Friday, May 30, 2014

ವಾಸ್ತವ ಮತ್ತು ಕಥನ : ಮಹಾನ್ ಬರಹಗಾರರಿಬ್ಬರ ನೋಟಗಳು

೧೯೨೦ರ ಸುಮಾರು. ಮಹಾತ್ಮ ಗಾಂಧಿಜಿಯವರು ಕರೆಕೊಟ್ಟಿದ್ದ ಅಸಹಕಾರ ಚಳುವಳಿ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿತ್ತು. ಅದರ ಬಿಸಿ ಮೈಸೂರಿಗೂ ತಗುಲಿ, ಅದರ ಪ್ರಚಾರಕ್ಕಾಗಿ ಗೌರೀಶಂಕರ ಮಿಶ್ರ ಎಂಬುವವರು ಮೈಸೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ನಡೆದ ವಿದೇಶಿ ವಸ್ತ್ರದಹನ ಘಟನೆಗೆ, ಮೈಸೂರು ರೂಪಿಸಿದ ಇಬ್ಬರು ಮಹಾನ್ ಬರಹಗಾರರು, ತಮ್ಮ ಬಾಲ್ಯದಲ್ಲಿ ಸಾಕ್ಷಿಯಾಗಿದ್ದರೆ!? ಒಬ್ಬರು ತಮ್ಮ ಆತ್ಮಚರಿತ್ರೆಯಲ್ಲೇ ಅದನ್ನು ದಾಖಲಿಸಿದ್ದರೆ, ಇನ್ನೊಬ್ಬರು ತಮ್ಮ ಸೃಜನಶೀಲ ಕೃತಿಯೊಂದರಲ್ಲಿ ಅದನ್ನು ಒಂದು ಘಟನೆಯಾಗಿ ಚಿತ್ರಿಸಿದ್ದಾರೆ. ಒಬ್ಬರು ಇಂಗ್ಲಿಷಿನಲ್ಲಿ ಆರಂಭಿಸಿ ಕನ್ನಡದಲ್ಲಿ ಬರೆದವರಾದರೆ, ಇನ್ನೊಬ್ಬರು ಇಂಗ್ಲೀಷಿನಲ್ಲಿಯೇ ಬರೆದವರು! ಹೌದು, ಕೆಲವರಾದರೂ ಊಹಿಸಿರುವಂತೆ ಅವರು ಕುವೆಂಪು ಮತ್ತು ಆರ್.ಕೆ.ನಾರಾಯಣ್. ಆ ಘಟನೆ ನಡೆದ ಸಂದರ್ಭದಲ್ಲಿ ಕುವೆಂಪು ಅವರು ಸುಮಾರು ಹದಿನಾರು ವರ್ಷದವರಾಗಿದ್ದರೆ, ಆರ್.ಕೆ. ನಾರಾಯಣ ಅವರಿಗೆ ಹದಿನಾಲ್ಕು ವರ್ಷದವರಾಗಿದ್ದರು.
ಕುವೆಂಪು ಅವರು ತಮ್ಮ ನೆನಪಿನ ದೋಣಿಯಲ್ಲಿ ಬರೆದುಕೊಂಡಿರುವಂತೆ, ಘಟನೆ ನಡೆದಾಗ ಅವರು ನಾಲ್ಕನೆಯ ಫಾರಂ (ಹೈಸ್ಕೂಲಿನ ಮೊದಲನೆಯ ವರ್ಷದ) ವಿದ್ಯಾರ್ಥಿಯಾಗಿದ್ದರು. ಅಂದು ಶಾಲಾಮಕ್ಕಳು ಸಮೂಹ ಸನ್ನಿಗೊಳಗಾದವರಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ತುದಿಯಲ್ಲಿ ಶ್ರೀ ಗೌರೀಶಂಕರ ಮಿಶ್ರ ಅವರ ಭಾಷಣ. ಇಂಗ್ಲೀಷಿನಲ್ಲಿದ್ದ ಅವರ ಉಗ್ರವಾದ ಭಾಷಣ ಕೇಳಿದವರೆಲ್ಲರೂ ನಿಬ್ಬೆರಗಾದರು. ಕೇವಲ ಕಾಟಾಚಾರಕ್ಕೊ, ಹುಡುಗಾಟಿಕೆಗೊ ಮೆರವಣಿಗೆಯಲ್ಲಿ ಸಾಗಿಬಂದಿದ್ದ ಹುಡುಗರಿಗೆಲ್ಲರಿಗೂ ರೋಮಾಂಚನ. ’ಗಂಡು ಕಣೊ ಅವನು! ಇಷ್ಟೊಂದು ಪೋಲೀಸರು ಸುತ್ತಮುತ್ತ ಇರುವಾಗ ಮಹಾರಾಜತರನ್ನು ಬಿಡದೆ ತರಾಟೆಗೆ ತಗೊಳ್ತಿದಾನಲ್ಲ’ ಎಂದು ಕೆಲವರೆಂದರೆ ’ಭಾಷಣಕಾರರನ್ನು ದಸ್ತಗಿರಿ ಮಾಡದೆ ಬಿಡುವುದಿಲ್ಲ’ ಎಂದು ಕೆಲವರು ವಾದಿಸುತ್ತಿದ್ದರು. ಅಷ್ಟರಲ್ಲಿ ಭಾಷಣ ಸಭೆ ಎರಡೂ ಒಮ್ಮೆಲೆ ಬರಕಸ್ತಾಗಿಬಿಟ್ಟವು. ಕೊನೆಗೆ ತಿಳಿದ ಕಾರಣವೆಂದರೆ, ಸಾರ್ವಜನಿಕ ಸ್ಥಳದಲ್ಲಿ ರಾಜದ್ರೋಹಕವಾದ ಭಾಷಣ ಮಾಡಬಾರದು ಎಂಬುದು!
ಹುಡುಗರೊಳಗೆ ಅದೆಂತದೊ ಒಂದು ರೀತಿಯ ಕಿಚ್ಚು ಹಚ್ಚಿದಂತಾಗಿತ್ತು. ಭಾಷಣ ಇನ್ನೂ ಬೇಕಾಗಿತ್ತು ಅಂದುಕೊಳ್ಳುತ್ತಿರುವಾಗಲೇ, ಮಿಶ್ರ ಅವರು ತಮ್ಮ ಭಾಷಣವನ್ನು ತಾವು ಇಳಿದುಕೊಂಡಿರುವ ಖಾಸಗಿ ಸ್ಥಳದಲ್ಲಿಯೇ ರಾತ್ರಿ ಒಂಭತ್ತು ಗಂಟೆಗೆ ಮುಂದುವರೆಸುತ್ತಾರೆ ಎಂಬ ಸುದ್ದಿ ಹಬ್ಬಿತು. ರಾತ್ರಿ ೯ಕ್ಕೆ ಸರಿಯಾಗಿ ಭಾಷಣ ಆರಂಭವಾಯಿತು. ಮಹಾರಾಜ ಕಾಲೇಜಿನ ಹುಡುಗರೆಲ್ಲಾ ಅಲ್ಲಿ ತುಂಬಿದ್ದರು. ಗೌರೀಶಂಕರ ಮಿಶ್ರರ ಉಗ್ರಭಾಷಣ ನಿರರ್ಗಳವಾಗಿ ಸಾಗಿತ್ತು. ಕುವೆಂಪು ವಾರಗೆಯ ಕೆಲವರು ಏನೊ ಒಂದು ಮಹತ್ ಘಟನೆ ನಡೆಯಲಿದೆಯೆಂದು ಕಾದು ನಿಂತಿದ್ದರು.
ಭಾಷಣದ ಕೊನೆಯಲ್ಲಿ, ವೇದಿಕೆಯ ಮುಂದೆ ’ಬಾನ್ ಪೈರ್’ ಹೆಸರಿನಲ್ಲಿ ಅಗ್ನಿ ಪ್ರಜ್ವಲಿಸಿತು. ಅಲ್ಲಿಸೇರಿದ್ದವರೆಲ್ಲಿ ಹಲವಾರು ಜನರು ತಮ್ಮ ತಮ್ಮ ಕೋಟು ಟೋಪಿಗಳನ್ನೆಲ್ಲಾ ಬಿಚ್ಚಿ ಬೆಂಕಿಗೆ ಎಸೆಯಲಾರಂಭಿಸಿದರು. ಒಳಗೆ ಚೆಡ್ಡಿ ಹಾಕಿದ್ದ ಕೆಲವರು ತಮ್ಮ ಪ್ಯಾಂಟುಗಳನ್ನೂ ಬಿಚ್ಚಿ ಎಸೆದು ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿಬಿಟ್ಟರು. ಕೆಲವರು ಬೇರೆಯವರ ತಲೆಯ ಮೇಲಿದ್ದ ಟೋಪಿಗಳನ್ನೂ ಕಿತ್ತು ಕಿತ್ತು ಬೆಂಕಿಗೆ ಹಾಕಲಾರಂಭಿಸಿದರು. ಕೆಲವರು ಮುಂಜಾಗ್ರತೆಯಾಗಿ ಟೋಪಿಗಳನ್ನು ಬಚ್ಚಿಟ್ಟುಕೊಂಡರು. ಅಂತವರಿಗೆ ದೇಶದ್ರೋಹಿ ಎಂಬ ಬಿರುದನ್ನೂ ಕೆಲವರು ದಯಪಾಲಿಸಿದರು. ಬಗೆ ಬಗೆಯ ಟೋಪಿ, ಕೋಟು, ಪ್ಯಾಂಟು, ಬೂಟುಗಳನ್ನು ಬೆಂಕಿಗೆ ಎಸೆಯುತ್ತಿರುವವರ ನಡುವೆ, ಗಾಂಧಿಯವರು ಕರೆಕೊಟ್ಟಂತೆ ವಿದೇಶೀ ವಸ್ತ್ರದಹನವೂ ದೇಶಭಕ್ತಿಯ ಒಂದು ಪ್ರಧಾನ ಲಕ್ಷಣವೆಂದು ಭಾವಿಸಿದವರ ಎದುರಿಗೆ ನಾನು ’ಕರಿಕುರಿ’ ಎನ್ನಿಸಿಕೊಳ್ಳಲಾದೀತೆ ಎನ್ನಿಸಿ, ಬಾಲಕಪುಟ್ಟಪ್ಪನೂ ತನ್ನ ಟೋಪಿಗೆ ಬೆಂಕಿಯ ದಾರಿ ತೋರಿಸಿದರು. ಇದ್ದ ಒಂದು ಟೋಪಿಯೂ ಬೆಂಕಿಯಲ್ಲಿ ಕರಗಿ ಹೋಗುತ್ತಿರುವುದನ್ನು ಆತಂಕದಿಂದ ನೋಡುತ್ತಿದ್ದ ಅವರಿಗೆ ಕೋಟನ್ನೂ ಎಸೆಯುವಂತೆ ಬಂದ ’ಆಜ್ಞೆ’ಯನ್ನು ತಪ್ಪಿಸಲೂ ಆಗದೆ ಹಿಂದು ಮುಂದು ನೋಡುತ್ತಿದ್ದಾಗ, ಹುಡಗರೇ ಕೋಟಿಗೂ ಟೋಪಿಯ ಹಾದಿಯ್ನನೇ ತೋರಿದರು. ದುರಂತವೆಂದರೆ ಅವರ ಬಳಿಯಿದ್ದುದ್ದು ಅದೊಂದೇ ಕೋಟು ಮತ್ತು ಟೋಪಿ!

ಮಾರನೆಯ ದಿನ ಕೋಟು ಟೋಪಿಯಿಲ್ಲದೆ ಶಾಲೆಗೆ ಬಂದಾಗ ಪುಟ್ಟಪ್ಪನಿಗೆ ಕಂಡಿದ್ದು, ನೆನ್ನೆ ಬೆಂಕಿಗೆ ಕೋಟು ಟೋಪಿ ಎಸೆದಿದ್ದ ಸಹಪಾಠಿಗಳೆಲ್ಲಾ, ಎಸೆದವುಗಳಿಗಿಂತ ಬಹಳ ಚೆನ್ನಾದ, ವಿದೇಶಿ ವಸ್ತ್ರಗಳಿಂದ ಮಾಡಿದ ಕೋಟು ಟೋಪಿಗಳನ್ನು ತೊಟ್ಟು ಬಂದಿದ್ದರು! ಆದರೆ, ಅದಕ್ಕೆ ಅನುಕೂಲ ಇರದಿದ್ದ ಇವರು ಮತ್ತು ಕೆಲವರು ಮಾತ್ರ ಅಂದಿನಿಂದ ಗಾಂಧಿ ಟೋಪಿ ಮತ್ತು ಖಾದಿ ಬಟ್ಟೆಗಳನ್ನೆ ತೊಡುವ ವ್ರತ ಕೈಗೊಂಡು ಸಮಾಧಾನ ಮಾಡಿಕೊಂಡರು.
ಈಗ, ಆರ್.ಕೆ.ನಾರಾಯಣರ ’ಸ್ವಾಮಿ ಮತ್ತು ಅವನ ಸ್ನೇಹಿತರು’ (ಅನು: ಎಚ್.ವೈ.ಶಾರದಾಪ್ರಸಾದ್) ಕೃತಿಗೆ ಬರೋಣ. ಇದೊಂದು ಭಾರತೀಯ ಇಂಗ್ಲಿಷ್ ಲೇಖಕರ ಕೃತಿಗಳಲ್ಲಿ ಅತ್ಯಂತ ವಿಭಿನ್ನವೂ ಉನ್ನತವೂ ಆದ ಕೃತಿ. ೧೯೩೦ ಆಗಸ್ಟ್ ೧೫ನೆಯ ತಾರೀಖಿನ ದಿನ ಮಾಲ್ಗುಡಿಯ ಸರಯೂ ನದಿಯ ದಡದಲ್ಲಿ ಗೌರೀಶಂಕರರ ಸಲುವಾಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಸಭೆ ಸೇರಿರುತ್ತಾರೆ. ಇದೊಂದು ಸೃಜನಶೀಲ ಕೃತಿಯಾಗಿರುವುದರಿಂದ ಕಾಲಸೂಚಕವನ್ನು ಪಕ್ಕಕ್ಕಿಟ್ಟುಬಿಡೋಣ. ಸಭೆಯಲ್ಲಿ ಗೌರೀಶಂಕರರಿಗೆ ಬೆಂಬಲ ಸೂಚಿಸಿ ಭಾಷಣ ಮಾಡುತ್ತಿದ್ದವ ತನ್ನ ವಾಕ್ ಪ್ರೌಢಿಮೆಯಿಂದ ಎಲ್ಲರ ಮೇಲೂ ಪ್ರಭಾವ ಬೀರಿದ್ದನು. ’ಪ್ರತಿಯೊಬ್ಬ ಭಾರತೀಯನೂ ಬಾಯಿತುಂಬ ಎಂಜಲು ತುಂಬಿಕೊಂಡು ಇಂಗ್ಲೆಂಡಿನ ಮೇಲೆ ಉಗಳಲಿ. ಆ ಜೊಲ್ಲಿನ ಸಮುದ್ರದಲ್ಲಿ ಇಂಗ್ಲೆಂಡ್ ಮುಳುಗಿ ಹೋಗುತ್ತದೆ’ ಎಂಬ ಮಾತುಗಳಿಂದ ಮತ್ತೇರಿದವನಂತೆ ಸ್ವಾಮಿನಾಥ ಎಂಬ ಬಾಲಕ (ಕೃತಿಯ ನಾಯಕ ಪಾತ್ರಧಾರಿಯೂ ಹೌದು) ’ಗಾಂಧೀಕಿ ಜೈ’ ಎಂದು ಕೂಗು ಹಾಕುತ್ತಾನೆ. ಸುಮ್ಮನಿರುವಂತೆ ತಿವಿದ ಸ್ನೇಹಿತ ಮಣಿಗೆ ’ಎಂಜಲುಗಿದು ಪರಂಗಿಯವರನ್ನು ಮುಳುಗಿಸೋದು ನಿಜವಾ?’ ಎಂದು ಕೇಳಿ ಫುಲಕಿತನಾಗುತ್ತಾನೆ. ಭಾಷಣದ ಕೊನೆಯಲ್ಲಿ ವಿದೇಶಿ ವಸ್ತುಗಳ ಬಹಿಷ್ಕಾರದ ಪ್ರತಿಜ್ಞೆ ನೆಡೆಯುತ್ತದೆ. ಸ್ವಾಮಿನಾಥ ಮ್ಯಾಂಚೆಸ್ಟರ್ ಮತ್ತು ಲ್ಯಾಂಕಷೈರಿನ ಬಟ್ಟೆಗಳನ್ನು ಕೈಯಿಂದ ಮುಟ್ಟುವುದೇ ಇಲ್ಲವೆಂದು ಶಪಥ ಮಾಡುತ್ತಾನೆ.
ಅಷ್ಟಕ್ಕೂ ಅವರನ ಚೇತನ ಸಮಾಧಾನ ಹೊಂದುವುದಿಲ್ಲ. ತಾನು ಹಾಕಿಕೊಂಡಿರುವ ಬಟ್ಟೆ ಯಾವುದೊ ಎಂದು ಮಣಿಯಲ್ಲಿ ಕೇಳು ತ್ತಾನೆ. ಅವನು ಪಕ್ಕ ಲ್ಯಾಂಕಾಷೈರಿನದು ಎನ್ನುತ್ತಾನೆ. ’ಈ ಲ್ಯಾಮಕಾಷೈರಿನ ಬಟ್ಟೆಗಳಲ್ಲಿ ಮೆರೆಯೋದಕ್ಕಿಂತ ಬೆತ್ತಲೆ ಬಂದಿದ್ದರೇನೇ ಗೌರವವಾಗಿ ಇರುತ್ತಿತ್ತು’ ಅನ್ನಿಸುತ್ತದೆ. ಆದರೆ, ಸ್ವಾಮಿನಾಥನಿಗೆ ಆ ವಿಷಯದಲ್ಲಿ ಶಂಕೆಯಿದ್ದುದರಿಂದ ಸುಮ್ಮನಿರುವುದೇ ವಾಸಿಯೆಂದುಕೊಳ್ಳುತ್ತಾನೆ. ಅಷ್ಟರಲ್ಲಿ ಬಟ್ಟೆ ಸುಡುವುದಕ್ಕಾಗಿ ಹಚ್ಚಿದ್ದ ಕಿಚ್ಚು ಧಗಧಗಿಸಲಾರಂಭಿಸುತ್ತದೆ. ಕೋಟು ಟೋಪಿ ಷರ್ಟು, ಪ್ಯಾಂಟು, ಕರವಸ್ತ್ರ ಮುಂತಾದವು ಗಾಳಿಯಲ್ಲಿ ತೂರಿಬಂದು ಬೆಂಕಿಯಲ್ಲಿ ಬೀಳಲಾರಂಬಿಸುತ್ತವೆ. ಆಗ ಅವನ ಹತ್ತಿರ ಬಂದವನೊಬ್ಬ ’ಪರದೇಶಿ ಟೋಪಿ ಹಾಕಿಕೊಂಡಿದ್ದೀಯಾ?’ ಎಂದು ಆಕ್ಷೇಪವೆತ್ತುತ್ತಾನೆ. ಅವಮಾನಕ್ಕೊಳಗಾದ ಸ್ವಾಮಿನಾಥ ತಕ್ಷಣ ’ಅಯ್ಯೊ ನೋಡಲಿಲ್ಲ’ ಎಂದು ಟೋಪಿಯನ್ನು ಬೆಂಕಿಗೆ ಎಸೆದು ’ಸದ್ಯ, ದೇಶವನ್ನು ಉಳಿಸಿದೆನಲ್ಲ!’ ಎಂದುಕೊಳ್ಳುತ್ತಾನೆ.
ಮಾರನೆಯ ದಿನ, ಅಲ್ಲಿ ಪುಟ್ಟಪ್ಪನಿಗೆ ಎದುರಾದ ಸಮಸ್ಯೆಯೇ ಇಲ್ಲಿ ಸ್ವಾಮಿನಾಥನಿಗೆ ಎದುರಾಗುತ್ತದೆ. ಸ್ಕೂಲಿಗೆ ಹಾಕಿಕೊಂಡು ಹೋಗಲು ಇನ್ನೊಂದು ಟೋಪಿಯಿಲ್ಲ! ಬೆಳಿಗ್ಗೆಯಿಂದ ಅಪ್ಪನ ಕಣ್ಣು ತಪ್ಪಿಸಿ ಮನೆಯಲ್ಲಿ ತಿರುಗಾಡಲಾರಂಭಿಸುತ್ತಾನೆ. ಇಲ್ಲಿ, ’ಭಾರತಮಾತೆಯ ಮಹಾಪುತ್ರರಲ್ಲೊಬ್ಬರು ದಸ್ತಗಿರಿಯಾಗಿದ್ದಾರೆ’ ಎಂಬ ಕಾರಣದಿಂದ ಶಾಲೆಗೆ ರಜೆ ಘೋಷಣೆ ಆತನ ಸಮಸ್ಯೆಯನ್ನು ಬಗೆಹರಿಸುತ್ತದೆ. ’ಭಾರತಮಾತೆ’ ’ಗಾಂಧೀಜಿ’ ಜೊತೆಯಲ್ಲಿ ’ಗೌರೀಶಂಕರ’ ಅವರಿಗೂ ಜಯಕಾರ ಬೀಳುವುದನ್ನು ನೋಡಿದರೆ, ದಸ್ತಗಿರಿಯಾಗಿದ್ದವರು ಅವರೇ ಇರಬೇಕು ಅನ್ನಿಸುತ್ತದೆ. ಆದರೆ ಇಲ್ಲಿ, ಗೌರೀಶಂಕರರಿಗೆ ಬಂಬಲ ಸೂಚಿಸುವುದಕ್ಕಾಗಿ ಸಭೆ, ವಸ್ತ್ರದಹನಗಳು ನಡೆದು, ಮಾರನೆಯ ದಿನ ಮೆರವಣಿಗೆ ನಡೆಯುತ್ತದೆ. ಆ ಮೆರವಣಿಗೆಯಲ್ಲಿ ಸೇರಿದ ಸ್ವಾಮಿನಾಥ ತನ್ನ ಟೋಪಿ ಬೆಂಕಿಗೆ ಆಹುತಿಯಾದ ದುಃಖವನ್ನು ಮರೆತೇಬಿಡುತ್ತಾನೆ! ಆದರೆ, ಪ್ರಾಥಮಿಕ ಶಾಲೆಯ ಹುಡುಗನೊಬ್ಬನ ಟೋಪಿಯನ್ನು ಕಂಡಾಕ್ಷಣ ಅದು ಮತ್ತೆ ನೆನಪಾಗುತ್ತದೆ. ಅದನ್ನು ಕಿತ್ತು ಮಣ್ಣಲ್ಲಿ ಎಸೆದು ತುಳಿದು ತನ್ನ ಟೋಪಿ ಹೋದ ದುಃಖದಿಂದ ಸಮಾಧಾನ ಪಡೆದುಕೊಳ್ಳುತ್ತಾನೆ. ತಂದಗೆ ವಿಷಯವೆಲ್ಲಾ ತುಳಿದ ಮೇಲೆ, ಗೊತ್ತಾದ ನಿಜವೇನೆಂದರೆ, ಆತ ತೊಟ್ಟಿದ್ದು ಕರೀ ಖಾಧಿ ಟೋಪಿ, ವಿದೇಶಿ ಬಟ್ಟೆಯದ್ದಲ್ಲ ಎಂಬುದು!
ಒಂದು ವಾಸ್ತವದ ಚಿತ್ರಣ. ಇನ್ನೊಂದು ಅದರಿಂದ ಪ್ರೇರೇಪಿತವಾದ ಕಥನ. ಇಬ್ಬರೂ ಋಷಿ ಸದೃಶವಾದ ವ್ಯಕ್ತಿಗಳೇ ಆದ್ದರಿಂದ, ಅವರ ಜೀವನ ಚರಿತ್ರೆಯನ್ನು ಅರಿಯಲೇನು ಕಷ್ಟ ಸಾಧ್ಯವಿಲ್ಲ. ನೆನಪಿನ ದೋಣಿಯಲ್ಲಿ ನಮಗೆ ಕುವೆಂಪು ಅವರ ಅಧಿಕೃತ ಜೀವನ ಚರಿತ್ರೆಯಾಗಿ ಸಿದ್ಧ ಅಕರವಾಗಿದೆ. ಈ ಚಳುವಳಿ ಮೈಸೂರಿನಲ್ಲಿ ನಡೆದ ಸಮಯದಲ್ಲಿ ಆರ್.ಕೆ.ಎನ್. ಅಲ್ಲಿದ್ದರು ಎಂಬುದಕ್ಕೆ ಅವರ ಜೀವನದ ವಿವರಗಳು ಸಾಕ್ಷಿಯನ್ನೊದಗಿಸುತ್ತವೆ. ನಾರಾಯಣರ ತಂದೆ ಮದ್ರಾಸಿನಿಂದ ವರ್ಗವಾಗಿ ಮೈಸೂರಿನಲ್ಲಿ ಮಹಾರಾಜಾ ಹೈಸ್ಕೂಲಿಗೆ ಬಂದಿರುತ್ತಾರೆ. ಆಗ ನಾರಾಯಣ ಮತ್ತು ಲಕ್ಷ್ಮಣ್ ಅವರೂ ಮೈಸೂರಿಗೆ ಬಂದು ತಮ್ಮ ಹೈಸ್ಕೂಲು ಶಿಕ್ಷಣವನ್ನು ಮುಂದುವರೆಸುತ್ತಾರೆ. ನಾರಾಯಣ್ ಅವರು ಯೂನಿವರ್ಸಿಟಿ ಎಂಟ್ರೇನ್ಸ್ ಎಕ್ಸಾಮಿನಲ್ಲಿ ಅನುತ್ತೀರ್ಣರಾಗಿ, ಒಂದು ವರ್ಷ ಮನೆಯಲ್ಲಿದ್ದು, ನಂತರ ಪಾಸಾಗಿದ್ದು ೧೯೨೬ರಲ್ಲಿ ಎಂಬುದನ್ನು ಗಮನಿಸಿದಾಗ, ೧೯೨೦ರ ಘಟನೆಗೆ ಬಾಲಕ ನಾರಾಯಣ್ ಅವರೂ ಸಾಕ್ಷಿಯಾಗಿದ್ದರು ಅನ್ನಿಸುತ್ತದೆ.
ಕೊನೆಯಲ್ಲಿ: ಸ್ವಾಮಿ ಮತ್ತು ಅವನ ಸ್ನೇಹಿತರು ಪುಸ್ತಕದಲ್ಲಿ ಮೇಲಿನ ಘಟನೆಯನ್ನು ಓದುವಾಗ, ಎಂಜಲನ್ನು ಉಗುಳಿ ಇಂಗ್ಲೆಂಡನ್ನು ಮುಳುಗಿಸುವ ಮಾತು ಬಂದಾಗ ನನಗೆ ಇನ್ನೊಂದು ಘಟನೆ ನೆನಪಾಯಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಪತ್ರಿಕಯೆಲ್ಲಿ ಓದಿದ್ದೊ ಅಥವಾ ಟೀವಿಯಲ್ಲಿ ನೋಡಿದ್ದೊ ಇರಬೇಕು. ಕನ್ನಡ ಚಿತ್ರರಂಗದವರು ಕಾರ್ಗಿಲ್ ನಿಧಿ ಸಂಗ್ರಹಕ್ಕಾಗಿ ಜಾಥಾ ಮೆರವಣಿಗೆ ರಸಮಂಜಿರಿ ಕಾರ್ಯಕ್ರಗಳನ್ನು ನಡೆಸುತ್ತಿದ್ದರು. ಈಗ ಹಿರಿಯ ನಟನ ಸ್ಥಾನಕ್ಕೇರಿರುವ, ಅಂದಿನ ಪೋಷಕ, ಖಳ, ನಾಯಕ, ಹಾಸ್ಯನಟ ಆದವರೊಬ್ಬರು ಹೀಗೆ ಹೇಳಿದ್ದರು. ಭಾರತೀಯರೆಲ್ಲ ಒಟ್ಟಾಗಿ ನಿಂತು ’ಸೂಸು’ ಮಾಡಿದರೆ ಪಾಕಿಸ್ಥಾನ ಕೊಚ್ಚಿಕೊಂಡು ಹೋಗುತ್ತದೆ!
ನಾಲಗೆಯ ಮಾತು ಸೊಂಟದ ಕೆಳಗೆ ಬಂದಿದೆ. ಕಾಲದ ಮಹಿಮೆ ಅನ್ನೋಣವೆ?

Tuesday, May 13, 2014

ಕನ್ನಡ ಭಾಷೆ ಅಥವಾ ಶಿಕ್ಷಣ ಮಾಧ್ಯಮ…

ಶಿಕ್ಷಣ ಮಾದ್ಯಮಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಈ ತೀರ್ಪು ಅನಿರೀಕ್ಷಿತವೇನಲ್ಲ. ರಾಜ್ಯ ಸರ್ಕಾರಕ್ಕೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿ ಎದುರಾಗಿದೆ. ’ಸಾಮಾನ್ಯ ಸಂದರ್ಭಗಳಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ ಆಗಿರಬೇಕು’ ಎಂಬ ೨೨.೬.೧೯೮೯ರ ಸರ್ಕಾರದ ನಿರ್ಧಾರದಿಂದ ಹಿಂದೆ ಸರಿದದ್ದು, ಹಾಗೂ ’ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಎಲ್ಲ ಶಾಲೆಗಳು ಒಂದರಿಂದ ನಾಲ್ಕನೆ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಅಥವಾ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು’ ಎಂದು ೨೯.೪.೧೯೯೪ರಂದು ರಾಜ್ಯ ಸರ್ಕಾರ ನೀಡಿದ ಆದೇಶವೇ ಈಗ ಹಗ್ಗವಾಗಿರುವುದು!
ಹೀಗೇಕೆ ಆಯಿತು?
ಭಾರತ ಸ್ವತಂತ್ರ್ಯಾನಂತರ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ನಿರ್ಮಾಣವಾದವು. ಭಾಷೆಯೇ ಆಯಾಯ ರಾಜ್ಯದ ಗುರುತೂ, ಅಸ್ಮಿತೆಯೂ ಆಗಿದ್ದು ಐತಿಹಾಸಿಕ ಸತ್ಯ. ಆಯಾಯ ಭಾಷೆಯೇ ಆಯಾಯ ರಾಜ್ಯಗಳ ರಾಜ್ಯಭಾಷೆ ಅರ್ಥಾತ್ ಆಡಳಿತಭಾಷೆಯೂ ಆಗಬೇಕಾದದ್ದು ಸಹಜವೂ ಹೌದು. ಆದ್ದರಿಂದ, ಸಾರ್ವತ್ರಿಕ ನೆಲೆಯಲ್ಲಿ ರಾಜ್ಯಭಾಷೆಯೇ ಆಯಾಯ ರಾಜ್ಯದ ಮಾತೃಭಾಷೆಯಾಗುತ್ತದೆ. ಆದರೆ, ವೈಯಕ್ತಿಕ ನೆಲೆಯಲ್ಲಿ ಅಲ್ಲ ಎಂಬುದು ಸ್ಪಷ್ಟ. ಆದರೆ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಭಾಷೆಯ ಅಭಿವೃದ್ಧಿಗೆ, ಉಳಿವಿಗೆ ಕೈಗೊಂಡ ಕ್ರಮಗಳು ಮಾತ್ರ ಪ್ರಶ್ನಾರ್ಹ.
ಮಾತೃಭಾಷೆ ಮತ್ತು ರಾಜ್ಯಭಾಷೆ ಇವುಗಳ ನಡುವೆ ಗೊಂದಲ ಸೃಷ್ಟಿಸಿದ್ದು ರಾಜ್ಯಸರ್ಕಾರದ ಇನ್ನೊಂದು ತಪ್ಪು ನಡೆ. ’ಮಾತೃಭಾಷೆ ಇಂಗ್ಲಿಷ್ ಆಗಿರುವ ವಿದ್ಯಾರ್ಥಿಗಳು ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬಹುದು’ ಎಂಬ ಸರ್ಕಾರದ ಅಭಿಪ್ರಾಯ ಕೂಡಾ ತಪ್ಪು. ಚಾಮರಾಜನಗರದ ಒಂದು ಹಳ್ಳಿಯ ಶಾಲೆಯಲ್ಲಿ ಹತ್ತು ಕನ್ನಡದ ಮಕ್ಕಳು ಹಾಗೂ ಹತ್ತು ತಮಿಳು ಮಕ್ಕಳು ಇದ್ದರೆ ಕನ್ನಡ ಹಾಗೂ ತಮಿಳು ಎರಡೂ ಮಾಧ್ಯಮಗಳಲ್ಲಿ ಪಾಠ ಮಾಡಲು ಸಾಧ್ಯವೆ? ಕೆಲಸಕ್ಕಾಗಿ ಬಂದು ಕರ್ನಾಟಕದಲ್ಲಿ ನೆಲೆಸಿರುವ ಬಿಹಾರಿಗಳ ಮಕ್ಕಳಿಗೆ ಬಿಹಾರಿ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸಾಧ್ಯವೆ? ಮಾಧ್ಯಮ ಯಾವುದೇ ಇರಲಿ, ಕಡ್ಡಾಯವಾಗಿ ಕನ್ನಡ ಕಲಿಯಿರಿ, ಕರ್ನಾಟಕದಲ್ಲಿರುವವರು ಪ್ರಥಮ ಭಾಷೆಯಾಗಿ ಓದಲೇಬೇಕು ಎಂದಿದ್ದರೆ, ಶಿಕ್ಷಣ ಮಾಧ್ಯಮದ ತೊಡಕೂ ಇರುತ್ತಿರಲಿಲ್ಲ; ರಾಜ್ಯಭಾಷೆಯ ಬಳೆವಣಿಗೆ ಕುಂಟಿತವೂ ಆಗುತ್ತಿರಲಿಲ್ಲ ಅಲ್ಲವೆ?
ಮಾತೃಭಾಷೆ ಎಂಬುದು ವೈಯಕ್ತಿಕ ನೆಲೆಯಲ್ಲಿ ತೀರ್ಮಾನವಾಗಬೇಕಾದ ವಿಷಯ. ಯಾರು ಬೇಕಾದರೂ ಯಾವ ಭಾಷೆಯನ್ನಾದರೂ ಮಾತೃಭಾಷೆಯನ್ನಾಗಿ ಸ್ವೀಕರಿಸಬಹುದು. ಒಬ್ಬ ಕನ್ನಡ ದಂಪತಿಗಳೇ ತಮ್ಮ ಮಾತೃಭಾಷೆ ಇಂಗ್ಲಿಷ್ ಎಂದು ಘೊಷಿಸಿಕೊಂಡರೆ ಅದನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ. ಅದು ಅವರವರ ಆಯ್ಕೆಯ ಸ್ವಾತಂತ್ರ್ಯ. ಆದರೆ ರಾಜ್ಯಭಾಷೆ ಎಂಬುದು ಸಾರ್ವತ್ರಿಕವಾದದ್ದು, ಸಾಮಾಜಿಕವಾದದ್ದು ಹಾಗೂ ಒಂದು ರಾಜ್ಯಕ್ಕೇ ಸಂಬಂಧಪಟ್ಟದ್ದು. ಕನ್ನಡ ಭಾಷೆಯನ್ನು ರಾಜ್ಯಭಾಷೆ ಎಂಬ ಸಾರ್ವತ್ರಿಕ ನೆಲೆಯಲ್ಲಿ ನೋಡದೆ ವೈಯಕ್ತಿಕವಾದ ಮಾತೃಭಾಷೆಯ ನೆಲೆಯಲ್ಲಿ ನೋಡಿದ್ದು ಹಾಗೂ ಅದನ್ನು ಶಿಕ್ಷಣ ಮಾಧ್ಯಮಕ್ಕೆ ತಳುಕು ಹಾಕಿದ್ದು ಈ ಎಲ್ಲಾ ಗೊಂದಲಗಳಿಗೆ ಕಾರಣವೆನ್ನಬಹುದು.

ನ್ಯಾಯಾಲಯದ ತೀರ್ಪು ಹೊರಬಂದ ಮೇಲೆ ಅಧಿಕಾರಸ್ಥರ ಪ್ರತಿಕ್ರಿಯೆಗಳನ್ನು ಗನಿಸಿದರೆ ಅವರ ಇಚ್ಛಾಶಕ್ತಿಯ ಮೇಲೆ ಅನುಮಾನ ಮೂಡುತ್ತದೆ. ಸಾಹಿತಿ-ಚಿಂತಕರ ಸಭೆ ಕರೆಯುವ ಮುಖ್ಯಮಂತ್ರಿಗಳ ನಿರ್ಧಾರ ಒಂದು ರಾಜಕೀಯ ನಡೆಯೆ ಹೊರತು, ಖಂಡಿತಾ ಕಾನೂನು ರೂಪಿಸುವವರ ನಡೆಯಲ್ಲ! ಸಾಹಿತ್ಯಕ ವಲಯದಿಂದ ಎದುರಾಗಬಹುದಾದ ಸ್ವಲ್ಪಮಟ್ಟಿನ ಪ್ರತಿರೋಧ, ಅದಕ್ಕೆ ಸಿಗುವ ಅಗ್ಗದ ಪ್ರಚಾರ, ಅದರಿಂದ ತನಗುಂಟಾಗುವ ಮುಜುಗರವನ್ನು ತಪ್ಪಿಸಲು ಸಾಹಿತಿಗಳ ಸಭೆ ಕರೆಯಲಾಗಿದೆ, ಅಷ್ಟೆ. ನಾಲ್ಕೈದು ಪುಸ್ತಕ ಬರೆದಾಕ್ಷಣ ಯಾವ ವಿಷಯದ ಬಗ್ಗೆಯಾದರೂ ಸಲಹೆ ಕೊಡುವುದು ಸಾಹಿತಿಗಳಿಗೆ ಹೇಗೆ ಸಾಧ್ಯ? ರಾಜ್ಯಸಭೆ, ವಿಧಾನಸಭೆ, ಅಕಾಡೆಮಿಗಳ ಅಧ್ಯಕ್ಷತೆ, ಸದಸ್ಯತ್ವ ಇವುಗಳ ಮೇಲೆ ಕಣ್ಣಿಟ್ಟು ತುದಿಗಾಲ ಮೇಲೆ ನಿಂತಿರುವ, ಕೇವಲ ಹೃದಯದಿಂದ ಯೋಚಿಸುವ ಕೆಲವು ಸಾಹಿತಿ-ಚಿಂತಕರಿಂದ ಏನನ್ನು ನೀರೀಕ್ಷಿಸಲು ಸಾಧ್ಯ.
ಇಂತಹ ವಿಷಯಗಳಲ್ಲಿ ಕರೆಯಬೇಕಾದ್ದು ಸಾಹಿತಿಗಳ ಸಭೆಯನ್ನಲ್ಲ; ಸಂವಿಧಾನ ತಜ್ಞರ, ಕಾನೂನು ತಜ್ಞರ, ಶಿಕ್ಷಣ ತಜ್ಞರ ಸಭೆ ಎಂಬ ಸಾಮಾನ್ಯ ಜ್ಞಾನ ಕೂಡಾ ನಮ್ಮನ್ನು ಆಳುವವರಿಗೆ ಇಲ್ಲದಿರುವುದು ದೌರ್ಭಾಗ್ಯವೇ ಸರಿ! ಒಂದು ಭಾಷೆಯನ್ನಾಗಿ, ತನ್ನ ರಾಜ್ಯಭಾಷೆಯಾದ ಕನ್ನಡವನ್ನು ಸಮರ್ಥವಾಗಿ ಕಲಿಸುವ ಪ್ರಾಥಮಿಕ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸದವರು, ಜಾಗತೀಕರಣದ ಈ ಹೊತ್ತಿನಲ್ಲಿ ಕನ್ನಡವನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ ಮಾತುಗಳನ್ನಾಡುವುದು ಶತಮಾನದ ವ್ಯಂಗ್ಯವಲ್ಲವೆ?
ಸರ್ವೋಚ್ಚ ನ್ಯಾಯಾಲಯದ ಇಂದಿನ ತೀರ್ಪಿನ ಹಿನ್ನೆಲೆಯಲ್ಲಿ, ಒಂದು ರಾಜ್ಯವಾಗಿ ಕರ್ನಾಟಕ ತನ್ನ ರಾಜ್ಯಭಾಷೆಯ ಅಭಿವೃದ್ಧಿಗಾಗಿ, ತನ್ಮೂಲಕ ಕನ್ನಡ ಭಾಷೆಯ ಉಳಿವಿಗಾಗಿ ಮಾಡಬೇಕದ್ದೇನು? ಮಾತೃಭಾಷೆ ಹೇಗೆ ವೈಯಕ್ತಿಕ ಆಯ್ಕೆಯಾಗುತ್ತದೊ ಹಾಗೇ ಶಿಕ್ಷಣ ಮಾದ್ಯಮವೂ ಕೂಡಾ. ಆದ್ದರಿಂದ, ಸರ್ಕಾರ ಶಿಕ್ಷಣ ಮಾದ್ಯಮದ ವಿಷಯವನ್ನು ಪಕ್ಕಕ್ಕಿಟ್ಟು, ವಸ್ತುನಿಷ್ಟವಾಗಿ ತನ್ನ ರಾಜ್ಯಭಾಷೆಯನ್ನು ಸಮರ್ಥವಾಗಿ ಬಳಸಬೇಕಾಗಿದೆ. ಶಿಕ್ಷಣ ಮಾದ್ಯಮ, ಮಾತೃಭಾಷೆ ಯಾವುದೇ ಇರಲಿ, ತನ್ನ ರಾಜ್ಯದಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಂದು ಮಗುವೂ ಕನ್ನಡವನ್ನು ಪ್ರಥಮ ಭಾಷೆಯಾಗಿ, ಕನಿಷ್ಠ ಹತ್ತನೆ ತರಗತಿಯವರೆಗೆ ಅಧ್ಯಯನ ಮಾಡಲೇಬೇಕೆಂಬ ಕಟ್ಟುನಿಟ್ಟಾದ ಕಾನೂನನ್ನು ರೂಪಿಸಲು ಸಾಧ್ಯವಿದೆ. ಈ ಪತ್ರಿಕೆಯಲ್ಲಿ ಪಡೆಯುವ ಅಂಕಗಳನ್ನು, ಗ್ರೇಡ್/ವರ್ಗ/ಶೇಕಡವಾರು ಲೆಕ್ಕಾಚಾರಕ್ಕೆ ಕಡ್ಡಾಯವಾಗಿ ಸೇರಿಸಲೇಬೇಕು. ಇದರಿಂದ ರಾಜ್ಯದಲ್ಲಿ ನೆಲೆಸುವ ಪ್ರತಿಯೊಬ್ಬರಿಗೂ ರಾಜ್ಯಭಾಷೆಯ ಅರಿವು ಉಂಟಾಗುತ್ತದೆ. ಜೊತೆಗೆ, ಜನರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸಿದಂತೆಯೂ ರಾಜ್ಯಭಾಷೆಯ ಸಮರ್ಥ ಬಳಕೆಗೆ ಅವಕಾಶವನ್ನು ಸೃಷ್ಟಿಸಿಕೊಂಡಂತೆಯೂ ಆಗುತ್ತದೆ.
ಅಷ್ಟಕ್ಕೂ ಮಾತೃಭಾಷೆಯ ಅಭಿವೃದ್ಧಿ ರಾಜ್ಯಸರ್ಕಾರದ ಕರ್ತವ್ಯ ಅಲ್ಲವೇ ಅಲ್ಲ! ಮಾತೃಭಾಷೆಯ ಅಳಿವು ಉಳಿವು ಆಯಾಯ ಭಾಷೆಗಳನ್ನಾಡುವವರ ಕೈಯಲ್ಲಿದೆ. ಸರ್ಕಾರಗಳು ಅದಕ್ಕೆ ಬೇಕಾದರ ಪೂರಕ ವಾತಾವರಣವನ್ನು ಕಲ್ಪಿಸಬಹುದೇ ಹೊರತು, ಜನಗಳ ಮಾತೃಭಾಷೆಯ ರಕ್ಷಕ ನಾನೇ ಎಂದು ಫೋಸು ಕೊಡುವುದು ಎಷ್ಟು ಸರಿ. ಮನುಷ್ಯನಿಗೆ ಒಂದು ಮಾತೃಭಾಷೆ ಇದ್ದಂತೆ, ಒಮದು ರಾಜ್ಯಕ್ಕೂ ಒಂದು ಮಾತೃಭಾಷೆ ಇರುತ್ತದೆ; ಅದು ಅದರ ರಾಜ್ಯಭಾಷೆಯೇ ಆಗಿರುತ್ತದೆ. ರಾಜ್ಯ ಸರ್ಕಾರ ಉಳಿಸಿ ಬೆಳೆಸಬೇಕಾಗಿರುವುದು, ಅಭಿವೃದ್ಧಿ ಪಡಿಸಬೇಕಾಗಿರುವುದು ತನ್ನ ಮಾತೃಭಾಷೆಯನ್ನು ಅಂದರೆ ಅದರ ರಾಜ್ಯಭಾಷೆಯನ್ನು ಮಾತ್ರ!
ರಾಜ್ಯ ಸರ್ಕಾರದ ಮುಂದಿರುವ ಇನ್ನೊಂದು ಆಯ್ಕೆಯೆಂದರೆ, ಪ್ರಾದೇಶಿಕ ಭಾಷೆಗಳನ್ನಾಡುವ ಜನರನ್ನು ಪ್ರತಿನಿಧಿಸುವ ಎಲ್ಲಾ ರಾಜ್ಯಗಳ ಸಂಸತ್ ಸದಸ್ಯರಲ್ಲಿ ಒಮ್ಮತಾಭಿಪ್ರಾಯವನ್ನು ಮೂಡಿಸಿ, ಸಂಸತ್ತಿನಲ್ಲಿ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಸಂಬಂದಿಸಿದಂತೆ ಪ್ರಬಲವಾದ ಕಾನೂನನ್ನು ರೂಪಿಸಲು ಒತ್ತಡ ಹೇರುವುದು. ಪಕ್ಷ ರಾಜಕಾರಣದಲ್ಲಿ ಮುಳುಗಿ ಕೊಳೆಯುತ್ತಿರುವವರಿಂದ ಇದನ್ನು ನಿರೀಕ್ಷಿಸಬಹುದೆ?
ಪ್ರಾದೇಶಿಕ ಭಾಷೆಗಳ ಉಳಿವಿಗೆ ಬೆಳವಣಿಗೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ನೀಡುವಂತೆ ಸರ್ವೋಚ್ಚ ನಾಯಾಲಯಕ್ಕೆ ಮೊರೆ ಹೋಗುವುದು ಇನ್ನೊಂದು ಮಾರ್ಗ. ಈ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿರುವ ಅಂತರಾಷ್ಟ್ರೀಯ ಸಂಘಸಂಸ್ಥೆಗಳ ನೆರವನ್ನೂ ಪಡೆಯಬಹುದು. ಇದಕ್ಕೆ ಭಾರೀ ಇಚ್ಛಾಶಕ್ತಿ ಬೇಕು. ಕುರ್ಚಿಗಾಗಿ ಹೋರಾಟ ನಡೆಸುತ್ತಿರುವ ರಾಜಕಾರಣಿಗಳಿಂದ ಇಂತಹ ಅಗಾಧ ಇಚ್ಛಾಶಕ್ತಿಯನ್ನು ಅಪೇಕ್ಷಿಸುವುದು ಮೂರ್ಖತನವೇನೊ ಅನ್ನಿಸುತ್ತಿದೆ.
ಇನ್ನು ಮುಂದಾದರೂ ಸರ್ಕಾರಗಳು ಮಾತೃಭಾಷೆ, ಶಿಕ್ಷಣ ಮಾದ್ಯಮ ಇಂತಹ ವೈಯಕ್ತಿಕ ಆಯ್ಕೆಯ ವಿಚಾರಗಳ ಹಕ್ಕನ್ನು ತಂದೆತಾಯಿ ಪೋಷಕರಿಗೆ ಬಿಟ್ಟುಬಿಡಲಿ ರಾಜ್ಯಭಾಷೆಯ ಸಮರ್ಥ ಬಳಕೆಯ ಹಕ್ಕನ್ನು ರಾಜ್ಯಸರ್ಕಾರ ಪರಿಣಾಮಕಾರಿಯಾಗಿ ಬಳಸುವಂತಹ ಯೋಜನೆ ರೂಪಿಸಲಿ. ಹೀಗೆಂದು ಆಶಿಸುವುದು ಸಧ್ಯದ ಮಟ್ಟಿಗೆ ಹೆಚ್ಚು ಅರ್ಥಪೂರ್ಣ ಎನ್ನಿಸುತ್ತದೆ.

Saturday, May 10, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 5

ಭಾಗ - 5 : ನೀನೊಲಿದ ವರನೆ ದೊರೆಯಲಿ ನಿನಗೆ! 
ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್ಲಿ ಹಿನ್ನೆಡೆಯಾಗಿದೆ. ಮಂಡೋದರಿಯ ಮಾತಿಗೆ, ಬೇಡಿಕೆಗೆ ಮಣಿದು ಕೊಲ್ಲೆನವಳಂ (ಸೀತೆಯನ್ನು) ಎಂದು ಮಾತು ಕೊಟ್ಟಿದ್ದಾನೆ. ಇತ್ತ ಮಗ ಅತಿಕಾಯನ ಮರಣದ ವಾರ್ತೆಯನ್ನು ಕೇಳಿದ ಧ್ಯಾನಮಾಲಿನಿ ಮರಣಶಯ್ಯೆಯಲ್ಲಿದ್ದಾಳೆ. ಸುದ್ದಿ ತಿಳಿದು ಅಲ್ಲಿಗೆ ಬಂದ ರಾವಣ ತುಂಬಾ ಸೋತುಹೋಗಿದ್ದಾನೆ; ವೇದಾಂತಿಯೂ ಆಗುತ್ತಾನೆ!
ಬಾಳ್!
ಕಳ್ಳನೊರೆದೊಂದು ಸುಳ್ಳಿನ ಸಂತೆ!
ಬರಿ ಬೊಂತೆ!
ಕಡೆಗೆ, ಬೆಂಕಿಯ ಹೊರೆದು,
ಬೂದಿರಾಸಿಯನುಳಿವ ಅರ್ಥವಿಲ್ಲದ ಬಣಗು ಕಂಥೆ!
ಇದಕೇಕಿನಿತು ಚಿಂತೆ?
ರಾವಣ ಈ ಮನಸ್ಥಿತಿಯಲ್ಲಿರುವಾಗಲೇ, "ಮೆಯ್ಯನಲ್ಲದೆ ಏಂ ಮನವನಿತ್ತೆನೆ?" ಎಂದು ರಾವಣನ ಶಕ್ತಿಯೇ ಉಡುಗುವಂತೆ ನುಡಿದ ಧಾನ್ಯಮಾಲಿನಿ
ಸ್ವಾಮಿ, ನನ್ನ ಮುಡಿಯಂ ನೋಡು,
ನಿಚ್ಚಮುಂ ತ್ರಿಜಟೆಯಿಂ ನಾಂ ಪಡೆದು ಮುಡಿದ
ರಘುರಾಮನ ಮಡದಿಯಡಿಯ ಪಾಪನಾಶಕ ಧೂಳಿ!.........
ಅದಕಾಗಿ ಆ ದೇವಿ ರಾಮಸತಿಗಿದೊ ಶತ ನಮಸ್ಕಾರಗಳ್!
ಎಂದು ಹೇಳಿ ಕಣ್ಣುಮುಚ್ಚಿಬಿಡುತ್ತಾಳೆ. ರಾವಣ ಕುಸಿಯಲಾರಂಬಿಸುತ್ತಾನೆ. ಅತ್ತ, ಇಂದ್ರಜಿತುವಿನ ಹೆಂಡತಿ ತಾರಾಕ್ಷಿ, ತನ್ನ ಪತಿಯ ಚಿತೆಯನ್ನು ಏರಲು ಸಿದ್ಧಳಾಗಿ ನಿಂತುಬಿಟ್ಟಿದ್ದಾಳೆ. ಅವಳನ್ನು ರಾವಣ-ಅನಲೆಯಲ್ಲದೆ ಬೇರೆ ಯಾರು ತಡೆದಾರು? ಅನಲೆ ತಡೆದು ನಿಲ್ಲಿಸಿದ್ದಾಳೆ. ದೊಡ್ಡಪ್ಪನನ್ನು ಕರೆತರಲು ಆಳನಟ್ಟಿದ್ದಾಳೆ. ವಿಷಯ ತಿಳಿದು ಧಾವಿಸಿ ಬಂದ ರಾವಣನಿಗೆ ಕಂಡದ್ದು, ಅನಲೆಯ ಅಪ್ಪುಗೆಯಲ್ಲಿ ಕುಸಿದ ಸೊಸೆ, ಮಗ ಮೇಘನಾದನ ವಲ್ಲಭೆ, ಮೊಮ್ಮಗ ವಜ್ರಾರಿಯ ತಾಯಿ, ತಾರಾಕ್ಷಿ. ರಾವಣ ಮರಗಟ್ಟಿ ನಿಲ್ಲುತ್ತಾನೆ. ಕವಿ ಉದ್ಘರಿಸುತ್ತಾರೆ: "ರಾಮಾಸ್ತ್ರತತಿಯಿಂ ಮುಂದೆ ಜಜ್ಜರಿತನಾದನ್ ಎಂಬುದು ಬರಿಯ ಕಥೆಯಲ್ತೆ?"
ದೊಡ್ಡಪ್ಪ ಬಂದುದನ್ನು ಕಂಡ ಅನಲೆ "ಸಖೀ, ಮಾವನದೊ! ಸುತನ ಸಾವಿನ ಸಿಡಿಲ್ ಬಡಿದು ಉಸಿರ್ ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್ ಗರಂ ತನಗೆರಗಿದಂತೆ" ಎನ್ನುತ್ತಾಳೆ. ಇಲ್ಲಿ ಅನಲೆಯ ಸಮಯಪ್ರಜ್ಞೆಯನ್ನೂ, ಅವಳ ಒಂದೊಂದು ಮಾತನ್ನೂ ಗಮನಿಸಬೇಕು. ’ಸಖೀ’ ಎಂದು ಸಂಬೋಧಿಸುವಲ್ಲೇ ಅವಳ ಮಾತೃಹೃದಯದ ಪರಿಚಯ ಮಾಡಿಸುತ್ತಾಳೆ. ಜೊತೆಗೆ, ’ನಿನ್ನ ನೋವ್ ಗರಂ ತನಗೆರಗಿದಂತೆ’ ಎಂದು ಹೇಳಿ ಆಕೆಯ ದುಃಖದ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸುತ್ತಾಳೆ. ರಾವಣ ಸೊಸೆಯನ್ನು ಸಮಾಧಾನ ಮಾಡಿ, ’ತಾನೇ ಸೇನಾಧಿಪನ ಪಟ್ಟವನ್ನು ಕಟ್ಟಿಕೊಂಡು ಯುದ್ಧವನ್ನು ಕೊನೆಗಾಣಿಸುತ್ತೇನೆ’ ಎಂದು ನಿಶ್ಚಯಿಸುತ್ತಾನೆ. ಸೊಸೆಗೆ ಮಗನನ್ನು ತೋರಿಸುವ ಇಚ್ಛೆಯಿಂದ, ವಜ್ರಾರಿಯನ್ನು ಹುಡುಕುತ್ತಾನೆ. ಅನಲೆ, ತಾಯಿ ಸರಮೆಯ ಬಳಿಯಿದ್ದ ವಜ್ರಾರಿಯನ್ನು ತಂದು ರಾವಣನ ಕೈಗೆ ಕೊಡುತ್ತಾಳೆ. ರಾವಣ "ಮಗಳೆ, ನೋಡಿಲ್ಲಿ ಇಹುದು ಬದುಕಿಗರ್ಥಂ, ಮತ್ತೆ ಬಾಳ್ಗೆ ಗುರಿ ನಿನಗೆ" ಎಂದು ವಜ್ರಾರಿಯನ್ನು ಆಕೆಯ ಮಡಿಲಿಗಿಡುತ್ತಾನೆ. ಅನಲೆ ಸಾಕ್ಷಿಯಾಗುತ್ತಾಳೆ ಜೊತೆಗೆ ತನ್ನ ಅತ್ತಿಗೆಯನ್ನು, ಗೆಳತಿಯನ್ನು ಉಳಿಸಿಕೊಳ್ಳುತ್ತಾಳೆ. ಹಿಂದೆ ಅನಲೆ ಸೀತೆಗೆ ಹೇಳಿದಂತೆ ಚಂದ್ರನಖಿಯೂ ರಾವಣನ ಆತ್ಮೋದ್ಧಾರಸಿದ್ಧಿಗೆ ಕೈಜೋಡಿಸುತ್ತಾಳೆ. "ಜನಕಕನ್ಯೆಯಂ ದಾಶರಥಿಗೊಪ್ಪಿಸು" ಎನ್ನುತ್ತಾಳೆ. ಅದಕ್ಕೆ ಇನ್ನೊಂದು ರೀತಿಯಲ್ಲಿ ಒಪ್ಪಿದ ರಾವಣ, 'ರಾಮನನ್ನು ಯುದ್ಧದಿ ಸೋಲಿಸಿ, ಸೆರೆಯಾಳಾಗಿಸಿ ತಂದು, ತನ್ನನ್ನು, ತನ್ನ ಸರ್ವ ಗರ್ವವನ್ನು ಸೋಲಿಸಿದ ಮೈಥಿಲಿಗೆ ಕಪ್ಪ ಕೊಡುತ್ತೇನೆ’ ಎನ್ನುತ್ತಾನೆ. ಆಗ ಚಂದ್ರನಖಿ "ಮಹಚ್ಛಿಲ್ಪಿ ನೀಂ ದಿಟಂ" ಎಂದು ಹೇಳಿ ಆನಂದಿಸುತ್ತಾಳೆ.
ಮುಂದೆ, ತನ್ನ ಎದೆಗೆ ಚುಚ್ಚಿದ ರಾಮನ ಬಾಣವನ್ನೇ, ರಾಮನೆಂದು ಭ್ರಮಿಸಿ, "ಸೆರೆ ಸಿಲ್ಕಿದನೊ ವೈರಿ" ಎಂದು ಉನ್ಮಾದಗೊಂಡು ಬಂದ ರಾವಣನನ್ನು ಸಂತೈಸಿ, ಮಂಡೋದರಿ ಬಾಣವನ್ನು ಕಿತ್ತಾಗ ರಾವಣ ಮರಣಮುಖಿಯಾಗುತ್ತಾನೆ. ತನ್ನ ಕಣ್ಣೆದುರಿಗೇ ತನ್ನ ದೊಡ್ಡಪ್ಪನು ಕಡೆಯುಸಿರೆಳೆವುದಕ್ಕೆ, ಅವನ ಹಿಂದೆಯೇ ದೊಡ್ಡಮ್ಮ ಮಂಡೋದರಿ ಮರಣವನ್ನಪ್ಪುವ ವೈಚಿತ್ರಕ್ಕೆ ಅನಲೆ ಸಾಕ್ಷಿಯಾಗುತ್ತಾಳೆ. ಮುಂದೆ, ರಾಮನೊಲಿದು ವಿಭೀಷಣನಿಗೆ ಲಂಕಾನಗರಿಯ ಪಟ್ಟಾಭಿಷೇಕವನ್ನು ನಿಶ್ಚಯಿಸುತ್ತಾನೆ. ಆದರೆ ವಿಭೀಷಣ ಅದನ್ನು ತನ್ನ ಕಯ್ಯಾರೆ, ತಾನೆ, ತಾರಾಕ್ಷಿ-ಇಂದ್ರಜಿತುವಿನ ಹಸುಳೆ ಶಿಶು ವಜ್ರಾರಿಯ ತಲೆಯ ಮೇಲೆ ಇಡುತ್ತಾನೆ. ಇವೆಲ್ಲವಕ್ಕೂ ಸಾಕ್ಷಿಯಾದ ಅನಲೆ, ಮುಖ್ಯವಾಗಿ ಸಾಕ್ಷಿಯಾಗಬಹುದಾದ ಮಹತ್ ಘಟನೆಯೊಂದಿದೆ; ಅದೇ ಸೀತಾರಾಮರ ಪುನರ್ಮಿಲನ!
ರಾಮನಾಜ್ಞೆಯನ್ನು ಹೊತ್ತು, ಸೀತೆಯನ್ನು ಕರೆದು ತರಲು ಹೊರಟ ಆಂಜನೇಯ, ವಿಭೀಷಣರ ಜೊತೆ ಅನಲೆಯೂ ಸೇರುತ್ತಾಳೆ. ಸೀತೆಯಿದ್ದ ಪರ್ಣಕುಟಿಯಿಂದ ಸ್ವಲ್ಪ ದೂರದಲ್ಲೇ ನಿಂತ ವಿಭೀಷಣ-ಆಂಜನೇಯರು, ಅನಲೆಯೊಬ್ಬಳನ್ನೇ ಸೀತೆಯ ಬಳಿಗೆ ಕಳುಹಿಸುತ್ತಾರೆ. ಆ ಕ್ಷಣ ಅನಲೆಯ ಸಂತೋಷಕ್ಕೆ ಎಣೆಯೇ ಇಲ್ಲ!
ದುಃಖವನೆಲ್ಲ ಮರೆತ ಅಣುಗಿ, ಸುಖವುಕ್ಕಿ,
ಭಾಷ್ಪಲೋಚನೆ, ಓಡಿ ಬಿಗಿದಪ್ಪಿ ಸೀತೆಯಂ,
ತೊದಲಿದಳ್, ತ್ರಿಜಟೆ ಪುಲಕಿಸಿ ಮೆಯ್ಮರೆಯುವಂತೆ:
ಶ್ರೀರಾಮ ಸಂದೇಶಮಂ ಪೊತ್ತ ಆಂಜನೇಯನಂ
ಕರೆತಂದು ನನ್ನಯ್ಯನ್ ಅದೊ ಅಲ್ಲೆ ನಿಂತಿಹನಮ್ಮ.
ನಿನ್ನ ಸಮಯವನರಿತು ಬಾ ಎಂದು ಎನಗೆ ಬೆಸಸಿದನ್
ಎನ್ನುತ್ತಾಳೆ. ಆಗ ಸೀತೆ
ಮಗಳೆ,
ಮಂಗಳದ ವಾರ್ತೆಯಂ ತಂದೆ.
ಚಿರಸುಖಿಯಾಗು.
ನೀನೊಲಿದ ವರನೆ ದೊರೆಯಲಿ ನಿನಗೆ!
ನಿನ್ನ ಕೈವಿಡಿದವಂ ಕೈಬಿಡದೆ ನಡೆಯಲೆಂದುಂ!
ಎಂದು ಅನಲೆಯನ್ನು ಆಶಿರ್ವದಿಸುತ್ತಾಳೆ. "ಪತಿಯ ವಚನಮಂ ಕೇಳ್ವಾತುರೆಗೆ ಸತಿಗೆ ನನಗೆ ಆವುದು ಅಸಮಯಂ? ಬೇಗದಿಂ ಕರೆದು ತಾರಮ್ಮಯ್ಯ ವಂದನೀಯರನಿರ್ವರುಂ!" ಎಂದು ಅನಲೆಗೆ ಹೇಳುತ್ತಾಳೆ. ಅವರಿಬ್ಬರು ಬಂದು ರಾಮನ ಸಂದೇಶವನ್ನು ಸೀತೆಗೆ ಒಪ್ಪಿಸುತ್ತಾರೆ. ಆಂಜನೇಯ-ಸೀತೆಯರ ನಡುವೆ ಸ್ವಾರಸ್ಯವಾದ ಮಾತುಕತೆ ನಡೆಯುತ್ತದೆ. ಕೊನೆಯಲ್ಲಿ, 'ಸೀತಾಂಜನೇಯರ ಜಗನ್ಮೋಹಕರ ಸಂವಾದ ಕಾವ್ಯರಸತೀರ್ಥದೊಳ್ ಮುಳುಗಿರ್ದ ರಾಕ್ಷಸೋತ್ತಮ ವಿಭೀಷಣನಿಗೆ’ ಆಂಜನೇಯನು
ಲೋಕಮಾನ್ಯೆಗೆ ಶಿರಸ್ನಾನಮಂ ಗೆಯ್ಸಿ,
ಶೀಘ್ರದಿಂ ಕರೆದು ತಾ,
ದಿವ್ಯಾಂಗರಾಗದಿಂದ ಅವತಂಸಯೋಗದಿಂ
ಭೋಗೀಂದ್ರಶಾಯಿಯರ್ಧಾಂಗಿಗೆ ಒಪ್ಪುವ ತೆರದಿ
ಸಿಂಗರಿಸಿ ಸುಮಗಂಧದಿಂ
ಎಂದು ಹೇಳುತ್ತಾನೆ. ಅವರ ಬಳಿಯೇ ನಿಂತು ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿದ್ದ ಅನಲೆಗೆ ವಿಭೀಷಣ ಹೀಗೆ ಹೇಳುತ್ತಾನೆ.
ಅನಲೆ,
ಬೆರಗು ಬಡಿದಂತೆ ಇಂತೇಕೆ ನಿಂತಿರುವೆ?
ತಡೆಯದೆಯೆ ಯಾನವೇರಿಸು ನಮ್ಮ ಭಾಗ್ಯದೀ ದೇವಿಯಂ.
ತ್ರಿಜಟೆಯ ಸಹಾಯದಿಂ, ನಿನ್ನ ತಾಯೊಡಗೂಡಿ,
ಪರಿಮಳ ದ್ರವ್ಯಮಯ ನವ್ಯ ತೈಲಂಗಳಂ ಪೂಸಿ,
ಮೀಯಿಸು ಸಖೋದಕ ಧಾರೆಯಿಂ,
ಪೊಂಗಿಂಡಿಗಳೊಳೆರೆದು ಪೊಯ್ ನೀರ್ಗಳಂ.
ಮತ್ತೆ, ಜನಕರಾಜನ ಮಗಳಿಗೆ, ಈ ದಶರಥನ ಸೊಸೆಗೆ, ರಾಮಪತ್ನಿಗೆ,
ಪಳಿಲಜ್ಜೆಯಂ ತೊರೆದು ಬಿಂಕದಿಂ ಕನಕ ಲಂಕಾ ಲಕ್ಷ್ಮಿ ತಲೆಯೆತ್ತಿ ನಿಲ್ವಂತೆವೋಲ್,
ತೊಡಿಸು, ಉಡಿಸು, ಮುಡಿಸು ದಿವ್ಯಾಂಬರ ಆಭರಣಮಂ ಪುಣ್ಯಪ್ರಸೂನಂಗಳಂ.
ಮಿಥಿಲೆಯಿಂದ ಅಂದು ಕೋಸಲಕೆ ದಿಬ್ಬಣಂಬೋದವೋಲ್,
ಇಂದೆಮ್ಮ ಲಂಕೆಯಿಂದ ಈಕೆ, ನವವಧುವೆನಲ್,
ಪ್ರಭುವೆಡೆಗೆ ಬೇಗದಿಂ ಪೋಗವೇಳ್ಕುಂ!
ತಂದೆಯ ಮಾತು ಕೇಳಿ ಸಿದ್ಧಳಾಗುತ್ತಿದ್ದ ಅನಲೆಗೆ, ಸೀತೆ ಸನ್ನೆಯಿಂದಲೇ ಅದನ್ನು ನಿರಾಕರಿಸುತ್ತಾಳೆ. ಇಂಗಿತಜ್ಞೆಯಾದ ಅನಲೆ, "ಅಸ್ನಾತೆಯಾಗಿಯೆ ಪೂಜ್ಯೆ ತೆರಳಲ್ಕೆ ಬಯಸುವಳ್, ತಂದೆ, ಪತಿಪಾದದರ್ಶನಕೆ" ಎಂದು ವಿಭೀಷಣನಿಗೆ ಹೇಳುತ್ತಾಳೆ. "ಆ ಪ್ರಭುವಿನಾಜ್ಞೆ, ದೇವಿ; ನನ್ನಿಚ್ಛೆಯೆಂದು ಅರಿಯದಿರ್" ಎನ್ನುತ್ತಾನೆ ವಿಭೀಷಣ. ಆಗ ಸೀತೆ, "ಮನ್ನಿಸು, ಮಹಾಪ್ರಾಜ್ಞ, ಭರ್ತೃವಾಜ್ಞೆಯೆ ಸತಿಗೆ ಪಥ್ಯಮಯ್. ನಿನ್ನಾಡಿತಕ್ಕೆ ಇದಿರ್ ನುಡಿಯೆನಿನ್. ತಂದೆ ನೀನು ಎನಗಿಲ್ಲಿ. ನೀನೆಂದವೋಲಕ್ಕೆ, ತಂದೆ!" ಎಂದು ನುಡಿದು ಅನಲೆಯನ್ನು ಆಶ್ರಯಿಸಿ ದಂಡಿಗೆಗೆ ಹೋಗಿ ಕುಳಿತುಕೊಳ್ಳುತ್ತಾಳೆ.
ಮುಂದೆ ಸೀತೆ ಸರ್ವಾಲಂಕಾರ ಭೂಷಿತೆಯಾಗಿ ರಾಮನಿದ್ದೆಡೆಗೆ, ಮೆರವಣಿಗೆಯಲ್ಲಿ ಬರುತ್ತಾಳೆ, ಅನಲೆಯ ಜೊತೆಗೆ. ಮೆರವಣಿಗೆಯ ನೇತೃತ್ವವನ್ನು ವಿಭೀಷಣನೇ ವಹಿಸಿರುತ್ತಾನೆ. ಕಪಿಸೈನ್ಯದ ಸಂಭ್ರಮವೂ ಮುಗಿಲು ಮುಟ್ಟುತ್ತದೆ. ಸದ್ದು ಅಡಗಿದ ಮೇಲೆ, "ಧರಾತ್ಮಜೆಯನ್ ಒರ್ವಳನೆ ಬಿಜಯಗೆಯ್ಸು ಎನ್ನೆಡೆಗೆ" ಎಂದು ರಾಮ ವಿಭೀಷಣನಿಗೆ ಆದೇಶಿಸುತ್ತಾನೆ. ವಿಭೀಷಣನಿಂದ ವಿಷಯ ತಿಳಿದ ಅನಲೆ "ನಾನುಂ ಆರ್ಯೆಯುಂ ಕೆಳೆಗೂಡಿ ಬಂದೊಡೆ ಏನ್ ಆರ್ಯಂಗೆ ತೊಂದರೆಯೆ?" ಎಂದು ವಿನೋದವಾಡುತ್ತಾಳೆ. ಆದರೆ ಸಂದರ್ಭ ಅವಳಂದುಕೊಂಡಂತೆ ಇರುವುದಿಲ್ಲ. ಅದನ್ನು ಅರಿತಿರುವ ವಿಭೀಷಣ ಮಗಳನ್ನು ಸುಮ್ಮನಿರುವಂತೆ ಸನ್ನೆ ಮಾಡುತ್ತಾನೆ. ಸಂತೋಷದಿಂದ ಪುಟಿಯುತ್ತಿದ್ದ ಅವಳ ಮುಖ ಕುಂದುತ್ತದೆ. ಸಂಕಟದಿಂದಲೇ, ಸಿಬಿಕೆಯ ಬಳಿಗೆ ಹೋಗಿ ತೆರೆಯೆಳೆದು ಸೀತೆಗೆ ವಿಷಯ ತಿಳಿಸುತ್ತಾಳೆ. ಸೀತೆ ರಾಮನ ಬಳಿ ಬಂದಾಗ, ರಾಮನಾಡುವ ಮಾತುಗಳು ವಿಭೀಷಣನಿಗೆ ಅಧಿಕಪ್ರಸಂಗದಂತೆ ಕಾಣುತ್ತವೆ. ಆದರೂ ಆತ ಅದನ್ನು ಸಹಿಸಿಕೊಳ್ಳುತ್ತಾನೆ. ಅದೆಲ್ಲವನ್ನೂ, ರಾಮನ ಮಾತುಗಳನ್ನೂ ದೂರದಲ್ಲಿಯೇ ನಿಂತು ಅನಲೆ ಕೇಳಿಸಿಕೋಳ್ಳುತ್ತಿದ್ದಾಳೆ. ತನ್ನದೇ ಕಾರಣಗಳನ್ನು ನೀಡಿ, "ರಾಕ್ಷಸಶ್ರೀಯುತೆ" ಎಂದು ಸೀತೆಯನ್ನು ನಿಂದಿಸಿ, 'ತನ್ನ ಕರ್ತವ್ಯವನ್ನು ತಾನು ಮಾಡಿದೆ' ಎಂದು ಹೇಳಿ, "ತೊಲಗುನಡೆ ಮೂರ್ಖೆ, ನೀನೆಲ್ಲಿಗಾದೊಡಂ ಎನ್ನ ಕಣ್ಮುಂದೆ ನಿಲ್ಲದಿರ್" ಎಂದು ರಾಮ ಕಠಿಣವಾಗಿ ವರ್ತಿಸುತ್ತಾನೆ.
ರಾಕ್ಷಸಂ ಮುಟ್ಟಿದನೆ?
ನಾನಲ್ತು, ದೈವಂ ಅಪರಾಧಿ.
ಮೆಯ್ಯನಲ್ಲದೆ ಮನವನೇಂ ಮುಟ್ಟಿದನೆ?
ಮುಟ್ಟಲಾರದೆ ಸುಟ್ಟು ಸೀದನಯ್
ಎಂದು ಅಬ್ಬರಿಸುತ್ತಾಳೆ. ಸೀತೆ ರಾಮನಿಗೆ ಪ್ರತ್ಯುತ್ತರವನ್ನೇನೊ ನೀಡುತ್ತಾಳೆ. ಆದರೆ ಕೊನೆಗೆ, "ಚಿತೆಯಂ ರಚಿಸು ಸೌಮಿತ್ರಿ! ಮಿಥ್ಯಾಪವಾದ ಘಾತಕೆ ಸಿಲ್ಕಿದೆನೆಗೆ ಬಾಳ್ ಮರಗೂಳನೊಂದು ಕೆಂಗೂಳ್" ಎಂದು ಲಕ್ಷ್ಮಣನಿಗೆ ಹೇಳುತ್ತಾಳೆ. ಲಕ್ಷ್ಮಣ "ಏನುಗ್ರನಗ್ರಜನೊ?" ಎಂದು ಅತ್ತಿಗೆಯ ಆಜ್ಞೆಯನ್ನು ಪಾಲಿಸುತ್ತಾನೆ. ಪತಿಗೆ ನಮಸ್ಕರಿಸಿ, ಮನದಲ್ಲಿ ಶಾಂತಿಯನ್ನಾಂತು, ನೋಡಿದವರೆಲ್ಲ ಬೆರಗಾಗುವಂತೆ ನಸುನಗುತ ಚಿತೆಯ ಬಳಿಗೆ ಬರುತ್ತಾಳೆ. ಅನಲೆ ಎಲ್ಲವನ್ನೂ ನಿಂತಲ್ಲಿಂದಲೇ ನೋಡುತ್ತಿದ್ದಾಳೆ. ಅಗ್ನಿಗೆ ನಮಸ್ಕರಿಸಿದ ಸೀತೆ,
ಮುಗಿದ ಕೈ ಮುಗಿದಂತೆ,
ತಪ್ತ ನವ ಹೇಮಾಭೆ ಪೊಕ್ಕಳ್ ಧಗದ್ಧಗಿಸುವುಜ್ಜ್ವಲ ಚಿತಾಗ್ನಿಯಂ,
ಮಂಗಳಾಜ್ಯಾಹುತಿಯವೋಲ್, ಪೂಜ್ಯೆ!
ಓಒಓ ಹೋಯೆಂದು ಹರಿದು ಹಬ್ಬಿದುದು
ಅಹಾ ರೋದನಂ ರೋದೋಂತಮಂ!
ಅಲ್ಲಿ ನೆರೆದಿದ್ದವರೆಲ್ಲಾ, ತಮ್ಮ ಕಣ್ಣೆದುರಿಗೇ ಸೀತೆ ಚಿತೆಗೆ ಬಿದ್ದಿದ್ದನ್ನು ಕಂಡು ದಿಗಿಲುಗೊಂಡು ರೋಧಿಸುತ್ತಿದ್ದಾರೆ. ಅಷ್ಟರಲ್ಲಿ, ಯಾರೂ ಊಹಿಸದಿದ್ದ, ಸ್ವತಃ ಲಕ್ಷ್ಮಣ, ಆಂಜನೇಯ, ಸುಗ್ರೀವ, ವಿಭೀಷಣ, ಅನಲೆಯರೂ ಊಹಿಸದಿದ್ದ ಘಟನೆಯೊಂದು ಕ್ಷಣಮಾತ್ರದಲ್ಲಿ ಘಟಿಸಿಬಿಡುತ್ತದೆ!
ನಿಷ್ಠುರಂ ಶಿಲಾಮೂರ್ತಿಯೆನೆ ನಿಷ್ಪಂದನಾಗಿ ನಿಂದು
ಅನಿತುಮಂ ಸಾಕ್ಷಿಯೊಲ್ ನಿಟ್ಟಿಸುತ್ತಿರ್ದ
ರಾಮಾನನಂ ತಾನಾಯ್ತು ದೀಪ್ಯಮಾನಂ.
ಚಲಿಸಿದನು ಚಿತೆಗೆ,
ನೋಳ್ಪರ್ ಆ ವಿಸ್ಮಯಂ ಚಿಂತೆಗೆ ತಿರುಗುವಂತೆ.
ಓವೊವೋ ಎಂಬನಿತರೊಳೆ ತಾಂ ಪ್ರವೇಶಿಸುತ್ತ
ಉಜ್ಜ್ವಲಿಪ ಗೋಪುರೋಪಮದ ಅಗ್ನಿ ಮಧ್ಯೆ
ಮರೆಯಾದನೈ ಜಮದಗ್ನಿಜಾತನಂ ಜಯಿಸಿದಾತಂ!
ಅಲ್ಲಿ ನೆರೆದಿದ್ದವರೆಲ್ಲರಿಗೂ, ಒಂದು ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಇನ್ನೊಂದು ಆಘಾತ! ’ದೇವರಪೂಜೆಗೆಂದು ಬಂದವರ ಮೇಲೆ ದೇವಸ್ಥಾನವೇ ಬಿದ್ದಂತಾಯ್ತು’. ಸೀತಾರಾಮರ ಪುನರ್ಮಿಲನಕ್ಕೆ ಸಾಕ್ಷಿಯಾಗಬೇಕಾದವರು, ಅವರಿಬ್ಬರ ಅಗ್ನಿಪ್ರವೇಶಕ್ಕೆ ಸಾಕ್ಷಿಯಾಗಬೇಕಾಯಿತು. ರಾಮ ಸೀತೆಗೆ ’ಅಗ್ನಿಪ್ರವೇಶ ಮಾಡು’ ಎಂದು ಹೇಳಲೇ ಇಲ್ಲ. ಆಯ್ಕೆಯನ್ನು ಅವಳಿಗೆ ಬಿಟ್ಟು, ’ನೀನು ಸ್ವತಂತ್ರಳು’ ಎಂದ. ಆದರೆ ಆಕೆ ಹಿಡಿದ ಹಾದಿಯನ್ನೇ ತಾನೂ ಆರಿಸಿಕೊಂಡ! ಆದರೆ, ನೋಡುವವರಿಗೆ, ಅದು, ’ಸೀತೆಯನ್ನು ರಕ್ಷಿಸುವುದಕ್ಕೆ ರಾಮನೂ ಅಗ್ನಿಪ್ರವೇಶ ಮಾಡಿದ್ದಾನೆ’ ಎಂಬಂತೆ ಸಹಜವಾಗಿಯೇ ನಡೆದುಹೋಗಿದೆ. ಪ್ರತಿಯೊಂದು ಚೇತನವೂ ರಾಮನ ಸ್ಮರಣೆಯಲ್ಲಿ ಮುಳುಗಿಬಿಡುತ್ತದೆ. ಆಗ ಅನಲೆಯ ಮನದಲ್ಲಿ ಬಹುದೊಡ್ಡ ಕೋಲಾಹಲವೇ ನಡೆಯುತ್ತಿರುತ್ತದೆ. ಎಲ್ಲರೂ ನೋಡು ನೋಡುತ್ತಲೇ,
ಹವ್ಯವಾಹನ ಪವಿತ್ರತನುವಿಂ
ಪೊಣ್ಮಿದನು ದಶರಥಾತ್ಮಜಂ
ಜಾನಕೀ ಪಾಣೀಗ್ರಹಣ ಕೃಪಾಲು!
ಸೀತೆಯಂ ಪಾವನಾಗ್ನಿಸ್ನಾತೆಯಂ,
ಕಿರ್ಚ್ಚಿನುರಿಯಿಂದೆ ಕಾಯ್ವ ತೆರದಿಂದೆ,
ಕರೆತಂದನೊಯ್ಯನೆ ಪೊರಗೆ
ದುರಿತವಿರಹಿತ ಶಾನ್ತ ಹರಿತಶಾದ್ವಲ ಚಾರು ಆ ಗಿರಿಯ ವೇದಿಕೆಗೆ.
ರಾಮನು ಸೀತೆಯೊಂದಿಗೆ ಚಿತೆಯಿಂದ ಮೇಲೆದ್ದು ಬರುತ್ತಾನೆ. ದಿವ್ಯದೇಹದಿಂದ, ದಿವ್ಯ ಮಾಲ್ಯಾಂಬರಗಳಿಂದ, ದಿವ್ಯತೇಜಸ್ಸಿನಿಂದ ಶೋಭಿಸುತ್ತಿದ್ದ ಸೀತಾರಾಮರನ್ನು ಕಂಡು ಕಪಿವೃಂದವೂ, ಲಂಕೆಯ ಜನರೂ ಹರ್ಷೋದ್ಗಾರದಿಂದ ಸ್ವಾಗತಿಸುತ್ತಾರೆ. ಆಗ,
.........ಓಡಿ ಬಂದ ಅನಲೆ
ದಿಂಡುಗೆಡೆದಳು ರಾಮಪದತಲದಿ ಸಂತೋಷಮೂರ್ಛಿತೆಯವೋಲ್:
ಮನ್ನಿಸೈ, ಸ್ವಾಮಿ;
ದೇವಿಯಂ ನಿಂದಿಸಿದ ನಿನ್ನನ್ ಎನಿತೆನಿತೊ ನಾಂ ಬಯ್ದೆನಯ್.
’ಹದಿಬದೆಯನ್ ಅಗ್ನಿವುಗಿಸುವುದಿರಲಿ, ತನ್ನಂ ಪರೀಕ್ಷಿಸುವರಾರೊ?
ತಾನೇಂ ಪೊರತೊ ದುರಿತ ದೋಷಕೆ?’
ಎನುತೆ ಶಂಕಿಸಿದೆನ್, ಆ ನಿಂದೆ ಭಸ್ಮವಾಯಿತು, ತಂದೆ,
ನೀನೊಡ್ಡಿದ ಈ ಚಿತೆಯ ಲೋಕಪಾವಕ ಪವನಸಖನಿಂದೆ:
ಪೂಜ್ಯೆಯಂ ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ!
ಲೋಕತೃಪ್ತಿಗೆ ಲೋಕಮರ್ಯಾದೆಗೆ ಒಳಗಾದೆ;
ಸರ್ವಲೋಕಪ್ರಭುವೆ, ಲೋಕಗುರು ನೀಂ ದಿಟಂ!
ಶತಶತಮಾನಗಳಿಂದ, ವಾಲ್ಮೀಕಿ ರಾಮಾಯಣದ ಈ ಸನ್ನಿವೇಶವನ್ನು ಓದಿ, ಕೇಳಿ ವ್ಯಾಕುಲಗೊಂಡಿದ್ದ, ಕ್ರೋಧಗೊಂಡಿದ್ದ, ಚಿಂತಿತವಾಗಿದ್ದ ಮನಸ್ಸುಗಳ ಪ್ರತಿನಿಧಿಯಂತೆ ಅನಲೆ ಮಾತನಾಡಿದ್ದಾಳೆ. ರಾವಣ ಮಹಾಶಿಲ್ಪಿ ಎಂದು ಚಂದ್ರನಖಿ ಹೇಳಿದ್ದಳು. ಇಲ್ಲಿ ಅನಲೆ ’ಲೋಕಗುರು’ ಎಂದು ರಾಮನಿಗೆ ಹೇಳುತ್ತಿದ್ದಾಳೆ! ರಾವಣತ್ವವು ಕಳೆದ ಮೇಲೆ ರಾವಣನೂ ರಾಮನೆ! ಯಾರೂ ಬೇಕಾದರೂ ರಾಮನಾಗಬಹುದು; ರಾವಣತ್ವವನ್ನು ತ್ಯಜಿಸುವುದರ ಮೂಲಕ. ಅಲ್ಲಿಯವರೆಗು ಕಣ್ಣ ಮುಂದೆ ನಡೆದ ಘಟನಾವಳಿಗಳನ್ನು, ಸಹೃದಯ ವಿಮರ್ಶಕಿಯಾಗಿ ಅನಲೆ ಅವಲೋಕಿಸಿತ್ತಾಳೆ. ಆಕೆಯ ಮಾತು ಅಲ್ಲಿ ನೆರೆದಿದ್ದವರಿಗೆಲ್ಲಾ ಹೃದಯದಂತರ್ ಬೋಧೆಯಾಗಲು, ಪ್ರತಿಯೊಬ್ಬರೂ ಬಂದು ಸೀತಾರಮರಿಗೆ ನಮಸ್ಕರಿಸುತ್ತಾರೆ.
ರಾಮಾಯಣದ ಪ್ರಮುಖ ಘಟ್ಟ ಸೀತೆಯ ಅಗ್ನಿಪ್ರವೇಶ. ಸೀತೆಯನ್ನು ರಕ್ಷಿಸುವ ನೆಪದಲ್ಲಿ ತಾನೂ ಪರೀಕ್ಷೆಗೆ ಒಳಪಡುವ ಉದಾತ್ತನನ್ನಾಗಿಸಿ ಶ್ರೀರಾಮನನ್ನು ಚಿತ್ರಿಸಿ, ಶ್ರೀರಾಮಾಯಣದರ್ಶನವನ್ನಾಗಿಸಿದ ಕವಿಪ್ರತಿಭೆ, ಆ ಘಟನೆಯ ನಂತರ ಅನಲೆಯೊಬ್ಬಳ ಮಾತುಗಳ ಮೂಲಕವೇ, ಅದರ ಅಂತರಾರ್ಥವನ್ನು ಜಗತ್ತಿಗೆ ಸಾರುವ ಮೂಲಕ ತಾನು ಸೃಜಿಸಿದ ಪಾತ್ರಕ್ಕೆ ಒಂದು ವಿಶೇಷ ವ್ಯಕ್ತಿತ್ವವನ್ನು ಆರೋಪಿಸಿ ಅನಲೆಯನ್ನು ಅಜರಾಮರಗೊಳಿಸಿದೆ.
ಅನಲೆಯನ್ನುಳಿದ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ, ಅನಲೆ ಇಡೀ ಕಾವ್ಯವನ್ನು ಆವರಿಸಿದ್ದಾಳೆ. ಆಕೆ ಕೇವಲ ಒಂದು ಪಾತ್ರವಾಗಿ ಉಳಿಯದೆ ಬೆಳೆಯುತ್ತಾ ಹೋಗುವ ಪರಿಯೇ ಒಂದು ಅಚ್ಚರಿ! ತನ್ನ ದರ್ಶನದ ಪ್ರತಿಪಾದನೆಗಾಗಿ, ತನ್ನ ಆದರ್ಶಕ್ಕೆ ಅನುಗುಣವಾದ ಒಂದು ಹೊಸ ಪಾತ್ರವನ್ನೇ ಸೃಷ್ಟಿಸಿ, ಆ ಪಾತ್ರ ರಾಮಾಯಣಕ್ಕೆ ಅನಿವಾರ್ಯ ಎನ್ನಿಸುವಂತೆ ಅದನ್ನು ಪೋಷಿಸಿದ್ದಾರೆ ಕವಿ. ಸರಮೆ, ವಿಭೀಷಣರನ್ನು ಹೆಸರಿಸುವಾಗ ಅನಲೆಯ ಬೊಪ್ಪ, ಅನಲೆಯ ತಾಯಿ ಎಂದು ಕಾವ್ಯದುದ್ದಕ್ಕೂ ಅನಲೆಯನ್ನು ನೆನಪಿಸುತ್ತಿರುತ್ತಾರೆ. ರಾವಣನ ಶ್ರೀದೇಹಕ್ಕೆ ಕಿಚ್ಚನ್ನಿಕ್ಕುವುದು ವಿಭೀಷಣ ಎನ್ನುವದಕ್ಕೆ ಬದಲಾಗಿ ’ಅನಲೆಯ ತಂದೆ ಕಿರ್ಚಿಡಲ್’ ಎನ್ನುತ್ತಾರೆ. ಈ ಎಲ್ಲಾ ಕಾರಣಗಳಿಂದಲೇ ನಾನು ಅನಲೆಯನ್ನು ’ಕವಿಮಾನಸಪತ್ರಿ’ ಎಂದು ಕರೆದದ್ದು. ಅನಲೆಯ ಪಾತ್ರವೊಂದೇ ಸಾಕು, ಕುವೆಂಪು ಅವರ ಕಲಾಸೃಷ್ಟಿಯ ವಿಶ್ವವಿರಾಡ್-ಸ್ವರೂಪವನ್ನರಿಯಲು. ಅನಲೆ ಕೂಡುಕುಟುಂಬವೊಂದರ ಮುದ್ದಿನ ಮಗಳು. ತಂದೆ ವಿಭೀಷಣ, ತಾಯಿ ಸರಮೆ. ದೊಡ್ಡಪ್ಪಂದಿರು ರಾವಣ-ಕುಂಭಕರ್ಣ. ದೊಡ್ಡಮ್ಮ ಮಂಡೋದರಿ, ಅಣ್ಣ ಇಂದ್ರಜಿತು, ಅತ್ತಿಗೆ-ಗೆಳತಿ ತಾರಾಕ್ಷಿ. ಪುಟ್ಟ ಹುಡುಗಿಗೆ ಆಡಲು ಇರುವ ಒಂದು ಜೀವಂತ ಗೊಂಬೆಯಂತೆ ವಜ್ರಾರಿ! ಬದುಕಿನ ಪ್ರಮುಖ ಘಟ್ಟದಲ್ಲಿ ಗುರುವಿನೋಪಾದಿಯಲ್ಲಿ ದೊರೆತ ಸೀತೆ, ಜೀವಿತಕ್ಕೊಂದು ದರ್ಶನವನ್ನೊದಗಿಸಿದ ರಾಮ. ಶ್ರೀಕುವೆಂಪುವ ಸೃಜಿಸಿದ ರಾಮಾಯಣದಲ್ಲಿ ಅನಲೆ ಮಕುಟಮಣಿಯಾಗಿದ್ದಾಳೆ, ನಿತ್ಯನೂತನಳಾಗಿದ್ದಾಳೆ, ಸಹೃದಯಶ್ರೀಯ ಪ್ರತಿನಿಧಿಯಾಗಿದ್ದಾಳೆ.
 ಅನಲೆಯಂತಹ ಮಗಳು ಮನೆಗೊಬ್ಬಳಿರಲಿ ಎನ್ನಿಸಿದರೆ ಅದು ದುರಾಸೆಯಲ್ಲ! ಆದ್ದರಿಂದಲೇ, "ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್!" ಎಂಬುದು ಕೇವಲ ರಾವಣನ ಮಾತಾಗಿ ಉಳಿಯದೆ, ಕವಿಯ ಮಾತೂ ಆಗುತ್ತದೆ; ಸಹೃದಯರ ಮಾತೂ ಆಗುತ್ತದೆ!
[ಮುಗಿಯಿತು]

Friday, May 09, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 4

ಭಾಗ - 4 : ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ! 
ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡುವಣ ಅಂತಹುದೊಂದು ನಂಟಿಗೆ ಕಾರಣವೇನು? ಇಂತಹುದೊಂದು ಪ್ರಶ್ನೆಗೆ ಉತ್ತರ ಸಿಗುವುದು, ಕುಂಭಕರ್ಣನ ವಧೆಯಾದ ಮೇಲೆ! ತನ್ನ ಕಿರಿದೊಡ್ಡಯ್ಯನನ್ನು ನೆನೆದು ಅನಲೆ ದುಃಖಿಸುತ್ತಾ ಸೀತೆಗೆ ಆತನ ಬಗ್ಗೆ ಹೇಳಿದಾಗ. ಅಲ್ಲಿ ನಮಗೆ ಅನಲೆಯ ಬಾಲ್ಯದ ಜೀವನದ ಎಳೆಗಳೂ ಸಿಗುತ್ತವೆ. ಕೂಡುಕುಟುಂಬವೊಂದರಲ್ಲಿ ಬೆಳೆಯುವ ಮುದ್ದುಮಗುವಿನ ಚಿತ್ರಣವೂ ದೊರೆಯುತ್ತದೆ. ಹೌದು. ರಾವಣನ ಸೈನ್ಯಕ್ಕೆ ಹಿನ್ನಡೆಯಾಗಿ, ಆತನ ಪ್ರಮುಖ ದಳಪತಿಗಳೆಲ್ಲಾ ನಿರ್ನಾಮವಾದಾಗ ರಾವಣ ತನ್ನ ಸಹೋದರ ಕುಂಭಕರ್ಣನನ್ನು ಎಬ್ಬಿಸಿ, ಯುದ್ಧಕ್ಕೆ ಕಳುಹಿಸುತ್ತಾನೆ. ಗಮನಿಸಬೇಕು, ಕುಂಭಕರ್ಣನೂ ಸಹ ರಾವಣನ ಅಕೃತ್ಯವನ್ನು ಒಪ್ಪುವುದಿಲ್ಲ. ಆದರೆ, ತನ್ನ ಅಣ್ಣನಿಗೋಸ್ಕರ, ಲಂಕೆಗೋಸ್ಕರ ಯುದ್ಧ ಮಾಡಲು ಒಪ್ಪುತ್ತಾನೆ. ಯುದ್ಧದಲ್ಲಿ ಹೋರಾಡಿ ಮಡಿಯುತ್ತಾನೆ. ಅಂದು ಉಂಟಾದ ಅಲ್ಲೋಲಕಲ್ಲೋಲದಿಂದ ರಣಭೂಮಿಯಲ್ಲಿ ಬೆಂಕಿಯೆದ್ದು ಹೊಗೆ ಭೂಮಿ ಆಕಾಶವನ್ನು ಒಂದು ಮಾಡಿರುತ್ತದೆ. ಇತ್ತ ಅಶೋಕವನದಲ್ಲಿದ್ದ ಸೀತೆ ಕಳವಳಿಸುತ್ತಿದ್ದಾಳೆ. "ತಳುವಿಹಳ್ ಅನಲೆಯುಂ; ನಿಚ್ಚಮುಂ ಪೊಗಸು ಸೊಗಯಿಸುವ ಮುನ್ನಮೇ ಬರುತಿರ್ದವಳ್, ದಿನದಿನದ ರಣವಾರ್ತೆಯಂ ತರುತಿರ್ದವಳ್?" ಎಂದು ಅನಲೆಯನ್ನು ನೆನಪು ಮಾಡಿಕೊಂಡು ಶೋಕಿಸುತ್ತಾಳೆ. ಸೀತೆಗೆ ಯುದ್ಧಭೂಮಿಯ ವರದಿ ತಲಪುತ್ತಿದ್ದುದೇ ಅನಲೆಯಿಂದ. ಅನಲೆ ಬಂದರೆ ಸೀತೆಗೆ ಸಮಾಧಾನ. ಇತ್ತ ಸೀತೆ ತ್ರಿಜಟೆಯೊಂದಿಗೆ ಅನಲೆ ಬರದಿರುವುದಕ್ಕೆ ಪರಿತಪಿಸುತ್ತಾ, ತ್ರಿಜಟೆಯ ಭಯವನ್ನು ಹೋಗಲಾಡಿಸಿತ್ತಾ ಇದ್ದರೆ, ಅತ್ತ ಅನಲೆ ಕುಂಭಕರ್ಣನ ಸಾವಿನಿಂದ, ’ರೋದನದಲ್ಲಿ ಯುದ್ಧಭೂಮಿಯನ್ನೇ ಮೀರಿಸುತ್ತಿದ್ದ’ ರಾವಣನ ಅರಮನೆಯಲ್ಲಿದ್ದಾಳೆ. ಅಲ್ಲಿಂದ, ಮನಶ್ಯಾಂತಿಯನ್ನು ಆರಿಸಿ ಬರುವವಳಂತೆ, ’ಶೋಕವನವಾಗಿದ್ದ ಅರಮನೆಯಿಂದ ಅಶೋಕವನಕ್ಕೆ’ ಬರುತ್ತಾಳೆ. ಬಂದವಳೇ ಸೀತೆಯ ಪಾದಗಳಿಗೆ ಅಡ್ಡಬೀಳುತ್ತಾಳೆ. ’ಅಶ್ರುಮಯ ಲೋಚನೆಯ, ಗದ್ಗದಧ್ವನಿಯ, ಶೋಕಾಕುಲೆಯ ಸುಮಕೋಮಲಾಂಗಮಂ ಕನಿಕರದಿನೆತ್ತಿದ’ ಸೀತೆ ಆಕೆಗೆ ಸಮಾಧಾನ ಮಾಡುತ್ತಾಳೆ; ತಾಯಿ ಮಗಳನ್ನು ಸಂತೈಸುವಂತೆ.
ತಳ್ಕೈಸಿದಳು ಸೀತೆ,
ತಾಯ್ ಮಗಳನೆಂತಂತೆವೋಲ್.
ಕಂಬನಿಯೊರೆಸಿದಳು;
ಮೊಗವ ಮುಂಡಾಡಿದಳು;
ಕುವರಿಯೊಡಲಂ ತನ್ನ ಮೆಯ್ಗೆ ತಳ್ತಪ್ಪುತ್ತೆ
ಕಣ್ಮುಚ್ಚಿ ಮೌನಿಯಾದಳ್.
ತನ್ನ ಹೃದಯದ ನಿಗೂಢತಮ ಶಾಂತಿಯಂ
ಯೌಗಿಕ ವಿಧಾನದಿಂ ಅನಲೆಯಾತ್ಮಕೆ
ದಾನಗೈವಂದದಿಂದಿರ್ದು,
ನುಡಿಸಿದಳು ತುಸುವೊಳ್ತನಂತರಂ:
ಎಂತು ನಾನ್ ಸಂತೈಪೆನೌ ನಿನ್ನನ್ ಅನಲೆ?
ಬಾಯ್ ಬರದು ಎನಗೆ
ನಿನ್ನನ್ ಅಳವೇಡ ಎನಲ್, ತಾಯಿ
ಭೂಮಿಜಾತೆ ಸೀತೆ ಇಲ್ಲಿ ನಿಜದ ತಾಯಿಯಾಗಿಬಿಟ್ಟಿದ್ದಾಳೆ. ಅವಳ ಸಂತೈಕೆಗೆ ಅನಲೆಯ ದುಃಖದ ಕಡಲು ಬತ್ತಲಾರಂಭಿಸಿದೆ. ತನ್ನ ತಲೆಗೂದಲನ್ನು ನೇವರಿಸುತ್ತಾ ಮಾತನಾಡುತ್ತಿದ್ದ ಸೀತೆಯನ್ನು, ಮಗು ತಾಯಿಯನ್ನು ನೋಡುವಂತೆಯೇ ನೋಡುತ್ತಾಳೆ. ಸೀತೆಯ ಕಣ್ಣಗಳೂ ಹನಿಯಿಂದ ಕೂಡಿವೆ. ತಕ್ಷಣ ಅನಲೆ ಎಚ್ಚೆತ್ತುಕೊಳ್ಳುತ್ತಾಳೆ. ತನ್ನ ಬೆರಳುಗಳಿಂದ ಸೀತೆಯ ಕಣ್ಣೀರನೊರೆಸಿ, ಸಮಾಧಾನಿಸುವ ನೆಪದಲ್ಲಿ, ಕುಂಭಕರ್ಣನ ಬಗ್ಗೆ ತನಗಿದ್ದ ಒಲವನ್ನು ತೆರೆದಿಡುತ್ತಾಳೆ. ಅದರ ಮೂಲಕ ಅವಳೂ ಸಮಾಧಾನ ಹೊಂದುತ್ತಾ ಸಾಗುತ್ತಾಳೆ. ಅನಲೆಯ ನುಡಿಗಳಿವು:
ನಿನ್ನಳಲನ್ ಅಳ್ತು ಮುಗಿಸಲ್
ನಿನಗೆ ಸಾಲದಾಗಿರೆ ನಿನ್ನ ಕಣ್ಣೀರ್,
ನನ್ನಳಲ್ಗೇಕೆ ತವಿಸುವೆ, ದೇವಿ,
ಬರಿದೆ ನಿನ್ನ ಈ ನೇತ್ರ ತೀರ್ಥಾಂಬುವಂ.
ನಿನ್ನ ನಯನದಿಂದ ಉರುಳುವ ಒಂದೊಂದು ಅಶ್ರುಬಿಂದುವುಂ
ಪೆರ್ಚಿಪುದು ನಮ್ಮ ಲಂಕೆಯ ಶೋಕಜೀವನದ ಸಿಂಧುವಂ.
ನೀನಳ್ತೆ: ಆ ಹನಿಗಳೊಂದೊಂದುವುಂ ಬಡಬಾಗ್ನಿ ಕಡಲಾಗಿ
ಕುಡಿದುವವ್ ಲಂಕೆಯ ಮಹಾಸುರ ಸಹಸ್ರಾಸು ವಾಹಿನಿಗಳಂ.
ಇದು ಅನಲೆ ಸೀತೆಗೆ ಹೇಳುವ ಸಮಾಧಾನದ ನುಡಿಗಳು. ಇಲ್ಲಿ ಯಾರು ಯಾರಿಗೆ ತಾಯಿ? ಸೀತೆಯ ದುಃಖ ದೊಡ್ಡದು, ಅದರಿಂದ ಆಕೆಯ ಕಣ್ಣಿರಿನ ಒಂದೊಂದು ಹನಿಗೂ, ಅದಕ್ಕೆ ಕಾರಣವಾಗಿರುವ ರಾವಣೇಶ್ವರನ ಲಂಕೆ ತೆರಬೇಕಾದ ಬೆಲೆ ದೊಡ್ಡದು, ಅದಕ್ಕಾದರೂ ಸೀತೆ ಕಣ್ಣೀರು ಹಾಕಬಾರದು, ಆಗುವುದು ಆಗಿಯೇ ತೀರುತ್ತದೆ ಎನ್ನುವಂತಿವೆ ಅವಳ ಮಾತು. ಮುಂದೆ ಆಕೆ ಕುಂಭಕರ್ಣನನ್ನು ನೆನೆಯುತ್ತಾಳೆ.
ಸರ್ವಲೋಕ ಭೀಕರನೆಂದು ಯುದ್ಧಭೈರವನೆಂದು
ಪೆಸರಾಂತ ಕಿರಿಯ ದೊಡ್ಡಯ್ಯನಂತಪ್ಪನಂ,
ನೇರ್ ನಡೆಯ ಸವಿನುಡಿಯ ಪೆರ್ಮೆಬಾಳ್ ಬಾಳ್ದನಂ,
ನಿನ್ನೆ ನುಂಗಿದುದಮ್ಮ ನಿನ್ನ ಕಣ್ ಪನಿಗಡಲ ಬಡಬವಾಯ್!
(ಸೀತೆಯ ದುಃಖದ, ಹನಿ ಕಣ್ಣೀರಿನ ಪರಿಣಾಮವನ್ನು ಅನಲೆ ಮನಗಂಡಿದ್ದಾಳೆ)
ಆ ಅಯ್ಯನೆಮ್ಮೊಡನೆ ಎನಿತೊ ಸೂಳ್
ಕುಳಿತು ಸರಸವನಾಡುತಿರ್ದನ್!
ಹಾಸ್ಯಮಂ ನುಡಿದು ಅಣಕಿಸುತ್ತ ಎಮ್ಮನ್
ಎಂತು ಅಳ್ಳೆ ಬಿರಿವಂತೆ ನಗಿಸುತಿರ್ದನ್!
ಕಳ್ಳರಾಟದಲ್ಲಿ ನಾವಟ್ಟಿ, ಅವನೋಡಿ,
ನಾನ್ ಪಿಡಿಯಲ್ ಆರದಿರೆ,
ಕೊನೆಕೊನೆಗೆ ನಗೆ ತಡೆಯಲಾರದೆಯೆ
ಸೋಲ್ತು ನಿಲುತಿರ್ದನಂ ನಾನ್ ಮುಟ್ಟೆ,
ನನ್ನನ್ ಅಂಬರಕೆತ್ತಿ ಮೇಲೆಸೆದು ಪಿಡಿದು
’ನೀನೊಂದು ಪೂವಿನ ಚೆಂಡು’
ಎನುತೆನ್ನ ಮುದ್ದಾಡುತಿರ್ದನ್
’ಚೆಂಡುವೂ! ಚೆಂಡುವೂ! ’
ಎಂದು ಅಟ್ಟಾಹಸಂ ಮೊಳಗಲದ್ಭುತಂ ನಗುತೆ! -
ಅನಲೆಯ ಈ ಮಾತುಗಳು ಒಂದು ಸುಂದರ ಚಿತ್ರಣವನ್ನು ಓದುಗನ ಕಣ್ಣಮುಂದೆ ನಿಲ್ಲಿಸುತ್ತವೆ. ಕೂಡುಕುಟುಂಬವೊಂದರಲ್ಲಿ, ಮುದ್ದುಮಗುವನ್ನು ಮನೆಯ ದೊಡ್ಡವರು, ಚಿಕ್ಕವರು ಹೇಗೆ ಆಟವಾಡಿಸುತ್ತಾರೆ. ಅದರಲ್ಲೂ, ದೈತ್ಯದೇಹಿಯಾದರೂ. ದೈತ್ಯನಾದರೂ ಮಗುವಿನಂತಹ ಮನಸ್ಸುಳ್ಳ ಕುಂಭಕರ್ಣ, ಮನೆಗೊಬ್ಬಳೇ ಮಗಳಾದ ಅನಲೆಯನ್ನು ಆಟವಾಡಿಸುವ ರೀತಿ ಹೃದಯಂಗಮವಾಗಿದೆ. ಮುಂದೆ, ಇದನ್ನೆಲ್ಲವನ್ನು ನೆನೆದು ಅನಲೆ ದುಃಖಿಸುತ್ತಾಳೆ. ಕುಂಭಕರ್ಣನ ಅಂತ್ಯಸಂಸ್ಕಾರದ ಚಿತ್ರಣವನ್ನು, ಆಕೆಯ ದುಃಖಿತ ನುಡಿಗಳಲ್ಲೇ ಕವಿ ನಮಗೆ ನೀಡುತ್ತಾರೆ.
ಅಯ್ಯೊ ಆ ಅಯ್ಯನನ್,
ಇಂದು ಕಡಲೆಡೆ, ಮಳಲ ತೀರದಲಿ,
ಗಂಧಚಿತೆಯಲಿ ಬೇಳ್ದು, ಬೂದಿಯಂ
ತಂದನೂರಿಗೆ ನನ್ನ ಬದುಕಿರ್ಪ ದೊಡ್ಡಯ್ಯನ್, ಅಸುರೇಶ್ವರಂ!
ಅದನ್ ಇಟ್ಟ ರತ್ನಮಂಜೂಷೆಯಂ ಬಿಗಿದಪ್ಪಿ
’ತಮ್ಮ ತಮ್ಮ’ ಎಂದೊರಲುತಿರ್ದನಂ ನೆನೆಯಲಮ್ಮೆನ್, ದೇವಿ.
ನಿನಗೆ ಅಹಿತನಾದಡೇನ್?
ನೀನುಮ್ ಮರುಗಿ ಕರಗುತಿರ್ದೆ ಆ ನೋಟಮನ್ ಕಂಡು!
ಅನಲೆಯ ಮಾತುಗಳು ನೂರಕ್ಕೆ ನೂರು ಸತ್ಯವಲ್ಲವೆ? ಸಾವು ಎಂತಹ ಕಠಿಣಹೃದಯಿಯನ್ನೂ ಕರಗಿಸಿಬಿಡುತ್ತದೆ. ರಾವಣನೇ ಕರಗಿಹೋಗಿದ್ದಾನೆ! ಇನ್ನು, ಮಾತೃಹೃದಯದ ರೂಪವನಾಂತಿರುವ ಸೀತೆಯನ್ನು ಅಲುಗಿಸುವುದಿಲ್ಲವೆ? ಕುಂಭಕರ್ಣನ ಬಗ್ಗೆ ರಾವಣನಿಟ್ಟಿದ್ದ ಪ್ರೀತಿ ಅನಲೆಯ ಮಾತುಗಳಲ್ಲಿ ಅಭಿವ್ಯಕ್ತಗೊಂಡಿದೆ. ಅನಲೆ ಬಸವಳಿದಿದ್ದಾಳೆ. ಅದನ್ನು ತಾಯಿಯಾದ ಸೀತೆ ಅರಿಯಳೆ?
ಗದ್ಗದೆಯಾಗಿ, ಜಾನಕಿಯೆದೆಗೆ ಮೊಗಮೊತ್ತಿ,
ಮಗಳವೋಲ್ ಅಳುತಿರ್ದಳಂ ಅನಲೆಯಂ ನೋಡಿ,
ಆವಿರ್ಭವಿಸಿದುದೊ ತನಗೆ ನಿಜಸ್ವರೂಪಮೆನೆ,
ಬೇರೆತನಮಂ ತೊರೆದು ಸೀತೆ,
ಲೋಕಕೆ ಮಾತೆ ತಾನಾದಳೆಂಬವೋಲ್,
ತನ್ನೆರಡು ತೋಳ್ಗಳಿಂ ತಳ್ಕಯ್ಸುತ ಅನಲೆಯಂ,
ತ್ರಿಜಟೆಗೆಂದಳ್:
ಬಾಲೆ ಉಪವಾಸಮಿರ್ಪಳ್, ತ್ರಿಜಟೆ;
ಶೋಕಭಾರಮಂ ತಡೆಯಲಾರಳ್; ತತ್ತರಿಸುವಳ್:
ಇವಳ್ಗಂ ಈ ಅಳಲೆ ಈ ಎಳಹರಯದೊಳ್?
ಪೋಗು, ಪಣ್ಗಳಂ ತಿಳಿನೀರ್ಗಳಂ ಬೇಗದಿಂ ತಾ
ಸೀತೆ ಲೋಕಕ್ಕೇ ತಾಯಿಯಾಗಿದ್ದು ಹೀಗೆ! ಅನಲೆಯ ದುಃಖ, ಅದಕ್ಕಿಂತ ಹೆಚ್ಚಾಗಿ, ಅವಳ ಮಾತುಗಳು ಸೀತೆಯನ್ನೇ ಬದಲಾಯಿಸಿಬಿಟ್ಟಿವೆ. ’ಈ ಎಳಹರೆಯದೊಳ್ ಈ ಅಳಲೆ’ ಎಂದು ಸೀತೆಯೆ ಉದ್ಗರಿಸುತ್ತಾಳೆ, ಅನಲೆಯ ದುಃಖದ ತೀವ್ರತೆಗೆ. ತಾಯಿ ಮಗಳನ್ನು ಸಂತೈಸುವಂತೆ ಸಂತೈಸುತ್ತಾಳೆ, ಕೆಳಗಿನಂತೆ.
ಅನಲೆಯ ತಲೆಗೆ ತನ್ನ ತೊಡೆಯ ತಲೆದಿಂಬೆಸಗಿ
ತನ್ನುಡೆಯ ಮಲಿನ ವಸ್ತ್ರಾಂಚಲದಿ
ಕೃಶಗಾತ್ರೆ ಬೀಸಿದಳ್ ತಂಗಾಳಿಯಂ:
ಏನ್ ಬೇಸಗೆಯೊ? ಬೇಗೆ ಧಗಿಸುತಿದೆ ಲೋಕಮಂ!
ತನ್ನೊಳಗೆ ಎನುತೆ ಸುಯ್ದು ನೋಡಿದಳು
ಮುಂದೆ ಹಬ್ಬಿರ್ದ ಜಲಧಿಯ ನೀಲವಿಸ್ತಾರಮಂ,
ನೀಲಿಯಾಗಸದ ನಿಸ್ಸೀಮತಾ ವಿಸ್ತಾರಮಂ,
ಮುಗಿಲ್ ಮುಗಿಲಾಗಿ ಮೇಲೇರ್ದ ಸತ್ ಕ್ರಿಯಾನಲಧೂಮ ವಿಸ್ತಾರಮಂ.
ಕಣ್ಗೆ ಪನಿ ತುಳ್ಕಿ ಬಿಳ್ದುವು ಅನಲೆಯ ಮೆಯ್ಗೆ!
ಸುಂದರ ವರ್ಣಚಿತ್ರವನ್ನು ಕಟೆದು ಸಹೃದಯನ ಮುಂದೆ ನಿಲ್ಲಿಸುತ್ತದೆ ಈ ಭಾಗ! ಅನಲೆ ಯಾರೊ? ಸೀತೆ ಯಾರೊ? ಸೀತೆಯ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದವನ ಮನೆಯ ಮಗಳು ಅವಳು. ಅವಳಿಗೆ ಇವಳು ತಾಯಿ; ಇವಳಿಗೆ ಅವಳು ಮಗಳು! ತಾಯ್ತನಕೆ, ಮಾತೃಭಾವಕೆ ಕಾಲ, ದೇಶ, ಎಲ್ಲೆ, ಕುಲಗಳ ಮಿತಿಯುಂಟೆ? ಮುಂದೆ ತ್ರಿಜಟೆ ತಣ್ಣನೆಯ ನೀರನ್ನು ತರುತ್ತಾಳೆ. ಸ್ವತಃ ಸೀತೆ ಅನಲೆಯ ಮುಖವನ್ನು ತೊಳೆಯುತ್ತಾಳೆ. ಹಣ್ಣುಗಳನ್ನು ತಿನ್ನಿಸುತ್ತಾಳೆ. ನೀರು ಕುಡಿಸುತ್ತಾಳೆ. ಅಲ್ಲಿಯವರೆಗೂ ಮಾತನಾಡದೆ ಸುಮ್ಮನಿದ್ದ ’ದಶಶಿರಾನುಜ ತನುಜೆ ಮುಂ ಪೇಳ್ದಳಿಂತು ಆ ಸ್ಥಿರಾತ್ಮಜೆಗೆ’. ಅಲ್ಲಿ ಅನಲೆಯ ಜಾಣ್ಮೆ, ವಿವೇಕ ಎಲ್ಲವೂ ವ್ಯಕ್ತವಾಗಿವೆ. ’ಅಲ್ಲಿಯವರೆಗೆ ಆದದ್ದು ಆಯಿತು. ಮುಂದೊಳಿತಾಗಬೇಕು’ ಎಂಬ ಹಂಬಲವಿದೆ. ಮುಂದೆ ಇಂದ್ರಜಿತು ಯುದ್ಧಕ್ಕಿಳಿಯುವುದು, ಅದರ ಪರಿಣಾಮ, ಅದಕ್ಕೆ ಮಾಡಬೇಕಿರುವುದು, ತಾವು ಮಾಡಬಹುದಾದುದು ಎಲ್ಲವನ್ನೂ ವಿಷದಪಡಿಸುತ್ತಾಳೆ. ಕುಂಭಕರ್ಣನ ಸಾವಿನ ನಂತರ ರಾವಣನಿಗೆ ಸಮಾಧಾನ ಮಾಡುವ, ನಿಕುಂಬಿಲಾಯಾಗಪ್ರತಿಜ್ಞೆ ಮಾಡುವ ಇಂದ್ರಜಿತುವಿನ ಚಿತ್ರಣವನ್ನು ಸಹೃದಯ ಕೇಳುವುದು ನೇರವಾಗಿಯಲ್ಲ, ಅನಲೆಯ ಬಾಯಿಂದ, ಸೀತೆಯೊಟ್ಟಿಗೆ! ಅದೊಂದು ರೀತಿಯಲ್ಲಿ ದೀರ್ಘಭಾಷಣದಂತೆ; ರಣತಂತ್ರವನ್ನು ಸಹದ್ಯೋಗಿಗಳಿಗೆ ವಿವರಿಸುವ ಸೇನಾನಾಯಕಿಯಂತೆ ಅನಲೆ ಭಾಸವಾಗುತ್ತಾಳೆ. ವ್ಯತ್ಯಾಸವಿಷ್ಟೆ; ಅಲ್ಲಿ ಕೊಲೆಯ ಸಂಚಿರುತ್ತದೆ, ಇಲ್ಲಿ ಆತ್ಮೋದ್ಧಾರದ ಹಂಬಲವಿದೆ. ಇಲ್ಲಿ ಅನಲೆ ಕೇವಲ ಒಂದು ಪಾತ್ರವಾಗಿ ಮಾತ್ರವಲ್ಲ, ಕಾವ್ಯದ ಮುನ್ನೆಡೆಗೆ ಕಾರ್ಯಕಾರಣ ಸಂಬಂಧವನ್ನು ಬೆಸೆಯುವ ಕವಿಯ ಪ್ರತಿನಿಧಿಯಂತೆ ಭಾಸವಾಗುತ್ತಾಳೆ. ಆ ಭಾಗವನ್ನು ಇಡಿಯಾಗಿ ಓದಿಯೇ ಸವಿಯಬೇಕು.
ಆದುದಾದುದು, ದೇವಿ,
ಆದುದಕೆ ನೂರ್ಮಡಿಯ ಘೋರಮಂ ಇನ್ನು ಆಗಲುರ್ಕುಮ್.
ಅದನ್, ನೀನಿಚ್ಛಿಸಲ್, ನಿಲಿಸಲ್ ಅಸದಳಮಲ್ತು.
ಕೇಳ್, ತಾಯಿ, ಮುನ್ನಡೆದುದು ಪೇಳ್ವೆನ್ ಅರಮನೆಯ ಕಥನಮಂ.
ತಮ್ಮನ ಕಳೇಬರಕೆ ಕೊನೆಯ ಸಂಸ್ಕಾರಮಂ
ಕಡಲ ತೀರದೊಳೆಸಗಿ, ಭಸ್ಮಾವಶೇಷಮಂ
ರತ್ನಪಾತ್ರೆಯೊಳಿಟ್ಟು ತಂದು ಗೋಳಿಡುತಿರ್ದ
ದೊಡ್ಡಯ್ಯನಂ ಕಂಡು ನನ್ನಣ್ಣನ್ ಇಂದ್ರಜಿತು, ಮೇಘನಾದಂ,
ಮಹಾ ರುದ್ರ ರೋಷವನಾಂತು ಸಂತಯ್ಸಿದನು ತನ್ನ ತಂದೆಯಂ;
ಪೂಣ್ದನ್ ಭಯಂಕರ ಪ್ರತಿಜ್ಞೆಯಂ:?
ತ್ಯಜಿಸು ಸಂತಾಪಮಂ, ದೈತ್ಯಕುಲ ಚಕ್ರೇಶ;
ಚಿಕ್ಕಯ್ಯನಸುವಿಂಗೆ ನೂರ್ಮಡಿ ಉಸಿರ್ಗಳಂ
ಬಲಿಗೊಳ್ವೆನ್ ಎನ್ನೀ ಪ್ರತಾಪ ಭೂತಕ್ಕೆ.
ರಿಪುಬಲವನ್ ಅಂತಕನೂರ್ಗೆ ಬಿರ್ದ್ದೆಸಗುವೆನ್; ತಪ್ಪೆನ್
ಎನ್ನಾಣೆ, ನಿನ್ನಾಣೆ, ತೀರ್ದಯ್ಯನಾಣೆ,
ಪೆತ್ತಬ್ಬೆ ಮೇಣ್ ಕುಲದೈವ ಆ ಶಿವನಾಣೆ!
ಕೈಕೊಳ್ವೆನೀಗಳೆ ನಿಕುಂಭಿಲಾ ಯಾಗಮಂ,
ಮೃತ್ಯುಗರ್ಭಂ ತರತರನೆ ನಡುಗೆ
ಮಾರಣ ಮಹಾಶಕ್ತಿಗಳನೊಡನೆ ಸೃಜಿಸುವೆನ್.
ನರ ವಾನರರ ಸೇನೆ ನಿರ್ನಾಮಮಪ್ಪಂತೆ ಗೆಯ್ದು
ಅವರ ನೆತ್ತರಿಂ ತಣಿಯೆರೆವೆನ್
ಆ ಪೂಜ್ಯ ಕುಂಭಕರ್ಣ ಪ್ರೇತಂ
ಎಮ್ಮ ಪಿತೃಲೋಕದೊಳ್ ಸಂಪ್ರೀತಮಪ್ಪವೋಲ್!
ಇಂತತಿ ಕಠೋರಮಂ ಸೂರುಳಂ ತೊಟ್ಟು,
ನಡೆದನ್ ನಿಕುಂಭಿಲೆವೆಸರ ನ್ಯಗ್ರೋಧಮೂಲದಾ
ಯಾಗಶಾಲೆಯ ಮಹಾ ಮಂತ್ರಕರ್ಮದ ತಂತ್ರಮಂಟಪಕೆ.
ಆ ನನ್ನ ಅಣ್ಣನ್ ಅತಿ ಶಕ್ತನ್;
ಇಂದ್ರನ ಗೆಲ್ದು, ಬ್ರಹ್ಮನಿಂ ನಾನಾ ವರಂಗಳು ಪಡೆದು,
ಮಾಯಾಬಲದಿ ದೇವದಾನವ ಭಯಂಕರನಾಗಿಹನು, ದೇವಿ.
ನಿರ್ವಿಘ್ನಮ್ ಆ ಯಾಗಮಂ ಮುಗಿಸಿದಾತನಂ
ಸೋಲಿಸುವರೊಳರೆ ಭುವನತ್ರಯದ ವೀರರಲಿ?
ವಿಘ್ನಮಿಲ್ಲದೆ ಯಾಗಮದು ಸಿದ್ಧಿಯಾಗಲ್,
ಅಜೇಯನಾತನ್; ಅವಾರ್ಯವೀರ್ಯನ್;
ಸುರಾಸುರರ್ ನೆರೆಯಲ್, ತೃಣೀಕರಿಸುವನ್!
ಕಪಿಧ್ವಜರೊಂದು ಪಾಡೆ?
ಆ ಬಳಿಕಲಾಂ ನೆನೆಯಲಮ್ಮೆನ್, ತಾಯಿ,
ಇರ್ಕೆಲದೊಳಪ್ಪ ಹರಣದ ಹತ್ಯೆಯಂ?
ಪೆಣ್ ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು,
ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು ಪಣೆಪೆಣೆದು ನಿಲ್ಲಲ್?
ಮಹೀಯಸೀ, ನೀನೊಪ್ಪೆ ನೆರಮಪ್ಪೆನಾಂ ನಿನಗೆ.
ನೆರಮಪ್ಪಳಾಂ ಬಲ್ಲೆನ್, ದೊಡ್ಡಮ್ಮನಾ ಮಂಡೋದರೀ ದೇವಿ,
ತಾರಾಕ್ಷಿ, ಮೇಘನಾದನ ಪತ್ನಿ, ನನ್ನತ್ತಿಗೆಯುಮಂತೆ ನೆರಮಪ್ಪಳೆಮಗೆ.
ಕೇಳ್, ನಿನ್ನನಿಲ್ಲಿಗೆ ತರಲ್ ಸಂಚು ಹೂಡಿದ
ಚಂದ್ರನಖಿಯುಮೀಗಳ್ ಬೇರೆ ಬಗೆಯಾಗಿಹಳ್.
ಮೇಣ್, ದಶಗ್ರೀವನಾತ್ಮಮುಂ, ತನ್ನ ಕಸುಗಾಯ್ತನದೊಗರ್ ಕಳೆದು,
ಪಣ್ತನಕೆ ತಿರುಗುತಿರ್ಪೊಂದು ಸೂಚನೆ ತೋರುತಿಹುದೆನಗೆ.
ಅದೊಡೆ ಮಹಾಸತ್ತ್ವನ್ ಆತನ್ ಅತ್ಯಭಿಮಾನಿ; ಪಿಂಜರಿವನಲ್ತು.
ತಾನೆಯೆ ಮುಂಬರಿವನಲ್ತು ತಡೆಯಲೀ ಕಾಳೆಗದ ಕೊಲೆಯಂ.
ಅಮರ್ಷಿ ತಾಂ ಕ್ಷಾತ್ರತೇಜಕೆ ಭಂಗ ಬರ್ಪಂದದಿಂದೆಂದುಂ ನಡೆವನಲ್ತು.
ಅನಲೆಯ ಈ ದೀರ್ಘ ಮಾತುಗಳಲ್ಲಿ, ತನ್ನವರ ಇತಿಮಿತಿಗಳನ್ನು ವಿವರಿಸಿದ್ದಾಳೆ. ತಮಗೆ ನೆರವಾಗುವವರ ಬಗ್ಗೆ ಮಾತನಾಡಿದ್ದಾಳೆ. ಕೊಲೆಗೆ ಹೇಸಿದ್ದಾಳೆ. ಅವಳು ’ಪೆಣ್ ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು, ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು ಪಣೆಪೆಣೆದು ನಿಲ್ಲಲ್?’ ಎಂದು, ಹೆಣ್ಣು ಅಸಹಾಕಯಕಳಾಗಿ, ಯುದ್ಧೋನ್ಮತ್ತರಾದ ಗಂಡಸರು ನಡೆಸುವ ಕೊಲೆಗೆ ತಟಸ್ಥ ಸಾಕ್ಷಿಮಾತ್ರವಾಗಿರಬೇಕಾಗಿಲ್ಲ ಎಂದು ವೀರೋಚಿತ ಮಾತುಗಳನ್ನು ಆಡುತ್ತಾಳೆ. ರಾವಣನ ಮನಃಪರಿವರ್ತನದ ಸುಳಿವನ್ನು ಅವಳು ಅರಿತಿದ್ದಾಳೆ. ಅವಳದು ಬಾಲಭಾಷೆಯಲ್ಲ; ಏಕೆಂದರೆ, ಇಲ್ಲಿ ಆಕೆ, ಕವಿಯಕರ್ಮವನ್ನಾಂತಿದ್ದಾಳೆ. ಅವಳ ಮಾತು, ದೃಢನಿಲುವು ಓದುಗನನ್ನು ಮಾತ್ರವಲ್ಲ, ಅದಕ್ಕೆ ಸಾಕ್ಷಿಯಾಗಿರುವ ಸೀತೆಯನ್ನೂ ಅಚ್ಚರಿಯ ಕಡಲೊಳಗೆ ತಳ್ಳಿಬಿಟ್ಟಿವೆ ಎಂಬುದು ಮುಂದೆ ಸೀತೆಯಾಡುವ ಮಾತುಗಳಲ್ಲಿ ವ್ಯಕ್ತವಾಗುತ್ತದೆ.
ಪುಟ್ಟ ಹೃದಯದೊಳೆಂತು, ಇಂತಪ್ಪ ದಿಟ್ಟತನವಿರಿಸಿರ್ಪೆ?
ಪೇಳನಲೆ.
ಪದಿನಾರ್ ಬಸಂತಗಳ ಮುದ್ರೆಯಂ ತಳೆದಿರ್ಪ
ನಿನ್ನ ಮೆಯ್ ಪಿರಿಯುಸಿರ್ ಬೀಡು,
ಪೆರ್ಬಗೆಯ ಪೆರ್ಮೆಗೆ ತವರ್ ನಾಡು!.....
ನಾನಸ್ವತಂತ್ರಳ್, ಕುವರಿ,
ನಿನ್ನವರ್ ಮೇಣ್ ನೀನ್ ಸ್ವತಂತ್ರರ್,
ತಪೋದ್ಯೋಗಮೊಂದುಳಿಯೆ
ಮತ್ತಾವುದುಜ್ಜುಗಂ ತಗದೆನಗೆ.....
ಪರಸುವೆನ್ ನಿನ್ನನ್;
ಅದೆ ನಿನ್ನುದ್ಯಮಕೆ ನಾನೀವ ನೆರಂ.
ನಿನ್ನಾಸೆ ನಲ್ಲದು. ವಿಭೀಷಣ ಕುಮಾರಿ, ಅದು ಸಲ್ಗೆ!
ಅನಲೆಯ ಮಾತಿಗೆ ಅಚ್ಚರಿಪಟ್ಟ ಸೀತೆ, ತನ್ನ ಮಿತಿಯನ್ನೂ ಆಕೆಗೆ ಹೇಳುತ್ತಾಳೆ. ’ಹರಕೆಯೊಂದೇ ನಾನು ನೀಡಬಹುದಾದುದು ನಿನ್ನ ಉದ್ಯಮಕೆ’ ಎಂದು ಮನದುಂಬಿ ಆಶಿರ್ವದಿಸುತ್ತಾಳೆ. ಸೀತೆಯ ಮಾತಿನಲ್ಲಿ ಇಣುಕುತ್ತಿದ್ದ ನಿರಾಶೆಯನ್ನು ಅನಲೆ ಗುರುತಿಸಿ ಹೀಗೆ ಹೇಳುತ್ತಾಳೆ:
ತೊರೆ ನಿರಾಶೆಯಂ, ದೇವಿ.
ವಾರ್ತೆಯನ್ ಎನ್ನ ತಂದೆಗೆ
ಹಿರಣ್ಯಕೇಶಿಯ ಕೈಲಿ ಕಳುಹಿದೆನ್,
ಇಂದ್ರಜಿತು ಕೈಕೊಳ್ವ ಕ್ರತು ಮುಗಿವ ಮುನ್ನಮೆಯೆ,
ವಿಘ್ನಮಂ ತಂದೊಡ್ಡುವರ್ ದಿಟಂ,
ವಾನರ ಮಹಾ ಪ್ರಾಜ್ಞ ಸೇನಾನಿಗಳ್.
(ಆಗ ಸೀತೆ ಮುಗುಳ್ನಗುತ್ತಾ ಆ ಧೈರ್ಯಮ್ ಎನಗಿರ್ಕುಮ್ ಎನ್ನುತ್ತಾಳೆ.)
ನೀನ್, ದೊಡ್ಡಯ್ಯನ್ ಇಂದು ಇಲ್ಲಿಗೈತರಲ್,
ನಮ್ಮಿದಿರ್ ತಾಯಾಗಿ ತೋರ್ಪವೊಲ್ ತೋರಿ,
ಕಂದಂಗೆಂತೊ ಅಂತೆ, ಹಿತವನೊರೆ ಸದ್ಬುದ್ಧಿಯಂ.
ನಿಚ್ಚಮುಂ ನಿನ್ನನೆಯೆ ನೆನೆದಾತನಾತ್ಮಕ್ಕೆ ನಿನ್ನೊಂದು ಪೊಳೆಯತೊಡಗಿದೆ ಮಹಿಮೆ.
ಮರುಗುವಂದದಿ ಮನಂ ಕರಗುವಂದದಿ ಹೃದಯ ಅವನಂತರಾತ್ಮಮಂ ಮಿಡಿದು ನುಡಿ,
ದೇವಿ, ಬೀರದ ಪೆರ್ಮೆ ಕನಿಕರಕೆ ಶರಣಪ್ಪವೋಲ್!
ಬಲ್ಲೆನ್ ಎನ್ನ ದೊಡ್ಡಯ್ಯನಂ ನಾನ್,
ದರ್ಪಕಾರಣಕೆ ಕೂರ್ಪನೆ ತೋರ್ಪನಪ್ಪೊಡಂ
ಕೂರ್ಮೆಗೆ ಮಣಿವ ಮೃದಲತೆ ಇರ್ಪುದವನೆರ್ದೆಯ ಕರ್ಬುನಕೆ.
ಇನ್ನೆಗಂ ನಿನ್ನರೊಲ್ ಪೇರುಸಿರ ಪೆಣ್ಗಳಂ ಸಂಧಿಸಿದನ್ ಇಲ್ಲ
ಅದುವೆ ಕಾರಣವಾಯ್ತು ಲಂಕೇಶ್ವರನ ದುರ್ಗತಿಗೆ.
ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!
ಅದ್ಭುತವಾದ ತಂತ್ರಗಾರಿಕೆಯನ್ನು ಅನಲೆ ಇಲ್ಲಿ ಮೆರೆದಿದ್ದಾಳೆ. ಅತ್ತ ಇಂದ್ರಜಿತುವಿನ ಯಾಗ ಅಪೂರ್ಣವಾಗುವಂತೆ ನೋಡಿಕೊಳ್ಳುವುದು, ಇತ್ತ ರಾವಣನು ಸೀತೆಯನ್ನು ನೋಡಲು ಬಂದಾಗ ಸೀತೆಯಿಂದ ಆತನ ಮನಃಪರಿವರ್ತನೆಗೆ ಯತ್ನಿಸುವುದು! ನಮ್ಮನ್ನು ತಾಯಿಯಾಗಿ ಪೊರೆದಂತೆ, ರಾವಣನನ್ನೂ ತಾಯಿಯಾಗಿ ಪೊರೆಯಬೇಕು, ಸೀತೆ. (ಮುಂದೆ ರಾವಣ ಕಂಡ ಕನಸ್ಸಿನಲ್ಲಿ, ಮಕ್ಕಳಾಗಿ ರೂಪಾಂತರಗೊಂಡ ರಾವಣ ಕುಂಭಕರ್ಣರಿಗೆ, ಸೀತೆ ತಾಯಾಗಿ ಬಂದು ಸಂತೈಸಿ ಹಾಲುಣಿಸುವ ಚಿತ್ರ ಬರುತ್ತದೆ. ಅನಲೆಯ ಅಭೀಪ್ಸೆ ಬೇರೊಂದು ರೀತಿಯಲ್ಲಿ ಕೈಗೂಡುತ್ತದೆ) ಅವನ ಅಂತರಾತ್ಮವನ್ನೇ ಮಿಡಿದು ನುಡಿಯಬೇಕಿದೆ ಸೀತೆ. ಇದು ಅನಲೆಯ ಆಸೆ; ಆದರೆ ದುರಾಸೆಯಲ್ಲ. ರಾವಣನ ಗುಣ ಆಕೆಗೆ ಗೊತ್ತು. ದರ್ಪದ ಕಾರಣದಿಂದ ಕಾಠಿಣ್ಯವನ್ನೇ ಹೊತ್ತವನಂತೆ ಕಾಣುವ ಆತನ ಹೃದಯವೂ ಮೃದಲತೆಯಂತೆ ಇದೆ. ಇದುವರೆಗೂ ಸೀತೆಯಂತಹ ಮಹಿಮಳನ್ನು ಆತ ಸಂಧಿಸದಿದ್ದುದೇ ಆತನ ಅವನತಿಗೆ ಕಾರಣವಾಗಿತ್ತು; ಆದರೆ ಇಂದು ಸೀತೆ ಹತ್ತಿರವೇ ಇದ್ದಾಳೆ. ಅದಕ್ಕೇ ಆತನಿಗೆ ಸುಗತಿ ದೂರವಿಲ್ಲ! ಇತ್ತ ಸೀತೆಗೆ ಹೇಗಾಗಿರಬೇಡ? ಆದರೆ ಸೀತೆ ಈಗ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲ ತಪವನ್ನೇ ಹೊತ್ತವಳಾಗಿದ್ದಾಳೆ ಎಂಬುದಕ್ಕೆ ಮುಂದಿನ ಅವಳ ಮಾತೇ ಸಾಕ್ಷಿ. ಅದಕ್ಕಿಂತ ಹೆಚ್ಚಾಗಿ, ಅನಲೆಯ ವಿಷಯದಲ್ಲಿ ಸೀತೆ ಕಠಿಣಳಾಗಲಾರಳು ಎಂಬುದೂ ಸತ್ಯ.
ಉಕುತಿಯ ದನಿಯ ನನ್ನಿಯ ದುರಂತಮಂ ಬಗೆಯದೆ ಆಡಿದ
ಮುಗುದೆಯನಲೆಯ ಮುಡಿಯ ನೇವರಿಸಿ,
ಪೆಗಲಿಂ ಜಗಳುತ ಇರ್ಕ್ಕೆಲದಿ
ಷೋಡಶ ವಸಂತ ವಕ್ಷವ ಸಿಂಗರಿಸಿ
ನೀಳ್ದ ನುಣ್ಪಿನ ಕರ್ಜಡೆಗಳಂ ಕರಾಗ್ರದಿಂದೆಳವಿ,
ರಾವಣಂ ಬಂದಾಗಳ್ ಎಂತು ತನ್ನಾತ್ಮಂ ಪ್ರಚೋದಿಪುದೊ
ಅಂತೆ ನಡೆವಂತೆ ಭಾಷೆಯನಿತ್ತು ಸಂತಯ್ಸಿದಳು ದೇವಿ.
ದೈತ್ಯಕುಲ ಕನ್ಯೆಯಂ ಪೆತ್ತಳೋಲೋವಿ.
ರಾಮ-ರಾವಣರ ಯುದ್ಧ ಅವರಿಬ್ಬರ ನಡುವೆ ಮಾತ್ರವೆ ನೆಡೆಯಿತು ಎಂಬುದು ಎಷ್ಟು ಸುಳ್ಳು! ಸೀತೆ, ಅನಲೆ, ತ್ರಿಜಟೆ, ಚಂದ್ರನಖಿ, ವಿಭೀಷಣ, ಮಂಡೋದರಿ, ತಾರಾಕ್ಷಿ - ಅವರೆಲ್ಲರ ಎದೆಯಲ್ಲಿ ನಡೆದದ್ದು ಯುದ್ಧವಲ್ಲದೆ ಮತ್ತೇನು?

[ನಾಳೆ : ನೀನೊಲಿದ ವರನೆ ದೊರೆಯಲಿ ನಿನಗೆ!]

Thursday, May 08, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 3

ಭಾಗ - 2 : ಇವಳೆನ್ನ ಕಾಪಿಡುವ ದೇವಿ!
ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ?. ಸೀತೆಗೆ ಅನಲೆಯ ಬಗ್ಗೆ ಮಾತೃವಾತ್ಸಲ್ಯ ಮೂಡಿದೆ. ಪರಸ್ಪರ ಗೌರವದಿಂದ ಇದ್ದಾರೆ. ಆದರೆ ಅದರ ಪರಿಣಾಮ, ಮುಖ್ಯವಾಗಿ ರಾವಣನ ಮೇಲೆ ಹೇಗಿದ್ದಿರಬಹುದು? ಅಂತಹ ಒಂದು ಸಂದರ್ಭದಲ್ಲಿ ಮತ್ತೆ ಅನಲೆ ಕಾಣಿಸಿಕೊಳ್ಳುತ್ತಾಳೆ. (ಹಾಗೆ ನೋಡಿದರೆ, ಅನಲೆ ಹಾಗೆ ಬಂದು ಹೀಗೆ ಹೋಗುವ ಪಾತ್ರ ಅಲ್ಲವೇ ಅಲ್ಲ. ಶ್ರೀರಾಮಾಯಣದರ್ಶನಂ ಕಾವ್ಯದ ಒಟ್ಟು ಚಲನಶೀಲತೆಯ ಸಂಕೇತದಂತೆ ಅವಳ ಪಾತ್ರ ಬಂದಿದೆ, ಕಾವ್ಯದುದ್ದಕ್ಕೂ.)
ರಾವಣ ಒಮ್ಮೆ ಸೀತೆಯನ್ನು ನೋಡಲು ಬರುತ್ತಾನೆ. ಚಂದ್ರನಖಿಯೂ ಜೊತೆಯಲ್ಲಿರುತ್ತಾಳೆ. ತ್ರಿಜಟೆ ಸೀತೆಯ ಯೋಗಕ್ಷೇಮದ ಜವಾಬ್ದಾರಿಯನ್ನು ಹೊತ್ತಿರುತ್ತಾಳೆ. ಸೀತೆಯ ಮನಸ್ಸನ್ನು ಬದಲಾಯಿಸಬೇಕೆಂದು ರಾವಣ ತ್ರಿಜಟೆಗೆ ಸೂಚಿಸಿರುತ್ತಾನೆ. ಆದರೆ, ಪುಣ್ಯಮನಪ್ಪುವ ಪಾಪದಂತೆ ತ್ರಿಜಟೆ ಸೀತೆಯ ಪ್ರಭಾವಲಯಕ್ಕೆ ಸಿಕ್ಕಿಕೊಂಡಿರುತ್ತಾಳೆ. ರಾವಣ ನೇರವಾಗಿ ಸೀತೆಯನ್ನು ಎದುರಿಸಲಾರ; ಮಾತನಾಡಿಸಲಾರ. ಅದಕ್ಕಾಗಿ ಆತ ತ್ರಿಜಟೆಯನ್ನು ಅವಲಂಬಿಸುತ್ತಾನೆ. ಆಕೆಯ ಮುಖಾಂತರ ಸೀತೆಯನ್ನು ವಿಚಾರಿಸುತ್ತಾನೆ, ಎಚ್ಚರಿಸುತ್ತಾನೆ. ತನ್ನ ಬಗೆಗಿನ ಸೀತೆಯ ’ಧಿಕ್’ ಭಾವನೆಯನ್ನು ಕಂಡು ತ್ರಿಜಟೆಯ ಮೇಲೆ ಕೋಪಗೊಳ್ಳುತ್ತಾನೆ. "ನೆನೆವಳಾ ರಾಮಚಂದ್ರನಂ ಮೂರುವೊಳ್ತುಂ ಸ್ವಾಮಿ" ಎಂಬ ತ್ರಿಜಟೆಯ ಮಾತುಗಳು ಆತನಿಗೆ ಸಿಡಿಲನಂತೆ ಎರಗಿವೆ. ಜೊತೆಗೆ "ಸೀತೆ ಪೆಣ್ಣಲ್ತು ನಮ್ಮನ್ನರೊಲ್, ದೈತ್ಯರಾಜೇಂದ್ರ: ದೇವಿಯಯ್; ನೀನಾಕೆಯಂ ಮೊದಲ್ ಕರೆದವೊಲ್ ('ನಿನ್ನ ಸೇವಾಫಲಮೊ ಮೇಣ್ ಸ್ತ್ರೀಸಹಜ ಛಲಮೊ? ದೇವಿಗೀ ಪಾಂಗಿದೇನ್, ತ್ರಿಜಟೆ?' - ಎಂದು ಸೀತೆಯ ಕುರಿತು ವಿಚಾರಿಸಿಕೊಂಡಿರುತ್ತಾನೆ.) ಆ ಪೂಜ್ಯೆ ದೇವಿಯೆ ದಿಟಂ!" ಎಂದು ಆತನ ತಂಗಿ, ಸೀತೆಯ ಅಪಹರಣಕ್ಕೆ ಬೀಜ ಬಿತ್ತಿದವಳೇ ಆದ ಚಂದ್ರನಖಿ ಧೈರ್ಯವಾಗಿ ಅವನೆದುರಿಗೇ ನುಡಿಯುತ್ತಾಳೆ. ಇದನ್ನಂತೂ ಆತ ನಿರೀಕ್ಷಿಸಿರಲೇ ಇಲ್ಲ. ಮುಂದುವರೆದ ಚಂದ್ರನಖಿ ರಾವಣನನ್ನು ಕುರಿತು,
....ನಿನ್ನ ಕೈಯಿಂದೆ ಹತನಾದನೆನ್ನ ಪತಿ ಪಾತಾಳಯುದ್ಧದೊಳ್.
ನೀನಿತ್ತ ವೈಧವ್ಯದಿಂದ ಉರಿದೆನ್ ಆಂ.
ಮತ್ತೆ, ನಿನ್ನ ದೆಸೆಯಿಂದೆನಗೆ ಅನುತ್ತಮದ ಜೀವಿತಂ ಮೊದಲಾಯ್ತು!
ಪಾಪಿ ನೀನ್ ಎನ್ನನುಂ ಪಾಪಕ್ಕೆ ನೂಂಕಿದಯ್.
ನಿನ್ನವೋಲೆನಗುಂ ಆ ಪಾಪಮೇ ರುಚಿಯಾಯ್ತು.
ಆ ಕೂಪಕಿನ್ನೆಂದುಂ ಇಳಿಯೆನಯ್.
ನಿನ್ನನುಂ ಪ್ರಾರ್ಥಿಪೆನ್ ಇಳಿಯದಂತೆ
ಎಂದು ಹೇಳಿದ ಮಾತುಗಳನ್ನು ಕೇಳಿದ ಮೇಲೆ, ಆತನಿಗೆ ವಿವೇಕವೇ ಹಾರಿಹೋಗುತ್ತದೆ. ತನ್ನ ಮನೆಯವರೇ ತನಗೆ ಶತ್ರುಗಳಾಗಿದ್ದಾರೆ ಎಂದು ಭಾವಿಸುತ್ತಾನೆ. ಅವರೆಲ್ಲರೂ ಆತನ ಆತ್ಮೋದ್ಧಾರಕ್ಕೆ ಕಾತರಿಸಿದ್ದಾರೆ ಎಂಬುದು ರಾವಣನಿಗೆ ಅರ್ಥವಾಗುವ ಹೊತ್ತು ಇನ್ನೂ ಬಂದಿಲ್ಲ. ಆತನ ಸಿಟ್ಟು ಚಂದ್ರನಖಿಯ ನೆಪದಲ್ಲಿ ಅನಲೆಯ ಮೇಲೆ ತಿರುಗಿಬಿಡುತ್ತದೆ. ಚಂದ್ರನಖಿಯ ಬದಲಾವಣೆಯ ಹಿಂದೆ, ಆತನಿಗೆ ಸೀತೆಗಿಂತ ಅನಲೆಯ ಕೈವಾಡವೇ ಕಾಣುತ್ತದೆ. (ತಾರಾಕ್ಷಿಯ ವಿಷಯದಲ್ಲಿ ಇಂದ್ರಜಿತುವೂ ಸಹ ಅನಲೆಯ ಕೈವಾಡವನ್ನೇ ಕಂಡಿದ್ದನ್ನು ಗಮನಿಸಿದ್ದೇವೆ). ಜೊತೆಗೆ, ಸೀತೆಯನ್ನು ರಾವಣ ಏನೂ ಮಾಡಲಾರ! ತಪೋಧೀಕ್ಷೆಯನಾಂತು ವ್ರತಿಯಾಗಿರುವ ಅವಳನ್ನು ನೇರವಾಗಿ ಎದುರಿಸಲಾರ. ಎಲ್ಲರಿಗೂ ಸೇರಿಸಿ, "ನೀನಾದೊಡಂ, ಅನಲೆಯಾದೊಡಂ, ಮತ್ತಂ ಇನ್ನಾರಾದೊಡಂ ಇತ್ತಲೀ ಬನಕೆ ಕಾಲಿಟ್ಟುದಂ ಕೇಳ್ದೆನಾದೊಡೆ....ಕೊರಳ್ ಉರುಳ್ದಪುದು" ಎಂದು ಎಚ್ಚರಿಕೆ ಕೊಡುತ್ತಾನೆ. ಇದು ಕೇವಲ ಆತ ತನ್ನ ದರ್ಪದಿಂದ, ಮುಖವನ್ನುಳಿಸಿಕೊಳ್ಳಲು ಆಡಿದ ಮಾತುಗಳು ಅಷ್ಟೆ. ಅದೂ, ಮಾತನ್ನು ತುಂಡರಿಸಿ ಹೇಳುತ್ತಾನೆ. 'ಕೊರಳ್ ಉರುಳ್ದಪುದು' ಎಂಬುದು ಅವರನ್ನು ಉದ್ದೇಶಿಸಿಯೊ ಅಥವಾ ತನ್ನ ಮೇಲೆ ಆಲವಾಣದ ಕೆಂಪುಹೂವನ್ನು ಬೀಳಿಸಿದ ಹೂಕುಡಿವ ಹಕ್ಕಿಗೊ ಎಂಬ ಸಂಧಗ್ದತೆ ಓದುಗನಿಗೆ ತೋರಿದರೆ ಆಶ್ಚರ್ಯವಿಲ್ಲ. ಏಕೆಂದರೆ, ಅನಲೆಯ ಬಗ್ಗೆ ಆತನಿಗೆ ಅಗಾಧವಾದ ವಾತ್ಸಲ್ಯವಿದೆ. ಮುಂದೆ ಆತ ಸೀತೆಯ ಭೇಟೆಗೆ ಬಂದಾಗ ಅನಲೆಯೂ ಇರುತ್ತಾಳೆ. ಅಲ್ಲಿ ನಡೆದ ಘಟನೆಗಳನ್ನು ಮಂಡೋದರಿಗೂ ತಿಳಿಸುತ್ತಾಳೆ. ಆದರೆ ರಾವಣ ಕುಪಿತನಾಗುವುದಿಲ್ಲ! ಇದು ಅನಲೆಯ ವ್ಯಕ್ತಿತ್ವವನ್ನು ತೋರಿಸುತ್ತದೆಯಲ್ಲದೆ, ರಾವಣ ಅವಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾನೆ ಎಂಬುದನ್ನು ಸೂಚಿಸುತ್ತದೆ. (ರಾವಣ ಅನಲೆಯನ್ನು ತನ್ನ ಮಗಳೆಂದು ಭಾವಿಸಿದ್ದಾನೆ ಎಂಬುದಕ್ಕೆ ಮುಂದೆ ಸೂಚನೆಗಳಿವೆ.) ಚಂದ್ರನಖಿಯನ್ನು ಬದಲಾಯಿಸಿದಷ್ಟು ಸುಲಭವಲ್ಲ, ರಾವಣನನ್ನು ಬದಲಾಯಿಸುವುದು. ಸೀತೆಯ ದೃಢನಿಲುವುನ್ನು ಕದಲಿಸಲಾರದೆ, ಕೊನೆಗೆ ಆತನಾಡುವ
ನಿರಶನವ್ರತ ರೂಪದ ಆತ್ಮಹತ್ಯಯಿನ್ ಆಕೆ ಮಡಿಯುವೊಡೆ,
ಅದೆ ಚಿತೆಯನೇರುವೆನ್;
ಪೆಣದೆಡೆಯೆ ಪವಡಿಪೆನ್;
ಭಸ್ಮರೂಪದಿನ್ ಆದೊಡಂ ಕೂಡಿ
ಪೊಂದುವೆನ್ ಸಾಯುಜ್ಯಮಂ!
ಎಂಬ ಮಾತುಗಳು ಆತನ ಕಠಿಣ ವ್ಯಕ್ತಿತ್ವವನ್ನು ತೋರಿಸುತ್ತವೆ. ಅಷ್ಟಕ್ಕೂ ಬದಲಾವಣೆ ಹೊರಗಿನಿಂದ ಆಗುವಂತದ್ದಲ್ಲ; ಒಳಗಿನಿಂದ ಆಗಬೇಕಾದದ್ದು. ಅದು ಕವಿಗೂ ಗೊತ್ತು. ಆದ್ದರಿಂದಲೇ, ಅನಲೆ ಮೊದಲಾದ ಆತನ ಪರಿವಾರದ ಬಯಕೆ, ಪ್ರಯತ್ನ ಎಲ್ಲವೂ ತಪೋರೂಪದಲ್ಲಿಯೇ ಇರುತ್ತವೆ. ಆತನ ಪ್ರೀತಿಪಾತ್ರಳಾದ ಅನಲೆಯೂ ಸೇರಿದಂತೆ ಯಾರೂ ನೇರವಾಗಿ ಆತನೊಂದಿಗೆ ವಾದಕ್ಕೆ ಇಳಿಯುವುದಿಲ್ಲ; ಸ್ವಲ್ಪಮಟ್ಟಿಗೆ, ಮಂಡೋದರಿ ಮತ್ತು ವಿಭೀಷಣರನ್ನುಳಿದು.
ಬದಲಾವಣೆ ಒಳಗಿನಿಂದಲೇ ಆಗುವಂತದ್ದು ಎಂಬ ಮಾತಿಗೆ ಅನುಗುಣವಾಗಿ ರಾವಣ ಒಳಗೊಳಗೆ ದ್ರವಿಸಲಾರಂಬಿಸುತ್ತಾನೆ. ಸೀತೆಯ ದೃಢನಿಲುವು, ತನ್ನವರ ತಪೋರಕ್ಷೆ ಇವೆಲ್ಲವೂ ಸತ್ಕುಲವಂತನೇ ಆದ ಆತನನ್ನು ಅಲುಗಾಡಿಸಿಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಸಹೋದರ ವಿಭೀಷಣ ರಾಜಸಭೆಯಲ್ಲಿ ತನ್ನ ಇಚ್ಛೆಗೆ ವಿರುದ್ಧವಾದ ನಿಲುವನ್ನು ಪ್ರತಿಪಾದಿಸಿದ್ದು, ಆ ಮೂಲಕ ರಾವಣನ ಮನದ ಅಳುಕನ್ನು ಹೊರಹಾಕಿದ್ದು ಆತನನ್ನು ಚಿಂತೆಗೀಡುಮಾಡಿಬಿಟ್ಟಿದೆ. ಸಭೆಯಲ್ಲಿಯೇ ರಾವಣ ಅಸ್ವಸ್ಥನಾಗುತ್ತಾನೆ. ಆದರೆ ಅಣ್ಣನ ಮೇಲೆ ನಿಜವಾದ ಪ್ರೀತಿಯನ್ನೇ ಹೊಂದಿರುವ ವಿಭೀಷಣ, ಅಣ್ಣನ ಕ್ಷೇಮಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡುತ್ತಾನೆ. ತನ್ನ ಮಗಳು ಅನಲೆಯನ್ನು ಕರೆದು, ರಾವಣನ ಅಸ್ವಸ್ಥತೆಯನ್ನು ತಿಳಿಸಿ ಹೇಳಿ, ದೊಡ್ಡಮ್ಮನೊಂದಿಗೆ ಅಣ್ಣನ ಶುಶ್ರೂಷೆಯನ್ನು ಮಾಡುವಂತೆ ನೇಮಿಸುತ್ತಾನೆ. ಹೇಗೋ ಒಂದಿರುಳು ಕಳೆದ ವಿಭೀಷಣ, ಮರುದಿನ ಬೆಳಿಗ್ಗೆಯೇ ರಾವಣನನ್ನು ಕಾಣಲು ಬರುತ್ತಾನೆ. ರಾವಣನನ್ನು ಎತ್ತಿ ಆಡಿಸಿದ ವೃದ್ಧ ಅವಿಂದ್ಯ, ಸೂಚ್ಯವಾಗಿ ವಿಭೀಷಣನ್ನು ಕಂಡರೆ ಮತ್ತೆ ರಾವಣ ಉದ್ವೇಗಕ್ಕೆ ಒಳಗಾಗುತ್ತಾನೆ ಎಂದು, ಭೇಟಿ ಬೇಡವೆಂದರೂ ಕೇಳದೆ, ಬಾಗಿಲಿಗೆ ಬಂದಿದ್ದ ಮಗಳೊಂದಿಗೆ ರಾವಣ ಮಲಗಿದ್ದಲ್ಲಿಗೆ ಬರುತ್ತಾನೆ. ಇಲ್ಲಿ ಕವಿ ನೇರವಾಗಿ ಅನಲೆಯ ಬಗ್ಗೆ, ರಾವಣನಿಗಿದ್ದ ಪ್ರೀತಿಯನ್ನು "ಪೆಣ್ಮಕ್ಕಳಿಲ್ಲದ ದಶಗ್ರೀವನೆರ್ದೆಯ ಅಳ್ಕರೆಯ ಅರಗಿಳಿಯ ಹರಣಮಂ ಹೊರೆವ ಹಂಜರಮೆನಲ್ ಚೆಲ್ವುಕಣಿಯಾಗಿರ್ದ ಆತನ್ನ ಮಗಳ್ ಅನಲೆ" ಎಂದು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ.
’ಕಾಲಪುರುಷನಿಗೆ ಕಾಲೆ ಹೆಳವಾಯ್ತು’ ಎನ್ನುವಂತೆ ಕಾಲ ಕುಂಟುತ್ತದೆ. ಮೌನ ಮನೆ ಮಾಡುತ್ತದೆ. ತುಂಬಾ ಹೊತ್ತಿನ ನಂತರ, ರಾವಣ ಕಾಣುತ್ತಿದ್ದ ಕನಸೊಡೆದು ಎಚ್ಚರಗೊಳ್ಳುತ್ತಾನೆ. ಆದರೆ ಆತ ವಿಭೀಷಣನನ್ನು ಗುರುತಿಸುವುದೇ ಇಲ್ಲ! ಮುಂದಿನ ಭಾಗವಂತೂ ರಾವಣ-ಅನಲೆಯರ ಮನದಂತರಾಳವನ್ನು ಸಹೃದಯರ ಮುಂದೆ ತೆರೆದಿಡುವ ಕನ್ನಡಿಯಂತಾಗುತ್ತದೆ. ’ದಶಗ್ರೀವನೆರ್ದೆಯ ಅಳ್ಕರೆಯ ಅರಗಿಳಿಯ ಹರಣಮಂ ಹೊರೆವ ಹಂಜರಮೆನಲ್’ ಎನ್ನುವಲ್ಲಿ ಅನಲೆ ರಾವಣನ ಪ್ರಾಣಪಕ್ಷಿಯನ್ನು ಕಾಪಾಡುವ ಪಂಜರ ಮಾತ್ರವಲ್ಲ; ಆತನ ಉದ್ಧಾರದ ಸಂಕಲ್ಪರೂಪಿಯೂ ಹೌದು. ಏಕೆಂದರೆ ಆಕೆ, ಆತನ ಪ್ರಾಣವನ್ನು ಉಳಿಸಿಕೊಳ್ಳಲಾಗುವುದಿಲ್ಲ; ಆದರೆ ಆತನ ಆತ್ಮೋದ್ಧಾರಕ್ಕೆ ಬೆಳಕಾಗಬಲ್ಲಳು. ಈ ಸಂದರ್ಭ ಒಂದು ರೀತಿಯಲ್ಲಿ, ರಾವಣನ ಮನಸ್ಸಿನಲ್ಲಿ, ರಾವಣತ್ವ ಹಿಂದೆ ಸರಿದು, ರಾಮತ್ವ ಊರ್ಧ್ವಮುಖಿಯಾಗಿ ಹೊಮ್ಮುತ್ತಿರುವುದರ ಸಂಕೇತ! ಅನಲೆಯನ್ನು ಗುರುತಿಸಿದ ಆತನ ಮುಖದಲ್ಲಿ ಕಿರುನಗೆ ಮೂಡುತ್ತದೆ. ಕನಸಿನ ಪರಿಣಾಮದಿಂದ ಮುಖದ ಮೇಲೆ ಮೂಡಿದ್ದ ನಾಚಿಕೆಯನ್ನು ಹಿಂದೆ ಸರಿಸಿ, ಮೃದುಸ್ವರದಿಂದ ಅನಲಾ! ಎಂದು ಕರೆಯುತ್ತಾನೆ. ಮುಂದಕ್ಕೆ ಬೀಳುತ್ತಿದ್ದ ಜಡೆಯನ್ನು ಹಿಂದಕ್ಕೆ ತಳ್ಳಿದ ಅನಲೆ ತನ್ನ ದೊಡ್ಡಯ್ಯನ ಮೊಗದೆಡೆಗೆ ಬಾಗಿ, ಆತನ ದನಿಗೆ ಕಿವಿಯಾಗುತ್ತಾಳೆ.
ರಾವಣ:
ಅನಲಾ!
ಇರ್ಪೆಯೇನ್ ಇಲ್ಲಿ?
ಅನಲೆ:
ದೊಡ್ಡಯ್ಯ?
ರಾವಣ:
ಏನಿಲ್ಲ!
ನೀನ್ ಎನ್ನನ್ ಅಗಲಿದೋಲೆ ಎನಗೊಂದು ಕನಸಾದುದು ಅಕ್ಕ!
(ನಗುತ್ತಾನೆ; ಆದರೆ ’ದುಃಖದಾನಂದಕೆ ಉಕ್ಕಿದುವೆನಲ್, ತೆಕ್ಕನೊಳ್ಕಿದವು ಅಶ್ರುತೀರ್ಥಮಂ’)
ಅನಲೆ:
ನಿದ್ದೆಗೆಯ್, ದೊಡ್ಡಯ್ಯ,
ನಾನ್ ಎಲ್ಲಿಗೂ ತೆರಳ್ದೆನ್,
ಇಲ್ಲಿ ಈ ಎಡೆಯೆ ಇರ್ದಪೆನ್.
ರಾವಣ:
ದಿಟವೊರೆದೆ, ಅಕ್ಕ,
ಆರ್ ತೊರೆದೊಡಂ ನೀನೆನ್ನನುಳಿವಳಲ್ತು!
(ಇಲ್ಲಿ ’ಆರ್’ ಎಂದರೆ ವಿಭೀಷಣ ಎಂಬುದು ಸ್ಪಷ್ಟ. ಅದು ಅರ್ಥವಾದುದರಿಂದಲೇ ಅಪ್ಪನ ಮುಖವನ್ನು ಅನಲೆ ನೋಡುತ್ತಾಳೆ. ವಿಭೀಷಣ ಕುಳಿತಲ್ಲೆ ತನ್ನೊಳಗೆ ತಾನೇ ಬೇಯುತ್ತಾನೆ.)
ರಾವಣ:
(ಮತ್ತೆ ತೆಕ್ಕನೆ ತೆರೆಯುತೆವೆಗಳಂ, ಬಿಕ್ಕಳಿಸಿ ಬೆಸಗೊಂಡನ್ ಅಕ್ಕರೆ ಸುಳಿಗೆ ಸಿಕ್ಕ ರಕ್ಕಸಂ)
ಅಕ್ಕ,
ನಿನ್ನ ಅಯ್ಯನ್ ಎಮ್ಮಂ ಬಿಡಲ್?...
ಅನಲೆ:
ಬಿಡುವನೇನ್ ನಿನ್ನನ್?
ಒಡಹುಟ್ಟಿದವನ್ ಎನ್ನ ಪಡೆದಯ್ಯನ್?
ರಾವಣ:
ನೀನೆ ನೋಡುವೆ, ಅಕ್ಕ,
ತೊರೆದಪನ್!
ಅನಲೆ:
ದೊಡ್ಡಯ್ಯ ತೆಗೆ ಈ ತೊದಲ್ ನುಡಿಗಳನ್!
ಬಿಡುವನ್ ಎಂದೇಕೆ ಕೆಮ್ಮನೆಯೆ ಶಂಕಿಪ್ಪೆ?
ಕಾಣ್, ನಟ್ಟು ಕುಳ್ತಿಹನ್, ಈ ಬಳಿಯೆ, ನಿನ್ನೆಡೆಯೆ,
ಇಂದು ಪೊಳ್ತರೆಯಿಂದೆ!
ಅಲ್ಲಿಯವರೆಗೂ ರಾವಣ ವಿಭೀಷಣನನ್ನು ಲಕ್ಷಿಸಿಯೇ ಇಲ್ಲ; ಆತ ಕಣ್ಣು ಬಿಟ್ಟಿದ್ದರೂ ಹೊರಗಿನ ಏನನ್ನೂ ಕಾಣುತ್ತಿಲ್ಲ. ಆತನಿಗೆ ಕಾಣುತ್ತಿರುವ ಅನಲೆ ಆತನ ಚೈತನ್ಯವೇ ಆಗಿದ್ದಾಳೆ. ಅನಲೆಯ ಉತ್ತರದಿಂದ ಆತನ ಹೊರಗಣ್ಣು ಕಾಣಲಾರಂಬಿಸುತ್ತದೆ. ಆತನ ದೃಷ್ಟಿ ಅನಲೆ ತೋರಿದ ಕೈಯ ಜೊತೆಯಲ್ಲೇ ವಿಭೀಷಣನೆಡೆಗೆ ತಿರುಗುತ್ತದೆ. ಆಗ ಆತನ ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಅನಲೆ-ಮಂಡೋದರಿಯರು ಭಯಭೀತರಾಗುತ್ತಾರೆ! ಅಲ್ಲಿವಯರೆಗೂ ಆತನನ್ನು ಆವರಿಸಿದ್ದ ’ಅನಲೆ’ ಎಂಬ ಮೋಹದ ತೆರೆ ಸರಿದು ಆತ ನಿದ್ರೆಯಿಂದ ಸಂಪೂರ್ಣ ಎಚ್ಚರಾಗುತ್ತಾನೆ. "ಬಿಟ್ಟರಾರೆನ್ನ ಬಳಿಗೆ ಈ ಕುಲದ್ರೋಹಿಯಂ, ಶತ್ರುಮಿತ್ರನಂ, ಗೃಹವೈರಿಯಂ, ಗರುಂಕೆ ಮುಸುಂಕಿ ಕಣ್ಗೊಳಿಪ ವಂಚನೆಯ ಶಿಥಿಲ ಮಲಕೂಪಮಂ?" ಎಂದು ವಿಭೀಷಣನ್ನು ನಿಂದಿಸುತ್ತಾನೆ. ಆತನನ್ನು ಒಳಗೆ ಬಿಟ್ಟ ’ಅವಿಂಧ್ಯನನ್ನು ಕರೆ’ ಎಂದು ಅನಲೆಗೆ ಆಜ್ಞಾಪಿಸುತ್ತಾನೆ! (ಪಾಪ, ಅವಿಂಧ್ಯ ವಿಭೀಷಣನನ್ನು ತಡೆಯುವ ವಿಫಲ ಯತ್ನವನ್ನು ನಡೆಸಿರುತ್ತಾನೆ) "ನೀಮೆಲ್ಲರು ಎನ್ನ ಕೊಲೆಗೆ ಒಳಸಂಚನ್ನು ಒಡ್ಡಿ ಈ ರಾಜ ವಿದ್ರೋಹಿಯಂ ರಾಜನ ಅರಮನೆಗಿಂತು ಪುಗಿಸಿರ್ಪಿರಲ್ತೆ!" ಎಂದು ಭೀಷಣನಾಗಿ ವಿಭೀಷಣನಿಗೆ ನುಡಿಯುತ್ತಾನೆ! ರಾವಣನನ್ನು ಬಾಲ್ಯದಲ್ಲಿ ಎತ್ತಿ ಆಡಿಸಿದ ಅವಿಂದ್ಯನನ್ನು ಕಂಡರೆ ರಾವಣನಿಗೆ ಏನೋ ವಾತ್ಸಲ್ಯ. ಆತ ಸಮಜಾಯಿಷಿ ನೀಡುತ್ತಾನೆ. ಅ ಸಮಾಜಾಯಿಷಿಯ, ಕೊನೆಯಲ್ಲಿ "ಮೇಣ್ ಅನಲೆಯ ಈ ಬೊಪ್ಪನನ್" ಎಂದು ಒತ್ತಿ ಹೇಳುತ್ತಾನೆ. ಇಲ್ಲಿ ’ಅನಲೆ’ ಎಂಬ ಹೆಸರು ರಾವಣನನ್ನು ಕರಗಿಸಿಬಿಡುತ್ತದೆ. ಅವಿಂಧ್ಯನ ಬಾಯಿಂದ ’ಅನಲೆ’ಯ ಹೆಸರು ಕೇಳಿದ ರಾವಣ ಒಮ್ಮೆ ಮಂಡೋದರಿಯನ್ನು ನೋಡಿ ಅನಲೆಯತ್ತ ತಿರುಗುತ್ತಾನೆ. ಆಕೆಯ ಕಣ್ಣಲ್ಲಿ ನೀರು! ರಾವಣನಿಗೆ ಹೇಗಾಗಿರಬೇಡ.
.......ಎರ್ದೆಯ ಮರುಕಂ ಉಕ್ಕಲ್ಕೆ.
ಬಿರುಕೊಡೆದು ಸೀಳಾಗಲಿಪ್ಪ ತನ್ನಾತ್ಮದ ಇಕ್ಕುಳದಲ್ಲಿ ಸಿಲ್ಕಿ
ಲಿವಿಲಿವಿಯೊದ್ದುಕೊಳುತಿರ್ದ ಕುದಿಬಗೆಯ ರಾವಣಂ ತೆಕ್ಕನೆದ್ದನ್;
ಪಿಡಿದು ಬರಸೆಳೆದು ತಕ್ಕಯ್ಸಿ, ಸಂತೈಸಿ, ಮುದ್ದಾಡಿದನ್
ತನ್ನ ಆ ಪ್ರೀತಿಪುತ್ಥಳಿಯನ್ ಅನಲೆಯಂ:
ಅಳದಿರು ಅಳದಿರೌ, ಅಕ್ಕ!
ಸಾವೊಪ್ಪಡಂ ನನಗೆ,
ನಿನಗೆ ಎಸಗೆನ್ ಆಂ ನೋವಪ್ಪುದಂ!
ಎನ್ನತ್ತ ಆಕೆಯನ್ನು ಎಳೆದು ತನ್ನೊತ್ತಿನಲ್ಲಿ ಕೂರಿಸಿಕೊಳ್ಳುತ್ತಾನೆ; ’ಇನ್ನೆಂದೂ ಬಿಡೆನು’ ಎನ್ನುವಂತೆ. ತನ್ನ ಸೆಜ್ಜೆಗೆ ಸೆಳೆದು ಕುಳ್ಳಿರಿಸಿ, ತಾನವಳ ಮೆಯ್ಯೊತ್ತಿನೊಳೆ ಕುಳಿತು ಎನ್ನುವಲ್ಲಿ ಆತನ ಅನಲೆಯ ಬಗೆಗಿನ ಪ್ರೀತಿ ಉತ್ಕಟವಾಗಿ ಅಭಿವ್ಯಕ್ತವಾಗಿದೆ. ಈ ಕ್ರಿಯೆಯಲ್ಲಿ ರಾವಣ ಮಾತ್ರವಲ್ಲ, ಅವನೊಂದಿಗೆ ಕವಿಯೂ, ಸಹೃದಯರೂ ಒಂದಾಗಿಬಿಡುತ್ತಾರೆ. ಆತನ ಆ ಕ್ರಿಯೆಯೇ, ಆತನಿಗೆ ಸಂಯಮವನ್ನು ಕಲ್ಪಿಸಿದೆ. ಅದಕ್ಕೆ, ಮೌನವಾಗಿ ಕುಳಿತು ಎಲ್ಲವನ್ನೂ ನೋಡುತ್ತಿದ್ದ ವಿಭೀಷಣನನ್ನು ಕುರಿತು ಶಾಂತವಾಗಿ, ಆದರೆ ನಿರ್ಧಾರಯುತವಾಗಿ ಆಜ್ಞೆಯ ರೂಪದಲ್ಲಿ ಹೀಗೆ ಘೋಷಿಸುತ್ತಾನೆ:
ಅನಲೆ ನಿನ್ನ ಮಗಳಲ್ತು,
ಎನ್ನವಳ್!
ಇವಳೆನ್ನ ಕಾಪಿಡುವ ದೇವಿ!
ಸೀತೆಯನ್ನು ಹೊತ್ತು ತಂದಾಗಲಿಂದ ರಾವಣನ ನಡೆನುಡಿಗಳಲ್ಲಿ ವ್ಯಕ್ತವಾಗುತ್ತಿದ್ದ ಅಳುಕು ಇಲ್ಲಿ ಮಾಯವಾಗಿದೆ. ’ಎನ್ನವಳ್’ ಎನ್ನುವಲ್ಲಿ ವ್ಯಕ್ತವಾಗುವ ಗರ್ವ, ಹೆಮ್ಮೆ ಓದುಗನ ಮನಸ್ಸನ್ನು ಹಿಡಿದು ನಿಲ್ಲಿಸಿಬಿಡುತ್ತದೆ. "ಆ ಪುಣ್ಯಮೆನಗಕ್ಕೆ" ಎಂದು ವಿಭೀಷಣ ಮೊದಲ ಮಾತನಾಡಿದಾಗ ಅಲ್ಲಿ 'ತಿಳಿನಗೆಯ ಸುಳಿ ಸುಳಿದುದಲ್ಲಿರ್ದರೆಲ್ಲರ ಮೊಗಂಗಳೊಳ್: ನಗೆವೆಳಗಿಗೆ ಉದ್ಭವಿಸಿದತ್ತಲ್ಲಿ ಮೈತ್ರಿಯ ನೆಳಲ್.' ಅನಲೆ ಆತನ ಆತ್ಮೋನ್ನತಿಯ ಮನುಷ್ಯರೂಪ ಮಾತ್ರ ಆಗಿದ್ದಾಳೆ. ಆತನ ಮನಸ್ಸು ಅದನ್ನು ಗುರುತಿಸಿದೆ; ’ಎನ್ನವಳ್’ ಎಂದು ಅಪ್ಪಿಕೊಂಡಿದೆ. ಇಲ್ಲಿಂದಲೇ ಆತನ ರಾವಣತ್ವ ಅಧೋಮುಖವಾಗುತ್ತದೆ. ಹೌದು, ಇಲ್ಲಿಂದ ಮುಂದಕ್ಕೆ ರಾವಣನ ಆತ್ಮ, -ಸಾವು ಎದುರಿಗಿದ್ದರೂ, ನಿಶ್ಚಯವಾಗಿದ್ದರೂ- ಮತ್ತೆಂದೂ ಅಧೋಮುಖಿಯಾಗುವುದಿಲ್ಲ! ಅದಕ್ಕೆ ಕಾರಣಳಾದ ಅನಲೆಯನ್ನು ಕುರಿತು "ಪುಣ್ಯಪ್ರಚೋದಿಯೆನಗೆ ಇದೊಂದೆ ಸೌಂದರ್ಯಂ ಅನಲೆಯ ಈ ಮುದ್ದು ಚೆಲ್ವು!" ಎಂದು ಹೆಮ್ಮೆಯಿಂದ ಹೇಳುತ್ತಾನೆ. ಆತನ ಮಾತುಗಳಿಗೆ "ತಾಯ್ ಸರಮೆ ಗಂಧರ್ವಕನ್ಯೆ, ತಂದೆಯುಂ ಅಂತೆ ಸತ್ತ್ವನಿಧಿ! ಕುವರಿಯಿಂತಿರ್ಪುದೇಂ ಸೋಜಿಗಮೆ?" ಎಂದು ಅವಿಂಧ್ಯ ಅಡಿಗೆರೆ ಎಳೆಯುತ್ತಾನೆ.
ಮುಂದೆ ರಾವಣ ವಿಭೀಷಣನ ನಡುವೆ ಮಾತು ಮುಂದುವರೆಯುತ್ತದೆ. ವಿಭೀಷಣ, ನೆನ್ನೆ ರಾಜಸಭೆಯಲ್ಲಿ ತಾನಾಡಿದ ಮಾತಿಗೆ ಕ್ಷಮೆ ಕೇಳುತ್ತಾನೆ. "ನಿನ್ನಭ್ಯುದಯಂ ಅಲ್ಲದೆ ಎನಗೆ ಎನ್ನ ನಾಲಗೆಗೆ ಬೇರಿಲ್ಲ ಗುರಿ" ಎನ್ನುತ್ತಾನೆ. "ಸಾವಧಾನದಿ ಮಥಿಸಿ ನನ್ನೆಂದುದಂ, ನಿರ್ಣಯಿಸು ಮುಂಬಟ್ಟೆಯಂ, ಬಾಳ್ವ ಬಟ್ಟೆಯಂ" ಎಂದು ರಾವಣನ ಅಂಗಳಕ್ಕೆ ಚೆಂಡನ್ನು ತಳ್ಳಿ ಮೌನವಾಗಿಬಿಡುತ್ತಾನೆ. ರಾವಣನ ನಿರ್ಧಾರ ಅಚಲವಾಗಿಬಿಟ್ಟಿದೆ. ಆತ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡಲಾರ. ಇತ್ತ, ಆತನ ತಮ್ಮ, ವಿಭೀಷಣನದೂ ಅದೇ ಸ್ಥಿತಿ.
ರಾಜಶಾಸನವಿರ್ಪೊಡಂ,
ಸೋದರನ ಕೊಲೆಗೆ ಕಾರಣಮಪ್ಪ ದುರ್ಯಶಕೆ ಪೇಸುವೆನ್....
ಮನವಿರಲ್ ನೆರವಾಗು.
ಇರದಿರಲ್ ಲಂಕೆಯನುಳಿದು ಪೋಗು.
ಅನ್ಯ ವಾದಕ್ಕಿಲ್ಲಿ ಕೇಳ್ ಇನಿತುಂ ಅನುವಿಲ್ಲ....
ನನ್ನ ಮಾರ್ಗಂ ನನಗೆ; ನಿನ್ನದು ನಿನಗೆ
ಎಂದು ರಾವಣ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತಾನೆ.
ವಿಭೀಷಣ:
ಕಟ್ಟಕಡೆ ನಿರ್ಣಯವೊ?
ರಾವಣ:
ಕೊಟ್ಟ ಕೊನೆ ನಿರ್ಣಯಂ!
ವಿಭೀಷಣ:
ನಿನಗೊಳ್ಳಿತಕ್ಕೆ! ಸದ್ಬುದ್ಧಿ ಬರ್ಕೆ!
ತಂದೆಯ ತಪದ ಮೈಮೆಯಿಂದಪ್ಪೊಡಂ
ನಿನ್ನಾತ್ಮಕುದ್ಧಾರಮಿರ್ಕೆ!
ಪೋಪೆನಿಲ್ಲಿಂದೆ, ಬೀಳ್ಕೊಡಿಮ್!
ರಾವಣ:
ಎತ್ತಣ್ಗೆ?
ವಿಭೀಷಣ:
ಅನಿಶ್ಚಿತಂ
ರಾವಣ:
ಕಡಲಾಚೆ ದಡದೆಡೆಗೊ? (ರಾವಣ ಈ ಮಾತಿನಲ್ಲಿ ವ್ಯಂಗ್ಯವಿದೆ; ಮುಂಗಾಣ್ಕೆಯಿದೆ)
ವಿಭೀಷಣ:
ಏನರ್ಥಮದಕೆ?
ರಾವಣ:
ಅರಿದಿದೆ ನಿನಗೆ;
ನೀಂ ಪೇಳಲಕ್ಕುಮಯ್!
ವಿಭೀಷಣ:
ನೀನಿನಿತು ಕೀಳ್ ಮನನ್ ಎಂದರಿದೆನಿಲ್ಲ ಇನ್ನೆಗಂ!
ರಾವಣ:
ಪರಸ್ಪರಮಲ್ತೆ ಪೇಳ್ ಆ ಅರಿವು!
ವಿಭೀಷಣ:
ನಮಸ್ಕಾರ
ಈ ಕ್ಷಣ, ಮೇಲಿನ ನಾಟಕದ ಕೊನೆಯ ಕ್ಷಣ, ನಮಸ್ಕರಿಸಿ ಮೇಲೆದ್ದ ವಿಭೀಷಣನ ಜೊತೆಯಲ್ಲಿ ಅನಲೆಯೂ ಎದ್ದುಬಿಡುತ್ತಾಳೆ! ಅವಳು ಎದ್ದುದನ್ನು ಕಂಡ ರಾವಣ, ವಾದದಲ್ಲಿ ಮುಳುಗಿಹೋಗಿದ್ದ ರಾಜೇಂದ್ರ, ದಾನವೇಂದ್ರ ರಾವಣ ತೆಕ್ಕನೆ ಎಚ್ಚೆತ್ತು ’ತಂದೆ’ ರಾವಣನಾಗುತ್ತಾನೆ!
ಆಜ್ಞೆಯಿಂ ಸಾಧ್ಯಮಪ್ಪೊಡಂ ಇದನ್ ಬೇಡುವೆನ್.
ಅನಲೆಯಂ ಕೊಂಡೊಯ್ದು,
ಸುಕುಮಾರಿಯಂ ಕಠಿನಕೊಡ್ಡದಿರ್
ತಮ್ಮ ವಿಭೀಷಣನನ್ನೇ ಬೇಡುತ್ತಿದ್ದಾನೆ ರಾವಣ. ಆಗ ಅನಲೆ ಮಾತನಾಡಲೇಬೇಕಾದ ಸಂದರ್ಭ ಬರುತ್ತದೆ. ಏಕೆಂದರೆ ರಾವಣ ವಿಭೀಷಣನ ಶತ್ರುವಲ್ಲ, ಅಣ್ಣ. ಸೀತಾಪಹರಣದ ಕಳಂಕವಿಲ್ಲದಿದ್ದಲ್ಲಿ ವಿಭೀಷಣ ತನ್ನ ಅಣ್ಣನ ವಿಷಯದಲ್ಲಿ ಕಠಿಣನಾಗುವ ಸಂದರ್ಭ ಬಂದಿರಲೇ ಇಲ್ಲ. ಅದಕ್ಕೆ, ಆತನಿಗೆ ರಾವಣನ ಈ ಬೇಡಿಕೆ ವಿಚಿತ್ರವೆನಿಸುವುದಿಲ್ಲ. ಅದರಿಂದಲೇ ಆತ ಮೌನವಹಿಸುತ್ತಾನೆ; ಮೌನವೇ ಸಮ್ಮತಿ ಎಂಬಂತೆ! ಆಗ,
ಅನಲೆ:
ಮನ್ನಿಸೆನ್ನನ್;
ತಂದೆಯೊಡವೋಗಿ, ಧರ್ಮಮನ್ ಸೇವಿಪೆನ್
ರಾವಣ:
ಇಲ್ಲಿರ್ದೆ ಧರ್ಮಕೆ ಸೇವೆಗೆಯ್!
ಅನಲೆ:
ಧರ್ಮಮಂ ಪೊರಗಟ್ಟಿ ಸೇವಿಪ್ಪುದೆಂತು!
ರಾವಣ: (ಅನಲೆಯ ಕೈಹಿಡಿದು)
ನನ್ನನ್ನರಂ ನಿನ್ನನ್ನರುಳಿಯೆ, ಧರ್ಮಂ ಉದ್ಧಾರಮಾದಪುದೆ?
ನಿನ್ನಯ್ಯಗಿಂ ಮಿಗಿಲ್ ನೀನ್ ವೇಳ್ಕುಮೆನಗಲ್ತೆ?
ಅನಲೆ: (ರಾವಣನ ತರ್ಕದ ಮುಂದೆ, ಅನಲೆ ಸೋಲುತ್ತಾಳೆ.)
ಬೊಪ್ಪನಪ್ಪಣೆಯೆನಗೆ ಬಟ್ಟೆ
(ಎಂದು ತಾನು ಎಲ್ಲಿರಬೇಕೆಂಬುದನ್ನು ವಿಭೀಷಣನ ತೀರ್ಮಾನಕ್ಕೆ ಬಿಡುತ್ತಾಳೆ)
ವಿಭೀಷಣ:
ಪಿರಿಯಯ್ಯನೆಂಬುದೆ ದಿಟಂ,
ಮಗಳೆ ನೀನಿರಲ್ ವೇಳ್ಕುಂ ಅದೆ ನೀತಿ.
ಅನಲೆ:
ತೊರೆವೆನೆ ನಿನ್ನ ಸಾನ್ನಿಧ್ಯಮಂ?
ರಾವಣ: (ದೈನ್ಯದಿಂದ)
ನಿನಗೆ ತಡೆಯುಂಟೆ, ಪೇಳಕ್ಕ?
ನಿನ್ನಯ್ಯನ್ ಎಲ್ಲಿರ್ದೊಡಲ್ಲಿಗೆ, ಏಗಳಾದೊಡಂ,
ಪೋಗಿ ಬರಲನುಮತಿಯನ್
ಅಂತೆಯೇ ವಿಮಾನಮನ್ ಪುಷ್ಪಕವನ್ ಈವೆನ್!
ಎಂದು ಅನಲೆಯ ಬಳಿ ನಿಲ್ಲುತ್ತಾನೆ. ರಾವಣನ ಆ ದೈನ್ಯದಲ್ಲಿ, ಆತನ ಉದ್ಧಾರಕರವಾದ ಭಾವಬೀಜವನ್ನು ವಿಭೀಷಣ ಗುರುತಿಸಿ, ಹರ್ಷಿಸಿ ಅವರನ್ನು ಬೀಳ್ಕೊಳ್ಳುತ್ತಾನೆ. ಇಲ್ಲಿ ಅನಲೆಯ ಒಲವು ನಿಲುವುಗಳು ಸುಂದರವಾಗಿ ಅಭಿವ್ಯಕ್ತಿಗೊಂಡಿವೆ. ಆಕೆ ವಿಭೀಷಣನಿಗೆ ಮಾತ್ರ ಮಗಳಲ್ಲ, ಇಡೀ ಕುಟುಂಬದ ಮಗಳು. ಆದ್ದರಿಂದ ಕುಟುಂಬದ ಯಜಮಾನನಾದ ರಾವಣ ಅಧಿಕಾರದಿಂದ ಮಾತ್ರವಲ್ಲ, ಅನಲೆಯ ಮೇಲಿಟ್ಟಿದ್ದ ತನ್ನ ಪರಿಶುದ್ಧ ಪ್ರೀತಿಯಿಂದಲೂ ಗೆಲ್ಲುತ್ತಾನೆ. ಆತನ ಮನಃಪರಿವರ್ತನೆಯಲ್ಲಿ ಅನಲೆಯ ಪಾತ್ರ ದೊಡ್ಡದು. ಕವಿ ಕುವೆಂಪು ರಾಮಾಯಣವನ್ನು ರಾಮಾಯಣದರ್ಶನವನ್ನಾಗಿಸಿದ್ದೇ ಊರ್ಧ್ವಾಭಿಲಾಷೆಯಿಂದ (ಪಾಪಿಗುದ್ಧಾರಮಿಹುದೌ ಸೃಷ್ಠಿಯ ಮಹದ್ ವ್ಯೂಹರಚನೆಯೊಳ್). ಅದಕ್ಕೆ ಕವಿಮಾನಸಪುತ್ರಿಯಾದ ಅನಲೆ ನೆರವಾಗದಿರುತ್ತಾಳೆಯೆ!?
[ನಾಳೆ : ನಮಗೆ ಅನಲೆಯೆ ದಿಟಂ!]

Wednesday, May 07, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 2

ಹಿಂದಿನ ಸಂಚಿಕೆ :  ಗಾನಮಲ್ತು; ಅನುರೋಧನಂ! .....
ನಮಗೆ ಅನಲೆಯೆ ದಿಟಂ! 
ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ, ಸೀತೆಯನ್ನು ಭೇಟಿಯಾದಾಗ. ಆದರೆ ಅದು ನಮಗೆ ತಿಳಿಯುವುದು ಮಂಡೋದರಿ-ರಾವಣರ ನಡುವೆ ನಡೆಯುವ ಸಂಭಾಷಣೆಯ ಮೂಲಕ. ಅವರಿಬ್ಬರ ಸಂಭಾಷಣೆಯ ನಡುವೆಯೂ ’ಅನಲೆ’ ಎಂಬ ಹೆಸರು ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ. ರಾವಣನ ಮನಸ್ಸನ್ನು ಆರ್ದ್ರವಗೊಳಿಸುತ್ತದೆ. ’ಸೀತೆಯನ್ನು ಒಬ್ಬನೇ ಹೋಗಿ ಕಂಡಿದ್ದೇಕೆ?’ ಎಂದು ಮಂಡೋದರಿ ಕಳವಳಗೊಳ್ಳುತ್ತಾಳೆ. ಸೀತೆಯ ರಕ್ಷಣೆಗೆ ಆಕೆಯೂ ತಪೋರಕ್ಷೆಯನ್ನು ಕಟ್ಟಿದ್ದಾಳೆ. ಆಕೆಯ ಕಳವಳವನ್ನು ನಿವಾರಿಸುತ್ತ ರಾವಣ, ’ಇಂದ್ರಜಿತುವಿನ ಮಾಯೆಗೆ ಸಿಲುಕಿ ರಾಮಲಕ್ಷ್ಮಣ ಸಹಿತ ಕಪಿಸೇನೆಗೆ ಆದ, ಹಿಂದಿನ ದಿನದ ಸೋಲನ್ನು ಹೇಳಲು ಹೋಗಿದ್ದೆ. ಅಲ್ಲಿ ತ್ರಿಜಟೆಯಿದ್ದಳು, ಅನಲೆಯಿದ್ದಳು’ ಎನ್ನುತ್ತಾನೆ. "ಪೇಳ್ದಳ್ ಎನಗೆ ಅನಲೆ ಬೇರೊಂದು ಕಥೆಯಂ" ಎಂದು ಮಂಡೋದರಿ ಅನಲೆಯ ಮಾತೆತ್ತಿದಾಗ, ರಾವಣ ಸಿಡಿಮಿಡಿಗೊಳ್ಳುವುದಿಲ್ಲ; ಬದಲಾಗಿ ತನ್ನ ಹೃದಯವನ್ನೇ, ಮನದಕುದಿತವನ್ನೇ ಮಂಡೋದರಿಯ ಮುಂದೆ ತೆರೆದಿಡುತ್ತಾನೆ. ಹಿಂದಿನ ರಾತ್ರಿ ತನಗೆ ಬಿದ್ದಿದ್ದ ಕನಸು, ಅದರಲ್ಲಿ ’ವೇದವತಿ’ ಚಿತೆಗೆ ಬಿದ್ದದ್ದು, ನೋಡುತ್ತಾ ನೋಡುತ್ತಾ ಆ ವೇದವತಿಯೇ ಸೀತೆಯಂತೆ ಕಂಡಿದ್ದು ಅದರಿಂದ ತನಗಾದ ನಡುಕ ಎಲ್ಲವನ್ನೂ ಹೇಳುತ್ತಾನೆ. ಆ (ಸೀತೆಯೂ ಸತ್ತುಹೋದಳೆ ಎಂಬ) ಭಯದಿಂದಲೇ ಬೆಳಿಗ್ಗೆ ಆತ ಅಶೊಕವನಕ್ಕೆ ಹೋಗಿ ಮನಸ್ಸಿನ ಕಳವಳವನ್ನು ದೂರಮಾಡಿಕೊಂಡಿರುತ್ತಾನೆ, ರಾವಣ. ಆಗ, ಮಂಡೋದರಿ ’ಅದು ನಿನ್ನಂತರಾತ್ಮದ ಶುದ್ಧ ಸಂದೇಶ, ಅದನ್ನು ದಿಕ್ಕರಿಸದಿರು’ ಎಂದು ಹೇಳುತ್ತ, ಅನಲೆ ತನಗೆ ಹೇಳಿದ್ದ ಘಟನೆಯನ್ನು ’ಅದು ನಿಮ್ಮ ಕನಸಿಗಿಂತ ಮಿಗಿಲು’ ಎಂದು ಕೆಳಗಿನಂತೆ ಹೇಳುತ್ತಾಳೆ.
ತ್ರಿಜಟೆ ತನ್ನ ಕೈಂಕರ್ಯಮಂ ಮುಗಿಸಿ ಮಲಗಿದಳಂತೆ.
ದೇವಿ ಕಣ್ಮುಚ್ಚದೆಯೆ ಭೀಷ್ಮ ಮೌನವನಾಂತು
ತನ್ನೊಳಗೆ ತಾಂ ಪೊಕ್ಕ ಯೋಗಿನಿವೋಲಿರಲ್
ಕಂಡುದು ಅನಲೆಯ ಕಣ್ಗೆ ಪರ್ಣಶಾಲೆಯ ತುಂಬಿದೊಂದನುಪಮಜ್ಯೋತಿ.
ರೋಮಾಂಚ ಕಂಚುಕಿತ ಗಾತ್ರೆ ನೋಡುತ್ತಿರಲ್,
ಬಾಹ್ಯಸಂಜ್ಞಾಶೂನ್ಯೆ ಆ ಸೀತೆ ತೊಡಗಿದಳ್
ಆರೊ ನುಡಿಸಿದವೊಲಾಗಿ ಸಂವಾದಮಂ.
ಆ ಪೂಜ್ಯೆ ಅಲ್ಲಿರ್ದುಂ ಎಲ್ಲೆಲ್ಲಿಯುಂ ಚರಿಸುತಿರ್ದಂತೆ,
ಅಲ್ಲಿರ್ದುಂ ಎಲ್ಲಮಂ ಕಾಣುತಿರ್ದಂತೆ,
ಮೇಣ್ ಅಲ್ಲಿ ತಾಟಸ್ಥ್ಯಮಂ ತಾಳ್ದಳೋಲಿರ್ದೊಡಂ ದೂರಮಿರ್ದು
ಇತರರ ಜಗತ್ ಕ್ರಿಯಾಚಕ್ರಮಂ ನಡೆಪವೋಲ್ ಆಚರಿಸುತಿರ್ದಳಂ
ಕಂಡು ಅನಲೆ ಮೆಯ್ಮರೆತಳಂತೆ ಭಯರಸವಶೆ!
ಅನಂತರಂ ಹದಿಬದೆಯ ಕಯ್ಯ ಸೋಂಕಿಗೆ ಅನಲೆ ಕಣ್ದೆರೆಯೆ,
ರಾಮಸತಿ ’ಅಭೀತಯಾಗಲೆ ವತ್ಸೆ, ನೀಂ ಕಂಡ ದೈವಿಕಕೆ.
ನಿನ್ನಯ್ಯನುಪಕೃತಿಗೆ ಬರ್ದುಕಿತೌ ನನ್ನಯ್ದೆದಾಳಿ.
ಕಂಟಕಮೊಂದು ಕಳೆದುದೌ ಪ್ರಭು ರಾಮಚಂದ್ರಂಗೆ!’
ಎನುತೆ ಸಂತೈಕೆಯಂ ಪೇಳ್ದ
ಪಾವನೆಯ ಪದತಲಕೆ ನಮಿಸಿದಳಂತೆ ನಮ್ಮ ಅನಲೆ!
ಪತಿಯ, ಮೈದುನನ, ಮತ್ತವರ ಸೈನ್ಯಕ್ಕೆ ತಪೋರಕ್ಷೆ ಕಟ್ಟುವುದನ್ನು ಬಿಟ್ಟು ಸೀತೆ ಬೇರೆನನ್ನೂ ಮಾಡಲಾರಳು. ಅವಳೇ ಹೇಳಿದಂತೆ, ಅವಳು ಅಸ್ವತಂತ್ರಳು. ಆದರೆ ತಪಕೆ ಬಂಧನದ ಭೀತಿಯಿಲ್ಲ! (ತಪಸ್ಸು ಎಂಬುದನ್ನು ’ಸತ್ಯ-ಅಹಿಂಸೆ’ಗೆ ಅನ್ವಯಿಸಿಕೊಂಡರೆ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜಿಯ ಮಾರ್ಗವೂ ಇದೇ ಆಗಿತ್ತು ಅನ್ನಿಸುತ್ತದೆ). ಆ ಕ್ಷಣ, ಸೀತೆ ಅಲೌಕಿಕ ಸ್ಥಿತಿಯಲ್ಲಿದ್ದ ಹೊತ್ತು, ಅತ್ತ ರಾಮಸೈನ್ಯಕ್ಕೆ ಎದುರಾಗಿದ್ದ ಕಂಟಕ ದೂರವಾಗಿತ್ತು. ರಾಮನ ಜೀವಕ್ಕೆ ಬಂದ ಆಪತ್ತು ದೂರವಾಗಿತ್ತು. ಅದಕ್ಕೆ ಅನಲೆಯ ತಂದೆ ವಿಭೀಷಣನ ಸಹಾಯ ಹಸ್ತವಿತ್ತು. ಅದನ್ನೇ ಸೀತೆ ಅನಲೆಗೆ ಹೇಳಿದ್ದಾಳೆ. ಅನಲೆ ತಾನು ಕಂಡದ್ದನ್ನು ಮಂಡೋದರಿಗೆ ಹೇಳುವಲ್ಲಿಯೂ, ಮಂಡೋದರಿ ರಾವಣನಿಗೆ ಹೇಳುವಲ್ಲಿಯೂ, ಅನಲೆ-ಮಂಡೋದರಿಯರ ರಾವಣೋದ್ಧಾರದ ತುಡಿತವನ್ನು ಅರ್ಥ ಮಾಡಿಕೊಳ್ಳಬಹುದು. ಅದನ್ನೆ ತಿರುಚಿ, ರಾವಣನನ್ನು ಕೆರಳಿಸುವಂತೆ ಹೇಳಿ ಆತನ ಮೆಚ್ಚುಗೆ ಪಡೆಯುವವರಾಗಿದ್ದರೆ ಹಾಗೆ ಮಾಡಬಹುದಿತ್ತೇನೊ? ಆದರೆ ಅವರಿಬ್ಬರೂ ರಾವಣನ ಆತ್ಮೋದ್ಧಾರವೇ ತಮ್ಮ ಉದ್ಧಾರವೆಂದು ಭಾವಿಸಿದವರಾಗಿದ್ದಾರೆ. ಈ ವಿಷಯವನ್ನು ಅನಲೆಯಲ್ಲದೆ ಬೇರೆಯವರು ಹೇಳಿದ್ದು ಎಂದಿದ್ದರೆ ರಾವಣನ ಪ್ರತಿಕ್ರಿಯೆ ಹೇಗಿರುತ್ತಿತ್ತೊ? ಏನೊ? ಆದರೆ ಅನಲೆಯ ಹೆಸರೇ ಆತನನ್ನು, ಆತನ ಚಿಂತನಾಶಕ್ತಿಯನ್ನು ಮತ್ತೆ ಮತ್ತೆ ಊರ್ಧ್ವಮುಖಿಯನ್ನಾಗಿಸುತ್ತದೆ. ತಾನು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಸರಿಸದೆಯೂ, ಅನಲೆಯ ಮೇಲಿನ ತನ್ನ ಪ್ರೇಮವನ್ನು ಕಡಿಮೆ ಮಾಡಿಕೊಳ್ಳದೆಯೂ, ಆಕೆಯ ವರದಿಗೆ ರಾವಣ ಕೆಳಗಿನಂತೆ ಪ್ರತಿಕ್ರಿಯಿಸುತ್ತಾನೆ.
ಅನಲೆ!
ನಮಗೆ ಅನಲೆಯೆ ದಿಟಂ!
ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್!
ಇರ್ವರುಂ ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು!
ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್
ನೋಡಿಬರುವಾಸೆಗೆ ಆಣತಿಯಿತ್ತೆನ್ ಒಪ್ಪಿದೆನ್;
ಮಾಡಿದಳ್ ಮನೆಯನ್ ಅಶೋಕವನದೊಳ್!
ಕಟ್ಟು ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ, ಮತಿಗೆಟ್ಟು ನಂಬುವಳ್;
ನಂಬಿಸುವಳ್ ಇತರರಂ; ಪೆಣ್ಗಳೊಳ್ ಪ್ರಕಟಿಸುವಳ್ ಅಪಧೈರ್ಯಮಂ!
ಆ ಅಣುಗಿ ಬೆಪ್ಪಾಡಿದುದನೆಲ್ಲಮಂ ನೀನುಂ ಒಪ್ಪಿದೆಯಲಾ, ಅದೆ ಸೋಜಿಗಂ!
ನಿನ್ನೆ ಬದುಕಿದನಲಾ ಶತ್ರು; ಇಂದಿನ ರಣದಿ ಕಾಣ್ಬೆ
ನಿನ್ನ ತಲೆಗೆಟ್ಟ ಅನಲೆಯಾ ಕಟ್ಟಿರ್ಪ ಕತೆಯ ಪೊಳ್ಳಂ.
ರಾವಣನ ಈ ಮಾತುಗಳಲ್ಲಿ ಅನಲೆಯ ಬಗ್ಗೆ ಆತನಿಗಿದ್ದ ಪ್ರೀತಿ ಅತ್ಯಂತ ಸ್ಫುಟವಾಗಿ ವ್ಯಕ್ತವಾಗಿದೆ. ಅಂತಹ ಸುದ್ದಿಯನ್ನು ತಂದು ಮಂಡೋದರಿಗೆ ಹೇಳಿದ್ದಕ್ಕೆ ಅನಲೆಯ ಮೇಲೆ ಆತನಿಗೆ ಕೋಪ ಬರುವುದಿಲ್ಲ. ಅದೊಂದು ಹುಡುಗಾಟಿಕೆ ಅನ್ನಿಸಿದೆ ಎನ್ನುವಂತೆ ಆಕೆಯ ಬಗ್ಗೆ ಮಾತನಾಡುತ್ತಾನೆ. ’ದ್ರೋಹಿಗಳ್’ ಎನ್ನುವಲ್ಲಿಯೂ ಕಾಠಿಣ್ಯದೊರತೆಯಿಲ್ಲ! ಅನಲೆ ಹೇಳಿದ್ದಕ್ಕಿಂತ, ಅದನ್ನು ನಂಬಿರುವ ಮಂಡೋದರಿಯ ಬಗ್ಗೆಯೇ ಆತನಿಗೆ ಹೆಚ್ಚು ಆಕ್ಷೇಪಣೆ ಇದ್ದಂತೆ ಕಾಣುತ್ತದೆ! ಆಕೆಯನ್ನು ’ಅಣುಗಿ’ ಎಂದು ಕರೆದಿರುವುದರಲ್ಲೂ ರಾವಣನ ಮನಸ್ಸನ್ನು ಓದಿಕೊಳ್ಳಬಹುದು. ಆದರೆ, ರಾವಣ ರಾಜನೂ ಹೌದು; ಚತುರನೂ ಹೌದು. ಅದಕ್ಕೆ ಆತನ ಅಂತರಂಗ, ಕೇವಲ ಆಕೆಯ ಮಾತುಗಳನ್ನು ಕಟ್ಟುಕತೆಯೆಂದು ನಿರಾಕರಿಸುವುದಿಲ್ಲ, ಅದರ ಪರಿಣಾಮಗಳನ್ನು ಚಿಂತಿಸುತ್ತಾನೆ. ’ನಮಗೆ ಅನಲೆಯೆ ದಿಟಂ’ ಎಂಬ ಮಾತಿನಲ್ಲಿ ಅದು ವ್ಯಕ್ತವಾಗಿದೆ. ಅನಲ ಎಂದರೆ ಅಗ್ನಿ, ಬೆಂಕಿ ಎಂದರ್ಥ. ಅಗ್ನಿ ಸೃಷ್ಟಿ-ನಾಶ ಎರಡಕ್ಕೂ ಸಂಬಂಧಿಸಿದ್ದಲ್ಲವೆ? ಇಲ್ಲಿ ರಾವಣನ ಮಾತನ್ನು ಎರಡೂ ಅರ್ಥದಲ್ಲಿಯೂ ಗಮನಿಸಬಹುದು. ತಮ್ಮೊಳಗಿನ ದುಷ್ಟತೆಯನ್ನು, ಅಳುಕನ್ನು, ಕೊಳಕನ್ನು ನಾಶಪಡಿಸುವುದರಿಂದಲೂ ಆಕೆ ಅಗ್ನಿ; ನಮ್ಮ ಆತ್ಮೋದ್ಧಾರಕ್ಕಾಗಿಯೇ ಆಕೆಯ ಪ್ರಯತ್ನವಿರುವುದರಿಂದಲೂ ಆಕೆ ಅಗ್ನಿ! ’ಎನ್ನ ಮಗಳ್ ಇವಳ್’ ಎಂದು ಅಭಿಮಾನದಿಂದ ರಾವಣ ಹೇಳಿದ ಮಾತಿಗೆ ಸಾಕ್ಷಿಯೊದಗಿಸುವಂತೆ ಬಂದಿವೆ ಮೇಲಿನ ಮಾತುಗಳು. ಮುಂದೆ ಚಾರನೊಬ್ಬ ಬಂದು, ಅಂದಿನ ಯುದ್ಧದ ವಾರ್ತೆಯನ್ನು, ತಮಗೊದಗಿರುವ ಯಶಸ್ಸನ್ನು ತಿಳಿಸುತ್ತಾನೆ. ರಾವಣ, ಮಂಡೋದರಿಯನ್ನು ನೋಡಿ ವಿಜಯದ ನಗೆ ಬೀರುತ್ತಾನೆ. ತಾನು ಅಲ್ಲಿಂದ ಹೊರಡುವ ಮುಂಚೆ ಮಂಡೋದರಿಗೆ ಆತ ಹೇಳುವ ಮಾತುಗಳಿವು.
ಸೀತೆಯಂ ಸಾಯದವೊಲ್
ಎಂತಾದಡಂ ಪೊರೆಯವೇಳ್ಕುಂ
ಆ ಅನಲೆಗೆ ಎನ್ನಾಜ್ಞೆಯಂ ಪೇಳ್, ದೇವಿ.
ಇನ್ನೆನಗೆ ರಣದ ಮೋಹವೆ ಮೋಹಂ
ಆ ಜಾನಕಿಯ ಮೇಲೆ ಮುನ್ನಿರ್ದ ಮೋಹಮೆಲ್ಲಂ
ತಿರುಗಿಹುದು ರಣದ ಮಧುರತರ ಸಾಹಸಕೆ!
ರಾಮನ ಪಡೆಗೆ, ತನ್ಮೂಲಕ ರಾಮನಿಗೆ ಸೋಲಾದರೆ ಸೀತೆ ಬದುಕುವುದಿಲ್ಲ ಎಂಬ ಭಯ ಆತನಿಗಿದೆ. ಸೀತೆ ಸಾಯುವುದು ಆತನಿಗೆ ಬೇಕಿಲ್ಲ. ಏಕೆಂದರೆ, ಆತನ ಮುಂದಿನ ಬಟ್ಟೆ ಈಗಾಗಲೇ ನಿರ್ಧಾರವಾಗಿಬಿಟ್ಟಿದೆ. ರಾವಣ ಬದಲಾಗಿದ್ದಾನೆ ಎಂಬುದಕ್ಕೆ, ಹಾಗೂ ತನ್ನ ಕಾರ್ಯಸಿದ್ಧಿಗೆ ಅನಲೆಯನ್ನೇ ಆಶ್ರಯಿಸಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿವೆ, ಈ ಮಾತುಗಳು.

[ನಾಳೆ : ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!]

Tuesday, May 06, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 1

ಹಿಂದಿನ ಸಂಚಿಕೆ : ಯಾರೀ 'ಅನಲಾ'!?

ಗಾನಮಲ್ತು; ಅನುರೋಧನಂ! .....
ಸುಗ್ರೀವನ ಆಜ್ಞೆಯನ್ನು ಹೊತ್ತು, ರಾಮನಿತ್ತ ಮುದ್ರಿಕೆಯನ್ನು ಆಂತು, ಸಾಗರವನ್ನು ಉಲ್ಲಂಘಿಸಿ, ಸೀತಾನ್ವೇಷಣೆಗಾಗಿ ಲಂಕೆಗೆ ಬಂದಿಳಿದ ಆಂಜನೇಯನಿಗೆ, ‘ಸಂಸ್ಕೃತಿ ಲಂಕಾ’ ಅಚ್ಚರಿಯ ಕಡಲಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಸೀತೆಯನ್ನು ಹುಡುಕುತ್ತಾ ಲಂಕೆಯ ಪ್ರಮುಖ ಮನೆಗಳೆಲ್ಲವನ್ನೂ ಶೋಧಿಸುತ್ತಾ ಬರುತ್ತಾನೆ. ಅರಮನೆಯಲ್ಲಿ ರಾವಣನೊಂದಿಗೆ ಇದ್ದ ಮಂಡೋದರಿಯನ್ನೇ ಸೀತೆಯೆಂದು ಭಾವಿಸುತ್ತಾನೆ, ಕೊನೆಗೆ ನಿಜವನ್ನರಿಯುತ್ತಾನೆ. ಅಲ್ಲಿಂದ ಮುಂದೆ ಬಂದವನಿಗೆ ಕಂಡದ್ದು ರಾವಣನ ಮಗ ಇಂದ್ರಜಿತು ಮತ್ತವನ ಸಂಸಾರ. ಧೂಮರೂಪವನ್ನು ತಳೆದು ಸಂಚರಿಸುತ್ತಿದ್ದ ಆಂಜನೇಯನ ಕಾರಣದಿಂದ ದಟ್ಟಯಿಸಿದ ಹೊಗೆಗೆ ತೂಗುತೊಟ್ಟಿಲಿನಲ್ಲಿ ಅಳಲಾರಂಭಿಸಿದ ವಜ್ರಾರಿಯನ್ನು ಆತನ ತಾಯಿ ತಾರಾಕ್ಷಿ ಸಂತಯಿಸುತ್ತಿದ್ದಾಳೆ. ಅವಳಿಗೆ ಅದೊಂದು ಅಪಶಕುನದಂತೆ ಭಾಸವಾಗಿದೆ. ಇಂದ್ರಜಿತು ಅವಳಿಗೆ ನೆರವಾಗುತ್ತಾ, ತನ್ನ ಕಂದನ ಅಳು ಹಾಗೂ ಹೆಂಡತಿಯ ಭಯಕ್ಕೆ ಸ್ಪಂದಿಸುತ್ತಿದ್ದಾನೆ. ಆವರಿಸಿರವ ದಟ್ಟ ಹೊಗೆಯನ್ನು ಗಮನಿಸಿದ ಆತ, "ಏನಿದು? ಧೂಫಧೂಮಮೇಂ? ಇಂತು ಪೊಗೆ ಅಡಸಿದೊಡೆ ನಿದ್ದೆ ಅಚ್ಚರಿಯಲ್ತೆ ಕಂದಂಗೆ?" ಎಂದು ಚಾರರಿಗೆ ಗವಾಕ್ಷಗಳನ್ನು ತೆರೆಯಲು ಆದೇಶಿಸುತ್ತಾನೆ. ಅದು ಅಪಶಕುನದಂತೆ ಕಂಡುದೇಕೆಂದು ತಾರಾಕ್ಷಿ ಹೇಳುತ್ತಾಳೆ.
ಪೋದ ಬೈಗಿನೊಳು,
ಪತ್ತನದ ಉತ್ತರದ ಗಿರಿಯ ಲಂಬವೆಂಬಾ ಶಿಖರದತ್ತಣ್ಗೆ
ಬಿದ್ದುದು ಒಂದು ಮಹೋಲ್ಕೆ.
ಎಮ್ಮ ಉದ್ಯಾನ ಕೃತಕ ಶೈಲಾಗ್ರದಿಂ ಕಂಡೆನ್
ಆಂ ಅನಲಾಕುಮಾರಿಯೊಡನಿರ್ದು
ಕನಕಲಂಕಾನ್ವೇಷಣೆಯಲ್ಲಿ ಆಂಜನೇಯನೊಂದಿಗಿದ್ದು ಸಂಚರಿಸುತ್ತಿದ್ದ ಸಹೃದಯರಿಗೆ ಮೊದಲ ಬಾರಿಗೆ ಅನಲಾ ಎಂಬ ಹೆಸರು ಎದುರಾಗುತ್ತದೆ. (’ರಾಮಾಯಣದರ್ಶನಂ’ನಲ್ಲಿ ರಾವಣನ ಹೆಸರು ಮೊದಲು ಕೇಳುವುದು ವಿಶ್ವಾಮಿತ್ರನ ಬಾಯಲ್ಲಿ, ಅದೂ ದಶರಥನ ಸಭೆಯಲ್ಲಿ!) ಯಾರು ಈ ಅನಲೆ? ರಾವಣನ ಸೊಸೆ ತಾರಾಕ್ಷಿಯ ಜೊತೆಗಿದ್ದಾಳೆ. ತಾರಾಕ್ಷಿ ಅವಳನ್ನು 'ಅನಲಾಕುಮಾರಿ’ ಎಂದು ಗೌರಪೂರ್ವಕವಾಗಿ ಸಂಬೋಧಿಸುತ್ತಿದ್ದಾಳೆ? ಎಂಬ ಅನುಮಾನಗಳು ಏಳಲು ಶುರುವಾಗುತ್ತವೆ. ಅದಕ್ಕೆ ಮತ್ತೆ ಮುಂದೆ ಇಂದ್ರಜಿತುವಿನ ಮಾತಲ್ಲಿ ಉತ್ತರ ಸಿಗುತ್ತದೆ. ಮಹಾಉಲ್ಕೆ ಬಿದ್ದದ್ದು ಅಪಶಕುನ ಎಂದು ಬಗೆದ ಮಡದಿಯ ಭೀತಿಯನ್ನು ನಿವಾರಿಸಿ, ’ಧನುರ್ವಿದ್ಯೆಯಂ ಪೇಳ್ವ ವೇದಮಂ’ ಓದಲು ಮುಂದಾಗಿದ್ದ ಇಂದ್ರಜಿತುವನ್ನು ತಾರಾಕ್ಷಿ ತಡೆದು,
....ರಾಮಸತಿಯಂ ಮಾವನ್ ಅಪಹರಿಸಿ ತಂದಾ ಮೊದಲ್ಗೊಂಡು
ತೋರುತಿವೆ ದುಶ್ಯಕುನಗಳ್. ನನಗೊ ದುಃಸ್ವಪ್ನಮಯಂ ಇರುಳ್.
ಆ ಮಹಾ ತಾಯಿಯನ್ ಹದಿಬದೆಯರಧಿದೇವಿಯಂ
ಮಾವನೆಂತಕ್ಕೆ ತಂದಾಯ್ತು.
ವಶವಾಗದವಳನ್ ಇನ್ನಾದಡೊಂ ಹಿಂದಕೊಪ್ಪಿಸುವಂತೆ
ತಿದ್ದಬಾರದೆ ನಿಮ್ಮಾ ತಂದೆಯಂ
ಎಂದು ಪ್ರಶ್ನಿಸುತ್ತಾಳೆ. ಸೀತೆಯ ಸಂಕಷ್ಟವನ್ನು ತಾರಾಕ್ಷಿ ಅರ್ಥಮಾಡಿಕೊಳ್ಳಬಲ್ಲಳು. ಆಕೆ ರಾವಣನ ನಿರ್ಧಾರವನ್ನು ತನ್ನ ಗಂಡನ ಮುಂದಾದರೂ ಪ್ರಶ್ನಿಸಬಲ್ಲಳು. ಆದರೆ, ಇಂದ್ರಜಿತು ರಾವಣನ ಮಗ. ಆತನಿಗೆ ತನ್ನ ತಂದೆ ಮಾಡಿದುದೇ ಸರಿ. ಅದಕ್ಕೆ ಆತ ತನ್ನ ಪತ್ನಿಯ ವಿರುದ್ಧ ಸಿಡಿಮಿಡಿಗೊಳ್ಳುತ್ತಾನೆ. ಆ ಸಿಡಿಮಿಡಿಯಲ್ಲೂ ಮುದ್ದಿರುತ್ತದೆ! ತನ್ನ ಪ್ರೀತಿಯ ಮಡದಿ ಇಷ್ಟೊಂದು ಮುಂದುವರೆದು ಯೋಚಿಸಬಲ್ಲಳು ಎಂಬುದೇ ಅವನಿಗೊಂದು ಸೋಜಿಗ. ಆ ಸೋಜಿಗಕ್ಕೆ ಆತ ಕಂಡಕೊಂಡ ಉತ್ತರವೇ 'ಅನಲೆ’! ಅವಳ ಸಹವಾಸದಿಂಲೇ ತಾರಾಕ್ಷಿ ಹೀಗೆಲ್ಲಾ ಯೋಚಿಸಬಲ್ಲವಳಾಗಿದ್ದಾಳೆ ಎಂದು ಭಾವಿಸುತ್ತಾನೆ. "ಆ ತಂಗಿ, ಕಕ್ಕನ ಮಗಳ್, ನಿನಗೆ ಸಖಿಯಲ್ತೆ ಅನಲೆ! ಅವಳ ಉಪದೇಶಮಂ ಕೇಳ್ದು ನೀನುಂ ವಿಭೀಷಣಾರ್ಯನ ತೆರದೊಳು ಒರೆಯುತಿಹೆ ನನಗೆ." ಎನ್ನುತ್ತಾನೆ. ಇಂದ್ರಜಿತುವಿನ ಮಾತಿನಿಂದ ನಮಗೆ ಅನಲೆಯ ಪರಿಚಯ ಸ್ವಲ್ಪಮಟ್ಟಿಗೆ ಲಭ್ಯವಾಗುತ್ತದೆ. ಆಕೆ, ಆತನ ತಂಗಿ. ಚಿಕ್ಕಪ್ಪನ ಮಗಳು. ತಾರಾಕ್ಷಿಯ ಜೊತೆ ಅವಳದು ಉತ್ತಮ ಗೆಳೆತನ. ವಿಭೀಷಣನಂತೆಯೇ ಅವಳು ಧರ್ಮಭೀರು. ಇಂದ್ರಜಿತುವಿನ ಮಡದಿ ತಾರಾಕ್ಷಿಯನ್ನು ಪ್ರಭಾವಿಸಿದ್ದಾಳೆ ಎಂದ ಮೇಲೆ ಅನಲೆಯದು ಅತ್ಯಂತ ಪ್ರಭಾವಿ ವ್ಯಕ್ತಿತ್ವ. 'ನಿನಗೆ ಸಖಿಯಲ್ತೆ ಅನಲೆ!’ ಎನ್ನುವ ಇಂದ್ರಜಿತುವಿನ ಮಾತಿನಲ್ಲಿ, ಅನಲೆಯ ಬಗ್ಗೆ ಅವನಿಗಿರುವ ಪ್ರೀತಿಯನ್ನು ಅಂತೆಯೇ ಅವಳ ಸ್ವಭಾವದ ಬಗ್ಗೆ ಇರುವ ವ್ಯಂಗ್ಯವನ್ನೂ ಕಾಣಬಹುದು.
ಹೀಗೆ, ಮೂಲರಾಮಾಯಣದಲ್ಲಿಯಾಗಲೀ ಅಥವಾ ಶ್ರೀರಾಮಾಯಣದರ್ಶನಂ ಕಾವ್ಯಕ್ಕೆ ಮೊದಲ ಕನ್ನಡ ರಾಮಾಯಣಗಳಲ್ಲಾಗಲೀ ಇಲ್ಲದ ಪಾತ್ರವೊಂದು ಸಹೃದಯನ ಎದುರಿಗೆ ತೆರೆದುಕೊಳ್ಳುತ್ತಾ ಸಾಗುತ್ತದೆ. ನೇರವಾಗಿ ಆಕೆಯನ್ನು ಸಹೃದಯ ಎದುರುಗೊಳ್ಳುವುದಕ್ಕೆ ಮೊದಲೇ ಆಕೆಯ ಗುಣಸ್ವಭಾವಗಳನ್ನು, ಒಲವು ನಿಲುವುಗಳನ್ನು ಸಹೃದಯರಿಗೆ ಮನಗಾಣಿಸಿ, ಆಕೆಯನ್ನು ಸ್ವಾಗತಿಸಲು ಸಹೃದಯಮನೋವೇದಿಕೆಯನ್ನು ಕವಿ ಸಿದ್ಧಪಡಿಸುತ್ತಿದ್ದಾರೆ! ಮುಂದಿನ ಅವಳ ಪ್ರವೇಶ, ತಂದೆ ತಾಯಿಯೊಂದಿಗೆ ಆಗಲಿದೆ.
ಮುಂದೆ ಆಂಜನೇಯ ಪ್ರಹಸ್ತ, ಕುಂಭಕರ್ಣ ಮೊದಲಾದವರ ಮನೆಗಳನ್ನು ಸುತ್ತಿ, ವಿಭೀಷಣನಿದ್ದಲ್ಲಿಗೆ ನಾದರೂಪಿಯಾಗಿ (ವಿಪಂಚೀಕ್ವಣನ ಸಂಗಿ ತಾನಾಗಿ) ಬರುತ್ತಾನೆ. ಬರುವಾಗಲೇ ಆತನ ಮನಸ್ಸು ಪ್ರಫುಲ್ಲವಾಗಿದೆ. ಏನೋ ಶುಭವನ್ನು ದರ್ಶಿಸುವ ಆಸೆಯಿಂದಲೇ ಶುಭರೂಪವನ್ನು ಧರಿಸಿಬಿಟ್ಟಿದ್ದಾನೆ ಆಂಜನೇಯ (ಮೇಘನಾದನ ಮನೆಯ ಬಳಿ ಧೂಮರೂಪಿಯಾಗಿದ್ದ!). ಅಲ್ಲಿ ಆತನು ಕಂಡ ಸುಂದರ ದೃಶ್ಯದಲ್ಲಿ ವಿಭೀಷಣನಿದ್ದಾನೆ; ಆತನ ಹೆಂಡತಿ ಸರಮೆಯಿದ್ದಾಳೆ; ಮಗಳು ಅನಲೆಯಿದ್ದಾಳೆ. ಅವಳ ಕಲೆಯಿದೆ. ಆ ದೃಶ್ಯ ಹೀಗಿದೆ:
ಚೆಲುವೆ ಅನಲಾ ಕನ್ಯೆ, ಮಗಳ್ ಆ ವಿಭೀಷಣಗೆ,
ರತ್ನ ಕಂಬಳ ಚಿತ್ರ ವೇದಿಕೆಯ ಮೇಲಿರ್ದು
ಮೀಂಟಿದಳ್ ತಂತಿಯಿಂಚರವೊನಲ್ ಬೀಣೆಯಂ,
ಮಂದಿರದ ಮರದ ಮಣ್ಣಿನ ಜಡಪದಾರ್ಥಗಳ್ ಪ್ರತಿರಣಿಸುವೋಲ್.
ನಾದರೂಪಿ ಮರುತಾತ್ಮಜಂ ಮೋದಮೂರ್ಛೆಗೆ ಸಂದನ್
ಅವ್ಯಕ್ತ ಶೋಕಮಯ ಸ್ವರಸುಖವನೀಂಟಿ.
ಬಳಿಯೊಳೆ ವಿಭೀಷಣನ ಸತಿ ಸರಮೆ ಕುಳ್ತಿರಲ್
ಅನತಿದೂರದೊಳವಂ ತನ್ನ ಮಗಳ ಕಲೆಯಂ ಮೆಚ್ಚಿ, ಕಣ್ ಮುಚ್ಚಿ,
ಕಿವಿದೆರೆದು ಸವಿಯುತಿರ್ದನು ನಿಶ್ಚಲಂ.
ಆ ದೃಶ್ಯವನ್ನು ನೋಡಿದ ಆಂಜನೇಯನಿಗೆ 'ಲಂಕೆಗತಿಥಿಗಳೊ?' ಎಂಬ ಶಂಕೆ ಬಂದುಬಿಡುತ್ತದೆ. ಅವನ ಕಲ್ಪನೆಯ ಲಂಕೆಯಲ್ಲಿ ದುಷ್ಟ ರಾವಣನಿದ್ದಾನೆ. ಅಲ್ಲಿರುವವರೆಲ್ಲರೂ ಅವನಂತೆಯೆ ಎಂದು ಭಾವಿಸಿದ್ದಾನೆ, ಅಷ್ಟರಲ್ಲಿ, ವೀಣೆ ತೆಕ್ಕನೆ ನಿಂತುಬಿಡುತ್ತದೆ. ಆಗ ಬೆಚ್ಚಿದ ಅನಲೆ, 'ಆರ ಬರವನೊ ನಿರೀಕ್ಷಿಸುವ ತೆರದಿ’ ಸುತ್ತ ನೋಡುತ್ತಾಳೆ. ವೀಣೆ ನಿಂತುದುಕ್ಕೆ ವಿಭೀಷಣನೂ ಕಣ್ತೆರೆದು ಪ್ರಶ್ನಾರ್ಥಕವಾಗಿ ಮಗಳನ್ನು ನೋಡುತ್ತಾನೆ. ಆಗ ಅನಲೆ "ಆರೊ ಬಂದಂತಾದುದು" ಎನ್ನುತ್ತಾಳೆ. ಮಗಳನ್ನು ಸಮರ್ಥಿಸುವಂತೆ ಸರಮೆ ಕೂಡಾ "ದಿಟಂ; ಪುಳಕಿಸುತಿದೆ ನನ್ನ ತನು" ಎನ್ನುತ್ತಾಳೆ.
ಒಳ್ಳೆಯ ಸುದ್ದಿ ಬರುವ ಮೊದಲು ನಮಗರಿವಿಲ್ಲದೆ ಮನಸ್ಸು ಸಂತೋಷದಿಂದಿರುತ್ತದೆ. ಹಾಗೆಯೇ ಅಶುಭ ಸುದ್ದಿಯನ್ನು ಕೇಳುವ ಮೊದಲು ಮನಸ್ಸು ಕಳವಳಿಸುತ್ತಿರುತ್ತದೆ. ಇದರ ಮನೋವೈಜ್ಞಾನಿಕ ವಿಶ್ಳೇಷಣೆ ಏನೇ ಇರಲಿ, ಆದರೆ ಜನಸಾಮಾನ್ಯರು ಅಂತಹ ಅನುಭವಗಳನ್ನು ತಮ್ಮ ಮಾತುಗಳ ನಡುವೆ ಪ್ರಸ್ತಾಪಿಸುವುದುಂಟು. ಆಂಜನೇಯ ವಿಭೀಷಣನ ಕುಟುಂಬವನ್ನು ದರ್ಶಿಸುವ ಮೊದಲೇ, 'ಮನದಿ ಸಂತೋಷಿಸಿದನ್, ಅಲ್ಲಿ ಕಲ್ಪಿಸಿ ಶುಭಸ್ನೇಹಮಂ' ಎನ್ನುತ್ತಾರೆ ಕವಿ. ಆಂಜನೇಯನ ಬರವು ಲಂಕೆಗೆ ಶುಭಸೂಚಕವಲ್ಲ; ಅದರೆ ವಿಭೀಷಣನಿಗೆ ಆತನ ಕುಟುಂಬಕ್ಕೆ ಅದೊಂದು ರೀತಿಯಲ್ಲಿ ಶುಭಸೂಚಕವೆ! ಆರಂಭದಲ್ಲಿ ಆದ ಅಲೌಕಿಕ ಅನುಭವಕ್ಕೆ ಅನಲೆ ಬೆಚ್ಚುತ್ತಾಳೆ; ಆದರೆ ಕಳವಳಗೊಳ್ಳುವುದಿಲ್ಲ. ತನ್ನ ಪ್ರೀತಿಪಾತ್ರನಾದ ದೊಡ್ಡಪ್ಪನಿಗಾಗಿ ಹಂಬಲಿಸುವ ಮುಗ್ಧೆಯಾಗಿ ಅವಳಿಗೆ ಆಂಜನೇಯನ ಬರವು ಒಂದು ರೀತಿಯಲ್ಲಿ ಅಶುಭವೂ ಹೌದು. (ಅನಲೆಯ ವೀಣಾಧ್ವನಿ 'ಶೋಕಮಯ ಸ್ವರ’ವಾಗಿದ್ದೇಕೆ? ಎಂಬುದಕ್ಕೆ ಮುಂದೆ ಅವಳ ಮಾತಿನಲ್ಲೇ ಉತ್ತರ ಸಿಗಲಿದೆ) 'ಪುಳಕಿಸುತಿದೆ ನನ್ನ ತನು’ ಎಂಬ ಸರಮೆಯ ಮಾತುಗಳಲ್ಲಿ ಶುಭದ ಸೂಚನೆಯಿದೆ. ಮುಂದೆ ವಿಭೀಷಣನಾಡುವ ಮಾತುಗಳಲ್ಲೂ ಅದು ವ್ಯಕ್ತವಾಗಿದೆ.
ಸೋಜಿಗಮೇಕೆ?
ದಿವ್ಯಕಲೆ ಎಲ್ಲಿರ್ದೊಡಲ್ಲಿಗೆ ಐತಹರಲ್ತೆ ದಲ್
ಪಗಲಿರುಳ್ ವಿಶ್ವಮಂ ಸಂಚರಿಸಿ ರಕ್ಷಿಸುವ
ಸತ್ ಶಕ್ತಿಗಳ್, ದೇವಾತ್ಮಗಳ್?
ನಮ್ಮವೋಲ್ ಅವರುಂ ರಸಪ್ರಿಯರ್.
ನಮಗಿಂ ಮಿಗಿಲ್! ರಸಮೆ ಅವರುಣ್ಬ ಅಮೃತಮಲ್ತೆ?
ಈ ಮಾತುಗಳು ಆಂಜನೇಯನಿಗೆ, ವಿಭೀಷಣನ ಮತ್ತು ಆತನ ಕುಟುಂಬದ ಬಗ್ಗೆ ಗೌರವವನ್ನು ಹೆಚ್ಚಿಸುತ್ತವೆ. ಮುಂದೆ ತಂದೆ, ತಾಯಿ, ಮಗಳ ನಡುವೆ ಸಂಭಾಷಣೆ ನಡೆಯುತ್ತದೆ. ಆಂಜನೇಯನಿಗೆ ಅದು ವಿಭೀಷಣನ ಸಂಸಾರವೆಂದು ತಿಳಿಯುತ್ತದೆ. ಅದಕ್ಕಿಂತ ಹೆಚ್ಚಾಗಿ, ಅನಲೆಯ ವ್ಯಕ್ತಿತ್ವ ಸಹೃದಯರ ಮುಂದೆ ಸಕಾರಣವಾಗಿ ಅನಾವರಣಗೊಳ್ಳುತ್ತದೆ. ಆ ಕಾವ್ಯಭಾಗವನ್ನು ಕೆಳಗಿನಂತೆ ನಾಟಕರೂಪದಲ್ಲಿ ಪುನರ್ರೂಪಿಸಬಹುದಾಗಿದೆ.
ಅನಲೆ:
ಮನಂ ಏಕೊ ಬೆಚ್ಚುತಿದೆ!
ಸುಖವೊ ದುಃಖವೊ ತಿಳಿಯೆನ್, ಎದೆಯೆನಳ್ಳಾಡುತಿದೆ!
ವಿಭೀಷಣ:
ನಿನ್ನ ಸಂಗೀತಮುಂ
ಲೋಕ ಶೋಕವನೆಲ್ಲಂ ಆಲಿಪರ ಹೃದಯದೊಳ್ ಕದಡುವೋಲಿರ್ದತ್ತು.
ವತ್ಸೆ, ಹರಯದ ಮಹಿಮೆ ಅಂತುಟೆ ವಲಂ!
ಸರಮೆ:
ಅಶೋಕವನಿಕಾ ಮಧ್ಯೆ
ರಾಮನ ತಪಸ್ವಿನಿಯ ಕಂಡಾ ಮೊದಲ್ಗೊಂಡು,
ಮೇಣಾ ಮಹೀಯಸಿಯ ವಾಗಮೃತಧಾರೆಯಂ ಸವಿದಾ ಮೊದಲ್ಗೊಂಡು,
ಅನ್ಯಳಂತಿಹಳ್ ಎಮ್ಮ ಕನ್ಯೆ!
ಈ ಮಾತು, ಕಿವಿಯ ಮೇಲೆ ಬಿದ್ದಾಕ್ಷಣ ಆಂಜನೇಯನ ಮನದೊಳಗೆ ಆಸೆಯ ಬಿಸಿಲು ಉಜ್ವಲಿಸುತ್ತದೆ. ಏಕೆಂದರೆ, ಹುಡಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಗಿದೆ ಆತನಿಗೆ. ಇತ್ತ ಆ ಮಾತು ಕೇಳಿದ ವಿಭೀಷಣನ ಮನಸ್ಸಿಗೆ ದುಗುಡವಾಗುತ್ತದೆ. ಸಂಕಟದ ಛಾಯೆಯನ್ನು ಆತನ ಕಣ್ಣುಗಳಲ್ಲಿ ಅನಲೆ ಗುರುತಿಸುತ್ತಾಳೆ.
ಅನಲೆ:
ಬೊಪ್ಪಯ್ಯ,
ಮುಚ್ಚುವಿರೆ ನನಗೆ ನಿಮ್ಮಾತ್ಮಮಂ ಸುಡುತ್ತಿರ್ಪ ಅಳಲ ಬೇಗೆಯಂ?
ನನಗಿನ್ ಮಿಗಿಲ್ ದುಃಖಿಗಳ್ ನೀಮ್, ಧರಾತ್ಮಜೆಯ ದೆಸೆಗೆ!
ಮರುಗಿಹಿರಿ ನೀಂ ಪಿರಿಯಯ್ಯಗಾಗಿಯುಂ;
ಮತ್ತೊಮ್ಮೆ ಕುಲಕೆ ಕೀರ್ತಿಗೆ ದೇಶದ ಅವನತಿಗೆ ಧರ್ಮಾಭ್ಯುದಯಕಾಗಿಯುಂ.
ಅರಸನೋಲಗದಿ ನಿಮಗೆ ನಿಮ್ಮಣ್ಣಂಗೆ ಮೇಣ್ ಇತರ ಮುಖ್ಯರಿಗೆ
ನಿಚ್ಚಮುಂ ನಡೆವ ಚರ್ಚೆಯ ತೋಟಿಯೇಂ ನಮಗೆ ತಿಳಿಯದೆಂಬಿರೆ?....
ನಿನ್ನೆ ಸಂಜೆ, ಲಂಕೆಗೆ ಲಂಕೆ ಕಂಡುದಾ ನೋಟಮಂ.
ಬಿಳ್ದುದೊಂದು ಉರಿವ ಅರಿಲ್ ನಗರದ ಉತ್ತರ ಗಿರಿಯ ನೆತ್ತಿಯಲಿ! ...
ದೇವಿಯನ್, ಆ ನನ್ನ ಗುರುದೇವಿಯನ್,
(ಒಯ್ಯನಿಟ್ಟಳ್ ಕಯ್ಯ ವೀಣೆಯನ್, ಗದ್ಗದವನೆಂತಾದೊಡಂ ಸಂಯಮಿಸಿ; ಕಣ್ಬನಿಯನೊರೆಸಿದಳ್ ಸೆರಗುದುದಿಯಿಂ. ಮತ್ತೆ)
ನಿರ್ಭಾಗ್ಯೆಯನ್ ಮರಳಿ ಪತಿಯೆಡೆಗೆ ಕಳುಹದಿರೆ,
ಲಂಕೆಗಿನ್ ಸುಖಂ ಎಲ್ಲಿ? ಲಂಕೆಗಿನ್ ಶುಭಂ ಎಲ್ಲಿ?
ಲಂಕಿಗರ್ ನಮಗೆ ನೆಮ್ಮದಿ ಎಲ್ಲಿ?....
ಬೊಪ್ಪಯ್ಯ ಮಿಡಿಯಲ್ ಒಳ್ಪನೆ ನುಡಿಯುವ ಈ ನನ್ನ ಇನಿಯ ಬೀಣೆ
ಮೀಂಟಲ್ ಈಗಳ್ ಮುನಿದು ಪರಿತಪಿಸುತಿದೆ; ಸುಯ್ದು ಶಪಿಸುತಿದೆ!
ನೀಂ ಇಂದು ಕೇಳ್ದುದು ಎಂಬುದುಂ ಅದರ ಗಾನಮಲ್ತು; ಅನುರೋಧನಂ! .....
ಕೇಳಿಂ ಇನ್ನುಮಾ ಓಂಕಾರದ ಆಲಾಪನೆಯ ತೀಕ್ಷ್ಣಸಂಕಟಂ ತುಂಬಿದೋಲಿದೆ ಮನೆಯ ತುಂಬಿಯಂ!
ಮೂವರೂ ಆ ಆಲಾಪನೆಯನ್ನು ಕೇಳುತ್ತಿರುವಂತೆಯೇ ಅದು ದೂರವಾಗುತ್ತಾ ಸಾಗತ್ತದೆ. ಇತ್ತ ಆಂಜನೇಯನಿಗೆ ಮೈಮನಗಳು ಪುಳಕಗೊಳ್ಳುತ್ತವೆ. "ಇನ್ನನ್ನರಿಂ ಕ್ಷೇಮಿಯೀ ಲಂಕಾ ಕನಕಲಕ್ಷ್ಮಿ!" ಎಂದು ಆತ ಮುಂದೆ ನಡೆಯುತ್ತಾನೆ. ರಾವಣ ಸೀತೆಯನ್ನು ಹೊತ್ತು ತಂದ ಮೇಲೆ, ಆಂಜನೇಯ ಬರುವವರೆಗೂ ಲಂಕೆಯಲ್ಲಿ ಏನೇನು ನಡೆಯಿತು ಎಂಬುದನ್ನು ಕವಿ ಎಲ್ಲಿಯೂ ನೇರವಾಗಿ ನಿರೂಪಿಸಿಲ್ಲ. ಹೀಗೆ ಪಾತ್ರಗಳ ಮುಖಾಂತರವೇ ನಮಗೆ ಅದು ದರ್ಶನವಾಗುತ್ತಾ ಸಾಗುತ್ತದೆ. ಇಲ್ಲಿ ಅನಲೆಯ ಮಾತುಗಳಿಂದ, ರಾವಣನ ಕೃತ್ಯ ಲಂಕೆಯ ಇಲ್ಲರಿಗೂ ಅದು ಇಷ್ಟವಾಗಿಲ್ಲ, ರಾವಣನ ಅಂತರಂಗದವರಿಗೂ ಅದು ಸರಿಯೆನ್ನಿಸಿಲ್ಲ, ಆದರೆ ಬಾಯಿಬಿಟ್ಟು ಆಡುವಂತಿಲ್ಲ; ಅನುಭವಿಸುವಂತಿಲ್ಲ ಅವರ ಸ್ಥಿತಿ ಎಂಬುದರ ಅರಿವಾಗುತ್ತದೆ. ಸರಮೆಯ ಮಾತುಗಳಿಂದ, ಅನಲೆ ಆಗಾಗ ಸೀತೆಯನ್ನು ಅಶೋಕವನದಲ್ಲಿ ಭೇಟಿಯಾಗುತ್ತಿದ್ದಳೆಂಬುದು ತಿಳಿಯುತ್ತದೆ. ಅಷ್ಟಲ್ಲದೆ, ಆಕೆ ಸೀತೆಯ ಮಾತುಗಳಿಂದ ಪ್ರಭಾವಿತಳಾಗಿದ್ದಾಳೆ; ಪ್ರೌಢೆಯಾಗಿದ್ದಾಳೆ ಎಂಬುದೂ ಮನದಟ್ಟಾಗುತ್ತದೆ. ರಾಜಸಭೆಯಲ್ಲಿಯೂ ಸೀತಾಪಹರಣದ ಪರಿಣಾಮ ಚರ್ಚೆಯಾಗಿದೆ. ವಿಭೀಷಣ ತನ್ನ ಕೈಲಾದುದನ್ನು ಮಾಡಿ, ಸೀತೆಯನ್ನು ರಾಮನಿಗೆ ಒಪ್ಪಿಸುವಂತೆ ರಾವಣನ ಮನವೊಲಿಸಲು ವಿಫಲ ಯತ್ನ ನಡೆಸಿದ್ದಾನೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅನಲೆಯ ವಾಕ್ಚಾತುರ್ಯ. ಆಕೆಯ ತರ್ಕಬದ್ಧ ಅಭಿಪ್ರಾಯ ನಿರೂಪಣೆ, ದೃಢ ನಿಲುವು ಸಹೃದಯರ ಮನ ಸೆಳೆಯುತ್ತವೆ. ಆಕೆಯ ಮಾತುಗಳೇ ಮುಂದೆ ಆಂಜನೇಯನ ಕಾರ್ಯವನ್ನು ಸುಗಮಗೊಳಿಸಿವೆ. ಕಾವ್ಯದ ನೆಡೆಗೆ ಪೂರಕವಾಗಿ ಆಕೆಯ ಪಾತ್ರಕ್ಕೊಂದು ಉಚಿತವಾದ ಸ್ಥಾನವನ್ನು ಕಲ್ಪಿಸುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಿರುವುದನ್ನೂ ಮುಂದೆ ಮನಗಾಣಬಹುದು.

[ನಾಳೆ : ಇವಳೆನ್ನ ಕಾಪಿಡುವ ದೇವಿ!]

Monday, May 05, 2014

ಯಾರೀ 'ಅನಲಾ'!?

ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ' ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ'. ಎರಡನೆಯದು 'ವರ್ಣಕ' ಮೊದಲನೆಯದಕ್ಕೆ ರಾಮಾಯಣ, ಮಹಾಭಾರತ, ಗಿಲ್ಗಮೆಷ್, ಈಲಿಯಡ್, ಒಡಿಸ್ಸಿ ಮೊದಲಾದವುಗಳನ್ನು ಹೆಸರಿಸಬಹುದು. ಎರಡನೆಯದಕ್ಕೆ, ಕುಮಾರಸಂಭವಂ, ಪಂಪಭಾರತ, ಕುಮಾರವ್ಯಾಸ ಭಾರತ, ಜೈಮಿನಿಭಾರತ, ತುಳಸಿರಾಮಾಯಣ, ಕಂಭರಾಮಾಯಣ, ಶ್ರೀರಾಮಾಯಣದರ್ಶನಂ, ಡಿವೈನ್ ಕಾಮಿಡಿ, ಪ್ಯಾರಡೈಸ್ ಲಾಸ್ಟ್ ಮೊದಲಾದ ಕೃತಿಗಳನ್ನು ಹೆಸರಿಸಬಹುದು. ಮಹಾಕಾವ್ಯವೊಂದರ ಪ್ರಸ್ತುತಿಯೆಂದರೆ ಅದು ಒಂದು ಸಣ್ಣ ಕವಿತೆ ಅಥವಾ ಕಥೆಯಂತೆ ಆ ಕ್ಷಣದ ಅಭಿವ್ಯಕ್ತಿಯಾಗಿರುವುದಿಲ್ಲ. ಭೂತ ಭವಿಷ್ಯತ್ ವರ್ತಮಾನಗಳಲ್ಲೆವನ್ನೂ ಒಳಗೊಂಡು ದೇಶ ಭಾಷೆ ಕಾಲಾತೀತವಾದ ಅಭಿವ್ಯಕ್ತಿ ಮಹಾಕಾವ್ಯದ ಲಕ್ಷಣ. ಮಹಾಕಾವ್ಯ ವರ್ತಮಾನದಲ್ಲಿರುತ್ತದೆ; ಭೂತದತ್ತ ಕೈಚಾಚಿರುತ್ತದೆ; ಭವಿಷ್ಯದತ್ತ ದೃಷ್ಟಿಯಿಟ್ಟಿರುತ್ತದೆ! ವಸ್ತುಕಗಳಾದ ರಾಮಾಯಣ ಮಹಾಭಾರತಗಳಲ್ಲೇ ವಾಲ್ಮಿಕಿ ವ್ಯಾಸರು ಕಾವ್ಯದೊಳಗೆ ಪಾತ್ರಗಳಾಗಿಯೇ ಇದ್ದಾರೆ ಎಂಬುದು ಗಮನಾರ್ಹ. ಇನ್ನು ವರ್ಣಕಗಳಾದ ಮಹಾಕಾವ್ಯಗಳು ಯುಗಧರ್ಮದ ಒತ್ತಡದಿಂದ ಮಹಾಕವಿಯೊಬ್ಬನಿಂದ ಸೃಜಿಸಲ್ಪಡುತ್ತವೆ. ಅವುಗಳಿಗೆ ಆ ಯುಗಧರ್ಮದ ಒಂದು ಸ್ಪಷ್ಟ ಉದ್ದೇಶವೂ ಇರುತ್ತದೆ. ಇನ್ನುಳಿದಂತೆ ವಸ್ತು, ವಿಷಯ, ಪ್ರಸ್ತುತಿಯಲ್ಲಿ ವಸ್ತುಕಗಳಿಗೂ ವರ್ಣಕಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ವರ್ಣಕ ಮಹಾಕಾವ್ಯಗಳಲ್ಲಿ ಕವಿ ತನ್ನ ಆಶಯವನ್ನು ಹೆಚ್ಚಾಗಿ ತಾನು ಕಂಡುಕೊಂಡ ದರ್ಶನವನ್ನು ಪ್ರತಿಪಾದಿಸಬೇಕಾಗುತ್ತದೆ. ವರ್ಣಕ ಮಹಾಕಾವ್ಯಗಳಿಗೆ ಮೂಲಕಥೆ ಸಿದ್ಧವಾಗಿರುತ್ತದೆ. ಕಥೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬಹುದಾದರೂ ಅಮೂಲಾಗ್ರ ಬದಲಾವಣೆ ಸಾಧ್ಯವಿಲ್ಲ. ಉದಾಹರಣೆಗೆ ಕೌರವ ಮತ್ತು ಪಾಂಡವರ ನಡುವಿನ ಯುದ್ಧವನ್ನೇ ಇಲ್ಲದಂತೆ ಮಹಾಭಾರತದ ರಚನೆ ಸಾಧ್ಯವಿದೆಯೇ? ಇಂತಹ ಸಂದರ್ಭದಲ್ಲಿ ಮಹಾಕವಿಗಳು ಕಾವ್ಯದ ನಡುವೆ ಆಗಾಗ ಅವಶ್ಯಬಿದ್ದಲ್ಲಿ ಮದ್ಯಪ್ರವೇಶ ಮಾಡುತ್ತಾರೆ. ಆದರೆ ಔಚಿತ್ಯವನ್ನು ಮೀರುವುದಿಲ್ಲ. ಇರುವ ಪಾತ್ರಗಳ ಮುಖಾಂತರವೇ ತಮ್ಮ ದರ್ಶನವನ್ನು ಪ್ರತಿಪಾದಿಸುತ್ತಾರೆ. ಅಗತ್ಯ ಬಿದ್ದಲ್ಲಿ ಹೊಸ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಗಮನಿಸಬೇಕು, ಇದೆಲ್ಲವೂ ಕಥೆಯ ಅಂದಗೆಡದಂತೆ ಕಥಾಚೌಕಟ್ಟಿನಲ್ಲೇ ನೆಡೆಯುತ್ತವೆ.
ವಾಲ್ಮೀಕಿ ವಿರಚಿತ ರಾಮಾಯಣದ ಕಥೆ ಭಾರತೀಯರಿಗೆಲ್ಲಾ ಚಿರಪರಿಚಿತ. ಆದರೆ ಸಾವಿರಾರು ಬಾರಿ ಮರು ಸೃಷ್ಟಿಗೊಂಡಿದೆ. ಇಪ್ಪತ್ತನೆಯ ಶತಮಾನದಲ್ಲಿ ಅದು ಕುವೆಂಪು ಅವರಿಂದ ಶ್ರೀರಾಮಾಯಣ ದರ್ಶನಂ ಆಗಿ ಸೃಜಿಸಲ್ಪಟ್ಟಿದೆ. "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ? ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ, ಕಥೆ ನಿನ್ನದಾದೊಡಂ, ನೀನೆ ಮೇಣಾಶೀರ್ವದಿಸಿ ಮತಿಗೆ ಬೋಧವನಿತ್ತಡಂ, ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕಾವ್ಯದಾಕೃತಿಯಲ್ತೆ?" ಎಂದು ಕುವೆಂಪು ಕಾವ್ಯಾರಂಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಕಥೆ ವಾಲ್ಮೀಕಿಯದೆ. ವಾಲ್ಮೀಕಿಯ ಆಶೀರ್ವಾದದಿಂದಲೇ ಈ ಕವಿ ತನ್ನ ದರ್ಶನ ಪ್ರತಿಪಾದನೆಗೆ ಅದನ್ನು ಬಳಸುತ್ತಿದ್ದಾರೆ. ಅದಕ್ಕಾಗಿ ಹಲವಾರು ಸಂದರ್ಭಗಳನ್ನು ಹಲವಾರು ಪಾತ್ರಗಳನ್ನು ಬಳಸಿದ್ದಾರೆ. ಜೊತೆಗೆ ಅವಕ್ಕೆಲ್ಲಾ ತಿಲಕವಿಟ್ಟಂತೆ "ಅನಲೆ" ಎಂಬ ಪಾತ್ರವನ್ನು ಹೊಸದಾಗಿ ಸೃಷ್ಟಿಸಿದ್ದಾರೆ. ಇಲ್ಲಿ ಅನಲೆಯ ಪಾತ್ರದ ನಡೆ, ನುಡಿ, ಅವಳ ವೈಚಾರಿಕ ಚಿಂತನೆ, ಕೌಟುಂಬಿಕ ವಾತ್ಸಲ್ಯ, ಸಮಷ್ಟಿಯ ಬಗೆಗಿನ ಕಾಳಜಿ ಎಲ್ಲವೂ ಕುವೆಂಪು ತಮ್ಮ ಜೀವಿತದ ಉದ್ದಕ್ಕೂ ಪ್ರತಿಪಾದಿಸಿಕೊಂಡು ಬಂದ ಮೌಲ್ಯಗಳೇ ಆಗಿವೆ. ಅವುಗಳನ್ನು ಕವಿಯೇ ಕಾವ್ಯದ ನಡುವೆ ಮಧ್ಯಪ್ರವೇಶಿಸಿ ಪ್ರತಿಪಾದಿಸುತ್ತಾ ಬಂದಿದ್ದರೆ ಔಚಿತ್ಯ ಮೀರಿ ಹೋಗುವ ಅಪಾಯವಿದ್ದೇ ಇತ್ತು. ಅನಲೆಯ ಪಾತ್ರದ ಮುಖಾಂತಯರವೇ ಕವಿ ಪ್ರತಿಪಾದಿಸಿದ 'ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‍ವ್ಯೂಹರಚನೆಯಳ್' ಎಂಬ ಮೌಲ್ಯಕ್ಕೆ ಅನುಗುಣವಾಗಿ ರಾಮಾಯಣದ ರಾವಣ, ವಿಭೀಷಣ, ಕುಂಭಕರ್ಣ ಅಷ್ಟೇ ಏಕೆ? ಸ್ವತಃ ರಾಮನೂ ಹೊಸದೊಂದು ರೂಪದಲ್ಲಿ ಸಹೃದಯರಿಗೆ ದರ್ಶನವನ್ನೀಯುತ್ತಾನೆ. ಇಪ್ಪತ್ತನೆಯ ಶತಮಾನ ಗಾಂಧೀಜಿಯವರ ಯುಗ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಅವರು ಪ್ರತಿಪಾದಿಸಿದ ಅಹಿಂಸೆ, ಕ್ಷಮಾಗುಣ ಇಂತಹ ಮೌಲ್ಯಗಳ ಕಾವ್ಯಾತ್ಮಕ ಪ್ರತಿಪಾದನೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಆಗಿದೆ ಎಂಬುದಕ್ಕೆ ನೂರಾರು ಉದಾಹರಣೆಗಳಿವೆ. ದಶರಥನು ನಡೆಸಬೇಕೆಂದು ಉದ್ದೇಶಿಸಿದ ಪುತ್ರಕಾಮೇಷ್ಠಿ ಯಾಗದ ಸಿದ್ಧತೆಯ ಸಂದರ್ಭದಲ್ಲಿ ಪ್ರವೇಶ ಮಾಡುವ ಜಾಬಾಲಿ "ಪೂರ್ವಪದ್ಧತಿವಿಡಿದು ಮಾಳ್ಪ ದಿಗ್ವಿಜಯ ಹಯಮೇಧ ಮೊದಲಾದುವಂ ತೊರೆದು, ಹಿಂಸಾ ಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ ನೋಂತು, ದೇವರ್ಕಳಂ ಪೂಜಿಸಲ್ ಮೆಚ್ಚುವುದು ಜಗವನಾಳುವ ಋತಂ........ ವಿಶ್ವಮಂ ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ ಪ್ರೇಮಾತ್ಮವಾಗಿಇರ್ಪುದದರಿಂದೆ ಹಿಂಸೆಯಿಂ ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್............. ದೊರೆಗೊಳ್ಳಿತಕ್ಕೆ! ಎಂದು ಆ ಮಂದಿ ಪರಸಲ್ಕೆ, ಪರಕೆಯದೆ ದೇವರಾಶೀರ್ವಾದಕೆಣೆ..." ಎಂದು ಮುಂತಾಗಿ ಹೇಳಿ ಅಹಿಂಸೆಯನ್ನು ಪ್ರತಿಪಾದಿಸುತ್ತಾನೆ. ಇಲ್ಲಿ ಕವಿ ತಾನು ಹೇಳಬೇಕಾದ ಮೌಲ್ಯಗಳನ್ನು ಜಾಬಾಲಿಯ ಮುಖಾಂತರ ಹೇಳಿಸುತ್ತಾರೆ.
ಶತಶತಮಾನಗಳಿಂದಲೂ ರಾಮಾಯಣದ ಸಹೃದಯ ಓದುಗ (ವಿಮರ್ಶಕರ ವಿಷಯ ಬಿಟ್ಟುಬಿಡೋಣ) ಕೊನೆಗೆ ಸೀತೆ ಅಗ್ನಿಪ್ರವೇಶ ಮಾಡುವ ಸಂದರ್ಭಕ್ಕೆ ಬಂದಾಗ ಕಳವಳಗೊಳ್ಳುತ್ತಾನೆ. ರಾಮಭಕ್ತನಾದವನೂ ಒಂದುಕ್ಷಣ ರಾಮನನ್ನು ಅನುಮಾನಿಸುತ್ತಾನೆ. ರಾಮನ ನಡೆಯನ್ನು ಆ ಕ್ಷಣಕ್ಕಾದರೂ ಪ್ರಶ್ನಿಸುತ್ತಾನೆ. ರಾಮಾಯಣವನ್ನು ಶ್ರೀರಾಮಾಯಣ ದರ್ಶನವನ್ನಾಗಿಸ ಹೊರಟ ಕುವೆಂಪು ಅವರಿಗೆ ಈ ಪ್ರಶ್ನೆ ಸಹಜವಾಗಿ ಕಾಡುತ್ತದೆಯಲ್ಲವೆ? ಆದರೆ ಕಾವ್ಯದ ನಡುವೆ ಕವಿಯೇ ಈ ಪ್ರಶ್ನೆಯನ್ನು ಎತ್ತುವುದು ಔಚಿತ್ಯದ ಎಲ್ಲೆ ಮೀರಿದಂತೆ. ಅದಕ್ಕೆ ಪ್ರಶ್ನೆ ಎತ್ತಲು ಸಶಕ್ತ ಪಾತ್ರತವೊಂದರ ಅಗತ್ಯವಿರುತ್ತದೆ. ಏಕೆಂದರೆ ಇದ್ದಕ್ಕಿದ್ದಂತೆ ಯಾವುದೋ ಒಂದು ಪಾತ್ರ ಬಂದು ಅಂತಹ ಒಂದು ಪ್ರಶ್ನೆಯನ್ನು ಎತ್ತುವುದು ಅಸಂಗತ. ಅಂತಹ ಸಶಕ್ತ ಪಾತ್ರವನ್ನೇ ಕವಿ ಸೃಷ್ಟಿಸುತ್ತಾರೆ. ಆ ಪಾತ್ರವೇ ಅನಲೆ. ರಾವಣನ ಮಹಾಕುಟುಂಬದ ಮುದ್ದಿನ ಕೂಸು. ವಿಭೀಷಣನ ಶುದ್ಧಾಂತಕರಣದ ಪುತ್ಥಳಿ. ಕುಂಭಕರ್ಣನ ಹೂವಿನ ಚೆಂಡು! ಅನಲೆ ಎಂದು ಆ ಪಾತ್ರಕ್ಕೆ ಹೆಸರನ್ನಿಡುವುದರಲ್ಲೇ ಕವಿಯ ಮಹೋದ್ದೇಶ ಅರ್ಥವಾಗುತ್ತದೆ. ಅನಲ ಎಂದರೆ ಬೆಂಕಿ, ಅಗ್ನಿ ಎಂದರ್ಥ. ಭಾರತೀಯ ದರ್ಶನದ ಪ್ರಕಾರ ಅಗ್ನಿ ಪರಿಶುದ್ಧಕಾರಕ. (ಬದುಕಿನಲ್ಲಿ ಬೆಂದವನು ಬೇಂದ್ರೆಯಾಗುತ್ತಾನೆ!) ಇಲ್ಲಿ ಅನಲೆ ಪರಿಶುದ್ಧಕಾರಕಳಾಗಿದ್ದಾಳೆ. ಅವಳಿಂದ ರಾವಣತ್ವವನ್ನು ಆವಾಹಿಸಿಕೊಂಡಿದ್ದ ಪಾತ್ರಗಳು ರಾಮತ್ವವನ್ನು ಆವಾಹಿಸಿಕೊಳ್ಳುತ್ತವೆ. ಅನಲೆ ತನ್ನ ಸುತ್ತಲಿನವರನ್ನೆಲ್ಲಾ ಉದ್ಧಾರಪಥದತ್ತ ಕೊಂಡೊಯ್ಯುತ್ತಾಳೆ. ಇಲ್ಲಿನ ರಾವಣ, ಶೂರ್ಪನಖಿ, ಇಂದ್ರಜಿತು ಅವರಲ್ಲದೆ ರಾಮನ ಪಾತ್ರವೂ ಕೂಡಾ ಅನಲೆ ಎಂಬ ಒರೆಗಲ್ಲಿಗೆ ಉಜ್ಜಲ್ಪಡುತ್ತದೆ! ಹಾಗೆ ಸೃಷ್ಟಿಸಿದ ಪಾತ್ರವನ್ನು ಸಶಕ್ತವಾಗಿ ಬೆಳೆಸುತ್ತಾ ಹೋಗುವ ಕವಿ ಆಕೆಯ ಮುಖಾಂತರವೇ ರಾಮನ 'ಅಕಾರ್ಯ'ವನ್ನು ಪ್ರಶ್ನಿಸುತ್ತಾರೆ. ಆದ್ದರಿಂದ ಇಲ್ಲಿ ಅನಲೆ ಕವಿಯ ಪ್ರತಿನಿಧಿಯೂ ಹೌದು, ಸಹೃದಯ ಓದುಗರ ಪ್ರತಿನಿಧಿಯೂ ಹೌದು!  ಅನಲೆಯ ಮನಸ್ಸಿನ ಮಾತು ಹೊರಬೀಳುವ ಮೊದಲೆ, ರಾಮನೂ ಅಗ್ನಿಪ್ರವೇಶ ಮಾಡಿಬಿಡುತ್ತಾನೆ, ಸೀತೆಯೊಂದಿಗೆ! (ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಶ್ರೀ ಕೆ. ಸಚ್ಚಿದಾನಂದನ್ ಹೇಳುವಂತೆ, "ಇಲ್ಲಿ ಬರುವ ರಾಮ, ಸೀತೆಯೊಂದಿಗೆ ಅಗ್ನಿಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ.)
ಅನಲೆಯ ಪಾತ್ರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸೃಷ್ಟಿಯಾಗಿ, ಬೆಳೆಯುತ್ತಾ ಹೋಗುವ ಪರಿಯೇ ಒಂದು ಸುಂದರ ಕಥನ. ಕವಿ ಅನಲೆಯ ಬಗ್ಗೆ ತುಂಬು ಪ್ರೀತಿಯನ್ನೇ ಹರಸಿದ್ದಾರೆ. ಆ ಪ್ರೀತಿಯ ಧಾರೆಯನ್ನು ನಾವೂ ಅರಿಯಬೇಕಾದರೆ ಕಾವ್ಯದ ಹಿನ್ನೆಲೆಯಲ್ಲಿಯೇ ಆ ಪಾತ್ರದ ಉಗಮ-ವಿಕಾಸಗಳನ್ನು ಅರಿಯಬೇಕು.  ಕಾವ್ಯಭಾಗದ ಹಿನ್ನೆಲೆಯಲ್ಲಿಯೇ ಅನಲೆಯನ್ನು ನಾವು ಆವಾಹಿಸಿಕೊಳ್ಳಬೇಕು. ಆ ಪ್ರಯತ್ನವೇ ಒಂದು ಚೇತೋಹಾರಿ ಕಾವ್ಯಪಯಣ.

ಮುಂದಿನ ಐದು ಕಂತುಗಳಲ್ಲಿ 'ಅನಲೆ' ನಂದೊಂದ್ಮಾತಿನಲ್ಲಿ ವಿಹರಿಸಲಿದ್ದಾಳೆ!
ಈಗಾಗಲೇ ಅನಲೆಯ ಬಗ್ಗೆ ಗೊತ್ತಿರುವವರು, ಇದುವರೆಗೂ ಗೊತ್ತಿಲ್ಲದೇ ಇರುವವರು ಈ ಕಾವ್ಯಪಯಣದಲ್ಲಿ ನಮ್ಮೊಂದಿಗಿರಲಿ ಎಂದು ಆಶಿಸುತ್ತೇನೆ.