Monday, August 24, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 23

ಮೊದಮೊದಲ್ ಸೇದಿದ ಸಿಗರೇಟು!
ಹಾಸ್ಟೆಲ್ಲಿನಲ್ಲಿ ನಮ್ಮದೇ ಆದ ಒಂದು ಗುಂಪಿದ್ದಂತೆ, ಸ್ಕೂಲ್‌ನಲ್ಲೂ ಒಂದು ಗುಂಪಿತ್ತು. ಆ ಗುಂಪಿನಲ್ಲಿ ನಾನೊಬ್ಬನೇ ಹಾಸ್ಟೆಲ್ಲಿನ ವಿದ್ಯಾರ್ಥಿಯಾಗಿದ್ದೆ. ಚಿಕ್ಕಮಗಳೂರಿನಿಂದ ಬಂದಿದ್ದ ಬೆಳಗುಲಿಯ ಚಿಕ್ಕಹೊನ್ನೇಗೌಡ, ಹಳೇಬೀಡಿನ ಸ್ಕೂಲಿನಿಂದ ಬಂದಿದ್ದ ಹಾಗೂ ಬೆಳಗುಲಿಯ ಮಾವನ ಮನೆಯಿಂದ ಸ್ಕೂಲಿಗೆ ಬರುತ್ತಿದ್ದ ಪುಷ್ಪಾಚಾರಿ, ತಿಮ್ಲಾಪುರದಿಂದ ಸೈಕಲ್‌ನಲ್ಲಿ ಬರುತ್ತಿದ್ದ ಸುರೇಶ, ಬ್ಯಾಡರಹಳ್ಳಿಯ ಬಿ.ಬಿ.ಮಂಜುನಾಥ ಮತ್ತು ನಾನು ಗುಂಪಿನ ಸದಸ್ಯರಾಗಿದ್ದೆವು. ಒಮ್ಮೊಮ್ಮೆ ಮೊಲದ ಮಂಜ ಇನ್ಯಾರಾದರೂ ಸೇರುತ್ತಿದ್ದರು. ನಾವೆಲ್ಲಾ ಸೈಕಲ್‌ನಲ್ಲಿ ಶ್ರವಣಬೆಳಗೊಳಕ್ಕೆ ಹೋಗಿಬಂದಿದ್ದೆವು. ಆಗ ನಮ್ಮ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದವರೆ! ನಮ್ಮ ಈ ಪಟಾಲಮ್ಮು ಯಾವುದೇ ಅಪಾಯಕರ ಕಾರ್ಯಗಳಿಗೆ ಕೈಹಾಕದಿದ್ದರೂ ಕೆಲವು ಸಣ್ಣ ಪುಟ್ಟ ಗುಪ್ತ ಕಾರ್ಯಚರಣೆ ನಡೆಸುವುದು ಇತ್ತು. ಹುಡುಗಿಯರ ಹಿಂದಿನ ಡೆಸ್ಕಿನಲ್ಲಿ ಕುಳಿತುಕೊಳ್ಳುತಿದ್ದ ನಾವು, ಬ್ಯಾಗಿನಿಂದ ದಾರಗಳನ್ನು ಕಿತ್ತುಕೊಂಡು ಹುಡುಗಿಯರ ಜಡೆಗಳನ್ನು ಪರಸ್ಪರ ಗಂಟು ಹಾಕುವುದು, ಅವರು ಚಪ್ಪಲಿ ಬಿಟ್ಟಿದ್ದರೆ, ಒಂದನ್ನು ಹಿಂದಕ್ಕೆ ಇನ್ನೊಂದನ್ನು ಇನ್ನೆಲ್ಲಿಗೋ ತಳ್ಳುವುದು, ಪೇಪರ್ ಬಾಲವನ್ನು ನಿರ್ಮಿಸಿ ಹುಡುಗರಿಗೆ ಅಂಟಿಸುವುದು, ಮೇಷ್ಟ್ರು ಬರುವಷ್ಟರಲ್ಲಿ ಡಸ್ಟರ್ ಮೇಲಿದ್ದ ಸ್ಪಂಜ್ ಕಿತ್ತು, ಮತ್ತೆ ಸುಮ್ಮನೆ ಅದರ ಮೇಲೆಯೇ ಏನೂ ಆಗಿಲ್ಲ ಎನ್ನುವಂತೆ ಇಡುವುದು, ಡೆಸ್ಟರ್‌ಗೆ ಇಂಕ್ ಸುರಿಯುವುದು, ಹುಡುಗರು ನಡೆದು ಬರುವಾಗ ಅಡ್ಡಗಾಲು ಕೊಡುವುದು ಮೊದಲಾದವುಗಳನ್ನು ಮಾಡುತ್ತಾ ಅದನ್ನೇ ಪರಮಸಂತೋಷ ಎಂದುಕೊಂಡಿದ್ದೆವು.
ಒಂದು ದಿನ ಹೊನ್ನೇಗೌಡ ಲೇಟಾಗಿ ಬಂದು, ಬೇರೆ ಡೆಸ್ಕಿನಲ್ಲಿ ಹಿಂದೆ ಕೂರಬೇಕಾಯಿತು. ಆಗ ಅಟೆಂಡೆನ್ಸ್ ಹೇಳಲು ಎದ್ದು ನಿಂತಿದ್ದ ಹುಡುಗ ಕುಳಿತುಕೊಳ್ಳುವಷ್ಟರಲ್ಲಿ ಪೆನ್ನನ್ನು ಇಟ್ಟು ಅದು ಆ ಹುಡುಗನ ಕುಂಡಿಗೆ ಚುಚ್ಚಿ ಆತ ಗೊಳೋ ಎಂದು ಅತ್ತಿದ್ದರಿಂದ ಮೇಷ್ಟ್ರು ಹೊನ್ನೇಗೌಡನ ತೊಡೆಯಲ್ಲಿ ಬಾಸುಂಡೆ ಮೂಡಿಸಿದ್ದರು! ಚೆನ್ನಾಗಿ ನೆನಪಿರುವ ಇನ್ನೊಂದು ಘಟನೆಯೆಂದರೆ ನಾವು ಮೊದಲ ಬಾರಿಗೆ ಸಿಗರೇಟು ಸೇದಿದ್ದು!
ದಸರಾ ರಜಾ ಮುಗಿದು ತರಗತಿಗಳು ಒಂದು ಶನಿವಾರ ಮತ್ತೆ ಶುರುವಾಗಬೇಕಾಗಿತ್ತು. ಮೊದಲೇ ಸೋಮಾರಿಗಳಾಗಿದ್ದ ಮೇಷ್ಟ್ರುಗಳು ಒಂದಾಗಿ, ‘ಶನಿವಾರ ಯಾಕೆ ಬರಬೇಕು? ಅದೂ ಹಾಫ್ ಡೇ ಬೇರೆ. ಆದ್ದರಿಂದ ಎಲ್ಲರೂ ಸೋಮುವಾರ ಬಂದುಬಿಡಿ’ ಎಂದು ತೀರ್ಮಾನ ಮಾಡಿದ್ದರು. ಹಾಸ್ಟೆಲ್ ಭಾನುವಾರದಿಂದ ಶುರುವಾಗುವುದರಲ್ಲಿತ್ತು. ನಮ್ಮ ಈ ಪಟಾಲಮ್ಮು ಮಾತ್ರ ಶನಿವಾರವೇ ಬಂದು ಹೋಗಬೇಕೆಂದು ತೀರ್ಮಾನಿಸಿಕೊಂಡಿದ್ದೆವು. ಊರಿನಲ್ಲಿ ರಜ ಕಳೆಯುವುದು ಬೇಸರದ ಸಂಗತಿಯಲ್ಲವಾದರೂ ಇಪ್ಪತ್ತಮೂರು ದಿನಗಳ ನಂತರ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರುವುದು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ.
ಸರಿ. ಅಂದು ಶನಿವಾರ ಐವರೂ ತಪ್ಪದೆ ಹಾಸ್ಟೆಲ್ ಬಳಿ ಬಂದು ಸೇರಿದೆವು. ಏನೇನೋ ಮಾತನಾಡಿದೆವು. ಹರಟೆ ಹೊಡೆದೆವು. ಮಂಜಣ್ಣನ ಹೋಟೆಲಿನ ಬೋಂಡ ತಿಂದೆವು. ಸುಮ್ಮನೆ ಸುತ್ತಾಡುತ್ತ ಮೆಳೆಯಮ್ಮನ ಗುಡಿಯ ಬಳಿಗೂ ಹೋಗಿ, ಪರೀಕ್ಷೆಯಲ್ಲಿ ಪಾಸು ಮಾಡುವಂತೆ ಕೇಳಿಕೊಂಡೆವು! ಆದರೂ ಹೊತ್ತು ಹೋಗುತ್ತಿಲ್ಲ. ಸಮಾಧಾನವೂ ಇಲ್ಲ. ಆ ಸಂದರ್ಭದಲ್ಲೇ ಸುರೇಶ ಒಂದು ಭಯಂಕರ ಐಡಿಯಾ ಕೊಟ್ಟ. ಅದೇ, ಎಲ್ಲರೂ ಸಿಗರೇಟು ಸೇದುವುದು!
ಆ ಸುರೇಶನನ್ನು ನಾವು ಬೆಂಕಿ ಎಂದು ಕರೆಯುತ್ತಿದ್ದೆವು. ಆತ ಆಗಾಗ ಬೀಡಿ ಸಿಗರೇಟು ಸೇದುತ್ತಿದ್ದುದ್ದು ನಮಗೆ ಗೊತ್ತಿತ್ತು. ಆತ ಚಿಕ್ಕ ಹುಡುಗನಾಗಿದ್ದಾಗ ಕಣಗಾಲದಲ್ಲಿ ಹಾಕಿದ್ದ ಬೆಂಕಿಯಲ್ಲಿ ಮಕಾಡೆ ಬಿದ್ದುಬಿಟ್ಟಿದ್ದನಂತೆ. ಅದರಿಂದಾಗ ಆತನ ಹೊಟ್ಟೆ, ಎದೆ, ಕುತ್ತಿಗೆ ಭಾಗವೆಲ್ಲಾ ಸುಟ್ಟು ಹೋಗಿದ್ದರ ಕುರುಹಾಗಿ ಚರ್ಮವೆಲ್ಲಾ ಸುಕ್ಕುಸುಕ್ಕಾಗಿತ್ತು. ಈ ಘಟನೆಯನ್ನು ಕೇಳಿದ ದಿನ ಪುಷ್ಪಾಚಾರಿ ಅವನಿಗೆ ಬೆಂಕಿ ಎಂದು ಅಡ್ಡ ಹೆಸರು ಇಟ್ಟುಬಿಟ್ಟಿದ್ದ! ಅಂದಿನಿಂದ ನಾವು ಆತನನ್ನು ಸುರೇಶ ಅಂದಿದ್ದೇ ಇಲ್ಲ; ಕೇವಲ ಮೇಸ್ಟರುಗಳ ಎದುರಿಗೇನಾದರು ಆತನನ್ನು ಮಾತನಾಡಿಸುವಾಗ ಮಾತ್ರ ಸುರೇಶ ಎನ್ನುತ್ತಿದ್ದೆವು. ಉಳಿದಂತೆ ಬೆಂಕಿ ಎಂಬುದೇ ಅವನ ಹೆಸರಾಗಿತ್ತು. ಆತ ಕೊಟ್ಟ ಸಿಗರೇಟು ಸೇದುವ ಸಲಹೆಗೆ ಎಲ್ಲರ ಒಪ್ಪಿಗೆಯೂ ಸಿಕ್ಕಿತು. ಸಿಗರೇಟನ್ನು ಬೆಂಕಿಯೇ ಕೊಡಿಸುವುದು ಎಂದು, ಸಿಗರೇಟು ಸೇದಿದ ಮೇಲೆ ಬಾಯಿಂದ ವಾಸನೆ ಬರದಂತೆ ತಿನ್ನಲು ಕಡ್ಲೆಪುರಿ ಚಾಕಲೇಟು ಮೊದಲಾದವುಗಳನ್ನು ಇತರರು ತರುವುದೆಂದು ತೀರ್ಮಾನವಾಯಿತು.
ಸಿಗರೇಟುಗಳನ್ನು ತೆಗೆದುಕೊಂಡು ಬಹಳಷ್ಟು ದೂರ ನಡೆದು ನಿರ್ಜನವಾಗಿದ್ದ ಒಂದು ಜಾಗದಲ್ಲಿ ಮರವೊಂದರ ಕೆಳಗೆ ಕುಳಿತು ಸಿಗರೇಟು ಹಚ್ಚಿದೆವು. ಮೊದಲ ದಮ್ಮಿಗೆ ನನಗೆ ಕೆಮ್ಮು ಹತ್ತಿತ್ತು. ಎದೆ ಹಿಡಿದು ಕೆಮ್ಮತ್ತಿದ್ದ ನನ್ನ ಕಣ್ಣು ಮೂಗಿನಲ್ಲಿ ನೀರು ಬರುತ್ತಿತ್ತು. ‘ಮೊದಲು ಹೀಗೆಯೇ ಆಗುವುದು, ಅಮೇಲೆ ಎನೂ ಆಗುವುದಿಲ್ಲ’ವೆಂದು ಬೆಂಕಿ ಸಲಹೆ ಬೇರೆ ಕೊಡುತ್ತಿದ್ದ! ನಾಲ್ಕೈದು ದಮ್ಮು ಸೇದುವುದರಲ್ಲೇ ಸುಸ್ತಾಗಿ ಬಿಸಾಕಿಬಿಟ್ಟೆ, ಪುಷ್ಪಾಚಾರಿಯೂ ನನ್ನದೇ ದಾರಿ ಹಿಡಿದ. ಇನ್ನಿಬ್ಬರು ಕೆಮ್ಮುತ್ತಲೇ ಪೂರ್ತಿ ಸೇದಿ ಎಂಜಾಯ್ ಮಾಡಿದರು! ಆದರೆ ಬೆಂಕಿ ಮಾತ್ರ ಸಿಗರೇಟಿನ ಫಿಲ್ಟರ್‌ವರೆಗೆ ಉರಿ ಬರುವವರೆಗೂ ಸೇದಿ ಹೊಗೆ ಬಿಡುತ್ತಿದ್ದ!
ನಾನು ಈ ಮೊದಲು ಸಿಗರೇಟು ಸೇದಿರಲಿಲ್ಲ. ಆದರೆ ಬೀಡಿ ಸೇದಿದ್ದೆ ಎಂದರೆ ನನಗೇ ಆಶ್ಚರ್ಯ! ನಿಮಗೂ ಆಶ್ಚರ್ಯವಾಗಬಹುದು!! ಆದರೆ ಅದು ಕದ್ದು ಮುಚ್ಚಿ ಸೇದಿದ್ದಲ್ಲ!!! ಎಲ್ಲರ ಎದುರಿಗೇ ಅದೂ ನಮ್ಮ ಮನೆಯಲ್ಲೇ ಕೇವಲ ಒಂದೆರಡು ದಮ್ಮು ಸೇದುವಷ್ಟಕ್ಕೆ ಮಾತ್ರ ಸೀಮಿತವಾಗಿತ್ತು.
ಅದು ಆಗಿದ್ದು ಹೀಗೆ. ನಮ್ಮ ಅಜ್ಜ ನಾನು ಎಂಟನೇ ತರಗತಿಯಲ್ಲಿದ್ದಾಗ ತೀರಿಹೋದರು. ಅವರು ತೀರಿ ಹೋಗುವ ಮೊದಲು ಒಂದೈದಾರು ತಿಂಗಳ ಕಾಲ ಹಾಸಿಗೆಯಲ್ಲಿದ್ದರು. ಎದ್ದು ನಡೆದಾಡುತ್ತಿರಲಿಲ್ಲ. ನಾವು ಆರು ಜನ ಅವರ ಮೊಮ್ಮಕ್ಕಳು ಅವರನ್ನು ತುಂಬಾ ಪ್ರೀತಿಸುತ್ತಿದ್ದೆವು. ಪೈಪೋಟಿಯ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳಲು, ಅವರ ಬೇಕು ಬೇಡಗಳನ್ನು ಪೂರೈಸಲು ಸಿದ್ಧರಾಗಿರುತ್ತಿದ್ದೆವು. ನನ್ನಜ್ಜನ ಮೆಚ್ಚಿನ ಹವ್ಯಾಸವೆಂದರೆ ಬೀಡಿ ಸೇದುವುದು. ಸಾಯುವ ಹಿಂದಿನ ದಿನವೂ ಅವರು ಬೀಡಿಯನ್ನು ಸೇದಿದ್ದರು! ಕೆಲವರು ಬೀಡಿ ಸೇದುವುದನ್ನು ಬಿಡಬೇಕೆಂದರೂ ನನ್ನಜ್ಜ ಬಿಟ್ಟಿರಲಿಲ್ಲ. ತುಂಬುಜೀವನವನ್ನು ತುಂಬಾ ಚಟುವಟಿಕೆಯಿಂದ ಕಳೆದಿದ್ದ ನನ್ನಜ್ಜನಿಗೆ ತೊಂಬತ್ತು ವರ್ಷಗಳಿಗೂ ಜಾಸ್ತಿಯಾಗಿತ್ತು. ಆದ್ದರಿಂದ ಈ ವಯಸ್ಸಿನಲ್ಲಿ ಅವರಿಗೆ ಇಷ್ಟವಾಗಿದ್ದ ಹವ್ಯಾಸವನ್ನು ನಿಲ್ಲಿಸುವುದು ಬೇಡ ಎಂದು ನಮ್ಮ ತಂದೆಯೂ ಅವರಿಗೆ ಬೀಡಿ ಪೂರೈಸುತ್ತಿದ್ದರು. ಆಗ ನಮ್ಮ ಮನೆಯಲ್ಲಿ ಕುಕ್ಕೆಗಟ್ಟಲೆ ಬೀಡಿ ತಂದು ಕೆಲಸಕ್ಕೆ ಬರುವವರಿಗೆಲ್ಲಾ ಕೊಡಲು ಇಟ್ಟಿರುತ್ತಿದ್ದರು. ಹಾಸಿಗೆಯಲ್ಲಿದ್ದ ನಮ್ಮಜ್ಜ ದಿನಕ್ಕೆ ಮೂರ‍್ನಾಲ್ಕು ಬಾರಿಯಾದರೂ ಬೀಡಿ ಬೇಕೆಂದು ಕೇಳಿ ಸೇದಿ ಸಂತೋಷ ಪಡುತ್ತಿದ್ದರು.
ಕೊನೆಯ ದಿನಗಳಲ್ಲಿ ಅವರು ತುಂಬಾ ನಿಶ್ಯಕ್ತರಾಗಿದ್ದರು. ನಾವು ಬೀಡಿಗೆ ಬೆಂಕಿ ಅಂಟಿಸಿ ಕೊಟ್ಟರೆ ಅದನ್ನು ಅವರು ಸೇದುವಷ್ಟರಲ್ಲಿ ಬೆಂಕಿ ಆರಿಹೋಗುತ್ತಿತ್ತು. ಆಗ ಬೆಂಕಿಯನ್ನು ಹಚ್ಚಿಸಿಕೊಟ್ಟಿಲ್ಲ ಎಂದು ನಮ್ಮನ್ನು ಬಯ್ಯುತ್ತಿದ್ದರು. ಅದಕ್ಕಾಗಿ ನಾನು ಕಂಡುಕೊಂಡಿದ್ದ ಮಾರ್ಗವೆಂದರೆ, ಅವರ ಬಾಯಿಗೆ ಬೀಡಿ ಇಡುವ ಮೊದಲು ನಾನು ಒಂದು ದಮ್ಮು ಚೆನ್ನಾಗಿ ಎಳೆದು, ನಂತರ ಇಡುತ್ತಿದ್ದೆ. ಆಗ ಇನ್ನು ಬೆಂಕಿ ಪ್ರಖರವಾಗಿರುತ್ತಿದ್ದುದರಿಂದ ಸ್ವಲ್ಪ ಎಳೆದರೂ ಸ್ವಲ್ಪವಾದರೂ ಹೊಗೆ ಬಾಯೊಳಗೆ ಹೋಗುತ್ತಿತ್ತು. ಅದನ್ನು ಬಾಯಿ ಮೂಗೊಳಗೆ ಅವರು ಹೊರಗೆ ಬಿಡುತ್ತಿದ್ದರು. ಆಗೆಲ್ಲಾ ಅವರ ಮುಖ ತೃಪ್ತಿಯಿಂದ ಕೂಡಿರುತ್ತಿತ್ತು!
ಸಿಗರೇಟು ಸೇದಿದ ನನ್ನ ಮೊದಲ ಅನುಭವ ಮಾತ್ರ ನನ್ನಲ್ಲಿ ಅಪರಾಧೀ ಭಾವನೆಯನ್ನು ಮೂಡಿಸಿತ್ತೋ ಅಥವಾ ಆಗ ಉಂಟಾದ ಕೆಮ್ಮು, ಅದರಿಂದ ನಾನು ಪಟ್ಟ ಕಷ್ಟ ಇವುಗಳಿಂದಾಗಿಯೋ ನಾನು ಮತ್ತೆಂದೂ ಸಿಗರೇಟು ಸೇದುವ ಗೋಜಿಗೆ ಹೋಗಲಿಲ್ಲ. ಈಗಲೂ, ಕೆಎಸ್ಸಾರ್ಟಿಸಿಯಲ್ಲಿ ಡ್ರೈವರ್ ಆಗಿರುವ ಬಿ.ಬಿ.ಮಂಜುನಾಥ ಚನ್ನರಾಯಪಟ್ಟಣದ ಬಸ್‌ಸ್ಟ್ಯಾಂಡ್‌ನಲ್ಲಿ ಯಾವಾಗಲಾದರೂ ಸಿಕ್ಕರೆ, ಬೈಟು ಟೀ ಹೇಳಿ, ಆತ ಒಂದು ಸಿಗರೇಟು ಸೇದುತ್ತಾನೆ. ಆಗ ಮೊದಲು ಸಿಗರೇಟು ಸೇದಿದ ದಿನವನ್ನು ಮೆಲುಕು ಹಾಕುತ್ತಾ ಎಂಜಾಯ್ ಮಾಡುತ್ತೇವೆ!
ಚಿತ್ರಕೃಪೆ:ಅಂತರಜಾಲ

Monday, August 17, 2009

ಪ್ರೇಮಮಹಲ್ ಮತ್ತು ಅದರ ಸ್ಥಾನ: ಒಂದು ಹಳೆಯ ಕಥೆ


ಒಂದಾನೊಂದು ಕಾಲಕ್ಕೆ ಕುಂದೂರಿನಿಂದ ಮೂಡಲಕ್ಕೆ ಒಂದು ಊರು.
ಹೆಸರು ಮೂಡನಹಳ್ಳಿ.
ಆ ಒಂದು ಹಳ್ಳಿಯವೊಳಗೆ ಇರುತಕ್ಕ ನೂರಾರು ಮನೆಯೊಳಗೆ ಸಾವಿರಾರು ಜನರೊಳಗೆ ಕುಂಬಾರ ಸಣ್ನಯ್ಯನೆಂಬೋನು ಬೆಳಗಾಗ ಎದ್ದು, ಪೂಜೆ ವೃತಾದಿಗಳನ್ನು ತಪ್ಪದೆ ಮಾಡಿ ನೋಡಿದವರು ಅವನನ್ನು ಮುಂದೆ ಬ್ರಾಹ್ಮಣೆಂದೂ ಹಿಂದೆ ಹಾರುವಯ್ಯನೆಂದೂ ಹಾಡಿ ಹೊಗಳುತ್ತಿರಲಾಗಿ,
ಸಣ್ಣಯ್ಯ ರಾಮಕ್ಕ ಎಂಬೊ ದಂಪತಿಗಳಿಗೆ ಕಮಲಿ ಒಬ್ಬಳೆ ಮಗಳಾಗಿ ಶಿವನೆಂಬೊ ದೇವರ ವರದಿಂದ ಹುಟ್ಟಿದವಳಾಗಿ ನೋಡಿದವರ ಕಣ್ಣಲ್ಲಿ ಆಸೆ ಮೂಡಿಸುವ ಹುಣ್ಣಿವೆಯ ಬೆಳದಿಂಗಳಾಗಿ ಬೆಳೆದು ಬೆಳೆದು ಬಳುಕುತ್ತಿರಲು,
ಇತ್ತ ಊರಿನವರೆಲ್ಲ ದೇವರೆಂದು ಕರೆಯುವ ಗುಂಡೇಗೌಡನೆಂಬ ಬಾರಿ ಆಳಿನ ಒಬ್ಬನೆ ಮಗನಾಗಿ ಬೆಳ್ಳಿಯ ಚಮಚಾವ ಬಾಯಲ್ಲೆ ಇಟ್ಟುಕೊಂಡು ಹುಟ್ಟಿದ ಬಾಲಕ ಮರಿಯಾನೆಯು ವಿದ್ಯೆ ಕಲಿಯೋದು ಎಷ್ಟೊಂದು ಸುಲಭ ಎಂದು ಊರವರೆಲ್ಲ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತಿರಲಾಗಿ, ಎಲ್ಲ ನೋಡುನೋಡುತ್ತಿರುವಂತೆ ಏಳೆಂಬ ಕ್ಲಾಸನ್ನು ಒಂದೇ ಬಾರಿಗೆ ಪಾಸ್ ಅನ್ನಿಸಿಕೊಂಡು ಮುಂದೆ ಓದೊಕೆ ಪ್ಯಾಟೆಗೆ ಹೊರಟವನೆ.
ಪ್ಯಾಟೆಗೆ ಹೊರಡೋಕು ಮುಂಚೆ ಹುಟ್ಟಿಸಿದ ಅಪ್ಪ ಅಮ್ಮಗಳಿಗೆ ಊರಿನ ಹಿರಿಯರಿಗೆ ಕಾಲಿಗೆ ಹಣೆಮುಟ್ಟಿಸಿ ನಮುಸ್ಕಾರವೆಂಬ ಶಾಸ್ತ್ರವನು ಅಪ್ಪ ಅಮ್ಮಗೆ ತೃಪ್ತಿಯಾಗುವವರಗೆ ಮತ್ತೆಮತ್ತೆ ಮಾಡಿ, ಊರ ಮುಂದಿನ ಗುಡಿಗೆ ಬಂದು ಶಿವನಿಗೂ ಕೈಮುಗಿದು ಹಣೆಯನ್ನು ನೆಲಕ್ಕೆ ತಾಕಿಸಿ ಭಕ್ತಿಯಿಂದ ಮುಚ್ಚಿದ ಕಣ್ಣುಗಳ ಬಿಟ್ಟುನೋಡಿದರೆ ಶಿವನೆಂಬ ದೇವರ ಬದಲಾಗಿ ಸಣ್ಣಯ್ಯ ರಾಮಕ್ಕ ದಂಪತಿಗಳ ಒಬ್ಬಳೇ ಮಗಳು ಕಮಲಿಯು ಕಣ್ಣರಳಿಸಿ ಮರಿಯಾನೆಯನ್ನೆ ನೋಡುತ್ತಿದ್ದಳು. ಪ್ಯಾಟೆಗೆ ಹೊರಡೊ ಒಪೊತ್ತಿನೊಳಗೆ ಮೂರುಮೂರು ಬಾರಿ ಕಮಲಿಯ ಕಣ್ಣಲ್ಲಿ ತುಂಬಿಕೊಂಡ ಮರಿಯಾನೆ-
ಅಪ್ಪನ ಹಿಂದೆ ಗಾಡಿ ಹತ್ತಿ ಪ್ಯಾಟೆ ಸೇರಿ ಶಾಲೆ-ಮಾವನ ಮನೆ, ಮಾವನ ಮನೆ-ಶಾಲೆ ಹೀಗೆ ವಾಕಿಂಗ್ ಮಾಡುತ್ತಿದ್ದ ಮರಿಯಾನೆ ಕಣ್ಣಿಗೆ ಬಿದ್ಡ ಬಾಲೆಯರೆಲ್ಲ, ಪುಸ್ತಕದಲ್ಲಿದ್ದ ಚಿತ್ರ ರೂಪದ ಹೆಣ್ಣುಗಳೆಲ್ಲ, ಶಿವನ ಎದುರಿಗೆ ಕಂಡಂತ ಕಮಲಿಯೇ ಆಗಿದ್ದರು.
ಸಪ್ಪಗೆ ತೆಪ್ಪಗೆ ಮೂಲೆಯಲ್ಲಿ ಕುಳಿತ ಸೋದರಳಿಯನನ್ನು ಕಂಡ ಅತ್ತೆವ್ವ ಊರು ಬಿಟ್ಟು ಬಂದಿದ್ದ ಬೇಸರಕ್ಕೆ ನನ್ನಳಿಯ ಮರಿಯಾನೆ ಅಪ್ಪ ಅವ್ವಾರ ನೆನೆಸಿಕೊಂಡು ಸೊರಗಿ ಹೋಗ್ಯಾನು ಎಂದು ಲಲ್ಲೆಗರೆದು ಊಟ ಇಕ್ಕುತ್ತಿರವದ ಕಂಡ ಅತ್ತೆಯ ಮಗಳು ಇಂಗ್ಲೀಷ್ ಕಲಿತ ಸರಸಿ ಎಂಬಾಕೆ ನಕ್ಕುಬಿಟ್ಟಳು baby, baby ಎಂದು.
ಇತ್ತ ಮೂಡನಹಳ್ಳಿಯ ಪಡ್ಡೆ ಹುಡುಗರಿಗೆಲ್ಲ ಕಚುಗುಳಿ ಇಡುವಂತೆ ಬೆಳೆಯುತ್ತಿದ್ದ ಕಮಲಿಯ ಕಣ್ಣೊಳಗೆ ಅಂದು ಶಿವನೆಂಬ ದೇವರ ಗುಡಿಯಲ್ಲಿ ತುಂಬಿಕೊಡ ಮರಿಯಾನೆಯ ಚಿತ್ರವಲ್ಲದೆ ಬೇರೆ ಯಾರೂ ಮೂಡಲೇ ಇಲ್ಲ.
ಹೀಗಿರಲಾಗಿ ಅದೊಂದು ದಿನ ರಾತ್ರಿ ಮರಿಯಾನೆಯ ಕನಸಿನಲಿ ಬಂದ ಕಮಲಿ
ಚಂದ್ರನೆಂತೆ ನಕ್ಕಳು.
ಹಕ್ಕಿಯಂತೆ ಹಾರಿದಳು.
ಜೇನಿನಂತೆ ಹಾಡಿದಳು.
ಮರಿಯಾನೆ ಅವಳೊಡನೆ ಕುಣಿಕುಣಿದು ನೆಗೆನೆಗೆದು ಬೀಳುವಾಗ ಮಲಗಿದ್ದ ಮಂಚದ ಮೇಲಿಂದ ದೊಪ್ಪೆಂದು ಬಿದ್ದು ಕೈಯನ್ನೆ ಮುರಿದುಕೊಳ್ಳಲಾಗಿ, ಆಗಲೆ ಮೈನೆರೆದು ನಿಂತಿದ್ದ ಅತ್ತೆಯ ಮಗಳು ಸರಸಮ್ಮ ತನ್ನ ಗಂಡನಾಗೊ ಗಂಡಿಗೆ ಸಕಲ ಸೇವೆಯನ್ನು ಮಾಡುತ್ತಿದ್ದಳು.
ಅತ್ತೆಯ ಮಗಳ ಕೈಯಿಂದ ಸೇವೆಯ ಮಾಡಿಸಿಕೊಂಡು ಖುಷಿಗೊಂಡ ಅಳಿಯ ಅತ್ತೆ ಮಾವನಿಗೆ ಖುಶಿಯಾಗೊ ರೀತೀಲಿ ನಗುನಗುತ ಇದ್ರೂನು ಅವರು ಮದುವೆ ಮಾತೆತ್ತಿದರೆ ಮಾತು ಬದಲಿಸುತ್ತ, ಹೇಗ್ಯಾಗೊ ತಪ್ಪಿಸಿಕೊಂಡು, ಇಂಗ್ಲೀಷಿನಲ್ಲಿ ಟುಸ್ಸುಪುಸ್ಸು ಎಂದು ಮೈಮೇಲೆ ಬೀಳಲು ಬರುತ್ತಿದ್ದ ಸರಸಿಗೆ ಬೇಜಾರು ಮಾಡಬಾರದು ಅಂತ ಅವಳು ಮೇಲೆ ಬೀಳೋಕೆ ಬಂದಾಗಲೆಲ್ಲ ಒಂದೊ ಎರಡೊ ಬೆರಳನ್ನು ತೋರಿಸುತ್ತಲೊ, ಹೊಟ್ಟೆ ನೋವು ಅಂತ ಬೊಬ್ಬೆ ಹೊಡಿಯುತ್ತಲೊ ಇದ್ದರೂ, ಏನಾದ್ರು ಮಾಡಿ ಅವನ ಮೇಲೆ ಬೀಳುತ್ತಿದ್ದ ಸರಸಿಯ ಕಣ್ಣಲ್ಲಿ ಕಮಲಿಯನ್ನೇ ಕಾಣುತ್ತಿದ್ದ.
ಹೀಗೆ ಒಂದೆರಡು ವರ್ಷಗಳು ಜಾರಿ ಹೋಗುವಷ್ಟರಲ್ಲಿ ಸಣ್ಣಯ್ಯ ರಾಮಕ್ಕರಿಗೆ ಬೆಳೆದು ನಿಂತ ಮಗಳ ಮದುವೆ ಮಾಡುವ ಯೋಚನೆ ಬರಲಾಗಿ ಜಾತಿ ಮತಸ್ತರು, ಅಲ್ಲದವರು ತಾಮುಂದು ನಾಮುಂದು ಎಂದು ಬೆಳದಿಂಗಳ ಮದುವೆಯಾಗಾಕೆ ನುಗ್ಗೋದ ಕಂಡು ಊರಿನ ದೇವರೆಂಬ ಗುಂಡೇಗೌಡ ಅದೇನೆಂದು ವಿಚಾರಿಸಲಾಗಿ, ಕುಂಬಾರ ಸಣ್ಣಯ್ಯನೆ ನಡುಬಗ್ಗಿಸಿ ‘ಮಗಳಿಗೆ ಮದುವೆ ಮಾಡಬೇಕಲ್ಲ ದೊರಿ’ ಎಂದು ಕೈಮುಗಿದು ಬೇಡಿಕೊಂಡ.
ಆಗಲೆ ಅರಳಿ ನಿಂತ ಕಮಲಿಯ ಕಣ್ಣರಳಿಸಿ ನೋಡಿದ ಗೌಡನಿಗೆ ಒಳಗೆಲ್ಲೊ ತಣ್ಣಗೆ ಅದೇನೊ ಹರಿದಂತಾಗಿ, ‘ಸಣ್ಣಯ್ಯ, ಇವಳಿಗೆ ಒಪ್ಪುವಂತ ಗಂಡು ಇರೋನು ಒಬ್ಬನೆ’ ಎಂದು ಪೀಠಿಕೆ ಇಟ್ಟಾಗ, ಸಣ್ಣಯ್ಯ ಆಸೆಯ ಕಣ್ಣಿಂದ ‘ಯಾವೂರಲ್ಲಿ ನನ್ನೊಡೆಯ’ ಎಂದು ಇನ್ನೂ ಇನ್ನೂ ನಡು ಬಾಗಿಸಲು, ಗೌಡನು ಹುರಿಗಟ್ಟಿದ್ದ ತನ್ನ ಮೀಸೆಯ ಇನ್ನಷ್ಟು ತಿರುವಿ ‘ಈ ಊರಿನಲ್ಲೆ ಇದಾನೊ ಮಂಕಮಗನೆ’ ಎನ್ನಲು ಚೋಜಿಗಗೊಂಡ ಸಣ್ಣಯ್ಯ ಮಾತು ಹೊರಡದೆ ನಿಲ್ಲಲು, ಗೌಡನೆ ಸಣ್ಣಗೆ ದನಿ ಹೊರಡಿಸಿ ‘ನಿನ್ನ ಮಗಳು ನನ್ನ ಮನೆ ಸೇರಲಿ. ಜಾತಿ ಗೀತಿ ಕಟ್ಕೊಂಡು ಸಾಯ್ಬೇಡ. ಯಾವ ಜಾತಿ ಹೂವಾದ್ರು ಶಿವನ ಪಾದ ಸೇರಿದ್ರೆ ಚೆಂದಾಗಿರ್ತೈತಿ. ಏನಂತಿ’ ಎಂದಾಗ, ಸಣ್ಣಯ್ಯನ ರಾಮಕ್ಕನ ಕಮಲಿಯ ಕಣ್ಣಲ್ಲಿ ದೊಡ್ಡದಾಗಿ ಬೆಳದು ನಿಂತವನೆ ಸೂಟುಬೂಟು ಹಾಕಿಕೊಂಡು ನಿಂತಿದ್ದ ಮರಿಯಾನೆ.
ಅತ್ತ ಗೌಡನ ಮನೆ ಇತ್ತ ಸಣ್ಣಯ್ಯನ ಮನೆಯಾಗೆ ಮದುವೆ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದ್ದರೆ, ಕೋಣೆ ಬಿಟ್ಟು ಹೊರಡದ ಮದುವಣಗಿತ್ತಿ ಕಮಲಿಗೆ ಏನೊ ಹೊಳೆದಂತಾಗಿ, ಮದುವೆಗೆ ಮೊದಲೊಮ್ಮೆ ಮರಿಯಾನೆಯ ನೋಡೊ ಆಸೆ ಬೆಳೆದು ಬೆಟ್ಟದಂತೆ ಆಗಲು ತಡೆಯದಾದ ಕಮಲಮ್ಮ ತಾಯಿ ತಂದೆಯರ ಮುಂದೆ ಕಣ್ಣೀರ ಹರಿಸಿ ಕೇಳುತ್ತಾಳೆ. ‘ಅಪ್ಪ. ಈ ಮದುವೆಗೆ ಮೊದಲು ನಾವಾರು ಮರಿಯಾನೆಯ ನೋಡಲೇ ಇಲ್ಲ. ಪ್ಯಾಟೆಲಿ ಓದ್ದೋನು. ಜಾತಿ ಬಿಟ್ಟು ಮದುವೆ ಆಗೋಕೆ ಒಪ್ತಾನೊ ಇಲ್ಲೊವೊ’ ಎಂದು ರಾಗ ಎಳೆಯಲು,
ಎಲ್ಲೊ ಗೂಬೆ ಕೂಗಿದಂತಾಗಿ ಬೆಚ್ಚಿದ ಸಣ್ಣಯ್ಯ ಗೌಡನ ಮುಂದೆ ನಡು ಬಾಗಿ ‘ಮರಿಯಾನೆ ಇನ್ನು ಬರ್ಲಿಲ್ಲ. ಮದುವೆ ಮೂರ್ದಿನ ಐತೆ’ ಎಂದು ಬೀಗರೆಂಬ ಸಲುಗೆಯಲಿ ಮಾತನಾಡಲು, ಅಡಿಯಿಂದ ಮುಡಿಯವರಗೆ ಸಣ್ಣಯ್ಯನ ಅಳತೆ ಮಾಡಿದ ಗೌಡರು ‘ಅವನಿಗೇನೊ ಪರೀಕ್ಷೆಯಂತೆ. ಬಂದಾನೇಳು ಮದುವೆಯೊತ್ತಿಗೆ’ ಎನ್ನಲು ತೃಪ್ತಿಗೊಂಡ ಸಣ್ಣಯ್ಯ ಮನೆಯಲ್ಲಿ ಹೇಳಿದ್ದು ‘ಮರಿಯಾನೆಗೆ ಏನೊ ದೊಡ್ಡ ಪರೀಕ್ಷೆಯಂತೆ, ಮದುವೆಯ ದಿನಾನೆ ಬರ್ತಾನಂತೆ’ ಎಂದು!
ಮದುವೆಯ ದಿನವೇನೊ ಬಂತು. ಮರಿಯಾನೆ ಬರಲಿಲ್ಲ.
ಸಣ್ಣಯ್ಯ ರಾಮಕ್ಕ ಕಂಗಾಲಾದರು.
ಕಮಲಿ ಊಟ ನಿದ್ದೆ ಬಿಟ್ಟಳು.
ಅತ್ತ ಗೌಡನ ಮನೆಯಲ್ಲಿ ದಿಬ್ಬಣ ಹೊರಡೊ ಹೊತ್ತಿಗೆ ಗೌಡರೇ ಸ್ವತಃ ಮದುವಣ್ಣನ ವೇಷದಲ್ಲಿ ಬಂದು ಕುದುರೆ ಹತ್ತುತ್ತಿರಲಾಗಿ,
ಗೌಡತಿಯ ತಮ್ಮ ಬಸವಣ್ಣ ಅನ್ನೋನು ಅಕ್ಕನ ಮುಖವನ್ನೊಮ್ಮೆ ನೋಡಿ ಅರ್ಜುನ ಬಿಟ್ಟ ಬಾಣದ ವೇಗದಲ್ಲಿ ಸಣ್ಣಯ್ಯನ ಮನೆಗೆ ತಗುಲಿ ಅಲ್ಲೊಂದಿಷ್ಟು ಗಾಯ ಮಾಡಿ ಹಿಂತಿರುಗಿ ಬತ್ತಳಿಕೆಯಲ್ಲಿ ಸೇರಿಕೊಳ್ಳಲು ಬರುತ್ತಿರಲಾಗಿ,
ಈ ವಿಷಯ ಹೇಗ್ಯಾಗೊ ಪ್ಯಾಟೆಲಿದ್ದ ಮರಿಯಾನೆಯ ಅತ್ತೆ ಮಾವನಿಗೆ ತಿಳಿದು ನೂರಾರು ಎಕರೆ ಗದ್ದೆ ತೋಟ ಕುಂಬಾರ ಹುಡುಗಿ ಕಮಲಿಯ ಕೊರಳಿಗೆ ಬೀಳೋದ ತಪ್ಪಿಸೋಕೆ ಅಂತ ರಾತ್ರೋರಾತ್ರಿಲಿ ಮರಿಯಾನೆಗು ಸರಸಿಗು ಮದುವೆಯೆಂಬ ಶಾಸ್ತ್ರ ಮುಗಿಸಿ ಗಂಡು ಹೆಣ್ಣು ಕರಕೊಂಡು ಊರಿಗೆ ಬಂದು ಮನೆಯ ಬಾಗಿಲಿಗೆ ಬಂದಿರಲಾಗಿ,
ವಿಷಯ ತಿಳಿದ ಗುಂಡೇಗೌಡ, ಮದುವಣ್ಣನ ವೇಷವನ್ನು ಕಳಚಿ ತನ್ನ ದೇವರ ಗೆಟಪ್ ನೀಡೊ ಮಾಮೂಲಿ ಡ್ರೆಸ್ ಮಾಡ್ಕೊಂಡು ಬಂದ ಗೌಡ, ತಂಗಿಭಾವನನ್ನು ಬಾಯಿಗೆ ಬಂದಂತೆ ಬಯ್ಯುತ್ತ ‘ ಇಲ್ಲಿ ನನ್ನ ಮಗನಿಗೆ ಚಿನ್ನದಂತ ಹುಡುಗಿ ನೋಡಿ ಮದುವೆಗೆ ಬರೋಕೆ ಹೇಳಿ ಕಳುಸಿದ್ರೆ ನೀವೇನೊ ಮಾಡ್ಕಂಡು ಬಂದಿದಿರಲ್ಲ. ಊರವರ ಮುಂದೆ ನಾನ್ಯಾಗೆ ತಲೆ ಎತ್ತಲಿ’ ಅಂತ ಗೋಳಾಡುತಿದ್ದನು.
ಮರಿಯಾನೆ ಯೋಚನೆ ಮಾಡಿದ. ‘ ಅಪ್ಪ ನನಗೆ ಮದುವೆ ಮಾಡಲು ಹೊರಟಿದ್ದು, ಅದು ಆ ಕಮಲಿ ಜೊತೆಲಿ. ಆದರೆ ಈ ಅತ್ತೆ ಮಾವ ಸುಳ್ಳು ಹೇಳಿ ನಿಮ್ಮಪ್ಪ ಆ ಕುಂಬಾರರ ಹುಡುಗಿ ಕಟ್ಟಿಕೊತಾನೆ. ನಿನ್ನ ಕೈಗೆ ಚಿಪ್ಪು ಕೊಡ್ತಾನೆ ಅಂತ ಬೆದರಿಸಿ ಸರಸಿನ ನನ್ನ ಕೊರಳಿಗೆ ಕಟ್ಟಿದರು. ನಮ್ಮಪ್ಪ ಎಷ್ಟು ಒಳ್ಳೇನು. ಜಾತಿ ಗೀತಿ ನೋಡದೆ ಕಮಲೀನ ತನ್ನ ಸೊಸೆ ಮಾಡ್ಕೊಳ್ಳಕೆ ಒಪ್ಪವನೆ, ಈ ಅತ್ತೆ ಮಾವ ಹೇಳಿದ್ದು ಬರಿ ಸುಳ್ಳು’ ಅಂತ.
ಮರಿಯಾನೆಯ ತಲೆಯೊಳಗೆ ಈ ಸರಸಮ್ಮ ಅತ್ತೆ ಮಾವ ಇವರನ್ನ ಕುತ್ತಿಗೆ ಹಿಡಿದು ತಳ್ಳುವ ವಿಚಾರ ಬರುತ್ತಿರಲಾಗಿ, ಗೌಡತಿ, ಗೌಡತಿ ತಮ್ಮ ಮರೆಯಲ್ಲಿ ನಿಂತು ನೋಡುತ್ತಿರಲಾಗಿ, ಸರಸಿಯ ತಾಯಿ ತಂದೆ ಇಂಗು ತಿಂದವರಂತೆ ನಿಂತಿರಲಾಗಿ, ಮರಿಯಾನೆಯ ಅಪ್ಪ ಇನ್ನೂ ತನ್ನ ದೈತ್ಯ ಕಾಳಗವನ್ನು ಕುಣಿಯುತ್ತಿರಲಾಗಿ ಕುಂಬಾರ ಕೇರಿಯಿಂದ ಗೊಳೋ ಎಂಬ ದನಿಯೂ ಸಣ್ಣಯ್ಯ ರಾಮಕ್ಕರ ಅಳುವೂ, ಒಟ್ಟೊಟ್ಟಿಗೆ ‘ಕಮಲಿ ಬಾವಿಗೆ ಬಿದ್ಲು’ ಎಂಬ ಕೂಗು ನಡುನಡುವೆಯೂ ಕೇಳಿ ಬರಲಾರಂಭಿಸಿದಾಗ,
ಈ ಹಿಂದೆ ತನ್ನ ಸೋದರ ಮಾವ ಕುಂಬಾರ ಕೇರಿಗೆ ಓಡಿದ್ದ ರೀತಿಲೆ ಮರಿಯಾನೆ ಓಡುತ್ತಿರಲು, ಯಾರಾದರು ಕೇಳುತ್ತಿದ್ದಾರೊ ಇಲ್ಲವೊ, ಯಾರಿಗಾದರು ಅರ್ಥವಾಗುತ್ತಿದೆಯೊ ಇಲ್ಲವೊ ಎಂದು ಒಂದು ಕ್ಷಣವೂ ಯೋಚಿಸದೆ ಸರಸಮ್ಮ ಹಾಡಿದಳು ಒಂದು ಇಂಗ್ಲಿಷು ಪದ್ಯ.!
Love has pitched his mansion
in the place of excrement.
[ ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನು ಉಚ್ಚೆಯ ಬಚ್ಚಲಿನಲ್ಲಿ]

Wednesday, August 12, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 22

ಗೌರ್ನಮೆಂಟ್ ಹಾಸ್ಪಿಟಲ್ ಮತ್ತು ನರ್ಸ್ ನಾಗಮ್ಮ
ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅಲ್ಲಿದ್ದ ಗೌರ್‍ನಮೆಂಟ್ ಆಸ್ಪತ್ರೆ ತುಂಬಾ ಪ್ರಸಿದ್ಧಿ ಪಡೆದಿತ್ತು. ಡಾಕ್ಟರ್ ಬೆಟ್ಟೇಗೌಡರು ಏನೇನೋ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದರು. ನಮ್ಮ ಬಂಧುಗಳೇ ಆಗಿದ್ದ ವೀರಭದ್ರೇಗೌಡ ಎಂಬುವವರು ಅಲ್ಲಿಗೆ ಕಾಂಪೌಂಡರ್ ಆಗಿ ಬಂದಿದ್ದರು. ಆಸ್ಪತ್ರೆಯ ಆಶ್ರಯದಲ್ಲಿ ತಿಂಗಳಿಗೊಂದು ಜನನ ನಿಯಂತ್ರಣ ಆಪರೇಷನ್ ಕ್ಯಾಂಪ್ ನಡೆಯುತ್ತಿತ್ತು. ಕಣ್ಣಿನ ಪರೀಕ್ಷೆಗೆಂದು ತಿಂಗಳಿಗೊಮ್ಮೆ ಕ್ಯಾಂಪ್ ನಡೆಯುತ್ತಿತ್ತು. ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಸಪ್ಲೈ ಆಗುತ್ತಿದ್ದ ಔಷಧಿಗಳನ್ನು ಈ ಆಸ್ಪತ್ರೆಯಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿತ್ತು.
ಜನಪ್ರಿಯರಾಗಿದ್ದ, ಡಾಕ್ಟರ್ ಬೆಟ್ಟೇಗೌಡರು ಇಂಜೆಕ್ಷನ್ ತೆಗದುಕೊಂಡ ಕೆಲವು ರೋಗಿಗಳಿಂದ ಎರಡು ಅಥವಾ ಮೂರು ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದರು. ಅದನ್ನು ಕೆಲವರು ‘ಸರ್ಕಾರಿ ಆಸ್ಪತ್ರೆಯಲ್ಲಿ ದುಡ್ಡೇಕೆ ಕೊಡಬೇಕು’ ಎಂದು ಪ್ರತಿಭಟಿಸುತ್ತಿದ್ದರು. ಆಗ ಬೆಟ್ಟೇಗೌಡರು, ‘ನೋಡಪ್ಪ, ಸರ್ಕಾರ ಎಲ್ಲಾ ಖಾಯಿಲೆಗಳಿಗೂ ಔಷಧಿಗಳನ್ನು ಸಪ್ಲೈ ಮಾಡುವುದಿಲ್ಲ. ನಿನಗೆ ನಾನು ಔಷಧಿಯನ್ನು ಬರೆದುಕೊಟ್ಟರೆ, ಅದನ್ನು ತರಲು ನೀನು ಚನ್ನರಾಯಪಟ್ಟಣಕ್ಕೆ ಹೋಗಬೇಕು. ಅಷ್ಟಕ್ಕೆ ನೀನು ಎಷ್ಟು ಖರ್ಚು ಮಾಡಬೇಕು? ಅಲ್ಲದೆ, ನೀನು ಹೋಗಿ ತರುವ ಹೊತ್ತಿಗೆ ನಿನ್ನ ಖಾಯಿಲೆಯ ಗತಿ ಏನಾಗಬೇಡ. ಅದಕ್ಕೆ ನಾನೇ ಒಂದಷ್ಟು ದುಡ್ಡು ಹಾಕಿ ಔಷಧಿ ತಂದಿದ್ದೇನೆ. ಅದಕ್ಕೆ ನೀವಲ್ಲದೆ ನಾನು ದುಡ್ಡು ಕೊಡಬೇಕೆ?’ ಎನ್ನುತ್ತಿದ್ದರು. ಪ್ರತಿಭಟನೆ ಮಾಡಿದವರು ತೆಪ್ಪಗೆ ‘ಇರುವುದು ಇಷ್ಟೆ’ ಎಂದು ಒಂದೋ ಎರಡೋ ರೂಪಾಯಿ ಕೊಟ್ಟು ಕಾಲು ಕೀಳುತ್ತಿದ್ದರು. ಹೀಗೆ ಹಣ ತೆಗೆದುಕೊಳ್ಳುತ್ತಿದ್ದರೂ ಬೆಟ್ಟೇಗೌಡರ ಜನಪ್ರಿಯತೆಗೇನೂ ಕೊರತೆಯಾಗಿರಲಿಲ್ಲ. ದೂರದ ಊರುಗಳಿಂದ ಗಾಡಿ ಕಟ್ಟಿಕೊಂಡು ರೋಗಿಗಳನ್ನು ಕರೆದುಕೊಂಡು ಬರುತ್ತಿದ್ದರು. ‘ಡಾಕ್ಟರರ ಕೈಗುಣ ಚೆನ್ನಾಗಿದೆ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತರಲು ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಸಿಬ್ಬಂದಿಗಳಿದ್ದರು. ಹತ್ತಾರು ಜನ ನರ್ಸ್‌ಗಳಿದ್ದರು. ಎಲ್ಲಾ ಊರುಗಳ ಮನೆಗಳ ಗೋಡೆಯ ಮೇಲೆ ‘ಎರಡೇ ಮಕ್ಕಳು ಸಾಕು’, ‘ನಿರೋಧ್ ಬಳಕೆ ಬುದ್ಧಿವಂತ ಪುರುಷರ ಲಕ್ಷಣ’ ಎಂಬ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ನರ್ಸ್‌ಗಳು ಮನೆಮನೆಗೆ ಹೋಗಿ ಜನರಲ್ಲಿ ಮಕ್ಕಳಾಗದ ಹಾಗೆ ಆಪರೇಷನ್ ಮಾಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವಲ್ಲಿ ನಿರತರಾಗಿದ್ದರು. ಆಪರೇಷನ್ ಮಾಡಿಸಿಕೊಂಡವರಿಗೆ ಇನ್ನೂರೋ ಇನ್ನೂರೈವತ್ತೋ ರೂಪಾಯಿ ದುಡ್ಡನ್ನು ಕೊಡಲಾಗುತ್ತಿತ್ತು. ಜೊತೆಗೆ, ಕರ್ನಾಟಕ ರಾಜ್ಯ ಲಾಟರಿಯ ಐದು ಟಿಕೆಟ್‌ಗಳನ್ನೂ ಕೊಡಲಾಗುತ್ತಿತ್ತು! ಆಪರೇಷನ್ ಮಾಡಿಸಿಕೊಳ್ಳಲು ಮನವೊಲಿಸಿದ ನರ್ಸ್‌ಗೆ ಕಮೀಷನ್ ಕೂಡಾ ದೊರೆಯುತ್ತದೆಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಹೆಚ್ಚಿನ ಸಿಬ್ಬಂಧಿಗಳು ಹಾಸನದಿಂದಲೋ ಚನ್ನರಾಯಪಟ್ಟಣದಿಂದಲೋ ಬಂದು ಹೋಗುತ್ತಿದ್ದರು. ನಾಗಮ್ಮ ಎಂಬ ನರ್ಸ್ ಮಾತ್ರ ಅಲ್ಲಿಯೇ ಒಂದು ಕ್ವಾರ್ಟ್ರಸ್‌ನಲ್ಲಿ ಉಳಿದುಕೊಂಡಿದ್ದಳು. ಅವಳ ಗಂಡನೂ ಡಾಕ್ಟರಾಗಿದ್ದು, ತಿಪಟೂರಿನಲ್ಲೋ ಅರಸೀಕೆಯಲ್ಲೋ ಕ್ಲಿನಿಕ್ ನಡೆಸುತ್ತಿದ್ದರಂತೆ. ಇನ್ನೂ ಚಿಕ್ಕ ವಯಸ್ಸಿನ ಆಕೆ ಚುರುಕಾಗಿ ಕೆಲಸ ಮಾಡುತ್ತಾ ಓಡಾಡುತ್ತಿದ್ದಳು. ಸಕ್ಕರೆ ಖಾಯಿಲೆಯಿದ್ದ ದೊಡ್ಡ ಸ್ವಾಮೀಜಿಯವರಿಗೆ, ಪ್ರತಿದಿನ, ಇಂಜೆಕ್ಷನ್ ಚುಚ್ಚಿ ಬರುವುದೂ ಅವಳ ಕೆಲಸವಾಗಿತ್ತು. ಸಂಜೆಯ ವೇಳೆ ಏನೂ ಕೆಲಸವಿಲ್ಲದಿದ್ದರೆ ಬಂದು ಹಾಸ್ಟೆಲ್ಲಿನ ಬಳಿ ಹುಡುಗರು ಕಬಡ್ಡಿ, ವಾಲಿಬಾಲ್ ಆಡುವುದನ್ನು ನೋಡುತ್ತಾ, ಹರಟೆ ಹೊಡೆಯುತ್ತಾ ಕುಳಿತಿರುತ್ತಿದ್ದಳು. ವಾರ್ಡನ್, ಭಟ್ಟರೆಲ್ಲರೂ ಅವಳಿಗೆ ಚೆನ್ನಾಗಿ ಪರಿಚಯವಾಗಿದ್ದರು. ಹಾಸ್ಟೆಲ್ಲಿನಲ್ಲಿ ಸ್ಪೆಷಲ್ ಮಾಡಿದ ದಿನ ಅವಳನ್ನು ಒಮ್ಮೊಮ್ಮೆ ಊಟಕ್ಕೆ ಕರೆಯಲಾಗುತ್ತಿತ್ತು.
ನಮ್ಮ ಹಾಸ್ಟೆಲ್ಲಿನಲ್ಲಿ ಕಳ್ಳತನವಾದ ದಿನವೇ ಕುಂದೂರಿನಲ್ಲಿ ಕೊಲೆಯಾದ ವಿಚಾರವನ್ನು ಹೇಳಿದೆನಲ್ಲ. ಆ ದಿನಗಳಲ್ಲಿ ಕುಂದೂರುಮಠದಲ್ಲಿ ಒಂದು ರೀತಿಯ ಭಯದ ವಾತಾವರಣವಿತ್ತು. ಕತ್ತಲಾದ ಮೇಲೆ ಒಬ್ಬೊಬ್ಬರೇ ಯಾರೂ ಹೊರಗೆ ಹೋಗುತ್ತಿರಲಿಲ್ಲ. ಇಡೀ ಕ್ವಾರ್ಟ್ರಸ್ಸಿನಲ್ಲಿ ಒಬ್ಬಳೇ ವಾಸವಾಗಿದ್ದ ನಾಗಮ್ಮನಿಗೂ ಈ ಭಯ ಕಾಡಿತ್ತು. ಅದಕ್ಕೆ ಅವಳು ನಮ್ಮ ವಾರ್ಡನ್ ಬಳಿ ಬಂದು ರಾತ್ರಿ ವೇಳೆ ಮನೆಯಲ್ಲಿ ಮಲಗಲು ನಾಲ್ಕಾರು ಹುಡುಗರನ್ನು ಕಳುಹಿಸುವಂತೆ ಕೇಳಿಕೊಂಡಿದ್ದಳು. ವಾರ್ಡನ್ನರೂ ಒಪ್ಪಿದರು. ನನ್ನನ್ನು ಸೇರಿಸಿ ನಾಲ್ಕು ಜನ ಹತ್ತನೇ ತರಗತಿಯ ಹುಡುಗರನ್ನು ಕರೆದು ದಿನಾ ರಾತ್ರಿ ಊಟವಾದ ಮೇಲೆ ನಾಗಮ್ಮನ ಮನೆಗೆ ಹೋಗಿ, ಅಲ್ಲಿಯೇ ಓದಿಕೊಂಡು ಮಲಗಬೇಕೆಂದು ಹೇಳಿದರು. ಅಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯಿತ್ತು. ಹಾಸ್ಟೆಲ್ಲಿನ ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಸುತ್ತಲೂ ಕುಳಿತು ಓದುತ್ತಿದ್ದ ಹಾಗೂ ಆ ಮಸಿಯನ್ನೇ ಉಸಿರಾಡುತ್ತಿದ್ದ ನಮಗೆ, ಮೂಗಿನೊಳಗೆ ಕಪ್ಪಗೆ ‘ಕಿಟ್ಟ’ ಕಟ್ಟಿಕೊಳ್ಳುತ್ತಿತ್ತು. ಬೆಳಿಗ್ಗೆ ಸ್ನಾನ ಮಾಡುವಾಗ, ಮೂಗಿನೊಳಗೆ ಬೆರಳು ಹಾಕಿ ಕಪ್ಪಗಿನ ಕಿಟ್ಟ ತೆಗೆದು ತೆಗೆದು ನಮಗೆ ಬೇಸರವಾಗಿತ್ತು. ವಿದ್ಯುತ್ ದೀಪದ ಬೆಳಕಿನಲ್ಲಿ ಓದಬಹುದೆಂಬ ಆಸೆಯಿಂದ ನಾವು ಹೊರಡಲು ಸಿದ್ಧರಾದೆವು. ಸ್ವತಃ ನಾಗಮ್ಮನೇ ಕುಳ್ಳ ಶಿವೇಗೌಡನೂ ಇರಲಿ ಎಂದು ಕರೆದಿದ್ದರಿಂದ ಒಟ್ಟು ಐದು ಜನ ನಮ್ಮ ನಮ್ಮ ಹಾಸಿಗೆ ಪುಸ್ತಕಗಳನ್ನು ತೆಗೆದುಕೊಂಡು ನಮ್ಮ ‘ಅಡ್ಡಾ’ವನ್ನು ಬದಲಿಸಿದೆವು.
ಅಲ್ಲಿ ಓದುವುದಕ್ಕಿಂತ ನಮಗೆ ಹೆಚ್ಚು ಆಕರ್ಷಣೆಯೆಂದರೆ ಅವರಲ್ಲಿದ್ದ ಒಂದು ರೇಡಿಯೋ. ಅದನ್ನು ಹಾಕಿಕೊಂಡು ಹರಟೆ ಹೊಡೆಯುವುದು ನಮ್ಮ ನೆಚ್ಚಿನ ಹವ್ಯಾಸವಾಗಿತ್ತು. ಸ್ವತಃ ನಾಗಮ್ಮನೇ ಬಯ್ದು, ‘ಓದಿಕೊಳ್ಳದಿದ್ದರೆ ವಾರ್ಡನ್‌ಗೆ ಹೇಳುತ್ತೇನೆ’ ಎನ್ನುವವರೆಗೂ ನಮ್ಮ ಆಟ ಮುಂದುವರೆಯುತ್ತಲಿತ್ತು. ಕೇವಲ ರಾತ್ರಿ ಹೊತ್ತು ಮಾತ್ರ ನಮಗೆ ಆಡುತಾಣವಾಗಿದ್ದ ನಾಗಮ್ಮನ ಮನೆ ಶನಿವಾರ ಭಾನುವಾರಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಆಡುತಾಣವಾಗಿದ್ದು ಈ ರೇಡಿಯೋ ನೆಪದಿಂದಲೇ! ಭಾನುವಾರ ಮಧ್ಯಾಹ್ನ ಎರಡೂವರೆಯಿಂದ ಮೂರೂವರೆಯವರೆಗೆ ಒಂದು ಕನ್ನಡ ಸಿನಿಮಾದ ಕಥೆಯನ್ನು ಆಗ ರೇಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರು. ಅದನ್ನು ಕೇಳಲು ನಾವು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದರ ನಡುವೆ ಆಗಾಗ ನಾಗಮ್ಮ ನಮಗೆ ಮೊಟ್ಟೆ, ಬ್ರೆಡ್, ಹಣ್ಣು ಕೊಡುತ್ತಿದ್ದುದ್ದು ಇನ್ನೊಂದು ಆಕರ್ಷಣೆಯಾಗಿತ್ತು. ಕೆಲವೊಮ್ಮೆ ನಾವೇ ದುಡ್ಡು ಸೇರಿಸಿ ಮೊಟ್ಟೆ ತಂದು ಆಮ್ಲೆಟ್ ಮಾಡಿಸಿಕೊಂಡು ತಿಂದದ್ದೂ ಉಂಟು!
ಇಂಥದ್ದೇ ಒಂದು ಮಧ್ಯಾಹ್ನ ನಾಗಮ್ಮ ಎಲ್ಲೋ ಹೊರಗೆ ಹೋಗಿದ್ದಳು. ನಾವು ಸಿನಿಮಾ ಕಥೆ ಕೇಳಿ ಓದುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆವು. ನಮ್ಮ ಜೊತೆಗಿದ್ದ ಕುಳ್ಳ ಶಿವೇಗೌಡ ಒಂಬತ್ತನೇ ತರಗತಿಯಲ್ಲಿದ್ದುದ್ದರಿಂದಲೋ ಏನೋ, ನಾನೇನು ಅಷ್ಟು ಓದಬೇಕಾಗಿಲ್ಲ ಎಂದು ಸುಮ್ಮನೇ ಕೋಣೆ ಕೋಣೆ ತಿರುಗುತ್ತಾ ಅದೂ ಇದೂ ಹುಡುಕಿ ತಂದು ನಮಗೆ ತೋರಿಸುವುದು ಮಾಡುತ್ತಿದ್ದ. ಆತ ನಾಗಮ್ಮನ ರೂಮಿನಿಂದ ತಂದ ಒಂದು ಕವರನ್ನು ನೋಡಿದಾಗ ಅದರಲ್ಲಿ ನೂರಾರು ನಿರೋಧ್‌ಗಳು ಇದ್ದವು. ಆಗ ಆಸ್ಪತ್ರೆಯವರು ಪ್ರಚಾರಕ್ಕಾಗಿ ಅಂಟಿಸುತ್ತಿದ್ದ ಭಿತ್ತಿಪತ್ರಗಳಲ್ಲಿ ನಿರೋಧ್‌ಗಳ ಚಿತ್ರವನ್ನು ಅದರ ಉಪಯೋಗವನ್ನು ನಾವು ಮನಗಂಡಿದ್ದೆವು. ನರ್ಸ್‌ಗಳು ಅವುಗಳನ್ನು ಮನೆಮನೆಗೆ ಹಂಚುತ್ತಿದ್ದರೆಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೂ ಅವುಗಳನ್ನು ಪ್ರತ್ಯಕ್ಷವಾಗಿ ಅಷ್ಟು ಹತ್ತಿರದಿಂದ ನೋಡಿದ್ದು ಅವತ್ತೇ.
ನಮ್ಮ ಜೊತೆಯಲ್ಲಿದ್ದ ಕಿಲಾಡಿಯೊಬ್ಬ ಒಂದು ಪ್ಯಾಕೆಟ್ ಓಪನ್ ಮಾಡಿ, ಅದನ್ನು ಬಲೂನ್ ರೀತಿ ಊದಿಯೇಬಿಟ್ಟ!. ಅವನಿಂದ ಪ್ರೇರೇಪಿತರಾದ ಕುಳ್ಳ ಮತ್ತು ಇನ್ನೊಂದಿಬ್ಬರು ತಾವೂ ಊದಲು ಕುಳಿತರು. ನಾನು ಮತ್ತು ಸೋಮಶೇಖರ ಎಷ್ಟು ಬೇಡವೆಂದರೂ ಐದೇ ನಿಮಿಷದಲ್ಲಿ ಹತ್ತಾರು ನಿರೋಧ್‌ಗಳನ್ನು ಊದಿ ಊದಿ ಗಂಟು ಹಾಕಿ ಹಾಲ್‌ನಲ್ಲಿ ಹಾರಿಬಿಟ್ಟುಬಿಟ್ಟರು. ನಮಗೆ ಏನು ಮಾಡಲು ತೋಚದೆ ಒಂದೊಂದನ್ನೇ ಹಿಡಿದು ನಾವು ಓದಿಕೊಳ್ಳುತ್ತಿದ್ದ ರೂಮಿಗೆ ತಳ್ಳುತ್ತಿದ್ದೆವು. ಹಾಲ್‌ನ ಕಿಟಕಿ ರಸ್ತೆಯ ಕಡೆಗೇ ಇದ್ದುದ್ದರಿಂದ ಯಾರಾದರು ನೋಡುತ್ತಾರೆ ಎಂಬ ಭಯ ನಮ್ಮದು. ನಾವು ಓದಿಕೊಳ್ಳುತ್ತಿದ್ದ ರೂಮ್ ಹಿಂಬದಿಗಿತ್ತು. ಕೊನೆಗೆ ಅವುಗಳನ್ನು ಹಿಡಿದು ಹಿಡಿದು ರೂಮಿಗೆ ತುಂಬುವ ಕೆಲಸ ನಮಗೂ ಮೋಜೆನ್ನಿಸಿ ಅವರನ್ನು ಮತ್ತೆ ಮತ್ತೆ ಊದಲು ಪ್ರೇರೇಪಿಸಿದೆವು. ಆ ಮೂವರೂ ಸುಮಾರು ಐವತ್ತಕ್ಕೂ ಹೆಚ್ಚು ನಿರೋಧ್‌ಗಳನ್ನು ಊದಿ ಮುಗಿಸಿದಾಗ ಆ ರೂಮ್ ಅರ್ಧದಷ್ಟನ್ನು ಊದಿದ ನಿರೋಧ್ ಬಲೂನ್‌ಗಳೇ ಆವರಿಸಿಕೊಂಡುಬಿಟ್ಟಿದ್ದವು. ಇನ್ನು ಮುಂದೆ ಊದಲು ಅವರಲ್ಲಿ ಶಕ್ತಿ ಉಳಿದಿರಲಿಲ್ಲ!
ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ನಾಗಮ್ಮ ಬರುವಷ್ಟರಲ್ಲಿ ಅವುಗಳನ್ನು ಒಡೆದು ಹಾಕುವುದೆಂದು ತೀರ್ಮಾನ ಮಾಡಿದೆವು. ಆದರೆ ಹೇಗೆ. ಒಂದು ಬಲೂನ್ ಹಿಡಿದು ಒಡೆಯಲು ಪ್ರಾರಂಭಿಸಿದರೆ ಅದು ಸಾಧ್ಯವೇ ಆಗುತ್ತಿರಲಿಲ್ಲ. ಹೇಗೆ ಅಮುಕಿದರೂ, ಕಾಲಿನಿಂದ ತುಳಿದರೂ ಅದು ಒಡೆಯುತ್ತಿರಲಿಲ್ಲ. ಗಂಟು ಬಿಚ್ಚಲೂ ಆಗಲಿಲ್ಲ. ಆಗ ನಾನು ಒಂದು ಗಂಧದ ಕಡ್ಡಿ ಹಚ್ಚಿ ಅವುಗಳಿಗೆ ಮುಟ್ಟಿಸುವ ಐಡಿಯಾ ಕೊಟ್ಟೆ. ಗಂಧದ ಕಡ್ಡಿ, ಬೆಂಕಿಕಡ್ಡಿ ಹುಡುಕಿ ಹಚ್ಚಿಕೊಂಡು ಒಂದೆರಡು ಬಲೂನ್‌ಗಳನ್ನು ಹೊಡೆದಿರಬಹುದು ಅಷ್ಟೆ. ಅವುಗಳು ಉಂಟು ಮಾಡುತ್ತಿದ್ದ ಶಬ್ದ ನಮ್ಮನ್ನು ಭಯಬೀಳಿಸಿತ್ತು. ಅದಕ್ಕಿಂತ ಹೆಚ್ಚಾಗಿ ನಮಗೆ ದಿಗಿಲಾಗಿದ್ದು ನಾಗಮ್ಮ ಬಂದು ಬಾಗಿಲು ಬಡಿದಿದ್ದು.
ತಕ್ಷಣ ನಾವು ರೂಮಿನ ಬಾಗಿಲನ್ನು ಮುಚ್ಚಿ ಏನೂ ಆಗದವರಂತೆ ಬಾಗಿಲು ತೆಗೆದು ಓದುತ್ತಾ ಕುಳಿತುಕೊಂಡೆವು. ನಾಗಮ್ಮನಿಗೆ ಆಶ್ಚರ್ಯ! ಇಂದೇಕೆ ಹಾಲ್‌ನಲ್ಲಿ ಕುಳಿತು ಓದಿಕೊಳ್ಳುತ್ತಿದ್ದಾರೆ ಎಂದು. ‘ಯಾಕೆ ಇಲ್ಲಿ ಕುಳಿತಿದ್ದೀರ?’ ಎಂದು ಕೇಳಿಯೇ ಬಿಟ್ಟಳು. ನಾವು ‘ಅಲ್ಲಿ ತುಂಬಾ ಸೆಕೆ. ಅದಕ್ಕೆ’ ಎಂದು ಒಂದು ಸುಳ್ಳನ್ನು ಹೇಳಿಬಿಟ್ಟೆವು. ಆದರೆ ನಾವು ಹೇಳಿದ್ದು ಸುಳ್ಳು ಎಂಬುದು ನಮ್ಮ ಮಾತಿನಲ್ಲಿದ್ದ ನಡುಕವೇ ಹೇಳುತ್ತಿತ್ತು. ನಾಗಮ್ಮ ನಮ್ಮ ಮಾತನ್ನು ನಂಬದೆ ‘ಏನಾದರು ರೂಮಿನಲ್ಲಿ ಚೆಲ್ಲಿದ್ದೀರಾ?’ ಎನ್ನುತ್ತಾ, ನಾವು ನೋಡು ನೋಡುತ್ತಿರುವಂತೆ ಬಾಗಿಲನ್ನು ಜೋರಾಗಿ ತೆಗೆದೇಬಿಟ್ಟಳು!

ಬಾಗಿಲನ್ನು ಜೋರಾಗಿ ತಳ್ಳಿದ ರಭಸಕ್ಕೆ ರೂಮಿನಲ್ಲಿ ಸುಮ್ಮನೆ ತೇಲುತ್ತಾ ಕುಳಿತಿದ್ದ ಬಲೂನ್‌ಗಳೆಲ್ಲಾ ಒಮ್ಮೆಲೆ ಮೇಲೇರಿ ಕುಣಿಯಲಾರಂಭಿಸಿದವು! ಕೆಲವು ಅವಳ ಕಡೆಗೂ ನುಗ್ಗಿ ಬಂದವು. ನಾಗಮ್ಮ ನಮ್ಮೆಡೆಗೆ ತಿರುಗಿ, ‘ಯಾರು ಇದನ್ನೆಲ್ಲಾ ಮಾಡಿದ್ದು, ಅವನ್ನೇನು ಬಲೂನ್ ಎಂದುಕೊಂಡಿದ್ದೀರಾ ಹೇಗೆ?’ ಎಂದು ಅಬ್ಬರಿಸಿದಳು. ನಾವು ಅಷ್ಟೂ ಜನ ಅವಳ ಎದುರಿಗೆ ಕೈಮುಗಿದು ‘ತಪ್ಪಾಯಿತು ಸಿಸ್ಟರ್ ನಾವೆ ಮಾಡಿದ್ದು. ಇದೊಂದು ಬಾರಿ ಇದನ್ನು ಯಾರಿಗೂ ಹೇಳಬೇಡಿ. ಮತ್ತೆ ಮಾಡಲ್ಲ.’ ಎಂದು ಮುಂತಾಗಿ ಬೇಡಿಕೊಂಡೆವು. ಅವಳು ನಗುತ್ತಾ ‘ಹೋಗಲಿ ಬಿಡಿ, ಮೊದಲು ಅವುಗಳ ಗಾಳಿಯನ್ನು ತೆಗೆದು, ಎಲ್ಲವನ್ನೂ ನೀರು ಕಾಯಿಸುವ ಒಲೆಗೆ ಹಾಕಿ’ ಎಂದಳು. ನಾವು ಅದಕ್ಕೆ ಮಾಡಿದ ಪ್ರಯತ್ನವನ್ನು ಅವಳ ಮುಂದೆ ಹೇಳಿದೆವು. ಕೊನೆಗೆ ಅವಳೇ ರೂಮಿನ ಕಿಟಕಿ ಬಾಗಿಲುಗಳನ್ನೆಲ್ಲಾ ಹಾಕಿಸಿ, ಸಾಧ್ಯವಾದಷ್ಟು ಶಬ್ದ ಬರದಂತೆ ಎಚ್ಚರವಹಿಸಿ ಒಡೆಯಲು ಸಹಕರಿಸಿದಳು.
ಅವುಗಳ ಸಂಹಾರಕಾರ್ಯದಲ್ಲಿ ನಿರತರಾಗಿರುವಾಗ ‘ಇವುಗಳನ್ನು ಬಲೂನ್‌ಗಳು ಎಂದುಕೊಂಡಿದ್ದಿರಾ’ ಎಂದು ನಾಗಮ್ಮ ಕೇಳಿದಳು. ಆಗ ನಾವು ‘ಅವು ಬಲೂನ್‌ಗಳಲ್ಲ ಅಂತ ಗೊತ್ತು. ನೀವು ಆಸ್ಪತ್ರೆ ಮುಂದೆ ಅಂಟಿಸಿರೋ ಪೋಸ್ಟರಿನಲ್ಲಿ ಅದರ ಬಗ್ಗೆ ಬರೆದಿರೋದನ್ನ ಓದಿದ್ದೀವಿ’ ಎಂದು ಹೇಳಿದೆವು. ಅವಳೂ ನಕ್ಕು ಸುಮ್ಮನಾಗಿಬಿಟ್ಟಳು. ಆದರೆ ಹದಿನೈದು ದಿನ ಕಳೆಯುವುದರಲ್ಲಿ ಈ ವಿಷಯ ಹೇಗೋ ಎಲ್ಲರಿಗೂ ತಿಳಿದುಹೋಗಿತ್ತು. ಆಗಲೂ ನಮಗೆಲ್ಲಾ ಕುಳ್ಳ ಶಿವೇಗೌಡನ ಮೇಲೆಯೇ ಅನುಮಾನ ಬಂದಿತ್ತು. ಆದರೆ ವಿಷಯ ಅಷ್ಟೊಂದು ಗಂಭೀರತೆ ಪಡೆದುಕೊಳ್ಳಲಿಲ್ಲವಾದ್ದರಿಂದ ನಾವು ಎಂದಿನಂತೆ ನಾಗಮ್ಮನ ಮನೆ ಕಾವಲು ಕೆಲಸಕ್ಕೆ ಹೋಗುತ್ತಿದ್ದೆವು. ಅದರಿಂದ ಆದ ಒಂದೇ ಬದಲಾವಣೆ ಎಂದರೆ ನಾಗಮ್ಮ ತನ್ನ ರೂಮಿಗೆ ಬೀಗ ಹಾಕಿಕೊಂಡು ಹೊರಗೆ ಹೋಗಲಾರಂಭಿಸಿದ್ದು!
ಚಿತ್ರಕೃಪೆ: ಅಂತರಜಾಲ

Friday, August 07, 2009

ಇಂದು ನಾನು ಮಣ್ಣಿನ ದಾಸನಾದೆ! - ಶ್ರೀ ಮಧುಸೂದನ ಪೆಜತ್ತಾಯ

ನಾನು ಗೊಬ್ಬರಮಿತ್ರನಾದ ಕತೆಯನ್ನು ಮುಂದೊಮ್ಮೆ ಹೇಳುತ್ತೇನೆ!(ref) ಎಂದಿದ್ದೆನಲ್ಲ. ಈಗ ಹೇಳುತ್ತೇನೆ ಕೇಳಿ.
ನಾನು ಕಾಲೇಜು ಮುಗಿಸಿ ಭತ್ತದ ವ್ಯವಸಾಯಕ್ಕೆ ಇಳಿದ ಮೊದಲ ದಿನ ನಮ್ಮ ವ್ಯವಸಾಯ ಕ್ಷೇತ್ರದ ಹಟ್ಟಿಯ ಗೊಬ್ಬರವನ್ನು ತಲೆಯ ಮೇಲೆ ಹೊತ್ತು ನನ್ನ ಅಕ್ಕನ ಗದ್ದೆಗೆ ಹಾಕಿದೆ. ೧೯೬೭ ಜೂನ್ ಕೊನೆಯ ವಾರ ಇರಬೇಕು!
ಆ ದಿನ ಭಾನುವಾರ! ಕೆಲಸದವರಾರೂ ಬಂದಿರಲಿಲ್ಲ.
ನಾನು ನಿರ್ಮಿಸಿದ ನನ್ನ ಅಕ್ಕನ ಹೊಸಾ ‘ಫಾರ್ಮ್’ ಕಾಡಿನ ಬದಿಯ ನಿರ್ಜನ ಜಾಗದಲ್ಲಿ ಇತ್ತು. ನನ್ನ ಅಕ್ಕನ ಗದ್ದೆಯ ಆಚೆಯ ದಡದಲ್ಲಿ ತುಂಬಿದ ಸುವರ್ಣಾ ನದಿ ಹರಿಯುತ್ತಾ ಇತ್ತು. ಗದ್ದೆಯ ಈ ಕಡೆಗೆ ನನ್ನ ಒಂಟಿ ಕೋಣೆಯ ಅರಮನೆ! ಅದರ ಪಕ್ಕದಲ್ಲೇ ನೆಲ ಹಾಸಿಗೆ ಹಸೀ ಸೊಪ್ಪು ಹಾಕುವ, ಮಧ್ಯದಲ್ಲಿ ಬೈಪಣೆ (ಗೋದಿಲು) ಇದ್ದ ವಿಶಾಲವಾದ ಹಟ್ಟಿ ಇತ್ತು.
ಬೆಳಗಾಗಲೇ ನಮ್ಮ ದನಗಳನ್ನು ನನ್ನ ’ಮ್ಯಾನ್ ಫ್ರೈಡೇ’ ಅರ್ಥಾತ್ ಚೀಂಪ ನಾಯ್ಕ ಮೇಯಿಸಲು ಒಯ್ದಿದ್ದ.
ಅಂದು ಕಾಡಿನ ಪಕ್ಕದ ನಮ್ಮ ಸಸ್ಯ ಕ್ಷೇತ್ರದಲ್ಲಿ ನಾನೊಬ್ಬನೇ! ಏಕಾಂಗಿ.
ನಮ್ಮ ಹಟ್ಟಿಯ ಎಲ್ಲಾ ಗೊಬ್ಬರವನ್ನು ಒಬ್ಬನೇ ಹೊತ್ತು ಗದ್ದೆಗೆ ಹಾಕುವ ’ಛಾಲೆಂಜ್’ ನನ್ನ ಮನದಲ್ಲಿ ಹುಟ್ಟಿತು.
ಅದನ್ನು ಸ್ವೀಕರಿಸಿಯೇ ಬಿಟ್ಟೆ!
ಹಿಂದಿನ ದಿನ ಮಾಡಿಟ್ಟ ಎಂಟು ಚಪಾತಿಗಳನ್ನು ಅಕ್ಕ ಡಾ. ಶಶಿಕಲಾ ಬಾಟಲಿಗೆ ಹಾಕಿ ಕೊಟ್ಟಿದ್ದ ಅವಳ ಮನೆಯ ಉಪ್ಪಿನಕಾಯಿ ಜತೆಗೆ ತಿಂದೆ. ಒಂದು ಮಗ್ ಬಿಸಿ ಟೀ ಮಾಡಿಕೊಂಡು ಕುಡಿದೆ.

ಬೇಸಿಗೆಯ ಧಗೆಯಲ್ಲಿ ಭದ್ರಾನದಿಯ ಮೇಲೆ ಮೋಡ!

ಪಾದರಕ್ಷೆ ಮತ್ತು ಶರಟು ಬಿಚ್ಚಿಟ್ಟು ಗೊಬ್ಬರದ ಇಸ್ಮುಳ್ಳು (ಕೊಕ್ಕೆ) ಮತ್ತು ದೊಡ್ಡ ಕಣ್ಣಿನ ಬೆತ್ತದ ಬುಟ್ಟಿ ಕೈಗೆತ್ತಿಕೊಂಡು ಸೆಗಣಿ ವಾಸನೆ ಹೊಡೆಯುತ್ತಾ ಇದ್ದ ಸೊಪ್ಪಿನ ಹಟ್ಟಿಯ ಗೊಬ್ಬರ ಗೋರಲು ಶುರುಮಾಡಿದೆ.
"ಇಂದಿನಿಂದ ಈ ಹಟ್ಟಿ ಗೊಬ್ಬರ ನನ್ನ ಮಿತ್ರ! ಗೊಬ್ಬರ ಇಲ್ಲದೆ ಸಾಗುವಳಿ ಇಲ್ಲ! ಈ ದಿನ ಈ ಹಟ್ಟಿಯ ಗೊಬ್ಬರವನ್ನು ಏಕಾಂಗಿಯಾಗಿ ಗದ್ದೆಗೆ ಸಾಗಿಸಿ, ಹಳ್ಳಿಗರ ಕೈಯ್ಯಲ್ಲಿ ‘ಸೈ’ ಎನ್ನಿಸಿಕೊಳ್ಳುವೆ! " ಅಂತ ನನ್ನ ಕೃಷಿ ಜೀವನದ ’ಓ ನಾಮ’ ಹಾಡಿದೆ.
ಕಳಿತ ಗೊಬ್ಬರದಿಂದ ಇಳಿಯುತ್ತಾ ಇದ್ದ (ಅಂದರೆ ಬಹು ರಸವತ್ತಾಗಿ ಕೊಳೆತಿದ್ದ) ಆ ಗಂಜಳದ ವಾಸನೆಯ ನೀರು ನನ್ನ ಕಣ್ಣುಗಳಿಗೆ ನುಗ್ಗಿದ್ದರಿಂದ ನನ್ನ ಕಣ್ಣುಗಳು ಉರಿಯುತ್ತಿದ್ದುವು. ಸ್ವಲ್ಪ ಕಣ್ಣೀರು ಸುರಿಸಿದ ಮೇಲೆ ಕಣ್ಣುಗಳು ಅದಕ್ಕೆ ಒಗ್ಗಿಕೊಂಡುವು. ದೊಡ್ಡ ಬಾಕಿಮಾರು ಗದ್ದೆಯ ಹರವಿನಲ್ಲಿ ಹಠ ಹಿಡಿದು ಇನ್ನೂರು ಚಿಲ್ಲರೆ ಬುಟ್ಟಿ ಗೊಬ್ಬರವನ್ನು ಎಂಟು ಅಡಿಗೊಂದರಂತೆ ಗುಪ್ಪೆ ಹಾಕಲು ಶುರು ಮಾಡಿದೆ.
ತಲೆಯ ಮೇಲೆ ಅಡಿಕೆಯ ಹಾಳೆಯ ಮುಟ್ಟಾಳೆ ಇತ್ತು. ಉಳಿದಂತೆ ಧರಿಸಿದ್ದು ಖಾಕಿಯ ಬಣ್ಣದ ಶಾರ್ಟ್ಸ್ ಮಾತ್ರ.
ಆಷಾಢ ಮಾಸದ ಮಳೆ ಮಧ್ಯೆ ಮಧ್ಯೆ ಬಿಡುವು ಕೊಟ್ಟು ಬರುತ್ತಾ ಇತ್ತು.
ಮೈ ಮೇಲಿನ ಗೊಬ್ಬರವನ್ನು ಮತ್ತು ಸುವಾಸನೆಯ ಆ ನೀರನ್ನು ಆ ಮಳೆ ಸ್ವಲ್ಪಮಟ್ಟಿಗೆ ಆಗಾಗ ತೊಳೆದು ಸಹಾಯ ಮಾಡುತ್ತಾ ಇತ್ತು! ಜತೆಗೆ, ನನ್ನ ಮೈಯಿಂದ ಬೆವರು ಧಾರಾಕಾರವಾಗಿ ಇಳಿಯುತ್ತಲೂ ಇತ್ತು.
ಕೆಲವೇ ನಿಮಿಷಗಳಲ್ಲಿ ನನ್ನ ಮೂಗು ಗೊಬ್ಬರದ ವಾಸನೆಗೆ ಒಗ್ಗಿ ಬಿಟ್ಟಿತು!
ಕೊನೆಗೆ ಆ ವಾಸನೆ ನನಗೆ ಗೊತ್ತಾಗಲೇ ಇಲ್ಲ!
ಗೊಬ್ಬರದ ನೀರು ನನ್ನ ಬಾಯಿಗೆ ಹರಿದು ಬಂದಾಗ ಉಗುಳನ್ನು ’ಥೂ!’ ಎಂದು ಉಗಿಯುತ್ತಾ ಇದ್ದೆ, ಅಷ್ಟೆ!
ಬರೇ ಕಾಲಿನ ನಡಿಗೆ ಆದ್ದರಿಂದ ನನ್ನ ಕಾಲಿನ ಚರ್ಮ ಕೊನೆಕೊನೆಗೆ ಉರಿಹತ್ತತೊಡಗಿತು. ‘ಸದಾ ಪಾದರಕ್ಷೆ ಧರಿಸಿ ನಾಜೂಕುಗೊಂಡ ನನ್ನ ಕಾಲುಗಳಿಗೆ
ನೋವನ್ನು ಔಡುಗಚ್ಚಿ ಸಹಿಸಿಕೊಂಡೆ.

ಸುಳಿಮನೆ ತೊಟ್ಟಿಯಲ್ಲಿ ಮಳೆ (16-05-2009)

ಅಂತೂ, ಸೊಪ್ಪಿನ ಹಟ್ಟಿಯ ಗೊಬ್ಬರ ಖಾಲಿಮಾಡಿದ್ದಾಯಿತು.
ಹಠದಿಂದ ಇನ್ನೂರು ಚಿಲ್ಲರೆ ದೊಡ್ಡ ಬುಟ್ಟಿ ಹಟ್ಟಿ ಗೊಬ್ಬರವನ್ನು ಏಕಾಂಗಿಯಾಗಿ ಆ ದಿನ ಹೊತ್ತು ಗದ್ದೆಗೆ ಹಾಕಿಯೇ ಬಿಟ್ಟಿದ್ದೆ!
"ಗದ್ದೆ ಸಾಗುವಳಿಯನ್ನು ಶುರುಮಾಡಿ ಸೆಗಣಿ ಗೊಬ್ಬರಕ್ಲ್ಕೆ ಅಂಜಿದೊಡೆ ಎಂತಯ್ಯಾ?" - ಅಂತ ಒಂದು ಅಣಕು ಪದ್ಯ ರಚಿಸಿ ಗಟ್ಟಿಯಾಗಿ ಹಾಡಿದೆ.
ಚೀಂಪ ನನ್ನ ರಾಗವನ್ನು ಅಪ್ಪಿ ತಪ್ಪಿ ಕೇಳಿದ್ದರೆ ಅಂದೇ ರಾಜೀನಾಮೆ ಕೊಟ್ಟು ಓಡಿಯೇ ಹೋಗುತ್ತಿದ್ದ!
ಕೆಲಸ ಮುಗಿದ ಕೂಡಲೇ ನದಿಗೆ ಹಾರಿ ಮಿಂದೆ! ಮೈ ಮೇಲಿನ ಖಾಕಿ ಚಡ್ಡಿಗೂ ಸರಾಗವಾಗಿ ಸೋಪ್ ಹಾಕಿ, ವಾಸನೆ ಹೋಗುವ ತನಕ ನೊರೆ ಎಬ್ಬಿಸಿದೆ! ಅದುವರೆಗೆ ನನಗೆ ಬಟ್ಟೆ ಒಗೆದು ಗೊತ್ತಿರಲಿಲ್ಲ! ಆ ದಿನಗಳಲ್ಲಿ ಬಟ್ಟೆ ಧರಿಸಿ ನೀರಿಗೆ ಇಳಿದು ಅವನ್ನು ಕ್ಲೀನ್ ಆಗುವತನಕ ಲೈಫ್ ಬಾಯ್ ಸೋಪ್ ಹಾಕಿ ತೊಳೆಯುತ್ತಿದ್ದೆ! ಇಂದೂ ಕೈಯ್ಯಲ್ಲಿ ಬಟ್ಟೆ ಒಗೆಯ ಬೇಕಾದಾಗ ಹೀಗೆಯೇ ಮಾಡುತ್ತೇನೆ. ಇತ್ತೀಚೆಗೆ ನನ್ನ ಶ್ರೀಮತಿ ಸರೋಜಮ್ಮನ ’ಬಾಷ್’ ವಾಶಿಂಗ್ ಮಷೀನ್ ಬಳಸಲು ಕಲಿತಿದ್ದೇನೆ!
ಒಮ್ಮೆಗೇ ಹಸಿವು ಕಾಡಿತು. ಅಡುಗೆ ಮಾಡಲು ಹಸಿವು ಬಿಡಲಿಲ್ಲ!
ಅವಲಕ್ಕಿಯ ದೊಡ್ದ ಅಲ್ಯೂಮಿನಿಯಂ ಡಬ್ಬಕ್ಕೇ ಮನೆಯಲ್ಲಿದ್ದ ಎಲ್ಲಾ ಮೊಸರು ಸುರಿದು ಉಪ್ಪು ಹಾಕಿ ಕಬಳಿಸಿಬಿಟ್ಟೆ.! ಹಸಿವಿನ ರಾಕ್ಷಸ ತಣ್ಣಗಾದ!
ಕೊನೆಗೆ,
"ಇಂದು ನಾನು ಮಣ್ಣಿನ ದಾಸನಾದೆ!" - ಅಂತ ಸ್ವಲ್ಪ ಹೆಮ್ಮೆ ಅನ್ನಿಸಿತು.
ಆ ದಿನದಿಂದ ಹಟ್ಟಿಯ ಗೊಬ್ಬರ ಎಂದಿಗೂ ನನಗೆ "ಅಹಸ್ಯ ಅಥವಾ ವಾಸನೆ" ಎಂದು ಅನ್ನಿಸುತ್ತಲೇ ಇಲ್ಲ!
ಇದು ವೃತ್ತಿಪರ ರೈತನಾದ ನನ್ನ "ಲಿವಿಂಗ್ ಕಂಡೀಶನ್!" - ಎಂದು ಒಪ್ಪಿಕೊಂಡು ಬಾಳುತ್ತಾ ಇದ್ದೇನೆ.ಈಗ ಸೆಗಣಿಯ ಬಗ್ಗೆ ಇನ್ನೊಂದು ಪ್ರಹಸನ!
ಶಿವಮೊಗ್ಗದಲ್ಲಿ ನಾವು ವಾಸ ಇರುವಾಗ ಅಂಗಳಯ್ಯನ ಕೆರೆ ಏರಿಯಾದಲ್ಲಿ ಒಂದು ಮನೆ ಒಕ್ಕಲಿನ ಸಮಾರಂಭಕ್ಕೆ ಹೋಗಲೇ ಬೇಕಾಯಿತು. ಬೆಳಗಿನ ಜಾವ ನಾಲ್ಕುಗಂಟೆಗೆ ಮನೆ ಒಕ್ಕಲು! ಪುರೋಹಿತರು "ಗೋಮಯ ತನ್ನಿ" ಎಂದರು! ಆ ಮನೆಯ ಒಬ್ಬ ವೃದ್ಧೆ ಕತ್ತಲೆಯಲ್ಲೇ ತಡಕಾಡಿ ಬೀದಿಬದಿಯಲ್ಲಿದ್ದ ಗೋಮಯ ಹುಡುಕಿ ತಂದರು. ಪುರೋಹಿತರು ಅದನ್ನು ನೀರು ಹಾಕಿ ಕಲಸುತ್ತಾ ಇದ್ದಾಗ ಮುಖ ಸಿಂಡರಿಸಿ “ಥತ್! ಗೋಮಯ ಕೇಳಿದರೆ ಕತ್ತೆಯ ಲದ್ದಿ ಯಾಕೆ ತಂದಿರಿ?" ಎಂದು ಆ ಹಿರಿಯರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಾ ಬೆಳಗಿನ ತನಕ ಸ್ನಾನ ಮಾಡಿದರು!
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಎರಡು ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ
(ಚಿತ್ರಗಳು: ಲೇಖಕರವು)

Saturday, August 01, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 21

ರಮೇಶ ಐರನ್ ಮಾಡಿ ‘ಮಗ್ಗಲುಚ್ಚೆ’ ಎಂಬ ಅಡ್ಡ ಹೆಸರು ಪಡೆದಿದ್ದು
ನಮ್ಮ ಹಾಸ್ಟೆಲ್ಲಿನಲ್ಲಿ ನನ್ನ ತರಗತಿಯವನೇ ಆದ ‘ಆನೆಕೆರೆ’ ಎಂಬ ಹುಡುಗನಿದ್ದ. ನಾಲ್ವರು ರಮೇಶ ಎಂಬುವವರು ಇದ್ದುದರಿಂದ ಅವರವರ ಊರಿನ ಹೆಸರಿನಿಂದ ಅವರನ್ನು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದವು. ಆನೆಕೆರೆ ರಮೇಶನನ್ನು ‘ಆನೆಕೆರೆ’ ಎಂದು. ಕೆರೆಗಳ್ಳಿ ರಮೇಶನನ್ನು ‘ಕೆರೆಗಳ್ಳಿ’ ಎಂದು, ಸಿಂಗಾಪುರದ ರಮೇಶನನ್ನು ಆತ ಕುಳ್ಳಗಿದ್ದುದರಿಂದ ‘ಕುಳ್ಳ ರಮೇಶ’ ಎಂದು ಕರೆಯುವದು ರೂಢಿಯಾಗಿತ್ತು. ತರಬೇನಹಳ್ಳಿಯವನಾದ ರಮೇಶನನ್ನು, ಪಾಪ ಪೂರ್ತಿ ಹೆಸರೂ ಕರೆಯದೆ, ಕೇವಲ ‘ತರಬೇ’ ಎಂದು ಕರೆಯುತ್ತಿದ್ದವು. ಕೆಲವೊಮ್ಮೆ ‘ರಾಮಿ’ ಎಂಬ ತ್ರಿಶಂಕು ಹೆಸರಿನಿಂದಲೂ ಆತನನ್ನು ಕರೆದು ಗೋಳುಗುಟ್ಟಿಸುತ್ತಿದ್ದೆವು. ಈ ಆನೆಕೆರೆ ಎಂಬ ರಮೇಶನಿಗೆ ಮಗ್ಗಲುಚ್ಚೆ ಮತ್ತು ಇಪ್ಪತ್ತು ಇಡ್ಲಿ ಎಂಬ ಅಡ್ಡ ಹೆಸರುಗಳೂ ಇದ್ದವು! ಅದರಲ್ಲೂ ಈ ಮಗ್ಗಲುಚ್ಚೆ ಎಂಬ ಹೆಸರು ಆತನಿಗೆ ಪ್ರಾಪ್ತವಾಗಿದ್ದು ಒಂದು ವಿಶೇಷ ಸಂದರ್ಭದಲ್ಲಿ.
ಹಾಸ್ಟೆಲ್ಲಿನಲ್ಲಿದ್ದ ನಮಗೆಲ್ಲಾ ನಮ್ಮ ಬಟ್ಟೆಗಳನ್ನು ಐರನ್ ಮಾಡಿಸಿಕೊಂಡು ಹಾಕಿಕೊಳ್ಳಬೇಕೆಂಬ ಚಪಲ. ಆದರೆ ಅಲ್ಲಿ ಯಾರೂ ಧೋಬಿಗಳಿರಲಿಲ್ಲ. ಯಾರ ಬಳಿಯೂ ಐರನ್ ಬಾಕ್ಸ್ ಕೂಡಾ ಇರಲಿಲ್ಲ. ವಾರ್ಡನ್ ಮೊದಲಾದವರು ಚನ್ನರಾಯಪಟ್ಟಣಕ್ಕೆ ಹೋದಾಗ ತಮ್ಮ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಐರನ್ ಮಾಡಿಸಿಕೊಂಡು ಬರುತ್ತಿದ್ದರು. ಆದು ನಮಗೆ ಅತ್ಯಂತ ದುಬಾರಿಯಾದ ಕೆಲಸವಾದ್ದರಿಂದ ನಾವು ಕೆಲವೊಂದು ಅಡ್ಡಮಾರ್ಗಗಳನ್ನು ಶೋಧಿಸಿಕೊಂಡಿದ್ದೆವು. ಅದರಲ್ಲಿ ಅತಿ ಸುಲಭ ಮಾರ್ಗವೆಂದರೆ, ಒಂದು ತಂಬಿಗೆಯಲ್ಲಿ ಕುದಿಯುವ ನೀರನ್ನು ತುಂಬಿಕೊಂಡು ನಮ್ಮ ಬಟ್ಟೆಯ ಮೇಲೆ ತಂಬಿಗೆಯಿಂದ ಉಜ್ಜುವುದು! ಇನ್ನೊಂದು, ನಮಗೆ ಊಟ ಮಾಡಲು ಕೊಟ್ಟಿದ್ದ ತಟ್ಟೆಯಲ್ಲಿ ಕೆಂಡವನ್ನು ತುಂಬಿಕೊಂಡು ಅದರಿಂದ ಬಟ್ಟೆಯನ್ನು ಉಜ್ಜಿಕೊಳ್ಳುವುದು! ಮೊದಲು, ಈ ಎರಡನೇ ಮಾರ್ಗವನ್ನು ಶೋಧಿಸಿದವರು, ಹೆಚ್ಚು ಕೆಂಡ ಹಾಕಿಕೊಂಡು ಬಟ್ಟೆಯನ್ನು ಸುಟ್ಟುಕೊಂಡಿದ್ದರಿಂದ ನಂತರದವರು ಸ್ವಲ್ಪಸ್ವಲ್ಪ ಕೆಂಡ ಮಾತ್ರ ಹಾಕಿಕೊಳ್ಳುತ್ತಿದ್ದೆವು. ಇವೆರಡೂ ನಾವೆಲ್ಲರೂ ಸಾಮಾನ್ಯವಾಗಿ ಅನುಸರಿಸುತ್ತಿದ್ದ ಮಾರ್ಗಗಳಾಗಿದ್ದವು.
ಈ ಆನೆಕೆರೆ ಅರ್ಥಾತ್ ಆನೆಕೆರೆ ರಮೇಶ ಐರನ್ ಸಮಸ್ಯೆಗೆ ಒಂದು ಹೊಸ ಮಾರ್ಗವನ್ನು ಶೋಧಿಸಿದ್ದ. ಅದೆಂದರೆ ರಾತ್ರಿ ಮಲಗುವಾಗ ಐರನ್ ಮಾಡಬೇಕಾದ ಬಟ್ಟೆಯನ್ನು ತನ್ನ ಹಾಸಿಗೆಯ ಕೆಳಗೆ ಹಾಕಿಕೊಂಡು ಮಲಗುತ್ತಿದ್ದ. ಹಾಸಿಗೆಯೆಂದರೆ ಅದು ದಪ್ಪ ಹಾಸಿಗೆಯಲ್ಲ. ಒಂದು ಗೋಣೀತಾಟು, ಅದರ ಮೇಲೊಂದು ಜಮಖಾನ, ಅದರ ಮೇಲೆ ಎರಡು ಬೆಡ್‌ಸ್ಪ್ರೆಡ್‌ಗಳು ಹೀಗೆ ಹಾಸಿಕೊಳ್ಳಲು ನಾಲ್ಕು, ಹೊದೆಯಲು ಒಂದು ಉಲ್ಲನ್ ರಗ್ ಮತ್ತು ಒಂದು ದಿಂಬು. ಇವಿಷ್ಟೂ ಹಾಸ್ಟೆಲ್ಲಿನಿಂದಲೇ ನಮಗೆ ಒದಗಿಸಲ್ಪಟ್ಟಿದ್ದವು. ಇವುಗಳಲ್ಲಿ ಮೇಲಿನ ಎರಡು ಬೆಡ್‌ಸ್ಪ್ರೆಡ್ ಮತ್ತು ಕೆಳಗಿನ ಜಮಖಾನದ ನಡುವೆ ಐರನ್ ಮಾಡಬೇಕಾದ ಷರ್ಟ್ ಅಥವಾ ಫ್ಯಾಂಟನ್ನು ನೆರಿಗೆಯಿಲ್ಲದಂತೆ ಹಾಸಿ ಮಲಗಿಕೊಳ್ಳುತ್ತಿದ್ದ. ಬೆಳಿಗ್ಗೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಐರನ್ ಮಾಡಿದಂತೆಯೇ ಆ ಬಟ್ಟೆಗಳು ಕಾಣುತ್ತಿದ್ದವು. ಆದರೆ ಆತನ ಈ ಪ್ರಯೋಗ ಕೇವಲ ಒಂದೆರಡು ವಾರದಲ್ಲಿ ಅವನಿಂದಲೇ ಬಂದ್ ಆಯಿತು!

ಒಂದು ದಿನ ಹೀಗೆ ಪ್ಯಾಂಟ್-ಷರ್ಟ್ ಎರಡನ್ನೂ ಹಾಸಿಗೆಯ ನಡುವೆ ಸೇರಿಸಿಕೊಂಡು ಮಲಗಿದ್ದ ಆನೆಕೆರೆಯು, ನಡುರಾತ್ರಿಯಲ್ಲಿ ನಿದ್ದೆಯಲ್ಲಿದ್ದಾಗಲೇ ಅವನಿಗೆ ಗೊತ್ತಿಲ್ಲದೆ ಉಚ್ಚೆ ಹುಯ್ದುಕೊಂಡುಬಿಟ್ಟಿದ್ದ! ಬೆಳಿಗ್ಗೆ ಎದ್ದು ಆತ ಐರನ್ ಆಗಿರುವ ತನ್ನ ಫ್ಯಾಂಟ್ ಷರ್ಟ್‌ನ್ನು ಬೇರೆಯವರಿಗೆಲ್ಲಾ ತೋರಿಸುವ ಸಂಭ್ರಮದಲ್ಲಿ ಆತ ಉಚ್ಚೆ ಹುಯ್ದುಕೊಂಡಿದ್ದು ಎಲ್ಲರಿಗೂ ಗೊತ್ತಾಯಿತು. ‘ತಾನು ಉಚ್ಚೆ ಹುಯ್ದುಕೊಂಡಿದ್ದಲ್ಲವೆಂದೂ, ರಾತ್ರಿ ತಾನು ಮಠದ ಪೌಳಿಯ ಬಳಿ ಉಚ್ಚೆ ಮಾಡಿಯೇ ಬಂದು ಮಲಗಿದ್ದೆ’ ಎಂದೂ ವಾದಿಸಿದ. ಆದರೆ ಆತ ಹಾಗೆ ಪೌಳಿಯ ಬಳಿ ಉಚ್ಚೆ ಮಾಡಿದ್ದು ಕನಸಿನಲ್ಲಿ ಎಂಬುದನ್ನು ಒಪ್ಪಲು ಸಿದ್ಧನಿರಲಿಲ್ಲ. ಮಹಾನ್ ಪುಕ್ಕಲನಾಗಿದ್ದ ಆತ ಮಠದ ಪೌಳಿಯವರೆಗೂ ಹೋಗಿ ಉಚ್ಚೆ ಹುಯ್ದು ಬರುವುದು ಸಾಧ್ಯವೇ ಇರಲಿಲ್ಲ. ಕನಸ್ಸಿನಲ್ಲಿ ಪೌಳಿಯ ಬಳಿ ಉಚ್ಚೆ ಹುಯ್ಯುತ್ತಿದ್ದ ಆತ ತನ್ನ ಹಾಸಿಗೆಯ ಮೇಲೆಯೇ ಹುಯ್ದುಕೊಂಡುಬಿಟ್ಟಿದ್ದ. ಅಂದಿನಿಂದ ಆತನಿಗೆ ‘ಮಗ್ಗಲುಚ್ಚೆ’ ಎಂಬ ಅಡ್ಡ ಹೆಸರು ಅಂಟಿಕೊಂಡುಬಿಟ್ಟಿತ್ತು. ಒಮ್ಮೊಮ್ಮೆ, ಆತನ ಮೇಲೆ ಕೋಪ ಬಂದಾಗ, ಹಾಸ್ಟೆಲ್ಲಿನ ವಾರ್ಡನ್ ಸಹ ‘ಮಗ್ಗಲುಚ್ಚೆ’ ಎಂದು ಬಯ್ದಿದ್ದಿದೆ!
ಇನ್ನು ಅವನಿಗೆ ‘ಇಪ್ಪತ್ತು ಇಡ್ಲಿ’ ಎಂದು ಅಡ್ಡ ಹೆಸರು ಬಂದಿದ್ದು ಹೀಗೆಯೇ ಆತ ಮಾಡಿಕೊಂಡ ಎಡವಟ್ಟಿನಿಂದಾಗಿ. ಅಷ್ಟೇನು ಭಾರೀ ಆಳಲ್ಲದ ಆತ ಇನ್ನೂ ಆರನೇ ಕ್ಲಾಸ್ ಓದುವ ಚಿಕ್ಕ ಹುಡುಗನಂತೆ ಕಾಣುತ್ತಿದ್ದ. ಆದರೆ ಆತ ತಿನ್ನಲು ಕುಳಿತರೆ ದೊಡ್ಡವರು ತಿನ್ನುವಂತೆ ಎರಡ್ಮೂರು ಮುದ್ದೆ, ತಟ್ಟೆ ತುಂಬಾ ಅನ್ನ ಎಲ್ಲವನ್ನೂ ಬಾರಿಸುತ್ತಿದ್ದ. ಹಾಗೆ ಹೆಚ್ಚು ತಿಂದಿದ್ದ ದಿನ ಆತನ ಹೊಟ್ಟೆ ಒಂದು ಕಡೆ ದಪ್ಪವಾದಂತೆ ಕಂಡು ನಾವು ಅವನಿಗೆ ‘ನಿನ್ನ ಹೊಟ್ಟೆ ಒಡೆದು ಹೋಗುತ್ತದೆ. ನೋಡುತ್ತಿರು’ ಎಂದು ತಮಾಷೆ ಮಾಡುತ್ತಿದ್ದೆವು. ಸುಬ್ಬೇಗೌಡ ಎಂಬ ಹುಡುಗನಿಗೂ ಇವನಿಗೂ ಯಾವ್ಯಾವುದಕ್ಕೋ ಮಾತು ಬೆಳೆದು, ಅದು ಇಪ್ಪತ್ತು ಇಡ್ಲಿ ತಿನ್ನುವ ಪಂದ್ಯಕ್ಕೆ ಎಡೆ ಮಾಡಿಕೊಟ್ಟಿತ್ತು. ಆನೆಕೆರೆ ಇಪ್ಪತ್ತು ಇಡ್ಲಿ ತಿನ್ನುತ್ತಿದ್ದನೋ ಏನೋ? ಆದರೆ ಸುಬ್ಬೇಗೌಡನಿಗೆ ಅವನ ಮಾತಿನ ಮೇಲೆ ನಂಬಿಕೆಯಿರಲಿಲ್ಲ. ಆತ ಅಡುಗೆ ಭಟ್ಟ ಅಪ್ಪಣ್ಣನನ್ನು ಸಾಕ್ಷಿಯಾಗಿರಿಸಿಕೊಂಡು ಬೆಟ್ ಕಟ್ಟಿಯೇ ಬಿಟ್ಟ. ಕೇವಲ ಇಪ್ಪತ್ತು ರೂಪಾಯಿ ಬೆಟ್ ಅಷ್ಟೆ. ಆನೆಕೆರೆ ಗೆದ್ದರೆ ಇಡ್ಲಿ ದುಡ್ಡನ್ನು ಸುಬ್ಬ ಕೊಡಬೇಕಾಗಿತ್ತು. ಸೋತರೆ ಆನೆಕೆರೆ ಕೊಡಬೇಕಾಗಿತ್ತು.

ಸರಿ ಒಂದು ಭಾನುವಾರ ಬೆಳಿಗ್ಗೆ ಮಂಜಣ್ಣನ ಹೋಟೆಲಿನಿಂದ ಇಪ್ಪತ್ತು ಬಿಸಿ ಬಿಸಿ ಇಡ್ಲಿ ತಂದು ಮಠದ ಹಿಂಬದಿಗಿದ್ದ ಕಲ್ಬಾವಿಯ ಬಳಿ ಸೇರಿದ್ದರು. ಆತ ತಿನ್ನುತ್ತಾನೆ ಅಥವಾ ಇಲ್ಲ ಎಂದು ಬೇರೆ ಕೆಲವರೂ ಅಷ್ಟಿಷ್ಟು ಬೆಟ್ ಕಟ್ಟಿಕೊಂಡಿದ್ದರು. ಸುಮಾರು ಇಪ್ಪತ್ತು ಮೂವತ್ತು ಹುಡುಗರ ನಡುವೆ ರಾಶಿಯಾಗಿ ಬಿದ್ದಿದ್ದ ಇಪ್ಪತ್ತು ಇಡ್ಲಿ, ಚಟ್ನಿಯ ಮುದ್ದೆ, ಕುಡಿಯಲು ನೀರು ಎಲ್ಲವೂ ಅಣಿಯಾಗಿತ್ತು. ಇಪ್ಪತ್ತು ಎಂಬ ಸಂಖ್ಯೆ ರಮೇಶನಿಗೆ ಸಣ್ಣದಾಗಿ ಕಂಡು ಒಪ್ಪಿಕೊಂಡಿದ್ದನೋ ಏನೂ? ಆದರೆ ಆ ಇಡ್ಲಿಯ ರಾಶಿ ನೋಡಿ ನಮಗೇ ಗಾಬರಿಯಾಯಿತು.
ಆತ ತಿನ್ನಲು ಪ್ರಾರಂಭಿಸಿ ಹತ್ತು... ಹನ್ನೆರಡು... ಹದಿನೈದು ಇಡ್ಲಿಗಳನ್ನು ಸರಾಗವಾಗಿಯೇ ಮುಗಿಸಿದ. ಇನ್ನೇನು ಐದೇ ಇಡ್ಲಿಗಳಲ್ಲವೆ? ಆತ ಗೆಲ್ಲುವುದು ಗ್ಯಾರಂಟಿ ಎಂದು ಆತನ ಪರವಾಗಿ ಬೆಟ್ ಕಟ್ಟಿದ್ದವರೆಲ್ಲಾ ಖುಷಿಯಾಗಿದ್ದರು. ನಂತರ ಒಂದು ಇಡ್ಲಿ ತಿನ್ನುವಷ್ಟರಲ್ಲಿ ಆತನ ತಿನ್ನುವ ವೇಗಕ್ಕೆ ಕಡಿವಾಣ ಬಿತ್ತು. ಬಿಕ್ಕಳಿಕೆ ಮೇಲಿಂದ ಮೇಲೆ ಬರಲಾರಂಭಿಸಿದವು. ನೀರು ಕುಡಿದರೆ ತಿನ್ನಲಾಗುವುದಿಲ್ಲವೆಂದೋ ಏನೋ ಆತ ನೀರು ಕುಡಿದೇ ಇರಲಿಲ್ಲ. ತಡೆದು ತಡೆದು ಆತ ಇನ್ನೂ ಎರಡು ಇಡ್ಲಿ ಮುಗಿಸಿದ. ನಂತರ ಸ್ವಲ್ಪ ನೀರು ಕುಡಿದು, ಸುಧಾರಿಸಿಕೊಂಡು ಮತ್ತೆ ಶುರುವಿಟ್ಟುಕೊಂಡ. ಹತ್ತೊಂಬತ್ತು ಇಡ್ಲಿಯೂ ಮುಗಿದವು. ಉಳಿದ ಒಂದರಲ್ಲಿ ಅರ್ಧವೂ ಖಾಲಿಯಾಯಿತು. ಆತ ಎಲ್ಲವನ್ನೂ ಬಾಯಿಯಲ್ಲೇ ತುರುಕಿಕೊಂಡಂತೆ ಕಾಣುತ್ತಿದ್ದ. ಉಳಿದರ್ಧದಲ್ಲಿ ಅರ್ಧ ಭಾಗವೂ ಖಾಲಿಯಾಯಿತು! ಇತ್ತ ಸುಬ್ಬನ ಮುಖ ಕಪ್ಪಿಟ್ಟಿತ್ತು. ಇನ್ನೇನು ಆ ತುತ್ತನ್ನು ಎತ್ತಿ ಬಾಯಿಗೆ ಹಾಕಿ ನುಂಗಿದರೆ ಸಾಕು, ಆತ ಗೆದ್ದುಬಿಡುತ್ತಿದ್ದ. ಹುಡುಗರೆಲ್ಲಾ ಕೂಗಿ ಕೂಗಿ ಹುರಿದುಂಬಿಸುತ್ತಿದ್ದರು. ಆತ ಒಂದೆರಡು ಕ್ಷಣ ತಡೆದು ತಿಂದಿದ್ದರೆ ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತೋ ಏನೋ. ಆದರೆ ಹುಡುಗರು ಹುರಿದುಂಬಿಸುತ್ತಿದ್ದುದರಿಂದ ಉತ್ತೇಜನಗೊಂಡು ಅದನ್ನು ಎತ್ತಿ ಬಾಯಿಯ ಬಳಿಗೆ ಕೈ ತಂದಿದ್ದನೋ ಇಲ್ಲವೋ, ‘ವ್ಯಾಕ್’ ಎಂದು ವಾಂತಿ ಮಾಡಿಬಿಟ್ಟ! ಅದನ್ನು ನಿರೀಕ್ಷಿಸಿರದ, ಅವನ ಮುಂದೆ ನಿಂತು ಹುರಿದುಂಬಿಸುತ್ತಿದ್ದವರ ಮೇಲೆಲ್ಲಾ ವಾಂತಿಯ ಸುರಿಮಳೆಯಾಯಿತು. ಅವರು ಎಚ್ಚೆತ್ತುಕೊಂಡು ಹಿಂದೆ ಸರಿಯುವುದರಲ್ಲಿ ಮತ್ತೊಮ್ಮೆ ‘ವ್ಯಾಕ್’ ಎಂದು ಮೊದಲಿಗಿಂತ ಜೋರಾಗಿ ಹಾರಿಸಿಬಿಟ್ಟ! ವಾಂತಿ ಮಾಡುವಾಗಿನ ಕಷ್ಟದಿಂದಲೋ, ಪಂದ್ಯದಲ್ಲಿ ಸೋತುದ್ದರಿಂದಲೂ ಆತನ ಮೂಗು ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ಸುಬ್ಬ ಮಾತ್ರ ಗೆದ್ದ ಖುಷಿಯಲ್ಲಿದ್ದರಿಂದ ರಮೇಶನ ಸ್ಥಿತಿಯನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಎರಡೇ ಬಾರಿ ‘ವ್ಯಾಕ್’ ಎಂದು ಅರ್ಧ ಗಂಟೆಯಿಂದ ಹೊಟ್ಟೆಗೆ ತುಂಬಿಕೊಂಡಿದ್ದ, ಇಡ್ಲಿ, ಚಟ್ಣಿ ಎಲ್ಲವನ್ನೂ ಹೊರಹಾಕಿದ್ದ! ಪಂದ್ಯ ಸೋತರೂ ಆತನಿಗೆ ‘ಇಪ್ಪತ್ತು ಇಡ್ಲಿ’ ಎಂಬ ಅಡ್ಡ ಹೆಸರು ಮಾತ್ರ ಕೊನೆಯವರೆಗೂ ಅಂಟಿಕೊಂಡಿತ್ತು!
ಚಿತ್ರಕೃಪೆ: ಅಂತರಜಾಲ