Saturday, October 31, 2009

ನನ್ನ ಹೈಸ್ಕೂಲು ದಿನಗಳು - ಮೊದಲ ಓದು : ವಿ. ಸುಂದರರಾಜ್


{ನನ್ನ ಪುಸ್ತಕದ ಬರವಣಿಗೆಯಾದ ಮೇಲೆ ಅದನ್ನು ಓದಿ ಮೊದಲ ಓದು ಎಂದು ಅದರ ವಿಮರ್ಶೆ ಮಾಡಿದವರು ನನ್ನ ಸಹೋದ್ಯೋಗಿಯಾದ ವಿ.ಸುಂದರರಾಜ್ ಅವರು. ವೃತ್ತಿಯಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿರುವ ಶ್ರೀಯುತರು ರಂಗಭೂಮಿ ಮತ್ತು ಕಿರಿ-ಹಿರಿತೆರೆಗಳಲ್ಲಿ ನಟನೆ, ಚಿತ್ರಕಥೆ ಮೊದಲಾದವುಗಳನ್ನು ಪ್ರವೃತ್ತಿಯಾಗಿ ಸ್ವೀಕರಿಸಿರುವವರು. ಒಳ್ಳೆಯ ಹಾಸ್ಯಮನೋಭಾವದವರು ಹಾಗೂ ಸ್ವತಃ ಬರಹಗಾರರೂ ಕೂಡಾ ಆಗಿದ್ದಾರೆ}


ಶ್ರೀ ಸತ್ಯನಾರಾಯಣ ಅವರು ತಮ್ಮ ಕಿಶೋರದಿನಗಳನ್ನು ಮೆಲಕು ಹಾಕುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ. ಎರಡು ಕಾರಣಗಳಿಂದಾಗಿ ಇದೊಂದು ಓದಿಸಿಕೊಂಡು ಹೋಗುವ, ಓದಿದ ಮೇಲೂ ನೆನಪಿನಲ್ಲಿ ಉಳಿಯುವ ಕೃತಿಯಾಗಿದೆ. ಒಂದು ಆ ವಯಸ್ಸು... ಇತ್ತ ಬಾಲ್ಯವೂ ಅಲ್ಲದ ಅತ್ತ ವಯಸ್ಕನೂ ಅಲ್ಲದ ಆ ವಯಸ್ಸಿನ ಆಸೆಗಳು, ಕುತೂಹಲಗಳು, ರಾಗ-ದ್ವೇಷಗಳು... ಇವೇ ತುಂಬ ನಾಟಕೀಯವಾಗಿರುತ್ತವೆ. ವ್ಯವಸ್ಥೆ ಬಗ್ಗೆ ಆಕ್ರೋಶ, ತಾನು ಹಿರಿಯರಿಗಿಂತ ತಿಳುವಳಿಕೆಯುಳ್ಳವನು, ತಾನು ಬದಲಾಯಿಸ್ತೀನಿ ಹೀಗೆ ‘ತಾನು’ ಅನ್ನೋದರ ಸುತ್ತವೇ ಬದುಕು ಗಿರಿಗಟಲೆ ಹೊಡೆವ ಹಂತ... ಈ ಅವಸ್ಥೆಯನ್ನು ವಾಸ್ತವವಾಗಿ ಬರೆದಿರೋರು ಕಡಿಮೆ. ಸತ್ಯನಾರಾಯಣ ಅವರೂ ಪೂರ್ತಿಯಾಗಿ ಅಥವಾ ತೀರಾ ಖಾಸಗಿ ವಲಯದ ವಿವರಕ್ಕೆ ಕೈ ಹಾಕಿಲ್ಲ. ಇದ್ದರೆ ಇನ್ನೂ ಚನ್ನಾಗಿರುತ್ತಿತ್ತೇನೋ(?)... ಇನ್ನೊಂದು ಕಾರಣ ಆ ದಿನಗಳ ನೆನಪನ್ನು ಹೇಳುವ ನೆಪದಲ್ಲಿ ಒಂದು ಸಮುದಾಯದ ಬದುಕನ್ನು ನಮ್ಮ ಮುಂದೆ ಬಿಚ್ಚಿಡ್ತಾರೆ... ಅನ್ನೋದು.

ಕುಂದೂರುಮಠದ ಮೂಲ ಹುಡುಕುವ ವಿವರಗಳಂತೂ ಒಬ್ಬ ಸಂಶೋಧಕನಿಗೆ ಮಾತ್ರ ಸಾಧ್ಯವಾಗುವಂಥದ್ದು. ಲೇಖಕರು ಸ್ವತಃ ಸಂಶೋಧಕರೂ ಆಗಿರುವುದರಿಂದ ಇದು ಸಾಧ್ಯವಾಗಿದೆ. ಪೂಜಿಸುವ ದೇವರ ಹೆಸರೇ ಬದಲಾದ ಕಥೆ, ಮೆಳೆಯಮ್ಮನಿಗೆ ಮಾಂಸಪ್ರಸಾದವನ್ನು ಲಿಂಗಾಯಿತ ಸಮುದಾಯದ ಪೂಜಾರಿ ಅರ್ಪಿಸುತ್ತಿದ್ದ ಪರಿ (ಈ ವ್ಯಂಗ್ಯದ ಹಿಂದೆ ಸ್ವಲ್ಪ ಕ್ರೌರ್ಯ ಇದೆಯೇನೋ ಅನ್ನಿಸುತ್ತೆ), ಹಳ್ಳಿ ಶಾಲೆಗಳ ಕಥೆ, ಹೆಡ್ಮಾಸ್ಟರಿಗೆ ನೀರು ಕೊಟ್ಟಿದ್ದು, ಹಾಸ್ಟೆಲ್ಲಿನಲ್ಲಿ ಆದ ಕಳ್ಳತನ... ಇವೆಲ್ಲಾ ಓದಿದಾಗ ಸ್ವಾರಸ್ಯಕರ ಕಥೆಗಳ ವ್ಯಕ್ತಿ ಚಿತ್ರಣಗಳು ಒಂದು ಕಾದಂಬರಿಯ ಹರುಹನ್ನು ಪಡೆದ ಬರಹಗಳಾಗಿವೆ. ಅಯ್ಯಪ್ಪಸ್ವಾಮಿಯ ಯಾತ್ರೆಯ ಬಗೆಗಿನ ಬರಹವೂ ಅಷ್ಟೆ. ಒಂದು ಸಮುದಾಯದ ನಂಬಿಕೆ, ಆಚರಣೆ ಇವುಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಬರಹಗಳ ಬಂಧವೂ ಹಾಗೆ..... ಒಮ್ಮೆ ಘಟನೆಯನ್ನು, ಮಗದೊಮ್ಮೆ ವ್ಯಕ್ತಿ ಪರಿಚಯವನ್ನು, ಮತ್ತೊಮ್ಮೆ ಸ್ಥಿತಿಚಿತ್ರಣವನ್ನು ಕೊಡುತ್ತಾ ವೈವಿಧ್ಯ ಕಾಯ್ದುಕೊಂಡಿದೆ.

ಪುಸ್ತಕದ ಮೊದಲಿಗೆ ಲೇಖಕರು ‘ತಮ್ಮ ಹೈಸ್ಕೂಲು ಜೀವನದ ಬಗ್ಗೆಯೇ ಏಕೆ ಬರೆಯಬೇಕು?’ ಅಂತ ಅನ್ನಿಸಿತು ಎಂದು ಹೇಳುತ್ತಾ, ‘ತಮ್ಮ ಇದುವರೆಗಿನ ಜೀವಮಾನದಲ್ಲೇ ಅತ್ಯಂತ ಸ್ವಾರಸ್ಯಕರವಾದ ಘಟನೆಗಳಿಂದ ಕೂಡಿದ ಕಾಲವಾಗಿತ್ತು’ ಎಂದು ಹೇಳುತ್ತಾರೆ. ಈ ಪುಸ್ತಕ ಓದಿದ ಮೇಲೆ ನಮ್ಮಂಥ ನಗರವಾಸಿಗಳಂತೂ ಒಪ್ಪಲೇಬೇಕಾದ ಮಾತು. ಆದರೆ ನನಗೆ ತುಂಬಾ ಕಾಡಿದ್ದು... ಹೀಗೆ ಭೂತವನ್ನು ಹೆಕ್ಕುವಾಗ ಎಲ್ಲ ಸೊಗಸಾಗಿ, ಸ್ವಾರಸ್ಯಕರವಾಗಿ ಕಾಣುವುದು ಸಹಜವಾದರೂ ಅವನ್ನು ಅನುಭವಿಸುವಾಗಿನ ಕಷ್ಟ, ಆ ನಿರಾಸೆಗಳು, ಆ ಕೊರತೆಗಳು... ಅವುಗಳನ್ನು ಇಂದು ಹೀಗೆ ನೆನಪಿಸಿಕೊಳ್ಳುವಾಗ ಕೊಡುವ ಸುಖ ಸುಳ್ಳಲ್ಲವೇ? ಸುಳ್ಳಲ್ಲದಿದ್ದರೆ ಇಂದಿಗೂ ಇರುವ ಗ್ರಾಮೀಣ ಪ್ರದೇಶದಲ್ಲಿನ ಬಡತನ, ಮೂಲಭೂತ ಸೌಕರ್ಯಗಳಿಲ್ಲದ ಕೊರತೆಯ ಸ್ಥಿತಿಯನ್ನು, ಅದಕ್ಕಿಂತ ಹೆಚ್ಚಾಗಿ ಅಜ್ಞಾನವನ್ನು, ನಿರಕ್ಷರತೆಯನ್ನು ಹಾಗೆ ಬಿಟ್ಟು ಬಿಡಬಹುದಲ್ಲವೇ? ಎಂದು. ಇದೊಂದು ಯೋಚನೆ ಅಷ್ಟೆ. ಎಲ್ಲ ಗ್ರಾಮೀಣ ಮಕ್ಕಳೂ ಸತ್ಯನಾರಾಯಣರಂತೆ ಆ ಎಲ್ಲ ಹಂಗನ್ನು ಮೀರಿ ಬೆಳೆಯುವ ಭರವಸೆ ಇದ್ದರೆ ಹಾಗೇ ಮಾಡಬಹುದಿತ್ತೇನೋ?!

ಇದರಲ್ಲಿ ಕೆಲವು ಲೇಖನಗಳನ್ನು ಓದಿದಾಗ ತುಂಬಾ ದುಃಖವಾಯ್ತು. ಮುಗ್ಧತೆಗೆ, ಬಡತನಕ್ಕೆ, ತಿಳಿಗೇಡಿತನಕ್ಕೆ ಸಿಗೋ ಸುಖ, ಖುಷಿ.... ತಿಳುವಳಿಕೆಗೆ, ಶ್ರೀಮಂತಿಕೆಗೆ ಏಕೆ ಸಿಗದು? ಹೈಸ್ಕೂಲು ಹುಡುಗನಿಗೆ ಇರುವ ಸಿನಿಮಾ ನೋಡುವ ತವಕ, ಕುತೂಹಲ, ಅದಮ್ಯ ಬಯಕೆ... ಇವು ಕೈತುಂಬ ದುಡಿಮೆ, ಬೇಕಾದಷ್ಟು ಸಿನಿಮಾ ನೋಡೋ ಬಿಡುವು, ಏಕೆ? ಏನು? ಅಂತ ಕೇಳುವವರು ಇಲ್ಲದಾಗ ಅದರ ಆಸೆಯೇ ಹಿಂಗಿ ಹೋಗುವುದು.... ದುಃಖ ಅಲ್ಲವೇ!? ತಿಪ್ಪರಲಾಗ ಹಾಕಿ ತಮಗೆ ಬೇಕಾದ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದ ಹುಡುಗರಿಗೆ ಅದನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆ... ಈಗ ಹಿಂದಿರುಗಿ ನೋಡಿದಾಗ ಮತ್ತೆ ಅಂಥ ಶೋಕಿ ಮಾಡುವಷ್ಟು ಕೂದಲೇ ಉಳಿಯದ ಬುರುಡೆಯನ್ನು ಸವರಿಕೊಳ್ಳುವಂತಾಗುವುದು ವಿಪರ್ಯಾಸವಲ್ಲವೇ!?

ಆಧುನಿಕತೆ, ಜಾಗತೀಕರಣದ ಪರಿಣಾಮಗಳಲ್ಲಿ ಒಳ್ಳೆಯದು-ಕೆಟ್ಟದ್ದು ಸಮಪ್ರಮಾಣದಲ್ಲಿದೆ ಎಂದು ಈ ಪುಸ್ತಕ ಓದಿದ ಮೇಲೆ ಅನ್ನಿಸದಿರದು. ಇಂದಿನ ಹೈಸ್ಕೂಲು ಮಕ್ಕಳು ಇವರ (ನಮ್ಮ) ತಲೆಮಾರಿನವರಂತೆ ಮುಗ್ಧರು, ಎಷ್ಟೋ ವಿಷಯದಲ್ಲಿ ಪೆದ್ದರು ಖಂಡಿತ ಆಗಿರುವುದಿಲ್ಲ. ಇವರು ಬಾಂಬ್ ಮಾಡಿದ ಸಾಹಸದಲ್ಲಿ, ಬೆಂಕಿ ದೆವ್ವದಲ್ಲಿ, ಕೋಳಿಮೊಟ್ಟೆ ಇಡುವ ಪ್ರಶ್ನೆಗೆ ಕೊಟ್ಟ ಉತ್ತರದಲ್ಲಿ ಇವೆಲ್ಲ ತುಂಬಾ ರಂಜಕವಾಗಿ ಕಚಗುಳಿಯಿಡುವಂತೆ ಬಿಚ್ಚುತ್ತಾ ಹೋಗುತ್ತದೆ.

ಈ ಪುಸ್ತಕದಲ್ಲಿನ ‘ಹಾಸ್ಟೆಲ್ಲಿನ ಕಳ್ಳತನ’ ‘ಅಡುಗೆ ಭಟ್ಟರು’ ‘ಬಾಂಬ್ ಮಾಡುವ ಸಾಹಸ’ ‘ಮೊದಮೊದಲ್ ಸೇದಿದ ಸಿಗರೇಟು’ ‘ಜಿ.ಎಸ್.ಎಸ್. ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದು’.... ಇನ್ನೂ ಎಷ್ಟೋ ಘಟನೆಗಳನ್ನು, ಆ ಪಾತ್ರಗಳ ಚಿತ್ರಣವನ್ನು ಓದಿದಾಗ ಬೇಡದೆಯೂ ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’, ಗೊರೂರರ ‘ನಮ್ಮ ಊರಿನ ರಸಿಕರು’, ಆರ್.ಕೆ. ನಾರಾಯಣರ ‘’ಮಾಲ್ಗುಡಿ ಡೇಸ್’ ಕೃತಿಗಳನ್ನು ಮೆಲಕು ಹಾಕುವಂತಾಯ್ತು. ಆ ಕೃತಿಗಳಂತೆಯೇ ಇದೂ ಕೂಡಾ ಬೆಚ್ಚಗಿನ ಅನುಭವ ಕೊಡುತ್ತಲೇ ಅದರಾಚೆಗಿನ ಒಂದು ಹೊಳಹನ್ನು ಕಾಣಿಸುತ್ತದೆ. ಆ ದೃಷ್ಟಿಯಿಂದ ಒಂದು ಸಾರ್ಥಕ ಓದು ನಮ್ಮ ಪಾಲಾಗುತ್ತದೆ. ಕೊರತೆ ಎನಿಸೋದು ಬರವಣಿಗೆಯಲ್ಲಿ ಸ್ವಾರಸ್ಯಕತೆಯನ್ನು ಕಟ್ಟಿಕೊಡುವುದಕ್ಕಿಂತ ಲೇಖಕರು ತಮ್ಮ ವಿಮರ್ಶಾ ಪ್ರಜ್ಞೆಯನ್ನು ಅಲ್ಲಲ್ಲಿ ಇಣಕಿಸಿ ರಸಭಂಗ ಮಾಡೋದು.... ಭೂತ ಮತ್ತು ವರ್ತಮಾನವನ್ನು ಹೀಗೆ ‘ಬ್ರಿಡ್ಜ್’ ಮಾಡುವ ಅಗತ್ಯ ಇರಲಿಲ್ಲವೇನೋ. ಅವರು ಅದನ್ನು ಹೇಳದೆಯೂ ಆ ಭಾವ ನಮ್ಮಲ್ಲೆ ಹುಟ್ಟಿಸುವಷ್ಟು ಪ್ರಭಾವಿ ಭಾಷೆ ಅವರಿಗೆ ಇರುವಾಗ... ಉದಾ: ಆಂಗ್ಲಭಾಷೆ ಕಲಿಯುವ ಅವರ ತರಗತಿಯ ಬಗ್ಗೆ ಹೇಳುತ್ತಾ ಇಂದಿನ ಶಿಕ್ಷಣ ಪದ್ಧತಿಯ ಮಾತು ತರುವುದು... ಹೀಗೆ.

ಸತ್ಯನಾರಾಯಣರವರ ಭಾಷೆಯ ಪ್ರಯೋಗದ ಬಗ್ಗೆ ಹೇಳಲೇಬೇಕು. ಅವರ ಅನುಭವಗಳಷ್ಟು ಸರಳವಲ್ಲ ಅವರ ಭಾಷೆ. ವಿವೇಕಯುಕ್ತ ಮಿದುಳೊಂದು ಆ ಅನುಭವಗಳನ್ನು ಪರಾಮರ್ಶಿಸುತ್ತಿರುವುದು ಕಾಣಸಿಗುತ್ತದೆ. ಕೆಲವು ಪದಪ್ರಯೋಗವಂತೂ ತುಂಬಾ ವಿಶಿಷ್ಟವಾಗಿವೆ ‘ಅಪಾರ್ಥದಲ್ಲಿ ಅರ್ಥೈಸಿಕೊಂಡಿದ್ದೆವು’ ಎನ್ನುತ್ತಾರೆ. ‘ಸ್ವಂತಪುರಾಣ ವಾಚನಗೋಷ್ಠಿ’ ಅಂತೆ... ಹೀಗೆ ಒಂದು ಬಗೆಯ ವ್ಯಂಗ್ಯವನ್ನು ಜೊತೆಗೆ ಹಾಸ್ಯದ ಹಾಸನ್ನು ಪದಗಳಿಂದಲೇ ಹುಟ್ಟುಹಾಕಿಬಿಡುತ್ತಾರೆ. ತಲೆಬರಹ ನೀಡುವಾಗಲೇ ಈ ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡಿದ್ದಾರೆ. ಇದೇ ಪುಸ್ತಕ, ಕಾಣದೂರಿನ ಒಬ್ಬ ಗೆಳೆಯನ ಅನುಭವದ ಹಂಚಿಕೆ ಅನ್ನುವಷ್ಟು ಸ್ವಾರಸ್ಯಕಾರಿಯಾಗಿ ಮುಂದಿಡುತ್ತಾರೆ.

ಒಟ್ಟಿನಲ್ಲಿ ಆತ್ಮಕತೆಗೆ ಈ ‘ಇಂಟರ್‌ಪ್ರಿಟೇಷನ್’ ತರುವ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಈ ಲೇಖಕರಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾಗಿದೆ.... ಆ ನಿಟ್ಟಿನಲ್ಲಿ ಈ ಕೃತಿ ಅವರಿಗೆ ಜವಾಬ್ದಾರಿಯನ್ನೂ ಹೊರಿಸುತ್ತೆ.... ಅದಕ್ಕೆ ಅವರು ತಯಾರಾಗಿರಬೇಕು ಅಷ್ಟೆ.

Thursday, October 29, 2009

ಬಾಲ್ಯವೆಂಬುದು ಹೂವು ಕಣೋ... (ಮತ್ತೊಂದು ಹಳೆಯ ಕಥೆ) - 2

5
ಹೋಟೆಲಿನ ಮುಂದೆ ಆಟೋ ನಿಲ್ಲಿಸಿದ ಮಂಜಪ್ಪ ‘ಬಿಯರ್ ಕುಡಿಯುತ್ತ ಊಟ ಮಾಡುತ್ತಾ ಮಾತನಾಡುವ’ ಎಂದ. ನಾನು ‘ಊಟ ಮಾತ್ರ ಮಾಡುತ್ತೇನೆ’ ಎಂದೆ. ಖಾಲಿಯಿದ್ದ ಟೇಬಲ್ ಬಳಿ ಕುಳಿತು, ಇಬ್ಬರಿಗೂ ಮಟನ್ ಮೀಲ್ಸ್ ಮತ್ತು ಅವನಿಗೆ ಬಿಯರ್ ಆರ್ಡರ್ ಮಾಡಿದ.

‘ಊರಿನಲ್ಲಿ ನನ್ನನ್ನು ಗೇಲಿ ಮಾಡುವಾಗ ಟೆಲಿಪೋನ್ ಎಂದು ಹುಡುಗರು ಆಡಿಕೊಳ್ಳುತ್ತಿದ್ದರು. ನೆನಪಿದೆಯಾ?’ ಎಂದ. ನಾನು ಇಲ್ಲವೆಂದು ತಲೆಯಾಡಿಸಿದೆ.

‘ಹೌದಾ! ಹಾಗಾದರೆ, ಹಾಗೇಕೆ ಅನ್ನುತ್ತಿದ್ದರೆಂದು ನಿನಗೆ ಗೊತ್ತಿಲ್ಲ. ಹೇಳುತ್ತೇನೆ ಕೇಳು’ ಎಂದು ಬಿಯರ್ ಚಪ್ಪರಿಸುತ್ತ ಮುಂದುವರೆಸಿದ.

‘ಗಾಜೂರಿನ ನಮ್ಮ ಮನೆಯ ಜಗುಲಿಯಲ್ಲಿ ಒಂದು ರೂಮಿತ್ತು. ಅಲ್ಲಿ ಟೆಲಿಪೋನ್ ಲೈನ್‌ಮೆನ್ ಲಿಂಗಪ್ಪ ಬಹಳ ಕಾಲದಿಂದ ಬಾಡಿಗೆಗೆ ವಾಸವಾಗಿದ್ದ. ಅವನ ಸಂಸಾರ ಸಿಟಿಯಲ್ಲಿತ್ತು. ನಾನು ಅವನಿಗೆ ಹುಟ್ಟಿದೋನು ಎಂಬ ಕಾರಣಕ್ಕೆ ನನ್ನನ್ನು ಟೆಲಿಪೋನ್ ಎಂದು ರೇಗಿಸುತ್ತಿದ್ದರು! ನನ್ನಪ್ಪ ಇನ್ನೂ ಬದುಕಿದ್ದಾಗಲೆ ಲೈನ್‌ಮನ್ ಲಿಂಗಪ್ಪನಿಗೆ ನಾನು ಹುಟ್ಟುವುದೆಂದರೇನು? ಅಷ್ಟೇ ಕಾರಣಕ್ಕೆ ಹಾಗೆಂದವರೊಡನೆ ನಾನು ಜಗಳಕ್ಕೆ ನಿಲ್ಲುತ್ತಿದ್ದೆ.’ ಹಾಗೆಂದು ಸ್ವಲ್ಪ ಹೊತ್ತು ಸುಮ್ಮನೆ ಕುಡಿಯುತ್ತಾ ತಿನ್ನುತ್ತಾ ಇದ್ದು ನಂತರ ಮುಂದುವರೆಸಿದ. ‘ಆದರೆ ಅದು ನಿಜ! ಅದು ನಿಜವೆಂದು ಗೊತ್ತಾಗಿ ಕೇವಲ ಅರ್ಧ ದಿನದಲ್ಲೇ ನಾನು ಆ ಊರು, ಅಪ್ಪ್ವನೆನಿಸಿಕೊಂಡವನು, ಹೆತ್ತವ್ವ, ಅಣ್ಣ ತಮ್ಮ ಅಕ್ಕ ಎಲ್ಲರನ್ನೂ ಬಿಟ್ಟು ಬಂದುಬಿಟ್ಟೆ.’ ಎಂದ ನಿರುಮ್ಮಳನಾಗಿ!

ನನಗೆ ಗಾಬರಿ ಆಶ್ಚರ್ಯ ಎರಡೂ ಆಗಿತ್ತು. ಆತ ಮುಂದುವರೆಸಿದ.

‘ನಾನು ಊರು ಬಿಟ್ಟ ಹಿಂದಿನ ದಿನ ಗಣೇಶನ ಹಬ್ಬ ಅಲ್ಲವಾ? ಅವತ್ತು ನಮ್ಮೂರಿನಲ್ಲಿ ನಾಟಕ ಆಡಿದ್ದರು. ನೆನಪಿದೆಯೆ? ನನ್ನ ದೊಡ್ಡಣ್ಣನೂ ನಾಟಕದಲ್ಲಿ ಪಾತ್ರ ಮಾಡಿದ್ದ. ನಾಟಕ ನೋಡಲು ಮನೆಯವರೆಲ್ಲಾ ಹೋಗಿದ್ದೆವು. ಹಬ್ಬಕ್ಕೆ ಊರಿಗೆ ಬಂದಿದ್ದ ನಾನು ಅವ್ವನ ಜೊತೆಯಲ್ಲೇ ಕುಳಿತು ನಾಟಕ ನೋಡುತ್ತಿದ್ದೆ.

ಯಾವಾಗ ನಿದ್ರೆ ಹತ್ತಿತೋ! ಕಣ್ತೆರೆದಾಗ ಅವ್ವ ಇರಲಿಲ್ಲ.

ಬೇಸರದಿಂದ ಮನೆಯ ಕಡೆ ನಡೆದೆ. ಹೋಗಿ ನೋಡಿದರೆ ಒಳಗೆ ಲೈಟ್ ಉರಿಯುತ್ತಿತ್ತು! ಹೋಗುವಾಗ ಬೀಗ ಹಾಕಿಕೊಂಡು ಹೋಗಿದ್ದೆವು! ಈಗ ಬಾಗಿಲು ಮಾತ್ರ ಹಾಕಿದೆ!. ಬಾಗಿಲಿನ ಕಿಂಡಿಯಲ್ಲಿ ಇಣುಕಿದೆ.

ನಡುಮನೆಯಲ್ಲಿ, ಹಾಸಿದ್ದ ಚಾಪೆಯಲ್ಲಿ, ಲಿಂಗಪ್ಪ ಅವ್ವನ ಮೇಲೆ ಸವಾರಿ ಮಾಡುತ್ತಿದ್ದ. ಇಬ್ಬರೂ ಬೆತ್ತಲಾಗಿದ್ದರು.

ಅವ್ವನಿಗೆ ಮೊದಲ ಮಗಳ ಮದುವೆಯಾಗಿ ಮೊಮ್ಮಗಳು ಹುಟ್ಟಿದ್ದಳು. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ದರಿಂದಲೋ ಏನೋ ವಯಸ್ಸಾದಂತೆ ಕಾಣುತ್ತಿರಲಿಲ್ಲ. ಲಿಂಗಪ್ಪನ ಬಲೆಗೆ ಬಿದ್ದಿದ್ದಳು. ಆದರೆ ನನಗೆ ಏನನ್ನಿಸಿತೋ ಏನೋ? ಮತ್ತೆ ನಾಟಕ ನಡೆಯುತ್ತಿದ್ದಲ್ಲಿಗೆ ಬಂದೆ. ದೂರದಲ್ಲಿ ನಿಂತುಕೊಂಡು ‘ಹೋ’ ಎಂದು ಅತ್ತುಬಿಟ್ಟೆ. ಬೆಳಿಗ್ಗೆ ಅಕ್ಕನ ಮನೆಗೆ ಕಾಯಿಕಣ ತೆಗೆದುಕೊಂಡು ಹೋಗಲು ಹೇಳಿದರು. ಹಿಂದೆ ಮುಂದೆ ಯೋಚಿಸದೆ ಲಾರಿ ಹತ್ತಿ ಬೊಂಬಾಯಿಗೆ ಬಂದುಬಿಟ್ಟೆ’ ಎಂದು ನಿಲ್ಲಿಸಿದ.

‘ಇದನ್ನು ನಾನು ನಂಬಬೇಕೆ?’ ಎಂದು ಪ್ರಶ್ನಿಸುತ್ತಿದ್ದ ನಾನ್ನನ್ನು ಮಧ್ಯದಲ್ಲಿಯೇ ತಡೆದು ‘ನಂಬದಿದ್ದರೆ ನನಗೇನು ನಷ್ಟವಿಲ್ಲ’ ಎಂದು ಅಸಹನೆಯಿಂದ ತಲೆಕೊಡವಿದ.

ನಾನು ‘ನಂಬುತ್ತೇನೆ.... ಈಗಲಾದರೂ ನೀನು ಊರಿಗೆ ಬರಬಹುದಲ್ಲ. ಈಗ ಲೈನ್‌ಮೆನ್ ಅಲ್ಲಿಲ್ಲ. ಆ ವಿಷಯವನ್ನು ಎಲ್ಲಾ ಮರೆತಿರುತ್ತಾರೆ. ನಿಮ್ಮ ಮನೆಯವರಿಗೂ ಸಮಾಧಾನವಾಗುತ್ತದೆ’ ಎಂದೆ. ‘ಬರಬಹುದಾಗಿತ್ತು. ಆದರೆ ಇಲ್ಲಿ ನಾನು ನನ್ನದೇ ಆದ ಬದುಕನ್ನು ಕಂಡುಕೊಂಡಿದ್ದೇನೆ. ನನ್ನದೇ ಆದ ತಾಪತ್ರಯಗಳಿವೆ.’ ಎಂದ.

‘ಹಾಗಾದರೆ ನೀನು ಊರಿಗೆ ಬರುವುದೇ ಇಲ್ಲವೇ’ ಎಂದೆ. ‘ಕಾಲ ಬಂದಾಗ ಬರುತ್ತೇನೆ. ಅಲ್ಲಿಯ ಆಸ್ತಿಯಲ್ಲಿ ನನಗೂ ಹಕ್ಕಿದೆ. ಅಪ್ಪನಲ್ಲದಿದ್ದರೂ ಅಪ್ಪನೆಂದು ನನ್ನ ಮೇಲೆ ಹಕ್ಕು ಚಲಾಯಿಸಿಲ್ಲವೆ ಅವರು?! ಅವರ ಆಸ್ತಿಗಾಗಿ ನಾನೂ ಹಕ್ಕು ಚಲಾಯಿಸುತ್ತೇನೆ! ಬಿಡುತ್ತೇನಾ?’ ಎಂದ.

ಆತನ ವ್ಯವಹಾರಿಕ ಮನಸ್ಥಿತಿ, ಒರಟುತನ ನನಗೆ ಅಶ್ಚರ್ಯವೆನಿಸಿತು. ಬೊಂಬಾಯಿಯು ಆತನಿಗೆ ಬದುಕು ಕೊಟ್ಟಿರುವಂತೆ ಅಲ್ಲಿನ ಕೊಳಕುತನವನ್ನು ಕೊಟ್ಟಿದೆ ಎಂದುಕೊಂಡೆ.

‘ನೀನು ನಿನ್ನ ವಿಳಾಸವನ್ನು ಕೊಡು. ನಾನು ನಿನಗೆ ಕಾಗದ ಬರೆಯುತ್ತಿರುತ್ತೇನೆ. ಅಲ್ಲಿಯ ವಿಷಯ ತಿಳಿಸುತ್ತಿರು. ಮನೆಯ ವಿಳಾಸ ಬೇಡ. ಈಗ ನೀನಿರುವ ವಿಳಾಸವನ್ನೇ ಕೊಡು’ ಎಂದ. ನಾನು ಪೆನ್ನು ಪೇಪರ್ ತೆಗೆದುಕೊಂಡು ವಿಳಾಸ ಬರೆಯತೊಡಿಗಿದೆ.

‘ನನ್ನ ತಾಯಿಯನ್ನು ನೋಡಿದರೆ ನನಗೆ ಪ್ರೀತಿ ಹುಟ್ಟುವುದಿಲ್ಲ. ನೀನು ನಿನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೀಯ ಅಲ್ಲವಾ?’ ಎಂದ.

ನಾನು ಆತನ ಮುಖ ನೋಡಿದೆ. ನಿರ್ಭಾವುಕನಂತೆ ಕಂಡ.

ನಾನಿನ್ನೂ, ಮಧ್ಯಾಹ್ನದಿಂದ ನಡೆಯುತ್ತಿದ್ದ ಘಟನೆಗಳ ಹೊಡೆತದಿಂದ ಹೊರಬಂದಿರಲಿಲ್ಲ. ಆತನ ಮನಸ್ಥಿತಿಯನ್ನೂ ಅರಿಯಲಾಗಲಿಲ್ಲ.

‘ತುಂಬಾ ಪ್ರೀತಿಸುವ ನಿನ್ನ ತಾಯಿಯ ಮೇಲೆ ನೀನು ಆಣೆ ಮಾಡಬೇಕು! ನಾನು ಸಿಕ್ಕಿದ್ದನ್ನಾಗಲೀ, ಹೇಳಿದ್ದನ್ನಾಗಲೀ ಯಾರಿಗೂ ಹೇಳುವುದಿಲ್ಲವೆಂದು. ಮಾಡುತ್ತಿಯಾ?’ ಎಂದ. ನಾನು ಆಗಲೆಂದು ಸಮ್ಮತಿಸಿದೆ.

ವಿಳಾಸವನ್ನು ಬರೆದು ಅವನಿಗೆ ಕೊಡುತ್ತಾ, ‘ಇನ್ನೊಂದಾರು ತಿಂಗಳಷ್ಟೆ ನಾನು ಈ ವಿಳಾಸದಲ್ಲಿರೋದು. ನಂತರ ಕೆಲಸ ಸಿಕ್ಕಲ್ಲಿಗೆ ಹೋಗುತ್ತೇನೆ. ಆಗ ಹೊಸ ವಿಳಾಸ ತಿಳಿಸಿ ಕಾಗದ ಬರೆಯುತ್ತೇನೆ. ನಿನ್ನ ವಿಳಾಸವನ್ನೂ ಕೊಡು’ ಎಂದೆ. ಆತ ಹೇಳಿದಂತೆ ಡೈರಿಯಲ್ಲಿ ಬರೆದುಕೊಂಡೆ.

ಸಂಜೆ ಆರರವರೆಗೆ ಅದೂ ಇದೂ ಮಾತನಾಡಿ, ನನ್ನನ್ನು ಐಐಟಿ ಕ್ಯಾಂಪಸ್ ಬಳಿ ಬಿಟ್ಟು ಹೊರಡುವಾಗ, ನಾನು ‘ಹಣವೇನಾದರು ಬೇಕೆ?’ ಎಂದೆ.

‘ಸಧ್ಯಕ್ಕೆ ಅದರ ಅಗತ್ಯವಿಲ್ಲ’ ಎಂದು ಆಟೋ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟ.

6
ನನ್ನ ಎಂ.ಸ್ಸಿ, ಮುಗಿದು ಕೆಲಸಕ್ಕೆ ನಾನು ಬೆಂಗಳೂರಿನ ದಾರಿ ಹಿಡಿದೆ. ಈ ನಡುವೆ ಮಂಜಪ್ಪನಿಗೆ ಒಂದು ಕಾಗದ ಬರೆದಿದ್ದೆನಷ್ಟೆ. ಅವನಿಂದ ಉತ್ತರ ಬಂದಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಹೊಸ ವಿಳಾಸ ತಿಳಿಸಿ ಕಾಗದ ಬರೆದೆ. ಹದಿನೈದು ದಿನಗಳಲ್ಲಿ ಕಾಗದ ವಾಪಸ್ ಬಂತು! ಆತನೂ ಮನೆ ಬದಲಾಯಿಸಿರಬಹುದೆಂದು, ಇನ್ನು ಮುಂದೆ ನಮ್ಮಿಬ್ಬರ ನಡುವೆ ಸಂಪರ್ಕ ಸಾಧ್ಯವೇ ಇಲ್ಲವೆಂದುಕೊಂಡು ಸುಮ್ಮನಾದೆ. ಆಶ್ಚರ್ಯವೆಂದರೆ ಆರು ತಿಂಗಳು ಕಳೆಯುವುದರೊಳಗಾಗಿ ಮಂಜಪ್ಪನಿಂದ ನನ್ನ ಹೊಸ ವಿಳಾಸಕ್ಕೇ ಕಾಗದ ಬಂತು! ನನ್ನ ಕಾಗದ ತಲುಪುವಷ್ಟರಲ್ಲಿ ಮಂಜಪ್ಪ ಆತನಿದ್ದ ಕೊಠಡಿಯನ್ನು ಖಾಲಿ ಮಾಡಿದ್ದನಂತೆ. ಆದರೆ ಕಾಗದ ಅಲ್ಲಿಗೆ ತಲುಪಿದಾಗ ಅಲ್ಲಿದ್ದವನು, ಆ ಕಾಗದದ ಹಿಂದಿದ್ದ ವಿಳಾಸವನ್ನು ಓದಿ ನೆನಪಿಟ್ಟುಕೊಂಡಿದ್ದನಂತೆ! ಯಾವಾಗಲೋ ಸಿಕ್ಕಿ ಕಾಗದ ಬಂದ ವಿಷಯ ಮಂಜಪ್ಪನಿಗೆ ತಿಳಿಸಿದ್ದರಿಂದ ಕಾಗದ ಬರೆದಿದ್ದ.
ಮತ್ತೆ ಎರಡು ವರ್ಷಗಳ ಕಾಲ ಅವನ ಕಡೆಯಿಂದ ಯಾವ ಕಾಗದವೂ ಬರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಬಂದ ಟೆಲಿಗ್ರಾಮ್‌ನಿಂದಾಗಿ, ಆ ದಿನವೇ ಆತ ವಾಪಸ್ ಗಾಜೂರಿಗೆ ಬರುತ್ತಿದ್ದಾನೆಂದು ತಿಳಿಯಿತು.

ಅದಾದ ಒಂದೆರಡು ವಾರಗಳ ನಂತರ, ಊರಿಗೆ ಹೋದಾಗ ನನಗೆ ಆಶ್ಚರ್ಯವೊಂದು ಕಾದಿತ್ತು. ಯಾರೋ ಅಂಜನ ಹಾಕುವವನು ‘ಮಂಜಪ್ಪನನ್ನು ಕೊಂದು ನೀರಿಗೆ ಎಸೆದಿದ್ದಾರೆ’ ಎಂದಿದ್ದನಂತೆ!

ಅದನ್ನು ನಂಬಿ, ಮಂಜಪ್ಪ ವಾಪಸ್ಸು ಬಂದ ದಿನವೇ ಆತನಿಗೆ ಹಾಲು-ತುಪ್ಪ ಬಿಡಲು, ಆತನ ಮನೆಯವರು ತಯಾರಿ ನಡೆಸಿದ್ದರಂತೆ!

ಅಂದೇ ಸಂಜೆ ಅವನನ್ನು ಹುಡುಕಿಕೊಂಡು ನಾನು ಊರೊಳಗೆ ಹೊರಟೆ. ನನ್ನನ್ನು ನೋಡಿದೊಡನೆ ‘ಬಾ ಹೊರಗೆ ಹೋಗಿ ಮಾತನಾಡುವ’ ಎಂದು ಹೊರಟ. ದಾರಿಯಲ್ಲಿ ‘ನೋಡಿದೆಯಾ. ಇಲ್ಲಿ ಇವರು ನನ್ನ ತಿಥಿ ಮಾಡಲು ತಯಾರಿ ನಡೆಸಿದ್ದರು’ ಎಂದ.

ನಾನು ‘ಊರು ಬಿಟ್ಟದ್ದಕ್ಕೆ ಮನೆಯವರಿಗೆ ಊರವರಿಗೆ ಏನು ಹೇಳಿದೆ?’ ಎಂದು ಪ್ರಶ್ನಿಸಿದೆ.

‘ಕಾಯಿಕಣ ತೆಗೆದುಕೊಂಡು ಲಾರಿ ಹತ್ತಿ ಕುಳಿತುಕೊಂಡವನಿಗೆ, ನಿದ್ದೆ ಬಂತು. ಎಚ್ಚರವಾದಾಗ ನಾನು ಬೊಂಬಾಯಿಯಲ್ಲಿದ್ದೆ. ನಂತರ ಲಾರಿಯವನೇ ನನ್ನನ್ನು ಸಾಕಿಕೊಂಡ. ಲಾರಿ ಓಡಿಸಿಕೊಂಡು ಜೀವನ ನಡೆಸುತ್ತಿದ್ದೆ ಎಂದು ಹೇಳಿದೆ. ಮತ್ತೆ ಮತ್ತೆ ಅಲ್ಲಿನ ವಿಷಯವನ್ನು ಪ್ರಶ್ನಿಸಬಾರದೆಂದು, ಪ್ರಶ್ನಿಸಿದರೆ ಮತ್ತೆ ವಾಪಸ್ಸು ಹೋಗುತ್ತೇನೆ ಎಂದು ಹೇಳಿದೆ. ನಾನು ಹೋದ ಹಿಂದಿನ ರಾತ್ರಿ ನಾಟಕ ನೋಡಿ ನಿದ್ದೆಗೆಟ್ಟುದ್ದರಿಂದ, ನಿಜವೆಂದು ಎಲ್ಲಾ ನಂಬಿದ್ದಾರೆ. ಹೆಚ್ಚಿಗೆ ಏನನ್ನೂ ಪ್ರಶ್ನಿಸುತ್ತಲೂ ಇಲ್ಲ’ ಎಂದ.

ಮಂಜಪ್ಪ ಸ್ವಲ್ಪ ಮೆತ್ತಾಗದಂತೆ ಕಂಡುಬಂದ. ಬೊಂಬಾಯಿಯಲ್ಲಿ ಕಂಡಿದ್ದ ಒರಟುತನ ಇಲ್ಲಿ ಕಾಣಲಿಲ್ಲ.

ಮತ್ತೆ ಆತನೇ ಮಾತನಾಡಿದ. ‘ಇಲ್ಲಿ ನನ್ನ ತಿಥಿಗೆ ತಯಾರಿ ನಡೆದಿತ್ತು ಅಂದಿದ್ದಕ್ಕೆ ನೀನು ಏನೂ ಹೇಳಲಿಲ್ಲ?’ ಅಂದ. ನಾನು ‘ಅದರಲ್ಲೇನು ಆಶ್ಚರ್ಯ. ಓಡಿ ಹೋದವನು ಹನ್ನೆರಡು ವರ್ಷವಾದರೂ ಬರದಿದ್ದರೆ ಅವರೇನು ಮಾಡುತ್ತಾರೆ’ ಎಂದೆ. ‘ಅದರಲ್ಲಿ ನನಗೇನೂ ಆಶ್ಚರ್ಯವಿಲ್ಲ. ಆದರೆ, ನಾನು ಬೊಂಬಾಯಿಯನ್ನು ಬಿಡುವುದು ಒಂದು ದಿನ ತಡವಾಗಿದ್ದರೂ ನನ್ನ ಕೊಲೆಯಾಗುತ್ತಿತ್ತು ಗೊತ್ತಾ!?’ ಎಂದ.

ನನಗೆ ಗಾಬರಿಯಾಯಿತು. ಅದನ್ನು ಅರ್ಥ ಮಾಡಿಕೊಂಡವನಂತೆ, ‘ಇನ್ನೇನು ಭಯವಿಲ್ಲ ಬಿಡು. ಮತ್ತೆ ನಾನು ಬೊಂಬಾಯಿಗೆ ಹೋಗುವುದಿಲ್ಲ. ಅಲ್ಲಿ ಏನು ಮಾಡುತ್ತಿದ್ದೆ? ಹೇಗಿದ್ದೆ? ಎಂಬುದೆಲ್ಲಾ ಒಂದು ಕನಸು ಅಷ್ಟೆ. ಅಷ್ಟೂ ದಿನಗಳು ನನ್ನ ಪಾಲಿಗೆ ನನ್ನವಲ್ಲ. ಅದರ ಬಗ್ಗೆ ನೀನೂ ಮರೆತುಬಿಡಬೇಕು. ಬಾಯಿ ತಪ್ಪಿಯೂ ಯಾರಿಗು ಹೇಳಕೂಡದು. ನನ್ನನ್ನು ಏನೂ ಕೇಳಕೂಡದು. ಅಗತ್ಯ ಬಿದ್ದಲ್ಲಿ ನನ್ನ ಬೊಂಬಾಯಿಯ ಜೀವನವನ್ನು ನಾನೇ ನಿನಗೆ ಹೇಳುತ್ತೇನೆ’ ಎಂದು ನನ್ನ ಕೈಗಳನ್ನು ಹಿಡಿದುಕೊಂಡ!

ನಾನು ಆಯ್ತೆಂದು ಸಮ್ಮತಿಸಿದೆ.

ಆಗಲೇ ನಾನು ಆತನ ಕಥೆ ಬರೆದು ಪ್ರಕಟಿಸಲು ಒಪ್ಪಿಗೆ ಕೇಳಿದ್ದು. ಆತ ‘ಸತ್ತ ನಂತರ’ ಎಂದಿದ್ದು.

7
ಮಂಜಪ್ಪ ಆಗಲೇ ನನ್ನ ಕೋರಿಕೆಯನ್ನು ಒಪ್ಪಿಬಿಟ್ಟಿದ್ದರೆ ಕಥೆಯನ್ನು ಇಲ್ಲಿಗೆ ಮುಗಿಸಿಬಿಡಬೇಕಾಗಿತ್ತು.

ಹಾಗೆ ನೋಡಿದರೆ ಕಥೆ ಇಲ್ಲಿಗೇ ಮುಗಿಯುತ್ತದೆ; ಬದುಕು ಮುಗಿಯುವುದಿಲ್ಲ.

ಊರಿಗೆ ವಾಪಸ್ ಬಂದ ವರ್ಷವೊಂದು ಕಳೆಯುವದರೊಳಗಾಗಿ ಆತನ ಅಕ್ಕನ ಮಗಳೊಂದಿಗೇ ಮದುವೆಯಾಗಿದ್ದು, ಎರಡು ಮಕ್ಕಳಾಗಿದ್ದು ಇಲ್ಲಿ ಮುಖ್ಯವಾಗುವುದಿಲ್ಲ.

ಆದರೆ ತನ್ನ ನಲವತ್ತನೇ ವಯಸ್ಸಿನಲ್ಲಿಯೇ ಆತ ಸತ್ತ ರೀತಿ ಮಾತ್ರ ಕಥೆಗೆ ಪೂರಕವೇನೋ ಅನ್ನಿಸುತ್ತಿದೆ.
ಸಾಯುವ ಮೊದಲು ಆತನಿಗೆ ಎರಡು ಬಾರಿ ಆಕ್ಸಿಡೆಂಟ್ ಆಗಿತ್ತು.

ಒಮ್ಮೆ ಬೈಕ್ ಬಿದ್ದು ಪಕ್ಕೆಲಬು ಮುರಿದುಕೊಂಡಿತ್ತು.

ಇನ್ನೊಮ್ಮೆ ಬಸ್ಸು-ಲಾರಿ ಗುದ್ದಿ, ಮುಂದೆಯೇ ಕುಳಿತಿದ್ದ ಆತನ ಕೈ ಮುರಿದಿತ್ತು.

ಎರಡೂ ಬಾರಿಯೂ ಸಾವಿನಿಂದ ಗೆದ್ದು ಬಂದಿದ್ದ. ಹಿಂದೆ ಬೊಂಬಾಯಿಯನ್ನು ಬಿಡುವುದು ಒಂದು ದಿನ ತಡವಾಗಿದ್ದರೂ ತನ್ನ ಕೊಲೆಯಾಗುತ್ತಿತ್ತೆಂದು ಆತ ಹೇಳಿದ್ದರಿಂದ, ‘ಮೂರು ಗಂಡಾಂತರಗಳನ್ನು ದಾಟಿದ್ದೀಯ. ಇನ್ನು ನಿನಗೆ ಸಾವೇ ಇಲ್ಲ’ ಎಂದು ಒಮ್ಮೆ ತಮಾಷೆ ಮಾಡಿದ್ದೆ. ಆದರೆ ಮೊನ್ನೆ ಊರಿಗೆ ಹೋದಾಗ ‘ಮಂಜಪ್ಪ ಆಕ್ಸಿಡೆಂಟ್‌ನಲ್ಲಿ ಸತ್ತ’ ಎಂದು ತಿಳಿಯಿತು.

ರಸ್ತೆ ಅಗಲೀಕರಣಕ್ಕಾಗಿ ಉರುಳಿಸಿದ್ದ ಹೆಮ್ಮರಕ್ಕೆ, ರಾತ್ರಿ ಹೊತ್ತು ಬೈಕಿನಲ್ಲಿ ಹೋಗುತ್ತಿದ್ದ ಮಂಜಪ್ಪ ಗುದ್ದಿ, ತಲೆಯೊಡೆದು ಸತ್ತುಹೋಗಿದ್ದ!

ಮಂಜಪ್ಪನ ಸಾವಿನೊಂದಿಗೆ ಆತನ ಬೊಂಬಾಯಿಯ ಬದುಕೂ ಸತ್ತು ಹೋಯಿತು.

‘ಅದು ಈ ಕಥೆಯನ್ನು ಅಪೂರ್ಣವಾಗಿಸಿಲ್ಲ’ ಎಂದುಕೊಳ್ಳುತ್ತೇನೆ.

ಬಾಲ್ಯವೆಂಬುದು ಹೂವು ಕಣೋ... ಎನ್ನುತ್ತಾ, ಆತನ ಆತ್ಮಕ್ಕೆ ಶಾಂತಿ ಕೋರುತ್ತೇನೆ.

Friday, October 23, 2009

ಬಾಲ್ಯವೆಂಬುದು ಹೂವು ಕಣೋ... (ಮತ್ತೊಂದು ಹಳೆಯ ಕಥೆ) - 1

1

ಮಂಜಪ್ಪನ ಕಥೆಯನ್ನು ಬರೆದು ಪ್ರಕಟಿಸುವುದಕ್ಕೆ ಸ್ವತಃ ಕಥಾನಾಯಕನಾದ ಮಂಜಪ್ಪನಿಂದಿಲೇ ನಾನು ಅನುಮತಿ ಪಡೆದಿದ್ದೇನೆ; ಅದೂ ಹದಿನೈದು ವರ್ಷಗಳ ಹಿಂದೆ! ತಾನು ಹೇಳಿದ ಕೆಲವೊಂದು ಘಟನೆಗಳನ್ನು ಯಾರಿಗೂ ಹೇಳಬಾರದೆಂದು ಮಂಜಪ್ಪ ಕೇಳಿಕೊಂಡಾಗ, ‘ನಿನ್ನ ಘಟನೆಯನ್ನು ಯಾರದೋ ಕಥೆಯೆಂಬಂತೆ ಬರೆಯುತ್ತೇನೆ’ ಎಂದಿದ್ದೆ. ಅದಕ್ಕೆ ಆತ ‘ಕಥೆ ಬರೆಯಲು ನನ್ನ ಅಭ್ಯಂತರವಿಲ್ಲ. ಆದರೆ ನಾನು ಹೇಳುವವರೆಗೂ ಅದನ್ನು ಪ್ರಕಟಿಸಬಾರದು. ಅಕಸ್ಮಾತ್ ನಡುವೆ ನಾನೇನಾದರೂ ಸತ್ತರೆ ಅದನ್ನೇ ನನ್ನ ಅನುಮತಿಯೆಂದು ತಿಳಿದು ಕಥೆಯನ್ನು ಪ್ರಕಟಿಸಬಹುದು’ ಎಂದು ಕಡಕ್ಕಾಗಿ ಉತ್ತರಿಸಿದ್ದ.

ಈಗ ಮಂಜಪ್ಪ ಸತ್ತು ಹೋಗಿದ್ದಾನೆ. ಅವನ ಆಸೆಯಂತೆ ಕಥೆಯನ್ನು ಪ್ರಕಟಿಸುತ್ತಿದ್ದೇನೆ.

2

ಮಂಜಪ್ಪ ನನಗೆ ಪರಿಚಯವಾಗಿದ್ದು ಸುಮಾರು ೨೫ ವರ್ಷಗಳ ಹಿಂದೆ. ಆಗ ನಾನು ಕಾಜೂರು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದೆ. ಆರನೇ ತರಗತಿಗೆ ಮಂಜಪ್ಪ ಅಡ್ಮಿಷನ್ ಆಗಿದ್ದ. ಐದನೇ ತರಗತಿಯವರೆಗೆ ಮಾವನ ಮನೆಯಲ್ಲಿದ್ದು, ಅಲ್ಲಿನ ಶಾಲೆಯಲ್ಲಿ ಓದುತ್ತಿದ್ದನಂತೆ. ಸರ್ಕಾರಿ ಶಾಲೆಯಾಗಿದ್ದರಿಂದಲೂ ಎಲ್ಲಾ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದರಿಂದಲೂ ಆತನನ್ನು ಮೊದಲ ದಿನವೇ ನೋಡಿದ್ದೆ. ಅಂದೇ ಸಂಜೆ ವಾಪಸ್ ಮನೆಗೆ ಬರುವಾಗ ದಾರಿಯಲ್ಲಿ ಅವನೂ ಗಾಜೂರಿನವನೆಂದು ತಿಳಿಯಿತು. ಗಾಜೂರಿನ ಹುಡುಗರಿಗೆ ಆತನ ಪರಿಚಯವಿತ್ತು. ನಾನು ಗಾಜೂರಿನಿಂದ ಆಚೆಗಿದ್ದ ತೋಟದ ಮನೆಯವನು. ಅಲ್ಲಿಗೆ ನಾವು ಬಂದು ಐದಾರು ವರ್ಷಗಳು ಕಳೆದಿದ್ದವು ಅಷ್ಟೆ.

ದಾರಿಯಲ್ಲಿದ್ದ ಬೃಹತ್ ಗಾತ್ರದ ಹುಣಿಸೆ ಮರದಲ್ಲಿ, ಅವತ್ತು ಗಾಜೂರಿನ ಕೆಲವರು ಇದ್ದುದ್ದು ನಮ್ಮ ಗಮನಕ್ಕೆ ಬಂತು. ನಾವೆಲ್ಲರೂ ಆಶ್ಚರ್ಯದಿಂದ ನೋಡುತ್ತಾ, ಮರದಲ್ಲಿದ್ದ ದೋರೆ ಹಣ್ಣನ್ನು ಕಿತ್ತುಕೊಡುವಂತೆ ಕೂಗತೊಡಗಿದ್ದವು. ಆಗ ಮರದ ಮೇಲಿದ್ದವನೊಬ್ಬನು ‘ಎಲ್ಲರಿಗೂ ಕಿತ್ತು ಕೊಡುತ್ತೇನೆ. ಕಿರುಚಬೇಡಿ. ಯಾರಾದರೂ ಕೇಳಿದರೆ ನಾವು ಇಲ್ಲಿರುವುದನ್ನು ಹೇಳಬೇಡಿ’ ಎಂದು ಗೊಂಚಲು ಗೊಂಚಲು ಹುಣಿಸೆಕಾಯಿ ಕಿತ್ತು ಹಾಕಿದ. ಹಾಗೆ ಹಾಕಿದ ಒಂದು ಗೊಂಚಲಿಗೆ ನಾನೂ ಮಂಜಪ್ಪ ಒಟ್ಟಿಗೆ ಕೈಹಾಕಿ ಕಿತ್ತಾಡಿ, ಅದಕ್ಕಾಗಿ ಜಗಳವನ್ನೂ ಆಡಿದೆವು. ನಂತರ ಬೇರೆ ಹುಡುಗರು, ಮೊದಲ ದಿನವೇ ಜಗಳಕ್ಕಿಳಿದ ಆತನನ್ನು ಬೈದು, ಇಬ್ಬರಿಗೂ ರಾಜಿ ಮಾಡಿಸಿ ‘ಪ್ರೆಂಡ್ಸ್’ ಮಾಡಿಸಿದ್ದರು.

ಗಾಜೂರಿನ ಎರಡು ಪಾರ್ಟಿಗಳಿಗೆ ಗಲಾಟೆಯಾಗಿದ್ದರಿಂದ, ಪೊಲೀಸಿನವರು ಬಂದು ಎಳೆದೊಯ್ಯುತ್ತಾರೆಂದು ಊರಿನ ಗಂಡಸರೆಲ್ಲಾ ಕಾಡು ಸೇರಿದ್ದರು. ಹುಣಿಸೆ ಮರದಲ್ಲಿ ಕೆಲವರು ಬಚ್ಚಿಟ್ಟುಕೊಂಡಿದ್ದಕ್ಕೆ ಅದೇ ಕಾರಣ.

ದಿನಾ ನಾವು ಬಂದು ಹೋಗುತ್ತಿದ್ದ ದಾರಿಯಲ್ಲಿ ಕಾಜೂರಿನ ಹೊಲಗೇರಿಯಿತ್ತು. ಅಲ್ಲಿಯ ರೇವಯ್ಯ ಮೇಸ್ಟರ ಹಿತ್ತಲಿನಲ್ಲಿದ ಸೀಬೆಹಣ್ಣಿನ ಮರದಿಂದ ಹಣ್ಣನ್ನು ಕದಿಯುವುದೆಂದು ನಾನೂ ಮಂಜಪ್ಪ ಹೇಳಿದಾಗ ಬೇರೆಯವರು ಆಸಕ್ತಿ ತೋರಿಸಲಿಲ್ಲ. ರೇವಯ್ಯನವರು ನಮಗೆ ಮೇಸ್ಟರಲ್ಲವಾದರೂ, ನಮ್ಮ ಮೇಸ್ಟರುಗಳಿಗೆ ಹೇಳಿ ಬೆತ್ತದ ರುಚಿ ತೋರಿಸುತ್ತಾರೆಂಬ ಭಯ. ಹಿಂದೊಮ್ಮೆ ಹಾಗೆ ಮಾಡಿದ್ದರಂತೆ.

ಆದರೆ ನಾವು ಮಾತ್ರ ಸೀಬೆಕಾಯಿ ಕೀಳಲು ನಿರ್ಧರಿಸಿದ್ದೆವು.

ನಾನು ಮರ ಹತ್ತಿ ಕಾಯಿ ಕೀಳುವುದೆಂದು, ಮಂಜಪ್ಪ ಕೆಳಗೆ ನಿಂತು ಯಾರಾದರೂ ಬಂದರೆ ತಿಳಿಸುವುದೆಂದು ತೀರ್ಮಾನವಾಗಿತ್ತು. ಅದರಂತೆ ನಾನು ಮರ ಹತ್ತಿದ್ದಾಗ, ಏನೋ ಸದ್ದಾಯಿತೆಂದು ನನಗೆ ಹೇಳದೆ ಮಂಜಪ್ಪ ಓಡಿ ಹೋಗಿದ್ದ. ಕೆಳಗಿಳಿದ ನನಗೆ ಮಂಜಪ್ಪ ಹೀಗೆ ಮಾಡಿದ್ದು ಸಿಟ್ಟು ಭರಿಸಿತ್ತು. ಓಡಿ ಹೋಗಿ, ಹೆಗಲಲ್ಲಿದ್ದ ಚೀಲವನ್ನು ಕೈಯಿಗೆ ತಗೆದುಕೊಂಡು ಬೀಸಿ ಮಂಜಪ್ಪನಿಗೆ ಹೊಡೆದಿದ್ದೆ. ಆತ ತಲೆಯನ್ನು ಸ್ವಲ್ಪ ಬಲಕ್ಕೆ ವಾಲಿಸಿದ್ದರಿಂದ ಏಟು ಎಡಗಿವಿಯ ಕಡೆಗೆ ಬಿತ್ತು. ಆತನ ಕಿವಿ ತಲೆಬುರುಡೆಗೆ ಅಂಟಿಕೊಂಡಿದ್ದಲ್ಲಿ ಬಿರುಕು ಬಿಟ್ಟು ರಕ್ತ ಒಸರಿತ್ತು. ಆತ ಇಡೀ ಬೀದಿಗೆ ಕೇಳುವಂತೆ ಅಳತೊಡಗಿದ್ದ. ಬೇರೆ ಹುಡುಗರು ‘ಹೆಚ್ಚೇನು ಏಟು ಆಗಿಲ್ಲ’ ಎಂದು ಸಮಾಧಾನ ಮಾಡಿದರೂ, ಮನೆಯಲ್ಲಿಯೂ ಸ್ಕೂಲಿನಲ್ಲಿಯೂ ದೂರು ಹೇಳುವುದಾಗಿ ಅಳುತ್ತಲೇ ಹೇಳುತ್ತಿದ್ದ.

ಭಯದಿಂದಾಗಿ ನಾನೂ ಅಳುತ್ತಿದ್ದೆ.

‘ಹುಡುಗರಲ್ಲಿ ಒಗ್ಗಟ್ಟಿರಬೇಕೆಂದು, ಇಂತಹ ಸಣ್ಣಪುಟ್ಟ ವಿಷಯವನ್ನೆಲ್ಲ ಮನೆಯಲ್ಲಿ ಮೇಷ್ಟರಲ್ಲಿ ಹೇಳಬಾರದೆಂದು’ ಬೇರೆ ಹುಡುಗರು ತೀರ್ಮಾನಿಸಿದರು. ಮಂಜಪ್ಪನ ಸಮಾಧಾನಕ್ಕಾಗಿ, ಆತನಿಗೆ ನಾನು ನನ್ನಲ್ಲಿದ್ದ ದುಡ್ಡನ್ನು ಔಷಧಿಗಾಗಿ ಕೊಡುವಂತೆ ಹೇಳಿದರು. ‘ಏನೆ ಬರಲಿ ಒಗ್ಗಟ್ಟರಲಿ’ ಎಂದು ಮೆರವಣಿಗೆಯಲ್ಲಿ ಕೂಗಿ ಕೂಗಿ ಸ್ಫೂರ್ತಿಗೊಂಡಿದ್ದ ಹುಡುಗರೆಲ್ಲ ಅದಕ್ಕೆ ಒಪ್ಪಿದರು. ನನ್ನ ಅನುಮತಿಯನ್ನು ಯಾರೂ ಕೇಳಲಿಲ್ಲ. ನನ್ನ ತರಗತಿಗೆ ನಾನೇ ಲೀಡರ್ ಆಗಿದ್ದರಿಂದ ಬಾವುಟ ಮಾರಲು ನನಗೆ ಕೊಟ್ಟಿದ್ದರು. ಹದಿನೈದು ಬಾವುಟ ಮಾರಿ ಒಂದೂವರೆ ರೂಪಾಯಿ ಸಂಗ್ರಹಿಸಿದ್ದೆ. ಹಣ ತೆಗೆದುಕೊಳ್ಳಬೇಕಾಗಿದ್ದ ಮೇಷ್ಟರು ಅಂದು ಬಂದಿರಲ್ಲವಾದ್ದರಿಂದ ಹಣ ನನ್ನೊಂದಿಗೆ ಇತ್ತು. ವಿಧಿಯಿಲ್ಲದೆ ಅಷ್ಟೂ ಹಣವನ್ನು ಮಂಜಪ್ಪನಿಗೆ ಕೊಟ್ಟೆ.

ನಾಳೆ ಮೇಷ್ಟರಿಗೆ ಕೊಡಲು ಒಂದೂವರೆ ರೂಪಾಯಿಯನನ್ನು ಅಜ್ಜಿಯ ಚೀಲದಲ್ಲಿ ಕದಿಯಲು ತೀರ್ಮಾನಿಸಿದ್ದೆ.

ದೇವರು ದಯಾಮಯನಾಗಿದ್ದ. ಅಜ್ಜಿಯ ಚೀಲದಿಂದ ದುಡ್ಡು ಕದಿಯುವ ಪ್ರಸಂಗವೇ ಬರಲಿಲ್ಲ. ರಾತ್ರಿ ಎಲೆ ಅಡಿಕೆ ಹಾಕುತ್ತಿದ್ದ ಅಜ್ಜಿಯ ಚೀಲದಿಂದ ಆಕಸ್ಮಿಕವಾಗಿ ಚಿಲ್ಲರೆ ಬಿದ್ದಹೋದವು. ಅದನ್ನ್ತು ಅಜ್ಜಿಗೆ ಎತ್ತಿಕೊಡುತ್ತ ‘ನಾಳೆ ಸ್ಕೂಲಿನಲ್ಲಿ ಮ್ಯಾಜಿಕ್ ತೋರಿಸಲು ಬರುತ್ತಾರೆ. ಮೇಷ್ಟರು ಒಂದೂವರೆ ರೂಪಾಯಿ ತರಲು ಹೇಳಿದ್ದಾರೆ’ ಎಂದು ಸುಳ್ಳು ಹೇಳಿದೆ. ಕೈತುಂಬ ಚಿಲ್ಲರೆ ಇದ್ದುದರಿಂದಲೋ ಏನೋ, ಅಜ್ಜಿ ಸುಮ್ಮನೆ ಕೊಟ್ಟುಬಿಟ್ಟಳು.

ಆದರೆ ಸ್ಕೂಲಿನಲ್ಲಿ ಅದೃಷ್ಟ ನನ್ನ ಕಡೆಗಿರಲಿಲ್ಲ.

ಮಂಜಪ್ಪ ತಲೆಗೆ ಒಂದು ದಪ್ಪ ಟವೆಲ್ಲನ್ನು ಸುತ್ತಿಕೊಂಡು, ಜೊತೆಯಲ್ಲಿ ಅವನ ದೊಡ್ಡಣ್ಣನನ್ನು ಕರೆದುಕೊಂಡು ಬಂದಿದ್ದ. ಮೇಷ್ಟರ ಕೋಲು ಮುರಿಯುವವರೆಗೂ ನನಗೆ ಏಟು ಬಿತ್ತು. ದುಡ್ಡೂ ಹೋಯಿತು.

ಈ ಘಟನೆಯ ನಂತರ ಮಂಜಪ್ಪನಿಗೆ ನಾನು ‘ಠೂ’ ಬಿಟ್ಟುಬಿಟ್ಟೆ.

ಏಳನೇ ತರಗತಿ ಮುಗಿದ ನಂತರ ನಾನು ಅವನನ್ನು ಬೇಟಿಯಾಗಿದ್ದು ಬೊಂಬಾಯಿಯ ಹ್ಯಾಂಗಿಗ್ ಗಾರ್ಡನ್ ಬಳಿ; ಅದೂ ಸುಮಾರು ಹತ್ತು ವರ್ಷಗಳ ನಂತರ!

3

ನಾನು ಹೈಸ್ಕೂಲಿಗೆ ಕಾಜೂರುಮಠದಲ್ಲಿದ್ದ ಹಾಸ್ಟೆಲ್ಲಿಗೆ ಸೇರಿದ್ದೆ. ಮಂಜಪ್ಪ ಹೈಸ್ಕೂಲಿಗೆ ಬೇರೆ ಊರಿಗೆ ಹೋಗಿದ್ದರಿಂದ ಆತನ ಬೇಟಿಯಾಗಲಿಲ್ಲ. ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ‘ಮಂಜಪ್ಪ ಓಡಿಹೋಗಿದ್ದಾನೆ’ ಎಂಬ ಸುದ್ದಿ ಹರಡಿತು. ಗಣೇಶ ಹಬ್ಬದ ಮಾರನೇ ದಿನ, ಅಕ್ಕಂದಿರ ಊರಿಗೆ ಕಾಯಿಕಣ ಕೊಡಲು ಹೋಗಿದ್ದ ಮಂಜಪ್ಪ ಕಾಣೆಯಾಗಿಬಿಟ್ಟಿದ್ದ. ಇಬ್ಬರು ಅಣ್ಣಂದಿರು, ಒಬ್ಬ ತಮ್ಮ, ಇಬ್ಬರು ಅಕ್ಕಂದಿರು ಅಪ್ಪ ಅವ್ವ ಇವರನ್ನೆಲ್ಲಾ ಬಿಟ್ಟು ಓಡಿ ಹೋಗಿದ್ದ.

ಎಲ್ಲಿಗೆ ಹೋಗಿದ್ದ ಎಂಬುದು ಮಾತ್ರ ಗೊತ್ತಾಗಲಿಲ್ಲ.

ಕೆಲವರು ಅವನು ಸತ್ತು ಹೋಗಿರಬಹುದೆಂದರು. ಇನ್ನು ಕೆಲವರು ಯಾವುದೋ ಡ್ಯಾಮು ಕಟ್ಟಲು ಬಲಿ ಕೊಟ್ಟಿದ್ದಾರೆ ಎಂದರು. ಅವನ ಮನೆಯವರು ಕೇಳದ ಶಾಸ್ತ್ರಗಳಿಲ್ಲ. ಮಾಡದ ದೇವರುಗಳಿಲ್ಲ. ಯಾರು ಯಾರೋ ಹೇಳಿದ್ದನ್ನೆಲ್ಲಾ ಮಾಡಿದರು. ಮಾಟ ಮಂತ್ರ ಮಾಡಿಸಿದರು.

ಏನೂ ಪ್ರಯೋಜನವಾಗದೆ, ಅವನೊಬ್ಬನಿದ್ದ ಎಂಬುದನ್ನು ಮರೆತೂಬಿಟ್ಟರು!

4

ಮುಂದೆ ನಾನು ಮಾನಸಗಂಗೋತ್ರಿ ಸೇರಿದ್ದೆ.

ಎಂ.ಎಸ್ಸಿ. ಎರಡನೇ ವರ್ಷ ಹುಡುಗರೆಲ್ಲಾ ಉತ್ತರಭಾರತದ ಟೂರ್ ಹೋಗಿದ್ದೆವು. ವಾಪಸ್ ಬರುವಾಗ ಬೊಂಬಾಯಿ ಕಡೆಯ ನೋಡುತಾಣವಾಗಿತ್ತು. ಹ್ಯಾಂಗಿಗ್ ಗಾರ್ಡನ್ ಬಳಿ ಬಂದಾಗ, ಅಂದು ನನಗೆ ಸ್ವಲ್ಪ ತಲೆನೋವಿದ್ದರಿಂದ ನಾನು ಬಸ್ಸಿನಲ್ಲೆ ಕುಳಿತೆ. ಆಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಹಸಿವಿನಿಂದ ನನಗೆ ಹಾಗೇ ಜೂಗರಿಕೆ ಹತ್ತಿತ್ತು.

ಯಾರೋ ನನ್ನ ಹೆಸರನ್ನು ಕರೆಯುತ್ತಿರುವಂತೆ ಕೇಳಿ ಎಚ್ಚರವಾಯಿತು. ಮತ್ತೆ ಮತ್ತೆ ನನ್ನ ಹೆಸರನ್ನು ಕರೆದಂತಾಗಿ, ಕೇಳಿದ್ದು ಕನಸಲ್ಲವೆಂದುಕೊಂಡೆ.

ಕಿಟಕಿಯಿಂದ ಹೊರಗೆ ಇಣುಕಿ ದೃಷ್ಟಿ ಹಾಯಿಸಿದೆ.

ಅಲ್ಲಿದ್ದ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ನನ್ನನ್ನು ನೋಡಿ ಹಲ್ಲು ಕಿರಿಯಿತು.

ನನಗೆ ಪೆಚ್ಚಾಯಿತು. ಬೊಂಬಾಯಿಯಲ್ಲಿ ನನಗಾರೂ ಪರಿಚಯದವರಿರಲಿಲ್ಲ. ಅಲ್ಲಿ ಪರಿಚಯದ ನೆಪ ಹೇಳಿ ಮೋಸ ಮಾಡುತ್ತಾರೆಂದು, ಕೆಲವರು ನಾವು ಟೂರ್ ಹೊರಟಾಗ ಹೇಳಿದ್ದರಿಂದ ಹೆದರಿಕೊಂಡು, ಅವನ ಹಲ್ಕಿರಿತಕ್ಕೆ ನಾನು ಪ್ರತಿಕ್ರಿಯಿಸಲಿಲ್ಲ.

ಮತ್ತೆ ನನ್ನ ಹೆಸರನ್ನು ಆತ ಕೂಗಿದಾಗ, ಅನೈಚ್ಛಿಕವಾಗಿ ‘ಏನು?’ ಎಂಬಂತೆ ತಲೆಯಾಡಿಸಿದೆ.

‘ನೀನು ಗಾಜೂರಿನ ತೋಟದ ಮನೆಯವನಲ್ಲವಾ?’ ಎಂದು ಕನ್ನಡದಲ್ಲಿಯೇ ಕೇಳಿದಾಗ ನನಗೆ ಮೂರ್ಛೆ ಬೀಳುವುದೊಂದು ಬಾಕಿ. ಹೌದೆಂದೆ.

ತಕ್ಷಣ ಆಟೋ ಇಳಿದು ಬಂದ ಆತ ‘ನಾನು ಕಣೋ ಮಂಜಪ್ಪ. ಗೊತ್ತಾಗಲಿಲ್ಲವಾ?’ ಎಂದ.

ಒಂದು ನಿಮಿಷ ನಾನು ನಾನಾಗಿ ಉಳಿದಿರಲಿಲ್ಲ. ಆಶ್ಚರ್ಯದಿಂದ ಅವನನ್ನು ನೋಡುತ್ತಿದ್ದೆ.

ಸಾವಿರ ಪ್ರಶ್ನೆಗಳು ಮನಸ್ಸಿಗೆ ಬಂದವು. ಬಾಯಿಗೆ ಬರಲಿಲ್ಲ.

‘ಗೊತ್ತಾಗಲಿಲ್ಲವಾ?’ ಎಂದು ಮತ್ತೊಮ್ಮೆ ಕೇಳಿದಾಗ ‘ಗೊತ್ತಾಯಿತು’ ಎಂದುಸುರಿದೆ. ‘ಆಗ ‘ಠೂ’ ಬಿಟ್ಟಿದ್ದನ್ನು ಇನ್ನೂ ಮರೆತಿಲ್ಲವೆನೋ’ ಎಂದು ನಕ್ಕ. ನನಗೆ ನಗು ಬರಲಿಲ್ಲ.

ಸೀರಿಯಸ್ಸಾಗಿ ಕೇಳಿದೆ. ‘ಏನು ನಿನ್ನ ಕಥೆ. ನಿಮ್ಮ ಮನೆಯವರು ನಿನಗಾಗಿ ತುಂಬಾ ಹುಡುಕಿದರು ಗೊತ್ತಾ?’ ಎಂದೆ.

ಅಷ್ಟರಲ್ಲಿ ಅಲ್ಲೇ ಹತ್ತಿರದಲ್ಲಿ ಜೋರಾಗಿ ಜಗಳ ಶುರುವಾಯಿತು. ದೊಡ್ಡ ಗುಂಪೇ ಸೇರಿತು. ಐದೇ ನಿಮಿಷದಲ್ಲಿ ಪೊಲೀಸರು ಬಂದರು.

ಮಂಜಪ್ಪ ನನ್ನನ್ನು ಆಟೋ ಕಡೆಗೆ ತಳ್ಳುತ್ತ ‘ಅದೊಂದು ದೊಡ್ಡ ಕಥೆ. ಎಲ್ಲವನ್ನೂ ಹೇಳುತ್ತೇನೆ. ಈಗ ಹೇಳು ನೀನೆಲ್ಲಿ ಉಳಿದುಕೊಂಡಿದ್ದೀಯಾ?’ ಎಂದ. ನಾನು ‘ಐಐಟಿ ಕ್ಯಾಂಪಸ್ಸಿನಲ್ಲಿ’ ಎಂದೆ. ‘ಹೌದೇ?! ಅದು ನಾನಿರುವಲ್ಲಿಗೆ ಬಹಳ ಹತ್ತಿರ. ನಾನೇ ನಿನ್ನನ್ನು ಸಂಜೆ ಅಲ್ಲಿ ಬಿಡುತ್ತೇನೆ. ಈಗ ಬಾ ಹೋಗೋಣ. ಜಗಳ ಜಾಸ್ತಿಯಾಗಿ ಗೋಲಿಬಾರ್ ಆದರೂ ಆಶ್ಚರ್ಯವಿಲ್ಲ’ ಎಂದ. ಗಲಾಟೆಯ ಗುಂಪು ನಮ್ಮ ಹತ್ತಿರಕ್ಕೆ ಬಂತು.

ನಾನು ನಮ್ಮ ಹುಡುಗರು ಹೋಗಿದ್ದ ಕಡೆ ನೋಡಿದೆ. ದೂರದಲ್ಲಿ ಕಂಡ ಒಬ್ಬನಿಗೆ ‘ನಾನು ಸಂಜೆ ಹಾಸ್ಟೆಲ್ಲಿಗೆ ಬರುತ್ತೇನೆ’ ಎಂದು ಕೂಗಿ ಹೇಳಿ ಆಟೋ ಹತ್ತಿದೆ.

ಸ್ಟಾರ್ಟ್ ಮಾಡಿ, ಒಂದೇ ಬಾರಿಗೆ ಸ್ಪೀಡ್ ಪಿಕ್‌ಅಪ್ ಮಾಡಿಕೊಂಡು ಆಟೋ ಓಡಿಸುತ್ತಿದ್ದ ಮಂಜಪ್ಪನಿಗೆ ‘ಏನದು ಗಲಾಟೆ’ ಎಂದೆ. ‘ಏನು ಗಲಾಟೆಯೋ ಯಾರಿಗೆ ಗೊತ್ತು. ಈ ಊರಿನಲ್ಲಿ ಹಾಗೆಯೇ. ಗಲಾಟೆ ಶುರುವಾಗುವುದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಬೇಗ ಹಬ್ಬಿ ಬೇಗ ಮುಗಿದು ಹೋಗುತ್ತದೆ. ಅಷ್ಟರಲ್ಲಿ ಒಂದೆರಡು ಹೆಣ ಬೀಳುತ್ತವೆ’ ಎಂದ.

ಇದ್ದಕ್ಕಿದ್ದಂತೆ ಮಂಜಪ್ಪ ಸಿಕ್ಕು ಅವನ ಆಟೋದಲ್ಲಿ ನಾನು ಹೋಗುತ್ತಿರುವ ವಿಚಿತ್ರದ ಬಗ್ಗೆ ನಾನು ಯೋಚಿಸುತ್ತಿದ್ದೆ.

ಮುಂದುವರೆಯುವುದು.........

Wednesday, October 21, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ -27

ಮಂಜಣ್ಣನ ಹೀರೋ ಮೆಜೆಸ್ಟಿಕ್
ಮಂಜಣ್ಣ ಯಾರ ಕೈಯಲ್ಲೂ ಮುಟ್ಟಿಸದ ಒಂದು ವಸ್ತುವೆಂದರೆ ‘ಹೀರೋಮೆಜೆಸ್ಟಿಕ್’ ಎಂಬ ಮೋಟಾರ್ ಸೈಕಲ್. ಅದು ರಸ್ತೆಯಲ್ಲಿ ಓಡಾಡಿದ್ದಕ್ಕಿಂತ ಮೂಲೆಯಲ್ಲಿ ನಿಂತದ್ದೇ ಹೆಚ್ಚು. ಅದನ್ನು ನಾವೂ ಆಸೆ ಕಂಗಳಿಂದ ನೋಡುತ್ತಾ, ಅದನ್ನು ಸವಾರಿ ಮಾಡಿದಂತೆ ಕನಸು ಕಾಣುತ್ತಾ ಇದ್ದೆವು. ಕೊನೆಯ ಪಕ್ಷ ಅದನ್ನು ಸುಮ್ಮನೆ ತಳ್ಳಿಕೊಂಡು ಓಡಾಡಿಸಲು ಕೊಟ್ಟಿದ್ದರೂ ನಮಗೆ ಆಗ ಸಂತೋಷವಾಗುತ್ತಿತ್ತೇನೋ!


ನಮ್ಮ ಈ ಆಸೆ ಈಡೇರುವ ದಿನವೂ ಒಮ್ಮೆ ಬಂತು. ಮಂಜಣ್ಣನಿಗೆ ಊರಿನಲ್ಲಿ ಸ್ವಲ್ಪ ಜಮೀನಿತ್ತು. ಅದರಲ್ಲಿ ಆತನ ಹಿರೇಹೆಂಡತಿ ಬಾಳೆ ಹಾಕಿಕೊಂಡಿದ್ದಳು. ಅದಕ್ಕೆ ಆತ ನೀರು ಬಿಡಲು ಆಗಾಗ ಊರಿಗೆ ಹೋಗುತ್ತಿದ್ದ. ಆಗಾಗ ಕೈಕೊಡುತ್ತಿದ್ದ ತನ್ನ ಮೊಟಾರ್ ಸೈಕಲ್ಲನ್ನು ಆತ ನೆಚ್ಚಿಕೊಳ್ಳುತ್ತಿರಲಿಲ್ಲ. ಊರಿಗೆ ಹೋಗುವುದು ಹೆಚ್ಚಾದಾಗ ಅದನ್ನು ಒಂದು ಬಾರಿ ಚೆನ್ನಾಗಿ ರಿಪೇರಿ ಮಾಡಿಸಿಬಿಡಬೇಕೆಂದು ತೀರ್ಮಾನ ಮಾಡಿದ. ಆದರೆ ಅದನ್ನು ಚನ್ನರಾಯಪಟ್ಟಣದವರೆಗೆ ತೆಗೆದುಕೊಂಡು ಹೋಗುವ ಬಗೆ ಹೇಗೆ? ಅದಕ್ಕಾಗಿ ಆತ ನನ್ನನ್ನು ಮತ್ತು ವೆಂಕಟೇಶ ಎಂಬ ಇನ್ನೊಬ್ಬ ಹುಡುಗನನ್ನು ಕೇಳಿಕೊಂಡ. ‘ಚನ್ನರಾಯಪಟ್ಣದವರೆಗೆ ಅದನ್ನು ತಂದುಕೊಟ್ಟರೆ, ಅದನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ಮೂರೂ ಮಂದಿ ವಾಪಸು ಬರೋಣ. ಅಲ್ಲಿ ನಿಮಗೆ ನಾನು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸುತ್ತೇನೆ’ ಎಂದು ಹೇಳಿದ. ‘ಬೇಕಾದರೆ ನೀವು ಇಳಿಜಾರಿನಲ್ಲಿ ಅದರ ಮೇಲೆ ಕುಳಿತುಕೊಂಡು ಬರಬಹುದು’ ಎಂದೂ ಸೇರಿಸಿದ. ಆತನ ಎರಡನೇ ಮಾತು ಮಾತ್ರ ನಮಗೆ ಕೇಳಿಸಿದ್ದು! ಕೇವಲ ಕನಸಾಗಿದ್ದ ಹೀರೋಮೆಜೆಸ್ಟಿಕ್ ಮೋಟಾರ್ ಸೈಕಲ್ಲನ್ನು ಹತ್ತಿ ಅದರಲ್ಲಿ ಡಬಲ್ ರೈಡ್ ಹೋಗುವ ಅವಕಾಶವನ್ನು ಕಳೆದುಕೊಳ್ಳಲು ನಾವಂತೂ ಸಿದ್ಧರಿರಲಿಲ್ಲ. ಒಪ್ಪಿಯೇ ಬಿಟ್ಟೆವು. ಮಂಜಣ್ಣ, ‘ನಾನು ಮೊದಲು ಹೋಗಿ ಬರಗೂರಿನಲ್ಲಿ ತೋಟಕ್ಕೆ ನೀರು ಬಿಡುತ್ತಿರುತ್ತೇನೆ. ನೀವು ಅಲ್ಲಿಯವರೆಗೆ ತಳ್ಳಿಕೊಂಡು ಬನ್ನಿ. ಅಲ್ಲಿಂದ ಮುಂದಕ್ಕೆ ನಾನೂ ಬರುತ್ತೇನೆ’ ಎಂದು ಹೇಳಿದ.
ಒಂದು ಭಾನುವಾರ ಮಂಜಣ್ಣ ಅದನ್ನು ಹೇಗೆ ತಳ್ಳಿಕೊಂಡು ಬರಬೇಕೆಂದು, ಇಳಿಜಾರಿನಲ್ಲಿ ಹೇಗೆ ಕ್ಲಚ್ ಹಿಡಿದು ಓಡಿಸಿಕೊಂಡು ಬರಬೇಕೆಂದು ನಾಲ್ಕೈದು ಬಾರಿ ಹೇಳಿ, ರಿಟರ್ನ್ ಬಸ್ ಹತ್ತಿದ. ಹಿಂದೆಯೇ ನಾವು ಮೋಟಾರ್ ಸೈಕಲ್‌ನ್ನು ಹತ್ತಿದೆವು. ಕುಂದೂರುಮಠದಿಂದ ಕುಂದೂರು ಕಡೆಗೆ ಪ್ರಾರಂಭದಲ್ಲಿಯೇ ದೊಡ್ಡ ಇಳಿಜಾರು ಇದ್ದುದರಿಂದ ನಮಗೆ ಅನುಕೂಲವೇ ಆಗಿತ್ತು. ಗಾಡಿ ಓಡಿಸುತ್ತಿದ್ದ ನಾನು, ಕ್ಲಚ್ ಹಿಡಿದು, ಯಾವುದಕ್ಕೂ ಇರಲಿ ಎಂದು ಬಲಗೈಯಲ್ಲಿ ಬ್ರೇಕನ್ನು ಸ್ವಲ್ಪ ಹಿಡಿದುಕೊಂಡು ಓಡಿಸುತ್ತಿದ್ದೆ. ಸೈಕಲ್‌ನ್ನು ಕೈಬಿಟ್ಟುಕೊಂಡೆಲ್ಲಾ ಓಡಿಸುತ್ತಾ, ಅದರ ಮೇಲೆ ನಾನಾ ವರಸೆಗಳನ್ನು ಮಾಡುತ್ತಿದ್ದ ನನಗೆ ನಿರ್ಜೀವವಾಗಿ ಓಡುತ್ತಿದ್ದ ಮೋಟಾರ್ ಸೈಕಲ್ ಹೊಸದೆಂದು ಅನ್ನಿಸಲೇ ಇಲ್ಲ.
ಇನ್ನೇನು ಇಳಿಜಾರು ಮುಗಿಯಬೇಕು ಎನ್ನುವಷ್ಟರಲ್ಲಿ ಯಾವುದೋ ಜ್ಞಾನದಲ್ಲಿ ಎಡಗೈಯಲ್ಲಿ ಹಿಡಿದಿದ್ದ ಕ್ಲಚ್‌ನ್ನು ಬಿಟ್ಟುಬಿಟ್ಟೆ. ಆ ಕ್ಷಣ ಮೋಟಾರ್ ಸೈಕಲ್ ವಿಚಿತ್ರ ಶಬ್ದ ಮಾಡುತ್ತಾ, ಮುಗ್ಗರಿಸುತ್ತಾ ಸ್ಟಾರ್ಟ್ ಆಗೇಬಿಟ್ಟಿತು! ನನಗೆ ಗಾಬರಿ, ಸಂತೋಷ ಎಲ್ಲವೂ ಆಯಿತು. ಕಷ್ಟಪಟ್ಟು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ಗಾಡಿ ಓಡಿಸತೊಡಗಿದೆ. ಬಹುಶಃ ಅದರ ಪ್ಲಗ್‌ನಲ್ಲೋ ಫಿಲ್ಟರ್‌ನಲ್ಲೋ ಏನೋ ತೊಂದರೆ ಇದ್ದಿರಬೇಕು. ಅದಕ್ಕೆ ಅದು ಮಂಜಣ್ಣ ಸ್ಟಾರ್ಟ್ ಮಾಡಿದಾಗ ಸ್ಟಾರ್ಟ್ ಆಗದೆ, ತುಂಬಾ ವೇಗವಾಗಿ ಬರುತ್ತಾ ಒಂದೇ ಬಾರಿ ಕ್ಲಚ್ ಬಿಟ್ಟಿದ್ದರಿಂದ ಹೇಗೋ ಸ್ಟಾರ್ಟ್ ಆಗಿರಬೇಕು. ಕುಂದೂರನ್ನು ದಾಟಿ ಮುಂದೆ ಬರುವವರೆಗೆ ನಾವಿಬ್ಬರೂ ಮಾತೇ ಆಡಿರಲಿಲ್ಲ. ಅಲ್ಲಿಯವರೆಗೆ ನಾನು ಗಾಡಿ ಓಡಿಸುವುದನ್ನು ಭಯದಿಂದ ನೋಡುತ್ತಾ ಭದ್ರವಾಗಿ ನನ್ನನ್ನು ಹಿಡಿದು ಕುಳಿತಿದ್ದ ವೆಂಕಟೇಶ ನಿಧಾನವಾಗಿ, ‘ನಾನೂ ಓಡಿಸುತ್ತೇನೆ’ ಎಂದು ರಾಗ ತೆಗೆದ.
ಅವನಿಗೆ ಮೋಟಾರ್ ಸೈಕಲ್ ಓಡಿಸುವುದು ಇಷ್ಟೊಂದು ಸುಲಭವೇ ಅನ್ನಿಸಿರಬೇಕು! ಆದರೆ ಅಷ್ಟು ಬೇಗ ನಾನು ಅವನಿಗೆ ಮೋಟರ್ ಸೈಕಲ್ಲನ್ನು ಕೊಡಲು ಸಿದ್ಧನಿರಲಿಲ್ಲ. ನಾನು ‘ಪೆಟ್ರೊಲ್ ಇದೆಯೋ ಇಲ್ಲವೋ. ಈಗ ನಿಲ್ಲಿಸಿದರೆ ಮತ್ತೆ ಸ್ಟಾರ್ಟ್ ಆಗದಿದ್ದರೆ ಮತ್ತೆ ನೀನೆ ತಳ್ಳಬೇಕಾಗುತ್ತೆ’ ಎಂದಿದ್ದರಿಂದ ತೆಪ್ಪಗೆ ಕುಳಿತುಕೊಂಡ. ನಾನು ರಾಜಠೀವಿಯಿಂದ ಗಾಡಿ ಓಡಿಸುತ್ತಾ ಮುಖ್ಯರಸ್ತೆಗೆ ಬಂದೆ. ಪೆಟ್ರೊಲ್ ಟ್ಯಾಂಕ್ ರಸ್ಟ್ ಹಿಡಿಯುತ್ತದೆ ಎಂದು ಪೆಟ್ರೊಲ್ ಪೂರಾ ಡ್ರೈ ಆಗಲು ಮಂಜಣ್ಣ ಬಿಟ್ಟಿರಲಿಲ್ಲ. ಅರ್ಧ ಲೀಟರಿನಷ್ಟು ಪೆಟ್ರೊಲ್ ಇತ್ತೆಂದು ಕಾಣುತ್ತದೆ. ಪೆಟ್ರೊಲ್ ಖಾಲಿಯಾಗಿ ಗಾಡಿ ನಿಲ್ಲುವ ಯಾವ ಸೂಚನೆಯೂ ಬಾರದಿದ್ದಾಗ ವೆಂಕಟೇಶ ಮತ್ತೆ ಮತ್ತೆ ರಾಗ ತೆಗೆಯುತ್ತಿದ್ದ. ನಾನು ‘ಸ್ಟಾರ್ಟ್ ಆಗದಿದ್ದರೆ, ನೀನೇ ತಳ್ಳುವುದಾದರೆ ಹೇಳು. ನಿಲ್ಲಿಸುತ್ತೇನೆ’ ಎಂದು ಹೆದರಿಸುತ್ತಲೇ ಇದ್ದೆ.
ಅಂತೂ ಇಂತು ಬರಗೂರಿನವರೆಗೆ ಬಂದಾಗ, ಗಾಡಿ ಕೆಟ್ಟ ಶಬ್ದ ಮಾಡುತ್ತಾ, ಮುಗ್ಗುರಿಸುತ್ತಾ ನಿಂತು ಹೋಯಿತು. ನಾವು ಗಾಡಿಯನ್ನು ಓಡಿಸಿಕೊಂಡು ಬಂದಿದ್ದನ್ನು ಕೇಳಿ ಮಂಜಣ್ಣನಿಗೆ ತುಂಬಾನೆ ಖುಷಿಯಾಯಿತು. ಅದೇ ಖುಷಿಯಲ್ಲಿ, ಊರಿನಲ್ಲಿ ಬೈಕಿದ್ದ ಇನ್ನಾರನ್ನೋ ಹುಡುಕಿ ಒಂದಷ್ಟು ಪೆಟ್ರೊಲನ್ನು ಸಂಪಾದಿಸಿಬಿಟ್ಟ. ಗಾಡಿಗೆ ಪೆಟ್ರೊಲ್ ತುಂಬಿಸಿ, ಸ್ಟಾರ್ಟ್ ಮಾಡಿದರೆ ಅದು ಮುಷ್ಕರ ಕುಳಿತವರಂತೆ ಮೌನವಾಗಿಬಿಟ್ಟಿತ್ತು. ಏನೆಲ್ಲಾ ಸರ್ಕಸ್ ಮಾಡಿದರೂ ಅದು ಸ್ಟಾರ್ಟ್ ಆಗಲಿಲ್ಲ. ಮಂಜಣ್ಣನನ್ನು ಗಾಡಿಯಲ್ಲಿ ಕುಳ್ಳಿರಿಸಿ ನಾವಿಬ್ಬರು ದೂಡಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಮಂಜಣ್ಣ ‘ಮಗಾ ನಿನ್ನ ಕೈಗುಣ ಚೆನ್ನಾಗಿರಂಗೆ ಕಾಣುತ್ತೆ. ನೀನೆ ಕುಳಿತು ಓಡ್ಸು, ನಾವೇ ತಳ್ತೀವಿ’ ಎಂದು ನನಗೆ ಗಾಡಿ ಓಡಿಸಲು ಕೊಟ್ಟ. ಆದರೆ ನನ್ನ ಕೈಗುಣವೂ ಚೆನ್ನಾಗಿರಲಿಲ್ಲ! ಅದು ಸ್ಟಾರ್ಟ್ ಆಗಲಿಲ್ಲ.
ಕೊನೆಗೆ ಅದನ್ನು ತಳ್ಳಿಕೊಂಡು ಅಲ್ಲಿಂದ ಒಂದು ಕಿಲೋಮೀಟರ್ ದೂರವಿರುವ ಬರಗೂರ್ ಹ್ಯಾಂಡ್‌ಪೋಸ್ಟ್ ಬಳಿಗೆ ಬಂದೆವು. ಅಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ಸಾಬರು ‘ನಾನೇ ರಿಪೇರಿ ಮಾಡುತ್ತೇನೆ’ ಎಂದು, ಅದರ ಫ್ಲಗ್ ಎಲ್ಲಾ ಬಿಚ್ಚಿ ಕ್ಲೀನ್ ಮಾಡಿದ. ನಂತರ ಸರಾಗವಾಗಿ ಅದು ಸ್ಟಾರ್ಟ್ ಆಯಿತು. ಆ ಸಾಬರು ‘ಇನ್ನೇನು ಭಯವಿಲ್ಲ. ಬೇರೆ ರಿಪೇರಿಯು ಬೇಕಿಲ್ಲ. ಆಗಾಗ ಬಂದು ಫ್ಲಗ್ ಕ್ಲೀನ್ ಮಾಡಿಸಿಕೊಳ್ಳಿ’ ಎಂದು ಉಚಿತವಾಗಿ ಸಲಹೆ ಕೊಟ್ಟ. ಮಂಜಣ್ಣ ನಮಗೆ ಮಾತು ಕೊಟಿದ್ದಂತೆ, ಚನ್ನರಾಯಪಟ್ಟಣದವರೆಗೂ ನಮ್ಮನ್ನು ತ್ರಿಬಲ್ ರೈಡ್ ಮಾಡುತ್ತಾ ಕರೆದುಕೊಂಡು ಬಂದು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸಿದ. ವಾಪಸ್ ಬರುವಾಗ ತ್ರಿಬಲ್ ರೈಡ್ ಮಾಡುತ್ತಾ ಬಂದೆವು. ಇಳಿಜಾರಿನಲ್ಲಿ, ಹಾಗೂ ಮಟ್ಟವಾದ ರಸ್ತೆಯಲ್ಲಿ ಹೇಗೋ ಹೋಗುತ್ತಿದ್ದ ನಾವು ಏರು ರಸ್ತೆ ಬಂದಾಗ ಮಾತ್ರ, ಇಳಿದು ಮಂಜಣ್ಣನ ಹಿಂದೆ ಓಡಬೇಕಾಗಿತ್ತು. ಅಂತೂ ಕೊನೆಗೆ ನಾವು ಕುಂದೂರುಮಠ ತಲುಪಿದಾಗ ಸಂಜೆಯ ಸೂರ್ಯ ಮೇಲಿನ ಸುಬ್ಬಪ್ಪನ ಗುಡಿಯ ಹಿಂದೆ ಮುಳುಗುವುದರಲ್ಲಿದ್ದ!

{ಈ ಕಂತಿನೊಂದಿಗೆ 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಇ-ರೂಪ ಮುಗಿಯಲಿದೆ. ಮುಂದೆ ಈ ಪುಸ್ತಕವನ್ನು ಕುರಿತು ಮೂವರು ಲೇಖಕರು ಬರೆದ ಬರಹಗಳನ್ನು ಮೂರು ಕಂತಿನಲ್ಲಿ ಪ್ರಕಟಿಸುತ್ತೇನೆ. ಥಟ್ ಅಂತ ಹೇಳಿ ಕಾರ್ಯಕ್ರಮದ ಡಾ.ನಾ. ಸೋಮೇಶ್ವರ ಅವರು ತಮ್ಮ ಯಕ್ಷಪ್ರಶ್ನೆಯಲ್ಲಿ ಹೈಸ್ಕೂಲು ದಿನಗಳ ಸವಿ ಸವಿ ನೆನಪು…  ಎಂದು ಬರೆದಿದ್ದಾರೆ. ಒಮ್ಮೆ ಭೇಟಿಕೊಡಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು}

ಚಿತ್ರಕೃಪೆ : ಅಂತರಜಾಲ

Thursday, October 15, 2009

ಭೂಮಿಯೇನು ಒಲೆಯ ಮೇಲಿಟ್ಟ ಮಡಕೆಯೇ?


ಒಲೆಯೆಂಬುದು ಬಕಾಸುರ

ಇಕ್ಕಿದ್ದೆಲ್ಲವನ್ನೂ ಮುಕ್ಕಿ

ಕ್ಷಣಮಾತ್ರದಲ್ಲಿ ಬೂದಿ ಮಾಡಿ

ಮಲಗಿಬಿಡುತ್ತದೆ ತಣ್ಣಗೆ!



ಒಲೆಯ ಮೇಲೆ ಮಡಕೆ

ಮಡಕೆ ತುಂಬ ನೀರು

ನೀರೊಳಗೆ ಸಾಕಷ್ಟು ಕೂಳು

ಇದ್ದರಷ್ಟೆ ಚೆಂದ

ಹೊಟ್ಟೆಗೊಂದಿಷ್ಟು ತಣ್ಣಗೆ!



ಬರಿದೆ ಮಡಕೆ ಕಾಯ್ದೀತು ಎಷ್ಟು?

ಸಣ್ಣ ಶಬ್ದ ಎಲ್ಲೋ ಬಿರುಕು

ಅಲ್ಲಿ ಬರ ಇಲ್ಲಿ ನೆರೆ

ಅಲ್ಲಿ ತಳಮಳ ಇಲ್ಲಿ ಆಹಾಕಾರ

ಕಾಯ್ದು ಕಾಯ್ದು ಬ್ರಹ್ಮರಂಧ್ರ

ಸಿಡಿವನ್ನಗಂ

ತಣಿಯಬೇಕು ತಣ್ಣಗೆ!


ಚಿತ್ರಕೃಪೆ : ಅಂತರಜಾಲ

ಪರಿಸರ ಪ್ರೇಮ ಬೆಳೆಸಿಕೊಳ್ಳಲು ಯಾರ ನಿರ್ಬಂಧವೂ ಇಲ್ಲ

(ಹಿರಿಯರಾದ ಶ್ರೀ ಮಧುಸೂದನ ಪೆಜತ್ತಾಯ ಅವರು, ನನ್ನ ಬ್ಲಾಗಿನ ಇದುವರೆಗಿನ ಏಕೈಕ ಅತಿಥಿ ಬರಹಗಾರ. ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿದ್ದ 'ಕಾಗದದ ದೋಣಿ' ಇವರ ಆತ್ಮಕತೆಯ ಸರಣಿ. ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ ಮನಸ್ಸಿಗೆ ಮುದನೀಡುವಂತದ್ದು. ವೃತ್ತಿಯಿಂದ ಪ್ರಗತಿಪರ ಕಾಫಿ ಬೆಳೆಗಾರರಾದ ಶ್ರೀಯುತರು ಒಳ್ಳೆಯ ಬರಹಗಾರರು, ಮಾತುಗಾರರೂ, ಕೃಷಿ ಪಂಡಿತರೂ ಆಗಿದ್ದಾರೆ. ಈಗ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಒಂದಿಷ್ಟು ಒಳ್ಳೆಯ ಬರವಣಿಗೆಯನ್ನು ಆಗಾಗ ಮಾಡುತ್ತಿರುತ್ತಾರೆ. ಅದನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಂಡು ಸಂತೋಷ ಪಡುತ್ತಾರೆ. ಹಾಗೆ ಬಂದ ಈ ಮೇಲ್ ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಈ ಹಿಂದೆ ನನ್ನ ಬ್ಲಾಗಿನಲ್ಲಿ ಅವರ ಪೂರ್ವಾನುಮತಿಯೊಂದಿಗೆ ಪ್ರಕಟಿಸಿದ್ದೇನೆ.
ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!
ಇಂದು ನಾನು ಮಣ್ಣಿನ ದಾಸನಾದೆ!
ಈಗಲೂ ಮೊನ್ನೆ ಬಂದ ಈ ಮೇಲ್ 'ಬ್ಲಾಗ್ ಆಕ್ಷನ್ ಡೇ'ಗೆ ಪೂರಕವಾದ ವಿಷಯ ಅದರಲ್ಲಿ ಇರುವುದರಿಂದ ನಿಮ್ಮ ಮುಂದಿಡುತ್ತಿದ್ದೇನೆ.)

ಇಂದಿನ ಯುವಜನರಿಗೆ ಪರಿಸರದ ಅರಿವು ಮೂಡಿಸಲು ಶಾಲಾಕಾಲೇಜುಗಳಲ್ಲಿ ಸ್ವಲ್ಪ ಪ್ರಯತ್ನ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ!
ಇಂದಿನ ಯುವ ಪೀಳಿಗೆಯ ಕೆಲ ಮಂದಿಗೆ ಪ್ರಕೃತಿ, ವನ ಭೋಜನ ಮುಂತಾದುವೆಲ್ಲಾ ಒಂದು ಮನೋರಂಜನೆ. ಕೆಲವರಿಗೆ ಪಿಕ್ನಿಕ್ ಮಾಡಿ, ಪೇಪರ್ ಪ್ಲೇಟ್, ನೀರಿನ ಬಾಟಲಿ ಎಸೆದು ಬರುವ ಜಾಗ,
ಹಲವು ಜನರಿಗೆ ಫಾರಂ ಹೌಸ್ ಎಂದರೆ ಮೋಜಿನ ತಾಣ! ಇದು ಹೊಸಾ ಸಂಸ್ಕೃತಿ ಅಂತೆ!
ಹಲವು ಜನ ನನ್ನ ಪರಿಚಯಸ್ಥರು " ನಿಮ್ಮ ತೋಟಕ್ಕೆ ಬರುತ್ತೇವೆ. ಶಿಕಾರಿ ಮಾಡಲು ಬಿಡುತ್ತೀರಾ? ಸ್ವಲ್ಪ ಕುಡಿದು ರಿಲ್ಯಾಕ್ಸ್ ಮಾಡಬಹುದೆ? ನಿಮ್ಮಲ್ಲಿ ಶಿಕಾರಿ ಮಾಂಸದ ಅಡುಗೆ ಮಾಡಿಸಿ ಹಾಕುತ್ತೀರಾ? ಕಾರ್ಡ್ಸ್ ಆಡಬಹುದೇ? ಸಾಯಂಕಾಲ ಕ್ಯಾಂಫ್ ಫೈರ್ ಮಾಡಿ ಅದರ ಸುತ್ತ ನರ್ತಿಸಬಹುದೇ? ನಿಮ್ಮಲ್ಲಿ ಹೈ ವ್ಯಾಟ್ಟೇಜ್ ಮ್ಯೂಸಿಕ್ ಸಿಸ್ಟಂ ಇದೆಯೇ? ಡ್ರಿಂಕ್ಸ್ ನಾವೇ ತರುತ್ತೇವೆ " ಅನ್ನುತ್ತಾರೆ.
ಆಗ ನಾನು " ಕ್ಷಮಿಸಿ. ನಮ್ಮ ಹಳ್ಳಿಯ ಮನೆ ನಮ್ಮ ಕಾರ್ಯ ಕ್ಷೇತ್ರ. ನಾವು ಸಸ್ಯಾಹಾರಿಗಳು. ಶಿಕಾರಿ, ಕಾರ್ಡ್ಸ್ ಮತ್ತು ಡ್ರಿಂಕ್ಸ್ ನಮ್ಮಲ್ಲಿ ನಿಶಿದ್ಧ. ಕುಡಿದು ಕುಣಿಯುವ ಸಂಸ್ಕೃತಿ ನಮ್ಮಲ್ಲಿ ಇಲ್ಲ. ಸೂರ್ಯ ಹುಟ್ಟಿದಾಗ ಏಳುತ್ತೇವೆ. ಕೆಲಸ ಮಾಡುತ್ತೇವೆ. ಸೂರ್ಯ ಮುಳುಗಿದ ಮೇಲೆ ಮನೆಗೆ ಬಂದು ದಿನದ ಪೇಪರ್ ಓದಿ ಬೇಗನೇ ಸಸ್ಯಾಹಾರೀ ಊಟ ಮಾಡಿ ಮಲಗುತ್ತೇವೆ. ಬೆಳಗ್ಗೆ ಬೇಗಲೇ ಏಳುತ್ತೇವೆ. ತೋಟದಲ್ಲಿ ನನ್ನ ಪುಸ್ತಕ ಸಂಗ್ರಹ ಇದೆ. ನನ್ನಲ್ಲಿ ಒಳ್ಳೆಯ ಬೈನಾಕುಲರ್ ಇದೆ. ಪಕ್ಷಿವೀಕ್ಷಣೆ ಮಾಡಿ. ಚಾರಣ ಮಾಡಿ. ಎಲ್ಲಾ ಮರಗಳ ಗಿಡಗಳ ಹಕ್ಕಿಗಳ ಕನ್ನಡ ಮತ್ತು ತುಳು ಹೆಸರುಗಳನ್ನು ಬಲ್ಲ ಆಳು ಒಬ್ಬನನ್ನು ಜತೆಗೆ ಕಳುಹಿಸುವೆ. ಕೆಮೆರಾ ತನ್ನಿ. ಫೋಟೋ ತೆಗೆದುಕೊಳ್ಳಿ. ನದಿಯಲ್ಲಿ ಈಜು ಹೊಡೆಯಲು ಅಥವಾ ಮೀನುಗಾರಿಕೆ ಮಾಡಲು ನಮ್ಮಲ್ಲಿ ಅನುಮತಿ ಕೊಡುವುದಿಲ್ಲ. ಒಳ್ಳೆಯ ಜಮಖಾನ ಒಂದನ್ನು ಕೊಡುತ್ತೇವೆ. ಒಳ್ಳೆಯ ಮರಗಳ ನೆರಳಲ್ಲಿ ವಿಶ್ರಮಿಸಿ. ಅಲೇ ನಿದ್ರೆ ಕೂಡಾ ಮಾಡಬಹುದು. ಊಟ ತಿಂಡಿಯ ಸಮಯಕ್ಕೆ ಸರಿಯಾಗಿ ನಮ್ಮ ಮನೆಯಲ್ಲಿ ಹಾಜರಾಗಿ. ನಮ್ಮ ಸಸ್ಯ ಕ್ಷೇತ್ರ ನಮಗೆ ಒಂದು ಪವಿತ್ರವಾದ ಜಾಗ. ನಮ್ಮ ಮನೆ ಮತ್ತು ಮನಗಳನ್ನು ಒಂದು ಮಂದಿರ ಎಂದು ತಿಳಿದು ನಾವು ಹಳ್ಳಿಯಲ್ಲಿ ಬಾಳುತ್ತೇವೆ. ಪುಷ್ಕಳ ಊಟ, ತಿಂಡಿ, ಕಾಪಿ ಚಹಾ ಕೊಡುತ್ತೇವೆ. ನಮ್ಮ ಜೀವನ ರೀತಿ ಗಮನಿಸಿ. ನಮ್ಮ ಹಾಗೇ ನಮ್ಮ ಜತೆ ಬಾಳಿ. ಯಾವ ಕೆಲಸವನ್ನೂ ಮಾಡದೇ ಆರಾಮವಾಗಿ ನಮ್ಮ ಅತಿಥಿಗಳಾಗಿ ಬೇಕಷ್ಟು ದಿನ ನಮ್ಮಲ್ಲಿ ಇರಿ. ಕಾರ್ಮಿಕರ ಮತ್ತು ನೌಕರರ ಪರಿಚಯ ಮಾಡಿಕೊಳ್ಳಿ ಅವರಲ್ಲಿ ವಿಚಾರ ವಿನಿಮಯ ಮಾಡಿ. ನಮ್ಮ ಕೃಷಿ ಪದ್ಧತಿ ಮತ್ತು ನಮ್ಮ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಅರಿಯಿರಿ. ನಮ್ಮ ಸಾಂಪ್ರದಾಯಿಕ ಕೃಷಿ ಜೀವನ ವಿಧಾನವನ್ನು ನಾವು ಬಿಟ್ಟಿಲ್ಲ. ಕರೆಂಟು ಇದ್ದಾಗ ಟೀವಿ ಅಥವಾ ಫ್ಯಾನ್ ಉಪಯೋಗಿಸಬಹುದು. ನಮ್ಮಲ್ಲಿ ರೇಡಿಯೋ ಇದೆ. ವಿ. ಸಿ. ಡಿ. ಪ್ಲೇಯರ್ ಇನ್ನೂ ಇಟ್ಟಿಲ್ಲ. ಕರೆಂಟು ಹೋದಾಗ ನಾವು ಸೋಲಾರ್ ಲೈಟ್ ಉಪಯೋಗಿಸುತ್ತೇವೆ. ಸೀಮೆ ಎಣ್ಣೆ ದೀಪದ ಕಷ್ಟ ಇಲ್ಲ. ಸ್ನಾನಕ್ಕೆ ಸದಾ ಕಟ್ಟಿಗೆ ಒಲೆಯ ಬಿಸಿನೀರು ಸಿಗುತ್ತೆ. ಹೆಚ್ಚಿನ ಅಡುಗೆ ಕಟ್ಟಿಗೆಯ ಒಲೆಯಲ್ಲೇ ಮಾಡುತ್ತೇವೆ, ನೆಲದಲ್ಲೇ ಕುಳಿತು ಬಾಳೆ ಎಲೆಯಲ್ಲಿ ಉಣ್ಣುತ್ತೇವೆ. ಊಟ ತಿಂಡಿಗಳ ಬಗ್ಗೆ ದಾಕ್ಷಿಣ್ಯ ಬೇಡ. ಸಾಯಂಕಾಲ ಬ್ಯಾಡ್ಮಿಂಟನ್, ಕ್ಯಾರಂ, ಚೆನ್ನೆಮಣೆ, ಚೆಸ್ಸ್, ಪಗಡೇ ಆಟ, ಹಾವು ಏಣಿ ಆಟ ಅಥವಾ ವಾಲಿಬಾಲ್ ಆಡಬಹುದು. ಬೆಳಗ್ಗೆ ಮತ್ತು ಸಂಜೆ ಹೊತ್ತು ಪಕ್ಷಿಗಳ ಕಲರವ ಕೇಳಬಹುದು. ಮನೆಯಲ್ಲಿ ದನ ಕರು ಇವೆ. ನಾಯಿಗಳು ಇವೆ. ಅವುಗಳನ್ನು ನೋಡಿ ಸಂತಸ ಪಡಬಹುದು. ಹೆಚ್ಚಿನಂಶ ನಮ್ಮಲ್ಲಿ ಈಗ ಟೆಲಿಫೋನ್ ಕೆಡುವುದಿಲ್ಲ. ಡಯಲ್ ಅಪ್ ಉಪಯೋಗಿಸಿ ಲ್ಯಾಪ್ ಟಾಪ್ ಬಳಸ ಬಹುದು. ನಿಮಗೆ ಸ್ವಾಗತ!" ಅನ್ನುತ್ತಾ ಇದ್ದೆ.
ನಮ್ಮ ಜತೆ ವಾಸ ಮಾಡಲು ಕಳೆದ ೩೮ ವರುಷಗಳಲ್ಲಿ ಬೆರಳ ಎಣಿಕೆಯ ಮಂದಿ ಮಾತ್ರ ಬಂದರು. ಎರಡು ದಿನಗಳಲ್ಲೇ ವಾಪಸ್ ಹೊರಟರು. ಅವರಿಗೆ ನಮ್ಮಲ್ಲಿ " ಬೋರ್" ಆಗುತ್ತಂತೆ!
ನನಗೆ ನನ್ನ ಕೃಷಿ ಜೀವನದಲ್ಲಿ ಎಂದೂ ಬೋರ್ ಆಗಿಲ್ಲ. ಸಂತೋಷವಾಗೇ ಇದ್ದೆ. ಇಂದು ನಿವೃತ್ತನಾಗಿ ಪೇಟೆಯ ಕಾಂಕ್ರಿಟ್ ಗೂಡಿನಲ್ಲಿ ಕಷ್ಟದಿಂದ ವಾಸಿಸುತ್ತಾ ಇದ್ದೇನೆ. ನನಗೆ ಇಂದು ಡಾಕ್ಯ್ಟರು ಹತ್ತಿರ, ಕಾಫಿಯ ಕಾಡು ದೂರ!
ಕೃಷಿಕ್ಷೇತ್ರದ ನೆನಪುಗಳೊಂದಿಗೆ ಇಂದು ಕೂಡಾ ಸಂತಸವಾಗಿ ಕಾಲ ಕಳೆಯುತ್ತಾ ಇದ್ದೇನೆ.

Friday, October 09, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ -26

ಮಂಜಣ್ಣನ ಹೋಟೆಲ್
ಕುಂದೂರುಮಠದಲ್ಲಿ ಮಂಜಣ್ಣನ ಹೋಟೆಲ್ ಒಂದು ಆಡುಂಬೊಲವಿದ್ದಂತೆ! ಮಂಜಣ್ಣ ತನ್ನ ಮೊದಲನೆ ಹೆಂಡತಿಯನ್ನು ಊರಿನಲ್ಲಿಯೇ ಬಿಟ್ಟು ಬಂದಿದ್ದು ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದವನು. ನಂತರ ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಇನ್ನೊಂದು ಹುಡುಗಿಯನ್ನೂ ಮದುವೆಯಾಗಿ ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿದ್ದವನು. ಎರಡನೇ ಮದುವೆಯಾದ ಮೇಲೆ ಮೇಸ್ತ್ರಿ ಕೆಲಸಕ್ಕೆ ಗುಡ್‌ಬೈ ಹೇಳಿ, ಹೋಟೆಲ್ ಶುರುಮಾಡಿದ್ದ. ಮೊದಲ ಹೆಂಡತಿ ಊರಿನಲ್ಲಿದ್ದರೆ, ಎರಡನೆಯ ಹೆಂಡತಿಯ ಜೊತೆಯಲ್ಲಿ ಈತ ಹೋಟೆಲ್ ನಡೆಸುತ್ತಿದ್ದ. ಆತನ ಹೋಟೆಲ್ ಎಂದರೆ ಒಂದು ಗುಡಿಸಲು, ಒಂದೆರಡು ಕುರ್ಚಿಗಳು, ನಾಲ್ಕೈದು ಪಾತ್ರೆಗಳು, ಒಂದು ಸ್ಟವ್ ಮಾತ್ರ. ಅಷ್ಟರಲ್ಲೇ ವ್ಯಾಪಾರ ಶುರುಮಾಡಿ, ಒಂದೆರಡು ವರ್ಷದಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿಯನ್ನೂ ಹೊಂದಿದ್ದ.
ಕುಂದೂರುಮಠಕ್ಕೆ ಬರುತ್ತಿದ್ದವರಲ್ಲಿ ಹೆಚ್ಚಿನವರು ಮೆಳೆಯಮ್ಮನ ಭಕ್ತರಾಗಿದ್ದರಿಂದಲೂ ಹಾಗೆ ಬರುವವರು ಕುರಿ, ಕೋಳಿ ಬಲಿ ಕೊಟ್ಟು ಅಡುಗೆ ಮಾಡಿ, ಊಟ ಮಾಡಿ ಹೋಗುವುದಕ್ಕೆಂದೇ ಬರುವವರಾಗಿದ್ದರಿಂದಲೂ ಆತನ ಹೋಟೆಲ್ಲಿಗೆ ಊಟ ತಿಂಡಿಗೆ ಬರುತ್ತಿದ್ದವರು ತುಂಬಾ ಕಡಿಮೆ. ಬೆಳಿಗ್ಗೆ ವೇಳೆ ಬರುತ್ತಿದ್ದ ರಿಟರ್ನ್ ಬಸ್ಸಿನ ಕಂಡಕ್ಟರ್ ಮತ್ತು ಡ್ರೈವರ್ ಮಾತ್ರ ಆತನ ಪರ್ಮನೆಂಟ್ ಗಿರಾಕಿಗಳು. ಬೆಳಿಗ್ಗೆ ಹೊತ್ತು ಮಾತ್ರ ಸ್ವಲ್ಪ ಇಡ್ಲಿ, ಉಪ್ಪಿಟ್ಟು ಮಾಡುತ್ತಿದ್ದ. ಮಧ್ಯಾಹ್ನ ಚಿತ್ರಾನ್ನ ಮಾತ್ರ ಆತನ ಹೋಟೆಲ್ಲಿನಲ್ಲಿರುತ್ತಿದ್ದ ತಿಂಡಿಯಾಗಿರುತ್ತಿತ್ತು. ಇನ್ನುಳಿದಂತೆ ಟೀ ಮತ್ತು ಬೋಂಡಾಕ್ಕೆ ಮಾತ್ರ ಹೆಚ್ಚಿನ ಬೇಡಿಕೆ ಇತ್ತು. ಆತನ ಹೋಟೆಲ್ಲಿನ ಹಿಂದೆ ಕೂಗಳತೆಯ ದೂರದಲ್ಲಿದ್ದ ಸೇಂದಿ ಮತ್ತು ಸಾರಾಯಿ ಅಂಗಡಿಗೆ ಹೋಗುವವರೆಲ್ಲಾ ಮಂಜಣ್ಣನ ಹೋಟೆಲ್ಲಿನ ಮುಂದೆಯೇ ಹೋಗಬೇಕಾಗಿತ್ತು. ಹಾಗೆ ಹೋಗುವವರೆಲ್ಲಾ ಸಾಕಷ್ಟು ಬೋಂಡಾಗಳನ್ನು ಕಟ್ಟಿಸಿಕೊಂಡೇ ಹೋಗುತ್ತಿದ್ದರು. ಸ್ವತಃ ಮಂಜಣ್ಣನೇ ಸ್ವಲ್ಪ ದಿನ ಬ್ಲಾಕ್‌ನಲ್ಲಿ ಬೀರು, ಬ್ರ್ಯಾಂಡಿಯನ್ನು ಮಾರುತ್ತಿದ್ದ. ಒಂದು ಮಂಕರಿಯಲ್ಲಿ ಹೂವು ಹಣ್ಣು ಇಟ್ಟುಕೊಂಡು ಮಾರಲು ಬರುತ್ತಿದ್ದ, ಪಕ್ಕದ ಹಳ್ಳಿಯ ಹೆಂಗಸೊಬ್ಬಳು, ಮಂಕರಿಯ ಒಳಗೆ ಬೀರು ಬ್ರ್ಯಾ೦ಡಿಯನ್ನು ತಂದು ಮಾರುತ್ತಿದ್ದಳು! ಅವಳು ಮಂಜಣ್ಣನ ಕಳ್ಳವ್ಯಾಪಾರವನ್ನು ಬಂದ್ ಮಾಡಿಸುವಲ್ಲಿ ಅದ್ಹೇಗೋ ಯಶಸ್ವಿಯಾಗಿದ್ದಳು. ಆ ಕಾರಣಕ್ಕೆ ಅವಳನ್ನು ನೋಡಿದರೆ ಮಂಜಣ್ಣ ಬಾಯಿಗೆ ಬಂದಂತೆ ಬಯ್ಯುತ್ತಿದ್ದ!
ಕೆಲಸವಿಲ್ಲದೆ ಅಲೆಯುವವರಿಗೆ, ಹರಟೆ ಹೊಡೆಯುತ್ತಾ ಕಾಲಕಳೆಯಲಿಚ್ಚಿಸುವವರಿಗೆ, ಬಸ್ ಕಾಯುವವರಿಗೆ ಮಂಜಣ್ಣನ ಹೊಟೆಲ್ ಅನುಕೂಲವಾದ ಜಾಗದಲ್ಲಿತ್ತು. ಜಾತ್ರೆಯ ದಿನಗಳಲ್ಲಿ ಒಂದು ತಿಂಗಳ ಕಾಲ ಆತನ ಹೋಟೆಲ್ಲಿಗೆ ಮಾತ್ರ ತುಂಬಾ ಡಿಮ್ಯಾಂಡ್ ಇತ್ತು. ಆಗ ಕೆಲಸ ಮಾಡುವುದಕ್ಕೆಂದೇ ಒಂದಿಬ್ಬರನ್ನು ಬೇರೆಡೆಯಿಂದ ಕರೆದು ತರುತ್ತಿದ್ದ. ಬೇರೆ ಬೇರೆ ತಿಂಡಿಯನ್ನೂ ಮಾಡುತ್ತಿದ್ದ. ಕೆಲವೊಮ್ಮೆ ಕೆಲವು ಹಾಸ್ಟೆಲ್ ಹುಡುಗರೂ ಸಪ್ಲೇಯರ್ ಕೆಲಸ ಮಾಡಿದ್ದುಂಟು. ಅದು ಚಿಕ್ಕಯ್ಯನೋರ ತನಕ ಹೋಗಿ, ಅವರು ಮಂಜಣ್ಣಗೆ ಬಯ್ದು ‘ಹಾಸ್ಟೆಲ್ ಹುಡುಗರ ಕೈಯಲ್ಲಿ ಕೆಲಸ ಮಾಡಿಸಬೇಡ’ ಎಂದು ಹೇಳಿದ್ದರು.
ಮಂಜಣ್ಣನ ಹೊಟೆಲ್ ಹಾಸ್ಟೆಲ್ಲಿನ ಎಲ್ಲಾ ಹುಡುಗರಿಗೆ ಅತ್ಯಂತ ಆಪ್ತವಾದ ಸ್ಥಳ. ಕೈಯಲ್ಲಿ ದುಡ್ಡಿದ್ದಾಗ, ಇಡ್ಲಿ-ವಡೆ ತಿನ್ನುತ್ತಿದ್ದುದ್ದರಿಂದ ಅವನಿಗೇನೂ ಅವರಿಂದ ತೊಂದರೆಯಾಗುತ್ತಿರಲಿಲ್ಲ. ಹೊತ್ತು ಕಳೆಯಲು ಅಲ್ಲಿ ರೆಡಿಯೋ ಇತ್ತು. ಆಟ ಆಡಿಸಲು ಮಂಜಣ್ಣನ ಎರಡು ವರ್ಷದ ಮಗುವಿತ್ತು. ಬಂದು ಹೋಗುವವರನ್ನು ನೋಡುತ್ತಾ ರೇಡಿಯೋ ಕೇಳುತ್ತಾ ಕಾಲ ಕಳೆಯುವ ಆಸೆ ಹಾಸ್ಟೆಲ್ ಹುಡುಗರಿಗೆ ತುಸು ಹೆಚ್ಚಾಗಿಯೇ ಇತ್ತು. ಅದಕ್ಕಾಗಿ ಹೊತ್ತು ಗೊತ್ತಿಲ್ಲದೆ ಆತನ ಹೋಟೆಲ್ಲಿನಲ್ಲಿ ಜಮಾಯಿಸಿಬಿಡುತ್ತಿದ್ದರು.
ಒಮ್ಮೆ ಸಂಜೆಯ ವೇಳೆ ಹಾಸ್ಟೆಲ್ಲಿಗೆ ಇನ್‌ಸ್ಪೆಕ್ಷನ್‌ಗಾಗಿ ಬಿ.ಇ.ಒ. ಬಂದು ಹುಡುಗರೆಲ್ಲಿ ಎಂದು ಕೇಳಿದಾಗ ಮೊದಲಿದ್ದ ಒಬ್ಬ ವಾರ್ಡನ್‌ಗೆ ಏನು ಹೇಳಬೇಕೆಂದು ಗೊತ್ತಾಗದೇ ತಬ್ಬಿಬ್ಬಾಗಿದ್ದಾರೆ. ಆಗ ಧರ್ಮಣ್ಣನೇ, ‘ಇಂದು ದೇವಾಸ್ಥಾನದಲ್ಲಿ ವಿಶೇಷ ಪೂಜೆಯೇನೋ ಇತ್ತು ಅದಕ್ಕೆ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ’ ಎಂದು ಹೇಳಿ, ಅಲ್ಲಿದ್ದ ಒಬ್ಬ ಹುಡುಗನನ್ನು ಗುಟ್ಟಾಗಿ ಮಂಜಣ್ಣನ ಹೋಟೆಲ್ಲಿನ ಹತ್ತಿರ ಇದ್ದವರನ್ನೆಲ್ಲಾ ಕರೆದುಕೊಂಡು ಬರಲು ಕಳುಹಿಸಿದ್ದ. ವಾರ್ಡನ್ ಮಂಜಣ್ಣನ ಮೇಲೆ ರೇಗಿ ‘ಅಲ್ಲಿ ಹುಡುಗರನ್ನು ಸೇರಿಸಬೇಡಿ’ ಎಂದು ಹೇಳಿದ್ದಕ್ಕೆ ರೇಗಿದ್ದ ಮಂಜಣ್ಣ ‘ಅಯ್ಯೋ ಹೋಗಯ್ಯ, ಮೊದಲು ಹುಡುಗರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊ. ಅವರನ್ನು ಕಾಯುತ್ತಾ ಕುಳಿತುಕೊಳ್ಳುವುದಕ್ಕೆ ನನಗೇನು ಬೇರೆ ಕೆಲಸವಿಲ್ಲವೆ’ ಎಂದಿದ್ದ. ಆದರೆ ಮಂಜಣ್ಣ ಬೇರೆಯವರ ಬಳಿ ಹೇಳಿದಂತೆ, ‘ಹುಡುಗರು ಹೋಟೆಲ್ಲಿನಲ್ಲಿ ಇದ್ದರೆ, ಯಾವಾಗಲೂ ಬಿಜಿಯಾಗಿರುವ ಹೋಟೆಲ್ ಎಂದು ಜನ ಭಾವಿಸುತ್ತಾರೆ; ಬ್ಯುಸಿನೆಸ್ ಚೆನ್ನಾಗಿ ಆಗುತ್ತದೆ’ ಎಂಬುದು ಆತನ ಲೆಕ್ಕಾಚಾರ.
ಈ ಮಂಜಣ್ಣನ ಹೋಟೆಲ್ ಕೇವಲ ಕಾಲ ಕಳೆಯುವ ತಾಣವಾಗಿದ್ದರೂ, ಒಂದು ರೀತಿಯಲ್ಲಿ ಮನರಂಜನಾ ಸ್ಥಳವಾಗಿತ್ತು! ನೋಡಿ. ಒಮ್ಮೆ ಮಾತು ಮಾತಿಗೆ ಬೆಳೆದು, ಅದು ಎಲ್ಲಿಗೋ ತಿರುಗಿ, ‘ಎಣ್ಣೆಯಲ್ಲಿ ಬೇಯುತ್ತಿರುವ ಬೋಂಡವನ್ನು ಬರಿಗೈಯಿಂದ ತೆಗೆದುಕೊಂಡರೆ ಆ ಬೋಂಡ ತೆಗೆದುಕೊಂಡವನಿಗೆ ಫ್ರೀ’ ಎಂದು ಮಂಜಣ್ಣ ಸವಾಲು ಹಾಕಿದ. ಆಗ ನಮ್ಮ ಎಂ.ಕೆ.ಸ್ವಾಮಿ ಲೀಲಾಜಾಲವಾಗಿ, ಕುದಿಯುತ್ತಿರುವ ಎಣ್ಣೆಯ ಬಾಂಡಲೆಯಲ್ಲಿ ಸ್ವಲ್ಪ ದಡಕ್ಕೆ ಬಂದಿದ್ದ ಬೋಂಡಾವನ್ನು ಬರಿಗೈಯಿಂದ ಎತ್ತಿ ತನ್ನದಾಗಿಸಿಕೊಂಡ. ಅದನ್ನು ಅನುಸರಿಸಿ ಇನ್ನೊಂದಿಬ್ಬರೂ ಪ್ರಯತ್ನ ಪಟ್ಟು, ಅಲ್ಪ ಸ್ವಲ್ಪ ಕೈಸುಟ್ಟುಕೊಂಡರೂ ಬೋಂಡಾ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸ್ವಾಮಿಯಂತೂ ಮೂರ‍್ನಾಲ್ಕು ಬೋಂಡಾಗಳನ್ನು ಕಬಳಿಸಿದ್ದ. ಇಷ್ಟಕ್ಕೆ ಹೆದರಿದ ಮಂಜಣ್ಣ ಆ ಸವಾಲನ್ನು ಹಿಂತೆಗೆದುಕೊಳ್ಳಬೇಕಾಯಿತು.
ಈ ಮಂಜಣ್ಣನದು ಒಂದು ಲಡಕಾಸು ಸೈಕಲ್ ಇತ್ತು. ಅದನ್ನು ಹತ್ತಿ ಓಡಾಡಿಸುವುದೆಂದರೆ ನಮಗೆಲ್ಲಾ ಭಾರಿ ಮಜ. ಅದರಿಂದ ನಮಗೆ ಇನ್ನೊಂದು ಉಪಯೋಗವೂ ಇತ್ತು. ಬೇಸಿಗೆಯಲ್ಲಿ ಹಾಸ್ಟೆಲ್ಲಿಗೆ ಬೇಕಿದ್ದ ನೀರನ್ನು ಮೆಳೆಯಮ್ಮನ ಗುಡಿಯ ಬಳಿಯಿದ್ದ ಬೋರ್‌ವೆಲ್‌ನಿಂದ ತರಬೇಕಾಗಿತ್ತು. ಆಗೆಲ್ಲಾ, ದಿನಾ ಹತ್ತು ಜನ ಹುಡುಗರು ನೀರು ತಂದು ತುಂಬಿಸಬೇಕಾಗಿತ್ತು. ಅದಕ್ಕೆ ಮಂಜಣ್ಣ ತನ್ನ ಸೈಕಲ್ಲನ್ನು ಫ್ರೀಯಾಗಿ ಒದಗಿಸುತ್ತಿದ್ದ. ‘ಪಾಪ. ಎಳೆಯ ಹುಡುಗರು. ಅವರ ಕೈಯಲ್ಲಿ ನೀರು ಹೊರಿಸುತ್ತಾರೆ. ಸೈಕಲ್ ಮೇಲೆ ತಂದುಕೊಳ್ಳಲಿ ಬಿಡಿ’ ಎಂದು ಕೇಳಿದವರ ಹತ್ತಿರ ಹೇಳುತ್ತಿದ್ದ. ಅದರಲ್ಲಿ ಆತನ ಸ್ವಾರ್ಥವೂ ಇತ್ತು. ಹಾಗೆ ನೀರುತರುತ್ತಿದ್ದ ಹುಡುಗರ ಕಡೆಯಿಂದ ತನ್ನ ಹೋಟೆಲ್ಲಿಗೆ ಬೇಕಾದಷ್ಟು ನೀರನ್ನು ತರಿಸಿಕೊಳ್ಳುತ್ತಿದ್ದ! ಸ್ವತಃ ತಾನೇ ತನ್ನ ಸೈಕಲ್‌ನ್ನು ಬಿಡಿಬಿಡಿಯಾಗಿ ಬಿಚ್ಚಿ ರಿಪೇರಿ ಮಾಡಿಕೊಳ್ಳುತ್ತಿದ್ದ ಆತನಿಗೆ ಅದನ್ನು ರಿಪೇರಿ ಮಾಡಿಸುವ, ಅದಕ್ಕೆ ಖರ್ಚು ಮಾಡುವ ಭಯವಿರಲಿಲ್ಲ.

ಮುಂದಿನವಾರ ಮಂಜಣ್ಣನ ಹಿರೋಮೆಜೆಸ್ಟಿಕ್ ಸವಾರಿ! (ನನ್ನ ಹೈಸ್ಕೂಲು ದಿನಗಳು ಪುಸ್ತಕದ ಕೊನೆಯ ಕಂತು)

ಚಂದನ ವಾಹಿನಿ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಡಾ.ನಾ.ಸೋಮೇಶ್ವರ ಅವರು 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಅವಲೋಕನವನ್ನು ತಮ್ಮ ಯಕ್ಷಪ್ರಶ್ನೆಯಲ್ಲಿ ಮಾಡಿರುತ್ತಾರೆ. ಅದನ್ನು ಓದಲು   ಹೈಸ್ಕೂಲು ದಿನಗಳ ಸವಿ ಸವಿ ನೆನಪು… ಕ್ಲಿಕ್ಕಿಸಿ.

Monday, October 05, 2009

ಕವಿಚಕ್ರವರ್ತಿಯಾಗಿ ರನ್ನ: ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 3

ಸುದೀರ್ಘ ಪಯಣವಾದರೂ ರನ್ನನಿಗೆ ಬೇಸರವಾಗಲಿಲ್ಲ. ಜೊತೆಯಲ್ಲಿ ಅತ್ತಿಮಬ್ಬೆ ಜೈನಧರ್ಮದ ತತ್ವಗಳನ್ನು, ಆಚಾರ್ಯಪುರುಷರ ಬಗೆಗಿನ ಕಥಗೆಳನ್ನು ಹೇಳುತ್ತಾ ನಡೆಯುತ್ತಿದ್ದಳು. ಹೀಗೆ ದಾರಿ ಸಾಗುವಾಗಲೇ ರನ್ನನ ತಲೆಯಲ್ಲಿ ಮಹಾಕಾವ್ಯವೊಂದರ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದವು. ಗುರು ಅಜಿತಸೇನಾಚಾರ್ಯರು ನೆನಪಿಗೆ ಬರುತ್ತಿದ್ದರು. ಪಂಪನ ಆದಿಪುರಾಣ ಕಣ್ಣಮುಂದೆ ಬರುತ್ತಿತ್ತು. ತಾನೂ ಒಬ್ಬ ತೀರ್ಥಂಕರನ ಚರಿತ್ರೆಯನ್ನು ಆಧರಿಸಿದ ಮಹಾಕಾವ್ಯವೊಂದನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದ. ಸ್ವತಃ ಅತ್ತಿಮಬ್ಬೆಯೇ ಆ ಕಾವ್ಯಕ್ಕೆ ಸ್ಫೂರ್ತಿಯಾಗಿದ್ದಳು.
ಒಂದುದಿನ ಅತ್ತಿಮಬ್ಬೆಯ ನೇತೃತ್ವದಲ್ಲಿ ತೈಲಪ ಚಕ್ರವರ್ತಿಯ ಬೇಟಿಯಾಯಿತು. ತೈಲಪನು ಪರಮಸಂತೋಷದಿಂದಲೇ ರನ್ನನಿಗೆ ಸ್ವಾಗತ ಬಯಸಿದ. ಯಾವ ತೊಂದರೆಯೂ ಇಲ್ಲದೆ ರನ್ನನಿಗೆ ರಾಜಾಶ್ರಯ ದೊರೆಯಿತು. ಚಕ್ರವರ್ತಿಯ ಸೌಜನ್ಯ, ಕವಿಜನಪ್ರೀತಿ, ಅತ್ತಿಮಬ್ಬೆಯ ಬೆಗಗಿನ ಗೌರವ ಇವೆಲ್ಲವೂ ರನ್ನನಲ್ಲಿ ತೈಲಪನ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಕೆಲವೇ ದಿನಗಳಲ್ಲಿ ‘ಅಜಿನಾಥಪುರಾಣ’ ಎಂಬ ಮಹಾಕಾವ್ಯದ ರಚನೆಗೆ ರನ್ನ ಕೈಹಾಕಿದ. ಯಾವುದೇ ಆತಂಕವಿಲ್ಲದ ರಾಜಾಶ್ರಯ, ರಾಜನ ಸ್ನೇಹ-ಪ್ರೀತಿ, ಅತ್ತಿಮಬ್ಬೆಯ ಮಾತೃವಾತ್ಸಲ್ಯ, ಮನೆಯಲ್ಲಿ ತನ್ನಿಚ್ಛೆಯನರಿತು ನಡೆಯುವ ‘ದೇಶಭಕ್ತಿ ಪತಿಭಕ್ತಿಗಳೇ ಆಭರಣಗಳಾಗಿ ಧರ್ಮದಲ್ಲಿ ನಿಷ್ಠೆಯುಳ್ಳವರಾದ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಪತ್ನಿಯರು, ರಾಯ ಮತ್ತು ಅತ್ತಿಮಬ್ಬೆ (ಚಾಮುಂಡರಾಯನ ನೆನಪಿಗಾಗಿ ಮಗನಿಗೆ ರಾಯ ಎಂದೂ, ಅತ್ತಿಮಬ್ಬೆಯ ನೆನಪಿಗಾಗಿ ಮಗಳಿಗೆ ಅತ್ತಿಮಬ್ಬೆ ಎಂದೂ ಹೆಸರಿನ್ನಿಟ್ಟಿದ್ದನು) ಎಂಬ ಮುದ್ದಾದ ಮಕ್ಕಳು ಇವರೆಲ್ಲರ ನಡುವೆ ರನ್ನನ ಕಾವ್ಯರಚನೆ ಯಾವುದೇ ಆತಂಕವಿಲ್ಲದೆ ನಡೆದು ದಡ ಮುಟ್ಟಿತು. ಒಂದು ಶುಭದಿನ ರಾಜಸಭೆಯಲ್ಲಿ ಲೋಕಾರ್ಪಣವೂ ಆಯಿತು.
ಕೆಲವೇ ದಿನಗಳಲ್ಲಿ ಅದರ ಪ್ರತಿಗಳನ್ನು ಮಾಡಿಸಿ ಎಲ್ಲಡೆ ಹಂಚಲಾಯಿತು. ಕಾವ್ಯ ಜನಪ್ರಿಯವೂ ಆಯಿತು. ರನ್ನನಂತಹ ಮಹಾಕವಿಯು ನನ್ನ ಆಸ್ಥಾನದಲ್ಲಿರುವುದು ನನಗೆ ಹೆಮ್ಮೆಯೆಂದು ಭಾವಿಸಿದ ತೈಲಪ ರನ್ನನಿಗೆ ‘ಕವಿಚಕ್ರವರ್ತಿ’ ಎಂಬ ಬಿರುದನ್ನು ದಯಪಾಲಿಸಿ ಸನ್ಮಾನಿಸಿದನು. ತನ್ನ ಕಾವ್ಯಕ್ಕೆ ದೊರೆತ ಜನಮನ್ನಣೆ, ಅದರ ರಚನೆಗೆ ದೊರೆತ ತೈಲಪನ ಸಹಕಾರ, ಪ್ರೋತ್ಸಾಹ ನಂತರ ತೈಲಪನ ಔದಾರ್ಯ ಇವೆಲ್ಲವೂ ರನ್ನನ ಮನಸ್ಸಿನಲ್ಲಿ ನೆಲೆಯೂರಿದ್ದವು. ತೈಲಪ ಮಹಾಚಕ್ರವರ್ತಿಯಾಗಿ, ಮಹಾಪುರುಷನಾಗಿ ಕಂಡಿದ್ದ. ಒಂದು ಮಾಹಕೃತಿ ಭುವನದ ಭಾಗ್ಯದಿಂದಾಗಿ ಒಬ್ಬ ಕವಿಯಿಂದ ಜನ್ಮ ತಾಳುತ್ತದೆ. ಅದು ಮಹಾಘಟನೆ. ಅಂತಹ ಮಹಾಘಟನೆ ಸಂಭವಿಸುವುದಕ್ಕೆ ತೈಲಪನಂತಹ ಸಾಹಿತ್ಯಪ್ರಿಯ, ಕವಿಜನಪ್ರಿಯ ಚಕ್ರವರ್ತಿಗಳ ಕೊಡುಗೆ ಅನನ್ಯ. ತೈಲಪನ ಮಗನಾದ ಸತ್ಯಾಶ್ರಯನೂ ಅಷ್ಟೆ, ರನ್ನನಲ್ಲಿ ಗೌರವ ಪ್ರೀತಿಯುಳ್ಳವನಾಗಿದ್ದನು. ತೈಲಪ ತನಗೆ ಮಾಡಿದ ಸಹಾಯಕ್ಕಾಗಿ ರನ್ನ ತೈಲಪನ ಹೆಸರಿನಲ್ಲಿ ‘ಚಕ್ರೇಶ್ವರ ಚರಿತ್ರೆ’ ಪ್ರಶಸ್ತಿಕಾವ್ಯವನ್ನೂ ಬರೆದು ಪ್ರಸ್ತುತ ಪಡಿಸಿದ.
ಹೀಗೆ ತನ್ನ ಸಾಹಿತ್ಯಿಕ ಹಾಗೂ ಸಾಂಸಾರಿಕ ಜೀವನವನ್ನು ಯಶಸ್ವಿಯಾಗಿ ಕಳೆಯುತ್ತಿದ್ದ ರನ್ನನಿಗೆ, ಚಾಲುಕ್ಯ ಚಕ್ರವರ್ತಿಗಳ ಇತಿಹಾಸವೂ ಆಸಕ್ತಿದಾಯಕ ವಿಷಯವಾಗಿ ಕಂಡಿತು. ಬದಾಮಿಯಲ್ಲಿ ಪ್ರಾರಂಭವಾಗಿ, ರಾಷ್ಟ್ರಕೂಟರಿಂದ ಹಿನ್ನಲೆಗೆ ಸರಿದು, ಮತ್ತೆ ಕಲ್ಯಾಣದಲ್ಲಿ ತೈಲಪನ ಮುಖೇನ ಪುನರುತ್ತಾನಗೊಂಡಿತ್ತು ಚಾಲುಕ್ಯ ವಂಶ. ತೈಲಪನ ಮಗ ಸತ್ಯಾಶ್ರಯ ಇರಿವೆಬೆಡಂಗನೆಂದೆ ಖ್ಯಾತಿವೆತ್ತು ತನ್ನ ತಂದೆಯ ನಂತರ ಚಕ್ರವರ್ತಿಯಾಗಿದ್ದ. ತಂದೆಗೆ ತಕ್ಕ ಮಗನಾಗಿದ್ದ, ತಾನೂ ಕವಿಜನಪ್ರಿಯನಾಗಿದ್ದ. ಸಾಹಸಪ್ರಿಯನೂ ಆಗಿದ್ದ. ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ತನ್ನ ರಾಜ್ಯವನ್ನು ವಿಸ್ತರಿಸಿ ಬಲಪಡಿಸಿದ್ದ. ರನ್ನನಲ್ಲಿ ಮೊದಲಿನಂತೆ ಗೌರವವಾಗಿ ನಡೆದುಕೊಳ್ಳುತ್ತಿದ್ದ. ಆ ಸಂದರ್ಭದಲ್ಲಿ ರನ್ನನಿಗೆ ಸತ್ಯಾಶ್ರಯನನ್ನು ನಾಯಕನನ್ನಾಗಿ ಮಾಡಿಕೊಂಡು ಕಾವ್ಯವೊಂದನ್ನು ಬರೆಯುವ ಆಸೆ ಮೊಳಕೆಯೊಡೆಯಿತು. ಪೂರ್ವದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಪೊನ್ನನ ಭವನೈಕರಾಮಾಭ್ಯುದಯ ಕಾವ್ಯಗಳು ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದವು. ಅದರಂತೆ ರನ್ನನೂ ತನ್ನ ಆಶ್ರಯದಾತನ ಮಗನೂ, ಸ್ವತಃ ಆಶ್ರಯದಾತನೂ ಆದ ಸತ್ಯಾಶ್ರಯನನ್ನು ಮಹಾಭಾರತದ ಸಾಹಸಭೀಮನಿಗೆ ಹೋಲಿಸಿ, ಸಾಹಸಭೀಮವಿಜಯ ಎಂಬ ಮಹಾಕಾವ್ಯದ ರಚನೆಗೆ ಕೈಹಾಕಿದ. ಆದರೆ ಸಂಪ್ರದಾಯವನ್ನು ಮುರಿದು ತನ್ನದೇ ಆದ ಕಾವ್ಯಶೈಲಿಯನ್ನು ರನ್ನ ರೂಢಿಸಿಕೊಂಡಿದ್ದ. ಆಗಲೂ ಪಂಪನ ವಿಕ್ರಮಾರ್ಜುನ ವಿಜಯ ಮಹಾಕಾವ್ಯ ಜನಪ್ರಿಯತೆಯ ತುಟ್ಟತುದಿಯಲ್ಲಿತ್ತು. ಕೇವಲ ನಾಯಕ ಅರ್ಜುನನ ಬದಲು ಭೀಮ ಎಂದಾದರೂ, ಒಟ್ಟು ಕಥೆ ಮಹಾಭಾರತವೇ ಆಗುತ್ತಿತ್ತು. ಪಂಪನ ಭಾರತ ಜನಪ್ರಿಯತೆಯ ತುಟ್ಟತುದಿಯಲ್ಲಿದ್ದಾಗ ತಾನೂ ಅದನ್ನೆ ಮರುಸೃಷ್ಟಿ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದನ್ನು ಮನಗಂಡಿದ್ದ ರನ್ನ ಸಂಕ್ಷಿಪ್ತವೂ ನವ್ಯವೂ ಆದ ಶೈಲಿಯನ್ನು ಮೈಗೂಡಿಸಿಕೊಂಡು ಸಿಂಹಾವಲೋಕನ ಕ್ರಮದಲ್ಲಿ ‘ಸಾಹಸಭೀಮವಿಜಯ’ವನ್ನು ಬರೆದು ಮುಗಿಸಿದ. ಇಡೀ ಸಾರಸ್ವತ ಲೋಕವೇ ಕವಿಚಕ್ರವರ್ತಿಯಾದ ರನ್ನನ ಈ ಕೃತಿಯನ್ನು ಸಂಭ್ರಮದಿಂದ ಸ್ವಾಗತಿಸಿತು.
ಅಂದಿನ ಕಾಲಕ್ಕೆ ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದ ಬಳೆಗಾರ ವೃತ್ತಿಯ ಕುಟುಂಬದಲ್ಲಿ ಹುಟ್ಟಿ, ಸ್ವಪ್ರಯತ್ನದಿಂದ ಪ್ರಕಾಶಿತನಾಗಿ, ಕನ್ನಡ ಜನತೆಯ ಪ್ರೀತಿಯ ಮಗನಾಗಿ ಬೆಳೆದ ರನ್ನಮಯ್ಯ, ಮಹಾಕವಿಯಾಗಿ, ಕವಿಚಕ್ರವರ್ತಿಯಾಗಿ, ಕವಿರತ್ನನಾಗಿ, ಕವಿಮುಖಚಂದ್ರನಾಗಿ ನೂರುವರ್ಷಗಳ ತುಂಬು ಜೀವನ ನಡೆಸಿ ಅಸ್ತಂಗತನಾಗಿದ್ದಾನೆ. ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚತುರ್ಮುಖ, ಉಭಯಕವಿ ಮೊದಲಾದ ಬಿರುದುಗಳನ್ನು ಧರಿಸಿ, ಕನ್ನಡ ಕಾವ್ಯಲೋಕದಲ್ಲಿ ಅಮರನಾಗಿದ್ದಾನೆ. ಹಲವಾರು ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾನೆ. ಆತನ ‘ಸಾಹಸಭೀಮವಿಜಯ’ ಗದಾಯುದ್ಧ’ ಎಂಬ ಹೆಸರಿನಲ್ಲಿ ಚಿರನೂತನವಾಗಿ ಇಂದಿಗೂ ಕಾವ್ಯಾಸಕ್ತರನ್ನು ಆಕರ್ಷಿಸುತ್ತಾ ಕೆರಳಿಸುತ್ತಾ ಉಳಿದುಬಂದಿದೆ.

ಮೊದಲ ಭಾಗ ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 1

ಎರಡನೇ ಭಾಗ ಶ್ರವಣಬೆಳಗೊಳದಲ್ಲಿ ರನ್ನ - ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 2