Thursday, April 30, 2009

ಎಮ್ಮೆಪಾಪು ಕಕ್ಕ ಮಾಡ್ತಿದೆ...!

ಕಳೆದ ಒಂದು ವಾರ ಊರಿನಲ್ಲಿ ತಳವೂರಿದ್ದೆ. ಎಲೆಕ್ಷನ್, ಭಾನುವಾರ, ಬಸವಜಯಂತಿಯ ಕೃಪೆ! ತೋಟದಲ್ಲಿ ವಿಪರೀತ ಕೆಲಸ.

ನನ್ನ ಮಗಳು ಈಕ್ಷಿತಾ ಕಟ್ಟು ಬಿಚ್ಚಿದ ಚಿಗರೆಯಂತಾಗಿದ್ದಳು. ತಿಂಗಳಿಗೊಮ್ಮೆಯಾದರೂ ತೋಟಕ್ಕೆ ಬರುತ್ತಾಳಾದರೂ, ಅವೆಲ್ಲವೂ ಒಂದೆರಡು ದಿನಗಳ ಬೇಟಿ. ಆದರೆ ಈಗಿನದು ಹತ್ತು ಹದಿನೈದು ದಿನಗಳದ್ದು. ಹೀಗಾಗಿ ಅವಳಿಗೆ ಸ್ಕೂಲು, ಮಿಸ್ಸು, ಹೋಮ್‌ವರ್ಕ್, ವ್ಯಾನು, ಫ್ರೆಂಡ್ಸ್ ಎಲ್ಲಾ ಮರೆತುಹೋದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವಳು ಮಾಡುತ್ತಿದ್ದ ಕೆಲಸ ಇಷ್ಟೆ. ತೋಟದಲ್ಲಿ ಎಮ್ಮೆಕರುವನ್ನು ಹಿಡಿದುಕೊಂಡು ಸುತ್ತುವುದು. ನಾವೆಂದೂ ಕಟ್ಟಿರದಿದ್ದ ನಾಯಿಮರಿಗೆ ಸರಪಳಿ ಹಾಕಿಸಿಕೊಂಡು ವಾಕಿಂಗ್ ಮಾಡಿಸುವುದು. ಮನೆಯೊಳಗೆ ಬಂದರೆ ಚೌಕಾಬಾರ ಮತ್ತು ಅಳುಗುಳಿ ಮನೆಯಾಡುವುದು.

ಸ್ನಾನ, ಊಟ ತಿಂಡಿ ಎಲ್ಲವೂ ಬಲವಂತದ ಮಾಘಸ್ನಾನ!


ಮೊನ್ನೆ ನಾನು ತೋಟದಲ್ಲಿ ತೆಂಗಿನ ಗರಿ ಸವರುತ್ತಿದ್ದೆ. ಈಕ್ಷಿತಾ ಅಲ್ಲಿಯೇ ಆಟವಾಡುತ್ತಿದ್ದಳು. ಹುಟ್ಟಿ ಸುಮಾರು ಹದಿನೈದು ದಿನಗಳಷ್ಟೇ ಕಳೆದಿದ್ದ ಪುಟಾಣಿ ಎಮ್ಮೆಕರು ಅವಳ ಕಣ್ಣಳತೆಯಲ್ಲಿಯೇ ನಿಂತಿತ್ತು. ಇದ್ದಕ್ಕಿದ್ದಂತೆ ಈಕ್ಷಿತಾ ‘ಅಪ್ಪಾ, ಅಪ್ಪಾ, ಬೇಗ ಬಾ’ ಎಂದು ಕೂಗಿದಳು. ನಾನು ಅಲ್ಲಿಂದಲೇ ‘ಏಕೆ?’ ಎಂದೆ. ಅದಕ್ಕೆ ಅವಳು ‘ಎಮ್ಮೆ ಪಾಪು ಕಕ್ಕ ಮಾಡ್ತಿದೆ, ಬೇಗ ಬಾ’ ಎಂದಳು. ನಾನು ಹೋಗಿ ನೋಡಿದೆ. ಪಾಪ, ಎಮ್ಮೆಕರು ತನ್ನ ಇಡೀ ದೇಹವನ್ನು ಕಾಮನಬಿಲ್ಲಿನಂತೆ ಬಗ್ಗಿಸಿಕೊಂಡು ಸಗಣಿ ಹಾಕಲು ಪ್ರಯತ್ನಿಸುತ್ತಿತ್ತು. ‘ಅಪ್ಪಾ ಅಪ್ಪಾ, ಅದರ ಫೋಟೋ ತೆಗೆಯೋಣವೆ?’ ಮಗಳ ಪ್ರಶ್ನೆ. ‘ಸರಿ’ ಎಂದು ನಾನು ಮನೆಯೊಳಗೆ ಹೋಗಿ ಮೊಬೈಲ್ ತಂದಾಗಲೂ, ಕರು ಅದೇ ಕಾಮನಬಿಲ್ಲನ ಆಕಾರದಲ್ಲೇ ನಿಂತಿತ್ತು. ನಾನು ಫೋಟೋ ತೆಗೆಯುವಷ್ಟರಲ್ಲಿ ಮತ್ತೆ ಎರಗಿತ್ತು ಮಗಳ ಪ್ರಶ್ನೆ. ‘ಅಪ್ಪಾ, ಅದು ಏಕೆ ಆಗಲಿಂದ ಹಾಗೇ ನಿಂತಿದೆ?’. ನಾನು ಅವಳಿಗೆ, ಸಾಮಾನ್ಯವಾಗಿ ಸಣ್ಣ ಸಣ್ಣಕರುಗಳು ಸಗಣಿ ಹಾಕಲು ತುಂಬಾ ಕಷ್ಟಪಡುತ್ತವೆ. ಕಾರಣ ಅವು ಬರೀ ಹಾಲು ಕುಡಿಯುವುದರಿಂದ ಹಾಗಾಗುತ್ತದೆ. ಬೆಳೆಯುತ್ತಾ ಹುಲ್ಲು ತಿನ್ನಲು ಆರಂಭಿಸಿದರೆ ಸರಿಹೋಗುತ್ತವೆ ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದೆ.
ಕರು ಅದೇ ಭಂಗಿಯಲ್ಲಿಯೇ ಒಂದು ಚೂರು ಸಗಣಿ ಹಾಕಿತಾದರೂ ಮತ್ತೂ ಪ್ರಯತ್ನ ಮುಂದುವರೆಸಿತ್ತು. ಒಂದು ಕ್ಷಣ ಮೌನವಾಗಿದ್ದ ಮಗಳು ‘ಅಪ್ಪಾ ಅದನ್ನು ಬಿಸಿನೀರಿನ ಟಬ್ಬಿನಲ್ಲಿ ಕೂರಿಸಿದರೆ ಸುಲಭವಾಗಿ ಕಕ್ಕ ಮಾಡಬೌದು, ಅಲ್ಲವಾ?’ ಎಂದಳು ನನಗೆ ಒಂದು ಕ್ಷಣ ಶಾಕ್!
ಸುಮಾರು ಎರಡು ವರ್ಷಗಳ ಹಿಂದೆ ಸ್ವತಃ ಅವಳೇ ಟಾಯ್ಲೆಟ್ಟಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಬಲವಂತ ಮಾಡಿ ಕೂರಿಸಿದರೆ ತುಂಬಾ ಕಷ್ಟ ಪಡುತ್ತಿದ್ದಳು. ಅದನ್ನು ಡಾಕ್ಟರರ ಗಮನಕ್ಕೆ ತಂದಾಗ ಅವರು ‘ಒಂದು ಟಬ್ಬಿನಲ್ಲಿ ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿ, ಅದರಲ್ಲಿ ಅವಳನ್ನು ಸ್ವಲ್ಪ ಹೊತ್ತು ಕೂರಿಸಿ. ಮೂರುವಾರಗಳ ಕಾಲ ಈ ರೀತಿ ಮಾಡಿ’ ಎಂಬ ಸಲಹೆ ಕೊಟ್ಟಿದ್ದರು. ನಾವೂ ಅದರಂತೆ ಮಾಡಿದ್ದೆವು. ಅವಳ ಸಮಸ್ಯೆಯೂ ದೂರವಾಗಿತ್ತು. ಅದನ್ನು ನೆನಪಿನಲ್ಲಿಟ್ಟುಕೊಂಡು, ಎಮ್ಮೆ ಕರುವಿಗೂ ‘ವಾಟರ್ ಥೆರಪಿ’ ನೀಡಬೇಕೆಂದು ಸಲಹೆ ಕೊಟ್ಟಿದ್ದಳು. ಸದ್ಯ ಪುಣ್ಯಕ್ಕೆ ದೊಡ್ಡ ಎಮ್ಮೆ ಸಗಣಿ ಹಾಕಲು ಕಷ್ಟಪಡುತ್ತಿರಲಿಲ್ಲ!
ಅವಳ ನೆನಪಿನ ಶಕ್ತಿಯನ್ನು ಹಿಂದೊಮ್ಮೆ ಹೀಗೆ ಪ್ರದರ್ಶಿಸಿದ್ದಳು. ಕಳೆದ ಸಾಲಿನಲ್ಲಿ ಎಲ್.ಕೆ.ಜಿ.ಯಲ್ಲಿದ್ದಾಗ ಪೇರೆಂಟ್ಸ್ ಮೀಟಿಂಗಿಗೆಂದು ನನ್ನ ಹೆಂಡತಿ ಹೋಗಿದ್ದಳು. ಅಲ್ಲಿ ಇವರು ಕುಳಿತಿದ್ದ ಕುರ್ಚಿಯ ಪಕ್ಕದಲ್ಲೇ ಬಂದು ಕುಳಿತ ಇನ್ನೊಬ್ಬಾಕೆ, ಸಹಜವಾಗಿಯೇ ‘ಏನು ನಿನ್ನ ಹೆಸರು?’ ಎಂದಿದ್ದಾರೆ. ‘ಈಕ್ಷಿತಾ’ ಎಂಬ ಉತ್ತರ ಕೇಳಿದಾಕ್ಷಣ ಆಕೆ ಎದ್ದುನಿಂತು ‘ನೀನೇನಾ ಈಕ್ಷಿತಾ!? ಪ್ರೀನರ್ಸರಿಯಲ್ಲಿದ್ದಾಗ ನನ್ನ ಮಗನ ಕೆನ್ನೆಯನ್ನು ಕಚ್ಚಿದ್ದವಳು!’ ಎಂದು ಕೇಳಿ, ನನ್ನ ಹೆಂಡತಿಯನ್ನು ಪರಿಚಯ ಮಾಡಿಕೊಂಡು ಪ್ರೀನರ್ಸರಿಯ ವರ್ಷಾರಂಭದಲ್ಲೇ ಅವರ ಮಗ ಪ್ರೀತಮ್ ಗೌಡ ಎಂಬುವವನ ಕೆನ್ನೆಯನ್ನು ಇವಳು ಕಚ್ಚಿದ್ದು, ಅವರ ಮಗ ಮನೆಗೆ ಹೋಗಿ ‘ಈಕ್ಷಿತಾ ಕಚ್ಚಿದ್ದು’ ಎಂದು ದೂರು ಹೇಳಿದ್ದು, ಕೆನ್ನೆ ಬಾತುಕೊಂಡಿದ್ದು, ಇಂಜೆಕ್ಷನ್ ಚುಚ್ಚಿಸಿದ್ದು ಹೀಗೆ ಹಿಂದಿನದೆಲ್ಲಾ ಹೇಳಿ, ‘ಅವನ ಕೈಯಲ್ಲೂ ನಿನ್ನ ಕೆನ್ನೆ ಕಚ್ಚಿಸುತ್ತೇನೆ, ನೋಡು’ ಎಂದು ಒಂದಷ್ಟು ರೇಗಿಸಿದರಂತೆ. ನನ್ನ ಹೆಂಡತಿ ಮಗಳನ್ನು ‘ಕೆನ್ನೆ ಕಚ್ಚಿದ್ದು ನಿಜವಾ? ಏಕೆ ಕಚ್ಚಿದೆ?’ ಎಂದು ಕೇಳಿದರೆ ಬಾಯಿಯೇ ಬಿಡಲಿಲ್ಲವಂತೆ.

ಸಂಜೆ ನನಗೆ ವರದಿ ಸಿಕ್ಕಿತು. ನಾನು ‘ಕೆನ್ನೆ ಏಕೆ ಕಚ್ಚಿದ್ದು?’ ಎಂದು ವಿಚಾರಿಸಿದೆ. ಆಗ ಅವಳು ‘ಅದೇ ಅಪ್ಪ, ನಾವು ಅಡಿಗೆ ಮನೆಗೆ (ಅಡಿಗೆ ಕಟ್ಟೆಯ ಕಲ್ಲನ್ನು ತೋರಿಸುತ್ತಾ) ಈ ಕಲ್ಲನ್ನು ತರಲು ಹೋಗಿದ್ದೆವಲ್ಲ, ಅವತ್ತು, ಅಲ್ಲಿ ನಿನ್ನ ಬೈಕ್ ಬಿದ್ದಿತ್ತಲ್ಲ, ಆಗ ಅದು (ಭುಜ ತೋರಿಸುತ್ತಾ) ನನ್ನ ಕೈಗೆ ತಗುಲಿ ನೋವಾಗಿತ್ತು. ಅವನು (ಪ್ರೀತಮ್ ಗೌಡ) ಅವತ್ತು ಸ್ಕೂಲಲ್ಲಿ ಹಿಂದಿನಿಂದ ಬಂದು ಹೀಗೆ ಹಿಡಿದು (ನನ್ನ ಭುಜ ಹಿಡಿದು ಅಲ್ಲಾಡಿಸುತ್ತ) ಅಲ್ಲಾಡಿಸಿದ. ನನಗೆ ಸಿಟ್ಟು ಬಂದು ಅವನ ಕೆನ್ನೆ ಹೀಗೆ ಹಿಡಿದು ಕಚ್ಚಿಬಿಟ್ಟೆ’ ಎಂದು ನನ್ನ ಕೆನ್ನೆಗೆ ಒಂದು ಮುತ್ತು ಕೊಟ್ಟು ಅಭಿನಯಿಸಿ ತೋರಿಸಿಬಿಟ್ಟಿದ್ದಳು. ಆ ಕ್ಷಣದಲ್ಲಿ ನಮಗೆ ನಗಬೇಕೋ ಅಳಬೇಕೋ ತಿಳಿಯದಾಗಿತ್ತು. ಆ ದಿನ ಗ್ರಾನೈಟ್ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿ ತಿರುಗುವಷ್ಟರಲ್ಲಿ, ಸ್ಟ್ಯಾಂಡ್ ಸರಿಯಾಗಿ ಹಾಕದೇ ಇದ್ದುದರಿಂದ ಅದು ಬಿದ್ದಿತ್ತು. ಈಕ್ಷಿತಾ ಅದರ ಮುಂದೆಯೇ ನಿಂತಿದ್ದಳು. ಆದರೆ ನಮ್ಮಿಬ್ಬರಿಗೂ ಬೈಕು ಬೀಳುವಾಗ ಅವಳಿಗೆ ತಾಗಿದ್ದು ಗಮನಕ್ಕೆ ಬಂದಿರಲಿಲ್ಲ. ಅವಳೂ ಹೇಳಿರಲೂ ಇಲ್ಲ!

ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲೂ ನೆನಪಿನ ಶಕ್ತಿ ಅಗಾಧವಾಗಿ ಇರುತ್ತದೆಂದು, ಅದು ಮಕ್ಕಳು ಬೆಳೆದಂತೆ ಏರುಪೇರಾಗುತ್ತದೆಂದು ಕೇಳಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ನಡೆಸಿದ ಸರ್ವೆಯೊಂದರ ಪ್ರಕಾರ ಆರುವರ್ಷದ ಮಕ್ಕಳುಗಳ ಕಲಿಯುವ ಶಕ್ತಿಯಲ್ಲಿ ಭಾರತದ ಮಕ್ಕಳು ಮೊದಲನೆಯ ಸ್ಥಾನದಲ್ಲಿರುತ್ತವಂತೆ. ಆದರೆ ಅದೇ ಮಕ್ಕಳು ಹದಿನಾರನೇ ವರ್ಷಕ್ಕೆ ಬರುವಷ್ಟರಲ್ಲಿ ಇಪ್ಪತ್ತಾರನೆಯ ಸ್ಥಾನಕ್ಕೆ ಜಾರಿಬಿಟ್ಟಿರುತ್ತಾರಂತೆ! ಅದೇ ಏಳೋ ಎಂಟೋ ಸ್ಥಾನದಲ್ಲಿದ್ದ ಜಪಾನಿ ಮಕ್ಕಳು ಒಂದನೇ ಸ್ಥಾನಕ್ಕೇರಿರುತ್ತಾರಂತೆ. ಪೋರ್ಚುಗಲ್ ಮಕ್ಕಳು ಎರಡನೇ ಸ್ಥಾನಕ್ಕೆ ಬರುತ್ತಾರಂತೆ. ಇದನ್ನು ಈ ವರ್ಷಾರಂಭದ ಓರಿಯಂಟೇಷನ್ ಪ್ರೋಗ್ರಾಮಿನಲ್ಲಿ ಒಬ್ಬ ಭಾಷಣಕಾರರು ಹೇಳಿದ್ದರು. ಅದಕ್ಕೆ ಕಾರಣವೇನು? ಎಂಬ ಪ್ರಶ್ನೆಯನ್ನೂ ಕೇಳಿದ್ದರು. ಆಗ ನಾನು ನಮ್ಮಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯೇ ಅದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದೆ. ಜೊತೆಗೆ ಕುವೆಂಪು ಅವರ ವಿಶ್ವಮಾನವ ಸಂದೇಶದ ‘ಪ್ರತಿಯೊಂದು ಮಗುವು ಹುಟ್ಟುತ್ತಲೆ-ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು’ ಎಂಬ ಮಾತುಗಳನ್ನು ಹೇಳಿ, ಕುವೆಂಪು ಅವರ ದಾರ್ಶನಿಕ ದೃಷ್ಟಿಕೋನವನ್ನು ವೈಜ್ಞಾನಿಕವಾಗಿ ನಡೆಸಿದ ಸರ್ವೆಯೊಂದು ದೃಢಪಡಿಸುತ್ತಿರುವುದನ್ನು ಸೂಚಿಸಿದ್ದೆ.

ಹುಟ್ಟಿನಂದಲೇ ಬರುವ ಶಕ್ತಿಯನ್ನು ಬೆಳೆಸಬೇಕೆ ಹೊರತು ಕುಂಠಿತಗೊಳಿಸಬಾರದು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣಪದ್ಧತಿ ನವೀಕರಣಗೊಳ್ಳಲೇಬೇಕೆಂಬುದು ನನ್ನ ಆಶಯ.

Tuesday, April 28, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 12

ಐ ಲವ್ ಯೂ!
ಇಂಗ್ಲೀಷ್ ಗ್ರಾಮರ್ ಮತ್ತು ನಾನ್‌ಡೀಟೈಲ್ ಪಾಠ ಮಾಡುತ್ತಿದ್ದ ಎಸ್.ಮಂಚಯ್ಯ ಎಂಬ ಮೇಷ್ಟ್ರೊಬ್ಬರಿದ್ದರು. ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವರೂ ಬೇರೆಡೆಗೆ ವರ್ಗವಾಗಿ ಹೋದರು. ಒಂಬತ್ತನೇ ತರಗತಿಯಲ್ಲಿದ್ದಾಗ ನಮಗೆ ಇಂಗ್ಲೀಷ್ ಗ್ರಾಮರ್ ಪಾಠ ಮಾಡುತ್ತಿದ್ದರು. ಒಂದು ದಿನ ವಾಕ್ಯ ರಚನೆಯ ಬಗ್ಗೆ ಪಾಠ ಮಾಡುತ್ತಿದ್ದು, ನಮಗೆ ಅರ್ಥವಾಗಲೆಂದು ಹಲವಾರು ಸರಳವಾದ ಉದಾಹರಣೆಗಳನ್ನು ಕೊಡುತ್ತಿದ್ದರು. ಹೀಗೆ ಉದಾಹರಣೆ ಕೊಡುತ್ತಾ ‘ಐ ಲವ್ ಯೂ ರಾಧಾ’ ಎಂದು ಒಂದು ವಾಕ್ಯವನ್ನು ಹೇಳಿದರು. ಒಂದು ಕ್ಷಣ ಇಡೀ ಕ್ಲಾಸಿಗೇ ಶಾಕ್ ಹೊಡೆದಂತೆ ಸ್ತಬ್ಧವಾಯಿತು. ನಂತರ ಗುಜುಗುಜು ಮಾತು, ಮುಸಿಮುಸಿ ನಗೆ ಶುರುವಾಯಿತು. ನಮ್ಮ ಮುಂದಿನ ಡೆಸ್ಕಿನಲ್ಲಿಯೇ ಕುಳಿತಿದ್ದ ರಾಧಾ ಎಂಬ ಹುಡುಗಿ, ಡೆಸ್ಕಿನ ಮೇಲೆ ತಲೆ ಇಟ್ಟುಕೊಂಡು ಬಿಕ್ಕುತ್ತಿದ್ದಳು! ನಮಗೆಲ್ಲಾ ‘ಲವ್’ ಎಂಬ ಪದವೇ ಭಯಂಕರವಾಗಿ ಕೇಳಿಸಿತ್ತು. ಏಕೆಂದರೆ ಆಗ ನಾವು ‘ಲವ್’ ಎನ್ನುವ ಪದವನ್ನು ತುಂಬಾ ಅಪಾರ್ಥದಲ್ಲಿ ಅರ್ಥೈಸಿಕೊಂಡಿದ್ದೆವು! ‘ಇವರಿಗೇನು ಬಂತು ಕೇಡು? ಆ ಹುಡುಗಿಯನ್ನು ‘ಲವ್’ ಮಾಡುತ್ತೇನೆ ಎಂದು ಓಪನ್ನಾಗಿ ಹೇಳಿಕೊಳ್ಳುತ್ತಿದ್ದಾರಲ್ಲಾ!’ ಎಂದು ಗಾಬರಿಯೂ, ಅವರು ಪೋಲಿಯಾಗಿ ಮಾತನಾಡುತ್ತಿದ್ದಾರೆಂದು ಒಂದು ಬಗೆಯ ಖುಷಿಯೂ ಆಯಿತು! ಹಿಂದೊಮ್ಮೆ, ಕೇವಲ ಹುಡುಗರಿಗೇ ಹೇಳಬಹುದಾದ ಒಂದು ಜೋಕನ್ನು ತರಗತಿಯಲ್ಲಿ ಹೇಳಲು, ಹುಡುಗಿಯರನ್ನು ಹೊರಗೆ ಕಳುಹಿಸಿದ್ದ ಮಂಚಯ್ಯ ಮೇಸ್ಟರನ್ನು, ಇಂದಿನ ಘಟನೆಯಿಂದ ‘ಪೋಲಿ’ ಎಂದು ಇಡೀ ತರಗತಿ ಭಾವಿಸಿದಂತಿತ್ತು. ತಕ್ಷಣ ತಮ್ಮ ತಪ್ಪಿನ ಅರಿವಾದ ಮೇಸ್ಟರು ಅದರ ರಿಪೇರಿಗೆ ತೊಡಗಿದರು. ‘ಐ ಲವ್ ಯೂ ರಾಧಾ, ಐ ಲವ್ ಇಂಡಿಯಾ, ಐ ಲವ್ ಮೈ ಡ್ಯಾಡಿ, ಐ ಲವ್ ಮೈ ಸಿಸ್ಟರ್, ಐ ಲವ್ ಮೈ ಮದರ್, ಐ ಲವ್ ಮೈ ಬ್ರದರ್’ ಹೀಗೇ ಮತ್ತೆ ಮತ್ತೆ ‘ಲವ್’ ಎಂಬ ಪದ ಬಳಕೆಯಾಗುವ ಹಲವಾರು ವಾಕ್ಯಗಳನ್ನು ಹೇಳಿ ಅವುಗಳ ಕನ್ನಡ ಅನುವಾದವನ್ನು ಹೇಳಿದರು. ಅಷ್ಟರಲ್ಲಿ ನಮಗೆ ಈ ‘ಲವ್’ ಎಂಬ ಪದ ನಾವು ಅಂದುಕೊಡ ಅರ್ಥದ್ದಲ್ಲ ಎಂಬ ಅರಿವೂ ಆಯಿತು. ಆದರೆ ಆ ಹುಡುಗಿ ಮಾತ್ರ ಅವರ ಕ್ಲಾಸು ಮುಗಿಯುವವರೆಗೂ ತಲೆಯೆತ್ತಲಿಲ್ಲ.
ಸಂಜೆ ಮಂಚಯ್ಯನವರೊಂದಿಗೆ ನಡೆದುಕೊಂಡು ಹೋಗುವಾಗ ‘ಏನ್ರೊ, ನಾನು ವಾಕ್ಯ ರಚನೆ ಮಾಡಿದಾಗ ಅಷ್ಟೊಂದು ನಕ್ಕಿದ್ದೇಕೆ?’ ಎಂದರು.
ನಾವು ಮತ್ತೊಮ್ಮೆ ನಗುತ್ತಾ ‘ಸಾರ್, ನೀವು ಆ ಹುಡುಗಿಯನ್ನು ಲವ್ ಮಾಡಿದ್ದನ್ನು ಅಷ್ಟು ಓಪನ್ನಾಗಿ ಹೇಳಿದಿರಲ್ಲಾ, ಅದಕ್ಕೆ ಅಷ್ಟೊಂದು ನಗು ಬಂತು’ ಎಂದು ಹೇಳಿದೆವು.
‘ಅಯ್ಯೋ ದಡ್ಡ ಬಡ್ಡೆತ್ತವಾ! ಅವಳೊಬ್ಬಳನ್ನೇ ಅಲ್ಲ, ನಿಮ್ಮನ್ನೆಲ್ಲಾ ನಾನು ಲವ್ ಮಾಡುತ್ತೇನೆ! ಲವ್ ಅಂದರೆ ಏನು ತಿಳಿದುಕೊಂಡಿದ್ದೀರಿ! ಲವ್ ಅಂದರೆ ಪ್ರೀತಿ ಅಂತ, ಇಷ್ಟ ಪಡೋದು ಅಂತ’ ಎಂದು ಮತ್ತೆ ಮತ್ತೆ ‘ಲವ್’ ಪದದ ಅರ್ಥವನ್ನು ನಮಗೆ ಮನದಟ್ಟು ಮಾಡಿಕೊಡಲು ಪ್ರಯತ್ನಪಟ್ಟರು!
ಕನ್ನಡ ಮೇಸ್ಟ್ರು ಮದುವೆಯಾದರು
ನಮ್ಮ ಹೈಸ್ಕೂಲಿನಲ್ಲಿ ಎಂ.ರಾಜಶೇಖರಯ್ಯ ಎಂಬ ಕನ್ನಡ ಮೇಸ್ಟರಿದ್ದರು. ಹುಡುಗರೆಲ್ಲಾ ಅವರನ್ನು ಎಂ.ಆರ್.ಎಸ್. ಅನ್ನುತ್ತಿದ್ದರು. ಚೆನ್ನಾಗಿ ಪಾಠ ಮಾಡುತ್ತಿದ್ದರು. ದಿನಾ ಪಾಠ ಮಾಡಿದ್ದಷ್ಟಕ್ಕೆ ಎಷ್ಟು ಪ್ರಶ್ನೆಗಳು ಬರುತ್ತವೆಯೋ ಅಷ್ಟಕ್ಕೆ ಹುಡುಗರೇ ಮಾರನೇ ದಿನ ಉತ್ತರ ಬರೆದುಕೊಂಡು ಹೋಗಬೇಕಾಗಿತ್ತು. ಉತ್ತರಗಳು ಸರಿಯಾಗಿದ್ದರೆ ಭೇಷ್ ಎಂದು ಜೋರಾಗಿಯೇ ಬೆನ್ನು ತಟ್ಟುತ್ತ್ತಿದ್ದರು. ತಪ್ಪಾಗಿದ್ದರೆ, ‘ಲೌಡಿಗಂಡ, ಮುಂಡೆಗಂಡ, ರಂಡೇಗಂಡ, ಸರಿಯಾಗಿ ಓದಲ್ಲ, ಸರಿಯಾಗಿ ಓದಬೇಕು, ಪ್ರಶ್ನೆಗೆ ತಕ್ಕ ಉತ್ತರ ಬರೀಬೇಕು’ ಎಂದು ಒಂದೊಂದೇ ಪದ ಹೇಳುತ್ತಾ ತಮ್ಮ ಕೈಯಿಂದ ಬೆನ್ನಿನ ಮೇಲೆ ಗುದ್ದುತ್ತಿದ್ದರು.
ತುಂಬಾ ವರ್ಷಗಳಿಂದ ಒಂದು ರೂಮು ಮಾಡಿಕೊಂಡು ಕುಂದೂರಿನಲ್ಲಿ ನೆಲೆಸಿದ್ದರು. ಊರಿನವರಿಗೆಲ್ಲಾ ಚಿರಪರಚಿತರಾಗಿದ್ದರು. ದಿನಾ ಬೆಳಿಗ್ಗೆ ವ್ಯಾಯಮ ಮಾಡಿ, ಕೆರಯಲ್ಲಿ ತಣ್ಣೀರು ಸ್ನಾನ ಮಾಡುತ್ತಿದ್ದರು. ‘ಒಂದು ರೋಣಗಲ್ಲನ್ನು ಅವರು ಎತ್ತುತ್ತಾರೆ’ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಅವರು ರೋಣಗಲ್ಲನ್ನು ಎತ್ತಿದ್ದನ್ನು ನಾನಂತೂ ನೋಡಿರಲಿಲ್ಲ. ರಾಜಶೇಖರಯ್ಯನವರ ವಯಸ್ಸು ಆಗ ಸುಮಾರು ಮೂವತ್ತೈದು ನಲವತ್ತಾಗಿದ್ದಿರಬಹುದು. ಆದರೆ ಇನ್ನೂ ಮದುವೆಯಾಗಿರಲಿಲ್ಲ.
ಆಗ ಅವರೇಕೆ ಮದುವೆಯಾಗಿಲ್ಲ ಎಂಬುದಕ್ಕೆ ಕುಂದೂರಿನಲ್ಲಿ ಸ್ವಾರಸ್ಯಕರವಾದ ಒಂದು ಕಥೆ ಹೇಳುತ್ತಿದ್ದರು. ಅವರು, ಅವರ ಅಣ್ಣಂದಿರ ಜೊತೆಯಲ್ಲಿ ಚೌಕಾಬಾರ ಆಡುವಾಗ ಬೆಟ್ ಕಟ್ಟಲು ಏನೂ ಇಲ್ಲದೆ, ‘ನಾನು ಈ ಆಟದಲ್ಲಿ ಸೋತರೆ ಮದುವೆಯೇ ಆಗುವುದಿಲ್ಲ’ ಎಂದು ಶಪಥ ಮಾಡಿದ್ದರಂತೆ. ಸೋತು ಹೋದುದ್ದರಿಂದ ಮದುವೆಯಾಗದೆ ಹಾಗೇ ಉಳಿದಿದ್ದರಂತೆ! ಆದರೆ ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವರಿಗೆ ಮದುವೆ ಗೊತ್ತಾಯಿತು! ಆಗ ಈ ಕಥೆಯೆಲ್ಲಾ ಸುಳ್ಳು ಎಂಬ ತೀರ್ಮಾನಕ್ಕೆ ನಾವು ಬಂದೆವು.
ಮದುವೆಗೆ ಅವರ ಪ್ರಿಯ ಶಿಷ್ಯರಾಗಿದ್ದ ಎಂ.ಕೆ.ಸ್ವಾಮಿ, ಚಿಕ್ಕಯ್ಯ ಮತ್ತು ನಮ್ಮ ಅಣ್ಣ ಮೂವರೂ ಹೋಗಿ ಬಂದರು. ಆಗ ಅವರು ಹೇಳಿದ ಸಂಗತಿಯಿಂದ ಆ ಕಥೆ ನಿಜವಾಗಿದ್ದುದ್ದು ತಿಳಿಯಿತು! ಹುಡುಗಾಟಕ್ಕೆ ಆಟವಾಡಿದ್ದನ್ನು ಅವರು ಶಿರಸಾವಹಿಸಿ ಪಾಲಿಸಲು ನಿರ್ಧರಿಸಿದ್ದರಂತೆ. ಆದ ಕಾರಣಕ್ಕೆ ಅಣ್ಣಂದಿರೆ ಬಲವಂತ ಮಾಡಿದ್ದರೂ ಮದುವೆಯಾಗದೆ ಹಾಗೇ ಇದ್ದರಂತೆ. ಆದರೆ ತಂದೆ ತಾಯಿಗಳ ಒತ್ತಡ, ಅವರ ಆತ್ಮಹತ್ಯೆಯ ಬೆದರಿಕೆ ಮತ್ತು ಊರವರೆಲ್ಲರೂ ಸೇರಿ ಪಂಚಾಯಿತಿ ಮಾಡಿ, ಮಕ್ಕಳಾಟಕ್ಕೆ ಮಾಡಿಕೊಂಡ ಒಪ್ಪಂದವನ್ನು ಮುರಿದರೆ ತಪ್ಪೇನಿಲ್ಲ ಎಂದು ವಾದಿಸಿ ಒಪ್ಪಿಸಿದ್ದರಿಂದ ಅವರಿಗೆ ಮದುವೆಯಾಯಿತಂತೆ!
ಜಿ.ಎಸ್.ಎಸ್. ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದು
ನಮ್ಮ ರಾಷ್ಟ್ರಕವಿ ಜಿ.ಎಸ್.ಎಸ್. ಅದ್ಯಾವ ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದರು ಎಂದು, ತಲೆಬರಹ ನೋಡಿ ಗಾಬರಿಯಾಗಬೇಡಿ. ನಾನೀಗ ಹೇಳಹೊರಟಿರುವುದು ನಮ್ಮ ಗಣಿತದ ಮೇಷ್ಟ್ರಾಗಿದ್ದ ಜಿ.ಎಸ್.ಎಸ್. ಬಗ್ಗೆ. ಅವರ ಪೂರ್ಣ ಹೆಸರು, ಜಿ.ಎಸ್.ಶ್ರೀನಿವಾಸಮೂರ್ತಿ ಎಂದು. ಅವರು ನಿತ್ಯವೂ ಅರಸೀಕೆರೆಯಿಂದ ಬಂದು ಹೋಗುತ್ತಿದ್ದರು. ನಾವು ಒಂಬತ್ತನೇ ತರಗತಿಯಲ್ಲಿದ್ದಾಗ ಹೊಸದಾಗಿ ಕೆಲಸಕ್ಕೆ ಸೇರಿದ್ದ ‘ಯುವಮೇಷ್ಟ್ರು’ ಅವರಾಗಿದ್ದರು. ಸಹಜವಾಗಿಯೇ ಅವರು ನಮ್ಮ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ದಿನಕ್ಕೊಂದು ಹೊಸ ಬಟ್ಟೆ ತೊಟ್ಟು ಬರುತ್ತಿದ್ದರೋ ಎಂಬಂತೆ ಗರಿಗರಿಯಾಗಿ ಐರನ್ ಮಾಡಿದ ಫ್ಯಾಂಟ್-ಷರ್ಟ್ ತೊಟ್ಟು, ಷರ್ಟ್-ಇನ್ ಮಾಡಿಕೊಂಡು, ದಪ್ಪದಾದ ಷೂ ತೊಟ್ಟುಕೊಂಡು ಫ್ರೆಷ್ಷಾಗಿ ಬರುತ್ತಿದ್ದರು. ಗಣಿತ ಮತ್ತು ವಿಜ್ಞಾನ ಪಾಠ ಮಾಡುತ್ತಿದ್ದರು. ಆದರೆ ಅಲ್ಲಿನ ಹದಗೆಟ್ಟ ವ್ಯವಸ್ಥೆಯಿಂದಾಗಿ ತಮ್ಮ ಪ್ರತ್ಯೇಕ ಐಡೆಂಟಿಟಿಯನ್ನು ನಾವಿದ್ದ ಕಾಲದಲ್ಲಂತೂ ಅವರು ತೋರಿಸಲಾಗಲಿಲ್ಲ! ಆದರೆ ವಯೋಸಹಜವಾಗಿ ಹುಡುಗಿಯರೆಂದರೆ ಕರಗಿ ಹೋಗುವಷ್ಟರ ಮಟ್ಟಿಗೆ ತುಂಬಾ ಮೃದುವಾಗಿ ವರ್ತಿಸುತ್ತಿದ್ದರು!
ನಾನು ಮೊದಲೇ ಹೇಳಿದಂತೆ ಕುಂದೂರು ಮಠದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಡಲ ಪಂಚಾಯಿತಿ ಆಫೀಸುಗಳಿದ್ದವು. ಅವುಗಳ ಆಶ್ರಯದಲ್ಲೋ ಏನೋ, ಒಂದು ಬಾರಿ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಮ್ಮೇಳನ ನಡೆದಿತ್ತು. ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಂಗನವಾಡಿ ವ್ಯವಸ್ಥೆ ಆಗಿನ್ನೂ ಹೊಸದಾಗಿ ಬಂದದ್ದಾಗಿತ್ತು. ಸಹಜವಾಗಿಯೇ ಅದರಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕ ಎಲ್ಲರೂ ಎಳೆಯ ವಯಸ್ಸಿನವರೇ ಆಗಿದ್ದರು. ಅಲ್ಲೊಬ್ಬರು ಇಲ್ಲೊಬ್ಬರು ಮದುವೆಯಾಗಿದ್ದವರು ಇದ್ದಿರಬಹುದು ಅಷ್ಟೆ. ಎಲ್ಲರಿಗೂ ಹಾಸ್ಟೆಲ್ ಮತ್ತು ಶಾಲಾ ಆವರಣದಲ್ಲಿದ್ದ ಮಠಕ್ಕೆ ಸೇರಿದ್ದ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ನಡೆದ ಆ ಸಮ್ಮೇಳನದ ಕಾಲದಲ್ಲಿ ನಮ್ಮ ಈ ಗಣಿತದ ಮೇಷ್ಟ್ರ ಲೆಕ್ಕಾಚಾರ ಏನಾಗಿತ್ತೋ ನನಗೆ ಗೊತ್ತಿರಲಿಲ್ಲ. ಮೊದಲೆಲ್ಲಾ ಹತ್ತು ಗಂಟೆಗೆ ಬರುತ್ತಿದ್ದ ಅವರು ಆ ದಿನಗಳಲ್ಲಿ ಒಂಬತ್ತಕ್ಕೇ ಹಾಜರ್!
ಸಮ್ಮೇಳನದ ಕೊನೆಯ ದಿನ ಹಾಗೆ ಬಂದವರೇ ಹಾಸ್ಟೆಲ್ ಕಡೆಗೆ ಬಂದರು. ಹೊರಗಡೆ ನಿಂತಿದ್ದ ನಾವೆಲ್ಲಾ ಹಾಸ್ಟೆಲ್ ಹುಡುಗರು ‘ಇವರ್‍ಯಾಕಪ್ಪಾ ಬರುತ್ತಾರೆ’ ಎಂದು ಒಳಗೆ ಹೋಗಲು ಹವಣಿಸುತ್ತಿದ್ದೆವು. ಆಗ ಅವರು ನನ್ನನ್ನು ಕರೆದು ಏನೇನೋ ಅಸಂಬದ್ಧವಾಗಿ ಮಾತನಾಡತೊಡಗಿದರು. ಅವರು ಏನು ಮಾತನಾಡಿದರೆಂದು ನನಗೀಗ ಒಂದು ಪದವೂ ನೆನಪಿಗೆ ಬರುತ್ತಿಲ್ಲ. ಆಗ ಅಲ್ಲಿಯೇ ಗುಂಪುಗುಂಪಾಗಿ ಓಡಾಡುತ್ತಿದ್ದ, ಅಂಗನವಾಡಿಯ ಕಾರ್ಯಕರ್ತೆಯರ ಒಂದು ಗುಂಪು ನಮ್ಮ ಹತ್ತಿರಕ್ಕೆ ಬಂದಿತ್ತು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಜಿ.ಎಸ್.ಎಸ್. ತಮ್ಮ ಎಡಗಣ್ಣನ್ನು ಪಟಾರನೆ ಆ ಗುಂಪಿನ ಕಡೆಗೆ ಹೊಡೆದರು. ನಂತರ ಇನ್ನೇನೋ ಹೇಳಿ ಸ್ಕೂಲಿನ ಕಡೆ ಹೊರಟರು. ನಾನು ನೋಡುವಷ್ಟರಲ್ಲಿ ಆ ಹೆಂಗಳೆಯರ ಗುಂಪಿಲ್ಲಿದ್ದ ಒಂದು ಹುಡುಗಿ, ‘ಥೂ’ ಎಂದು ನಮ್ಮ ಕಡೆಗೆ ಉಗಿಯುತ್ತಿದ್ದಳು! ಆಗಲೇ ನನಗೇ ಅರ್ಥವಾಗಿದ್ದು, ಜಿ.ಎಸ್.ಎಸ್. ಆ ಹುಡುಗಿಯರಿಗೆ ಕಣ್ಣು ಹೊಡೆಯಲೆಂದೇ ನನ್ನನ್ನು ಹುಡುಕಿಕೊಂಡು ಮಾತನಾಡಿಸಲು ಬಂದಿದ್ದರೆಂದು!
ಹೈಸ್ಕೂಲ್ ಕ್ಲರ್ಕ್ ಮತ್ತು ಮೆಳೆಯಮ್ಮನ ಪ್ರಸಾದ
ನನ್ನ ಹೈಸ್ಕೂಲಿಗೆ ಒಬ್ಬ ಕ್ಲರ್ಕ್ ಕೂಡಾ ಇದ್ದ. ಆತನ ಹೆಸರೇನು ಎಂಬುದೇ ನನಗೆ ಈಗ ಮರೆತು ಹೋಗಿದೆ! ಏಕೆಂದರೆ ಆತ ಕ್ಲರ್ಕ್ ಮಾತ್ರ ಆಗಿದ್ದ! ಆತ ನಮ್ಮ ಮೇಲೆ ಯಾವುದೇ ಪ್ರಭಾವ ಬೀರುವಷ್ಟು ದೊಡ್ಡ ವ್ಯಕ್ತಿಯಾಗಿರಲಿಲ್ಲ. ಆದರೂ ಆತನ ಒಂದು ವಿಚಿತ್ರ ಹವ್ಯಾಸವನ್ನು ಇಲ್ಲಿ ಹೇಳಬಯಸುತ್ತೇನೆ.
ಆತ ಹಾಸನದಿಂದಲೋ ಶಾಂತಿಗ್ರಾಮದಿಂದಲೋ ನಿತ್ಯವೂ ಬಂದು ಹೋಗುತ್ತಿದ್ದ. ಸೋಮವಾರ ಬಿಟ್ಟರೆ ಇನ್ಯಾವತ್ತೂ ಆತ ಮಧ್ಯಾಹ್ನದ ಊಟ ತರುತ್ತಿರಲಿಲ್ಲ! ಉಳಿದ ದಿನಗಳೆಲ್ಲಾ ಆತನ ಮಧ್ಯಾಹ್ನದ ಊಟಕ್ಕೆ ಮೆಳೆಯಮ್ಮನ ಪ್ರಸಾದವೇ ಗತಿ. ಆತ ಮಾಡುತ್ತಿದ್ದುದು ಇಷ್ಟೆ. ಮಧ್ಯಾಹ್ನ ಲಂಚ್ ಅವರ್ ಆದ ಮೇಲೆ, ಮತ್ತೆ ತರಗತಿಗಳು ಸೇರಲು ಬೆಲ್ ಆಗುತ್ತಿದ್ದಂತಯೇ ಆತ ಒಂದೆರಡು ಫೈಲ್ ಹಿಡಿದುಕೊಂಡು ಹೊರಡುತ್ತಿದ್ದ. ನಾನು ಮೊದಲೇ ಹೇಳಿದಂತೆ ಅಲ್ಲಿದ್ದ ಮೆಳೆಯಮ್ಮ ಎಂಬ ರಕ್ತದೇವತೆಗೆ ಪ್ರತಿ ದಿನವೂ ಪ್ರಾಣಿಬಲಿ ಇರುತ್ತಿತ್ತು. ದಿನವೂ ನೂರಾರು ಜನ ಕುರಿ ಕೋಳಿ ಬಲಿ ಕೊಡುತ್ತಿದ್ದರು. ಹಾಗೆ ಕೊಟ್ಟ ಬಲಿಯನ್ನು ಅಲ್ಲಿಯೇ ಅಡುಗೆ ಮಾಡಿ, ಮೇಳೆಯಮ್ಮನ ಭೂತಗಳಿಗೆ ಎಡೆ ಹಾಕಿ, ತಾವೂ ಊಟ ಮಾಡಿಕೊಂಡು ಹೊರಡುತ್ತಿದ್ದರು. ದೂರದ ಊರುಗಳಿಂದಲೂ ಗಾಡಿ, ಟ್ರಾಕ್ಟರ್, ಲಾರಿಗಳಲ್ಲಿ ಜನ ಈ ರೀತಿ ಹರಕೆ ತೀರಿಸಲು ಬರುತ್ತಿದ್ದರು. ಇತ್ತ ಫೈಲ್ ಹಿಡಿದುಕೊಂಡು ಹೊರಡುತ್ತಿದ್ದ ನಮ್ಮ ಕ್ಲರ್ಕ್ ಮಹಾಶಯ ಗಾಡಿಗಳ ದಟ್ಟಣೆಯಿರುವಲ್ಲಿಗೆ ಹೋಗಿ, ಎರಡು ಮೂರು ಗಾಡಿಯವರಿಗೆ ಕಾಣುವಂತೆ ಫೈಲ್ ನೋಡುತ್ತಾ ಕುಳಿತುಬಿಡುತ್ತಿದ್ದ. ಗ್ರಾಮೀಣ ಜನರಿಗೆ ಸಹಜವಾಗಿಯೇ ಬಂದಿರುವ ಗುಣದಂತೆ, ಯಾರಾದರೂ ಒಬ್ಬರು ಮಾತನಾಡಿಸುತ್ತಿದ್ದರು. ಹೀಗೇ ಮಾತನಾಡುತ್ತಾ, ಊಟದ ಸಮಯವಾದಾಗ ಊಟಕ್ಕೇಳಿಸುತ್ತಿದ್ದರು. ಚೆನ್ನಾಗಿ ಊಟ ಮಾಡಿ ಮತ್ತೆ ಸ್ಕೂಲಿಗೆ ಹಿಂತಿರುಗುತ್ತಿದ್ದ. ಸುಮಾರು ನಲವತ್ತು ನಲವತ್ತೈದರ ಪ್ರಾಯದ ಆ ಕ್ಲರ್ಕ್‌ನ ಗುಡಾಣದಂತಹ ಹೊಟ್ಟೆಗೆ ಆತನ ಈ ರೀತಿಯ ದಿನಚರಿಯೇ ಕಾರಣವಾಗಿತ್ತು!

Thursday, April 23, 2009

ಅನಾಮಿಕನ ನೆನವರಿಕೆಯಲ್ಲಿ.....

[ಮೊದಲ ಮಾತು: ನೆನ್ನೆ ಕಂಪ್ಯೂಟರಿನಿಲ್ಲಿದ್ದ ಅನುಪಯುಕ್ತ ಫೈಲುಗಳನ್ನು ಹುಡುಕಿ ಡಿಲೀಟ್ ಮಾಡುತ್ತಿದ್ದೆ. ಆಗ ಈ ಕಥೆ ಕಣ್ಣಿಗೆ ಬಿತ್ತು! ಆಶ್ಚರ್ಯವೆಂದರೆ ಅದನ್ನು ಯಾವಾಗ ಬರೆದಿದ್ದೆ ಎಂಬುದೇ ನನಗೆ ಮರೆತು ಹೋಗಿತ್ತು! ಈ ಕಥೆ ನನ್ನದೇ ಅಥವಾ ಬೇರೆ ಯಾರದ್ದೋ ಎಂಬ ಅನುಮಾನವೂ ಬಂತು. ಆದರೆ ಕಥೆಯ ಕೊನೆಯಲ್ಲಿ (ನನ್ನ ಅಭ್ಯಾಸದಂತೆ) ಟೈಪ್ ಮಾಡಿದ್ದ ನನ್ನ ಹೆಸರು, ಫೋನ್ ನಂಬರ್ ಮತ್ತು ಈ-ಮೇಲ್ ವಿಳಾಸ ಎಲ್ಲವೂ ಇತ್ತು! ಕೊನೆಗೆ ಆ ಫೈಲ್ ಕ್ರಿಯೇಟ್ ಆದ ದಿನಾಂಕವನ್ನು ಪರಿಶೀಲಿಸಿದೆ. ನನ್ನದೇ ಕಂಪ್ಯೂಟರಿನಲ್ಲಿ ಸುಮಾರು ಒಂಬತ್ತು ತಿಂಗಳ ಹಿಂದೆ 28.06.2008ರಲ್ಲಿ ಕ್ರಿಯೇಟ್ ಆಗಿತ್ತು. ಆಗ ನನಗೆ ನೆನಪಿಗೆ ಬಂತು. ಜುಲೈ ಹನ್ನೊಂದಕ್ಕೆ ನನ್ನ ಪಿಹೆಚ್.ಡಿ. ವೈವ ನಡೆದಿತ್ತು. ಕೇವಲ ಒಂದೆರಡು ವಾರದ ಮುಂಚೆ ವೈವಾದ ದಿನಾಂಕ ನನಗೆ ಗೊತ್ತಾಗಿತ್ತು. ಆ ಗಡಿಬಿಡಿಯಲ್ಲಿ ನಾನೇ ಸ್ವತಃ ಟೈಪಿಸಿದ ಕಥೆಯನ್ನು ನಾನು ಮರೆತೇಬಿಟ್ಟಿದ್ದೆ! ಎಂದು. ಅದನ್ನು ಟೈಪಿಸಿದ ಮೇಲೆ ಓದಿಯೇ ಇಲ್ಲ ಎಂದು ಅದರಲ್ಲಿದ್ದ ಸಾಕಷ್ಟು ಕಾಗುಣಿತದ ತಪ್ಪುಗಳು ಎತ್ತಿ ತೋರಿಸುತ್ತಿದ್ದವು. ಆ ಅಕ್ಷರದ ತಪ್ಪುಗಳನ್ನಷ್ಟೇ ತಿದ್ದಿ, ಅದು ಹೇಗಿತ್ತೋ ಹಾಗೇ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ. ಇಷ್ಟವಾದರೆ ಸಂತೋಷ. ಇಲ್ಲದಿದ್ದರೆ ಮರೆತುಬಿಡಿ]

ಮುಂಬಾಗಿಲಿಗೆ ರಂಗೋಲಿಯಿಕ್ಕುತ್ತಿದ್ದ ರಜನಿಯ ಮೇಲೆ ಬಾಲರವಿಯ ಕಿರಣಗಳು ಲಾಸ್ಯವಾಡುತ್ತಿದ್ದವು. ಇಂದು ಅವಳ ಮನಸ್ಸು ಪ್ರಪುಲ್ಲವಾಗಿತ್ತು. ಎಂದೂ ನೆನಪಿಗೆ ಬರದ ಆ ‘ಅನಾಮಿಕ’ ಇಂದು ಬೆಳಿಗ್ಗೆ ಹಾಸಿಗೆಯಿಂದೇಳುವಾಗಲೇ ನೆನಪಾಗಿದ್ದ. ಅದರ ಬಗ್ಗೆಯೇ ಯೋಚಿಸುತ್ತಾ ದೈನಂದಿನ ಕೆಲಸದಲ್ಲಿ ತೊಡಗಿದಳು. ಆದರೆ ರಂಗೋಲಿಯಿಡಲು ಬರುವಷ್ಟರಲ್ಲಿ ‘ಇಂದೇಕೆ ಆತ ಇಷ್ಟೊಂದು ನೆನಪಾಗುತ್ತಿದ್ದಾನೆ?’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಆತ ಯಾರೋ, ಏನೋ. ಸುಮಾರು ಆರು ತಿಂಗಳಿನಿಂದ ನಾನು ಅವನನ್ನು ಗಮನಿಸುತ್ತಿರಬಹುದು. ವಾರದಲ್ಲಿ ಐದು ದಿನ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ಒಂಬತ್ತೂಕಾಲರ ಸುಮಾರಿಗೆ ನಾನು ನಡೆಯುವ ದಾರಿಯಲ್ಲಿ ಆತ ಬೈಕಿನಲ್ಲಿ ಸಾಗಿ ಹೋಗುತ್ತಾನೆ ಅಷ್ಟೆ. ಅದೇ ವೇಳೆಗೆ, ಒಂದೆರಡು ನಿಮಿಷಗಳ ವ್ಯತ್ಯಾಸದಲ್ಲಿ ನಾನೂ ಕತ್ರಿಗುಪ್ಪೆಯಿಂದ ಹೊರಟು ವಾಟರ್ ಟ್ಯಾಂಕ್ ಸರ್ಕಲ್ ಬಳಿಯಿರುವ ಆಫೀಸಿಗೆ ಹೋಗುತ್ತಿರುತ್ತೇನೆ. ಸುಮಾರು ಅರ್ಧ ಕಿಲೋಮೀಟರ್ ನೇರವಾಗಿ ಇರುವ ರಸ್ತೆಯ ಯಾವುದಾದರೊಂದು ಜಾಗದಲ್ಲಿ ಆತ ಎದುರಿನಿಂದ ಬೈಕಿನಲ್ಲಿ ಬರುತ್ತಾನೆ. ಕಂಡಷ್ಟೇ ವೇಗವಾಗಿ ಮಾಯವಾಗುತ್ತಾನೆ. ಅಷ್ಟೆ, ಒಂದು ನಗುವಿಲ್ಲ. ನೋಟಗಳ ವಿನಿಮಯ ಇದ್ದಿರಬಹುದೇನೋ ನೆನಪಿಗೆ ಬರುತ್ತಿಲ್ಲ. ಅದೇಕೆ ಇಂದು ನೆನಪಾದ? ಎಂದುಕೊಂಡಳು. ಬಹುಶಃ ಆತನಿಗೂ ನನ್ನಂತೆಯೇ ಆಗಿರಬಹುದು ಅನ್ನಿಸಿತು. ತಕ್ಷಣ ಆ ಬಾವನೆಯೇ ಅವಳಿಗೆ ಮತ್ತೆ ಮತ್ತೆ ಇಷ್ಟವಾಗತೊಡಗಿತು. ಅದು ಅವಳ ಗಮನಕ್ಕೂ ಬಂತು.
ಒಳಗೆ ಬರುವಷ್ಟರಲ್ಲಿ ಅತ್ತಿಗೆ ಮಕ್ಕಳಿಗೆ ಹಲ್ಲುಜ್ಜಿಸುತ್ತಿದ್ದರು. ಮೂವತ್ತನ್ನು ದಾಟದ ಅತ್ತಿಗೆಗೆ ಎರಡು ಮಕ್ಕಳ ತಾಯಿ. ಮೂವತ್ತು ದಾಟುತ್ತಿರುವ ನಾನಿನ್ನೂ ಕನ್ಯೆ! ಆದರೆ ಅತ್ತಿಗೆ ವಿಧವೆ. ನಮ್ಮಿಬ್ಬರಲ್ಲಿ ಯಾರು ಹೆಚ್ಚು ಸುಖಿ? ಎಂಬ ಪ್ರಶ್ನೆ ಮನಸ್ಸಿಗೆ ಬಂತು. ದಿನನಿತ್ಯದ ಕೆಲಸಗಳು ಯಾಂತ್ರಿಕವಾಗಿ ಸಾಗುತ್ತಿದ್ದವು. ಅತ್ತಿಗೆ ಏನೇನೋ ಮಾತನಾಡುತ್ತಿದ್ದರು. ‘ನೆನ್ನೆ ಬಂದ ಬಂಡಲ್ಲಿನಲ್ಲಿ ಹೆಚ್ಚು ಹರಿದು ಹೋಗಿದ್ದ ಪೇಪರ್‌ಗಳು, ತೂಕ ಹೆಚ್ಚು ಕಮ್ಮಿ ಮಾಡುವ ಅಂಗಡಿಯ ಶೆಟ್ಟಿ, ಮಕ್ಕಳು ರಬ್ಬರ್ ಹರಿದು ಎರಡು ಭಾಗ ಮಾಡಿರುವುದು’ ಹೀಗೇ ಏನೇನೋ. ಆದರೆ ರಜನಿ ಅನಾಮಿಕನ ನೆನಪಲ್ಲಿ ಮುಳುಗಿ ಹೋದಳು. ಆ ದಾರಿಯಲ್ಲಿ ತಾನು ನಡೆದುಕೊಂಡು ಹೋಗುವಷ್ಟರಲ್ಲಿ ಕನಿಷ್ಟ ನೂರಾದರೂ ಬೈಕ್‌ಗಳು ಸಾಗಿ ಹೋಗುತ್ತವೆ. ಅವರಂತೆಯೇ ಈತನೂ ಒಬ್ಬ. ಆದರೂ ಆತನ ನೆನಪೇಕೆ? ಗೆರೆಯೆಳೆದಂತೆ ಬೈತಲೆ ತೆಗೆದು ಬಾಚಿದ ತಲೆ, ದುಂಡಾದ ಮುಖ, ಷರ್ಟ್ ಇನ್ ಮಾಡಿದ ಅರ್ಧತೋಳಿನ ಅಂಗಿ, ಬೆನ್ನಿಗೇರಿದ್ದ ಬ್ಯಾಗ್, ಕನ್ನಡಿಗೆ ನೇತುಹಾಕಿದ ಹೆಲ್ಮೆಟ್ ಎಲ್ಲವೂ ಕಣ್ಣಿಗೆ ಕಟ್ಟುವಂತೆ ನೆನಪಾಗುತ್ತಿವೆ.
* * *
ದಿನಗಳು ಕಳೆಯುತ್ತಿದ್ದವು. ಅಣ್ಣ ಬದುಕಿದ್ದರೆ ನನಗೂ ಇಷ್ಟೊತ್ತಿಗೆ ಮದುವೆಯಾಗುತ್ತಿತ್ತು. ಬಹುಶಃ ಒಂದೆರಡು ಮಕ್ಕಳೂ ಆಗಿರುತ್ತಿದ್ದವು. ಆದರೆ ದುರದೃಷ್ಟ ಬೆಂಬಿಡದಂತೆ ಕಾಡುತ್ತಿದೆ. ಹದಿನೈದು ವರ್ಷದ ಹಿಂದೆ, ಜಾತಿಯ ಜಗಳಕ್ಕೆ ಸುಟ್ಟು ಹೋಗಿದ್ದ ಮನೆ, ಸತ್ತು ಹೋಗಿದ್ದ ಅಪ್ಪ, ದೊಡ್ಡಪ್ಪ, ಅವ್ವಂದಿರು ತಮ್ಮಂದಿರು ಎಲ್ಲಾ ನೆನಪಾದರು. ಬರೀ ಎಡಗೈಗಷ್ಟೇ ಸುಟ್ಟಗಾಯ ಮಾಡಿಕೊಂಡು ಬದುಕುಳಿದ ನಾನು ಎಲ್ಲರ ಆಶ್ಚರ್ಯಕ್ಕೆ ಕಾರಣಳಾಗಿದ್ದೆ. ಆದರೆ ಊರಿನಿಂದ ಕದ್ದು ಓಡಿಹೋಗಿದ್ದ ದೊಡ್ಡಪ್ಪನ ಮಗ, ಈ ಅಣ್ಣ ಪತ್ರಿಕೆಯಲ್ಲಿ ವಿಷಯ ತಿಳಿದು ಊರಿಗೆ ಬಂದಿದ್ದ. ಮಾಡಬೇಕಾದ ಕಾರ್ಯ ಮಾಡಿ, ಬದುಕುಳಿದಿದ್ದ ನನ್ನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ. ಆಶ್ಚರ್ಯವೆಂದರೆ ಅಣ್ಣ ನಮಗಾರಿಗೂ ತಿಳಿಯದಂತೆ, ಇನ್ನೂ ಹದಿನೆಂಟು ತುಂಬಿರದ ಸರೋಜಳನ್ನು ಮದುವೆಯಾಗಿದ್ದ. ನಾನು ಮನೆಯೊಳಗೆ ಕಾಲಿಡುತ್ತಲೇ ಆಕೆ ಪ್ರೀತಿಯಿಂದ ಸ್ವಾಗತಿಸಿದಳು. ಒಳ್ಳೆಯ ಗೆಳತಿಯೂ ಆದಳು.
ಆಟೋ ಓಡಿಸುತ್ತಿದ್ದ ಅಣ್ಣ ನನ್ನ ವಿದ್ಯಾಭ್ಯಾಸಕ್ಕೂ ನೆರವಾದ. ನಾನು ಡಿಗ್ರಿ ಮುಗಿಸುವಷ್ಟರಲ್ಲಿ ಅವರಿಗೆ ಎರಡು ಮಕ್ಕಳಾದವು. ದುರದೃಷ್ಟವೆಂದರೆ, ನನ್ನ ಮದುವೆಯ ಮಾತನಾಡುತ್ತಿದ್ದ ಅಣ್ಣ ಅಪಘಾತವೊಂದರಲ್ಲಿ ದುರ್ಮರಣವನ್ನಪ್ಪಿದ. ನನಗೆ ಪ್ರಕಾಶನ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿ ಆರು ತಿಂಗಳೂ ಆಗಿರಲಿಲ್ಲ. ನಾನೂ, ಅತ್ತಿಗೆ ಮಕ್ಕಳು ಬೀದಿಗೆ ಬೀಳಬೇಕಾದ ಸಂದರ್ಭ. ಆದರೆ ಅಣ್ಣ ಸತ್ತೂ ನಮ್ಮನ್ನು ಕಾಪಾಡಿದ್ದ. ಆತನ ಇನ್ಷ್ಯೂರೆನ್ಸ್ ಮತ್ತು ಆತನ ಆಟೋಗೆ ಡಿಕ್ಕಿ ಹೊಡೆದಿದ್ದ ಲಾರಿಯವರ ಕಡೆಯಿಂದ ಬಂದ ಪರಿಹಾರ ಎಲ್ಲಾ ಸೇರಿ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಸಿಕೊಳ್ಳುವಷ್ಟರ ಮಟ್ಟಿಗೆ ಸಹಾಯವಾಯಿತು. ನಂತರ ಅತ್ತಿಗೆ ನಾನೂ ಕುಳಿತು ಮುಂದಿನ ಜೀವನದ ಬಗ್ಗೆ, ಮಕ್ಕಳ ಬಗ್ಗೆ ಮಾತನಾಡಿದೆವು. ಅತ್ತಿಗೆಯೂ ಪೇಪರ್‌ನಲ್ಲಿ ಕವರ್ ಮಾಡುವುದನ್ನು ಕಲಿತು, ಮನೆಯಲ್ಲಿಯೇ ಒಂದಿಷ್ಟು ಸಂಪಾದನೆಗೆ ದಾರಿ ಮಾಡಿಕೊಂಡರು. ನನಗೆ ಬರುವ ಸಂಬಳದಲ್ಲಿ ಮನೆ ನಡೆಯುತ್ತಿತ್ತು. ಆಗಾಗ ಅತ್ತಿಗೆ ನನ್ನ ಮದುವೆಯ ಬಗ್ಗೆ ಮಾತು ತೆಗೆದರೂ ನಾನು ಬಾಯಿ ಮುಚ್ಚಿಸಿಬಿಡುತ್ತಿದ್ದೆ.
ಆ ಬೈಕ್ ಹುಡುಗನ ನೆವದಿಂದಾಗಿ ಇಂದು ಹಿಂದಿನದೆಲ್ಲಾ ನೆನಪಿಗೆ ಬಂತು. ಯಾವುದಾದರೂ ಒಂದುದಿನ ಆತನನ್ನು ಮಾತನಾಡಿಸಬೇಕು ಎನ್ನಿಸಿತು. ಅವನಿಗೂ ಹಾಗೇ ಅನ್ನಿಸಿರಬಹುದೆ? ಎಂಬ ಪ್ರಶ್ನೆಯೂ ಎದುರಾಯಿತು. ಹೆಣ್ಣಾದ ನಾನೇ ಮೇಲೆ ಬಿದ್ದು ಮಾತನಾಡಿಸುವುದು ಸರಿಯೇ? ಎಂಬ ಗೊಂದಲವೂ ಎದುರಾಯಿತು. ಕೇವಲ ನಗುವಿನ ವಿನಿಮಯವಾದರೂ ನಡೆಯಬಾರದೇ ಎನ್ನಿಸಿತು.
* * *
ಆತ ಯಾರೋ? ಏನೋ? ಹೀಗೆ ಪ್ರತಿನಿತ್ಯ ಠಾಕುಠೀಕಾಗಿ ಹೋಗುವದನ್ನು ನೋಡಿದರೆ, ಯಾವುದೋ ಒಳ್ಳೆಯ ಕೆಲಸದಲ್ಲಿಯೇ ಇರಬೇಕು. ಶನಿವಾರ ಭಾನುವಾರ ಬರದೇ ಇರುವುದನ್ನು ನೋಡಿದರೆ, ಸೆಂಟ್ರಲ್ ಗೌವರ್‍ನಮೆಂಟೋ, ಎಂ.ನ್.ಸಿ.ಯಲ್ಲೋ ಕೆಲಸಕ್ಕಿರಬೇಕು. ಮದುವೆಯಾಗಿರಬೇಕು. ಅವನ ಸಂಸಾರ ಸುಖವಾಗಿ ಇರಬೇಕು. ಇನ್ನೂ ಏನೇನೋ ಯೋಚನೆಗಳು ತಲೆ ತುಂಬಿಕೊಳ್ಳತೊಡಗಿದವು. ಬಹುಶಃ ಮದುವೆಯಾಗಿರಲಾರದು. ನೋಡಿದರೆ ಇಪ್ಪತ್ತೇಳು ಇಪ್ಪತ್ತೆಂಟರ ಹಾಗೆ ಕಾಣುತ್ತಾನೆ. ಆತನಿಗಿನ್ನೂ ಮದುವೆಯಾಗಿರಲಾರದು ಎಂಬ ಯೋಚನೆ ಮನಸ್ಸಿಗೆ ಇಷ್ಟವಾಗತೊಡಗಿ, ಆಶ್ಚರ್ಯವೂ ಆಯಿತು. ಅಯ್ಯೋ ಮದುವೆಯಾಗದಿದ್ದರೆ ತಾನೆ ಏನು ಪ್ರಯೋಜನ? ಅವನೇನು ನನ್ನನ್ನು ಮದುವೆಯಾಗುತ್ತಾನೆಯೇ? ಎಡಗೈಯಲ್ಲಿ ಸುಟ್ಟಗಾಯದ ದೊಡ್ಡ ಗುರುತು. ನಾನೋ ನೋಡಲು ಸ್ವಲ್ಪ ಕಪ್ಪು ಬೇರೆ. ಅದಕ್ಕೆ ಒಪ್ಪವಿಟ್ಟಂತೆ ಹೆಸರು ರಜನಿ. ಅಪ್ಪ ರಜನಿಕಾಂತನ ಅಭಿಮಾನಿ. ಗಂಡು ಮಗುವಾದರೆ ರಜನಿಕಾಂತನ ಹೆಸರನ್ನೇ ಇಡುತ್ತೇನೆ ಅಂದಿದ್ದನಂತೆ. ಆದರೆ ಹುಟ್ಟಿದ್ದು ನಾನು, ಹೆಣ್ಣು. ರಜನಿಯೆಂದೇ ಹೆಸರಿಟ್ಟ. ಕಾಲೇಜಿನ ಕೊನೆಯ ವರ್ಷದಲ್ಲಿ ಎಕಾನಾಮಿಕ್ಸ್ ಲೆಕ್ಚರರ್, ನಿನಗೆ ರಜನಿ ಎನ್ನುವ ಹೆಸರು ಚೆನ್ನಾಗಿ ಒಪ್ಪುತ್ತದೆ ಎಂದಿದ್ದರು. ಏಕೆ? ಎಂದಿದ್ದಕ್ಕೆ, ಕಪ್ಪಗಿರುವವರಿಗೆ ಆ ಹೆಸರು ಚೆನ್ನಾಗಿರುತ್ತದೆ ಎಂದು ಬೆಳ್ಳಗಿನ ಕೈಗಳನ್ನು ತಿರುಗಿಸುತ್ತಾ ಹೇಳಿದ್ದರು.
* * *
ಈ ಬೈಕ್ ಸುಂದರಾಂಗನಿಂದ ನನಗೆ ಬಿಡುಗಡೆಯೇ ಇಲ್ಲ. ಹಗಲು ರಾತ್ರಿ ಎನ್ನದೆ ನೆನಪಾಗುತ್ತಾನೆ. ಮಾತನಾಡಿಸಿಯೇ ಬಿಡುತ್ತೇನೆ ಎಂದು, ಪ್ರತಿನಿತ್ಯ ಎಡಬದಿಯಲ್ಲಿ ನಡೆಯುತ್ತಿದ್ದವಳು ಮೊನ್ನೆ ಬಲಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಅವನ ನಡುವಿನ ಅಂತರ ಆರೇಳು ಮೀಟರಿನಿಂದ ಒಂದೆರಡು ಮೀಟರ್‌ಗೆ ಇಳಿದಿತ್ತು. ಆದರೆ ಆತನ ಕಣ್ಣುಗಳನ್ನು ನಾನು ನೋಡುವುದರಲ್ಲಿ ಮುಂದೆ ಸಾಗಿಬಿಟ್ಟ. ಆತನಿಗೆ ಒಮ್ಮೆಯಾದರೂ, ಈ ಹುಡುಗಿಯನ್ನು ದಿನವೂ ನೋಡುತ್ತಿದ್ದೇನಲ್ಲ ಅನ್ನಿಸಿರುವುದಿಲ್ಲವೆ? ಅನ್ನಿಸಿರದೆ ಏನು? ಈಗಿನ ಹುಡುಗರು ಸ್ವಲ್ಪ ಹಮ್ಮು ಬಿಮ್ಮು ಅಷ್ಟೆ. ಇನ್ನು ಪ್ರತಿ ದಿನ ಬಲಬದಿಯಲ್ಲೇ ನಡೆದುಕೊಂಡು ಹೋಗಿ ನೋಡುತ್ತೇನೆ. ಒಮ್ಮೆ ನಕ್ಕು, ಪರಿಚಯಕ್ಕೆ ಇಳಿದು ಬಿಟ್ಟರೆ ಸಾಕು. ನೀನು ನನ್ನನ್ನು ರಾತ್ರಿಯಿಡೀ ಕಾಡುತ್ತೀಯ ಏಕೆ? ಎಂದು ಕೇಳುತ್ತೇನೆ. ಈ ಅನಿಸಿಕೆಗೆ ಅವಳಿಗೇ ನಗುಬಂತು. ನಾನಾಗೇ ಮೇಲೆಬಿದ್ದು ಮದುವೆ ಆಗು ಎಂದರೂ ಈ ಕರಿಮೂತಿಯನ್ನು, ಆತ ಒಪ್ಪುತ್ತಾನೆಯೇ? ಸುಟ್ಟಗಾಯದ ಕೈ ನೋಡಿಯೇ ಓಡಿಹೋಗುತ್ತಾನೇನೋ? ಆದರೂ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರಲ್ಲ, ಅದು ನನ್ನ ವಿಷಯದಲ್ಲಿ ಏಕೆ ನಿಜವಾಗಬಾರದು?
* * *
ಇಂದು ಆತನನ್ನು ಮಾತನಾಡಿಸಿಯೇ ತೀರುತ್ತೇನೆ ಎಂದು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿ ನಡೆಯುತ್ತಿದ್ದ ರಜನಿಗೆ, ಒಂದು ಕ್ಷಣ ಆತ ಬರದಿದ್ದರೆ ಎನ್ನಿಸಿ ಭಯವಾಯಿತು. ನಾನು ಆತನನ್ನು ಮಾತನಾಡಿಸದಿದ್ದರೆ ಅಷ್ಟೆ ಹೋಯಿತು. ಆತ ಬಂದರೆ ಸಾಕು. ನಾನೂ ನಿನ್ನನ್ನು ನೋಡುತ್ತಿದ್ದೆ ಎನ್ನುವಂತೆ ಒಂದು ನಗು ನಕ್ಕರೆ ಸಾಕು. ದಾರಿಯಲ್ಲಿ ಬೈಕ್ ಏನೋ ಬಂತು. ಆದರೆ ಒಂದೇ ಕೈಯಲ್ಲಿ ಬೈಕ್ ಓಡಿಸುತ್ತಾ, ಇನ್ನೊಂದು ಕೈಯನ್ನು ಕಿವಿಯ ಬಳಿ ಹಿಡಿದುಕೊಂಡು ಬರುತ್ತಿದ್ದ. ವೇಗ ತುಂಬಾ ಕಡಿಮೆಯಾಗಿತ್ತು. ಬಹುಶಃ ಮೊಬೈಲ್‌ನಲ್ಲಿ ಮಾತನಾಡುತ್ತಾ ಬರುತ್ತಿರಬೇಕು. ನನ್ನ ಬಳಿಗೆ ಬರುವಷ್ಟರಲ್ಲಿ ಅದು ಕೊನೆಗೊಂಡರೆ ಖಂಡಿತ ಇಂದು ನಮ್ಮಿಬ್ಬರ ಪರಿಚಯ ನಿಶ್ಚಿತ ಎಂದುಕೊಂಡು ಕಣ್ಣು ಕೀಲಿಸಿ, ನಡಿಗೆ ನಿಧಾನವಾಗಿಸಿದಳು. ಬೈಕ್ ಕೂಡಾ ನಿಧಾನವಾಗಿಯೇ ಬಂತು. ಇನ್ನೇನು ನನ್ನ ಮುಂದೆ ನಿಲ್ಲುತ್ತದೆ ಎಂದುಕೊಳ್ಳುವಷ್ಟರಲ್ಲಿ ಬೈಕ್ ಮುಂದೆ ಹೊರಟೇ ಹೋಯಿತು. ಆದರೆ ಆತ ಪೋನಿನಲ್ಲಿ ಹೇಳುತ್ತಿದ್ದ ‘ಸ್ಸಾರಿ, ನನಗೆ ಒಪ್ಪಿಗೆಯಾಗಲಿಲ್ಲ’ ಎನ್ನುವ ಮಾತು ಕೇಳಿಸಿತು. ದ್ವನಿಯೇನೋ ಮಧುರವಾಗಿತ್ತು. ಆದರೆ ಆತನಿಗೆ ಯಾವುದು ಒಪ್ಪಿಗೆಯಾಗಲಿಲ್ಲ. ಅದಕ್ಕೆ ಸ್ಸಾರಿ ಏಕೆ? ಎನ್ನುವ ಪ್ರಶ್ನೆಗಳೆದ್ದವು. ಇಂದು ಅವನ ದ್ವನಿಯನ್ನಾದರೂ ಕೇಳಿದೆ ಎಂದು ಸಂಭ್ರಮಿಸುವ ಮುನ್ನವೇ ಈ ಪ್ರಶ್ನೆಗಳೆದ್ದುದ್ದು ಕಸಿವಿಸಿಯಾಯಿತು.
ಈ ಸಂದರ್ಭದಲ್ಲಿ ಅಣ್ಣನಿದ್ದಿದ್ದರೆ ಅವನ ಬಳಿ ತನ್ನ ಆಸೆ, ಆತಂಕ ಎಲ್ಲವನ್ನು ಹೇಳಿಕೊಳ್ಳಬಹುದಾಗಿತ್ತು ಅನ್ನಿಸಿತು. ಅತ್ತಿಗೆಗೆ ಹೇಳಿದರೆ ಏನೆಂದುಕೊಳ್ಳುತ್ತಾರೋ? ಬೈಕ್ ಚೆಲುವನಿಗೆ ಒಪ್ಪಿಗೆಯಾಗದ್ದು ಏನು? ಮನೆಯಲ್ಲಿ ಆತನಿಗೆ ಹುಡುಗಿ ನೋಡುತ್ತಿರಬೇಕು. ಅದು ತನಗೆ ಇಷ್ಟವಾಗಲಿಲ್ಲ ಅಂದನೇನೋ. ಅಯ್ಯೋ, ಆತನಿಗೆ ಮದುವೆಯಾದರೆ ಈ ದಾರಿಯಲ್ಲಿ ಇನ್ನು ಬರುವುದಿಲ್ಲ. ಅವನಿಗೆ ಮದುವೆಯಾಗದಿರಲಿ, ಮದುವೆ ಗೊತ್ತಾಗದಿರಲಿ, ನಾನು ಅವನನ್ನು ಮಾತನಾಡಿಸಿ, ಪ್ರೀತಿಸಿ ಮದುವೆಯಾಗುವವರೆಗೂ... ಎಂದು ಏನೇನೋ ಹಲುಬಿಕೊಂಡಳು. ಛೇ, ನನ್ನ ಮನಸ್ಸು ಇಷ್ಟೊಂದು ದುರ್ಬಲವೇ? ನಾಳೆಯಿಂದ ಅವನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿಕೊಂಡಳು. ತನ್ನ ಅಣ್ಣ, ಅಪ್ಪ ಅಮ್ಮ ಎಲ್ಲರ ಮೇಲೂ ಆಣೆ ಇಟ್ಟುಕೊಂಡಳು. ಸ್ಕೂಲಿನಲ್ಲಿ ಯಾವಾಗಲೋ ಕಲಿತಿದ್ದ, ‘ಮಸುಕಿದ ಮಬ್ಬಿನಲಿ ಕೈಹಿಡಿದು ನಡೆಸನ್ನೆನು’ ಹಾಡನ್ನು ಹೇಳಿಕೊಳ್ಳತೊಡಗಿದಳು.
ಮಾರನೇ ದಿನ ಹಠ ಹಿಡಿದವಳಂತೆ ಹಾಡನ್ನು ಹೇಳಿಕೊಳ್ಳುತ್ತಲೇ, ದಾರಿಯಲ್ಲಿ ಬರುತ್ತಿದ್ದಳು. ಎಷ್ಟೊತ್ತಾದರೂ ಬೈಕ್ ಬರಲೇ ಇಲ್ಲ. ವಾಚ್ ನೋಡಿಕೊಂಡಳು. ದಿನ ಬಿಡುವ ಹೊತ್ತಿಗೆ ಮನೆಯನ್ನು ಬಿಟ್ಟಿದ್ದಳು. ಆದರೂ ಆತ ಬರಲಿಲ್ಲ. ಹೇಳಿಕೊಳ್ಳುತ್ತಿದ್ದ ಹಾಡು ನಿಂತು ಹೋಗಿತ್ತು. ಇಂದು ಆತನೇಕೆ ಬರಲಿಲ್ಲ? ಪ್ರಶ್ನೆ ಪಿಶಾಚಿಯಂತೆ ಪ್ರಥ್ಯಕ್ಷವಾಗಿತ್ತು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ಅರಿತು, ಸ್ವಲ್ಪ ದೂರ ಹಿಂದೆ ಬಂದು ಮತ್ತೆ ನಿಧಾನವಾಗಿ ನಡೆದಳು. ಆದರೂ ಬೈಕ್ ಬರಲಿಲ್ಲ. ನಿರಾಶಳಾಗಿ ಅಫಿಸಿಗೆ ಹೋದಳು.
* * *
ಮೊದಲ ಬಾರಿಗೆ- ಆತನ ನೆನಪಿನಲ್ಲಿ ನಿಂತ ದಿನದಿಂದ ಇದೇ ಮೊದಲ ಬಾರಿಗೆ ಆತ ಬಂದಿರಲಿಲ್ಲ. ಆತನ ಬಗ್ಗೆಯೇ ಯೋಚಿಸುತ್ತಿದ್ದರೂ ಮನೆಯಲ್ಲಿ, ಆಫೀಸಿನಲ್ಲಿ ಅದನ್ನು ಅವಳು ತೋರಿಸಿಕೊಂಡಿರಲಿಲ್ಲ. ಆದರೆ ಇಂದು ಮಾತ್ರ ಅವಳಿಗೆ ತಡೆಯಲಾಗಲಿಲ್ಲ. ಕೆಲಸ ಮಾಡಲಾಗಲಿಲ್ಲ. ಹೇಗೋ ಮಧ್ಯಾಹ್ನದವರೆಗೂ ಆಪೀಸಿನಲ್ಲಿದ್ದು, ನಂತರ ಪರ್ಮಿಷನ್ ತೆಗೆದುಕೊಂಡು ಮನೆಗೆ ಬಂದಳು. ಇದೇ ಮೊದಲ ಬಾರಿಗೆ ಮಧ್ಯಾಹ್ನಕ್ಕೆ ಮನೆಗೆ ಬಂದ ರಜನಿಯನ್ನು ಕಂಡು ಸರೋಜಳಿಗೆ ಭಯ, ಆಶ್ಚರ್ಯ ಎಲ್ಲವೂ! ಏಕೋ ತಲೆ ನೋಯುತ್ತಿದೆ ಎಂಬ ಉತ್ತರಕ್ಕೆ ತೃಪ್ತಳಾಗದಿದ್ದರೂ, ರೆಸ್ಟ್ ತಗೋ ಎಂದು ಸಮಾಧಾನ ಹೇಳಿದಳು.
ಸಂಜೆ, ಏಳಾದರೂ ಎದ್ದು ಬಾರದ ರಜನಿಯನ್ನು ನೋಡಿ ಸರೋಜಳಿಗೆ ಗಾಬರಿಯಾಯಿತು. ಏಕೆ? ಏಕೆ? ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿದಳು. ಅದುವರೆಗೂ ಕಟ್ಟಿಕೊಂಡಿದ್ದ ಆತಂಕವೆಲ್ಲಾ ಮಾತಾಗಿ ಹೊರಗೆ ಬಂತು. ರಜನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಮಕ್ಕಳು ಟೀವಿ ನೋಡುತ್ತಿದ್ದುದರಿಂದ ಇಬ್ಬರೂ ವಿವರವಾಗಿ ಮಾತನಾಡಿದರು. ರಜನಿ ಆತನನ್ನೇ ಮದುವೆಯಾಗಬೇಕೆಂದು ಹಂಬಲಿಸುತ್ತಿರುವ ತನ್ನ ಮನದಾಳವನ್ನು ಹೇಳಿರಲಿಲ್ಲ. ಕೇವಲ ಆತ ಬರುದಿದ್ದುದಕ್ಕೆ ಆಗಿರುವ ಆತಂಕ, ಮತ್ತೆ ನೋಡುತ್ತೇನೋ ಇಲ್ಲವೋ ಎನ್ನುವ ಭಯ ಎನ್ನುವಂತೆ ಮಾತನಾಡಿದ್ದಳು. ರಜನಿ ಇನ್ನೊಂದೆರಡು ದಿನ ನೋಡು, ಆಗಲೂ ಬರದೇ ಇದ್ದರೆ, ಅವನ ಮನೆಯನ್ನು ಪತ್ತೆ ಹಚ್ಚಿ ಹೋಗಿ ನೋಡಿಕೊಂಡು ಬಾ. ಆದರೆ ಈ ರೀತಿ ಕೊರಗಿದರೆ ನನಗೆ ಭಯವಾಗುತ್ತದೆ ಎಂದಳು. ಮನೆ ಪತ್ತೆ ಹಚ್ಚುವುದು ಹೇಗೆ? ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡಿತು. ಅವನ ಬಗ್ಗೆ ನಿನಗೆ ಏನು ಗೊತ್ತು, ಎಂದಾಗ, ಅವನ ಬೈಕ್‌ನ ನಂಬರ್ ಅಷ್ಟೇ ಗೊತ್ತು ಎಂದಳು. ತಕ್ಷಣ ಸರೋಜ, ಹಾಗದರೆ ಅವನ ಮನೆಯನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ ಬಿಡು. ಇನ್ನೊಂದೆರಡು ದಿನ ನೋಡು, ಎಂದು ಸಮಾಧಾನ ಮಾಡಿದಳು.

* * *

ಒಂದು. ಎರಡು.. ಮೂರು... ದಿನಗಳು ಕಳೆದು ಹೋದವು. ಆತ ಬರಲೇ ಇಲ್ಲ. ಇತ್ತ ರಜನಿ ಮನೋರೋಗಿಯಂತಾಗಿದ್ದಳು. ಸಿಟಿಯಲ್ಲೇ ಹುಟ್ಟಿ ಬೆಳೆದಿದ್ದ ಸರೋಜಾ ಮಾತ್ರ ಎದೆಗುಂದಲಿಲ್ಲ. ಒಂದು ಬಾರಿ ಆತ ಯಾರು? ಏನಾದ ಎಂಬ ವಿಷಯಗಳು ತಿಳಿದರೆ ಇವಳ ಖಾಯಿಲೆ ಹುಷಾರಾದಂತೆಯೇ ಎಂದುಕೊಂಡಳು. ತನ್ನ ಗಂಡನ ಜೊತೆಯಲ್ಲಿಯೇ ಆಟೋ ಓಡಿಸಿಕೊಂಡಿದ್ದ ತನ್ನ ಚಿಕ್ಕಪ್ಪನನ್ನು ಕರೆದು, ಬೈಕ್ ನಂಬರ್ ಕೊಟ್ಟು ಅದರ ವಿಳಾಸವನ್ನು ಪತ್ತೆ ಮಾಡಿಕೊಡುವಂತೆ ಕೇಳಿಕೊಂಡಳು. ಇದರಿಂದಾಗಿ ರಜನಿಯೂ ಸ್ವಲ್ಪ ಉತ್ಸಾಹದಿಂದಲೇ ಇದ್ದಳು. ಚಿಕ್ಕಪ್ಪನಿಗೆ ಹಲವಾರೂ ಅನುಮಾನಗಳೂ ಹುಟ್ಟಿಕೊಂಡವು. ಆದರೆ ಸರೋಜ, ಆ ಬೈಕಿನಿಂದ ಬಿದ್ದ ಕೆಲವು ಕಾಗದ ಪತ್ರಗಳು ನನ್ನ ಸ್ನೇಹಿತೆಗೆ ಸಿಕ್ಕಿವೆ, ಅವುಗಳನ್ನು ಹಿಂತಿರುಗಿಸುವುದಕ್ಕೆ ಎಂದು ಸುಳ್ಳು ಹೇಳಿಬಿಟ್ಟಳು.
ಎರಡು ದಿನ ಕಳೆದು, ಸಂಜೆ ಅವಳ ಚಿಕ್ಕಪ್ಪ ಅಡ್ರೆಸ್ ಹಿಡಿದು ಬಂದಾಗ ಇಬ್ಬರಿಗೂ ಖುಷಿಯಾಯಿತು. ರಜನಿಯೇ ಟೀ ಮಾಡಿಕೊಟ್ಟಳು. ಆಕಡೆಗೆ ಚಿಕ್ಕಪ್ಪ ಹೊರಟ ತಕ್ಷಣ, ಅಡ್ರೆಸ್ ನೋಡಿದಳು. ಹೆಸರು ರಮೇಶ್ ಎಂದಿತ್ತು. ಆ ವಿಳಾಸ ತೀರಾ ದೂರವೇನಿರಲಿಲ್ಲ. ನಡೆದೇ ಹೋದರೆ ಅರ್ಧ ಗಂಟೆಯ ದಾರಿ. ಈಗಲೇ ಹೋಗೋಣವೇ? ಎಂದಳು. ಸರೋಜಳಿಗೆ ಅವಳ ಆತುರ ಕಂಡು ನಗು ಬಂತು. ಅವನು ಯಾರು? ಮದುವೆಯಾಗಿದೆಯಾ? ಆಗಿಲ್ಲವೆಂದರೆ ನಿನ್ನನ್ನು ಇಷ್ಟಪಡುತ್ತಾನಾ? ಎಂಬ ಹಲವಾರು ಅನುಮಾನಗಳನ್ನು ಸರೋಜ ವ್ಯಕ್ತಪಡಿಸಿದಳು. ಆದರೆ ರಜನಿಯದು ಒಂದೇ ಒತ್ತಡ. ಆತನನ್ನು ಮದುವೆಯಾಗುವುದು ಬಿಡುವುದು ನನಗೆ ಮುಖ್ಯವಲ್ಲ. ಆತ ಬರುವುದು ಏಕೆ ನಿಂತು ಹೋಯಿತು ಎಂದು ತಿಳಿದುಕೊಂಡರೆ ಸಾಕು ಎಂದು ಸರೋಜಳ ಬಾಯನ್ನು ಮುಚ್ಚಿಸಿದಳು. ಬೆಳಿಗ್ಗೆಯೇ ಎದ್ದು ಹೋಗುವುದೆಂದು ತೀರ್ಮಾನಿಸಿದರು.

* * *

ಬೆಳಿಗ್ಗೆ ಅಲ್ಲಿಗೆ ತಲುಪಿದಾಗ ಏಳೂವರೆಯಾಗಿತ್ತು. ದಾರಿಯುದ್ದಕ್ಕೂ ರಜನಿ ಆತನನ್ನು ಯಾವ ರೀತಿಯಲ್ಲಿ ಎದುರುಗೊಳ್ಳುತ್ತೇನೆ ಎಂದು ಯೋಚಿಸಿ ಯೋಚಿಸಿ ಸುಸ್ತಾಗಿದ್ದಳು. ವಿಳಾಸದಲ್ಲಿದ್ದ ಎಲ್ಲವೂ ಅವರು ನಿಂತಿದ್ದ ಮನೆಯದ್ದೇ ಆಗಿತ್ತು. ಇನ್ನು ಒಳಗೆ ಹೋಗುವುದೊಂದೇ ಬಾಕಿ. ಆದರೆ ಹೇಗೆ? ಏನೆಂದು ಹೇಳುವುದು? ಇದುವರೆಗೂ ಅವರಿಬ್ಬರು ಯೋಚಿಸದ ನೂರಾರು ಪ್ರಶ್ನೆಗಳು ಆವರಿಸಿಕೊಳ್ಳತೊಡಗಿದವು. 'ದಿನವೂ ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು, ಈಗೇಕೆ ಆ ದಾರಿಯಲ್ಲಿ ಬರುತ್ತಿಲ್ಲ ಎಂದು ಹುಡುಕಿಕೊಂಡು ಬಂದಿದ್ದೇವೆ' ಎಂದರೆ ಎಂತಹ ನಗೆಪಾಟಲಿಗೆ ಈಡಾಗುತ್ತೇವೆ ಎಂದು ಇಬ್ಬರಿಗೂ ಭಯ, ಅವಮಾನ, ಅನಿಶ್ಚತತೆ ಎಲ್ಲವೂ ಉಂಟಾಯಿತು. 'ಬೇಡವೇ ಬೇಡ ವಾಪಸ್ಸು ಹೋಗೇ ಬಿಡುವ' ಎಂದು ರಜನಿ ಹೇಳಿ, ಇಬ್ಬರೂ ತಿರುಗುವಷ್ಟರಲ್ಲಿ, ಗೇಟು ಶಬ್ದ ಮಾಡಿಬಿಟ್ಟಿತು. ಇಬ್ಬರೂ ಕರೆಂಟ್ ಹೊಡೆದವರಂತೆ ಬೆಚ್ಚಿ ಬಿದ್ದರು. ಹೊರಗೆ ಬಂದವಳು ಹಾಲಿನವಳಾದ್ದರಿಂದ ಸ್ವಲ್ಪ ಸಮಾಧಾನವಾಯಿತು. ಇವರನ್ನು ನೋಡಿಕೊಂಡೇ ಮುಂದೇ ಹೋಗುತ್ತಿದ್ದ ಹಾಲಿನವಳನ್ನು, ಇನ್ನು ಬಿಟ್ಟರೆ ಸಾಧ್ಯವೇ ಇಲ್ಲವೆನ್ನುವಂತೆ ಸರೋಜ ಧಾವಿಸಿ ಮಾತನಾಡಿಸತೊಡಗಿದಳು. ‘ರಮೇಶ್ ಅನ್ನುವವರ ಮನೆ ಇದೆಯೇ?’ ಎಂದು ಕೇಳಿದಳು. ‘ಅಲ್ಲ, ಇದು ದನಿನ ಡಾಕ್ಟ್ರು ಮನೆ’ ಅಂದಳು. ಏನೋ ಹೊಳೆದವಳಂತೆ, ‘ಅದೆ, ಅವ್ರ ಮಗ ರಮೇಶ್’ ಅಂದಳು ಸರೋಜ. ‘ಏ.. ಅವ್ರಿಗೆ ಗಂಡುಮಕ್ಳಿಲ್ಲಕಣೇಳಿ’ ಎಂದ ಹಾಲಿನವಳು ‘ನಿಮಗೆ ಬೇಕಾಗಿರೋರು ಬೇರೆ ಯಾರೋ ಇರಬೇಕು’ ಎಂದು ಹೊರಟಳು. ರಜನಿ ಸರೋಜ ಇಬ್ಬರಿಗೂ ಮನಸ್ಸಿಗೆ ಪಿಚ್ಚೆನಿಸಿತು. ಐದಾರು ಹೆಜ್ಜೆ ಮುಂದೆ ಹೋಗಿದ್ದ ಹಾಲಿನವಳು ಮತ್ತೆ ಬಂದು, ‘ಮುಂಚೆ ಈ ಮನೇಲಿದ್ದವರಿಗೆ ರಮೇಶ ಅನ್ನೋ ಮಗ ಇದ್ದಂಗೆ ನೆನಪು. ಅವರು ಮನೆ ಖಾಲಿ ಮಾಡಿ, ಪುಷ್ಪಗಿರಿನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಹೋಗಿ ಬಾಳ ದಿನ್ವಾತು’ ಅಂದಳು. ‘ಅದ್ರ ಅಡ್ರೆಸ್ ಗೊತ್ತಾ’ ಇಬ್ಬರೂ ಒಟ್ಟಿಗೆ ಕೇಳಿದ್ದನ್ನು ಅಚ್ಚರಿಯಿಂದ ನೋಡುತ್ತಾ ಹಾಲಿನವಳು ‘ಏ.. ಅದ್ಹೆಂಗೆ ಗೊತ್ತಾದತು ನಂಗೆ. ಬೇಕಾರೆ ಡಾಕ್ಟ್ರನ್ನ ಕೇಳಿ ನೋಡಿ’ ಅಂದು ಹೊರಟೇ ಹೋದಳು.
ಇಬ್ಬರೂ ಸ್ವಲ್ಪ ಹೊತ್ತು ಯೋಚಿಸಿ ಮನೆಯ ಗೇಟ್ ತೆಗೆದು ಒಳ ನುಗ್ಗಿಯೇ ಬಿಟ್ಟರು. ಕಾಲಿಂಗ್ ಬೆಲ್ ಒತ್ತಿ ಕಾದರು. ಸುಮಾರು ಅಯ್ವತ್ತರ ಪ್ರಾಯದ ವ್ಯಕ್ತಿ ಬಾಗಿಲು ತೆಗೆದು ಪ್ರಶ್ನಾರ್ಥಕವಾಗಿ ನೋಡಿದರು. ರಜನಿ ತಟ್ಟನೆ, ‘ಸಾರ್, ನಾನು ಜ್ಯೋತಿ ಅಂತ. ರಮೇಶ್ ಅವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಬೇರೆಡೆ ಇದ್ದೇನೆ. ಸ್ವಲ್ಪ ರಮೇಶ್ ಅವ್ರನ್ನ ನೋಡಬೇಕು.’ ಏನೇನೋ ಹಲುಬತೊಡಗಿದಳು. ಆತ ಒಂದು ಕ್ಷಣ ಚಿಂತಾಕ್ರಾಂತವಾದವನಂತೆ ಕಂಡ. ಒಳಗೆ ಬನ್ನಿ ಎಂದು ಅವರಿಗೆ ಹೇಳಿ, ‘ಪಾಪ, ಈಗ ಒಂದ್ವಾರದಿಂದ ಅವನನ್ನ ಕೇಳಿಕೊಂಡು ಇನ್ನೂ ಮೂರ್‍ನಾಲ್ಕು ಜನ ಬಂದಿದ್ರು’ ಎನ್ನುತ್ತಾ ತಾನೂ ನಡೆದು ವರಾಂಡದಲ್ಲಿದ್ದ ಕುರ್ಚಿಯಲ್ಲಿ ಕುಳಿತ. ಅವರನ್ನೂ ಕುಳಿತುಕೊಳ್ಳಲು ಹೇಳಿದ. ನಂತರ, ನಿಧಾನವಾಗಿ ‘ನಿಮಗೆ ವಿಷಯ ಗೊತ್ತಾಗಿಲ್ಲ ಅನ್ಸುತ್ತೆ. ಈಗ್ಗೆ ಆರು ದಿನದ ಹಿಂದೆ ಆತ ತೀರಿಕೊಂಡ. ಅವನಿಗೆ ಬ್ರೈನ್ ಟ್ಯೂಮರ್ ಇತ್ತು...’ ಎಂದು ಏನೇನೋ ಹೇಳುತ್ತ, ಟೇಬಲ್ ಮೇಲೆ ಹರಡಿದ್ದ ವಿಸಿಟಿಂಗ್ ಕಾರ್ಡ್‌ಗಳಲ್ಲಿ ಹುಡುಕಿ ಒಂದನ್ನು ಎತ್ತಿಕೊಡುತ್ತ, ‘ಅವರ ತಂದೆ ತಾಯಿಯನ್ನು ನೋಡುವುದಾದರೆ ಈ ಅಡ್ರೆಸ್‌ಗೆ ಹೋಗಿ’ ಎಂದ.

* * *

ಸರೋಜ ರಜನಿ ಇಬ್ಬರೂ ಮುಖ ಮುಖ ನೋಡಿಕೊಂಡರು. ಮತ್ತಿನ್ನೇನ್ನೂ ಕೇಳಬೇಕೆನಿಸಲಿಲ್ಲ. ಕಾರ್ಡ್ ತೆಗೆದುಕೊಂಡು ಹೊರಟರು. ಮನೆಗೆ ಬರುವವರೆಗೂ ಯಾರೂ ಮಾತನಾಡಲಿಲ್ಲ. ಮನೆ ತಲುಪಿದ ತಕ್ಷಣ ‘ಈಗ ಆಪೀಸಿಗೆ ಹೋಗಿ ಬಾ, ಸಂಜೆ ಹೋಗಿ ನೋಡಿಕೊಂಡು ಬರೋಣ’ ಎಂದ ಸರೋಜಳಿಗೆ ಬೇಡ ಎನ್ನುವಂತೆ ತಲೆಯಾಡಿಸಿದಳು ರಜನಿ. ಕೈಲ್ಲಿದ್ದ ಕಾರ್ಡನ್ನು ಬಿಗಿಯಾಗಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದಳು, ಸರೋಜಳ ಭುಜಕ್ಕೆ ಮುಖವಾನಿಸಿ.

Monday, April 20, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 11

ಅಂತೂ ಸಿ.ಆರ್. ತೆಗೆದುಕೊಂಡೆ
ಆಗಿನ್ನು ಜೂನಿಯರ್ ಕಾಲೇಜು ಇತ್ತು. ಅದಕ್ಕೊಬ್ಬ ಪ್ರಾಂಶುಪಾಲರೂ ಇದ್ದುದರಿಂದ ಅವರ ಕೈಕೆಳಗೇ ಹೈಸ್ಕೂಲ್ ನಡೆಯುತ್ತಿತ್ತು. ನಮಗೆ ಪರೀಕ್ಷೆಯ ಹಾಲ್‌ಟಿಕೆಟ್‌ಗಳನ್ನು ಪರೀಕ್ಷೆಯ ಹಿಂದಿನ ದಿನವೇ ವಿತರಿಸುವುದೆಂದು ತೀರ್ಮಾನವಾಗಿತ್ತು. ಅಂದು ಸರಸ್ವತೀ ಪೂಜೆಗೂ ಏರ್ಪಾಡಾಗಿತ್ತು. ಮಠದ ಚಿಕ್ಕಯ್ಯನೋರ ಅಮೃತಹಸ್ತದಿಂದ ನಾವು ಟಿಕೆಟ್‌ಗಳನ್ನು ತೆಗೆದುಕೊಳ್ಳವುಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನನಗೆ ಆಗಿದ್ದ ಧೈರ್ಯಕ್ಕೆ ಅದೂ ಕಾರಣವಾಗಿತ್ತು. ಒಬ್ಬೊಬ್ಬರ ಹೆಸರನ್ನೇ ಕರೆದು, ಸ್ವಾಮೀಜಿಯ ಕೈಯಿಂದ ಟಿಕೆಟ್ ಕೊಡಿಸುವಾಗ ನನ್ನ ಹೆಸರನ್ನು ಕರೆಯದೇ ಇರುತ್ತಾರೆಯೇ? ಈ ಅನುಮಾನವನ್ನು ವ್ಯಕ್ತಪಡಿಸಿದಾಗ ಹಾಸ್ಟೆಲಿನ ವಾರ್ಡನ್ ‘ನಾನೂ ಬರುತ್ತೇನೆ ನೋಡೋಣ ಏನಾಗುತ್ತದೆ’ ಎಂದು ಜೊತೆಯಲ್ಲೇ ಬಂದಿದ್ದರು. ನಾನು ಆದಷ್ಟು ನಿಂಗೇಗೌಡರ ಕಣ್ಣು ತಪ್ಪಿಸಿ ತಿರುಗುತ್ತಿದ್ದೆ.
ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಹೆಸರು ಕೂಗಿದಾಗ ಒಬ್ಬೊಬ್ಬ ಹುಡುಗನೂ ಎದ್ದು ಹೋಗಿ, ಚಿಕ್ಕಯ್ಯನೋರ ಕಾಲಿಗೆ ಬಿದ್ದು, ಹಾಲ್‌ಟಿಕೆಟ್ ತೆಗೆದುಕೊಂಡು ಬರುತ್ತಿದ್ದರು. ನನ್ನ ಹೆಸರು ಕೂಗಿದಾಗ, ಇನ್ನೇನು ಡಿ.ಎಸ್.ಎನ್. ನನಗೆ ಅಡ್ಮಿಷನ್ ಟಿಕೆಟ್ ಕೊಡಬಾರದೆಂದು ಹೇಳುತ್ತಾರೆ, ಎಂಬ ಭಯದಲ್ಲೇ ಹೋಗಿ, ಚಿಕ್ಕಯ್ಯನೋರ ಕಾಲಿಗೂ ಬೀಳದೇ, ಅಡ್ಮಿಷನ್ ಟಿಕೆಟ್ ತೆಗೆದುಕೊಂಡು ಬಂದಿದ್ದೆ! ಫಂಕ್ಷನ್ನಿನ ನಂತರ ಕೆಲವು ಹುಡುಗರ ಮುಂದೆ ಡಿ.ಎಸ್.ಎನ್. ‘ಸ್ವಾಮೀಜಿಗಳ ಕಾಲಿಗೆ ನಮಸ್ಕಾರ ಮಾಡದೆ ಧಿಮಾಕು ತೋರುಸ್ತಾನೆ. ನೋಡೋಣ ಅದೆಂಗೆ ಪಾಸಾಗುತ್ತಾನೆ. ಕೈ ಬಿಟ್ಟುಕೊಂಡು ಸೈಕಲ್ ಹೊಡೆದಂಗಲ್ಲ, ಎಸ್ಸೆಸ್ಸೆಲ್ಸಿ ಪಾಸು ಮಾಡೋದು’ ಎಂದು ತಮ್ಮ ನಂಜನ್ನು ಹೊರ ಹಾಕಿದ್ದರಂತೆ! ಆಗ ನಾನು ಕೈ ಬಿಟ್ಟುಕೊಂಡು ಸೈಕಲ್ ಹೊಡೆಯುವುದರಲ್ಲಿ ಛಾಂಪಿಯನ್ ಆಗಿದ್ದೆ!
ಅಂತೂ ಫಲಿತಾಂಶ ಬಂದು ನಾನೊಬ್ಬನೇ ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿದ್ದೆ. ಅದೇ ವರ್ಷ ಜೂನಿಯರ್ ಕಾಲೇಜನ್ನು ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ನಾನು ನನ್ನ ಅಂಕಪಟ್ಟಿ, ಸ್ಟಡಿ ಸರ್ಟಿಫಿಕೇಟ್ ಎಲ್ಲವನ್ನೂ ತೆಗೆದುಕೊಳ್ಳುವುದರಲ್ಲಿ ಅಲ್ಲಿದ್ದ ಪ್ರಾಂಶುಪಾಲರನ್ನೂ ಎತ್ತಂಗಡಿ ಮಾಡಿದ್ದರು. ಆಗ ಇದೇ ನಿಂಗೇಗೌಡರನ್ನು ಇಂಚಾರ್ಜ್ ಹೆಡ್ಮಾಸ್ಟರನ್ನಾಗಿ ನೇಮಿಸಲಾಗಿತ್ತು. ನಾನು ಚನ್ನರಾಯಪಟ್ಟಣದ ಜೂನಿಯರ್ ಕಾಲೇಜು ಸೇರಿದ್ದೆ.
ಹೀಗೇ ಒಂದು ದಿನ, ಯಾರೋ ಹೇಳಿದರೆಂದು ಹಾಗೂ ನನ್ನ ಸಿ.ಆರ್. ಅಂದರೆ ಕ್ಯುಮುಲೇಟಿವ್ ರೆಕಾರ್ಡ್ ಅಗತ್ಯ ಬೇಕಾಗುತ್ತದೆಂದು ಭಾವಿಸಿ ಅದನ್ನು ತರಲು ಸ್ಕೂಲಿಗೆ ಹೋಗಿದ್ದೆ. ಹೆಡ್ಮಾಸ್ಟರ ರೂಮಿನಲ್ಲಿ ನಿಂಗೇಗೌಡರು ವಿರಾಜಮಾನರಾಗಿದ್ದರು. ನಾನು ನೇರವಾಗಿ ಒಳಗೆ ಹೋಗಿ ‘ನನಗೆ ಸಿ.ಆರ್. ಬುಕ್ ಬೇಕು ಸಾರ್’ ಎಂದು ಕೇಳಿದ್ದೆ. ನನ್ನನ್ನು ನಿರೀಕ್ಷಿಸಿರದ ಅವರು ಮೊದಲು ಗಲಿಬಿಲಿಗೊಂಡರೂ ‘ಅರ್ಜಿ ಬರೆದುಕೊಡು’ ಎಂದರು. ನಾನು ಅರ್ಜಿ ಬರೆದುಕೊಂಡು ಹೋಗುವಷ್ಟರ್‍ಲಲ್ಲಿ ಅವರಿಗೆ ಜ್ಞಾನೋದಯವಾಗಿ, ನಾನು ಅವರಿಗೆ ಕೊಡಬೇಕಾದ ಎಪ್ಪತ್ತಮೂರೂವರೆ ರೂಪಾಯಿಯ ನೆನಪಾಗಿದೆ. ನಾನು ಕೊಟ್ಟ ಅರ್ಜಿಯನ್ನು ಕಣ್ಣೆತ್ತಿಯೂ ನೋಡದೆ, ‘ನೀನು ನನಗೆ ಕೊಡಬೇಕಾದ ದುಡ್ಡು ಕೊಟ್ಟರೆ ಮಾತ್ರ ನಿನ್ನ ಸಿ.ಆರ್.ಕೊಡಿಸುತ್ತೇನೆ. ಇಲ್ಲದಿದ್ದರೆ ಇಲ್ಲ’ ಎಂದು ಕಡಾಖಂಡಿತವಾಗಿ ಹೇಳಿಬಿಟ್ಟರು. ನಾನು ‘ಸಾರ್ ನನ್ನಲ್ಲಿ ಈಗ ದುಡ್ಡಿಲ್ಲ. ಬೇಕಾದರೆ, ಹಾಸ್ಟೆಲ್ಲಿನಿಂದ ನನಗೆ ‘ಕಾಷನ್ ಡಿಪಾಸಿಟ್’ ವಾಪಸ್ ಬರುವುದಿದೆ. ಅದನ್ನು ಬೇಕಾದರೆ ನಿಮಗೆ ಕೊಡುತ್ತೇನೆ. ನನಗೆ ಸಿ.ಆರ್. ಕೊಟ್ಟುಬಿಡಿ ಸಾರ್’ ಎಂದು ಬೇಡಿಕೊಂಡೆ. ಅವರು ‘ಅದನ್ನು ಹಾಳೆಯಲ್ಲಿ ಬರೆದುಕೊಡು’ ಎಂದರು. ನಾನು ಬರೆದೆ. ಅಷ್ಟಕ್ಕೆ ತೃಪ್ತರಾಗದ ಅವರು, ‘ನಿಮ್ಮ ಹಾಸ್ಟೆಲ್ಲಿನ ವಾರ್ಡನ್ನರೇ ಬಂದು ಆ ಹಣವನ್ನು ನನಗೆ ಕೊಡುತ್ತೇನೆಂದು ಹೇಳಿದರೆ ಮಾತ್ರ ಸಹಿ ಹಾಕುತ್ತೇನೆ’ ಎಂದರು.
ನಾನು ಜಟಗೊಂಡ ಅವರ ಬಳಿ ಓಡಿದೆ. ಅವರಿಗೆ ಇದನ್ನು ವಿವರಿಸಿ ಹೇಳಿದಾಗ, ‘ನಡೆ, ನಾನು ಬಂದು ಹೇಳುತ್ತೇನೆ’ ಎಂದು ಬಂದರು. ‘ಕಾಷನ್ ಡಿಪಾಸಿಟ್ ವಾಪಸ್ಸು ಬಂದಾಗ ಹಣವನ್ನು ನಿಮಗೆ ಕೊಡುತ್ತೇನೆ ಸಾರ್. ಅವನಿಗೆ ಸಿ.ಆರ್. ಕೊಟ್ಟು ಬಿಡಿ’ ಎಂದು ಜಟಗೊಂಡ ಹೇಳಿದಾಗ, ನಿಂಗೇಗೌಡರು ಒಂದು ಹೊಸ ವರಸೆ ತೆಗೆದರು. ‘ನೀವು ಹೇಳುವುದನ್ನು ರೈಟಿಂಗ್‌ನಲ್ಲಿ ಬರೆದುಕೊಡಬೇಕು’ ಎಂದು ಪಟ್ಟು ಹಿಡಿದರು.
ಆಗ ಜಟಗೊಂಡ ಅವರು, ‘ಸಾರ್, ನಾನು ಒಬ್ಬ ಗೌರ್‍ನಮೆಂಟ್ ಸರ್ವೆಂಟ್. ಹಾಗೆ ವಾಪಸ್ ಬಂದ ಡಿಪಾಸಿಟ್ ಹಣವನ್ನು ನೇರವಾಗಿ ನಿಮಗೆ ಕೊಡಲಾಗುವುದಿಲ್ಲ. ಈತ ಬಂದು ಸಹಿ ಮಾಡಿದ ಮೇಲೆಯೇ ನಾನು ಅದನ್ನು ನಿಮಗೆ ಕೊಡಿಸಬಹುದು. ಈತ ನನ್ನ ಮಾತನ್ನು ಮೀರುವುದಿಲ್ಲ ಎಂಬ ನಂಬಿಕೆ ನನಗಿದೆ. ಆ ರೀತಿಯಲ್ಲಿ ಲೆಟರ್ ಬರೆದುಕೊಡಲಾಗುವುದಿಲ್ಲ. ದಯವಿಟ್ಟು ಹುಡುಗನಿಗೆ ತೊಂದರೆ ಮಾಡಬೇಡಿ’ ಎಂದರು. ಜಟಗೊಂಡ ಅವರ ಬೇಡಿಕೆಗೂ ನಿಂಗೇಗೌಡರು ಅಡ್ಡತಲೆಯಾಡಿಸಿದಾಗ ನನ್ನ ತಾಳ್ಮೆ ತಡೆಯಲಿಲ್ಲ. ಅವರ ಮುಂದಿದ್ದ ನನ್ನ ಅರ್ಜಿ ಹಾಳೆಯನ್ನು ತೆಗೆದುಕೊಂಡು ಪರಪರ ಹರಿದು ಅವರ ಮುಖದ ಮೇಲೆ ಬಿಸಾಕಿ, ‘ನೀವು ಸಾಚಾ ಎಂದು ತಿಳಿಯಬೇಡಿ. ಹುಡುಗರಿಂದ ಏನೇನು ಕೆಲಸ ಮಾಡಿಸಿಕೊಂಡಿದ್ದೀರಾ, ಎಷ್ಟೆಷ್ಟು ಕೋಳಿ, ಮೊಲಗಳನ್ನು ತರಿಸಿಕೊಂಡು ತಿಂದಿದ್ದೀರಾ, ಮಂಕರಿ, ಬುಟ್ಟಿ ಹೆಣೆಸಿಕೊಂಡಿದ್ದೀರಾ ಎಲ್ಲಾ ನನಗೆ ಗೊತ್ತಿದೆ. ನಾನು ದುಡ್ಡು ಕೊಡುವುದಿಲ್ಲ. ಆದರೆ ನನ್ನ ಸಿ.ಆರ್.ಅನ್ನು ನಾನು ತೆಗೆದುಕೊಂಡೇ ತೀರುತ್ತೇನೆ ನೋಡಿ’ ಎನ್ನುತ್ತಾ, ನನ್ನನ್ನು ಸಮಾಧಾನದಿಂದಿರುವಂತೆ ಹೇಳುತ್ತಿದ್ದ ಜಟಗೊಂಡ ಅವರನ್ನು ಎಬ್ಬಿಸಿಕೊಂಡು ಹೊರಬಂದುಬಿಟ್ಟೆ!
ಅದಾದ ಆರು ತಿಂಗಳಲ್ಲಿ ಹೈಸ್ಕೂಲಿಗೆ ಹೊಸ ಹೆಡ್ಮಾಸ್ಟರ್ ಬಂದಿದ್ದಾರೆ ಎಂಬ ವಿಷಯವನ್ನು ಜಟಗೊಂಡ ಅವರೇ ಹೇಳಿಕಳುಹಿಸಿದ್ದರು. ನಾನು ಅರ್ಜಿ ಬರೆದುಕೊಂಡೇ ಹೋಗಿದ್ದೆ. ನಿಂಗೇಗೌಡರು ಅದೇ ಕಿತ್ತು ಹೋದ ನೋಟ್ಸನ್ನು ಹಿಡಿದುಕೊಂಡು ಮಕ್ಕಳಿಗೆ ಉತ್ತರ ಬರೆಸುತ್ತಿದ್ದರು. ನನ್ನ ಅರ್ಜಿಗೆ ಹೆಡ್ಮಾಸ್ಟರೇನೋ ಮಾತನಾಡದೆ ಸಹಿ ಹಾಕಿದರು. ಆದರೆ ನಾನು ಆ ಲೆಟರನ್ನು ಕ್ಲರ್ಕ್ ಬಳಿ ತಂದಾಗ, ಕ್ಲರ್ಕ್ ಮೇಲೆ ಕೆಳಗೆ ನೋಡಿ ‘ಏನಪ್ಪಾ, ನೀನು ನಿಂಗೇಗೌಡರಿಗೆ ದುಡ್ಡು ಕೊಡಬೇಕಂತೆ. ಅದನ್ನು ಕೊಡೋವರೆಗೆ ನಿನ್ನ ಸಿ.ಆರ್. ಕೊಡಲಾಗುವುದಿಲ್ಲ’ ಎಂದುಬಿಟ್ಟ.
ನಾನು ‘ನೋಡಿ ಹೆಡ್ಮಾಸ್ಟರು ಸಹಿ ಹಾಕಿದ್ದಾರೆ. ಆದ್ದರಿಂದ ನೀವು ಕೊಡಲೇ ಬೇಕು. ನಾನು ಸ್ಕೂಲಿಗೇನು ದುಡ್ಡು ಉಳಿಸಿಕೊಂಡಿಲ್ಲ’ ಎಂದು ಜೋರು ದನಿಯಲ್ಲೇ ವಾದಿಸಿದೆ.
ನನ್ನ ದನಿಯನ್ನು ಕೇಳಿ ಎದ್ದು ಬಂದ ಹೆಡ್ಮಾಸ್ಟರಿಗೆ ಕ್ಲರ್ಕ್ ತಲೆ ಕೆರೆದುಕೊಳ್ಳುತ್ತಾ ‘ಸಾರ್, ಇವರು ನಿಂಗೇಗೌಡರಿಗೆ ಏನೋ ದುಡ್ಡು ಕೊಡಬೇಕಂತೆ. ಆದ್ದರಿಂದ ಸಿ.ಆರ್.ಕೊಡಬೇಡ ಅಂದಿದ್ದಾರೆ ನಿಂಗೇಗೌಡ್ರು’ ಎಂದ.
ಹೆಡ್ಮಾಸ್ಟ್ರು ನನ್ನ ಕಡೆಗೆ ತಿರುಗಿ, ‘ಏನ್ರಿ. ಎಷ್ಟು ಕೊಡಬೇಕ್ರಿ? ಯಾವ ಹಣಾನ್ರಿ ಅದು. ಫೀಸು ಗೀಸು ಕಟ್ಟಿಲ್ವ?’ ಎಂದರು.
ನಾನು ‘ಸಾರ್, ಅದು ಪರ್ಸನಲ್ ವಿಷಯ ಸಾರ್. ನಾನು ಸ್ಕೂಲಿಗೆ ಯಾವುದಾದರು ಬಾಕಿ ಉಳಿಸಿಕೊಂಡಿದ್ರೆ ಹೇಳಿ. ಇಲ್ಲೇ ಇವಾಗಲೇ ಕೊಟ್ಟು ಬಿಡುತ್ತೇನೆ’ ಎಂದು ನಿರ್ಧಾರಯುತವಾಗಿ ಹೇಳಿದೆ.
ಹೆಡ್ಮಾಸ್ಟರು ಕ್ಲರ್ಕ್ ಕಡೆ ತಿರುಗಿ ‘ಏನ್ರಿ ಅದು ಸ್ಕೂಲಿನ ಬಾಕಿಯೇನ್ರಿ’ ಎಂದರು.
ಆತ ‘ಇಲ್ಲ’ ಎಂದ.
ತಕ್ಷಣ ಹೆಡ್ಮಾಸ್ಟರು ‘ಮತ್ತೆ ನಿಮಗ್ಯಾಕ್ರಿ ಇಲ್ಲದ ಉಸಾಬರಿ. ಸುಮ್ಮನೆ ಸಿ.ಆರ್. ಬರೆದುಕೊಡ್ರಿ. ನಾನು ಸಹಿ ಹಾಕಿಕೊಡುತ್ತೇನೆ’ ಎಂದುಬಿಟ್ಟರು.
ಕೇವಲ ಹತ್ತೇ ನಿಮಿಷದಲ್ಲಿ ನನ್ನ ಸಿ.ಆರ್. ನನ್ನ ಕೈಯಲ್ಲಿತ್ತು! ಅಷ್ಟು ಹೊತ್ತಿಗೆ ಪೀರಿಯಡ್ ಮುಗಿದು ಬೆಲ್ ಹೊಡೆಯಿತು. ನಿಂಗೇಗೌಡರು ಕ್ಲಾಸಿನಿಂದ ಹೊರಬರುತ್ತಿದ್ದರು. ನಾನು ವಿಜಯದ ನಗೆ ನಕ್ಕೆ!

Thursday, April 16, 2009

ಮತ್ತೆ ಮತ್ತೆ ತೇಜಸ್ವಿ

ತೇಜಸ್ವಿ ನಿಧನರಾದಾಗ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯಲ್ಲಿ ‘ತೇಜಸ್ವಿ ಮಾತು ಮೂರು ಅರ್ಥ ನೂರಾರು’ ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಕಳೆದ ವರ್ಷಾಂತ್ಯದಲ್ಲಿ ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟಾಗ ಆ ಲೇಖನವನ್ನು ನನ್ನ ಬ್ಲಾಗಿನಲ್ಲಿ ಹಾಕಿದೆ. http://nandondmatu.blogspot.com/2008/12/blog-post_10.html
ಅದನ್ನು ಓದಿದ ಶ್ರೀಮತಿ ಈಶಾನ್ಯೆ ಅವರು ‘ಇದರಲ್ಲಿ, ಕೆಲವು ತೇಜಸ್ವಿಯವರು ಹೇಳಿದ ಮಾತುಗಳೇ ಅಲ್ಲ! (ಅವರ ಸ್ಟೈಲೇ ಬೇರೆ.. ಉದಾಹರಣೆಗೆ, ಅವರೆಂದೂ ರಾಜೇಶ್ವರಿಯವರನ್ನು ರಾಜೂ ಎಂದು ಕರೆಯುತ್ತಿರಲಿಲ್ಲ.. ‘ಬಂದವ್ನೆ’ ಎಂದು ಉಪಯೋಗಿಸುತ್ತಿರಲಿಲ್ಲ... ಇನ್ನೂ ಆನೇಕ). ಅಲ್ಲದೆ, ಇಲ್ಲಿರುವ ಕೆಲವು ತೇಜಸ್ವಿಯವರ ಅನಿಸಿಕೆಗಳು ಬೇರೆಯವರ ಅನಿಸಿಕೆಗಳಂತೆ ತೋರುತ್ತಿವೆ!’ ಎಂದು ಪ್ರತಿಕ್ರಿಯಿಸಿದ್ದರು. ಅದು ಸರಿಯೂ ಕೂಡಾ. ಆಗ ಕೇವಲ ಸರಿಯೆನ್ನಿಸಿದ್ದು ಈಗ ಇನ್ನಷ್ಟು ಸ್ಪಷ್ಟವಾಗಿದೆ, ಅನುಭವಗಮ್ಯವಾಗಿದೆ! ಈಶಾನ್ಯೆ ಅವರ ಮಾತುಗಳು ನೂರಕ್ಕೆ ನೂರರಷ್ಟು ಸತ್ಯವೆಂದು ಬೇರೊಂದು ಕಾರಣದಿಂದಲೂ ನನಗೆ ದೃಢಪಟ್ಟಿದೆ. ಬೇರೆಯವರು ‘ತೇಜಸ್ವಿ ಹಾಗೆ ಹೇಳಿದ್ದರು, ಹೀಗೆ ಹೇಳಿದ್ದರು’ ಎಂದು ಮಾದ್ಯಮಗಳಿಗೆ ಕೊಟ್ಟ ಮಾತುಗಳೆಲ್ಲವನ್ನೂ ನಾನು ಅವರದೇ ಎಂದು ಭಾವಿಸಿದ್ದು ನನ್ನ ಮೊದಲ ತಪ್ಪು. ತೇಜಸ್ವಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ಆಡಿದ ಮಾತುಗಳನ್ನು ಕೇಳಿಸಿಕೊಂಡವರು, ಅವುಗಳನ್ನು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಿಸಿರುತ್ತಾರೆ ಎಂಬುದು ಈಗ ನನಗೆ ಗೊತ್ತಾಗಿದೆ. ಅವರ ನಿಧನಾನಂತರ ನಾನು ತೇಜಸ್ವಿ ಸಾಹಿತ್ಯ ಸಂಬಂಧಿತ ನಾಲ್ಕು ಸೆಮಿನಾರುಗಳಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ ಭಾಗವಹಿಸಿದ್ದ ಹೆಚ್ಚಿನ ವಿಮರ್ಶಕರು ‘ನಾನು ತೇಜಸ್ವಿಯವರೊಂದಿಗೆ ಮಾತನಾಡುವಾಗ ಹೀಗೆ ಹೇಳಿದ್ದರು, ಫೋನಿನಲ್ಲಿ ಹಾಗೆ ಹೇಳಿದ್ದರು’ ಎಂದು ಏನಾದರೂ ಹೇಳುತ್ತಲೇ ಇರುವುದನ್ನು ಗಮನಿಸಿದ್ದೇನೆ. ಒಬ್ಬರೇ ವಿಮರ್ಶಕರು, ಒಂದೇ ಸನ್ನಿವೇಶದ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿರುವುದಲ್ಲದೆ, ಅವುಗಳನ್ನು ತಮ್ಮ ಮಾತುಗಳ ಸಮರ್ಥನೆಗೆ ಬಳಸಿಕೊಂಡಿರುವುದನ್ನು ಕೇಳಿದ್ದೇನೆ.

ಸೆಮಿನಾರುಗಳ ಬೂಟಾಟಿಕೆ
ಇಷ್ಟೆಲ್ಲಾ ನೆನಪಾದದ್ದು, ಮೊನ್ನೆ (೦೯.೦೪.೨೦೦೯) ಬೆಂಗಳೂರಿನ ಬಿ.ಇ.ಎಸ್.ಕಾಲೇಜಿನಲ್ಲಿ ನಡೆದ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಸಂಸ್ಕೃತಿ ಚಿಂತನೆ’ ಎಂಬ ಸೆಮಿನಾರಿನಲ್ಲಿ. ಆಹ್ವಾನ ಪತ್ರಿಕೆಯಲ್ಲಿದ್ದ ‘ಕಡಿದಾಳ ಶಾಮಣ್ಣ’ ಅವರ ಹೆಸರನ್ನು ನೋಡಿ, ಅವರು ಭಾಗವಹಿಸಲಿರುವ ಸಮಾರೋಪ ಸಮಾರಂಭಕ್ಕಷ್ಟೇ ಹೋಗಿಬರಬೇಕೆಂದುಕೊಂಡಿದ್ದೆ. ಏಕೆಂದರೆ ವಿಚಾರಸಂಕಿರಣದಲ್ಲಿ ಭಾಗವಹಿಸಲಿರುವ ವಿಮರ್ಶಕರಲ್ಲಿ ಅನೇಕರು ಈಗಾಗಲೇ ತೇಜಸ್ವಿ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ವಿಮರ್ಶೆಯ ಬಗ್ಗೆ ತೇಜಸ್ವಿಯವರ ಆಶಯಕ್ಕೆ ವಿರುದ್ಧವಾಗಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಅವರು ತೇಜಸ್ವಿಯವರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂಬ ಅಭಿಪ್ರಾಯ ನನ್ನದಾಗಿತ್ತು. ಆದರೆ ನಮ್ಮ ಪ್ರಾಂಶುಪಾಲರು, ‘ಹೋಗಿಬನ್ನಿ, ಬೇರೆ ಯಾರು ಹೋಗುವಂತೆ ಕಾಣುತ್ತಿಲ್ಲ. ಓ.ಓ.ಡಿ. ಕೊಡುತ್ತೇನೆ’ ಎಂದು ಹೇಳಿದ್ದರಿಂದ ಇಡೀ ದಿನ ಸೆಮಿನಾರಿನಲ್ಲಿ ಭಾಗವಹಿಸಬೇಕಾಗಿ ಬಂತು.ಪ್ರೊ.ಜಿ.ಹೆಚ್.ನಾಯಕರ ಉದ್ಘಾಟನಾ ಭಾಷಣ ಹೊಸ ಆಲೋಚನೆಗಳನ್ನು ಹುಟ್ಟುಹಾಕುವಂತೆ ಇತ್ತು. ನಾನು ನಿರೀಕ್ಷಿಸಿರದ ಶ್ರೀಮತಿ ರಾಜೇಶ್ವರಿಯವರು ಬಂದಿದ್ದು, ಎರಡೇ ಎರಡು ನಿಮಿಷ ಮಾತನಾಡಿದರು! ಇನ್ನು ಉಳಿದಂತೆ, ಶಿವಾರೆಡ್ಡಿಯವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ಮತ್ತದೇ ಪೋಸ್ಟ್ ಮಾರ್ಟಮ್ ರೀತಿಯ ವಿಮರ್ಶೆ ನಡೆಸಿದ್ದೇ ನಡೆಸಿದ್ದು! ಶಿವಾರೆಡ್ಡಿ ಮಾತ್ರ ‘ಮಿಲೆನಿಯಂ ಸೀರಿಸ್’ ಪುಸ್ತಕಗಳ ವಿಶೇಷಗಳನ್ನು ಹೇಳಿ, ಅದರ ಓದಿನ ಅಗತ್ಯವನ್ನು, ಅದರಿಂದಾಗುವ ಲಾಭವನ್ನು ಸರಳವಾಗಿ ಹದಿನೈದು ನಿಮಿಷದಲ್ಲಿ ಹೇಳಿ ಮುಗಿಸಿದ್ದರು. ಪುಟ್ಟಸ್ವಾಮಿಯವರ ಮಾತುಗಳು ಪುನರಾವರ್ತನೆಯಾದವು, ಅಷ್ಟೆ. ಆದರೆ ಉಳಿದವರ್‍ಯಾರೂ ಸಮಯ ಪ್ರಜ್ಞೆ ಮೆರೆಯಲಿಲ್ಲ. ಆದ್ದರಿಂದ ಯಾವುದೇ ಪ್ರಶ್ನೆ ಕೇಳುವ ಅವಕಾಶ ಯಾರಿಗೂ ಸಿಗಲಿಲ್ಲ.
ಇನ್ನೊಬ್ಬ ಮಹನೀಯರ ವಿಷಯವೇ (ಅವರೇ ಸೂಚಿಸಿದ್ದಂತೆ) ತೇಜಸ್ವಿಯರ ಸಾಹಿತ್ಯದಲ್ಲಿ ಮಾಯೆ ಮತ್ತು ಲೋಕದ ಸಂಬಂಧ. ವಿಷಯ ಕೇಳುವುದಕ್ಕಷ್ಟೇ ಚೆನ್ನಾಗಿದೆ. ಆದರೆ ಅವರು ತೇಜಸ್ವಿಯವರ ಸಾಹಿತ್ಯದಲ್ಲಿ ಬರುವ ಕೆಲವು ಸನ್ನಿವೇಶಗಳನ್ನಷ್ಟೇ ರಂಜಕವಾಗಿ ಹೇಳಿ, ಒಂದಷ್ಟು ನಗಿಸಿ ಭಾಷಣ ಮುಗಿಸಿದ್ದರು. ಹಿಂದಿನ ಎರಡು ಸೆಮಿನಾರುಗಳ ನನ್ನ ಅನಿಸಿಕೆಯನ್ನು ಪತ್ರಿಕೆಗಳಿಗೆ ಬರೆದಿದ್ದೆ. ಅದನ್ನೊಮ್ಮೆ ಓದಿ. (ಈಗಲೇ ಪತ್ರಿಕೆಗಳಲ್ಲಿ ಓದಿದ್ದವರು ಬೇಕಾದರೆ ಬೈಪಾಸ್ ಮಾಡಿ, ಕೊನೆಗೆ ಬಂದುಬಿಡಿ!)
ಜನವರಿ ೭, ೨೦೦೭
ಭಾನುವಾರ (೭-೧-೦೭) ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡೀ ದಿನ ‘ತೇಜಸ್ವಿ ಕಥನ ಸಾಹಿತ್ಯ’ವನ್ನು ಕುರಿತು ವಿಚಾರಸಂಕಿರಣ ಏರ್ಪಟ್ಟಿತ್ತು. ರಂಗಕರ್ಮಿ ಪ್ರಸನ್ನ ಅವರಿಗೆ ಬೆಂಬಲ ಸೂಚಿಸುವುದಕ್ಕಾಗಿ ಅವರು ಉಪವಾಸ ನಡೆಸುತ್ತಿರುವ ಜಾಗದಲ್ಲೇ ಈ ವಿಚಾರ ಸಂಕಿರಣ ನಡೆಸಿದ್ದು ಅರ್ಥಪೂರ್ಣವಾಗಿತ್ತು. ಚಂದ್ರಶೇಖರ ನಂಗಲಿ, ಶಿವಾರೆಡ್ಡಿ, ಮತ್ತು ಅಬ್ದುಲ್ ರಷೀದ್ ಈ ಮೂವರನ್ನು ಬಿಟ್ಟರೆ, ಉಳಿದ ಭಾಷಣಕಾರರು ‘ತೇಜಸ್ವಿ ಇದನ್ನು ಏಕೆ ಬರೆದಿಲ್ಲ? ಅದನ್ನು ಹೀಗೆ ಬರೆಯಬಹುದಾಗಿತ್ತು. ಅಲ್ಲಿ ಸಂಯಮ ಬೇಕಿತ್ತು. ಅವರು ಸ್ತ್ರೀಯರ ಪರವಲ್ಲ. ಯಾವುದೋ ಚಳುವಳಿಯನ್ನು ಬೈಪಾಸ್ ಮಾಡಿದ್ದಾರೆ, ಗಂಭೀರವಾಗಿ ಪರಿಗಣಿಸಿಲ್ಲ...’ ಹೀಗೆ ಹಲವಾರು ಸಾಹಿತ್ಯ ವಿಮರ್ಶೇಯ ಚೌಕಟ್ಟುಗಳನ್ನು ಇಟ್ಟುಕೊಂಡೆ ಮಾತನಾಡಿದರು.ಎಲ್ಲಾ ಕಟ್ಟುಪಾಡುಗಳನ್ನು ಕಳಚಿಕೊಂಡು, ‘ತಾನು ಬರೆಯುತ್ತಿರುವುದು ಸಿದ್ಧಾಂತವಾಗಬಾರದು’ ಎಂಬ ಎಚ್ಚರದಲ್ಲಿ ಬರೆಯುತ್ತಿರುವ ಲೇಖಕ ತೇಜಸ್ವಿ ಎಂಬುದನ್ನು ಅವರು ಮರೆತಂತಿತ್ತು. ಶ್ರೋತೃಗಳು ಎತ್ತಿದ ಪ್ರಶ್ನೆಗಳಿಗೆ ನೀಡಿದ ಭಾಷಣಕಾರರ ಉತ್ತರದಲ್ಲಿ ಸ್ಪಷ್ಟತೆ ಇಲ್ಲದಿದ್ದರಿಂದ ಸಂಕಿರಣದ ಸಾರಥ್ಯ ವಹಿಸಿದ್ದ ಕಿ.ರಂ.ನಾಗರಾಜ ಅವರೇ ಬರಬೇಕಾಯಿತು. ಆದರೆ ಭಾಷಣಕಾರರನ್ನು ಸಮಥಿಸುವ ಆತುರದಲ್ಲಿ ಕಿ.ರಂ.ನಾ. ಅವರು ಸಾಹಿತ್ಯ ವಿಮರ್ಶೆಯ ತತ್ವಗಳನ್ನೇ ಹೇಳಿದ್ದು ಆಶ್ಚರ್ಯವಾಗಿತ್ತು! ಏಕೆಂದರೆ, ಕಿ.ರಂ.ನಾ. ಆಶಯ ಭಾಷಣ ಮಾಡುವಾಗ ‘ಸಾಹಿತ್ಯ ವಿಮರ್ಶೆಯ ಸಿದ್ಧಮಾದರಿಗಳನ್ನು ಇಟ್ಟುಕೊಂಡು ತೇಜಸ್ವಿಯನ್ನು ಓದಲು ತೊಡಗಬಾರದು’ ಎಂದು ಹೇಳಿದ್ದರು.ಶಿವಾರೆಡ್ಡಿ ಹೇಳುವಂತೆ, ‘ತೇಜಸ್ವಿ ಅವರ ಯಾವುದಾದರು ಒಂದು ಕೃತಿಯನ್ನು ಓದಿದರೆ ಸಾಕು. ಅದೇ ಅವರ ಬೇರೆ ಕೃತಿಗಳಿಗೆ ದಿಕ್ಸೂಷಿಯಾಗುತ್ತದೆ.’ ವಿಮರ್ಶೆಯ ತತ್ವಗಳನ್ನು ಹೇಳುತ್ತಾ ಓದುಗರಲ್ಲಿ ಗೊಂದಲ ಮೂಡಿಸುವ ವಿಚಾರಸಂಕಿರಣಗಳು ತೇಜಸ್ವಿಯವರ ಕೃತಿಗಳಿಗಂತೂ ಅನಿವಾರ್ಯವಲ್ಲ. ತೇಜಸ್ವಿ, ‘ಜೀವವೈವಿಧ್ಯತೆಗೆ ಮತ್ತು ಜೈವಿಕ ಪರಿಸರಕ್ಕೆ ಮನುಷ್ಯ ಮಾಡಬಯಸುತ್ತಿರುವ ಸಹಾಯವೇ ಅವಕ್ಕೆ ಮುಳುವಾಗುತ್ತಿದೆ’ ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ, ಸರಳವಾಗಿ ಓದಿಸಿಕೊಂಡು ಹೋಗುವಂತೆ ಬರೆಯುತ್ತಿರುವ ಲೇಖಕ. ಅಂತಹ ಲೇಖಕ ಮತ್ತು ಓದುಗರ ನಡುವೆ ಸೇತುವಾಗಬೇಕಿದ್ದ ವಿಚಾರಸಂಕಿರಣಗಳು, ಅಡ್ಡಗೋಡೆಯಾಗುತ್ತಿರುವುದು ಮತ್ತು ನಾವು ಪರಿಸರಕ್ಕೆ ಮಾಡುತ್ತಿರುವ ಸಹಾಯದಂತೆಯೇ ಅಡ್ಡ ಪರಿಣಾಮವನ್ನುಂಟು ಮಾಡುತ್ತಿರುವುದು ವಿಪರ್ಯಾಸವೇ ಸರಿ. ಅದಕ್ಕೆ ಕಿ.ರಂ.ನಾ. ಅವರಂಥವರು ಸಾರಥ್ಯ ವಹಿಸಿದ್ದು ನಿಜಕ್ಕೂ ವಿಷಾದನೀಯ. ಇಂತಹ ಸಂಕಿರಣಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.
ಸೆನೆಟ್ ಹಾಲಿನಲ್ಲಿ ನಡೆದ ಸೆಮಿನಾರಿನ ಅನುಭವ
ಇತ್ತೀಚಿನ ಸಾಹಿತ್ಯಕ ವಿಚಾರ ಸಂಕಿರಣಗಳಲ್ಲಿ, ಪ್ರಬಂಧ ಮಂಡನೆಯ ಕೊನೆಯಲ್ಲಿ ಚರ್ಚೆಗೆ ಅವಕಾಶವಿರುತ್ತದೆ ಎಂಬ ಘೋಷಣೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ ಭಾಷಣಕಾರರು ತಮ್ಮ ಪಾಂಡಿತ್ಯಪ್ರದರ್ಶನದ ಸಲುವಾಗಿ ನಿಗಧಿಪಡಿಸಿದ ಸಮಯದ ಜೊತೆಗೆ ಬೇರೆಯವರ ಸಮಯವನ್ನೂ ತಿಂದು ಹಾಕುತ್ತಿದ್ದಾರೆ. ಕೊನೆಯಲ್ಲಿ ಚರ್ಚೆಗೆ ಕೇವಲ ಎರಡು ನಿಮಿಷ, ಐದು ನಿಮಿಷ ಎಂಬ ಘೋಷಣೆ ಮಾಡುತ್ತಾರೆ. ಆ ಸಮಯದಲ್ಲಾದರೂ ಯಾರಾದರು ಉತ್ಸಾಹಿ ಸಹೃದಯರು ಕೇಳಿದ ಪ್ರಶ್ನೆಗಳಿಗೆ, ವ್ಯಕ್ತಪಡಿಸಿದ ಸಂದೇಹಗಳಿಗೆ ಭಾಷಣಕಾರರು ಉತ್ತರಿಸುವ ಗೋಜಿಗೆ ಹೋಗದೆ ನಿರಾಶೆಗೊಳಿಸುವುದು ಸಾಮಾನ್ಯವಾಗಿದೆ.ಕಳೆದ ವಾರಾಂತ್ಯದಲ್ಲಿ ನಡೆದ ‘ಕಾಡು ಹಕ್ಕಿಯ ನೆನಪು’ ವಿಚಾರ ಸಂಕಿರಣದಲ್ಲಿ ಆದದ್ದು ಅದೇ! ‘ತೇಜಸ್ವಿ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಬರೆದಿದ್ದಾರೆ. ಆದರೆ ನೀವೇ ಅದನ್ನು ಹೆಚ್ಚು ಜಟಿಲಗೊಳಿಸುತ್ತಿದ್ದೀರಿ’ ಎಂಬ ಸಹೃದಯನೊಬ್ಬನ ಪ್ರಶ್ನೆಗೆ ಭಾಷಣಕಾರ್ತಿ ‘ತೇಜಸ್ವಿ ಸಾಹಿತ್ಯದ ವಿಚಾರ ಸಂಕಿರಣದಲ್ಲಿ ಇದೊಂದು ಬಹುನಿರೀಕ್ಷಿತ ಪ್ರಶ್ನೆ. ಹಾಗೆ ಜಟಿಲಗೊಳಿಸುವುದೇ ನಮ್ಮ ಕೆಲಸ!’ ಎಂದು ಅಸಂಬದ್ಧವಾಗಿ ಉತ್ತರಿಸಿ, ನಕ್ಕು ಸುಮ್ಮನಾಗಿಬಿಟ್ಟರು!
ಅನಂತಮೂರ್ತಿ, ಕಿರಂ, ಕುಂವೀ, ಮೊಗಳ್ಳಿ ಮೊದಲಾದವರು ತಮ್ಮ ಭಾಷಣದಲ್ಲಿ, ‘ವಿಮರ್ಶೆಯ ಸಿದ್ಧಮಾದರಿಗಳನ್ನು ಇಟ್ಟುಕೊಂಡು ಹೊರಟರೆ ತೇಜಸ್ವಿ ನಮಗೆ ದಕ್ಕುವುದಿಲ್ಲ’ ಎಂಬ ಅಭಿಪ್ರಾಯವನ್ನು ಹಿಂದಿನ ದಿನ ವ್ಯಕ್ತಪಡಿಸಿದ್ದರು. ‘ತೇಜಸ್ವಿಯನ್ನು ನೀವು ಜಟಿಲಗೊಳಿಸುತ್ತಿದ್ದೀರಿ’ ಎಂಬ ಅಭಿಪ್ರಾಯವೂ ಅದಕ್ಕೆ ಪೂರಕವಾಗಿ ಚರ್ಚೆ ವಿಸ್ತೃತವಾಗಿ ನಡೆಸುವ ಸಾಧ್ಯತೆಯನ್ನು ಹೆಚ್ಚಿಸಿತ್ತು. ಆದರೆ ಭಾಷಣಕಾರರ ಉಡಾಪೆಯಿಂದ ಅದು ಸಾಧ್ಯವಾಗಲಿಲ್ಲ. ಮುಂದ ಬೇರೆಯವರು ಪ್ರಶ್ನೆ ಕೇಳಲಿಲ್ಲ!
ಮೊದಲ ದಿನವೂ ಯಾರೂ ಪ್ರಶ್ನೆ ಕೇಳುವವರೇ ಇರಲಿಲ್ಲ! ಸ್ವತಃ ಅನಂತಮೂರ್ತಿಯವರೇ ಚರ್ಚೆಯನ್ನು ಪ್ರಾರಂಭಿಸಿದರೂ ಮುಂದುವರೆಯಿಲಿಲ್ಲ. ಆದರೆ ಸಹೃದಯರೊಬ್ಬರು, ಒಬ್ಬ ಭಾಷಣಕಾರರ ಮಾತಿಗೆ ಸಂಶಯ ವ್ಯಕ್ತಪಡಿಸಿ, ಹೆಚ್ಚಿನ ವಿವರಣೆ ಬಯಸಿದರೆ, ಆ ಭಾಷಣಕಾರರು ‘ಅದಕ್ಕೆ ನಾನೇನು ಹೇಳಬೇಕಾಗಿಲ್ಲ’ ಎಂಬ ಒಂದೇ ಮಾತಿನ ಉತ್ತರವನ್ನು ಕುಳಿತಲ್ಲಿಂದಲೇ ಹೇಳಿ ಮೌನವಾದರು!
ಹೀಗೇಕೆ? ಸಾಹಿತ್ಯಕ ಕಾರ್ಯಕ್ರಮಗಳಿಗೆ ಜನರು ಬರುವುದೇ ಅಪರೂಪವಾಗಿರುವಾಗ, ಬಂದ ಕೆಲವು ಉತ್ಸಾಹಿಗಳನ್ನು ಹೀಗೆ ನಿರುತ್ಸಾಹಗೊಳಿಸುವುದು ಸರಿಯೆ? ತಮ್ಮ ಪ್ರತಿ ಹೆಜ್ಜೆಯಲ್ಲೂ ಹೊಸತನಕ್ಕಾಗಿ ತುಡಿಯುತ್ತಿದ್ದ ತೇಜಸ್ವಿಯವರ ಬಗ್ಗೆ ನಡೆದ ವಿಚಾರಸಂಕರಣದಲ್ಲಿ ಹೀಗೆಲ್ಲಾ ಆಗಿದ್ದು ನೋಡಿದರೆ, ಈ ಬಗೆಯ ವಿಚಾರ ಸಂಕಿರಣಗಳು, ಅವರನ್ನು ಜಟಿಲಗೊಳಿಸಿ ಜನಸಾಮಾನ್ಯರಿಂದ ದೂರ ಮಾಡುವ ಹುನ್ನಾರದಂತೆ ಕಾಣುತ್ತವೆ. ಇನ್ನು ಮುಂದಾದರೂ ಭಾಷಣ ಕಡಿಮೆಯಿರಲಿ; ಚರ್ಚೆ ಹೆಚ್ಚಾಗಿರಲಿ ಎಂದು ಆಶಿಸೋಣ.
ಭಾನುವಾರದ ಪತ್ರಿಕೆಯೊಂದರಲ್ಲಿ, ‘ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಇಂದೂಧರ ಹೊನ್ನಾಪುರ ವಿಚಾರಸಂಕಿರಣದಲ್ಲಿ ಭಾಷಣ ಮಾಡಿದರು’ ಎಂಬ ವರದಿ ಬಂದಿದೆ. ಆದರೆ ಆ ಇಬ್ಬರು ಮಹನೀಯರು ಬಂದೇ ಇರಲಿಲ್ಲ! ಕೇವಲ ಆಹ್ವಾನ ಪತ್ರಿಕೆ ನೋಡಿ ಸುದ್ದಿಯನ್ನು ತಯಾರಿಸುವ ಚಾಳಿಗೆ ಕನ್ನಡ ಪತ್ರಿಕೋದ್ಯಮ ಇಳಿದಿರುವುದು ದುರದೃಷ್ಟಕರ!
ಹೀಗೇಕೆ?
ತೇಜಸ್ವಿ ಸಾಹಿತ್ಯದ ಬಗ್ಗೆ ಸೆಮಿನಾರುಗಳನ್ನು ಆಯೋಜಿಸುವವರು, ಪ್ರಮುಖ ವಿಮರ್ಶಕರು ಆಡುವ ಮಾಮೂಲಿ ಮಾತುಗಳೆಂದರೆ, ‘ತೇಜಸ್ವಿಯವರ ಸಾಹಿತ್ಯವನ್ನು ದಕ್ಕಿಸಿಕೊಳ್ಳಬೇಕಾದರೆ ಸಿದ್ದಸೂತ್ರಗಳನ್ನು ಇಟ್ಟುಕೊಂಡು ನೋಡಲಾಗದು’ ಎಂಬವು. ಆದರೆ ಇಡೀ ಸೆಮಿನಾರು ನಡೆಯುವುದು ಅದೇ ಸಿದ್ದಸೂತ್ರಗಳ ಆಧಾರದ ಮೇಲೆಯೇ! ಅಲ್ಲಿ ಮಂಡಿಸುವ ಪ್ರಬಂಧಗಳಲ್ಲಿ ಹೆಚ್ಚಿನ ವಿಮರ್ಶಕರು ತಮಗೆ ಗೊತ್ತಿರುವ ಸಮಸ್ತ ಪಾರಿಭಾಷಿಕ ಪದಗಳನ್ನು ತೂರಿಸಿ, ತಮ್ಮ ವಿದ್ವತ್ತನ್ನು ಪ್ರದರ್ಶಿಸಿ, ಸರಳವಾಗಿರುವ ತೇಜಸ್ವಿಯವರನ್ನು ಮತ್ತು ಅವರ ಸಾಹಿತ್ಯವನ್ನು ಕ್ಲಿಷ್ಟಗೊಳಿಸಿಬಿಡುತ್ತಾರೆ. ಇಲ್ಲದ ಸಾಂಕೇತಿಕತೆಯನ್ನು ಆರೋಪಿಸುತ್ತಾರೆ. ಇಷ್ಟಕ್ಕೆ ಸುಮ್ಮನಾಗದೆ ‘ತೇಜಸ್ವಿ ಇದನ್ನು ಹೀಗೆ ಬರೆದಿದ್ದಾರೆ, ಹಾಗೆ ಬರೆದಿದ್ದಾರೆ, ಅದನ್ನು ಹೀಗೆ ಬರೆಯಬಹುದಿತ್ತು. ಬರೆದಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು’ ಇತ್ಯಾದಿ ಇತ್ಯಾದಿ ತೀರ್ಮಾನಗಳನ್ನೂ ನೀಡುತ್ತಾರೆ. ಅವರ ಪೋಸ್ಟ್ ಮಾರ್ಟಮ್ ರೀತಿಯ ವಿಮರ್ಶೆಯನ್ನು ಕೇಳಿದ ಯಾರಿಗಾದರೂ, ‘ತೇಜಸ್ವಿ ಕಷ್ಟ’ ಅನ್ನಿಸಿದರೆ ಆಶ್ಚರ್ಯವೇನಿಲ್ಲ! ಸ್ವತಃ ತೇಜಸ್ವಿಯವರೇ ವಿಮರ್ಶೆ ಹೇಗಿರಬೇಕು. ಈ ಸಂದರ್ಭದ ಕನ್ನಡ ಸಾಹಿತ್ಯದ ಅಗತ್ಯತೆ ಏನು ಎಂಬುದರ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಅಣ್ಣನ ನೆನಪು’ ಕೃತಿಯ ಮೊದಲ ಅಧ್ಯಾಯದಲ್ಲಿಯೇ, ವಿಶ್ಲೇಷಣಾತ್ಮಕ ದೃಷ್ಟಿಕೋನಕ್ಕಿಂತ ಸಂಶ್ಲೇಷಣಾತ್ಮಕ ದೃಷ್ಟಿಕೋನ ಹೇಗೆ ಭಿನ್ನ ಹಾಗೂ ಅನುಕೂಲ ಎಂಬುದನ್ನು ವಿವರಿಸಿದ್ದಾರೆ. ಶ್ರೀ ಚಂದ್ರಶೇಖರ ನಂಗಲಿಯವರಿಗೆ ಬರೆದಿರುವ ಪತ್ರದಲ್ಲೂ ಸ್ಪಷ್ಟವಾಗಿ, ವಿಶ್ಲೇಣಾತ್ಮಕ ವಿಮರ್ಶೆಗಿಂತ ಸಂಶ್ಲೇಷಣಾತ್ಮಕ ವಿಧಾನವನ್ನು ಅನುಮೋದಿಸಿದ್ದಾರೆ. ಅದಕ್ಕೆ ಉದಾಹರಣೆಯಾಗಿ ದ್ರೌಪದಿಯ ಶ್ರೀಮುಡಿ ಮತ್ತು ತಪೋನಂದನ ಕೃತಿಗಳನ್ನು ಹೆಸರಿಸಿದ್ದಾರೆ. ಸಂಶ್ಲೇಷಣಾತ್ಮಕ ಮಾದರಿ ವಿಮರ್ಶೆಯಿಂದ ಆಗುವ ಪ್ರಯೋಜನಗಳನ್ನು ಕುರಿತು ಬರೆದಿದ್ದಾರೆ. ಇಷ್ಟೆಲ್ಲಾ ಆದರೂ ನಮ್ಮ ನಡುವಿನ ವಿಮರ್ಶಕರು ಹೀಗೇಕೆ? ಇದೊಂದು ನನಗೆ ಬಿಡಿಸಲಾಗದ ಒಗಟಾಗಿದೆ.
ಮದರಾಸು ವಿಶ್ವವಿದ್ಯಾಲಯದ ಸೆಮಿನಾರಿನಲ್ಲಿ ಬಸವರಾಜ ಕಲ್ಗುಡಿಯವರು ಮಾಡಿದ ತೇಜಸ್ವಿಯವರನ್ನು ಕುರಿತ ಭಾಷಣ ಸಂಶ್ಲೇಷಣಾತ್ಮಕ ಮಾದರಿಗೆ ಒಂದು ಒಳ್ಳೆಯ ಉದಾಹರಣೆ. ಪ್ರೇಕಸ್ಷಕರ ಸಂಖ್ಯಯನ್ನು ಹೆಚ್ಚಿಸುವುದಕ್ಕಾಗಿ ಹಿರಿಯರ ಬಲವಂತಕ್ಕೆ ಬಂದು ಕುಳಿತಿದ್ದ ಸುಮಾರು ಮೂವತ್ತು ನಲವತ್ತು ಜನ ಶಾಲಾಮಕ್ಕಳು ಮಂತ್ರಮುಗ್ದರಾಗುವಂತೆ ಕಲ್ಗುಡಿ ಮಾತನಾಡಿದ್ದರು. ಕಾರ್ಯಕ್ರಮ ಮುಗಿದ ಮೇಲೂ ಮಕ್ಕಳು ತೇಜಸ್ವಿಯವರ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಿ, ಪರಸ್ಪರ ಚರ್ಚೆ ನಡೆಸಿದ್ದನ್ನು ನಾನು ಕಂಡಿದ್ದೇನೆ.
ಮೊನ್ನೆ ನಡೆದ ಸೆಮಿನಾರು ಆಯೋಜನೆಯ ದೃಷ್ಟಿಯಿಂದ ಬಹಳ ಚೆನ್ನಾಗಿತ್ತು. ಆದರೆ ಕೂದಲು ಸೀಳುವ ವಿಮರ್ಶಕರಿಂದಾಗಿ, ಕಡಿದಾಳು ಶಾಮಣ್ಣ ಅವರು ಸಮಾರೋಪ ಭಾಷಣವನ್ನು ಕೇವಲ ಎರಡೇ ನಿಮಿಷಗಳಲ್ಲಿ ಮುಗಿಸಿದ್ದು, ಸೆಮಿನಾರುಗಳಲ್ಲಿ ವಿಮರ್ಶಕರು ಆಡಿದ ಮಾತುಗಳು ಅವರನ್ನು ಘಾಸಿಗೊಳಿಸದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅತ್ಯಂತ ಸ್ಪಷ್ಟವಾಗಿ ‘ಸಾಕು. ಸಾಕು. ಇಲ್ಲಿಯವರೆಗೆ ಏನೋ ನಡೆದು ಹೋಯಿತು. ಇನ್ನು ಮುಂದಾದರು ಈ ರೀತಿ ಯೋಚಿಸುವುದನ್ನು ಬಿಡಿ. ತೇಜಸ್ವಿ ಬಗ್ಗೆ ಸೆಮಿನಾರನ್ನು ನಾವು ಶಿವಮೊಗ್ಗದಲ್ಲಿ ಮಾಡಿ ತೋರಿಸುತ್ತೇವೆ’ ಎಂದು ಮಾತು ಮುಗಿಸಿಯೇ ಬಿಟ್ಟರು! ಸಭಾಂಗಣ ಸ್ತಬ್ಧವಾಗಿಬಿಟ್ಟಿತ್ತು, ಆ ಕ್ಷಣ. ‘ಕೆಳಸ್ತರ ಮೇಲುಸ್ತರ’ ಮೊದಲಾದ ಪಾರಿಭಾಷಿಕ ಪದಗಳನ್ನು ಹಾಕಿ ತೇಜಸ್ವಿಯವರ ಸಾಹಿತ್ಯವನ್ನು ಅಳೆಯುತ್ತೇವೆ ಎಂದು ಹೊರಟಿದ್ದ ವಿಮರ್ಶಕರ ಸಮೇತ ಎಲ್ಲರೂ ಉಸಿರು ಬಿಗಿಹಿಡಿದು ಕುಳಿತಿದ್ದರು! ಜಿ.ಹೆಚ್.ನಾಯಕ ಮತ್ತು ಶಿವಾರೆಡ್ಡಿಯರ ಮಾತುಗಳನ್ನು ಕೇಳಿದ್ದು ಹಾಗೂ ಶ್ರೀಮತಿ ರಾಜೇಶ್ವರಿ ಮತ್ತು ಶಾಮಣ್ಣ ಅವರೊಂದಿಗೆ ಸಮಾರಂಭದ ನಡುವೆ ಮಾತನಾಡಿದ್ದಷ್ಟೆ ಆ ಸೆಮಿನಾರಿನಿಂದ ನನಗಾದ ಲಾಭ!

ಕೊನೆಯ ಮಾತು
ಕಳೆದ ವಾರ ಗೆಳಯ ಡಿ.ಜಿ.ಮಲ್ಲಿಕಾರ್ಜುನ ಅವರು ನನ್ನ ಕೋರಿಕೆಯ ಮೇರೆಗೆ, ತೇಜಸ್ವಿಯವರು ಚಿತ್ರಕಲಾ ಪರಿಷತ್ತಿನಲ್ಲಿ ಭಾಗವಹಿಸಿದ್ದ ಸಂವಾದ ಕಾರ್ಯಕ್ರದ ಡಿ.ವಿ.ಡಿ ಕಳುಹಿಸಿದ್ದರು. ಅದಾಗಿತ್ತು. ಅದನ್ನು ಶನಿವಾರ ಸಂಜೆ ನಾನು ಮತ್ತು ನನ್ನ ಹೆಂಡತಿ ನೋಡುತ್ತಾ ಕುಳಿತಿದ್ದೆವು. ಫೋನ್ ರಿಂಗಾಯಿತು. ನೋಡಿದರೆ ‘ನಿರುತ್ತರ’ದ ನಂಬರ್! ಆ ಕಡೆ ಶ್ರೀಮತಿ ರಾಜೇಶ್ವರಿಯವರು ಲೈನಿನಲ್ಲಿದ್ದರು. ಮೊನ್ನೆ ಸೆಮಿನಾರಿನಲ್ಲಿ ಅವರನ್ನು ಮಾತನಾಡಿಸಿದ್ದೆ. ನಂತರ ಅವರು ನನಗೆ ಏನೋ ಹೇಳಬೇಕೆಂದು ನೋಡಿದರಂತೆ. ನಾನು ಸಿಗಲಿಲ್ಲ. (ಹಾಗೆ ನೋಡಿದರೆ, ಅವರನ್ನು ಮತ್ತೊಮ್ಮೆ ಮಾತನಾಡಿಸಬೇಕೆಂದು ನಾನೂ ಅಂದುಕೊಂಡಿದ್ದೆ. ಆದರೆ ಅವರಿಗೆ ಸುತ್ತಿಕೊಳ್ಳುತ್ತಿದ್ದ ಮಹಿಳಾಮಣಿಗಳಿಂದಾಗಿ ನನಗೆ ಸಾಧ್ಯವಾಗಿರಲಿಲ್ಲ!) ಅದಕ್ಕಾಗಿ ಫೋನ್ ಮಾಡಿದ್ದರು. ಬೆಂಗಳೂರಿನಿಂದ ಹೊರಟು ಮನೆ ತಲುಪಿದ ಒಂದು ಘಂಟೆಯಲ್ಲಿ ನನಗೆ ಫೊನ್ ಮಾಡಿದರಂತೆ! ನನ್ನ ಪುಸ್ತಕ ತೆಗೆದಿಟ್ಟುಕೊಂಡು ಅದರಿಂದ ಫೋನ್ ನಂಬರ್ ಪತ್ತೆ ಹಚ್ಚಿದರಂತೆ! ನಾವು ಅವರ ತೋಟಕ್ಕೆ ಹೋಗಿದ್ದಾಗ, ನಾಯಿಮರಿಗಳಿಗಾಗಿ ನನ್ನ ಮಗಳು ಅತ್ತಿದ್ದು, ಶಿವು ಅನ್ನುವವರು ಕಿತ್ತಲೆ ಕೊಟ್ಟು ಸಮಾಧಾನ ಮಾಡಿದ್ದು, ಈ ವಿಷಯವನ್ನು ಅವರ ಮೆನಯ ದೇವಕಿ ಮತ್ತು ಶಿವು ಹೇಳಿದ್ದು, ನನ್ನ ‘ನನ್ನ ಹೈಸ್ಕೂಲ್ ದಿನಗಳು’ ಪುಸ್ತಕವನ್ನು ಓದಿದ್ದು ಎಲ್ಲವನ್ನೂ ಹೇಳಿದರು. ಮಗಳ ಬಗ್ಗೆ ವಿಚಾರಿಸಿದರು. ಮತ್ತೊಮ್ಮೆ ಬನ್ನಿ ಎಂದರು. ಸಂತೋಷದ ಭರದಲ್ಲಿ ಮಾತು ಕಳೆದುಕೊಂಡಿದ್ದ ನಾನು ಈ ಕಡೆಯಿಂದ, ‘ಮೇಡಂ ಈಗ ನಾವು ತೇಜಸ್ವಿ ಮತ್ತು ನೀವು ಭಾಗವಹಿಸಿದ್ದ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಕಾರ್‍ಯಕ್ರಮದ ಡಿ.ವಿ.ಡಿ. ನೋಡುತ್ತಿದ್ದೆವು. ಆಗಲೇ ನಿಮ್ಮ ಫೋನ್ ಬಂತು’ ಎಂದು ತಿಳಿಸಿದೆ. ಅವರೂ ಒಂದು ಕ್ಷಣ ಆ ನೆನಪಿಗೆ ಜಾರಿ, ಮಾತು ಮುಗಿಸಿದರು. ಸ್ವತಃ ಶ್ರೀಮತಿ ರಾಜೇಶ್ವರಿಯವರೇ ಫೋನ್ ಮಾಡಿ ಮಾತನಾಡಿಸಿದ್ದರಿಂದ ನಾನೂ ಮತ್ತು ನನ್ನ ಹೆಂಡತಿ ರೋಮಾಂಚನಗೊಂಡಿದ್ದಂತೂ ಸತ್ಯ. ನನ್ನ ಹೆಂಡತಿಯ ಪ್ರಕಾರ, ತೇಜಸ್ವಿಯವರ ಕಾರ್ಯಕ್ರಮದ ಸಿ.ಡಿ.ಯನ್ನು ನೋಡುವಾಗ, ಅವರ ಮನೆಯಿಂದಲೇ ಫೋನ್ ಬಂದಿದ್ದು ಒಂದು ಅದ್ಭುತ!ಮಲ್ಲಿಕಾರ್ಜುನ್ ಥ್ಯಾಂಕ್ಸ್ ನಿಮಗೆ!

Monday, April 13, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 10

ಹಾಸ್ಟೆಲ್ಲಿನ ಕಳ್ಳತನವೂ ಕುಂದೂರಿನಲ್ಲಾದ ಕೊಲೆಯೂ!
ಕುಂದೂರಿನಲ್ಲಿ ಒಂದು ಕೊಲೆಯಾಗಿತ್ತು. ಆಗ ನಾನು ಹತ್ತನೇ ತರಗತಿಯಲ್ಲಿದ್ದೆ. ಆ ಕೊಲೆಯಾದ ರಾತ್ರಿಯೇ ಹಾಸ್ಟೆಲ್ಲಿನಲ್ಲಿ ಕಳ್ಳತನವೂ ಆಗಿತ್ತು. ಅದಕ್ಕೇ ಈ ತಲೆಬರಹ!
ಆ ಕಳ್ಳತನದಿಂದಾಗಿ ನಾನು ಮತ್ತೆ ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರನ್ನು ಎದುರು ಹಾಕಿಕೊಳ್ಳುವಂತಾಗಿದ್ದು ಮಾತ್ರ ಸತ್ಯ. ಎಕ್ಸಾಮಿನೇಷನ್ ಫೀಸೋ ಏನೋ, ಆಗ ವಿದ್ಯಾರ್ಥಿಗಳು ತಲಾ ಮೂವತ್ತು ರೂಪಾಯಿ ಐವತ್ತು ಪೈಸೆಯನ್ನು ಸ್ಕೂಲಿಗೆ ಕಟ್ಟಬೇಕಾಗಿತ್ತು. ಆದಾಯ ಸರ್ಟಿಫಿಕೇಟ್ ಮಾಡಿಸಿಕೊಂಡು ಬಂದವರು ಕೇವಲ ಹತ್ತೂವರೆ ರೂಪಾಯಿಯನ್ನು ಕಟ್ಟಿದರೆ ಸಾಕಾಗಿತ್ತು. ಸ್ಕೂಲಿನಲ್ಲಿದ್ದ ಬಹುತೇಕ ಎಲ್ಲರೂ ಆದಾಯ ಸರ್ಟಿಫಿಕೇಟ್ ಮಾಡಿಸಿಕೊಂಡು ಬರುವವರೇ ಆಗಿದ್ದರು. ನಾನು ಮಾನೀಟರ್ ಆಗಿದ್ದರಿಂದ ಆ ಹತ್ತೂವರೆ ರೂಪಾಯಿಯನ್ನು ಸಂಗ್ರಹಿಸಲು ಡಿ.ಎಸ್.ಎನ್. ನನಗೇ ವಹಿಸಿದ್ದರು. ಪ್ರತಿ ದಿನ ಸಂಜೆ ಸಂಗ್ರಹವಾಗಿದ್ದಷ್ಟನ್ನು ಅವರಿಗೆ ಕೊಡಬೇಕಾಗಿತ್ತು. ಅಂದು ಶನಿವಾರ. ಏಳುಜನ ತಲಾ ಹತ್ತೂವರೆ ರೂಪಾಯಿಗಳನ್ನು ಕೊಟ್ಟಿದ್ದರು. ನಾನು ಅದನ್ನು ಕೊಡಲು ಹೋದಾಗ, ಊರಿಗೆ ಹೊರಡಲು ಸಿದ್ಧರಾಗಿದ್ದ ಅವರು ‘ನೀನೆ ಇಟ್ಟುಕೊಂಡಿರು. ಸೋಮವಾರ ಕೊಡು’ ಎಂದುಬಿಟ್ಟರು. ನಾನು ಸುಮ್ಮನಾದೆ. ಹಾಸ್ಟೆಲ್ಲಿಗೆ ಬಂದ ನಂತರ ಪೆಟ್ಟಿಗೆ ಒಳಗೆ ಆ ದುಡ್ಡನ್ನು ಹಾಕಿ ಭದ್ರಪಡಿಸಿದೆ.
ಸೋಮವಾರ ಬೆಳಗಿನ ಜಾವ ನಾಲ್ಕೂವರೆ ಗಂಟೆಗೆ ನಾವು ಎದ್ದು ಓದಿಕೊಳ್ಳಲು, ವಾರ್ಡನ್ ಭಾನುವಾರ ರಾತ್ರಿ ಇಟ್ಟು ಹೋಗಿದ್ದ ಅಲರಾಮ್, ಬೆಳಗಿನ ಜಾವ ಹೊಡೆದುಕೊಂಡಾಗ ಹತ್ತನೇ ತರಗತಿಯ ಹದಿಮೂರು ಜನರಲ್ಲಿ ಕೆಲವರು ದಡಬಡ ಎದ್ದೆವು. ಎದ್ದು ನೋಡುವುದೇನು? ನನ್ನದೂ ಸೇರಿದಂತೆ ಮೂವರ ಪೆಟ್ಟಿಗೆಗಳೇ ಮಾಯ! ಅದರಲ್ಲಿಟ್ಟಿದ್ದ ಎಪತ್ತಮೂರೂವರೆ ರೂಪಾಯಿಯನ್ನು ನೆನೆದು ನನಗಂತೂ ಗಾಬರಿಯಾಗಿತ್ತು. ಬೇರೆ ಇಬ್ಬರು, -ಒಬ್ಬ ಸೋಮಶೇಕರ, ಇನ್ನೊಬ್ಬ ರಮೇಶ ಎಂದು ನೆನಪು- ಇಬ್ಬರೂ ಆ ನೀರವ ರಾತ್ರಿಯಲ್ಲಿ ಬಿಕ್ಕಳಿಸಿಕೊಂಡು ಅಳುತ್ತಿದ್ದರು. ಹಾಸ್ಟೆಲ್ಲಿನಲ್ಲಿದ್ದ ಎಲ್ಲಾ ದೀಪಗಳನ್ನು ಹಚ್ಚಿ ಹುಡುಕಾಟ ಶುರುವಾಯಿತು. ಹೊರಗೆ ಹೋಗಲು ಇದ್ದ ಏಕೈಕ ಬಾಗಿಲು ಹಾಕಿದಂತೆಯೇ ಇತ್ತು. ಅದನ್ನು ಭದ್ರಪಡಿಸಲು ಇದ್ದ ಏಕೈಕ ಹಾಗೂ ಸುಲಭ ಮಾರ್ಗವೆಂದರೆ, ಒಂದು ಬಿದಿರು ಗಳವನ್ನು ಬಾಗಿಲಿನ ಮೇಲ್ಭಾಗಕ್ಕೂ ನೆಲಕ್ಕೂ ಓರೆಯಾಗಿ ಇಡುವುದು! ಹೊರಗೆ ನೋಡುವ ಧೈರ್ಯ ಯಾರಲ್ಲೂ ಇರಲಿಲ್ಲ. ಐದೂವರೆಗೆಲ್ಲಾ ವಾರ್ಡನ್ ನಾವು ಓದುತ್ತಿದ್ದೇವೋ ಇಲ್ಲವೋ ಎಂದು ನೋಡಲು ಬರುತ್ತಿದುದರಿಂದ, ಅವರು ಬರುವವರೆಗೂ ಕಾಯಲು ನಿರ್ಧರಿಸಿದ್ದೆವು.
ವಾರ್ಡನ್ ಬಂದು ಬಾಗಿಲು ಬಡಿದಾಗಲೇ ನಮಗೆ ನೆಮ್ಮದಿ. ಒಳಗೆ ಬಂದವರಿಗೆ ಎಲ್ಲಾ ವಿಷಯವನ್ನು ತಿಳಿಸಿದೆವು. ಅವರು ಹೊರಗಡೆ ದೀಪ ಹಿಡಿದುಕೊಂಡು ಐದಾರು ಮಂದಿಯನ್ನು ಕರೆದುಕೊಂಡು ಪೆಟ್ಟಿಗೆ ಏನಾದರೂ ಸಿಗಬಹುದೆ ಎಂದು ಹುಡುಕಲು ಹೊರಟರು. ಹಾಸ್ಟೆಲ್ ಕಟ್ಟಡದ ಎಡಬದಿಯಲ್ಲೇ ಮೂರೂ ಪೆಟ್ಟಿಗೆಗಳು ಅನಾಥವಾಗಿ ಬಿದ್ದಿದ್ದವು! ಅದರಲ್ಲಿದ್ದ ಬಟ್ಟೆ ಬರೆ, ಪುಸ್ತಕಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎಲ್ಲವನ್ನೂ ಎತ್ತಿ ತಂದು ಜೋಡಿಸಿ ನೋಡಿದಾಗ ನನ್ನ ಪೆಟ್ಟಿಗೆಯಲ್ಲಿದ್ದ ಹಣ ಮಾತ್ರ ಮಾಯವಾಗಿತ್ತು. ನನ್ನ ಪೆಟ್ಟಿಗೆಯಲ್ಲಿ ಹಣ ಇದೆ ಎಂದು ಗೊತ್ತಿರುವವರೇ, ಈ ಕೆಲಸ ಮಾಡಿದ್ದಾರೆ ಹಾಗೂ ಅನುಮಾನ ಬರದಿರಲಿ ಎಂದು ಬೇರೆ ಎರಡು ಪೆಟ್ಟಿಗೆಗಳನ್ನು ಎತ್ತಿ ಹೊರಗೆ ಹಾಕಿದ್ದಾರೆ, ಎಂದು ವಾರ್ಡನ್ ತೀರ್ಮಾನಿಸಿದರು. ಹಾಕಿದ ಬಾಗಿಲು ಹಾಕಿದಂತೆಯೇ ಇದ್ದುದರಿಂದ ಕಳ್ಳ ಹೊರಗಿನಿಂದ ಬಂದಿರಲೂ ಸಾಧ್ಯವಿರಲಿಲ್ಲ. ಆದರೂ ಕಳ್ಳ ಯಾರು ಎಂಬುದು ಮಾತ್ರ ಬುದ್ದಿವಂತರಾದ ವಾರ್ಡನ್ನಿಗೂ ಪತ್ತೆ ಹಚ್ಚಲು ಆಗಲಿಲ್ಲ! ಇಂದಿಗೂ ಅದೊಂದು, ನನ್ನ ಬದುಕಿನ ಬಗೆಹರಿಯದ ವಿಸ್ಮಯ!
ರಾತ್ರಿ ನಡೆದ ಘಟನೆಯನ್ನು ಸದ್ಯಕ್ಕೆ ಯಾರಿಗೂ ಹೇಳಬಾರದೆಂದು, ಬೇಕಾದರೆ ಕಳೆದು ಹೋಗಿರುವ ದುಡ್ಡಿನ ಬಗ್ಗೆ ನಿಂಗೇಗೌಡರಿಗೆ ನಾನೇ ಹೇಳುತ್ತೇನೆಂದು ವಾರ್ಡನ್ ಹೇಳಿದ್ದರಿಂದ ನಾವ್ಯಾರು ಆ ವಿಷಯವನ್ನು ಬಾಯಿ ಬಿಟ್ಟಿರಲಿಲ್ಲ. ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೇ ಕುಂದೂರಿನ ಒಬ್ಬ ವ್ಯಕ್ತಿ ಕೊಲೆಯಾಗಿರುವ ಬಿಸಿಬಿಸಿ ಸುದ್ದಿ ಬಂದಾಗ, ಯಕಶ್ಚಿತ್ ಎಪ್ಪತ್ತಮೂರೂವರೆ ರೂಪಾಯಿಯ ಕಳ್ಳತನ, ಅದೂ ಮನೆಯಲ್ಲೇ ಇರುವ ಕಳ್ಳನ ವಿಚಾರ ಯಾರಿಗೆ ತಾನೇ ಮುಖ್ಯವಾಗುತ್ತದೆ ಹೇಳಿ!
ಅಂದು ಬೆಳಿಗ್ಗೆ ಕುಂದೂರುಮಠದಲ್ಲಿ ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹರಡಿತ್ತು. ಕುಂದೂರಿನ ವ್ಯಕ್ತಿಯೊಬ್ಬ ಕೊಲೆಯಾಗಿದ್ದ. ಕುಂದೂರುಮಠದಿಂದ ಕುಂದೂರಿಗೆ ಹೋಗುವ ಮಾರ್ಗದ ರಸ್ತೆ ಬದಿಯಲ್ಲೇ ಆ ಕೊಲೆಯಾಗಿತ್ತು. ಸುತ್ತಮುತ್ತಲಿನ ಊರವರು ಸಾವಿರಾರು ಜನ ಸೇರಿಬಿಟ್ಟಿದ್ದರು. ಸತ್ತವನು ಜನತಾಪಕ್ಷದವನೆಂದು, ಕೊಲೆ ಮಾಡಿದವರು ಕಾಂಗ್ರೆಸ್‌ನವರೆಂದು ಜನ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಸತ್ತವನು ಇತ್ತೀಚಿಗೆ ಕಾಂಗ್ರೆಸ್ ಸೇರಿದ್ದನೆಂದು, ಅದರಿಂದ ಜನತಾಪಕ್ಷದವರೇ ಕೊಲೆ ಮಾಡಿಸಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು. ಅಂದು ಶಾಲೆ, ಕಾಲೇಜಿಗೆ ರಜೆ ಘೊಷಿಸಿಲಾಯಿತು.
ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಹಾಸನದಿಂದ ಬಂದ ಪೊಲೀಸ್ ವ್ಯಾನಿನಲ್ಲಿ ತೋಳದಂತಿದ್ದ ಎರಡು ನಾಯಿಗಳು ಬಂದಾಗ, ಕಳ್ಳ ಇನ್ನೇನು ಸಿಕ್ಕಿಯೇ ಬಿಟ್ಟ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೆವು. ಆ ನಾಯಿಗಳನ್ನು ಶವದ ಸುತ್ತ ಮುತ್ತಲಿನ ಜಾಗದಲ್ಲಿ ಮೂಸಿ ನೋಡಲು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ಎರಡೂ ನಾಯಿಗಳು, ತಮ್ಮನ್ನು ಹಿಡಿದಿದ್ದ ಪೊಲೀಸಿನವರನ್ನೂ ಎಳೆದುಕೊಂಡು ಒಂದೇ ದಿಕ್ಕಿಗೆ ಓಡತೊಡಗಿದವು. ಆ ಭಾಗದಲ್ಲಿ ನಿಂತಿದ್ದ ಜನರೆಲ್ಲಾ ಹೋ ಎಂದು ಇಬ್ಭಾಗವಾಗಿ ಓಡಿದರು. ನಾವಂತೂ ಅದು ಯಾರನ್ನಾದರು ಕಚ್ಚಿಯೇ ಬಿಡುತ್ತದೆ ಆತನೇ ಕೊಲೆಗಾರ ಎಂದು ಉಸಿರು ಬಿಗಿ ಹಿಡಿದು ನಿಂತಿದ್ದೆವು. ಆ ನಾಯಿಗಳು ಅಲ್ಲಲ್ಲಿ ಮೂಸುತ್ತಾ, ಓಡುತ್ತಾ, ನಡೆಯುತ್ತಾ ಮಠದ ದಾರಿ ಹಿಡಿದಾಗ, ಕೊಲೆಗಾರರು ಮಠದಲ್ಲೇ ಅವಿತಿರಬಹುದು ಎಂದು ಜನ ಮಾತನಾಡಿಕೊಂಡರು. ಆದರೆ ನಾಯಿಗಳು ಓಡುತ್ತಾ, ಮಠದ ಎಡಬದಿಗೆ ಕೂಗಳತೆಯ ದೂರದಲ್ಲಿದ್ದ ನಮ್ಮ ಹಾಸ್ಟೆಲಿನ ಕಡೆಗೆ ತಿರುಗಿದಾಗ ನಮಗೆಲ್ಲಾ ಆಶ್ಚರ್ಯ. ಇನ್ನೇನು ಹಾಸ್ಟೆಲಿನ ಒಳಗೆ ನಾಯಿ ನುಗ್ಗಿಯೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಹತ್ತಿರವಾಗಿ, ಮೂಸುತ್ತಾ ಮೂಸುತ್ತಾ ಬೆಳಗಿನ ಜಾವ ನಮ್ಮ ಪೆಟ್ಟಿಗೆಗಳು ಬಿದ್ದಿದ್ದ ಜಾಗದಲ್ಲೂ ಮೂಸುತ್ತಾ ಉತ್ತರಕ್ಕೆ ಇದ್ದ ಹಳ್ಳದ ಕಡೆಗೆ ಓಡಿದವು! ಬಾಯಿಗೆ ಬಂದಿದ್ದ ನಮ್ಮ ಹೃದಯಗಳು ಸ್ವಸ್ಥಾನ ಸೇರಿದ್ದು ಆಗಲೇ. ಆ ನಾಯಿಗಳು ಮುಂದೆ ಹಳ್ಳದ ನೀರಿರುವ ಜಾಗದವರೆಗೂ ಹೋಗಿ ವಾಪಸ್ ಬಂದಾಗ, ಆ ನೀರಿನಲ್ಲಿ ಸ್ನಾನ ಮಾಡಿಕೊಂಡು ಕೊಲೆಗಾರರು ಮುಂದಕ್ಕೆ ಹೋಗಿದ್ದಾರೆ ಎಂಬ ತೀರ್ಮಾನಕ್ಕೆ ಜನ ಬಂದರು.
ಕೊಲೆಗಾರ ಸಿಕ್ಕನೋ ಬಿಟ್ಟನೋ ಗೊತ್ತಿಲ್ಲ. ಆದರೆ ಮಂಗಳವಾರ ಬೆಳಿಗ್ಗೆಯೇ ನಿಂಗೇಗೌಡರು ಹಣ ಕೇಳಿದಾಗ ಮಾತ್ರ, ಆ ಯಕಶ್ಚಿತ್ ಎಪ್ಪತ್ತಮೂರೂವರೆ ರೂಪಾಯಿಯ ಕಳ್ಳತನವೇ ಅತ್ಯಂತ ಪ್ರಮುಖವಾದ ವಿಷಯವಾಗಿತ್ತು. ನಾನು ನಡೆದ ವಿಷಯವನ್ನು ಹೇಳಿ ‘ಸದ್ಯಕ್ಕೆ ತನ್ನಲ್ಲಿ ಹಣವಿಲ್ಲ’ವೆಂದು ಹೇಳಿದೆ. ಬೇರೆ ಹುಡುಗರೂ ಕಳ್ಳತನವಾದ ವಿಚಾರವನ್ನು ಹೇಳಿದ್ದರಿಂದ, ನಿಂಗೇಗೌಡರು ‘ಬೇಗ ಹಣಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು. ‘ಕಳ್ಳ ಸಿಕ್ಕ ಕೂಡಲೇ ತಮ್ಮ ಹಣವನ್ನು ಕೊಡುತ್ತೇನೆ’ ಎಂದು ನಾನು ಹೇಳಿದೆ. ಆದರೆ ಆ ಕಳ್ಳ ಸಿಗಲೂ ಇಲ್ಲ; ನಾನು ಅವರಿಗೆ ಆ ಹಣವನ್ನು ಕೊಡಲೂ ಇಲ್ಲ!
ಹಾಗೆಂದ ಮಾತ್ರಕ್ಕೆ ನಿಂಗೇಗೌಡರು ಆ ವಿಷಯವನ್ನು ಸುಮ್ಮನೆ ಬಿಟ್ಟರೆಂದು ನೀವು ಭಾವಿಸಬೇಕಾಗಿಲ್ಲ. ಆಗಾಗ ಅವರು ಹಣವನ್ನು ಕೊಡು ಎನ್ನುತ್ತಿದ್ದುದ್ದು, ನಾನು ಕಳ್ಳ ಸಿಕ್ಕ ಮೇಲೆ ಕೊಡುತ್ತೇನೆ ಎನ್ನುವುದು ಮುಂದುವರೆದೇ ಇತ್ತು. ‘ಪರೀಕ್ಷೆಗೆ ಹೋಗುವಾಗ ಅಡ್ಮಿಷನ್ ಟಿಕೆಟ್ ಕೊಡುವುದಿಲ್ಲ’ ಎಂಬ ಬೆದರಿಕೆಯನ್ನು ನಾನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಈ ಹೆದರಿಕೆಯನ್ನು ಮುಂದಿಟ್ಟಿದ್ದ ಬಿ.ಬಿ.ಮಂಜುನಾಥ ಎಂಬ ಸ್ನೇಹಿತನ ಎದುರಿಗೆ, ‘ಕೊಡದೆ ಏನು ಮಾಡುತ್ತಾರೆ? ನನಗೆ ಅಡ್ಮಿಷನ್ ಟಿಕೆಟ್ ಕೊಡದಿದ್ದರೆ, ಈ ಬಾರಿ ಎಸ್ಸೆಸ್ಸೆಲ್ಸಿ ರಿಸಲ್ಟ್ ಸೊನ್ನೆ ತಿಳುಕೊ’ ಎಂದಿದ್ದೆ! ಯಾವ ಧೈರ್ಯದ ಮೇಲೆ ಹಾಗೆಂದಿದ್ದೆನೋ ಏನೋ, ನನಗಂತೂ ಇಂದೂ ಅರ್ಥವಾಗಿಲ್ಲ. ಆ ವರ್ಷ ನಾನೊಬ್ಬನೇ ಪಾಸಾದಾಗ ಮಂಜುನಾಥ ಆ ಮಾತನ್ನು ನೆನೆಪಿಸಿಕೊಂಡಿದ್ದ. ಈಗ ಡ್ರೈವರ್ ಆಗಿರುವ ಆತ ಸಿಕ್ಕಿದಾಗ ‘ನೀನು ಬಿಡಪ್ಪ. ಹೇಳಿದಂತೆ ನಡೆದುಕೊಂಡವನು!’ ಎಂದು ಬೈಟು ಕಾಫಿ ಕೊಡಿಸುತ್ತಾನೆ!
[ಮೊನ್ನೆ ಯುಗಾದಿ ಹಬ್ಬದ ಹಿಂದಿನ ದಿನ, ನಾನೂ ನನ್ನ ಹೆಂಡತಿ ಮಗಳೂ ಎಲ್ಲರೂ ಊರಿಗೆ ಹೋಗಿದ್ದೆವು. ಆಗ ಚೆನ್ನರಾಯಪಟ್ಟಣದ ಹಳೇ ಬಸ್ ಸ್ಟ್ಯಾಂಡಿನ ಬಳಿಯಿರುವ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಇತ್ಯಾದಿಗಳನ್ನು ಕೊಂಡುಕೊಂಡು, ಊರಿಗೆ ಹೋಗಲು ನಿಂತಿದ್ದಾಗ ಬಿ.ಬಿ. ಸಿಕ್ಕಿದ್ದ. ಆತನಿಗೆ ನನ್ನ ಹೆಂಡತಿ ಮಗಳನ್ನು ಪರಿಚಯಿಸಿದೆ. ಆತ ಅದೇ ಪ್ಲೇಟನ್ನು ಮತ್ತೆ ತಿರುವಿ ಹಾಕಿದ. 'ಮೇಡಂ. ನಮ್ಮ ಬ್ಯಾಚಿನಲ್ಲಿ ಇವನೊಬ್ಬನೇ ನೋಡಿ. ನುಡಿದಂತೆ ನಡೆದವನು' ಎಂದು. ಟೀಗೂ ಆಹ್ವಾನಿಸಿದ! ಪುಸ್ತಕದ ವಿಚಾರವನ್ನು ತಿಳಿಸಿದೆ. ಖುಷಿಯಿಂದ 'ನನಗೊಂದು ಪುಸ್ತಕ ಕೊಡಪ್ಪ, ದುಡ್ಡು ಕೊಡುತ್ತೇನೆ' ಎಂದ. ಇನ್ನೂ ಕೊಡಲಾಗಿಲ್ಲ, ಕೊಡಬೇಕು]

Thursday, April 09, 2009

ಐದುವರ್ಷದ ಮಗಳು

ಈಕ್ಷಿತಾ ನನ್ನ ಐದುವರ್ಷದ ಮಗಳು
ನಾನು ಐದು ವರ್ಷದ ತಂದೆ
ಆದ್ದರಿಂದ ನಾವಿಬ್ಬರೂ ಒಂದೆ.
ಕಂದ ನೀನು ನಕ್ಕಾಗ...
ನನ್ನ ಮಗಳಿಗೆ ಇದೇ ಏಪ್ರಿಲ್ ಹತ್ತನೇ ತಾರೀಖು (ಮೊದಲು ರಿಸಲ್ಟ್ ಡೇ ಎನ್ನುತ್ತಿದ್ದೆ. ಈಗ ರಿಸಲ್ಟನ್ನು ಬೇರೇ ತಾರೀಖುಗಳಲ್ಲಿಯೂ ಕೊಡುತ್ತಾರೆ) ಐದು ವರ್ಷ ತುಂಬಲಿದೆ. ಅವಳು ಹುಟ್ಟಿದಂದಿನಿಂದ ನಾವು ಅವಳ ಆಟ ಪಾಠಗಳಲ್ಲಿ ಸಾಕಷ್ಟು ಸಂತೋಷವನ್ನು ಕಂಡಿದ್ದೇವೆ. ಅವಳೊಂದಿಗೆ ನಾವು ಕಳೆದ ಎಲ್ಲಾ ರಸಮಯ ಸಮಯವನ್ನು ದಾಖಲಿಸುವುದು ಕಷ್ಟ. ಅದರಲ್ಲಿ ಈಗ ನೆನಪಿರುವ ಕೆಲವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಕಲ್ಲರಳಿ ಹೂವಾಗಿ
ಮೂರೂವರೆ ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನ ಮಗಳು ಎರಡೆರಡು ಅಕ್ಷರದ ಪದಗಳನ್ನು ತೊದಲು ನುಡಿಯುತ್ತಿದ್ದ ಕಾಲ. ಒಮ್ಮೆ ನಮ್ಮ ಸ್ನೇಹಿತರ ಮನೆಯಲ್ಲಿ ಐದಾರು ಜನ ಕುಳಿತು ಹರಟೆ ಹೊಡೆಯುತ್ತಿದ್ದೆವು. ನಡುವೆ ತೂರಿಕೊಂಡು ಬರುತ್ತಾ ‘ಗಾಜ, ಗಾಜ’ ಎಂದು ಅಳತೊಡಗಿದಳು. ನಮಗೆ ಏನೆಂದು ಅರ್ಥವಾಗಲಿಲ್ಲ. ನಾವು ಏನೆಂದು ಕೇಳಿದರೂ ಅವಳು ಮತ್ತೆ ಮತ್ತೆ ‘ಗಾಜ ಗಾಜ’ ಎಂದಷ್ಟೇ ಹೇಳುತ್ತಿದ್ದಳು. ಕೊನೆಗೂ ನಮಗೆ ಅದೇನೆಂದು ತಿಳಿಯಲಿಲ್ಲ.

ಕಲ್ಲದೇವರಿಗಿಂತ ನಾನೇ ವಾಸಿ...

ಮಾರನೆಯ ದಿನ ನನ್ನ ಬೈಕ್ ಕೀ ಕಾಣುತ್ತಿರಲಿಲ್ಲ. ಅದನ್ನು ಈಕ್ಷಿತಾ ಕೈಯಲ್ಲಿ ಹಿಡಿದುಕೊಂಡಿದ್ದಳು ಎಂಬುದು ನನ್ನ ಹೆಂಡತಿಯ ಆರೋಪ. ಆಗ ಮಗಳಿಗೆ ಪೂಸಿ ಹೊಡೆಯುತ್ತಾ ‘ಕೀ ಎಲ್ಲಿ?’ ಎಂದು ಕೇಳಿದ್ದಾಯಿತು. ನನ್ನ ಮಗಳ ಉತ್ತರ ‘ಮೂರು, ಮೂರು’ ಎಂಬುದಾಗಿತ್ತು. ನನಗೇನು ಅರ್ಥವಾಗಲಿಲ್ಲ. ಆಗ ನನ್ನ ಹೆಂಡತಿ ‘ನಿಮಗೇನೂ ಅರ್ಥವಾಗುವುದಿಲ್ಲ. ಅದರಲ್ಲಿ ಮೂರು ಕೀಗಳು ಇರುವುದನ್ನು ಹೇಳುತ್ತಿದ್ದಾಳೆ!’ ಎನ್ನಬೇಕೆ? ನನಗೆ ನಗುತಡೆಯಲಾಗಲಿಲ್ಲ. ಸಾಕಾಗುವಷ್ಟು ನಕ್ಕು, ನಂತರ ಮಗಳಿಗೆ ‘ಕೀ ತೋರಿಸುವಂತೆ’ ಕೇಳತೊಡಗಿದೆ. ಅದೇನು ಅರ್ಥವಾಯಿತೋ, ರೂಮಿನಕಡೆಗೆ ಕೈ ತೋರಿಸಿದಳು. ಹೋಗಿ ನೋಡಿದರೆ ಕೀ ರೂಮಿನಲ್ಲಿ ಬಿದ್ದಿತ್ತು. ಆಗ ನಮ್ಮ ದಡ್ಡ ತಲೆಗೆ ಹೊಳೆಯಿತು! ಅವಳು ‘ರೂಮು’ ಎನ್ನುವುದಕ್ಕೆ ‘ಮೂರು’ ಎನ್ನುತ್ತಿದ್ದಾಳೆ ಎಂದು. ತಕ್ಷಣ ನೆನ್ನೆ ಅವಳು ‘ಗಾಜ’ ಎಂದಿದ್ದು ‘ಜಾಗ’ ಎಂಬುದಕ್ಕೆ ಎಂದು ಅರ್ಥವಾಯಿತು.

ನಾನೂ ಓದ್ತಿನಿ ಗೊತ್ತಾ...!

ಹೀಗೆ ಈಕ್ಷಿತಾ ಉಲ್ಟಾಪಲ್ಟಾ ಹೇಳುತ್ತಿದ್ದ ಇನ್ನೊಂದು ಪದ ಪಾಚೆ (ಚಾಪೆ). ಕೆಲವು ದಿನ ಚಪಾತಿ ಎನ್ನುವುದಕ್ಕೆ ‘ಪಚಾತಿ’ ಎಂದು ಹೇಳುತ್ತಿದ್ದಳು.


ತನ್ನ ತಾನು ನೋಡಿಕೊಂಡು ನಕ್ಕಳು
ಇವಳ ಹುಟ್ಟಿದ ಹಬ್ಬಕ್ಕೆ ಸ್ವೀಟ್ ಏನು ಮಾಡುವುದು?’ ಎಂದು ಅವರಮ್ಮ ತಲೆಕೆಡಿಸಿಕೊಂಡಿದ್ದರೆ, ಇವಳು ‘ಬಾಲಾಜಿ’ ಎಂದಳು. ‘ಏನ್ ಬಾಲಾಜಿ, ಸರಿಯಾಗಿ ಹೇಳು’ ಎಂದಿದ್ದಕ್ಕೆ, ‘ಅದೇ ಅಮ್ಮ, ರೌಂಡು ರೌಂಡಾಗಿ ಇರುತ್ತಲ್ಲ ಆ ಸ್ವೀಟು’ ಎನ್ನಬೇಕೆ? ಆಗಲೇ ನಮಗೆ ಅರ್ಥವಾಗಿದ್ದು, ಇವಳ ಬಾಲಾಜಿ ‘ಜಿಲೇಬಿ’ ಎಂದು!


ನಾನೇ ಬೌಲರ್, ನಾನೇ ಬ್ಯಾಟ್ಸ್ ಮನ್
ನಾವು ಎಲ್ಲಿಗಾದರೂ ಬಸ್ ಪ್ರಯಾಣ ಮಾಡುವಾಗ, ನನ್ನ ಮಗಳು ಹಾಕಿರುವ ಚಪ್ಪಲಿ ಅಥವಾ ಶೂ ಬಿಚ್ಚಿಬಿಡುತ್ತಿದ್ದೆವು. ಇಲ್ಲದಿದ್ದರೆ ಅವುಗಳ ಸಮೇತ ನನ್ನ ತೊಡೆಯ ಮೇಲೆ ನಿಂತು ಆಟಕ್ಕೆ ಇಳಿದುಬಿಡುತ್ತಿದ್ದಳು. ಹಾಗೆ ತೆಗೆದಿಟ್ಟ ಚಪ್ಪಲಿ ಬಸ್ಸಿನ ಕುಲುಕಾಟಕ್ಕೆ ಬಸ್ಸಿನೊಳಗೇ ಒಂದು ಪುಟ್ಟ ಪ್ರಯಾಣ ಮಾಡಿ ಯರ‍್ಯಾರದೋ ಸೀಟಿನ ಕೆಳಗೆ ಹೋಗಿ ಕುಳಿತುಬಿಡುತ್ತಿದ್ದವು. ಇಳಿಯುವಾಗ ಹುಡುಕಬೇಕಾಗಿತ್ತು. ಅದಕ್ಕೆ ನಾನು ಸ್ಟ್ರಾಪ್ ಚಪ್ಪಲಿಗಳಾಗಿದ್ದರೆ, ಒಂದರ ಸ್ಟ್ರಾಪನ್ನು ಇನ್ನೊಂದರದರೊಳಗೆ ಹಾಕಿ ಸೀಟಿನ ಕಂಬಿಗೆ ನೇತುಬಿಡುತ್ತಿದ್ದೆ. ಸುಮಾರು ದಿನದಿಂದಲೂ ಇದನ್ನೇ ಮಾಡುತ್ತಿದ್ದೇನೆ.
ನನ್ನ ಶೂ ನಾನೇ ಪಾಲೀಷ್ ಮಾಡಿಕೊಳ್ಳಬೇಕಾ! ಅದಕ್ಕೂ ರೆಡಿ!
ಮೊನ್ನೆ ಹಾಗೆ ಮಾಡಿದಾಗ, ಅದನ್ನು ನೋಡಿದ ನನ್ನ ಮಗಳು ‘ಬ್ಯೂಟಿಫುಲ್ ನೇತ್’ ಎಂದಳು. ನಮಗೆ ಅರ‍್ಥವಾಗಲಿಲ್ಲ. ಏನಂದು ಕೇಳಿದ್ದಕ್ಕೆ ನೇತು ಹಾಕಿದ್ದ ಚಪ್ಪಲಿ ತೋರಿಸಿ ‘ಬ್ಯೂಟಿಫುಲ್ ನೇತ್’ ಎಂದಳು. ತಕ್ಷಣ ನನಗೆ ಇದು ಇವಳು ಎರಡು ಭಾಷೆಗಳನ್ನು ಒಟ್ಟೊಟ್ಟಿಗೆ ಕಲಿಯಬೇಕಾಗಿರುವುದರಿಂದ ಆಗುತ್ತಿರುವ ತೊಂದರೆ ಎಂದು ಅರ್ಥವಾಯಿತು.


ಹಲೋ, ಈಕ್ಷಿತಾ ಸ್ಪೀಕಿಂಗ್...!
ನನ್ನ ಮಗಳು ಸ್ವಲ್ಪ ‘ಅಪ್ಪನ ಮಗಳು’. ಏಟು ಕೊಡುವುದು ನಾನೆ, ಮುದ್ದು ಮಾಡುವುದು ನಾನೆ. ಅವರಮ್ಮನ ಹತ್ತಿರ ಸ್ವಲ್ಪ ಹಠ ಜಾಸ್ತಿ. ಕೇಡುಗ ಬುದ್ಧಿಯಲ್ಲದಿದ್ದರೂ, ಅವರಮ್ಮನಿಗೆ ಅದನ್ನು ಸಹಿಸಲಾಗುವುದಿಲ್ಲ. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ದಿನಕ್ಕೆ ಇಪ್ಪತ್ತು ಸಾರಿಯಾದರೂ ಮಗಳಿಗೆ ಬುದ್ಧಿ ಹೇಳುತ್ತಿರುತ್ತಾಳೆ. (ನೀನು ಹಾಗೆ ಮಗುವಿಗೆ ಯಾವಾಗಲೂ ಎಲ್ಲದಕ್ಕೂ ರಿಸ್ಟ್ರಿಕ್ಟ್ ಮಾಡಬೇಡ ಎಂದು ನಾನು ಅವಳಿಗೆ ಬುದ್ದಿ ಹೇಳುತ್ತಿರುತ್ತೇನೆ)
ನನ್ನಪ್ಪನಿಗೆ ಇಷ್ಟವಾದ ರಾಗಿ ಮುದ್ದೆ ನಾನೂ ಮಾಡ್ತೀನಿ ಗೊತ್ತಾ...?
ಮೊನ್ನೆ ಒಂದು ದಿನ ಹೀಗೇ ಯಾವುದಕ್ಕೋ ಮಗಳಿಗೆ ಬುದ್ದಿ ಹೇಳುವುದು ಶುರುವಾಯಿತು. ನನ್ನ ಮಗಳಿಗೆ ಅದೇನು ಅನ್ನಿಸಿತೋ, ಕಾಣೆ. ಹಣೆ ಹಣೆ ಚಚ್ಚಿಕೊಳ್ಳುತ್ತಾ ‘ನಾನು ಈ ಮನೇಲಿ ಹುಟ್ಟಬಾರದಿತ್ತಮ್ಮಾ’ ಎಂದು ಬಿಟ್ಟಳು. ನಮಗಿಬ್ಬರಿಗೂ ಶಾಕ್. ‘ಏಕೆ’ ಎಂದು ಇಬ್ಬರೂ ಒಟ್ಟಿಗೆ ಕೇಳಿದೆವು. ಅದಕ್ಕೆ, ಅವಳು ‘ನಾನು ಹಠ ಮಾಡುತ್ತೇನೆ, ನೀನು ನನ್ನನ್ನು ಬಯ್ಯುತ್ತೀಯಾ. ಅಪ್ಪ ನಿನ್ನನ್ನು ಬಯ್ಯುತ್ತದೆ, ಅದಕ್ಕೆ’ ಎನ್ನುವುದೇ!

ನಾನೂ ಬರಿತೀನ್ರಿ. ನೀವು ಓದ್ತಿರಾ ತಾನೆ?
ಮೊನ್ನೆ ಒಬ್ಬರ ಮನೆಗೆ ಹೋಗುವುದಿತ್ತು. ಇವಳು ಚಿಕ್ಕವಳಾಗಿದ್ದಾಗ, ನಾವು ಹೋಗುತ್ತಿದ್ದ ಮನೆಯವರು ನಮ್ಮ ಪಕ್ಕದ ಮನೆಯವರಾಗಿದ್ದರು. ಹೊರಟು ನಿಂತಿದ್ದಾಗ ನನ್ನ ಮಗಳು ‘ಅಮ್ಮ ಅವರ ಮನೆಯಲ್ಲಿ ಯರ‍್ಯಾರು ಇರುತ್ತಾರೆ? ಎಂದು ಪ್ರಶ್ನಿಸಿದಳು. ಅವಳು ‘ಆಂಟಿ ಇರುತ್ತಾರೆ’ ಎಂದಳು. ‘ಇನ್ನು ಯಾರು ಇರುವುದಿಲ್ಲವೆ?’ ಮತ್ತೆ ಮಗಳ ಪ್ರಶ್ನೆ. ಅದಕ್ಕೆ ನನ್ನ ಹೆಂಡತಿ ‘ಇನ್ನು ಯಾರು ಇರಬೇಕಿತ್ತು?’ ಎಂದು ಮರುಪ್ರಶ್ನೆ ಹಾಕಿದಳು. ತಕ್ಷಣ ನನ್ನ ಮಗಳು ‘ಗಂಡ, ಇರಬೇಕಿತ್ತು’ ಎಂದಳು. ನನ್ನ ಹೆಂಡತಿ ನಗುತ್ತಾ ‘ಗಂಡನಾ, ಗಂಡ ಅಂದರೆ ಏನು? ಎಂದಳು. ನನ್ನ ಮಗಳು ನನ್ನೆಡೆಗೆ ಕೈತೋರುತ್ತಾ ‘ನಮ್ಮ ಮನೆಯಲ್ಲಿ ಇಲ್ಲವಾ, ಹಾಗೆ’ ಎಂದುಬಿಟ್ಟಳು. (ಸಧ್ಯ, ದಂಡ, ಪಿಂಡ ಎಂಬ ಪ್ರಸಾಕ್ಷರಗಳು ಇನ್ನೂ ಅವಳಿಗೆ ಗೊತ್ತಿಲ್ಲ)
ನನ್ಗೂ ಗೊತ್ರಿ, ಕಂಪ್ಯೂಟರ್...!
ಈಕ್ಷಿತಾ ಚಿಕ್ಕವಳಿದ್ದಾಗಲಿಂದಲೂ ದೊಡ್ಡವರನ್ನು ಅನುಕರಿಸುವುದು ಜಾಸ್ತಿ. ಬೇರೆಯಾಗಿಯೇ ಊಟಕ್ಕೆ ಕೂರುವುದು, ನಾವು ಬಡಿಸಿಕೊಂಡು ಎಲ್ಲವನ್ನೂ ತಾನೂ ಬಡಿಸಿಕೊಳ್ಳುವುದು (ತಿನ್ನುವುದು ಮಾತ್ರ ತನಗೆ ಬೇಕಾದ್ದನ್ನು! ಊಟ ಬೇಡವಾದಾಗ ಮೊಸರನ್ನವನ್ನೂ ಕಾರ ಎಂದು ತಳ್ಳಿರುವದುಂಟು!) ಇತ್ಯಾದಿ.

ಪೇಪರ್ ಓದೋದು ಹೀಗೇನಾ...?
ನಾವು ಕಾಫಿ ಕುಡಿದಾಗ ಅವಳಿಗೆ ಹಾಲು ಕೊಟ್ಟು, ನಮ್ಮದು ಕಷಾಯ ಎಂದು ಹೇಳಿದರೂ, ನನಗೂ ಕಷಾಯವನ್ನೇ ಕೊಡು ಎನ್ನುತ್ತಿದ್ದಳು. ಆಗ ನಾವು ಬೂಸ್ಟನ್ನು ಕಾಫಿ ಎಂದು ಸುಳ್ಳು ಹೇಳಿ ಕೊಡುತ್ತಿದ್ದೆವು. ಆದರೆ ನಾವೂ ಹೆಚ್ಚಾಗಿ ಹೋಗುವ, ಅವಳು 'ಮಾಯಿ' ಎಂದು ಕರೆಯುವ ಒಬ್ಬರ ಮನೆಯಲ್ಲಿ ಕಾಫಿ ಸಮಾರಾಧನೆ ಹೆಚ್ಚು. ರಾತ್ರಿ ಹತ್ತು ಗಂಟೆಗೆ ಹೋದರೂ ಒಂದೆರಡು ಸಿಪ್ ಕಾಫಿ ಕುಡಿದೇ ನಾವು ಹೊರಡುವುದು. ಅವರಿಗೆ ಈಕ್ಷಿತಾಳಿಗೆ ಕಾಫಿ ಕೊಡುವುದಕ್ಕೆ ಭಯ. ಆದರೆ ಕೊಡದಿರುವುದಕ್ಕೆ ಇಷ್ಟವಿಲ್ಲ. ಅದಕ್ಕಾಗಿ ಲೈಟಾಗಿ ಸ್ವಲ್ಪ ಕೊಡುವುದನ್ನು ಅಭ್ಯಾಸ ಮಾಡಿಸಿದರು.
ಮನೆ ಗುಡಿಸೋದಿಕ್ಕೂ......
‘ನಮ್ಮ ಮನೆಗೆ ಬಂದಾಗ ಸ್ವಲ್ಪವನ್ನೇ ಕುಡಿಯಬೇಕು’ ಎಂದು ಅವಳನ್ನು ಕನ್ವಿನ್ಸ್ ಮಾಡಿದರೂ ಕೂಡಾ. ಮುಂದೆ ನಾವು ಯಾವಾಗ ಅವರ ಮನೆಗೆ ಹೋದರೂ ಅವರು ಕಾಫಿ ಮಾಡಲು ಎದ್ದರೆ ಸಾಕು, ‘ಮಾಮಿ, ನನಗೆ ಸೀಲ್ ಲೋಟದಲ್ಲಿ ಸೂರ್ ಕಾಫಿ ಕೊಡಿ’ ಎನ್ನುತ್ತಿದ್ದಳು. ಅವಳು ಮೂರುವರ್ಷದವಳಿದ್ದಾಗಲಿಂದ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ಅವಳ ಈ ವಾಕ್ಯ ನಮಗೆ ಬಹಳ ತಮಾಷೆಯ ವಸ್ತುವಾಗಿತ್ತು. ಮಾಯಿಯ ಸ್ನೇಹಿತರೆಲ್ಲಾ ಈಕ್ಷಿತಾಳ ಬಗ್ಗೆ ವಿಚಾರಿಸುವಾಗ 'ಸೂರ್ ಕಾಫಿ ಹೇಗಿದೆ?' ಎಂದೇ ಕೇಳುತ್ತಿದ್ದರಂತೆ!

ಮನೆ ತೊಳೆಯೋದಿಕ್ಕೂ ನಾನ್ ರೆಡಿ!
ನನ್ನ ತಾಯಿಗೆ ಈಗ ಸುಮಾರು ಎಪ್ಪತ್ತೈದು ವರ್ಷ ಆಗಿದೆ. ಅವರ ಚರ್ಮ ಸುಕ್ಕುಗಟ್ಟಿ ನೆರಿಗೆ ನೆರಿಗೆಯಾಗಿ ಕಾಣುತ್ತದೆ. ಅವರ ಕೈನ ಚರ್ಮವನ್ನು ಸವರುತ್ತಾ ನನ್ನ ಮಗಳು 'ಅಜ್ಜಿಯ ಚರ್ಮ ಹಾಲಿನೆ ಕೆನೆಯಿದ್ದ ಹಾಗಿದೆ' ಎನ್ನುತ್ತಿದ್ದಳು. ಬಿಸಿಯಾಗಿದ್ದ ಹಾಲು ತಣ್ಣಗಾಗಿ ಕೆನೆಕಟ್ಟಿದಾಗ ಕಾಣುವ ರೀತಿಯನ್ನು ಅವಳು ಗಮನಿಸಿದ್ದಳು!
ಅಜ್ಜಿ ಊರಲ್ಲೂ ನಾನೇ ಕೆಲ್ಸ ಮಾಡೋದು, ಗೊತ್ತಾ!
ಅಜ್ಜಿ ಊರಲ್ಲಿರೋ ನನ್ನ ಫ್ರೆಂಡ್ಸ್, ಇವ್ರು!

ಇನ್ನೊಬ್ಬ ಫ್ರೆಂಡ್ಸ್ ಗೂ ನಾನೇ ಕಾಳು ತಿನ್ನಿಸ್ತಿನಿ

ಅಪ್ಪಾ, ನಾನು ಕೇಕ್ ಕಟ್ ಮಾಡ್ಲಾ...?
ಇವ್ರೆಲ್ಲಾ ನನ್ನ ಮೊದಲ ಸ್ಕೂಲಿನ ಜೊತೆಗಾರ್ರು
ಮುಂಜಾನೆ ವಾಕಿಂಗ್, ಬ್ಯಾಲೆನ್ಸಿಂಗ್ ಎಲ್ಲಾ ನಡೆಯುತ್ತೆ ಪಾರ್ಕಿನಲ್ಲಿ
ನಮ್ಮ ಸಂಸಾರ


ನನ್ನ ಡ್ಯಾನ್ಸ್ ಸ್ವಲ್ಪ ನೋಡಿ

Monday, April 06, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 9

ಮೊಲದ ಮಂಜ
ಈ ನಿಂಗೇಗೌಡರ ಪುರಾಣ ಇನ್ನೂ ಇರುವಾಗಲೇ ಇಲ್ಲಿಯೇ ಮೊಲದ ಮಂಜನ ಕಥೆಯನ್ನು ಸ್ವಲ್ಪ ಹೇಳಿಬಿಡುತ್ತೇನೆ. ಏಕೆಂದರೆ ಈ ಮೊಲದ ಮಂಜನಿಗೂ ನಿಂಗೆಗೌಡರಿಗೂ ಒಂದು ರೀತಿಯಲ್ಲಿ ಗೆಳೆತನವಿತ್ತು ಹಾಗೂ ಒಂದು ವಿಷಯದಲ್ಲಿ ಜಗಳವಾಗಿತ್ತು!
ಮೊಲದ ಮಂಜ ನಮ್ಮ ತರಗತಿಯಲ್ಲಿದ್ದ ಅತ್ಯಂತ ಹಿರಿಯ ವಿದ್ಯಾರ್ಥಿ! ಸುಮಾರು ಹದಿನೆಂಟು ಇಪ್ಪತ್ತು ವರ್ಷದವನಾದ ಆತ ಇನ್ನೂ ಹತ್ತನೇ ತರಗತಿಯಲ್ಲಿಯೇ ಇದ್ದುದಕ್ಕೆ, ಆತ ಕೊಡುತ್ತಿದ್ದ ಕಾರಣ ‘ಅವನ ತಾಯಿ ಸ್ಕೂಲಿಗೆ ಸೇರಿಸಿದ್ದು ಲೇಟು’ ಎಂಬುದು. ಆತನ ತಂದೆ ತೀರಿ ಹೋಗಿದ್ದರು. ತಾಯಿಯ ಅತಿಯಾದ ಮುದ್ದಿನಿಂದ ಆತ ಓದುವುದಕ್ಕಿಂತ ಹೆಚ್ಚಾಗಿ ಮೀನು, ಮೊಲ, ಹಕ್ಕಿ ಇವುಗಳ ಬೇಟೆಯಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು. ನಮ್ಮ ತೋಟದ ಹತ್ತಿರವೇ ಇವನ ಮನೆಯಿತ್ತು. ಇವನ ತಾಯಿ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಒಳ್ಳೆಯ ಬೇಟೆಯಾದಾಗ, ಬೇಟೆಯಾದ ಮೊಲ ಅಥವಾ ಮೀನು ಒಳ್ಳೆಯ ರೇಟಿಗೆ ಮಾರಾಟವಾಗದಿದ್ದಾಗ, ಆತ ನಮ್ಮ ಮನೆಗೆ ಅವುಗಳನ್ನು ತಂದುಕೊಡುತ್ತಿದ್ದ. ನಮಗೆ ಬೇಕಾದಾಗಲೂ ಅಷ್ಟೆ. ಹೇಳಿದರೆ ಸಾಕು. ತಂದುಕೊಡುತ್ತಿದ್ದ. ಆತನಿಗೆ ದುಡ್ಡು ಕೊಡಬೇಕೆಂದರೆ ನಮ್ಮ ತಂದೆಗೆ ಸಾಕು ಬೇಕಾಗುತ್ತಿತ್ತು. ದುಡ್ಡು ತೆಗೆದುಕೊಳ್ಳದಿದ್ದರೆ ನಮ್ಮ ತಾಯಿ ಬಯ್ಯುತ್ತಿದ್ದರು. ಇನ್ಯಾವತ್ತೂ ನೀನು ನಮಗೆ ಮೊಲ ಮೀನು ಕೊಡಬೇಡ ಅನ್ನುತ್ತಿದ್ದರು. ಆದರೆ ದುಡ್ಡು ತೆಗೆದುಕೊಂಡರೆ ಅವನ ತಾಯಿ ಬಯ್ಯುತ್ತಿದ್ದರು!
ಆತನ ಬೇಟೆ ಹುಚ್ಚು ನನಗೂ ಹಿಡಿದಿತ್ತು. ರಾತ್ರಿ ಹೊತ್ತು ನಾನೂ ಬ್ಯಾಟರಿ ಹೊತ್ತುಕೊಂಡು ಅವನ ಹಿಂದೆ ತಿರುಗುತ್ತಿದ್ದೆ. ಈಗಲೂ ನಾನು ಊರಿಗೆ ಹೋದಾಗ ಅವನನ್ನು ಆಗಾಗ ಭೇಟಿಯಾಗುತ್ತೇನೆ. ಆ ಸಮಯಕ್ಕೆ ಏನಾದರು ಬೇಟೆಯಾಗಿದ್ದರೆ ತಂದು ಕೊಡುತ್ತಾನೆ. ಈಗ ಮೊದಲಿನಷ್ಟು ಬೇಟೆ ಸಾಧ್ಯವಿಲ್ಲ. ಪ್ರಾಣಿಗಳೂ ಇಲ್ಲ; ಅರಣ್ಯ ಇಲಾಖೆಯವರೂ ಸುಮ್ಮನಿರುವುದಿಲ್ಲ. ಇನ್ನೊಂದು ವಿಷಯವೆಂದರೆ ಆತ ಹತ್ತನೇ ತರಗತಿಗೆ ಬರುವಷ್ಟರಲ್ಲಿ ಒಂದು ಕೋವಿಯನ್ನು ಕೊಂಡುಕೊಂಡಿದ್ದ!
ಈತ ಬೇಟೆ ಆಡುತ್ತಿದ್ದ ಹಲವಾರು ಮಾರ್ಗಗಳು ವಿಚಿತ್ರವಾಗಿವೆ. ಹೆಚ್ಚಾಗಿ ರಾತ್ರಿ ವೇಳೆಯಲ್ಲೇ ಆತನ ಬೇಟೆ ಕಾರ್ಯಗಳು ನಡೆಯುತ್ತಿದ್ದವು. ಅವುಗಳಲ್ಲಿ ಆತ ಮೀನು ಹೊಡೆಯುವ ಬೇಟೆಯಂತೂ ಒಂದು ರೀತಿಯ ತಪಸ್ಸು. ಮಧ್ಯರಾತ್ರಿ ವೇಳೆ, ಹಣೆಗೆ ಬ್ಯಾಟರಿ ಕಟ್ಟಿಕೊಂಡು, ಸೊಂಟದುದ್ದದ ನೀರಿನಲ್ಲಿ ನಿಂತುಕೊಂಡು, ಮೀನಿನ ಚಲನವಲನವನ್ನು ಗಮನಿಸಿ, ಕೈಯಲ್ಲಿ ಹಿಡಿದಿರುತ್ತಿದ್ದ ಚೂಪಾದ ಭರ್ಜಿಯಿಂದ ಮೀನಿಗೆ ಚುಚ್ಚುತ್ತಿದ್ದ. ಬ್ಯಾಟರಿಯ ಬೆಳಕು ಬಿದ್ದ ಜಾಗಕ್ಕೆ ಮೀನುಗಳೂ ಹಿಂಡುಹಿಂಡಾಗಿ ಬರುತ್ತಿದ್ದವು. ಬೆಳಗಿನ ಹೊತ್ತಿಗೆ ಹತ್ತು ಹನ್ನೆರಡು ಮೀನುಗಳನ್ನು ಭರ್ಜಿಯಲ್ಲಿ ಚುಚ್ಚಿ ಹಿಡಿಯುತ್ತಿದ್ದ. ಬಲೆಯನ್ನು ಬೀಸಿ ಮೀನು ಹಿಡಿಯುವುದೂ ಆತನಿಗೆ ಗೊತ್ತಿತ್ತು.
ಮೊಲದ ಬೇಟೆಗೆ ಆತ ಹಣೆಬ್ಯಾಟರಿ ಮತ್ತು ಬಂದೂಕು ಬಳಸುತ್ತಿದ್ದ. ಚಿಗುರು ಹುಲ್ಲು ಬೆಳೆದಿರುತ್ತಿದ್ದ ಕಡೆ, ರಾತ್ರಿ ವೇಳೆಯಲ್ಲಿ ಮೇಯಲು ಬರುತ್ತಿದ್ದ ಮೊಲಗಳಿಗೆ ಬ್ಯಾಟರಿ ಬೆಳಕು ಬೀಳುತ್ತಿದ್ದಂತೆ, ಅವು ಗಾಬರಿಯಾಗಿ ಅತ್ತಿತ್ತ ಅಲುಗಾಡದೆ ನಿಂತು ಬಿಡುತ್ತಿದ್ದವು. ಆಗ ಈತ ತುಸುವೂ ಅಲುಗಾಡದೆ ಗುರಿಯಿಟ್ಟು ಕೋವಿಯಿಂದ ಉಡಾಯಿಸಿಬಿಡುತ್ತಿದ್ದ. ಇನ್ನೊಂದು ‘ಉಳ್ಳು’ ಎಂಬ ಸಾಧನವನ್ನೂ ಆತ ಬಳಸಿ ಮೊಲಗಳನ್ನು ಹಿಡಿಯುತ್ತಿದ್ದ. ಮೊಲಗಳ ಓಡಾಟದ ಜಾಡನ್ನು ಗಮನಿಸಿ, ಸಂಜೆಯ ವೇಳೆ ಹೋಗಿ ಉಳ್ಳನ್ನು ಕಟ್ಟಿ ಬರುತ್ತಿದ್ದ. ಬೆಳಿಗ್ಗೆ ಬೇಗ ಹೋಗಿ ನೋಡಿದರೆ ಒಂದೆರಡು ಮೊಲಗಳು ಉಳ್ಳಿಗೆ ಸಿಕ್ಕಿ ಬಿದ್ದಿರುತ್ತಿದ್ದವು. ನಾವು ಹಾಸ್ಟೆಲ್ಲಿನ ಹುಡುಗರೆಲ್ಲಾ ಅವನನ್ನು ಒಂದಷ್ಟು ದಿನ ಹಾಸ್ಟೆಲ್ಲಿನಲ್ಲಿಯೇ ಇರಿಸಿಕೊಂಡು, ಐದಾರು ಮೊಲಗಳನ್ನು ಹಿಡಿದು ಅವನ ಕೈಯಲ್ಲೇ ಅಡುಗೆ ಮಾಡಿಸಿಕೊಂಡು ಸ್ವಾಹ ಮಾಡಿದ್ದೆವು.
ಈ ಎಲ್ಲಾ ಕೃತ್ಯಗಳಿಂದ ಆತನಿಗೆ ‘ಮೊಲದ ಮಂಜ’ ಎಂಬ ಅಡ್ಡ ಹೆಸರು ಪರ್ಮನೆಂಟಾಗಿ ನಿಂತುಬಿಟ್ಟಿದೆ. ಈಗಲೂ ನಮ್ಮ ತಾಯಿ ನಾನು ಊರಿಗೆ ಹೋದಾಗ, ಆತನ ವಿಷಯವನ್ನು ಪ್ರಸ್ತಾಪಿಸಬೇಕಾದಾಗ ‘ಮೊಲದ ಮಂಜ’ ಎಂದೇ ಉಲ್ಲೇಖಿಸುತ್ತಾರೆ.
ಆತನಿಗೆ ಇದ್ದ ಇನ್ನೊಂದು ಅಡ್ಡ ಹೆಸರೆಂದರೆ ‘ಖಾಲಿ’ ಎಂಬುದು. ನಮ್ಮ ತರಗತಿಯಲ್ಲಿ ಇದ್ದ ಐದಾರು ಜನ ‘ಮಂಜುನಾಥ’ ಎಂಬ ಹೆಸರಿನ ವಿದ್ಯಾರ್ಥಿಗಳಿಂದಾಗಿ ಅವರನ್ನು ಗುರುತಿಸಲು ಅವರವರ ಇನಿಷಿಯಲ್‌ಗಳನ್ನು ಹೆಚ್ಚಾಗಿ ಬಳಸಬೇಕಾಗಿತ್ತು. ಮೇಷ್ಟ್ರುಗಳು ಅಟೆಂಡೆನ್ಸ್ ಕೂಗುವಾಗ, ಮೊದಲ ಮಂಜುನಾಥನನ್ನು ಮಾತ್ರ ಹೆಸರು ಮತ್ತು ಇನಿಷಿಯಲ್ ಸಮೇತ ಕೂಗಿ, ನಂತರ ಉಳಿದವರ ಇನಿಷಿಯಲ್ ಮಾತ್ರ ಕೂಗುತ್ತಿದ್ದರು. ಆದರೆ ಇನಿಷಿಯಲ್ಲೇ ಇಲ್ಲದ ಮಂಜುನಾಥನಾದ ಈ ಬೇಟೆಗಾರನನ್ನು ಮಾತ್ರ ‘ಖಾಲಿ’ ಎಂದಷ್ಟೇ ಕೂಗುತ್ತಿದ್ದರು. ಅದರಿಂದಾಗಿ ಆತನಿಗೆ ಮೊಲದ ಮಂಜ ಎಂಬುದರೊಂದಿಗೆ ಖಾಲಿ ಎಂಬ ಹೆಸರೂ ಇತ್ತು.
ಮೊಲ ಮೀನು ತರಿಸಿಕೊಂಡಿದ್ದು; ಬುಟ್ಟಿ ಹೆಣೆಸಿಕೊಂಡಿದ್ದು
ಈ ರೀತಿಯ ಸಕಲಕಲಾವಲ್ಲಭನೂ, ಓದಿನಲ್ಲಿ ದಡ್ಡನೂ ಆದ ಮಂಜ, ನಿಂಗೇಗೌಡರಿಗೆ ವರವಾಗಿ ಪರಿಣಮಿಸಿದ್ದ. ಎಂಟು ಮತ್ತು ಒಂಬತ್ತನೇ ತರಗತಿಯಲ್ಲಿ ಹತ್ತು ಹದಿನೈದು ಬಾರಿಯಾದರೂ ಆತನಿಂದ ಮೀನು ಮತ್ತು ಮೊಲವನ್ನು ತರಿಸಿಕೊಂಡು ಪುಕ್ಕಟ್ಟೆಯಾಗಿ ಮಜ ಉಡಾಯಿಸಿದ್ದರು. ಅವರು ಪಾಠ ಮಾಡುತ್ತಿದ್ದ ವಿಷಯಗಳಲ್ಲಿ ಆತನಿಗೆ ಒಳ್ಳೆಯ ಅಂಕಗಳನ್ನು ಕೊಟ್ಟು ಕೃತಾರ್ಥರೂ ಆಗಿದ್ದರು. ಮಂಜ ನಮಗೆ ತಮಾಷೆ ಮಾಡುತ್ತಿದ್ದ. ‘ನಿಮ್ಮ ಓದು ನಿಮಗೆ ಮಾರ್ಕ್ಸ್ ಕೊಡಿಸಿದರೆ ನನ್ನ ಬೇಟೆ ನನಗೆ ಮಾರ್ಕ್ಸ್ ಕೊಡಿಸುತ್ತದೆ. ಎರಡೂ ವಿದ್ಯೆಯೇ ಅಲ್ಲವೇ?’ ಎನ್ನುತ್ತಿದ್ದ. ಆತ ಹೇಳುವುದೂ ಒಂದರ್ಥದಲ್ಲಿ ನಿಜವೇ ಇರಬೇಕು! ಆದರೆ ಹತ್ತನೇ ತರಗತಿಗೆ ಬರುತ್ತಿದ್ದಂತೆ, ಆತನ ವರ್ತನೆ ಬದಲಾಯಿತು.
ಹತ್ತನೇ ತರಗತಿಯ ಫಲಿತಾಂಶ ಈ ನಿಂಗೇಗೌಡರ ಕೈಯಲ್ಲಿ ಇಲ್ಲ ಎಂಬುದು ಗೊತ್ತಾಗಿದ್ದೇ ತಡ, ಅವರಿಗೆ ಸಬೂಬು ಹೇಳತೊಡಗಿದ. ಪ್ರಾರಂಭದಲ್ಲೇ ಒಂದು ದಿನ ಅವರು ‘ಮನೆಗೆ ನೆಂಟರು ಬರುತ್ತಿದ್ದಾರೆ. ಒಂದು ಒಳ್ಳೆಯ ಮೊಲ ಹೊಡೆದುಕೊಡು’ ಎಂದು ಕೇಳಿದ್ದರು. ಆತನೂ ಒಪ್ಪಿಕೊಂಡು ಬೇಟೆಗೆ ಹೊರಟಿದ್ದ. ಅಂದು ನಾನೂ ಅವನ ಜೊತೆಯಲ್ಲಿ ಉಳ್ಳು ಹೊತ್ತುಕೊಂಡು ಹೋಗಿದ್ದೆ. ಬೆಳಿಗ್ಗೆ ನೋಡಿದಾಗ ಭರ್ಜರಿಯಾದ ಎರಡು ಮೊಲಗಳೂ ಸಿಕ್ಕಿದ್ದವು! ಅವುಗಳನ್ನು ತೆಗೆದುಕೊಂಡು ಹೊರಟಾಗ ಮಾತ್ರ ಆತ ಅನ್ಯಮನಸ್ಕನಾಗಿದ್ದ. ಏಕೆಂದು ನಾನು ಕೇಳಿದಾಗ, ‘ಇಷ್ಟೊಂದು ಕಷ್ಟಪಟ್ಟು ಹಿಡಿದ ಮೊಲಗಳನ್ನು ಅವನಿಗ್ಯಾಕೆ (ಡಿ.ಎಸ್.ಎನ್.ಗೇಕೆ) ಕೊಡಬೇಕು? ನೋಡು, ನಾನು ಹೊಸ ಉಳ್ಳು ಕೊಂಡುಕೊಂಡಿದ್ದ ದುಡ್ಡನ್ನು ಇನ್ನೂ ಆ ಹಕ್ಕಿಪಿಕ್ಕಿ ರಾಮನಿಗೆ ಕೊಟ್ಟಿಲ್ಲ. ಆದ್ದರಿಂದ ಒಂದು ಮೊಲವನ್ನು ಅವನಿಗೆ ಕೊಟ್ಟುಬಿಡುತ್ತೇನೆ. ಇನ್ನೊಂದನ್ನು ನಾವಿಬ್ಬರೂ ಪಾಲು ಮಾಡಿಕೊಳ್ಳೋಣ. ಅವರು ಕೇಳಿದರೆ ಮೊಲ ಉಳ್ಳಿಗೆ ಬಿದ್ದಿರಲೇ ಇಲ್ಲ ಎನ್ನುತ್ತೇನೆ’ ಎಂದು ಅವನೇ ಉಪಾಯವನ್ನು ಸೂಚಿಸಿದ್ದರಿಂದಲೂ, ಮೊಲದ ಮಾಂಸದ ಆಸೆಯಿಂದಲೂ ಅದಕ್ಕಿಂತ ಹೆಚ್ಚಾಗಿ ನಿಂಗೇಗೌಡರನ್ನು ಕಂಡರೆ ನನಗೆ ಮೊದಲಿಂದಲೂ ಆಗುತ್ತಿರಲಿಲ್ಲವಾದ್ದರಿಂದಲೂ ನಾನು ಆತನ ಸಲಹೆಗೆ ಮನಸ್ವೀ ಒಪ್ಪಿದ್ದೆ.
ಇತ್ತ ಮೊಲದ ಮಂಜನ ಲೆಕ್ಕಾಚಾರ ಈ ರೀತಿ ಬದಲಾದರೆ, ಮೊಲ ಸಿಗದೇ ಬೇಸರವಾದ ನಿಂಗೇಗೌಡರ ವರ್ತನೆಯೂ ನಿಧಾನವಾಗಿ ಬದಲಾಗತೊಡಗಿತು. ತರಗತಿಯಲ್ಲಿ ಮಂಜನಿಗೆ ಪ್ರಶ್ನೆಗಳನ್ನು ಕೇಳುವುದು, ಉತ್ತರ ಹೇಳದಿದ್ದಾಗ ಬಾಯಿಗೆ ಬಂದಂತೆ ಬಯ್ಯುವುದು ಶುರುವಾಯಿತು. ಸ್ವಲ್ಪ ದಿನದ ನಂತರ ಮತ್ತೆ ಮೀನಿಗೆ ಬೇಡಿಕೆ ಇಡುವುದು ನಡೆಯುತ್ತಿತ್ತು. ಆದರೆ ಓದನ್ನು ಬೇಕಾದರೆ ಬಿಡಲು ಸಿದ್ಧನಿದ್ದ ಮಂಜ ಮಾತ್ರ ಅವರಿಗೆ ಒಂದು ಮೀನನ್ನೂ ಕೊಡಲು ತಯಾರಿರಲಿಲ್ಲ. ಒಂದು ದಿನ ಇಂಗ್ಲೀಷ್ ಪಾಠ ಮಾಡುತ್ತಿದ್ದಾಗ, ಏನೋ ಪ್ರಶ್ನೆ ಕೇಳಿದರು. ಮಂಜ ಉತ್ತರ ಹೇಳಲಿಲ್ಲ. ಅವರ ಕೈಯಲ್ಲಿದ್ದ, ನಾನೇ ತಂದು ಕೊಟ್ಟಿದ್ದ ಕೋಲಿನಿಂದ ಮಂಜನಿಗೆ ಜೋರಾಗಿಯೇ ಹೊಡೆಯತೊಡಗಿದರು. ಮಂಜ ಸುಮ್ಮನಿದ್ದ. ಡಿ.ಎಸ್.ಎನ್. ‘ಯಾವನೋ ನಿನ್ನನ್ನು ಎಂಟು ಒಂಬತ್ತರಲ್ಲಿ ಪಾಸು ಮಾಡಿದವನು’ ಎಂದು ಕೂಗಿದರು. ಅದಕ್ಕೆ ಮಂಜ ನಿರುಮ್ಮಳನಾಗಿ, ‘ನೀವೆ, ಮೊಲ ಮೀನು ತರಿಸಿಕೊಂಡು ಪಾಸು ಮಾಡಿದ್ದು’ ಎಂದುಬಿಟ್ಟ! ಆಗ ನೋಡಬೇಕಿತ್ತು ಅವರ ಮುಖವನ್ನು. ಅಂದಿನಿಂದ ಮುಂದೆ ಯಾವತ್ತೂ ಮಂಜನನ್ನು ಮೀನಿಗೆ, ಮೊಲಕ್ಕೆ ಪೀಡಿಸಲಿಲ್ಲ; ಪ್ರಶ್ನೆಯನ್ನೂ ಕೇಳಲಿಲ್ಲ.
ನಾಗರಾಜ ಎಂಬ ವಿದ್ಯಾರ್ಥಿ ನಮ್ಮ ತರಗತಿಯಲ್ಲಿದ್ದು, ನಮ್ಮ ಜೊತೆಯಲ್ಲಿ ಹಾಸ್ಟೆಲ್ಲಿನಲ್ಲೂ ಇದ್ದ. ಬುಟ್ಟಿ, ಮಂಕರಿಗಳನ್ನು ಹೆಣೆಯುವುದು ಅವರ ಮನೆಯವರ ಕಸುಬಾಗಿತ್ತು. ಸ್ವಲ್ಪ ಮಟ್ಟಿನ ಅಲೆಮಾರಿಗಳಾಗಿದ್ದ ಅವನ ಮನೆಯವರು ತಿಪಟೂರಿನ ಕಡೆಯಿಂದ ಬಂದು ಅಲ್ಲೆಲ್ಲೋ ನೆಲೆಸಿದ್ದರು. ಎಂಟು-ಒಂಬತ್ತನೇ ತರಗತಿಗಳನ್ನು ತಿಪಟೂರಿನಲ್ಲಿ ಓದಿ, ಹತ್ತನೇ ತರಗತಿಗೆ ಮಠಕ್ಕೆ ಬಂದಿದ್ದ ಆತನನ್ನೂ ಡಿ.ಎಸ್.ಎನ್. ಬಿಡಲಿಲ್ಲ. ಆತನಿಂದ ಮಂಕರಿ ಕುಕ್ಕೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹೇಳಿ ಮಾಡಿಸಿಕೊಂಡಿದ್ದರು. ಅವರ ಹೆದರಿಕೆಗೆ ತಂದು ಒಪ್ಪಿಸಿದನಾದರೂ ಹಿಂದೆ ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಆದರೆ ಮಂಜ ಆ ರೀತಿ ತಿರುಗಿ ಉತ್ತರಿಸಿದ ನಂತರ, ನಾನೂ ಹಾಗೇ ಮಾಡಿದ್ದರೆ ಅವರು ನನ್ನನ್ನು ಕೇಳುತ್ತಿರಲಿಲ್ಲ ಎನ್ನುತ್ತಿದ್ದ. ಆಶ್ಚರ್ಯವೆಂದರೆ ಆ ಪುಣ್ಯಾತ್ಮನಿಗೆ, ಹತ್ತನೇ ತರಗತಿಯ ಫಲಿತಾಂಶ ಶಾಲಾ ಮಾಸ್ತರ ಕೈಯಲ್ಲಿ ಇರುವುದಿಲ್ಲ ಎಂಬುದೇ ಗೊತ್ತಿರಲಿಲ್ಲ!

[ಮೊಲದ ಮಂಜ ನನಗೆ ಈಗಲೂ ಸಿಗುತ್ತಿರುತ್ತಾನೆ. ಅವನ ತಾಯಿ ಈಗಲೂ ನಮ್ಮ ಮನೆಗೆ ವಾರಕ್ಕೆರಡುಬಾರಿಯಾದರೂ ಬಂದು ಹೋಗುತ್ತಾರೆ. ದುರದೃಷ್ಟವೆಂದರೆ, ಮಂಜ ತನ್ನ ತಾಯಿಯನ್ನು ಬೇರೆ ಇಟ್ಟಿದ್ದಾನೆ. ಇಬ್ಬರು ಹೆಂಡಿರ ಮುದ್ದಿನ ಗಂಡನಾದ ಮಂಜನ ಹಿರಿಯ ಹೆಂಡತಿ ತವರು ಸೇರಿದ್ದಾಳೆ. ಎರಡನೇ ಹೆಂಡತಿಯೊಂದಿಗೆ ಚೆನ್ನಾಗಿ ಸಂಸಾರ ಮಾಡುತ್ತಿದ್ದಾನೆ. ಆತನಿಗೆ ಈಗ ಕೋವಿಗೆ ಅಧಿಕೃತ ಲೈಸೆನ್ಸ್ ಸಿಕ್ಕಿದೆ. ಅದೇ ಆಧಾರದ ಮೇಲೆ, ಹಾಸನದಲ್ಲಿ ಕೆ.ಎಸ್.ಸಿ.ಎ. ಅವರು ಕಟ್ಟುತ್ತಿರು ಕ್ರಿಕೆಟ್ ಸ್ಟೇಡಿಯಂನಲ್ಲಿ ಗನ್-ಮ್ಯಾನ್ ಆಗಿ ಕೆಲಸ ಸೇರಿಕೊಂಡಿದ್ದಾನೆ. ಮಹಾರಾಜರು(ಶ್ರೀಕಂಠದತ್ತ ಒಡೆಯರ್) ಅದೇ ಕೆಲಸವನ್ನು ಪರ್ಮನೆಂಟ್ ಮಾಡಿಸುತ್ತೇನೆ ಎಂದು ಹೇಳಿದ್ದಾರಂತೆ!

ನನಗೂ ಪುಸ್ತಕದ ಪ್ರತಿ ಕೊಡು ಎಂದು ಕೇಳಿದ್ದ. ಮೊನ್ನೆ ಹೋಗಿದ್ದಾಗ ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ಬಂದಿದ್ದೇನೆ. ನಿನ್ನ ಬಗ್ಗೆ ಓದಿದವರು ವಿಚಾರಿಸುತ್ತಾರೆ ಎಂದಿದ್ದಕ್ಕೆ, ಅವರೆಲ್ಲರನ್ನೂ ಬೇಕಾದರೆ ಕರೆದುಕೊಂಡು ಬಾ. ಮೀನು ಮೊಲ ಹೊಡೆದು ಭರ್ಜರಿ ಔತಣ ಮಾಡೋಣ ಎನ್ನುತ್ತಾನೆ! ಈಗ ನಾನು ಮೊಲ ಮೀನು ತಿನ್ನುವವರು ಯಾರ್ಯಾರಿದ್ದಾರೆ? ಅವರನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಲೆಕೆಡಿಸಿಕೊಳ್ಳಬೇಕಾಗಿದೆ, ನೋಡಿ!]

Friday, April 03, 2009

ತೇಜಸ್ವಿ ನೆನಪು : ಮರೆತಿದ್ದರೆ ತಾನೆ!



"ತೇಜಸ್ವಿ ಧ್ಯಾನದಲ್ಲಿ - ನಿರುತ್ತರದ ಕೆರೆಯಲ್ಲಿ"

ನನ್ನನ್ನು ಅತಿಯಾಗಿ ಕಾಡಿದ ಹಾಗೂ ನನ್ನ ಪ್ರೀತಿಯ ತೇಜಸ್ವಿಯವರ ಬಗ್ಗೆ ಬರೆಯಲು ಕುಳಿತಿದ್ದೇನೆ. ನಾನು ತೇಜಸ್ವಿಯವರ ಸಾಹಿತ್ಯ ಸಂಪರ್ಕಕ್ಕೆ ಬಂದು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ತೇಜಸ್ವಿ ಕುವೆಂಪು ಅವರ ಮಗ ಎಂದು ತಿಳಿದಿದ್ದು, ಕುವೆಂಪು ನಿಧನರಾದ ದಿನ! ತೇಜಸ್ವಿಯವರನ್ನು ಮೊದಲಬಾರಿಗೆ ಬೇಟಿಯಾಗಿ ಕೇವಲ ಐದು ವರ್ಷ ಕಳೆಯುವುದರೊಳಗಾಗಿ, ಅವರನ್ನು ಕಳೆದುಕೊಂಡು ಎರಡು ವರ್ಷವಾಗುತ್ತಾ ಬರುತ್ತಿದೆ. ಅವರು ನಿಧನರಾದ ದಿನ, ನಾನು ಅನುಭವಿಸಿದ ಒಂದು ಭಾವಶೂನ್ಯತೆ ಅಥವಾ ಚೈತನ್ಯಶೂನ್ಯತೆ ಅಥವಾ ನಮ್ಮ ಕಣ್ಣೆದುರೇ ನಮ್ಮ ದೇಹದ ಒಂದು ಭಾಗ ಬೇರೆಯಾಗಿ ಹೋಗುತ್ತಿರುವುದನ್ನು ನೋಡಿಯೂ ಏನನ್ನೂ ಮಾಡಲಾಗದ ಕ್ರಿಯಾಶೂನ್ಯತೆ ಅಥವಾ ನನ್ನ ಪದಸಂಪತ್ತಿಗೆ ನಿಲುಕದ ಯಾವುದೋ ಒಂದು ಭಾವ, ತೇಜಸ್ವಿ ನಮ್ಮೊಂದಿಗಿಲ್ಲ ಎಂಬ ನೆನಪಿನೊಡನೆ ಮತ್ತೆ ಮತ್ತೆ ಆವರಿಸುತ್ತದೆ. ಆದರೆ ಮರುಕ್ಷಣದಲ್ಲಿಯೇ, ತೇಜಸ್ವಿಯವರ ಕಾರಣದಿಂದಲೇ ಮನಸ್ಸು ಕ್ರಿಯಾಶೀಲವಾಗುತ್ತದೆ.


ನಿರುತ್ತರಾ!
ಉದ್ಯೋಗನಿಮಿತ್ತವಾಗಿ ಬೆಂಗಳೂರಿಗೆ ಬಂದಾಗಲೂ ಇದೇ ರೀತಿಯ ಗೊಂದಲ ಉಂಟಾಗಿತ್ತು. ಸಿಕ್ಕಿರುವ ಕೆಲಸವನ್ನು ಬಿಟ್ಟು ಊರಿಗೆ ಹೋಗಿಬಿಡಬೇಕು ಎನ್ನುವಷ್ಟರ ಮಟ್ಟಿಗೆ ಭಾವಶೂನ್ಯತೆ ಕಾಡಿತ್ತು. ಆಗಲೂ ಮನಸ್ಸಿಗೆ ನೆಮ್ಮದಿ, ಸಮಸ್ಯಗೆ ಪರಿಹಾರ ಕೊಟ್ಟಿದ್ದು ತೇಜಸ್ವಿಯೇ. ನಾವು ನಿಂತ ನೆಲದಲ್ಲಿಯೇ ನಮ್ಮ ಸ್ವಂತಿಕೆಯನ್ನೂ ಉಳಿಸಿಕೊಂಡು ಕ್ರಿಯಾಶೀಲರಾಗಿರಬಹುದು ಎಂಬುದನ್ನು ತೇಜಸ್ವಿ ಸಾಹಿತ್ಯ ನಮಗೆ ತೋರಿಸಿ ಕೊಟ್ಟಿದೆ. ಇಂತಹ ಸಂತೃಪ್ತಿಗೆ ತೇಜಸ್ವಿಯವರ ಬದುಕು ಮತ್ತು ಬರಹ ಕಾರಣ ಅಂದಾಗ, ಅದು ನನ್ನ ಮೇಲೆ ಬೀರಿರುವ ಪ್ರಭಾವ ಎಷ್ಟೆಂಬುದನ್ನು ಗಮನಿಸಬಹುದು.


ತೇಜಸ್ವಿ ಮನೆಯ ಮುಂದಿನ ಪುಟಾಣಿ ಕೊಳ (ಈ ಫೋಟೋ ಕ್ಲಿಕ್ಕಿಸಿದ್ದು ನನ್ನ ಮಗಳು!)
ಯೌವ್ವನ ಸಹಜವಾದ ಹಸಿಹಸಿ ಕನಸು, ಆದರ್ಶಗಳ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗಬಹುದಾದ ನನಗೆ, ಹಾಗೇ ಅನೇಕರಿಗೆ ಯೋಚಿಸುವುದನ್ನು ಕಲಿಸಿದ, ಸ್ವಂತಿಕೆ ಎಂದರೇನೆಂದು ತೋರಿಸಿದ, ನಮ್ಮ ಚಿಂತನಾ ದಿಗಂತದ ಮೇರೆಗಳನ್ನು ವಿಸ್ತರಿಸಿದ ಬರಹಗಾರ ತೇಜಸ್ವಿ. ಒಂದು ರೀತಿಯಲ್ಲಿ ಇಂದಿನ ನನ್ನ ಅರಿವಿನ ಗುರು. ಒಂದರಗಳಿಗೆಯೂ ಭಾವಶೂನ್ಯತೆಯಿಂದ ತೊಳಲಾಡಿಸದೆ, ನಮ್ಮನ್ನು ಕ್ರಿಯಾಶೀಲರಾಗಿ ಇರಿಸುವ ಶಕ್ತಿ ತೇಜಸ್ವಿಯವರಿಗಿತ್ತು; ಅವರ ಸಾಹಿತ್ಯಕ್ಕಿತ್ತು. ಈಗಲೂ ಅವರ ಸಾಹಿತ್ಯಕ್ಕೆ, ಚಿಂತನೆಗಳಿಗೆ ಆ ಶಕ್ತಿ ಇದೆ. ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುವ ಅವರು, ‘ನಡುವೆ ಅಂತರವಿಲ್ಲದಷ್ಟು ಹತ್ತಿರವಾಗುತ್ತಾರೆ.’ ಅವರ ಪೂರ್ಣ ಹೆಸರು ಹೇಳಿದರೆ ಅವರೆಲ್ಲಿ ದೂರವಾಗಿಬಿಡುತ್ತಾರೋ ಎಂಬ ಅಭದ್ರತೆಯ ಭಾವ ಹುಟ್ಟಿಸುವಷ್ಟು ಹತ್ತಿರವಾಗಿಬಿಡುತ್ತಾರೆ.

ಮನೆಯ ಹಿಂಬದಿಯಲ್ಲಿ ಕಾಫಿ ಬೀಜ ಒಣಗಿಸುವ ಕಣ
ಇಂತಹ ತೇಜಸ್ವಿಯವರನ್ನು ಎಂದಾದರೂ ಮರೆಯಲು ಸಾಧ್ಯವೇ?
ತೇಜಸ್ವಿ ದೈಹಿಕವಾಗಿ ನಮ್ಮನ್ನಗಲಿ ನಾಳೆ ಭಾನುವಾರಕ್ಕೆ (೦೫-೦೪-೦೯) ಎರಡು ವರ್ಷಗಳು ಗತಿಸಲಿವೆ. ‘ತೇಜಸ್ವಿ’ ಎನ್ನುವ ಹೆಸರೇ ನಮಗೆ ತೇಜಸ್ಸು ನೀಡುವಂತದ್ದು. ಅವರ ನೆನಪು ನಮ್ಮಲ್ಲಿ ಸದಾ ಅಚ್ಚಹಸುರಾಗಿರುತ್ತದೆ. ‘ಕಳೆದ ಎರಡು ವರ್ಷಗಳಿಂದ ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳದ ದಿನ ಯಾವುದಾದರೂ ಇದೆಯೇ?’ ಎಂಬ ಪ್ರಶ್ನೆಗೆ ನಾನು ಖಂಡಿತವಾಗಿ ಹೇಳಬಹುದಾದ ಉತ್ತರ ‘ಇಲ್ಲ’ ಎಂದೇ!



ಒಂದು ನಿಮಿಷ ನೋಡಿಬಿಡಿ!
ಕಳೆದ ವರ್ಷಾರಂಭದಲ್ಲಿ ಮದರಾಸು ವಿಶ್ವವಿದ್ಯಾಲಯದಲ್ಲಿ ತೇಜಸ್ವಿ ಸಾಹಿತ್ಯ ಕುರಿತಂತೆ ಒಂದು ವಿಚಾರ ಸಂಕಿರಣ ಏರ್ಪಟ್ಟಿತ್ತು. ಅದರಲ್ಲಿ ನಾನೂ ಒಂದು ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದೆ. ಆಗ ಯಾವ ಪೂರ್ವಯೋಜಿತ ನಿರ್ಧಾರವೂ ಇಲ್ಲದೆ, ನನ್ನ ಬಾಯಿಯಿಂದ ಬಂದ ಮಾತು ‘ಅರಿವಿನ ಗುರು ತೇಜಸ್ವಿ’ ಎಂಬುದಾಗಿತ್ತು. ನಂತರ ಯೋಚಿಸಿದಂತೆಲ್ಲಾ ‘ಅರಿವಿನ ಗುರು’ ಎಂಬ ಮಾತು ಎಷ್ಟೊಂದು ಸತ್ಯ ಎಂಬುದನ್ನು ನಾನು ಮನಗಂಡಿದ್ದೇನೆ. ಯಾವುದೋ ಹಳ್ಳಿಯ ಕೊಂಪೆಯಲ್ಲಿ ಕಳೆದುಹೋಗಬಹುದಾಗಿದ್ದ ನಾನು, ಇಂದು ತೃಪ್ತಿಕರವಾದ ಜೀವನ ನಡೆಸುತ್ತಿದ್ದರೆ ಅದಕ್ಕೆ ತೇಜಸ್ವಿಯವರ ಸಾಹಿತ್ಯದ ಕೊಡುಗೆಯೂ ಇದೆ. ನನ್ನ ಸಾಹಿತ್ಯಕ ಬದುಕು ಮತ್ತು ಜಗತ್ತನ್ನು ನಾನು ಕಾಣುವ ದೃಷ್ಟಿಕೋನ ಆರೋಗ್ಯಕರವಾಗಿರುವುದಕ್ಕೆ ತೇಜಸ್ವಿಯವರ ಜೀವನ ಪ್ರೇರಕವೂ, ಉತ್ತೇಜಕವೂ ಆಗಿದೆ.



ತೇಜಸ್ವಿಯವರನ್ನು ಹಲವಾರು ವರ್ಷಗಳ ಕಾಲ ಹೊತ್ತು ಓಡಾಡಿಸಿದ್ದ ಸ್ಕೂಟರ್!
ಇಂದು ನನ್ನ ಮಗಳು ‘ಇದು ಕೋಗಿಲೆಯ ಧ್ವನಿ’ ‘ಇದು ಕಾಗೆಯ ಧ್ವನಿ’ ಎಂದು ಹೇಳುತ್ತಿರುವುದರ ಹಿಂದೆ ತೇಜಸ್ವಿ ನಮ್ಮಲ್ಲಿ ಮೂಡಿಸಿದ ‘ಅರಿವು’ ಕೆಲಸ ಮಾಡುತ್ತಿದೆ. ನಾನೀಗ ಯಾವ ಹೊಸ ಕಥೆ ಹೇಳಿದರೂ ‘ಇದನ್ನು ಬರೆದವರು ತೇಜಸ್ವಿ ತಾತನೇ?’ ಎಂದು ನನ್ನ ಮಗಳು ಪ್ರಶ್ನಿಸುತ್ತಾಳೆ. ಕಾರಣ, ‘ಮಾರ’ ಗಿಡವೊಂದರ ಕಡ್ಡಿಯಿಂದ ಹಲ್ಲು ಉಜ್ಜಿದ್ದರಿಂದಾಗಿ. ಒಂದೇ ಕಡೆಯ ಹಲ್ಲುಗಳನ್ನು ಕಳೆದುಕೊಂಡ ಪ್ರಸಂಗ ಮತ್ತು ಯಾವುದೋ ಎಲೆಯಲ್ಲಿ ಕಟ್ಟಿದ್ದ ಕಾಡುಕುರಿಯ ಮಾಂಸ ಮತ್ತೆ ಕುರಿಯಾಗಿ ಜೀವತಳೆದ ಪ್ರಸಂಗಗಳನ್ನು ನಾನು ಅವಳಿಗೆ ಕಥೆಯೆಂತೆ ಹೇಳಿದ್ದು. ಪರಂಗಿ ಅಥವಾ ಹರಳು ಗಿಡದ ರೆಕ್ಕೆಯ ಸ್ಟ್ರಾ, ತೆಂಗಿನ ಗರಿಯ ವಾಚ್ ಇತ್ಯಾದಿಗಳಿಂದ ನನ್ನ ಮಗಳಲ್ಲಿ ಕ್ರಿಯೇಟಿವಿಟಿಯನ್ನು ಬೆಳೆಸಲು ನನಗೆ ಸಾಧ್ಯವಾಗಿದ್ದರೆ ಅದಕ್ಕೆ ತೇಜಸ್ವಿಯವರೇ ಬದುಕೇ ಪ್ರೇರಕ!



ಛಾವಣಿ ಎತ್ತರಕ್ಕೆ ಬೆಳದ ಕ್ಯಾಕ್ಟಸ್
ಈ ವಿಷಯದಲ್ಲಿ ನನ್ನ ಗ್ರಂಥಪಾಲಕ ವೃತ್ತಿಯೂ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಐದಾರು ವರ್ಷಗಳ ಹಿಂದೆ, ವರ್ಷಾಂತ್ಯದಲ್ಲಿ ನಡೆಯುವ ಸ್ಟಾಕ್ ವೆರಿಫಿಕೇಶನ್ ಸಮಯದಲ್ಲಿ ಕೆಲವು ಕನ್ನಡ ಪುಸ್ತಕಗಳು ಕಾಣೆಯಾಗಿರುವುದು ಗಮನಕ್ಕೆ ಬಂತು. ಆಶ್ಚರ್ಯವೆಂದರೆ ಅವೆಲ್ಲಾ ತೇಜಸ್ವಿಯವರ ಪುಸ್ತಕಗಳೇ ಆಗಿದ್ದವು! ‘ಓಹೋ, ಈ ಕಳ್ಳ ಯಾರೋ ತೇಜಸ್ವಿಯವರ ಭಕ್ತ!’ ಎಂದುಕೊಂಡು ಮೊದಲ ವರ್ಷ ಸುಮ್ಮನಾಗಿಬಿಟ್ಟೆವು. ಅದರ ಮುಂದಿನ ವರ್ಷವೂ ಇನ್ನೂ ಮೂರ್ನಾಲ್ಕು ತೇಜಸ್ವಿ ಪುಸ್ತಕಗಳು ಕಳುವಾದಾಗ ವಿಧಿಯಿಲ್ಲದೆ ಎಚ್ಚರವಹಿಸಲೇ ಬೇಕಾಯಿತು. ನಾನು ಮುಂಜಾಗ್ರತೆ ವಹಿಸಿ, ಅವರ ಎಲ್ಲಾ ಪುಸ್ತಕಗಳನ್ನು ನನ್ನ ರೂಮಿನ ಕಪಾಟಿಗೆ ವರ್ಗಾಯಿಸಿಕೊಂಡು ಬಿಟ್ಟೆ. ತೇಜಸ್ವಿ ಪುಸ್ತಕ ಬೇಕಾದವರು ನೇರವಾಗಿ ನನ್ನಿಂದಲೇ ಪಡೆಯುವಂತೆ ಏರ್ಪಾಟು ಮಾಡಿದೆ. ಇದರಿಂದ ನನಗಾದ ಲಾಭವೆಂದರೆ, ಯಾವಾಗ ಬೇಕೋ ಆಗ, ಬಿಡುವಾದಾಗ, ದಿನಕ್ಕೆ ಒಂದೆರಡು ಬಾರಿ ತೇಜಸ್ವಿಯವರ ಯಾವುದಾದರೂ ಪುಸ್ತಕ ನನ್ನ ಕೈ ಸೇರುತ್ತಿರುತ್ತದೆ. ಹಲವಾರು ಪುಟುಗಳು ತಲೆಗೂ ಏರುತ್ತವೆ. ಆದ್ದರಿಂದ ಯಾರಾದರೂ ನನ್ನನ್ನು ‘ತೇಜಸ್ವಿಯವರ ಯಾವ ಪುಸ್ತಕವನ್ನು ಎಷ್ಟೆಷ್ಟು ಬಾರಿ ಓದಿದ್ದೀಯಾ?’ ಎಂದು ಕೇಳಿದರೆ, ಉತ್ತರ ಹೇಳುವುದು ಕಷ್ಟ!
ಜೊತೆಗೆ, ನನಗೆ ಕನ್ನಡ ಪಿಎಚ್.ಡಿ. ಪದವಿ ದೊರೆತ ಮೇಲೆ, ಕಾಲೇಜಿನ ಆಡಳಿತ ಮಂಡಳಿಯವರು ಕೆಲವು ತರಗತಿಗಳಲ್ಲಿ ಕನ್ನಡ ಬೋಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ‘ಅಣ್ಣನ ನೆನಪು’ ಪುಸ್ತಕದ ಒಂದು ಭಾಗ ಮತ್ತು ‘ಕಾರ್ವಾಲೋ’ದ ‘ಮಂದಣ್ಣನ ಮೇರೇಜು’ ಪಠ್ಯಗಳಾಗಿವೆ. ಇವುಗಳಿಂದಾಗಿ ಹುಡುಗರ ಒಡನಾಟದಲ್ಲಿ ತೇಜಸ್ವಿ ಹಲವಾರು ಬಾರಿ ಬಂದುಹೋಗುತ್ತಿರುತ್ತಾರೆ. ಈಗಾಗಲೇ ಹಲವಾರು ಹುಡುಗರು ತೇಜಸ್ವಿ ಸಾಹಿತ್ಯದ ಗುಂಗು ತಲೆಗೇರಿಸಿಕೊಂಡಿದ್ದಾರೆ! ಹೊಸದಾಗಿ ಕನ್ನಡ ಕಲಿತಿರುವ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿರುವ ಗುಜರಾತಿ ಮಹಿಳೆಗೆ ಓದಲು ಯಾವುದಾದರು ಕನ್ನಡ ಪುಸ್ತಕಗಳನ್ನು ಕೊಡುವಂತೆ ಕೇಳಿದಾಗ, ನಾನು ಹಿಂದೆಮುಂದೆ ಯೋಚಿಸದೆ ತೇಜಸ್ವಿಯವರ ‘ಪರಿಸರದ ಕಥೆಗಳು’ ಮತ್ತು ‘ಕರ್ವಾಲೊ’ ಕಾದಂಬರಿಯನ್ನು ಕೊಟ್ಟಿದ್ದೆ. ಕೇವಲ ಮೂರೇ ದಿನದಲ್ಲಿ ಆ ಗುಜರಾತಿ ಮಹಿಳೆ ಗ್ರಂಥಾಲಯಕ್ಕೇ ಬಂದು, ‘ಈ ಲೇಖಕರ ಎಲ್ಲಾ ಕೃತಿಗಳನ್ನು ನಾನು ಓದಬೇಕು. ಎಲ್ಲಿ ಸಿಗುತ್ತವೆ’ ಎಂದರು. ನಾನು ‘ನಮ್ಮ ಗ್ರಂಥಾಲಯದಲ್ಲೇ ಸಿಗುತ್ತವೆ’ ಅಂದಿದ್ದಕ್ಕೆ ‘ಇಲ್ಲ. ನಾನು ಅವೆಲ್ಲವನ್ನು ಕೊಂಡೇ ಓದುತ್ತೇನೆ. ಲಿಸ್ಟ್ ಕೊಟ್ಟು ಬಿಡಿ’ ಅಂದು ಲಿಸ್ಟ್ ತೆಗೆದುಕೊಂಡು ಹೋದರು.


ಇದೇ ನಾಯಿಮರಿಗಳಿಗಾಗಿ ನನ್ನ ಮಗಳ ಅತ್ತಿದ್ದು.

ಇಂದಿನ ಯಾವುದಾದರು ವಿಷಯವನ್ನು, ಘಟನೆಯನ್ನು ಪರಿಭಾವಿಸುವ ಮೊದಲೇ ‘ಇದನ್ನು ತೇಜಸ್ವಿ ಹೇಗೆ ಸ್ವೀಕರಿಸುತ್ತಿದ್ದರು ? ಹೇಗೆ ಪ್ರತಿಕ್ರಿಯಿಸುತ್ತಿದ್ದರು’ ಎಂದೆಲ್ಲಾ ಮನಸ್ಸು ಚಿಂತಿಸುತ್ತದೆ. ಹಿಮಾಲಯದ ಬೇಸ್ ಕ್ಯಾಂಪ್ ಅನುಭವಗಳನ್ನು ಬರೆಯುತ್ತಿರುವ ಶ್ರೀಮತಿ ಈಶಾನ್ಯೆ ಅವರ ಬರಹಗಳನ್ನು ಓದುವಾಗಲೂ ‘ಇದನ್ನೇ ತೇಜಸ್ವಿ ಹೇಗೆ ಬರೆಯುತ್ತಿದ್ದರು’ ಎಂದು ಕೆಲವು ಕಡೆ ಅನ್ನಿಸಿದ್ದಿದೆ. ಅದನ್ನೇ ಶ್ರೀಮತಿ ಈಶಾನ್ಯೆ ಅವರಿಗೂ ಮೇಲ್ ಮಾಡಿ ತಿಳಿಸಿದ್ದೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದರು. ಅರ್ಥಪೂರ್ಣ ಬದುಕಿನ ಅರಿವನ್ನು ಮೂಡಿಸುವ, ಹಲವಾರು ತಲೆಮಾರುಗಳ ಯೋಚನೆಯ ದಿಕ್ಕನ್ನೇ ಬದಲಿಸುವ ಶಕ್ತಿ ತೇಜಸ್ವಿಯವರ ಬದುಕು-ಬರಹಗಳಿಗಿದೆ. ಅದು ಈಗಲೇ ನಿರೂಪಿತವಾಗಿರುವ ಸತ್ಯ. ತೇಜಸ್ವಿಯವರ ಸಾಹಿತ್ಯದ ಬಗ್ಗೆ ನೂರಾರು ಪುಟಗಳನ್ನು ಬರೆದಿರುವ ಹಾಗೂ ಹತ್ತಾರು ಸೆಮಿನಾರುಗಳಲ್ಲಿ ಭಾಷಣ ಬಿಗಿದಿರುವ ಮಹಾಶಯರುಗಳಿಂದ, ತೇಜಸ್ವಿಯವರಿಂದ ಪ್ರೇರಣೆ ಪಡೆದ ಮನಸ್ಸುಗಳ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವೇ? ಅವರ ಒಂದೂ ಪುಸ್ತಕ ಓದದವನು ಕೂಡಾ ತೇಜಸ್ವಿಯವರಿಂದ ಪ್ರೇರಣೆ ಪಡೆದಿದ್ದಾನೆ ಎಂದರೆ ಅವರ ಬದುಕೇ ಒಂದು ಮಹತ್ವವಾದ ಕೃತಿ.


ನಾವು ಭೇಟಿಕೊಟ್ಟಾಗ ಕೊಟ್ಟಿಗೆಯಲ್ಲಿದ್ದ ಕಾಡುಕುರಿಯ ಮರಿ

ನಾಲ್ಕೈದು ವರ್ಷಗಳಿಂದ ಒಂದೂ ಕವಿತೆ ಬರೆಯದ ನಾನು, ತೇಜಸ್ವಿ ನಿಧನರಾದ ಮೇಲೆ ‘ಅವಸರವಿಲ್ಲ’ ಎನ್ನುವ ಕವಿತೆ ಬರೆದಿದ್ದೆ. (ಕೆಂಡಸಂಪಿಗೆಯಲ್ಲಿ ಪ್ರಕಟವಾಗಿತ್ತು) ಕಳೆದ ವರ್ಷಾಂತ್ಯದಲ್ಲಿ ‘ನಿರುತ್ತರಾ’ಕ್ಕೆ, ಕುಪ್ಪಳ್ಳಿಗೆ ಭೇಟಿಕೊಟ್ಟಿದ್ದೆ. ಹಲವಾರು ಫೋಟೋಗಳನ್ನು ತೆಗೆದಿದ್ದೆ. ಇವೆಲ್ಲವೂ ನನಗೆ ಅಮೂಲ್ಯವಾದವುಗಳು. ಕವಿತೆ ಮತ್ತು ಕೆಲವು ಫೋಟೋಗಳು ಇಲ್ಲಿವೆ, ನೋಡೋಣ. ಈ ಮೂಲಕ ತೇಜಸ್ವಿಯವರಿಗೊಂದು ‘ಸ್ಮೈಲ್’ ಕೋಡೋಣ. ಮತ್ತೆ ನಮ್ಮ ನಮ್ಮ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ಬದುಕನ್ನು ಬಾಳುತ್ತಲೇ ಅವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸೋಣ.


ಅಳು ನಿಲ್ಲಿಸಿದ ಕಿತ್ತಲೆ ಹಣ್ಣಿನೊಂದಿಗೆ ನಿರುತ್ತರದ ಗೇಟಿನ ಮುಂಭಾಗದಲ್ಲಿ ನನ್ನ ಮಗಳು

ಕುಪ್ಪಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ತೇಜಸ್ವಿ ಸ್ಮಾರಕ
(ಕವಿಮನೆಗೆ ಹೋಗುವ ರಸ್ತೆಯಲ್ಲಿ, ಬಲಕ್ಕೆ ಕವಿಶೈಲದ ರಸ್ತೆ ಕವಲೊಡೆಯುವ ಜಾಗದಲ್ಲಿ ಎಡಬದಿಗೆ ಇದೆ)

1

ಇಂದು ಅವಸರವಿಲ್ಲ ನನಗೆ

ಹೋಗಿಬನ್ನಿ, ಶುಭವಾಗಲಿ ನಿಮಗೆ

ಇಂದು ನೀವು; ನಾಳೆ ನಾವು

ಬಂದೆ ಬರುವೆವು ಅಲ್ಲಿಗೆ.

2

ನೀವೆ ಹಚ್ಚಿದ ಹಣತೆಗೆ

ಜೊತೆಗಿರಬೇಕು ಇನ್ನಷ್ಟು ದಿನ

ನಿಮ್ಮದೇ ಕನಸು ನನಸಾಗುವತನಕ

ನೀವಿತ್ತ ದೀಕ್ಷೆ; ನಿಮಗಿತ್ತ ಮಾತು

ನೀವು ತೋರಿಸಿದ ದಾರಿ

ನಾ ತೊಟ್ಟ ಗುರಿ

ತಲುಪಿದ ಮೇಲೆ

ನಾನಿಲ್ಲಿ ಇರುವೆನೇನು?

3

ಎನ್ನ ಜೊತೆಗೆ ನೀವೆ ಈಗಲೂ

ಎಂದಿನಂತೆ ಬೆಂಗಾವಲೂ!

ಅಂದು ಮೈನೇವರಿಸುತ್ತಿದ್ದರಿ

ಇಂದು ಮನ ತಡವುತ್ತಿರುವಿರಿ

ಅಂತ್ಯವೆಂಬುದೇ ಇಲ್ಲ;

ಗುರುವೇ ನಾನಿನ್ನ ಬೇಡುವುದಿಲ್ಲ.

4

ಸಾಕೆಂಬುದಿಲ್ಲ

ಹಾಗೆಂದು ಬೇಕಂಬುದೂ ಇಲ್ಲ

ಸಾಕು ಬೇಕುಗಳ ಪಟ್ಟಿಗೆ ಲೆಕ್ಕ ಇಟ್ಟವರಿಲ್ಲ.

ಇಂದು ನಾಳೆಗೂ ಇರಲಿ

ಭ್ರಮೆ ಹರಿಯುವತನಕ ನಾನಿಲ್ಲಿ. ನೀವಲ್ಲಿ

ನನಗೆ ಅವಸರವಿಲ್ಲ

ಗೊತ್ತೆನೆಗೆ, ಬೇಸರವೂ ಇಲ್ಲ ನಿಮಗೆ.