Wednesday, July 15, 2015

ಎಲ್ಲರ ಕಣ್ಣು ಅನ್ನಭಾಗ್ಯದ ಅಕ್ಕಿಯ ಮೇಲೆಯೇ!

ವಸ್ತುನಿಷ್ಠ ಚರ್ಚೆಯ ಬದಲು ವೈಯಕ್ತಿಕ ನಿಂದನೆಗಿಳಿದವರಿಗೆ ಟಾಂಗ್ ಕೊಡುವಲ್ಲಿ ಶ್ರೀ ಎಸ್.ಎಲ್. ಭೈರಪ್ಪನವರು ಯಶಸ್ವಿಯಾಗಿದ್ದಾರೆ. ಭೈರಪ್ಪನವರು ಎತ್ತಿದ ವಿಷಯದ ಸಾಧಕ-ಬಾಧಕಗಳನ್ನು ಚರ್ಚಿಸದೆ, ಅವರ ವಾರಾನ್ನದ ವಿಷಯವನ್ನು ಪ್ರಸ್ತಾಪಿಸಿದವರು ಭಟ್ಟಂಗಿಗಳಲ್ಲದೆ ಬೇರೇನೂ ಅಲ್ಲ. ವ್ಯಕ್ತಿಗತ ನಿಂದನೆಗಿಳಿದ ಮಹಾಶಯರಿಗೆ, ವಾರಾನ್ನ ಮಾಡಿದವರು ಅನ್ನಭಾಗ್ಯ ಯೋಜನೆಯ ಬಗ್ಗೆ ಟೀಕೆ ಮಾಡಬಾರದೆಂದರೆ, ಮೃಷ್ಟಾನ್ನವುಂಡವರು ಟೀಕೆ ಮಾಡಬಹುದು ಎಂದಂತಾಗುತ್ತದೆ ಎಂಬುದರ ಅರಿವೂ ಇರಲಿಲ್ಲ. ಆದರೆ, ಭೈರಪ್ಪನವರಿಂದ ನಮ್ಮ ನಿರೀಕ್ಷೆ ಅದಾಗಿರಲಿಲ್ಲ!
ಕೆಲವು ವರ್ಷಗಳ ಹಿಂದೆ ಯಾವುದೋ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ದೇಶದಲ್ಲಿ ಸಾಕಷ್ಟು ಆಹಾರಧಾನ್ಯಗಳ ದಾಸ್ತಾನಿದ್ದರೂ, ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದ್ದುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿತರಣಾ ವ್ಯವಸ್ಥೆಯ ವೈಫಲ್ಯದ ಕಡೆಗೆ ಬೆರಳು ತೋರಿಸಿದ್ದು ಮಾದ್ಯಮಗಳಲ್ಲಿ ಪ್ರಕಟವಾಗಿತ್ತು. ಅನ್ನಭಾಗ್ಯ ಯೋಜನೆಯಲ್ಲೂ ಆಗಿದ್ದು ಅದೆ. ನಿಜವಾಗಿಯೂ ಹಸಿದವರಿಗೆ ಅನ್ನಭಾಗ್ಯ ಯೋಜನೆ ಒಂದು ಚೈತನ್ಯದಾಯಕ ಯೋಜನೆಯಾಗಿತ್ತು. ಆದರೆ ಅದು ಸದುಪಯೋಗವಾಗುವ ಬದಲು ದುರುಪಯೋಗವಾಗಿದ್ದೆ ಹೆಚ್ಚು. ಬಹುತೇಕ ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯವರೂ ಈ ಯೋಜನೆಯ ಫಲಾನುಭವಿಗಳೇ ಆಗಿದ್ದಾರೆ. ಅವರಲ್ಲಿ ಹೆಚ್ಚಿನವರು ಹತ್ತಿಪ್ಪತ್ತು ಎಕರೆ ಹೊಲ ತೋಟ, ಟ್ರಾಕ್ಟರ್, ಜೆಸಿಬಿ ಹೊಂದಿರುವವರೂ ಸೇರಿದ್ದಾರೆ. ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲೇ ನಮ್ಮ ಆಡಳಿತ ವ್ಯವಸ್ಥೆ ಸೋತುಹೋಗಿತ್ತು. ಇದು ಭಾರತದ ಬಹುತೇಕ ಯೋಜನೆಗಳ ಸಮಸ್ಯೆಯೂ ಆಗಿರುವುದು ನಮ್ಮ ದುರಂತ.
ಇನ್ನು, ಇಂತಹ ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂಬುದು ಅರ್ಧಸತ್ಯದ ಮಾತು. ಭೈರಪ್ಪನವರು ನೀಡಿರುವ ಒಂದೇ ಉದಾಹರಣೆಯಿಂದ ಇಂತಹ ತೀರ್ಮಾನಕ್ಕೆ ಬರಲಾಗುವುದಿಲ್ಲ. ಇದಕ್ಕೆ ತದ್ವಿರುದ್ಧವಾದ ಉದಾಹರಣೆಗಳು ಇವೆ. ನಮ್ಮ ಹಳ್ಳಿಯ ಕಡೆ ಕೃಷಿಕಾರ್ಮಿಕಳೊಬ್ಬಳನ್ನು ನಾನು ಈ ವಿಷಯವಾಗಿ ಕೇಳಿದಾಗ, ಆಕೆ, 'ಅವರು ಅಕ್ಕಿ ಕೊಟ್ಟರು ಅಂತ ಕೂಲಿಗೆ ಬರೋದು ತಪ್ಸಕ್ಕಾಗುತ್ತಾ' ಎಂದಳು. ಮುಂದುವರೆದು, 'ಏನೋ, ಆ ಉಳಿದ ದುಡ್ಡಲ್ಲಿ ಮಗಿಗೆ ಒಂದೆರಡು ಜೊತೆ ಒಳ್ಳೆ ಬಟ್ಟೆ ಕೊಡ್ಸೋಕ್ಕಾಯ್ತು. ಈಗ ಹುಡುಗ ಸಂತೋಷವಾಗಿ ಸ್ಕೂಲಿಗೆ ಹೋಗ್ತಾನೆ' ಎಂದಳು. ಎರಡೂ ಕಡೆಯ ವಾದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುವುದರಿಂದಲೇ ನಾನು ಇದನ್ನು ಅರ್ಧ ಸತ್ಯ ಎಂದು ಕರೆದಿದ್ದು.
ಎಸ್.ಎಂ.ಕೃಷ್ಣ ಸರ್ಕಾರ ಮಾಡಿದ ಅಭಿವೃದ್ಧಿ ಸಮತೋಲಿತ ಅಭಿವೃದ್ಧಿ ಅಲ್ಲ ಎಂಬುದು ಸಾಮಾನ್ಯ ಜ್ಞಾನವಿದ್ದವರಿಗೆ ಅರಿವಾಗಿರುತ್ತದೆ. ಕೇವಲ ನಗರಕೇಂದ್ರಿತ ಅಭಿವೃದ್ಧಿಯನ್ನು ಮಾದ್ಯಮಗಳ ಮುಖಾಂತರ ಬಿಂಬಿಸಿದ್ದನ್ನು ಯಾರೂ ಅಲ್ಲಗಳೆಯಲಾರರು. ಅಸಮತೋಲಿತ ಅಭಿವೃದ್ಧಿಯ ಕಾರಣದಿಂದಲೇ, ನಂತರದ ಚುನಾವಣೆಯಲ್ಲಿ ಕೃಷ್ಣ ಸರ್ಕಾರದ ಮುಕ್ಕಾಲು ಪಾಲು ಮಂತ್ರಿಗಳು ಮನೆಗೆ ಹೋದರು. ಅವರ ಪಕ್ಷ ಹೀನಾಯವಾಗಿ ಸೋತುಹೋಯಿತು. ಐಟಿ ಬಿಟಿಯ ಜೊತೆಗೆ ಕೃಷಿಯಾಧಾರಿತ ಕೈಗಾರಿಗಳ ಅಭಿವೃದ್ಧಿಗೂ ಒತ್ತು ಕೊಡಬೇಕು ಎಂದು ಕೃಷ್ಣ ಅವರಿಗೆ ಅನ್ನಿಸಿದ್ದು ಅವರು ಸೋತು ಮನೆ ಸೇರಿದಾಗಲೆ.
ಸರ್ಕಾರ ಒಂದು ಯೋಜನೆಯನ್ನು ಆರಂಭಿಸುವಾಗ, ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಯಾರಿಗಾಗಿ ಆ ಯೋಜನೆ ರೂಪಿಸುತ್ತಿದ್ದಾರೊ ಅವರಿಗೆ ಅದು ತಲಪುವಂತೆ ಮತ್ತು ಅನರ್ಹರಿಗೆ ದಕ್ಕದಂತೆ ಎಚ್ಚರ ವಹಿಸಬೇಕಾಗಿತ್ತು. ಸರ್ಕಾರ ಅನ್ನಭಾಗ್ಯ ವಿಷಯದಲ್ಲಿ ಎಡವಿದೆ.
ಉದ್ಯೋಗಸೃಷ್ಟಿಯ ವಿಷಯವನ್ನು ಅನ್ನಭಾಗ್ಯ ಯೋಜನೆಗೆ ತಳುಕು ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆಯೂ ಬರುತ್ತದೆ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ವೈಫಲ್ಯತೆಯನ್ನು ಪ್ರತ್ಯೇಕವಾಗಿಯೇ ಚರ್ಚಿಸಬಹುದಿತ್ತು. ಉದ್ಯೋಗ ಸೃಷ್ಟಿಗೆಂದೇ ಸ್ಥಾಪಿಸಿದ ಬೃಹತ್ ಕಂಪೆನಿಗಳಿಗೆ ಕೊಟ್ಟಿರುವ ನಾನಾ ವಿನಾಯಿತಿಗಳನ್ನು ಲೆಕ್ಕ ಹಾಕಿದರೆ, ಅನ್ನಭಾಗ್ಯ ಯೋಜನೆಗೆ ಮಾಡುವ ಖರ್ಚು ಶೇ. ಒಂದೊ ಎರಡೊ ಅಷ್ಟೆ. ಇಂತಹ ಚರ್ಚೆಗಳಿಂದ ಅನ್ನಭಾಗ್ಯ ಯೋಜನೆಯ ಮೂಲ ಆಶಯ ಮತ್ತು ಯೋಜನೆಯ ಜಾರಿಯಲ್ಲಿ ಆದ ಎಡವಟ್ಟುಗಳನ್ನು ಮರೆಮಾಚಿದಂತೆ ಆಗುತ್ತದೆಯೆ ಹೊರತು ಇನ್ನೇನೂ ಆಗಲಾರದು. ಆಗಿರುವ ಎಡವಟ್ಟುಗಳನ್ನು ಗುರುತಿಸಿ, ನಿಜವಾಗಿಯೂ ಅಗತ್ಯವಿರುವವರಿಗೆ ಮಾತ್ರ ಈ ಯೋಜನೆ ತಲಪುವಂತೆ ಮಾಡಿದರೆ ಅನ್ನಭಾಗ್ಯ ಯೋಜನೆ ಒಂದು ಚೈತನ್ಯದಾಯಕ ಯೋಜನೆಯಾಗಬಲ್ಲದು.
ಇಂದು ಎಲ್ಲದಕ್ಕೂ ಅನ್ನಭಾಗ್ಯ ಯೋಜನೆಯನ್ನು ಲಿಂಕ್ ಮಾಡಿ ಮಾತನಾಡುವ ದುರ್ ಹವ್ಯಾಸ ಕೆಲವರಲ್ಲಿದೆ. ಮೊನ್ನೆ ಸಂಜೆ ನನ್ನ ಸ್ನೇಹಿತರ ಮನೆಯಲ್ಲಿದ್ದಾಗ, ನಮಗಿಬ್ಬರಿಗೂ ಪರಿಚಯವಿದ್ದ ಒಬ್ಬ ಹಿರಿಯರು ಬಂದರು. ಒಂದು ಪುಟ ಕನ್ನಡ ಡಿಟಿಪಿ ಮಾಡಿಸಿಕೊಳ್ಳುವುದು ಅವರ ಉದ್ದೇಶ. ಅದರ ವಿಷಯ, ಹಿರಿಯ ನಾಗರಿಕರಿಗೆ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಅಥವಾ ಶೇ. 50 ರಿಯಾಯಿತಿ ನೀಡಬೇಕೆಂದು ಸಂಬಂಧಪಟ್ಟವರಿಗೆ ಆಗ್ರಹ ಮಾಡಲು ಆ ಪತ್ರ ಸಿದ್ಧಪಡಿಸಿದ್ದರು. ಆ ವಿಷಯವನ್ನು ಉತ್ಸಾಹದಿಂದ ನಮಗೆ ವಿವರಿಸಿದ ಹಿರಿಯರು, ಅನ್ನಭಾಗ್ಯಕ್ಕೆ ಸಾವಿರಾರು ಕೋಟಿ ಕೊಡುವುದಿಲ್ಲವೆ? ಇದಕ್ಕೂ ಒಂದಷ್ಟು ಕೊಡಲಿ ಬಿಡಿ ಎಂದು ಜಾಡಿಸಿದರು! ಆಗ ನಾನು ಸ್ವಾಮಿ, ನೀವು ಎಷ್ಟು ವರ್ಷದಿಂದ ಸಬ್ಸಿಡಿ ದರದ ಗ್ಯಾಸ್, ಡೀಸೆಲ್ ಪೆಟ್ರೋಲ್ ಬಳಸುತ್ತಿದ್ದೀರಿ. ಈಗಾಗಲೇ ಶೇ 10ರ ರಿಯಾಯಿತಿಯಲ್ಲಿ ಬಸ್ ಸೌಲಭ್ಯವನ್ನೂ ಪಡೆದಿದ್ದೀರಿ. ಈಗ ಇನ್ನೂ ಹೆಚ್ಚಿಗೆ ಬೇಕೆಂದು ಹೋರಾಟಕ್ಕೆ ಇಳಿಯುವ ಮಾತನಾಡುತ್ತಿದ್ದೀರಿ. ಒಂದಷ್ಟು ಪೆನ್ಷನ್, ಉದ್ಯೋಗದಲ್ಲಿರುವ ಮಗ ಎಲ್ಲವನ್ನೂ ಇಟ್ಟುಕೊಂಡೇ ನೀವು ಸರ್ಕಾರದಿಂದ ಮತ್ತೂ ನೆರವನ್ನು ಪಡೆಯಲು ಯೋಜಿಸುತ್ತಿದ್ದೀರಿ. ಆದರೆ, ಹಸಿದವರಿಗೆ ಕೊಡುವ ಐದು ಕೆಜಿ ಅಕ್ಕಿಯ ಮೇಲೆ ಕಿಡಿ ಕಾರುತ್ತೀರಿ. ಇದು ನ್ಯಾಯವೇ ಎಂದೆ. ಅವರು ಸ್ವಲ್ಪ ಅಸಮಾಧಾನದಿಂದಲೇ ನಿರ್ಗಮಿಸಿದರು ಎನ್ನಿ. ಒಟ್ಟಿನಲ್ಲಿ ಎಲ್ಲರ ಕಣ್ಣು ಅನ್ನಭಾಗ್ಯದ ಅಕ್ಕಿಯ ಮೇಲೆಯೇ!.
ಇನ್ನು ಇಂದು ಕಥೆಗಾರ್ತಿ ವೈದೇಹಿಯವರು, ಕಾರ್ಪುರೇಟ್ ಸಂಸ್ಥೆಗಳು ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇಡಂ, ನಿಮಗೆ ಗೊತ್ತೆ. ತಮ್ಮಿಂದ ಚುನಾಯಿತವಾದ ಸರ್ಕಾರದಿಂದ ಐದು ಕೆಜಿ ಅಕ್ಕಿ ಪಡೆಯುತ್ತಿರುವವರನ್ನು ಅನುಮಾನದಿಂದ ನೋಡುತ್ತಿರುವವರು ಇನ್ನು ಕಾರ್ಪೊರೇಟ್ ಸಂಸ್ಥೆಗಳಿಂದಲೂ ನೆರವು ಪಡೆದವರನ್ನು ಭಿಕ್ಷುಕರಂತೆ ಕಾಣುವುದಿಲ್ಲವೆ? ಮೂರು ಕಾಸು ಸಹಾಯ ಮಾಡಿ ಆರು ಕಾಸು ಪ್ರಯೋಜನ ಪಡೆಯುವ ಆ ಸಂಸ್ಥೆಗಳಿಂದ ನಿರ್ಮಾಣವಾಗುವ ಪರಿಸ್ಥಿತಿ ಖಂಡಿತಾ ಫಾಲಾನುಭವಿಗಳನ್ನು ಭಿಕ್ಷುಕರಂತೆ ಕಾಣುವಂತೆ ಮಾಡುತ್ತದೆ. ಈ ಸಂಸ್ಥೆಗಳು ರೈತರಿಗೆ ಸಹಾಯ ಮಾಡುವ ಬದಲು, ತಾವು ಯಾವುದೇ ತೆರಿಗೆ ರಿಯಾಯಿತಿ ಬಯಸದೆ, ಸರ್ಕಾರಕ್ಕೆ ಸಲ್ಲಬೇಕದ್ದನ್ನು ನ್ಯಾಯವಾಗಿ ಕೊಟ್ಟರೆ ಸಾಕಲ್ಲವೆ?
ರೈತರಿಗೆ ನಿಜವಾಗಿಯೂ ಬೇಕಾಗಿರುವುದು ಏನು? ಸಾಧ್ಯವಾದಷ್ಟು ನೀರಾವರಿ ಸೌಲಭ್ಯ. ಕೊಳವೆ ಬಾವಿಗಳಿಗೆ ಗುಣಮಟ್ಟದ ವಿದ್ಯುತ್, ಅಗತ್ಯ ಬಿದ್ದಾಗ ಸುಲಭ ಬಡ್ಇಡ ದರದ ಸಾಲ. ಬೆಳೆದ ಬೆಳೆಗೆ ಸರಿಯಾದ ಬೆಲೆ. ಬೆಳೆ ನಷ್ಟವಾದಾಗ ಸಕಾಲಕ್ಕೆ ಒದಗುವ ವಿಮಾ ಸೌಲಭ್ಯ. ಆದರೆ ಇವು ಇಂದು ನಮ್ಮ ದೇಶದಲ್ಲಿ ಸರಿಯಾಗಿ ಸಿಗುತ್ತಿವೆಯೇ? ಕೃಷಿಯಾಧಾರಿಯ ಕೈಗಾರಿಕೆಗಳ ಬೆಳವಣಿಗೆಯಾಗಿದೆಯೇ? …..
ಇನ್ನೊಬ್ಬ ಬರಹಗಾರ್ತಿ ರೈತರ ಆತ್ಮಹತ್ಯೆ ಕುರಿತು ಬರೆಯುವಾಗ ಪರಿಸ್ಥಿತಿಯ ಜೊತೆಗೆ ಮನಸ್ಥಿತಿಯೂ ಮುಖ್ಯ ಎನ್ನುತ್ತಾರೆ. ಬೆಳೆ ಬಾಡಿಹೋದ ಹೊಲಗಳ, ಕೈಗೆ ಬಂದ ತುತ್ತು ಬಾಯಿಗೆ ಬಾರದ ಕಬ್ಬು ಒಣಗಿಹೋದ ಗದ್ದೆಯ, ಕೊಯ್ಲಿನ ಕಾಸು ಗಿಟ್ಟದೆ ಹೊಲದಲ್ಲೇ ಕೊಳೆಯಲು ಬಿಟ್ಟ ತರಕಾರಿಗಳ ಗಿಡದ ದಂಡೆಯಲ್ಲಿ ನಿಂತ ರೈತನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾದೀತೆ? ಉಪದೇಶ ನೀಡುವುದು ಸುಲಭ. ಆದರೆ ನಾವೇ ಆ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭವೇ ಬೇರೆ!