Friday, February 27, 2009

ಭಯೋತ್ಪಾದನೆ ವಿರೋಧಿ ಜಾಗೃತಿ ಅಭಿಯಾನವನ್ನು ವಿರೋಧಿಸುವುದು ಏಕೆ?

ಕರ್ನಾಟಕ ರಾಜ್ಯ ಸರ್ಕಾರವು ‘ಭಯೋತ್ಪಾದನೆ ವಿರೋಧಿ ಜಾಗೃತಿ ಅಭಿಯಾನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಶ್ವವಿದ್ಯಾಲಯಗಳು ಮತ್ತು ಶಾಲಾಕಾಲೇಜುಗಳನ್ನೇ ವೇದಿಕೆಯಾಗಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ ಎಂದು ಉನ್ನತ ಶಿಕ್ಷಣ ಸಚಿವರೂ ಮುಖ್ಯಮಂತ್ರಿಗಳೂ ಒಟ್ಟಾರೆ ಸರ್ಕಾರವೇ ಮತ್ತೆ ಮತ್ತೆ ಅದನ್ನು ಸಪಷ್ಟಪಡಿಸುತ್ತಿದೆ. ಆದರೂ ಅಭಿಯಾನದ ಘೋಷಣೆಯಾದ ದಿನದಿಂದಲೇ ಒಂದು ವರ್ಗದಿಂದ ಇದಕ್ಕೆ ತೀವ್ರತರವಾದ ವಿರೋಧ ವ್ಯಕ್ತವಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಪಕ್ಷಗಳು ಅದನ್ನು ವಿರೋಧಿಸುತ್ತಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಪರಿಸರವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬುದು ಅದರ ಆರೋಪ. ಹಾಗೇ ಹಲಕೆಲವು ವಿಚಾರವಾದಿಗಳು ಭಯೋತ್ಪಾದನಾ ವಿರೋಧಿ ಅಭಿಯಾನ ಒಂದು ವರ್ಗದವರನ್ನು ಗುರಿಯಾಗಿರಿಸಿಕೊಂಡಿದೆ ಎಂದೂ ಆರೋಪ ಮಾಡಿದ್ದಾರೆ. ಆದೇನೇ ಇರಲಿ. ಮೇಲ್ನೋಟಕ್ಕೆ ಸರ್ಕಾರದ ಕೆಲಸ ಒಳ್ಳೆಯ ಕೆಲಸವಾಗಿ ಕಂಡರೆ ಅದು ನಮ್ಮ ತಪ್ಪಲ್ಲ. ಆದರೆ ಅದರ ಬಗೆಗಿರುವ ವಿರೋಧಗಳನ್ನು - ರಾಜಕೀಯಕ್ಕಾಗಿ ವಿರೋಧಿಸುವುದನ್ನು ಹೊರತುಪಡಿಸಿ - ಗಮನಿಸಿದರೆ ಅವುಗಳಲ್ಲಿ ಸತ್ಯಾಂಶವಿಲ್ಲದಿಲ್ಲ. ಈ ಸತ್ಯಾಂಶವೇನು? ಅದರ ಪರಿಣಾಮವೇನು ಎಂಬುದನ್ನು ಒಂದು ಉದಾಹರಣೆಯಿಂದ ತಿಳಿದುಕೊಳ್ಳಬಹುದು. ಭಯೋತ್ಪಾದನಾ ವಿರೋಧಿ ಅಭಿಯಾನದ ಒಂದು ಕಾರ್ಯಕ್ರಮವನ್ನು ತೀರಾ ಹತ್ತಿರದಿಂದ ಗಮನಿಸುವ ಅವಕಾಶ ನನಗೆ ಲಭಿಸಿತ್ತು. ಒಂದು ವಿದ್ಯಾಸಂಸ್ಥೆಯಲ್ಲಿ, ಅಭಿಯಾನದ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಎಡಸಿಕೊಳ್ಳಲಾಯಿತು. ಅದರಲ್ಲಿ ಪ್ರಬಂಧ ರಚನೆಯೂ ಒಂದು. ‘ಭಯೋತ್ಪಾದನೆಯ ನಿಗ್ರಹದಲ್ಲಿ ವಿದ್ಯಾರ್ಥಿಗಳ ಪಾತ್ರ’ ಎಂಬುದು ವಿಷಯ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪ್ರಬಂಧಗಳನ್ನು ರಚಿಸಬಹುದಾಗಿತ್ತು. ಹಾಗೆ ರಚನೆಯಾದ ಪ್ರಬಂದಗಳಲ್ಲಿ ಮೂರಕ್ಕೆ ಬಹುಮಾನ ನೀಡುವುದು ಸಂಘಟಕರ ಉದ್ದೇಶ. ಹಾಗೆ, ಮೂರನೇ ಬಿ.ಕಾಂ. ವಿದ್ಯಾರ್ಥಿಯೊಬ್ಬಳಿಂದ ರಚಿತವಾಗಿ, ಮೊದಲನೇ ಬಹುಮಾನ ಪಡೆದ ಒಂದು ಪ್ರಬಂಧವನ್ನು ಓದುವ ಅವಕಾಶ ನನಗೆ ಲಭಿಸಿತು. ಓದಿದಿ ತಕ್ಷಣ ನನಗೆ ಶಾಕ್ ಆಯಿತು. ಪ್ರಬಂಧದ ಭಾಷೆಯೂ ಅಷ್ಟಕ್ಕಷ್ಟೆ. ವಿದ್ಯಾರ್ಥಿಗಳ ಪಾತ್ರವನ್ನು ಕುರಿತ ನಾಲ್ಕೈದು ವಾಕ್ಯಗಳನ್ನು ಬಿಟ್ಟರೆ, ನಾಲ್ಕುಪುಟಗಳ ಪ್ರಬಂಧದಲ್ಲಿ ಉಳಿದ ವಿಷಯವೆಲ್ಲವೂ ಒಂದು ದೇಶವನ್ನು, ಒಂದು ಸಮುದಾಯವನ್ನು ನಿಂದಿಸುವುದಕ್ಕೇ ಮೀಸಲಾಗಿತ್ತು. ಕೆಲವು ಉದಾಹರಣೆಗಳನ್ನು ನೋಡಿ. (ಎಡಿಟ್ ಮಾಡಿಲ್ಲ)

  • ಭಯೋತ್ಪಾದನೆ ಎಂಬುದು ದೇಶಾದ್ಯಂತ ತನ್ನ ಅಟ್ಟಹಾಸವನ್ನು ಪ್ರದರ್ಶಿಸುತ್ತಿದೆ. ಹೀಗೆ ಪ್ರದರ್ಶಿಸುತ್ತಿರುವ ಅಟ್ಟ ಹಾಸವು, ಪ್ರಾರಂಭವಾದದ್ದು ಮೊದಲು ‘ಪಂಜಾಬ್’ನಲ್ಲಿ. ಇಲ್ಲಿ ಜಾಗ ಹೂಡಿಕೊಂಡ ಭಯೋತ್ಪಾದಕರು, ಯಾವುದೇ ಪರಿಣಾಮವನ್ನು ಕಂಡು ಕೊಳ್ಳದ ಭಯೋತ್ಪಾದಕರು ‘ಕಾಶ್ಮೀರವನ್ನು ಆರಿಸಿಕೊಂಡರು.
  • ಭಯೋತ್ಪಾದನೆ ಎಂದಕೂಡಲೇ ಪಾಕಿಸ್ತಾನದ ಜನಕನಾದ ‘ಮೊಹಮದ್ ಆಲಿ ಜಿನ್ನಾ’ ಎಂಬುವವನು “ಈಗ ನಗುನಗುತ್ತಾ ಪಾಕಿಸ್ತಾನವನ್ನು ತೆಗೆದುಕೊಂಡೆವು ಮುಂದೆ ‘ಖಡ್ಗ ಮತ್ತು ಬಂದೂಕಿ’ನಿಂದ ಭಾರತವನ್ನು ನಮ್ಮ ವಶಕ್ಕೆ ಪಡೆಯುತ್ತೇವೆ” ಎಂಬ ಮಾತು ಈಗ ಅರಿವಾಗುತ್ತಿದ್ದು, ಈಗ ಜಿನ್ಹಾನ ಮಾತುಗಳು ಅಲ್ಲಿನ ಜನರಿಗೆ ಅದರಲ್ಲೂ ಭಯೋತ್ಪಾದಕರಿಗೆ ಪ್ರೇರಣೆಯಾಗಿದೆ.
  • ಇಂತಹ ಒಂದು ಭಯೋತ್ಪಾದನೆ ಹುಟ್ಟಿದ್ದು ಮತ್ತು ನೆಲೆಯೂರಿದ್ದು ಭಾರತಕ್ಕೂ ಸೇರದ ಪಾಕಿಸ್ತಾನಕ್ಕೂ ಸೇರದ ‘ಆಜಾದ್ ಕಾಶ್ಮೀರ’ದಲ್ಲಿ.
  • ಮುಸ್ಲಿಂ ಅಲ್ಲದ ಭಾರತೀಯರನ್ನು ಕೊಂದು ‘ರೈಲು ಗೂಡ್ಸುಗಳ ಮೂಲಕ ಹೆಣಗಳನ್ನು ರವಾನಿಸಿದರು.
  • ಅದೇ ರೀತಿ ಈ ‘ಮುಸ್ಲಿಂ’ ಅಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನ ಶಿಬಿರಗಳನ್ನು ಮತ್ತು ಮದರಸಗಳಲ್ಲಿ ‘ಭಾರತ ನಮ್ಮ ಶತ್ರು ರಾಷ್ಟ್ರ, ಅಲ್ಲಿ ಅಶಾಂತಿಯನ್ನು ಹರಡಬೇಕು, ಹಾಗೂ ಅಲ್ಲಿನ ಜನರು ಭಯಭೀತರಾಗಿ ಇರಬೇಕು’ ಇಂತಹ ವಾತಾವರಣವನ್ನು ಉಂಟುಮಾಡಬೇಕೆಂಬುದೇ ಅವರ ಉದ್ದೇಶವಾಗಿದೆ.
  • ಈ ಭಯೋತ್ಪಾದಕರು ಹೆಚ್ಚಾಗಿ ಪಾಕಿಸ್ತಾನದವರೇ ಆಗಿರುತ್ತಾರೆ.

ಇಲ್ಲಿ ನನಗನ್ನಿಸುವುದು ಇಷ್ಟು.

  • ಅಭಿಯಾನ ನಡೆಸುವವರು, ಅಭಿಯಾನದ ಉದ್ಧೇಶಗಳನ್ನು ಸರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಲ್ಲ. ಅಥವಾ ಅವರು ತಿಳಿಸಿರುವ ವಿಷಯಗಳು ಒಂದು ದೇಶ ಮತ್ತು ಒಂದು ಸಮುದಾಯವನ್ನು ಮಾತ್ರ ಗುರಿಯಾಗಿರಿಸಿಕೊಂಡಿವೆ.
  • ಈ ಪ್ರಬಂಧವನ್ನು ಬರೆದ ವಿದ್ಯಾರ್ಥಿನಿಯ ಭಾಷಾ ಪ್ರಬುದ್ಧತೆಯ ಬಗ್ಗೆಯಾಗಲೀ, ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆಯಾಗಲೀ ನನ್ನ ಆಕ್ಶೇಪವಿಲ್ಲ (ಅದು ಮೌಲ್ಯಮಾಪಕರ ಅಜ್ಞಾನವನ್ನು ತೋರಿಸುತ್ತದೆ). ಆದರೆ ಪ್ರಬಂಧ ಬರೆಯಲು ಕೊಟ್ಟಿರುವ ವಿಷಯಕ್ಕೂ ಬರೆದಿರುವ ವಿಷಯಕ್ಕೂ ಯಾವುದೇ ಸಂಬಂಧವಿಲ್ಲದ ಈ ಪ್ರಬಂಧಕ್ಕೆ ಮೊದಲ ಬಹುಮಾನವನ್ನು ಕೊಟ್ಟಿರುವುದು ಎಷ್ಟು ಸರಿ?
  • ಅಥವಾ ಈ ರೀತಿಯ ಪ್ರಬಂಧಗಳನ್ನೇ ಬೆಂಬಲಿಸಬೇಕೆಂಬ ಉದ್ದೇಶವೇನಾದರೂ ಇದೆಯೇ? ಅಥವಾ ಯಾರನ್ನಾದರೂ ಮೆಚ್ಚಿಸಲು ಈ ರೀತಿಯ ಪ್ರಬಂಧಗಳನ್ನು ಪ್ರೋತ್ಸಾಹಿಸಲಾಗುತ್ತಿದೆಯೇ?
  • ವಿದ್ಯಾರ್ಥಿ ಜೀವನ ಎಂಬುದು ಚಿನ್ನದ ಸಮಯ ಎನ್ನುತ್ತಾರೆ. ಆದರೆ ಅರಳುವ ಮನಸ್ಸುಗಳಲ್ಲಿ ಈ ರೀತಿಯ ವಿಷ ಬೀಜವನ್ನು ಬಿತ್ತುವುದೇಕೆ?

ತಿಳಿದವರು ಯೋಚಿಸಬೇಕು. ಇದಕ್ಕಾಗಿಯಾದರೂ ಸರ್ಕಾರದ ಈ ಕಾರ್ಯಕ್ರಮವನ್ನು ತಿಳಿದವರು ಖಂಡಿಸಬೇಕು.

Wednesday, February 25, 2009

ಅಜ್ಜ ಹೇಳಿದ್ದ ‘ನರಿ ಪಂಚಾಯ್ತಿ ಮಾಡಿದ ಕಥೆ’ - (೩)

ಒಂದು ಊರಿನಲ್ಲಿ ಒಬ್ಬ ಅಜ್ಜ ಇದ್ದ. ಆತನಿಗೆ ಇಬ್ಬರು ಗಂಡಮಕ್ಕಳು. ಇಬ್ಬರಿಗೂ ಮದುವೆಯಾಗಿತ್ತು. ಅಜ್ಜ ಸಾಯುವಾಗ ತನ್ನ ಆಸ್ತಿಯನ್ನು ಎರಡು ಭಾಗ ಮಾಡಿ ಇಬ್ಬರಿಗೂ ಕೊಟ್ಟಿದ್ದ. ಅವನತ್ರ ಇದ್ದ ಒಂದು ಹಸು ಒಂದು ಎತ್ತನ್ನ, ಅಣ್ಣನಿಗೆ ಎತ್ತನ್ನು ತಮ್ಮನಿಗೆ ಹಸುವನ್ನು ಕೊಟ್ಟಿದ್ದ. ಇಬ್ಬರೂ ಅವರವರ ಆಸ್ತಿ ನೋಡಿಕೊಂಡು ಚೆನ್ನಾಗಿದ್ರು. ಒಂದು ದಿನ ತಮ್ಮನ ಮನಯ ಹಸು ಕರು ಹಾಕ್ತು. ಬೆಳಿಗ್ಗೆ ಹಾಲು ಕರೆದುಕೊಂಡು ತಮ್ಮನ ಹೆಂಡತಿ ಕರುವನ್ನು ಹಾಲೂಡಲು ಬಿಟ್ಟು ಒಳಗೆ ಹೋಗಿದ್ದಳು. ಅದು ಹಾಲು ಕುಡಿದು, ನೆಗೆದಾಡುತ್ತಾ, ಪಕ್ಕದ ಅಣ್ಣನ ಮನೆ ಮುಂದೆ ಕಟ್ಟಿದ್ದ ಎತ್ತಿನ ಬಳಿ ಬಂತು. ಎತ್ತಿನ ಜೊತೆ ಸುಮಾನ ಆಡುತ್ತಾ, ಅದರಿಂದ ಹಾಲು ಕುಡಿಯುತ್ತಿರುವಂತೆ ಎತ್ತಿನ ತೊಡೆಯ ಸಂದಿಗೆ ಬಾಯಿ ಹಾಕಿತ್ತು. ಆಗ ಅಲ್ಲಿಗೆ ಬಂದ ಅಣ್ಣನ ಹೆಂಡತಿ, ‘ಓ, ನನ್ನ ಮೈದುನನ ದನಿನಂಗೆ ನಮ್ಮ ದನಾನೂ ಕರು ಹಾಕಿದೆ’ ಅಂತ ತಂದು ಕೊಟ್ಟಿಗೆಗೆ ಕಟ್ಟಿದಳು. ಹೊರಗೆ ಬಂದ ತಮ್ಮನ ಹೆಂಡತಿ ಅದನ್ನು ನೋಡಿ ಕರುವನ್ನು ಬಿಡುವಂತೆ ಕೇಳಿದಳು. ಇಬ್ಬರಿಗೂ ಜಗಳ ಶುರುವಾಯಿತು. ಕರು ನನ್ನದು, ಕರು ನನ್ನದು ಅಂತ. ಅಷ್ಟರಲ್ಲಿ ಹೊಲದ ಕಡೀಗೆ ಹೋಗಿದ್ದ ಅಣ್ಣತಮ್ಮ ಬಂದ್ರು. ಜಗಳ ಇನ್ನೂ ಜೋರಾಯಿತು. ಇದು ಬಗೆಹರಿಯುವ ಜಗಳವಲ್ಲ ಅಂತ ಊರಿನ ಪಂಚಾಯಿತಿಗೆ ಕೊಟ್ರು.
ಸುತ್ತ ಹತ್ತು ಹಳ್ಳಿ ಜನ ಪಂಚಾಯ್ತಿಗೆ ಸೇರಿದ್ರು. ತಮ್ಮಂದು ಒಂದೇ ದೂರು. ನನ್ನ ದನೀನ ಕರಾನ ಅಣ್ಣನ ಹೆಂಡತಿ ಹಿಡಿದಾಕಿದ್ದಾಳೆ ಅಂತ. ಅಣ್ಣಂದು ಒಂದೇ ಉತ್ತರ, ಅದು ನನ್ನ ದನೀಂದೆ ಕರ. ಇಲ್ಲಾಂದ್ರೆ ಅದು ನನ್ನ ದನೀನಲ್ಲಿ ಏಕೆ ಹಾಲು ಕುಡೀತಿತ್ತು ಅಂತ. ಪಂಚಾಯ್ತಿಲಿದ್ದ ಮುಖಂಡ್ರೆಲ್ಲಾ ‘ಕರ ಅಣ್ಣನ ದನೀನಲ್ಲಿ ಹಾಲು ಕುಡೀತಿದ್ರಿಂದ ಅದು ಅವಂದೆ’ ಅಂತ ತೀರ್ಮಾನ ಕೊಟ್ರು. ತಮ್ಮನಿಗೆ ಬೋ ಬೇಸ್ರ ಆಯ್ತು. ಅದೇ ಬೇಸರದಲ್ಲಿ ಕಾಡಿನೊಳಗೆ ಬಂದು ಅಳುತ್ತಾ ಕೂತಿದ್ದ.
ಅಲ್ಲಿ ಒಂದು ನರಿ ಅವನ್ನ ನೋಡ್ತು. ಅದು ‘ಏನ್ರಣ್ಣ ವಿಷಯ? ಏಕ್ ಆಳ್ತಾಯಿದ್ದಿ?’ ಅಂತು. ಅದಕ್ಕೆ ಅವನು, ‘ಏನೆಂದ್ರೆ ಏನೇಳ್ಳಿ ನರಿಯಣ್ಣ’ ಅಂದು ಇಡೀ ಕಥೇನೆಲ್ಲ ಹೇಳಿದ. ಅದಕ್ಕೆ ನರಿಯಣ್ಣ ‘ಅಷ್ಟೇ ತಾನೆ, ನಾನು ಈ ಸಮಸ್ಯೇನ ಬಗೆಹರಿಸ್ತೀನಿ. ನನಗೆ ಏನು ಕೊಡ್ತೀಯ?’ ಅಂತು. ಅದಕ್ಕೆ ಅವನು ‘ಈ ಪಂಚಾಯ್ತಿ ಬಗೆಹರಿಸಿದ್ರೆ ನಿನಗೆ ಎರಡು ಮೊಟ್ಟೆಕೋಳಿ ಕೊಡ್ತೀನಿ’ ಅಂತ ಮಾತು ಕೊಟ್ಟ. ಅದಕ್ಕೆ ನರಿ ‘ಹಾಗಾದ್ರೆ, ಇವತ್ತಿನ ಸಂಜಿಕೆ ಎಲ್ಲಾರ್‍ನೂ ಸೇರ್‍ಸ್ಸು. ಪಂಚಾಯ್ತಿ ಮಡಗ್ಸು. ನಾನು ಬತ್ತೀನಿ, ಊರ್‍ನಾಗಿರೋ ನಾಯಿನೆಲ್ಲ ಕಟ್ಟಾಕ್ಸು’ ಅಂತು. ‘ಸರಿ’ ಅಂದ್ಕೊಂಡು ಬಂದ.
ತಮ್ಮ ಮತ್ತೆ ಊರೋರ್‍ನೆಲ್ಲಾ ಸೇರ್‍ಸಿದ. ನಾಯಿ ಎಲ್ಲಾ ಕಟ್ಟಾಕ್ಸಿದ. ಸಂಜೆ ಎಲ್ಲಾ ಊರು ಮುಂದೆ ಸೇರಿದ್ರು. ನರಿ ಬರೋದ್ನೆ ಕಾಯ್ತಿದ್ರು. ಎಷ್ಟೊತ್ತಾದ್ರೂ ನರಿ ಬರ್‍ಲೇ ಇಲ್ಲ. ರಾತ್ರಿ ಎಂಟಾಯ್ತು, ಹತ್ತಾಯ್ತು, ಹನ್ನೆರಡಾಯ್ತು ನರಿ ಬರ್‍ಲೇ ಇಲ್ಲ. ಎಲ್ಲಾ ತಮ್ಮನಿಗೆ ಬಯ್ಯುತ್ತಾ ಕೂತಲ್ಲೇ ತೂಕಡಿಸೋಕೆ ಶುರು ಮಾಡಿದ್ರು. ಕೊನೆಗೆ ಮಧ್ಯರಾತ್ರಿ ಕಳೆದ ಮೇಲೆ ನರಿ ನಿಧಾನವಾಗಿ ನಡಕೊಂಡು ಬಂತು. ಮುಖಂಡ ಎಲ್ಲಾ ‘ಏನ್ ನರಿಯಣ್ಣ ಇಷ್ಟೊತ್ತು ಮಾಡಿಬಿಟ್ಟೆ’ ಅಂದ್ರು ಅದಕ್ಕೆ ನರಿ ‘ಏನಂದ್ರೆ ಏನೇಳ್ಳಣ್ಣ, ಪಕ್ಕದ ಊರ್‍ನಾಗೆ ಸಮುದ್ರಕ್ಕೆ ಬೆಂಕಿ ಬಿದ್ದಿತ್ತು. ಅದನ್ನು ಆರಿಸೋಕೆ ಅಂತ ನನ್ನ ಕರೆಸಿದ್ರು. ಅದಕ್ಕೆ ನೆಲ್ಲುಲ್ಲು (ಭತ್ತದ ಹುಲ್ಲು) ಹಾಕಿ ಆರ್‍ಸಿ ಬರೋತ್ಕೆ ಇಷ್ಟೊತ್ತಾಯ್ತು’ ಅಂತು.
ಅದಕ್ಕೆ ಜನೆಲ್ಲಾ ನಗುತ್ತಾ ‘ಏನಣ್ಣ ಹಿಂಗೇಳ್ತಿ, ಸಮುದ್ರಕ್ಕೆ ಎಲ್ಲಾರ ಬೆಂಕಿ ಬೀಳೋದ್ ದಿಟವಾ? ಬಿದ್ರು ಅದನ್ನ ನೆಲ್ಲುಲ್ಲಲ್ಲಿ ಆರ್‍ಸೋದು ಸಾದ್ಯವಾ?’ ಅಂದು ಗೇಲಿ ಮಾಡಿದ್ರು.
ಅದಕ್ಕೆ ನರಿಯಣ್ಣ, ‘ಅಲ್ಲಕಣ್ರಯ್ಯಾ, ನಿಮ್ಮೂರಲ್ಲಿ ಎತ್ತು (ಗಂಡುದನ) ಕರು ಹಾಕಬಹುದಾದ್ರೆ, ಪಕ್ಕದ ಊರಲ್ಲಿ ಸಮುದ್ರಕ್ಕೆ ಬೆಂಕಿ ಬೀಳೋದ್ರಲ್ಲಿ ಏನಶ್ಚರ್ಯ’ ಅಂತು. ಆಗ ಊರಿನ ಜನಗೋಳ್ಗೆ ಎಲ್ಲಾ ಅರ್ಥ ಆಯ್ತು. ಕರೂನ ತಮ್ಮನಿಗೆ ಕೊಡಿಸಿದ್ರು. ತಮ್ಮ ನರಿಗೆ ಮಾತು ಕೊಟ್ಟಂತೆ ಎರಡು ಮೊಟ್ಟೆ ಕೋಳಿ ಇನಾಮು ಕೊಟ್ಟು, ಸುಖವಾಗಿದ್ದ.

Tuesday, February 24, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 5

ಹೆಡ್ಮಾಸ್ಟರ್ ವೆಂಕಟಪ್ಪ
ಶ್ರೀ ವೆಂಕಟಪ್ಪ ಅವರು ಹೆಡ್ಮಾಸ್ಟರಾಗಿ ಕುಂದೂರುಮಠಕ್ಕೆ ಬರುವಷ್ಟರಲ್ಲಿ ಅಲ್ಲಿಯ ಹೈಸ್ಕೂಲ್ ಅಸ್ತಿತ್ವವನ್ನೇ ಕಳೆದುಕೊಳ್ಳುವುದರಲ್ಲಿತ್ತು. ಅವರು ಬಂದು ಎರಡೇ ವರ್ಷದಲ್ಲಿ ಫಲಿತಾಂಶವನ್ನು ಎರಡಂಕಿ ದಾಟಿಸಿದರು. ಅವರ ಈ ಶ್ರಮದಿಂದಾಗಿ ಅಲ್ಲಿಗೆ ಜೂನಿಯರ್ ಕಾಲೇಜು ಬಂದಿದ್ದನ್ನು ಮೊದಲೇ ಹೇಳಿದ್ದೇನೆ. ಅವರು ಮೂಡನಹಳ್ಳಿಯಲ್ಲಿ ಒಂದು ಕೊಠಡಿ ಮಾಡಿಕೊಂಡು ವಾಸ್ತವ್ಯ ಹೂಡಿದ್ದರು. ಅವರ ಸಂಸಾರ ಹಾಸನದಲ್ಲೋ ಸಕಲೇಶಪುರದಲ್ಲೋ ಇತ್ತೆಂದು ಮಾತನಾಡುವುದನ್ನು ಕೇಳಿದ್ದೆ. ದಿನವೂ ಕುಂದೂರು ಮಠಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ನಾವು ಮಿಡ್ಲಿಸ್ಕೂಲಿಗೆ ಅದೇ ದಾರಿಯಲ್ಲಿ ಹೋಗಿಬರುತ್ತಿದ್ದುದರಿಂದ ನಮಗೂ ಅವರ ಪರಿಚಯ ಅಲ್ಪಸ್ವಲ್ಪ ಆಗಿತ್ತು. ಸಂಜೆ ಹೊತ್ತು ವಾಪಸ್ಸು ಮೂಡನಹಳ್ಳಿಗೆ ಬರುವಾಗ ಮಾತ್ರ ಅವರು ವಿರಾಮವಾಗಿ ವಾಕಿಂಗ್ ಮಾಡಿಕೊಂಡು, ಅಲ್ಲಿಲ್ಲಿ ನಿಂತು ಕೈಕಾಲು ಆಡಿಸಿಕೊಂಡು ವ್ಯಾಯಾಮ ಮಾಡಿಕೊಂಡು ಬರುತ್ತಿದ್ದರು. ನಾನು ಎಂಟನೇ ತರಗತಿಗೆ ಸೇರುವ ಮೊದಲೇ ಅವರು ‘ತುಂಬಾ ಸ್ಟ್ರಿಕ್ಟ್’ ಎಂದು ಹೆಸರುವಾಸಿಯಾಗಿದ್ದರು. ‘ತರಗತಿಯೊಳಗೆ ಮೇಷ್ಟ್ರುಗಳು ಸರಿಯಾಗಿ ಪಾಠ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಹೊರಗೆ ನಿಂತು ಕೇಳಿಸಿಕೊಳ್ಳುತ್ತಿದ್ದರು. ಮೇಷ್ಟ್ರುಗಳನ್ನು ಪ್ರತ್ಯೇಕವಾಗಿ ಕರೆದು ಬಯ್ಯುತ್ತಿದ್ದರು’ ಎಂದು ಆಗಾಗ ಹುಡುಗರು ಮಾತನಾಡಿಕೊಳ್ಳುತ್ತಿದ್ದರು.
ನಾನು ಆ ಸ್ಕೂಲಿಗೆ ಸೇರಿಕೊಂಡಾಗಲೂ ಸ್ವಂತದ್ದು ಎಂಬ ಕಟ್ಟಡ ಇರಲಿಲ್ಲ. ಮಠಕ್ಕೆ ಸೇರಿದ ಮೂರು ಹೆಂಚಿನ ಮನೆಗಳಲ್ಲಿ ಸ್ಕೂಲ್ ಮತ್ತು ಹಾಸ್ಟೆಲ್ ಎರಡೂ ನಡೆಯಬೇಕಾಗಿತ್ತು. ಒಂದು ಮನೆಯ ಹಾಲ್‌ನಲ್ಲಿ ಹಾಸ್ಟೆಲ್ ಮತ್ತು ಹಿಂಬದಿಯ ಪಡಸಾಲೆಯಲ್ಲಿ ಅಡುಗೆ ಮನೆಯಿತ್ತು. ಅದರಲ್ಲಿ ಬರೋಬ್ಬರಿ ಐವತ್ತು ಜನ ವಿದ್ಯಾರ್ಥಿಗಳಿದ್ದರು! ಅದೇ ಕಟ್ಟಡದ ತೆರೆದ ಜಗುಲಿಯಲ್ಲಿ ಒಂಬತ್ತನೇ ತರಗತಿಗೆ ಪಾಠ ಪ್ರವಚನಗಳು ನಡೆಯುತ್ತಿದ್ದವು. ಹತ್ತನೇ ತರಗತಿ ನಡೆಯುತ್ತಿದ್ದ ಮನೆಯಲ್ಲಿಯೂ ಹಿಂಬದಿಯಲ್ಲಿ ಮಠದ ಕಂಟ್ರಾಕ್ಟರ್ ಅವರ ಆಳುಗಳ ಒಂದು ಸಂಸಾರವಿತ್ತು. ಇನ್ನುಳಿದ ಒಂದು ಮನೆಯ ಪಡಸಾಲೆಯೇ ಆಫೀಸ್ ರೂಂ ಮತ್ತು ಸ್ಟಾಫ್ ರೂಮಾಗಿತ್ತು. ಅದೇ ಮನೆಯ ಹಾಲ್‌ನಲ್ಲಿ ಎಂಟನೇ ತರಗತಿಯ ಪಾಠಪ್ರವಚನಗಳು ನಡೆಯಬೇಕಾಗಿತ್ತು. ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!
ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು. ಅವರು ತರಗತಿಗೆ ಬಂದ ಮೊದಲ ದಿನವೇ ಮಾನಿಟರ್‌ನನ್ನು ಚುನಾಯಿಸುವ ಕೆಲಸ ಮಾಡಿದರು. ನಾನೂ ಸೇರಿದಂತೆ ಮೂವರು ಚುನಾವಣೆಗೆ ನಿಂತಿದ್ದವು. ಮತದಾನದ ನಂತರ ನಾನು ಇದ್ದ ಅರವತ್ತು ಮತಗಳಲ್ಲಿ ಐವತ್ತಕ್ಕು ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದೆ! ಕೇವಲ ಒಂದೇ ಗಂಟೆಯಲ್ಲಿ ಚುನಾವಣೆ ಮಾಡಿ ಫಲಿತಾಂಶವನ್ನು ಘೋಷಿಸಿದ ವೆಂಕಟಪ್ಪನವರು, ನಾನು ಮಾಡಬೇಕಾದ ಕೆಲಸದ ಪಟ್ಟಿಯನ್ನೂ ಹೇಳಿಬಿಟ್ಟರು. ಅವರು ಆಫೀಸ್ ರೂಮಿನಲ್ಲಿ ಕುಳಿತಿದ್ದಾಗ ‘ಮಾನಿಟರ್’ ಎಂದು ಕೂಗಿದೊಡನೆ ಎದ್ದು ಹೋಗಬೇಕಾಗಿತ್ತು. ಅವರು ತರಗತಿಗೆ ಬರುವಷ್ಟರಲ್ಲಿ ಬೋರ್ಡ್ ಒರೆಸಿ, ಸೀಮೆಸುಣ್ಣ ತಂದು ಇಟ್ಟಿರಬೇಕಾಗಿತ್ತು. ಜವಾನ ನಂಜಪ್ಪ ಇರದಿದ್ದಾಗ ಬೆಲ್ ಕೂಡಾ ನಾನೇ ಹೊಡೆಯಬೇಕಾಗಿತ್ತು. ದಿನವೂ ಒಂದಷ್ಟು ಕೋಲುಗಳನ್ನು ತಂದು ಮೇಷ್ಟ್ರುಗಳಿಗೆ ಕೊಡಬೇಕಾಗಿತ್ತು! ಅದಕ್ಕಿಂತ ಹೆಚ್ಚಾಗಿ ಪ್ರತಿ ಶನಿವಾರ ಆ ಮನೆಯ ನೆಲವನ್ನು ಸಗಣಿ ಹಾಕಿ ಸಾರಿಸಲು ವ್ಯವಸ್ಥೆ ಮಾಡಬೇಕಾಗಿತ್ತು. ಆ ಮನೆಯ ನೆಲಕ್ಕೆ ಗಾರೆ ಇರಲಿಲ್ಲ. ಹತ್ತು-ಹತ್ತು ಹುಡುಗರ ಗುಂಪುಗಳನ್ನು ಮಾಡಿ ಒಂದೊಂದು ಗುಂಪಿನವರು ಒಂದೊಂದು ವಾರ ನೆಲವನ್ನು ಗುಡಿಸಿ ಸಾರಿಸಬೇಕಾಗಿತ್ತು. ಅದರ ಮೇಲುಸ್ತುವಾರಿ ಮಾತ್ರ ನನ್ನದಾಗಿತ್ತು!
ವೆಂಕಟಪ್ಪನವರು ಸ್ಟ್ರಿಕ್ಟ್ ಎಂದು ಅಷ್ಟೊಂದು ಹೆಸರಾಗಿದ್ದರೂ ಹುಡುಗರಿಗೆ ಹೊಡೆಯುತ್ತಿದ್ದುದ್ದು ತುಂಬಾ ಕಡಿಮೆ. ಹಾಗೆ ಹೊಡೆಯಲೇ ಬೇಕಾದ ಸಂದರ್ಭದಲ್ಲಿ, ಹುಡುಗರನ್ನು ಬಗ್ಗಿ ನಿಲ್ಲುವಂತೆ ಹೇಳುತ್ತಿದ್ದರು. ಬಗ್ಗಿ ನಿಂತ ಹುಡುಗರ ಕುಂಡಿಯ ಮೇಲೆ ಕೋಲಿನಿಂದ ಹೊಡೆಯುತ್ತಿದ್ದರು. ಹುಡುಗಿಯರಿಗೂ ಅದೇ ಶಿಕ್ಷೆ. ಅವರು ಜೋರಾಗಿ ಹೊಡೆಯುತ್ತಿರಲಿಲ್ಲವಾದರೂ, ಬೇರೆ ಹುಡುಗರ ನಡುವೆ ಹಾಗೆ ಕುಂಡಿ ಬಗ್ಗಿಸಿ ಹೊಡೆಸಿಕೊಳ್ಳುವುದು ಅವಮಾನದ ಸಂಗತಿಯಾಗಿತ್ತು. ಅದೃಷ್ಟವೆಂದರೆ, ನನಗೆ ಅವರಿಂದ ಹೊಡೆಸಿಕೊಳ್ಳುವ ದಿನ ಬರಲೇ ಇಲ್ಲ!
ಹೆಡ್ಮಾಸ್ಟರಿಗೆ ನೀರು ಕೊಟ್ಟಿದ್ದು!
ವೆಂಕಟಪ್ಪನವರು ನನ್ನನ್ನು ‘ಮಾನಿಟರ್’ ಎಂದು ಘೊಷಿಸಿದಾಗ ಹೇಳಿರದ, ಆದರೆ ತೀರಾ ವೈಯಕ್ತಿಕ ಎನ್ನಬಹುದಾದ ಒಂದು ಕೆಲಸವನ್ನು ನಾನು ಅವರಿಗೆ ಮಾಡಿಕೊಡಬೇಕಾಗಿತ್ತು. ಅದಕ್ಕೆ ಅವರು ನನಗೆ ಪ್ರತಿಯಾಗಿ ‘ಥ್ಯಾಂಕ್ಸ್’ ಎಂದು ಹೇಳುತ್ತಿದ್ದರು. ಈಗ ಆ ಕೆಲಸವನ್ನು ನೆನಪಿಸಿಕೊಂಡರೆ ನಗು ಬರುತ್ತದೆಯಾದರೂ ಆಗ ನನಗೆ ಹೆಮ್ಮೆಯೆನ್ನಿಸುತ್ತಿತ್ತು. ಆ ಕೆಲಸವನ್ನು ನಾನು ಅವರಿಗೆ ಮಾಡಿಕೊಡುವುದರಿಂದ, ನಾನು ಅವರ ಅಂತರಂಗದ ಶಿಷ್ಯನಾಗಿದ್ದೇನೆ ಎಂಬ ಹೆಮ್ಮೆ ನನ್ನಲ್ಲಿತ್ತೇನೋ! ಅಂದ ಹಾಗೆ ಆ ಕೆಲಸ ಏನೆಂದರೆ, ಯಾವಾಗಲಾದರೂ ಅವರು ಶಾಲೆಯ ವೇಳೆಯಲ್ಲಿ ಕಕ್ಕಸಿಗೆ ಹೋಗಬೇಕಾದಾಗ, ಅವರಿಗೆ ನೀರನ್ನು ತಗೆದುಕೊಂಡು ಹೋಗಿ ಕೊಡುವುದು!
ಸ್ವಂತ ಕಟ್ಟಡವೇ ಇಲ್ಲದ ಆ ಸ್ಕೂಲಿನಲ್ಲಿ, ಟಾಯಿಲೆಟ್ ರೂಮ್ ಎಂಬುದು ಅದರ ಹೆಸರನ್ನೂ ಕೇಳಿರದ ವಸ್ತುವಾಗಿತ್ತು. ಸಿಟಿಯವರಾದ ವೆಂಕಟಪ್ಪನವರಿಗೆ ಮಾತ್ರ ಇದರಿಂದ ಬಹಳ ತೊಂದರೆಯಾಗಿತ್ತೆಂದು ಕಾಣುತ್ತದೆ. ಮೂಡನಹಳ್ಳಿಯಲ್ಲಿ ಅವರು ಇಳಿದುಕೊಂಡಿದ್ದ ರೂಮಿನ ಮನೆಯಲ್ಲೂ ಕಕ್ಕಸ್ಸು ರೂಮ್ ಇರಲಿಲ್ಲ. ಆದರೆ ಅದು ಅವರಿಗೆ ಅಷ್ಟೊಂದು ಸಮಸ್ಯೆಯಾಗಿ ಕಂಡಿರಲಿಲ್ಲ. ಕಾರಣ ಅವರ ದಿನಚರಿ ಊರೆಲ್ಲಾ ಮಲಗಿರುವಾಗ, ಅಂದರೆ ಬೆಳಗಿನ ಜಾವ ನಾಲ್ಕೂವರೆ ಐದಕ್ಕೆಲ್ಲಾ ಶುರುವಾಗಿಬಿಡುತ್ತಿತ್ತು. ಊರಿನ ಆಸುಪಾಸಿನಲ್ಲಿದ್ದ ಕೆರೆಗಳಲ್ಲಿ ಆಗ ವರ್ಷವಿಡೀ ನೀರಿರುತ್ತಿದ್ದುದರಿಂದ ಅವರು ಸ್ನಾನಕ್ಕೂ ಆ ಕೆರೆಗಳನ್ನೆ ಆಶ್ರಯಿಸಿದ್ದರು. ಆದರೆ ಯಾವಾಗಲಾದರೊಮ್ಮೆ ಅವರಿಗೆ ಅವೇಳೆಯಲ್ಲಿ, ಅಂದರೆ ಸ್ಕೂಲಿನಲ್ಲಿದ್ದಾಗ ಕಕ್ಕಸ್ಸಿಗೆ ಹೋಗಬೇಕೆಂದರೆ ಮಾತ್ರ ಪೇಚಾಟವಾಗುತ್ತಿತ್ತು. ಅದಕ್ಕೆ ಅವರು ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿದ್ದರು. ಅದಕ್ಕೆ ನನ್ನ ಸಹಕಾರ ಬೇಕಾಗಿತ್ತು ಅಷ್ಟೆ!
ಕುಂದೂರುಮಠದ ಹೈಸ್ಕೂಲಿನಿಂದ ಯಾವ ಕಡೆಗಾದರೂ ಸರಿಯೆ, ನೂರಿನ್ನೂರು ಮೀಟರ್ ನಡೆದರೆ ಕುರುಚಲು ಕಾಡು ಸಿಗುತ್ತಿತ್ತು. ಅಲ್ಲಲ್ಲಿ ಹೊಲ ತೋಟಗಳೂ ಇದ್ದವು. ಸ್ಕೂಲಿನ ಉತ್ತರಕ್ಕೆ ಸ್ವಲ್ಪ ಕಣಿವೆ ಎನ್ನಬಹುದಾದ ತಗ್ಗಾದ ಪ್ರದೇಶವಿತ್ತು. ಅಲ್ಲಿ ಕುರುಚಲುಗಿಡಗಳೂ, ಕೆಲವು ದೊಡ್ಡ ಮರಗಳೂ ಯಥೇಚ್ಚವಾಗಿ ಬೆಳೆದಿದ್ದವು. ಅವರು ‘ಮಾನಿಟರ್’ ಎಂದು ಕೂಗಿ ಕರೆದಾಗ, ನಾನು ಹೋದರೆ, ಆಗ ಅಲ್ಲಿ ಯಾರೂ ಇರದಿದ್ದರೆ, ಅಂದು ನಾನು ನೀರು ತೆಗೆದುಕೊಂಡು ಹೋಗಬೇಕಾಗಿದೆ ಎಂದು ಸಾಮಾನ್ಯವಾಗಿ ನಾನು ಊಹಿಸುತ್ತಿದ್ದೆ. ಯಾರಾದರೂ ಬೇರೆ ಮೇಷ್ಟ್ರುಗಳಿದ್ದರೆ ಅವರೇ ಬಾಗಿಲಿಗೆ ಬಂದು ನಿಂತು ನನ್ನನ್ನು ಕರೆದು ಹೊರಗೆ ಹೇಳುತ್ತಿದ್ದರು. ಆಗ ನಾನು ಅಲ್ಲಿದ್ದ ಒಂದು ದೊಡ್ಡ ಚೆಂಬು ಅಥವಾ ಸಣ್ಣ ಬಿಂದಿಗೆ (ಸುಮಾರು ಐದಾರು ಲೀಟರ್ ನೀರು ಹಿಡಿಯುವಂಥದ್ದು) ತುಂಬಾ ನೀರು ತುಂಬಿಕೊಂಡು ಅದನ್ನು ತೆಗೆದುಕೊಂಡು ಹೋಗಿ ಆ ದೂರದ ಕಣಿವೆಯಲ್ಲಿದ್ದ ಒಂದು ಹೊಂಗೇಮರದ ಬುಡದಲ್ಲಿ ಇಟ್ಟು ಬರುತ್ತಿದ್ದೆ. ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ‘ಹದಿನೈದು ನಿಮಿಷ ಬಿಟ್ಟುಕೊಂಡು ಬಾ’ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ‘ಥ್ಯಾಂಕ್ಸ್’ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು.
ಹೀಗೆ ಒಂದು ದಿನ ಬಿಂದಿಗೆ ಇಟ್ಟು ವಾಪಸ್ಸು ಸ್ಕೂಲಿಗೆ ಹಿಂತಿರುಗದೇ, ಬಿಸಿಲು ಹೆಚ್ಚಾಗಿದ್ದುದ್ದರಿಂದ, ಅಲ್ಲೇ ಸ್ವಲ್ಪ ದೂರದಲ್ಲಿದ್ದ ಮರದ ನೆರಳಿನಲ್ಲಿ ನಿಂತುಕೊಂಡಿದ್ದೆ. ಅವರೇ ಮೊದಲೊಂದು ದಿನ ‘ದೂರ ಮರದ ನೆರಳಿನಲ್ಲಿ ಬೇಕಾದರೆ ನಿಂತಿರು’ ಎಂದು ಹೇಳಿದ್ದರು, ಕೂಡಾ. ಹಾಗೆ ನಿಂತಿದ್ದರಿಂದ, ಅವರು ಅಲ್ಲಿಂದ ಮುಂದಕ್ಕೆ ಸೂಮಾರು ಐವತ್ತು ಮೀಟರ್ ದೂರವಾದರೂ ಬಿಂದಿಗೆಯನ್ನು ತೆಗೆದುಕೊಂಡು ಹೋಗುತ್ತಾರೆಂದು ನನಗವತ್ತು ತಿಳಿಯಿತು. ಹಾಗೆ ಹೋಗುವ ಮೊದಲು ಅವರು ತಮ್ಮ ಷೂಗಳನ್ನು ತಗೆದು, ಬಿಳಿಯಬಣ್ಣದ (ಅವರು ಯಾವಾಗಲೂ ಬಿಳಿಯ ವಸ್ತ್ರಗಳನ್ನೇ ಧರಿಸುತ್ತಿದ್ದರು.) ಪ್ಯಾಂಟನ್ನು ಬಿಚ್ಚಿ, ಅದನ್ನು ಹೊಂಗೇ ಮರದ ಕೊಂಬೆಗೆ ನೇತುಹಾಕುತ್ತಿದ್ದರು. ನಂತರ ಮತ್ತೆ ಸಾಕ್ಸ್ ತೊಡದೆ ಷೂಗಳನ್ನು ಮಾತ್ರ ಧರಿಸಿ ತಂಬಿಗೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ತಿರುಗಿ ಬಂದು ಷೂ ತಗೆದು, ಪ್ಯಾಂಟ್ ತೊಟ್ಟು ನಂತರ ಸಾಕ್ಸ್, ಷೂ ತೊಟ್ಟುಕೊಂಡು ಬರುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ನಾನು ಹೋಗಿ ಖಾಲಿ ಬಿಂದಿಗೆಯನ್ನು ತಗೆದುಕೊಂಡು ಬರುತ್ತಿದ್ದೆ. ಕೆಂಪಗೆ ಸಲಕ್ಷಣವಾಗಿದ್ದ ಅವರು, ಬಿಳಿಯ ಚಡ್ಡಿ, ಷರ್ಟ್, ಷೂಗಳನ್ನು ಮಾತ್ರ ಧರಿಸಿ ಕೈಯಲ್ಲಿ ತಂಬಿಗೆ ಹಿಡಿದುಕೊಂಡು ಹೋಗುವುದನ್ನು ಈಗ ಚಿತ್ರಿಸಿಕೊಂಡರೆ ನಗೆ ಬರುವ ಬದಲು ಅಯ್ಯೋ ಎನ್ನಿಸುತ್ತದೆ!
ಒಂದು ದಿನ ಹಾಗೆ ಅವರು ವಾಪಸ್ಸು ಬಂದ ಕೆಲವೇ ನಿಮಿಷಗಳಲ್ಲಿ ಮತ್ತೆ ‘ಮಾನಿಟರ್’ ಎಂದು ಕೂಗಿದರು. ನಾನು ಒಳಗೆ ಹೋದೊಡನೆ ಬಾಗಿಲನ್ನು ಭದ್ರಪಡಿಸಲು ಹೇಳಿದರು. ನಂತರ ತಮ್ಮ ಪ್ಯಾಂಟನ್ನು ಕಳಚಿ, ನನ್ನ ಕೈಗೆ ಕೊಡುತ್ತಾ ‘ಅದರಲ್ಲಿ ಇರುವೆಗಳು ಸೇರಿಕೊಂಡಿವೆ. ಎಲ್ಲವನ್ನು ಹುಡುಕಿ ತೆಗೆದುಬಿಡು’ ಎಂದು ಹೇಳುತ್ತಲೇ, ತೊಡೆ, ಕುಂಡಿ, ಸೊಂಟದ ಕಡೆಗೆಲ್ಲಾ ಫಟ್ ಫಟ್ ಎಂದು ಹೊಡೆದುಕೊಳ್ಳುತ್ತಾ ಇರುವೆಗಳ ಸಂಹಾರಕಾರ್ಯದಲ್ಲಿ ನಿರತರಾಗಿದ್ದರು.
ನಾನು ಚೆನ್ನಾಗಿ ಕೊಡವಿಕೊಟ್ಟ ಪ್ಯಾಂಟನ್ನು ಮತ್ತೊಮ್ಮೆ ಪರಿಶೀಲಿಸಿ ಹಾಕಿಕೊಂಡರು. ಬಾಗಿಲು ತಗೆದು ನಾನು ಹೊರಟು ನಿಂತಾಗ ನನ್ನನ್ನು ಹತ್ತಿರಕ್ಕೆ ಕರೆದು, ಪ್ರೀತಿಯಿಂದ ತಲೆ ಸವರುತ್ತಾ ‘ಥ್ಯಾಂಕ್ಯೂ ಮೈ ಚೈಲ್ಡ್, ಥ್ಯಾಂಕ್ಯೂ ವೆರಿಮಚ್. ಬಟ್ ಐ ಯಾಮ್ ವೆರಿ ಸಾರಿ. ನಿನ್ನಿಂದ ಈ ಕೆಲಸ ಮಾಡಿಸಿಕೊಂಡಿದ್ದಕ್ಕೆ’ ಎಂದರು. ನನಗೆ ಏನು ಹೇಳಬೇಕೆಂದು ಗೊತ್ತಿರಲಿಲ್ಲ. ಸುಮ್ಮನೆ ಹೊರಗೆ ಬಂದೆ. ನಾನು ‘ಸ್ಸಾರಿ’ ಎಂಬ ಪದವನ್ನು ಅವತ್ತೇ ಮೊದಲು ಕೇಳಿದ್ದು! ಆದರೆ ಅವರು ನನ್ನ ತಲೆಯನ್ನು ಸವರಿ ಮಾತನಾಡಿಸಿದ್ದು ನನಗೆ ಖುಷಿಯೆನ್ನಿಸಿತ್ತು. ಸುಮಾರು ಹೊತ್ತು ಆಗಾಗ ನನ್ನ ತಲೆಯನ್ನು ನಾನೇ ಸವರಿಕೊಳ್ಳುತ್ತಿದ್ದೆ!
ನನ್ನ ಈ ಬಗೆಯ ಕೆಲಸಕ್ಕಾಗಿ ಪ್ರಾರಂಭದಲ್ಲಿ ಬೇರೆ ಹುಡುಗರು ನನ್ನನ್ನು ‘ಚೆಂಬು’ ಎಂದು ಹೀಗಳೆಯುತ್ತಿದ್ದರು. ಹೀಗೆ ನನ್ನನ್ನು ‘ಚೆಂಬು’ ಎಂದು ಹೀಗಳೆದವರಿಬ್ಬರನ್ನು, ಗಲಾಟೆ ಮಾಡಿದವರ ಪಟ್ಟಿಯಲ್ಲಿ ಸೇರಿಸಿ ಚೆನ್ನಾಗಿ ಏಟು ಕೊಡಿಸಿದ್ದರಿಂದ, ನಂತರ ಯಾರೂ ಹಾಗೆ ಕರೆಯುವ ಸಾಹಸ ಮಾಡಲಿಲ್ಲ!
ಇಪ್ಪತ್ತೈದು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶದ ಶಾಲೆಗಳು ಎದುರಿಸುತ್ತಿದ್ದ ನೂರಾರು ಸಮಸ್ಯೆಗಳಲ್ಲಿ ಟಾಯಿಲೆಟ್ ಸಮಸ್ಯೆ ಒಂದು ಮಾತ್ರ. ಅಂದು ವೆಂಕಟಪ್ಪನವರು ಎದುರಿಸುತ್ತಿದ್ದ ಸಮಸ್ಯೆಯನ್ನು ಎಲ್ಲಾ ಭಾಗದ ಶಾಲೆಗಳ ಬೇರೆ ಬೇರೆ ಉಪಾಧ್ಯಾಯರೂ ಎದುರಿಸಿದ್ದಾರೆ. ಮಹಿಳಾ ಶಿಕ್ಷಕಿಯರ ಮತ್ತು ವಿದ್ಯಾರ್ಥಿನಿಯರ ಕಷ್ಟವನ್ನಂತೂ ಹೇಳುವಂತೆಯೇ ಇಲ್ಲ. ಇಂದೂ ಆ ಸಮಸ್ಯೆ ಪೂರ್ಣವಾಗೇನೂ ತೊಲಗಿಲ್ಲ. ಎಲ್ಲಾ ಶಾಲೆಗಳ ಬಳಿ ಶೌಚಾಲಯಗಳನ್ನು ಸರ್ಕಾರ ನಿರ್ಮಿಸಿದೆಯಾದರೂ ಅದರ ನಿರ್ವಹಣೆ ಮಾತ್ರ ಚಿಂತಾಜನಕವಾಗಿದೆ. ಎಷ್ಟೋ ಶಾಲೆಗಳಲ್ಲಿ ನೀರಿಲ್ಲದೆ, ಇಡೀ ಶೌಚಾಲಯವೇ ತಿಪ್ಪೆಗುಂಡಿ ಆಗಿರುವ ನಿದರ್ಶನಗಳಿವೆ. ಇಂತಹ ಬರ್ಬರವಾದ ಶೈಕ್ಷಣಕ ಪರಿಸರದಿಂದ ಹೇಗೋ ಶಿಕ್ಷಣ ಮುಗಿಸಿ ಹೊರ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾಗಿರುವುದು ಮಾತ್ರ ವಿಪರ್ಯಾಸ!
ಸೈಕಲ್ ಲಿಫ್ಟ್
ಶ್ರೀ ವೆಂಕಟಪ್ಪನವರಿಗೆ ನಾನೊಮ್ಮೆ ಸೈಕಲ್ಲಿನಲ್ಲಿ ಲಿಫ್ಟ್ ಕೊಡುವ ಅವಕಾಶ ಬಂದಿತ್ತು. ಕುಂದೂರುಮಠದಿಂದ ಸುಮಾರು ಹತ್ತು ಹದಿನೈದು ಕಿಲೋಮೀಟರ್ ದೂರದ ಒಂದು ಊರು (ಅದರ ಹೆಸರು ನೆನಪಿಗೆ ಬರುತ್ತಿಲ್ಲ). ಅಲ್ಲಿದ್ದ, ವೆಂಕಟಪ್ಪನವರ ಬಂಧುಗಳೊಬ್ಬರು ತೀರಿ ಹೋಗಿದ್ದರು. ಸ್ಕೂಲಿನಲ್ಲಿದ್ದ ಅವರಿಗೆ, ವಿಷಯ ಟೆಲಿಗ್ರಾಂ ಮೂಲಕ ತಿಳಿಯಿತು. ಆದರೆ ಬಸ್‌ಗಳಾಗಲೀ ಬೇರಾವ ವಾಹನಗಳಾಗಲೀ ಇಲ್ಲದ ಆ ಊರಿಗೆ ಹೋಗುವುದು ಹೇಗೆ? ಬಸ್ ಇರಲಿ, ಒಂದು ಒಳ್ಳೆಯ ಜೆಲ್ಲಿ ರಸ್ತೆಯೂ ಇರಲಿಲ್ಲ. ಅವರು ಹೇಗಾದರೂ ಮಾಡಿ ಆ ಊರು ತಲುಪಿದರೆ, ಸಂಜೆ ಅಲ್ಲಿಂದ ಹಾಗೇ ಹಾಸನಕ್ಕೆ ಹೋಗುವುದು, ಎಂಬುದು ಅವರ ಅಭಿಪ್ರಾಯವಾಗಿತ್ತು. ಕೊನೆಗೆ ಪಿ.ಟಿ. ಮೇಷ್ಟ್ರು ಮತ್ತು ನಾನು ಒಂದು ಸೈಕಲ್ಲಿನಲ್ಲಿ ಮತ್ತು ಅವರು ಒಂದು ಸೈಕಲ್ಲಿನಲ್ಲಿ ಅಲ್ಲಿಗೆ ಹೋಗುವುದು. ಅಲ್ಲಿಂದ ವಾಪಸ್ ಬರುವಾಗ ನಾನು ಮತ್ತು ಪಿ.ಟಿ. ಮೇಷ್ಟ್ರು ಎರಡೂ ಸೈಕಲ್‌ಗಳಲ್ಲಿ ವಾಪಸ್ ಬರುವುದು ಎಂದು ತೀರ್ಮಾನವಾಯಿತು. ಇದ್ದುದರಲ್ಲಿಯೇ ಒಂದು ಒಳ್ಳೆಯ ಸೈಕಲ್ಲನ್ನು ಹುಡುಗನೊಬ್ಬನಿಂದ ಹೆಡ್ಮಾಸ್ಟರಿಗೆಂದು ತೆಗೆದುಕೊಳ್ಳಲಾಯಿತು. ಇನ್ನೊಂದು ಸುಮಾರಾಗಿದ್ದ ಸೈಕಲ್ಲಿನಲ್ಲಿ ಪಿ.ಟಿ. ಮೇಷ್ಟ್ರು ಮತ್ತು ನಾನು ಡಬಲ್ ರೈಡ್‌ನಲ್ಲಿ ಹೊರಟೆವು. ಸೈಕಲ್ ಅಭ್ಯಾಸವೇ ತಪ್ಪಿ ಹೋಗಿದ್ದ ವೆಂಕಟಪ್ಪನವರು ಪ್ರಾರಂಭದಲ್ಲಿ ಕಷ್ಟಪಟ್ಟರೂ ಹೇಗೋ ಸುಧಾರಿಸಿಕೊಂಡು ಸೈಕಲ್ ತುಳಿದು, ಊರನ್ನೂ ತಲುಪಿಬಿಟ್ಟರು. ಆದರೆ ಅವರಿಗೆ ನಮ್ಮನ್ನು ಹಾಗೆಯೇ ಕಳುಹಿಸಲು ಇಷ್ಟವಿರಲಿಲ್ಲ. ಇನ್ನು, ಸಾವು ಸಂಭವಿಸಿರುವ ಅವರ ಬಂಧುಗಳ ಮನೆಯಲ್ಲಿ ತಿನ್ನಲು ಅಪೇಕ್ಷಿಸುವಂತಿಲ್ಲ. ಪಿ.ಟಿ. ಮೇಷ್ಟ್ರೇನೋ ‘ಬೇಡ ಬಿಡಿ ಸಾರ್, ನಾವು ಹೋಗುತ್ತೇವೆ. ಅಲ್ಲಿಯೇ ಹೋಗಿ ನಾವು ತಂದಿರುವ ಊಟವನ್ನೇ ಮಾಡುತ್ತೇವೆ’ ಎಂದರು. ಆದರೆ ವೆಂಕಟಪ್ಪನವರು ಅಂದು ಹೇಳಿದ ಪ್ರತಿಯೊಂದು ಪದಗಳೂ ನನಗೆ ಚೆನ್ನಾಗಿ ನೆನಪಿವೆ. ‘ನಿಮ್ಮದು ಹೇಗೋ ನಡೆಯುತ್ತದೆ ರೀ. ಆದರೆ, ನನಗೆ ನನ್ನ ವಿದ್ಯಾರ್ಥಿಯದೇ ಚಿಂತೆ. ಅಷ್ಟು ದೂರ ನನಗಾಗಿ ಸೈಕಲ್‌ನಲ್ಲಿ ಬಂದಿದ್ದಾನೆ. ಈ ಕಡೆಯಿಂದ ಸೈಕಲ್ ಬೇರೆ ತುಳಿಯಬೇಕು..... ನೀವು ಒಂದು ಕೆಲಸ ಮಾಡಿ. ನಾನು ಹೊಡೆದುಕೊಂಡು ಬಂದ ಸೈಕಲ್ಲನ್ನು ಅವನಿಗೆ ಕೊಟ್ಟು ಬಿಡಿ. ಅದು ತುಳಿಯಲು ಸುಲಭವಾಗಿರುವಂತಿದೆ’ ಎಂದರು. ತಕ್ಷಣ ಯಾರನ್ನೋ ವಿಚಾರಿಸಿ ಅಲ್ಲಿದ್ದ ಒಂದು ಗೂಡಂಗಡಿಯಿಂದ ನಾಲ್ಕು ಬಾಳೇಹಣ್ಣನ್ನು ತೆಗೆದುಕೊಟ್ಟು, ‘ತಿಂದು ನೀರು ಕುಡಿದು ಹೊರಡಿ’ ಎಂದು ಹೇಳಿದರು. ಆದರೆ ಬರುವಾಗ, ಆ ಊರಿನಿಂದ ಹೊರಗೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಪಿ.ಟಿ. ಮೇಷ್ಟ್ರು ನಾನು ಹೊಡೆಯುತ್ತಿದ್ದ ಸೈಕಲ್ಲನ್ನು ತಾವು ತೆಗೆದುಕೊಂಡರು! ನಾನೇನೂ ಮಾತನಾಡುವಂತಿರಲಿಲ್ಲ. ವೆಂಕಟಪ್ಪನವರ ಮಾನವೀಯತೆ, ಶಿಷ್ಯ ಪ್ರೀತಿಯನ್ನು ನಾನು ಹಲವಾರು ಬಾರಿ ಕಂಡಿದ್ದೆ. ಅಂದೂ ಕಂಡೆ. ಆದರೆ ಪಿ.ಟಿ. ಮೇಷ್ಟ್ರುಂತಹ ಧೂರ್ತರೂ ಶಿಕ್ಷಣಕ್ಷೇತ್ರದಲ್ಲಿ ಇದ್ದಾರೆ ಎಂಬ ಸತ್ಯ ಮಾತ್ರ ಅಂದೇ ಗೊತ್ತಾಗಿದ್ದು!

Tuesday, February 17, 2009

ಮೂಢನಂಬಿಕೆ ಮತ್ತು ತತ್ತಕ್ಷಣದ ಪ್ರತಿಕ್ರಿಯೆ


ನಾನು ಮೂಢನಂಬಿಕೆಗೆ ತುತ್ತಾಗಬಾರದೆಂದು ನಿರ್ಧರಿಸಿ ಸುಮಾರು ಹದಿನಾರು ವರ್ಷಗಳೇ ಕಳೆದುಹೋಗಿವೆ. ಅವುಗಳನ್ನು ಅಪ್ರಜ್ಞಾಪೂರ್ವಕವಾಗಿಯೋ, ಪ್ರಜ್ಞಾಪೂರ್ವಕವಾಗಿಯೋ ಮೀರಲು ಪ್ರಯತ್ನಿಸುತ್ತಿರುತ್ತೇನೆ. ಆದರೂ ಒಮ್ಮಮ್ಮೆ ನನಗರಿವಿಲ್ಲದೆ ಮನಸ್ಸಿನಲ್ಲಿ ಮಿಂಚಿಹೋಗುವ ಮೂಢನಂಬಿಕೆಗಳ ಶಕ್ತಿಯ ಬಗ್ಗೆ, ಅವುಗಳು ನಮ್ಮ ರಕ್ತದಲ್ಲಿಯೇ ಬಂದಿವೆಯೋ ಎನ್ನುವಷ್ಟರ ಮಟ್ಟಿಗೆ ನಮ್ಮಿಂದ ತೊಲಗಲು ನಿರಾಕರಿಸುತ್ತಿರುವ ಅವುಗಳ ದೃಡ ನಿಲುವಿನ ಬಗ್ಗೆ ನನಗೆ ಆಶ್ಚರ್‍ಯ ಮತ್ತು ಭಯ ಎರಡೂ ಇವೆ. ನೆನ್ನೆ ಮನೆಯಿಂದ ಹೊರಟಾಗ, ದಾರಿಯಲ್ಲಿ ಬೈಕಿಗಡ್ಡವಾಗಿ ಬೆಕ್ಕೊಂದು ಬಲದಿಂದ ಎಡಕ್ಕೆ ಹೋಯಿತು. ಇದಕ್ಕೂ ಮೊದಲು ಬೇಕಾದಷ್ಟು ಬಾರಿ ಬೆಕ್ಕು ಅಡ್ಡ ಹೋಗಿದ್ದರೂ, ಮನಸ್ಸಿಗೆ ಯೋಚನೆ ಮಾಡಲು ಬೇಕಾದಷ್ಟು ವಿಷಯಗಳಿದ್ದರಿಂದಲೋ ಏನೋ ಆಕ್ಷಣಕ್ಕೇ ಅದನ್ನು ಮರೆತುಬಿಡುತ್ತಿದ್ದೆ. ಆದರೆ ನೆನ್ನೆ ಆಕ್ಷಣ ನನಗೆ ಏನನ್ನಿಸದಿದ್ದರೂ, ನನ್ನ ಮನಸ್ಸು ನನ್ನ ಬಾಲ್ಯಕ್ಕೆ ಜಿಗಿಯಿತು. ನನ್ನ ಬಾಲ್ಯದಲ್ಲಿ ನಮ್ಮ ಪರಿಸರದಲ್ಲಿ ದಾರಿಗಡ್ಡವಾಗಿ ಬೆಕ್ಕು ಬರುವುದು ಅಪಶಕುನ. ಅದರಲ್ಲು ಬಲದಿಂದ ಎಡಕ್ಕೆ ಹೋದರಂತೂ ಮಹಾ ದೊಡ್ಡ ಅಪರಾಧ. ಹೊರಟಿದ್ದವರು, ಮರಳಿಬಂದು ಸ್ವಲ್ಪ ಹೊತ್ತು ಬಿಟ್ಟೋ, ಅಥವಾ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತೋ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದರು. ಅದೂ ಈಗಲೂ ಹಾಗೇ ಇರಬಹುದು. ಹೋಗುವ ಬೆಕ್ಕೋ ಗಂಡೋ ಹೆಣ್ಣೋ, ಯಾವ ಬಣ್ಣದ್ದು ಎಂಬ ಆಧಾರದ ಮೇಲೆ ಶಕುನ-ಅಪಶಕುನಗಳನ್ನು ನಿರ್ಧರಿಸುವ ಪ್ರವೃತ್ತಿಯನ್ನೂ ನಾನು ನೋಡಿದ್ದೇನೆ. ಹಾಗೆ ನೋಡಿದರೆ ನನಗೆ ಬೆಕ್ಕಿನ ಬಗ್ಗೆ ಯಾವುದೇ ದ್ವೇಷವಿಲ್ಲ. ನಾನು ಬೆಕ್ಕುಗಳೊಂದಿಗೇ ಬೆಳೆದವನು. ನಮ್ಮ ತೋಟದ ಮನೆಯಲ್ಲ್ಲಿ ಬೆಕ್ಕು ಇಲ್ಲದ ದಿನಗಳೇ ಇಲ್ಲವೆನ್ನಬಹುದು. ನಾವು ಚಿಕ್ಕವರಾಗಿದ್ದಾಗ ಹೊಂಬಣ್ಣದ ಮೈಮೇಲೆ ಬಿಳಿಯ ಪಟ್ಟೆಗಳಿದ್ದ ಬೆಕ್ಕು ಸಾಕಿದ್ದವು. ಅದು ಹದಿನೆಂಟು ವರ್ಷ ಬದುಕಿತ್ತು. ಈಗ ನಮ್ಮಲ್ಲಿರುವ ಬೆಕ್ಕೂ ಅದೇ ಬಣ್ಣದ್ದು. ನಾನು ಊರಿಗೆ ಹೋದಾಗ ನಾನು ಬೇಕಾಗೋ ಬೇಡವಾಗೋ ತೊಡೆ ತಟ್ಟಿಕೊಂಡರೆ ಸಾಕು, ಎಲ್ಲಿಂದಲೋ ಥಟ್ಟನೆ ನೆಗೆದು ಬಂದು ನನ್ನೆ ತೊಡೆಯ ಮೇಲೇ ಆಸೀನವಾಗಿಬಿಡುವ ನಮ್ಮ ಬೆಕ್ಕಿನ (ಸಿದ್ದಿಯ) ಬಗ್ಗೆ ಮತ್ತುಅವುಗಳ ವಂಶದ ಬಗ್ಗೆ ನನಗೆ ಪ್ರೀತಿಯಿದೆ.
ನೆನ್ನೆ ಈ ರೀತಿ ನಾನು ಯೋಚಿಸುತ್ತಾ ಬರುತ್ತಿರಬೇಕಾದರೆ ಒಂದು ತಿರುವಿನಲ್ಲಿ ಸಿಟಿಬಸ್ ಬಂದಿದ್ದರಿಂದ ನಾನು ಬೈಕ್ ನಿಧಾನಿಸಿದೆ. ಅಷ್ಟೊಂದು ನಿಧಾನಿಸಬೇಕಾದ ಸನ್ನಿವೇಶವೇನೂ ಇರಲಿಲ್ಲ. ನಾನು ಅಷ್ಟೊಂದು ರಾಷ್ ರೈಡಿಂಗ ಮಾಡುವುದಿಲ್ಲವಾದರೂ ತುಂಬಾ ನಿಧಾನಸ್ತನೇನಲ್ಲ. ಆದರೆ ನೆನ್ನೆ ನಾನು ಸಿಟಿ ಬಸ್ಸಿಗೆ ಜಾಗ ಕೊಟ್ಟುದ್ದು ಏಕೆ? ಆಗ ನನ್ನ ಮನಸ್ಸಿನಲ್ಲಿದ್ದ ಬೆಕ್ಕಿನ ಅಪಶಕುನವೇ ಅದಕ್ಕೆ ಕಾರಣವೇ ಎಂಬ ಯೋಚನೆ ಬಂತು. ಅಲ್ಲಿಂದ ಮುಂದಕ್ಕೆ ನಾನು ತುಂಬಾ ಜಾಗರೂಕನಾಗಿ ಬೈಕ್ ಓಡಿಸುತ್ತಿದ್ದೇನೆಯೇ ಎಂಬ ಅನುಮಾನ ಕಾಡಿಸಲು ಶುರುವಾಯಿತು. ಇಲ್ಲ, ಇಲ್ಲ ಎಂದು ತಲೆಕೊಡವಿಕೊಂಡು ಸ್ವಲ್ಪ ವೇಗ ಹೆಚ್ಚಿಸಿ, ಒಂದೆರಡು ನಿಮಿಷಗಳು ಕಳೆಯುವುದರಲ್ಲಿ ಮತ್ತೆ ಗಾಡಿಯ ವೇಗ ನಿಧಾನವೆನ್ನಿಸಿತು. ಜೊತೆಗೆ ಅತ್ಯಂತ ಎಚ್ಚರಿಕೆಯಿಂದ ಓಡಿಸುತ್ತಿದ್ದೇನೆ ಎನ್ನುವುದು ಆಗಿನ ನನ್ನ ಮನಸ್ಸಿಗೆ ಹೊಳೆದಿತ್ತು.
ಹೀಗೇಕೆ? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಈ ಮೂಢನಂಬಿಕೆ ಎಂಬವುಗಳು ಜನ್ಮಕ್ಕಂಟಿದ ಶನಿಗಳು ಅಂದುಕೊಳ್ಳಬೇಕಷ್ಟೆ. ಒಂದು ಕಡೆ ತೇಜಸ್ವಿಯವರೂ ಅದನ್ನೇ ಹೇಳಿದ್ದಾರೆ. ಮೂಢನಂಬಿಕೆಗಳನ್ನು ನಂಬದವರೂ, ನಾನೂ ಕೂಡಾ ಬೆಕ್ಕ ಅಡ್ಡ ಬಂದರೆ ಆಕ್ಷಣಕ್ಕೆ ತತ್ ಎಂದುಬಿಡುತ್ತೇನೆ’ ಎಂದಿದ್ದಾರೆ.
ಇಷ್ಟನ್ನು ಯೋಚಿಸಿ ಸುಮ್ಮನಾಗಿದ್ದೆ. ಅದನ್ನು ಬ್ಲಾಗಿಸುವ ಯಾವ ಯೋಚನೆಯೂ ನನಗಿರಲಿಲ್ಲ. ಆದರೆ ಇಂದು ನನ್ನ ಸಹೋದ್ಯೋಗಿ ಮಿತ್ರರೊಬ್ಬರು ಕಾಫಿಗೆ ಕರೆದು ಒಂದು ವಿಷಯ ಹೇಳಿದರು. ನೆನ್ನೆ ನಮ್ಮ ಕಾಲೇಜಿನಲ್ಲಿ ಫೋಟೋ ಸೆಷನ್ ಇತ್ತು. ಆ ಮಿತ್ರರೇ ಅದರ ಇನ್ ಚಾರ್ಜ್ ಕೂಡಾ. ಅವರಿಗೆ ಒಂದು ನಂಬಿಕೆ. ಸೋಮವಾರ ಮತ್ತು ಮಂಗಳವಾರ ಹೊಸಬಟ್ಟೆ ಧರಿಸಿದರೆ, ಯಾವಾಗಲೂ ಏನಾದರು ಕಿರಿ ಕಿರಿ ಅನುಭವಿಸುತ್ತಿರುತ್ತೇನೆ ಎಂದು. ಉದಾಹರಣೆಗೆ, ಬಟ್ಟೆಗಳು ಕರೆಯಾಗುವುದು, ಬೇಗ ಹರಿದುಹೋಗುವದು, ಹಕ್ಕಿ ಹಿಕ್ಕೆ ಹಾಕುವುದು, ಊಟ ಮಾಡುವಾಗ ಸಾರು ಚೆಲ್ಲಿಕೊಳ್ಳುವುದು ಇತ್ಯಾದಿ ಇತ್ಯಾದಿ. ಮೊನ್ನೆ ಭಾನುವಾರ ಹೊಸದಾಗಿ ತೆಗೆದುಕೊಂಡಿದ್ದ ಪ್ಯಾಂಟ್ ಶರ್ಟ್ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ಫೋಟೋ ಸೆಷನ್ನಿಗೆ ಅದನ್ನೇ ಹಾಕಿಕೊಳ್ಳುವ ಮನಸ್ಸಾಯಿತು. ಆದರೆ ಸೋಮವಾರ! ಮನಸ್ಸು ಬಹಳ ಯೋಚಿಸಿದ ನಂತರ ಇವೊತ್ತೊಂದಿನ ಹಾಕಿಕೊಂಡು ನೋಡಿಯೇ ಬಿಡುವ ಎಂದುಕೊಂಡರಂತೆ; ಅಷ್ಟರ ಮಟ್ಟಿಗೆ ಆ ಹೊಸಬಟ್ಟೆಗಳು ಅವರನ್ನು ಮೋಡಿಮಾಡಿಬಿಟ್ಟಿದ್ದವು. ಹಾಗೆ ಧರಿಸಿ ಸ್ಕೂಟರ್‌ನಲ್ಲಿ ಹೊರಟರೆ, ಅರ್ಧ ಕಿಲೋಮೀಟರ್ ಬರುವಷ್ಟರಲ್ಲಿ ಮೊಬೈಲ್ ಬಿಟ್ಟುಬಂದಿರುವುದು ಗಮನಕ್ಕೆ ಬಂತಂತೆ. ಹೋ, ಸೋಮವಾರ ಹೊಸಬಟ್ಟೆ ಧರಿಸಿದ್ದರಿಂದಲೇ ಹೀಗಾಗಿದೆ ಅನ್ನಿಸಿತಂತೆ. ಆಮೇಲೆ ಅಯ್ಯೋ ಇದಕ್ಕೂ ಮೊದಲು ಎಷ್ಟೋ ದಿನಗಳ ಕಾಲ ಬಿಟ್ಟುಬಂದಿದ್ದೇನೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದುಕೊಂಡು, ವಾಪಸ್ ಮನಗೆ ಹೋಗಿ ತೆಗೆದುಕೊಂಡು ಬಂದರಂತೆ. ಬರುವ ದಾರಿಯಲ್ಲಿ ಟಾರ್ ರಸ್ತೆ ಮಾಡುವುದಕ್ಕೆ ನೆಲ ಗುಡಿಸುತ್ತಿದ್ದರು. ಒಬ್ಬ ಅದರ ತೆಳುವಾದ ಮಿಶ್ರಣವನ್ನು ಡಬ್ಬಕ್ಕೆ ತುಂಬಿಕೊಂಡು ನೆಲಕ್ಕೆ ಚಿತ್ತಾರ ಮೂಡಿಸುತ್ತಿದ್ದ. ಹಾಗೆ ಡಬ್ಬಕ್ಕೆ ತುಂಬಿಕೊಳ್ಳುವಾಗ, ಡಬ್ಬ ತುಂಬಿದ್ದರಿಂದ, ದೊಡ್ಡ ಡ್ರಮ್ಮಿನಿಂದ ಹೊರಟಿದ್ದ ರಬ್ಬರ್ ಪೈಪನ್ನು ಒತ್ತಿಹಿಡಿಯುವುದಕ್ಕೂ, ನನ್ನ ಮಿತ್ರರು ಅಲ್ಲಿಗೆ ಬರುವುದಕ್ಕೂ ಸರಿಹೋಗಿದೆ. ಇವರ ಪ್ಯಾಂಟ್ ಶರ್ಟ್ ಎರಡಕ್ಕೂ ಚೆನ್ನಾಗಿಯೇ ಅಭಿಷೇಕವಾಗಿದೆ! ತನ್ನ (ಮೂಢ)ನಂಬಿಕೆಯೇ ಸರಿ ಎಂದುಕೊಂಡು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾ ಮತ್ತೆ ಮನೆಗೆ ಹೋಗಿ ಬೇರೆ ಬಟ್ಟೆ ಹಾಕಿಕೊಂಡು ಬಂದರಂತೆ.
ಇದಕ್ಕೆ ಏನನ್ನೋಣ? ಎಂಬ ಬಹುದೊಡ್ಡ ಪ್ರಶ್ನೆಯನ್ನೇ ಅವರು ನನ್ನ ಮುಂದಿಟ್ಟರು. ಅವರಿಗಂತೂ ಅವರ ನಂಬಿಕೆಯೇ ಸತ್ಯ ಎಂಬುದು ನನಗೆ ಅರಿವಾಗಿತ್ತು. ಆದ್ದರಿಂದ ಹೆಚ್ಚಿನ ವಿವರಣೆಗೆ ಚರ್ಚೆಗೆ ನಾನು ಇಳಿಯಲಿಲ್ಲ. ಆದರೆ ಕೆಲವು ನಂಬಿಕೆಗಳು ನಮ್ಮ ಮನಸ್ಸನ್ನಾಳುತ್ತವೆ, ಅದೂ ನಮ್ಮ ಇಚ್ಛೆಗೆ ವಿರುದ್ಧವಾಗಿ ಎಂದು ಆಶ್ಚರ್ಯವಾಯಿತು. ಜೊತೆಗೆ ಈ ನಂಬಿಕೆಗಳೂ ಕೂಡಾ ವಂಶವಾಹಿನಿಯೇ? ನಮ್ಮ ಪುರಾತನರಿಂದ ನಮಗೆ ಹರಿದುಬರುವ ಕೆಲವು ಲಕ್ಷಣಗಳಂತೆ, ಇವೂ ಕೂಡಾ ದಾಟಿ ಬರುತ್ತವೆಯೇ? ಅವರ ಒಂದು ಪ್ರಶ್ನೆಗೆ ಎದುರಾಗಿ ನನ್ನಲ್ಲಿ ನೂರಾರು ಪ್ರಶ್ನೆಗಳು ಏಳುತ್ತಿವೆ. ಅವುಗಳಲ್ಲಿ ಕೆಲವಾದರೂ ನಿಮಗೆ ಕಾಡಬಹುದು ಎಂದುಕೊಂಡು, ಪೋಸ್ಟ್ ಮಾಡಿ ನಿರಾಳನಾಗುತ್ತಿದ್ದೇನೆ.

Monday, February 16, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 4

ಅಡ್ಮಿಷನ್ ಅವಾಂತರ
ನಾನು ಎಂಟನೇ ತರಗತಿಗೆ ಅಡ್ಮಿಷನ್ ಆಗುವ ಮೊದಲ ದಿನವೇ ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ಐದನೇ ತರಗತಿಗೆ ಕುಂದೂರಿನ ಮಿಡ್ಲಿಸ್ಕೂಲಿಗೆ ಸೇರಿಕೊಳ್ಳುವಾಗಲೇ ನಮ್ಮ ಮನೆಯಿಂದ ಯಾರೂ ಬಂದಿರಲಿಲ್ಲ. ನಾನೇ ಹೋಗಿ ಮೇಸ್ಟರನ್ನು ಕೇಳಿಕೊಂಡು ಅಡ್ಮಿಟ್ ಆಗಿದ್ದೆ. ಅವರು ಹೇಳಿದ ಮೂರೂವರೆ ರೂಪಾಯಿಯನ್ನು ಮನೆಯಲ್ಲಿ ಹೇಳಿ ತೆಗೆದುಕೊಂಡು ಹೋಗಿ ಕಟ್ಟಿದ್ದೆ. ಪ್ರಾಥಮಿಕ ಶಾಲೆಯಿಂದ ಟಿ.ಸಿ.ಯನ್ನು ನಾನೇ ತಂದುಕೊಟ್ಟಿದ್ದೆ. ಇದು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ. ಸಾಮಾನ್ಯವಾಗಿ ಎಲ್ಲರೂ ರೈತವರ್ಗದವರೇ ಆಗಿರುವುದರಿಂದ, ಯಾರಿಗೂ ಬಿಡುವೆಂಬುದೇ ಇರುವುದಿಲ್ಲ. ಸ್ಕೂಲಿಗೆ ಅಡ್ಮಿಷನ್ ಪ್ರಾರಂಭವಾಗುವ ಜೂನ್ ತಿಂಗಳು ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ತಿಂಗಳು. ಆಗಿನ ಮೇಷ್ಟ್ರುಗಳು ಸ್ಕೂಲಿಗೆ ಸೇರಿಸಿಕೊಳ್ಳುವಲ್ಲಿ ತುಂಬಾ ಉದಾರಿಗಳಾಗಿದ್ದರು. ಈಗಿನ ಪದವಿ ತರಗತಿಯಲ್ಲಿ ಓದುತ್ತಿರುವ ಮಕ್ಕಳ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ನಿರ್ಧಾರ ತಗೆದುಕೊಳ್ಳುವ ಸ್ವಾತಂತ್ರ್ಯ ಕೊಟ್ಟಿಲ್ಲ. ಇದಕ್ಕೆ ಹೋಲಿಸಿದರೆ ನಾವು ಸ್ವಲ್ಪ ಚೆನ್ನಾಗಿಯೇ ಸ್ವತಂತ್ರವನ್ನು ಅನುಭವಿಸಿದ್ದೆವು ಎನ್ನಿಸುತ್ತದೆ.
ಮಿಡ್ಲಿಸ್ಕೂಲಿಗೆ ಒಬ್ಬನೇ ಹೋಗಿ ಅಡ್ಮಿಷನ್ ಆದವನಿಗೆ, ಹೈಸ್ಕೂಲಿಗೆ ಅಡ್ಮಿಷನ್ ಆಗಲು ಕಷ್ಟವೇನು? ಸರಿ, ಜೂನ್ ತಿಂಗಳ ಒಂದನೇ ತಾರೀಖಿನಂದೇ ಮಿಡ್ಲಿಸ್ಕೂಲಿಗೆ ಹೋದೆ. ನನ್ನ ಅಜ್ಜಿಯನ್ನು ಪುಸಲಾಯಿಸಿ ಪಡೆದಿದ್ದ ಹಣದಿಂದ, ಹೋಗುವಾಗಲೇ ಒಂದು ಬಿಸ್ಕೆಟ್ ಪ್ಯಾಕೆಟ್ ತಗೆದುಕೊಂಡು ಹೋದೆ. ಹಿಂದಿನ ವರ್ಷದ ವಿದ್ಯಾರ್ಥಿಗಳು ಟಿ.ಸಿ. ತೆಗೆದುಕೊಂಡು ಹೋಗುವಾಗ ಬಿಸ್ಕೆಟ್ ಪ್ಯಾಕೆಟ್, ಬಾಳೆ ಹಣ್ಣು, ಕೊಬ್ಬರಿ ತಂದು ಮಿಡ್ಲಿಸ್ಕೂಲಿನ ಮೇಷ್ಟ್ರುಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೆ! ತೆಗೆದುಕೊಂಡು ಹೋಗಿದ್ದು ಒಂದೇ ಪ್ಯಾಕೆಟ್ ಆಗಿದ್ದರಿಂದ, ಅದನ್ನು ಬೇರೆ ಮೇಷ್ಟ್ರುಗಳಿಗೆ ಕಾಣದಂತೆ ಅಡಗಿಸಿಟ್ಟುಕೊಂಡು ಹೋಗಿ ಹೆಡ್ಮಾಸ್ಟರಿಗೆ ಕೊಟ್ಟಿದ್ದೆ! ಆಗ ಹೆಡ್ಮಾಸ್ಟರಾಗಿದ್ದ ಕೇಶವೇಗೌಡ ಎಂಬುವವರು ತುಂಬಾ ಪ್ರೀತಿಯಿಂದ ಮಾತನಾಡಿಸಿ ಟೀ.ಸಿ. ಬರೆದುಕೊಟ್ಟರು. ಹಾಗೆ ಕೊಡುವಾಗ ‘ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂದರೆ ಆರನೂರಕ್ಕೆ ನಾನೂರ ಏಳು ಅಂಕ ಪಡೆದವನು ನೀನಯ್ಯ. ಇನ್ನು ಮುಂದೆಯೂ ಚೆನ್ನಾಗಿ ಓದಬೇಕು’ ಎಂದು ಹಿತವಚನವನ್ನೂ ಹೇಳಿದರು. ಅವರು ಕೊಟ್ಟ ಟೀ.ಸಿ.ಯನ್ನು ನೋಡುವ, ಓದುವ ವ್ಯವಧಾನವಿಲ್ಲದೆ, ಅಂದೇ ಕುಂದೂರುಮಠದ ಹೈಸ್ಕೂಲಿಗೆ ತಗೆದುಕೊಂಡು ಹೋದೆ.
ಆಗ ಶ್ರೀ ವೆಂಕಟಪ್ಪನವರೇ ಹೆಡ್ಮಾಸ್ಟರಾಗಿದ್ದರು. ಕ್ಲರ್ಕ್ ಹೇಳಿದ್ದರಿಂದ ಟೀ.ಸಿ. ಮೇಲೆ ಅವರ ರುಜು ಹಾಕಿಸಲು ಅವರ ಕೊಠಡಿಗೆ ಹೋದೆ. ಅವರಿಗೆ ನನ್ನ ಪರಿಚಯವಿತ್ತು. ಏಕೆಂದರೆ ಅವರು ದಿನಾ ಮೂಡನಹಳ್ಳಿಯಿಂದ ಕುಂದೂರುಮಠಕ್ಕೆ ಹೋಗಿ ಬರುವಾಗ ದಾರಿಯಲ್ಲಿ ಮಿಡ್ಲಿಸ್ಕೂಲಿನ ವಿದ್ಯಾರ್ಥಿಗಳಾದ ನಮಗೆ ಸಿಗುತ್ತಿದ್ದರು. ನಾವೆಲ್ಲಾ ಒಟ್ಟಿಗೇ ‘ಗುಡ್‌ಮಾರ್ನಿಂಗ್’ ಎಂದೋ ‘ಗುಡ್‌ಈವನಿಂಗ್’ ಎಂದೋ ಕಿರುಚಿ ನಮಸ್ಕರಿಸುತ್ತಿದ್ದೆವು. ಆಗಾಗ ಅವರು ನಮ್ಮ ಹೆಸರು, ಓದುತ್ತಿರುವ ತರಗತಿ ಮೊದಲಾದವುಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಪರಿಚಯದಿಂದ ನಸುನಗುತ್ತಲೇ ನನ್ನ ಟೀ.ಸಿ.ಯ ಮೇಲೆ ಕಣ್ಣಾಡಿಸುತ್ತಿದ್ದರು. ಟೀ.ಸಿ.ಯ ಹಿಂಬದಿಯಲ್ಲಿ ಏಳನೇ ತರಗತಿಯಲ್ಲಿ ನಾನು ಪಡೆದ ಅಂಕಗಳನ್ನು ಬರೆಯಲಾಗಿತ್ತು. ಹಾಳೆ ತಿರುಗಿಸಿ ಅದನ್ನು ನೋಡುವಾಗ ಅವರ ಮುಖದಲ್ಲಿ ನನಗೆ ಆಗ ಅರ್ಥೈಸಲಾರದ ಬದಲಾವಣೆಗಳಾದವು.
ನಂತರ ಅವರು ‘ಟೀ.ಸಿ. ಬರೆದದ್ದು ಯಾರು?’ ಎಂದರು.
ನಾನು ‘ಹೆಡ್ಮಾಸ್ಟ್ರು ಕೇಶವೇಗೌಡರು ಸಾರ್’ ಎಂದೆ.
ಅವರು ನನ್ನೆಡೆಗೆ ಟೀ.ಸಿ. ತೋರಿಸುತ್ತಾ, ‘ನೋಡಿಲ್ಲಿ, ಅವರು ತಪ್ಪು ಬರೆದಿದ್ದಾರೆ. ಅಂಕಗಳನ್ನು ಕೂಡಿದಾಗ ನಾನೂರ ಮೂವತ್ತೇಳು ಬರುತ್ತದೆ. ಅವರು ನಾನೂರ ಏಳು ಎಂದು ಬರೆದಿದ್ದಾರೆ. ಆದ್ದರಿಂದ ಈವತ್ತು ನಿನ್ನನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದಿಲ್ಲ. ಹೋಗಿ ಇದನ್ನು ಸರಿ ಮಾಡಿಸಿಕೊಂಡು ಬಾ’ ಎಂದು ಟೀ.ಸಿ.ಯನ್ನು ನನಗೇ ವಾಪಸ್ಸು ಕೊಟ್ಟು ಬಿಟ್ಟರು.
ನನಗೋ ಗಾಬರಿ. ಒಂದು ಕ್ಷಣ ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲೇ ಇಲ್ಲ. ‘ನಿನ್ನನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದಿಲ್ಲ’ ಎಂಬುದಷ್ಟೇ ನನ್ನ ತಲೆಯೊಳಗೆ ಹೋಗಿ ಮುಖ ಬಾಡಿ, ಕಣ್ಣೀರು ದುಮ್ಮಿಕ್ಕುವ ಸ್ಥಿತಿಗೆ ತಲುಪಿದ್ದೆ. ಅದನ್ನು ಗಮನಿಸಿದ ಅವರು ‘ಈಗಲೇ ಹೋದರೆ ಇನ್ನೊಂದು ಗಂಟೆಯಲ್ಲಿ ವಾಪಸ್ ಬಂದೇ ಬಿಡುತ್ತೀಯಾ, ಹೋಗು. ಇಂದೇ ಅಡ್ಮಿಷನ್ ಆಗಬಹುದು’ ಎಂದರು.
ಅವರ ಧ್ವನಿ ಹೇಗಿತ್ತೆಂದರೆ, ನನ್ನ ಆಗಿನ ದುಗುಡವೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿ ಮತ್ತೆ ಮಿಡ್ಲಿಸ್ಕೂಲಿನ ಕಡೆಗೆ ನಡೆದೆ. ಆದರೆ ಹೋಗುವ ದಾರಿಯಲ್ಲಿ ಸಿಕ್ಕ ನನ್ನ ಒಬ್ಬ ಮಿತ್ರನಿಂದಾಗಿ ನಾನು ಮಿಡ್ಲಿಸ್ಕೂಲಿಗೆ ಹೋಗದೆ, ಕೇಶವೇಗೌಡರನ್ನು ನೋಡದೆ ಒಂದು ತಪ್ಪನ್ನು ಮಾಡಿದೆ. ‘ಕೇಶವೇಗೌಡರು ಮಾಡಿರುವ ತಪ್ಪಾದರೂ ಏನು? ೪೩೭ರ ಬದಲಿಗೆ ೪೦೭ ಬರೆದಿದ್ದಾರೆ. ಆ ಸೊನ್ನೆ ಇರುವ ಜಾಗದಲ್ಲಿ ಮೂರನ್ನು ಬರೆದರೆ ಆಯಿತು. ಅದಕ್ಕೆ ಅಷ್ಟು ದೂರ ನಡೆದು ಹೋಗಬೇಕೆ’ ಎಂಬ ಮಿತ್ರನ ಸಲಹೆಯನ್ನು ತ್ರಿಕರಣಪೂರ್ವಕವಾಗಿ ಸ್ವೀಕರಿಸಿ ನಾನೇ ನನ್ನ ಕಯ್ಯಾರೆ ‘೦’ ಯ ಮೇಲೆ ‘೩’ ಎಂದು ತಿದ್ದಿ ತಿದ್ದಿ ಬರೆದುಬಿಟ್ಟೆ!
ಮಧ್ಯಾಹ್ನ ಎರಡೂವರೆಯವರೆಗೆ ನನ್ನ ಸನ್ಮಿತ್ರನೊಂದಿಗೆ ಗೋಲಿ ಆಡಿ, ಮತ್ತೆ ಸ್ಕೂಲಿನ ಕಡೆ ಹೋದೆ. ನೇರವಾಗಿ ಹೆಡ್ಮಾಸ್ಟರ ಬಳಿ ಹೋಗಿ ಟೀ.ಸಿ.ಯನ್ನು ತೆಗೆದುಕೊಡುತ್ತಾ ‘ಸಾರ್, ಸರಿ ಮಾಡಿಸಿಕೊಂಡು ಬಂದಿದ್ದೇನೆ’ ಎಂದೆ.
ಅವರು ಅಷ್ಟೇ ಸಮಾಧಾನದಿಂದ, ಮೊದಲಿನಿಂದ ಟೀ.ಸಿ.ಯನ್ನು ನೋಡುತ್ತಾ ಹಾಳೆ ತಿರುಗಿಸಿದರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಅವರ ನೋಟ ಭಯಂಕರವಾಯಿತು. ನನ್ನನ್ನೇ ಇರಿಯುವಂತೆ ನೋಡಿದರು. ‘ಅವರು ದೃಷ್ಟಿಯಿಟ್ಟು ನೋಡಿದರೆ ಸಾಕು ಮೇಷ್ಟ್ರುಗಳೇ ಹೆದರುತ್ತಾರೆ’ ಎಂದು ನನ್ನಣ್ಣ ಆಗಾಗ ಹೇಳುತ್ತಿದ್ದ. ‘ಇದನ್ನು ಯಾರು ತಿದ್ದಿದ್ದು? ಎಂದರು.
ನಾನು ‘ಸಾರ್, ಅದು ಕೇಶವೇಗೌಡರು’ ಎಂದು ಮುಂತಾಗಿ ತೊದಲಿದೆ.
‘ಸುಳ್ಳು ಹೇಳಬೇಡ. ಅವರು ತಿದ್ದಿದ್ದರೆ ಅದರ ಕೆಳಗೆ ಸಹಿ ಹಾಕಿ ಕೊಡುತ್ತಿದ್ದರು, ಗೊತ್ತಾ’ ಎಂದರು.
‘ಸಾರ್ ಅದು... ಅದು... ಅವರು ಚೆನ್ನರಾಯಪಟ್ಟಣಕ್ಕೆ ಹೋಗಲು ಹೊರಟು ನಿಂತಿದ್ದರು. ಅರ್ಜೆಂಟಲ್ಲಿ ಹಾಗೇ ಕೊಟ್ಟಿರಬಹುದು....’
‘ಸ್ಟಾಪ್, ಸ್ಟಾಪ್. ಮತ್ತೊಮ್ಮೆ ಸುಳ್ಳು ಹೇಳುತ್ತಿದ್ದೀಯ. ಅಂಕಿಯಲ್ಲಿ ನಾನೂರ ಮುವತ್ತೇಳು ಎಂದು ತಿದ್ದಿದವರು ಅಕ್ಷರದಲ್ಲಿ ಹಾಗೇ ಬಿಟ್ಟಿದ್ದಾರೆ. ನೀನು ಸುಳ್ಳು ಹೇಳುವುದು ನನಗೆ ಗೊತ್ತಾಗುವುದಿಲ್ಲ ಎಂದುಕೊಂಡೆಯಾ! ಭಡವಾ! ನಾಳೆ ಹೋಗಿ, ಅವರಲ್ಲಿ ಇದನ್ನು ಸಂಪೂರ್ಣ ಸರಿ ಮಾಡಿಸಿಕೊಂಡು ಬಾ. ಇಲ್ಲದಿದ್ದಲ್ಲಿ ನಿನಗೆ ಅಡ್ಮಿಷನ್ ಇಲ್ಲ. ಹೋಗು. ಇನ್ನೆಂದೂ ನನ್ನ ಎದುರಿಗೆ ಸುಳ್ಳು ಹೇಳಬೇಡ’ ಅಂದು ಟೀ.ಸಿಯನ್ನು ನನ್ನ ಕಡೆಗೆ ತಳ್ಳಿದರು.
ನಾನು ಅದನ್ನು ಎತ್ತಿಕೊಂಡು ಕತ್ತು ಬಗ್ಗಿಸಿ ಹೊರಗೆ ಬಂದೆ. ಆಗಿನ್ನೂ ನಮಗೆ ಈ ‘ಸ್ಸಾರಿ’ ಪದ ಪರಿಚಯವಾಗಿರಲಿಲ್ಲ. ಮುಂದೊಂದು ದಿನ ಈ ಸ್ಸಾರಿ ಎಂಬ ಪದ ಒಂದು ವಿಶೇಷ ಸಂದರ್ಭದಲ್ಲಿ ಇದೇ ವೆಂಕಟಪ್ಪನವರಿಂದಲೇ ಪರಿಚಯವೂ ಆಯಿತು!
ಮಾರನೆಯ ದಿನ ಮಿಡ್ಲಿಸ್ಕೂಲಿಗೆ ಹೋಗಿ ಕೇಶವೇಗೌಡರನ್ನು ನೋಡಿದೆ. ಅವರು ಟೀ.ಸಿ. ನೋಡಿದವರೆ, ಯಕ್ಷಗಾನದ ದೈತ್ಯಕುಣಿತವನ್ನೇ ಪ್ರಾರಂಭಿಸಿದರು. ನಾನು ಏನೂ ಮಾತನಾಡದೆ ಪಿಳಪಿಳನೆ ಅವರನ್ನೇ ನೋಡುತ್ತಿದ್ದೆ.
‘ಏನಯ್ಯ ಏನೋ ಒಳ್ಳೆ ಮಾರ್ಕ್ಸ್ ತೆಗೆದಿದ್ದೀಯಾ ಅಂದರೆ, ಫೋರ್ಜರಿ ಮಾಡೋಕು ಬರುತ್ತೆ ಅಂತ ತೋರಿಸ್ತಿದ್ದೀಯಾ’ ಅಂದರು.
ಆಗ ನನಗೆ ‘ಫರ್ಜರಿ’ ಪದದ ಅರ್ಥ ಗೊತ್ತಿರಲಿಲ್ಲ! ಮಾರ್ಕ್ಸ್ ತಿದ್ದಿದ್ದ ಕಡೆ ತೋರುತ್ತಾ ‘ಇದನ್ನು ಯಾರು ತಿದ್ದಿದ್ದು, ಕತ್ತೆ ಭಡವಾ’ ಎಂದು ಅಬ್ಬರಿಸಿದರು.
ನಾನು ‘ನನ್ನ ಪ್ರೆಂಡು ಸಾರ್’ ಎಂದೆ!
‘ಯಾವನಲೆ ಅವನು ನಿನ್ನ ಪ್ರೆಂಡು. ನೆನ್ನೆಯಿನ್ನು ಸ್ಕೂಲಿಗೆ ಹೋಗಿದ್ದೀಯಾ ಅಷ್ಟು ಬೇಗ ಅದ್ಯಾವನಪ್ಪ ನಿನಗೆ ಫ್ರೆಂಡು ಆದವನು....... ನಮ್ಮ ಸ್ಕೂಲಿನಿಂದ ಹೋದವನೇ ಯಾವನೊ ಇರಬೇಕು. ಅವನ್ಯಾರು ಹೇಳು’ ಅಂದರು.
ನಾನು ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಕಂಡು, ‘ಸಾರ್. ಇದೊಂದು ಸಾರಿ ತಪ್ಪಾಗೋತು. ಇನ್ಯಾವತ್ತು ಹಿಂಗೆ ಮಾಡೋದಿಲ್ಲ ಸಾರ್. ಬೇರೆ ಟೀ.ಸಿ. ಕೊಡಿ ಸಾರ್’ ಎಂದು ಅಂಗಲಾಚಿದೆ.
ಆಗ ಕೇಶವೇಗೌಡರು ನಗುತ್ತಾ ‘ಹಂಗೆ ಬಾ ದಾರಿಗೆ, ಭಡವಾ’ ಎಂದು ಇನ್ನಷ್ಟು ಹೊತ್ತು ಕಾಯಿಸಿ, ಮತ್ತಷ್ಟು ಬಯ್ದು, ಹೊಸ ಟೀ.ಸಿ. ಬರೆದುಕೊಟ್ಟರು.

Wednesday, February 11, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 3

ಮೆಳೆಯಮ್ಮನ ಕಥೆ, ಮಲ್ಲಿಕಾರ್ಜುನ ಪೂಜಾರಿ ಇತ್ಯಾದಿ...
ಕುಂದೂರುಮಠದಲ್ಲಿರುವ ಹಲವಾರು ದೇವರುಗಳನ್ನು ಪೂಜೆ ಮಾಡಲು ಸಾಕಷ್ಟು ಪೂಜಾರಿಗಳು ಇದ್ದರು. ಅವರೆಲ್ಲರೂ ಕುಂದೂರಿನಲ್ಲಿ ವಾಸವಾಗಿದ್ದರು. ಅವರಿಗೆ ಮಠದ ವತಿಯಿಂದ ಜಮೀನು ಕೊಡಲಾಗಿತ್ತು. ಮಂಗಳಾರತಿ ತಟ್ಟೆಗೆ ಬೀಳುವ ಕಾಸು ಅವರದೇ ಆಗುತ್ತಿತ್ತು. ಅವರಿಗೆ ಸಂಬಳ ಕೊಡುವ ಪ್ರತ್ಯೇಕ ವ್ಯವಸ್ಥೆ ಇದ್ದಂತಿರಲಿಲ್ಲ. ಈ ಪೂಜಾರಿಗಳು ಮೂರ್‍ನಾಲ್ಕು ಕುಟಂಬಕ್ಕೆ ಸೇರಿದ, ಲಿಂಗಾಯಿತ ಸಮಾಜದವರಾಗಿದ್ದರು. ಒಂದೊಂದು ತಿಂಗಳ ಕಾಲದ ಸರದಿಯ ಮೇಲೆ ಎಲ್ಲಾ ದೇವಾಲಯಗಳಲ್ಲೂ ಒಬ್ಬೊಬ್ಬರು ಪೂಜೆ ಮಾಡುತ್ತಿದ್ದರು. ಲಿಂಗಾಯಿತರಾದರೂ ರಂಗನಾಥಸ್ವಾಮಿಗೂ ಅವರೇ ಪೂಜೆ ಮಾಡುತ್ತಿದ್ದುದ್ದು ಯಾವುದೇ ಧರ್ಮಸಾಮರಸ್ಯದಿಂದಲ್ಲ; ಕೇವಲ ಸ್ವ-ಅನುಕೂಲಕ್ಕಾಗಿ ಮಾತ್ರ!
ಮೆಳೆಯಮ್ಮ ಎಂಬ ರಕ್ತದೇವತೆಯ ಪೂಜೆ ಮಾಡಲು ಈ ಪೂಜಾರಿಗಳಲ್ಲಿ ಪೈಪೋಟಿ ಇತ್ತೆಂಬುದು ಮಾತ್ರ ಸುಳ್ಳಲ್ಲ. ಏಕೆಂದರೆ ಅದಕ್ಕೆ ಬರುತ್ತಿದ್ದ ಅಸಂಖ್ಯಾತ ಭಕ್ತರಿಂದಾಗಿ ಅವರ ಮಂಗಳಾರತಿ ತಟ್ಟೆಯ ಆದಾಯ ಹೆಚ್ಚುತ್ತಿತ್ತು. ಕೇವಲ ದೇವರಿಗೆ ಹಣ್ಣು-ಕಾಯಿ ಮಾಡಿಸಲು ಬಂದವರಿಂದಲೂ, ಒಂದೊಂದು ಬಾಳೆಹಣ್ಣು ಮತ್ತು ಒಂದು ಹೋಳು ತೆಂಗಿನಕಾಯಿಯನ್ನು ತಾವೇ ಇಟ್ಟುಕೊಳ್ಳುತ್ತಿದ್ದರು.
ಇಂತಹ ಪೂಜಾರಿಗಳ ಸಮೂಹದಲ್ಲಿ ಮಲ್ಲಕಾರ್ಜುನ ಎಂಬ ಹುಡಗನೂ ಇದ್ದ. ನನಗಿಂತ ಒಂದು ವರ್ಷ ಚಿಕ್ಕವನಾಗಿದ್ದ ಆತ ಐದನೇ ತರಗತಿಯಲ್ಲಿದ್ದಾಗಲಿಂದಲೂ ನನಗೆ ಪರಿಚಯ. ಆತ ಎಂಟನೇ ತರಗತಿಗೆ ಕುಂದೂರುಮಠದ ಹೈಸ್ಕೂಲಿಗೆ ಸೇರಿಕೊಂಡಾಗ, ಬೆಳಿಗ್ಗೆ ಸಂಜೆ, ಯಾವುದಾದರೊಂದು ದೇವಾಲಯದಲ್ಲಿ ಪೂಜೆ ಮಾಡುವ ಕೆಲಸವೂ ಅವನದಾಗಿತ್ತು. ಅತಿ ಹೆಚ್ಚು ಮಾತನಾಡುತ್ತಿದ್ದ ಆತ, ತಾನು ಪೂಜೆ ಮಾಡುವ ದೇವರನ್ನು ಅತಿ ಹೆಚ್ಚು ‘ಸತ್ಯವುಳ್ಳದ್ದು’ ಎಂದು ಹೇಳುತ್ತಿದ್ದ. ಮೆಳೆಯಮ್ಮನನ್ನು ಪೂಜೆ ಮಾಡುವಾಗ ‘ಮೆಳೆಯಮ್ಮ ಸತ್ಯವುಳ್ಳ ದೇವತೆ’ ಎನ್ನುತ್ತಿದ್ದರೆ, ರಂಗನಾಥಸ್ವಾಮಿಯನ್ನು ಪೂಜಿಸುವ ದಿನಗಳಲ್ಲಿ ‘ರಂಗನಾಥಸ್ವಾಮಿಯೇ ಹೆಚ್ಚು ಸತ್ಯವುಳ್ಳ ದೇವರು’ ಎನ್ನುತ್ತಿದ್ದ. ಅವನ ಕೆಲವೊಂದು ಅಸಂಗತ ವಿಚಾರಗಳನ್ನು ನಾನಿಲ್ಲಿ ಹೇಳಬಯಸುತ್ತೇನೆ.
ಮೆಳೆಯಮ್ಮ ಅಲ್ಲಿ ಪ್ರತಿಷ್ಠಾಪನೆಯಾಗಿದ್ದಕ್ಕೆ ಆತ ಹೇಳುತ್ತಿದ್ದ ಕಥೆ ಹೀಗಿದೆ. ಒಂದು ದಿನ ತಂದೆ ಮತ್ತು ಮಗ ಸಂತೆಗೆ ಗಾಡಿಯಲ್ಲಿ ಹೋಗಿ ಹಿಂದಕ್ಕೆ ಬರುತ್ತಿದ್ದರು. ಆಗ ಗಾಡಿಯ ಒಂದು ಗುಜ್ಜುಗೋಲು ಅಂದರೆ ಗಾಡಿಯ ಇಕ್ಕೆಲಗಳಲ್ಲಿರುವ ತಡಿಕೆಗೆ ಆಧಾರವಾಗಿರುವ ಕೋಲು ಬಿಗಿಯಾಗಿರದೆ ಮತ್ತೆ ಮತ್ತೆ ಕಳಚಿಹೋಗುತ್ತಿತ್ತಂತೆ. ಆಗ ಅದನ್ನು ಭದ್ರಪಡಸಲು ಅವರು ಒಂದು ಕಲ್ಲನ್ನು ಗಾಡಿಯಲ್ಲೇ ಇಟ್ಟುಕೊಂಡು ಸಂತೆಯಿಂದ ವಾಪಸ್ಸು ಬರುತ್ತಿದ್ದರಂತೆ. ಈಗ ಗುಡಿಯಿರುವ ಜಾಗದಲ್ಲಿ ಅಗಾಧವಾದ ಮೆಳೆ ಎಂದರೆ ಪೊದೆ ಇತ್ತಂತೆ. ಅಲ್ಲಿ ಬರುವಾಗ, ಗಾಡಿಯಲ್ಲಿದ್ದ ಕಲ್ಲು ಕೆಳಗೆ ಬಿದ್ದು ಹೋಯಿತಂತೆ. ಅದನ್ನು ಮತ್ತೆ ತೆಗೆದುಕೊಳ್ಳಲು ಹೋದರೆ ಅದು ಕೈಗೆ ಬರಲಿಲ್ಲವಂತೆ! ಕಣ್ಣ ಮುಂದೆಯೇ ನೆಲ್ಲಕ್ಕೆ ಬಿದ್ದ ಕಲ್ಲನ್ನು ಎತ್ತಿಕೊಳ್ಳಲು ಹೋದರೆ ಅದು ಬರುತ್ತಿಲ್ಲವೆಂದರೆ, ‘ಅದರಲ್ಲಿ ಏನೋ ಶಕ್ತಿಯಿರಬೇಕು’ ಎಂದು ಆ ಕಲ್ಲನ್ನು ಪೂಜಿಸಿ ಹೋದರಂತೆ! ಸುತ್ತಲೂ ಮೆಳೆಯಿದ್ದುದರಿಂದ ಅದಕ್ಕೆ ಮೆಳೆಯಮ್ಮ ಎಂಬ ಹೆಸರಾಯಿತಂತೆ! ಈಗ ಮೆಳೆಯಮ್ಮನೆಂದು ಪೂಜಿಸುವುದು ಯಾವುದೇ ಶಿಲ್ಪವನ್ನಲ್ಲ; ಆಕಾರವಿಲ್ಲದ ಒಂದು ಕಲ್ಲನ್ನು!
ಈ ಮೆಳೆಯಮ್ಮ ರಕ್ತದೇವತೆ. ಕುರಿ, ಕೋಳಿ, ಹಂದಿಗಳನ್ನು ಮೆಳೆಯಮ್ಮನಿಗೆ ಬಲಿ ಕೊಡಲಾಗುತ್ತದೆ. ಹಾಗೆ ಬಲಿಕೊಟ್ಟ ಪ್ರಾಣಿಗಳ ಮಾಂಸದಿಂದ ಅಡುಗೆ ಮಾಡಿ ಅದನ್ನು ಮೆಳೆಯಮ್ಮನಿಗೆ ‘ಎಡೆ’ ಇಟ್ಟು ಪೂಜಿಸಿ ಹೋಗುವ ಸಂಪ್ರದಾಯವಿದೆ. ಹೀಗೆ ಮಾಂಸಾಹಾರಿಯಾದ ದೇವರನ್ನು, ಮಾಂಸವನ್ನೇ ತಿನ್ನದ, ತಿನ್ನುವವರನ್ನು ಕಂಡರೆ ಹೇಸಿಕೊಳ್ಳುವ ಪೂಜಾರಿಗಳು ಪೂಜಿಸುವುದು ಮಾತ್ರ ವಿಚಿತ್ರ! ನಾವು ಯಾವಾಗಲಾದರೂ ಮಲ್ಲಿಕಾರ್ಜುನನ್ನು ರೇಗಿಸಲು ಈ ವಿಷಯ ಪ್ರಸ್ತಾಪಿಸಿದರೆ ಆತ ಅದಕ್ಕೊಂದು ಕಥೆ ಹೇಳುತ್ತಿದ್ದ. ಮೆಳೆಯಮ್ಮ ನಿಜವಾಗಿಯೂ ಮಾಂಸವನ್ನು ಬಯಸುವುದಿಲ್ಲವಂತೆ! ಆ ಮಾಂಸದ ಎಡೆ ಏನಿದ್ದರೂ ಮೆಳೆಯಮ್ಮನ ಭೂತಗಳಿಗಂತೆ! ಮೆಳೆಯಮ್ಮನ ಗುಡಿಯೆದುರು ಮೆಳೆಯಮ್ಮನ ಭೂತಗಳು ಎಂದು ಕರೆಯುವ ಏಳೆಂಟು ಕರಿಯ ಕಲ್ಲಿನ ಗುಂಡುಗಳು ಆತನ ಮಾತಿಗೆ ಸಾಕ್ಷಿಯಾಗಿದ್ದವು. ಆ ಕಲ್ಲಿನ ಗುಂಡುಗಳಿಗಿಂತ ಮುಂದಕ್ಕೆ ಅಂದರೆ ಮೆಳೆಯಮ್ಮನ ಗುಡಿಯ ಆವರಣದೊಳಕ್ಕೆ ಮಾಂಸದ ಎಡೆಯನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ.
ಜನಗಳು ಮಾಂಸದ ಎಡೆಯನ್ನು ತಂದಾಗ ಪೂಜಾರಿಗಳು ಅದಕ್ಕೆ ತೀರ್ಥವನ್ನು ಚಿಮುಕಿಸಬೇಕಾಗಿತ್ತು. ‘ಮಾಂಸದ ಎಡೆಗೆ ತೀರ್ಥ ಹಾಕುವಾಗ ಅದರ ವಾಸನೆ ಕುಡಿಯುವುದರಿಂದ, ನೀವೂ ಮಾಂಸ ತಿಂದಂತೆಯೇ ಲೆಕ್ಕ’ ಎಂದು ನಾವು ಮಲ್ಲಿಕಾರ್ಜುನನನ್ನು ರೇಗಿಸುತ್ತಿದ್ದೆವು. ಆಗ ಕುಂದೂರಿನ ಸುತ್ತಮುತ್ತಲೆಲ್ಲಾ ಹುಚ್ಚಯ್ಯನೆಂದು ಕರೆಸಿಕೊಳ್ಳುತ್ತಾ, ತಿರುಗುವ ನಂಜಯ್ಯ ಎಂಬುವವನಿದ್ದನು. ಅವನೂ ಒಂದು ಕಾಲದಲ್ಲಿ ಮೆಳೆಯಮ್ಮನ ಪೂಜಾರಿಗಳಲ್ಲಿ ಒಬ್ಬನಾಗಿದ್ದನಂತೆ! ಆತ ಮಾನಸಿಕ ಅಸ್ವಸ್ಥನಾಗಿದ್ದುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ. ಆದರೆ ಮಲ್ಲಿಕಾರ್ಜುನ ಮಾತ್ರ, ನಾವು ರೇಗಿಸಿದಾಗ, ಹುಚ್ಚಯ್ಯನನ್ನು ತೋರಿಸಿ ‘ನೋಡಿ, ಅವನು ಒಂದು ಕಾಲದಲ್ಲಿ ಮೆಳೆಯಮ್ಮನನ್ನು ಪೂಜೆ ಮಾಡುತ್ತಿದ್ದವನೆ! ಮಾಂಸ ತಿಂದು, ಹೆಂಡ ಕುಡಿಯುವುದನ್ನು ಕಲಿತು ತಲೆಕೆಟ್ಟು ಹೋಯಿತು! ಮೆಳೆಯಮ್ಮನ ಗುಡಿಯ ಒಳಗೆಲ್ಲಾ ವಾಂತಿಬೇಧಿ ಮಾಡಿಕೊಂಡಿದ್ದನಂತೆ!! ಮೆಳೆಯಮ್ಮ ಅವನಿಗೆ ಶಾಪ ಕೊಟ್ಟು ಈಗ ಹುಚ್ಚನಾಗಿದ್ದಾನೆ, ಗೊತ್ತಾ!!! ಎಂದು ನಮ್ಮನ್ನೆಲ್ಲಾ ಭಯಬೀಳುವಂತೆ ಮಾಡಿದ್ದ.
ಹೀಗೆ ಮಾಂಸದ ಎಡೆಯನ್ನು ಹಾಕಿ, ಪೂಜಾರಿಗಳು ತೀರ್ಥ ಎಂದು ನೀರನ್ನು ಚುಮುಕಿಸಿ, ಭಕ್ತರು ಇನ್ನು ಸರಿಯಾಗಿ ಕೈ ಮುಗಿಯುವಷ್ಟರಲ್ಲಿ ಅಲ್ಲಿದ್ದ ಅಸಂಖ್ಯಾತ ನಾಯಿಗಳು ನುಗ್ಗಿ, ಒಂದನ್ನೊಂದು ಕಚ್ಚುತ್ತಾ ಮಾಂಸದ ಎಡೆಗೆ ಮುತ್ತಿಕೊಳ್ಳುತ್ತಿದ್ದವು. ಆ ನಾಯಿಗಳೆಲ್ಲವೂ ಅತ್ಯಂತ ದಷ್ಟಪುಷ್ಟವಾಗಿದ್ದವು. ಅಲ್ಲಿದ್ದ ನಾಯಿಗಳು ದೀರ್ಘಯುಷಿಗಳಾಗಿರದೆ, ಕೇವಲ ಮೂರ್‍ನಾಲ್ಕು ತಿಂಗಳಲ್ಲೇ ಸತ್ತು ಹೋಗುತ್ತವೆ ಎಂಬ ನಂಬಿಕೆ ಅಲ್ಲಿದೆ. ಆದರೆ ಅಲ್ಲಿದ್ದ ನಾಯಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಅವುಗಳನ್ನು ಗುರುತಿಟ್ಟುಕೊಂಡು, ಅವುಗಳ ಆಯಸ್ಸನ್ನು ಲೆಕ್ಕ ಹಾಕುವವರು ಯಾರೂ ಇಲ್ಲವಾದ್ದರಿಂದ ಮೇಲಿನ ಮಾತಿಗೆ ಯಾವ ಪುರಾವೆಯೂ ಇಲ್ಲ. ಒಮ್ಮೆ ಅವುಗಳ ಸಂಖ್ಯೆ ವಿಪರೀತವಾದಾಗ ಮಠದವರೇ ಅವುಗಳಿಗೆ ವಿಷದ ಇಂಜೆಕ್ಷನ್ನು ಚುಚ್ಚಿಸಿದರೆಂದೂ, ಆದರೂ ಅವು ಸಾಯಲಿಲ್ಲವೆಂದು, ಅದೊಂದು ಪವಾಡವೆಂಬಂತೆ ಒಮ್ಮೆ ಮಲ್ಲಿಕಾರ್ಜುನ ಹೇಳಿದ್ದ! ನಂತರದ ದಿನಗಳಲ್ಲಿ ಅಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿ, ಅವರು ದೊಣ್ಣೆ ಹಿಡಿದುಕೊಂಡು ಎಡೆಯನ್ನು ನಾಯಿಗಳು ಮುಟ್ಟದಂತೆ ಕಾಯ್ದುಕೊಂಡು, ತಾವೇ ಅದನ್ನು ತೆಗೆದುಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ!
ರಂಗನಾಥನ ಪೂಜೆ ಮಾಡುವಾಗಲೆಲ್ಲಾ ಆತ ರಂಗನಾಥನ ಪರವಾಗಿ ಮಾತನಾಡುತ್ತಿದ್ದನೆಂದು ಮೊದಲೇ ಹೇಳಿದ್ದೇನೆ. ಅವನು ಅಲ್ಲಿಗೆ ಬಂದು, ಪೂಜೆಗೆ ಬಾಗಿಲನ್ನು ತೆರೆದಾಗ, ಹೊರಗಡೆಯೇ ಇದ್ದ ಒಂದು ಘಂಟೆಯನ್ನು ಜೋರಾಗಿ ಬಡಿಯುತ್ತಿದ್ದ. ನಾವು ‘ಅದನ್ನು ಬಾರಿಸುವುದು ಏಕೆ?. ಎಂದು ಕೇಳಿದರೆ, ‘ರಂಗನಾಥಸ್ವಾಮಿಯ ಸರ್ಪವೊಂದು ಅಲ್ಲಿ ವಾಸವಾಗಿದೆ. ಹಾಗೆ ಘಂಟೆಯನ್ನು ಬಾರಿಸದೇ ಒಳಗೆ ಹೋಗಲು ಅದು ಬಿಡುವುದಿಲ್ಲ’ ಎಂದೂ, ‘ದೇವರೂ ನಿದ್ರೆ ಮಾಡುತ್ತಾನೆ. ಘಂಟೆ ಬಾರಿಸದೆ ಹಾಗೇ ಹೋಗುವುದರಿಂದ ತೊಂದರೆಯಾಗುತ್ತದೆ!’ ಎಂದೂ ಹೇಳುತ್ತಿದ್ದ. ಯಾರೋ ಭಕ್ತರು, ನೋಡಲು ಸ್ವಲ್ಪ ವಕ್ರ ವಕ್ರವಾಗಿ ಕಾಣುವ ಸೋರೆಕಾಯಿಯನ್ನು ದೇವಾಲಯಕ್ಕೆ ಕೊಟ್ಟಿದ್ದರು. ಅದನ್ನು ರಂಗನಾಥನ ದೇವಸ್ಥಾನದಲ್ಲಿ ನೇತುಹಾಕಿದ್ದರು. ಅದನ್ನು ನಮಗೆ ತೋರಿಸುತ್ತಾ ‘ನೋಡಿ. ಅದು ನೋಡಲು ಸರ್ಪ ಕಂಡಂತೆ ಕಾಣುತ್ತದೆಯಲ್ಲವೇ? ನಾನು ಘಂಟೆ ಬಾರಿಸಿದ ನಂತರ ಅದು ಅದರೊಳಗೆ ಹೋಗಿ ಮಾಯವಾಗಿಬಿಡುತ್ತದೆ!’ ಎಂದು ಕಣ್ಣಿಗೆ ಕಟ್ಟಿದವನಂತೆ ಹೇಳುತ್ತಿದ್ದ. ಆ ಸೋರೆಕಾಯಿಯನ್ನು ತುಂಬಾ ಎತ್ತರದಲ್ಲಿ ನೇತುಹಾಕಿದ್ದರು. ಅದು ಕೆಳಗಡೆಯೆ ಇದ್ದರೂ ನಾವಾರೂ ಅದರಲ್ಲಿ ಸರ್ಪವಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೋಗುತ್ತಿರಲಿಲ್ಲ, ಬಿಡಿ!
ಅಲ್ಲಿ ಎರಡು ಸುಬ್ಬಪ್ಪನ ಗುಡಿಗಳಿದ್ದುದ್ದರಿಂದ, ಆ ಕ್ಷೇತ್ರವನ್ನು ಸುಬ್ರಹ್ಮಣ್ಯ ಕ್ಷೇತ್ರವೆಂದೂ ಅಲ್ಲಿ ನಾಗರಹಾವುಗಳನ್ನು ಕೊಲ್ಲಬಾರದೆಂದು ನಂಬಿಕೆಯಿದೆ. ಒಮ್ಮೆ ಹಾಸ್ಟೆಲ್ಲಿನ ಬಳಿ ಹುಡುಗರೆಲ್ಲಾ ಸೇರಿಕೊಂಡು ಒಂದು ನಾಗರಹಾವನ್ನು ಸಾಯಿಸಿಬಿಟ್ಟಿದ್ದೆವು. ಯಾರೋ, ನಾಗರಹಾವನ್ನು ಸಾಯಿಸಿದ್ದು ತಪ್ಪೆಂದು, ಅದರಿಂದ ನಿಮಗಾರಿಗೂ ಒಳ್ಳೆಯದಾಗುವುದಿಲ್ಲವೆಂದೂ ಹೆದರಿಸಿದರು. ಆಗ ಇದೇ ಮಲ್ಲಿಕಾರ್ಜುನನು ಹಾವಿಗೆ ಅಂತ್ಯಸಂಸ್ಕಾರ ಮಾಡಿಸಿದ್ದ! ಹಾವನ್ನು ಸುಡುವ ಮೊದಲು, ಅದರ ಬಾಯಿಯನ್ನು ಮನುಷ್ಯರ ಕಕ್ಕಸ್ಸಿಗೆ ಮುಟ್ಟಿಸುವಂತೆ ತಾಖೀತು ಮಾಡಿದ್ದ! ನಂತರ ಒಂದು ಹಿತ್ತಾಳೆಯ ನಾಣ್ಯವನ್ನು ಸುಣ್ಣ ಬಳಿದು ಹಾವಿನ ಬಾಯಿಯೊಳಗೆ ಹಾಕಿಸಿ ಸುಡಲು ಹೇಳಿದ. ಹಾವು ಚೆನ್ನಾಗಿ ಸುಟ್ಟು ಹೋದಮೇಲೆ, ಅದರ ಬೂದಿಯಲ್ಲೆಲ್ಲಾ ಹುಡುಕಿ, ಹಿತ್ತಾಳೆಯ ನಾಣ್ಯವನ್ನು ತೆಗೆದುಕೊಂಡ. ‘ಅದನ್ನು ಏನು ಮಾಡುತ್ತೀಯಾ?’ ಎಂದು ನಾವು ಕೇಳಿದ್ದಕ್ಕೆ, ‘ನಾಣ್ಯಕ್ಕೆ ಒಂದು ತೂತು ಮಾಡಿಸಿ, ಉಡುದಾರಕ್ಕೆ ಸೇರಿಸಿ ಹಾಕಿಕೊಳ್ಳುತ್ತೇನೆ. ಆಗ ನನಗೆ ನಾಗರಹಾವಿನ ಭಯವಿರುವುದಿಲ್ಲ. ಯಾವ ಹಾವೂ ನನಗೆ ಕಚ್ಚುವುದಿಲ್ಲ. ನನ್ನನ್ನು ಕಂಡರೆ ಬಾಲ ಮುದುರಿಕೊಂಡು ಹೋಗುತ್ತವೆ!’ ಎಂದು ಅದಕ್ಕೆ ಹಲವಾರು ನಿದರ್ಶನಗಳನ್ನು ಕೊಟ್ಟಿದ್ದ.
ಕೇವಲ ಹತ್ತು ಹದಿನೈದು ವರ್ಷದ ಮಲ್ಲಿಕಾರ್ಜುನನ ಸುಳ್ಳು, ಮೂಡನಂಬಿಕೆಗಳನ್ನೆಲ್ಲಾ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ, ಎಲ್ಲರಂತೆ ನಾನೂ ಆಗ ನಂಬಿದ್ದೆ. ಇವೆಲ್ಲವನ್ನೂ ಒತ್ತಟ್ಟಿಗಿಟ್ಟು ನೋಡಿದಾಗ, ಆತನ ಬುದ್ದಿಶಕ್ತಿಗೆ ಮೆಚ್ಚಿ ನಾವು ತಲೆದೂಗಲೇಬೇಕು, ಅಲ್ಲವೇ!?
ಹೀಗೆ ಸುತ್ತ ಹತ್ತೂರಿಗೆ ಕೇಂದ್ರಬಿಂದುವಾಗಿದ್ದ ಕುಂದೂರುಮಠ ರಾಜಕೀಯ ನೇತಾರರ, ಪುಡಾರಿಗಳ, ಸೋಮಾರಿಗಳ ಗಮನಕ್ಕೆ ಬಂದು ಒಂದು ಕೇಂದ್ರದಂತೆ ರೂಪುಗೊಂಡಿತ್ತು. ಕೇವಲ ಸರ್ಕಾರಿ ಕೃಪಾಪೋಷಿತ ಆಸ್ಪತ್ರೆ, ಹೈಸ್ಕೂಲ್, ಹಾಸ್ಟೆಲ್, ಮಂಡಲ ಪಂಚಾಯಿತಿ ಆಫೀಸ್ ಇಷ್ಟಕ್ಕೆ ಮಾತ್ರ ತನ್ನ ಅಭಿವೃದ್ಧಿಯನ್ನು ಸೀಮಿತಗೊಳಿಸಿಕೊಂಡಿತ್ತು. ಇಂತಹ ಮಠದಲ್ಲಿದ್ದ ಸರ್ಕಾರಿ ಹೈಸ್ಕೂಲಿಗೆ, ಆ ಸುತ್ತಲಿನ ಇತರ ಮಕ್ಕಳಂತೆ ನಾನೂ ಎಂಟನೇ ತರಗತಿಗೆ ಅಡ್ಮಿಷನ್ ಆದೆ.

Monday, February 09, 2009

ಅಜ್ಜ ಹೇಳಿದ ‘ಗುಂಡನ ಕಡುಬು’ ಕಥೆ (೨)

ಒಂದು ಊರಲ್ಲಿ ಒಬ್ಬ ಗುಂಡ ಇದ್ದ. ಅವನಿಗೊಬ್ಬಳು ಹೆಂಡತಿ ಇದ್ದಳು. ಅವನು ಒಂದು ದಿನ ನೆಂಟರ ಮನೆಗೆ ಹೋಗಿರ್‍ತನೆ. ಅಲ್ಲಿ ಕಡಬು ಮಾಡಿರ್‍ತರೆ. ಊಟಕ್ಕೆ ಕಡಬು ಹಾಕಿದಾಗ, ಅದು ಅವನಿಗೆ ತುಂಬಾ ಇಷ್ಟವಾಗುತ್ತೆ. ಹೊಟ್ಟೆ ಬಿರಿಯೆ ತಿಂತಾನೆ. ಊರಿಗೆ ಹೋಗಿ, ತನ್ನ ಹೆಂಡ್ತಿ ಕೈಯಲ್ಲೂ ಕಡಬು ಮಾಡಿಸ್ಕೊಂಡು ತಿನ್ನಬೇಕು ಅಂದ್ಕೊತಾನೆ. ಊರಿಗೆ ವಾಪಸ್ಸು ಬರೋವಾಗ, ದಾರಿ ಉದ್ದಕ್ಕೂ ‘ಕಡಬು... ಕಡಬು... ಕಡಬು...’ ಅಂದ್ಕೊತಾ ಬರ್‍ತಾ ಇರ್‍ತಾನೆ.

ದಾರೀಲಿ ಹೆಣಾನ ಹೊತ್ಕೊಂಡು ಒಂದಷ್ಟು ಜನ ಮಶಾಣಕ್ಕೆ ಹೋಗ್ತಿರ್‍ತಾರೆ. ಅವ್ರು ಅಳೋದು, ಕಿರ್‍ಚೋದು ನೋಡಿ ಅವನಿಗೆ ಕಡಬು ಅನ್ನೋದು ಮರ್‍ತೋಗುತ್ತೆ. ಅಯ್ಯೋ ಮರ್‍ತೋಯ್ತಲ್ಲ ಅಂದ್ಕೊಂಡು ಊರಿಗೆ ಬರ್‍ತಾನೆ.
ಊರಿಗೆ ಬಂದವ್ನೆ ಹೆಂಡ್ತಿನ ಕರೆದು ‘ಲೇ ಇವ್ಳೇ, ನೆಂಟರ ಮನೇಲಿ ಊಟಕ್ಕೆ ಅದೆಂತದೋ ಹಾಕಿದ್ರು. ಬಾಳ ಚೆಂದಾಗಿತ್ತು. ನೀನು ಅದು ಮಾಡ್ಕೊಡು’ ಅಂತಾನೆ.
ಅವಳು ‘ಏನು’ ಅಂತಾಳೆ.
‘ಅದೆ ಇದು’ ಅಂತಾನೆ.
ಅವಳು ‘ಅದೇನು ಸರಿಯಾಗಿ ಹೇಳಬಾರದೆ’ ಅಂತಾಳೆ.
ಅದಕ್ಕೆ ಅವನು ‘ಅದೇ ಕಣೆ, ದುಂಡುಗೆ ಉದ್ದಕ್ಕೆ ದಪ್ಪಗೆ ಇರ್‍ತದಲ್ಲ, ಅದು’ ಅಂತಾನೆ.
‘ಅದೇನು ಬಾಳೆ ಹಣ್ಣೆ’ ಅಂತಾಳೆ ಅವ್ಳು.
ಅವ್ನಿಗೆ ಸಿಟ್ಟು ಬರುತ್ತೆ. ‘ಅಯ್ಯೊ ಬಡ್ಡೆತ್ತದ್ದೆ, ಬಾಳೆಹಣ್ಣನ್ನು ಅಡ್ಗೆ ಮನೇಲಿ ಯರ್‍ಯಾರ ಮಾಡ್ತಾರ?’ ಅಂತಾನೆ. ಮತ್ತೆ ‘ಅದೇ ಕಣೇ, ಗರಿ ಗರಿಯಾಗಿ, ಘಮ್ಮಂತ ವಾಸ್ನೆ ಬರುತ್ತಲ್ಲ, ಅದು’ ಅಂತಾನೆ.
ಅವ್ಳಿಗೆ ಸಿಟ್ಟು ಬಂದು ‘ಅದ್ಯೋನು ಸರಿಯಾಗಿ ಹೇಳಿ. ಲಾಡೋ, ಕೋಡ್ಬಳೆನೋ’ ಅಂತಾಳೆ.
ಅವ್ನಿಗೆ ವಿಪ್ರೀತ ಸಿಟ್ಟು ಬಂದ್ಬುಡುತ್ತೆ. ತೆಗೆದು ಅವಳ ಕೆನ್ನೆಗೆ ರಪ್ಪಂತ ಒಂದೇಟು ಹೊಡೆದು, ಹೊಲದ ಕಡೀಕೆ ಹೊರಟೋಗ್ತಾನೆ. ವಾಪಸ್ಸು ಬಂದಾಗ ಅವ್ನ ಹೆಂಡ್ತಿ ಅಳ್ತಾ ಕೂತಿರ್‍ತಾಳೆ.
ಇವ್ನು, ‘ಅದ್ಯಾಕೆ ಅಳ್ತಿದ್ದೀಯಾ?’ ಅಂತ ರೇಗ್ತಾನೆ.
ಅದಕ್ಕೆ ಅವ್ಳು ‘ಅಳ್ದೇ ಇನ್ನೇನು ಮಾಡ್ಲಿ. ಇಲ್ನೋಡು, ನೀನು ಹೊಡ್ದಿದ್ದು, ಒಳ್ಳೆ ಕಡ್ಬು ಊದ್ದಂಗೆ ಊದ್ಬುಟ್ಟದೆ’ ಅಂದು ಕೆನ್ನೆ ತೋರಿಸ್ತಾಳೆ.
ಗುಂಡ ತಕ್ಷಣ ‘ಅದೆ ಕಣೆ ಅದೇ, ಕಡಬು. ಅದನ್ನ ಮಾಡ್ಕೊಡು ಅಂತಾನೆ ನಾನು ಕೇಳಿದ್ದು. ಈಗ, ಈಗ್ಲೆ ಮಾಡ್ಕೊಡು’ ಅಂತ ಕುಣ್ದಾಡ್ತಾನೆ.
ಅದಕ್ಕೆ ಅವ್ನ ಹೆಂಡ್ತಿ ‘ಅಷ್ಟಕ್ಕೆ ಇಷ್ಟೊಂದು ಕುಣ್ದಾಡ್ಬೇಕ. ಬುಡು ಮಾಡ್ಕೊಡ್ತಿನಿ’ ಅಂತ ಅಡುಗೆ ಮನೆಗೆ ಹೋಗ್ತಾಳೆ.

Tuesday, February 03, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 2ಕುಂದೂರುಮಠ
ನಾನು ಈಗ ಹೇಳಹೊರಟಿರುವ ಸಂಪೂರ್ಣ ಕಥೆ ಕುಂದೂರುಮಠದಲ್ಲೇ ನಡೆದದ್ದು. ಆದ್ದರಿಂದ ಕುಂದೂರುಮಠದ ಸಾಂಸ್ಕೃತಿಕ ಹಿನ್ನೆಲೆ ಮುನ್ನೆಲೆಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಟ್ಟುಬಿಡುತ್ತೇನೆ. ಅದರ ಹಿನ್ನೆಲೆಯಿದ್ದರೆ ಮುಂದೆ ನಾನು ಕೊಡುವ ಚಿತ್ರಣ ಸ್ಪಷ್ಟವಾಗಿ ಗೋಚರವಾಗುತ್ತದೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿಯ ಒಂದು ಗ್ರಾಮ ಕುಂದೂರು. ಆಗ್ಗೆ ಇಲ್ಲಿ ಒಂದರಿಂದ ಏಳನೇ ತರಗತಿಯವರಗೆ ಸರ್ಕಾರಿ ಮಾಧ್ಯಮಿಕ ಶಾಲೆಯಿತ್ತು. ಹೊಳೇನರಸೀಪುರ ವಿಧಾನಸಭೆ ಹಾಗೂ ಹಾಸನ ಲೋಕಸಭೆ ಕ್ಷೇತ್ರಕ್ಕೆ ಸೇರುವ ಈ ಊರು ದೇವೇಗೌಡರ ರಾಜಕೀಯ ಏಳುಬೀಳುಗಳೊಂದಿಗೇ ಗುರುತಿಸಿಕೊಳ್ಳುತ್ತಾ ಬರುತ್ತಿದೆ. ಈ ಕುಂದೂರಿನಿಂದ ಪಶ್ಚಿಮಕ್ಕೆ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಮಠವಿದೆ. ಅದನ್ನು ಸಾಮಾನ್ಯವಾಗಿ ಕುಂದೂರುಮಠ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿರುವ ಎರಡನೇ ಒಕ್ಕಲಿಗ ಮಠ ಎಂದು ಹೇಳುತ್ತಾರೆ.
ಇಡೀ ಮಠ ಸುತ್ತಮುತ್ತಲಿನ ಹಳ್ಳಿಯ ಕೆಲವರಿಗೆ ಹೊತ್ತು ಕಳೆಯುವ, ಭಂಗಿ ಸೇದುವ ‘ಅಡ್ಡಾ’ ಇದ್ದ ಹಾಗೆ. ಚುನಾವಣೆ ಬಂದಾಗ ರಾಜಕಾರಣಿಗಳಿಗೆ ಸಭೆ ಸಮಾರಂಭಗಳನ್ನು ನಡೆಸಲು ತಕ್ಕ ತಾಣ. ಇಲ್ಲಿ ದೇವೇಗೌಡರು ರಾಜಕೀಯ ಪ್ರವರ್ಧಮಾನಕ್ಕೆ ಬಂದ ಹಾಗೆ ಬೆಳವಣಿಗೆಗಳೂ ಆಗಿವೆ. ಒಂದು ಹೈಸ್ಕೂಲು, ಆಸ್ಪತ್ರೆ, ಓ.ಬಿ.ಸಿ.ಹಾಸ್ಟೆಲ್, ಜೂನಿಯರ್ ಕಾಲೇಜು ಆಗಿದ್ದವು. ಈಗ ಜೂನಿಯರ್ ಕಾಲೇಜು ಇಲ್ಲ. ಇವುಗಳ ಕಟ್ಟಡಗಳು ಮತ್ತು ಕೆಲವು ಕ್ವಾರ್ಟ್ರಸ್‌ಗಳನ್ನು ಬಿಟ್ಟರೆ ಇನ್ನಾವುದೇ ಖಾಸಗೀ ಕಟ್ಟಡಗಳು ಅಲ್ಲಿಲ್ಲ. ಅಲ್ಲಿರುವ ಎಲ್ಲಾ ಆಸ್ತಿಯು ಮಠಕ್ಕೆ ಸೇರಿದ್ದರಿಂದ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ. ಕೆಲವು ತಾತ್ಕಾಲಿಕ ಗುಡಿಸಲುಗಳಲ್ಲಿ ಹೊಟೇಲು ಅಂಗಡಿಮುಂಗಟ್ಟುಗಳು ಇದ್ದವು.
ಈ ಮಠದಲ್ಲಿ ಮೂರು ಸುತ್ತಿನ, ಪುಟ್ಟದಾದ, ಹೆಚ್ಚು ಎತ್ತರವಿಲ್ಲದ ಒಂದು ಕೋಟೆ(ಪೌಳಿ) ಇದೆ. ಅದನ್ನು ಹತ್ತಿ ಹೋಗಲು ಸುಮಾರು ಐವತ್ತು ಮೆಟ್ಟಿಲುಗಳಿವೆ. ನಡುವೆ ಒಂದು ರಂಗನಾಥಸ್ವಾಮಿ ದೇವಾಲಯ, ಒಂದು ಶಿವಾಲಯ ಹಾಗೂ ಸ್ವಾಮೀಜಿಗಳು ವಾಸಿಸುವ ಮನೆಗಳಿವೆ. ಮಠದಿಂದ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಎರಡು ಸುಬ್ರಹ್ಮಣ್ಯ ದೇವರ ಗುಡಿಗಳಿವೆ. ಅವುಗಳನ್ನು ಮೇಲಿನ ಸುಬ್ಬಪ್ಪ ಮತ್ತು ಕೆಳಗಿನ ಸುಬ್ಬಪ್ಪನ ಗುಡಿಗಳೆಂದು ಕರೆಯುತ್ತಾರೆ. ಈ ಮೇಲಿನ ಗುಡಿಯಿರುವ ಜಾಗದಿಂದ ಒಂದು ನಾಯಿ ಮತ್ತು ಕೆಳಗಿನ ಗುಡಿಯಿರುವ ಜಾಗದಿಂದ ಒಂದು ಮೊಲ ಓಡುತ್ತಾ ಬಂದು, ಈಗ ಮಠವಿರುವ ಜಾಗದಲ್ಲಿ ಜಗಳಕ್ಕೆ ಬಿದ್ದವಂತೆ! ನಂತರ ಯಾವುದೂ ಸೋಲದೆ ಇದ್ದುದ್ದನ್ನು ಕಂಡವರೊಬ್ಬರು ಅದನ್ನು ‘ಗಂಡುಭೂಮಿ’ ಎಂದು ಕರೆದು ಮಠ ಸ್ಥಾಪನೆ ಮಾಡಿದರಂತೆ!! ಮಠ ಸ್ಥಾಪನೆ ಮಾಡಿದ್ದು ವಿಜಯನಗರದ ಅರಸರು ಎಂಬುದು ಇನ್ನೊಂದು ಕಥೆ!!!
ಅದೇನೇ ಇರಲಿ. ಇತ್ತೀಚಿಗೆ ನನ್ನಲ್ಲಿ ಬೆಳೆದ ಐತಿಹಾಸಿಕ ಮತ್ತು ಜಾನಪದ ಸಂಶೋಧನೆಯ ಆಸಕ್ತಿಯಿಂದ ಈ ಮಠದ ಬಗ್ಗೆ ಒಂದು ಸಂಶೋಧನಾ ಲೇಖನವನ್ನು, ಡಾ. ಎಂ. ಬೈರೇಗೌಡ ಅವರ ಜೊತೆಯಲ್ಲಿ ಸೇರಿ ಸಿದ್ಧಪಡಿಸಿದ್ದೆ. ಅದು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಸಂಶೋಧನೆಯ ಫಲಿತಾಂಶದಂತೆ, ಈ ಮಠದ ಇತಿಹಾಸ ಹೀಗಿದೆ. ಮೂಲತಃ ಕುರುಬರಿಗೆ ಸೇರಿದ ಮಠ ಇದಾಗಿದ್ದು, ತಿಪಟೂರು ತಾಲೋಕಿನ, ಕೆರಗೋಡು ರಂಗಾಪುರ ಎಂಬಲ್ಲಿರುವ ಮಠದ ಶಾಖಾಮಠ ಇದಾಗಿತ್ತು. ನಂತರದ ದಿನಗಳಲ್ಲಿ ಒಕ್ಕಲಿಗ ಪ್ರಾಬಲ್ಯ ಹೆಚ್ಚಾದಂತೆ (ಕುರುಬ ಒಕ್ಕಲಿಗ ಎಂಬ ಜಾತಿಯೂ ಇದೆ!) ಒಕ್ಕಲಿಗರ ಮಠ ಎಂಬ ಪ್ರಚಾರ ಸಿಕ್ಕಿದೆ. ಈಗಲೂ ಕುಂದೂರಿನಲ್ಲಿ ನಡೆಯುವ ರಂಗನ ಕುಣತದಲ್ಲಿ ಮೊದಲಿಗೆ ಪೂಜೆ ಸಲ್ಲುವುದು ಕುರುಬರ ದೈವವಾದ ಬೀರೆ(ರ)ದೇವರಿಗೆ! ಮಠದಲ್ಲಿರುವ ದಾಖಲೆಗಳಿಂದಲೂ ಅದು ಮೂಲತಃ ಕುರುಬರ ಮಠ ಎಂಬುದು ಸ್ಪಷ್ಟವಾಗುತ್ತದೆ. ಮಠದಲ್ಲಿ ಕುರಿ ಸಾಕಾಣಿಕೆ ಒಂದು ಕಸುಬಾಗಿಯೇ ಬೆಳೆದು ಬಂದಿದೆ. ನಾವು ಹೈಸ್ಕೂಲು ಓದುವಾಗ್ಗೆ ಮಠದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕುರಿಗಳಿದ್ದವು.
ಈ ಮಠದಿಂದ ದಕ್ಷಿಣಕ್ಕೆ, ಕೂಗಳತೆಯ ದೂರದಲ್ಲಿ ಮೆಳೆಯಮ್ಮ ಎಂಬ ರಕ್ತದೇವತೆಯ ಗುಡಿಯಿದೆ. ಇಲ್ಲಿ ಪ್ರತಿದಿನ ನೂರಾರು ಭಕ್ತಾದಿಗಳು ಬಂದು ಕುರಿ, ಕೋಳಿ, ಹಂದಿಗಳನ್ನು ಮೆಳೆಯಮ್ಮನಿಗೆ ಬಲಿ ಕೊಟ್ಟು, ಅಲ್ಲಿಯೇ ಅಡುಗೆ ಮಾಡಿ, ಊಟ ಮಾಡಿಕೊಂಡು ಹೋಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೂರ್ಣಿಮೆ ದಿನಗಳಲ್ಲಿ ಇಲ್ಲಿ ಬಲಿಯಾಗುವ ಕುರಿ ಕೋಳಿಗಳ ಸಂಖ್ಯೆ ಸಾವಿರವನ್ನು ದಾಟುತ್ತದೆ. ಹೀಗೆ ಬಲಿ ಕೊಡಲು, ಮಠಕ್ಕೆ ಹಣ ಪಾವತಿಸಿ ರಸೀತಿ ಪಡೆಯಬೇಕು. ಕುರಿ, ಮೇಕೆಯ ಬಲಿಯಾದರೆ ಅವುಗಳ ಚರ್ಮವನ್ನು ಮಠಕ್ಕೆ ಒಪ್ಪಿಸಬೇಕು. ಇವುಗಳಿಂದ ಮಠಕ್ಕೆ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಜೊತೆಗೆ ಸಾಕಷ್ಟು ತೆಂಗಿನ ತೋಟವೂ ಜಮೀನೂ ಇದೆ.
ಇವುಗಳಲ್ಲದೆ, ಸುಗ್ಗಿಕಾಲದಲ್ಲಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ರೈತರುಗಳಿಂದ ರಾಗಿ, ಜೋಳ, ಭತ್ತ... ಹೀಗೆ ಬೆಳೆದಿದ್ದರಲ್ಲಿ ನಾಲ್ಕೈದು ಸೇರು ಧಾನ್ಯವನ್ನು, ಕೆಲವು ತೆಂಗಿನಕಾಯಿಗಳನ್ನು ವಸೂಲಿ ಮಾಡುತ್ತಿದ್ದರು. ವಸೂಲಿಗೆ ಹೋಗುವಾಗ, ಮುಂದೆ ಧ್ವಜ, ಛತ್ರಿ, ಚಾಮರಗಳನ್ನು ಹಿಡಿದ ಜನರು ಇದ್ದರೆ, ಅವರ ಹಿಂದೆ ಒಂದು ಬಸವನ ಮೇಲೆ ಒಬ್ಬ ಢಕ್ಕೆ ಬಡಿದುಕೊಂಡು ಕುಳಿತಿರುತ್ತಿದ್ದ. ಕೊಂಬು ಕಹಳೆ ಊದುವ ಜನರೂ ಇರುತ್ತಿದ್ದರು. ಅವರ ಹಿಂದೆ ಕುದುರೆಯ ಮೇಲೆ ಸ್ವಾಮೀಜಿಗಳಿರುತ್ತಿದ್ದರು. ಅವರ ಹಿಂದೆ ನಾಲ್ಕಾರು ಗಾಡಿಗಳು ಸಾಗುತ್ತಿದ್ದವು. ಹೀಗೆ ಕುಂದೂರುಮಠದ ಸ್ವಾಮೀಜಿಗಳು ವಸೂಲಿಗೆ ಹೊರಟರೆಂದರೆ, ಒಂದು ಚಿಕ್ಕ ಮೆರವಣಿಗೆಯೇ ಹೊರಟಂತಾಗುತ್ತಿತ್ತು!
ಕುದ್ರೆ ಕುಂದೂರಯ್ಯ
ಕುಂದೂರಯ್ಯ ಕುದ್ರೆ ಕೊಡು
ಹತ್ತಿ ನೋಡಾನ;
ಬಾಗೂರಯ್ಯ ಬಾಗ್ಲು ತಗಿ
ಬಗ್ಗಿ ನೋಡಾನ.
ಎಂಬುದು ಕುಂದೂರು ಪರಿಸರದ ಅತ್ಯಂತ ಜನಪ್ರಿಯ ಶಿಶುಪ್ರಾಸ. ಕುಂದೂರುಮಠಕ್ಕೂ ಕುದುರೆಗೂ ಅವಿನಾಭಾವ ಸಂಬಂಧ. ನಾವು ಹೈಸ್ಕೂಲಿನಲ್ಲಿದ್ದಾಗ ನಂಜಯ್ಯ ಎಂಬ ‘ದೊಡ್ಡಯ್ಯನೋರು’ ಬದುಕಿದ್ದರು. ಆಗಿದ್ದ ‘ಸಣ್ಣಯ್ಯನೋರು’ ಈಗ ‘ದೊಡ್ಡಯ್ಯನೋರು’ ಆಗಿದ್ದಾರೆ. ಮೊದಲ ಮಠಾಧಿಪತಿಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ ಎಂಬ ಪ್ರತೀತಿಯೂ ಇದೆ. ದೊಡ್ಡಯ್ಯನೋರು ಕುದುರೆ ಓಡಿಸುವುದರಲ್ಲಿ ನಿಪುಣರಾಗಿದ್ದರು. ಒಮ್ಮೆ ಮಠಕ್ಕೆ ನುಗ್ಗಿದ್ದ ಕಳ್ಳರು ಎಲ್ಲಾ ಕುರಿಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರಂತೆ. ರಂಗನಾಥಸ್ವಾಮಿಯೇ ಕನಸಿನಲ್ಲಿ ಬಂದು ಆಗ ಸಣ್ಣಯ್ಯನೋರಾಗಿದ್ದ ನಂಜಯ್ಯನನ್ನು ಎಬ್ಬಿಸಿದನಂತೆ! ಬೆತ್ತಲೆ ಕುದುರೆ ಹತ್ತಿದ ನಂಜಯ್ಯ, ಲಾರಿಯನ್ನು ಬೆನ್ನತ್ತಿ ಸಕಲೇಶಪುರದ ಬಳಿ ಕಳ್ಳರನ್ನು ಹಿಡಿದರಂತೆ! ಆಗಿನಿಂದ ಅವರಿಗೆ ‘ಕುದುರೆ ನಂಜಯ್ಯ’ ಎಂಬ ಹೆಸರು ಬಂದಿತಂತೆ! ಇನ್ನೊಂದು ಕಥೆಯಲ್ಲಿ, ಕಾರಿದ್ದ ಒಬ್ಬ ಸಾಹುಕಾರನಿಗೂ ಈ ನಂಜಯ್ಯನ ಕುದುರೆಗೂ ಪಂದ್ಯವಾಗಿ, ನಂಜಯ್ಯ ಕುದುರೆ ಸವಾರಿ ಮಾಡಿ ಗೆದ್ದರಂತೆ! ಉಸಿರು ಕಟ್ಟಿದ್ದ ಕುದುರೆಗೆ ತಕ್ಷಣ ನೀರು ಕುಡಿಸಿದ್ದರಿಂದ ಅದು ಸತ್ತು ಹೋಯಿತಂತೆ! ಅದನ್ನು ಮಠದ ಆವರಣದಲ್ಲಿ ಸಮಾಧಿ ಮಾಡಲಾಯಿತಂತೆ!
ಇಂತಹ ಕಥೆಗಳನ್ನು ನಾವು ಬಾಲ್ಯದಲ್ಲಿ ತುಂಬಾ ಕೇಳಿದ್ದೆವು. ಆದ್ದರಿಂದ ಕುಂದೂರುಮಠದ ಬಗ್ಗೆ ಸುತ್ತಮುತ್ತಲಿನ ಮಕ್ಕಳಿಗೆ ಏನೋ ಒಂದು ಬಗೆಯ ಆಕರ್ಷಣೆ. ಅದಕ್ಕಿಂತ ವಿಶೇಷ ಆಕರ್ಷಣೆಯೆಂದರೆ ಅಲ್ಲಿ ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಯುವ ಷಷ್ಠಿ ಜಾತ್ರೆ. ಮುಖ್ಯಜಾತ್ರೆ ಕಳೆದ ಒಂದು ತಿಂಗಳಿಗೆ ಮತ್ತೊಮ್ಮೆ ‘ಮರಿಜಾತ್ರೆ’ ಎಂದು ಹಬ್ಬ ಮಾಡುತ್ತಿದ್ದರಾದರೂ ಆಗ ಅಂಗಡಿಗಳು ಸೇರುತ್ತಿರಲಿಲ್ಲ.