Friday, September 13, 2013

ಎಲ್ಲಾ ಟೈಮ್. ಬಟ್ ಟೂ ಅರ್ಲಿ! ಶ್ರೀಮತಿ ಸರೋಜಮ್ಮ ಇನ್ನಿಲ್ಲ

ನೆನ್ನೆ ಸಂಜೆ ನಾನು ಮನೆ ತಲುಪಿದಾಗ ಐದು ಗಂಟೆಯಾಗಿತ್ತು. ಕಾರ್ಪೆಂಟರ್ ಮಾಡುತ್ತಿದ್ದ ಸದ್ದಿನೊಳಗೆ ನನ್ನ ಮೊಬೈಲಿನ sms ಶಬ್ದ ಕೇಳಿಸಿತು. ಕತೂಹಲದಿಂದಲೇ ತೆಗದು ನೋಡಿದಾಗ, ಪೆಜತ್ತಾಯರಿಂದ ಮೆಸೇಜ್ ಎಂದಿತ್ತು. ಸಾಮಾನ್ಯವಾಗಿ ಪೆಜತ್ತಾಯರು ನನಗೆ ಏನಾದರೂ ಹೇಳಬೇಕೆಂದರೆ ಈ ಮೇಲ್ ಮಾಡುವುದೇ ಹೆಚ್ಚು. ಅನಿವಾರ್ಯವಾದರೆ ಮಾತ್ರ ಪೋನ್ ಮಾಡುತ್ತಾರೆ. ನಾನು ಮಾತನಾಡುವುದು ಅವರಿಗೆ ಸರಿಯಾಗಿ ಕೇಳಿಸುವುದಿಲ್ಲವಾದ್ದರಿಂದ ಅವರು ಹೇಳುವುದನ್ನಷ್ಟೇ ನಾನು ಕೇಳಿಸಿಕೊಳ್ಳಬೇಕಾಗುತ್ತಿತ್ತು. ಆದರೆ SMS  ಇಲ್ಲವೇ ಇಲ್ಲ. ಇದೇಕೆ sms ಮಾಡಿದ್ದಾರೆ. ಮಿಸ್ಡ್ ಕಾಲ್ ಆಗಿದ್ದರೂ sms ಬರುವುದರಿಂದ ಅದಿರಬಹುದೆಂದುಕೊಂಡು ಮೆಸೇಜ್ ತೆರೆದೆ. Sroja left to her Heavenly abode. ಎಂದು ಬರೆದಿತ್ತು. ನನಗೆ ಒಂದೆರಡು ಕ್ಷಣ ಏನು ಓದುತ್ತಿದ್ದೇನೆ, ಏನು ಓದಿದೆ ಎಂಬುದೇ ತಲೆಗೆ ಹತ್ತಲಿಲ್ಲ. ಮತ್ತೆ ಮತ್ತೆ ಒಂದೆರಡು ಬಾರಿ ಓದಿದ ಮೇಲೆಯೇ ನನಗೆ ಹೊಳೆದಿದ್ದು, ಶ್ರೀಮತಿ ಸರೋಜಮ್ಮನವರು ಇನ್ನಿಲ್ಲ ಎಂದು.
ಪತಿಯೊಂದಿಗೆ ಶ್ರೀಮತಿ ಸರೋಜಮ್ಮನವರು
ತಕ್ಷಣ ಪೆಜತ್ತಾಯರ ಬಳಿ ಮಾತನಾಡಬೇಕೆನ್ನಿಸಿತು. ಪಾರ್ಥಿವ ಶರೀರವನ್ನೊಮ್ಮೆ ದರ್ಶಿಸಿ ಬರಬೇಕೆನ್ನಿಸಿತು. ಅದು ಎಲ್ಲಿದೆ? ಸುಳಿಮನೆ ತೋಟಕ್ಕೇನಾದರೂ ತೆಗೆದುಕೊಂಡು ಹೋಗುತ್ತಾರೆಯೇ? ಇಲ್ಲೇ ಬೆಂಗಳೂರಿನಲ್ಲೇ ಸಂಸ್ಕಾರ ನಡೆಯಲಿದೆಯೇ? ಎಂಬ ಹತ್ತಾರು ಪ್ರಶ್ನೆಗಳು ಮನಸ್ಸಿನಲ್ಲಿ ಹಾದು ಹೋದವು. ಫೋನಿನಲ್ಲಿ ಪೆಜತ್ತಾಯರಿಗೆ ಮಾತನಾಡಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತೆಗೆದುಕೊಳ್ಳಲು ಸಾಧ್ಯವೆ? ಅವರು ಅಲ್ಲಿ ಯಾವ ಸ್ಥಿತಿಯಲ್ಲಿದ್ದಾರೆಯೋ ಎನ್ನಿಸಿತು. ನನ್ನ ಬಳಿ ಬೇರೆ ಇನ್ನಾವುದೇ ಮಾರ್ಗ ಉಳಿದಿಲ್ಲವಾದ್ದರಿಂದ ಫೋನ್ ಮಾಡಿದೆ. ಅವರೇ ರಿಸೀವ್ ಮಾಡಿದರು. ಅವರೇ ಅತ್ಯಂತ ಸ್ಪಷ್ಟವಾಗಿ ಮಾತನಾಡಿದರು. ಧ್ವನಿಯಲ್ಲಿನ ನೋವು ನನಗೂ ತಟ್ಟುತ್ತಿತ್ತು. ಸಂಸ್ಕಾರ ಇಲ್ಲೇ ಬೆಂಗಳೂರಿನಲ್ಲೇ, ಇನ್ನೊಂದರ್ಧ ಮುಕ್ಕಾಲು ಗಂಟೆಯಲ್ಲಿ, ಚಾಮರಾಜಪೇಟೆಯಲ್ಲಿ ನಡೆಯುತ್ತದೆ ಎಂದರು. ನಾನು ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ ಎಂದು ಫೋನ್ ಕಟ್ ಮಾಡಿದೆ. ನನ್ನ ಹೆಂಡತಿ ನಾನೂ ಬರುತ್ತೇನೆ ಎಂದಿದ್ದರಿಂದ, ಇಬ್ಬರೂ ಸ್ಕೂಟರ್ ಹತ್ತಿ ಧಾವಿಸಿದೆವು.

 ಸರೋಜಮ್ಮನವರ ಸುಳಿಮನೆ ತೋಟ

ಪೆಜತ್ತಾಯರ ಪರಿಚಯದೊಂದಿಗೆಯೇ ಅವರ ಶ್ರೀಮತಿ ಸರೋಜಮ್ಮನವರ ಪರಿಚಯವೂ ನನಗಾಯಿತು. ಅವರಿಬ್ಬರನ್ನು ಒಮ್ಮೆಯೂ  ಮೂಖತಃ ಭೇಟಿಯಾಗದೆ, ಅವರ ಸುಳಿಮನೆ ತೋಟಕ್ಕೆ ನಾನ ಹೋಗಿಬಂದಿದ್ದೆ. ಅಲ್ಲಿನ ಜನ ಸರೋಜಮ್ಮನವರ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ ಗೌರವಗಳು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿದ್ದುದನ್ನು ನಾನು ಗುರುತಿಸಿದ್ದೆ. ತೋಟದಿಂದ ಬಂದ ಮೇಲೆ ಅವರ ಮನೆಗೆ ಹೋದಾಗ, ಸರೋಜಮ್ಮನವರ ದರ್ಶನ ಮತ್ತು ಸಂದರ್ಶನ ಎರಡೂ ಆದವು. ಗೌರವವೇ ಮೂರ್ತಿವೆತ್ತಂತಹ, ನಗುಮುಖದ ಸರೋಜಮ್ಮನವರು ಪೆಜತ್ತಾಯರ ಹರಟೆಯ ನಡುವೆ, ಹಸನ್ಮುಖರಾಗಿ ಕುಳಿತು ಅಲ್ಲೊಂದು ಇಲ್ಲೊಂದು ಮಾತು ಸೇರಿಸುತ್ತಾ, ಬಂದವರಿಗೆ ಕಾಫಿ ತಿಂಡಿ ಕೊಡುತ್ತಾ ಆಧರಿಸುತ್ತಿದ್ದರು. ಅವರಿಗೆ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದೆಂದರೆ ಒಂದು ಸಂಭ್ರಮ. ಅವರ ತೋಟಕ್ಕೆ ನಾವು ಎರಡು ಬಾರಿ ಹೋದಾಗಲೂ, ಅವರ ಮನೆಯವರು ಒಬ್ಬರೂ ಅಲ್ಲಿಲ್ಲದಿದ್ದರೂ, ನಮ್ಮ ಅತಿಥಿ ಸತ್ಕಾರ ಭರ್ಜರಿಯಾಗಿ ನಡೆಯುವಂತೆ ಇಲ್ಲಿಂದಲೇ ಏರ್ಪಾಟು ಮಾಡಿದ್ದರು. ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿ ಬೆಳೆದವರಾದರೂ, ಅವರ ಸರಳತೆ, ನೇರ ಮಾತುಗಾರಿಗೆ, ಮನೆಗೆ ಬಂದವರಿಗೆ ಅವರು ತೋರಿಸುತ್ತಿದ್ದ ಪ್ರೀತಿ ಗೌರವಗಳು ನನ್ನನ್ನು ಮೂಕವಿಸ್ಮಿನನ್ನಾಗಿಸಿದ್ದವು. ಅವರೊಬ್ಬರು ಮಮತಾಮಯಿ ತಾಯಿಯಾಗಿದ್ದರು. 'ಸರೋಜಮ್ಮ ನನ್ನ ಮನೆ-ಮನಸ್ಸಿನ ಯಜಮಾನಿತಿ' ಎಂದು ಆಗಾಗ ಹೇಳುತ್ತಲೇ ಇದ್ದರು. ಪೆಜತ್ತಾಯರ ಬರವಣಿಗೆಗಳನ್ನು ಓದಿದವರಿಗೆ ಸರೋಜಮ್ಮನವರ ಪರಿಚಯವಿದ್ದೇ ಇರುತ್ತದೆ. ಪೆಜತ್ತಾಯರು


ಸರೋಜಮ್ಮನವರ ಮನೆಯಂಗಳದ ತುಳಸಿಮಂಟಪ

ಮುಂದೆ ರೈತನಾಗುವ ಹಾದಿಯಲ್ಲಿ ಪುಸ್ತಕದ ಸಂಪಾದನೆಯ ಸಮಯದಲ್ಲಿ ಅವರು ತೋರಿದ ಮಾರ್ಗದರ್ಶನ, ನೀಡಿದ ಸಹಕಾರ ಅವನ್ನು ಮರೆಯುವಂತೆಯೇ ಇಲ್ಲ. ಪುಸ್ತಕ ಬಿಡುಗಡೆಯ ದಿನದ ಆಹ್ವಾನ ಪತ್ರಿಕೆಯನ್ನು ಕೈಯಲ್ಲಿಡಿದು, ತಮ್ಮ ಪತಿ ಪೆಜತ್ತಾಯರ ಪುಸ್ತಕವೊಂದು ಇಂತಹುದೊಂದು ದೊಡ್ಡ ಸಮಾರಂಭದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಅವರು ಸಂಭ್ರಮಿಸಿದ್ದರು. ಆ ಸಮಾರಂಭದ ಉಪಹಾರದ ಉಸ್ತುವಾರಿಯನ್ನು ತಾವೇ ಖುದ್ದಾಗಿ ವಹಿಸಿ ನೆರವೇರಿಸಿದರು. ನಂತರವೂ ಮೂರ್ನಾಲ್ಕು ಬಾರಿ ಅವರನ್ನು ಭೇಟಿಯಾಗಿದ್ದಿದೆ. ಅವರ ಮಗಳ ಮದುವೆಯಲ್ಲಿ, ಹೊಸಮನೆಗೆ ಪ್ರವೇಶ ಮಾಡಿದ ಸಂದರ್ಭದಲ್ಲಿ. ಯಾವಾಗಲೂ ಅವರದು ಸರಳತೆಯೇ ಮೈವೆತ್ತಿದಂತಹ ನಡವಳಿಕೆ, ಸಹಜ ನಗುಮುಖ ಬದಲಾಗಿದ್ದೇ ಇಲ್ಲ.

ಇಷ್ಟೆಲ್ಲವನ್ನೂ ಯೋಚಿಸುತ್ತಲೇ ಅಂತ್ಯಸಂಸ್ಕಾರ ನೆಡೆಯುವ ಸ್ಥಳವನ್ನು ತಲುಪಿದೆವು. ಪೆಜತ್ತಾಯರು ನನ್ನನ್ನು ಕಂಡವರೇ, ಪಾರ್ಥಿವ ಶರೀರವಿದ್ದ ಆಂಬ್ಯುಲೆನ್ಸ್ ಕಡೆ ಕೈತೋರಿಸಿದ್ದರು. ನಾನು ಅಂತಿಮ ದರ್ಶನವಾದ ಮೇಲೆ ಪೆಜತ್ತಾಯರ ಬಳಿ ಹೋಗಿ ಅವರ ಕೈಹಿಡಿದು ನಿಂತೆ. ನಮ್ಮಿಬ್ಬರ ನಡುವಿನ ಮಾತು ಮೌನವೇ ಆಗಿತ್ತು. ಸುಮಾರು ಮೂರ್ನಾಲ್ಕು ನಿಮಿಷಗಳು ಕಳೆದ ಮೇಲೆ ಅವರೇ ನಲವತ್ತು ದಿನಗಳಿಂದ ಏನೇನು ಆಯಿತು, ಆಸ್ಪತ್ರೆವಾಸ, ಬದುಕಿಗಾಗಿ ಹೋರಾಟ, ಅಂತಿಮಯಾತ್ರೆ ಎಲ್ಲವನ್ನೂ ಹೇಳಿದರು. ಮಾತಿನಲ್ಲಿ ನೋವಿತ್ತು. ಆದರೂ ಅವರು ತಮ್ಮ ಸ್ಥಿತಿಪ್ರಜ್ಞೆಯನ್ನು ಕಳೆದುಕೊಂಡಿರಲಿಲ್ಲ. ಎಲ್ಲವನ್ನೂ ಹೇಳಿ ಒಂದು ನಿಟ್ಟುಸಿರು ಬಿಟ್ಟರು. ನಂತರ 'ನಮ್ಮ ಕೈಯಲ್ಲಿ ಏನಿದೆ?' ಎಂದು ಮೇಲೆ ಕೈ ತೋರಿಸುತ್ತಾ 'ಎಲ್ಲಾ ಟೈಮ್' ಎಂದರು. ನಾನು 'ಬಟ್ ಟೂ ಅರ್ಲಿ' ಎಂದೆ. ಅವರು ನಸುನಕ್ಕರು.
ಹೌದು. ಶ್ರೀಮತಿ ಸರೋಜಮ್ಮನವರದು ಸಾಯುವ ವಯಸ್ಸಲ್ಲ. ಅರವತ್ತೊ ಅರವತ್ತೆರಡೊ ಇರಬಹುದು. ಆದರೆ, ಪೆಜತ್ತಾಯರು ಹೇಳುವಂತೆ ಎಲ್ಲಾ ಟೈಮ್!
ಶ್ರೀಮತಿ ಸರೋಜಮ್ಮನವರಿಗೆ ಇದು ನನ್ನ ನುಡಿ ನಮನ.
ಪೆಜತ್ತಾಯರ ಕುಟುಂಬವರ್ಗಕ್ಕೆ ಈ ಅಕಾಲಿಕ ದುಃಖವನ್ನು ಭರಿಸುವ ಶಕ್ತಿಯೊದಗಲಿ.