Friday, January 29, 2010

ಬರ್ತ್ ಡೇ ತಾತ ಬೇಂದ್ರೆ ನೆನಪಲ್ಲಿ

ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ ಗೊತ್ತಾಯಿತು. ಸ್ವಲ್ಪ ದೂರದಲ್ಲಿದ್ದ ಚಿತ್ರ ಯಾವ ಕೋನದಿಂದ ನೋಡಿದರೂ ನಮ್ಮ ತಾತನದೇ ಚಿತ್ರದಂತೆ ಕಾಣುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ನಮ್ಮ ತಾತ ತಲೆಗೆ ರುಮಾಲು ಸುತ್ತುತ್ತಿದ್ದರು. ಚಿತ್ರದಲ್ಲಿದ್ದ ತಾತ ಟೋಪಿ ಹಾಕಿಕೊಂಡಿದ್ದರು. ಕೊನೆಗೆ ತಡೆಯಲಾರದೇ ಎದ್ದು ಹೋಗಿ ನೋಡಿದಾಗ ಅದರ ಮೇಲೆ ದ.ರಾ.ಬೇಂದ್ರೆ ಎಂದು ಬರೆದಿತ್ತು. ನಮ್ಮ ತಾತನಿಗೂ ಅದೇ ವಯಸ್ಸು, ಸುರುಳಿಗೂದಲು, ಮೀಸೆ ಮತ್ತು ಮುಗ್ದಮುಖವಿದ್ದುದರಿಂದ ಬೇಂದ್ರೆ ಚಿತ್ರ ನನಗೆ ನನ್ನ ತಾತನ ಚಿತ್ರದಂತೆಯೇ ಕಾಣುತ್ತಿತ್ತು. ಹೀಗೆ ಬೇಂದ್ರೆ ಚಿತ್ರ ಅಂದು ನನ್ನ ಮನಸ್ಸಿನಲ್ಲಿ ದಾಖಲಾಯಿತು. ಅಂದಿನಿಂದ ಇಂದಿನವರೆಗೂ ಬೇಂದ್ರೆ ಎಂದರೆ ನನಗೆ ಮೊದಲು ನೆನಪಾಗುವುದು ಅದೇ ಚಿತ್ರದ ತಾತ! ಜನವರಿ 31 ಅವರು ಹುಟ್ಟಿದ ದಿನ.

ನಂತರ ಪಠ್ಯಪುಸ್ತಕಗಳಲ್ಲಿದ್ದ ಕವನಗಳ ಮೂಲಕ ಬೇಂದ್ರೆ ಹತ್ತಿರವಾದರು. ಸಾಹಿತ್ಯದಲ್ಲಿ ಆಸಕ್ತಿ ಮೂಡುತ್ತಾ ಹೋದಂತೆ ಬೇಂದ್ರೆ ಪ್ರೀತಿಯ ಕವಿಯಾದರು. ೧೯೯೮-೨೦೦೦ನೇ ಇಸವಿಯಲ್ಲಿ ಕನ್ನಡ ಎಂ.ಎ. ಮಾಡುವಾಗ ನನ್ನ ಸುಯೋಗವೋ ಏನೋ? ಬೇಂದ್ರೆಯವರನ್ನು ವಿಶೇಷಕವಿಯಾಗಿ ಅಧ್ಯಯನ ಮಾಡಬೇಕಾಗಿತ್ತು. ಆಗಿನ್ನು ಅವರ ಸಮಗ್ರಸಾಹಿತ್ಯ ಪ್ರಕಟವಾಗಿರಲಿಲ್ಲ. ಆದರೂ ಆಗ ಸಿಕ್ಕ ಅವರ ಎಲ್ಲಾ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದೆ. ಅದರಿಂದಾದ ಸಂತೋಷ ಪದಗಳಿಗೆ ನಿಲಕದ್ದು.

ಅವರ ಯಾವುದೋ ಬರಹವೊಂದರಲ್ಲಿ ‘ಸಣ್ಣ ಸೋಮವಾರ’ ಎಂಬ ಪ್ರಯೋಗ ಬಂದಿತ್ತು. ನಾನು ಆ ಪದದ ಬಗ್ಗೆ ತಲೆಕೆಡಿಸಿಕೊಂಡು ಸಿಕ್ಕ ಸಿಕ್ಕ ನಿಘಂಟುಗಳನ್ನೆಲ್ಲಾ ಜಾಲಾಡಿದ್ದೆ. ಕೊನೆಗೆ ವರ್ಷದ ಕೊನೆಯಲ್ಲಿ ಪ್ರೊ.ಶಿವಕುಮಾರ್ ಎಂಬುವವರಲ್ಲಿ ಈ ಪದದ ಬಗ್ಗೆ ಕೇಳಿದೆ. ಅವರು ‘ಈ ಸಮಸ್ಯೆ ನಿನಗೂ ಕಾಡಿದೆ ಎಂದರೆ ನೀನು ಬೇಂದ್ರೆಯವರನ್ನು ಸೀರಿಯಸ್ಸಾಗಿ ಓದುತ್ತಿದ್ದೀಯಾ ಎಂದರ್ಥ. ಈ ಪದ ಹಲವಾರು ವಿದ್ವಾಂಸರನ್ನು ಓದುಗರನ್ನು ಕಾಡಿದೆ. ಅದಕ್ಕೆ ಒಬ್ಬ ಬಸ್ ಕಂಡಕ್ಟರ್ ಉತ್ತರ ಹುಡುಕಿದ್ದರು. ಧಾರವಾಡ ಕಡೆ ಸಣ್ಣ ಸೋಮವಾರ ಮಾಡುವುದು ಎಂಬ ಆಚರಣೆಯೇ ಇದೆ. ಸಣ್ಣ ಅಂದರೆ ಶ್ರಾವಣ ಅಂತ ಅಷ್ಟೆ! ಅಂದರೆ ಶ್ರಾವಣ ಸೋಮವಾರ’ ಎಂದು ಅದರ ಇತಿಹಾಸವನ್ನೇ ಬಿಚ್ಚಿಟ್ಟಿದ್ದರು. ಬೇಂದ್ರೆಯವರು ಈ ನೆಲದ ಸೊಗಡನ್ನು ತಮ್ಮದಾಗಿಸಿಕೊಂಡಿದ್ದಕ್ಕೆ ಇದೊಂದು ಚಿಕ್ಕ ಉದಾಹರಣೆ.

ಆಗ ಉಪನ್ಯಾಸ ನೀಡಿದ್ದ ಇನ್ನೊಬ್ಬ ವಿದ್ವಾಂಸರು ಸಾಂಸ್ಕೃತಿಕ ವೈರುದ್ಧ್ಯಗಳಂತಿದ್ದ ವ್ಯಕ್ತಿತ್ವಗಳು ಅರ್ಥಪೂರ್ಣ ಮುಖಾಮುಖಿಯಾಗುವುದು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ ಎಂದು ಹೇಳಿ ಮೂರು ಉದಾಹರಣೆ ಕೊಟ್ಟಿದ್ದರು. ‘ಕನಕದಾಸ-ಪುರಂದರದಾಸ, ಗಾಂಧಿ - ಅಂಬೇಡ್ಕರ್, ಕುವೆಂಪು-ಬೇಂದ್ರೆ’ ಎಂದು.

ಗಾಂಧಿ ಸೂಟುಬೂಟು ತ್ಯಜಿಸಿದ್ದು ಹಾಗೂ ಅಂಬೇಡ್ಕರ್ ಸೂಟುಬೂಟು ಒಪ್ಪಿಕೊಂಡಿದ್ದು, ಕುವೆಂಪು ಭಾಷೆ ಸಂಸ್ಕೃತಭೂಯಿಷ್ಟವಾದುದ್ದು ಹಾಗೂ ಬೇಂದ್ರೆ ಭಾಷೆ ಜಾನಪದೀಯವಾದದ್ದು, ಪುರಂದರದಾಸರು ಕೇವಲ ದಾಸರಾಗಿದ್ದು ಹಾಗೂ ಕನಕದಾಸರು ದಾಸರಾಗುವುದರ ಜೊತೆಗೆ ಕವಿಯೂ ಆದದ್ದು. . . . ಹೀಗೇ ಅವರ ಹೋಲಿಕೆ ನಡೆದಿತ್ತು. ಆದರೆ ಅವರ ವಿಮರ್ಶೆ ಕುಚೋದ್ಯದಿಂದ ಕೂಡಿದೆ ಎಂದೇ ಅನ್ನಿಸಿತ್ತು. ಈಗಲೂ ಅದನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಕುವೆಂಪು-ಬೇಂದ್ರೆ ಭಾಷಾವಿಚಾರದಲ್ಲಿ ಅದೊಂದು ತೀರಾ ಸಾಮಾನ್ಯ ವಿವರಣೆ ಅನ್ನಿಸದಿರದು. ಸಹಜಕವಿಯಾದವನಿಗೆ ಭಾಷೆಯೇ ಒಂದು ತೊಡಕು ಎಂದು ಎಲ್ಲೋ ಓದಿದ ನೆನಪು. ಕವಿಯ ಮನಸ್ಸಿನಲ್ಲಿ ಕವಿತೆಯಾದುದೆಲ್ಲಾ ಭಾಷೆಯಲ್ಲಿ ಅಭಿವ್ಯಕ್ತಿಯಾಗುವುದು ಕಷ್ಟ! ಬೇಂದ್ರೆ-ಕುವೆಂಪು ಇಬ್ಬರೂ ಭಾಷೆಯನ್ನು ಯಾವ ಗರಿಷ್ಠಮಟ್ಟಕ್ಕಾದರೂ ಕೊಂಡಯ್ದು ಬಳಸಬಲ್ಲ ಕವಿಗಳಾಗಿದ್ದರು. ಹಾಗೇ ಜಾನಪದೀಯವಾಗಿಯೂ ಬಳಸಬಲ್ಲವರಾಗಿದ್ದವರು. ಇಷ್ಟನ್ನೇ ಆಧಾರವಾಗಿರಿಸಿಕೊಂಡು ಸಾಂಸ್ಕೃತಿಕ ವೈರುದ್ಧ್ಯವುಳ್ಳ ವ್ಯಕ್ತಿತ್ವಗಳು ಹಾಗೂ ಅವುಗಳ ಮುಖಾಮುಖಿ ಎಂದು ಭಾವಿಸುವುದು ಅಷ್ಟು ಸಮಂಜಸವೇನಲ್ಲ ಎಂಬುದು ನನ್ನ ಅನಿಸಿಕೆ.

ನಾನು ಬೇಂದ್ರೆಯವರನ್ನು ಅಧ್ಯಯನ ಮಾಡುವಾಗ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು ಅವರ ‘ಕನ್ನಡ ಮೇಘದೂತ’ ಖಂಡಕಾವ್ಯ. ಅದು ಕಾಳಿದಾಸನ ಮೇಘದೂತದ ಕನ್ನಡ ಅವತರಣಿಕೆ. ಒಂದೊಂದು ಪದ್ಯವೂ ಬಿಡಿಮುತ್ತಿನಂತೆ ಸರಳ ಛಂದಸ್ಸ್ಸಿನಲ್ಲಿ ಮೂಡಿಬಂದಿವೆ. ಅದರ ನಾಲ್ಕು ಪದ್ಯಗಳನ್ನು ಇಲ್ಲಿ ಕೊಡುತ್ತೇನೆ, ರಸಗ್ರಹಣಕ್ಕಾಗಿ!

ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ

ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು?
ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು
ಆ ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
ಅವರ ಕಣ್ಣಕುಡಿಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು

ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಡ ಮಾವು ಸುರಿದಾವು ಗೊಂಚಲಲ್ಲಿ ಬೆಟ್ಟದೆದೆಯ ಮೇಲೆ
ಅಮರ ಮಿಥುನಗಳ ಪ್ರಣಯ ದೃಷ್ಟಿ ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ

ಮರದ ನಡುವೆ ಬಿಳಿ ಹಾಸಗಲ್ಲು ಬಂಗಾರ ಕೋಲು ನಡುಕೆ
ಎಳೆಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ
ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
ಕೈ ತಟ್ಟಿ ಮಾಟ ಬಳೆ ತಕಲಾಟ ಥಕಥೈಯ ಥಾಟಿನಲ್ಲಿ

ಈ ಮೇಘದೂತದ ಗುಂಗಿನಲ್ಲೇ ನಾನು ಮೇಘದೂತನ ಕಾವ್ಯಸಿರಿ ಎಬ ಕವಿತೆಯೊಂದನ್ನು ಬರೆದಿದ್ದೆ. ಅದನ್ನಿಲ್ಲಿ ಕೊಟ್ಟು ಈ ಲೇಖನವನ್ನು ಮುಗಿಸುತ್ತೇನೆ. ಹಾಗೆ ನೋಡಿದರೆ ಮೊನ್ನೆ ಹೆಚ್.ಎಸ್.ವೆಂಕಟೇಶಮೂರ್ತಿಯವರು ಹೇಳಿದಂತೆ ಸ್ಮರಣೆಯೊಂದೇ ಮರಣದ ದುಃಖವನ್ನು ಮರೆಯಾಗಿಸುವ ಸಾಧನ!

ಮೇಘದೂತನ ಕಾವ್ಯಸಿರಿ

ಕೆರೆಯ ಅಂಚಿಗೆ ಚಾಚಿದ್ದ ಬಿಳಿಯ ಕಲ್ಲು
ತೊಳೆದು ಹೊಳೆವ ಬಿಂದಿಗೆ ನಡುವಿಗೆ
ಎಳೆಯ ರಶ್ಮಿಯ ಹೊಳಪಿನಿಂದ
ಬೆಳಕ ಚಿತ್ತಾರ ನೀರಕನ್ನಡಿಗೆ.

ಬಿಂದಿಗೆಯ ಮುಳುಗಿಸಿ ನೀರ
ತುಂಬುವಳು ಚೆಲುವೆ ಬಿಂಕದಿಂದ
ಅದ ನಡುವಿಗಿಟ್ಟು ನೆರಿಗೆ ಎತ್ತಿ ಕಟ್ಟಿ
ನಡೆವಳು ಚೆಲುವೆ ವೈಯಾರದಿಂದ.

ತಾವರೆಯ ವರಿಸಿದ ದುಂಬಿ, ಮರೆತು
ಬಂದಿತೋ ಅವಳಿಂದೆ; ಅವಳೊಂದು ಪುಷ್ಪ.
ಮುಂಜಾನೆಯ ಮಂದ ಮಾರುತಕೆ
ಚೆಲ್ಲಿದಳೋ ಮಕರಂದ, ಅವಳೊಂದು ಪುಷ್ಪ

ವಾಯುವಿಹಾರಿ ವಾಯಿಸಂಚಾರಿ
ಮನುಜ ಗಂಧರ್ವರೆಲ್ಲ ಬೆರಗಾದರೋ,
ಕನಕಪುತ್ಥಳಿ ಮಕರಂದಪುಷ್ಪ
ನಿಜ ಚೆಲುವಕಂಡು ಧನ್ಯರಾದರೋ.

ದತ್ತೂ ಮಾಸ್ತರರ ಕನ್ನಡ ಕಸ್ತೂರಿಯ
ಸೊಗಸನು ಮೇಘದೂತದಿ ಕಂಡು
ಮೈಮನ ನಿಮಿರಿ ರೋಮಾಂಚನದಲಿ
ಪುಲಕಗೊಂಡವು ಆ ಸೊಗಸನುಂಡು.

Tuesday, January 19, 2010

ಪುಸ್ತಕ ಪ್ರಕಟಣೆ, ಸಾಹಿತ್ಯ ಸೇವೆ ಎಂಬ ಕಾಳದಂಧೆ

ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದಲ್ಲಿ ಬರದೇ ಬದುಕು ಸಾಗಿಸಬೇಕಾದ ವೃತ್ತಿ ಬರಹಗಾರರು ಇಲ್ಲ ಎಂಬುದು ತೇಜಸ್ವಿಯವರ ಮೊದಲ ಆಕ್ಷೇಪ. ಇರುವವರೆಲ್ಲಾ ಪಾರ್ಟ್‌ಟೈಮ್ ಬರಹಗಾರರೆಂದೇ ಹೇಳಬಹುದು. ಬರೆಯುವುದು ಒಂದು ತರ ಶೋಕಿಯಾಗುತ್ತಿದೆ. ಬರೆದುದ್ದು ಪುಸ್ತಕ ರೂಪದಲ್ಲಿ ಬಂದರೆ ಸಾಕು. ಸಾಹಿತಿ ಎಂಬ ಲೇಬಲ್ ಅಂಟಿಸಿಕೊಂಡುಬಿಡುತ್ತಾರೆ. ತಾವು ಬರೆದುದ್ದನ್ನು ಬೇರೆಯವರು ಓದುತ್ತಿದ್ದಾರೊ ಇಲ್ಲವೋ ಎಂಬುದರ ಬಗ್ಗೆ ಇವರಿಗೆ ಪ್ರಾಥಮಿಕ ಜ್ಞಾನವೂ ಇಲ್ಲ. ತಮ್ಮ ಪುಸ್ತಕದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೂ ಯೋಚಿಸುವ ವ್ಯವಧಾನವೂ ಇಲ್ಲ. ಇಂದು ಕನ್ನಡದಲ್ಲಿ ಒಂದೂ ಪೈಸೆ ಗೌರವಧನ ಪಡೆಯದೆ ತಮ್ಮ ಪುಸ್ತಕಗಳು ಪ್ರಕಟವಾದರೆ ಸಾಕು ಎಂದು ಪ್ರಕಾಶಕರಿಗೆ ಕೊಟ್ಟು ಬಿಡುವ ಲೇಖಕರ ಸಂಖ್ಯೆಯೇ ಶೇಕಡಾ ಎಂಬತ್ತನ್ನು ಮೀರಬಹುದು. ಇದರಲ್ಲಿ ಹೆಚ್ಚಿನವರು ಸಾಹಿತ್ಯ ಕ್ಷೇತ್ರಕ್ಕೆ ಹೊಸಬರಿರುತ್ತಾರೆ. ಪ್ರಕಟವಾದ ಪುಸ್ತಕದ ಒಂದಷ್ಟು ಕಾಪಿಗಳನ್ನು ಪಡೆದುಕೊಂಡು, ಪತ್ರಿಕೆಗಳಿಗೆ, ಸ್ನೇಹಿತರಿಗೆ ಹಂಚಿ ಉಳಿದಿದ್ದನ್ನು ಅಟ್ಟಕ್ಕೆ ಸಾಗಿಸಿ ಸುಮ್ಮನಾಗಿಸಿಬಿಡುತ್ತಾರೆ. ಇನ್ನು ಇಂತಹವರ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೂ ಅಷ್ಟೆ. ಸರ್ಕಾರಿ ಗ್ರಂಥಾಲಯಗಳಿಗೆ ಒಂದಷ್ಟು ಪ್ರತಿಗಳನ್ನು ಮಾರಿ ಹಾಕಿದ ಬಂಡವಾಳ ಹಿಂತೆಗೆದುಕೊಂಡು ಸುಮ್ಮನಾಗಿಬಿಡುತ್ತಾರೆ.

ಮೊದಲ ಬಗೆಯ ಬರಹಗಾರರಲ್ಲದೆ ಉಳಿದ ಶೇಕಡಾ ಇಪ್ಪತ್ತು ಬರಹಗಾರರೂ ಸಿರಿಯಸ್ಸಾಗೇನೂ ಬರವಣಿಗೆಯನ್ನು ತಗೆದುಕೊಂಡವರಲ್ಲ. ತಾವು ಆಗಾಗ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು, ಮಂಡಿಸಿದ ಪ್ರಬಂದಗಳನ್ನು, ಕೊನೆಗೆ ಎಲ್ಲೋ ಮಾಡಿದ ಭಾಷಣಗಳನ್ನು ಬರಹ ರೂಪಕ್ಕೆ ತಂದು ಪುಸ್ತಕ ಪ್ರಕಟಣೆಗೆ ಕೊಟ್ಟುಬಿಡುತ್ತಾರೆ. ಇವರೆಲ್ಲರೂ ಸ್ವಲ್ಪ ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಹೆಸರು ಮಾಡಿದಂತವರು. ಆದರೆ ಇವರೂ ತಮ್ಮ ಪುಸ್ತಕದ ಮಾರುಕಟ್ಟೆಯ ಬಗ್ಗೆ ಯಾವುದೇ ಫೀಡ್‌ಬ್ಯಾಕ್ ಹಾಗೂ ಓದುಗರ ಅಭಿರುಚಿಯ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ನಿಜವಾಗಿ ಸಾಹಿತ್ಯವನ್ನು ಸೀರಿಯಸ್ಶಾಗಿ ತೆಗೆದುಕೊಂಡು ತಾವು ಬರೆದುದ್ದು ಮಾರಾಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮನಗಂಡು, ಓದುಗರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಂದಡಿಯಿಡುವ ಕನ್ನಡ ಬರಹಗಾರರ ಸಂಖ್ಯೆ ಬೆರಳೆಣಿಕೆಯಷ್ಟಿಲ್ಲ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಇನ್ನು ಪ್ರಕಾಶಕರು. ಇವರಿಂದಲೇ ಇಡೀ ಪುಸ್ತಕೋದ್ಯಮ ಈ ಮಟ್ಟಿನ ದುಸ್ಥಿತಿಗೆ ಇಳಿದಿದೆ ಎಂಬುದು ತೇಜಸ್ವಿಯವರ ಎರಡನೇ ಆಕ್ಷೇಪಣೆ. ಪಠ್ಯಪುಸ್ತಕಗಳನ್ನು ಮಾತ್ರ ಪ್ರಕಟಿಸುವ ಪ್ರಕಾಶಕರು ಶಿಕ್ಷಣ ಕ್ಷೇತ್ರದ, ತನ್ಮೂಲಕ ಇಡೀ ದೇಶದ ಸಂಸ್ಕೃತಿಯ ದುಸ್ಥಿತಿಗೆ ಕಾರಣರಾಗಿದ್ದಾರೆ. ಇದರಲ್ಲಿ ಬರಹಗಾರರ ಪಾಲೂ ಇದೆ. ಕೇವಲ ಪಠ್ಯಪುಸ್ತಕಗಳನ್ನೇ ಬರೆಯುವ ವೃತ್ತಿಬರಹಗಾರರು ಅಲ್ಲಲ್ಲಿ ಸಿಗುತ್ತಾರೆ. ಹೆಸರನ್ನು ಹಾಕಿಕೊಳ್ಳದೇ ಕನ್ನಡ ಪಠ್ಯಪುಸ್ತಕಗಳಿಗೆ ಗೈಡ್ ಬರೆಯುವ ಅಧ್ಯಾಪಕರೂ ನಮ್ಮ ನಡುವೆ ಇದ್ದಾರೆ. ಕನ್ನಡವನ್ನು ಮಾತೃಭಾಷೆಯನ್ನಾಗಿ ಉಳ್ಳ ಒಬ್ಬ ವಿದ್ಯಾರ್ಥಿ, ಕನ್ನಡ ಪಠ್ಯವನ್ನು ಗೈಡ್ ಮುಖಾಂತರ ಓದುವ ದುಸ್ಥಿತಿಯೇ ಭಯಂಕರವಾದದ್ದು. ಇನ್ನು ಕೆಲವರು ಸರಸ್ವತಿಯ ಸೇವೆ ಎಂದೋ ಕನ್ನಡದ ಸೇವೆ ಎಂದೋ ಪುಸ್ತಕಗಳನ್ನು ಪ್ರಕಟಿಸುವವರು. ಇವರು ಪುಸ್ತಕೋದ್ಯಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇರುವವರು. ಇವರಿಂದಲೂ ಬರಹಗಾರರಿಗೆ ಯಾವುದೇ ರೀತಿಯ ಫೀಡ್‌ಬ್ಯಾಕ್ ಸಿಗುವುದಿಲ್ಲ.

ರಾಜ್ಯ ಹಾಗೂ ಕೇಂದ್ರಸರ್ಕಾರದ ಯಾವ ಯಾವ ಸ್ಕೀಮ್‌ಗಳಲ್ಲಿ ಎಷ್ಟೆಷ್ಟು ಹಣವಿದೆ ಎಂಬುದನ್ನು ತಿಳಿದು ಆ ಸ್ಕೀಮಿಗೆ ಬೇಕಾದಂತಹ ಪುಸ್ತಕಗಳನ್ನು ಮುದ್ರಿಸುವ ಒಂದು ಪ್ರಕಾಶಕ ವರ್ಗವಿದೆ. ಇವರು ಕೆಲವೇ ದಿನಗಳಲ್ಲಿ, ಬೇಡಿಕೆಯಿರುವ ಎಲ್ಲಾ ವಿಷಯಗಳ ಪುಸ್ತಕಗಳನ್ನು ಬರೆಯಿಸಿ ಮುದ್ರಿಸಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಆಯಾಯ ಸ್ಕೀಮಿನ ಸರ್ಕಾರಿ ಅಧಿಕಾರಿಗೆ ಇದರಲ್ಲಿ ಸಿಂಹಪಾಲು ಲಾಭವಿದೆ. ಆದರೆ ಬರಹಗಾರನಿಗೂ ಓದುಗನಿಗೂ ಯಾವುದೇ ಲಾಭವಿಲ್ಲ.

ಇನ್ನು ಕೊನೆಯವರು ಕೇವಲ ಗ್ರಂಥಾಲಯಕ್ಕೆ ಸರ್ಕಾರ ಕೊಂಡುಕೊಳ್ಳುವ ಸೀಮಿತ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಪುಸ್ತಕ ಪ್ರಕಟಿಸಿ ಲಾಭ ಮಾಡುವವರು. ಇವರು ಸರ್ಕಾರ ಕೊಂಡುಕೊಳ್ಳುವ ನೂರೋ ಇನ್ನೂರೋ ಪ್ರತಿಗಳಲ್ಲೇ ತಾವು ಹಾಕಿದ ಬಂಡವಾಳವನ್ನು ವಾಪಸ್ ಪಡೆಯಬಲ್ಲ ಚಾಣಕ್ಯರು. ಇಲ್ಲೂ ಲೇಖಕರಿಗೆ ಗೌರವಪ್ರತಿಗಳೇ ಗತಿ. ಇಂತಹ ಪ್ರಕಾಶಕರಿಂದ ಸಂಭಾವನೆ ಪಡೆಯುವ ಲೇಖಕರ ಸಂಖ್ಯೆ ಶೇಕಡಾ ಐದೋ ಹತ್ತೋ ಇರಬಹುದು ಅಷ್ಟೆ. ಆದರೆ ಗ್ರಂಥಾಲಯಗಳಲ್ಲಿ ಮಾತ್ರ ಕಸದ ರಾಶಿಯಂತೆ ಪುಸ್ತಕಗಳನ್ನು ತುಂಬಿಕೊಳ್ಳುತ್ತಾರೆ. ಇದರಲ್ಲಿ ಪುಸ್ತಕ ಆಯ್ಕೆ ಸಮಿತಿಯವರು, ಗ್ರಂಥಾಲಯ ಅಧಿಕಾರಿಗಳು, ಗ್ರಂಥಪಾಲಕರು ಪಾಲು ಪಡೆಯುತ್ತಾರೆ. ಐದು ವರ್ಷ ಗ್ರಂಥಾಲಯಗಳಿಗೆ ಯಾವುದೇ ಪುಸ್ತಕ ಖರೀದಿಸದಿದ್ದರೆ, ಈ ಬಗೆಯ ಪ್ರಕಾಶಕರಲ್ಲೆ ಶೇಕಡಾ ತೊಂಬತ್ತಕ್ಕೂ ಹೆಚ್ಚುಜನ ತಮ್ಮ ಉದ್ಯೋಗ ಬದಲಾಯಿಸಬೇಕಾಗುತ್ತದೆ ಇಲ್ಲ ಬಿಡಬೇಕಾಗುತ್ತದೆ. ನಿಜವಾಗಿ ಕನ್ನಡ ಪುಸ್ತಕೋದ್ಯಮದಲ್ಲಿ, ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಾ ಮಾರುಕಟ್ಟೆಯನ್ನು ಬೆಳೆಸುತ್ತಾ ಬಂದಿರುವ ಪ್ರಕಾಶಕ ಸಂಸ್ಥೆಗಳ ಸಂಖ್ಯೆ ಹತ್ತನ್ನು ದಾಟುವುದಿಲ್ಲ.

ಇಂದು ಸರ್ಕಾರ ಎಲ್ಲವಕ್ಕೂ ಅನುಧಾನ ಕೊಡುತ್ತಾ ಎಲ್ಲವನ್ನೂ ಹಾಳು ಮಾಡುತ್ತಿದೆ. ಚಲನಚಿತ್ರೋದ್ಯಮಕ್ಕೆ, ಪುಸ್ತಕೋದ್ಯಮಕ್ಕೆ, ಕನ್ನಡದ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಕೆಲವು ನಾಟಕ ಕಂಪೆನಿಗಳಿಗೆ ಎಲ್ಲವಕ್ಕೂ ಸರ್ಕಾರದ ಅನುದಾನವೇ ಉಸಿರಾಗಿದೆ. ಇಂದೊಮ್ಮೆ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ಚಂದ್ರಹಾಸ ಗುಪ್ತ ಎಂಬ ಅಧಿಕಾರಿಯೊಬ್ಬರು ಆಗಿನ ಸಾಹಿತ್ಯ ಪರಿಷತ್ ಪದಾಧಿಕಾರಿಗಳಗೆ ಒಂದು ಪ್ರಶ್ನೆ ಕೇಳಿದ್ದು ನೆನಪಾಗುತ್ತಿದೆ. ‘ಒಂದು ಆಪ್‌ಸೆಟ್ ಮುದ್ರಣ ಯಂತ್ರವನ್ನು ಇಟ್ಟುಕೊಂಡಿರುವವನು ನಾಲ್ಕಾರು ಜನಕ್ಕೆ ಕೆಲಸಕೊಟ್ಟೂ ಸಂಬಳ ಕೊಟ್ಟೂ ತಾನೂ ಲಾಭ ಮಾಡುತ್ತಾ ಇರಬೇಕಾದರೆ ಪರಿಷತ್ ಮೂರು ಆಫ್‌ಸೆಟ್ ಮುದ್ರಣ ಯಂತ್ರಗಳನ್ನು ಇಟ್ಟುಕೊಂಡೂ, ಅವುಗಳ ರಿಪೇರಿಗೆಂದು ಅನುದಾನಕ್ಕಾಗಿ ಸರ್ಕಾರಕ್ಕೆ ಕೈ ಚಾಚುತ್ತಿರುವುದೇಕೆ? ಈ ರೀತಿ ಅನುದಾನದಿಂದಲೇ, ನಡೆಯುವ ಪುಸ್ತಕೋದ್ಯಮದ ಅಗತ್ಯವಾದರೂ ಏನು?’ ಎಂದು ಪ್ರಶ್ನಿಸಿದ್ದರು. ತೇಜಸ್ವಿ ಇದನ್ನೇ ಇನ್ನೂ ನಿಖರವಾಗಿ ಖಾರವಾಗಿ ಹೇಳುತ್ತಾರೆ. ‘ನನ್ನಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟುಕೊಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ’ ಎಂದು. ತೇಜಸ್ವಿ ಈ ಮಾತನ್ನು ಹೇಳಿದ್ದು ರಂಗಾಯಣದ ಕಲಾವಿದರನ್ನು ಕುರಿತು. ಈ ಮಾತನ್ನು ಕೇಳಿದ ನಂತರ ರಂಗಾಯಣದ ಎಷ್ಟೋ ಜನ ಕಲಾವಿದರು ಹೊರಬಂದು ಸಿನಿಮಾ ಟೀವಿಗಳಲ್ಲಿ ತಮ್ಮ ಹೊಟ್ಟೆ ಪಾಡು ಕಂಡುಕೊಂಡರು. ಇದೇ ಮಾತು ಕೋಟಿಗಟ್ಟಲೆ ಅನುದಾನ ಪಡೆಯುತ್ತಿರುವ ಅಕಾಡೆಮಿಗಳು, ಪ್ರಾಧಿಕಾರಗಳು ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಗ್ರಂಥಾಲಯಗಳ ಪುಸ್ತಕ ಖರೀದಿ, ಅಕಾಡೆಮಿಗಳ ಕಾರ್ಯನಿರ್ವಹಣೆ, ಪುಸ್ತಕ ಪ್ರಾಧಿಕಾರದ ದುಂದುವೆಚ್ಚದ ಪ್ರಕಟಣೆಗಳು ಇವನ್ನು ನೋಡಿದಾಗ ಸಾರ್ವಜನಿಕರ ಹಣವನ್ನು ಕೆಲವೇ ಮಂದಿ ಸೇರಿಕೊಂಡು ಮಜಾ ಉಡಾಯಿಸುತ್ತಿದ್ದಾರೆ ಎಂಬ ಅನುಮಾನ ಬಾರದಿರದು.

ಅನುದಾನ ಎಂಬುದು ಯಾವುದೇ ಕಲೆಗೆ, ಸಂಸ್ಥೆಗೆ ತತ್ಕಾಲಿಕವಾಗಿ ಇರಬೇಕಾದ್ದು. ಅದೇ ನಿರಂತರವಾದರೆ ಅದರಿಂದ ನಡೆಯುವ ಸಂಸ್ಥೆಗಳು ಸ್ವಂತಿಕೆಯನ್ನು ಕಳೆದುಕೊಂಡು ಬರೇ ಲೆಕ್ಕ ಕೊಡುತ್ತಾ ಕೂರಬೇಕಾಗುತ್ತದೆ ಎನ್ನುತ್ತಾರೆ ತೇಜಸ್ವಿ. ಕಡೆಗೆ ತೇಜಸ್ವಿ ಸರ್ಕಾರಕ್ಕೆ ‘ನೀವು ಕೊಟ್ಟ ಅನುದಾನ ಏನಾಗತ್ತಿದೆ ಎಂಬುದನ್ನಾದರೂ ಸರಿಯಾಗಿ ಗಮನಿಸಿ ಲೆಕ್ಕ ಕೇಳಿ’ ಎಂದು ಸಲಹೆ ಕೊಟ್ಟಿದ್ದರು. ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ ನಮ್ಮ ಗ್ರಂಥಾಲಯದಲ್ಲಿರುವ ಸುಮಾರು ಮೂರುಸಾವಿರ ಕನ್ನಡ ಪುಸ್ತಕಗಳಲ್ಲಿ ಮುಕ್ಕಾಲುಪಾಲು ಪುಸ್ತಕಗಳನ್ನು ಕೇಳುವವರೇ ಇಲ್ಲ. ನಮ್ಮ ಸಂಗ್ರಹದಲ್ಲಿ ಬಹುತೇಕ ಪ್ರಕಟಣೆಗಳು ವಿಶ್ವವಿದ್ಯಾಲಯಗಳು, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತು ಪ್ರಕಟಿಸಿದಂತಹವುಗಳೇ ಆಗಿವೆ.

Tuesday, January 12, 2010

ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು!

ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನನ್ನ ಕಿವಿಗೆ ಬಿದ್ದವು. ಅದರ ಬಗ್ಗೆ ವಿವರಿಸಿದಾಗ ನನಗೆ ಸಿಕ್ಕ ಮಾಹಿತಿ ಇದು.

ಚೆನ್ನರಾಯಪಟ್ಟಣದಿಂದ ಅರಕಲಗೂಡಿನವರೆಗೆ ಸುಮಾರು ನಲವತ್ತೈದು ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿತ್ತು. ಅತ್ಯುತ್ತಮ ಗುಣಮಟ್ಟದ ದ್ವಿಪಥ ರಸ್ತೆ ನಿರ್ಮಾಣದ ಉದ್ದೇಶವಾಗಿತ್ತು. ಜೊತೆಗೆ ನೀರಾವರಿ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಯನ್ನೂ, ಹೇಮಾವತೀ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ (ಸುಮಾರು ಎರಡು ಕಿ.ಮೀ) ಸಂಪೂರ್ಣ ಕಾಂಕ್ರೀಟಿನಿಂದ ಕೂಡಿದ ಚತುಷ್ಪಥ ರಸ್ತೆ ಹಾಗೂ ಫುಟ್ ಪಾತ್ ನಿರ್ಮಾಣದ ಗುರಿಯೂ ಇತ್ತು. ಕೆಲಸ ಭರದಿಂದ ಸಾಗುತ್ತಿದ್ದಾಗ ಮೊದಲು ರಾಷ್ಟ್ರಪತಿ ಆಡಳಿತ, ನಂತರ ಚುನಾವಣೆ ನಡೆದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ವಿರೋಧ ಪಕ್ಷಗಳ ಶಾಸಕರಿರುವ ಕ್ಷೇತ್ರಗಳಲ್ಲಿನ ಕಾಮಗಾರಿಗಳು ವೇಗ ಕಳೆದುಕೊಂಡವು. ಆ ರಸ್ತೆ ಇರುವ ಜಾಗ ಶ್ರವಣ ಬೆಳಗೊಳ - ಹೊಳೆನರಸೀಪುರ - ಅರಕಲಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೊದಲೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೆ, ಅರಕಲಗೂಡಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಈ ರಸ್ತೆಯ ಕಾಮಗಾರಿಯನ್ನು ಪೂರ್ಣ ನಿಲ್ಲಿಸಲು ಹಾಗೂ ಆಗಿರುವ ಕೆಲಸಕ್ಕಷ್ಟೇ ಬಿಲ್ ನೀಡಲು ಕಂಟ್ರಾಕ್ಟ್ ದಾರರಿಗೆ ಸೂಚನೆ ಹೋಯಿತು. ಅವರೂ ಅಷ್ಟನ್ನೇ ಮಾಡಿದರು.

45 ಕಿ.ಮೀ. ರಸ್ತೆಯಲ್ಲಿ ಸುಮಾರು ಶೇಕಡಾ 60ರಷ್ಟು ಕೆಲಸವಷ್ಟೇ ಆಗಿದೆ. ಒಟ್ಟು ಹತ್ತು ಕಡೆ ಹಳೆಯ ರಸ್ತೆ, ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಅಗೆದು ಹಾಕಿದ್ದರಿಂದ ಇನ್ನೂ ಹದಗೆಟ್ಟಿರುವ ರಸ್ತೆ ಹಾಗೇ ಉಳಿದಿದೆ! ಅರಕಲಗೂಡಿನಿಂದ ಹೊಳೆನರಸೀಪುರದ ನಡುವೆ ಆರು ಬಾರಿ, ಹೊಳೆನರಸೀಪುರದಿಂದ ಚೆನ್ನರಾಯಪಟ್ಟಣದ ವರೆಗೆ ನಾಲ್ಕು ಬಾರಿ ತೀರಾ ಹದಗೆಟ್ಟಿರುವ ರಸ್ತೆಗಳಲ್ಲಿ ಕೆಲ ಕಿ.ಮೀ. ಪ್ರಯಾಣಿಸಬೇಕಾಗಿದೆ. ಹೊಸ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ನಿದ್ದೆಗೆ ಜಾರುವ ಸನ್ನಾಹದಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ನೆಗೆದು ಬೀಳುವ ಬಸ್ಸಿನಲ್ಲಿ ನಗೆಪಾಟಲಿಗೀಡಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ! ಅಯ್ಯೋ ಈ ರಸ್ತೆಯಲ್ಲಿ ಯಾಕಾದರೂ ಬಂದೆವೋ ಎಂದುಕೊಳ್ಳುತ್ತಾ ಒಂದೆರಡು ಕಿಲೋಮೀಟರ್ ಸಂಚರಿಸುವುದಲ್ಲಿ ಮತ್ತೆ ಗುಣಮಟ್ಟದ ಹೊಸ ರಸ್ತೆ ಬಂದು ಖುಷಿಪಡುವುದನ್ನೂ ನೋಡಿದ್ದೇನೆ.

ಉತ್ತಮ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಜನ ಅದನ್ನು ಜೆಡಿಎಸ್ ರಸ್ತೆ ಎಂದೂ, ಕೆಟ್ಟ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಅದನ್ನು ಬಿಜೆಪಿ ರಸ್ತೆಯೆಂದೂ ತಮಾಷೆಯಾಗಿ ಕರೆಯುತ್ತಾರೆ.

ಈ ಬಾರಿ ಅಲ್ಲಿ ಬಸ್ ಪ್ರಯಾಣ ಮಾಡುವಾಗ ಫೋಟೋಗಳನ್ನು ತೆಗೆಯುವ ಸಾಹಸ ಮಾಡಿದರೂ ನಾನು ಅದರಲ್ಲಿ ಸಫಲನಾಗಲಿಲ್ಲ. ಒಳ್ಳೆಯ ರಸ್ತೆಯ ಫೋಟೋ ಹಾಗೂ ಹೀಗೂ ಬಂದರೂ, ಕೆಟ್ಟ ರಸ್ತೆಯ ಫೋಟೋ ತೆಗೆಯಲಾಗಲೇ ಇಲ್ಲ! ಕಾರಣ ಇಷ್ಟೆ. ಕನಿಷ್ಠ ೆರಡಮೂರು ಅಡಿಗಳಷ್ಟು ಎತ್ತರಕ್ಕೆ ಹಾರಿ ಹಾರಿ ಬೀಳುವಂತೆ ಕುಲುಕಾಡುತ್ತಿದ್ದ ಬಸ್!

ದುರಂತವೆಂದರೆ ಆ ಮಾರ್ಗದಲ್ಲಿ ಸಂಚರಸಸುತ್ತಿದ್ದ ಬಸ್ಸುಗಳ ಸಂಖ್ಯೆಯನ್ನು (ವಿಶೇಷವಾಗಿ ದೂರ ಪ್ರಯಾಣದ ಬಸ್ಸುಗಳನ್ನು) ಕೆಟ್ಟ ರಸ್ತೆಯ ಕಾರಣದಿಂದ ಇಳಿಸಲಾಗಿದೆ. ಕೊನೆಗೆ ಜನರೇ ಈ ರಾಜಕೀಯದ ಬಿಸಿಯನ್ನು ಅನುಭವಿಸಬೇಕಾಗಿದೆ.

ಅದರ ನಡುವೆಯೂ ಜನ ತಮಾಷೆಯಾಗಿ ಜೆಡಿಎಸ್ ರಸ್ತೆ! ಬಿಜೆಪಿ ರಸ್ತೆ! ಎಂದು ಎಂಜಾಯ್ ವಮಾಡುವುದನ್ನು ನೋಡಿ ನಗುವುದೋ ಅಳುವುದೋ ತಿಳಿಯದಾಗಿದೆ.

ವಿಪಕ್ಷಗಳ ಶಾಸಕರಿರುವ ಕ್ಷೇತ್ರಗಳನ್ನು ಇಷ್ಟರಮಟ್ಟಿಗೆ ಕಡೆಗಣಿಸುವುದು ಸರಿಯೇ? ಈ ಸರ್ಕಾರ ಬಿ.ಜೆ.ಪಿ. ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಸರ್ಕಾರವೇ? ಅಥವಾ ಇಡೀ ಕರ್ನಾಟಕದ ಸರ್ಕಾರವೇ? ಎಂಬುದು ನನ್ನ ಪ್ರಶ್ನೆ.

Monday, January 04, 2010

ಆರು ಸಾಲಿನ ಷಟ್ಪದಿಯಲ್ಲೂ ಇಷ್ಟೊಂದು ಬಗೆಯ ಚೆಲುವೆ!?

ಈ ಷಟ್ಪದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ! ಕನ್ನಡ ದೇಸಿ ಛಂದಸ್ಸಿನಲ್ಲಿ ತ್ರಿಪದಿಯನ್ನು ಬಿಟ್ಟರೆ ಅತ್ಯಂತ ಜನಪ್ರಿಯ ಪ್ರಕಾರ ಇದು. ಆದರೆ ತ್ರಿಪದಿಗಿಂತ ಹೆಚ್ಚು ಕಾವ್ಯಗಳು ಈ ಷಟ್ಪದಿ ಪ್ರಕಾರದಲ್ಲಿ ಬಂದಿವೆ.

ದೇಸಿ ಛಂದಸ್ಸಿನ ಮುಖ್ಯ ಲಕ್ಷಣದಂತೆ ಷಟ್ಪದಿಯೂ ಅಂಶ ಛಂದಸ್ಸೇ ಆಗಿತ್ತು. ಬ್ರಹ್ಮ, ವಿಷ್ಣು, ರುದ್ರ ಎಂದು ಮೂರು ಬಗೆಯ ಅಂಶಗಳನ್ನು ಒಳಗೊಂಡಿರುವುದೇ ಅಂಶ ಛಂದಸ್ಸು. ಅಂಶ ಷಟ್ಪದಿಯ ಒಂದು ಉದಾಹರಣೆ:

ವಿ ವಿ               
ವಿ ವಿ               
ವಿ ವಿ ರು           
ವಿ ವಿ               
ವಿ ವಿ               
ವಿ ವಿ ರು           

ಅದುಪರ/ಮಾಸ್ಪದ
ಮದುಪುಣ್ಯ/ಸಂಪದ
ಮದುಮಹಾ/ಭ್ಯುದಯವಿ/ಲಾಸಾವಾಸಂ
ಅದುದಿಬ್ಯಂ/ಮದುಸೇಬ್ಯ
ಮದುಸೌಮ್ಯ/ಮದುರಮ್ಯ
ಮದುಸುಖಾ/ಧಾರಸಂ/ಸಾರಸಾರಂ

ಸುಮಾರು ಹನ್ನೆರಡನೇ ಶತಮಾನದಲ್ಲಿ ಉಂಟಾದ ದೇಸಿ ಛಂದಸ್ಸಿನ ಪುರುಜ್ಜೀವನ ಮತ್ತು ನವೀಕರಣದ ಫಲವಾಗಿ ತ್ರಿಪದಿಯಂತೆಯೇ ಷಟ್ಪದಿಯೂ ಮಾತ್ರಗಣಾತ್ಮಕವಾಗಿ ಬದಲಾಯಿತು. ಅಕ್ಷರಬಂದ ಸಂಪೂರ್ಣ ಮಾತ್ರಗಳ ಸಂಖ್ಯೆಯನ್ನೇ ಆದರಿಸುವಂತಾಯಿಯತು. ಲಘುವಿಗೆ ಒಂದಾ ಮಾತ್ರೆ, ಗುರುವಿಗೆ ಎರಡು ಮಾತ್ರೆ ಲೆಕ್ಕ.

ಆದರೆ ಈ ಮಾತ್ರಾಷಟ್ಪದಿಯಲ್ಲಿ ದೊಡ್ಡ ಕ್ರಾಂತಿಯೇ ಆಗಿಹೋಯಿತು. ಪ್ರಮುಖವಾಗಿ ಆರು ವಿಧಗಳು ಬೆಳೆದು ಬಂದವು. ಒಂದೇ ಮಾತ್ರೆಯ ವ್ಯತ್ಯಾಸವಾದರೂ ಅವುಗಳ ಲಯ, ಸೊಗಸು ಅದ್ಭುತವಾದುದ್ದು. ಕೆಳಗೆ ಕೊಟ್ಟಿರುವ ಉದಾಹರಣೆಗಳನ್ನು ಓದಿಕೊಳ್ಳುವಾಗ ಹಾಡಿಕೊಳ್ಳುವಾಗ ಅವುಗಳ ಲಯದ ವ್ಯತ್ಯಾಸ, ಸೊಗಸು ನಿಮಗೇ ಮನದಟ್ಟಾಗುತ್ತದೆ.

ಶರ ಷಟ್ಪದಿ
4 4                         
4 4                          
4 4 4  ಗುರು              
4 4                          
4 4                           
4 4 4 ಗುರು               

ಈಶನ/ಕರುಣೆಯ
ನಾಶಿಸು/ವಿನಯದಿ
ದಾಸನ/ಹಾಗೆಯೆ/ನೀಮನ/ವೇ
ಕ್ಲೇಶದ/ವಿಧವಿಧ
ಪಾಶವ/ಹರಿದು ವಿ
ಲಾಸದಿ/ಸತ್ಯವ/ತಿಳಿಮನ/ವೇ

ಕುಸುಮ ಷಟ್ಪದಿ
5 5                       
5 5                       
5 5 5 ಗುರು            
5 5                       
5 5                       
5 5 5 ಗುರು            

ಅವರವರ/ದರುಶನಕೆ
ಅವರವರ/ವೇಷದಲಿ
ಅವರವರಿ/ಗೆಲ್ಲ ಗುರು/ನೀನೊಬ್ಬ/ನೆ
ಅವರವರ/ಭಾವಕ್ಕೆ
ಅವರವರ/ಪೂಜೆಗಂ
ಅವರವರಿ/ಗೆಲ್ಲ ಶಿವ/ನೀನೊಬ್ಬ/ನೆ

ಭೋಗ ಷಟ್ಪದಿ
3 3 3 3                  
3 3 3 3                  
3 3 3 3 3 3 ಗುರು    
3 3 3 3                   
3 3 3 3                   
3 3 3 3 3 3 ಗುರು            

ಮೆರೆಯು/ತಿದ್ದ/ಭಾಗ್ಯ/ವೆಲ್ಲ
ಹರಿದು/ಹೋಯಿ/ತೆನುತ/ತಿರುಕ
ಮರಳಿ/ನಾಚಿ/ಹೋಗು/ತಿದ್ದ/ಮರುಳ/ನಂತೆಯೇ
ಧರೆಯ/ಭೋಗ/ವನ್ನು/ಮೆಚ್ಚಿ
ಪರವ/ಮರೆತು/ಕೆಡಲು/ಬೇಡ
ಧರೆಯ/ಭೋಗ/ಕನಸಿ/ನಂತೆ/ಕೇಳು/ಮಾನ/ವಾ

ಭಾಮಿನಿ ಷಟ್ಪದಿ
3 4 3 4                 
3 4 3 4                 
3 4 3 4 3 4 ಗುರು  
3 4 3 4                 
3 4 3 4                  
3 4 3 4 3 4 ಗುರು   

ಇಳಿದು/ಬಂದಳು/ವರ್ಷೆ/ಯಂದದಿ/
ಒಲಿದು/ಬಂದಳು/ನಲ್ಲೆ/ಯಂದದಿ/
ತೊಳೆಯ/ಬಂದಳು/ಮನದ/ಕಲ್ಮಶ/ಹರಿಯ/ಮೆರೆಸಲು/ತಾ
ನಿಳೆಯ/ರೂಪದಿ/ಸಹನೆ/ಯಿಂದಾ/
ಕಳೆಯ/ಬಂದಳು/ಮೋಹ/ಮತ್ಸರ/
ಗಳನು/ಭಾಮಿನಿ/ನಾರ/ಣಪ್ಪನಿ/ಗೊಲಿದ/ಳಿಂದುಮು/ಖೀ

ಪರಿವರ್ಧಿನಿ ಷಟ್ಪದಿ
4 4 4 4
4 4 4 4
4 4 4 4 4 4 ಗುರು
4 4 4 4
4 4 4 4
4 4 4 4 4 4 ಗುರು

ಸ್ಮರ ರಾ/ಜ್ಯದ ಮೈ/ಸಿರಿ ಶೃಂ/ಗಾರದ
ಶರನಿಧಿ/ರತಿ ನಾ/ಟ್ಯದ ರಂ/ಗ ಸ್ಥಳ
ವಿರಹದ/ನೆಲೆವೀ/ಡೋಪರ/ಕೂರಾ/ಟದ ಕೊಸ/ರಿನ ಗೊ/ತ್ತು
ಸರಸರ/ಸಂತವ/ಣಿಯ ಮನೆ/ಸುಗ್ಗಿಯ
ಪುರವಾ/ಗರ ಭೂ/ಪಾಲಯ/ವಪ್ಪಂ
ತಿರೆಪೇ/ಳಿದನಮ/ರುಕವನು/ದೇಪಮ/ಹೀಪತಿ/ಕನ್ನಡಿ/ಸಿ

ವಾರ್ಧಕ ಷಟ್ಪದಿ
5 5 5 5
5 5 5 5
5 5 5 5 5 5 ಗುರು
5 5 5 5
5 5 5 5
5 5 5 5 5 5 ಗುರು

ಪುರದಪು/ಣ್ಯಂಪುರುಷ/ರೂಪಿಂದೆ/ಪೋಗುತಿದೆ
ಪರಿಜನದ/ಭಾಗ್ಯವಡ/ವಿಗೆನಡೆಯು/ತಿದೆಸಪ್ತ
ಶರಧಿಪರಿ/ವೃತಧರೆಯ/ಸಿರಿಯಸೊಬ/ಗಙತ/ವಾಸಕ್ಕೆ/ಪೋಗುತಿದೆ/ಕೋ
ಎರೆವದೀ/ನಾನಾಥ/ರಾನಂದ/ವಡಗುತಿದೆ
ವರಮುನೀಂ/ದ್ರರಯಾಗ/ರಕ್ಷೆಬಲ/ವಳಿಯುತಿದೆ
ನಿರುತವೆಂ/ದೊಂದಾಗಿ/ಬಂದುಸಂ/ದಿಸಿನಿಂದ/ಮಂದಿನೆಱೆ/ಮೊಱೆಯಿಟ್ಟು/ದು

ಉದ್ಧಂಡ ಷಟ್ಪದಿ
ಕೇವಲ ಈ ಆರು ವಿಧಗಳಿಗೇ ಷಟ್ಪದಿಯ ಬೆಳವಣಿಗೆ ಸೀಮಿತವಾಗಿ ಉಳಿಯಲಿಲ್ಲ. ಬೇರೆ ಇನ್ನೊಂದು ಉದ್ಧಂಡ ಷಟ್ಪದಿ ಎನ್ನುವ ಪ್ರಕಾರವೂ ಬೆಳಕಿಗೆ ಬಂತು. ಅದರಲ್ಲಿಯೇ ಎರಡು-ಮೂರು ಕವಲುಗಳಾದವು. ಆದರೆ ಅದು ಅಷ್ಟೊಂದು ಜನಪ್ರಿಯವಾಗಿ ಬೆಳೆಯಲಿಲ್ಲ. ಒಂದೆರಡು ಉದಾಹರಣೆಗಳನ್ನು ನೋಡಬಹುದು.

4 4 4 4 4
4 4 4 4 4
4 4 4 4 4 4 4 ಗುರು
4 4 4 4 4
4 4 4 4 4
4 4 4 4 4 4 4  ಗುರು

ಬಂದಳು/ಬಂದಳು/ಚಿನ್ನದ/ಚಿಗರೆಯ/ತೆರದಲಿ
ತಂದಳು/ತಂದಳು/ಕಣ್ಮಣಿ/ಸೊಬಗನು/ಸಿರಿಯಲಿ
ಚೆಂದವೊ/ಚೆಂದವೊ/ಈಜಗ/ಎನ್ನುತ/ಕುಣಿಯುತ/ಕುಣಿಸುತ/ಹಾಡಿದ/ಳು

4 4 4 4 4
4 4 4 4 4
4 4 4 4 4 4 4 4
4 4 4 4 4
4 4 4 4 4
4 4 4 4 4 4 4 4

ಪರಿಣಾ/ಮದಕಣಿ/ಶಾಂತಿಯ/ನಿಧಿಭ/ಕ್ತಿಯಸಾ
ಗರುಮೇ/ಕೋನಿ/ಷ್ಟೆಯಹರ/ಗತಿಸಾ/ಮರ್ಥ್ಯದ
ತರುನೀ/ತಿಯಕಡೆ/ಉದಯಾ/ಗಾರಂ/ಪುಣ್ಯದ/ಪಂಜಂ/ಸತ್ಯದ/ಸದನಾ

ಈ ಉದಾಹರಣೆಗಳಲ್ಲಿ ನಿಮಗಿಷ್ಟವಾದುದನ್ನು ಮೇಲಿಂದ ಮೇಲೆ ಹಾಡಿಕೊಳ್ಳಿ. ನೀವೇನಾದರು ಕವಿತೆ ಬರೆಯುವವರಾಗಿದ್ದರೆ, ನಿಮ್ಮಿಂದ ಅದೇ ಲಯದ ಕವಿತೆ ಹುಟ್ಟುತ್ತದೆ. ಪಂಡಿತರಿಂದ ತಿಣುಕಿ ಸೃಷ್ಟಿಯಾದುದಲ್ಲ; ಜನಪದರಿಂದ ಸಹಜವಾಗಿ ಸೃಷ್ಟಿಯಾದ ಛಂದೋಗಂಗೋತ್ರಿ! ಇದೇ ದೇಸಿ ಛಂದಸ್ಸಿನ ವೈಶಿಷ್ಟ್ಯ.