
ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿರುವ 'ಶ್ರೀ ಕವಿರನ್ನ' ಎಂಬ ಕನ್ನಡ ಲಿಪಿ. ಇದರ ಎದುರಿಗೆ 'ಚಾವುಂಡರಾಯ' ಎಂಬ ಬರಹವಿದೆ. ಈ ಲಿಪಿವಿನ್ಯಾಸ ಹತ್ತನೇ ಶತಮಾನದ ಲಿಪಿಯನ್ನೇ ಹೋಲುವುದರಿಂದ ಸ್ವತಃ ರನ್ನ ಮತ್ತು ಚಾವುಂಡರಾಯರೇ ಇದನ್ನು ಬರೆದಿರಬಹುದು ಎಂದು ನಂಬಲಾಗಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿನಮಗೆ ಸ್ವಾತಂತ್ರ್ಯ ಬಂದಿದ್ದು ೧೯೪೭ರಲ್ಲಿ. ಅಲ್ಲಿಗೆ ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಮದುವೊಳಲು ಎಂಬ ಊರಿನಲ್ಲಿ ರನ್ನನ ಜನನ. ಈಗ ಮುಧೋಳ್ ಎಂಬ ಹೆಸರಿನಿಂದ ಗುರುತಿಸುವ ಅಂದಿನ ಮುದುವೊಳಲು ಘಟಪ್ರಭ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ, ತೊರೆಗೆರೆಗೆ ಉತ್ತರಕ್ಕೂ ಇದ್ದ ಬೆಳಗುಲಿ-೫೦೦ ಎಂಬ ಸೀಮೆಯಲ್ಲಿ ಜಂಬುಖಂಡಿ ಪ್ರಾಂತ್ಯದಲ್ಲಿತ್ತು. ರನ್ನನ ತಂದೆ ‘ಜಿನೇಂದ್ರಪಾದ ಕಮಲಭ್ರಮರ ಜಿನವಲ್ಲಭ’. ತಾಯಿ ‘ಪತಿವ್ರತಾಗುಣದಿಂದ ಪ್ರಸಿದ್ಧಳಾದ ಅಬ್ಬಲಬ್ಬೆ’. ರೇಚಣ ಮತ್ತು ಮಾರಮಯ್ಯ ಎಂಬ ಇಬ್ಬರು ಅಣ್ಣಂದಿರು ರನ್ನನಿಗಿದ್ದರು. ಜಿನಧರ್ಮಾವಲಂಬಿಯಾಗಿದ್ದ ಈ ಕುಟುಂಬದವರದು ಬಳೆಗಾರ ವೃತ್ತಿ. ಬಳೆಗಳನ್ನು ಕೊಂಡು ತಂದು ಹೊತ್ತು ಮಾರಿ ಬಂದ ಲಾಭದಿಂದ ಜೀವನ ಸಾಗಿಸಬೇಕಾದ ಪರಿಸ್ಥಿತಿ. ಸಹಜವಾಗಿಯೇ ಬಡತನವಿತ್ತು. ವಿದ್ಯೆಯೆಂಬುದು ಕನಸಿನ ಮಾತಾಗಿತ್ತು.
(ಬಂಕಾಪುರದಲ್ಲಿರುವ ಪ್ರಾಚೀನ ದೇವಾಲಯ)
ಬಾಲಕ ರನ್ನನಿಗೆ ವಿದ್ಯೆ ಕಲಿಯಬೇಕೆಂಬ ಅದಮ್ಯ ಬಯಕೆ. ಮನೆಯಲ್ಲಿ ವಾತಾವರಣ ಅದಕ್ಕೆ ಪೂರಕವಾಗಿರಲಿಲ್ಲ. ಆತನೂ ಬಳೆ ವ್ಯಾಪಾರಕ್ಕೆ ಇಳಿಯಲೇಬೇಕಾದ ಪರಿಸ್ಥಿತಿ. ಅಂತಹ ಸಂದರ್ಭದಲ್ಲಿ ರನ್ನ ಹೇಗೋ ಬಂಕಾಪುರದಲ್ಲಿದ್ದ ಜೈನಗುರುಕುಲದ ಜಾಡು ತಿಳಿದು ಮನೆಗೆ ತಿಳಿಸಿ ವಿದ್ಯಾಭ್ಯಾಸದ ಕನಸು ಹೊತ್ತು ಹೊರಟೇಬಿಟ್ಟ. ಬಂಕಾಪುರ ತಲುಪಿದಷ್ಟು ಸುಲಭವಾಗಿರಲಿಲ್ಲ ವಿದ್ಯೆ ಕಲಿಯುವುದು. ಆದರೆ ರನ್ನನ ವಿದ್ಯೆ ಕಲಿಯಬೇಕೆಂಬ ಹಸಿವು ಅವನನ್ನು ಸುಮ್ಮನೆ ಕೂರಿಸಲಿಲ್ಲ. ಗುರುಕುಲದ ಬಾಗಿಲು ಬಡಿದು ನಿಂತ ರನ್ನನನ್ನು ಅಲ್ಲಿನ ವಿದ್ಯಾರ್ಥಿಸಮೂಹ ತಿರಸ್ಕಾರದಿಂದಲೇ ಕಂಡಿತು. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಬಾಲಕ ರನ್ನ ಹೆದರಿಕೊಳ್ಳುವಂತಹ ಸನ್ನವೇಶ ಸೃಷ್ಟಿಯಾಯಿತು.
“ಯಾರು ನೀನು?”
“ವಿದ್ಯಾರ್ಥಿ”
“ಹೆಸರೇನು?”
“ರನ್ನಮಯ್ಯ”
“ಓಹೋ, ರನ್ನ! ನಿನ್ನ ತಂದೆ ತಾಯಿ ಯಾರು”
“....”
“ಏನು ವೃತ್ತಿ”
“ಬಳೆಗಾರರ ವೃತ್ತಿ”
“ಬಳೆಗಾರ ವೃತ್ತಿ ಮಾಡಿಕೊಂಡಿರುವುದನ್ನು ಬಿಟ್ಟು ವಿದ್ಯೆ ಕಲಿಯಬೇಕೆಂಬ ಚಪಲವೋ”
“...”
“ಪಂಡಿತ ರನ್ನಮಯ್ಯ ಅನ್ನಿಸಿಕೊಳ್ಳುವ ಚಪಲವೋ”
“...”
“ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನು ಬಳೆಯ ಮಲಾರವೆ?”
“ವೃತ್ತಿ ಹೊಟ್ಟೆ ಪಾಡಿನದಾಯಿತು. ಕಲಿಯಬೇಕೆಂಬುದು ನನ್ನ ಆತ್ಮದ ಹಸಿವು”
“ಓಹೋ, ಆತ್ಮ ಪರಮಾತ್ಮ ಎಲ್ಲ ತಿಳಿದಿದ್ದೀಯೋ. ಹೋಗಯ್ಯಾ ಹೋಗು. ಬಳೆ ಮಾರಿಕೊಂಡೇ ಜೀವನ ನಡೆಸು. ನೀನು ವಿದ್ಯೆ ಕಲಿಯಲು ಬಂದರೆ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ. ಹೋಗಯ್ಯಾ”
ಹೀಗೇ ಮೂದಲಿಕೆ ಮುಂದುವರೆಯಿತು.
ರನ್ನ ಹತಾಶನಾದ. ಗುರುಕುಲದಿಂದ ಹೊರಗೆ ಬಂದು ಆಕಾಶದತ್ತ ಮೊಗ ಮಾಡಿ ನಿಂತ. ಯಾರೋ ಕೂಗುತ್ತಿದ್ದಾರೆ ಅನ್ನಿಸಿ ಮೊಗತಿರುಗಿಸಿ ನೋಡಿದ. ವಯಸ್ಸಿನಲ್ಲಿ ತನಗಿಂತ ಸ್ವಲ್ಪ ದೊಡ್ಡವನಾದ ಹಾಗೂ ತೇಜೋವಂತನಾದ ಒಬ್ಬ ಯುವಕ ತನ್ನತ್ತ ಬರುತ್ತಿದ್ದ.
“ನಿನ್ನ ಹೆಸರು ರನ್ನಮಯ್ಯನೆಂದೆ, ಅಲ್ಲವೆ?” ನಗುತ್ತ ಕೇಳಿದ ಆ ಯುವಕ.
“ಹೌದು”
“ವಿದ್ಯೆ ಕಲಿಯಬೇಕೆಂಬುದು ಕೇವಲ ಕ್ಷಣಿಕ ಆಕರ್ಷಣೆಯೋ ಹೇಗೆ?”
“ಆಗಲೇ ಹೇಳಿದೆನಲ್ಲ. ಅದು ನನ್ನ ಆತ್ಮದ ಹಸಿವು”
“ಉದ್ದೇಶ”
“ಜ್ಞಾನಾರ್ಜನೆ, ಕಾವ್ಯಾಭ್ಯಾಸ, ಕಾವ್ಯರಚನೆ...”
“ಓಹೋ ನಿನ್ನ ದೃಷ್ಟಿ ಹಿಮಾಲಯದತ್ತ!”
“ಯಾಕಾಗಬಾರದು?”
“ಹೌದು ಯಾಕಾಗಬಾರದು?! ಆಗಲಿ. ಆದರೆ ನಿನಗಿಲ್ಲಿ ಪ್ರವೇಶವೇ ದೊರಕುತ್ತಿಲ್ಲವಲ್ಲ”
“ನನಗೆ ಪ್ರತಿಭೆಯಿಲ್ಲವೆಂದಲ್ಲ. ನನ್ನ ಜಾತಿಯ ಕಾರಣದಿಂದ”
“ಆದ್ದರಿಂದಲೇ ಇದು ನಿನಗೆ ಪ್ರತಿಕೂಲ ವಾತಾವರಣ. ಕಲಿಯಲೇಬೇಕೆಂಬ ಹಸಿವು ನಿನಗಿದ್ದುದೇ ಆದರೆ ಶ್ರವಣಬೆಳಗೊಳಕ್ಕೆ ಹೋಗು. ಅಲ್ಲಿ ಅಜಿತಸೇನಾಚಾರ್ಯರೆಂಬ ಮಹಾಗುರುಗಳಿದ್ದಾರೆ. ಬಹುಶಃ ಅವರು ನಿನ್ನ ಕೈ ಹಿಡಿಯಬಹುದು.” ಆತ್ಮವಿಶ್ವಾಸದಿಂದ ನುಡಿದ ಯುವಕನನ್ನು ರನ್ನ ಸಂತೋಷ ಆಶ್ಚರ್ಯದಿಂದ ನೋಡಿದ.
“ಅಲ್ಲಿ ನನಗಾರು ಆಶ್ರಯ ಕೊಡುವವರು”
“ಸಮರಪರಶುರಾಮನಾದ ಚಾಮುಂಡರಾಯನಿದ್ದಾನೆ. ಕೊನೆಗೆ ಎಲ್ಲರನ್ನೂ ಸಲಹುವ ಆ ಬಾಹುಬಲಿಯಿದ್ದಾನೆ”
“ಸಂತೋಷ ಪರಮಸಂತೋಷ! ನಿಮ್ಮ ನಾಮಧೇಯ ತಿಳಿಯಬಹುದೆ”
“ಅದಕ್ಕೇನಂತೆ! ನನ್ನ ಹೆಸರು ಲಲಿತಕೀರ್ತಿ. ನಾನೂ ಅಜಿತಸೇನಾಚಾರ್ಯರ ವಿದ್ಯಾರ್ಥಿ. ನೀವು ಹೋಗಿ ನಾನು ಕಳಿಸಿದೆನೆಂದೇ ಹೇಳಿ. ಆದರೆ ನಾನು ಕಳಿಸಿದವನು ಎಂದ ಮಾತ್ರಕ್ಕೆ ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ ಎಂಬ ಭರವಸೆ ನನಗಿಲ್ಲ. ನಿಮ್ಮ ಪರೀಕ್ಷೆ ನಡೆಯುತ್ತದೆ. ನಿಮ್ಮ ಇಚ್ಛೆ ಕರವಾಳವೋ ಮರವಾಳವೋ ತೀರ್ಮಾನವಾಗುತ್ತದೆ. ಕರವಾಳವಾದರೆ, ಗುರುಗಳು ತೃಪ್ತರಾದರೆ ನಿಮಗೆ ಪ್ರವೇಶ ಖಂಡಿತ.”
“ತುಂಬಾ ಸಂತೋಷ. ನಾನಿನ್ನು ಬರಲೆ”
“ಎಲ್ಲಿಗೆ? ಶ್ರವಣಬೆಳಗೊಳವೇನು ಪಕ್ಕದ ಊರಲ್ಲ. ದೂರದ ಕಾಣದ ದೇಶ. ಹೋಗಿ ತಲಪಲೇ ಮೂರ್ನಾಲ್ಕು ತಿಂಗಳಾದರು ಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಆಗಿದೇಯೇನು?”
“ಇಲ್ಲ. ಹೇಗೋ ಏನೋ ನನಗೆ ಗೊತ್ತಿಲ್ಲ. ನಾನು ಅಲ್ಲಿಗೆ ತಲಪುತ್ತೇನೆ ಎಂದಷ್ಟೇ ಹೇಳಬಲ್ಲೆ”
“ಒಳ್ಳೆಯದು ಹೋಗಿಬನ್ನಿ. ಅರ್ಹಂತನು ಕಾಪಾಡಲಿ”
(ಮುಂದಿನ ವಾರ: ಶ್ರವಣಬೆಳಗೊಳದಲ್ಲಿ ರನ್ನ)
23 comments:
ಸತ್ಯನಾರಾಯಣ ಸರ್....
"“ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನು ಬಳೆಯ ಮಲಾರವೆ?”
ಅಂದಿನ ಜಾತಿ ಪದ್ಧತಿಯ ಕ್ರೂರ ಸಮಾಜದಲ್ಲಿ ವಿದ್ಯೆ ಕಲಿಯುವದು ಬಹಳ ಕಷ್ಟವಾಗಿದ್ದರೂ..
ರನ್ನ ಕವಿ ರತ್ನದಂಥಹ ಕಾವ್ಯ ರಚಿಸಿದನಲ್ಲ...
ಅವನ ಜೀವನ ಚರಿತ್ರೆ ಸೊಗಸಾಗಿ ಬರುತ್ತಿದೆ....
ಮುಂದೆ ಓದಲು ಕಾಯುತ್ತಿರುತ್ತೇವೆ....
ಸಧಭಿರುಚಿಯ ಸಾಹಿತ್ಯ ಪರಿಚಯಿಸುತ್ತಿದ್ದೀರಿ...
ಅಭಿನಂದನೆಗಳು...
ಸತ್ಯನಾರಾಯಣ ಸರ್,
ನಿಮ್ಮ ಪ್ರಯತ್ನ ನನಗೆ ತುಂಬಾ ಖುಷಿಕೊಡುತ್ತಿದೆ. ಇತಿಹಾಸ, ಪರಂಪರೆಯನ್ನು ಹೀಗೆ ಸರಳವಾಗಿ ಓದಿಸಿಕೊಂಡು ಹೋಗುವಂತ ಬರವಣಿಗೆಯಲ್ಲಿ ಹೇಳುತ್ತಾ ಹೋದರೆ ಅನೇಕ ವಿಚಾರಗಳನ್ನು[ಆಗ ಕಲಿತಿದ್ದನ್ನು]ಮತ್ತೆ ಮೆಲುಕುಹಾಕಬಹುದು. ಜ್ಞಾನ ಬೆಳೆಸಿಕೊಳ್ಳಬಹುದು. ಮೊದಲ ಬರಹ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಖಂಡಿತ ಮುಂದುವರಿಸಿ.
ಧನ್ಯವಾದಗಳು.
ಸತ್ಯ ಸರ್,
ನಿಮ್ಮ ಈ ಸರಣಿ ನಿಜವಾಗಲೂ ಚೆನ್ನಾಗಿದೆ. ಎಂದೂ ಕನ್ನಡ ಇತಿಹಾಸ,ಸಾಹಿತ್ಯ ಓದದ ನನ್ನಂತಹವರಿಗೆ ಬಲು ಉಪಯುಕ್ತ!
ಕಥೆಯ ರೂಪದಲ್ಲಿರುವುದು ಇನ್ನೂ ಹೆಚ್ಚು ಖುಶಿಕೊಡುತ್ತಿದೆ, ’ಪಠ್ಯಪುಸ್ತಕ’ವೆನಿಸೊಲ್ಲ:)) ಇದರಿಂದಾಗಿ ಬಹಳಷ್ಟು ವಿಚಾರ ತಿಳಿದುಕೊಳ್ಳಬಹುದು, ಖಂಡಿತಾ ಮುಂದುವರೆಸಿ!!
ಸತ್ಯನಾರಾಯಣ ಸರ್,
ನಿಮ್ಮ ಎಲ್ಲ ಲೇಖನಗಳು ಒಳ್ಳೆ ಮಾಹಿತಿ ಇಂದ ಕೂಡಿರುತ್ತವೆ....ಇತಿಹಾಸದ ಬಗ್ಗೆ ತಿಳಿದುಕೊಂಡು ಅದರಲ್ಲಿ ಇರುವ ಅರ್ಥ, ಉದ್ದೇಶ ಎಲ್ಲವನ್ನು ತಿಳಿಸುತ್ತಿರಿ... ಒಳ್ಳೆ ಪ್ರಯೋಗಾತ್ಮಕ ಲೇಖನಗಳು....
ಹೀಗೆ ಮುಂದುವರಿಯಲಿ....ಮುಂದಿನ ಭಾಗಕ್ಕಾಗಿ ಕಾಯುತ ಇರುತ್ತೇನೆ
ನಿಮ್ಮ ಶಿಷ್ಯ
ಗುರು :-)
ಕಥಾರೂಪದಲ್ಲಿ ರನ್ನನ ಚರಿತ್ರೆ ತಿಳಿಸುವ ಈ ಪ್ರಯತ್ನ ಸ್ತುತ್ಯವಾದದ್ದು. ಇದೇ ರೀತಿ ಉಳಿದ ಕವಿಗಳ ಚರಿತ್ರೆಯನ್ನೂ ತಿಳಿಸಬೇಕೆಂದು ಬಿನ್ನಹ.
ಸತ್ಯನಾರಾಯಣ ಸರ್, ರನ್ನನ ಚರಿತ್ರೆ ಸೊಗಸಾಗಿ ಬರುತ್ತಿದೆ. ಮುಂದಿನ ಸಂಚಿಕೆ ಬೇಗ ಬರಲಿ. ಆಗಿನ ದಿನಗಳ ಚಿತ್ರಣ, ಪರಿಶ್ರಮ, ಎದಿರಿಸಬೇಕಾದ ಅನೇಕ ಸವಾಲುಗಳು, ಇದೆಲ್ಲ ಮೀರಿ ಪ್ರತಿಭಾವಂತರು ಹೇಗೆ ಮಂದುವರೆಯುತ್ತಿದ್ದರು ಎಂದು ಯೋಚಿಸಿದರೇ ಆಶ್ಚರ್ಯವಾಗುತ್ತದೆ.
ನನ್ನ ಹೊಸ ಲೇಖನ ಬರೆದ್ದಿದ್ದೇನೆ. ಸಮಯವಿದ್ದಾಗ ಓದಿ ಪ್ರತಿಕ್ರಿಸಿ.
ಮಹಾಕವಿ ರನ್ನನ ಬಗ್ಗೆ ಸರಳವಾಗಿ ತಿಳಿಸಿದ್ದಿರಿ. ಈ ಮಾಲಿಕೆಯನ್ನು ಮು೦ದುವರಿಸಿ, ಚೆನ್ನಾಗಿದೆ.
ಸತ್ಯ ಸಾರ್.......
ರನ್ನನ ಚರಿತ್ರೆ ಸರಳವಾಗಿ ತುಂಬಾ ಚೆನ್ನಾಗಿದೆ. ಇತಿಹಾಸ ಯಾವಾಗಲೂ ಕುತೂಹಲಕರವೇ. ಒಳ್ಳೆಯ ವಿಷಯ ಸಾರ್, ಮುಂದಿನ ಭಾಗಗಳನ್ನು ಓದಲು ಕಾಯುತ್ತಿದ್ದೇನೆ.
ಶ್ಯಾಮಲ
ಸತ್ಯನಾರಾಯಣ ಸರ್,
ರನ್ನನ ಶಿಕ್ಷಣದ ಹಸಿವನ್ನು ಸೊಗಸಾಗಿ ವಿವರಿಸಿದ್ದೀರಿ . ಮು೦ದಿನ ಭಾಗಕ್ಕಾಗಿ ಕಾಯುತ್ತಿದ್ದೆನೆ .
ಅಭಿನಂದನೆಗಳು...
Xcellent Sirr...
Matte odisi,
Kallare
artical thumba chennagide sir
ಸತ್ಯನಾರಾಯಣ ಸರ್,
ರನ್ನನ ಜೀವನ ಚರಿತ್ರೆ ಸರಳವಾಗಿ ಬರುತ್ತಿದೆ. ಮುಂದುವರಿಸಿ.
ಧನ್ಯವಾದಗಳು.
Sir,
Tumba chennagide..mundiana..kanthu yavaga..
Sir,
Tumba chennada itihaasa .. patyadantallade katheyante odisikondu hoguttide .. sundara sarala baraha nimamdu .. if you dont mind idara moola aakaragalannu tilisalu saadyave ..
thanks,
Shridhar Bhat
ಆತ್ಮೀಯ ಸತ್ಯನಾರಾಯಣ ಸರ್,
ಅಭಿನಂದನೆಗಳು.
ತುಂಬಾ ಒಳ್ಳೆಯ ಬರಹ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಓದುಗರನ್ನ ಆಕರ್ಷಿಸಲಿ .
ಸತ್ಯನಾರಾಯಣ್ ಅವರೇ.
ನಿಮ್ಮ ಲೇಖನದ ಕೊಂಡಿ ಸಂಪದದಲ್ಲಿ ಈಗಷ್ಟೇ ನೋಡಿದೆ.
ರನ್ನನ ಕುರಿತಾದ ಲೇಖನವನ್ನು ಮುಂದುವರಿಸುವಿರ ? ನನಗೆ ಓದಬೇಕೆನಿಸಿದೆ. ಪುಸ್ತಕ ಓದಲು ಮನೆಯಲ್ಲಿ ಸಮಯ ಇರುವುದಿಲ್ಲ. ಸಿಗುವ ಸ್ವಲ್ಪ ಸಮಯವೆಂದರೆ ಅದು ಆಫೀಸ್ ನಲ್ಲಿ ಮಾತ್ರ. ನಿಮ್ಮ ಲೇಖನದಿಂದ ಓದಲು ಸ್ಫೂರ್ತಿ ನೀಡಿದೆ.
ವಂದನೆಗಳು
ಅಂಬಿಕಾ
ಮೂರೂ ಕಂತುಗಳ ಲಿಂಕ್ ಇಲ್ಲಿದೆ. ನನ್ನ ಬ್ಲಾಗಿನ ಆರ್ಕೈವ್ಸ್ ನಲ್ಲೂ ಸಿಗುತ್ತದೆ.
ಕಂತು 1 http://nandondmatu.blogspot.com/2009/08/1.html
ಕಂತು 2
http://nandondmatu.blogspot.com/2009/09/2.html
ಕಂತು 3 http://nandondmatu.blogspot.com/2009/10/3.html
ಮೂರನೇ ಕಂತಿನ ಕೊನೆಯಲ್ಲೂ 1 ಮತ್ತು 2ನೇ ಕಂತಿನ ಲಿಂಕ್ ಕೊಟ್ಟಿದ್ದೇನೆ. ನಿಮ್ಮ ಕುತೂಹಲಕ್ಕೆ ಧನ್ಯವಾದಗಳು
ಉಪಯುಕ್ತ ಮಾಹಿತಿ, ಧನ್ಯವಾದಗಳು.
ಆಸಕ್ತರಿಗೆ ಬೆರಳು ತುದಿಯಲ್ಲಿ ಅತ್ಯುಪಯುಕ್ತ ಮಾಹಿತಿ
ನೀಡುವ ತಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ
ಆಸಕ್ತರಿಗೆ ಬೆರಳು ತುದಿಯಲ್ಲಿ ಅತ್ಯುಪಯುಕ್ತ ಮಾಹಿತಿ
ನೀಡುವ ತಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ
ಆಸಕ್ತರಿಗೆ ಬೆರಳು ತುದಿಯಲ್ಲಿ ಅತ್ಯುಪಯುಕ್ತ ಮಾಹಿತಿ
ನೀಡುವ ತಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ
ಆಸಕ್ತರಿಗೆ ಬೆರಳು ತುದಿಯಲ್ಲಿ ಅತ್ಯುಪಯುಕ್ತ ಮಾಹಿತಿ
ನೀಡುವ ತಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ
ಸರ್ ಈ ಲೇಖನ ಇಂದಿನ ವಿದ್ಯಾರ್ಥಿಗಳು ಮನ ಮುಟ್ಟು ವಂತೆ ಮೂಡಿದೆ
ಶರಣು ಶರಣಾಥಿ೯
Post a Comment