Saturday, September 22, 2012

ಮಹಾಮಾತೆ ಮಂಥರೆ

ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್.
-ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪.

ಸೂರ್ಯೋದಯಕ್ಕೂ ಮೊದಲೆ ಎದ್ದು, ನದಿಯೆಡೆಗೆ ಹೋಗಿ ನಿತ್ಯ ಕರ್ಮಾದಿಗಳನ್ನು ಮುಗಿಸಿ, ಸ್ನಾನಕ್ಕೆಂದು ನಡುಹೊಳೆಗಿಳಿದ ಭರತ ಯೋಚಿಸಿದ. ‘ನೆನ್ನೆಗೆ ಹದಿನಾಲ್ಕು ವರ್ಷಗಳು ಮುಗಿದು ಹೋದವು. ಅಣ್ಣನು ಸೀತಾ ಲಕ್ಷ್ಮಣರೊಂದಿಗೆ ತಿರುಗಿ ಬರಲಿಲ್ಲ. ಅಣ್ಣನ ಸುಳಿವನ್ನರಸಿ ಹೋಗಿದ್ದ ಭಟರು ನಿರಾಶರಾಗಿ ಹಿಂದುರಿಗಿದರಂತೆ. ನನ್ನ ಮನೋನಿಶ್ಚಯದಂತೆ ಇಂದು ನಾನು ಅಗ್ನಿಪ್ರವೇಶ ಮಾಡಲೇ ಬೇಕು. ಇನ್ನೊಂದು ಜಾವದೊಳಗೆ ಅಣ್ಣನ ಸುದ್ದಿ ನನಗೆ ತಲಪದಿದ್ದರೆ ನಾನು ಅಗ್ನಿಗಾಹುತಿಯಾಗುವುದು ಶತಸಿದ್ದ’ ಎಂದು ನಿರ್ಧರಿಸಿ ಸ್ನಾನಾದಿಗಳನ್ನು ಮುಗಿಸಿ, ರಥವೇರುತ್ತಿದ್ದ ಸೂರ್ಯನಿಗೆ ಅರ್ಘ್ಯವನಿತ್ತು ಆಶ್ರಮದೆಡೆಗೆ ನಡೆದನು. ಹೊರೆಹೊರೆ ಉರುವಲುಗಳನ್ನು ತಂದು ಅಗ್ನಿಕುಂಡದ ಸುತ್ತಲೂ ಜೋಡಿಸತೊಡಗಿದ. ಇನ್ನಷ್ಟು ಮತ್ತಷ್ಟು ಸೌದೆಗಳನ್ನು ತಂದು ಅಗ್ನಿಕುಂಡದ ಸುತ್ತಲೂ ಜೋಡಿಸಿ ತುಪ್ಪವನ್ನು ಸುರಿದು ಬೆಂಕಿಯನುರಿಸಿದ ಭರತ ಯೋಚಿಸಿದ. ‘ಹದಿನಾಲ್ಕು ವರ್ಷಗಳು ಕಳೆದ ಮೇಲೆ ಒಂದರಗಳಿಗೆಯೂ ತಡಮಾಡದೆ ಬಂದು ನಿನ್ನನ್ನು ಸೇರುತ್ತೇನೆ ಎಂದಿದ್ದ ಅಣ್ಣ ಹೀಗೇಕೆ ಮಾಡಿದ? ಅವನೆಂದೂ ಮಾತಿಗೆ ತಪ್ಪುವನಲ್ಲ. ನಾನು ಅವನ ತಮ್ಮ. ನಾನೂ ಮಾತಿಗೆ ತಪ್ಪಲಾರೆ. ತಾಯಂದಿರು ಮತ್ತು ಶತ್ರುಜ್ಞಾದಿಗಳುಗಳು ಬಂದು ಅಡ್ಡಿ ಪಡಿಸುವ ಮೊದಲೇ ನಾನು ಅಗ್ನಿ ಪ್ರವೇಶ ಮಾಡಿಬಿಡಬೇಕು’ ಎಂದುಕೊಂಡು ಮತ್ತಷ್ಟು ತುಪ್ಪವನ್ನು ಬೆಂಕಿಗೆ ಸುರಿದನು.

ಮೇಲಿಂದ ಬೀಳುತ್ತಿದ್ದ ತುಪ್ಪದ ಕಡೆಗೆ ದಿಗ್ಗನೆದ್ದ ಜ್ವಾಲೆಗಳು ಛಾವಣಿಯವರೆಗೂ ಕೆನ್ನಾಲಿಗೆಗಳನ್ನು ಚಾಚಿದವು. ಅದರೊಂದಿಗೆ ಮಂಗಳಾಕಾರವಾದ ದೇವತೆಯೊಂದು ಅಗ್ನಿಕುಂಡದೊಳಗೆ ಮೈದಳೆಯತೊಡಗಿತು. ಅಚ್ಚಿರಿಯಿಂದ ಭರತ ನೋಡುತ್ತಿರುವಂತೆಯೇ ಪೂರ್ಣಾಕಾರವನ್ನು ತಳೆದ ದೇವತೆಯಾಕಾರವು ‘ಮಗು ಭರತ, ರಾಮನ ಪ್ರಿಯಾನುಜ. ನೀನು ಅಗ್ನಿಪ್ರವೇಶ ಮಾಡುವ ಅಗತ್ಯವಿಲ್ಲ. ನಿನ್ನಣ್ಣನು ಸೀತಾ ಲಕ್ಷ್ಮಣರೊಡಗೂಡಿ ಇಂದೊ ನಾಳೆಯೊ ಹಿಂತಿರುಗವನು. ಆದ್ದರಿಂದ ನಿನ್ನ ನಿರ್ಧಾರವನ್ನು ಕೈಬಿಡು’ ಎಂದಿತು.

ಅತಿಶಯ ಸಂತೋಷದಿಂದ ಉಬ್ಬಿ ಹೋದ ಭರತ ಆ ದೇವತೆಯಾಕಾರಕ್ಕೆ ಶಿರಬಾಗಿ ನಮಸ್ಕರಿಸಿ ‘ನೀನಾರು ತಾಯೆ? ಉರಿಯೊಳಗಿಹ ನನಗೆ ತಂಪನೆರೆಯುತಿರುವೆ. ನೀನಾರು ತಾಯೆ?’ ಎಂದು ಸಂತೋಷ ಬಾವದಿಂದ ಕೇಳಿದನು.
‘ಇನ್ನಾರು ಮಗು. ಸದಾ ನಿನಗೊಳಿತನ್ನೆ ಬಯಸುತ್ತಿದ್ದವಳು. ಬಯಸುತ್ತಿರುವವಳು. ಮಂಥರೆ!’

‘ಬೇಡ ತಾಯೆ, ಬೇಡ ಆ ಹೆಸರೆನೆಂದು ಹೇಳದಿರು ಮತ್ತೊಮ್ಮೆ. ಗೂನಿಯವಳೆ ಕಾರಣಳು ನನ್ನಣ್ಣನ ವನವಾಸಕ್ಕೆ, ನನ್ನತ್ತಿಗೆಯ ಪರಿತಾಪಕ್ಕೆ, ನನ್ನನುಜನ ಕಾರ್ಪಣ್ಯಕ್ಕೆ, ನನ್ನೆದೆಯೊಳಗಿನ ಉರಿಗೆ. ಆ ಹೆಸರನಿನ್ನೊಮ್ಮೆ ಉಸುರದಿರು ತಾಯೆ’ ಎಂದು ಭರತನು ನಿಷ್ಟುರವಾಗಿ ನುಡಿಯಲು, ‘ಮಗು ಭರತ. ಕಾರಣಳಲ್ಲ ಮಂಥರೆ, ಬರಿ ಕರಣ ಮಾತ್ರಳು. ಅವಳ ಅಂತರಂಗವನ್ನು ನೀನು ಕಾಣೆ. ನಿನ್ನ ಅಭ್ಯುದಯವೊಂದೇ ಅವಳ ಉದ್ಯೋಗ. ಕುಬ್ಜೆಯವಳು. ಗೂನಿಯವಳು. ಆದರೂ ಮಗು ನೀನೂ ಕಾಣದಾದೆಯ ಮಂಥರೆಯಂತರಾತ್ಮವನು. ಮಗು ನೀನೊಮ್ಮೆ ನಿನ್ನ ಮನಃಕ್ಲೇಶಗಳೆಲ್ಲವನೊಮ್ಮೆ ದೂರ ತಳ್ಳಿ, ನಿರ್ಮಲ ಚಿತ್ತನಾಗಿ ನನ್ನನ್ನು ಕಾಣು. ಹದಿನಾಲ್ಕು ವರ್ಷಗಳಿಂದ ನಿನ್ನ ಮಂಗಳ ಮನಸ್ಸಿನಲ್ಲಿ ರಾಮನಲ್ಲದೆ ಬೇರಾರಿಲ್ಲವೆಂಬುದನು ನಾನು ತಿಳಿಯೆನೆ? ಅಂದಿನಿಂದ ಇಂದಿನವರೆಗೂ ನಾನೂ ಕಾಯುತ್ತಿದ್ದೇನೆ, ಮುಕ್ತಿಗಾಗಿ. ಇಂದು ರಾಮ ಬರುವವನಿದ್ದಾನೆ. ಈಗೊಮ್ಮೆ ಈ ಮಂಥರೆಯ ಬಗ್ಗೆ ಯೋಚಿಸಿ ನೋಡು’ ಎಂದು ಇಡೀ ದೇವತೆಯಾಕಾರವು ತಾನು ರೂಪಗೊಂಡಿದ್ದ ಅಗ್ನಿಯ ಜ್ವಾಲೆಗಳಲ್ಲಿಯೇ ಲೀನವಾಯಿತು.

ಭರತ ನಿಂತಿದ್ದ ನಿಬ್ಬೆರಗಾಗಿ ನೋಡುತ್ತ ಶೂನ್ಯವನುಪಕ್ರಮಿಸಿದ ಜ್ವಾಲೆಗಳನ್ನು. ಮಂಥರೆ, ಮಂಥರೆ ಎಂದು ಅವನ ಮನಸ್ಸಿನಲ್ಲಿ ಮತ್ತೆ ಮತ್ತೆ ಅನುರಣವಗೊಳ್ಳುತೊಡಗಿತು. ‘ಹೌದು ಪೂಜ್ಯೆ ಹೌದು. ಈ ಹದಿನಾಲ್ಕು ಸಂವತ್ಸರಗಳಲ್ಲಿ ನಿನ್ನನೊಮ್ಮೆಯೂ ನಾನು ನೆನೆಯಲಿಲ್ಲ. ನಿನ್ನ ಉಸುರಿನ ರಕ್ಷೆಯಲ್ಲಿ ನನ್ನ ಬೆಳಸಿದ್ದೆ ನೀನು. ಆದರೂ ನಾನು ಕಾಣದಾದೆ ನಿನ್ನಂತರಾತ್ಮದ ಪುಣ್ಯಲಕ್ಷ್ಮಿಯನ್ನು. ಕ್ಷಮಿಸು ತಾಯೆ, ಕ್ಷಮಿಸು. ಈ ಕಳಂಕಿತ ಮಗನನ್ನು. ಅಂದು ನೀನು ಶತೃಜ್ಞನಿಂದ ಬಡಿಸಿಕೊಂಡು, ನನ್ನಿಂದಲೂ ತಿರಸ್ಕೃತಗೊಂಡು ಅಮೇಲೆ ಎಲ್ಲಿ ಹೋದೆ? ಅದರ ಬಗ್ಗೆ ನಾನೊಮ್ಮೆಯೂ ಯೋಚಿಸಲೇ ಇಲ್ಲ. ತಾಯೊಡಲನಗಲಿ ನಿನ್ನ ಮಡಿಲಲ್ಲಿ ಬಿದ್ದ ನಾನು ನಿನ್ನ ಪ್ರೇಮಸಿಂಚನವನುಂಡು ಬೆಳೆದೆ. ಆದರೆ ನಿನ್ನ ಅತ್ಯಕಾಲದಲ್ಲಿ ನನ್ನ ಮೈಮನಗಳೆರಡೂ ನಿಷ್ಕ್ರಿಯವಾಗಿ ಹೋದವು. ಹೌದು ತಾಯಿ ಹೌದು. ನೀನೆಷ್ಟು ನೊಂದವಳೆಂಬುದು ನನಗೀಗ ಅರ್ಥವಾಗುತ್ತಿದೆ. ನೀನಂದು ಎಲ್ಲರ ಕಣ್ಣಲ್ಲು ಕುರೂಪಿಯಾಗಿದ್ದೆ. ಅಸಹ್ಯವಾಗಿದ್ದೆ. ಅಂದು.....’

ಅಂದು ನಾನಿನ್ನು ಚಿಕ್ಕವನಾಗಿದ್ದೆ. ನಾನು ಚನ್ನಾಗಿ ನಡೆದಾಡುತ್ತಿದ್ದರೂ ನೀನು ನನ್ನನೆಂದೂ ನಡೆಯಲು ಬಿಡದೆ ಎತ್ತಿಕೊಂಡೇ ತಿರುಗುತ್ತಿದ್ದೆ, ನಾನೆಲ್ಲಿ ನೋಯುತ್ತೇನೊ ಎಂದು. ಆ ದಿನ ನೀನು ನನ್ನನ್ನೆತ್ತಿಕೊಂಡು ದಡದಡನೆ ಓಡಿ ಉಪ್ಪರಿಗೆಯ ಮೇಲೆ ಹೋದೆ. ನಿನ್ನನ್ನು ಕಂಡ ಅಲ್ಲಿದ್ದವರೆಲ್ಲ ದೂರ ಸರಿದರು. ಅಲ್ಲಿ ರಾಮಣ್ಣ ಹೋ ಎಂದು ಅಳುತ್ತಿದ್ದ. ಅಪ್ಪ, ದೊಡ್ಡಮ್ಮ, ನನ್ನಮ್ಮ ಮಂತ್ರಿ ಪುರೋಹಿತರೆಲ್ಲ ಅಸಹಾಯಕರಾಗಿ ನಿಂತಿದ್ದರು. ಅಣ್ಣ ಒಂದೇ ಸಮನೆ ಅಳುತ್ತಿದ್ದ. ನನಗಾಗ ಏಕೆಂದು ಹೊಳೆಯಲಿಲ್ಲ. ಆಗ ನೀನು ನನ್ನಬ್ಬೆಯ ಕಿವಿಯಲ್ಲೇನೊ ಉಸುರಿ, ಕನ್ನಡಿಯೊಂದನು ಅವಳ ಕೈಗಿತ್ತಿದ್ದೆ. ಅವ್ವನ ಕೈಯಿಂದ ಅದನ್ನು ಪಡೆದ ಅಣ್ಣಯ್ಯ ‘ಸಿಕ್ಕಿದ, ಸಿಕ್ಕಿದ’ ಎಂದು ಕೇಕೆ ಹಾಕಿ ಕುಣಿಯುತ್ತಿದ್ದ. ನನ್ನನ್ನು ಕೆಳಗಿಳಿಸಿದ ನೀನು, ಅವನನ್ನೆತ್ತಿಕೊಳ್ಳಲು ಕೈಚಾಚಿದೆ. ಬಾ ಎಂದು ಕರೆದೆ. ನೀನು ನನ್ನನ್ನು ಕೆಳಗಿಳಿಸಿದ್ದರಿಂದ ನನ್ನ ಕಣ್ಣುಲ್ಲಿ ನೀರು ತುಂಬಿತ್ತು. ಯಾರು ಯಾರೊ ಜೋರಾಗಿ ಕೂಗಿಕೊಳ್ಳುತ್ತಿದ್ದರು. ನೀನಾಗ ನನ್ನನ್ನು ಎತ್ತಿಕೊಂಡು ಬಂದ ದಾರಿಯಲ್ಲಿಯೆ ದಡದಡನೆ ಉಪ್ಪರಿಗೆಯನಿಳಿದು ಬಂದೆ......’

ನನಗೀಗ ಅರ್ಥವಾಗುತ್ತಿದೆ ಪೂಜ್ಯೆ. ನೀನಂದು ರಾಮನನ್ನು ನಗಿಸಿ, ಅವರೆಲ್ಲಾ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದೆ. ಆದರೆ ಅವರಾರು ಕಾಣದಾದರು ನಿನ್ನಾತ್ಮಸೌಂದರ್ಯಲಕ್ಷ್ಮಿಯನ್ನು!

* * * * * * * * * * * *

‘ಛೇ, ನಾನೇಕೆ ಹೀಗೆ ಸುಮ್ಮನೆ ಕುಳಿತಿದ್ದೇನೆ. ಅಣ್ಣ ಅತ್ತಿಗೆಯರು ಇಂದೋ ನಾಳೆಯೋ ಇಲ್ಲಿರುತ್ತಾರೆ. ಅವರ ಸ್ವಾಗತಕ್ಕೆ ಸಿದ್ದತೆಗಳಾಗ ಬೇಕು. ಶತೃಜ್ಞ ಬರುವುದು ತಡವಾಗಬಹುದು. ಅಲ್ಲಿ ತಾಯಂದಿರೆಲ್ಲ ಅಣ್ಣ ಬರಲಿಲ್ಲವೆಂದು ಎಷ್ಟು ಕಳವಳ ಪಡುತ್ತಿದ್ದಾರೊ? ಅವರನ್ನು ಸಮಾಧಾನ ಮಾಡುವುದೇ ತಮ್ಮನಿಗೆ ಒಂದು ದೊಡ್ಡ ಕೆಲಸ. ’ ಎಂದುಕೊಂಡು ಆಶ್ರಮದಿಂದ ಹೊರಬಂದು, ಎಳೆಯ ಬಿಸಿಲಿನಲ್ಲಿ ನದಿಯ ಮೂಲದ ಕಡೆಗೆ ನಿಧಾನವಾಗಿ ನಡೆಯತೊಡಗಿದ, ‘ನದಿಯ ಮೂಲವನ್ನು ತಲಪಿಯೇ ತೀರುತ್ತೇನೆ’ ಎಂದು ಹಠ ಹಿಡಿದು ನಡೆಯುವ ಯಾತ್ರಿಕನಂತೆ.

‘ಈ ಮಂಥರೆ ಯಾರು? ನನ್ನನ್ನೇಕೆ ಒಂದರಗಳಿಗೆಯೂ ಬಿಟ್ಟಿರುವುದಿಲ್ಲ?’ ಎಂಬ ಹಲವಾರು ಪ್ರಶ್ನೆಗಳು ನನಗೆ ಬಂದಿದ್ದೇ ಬಹಳ ಕಡಿಮೆ. ಒಮ್ಮೊಮ್ಮೆ ಅರಮನೆ ಅಂತಃಪುರಗಳಲ್ಲಿ, ಪುರಜನರ ನಡುವೆ ಅವಮಾನಿತಳಾದಾಗ ‘ಇವಳಾರು? ನನ್ನನ್ನು ಇಷ್ಟೇಕೆ ಹಚ್ಚಿಕೊಂಡಿದ್ದಾಳೆ?’ ಎಂದು ನನ್ನಬೆಯನ್ನೇ ಕೇಳಿದ್ದೆ. ಅದಕ್ಕವಳು ನಕ್ಕು ‘ಮಂಥರೆ ನನ್ನ ತಾಯಿಯಿದ್ದಂತೆ’ ಎಂದು ಬಿಡುತ್ತಿದ್ದಳು. ಹಠ ಬಿಡದ ನಾನು, ಒಮ್ಮೆ ಅಜ್ಜನ ಊರಿಗೆ ಹೊಗಿದ್ದಾಗ ಅಜ್ಜಿಯನ್ನು ಕೇಳಿದ್ದೆ ‘ಯಾರೀ ಮಂಥರೆ?’ ಎಂದು.

‘ನಿನ್ನಜ್ಜನೊಮ್ಮೆ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸಿಕ್ಕ ಮಗು ಇವಳು. ಅದನ್ನು ಎತ್ತಿ ತಂದು ಸಾಕಿ ಬೆಳಸಿದರು. ನಿನ್ನಬ್ಬೆಯು ಹುಟ್ಟಿದಾಗ ನಿನ್ನಜ್ಜ ಮಂಥರೆಗೆ ಮಗು ಆಡಿಸುವ ಕೆಲಸವನ್ನು ವಹಿಸಿದರು. ಅದರಿಂದ ಅವಳೆಷ್ಟು ಖುಷಿ ಪಟ್ಟಳೆಂದರೆ, ತನಗೇ ಮಗುವಾದಷ್ಟು ಖುಷಿಯಿಂದ ನಿನ್ನಬ್ಬೆಯನ್ನು ಆಡಿಸಿ ಬೆಳಸಿದಳು. ಅವಳಿಗೆ ಮದುವೆಯಾಗಿ ಅಯೋದ್ಯೆಗೆ ಹೊರಟಾಗ ಇವಳೂ ಹಠ ಹಿಡಿದು ಅಲ್ಲಿಗೆ ಬಂದಳು. ಇನ್ನು ನೀನು ಹುಟ್ಟಿದಾಗ, ನಿನ್ನಬ್ಬೆ ಕೈಕೆ ಮತ್ತು ನಮ್ಮೆಲ್ಲರದೂ ಒಂದು ಭಾಗ ಸಂಭ್ರಮವಾದರೆ ಇನ್ನೊಂದು ಭಾಗ ಅವಳೊಬ್ಬಳದೇ ಸಂಭ್ರಮ. ಅದನ್ನು ಹೇಳಲು ಬಾಯಿ ಸಾಲದು. ಒಂದು ರೀತಿಯಲ್ಲಿ ನಿನ್ನಬ್ಬೆಗೆ ಅವಳೇ ತಾಯಿ. ನಿನಗೂ ಕೂಡ’ ಅಂದಿದ್ದರು.

ಅಜ್ಜನಂತೂ ‘ಮಗು ಭರತಣ್ಣ, ಪಾಪ ಅವಳು ತಬ್ಬಲಿ. ಅವಳಿಗೆ ನಿನ್ನ, ಕೈಕೆಯ ಹೊರತು ಬೇರೆ ಪ್ರಪಂಚವಿಲ್ಲ. ನಿಮ್ಮ ಜಗತ್ತೇ ಅವಳ ಜಗತ್ತು. ಇಲ್ಲಿ ಎಲ್ಲರೂ ಅವಳನ್ನು ಕುರೂಪಿ, ತೊನ್ನಿ, ಕುಬ್ಜೆ ಮುಂತಾಗಿ ಹಿಯಾಳಿಸುತ್ತಿದ್ದರು. ಅಲ್ಲಿಯೂ ಅದು ತಪ್ಪಲಿಲ್ಲ. ಸೂರ್ಯವಂಶದವರಾದರೇನಂತೆ? ನಿಜ ಸೌಂದರ್ಯವನ್ನು ಅರಿಯುವಲ್ಲಿ ಅವರೂ ತಪ್ಪಿದರು.’ ಎಂದು ನಿಟ್ಟುಸಿರಿಟ್ಟಿದ್ದರು.

ಆಗ ನನಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಅದನ್ನೆಲ್ಲ ಕೇಳಿದ ಮೇಲೆ ನಾನು ನಿನಗೆ ಇನ್ನಷ್ಟು ಹತ್ತಿರವಾಗಿದ್ದೆ ಅಷ್ಟೆ.

* * * * * * * * * *

ಬಿಸಿಲೇರುತ್ತಿತ್ತು. ಮೈಮೇಲಿದ್ದ ಉತ್ತರೀಯವನ್ನು ತಲೆಯ ಮೇಲೆಳೆದುಕೊಂಡ ಭರತ ಒಂದು ಕ್ಷಣ ನಿಂತು ಮತ್ತೆ ನಡೆಯತೊಡಗಿದ.

‘ಮಂಥರೆ ಕೆಟ್ಟವಳಂತು ಅಲ್ಲ. ರಾಮನಲ್ಲಿ ಅವಳಿಗೆ ದ್ವೇಷವೂ ಇರಲಿಲ್ಲ. ಅಣ್ಣನೂ ಅವಳನ್ನು ಪ್ರೀತಿಯಿಂದಲೇ ಕಾಣುತ್ತಿದ್ದ. ಎಷ್ಟೋ ಬಾರಿ ನನ್ನನ್ನು ಕೆಳಗಿಳಿಸಿ ಅಣ್ಣನನ್ನು ಎತ್ತಿಕೊಂಡು ಮುದ್ದಿಸುತ್ತಿದ್ದಳೂ ಕೂಡ. ನಂತರ ಏನೋ ತಪ್ಪು ಮಾಡಿದವಳಂತೆ ಅತ್ತಿತ್ತ ನೋಡಿ ಅಣ್ಣನನ್ನು ಇಳಿಸಿಬಿಡುತ್ತದ್ದಳು. ಆದರೂ ಅವಳು ರಾಮನನ್ನು ಕಾಡಿಗಟ್ಟಿದಳೆಂದೇ ಎಲ್ಲರು ಭಾವಿಸಿದ್ದಾರೆ. ನಾನೂ ಸಹ ಆಗ್ಗೆ ಹಾಗೆಯೇ ಅಂದುಕೊಂಡಿದ್ದೆ. ಅಂದು ಶತೃಜ್ಞ ಅವಳನ್ನಿಡಿದು ಬಡಿಯುತ್ತಿದ್ದರೆ, ‘ಭರತಾ, ಓ ಭರತಾ’ ಎಂದು ಆರ್ತಳಾಗಿ ಕೂಗಿಕೊಳ್ಳುತ್ತಿದ್ದ ಮಂಥರೆಗೆ ನನ್ನಿಂದ ಸಿಕ್ಕಿದ್ದಾದರು ಏನು? ಬರಿ ತಿರಸ್ಕಾರ.

ನಂತರ ಮಂಥರೆ ಎಲ್ಲಿ ಹೋದಳು? ನಾನದನ್ನು ಯೋಚಿಸಿಯೆ ಇಲ್ಲ. ಅಯ್ಯನ ಮರಣ, ಅಣ್ಣನ ವನವಾಸ, ಅವನನ್ನು ಹಿಂದಕ್ಕೆ ಕರೆತರಲು ಹೋಗಿದ್ದು ಇವುಗಳ ನಡುವೆ ಮಂಥರೆಯ ಬಗ್ಗೆ ಯೋಚಿಸಲಿಲ್ಲ. ಅವಳೇನಾದಳು? ಯಾರು ಏನಂದರೊ? ಕೊಂದರೊ? ಓ ಮಂಥರೆಯೆ, ಪ್ರೇಮಭೈರವಿಯೆ, ನೀನಂದು ನನ್ನಿಂದ ತಿರಸ್ಕೃತಗೊಂಡು ಎತ್ತ ಹೋದೆ? ಬಾಯ್ಬಿಟ್ಟ ಭೂಮಿಯೊಳಗೆ ಇಳಿದೆಯಾ? ಗಾಳಿ ಬಿಸಿಯಾಗಿ ಅದರಲ್ಲಿಯೇ ಕರಗಿ ಹೋದೆಯ? ಏನಾದೆ ತಾಯೆ?

* * * * * * * * *

ಹೌದು ಮಗು. ನನಗಾಗ ಏನಾಗಿತ್ತು. ನನ್ನಲ್ಲೇನಾಗುತ್ತಿತ್ತು. ಎಂಬುದರ ಕಲ್ಪನೆ ನಿನಗಿರಲಿಕ್ಕಿಲ್ಲ. ನಿಜ ಹೇಳಲೆ ಕಂದ. ಹದಿನಾಲ್ಕು ವರ್ಷಗಳ ವನವಾಸ ರಾಮನೊಬ್ಬನಿಗಲ್ಲ. ಸೀತೆ ಲಕ್ಷ್ಮಣರಿಗಷ್ಟೆ ಅಲ್ಲ. ನನಗೆ ನಿನಗೆ ನಿನ್ನಬ್ಬೆಯರಿಗೆ ಕೂಡಾ. ನಿನ್ನಣ್ಣಯ್ಯನಿಗೆ ಹಾದಿ ಸುಗಮವಾಗಲೆಂದು ಹಾರೈಸುವುದನ್ನು ಬಿಟ್ಟು ನಾನೇನನ್ನು ಮಾಡಲಿ?

ನೀವೆಲ್ಲ ನಿಮ್ಮಯ್ಯನ ಅಗ್ನಿ ಕಾರ್ಯಕ್ಕೆಂದು ಹೋಗಿದ್ದಿರಿ. ಅರಮನೆ ಅಂತಃಪುರವೆಲ್ಲ ನಿರ್ಜನವಾಗಿತ್ತು. ನಾನೆದ್ದೆ, ತನ್ನ ವಿಷವನ್ನು ತಾನೇ ಹೀರಲು ಹೊರಟ ಸರ್ಪಿಣಿಯಂತೆ! ‘ನನ್ನ ಕೈಕೆಯ ಕಂದನಿಗೆ ಮುಕುಟವನ್ನು ದೊರಕಿಸಲು ನಾನು ರಾಮನನ್ನು ಅಡವಿಗಟ್ಟಿದೆ. ರಾಮ ಕಾಡುಪಾಲಾದನೆಂದು ಕೈಕೆ ಭರತರೂ ನನ್ನನ್ನು ದೂರ ಮಾಡಿದರು. ಅವರಿಲ್ಲದೆ ನಾನಿಲ್ಲ. ಯಾವ ರಾಮನನ್ನು ಕಾಡಿಗಟ್ಟಿದೆನೆಂದು ಅವರು ನನ್ನನ್ನು ದೂರ ಮಾಡಿದ್ದಾರೋ ಅದೇ ರಾಮನನ್ನು ಹಿಂದಕ್ಕೆ ಕರೆತಂದರೆ? ಎಲ್ಲರೂ ನನ್ನನ್ನು ಮೊದಲಿನ ಹಾಗೆಯೇ ಪ್ರೀತಿಸಿತ್ತಾರೆ. ನಾನು ಹಿಂದಕ್ಕೆ ಬರಬೇಕೆಂದು ರಾಮನ ಪಾದಗಳ ಮೇಲೆ ಬಿದ್ದು ಬೇಡಿಕೊಂಡರೆ ರಾಮ ಬರದೆ ಇರಲಾರ. ಆತನೊಬ್ಬನೇ ನನ್ನ ನಿಜದಂತರಂಗವನ್ನರಿತವನು’ ಎಂದುಕೊಂಡು, ‘ಓ ರಾಮಯ್ಯ ಬಾರಯ್ಯ. ಭರತನಣ್ಣಯ್ಯ ಬಾರಯ್ಯ’ ಎಂದು ಕೂಗಿಕೊಂಡು ನಗರದ ಬೀದಿಯಲ್ಲಿ ಹುಚ್ಚಳಂತೆ ಓಡುತ್ತಿದ್ದರೆ, ಜನರೆಲ್ಲ ಛಿ, ಥೂ ಎಂದು ಉಗಿದರು, ಕಲ್ಲಿನಿಂದ ಹೊಡೆದರು. ಆದರೆ ಅವುಗಳೆಲ್ಲವುಗಳಲ್ಲಿಯೂ ನಾನು ರಾಮನನ್ನೆ ಕಾಣುತ್ತಿದ್ದೆ. ರಾಮನ ಮಂಗಳ ಮೂರ್ತಿಯಲ್ಲದೆ ಬೇರೇನನ್ನು ನಾನು ಕಾಣಲಿಲ್ಲ. ನನ್ನ ಬಾಯಿಂದ ಬರುತ್ತಿದ್ದುದ್ದು ಎರಡೇ ಶಬ್ಧಗಳು. ‘ರಾಮಯ್ಯ, ಭರತನಣ್ಣಯ್ಯ’ ಎಂದು. ದೂರದಲೆಲ್ಲೊ ಕಾಡ್ಗಿಚ್ಚು ಉರಿಯುತಿತ್ತು. ‘ಓ. ನನ್ನ ರಾಮಯ್ಯನಿಲ್ಲೆ ಬಿಡಾರ ಮಾಡಿರಬಹುದು’ ಎಂದುಕೊಂಡೆ. ಅದೆನೆಗೆ ಕಾಡ್ಗಿಚ್ಚಾಗಿರಲಿಲ್ಲ. ರಾಮನ ದಿವ್ಯಾತ್ಮವಾಗಿತ್ತು. ಖಗಮೃಗಗಳ ದ್ವನಿ ರಾಮನ ವಾಣಿಯಾಗಿತ್ತು. ಮುಗಿಲು ಮುಟ್ಟುತ್ತಿದ್ದ ಜ್ವಾಲೆಯ ನಡುವೆ ಅವರೆಲ್ಲರೂ ನಗುತ್ತಲೇ ನಿಂತಿದ್ಡರು. ರಾಮನ ಮಂಗಳ ಮೂರ್ತಿಯನ್ನು ಬಾಚಿ ತಬ್ಬಿಕೊಂಡು ಅವನ ಕಾಲ ಮೇಲುರುಳಿದೆ ‘ಪುಣ್ಯವನು ತಬ್ಬುವ ಪಾಪದಂತೆ’. ಕ್ಷಣ ಮಾತ್ರದಲ್ಲಿ ಯಾವ ಉಗ್ರ ಬೆಂಕಿಯ ಬಿಸಿಯೂ ಇಲ್ಲದೆ ರಾಮನಾಮಾಮೃತವನುಣ್ಣುತ್ತಲೇ ಇಹದ ವ್ಯಾಪಾರವನ್ನು ಮುಗಿಸಿಬಿಟ್ಟಿದ್ದೆ.

* * * * * * * * * * * * * * * *

‘ಓ ತಾಯೆ ಮಂಥರೆ’ ಎಂದು ಮುಖ ಕಿವುಚಿಕೊಂಡ ಭರತ ನೋವಿನಿಂದ. ಹೌದು ಪೂಜ್ಯಳೆ, ಒರಟಾದ ಗಂಧದ ಕೊರಡು ಬೆಂಕಿಯಲ್ಲಿ ಬಿದ್ದು ಇಡೀ ವಾತಾವರಣವನ್ನು ಸುಗಂಧಮಯವನ್ನಾಗಿ ಮಾಡಿದಂತೆ ನೀನು ಅಗ್ನಿಗಾಹುತಿಯಾಗಿ ನಿನ್ನ ಪ್ರೇಮದ ಅಮೃತಮಯ ಸೌಂದರ್ಯ ಪ್ರಭೆ ಲೋಕವಾವರಿಸುವಂತೆ ಮಾಡಿದೆ. ನಿನಗಿದೋ ನನ್ನ ನಮನ ತಾಯೆ’ ಎಂದ ಭರತ ನಿಧಾನವಾಗಿ ನದಿಯೆಡೆಗೆ ಇಳಿದ. ನಡು ಹೊಳೆಯವರೆಗೂ ನಡೆದು ಸೊಂಟದುದ್ದದ ನೀರಿನಲ್ಲಿ ನಿಂತು ಬೊಗೆಸೆ ಬೊಗಸೆಯಾಗಿ ನೀರನೆತ್ತಿ ಮಂಥರೆಗೆ ಅರ್ಪಣವನಿತ್ತನು. ಕೈಮುಗಿದು ಎಷ್ಟು ಹೊತ್ತು ಹಾಗೆಯೇ ನಿಂತಿದ್ದನೊ, ಯಾರೋ ಹಿಂದೆ ನಿಂತತೆ ಭಾಸವಾಗಿ ಕಣ್ತೆರೆದು ನೋಡಿದ. ದಡದಲ್ಲಿ ನಿಂತಿದ್ದ ಮಾರುತಿ, ಭರತ ತನ್ನೆಡೆಗೆ ನೋಡಿದ್ದನ್ನು ಮನಗಂಡು, ಬಾಗಿ ನಮಸ್ಕರಿಸಿ ‘ಮಹಾನುಭಾವನೆ, ನಿನ್ನ ಮಂಗಳಮೂರ್ತಿಯನ್ನು ಕಂಡು ನನ್ನ ಸ್ವಾಮಿಯನ್ನೆ ಕಂಡಂತಾಯಿತು. ಭರತ! ನನ್ನ ಸ್ವಾಮಿಯು ಯಾವಾಗಲೂ ನೆನಪಿಸಿಕೊಳ್ಳುತ್ತದ್ದ ಭರತಕುಮಾರ! ನಿನಗಿದೋ ನನ್ನ ಪ್ರಣಾಮಗಳು’ ಎಂದು ನಡುಬಾಗಿ ನಮಸ್ಕರಿಸಿದ ಮಾರುತಿಯನ್ನು ಕಂಡು ಭರತನು ‘ಎಲೈ ಮಹಾನುಭಾವನೆ ನೀನು ಯಾರು? ಯಾರು ನಿನ್ನ ಸ್ವಾಮಿ? ರಾಮನೆ ನನ್ನಣ್ಣನೆ?’ ಎಂದು ಸಂತೋಷ ಕುತೂಹಲಭರಿತನಾಗಿ ಪ್ರಶ್ನೆಗಳ ಸುರಿಮಳೆಗರೆದನು.

‘ರಾಮ, ಶ್ರೀರಾಮನೇ ನನ್ನ ಸ್ವಾಮಿ. ನಿನ್ನಣ್ಣನೇ ನನ್ನ ಸ್ವಾಮಿ. ಇಂದು ಸಂಜೆಯ ವೇಳೆಗೆ ಸೀತಾಮಾತೆ, ಲಕ್ಷ್ಮಣರೊಡಗೂಡಿ ಇಲ್ಲಿಗೆ ಬರುವವನಿದ್ದಾನೆ. ಅದನ್ನು ತಿಳಿಸಲೆಂದು ನನ್ನನ್ನು ಮುಂದಾಗಿಯೆ ಕಳುಹಿಸಿದರು’ ಎಂದು ನುಡಿಯಲು, ಭರತನು ತೆರೆದ ತೋಳನ್ನು ಹನುಮನೆಡೆಗೆ ಚಾಚಿ ‘ಬಾ ಮಿತ್ರ. ಬಾ. ಶುಭನುಡಿಯ ತಂದಿರುವೆ. ನಿನಗಿದೋ ನನ್ನ ಪ್ರಣಾಮಗಳು’ ಎಂದು ಬಾಚಿ ಅಪ್ಪಿಕೊಂಡ. ಮತ್ತೊಮ್ಮೆ ತಾಯಿ ಕೈಕೆಯ ಒಡಲೊಳಗೆ ಮಂಥರೆಯ ಪ್ರೇಮದ ಮಡಿಲೊಳಗೆ ಇಳಿದಾಡಿದ ಭಾವ ಭರತನಲ್ಲಿ ಸುಳಿದಾಡಿ, ಹೊಸಜನ್ಮ ಪಡೆದವನಂತೆ ಪುಳಕಗೊಂಡನು.

* * * * * * * * * * * *