Monday, August 30, 2010

ಅಡುಗೆಯವಳೂ ಆದ ಸರಸ್ವತಿ

ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ’ಜಯನೃಪಕಾವ್ಯ’, ’ನೇಮಿಜಿನೇಶ ಸಂಗತಿ’, ’ಸಮ್ಯಕ್ತ್ವ ಕೌಮುದಿ’ ಮತ್ತು ’ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.

ಪರಬ್ರಹ್ಮಹೃದಯಸರಸಿರುಹೋ

ದರದೊಳಗೊಗೆದಾತನ ಸಿರಿಮೊಗದೊಳು

ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ

ಭರದಿಂ ಭವ್ಯಭುಜಂಗರನವಳೊಳ್

ನೆರಪುವ ಕೋವಿದೆ ನರಸುರವಂದಿತೆ

ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು

ಯಾರ ಹೃದಯಕಮದಲ್ಲಿ ಜನಿಸಿದಳೋ, ಅಂತಹ ಪರಬ್ರಹ್ಮನ ಸಿರಿಮೊಗದಲ್ಲಿ ಚೆಲುವನ್ನು ತಾಳಿ ಸರಸ್ವತಿಯು ನೆಲಸಿದ್ದಾಳೆ. ಕೈವಲ್ಯಸತಿಗೆ ಸಹಚಾರಿಣಿಯಾಗಿ, ಸಡಗರದಿಂದ ಭವ್ಯಭುಜಂಗರೊಂದಿಗೆ ಸೇರಿಸುವ ನೈಪುಣ್ಯವತಿಯೂ, ನರ ಮತ್ತು ಸುರರಿಂದ ಪೂಜಿಸಲ್ಪಡುವವಳೂ ಆದ ತರುಣೀಮಣಿ ಭಾರತಿ ನೀನು ನಮ್ಮ ಮತಿಗೀವುದು ಮಂಗಳವನು ಎಂಬುದು ಕವಿಯ ಆಶಯ. ಆದರೆ ’ಭುಜಂಗ’ ಎಂಬ ಪದಕ್ಕೆ ವಿಟ, ಜಾರ, ಹಾವು ಮೊದಲಾದ ಅರ್ಥಗಳನ್ನು ಪದಕೋಶದಲ್ಲಿ ಹೇಳಲಾಗಿದೆ. ಆದ್ದರಿಂದ ’ಕೈವಲ್ಯಸತಿಗೆ ಸಹಚರಿಯಾಗಿ ಭರದಿಂ ಭವ್ಯಭುಜಂಗರನವಳೊಳ್’ ಎಂಬ ಮಾತು ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ’ಸತಿಯೊಡನೆ ಚೆಲ್ಲಾಟ ವಿಟರಿಗೇನೋ ಸ್ವಾಭಾವಿಕ. ಆದರೆ ಕೈವಲ್ಯ ಸತಿಯೊಡನೆ ಭವ್ಯಭುಜಂಗರು ಚೆಲ್ಲಾಟವಾಡಬಹುದೆ? ಹಾಗಾದರೆ ಅವರು ಭವ್ಯರು ಅಂದರೆ ಜಿನಭಕ್ತರು ಹೇಗೆ? ಕೈವಲ್ಯಸತಿ ಹೇಗೆ? ಮತ್ತು ಇವರನ್ನು ನೆರಪುವುದಕ್ಕೆ ತರುಣೀಮಣಿ ಭಾರತಿ ಕೋವಿದೆಯಾಗಿ ಕೆಲಸ ಮಾಡಬೇಕೆ?’ ಎಂಬ ಪ್ರಶ್ನೆಗಳನ್ನು ರಂ.ಶ್ರೀ.ಮುಗಳಿಯವರು ಎತ್ತಿದ್ದಾರೆ. ಭುಜಂಗ ಪದಕ್ಕೆ ಪತಿ, ಒಡೆಯ ಎಂಬ ಅರ್ಥಗಳು ಇರುವುದನ್ನೂ ನಾವು ಗಮನಿಸಬೇಕಾಗಿದೆ. ಇಲ್ಲಿ ಬರುವವರು ಕೇವಲ ಭುಜಂಗರಲ್ಲ; ಭವ್ಯ ಭುಜಂಗರು. ಅಂದರೆ ಜಿನಭಕ್ತರಾದ ಪತಿಗಳು, ಒಡೆಯರು ಎಂದರ್ಥ. ಆದರೂ ’ಭವ್ಯರೆಂಬ ಪತಿಗಳು’ ಎಂಬ ಅರ್ಥ ಬರುವುದರಿಂದ, ’ಒಬ್ಬ ಸತಿಗೆ ಬಹುಪತಿಗಳು ಎಂಬ ವಿಪರೀತಾರ್ಥವಾಗುತ್ತದೆ’ ಎಂಬ ಮುಗಳಿಯವರ ಪ್ರಶ್ನೆ ಹಾಗೇ ಉಳಿಯುತ್ತದೆ. ನಾವು ಅದನ್ನು ಬೇರೊಂದು ರೀತಿಯಲ್ಲಿ ಪರಿಶೀಲಿಸಬಹುದಾಗಿದೆ. ನಾಗಚಂದ್ರನ ’ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’, ಪಾರ್ಶ್ವಕವಿಯ ’ಅತನುಜಿತಜಿನವದನದಿಂ ನಿರ್ವೃತಿಪಥವ ತೋರಲ್ಕೆತಾಸರಸತಿಯೆನಿಸಿ ಪೊರಮಟ್ಟು ನಿರ್ಮಳರೂಪನಾಂತೀಗ’ ಮತ್ತು ಬಾಹುಬಲಿ ಪಂಡಿತನ ’ಸರಸ್ವತೀ ಕಮಳಿನಿ ತೋರ್ಕೆ ಮುಕ್ತಿಕಮಳಾಮುಖಮಂ ನಮಗೊಲ್ದು ಲೀಲೆಯಿಂ’ ಎಂಬ ಪರಿಕಲ್ಪನೆಗಳನ್ನು ಗಮನಿಸಿದಾಗ, ಸರಸ್ವತಿಯನ್ನು ಮುಕ್ತಿಲಕ್ಷ್ಮಿಗಾಗಿ ಪ್ರಾರ್ಥಿಸುವುದು ಒಂದು ಸಂಪ್ರದಾಯವಾಗಿಯೇ ಬಂದಿರುವುದನ್ನು ಗಮನಿಸಬಹುದು. ಮುಕ್ತಿಸಂಪಾದನೆಗೆ ಸರಸ್ವತಿಯು ನೆರವಾಗುತ್ತಾಳೆ ಎಂಬುದು ಆಶಯ. ಆದ್ದರಿಂದ ಪ್ರಸ್ತುತ ಪದ್ಯದ ವಾಚ್ಯಾರ್ಥವನ್ನು ಮಾತ್ರ ಗಮನಿಸದೆ, ಜಿನಭಕ್ತ(ಭವ್ಯ)ರಾದ ಪತಿಗಳಿಗೆ, ಒಡೆಯರಿಗೆ (ಭುಜಂಗರಿಗೆ) ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ ಎಂದು ಅರ್ಥೈಸುವುದೇ ಸೂಕ್ತ. ಇವರು ಕೇವಲ ಪತಿಗಳು ಅಥವಾ ಒಡೆಯರು ಮಾತ್ರ ಆಗಿರದೆ ಜಿನಭಕ್ತ(ಭವ್ಯ)ರಾದವರು ಎಂಬುದನ್ನು, ಜಿನಭಕ್ತರಿಗೆ ಮೋಕ್ಷಪದವಿ ಸಿಗುತ್ತದೆ ಎಂಬ ಕಲ್ಪನೆಯನ್ನು ಗಮನಿಸಿ, ಪ್ರಸ್ತುತ ಪದ್ಯದಲ್ಲಿ ಮೇಲ್ನೋಟಕ್ಕೆ ಕಾಣುವ ವಿಪರೀತಾರ್ಥನ್ನು ತೊಡೆದು ಹಾಕಬಹುದಾಗಿದೆ. ಮಂಗರಸ ತನ್ನ ’ನೇಮಿಜಿನೇಶನ ಸಂಗತಿ’ಯಲ್ಲಿ ಸರಸ್ವತಿಯನ್ನು ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ’ ಎಂದು ಕರೆದಿದ್ದಾನೆ.

ವಾಣಿ ವೃಜಿನ ಘನತರಕಾಂತಾರ ಕೃ

ಪಾಣಿ ಸಂಸಾರವಾರಿಧಿಗೆ

ದ್ರೋಣಿ ನಿರ್ಮಮಲನಿಶ್ರೇಯೋಮಾರ್ಗ ನಿ

ಶ್ರೇಣಿಗೆ ನಾನೆರಗುವೆನು

ಕಡಿದಾದ ಕಾಡಿನಂತಿರುವ ಕ್ಲೇಶಗಳಿಗೆ ಕಠಾರಿಯಂತೆ ಇರುವವಳು, ಸಂಸಾರವೆಂಬ ಸಮುದ್ರಕ್ಕೆ ದೋಣಿಯಂತೆ ಇರುವವಳು, ನಿರ್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ. ಅವಳಿಗೆ ನಾನು ನಮಸ್ಕರಿಸುತ್ತೇನೆ. ಇಡೀ ಪದ್ಯ ಅಗ್ಗಳನ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ ವಿಸರದ್ದುರ್ಬೋಧರೋದಸ್ವಿನೀ ತರಣದ್ರೋಣಿ ಸಮುನ್ನತಾಕ್ಷಯಪದ ಪ್ರಾಸಾದ ನಿಶ್ರೇಣಿ’ ಎಂಬ ಪದ್ಯದಿಂದ ಪ್ರಭಾವಿತವಾಗಿದೆ. ’ಸಮ್ಯಕ್ತ್ವ ಕೌಮುದಿ’ಯಲ್ಲಿ ಬಂದಿರುವ ’ವಾಣಿವೀಣಾಪಾಣಿ... ಜಿನಮುಖಜನಿತವಾಣಿ ಶಾಸ್ತ್ರಕ್ಷೆಣಿ ಮಾಣದೆನ್ನೆದೆಯಲಿ ನೆಲಸಿ ಸನ್ಮತಿಯೀವುದು’ ಎಂಬ ಪದ್ಯದ ಮೇಲೂ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ....’ ಪದ್ಯದ ಪ್ರಭಾವವಿದೆ. ಜಯನೃಪಕಾವ್ಯದ ’ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ’ ಎಂಬುದಕ್ಕೆ ಪೂರಕವಾಗಿ ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ ಅಂದರೆ ನಿರ‍್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ’ ಎಂಬ ಮಾತು ಬಂದಿದೆ.

ಅಡಿಗೆಯನ್ನು ಕುರಿತ ಕನ್ನಡದ ಮೊದಲ ಸ್ವತಂತ್ರ ಕೃತಿ ’ಸೂಪಶಾಸ್ತ್ರ’ವನ್ನು ಮಂಗರಸನು ರಚಿಸಿದ್ದಾನೆ. ಕೃತಿಯ ಎರಡನೇ ಪದ್ಯದಲ್ಲಿಯೇ ಸೂಪಶಾಸ್ತ್ರಕ್ಕನುಗುಣವಾಗಿ ಸರಸ್ವತಿಯನ್ನು ನೆನೆಯುತ್ತಾನೆ.

ನವ ಕವೀಶ್ವರ ವಿಕಸಿತಾನನ ಘಟಂಗಳೊಳು

ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ

ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು

ತವೆ ಪಾಕಮಂ ಮಾಡಿ ರಸಿಕಜನಸಂತತಿಯ

ಕಿವಿಗೆ ತೀವುವ ಭಾರತೀದೇವಿಯಂ ನೆನೆದು

ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು

ಹೊಸ ಕವೀಶ್ವರರ ನಗುವಿನಿಂದ ಬಿರಿದ ಮುಖಗಳೆಂಬ ಪಾತ್ರೆಗಳಲ್ಲಿ ನವರಸಗಳನ್ನು ಹಾಕಿ, ಚಾತುರ್ಯ, ದರ್ಶನ (ಶೋಭೆ) ಮೊದಲಾದ (ಕಾವ್ಯ) ಪರಿಕರಗಳೊಂದಿಗೆ ಕಲೆಸಿ, ಬಳಿಕ ಅವರ (ಹೊಸ ಕವೀಶ್ವರರ) ನಾಲಗೆಯೆಂಬ ಸೌಟಿನಿಂದ ತಿರುಗಿಸುತ್ತಾ, ಒಳ್ಳೆಯ ಅಡುಗೆಯನ್ನು (ಕಾವ್ಯವನ್ನು) ಮಾಡಿ (ಹೇಳಿಸಿ), ರಸಿಕ ಜನರ ಬಾಯಿಗೆ (ಕಿವಿಗೆ) ತುಂಬುವ ಭಾರತಿ(ಸರಸ್ವತಿ)ಯನ್ನು ಸ್ತುತಿಸಿ, ರುಚಿಯಿಂದ, ಷಡ್ರಸಗಳಿಂದ ಕೂಡಿದ ಪಾಕ ವಿಶೇಷಗಳನ್ನು ತಿಳಿದ ಮಟ್ಟಿಗೆ ಹೇಳುತ್ತೇನೆ ಎಂಬುದು ಮಂಗರಸನ ನಿವೇದನೆ. ಸರಸ್ವತಿಯನ್ನು (ಕಾವ್ಯವೆಂಬ) ಪಾಕಶಾಸ್ತ್ರಪ್ರವೀಣೆಯಾಗಿಸಿರುವುದು ಕವಿಯ ಚಮತ್ಕಾರವನ್ನು ತೋರಿಸುತ್ತದೆ. ಜೊತೆಗೆ ಸರಸ್ವತಿಗೆ ಹೊಸತೆರನಾದ ಆದರೆ ವಿಶೇಷವಾದ ಪಾತ್ರವನ್ನೂ ಕಲ್ಪಿಸುತ್ತದೆ.

Saturday, August 21, 2010

ಇವರು ತಪ್ಪಿಸಿಕೊಂಡವರಂತೆ!

ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು.


ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಾಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ.

ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ.

ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ.

ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!.

ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ.

ಕೊನೆಗೆ ಆಟೋಡ್ರೈವರ್ ಹೇಳಿದ್ದು.

ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ.

ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು.

‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ.

ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು.

ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ? ಮುಖ್ಯಮಂತ್ರಿಗಳೇ ಯೋಚಿಸಬೇಕು

Monday, August 16, 2010

೨೪೦ ನಿಮಿಷಗಳಲ್ಲಿ ೬೮ ಅಭ್ಯರ್ಥಿಗಳಿಗೆ ಸಂದರ್ಶನ; ತುಮಕೂರು ವಿವಿ ವಿಶ್ವದಾಖಲೆ!!!

ಮೊನ್ನೆ ಶುಕ್ರವಾರ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ (ಲೆಕ್ಚರರ್ ಎಂಬುದರ ಹೊಸ ಅವತಾರ!) ಹುದ್ದೆಗೆ ಸಂದರ್ಶನ ನಡೆಯಿತು. ಹಿಂದೊಮ್ಮೆ ಇದೇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದು ಅದು ಕೋರ್ಟ್ ಮೆಟ್ಟಿಲು ಹತ್ತಿತ್ತು. ಕೋರ್ಟ್ ಎಲ್ಲವನ್ನೂ ಹೊಸದಾಗಿ ನಡೆಸುವಂತೆ ತೀರ್ಪು ಇತ್ತುದರಿಂದ ನನಗೂ ಸಂದರ್ಶನದ ಅವಕಾಶ ಸಿಕ್ಕಿತ್ತು. ಎಸ್.ಎಂ.ಎಸ್., ಈ ಮೇಲ್ ಹಾಗೂ ಅಂಚೆ ಮುಖಾಂತರವೂ ಸಂದರ್ಶನದ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದೆಲ್ಲವೂ ಕೋರ್ಟ್ ತೀರ್ಪಿನ ಪ್ರಭಾವವಿದ್ದಿರಬೇಕು.

ಇದೇ ಮೊದಲ ಬಾರಿಗೆ ಕನ್ನಡ ಉಪನ್ಯಾಸಕ ಹುದ್ದೆಯೊಂದಕ್ಕೆ, ವಿವಿಯ ಮಟ್ಟದಲ್ಲಿ ಸಂದರ್ಶನಕ್ಕೆ ಹೊರಟಿದ್ದ ನಾನು ನನ್ನ ಎಲ್ಲಾ ದಾಖಲೆಗಳನ್ನು, ಪ್ರಕಟಣೆಗಳನ್ನು ಹೊತ್ತು, ನನ್ನಂತೆಯೇ ಸಂದರ್ಶನಕ್ಕೆ ಹೊರಟಿದ್ದ ನನ್ನ ಮಿತ್ರರೊಬ್ಬರ ಜೊತೆಗೆ, ಬೆಳಿಗ್ಗೆ ೭.೪೦ ಗಂಟೆಗೆ ತುಮಕೂರು ತಲುಪಿದ್ದೆ. ಅಂದ ಹಾಗೆ ಸಂದರ್ಶನದ ಸಮಯ ನಿಗದಿಯಾಗಿದ್ದು ಬೆಳಿಗ್ಗೆ ೭.೩೦ ಗಂಟೆಗೆ! ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು ಎಪ್ಪತ್ತು ಎಂಬತ್ತು ಜನ ಅಲ್ಲಿ ಜಮಾಯಿಸಿದ್ದರು. ನಾಲ್ಕೈದು ಪರಿಚಿತ ಮುಖಗಳೂ ಇದ್ದವು. ನನ್ನ ಸಹದ್ಯೋಗಿಯೊಬ್ಬರೂ ಸಂದರ್ಶನಕ್ಕೆ ಬಂದಿದ್ದರು. ಒಂದೆರಡು ದಿನಗಳ ಮುಂಚೆಯಷ್ಟೇ ಸಂದರ್ಶನದ ಮಾಹಿತಿ ಸಿಕ್ಕಿದ್ದರಿಂದ ನಮಗೆ ಪರಸ್ಪರ ಗೊತ್ತೇ ಆಗಿರಲಿಲ್ಲ.

ಗದ್ದಲವೋ ಗದ್ದಲ. ಒಂದು ಮೂಲೆಯಲ್ಲಿ ಅಭ್ಯರ್ಥಿಗಳ ಕಾಗದ ಪತ್ರ ಅಂಕಪಟ್ಟಿ ಪುಸ್ತಕ ಲೇಖನ ಮೊದಲಾದವುಗಳನ್ನು ಪರಿಶೀಲಿಸಲಾಗುತ್ತಿತ್ತು. ಒಬ್ಬೊಬ್ಬರದಕ್ಕೆ ಕನಿಷ್ಠ ೧೦ ನಿಮಿಷಗಳಾದರೂ ಬೇಕಾಗುತ್ತಿತ್ತು. ಅಷ್ಟರಲ್ಲೇ ನಾಲ್ಕೈದು ಜನರ ಸಂದರ್ಶನವೂ ಮುಗಿದು ಹೋಗಿತ್ತು!

ಸಂದರ್ಶನ ನಡೆಸುವವರ ವೇಗಕ್ಕೆ ಅನುಗುಣವಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತಿರಲಿಲ್ಲ. ಅದನ್ನು ತಿಳಿದ ವಿ.ಸಿ.ಯವರು ಸ್ವತಃ ಸಂದರ್ಶನದ ಕೊಠಡಿಯಿಂದ ಬಂದು, ಇನ್ನಿಬ್ಬರನ್ನು ಆ ಕೆಲಸಕ್ಕೆ ನೇಮಿಸಿ ಬೇಗ ಬೇಗ ಪರಿಶೀಲನೆ ನಡೆಸುವಂತೆ ಆಜ್ಞೆಯಿತ್ತು ಮತ್ತೆ ಒಳ ಹೋದರು. ಕೇವಲ ಎರಡು ನಿಮಿಷಗಳಲ್ಲಿ ಒಬ್ಬ ಅಭ್ಯರ್ಥಿಯ ಸಂದರ್ಶನ ಮುಗಿದು ಹೋಗುತ್ತಿತ್ತು!

ಎಂಟೂವರೆಯ ಹೊತ್ತಿಗೆ ನನ್ನ ಜೊತೆಯಲ್ಲಿ ಬಂದಿದ್ದ ಸ್ನೇಹಿತರ ಸಂದರ್ಶನ ಮುಗಿದು ಹೋಯಿತು. ’ಇದೇನು ಸದರ್ಶನವೋ? ನಾಟಕವೋ?’ ಎನ್ನುತ್ತಲೇ ಹೊರ ಬಂದರು. ನಾನು ಸಮಯ ನೋಡಿಕೊಂಡಿದ್ದೆ. ಸರಿಯಾಗಿ ಒಂದೂಮುಕ್ಕಾಲು ನಿಮಿಷದಲ್ಲಿ ಅವರು ಹೊರಗೆ ಬಂದಿದ್ದರು! ಒಳ ಹೋದ ತಕ್ಷಣ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೊದಲೇ, ಒಬ್ಬರು ಅಂಕಪಟ್ಟಿಗಳಿದ್ದ ಫೈಲನ್ನು ಕೈಯಿಂದ ಕಸಿದುಕೊಂಡರಂತೆ. ಆದರೆ ಅದನ್ನು ತೆಗೆದು ನೋಡುಲೇ ಇಲ್ಲವಂತೆ. ನಂತರ ಮೂರೇ ಪ್ರಶ್ನೆ. ನಿಮ್ಮ ಪಿಹೆಚ್.ಡಿ. ವಿಷಯ ಯಾವುದು? ಗೈಡ್ ಯಾರು? ಏನು ವಿಶೇಷ? ನಂತರ ನೀವಿನ್ನು ಹೋಗಬಹುದು ಎಂಬ ವಿದಾಯ ವಾಕ್ಯ. ಸಾಹಿತಿಯೊಬ್ಬರ ಕೃತಿಗಳ ಹಿನ್ನೆಲೆಯಲ್ಲಿ ಅಂದಿನ ಕಾಲಘಟ್ಟದ ಸಾಂಸ್ಕೃತಿಕ ಪಲ್ಲಟಗಳು, ವೈರುದ್ಧ್ಯಗಳು, ಚಳುವಳಿಗಳ ಬಗ್ಗೆ ಒಳ್ಳೆಯ ಮಹಾಪ್ರಬಂಧ ಬರೆದು ಪಿಹೆಚ್.ಡಿ. ಪದವಿ ಗಳಿಸಿರುವ ನನ್ನ ಗೆಳೆಯರೊಬ್ಬರಿಗೆ ಸಂದರ್ಶನ ನಡೆಯುವಾಗ ಕೇವಲ ಎರಡೇ ನಿಮಿಷದಲ್ಲಿ ಬಿರುಸಿನ ಮಾತು ಕಥೆಗಳಾದವಂತೆ. ಆ ಅಭ್ಯರ್ಥಿ ಕೊಠಡಿಯಿಂದ ಹೊರ ಬರುವಾಗ ’ಎಷ್ಟೇ ಆಗಲಿ ಅವರ ಶಿಷ್ಯರಲ್ಲವೆ?’ ಎಂದು ಮೂದಲಿಕೆಯ ದನಿಯೂ ಹಿಂಬಾಲಿಸಿತಂತೆ!

ಒಂಬತ್ತು ಗಂಟೆಯ ಹೊತ್ತಿಗೆ ಒಳಗೆ ಕಳುಹಿಸಲು, ದಾಖಲೆಗಳ ಪರಿಶೀಲನೆ ಮುಗಿದಿರುವ ಅಭ್ಯರ್ಥಿಗಳೇ ಇರಲಿಲ್ಲ!

ಮತ್ತೆ ವಿ.ಸಿ.ಯವರು ಮತ್ತೆ ಹೊರಬಂದರು. ಮತ್ತೊಂದು ಟೇಬಲ್ ಹಾಕಿಸಿ ಬೇಗ ಬೇಗ ಪರಿಶಿಲನೆ ನಡೆಸುವಂತೆ ಸೂಚನೆ ಕೊಟ್ಟು ಒಳ ಹೋದರು. ಸುಮಾರು ಒಂಬತ್ತೂವರೆಗೆ ನಾನು ಸಂದರ್ಶಕರ ಮುಂದಿದ್ದೆ. ಮೇಲೆ ಹೇಳಿದ ಮೂರು ಪ್ರಶ್ನೆಗಳಲ್ಲಿ ಮೊದಲ ಎರಡೂ ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮೂರನೆಯ ಪ್ರಶ್ನೆ ಸಂಸ್ಕೃತ ಸಂಗೀತ ಕೃತಿಗಳಿಗೆ ಸಂಬಂಧಿಸಿದ್ದಾಗಿತ್ತು. ನಂತರ ಅದೇ ವಿದಾಯ ವಾಕ್ಯ. ಕೇವಲ ಎರಡು ನಿಮಿಷಗಳಲ್ಲಿ ನಾನು ಒಳಗೆ ತೆಗೆದುಕೊಂಡು ಹೋಗಿದ್ದ ನನ್ನ ಪುಸ್ತಕ ಲೇಖನಗಳ ಕಟ್ಟು ಅಂಕಪಟ್ಟಿಗಳನ್ನು ಹಿಡಿದು ಹೊರಬಿದ್ದಿದ್ದೆ.

ಸರಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೊರಡಲು ಸಿದ್ದವಾಗುತ್ತಿದ್ದಾಗ, ನಮ್ಮ ಪರಿಚಿತರೊಬ್ಬರು, ’ನಾನು ಕಾರಿನಲ್ಲಿ ಬಂದಿದ್ದೇನೆ. ಒಟ್ಟಿಗೆ ಹೋಗೋಣ. ನನ್ನದೂ ಸಂದರ್ಶನ ಆಗುವವರೆಗೆ ಕಾಯಿರಿ’ ಎಂದರು.

ಸರಿ ನಾವೂ ಅದೂ ಇದೂ ಮಾತನಾಡುತ್ತಾ ಕುಳಿತೆವು. ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳ ಹೆಸರಿನ ಆಂಗ್ಲ ವರ್ಣಾನುಕ್ರಮಣಿಕೆಯಲ್ಲಿ ನಡೆಯುತ್ತಿತ್ತು. ಆದರೆ ಪರಿಶೀಲಕರ ಸಂಖ್ಯೆ ಒಂದರಿಂದ ಮೂರಾಗಿದ್ದದರಿಂದ, ಅವರು ಅಭ್ಯರ್ಥಿಗಳ ಪಟ್ಟಿಯ ಪುಟಗಳನ್ನು ಹಂಚಿಕೊಂಡಿದ್ದರಿಂದ ನಮಗೆ ಕಾಯಲು ಹೇಳಿದ ಮಿತ್ರರ ಹೆಸರು ಕೆಳಗಿನಿಂದ ಮೂರನೆಯವರದ್ದಾಗಿತ್ತು. ಅಲ್ಲಿಯವರೆಗೆ ಕಾಯಲೇ ಬೇಕಾಗಿತ್ತು. ಬೆಳಿಗ್ಗೆ ನಾಲ್ಕೂವರೆಗೆ ಮನೆ ಬಿಟ್ಟಿದ್ದ ನಾವು (ಅಲ್ಲಿದ್ದ ಬಹುತೇಕರು) ಕಾಫಿ ಬಿಟ್ಟು ಬೇರೇನನ್ನೂ ಕಂಡಿರಲಿಲ್ಲ. ನಮ್ಮ ಮಿತ್ರರ ಸಂದರ್ಶನ ಮುಗಿಯುವಷ್ಟರಲ್ಲಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದವು. ಇನ್ನು ಇಬ್ಬರಿದ್ದು ಅವರದು ಹನ್ನೊಂದೂವರೆಯ ಹೊರೆಯ ಹೊತ್ತಿಗೆ ಮುಗಿಯಬಹುದು ಎಂದುಕೊಂಡು ನಾವು ಕಾರು ಹತ್ತಿದೆವು.

ಬೆಳಿಗ್ಗೆ ಏಳೂವರೆಯಿಂದ ಹನ್ನೊಂದೂವರೆಯವರೆಗೆ ನಡೆದ ಸಂದರ್ಶನದಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅದೂ ವಿಶ್ವವಿದ್ಯಾಲಯವೊಂದರ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ! (ಮಧ್ಯೆ ಸಂದರ್ಶಕರ ಉಪಾಹಾರ, ಎರಡು ಬಾರಿ ಕಾಫಿ/ಟೀ ಸೇವನೆಯೂ ನಡೆಯಿತು! ಆದರೆ ಅಭ್ಯರ್ಥಿಗಳಿಗೆ ತಿಂಡಿಯಿರಲಿ, ೫೦ ಮಿಲಿ ಕಾಫಿಯೂ ಇಲ್ಲ). ಸಂದರ್ಶನ ನಡೆಯುತ್ತಿದ್ದಾಗಲೇ ವಿ.ಸಿ.ಯವರು ಹೊರ ಬಂದು ಒಬ್ಬರ (ಹಿರಿಯರ?) ಜೊತೆಗೆ ಸುಮಾರು ಹತ್ತು ನಿಮಿಷಗಳ ಗಹನ ಚರ್ಚೆ ನಡೆಸಿ ಒಳಹೋಗಿದ್ದು ನಡೆಯಿತು.

ಇಷ್ಟೆಲ್ಲಾ ಹೇಳಿದ ಮೇಲೆ ಅಲ್ಲಿ ನಮ್ಮ ಗಮನಕ್ಕೆ ಬಂದ ಹಲವಾರು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು. ಇದೇ ಮೊದಲ ಬಾರಿ ವಿಶ್ವವಿದ್ಯಾಲಯ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದ ನಾನು ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಅಲ್ಲಿದ್ದ ಎಲ್ಲಾ ಸಿಬ್ಬಂಧಿಗಳೂ ಯಾವುದೋ ಅವಸರದಲ್ಲಿದ್ದವರಂತೆ ಕಾಣುತ್ತಿದ್ದರು. ಅಲ್ಲಿದ್ದವರೆಲ್ಲ ಎಷ್ಟು ಅವಸರದಲ್ಲಿದ್ದಂದರೆ, ಅಭ್ಯರ್ಥಿಗಳ ಬ್ಯಾಗು ಸೂಟ್‌ಕೇಸುಗಳನ್ನು ವಿವಿಯ ಅಧಿಕಾರಿಗಳೇ ಎತ್ತಿಕೊಡುವುದು ಜೋಡಿಸಿಕೊಡುವುದು ನೋಡಿದರೆ, ’ಇವರೆಲ್ಲಾ ಬೇಗ ಇಲ್ಲಿಂದ ತೊಲಗಿದರೆ ಸಾಕು’ ಎನ್ನುವಂತಿತ್ತು!

ಸ್ವತಃ ವಿ.ಸಿ.ಯವರು ಬಾರೀ ಅವರಸರದಲ್ಲಿದ್ದರು. ಅದಕ್ಕೆ ಅಲ್ಲಿದ್ದ ಅಧಿಕಾರಿಯೊಬ್ಬರು ಕೊಟ್ಟ ಕಾರಣ ಏನು ಗೊತ್ತೆ? ಮಧ್ಯಾಹ್ನ ಪದವಿ ತರಗತಿಗಳು ಪ್ರಾರಂಭವಾಗುವುದರಿಂದ ಅಷ್ಟರಲ್ಲಿ ಸಂದರ್ಶನ ಮುಗಿಸಬೇಕು ಎಂಬುದು! ಆದರೆ ಇದೊಂದು ಕಾರಣವೇ ಅಲ್ಲ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.

ನಾವು ಗಮನಿಸಿದಂತೆ ಗರಿಷ್ಠ ನಾಲ್ಕೈದು ನಿಮಿಷಗಳಿಗಿಂತ ಯಾರಿಗೂ ಹೆಚ್ಚು ಸಮಯ ಸಂದರ್ಶನ ನಡೆಯಲಿಲ್ಲ. ಒಬ್ಬ ಅಭ್ಯರ್ಥಿಯನ್ನು ಬಿಟ್ಟು! ಬಹುಶಃ ಸಂದರ್ಶಕರು ತಿಂಡಿ ತಿನ್ನುವ ಸಮಯದಲ್ಲಿ ಅವರು ಒಳಹೋಗಿದ್ದರಿಂದ ಇರಬಹುದು ಎಂದು ನಾನು ಭಾವಿಸಿದ್ದೆ. ಆಗ ಅವರಿಗೆ ಸುಮಾರು ಹತ್ತು ನಿಮಿಷ ಹಿಡಿದಿತ್ತು. ಆದರೆ ನಂತರ ಅಲ್ಲಿ ಹರಿದಾಡಿದ ಸುದ್ದಿಗಳು ಮಾತ್ರ ಗಾಬರಿ ಹುಟ್ಟಿಸುವಂತಿದ್ದವು. ಏಕೆಂದರೆ ಆ ಅಭ್ಯರ್ಥಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಶಿಲ್ಪದ ಆವರಣದಲ್ಲೇ ವಾಸ್ತವ್ಯ ಹೂಡಿದ್ದವರು! ಸರ್ಕಾರದ ಆನ್‌ಲೈನ್ ವಿಶ್ವಕೋಶ ಖಜಾನೆಗೂ ಕೆಲಸ ಮಾಡುತ್ತಿರುವವರು. ಅವರಿಗೆ ಒಂದು ಪೋಸ್ಟ್ ಗ್ಯಾರಂಟಿ ಎಂಬಬುದು ಇನ್ನೂ ಗಾಬರಿ ಹುಟ್ಟಿಸುವಂತಿತ್ತು. ಅದರ ಜೊತೆಗೆ ಅವರ ನಡುವಳಿಕೆಯೂ ಅದಕ್ಕೆ ಪೂರಕವಾಗಿತ್ತು. ಸುಮಾರು ಎಂಟು ಗಂಟೆ ಇಪ್ಪತ್ತು ನಿಮಿಷಕ್ಕೆ ಅವರ ಸಂದರ್ಶನ ಮುಗಿದರೂ ಅವರು ಹನ್ನೊಂದುವರೆಯವರೆಗೂ ಅಲ್ಲಿಂದ ಅಲುಗಲಿಲ್ಲ. ಬೇರೆಯವರ ಜೊತೆ ಅಷ್ಟೊಂದು ಬೆರೆಯಲೂ ಇಲ್ಲ. ಅಲ್ಲಿದ್ದ ವಿವಿಯ ಬೇರೆ ಬೇರೆ ಅಧಿಕಾರಿಗಳ ಜೊತೆಯಲ್ಲಷ್ಟೇ ಮಾತು. ಹೆಚ್ಚು ಹೊತ್ತು ಕುರ್ಚಿಯಲ್ಲಿ ಒಬ್ಬರೇ ಕುಳಿತು ಕಾಲ ದೂಡುತ್ತಿದ್ದರು. ಜೊತೆಗೆ ’ತುಮಕೂರು ವಿವಿಯ ಅಫಿಲಿಯೇಟೆಡ್ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಯೊಬ್ಬರಿಗೆ ಒಂದು ಪೋಸ್ಟ್ ಈಗಾಗಲೇ ಬುಕ್ ಆಗಿದೆ’ ಎಂಬ ಸುದ್ದಿಯೂ ಅಲ್ಲಿ ಹಬ್ಬಿಬಿಟ್ಟಿತ್ತು! ಪಾಪ, ನಿಜವಾದ ಅರ್ಹತೆಯಿದ್ದರೂ ಅವರನ್ನು ಅನುಮಾನದಿಂದ ನೋಡುವದಂತೂ ತಪ್ಪುವುದಿಲ್ಲ.

ಯಾರೋ ಒಬ್ಬರು ಸ್ವಲ್ಪ ಜೋರಾಗಿಯೇ ’ಒಂದು ವಿವಿಯ ಉಪನ್ಯಾಸಕರಿಗೆ ನಡೆಸುವ ಸಂದರ್ಶನದಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಲು ಒಂದು ನಿಮಿಷದ ಕಾಲಾವಕಾಶವೂ ಇಲ್ಲ! ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ! ಎಲ್ಲಾ ವ್ಯವಸ್ಥಿತ ನಾಟಕವಾಡುತ್ತಿದ್ದಾರೆ. ಇನ್ನು ಕೇವಲ ನಾಲ್ಕೇ ದಿನಗಳಲ್ಲಿ ಲಿಸ್ಟ್ ಅನೌನ್ಸ್ ಮಾಡಿ, ಐದನೇ ದಿನದಲ್ಲಿ ಅವರೆಲ್ಲಾ ಡ್ಯೂಟಿ ರಿಪೋರ‍್ಟ್ ಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಈಗಾಗಲೇ ಕೆಲವು ವಿಷಯಗಳಿಗೆ ನಡೆದ ಸಂದರ್ಶನದಲ್ಲಿ ಹೀಗೆಯೇ ಆಗಿದೆ. ಕೋರ್ಟಿನವರು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿಯ ಕೆಳಗೆ ನುಸುಳುತ್ತಾರೆ’ ಎಂದು ಗೊಣಗಿದರು. ಅಷ್ಟರಲ್ಲಿ ಇನ್ನೊಬ್ಬರು ’ಆರ್.ಎಸ್.ಎಸ್. ಮಂತ್ರಿ; ಆರ್.ಎಸ್.ಎಸ್. ವಿ.ಸಿ.’ ಎಂದು ಏನೇನೋ ಮಾತನಾಡಿದರು.

ಇಂದು ನಮ್ಮ ದೇಶದಲ್ಲಿ ಎಲ್ಲಿ ಏನೇ ನಡೆದರೂ ಅದಕ್ಕೆ ರಾಜಕೀಯ ಬಣ್ಣ ಬಂದು ಬಿಡುತ್ತದೆ. ಅಷ್ಟರ ಮಟ್ಟಿಗೆ ರಾಜಕೀಯ ಎಲ್ಲವನ್ನೂ ಹೊಲಸೆಬ್ಬಿಸಿಬಿಟ್ಟಿದೆ. ವಿವಿಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ರಾಜಕೀಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ದುರದೃಷ್ಟವೆಂದರೆ ಅವುಗಳಲ್ಲಿ ಹೆಚ್ಚಿನವುಗಳು ನಿಜವೂ ಆಗಿಬಿಡುವುದು.

ಕೇವಲ ಸುಮಾರು ೨೦೦ ರಿಂದ ೨೪೦ ನಿಮಿಷಗಳಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ - ವಿಶ್ವವಿದ್ಯಾಲಯವೊಂದರಲ್ಲಿ ಕಾರ್ಯ ನಿರ್ವಹಿಸಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ - (ಸರಾಸರಿ ಒಬ್ಬರಿಗೆ ೩ ರಿಂದ ೩.೫ ನಿಮಿಷ ಮಾತ್ರ; ಅವರು ಒಳ ಹೋಗುವ, ಹೊರ ಬರುವ ಸಮಯ, ಕಾಫಿ ತಿಂಡಿಯ ಸಮಯ ಕಳೆದರೆ ಸರಾಸರಿ ಎರಡೂವರೆ ನಿಮಿಷಕ್ಕೆ ಇಳಿಯುತ್ತದೆ!) ಸಂದರ್ಶನ ನಡೆಸಿ ತುಮಕೂರು ವಿವಿ ವಿಶ್ವದಾಖಲೆಗೆ ಅರ್ಹವಾಗಿದೆ. ಅದಕ್ಕೆ ನೀವೂ ಒಂದಷ್ಟು ಅಭಿನಂದನೆ ಸಲ್ಲಿಸಿಬಿಡಿ!

Thursday, August 12, 2010

ಸಹೃದಯ

ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಪರಿಕಲ್ಪನೆಯಿದೆ. ಕಾವ್ಯ, ನಾಟಕ ಮತ್ತು ಸಂಗೀತ ಮುಂತಾದವುಗಳನ್ನು ಓದಿ, ಕೇಳಿ ಮತ್ತು ನೋಡಿ ಅವುಗಳ ಸೌಂದರ್ಯವನ್ನು ಅನುಭವಿಸಿ ಆನಂದಪಡುವಾತನೇ ಈ ಸಹೃದಯ. ಸಹೃದಯನೆಂದರೆ ಕವಿ ಹೃದಯಕ್ಕೆ ಸಮನಾದ ಹೃದಯವುಳ್ಳವನು ಎಂದರ್ಥ.

ಕವಿ ಸ್ವತಂತ್ರ; ಕೃತಿ ಪರತಂತ್ರ ಎಂಬ ಮಾತಿದೆ. ನಿಜ. ಕವಿಯಿಂದ ಒಮ್ಮೆ ರಚಿತವಾಯಿತೆಂದರೆ ಕೃತಿ ಪರತಂತ್ರ. ಆದರೆ ಅದು ಕವಿಗೆ ಮಾತ್ರ. ಸಹೃದಯನಿಗಾದರೋ ಅದು ಸ್ವತಂತ್ರವಾಗಿಯೇ ಉಳಿದುಬಿಡುತ್ತದೆ. ಎಷ್ಟೋ ಜನ ಮಹಾಕವಿಗಳೂ ಕೂಡ ತಮ್ಮ ಕೃತಿಗೆ -ಅದರ ಸೌಂದರ್ಯಾತಿಶಯಗಳನ್ನು ಕಂಡು -ತಾವೇ ನಮಸ್ಕರಿಸಿದ್ದಾರೆ. ಕೃತಿ ಕವಿಯಿಂದ ಒಮ್ಮೆ ರಚಿತವಾಗುತ್ತದೆ. ಆದರೆ ಸಹೃದಯರ ಮಟ್ಟಿಗೆ ಮಾತ್ರ ಒಂದೊಂದು ಸಾರಿ ಓದಿದಾಗಲೂ, ಒಬ್ಬೊಬ್ಬ ಸಹೃದಯ ಓದಿದಾಗಲೂ ಮತ್ತೆ ಮತ್ತೆ ರಚಿತವಾಗುತ್ತಲೇ ಇರುತ್ತದೆ. ಸಹೃದಯರಿರುವವರೆಗೆ ತನ್ನದೇ ಕೃತಿಯಿಂದ ಕವಿ ನೂರಾರು, ಸಾವಿರಾರು ಬಾರಿ ಸೃಜನನಾಗುತ್ತಾನೆ. ಅದಕ್ಕೆಂದೇ ಕುವೆಂಪು ಅವರು ತಮ್ಮ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ “ಶ್ರೀ ಕುವೆಂಪುವ ಸೃಜಿಸಿದೀ ಕೃತಿ. . . “ ಎಂದು ವಿನೀತರಾಗಿ ಒಪ್ಪಿಕೊಳ್ಳುತ್ತಾರೆ.

ಕವಿಯ ಕೃತಿ ಸಹೃದಯನ ಮನಸ್ಸೆಂಬ ಕನ್ನಡಿಯ ಮೇಲೆ ಪ್ರತಿಭಾರಿಯೂ ಹೊಸದಾಗಿ ಪ್ರತಿಫಲಿಸುತ್ತದೆ. ಪ್ರತಿಯೊಬ್ಬ ಸಹೃದಯನೂ ಒಂದೇ ಕೃತಿಯನ್ನು ತನ್ನಿಚ್ಛೆಯಂತೆ ಮರುಸೃಷ್ಟಿಸಿಕೊಳ್ಳುತ್ತಾನೆ. ಅದರಿಂದ ಆನಂದ ಪಡುತ್ತಾನೆ. ಆನಂದವರ್ಧನನು ತನ್ನ ಲೋಚನದಲ್ಲಿ, “ಯೇಷಾಂ ಕಾವ್ಯಾನುಶೀಲನವಶಾತ್ ವಿಶದೀ ಭೂತೆ ಮನೋಮುಕುರೇ ವರ್ಣನೀಯ ತನ್ಮಯೀಭವ ಯೋಗ್ಯತಾ ತೇ ಹೃದಯ ಸಂವಾದ ಭಾಜಃ ಸಹೃದಯಾ” ಎಂದು ವಿಸ್ತರಿಸಿ ಸ್ಪಷ್ಟಪಡಿಸಿದ್ದಾನೆ. ಅಂದರೆ ಕಾವ್ಯಗಳನ್ನು ಪರಿಶೀಲಿಸಿ ಮನಸ್ಸೆಂಬ ಕನ್ನಡ ನಿರ್ಮಲವಾಗಿರುವುದರಿಂದ ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವರೇ ಸಹೃದಯರು - ಕವಿಯೊಂದಿಗೆ ಹೃದಯ ಸಂವಾದ ನಡೆಸುವವರು.

ಇಲ್ಲಿ ಕವಿ ಸಹೃದಯರಿಬ್ಬರೂ ಸೃಷ್ಟಿಕರ್ತರೆ! ಕವಿಯದು ಸೃಷ್ಟಿಕಾರ್ಯವಾದರೆ, ಸಹೃದಯನದು ಅನುಸೃಷ್ಟಿಕಾರ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕವಿ ಪ್ರತಿಭೆ ಕಾರಯಿತ್ರಿ; ಸಹೃದಯ ಪ್ರತಿಭೆ ಭಾವಯಿತ್ರಿ. ಇವೆರಡು ಸೇರದೆ ಕಲಾಕೃತಿಗೆ ಪೂರ್ಣತೆಯೊದಗಲಾರದು. ಕವಿ ಸಹೃದಯರಿಬ್ಬರು ಸಮಶೃತಿಯನ್ನುಳ್ಳ ಎರಡು ವೀಣೆಗಳಿದ್ದಂತೆ. ಒಂದನ್ನು ಮೀಟಿದರೆ ಇನ್ನೊಂದು ಝೇಂಕರಿಸುತ್ತದೆ.

ಜನ್ನನು ತನ್ನ ಅನಂತನಾಥಪುರಾಣದಲ್ಲಿ “ಕಟ್ಟಿಯುಮೇನೋ ಮಾಲೆಗಾರನ ಪೊಸಬಾಸಿಗಂ. ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗುದೇ!” ಎಂದು ಸಹೃದಯನನ್ನು ಭೋಗಿಗೆ ಹೋಲಿಸುತ್ತಾನೆ. ಕಲಾವಿದನಿಗೆ ತನ್ನ ಸೃಷ್ಟಿಯು ಸಾರ್ಥಕವಾಗಬೇಕಾದರೆ ಅದನ್ನು ಸ್ವೀಕರಿಸುವ ಸಹೃದಯರೂ ಬೇಕು. ಇಲ್ಲದಿದ್ದರೆ ಮಾಲೆ ಬಾಡಿ ಹೋಗುತ್ತದೆ. ಕವಿಪ್ರತಿಭೆ “ಜೀರ್ಣಮಂಗೇ ಸುಭಾಷಿತಂ” ಎಂಬಂತೆ ಕಮರಿಹೋಗುತ್ತದೆ. ಅದಾಗಬಾರದು. ಕಲೆಯ ಸಾರ್ಥಕತೆ ಸಹೃದಯನ ಹೃದಯದಲ್ಲಿ ನೆಲೆಗೊಂಡ ಮೇಲಲ್ಲವೆ? ಏಕೆಂದರೆ ಕವಿ ಕಲೆಯನ್ನಲ್ಲದೆ ಶಿಲೆಯನ್ನು ಸೃಷ್ಟಿಸುವುದಿಲ್ಲ. ಆತ ಸೃಷ್ಟಿಕರ್ತ; ಆದರೆ ಬ್ರಹ್ಮನಲ್ಲ.

ಪ್ರಸ್ತು ಸೃಷ್ಟಿಕರ್ತರ ಬೆಳೆ ಹುಲುಸಾಗಿಯೇ ಇದೆ. ಆದರೆ ಸಹೃದಯರ ಕೊರತೆಯಿದೆ. ಕೈಯೊಂದರಿಂದ ಚಪ್ಪಾಳೆಯಾಗಲಾರದು. ಕೃತಿ ಸೃಷ್ಟಿಗೆ ಪ್ರತಿಭೆಯಷ್ಟು ಅಗತ್ಯವೋ ಅಷ್ಟೆ ಅಗತ್ಯ ಕವಿಗೆ, ಕೃತಿಗೆ ಸಹೃದಯ ಪ್ರತಿಭೆ. ಅವನ ಮಹತ್ವವನ್ನರಿತೇ ಅಭಿನವಗುಪ್ತನು, “ಕವಿ ಸಹೃದಯರಿಬ್ಬರೂ ಒಂದೇ ಸಾರಸ್ವತ ಲೋಕದ ಅಂಗಗಳು’ ಎಂದು ಸಾರಿದ್ದಾನೆ.

Monday, August 09, 2010

ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!

ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...
ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಶಾಲಾದಿನಗಳಲ್ಲಿ ಲಗುಬುಗೆಯಿಂದ ಮನೆಗೆ ನಡೆದು ಬಂದು ಬೇಗಬೇಗನೇ ಮೂಗು ಬಾಯಿಯಿಂದ ಊಟ ಮುಕ್ಕಿ ಸಮಯಕ್ಕೆ ಸರಿಯಾಗಿ ಪುನಃ ಸ್ಕೂಲ್ ಸೇರುತ್ತಾ ಇದ್ದೆ!

ಸೈಕಲ್ ಕಲಿತರೆ ನನಗೆ ತುಂಬಾ ಅನುಕೂಲ ಆಗಬಹುದೆಂಬ ಆಸೆಯಿಂದ ಪ್ರತೀ ಸಂಜೆ ಬಾಡಿಗೆಯ ಸೈಕಲ್ ಪಡೆದು ಕಲಿಯ ತೊಡಗಿದೆ. ಮೊದಲ ದಿನವೇ ನನ್ನ ಬಾಡಿಗೆಯ ಸೈಕಲ್ ಪಲ್ಟಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡೆ. ಕುಂಟುತ್ತಾ ನಡೆಯುತ್ತಿದ್ದ ನನಗೆ ಅಮ್ಮ ನಾಲ್ಕಾಣೆಯ ಪಾವಲಿ (ನಾಣ್ಯ) ಕೊಟ್ಟು ನಮ್ಮ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಆನಂದ ಭವನ ಹೋಟೆಲಿನಲ್ಲಿ “ಪ್ಲೇಟ್ ಊಟ ಮಾಡು” ಎಂದು ಹೇಳಿದ್ದರು.

ನನಗೆ ಸಂಭ್ರಮವೋ ಸಂಭ್ರಮ!

ಆ ದಿನಗಳಲ್ಲಿ ನಮಗಾರಿಗೂ ‘ಪಾಕೆಟ್ ಮನಿ’ ಕೊಡುವ ಪದ್ಧತಿ ಇರಲಿಲ್ಲ. ಅಪರೂಪದಲ್ಲಿ, ಮಧ್ಯಾಹ್ನ ಮನೆಗೆ ಊಟಕ್ಕೆ ಬರಲಾಗದ ಇಂತಹಾ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಊಟಕ್ಕೆಂದು ಪಾಕೆಟ್ ಮನಿ ನನಗೆ ಸಿಗುತ್ತಾ ಇತ್ತು.

ಆಗ ಪ್ಲೇಟ್ ಊಟಕ್ಕೆ ಬರೇ ನಾಲ್ಕಾಣೆ (=೨೫ ಪೈಸೆ) ಫುಲ್ ಊಟಕ್ಕೆ ಎಂಟಾಣೆ (= ೫೦ ಪೈಸೆ)! ಫುಲ್ ಊಟ ಅಂದರೆ ಊಟ ಮಾಡಿದಷ್ಟೂ ಅನ್ನ ಹಾಗೂ ವ್ಯಂಜನಗಳು! ಶಾಲಾ ಮಕ್ಕಳಾದ ನಮಗೆ ಆನಂದ ಭವನದ ಪ್ಲೇಟ್ ಊಟವೇ ಹೆಚ್ಚಾಗುತ್ತಾ ಇತ್ತು.

ಒಂದು ದಿನ ಆನಂದ ಭವನದ ಹತ್ತಿರ ಬರುತ್ತಲೇ ಪಕ್ಕದ ಬೀಡಾ ಅಂಗಡಿಯಲ್ಲಿ ತೂಗು ಹಾಕಿದ್ದ ಚಂದ್ರಬಾಳೆಯ ಹಣ್ಣಿನ ಗೊನೆ ಕಂಡಿತು. ಆ ಗೊನೆಯಲ್ಲಿ ನಸುಗೆಂಪು ಬಣ್ಣದ ಸುಮಾರು ಒಂದೊಂದು ಪೌಂಡ್ (ಸುಮಾರು ೪೫೪ ಗ್ರಾಂ) ತೂಗುವ ಮಾಗಿದ ಚಂದ್ರ ಬಾಳೆಯ ಹಣ್ಣುಗಳು ತೂಗಾಡುತ್ತಿದ್ದುವು. ಕ್ರಯ ಕೇಳಲು ಪ್ರತೀ ಬಾಳೆಹಣ್ಣಿಗೆ ಎರಡಾಣೆ (=೧೨ ಪೈಸೆ) ಅಂತ ಅಂಗಡಿಯ ಯಜಮಾನರು ಹೇಳಿದರು.

ನನಗೆ ಈ ಅಪರೂಪದ ಚಂದ್ರಬಾಳೆಹಣ್ಣು ಬಹು ಇಷ್ಟ. ಅದರ ಪರಿಮಳ ಮತ್ತು ಸ್ವಾದಗಳೇ ವಿಶಿಷ್ಟ. ಅದಲ್ಲದೇ, ಒಂದು ಬಾಳೆಯ ಹಣ್ಣು ತಿಂದರೆ ನನ್ನ ಹೊಟ್ಟೆಯೇ ತುಂಬುವಂತಿತ್ತು!

ಬಾಳೆಹಣ್ಣು ಕಂಡೊಡನೆಯೇ, ನನ್ನ ಮಧ್ಯಾಹ್ನದ ಊಟದ ‘ಮೆನು’ ಬದಲಾಯಿತು. “ಇಂದು ಮಧ್ಯಾಹ್ನದ ಊಟದ ಬದಲಿಗೆ ಎರಡಾಣೆ ಕೊಟ್ಟು ಒಂದು ಮಸಾಲೆ ದೋಸೆ ತಿಂದು, ಉಳಿಯುವ ಎರಡಾಣೆಗಳನ್ನು ಸಾಯಂಕಾಲದ ಚಂದ್ರ ಬಾಳೆಚಿi ಹಣ್ಣಿನ ಫಲಾಹಾರಕ್ಕೆ ಉಳಿಸಿಕೊಂಡರೆ ಹೇಗೆ?” ಎಂಬ ಆಲೋಚನೆ ಬಂತು.

ಆನಂದ ಭವನದ ಮಸಾಲೆ ದೋಸೆ ಇಡೀ ಉಡುಪಿಗೇ ಪ್ರಸಿದ್ಧ.

ಉಡುಪಿಯ ದೇವಸ್ಥಾನಗಳ ಸುತ್ತಿನಲ್ಲಿರುವ ರಥಬೀದಿಯ ಉಪಾಹಾರ ಗೃಹಗಳಲ್ಲಿ ನೀರುಳ್ಳಿ ಬಳಸದೇ ಬರೇ ಇಂಗಿನ ಒಗ್ಗರಣೆ ಸೇರಿಸಿದ ಆಲೂಗೆಡ್ಡೆಯ ಪಲ್ಯವನ್ನು ಹಾಕಿ ಘಮಘಮ ಮಸಾಲೆ ದೋಸೆ ತಯಾರಿಸುವ ಕ್ರಮ ಅಂದೂ ಇತ್ತು, ಆ ಕ್ರಮ ಇಂದಿಗೂ ಇದೆ.

ಈ ಈರುಳ್ಳಿ ರಹಿತ ಮಸಾಲೆ ದೋಸೆಗಳು ಯಾತ್ರಾರ್ಥಿಗಳ ಮತ್ತು ಸ್ಥಳೀಯ ಜನರ ಅಭಿರುಚಿಗೆ ತಕ್ಕಂತೆ ಇಂದಿಗೂ ಬದಲಾಗದೇ ಉಳಿದಿವೆ. ಸ್ಥಳೀಯ ಜನರು ಮತ್ತು ಯಾತ್ರಾರ್ಥಿಗಳು ಈ ವಿಶಿಷ್ಟ ಮಸಾಲೆ ದೋಸೆಗಳ ರುಚಿಗೆ ಇಂದಿಗೂ ಮುಗಿಬೀಳುತ್ತಾರೆ.

ಈರುಳ್ಳಿ ಮತ್ತು ಬೆಳ್ಳುಳ್ಳಿಯ ರುಚಿಗೆ ಆಗಲೇ ಮಾರುಹೋಗಿದ್ದ ನಾವು, ಉಡುಪಿಯ ರಥಬೀದಿಯ ಉಪಹಾರಗೃಹಗಳ ಮಸಾಲೆ ದೋಸೆಗಳನ್ನು “ಮಡಿ ಮಸಾಲೆ ದೋಸೆ” ಅಂತ ಲೇವಡಿ ಮಾಡುತ್ತಾ ಇದ್ದೆವು!

ಆನಂದ ಭವನದ ಗರಿ ಗರಿ ದೋಸೆಗಳ ಮೇಲೆ ಕೆಂಪು ಕೆಂಪು ಖಾರದ ಮೆಣಸುಯುಕ್ತವಾದ ಬೆಳ್ಳುಳ್ಳಿಯ ಚಟ್ನಿ ಹಚ್ಚಿ ಈರುಳ್ಳಿ ಮತ್ತು ಆಲೂಗೆಡ್ಡೆಯ ಪಲ್ಯ ಪೇರಿಸಿ ಮಡಚಿ ಕೊಡುತ್ತಾ ಇದ್ದರು.

ಹಾಗಾಗಿ, ನಮಗೆ ಆನಂದ ಭವನದ ಮಸಾಲೆ ದೋಸೆ ಬಹಳ ಇಷ್ಟ.

ಎರಡಾಣೆ ಬೆಲೆಯ ಹನ್ನೆರಡು ಇಂಚು ಅಗಲದ ಒಂದು ಮಸಾಲೆ ದೋಸೆ ತಿಂದು ನೀರು ಕುಡಿದಾಗ ಮಧ್ಯಾಹ್ನದ ಹಸಿವು ಮಂಗಮಾಯ!

ಆ ಸಂಜೆ ಶಾಲೆ ಬಿಟ್ಟೊಡನೆ ಎರಡು ಆಣೆ ಕೊಟ್ಟು ಚೆನ್ನಾಗಿ ಮಾಗಿದ ಒಂದು ಚಂದ್ರಬಾಳೆಯ ಹಣ್ಣನ್ನು ಖರೀದಿಸಿದೆ. ಅದನ್ನು ನನ್ನ ಸ್ಕೂಲ್ ಬ್ಯಾಗ್‌ನ ಒಳಗೆ ಸೇರಿಸಿದೆ. ಮನೆಗೆ ಹೋಗುತ್ತಾ, ಮುಂದೆ ಸಿಗುವ ನಿರ್ಜನವಾದ ದಾರಿಯಲ್ಲಿ, ನಿಧಾನವಾಗಿ ಅದನ್ನು ಆಸ್ವಾದಿಸಿ ತಿನ್ನುವ ಯೋಜನೆ ಹಾಕಿದೆ.

ಮನೆಯ ದಾರಿಯಲ್ಲಿ ಸಾಗುತ್ತಾ ಸಾಗುತ್ತಾ ಇರುವಂತೆ ಜನಸಂದಣಿ ಕಡಿಮೆ ಆಯಿತು. ಬಾಳೆಯ ಹಣ್ಣಿನ ಪರಿಮಳ ಮೂಗಿಗೆ ಬಡಿದು ನನ್ನ ಹಸಿವು ಮತ್ತಷ್ಟು ಹೆಚ್ಚಿತು.

ನನ್ನ ಮುಂದುಗಡೆ, ರಸ್ತೆಯ ಬಲಬದಿಯಲ್ಲಿ ಒಂದು ದನ ನೆರಳಿನಲ್ಲಿ ಮೆಲುಕು ಹಾಕುತ್ತಾ ಮಲಗಿತ್ತು. ಈ ದನಕ್ಕೆ ಬಾಳೆಹಣ್ಣಿನ ಸಿಪ್ಪೆ ತಿನ್ನಲು ಕೊಟ್ಟು ನಾನು ಬಾಳೆಯ ಹಣ್ಣನ್ನು ನಿಧಾನವಾಗಿ, ಆಸ್ವಾದಿಸಿ ತಿನ್ನುವ ಆಲೋಚನೆ ಮಾಡಿದೆ.

ಹಣ್ಣನ್ನು ನಿಧಾನವಾಗಿ ಸುಲಿಯಲಾರಂಬಿಸಿದೆ.

ಬಾಳೆಯ ಹಣ್ಣಿನ ತಿರುಳನ್ನು ಬಲಗೈ ಬೆರಳುಗಳಲ್ಲಿ ಭದ್ರವಾಗಿ ಹಿಡಿದು ಸಿಪ್ಪೆಯನ್ನು ಬೇರ್ಪಡಿಸಿದೆ.

ಆ ನಂತರ ಸಿಪ್ಪೆಯನ್ನು ದನದ ಕಡೆಗೆ ಎಸೆದೇ ಬಿಟ್ಟೆ!

ಆಗಲೇ ದೊಡ್ದ ಅಚಾತುರ್ಯ ನಡೆದಿತ್ತು!!

“ದೇವರೇ! ನೀನು ಯಾಕೆ ನನ್ನನ್ನು ಎಡಚನನ್ನಾಗಿ ಮಾಡಲಿಲ್ಲ?” ಅಂತ ಹಲುಬುವಷ್ಟು ದೊಡ್ದ ತಪ್ಪನ್ನು ಮಾಡಿಬಿಟ್ಟಿದ್ದೆ!!!

ಬಲಗೈ ಬಂಟನಾದ ನಾನು ಬಲಗೈಯ್ಯಲ್ಲಿ ಇದ್ದ ಕದಳೀ ಫಲದ ತಿರುಳನ್ನು ದನದ ಮುಂದೆ ಎಸೆದು, ಎಡಕೈಯ್ಯಲ್ಲಿ ಇದ್ದ ಸಿಪ್ಪೆಯನ್ನು ನನ್ನ ಬಾಯಿಗೆ ಕೊಂಡೊಯ್ದಿದ್ದೆ!!!!

ಅಷ್ಟೊತ್ತಿಗಾಗಲೇ ಆ ದನವು ಮಲಗಿದ್ದಲ್ಲಿಂದಲೇ ಕತ್ತು ನೀಡಿ ಬಾಳೆಯ ಹಣ್ಣನ್ನು ಸ್ವಾಹಾ ಮಾಡಿತ್ತು!

ನನ್ನ ಕೈಯ್ಯಲ್ಲಿ ಉಳಿದಿದ್ದ ಚಂದ್ರಬಾಳೆಯ ಹಣ್ಣಿನ ಸಿಪ್ಪೆಯನ್ನೇ ಒಂದು ಕ್ಷಣ ನಿರಾಸೆಯಿಂದ ದಿಟ್ಟಿಸಿ, ಅದನ್ನೂ ಆ ದನದ ಕಡೆಗೆ ಎಸೆದೆ!!

ನನಗೆ ಅಂದು ಆ ಚಂದದ ಬಾಳೆಯ ಹಣ್ಣು ತಿನ್ನುವ ಯೋಗ ಇರಲಿಲ್ಲ!!!

ಅದನ್ನು ತಿನ್ನುವ ಯೋಗ ಅಂದು ಖಂಡಿತವಾಗಿ ಆ ದನಕ್ಕೆ ಬರೆದಿತ್ತು!

ಈ ಮರೆಯಲಾರದ ಸಂಗತಿಯನ್ನು ಇಂದು ನೆನೆದಾಗ “ದಾನ್ ದಾನ್ ಪರ್ ಲಿಖಾಹೈ ತೇರೇ ನಾಮ್!” ಎಂಬ ಗಾದೆ ನೆನಪಾಗುತ್ತೆ!

{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. 'ರೈತನಾಗುವ ಹಾದಿಯಲ್ಲಿ' ಎಂಬ ಕನ್ನಡ ಪುಸ್ತಕವೂ ಪ್ರಕಟವಾಗುವುದರಲ್ಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ

Monday, August 02, 2010

ಕಿನ್ನರಿ ಬ್ರಹ್ಮಯ್ಯ

ಇಂದಿನ ಆಂಧ್ರಪ್ರದೇಶದ ಪೂದೂರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿತ್ತು. ನಂತರ ಕಲಚೂರಿ ಬಿಜ್ಜಳನ ಆಡಳಿತಕ್ಕೆ ಹೋಯಿತು. ಆಗ ಪೊಡೂರು ಎಂದು ಕರೆಯಲಾಗುತ್ತಿತ್ತು. ಆ ಊರಿನಲ್ಲಿದ್ದ ಅಕ್ಕಸಾಲಿಗ ಕುಟುಂಬವೊಂದರಲ್ಲಿ ಬ್ರಹ್ಮಯ್ಯ ಎಂಬ ಶಿವಭಕ್ತನೊಬ್ಬನಿದ್ದನು. ಅವನು ತನಗೆ ವಂಶಪಾರಂಪರ್ಯವಾಗಿ ಬಂದಿದ್ದ ವೃತ್ತಿಯ ಜೊತೆಗೆ ಕಿನ್ನರಿ ನುಡಿಸುವುದನ್ನೂ ಕಲಿತಿದ್ದನು. ಆತನಿಗೆ ಕಿನ್ನರಿ ನುಡಿಸುವುದನ್ನು ಕಲಿಸಿದ ಗುರುವೊಬ್ಬರಿಗೆ ಒಂದಷ್ಟು ಆಭರಣ ಮಾಡಿಕೊಡುವ ಅವಕಾಶ ಅವನಿಗೆ ಬರುತ್ತದೆ. ಗುರುವಿನ ಕೆಲಸ ಎಂಬ ತುಂಬು ಅಭಿಮಾನದಿಂದ ಆಭರಣ ತಯಾರು ಮಾಡಿದ ಬ್ರಹ್ಮಯ್ಯ ಅದನ್ನು ಗುರುವಿಗೆ ಒಪ್ಪಿಸಲು ಬರುತ್ತಾನೆ. ಆತ ಕೊಟ್ಟ ಆಭರಣಗಳ ಸೊಗಸನ್ನು ಸವಿಯುತ್ತ ಗುರುಗಳು ಅದನ್ನು ಸ್ವೀಕರಿಸುತ್ತಾರೆ. ಆಗ ಗುರುವಿನ ಮನೆಯಲ್ಲಿದ್ದವರೊಬ್ಬರು ‘ಏನು ಗುರುಗಳೆ, ಚಿನ್ನವನ್ನು ತೂಕ ಹಾಕಿಯೇ ತೆಗೆದುಕೊಳ್ಳಬೇಕು. ಹೊಳೆಗೆ ಹಾಕಿದರೂ ಅಳೆದು ಹಾಕು ಎಂಬ ಗಾದೆಯನ್ನು ನೀವು ಕೇಳಿಲ್ಲವೆ? ಅಕ್ಕಸಾಲಿಗರು ಸ್ವತಃ ಅಕ್ಕನ ಚಿನ್ನದಲ್ಲಿಯೂ ಕತ್ತರಿಸದೆ ಬಿಡರು ಎಂಬ ಮಾತಿದೆ. ನೀವು ತೂಕ ಹಾಕಿಸಿ ತೆಗೆದುಕೊಳ್ಳಿ’ ಎಂದರು. ಆಗ ಗುರುಗಳು ‘ನನ್ನ ಶಿಷ್ಯನ ಬಗ್ಗೆ ನನಗೆ ನಂಬಿಕೆಯಿದೆ’ ಎಂದರು. ಆದರೆ ತನ್ನ ಗುರುಭಕ್ತಿಯನ್ನೇ ಅವಮಾನಕ್ಕೆ ಎಡೆಮಾಡಿದ ಹಾಗೂ ತನ್ನ ವೃತ್ತಿಯನ್ನು ಅವಮಾನಿಸಿದ ಆ ವ್ಯಕ್ತಿಯನ್ನು ಕುರಿತು ಬ್ರಹ್ಮಯ್ಯ ‘ನಾನು ವಡವೆಯನ್ನು ತೂಕ ಹಾಕಿಯೇ ಕೊಡುತ್ತೇನೆ’ ಎಂದು ಗುರುಗಳು ತಡೆಯುತ್ತಿದ್ದರೂ ತೂಕಕ್ಕೆ ಹಾಕುತ್ತಾನೆ. ಅದರಲ್ಲಿ ಒಂದು ಸಾಸಿವೆ ಕಾಳಿನಷ್ಟು ತೂಕದ ಚಿನ್ನ ಕಡಿಮೆ ಇರುತ್ತದೆ. ಗುರುಗಳ ಮನೆಯಲ್ಲಿದ್ದ ಆಗುಂತಕ ತನ್ನ ಪ್ರೌಢಿಮೆಗೆ ತಾನೇ ಬೀಗುತ್ತಾ ‘ನಾನು ಹೇಳಲಿಲ್ಲವೇ ಗುರುಗಳೆ’ ಎಂದು ವ್ಯಂಗ್ಯದ ನಗೆ ನಗುತ್ತಾನೆ. ಗುರುಗಳು ‘ಸೂಕ್ಷ್ಮ ಕೆಲಸ ಮಾಡುವಾಗ ಒಂದಷ್ಟು ಹೆಚ್ಚು ಕಡಿಮೆ ಆಗುತ್ತದೆ’ ಎಂದು ಸಮಾಧಾನದ ಮಾತನ್ನಾಡುತ್ತಾರೆ. ಆದರೆ ಬ್ರಹ್ಮಯ್ಯನಿಗೆ ಕೋಪ, ನಾಚಿಕೆ, ದುಃಖ ಎಲ್ಲವೂ ಆಗುತ್ತದೆ. ತಕ್ಷಣ ಗುರುವಿನ ಪಾದಗಳನ್ನು ಹಿಡಿದು ಕ್ಷಮೆ ಕೋರುತ್ತಾ ‘ಇನ್ನೆಂದು ನಾನು ಅಕ್ಕಸಾಲಿಗ ವೃತ್ತಿಯನ್ನು ಮಾಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡುತ್ತಾನೆ.


ಅಕ್ಕಸಾಲಿಗ ವೃತ್ತಿಯನ್ನು ತ್ಯಜಿಸಿದ ಬ್ರಹ್ಮಯ್ಯ ಮುಂಗಾಣದೆ ಕುಳಿತಿದ್ದಾಗ, ಕಲ್ಯಾಣದಲ್ಲಿ ನಡೆಯುತ್ತಿದ್ದ ಬಸವಣ್ಣನ ನೇತೃತ್ವದ ಕಾಯಕ ಚಳುವಳಿ ಗಮನ ಸೆಳೆಯುತ್ತದೆ. ಒಂದೇ ಮನದಿಂದ ಶಿವನನ್ನು ಸ್ತುತಿಸುತ್ತಾ ಕಲ್ಯಾಣದ ದಾರಿ ಹಿಡಿಯುತ್ತಾನೆ. ಅಲ್ಲಿನ ತ್ರಿಪುರಾಂತಕೇಶ್ವರ ದೇವಾಲಯದ ಮುಂದೆ ಕಿನ್ನರಿ ನುಡಿಸುವ ಕಾಯಕ ನಡೆಸುತ್ತಾ ಜೀವನ ಸಾಗಿಸುತ್ತಾನೆ. ಆತನ ಕಿನ್ನರಿಯ ನಾದವನ್ನು ಕೇಳಿದ ಜನತೆ ಪ್ರಸನ್ನರಾಗಿ ನೀಡುತ್ತಿದ್ದ ಹಣವನ್ನು ಸಂಗ್ರಹಿಸಿ ನಿತ್ಯ ಅನ್ನದಾಸೋಹ ನಡೆಸುತ್ತಾನೆ. ಜನ ಅವನನ್ನು ಪ್ರೀತಿಯಿಂದ ಕಿನ್ನರಿ ಬೊಮ್ಮಯ್ಯ ಎಂದು ಕರೆಯುತ್ತಾರೆ. ಇವನ ಜಂಗಮದಾಸೋಹ ಬಸವಣ್ಣ ಕಿವಿಗೂ ಮುಟ್ಟುತ್ತದೆ. ಅಂತಹ ನಿಷ್ಠ ಭಕ್ತರ ಅಗತ್ಯವಿದ್ದ ಬಸವಣ್ಣ ಆತನನ್ನು ಮಹಾಮನೆಗೆ ಕರೆದುಕೊಂಡು ಹೋಗಿ ಅಲ್ಲಿನವರಿಗೆ ಪರಿಚಯಿಸಿ ಆತನನ್ನು ಅವರೊಳಗೊಬ್ಬನನ್ನಾಗಿಸಿಕೊಳ್ಳುತ್ತಾನೆ.

ಒಮ್ಮೆ ಮಹಾಮನೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಸವಣ್ಣ ಈರುಳ್ಳಿಯು ತಾಮಸ ಗುಣವನ್ನು ಪ್ರಚೋದಿಸುವುದೆಂದು ವಾದಿಸಿ, ಈರುಳ್ಳಿಯ ಸೇವನೆಯನ್ನು ತ್ಯಜಿಸಬೇಕೆಂದು ಕರೆಕೊಡುತ್ತಾನೆ. ಜನಸಾಮಾನ್ಯರ ಆಹಾರವಾದ ಈರುಳ್ಳಿಯನ್ನು ಬಸವಣ್ಣ ನಿಂದಿಸಿದ್ದನ್ನು ತಡೆಯದ ಬ್ರಹ್ಮಯ್ಯ ಅದನ್ನು ವಿರೋಧಿಸಿ ಮಹಾಮನೆಯಿಂದ ಹೊರಟು ಹೋಗುತ್ತಾನೆ. ಹಾಗೆ ಬ್ರಹ್ಮಯ್ಯ ವಿರೋಧಿಸಿದ್ದೇಕೆಂದು ಚಿಂತಿಸಿದ ಬಸವಣ್ಣನಿಗೆ ತನ್ನ ಸಂಸ್ಕಾರದ ಬಗ್ಗೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಜನಸಾಮಾನ್ಯರೆಲ್ಲಾ ಈರುಳ್ಳಿಯನ್ನು ನಿತ್ಯಸೇವನೆ ಮಾಡುತ್ತಿದ್ದರೂ ಅವರೆಲ್ಲರೂ ತಾಮಸಗುಣದಿಂದ ಪೀಡಿತರಾಗಿಲ್ಲ ಎಂಬ ಸತ್ಯ ಬಸವಣ್ಣನಿಗೆ ಹೊಳೆಯುತ್ತದೆ. ತಕ್ಷಣ ಬ್ರಹ್ಮಯ್ಯನ ಮನೆಗೆ ಹೋಗಿ ತನ್ನ ದುಡುಕಿಗೆ ಕ್ಷಮೆಯಾಚಿಸಿದ್ದಲ್ಲದೆ, ಮತ್ತೆ ಬ್ರಹ್ಮಯ್ಯನನ್ನು ಮಹಾಮನೆಗೆ ಕರೆದುಕೊಂಡು ಬರುತ್ತಾನೆ. ಅಷ್ಟಕ್ಕೆ ಸಮಾಧಾನ ಹೊಂದದ ಬಸವಣ್ಣ ಈರುಳ್ಳಿಯನ್ನು ಊರಿನಲ್ಲೆಲ್ಲಾ ಮೆರವಣಿಗೆ ಮಾಡಿಸಿ, ಜನಸಾಮಾನ್ಯರ ಆಹಾರವಾದ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯುವಂತೆ ಮಾಡುತ್ತಾನೆ.

ತನ್ನಿಷ್ಟದ ಕಿನ್ನರಿ ಕಾಯಕ, ತನ್ನಿಷ್ಟದೈವದ ಪೂಜೆ, ತಾನು ನಡೆಸುತ್ತಿರುವ ಜಂಗಮದಾಸೋಹ ಇವುಗಳೆಲ್ಲದರ ಜೊತೆಗೆ ಬಸವಾದಿಗಳ ಸಹವಾಸ ಇದರಿಂದ ಕಿನ್ನರಿ ಬೊಮ್ಮಯ್ಯನಿಗೆ ತನ್ನ ಬಗ್ಗೆ ತನಗೇ ಅಭಿಮಾನ. ಒಂದು ರೀತಿಯ ಅಹಂಕಾರ ಆಗಾಗ ಮನಸ್ಸಿನಲ್ಲಿ ಮೂಡುತ್ತಿರುತ್ತದೆ. ಒಮ್ಮೆ ಕಲಕೇತಯ್ಯ ಎಂಬ ಕಿಳ್ಳೆಕ್ಯಾತ ಜನಾಂಗದ ಅಲೆಮಾರಿ ಜಾನಪದ ಕಲಾವಿದನೊಬ್ಬನು ನಡೆಸುತ್ತಿದ್ದ ದಾನದ ಎದುರಿಗೆ ತನ್ನದೇನೂ ಅಲ್ಲ ಎಂಬ ಅರಿವು ಕಿನ್ನರಯ್ಯನಿಗೆ ಉಂಟಾಗುತ್ತದೆ. ಆ ಕಥೆ ಹೀಗಿದೆ. ಒಂದು ದಿನ ಬಡವನೊಬ್ಬನು ಕಿನ್ನರಯ್ಯ ನಿತ್ಯಪಡಿಕೊಡುವನೆಂದು ತಿಳಿದು ಅದಕ್ಕಾಗಿ ಅವನಲ್ಲಿಗೆ ಹೊರಟಿರುತ್ತಾನೆ. ದಾರಿಯಲ್ಲಿ ಸಿಕ್ಕ ಕೇತಯ್ಯನು ಆ ಬಡವನ ಕಷ್ಟವೇನೆಂದು ತಿಳಿದುಕೊಂಡು, ಅಂದು ತಾನು ಗಳಿಸಿದ್ದೆಲ್ಲವನ್ನೂ, ತನಗೂ ಒಂದಷ್ಟು ಇಟ್ಟುಕೊಳ್ಳದೆ ಆ ಬಡವನಿಗೆ ದಾನ ಮಾಡಿಬಿಡುತ್ತಾನೆ. ಆತ ಕೊಟ್ಟಿದ್ದೆಲ್ಲವನ್ನೂ ಆ ಬಡವ ಹೊರಲಾರದೆ ತನ್ನಿಂದ ಆದಷ್ಟನ್ನು ಹೊತ್ತುಕೊಂಡು ದಾರಿಯಲ್ಲಿ ಬರುವಾಗ ಬಸವಣ್ಣ ಮತ್ತು ಕಿನ್ನರಯ್ಯ ಅವರನ್ನು ಬೇಟಿ ಮಾಡಿ ಕೇತಯ್ಯನ ದಾನಗುಣವನ್ನು ಪ್ರಶಂಸಿಸುತ್ತಾನೆ. ಬಸವ ಬೇರೊಬ್ಬ ಆಳನ್ನು ಕಳುಹಿಸಿ ಉಳಿದ ಹೊನ್ನನ್ನು ಆ ಬಡವನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಬಸವಣ್ಣ ಕಿನ್ನರಯ್ಯನಲ್ಲಿ ಕೇತಯ್ಯನ ನಿಸ್ಸಂಗ್ರಹಬುದ್ದಿಯನ್ನು ಕೊಂಡಾಡುತ್ತಾನೆ. ಅದನ್ನು ಕೇಳಿದ ಕಿನ್ನರಯ್ಯ ‘ಅಯ್ಯೋ ನಾನು ಕೊಡುವ ಪಡಿಯೇ ದೊಡ್ಡದೆಂದು ನಾನೆಂದುಕೊಂಡಿದ್ದೆ. ಆದರೆ ಇಲ್ಲಿ ನನಗೊಬ್ಬ ಗುರುವಿದ್ದಾನೆ’ ಎಂದುಕೊಂಡು ಕೇತಯ್ಯನಲ್ಲಿಗೆ ಬಂದು ಅವನನ್ನು ಸ್ತುತಿಸುತ್ತಾನೆ.

ಮಹಾವಿರಾಗಿನಿಯಾದ ಅಕ್ಕಮಹಾದೇವಿಯು ಮಹಾಮನೆಗೆ ಬಂದಾಗ ಅವಳನ್ನು ಪರೀಕ್ಷಿಸುವ ಸಂದರ್ಭ. ಮಹಾಮನೆಯ ಬಾಗಿಲಿನಲ್ಲೇ ಅಕ್ಕಮಹಾದೇವಿಯನ್ನು ಕಿನ್ನರಿ ಬೊಮ್ಮಯ್ಯ ನಿಲ್ಲಿಸಿ ಅವಳ ವೈರಾಗ್ಯವನ್ನು ಒರೆಗಲ್ಲಿಗೆ ಅಚ್ಚುತ್ತಾನೆ. ಅವಳ ಮೈಮನಸ್ಸೆಲ್ಲವೂ ವೈರಾಗ್ಯವೇ ಆಗಿತ್ತು ಎಂಬುದನ್ನು ಮನಗಂಡ ಕಿನ್ನರಯ್ಯ ತನ್ನ ಅಲ್ಪತನಕ್ಕೆ ಪಶ್ಚತ್ತಾಪ ಪಡುತ್ತಾನೆ. ಸ್ವತಃ ಅಕ್ಕಮಹಾದೇವಿಯು ಆತನನ್ನು ಸಹೋದರ ಎಂದು ಕರೆದು ಸಮಾಧಾನಿಸುತ್ತಾಳೆ. ಕಿನ್ನರಯ್ಯ ತನ್ನೊಂದು ವಚನದಲ್ಲಿ ಆಕೆಯನ್ನು ಹುಲಿಗೆ ಹೋಲಿಸುತ್ತಾ, ‘ನಾನು ಹುಲಿಯ ನೆಕ್ಕಿ ಬದುಕಿದೆನು’ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಅಷ್ಟಲ್ಲದೆ ತನ್ನೊಂದು ವಚನದಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವಾಗಿನ ತನ್ನ ಅನುಭವವನ್ನು ಹೇಳಿಕೊಳ್ಳುತ್ತಾ ‘ತ್ರಿಪುರಾಂತಕದೇವಾ ಮಹಾದೇವಿಯಕ್ಕನ ನಿಲುವನ್ನರಿಯದೆ ಅಳುಪಿ ಕೆಟ್ಟೆನು’ ಎಂದು ಆಲಾಪಿಸಿದ್ದಾನೆ.

‘ಶರಣಲೀಲಾಮೃತ’ ಮತ್ತು ‘ಚೆನ್ನಬಸವಪುರಾಣ’ ಇವುಗಳಲ್ಲಿ ಕಿನ್ನರಿ ಬೊಮ್ಮಯ್ಯನ ಬಗ್ಗೆ ಪವಾಡದ ಒಂದು ಕತೆ ಬಂದಿದೆ. ಒಮ್ಮೆ ನಗರದ ಸೂಳೆಯೊಬ್ಬಳಿಗೆ, ಅವಳ ವಿಟಪುರುಷನೊಬ್ಬನು ಕಾಣಿಕೆಯಾಗಿ ಕೊಡಲು ಕೊಬ್ಬಿದ ಕುರಿಯನ್ನು ಕೊಂಡೊಯ್ಯುತ್ತಿರುತ್ತಾನೆ. ಅದು ಅವನಿಂದ ತಪ್ಪಿಸಿಕೊಂಡು ತ್ರಿಪುರಾಂತಕೇಶ್ವರ ದೇಗುಲದ ಗರ್ಭಗುಡಿಯನ್ನು ಹೊಕ್ಕುಬಿಡುತ್ತದೆ. ದೇವಾಲಯದ ಮುಂದೆ ಕಿನ್ನರಿ ಕಾಯಕವ ನಡೆಸುತ್ತಿದ್ದ ಬೊಮ್ಮಯ್ಯ ಅದನ್ನು ನೋಡುತ್ತಾನೆ. ಆ ಟಗರನ್ನು ಎಳೆದೊಯ್ಯಲು ಬಂದ ವಿಟಪುರುಷನಿಗೆ ಆ ದಿನದ ತನ್ನ ಗಳಿಕೆಯಲ್ಲವನ್ನೂ ಕೊಟ್ಟು ಟಗರನ್ನು ಬಿಟ್ಟು ಬಿಡುವಂತೆ ಬೇಡಿಕೊಳ್ಳುತ್ತಾನೆ. ಆ ವಿಟಪುರುಷನಿಗೋ ತನ್ನ ಸೂಳೆಯ ಮುಂದೆ, ಕಿನ್ನರಯ್ಯ ಕೊಡುವ ಒಂದಷ್ಟು ಹೊನ್ನು ಆಕರ್ಷಕವಾಗಿ ಕಾಣುವುದೇ ಇಲ್ಲ. ಆತನ ಕೋರಿಕೆಯನ್ನು ತಿರಸ್ಕರಿಸಿ ಟಗರನ್ನು ಎಳೆದೊಯ್ಯುತ್ತಿದ್ದ ಆತನನ್ನು ಕಿನ್ನರಯ್ಯ ತನ್ನ ಕಿನ್ನರಿಯಿಂದ ಹೊಡೆಯುತ್ತಾನೆ. ಅಷ್ಟಕ್ಕೇ ಆತ ಸತ್ತು ಹೋಗುತ್ತಾನೆ. ಈ ಘಟನೆ ಬಿಜ್ಜಳನವರೆಗೂ ಹೋಗುತ್ತದೆ. ಕಿನ್ನರಯ್ಯ ವಿಟಪುರುಷನನ್ನು ಕೊಂದಿದ್ದು ತಪ್ಪು ಎಂಬುದು ಬಿಜ್ಜಳನ ಆಕ್ಷೇಪ. ಆದರೆ ತನ್ನದೇನು ತಪ್ಪಿಲ್ಲ ಎಂದು ವಾದಿಸುವ ಕಿನ್ನರಯ್ಯ ಬೇಕಾದರೆ ಶಿವನಿಂದ ಸಾಕ್ಷಿ ಹೇಳಿಸುತ್ತೇನೆ ಎಂದು ಬಿಜ್ಜಳನಿಗೆ ಸವಾಲೆಸೆಯುತ್ತಾನೆ. ಎಲ್ಲರೂ ತ್ರಿಪುರಾಂತಕೇಶ್ವರ ಗುಡಿಯ ಬಳಿ ಬರುತ್ತಾರೆ. ಗರ್ಭಗುಡಿಯ ಬಾಗಿಲ ತೆಗೆಸಿ ಕಿನ್ನರಯ್ಯ ಶಿವನನ್ನು ಪ್ರಾರ್ಥಿಸುತ್ತಾನೆ. ಶಿವನೇ ಸಾಕ್ಷಿ ನುಡಿದಿದ್ದರಿಂದ ಬಿಜ್ಜಳ ಸುಮ್ಮನಾಗಬೇಕಾಗುತ್ತದೆ. ಸತ್ತು ಹೋಗಿದ್ದ ವಿಟಪುರುಷನೂ ಬದುಕುತ್ತಾನೆ. ಟಗರೂ ಬದುಕುತ್ತದೆ.

ಬಿಜ್ಜಳನ ಕೊಲೆಯಾಗಿ ಶಿವಶರಣರೆಲ್ಲಾ ಕಲ್ಯಾಣವನ್ನು ತೊರೆಯುವಾಗ, ದಂಡಿನ ದಳಪತಿಯಾಗಿದ್ದ ಚೆನ್ನಬಸವಣ್ಣನು ಅದರ ಉಸ್ತುವಾರಿಯನ್ನು ಕಿನ್ನರಿ ಬೊಮ್ಮಯ್ಯನಿಗೆ ವಹಿಸಿಕೊಡುತ್ತಾನೆ. ದಂಡಿನ ದಳಪತಿಯಾಗಿ ಹೋರಾಟವನ್ನು ಮುಂದುವರೆಸಿದ ಕಿನ್ನರಯ್ಯ, ಉಳವಿಯ ಮಹಾಮನೆಯ ಮುಂದಿನ ನದಿಯ ದಿಕ್ಕನ್ನು ತನ್ನ ದಂಡಿನ ನೆರವಿನಿಂದ ಬದಲಾಯಿಸುತ್ತಾನೆ. ಅದರ ಪರಿಣಾಮವಾಗಿ ಶತ್ರು ಸೇನೆ ಅಪಾರ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ನಂತರ ಉಳವಿಯಲ್ಲೇ ಕೊನೆಯುಸಿರೆಳೆದ ಕಿನ್ನರಯ್ಯ ಸಮಾಧಿ ಈಗಲೂ ಉಳವಿಯಲ್ಲಿದೆ. ಆತ ತಿರುಗಿಸಿದ ಹೊಳೆಗೆ ಕಿನ್ನರಿ ಬೊಮ್ಮಯ್ಯನ ಹೊಳೆ ಎಂದೇ ಹೆಸರಾಗಿದೆ.

ಕಿನ್ನರ ಬೊಮ್ಮಯ್ಯನು ತನ್ನಿಷ್ಟದೈವವಾದ ‘ಮಹಾಲಿಂಗ ತ್ರಿಪುರಾಂತಕ’ನ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಗುರುಲಿಂಗಜಂಗಮ ಸ್ವರೂಪ ಇವನ ವಚನಗಳಲ್ಲಿ ವ್ಯಕ್ತವಾಗಿದೆ. ಮುಖ್ಯವಾಗಿ ಕಿನ್ನರಯ್ಯ ಅಕ್ಕಮಹಾದೇವಿಯನ್ನು ಪರೀಕ್ಷಿಸಿದ ನಂತರ ಅದರಿಂದಾದ ತನ್ನ ಅನುಭವವನ್ನು ದಾಖಲಿಸಿರುವ ವಚನಗಳು ಗಮನ ಸೆಳೆಯುತ್ತವೆ. ಅದರಲ್ಲಿ ಒಂದು ವಚನ ಹೀಗಿದೆ.

ಮಸ್ತಕವ ಮುಟ್ಟಿ ನೋಡಿದಡೆ

ಮನೋಹರದಳಿವು ಕಾಣ ಬಂದಿತ್ತು!

ಮುಖಮಂಡಲವ ಮುಟ್ಟಿ ನೋಡಿದಡೆ,

ಮೂರ್ತಿಯ ಅಳಿವು ಕಾಣ ಬಂದಿತ್ತು!

ಕೊರಳ ಮುಟ್ಟಿ ನೋಡಿದಡೆ,

ಗರಳಧರನ ಇರವು ಕಾಣಬಂದಿತ್ತು!

ತೋಳುಗಳ ಮುಟ್ಟಿ ನೋಡಿದಡೆ,

ಶವನಪ್ಪುಗೆ ಕಾಣಬಂದಿತ್ತು!

ಉರಸ್ಥಲವ ಮುಟ್ಟಿ ನೋಡಿದಡೆ,

ಪರಸ್ಥಲದಂಗಲೇಪ ಕಾನ ಬಂದಿತ್ತು!

ಬಸಿರ ಮುಟ್ಟಿನೋಡಿದಡೆ,

ಬ್ರಹ್ಮಾಂಡವ ಕಾಣಬಂದಿತ್ತು!

ಗುಹ್ಯವ ಮುಟ್ಟಿನೋಡಿದಡೆ,

ಕಾಮದಹನ ಕಾಣಬಂದಿತ್ತು!

ಮಹಾಲಿಂಗ ತ್ರಿಪುರಾಂತಕದೇವಾ,

ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.

ಅಕ್ಕಮಹಾದೇವಿಯ ಪರೀಕ್ಷೆನಡೆದ ಮೇಲೆ, ಆಕೆ ಕಿನ್ನರಯ್ಯನನ್ನು ಸಹೋದರನೆಂದು ಸ್ವೀಕರಿಸಿದ ಮೇಲೆ ಕಿನ್ನರಯ್ಯ ಅವಳಿಗೆ ಶರಣು ಹೋಗುತ್ತಾನೆ. ಆಗಿನ ಭಾವ ಕೆಳಗಿನ ವಚನದಲ್ಲಿದೆ.

ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,

ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ

ದಯಾಮೂರ್ತಿ ತಾಯೆ, ಶರಣಾರ್ಥಿ!

ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,

ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ

ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ.