆ ಹೀಗೆ ಮಾಡಿದೆ? ಒಂದು ವಾರದ ಕೆಳಗೆ ನಿನ್ನಾಳೊಬ್ಬ ಬಂದು, ‘ಮಕರಗ್ರಾಹಪುರವರಾಧೀಶ್ವರ ಚಂಡಶಾಸನದೇವರು ನಿಮ್ಮನ್ನು ಕಾಣಲು ನಾಳೆ ಬರುವವರಿದ್ದಾರೆ’ ಎಂದಾಗ ನಾನೆಷ್ಟು ಸಂತೋಷಪಟ್ಟಿದ್ದೆ. ಆ ಖುಷಿಯಲ್ಲಿ ನನ್ನ ಕೊರಳಲಿದ್ದ ಆಭರಣವನ್ನೇ ಉಡುಗೊರಯಾಗಿ ಕೊಟ್ಟಿದ್ದೆ. ನನ್ನೆಲ್ಲಾ ಅರಮನೆಯ, ಅಂತಃಪುರದ ಜನಕ್ಕೆಲ್ಲಾ ನಿನ್ನ ಸ್ವಾಗತಕ್ಕೆ ಸಿದ್ದರಾಗುವಂತೆ ಆಜ್ಞೆ ಮಾಡಿದ್ದೆ. ಇಡೀ ಪೌದನಪುರವನ್ನೇ ನಿನ್ನ ಸ್ವಾಗತಕ್ಕೆ ಸಿದ್ಧಪಡಿಸಲು ನನ್ನಂತರಂಗದ ಜನಕ್ಕೆ ತಿಳಿಸಿದ್ದೆ. ಏಕೆ ಹೇಳು? ಆರು ವರ್ಷಗಳ ನಂತರ, ಜೊತೆಯಲ್ಲೇ ದೂಳಾಟವಾಡಿದ್ದ ಬಾಲ್ಯ ಸ್ನೇಹಿತರಿಬ್ಬರು, ಒಂದೇ ಗುರುವಿನ ಶಿಷ್ಯರಿಬ್ಬರು, ನೆರೆಹೊರೆ ರಾಜ್ಯಗಳ ರಾಜರಿಬ್ಬರು ಆರು ವರ್ಷಗಳ ನಂತರ ಮತ್ತೆ ಬೇಟಿಯಾಗುತ್ತಿದ್ದೆವು. ಚಂಡಶಾಸನ ನಿನಗೆ ನೆನಪಿದೆಯೋ, ಇಲ್ಲವೊ? ನಾವಂದು ಗುರುಕುಲದಿಂದ ಹೊರಟು ನಿಂತಾಗ, ಪ್ರತಿವರ್ಷಕ್ಕೊಮ್ಮೆ ನಾವಿಬ್ಬರು ಸೇರಿ ವಾರವಿಡೀ ಕ್ರೀಡಾವಿಲಾಸಗಳಲ್ಲಿ, ಜಲಕೇಳಿಗಳಲ್ಲಿ, ಮೃಗಕಥಾವಿನೋದಗಳಲ್ಲಿ ವಿಹರಿಸಬೇಕೆಂದು ಮಾತನಾಡಿಕೊಂಡಿದ್ದೆವು. ಅಲ್ಲಿಂದ ಬಂದು ತಿಂಗಳೆರಡರಲ್ಲಿ ನನ್ನ ಪಟ್ಟಾಭಿಷೇಕ. ನಂತರ ಮದುವೆ. ನೀನು ಮದುವೆಗೆ ಬರಲೊಪ್ಪಿದ್ದೆ. ಆದರೆ ನಿನ್ನ ದೇಶದ ದಕ್ಷಿಣದಲ್ಲಿ ಎದ್ದ ದಂಗೆಯಿಂದಾಗಿ ನೀನು ಬರುವುದಿಲ್ಲವೆಂದು ತಿಳಿದಾಗ ನಾನೆಷ್ಟು ಅವಲತ್ತುಕೊಂಡಿದ್ದೆ. ನಿಜ, ಮೊದಲು ಕರ್ತವ್ಯ. ನೀನೂ ಒಂದು ದೇಶದ ಅರಸು. ಎಲ್ಲಾ ಸರಿಯಾಗಿ ಒಂದು ಸ್ಥಿತಿ ತಲುಪಿದಾಗ ಬರುವುದಾಗಿ ನೀನು ತಿಳಿಸಿದ್ದೆ. ಅದಕ್ಕಾಗಿ ನಾನು ಆರು ವರ್ಷಗಳೇ ಕಾಯಬೇಕಾಯಿತು, ಮಿತ್ರ ಆರು ವರ್ಷಗಳು.
ಬಂದೆ. ನೀನು ಮಹೋತ್ಸವದಿಂದ ಪುರಪ್ರವೇಶ ಮಾಡಿದ್ದೆ ನಿನ್ನ ನರ್ಮಸಚಿವ ಸುದರ್ಶನನೊಂದಿಗೆ. ನಾವಿಬ್ಬರು ಆಲಂಗಿಸಿದೆವು. ಅಭಿನಂದಿಸಿದೆವು. ಆನಂದಿಸಿದೆವು. ಎರಡು ಘನಗಜಗಳನ್ನೇರಿ ಮೆರವಣಿಗೆಯಲ್ಲಿ ಅರಮನೆಗೆ ಬಂದೆವು. ಎಲ್ಲವೂ ನಾನಂದುಕೊಂಡಂತೆಯೇ ಆಯಿತು. ಸ್ವತಃ ದೇವಿ ಸುನಂದೆಯೇ ಆರತಿಯೆತ್ತಿ ನಮ್ಮನ್ನು ಸ್ವಾಗತಿಸಿದಳು.
ಮೊದಲೆರಡು ದಿನಗಳು ನಡೆದ ಸಹಪಂಕ್ತಿ ಬೋಜನ, ಸಹವಿಳಾಸಕ್ರೀಡೆಗಳನ್ನು ನಾನು ಹೇಗೆ ಮರೆಯಲಿ. ನಂತರ ನೀನ್ನಲ್ಲಿ ಸ್ವಲ್ಪ ಅನ್ಯಮನಸ್ಕತೆಯನ್ನು ಕಂಡೆ. ತನ್ನ ನಾಡಿನಿಂದ ದೂರವಿರುವುದಕ್ಕೆ ಇರಬೇಕೆಂದುಕೊಂಡೆ. ಆದರೆ ನಾಳೆಗೆ ನಡೆಸಲು ಯೋಜಿಸಿದ್ದ ಮೃಗಬೇಟೆಯ ವಿನೋದದ ಸುಖದ ಕಲ್ಪನೆಯಲ್ಲಿ ನಾನಿದ್ದೆ. ಇದು ನಿನಗೆ ಖುಷಿಕೊಡುತ್ತದೆಯೆಂದು ಭಾವಿಸಿ ಸುಮ್ಮನಾದೆ. ಕಾಡಿನಲ್ಲಿ ಮೃಗವೊಂದನ್ನು ಬೆನ್ನಟ್ಟಿ ನಾವಿಬ್ಬರೂ ದೂರವಾಗಿದ್ದೆವು. ನನಗೆ ಬೇಟೆ ಸಿಗಲಿಲ್ಲ. ಆದರೆ, ಆದರೆ,,,.. ..
* * *

ನೋಡಿದೆಯಾ ಸಹೋದರಿ, ಈ ಮನುಷ್ಯನಂತರಂಗವನ್ನು. ಕ್ರೋಧದ ಕೆಸರಿನಿಂದ ತನ್ನಮನದ ನೈರ್ಮಲ್ಯವನ್ನು ಕಳೆದುಕೊಂಡುಬಿಟ್ಟಿದ್ದಾನೆ. ಈಗ ನೀನು ಇನ್ನೊಬ್ಬನನ್ನು ನೋಡಬೇಕು. ಒಬ್ಬನಲ್ಲ ಇಬ್ಬರು. ಚಂಡಶಾಸನ ಮತ್ತು ಸುನಂದೆಯನ್ನು, ಅರಮನೆಯಲ್ಲಿ. ನೋಡಲ್ಲಿ, ಆತ ಚಂಡಶಾಸನ. ಅವನು ಸುನಂದೆಯನ್ನು ಅನುನಯಿಸುತ್ತಿದ್ದಾನೆ, ಕಾಡುತ್ತಿದ್ದಾನೆ. ಇಲ್ಲ ಆತ ಅವಳನ್ನು ಬೇಡುತ್ತಿದ್ದಾನೆ. ಹೋ, ಹೊರಟುಬಿಟ್ಟ. ನಮ್ಮ ಬರುವು ಒಂದು ಕ್ಷಣ ತಡವಾಯಿತೆ? ಇರಲಿ, ಸೃಷ್ಟಿ ಈಗ ನೀನು ಈತನ ಮನೋಮಂದಿರವನ್ನು ಹೊಕ್ಕು ಅಲ್ಲಿನ ವ್ಯಾಪಾರವನ್ನು ಗ್ರಹಿಸು. ಆತ ನಿದ್ರೆಯನ್ನಂತೂ ಮಾಡಲಾರ. ಮನುಷ್ಯಪ್ರಾಣಿ ಏಕಾಂಗಿಯಾಗಿದ್ದಾಗ ನಿಷ್ಪಕ್ಷಪಾತವಾಗಿ ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾನೆ. ಹೋಗಿ ಬಾ, ನಾನಿಲ್ಲಿಯೇ ಚಲಿಸುತ್ತಿರುತ್ತೇನೆ.
ಮುಂದುವರೆಯುತ್ತದೆ........

Monday, November 23, 2009

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗುತ್ತಾ ಬರುತ್ತಾನೆ. ಗಾಳ ಹಾಕಿಕೊಂಡು ಕುಳಿತವ ‘ಸದ್ದು ಮಾಡಬೇಡ (ಮೀನು ಗಾಳಕ್ಕೆ ಬೀಳುವುದಿಲ್ಲ)’ ಎಂದು ಗದರುತ್ತಾನೆ. ಹಳ್ಳಿಯವ ಒಂದು ಕೋಲಿಗೆ ನಾಲ್ಕು ಹನಿ ಫೆವಿಕ್ವಿಕ್ ಹಾಕಿ ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಾನೆ. ನಾಲ್ಕು ಮೀನುಗಳು ಕೋಲಿಗೆ ಅಂಟಿಕೊಂಡಿರುತ್ತವೆ! ಹಳ್ಳಿಯವ ಮತ್ತೆ ಸಂತೋಷದಿಂದ ಹಾಡು ಗುನುಗಲಾರಂಭಿಸಿದರೆ ಇತ್ತ ಗಾಳ ಹಾಕಿ ಕುಳಿತವನ ಮುಖ ಇಂಗು ತಿಂದ ಮಂಗನಂತಾಗುತ್ತದೆ!!!
ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣ ಪಂಪಭಾರತ! ನಮ್ಮ ವಾರಾಂತ್ಯ ಕಾರ್ಯಕ್ರಮ ಪಂಪಭಾರತ ಅಧ್ಯಯನ ನೆನ್ನೆ ನೆಡೆದಿತ್ತು. ಅದರಲ್ಲಿ ಯಮುನಾ ನದಿಯ ಮಡುವೊಂದರಲ್ಲಿ ಕೃಷ್ಣಾರ್ಜುನರು ತಮ್ಮ ಪರಿವಾರದೊಡನೆ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಆಗ ಮೀನು ಹಿಡಿಯುವುದು ಇಷ್ಟೊಂದು ಸುಲಭವೇ? ಅನ್ನಿಸಿತು! ನಂತರ ನನ್ನ ಮನಸ್ಸನ್ನು ಆವರಿಸಿದ್ದು ನಾನು ಬಾಲ್ಯದಲ್ಲಿ ಕಂಡ, ದಕ್ಷಿಣದ ಒಳನಾಡಿನಲ್ಲಿ ಅಂದರೆ ಕರ್ನಾಟಕದ ಬಯಲುಸೀಮೆಯಲ್ಲಿ ಮೀನು ಹಿಡಿಯುವ ಹಲವಾರು ವಿಧಾನಗಳು. ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.
ಹಾಂ! ಯೋಚಿಸಬೇಡಿ. ಪಂಪಭಾರತದ ಆ ಸನ್ನಿವೇಶವನ್ನು ಕೊನೆಯಲ್ಲಿ ಹೇಳುತ್ತೇನೆ. ಅದರ ಸ್ವಾರಸ್ಯವನ್ನು ನೀವು ಸವಿಯಲೇಬೇಕು!
ಸಣ್ಣ 'ಕೂಳಿ'ಯಲ್ಲಿ ಮೀನು ಹಿಡಿಯುವುದು
ತೆಂಗಿನ ಗರಿಯಿಂದ ಬೇರ್ಪಡಿಸಿದ ಕಡ್ಡಿಯನ್ನು ಬಳಸಿ ನಿರ್ಮಿಸಿದ 'ಕೂಳಿ' ಅಥವಾ 'ಕೂಣಿ' ಮೀನು ಹಿಡಿಯುವ ಜನಪ್ರಿಯ ಸಾಧನ. ಅವುಗಳನ್ನು ಮಳೆಗಾಲದಲ್ಲಿ ಸಣ್ಣದಾಗಿ ನೀರು ಹರಿಯುವ ಕಾಲುವೆಗಳಿಗೆ ಒಡ್ಡಿ (ಜೋಡಿಸಿ), ನೀರು ಅದರ ಮುಖಾಂತರ ಮಾತ್ರ ಹರಿಯುವಂತೆ ಮಾಡುತ್ತಿದ್ದರು. ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಒಂದು ಕೂಳಿಯ ನೀರು, ಎರಡು ಕೂಳಿಯ ನೀರು ಎಂದು ನಿರ್ಧರಿಸುತ್ತಿದ್ದರು. ಹಾಗೆ ರಾತ್ರಿ ಜೋಡಿಸಿ ಬಂದ ಕೂಳಿಯಲ್ಲಿ ಬೆಳಿಗ್ಗೆ ಸೇರುಗಟ್ಟಲೆ ಸಣ್ಣ ಸಣ್ಣ ಮೀನುಗಳು ಸಂಗ್ರಹವಾಗಿರುತ್ತಿದ್ದವು (ಒಮ್ಮೊಮ್ಮೆ ಕೇರೆಹಾವು, ಕಪ್ಪೆ ಮೊದಲಾದವುಗಳೂ ಸೇರಿಕೊಳ್ಳುತ್ತಿದ್ದವು). ಕೆಲವೊಮ್ಮೆ ಕೆಲವು ಉತ್ಸಾಹಿಗಳು ಕೂಳಿ ಹಾಕಿದ ಜಾಗದಲ್ಲೇ ಗುಡಾರ ಹಾಕಿಕೊಂಡು ಕೂಳಿಯೊಳಗೆ ಹಾವು ಬಂದಿದೆಯೇ ಎಂದು ನೋಡಿ ಬಂದಿದ್ದರೆ ಅದನ್ನು ಹೊರಗೆ ಹಾಕಿ ಮತ್ತೆ ಕೂಳಿ ಜೋಡಿಸುತ್ತಿದ್ದರು. ಏಕೆಂದರೆ ಹಾವು ಕೂಳಿಯೊಳಗೆ ಬಂದ ಮೀನೆಲ್ಲವನ್ನೂ ಕಬಳಿಸುತ್ತದೆ ಎಂದು! ಹರಿಯುವ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಮೀನು ಚಲಿಸುತ್ತವೆ ಎಂದು ಆಗ ನಮಗೆ ಗೊತ್ತಿರಲಿಲ್ಲ. ನೀರು ಹರಿಯುವ ದಿಕ್ಕಿಗೇ ತೆರೆದ ಬಾಯಿಯನ್ನು ಮಾಡಿ ಜೋಡಿಸುತ್ತಿದ್ದ ಕೂಳಿಯೊಳಗೆ ಮೀನು ಹೇಗೆ ಹೋಗುತ್ತವೆ? ಎಂದು ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದೆವು.
ದೊಡ್ಡ ಕೂಳಿಯಲ್ಲಿ ಮೀನು ಹಿಡಿಯುವುದು
ಬಿದಿರು ಕಡ್ಡಿಗಳಲ್ಲಿ ಮಾಡಿರುವ ಇದನ್ನು ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ಇದನ್ನು ಬಳಸುತ್ತಾರೆ. ಸಿಹಿನೀರಿನಲ್ಲಿ ಅಂದರೆ ಕೆರೆಗಳಲ್ಲಿ ಮೀನು ಸಾಕಿದ ಗ್ರಾಮದವರು ವರ್ಷಕ್ಕೊಮ್ಮೆ ಮೀನು ಹಿಡಿಯುವ ಕಾರ್ಯಕ್ರಮ (ಮೀನು ಪಾಚುವರಿ) ಇಟ್ಟುಕೊಂಡಿರುತ್ತಾರೆ. ನೀರು ಕೂಳಿಗೆ ಅನುಕೂಲಕರ ಹಂತಕ್ಕೆ ಬಂದಾಗ ಈ ಕಾರ್ಯಕ್ರಮವಿರುತ್ತದೆ. ಅಲ್ಲಿಯವರೆಗೆ ಯಾರಾದರೂ ಕದ್ದು ಮೀನು ಹಿಡಿಯುವುದನ್ನು ತಪ್ಪಿಸಲು ಕಾವಲು ಕಾಯುವ ಪದ್ಧತಿಯೂ ಇದೆ. ಈ ವಾರ್ಷಿಕ ಕಾರ್ಯಕ್ರಮದಲ್ಲಿ ಒಂದು ಕೂಳಿಗೆ ಇಷ್ಟು ಎಂದು ಪ್ರವೇಶ ಧನ ತೆಗೆದುಕೊಂಡು ಒಂದೇ ಬಾರಿ ಎಲ್ಲಾ ಮೀನುಗಾರರನ್ನು ಕೆರೆಯೊಳಗೆ ಬಿಡಲಾಗುತ್ತದೆ. ಐನೂರು ಆರನೂರು ಜನ ಒಟ್ಟಿಗೇ ಕೂಳಿಗಳನ್ನು ಮೇಲೆತ್ತಿ ಹಿಡಿದು ಕೂಗುತ್ತಾ ಕೆರೆಯೊಳಗೆ ನುಗ್ಗುವ ಆ ದೃಶ್ಯ ಒಂದು ರೀತಿಯ ರಣೋತ್ಸಾಹವನ್ನು ನೆನಪಿಸುತ್ತದೆ. ದೊಡ್ಡಕೂಳಿಯನ್ನು ಅಲ್ಲಲ್ಲಿ ಹಾಕುತ್ತಾ ಮೀನು ಅದರೊಳಗೆ ಬಂದರೆ ಅದನ್ನು ಕೈಯಲ್ಲಿ ಹಿಡಿದು, ಸೊಂಟದಲ್ಲಿ ದಬ್ಬಳ(ದೊಡ್ಡಸೂಜಿ)ದೊಂದಿಗೆ ನೇತಾಡುವ ದಾರಕ್ಕೆ ಪೋಣಿಸಿಕೊಂಡು ಮುಂದುವರೆಯುತ್ತಾರೆ. ಅಂದು ಕೆಲವು ಮೀನುಗಾರರು ನೂರಾರು ಮೀನುಗಳನ್ನು ಹಿಡಿಯುತ್ತಾರೆ. ದಾರದಲ್ಲಿ ಪೋಣಿಸಿದ ಮೀನನ್ನು ಕದಿಯುವವರೂ ಇರುತ್ತಾರೆ! ಅದಕ್ಕೆ ಕೆಲವರು ಸಹಾಯಕರನ್ನು ಕರೆತಂದು, ಆಗಾಗ ಆರೇಳು ಮೀನುಗಳಾದ ತಕ್ಷಣ ದಾರವನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನ ಮಕ್ಕಳು ನೀರೊಳಗೆ ಇಳಿದು ಕೈಗೆ ಸಿಕ್ಕ ಸಣ್ಣ ಪುಟ್ಟ ಮೀನುಗಳನ್ನು ಬಾಚಿಕೊಳ್ಳುತ್ತಾರೆ. ಅವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ನಾವು ಮಿಡ್ಲಿಸ್ಕೂಲಿನಲ್ಲಿದ್ದಾಗ ಅಲ್ಲಿನ ಮೇಷ್ಟರುಗಳು ನಮ್ಮನ್ನು ಕಳುಹಿಸಿ ಸಾಕಷ್ಟು ಮೀನನ್ನು ಹಿಡಿಸಿಕೊಂಡು ಸಂಜೆ ಮನೆಗೆ ಕೊಂಡೊಯ್ದಿದ್ದರು! (ಮಿಡ್ಲಿಸ್ಖೂಲಿನ ಮೇಷ್ಟರ ಮೀನು ಕೋಳಿ ಶಿಕಾರಿಯ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ)
ತಟ್ಟೋಬಲೆಯಲ್ಲಿ ಮೀನು ಹಿಡಿಯುವುದು
ತ್ರಿಕೋನಾಕಾರದ ತೆರೆದ ಬಾಯಿಯುಳ್ಳ ಹಾಗೂ ಆ ಬಾಯಿಯಿಂದ ಹಿಂದಕ್ಕೆ ಬಾಲದಂತೆ ಕಾಣುವ ಬಲೆಯುಳ್ಳ ಒಂದು ಉಪಕರಣ ತಟ್ಟೋಬಲೆ. ಸುಮಾರು ಮಂಡಿಯುದ್ದದ ನೀರಿರುವ ಕಡೆ ಮೀನುಗಳಿದ್ದರೆ ಈ ಉಪಕರಣವನ್ನು ಬಳಸುತ್ತಾರೆ. ಮೀನು ಗುಂಡಿಗಳಲ್ಲಿ ಇವೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು, ಕ್ಯಾಕರಿಸಿ ಅದರೊಳಗೆ ಉಗಿಯುವುದು, ಅಥವಾ ಮನೆಯಿಂದ ತಂದ ರೊಟ್ಟಿ ಚೂರು ಹಾಕುವುದು ಮಾಡುತ್ತಾರೆ. ಅದನ್ನು ತಿನ್ನಲು ಬರುವ ಮೀನುಗಳ ಸಂಖ್ಯೆಯನ್ನು ಆಧರಿಸಿ ಮೀನು ಹಿಡಿಯಲು ನಿರ್ಧರಿಸುತ್ತಾರೆ. ಈ ತಟ್ಟೋಬಲೆಯ ಜೊತೆಗೆ ಇರುವ ಇನ್ನೊಂದು ಉಪಕರಣವೆಂದರೆ ಮಾರುದ್ದದ ಒಂದು ಕೋಲು. ಕೆಲವೊಮ್ಮೆ ಅದಕ್ಕೆ ಸ್ವಲ್ಪ ಬಟ್ಟೆ ಕಟ್ಟಿರುತ್ತಾರೆ. ತಟ್ಟೋ ಬಲೆಯನ್ನು ಎಡಗೈಯಲ್ಲಿ ನೀರೊಳೊಗಿನ ನೆಲಕ್ಕೆ ಒತ್ತಿ ಹಿಡಿದು, ಬಲಗೈಯಲ್ಲಿ ಕೋಲಿನಿಂದ, ತನಗೆ ಎಟಕುವಷ್ಟು ಅಗಲದ ನೀರಿನೊಳಗೆ ಮುಳುಗಿಸಿ ಮೀನುಗಳನ್ನು ಬೆದರಿಸಿಕೊಂಡು ಬರುತ್ತಾರೆ. ಆಗ ಬೆದರಿದ ಮೀನುಗಳು ತಟ್ಟೋಬಲೆಯೊಳಗೆ ಗುಂಪುಗುಂಪಾಗಿ ಬರುತ್ತವೆ. ತಕ್ಷಣ ಎಡಗೈಯಿಂದ ತಟ್ಟೋಬಲೆಯನ್ನು ಮೇಲಕ್ಕೆ ಎತ್ತುತ್ತಾರೆ. ಅದರೊಳಗೆ ಸಿಕ್ಕಿಹಾಕಿಕೊಂಡ ಮೀನುಗಳು ಬಲೆಯ ಹಿಂಬದಿಗೆ ಸರಿದು ಸಂಗ್ರಹಗೊಳ್ಳುತ್ತವೆ! ಹತ್ತಾರು ಬಾರಿ ಈ ರೀತಿ ಮಾಡಿದ ಮೇಲೆ ಮೇಲೆ ಬಂದು ಮೀನುಗಳನ್ನು ಮತ್ತೊಂದು ಚೀಲಕ್ಕೋ ಪಾತ್ರೆಗೋ ಸುರಿದುಕೊಳ್ಳುತ್ತಾರೆ.
ಗಾಳ ಹಾಕಿ ಮೀನು ಹಿಡಿಯುವುದು
ಇದರ ಬಗ್ಗೆ ಹೆಚ್ಚನದೇನನನು ಹೇಳುವ ಅವಶ್ಯಕತೆಯಿಲ್ಲ. ಕೊಕ್ಕೆಯಂತಹ ಲೋಹದ ಮೊಳೆಗೆ ದಾರಕಟ್ಟಿ, ಅದನ್ನು ಒಂದು ಬಲವಾದ ಕೋಲಿಗೆ ಕಟ್ಟಿಕೊಂಡು, ಗಾಳಕ್ಕೆ ತಿಂಡಿಯನ್ನೋ, ಚಿಕ್ಕ ಮೀನನ್ನೋ, ಎರೆಹುಳುವನ್ನೋ ಸಿಕ್ಕಿಸಿ ಮೀನಿರುವ ಕೊಳ ಅಥವಾ ಗುಂಡಿಯಲ್ಲಿ ಹಾಕಿ ಕುಳಿತರೆ ಮೀನುಗಳು ತಿಂಡಿಯ ಆಸೆಗೆ ಬಂದು ಗಾಳವನ್ನು ಕಚ್ಚಿಕೊಳ್ಳುತ್ತವೆ. ಅದರೊಳಗೆ ಹಿಮ್ಮುಖವಾಗಿರುವ ಕೊಕ್ಕೆ ಮೀನಿನ ಅಂಗುಳಕ್ಕೆ ಚುಚ್ಚಿಕೊಳ್ಳುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಜಗ್ಗಾಟ, ದಾರದ ನಡುವೆ ಕಟ್ಟಿರುವ ಬೆಂಡು ಮುಳುಗಿ, ಮೀನು ಕಚ್ಚಿದೆ ಎಂದು ಗಾಳ ಹಿಡಿದು ಕುಳಿತವನಿಗೆ ತಿಳಿದು ಅದನ್ನು ಮೇಲಕ್ಕೆ ಎಳೆದುಕೊಂಡು ಬಿಡಿಸಿ ಮಡಕೆಯೊಳಗೆ ಸಂಗ್ರಹಿಸಿಕೊಳ್ಳುತ್ತಾನೆ. ತೇಜಸ್ವಿಯವರ ಸಾಹಿತ್ಯ ಓದಿದವರಿಗೆ ಈ ಬಗೆಯ ಮೀನು ಹಿಡಿಯುವ ತಂತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಡಮಾನಿಗೆ ಪ್ರವಾಸ ಹೋಗುವ ತೇಜಸ್ವಿ ರಾಮದಾಸ್ ಮೊದಲಾದವರು ಅಲ್ಲಿಗೆ ಕೊಂಡಯ್ಯವುದು ಈ ರೀತಿ ಮೀನು ಹಿಡಿಯುವ ಗಾಳ, ರಾಡು ರೀಲುಗಳನ್ನು!
ಬಲೆ ಹಾಕಿ ಮೀನು ಹಿಡಿಯುವುದು
ಇದರಲ್ಲಿ ಹಲವಾರು ವಿಧಾನಗಳಿವೆ. ಬೀಸೋ ಬಲೆ ಎಂಬುದರಲ್ಲಿ, ಬಲೆಯನ್ನು ಬೀಸಿ ನೀರಿನಲ್ಲಿ ಹಾಕುತ್ತಾರೆ. ನಿಧಾನವಾಗಿ ಬಲೆಯನ್ನು ನೆರಿಗೆ ನೆರಿಗೆ ಮಾಡಿಕೊಂಡು ಮೇಲಕ್ಕೆ ಎಳದೆಕೊಳ್ಳುತ್ತಾರೆ. ಬಲೆಯೊಳಗೆ ಸಿಕ್ಕಿ ಹಾಕಿಕೊಂಡು ಚಡಪಡಿಸುವ ಮೀನುಗಳನ್ನು ಆರಿಸಿ ಮಡಕೆಯಲ್ಲಿ ತುಂಬಿಕೊಳ್ಳುತ್ತಾರೆ.
ಇನ್ನೊಂದು ವಿಧಾನದಲ್ಲಿ ರಾತ್ರಿವೇಳೆ ಬಲೆಯನ್ನು ಕೆರೆಯೊಳಗೆ ಬೀಸಿ. ಅದರ ಎರಡು ತುದಿಗಳನ್ನು ಬಲವಾದ ಬಡಿಗೆಗಳಿಗೆ ಕಟ್ಟಿ ಬಂದಿರುತ್ತಾರೆ. ಬೆಳಿಗ್ಗೆ ಹೋಗಿ ಬಲೆ ಮೇಲೆತ್ತಿ ಸಂಗ್ರಹಗೊಂಡ ಮೀನುಗಳನ್ನು ಹಿಡಿದುಕೊಳ್ಳುತ್ತಾರೆ.
ಒಮ್ಮೆ ನಮ್ಮ ಮಿಡ್ಲಿಸ್ಕೂಲಿನ ಮೇಷ್ಟರೊಬ್ಬರಿಗೆ ಮೀನು ತಿನ್ನಬೇಕೆನ್ನಿಸಿ, ‘ಎಲ್ಲಿಯಾದ್ರು ಮೀನು ಹಿಡ್ಕೊಂಬರೋಕೆ ಆಗುತ್ತಾ’ ಎಂದರು. ನಾವು ನಾಲ್ಕು ಜನ 'ಅದಕ್ಕೇನಂತೆ ಸಾರ್ ನಾವು ಹಿಡ್ಕೊಂಡು ಬರುತ್ತೇವೆ' ಎಂದು ಹೊರಟೆವು. ಆಗ ಅದರಲ್ಲಿದ್ದ ಬುದ್ಧಿವಂತನೊಬ್ಬ ಅವರ ಮನೆಯಲ್ಲಿದ್ದ ಒಂದು ಹಳೆಯ ಪಂಚೆಯನ್ನು ತಂದ. ಸೊಂಟದಾಳದ ನೀರಿನಲ್ಲಿ ನಿಂತ ನಾವು ಅದರ ನಾಲ್ಕ ಮೂಲೆಗಳನ್ನು ಒಬ್ಬೊಬ್ಬರು ಹಿಡಿದು, ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಿದ್ದೆವು. ಮೀನು ನಮ್ಮ ಕಣ್ಣಿಗೆ ಕಾಣುತ್ತಿದ್ದರು, ಪಂಚೆ ಮೇಲೆ ಬರುವಷ್ಟರಲ್ಲಿ ನೀರಿನೊಂದಿಗೆ ಮೀನುಗಳೂ ಹೊರಟುಹೋಗುತ್ತಿದ್ದವು. ಪಂಚೆಯಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದೇ ಆದಕ್ಕೆ ಕಾರಣ ಎಂಬುದು ನಮಗೆ ಹೇಗೆ ತಿಳಿಯಬೇಕು. ಖುಷಿಯಿಂದ ಮೂರ್ನಾಲ್ಕು ಬಾರಿ ಹಾಗೆ ಮಾಡಿದೆವು. ಐದನೆಯ ಬಾರಿ ಪಂಚೆ ಮಧ್ಯಕ್ಕೆ ಹರಿದುಹೋಯಿತು! ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳಾಮಂಡಲಿ ಹೋ ಎಂದು ನಕ್ಕು ನಮ್ಮನ್ನು ಗೇಲಿ ಮಾಡಿದ್ದರಿಂದ ನಾವು ಜಾಗ ಖಾಲಿ ಮಾಡಬೇಕಾಯಿತು.
ಗುಂಡಿ ಉಗ್ಗುವುದು ಅಥವಾ ಗುಂಡಿ ಕದಡುವುದು
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೆರೆ ಕುಂಟೆಗಳ ನೀರು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಗ ಕೆರೆಯಂಗಳದಲ್ಲಿ ಅಲ್ಲಲ್ಲಿ ಗುಂಡುಂಡಿಗಳು ಕಾಣಿಸಿಕೊಂಡು ಮುಖ್ಯ ಕೆರೆಯ ನೀರಿನಿಂದ ಪ್ರತ್ಯೇಕವಾಗಿ ಸಣ್ಣಪುಟ್ಟ ಕುಂಟೆಗಳಾಗುತ್ತವೆ. ಅವುಗಳ ನೀರನ್ನು ಖಾಲಿಮಾಡಿ ಮೀನು ಹಿಡಿಯುವ ಪದ್ಧತಿಗೆ ಗುಂಡಿ ಉಗ್ಗುವುದು ಎನ್ನುತ್ತಾರೆ. ಯಾವುದಾದರೂ ಪಾತ್ರೆ ಅಥವಾ ಮಂಕರಿ ಅಥವಾ ಬುಟ್ಟಿಗೆ ಎರಡೂ ಬದಿಗೆ ಎರಡು ಹಗ್ಗಗಳನ್ನು ಕಟ್ಟಿ, ಇಬ್ಬರು ನಿಂತುಕೊಂಡು, ಅದರಿಂದ ನೀರನ್ನು ಮೊಗೆದು ಮೊಗೆದು ಗುಂಡಿಯ ಆಚೆಗೆ ಸುರಿಯುತ್ತಾರೆ. ಸರದಿಯ ಮೇಲೆ ಇಬ್ಬಿಬ್ಬರು ಈ ರೀತಿ ಮಾಡುವುದರಿಂದ ಹೆಚ್ಚು ಸುಸ್ತು ಆಗುವುದಿಲ್ಲ. ನೀರು ಕಡಿಮೆಯಾಗಿ ಮೀನುಗಳು ಮೇಲೆ ಮೇಲೆ ನೆಗೆಯಲು ಪ್ರಾರಂಭಿಸುತ್ತವೆ. ಆಗ ನೀರು ಖಾಲಿಮಾಡುವುದನ್ನು ಬಿಟ್ಟು, ಗುಂಡಿಯಲ್ಲಿ ಕೆಸರೆಬ್ಬಿಸಲಾಗುತ್ತದೆ. (ನೀರು ತೀರಾ ಕಡಿಮೆಯಿರುವ ಗುಂಡಿಗಳಾದರೆ, ನೇರವಾಗಿಯೇ ಕೆಸರೆಬ್ಬಿಸಲಾಗುತ್ತದೆ. ಇದನ್ನು ಗುಂಡಿ ಕದಡುವುದು ಎನ್ನುತ್ತಾರೆ.) ಕೆಸರು ದಟ್ಟವಾಗುತ್ತಿದ್ದಂತೆ ಮೀನುಗಳು ಉಸಿರಾಡುವುದಕ್ಕಾಗಿ ಕೆಸರಿನ ಮೇಲಕ್ಕೆ ತಲೆಯೆತ್ತಿ ಬಾಯಿ ಬಿಡಲಾರಂಬಿಸುತ್ತವೆ. ಆಗ ಅವೆಲ್ಲವನ್ನೂ ಹಿಡಿದು ದಡದಲ್ಲಿರುವವರ ಕೈಗೆ ಕೊಡಲಾಗುತ್ತದೆ.
ಅಂದು ಪಂಚೆಯಲ್ಲಿ ಮೀನು ಹಿಡಿಯುವ ನಮ್ಮ ಸಾಹಸ ವಿಫಲವಾಗಿ, ಮಹಿಳಾ ಮಂಡಳಿಯಿಂದ ಅವಮಾನವಾದಾಗ ನಾವೂ ಹುಡುಕಿ ಹೊರಟಿದ್ದು ಇಂತಹ ಗುಂಡಿಗಳನ್ನೇ! ಒಂದೆರಡು ಗುಂಡಿಗಳನ್ನು ಹುಡುಕಿ, ಕೆಮ್ಮಿ ಕ್ಯಾಕರಿಸಿ ಉಗಿದು ಅವುಗಳಲ್ಲಿ ಮೀನುಗಳಿವೆಯೇ ಎಂದು ಪರೀಕ್ಷಿಸಿದ್ದಾಯಿತು. ಸಣ್ಣ ಸಣ್ಣ ಮೀನುಗಳು ಹಿಂಡುಹಿಂಡಾಗಿ ಬಂದು ಎಂಜಲಿಗೆ ಮುತ್ತಿಗೆ ಹಾಕಿದ್ದನ್ನು ಕಂಡು ದಬದಬ ನೀರೊಳಗೆ ಬಿದ್ದು ಕೆಸರೆಬ್ಬಿಸಿದ್ದೂ ಆಯಿತು. ಆದರೆ ಒಂದೂ ಮೀನು ಬಾಯಿ ಬಿಟ್ಟು ಮೇಲೆ ಬಂದು ನಮ್ಮನ್ನು ಹಿಡಿದುಕೊಳ್ಳಿ ಎನ್ನಲಿಲ್ಲ! ಆಗ ಆ ದಾರಿಯಾಗಿ ಬಂದ ಹಿರಿಯರೊಬ್ಬರು ‘ಅಯ್ಯೋ ದಡ್ಡಮುಂಡೇವೆ! ಹಾಗೆ ಹಿಂಡು ಹಿಂಡಾಗಿ ಬಂದುದ್ದು ಮೀನುಗಳಲ್ಲ; ಕಪ್ಪೆಗೊದ್ದಗಳು! ಅವು ಕೆಸರೆಬ್ಬಿಸಿದರೂ ಮೇಲೆ ಬರಲ್ಲ’ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಲ್ಲದೆ, ‘ನಿಮ್ಮ ಮನೆಗಳಿಗೆ ಹೇಳಿ ಬಿಡಿಸುತ್ತೇನೆ, ಲಾತ. ಬನ್ನಿ’ ಎಂದು ಭಯೋತ್ಪಾದಕರಾಗಿದ್ದರು!
ಭರ್ಜಿಯಲ್ಲಿ ಹೊಡೆಯುವುದು
ನನ್ನ ಸ್ನೇಹಿತನೊಬ್ಬನಿದ್ದ. ಆತನ ಹೆಸರು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿದೆ, ‘ಮೊಲದ ಮಂಜ’ ಎಂದು. ಈತನ ಮೀನು ಭೇಟೆಯ ಬಗ್ಗೆ ನಾನಾಗಲೇ ಬರೆದಿದ್ದೇನೆ. ಎದೆಮಟ್ಟದ ನೀರಿನಲ್ಲಿ, ರಾತ್ರಿವೇಳೆಯಲ್ಲಿ ಹಣೆಗೆ ಬ್ಯಾಟರೀ ಕೊಟ್ಟಿಕೊಂಡು, ಬಲಗೈಯಲ್ಲಿ ಭರ್ಜಿ ಹಿಡಿದು ನಿಂತುಕೊಂಡು, ಬ್ಯಾಟರಿಯ ಬೆಳಕಿಗೆ ಬರುವ ದೊಡ್ಡ ಮೀನುಗಳಿಗೆ ಗುರಿ ಹಿಡಿದು ಚುಚ್ಚಬೇಕು. ಈ ಕೆಲಸಕ್ಕೆ ರಾತ್ರಿ ಮತ್ತು ನೀರಿನ ಭಯವಂತೂ ಇರುವ ಹಾಗೇ ಇಲ್ಲ; ಜೊತೆಗೆ ಒಳ್ಳೆಯ ಗುರಿಕಾರರಾಗಿರಬೇಕು, ಸಹನೆಯೂ ಇರಬೇಕು.
ಕೆಲವರು ಭರ್ಜಿಯ ಬದಲು ಬಲವಾದ ದೊಣ್ಣೆಯಿಂದಲೇ ತೇಲುತ್ತಾ ಬಂದ ಮೀನಿಗೆ ಒಡೆಯುತ್ತಾರೆ ಎಂದು ಹಾಗೂ ಕೋವಿಯಿಂದಲೂ ಮೀನು ಒಡೆಯುತ್ತಾರೆ ಎಂದು ಕೇಳಿದ್ದೇನೆ. ಇವೆರಡನ್ನೂ ನಾನು ನೋಡಿಲ್ಲ.
ಭಂಗಿಸೊಪ್ಪು ಅಥವಾ ಹೊಗೆಸೊಪ್ಪು ಕದಡುವುದು
ಇದೊಂದು ಸುಲಭವಾದ ಆದರೆ ಸ್ವಲ್ಪ ದುಬಾರಿಯಾದ ವಿಧಾನ. ಸಣ್ಣಪುಟ್ಟ ಗುಂಡಿಗಳಲ್ಲಿ ಮೀನುಗಳಿರುವುದು ಖಚಿತವಾದರೆ ಸ್ವಲ್ಪ ಭಂಗಿ ಸೊಪ್ಪು ಅಥವಾ ಹೊಗೆಸೊಪ್ಪನ್ನು ಚೆನ್ನಾಗಿ ಕೈಯಿಂದ ತಿಕ್ಕಿ ನೀರಿನಲ್ಲಿ ಕದಡಿ ಬಿಡುವುದು. ಅದರ ಘಾಟಿಗೆ ಮೀನುಗಳು ಮತ್ತೇರಿ ತೇಲಲಾರಂಬಿಸುತ್ತವೆ. ಆದರೆ ಭಂಗಿಸೊಪ್ಪು ದುಬಾರಿ ಎಂಬ ಮಾತಿರಲಿ ಅದನ್ನು ಬಳಸಿದರೆ ಜೈಲು ಕಾಣಬೇಕಾಗುತ್ತದೆ ಎಂಬುದು ಆಗಿನ ತಿಳುವಳಿಕೆಯಾಗಿತ್ತು. ಹೊಗೆ ಸೊಪ್ಪು ಸಾಮಾನ್ಯವಾಗಿ ಹಳ್ಳಿಯ ಎಲ್ಲರ ಮೆನಯಲ್ಲೂ ಸಿಗುವ ವಸ್ತುವಾದರೂ ಅಂದಿನ ಕಾಲಕ್ಕೆ ಅತ್ಯಂತ ದುಬಾರಿಯಾದ ವಸ್ತುವಾಗಿತ್ತು.
ಕಾರೆಕಾಯಿ ಕದಡುವುದು
ಭಂಗಿಸೊಪ್ಪು ಅಥವಾ ಹೊಗೆಸೊಪ್ಪಿಗೆ ಪರ್ಯಾಯವಾಗಿ ಕಾರೆಕಾಯಿಯನ್ನು ಬಳಸುವ ಈ ವಿಧಾನ ಸುಲಭವಾದದ್ದು ಆದರೂ ಅಪಾಯಕಾರಿಯಾದದ್ದು. ಕಾರೇಕಾಯಿಗಳಲ್ಲಿ ಒಂದು ಜಾತಿಯ ಕಾಯಿಗಳಿಗೆ ಸ್ವಲ್ಪ ವಿಷ ಜಾಸ್ತಿ, ಕಾರೇ ಹಣ್ಣುಗಳನ್ನು ತಿನ್ನುತ್ತಾರಾದರೂ ಈ ಜಾತಿಯ ಹಣ್ಣುಗಳನ್ನು ಯಾರೂ ತಿನ್ನುವುದಿಲ್ಲ. ಇವನ್ನು ಸಣ್ಣಪುಟ್ಟ ದನಕರುಗಳು ತಿಂದರೆ ಸತ್ತೇ ಹೋಗುತ್ತವೆ. ಇಂತಹ ಕಾರೇಕಾಯಿಗಳನ್ನು ಜಜ್ಜಿ ನೀರಿನಲ್ಲಿ ಕದಡಿದರೆ ಕ್ಷಣಾರ್ಧದಲ್ಲಿ ಮೀನುಗಳು ಪ್ರಜ್ಞಾಶೂನ್ಯವಾಗಿ ತೇಲಲಾರಂಭಿಸುತ್ತವೆ. ನೀರು ಕಪ್ಪಾಗುತ್ತದೆ.ಇದು ತಾಕಿದ ಮೈಕೈಗಳಿಗೆ ತುರಿಕೆಯಾಗುತ್ತದೆ. ಮೀನು ಬಾಚಿಕೊಳ್ಳುವ ಅವಸರದಲ್ಲಿ ನೀರನ್ನು ಬಾಯಿಗೆ ಸೋಕಿಸುವಂತಿಲ್ಲ. ಮೈಯಲ್ಲಿ ತೆರೆದ ಗಾಯಗಳಿದ್ದರೂ ಅಪಾಯ. ಮೀನುಹಿಡಿದ ಮೇಲೆ ಗುಂಡಿಯ ನೀರನ್ನು ಕುಡಿದರೆ ದನಕರುಗಳು ಸತ್ತೇ ಹೋಗುತ್ತವೆ. ಗುಂಡಿಯಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ. ಆದರೂ ಅದನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಮೀನು ಹಿಡಿಯುತ್ತಾರೆ.
ಡೈನಾಮೆಂಟ್ ಸಿಡಿಸುವುದು
ಕುಂದೂರು ಮಠದಲ್ಲಿ ಕಲ್ಲು ಹೊಡೆಯುವವರು ಈ ವಿಧಾನ ಬಳಸುವುದನ್ನು ಕಂಡಿದ್ದೇನೆ. ಅವರು ಕಲ್ಲು ಸಿಡಿಸಲು ತಂದಿದ್ದ ಡೈನಾಮೆಂಟ್ಟನ್ನು ಕಡಿಮೆ ಪ್ರಮಾಣದಲ್ಲಿ ಮೀನುಗಳಿರುವ ಬಾವಿ ಅಥವಾ ಗುಂಡಿಯಲ್ಲಿ ನೀರೊಳಗೆ ಸಿಡಿಸುತ್ತಿದ್ದರು. ಮೀನುಗಳು ಸತ್ತು ತೇಲುತ್ತಿದ್ದವು. ಅವರು ಅವನ್ನು ಧಾರಾಳವಾಗಿ ಹಿಡಿದು ತಿನ್ನುತ್ತಿದ್ದರು. ಆದರೆ ಅವು ವಿಷಯುಕ್ತ ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು.
ಸಧ್ಯಕ್ಕೆ ಇಷ್ಟೇ ನನಗೆ ನೆನಪಾಗುತ್ತಿರುವುದು.
ಈಗ ಪಂಪನ ಸರದಿ!
ಕೃಷ್ಣಾರ್ಜುನರು ತಮ್ಮ ಅಂತಃಪುರದ ಸ್ತ್ರೀಯರೊಡನೆ ಯಮುನಾ ನದಿಯಲ್ಲಿ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಪಂಪ ಅದನ್ನು ಸ್ವಾರಸ್ಯಕರವಾಗಿಯೂ ಶೃಂಗಾರರಸಾತ್ಮಕವಾಗಿಯೂ ವರ್ಣಿಸಿದ್ದಾನೆ (ಅದೇ ಒಂದು ಪ್ರತ್ಯೇಖ ಲೇಖನವಾಗುತ್ತದೆ; ಬಿಡಿ).
ಅದರಲ್ಲಿ ಬರುವ ಒಂದು ಪದ್ಯ ಹೀಗಿದೆ.
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ಮೀಂಗಳ್||
ಆ ಎಲ್ಲಾ ಸ್ತ್ರೀ ಸಮೂಹವು ಮೈಯಿಗೆ ಬಳಿದುಕೊಂಡಿದ್ದ ಕಸ್ತೂರಿತೈಲದಿಂದಲೂ, ಮುಡಿದುಕೊಂಡಿದ್ದ ಹೂವುಗಳ ಪರಾಗದಿಂದಲೂ ಸಷ್ಟಿಯಾದ (ಸು)ವಾಸನೆ ಮಡುವಿನ ನೀರಿನಲ್ಲಿ ಸೇರಿಕೊಂಡು ಕದಡಲ್ಪಟ್ಟಿತ್ತು. ಆ ವಾಸನೆಯನ್ನು ಸೇವಿಸಿದ ಮೀನುಗಳು ಸೊಕ್ಕಿ ಅಂದರೆ ಪ್ರಜ್ಞೆ ಕಳೆದುಕೊಂಡು ನೀರಿನಲ್ಲಿ ಬೆಂಡು ತೇಲುವಂತೆ ತೇಲಿದವಂತೆ!
ಆಹಾ! ಮೀನು ಹಿಡಿಯುವುದು ಎಷ್ಟೊಂದು ಸುಲಭ! ಮೈಗೆಲ್ಲಾ ಸುಗಂಧದ್ರವ್ಯಗಳನ್ನು (ಆಧುನಿಕ ತರೇವರಿ ಸೆಂಟ್ ಆದರೂ ಪರಾವಾಗಿಲ್ಲ!!!) ಪೂಸಿಕೊಂಡು ನೀರಿಗಿಳಿದರೆ ಸಾಕು, ಅಲ್ಲವೆ!?
ವಿಶೇಷ ಎಚ್ಚರಿಕೆ: ಪಂಪನಲ್ಲಿ ಪ್ರಜ್ಞೆ ಮಾತ್ರ ಕಳೆದುಕೊಂಡು ತೇಲುತ್ತಿದ್ದ ಮಿನುಗಳು ಆಧುನಿಕ ಸೆಂಟ್ ಸೇವಿಸಿದರೆ ಸತ್ತೇ ಹೋಗುತ್ತವೆ!)