Tuesday, September 16, 2014

ಗುಡಿಯ ಪೀಠದಲ್ಲಿ ಮೂರ್ತಿಯಿಲ್ಲ!

ಅಯ್ಯೋ,
ಗುಡಿಯ ಪೀಠದಲ್ಲಿ
ಮೂರ್ತಿಯಿಲ್ಲ!
ದೇವರೆಲ್ಲಿ?
ಹರಕುಬಟ್ಟೆ ತಿರುಕನಲ್ಲಿ ಲೀನವಾದನು!
(ಕುವೆಂಪು) 






Tuesday, September 09, 2014

ಚಿದಂಬರ ರಹಸ್ಯ : ಕುವೆಂಪು ಮತ್ತು ತೇಜಸ್ವಿ

ದೇವರು ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ – ಇದು ತೇಜಸ್ವಿಯವರ ಅನಿಸಿಕೆ. ಇದ್ದಾನೆ, ಇಲ್ಲ ಈ ಎರಡರ ನಡುವೆಯೇ ಮಾನವ ನಾಗರಿಕತೆ ವಿಕಾಸವಾಗುತ್ತಾ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ದೇವರು ಇದ್ದಾನೆ ಎಂದು ಖಚಿತವಾದ ದಿನ ಎಲ್ಲವೂ ಮುಗಿದು ಹೋಗುತ್ತದೆ; ಹಾಗೆಯೇ ದೇವರು ಇಲ್ಲ ಎಂದು ಖಚತವಾದಾಗಲೂ ಸಹ! ಹೀಗೇಕೆ? ಇದೊಂದು ಚಿದಂಬರ ರಹಸ್ಯ.
ಚಿದಂಬರ ರಹಸ್ಯ ಎಂಬುದು ತೇಜಸ್ವಿಯವರ ಒಂದು ಕಾದಂಬರಿ. ಅದರಲ್ಲಿ ಒಂದು ಪ್ರಮುಖವಾದ ಪ್ರಶ್ನೆಯನ್ನು ತೇಜಸ್ವಿ ಎತ್ತುತಾರೆ – ಜಯರಾಮನ ಮೂಲಕ. ಅದು ಹೀಗಿದೆ:
ಮನುಷ್ಯಪ್ರಜ್ಞೆ ನಿಜವಾಗಿ ಸ್ವತಂತ್ರವೋ? ಅಥವಾ ಅದೊಂದು ಭ್ರಮೆಯೋ? ಇಡೀ ಗ್ರಹತಾರೆ ನಿಹಾರಿಕೆಗಳ ಈ ವಿಶ್ವವೆಲ್ಲಾ ತಮ್ಮ ತಮ್ಮ ನಿಯಮಕ್ಕೆ ಬದ್ಧವಾಗಿ ವರ್ತಿಸುತ್ತಿವೆ. ಪ್ರತಿಯೊಂದು ಅಣು ಪರಮಾಣುವಿನಲ್ಲೂ ಎಲೆಕ್ಟ್ರಾನುಗಳು ಪ್ರೋಟಾನುಗಳೂ ತಮ್ಮ ನಿಯಮಗಳ ಸರಹದ್ದಿನಲ್ಲಿ ಸುತ್ತುತ್ತಿವೆ. ಅಂಥದರಲ್ಲಿ ಇದರಿಂದ ಹೊಮ್ಮಿದ ಈ ಪ್ರಜ್ಞೆ ನಿಯಮಾತೀತವೇ? ನಿಜವಾಗಿಯೂ ಸ್ವತಂತ್ರವೆ?
ಚಿದಂಬರ ರಹಸ್ಯ ಓದಿದ ಪ್ರತಿಯೊಬ್ಬನ ಮನಸ್ಸಿನಲ್ಲಿ ಇದು ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತದೆಯಲ್ಲವೆ? ಮನುಷ್ಯಪ್ರಜ್ಞೆ ಸ್ವತಂತ್ರ, ಅದು ಯಾವುದೇ ನಿಯಮಕ್ಕೆ ಒಳಪಟ್ಟಿಲ್ಲ ಎಂದಾದರೆ, ಮಾನವನೇ ಸರ್ವಸ್ವತಂತ್ರ. ಅವನೇ ದೇವರು!!! ಆದರೆ, ಆತನ ಪ್ರಜ್ಞೆ ಒಂದು ನಿಯಂತ್ರಣಕ್ಕೆ ಒಳಪಟ್ಟಿದ್ದೇ ಆಗಿದ್ದಲ್ಲಿ, ನಮ್ಮೆಲ್ಲಾ ನಿರ್ಧಾರಗಳು, ಪ್ರಯತ್ನ, ಸಂಶೋಧನೆ, ಸಾಧನೆ ಎಲ್ಲವೂ ಮೊದಲೇ, ಯಾರಿಂದಲೋ ನಿರ್ಧಾರಿಸಲ್ಪಟ್ಟ ಸತ್ಯಗಳು. ಅಂದರೆ ರೆಡಿಮೇಡ್ ಸ್ಕ್ರಿಪ್ಟ್!! ಜಗತ್ತು ಒಂದು ನಾಟಕ ರಂಗಭೂಮಿ, ನಾವೆಲ್ಲಾ ಅಲ್ಲಿ ಪಾತ್ರಧಾರಿಗಳು ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ! ಸಿದ್ಧವಾಗಿರುವ ನಾಟಕದಲ್ಲಿ ನಾವೆಲ್ಲಾ ಬಂದು ಒಂದೊಂದು ಪಾತ್ರ ಮಾಡಿ ಹೋಗುತ್ತಿದ್ದೇವೆ ಅಷ್ಟೆ! (ಶ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ಸ್ವರ್ಣಸ್ವಪ್ನದಿಂದ ಎಚ್ಚತ ಧುರ್ಯೋಧನನ ಪಾತ್ರಧಾರಿ ಇದ್ದಕ್ಕಿದ್ದಂತೆ ಕೃಷ್ಣನೊಡನೆ “ನಾನೆನ್ನ ಪಾತ್ರಮಂ ನೇರಮಾಗಭಿನಯಿಸಿ ತೋರ್ದೆನೇನ್? ಮೇಣ್ ಅದರೊಳೇನಾದರುಂ ತಪ್ಪಿದೆನೊ?” ಎಂದು ಕೇಳುವುದನ್ನು, “ನಾಟಕಮಂ ನೇರವಾಗಿ ಕೊನೆಗಾಣ್ಚು! ನಾನ್ ಪೋಗಿ ಬರ್ಪೆನ್. ಅಲ್ಲಿ ನಿನ್ನನ್ ಮರಳಿ ಕಾಣುವೆನ್” ಎಂದು ಕೃಷ್ಣ ಹೇಳುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು)
ಮನುಷ್ಯಪ್ರಜ್ಞೆ ವಿಧಿನಿಯಮಗಳ ಅಧೀನಾನೋ ಅಥವಾ ಸ್ವತಂತ್ರವೊ? ಇವೆರಡರಲ್ಲಿ ಯಾವುದು ಸತ್ಯವಾದರೂ ಅದು ವಿಸ್ಮಯವೇ ಆಗಿರುತ್ತದೆ!
ತೇಜಸ್ವಿಯವರ ಈ ವಾದ ಮೇಲ್ನೋಟಕ್ಕೆ ಅಮೂರ್ತಕಲ್ಪನೆಯಂತೆ ಕಾಣುತ್ತದೆ. ಇಂತಹುದೊಂದು ಆಲೋಚನೆ ಅಥವಾ ಪ್ರಶ್ನೆ ತೇಜಸ್ವಿಯವರಿಗೆ ಕಾಡಲು ಕಾರಣವೇನು? ಅದಕ್ಕೆ ಮೂಲಾಧಾರವೇನಾದರೂ ಇದೆಯೆ? ಇದಕ್ಕೆ ಯಾವುದಾದರೂ ಪ್ರೇರಣೆ ಪ್ರಭಾವ ಇದೆಯೆ? ಇವೆಲ್ಲಾ ಪ್ರಶ್ನೆಗಳು ಚಿದಂಬರ ರಹಸ್ಯವನ್ನು ಮತ್ತೆ ಮತ್ತೆ ಓದುವವರಿಗೆ ಕಾಡಿದ್ದರೆ ಆಶ್ಚರ್ಯವಲ್ಲ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೌದು ಎಂದೇ ಹೇಳಬಹುದು? ಅದಕ್ಕೂ ಪೂರ್ವದಲ್ಲಿಯೇ ಈ ಸಮಸ್ಯೆ ಬೇರೊಂದು ರೂಪದಲ್ಲಿ ಒಬ್ಬರನ್ನು ಕಾಡಿತ್ತು. ಆ ಒಬ್ಬರು ಒಬ್ಬರೇ – ಕುವೆಂಪು!

ಕುವೆಂಪು ಅವರನ್ನು ಕಾಡಿರುವ ಚಿದಂಬರ ರಹಸ್ಯ ಯಾವುದೆಂದು ನೋಡೋಣ:
ಕುವೆಂಪು ಅವರ ’ರಸೋ ವೈ ಸಃ’ ಎಂಬ ಸಾಹಿತ್ಯ ಮೀಮಾಂಸೆಯ ಪುಸ್ತಕದಲ್ಲಿ ’ಕವಿನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ’ ಎಂಬ ಲೇಖನವಿದೆ. ಒಂದು ಕಲಾಕೃತಿಯ ನಿರ್ಮಾಣದಲ್ಲಿ ಕಲಾವಿದನ ಪಾತ್ರವೇನು? ಕಲಾವಿದ ಸರ್ವತಂತ್ರ ಸ್ವತಂತ್ರನೇ? ಅಥವಾ ಪರತಂತ್ರ ಅಧೀನನೇ? ಎಂಬೆಲ್ಲಾ ಪ್ರಶ್ನೆಗಳೆಲ್ಲಾ ಬರುತ್ತವೆ?
ಮೊದಲಿಗೆ ‘ನಿಯತಿಕೃತ ನಿಯಮ’ ಎಂಬುದನ್ನು ಮಾತ್ರ ಓದಿಕೊಂಡಾಗ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿ (ದೇವರು, ಗುರುತ್ವಾಕರ್ಷಣ ಯಾವುದೋ ಒಂದು) ಅದು ಕೆಲವೊಂದು ನಿಯಮಕ್ಕೆ ಒಳಪಟ್ಟಿದೆ. ಅಥವಾ ತನ್ನಷ್ಟಕ್ಕೆ ತಾನೇ ಕೆಲವೊಂದು ನಿಯಮಗಳನ್ನು ಸೃಷ್ಟಿಸಿಕೊಂಡಿದೆ. ಅಂತಹುದೊಂದು ಅಥವಾ ಹಲವು ನಿಯಮಗಳಿವೆ. ‘ರಾಹಿತ್ಯ’ ಎಂದು ಓದಿಕೊಂಡರೆ,ಕವಿನಿರ್ಮಿತಿ ’ನಿಯತಿಕೃತ ನಿಯಮ’ಗಳಿಗೆ ರಾಹಿತ್ಯವಾದದ್ದು, ಹೊರತಾದದ್ದು ಎಂದಾಗುತ್ತದೆ. ಅಂದರೆ ಕವಿ ಅಥವಾ ಕಲಾವಿದ ಸರ್ವತಂತ್ರ ಸ್ವತಂತ್ರ! ಕವಿರ್ಮಿತಿಯು ನಿಯತಿಕೃತ ನಿಯಮಗಳಿಗೆ ಅತೀತವಾದದ್ದು ಎಂಬುದು ಮೀಮಾಂಸಕ ಕುವೆಂಪು ಅಭಿಮತವಲ್ಲ. ಅವರ ಅಭಿಪ್ರಾಯ ‘ಕವಿನಿರ್ವಿತಿ ನಿಯತಿಕೃತವಾಗಿಯೂ ಇದ್ದು, ನಿಯಮರಾಹಿತ್ಯವೂ ಆಗಿರಬೇಕು! ಅದನ್ನು ಮುಂದೆ ನೋಡಬಹುದು.
ಇಡೀ ಶೀರ್ಷಿಕೆಯನ್ನು -ಕುವೆಂಪು ಬರೆದಿರುವಂತೆ- ’ಕವಿನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ’ ಎಂದು ಓದಿಕೊಂಡಾಗ ಎರಡು ಪ್ರಮುಖ ಅಂಶಗಳು ಎದ್ದು ಕಾಣುತ್ತವೆ. ಒಂದು ನಿಯತಿಕೃತ; ಇನ್ನೊಂದು ನಿಯಮರಾಹಿತ್ಯ. ಕವಿಯ ಕೃತಿ ನಿಯತಿಕೃತವಾಗಿಯೂ ಅಂದರೆ ಈ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿಗೆ ಅಥವಾ ಆ ಶಕ್ತಿಯಿಂದ ಕೃತವಾದ (ನಿರ್ಮಿಸಲ್ಪಟ್ಟ) ನಿಯಮಗಳಿಗೆ ಅಧೀನವಾಗಿಯೇ ಇದೆ ಎಂದಾಗುತ್ತದೆ. ನಿಯಮ ರಾಹಿತ್ಯವಾಗಿದೆ ಎಂದರೆ ಅದು ಸರ್ವತಂತ್ರಸ್ವತಂತ್ರ, ಅದು ನಿಯಮವನ್ನು ಮೀರಿದ್ದಾಗಿದೆ ಎಂದಾಗುತ್ತದೆ. ನಿಯಮಕ್ಕೊಳಪಟ್ಟು ನಿಯಮವನು ಮೀರುವುದು. ಕಾನೂನನ್ನು ಗೌರವಿಸುತ್ತಲೇ ಅದನ್ನು ಮೀರುವುದು – ಗಾಂಧೀಜಿಯ ಆಶಯವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. (ಕುವೆಂಪು ತಮ್ಮ ಬರವಣಿಗೆಯಲ್ಲಿ ಪಂಕ್ಚ್ಯುಲ್ ಮಾರ್ಕ್ಸ್, ಸ್ಪೇಸ್, ಪದಜೋಡಣೆ, ಪದವಿಂಗಡಣೆ ಇವುಗಳಿಗೆ ಕೊಟ್ಟಿರುವ ಮಹತ್ವವನ್ನು ಮನಗಾಣಬೇಕು)
ಅನಾದಿಕವಿ ತತ್ವವನ್ನು ಪ್ರತಿಪಾದಿಸುವ ಕುವೆಂಪು ಈ ಸಮಸ್ಯೆಗೆ ಪರಿಹಾರವನ್ನೂ ಕಂಡುಕೊಳ್ಳುತ್ತಾರೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕವಿಯನ್ನು ಅಭಿನವ ಸೃಷ್ಟಿಕರ್ತ ಎಂದು ಕರೆದಿರುವುದನ್ನು ಮನಗಾಣಬೇಕು. ’ಕಾವ್ಯಕೃತಿಯನ್ನು ರಚಿಸುವ ಕವಿಯೂ ಈಶ್ವರ ಸೃಷ್ಟಿಯಲ್ಲಿ ಒಂದು ಕೃತಿಮಾತ್ರನಾಗಿದ್ದಾನೆ.’ ಎಂದು ಕುವೆಂಪು ಅವರದೇ ಇನ್ನೊಂದು ಮಾತಿದೆ. ಇದನ್ನೇ ರಾಮಾಯಣದರ್ಶನಂ ಕಾವ್ಯದಲ್ಲಿ ಮೊದಲಲ್ಲಿಯೇ,
“ನೆಯ್ದಾಳುತಿದೆ ಜಗವನೊಂದು ಅತಿವಿರಾಣ್ ಮನಂ,
ಸೂಕ್ಷ್ಮಾತಿಸೂಕ್ಷ್ಮ ತಂತ್ರದಿಂ ಬಿಗಿದು ಕಟ್ಟಿಯುಂ
ಜೀವಿಗಳ್ಗೆ ಇಚ್ಛೆಯಾ ಸ್ವಾತಂತ್ರ್ಯಭಾವಮಂ ನೀಡಿ”
ಎಂದು ಹಾಡಿದ್ದಾರೆ. ಇದು ಅನಾದಿಕವಿ ತತ್ವಕ್ಕೆ ಪೂರಕವಾಗಿಯೇ ಇರುವಂತದ್ದು. ಇಡೀ ಸೃಷ್ಟಿಯೇ ಒಂದು ಮಹಾಕಾವ್ಯ ಅಥವಾ ಮಹಾಕಲಾಕೃತಿ! ಅದು ಶಾಶ್ವತವೂ ನಿತ್ಯನೂತನವೂ ಆದುದಾಗಿದೆ. ಅದನ್ನು ಋತ ಅಥವಾ ನಿಯತಿ ಅಥವಾ ಶಕ್ತಿ ಅಥವಾ ದೇವರು (ಅತಿವಿರಾಣ್ ಮನಂ) ಸೃಷ್ಟಿಮಾಡಿದೆ; ಮಾಡುತ್ತಲೇ ಇದೆ. ಅದರಲ್ಲಿ ಈ ಜಗತ್ತಿನ ಪ್ರತಿಯೊಂದು ಆಗುಹೋಗುಗಗಳು, -ಮಹಾಸ್ಫೊಟ, ಗ್ರಹತಾರೆನಿಹಾರಿಗೆಳ ಚಲನೆ, ಆಕರ್ಷಣೆ, ಜೀವವಿಕಾಸ, ಮನುಷ್ಯಪ್ರಯತ್ನ, ನಾಗರಿಕತೆ, ಸಾಧನೆ, ಯೋಚನೆ, ಆಲೋಚನೆ, ತಂತ್ರ, ಕುತಂತ್ರ- ಎಲ್ಲವೂ ಆ ಸೃಷ್ಟಿಕಾವ್ಯದ ಭಾಗಗಳೇ ಆಗಿವೆ. ಸನ್ನಿವೇಶಗಳೇ ಆಗಿವೆ, ಪಾತ್ರಗಳೇ ಆಗಿವೆ! ಆದ್ದರಿಂದ ಕಲಾಕೃತಿಯನ್ನು ನಿರ್ಮಿಸುವ ಕಲಾವಿದನೂ ಈ ಬೃಹತ್ ಸೃಷ್ಟಿಯಲ್ಲಿ ಒಂದು ಕೃತಿ ಮಾತ್ರ!
ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಕೊನೆಯ ಸಂಚಿಕೆ ಅಭಿಷೇಕ ವಿರಾಡ್‌ದರ್ಶನಂ. ರಾಮಪಟ್ಟಾಭಿಷೇಕದ ಕಥೆಯನ್ನು ಬರೆಯಲು ಕುಳಿತ ಕವಿಗೆ ಅತೀಂದ್ರತೀಯ ಶಕ್ತಿ ಅನುಭವದ್ಗೋಚರವಾಗುತ್ತದೆ. ಅದನ್ನು ಕವಿ ‘ನೀನಾರ್, ಮಹಾಪುರುಷ?’ ಎಂದು ಪ್ರಶ್ನಿಸುತ್ತಾರೆ. ಆಗ ಆ ಅತೀಂದ್ರಿಯ ಶಕ್ತಿ ಹೀಗೆ ಹೇಳುತ್ತದೆ:
ಅನಾದಿಕವಿ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹುಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು!
ಈ ಜಗತ್ತಿನಲ್ಲಿ ಇದುವರೆಗೆ ಆಗಿ ಹೋಗಿರುವ ಮಹಾಮಹಾಮಹಿಮರೆಲ್ಲರೂ, ಮಹತ್‌ಘಟನೆಗಳು – ಮಹಾಸ್ಪೋಟ, ಚಂದ್ರಲೋಕಯಾತ್ರೆ, ಮಂಗಳಯಾನ, ಮಹಾಯುದ್ಧಗಳು, ಮಹಾಮಹಾಸಂಶೋಧನೆಗಳು (ವಿಜ್ಞಾನ ನಿತ್ಯಸತ್ಯದ ವಿಸ್ತರಣೆ ಎಂಬ ಅಭಿಪ್ರಾಯವೂ ಇದೆ.) – ಎಲ್ಲವೂ ಆ ಅನಾದಿಕವಿ ಚಿತ್ರಿಸಿರುವ ಪಾತ್ರಗಳು ಘಟನೆಗಳು ಮಾತ್ರ! ಈ ಸೃಷ್ಟಿಯೇ ಒಂದು ಬೃಹತ್ ಕಲಾಕೃತಿ! (ದೇವರು ರುಜು ಮಾಡಿದನು ಕವಿ ರಸವಶನಾಗುತ ಅದ ನೋಡಿದನು).
ಕುವೆಂಪು ಪ್ರತಿಪಾದಿಸಿರುವ ವಿಚಾರಧಾರೆ ಅತ್ಯಂತ ಅಮೂರ್ತವಾದುದು. ’ಚಿದಂಬರ ರಹಸ್ಯ’ದಲ್ಲಿ ತೇಜಸ್ವಿಯವರು ಅದನ್ನು ಆದಷ್ಟು ಮೂರ್ತಗೊಳಿಸಿ ನಮ್ಮ ಕೈಗೆಟಕುವಂತೆ ಮಾಡಿದ್ದಾರೆ ಎನ್ನಬಹುದು. (ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ! – ಕುವೆಂಪು)