Monday, March 30, 2009

ಮೂರು ಸೋಮಾರಿಗಳ ಕಥೆಯ ಸಮಸ್ಯೆಗೆ ಅಜ್ಜ ಹೇಳಿದ 'ಪರಿಹಾರ'

ಪರಿಹಾರ ತಿಳಿದುಕೊಳ್ಳುವ ಮೊದಲು ಒಂದಿಷ್ಟು ಮಾತುಕಥೆಯಾಡೋಣ.
ನನ್ನ ಮಗಳು ನನ್ನನ್ನು ಆಗಾಗ ಕಥೆ ಹೇಳುವಂತೆ ಪೀಡಿಸುತ್ತಿರುತ್ತಾಳೆ. ಹೇಳಿದ ಕಥೆಗಳನ್ನೇ ಮತ್ತೆ ಮತ್ತೆ ಹೇಳೋದು, ಸ್ವಲ್ಪ ಬದಲಾಯಿಸಿ ಹೇಳೋದು, ಹೊಸ ಕಥೆಗಳನ್ನು ಸೃಷ್ಟಿ ಮಾಡಿ ಹೇಳೊದು... ಹೀಗೆ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿರುತ್ತೇನೆ. ಇನ್ನು ನನಗೆ ಅನುಕೂಲವಾದ ಸಮಯವನ್ನು ನೋಡಿಕೊಂಡು ಅವಳಿಗೆ 'ಒಂದು ಕಥೆ ಹೇಳುತ್ತೇನೆ' ಎಂದು ಪುಸಲಾಯಿಸಿ, ನನ್ನ ಕೆಲಸ ಹಗುರ ಮಾಡಿಕೊಳ್ಳುವುದು ಉಂಟು. ಮೊನ್ನೆ ಹಬ್ಬದ ಹಿಂದಿನ ದಿನ ಊರಿಗೆ ಹೋಗಿದ್ದೆವು. ಬಸ್ ಸ್ಟಾಪಿನಿಂದ ನಮ್ಮ ತೋಟದ ಮನೆಗೆ ಒಂದು ಕಿಲೋಮೀಟರ್ ಆಗುತ್ತದೆ. ಮೊದಲು ಅವಿಭಕ್ತ ಕುಟುಂಬವಾಗಿದ್ದಾಗ ಯಾರಾದರು ಗಾಡಿ ಅಥವಾ ಸೈಕಲ್ ಅಥವಾ ಬೈಕ್ ತಂದು ಬಸ್ ಸ್ಟ್ಯಾಂಡಿನಿಂದ ಕರೆದೊಯ್ಯುತ್ತಿದ್ದರು. ಈಗ ಅದೆಲ್ಲಾ ಇಲ್ಲ. ಜೊತೆಗೆ ಊರಿನ ತುಂಬಾ ಆಟೋಗಳು ಇವೆ. ನಾನೊಮ್ಮೆ ಒಬ್ಬ ಆಟೋದವನನ್ನು 'ಇಷ್ಟೊಂದು ಆಟೋ ಇದ್ದಾವಲ್ಲ, ನಿಮಗೆ ಏನಾದರು ಗಿಟ್ಟುತ್ತದೆಯೇ?' ಎಂದು ಕೇಳಿದ್ದೆ. ಅದಕ್ಕೆ ಅವನು 'ಆಟೋದಿಂದ ನನಗಂತೋ ಲಾಭವಾಗಿಲ್ಲ. ಎತ್ತಿನ ಗಾಡಿ ಅಥವಾ ಬೈಕ್ ಅಥವಾ ಸ್ಕೂಟರ್ ಇಟ್ಟುಕೊಳ್ಳುವ ಬದಲು ಆಟೋ ಇಟ್ಟುಕೊಂಡಿದ್ದೇನೆ, ಅಷ್ಟೆ. ಬಿಡುವಾದಾಗ ಬಾಡಿಗೆಗೆ ಓಡಿಸುತ್ತೇನೆ. ಇದ್ದಂತೆ ನಾನು ನಮ್ಮ ಮನೆಯವರು ಓಡಾಡುವುದಕ್ಕೆ ಮಾತ್ರ ಬಳಸಿಕೊಳ್ಳುತ್ತೇನೆ' ಎಂದು ಹೇಳಿದ್ದ!
ಇಂತಹ ನಾನ್-ಪ್ರೊಫೆಷನಲ್(!) ಆಟೋಡ್ರೈವರುಗಳಿಂದಾಗಿ ನನಗೆ ಅನುಕೂಲವಾಗಿರುವುದಕ್ಕಿಂತ ಅನಾನುಕೂಲವಾಗಿರುವುದೇ ಹೆಚ್ಚು! ಏಕೆಂದರೆ ನಾವು ಕರೆದಾಗಲೆಲ್ಲಾ ಅವರು ಬರದಿರುವುದೇ ಹೆಚ್ಚು. 'ಅಣ್ಣ ಮಳೆ ಬಂದು ರಸ್ತೆಯೆಲ್ಲಾ ಕೆಸರಾಗಿದೆ' ಎಂದೋ, 'ಡೀಸೆಲ್ ಇಲ್ಲ' ಎಂದೋ, 'ಗಾಡಿ ರಿಪೇರಿ' ಎಂದೋ ಸುಲಭವಾಗಿ ಹೇಳಿ ತಪ್ಪಿಸಿಕೊಂಡುಬಿಡುತ್ತಾರೆ. ಅಂತಹ ದಿನಗಳಲ್ಲಿ ನಮಗೆ ನಮ್ಮ ಕಾಲುಗಳೇ ಗತಿ! ಬಂದರೂ ಕೇಳಿದಷ್ಟು ಕೊಡಬೇಕು. ಬೆಂಗಳೂರಿನ ಆಟೋಗಳಿಗಿಂತ ಐದು ಆರು ಪಟ್ಟು ಹಣ ಕೊಟ್ಟಿರುವುದೂ ಉಂಟು. ಒಂದು ಕಿಲೋಮೀಟರ್ ದೂರ ಕ್ರಮಿಸುವುದಕ್ಕೆ ಕನಿಷ್ಠ ಮೂವತ್ತು ಗರಿಷ್ಠ ಐವತ್ತು ರೂಪಾಯಿವರೆಗೂ ನಾನು ಕೊಟ್ಟಿದ್ದೇನೆ! ಬೆಂಗಳೂರಿನಲ್ಲಿ ಮಿನಿಮಮ್ (ಎರಡು ಕಿಲೋಮೀಟರ್) ಹದಿನಾಲ್ಕು ರುಪಾಯಿ! ಮೊನ್ನೆ ಯುಗಾದಿಯ ದಿನವೇ, ಈ ಆಟೋ ಡ್ರೈವರುಗಳ ಜೂಜಾಟದ ಹುಚ್ಚಿನಿಂದಾಗಿ, ನಾನು ಹತ್ತು ಕಿಲೋಮೀಟರ್ ನಡೆಯಬೇಕಾಯಿತು!
ಮೊನ್ನೆಯೂ ಹಾಗೇ ಆಯಿತು. ಯಾವ ಆಟೋದವನು ಬರಲಿಲ್ಲ. ದಿನಾ ಬೆಂಗಳೂರಿನಲ್ಲಿ ಮೂರು ಕಿಲೋಮೀಟರ್ ವಾಕಿಂಗ್ ಮಾಡುವ ನನ್ನ ಹೆಂಡತಿ ಬ್ಯಾಗ್ ಹಿಡಿದು ನಡೆಯುವುದು ಕಷ್ಟ ಎಂದು ಗೊಣಗಿದಳು. ಇನ್ನು ನನ್ನ ಮಗಳು 'ಎತ್ತಿಕೊಂಡರಷ್ಟೆ' ಎಂದು ಬಿಟ್ಟಳು. ಅವಳು ನಡೆಯುವುದಕ್ಕೆ ಚಿಕ್ಕ ಮಗುವಾದರೂ ಎತ್ತಿಕೊಳ್ಳುವುದಕ್ಕೆ ಖಂಡಿತಾ ದೊಡ್ಡ ಮಗು!
ಸರಿ ಅದಕ್ಕೆ ಒಂದು ಉಪಾಯ ಮಾಡಿದೆ. 'ನಾನು ಕಥೆ ಹೇಳುತ್ತೇನೆ. ಅದನ್ನು ಕೇಳುತ್ತಾ ಹೂಂಗುಟ್ಟುತ್ತಾ ನಡೆದುಕೊಂಡು ಬಾ' ಎಂದು ಪುಸಲಾಯಿಸಿದೆ. ಅವಳಿಗೆ ಖುಷಿಯಾಯಿತು. ಆದರೆ ಒಂದು ಕಂಡಿಷನ್ ಹಾಕಿದಳು 'ಇದುವರೆಗೆ ಹೇಳಿರುವ ಕಥೆಯನ್ನು ಮತ್ತೆ ಹೇಳಬಾರದು' ಎಂದು!
ನನಗೆ ಪೀಕಲಾಟಕ್ಕೆ ಬಂತು. ಈ ಕಥೆಗಳೇ ಹಾಗೆ. ನಮಗೆ ಬೇಕಾದಾಗ ನೆನಪಿಗೆ ಬರುವುದಿಲ್ಲ! ಆಗ ನನ್ನ ಕೈಹಿಡಿದಿದ್ದು ಈ ಸೋಮಾರಿಗಳ ಕಥೆ! ಸಾಧ್ಯವಾದಷ್ಟು ಅವಳಿಗೆ ಅರ್ಥವಾಗುವಂತೆ ಸರಳ ಮಾಡಿಕೊಂಡು ನಿಧಾನವಾಗಿ ಕಥೆ ಹೇಳುತ್ತಾ ನಡೆಯತೊಡಗಿದೆ. ಭೂತಗನ್ನಡಿಯನ್ನು ಟಿ.ವಿ. (ದೂರದರ್ಶನ) ಎಂದು, ಹಾರುವ ಕುದುರೆಯನ್ನು ಎಲಿಕ್ಯಾಪ್ಟರ್ ಎಂದು, ಮಂತ್ರದಂಡವನ್ನು ಮ್ಯಾಜಿಕ್ ಸ್ಟಿಕ್ ಎಂದು ಹೀಗೇ ಏನೇನೋ.... ಅಂತೂ ಕಥೆಯನ್ನು ಹೇಳಿಬಿಟ್ಟೆ. ಕೊನೆಗೆ ಆ ಹುಡುಗಿಯನ್ನು ಯಾರಿಗೆ ಕೊಟ್ಟು ಮದುವೆ ಮಾಡಿಸುವುದು? ಎಂಬ ಪ್ರಶ್ನೆಯನ್ನು ಕೇಳಿದೆ. ನನ್ನ ಹೆಂಡತಿ ತಲೆ ಕೆಡಿಸಿಕೊಳ್ಳತೊಡಗಿದಳು. ಆದರೆ ನನ್ನ ಮಗಳು ಹಿಂದೆ ಮುಂದೆ ಯೋಚಿಸದೆ 'ಆ ಮ್ಯಾಜಿಕ್ ಸ್ಟಿಕ್ ಇತ್ತಲ್ಲ, ಅವನಿಗೆ ಕೊಡಬೇಕು' ಎಂದು ಉತ್ತರಿಸಿಬಿಟ್ಟಳು. ಉತ್ತರ ತಪ್ಪಿತ್ತು. ಆದರೂ ನನಗೆ ಖುಷಿಯಾಗಿದ್ದು ನನ್ನ ಮಗಳ ನನ್ನ ಕಥೆಗಳನ್ನು ಸೀರಿಯಸ್ಸಾಗಿ ಕೇಳುತ್ತಿದ್ದಾಳಲ್ಲ, ಈ ಜಾನಪದ ಕಥೆಗಳಿಗೆ ಮಕ್ಕಳನ್ನು ಚಿಂತನೆಗೆ ತಳ್ಳಬಲ್ಲ ಶಕ್ತಿ ಇದೆಯಲ್ಲಾ ಎಂಬ ಕಾರಣಕ್ಕೆ. ಕೊನೆಗೆ ಆ ಉಳಿದಿಬ್ಬರೂ ಜಗಳ ತೆಗೆಯುತ್ತಾರೆ ಎಂಬುದನ್ನು ಅವಳಿಗೆ ವಿವರಿಸಿ ಹೇಳಿ ಸಮಸ್ಯೆಗೆ ಪರಿಹಾರವನ್ನೂ ಹೇಳಿದೆ. ಅಷ್ಟರಲ್ಲಿ ನಾವು ನಮ್ಮ ಮನೆ ಬಾಗಿಲಿಗೆ ಬಂದಿದ್ದಾಯಿತು!
ನನಗೆ ಚೆನ್ನಾಗಿ ನೆನಪಿದೆ. ನನ್ನಜ್ಜ ಈ ಕಥೆಯನ್ನು ಮೊದಲ ಬಾರಿಗೆ ನಮಗೆ ಹೇಳಿದಾಗ ಅಲ್ಲಿದ್ದ ನಾವೆಲ್ಲಾ ಮೂರು ಭಾಗಗಳಾಗಿ ಒಬ್ಬೊಬ್ಬರೂ ಒಬ್ಬಬ್ಬರ ಪಕ್ಷ ವಹಿಸಿ ವಾದ ಮಂಡಿಸಿದ್ದೂ ಉಂಟು. ಆದರೆ ನಮ್ಮೆಲ್ಲಾ ವಾದಗಳನ್ನು ಖಂಡತುಂಡವಾಗಿ ನಿರಾಕರಿಸಿ ಒಂದೇ ಸಾಲಿನಲ್ಲಿ ಉತ್ತರ ಹೇಳಿದ್ದರು ನನ್ನ ಅಜ್ಜ. ನಂತರ ನಮ್ಮ ಬಂಧುಬಳಗದ ಮಕ್ಕಳಿಗೆಲ್ಲಾ ಕಥೆ ಹೇಳಿ ನಿಜವಾದ ಉತ್ತರನಮಗೆ ಗೊತ್ತಿದ್ದರಿಂದ ಹೆಮ್ಮೆಯಿಂದ ಬೀಗಿದ್ದೂ ಇದೆ. ಈಗ ನನ್ನ ಮಗಳೂ ಅದನ್ನೇ ಮಾಡುತ್ತಿದ್ದಾಳೆ.
ಈಗ ನಮ್ಮ ಸಮಸ್ಯೆಗೆ ಬರೋಣ. ಆ ಹುಡುಗಿಗೆ ಒಬ್ಬ ಯೋಗ್ಯನೊಡನೆ ಮದುವೆ ಮಾಡಿಸಿ ಆ ಊರಿನಲ್ಲಿ ಕದಡಿರುವ ಶಾಂತಿಯನ್ನು ನಾವು ಮರುಸ್ಥಾಪಿಸಬೇಕಾಗಿದೆ! ಕಥೆಯಲ್ಲಿ ಬರುವ ಇತರ ಪಾತ್ರಗಳ ಕಡೆಗೆ ಗಮನ ಹರಿಸೋಣ. ಈ ಮೂರು ಸೋಮಾರಿಗಳ ಪಾತ್ರಗಳನ್ನು ಬಿಟ್ಟರೆ ಕಥೆಯಲ್ಲಿ ಪ್ರಮುಖವಾದ ಪಾತ್ರ ಬರೋದು ಅಂಗಡಿ ಇಟ್ಟುಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಿರುವ ಪರವೂರಿನ ಕುಂಟ! ಪರಸ್ಪರ ಉಪಯೋಗ ಬರುವ ಮೂರು ಸಾಮಾನುಗಳನ್ನು ಆತ ಈ ಸೋಮಾರಿಗಳಿಗೆ ಹೊಂದಿಸಿಕೊಟ್ಟಿದ್ದರಿಂದಲೇ ಆ ಹುಡುಗಿಗೆ ಜೀವ ಉಳಿಸಲು ಸಾಧ್ಯವಾಯಿತು! ಆದ್ದರಿಂದ ಯಾರೋ ಬುದ್ದಿವಂತ ಸೂಚಿಸಿದ್ದರಿಂದ, ಹಾಗೂ ಹುಡುಗಿಗೆ ಒಬ್ಬ ಯೋಗ್ಯ ವರ ಸಿಗುವುದರಿಂದ ಊರವರು ಆ ಹುಡುಗಿಯನ್ನು ಆ ಸ್ವಾವಲಂಬಿ ಕುಂಟನಿಗೆ ಕೊಟ್ಟು ಮದುವೆ ಮಾಡಿಸುತ್ತಾರೆ. ಅದರಿಂದಾಗಿ ಊರಿನಲ್ಲಿ ಉಂಟಾಗಿದ್ದ ಮೂರು ಪಾರ್ಟಿಗಳು ನಾಶವಾಗಿ ಎಲ್ಲರೂ ಒಂದಾಗುತ್ತಾರೆ.
ನಾವು ಮೊದಲ ಬಾರಿ ಈ ಉತ್ತರ ಕೇಳಿದಾಗ ಬಹಳ ನಿರಾಶೆಗೊಂಡಿದ್ದೆವು! ಆದರೆ ಕಾಲ ಕಳೆದಂತೆ ನಮ್ಮ ಯೋಚನಾ ಶಕ್ತಿ ಬಲಿತಂತೆ ಅದೇ ಸರಿ ಎನ್ನಿಸಲು ಶುರುವಾಯಿತು, ಅದೇ ಸರಿ ಕೂಡಾ!. ಅಂಗವಿಕಲನಾದರೂ ಬಹುತೇಕ ಅಂಗವಿಕಲರಂತೆ ಭಿಕ್ಷಾಟನೆಗೆ ಇಳಿಯದೆ, ಅಂಗಡಿ ಇಟ್ಟುಕೊಂಡು ಸ್ವಾವಲಂಬಿಯಾಗಿರುವ ಆತ ಮಾದರಿ ಮನುಷ್ಯ. ಜೀವನದಲ್ಲಿ ಆಕಸ್ಮಿಕವಾಗಿ ಸಿಕ್ಕ ವಸ್ತುಗಳಿಂದಾಗಿ ಹುಡುಗಿಗೆ ಮರುಜೀವ ನೀಡಲು ಕಾರಣರಾದ ಸೋಮಾರಿಗಳಿಗಿಂತ ಒಬ್ಬ ಸ್ವಾವಲಂಬಿ ಯುವಕ ಹೆಚ್ಚು ಅರ್ಹನಾಗುತ್ತಾನೆ.
ಜೊತೆಗೆ ಮಕ್ಕಳಲ್ಲಿ ಅಂಗವಿಕಲರ ಬಗ್ಗೆ ಒಂದು ಒಳ್ಳೆಯ ಯೋಚನೆಯನ್ನು, ಸದಾಶಯವನ್ನು ಮೂಡಿಸಲು, ಎಲ್ಲ ಮಕ್ಕಳಂತೆ ಅವರನ್ನು ಕಾಣಲು ಇಂತಹ ಕಥೆಗಳು ನೆರವಾಗುತ್ತವೆ ಎಂಬುದು ನನ್ನ ಅಭಿಪ್ರಾಯ.
ಯುಗಾದಿ ಹಬ್ಬದ ದಿನ ಸಂಜೆ ನನ್ನ ಮಗಳು ನನ್ನ ತಾಯಿಗೆ ಈ ಕಥೆಯನ್ನು ಹೇಳಿ ಪ್ರಶ್ನೆಯನ್ನೂ ಕೇಳಿದಳು! ಉತ್ತರ ಗೊತ್ತಿದ್ದರೂ ನನ್ನ ತಾಯಿ ಅವಳನ್ನೇ ಹೇಳುವಂತೆ ಪುಸಲಾಯಿಸಿದರು. ಅವಳು ಉತ್ತರ ಮಾತ್ರ ಹೇಳದೆ, ಆ ಮೂವರಲ್ಲಿ ಒಬ್ಬರ ಹೆಸರು ಹೇಳಿ ಅವನಿಗೆ ಮದುವೆ ಮಾಡಿಕೊಟ್ಟರೆ ಇನ್ನಿಬ್ಬರಿಗೆ ಏಕೆ ಬೇಸರವಾಗುತ್ತದೆ, ಏಕೆ ಕುಂಟನಿಗೆ ಮದುವೆ ಮಾಡಿಕೊಡಬೇಕು? ಅದರಿಂದ ಊರಿನಲ್ಲಿ ಜಗಳ ನಿಲ್ಲುತ್ತದೆ... ಇನ್ನೂ ಏನೇನೋ ಹೇಳುತ್ತಿದ್ದಳು. ನನ್ನ ತಾಯಿ ಖುಷಿಯಿಂದ ಕೇಳುತ್ತಿದ್ದರು!
ಅಂತೂ ನನ್ನ ಕಥೆಯನ್ನು ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಧನ್ಯವಾದಗಳು.

Wednesday, March 25, 2009

‘ಯುಗಾದಿ’ಯ ಕವಿತೆಗಳು

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಬೇವು ಬೆಲ್ಲ ತಿಂದು, ಹೋಳಿಗೆಯ ಊಟ ಮಾಡಿ ಮುಂದಿನ ಯುಗಾದಿಯವರೆಗಿನ ಬದುಕಿಗೆ ಕನಸುಗಳ ತೋರಣ ಕಟ್ಟೋಣ. ಯುಗಾದಿಯಂದು ಕನ್ನಡ ಕವಿಗಳ ಯುಗಾದಿ ಕವಿತೆಗಳನ್ನು ಓದಿ ನಲಿಯೋಣ.
ಯುಗಾದಿ ಕವಿತೆಗಳಿಗಾಗಿ ಹುಡುಕಾಟ ನಡೆಸಿದಾಗ ನನಗೆ ಸಮ್ಮತವೆನಿಸಿದ ಕೆಲವು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಕೆಲವು ಕವಿತೆಗಳು ನೇರವಾಗಿ ಯುಗಾದಿ ದರ್ಶನವನ್ನು ನಮಗೆ ಮಾಡಿಸುತ್ತವೆ. ಇನ್ನು ಕೆಲವು ಕವಿತೆಗಳು ಯುಗಾದಿಯನ್ನು ನೆಪವಾಗಿಟ್ಟುಕೊಂಡು ಬದುಕಿನ ವಿವಿಧ ಮಜಲುಗಳನ್ನು ಕಾಣುವ ಪ್ರಕ್ರಿಯೆಯಂತೆ ಭಾಸವಾಗುತ್ತವೆ. ಇದು ನನ್ನ ಅನಿಸಿಕೆ. ನೀವೊಮ್ಮೆ ಓದಿ ನಿಮ್ಮ ಅನಿಸಿಕೆಗಳನ್ನು ನನಗೆ ತಿಳಿಸಿದರೆ ಸಂತೋಷ.
ಮತ್ತೊಮ್ಮೆ ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ವರಕವಿ ದ.ರಾ. ಬೇಂದ್ರೆಯವರ ‘ಯುಗಾದಿ’

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!
(ಕೃಪೆ: ಔದುಂಬರ ಗಾಥೆ, ಸಂಪುಟ-೪. ಸಂಪಾದಕರು: ವಾಮನ ಬೇಂದ್ರೆ)

ರಸಋಷಿ ಕುವೆಂಪು ಅವರ ‘ಯುಗಾದಿ’


ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!
(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)

ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ‘ಯುಗಾದಿ’
ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿ ಮಾಡಿ
ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;
ಉಟ್ಟ ಸೀರೆ ಸಾಗರ.
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ.

‘ಯುಗಾದಿ ‘೮೭’ ಕವನದ ಎರಡು ಪದ್ಯಗಳು

ಹೊಸ ವರುಷ ಬಂತು ಮಾಂದಳಿರಿನಲ್ಲಿ,
ಮುಗಿವಿರದ ಚೆಲುವಿನಲ್ಲಿ,
ಹೂಬಿಸಿಲಿನಲ್ಲಿ, ಉಪವನಗಳಲ್ಲಿ,
ಎದೆ ತುಂಬಿದೊಲವಿನಲ್ಲಿ.

ಹೊಸ ವರುಷ ಬಂತು! ನಾನಿಲ್ಲಿ ನಿಂತು
ಹಾಡೊಂದ ನೂಲುತಿಹೆನು.
ಅಲ್ಲೊಂದು ಹಕ್ಕಿ ಇಲ್ಲೊಂದು ಹೂವು!-
ನಾನವನು ನೋಡುತಿಹೆನು.
(ಕೃಪೆ: ಮಲ್ಲಿಗೆಯ ಮಾಲೆ)

ಪು.ತಿ.ನರಸಿಂಹಚಾರ್ ಅವರ ‘ಹೊಸ ವರುಷ ಬಹುದೆಂದಿಗೆ’ ಕವಿತೆಯ ಎರಡು ಪದ್ಯಗಳು
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ-

ಜಾಣ ಜಿತೇಂದ್ರಿಯ ಧಿರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ
(ಕೃಪೆ: ಪುತಿನ ಸಮಗ್ರ ಕವನಗಳು)

ಗೋಪಾಲಕೃಷ್ಣ ಅಡಿಗರ ‘ಯುಗಾದಿ’ ಕವಿತೆಯ ಎರಡು ಪದ್ಯಗಳು
ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;
ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ
ಕೊಳೆಯ ಬೆಳೆ;- ರಂಗಮಂದಿರವು!

ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ
ಮೊದಲಾಗುತ್ತಿದೆ ಯುಗವು, ನರನ ಜಗವು;
ವರುಷವರುಷವು ನಮ್ಮ ಪಯಣ ಮೊದಲಾಗುತ್ತಿದೆ;
ಇದಕು ಮಿಗಿಲಿಲ್ಲ, ಹಾ, ನರಗೆ ಸೊಗವು!
(ಕೃಪೆ: ಸಮಗ್ರ ಕಾವ್ಯ)

ಕೆ.ಎಸ್.ನಿಸಾರ್ ಆಹಮದ್ ಅವರ ‘ವರ್ಷಾದಿ’


ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.

ಹೊಸ ಬಟ್ಟೆಯ ತೊಟ್ಟು ಚೈತ್ರ
ಜಲದರ್ಪಣ ಮಗ್ನ ನೇತ್ರ
ಮುಗಿಲಿನ ಪಂಚಾಂಗ ತೆರೆಸಿ
ಕುಳಿತಿಹ ಫಲ ತಿಳಿಯ ಬಯಸಿ.

ಬೆವರ ಹೀರಿ ಬೆಳೆದ ಪೈರು
ಕಣಕಣದಲಿ ಹೊನ್ನ ತೇರು.
ಕಣಜ ತುಂಬಿ ತುಳುಕಿ ಹಿಗ್ಗಿ
ನಾಡಿಗೊದಗಿ ಬಂತು ಸುಗ್ಗಿ.

ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲವ ಗೀತೆ.

ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.

‘ಯುಗಾದಿ:೧೯೯೦’ ಕವಿತೆಯ ಎರಡು ಪದ್ಯಗಳು

ಹಳೆ ಯುಗಾದಿಯ ಹಾದಿ ಈ ಯುಗಾದಿಯು ಹಿಡಿದು
ಏರಿದೆ ಭವಾದ್ರಿಯನು ಏದಿ, ಏದಿ.
ಯಾವ ಉಡುಗೊರೆ ಜಗಕೆ ನೀಡಲಿಹುದೋ ಕಾಣೆ
ಪ್ರಮೋದೂತ ನಾಮದ ಸ್ವೈರತಾಮೋದಿ.

ಚೈತ್ರ ಮಾಂತ್ರಿಕ ಸ್ಪರ್ಶಕೆಲ್ಲ ಉದ್ಯಾನವನ
ಪಲ್ಲವಿಸಿ, ಕರೆಯೋಲೆ ಕಳಿಸುವಂತೆ-
ಸೌಭಾಂಗ್ಯ ಪಕ್ಷಿಕುಲ ಪ್ರತಿ ಬಾಳ್ವೆಯಲಿ ಸಂದು
ಹೊಸ ವರ್ಷ ನೆರೆಸಿರಲಿ ಸೊಗದ ಸಂತೆ.
(ಕೃಪೆ: ಸಮಗ್ರ ಕವಿತೆಗಳು)

ಜಿ.ಎಸ್.ಶಿವರುದ್ರಪ್ಪ ಅವರ ‘ಯುಗಾದಿಯ ಹಾಡು’


ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಟ್ಷಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರ ಚಿಗುರಿನಂದದ
ಮಂದಹಾಸವೆ ಉಳಿಯಲಿ.

‘ಯುಗಾದಿಯ ಪ್ರಶ್ನೆಗಳು’ ಕವಿತೆಯ ಒಂದು ಪದ್ಯ

ನಾನು, ನನ್ನಪ್ಪ, ಅವರಪ್ಪನಪ್ಪ,
ಮಗ, ಮೊಮ್ಮೊಗ, ಮರಿಮಗ, ಗಿರಿಮಗ
ಈ ಗಿರಿಗಿರಿ ತಿರುಗವೀ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ?
(ಕೃಪೆ: ಸಮಗ್ರ ಕಾವ್ಯ)

ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಯುಗಾದಿ’


ನಾವು ನಮ್ಮೂರಿಂದ
ನಿಮ್ಮ ಊರಿಗೆ ಹೊರಟ ದಾರಿಯಲ್ಲಿ
ಇದು ಒಂದು ಮೈಲಿಗಲ್ಲು!
ಸಿರಿವಂತ ಕಾರಿನಲಿ,
ಬಡವ ಬರಿಗಾಲಿನಲಿ
ನಡೆದು ಬಂದುದು ಇದೇ ದಾರಿಯಲ್ಲಿ!

ಇಂಥ ಒನ್ ವೇ ಟ್ರಾಫಿಕ್ಕಿನಲ್ಲಿ
ಕಲ್ಲು ಹೂಗಳ ಚೆಲ್ಲಿ,
ಮುಳ್ಳು ಮರಗಳ ನೆಟ್ಟು,
ಅದರ ನಡುವೆಯೆ ಮಧುರ ಸವಿಜೇನ ಹಲ್ಲೆಗಳ
ಜೋಲಿಯಾಡಲು ಬಿಟ್ಟು,
ದಾರಿಯಲಿ ಅಲ್ಲಲ್ಲಿ,
ಗುಂಡಿಗಳ ತೋಡಿ,
ಮೇಲೆ ಹುಲ್ಲನು ಹಾಸಿ
ಜೀವಿಗಳ ಖೇಡ್ಡಾ ನೋಡುವ ಸಾರಿಗೇ ಸಂಸ್ಥೆಯ ಒಡೆಯ
ಯಾರೆಂಬುದೇ ಯಾರೂ ಅರಿಯದಂತಹ ಗುಟ್ಟು!
ಅದು ರಟ್ಟಾಗದಂತೆ
ಮುಂದೆ ಇಬ್ಬನಿ ತುಂಬಿ ದಟ್ಟವಾಗಿದೆಯಂತೆ!

ಇಷ್ಟು ದೂರವ ಹೇಗೋ ನಡೆದು ಬಂದೆವು ನಾವು.
ನಮ್ಮ ಕಣ್ಣೆದುರಿಗೇ ಬಿದ್ದವರು ಬಿದ್ದರು.
ಬಿಸಿಲಿನಲಿ, ಮಳೆಯಲ್ಲಿ
ರಾತ್ರಿಯಲಿ ಹಗಲಲ್ಲಿ
ನಡೆದಿದ್ದೆ ನಡೆದಿದ್ದು
ಹತ್ತಿದ್ದು, ಇಳಿದಿದ್ದು,
ಮುಗ್ಗುರಿಸಿ ಬಿದ್ದು ಎದ್ದದ್ದು,
ಹೊಸ ಹೊಣೆಯ ಹೆತ್ತದ್ದು, ಹೊತ್ತದ್ದು,
ಮಳೆಯಲ್ಲಿ ನೆಂದು ಬಿಸಿಲಲ್ಲಿ ಒಣಗಿ

ಆದರೂ ಹೆಣಗಿ
ಮುಳ್ಳು ಮರದಡಿಯೇ ತುಸು ಮಲಗಿ
ಮಗುವಾಗಿ
ಆತ್ತು ನಕ್ಕಿದ್ದು!

-ಎಲ್ಲಾ ಇಂದು ಹೆಗಲ ಮೇಲಿನ ಗಟ್ಟಿ ಪೆಟ್ಟಿಗೆಯ ತಳದಲ್ಲಿ ನುಸಿ ಹಿಡಿದು ನವೆಯುತ್ತ
ಅಲ್ಲೊಂದು ಇಲ್ಲೊಂದು ಉಳಿದಿದ್ದು!
ಹಳೆಯ ಫೈಲಿನ ಮಸುಕು ಹಾಳೆಯಂತೆ.

ಮಂಜು ಆವರಿಸಿರುವ ಮುಂದಿರುವ ದಾರಿಯಲಿ
ನಡೆದವರೆ ಇಲ್ಲ!
ಇನ್ನು ನಡೆ-ನಡೆದಂತೆ ಹೆಜ್ಜೆ-ಹೆಜ್ಜೆಯ ಗುರುತು
ಹೂವಾಗಿ ಅರಳಬೇಕು!
ಅಥವಾ-
ಹಾವಾಗಿ ಹೊರಳಬೇಕು!

ಬಗೆಬಗೆಯ ಆ ಗುರುತ
ನನ್ನ ಕೈ ಕ್ಯಾಮರದಿ ಹಿಡಿಯಬೇಕು!
ಅದಕಾಗಿಯೇ ನೀವು, ನಾವು ಅವರೂ ಕೂಡ
ಮುಂದೆ ಸಿಗಬಹುದಾದ ಮೈಲುಗಲ್ಲಿನವರೆಗೆ
ನಡೆಯಬೇಕು!
(ಕೃಪೆ: ಮೂವತ್ತು ಮಳೆಗಾಲ, ಸಂಪುಟ-೧)

Tuesday, March 24, 2009

ಅಜ್ಜ ಹೇಳಿದ ‘ಮೂರು ಸೋಮಾರಿಗಳ ಕಥೆ’ - 4

ಒಂದು ಊರಿನಲ್ಲಿ ಒಬ್ಬ ಅಜ್ಜಿ ಇದ್ದಳು. ಅವಳಿಗೆ ಮೂರು ಜನ ಗಂಡುಮಕ್ಕಳು. ಹುಟ್ಟಾ ಸೋಮಾರಿಗಳಾದ ಅವರು ಅಜ್ಜಿಯ ಸಂಪಾದನೆಯ ಮೇಲೇ ತಮ್ಮ ಜೀವನ ಸಾಗಿಸುತ್ತಿದ್ದರು.

ಅಜ್ಜಿಗೆ ಒಬ್ಬ ತಮ್ಮ ಇದ್ದ. ಆತನಿಗೆ ಸುಂದರಳಾಗಿದ್ದ ಒಬ್ಬಳೇ ಮಗಳಿದ್ದಳು. ಅವಳನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಅಂತ ಆಸೆ. ಆದರೆ ತಮ್ಮ ‘ಸೋಮಾರಿಗಳಾಗಿರುವ ಇವರಿಗೆ ನನ್ನ ಮಗಳನ್ನು ನಾನು ಕೊಡುವುದಿಲ್ಲ. ಯಾರಾದರು ದುಡಿದು ತಿನ್ನುವಂತಹ ಬುದ್ಧವಂತನಿಗೆ ಕೊಡುತ್ತೇನೆ’ ಎಂದು ಹೇಳಿಬಿಟ್ಟ. ಅಜ್ಜಿಗೆ ದುಃಖವಾಯ್ತು. ತನ್ನ ಮೂವರು ಮಕ್ಕಳನ್ನು ಬಳಿಗೆ ಕರೆದು ‘ನೋಡ್ರೋ, ನಾನು ಮುಂದೊಂದು ದಿನ ಸತ್ತೋಯ್ತಿನಿ. ಮುಂದೆ ಜೀವನಕ್ಕೆ ಏನು ಮಾಡ್ತೀರಿ. ನಾನು ಕಷ್ಟಪಟ್ಟು ಒಂದಷ್ಟು ದುಡ್ಡು ಕೂಡಿಟ್ಟಿದ್ದಿನಿ. ಅದನ್ನು ಮೂರು ಭಾಗ ಮಾಡಿ ನಿಮಗೆ ಒಂದೊಂದು ಭಾಗ ಕೊಡ್ತಿನಿ. ಅದನ್ನು ತಗೊಂಡು, ಬೇರೆ ಯಾವ ಊರಿಗಾದ್ರೂ ಹೋಗಿ, ಏನಾದ್ರು ವ್ಯಾಪಾರ ಮಾಡಿ, ಸಂಪಾದನೆ ಮಾಡಿಕೊಂಡು ಬನ್ನಿ’ ಎಂದಳು. ಅಂತೆಯೇ ಮೂವರಿಗೂ ದುಡ್ಡು ಭಾಗ ಮಾಡಿಕೊಟ್ಟಳು.
ಆಗ ಮೂವರೂ ಊಟ ಮಾಡಿಕೊಂಡು, ಅಜ್ಜಿ ಕೊಟ್ಟಿದ್ದ ದುಡ್ಡು ತಗೊಂಡು ಊರು ಬಿಟ್ಟರು. ಆದರೆ ಮುಂದೆ ಎಲ್ಲಿ ಹೋಗಬೇಕು? ಏನು ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ. ಸುಮ್ಮನೆ ಸುಸ್ತಾಗುವವರೆಗೂ ನಡೆದು ಒಂದು ಊರು ತಲುಪಿದರು. ಅಲ್ಲಿ ಊರಮುಂದೆ ಒಂದು ಅಂಗಡಿ ಇತ್ತು.

ಅದರ ಮುಂದೆ ಸುಮ್ಮನೇ ಹೋಗಿ ಕುಂತುಕೊಂಡರು. ಅದರ ಯಜಮಾನ ಕಾಲಿಲ್ಲದ ಕುಂಟ. ಈ ಮೂರೂ ಜನರನ್ನ ನೋಡಿ ‘ಏನ್ರಪ್ಪ, ಏನು ಬೇಕು?’ ಎಂದ. ಇವ್ರಿಗೂ ಏನೂ ತೋಚಲಿಲ್ಲ. ಒಬ್ಬ, ‘ಅಣ್ಣ, ನನ್ನತ್ರ ಸ್ವಲ್ಪ ದುಡ್ಡಿದೆ. ಅದನ್ನು ತೊಗೊಂಡು ವ್ಯಾಪಾರ ಮಾಡೋಕೆ ಏನಾರ ಸಾಮಾನನ್ನು, ಈಗ ತಿನ್ನೋದಿಕ್ಕೆ ಕಡ್ಲೆಪುರಿನು ಕೊಡು’ ಅಂದ. ಆಗ ಕುಂಟ ಅವನಿಗೆ ಒಂದು ‘ಭೂತಗನ್ನಡಿ’ಯನ್ನೂ (ದೂರದರ್ಶಕಯಂತ್ರ - ಬೈನಾಕ್ಯುಲರ್!), ತಿನ್ನಲೂ ಕಡ್ಲೆ ಪುರಿಯನ್ನು ಕೊಟ್ಟು ದುಡ್ಡು ತಗೊಂಡ. ಇನ್ನೊಬ್ಬನೂ ಹಾಗೇ ಕೇಳಿದಾಗ, ಅವನಿಗೆ, ಸತ್ತವರನ್ನು ಒಮ್ಮೆ ಮಾತ್ರ ಬದುಕಿಸುವ ‘ಜೀವಾಳದ ಕಡ್ಡಿ’ಯನ್ನು, ತಿನ್ನಲು ಕಡ್ಲೆಪುರಿಯನ್ನು ಕೊಟ್ಟ. ಮೂರನೆಯವನೂ ಕೇಳಿದಾಗ, ಅವನಿಗೆ ಆಕಾಶದಲ್ಲಿ ಹಾರಿ ಹೋಗುವ ಒಂದು ಕುದುರೆಯನ್ನು, ಕಡ್ಲೆಪುರಿಯನ್ನು ಕೊಟ್ಟ.
ಮೂವರೂ ಅವನ್ನೆಲ್ಲಾ ತಗೊಂಡು ಊರಾಚೆ ಹೊಳೆದಂಡೆಲಿರೂ ಒಂದು ಮರದ ಕೆಳಗೆ ಕುಂತ್ಕೊಂಡು, ತಿಂದ್ಕೊಂಡು, ನೀರ್‍ಕುಡ್ಕೊಂಡು ಹಾಗೇ ಮಲಿಕ್ಕೊಂಡ್ರು. ಬೆಳ್ಳಿಗ್ಗೆ ಎದ್ದಾಗ, ಭೂತಗನ್ನಡಿ ತಗೊಂಡಿದ್ದವನು, ಸುಮ್ಮನೇ ಭೂತಗನ್ನಡಿಲಿ ಎಲ್ಲಾ ಕಡೆಗೂ ನೋಡ್ತಾಯಿದ್ದ.

ಅದ್ರಲ್ಲಿ ಅವರ ಊರಲ್ಲಿ ಅವರ ಸೋದರಮಾವನ ಮಗಳು ಸತ್ತೋಗಿರೋದು ಕಾಣ್ತಾಯಿತ್ತು. ಹೆಣ ಸುಡೋದಿಕ್ಕೆ ವ್ಯವಸ್ಥೆ ಮಾಡ್ತಾಯಿದ್ರು. ಅವನು ಪಕ್ಕದವನನ್ನು ಕರೆದು ಅದನ್ನು ತೋರಿಸಿದ. ಆಗ ಅವನು, ‘ಅಯ್ಯೋ ನನ್ನತ್ರ ಸತ್ತವರನ್ನು ಬದುಕಿಸೋ ಜೀವಾಳದ ಕಡ್ಡಿ ಐತೆ. ಹೆಣ ಸುಡೋದ್ರೊಳಗೆ ಅಲ್ಲಿಗೆ ಬೇಗ ಹೋಗಬೇಕು. ಹೋದ್ರೆ ಅವಳನ್ನು ಜೀವಂತ ಮಾಡ್ತಿನಿ’ ಅಂದ. ಆಗ ಮೂರನೆಯವನು ‘ಬನ್ನಿ ಬನ್ನಿ, ನನ್ನ ಕುದ್ರೆ ಮೇಲೆ ಕುಂತ್ಕೊಂಡ್ರೆ, ಬೇಗ ಹೋಗಬೌದು’ ಎಂದ. ಅದರಂತೆ ಮೂರೂಜನ ಕುದ್ರೆ ಹತ್ತಿ ಊರಿಗೆ ಬಂದ್ರು.

ಅಲ್ಲಿ ಬಂದವರೆ, ಹೆಣವಾಗಿ ಮಲಗಿದ್ದ ಸೋದರಮಾವನ ಮಗಳ ಹತ್ರ ಹೋಗಿ, ಜೀವಾಳದ ಕಡ್ಡಿನ ಅವಳಿಗೆ ಮುಟ್ಟಿಸಿದ್ರು. ತಕ್ಷಣ ಅವಳು ಎದ್ದು ಕುಂತ್ಕೊಂಡ್ಳು.

ಸೋದರ ಮಾವನಿಗೆ ಬಾಳ ಖುಷಿಯಾಯಿತು. ತನ್ನ ಅಳಿಯಂದಿರೂ ಬುದ್ಧಿವಂತರು ಎಂದು ಒಪ್ಪಿಕೊಂಡ. ಆಗ ಮೂರೂ ಜನರಿಗೆ ಮಾವನ ಮಗಳನ್ನು ಮದುವೆಯಾಗುವ ಆಸೆಯಾಯಿತು. ಮೂರು ಜನರಲ್ಲಿ ಜಗಳ ಶುರುವಾಯಿತು. ‘ನಾನು ಭೂತಗನ್ನಡಿಯಲ್ಲಿ ನೋಡದ್ರಿಂದಲೇ ಗೊತ್ತಾಗಿದ್ದು. ನಾನು ನೋಡದೇ ಹೋಗಿದ್ರೆ, ಇವನು ಕುದ್ರೆ ಮೇಲೆ ಕರ್‍ಕೊಂಡು ಬರೋಕು ಆಗ್ತಾಯಿರ್‍ಲಿಲ್ಲ; ಇವನು ಜೀವಾಳದ ಕಡ್ಡಿಲಿ ಬದುಕ್ಸೋಕು ಆಗ್ತಾಯಿರ್‍ಲಿಲ್ಲ. ಅದರಿಂದ ನನಗೆ ಅವಳನ್ನು ಕೊಟ್ಟು ಮದುವೆ ಮಾಡಬೇಕು’ ಎಂದು ಭೂತಗನ್ನಡಿಯಿದ್ದವನು ಹಠ ಹಿಡಿದ. ಆಗ ಜೀವಾಳದ ಕಡ್ಡಿಯಿದ್ದವನು, ‘ನಾನು ನನ್ನ ಜೀವಾಳದ ಕಡ್ಡಿಯಿಂದ ಅವಳನ್ನ ಬದುಕಿಸಿರೋದು. ಒಬ್ಬ ಭೂತಗನ್ನಡಿಲಿ ನೋಡಿದ್ರೂ, ಬೇಗ ನನ್ನನ್ನ ಇಲ್ಲಿಗೆ ಇನ್ನೊಬ್ಬ ಕರ್‍ಕೊಂಡು ಬಂದಿದ್ರೂ ಸತ್ತವಳನ್ನು ಬದುಕಿಸಿದ್ದು ನಾನೆ. ಆದ್ರಿಂದ ನನಗೆ ಕೊಟ್ಟು ಮದುವೆ ಮಾಡ್ಬೇಕು’ ಅಂದ. ಮೂರನೆಯವನು, ‘ಒಬ್ಬ ಭೂತಗನ್ನಡಿಲಿ ನೋಡಿದ್ರೂ, ಇನ್ನೊಬ್ಬನತ್ರ ಜೀವಾಳದ ಕಡ್ಡಿ ಇದ್ರೂ ನಾನು ಬೇಗ ಇಲ್ಲಿಗೆ ಕರ್‍ಕೊಂಡು ಬರ್‍ದೆ ಇದ್ರೆ, ಹೆಣ ಸುಟ್ಟೋಗ್ತಾಯಿತ್ತು. ನಾನು ವೇಗವಾಗಿ ನಿಮ್ಮನ್ನ ಕರ್‍ಕೊಂಡು ಬಂದಿದ್ದಕ್ಕೆ ಅಲ್ಲವಾ, ಅವಳನ್ನ ಉಳಿಸೋದಿಕ್ಕೆ ಸಾಧ್ಯವಾಗಿದ್ದು. ಅದ್ರಿಂದ ನನಗೇ ಕೊಟ್ಟು ಮದುವೆ ಮಾಡ್ಬೇಕು’ ಎಂದು ಹಠ ಹಿಡಿದ. ಮೂರೂ ಜನಕ್ಕೆ ದೊಡ್ಡ ಜಗಳ ಆಯ್ತು. ಊರಲ್ಲಿ ಪಂಚಾಯ್ತಿ ಶುರುವಾಯಿತು.

ಅವರವರ ವಾದ ಕೇಳಿದಾಗಲೂ ಜನ ಅವನಿಗೇ ಕೊಡಬೇಕು ಅನ್ನೋರು. ಅದರಿಂದ ಊರಿನ ಜನರಲ್ಲೂ ಮೂರು ಭಾಗ ಆಗೋಯ್ತು. ಇವತ್ತಿಗೂ ಆ ಊರಲ್ಲಿ ಜಗಳ ನಿಂತಿಲ್ಲ. ಯಾರಾದ್ರು ಬುದ್ದಿವಂತರು ಇದ್ರೆ ಈ ಪಂಚಾಯ್ತಿನ ಬಗೆಹರಿಸಿ, ಊರವರ ಜಗಳ ನಿಲ್ಲಿಸಬೇಕಾಗಿ ನನ್ನ ಕೋರಿಕೆ.
ಈ ಸಮ್ಯೆಸ್ಯೆಯನ್ನು ಬಿಡಿಸುವುದಕ್ಕೆ ನಿಮಗೆ ಒಂದುವಾರ ಸಮಯವಿರುತ್ತದೆ. ಈಗಿನಿಂದಲೇ ಯೋಚಿಸಿ, ಉತ್ತರಿಸಿ. ಊರಿನವರ ಜಗಳ ನಿಲ್ಲಿಸಿ. ಆ ಹುಡುಗಿಗೊಂದು ಮದುವೆ ಮಾಡಿಸಿ. ನಾನಂತೂ ಮುಂದಿನವಾರ ಮುಹೂರ್ತ ಫಿಕ್ಸ್ ಮಾಡಿಕೊಂಡು ಕಾಯುತ್ತಿದ್ದೇನೆ!

Wednesday, March 18, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ: ಭಾಗ - 8

ಹತ್ತನೇ ತರಗತಿಯಲ್ಲಿ ಸ್ವಂತಪುರಾಣ ವಾಚನ ಗೋಷ್ಠಿ!
ಈ ಸಿ.ಓ.ಆರ್.ಪಿ.ರೇಷನ್ ಮೇಷ್ಟ್ರು ಪಾಠ ಮಾಡುವ ವೈಖರಿಯನ್ನು ನಾನಿಲ್ಲಿ ಹೇಳಲೇಬೇಕು. ಇಂಗ್ಲೀಷ್‌ನ್ನು ಪಾಠ ಮಾಡುವಾಗ ಯಾವುದೋ ಕಾಲದ ಒಂದು ಗೈಡನ್ನು ಇಟ್ಟುಕೊಂಡು ಅದರಲ್ಲಿ ಕೊಡುತ್ತಿದ್ದ ಕನ್ನಡ ಭಾವಾನುವಾದವನ್ನು ಓದಿ ಹೇಳುತ್ತಿದ್ದರು. ಅದರಲ್ಲಿಯೇ ನೋಡಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಯಿಸುತ್ತಿದ್ದರು. ‘ಇಂಗ್ಲೀಷ್ ಹೇಗೋ ಹಾಳಾಗಲಿ, ಅದು ಅವರ ಸಬ್ಜೆಕ್ಟ್ ಅಲ್ಲವಲ್ಲ’ ಎಂದುಕೊಂಡರೆ ಸಮಾಜ ಪಾಠ ಮಾಡುವಾಗಲೂ ಅವರದು ಇದೇ ಪದ್ಧತಿಗೆ. ಆದರೆ ಇಲ್ಲಿ ಗೈಡ್‌ಗೆ ಬದಲಾಗಿ ಯಾವುದೋ ಕಾಲದ, ಹರಿದು ಜೂಲುಜೂಲಾಗಿದ್ದ ಒಂದು ನೋಟ್ ಪುಸ್ತಕದಲ್ಲಿ ಬರೆದುದ್ದನ್ನು ನೋಡಿಕೊಂಡು ಪ್ರಶ್ನೆಗಳಿಗೆ ಉತ್ತರ ಬರೆಸುತ್ತಿದ್ದರು!
ಸಮಾಜ ಪಾಠ ಮಾಡುವಾಗ ಯಾವಾಗಲೂ ಅವರು ಬೋರ್ಡಿನ ಮೇಲೆ ಭಾರತದ ನಕ್ಷೆ ಬರೆಯುತ್ತಿದ್ದರು. ಅವರು ಬರೆಯುತ್ತಿದ್ದುದು ಇಷ್ಟೆ. ದಕ್ಷಿಣ ಭಾರತದ ನಕ್ಷೆಯಂತೆ ಕಾಣುವ ಇಂಗ್ಲೀಷ್‌ನ ‘ವಿ’ ಅಕ್ಷರವನ್ನು ಹೋಲುವ ಒಂದು ಗೆರೆ. ಅದನ್ನು ಬರೆಯುವುದಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ಕಾಲ ಒಂದು ಕಣ್ಣೆವೆಯಿಕ್ಕುವಷ್ಟು ಮಾತ್ರ! ಆದರೆ ಸ್ವಾಂತಂತ್ರ್ಯ ದಿನಾಚಾರಣೆಯಂದು ನಾನು ಹಾಸ್ಟೆಲ್ಲಿನ ಮುಂಭಾಗದಲ್ಲಿ ಧ್ವಜಕಟ್ಟೆಯ ಮುಂದೆ ಚೆನ್ನಾಗಿಯೇ ಬರೆದಿದ್ದ ಭಾರತದ ನಕ್ಷೆಯನ್ನು ಕಂಡು ‘ಯಾವನೋ ಅವನು ಇಷ್ಟೊಂದು ಪಸಂದಾಗಿ ಮ್ಯಾಪು ಬರೆದಿರೋನು?’ ಎಂದು ಆಡಿಕೊಂಡಿದ್ದರು! ನಾನು ಎದೆಯುಬ್ಬಿಸಿ ‘ನಾನೆ ಸಾರ್’ ಎಂದು ಹೇಳಿದಾಗ ತೆಪ್ಪಗಾಗಿದ್ದರು ಕೂಡಾ!
ಐವತ್ತು ನಿಮಿಷದ ಪೀರಿಯಡ್ಡಿನಲ್ಲಿ ಅವರು ಪಾಠ ಮಾಡುತ್ತಿದ್ದುದ್ದು ಕೇವಲ ಇಪ್ಪತ್ತು ಇಪ್ಪತ್ತೈದು ನಿಮಿಷ ಅಷ್ಟೆ, ನಂತರ ಯಾವುದಾವುದೋ ವಿಷಯಗಳನ್ನು ತೆಗೆದುಕೊಂಡು ಮಾತನಾಡುತ್ತಿದ್ದರು. ಅವರು ನೋಡಿದ ಸಿನಿಮಾ, ಹೋಗಿದ್ದ ಹೋಟೆಲ್ ಹೀಗೆ ಅವರ ವಿಷಯಗಳಿಗೆ ಮಿತಿಯೇ ಇರುತ್ತಿರಲಿಲ್ಲ. ಅವರ ಈ ದುರಭ್ಯಾಸ ಮೊದಲೆರಡು ವರ್ಷಗಳಲ್ಲಿ ಸ್ವಲ್ಪ ಕಡಿಮೆಯಿತ್ತೆಂದು ಹೇಳಬೇಕು. ಬಹುಶಃ ಅದಕ್ಕೆ ಈಗಿನ ನನ್ನ ಊಹೆ ಸರಿಯೆನ್ನಿಸುತ್ತದೆ. ಆ ಎರಡು ವರ್ಷಗಳ ಕಾಲ ಅವರ ಮಗಳೂ ನಮ್ಮ ತರಗತಿಯಲ್ಲಿಯೇ ಇದ್ದಳು. ಯಾವಾಗ ಆ ವರ್ಷ ಹತ್ತನೇ ತರಗತಿ ಪಾಸಾದವರ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿಯಿತೋ, ಆಗ ತಮ್ಮ ಮಗಳನ್ನು ಚನ್ನರಾಯಪಟ್ಟಣದ ಹೈಸ್ಕೂಲಿಗೆ ಸೇರಿಸಿಬಿಟ್ಟರು. ನಂತರದ ದಿನಗಳಲ್ಲಿ ಶುರುವಾಯಿತು ನೋಡಿ ಅವರ ಸ್ವಂತಪುರಾಣ ವಾಚನ ಗೋಷ್ಠಿ!
ಆಗ ನಮ್ಮ ತರಗತಿಯಲ್ಲಿದ್ದ ನಲವತ್ತೈದು ಮಂದಿಯಲ್ಲಿ ಕೇವಲ ನಾಲ್ಕೇ ಜನ ಹುಡುಗಿಯರಿದ್ದುದ್ದು. ಮುಂದಿನ ಒಂದೇ ಬೆಂಚಿನಲ್ಲಿ ಆ ನಾಲ್ಕೂ ಹುಡುಗಿಯರು ಕುಳಿತುಕೊಳ್ಳುತ್ತಿದ್ದರು. ಒಂದಷ್ಟು ಹೊತ್ತು ಪಾಠ ಮಾಡಿ, ಗೈಡೋ, ನೋಟ್ಸೋ ನೋಡಿಕೊಂಡು ಒಂದೆರಡು ಪ್ರಶ್ನೆಗಳಿಗೆ ಉತ್ತರ ಬರೆಯಿಸಿದರೆ ನಿಂಗೇಗೌಡರ ಕೆಲಸ ಮುಗಿಯುತ್ತಿತ್ತು. ನಂತರ ತಮ್ಮ ಕುರ್ಚಿಯನ್ನು ಹುಡುಗಿಯರ ಡೆಸ್ಕಿನ ಮುಂದೆ ಎಳೆದುಕೊಂಡು ಕುಳಿತುಕೊಳ್ಳುತ್ತಿದ್ದರು. ತಾವು ಓದುತ್ತಿದ್ದುದ್ದು, ಅವರ ಮೇಷ್ಟ್ರುಗಳಿಗೆ ಅವರು ಹೆದರಿ ಉಚ್ಚೆ ಹುಯ್ದುಕೊಳ್ಳುತ್ತಿದ್ದುದು, ಈಗಿನ ಮಕ್ಕಳಿಗೆ ಭಯವೇ ಇಲ್ಲದಿರುವುದು ಮುಂತಾದ ವಿಷಯಗಳನ್ನು ಹೇಳುತ್ತಿದ್ದರು. ಹುಡುಗಿಯರ ಕೈಹಿಡಿದು ಹಸ್ತರೇಖೇ ನೋಡಿ ಭವಿಷ್ಯವನ್ನೂ ಹೇಳುತ್ತಿದ್ದರು!
ಒಮ್ಮೆ ಅವರು ಶಿವಮೊಗ್ಗಕ್ಕೆ ಹೋಗಿಬಂದ ವಿಚಾರವನ್ನು, ಅಲ್ಲಿನ ಹೋಟೆಲಿನಲ್ಲಿ ಅವರು ತಿಂದ ಮಸಾಲೆದೋಸೆಯ ವಿಚಾರವನ್ನು ಸುಮಾರು ಅರ್ಧಗಂಟೆ ಇಡೀ ತರಗತಿಗೆ ಕೇಳಿಸುವಂತೆ, ಹುಡುಗಿಯರಿಗೆ ಮಾತ್ರ ಹೇಳಿದ್ದರು! ಅಲ್ಲದೆ ಹುಡುಗಿಯರಿಗೆ ‘ನಿಮ್ಮ ಮದುವೆ ಯಾವಾಗ?’ ಎಂದು ಅವರು ನಾಚಿಕೊಳ್ಳುವಂತೆ ಮಾಡುತ್ತಿದ್ದರು. ಅವರು ನಾಚಿಕೊಳ್ಳುವುದನ್ನು ನೋಡಿ, ‘ನಾಚಿಕೊಳ್ಳುವುದನ್ನು ನೋಡು, ಚಿನಾಲಿ. ಈಗ ನಾಚಿಕೊಳ್ಳುತ್ತಾಳೆ. ಗಂಡ ಪಕ್ಕಕ್ಕೆ ಬಂದರೆ ನಮ್ಮನ್ನು ನೋಡಿದರೂ ನೋಡದೆ ಹೋಗುತ್ತಾಳೆ’ ಎಂದು ಅಭಿನಯ ಪೂರ್ವಕವಾಗಿ ಹೇಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರು ಹೇಳುತ್ತಿದ್ದ ಒಂದು ಹಾಡಿನ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ.
ಕೊತಕೊತ ಅಂತ ಕುದಿತೈತೆ
ಗರತಿ ಬಾಯಲಿ ಜೊಲ್ಲು ಸುರಿತೈತೆ
ಆರಕಡಿದೊಂದು ಕುಚ್ಚಿನಮೀನು
ಮೂರಕಡಿದೊಂದು ಬಾಳೆ ಮೀನು
ಕೊತಕೊತ ಅಂತ ಕುದಿತೈತೆ
ಗರತಿ ಬಾಯಲಿ ಜೊಲ್ಲು ಸುರಿತೈತೆ
ಎಂದು ಅಭಿನಯಪೂರ್ವಕವಾಗಿ ಹೇಳುತ್ತಾ, ಹೆಣ್ಣು ಮಕ್ಕಳು ಹೇಗೆ ಗಂಡನಿಗೆ ಮೋಸ ಮಾಡುತ್ತಾರೆ ಎಂದೂ ಹೇಳುತ್ತಿದ್ದರು!
ತೋಟದ ಕೆಲಸಕ್ಕೂ ಬೇಕು ವಿದ್ಯಾರ್ಥಿಗಳು!
ಅವರ ಇನ್ನೊಂದು ದುರಭ್ಯಾಸವನ್ನೂ ನಾನಿಲ್ಲಿ ಹೇಳಬಹುದು. ದಸರಾ ಮತ್ತು ಬೇಸಿಗೆ ರಜ ಬಂತೆಂದರೆ ಸಾಕು, ಆ ಮೇಷ್ಟ್ರಿಗೆ ತಮ್ಮ ಊರಿನ, ತೋಟದ ನೆನಪಾಗುತ್ತಿತ್ತು. ಆಗ ಅವರ ದೃಷ್ಟಿ, ಸ್ವಲ್ಪ ಬಲಿಷ್ಠರಾದ ಹುಡುಗರ ಮೇಲೆ ಬೀಳುತ್ತಿತ್ತು. ನನಗೆ ಇದು ಗೊತ್ತಾಗಿದ್ದು ನಾವು ಒಂಬತ್ತನೇ ತರಗತಿಯಲ್ಲಿದ್ದಾಗಲೇ. ಆಗ ಹತ್ತನೇ ತರಗತಿಯಲ್ಲಿದ್ದ, ನನ್ನಣ್ಣನೊಂದಿಗೆ ಚಿಕ್ಕಯ್ಯ ಮತ್ತು ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಗಳಿದ್ದರು. ಈ ಮೂವರೂ ನೋಡಲು ತುಂಬಾ ಬಲಿಷ್ಠರಾಗಿದ್ದರು. ಕಬಡ್ಡಿ ವಾಲಿಬಾಲ್ ಯಾವುದರಲ್ಲಿಯೇ ಆಗಲಿ ಆ ಮೂವರದೇ ಕಾರುಬಾರು. ಅಲ್ಲದೆ ಆ ಮೂವರೂ ಹಾಸ್ಟೆಲ್ಲಿನಲ್ಲಿಯೇ ಇದ್ದರು ಹಾಗೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಆ ಬಾರಿ ದಸರಾ ರಜ ಬಂದಾಗ ನಿಂಗೇಗೌಡರು ಆ ಮೂವರನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದರು. ಅವರು ವಾಪಸ್ಸು ಬಂದು, ಚಿಕ್ಕಯ್ಯ ನಮಗೆ ಎಲ್ಲಾ ವಿಷಯ ಹೇಳುವವರೆಗೂ ನಮಗೆ ಅವರನ್ನು ಕರೆದುಕೊಂಡು ಹೋಗಿದ್ದು ಏಕೆಂದು ಗೊತ್ತೇ ಇರಲಿಲ್ಲ! ಸುಮಾರು ಇಪ್ಪತ್ತಮೂರು ದಿನಗಳ ಕಾಲ ಆ ಮೂವರಿಂದ ಹೊಲ-ತೋಟಗಳಲ್ಲಿ ಪುಕ್ಕಟೆಯಾಗಿ ಕೆಲಸ ಮಾಡಿಸಿಕೊಂಡಿದ್ದರು. ನನ್ನಣ್ಣ ಮನೆಯಲ್ಲಿ ಏನೇನೋ ಹೇಳಿ ತಪ್ಪಿಸಿಕೊಂಡಿದ್ದ. ಆದರೆ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದ ಚಿಕ್ಕಯ್ಯ ಮತ್ತು ಎಂ.ಕೆ.ಸ್ವಾಮಿ ಅವರು ನಿಜ ಹೇಳಿಯೇ ಬಿಟ್ಟರು.
ಚಿಕ್ಕಯ್ಯ ಹರಿಜನನಾಗಿದ್ದರೂ, ನಮ್ಮ ಜೊತೆಯಲ್ಲಿ ಬಂದಾಗ ನಮ್ಮ ಮನೆಯೊಳಗೇ ಬಂದು ನಮ್ಮ ಜೊತೆಯಲ್ಲೇ ಊಟ ಮಾಡುತ್ತಿದ್ದ. ಅದಕ್ಕೆ ನಮ್ಮ ತಂದೆ ತಾಯಿಯವರೂ ಏನೂ ಹೇಳುತ್ತಿರಲಿಲ್ಲ. ಓದುತ್ತಿರುವ ಹುಡುಗರಲ್ಲವೆ? ಅವರನ್ನು ಬೇರೆ ಬೇರೆ ಕೂರಿಸಿ ಊಟ ಹಾಕಲಾಗುತ್ತದೆಯೆ? ಎಂದು ನಮ್ಮ ತಾಯಿ ಸುಮ್ಮನಾಗುತ್ತಿದ್ದರು. ಹಾಸ್ಟೆಲ್ಲಿನಲ್ಲಿದ್ದ ಕೆಲವು ಹುಡುಗರು, ಭಾನುವಾರ ಬಂತೆಂದರೆ ನಮ್ಮ ಜೊತೆ ನಮ್ಮ ತೋಟದ ಮನೆಗೆ ಬಂದು ಅಲ್ಲಿಯೇ ಬಟ್ಟೆ ತೊಳೆದುಕೊಂಡು ಸ್ನಾನ ಮಾಡಿಕೊಂಡು, ನಮ್ಮ ಮನೆಯಲ್ಲೇ ಊಟ ಮಾಡಿಕೊಂಡು ಹೋಗುತ್ತಿದ್ದರು. ಅದರಲ್ಲೂ ತುಂಬಾ ಜನ ದೂರದ ಊರಿನ ಹರಿಜನ ವಿದ್ಯಾರ್ಥಿಗಳಿರುತ್ತಿದ್ದರು. ಈ ರೀತಿ ನಮ್ಮ ಮನೆಯವರಿಗೆ ಸ್ನೇಹಿತನಂತಿದ್ದ ಚಿಕ್ಕಯ್ಯ ಎಲ್ಲಾ ವಿಷಯವನ್ನು ಬಾಯಿಬಿಟ್ಟಿದ್ದರಿಂದ ನಿಂಗೇಗೌಡರ ಸ್ವಾರ್ಥ ಬಯಲಾಗಿತ್ತು. ನಮ್ಮ ತಂದೆ ಏನೂ ಹೇಳದೆ ‘ಹಾಳಾಗಿ ಹೋಗಲಿ’ ಎಂದು ಸುಮ್ಮನಾಗಿ ಬಿಟ್ಟರು.
ಆದರೆ ವಿಷಯ ಸ್ಕೂಲಿನಲ್ಲೆಲ್ಲಾ ಜಗಜ್ಜಾಹೀರಾಗಿತ್ತು. ಅದರಿಂದಲೋ ಏನೋ ಮುಂದಿನ ಬೇಸಿಗೆ ರಜದಲ್ಲಿ ಯಾವ ವಿದ್ಯಾರ್ಥಿಗಳನ್ನೂ ಅವರು ಕರೆದುಕೊಂಡು ಹೋಗಲಿಲ್ಲ. ನಾನು ಹತ್ತನೇ ತರಗತಿಗೆ ಬಂದಾಗ ಕೆಲವೊಂದು ವಿದ್ಯಾರ್ಥಿಗಳನ್ನು ಅವರು ಕೇಳಿದ್ದುಂಟು. ಆದರೆ ಅವರ ಅದೃಷ್ಟಕ್ಕೆ, ಆಗ ವಾರ್ಡನ್ನಾಗಿ ಬಂದ ಜಟಗೊಂಡ ಅವರು, ಹತ್ತನೆ ತರಗತಿಯವರಿಗೆ ರಜದಲ್ಲೂ ಹಾಸ್ಟೆಲ್ಲನ್ನು ತೆರೆದಿಟ್ಟು, ಪಾಠ ಮಾಡುವುದಾಗಿ ಘೋಷಿಸಿದ್ದರು. ನಿಂಗೇಗೌಡರ ಆಹ್ವಾನಕ್ಕೆ ಒಳಗಾಗಿದ್ದ ಹುಡುಗರು ಈ ಕಾರಣ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಸ್ವತಃ ನಿಂಗೇಗೌಡರೇ ಹಾಸ್ಟೆಲ್ಲಿಗೆ ಬಂದು ‘ಹುಡುಗರನ್ನು ನಾನು ಕೆಲಸ ಮಾಡಿಸಿಕೊಳ್ಳಲು ಕರೆದುಕೊಂಡು ಹೋಗುತ್ತಿಲ್ಲ. ಅವರಿಗೆ ಅಲ್ಲಿಯೇ ಪಾಠ ಹೇಳಿಕೊಡುತ್ತೇನೆ. ಕಳುಹಿಸಿ’ ಎಂದು ಕೇಳಿದ್ದುಂಟು. ಆದರೆ ತುಂಬಾ ಸ್ಟ್ರಿಕ್ಟ್ ಎನಿಸಿಕೊಂಡಿದ್ದ ಜಟಗೊಂಡ ಅವರು ‘ಹಾಸ್ಟೆಲ್ಲಿನಲ್ಲಿರುವ ವಿದ್ಯಾರ್ಥಿಗಳ ಹೊಣೆ ನನ್ನದು. ಆದ್ದರಿಂದ ಅವರನ್ನು ಎಲ್ಲಿಗೂ ಕಳುಹಿಸುವುದಿಲ್ಲ. ಅವರ ಊರಿಗೂ ಕಳುಹಿಸದೆ ಇಲ್ಲೇ ಇರಿಸಿಕೊಂಡು ಪಾಠ ಮಾಡುತ್ತೇನೆ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟಿದ್ದರು.
(ಮುಂದಿನ ವಾರ: ಮೊಲದ ಮಂಜನ ಕಥೆ)

Monday, March 16, 2009

ಜಾಗಿಂಗ್ ಯಾ ವಾಕಿಂಗ್

ಸರಿಸುಮಾರು ಇಪ್ಪತ್ತು ಬಾರಿಯಾದರೂ ನಾನು ನನ್ನ ಜಾಗಿಂಗ್ ಇಲ್ಲವೆ ವಾಕಿಂಗ್ ಶುರು ಮಾಡಿ ನಿಲ್ಲಿಸಿದ್ದೇನೆ. ಆದರೆ ಇತ್ತೀಚಿಗೆ ಅದನ್ನು ನಿಲ್ಲಿಸಲು ಮನಸ್ಸಾಗುತ್ತಿಲ್ಲ. ದೇಹವೂ, ಅಂತರಾಳವೂ ನನಗೆ ಚಾಳೀಸು ಸಮೀಪಿಸುತ್ತಿರುವುದನ್ನು ಒಪ್ಪಿಕೊಂಡು ‘ಅರ್ಧ ದಾರಿ ಮುಗಿಯಿತಲ್ಲ’ ಎಂದು ಪರೋಕ್ಷವಾಗಿ ಬೆಳಗಿನ ವಾಯುವಿಹಾರಕ್ಕೆ ನನ್ನನ್ನು ಪ್ರೇರೇಪಿಸುತ್ತಿರಬಹುದು! ಜೊತೆಗೆ ಈ ಬಾರಿ ನನ್ನ ಹೆಂಡತಿಯೂ ಸೇರಿಕೊಂಡಿದ್ದರಿಂದ, ‘ನಿನ್ನಿಂದಲೇ ಬೆಳಗಿನ ವಾಕ್ ನಿಂತುಹೋಯಿತು’ ಎಂಬ ದೂರನ್ನು ಹೊರಲು ಇಬ್ಬರೂ ಸಿದ್ದರಿಲ್ಲದ್ದರಿಂದ, ಅದು ಮುಂದುವರೆಯುತ್ತಿದೆ.
ಈ ಬೆಳಗಿನ ವಾಕಿಂಗಿಗೆ ಕೆಲವರು ಮನೆಯ ಮುಂದೆಯೇ ಓಡಾಡುತ್ತಾರೆ, ಇನ್ನು ಕೆಲವರು ಮನೆಯ ಒಳಗೇ ಓಡಾಡುತ್ತಾರೆ. ಮತ್ತೆ ಕೆಲವರು ಹತ್ತಿರದ ಪಾರ್ಕುಗಳನ್ನು ಆಶ್ರಯಿಸುತ್ತಾರೆ. ದೂರದ ಪಾರ್ಕುಗಳಿಗೂ ಕೆಲವರು ವಾಹನದಲ್ಲಿ ಹೋಗಿ, ಅಲ್ಲಿ ಒಂದಷ್ಟು ನಡೆದು ಮತ್ತೆ ವಾಹನದಲ್ಲಿ ವಾಪಸ್ಸು ಬರುತ್ತಾರೆ. ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಸುಸ್ಥಿತಿಯಲ್ಲಿಟ್ಟುಕೊಳ್ಳಲು ಇವರು ಒಂದಿಷ್ಟು ಪೆಟ್ರೋಲು ಯಾ ಡೀಸೆಲ್ ಉರಿಸಿ ಭೂಮಿಯನ್ನು ಬಿಸಿ ಮಾಡುತ್ತಾರೆ.
ಆದರೆ ನನ್ನ ಕಥೆ ಕೇಳಿ.
ನಮ್ಮ ಮನೆಯ ಬಳಿ ಕಾಲ್ನಡಿಗೆಯ ದೂರದಲ್ಲಿ ಮೂರು ಪಾರ್ಕುಗಳಿವೆ. ನನ್ನ ಮನೆಗೆ ತೀರಾ ಹತ್ತಿರದಲ್ಲಿರುವ ಪಾರ್ಕು ರಿಂಗ್ ರೋಡಿಗೆ ಹತ್ತಿರದಲ್ಲಿರುವುದಲ್ಲದೆ, ತೀರಾ ಚಿಕ್ಕದು. ಅಲ್ಲಿ ಇದ್ದಷ್ಟೂ ಹೊತ್ತು ಕೇವಲ ಹೊಗೆಯಷ್ಟೇ ನಮ್ಮ ಉಸಿರಾಟಕ್ಕೆ ದಕ್ಕುವುದು! ಎರಡನೆಯದು ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಹೆಸರಿನಲ್ಲಿರುವ ಸುಸಜ್ಜಿತ ಪಾರ್ಕು. ನಡೆಯಲು ಕಾಲುಹಾದಿ, ದಟ್ಟವಾದ ಮರಗಿಡಗಳು, ಹುಲ್ಲು ಹಾಸು, ಕುಳಿತುಕೊಳ್ಳಲು ಸಿಮೆಂಟಿನ ಆರಾಮಾಸನಗಳು, ಆಗಾಗ ಗೊರಗೊರ ಸದ್ದು ಮಾಡುತ್ತಲೇ ಕಿವಿಯಮೇಲೆ ಬೀಳುವ, ಮೈಸೂರುಮಲ್ಲಿಗೆಯ ಹಾಡುಗಳು... ಹೀಗೆ ಎಲ್ಲಾ ರೀತಿಯಲ್ಲೂ ಸುಸಜ್ಜಿತವಾದ ಪಾರ್ಕು. ನಾನು ಇದನ್ನು ‘ಡೆವಲಪ್‌ಡ್ ಪಾರ್ಕು’ ಎನ್ನುತ್ತೇನೆ; ‘ಡೆವಲಪ್‌ಡ್ ಕಂಟ್ರಿ’ ಎನ್ನುವ ರೀತಿಯಲ್ಲಿ.
ಆದರೆ ಇಲ್ಲಿರುವ ಅನುಕೂಲತೆಗಳೇ ಅನಾನುಕೂಲತೆಗಳಾಗಿ ಮಾರ್ಪಟ್ಟಿವೆ. ವಿಪರೀತ ಜನಜಂಗುಳಿ. ನಡೆದುಕೊಂಡೇ ಅಥವಾ ತೆವಳಿಕೊಂಡೇ ಓಡಾಡಬೇಕು. ಓಡುವಂತಿಲ್ಲ. ಅದಕ್ಕಿಂತ ಹೆಚ್ಚಾಗಿ ಬೆಳಗಿನ ಆ ನೀರವ ಮೌನವನ್ನು ಅನುಭವಿಸಲು ಹಾಗೂ ಆಗೊಮ್ಮೆ ಈಗೊಮ್ಮೆ ಕಿವಿಗಪ್ಪಳಿಸುವ ಹಕ್ಕಿಗಳ ಇಂಚರವನ್ನು ಕೇಳಲು ಸಾಧ್ಯವೇ ಇಲ್ಲ. ಇದಕ್ಕೆ ಒಂದೇ ಕಾರಣವೆಂದರೆ, ಲಾಫಿಂಗ್ ಕ್ಲಬ್ ಸದಸ್ಯರು! ಇವರಿಗೆ ಅದ್ಯಾವ ಪುಣ್ಯಾತ್ಮ ಅರ್ಥ ಮಾಡಿಸಿದನೋ ಕಾಣೆ, ನಗುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು. ಇವರು ಅದನ್ನೇ ಅಪಾರ್ಥ ಮಾಡಿಕೊಂಡು ಅರ್ಧ ಕಿಲೋಮೀಟರ್ ದೂರ ಕೇಳಿಸುವಂತೆ, ಅಕ್ಕಪಕ್ಕದ ರಸ್ತೆಯ ಮನೆಗಳಲ್ಲಿ ಮಲಗಿರುವವರು, ವೃದ್ಧರು, ವಿದ್ಯಾರ್ಥಿಗಳು, ರೋಗಿಗಳು ಬೆಚ್ಚಿ ಬೀಳುವಂತೆ ನಗುತ್ತಾರೆ ಅಲ್ಲಲ್ಲ ಕೆನೆಯುತ್ತಾರೆ. ‘ನಗುವುದು ಸಹಜಧರ್ಮ ನಗಿಸುವುದು ಪರಧರ್ಮ’ ಎಂಬ ಮಾತು ಇಲ್ಲಿ ಅನ್ವಯವಾಗುವುದಿಲ್ಲ. ‘ನಗುವುದು ಅನಿವಾರ್ಯ ಕರ್ಮ’ ಎಂದು ಇವರು ತಿಳಿದುಕೊಂಡಿದ್ದಾರೆ. ಅರವತ್ತು ಎಪ್ಪತ್ತು ಜನರಷ್ಟಿರುವ ಇವರೆಲ್ಲಾ ಒಮ್ಮೆಲೇ ಬಲವಂತವಾಗಿ ಜೋರಾಗಿ ನಗುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಉಂಟು ಮಾಡುವ ಶಬ್ದಕ್ಕೆ, ಹತ್ತು ಯುದ್ಧ ವಿಮಾನಗಳು ನಮ್ಮ ನೆತ್ತಿಯ ಮೇಲೆ ಒಮ್ಮೆಲೆ ದೌಡಾಯಿಸಿದಂತೆ ಆಗುತ್ತದೆ! ಇನ್ನು ಮರಗಿಡಗಳಲ್ಲಿ ಕುಳಿತಿರುವ ಹಕ್ಕಿಗಳೆಲ್ಲಾ ‘ಓ ಪ್ರಳಯವಾಗುತ್ತಿದೆ. ತಪ್ಪಿಸಿಕೊಳ್ಳಿ, ತಪ್ಪಿಸಿಕೊಳ್ಳಿ’ ಎಂದು ಇಟ್ಟಿದ್ದ ಮೊಟ್ಟೆಗಳನ್ನು, ತುಪ್ಪಳ ಮೂಡದ ಮರಿಗಳನ್ನು ಅಲ್ಲಲ್ಲಿಯೇ ಬಿಟ್ಟು ದೌಡಾಯಿಸುತ್ತವೆ, ಅಷ್ಟೆ. ಇನ್ನು ಹಕ್ಕಿಯಿಂಚರ ಕೇಳುತ್ತಾ ವಾಕಿಂಗ್ ಮಾಡುವ ಆಸೆಯಿರುವ ನನ್ನಂತವರಿಗೆ ಅಲ್ಲಿ ನೆಲೆಯಿಲ್ಲ. ಅದಕ್ಕೆ ನಾನು ಆ ಪಾರ್ಕಿಗೆ ವಾಕಿಂಗ್ ಹೋಗುವ ಆಸೆ ಕೈ ಬಿಟ್ಟಿದ್ದೇನೆ.

ಆದರೂ ನನ್ನ ಕಿರಿಯ ಮಿತ್ರರೊಬ್ಬರು ನನಗೆ ಹಲವಾರು ಸಲಹೆಗಳನ್ನು ಕೊಟ್ಟರು. ಅವು ಸಲಹೆಗಳಲ್ಲ. ಸ್ವತಃ ಅವರೇ ಪಾಲಿಸುತ್ತಿರುವ ಸುರಕ್ಷತಾ ಕ್ರಮಗಳು ಎನ್ನಬಹುದು. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗಿದ್ದ ಮಿತ್ರರು, ಅಲ್ಲಿ ಹೊತ್ತು ಕಳೆಯಲು ರೂಢಿಸಿಕೊಂಡ ಅಭ್ಯಾಸಗಳಲ್ಲಿ ಜಾಗಿಂಗ್ ಕೂಡಾ ಒಂದು. ದಿನಕ್ಕೆ ಬೆಳಿಗ್ಗೆ, ಸಂಜೆ ಸಮಯವಿದ್ದರೆ ಮದ್ಯಾಹ್ನ ಕೂಡಾ ಜಾಗಿಂಗ್ ಹೋಗುವುದು ಅಭ್ಯಾಸವಾಗಿದೆ. ಇಲ್ಲಿ ಬಂದು ಒಳ್ಳೆಯ ಕೆಲಸ ಹಿಡಿದರೂ, ಆ ಕೆಲಸದಲ್ಲಿ ಕುಂಡಿ ತುರಿಸಲು ಪುರುಸೊತ್ತು ಎನ್ನುವುದು ಇಲ್ಲದಿರುವಾಗಲೂ ಈ ಜಾಗಿಂಗ್ ಹುಚ್ಚು ಅವರಿಗೆ ಹೋಗಿಲ್ಲ. ಆದರೆ ಜಾಗಿಂಗ್ ಮಾಡುವ ಸಮಯ ಕಡಿಮೆಯಾಗಿದೆ ಅಷ್ಟೆ. ಅವರ ಮನೆಯಿಂದ ನಮ್ಮ ಮೈಸೂರು ಮಲ್ಲಿಗೆ ಪಾರ್ಕು ಒಂದು ನಿಮಿಷದ ಹಾದಿ. ದೂರ ದೂರದ ಪಾರ್ಕುಗಳಿಗೆ ಹೋಗಿ ಜಾಗಿಂಗ್ ಮಾಡುವಷ್ಟು ಸಮಯವಿಲ್ಲದ್ದರಿಂದ ಅವರೂ ಅದೇ ಪಾರ್ಕನ್ನು ಆಶ್ರಯಿಸಿಬೇಕಾಯಿತು. ಆದರೆ ಅಲ್ಲಿ ದಿನಕ್ಕೊಂದರಂತೆ ತೊಂದರೆಗಳು ಉದ್ಭವಿಸತೊಡಗಿದವು.
ಮೊದಲಿಗೆ ಪಾರ್ಕಿನಲ್ಲಿ ದಿನವೂ ಹಾಕುತ್ತಿದ್ದ ಮೈಸೂರುಮಲ್ಲಿಗೆ ಹಾಡುಗಳು. ಮೈಸೂರು ಮಲ್ಲಿಗೆಯ ಹಾಡುಗಳನ್ನು ಐಪಾಡಿನಲ್ಲಿಟ್ಟುಕೊಂಡು, ಇಷ್ಟಪಟ್ಟು ಕೇಳುವವರಾಗಿದ್ದ ಅವರಿಗೆ, ಆ ಗೊರ ಗೊರ ಶಬ್ದದ ನಡುವೆ, ತಾರಕದಲ್ಲಿ ಕೇಳಿಸುವ ಅಶ್ವತ್ಥರ ಧ್ವನಿ ಕೇಳಿದರೇ ಬಹಳ ರೇಜಿಗೆಯುಂಟಾಗಲಾರಂಭಿಸಿತು.
ಎರಡನೆಯದು, ವೇಗವಾಗಿ ಓಡಲು ಸಾಧ್ಯವೇ ಇಲ್ಲದಷ್ಟು ಜನಗಳ ಟ್ರಾಫಿಕ್ಕು. ಅದಕ್ಕೆ ಅವರು ಕಂಡುಕೊಂಡ ಉಪಾಯ, ಪಾರ್ಕನ್ನು ಬಿಟ್ಟು ಪಾರ್ಕ್ ಸುತ್ತ ಇರುವ ರಸ್ತೆಯಲ್ಲಿ ಓಡುವುದು! ಆದರೆ ಅಲ್ಲಿಗೂ ಬಂದು ಅಪ್ಪಳಿಸುವ ಲಾಫಿಂಗ್ ಕ್ಲಬ್‌ನ ಹಾಸ್ಯೋತ್ಪಾದಕರ ಅಪಹಾಸ್ಯ ಬೇರೆ. ಈ ಎರಡೂ ಸಮಸ್ಯೆಗಳಿಗೆ ಅವರು ಐಪಾಡಿನಿಂದ ಇಯರ್ ಫೋನ್ ಮುಖಾಂತರ ಜೋರಾಗಿ ಹಾಡುಗಳನ್ನು ಕೇಳುವ ಅಭ್ಯಾಸಕ್ಕೆ ಮೊರೆ ಹೋದರು. ಆದರೂ ಶನಿವಾರ ಭಾನುವಾರ ಹಾಗೂ ಬಿಡುವಾದಗಲೆಲ್ಲಾ, ದೂರದ ಲಾಲ್‌ಬಾಗಿಗೋ, ಜಯನಗರದ ಮಾಧವನ್ ಪಾರ್ಕಿಗೋ ಹೋಗಿ ಜಾಗಿಂಗ್ ಎಂಜಾಯ್ ಮಾಡುತ್ತಿರುತ್ತಾರೆ.
ಜೋರಾಗಿ ಇಯರ್ ಫೋನ್ ಮುಖಾಂತರ ಹಾಡು ಕೇಳಿ ಅವಧಿಗೆ ಮೊದಲೇ ಕಿವುಡನಾಗುವ ತಾಪತ್ರವೇ ಬೇಡ ಎಂದುಕೊಂಡು ನಾನು ಆ ದುಸ್ಸಾಹಾಸಕ್ಕೆ ಕೈಹಾಕಲಿಲ್ಲ. ಆದರೂ ವಾಯುವಿಹಾರ ನಡೆಯಲೇಬೇಕಲ್ಲ. ಅದಕ್ಕಾಗಿ ಮೂರನೇ ಪಾರ್ಕು ಆಯ್ದುಕೊಂಡೆ. ಇದೂ ಕೂಡಾ ಮೈಸೂರು ಮಲ್ಲಿಗೆ ಪಾರ್ಕಿನಷ್ಟೇ ದೂರದಲ್ಲಿದೆ. ಆದರೆ ಅಷ್ಟು ದೊಡ್ಡದಲ್ಲ. ನಮ್ಮ ಮನೆಯಿಂದ ಹದಿನೈದು ನಿಮಿಷಗಳು ನಡೆಯಬೇಕು. ಬೈಕಿನಲ್ಲಿ ಹೋಗಿ, ಅಲ್ಲಿ ನಡೆಯುವಷ್ಟು ಕೆಟ್ಟವನಲ್ಲ ನಾನು. ಅದಕ್ಕಾಗಿ ನಡೆದುಕೊಂಡೇ ಹೋಗುತ್ತೇವೆ. ಆದರೆ ಶನಿವಾರ ಭಾನುವಾರ ಈ ನಿಯಮವನ್ನು ಮೀರಬೇಕಾಗುತ್ತದೆ. ಕಾರಣ ನನ್ನ ಐದು ವರ್ಷದ ಮಗಳು. ಆ ಎರಡು ದಿನಗಳು ಅವಳೂ ಪಾರ್ಕಿಗೆ ಬರುತ್ತಾಳೆ. ವಾಕಿಂಗ್ ಅಥವಾ ಜಾಗಿಂಗ್ ಅವಳಿಗೆ ಅಪಥ್ಯ. ಆದರೆ ಅಲ್ಲಿರುವ ಮರಳಿನ ಮೇಲೆ, ರಾಟೆಯ ಮೇಲೆ, ಜಾರುಬಂಡೆಯ ಮೇಲೆ, ಉಯ್ಯಾಲೆಯಲ್ಲಿ ಆಟವಾಡಲು. ಅವಳ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ನಾನು ನನ್ನ ಕಯ್ಯಾರೆ ಮಾಡಿಕೊಟ್ಟಿರುವ ಉಯ್ಯಾಲೆ ಮನೆಯಲ್ಲಿದೆ. ನಾವು ಮೊದಲಿದ್ದ ಬಾಡಿಗೆ ಮನೆಯಲ್ಲಿ ಅದಕ್ಕೆ ಸಾಕಷ್ಟು ಜಾಗವಿತ್ತು. ಆದರೆ ಈಗ ಅದು ನನ್ನ ಸ್ವಂತ ಪುಟ್ಟ ಅರಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಹುದಾದ ತೂಗು ಕುರ್ಚಿಯಾಗಿದೆಯೇ ಹೊರತು ಉಯ್ಯಾಲೆಯಾಗಿಲ್ಲ. ಆದ್ದರಿಂದ ಅವಳು ಅದನ್ನು ಏರಿ ಕೂರುವುದಿಲ್ಲ! ಇವಳಿಗೆ ಪಾರ್ಕಿಗೆ ಇರುವ ದೂರವನ್ನು ನಡೆಯುವುದು ಕಷ್ಟವಲ್ಲದಿದ್ದರೂ ಇಷ್ಟವಿಲ್ಲ. ಅವಳನ್ನು ಎತ್ತಿಕೊಂಡು ನಡೆಯುವ ತ್ರಾಣ ನಮ್ಮಿಬ್ಬರಲ್ಲಿ ಯಾರಿಗೂ ಇಲ್ಲ. ವಾರದ ಎಲ್ಲಾ ದಿನಗಳೂ ಅವಳು ಬರಲು ಸಿದ್ದಳಿದ್ದರೂ ಎರಡು ಕಾರಣಗಳಿಗಾಗಿ ನಾನು ಅದಕ್ಕೆ ಬ್ರೇಕ್ ಹಾಕಿದ್ದೇನೆ. ಮೊದಲನೆಯದು, ಸ್ಕೂಲ್ ಇದ್ದ ದಿನ ಪಾರ್ಕಿಗೆ ಬಂದರೆ, ಮಧ್ಯಾಹ್ನ ಸ್ಕೂಲಿನಿಂದ ವಾಪಸ್ಸು ಬರುವುದರೊಳಗೆ ವ್ಯಾನಿನಲ್ಲೇ ನಿದ್ದೆ ಮಾಡುಬಿಡುತ್ತಾಳೆ. ಎರಡನೆಯದು, ಬೈಕಿನಲ್ಲಿ ನಿತ್ಯವೂ ಪಾರ್ಕಿಗೆ ಹೋಗಲು ನನಗೆ ಮನಸ್ಸಿಲ್ಲದಿರುವುದು! ಅದಕ್ಕಾಗಿ ವಾರಾಂತ್ಯದ ಎರಡು ದಿನ ಮಾತ್ರ ವಾಯುವಿಹಾರಕ್ಕೆ ಪೂರ್ವಬಾವಿಯಾಗಿ ಬೈಕ್ ವಿಹಾರವೂ ನಡೆಯುತ್ತದೆ.
ಇನ್ನು ಆ ಪಾರ್ಕಿನ ಸ್ಥಿತಿಗತಿ. ಅದೊಂದು ‘ಅಂಡರ್ ಡೆವಲಪ್‌ಡ್ ಪಾರ್ಕ್’, ‘ಅಂಡರ್ ಡೆವಲಪ್‌ಡ್ ಕಂಟ್ರಿ’ ಇದ್ದಹಾಗೆ! ಮರಗಿಡಗಳು ಸ್ವಲ್ಪ ಕಡಿಮೆ. ಆದರೆ ನಡೆಯಲು ಸೂಕ್ತವಾದ ಕಾಲುಹಾದಿಯಿದೆ. ಜನರೂ ಕಡಿಮೆ. ಲಾಫಿಂಗ್ ಕ್ಲಬ್ಬಿನ ಹಾಸ್ಯೋತ್ಪಾದಕರು ಅಲ್ಲಲ್ಲ ಶಬ್ದೋತ್ಪಾದಕರು (ಅದು ಹಾಸ್ಯವಲ್ಲ; ಬರೀ ಶಬ್ದ!) ಇಲ್ಲಿಗೆ ಇನ್ನು ಕಾಲಿಟ್ಟಿಲ್ಲ. ಹಲವಾರು ಹೊಂಗೇ ಮರಗಳು ಇವೆ. ಈ ಚೈತ್ರದ ಉರಿಯಲ್ಲಿ ಅವು ಸೊಂಪಾಗಿ ಪಲ್ಲವಿಸಿ ಹೂಬಿಟ್ಟಿವೆ. ಅವುಗಳ ಕೆಳಗೆ ಉದುರಿರುವ ಹೂವುಗಳನ್ನು ನೋಡಿ ನನಗೆ ‘ಪಂಪಭಾರತ’ದಲ್ಲಿ ಬರುವ ಮರಳಿನ ಮೇಲೆ ಅಕ್ಷತೆಯ ರಂಗವಲ್ಲಿಯಿಕ್ಕಿದಂತೆ ಚೆಲ್ಲಿದ್ದ ಹೊಂಗೆ ಹೂವುಗಳ ಶಬ್ದಚಿತ್ರ ನೆನಪಿಗೆ ಬರುತ್ತದೆ. ಕುವೆಂಪು ರಾಮಾಯಣದಲ್ಲೂ ಮರಳಿನ ಮೇಲೆ ಚೆಲ್ಲಿದ ಹೊಂಗೇ ಮರದ ದಟ್ಟ ನೆರಳಿನ ಚಿತ್ರ ಬರುತ್ತದೆ. ಬೇಂದ್ರೆಯವರ ಯುಗಾದಿ ಕವಿತೆಯಲ್ಲಿ 'ಹೊಂಗೆ ಹೂವ ತೊಂಗಲಲ್ಲಿ ಬೃಂಗದ ಸಂಗೀತ ಕೇಳಿ' ಎಂಬ ಸಾಲು ಅಜರಾಮರ'. ಪಾರ್ಕಿನ ಬದಿಯ ರಸ್ತೆಯಲ್ಲಿ ಒಂದರೆಡು ಮಾವಿನ ಮರಗಳೂ ಇವೆ. ಆ ಮರಗಳಲ್ಲಿ ಆಶ್ರಯ ಪಡೆದಿರುವ ಹಲವಾರು ಹಕ್ಕಿಗಳ ಇಂಚರ ಕಿವಿಯ ಮೇಲೆ ಬೀಳುತ್ತಿರುತ್ತದೆ. ನನ್ನ ಮಗಳಿಗೆ ಕೇಳಿಸುತ್ತಿರುತ್ತೇನೆ. ಮನೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದ ಡಿಜಿಟಲ್ ವಿಶ್ವಕೋಶದಿಂದ ಹಕ್ಕಿಗಳ ಇಂಚರ ಕೇಳಿಸಿ ಅವುಗಳನ್ನು ಗುರುತಿಟ್ಟುಕೊಳ್ಳುವ ಪ್ರಯತ್ನವನ್ನು ನನ್ನ ಮಗಳಿಗೆ ಹಕ್ಕಿಗಳ ಬಗ್ಗೆ ಕುತೂಹಲ ಮೂಡಿಸುವುದಕ್ಕೋಸ್ಕರ, ನಮ್ಮ ‘ತೇಜಸ್ವಿ’ ಸಾಹಿತ್ಯದ ದಿಸೆಯಿಂದ ಮಾಡುತ್ತಿರುತ್ತೇನೆ. (ನನ್ನ ಮಟ್ಟಿಗೆ ವಿಫಲ. ಏಕೆಂದರೆ, ಎಷ್ಟೆಲ್ಲಾ ಪರಿಶ್ರಮ ಪಟ್ಟರೂ ನಾನು ಧ್ವನಿ ಕೇಳಿ ಗುರುತಿಸುವ ಪಕ್ಷಿಗಳ ಸಂಖ್ಯೆ ಒಂದು ಕೈನ ಬೆರಳಗಳಷ್ಟೂ ಆಗುವುದಿಲ್ಲ.!) ಹಕ್ಕಿಗಳ ಧ್ವನಿ ಕೇಳಿ ಗುರುತಿಸುವುದು ಬಹಳ ಕಷ್ಟ. ನನಗೆ ಈ ಮೊದಲು ಹಾಗೆ ಗೊತ್ತಿದ್ದಿದ್ದು ಕಾಗೆ-ಗೂಬೆ! ಈ ಎರಡನ್ನು ಬಿಟ್ಟರೆ ಸುಲಭವಾಗಿ ಗುರುತಿಸಬಹುದಾದದ್ದು ಎಂದರೆ, ಕೋಳಿ ಮಾತ್ರ!
ಈ ಪಾರ್ಕಿನ ಒಂದೆರಡು ವಿಶೇಷಗಳನ್ನು ಹೇಳಿ, ಈ ದೀರ್ಘ ಓದಿನಿಂದ ನಿಮಗೆ ಬಿಡುಗಡೆ ನೀಡುತ್ತೇನೆ. ಇಲ್ಲಿಗೆ ಮಧ್ಯವಯಸ್ಸಿನ ಮಹಿಳೆಯೊಬ್ಬರು ವಾಕಿಂಗ್ ಬರುತ್ತಾರೆ. ಪಾರ್ಕಿನ ವಾಕ್ಫಥ ಒಂದೇ ಸಮತಟ್ಟಿನಲ್ಲಿ ಇಲ್ಲ. ಕೆಲವು ಕಡೆ ಇಳಿಜಾರು ಸಿಗುತ್ತದೆ. ಆಯತಾಕೃಆದಲ್ಲಿರುವ ವಾಕ್ಫಥದ ಒಂದು ಸಣ್ಣ ಭುಜ ಇಳಿಜಾರಾಗಿದೆ. ಆ ಮಹಿಳೆ ಅಲ್ಲಿಗೆ ಬಂದ ತಕ್ಷಣ ಸುಮಾರು ಹತ್ತಿಪ್ಪತ್ತು ಹೆಜ್ಜೆ ದಡದಡನೆ ಓಡಿ ಮತ್ತೆ ನಡೆಯಲು ಶುರು ಮಾಡುತ್ತಾರೆ. ಮೊದಲ ಬಾರಿ, ಮುಂದೆ ನಡೆಯುತ್ತಿದ್ದ ನಾವು, ಹಿಂದಿನಿಂದ ದಡದಡನೆ ಓಡಿ ನಮ್ಮನ್ನು ಹಿಂದೆ ಹಾಕಿ ಮತ್ತೆ ನಡೆಯಲು ಪ್ರಾರಂಭಿಸಿದ ಅವರ ರೀತಿಯಿಂದ ದಂಗಾಗಿ ಹೋಗಿದ್ದೆವು. ಬಹುಶಃ ಅವರು ನಡೆಯುವ ವೇಗಕ್ಕಿಂತ ನಾವು ನಡೆಯುವ ವೇಗ ಕಡಿಮೆಯಾದ್ದರಿಂದ ನಮ್ಮನ್ನು ಹಿಂದೆ ಹಾಕಲು ಆ ರೀತಿ ಮಾಡಿರಬಹುದು ಎಂದುಕೊಂಡೆವು. ಆದರೆ ಮುಂದಿನ ದಿನಗಳಲ್ಲಿ ಅದು ಸುಳ್ಳು ಎಂದು ತಿಳಿಯಿತು. ಆ ಜಾಗಕ್ಕೆ ಅವರು ಬಂದಾಗ, ಅಲ್ಲಿ ಯಾರು ಇಲ್ಲದಿದ್ದರೂ ಹಾಗೇ ದಡದಡನೆ ಓಡಿ ಮತ್ತೆ ನಡೆಯಲು ಪ್ರಾರಂಭಿಸುತ್ತಾರೆ. ಅವರು ಎಷ್ಟು ಸುತ್ತು ನಡೆದರೂ ಇದು ಮಾತ್ರ ತಪ್ಪುವುದಿಲ್ಲ! ಆದರೆ ಬೇರೆಡೆ ಇಳಿಜಾರಾಗಿರುವಲ್ಲಿ ಮಾತ್ರ ಈ ರೀತಿ ದಡದಡನೆ ಓಡುವ ಚಾಳಿ ಅವರಿಗಿಲ್ಲ.
ಇನ್ನೊಬ್ಬ ಮಹನೀಯರಿದ್ದಾರೆ. ಅವರು ಸಿಮೆಂಟಿನ ಬೆಂಚಿನ ಮೇಲೆ ಕುಳಿತುಕೊಂಡು, ಹೊಟ್ಟೆಯ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು ಮಿಡುಕುತ್ತಾರೆ. ಮಿಡುಕುವುದು ಎಂಬುದು ಸರಿಯಾದ ಪದವೋ ಏನೋ ತಿಳಿಯುತ್ತಿಲ್ಲ. ಒಂದ ರೀತಿಯಲ್ಲಿ ಬೆಚ್ಚಿದವರಂತೆ ಮೈ ನಡುಗಿಸುತ್ತಿರುತ್ತಾರೆ. ಇದು ಆಗಾಗ ನಡೆಯುತ್ತಿರುತ್ತದೆ. ಅದನ್ನು ಕಂಡ ನಮ್ಮ ಪರಿಚಯದ ಸಹನಡಿಗೆದಾರರೊಬ್ಬರು ಅವರನ್ನು ಕಂಡಾಗಲೆಲ್ಲಾ ‘ಮಿಡುಕಪ್ಪ’ ಎಂದು ನಮಗೆ ಕೇಳಿಸುವಂತೆ ಹೇಳುತ್ತಾರೆ! ಅದೊಂದು ರೀತಿಯ ವ್ಯಾಯಾಮವಿರಬಹುದು. ಏಕೆಂದರೆ, ನಾಲ್ಕಾರು ದಿನಗಳು ಕಣ್ಣಿಗೆ ಬಿದ್ದು ಈಗ ಮಾಯವಾಗಿರುವ ಮಹಿಳೆಯೊಬ್ಬರೂ ಅದೇ ರೀತಿ ಮಾಡುತ್ತಿದ್ದರು.
ಇನ್ನೊಬ್ಬರಿದ್ದಾರೆ. ಅವರು ತಮ್ಮ ಎರಡೂ ಕಿವಿಗಳನ್ನು ತಮ್ಮ ಕೈಗಳಿಂದ ಎಳೆದುಕೊಳ್ಳುತ್ತಿರುತ್ತಾರೆ. ಅದನ್ನು ಐದೈದು ನಿಮಿಷ ಮಾಡುತ್ತಾರೆ. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಅದನ್ನೆ ಮಾಡುತ್ತಾರೆ. ನಡುವೆ ಕೆನ್ನೆಗೆ ರಪರಪನೆ ಬಡಿದುಕೊಳ್ಳುತ್ತಾರೆ. ನಾನು ತುಂಬಾ ಹತ್ತಿರದಿಂದ ಅವರ ಕಿವಿಯ ಆಲೆಗಳನ್ನು ಗಮನಿಸಬೇಕೆಂದಿದ್ದೇನೆ. ಏಕೆಂದರೆ ಹಿಂದೊಮ್ಮೆ ಎ.ಎಕ್ಸ್.ಎನ್. ವಾಹಿನಿಯಲ್ಲಿ ಅತ್ಯಂತ ಉದ್ದ ಕಿವಿಯಾಲೆಗಳನ್ನು ಹೊಂದಿದ್ದವನೊಬ್ಬನಿಗೆ ಗಿನ್ನೆಸ್ ದಾಖಲೆಯ ಗೌರವ ಕೊಡುತ್ತಿರುವುದನ್ನು ನೋಡಿದ್ದೆ. ಈ ವ್ಯಕ್ತಿಯೇನಾದರೂ ಅದಕ್ಕೆ ತಯಾರಿ ನಡೆಸುತ್ತಿದ್ದಾರೋ ಎನ್ನುವ ಅನುಮಾನ ನನ್ನದು!

ಸುಮಾರು ಏಳೆಂಟು ವರ್ಷದ ಮುದ್ದಾದ ಹೆಣ್ಣುಮಗಳೊಬ್ಬಳು ಅವಳ ತಾತನೊಂದಿಗೆ ಆಗಾಗ ಪಾರ್‍ಕಿಗೆ ಬರುತ್ತಾಳೆ. ಅವಳು ಹೆಚ್ಚಿನ ಸಮಯವನ್ನು ಉಯ್ಯಾಲೆಯ ಸಮೀಪ ಕಳೆಯುತ್ತಾಳೆ. ಉಯ್ಯಾಲೆಯಲ್ಲಿ ಜೀಕಿಕೊಳ್ಳುವುದಿಲ್ಲ. ಆದರೆ ಆ ಉಯ್ಯಾಲೆಯನ್ನು ತೊಟ್ಟಿಲ ಹಾಗೆ ತೂಗುತ್ತಿರುತ್ತಾಳೆ! ಮಕ್ಕಳ ಆಸಕ್ತಿಯನ್ನು ನೋಡಿ ಅವರು ಮುಂದೇನಾಗುತ್ತಾರೆ ಎಂಬುದನ್ನು ಹೇಳಬಹುದು ಅಂತಾರೆ, ಕೆಲವರು. ಅದು ನಿಜವಾದರೆ ಈ ಹುಡುಗಿ ಒಳ್ಳೆಯ ತಾಯಿಯಾಗುತ್ತಾಳೆ ಎಂದು ಹೇಳಬಹುದು. ಇಂದಿನ ವೇಗದ ಜಗತ್ತಿನಲ್ಲಿ ಒಳ್ಳೆಯ ತಾಯಿಯಾಗುವುದೂ ಒಂದು ಸವಾಲೇ ಹೌದು. ಅದು ಏನೇ ಇರಲಿ, ಹೆಣ್ಣು ಮಕ್ಕಳಿಗೆ ಮಾತೃಭಾವ ಎಂಬುದು ಪ್ರಕೃತಿಸಹಜವಾಗಿ, ಹುಟ್ಟಿನಿಂದಲೇ ಬಂದುಬಿಟ್ಟಿರುತ್ತದೆ. ಅದು ಸಧಾ ಜಾಗೃತವಾಗಿದ್ದು, ಆಗಾ ಪ್ರಕಟಗೊಳ್ಳುತ್ತಿರುತ್ತದೆ ಎನ್ನಬಹುದು.
ಇನ್ನು ಕೆಲವು ಪಡ್ಡೆ ಹುಡುಗರಿದ್ದಾರೆ. ಅವರು ನಾನು ನೋಡಿದ ಹೆಚ್ಚಿನ ಸಮಯದಲ್ಲಿ ಸುಮ್ಮನೇ ನಿಂತು ಮಾತನಾಡುತ್ತಿರುತ್ತಾರೆ. ಇವರು ಯಾವಾಗ ವ್ಯಾಯಮ ಮಾಡುತ್ತಾರೆ, ಯಾವಾಗ ಜಾಗಿಂಗ್ ಮಾಡುತ್ತಾರೆ ಎನ್ನುವ ಕೆಟ್ಟ ಕುತೂಹಲ ನನಗೆ ತಿಂಗಳ ಹಿಂದೆ ಬರಬೇಕೆ. ಸರಿ ಪತ್ತೆ ದಾರಿಕೆಯಲ್ಲಿ ತೊಡಗಿಸಿಕೊಂಡೇ ಬಿಟ್ಟೆ. ಪ್ರತಿದಿನ ನಾಲ್ಲಿರುವಷ್ಟು ಹೊತ್ತು ಅವರ ಮೇಲೊಂದು ನನ್ನ ಕಣ್ಣಿಟ್ಟೆ. ಆಗ ನನ್ನ ಗಮನಕ್ಕೆ ಬಂದ ಭಯಂಕರ ಸತ್ಯವನ್ನು ಸ್ಪಷ್ಟ ಮಾಡಿಕೊಳ್ಳಲು ಒಂದು ವಾರ ಅವರನ್ನು ಸೂಕ್ಷ್ಮವಾಗಿ ಅವಲೋಕಿಸಿದೆ. ಯಾರಾದರು ಹುಡುಗಿಯರು ಹತ್ತಿರ ಬಂದ ನಂತರವಷ್ಟೇ ಅವರೂ ವ್ಯಾಯಾಮ ಮಾಡಲು ಶುರು ಮಾಡುತ್ತಿದ್ದರು.! ಯಾರಾದರು ಹುಡುಗಿಯರು ವಾಕಿಂಗ್ ಮಾಡುತ್ತಿದ್ದರಷ್ಟೇ ಇವರು ಜಾಗಿಂಗಿಗೆ ಹೊರಡುತ್ತಿದ್ದರು! ನಿಜವಾಗಿಯೂ ನನಗೆ ಆಶ್ಚರ್ಯವಾಯಿತು. ಆ ಹುಡುಗರು ಕೆಟ್ಟವರೇನಲ್ಲ. ಯಾರನ್ನೂ ರೇಗಿಸಿಲ್ಲ. ಅಸಭ್ಯವಾಗಿಯೂ ವರ್ತಿಸಿಲ್ಲ. ಆದರೆ ಅವರ ಈ ಅಭ್ಯಾಸ ಮಾತ್ರ ವಿಚಿತ್ರ. ಅದು ಆ ಹುಡುಗರ ಮನಸ್ಸಿನ ಪೂರ್ವನಿರ್ಧಾರಿತ ಯೋಜನೆಯೇ? ಇಲ್ಲಾ ಅವರಲ್ಲಿ ಯಾರಾದರೊಬ್ಬನ ಯೋಜನೆಯಾಗಿದ್ದು, ಅವನು ಉಳಿದವರನ್ನು ಉಪಾಯವಾಗಿ ನಿಯಂತ್ರಿಸುತ್ತಿದ್ದಾನೆಯೇ? ಹಲವಾರು ಪ್ರಶ್ನೆಗಳು ಕಾಡಲು ಶುರುವಾಯಿತು.
ಇದು ನನ್ನೊಬ್ಬನ ಅನಿಸಿಕೆಯಾಗಿರಲಿಲ್ಲ. ನಮ್ಮ ಪರಿಚಯದವರೊಬ್ಬರು ಇದೇ ರೀತಿಯ ಸಂಶಯವನ್ನು ವ್ಯಕ್ತಪಡಿಸಿದರು! ಆದರೆ ಆ ಹುಡುಗರ ಗುಂಪಿನ ಸಂಖ್ಯೆ ಒಂದೇ ಸಮನಾಗಿರುವುದಿಲ್ಲ. ಒಂದೊಂದು ದಿನ ಇಬ್ಬರೇ ಇದ್ದರೆ, ಇನ್ನೊಂದು ದಿನ ಏಳೆಂಟು ಜನರಿರುತ್ತಾರೆ. ಅವರಿಂದ ಯಾವುದೇ ತೊಂದರೆಯಿಲ್ಲ. ಅದರಿಂದಲೋ ಏನೋ ನನ್ನ ಮನಸ್ಸು ಅವರ ಬಗ್ಗೆ ಯೋಚಿಸುವುದನ್ನು ಬಿಟ್ಟಿತು. ಈಗ ಪಿಯುಸಿ ಪರೀಕ್ಷೆ ಹತ್ತಿರಕ್ಕೆ ಬಂದಂತೆ ಅವರು ಬರುವುದು ಕ್ರಮೇಣ ನಿಂತುಹೋಯಿತು!


ಪಿಯುಸಿ ಎಂದಾಕ್ಷಣ ಇನ್ನೊಂದು ಜೋಡಿ ನೆನಪಾಯಿತು. ಒಂದು ಹುಡುಗಿ, ಒಬ್ಬ ಹುಡುಗ ಒಂದಷ್ಟು ದಿನ ಪಾರ್ಕಿಗೆ ಬಂದು ಕಲ್ಲು ಬೆಂಚಿನ ಮೇಲೆ ಒಂದರ್ಧ ಗಂಟೆ ಕುಳಿತು, ಮಾತನಾಡಿ, ಫೋನಿನಲ್ಲೂ ಮಾತನಾಡಿ ಹೊರಟು ಹೋಗುತ್ತಿದ್ದರು. ಅವರಿಬ್ಬರೂ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳೆಂದು ನನಗೊಂದು ದಿನ ತಿಳಿಯಿತು. ಹುಡುಗಿಯ ಕೈಯಲ್ಲಿದ್ದ ಟಿ.ಟಿ.ಶ್ರೀನಿವಾಸನ್ ಬರೆದಿರುವ ದ್ವಿತೀಯ ಪಿಯುಸಿ ಟೆಕ್ಸ್ಟ್ ಬುಕ್ ನನ್ನ ಕಣ್ಣಿಗೆ ಬಿದ್ದಿತ್ತು. ಈ ಇಬ್ಬರೂ ಟ್ಯೂಷನ್ ಪೂರ್ವ ಅಥವಾ ಟ್ಯೂಷನ್ನೋತ್ತರ, ಅಥವಾ ಟ್ಯೂಷನ್ ಬಂಕ್ ಬೇಟಿಗೆ ಇಲ್ಲಿಗೆ ಬರುತ್ತಿದ್ದರೆಂದು ಕಾಣುತ್ತದೆ. ಹುಡಗಿ ಸ್ಕೂಟಿಯಲ್ಲಿ ಬರುತ್ತಿದ್ದರೆ, ಆತ ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ. ಬೆಳಗಿನ ಚುಮುಚಮು ಚಳಿಯಲ್ಲಿ, ನಸುಗತ್ತಲಿನಲ್ಲಿ ಪಾರ್ಕಿನ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತು ಪ್ರೇಮದ ಕನಸುಗಳನ್ನು ಕಾಣುತ್ತಿದ್ದ ಆ ಯುವಪ್ರೇಮಿಗಳ ತುಂಬಾ ದಿನ ಬರಲಿಲ್ಲ. ಅವರಿಬ್ಬರೂ ಜೊತೆಯಲ್ಲಿದ್ದಷ್ಟು ಹೊತ್ತು ಏನು ಮಾತನಾಡಿಕೊಳ್ಳುತ್ತಿದ್ದರು ಎಂದು ನನಗೆ ತಿಳಿಯಲಿಲ್ಲ. ಆದರೆ ಹೆಚ್ಚಿನ ಹೊತ್ತು ಇಬ್ಬರಲ್ಲಿ ಒಬ್ಬರು ಫೋನಿನಲ್ಲಿ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದರು!
ಹೀಗೆ ನಾನು ಕಂಡಿದ್ದನ್ನೆಲ್ಲಾ ಉಪ್ಪುಕಾರ ಸೇರಿಸಿ ನನ್ನ ಶ್ರೀಮತಿಗೆ ಹೇಳುತ್ತಿರುತ್ತೇನೆ. ಆಗ ಅವಳು ಇದನ್ನೆಲ್ಲಾ ರೆಕಾರ್ಡ ಮಾಡಿಕೊಳ್ಳಬೇಕು, ಫೋಟೊ ತೆಗೆದುಕೊಳ್ಳಬೇಕು ಎನ್ನುವ ಭಯಂಕರ ಸಲಹೆಗಳನ್ನು ಒಮ್ಮೆ ಕೊಟ್ಟಳು. ಭಯಂಕರವೇಕೆಂದರೆ ಅವರವರ (ವಿಚಿತ್ರ) ಕರ್ಮದಲ್ಲಿ ತೊಡಗಿರುವವರ ಮುಂದೆ ನಾನು ಕ್ಯಾಮೆರಾ ಹಿಡಿದು ಹೋದರೆ ನನಗೆ ಧರ್ಮದೇಟು ಬೀಳುವುದರಲ್ಲಿ ಸಂದೇಹವಂತೂ ನನಗೆ ಉಳಿದಿಲ್ಲ, ಅದಕ್ಕೆ! ಆದ್ದರಿಂದ ನಾನು ಇಲ್ಲಿ ಬಳಸಿಕೊಂಡಿರುವ ಫೋಟೋಗಳು ಅಂತರ್ಜಾಲದ ಕೃಪೆಯಿಂದ ದೊರೆತವುಗಳು. ಆ ಅಪರಿಚಿತ, ಅನಾಮಿಕ ಕಲಾವಿದರಿಗೆ ನಾನು ಆಭಾರಿಯಾಗಿದ್ದೇನೆ.

Thursday, March 12, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 7

ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರು
ಈ ತಲೆಬರಹವನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಸಿ.ಒ.ಆರ್.ಪಿ. ಎಂಬುದು ನಾಲ್ಕು ಹೆಸರುಗಳ ಮೊದಲ ಅಕ್ಷರಗಳೆಂದು, ರೇಷನ್ ಎಂಬುದು ಸರ್‌ನೇಮ್ ಆಗಿದ್ದಿರಬಹುದು, ಒಟ್ಟಿಗೆ ಆ ಮೇಷ್ಟ್ರಿಗೆ ಐದು ಹೆರಸುಗಳಿದ್ದಿರಬೇಕು ಎಂದುಕೊಳ್ಳಬೇಡಿ. ‘ಕಾರ್ಪೊರೇಷನ್’ ಎಂಬ ಪದವನ್ನು ‘ಸಿ-ಒ-ಆರ್-ಪಿ-ರೇಷನ್ ಎಂದು ಉಚ್ಛರಿಸುತ್ತಿದ್ದ ಮೇಷ್ಟ್ರಿಗೆ ನಾವು ಇಟ್ಟಿದ್ದ ಅಡ್ಡ ಹೆಸರು ಇದು!
ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಶಾಲೆಯ ವಾತಾವರಣ ಕೆಟ್ಟುಹೋಗಿತ್ತು ಎಂದು ಮೊದಲೇ ಹೇಳಿದ್ದೇನಲ್ಲ. ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಿಗೆ ಮೇಷ್ಟ್ರುಗಳೇ ಇರಲಿಲ್ಲ. ಆಗ ಸಮಾಜವನ್ನು ಪಾಠ ಮಾಡುತ್ತಿದ್ದ ಡಿ.ಎಸ್.ನಿಂಗೇಗೌಡ ಎಂಬ ಮಹಾಶಯರೇ ಡೀಟೈಲ್ ಇಂಗ್ಲೀಷ್‌ನ್ನೂ ಪಾಠ ಮಾಡುತ್ತಿದ್ದರು. ಅವರು ಮಾತನಾಡುವಾಗ ತೊದಲುತ್ತಿದ್ದರು. ಇಂಗ್ಲೀಷ್‌ನಲ್ಲಿ ಅವರ ಜ್ಞಾನ ಅಷ್ಟಕ್ಕಷ್ಟೆ. ಸರಿಯಾಗಿ ಓದುವುದಕ್ಕೇ ಬರುತ್ತಿರಲಿಲ್ಲ. ಕೆಲವೊಂದು ದೀರ್ಘವಾದ ಪದಗಳನ್ನು ಮೊದಲು ಸ್ಪೆಲ್ಲಿಂಗ್ ಹೇಳಿ ನಂತರ ಉಚ್ಛಾರ ಮಾಡುತ್ತಿದ್ದರು. ಕೆಲವೊಂದು ಪದಗಳಿಗೆ ಸ್ಪೆಲ್ಲಿಂಗ್ ಮಾತ್ರ ಹೇಳಿ ಮುಂದುವರೆಯುತ್ತಿದ್ದರು. ಹೀಗೆ ಅವರು ಅರ್ಧ ಸ್ಪೆಲ್ಲಿಂಗನ್ನು ಅರ್ಧ ಪದವನ್ನು ಮಾತ್ರ ಹೇಳುತ್ತಿದ್ದ ಹಲವಾರು ಪದಗಳಲ್ಲಿ ಕಾರ್ಪೊರೇಷನ್ ಎಂಬ ಪದವೂ ಒಂದು. ಯಾವುದೋ ಪಾಠದಲ್ಲಿ ಈ ಪದ ಮೇಲಿಂದ ಮೇಲೆ ಬರುತ್ತಿತ್ತು. ಅದನ್ನು ಅವರು ‘ಸಿ-ಒ-ಆರ್-ಪಿ-ರೇಷನ್’ ಎಂದು ಯಾವಾಗಲೂ ಹೇಳುತ್ತಿದ್ದರು!
ಈ ಬಗೆಯ ಹಲವಾರು ಬಗೆಯ ಪದಪ್ರಯೋಗಗಳನ್ನು ಅವರು ಮಾಡುತ್ತಿದ್ದರೂ ಈ ಹೆಸರೇ ಅವರಿಗೆ ಪರ್ಮನೆಂಟಾಗಿ ನೆಲೆ ನಿಲ್ಲಲು ಕಾರಣವೆಂದರೆ, ಮೊದಲ ಬಾರಿಗೆ ಈ ಪದವನ್ನು ಅವರು ಹೇಳಿದಾಗ ಇಡೀ ತರಗತಿಯೇ ಗೊಳ್ ಎಂದು ನಕ್ಕುಬಿಟ್ಟಿತ್ತು. ಅದರಿಂದ ಸಿಟ್ಟಿಗೆದ್ದ ನಿಂಗೇಗೌಡರು, ಹತ್ತಿರದಲ್ಲಿ ಕೈಗೆ ಸಿಕ್ಕ ಹೊನ್ನೇಗೌಡ ಎಂಬ ವಿದ್ಯಾರ್ಥಿಯನ್ನು ಹಿಡಿದು ಚೆನ್ನಾಗಿ ಬಡಿದಿದ್ದರು. ಎಷ್ಟರ ಮಟ್ಟಿಗೆ ಎಂದರೆ ಆತ ಚಡ್ಡಿಯಲ್ಲಿ ಹಿಂದೆ ಮತ್ತು ಮುಂದೆ ಎರಡನ್ನು ಒಟ್ಟಿಗೇ ಮಾಡಿಕೊಂಡಿದ್ದ. ಅಲ್ಲಿಂದ ಮುಂದೆ ಅವರ ಈ ರೀತಿ ಪದ ಪ್ರಯೋಗಗಳಿಗೆ ಮೌನವೇ ತರಗತಿಯ ಉತ್ತರವಾಗಿತ್ತು. ಆದರೆ ಅಂದು ಅವಮಾನಿತನಾಗಿದ್ದ ಹೊನ್ನೇಗೌಡ ಹುಡುಗರ ನಡುವೆ ಮೇಲಿಂದ ಮೇಲೆ ಅವರನ್ನು ಈ ಹೆಸರಿನಿಂದಲೇ ಸಂಬೋಧಿಸುತ್ತಿದ್ದುದರಿಂದ ‘ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರು’ ಎಂಬ ಅಡ್ಡ ಹೆಸರು ಸ್ಥಿರವಾಗಿ ನೆಲೆನಿಂತುಬಿಟ್ಟಿತ್ತು. ಇಂಗ್ಲೀಷ್ ಪಾಠ ಮಾಡುವಲ್ಲಿ ಇಷ್ಟೆಲ್ಲಾ ಅಸಮರ್ಥರಾಗಿದ್ದ ಇವರು, ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಜೂನಿಯರ್ ಕಾಲೇಜಿನ ಲೆಕ್ಚರರ್ ಇಂಗ್ಲೀಷ್ ಪಾಠ ಮಾಡುತ್ತೇನೆ ಎಂದಾಗ ವಿರೋಧಿಸಿದ್ದೇಕೆಂದು ನನಗಾಗ ಅರ್ಥವಾಗಿರಲಿಲ್ಲ.
ಈ ನಿಂಗೇಗೌಡರ ಬಗ್ಗೆ ನಾನು ಐದನೇ ತರಗತಿಯಲ್ಲಿ ಓದುವಾಗಲಿಂದ ಕೇಳಿದ್ದೆ. ಅವರ ಮಗಳು ನನ್ನ ತರಗತಿಯಲ್ಲೇ ಓದುತ್ತಿದ್ದಳು. ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದ ಡಿ.ಎಸ್.ಎನ್. ಅವರ ಮಗಳೆಂದು ಹುಡುಗರು ಹೇಳುತ್ತಿದ್ದರು. ಮಿಡ್ಲಿಸ್ಕೂಲಿನ ಮೇಷ್ಟ್ರುಗಳು ಅವಳನ್ನು ಮಾತನಾಡಿಸುವಾಗ ಅವಳ ತಂದೆಯ ಹೆಸರನ್ನು ಪ್ರಸ್ತಾಪಿಸುತ್ತಿದ್ದರು. ಹುಡುಗರು, ಡಿ.ಎಸ್.ಎನ್. ಹುಡುಗರಿಗೆ ಹೊಡೆಯುವುದರಲ್ಲಿ ಸಿದ್ಧಹಸ್ತರೆಂದೂ, ಅವರನ್ನು ಕಂಡರೆ ಹುಡುಗರು ಹೆದರಿ ಸಾಯುತ್ತಾರೆಂದೂ ಮಾತನಾಡಿಕೊಳ್ಳುತ್ತಿದ್ದರು. ನಾನು ಏಳನೇ ತರಗತಿಯಲ್ಲಿದ್ದಾಗಲೇ ನನ್ನಣ್ಣ ಎಂಟನೇ ತರಗತಿಗೆ ಸೇರಿದ್ದರಿಂದ ಆತನೂ ನಿಂಗೇಗೌಡರ ಹೊಡೆತಗಳ ಬಗ್ಗೆ ಆಗಾಗ ಹೇಳುತ್ತಿದ್ದ. ಮಿಡ್ಲಿಸ್ಕೂಲಿನಲ್ಲಿದ್ದ ರಾಮೇಗೌಡರೇ ಜಾಸ್ತಿ ಹೊಡೆಯುವ ಮೇಷ್ಟ್ರು ಎಂಬ ನಮ್ಮ ಮಾತಿಗೆ ‘ಹೈಸ್ಕೂಲಿನಲ್ಲಿ ಡಿ.ಎಸ್.ಎನ್. ಇದ್ದಾರೆ ಬನ್ನಿ’ ಎನ್ನುವ ಮಾತು ಉತ್ತರವಾಗಿರುತ್ತಿತ್ತು!
ಈ ಡಿ.ಎಸ್.ಎನ್.ಗೂ ನನಗೂ ಒಂದು ರೀತಿಯ ಎಣ್ಣೆ ಸೀಗೇಕಾಯಿ ಇದ್ದ ಹಾಗೆ. ಎಂಟನೇ ತರಗತಿಯ ಪ್ರಾರಂಭದಲ್ಲೇ ನಡೆದ ಒಂದು ಘಟನೆಯಿಂದ ನನ್ನನ್ನು ಒಂದು ರೀತಿಯಲ್ಲಿ ಶತ್ರುವಿನಂತೆ ನೋಡುತ್ತಿದ್ದ ಅವರು, ನಾನು ಆ ಸ್ಕೂಲನ್ನು ಬಿಟ್ಟ ಮೇಲೂ ದ್ವೇಷ ಸಾಧಿಸುತ್ತಿದ್ದರು!
ನಾನು ಎಂಟನೇ ತರಗತಿಯಲ್ಲಿ ಮಾನಿಟರ್ ಆಗಿದ್ದರಿಂದಲೂ, ಆ ತರಗತಿಯ ಪಕ್ಕದಲ್ಲೇ ಆಫೀಸ್ ಮತ್ತು ಸ್ಟಾಫ್ ರೂಮ್‌ಗಳಿದ್ದುದರಿಂದಲೂ ಆಗಾಗ ನನ್ನನ್ನು ಕರೆಯುತ್ತಿದ್ದುದ್ದು ಸಾಮಾನ್ಯವಾಗಿತ್ತು. ಹೆಚ್ಚಾಗಿ ಬೆಲ್ ಮಾಡಲು ಕರೆಯುತ್ತಿದ್ದರು. ಹಾಗೊಂದು ದಿನ ಹೆಡ್ಮಾಸ್ಟರಾದ ವೆಂಕಟಪ್ಪನವರು ಇಲ್ಲದಿದ್ದಾಗ, ಈ ಡಿ.ಎಸ್.ಎನ್. ಮೇಷ್ಟ್ರು ನನ್ನನ್ನು ಕೂಗಿದ್ದರು. ನಾನು ಹೋಗಿ ಅವರು ಹೇಳಿದಂತೆ ಬೆಲ್ ಮಾಡಿ ವಾಪಸ್ ತರಗತಿಗೆ ಬಂದಾಗ, ಹೊನ್ನೇಗೌಡ ಮತ್ತು ಇತರ ವಿದ್ಯಾರ್ಥಿಗಳು ‘ಕರೆದಿದ್ದು ಏನಕ್ಕೆ?’ ಎಂದು ಕೇಳಿದರು. ನಾನು ತಮಾಷೆಯಾಗಿ ‘ಎ....ಎ....ಎರಡು ಬೆ....ಬೆ....ಲ್’ ಹೊಡೆಯಕ್ಕೆ’ ಅಂದಿದ್ದೆ. ಚಿಕ್ಕಮಗಳೂರಿನ ಹೈಸ್ಕೂಲಿನಲ್ಲಿ, ತನ್ನ ತುಂಟಾಟಗಳಿಂದಾಗಿ ಹಾಗೂ ಎಂಟನೇ ತರಗತಿಯಲ್ಲಿ ಫೇಲ್ ಆಗಿದ್ದರಿಂದಾಗಿ, ಈ ಕುಂದೂರುಮಠದ ಹೈಸ್ಕೂಲಿನಲ್ಲಿ ಮತ್ತೆ ಎಂಟನೇ ತರಗತಿಗೆ ಅಡ್ಮಿಷನ್ ಆಗಿದ್ದ ಹೊನ್ನೇಗೌಡ, ಇಲ್ಲಿಯೂ ತುಂಬ ತುಂಟನಾಗೇ ಉಳಿದಿದ್ದ. ನಾನು ಬೆಲ್ ಹೊಡೆಯುವುದಕ್ಕೆ ಎಂದು ಡಿ.ಎಸ್.ಎನ್. ಹೇಳಿದ್ದ ರೀತಿಯನ್ನು ಅಣಕಿಸುವಂತೆ ಹೇಳಿದ್ದರಿಂದ ಸ್ಫೂರ್ತಿಗೊಂಡು ‘ಬೆ....ಬೆ...ಬೆಲ್ ಹೊ....ಹೊ....ಹೊಡೆದು ಬ.....ಬ....ಬಂದೆಯಾ?’ ಎಂದು ಜೋರಾಗಿ ಕಿರುಚಿದ. ಅದು ಪಕ್ಕದ ರೂಮಿನಲ್ಲೇ ಕುಳಿತಿದ್ದ ಡಿ.ಎಸ್.ಎನ್.ಗೆ ಕೇಳಿಸಿತ್ತು!
ಅಂದು ಸಂಜೆ ಅವರು ಹಾಸ್ಟೆಲ್ಲಿಗೆ ಟ್ಯೂಷನ್‌ಗೆಂದು ಬಂದವರೆ, ಬರುವಾಗಲೇ ಹಿಡಿದು ತಂದಿದ್ದ ಒಂದು ಬಿದಿರು ಕೋಲಿನಿಂದ ನನಗೆ ಬಾರಿಸತೊಡಗಿದರು. ನನ್ನ ಬೆನ್ನು ಮುಖ ಕೈ ಮೇಲೆಲ್ಲಾ ಏಟು ಬೀಳುತ್ತಿದ್ದವು. ನಡುನಡುವೆ ಅವರು ಕಿರುಚುತ್ತಿದ್ದ ಮಾತುಗಳಿಂದ ಬೆಳಿಗ್ಗೆ ನಾವು ಅವರನ್ನು ಆಡಿಕೊಂಡಿದ್ದಕ್ಕೆ ಹೊಡೆಯುತ್ತಿದ್ದಾರೆಂದು ನನಗೆ ತಿಳಿಯಿತು. ಈಗ ನನಗನ್ನಿಸುವಂತೆ, ಅಂದು ನಾನು ಮಾಡಿದ್ದು ತಪ್ಪು. ಆದರೆ ಅದಕ್ಕೆ ಒಬ್ಬ ಎಂಟನೇ ತರಗತಿ ಓದುತ್ತಿರುವ, ಸುಮಾರು ಹದಿಮೂರು ಹದಿನಾಲ್ಕು ವರ್ಷದ ವಿದ್ಯಾರ್ಥಿಗೆ, ಆ ರೀತಿ ಒಬ್ಬ ಮೇಷ್ಟ್ರು ಹೊಡೆಯುವುದನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದು ನಾನು ನಡೆದುಕೊಂಡ ರೀತಿ ಇಂದೂ ನನಗೆ ಆಶ್ಚರ್ಯ ತರುತ್ತಿದೆ. ಏಟು ಬೀಳುತ್ತಿದ್ದ ರಭಸಕ್ಕೆ ಚರ್ಮ ಬೆಂಕಿಹೊತ್ತಿಕೊಂಡಂತೆ ಉರಿಯುತ್ತಿತ್ತು. ಚೆಡ್ಡಿ ಮಾತ್ರ ಹಾಕಿರುತ್ತಿದ್ದ ನನಗೆ, ತೊಡೆಯ ಭಾಗದಲ್ಲಿ ರಕ್ತ ಕಿತ್ತು ಬಂದಿದ್ದು, ಉರಿಯನ್ನು ತಡೆಯಲಾರದೆ ಕೈಯಿಂದ ಮುಟ್ಟಿ ನೋಡಿಕೊಂಡಾಗ ನನ್ನ ಗಮನಕ್ಕೆ ಬಂದಿತ್ತು. ಅದು ಎಲ್ಲಿತ್ತೋ ಏನೋ, ಆ ಸಿಟ್ಟು. ಅಬ್ಬರಿಸುತ್ತಾ, ಸುಮಾರು ನಾಲ್ಕೈದು ಅಡಿ ಮೇಲೆ ನೆಗೆದು, ಅವರು ಇನ್ನೂ ಹೊಡೆಯಲು ಕೈಎತ್ತಿ ಹಿಡಿದಿದ್ದ ಕೋಲನ್ನು ಕಿತ್ತುಕೊಂಡುಬಿಟ್ಟಿದ್ದೆ. ಕಬಡಿ ಆಟದಲ್ಲಿ ನಿಪುಣನಾಗಿದ್ದ ನನಗೆ ನಿಂತನಿಲುವಿನಲ್ಲೇ ನಾಲ್ಕೈದು ಅಡಿ ಮೇಲಕ್ಕೆ ಎಗರುವುದು ಕಷ್ಟವೇನಾಗಿರಲಿಲ್ಲ! ಹಾಗೆ ಕಿತ್ತುಕೊಂಡ ಕೋಲನ್ನು ಅವರ ಮುಖದ ಮೇಲೆ ರಪ್ಪನೆಂದು ಬಿಸಾಕಿ ಹೊರಗೆ ಬಂದುಬಿಟ್ಟೆ. ಹಾಸ್ಟೆಲ್ಲಿನಲ್ಲಿಯೇ ಇದ್ದ ನನ್ನಣ್ಣ ಅಳುತ್ತಿದ್ದುದು ನನ್ನ ಕಣ್ಣಿಗೆ ಬಿದ್ದು, ನನಗೂ ಅಳು ಬಂದಿತ್ತು. ದೂರ, ಮಠದ ಕಲ್ಯಾಣಿಯವರೆಗೂ ಒಬ್ಬನೇ ಹೋಗಿ ತುಂಬಾ ಹೊತ್ತು ಅಳುತ್ತಾ ಕುಳಿತಿದ್ದೆ!
ಮಾರನೆಯ ದಿನ ಬೆಳಿಗ್ಗೆಯೇ, ಇಡೀ ಸ್ಕೂಲಿಗೆ ಈ ಸುದ್ದಿ ಹಬ್ಬಿತ್ತು. ಕೆಲವರಂತೂ ನಾನು ಡಿ.ಎಸ್.ಎನ್. ಅವರಿಗೆ ಕೋಲು ಕಿತ್ತುಕೊಂಡು ಹೊಡೆದನೆಂದೇ ಮಾತನಾಡಿಕೊಳ್ಳುತ್ತಿದ್ದರು. ಅಂದು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಒಂಬತ್ತು ಮತ್ತು ಹತ್ತನೇ ತರಗತಿಯ ಕೆಲವು ಹುಡುಗರು ನನ್ನನ್ನು ಯಾರೆಂದು ಕೇಳಿಕೊಂಡು ಬಂದು ನೋಡಿ ಹೋಗುತ್ತಿದ್ದರು. ಒಳಗೊಳಗೆ ಅಳುಕು ಇದ್ದರೂ, ದಿನ ಬೆಳಗಾಗುವುದರೊಳಗಾಗಿ ಎಲ್ಲರೂ ಗುರುತಿಸುವಂತಾಗಿದ್ದು ನನಗೆ ಖುಷಿ ಎನ್ನಿಸುತ್ತಿತ್ತು. ಆದರೆ, ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ, ವೆಂಕಟಪ್ಪನವರು ಕರೆದಾಗ ನನ್ನ ಜಂಘಾಬಲವೇ ಹುದುಗಿಹೋಯಿತು. ನನ್ನ ಮೇಲೆ ಕಂಪ್ಲೇಂಟ್ ಮಾಡಿರುವ ನಿಂಗೇಗೌಡರಿಗೆ ಹಿಡಿ ಶಾಪ ಹಾಕುತ್ತಲೇ ಹೆಡ್ಮಾಸ್ಟರ ಬಳಿಗೆ ಹೋಗಿದ್ದೆ.
ಅವರು ‘ಏನು ನಿನ್ನ ಗಲಾಟೆ? ನಿಂಗೇಗೌಡರಿಗೆ ಹೊಡೆಯುತ್ತೀಯಾ?’ ಎಂದರು.
ನಾನು ಅಳುತ್ತಲೇ ‘ನಾನು ಅವರನ್ನು ಹೊಡೆಯಲಿಲ್ಲ ಸಾರ್. ಅವರ ಏಟು ತಡೆಯಲಾರದೇ ಕೈಯಲ್ಲಿದ್ದ ಕೋಲು ಕಿತ್ತೆಸೆದೆ ಅಷ್ಟೆ’ ಎನ್ನುತ್ತಲೇ, ಬಾಸುಂಡೆ ಮತ್ತು ರಕ್ತದಿಂದ ಕರೆಕಟ್ಟಿದ್ದ ನನ್ನ ತೊಡೆಯನ್ನು ತೋರಿಸಿದೆ.
ಅದನ್ನು ನೋಡಲು ಎದ್ದು, ಮುಂದಿದ್ದ ಟೇಬಲ್ಲಿನ ಮೇಲಿಂದಲೇ ಬಾಗಿ ನಿಂತಿದ್ದ ವೆಂಕಟಪ್ಪನವರು ಒಂದು ಕ್ಷಣ ದಂಗಾಗಿ ಹೋದರು. ನಂತರ, ಕುರ್ಚಿಯಲ್ಲಿ ಕುಳಿತು, ತಮ್ಮ ಕನ್ನಡಕ ತೆಗೆದು ಕೈಯಲ್ಲಿ ಹಿಡಿದುಕೊಂಡು, ‘ಅದಕ್ಕೆ ಏನಾದರೂ ಔಷಧಿ ಹಾಕಿಸಿದೆಯಾ?’ ಎಂದರು.
ನಾನು ಕಣ್ಣೀರು ಒರೆಸಿಕೊಳ್ಳುತ್ತಾ ಇಲ್ಲವೆಂದು ತಲೆ ಆಡಿಸಿದೆ. ‘ಈಗಲೇ ಹೋಗಿ ಆಸ್ಪತ್ರೆಯಲ್ಲಿ, ನಾನು ಹೇಳಿದೆನೆಂದು ಹೇಳಿ ಸ್ವಲ್ಪ ಟಿಂಕ್ಚರ್ ಏನಾದರೂ ಹಾಕಿಸಿಕೊಂಡ ಬಾ’ ಎಂದು ಕಳಿಸಿದರು.
ಅವರು ಮತ್ತೆ ನನ್ನನ್ನು ಕರೆಯಲೂ ಇಲ್ಲ. ಈ ವಿಷಯವನ್ನು ಕೇಳಲೂ ಇಲ್ಲ. ಅಂದು ನಾನಂದುಕೊಂಡಂತೆ, ನಿಂಗೇಗೌಡರು ನನ್ನ ಮೇಲೇನೂ ದೂರು ಹೇಳಿರಲಿಲ್ಲ. ಆದರೆ ಅದು ಹೇಗೋ ವೆಂಕಟಪ್ಪನವರ ಕಿವಿಗೆ ಬಿದ್ದು ಅವರೇ ನನ್ನನ್ನು ಕರೆಸಿ ಕೇಳಿದ್ದರು ಅಷ್ಟೆ.
ಅಂದೇ ಕೊನೆ. ಇನ್ನೆಂದೂ ನನ್ನ ವಿದ್ಯಾರ್ಥಿ ಜೀವನದಲ್ಲಿ ನಾನು ಯಾವೊಬ್ಬ ಮೇಷ್ಟ್ರಿಂದಲೂ ಒದೆ ತಿಂದಿದ್ದಿಲ್ಲ. ಹೈಸ್ಕೂಲ್‌ನಲ್ಲಿದ್ದ ಮೂರು ವರ್ಷಗಳಲ್ಲಿ ನಾನೆಷ್ಟೇ ತಪ್ಪು ಮಾಡಿದ್ದರೂ ಯಾವ ಮೇಷ್ಟ್ರೂ ನನಗೆ ಹೊಡೆದಿದ್ದಿಲ್ಲ. ನಿಂಗೇಗೌಡರಂತೂ ಸ್ವಲ್ಪ ದಿನಗಳ ಕಾಲ ನನ್ನನ್ನು ಮಾತಾಡಿಸುತ್ತಿರಲಿಲ್ಲ. ನಾನು ಹತ್ತನೇ ತರಗತಿಯಲ್ಲಿದ್ದಾಗ, ಕಬಡ್ಡಿ ಪಂದ್ಯ ನಡೆಯುತ್ತಿದ್ದಾಗ, ನನ್ನೆಡೆಗೆ ಅಶ್ಲೀಲವಾಗಿ ಕೈ ತೋರಿಸಿದ ಎಂಬ ಕಾರಣಕ್ಕೆ ಒಂಬತ್ತನೇ ತರಗತಿಯ ಹುಡುಗನಿಗೆ, ಮೇಷ್ಟ್ರುಗಳ ಎದುರಿಗೇ ನೆಲಕ್ಕೆ ಬೀಳುವಂತೆ ಹೊಡೆದಿದ್ದೆ. ಆಗಲೂ ಯಾವೊಬ್ಬ ಮೇಷ್ಟ್ರೂ ನನ್ನ ಮೇಲೆ ಕೈ ಎತ್ತದಿದ್ದುದು ಇಂದೂ ನನಗೆ ಆಶ್ಚರ್ಯವಾಗಿ ಉಳಿದಿದೆ. ಕೆಲವರು ಸುನಿಲ್ ಗವಾಸ್ಕರ್ ಅವರ ತಾಳ್ಮೆಯನ್ನು ಉದಾಹರಣೆ ಕೊಟ್ಟ ನೆನಪಿದೆ ಅಷ್ಟೆ. ಆಗೆಲ್ಲೋ ಅವರು ಪಾಕಿಸ್ತಾನದಲ್ಲಿ ಅವಮಾನಕ್ಕೆ ಈಡಾದಾಗ ಏನೂ ಮಾತನಾಡದೆ ಆಟ ಆಡುವುದನ್ನು ಬಿಟ್ಟು ಬಂದಿದ್ದರಂತೆ!
ಆಗ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ, ನಮ್ಮ ಕಬಡ್ಡಿ ಆಟಕ್ಕೆ ಆದರ್ಶವಾಗಿದ್ದ, ರಾಜ್ಯಮಟ್ಟದ ಕಬಡ್ಡಿ ಆಟಗಾರ ನಮ್ಮೆಲ್ಲರ ಹೀರೋ ಡಿ.ಎಸ್.ನಾರಾಯಣಗೌಡ ಎಂಬುವವರು ಅಲ್ಲಿಯೇ ಹತ್ತನೇ ತರಗತಿಯನ್ನು ಮುಗಿಸಿದ್ದವರು. ಅವರೂ ಈ ನಿಂಗೇಗೌಡರ ದುಷ್ಟತನಕ್ಕೆ ಈಡಾಗಿದ್ದವರೇ. ಆಗ ಅವರು ಹೇಳಿದ್ದ ವಿಷಯವೊಂದು ತೀರಾ ಸಣ್ಣತನದ್ದಾಗಬಹುದಾದರೂ ನಾನಿಲ್ಲಿ ಹೇಳಲೇಬೇಕಾಗಿದೆ. ಡಿ.ಎಸ್.ಎನ್. ಅವರಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿದ್ದು ಆಗಾಗ ಅದು ಕೆರಳುತ್ತಿತ್ತಂತೆ. ಅದೂ ಅಮಾವಾಸ್ಯೆ ಮತ್ತು ಪೂರ್ಣಮಿಗಳಲ್ಲಿ ಅವರು ಹುಚ್ಚು ಹುಚ್ಚಾಗಿ ಹುಡುಗರಿಗೆ ಹೊಡೆದು ಬಡಿದು ಮಾಡುತ್ತಿದ್ದರಂತೆ. ಎಲ್ಲವೂ ಅಂತೆ ಕಂತೆಗಳು ಮಾತ್ರ. ಆದರೆ ಅಂದು ನಾರಾಯಣಗೌಡ ಒದಗಿಸಿದ ಎರಡು ಸಾಕ್ಷಿಯೆಂದರೆ, ಅವರು ನನಗೆ ಹೊಡೆದ ದಿನವೂ ಅಮಾವಾಸ್ಯೆಯಾಗಿದ್ದು ಮತ್ತು ನಿಂಗೇಗೌಡರ ತೋಳಿನ ತುಂಬಾ ಇದ್ದ ತಾಯಿತಗಳು ಹಾಗೂ ಒಂದು ಕಬ್ಬಿಣದ ಬಳೆ! ನಾನಾಗ ಇತರರಂತೆ ಅದನ್ನು ನಿಸ್ಸಂಶಯವಾಗಿ ನಂಬಿದ್ದೆ!
ನಾನು ಎಂಟನೇ ತರಗತಿಗೆ ಅಡ್ಮಿಷನ್ ಆದಂದಿನಿಂದಲೇ ಓ.ಬಿ.ಸಿ. ಹಾಸ್ಟೆಲ್ಲನ್ನೂ ಸೇರಿದ್ದೆ. ಆಗ ಓ.ಬಿ.ಸಿ.ಹಾಸ್ಟೆಲ್ಲುಗಳಲ್ಲಿ ಇರುತ್ತಿದ್ದ ವಿದ್ಯಾರ್ಥಿಗಳಿಗೆ ಸಂಜೆ ಮನೆಪಾಠವನ್ನು ಏರ್ಪಡಿಸುತ್ತಿದ್ದರು. ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರುಗಳೇ ಸಂಜೆಯೂ ಒಂದರ್ಧ ಗಂಟೆ ಪಾಠ ಮಾಡುವ ಶಾಸ್ತ್ರ ಮಾಡಿ ಮುಗಿಸುತ್ತಿದ್ದರು. ಆಗಿದ್ದ ಅಸಮರ್ಥ ಮತ್ತು ಭ್ರಷ್ಟ ವಾರ್ಡನ್ನನೂ ಅವರುಗಳೊಂದಿಗೆ ಸೇರಿ, ತಿಂಗಳ ಕೊನೆಯಲ್ಲಿ ಗೌರ್‍ನಮೆಂಟಿನಿಂದ ಹಣವನ್ನು ಮಾತ್ರ ತಪ್ಪದೇ ಪಡೆಯುತ್ತಿದ್ದರು. ನಂತರದ ದಿನಗಳಲ್ಲಿ ಟ್ಯೂಷನ್ ಮಾಡುವ ಪದ್ಧತಿ ನಿಂತು ಹೋಯಿತೆಂದು ಕಾಣುತ್ತದೆ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಆಗಿ ಬಂದ ಭೀಮಪ್ಪ ಕರಿಯಪ್ಪ ಜಟಗೊಂಡ ಅವರು, ಸ್ವತಃ ಬಿ.ಎಡ್. ಪದವೀಧರರಾಗಿದ್ದರಿಂದಲೂ, ಸ್ವಭಾವತಃ ಒಳ್ಳೆಯವರಾಗಿದ್ದರಿಂದಲೂ ಅವರೇ ಆಗಾಗ ಟ್ಯೂಷನ್ ತೆಗೆದುಕೊಂಡು ಗಣಿತ, ವಿಜ್ಞಾನ, ಇಂಗ್ಲೀಷ್ ಪಾಠಗಳನ್ನು ಓದಿ, ಓದಿಸಿ ಮಾಡುತ್ತಿದ್ದರು.

Monday, March 09, 2009

ಕಳೆದವಾರ ಕೆಂಡಸಂಪಿಗೆಯಲ್ಲಿ ತೆರೆಕಂಡ 'ಚೈತ್ರದ ಉರಿಯಲ್ಲಿ ಪಂಪನ ವೃತ್ತಗಳು'

http://www.kendasampige.com/article.php?id=2144

ಈಗೊಂದು ವಾರದಿಂದ ಗಮನಿಸುತ್ತಿದ್ದೇನೆ. ನಿಸರ್ಗದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ! ಇನ್ನೇನು ಯುಗಾದಿ ಬರಲಿದೆ. ಬೆಂಗಳೂರಿನಲ್ಲಿ ಅಲ್ಲೊಂದು ಇಲ್ಲೊಂದು ಇರುವ ಮರಗಿಡಗಳು ನಿತ್ಯವೂ ಒಂದೊಂದು ಬಣ್ಣ ಬಳಿದುಕೊಳ್ಳುತ್ತಿವೆ. ಊರಿಗೆ ಹೋಗುವ ದಾರಿಯಲ್ಲಿ ಕಾಣುವ ಹಸಿರು, ಬೇಸಿಗೆಯ ಪ್ರಯಾಣದ ದಣಿವನ್ನು ಮರೆಸುತ್ತದೆ. ನಮ್ಮ ತೋಟದಲ್ಲೂ ಹಸಿರು ಉಕ್ಕುತ್ತಿದೆ. ಅದರಲ್ಲೂ ಮಾವಿನ ಮರಗಳಂತೂ ಹಸಿರನ್ನೂ ಮರೆಸುವಂತೆ ಹೂಮುಡಿದು ತೊನೆದಾಡುತ್ತಿವೆ. ಇಷ್ಟೆಲ್ಲಾ ಹೇಳಿದ ಮೇಲೆ ಇದು ವಸಂತಕಾಲದ ಆಗಮನ, ಚೈತ್ರದ ಸೊಬಗು ಎಂದು ಹೇಳಬೇಕಾಗಿಲ್ಲ ಅಲ್ಲವೆ? ಆದರೆ, ಹೂ ಬಿಟ್ಟು ಕೂತ ಮಾವಿನ ಮರಗಳನ್ನು ನೋಡುವಾಗ ನನಗೆ ನೆನಪಾಗಿದ್ದು ಪಂಪಭಾರತದಲ್ಲಿ ಬಂದಿರುವ ವಸಂತನ ವರ್ಣನೆ. ಅದು ನೆನಪಾಗಲು ಕಾರಣ ಹೀಗಿದೆ. ಶ್ರೀರಾಮಾಯಣದರ್ಶನಂ ಕಾವ್ಯದ ಅಧ್ಯಯನ ಮುಗಿದ ಮೇಲೆ ನಮ್ಮ ತಂಡ ಪಂಪಭಾರತದ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಈಗ ಕಳೆದೆರಡು ವಾರಗಳ ಹಿಂದೆ, ಪಂಪಭಾರತದ ಎರಡನೇ ಆಶ್ವಾಸದಲ್ಲಿರುವ ಪಾಂಡು-ಮಾದ್ರಿಯರ ಪರಿಣಯಕ್ಕೆ ಪೂರ್ವಭಾವಿಯಾಗಿ ಪಂಪ ವಸಂತ ವರ್ಣನೆಯನ್ನು ಮಾಡಿದ್ದಾನೆ. ಅದು ಇನ್ನೂ ನನ್ನ ತಲೆಯಲ್ಲಿ ಕೊರೆಯುತ್ತಲಿರುವುದರಿಂದಲೋ ಏನೋ ಕಣ್ಣಿಗೆ ಕಾಣುವ ಪ್ರಕೃತಿಯೆಲ್ಲವೂ ಹೊಸದಾಗಿ ಕಾಣುತ್ತಿದೆ. ನನ್ನೊಳಗೆ ಹೊಸ ಕವನವೊಂದು ಹುಟ್ಟಬಹುದಾದ ಈ ಸಂದರ್ಭದಲ್ಲೂ, ಪಂಪನ ವಸಂತವರ್ಣನೆಯೇ ಕಣ್ಣಮುಂದೆ ಸುಳಿಯುತ್ತಿದೆ; ಕಿವಿಯಲ್ಲಿ ಭೋರ್ಗರೆಯುತ್ತುದೆ. ಅದಕ್ಕಾಗಿ ಪಂಪನ ವಸಂತವೈಭವವನ್ನೇ ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ನನ್ನದಾಗಿದೆ. ಪಂಪನು ನಾಲ್ಕು ವೃತ್ತಗಳಲ್ಲಿ ಮತ್ತು ಹಲವಾರು ಸಾಲು ಗದ್ಯದಲ್ಲಿ ವಸಂತ ವರ್ಣನೆಯನ್ನು ಮಾಡಿದ್ದಾನೆ. ಅದನ್ನು ಸರಳವಾಗಿ ಬಿಡಿಸಿ, ಅನ್ವಯಿಸಿ ಇಲ್ಲಿ ಸಂಸ್ಕರಿಸಿದ್ದೇನೆ. (ಗದ್ಯಾನುವಾದವನ್ನು ಹೊಸದಾಗಿ ಸೇರಿಸಿರುತ್ತೇನೆ)

1
ಅಲರ್ದ ಅದಿರ್ಮುತ್ತೆ
ಪೂತ ಪೊಸಮಲ್ಲಿಗೆ
ಕಂಪನ್ ಅವುಂಕುತಿರ್ಪ ತೆಂಬೆಲರುಂ
ಇದಂ ಗೆಲಲ್ ಬಗೆವ ತುಂಬಿ
ಗಳಧ್ವನಿಯಿಂ ಕುಕಿಲ್ವ ಕೋಗಿಲೆ
ನನೆದೋಱೆ ನುಣ್ಪೆಸೆವ ಮಾಮರನ್
ಒರ್ ಮೊದಲಲ್ಲದೆ ಉಣ್ಮುವ ಉಯ್ಯಲ ಪೊಸಗಾವರಂ
ಪುಗಿಲೊಳ್ ಬಸಂತಮಾಸದೊಳ್ ಏನ್ ಎಸೆದತ್ತೊ
[ಅರಳಿದ ‘ಅದಿರ್ಮುತ್ತೆ’*ಯ ಹೂವು
ಹೊಸಮಲ್ಲಿಗೆಯ ಹೂವು
ಕಂಪನ್ನು ಪಸರಿಸುತ್ತಿರುವ ತಂಬೆಲರು
ಕಂಪನೀಂಟಲು ಮೊರೆಯುತ್ತಿರುವ ದುಂಬಿ
ಇಂಪಾಗಿ ಕೇಳುವ ಕೋಗಿಲೆಗಳ ಕುಕಿಲಿಂಚರ
ಮೋಹಕ ಹೂಗೊಂಚಲತೋರಿ ಸಂಭ್ರಮಿಸುವ ಮಾಮರ
ಒಮ್ಮೆ ಮಾತ್ರವಲ್ಲದೆ ಹೊಮ್ಮುತ್ತಲೇ ಇರುವ ಉಯ್ಯಾಲೆಯಿಂಚರ
ವಸಂತಮಾಸದ ಆಗಮನ ಏನು ಶೂಭಿಸುತ್ತಿದೆಯೋ!]
(*ಅದಿರ್ಮುತ್ತೆ ಎಂಬ ಹೂ ವಸಂತಾರಂಭದಲ್ಲಿ ಅರಳುತ್ತದೆ;
ಇದಕ್ಕೆ ವಸಂತದೂತಿ ಎಂದು ಮತ್ತೊಂದು ಹೆಸರು.
ಏಕೆಂದರೆ ಇದು ವಸಂತಾಗಮನವನ್ನು ಸೂಚಿಸುತ್ತದೆ.)

2
(ಆಗಳ್ ಆ) ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ
ಬಳ್ವಳ ಬಳೆದಮಿಳಿರ್ವ ಅಶೋಕೆಯ ತಳಿರ್ಗಳುಂ
ಆತನ ಬರುವಿಂಗೆ ತೋರಣ ಕಟ್ಟಿದಂತೆ
ಬಂದ ಮಾಮರಂಗಳನ್ ಅಡರ್ದು ತೊಡರ್ದು ಎಳಗೊಂಬುಗಳ್ವಿಡಿದು
ಮರದಿಂ ಮರಕ್ಕೆ ದಾಂಗುಡಿಯಿಡುವ ಮಾಧವೀಲತೆಗಳುಂ
ಆತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ
ನನೆಯಬಿರಿಮುಗುಳ್ಗಳ ತುಱುಗಲೊಳ್ ಎರಗಿದ ಕಲ್ಪಲತೆಗಳುಂ
ಆತನ ಬರವಿಂಗೆ ಬದ್ದವಣಂ ಬಾಜಿಪಂತೆ
ಭೋರ್ಗರೆದು ಮೊರೆವ ತುಂಬಿಗಳುಂ
ಆತನ ಬರವಿಂಗೆ ರಂಗವಲ್ಲಿಯಿಕ್ಕಿದಂತೆ
ಪುಳಿನಸ್ಥಳಂಗಳೊಳುದಿರ್ದ ಕೞವೂಗಳುಂ
ಆತನ ಬರವಿಂಗೆ ವನವನಿತೆ ಮೆಚ್ಚಿ ನೆಱೆಯೆ ಕೆಯ್ಗೆಯ್ದಂತೆ
ನಿಱನಿಱಗೊಂಡು ಸೊಯಿಸುವ ನಿಱಗನ ನಿಱದಳಿರ ಗೊಂಚಲ್ಗಳುಂ
ಆತನ ಮೇಲ್ವಾಯೆ ರಾಗಿಸಿ ರೋಮಾಂಕುರಂ ಒಗೆದಂತೆ
ಒಗೆದ ಕಳಿಕಾಂಕುರಂಗಳುಂ
ಆತನ ಅಂಗಸಂಗದೊಳ್ ಕಾಮರಸಂ ಉಗುವಂತೆ
ಉಗುವ ಸೊನೆಯ ಸೋನೆಗಳುಮನ್ -
ಒಳಕೊಂಡು ತದಾಶ್ರಮದ ನಂದನವನಂಗಳ್
ಜನಂಗಳನ್ ಅನಂಗಂಗೆ ತೊಫ್ತುವೆಸಂಗೆಯ್ಸಿದವು

[ಆಗ
ವಸಂತರಾಜನಾಗಮನಕ್ಕಾಗಿ ಬಾವುಟ ಕಟ್ಟಿದಂತೆ
ಸೋಂಪಾಗಿ ಬೆಳೆದ ಅಶೋಕೆಯ ಚಿಗುರು
ವಸಂತರಾಜನಾಗಮನಕ್ಕಾಗಿ ತೋರಣವ ಕಟ್ಟಿದಂತೆ
ತುಂಬಿದ ಮಾಮರಗಳನಾವರಿಸಿ, ಏರಿ ಎಳೆಕೊಂಬೆಗಳನಿಡಿದು
ಮರದಿಂದ ಮರಕ್ಕೆ ಸಾಗುತ್ತಿರುವ ಮಾಧವೀಲತೆಗಳು
ವಸಂತರಾಜನಾಗಮನಕ್ಕಾಗಿ ಪೂರ್ಣಾಲಂಕಾರದಿಂದ
ಸೊಗಯಿಸುತ್ತಿರುವ ನಲ್ಲಳಂತೆ ಸೋಂಪಾದ ಮೊಗ್ಗುಗಳ ಗೊಂಚಲುಗಳೊಂದಿಗೆ ಸೊಯಿಸುತ್ತಿರುವ ಕಲ್ಪಲತೆಗಳು
ವಸಂತರಾಜನಾಗಮನಕ್ಕಾಗಿ ಮಂಗಳವಾದ್ಯಗಂತೆ
ಭೋರ್ಗರೆಯುತ್ತಿರುವ ದುಂಬಿಗಳು
ವಸಂತರಾಜನಾಗಮನಕ್ಕಾಗಿ ರಂಗವಲ್ಲಿಯಿಕ್ಕಿದಂತೆ ಮರಳಿನ ಮೇಲೆ
ಉದುರಿರುವ ಮಾಗಿದ ಹೂವುಗಳು
ವಸಂತರಾಜನಾಗಮನಕ್ಕಾಗಿ ಕಾಡಿನ ಹೆಣ್ಣು ಸಂತೋಷದಿಂದ ಅಲಂಕರಿಸಿಕೊಂಡಂತೆ
ನಿರಿನಿರಿಯಾಗಿ ಶೋಭಿಸುತ್ತಿರುವ ಸಿಹಿಮಾವಿನಮರದ ನವಿರಾದ ಎಳೆಚಿಗುರಿನ ಗೊಂಚಲುಗಳು
ವಸಂತರಾಜನ ಮೇಲೆ ಪ್ರೀತಿಯಿಂದ ಹಾಯಲು ರೋಮಾಂಚನಗೊಂಡಂತೆ
ಮಾವಿನ ಮರದ ಮೇಲೆ ಬೆಳೆದಿರುವ ನವಿರಾದ ಚಿಗುರುಗಳು ಎಳೆಕೊಂಬೆಗಳು
ವಸಂತನ ಅಂಗಸಂಗದೊಳಗೆ ಕಾಮರಸವು ಉಕ್ಕುವಂತೆ ಉಕ್ಕುತ್ತಿರುವ ಮಾವಿನ ಸೊನೆಯನ್ನು
ಒಳಕೊಂಡು ಆ ಆಶ್ರಮದ ಉದ್ಯಾನವನದಲ್ಲಿ ಜನಗಳನ್ನು ವಸಂತನಿಗೆ ತೊಳ್ತಾಗುವಂತೆ ಮಾಡಿದವು.]

3
‘ಬಿರಯಿಯ ಮಿೞ್ತುವೆಂ, ಮಿದಿದೊಡಲ್ಲದೆ ಅಣಂ ಮುಳಿಸಾರದು’
ಎಂದು ಮನ್ಮಥನ್ ಇಲ್ಲಿ ಪಲ್ಮೊರೆದಪನ್
‘ಇದಂ ಪುಗಲಿಂಗಡಿಂ’
ಎಂದು ಬೇಟಕಾಱರನ್ ಇರದೂಱ ಸಾಱ ಜಡಿವಂತೆ
ಸಹಕಾರ ಕೋಮಳಾಂಕುರ ಒರಿತುಷ್ಟ ಪಷ್ಟ ಪರಪುಷ್ಟ ಗಳಧ್ವನಿ
ನಂದನಂಗಳೊಳ್ ಎಸಗುಂ

[‘ವಿರಹಿಗಳನ್ನು ಚಚ್ಚದೆ, ವಿರಹಿಗಳ ಮೃತ್ಯುವಾಗಿರುವ ನನ್ನ ಕೋಪ ತಣಿಯದು’ ಎಂದಲ್ಲಿ ಮನ್ಮಥನ್ ಹಲ್ಕಡಿದನು
‘ಪ್ರವೇಶವಿಲ್ಲ ನಿಮಗೆ’ ಎಂದು ವಿರಹಿಗಳನ್ನು ದೂರ ಸರಿಸುತ್ತಿರುವವೋ ಎನ್ನುವಂತೆ
ಮಾವಿನೆಳೆ ಚಿಗುರನು ತಿಂದು ಸುಪುಷ್ಟವಾಗಿ ಬೆಳೆದಿರುವ ಕೋಗಿಲೆಗಳ ಧ್ವನಿ ಮೊರೆಯುತ್ತಿತ್ತು ಆ ಉದ್ಯಾನದಲ್ಲಿ]

4
ಕವಿವ ಮದಾಳಿಯಿಂ ಮುಸುಳನ್ ಆಗಿ
ಪಯೋಜರಜಂಗಳೊಳ್ ಕವಿಲ್ಗವಿಲನುಂ ಆಗಿ
ಬಂದ ಮಲಯಾನಿಲನ್ ಊದೆ
ತೆರಳ್ವ ಚೂತ ಪಲ್ಲವದ ತೆರಳ್ಕೆ
ತದ್ವನವಿಳಾಸಿನಿಯುಟ್ಟ ದುಕೂಲದ
ಒಂದು ಪಲ್ಲವದ ತೆರಳ್ಕೆಯಂತೆ ಎಸೆಯೆ
ನಂದನಾಳಿಗಳ್ ಎಸೆದಿರ್ದವು ಕಣ್ಗೆ

[ಮುತ್ತುತ್ತಿರುವ ಸೊಕ್ಕಿನ ದುಂಬಿಗಳಿಂದಾಗಿ ಅಪ್ರಾಕಶಿತವಾಗಿದ್ದರೂ
ತಾವರೆಯ ಧೂಳಿನಿಂದ ಮಾಸಲು ಬಣ್ಣವಾಗಿದ್ದರೂ
ಬೀಸುತ್ತಿರುವ ಮಲಯಮಾರುತದಿಂದಾಗಿ ಅಲ್ಲಾಡುತ್ತಿರುವ ಮಾವಿನೆಳೆ ಚಿಗುರಿನ ಸಪ್ಪಳ
ವನದೇವಿಯುಟ್ಟ ರೇಷ್ಮೆವಸ್ತ್ರದ ಸೆರಗಿನ ಸಪ್ಪಳದಂತೆ
ಶೋಭಿಸುತ್ತಿರಲು ಆ ತೋಟದ ಶೋಭೆ ಮೆರೆಯುತ್ತಿತ್ತು.]

5
ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಂ ಆಗಿರೆ
ಚಂದ್ರಕಾಂತಿ ಕಾಯ್ಪು ಆಗಿರೆ
ಬೀಸುವ ಒಂದು ಎಲರೆ ಬೀಸುವುದು ಆಗಿರೆ
ಕಾಯ್ಗಳಿಂದಂ ಇಂಬಾಗಿರೆ ಸೋರ್ವ ಸೋನೆ ಮದಂ ಆಗಿರೆ
ಬಂದ ಮಾವಿನ ಕೋಡೆ ಕೋಡಾಗಿರೆ
ವಸಂತಗಜಂ ವಿಯೋಗಿಯಂ ಕೋಡುಗೊಂಡು ಪರಿದತ್ತು

[ಉದ್ಯಾನವನ್ನು ಬಿಟ್ಟು ಹೋಗದೆ ಭೋರ್ಗರೆಯುತ್ತಿರುವ ದುಂಬಿಯ ಝೇಂಕಾರವೇ ಆನೆಯ ಘೀಂಕಾರವಾಗಿರಲು
ಬೆಳದಿಂಗಳೇ ಆ ಗಜದ ಕೋಪವಾಗಿರಲು
ಬೀಸುಗಾಳಿಯೇ ಬೀಸಣಿಕೆಯಾಗಿರಲು
ಮಾವಿನೆಳೆ ಕಾಯಿಯಿಂದ ಒಸರುತ್ತಿರುವ ಸೊನೆಯೇ ಮದೋದಕವಾಗಿರಲು
ಮಾಮರದ ಕೊಂಬೆಗಳೇ ಅದರ ಕೊಂಬಾಗಿರಲು
ವಸಂತವೆಂಬಾನೆಯು ವಿರಹಿಗಳನ್ನು ತನ್ನ ಕೋಡಿಂದ ತಿವಿದು ಓಡಿತ್ತು ಅಲ್ಲಿ]

Thursday, March 05, 2009

ಸೆರೆ ಸಿಲ್ಕಿದರೋ ಹನುಮ ಅಂಗದ ನಳ ನೀಲಾದಿ ಕಪಿ ಪುಂಗವರ್...!

ದೇವಾಲಯ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳ ಅಧ್ಯಯನದ ನೆಪದಲ್ಲಿ ಊರೂರು ಸುತ್ತುತ್ತಿದ್ದೆ. ಎಲ್ಲೇ ಹೋಗಲಿ ದೇವಾಲಯಗಳಿದ್ದಲ್ಲಿ -ಅದರಲ್ಲೂ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಆಡಳಿತದಲ್ಲಿರುವ ದೇವಾಲಯಗಳ ಪರಿಸರದಲ್ಲಿ ಈ ವಾನರ ಸೇನೆಯದ್ದೇ ಕಾರುಬಾರು. ಬಂದವರು ತಾವಾಗೆ ತಿನ್ನಲು ಕೊಟ್ಟರೆ ಸರಿ, ಇಲ್ಲದಿದ್ದರೆ ಅವೇ ಸಂಪಾದನೆಗೆ ಇಳಿದುಬಿಡುತ್ತವೆ. ಹೀಗೆ ಅಚಾನಕ್ಕಾಗಿ ಎದುರಾದ ಫೋಟೋಪ್ರಿಯ ಮಿತ್ರರನ್ನೆಲ್ಲಾ ಒಂದೆಡೆ ಕಲೆ ಹಾಕಿದ್ದೀನಿ, ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ, ನೋಡಿ.
ಕಡ್ಲೆಕಾಯಿಗಾಗಿ ಹೈಜಂಪ್...!
ಊಟಕ್ಕೆ ಮೊದಲಿನ ಮಾತುಕಥೆ
ಬಂದುಹೋಗುವವರ ನಡುವೆ ಹೊಟ್ಟೆ ತುಂಬಿಸುವರ ನಿರೀಕ್ಷೆಯಲ್ಲಿ
ನಿರೀಕ್ಷೆಯ ತುದಿಯಲ್ಲಿ ಒಂದು ಸಣ್ಣ ನಿದ್ದೆ
ಸಿಕ್ಕಿದ್ದನ್ನು ಶೇರ್ ಮಾಡಿಕೊಳ್ಳೋಣವೇ!?
ಒರಿಸ್ಸಾದ ಉದಯಗಿರಿ-ಖಂಡಗಿರಿ ಗುಹಾಲಯಗಳ ಹತ್ತಿರದ ರಾತ್ರಿ ಕಾವಲುಗಾರರು
ಉದಯಗಿರಿಯ ದೇವಾಲಯವೊಂದರ ಶಿಖರವೇ ವಾಚ್ ಟವರ್!
ಉದಯಗಿರಿಯ ತಪ್ಪಲಲ್ಲಿ
ಉದಯಗಿರಿಯ ಗುಹೆಗಳ ಮೇಲೆ ಮಂತ್ರಾಲೋಚನೆ
ಅಮ್ಮನ ಮಡಿಲಲ್ಲಿ
ಸ್ತನ್ಯಪಾನ - ಅಮೃತಪಾನ
ಪಟ್ಟದಕಲ್ಲು ದೇವಾಲಯಗಳ ಕಾವಲುಗಾರ - 1
ಪಟ್ಟದಕಲ್ಲು ದೇವಾಲಯಗಳ ಕಾವಲುಗಾರ - 2
ಎಲಿಫೆಂಟಾದಲ್ಲಿ ಕಂಡ ಸಂಸಾರ
ಬದಾಮಿ ಗುಹೆಗಳ ಹೊರಭಾಗದಲ್ಲಿ ವಾಚ್ ಮನ್!

Monday, March 02, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 6

ಸ್ಕೂಲಿಗೆ ಹೊಸ ಕಟ್ಟಡ ಇಂದು ಇಲ್ಲಿ ಕುಳಿತು ನಾನು ಶ್ರೀ ವೆಂಕಟಪ್ಪನವರಲ್ಲಿ ಗುರುತಿಸಬಹುದಾದ ಗುಣವೆಂದರೆ, ಯಾವ ಕಾರಣಕ್ಕೂ ಬೇರೆಯವರನ್ನು ದೂಷಿಸದ ಅವರ ಸ್ವಭಾವ. ಬೇರೆಯವರ ತಪ್ಪುಗಳನ್ನು ಅವರು ಗುರುತಿಸುತ್ತಿದ್ದರು. ಗುರುತಿಸಿ ತಿದ್ದುತ್ತಿದ್ದರು, ಆದರೆ ಅದನ್ನೇ ಜಗಜ್ಜಾಹೀರು ಮಾಡಿ ಅನಾವಶ್ಯಕವಾಗಿ ಪ್ರಚಾರ ಮಾಡುತ್ತಿರಲಿಲ್ಲ. ಬಹುಶಃ ಅವರು ಎದುರಿಸುತ್ತಿದ್ದ ಇಂತಹ ಸಂಕಷ್ಟಗಳಿಂದ ಪಾರಾಗಬೇಕೆಂಬ ಅವರ ನಿತ್ಯ ಹೋರಾಟದ ಫಲವಾಗಿ ಸ್ಕೂಲಿಗೆ ಸ್ವಂತ ಕಟ್ಟಡ ಸಿಗುವ ಕಾಲ ಹತ್ತಿರವಾಯಿತು. ಆಗ ಮಂತ್ರಿಗಳಾಗಿದ್ದ ದೇವೇಗೌಡರು ಸ್ಕೂಲ್, ಆಸ್ಪತ್ರೆ, ಹಾಸ್ಟೆಲ್ ಕಟ್ಟಡಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟಿದ್ದರು. ದುರಂತವೆಂದರೆ, ಸ್ಕೂಲ್ ಕಟ್ಟಡದ ಕಾಮಗಾರಿ ಮುಗಿಯುವ ಮೊದಲೇ ವೆಂಕಟಪ್ಪನವರು ಬೇರೆಡೆಗೆ ವರ್ಗವಾಗಿದ್ದು. ಅವರಿಗೆ ಒಂದು ಕಾಲೇಜನ್ನು ಮುನ್ನಡೆಸುವ ಸರ್ವಸಾಮರ್ಥ್ಯವಿದ್ದರೂ, ಪ್ರಾಂಶುಪಾಲರಾಗಲು ಬೇಕಾದ ಕ್ವಾಲಿಫಿಕೇಷನ್ ಇರಲಿಲ್ಲ. ಕಾಲೇಜು ಬರಲು ಕಾರಣಕರ್ತರಾಗಿ, ಅಷ್ಟೂ ದಿನ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದ ಅವರು, ಬೇರಾವುದೋ ಹೈಸ್ಕೂಲಿಗೆ ವರ್ಗವಾಗಿ ಹೋಗಬೇಕಾಯಿತು. ಕಾನೂನಿಗೆ ಕಣ್ಣಿಲ್ಲ ಎಂಬ ಮಾತು ಇಂತಹ ಘಟನೆಗಳನ್ನು ನೋಡಿಯೇ ಹುಟ್ಟಿಕೊಂಡಿರಬೇಕು! ಹೊಸ ಪ್ರಾಂಶುಪಾಲರು ಬರುವವರೆಗೆ ಹಿರಿಯ ಮೇಷ್ಟ್ರಾಗಿದ್ದ, ಗಾಂಧೀವಾದಿ ಹೆಚ್.ಸಿ. ಅಂದರೆ ಹೊಸಹಳ್ಳಿ ಚನ್ನೇಗೌಡ ಅವರು ಇನ್‌ಚಾರ್ಜ್ ವಹಿಸಿಕೊಂಡರು.
ಚನ್ನೇಗೌಡರು ತುಂಬಾ ಸರಳವಾದ ವ್ಯಕ್ತಿ. ಯಾವಾಗಲೂ ಖಾದಿ ಪ್ಯಾಂಟ್ ಮತ್ತು ಅರ್ಧತೋಳಿನ ಖಾದಿ ಶರ್ಟ್ ಧರಿಸುತ್ತಿದ್ದರು. ಗಣಿತ ಪಾಠ ಮಾಡುತ್ತಿದ್ದ ಅವರು ತುಂಬಾ ಮೆಲ್ಲಗೆ ಮಾತನಾಡುತ್ತಿದ್ದರು. ಅವರು ಅಷ್ಟೊಂದು ಸರಳವಾಗಿ ಇರುತ್ತಿದ್ದುದಕ್ಕೆ, ಅವರ ಬಗ್ಗೆ ಆಗ ಒಂದು ಕಥೆ ಜನಜನಿತವಾಗಿತ್ತು. ಅವರು ಮದುವೆಯಾದ ಹೊಸದರಲ್ಲಿ ತುಂಬಾ ಶೋಕಿದಾರರಾಗಿದ್ದರಂತೆ. ಒಂದು ದಿನ ದುಬಾರಿಯಾದ ಬಟ್ಟೆ, ವಡವೆ ತೊಟ್ಟು ಹೆಂಡತಿಯ ಮನೆಗೆ ಹೋಗುತ್ತಿರಬೇಕಾದರೆ ಕಳ್ಳರು ಅಡ್ಡಗಟ್ಟಿ ಎಲ್ಲವನ್ನೂ ಕಿತ್ತುಕೊಂಡು ಕೇವಲ ಬನಿಯನ್ ಮತ್ತು ಚೆಡ್ಡಿ ಮಾತ್ರ ಬಿಟ್ಟು ಹೋದರಂತೆ. ಅಂದಿನಿಂದ ಅವರು ಸರಳವಾಗಿ ಇರಲು ತೀರ್ಮಾನಿಸಿದರಂತೆ. ಸುಮಾರು ಹತ್ತು ಕಿಲೋಮೀಟರ್ ದೂರದ ಹೊಸಹಳ್ಳಿಯಿಂದ ಅವರು ಸೈಕಲ್ಲಿನಲ್ಲಿ ನಿತ್ಯ ಬಂದು ಹೋಗುತ್ತಿದ್ದರು. ಹೈಸ್ಕೂಲಿನಿಂದ ಕೂಗಳತೆಯ ದೂರದವರೆಗೂ, ಖಾದಿ ಪಂಚೆ ಉಟ್ಟುಕೊಂಡು ಬರುತ್ತಿದ್ದ ಅವರು, ಅಲ್ಲೆ ಯಾವುದಾದರೊಂದು ಮರದ ಮರೆಯಲ್ಲಿ ಸೈಕಲ್ ನಿಲ್ಲಿಸಿ, ಪಂಚೆ ತೆಗೆದು ಪ್ಯಾಂಟ್ ಹಾಕಿಕೊಂಡು ಸ್ಕೂಲಿಗೆ ಬರುತ್ತಿದ್ದರು. ಮತ್ತೆ ಸಂಜೆ ಹೋಗುವಾಗ ಅದೇ ಜಾಗದಲ್ಲಿ ಪ್ಯಾಂಟ್ ತೆಗೆದು ಪಂಚೆ ಉಟ್ಟುಕೊಂಡು ಹೋಗುತ್ತಿದ್ದರು!
ಇವರ ಮೃದುಸ್ವಭಾವದಿಂದಾಗಿ ಕೆಲವು ಮೇಷ್ಟ್ರುಗಳು ಆಗಲೇ ಬಾಲ ಬಿಚ್ಚಲು ಆರಂಭಿಸಿದ್ದರು. ಆಗ ಹೊಸದಾಗಿ ಬಂದ ಪ್ರಾಂಶುಪಾಲರು ಅದಕ್ಷರಾಗಿದ್ದರಿಂದಲೋ ಏನೋ ಇಡೀ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ಆ ವರ್ಷ ನಡೆದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪಾಸಾದವರ ಸಂಖ್ಯೆ ಕೇವಲ ಮೂರು! ಆದ್ದರಿಂದ ಪ್ರಥಮ ಪಿ.ಯು.ಸಿ.ಗೆ ಅಡ್ಮಿಷನ್ ಆದವರೂ ಅದೇ ಮೂರು ಜನ ಮಾತ್ರ! ಅದರಲ್ಲಿ ಒಬ್ಬರು ನಡುವೆಯೇ ಟೀ.ಸಿ. ತೆಗೆದುಕೊಂಡು ಚನ್ನರಾಯಪಟ್ಟಣದ ಕಾಲೇಜಿಗೆ ಸೇರಿಕೊಂಡಿದ್ದರಿಂದ ಕಾಲೇಜನ್ನು ಆಗಲೋ ಈಗಲೋ ಮುಚ್ಚುತ್ತಾರೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಸ್ವತಃ, ಹೈಸ್ಕೂಲಿನ ಕೆಲವು ಮೇಷ್ಟ್ರುಗಳೇ ‘ಈ ಕಾಲೇಜು ತೊಲಗಿದರೆ ಸಾಕು’ ಎನ್ನುತ್ತಿದ್ದುದನ್ನು ನಾನು ಕೇಳಿದ್ದೇನೆ. ಅವರಿಗೂ ಕಾಲೇಜಿನ ಲೆಕ್ಚರರಿಗೂ ಯಾವಾಗಲೂ ಜಗಳಗಳಾಗುತ್ತಿದ್ದವು. ಬಹುಶಃ ಕಾಲೇಜು ಲೆಕ್ಚರರಿಗೆ ಸಿಗುತ್ತಿದ್ದ ಅತಿಯಾದ ಗೌರವದಿಂದ, ಸಣ್ಣ ಮನಸ್ಸಿನ ಕೆಲವು ಮೇಷ್ಟ್ರುಗಳಿಗೆ ಹೊಟ್ಟೆ ಉರಿದಿರಬೇಕು!
ಹೈಸ್ಕೂಲ್ ಬಿಲ್ಡಿಂಗಿಗೆ ಹೆಂಚು ಹೊತ್ತಿದ್ದು
ನಾವು ಒಂಬತ್ತನೇ ತರಗತಿಗೆ ಬಂದಾಗ ಸ್ಕೂಲಿನ ಕಟ್ಟಡ ಮುಗಿಯುತ್ತಾ ಬಂದಿತ್ತು. ಇದ್ದಕ್ಕಿದ್ದಂತೆ ದೇವೇಗೌಡರು ಒಂದು ದಿನ ಉದ್ಘಾಟನೆಗೆ ಬರುತ್ತಾರೆ ಎಂಬ ಸುದ್ದಿ ಹರಡಿತ್ತು. ನೋಡಿದರೆ ಕಟ್ಟಡಕ್ಕೆ ಇನ್ನು ಹೆಂಚನ್ನೇ ಹಾಕಿರಲಿಲ್ಲ! ಉದ್ಘಾಟನೆಗೆ ಮುನ್ನ ಹೆಂಚನ್ನಾದರೂ ಹಾಕಿದರೆ, ಕಿಟಕಿ ಬಾಗಿಲು ಆಮೇಲೆ ಮಾಡಿಕೊಳ್ಳಬಹುದೆಂದು ಮಠದ ಸ್ವಾಮೀಜಿಯೂ, ಅಲ್ಲಿದ್ದ ಒಬ್ಬ ಮಾಜಿ ಛೇರ್ಮನ್ನನೂ, ಮತ್ತು ಕಂಟ್ರಾಕ್ಟ್ರರ್ ಲಿಂಗಪ್ಪನೂ ನಿರ್ಧರಿಸಿದ್ದರು. ಆದರೆ ಕಟ್ಟಡಕ್ಕೆ ಬಂದಿದ್ದ ಎಲ್ಲಾ ಹೆಂಚುಗಳನ್ನು (ಸುಮಾರು ಹತ್ತು ಸಾವಿರ!) ಮಠದ ಹೊರಪೌಳಿಯಲ್ಲಿ ಇಳಿಸಿದ್ದರು. ಅವುಗಳನ್ನು ಅಲ್ಲಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿದ್ದ ಸ್ಕೂಲಿನ ಬಳಿಗೆ ಸಾಗಿಸುವುದಕ್ಕೆ ಅವರುಗಳು ಕಂಡುಕೊಂಡ ಸುಲಭ ಮಾರ್ಗವೆಂದರೆ, ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು. ಪ್ರಾಂಶುಪಾಲರು ಅದಕ್ಷರಾಗಿದ್ದುದರಿಂದ ಸುಮಾರು ಒಂದೂವರೆ ದಿನ, ಮೂರೂ ತರಗತಿಗಳ ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದಣಿಯಬೇಕಾಯಿತು. ಮನುಷ್ಯತ್ವವನ್ನೇ ಮರೆತಂತಿದ್ದ ಕಂಟ್ರಾಕ್ಟರ್ ಲಿಂಗಪ್ಪ, ಮಕ್ಕಳಿಗೆ ಒಂದು ಪೆಪ್ಪರ್‌ಮೆಂಟನ್ನೂ ಕೊಡಿಸಲಿಲ್ಲ. ಆಗ ನಾವೆಲ್ಲಾ ‘ಆತನ ಹಿಂದಿನ ಮುಂದಿನ ವಂಶವೆಲ್ಲಾ ನಾಶವಾಗಲಿ’ ಎಂದು, ‘ಉದ್ಘಾಟನೆಗೆ ಬರುತ್ತಿರುವ ದೇವೇಗೌಡರು ಹಾಳಾಗಲಿ’ ಎಂದು ಬಯ್ದುಕೊಳ್ಳುತ್ತಲೇ ಹೆಂಚು ಹೊತ್ತಿದ್ದೆವು!
ಸ್ಕೂಲ್ ಹೊಸ ಕಟ್ಟಡಕ್ಕೆ ಶಿಫ್ಟ್ ಆದ ನಂತರ, ಹಾಸ್ಟೆಲ್ ಎಂಟನೇ ತರಗತಿ ಹಾಗೂ ಆಫೀಸು ನಡೆಯುತ್ತಿದ್ದ ಮನೆಗೆ ಬದಲಾಯಿತು. ಹಾಸ್ಟೆಲ್ಲಿದ್ದ ಮನೆಯನ್ನು ಆಸ್ಪತ್ರೆಗೆ ಬಿಟ್ಟುಕೊಟ್ಟರು. ಆಗ ಅಲ್ಲಿದ್ದ ಬೆಟ್ಟೇಗೌಡ ಎಂಬ ಡಾಕ್ಟರ್ ತುಂಬಾ ಹೆಸರುವಾಸಿಯಾಗಿದ್ದರು. ದೂರದ ಊರುಗಳಿಂದೆಲ್ಲಾ ಜನ ಅಲ್ಲಿದ್ದ ಆಸ್ಪತ್ರೆಗೆ ಬರುತ್ತಿದ್ದರಿಂದ, ಆಸ್ಪತ್ರೆಗೆ ದೊಡ್ಡ ಜಾಗ ಬೇಕಾಗಿತ್ತು. ಅದಕ್ಕೆ ಮೊದಲು ಆಸ್ಪತ್ರೆ, ಮಠದ ಒಳಗೇ ಒಂದು ದನದ ಕೊಟ್ಟಿಗೆಗೆ ಅಂಟಿಕೊಂಡಿದ್ದ ರೂಮಿನಲ್ಲಿತ್ತು!