Monday, June 27, 2011

ಹಸುರ ಮೇದುದು ಕವಿ ಪ್ರಾಣಕೋಶ!

ಭಾದ್ರಪದ ಮಾಸವನ್ನು ಕುರಿತ ಕುವೆಂಪು ಒಂದು ಚುಟುಕ ಹೀಗಿದೆ.
ಹಸುರು ಹಾಸಿದ ನೆಲದ
ಶಾದ್ವಲದ ಹಾಸ;
ತಿಲಕ ವೃಕ್ಷದ ಸಾಲು;
ಬುಡವೆಲ್ಲ ಹೂ ಹಾಲು:
ಭಾದ್ರಪದ ಮಾಸ!
ಕವಿಗೆ ಹಸುರೆಂದರೆ ಪ್ರೀತಿ. ಆಕರ್ಷಣೆ. ಭಾದ್ರಪದ ಮಾಸ ಕವಿಯ ಮನಸ್ಸಿಗಿಳಿಯುವುದು ಹಸುರಿನಿಂದಲೇ! ಕವಿಯ ಹಸುರಿನ ಪ್ರೀತಿಗೆ ’ಹೆಸರಿಲ್ಲದ ತಂಪು’ ಕವಿತೆಯ ಕೊನೆಯ ಸಾಲುಗಳನ್ನು ಗಮನಿಸಿ.
ಹಸುರು, ಹಸುರು, ಸೊಂಪು;
ಹೆಸರಿಲ್ಲದ ತಂಪು;
ತನಗೆ ತಾನೆ ಇಂಪು:
ಇಲ್ಲ ಬೇರೆ ಪೆಂಪು;
ಅಲ್ಲಿ ಬರಿ ಕುವೆಂಪು!. . . .  ದೂರ . . . .
ಹೀಗೆ 'ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್' ಎಂದು ಸದಾ ಹಸುರಿಗಾಗಿ ತುಡಿಯುವ ಕವಿಗೆ ತನ್ನ ಮನೆಯ ಉದ್ಯಾನವನದ ಹಸುರು ನಿತ್ಯೋತ್ಸವ ಸರ್ವದಾ ಅಪೇಕ್ಷಣೀಯ. ಉದಯರವಿಯ ಉದ್ಯಾನವನದಲ್ಲಿ ನಾನಾ ಜಾತಿಯ ಗಿಡ, ಮರ, ಹೂಗಿಡಗಳು ಇದ್ದುವು. ಅವೆಲ್ಲದರ ಜೊತೆಗೆ ಉದ್ಯಾನದ ಎರಡೂ ಕಡೆ ವಿಶಾಲವಾದ ಹುಲ್ಲುಹಾಸನ್ನು ಬೆಳಸಲಾಗಿತ್ತು. ಅದರ ನಿರ್ವಹಣೆಗೆ ಸ್ವತಃ ಕುವೆಂಪು ಅವರೇ ಶ್ರಮವಹಿಸುತ್ತಿದ್ದರು. ಬೇಸಗೆಯ ದಿನಗಳಲ್ಲಿ ಅದಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೆಕಾಗಿತ್ತು. ನಲ್ಲಿಯಲ್ಲಿ ನೀರು ಬರುತ್ತಿದ್ದುದೇ ದಿನ ಬಿಟ್ಟು ದಿನ. ಅದಕ್ಕಿಂತ ಹೆಚ್ಚಾಗಿ ಅಪರಾತ್ರಿಯ ವೇಳೆಯಲ್ಲೇ ನಲ್ಲಿಗಳಿಗೆ ಜೀವ ಬರುತ್ತಿತ್ತಂತೆ! ರಾತ್ರಿ ನೀರು ಬರುವ ಸದ್ದು ಕೇಳಿದರೆ ಕುವೆಂಪು ಅವರೇ ಎದ್ದುಹೋಗಿ ಹುಲ್ಲು ಹಾಸಿನ ಎಲ್ಲಾ ಕಡೆಗೆ ನೀರು ಹಾಕಿ ಹಾರೈಕೆ ಮಾಡುತ್ತಿದ್ದರಂತೆ. ಪ್ರಸಿದ್ಧ ನೇತ್ರ ತಜ್ಞರಾದ ಡಾ. ಮೋದಿಯವರು ಉದಯರವಿಗೆ ಬಂದಾಗಲೆಲ್ಲಾ ಸೊಂಪಾಗಿ ಬೆಳೆದ ಆ ಹುಲ್ಲುಹಾಸನ್ನು ತುಂಬಾ ಹೊತ್ತು ನೋಡಿ ನಂತರವೇ ಮನೆಯ ಒಳಗೆ ಬರುತ್ತಿದ್ದರಂತೆ! ಬಿರುಬಿಸಿಲಿನಲ್ಲಿಯೂ ಕಣ್ಣಿಗೆ ತಂಪು ಈ ನಿಮ್ಮ ಲಾನ್. ದಿನವೂ ನೋಡುತ್ತಿದ್ದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಕುವೆಂಪು ಅವರಿಗೆ ಹೇಳುತ್ತಿದ್ದರಂತೆ. ಒಮ್ಮೆ ಕುವೆಂಪು ಅವರು ಆ ಶಾದ್ವಲ ವೇದಿಕೆಯನ್ನೇ ನೋಡುತ್ತಾ ತಾರಿಣಿಯವರಿಗೆ ’ಏನು ಹಸಿರು ಉಕ್ಕುತಿದೆ ನೋಡಕ್ಕಾ, ಕಣ್ಗೆ ಸೊಂಪು, ಮನಕೆ ತಂಪು, ಹೃದಯ ಪೆಂಪು, ಹಸಿರು ಹೆಪ್ಪು ಬಿಸಿಲೊಳೆಸೆಯುವ ತೋಟವೇ ಕುವೆಂಪು, ಆಗಿ ತಿರುಗಾಡುತ್ತಿರುವೆ ಈ ಹೂದೋಟದಲ್ಲಿ’ ಎಂದು ಹೇಳಿದ್ದರಂತೆ.
ಅಂತಹ ಹುಲ್ಲು ಹಾಸು ಕವಿಗೆ ಹೇಗೆ ಕಂಡಿರಬಹುದು? ಉದ್ಯಾನ ಶಾದ್ವಲ ಕವಿತೆಯಲ್ಲಿ ಮೂಡಿದೆ ಕವಿಯ ಅಂತರಂಗ.
ಈ ಶಾದ್ವಲ . . .!
ಇದೇನು ಬರಿಯ ಹಸುರು ಹತ್ತಿದ ನೆಲ?
ನಂದನದ ಚೂರೊಂದು ನಮ್ಮಿಳೆಗೆ ಬಿದ್ದುದಲಾ!
ವರವೋ? ಶಾಪವೋ?
ಊರ್ವಶಿಯೆ ಹಸುರಾಗಿ ಇಳಿಯುತಿಲ್ಲಿ
ನಮ್ಮ ಮನೆ ’ಉದಯರವಿ’ಯುದ್ಯಾನದಲ್ಲಿ
ತಾನಾದಳೈಸೆ ಉರ್ವರಾ-ಶಾದ್ವಲಾ!
ಹಸುರು ಹತ್ತಿದ ನೆಲ, ಈ ಶಾದ್ವಲದ ವೇದಿಕೆ ಕವಿಗೆ ಇಂದ್ರನ ಉದ್ಯಾನ ನಂದನದ ತುಣುಕಿನಂತೆ ಕಾಣುತ್ತದೆ. ಶಾಪದಿಂದ ಊರ್ವಶಿ ಭೂಮಿಗೆ ಬಂದಳಂತೆ! ಆದರೆ ಆಕೆ ಬಂದಿದ್ದು ಹಸುರಾಗಿ, ಹಸುರಿನ ಹುಲ್ಲುಹಾಸಾಗಿ! ಬಂದು ನೆಲೆಯಾಗಿದ್ದು ಉದಯರವಿಯ ಉದ್ಯಾನವನದಲ್ಲಿ. ಊರ್ವಶಿ ಭುಮಿಗೆ ಬಂದದ್ದು ಶಾಪದಿಂದ. ಆದರೆ ಅವಳಿಗೆ ಶಾಪವಾಗಿದ್ದು ಕವಿಗೆ ವರವಾಗಿಬಿಟ್ಟಿದೆ!
ಭಾವಗೀತೆಯ ಪ್ರಾಣಕೇಂದ್ರದಲಿ ಕುಳಿತು, ಕವಿ
ತನ್ನ ಸೃಷ್ಟಿಗೆ ತಾನೆ ಮಾರುಹೋಗುವವೋಲೆ
ಮನೆಯ ಉದ್ಯಾನದೀ ಶಿಲೆಯ ಪೀಠದ ಮೇಲೆ
ದೇವನಾಗುತ್ತಿಹೆನು, ಮೆಯ್ಯೆಲ್ಲ ಮಿಂಚಿ! ರವಿ
ಪಚ್ಚೆಯೀ ಶಾದ್ವಲದಿ ಮೃಣಾಳಮರಕತಚ್ಛವಿ!. . . 
ಭಾವಗೀತೆಗೆ ಜೀವತುಂಬಿದವನು ಕವಿ. ಆತನೇ ಅದರ ಪ್ರಾಣಕೇಂದ್ರದಲ್ಲಿ ಕುಳಿತು ತನ್ನ ಸೃಷ್ಟಿಗೆ ತಾನೇ ಮಾರುಹೋಗಿಬಿಡುತ್ತಾನೆ, ’ತನ್ನ ಕೃತಿಗೆ ಕವಿ ತಾನೆ ಮಣಿವಂತೆ’. ಉದ್ಯಾನವನದಲ್ಲಿದ್ದ ಶಿಲಾಪೀಠದ ಮೇಲೆ ಕುಳಿತು ಕವಿ ಭಾವಸಮಾಧಿಸ್ತನಾಗಿಬಿಡುತ್ತಾನೆ ಎಂಬುದನ್ನು ದೇವನಾಗುತ್ತಿಹೆನು ಎಂದು ಹೇಳಿ ಆ ಬ್ರಹ್ಮಾನಂದಕ್ಕೆ ವಾಗ್ರೂಪವನ್ನು ಹೇಳಿದ್ದಾರೆ.
ಅಗ್ನಿಗಂಗೆಯ ಧರಿಸೆ ಧೂರ್ಜಟಿಯ ವ್ಯೋಮಕೇಶ,
ಉಸಿರೆಳೆದೆ ಹಸುರ ಮೇದುದು ಕವಿ ಪ್ರಾಣಕೋಶ!
ಹಸುರಿನ ದ್ಯಾನಮಗ್ನನಾದ ಕವಿಗೆ ಶಿವಸಾಕ್ಷಾತ್ಕಾರವಾಗಿಬಿಡುತ್ತದೆ. ಅಗ್ನಿಯಷ್ಟೇ ಪವಿತ್ರಳಾದ ಗಂಗೆಯನ್ನು ಧೂರ್ಜಟಿಯು ಧರಿಸಿದಂತೆ ಕವಿಯ ಪ್ರಾಣಕೋಶ ಹಸುರನ್ನು ಮೇಯುತ್ತದೆ, ಉಸಿರೆಳೆದೆ!
ಹೂವಾದರೆ ಹೋಗಲಿ; ಎಸಳು ಹಸುರು ಹುಲ್ಲಿಗೂ ಇಷ್ಟೊಂದು ಪ್ರಾಮುಖ್ಯೆತೆ ಏಕೆ ಎಂದೆನಿಸಬಹುದು ಸಾಮಾನ್ಯನ ಪ್ರಜ್ಞೆಗೆ. ಆದರೆ ಕವಿ ಪ್ರಜ್ಞೆಗೆ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಒಂದು ಎಸಳು ಹುಲ್ಲು, ಒಂದು ಹನಿ ಇಬ್ಬನಿ ಹೀಗೆ... ಸರ್ವದಲ್ಲೂ ಸೃಷ್ಟಿಯ ಬೆರಗನ್ನು ಆಸ್ವಾದಿಸಬಲ್ಲದಾಗಿರುತ್ತದೆ, ಸೃಷ್ಟಿಶೀಲ ಪ್ರತಿಭೆ. ರಾಮಾಯಣ ದರ್ಶನಂ ಕಾವ್ಯದಲ್ಲಿ ರಾಮನಿಗೆ 'ಗಿರಿವನಪ್ರಿಯ' ಎಂಬ ವಿಶೇಷಣವನ್ನು ಟಂಕಿಸಿ ಬಳಸಿದ್ದಾರೆ. ಪಂಚವಟಿಯಲ್ಲೊಮ್ಮೆ ರಾಮನು ಸೀತೆಗೆ ಹೇಳುವ ಮಾತುಗಳಲ್ಲಿ 'ಕಿರಿದರಲ್ಲಿ ಹಿರಯರ್ಥವನ್ನು' ಕಾಣುವ ಕವಿಯ ಮನೋಭಾವವನ್ನು ನೋಡಬಹುದು.

"ನೋಡು, ಮೈಥಿಲಿ, ಅಲ್ಲಿ!
ಪನಿ ತಳ್ತ ಶಾದ್ವಲ ಶ್ಯಾಮವೇದಿಕೆಯಲ್ಲಿ
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವಾ ಹಿಮದ ಬಿಂದು! ಜ್ವಲಿಸುತಿದೆ
ನೋಡೆಂತು ಬಣ್ಣದೆಣ್ಣೆಯ ಹಣತೆ ಸೊಡರಂತೆ
ಸಪ್ತರಾಗೋಜ್ವಲಂ! ಸರ್ವಸೃಷ್ಟಿಯ ದೃಷ್ಟಿ ತಾಂ
ಸೆರೆಯಾಗಲೊಪ್ಪಿರುವುದಾ ಹನಿಯ ಹೃದಯದಾ
ಪುಟ್ಟ ಜೋತಿಯಲಿ! ದೇವರ ಮುಖದ ದರ್ಶನಕೆ
ಸಾಲದೇನಾ ಹನಿಯ ಕಿರುದರ್ಪಣಂ? ನಿಲ್ಲಿಮ್: ಆ
ಇರ್ಬನಿಯ ಕಿಡಿಗುಡಿಯೊಳಾರಾಧನೆಯನೆಸಗಿ
ಮುಂಬರಿಯುವಂ!"

ಅಮ್ಮ ಮಾಡಿದ ಹೋದೋಟವೇ ತಂದೆಯವರ ಅನೇಕ ಕವನಗಳಿಗೆ ಸ್ಫೂರ್ತಿಯಾಗಿದೆ ಎಂದು ತಾರಿಣಿಯವರು ’ಕಣ್ಣು’ ಎಂಬ ಕವಿತೆಯನ್ನು ಉಲ್ಲೇಖಿಸಿದ್ದಾರೆ. ’ಮನೆಯ ಉದ್ಯಾನದಲ್ಲಿ ಆಶ್ವೀಜಮಾಸದ ಪ್ರಾತಃಸಮಯದ ಹೊಂಬಿಸಿಲಿನಲ್ಲಿ ಹಸುರು ಹೂವುಗಳ ವೈಭವವನ್ನು ಸವಿಯುತ್ತಿರುವಾಗ ಉಂಟಾದ ಅನುಭವ’ ಎಂಬ ಟಿಪ್ಪಣಿಯನ್ನು ಕವಿ ನೀಡಿದ್ದಾರೆ. ಆ ಕವನದ ಪೂರ್ಣಪಾಠ ಇಲ್ಲಿದೆ.
ಎಂತಹ ಕೃಪೆ ಈ ಕಣ್ಣು,
ಹೋದೋಟದ ಶ್ರೀನೋಟವ ಸವಿಯುತ್ತಿಹ ಈ ಕಣ್ಣು!
ಭಗವಂತನ ದಯೆ ಘನಿಸಿಹುದಿಲ್ಲಿ;
ಧನ್ಯತೆ ಕ್ಷಣಕ್ಷಣಕೂ ಅವತರಿಸಿದೆ ಇಲ್ಲಿ
ಹೂ ಹೂ ಹೂವಿನ ಸುಂದರ ರೂಪದಲಿ:
ಭಾವಿಸಿದನಿತೂ, ಕಯ್ ಮುಗಿಯುತ್ತಿದೆ;
ಚಿಂತಿಸಿದನಿತೂ, ಚೇತನ ರೋಮಾಂಚನವಾಗುತಿದೆ!
ಕಣ್ಣಿನ ಈ ಸೌಭಾಗ್ಯಕೆ
ಜೀವದ ಭಕ್ತಿ ಕೃತಜ್ಞತೆ
ಜಗದಂಬೆಯ ಪಾದಕೆ ಹೂವಾರತಿಯೆತ್ತುತಿದೆ!
ಸಾಕ್ಷಾತ್ಕಾರದ ಅಗ್ನಿಯ ಅಂಚಿಗೆ ತಾಗುತ್ತಿದೆ
ಶರಣೆನುವೀ ನನ್ನಾತ್ಮದ ರತಿ,
ಶರಣಾಗತಿ
ನಮಸ್‌ಕೃತಿ!
ಸೃಷ್ಟಿಯ ಸಾರ್ಥಕತೆಗೆ ಈ ಅಕ್ಷಿಯೆ ಸಾಕ್ಷಿ:
ಅಕ್ಷಿಯ ಪುರುಷಾರ್ಥಕೆ ಈ ಸೃಷ್ಟಿಯೆ ಸಾಕ್ಷಿ;
ಅಕ್ಷಿಯ ಸೃಷ್ಟಿಯ ಸಂಗಮಸೌಭಾಗ್ಯವೆ
ಕೃಪೆಯೆ ಸ್ವಯಂ ತಾನಾಗಿಹ ಈ ದೃಷ್ಟಿ!
ಎಂತಹ ಕೃಪೆ ಓ ಈ ಕಣ್ಣು!
ಎಂತಹ ಭಾಗ್ಯವೋ ಈ ಮಣ್ಣು!
ಕಣ್ಣು ಬರಿ ಇಂದ್ರಿಯವಲ್ಲೊ:
ಸಾಕ್ಷಾತ್ಕಾರದ ಅಪರೋಕ್ಷದ ಅನುಭೂತಿಯ ಒಂದಂಗ!

Thursday, June 23, 2011

ಗುಣಮಧುರ : ಡಾ ದೇವರಕೊಂಡಾರೆಡ್ಡಿಯವರ ಅಭಿನಂದನ ಗ್ರಂಥ

[ನನ್ನ ಪಿಹೆಚ್.ಡಿ. ಅಧ್ಯಯನದ ಮಾರ್ಗದರ್ಶಕರಾದ ಡಾ.ದೇವರಕೊಂಡಾರೆಡ್ಡಿಯವರಿಗೆ ಅವರ ಅಭಿಮಾನಿ ಹಾಗೂ ಶಿಷ್ಯರ ಬಳಗ 'ಗುಣಮಧುರ' ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿತ್ತು. ನೂರಾರು ಸಂಶೋಧನಾ ಲೇಖನಗಳನ್ನು ಒಳಗೊಂಡಿರುವ ಆ ಬೃಹತ್ ಕೃತಿಯನ್ನು ಹಿರಿಯರಾದ ಶ್ರೀ ಜಿ.ಎಸ್.ಎಸ್. ರಾವ್ ಅವರು ಪರಿಚಯಿಸಿದ್ದಾರೆ.]
ಕರ್ನಾಟಕದಲ್ಲಿ ಶಾಸನ ಮತ್ತು ಲಿಪಿ ತಜ್ಞರಲ್ಲಿ ಪ್ರಮುಖರೆಂದು ಡಾ|| ದೇವರಕೊಂಡಾರೆಡ್ಡಿಯವರು ಗುರುತಿಸಲ್ಪಡುತ್ತಾರೆ. ಅವರಿಗೆ ಅರವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಈ ’ಗುಣಮಧುರ’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗಿದೆ. ಬರೆದಿರುವ ಲೇಖಕರೆಲ್ಲರೂ ಡಾ|| ದೇವರಕೊಂಡಾರೆಡ್ಡಿಯವರ ಆತ್ಮೀಯರು ಹಾಗೂ ತಮ್ಮ ತಮ್ಮ ಅಧ್ಯಯನಾಸಕ್ತಿಯ ಕ್ಷೇತ್ರದಲ್ಲಿ ವಿದ್ವಾಂಸರು. 
ಡಾ||ದೇವರಕೊಂಡಾರೆಡ್ಡಿಯವರು ನಿರಂತರ ಅಧ್ಯಯನ ಶೀಲರಷ್ಟೆ ಅಲ್ಲದೆ ಬೇರೆ ಬೇರೆ ವಿದ್ವತ್ ವಿಭಾಗಗಳಲ್ಲಿ ತಮ್ಮ ವಿದ್ಯಾರ್ಥಿಗಳು ಕೂಡ ಸಂಶೋಧನೆ, ಅಧ್ಯಯನ ಕೈಗೊಳ್ಳಲು ಬೇಕಾದ ತರಬೇತಿಯನ್ನು ನೀಡಿ, ಶಾಸನ ಶಾಸ್ತ್ರ, ಲಿಪಿಶಾಸ್ತ್ರ, ವಾಸ್ತುಶಿಲ್ಪ, ಗ್ರಂಥ ಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ಸತ್ಯಶೋಧನೆಯು ನಿರಂತರವಾಗಿರುವಂತೆ ಮಾಡಿದ್ದಾರೆ. ಔದಾರ್ಯ ಪೂರ್ಣ ಮುಕ್ತ ಮನಸ್ಸು, ಎಲ್ಲರೊಂದಿಗೆ ಶುದ್ಧ ಸ್ನೇಹ, ನಿರ್ಮಲವಾದ ವ್ಯಕ್ತಿತ್ವ, ಬೇಡುವ ಮುಂಚೆಯೇ ತಾವಾಗಿಯೇ ನೀಡುವ ಸಹಾಯಹಸ್ತ, ಸಾಮಾನ್ಯರಲ್ಲಿ ಕಾಣದ ನಿರ್ಲಿಪ್ತತೆ ಮತ್ತು ಡಾ||ಶೇಷಶಾಸ್ತ್ರಿಗಳು ಹೇಳಿರುವಂತೆ ’ರೀಟೈರ್’ ಅಗಿ ’ಖೇಡ, ಖರ್ವಡ, ಮಡಂಬ, ಪಟ್ಟಣ’ಗಳನ್ನು ಅಧ್ಯಯನಕ್ಕಾಗಿ ಸುತ್ತುವುದು. . . ಇವು ಡಾ||ದೇವರಕೊಂಡಾರೆಡ್ಡಿಯವರ ಸಹಜ ಗುಣಗಳು. ಅವರ ಮಧುರವಾದ ಈ ಗುಣಗಳು ಸಂಪುಟಕ್ಕಿಟ್ಟಿರುವ ’ಗುಣಮಧುರ’ ಎಂಬ ಹೆಸರನ್ನು ಸಾರ್ಥಕ ಗೊಳಿಸಿವೆ.
ಲೇಖನದ ವಿಷಯಕ್ಕೆ ಅನುಗುಣವಾಗಿ ಪುಸ್ತಕದಲ್ಲಿ ಆರು ವಿಭಾಗಗಳಿವೆ. ಮೊದಲನೆಯ ವಿಭಾಗದಲ್ಲಿ ಡಾ|| ದೇವರಕೊಂಡಾರೆಡ್ಡಿಯವರೇ ಬರೆದಿರುವ ಆತ್ಮ ಕಥನ ಇದೆ. ಅವರು ಬಾಲ್ಯದಿಂದ ಪ್ರಾರಂಭಿಸಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿ ನಿವೃತ್ತರಾಗುವವರೆಗೂ ನಡೆದು ಬಂದ ದಾರಿಯ ಸಿಂಹಾವಲೋಕನ ಇದೆ. ಅವರು ಬಾಲ್ಯದಲ್ಲಿ ಕಂಡ ತಮ್ಮ ಹಳ್ಳಿಯ ಚಿತ್ರವನ್ನು ಅಲ್ಲಿಯ ಸಮಾಜವನ್ನು ಹಬ್ಬ-ಹರಿದಿನಗಳ ಆಚರಣೆಯನ್ನು ಸಮಾಜದ ವಿವಿಧ ಸ್ತರಗಳ ಪರಸ್ಪರ ಹೊಂದಾಣಿಕೆಯನ್ನೂ ತಮ್ಮ ಮನೆಯ ಸಂಕೀರ್ಣ ವಾತಾವರಣವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಓದುಗರಿಗೆ, ಡಾ||ದೇವರಕೊಂಡಾರೆಡ್ಡಿಯವರು ತಮ್ಮ ಯೌವನದ ದಿನಗಳಲ್ಲಿ ಬಂದ ಎಲ್ಲ ಅಡೆತಡೆಗಳನ್ನು ಎದುರಿಸಲು ಬಾಲ್ಯದ ಅನುಭವಗಳು ಯಾವ ರೀತಿಯ ಸಹಾಯ ಮಾಡಿದುವೆಂಬುದರ ಹೊಳಹು ದೊರೆಯುತ್ತದೆ.
ಎರಡನೆಯ ವಿಭಾಗವಾದ ’ಗುಣಗಾನ’ದಲ್ಲಿ ಡಾ|| ದೇವರಕೊಂಡಾರೆಡ್ಡಿಯವರನ್ನು ವೈಯಕ್ತಿಕವಾಗಿ ಬಲ್ಲ ಬಹಳ ಆತ್ಮೀಯರಾದ ಸಂಬಂಧಿಗಳು, ಸ್ನೇಹಿತರು, ಸಹೋದ್ಯೋಗಿಗಳು, ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಲೇಖನಗಳಲ್ಲಿ ದೇವರಕೊಂಡಾರೆಡ್ಡಿಯವರ ತಾಯಿ, ಪತ್ನಿ ಹಾಗೂ ಮಗಳ ಲೇಖನಗಳು ಮನ ಮುಟ್ಟುವಂತಿದ್ದು, ಹೃದಯವನ್ನು ಆರ್ದಗೊಳಿಸುತ್ತವೆ. ಒಡನಾಡಿದ್ದು ಕಲ್ಲಿನಲ್ಲಿ ಕೊರೆದ ಶಾಸನಗಳೊಂದಿಗಾದರೂ ರೆಡ್ಡಿಯವರ ಹೃದಯ ಬೆಣ್ಣೆಯಷ್ಟು ಮೃದು ಎಂಬುದನ್ನು ನಿರೂಪಿಸುವುದರಲ್ಲಿ ಸಾರ್ಥಕವಾಗಿವೆ. ರೆಡ್ಡಿಯವರ ಬುದ್ದಿಮತ್ತೆ ನಿಷ್ಪಕ್ಷಪಾತ ನಿಲುವು, ಪಾಂಡಿತ್ಯ ಹಾಗೂ ಜೀವನೋತ್ಸಾಹಗಳನ್ನು ತಿಳಿಯಲು ನಾಡಿನ ಪ್ರಸಿದ್ಧ ವಿದ್ವಾಂಸರುಗಳು ಬರೆದಿರುವ ಲೇಖನಗಳು ಸಹಾಯಮಾಡುತ್ತವೆ. ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವ ಮೂರು ಜನ ಶಿಷ್ಯರ ಲೇಖನಗಳಲ್ಲಿ ಅವರ ಶಿಷ್ಯ ವಾತ್ಸಲ್ಯ, ಅಧ್ಯಯನದ ಬಗ್ಗೆ ಇರಬೇಕಾದ ಶಿಸ್ತು ಮುಂತಾದವುಗಳ ಬಗ್ಗೆ ಮಾಹಿತಿಯಿದೆ. 
ಗ್ರಂಥಾವಲೋಕನ ಎಂದು ತಲೆಬರಹವಿರುವ ಮೂರನೆಯ ವಿಭಾಗದಲ್ಲಿ ಬಹುತೇಕ ಲೇಖನಗಳು ರೆಡ್ಡಿಯವರಿಂದ ರಚಿತವಾದ ಕೃತಿಗಳ ಪರಿಚಯ ಸಮೀಕ್ಷೆ ಗೆ ಮೀಸಲಾಗಿವೆ. ಪ್ರಾತಿನಿಧಿಕವಾಗಿ ಕೆಳಕಂಡ ಲೇಖನಗಳನ್ನು ಗಮನಿಸಬಹುದು. ಲೇಖಕರಾಗಿ ಅವರು ಪಾಲಿಸುತ್ತಿದ್ದ ಶಿಸ್ತು ಕೃತಿಗಳನ್ನು ಸಂಪಾದಿಸುವಾಗ ಗಮನಿಸುತ್ತಿದ್ದ ಸೂಕ್ಷ್ಮವಾದ ವಿಷಯಗಳು ಇತರ ಲೇಖಕರನ್ನು ವಿಮರ್ಶಿಸುವಾಗ ತೋರಿರುವ ಸಂಯಮ ಮುಂತಾದ ಗುಣಗಳು ಓದುಗರನ್ನು ಥಟ್ಟನೆ ಆಕರ್ಷಿಸುತ್ತವೆ. ಒಬ್ಬ ಒಳ್ಳೆಯ ಸಂಪಾದಕನಿಗೆ ಇರಲೇಬೇಕಾದ ಎಲ್ಲಾ ಗುಣಗಳನ್ನು ಇಲ್ಲಿರುವ ಲೇಖನಗಳ ಸಂಪಾದನೆಯಲ್ಲಿರುವುದನ್ನು ಕಾಣಬಹುದಾಗಿದೆ. ರೆಡ್ಡಿಯವರ ’ಲಿಪಿಯ ಹುಟ್ಟು ಮತ್ತು ಬೆಳವಣಿಗೆ’ ಎನ್ನುವ ಪುಟ್ಟ ಪುಸ್ತಕವನ್ನು ಅವಲೋಕಿಸಿರುವ ಡಾ| ಎಂ. ಶ್ರೀನಿವಾಸರು ಕೃತಿಯು ಹೇಗೆ ಲಿಪಿ ಪ್ರಪಂಚವನ್ನು ಪರಿಚಯಿಸುತ್ತದೆ ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಶ್ರೀ ಎಸ್. ನಂಜುಂಡಸ್ವಾಮಿಯವರ ’ದೇವರಕೊಂಡಾರೆಡ್ಡಿಯವರ ಕೆಲವು ಕೃತಿಗಳು ಒಂದು ಪರಿಚಯ’ ಎನ್ನುವ ಲೇಖನ ದೇವರಕೊಂಡಾರೆಡ್ಡಿಯವರ ಆಸಕ್ತಿಯ ವಿಸ್ತಾರವನ್ನು ಸೂಚ್ಯವಾಗಿ ಹೇಳುತ್ತದೆ. ಡಾ.ಶಾಂತಿನಾಥ ದಿಬ್ಬದ ಅವರು ’ಕರ್ನಾಟಕ ಶಾಸನಗಳಲ್ಲಿ ಶಾಪಾಶಯ ಎಂಬ ರೆಡ್ಡಿಯವರ ಕುತೂಹಲಕಾರಿ ಕೃತಿಯನ್ನು ಪರಿಚಯಿಸಿದ್ದಾರೆ. ಶಾಸನಗಳು ಅವಿಭಾಜ್ಯ ಭಾಗವಾಗಿಯೂ ಅವಜ್ಞೆಗೆ ಒಳಗಾಗಿದ್ದ ಶಾಪಾಶಯಗಳ ಬಗ್ಗೆ ಉತ್ತಮ ಆಕರಗ್ರಂಥವೊಂದನ್ನು ದೊರಕಿಸಿಕೊಟ್ಟಿದ್ದಾರೆ. ಡಾ|| ಕೆ.ಆರ್.ಗಣೇಶ್ ಅವರು ರೆಡ್ಡಿಯವರು ಸಂಪಾದಿಸಿ ಹಂಪಿವಿಶ್ವವಿದ್ಯಾನಿಲಯದಿಂದ ಪ್ರಕಟಿಸಲ್ಪಟ್ಟಿರುವ ಒಂಭತ್ತು ಶಾಸನ ಸಂಪುಟಗಳ ವಿಶೇಷತೆಗಳನ್ನು ಗುರುತಿಸಿದ್ದಾರೆ. ಅವರು ರೆಡ್ಡಿ ಹಾಕಿಕೊಟ್ಟ ಈ ದಾರಿಯಲ್ಲಿ ಹಂಪಿಯ ವಿಶ್ವವಿದ್ಯಾಲಯ ಮಾತ್ರವಲ್ಲ, ಉಳಿದ ಎಲ್ಲ ವಿಶ್ವವಿದ್ಯಾಲಯಗಳು ನಡೆದು ನಾಡಿನ ಸಾಂಸ್ಕೃತಿಕ ಮುಖವೊಂದರ ಬೆಳಕಿಗೆ ಕಾರಣವಾಗಬೇಕಾಗಿದೆ ಎಂದಿರುವುದು ಸಕಾಲಿಕವಾಗಿದೆ.
ನಾಲ್ಕನೆಯ ವಿಭಾಗದಲ್ಲಿ ಲಿಪಿಗಳನ್ನು ಕುರಿತಂತೆ ಮೌಲಿಕವಾದ ಹನ್ನೊಂದು ಲೇಖನಗಳಿವೆ. ಪ್ರತಿ ಲೇಖನವೂ ಲಿಪಿಯೊಂದರ ಸಮಗ್ರ ಚರಿತ್ರೆಯನ್ನು ತೆರೆದಿಡುವುದಲ್ಲದೆ, ಲಿಪಿಯ ವಿಶೇಷತೆಯನ್ನು ಲಿಪಿ ಶಾಸ್ತ್ರದಲ್ಲಿ ಅದರ ಸ್ಥಾನ ಹಾಗೂ ಮಹತ್ವವನ್ನು ತಿಳಿಸಿಕೊಡುತ್ತದೆ. ಲಿಪಿಗಳ ವಿಚಾರವಾಗಿ ಆಕರಗಳೆಂದು ಪರಿಗಣಿಸಬಹುದಾದ ಈ ಲೇಖನಗಳು ವಿದ್ವತ್ ಪೂರ್ಣವಾಗಿವೆ. ಡಾ||ಅ.ಲ.ನರಸಿಂಹನ್ ಅವರ ’ಚಿತ್ರಲಿಪಿ’ ತಲೆಬರಹದ ಲೇಖನ ಇಂದಿನ ಲಿಪಿಗಳ ಉಗಮಕ್ಕೆ ’ಚಿತ್ರಲಿಪಿ’ ಗಳ ಕೊಡುಗೆಯನ್ನು ಸಮರ್ಥವಾಗಿ ನಿರೂಪಿಸುತ್ತದೆ. ಲೇಖನದ ಉದ್ದಕ್ಕೂ ಇರುವ ವಿವರಣಾತ್ಮಕ ಚಿತ್ರಗಳು ಓದುಗರಿಗೆ ವಿಷಯದ ಬಗ್ಗೆ ಆಸಕ್ತಿಯನ್ನು ಉಂಟುಮಾಡುತ್ತದೆ.
ಶ್ರೀ ಜಿ.ಕೆ.ದೇವರಾಜ ಸ್ವಾಮಿಯವರ ’ಲಿಪಿಯ ಉಗಮ ಮತ್ತು ವಿಕಾಸದ ಬಗೆಗಿನ ಸಿದ್ಧಾಂತಗಳು’ ಎಂಬ ಲೇಖನ ವಿಷಯದ ಬಗೆಗೆ ಇದುವರೆಗೆ ಬಂದಿರುವ ಎಲ್ಲ ಸಿದ್ಧಾಂತಗಳನ್ನೂ ಸಂಕ್ಷಿಪ್ತವಾಗಿ ವಿವೇಚಿಸಿ, ಸಿಂಧೂ ಲಿಪಿ, ಬ್ರಾಹ್ಮೀ ಲಿಪಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ.
’ವಿಶ್ವಲಿಪಿಗಳ ಮಹಾತಾಯಿ ಸೆಮೆಟಿಕ್ ಲಿಪಿ’ ಲೇಖನದಲ್ಲಿ ಡಿ.ಸ್ಮಿತಾರೆಡ್ಡಿಯವರು ಸೆಮೆಟಿಕ್ ಲಿಪಿಯು ನೂರಕ್ಕೂ ಹೆಚ್ಚು ಲಿಪಿಗಳ ಸಮೂಹಕ್ಕೆ ಲಿಪಿ ವ್ಯವಸ್ಥೆಯಾಗಿರುವುದನ್ನು ಸಾಧಾರವಾಗಿ ನಿರೂಪಿಸಿದ್ದಾರೆ. ಡಾ||ಎನ್.ಆರ್.ಲಲಿತಾಂಬ ಅವರು ಬರೆದಿರುವ ’ರೊಸೆಟ್ಟಾ ಶಿಲೆ ತೆರೆದ ರಹಸ್ಯ’ ಎಂಬ ಪ್ರಬಂಧ ’ಹೈರೋಗ್ಲೈಫ್’ ಗಳನ್ನು ಸಮರ್ಥವಾಗಿ ಅರ್ಥೈಸಿದುದರ ಕಥೆಯನ್ನು ರೋಚಕವಾಗಿ ತಿಳಿಸುತ್ತದೆ. ಸುಂಕಂ ಗೋವರ್ಧನರ ಪ್ರಬಂಧ ’ಅರಾಬಿಕ್, ಪರ್ಶಿಯನ್ ಹಾಗೂ ಉರ್ದು ಲಿಪಿಗಳ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದೆ. ಈ ಲಿಪಿಗಳು ತಮ್ಮ ಉಪಯುಕ್ತತೆಗೆ ಮಾತ್ರವಲ್ಲದೆ, ಸುಂದರವಾದ ಕೈಬರಹ (ಕ್ಯಾಲಿಗ್ರಫಿ)ಗಳಿಗಾಗಿ ಪ್ರಪಂಚದಲ್ಲೇ ಪ್ರಸಿದ್ಧವಾಗಿವೆ. ಅಪರೂಪವೆನಿಸುವ ಶಂಖಲಿಪಿಯ ಶಾಸನಗಳ ಅವಲೋಕನವನ್ನು ಡಾ|| ಶ್ರೀನಿವಾಸ ವಿ. ಪಾಡಿಗಾರರು ಮಾಡಿರುತ್ತಾರೆ. ಒಟ್ಟು ೬೭ ನೆಲೆಗಳಲ್ಲಿ ಶಂಖಲಿಪಿಯ ೬೪೦ ಶಾಸನಗಳನ್ನು ಗುರುತಿಸಲಾಗಿದೆಯೆಂಬ ಕುತೂಹಲಕರ ಸಂಗತಿ ತಿಳಿದುಬರುತ್ತದೆ. ಸಂಶೋಧನೆಗೆ ವಿಪುಲ ಅವಕಾಶವಿರುವ ಈ ವಿಷಯದ ಬಗೆಗಿನ ಲೇಖನ ಸ್ವಾಗತಾರ್ಹವಾದುದಾಗಿದೆ.
ತಮಿಳು ಬ್ರಾಹ್ಮೀ ಗ್ರಂಥ ಹಾಗೂ ವಟ್ಟೆಳುತ್ತು ಲಿಪಿಗಳು ಬಗ್ಗೆ ಡಾ||ತಮಿಳ್ ಸೆಲ್ವಿಯವರು ತಲಸ್ಪರ್ಶಿಯಾದ ಲೇಖನ ಬರೆದಿದ್ದಾರೆ. ಗ್ರಂಥ ಹಾಗೂ ವಟ್ಟೆಳುತ್ತು ಲಿಪಿಗಳ ಉಗಮ, ಅವುಗಳು ಪ್ರಸಾರದಲ್ಲಿದ್ದ ಪ್ರದೇಶಗಳು ಮತ್ತು ಅವುಗಳ ವಿಶೇಷತೆಯನ್ನು ಸ್ಫುಟವಾಗಿ ತಿಳಿಸಿಕೊಟ್ಟಿದ್ದಾರೆ. ಶ್ರೀ ಎಂ.ವಿಶ್ವೇಶ್ವರ ಅವರು ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಲ್ಲದ ಆದರೆ ಕುತೂಹಲಕಾರಿಯಾದ ’ಆದಿಲ್ ಶಾಹಿಕಾಲದ ಅಲಂಕಾರಿಕ ಲಿಪಿ ಶೈಲಿಗಳನ್ನು’ ಪರಿಚಯಿಸಿದ್ದಾರೆ. ಅಲಂಕಾರಿಕ ಲಿಪಿ ಶೈಲಿಗಳಲ್ಲಿರುವ ವೈವಿಧ್ಯಗಳನ್ನು ವಿವರಿಸಿ, ಅವುಗಳನ್ನು ಕಟ್ಟಡಗಳ ವಾಸ್ತುವಿನಲ್ಲಿ ಅಳವಡಿಸಿರುವ ಬಗೆ ವರ್ಣ ಚಿತ್ರಗಳಲ್ಲಿ ಅವುಗಳ ಉಪಯೋಗ, ಹಸ್ತಪ್ರತಿಗಳಲ್ಲಿ ಅಲಂಕಾರಲಿಪಿಯ ಪ್ರಯೋಗ, ಇವೆಲ್ಲದರ ಪರಿಚಯ ಮಾಡಿಕೊಡುವ ಚಿತ್ರಗಳೂ ಲೇಖನದಲ್ಲಿವೆ. ಡಾ||ಎಂ.ವೈ. ಸಾವಂತ ಧಾರವಾಡರು ’ಮರಾಠಿ ಮೋಡಿ ಲಿಪಿಯ ಸ್ಥೂಲ ಪರಿಚಯ’ ಮಾಡಿಕೊಟ್ಟಿದ್ದಾರೆ. ’ಸ್ಥೂಲ ಪರಿಚಯ’ವೆಂದಿದ್ದರೂ ಮೋಡಿ ಲಿಪಿಯ ಎಲ್ಲ ವೈಶಿಷ್ಟ್ಯಗಳನ್ನು ಲೇಖನದಲ್ಲಿ ವಿವರಿಸಲಾಗಿದೆ. ಈ ವಿಭಾಗದಲ್ಲಿರುವ ಎಲ್ಲ ಲೇಖನಗಳೂ ತಮ್ಮ ವಿನೂತನ ವಸ್ತು, ಶೈಲಿ ಹಾಗೂ ಉಪಯುಕ್ತತೆಯಿಂದ ಗಮನಾರ್ಹವಾಗಿವೆ.
ಶಾಸನ ಅಧ್ಯಯನ ಮತ್ತು ಇತರ ಲೇಖನಗಳು ಎಂಬ ವಿಭಾಗದಲ್ಲಿ ೪೮ ಲೇಖನಗಳಿದ್ದು, ಅತ್ಯಂತ ದೊಡ್ಡ ವಿಭಾಗವಾಗಿದೆ. ಲೇಖಕರು ತಮಗೆ ಆಸಕ್ತಿಯಿರುವ ಕ್ಷೇತ್ರಗಳ ಮಾಡಿರುವ ಅಧ್ಯಯನವನ್ನು ದಾಖಲಿಸಿದ್ದಾರೆ. ಅನೇಕ ಹೊಸ ವಿಚಾರಗಳನ್ನು ಬೆಳಕಿಗೆ ತರಲಾಗಿದೆ. ಅನೇಕ ವಿಷಯಗಳ ಬಗ್ಗೆ ಇನ್ನೂ ನಡೆಯಬೇಕಾಗಿರುವ ಸಂಶೋಧನೆಯ ಬಗೆಗೂ ಸೂಚಿಸಲಾಗಿದೆ. ಮಾಹಿತಿಯ ಮಹಾಪೂರವೇ ಇದೆ.
ಕೊನೆಯ ವಿಭಾಗದಲ್ಲಿ ’ವಾಸ್ತು ಮತ್ತು ಶಿಲ್ಪಕಲೆ’ ಎಂಬ ತಲೆಬರಹದ ಅಡಿಯಲ್ಲಿ ಹದಿನಾರು ಲೇಖನಗಳಿವೆ. ವಿವಿಧ ವಿದ್ವಾಂಸರು ತಮಗೆ ಆಸಕ್ತಿಯಿರುವ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿ ಬರೆದಿರುವ ಲೇಖನಗಳಿವು. ವಿಷಯದ ಬಗೆಗಾಗಲೀ ಲೇಖನದ ವಿಸ್ತಾರಕ್ಕಾಗಲೀ ಯಾವುದೇ ರೀತಿಯ ನಿರ್ಬಂಧಗಳು ಇಲ್ಲದಿರುವುದರಿಂದ, ಲೇಖನಗಳು ಬಹುತೇಕ ಸಮಗ್ರವಾಗಿವೆ. 
ಸಣ್ಣ ಪುಟ್ಟ ಸ್ಖಾಲಿತ್ಯಗಳು ಸಂಪುಟದಲ್ಲಿದ್ದರೂ ಅವು ಗ್ರಂಥದ ಒಟ್ಟಾರೆ ಗುಣಗ್ರಹಣಕ್ಕೆ ತೊಂದರೆಯನ್ನುಂಟುಮಾಡುವುದಿಲ್ಲ. ವಿದ್ವತ್ ಪೂರ್ಣವಾದ ಗ್ರಂಥಗಳು ಅಪರೂಪವಾಗುತ್ತಿರುವ ಈ ಕಾಳಘಟ್ಟದಲ್ಲಿ ’ಗುಣಮಧುರ’ ಒಂದು ಸಂಗ್ರಹ ಯೋಗ್ಯ ಕೃತಿಯಾಗಿದ್ದು, ಅದರ ಇಲ್ಲ ಲೇಖಕರು ಸಂಪಾದಕರು ಹಾಗೂ ಪ್ರಕಾಶಕರು ಅಭಿನಂದನಾರ್ಹರಾಗಿದ್ದಾರೆ.

ಶ್ರೀ ಜಿ.ಎಸ್.ಎಸ್. ರಾವ್
ನಂ ೩೦ ’ವಾತ್ಸಲ್ಯ’ ಒಂದನೆಯ ಅಡ್ಡರಸ್ತೆ
ಓಬಳಪ್ಪ ಗಾರ್ಡನ್, ಟಾಟಾ ಸಿಲ್ಕ್ ಫಾರ್ಮ್
ಬೆಂಗಳೂರು
ದೂ: ೦೮೦-೨೬೭೬೨೯೭೯, ಮೊ: ೯೬೧೧೭೦೩೧೦೫

Monday, June 20, 2011

ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!

ಉದಯರವಿಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗಲೇ ಗಮನ ಸೆಳೆದ ಬೇರೊಂದು ಕವಿತೆಯ ಕಾರಣದಿಂದಾಗಿ, ನನ್ನ ದಾರಿ ಒಂದು ಹೊರಳುವಿಕೆಯನ್ನು ಕಂಡಿದೆ. ಮತ್ತೆ ಉದ್ಯಾನವನಕ್ಕೆ ಬರುವ ಮೊದಲು, ನೇರ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನ ಉಪನ್ಯಾಸ ಮಂದಿರಕ್ಕೆ ಒಂದು ಬೇಟಿ ಕೊಟ್ಟುಬಿಡೋಣ!?

’ಇನ್ನೂ ನಾಲ್ಕು ಪೀರಿಯಡ್ ಹೆಚ್ಚಿಗೆ ಪಾಠ ಬೇಕಾದರೆ ಮಾಡಬಹುದು, ಇನ್ವಿಜಿಲೇಷನ್ ಡ್ಯೂಟಿ ಮಾಡುವುದು ಮಾತ್ರ ಆಗುವುದಿಲ್ಲ’ ಎಂದು ಗೊಣಗಿಕೊಳ್ಳುವ ಅಧ್ಯಾಪಕ ಮಿತ್ರರನ್ನು ನಾನು ಕಂಡಿದ್ದೇನೆ. ಗ್ರಂಥಪಾಲಕನಾಗಿರುವ ನನಗೆ, ಕೆಲಸಕ್ಕೆ ಸೇರಿದ ಹೊಸತರಲ್ಲಿ ಇನ್ವಿಜಿಲೇಷನ್ ಡ್ಯೂಟಿ ಮಾಡಬೇಕಾಗಿದ್ದುದರಿಂದ ಅದರ ತಾಪವನ್ನು ನಾನೂ ಅನುಭವಿಸಿದ್ದೇನೆ. ಒಂದು ದೊಡ್ಡ ಹೋರಾಟದ ನಂತರವೇ ನಾನು ಆ ಕರ್ಮದಿಂದ ವಿನಾಯ್ತಿ ಪಡೆದಿದ್ದೇನೆ. ಈಗ ಮತ್ತೆ ಅಧ್ಯಾಪನಕ್ಕಿಳಿದಿರುವುದರಿಂದ ಅದನ್ನು ಅನುಭವಿಸಲೇ ಬೇಕಾಗಿದೆ. ಅದು ಒತ್ತಟ್ಟಿಗಿರಲಿ. ಈಗ ಅದರಿಂದಲೂ ಉಪಯೋಗ ಪಡೆಯಬಹುದು ಎಂಬುದನ್ನು ನೋಡೋಣ.

೧೯.೦೯.೧೯೪೦ರಂದು ಪರೀಕ್ಷಾ ಹಾಲ್ ಆಗಿದ್ದ ಇಂಟರ್ ಮೀಡಿಯೇಟ್ ಕಾಲೇಜಿನ ಉಪನ್ಯಾಸ ಮಂದಿರದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಅದಕ್ಕೆ ಇನ್ವಿಜಿಲೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು ಕೆ.ವಿ. ಪುಟ್ಟಪ್ಪ. ಸ್ಥಾವರ ಪ್ರಕೃತಿಯವರಾದ ಅವರಿಗೆ ಏಕಾಂತವೂ ಅಚ್ಚುಮೆಚ್ಚಿನ ಹವ್ಯಾಸ. ಆ ಏಕಾಂತದಲ್ಲಿ ಅವರ ಮನಸ್ಸು ಕಾಲದೇಶಗಳನ್ನು ಮೀರಿ ವಿಹರಿಸುತ್ತಿರುತ್ತದೆ! ಇನ್ವಿಜಿಲೇಷನ್ ಡ್ಯೂಟಿಯಲ್ಲಿ ಸುಮಾರು ಮೂರು-ಮೂರೂವರೆ ಗಂಟೆಗಳ ಕಾಲ ಆ ದೊಡ್ಡ ಹಾಲಿನಲ್ಲಿ ಇದ್ದ ಅಷ್ಟೂ ಹುಡುಗರ ಪರೀಕ್ಷಾ ಕರ್ಮಕ್ಕೆ ಸಾಕ್ಷಿಯಾಗಬೇಕಾದ ಸಂದರ್ಭ. ಕುಳಿತಲ್ಲೇ ರಸಸಮಾಧಿಯನ್ನೇರಬಲ್ಲ ಕವಿಚೇತನ ಅಲ್ಲಿನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಪರೀಕ್ಷೆಯೆಂಬ ಕರ್ಮವನ್ನು ಅನುಭವಿಸಲೇಬೇಕಾದ ವಿದ್ಯಾರ್ಥಿವೃಂದ ತೀವ್ರತರವಾದ ಶ್ರದ್ದೆಯಿಂದ ಉತ್ತರಿಸುವ ಕ್ರಿಯೆಯಲ್ಲಿ ತೊಡಗಿತ್ತು. ದೊಡ್ಡ ಹಾಲ್. ಹಾಲಿನ ಗೋಡೆಗಳಲ್ಲಿ ನೇತುಹಾಕಿದ್ದ ಹಲವಾರು ವರ್ಣಚಿತ್ರಗಳು. ಅವುಗಳನ್ನು ಗಮನಿಸುತ್ತಾ, ವರ್ಣಸೌಂದರ್ಯವನ್ನು ಆಸ್ವಾದಿಸುತ್ತಾ, ಅಜ್ಞಾತ ಕಲಾಕಾರನ ಸೌಂದರ್ಯ ಪ್ರಜ್ಞೆಯನ್ನು ಮೆಚ್ಚುತ್ತಾ ಸಾಗುವ ಕವಿಯ ಮನಸ್ಸು ಒಂದು ಚಿತ್ರದ ಮೇಲೆ ನೆಟ್ಟುಬಿಡುತ್ತದೆ. ಹಿಮಾಲಯದ ಬೆಟ್ಟ ಕಣಿವೆಗಳಲ್ಲಿ ಸೂರ್ಯನ ಬಿಸಿಲು ನಿರ್ಮಿಸಿದ ಬೆಳಕು-ನೆರಳಿನಾಟವನ್ನು ಕಲಾವಿದ ಸೆರೆಹಿಡಿದಿರುತ್ತಾನೆ. ಅದನ್ನು ನೋಡುತ್ತ ನೋಡುತ್ತಲೇ ಇನ್ವಿಜಿಲೇಟರ್ ಪುಟ್ಟಪ್ಪ ಹಿಂದೆ ಸರಿದು ಕವಿ ಕುವಂಪು ಜಾಗೃತನಾಗಿಬಿಡುತ್ತಾನೆ. ಆಗ ಮೂಡಿಬಿಡುತ್ತದೆ ’ಇನ್‌ವಿಜಿಲೇಷನ್ ಅಥವಾ ಒಂದು ಚಿತ್ರಕ್ಕೆ’ ಎಂಬ ಕವಿತೆ!

ಇನ್ವಿಜಿಲೇಷನ್ ಎಂಬ ಅನಿವಾರ್ಯ ಕರ್ಮದಿಂದ ಕ್ಷಣಮಾತ್ರದಲ್ಲಿ ಮುಕ್ತಿಹೊಂದಿ ರಸಸಮಾಧಿಯನ್ನೇರಿದ ಕವಿಯ ಹೃದಯ ಹೀಗೆ ಹಾಡುತ್ತದೆ.
ಎಂತಹ ರಸಕ್ಷಣಂ ಕ್ಷಣಿಕದಿಂ ಪಾರಾಗಿ
ಪಡೆದಿದೆ ಚಿರತ್ವಮಂ ವರ್ಣಶಿಲ್ಪಿಯ ಕಲಾ
ಮಂತ್ರದಿಂದೀ ಚಿತ್ರದಲ್ಲಿ!
ಚಿತ್ರದಲ್ಲಿ ಹಿಮಪರ್ವತಗಳ ಕಣಿವೆಗಳ ಮೇಲೆ ಬೆಳಕು ಮೂಡಿಸಿದ ಚಿತ್ತಾರ, ಚಲನೆಯನ್ನು ಕಳೆದುಕೊಂಡು ಸ್ಥಿರವಾಗಿ ನಿಂತಂತೆ ಕಾಣುತ್ತಿರುವ ಸರೋವರ, ಅದರ ದಡದಲ್ಲಿ ಚಲನೆಯನ್ನು ಪ್ರತಿನಿಧಿಸುವಂತೆ ಕಾಣುತ್ತಿರುವ ಹರಿಣ ದಂಪತಿಗಳು - ಇವುಗಳ ಚಿತ್ರಣವನ್ನು ಕವಿ ಹೀಗೆ ಕಟ್ಟಿ ಕೊಡುತ್ತಾರೆ.
-ಮೂಡುವ ಬಿಸಿಲ್
ಚುಂಬಿಸಿದೆ ದೂರದ ಹಿಮಾಲಯದ ನರೆನವಿರ
ಶೃಂಗಮಂ; ಕಣಿವೆಯಡವಿಯ ತೋಳ್ಗಳಪ್ಪುಗೆಯ
ಸರಸದಲಿ ರತಿನಿದ್ರೆಗದ್ದಿದೆ ಸರೋವರಂ;
ಸರಸಿಯೆದೆಯಿಂ ಕೆಲಕ್ಕೋಸರಿಸಿದಂಚಲದ
ತೆರನ ಕೊಳದಂಚಿನಲಿ ಹರಿಣ ದಂಪತಿಯೆಂತು
ನಿಂತಿರುವುವದೊ ಚಲಚ್ಚರಣ ವಿನ್ಯಾಸದಿಂ
ಚಕಿತವೆಂಬಂತೆ!
ಕೇವಲ ಚಿತ್ರಕೃತಿಯ ಆಸ್ವಾದನೆ, ವರ್ಣನೆ ಇಷ್ಟಕ್ಕೆ ಕವಿಚೇತನ ವಿಶ್ರಮಿಸುವುದಿಲ್ಲ. ನೀರಸವಾಗಿ ಕಳೆದುಹೋಗಬಲ್ಲ ಮೂರು ಘಂಟೆಗಳ ಕಾಲ, ತನ್ನನ್ನು ಕಾಲದೇಶಗಳ ಆಚೆಗೆ ಕರೆದೊಯ್ದು, ಕಲಾಯಾತ್ರೆ ಮಾಡಿಸಿದ ವರ್ಣಚಿತ್ರ ಮತ್ತು ಅದರ ಕರ್ತೃವಿಗೊಂದು ನಮಸ್ಕಾರವನ್ನು ಹೇಳಿ ಉಪಕಾರ ಸ್ಮರಣೆಯನ್ನೂ ಮಾಡಿಬಿಡುತ್ತದೆ, ಹೀಗೆ.
-ಪರಕಾಲ ದೇಶಂಗಳಂ
ಪೊಕ್ಕೆನ್ನ ಮನಕೆ ದೊರೆಕೊಂಡತ್ತು ವಿಪಿನಗಿರಿ
ಸುಂದರ ಕಲಾಯಾತ್ರೆ. ಮೂರು ಘಂಟೆಯ ದೀರ್ಘ
ನೀರಸ ಪರೀಕ್ಷೆಯೀ ಕಾಪು ನಿನ್ನಿಂದೆ, ಓ
ವರ್ಣಕೃತಿ, ರಸ ರಥೋತ್ಸವವಾಯ್ತು: ಧನ್ಯ ನೀಂ,
ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!
ಚಿರಮಕ್ಕೆ ನೀನರಿಯದೀ ನಿನ್ನ ಉಪಕಾರ!
ಒಂದು ಕಲಾಕೃತಿ - ಸಾಹಿತ್ಯ, ಚಿತ್ರ, ಶಿಲ್ಪ ಯಾವುದೇ ಇರಲಿ, ಒಮ್ಮೆ ಕಲಾಕಾರನಿಂದ ನಿರ್ಮಾಣವಾದ ಮೇಲೆ ಕಲಾಕಾರನ ಕೆಲಸ ಮುಗಿದು ಹೋದಂತೆಯೇ! ನಂತರ ಏನಿದ್ದರೂ, ಆ ಕಲಾಕೃತಿಯೊಂದಿಗೆ ಮುಖಾಮುಖಿಯಾಗುವ ಸಹೃದಯ ಪ್ರತಿಭೆಯದ್ದೇ ಪೂರ್ಣ ಕಾರುಬಾರು! ತನ್ನ ಕೃತಿ ಯಾವಾಗ, ಎಂತಹ ಸಂದರ್ಭದಲ್ಲಿ, ಯಾರಿಗೆ ಯಾವ ರೀತಿಯ ಭಾವನೆಗಳನ್ನು ಬಡಿದೆಬ್ಬಿಸುತ್ತದೆಯೋ, ಚಿಂತನೆಗಳನ್ನು ಹುಟ್ಟು ಹಾಕುತ್ತದೆಯೋ, ಯಾವ ರೂಪದಲ್ಲಿ ಅವರಿಗೆ ಉಪಕಾರವಾಗುತ್ತದೆಯೋ ಎಂಬುದು ಮೂಲ ಕಲಾಕಾರನಿಗೆ ಗೊತ್ತಿರುವುದಿಲ್ಲ. ಉಪಕಾರ ಸ್ಮರಣೆ ಎಂಬುದು ಸಹೃದಯ ಪ್ರತಿಭೆಗಿರಬೇಕಾದ ಅಗತ್ಯ ಲಕ್ಷಣ! ಆ ಉಪಕಾರ ನಿತ್ಯವಾಗಬೇಕು. ’ಚಿರಮಕ್ಕೆ ನೀನರಿಯದ ಈ ನಿನ್ನ ಉಪಕಾರ’.

ಮೂರು ಘಂಟೆಗಳ ಕಾಲ ಕವಿಯ ಭಾವಲೋಕಕ್ಕೆ ದೀಪ್ತವಾಗಿದ್ದ ಆ ಚಿತ್ರದ ರಚನೆಕಾರ ಯಾರೆಂಬುದು ಕವಿಗೆ ಗೊತ್ತಿಲ್ಲ. ಅದು ಹಾಗೂ ಆ ಚಿತ್ರದ ಬಗ್ಗೆಯೂ ನಮಗೆ ಗೊತ್ತಿಲ್ಲ. ಆದರೆ ಏಕಕಾಲದಲ್ಲಿ ಚಿತ್ರವನ್ನು, ಚಿತ್ರಸೌಂದರ್ಯವನ್ನು, ಅದರಿಂದ ಉದ್ಬೋಧಗೊಂಡ ಕವಿಯ ಮನಸ್ಸಿನಿಂದ ಕೃತಿರೂಪಕ್ಕಿಳಿದ ಈ ಕವಿತೆಯನ್ನು ಆಸ್ವಾದಿಸುತ್ತಿರುವ ನಾವು ಆ ಕಲಾವಿಭೂತಿಗೆ ’ನಿನಗಿದೊ ನಮಸ್ಕಾರ! ಚಿರಮಕ್ಕೆ ನೀನರಿಯದೀ ನಿನ್ನ ಉಪಕಾರ!’ ಎಂದು ಹೇಳೋಣವೇ!?

ಕೊನೆಯ ಮಾತು: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಉಪಕಾರವನ್ನೂ ನಾವು ಸ್ಮರಣೆ ಮಾಡಬೇಕು! ಏಕೆಂದರೆ ಅವರು ಕವಿಗೆ, ಕವಿತೆಯ ಆವಿರ್ಭಾವಕ್ಕೆ ತೊಡಕಾಗಲಿಲ್ಲ, ನೆಪವಾದರು ಅವರಿಗರಿವಿಲ್ಲದೆ ಸಾಕ್ಷಿಯಾದರು, ಅದಕ್ಕೆ! ಅಂದು ಪರೀಕ್ಷೆ ಬರೆದ ಯಾರಾದರು ಈಗ ಅಂದರೆ ಸುಮಾರು ಎಪ್ಪತ್ತು ವರ್ಷಗಳ ನಂತರ (ಬಹುಶಃ ಈಗ ಅವರಿಗೆ ೯೦ ವರ್ಷಗಳಾದರೂ ಆಗಿದ್ದಿರಬೇಕು) ಈ ಕವಿತೆಯನ್ನು ಓದಿ ಪುಳಕಗೊಳ್ಳಬಹುದು.

Monday, June 13, 2011

ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಾ

ಚಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆಯುವ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಗಿಡವೊಂದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಆವರಣದಲ್ಲಿತ್ತು. ಅದನ್ನು ನೋಡಿದ್ದ ಕುವೆಂಪು ದಂಪತಿಗಳು, ತಮ್ಮ ಹೋತೋಟದಲ್ಲಿಯೂ ಅಂತಹ ಗಿಡವೊಂದನ್ನು ಬೆಳೆಸಲು ಉತ್ಸಕರಾಗಿದ್ದರು. ಬೆಂಗಳೂರಿನ ಲಾಲ್‌ಬಾಗಿನಲ್ಲಿ ನಿರ್ದೇಶಕರಾಗಿದ್ದಗ ಮರಿಗೌಡ ಎಂಬುವವರಿಗೆ ಹೇಳಿ, ಊಟಿಯಿಂದ ತರಿಸಿಕೊಂಡು ಬೆಳೆಸುತ್ತಾರೆ. ಸುಮಾರು ಆರೇಳು ವರ್ಷಗಳ ನಿರಂತರ ಹಾರೈಕೆಯ ಬಳಿಕ ಅದರಲ್ಲಿ ಹೂವು ಅರಳುತ್ತದೆ. ಆ ಸಂದರ್ಭವನ್ನು ಶ್ರೀಮತಿ ತಾರಿಣಿಯವರು ಹೀಗೆ ದಾಖಲಿಸಿದ್ದಾರೆ: ಗ್ರಾಂಡಿಫ್ಲೋರಾ ಮೊಗ್ಗು ಬಿಟ್ಟಾಗಿನಿಂದ ದೊಡ್ಡದಾಗಿ ಹೂ ಅರಳುವವರೆಗೂ ತಂದೆಯವರು ದಿನವೂ ಗಮನಿಸುತ್ತಲೇ ಇದ್ದರು. ಮೊದಲ ಹೂ ಕತ್ತರಿಸಿ ಹೂಜಿಯಲ್ಲಿ ಹಾಕಿ ದೇವರ ಮನೆಯಲ್ಲಿ ಇಟ್ಟರು. ಹೂ ಎರಡು ದಿನಗಳು ಬಾಡದೆ ಉಳಿಯಿತು. ಮೊದಲ ದಿನ ಹೂ ಅರಳಿ ಸಂಜೆ ಮುಚ್ಚಿಕೊಂಡು ಮೊಗ್ಗಿನಂತಾಯಿತು . ಮಾರನೆ ದಿನ ಪೂರ್ಣ ಅರಳಿ ನಾನಾ ವಿನ್ಯಾಸದಿಂದ ಪರಾಗ ಉದುರಿಸುವ ದೃಶ್ಯವಂತೂ ಅದ್ಭುತ ರಮ್ಯ. ತಂದೆಯವರು ಹೇಳುವಂತೆ ಈ ದಿನ ಹೂವರಳಿದೆ. ಅದರ ಅರಳುವಿಕೆಯ ವೈಭವವೇ ವೈಭವ. ತಂದೆಯವರು ಎರಡು ದಿನಗಳೂ ದೇವರ ಮನೆಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದರು. ಕೊನೆಗೂ ಅಪ್ಪಮ್ಮನವರ ಆಸೆ ನೆರವೇರಿತು. ಕವನದಲ್ಲಿ ಹೇಳುವಂತೆ ಉಗಾದಿ ದಿನವೇ ಮೊದಲ ಹೂ ಅರಳಿತು. ಅಣ್ಣ ಚೈತ್ರನ ಆಗಮನವೂ ಆಯಿತು. ತಂದೆಯವರು ಹೇಳಿದರು ಅಂತೂ ಅಮ್ಮನ ಶ್ರಮ ಸಾರ್ಥಕವಾಯಿತು ಎಂದು. ಆ ಒಂದು ಹೂ ಅರಳುವಿಕೆ ಕವಿಗೆ ವಿಭೂತಿಯ ಆಗಮನದಂತೆ ಭಾಸವಾಗಿದೆ. ಕವಿತೆಯ ಶೀರ್ಷಿಕೆಯೇ 'ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಅಥವಾ ವಿಭೂತಿ ಆಗಮನ',
ಓ ನೋಡು ಬಾರಾ:
ಗಿಡದ ಕೈಮುಗಿಹ ಮೊಗ್ಗಾಗಿ ಮೈದೋರುತಿದೆ
ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ!
ತೇರ ಚಲನೆಯ ಸಾರ್ವಭೌಮಿಕ ಉದಾಸೀನ
ನಿರ್ವೇಗದಲಿ, ಎನಿತೊ ದಿನಗಳಿಂದುದ್ಯಾನ
ಯಜ್ಞವೇದಿಯೊಳುದಿಸಿ, ಕವಿ ಮನೋಧ್ಯಾನ
ದೇವತಾ ವಸ್ತುವಾಗಿಹುದೀ ಮಹಾ ಕುಟ್ಮಲಾಕಾರ:
ಹೇವಿಳಂಬಿಯೊಳುದಿಸಿ, ಅರಳಿದೆ ವಿಳಂಬಿಯಲಿ!
ವಿಳಂಬಿ ಸಂವತ್ಸರದ ಮೊದಲ ದಿನ ಯುಗಾದಿಯಂದು ಹೂವು ಅರಳಿದೆ. ಆದರೆ ಮೊಗ್ಗಾಗಿದ್ದು ಹಿಂದಿನ ಹೇವಿಳಂಬಿ ಸಂವತ್ಸರದಲ್ಲಿ! ಜಗತ್ತಿನ ಸರ್ವವ್ಯಾಪಾರಗಳಿಗೂ ಉದಾಸೀನವಾಗಿರುವಂತೆ ಕಂಡರೂ, ಉದ್ಯಾನವನ ಎಂಬ ಯಜ್ಞವೇದಿಕಯಲ್ಲಿ ಉದ್ಭವವಾಗಿ ಕವಿಮನದಲ್ಲಿ ಧ್ಯಾನಗೊಳ್ಳುತ್ತಿರುವ ದೇವತಾಸ್ವರೂಪವಾಗಿ ಹೂವು ಅರಳಿದೆ.
ಋತು ವಸಂತನ ಸಖನ ಚೈತ್ರನಾಗಮನಕ್ಕೆ
ಸ್ವಾಗತವ ಬಯಸುವಂತೆ!
ಇಂದೆಮ್ಮ ಕೋಕಿಲೋದಯ ಚೈತ್ರನುಂ ಮನೆಗೆ
ಹಬ್ಬಕ್ಕೆ ಬರುವನಿಂತೆ!
ವಸಂತನ ಸಖ ಚೈತ್ರನಾಗಮನವಾಗುವ ಮತ್ತು ಕೋಕಿಲೋದಯ ಚೈತ್ರ ಉದಯರವಿಗೆ ಹಬ್ಬಕ್ಕೆ ಬರುವ ದಿನದಂದೇ ಹೂವು ಅರಳಿದೆ. ಅರಳಿರುವ ರೀತಿಯನ್ನು ಕವಿಮಾತುಗಳಲ್ಲಿಯೇ ಕಾಣಬಹುದು.
ಇನಿತು ಕಿರುಗಿಡದೊಳೆನಿತು ಹಿರಿ ಹೂವು ಅಃ
ಬೆಳ್ಳಿಬಿಳಿ ಕಲಶಶಿಶು ಬಾಯ್‌ದುಟಿಯ ತೆರೆವಂತೆ
ಅಲರುತಿದೆ ಮೂರುಲೋಕದ ಮೋಹ ಕರೆವಂತೆ
ದುಗ್ಧಧವಳಿಮ ಮುಗ್ಧತೆಯೆ ಮೈ ಹೊರೆಯುವಂತೆ
ದಿವ್ಯ ಧಾಮದ ಗರ್ಭಗೃಹವೆ ಕಣ್ ತೆರೆಯುವಂತೆ
ಪುಂಡರೀಕಂಗಂದು ಆ ಮಹಾಶ್ವೇತೆ ಮೈದೋರಿದಂತೆ!
ಪುಂಡರೀಕನೆದುರು ಮಹಾಶ್ವೇತೆ ಪ್ರತ್ಯಕ್ಷವಾದಂತೆ ಅರಳಿದ ಈ ಹೂ ಭೀಮ ದ್ರೌಪದಿಗೆ ತಂದುಕೊಟ್ಟ ಸೌಗಂಧಿಕಾ ಪುಷ್ಪಕ್ಕಿಂತ, ಕೃಷ್ಣ ಸತ್ಯಭಾಮೆಗಿತ್ತ ಪಾರಿಜಾತಕ್ಕಿಂತ ಹೆಚ್ಚಿನದು ಕವಿಗೆ!
ಭೀಮ ತಂದ ಸೌಗಂಧಿಕಾ ಕುಸುಮ
ಇದಕೆ ಅಸಮ!
ಸತ್ಯಭಾಮೆಗಾ ಶ್ರೀ ಕೃಷ್ಣನಿತ್ತ
ಹೂ ಅದೆತ್ತ?
ಹೀಗೆ ಅರಳಿದ ಹೂವು ಧನ್ಯತೆಯನ್ನು ಅನುಭವಿಸುತ್ತದೆ. 
ಅಃ ಇಂತೆ ನಾನರಳಿದರೆ ಧನ್ಯನಲ್ತೆ?
ಬೆಳಕು ಮಾಡೆ ಮಲರಿ,
ಮುಳುಗೆ ಮುಗುಳಿ,
ಬೆಣ್ಣೆಬಿಳಿ ಬಾಳ ಹೂವೆಸಳುಗಳನರಳಿ
ರಾಜರಾಜೇಶ್ವರರ ಸಿರಿಯನಿಳಿಕೆಗೈದು
ಕವಿಯ ಋಷಿಯ ಆಶೀರ್ವಾದಗಳ ಸೂರೆಗೈದು
ಅಃ ಇಂತೆನ್ನ ಬಾಳರಳಿದರೆ ಧನ್ಯನಲ್ತೆ!
ಹೇವಿಳಂಬಿಯಲ್ಲಿ ಮೊಗ್ಗಾಗಿದ್ದು, ವಿಳಂಬಿಯಲ್ಲಿ ಹೂವಾಗಿ ಅರಳಿದ್ದನ್ನು ಕವಿ, ಹೇವಿಳಂಬಿಯಲ್ಲಿ ಉದಯರವಿಗೆ ದರ್ಶನವಿತ್ತ ನರವಿಭೂತಿ ವಿನೋಬಾಜಿಯವರ ಜೊತೆಗೆ ಸಮೀಕರಿಸಿ, ಹೂ ಅರಳುವಿಕೆಯನ್ನು ವಿಭೂತಿ ಆಗಮನ ಎಂದು ಭಾವಿಸುತ್ತಾರೆ. ವಿನೋಬಾಜಿಯವರಲ್ಲಿ ನರವಿಭೂತಿಯನ್ನು ಕಂಡಂತೆ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಹೂವಿನಲ್ಲಿ ಸುಮವಿಭೂತಿಯನ್ನು ಕಾಣುತ್ತಾರೆ.
ಹೇವಿಳಂಬಿಯಲ್ಲಿ ಆ ಕೊಡಗುದಾರಿಯಲಿ
ನಡೆದು ಬಂದರು ಅಂದು ಉದಯರವಿಗಾ
ನರವಿಭೂತಿ ಶ್ರೀ ವಿನೋಬಾಜಿ:
ವಿಳಂಬಿಯಲಿ ಗಿಡದ ಈ ಮೈ ಹಸುರು ದಾರಿಯಲಿ
ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಾ
ಸುಮವಿಭೂತಿ ಶ್ರೀ ದಿವ್ಯರಾಜ್ಙಿ!
ಧನ್ಯ ಹೇವಿಳಂಬಿ!....
ಧನ್ಯ ವಿಳಂಬಿ!
ಒಂದು ಹೂವು ಅರಳುವ ಪ್ರಕೃತಿ ಸಹಜವಾದ ಕ್ರಿಯೆಯಲ್ಲಿ ಭಗವಂತನ ಆಗಮನವನ್ನು ಕವಿಯ ಮನಸ್ಸು ಕಂಡಿದೆ. ಅದರಿಂದ ಯುಗಯುಗಳೇ ಧನ್ಯತೆಯನ್ನು ಅನುಭವಿಸುತ್ತವೆ. ಈ ಹೂವಿನ ಆಕರ್ಷಣೆ ಕುವೆಂಪು ಇದ್ದಷ್ಟೂ ಕಾಲ, ಅಲ್ಲಿ ಹೂವು ಅರಳುತ್ತಿದ್ದಾಗಲೆಲ್ಲಾ ಕವಿಗೆ ರಸಾನುಭವವಾಗುತ್ತಿತ್ತು ಎಂದು ಶ್ರೀಮತಿ ತಾರಿಣಿಯವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಹೂವನ್ನು ಹೂಜಿಗೆ ಹಾಕಿಟ್ಟಾಗ ಅದರ ಸೌಂದರ್ಯವನ್ನು ಹತ್ತಿರದಿಂದ ಇನ್ನೂ ಚೆನ್ನಾಗಿ ನೋಡಬಹುದು ಎಂಬುದು ಕವಿಯ ಅಭಿಪ್ರಾಯ. ಅಂತೆಯೇ ಹೂವನ್ನು ಹೂಜಿಯಲ್ಲಿ ಹಾಕಿ ದೇವರ ಮನೆಯಲ್ಲಿಟ್ಟರೆ ಅಲ್ಲಿಗೂ ಜೇನುಗಳ ಆಗಮನವಾಗುತ್ತದೆ! ಅದನ್ನು ಕಂಡು ಈ ದಿನ ದೇವರ ಮನೆಯಲ್ಲಿ ಹೂವಿಗೆ ಜೇನುಗಳು ಹಿಂಡು ಹಿಂಡಾಗಿ ಮುತ್ತಿ ಮೊರೆಯುತ್ತಿವೆ. ನೋಡಲು ಆಲಿಸಲೂ ರಸದೌತಣ ಎನ್ನುತ್ತಿದ್ದರಂತೆ. ಜೇನುಗಳ ಝೇಂಕಾರವನ್ನು ಕೇಳುತ್ತಾ, ಅವುಗಳು ಹೂವಿನೊಂದಿಗೆ ಆಡುವ ಚೆಲ್ಲಾಟವನ್ನು ನೋಡುತ್ತಾ ಕುಳಿತಿರುತ್ತಿದ್ದ ಕವಿ, ಹುಳುಗಳು ಕಾಳಿಗೆ ಕುಚ್ಚು ಕಟ್ಟಿದಂತೆ ಬಣ್ಣದ ಪರಾಗ ಹುಡಿಯನ್ನು ಅಂಟಿಸಿಕೊಂಡು ಹಾರಿಹೋಗುವ ಸೂಕ್ಷ್ಮವನ್ನು, ಅದ್ಭುತವನ್ನು ಗಮನಿಸುತ್ತಾರೆ. 'ಜಗನ್ಮಾತೆಯ ಸೃಷ್ಟಿಯ ಅದ್ಭುತ ಪ್ರಜ್ಞೆಯಿಂದ ನಾನು ಆಶ್ಚರ್ಯ ಚಕಿತನಾಗಿ ವೀಕ್ಷಿಸುತ್ತಿದ್ದೇನೆ. ಈ ಹುಳುಗಳು ಹೂವನ್ನು ತೊಳೆದು ಒರೆಸಿದಂತೆ ಒಳಗಿನ ಪರಾಗವನ್ನು ಹೊತ್ತು ಹೋಗುವ ಈ ಹೂವಿನ ರಮ್ಯಕರ್ಮವನ್ನು ಅವಳೇ ನಡೆಸುತ್ತಿರುವಳೆಂದು ಭಾವಿಸುತ್ತಾ ಇರುವೆ' ಎನ್ನುತ್ತಾ ದೇವರ ಮನೆಯಲ್ಲೇ ಹೂವಿನ ಸಾನಿಧ್ಯದಲ್ಲೇ ಹೆಚ್ಚು ಹೊತ್ತು ಕುಳಿತಿದ್ದರಂತೆ. ಒಮ್ಮೆ 'ಗ್ರಾಂಡಿಫ್ಲೋರಾ ಹೂ ಮನೆಯೊಳಗೆ ಇಟ್ಟಿದ್ದರೂ ಈ ದಿನವೇ ಪರಾಗ ಚಲ್ಲುತ್ತವೆ ತಮಗೆ ಸಿಗುತ್ತದೆ ಎಂದು ಆ ಜೇನಿಗೆ ಹೇಗೆ ಗೊತ್ತಾಗುತ್ತದೆಯೇ, ಆ ದೇವರಿಗೇ ಗೊತ್ತು?' ಎಂದಿದ್ದರಂತೆ. ಪರಾಗ ಉದುರುವ ಸಮಯವನ್ನು ಗಮನಿಸಿ ಕಿಟಕಿಗಳನ್ನು ಸ್ವತಃ ತಾವೇ ತೆರೆದಿಟ್ಟು ಹುಳುಗಳು ಬಂದು ಹೋಗುವುದನ್ನು ಗಮನಿಸಿ ಇತರರಿಗೂ ತೋರುತ್ತಿದ್ದರಂತೆ. ಒಮ್ಮೆ, 'ಏನು ಮಾಡುತ್ತವೆ ನೋಡೋಣ' ಎಂದು ಕಿಟಕಿಯನ್ನು ಮುಚ್ಚಿ ನೋಡುತ್ತಾ ಕುಳಿತಿದ್ದಾಗ, ಆ ಬುದ್ಧಿವಂತ ಹುಳುಗಳು ಬಾಗಿಲಿನ ಮೂಲಕ ಒಳಬಂದು, ದೇವರ ಮನೆ ಹೊಕ್ಕು ಪರಾಗವನ್ನು ಕೊಂಡೊಯ್ವಂತೆ! 'ಜೇನಿನ ಝೇಂಕಾರವೇ ಒಂದು ದಿವ್ಯತರವಾದ ಓಂಕಾರದಂತಿದೆ. ತುಂಬ ಹೊತ್ತು ಧ್ಯಾನ ಮಾಡಬಹುದು' ಎಂದು ಹೆಚ್ಚು ಹೊತ್ತು ಧ್ಯಾನ ಮಾಡುತ್ತಾ ಕುಳಿತುಬಿಡುತ್ತಿದ್ದರಂತೆ.

ಹೂವಿಗೂ ಕವಿಗೂ ಏನು ಬಂಧವೋ!?

Monday, June 06, 2011

ಸಾವಿರ ವರುಷದ ಪಂಪನ ಬಣ್ಣನೆ ಇಂದೂ ಸಾರ್ಥಕವಾಗಿತ್ತು!

ಕುವೆಂಪು ಅವರ ಮನೆ ಉದಯರವಿಯ ಮುಂದಿನ ಕೈತೋಟದಲ್ಲಿ ಹಲವಾರು ತರಹದ ಹೂಗಿಡಗಳನ್ನು ಬೆಳಸಲಾಗಿರುತ್ತದೆ. ಹಸಿರು, ಹೂವು, ಮರ, ಗಿಡ, ಹಕ್ಕಿಗಳ ಬಗ್ಗೆ ವಿಶೇಷ ಪ್ರೀತಿಯಿದ್ದ ಕವಿಗೆ ಈ ಉದ್ಯಾನವನ ಮಲೆನಾಡಿಗೆ ಇಟ್ಟ ಒಂದು ಪುಟ್ಟ ಕಿಟಕಿಯಾಗಿತ್ತೇನೋ! ಈ ಹೂದೋಟದಲ್ಲಿದ್ದ ಗಿಡಗಳ ಮತ್ತು ಅವುಗಳ ಹೂವುಗಳ ಬಗ್ಗೆಯೇ ಹಲವಾರು ಕವಿತೆಗಳನ್ನು ಕುವೆಂಪು ಬರೆದಿದ್ದಾರೆ. ಉದಯರವಿ ನಿರ್ಮಾಣವಾಗುತ್ತಿರುವಾಗಲೇ ಹಾಕಿದ ಸುರಹೊನ್ನೆಯ ಮರದ ಹೂವಿನ ಬಗ್ಗೆ ತಾರಿಣಿಯವರು, ’ಹೂವುಗಳನ್ನೆಲ್ಲಾ ಕೊಯ್ದು ದೇವರಿಗೆ ಹಾರಮಾಡಿ ಹಾಕುವುದು ಅಮ್ಮನ ಕೆಲಸ. ಹೂ ಪರಿಮಳ ತಿಳಿಯಾಗಿ ದೇವರ ಮನೆಯನ್ನೆಲ್ಲಾ ಆವರಿಸುತ್ತಿತ್ತು. ಗಿಡದಲ್ಲಿನ ಹೂಗಳಿಗೆ ಜೇನುಗಳು ಮತ್ತುತ್ತಿದ್ದವು. ಅವುಗಳ ಝೇಂಕಾರದಿಂದ ಶುಭ್ರ ಬಿಳೀ ಹೂ ಮಧ್ಯೆ ಕೆಂಪು ಶಲಾಖೆ ನೋಡಲು ಎರಡು ಕಣ್ಣೂ ಸಾಲದು’ ಎಂದು ಬರೆದಿದ್ದಾರೆ. ಕುವೆಂಪು ಬಿಡುವಿನ ವೇಳೆಯಲ್ಲಿ ಹೂದೋಟದಲ್ಲಿ ಕುಳಿತು ಹೂವು, ಹಕ್ಕಿ ಮೊದಲಾದವುಗಳನ್ನು ನೋಡುತ್ತಾ ರಸಸಮಾಧಿಯನ್ನೇರುತ್ತಿದ್ದರಂತೆ! ಅಂತಹ ಒಂದು ದಿನ, (೧೮-೯-೧೯೫೫) ಸುರಹೊನ್ನೆಯ ಮರ ಅದರ ಹೂವು ಕವಿಗೆ ಅಧಿದೇವತೆಯ ಸಾಕ್ಷಾತ್ಕಾರದಂತೆ ಕಂಡುಬಿಡುತ್ತದೆ. ಆಗ ಉಂಟಾದ ರಸಾನುಭವದ ಫಲವೇ ’ಅಧಿದೇವತಾ ಆವಿರ್ಭೂತಿ’ ಎಂಬ ಕವನ.

ಸುರಹೊನ್ನೆಯ ಮರ ದಿಟಕೂ ಸುರವಾಗಿತ್ತು;
ಹೊನ್ನಾಗಿತ್ತು.
ಶ್ರಾವಣಮಾಸದ ಸಿರಿಹೊತ್ತಾರೆಯ ವಾಯು ಮಂಡಲಕೆ
ಕಂಪಿನ ಹೊಳೆ ಹರಿದಿತ್ತು;
ಮರವೇ ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆಯಾಗಿತ್ತು.
ಸಾವಿರ ವರುಷದ ಪಂಪನ ಬಣ್ಣನೆ ಇಂದೂ ಸಾರ್ಥಕವಾಗಿತ್ತು!
’ಮರವೇ ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆಯಾಗಿತ್ತು.’ ಎಂಬ ಸಾಲು ಅದ್ಭುತವಾಗಿದೆ. ಕುವೆಂಪು ಅವರ ’ಭಗವಂತನಾನಂದ ರೂಪಗೊಂಡಿಹುದಿಲ್ಲಿ’ ಮತ್ತು ಬೇಂದ್ರೆಯವರ ’ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಯಾ ಹಾಡು’ ಸಾಲುಗಳಂತಹ ಒಂದು ಅದ್ಭುತ ರೂಪಕ ’ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆ!’ ಕವಿತೆ ಹೂವಿನ ಪರಿಮಳ, ಕಾಣ್ಕೆ ಹಾಗೂ ಕವಿಗಾದ ಅನುಭವವನ್ನು ಕಟ್ಟಿಕೊಡುತ್ತದೆ. ಸುರಹೊನ್ನೆಯ ಕಾವ್ಯ ಸೊಬಗು ಕನ್ನಡದ ಮಟ್ಟಿಗೆ ಸಾವಿರ ವರ್ಷಗಳನ್ನು ಪೂರೈಸಿದೆ! ಸುರಹೊನ್ನೆಯ ಹೂವಿನ ಬಗ್ಗೆ ಪಂಪನೂ ವರ್ಣಿಸಿದ್ದಾನೆ. (ಅದನ್ನು ಕೊನೆಯಲ್ಲಿ ಗಮನಿಸಲಾಗುವುದು)
ಚಿನ್ನದ ನೇಸರು ಕೋಲ್ಗದಿರಿಂ ಚೆಂಬಿಸಿಲಿನ ರಂಗೋಲಿಯನೆಸೆದಿತ್ತು;
ಗರುಕೆಯ ಹಸುರುಕ್ಕುವ ನೆಲ ಪಚ್ಚೆಯ ವೇದಿಕೆಯಾಗಿತ್ತು.

ಜೇನ್ದುಂಬಿಯ ಮೊರೆ, ಹಕ್ಕಿಯ ಇಂಚರ, ಕೈದೋಂಟದ ಹೂಗಳ ಪರಿವಾರ
ಕವಿಹೃದಯಕೆ ತಾನಾದುದು ರಸಲೋಕದ ಅಮೃತಾಹಾರ:
ತೆಕ್ಕನೆ ಮೋಕ್ಷಕೆ ತವರಾದುದೊ ತಾನ್ ಈ ಸಂಸಾರ!

ಸಾಮಾನ್ಯದ ಸೀಮೆಯಲ್ಲಿದ್ದಾ ಸುರಹೊನ್ನೆಯ ಮರದಡಿಗೆ
ಸೌಂದರ್ಯಾವೇಶದಿ ನಡೆದೈತರೆ ಕವಿ,
ಅದ್ಭುತವಾಯಿತ್ತು:

ಸಂಯೋಗದಿ ಅವಿರ್ಭವಿಸಿತು, ಅವತರಿಸಿತು ರಸದೈವಂ ಮುಡಿಗೆ:
ಬಿಚ್ಚಿದ ಸುರಳಿಯ ಸರ್ಪದ ಹೆಡೆ ತಾಗಿತು ಅಧಿದೇವತೆಯಡಿಗೆ!

ಸ್ಪಂದಿಸಿತಾಕಾಶ!
ಪಿಲಕಿಸಿದವನಿ!
ತರುತನು ರೋಮಾಂಚಿಸಿತು!
ಮೃತ್‌ತನು ತಾಂ ಚಿತ್‌ತನುವಾಯ್ತೀ ಪೃಥಿವಿ!

ಅತಿಶೈತ್ಯಕೆ ಕಡಲಿನ ನೀರ್
ಘನವಾಗುವ ಐಕಿಲ್ಬಂಡೆಯ ತೆರದಿ,
ಭಕ್ತಿಯ ಭರಕೆ
ಆಕಾರಕೆ ಅವತರಿಸುವ ಭಗವಂತನ ತೆರದಿ,
ಕರುವೈತರೆ ಅಕ್ಕರೆಗುಕ್ಕಿ
ಹಾಳ್ ಸೊರಸುವ ಸುರಭಿಯ ತೆರದಿ,
ಸಂಭವಿಸಿತು ರಸತತ್ವಂ ಆ ಮರದಿ!
ಅತಿಶೈತ್ಯಕೆ ಕಡಲಿನ ನೀರ್ ಘನವಾಗುವ ಐಕಿಲ್ಬಂಡೆಯ ತೆರದಿ, ಎನ್ನುವಲ್ಲಿ 'ಐಕಿಲ್ಬಂಡೆ' (ಐಕಿಲ್ = ಮಂಜು; ನೀರ್ಗಲ್ಲು - Iceburg) ಎಂಬ ಪ್ರಯೋಗ ಗಮನಸೆಳೆಯುತ್ತದೆ.


ಶರಧಿ ಶರೀರೆ; ಗಿರಿವನ ವದನೆ;
ಗಗನಾಂಬರೆ; ಅಧಿಮಾನಸ ಸದನೆ;
ನಯನ ಸರೋವರೆ;
ಭ್ರೂ ಸುಂದರ ಅದ್ರಿ!

ಹಣೆ ಆಕಾಶವ ಕೀಸಿತು. ಪುಲಕಾವೇಶಂ
ವ್ಯೋಮವನಾಚ್ಛಾದಿಸಿತಾತ್ಮದ ಧೂರ್ಜಟಿಕೇಶಂ
ಕೆದರಿದ ಕೂದಲ ಮೇಘಾಂತರದಲಿ ಸೆರೆಸಿಕ್ಕಿದ ರವಿ ಚಂದ್ರ
ತಾವಾದರು ರುದ್ರಾಭರಣಂಗಳವೊಲು ಸುಂದರ ರುಂದ್ರ!
ಈ ಭಾಗದಲ್ಲಿ ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ, ಆರಾಧಿಸುವ ನವೋದಯ ಕವಿಗಳ ಮನೋಭಾವವೇ ವ್ಯಕ್ತವಾಗಿದೆ. ಇಡೀ ವಿಶ್ವವನ್ನೇ ದೇವರ ಆಕಾರವೆಂದು ಭಾವಿಸಲಾಗಿದೆ. ಹಲವು ತಲೆ, ಹಲವು ಕೈ, ವಿಚಿತ್ರ ವೇಷಭೂಷಣದ ದೇವರುಗಳಿಗಿಂತ ಇಡೀ ಸೃಷ್ಟಿಯನ್ನು ದೇವರೆಂದು ಪರಿಭಾವಿಸುವುದು ಆ ಯುಗದ ಧರ್ಮವೇ ಆಗಿದೆ.
ರಸದದ್ರಿಗೆ ದುಮುಕಿದ ನಾನಿಲ್ಲಾಗಿ
ತುಂಬಿದೆನೆಲ್ಲವನಂಬರವಪುವಾಗಿ!
ಹಾಲಾದಳು ತಾಯಾಗಿ;
ಮಧುವಾದಳು ವಧುವಾಗಿ;
ಬೆಳಕಾದಳು ಗುರುವಾಗಿ:

ಸುರಹೊನ್ನೆಯ ರೂಪದಲ್ಲಿ ಅದಿದೇವತೆಯ ಆವಿರ್ಭಾವವಾದ ಮೇಲೆ, ಆ ಅದಿದೇವತೆ ತಾಯಾಗಿ, ವಧುವಾಗಿ, ಗುರುವಾಗಿ ಕವಿಗೆ ಗೋಚರಿಸುತ್ತಾಳೆ. ಅದಿದೇವತೆಯ ಸ್ತುತಿ ಸಂಸ್ಕೃತದಲ್ಲಿದೆ; ನಾರಣಪ್ಪನಲ್ಲಿ ದ್ರೌಪದಿಯ ಮುಡಿ - ಶ್ರೀಮುಡಿಯಾದಂತೆ.
"ಮಧು ವಾತಾ ಋತಾಯತೇ!
ಮಧು ಕ್ಷರಂತಿ ಸಿಂಧವಃ|
ಮಾಧ್ವೀರ್ನಃ ಸ್ತನ್ವೋಷಧಿಃ||"
"ಮಧು ನಕ್ತಮುತೋಷಸೋ|
ಮಧುಮತ್ಪಾರ್ಥಿವಂ ರಜಃ|
ಮಧು ದ್ಯೌರಸ್ತು ನಃ ಪಿತಾ||"
"ಮಧುಮಾನ್ನೋ ವನಸ್ಪತಿಃ|
ಮಧುಮಾನಸ್ತು ಸೂರ್ಯಃ|
ಮಾಧ್ವೀರ್ಗಾವೋ ಭವನ್ತು ನಃ||"

ಸುರಹೊನ್ನೆಯ ಹೂವಿನ ಸೌಂದರ್ಯಾಸ್ವಾದನೆಯಲ್ಲಿ ಮುಳುಗಿದ ಕವಿಯ ಮನಸ್ಸು ಕಾಲ-ಲೋಕಗಳನ್ನು ಮೀರಿ, ಅಧಿದೇವತೆಯ ಸಾಕ್ಷಾತ್ಕಾರವನ್ನು ಕಂಡ ಕಾಣ್ಕೆ, ವೇದ ಉಪನಿಷತ್ ವಿಚಾರಶ್ರೀಯ ವಿಹಾರ, ಭೂಮ್ಯಾಕಾಶಗಳನ್ನು ಆವರಿಸಿದ ಚೈತನ್ಯ, ಮರ್ತ್ಯಪ್ರಕೃತಿಯ ಅಲೌಕಿಕಾವತಾರ ಮೊದಲಾದವು ಕವಿತೆಯ ರಸೋತ್ಕರ್ಷವನ್ನು ಮನಗಾಣಿಸುತ್ತವೆ.
ಜೈನಪರಂಪರೆಯಲ್ಲಿ, ಪುರಾಣಗಳಲ್ಲಿ ವಿಶೇಷವಾಗಿ ವರ್ಣಿತವಾಗಿರುವ ನಮೇರುವ ಎಂಬ ಮರದ ಪುಷ್ಪ ಸುರಹೊನ್ನೆಯ ಹೂವೇ ಆಗಿದೆ. ಅದಕ್ಕೆ ಸುರಪುನ್ನಾಗ ಎಂಬ ಹೆಸರೂ ಇದೆ. ಇದು ಜಿನರಿಗೆ ಅತ್ಯಂತ ಪ್ರಿಯವಾದ ಪುಷ್ಪ. ಶ್ರವಣಬೆಳಗೊಳದ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕವನ್ನು ವಿಶೇಷವಾಗಿ ವರ್ಣಿಸಿರುವ 'ಬೊಪ್ಪಣ್ಣ'ನ 'ಗೊಮ್ಮಟಸ್ತುತಿ'ಯಲ್ಲಿಯೂ ಸುರಹೊನ್ನೆಯ ಪ್ರಸ್ತಾಪವಿದೆ. 'ಹೂವುಗಳಲ್ಲಿ ಸುರಹೊನ್ನೆಯೇ ಚೆನ್ನ' ಎನ್ನುವ ಪಂಪ ಸುರಹೊನ್ನೆಯನ್ನುವರ್ಣಿಸಿರುವ ರೀತಿ ಹೀಗಿದೆ:

ಎಸಳ್ಗಳನೆಂ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಂಳಲ್ಲಿಗೆ ಕರ್ಣಿಕೆಯಂದಮಗೆ ಕೀ
ಲಿಸಿ ಪೊಸತಪ್ಪ ಮಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ
ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನನೋ
(ಮುತ್ತುಗಳಿಂದ ಎಸಳುಗಳನ್ನು ಸರಿಯಗಿ ನಿರ್ಮಿಸಿ, ಅದರಲ್ಲಿ ಕೇಸರಾಕಾರದಲ್ಲಿ ಚಿನ್ನದಪುಡಿಗಳನ್ನು ಉದುರಿಸಿ, ಮಣಿಕ್ಯದಿಂದಾದ ತನ್ನ ನುಣ್ಬೆರಳನ್ನು ಅದರ ನಡುವೆ ಕರ್ಣಿಕೆಯಂತೆ ಇಟ್ಟು, ವಸಂತನು ಮನ್ಮಥನಿಗೆ
ಈ ಹೂವನ್ನು ಬಣ್ಣಿಸಿ ಹೇಳುತ್ತಿರುವನೋ ಎಂಬಂತೆ ತೋರುವ ಈ ಸುರಹೊನ್ನೆ ಹೂಗಳಲ್ಲಿ ಅದೆಷ್ಟು ಸುಂದರವೊ!)