Thursday, September 09, 2010

2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು

ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿ ಜಾತಿ ನಿರ್ಮೂಲನೆಯ ಹಾದಿಯಲ್ಲಿ ಆರಂಭದ ಹೆಜ್ಜೆಗಳನ್ನು ಇಟ್ಟರು. (ಈ ಹಿಂದೆಯೂ ಒಮ್ಮೆ ಅವರು ದಲಿತಕೇರಿಗೆ ಬೇಟಿ ಕೊಟ್ಟಿದ್ದು ಉಂಟು). ನಾಡಿನಾದ್ಯಂತ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಮಾದ್ಯಮಗಳೂ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟವು. ಸುವರ್ಣ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಎಲ್. ಹನುಮಂತಯ್ಯನವರು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ಅಸ್ಪೃಷ್ಯತೆಯ ನಿರ್ಮೂಲನೆಗೆ ಇರುವ ಎಡರು ತೊಡರುಗಳನ್ನು ಗುರುತಿಸಿದರೆ, ಗೀತಾ ರಾಮಾನುಜಂ ಅವರು ಕೇವಲ ಮೇಲ್ವರ್ಗದವರು ಪ್ರಯತ್ನ ಪಟ್ಟರೆ ಸಾಲದು; ಅಸ್ಪೃಷ್ಯರೂ ಸಹಕರಿಸಬೇಕು. ಅಸ್ಪೃಷ್ಯತೆಯ ನಿವಾರಣೆಗಾಗಿ ನಾವು (ಮೇಲ್ವರ್ಗ?) ಏನೂ ಮಾಡಲು ಸಿದ್ಧರಿದ್ದೇವೆ. ಆದರೆ ಆ ವರ್ಗವೇ ಸಿದ್ಧವಾಗಿಲ್ಲ ಎನ್ನುವ ಅರ್ಥದಲ್ಲಿ ತಮ್ಮ ವಾದವನ್ನು ಮಂಡಿಸಿ, ಪೇಜಾವರ ಶ್ರೀಗಳ ಪ್ರಯತ್ನವನ್ನು ಶ್ಲಾಘಿಸುತ್ತಾ, ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂದು ಮಾತು ಮುಗಿಸಿದ್ದರು.

ಈ ಚರ್ಚೆಯನ್ನು ನೋಡುತ್ತಿದ್ದಾಗಲೇ ನನಗನ್ನಿಸಿದ್ದು. ಪೇಜಾವರ ಶ್ರೀಗಳು ದಲಿತಕೇರಿಗೆ ಹೋಗಿದ್ದು. ಅಭಿನಂದನೀಯ. ಅವರನ್ನು ದಲಿತ ಸಮುದಾಯ ಸ್ವಾಗತಿಸಿದ್ದು ಅನುಕರಣೀಯ. ಆದರೆ ಬೇರೆ ಜಾತಿಯ ಸ್ವಾಮಿಜಿಗಳು (ಜಾತಿಗೊಂದು ಮಠ, ಸ್ವಾಮಿಜಿ ಇರುವುದು ನಾಗರಿಕ ಸಮಾಜದ ಆರೋಗ್ಯಕರ ಲಕ್ಷಣವಲ್ಲ! ಅದು ಬೇರೆ ಮಾತು) ಬೇರೆ ಬೇರೆ ಜಾತಿಗಳವರ ಊರು ಕೇರಿ ಮನೆಗಳಿಗೆ ಬೇಟಿಕೊಟ್ಟರೆ ಹೇಗಿರುತ್ತದೆ? ಎಂಬ ಆಲೋಚನೆ ತಲೆಯಲ್ಲಿ ಸುಳಿದು ಹೋಗಿತ್ತು. ಅದರಲ್ಲೂ ವಿಶೇಷವಾಗಿ ಈಗ ದಲಿತ ಸಮುದಾಯಕ್ಕೂ ಒಂದು ಮಠ, ಸ್ವಾಮೀಜಿ ಇರುವುದರಿಂದ, ಆ ಸಮುದಾಯದ ಸ್ವಾಮೀಜಿಯೊಬ್ಬರು ಬ್ರಾಹ್ಮಣ ಕೇರಿಯಲ್ಲಿ ಪಾದ ಯಾತ್ರೆ ನಡೆಸಿದರೆ, ಬ್ರಾಹ್ಮಣರ ಮನೆಗಳಿಗೆ ಬೇಟಿ ಕೊಡಲು ಇಚ್ಛಿಸಿದರೆ, ಅವರ ಮನೆಗಳಲ್ಲಿ ದೇವರ ಪೂಜೆ ಮಾಡಲು ಇಚ್ಛಿಸಿದರೆ ಸಮುದಾಯದ ಪ್ರತಿಕ್ರಿಯೆ ಹೇಗಿದ್ದಿರಿಬಹುದು? ಹೀಗೇ ಏನೇನೋ ಯೋಚನೆಗಳು ತಲೆಯನ್ನು ತುಂಬಿಕೊಂಡಿದ್ದೂ ಉಂಟು.

ಇಂದು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಈ ವರದಿ ನನ್ನಲ್ಲಿ ಸಂಚಲವನ್ನೇ ಹುಟ್ಟು ಹಾಕಿತ್ತು. ಮಾದಿಗ ಜನಾಂಗ ಗುರುಪೀಠದ ಚನ್ನಯ್ಯ ಸ್ವಾಮೀಜಿಯವರು ಇದೇ ಸೆಪ್ಟಂಬರ್ ಹದಿನೈದರಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ’ಸಾಮರಸ್ಯ ನಡಿಗೆ’ ನಡೆಸುವುದಾಗಿ ಘೋಷಿಸಿದ್ದಾರೆ. ’ಯಾವುದೇ ದ್ವೇಷ ಅಥವಾ ಸ್ಪರ್ಧಾ ಮನೋಭಾವದಿಂದ ತಾವು ಬ್ರಾಹ್ಮಣರ ಕೇರಿಗೆ ಹೋಗುತ್ತಿಲ್ಲ. ಪೇಜಾವರ ಸ್ವಾಮೀಜಿ ಅವರಿಗೆ ಸವಾಲು ಹಾಕುವ ಉದ್ದೇಶವಲ್ಲ. ಈ ಎರಡೂ ಜನಾಂಗದ ನಡುವೆ ಸಾಮರಸ್ಯ ತರುವ ಹಿನ್ನೆಲೆಯಲ್ಲಿ ತಮ್ಮದೊಂದು ಪುಟ್ಟ ಪ್ರಯತ್ನ’ ಎಂದು ಹೇಳಿರುವ ಅವರಿಗೆ ವಿಷಯದ ಗಂಭೀರತೆ, ಸಂಕೀರ್ಣತೆ ಹಾಗೂ ವ್ಯಾಪ್ತಿಯ ಎಚ್ಚರವೂ ಇದೆ ಎಂಬುದು ಸ್ಪಷ್ಟವಾಗಿದೆ.

’ಮಾದಿಗರು ಮಾಧ್ವರಾಗಬೇಕು ಎನ್ನುವುದು ಪೇಜಾವರ ಶ್ರೀಗಳ ಆಶಯ. ಆದರೆ ಅವರ ಜನಾಂಗದವರು ಇದನ್ನು ಒಪ್ಪುತ್ತಾರೆಯೇ?’ ಎಂಬ ಪ್ರಶ್ನೆ ಮಾದಾರ ಚನ್ನಯ್ಯ ಸ್ವಾಮಿಗಳಲ್ಲಿದೆ. ಅದಕ್ಕೆ ಉತ್ತರವೂ ಸೆಪ್ಟಂಬರ್ ಹದಿನೈದರಂದು ಸಿಗಲಿದೆ. ಪೇಜಾವರ ಶ್ರೀಗಳಂತಹ ಧೀಮಂತ ವ್ಯಕ್ತಿತ್ವದ ಸ್ವಾಮೀಜಿಯೊಬ್ಬರು ಜಾತಿ ನಿರ್ಮೂಲನೆಯ ನಿಟ್ಟಿನಲ್ಲಿ ಇಟ್ಟಿರುವ ಐತಿಹಾಸಿಕ ಹೆಜ್ಜೆಯ ಮುಂದುವರೆದ ಭಾಗದಂತಿರುವ ಈ ಸಾಮರಸ್ಯದ ನಡಿಗೆಯಲ್ಲಿ, ತಮ್ಮ ಕೇರಿಗೆ ಮನೆಗೆ ಬರುವ ಮಾದಾರ ಚನ್ನಯ್ಯ ಸ್ವಾಮಿಜಿಗಳಿಗೆ ಒಳ್ಳೆಯ ಸ್ವಾಗತವೇ ಸಿಗಲಿ ಎಂದು ಆಶಿಸೋಣ. ಪೇಜಾವರ ಸ್ವಾಮಿಜಿಗಳ ಐತಿಹಾಸಿಕ ನಿರ್ಧಾರಕ್ಕೆ, ಮಾಧ್ವ ಸಮುದಾಯ ಚನ್ನಯ್ಯ ಸ್ವಾಮಿಜಿಗಳನ್ನು ಸ್ವಾಗತಿಸುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರೆ ನಿಜವಾಗಲೂ ಇದೊಂದು ಐತಿಹಾಸಿಕ ದಿನವಾಗಲಿದೆ. ಮಾಧ್ವ ಸಮುದಾಯ ಪೇಜಾವರ ಶ್ರೀಗಳ ಬೆಂಬಲಕ್ಕೆ ನಿಲ್ಲಲೇಬೇಕು. ಇಲ್ಲದಿದ್ದರೆ, ಸ್ವಾಮಿಜಿಗಳು ಒಬ್ಬಂಟಿಗಳಾಗುತ್ತಾರೆ. ಅವರ ಪ್ರಯತ್ನ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತೆ ವ್ಯರ್ಥವಾಗುತ್ತದೆ.

ಕೊನೆಯ ಮಾತು: ಪೇಜಾವರ ಸ್ವಾಮಿಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ನಡೆಸುವ; ನಡೆಸಿದ ವಿಷಯ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ, ಮಾದ್ಯಮಗಳಲ್ಲೂ ಪ್ರಮುಖ ಸುದ್ದಿಯಾಗಿತ್ತು. ಆದರೆ ಈ ಸಾಮರಸ್ಯ ನಡಿಗೆಯ ವಿಷಯ ನನ್ನ ಗಮನಕ್ಕೆ ಬಂದಿರುವಂತೆ ಪ್ರಜಾವಾಣಿ ಪತ್ರಿಕೆಯನ್ನುಳಿದು ಬೇರೆ ಪತ್ರಿಕೆಗಳಲ್ಲಿ ಬಂದಿಲ್ಲ. ಇದು ಪತ್ರಿಕೆಗಳ ಜಾತಿ ರಾಜಕಾರಣವಲ್ಲ ತಾನೆ? ಆಗಿರದಿರಲಿ ಎಂದು ಆಶಿಸೋಣ.

Wednesday, September 08, 2010

ಇವರು ಯಾರು ಬಲ್ಲಿರೇನು?

ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಕೊನೆಯಲ್ಲಿ ಅವರ ಫೋಟೋ ಕೂಡಾ ಇದೆ. ಜೊತೆಗೆ ಒಂದು ಕ್ಲೂ ಕೂಡಾ!
  • ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ. ಅಂತಹ ವಿಸ್ಮಯಗಳ ಹುಡುಕಾಟ ಇವರ ಹವ್ಯಾಸ. 
  • ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಫಂಥಕ್ಕೆ ಸೀಮಿತಗೊಳಿಸಿ, ಅವನ ಪ್ರಗತಿಪರವಾದ, ಜೀವಪರವಾದ ನಿಲುವುಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನ ಶಕ್ತಿಮೂಲ ಯಾವುದು? 
  • ಬಹುಸಂಸ್ಕೃತಿಯ, ಧಾರ್ಮಿಕತೆಯ ನಾಡಿನಲ್ಲಿ ಸಹಬಾಳ್ವೆ ಸಾದ್ಯವಿರುವೆಡೆಯಲ್ಲೆಲ್ಲಾ ಅಂತರಂಗದಲ್ಲಿ ಕ್ರೋಧ, ದ್ವೇಷಗಳಂತೆ ಜಾತಿಯತೆಯೂ ಸ್ಥಾಯಿಯಾಗಿ ಇರುವುದರಿಂದ ಸಾಂಸ್ಕೃತಿಕ ಚಿದ್ರೀಕರಣವಾಗುತ್ತಿರುವುದು.  
  • ಒಳಗೊಳಗೇ ಮತ್ತೆ ಗಟ್ಟಿಯಾಗುತ್ತಿರುವ ಜಾತೀಯತೆ. ಜಾಗತೀಕರಣದ ತೀವ್ರತರ ಪ್ರಭಾವ ಮತ್ತು ಪರಿಣಾಮದಿಂದಾಗಿ ಜಾತೀಯತೆಯ ಬೇರುಗಳು ಸಡಿಲವಾಗಬಹುದೆಂಬ ಆಶಾಭಾವನೆ. 
  • ಸನಾತನವಾದಿಗಳ ಪ್ರಕಾರ ಗುರುಪೀಠದ ಹಕ್ಕೇ ಇಲ್ಲದ ಶೂದ್ರಪರಂಪರೆಯ ಮಠಗಳೂ ಸಹ ಬೆಳ್ಳಿಕಿರೀಟ, ಅಡ್ಡಪಲ್ಲಕ್ಕಿ ಉತ್ಸವ ಪಾದಪೂಜೆ ಮೊದಲಾದವುಗಳಲ್ಲಿ ತೊಡಗುತ್ತಿರುವುದು.  
  • ಸ್ವಲ್ಪಮಟ್ಟಿನ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವರಿಗೇ (ನನ್ನನ್ನೂ ಸೇರಿಸಿಕೊಂಡು) ಬೆಕ್ಕು ಅಡ್ಡ ಹೋಗುವುದನ್ನು ನೋಡಿ ’ತಥ್’ ಎನ್ನುವಂತೆ ಆಗುತ್ತದೆ. ಅಂದರೆ ಈ ನಂಬಿಕೆಗಳು ಆನುಷಂಗಿಕವೋ ಎಂಬ ಭಾವ. 
  • ಯಾವುದರ ವಿರುದ್ದ ಶೂದ್ರರು ಸೆಟೆದು ನಿಂತಿದ್ದರೊ ಅದರ ಬಗ್ಗೆಯೇ ಮೃದುವಾದರೆಂದರೆ ಶುದ್ರರೂ ದಲಿತರೂ ಮತ್ತೆ ಸನಾತನಿಗಳ ಊಳಗಕ್ಕಿಳಿಯುವ ಸಾಧ್ಯತೆ. 
  • ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದದ ಪರಿಣಾಮಗಳು.  
  • ಶಿಕ್ಷಣ ಪದ್ಧತಿ, ಮಾಧ್ಯಮ ಮತ್ತು ಗುಣಮಟ್ಟ. ಟೀ.ವಿ. ಚಾನೆಲ್‌ಗಳನ್ನು ಬದಲಾಯಿಸುವಂತೆ, ನಮ್ಮ ನಾಯಕರುಗಳು ಬದಲಾಯಿಸುತ್ತಿರುವ, ದೂರಗಾಮಿತ್ವವಿಲ್ಲದ ಶಿಕ್ಷಣ ನೀತಿ. 
  • ಶಿಕ್ಷಕ ಸಮುದಾಯದ ನಿಷ್ಕ್ರೀಯತೆ. ಪಠ್ಯೇತರ ಜ್ಞಾನದ ಬಗೆಗಿನ ಅನಾದರ. ಸಾಹಿತ್ಯವು ಅಧ್ಯಾಪಕರ ಸೊತ್ತಾಗಿರುವುದು. ಸಾಹಿತಿಗಳೆನಿಸಿಕೊಂಡವರಲ್ಲಿ ಹೆಚ್ಚುತ್ತಿರುವ ಜ್ಞಾನದ ಅಹಂಕಾರ ಮತ್ತು ಜ್ಞಾನ ಮೂಲದ ನಿರಾಕರಣೆ. 
  • ತನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗದ ಅನ್ವೇಷಣೆ.
  • ಕಾಲ, ತಂತ್ರಜ್ಞಾನ ಇವುಗಳ ಬದಲಾವಣೆಯ ವೇಗದೊಂದಿಗೆ ಬದಲಾಗದ ಕನ್ನಡ ಭಾಷೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡವನ್ನು ಬಳಸಲು ಇರುವ ಹಿಂಜರಿಕೆ. 
  • ಪುಸ್ತಕೋದ್ಯಮದ ಶಿಥಿಲ ವ್ಯವಸ್ಥೆ ಹಾಗೂ ಭ್ರಷ್ಟಾಚಾರ. ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾಸಾಹಸವಾಗುತ್ತಿರುವುದು. 
  • ಎಲ್ಲಾ ಚಳುವಳಿಗಳು, (ಉದಾಹರಣೆಗೆ ಜಾತಿವಿನಾಶ ಚಳುವಳಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ನವ್ಯ, ದಲಿತ ಮತ್ತು ಬಂಡಯ, ಇತ್ತಿಚಿನ ಪರಿಸರ ಚಳುವಳಿಗಳು) ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತಿರುವುದು. ಸಾಮಾಜಿಕ ಆಯಾಮವನ್ನು ದಕ್ಕಿಸಿಕೊಳ್ಳದೇ ಇರುವುದು. ಗೋಕಾಕ್ ಮತ್ತು ರೈತ ಚಳುವಳಿಗಳು ಸಾಹಿತ್ಯೇತರ ಚಳುವಳಿಯಾಗಿದ್ದರೂ ಸಾಮಾಜಿಕ ಎಚ್ಚರ ಮೂಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು. 
  • ಆಯಾಯ ಕಾಲಧರ್ಮವನ್ನು ಅನುಸರಿಸಿ ಸಮಾಜೋದ್ಧಾರದಲ್ಲಿ ನಿರತರಾದವರನ್ನು ನೇತಾರರನ್ನು ಅವರುಗಳ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಇಂದಿನ ಸಮಸ್ಯೆಗಳೇ ಬೇರೆ ಸ್ವರೂಪದವುಗಳು. ಆದ್ದರಿಂದ ಯಾವುದೇ ನಾಯಕ- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಸೇರಿದಂತೆ ಯಾವುದೇ ನಾಯಕರು ಇಂದು ರಿಲವೆಂಟ್ ಆಗಿ ಉಳಿದಿಲ್ಲ. 
  • ವೈಚಾರಿಕತೆ ಎಂಬುದನ್ನು ಕೇವಲ ಧಾರ್ಮಿಕವಾದ, ಕೋಮುವಾದ ಮತ್ತು ಸಾಹಿತ್ಯವಾದದ ಹಿನ್ನೆಲೆಯಲ್ಲಿ ಮಾತ್ರ ಏಕೆ ನೋಡಲಾಗುತ್ತಿದೆ? ವೈಚಾರಿಕತೆಯ ನಿಲುವುಗಳನ್ನು ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ಏಕೆ ನೋಡಲಾಗುತ್ತಿಲ್ಲ? 
  • ಮನುಷ್ಯನನ್ನು ಒಟ್ಟು ಪರಿಸರದಿಂದ ಬೇರೆಯಾಗಿಯೇ ನೋಡುತ್ತಿರುವುದರಿಂದ ಆಗುತ್ತಿರುವ ದುರಂತ.
ಕ್ಲೂ : ಅಂದ ಹಾಗೆ ಇಂದು ಅವರ ಹುಟ್ಟು ಹಬ್ಬ.
 

Friday, September 03, 2010

ಗೋಪಿನಾಥ ರಾವ್ ಅವರ ’ಸಾರ್ವಭೌಮ’ದ ಕೆಲವು ಕಥೆಗಳು: ಸ್ವಗತ

ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅವರ ಚೊಚ್ಚಲ ಕಥಾ ಸಂಕಲನ ಸಆರ್ವಭೌಮ ದೂರದ ದುಬೈನಲ್ಲಿ ಬಿಡುಗಡೆಯಾಗಿತ್ತು. ಮೊನ್ನೆ ಅವರು ಬಂದಾಗ ಕಥಾಸಂಕಲನವನ್ನು ಕೊಟ್ಟರು. ಅವರನ್ನು ಬೀಳ್ಕೊಟ್ಟ ತಕ್ಷಣ ನಾನು ಕೆಲವು ಕಥೆಗಳ ಮೇಲೆ ಕಣ್ಣಾಡಿಸಿದೆ. ಅದರ ಹಲವಾರು ಕಥೆಗಳು ಒಂದೇ ಬಾರಿಗೆ ನನ್ನಿಂದ ಓದಿಸಿಕೊಂಡವು. ಒಂದೇ ಒಂದು ಪದ ಆಚೀಚೆಯಾಗದಂತೆ ಬರೆಯುವ ಅವರ ಕಲೆಗಾರಿಕೆ ನನಗೆ ಇಷ್ಟವಾಯಿತು. ಒಂದು ಕಥೆಯಾದ ಮೇಲೆ ಅದರ ಬಗ್ಗೆ ನನಗನ್ನಿಸಿದ್ದನ್ನು ಆಗಲೇ ಟೈಪಿಸಿಬಿಡುತ್ತಿದ್ದೆ. ಅಂತಹ ಅನಿಸಿಕೆಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದೇನೆ. ಆ ಸಂಕಲನದ ಇನ್ನುಳಿದ ಕಥೆಗಳನ್ನು ಓದಿದ ನಂತರ ಮತ್ತೆ ಬರೆಯುತ್ತೇನೆ.

ಗೆಲುವಿನಹಳ್ಳಿ ಸೇತು

ಅತ್ಯಂತ ನಾಟಕೀಯ ತಿರುವು ತೆಗೆದುಕೊಳ್ಳುವ ’ಗೆಲುವಿನಹಳ್ಳಿ ಸೇತು’ ಕಥೆಯಲ್ಲಿ ರಾಜಕೀಯದ ಒಳಸುಳಿಗಳೆಲ್ಲಾ ಬಂದುಹೋಗುತ್ತವೆ. ಉದ್ಘಾಟನೆಗೂ ಮುಂಚೆ ಮುರಿದು ಬಿದ್ದ ಒಂದು ಸೇತುವೆ, ದಿನಗೂಲಿ ನೌಕರ ಸೇತು ಇಲ್ಲಿ ನಿಮಿತ್ತ ಮಾತ್ರ. ಆದರೆ ಈ ಸೇತು(ವೆ) ಮತ್ತು ಆ ಸೇತು ನಡುವೆ ಬೇರೆ ಪಾತ್ರಗಳು ಬಿಚ್ಚಿಡುವ ಸಂಗತಿಗಳು ಯಾವ ಆಧುನಿಕ ರಾಜಕೀಯ ಅಸಂಗತತೆಗೂ ಕಡಿಮೆಯಿಲ್ಲ. ಸೇತುವೆ, ಕಟ್ಟಡ ಕುಸಿದಂತಹ ಅವಘಢಗಳು ನಡೆದಾಗ ತಾಂತ್ರಿಕ ಜ್ಞಾನ ಸವಲ್ಪವೂ ಇಲ್ಲದ ಮಂತ್ರಿಗಳು ಕೊಡುವ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದಾಗ ಈ ಕಥೆ ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ. ಮೊನ್ನೆ ಮೊನ್ನೆ ಪಶ್ಚಿಮಬಂಗಾಲದಲ್ಲಿ ರೈಲ್ವೇ ಹಳಿ ಸ್ಪೋಟವಾಗಿ ನೂರಾರು ಜನ ಸತ್ತರಲ್ಲ, ಆಗಿನ ರಾಜಕಾರಣಿಗಳ ಅಧಿಕಾರಿಗಳ ಮಾತುಗಳನ್ನು ಕೇಳಿಸಿಕೊಂಡಿದ್ದವರಿಗೆ ಈ ಕಥೆ ಇನ್ನೂ ಹೆಚ್ಚು ಅರ್ಥವತ್ತಾಗಿ ಕಂಡರೆ ಆಶ್ಚರ್ಯವಿಲ್ಲ.

ಭೂತಕ್ಕೆ ಹೆದರುವ ಅಜ್ಜ

’ಭೂತಕ್ಕೆ ಹೆದರುವ ಅಜ್ಜ’ ಕಥೆಯಲ್ಲಿನ ಪಾಟೀಲನ ಪಾತ್ರ ಪ್ರಾರಂಭದಲ್ಲಿ ಉದಾತ್ತವಾಗಿ ಕಂಡರೂ, ಆತನ ಮಾತು ನಡವಳಿಕೆಗಳು ಸ್ವಲ್ಪ ಮಟ್ಟಿಗೆ ಅಪರಿಚಿತವೆನ್ನಿಸುತ್ತವೆ. ಓದುಗನಲ್ಲಿ ಆತನ ಮಾತುಗಳು ನಂಬಿಕೆ ಹುಟ್ಟಿಸುವುದಿಲ್ಲ. ಅದಕ್ಕೆ ಪೂರಕವಾಗಿ ಆತನ ಹೆಂಡತಿ ಆಡಿದ ಮಾತುಗಳು ಓದುಗನ ಮನಸ್ಸಿನಲ್ಲಿ ನಿಂತುಬಿಡುತ್ತವೆ. ಆಕಾಂಕ್ಷ ನನ್ನ ಮೊಮ್ಮಗಳು, ಎನ್ನುವ ಪಾಟೀಲಜ್ಜ ದೂರದ ಊರಿನಲ್ಲಿ ತನ್ನ ಹೆಂಡತಿ ಮಕ್ಕಳು ಮೊಮ್ಮಕ್ಕಳು ಇರುವುದನ್ನು ಮರೆತವನಂತೆ ವರ್ತಿಸುವುದಕ್ಕೆ ಬಲವಾದ ಕಾರಣಗಳಿಲ್ಲ. ತಾನು ಸಂಪಾದಿಸಿದ ಹಣ ಎಂಬ ಪುರುಷ ಅಹಂಕಾರಕ್ಕೆ ಅನುಗುಣವಾಗಿ ಆತನಲ್ಲಿ ಮೂಡಿದ ಸಣ್ಣ ಅನುಮಾನ ವೈವಾಹಿಕ ಸಂಬಂಧಗಳು ಗಟ್ಟಗೊಳ್ಳುವ ಬದಲು ಹರಿದುಹೋಗುವ ಹಂತ ತಲುಪಿದ್ದು ವಿಷಾದನೀಯ. ಆದರೆ ನಿರೂಪಕನಲ್ಲಿ ಪಾಟೀಲಜ್ಜನಿಗಿದ್ದ ಆಪ್ತತೆ ನಂಬಿಕೆ ಹಾಗೂ ನಿರೂಪಕನಿಗೆ ಎರಡು ಬಾರಿ ಹೊಳೆದ ಸತ್ಯ - ಮೊದಲು ಆಕಾಂಕ್ಷ ನನ್ನ ಮೊಮ್ಮಗಳು ಎಂದಾಗ, ಎರಡನೆಯದು, ಪಾಟೀಲಜ್ಜನ ಹೆಂಡತಿ ಕೆಲವೇ ಮಾತುಗಳಲ್ಲಿ ಬಿಡಿಸಿಟ್ಟ ಸತ್ಯ - ಓದುಗನನು ಆಶಾವಾದಿಯನ್ನಾಗಿಸುತ್ತವೆ, ಕಥೆಯ ಅಂತ್ಯಕ್ಕೆ.

ಪಯಣ

’ಪಯಣ’ ಕಥೆಯಲ್ಲಿ ಮನುಷ್ಯ ಸಂಬಂಧಗಳು, ಸಂಘರ್ಷಗಳು, ನಂಬಿಕೆಗಳು ಮುಖಾಮುಖಿಯಾಗುತ್ತವೆ. ದೂರದ ಅಮೆರಿಕಾದಲ್ಲಿ ಯಶಸ್ವೀ ಉದ್ಯಮಿಯಾಗಿ ನೆಲೆಸಿರುವ ಮಗ ಕಥೆಯ ಉದ್ದಕ್ಕೂ ನೇಪಥ್ಯದಲ್ಲೇ ಉಳಿದು, ಆಗಾಗ ಖಳನಾಯಕನಂತೆ ಗೋಚರಿಸಿದರೂ, ಕಥೆಯ ಕೊನೆಯಲ್ಲಿ ಆತನಾಡುವ ಮಾತು ಓದುಗನ ಕಣ್ಣಂಚನ್ನು ಒದ್ದೆಯಾಗಿಸದೆ ಬಿಡುವುದಿಲ್ಲ. ಮಾನವೀಯತೆಯೆ ಎದ್ದುಬಂದಂತೆ ಕಾಣುವ ಮಂಜುನಾಥನ ಸಾವಿನ ನಂತರ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಬೇರೊಂದು ಮಗ್ಗುಲಿಗೆ ಹೊರಳುವುದು ಕಥೆಗಾರರ ಯಶಸ್ವೀ ತಂತ್ರವಾಗಿದೆ. ಘಟಶ್ರಾದ್ಧ ಕ್ರಿಯೆಯ ಜಿಜ್ಞಾಸೆಯೂ ನಡೆಯುತ್ತದೆ. ಆದರೆ ತಾರ್ಕಿಕ ಅಂತ್ಯ ಕಾಣದೆ ಸುಲಭೋಪಾಯಕ್ಕೆ ಮಣಿದುಬಿಡುತ್ತದೆ. ಈ ಕೊರತೆಯನ್ನು ಕಥೆಯ ಅಂತ್ಯ ಹಾಗೂ ಪಟೇಲರ ಮಗ ಆಡುವ ’... ನಾನಿಲ್ಲದಿದ್ದರೆ ಇನ್ನೊಬ್ಬ, ಬೆಂಕಿ ಕೊಟ್ಟೇ ಕೊಡುತ್ತಾರೆ. . . ಬದುಕುಬೇಕಾದವರ ಬಗ್ಗೆ ಆಲೋಚಿಸಿ’ ಎಂಬ ಮಾತುಗಳು ಘಟಶ್ರಾದ್ಧದ ಅರ್ಥಹೀನತೆಯನ್ನೇ ಎತ್ತಿ ತೋರಿಸಿಬಿಡುತ್ತವೆ.

ಮನೆ ಜಗಲಿಯ ಕೋರ್ಟು

’ಮನೆ ಜಗಲಿಯ ಕೋರ್ಟು’ ಮಾನವೀಯ ಸಂಬಂಧಗಳು, ಸಂಘರ್ಷಗಳನ್ನು ಕೆಲವೇ ನಿಮಿಷದಲ್ಲಿ ಮೂವತ್ತು ವರ್ಷಗಳ ಇತಿಹಾಸದೊಂದಿಗೆ ತೆರೆದಿಡುವ ಭಾವಾವೇಶದಿಂದ ಕೂಡಿದ ಅತ್ಯುತ್ತಮ ಸಣ್ಣಕಥೆ. ಒಂದು ಪದ ಆಚೀಚೆ ಆಗದ ಹಾಗೆ ನಿರುಪಣೆಗೊಂಡಿರುವ ಈ ಕಥೆ ಕಥೆಗಾರರ ಕೌಶಲಕ್ಕೆ ಹಿಡಿದ ಕನ್ನಡಿ. ಸಂಪ್ರದಾಯದ ಚೌಕಟ್ಟಿನಲ್ಲಿಯೇ ಬಾಳಿ ಬದುಕುತ್ತಿರುವ ಕುಟುಂಬಗಳಿಗೆ ಮದುವೆ, ಕನ್ಯದಾನ, ಅಪರಕರ್ಮ ಇವುಗಳು ಅತ್ಯಂತ ಪ್ರಮುಖವಾದವುಗಳು. ಅವುಗಳ ಬಗ್ಗೆ ಹಿಂದೆ ಮುಂದೆ ಯೋಚಿಸದೆ ತೀರಾ ಯಾಂತ್ರಿಕವಾಗಿಯೂ ನಡೆದುಕೊಳ್ಳುವುದು ಉಂಟು. ಮಗ ದೊಡ್ಡ ಕಳ್ಳ ಸುಳ್ಳನಾದರೂ ತಂದೆ ಸತ್ತಾಗ ಅವರ ಅಪರಕರ್ಮ ಮಾಡಲೇಬೇಕು, ದುಃಖ ಪಡಬೇಕು! ಅವಿನೆಗ ದುಃಖವಾಗದಿದ್ದರೂ ಜನರ ಸಮಾಧಾನಕ್ಕಾಗಿ ಆತ ಅಳಬೇಕು! ಏಕೆಂದರೆ ಅದು ಸಂಪ್ರದಾಯ. ಆದರೆ ಈ ಕಥೆಯ ಶೇಷಪ್ಪಯ್ಯ ತನ್ನ ತಮ್ಮನ ಸಾವಿಗೆ ದುಃಖಿಸುವುದರಲ್ಲಿ ಅರ್ಥವಿದೆ. ಆತನ ನಾಲ್ಕು ಹನಿ ಕಣ್ಣೀರಿಗೆ ಸಾಗರದಷ್ಟು ಅರ್ಥಗಳು ಭಾವನೆಗಳು ನಮ್ಮನ್ನು ಆವರಿಸಿಬಿಡುತ್ತವೆ. ಏಕೆಂದರೆ ತಮ್ಮನ ಆಸ್ತಿಯನ್ನು ಜೋಪಾನ ಮಾಡಿ ನಿಜವಾದ ಹಕ್ಕುದಾರರಿಗೆ ತಲುಪಿಸುವ ಸತ್ಪ್ರಯತ್ನದಲ್ಲಿದ್ದ ಶೇಷಪ್ಪಯ್ಯ ನಿಜವಾದ ಅರ್ಥದಲ್ಲಿ ’ಅಣ್ಣ’!

ಬೆತ್ತಲೆ ಹಕ್ಕು

ಪುರುಷ ಅಹಂಕಾರದ ಇನ್ನೊಂದು ಉದಾಹರಣೆ ’ಬೆತ್ತಲೆ ಹಕ್ಕು’ ಕಥೆಯಲ್ಲಿ ವ್ಯಕ್ತವಾಗಿದೆ. ಗಂಡಸಿಗೆ ತಾನು ಎಷ್ಟೊಂದು ಜನ ಹೆಣ್ಣುಗಳ ಜೊತೆಗೆ ಸೇರುವುದು ತಪ್ಪಲ್ಲವೆನಿಸಿದರೂ, ತನ್ನ ಹೆಂಡತಿ ಅಥವಾ ತನಗೆ ಸೇರಿದ ವಸ್ತುಗಳು ಬೇರೆಯವರಿಗೆ ಸಿಗಬಾರದು, ಅದರ ರಕ್ಷಣೆ ನನ್ನ ಹೊಣೆ ಎಂಬ ವಿಚಿತ್ರ ಮನಸ್ಥಿತಿ ತನಗರಿವಿಲ್ಲದೇ ಮೂಡಿಬಿಡುತ್ತದೇನೋ? ಹೆಣ್ಣು ಅಬಲೆ ಎಂಬ ಪೂರ್ವಾಗ್ರಹಪೀಡಿತ ಮನಸ್ಸು ’ಅವಳ ರಕ್ಷಣೆ ನನ್ನದು’ ಎಂದು ಅಧಿಕಾರ ಚಲಾಯಿಸುತ್ತದೆ. ಒಮ್ಮೊಮ್ಮೆ ಈ ಪುರುಷ ಅಹಂಕಾರ ಧಾನಾತ್ಮಕ ಪರಿಣಾಮವನ್ನೂ ಉಂಟುಮಾಡುತ್ತದೆ ಎಂಬುದು ಮಾತ್ರ ಈ ಸೃಷ್ಟಿಯ ವೈಚಿತ್ರ್ಯ ಅಥವಾ ಮಾನವ ನಾಗರೀಕತೆಯ ಸಂಕೀರ್ಣತೆಯ ಒಂದು ಭಾಗ. ಕಥೆಯ ಆರಂಭದಿಂದಲೂ ಚೆಲ್ಲಾಟದ ಹುಡುಗಿಯಾಗಿ (ಹಾಗೆ ನೋಡಿದರೆ ಆ ಪಾತ್ರಕ್ಕೆ ಸರಿಯಾಗಿ) ಕಾಣಿಸಿಕೊಳ್ಳುವ ಭಾವನ ಬೆತ್ತಲಾಗಿ ಕುಳಿತು, ಕಲಾವಿದನ ಕುಂಚದಿಂದ ಬಿತ್ತಿಯಲ್ಲಿ ಕಲೆಯಾಗಿ ಅರಳುವಷ್ಟರಲ್ಲಿ ತಾನೂ ಬೆಂಕಿಯಲ್ಲಿ ಅರಳಿದ ಹೂವಾಗಿ ಬಿಟ್ಟಿರುತ್ತಾಳೆ. ಮೂರು ಗಂಟೆಗಳ ಕಾಲ ಇಬ್ಬರು ಪುರುಷರ ಎದುರಿಗೆ ಬೆತ್ತಲಾಗಿ ಕುಳಿತಿದ್ದರೂ ಅವಳಿಗೆ ಸಿಕ್ಕ ಏಕಾಂತ, ಅವಳ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ತಪಸ್ಸು ಸಾರ್ಥಕವಾಗಬೇಕಾದರೆ ದೇವರು ಪ್ರತ್ಯಕ್ಷವಾಗಲೇ ಬೇಕಿಲ್ಲ. (ಹಾಗೆ ನೋಡಿದರೆ ಬುದ್ಧ-ಮಹಾವೀರರಿಗೆ ಯಾವ ದೇವರೂ ಪ್ರತ್ಯಕ್ಷನಾಗಲಿಲ್ಲ) ಯಾವಾಗಲೂ ಹೆಣ್ಣನ್ನು ಆಳುವ ಮನಸ್ಥಿತಿಯ ಪುರುಷ ಅಹಂಕಾರ, ಅವಳ ಬೆತ್ತಲೆ ಚಿತ್ರದ ಮೇಲೂ ಪಸರಿಸುವುದು ಮಾತ್ರ ಅದರ ಔನ್ನತ್ಯದ ಅತಿರೇಕವೆನ್ನಿಸುತ್ತದೆ. ಇಲ್ಲಿ ರಾಜುವಿನ ಪಾತ್ರ ಅದರ ಪ್ರತೀಕ. ಕೇವಲ ಅವಳನ್ನೊಂದಿಷ್ಟು ಹೊತ್ತು ರೇಗಿಸುವ ಎಂದು ಬಂದ ಆತ ’ಆದಿನದ ಒಳ್ಳೆಯ ಸಂಪಾದನೆಯ’ ಫಲವಾಗಿಯೋ ಅಥವಾ ದೃಢತೆಯಿಲ್ಲದ ಮನಸ್ಥಿತಿಯೋ ಆತ ಕುಸಿಯಲಾರಂಭಿಸುತ್ತಾನೆ. ಅಂತಹವನ ಪಾತ್ರವೂ ಕಲಾವಿದನ ಸಾಮೀಪ್ಯದಿಂದ ವಿಚಿತ್ರವಾದ ಸಂಯಮವನ್ನು ಸಂಪಾದಿಸಿಕೊಂಡುಬಿಡುತ್ತದೆ. ಭಯಂಕರ ವಾಚಾಳಿಯಾದವನೂ ಒಂದು ಅತ್ಯುತ್ತಮ ಕಲಾಕೃತಿಯ ಎದುರಿಗೆ ನಿಂತಾಗ ಒಂದರೆ ಕ್ಷಣ ಮಾತು ಮರೆಯುವಂತೆ! ಮತ್ತೆ ಕಾರಿನಲ್ಲಿ ಹೋಗುವಾಗ ’ಈಗ ನನ್ನ ರೂಮಿಗೆ ಬರುತ್ತೀಯೋ ಅಥವಾ ನಿನ್ನ ರೂಮಿಗೆ ಬಿಡಲೋ’ ಎಂಬ ಮಾತು ಆತನದು ತಾತ್ಕಾಲಿಕ ಸಂಯಮ, ಅದೂ ಕಲಾವಿದನ ಸಾಮಿಪ್ಯದಿಂದಲೇ ಬಲವಂತವಾಗಿ ತಂದುಕೊಂಡಿದ್ದು ಎಂಬಂತಾಗುತ್ತದೆ. ಆದರೆ, ಸಾಕ್ಷಾತ್ಕಾರದ ಹಾದಿ ಮುಂದಿದ್ದ ಭಾವನಾ ಮೇಲ್ನೋಟಕ್ಕೆ ವ್ಯಾವಹಾರಿಕವಾಗಿ ವರ್ತಿಸಿದಂತೆ ಕಂಡರೂ ಸಂಯಮವನ್ನು ಪ್ರಕಟಿಸುತ್ತಾಳೆ. ಅದು ನಂತರವೂ ಮುಂದುವರೆಯುತ್ತದೆ. ಅವಳ ಬಗ್ಗೆ ಅಭಿಮಾನವೆನ್ನಿಸುತ್ತದೆ. ಕಲಾವಿದನ ಬಗ್ಗೆ ಆಕೆ ಹೇಳುವ ಮಾತುಗಳು -ರಾಜುವಿನ ಎದುರಿಗೆ ಅಪ್ರಸ್ತುವೆನ್ನಿಸಿದರೂ- ಮನಮುಟ್ಟುತ್ತವೆ. ಆ ಕ್ಷಣ ಆಕೆಗೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಅಭಿಮಾನವೆನ್ನಿಸುತ್ತದೆ. ಕಲೆಗೆ ಆ ಶಕ್ತಿಯಿದೆ. ಆದರೆ ನಗ್ನತೆಯನ್ನೇ ಆಧಾರವಾಗಿಟ್ಟುಕೊಂಡು ಸಂಸ್ಕೃತಿಯ ರಕ್ಷಣೆ ಮಾಡುತ್ತೇವೆ ಎಂದು ಹೊರಟವರಿಗೆ ಇಂಥದ್ದೆಲ್ಲ ಅರ್ಥವಾಗುವುದಿಲ್ಲ. ಇಡೀ ಕಥೆಯಲ್ಲಿ ಎಲ್ಲಿಯೂ ಪ್ರಸ್ತಾಪವಾಗದ ಆದರೆ ಸೂಕ್ಷ್ಮ ಓದಿಗೆ ನಿಲುಕುವ ವಿಷಯವೆಂದರೆ ಕಥೆಗಾರರ ಸಂಯಮ. ಚಿತ್ರಕಲಾವಿದನ ಸಂಯಮವನ್ನೇ ಕಥೆಗಾರರೂ ತೋರಿದ್ದಾರೆ. ಇಂತಹ ಕಥೆಗಳಲ್ಲಿ ಕೊಂಚ ಆಚೀಚೆಯಾದರೂ ಅಶ್ಲೀಲತೆಯ ಸೋಂಕು ಬಡಿದುಬಿಡುತ್ತದೆ. ಕಥೆಗಾರರ ಈ ಸಂಯಮ ’ಬೆತ್ತಲೆಯ ಹಕ್ಕು’ ಕಥೆಯನ್ನು ಸಂಕಲನದ ಅತ್ಯುತ್ತಮ ಕಥೆಗಳಲ್ಲಿ ಒಂದನ್ನಾಗಿ ಮಾಡಿದೆ.

ಈ ನನ್ನ ಅನಿಸಿಕೆಗಳು ನನ್ನವು ಮಾತ್ರ. ಇವುಗಳನ್ನು ಓದಿ ನಿಮಗೆ ಅವರ ಕಥೆಗಳನ್ನು ಓದಬೇಕೆನ್ನಿಸಿದರೆ ಸಂತೋಷ.

ಅಂದ ಹಾಗೆ ಪುಸ್ತಕದ ವಿವರಗಳು ಹೀಗಿವೆ.

ಪುಸ್ತಕದ ಹೆಸರು : ಸಾರ್ವಭೌಮ

ಪ್ರಕಾರ : ಸಣ್ಣಕಥೆಗಳು

ಕಥೆಗಾರರು : ಶ್ರೀ ಗೋಪಿನಾಥ ರಾವ್

ಪ್ರಕಾಶಕರು : ಸೂರ್ಯಪ್ರಕಾಶನ, ಮಲ್ಲಾಡಿಹಳ್ಳಿ

ವರ್ಷ : ೨೦೦೯

ಪುಟಗಳು : ೧೪೬

ಬೆಲೆ : ೯೦ ರೂಪಾಯಿಗಳು

ಮುನ್ನುಡಿ : ಮಹಾಬಲಮೂರ್ತಿ ಕೊಡ್ಲಕೆರೆ (ಕಥೆಗಾರರು)