Thursday, June 21, 2012

ನಡುವೆ ನಿಂತುದದೊಂದೆ ವಿಶ್ವದಾ ಶಿಶುಮೂರ್ತಿ


೫-೧೨-೧೯೩೧ರಂದು ಸಂಜೆ, ಕುವೆಂಪು ಅವರು, ಅಜ್ಜಂಪುರ ಸೀತಾರಾಂ ಅವರೊಂದಿಗೆ ಒಂಟಿಕೊಪ್ಪಲಿನಿಂದ ಆಚೆ, ತುಸು ದೂರವಿದ್ದ, ಹೊಲಗಳ ಕಡೆ ವಾಯುಸಂಚಾರಕ್ಕೆ ಹೋಗಿರುತ್ತಾರೆ. ದೂರದ ದಿಗಂತದ ಪರ್ವತರೇಖೆಗಳನ್ನು, ನಿಂತಲ್ಲಿಂದ ಕಾಣುತ್ತಿದ್ದ ಚಾಮುಂಡಿ ಬೆಟ್ಟದ ದೃಶ್ಯವನ್ನು, ಬಯಲಿನಲ್ಲಿ ಗುಂಪು ಗುಂಪಾಗಿ ಕುಳಿತಿದ್ದ ತೇನೆಹಕ್ಕಿಗಳನ್ನು ಕುರಿತು ಮಾತನಾಡುತ್ತಾ, ಕಲ್ಲು ದಿಣ್ಣೆಯಿಂದ ಕೂಡಿದ ಜಾಗಕ್ಕೆ ಬರುತ್ತಾರೆ. ಅಲ್ಲಿಂದ ಮುಂದಕ್ಕೆ ಕಂಡ ದೃಶ್ಯ ಆಪ್ಯಾಯಮಾನವಾಗಿತ್ತು. ಅದೊಂದು ’ಹುಚ್ಚೆಳ್ಳು’ ಹೊಲವಾಗಿದ್ದು, ಇಡೀ ಬಯಲು ಹಳದಿಯ ಮಯವಾಗಿತ್ತು. ಹೊಲದಲ್ಲಿ ರಾಗಿಯ ಹುಲ್ಲು ಕೊಯ್ಯುತ್ತಿದ್ದ ರೈತನೊಬ್ಬ ಹತ್ತಿರ ಬಂದು, ’ಬುದ್ದೀ, ಕೂತುಕೊಳ್ಳಿ. ಹವಾ ಚೆನ್ನಾಗಿದೆ’ ಎಂದು ಉಪಚಾರ ಮಾಡಿದ. ಆತನೂ ಅವರ ಜೊತೆಯಲ್ಲಿ ಕುಳಿತ. ಮಾತು ಮಳೆ-ಬೆಳೆ, ರೈತ-ಬದುಕು ಎಂದು ಸಾಗಿತ್ತು. ಮಾತನಾಡುತ್ತ ಹುಚ್ಚೆಳ್ಳನ್ನು ’ಅಚ್ಚೆಳ್ಳು’ ಎಂದು ಕರೆದಾಗ ರೈತ ಅದನ್ನು ನಯವಾಗಿ ತಿದ್ದಿದ. ’ಇದು ಹುಚ್ಚೆಳ್ಳು, ಸ್ವಾಮೀ. ಎಳ್ಳಿನ ಹೂವು ಹೀಗೆ ಹಳದಿಯಾಗಿರೋದಿಲ್ಲ. ಅದರ ಹೂವು ನಿಮ್ಮ ಪಂಚೆಯಂತೆ ಬೆಳ್ಳಗಿರುತ್ತದೆ. ಕಾಯಿ ನಿಮ್ಮ ಕವಚದಂತೆ (ನೀಲಶ್ಯಾಮಲ) ಇರುತ್ತದೆ ಎನ್ನುತ್ತಾನೆ. ಆತನ ನಡೆನುಡಿಗಳಲ್ಲಿ ಪ್ರಕೃತಿಗೆ ಸಹಜವಾದ ಸರಳತೆ-ಮೈತ್ರಿಗಳು ಹೊರಹೊಮ್ಮುತ್ತಿದ್ದುದನ್ನು ಕವಿ ಗುರುತಿಸುತ್ತಾರೆ. ಆ ಸುಂದರ ಸಂಜೆಯಲ್ಲಿ, ಹುಚ್ಚೆಳ್ಳು ಹೊಲದ ನಡುವೆ ಕುಳಿತು ಆ ರೈತನ ಎದುರು ತಮ್ಮ ರಚನೆಗಳಾದ ’ನೇಗಿಲಯೋಗಿ’ ’ಹೊಲದ ಹುಡುಗಿ’ ’ಸಂಜೆವೆಣ್ಣು’ ಕವಿತೆಗಳನ್ನು ಹಾಡುತ್ತಾರೆ. ಪಶ್ಚಿಮದಲ್ಲಿ ಸಂಧ್ಯಾ ಅರುಣರಾಗವು ಜಡೆಜಡೆಯಾದ ಮೇಘಗಳಲ್ಲಿ ಅದ್ಭುತವಾಗಿ ರಂಜಿಸುತ್ತಿತ್ತಂತೆ, ಆಗ. ಆತ ’ಸರ‍್ಕಾರಕ್ಕೆ ದುಡ್ಡು ಕೊಟ್ಟು ಜಮೀನು ಖರೀದಿಸಿದ್ದು, ಕಟ್ಟುವ ದುಬಾರಿ ಕಂದಾಯ ಇವುಗಳ ನಡುವೆ ಮಳೆ ನಡೆಸಿದರೆ ಮಾತ್ರ ರೈತ ಬದುಕಬೇಕಾದ ಸಂದರ್ಭ’ ಇವುಗಳನ್ನು ಕುರಿತು ಮಾತನಾಡುತ್ತಾನೆ. ಆತನ ಮಾತುಗಳಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಾಗಲಿ, ಆವೇಶವಾಗಲಿ, ಕುರುಬಾಗಲೀ ಕಾಣುವುದಿಲ್ಲ, ಕವಿಗೆ. ಮಾತು ಮುಗಿಯುವಷ್ಟರಲ್ಲಿ ಕತ್ತಲಾವರಿಸುತ್ತದೆ. ಮನೆಯ ಕಡೆ ಹೊರಟಾಗ ಆತ ’ನಾಳೆ ಬನ್ನಿ, ಸ್ವಾಮೀ. ಹವಾ ಚೆನ್ನಾಗಿರುತ್ತದೆ. ನಾನೂ ಬರುತ್ತೇನೆ. ಇಲ್ಲಿಗೆ’ ಎಂದು ಆಹ್ವಾನ ನೀಡುತ್ತಾನೆ. ಅಂದು ನಡೆದ ಕವಿ-ರೈತ ನಡುವಿನ ಸಂಭಾಷಣೆಯಲ್ಲಿ ಯುಗಗಳ ಮೈತ್ರಿ ಇತ್ತು ಎನ್ನುತ್ತಾರೆ, ಕವಿ. ಆ ಸಂದರ್ಭವನ್ನು ಕುರಿತು ಅಂದಿನ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ.
’.... ಆ ರೈತನ ಮುದ್ದಾದ ಬಡ ಮೂರುತಿಯೊಂದೆ ಮನಸ್ಸನ್ನು ತುಂಬಿತು..... ದಾರಿಯಲ್ಲಿ ಆತನೊಬ್ಬನೇ ನಮ್ಮ ಮಾತಿನ ಮನಸ್ಸಿನ ಹೃದಯದ ಹಿರಿಯ ಮೂರ್ತಿಯಾದನು. ನನ್ನ ಜೀವಮಾನದಲ್ಲಿ ಅವನೊಡನೆ ಮಾತಾಡಿದಂತೆ, ಅವನನ್ನು ಒಲಿದಂತೆ, ಅವನಿಗಾಗಿ ಮರುಗಿ ಕರಗಿದಂತೆ ಅನೇಕ ಜನಗಳಿಗೆ ಕರಗಿಲ್ಲ ಮರುಗಿಲ್ಲ, ಕೊರಗಿಲ್ಲ, ನಾಳೆ ಹೋಗಲು ಸಮಯವಿಲ್ಲ. ನಾಡಿದ್ದಾದರೂ ಅಲ್ಲಿಗೆ ಹೋಗಿ ಪುನಃ ಆತನೊಡನೆ ಮಾತಾಡುವೆನು. ಹೇ ಸರಸ್ವತಿಯೇ, ಆ ರೈತನ ಮೈತ್ರಿಯನ್ನು ನನ್ನೆದೆಯಲ್ಲಿ ಹರಿಸಿ ಕವನವಾಹಿನಿಯಾಗುವಂತೆ ಮಾಡು! ಅಯ್ಯೋ ಅವನ ಹೆಸರು ಕೇಳುವುದನ್ನೆ ಮರೆತನಲ್ಲಾ!’
ಕವಿಯು ಸರಸ್ವತಿಯಲ್ಲಿಟ್ಟ ಮೊರೆ ವ್ಯರ್ಥವಾಗಲಿಲ್ಲ. ಬಹುಶಃ ಮಾರನೆಯ ದಿನವೇ ’ಹೊಲದ ಕವಿ’ ಎಂಬ ಕವಿತೆಯ ರಚನೆಗೆ ತೊಡಗುತ್ತಾರೆ. ಅದರ ಮಾರನೆಯ ದಿನದ (೭-೧೨-೧೯೩೧) ದಿನಚರಿಯಲ್ಲಿ ಹೇಳಿರುವಂತೆ - ’ಹೊಲದ ಕವಿ’ ಪೂರೈಸಿದೆ - ಎಂದಿದೆ. ಆ ಕವಿತೆಯ ಓದಿಗೂ ಮುಂಚೆ, ಕವಿತೆಯ ಹೆಸರು ’ಕಿಟ್ಟಯ್ಯ’ ಎಂದು ಬದಲಾಗಿದ್ದರ ಕಾರಣ ತಿಳಿಯಬಹುದು. ಎಂಟನೆಯ ತಾರೀಖು ’ಹೊಲದ ಕವಿ’ಯ ಹೊಲಕ್ಕೆ ಕವಿ ಹೋಗುತ್ತಾರೆ. ಅಲ್ಲಿ ಆತನನ್ನು ಕಂಡು ಮಾತನಾಡಿಸಿ, ರಾಮಕೃಷ್ಣ ಪರಮಹಂಸರ ವಿಚಾರ ತಿಳಿಸಿ, ಆತನ ಹೆಸರು ’ಕಿಟ್ಟಯ್ಯ’ ಎಂದು ತಿಳಿದು ಕವಿ ಹಿಂದಿರುಗುತ್ತಾರೆ. ಕವಿತೆಯ ಶೀರ್ಷಿಕೆ ’ಕಿಟ್ಟಯ್ಯ’ ಎಂದು ಬದಲಾಗುತ್ತದೆ. ’ಹೊಲದ ಕವಿ ಕಿಟ್ಟಯ್ಯ’ ಎನ್ನಬಹುದಾದ ಈ ಕವಿತೆ ೨೨೦ ಸಾಲುಗಳವರೆಗೂ ವಿಸ್ತರಿಸಿರುವ ಕಥನಕವನವಾಗಿದೆ.
ಆನಂದನೊಡಗೂಡಿ ಸಂಜೆಯಲಿ ಸಂಚರಿಸೆ
ಆಶ್ರಮವನುಳಿದು ಪಡುವಣದೆಸೆಗೆ ತಿರುಗಿದೆನು
ಒಟಿಕೊಪ್ಪಲಿನಾಚೆ ಹಬ್ಬಿರುವ ದಿಬ್ಬಕ್ಕೆ.
ಎಂದು ಕವಿತೆ ಆರಂಭವಾಗುತ್ತದೆ. ತಲುಪಿದ ಜಾಗದ ಬಗ್ಗೆ ಹೀಗೆ ಬರೆಯುತ್ತಾರೆ.
.... ನಿಂತು ನೋಡಿದೆವು
ನಮ್ಮ ಬಲ ಭಾಗದಲಿ ಮೈಸೂರು ಚಾಮುಂಡಿ;
ಎದುರಿನಲಿ ಉತ್ತು ಬಿತ್ತಿದ ಹೊಲದ ಹಸುರಿನಲಿ
ಅಲ್ಲಲ್ಲಿ ಬೆಳೆದ ಮರಗಳು; ದೂರ ದೂರದಲಿ
ಅಲೆಯೇರಿ ಹಾರಿಬಹ ಬಯಲುಸೀಮೆಯ ಭೂಮಿ;
ಎಡದ ಭಾಗದಲೊಂದು ಹಿರಿಯ ದಿಣ್ಣೆಯ ಬೋರೆ
ಸಂಜೆಗೆಂಪಿನ ಬಾನಿಗೆದುರಾಗಿ ಹಬ್ಬಿತ್ತು;
ಹಿಂದುಗಡೆ ಹೊಲ, ಹಳ್ಳಿ. ಆ ಸೊಬಗು, ಆ ಶಾಂತಿ,
ಆ ಮಧುರ ನಿರ್ಜನತೆ, ಹಲಕೆಲವು ಪಕ್ಷಿಗಳ
ಕೂಜನದಿ ಹೊರೆಯೇರುತಿದ್ದ ಆ ನೀರವತೆ,
ಎಲ್ಲವೂ ಭವ್ಯತೆಯ ಸೀಮೆಯಲ್ಲಿ ನೆಲೆಸಿತ್ತು!
ಕಬ್ಬಿಗನು ಕತೆಗಾರರಿಬ್ಬರೂ ಮಾತುಳಿದು
ಗಾಢವಾಗುತಲಿದ್ದ ಧ್ಯಾನದಲಿ ಮುಳುಗಿದರು!
ಆಗ ಅವರಿಗೆ ’ಕೂತುಕೊಳ್ಳೀ ಬುದ್ದಿ!’ ಎಂಬ ಧ್ವನಿ ಕೇಳಿಸುತ್ತದೆ. ಧ್ವನಿ ಬಂದ ಕಡೆ ನೋಡಿದಾಗ ಕಂಡುದ್ದು,
ಸ್ವರ್ಣವರ್ಣದ ಲಕ್ಷ ಪುಷ್ಪಗಳ ಶೋಭೆಯಲಿ
ಮೆರೆದಿದ್ದ ಹುಚ್ಚೆಳ್ಳು ಗಿಡಗಳಾ ಹೊಲದಲ್ಲಿ,
ರೈತನೊಬ್ಬನು ತನ್ನ ಕಾರ್ಯದಲಿ ತೊಡಗಿದುದು.
ಹತ್ತಿರ ಬಂದ ರೈತ ’ಕೂತುಕೊಳ್ಳೀ ಬುದ್ದಿ! ಹವವು ಚೆನ್ನಾಗಿಹುದು!’ ಎಂದು ಉಪಚಾರ ಮಾಡುತ್ತಾನೆ. ಕವಿಯೆದುರಿಗೆ ಕುಳಿತು ಮಾತನಾಡುತ್ತಿರುವ ಮುಗ್ಧ ರೈತನ ಚಿತ್ರಣ ಹೀಗಿದೆ.
ಆ ವಾಣಿಯಾಹ್ವಾನದಲಿ ಎನಿತು ಸರಳತೆ,
ಎನಿತು ಆದರವೆನಿತು ವಾತ್ಸಲ್ಯವೆನಿತೊಲ್ಮೆ!
ಆ ಮಾತಿನಾ ಮೋಹದಿಂಪಿನಲಿ ಸೆರೆಸಿಕ್ಕಿ
ಮರುಳಾಗಿ ಮುಗ್ಧಭಾವದಿನಲ್ಲಿ ಕುಳಿತುಬಿಡೆ,
ಮೆಲುಮೆಲನೆ ಮಾತು ತೆಗೆದನು ನೇಗಿಲಿನ ಯೋಗಿ.
ರೈತನ ಮಾತುಗಳನ್ನು ಕವಿಯ ಕಿವಿ ಕೇಳುತ್ತಿದ್ದರೆ, ಕಣ್ಗಳು ಹನಿತುಂಬಿ ಆತ್ಮೀಯತೆಯಿಂದ ಆ ಪುಣ್ಯಮೂರ‍್ತಿಯನ್ನು ತುಂಬಿಕೊಂಡವಂತೆ. ಆತನೇ ದೇವಮೂರ‍್ತಿ; ಮುಳುಗುತ್ತಿರುವ ಸಂಧ್ಯೆಯ ಸೂರ್ಯನೇ ಆ ಪುಣ್ಯಮೂರ್ತಿಗೆ ಆರತಿ ಎತ್ತುತ್ತಿರುವಂತೆ ಕಾಣುತ್ತದೆ, ಕವಿಗೆ.
ಅವನ ಮೈಯಲ್ಲಿ ಹರಕು ಅಂಗಿ; ಮೊಳಕಾಲಿನಲಿ
ಚಿಂದಿ ಪಂಚೆ: ಆ ಮನೋಹರ ಮಂಗಳದ ಮೂರ್ತಿ!
ಮುಳುಗುತಿಹ ಕನಕಮಯ ಸಂಧ್ಯೆಯ ದಿವಾಕರನು,
ಬೈಗುವೆಣ್ಣಿನ ಕುಂಕುಮದ ಮಂಗಳಾರತಿಯು,
.............. ........... ......... ಮಿಗಿಲೆನಿಸಿ ಆ
ಹಸುರು ಹುಚ್ಚೆಳ್ವೊಲದ ಪುಷ್ಪಿತ ಹರಿದ್ರದಲಿ
ರೈತನೆಸೆದನು ತನ್ನ ಶುಭದ ದಾರಿದ್ರ್ಯದಲಿ!
ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಂತೆ ತನ್ನ ಹೊಲಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಿ, ಕೂರಿಸಿ ಮಾತನಾಡಿಸುವ ರೈತನನ್ನು ಕವಿ ಕತೆಗಾರರಿಬ್ಬರೂ ಆತನ ಮಾತಿನ ಮೋಡಿಗೆ ಒಳಗಾದವರಂತೆ ಕೇಳುಗರಾಗಿಬಿಡುತ್ತಾರೆ. ’ಶುಭದ ದಾರಿದ್ರ್ಯ’ ಎಂಬ ಮಾತು ವಿಶೇಷವಾಗಿದೆ. ಆತ ತನ್ನ ಇಡೀ ಸಂಸಾರದ ಕಥೆಯನ್ನು ಅವರೆದುರು ಬಿಡಿಸಿಡುತ್ತಾನೆ. ಯಾರನ್ನೂ ದೂರುವುದಿಲ್ಲ; ನಿಂದಿಸುವುದಿಲ್ಲ. ಎಲ್ಲವನ್ನೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.
ಮೂರು ಎಕ್ಕರೆ ಭುಮಿ ನನಗಿಹುದು, ಬುದ್ದಿ. ಅದು
ನಮ್ಮ ತಂದೆಯ ತಂದೆ ಕೊಂಡಿದ್ದು, ಆರ‍್ನೂರು
ರುಪಾಯಿ ನಗದು ಹಣ ಸುರಿದು ಸರಕಾರಕ್ಕೆ
ಕೊಂಡುದಿದು. ಆದರೂ ವರುಷ ವರುಷವು ನಾವು
ಕಂದಾಯ ಕೊಡಬೇಕು! ಆರುವರೆ ರುಪಾಯಿ!
ಎಂದು ತನ್ನ ಹೊಲದ ಎಲ್ಲೆಯನ್ನು ತೋರಿಸುತ್ತಾನೆ. ಆದರೆ ಆ ಹೊಲ ಕಲ್ಲುಮಂಟಿಗಳಿಂದ ಕೂಡಿದ್ದು. ಹುರುಳಿ ಜೋಳ ರಾಗಿ ಹುಚ್ಚೆಳ್ಳು ಮಾತ್ರ ಬೆಳೆಯಬಹುದಾದಂತಹ ಭುಮಿ; ಅದೂ ಮಳೆಯಾದರೆ ಮಾತ್ರ! ನಲವತ್ತು ವಯಸ್ಸಿನ ಆತನಿಗೆ ಆದರಿನಿತೂ ಬೇಸರವಿಲ್ಲ. ಜೀವನಕೆ ನಿನಗಿದರ ಉತ್ಪತ್ತಿ ಸಾಲುವುದೆ? ಎಂಬ ಪ್ರಶ್ನೆಗೆ ಮಳೆ ನಡೆಸಿದರೆ ಸಾಲುವುದು, ಬುದ್ದಿ. ಎನ್ನುತ್ತಾನೆ. ’ಮಳೆಯಾಗಲಿ, ಬಿಡಲಿ, ಬೆಳೆ ಬರಲಿ ಬಿಡಲಿ ತೆರಿಗೆ ಮಾತ್ರ ಕೊಡಲೇಬೇಕು’ ಎನ್ನುತ್ತಾನೆ. ಆ ಹೊಲದ ಬಗ್ಗೆ ಆತನಿಗೆ ಇನ್ನಿಲ್ಲದ ಹೆಮ್ಮೆ! ಅದರ ಉತ್ಪತ್ತಿಯ ಮೇಲೆಯೇ ಅವಲಂಬಿತರಾಗಿರಉವ ತನ್ನ ಸಂಸಾರದ ಪರಿಚಯ ಮಾಡಿಕೊಡುತ್ತಾನೆ, ಹೀಗೆ.
............. ಹಿರಿಯರಿತ್ತೀ ನೆಲವ
ತೆರಿಗೆ ಕೊಡದೆಯೆ ನಾವು ಪರರ ವಶಮಾಡಿದರೆ
ಮಕ್ಕಳಾದಪೆವೆಂತು ನಾವವರಿಗೆ? ಮುಂದೆಮಗೆ
ಒಳಿತಹುದೆ? ನಾವಿಬ್ಬರಣ್ಣತಮ್ಮದಿರಿಹೆವು.
ಅಣ್ಣನಿಗೆ ಮಗನೊಬ್ಬ; ಮದುವೆಯಾಗಿಹುದವಗೆ;
ಮಕ್ಕಳೆರಡಿವೆ; ನಿಮ್ಮ ವಯಸವಗೆ. ನನಗೊಬ್ಬ
ಮಗನಿಹನು. ಮನೆಯಲ್ಲಿ ಹೆಂಗಸರು ಬೇರಿಹರು.
ಇಷ್ಟು ಜನರಿಗೆ ಹೊಟ್ಟೆ ಬಟ್ಟೆಯಂದರೆ ಎಲ್ಲಿ
ಹಣಕಾಸು? ಹೇಗೊ ಸಾಲದ ಮೇಲೆ ಬಡಬದುಕು
ಹೊರೆಯುತಿದೆ
ಎನ್ನುತ್ತಾನೆ. ’ನಿನಗೆನಿತು ಸಾಲವಿದೆ? ಅದನೆಂತು ತೀರಿಸುವೆ?’ ಎಂದ ಮಾತಿಗೆ, ಅಷ್ಟೇ ಮುಗ್ಧನಾಗಿ ಉತ್ತರಿಸುತ್ತಾನೆ.
ಈಗ ಬಡ್ಡಿಯ ಕೊಟ್ಟು,
ಮುಂದೆ ಒಳ್ಳೆಯ ಕಾಲ ಬಂದಾಗ ತೀರಿಸುವೆ.
ಎಷ್ಟು ಬಡ್ಡಿಯ ಕೊಡುವೆ?
ನೂರಕ್ಕೆ ಹದಿನೆಂಟು!
ಅಷ್ಟರಲ್ಲಿ ಸೂರ್ಯ ಅಸ್ತಮಿಸಿಯಾಗಿರುತ್ತದೆ. ಕತ್ತಲು ಕವಿಯಲಾರಂಬಿಸುತ್ತದೆ. ’ಕತ್ತಲಾಯಿತು, ದಾರಿ ಕೊರಕಲಾಗಿದೆ’ ಎಂದು ಅಕ್ಕರೆಯಿಂದ ಕವಿ ಕಥೆಗಾರರಿಬ್ಬರನ್ನೂ ಎಬ್ಬಿಸುತ್ತಾನೆ. ಮೈಸೂರಿನ ಕಡೆ ದೀಪಗಳು, ಆಕಾಶದೆಡೆ ನಕ್ಷತ್ರಗಳು ಮಿನುಗುತ್ತವೆ. ಆಗ ಕವಿಗನ್ನಿಸಿದ್ದು:
................ ದೂರ ಮೈಸೂರಿನಲಿ
ಮಿಂಚಿದುವು ದೀಪಗಳು ಐಶ್ವರ‍್ಯಗರ‍್ವದಲಿ.
ಮೇಲೆ ಆಕಾಶದಲಿ ಮಿಣುಕಿದುವು ತಾರೆಗಳು
ವಿಶ್ವದೌದಾಸೀನ್ಯದಲಿ? ಅಥವ ಶೋಕದಲಿ?
ಕತ್ತಲಲಿ ರೈತನಾಕೃತಿಯೊಂದು ಕನಸಿನ ತೆರದಿ
ಕಾಣಿಸಿತು: ಅವನೊಂದು ವಿಶ್ವದ ಮಹಾಸ್ವಪ್ನ!
ಪೂರ್ಣ ಕತ್ತಲಾವರಿಸಿದ್ದರಿಂದ ದಾರಿ ಕವಲಾಗಿರುವವರಗೆ ಜೊತೆ ಬರುತ್ತೇನೆಂದು ಹೊರಡುತ್ತಾನೆ. ಆಗ ಇವರಿಬ್ಬರೂ 
ಬೇಡ ಬೇಡೈ, ನೀನು ಗುಡಿಗೆ ನಡೆ; ಹಗಲೆಲ್ಲ
ಉಣಿಸಿಲ್ಲ, ಹಸಿದಿರುವೆ, ದುಡಿದು ಮೈದಣಿದಿರುವೆ.
ಎಂದು ಹೇಳುತ್ತಾರೆ. ಆದರೂ ಆತ ಕೇಳುವುದಿಲ್ಲ. ’ನನ್ನ ಊಟಕಿನ್ನೂ ಹೊತ್ತು ಬಹಳವಿದೆ.’ ಎಂದು ಜೊತೆ ಬರುತ್ತಾನೆ. ದಾರಿ ಕವಲಾಗುವೆಡೆಯಲ್ಲಿ ಇವರನ್ನು ಬೀಳ್ಕೊಡುತ್ತಾನೆ. ಕವಿಗೆ ಆತನ ಮನಸ್ಸಂಪತ್ತು, ಸರಳ ನಡವಳಿಕೆ ಎಲ್ಲವೂ ಮಹತ್ವವೆನಿಸಿಬಿಡುತ್ತವೆ. ನುಡಿಕವಿಯು ಹೊಲದ ಕವಿಯ ನಡವಳಿಕೆಯ ಸಿರಿತನದ ಮಹನ್ನೋತಿಯನ್ನು ಗುರುತಿಸುತ್ತಾನೆ.
............. ಒಂದು ಗಂಟೆಯ ನುಡಿಗೆ
ಅವನದೆಂತಹ ಮೈತ್ರಿ! ನಾಗರಿಕರಂತಿಹರೆ?
ಆತನು ಅನಾಗರಿಕನೆ? ಅವನ ಆ ದುಃಖದಲಿ
ಹೆರರ ಸುಖವನು ಕಂಡು ಕುದಿವ ಕರುಬಿನಿತಿಲ್ಲ;
ತನ್ನ ನೋವನು ಕುರಿತು ನುಡಿವಾಗ ಮಾತಿನಲಿ
ಕ್ರೋಧ ಮತ್ಸರವಿಲ್ಲ, ಕೋಪವೆಂಬುವುದಿಲ್ಲ.
ಸ್ಥಿತ ಪ್ರಜ್ಞನಿಗೆ ಸಹಜವಾಗಿಹ ಸಹಿಷ್ಣುತೆ,
ಧೀರತೆ, ಸೌಜನ್ಯಗಳು ಹುಟ್ಟುಗುಣವವಗೆ.
ನಮ್ಮೊಡನೆ ಯಾರನೂ ಆತನು ಹಳಿಯಲಿಲ್ಲ:
ಎಲ್ಲವನು ಹೇಳಿದನೆ ಹೊರತು ಖಂಡಿಸಲಿಲ್ಲ!
ನಾಗರಿಕರಂತಿಹರೆ? ಆತನು ಅನಾಗರಿಕನೆ?
ಕವಿ ಕಥೆಗಾರರಿಬ್ಬರೂ ಇನಿವಾತುಗಳನಾಡಿ ಕಡೆಗವನ ಬೀಳ್ಕೊಂಡು ಹಿಂತಿರುಗುತ್ತಾರೆ. ಹೊಲದ ಕವಿಯ ದರ್ಶನದಿಂದ ಕವಿಗೆ ಹೊಸದೊಂದು ದರ್ಶನವಾಗುತ್ತದೆ. ಕಡೆಯಲ್ಲಿ ಹೀಗೆ ಹೇಳುತ್ತಾರೆ.
ಇನಿವಾತುಗಳನಾಡಿ ಕಡೆಗವನ ಬೀಳ್ಕೊಂಡು
ಬರುತಿರಲು, ನಮ್ಮೆದೆ ದುಃಖ ಸಂಮಿಶ್ರಣದ
ಸ್ಮೃತಿಯ ಮಾಧುರ‍್ಯದಲಿ ಗಂಭೀರವಾಗಿತ್ತು.
ಸ್ವಂತ ಸ್ವಾಂತದ ಚಿಂತೆಯ ತರಂಗಗಳ ಮಧ್ಯೆ
ನಮ್ಮಾತ್ಮಗಳು ತೇಲಿ ಮುಳುಗಿದುವು. ಮೌನದಲಿ,
ಧ್ಯಾನದಲಿ, ಬ್ರಹ್ಮಾಂದ ಭವ್ಯ ಗಾಂಭೀರ‍್ಯದಲಿ,
ಚಿತ್ತಕೆ ಅತೀತವಹ ಗೂಢತರ ಶಾಂತಿಯಲಿ,
ಜಗದ ವಸ್ತುಗಳೆಲ್ಲ ಮನದಿಂದ ಜಾರುತಿರೆ
ನಡುವೆ ನಿಂತುದದೊಂದೆ ವಿಶ್ವದಾ ಶಿಶುಮೂರ್ತಿ,
ಹಸುರು ಹುಚ್ಚೆಳ್ವೊಲದಿ ಕಂಡ ರೈತನ ಮೂರ್ತಿ!
ನಾನವಗೆ ನುಡಿದಂತೆ ಬಹುಜನಕೆ ನುಡಿದಿಲ್ಲ;
ಅವನಿಗೆ ಕರಗಿದಂತೆ ಬಹುಜನಕೆ ಕರಗಿಲ್ಲ!
ಈ ಕವಿತೆಯ ಉದ್ದಕ್ಕೂ ಐದೈದು ಮಾತ್ರೆ ನಾಲ್ಕು ನಾಲ್ಕು ಗಣಗಳ ಪಂಕ್ತಿಗಳ ಓಟವಿದೆ. ಅಂತ್ಯಪ್ರಾಸ ರಹಿತ ಲಲಿತ ರಗಳೆ ಎನ್ನಬಹುದು. ಇಡೀ ಕವಿತೆಯನ್ನು ಒಂದೇ ಬೀಸಿನಲ್ಲಿ ಲಯತಪ್ಪದೆ ಓದಬಹುದು! ಆದರೆ ಅದಕ್ಕಿಂತ ಹೆಚ್ಚಾಗಿ, ಮುಂದೆ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬಳಕೆಯಾಗಲಿದ್ದ ಛಂದಸ್ಸು ಇದು ಎಂಬುದು ಗಮನಾರ್ಹ. ಈ ಬಗೆಯ ಛಂದಸ್ಸಿನ ದೀರ್ಘ ಕವಿತೆಗಳು ಮಹಾಕಾವ್ಯ ರಚನಾಪೂರ್ವ ಸಿದ್ಧತೆಯಂತೆ ತೋರುತ್ತದೆ.

Monday, June 04, 2012

ಗಣಪತಿಯ ಒಂದು ದಿನ - ಮತ್ತೆ ಸಿಕ್ಕಿದ ಹರಟೆ!


ಸರಸ್ವತಿ : ಗಣಪ ಲೋ ಗಣಪ. ಎಲ್ಲೋಗ್ತಿದಿಯಾ ಮರಿ?

ಗಣಪತಿ : ಲಕ್ಷ್ಮಿ ಆಂಟಿ ಮನೆಗೆ.
ಸರಸ್ವತಿ : ಅಯ್ಯಯ್ಯೋ ಏಕಳ್ತಿದಿಯಪ್ಪಾ. ಏನಾಯ್ತು?
ಗಣಪತಿ : ನೋಡಿ ಸರಸ್ವತಿ ಆಂಟಿ, ಅಪ್ಪ ಅಮ್ಮ ಭೂಲೋಕಕ್ಕೆ ಅದ್ಯಾರಿಗೋ ವರ ಕೊಡೋದಿಕ್ಕೆ ಹೋಗಿದಾರೆ. ನಾನು ಬರ್ತಿನಿ ಅಂದಿದ್ದಕ್ಕೆ ಬೇಡ ನೀನಿಲ್ಲೆ ಇರು. ಲಕ್ಷ್ಮಿ ಆಂಟಿ ಮನೆಲೋ, ಸರಸ್ವತಿ ಆಂಟಿ ಮನೇಲೋ ಆಡ್ಕೊಂಡಿರು ಅಂದ್ಬಿಟ್ರು.
ಸರಸ್ವತಿ : ಇರಲಿ ಬಿಡು ಮರಿ. ಅಲ್ಲಿ ಅವರಿಗೇನು ಕೆಲಸ ಇರುತ್ತೋ ಏನೋ. ಬಾ ಮರಿ ಇಲ್ಲೊಂದಿಷ್ಟು ಹೊತ್ತು ಇದ್ದು ಹೋಗು.
ಗಣಪತಿ : ಇಲ್ಲ ಸರಸ್ವತಿ ಆಂಟಿ, ಅಲ್ಲಿ ನಾರದ ನನಗೆ ಅಪಾಯಿಂಟ್‌ಮೆಂಟ್ ಕೊಟ್ಟಿದಾನೆ. ಯಾವ್ದೋ ಕಥೆ ಹೇಳ್ತೀನಿ ಅಂತ. ವಿಷ್ಣು ಅಂಕಲ್ ಹತ್ರ ಇರ್ತಾನಂತೆ. ಅದಕ್ಕೆ ಅಲ್ಲಿಗೆ ಹೋಗ್ತೀನಿ.
ಸರಸ್ವತಿ : ಅವನು ಇದ್ರೆ ಅಲ್ಲಿ. ಇಲ್ಲ ಭೂಲೋಕದಲ್ಲಿ.
ಗಣಪತಿ : ನಾನು ಬರ್ಲಾ ಆಂಟಿ.
ಸರಸ್ವತಿ : ಅಯ್ಯೋ ಇರೋ ಗಣಪ ಮರೆತೆಬಿಟ್ಟಿದ್ದೆ. ಕಡುಬು ಮಾಡಿದ್ದೆ. ನಿನಗೆ ಅಂತ ಎತ್ತಿಟ್ಟಿದ್ದೆ. ಬಾ ಕೊಡ್ತೀನಿ  ತಿಂದು ಹೋಗುವಂತೆ.
ಗಣಪತಿ : ಏನ್ ಆಂಟಿ ನೀವು ಇಷ್ಟು ನಿಧಾನಕ್ಕೆ ಹೇಳ್ತಿದಿರಾ!?
ಸರಸ್ವತಿ : ಮರ್ತುಬಿಟ್ಟಿದ್ದೆ ಪುಟ್ಟಾ. ಬಾ ಕೊಡ್ತೀನಿ.
* * *
ಸರಸ್ವತಿ : ನೋಡೋ ಇಲ್ಲಿ ಗಣಪ. ನಿನಗೆ ಅಂತ ಹತ್ತು ಕಡಬು ತೆಗೆದು ಇಟ್ಟಿದ್ದೆ. ಈಗ ಒಂದ್ಸೊಲ್ಪತ್ತಿನ ಮುಂದೆ, ನಿಮ್ಮ ಬ್ರಹ್ಮ ಅಂಕಲ್ ಹೊಟ್ಟೆ ಹಸಿತಿದೆ ತಿನ್ನೋದಿಕ್ಕೆ ಏನಾದರೂ ಕೊಡು ಅಂದರು. ಮತ್ಯಾರು ಮಾಡ್ತಾರೆ ಅಂತ ಹತ್ತರಲ್ಲೆ ಒಂದು ಕಡುಬು ತಗೊಂಡು ತಿನ್ನಿ ಅಂದೆ. ಆದರೆ ಅವರು ನಾಲ್ಕು ತಿಂದು ಬಿಟ್ಟಿದ್ದಾರೆ.
ಗಣಪತಿ : ನಾಲ್ಕೂ ಕಡಬು ತಿಂದಿದಾರ. ಹೋಗ್ಲಿ ಬಿಡಿ ಇಷ್ಟಾದರೂ ಇದೆಯಲ್ಲ. ನಿಮ್ಮ ಲೆಕ್ಕದಲ್ಲಿ ಒಂದು ಅಂದರೆ ಅವರ ನಾಲ್ಕು ತಲೆನೂ ಒಂದೊಂದು ತಿಂದಿರಬೇಕು!
* * *
ಗಣಪತಿ : ಆಂಟಿ ನನಗೊಂದು ಅನುಮಾನ. ವಿದ್ಯಾದೇವತೆ ನೀವು. ಆದ್ರೂ ಈ ಭೂಲೋಕದ ಜನ ನನ್ನನ್ನು ವಿದ್ಯಾಗಣಪತಿ ಅಂತ ಪೂಜೆ ಮಾಡಿ ವರ ಕೊಡು ಅಂತ ಪೀಡಿಸ್ತಾರಲ್ಲ ಏಕೆ?
ಸರಸ್ವತಿ : ಏನ್ಮಾಡೋದಿಕ್ಕಾಗುತ್ತೆ ಮರಿ, ಕೆಲವಕ್ಕೆ ನಾನೆದೆಷ್ಟು ಕಷ್ಟಪಟ್ಟು ತಿದ್ದಿದ್ರು ಸ ಅಂದರೆ ಶ ಅಂತಾವೆ, ಶ ಅಂದರೆ ಸ ಅಂತಾವೆ. ಅವರಿಗೆ ಕಷ್ಟ ಪಡೋದಿಕ್ಕಾಗಲ್ಲ. ಅದಕ್ಕೆ ನನ್ನನ್ನ ಕೈಲಾಗದ ದೇವತೆ ಅಂತ ನಿನ್ನತ್ರ ಬರ್ತಾವೆ. ಏನ್ಮಾಡೋದು ಹೇಳು. ನೀನು ಸುಮ್ಮನೆ ತಥಾಸ್ತು ಅಂದ್ಬುಡು. ಇಲ್ಲಾಂದರೆ ಮತ್ತೆ ನನ್ನತ್ರ ಬಂದು ನಿನ್ನ ಕೈಲಾಗ್ದೋನು ಅಂತಾರೆ.
ಗಣಪತಿ : ಇಲ್ಲ ಆಂಟಿ ನಾನಿದುವರೆಗೆ ಒಬ್ಬನಿಗೂ ವರ ಕೊಟ್ಟಿಲ್ಲ. ಅದು ನಿನಗೆ ಹೇಳದೆ ನಿನ್ನ ಕೆಲಸ ಮಾಡೋದಿಕ್ಕಾಗುತ್ತ ಆಂಟಿ.
ಸರಸ್ವತಿ : ನಿನಗೆ ಹೇಗೆ ತೋಚುತ್ತೋ ಹಾಗ್ ಮಾಡು.
ಗಣಪತಿ : ಆಂಟಿ ಕಡುಬು ಬಹಳ ಚೆನ್ನಾಗಿತ್ತು. ನಿನ್ನ ಕೈನ ಕಡುಬು ಅಂದರೆ ಕಡುಬು. ನಮ್ಮಮ್ಮಾನು ಹೀಗ್ ಮಾಡಲ್ಲ! ಆಂಟಿ ನಾನು ಬರ್ತಿನಿ. ಇಲ್ಲಾಂದ್ರೆ ನಾರದ, ಲಕ್ಷ್ಮಿ ಆಂಟಿ ಮನೆ ಬಿಟ್ಟು ಹೊರಟ್ಬುಡ್ತಾನೆ. ಮತ್ತೆ ಕೈಗೆ ಸಿಗೋದು ಯಾವಾಗಲೋ.
ಸರಸ್ವತಿ : ಸರಿ ನೀನು ಹೊರಡಪ್ಪ. ನಿಮ್ಮ ಬ್ರಹ್ಮ ಅಂಕಲ್ ಏಕೋ ಅವರ ಒಂದು ಗಂಟಲು ನೋವು ಅಂತಿದ್ದರು. ಒಂಚೂರು ಕಷಾಯ ಮಾಡಿಕೊಡು ಅಂದಿದ್ದರು. ಲಕ್ಷ್ಮಿ ಹತ್ರ ಔಷದಿನೂ ತಂದಿದಿನಿ. ಕೊಡ್ತಿನಿ. ನೀನು ಹೋಗ್ಬಾ.
ಗಣಪತಿ : ಸರಸ್ವತಿ ಆಂಟಿ ನೀವೀಗ ಏನಂದ್ರಿ. ಬ್ರಹ್ಮ ಅಂಕಲ್ ಗೆ ಒಂದು ಗಂಟಲು ನೋವ!? ಹಾಗಾದರೆ ಇನ್ನೊಂದು ಕಡಬು ಅವರು ತಿಂದಿಲ್ಲ. ಆಮೇಲೆ ತಿನ್ನೋಣ ಅಂತ ಎತ್ತಿಟ್ಕೊಂಡಿರಬೇಕು ಅಲ್ವಾ?
ಸರಸ್ವತಿ : ಏನೋಪ್ಪಾ ಇದ್ರು ಇರಬಹುದು. ಈ ವಯಸ್ಸಾದೋರಿಗೆ ಬಾಯಿ ಚಪಲ ಜಾಸ್ತಿ.
ಗಣಪತಿ : ಇರ‍್ಲಿ ಬಿಡಿ ಆಂಟಿ. ನಾನ್ಬರ‍್ತಿನಿ.
* * *
ಲಕ್ಷಿ : ಓಹೋ ಬಾರೋ ಗಣಪ ಬಾ ಅಲ್ಲೇನು ಹುಡುಕ್ತಿದಿಯಾ?
ಗಣಪತಿ : ಲಕ್ಷ್ಮಿ ಆಂಟಿ ನಾರದ ಇಲ್ಲೆ ಇರ್ತಿನಿ ಅಂದಿದ್ದ. ಎಲ್ಲೋದ?
ಲಕ್ಷ್ಮಿ : ವಿಷ್ಣು ಅಂಕಲ್ ಇನ್ನೊಂದು ಹಾಡು ಹೇಳು ಅಂತಿದ್ದರು. ಅಲ್ಲೆ ಇದ್ದ ಇನ್ನೇನು ಬರಬಹುದು ಬಾ. ನಿಮ್ಮಮ್ಮ ಏನ್ಮಾಡ್ತಿದ್ದರು?
ಗಣಪತಿ : ಅಮ್ಮ ಎಲ್ಲಿ ಆಂಟಿ? ಅದ್ಯಾರ್ಗೋ ಭೂಲೋಕದಲ್ಲಿ ವರ ಕೊಡೋದಿಕ್ಕೆ ಅಂತ ಹೋಗಿದಾರೆ.
ಲಕ್ಷ್ಮಿ : ಹೌದಾ!? ಹೋಗ್ಲಿ ಬಿಡು. ನೀನು ಏನಾದರೂ ತಿಂದ್ಯಾ ಮರಿ. ತಗೋ ಇಲ್ಲೊಂದಿಷ್ಟು ಕಬ್ಬು ಇದೆ ತಿನ್ನು. ಅಷ್ಟರಲ್ಲಿ ನಾರದ ಬರ್ತಾನೆ.
ಗಣಪತಿ : ಕೊಡಿ ಆಂಟಿ. ಸಂಕ್ರಾಂತಿ ಆಗಿ ಇಷ್ಟು ದಿನ ಆದ್ರು ಕಬ್ಬು ಇಟ್ಟಿದ್ದೀರಲ್ಲ ಅದೇ ಸಂತೋಷ. ಆಂಟಿ ಅಂದ ಹಾಗೆ ’ನಾರದ ಮನೆಗೆ ಬರೋಲ್ಲ’ ಅಂತ ಸರಸ್ವತಿ ಆಂಟಿ ಬೇಜಾರು ಮಾಡ್ಕೋತಿದ್ರು. ಈತ ನನ್ಗು ’ಕಥೆ ಹೇಳ್ತೀನಿ ಬಾ’ ಅಂತ ಹೇಳಿ ಇನ್ನು ಹಾಡು ಹೇಳ್ತಾ ಕೂತಿದ್ದಾನೆ. ಇವನು ಯಾವಾಗಲೂ ಹೀಗೇನೆ ಅಲ್ವಾ ಆಂಟಿ.
ಲಕ್ಷ್ಮಿ : ಏನ್ಮಾಡೋದು ಹೇಳೋ. ಒಬ್ಬೊಬ್ಬರದು ಒಂಥರಾ. ಸರಸ್ವತಿನೂ ಒಬ್ಬಳೆ ಇರ್ಬೇಕು. ನಿಮ್ಮ ಬ್ರಹ್ಮ ಅಂಕಲ್ ದಿನದ ಇಪ್ಪತ್ತನಾಲ್ಕು ಗಂಟೇನು ಆಫೀಸಿನಲ್ಲೇ ಇರ್ತಾರೆ. ಬೆಳೆಗ್ಗೆ ತಾನೆ ಬಂದಿದ್ದಳು. ನಿಮ್ಮ ಅಂಕಲ್‌ಗೆ ಏನೋ ಗಂಟಲು ನೋವು  ಅಂತ ಔಷಧಿ ತಗೊಂಡು ಹೋದಳು.
ಗಣಪತಿ : ಹಾಡು ನಿಂತೋದ್ಹಾಗೆ ಆಯ್ತು. ನಾನೋಗ್ತೀನಿ ಆಂಟಿ. ಇಲ್ಲಾಂದರೆ ನಾರದ ಇವತ್ತು ತಪ್ಪಿಸ್ಕೊಂಡ್ಬಿಡ್ತಾನೆ.
ಲಕ್ಷ್ಮಿ : ಆಯ್ತು. ನಿಧಾನವಾಗಿ ಹೋಗೋ! ಎಲ್ಲು ಹೋಗಲ್ಲ.
* * *
ಗಣಪತಿ : ಏನೋ ನೀನು. ಕಥೆ ಹೇಳ್ತೀನಿ ಅಂತ ಹೇಳಿ ಹೋದ ವಾರ ಕೈಕೊಟ್ಟಿದ್ದೆ. ಈಗ ನೋಡಿದರೆ ನನ್ನ ಬರೋದಕ್ಕೆ ಹೇಳಿ ಅಲ್ಲೋಗಿ ಹಾಡು ಹೇಳ್ತಾ ಇದೀಯಾ.
ನಾರದ : ಹಂಗೇನಿಲ್ಲ ಬಾ. ಇವತ್ತು ನಿನಗೆ ಒಂದು ಕಥೆ ಹೇಳೆ ನಾನು ಮುಂದಿನ ಕೆಲಸಕ್ಕೆ ಹೋಗ್ತೀನಿ. ನಿಮ್ಮ ಅಪ್ಪ ಅಮ್ಮ ಭೂಲೋಕಕ್ಕೆ ಹೊರಟರಾ?
ಗಣಪತಿ : ಹೂಂ. ಹೋದರು. ಅದ್ಯಾರಿಗೋ ವರ ಕೊಡೋದಿಕ್ಕೆ ಅಂತ.
ನಾರದ : ಅದೇ ಕಥೆ ಹೇಳ್ತೀನಿ ಕೇಳು ಇವತ್ತು. ಭೂಲೋಕದಲ್ಲಿ ಒಬ್ಬ ರಾಕ್ಷಸ ಇದ್ದಾನೆ. ಅವನ ನಿರ್ಮೂಲನ ಮಾಡೋದಿಕ್ಕೆ ವೆಂಕಟಾಚಲ ಅಂತ ನಾರಾಯಣನ ಭಕ್ತನೊಬ್ಬ ತೊಡೆತಟ್ಟಿ ನಿಂತಿದ್ದಾನೆ. ಸುದರ್ಶನ ಅನ್ನೋ ಇನ್ನೊಬ್ಬ ಕೂಡಾ ಇದ್ದಾನೆ. ಆದರೆ ಆ ರಾಕ್ಷಸ, ಅವನನ್ನ ಬೆಳೆಸಿದೋರು ಬಹಳ ಘಟಾನುಘಟಿಗಳು. ಅದಕ್ಕೆ ವಿಷ್ಣು ಅಂಕಲ್ ಅವರಿಬ್ಬರಿಗೂ ಸ್ವಲ್ಪ ಸಹಾಯ ಮಾಡು ಅಂತ ನಿಮ್ಮ ಅಪ್ಪನ ಹತ್ರ ಹೇಳಿದ್ದರು. ಅದಕ್ಕೆ ಹೋಗಿದ್ದಾರೆ.
ಗಣಪತಿ : ಅದು ಸರಿ ನಾರದ ವಿಷ್ಣು ಅಂಕಲ್ಲೇ ಹೋಗಬಹುದಿತ್ತಲ್ವಾ? ನಮ್ಮ ಅಪ್ಪ ಅಮ್ಮನ್ನ ಏಕೆ ಹೋಗಿ ಅಂದರು.
ನಾರದ : ಅದು ಹಾಗಲ್ಲ ಕಣೋ ಗಣಪು. ಈ ಅಯೋಧ್ಯೆ ಗಲಾಟೆ ಆದಾಗಿನಿಂದ ವಿಷ್ಣು ಅಂಕಲ್‌ಗೆ ಭೂಲೋಕ, ಅವತಾರ, ಭಕ್ತರು ಅಂದರೆ ಒಂದು ರೀತಿ ಭಯ. ಅದಕ್ಕೆ ನಿಮ್ಮಪ್ಪ ಅಮ್ಮನಿಗೆ ಕೇಳ್ಕೊಂಡಿದ್ದು.
ಗಣಪತಿ : ಹೌದು ಹತ್ತು ಅವತಾರ ಎತ್ತಿ ಇಲ್ಲಾ ರಾಕ್ಷಸರನ್ನೂ ವಿಷ್ಣು ಅಂಕಲ್ ಬಡದು ಹಾಕಿದ್ದರಲ್ಲಾ. ಈ ಕಲಿಯುಗದಲ್ಲೂ ಅವರ ಸಂತತಿ ಉಳಿದಿದೆಯಾ? ಹಾಗಾದರೆ ಯಾರಪ್ಪ ಅದು, ಆ ರಾಕ್ಷಸ.
ನಾರದ : ಅದೊಂದು ವಿಚಿತ್ರವಾದ ರಾಕ್ಷಸ. ಒಂದು ರೀತೀಲಿ ಖಾಯಿಲೆ ಇದ್ದ ಹಾಗೆ. ರೂಪ ಇಲ್ಲ. ಅದರ ಹೆಸರು ’ಭ್ರಷ್ಟಾಚಾರ’ ಅಂತ.
ಗಣಪತಿ : ಓ, ಈಗ ಗೊತ್ತಾಯಿತು ಬಿಡು. ವರ್ಷಕ್ಕೊಂದು ಬಾರಿ ಭೂಲೋಕಕ್ಕೆ ಹೋದಾಗ ನನಗೂ ಅದರ ಅನುಭವಾನ ಜನ ಮಾಡ್ಸಿದಾರೆ. ನಾನೀಗಲೇ ಹೇಳ್ತೀನಿ. ನಮ್ಮ ಅಪ್ಪ ಅಲ್ಲ, ಈ ತ್ರಿಮೂರ್ತಿಗಳೇ ಹೋಗಿ ವರ ಕೊಟ್ಟರೂ, ಅವತಾರ ಎತ್ತಿದರೂ ಆ ರಾಕ್ಷಸನನ್ನ ನಿರ್ಮೂಲನ ಮಾಡೋದಿಕ್ಕಾಗಲ್ಲ. ಅದು ಹೊಟ್ಟೆ ಒಳಗಿನ ಮಗೂನಿಂದ ಹಿಡಿದು ಸ್ಮಶಾನದ ಹೆಣದವರೆಗೂ ಅದು ಆವರಿಸಿಬಿಟ್ಟಿದೆ.
ನಾರದ : ಅದು ನನಗೂ ಗೊತ್ತೋ. ಆದರೆ ಏನು ಮಾಡೋದು ಹೇಳು. ನಾವು ಏನಾದ್ರೂ ಪ್ರಯತ್ನ ಮಾಡಲೇ ಬೇಕು. ಇಲ್ಲ ಮಾಡ್ತಾ ಇದ್ದೀವಿ ಅಂತ ತೋರಿಸ್ಕೋಬೇಕು. ಇಲ್ಲಾಂದರೆ ಈ ಜನ ನಮ್ಮನ್ನೂ ಕೈಲಾಗದೋರು ಅಂತ ತಿಳ್ಕೊಂಡ್ಬಿಡ್ತಾರೆ. ಆಮೇಲೆ ಅವ್ರು ನಮ್ಮ ಸ್ಥಾನವನ್ನು ಬೇರೆಯವರಿಗೆ ಕೊಡೋದಿಕ್ಕೂ ಹೇಸೋದಿಲ್ಲ.
ಗಣಪತಿ : ಅದು ಸರಿ ಅನ್ನು. ನಾನಿನ್ನು ಬರ್ತೀನಿ ಕಣೋ. ಏಕೋ ಹೊಟ್ಟೆ ಹಸಿತಾ ಇದೆ.
ನಾರದ : ಸರಿ ಹೊರಡು. ಶುಭವಾಗಲಿ ನಿನ್ನ ಹೊಟ್ಟೆಗೆ!
[4/2/2003 ರಂದು ನನ್ನಿಂದ ರಚಿತವಾಗಿ, ಕಾಲೇಜಿನ ಸ್ಪರ್ಧೆಯೊಂದಕ್ಕೆ ನಿರ್ದೇಶಿತವಾಗಿದ್ದ ಈ ಹರಟೆ ಪ್ರಸಂಗದಲ್ಲಿ ನಾನು ನಾರದನ ಪಾತ್ರ ಕೂಡಾ ಮಾಡಿದ್ದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೂಡಾ ಬಂದಿತ್ತು ಈ ಹರಟೆಗೆ. ಆದರೆ, ನಂತರ ನನ್ನ ಸಹದ್ಯೋಗಿಗಳೊಬ್ಬರು, ಅದನ್ನು ತೆಗೆದುಕೊಂಡು, ಎಲ್ಲೋ ಕಳೆದು ಬಿಟ್ಟಿದ್ದರು. ಇತ್ತ ನನ್ನ ಕಂಪ್ಯೂಟರಿನಲ್ಲಿದ ಫೈಲ ಕೂಡಾ ಯಾವಾಗಲೋ ಮಾಯವಾಗಿಬಿಟ್ಟಿತ್ತು. ಸುಮಾರು ಒಂಬತ್ತು ವರ್ಷಗಳ ಬಳಿಕ, ನನ್ನ ಸಹದ್ಯೋಗಿ ಮಿತ್ರರು, ತಮ್ಮ ಪುಸ್ತಕದ ಬೀರು ಸ್ವಚ್ಛಗೊಳಿಸುವಾಗ ಯಾವುದೋ ಫೈಲಿನಲ್ಲಿ ಅಂತರಗತ್ವಾಗಿದ್ದ ನನ್ನ ಹರಟೆಯ ಪ್ರತಿಯನ್ನು ಸುರಕ್ಷಿತವಾಗಿ ಹಿಂತಿರುಗಿಸಿ ನಿಟ್ಟುಸಿರು ಬಿಟ್ಟರು. ಅದನ್ನು ಮತ್ತೆ ಕಂಪ್ಯೂಟರಿಗೇರಿಸಿದ್ದು ನನ್ನ ಶ್ರೀಮತಿ. ಈಗ ನಾನು ಅದನ್ನು ಬ್ಲಾಗಿಗೆ ಏರಿಸುತ್ತಿದ್ದೇನೆ. ಲೋಕಾಯುಕ್ತ ವೆಂಕಟಾಚಲ, ಬಿಳಿಗಿರಿ ಬೆಟ್ಟದ ಸುದರ್ಶನ ಅವರ ಹೆಸರುಗಳ ಬದಲಿಗೆ, ಸಂತೋಷ ಹೆಗಡೆ, ನ್ಯಾಯಮೂರ್ತಿ ಸುಧೀಂದ್ರ ರಾವ್, ಶ್ರೀಯುತ ಹಿರೇಮಠ ಇಂಥವರ ಹೆಸರುಗಳನ್ನು ಹಾಕಿಕೊಂಡರೆ ಹರಟೆ ಇಂದಿಗೂ ಪ್ರಸ್ತುತ. ಅದಕ್ಕೆ ಸಂತೋಷ ಪಡಬೇಕೋ, ಅಥವಾ ಪರಿಸ್ಥಿತಿ ಇನ್ನೂ ದುರಂತಮಯವಾಗಿದೆ ಎಂದು ದುಃಖಿಸಬೇಕೋ? ನೀವೇ ನಿರ್ಧರಿಸಿ)