Saturday, October 08, 2016

ಮರಳಿ ಹಳಿಗೆ ಕಾವೇರಿ ಹೋರಾಟ!

ಕಾವೇರಿ ವಿಚಾರದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ನ್ಯಾಯಾಂಗ ಹಾಗೂ ಶಾಸಕಾಂಗ ಪ್ರಕ್ರಿಯೆಯಲ್ಲಿ ಸಾಮಾನ್ಯ ನಾಗರಿಕನೊಬ್ಬನಿಗೆ ಕಾಡುವ ಅನುಮಾನಗಳು ಹಲವು. ನ್ಯಾಯಾಂಗ ವ್ಯವಸ್ಥೆಯೇ ರೂಪಿಸಿದ್ದ ಶಾಸನಬದ್ಧ ಸಮಿತಿ ನೀಡಿದ್ದ ಆದೇಶವನ್ನು ಲೆಕ್ಕಿಸದೆ, ನೀರಿನ ಪ್ರಮಾಣವನ್ನು ದ್ವಿಗುಣಗೊಳಿಸಿ ಮರು ಆದೇಶ ನೀಡಿದ್ದು, ಈಗಾಗಲೇ ತ್ರಿಸದಸ್ಯಪೀಠದ ಮುಂದಿರುವ ವಿಚಾರವನ್ನು ತಾನಾಗಿ ಪ್ರಸ್ತಾಪಿಸಿ, ಕೇವಲ ನಾಲ್ಕು ವಾರಗಳಲ್ಲಿ ‘ಕಾವೇರಿ ನಿರ್ವಹಣಾ ಮಂಡಳಿ’ಯನ್ನು (ಕಾ.ನಿ.ಮಂ.) ರಚಿಸುವಂತೆ ಆದೇಶಿಸಿದ್ದು, ಫೆಡರಲ್ ವ್ಯವಸ್ಥೆಯಯಡಿ, ರಾಜ್ಯವೊಂದು ತನ್ನ ವಿಧಾನ ಮಂಡಲದಲ್ಲಿ ತೆಗೆದುಕೊಂಡ ನಿರ್ಣಯವೊಂದನ್ನು ಲೆಕ್ಕಕ್ಕೂ ಇಡದೆ, ಮತ್ತೆ ನೀರು ಬಿಡುಗಡೆಯ ಆದೇಶ ನೀಡಿದ್ದು, ನಿಜವಾಗಿಯೂ ನ್ಯಾಯಾಂಗ ನಿಂದನೆಯಾಗಿದ್ದಲ್ಲಿ ಕಾನೂನು ಪ್ರಕಾರ ಶಿಕ್ಷೆ ವಿಧಿಸುವ ಸರ್ವ ಅವಕಾಶ ತನ್ನ ಮುಂದಿದ್ದರು ಅದನ್ನು ಪರಿಗಣಿಸದೆ, ಆದೇಶ, ಮರು ಆದೇಶಗಳನ್ನು (ಐದೂ ಆದೇಶಗಳಲ್ಲೂ) ನೀರು ಬಿಡುವಂತೆ ನೀಡಿರುವುದಂತೂ ಜನಸಾಮಾನ್ಯರಲ್ಲಿ ದಿಗಿಲು ಮೂಡಿಸಿದೆ. ತ್ರಿಸದಸ್ಯಪೀಠದ ಮುಂದಿದ್ದ ವಿಷಯವನ್ನು ಪ್ರಸ್ತಾಪಿಸಿದ್ದಲ್ಲದೆ, ಈ ಹಿಂದೆ ತಾನೇ ನೀಡಿದ್ದ ನಾಲ್ಕು ವಾರದ ಗಡುವನ್ನೂ ಉಲ್ಲಂಘಿಸಿ, ಕೇವಲ ಮೂರೇ ದಿನಗಳಲ್ಲಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ನೀಡಿದ ಆದೇಶ ಜೊತೆಗೆ ಶಿಕ್ಷೆಯೋ ಎನ್ನುವಂತೆ ಮತ್ತೂ ಆರುದಿನಗಳ ಕಾಲ ನಿತ್ಯ ಆರು ಸಾವಿರ ಕ್ಯೂಸೆಕ್ಸ್ ನೀರುಬಿಡುವಂತೆ ನೀಡಿದ ಆದೇಶ ಕರ್ನಾಟಕದ, ಕಾವೇರಿ ಕೊಳ್ಳದ ಜನರಲ್ಲಿ ತಬ್ಬಲಿಗಳಾದ ಭಾವನೆಯನ್ನು ಉಂಟು ಮಾಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ, ಕಾ.ನಿ.ಮಂ.ಯ ಸುಪ್ರೀಂ ಆದೇಶಕ್ಕೆ ಬ್ರೇಕ್ ಬಿದ್ದ ಹಾಗಿದೆ. ಪರಿಣಿತರ ತಂಡವೊಂದನ್ನು ಕಾವೆರಿ ಕಣಿವೆಗೆ ಕಳುಹಿಸಲು ಸುಪ್ರೀಂ ಒಪ್ಪಿಕೊಂಡಿದೆ. ಜೊತೆಗೆ ಕರ್ನಾಟಕ ಅಕ್ಟೋಬರ್ ಹದಿನೆಂಟರವೆಗೂ ನಿತ್ಯ 2000 ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ.
ಇನ್ನು ರಾಜ್ಯ ಸರ್ಕಾರದವರ ವಿಷಯಕ್ಕೆ ಬಂದರೆ ಕೆಲವು ಅನುಮಾನಗಳು ಕಾಡುತ್ತವೆ. ಮೊದಲ ಬಾರಿ, ಕಾ.ನಿ.ಮಂ.ಯನ್ನು ನಾಲ್ಕು ವಾರದಲ್ಲಿ ರಚಿಸುವಂತೆ ನೀಡಿದ ಆದೇಶವನ್ನು ಏಕೆ ಪ್ರಶ್ನಿಸಲಿಲ್ಲ? ಕೇವಲ ನೀರುಬಿಡುಗಡೆಯನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಆದೇಶ ಬಂದರೆ ಸಾಕು; ಬೀಸೋ ದೊಣ್ಣೆ ತಪ್ಪಿಸಿಕೊಂಡಂತೆ ಎಂದು ಭಾವಿಸಿದ ಸರ್ಕಾರ, ಕೇವಲ ತನ್ನ ಜಲಾಶಯಗಳಲ್ಲಿ ನೀರಿಲ್ಲದ್ದನ್ನು ಹಾಗೂ ಕುಡಿಯುವ ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ರಕ್ಷಣಾತ್ಮಕ ಆಟವಾಡಿತು. ಆದರೆ, ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸುವ ವಿಷಯದಲ್ಲಿ ಮಾತ್ರ ಆಕ್ರಮಣಕಾರಿಯಾಯಿತು. ಹಾಗೆ ನಿರ್ಣಯವನ್ನು ತೆಗೆದುಕೊಳ್ಳುವ ತನಗಿರುವ ಹಕ್ಕನ್ನು ಚಲಾಯಿಸುವಾಗ ಸ್ವಲ್ಪಮಟ್ಟಿನ ರಕ್ಷಣಾತ್ಮಕ ನಡೆಗೆ ಅವಕಾಶವಿತ್ತು. ನ್ಯಾಯಪೀಠ ಆಗ ನೀಡಿದ್ದ ಮೂರನೆಯ ಆದೇಶವನ್ನು ಪಾಲಿಸುವುದಕ್ಕೆ ಒಪ್ಪಿಕೊಂಡು, ‘ಇನ್ನುಮುಂದಿನ ದಿನಗಳಲ್ಲಿ ಜಲಾಶಯಗಳಲ್ಲಿರುವ ನೀರು ಕುಡಿಯುವುದಕ್ಕೆ ಮಾತ್ರ’ ಎಂಬ ನಿರ್ಣಯವನ್ನು ತೆಗೆದುಕೊಳ್ಳಬಹುದಿತ್ತು. ಆಗ ಸರ್ಕಾರಕ್ಕೆ ಇನ್ನಿಲ್ಲದಂತೆ ಕಾಡಿದ ನ್ಯಾಯಾಂಗ ನಿಂದನೆಯ ಭಯ ಇರುತ್ತಿರಲಿಲ್ಲ. ಜೊತೆಗೆ, ಕಾ.ನಿ.ಮಂ.ಯ ರಚನೆಯ ಬಗ್ಗೆಯೂ ತನ್ನ ವಿರೋಧವನ್ನು ವಿಧಾನಮಂಡಲದಲ್ಲಿ ದಾಖಲಿಸಬಹುದಿತ್ತು. ಪೀಠ ಬದಲಾವಣೆ ವಿಚಾರದಲ್ಲೂ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದುಕೊಳ್ಳಬಹುದಿತ್ತು. ತನ್ನ ನ್ಯಾಯವಾದಿಗಳು ನೀಡಿದ ಸಲಹೆಯನ್ನೂ ತಿರಸ್ಕರಿಸಿ ಕರ್ನಾಟಕ ಈ ಹಂತದಲ್ಲಿ ಆಕ್ರಮಣಕಾರಿಯಾದುದು ಸಹಜವಾಗಿಯೇ ನ್ಯಾಯಪೀಠದ ಕಣ್ಣು ಕೆಂಪಾಗಿಸಿತು. ರಾಜ್ಯದ ಪರ ನ್ಯಾಯವಾದಿಗಳನ್ನೇ ಬಾಯಿಗೆ ಬಂದಂತೆ ನಿಂದಿಸುವ ರಾಜ್ಯದ ಕೆಲವು ರಾಜಕಾರಣಿಗಳ ನಡತೆ ದಿಗಿಲು ಹುಟ್ಟಿಸುವಂಥದ್ದು. ಈಗ ಮತ್ತೆ ವಿಧಾನಮಂಡಳದಲ್ಲಿ ಕೋರ್ಟ್ ಆದೇಶ ಪಾಲಿಸಲು ನೆರವಾಗುವಂತೆ ನಿರ್ಣಯ ಅಂಗೀಕರಿಸಿರುವುದು, ಹೋರಾಟವನ್ನು ಮತ್ತೆ ಸರಿಯಾದ ಹಳಿಗೆ ತಂದು ನಿಲ್ಲಿಸಿದೆ ಎಂದು ಭಾವಿಸಬಹುದಾಗಿದೆ. ಅದರ ಪರಿಣಾಮವನ್ನು ಅಕ್ಟೋಬರ್ ನಾಲ್ಕರ ಸುಪ್ರೀಂ ಆದೇಶದಲ್ಲಿ ಗುರುತಿಸಬಹುದಾಗಿದೆ.
ಇಡೀ ಪ್ರಕ್ರಿಯೆಯಲ್ಲಿ, ಕೇಂದ್ರ ಸರ್ಕಾರವಂತೂ ಕೋಲೆಬಸವಣ್ಣನ ಪಾತ್ರ ನಿರ್ವಹಿಸಿತು. ಮೊದಲ ಬಾರಿಗೆ ಕಾ.ನಿ.ಮಂ.ಯ ಪ್ರಸ್ತಾಪವಾದಾಗಲೇ, ಕೇಂದ್ರ ಮಧ್ಯಪ್ರವೇಶಿಸಿ, ಅದು ಈಗಾಗಲೇ ತ್ರಿಸದಸ್ಯಪೀಠದ ಮುಂದಿರುವ ಮತ್ತು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ವಿಚಾರಣೆಗೆ ಬರುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ, ಆದೇಶವನ್ನು ಮರುಪರಿಶೀಲಿಸುವಂತೆ ಕೋರಬಹುದಿತ್ತು. ತಜ್ಞರ ಸಮಿತಿ ನೀಡಿದ ಆದೇಶವಷ್ಟೇ ಸಾಕು, ನೀರಿನ ಪ್ರಮಾಣ ದ್ವಿಗುಣಗೊಳಿಸುವುದು ಬೇಡ ಎನ್ನಬಹುದಿತ್ತು. ಎರಡನೆಯದಾಗಿ, ಕೋರ್ಟಿನ ಆದೇಶದಂತೆ ನಡೆಸಿದ ಮಧ್ಯಸ್ಥಿಕೆಯಲ್ಲಿ, ತಮಿಳುನಾಡು ಆಕ್ಷೇಪವೇನಿದ್ದರೂ ತಜ್ಞರ ತಂಡವನ್ನು ಕಳುಹಿಸುವ ತನ್ನ ಹಕ್ಕನ್ನು ಚಲಾಯಿಸಬಹುದಿತ್ತು. ವಾಸ್ತವ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅರಿತು ನಂತರ ಕೋರ್ಟಿಗೆ ತನ್ನ ತೀರ್ಮಾನವನ್ನು ತಿಳಿಸಬಹುದಿತ್ತು. ಆದರೆ ಅದು ತಾನು ನಡೆಸಿದ ಸಭೆಯ ವಿವರಗಳನ್ನಷ್ಟೇ ನೀಡಿ ಜಾರಿಕೊಂಡಿತು. ಮೂರನೆಯದಾಗಿ, ಕೇವಲ ಮೂರೇ ದಿನದಲ್ಲಿ ಕಾ.ನಿ.ಮಂ.ಯನ್ನು ರಚಿಸಬೇಕೆನ್ನುವ ನ್ಯಾಯಪೀಠದ ಮಾತಿಗೆ ವಸ್ತುಶಃ ಕೋಲೆಬಸವಣ್ಣನೇ ಆಯಿತು! ಮಾಜಿ ಪ್ರಧಾನಿ ನಡೆಸಿದ ಉಪವಾಸ ಸತ್ಯಾಗ್ತಹದ ಪ್ರತ್ಯಕ್ಷ ಪರಿಣಾಮವೊ ಅಥವಾ ಅಪ್ರತ್ಯಕ್ಷವೆನ್ನಬಹುದಾದ ಇನ್ನಾವ ನಿಲುವೋ ಅಂತೂ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ಅಫಿಡವಿಟ್ ಸಲ್ಲಿಸಿದೆ ಹಾಗೂ ತನ್ನ ಹಕ್ಕನ್ನು ಪ್ರಬಲವಾಗಿಯೇ ಪ್ರತಿಪಾದಿಸಿದೆ. ಇದು ಕರ್ನಾಟಕದ ಪಾಲಿಗಂತೂ ಸ್ವಾಗತಾರ್ಹ ನಡೆ.
ಒಂದೇ ಒಂದು ನದಿ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬ್ರಿಟೀಷರ ಅಧಿನದಲ್ಲಿದ್ದ, ಸ್ವಾತಂತ್ರ್ಯಪೂರ್ವದ ಎರಡು ಪ್ರದೇಶಗಳ ನಡುವಿನ ಒಪ್ಪಂದ. ನೂರಾರು ವರ್ಷಗಳ ಸಮಸ್ಯೆ. ಸ್ವಾತಂತ್ರ್ಯಾನಂತರ ನಾಲ್ಕು ರಾಜ್ಯಗಳ ಸಮಸ್ಯೆ ಹಾಗೂ ಅದಕ್ಕೂ ಎಪ್ಪತ್ತು ವರ್ಷಗಳ ಇತಿಹಾಸ. ಇವೆಲ್ಲವೂ ಕೇವಲ ಒಂದೇ ತಿಂಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಗೆಹರಿದರೆ ಯಾರು ಬೇಡವೆನ್ನುತ್ತಾರೆ? ಆದರೆ ಆ ಪರಿಹಾರ ನಿಷ್ಪಕ್ಷಪಾತವಾಗಿದ್ದು ನ್ಯಾಯಸಮ್ಮತವಾಗಿದ್ದರೆ ಮಾತ್ರ. ಒಂದೇ ತಿಂಗಳಲ್ಲಿ ಐದು ಬಾರಿ ಆದೇಶ. ಮೊದಲಿನೆರಡು ಪಾಲನೆ, ನಂತರದವೆರಡು ಉಲ್ಲಂಘನೆ. ಮತ್ತೆ ಐದನೆಯದನ್ನು ಭಾಗಶಃ ಪಾಲಿಸುವ ಚಿಂತನೆ... ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಇಷ್ಟೊಂದು ಶೀಘ್ರವಾಗಿ ಪ್ರಕರಣವೊಂದು ಯಾರೂ ಊಹಿಸದ ರೀತಿಯ ತಿರುವುಗಳನ್ನು ಪಡೆದುಕೊಂಡದ್ದು ಬಹುಶಃ ಇಲ್ಲವೇ ಇಲ್ಲ! ಕರ್ನಾಟಕದ ಕಾವೇರಿ ಹೋರಾಟ ಅಂತೂ ಸರಿದಾರಿಗೆ ಬಂದಿದೆ. ಈಗ, ಮತ್ತೆ ಎಲ್ಲರ ಚಿತ್ತ ಸುಪ್ರೀಂ ಕೋರ್ಟಿನತ್ತ ನೆಟ್ಟಿದೆ. ಶಾಸಕಾಂಗದ ಹಾಗೂ ನ್ಯಾಯಾಂಗದ ಘನತೆ ಹೆಚ್ಚಿಸುವಂತ ಆದೇಶಕ್ಕಾಗಿ ಜನತೆ ಕಾಯುತ್ತಿದೆ.

2 comments:

Unknown said...

10-8-2016 ಎಂದು ದಿನಾಂಕ ?

Unknown said...

10-8-2016 ಎಂದು ದಿನಾಂಕ ?