Tuesday, March 19, 2013

ಎದೆಗೆ ಬಿದ್ದ ಅಕ್ಷರವೂ.. ಬೆಂಕಿ ಆಕಸ್ಮಿಕವೂ... ನನ್ನೆದೆಯ ತಳಮಳವೂ....


ಸಹೃದಯರೆ, ನೆನ್ನೆ (18.03.2013) ಬೆಳಿಗ್ಗೆಯಿಂದ ನಡೆದ ಘಟನೆಗಳನ್ನು ಮೊದಲು ಹೇಳಿಬಿಡುತ್ತೇನೆ. ಆಮೇಲೆ ಮೇಲಿನ ಶಿರ್ಷಿಕೆಯ ಬಗ್ಗೆ ನೀವೇ ತೀರ್ಮಾನಿಸಿ!
ನೆನ್ನೆ ಎಂದಿನಂತೆ ಮಗಳನ್ನು ಸ್ಕೂಲಿಗೆ ಬಿಟ್ಟು ಕಾಲೇಜಿಗೆ ಬಂದೆ. ನಿತ್ಯದಂತೆ, ಮರವೊಂದರ ಕೆಳಗೆ ಕಾರನ್ನು ನಿಲ್ಲಿಸಿ ಬರುವಾಗ ಸುಮಾರು ಮೂರ‍್ನಾಲ್ಕು ಅಡಿ ಎತ್ತರದ ತರಗೆಲೆಗಳ ರಾಶಿ ಕಣ್ಣಿಗೆ ಬಿತ್ತು. ಆ ರಾಶಿಗೆ ತಗುಲಿಕೊಂಡಂತೆ ನನ್ನ ಕಾರಿನ ಹಿಂದಿನ ಚಕ್ರಗಳು ನಿಂತಿದ್ದವು. ’ಉದುರಿದ್ದ ಎಲ್ಲ ತರಗೆಲೆಗಳನ್ನು ಒಂದೆಡೆ ರಾಶಿ ಹಾಕಿದ್ದಾರೆ. ಬಹುಶಃ ನಂತರ ಬಂದು ತೆಗೆದುಕೊಂಡು ಹೋಗುತ್ತಾರೆ. ನೀರು ಕಾಯಿಸಲು ಬಳಸುತ್ತಾರೊ ಅಥವಾ ಗೊಬ್ಬರದ ಗುಂಡಿಗೆ ಹಾಕುತ್ತಾರೊ’ ಎಂದುಕೊಂಡು, ಕಾಲೇಜಿಗೆ ಬಂದು ಕೆಲಸದಲ್ಲಿ ತೊಡಗಿಕೊಂಡೆ. ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ, ಆ ತರಗೆಲೆಯ ರಾಶಿ ನೆನಪಾಗಿ ಕಣ್ಣ ಮುಂದೆ ಬಂತು. ’ಬೇಸಿಗೆಯಲ್ಲಿ ಚೆನ್ನಾಗಿ ಒಣಗಿದೆ. ಯಾರಾದರೂ ಕಿಡಿಗೇಡಿ ಒಂದು ಬೆಂಕಿಕಡ್ಡಿ ಗೀರಿ ಒಗೆದರೆ ಅಥವಾ ಬೀಡಿ ಸೇದಿ ತುಂಡನ್ನು ಆ ರಾಶಿಯೊಳಗೆ ಬಿಸಾಕಿದರೆ ದಗ್ಗನೆ ಹತ್ತಿ ಉರಿಯುತ್ತದೆ. ಆಗ ನನ್ನ ಕಾರಿಗೂ ಬೆಂಕಿ ತಗುಲಿಕೊಳ್ಳಬಹುದಲ್ಲ’ ಎನ್ನಿಸಿತು. ಮನಸ್ಸಿನಲ್ಲಿ ಒಂದು ರೀತಿಯ ಅವಾಚ್ಯ ವೇದನೆ ಶುರುವಾಗಿಬಿಟ್ಟಿತು. ಸುಮಾರು ಒಂದು ಗಂಟೆಯವರೆಗೂ ನಾನು ಆ ಹಿಂಸೆಯನ್ನು ನಾನು ಅನುಭವಿಸಿದ್ದೇನೆ. ತಕ್ಷಣ ಹೋಗಿ ಬೇರೆಡೆಗೆ ನಿಲ್ಲಿಸಿ ಬರಲೇ ಎನ್ನಿಸಿದ್ದೂ ಇದೆ. ಕೆಲಸದ ಒತ್ತಡದಿಂದ ಹಾಗೂ ಮತ್ತೆ ನೆರಳಿರುವ ಪಾರ್ಕಿಂಗ್ ಸಿಗುತ್ತದೊ ಇಲ್ಲವೊ ಎಂದುಕೊಂಡು ಆ ಕ್ಷಣಕ್ಕೆ ಅದನ್ನು ಮನಸ್ಸು ನಿರಾಕರಿಸಿದರೂ ಆ ಅವಾಚ್ಯ ವೇದನೆಯ ಕಳವಳವನ್ನು ನಾನು ಅನುಭವಿಸಿದ್ದೇನೆ. ಮದ್ಯಾಹ್ನ ಊಟದ ಸಮಯದಲ್ಲಿ ಹೊರಗೆ ಬಂದಾಗ ಕಾರಿನ ಕಡೆಯೇ ನಡೆದು ನೋಡಿದೆ. ಕಾರು ಹಾಗೇ ನಿಂತಿತ್ತು; ತರಗೆಲೆಯ ರಾಶಿಯೂ ಹಾಗೇ ಇತ್ತು. ಊಟ ಮುಗಿಸಿ ವಾಪಸ್ಸು ಬರುವಾಗ ಬಿಸಿಲ ಧಗೆ ವಿಪರೀತವಾಗಿದ್ದುದಲ್ಲದೆ, ನನಗೆ ಮತ್ತೆ ಬೆಂಕಿ ಹತ್ತಿಕೊಂಡ ತರಗೆಲೆಯ ರಾಶಿ ಕಣ್ಣ ಮುಂದೆ ಬಂತು. ಇನ್ನು ತಡೆಯಲಾರೆನು ಎಂದುಕೊಂಡು ಕಾರನ್ನು ಅಲ್ಲಿಂದ ತೆಗೆದು ಬೇರೆಡೆ ಸೂಕ್ತವಾದ ಜಾಗವನ್ನು ಹುಡುಕಿ ಕಾಲೇಜಿಗೆ ಬಂದೆ.
ಸಂಜೆ ನಾಲ್ಕರ ಹೊತ್ತಿಗೆ ಬಿಡುವಾಯಿತು. ಈಗಾಗಲೇ ಓದಿ ಮುಗಿಸಿದ್ದ, ’ಎದೆಗೆ ಬಿದ್ದ ಅಕ್ಷರ’ ಪುಸ್ತಕವನ್ನು ತೆಗೆದುಕೊಂಡು, ಅನೈಚ್ಛಿಕವಾಗಿ ಒಂದು ಕಡೆ ತೆರೆದೆ. ಅದು ೧೦ನೆಯ ಪುಟ. ಅಲ್ಲಿದ್ದ ಲೇಖನದ ಹೆಸರು ’ಮೂರ್ಛಾವಸ್ಥೆಯಲ್ಲಿ ಕಾರುಣ್ಯ’. ಸುಮ್ಮನೆ ಓದಿದೆ. ಶಿವಮೊಗ್ಗದಿಂದ ಬಂದಿದ್ದ ಡಾ. ಅಶೋಕ ಪೈ ಅವರು ದೇವನೂರರಿಗೆ ಹೇಳಿದ ಒಂದು ಘಟನೆಯನ್ನು ಅದು ಒಳಗೊಂಡಿದೆ. ಮನಸ್ಸಿನ ಬಗ್ಗೆ ನಡೆದಿರುವ ಸಂಶೋಧನೆಯೊಂದರ ಪ್ರಕಾರ, ’ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.... ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುವುದೇನೊ. ಈ ಅನುಕಂಪನ ನಿಜವು ಇಡೀ ಜೀವಸಂಕುಲವನ್ನೆ ಒಂದು ಎಂದು ಹೇಳುತ್ತದೆ’. ಇದಕ್ಕೆ ಪೂರಕವಾಗಿ ಡಾ. ಅಶೋಕ ಪೈ ಅವರು ಕೊಟ್ಟಿರುವ ಉದಾಹರಣೆ ಇದು. ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವ ಹೊತ್ತಿನಲ್ಲೇ, ಪಕ್ಕದ ಇನ್ನೊಂದು ಕೊಠಡಿಯಲ್ಲಿ ಒಂದಷ್ಟು ಜನ ಇಸ್ಪೀಟ್ ಆಡುತ್ತಲೊ, ಏನೊ ಮಾತುಕತೆಯಲ್ಲೊ ನಿರತರಾಗಿರುತ್ತಾರೆ. ಟೀವಿಯಲ್ಲಿ ಕೊಲೆಯ ಸುದ್ದಿಯೊಂದನ್ನು ನೋಡಿದ ಈ ರೂಮಿನ ಜನ ಅನುಭವಿಸಿದ ಭಾವದ ಒಂದೆಳೆಯನ್ನು ಪಕ್ಕದ ಕೊಠಡಿಯಲ್ಲಿರುವವರೂ ಅನುಭವಿಸಿರುತ್ತಾರೆ. ಈ ರೂಮಿನವರ ದುಗುಡ ಆ ರೂಮಿನಲ್ಲಿದ್ದವರ ಮನಸ್ಸಿಗೂ ತಟ್ಟಿರುತ್ತದೆ. ಅದೇ ಟೀವಿ ರೂಮಿನಲ್ಲಿರುವ ಜನ ಹಾಡನ್ನೊ ನೃತ್ಯವನ್ನೊ ನೋಡಿ ಸಂತುಷ್ಟ ಭಾವವನ್ನು ಅನುಭವಿಸುತ್ತಿದ್ದರೆ, ಇತ್ತ ಈ ಕೊಠಡಿಯಲ್ಲಿದ್ದವರ ಮನಸ್ಸಿನ ಮೇಲೂ ಸ್ವಲ್ಪ ಮಟ್ಟಿನ ಸಂತೋಷದ ಭಾವನೆ ಉಂಟಾಗುವುದಂತೆ. ಇದು ಪರಸ್ಪರ ಎಂಬುದು ಎಂಬುದು ಮಾತ್ರ ನಿಜ. ಈ ಘಟನೆಯನ್ನು ಓದಿದಾಗ ನನಗೆ ’ಅಮೃತವಾಹಿನಿಯೊಂದು ಹರಿಯುತಲಿಹುದು ಮಾನವನ ಎದೆಯಿಂದಲೆದೆಗೆ’ ಎಂಬ ಕವಿವಾಣಿ ನೆನಪಾಯಿತು. ಜೊತೆಗೆ, ಸಂದರ್ಶನವೊಂದರಲ್ಲಿ ಜೋತಿಷ್ಯದ ಬಗ್ಗೆ ಉತ್ತರಿಸಿದ್ದ ಕುವೆಂಪು ’ಈಗ ಈ ಮೋಡ ಅಲ್ಲಿದೆ; ಈ ಮರ ಇಲ್ಲಿದೆ. ಇವುಗಳ ಸಂಬಂಧವೂ ಕೂಡ ಆ ಗ್ರಹಗತಿಗಳಷ್ಟೇ ಪರಿಣಾಮ ಬೀರುತ್ತೆ. ಇವುಗಳಿಗೂ ನಾವು ಮಾತಾಡೋದಿಕ್ಕೂ ಸಂಬಂಧ ಇದೇ ಅಂತ ನಾನು ಹೇಳ್ತಿನಿ’ ಎಂದಿದ್ದ ಮಾತು ನೆನಪಾಯಿತು. ಅಷ್ಟಕ್ಕೆ ಸಮಯ ಮುಗಿದಿದ್ದರಿಂದ ಪುಸ್ತಕ ಮಡಿಚಿಟ್ಟು, ಮನೆಗೆ ಹೊರಟೆ.
ಸಂಜೆ ಮತ್ತು ರಾತ್ರಿಯಿಡೀ. ನನ್ನ ಮಗಳಿಗೆ ಬಹುದಿನದಿಂದ ಹೇಳುತ್ತಾ ಬಂದಿದ್ದ, ಒಂದು ಪುಟ್ಟ ಅಕ್ವೇರಿಯಂ ಸಿದ್ಧಪಡಿಸಿಕೊಡುವುದರಲ್ಲಿ ಕಳೆದು ಹೋಯಿತು. ಟೀವಿ ಹಾಕಿ ನ್ಯೂಸ್ ಕೂಡಾ ನೋಡಲಾಗಿರಲಿಲ್ಲ. ಬೆಳಿಗ್ಗೆ ಎದ್ದು ಎಂದಿನಂತೆ, ಪೇಪರ್ ಕೈಗೆತ್ತಿಕೊಂಡಾಗ, ಬೆಂಗಳೂರಿನ ಮುರುಗೇಶಪಾಳ್ಯದಲ್ಲಿ ಇನ್‌ಫ್ಯಾಂಟ್ ಟ್ರಾವಲ್ ಸರ್ವೀಸ್ ಘಟಕದಲ್ಲಿ ನಡೆದ ಅಗ್ನಿ ಅನಾಹುತ ಕಣ್ಣಿಗೆ ಬಿತ್ತು. ಬೆಂಕಿ ಅನಾಹುತ ಎಂದ ತಕ್ಷಣ ಮನಸ್ಸಿನಲ್ಲಿ ಒಂದು ರೀತಿಯ ಹಳಹಳಿಕೆ ಶುರುವಾಯಿತು. ಅದು ನಾನು ಈಗಾಗಲೇ ಅನುಭವಿಸಿದ್ದ ಒಂದು ಭಾವ ಎಂದು ಮನಸ್ಸಿಗೆ ಹೊಳೆಯಿತು. ನೆನ್ನೆ ಸುಮಾರು ಹನ್ನೊಂದರಿಂದ ಒಂದು ಘಂಟೆಯವರೆಗೂ ನನ್ನ ಮನಸ್ಸು ಅನುಭವಿಸಿದ್ದ ಭಾವವೇ ಅದಾಗಿತ್ತು. ತರಗೆಲೆ, ಕಾರು, ಬೆಂಕಿ ಅನಾಹುತ ಇವುಗಳೆಲ್ಲವೂ ಮನಸ್ಸಿಗೆ ಬಂದವು. ಅದರ ಹಿಂದೆಯೇ ದೇವನೂರರ ’ಎದೆಗೆ ಬಿದ್ದ ಅಕ್ಷರ’ ಕೃತಿಯ ಹತ್ತನೆಯ ಪುಟದ ಮೂರ್ಛಾವಸ್ಥೆಯಲ್ಲಿ ಕಾರುಣ್ಯ ಎಂಬ ಪುಟ್ಟ ಬರಹವೂ ನೆನಪಾಯಿತು.
ಸಾಹಿತ್ಯ ಜೀವನದ ಪ್ರತಿಕರತಿ ಎಂಬ ಮಾತಿದೆ. ಈಗ ಹೇಳಿ. ಈ ಮೇಲಿನ ಶೀರ್ಷಿಕೆಗೂ ಕಳೆದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ನನ್ನ ಪ್ರಜ್ಞೆಯಾವರಣದಲ್ಲಿ ನಡೆದ ಘಟನೆಗಳಿಗೂ, ಮನಸ್ಸು ಅನುಭವಿಸಿದ್ದ ಭಾವನೆಗಳಿಗೂ ಒಂದಕ್ಕೊಂದು ಸಂಬಂಧವಿಲ್ಲವೆ?

Friday, March 15, 2013

ನಿಷ್ಕಾಮ ಕರ್ಮಯೋಗಿ - ಅಭಿನವ ಗಾಂಧಿ : ಶ್ರೀ ಕಲ್ಯಾಣಸುಂದರಂ


ವೃತ್ತಿಯಿಂದ ಗ್ರಂಥಪಾಲಕರಾಗಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶ್ರೀ ಕಲ್ಯಾಣಸುಂದರಂ ಅವರು, ತಮ್ಮ ಸೇವಾವಧಿಯಲ್ಲಿ ದೊರಕಿದ ಸಂಬಳವನ್ನು ಸಂಪೂರ್ಣವಾಗಿ ದಾನ ಮಾಡಿ ವಿಶೇಷ ಸಾಧನೆ ಗೈದಿದ್ದಾರೆ. ಅವರೆಂದೂ ಸಂಬಳವನ್ನೇ ಡ್ರಾ ಮಾಡಿಕೊಳ್ಳಲಿಲ್ಲ. ಬಂದ ಸಂಬಳವೆಲ್ಲಾ ಅಗತ್ಯವಿರುವವರಿಗೆ ದಾನ ಮಾಡಿಬಿಡುತ್ತಿದ್ದರು. ಕೇವಲ ಸಂಬಳವನ್ನಷ್ಟೇ ಅಲ್ಲ, ತಮ್ಮ ನಿವೃತ್ತಿಯ ನಂತರ ಬಂದ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು ಭವಿಷ್ಯನಿಧಿ ಹಣ, ನಂತರ ಬರುತ್ತಿರುವ ನಿವೃತ್ತಿವೇತನವನ್ನೂ ಇಡಿಯಾಗಿ ದಾನ ಮಾಡಿ ಆದರ್ಶಪ್ರಾಯರಾಗಿದ್ದಾರೆ. ಹೀಗೆ ಬಂದುದೆಲ್ಲವನ್ನೂ ದಾನ ಮಾಡಿದರೆ ಅವರ ಜೀವನ ನಡೆಯುತ್ತಿದ್ದುದ್ದು ಹೇಗೆ? ಅವರಿಗೆ ಬೇಕಾಗಿದ್ದ ಕನಿಷ್ಠ ಅಗತ್ಯಗಳಿಗಾಗಿ ಹೋಟೆಲೊಂದರಲ್ಲಿ ಮಾಣಿಯ ಕೆಲಸ ಮಾಡಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಂಪಾದಿಸಿಕೊಂಡು, ಅತ್ಯಂತ ಸರಳವಾದ ಆದರೆ ಅತ್ಯಂತ ಅರ್ಥಪೂರ್ಣವಾದ ಬದುಕನ್ನು ಬಾಳುತ್ತಿರುವವರು ಶ್ರೀ ಕಲ್ಯಾಣಸುಂದರಂ ಅವರು. ಹೀಗೆ ತಮಗೆ ಬಂದ ಸಂಬಳದ ಹಣವನ್ನೆಲ್ಲಾ ಬೇರೆಯವರಿಗೆ ಸಾಮಾಜಿಕ ಕಾರಣಗಳಿಗಾಗಿ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ವ್ಯಕ್ತಿ ಇವರೇ ಆಗಿದ್ದಾರೆ. ಇದು ಬದುಕಿರುವಾಗಿನ ಮಾತು. ಆದರೆ ತಾವು ಸತ್ತ ಮೇಲೂ ಈ ದಾನದ ಪ್ರಕ್ರಿಯೆ ಮುಂದುವರೆಯಬೇಕು ಎಂಬಂತೆ, ಮರಣಾನಂತರ ತಮ್ಮ ಕಣ್ಣು ಮತ್ತು ಇಡೀ ದೇಹವನ್ನು ತಿರುನಲ್ವೇಲಿ ಮೆಡಿಕಲ್ ಕಾಲೇಜಿಗೆ ದಾನ ನೀಡಿ, ಹಿಮಾಲಯದೆತ್ತರಕ್ಕೆ ಏರಿಬಿಟ್ಟಿದ್ದಾರೆ.
ಇವರ ಈ ಅತ್ಯಂತ ಅಪರೂಪದ ಸಾಧನೆಯನ್ನು ಗುರುತಿಸಿದ ವಿಶ್ವಸಂಸ್ಥೆ (ಯು.ಎನ್.ಒ.) ಕಲ್ಯಾಣಸುಂದರಂ ಅವರನ್ನು ಇಪ್ಪತ್ತನೆಯ ಶತಮಾನದ ವ್ಯಕ್ತಿ ಎಂದು ಘೊಷಿಸಿ ಗೌರವಿಸಿದೆ. ಇದನ್ನು ಗಮನಿಸಿದ ಅಮೇರಿಕಾದ ಸಂಸ್ಥೆಯೊಂದು ಕಲ್ಯಾಣಸುಂದರಂ ಅವರನ್ನು ಸಹಸ್ರಮಾನದ ವ್ಯಕ್ತಿ (ಮ್ಯಾನ್ ಆಫ್ ದಿ ಮಿಲೇನಿಯಂ) ಎಂದು ಘೋಷಿಸಿರುವುದು ಮಾತ್ರವಲ್ಲದೆ ಬರೋಬ್ಬರಿ ಮೂವತ್ತು ಕೋಟಿ ರೂಪಾಯಿಗಳನ್ನು ಕಲ್ಯಾಣಸುಂದರ ಅವರಿಗೆ ದತ್ತಿಯನ್ನಾಗಿ ನೀಡಿ ಮಹತ್ವದ ಸಾಧನೆ ಮಾಡಿತು. ಆದರೆ ಅದನ್ನೂ ಮೀರಿಸುವಂತೆ, ಕಲ್ಯಾಣಸುಂದರಂ ಅವರು ಹಾಗೆ ಬಂದ ಇಡೀ ಹಣವನ್ನು ಸಮಾಜದಲ್ಲಿ ಅಗತ್ಯವಿರುವವರಿಗೆ ದಾನ ಮಾಡಿ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿಬಿಟ್ಟರು! ತಮ್ಮ ಸೇವಾಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ’ಪಾಲಂ’ ಎಂಬ ಸೇವಾಸಂಸ್ಥೆಯನ್ನೇ ಕಟ್ಟಿದ್ದಾರೆ.
ಕಲ್ಯಾಣಸುಂದರಂ ಅವರು ಕೇವಲ ತಮಗೆ ಬಂದುದೆಲ್ಲವನ್ನು ಬೇರೆಯವರಿಗೆ, ಸಮಾಜಕ್ಕೆ ದಾನ ಮಾಡುವುದರಲ್ಲಷ್ಟೇ ತೃಪ್ತರಲ್ಲ; ತಮ್ಮ ವೃತಿಯಲ್ಲು ಅತ್ಯಂತ ಯಶಸ್ವಿಯಾಗಿದ್ದವರು. ಅವರೊಬ್ಬ ಉತ್ತಮ ಗ್ರಂಥಪಾಲಕ. ಅವರ ಗ್ರಂಥಾಲಯದ ಬಗೆಗಿನ ಸಾಧನೆಯನ್ನು ಗುರುತಿಸಿದ ಕೇಂದ್ರಸರ್ಕಾರ ಅವರಿಗೆ ಭಾರತದ ಅತ್ಯುತ್ತಮ ಗ್ರಂಥಪಾಲಕ (ಬೆಸ್ಟ್ ಲೈಬ್ರೇರಿಯನ್ ಇನ್ ಇಂಡಿಯಾ) ಎಂಬ ಗೌರವನ್ನು ನೀಡಿದೆ. ಪ್ರಪಂಚದ ಹತ್ತು ಉತ್ತಮ ಗ್ರಂಥಪಾಲಕರಲ್ಲಿ ಇವರೂ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ’ದಿ ಇಂಟರ್‌ನ್ಯಾಷನಲ್ ಬಯಾಗ್ರಫಿಕಲ್ ಸೆಂಟರ್’ ಕೇಂಬ್ರಿಡ್ಜ್ ಇವರು ಕಲ್ಯಾಣಸುಂದರಂ ಅವರನ್ನು ’ಇಪ್ಪತ್ತನೆಯ ಶತಮಾನದ ಅಸಮಾನ್ಯ ವ್ಯಕಿ’ ಎಂದು ಘೊಷಿಸಿದ್ದಾರೆ.
ಕಲ್ಯಾಣಸುಂದರಂ ನಮ್ಮನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ. ತಿರುನಲ್ವೇಲಿಯ ಮೇಲಕರಿವೇಲಂಕುಲಮ್ ಎಂಬ ೧೯೫೩ರ ಆಗಸ್ಟ್ ತಿಂಗಳಿನಲ್ಲಿ ಶ್ರೀಯುತರ ಜನನ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸುಂದರಂ ಅವರಿಗೆ ತಾಯಿಯೇ ಸರ್ವಸ್ವವೂ ಆಗಿದ್ದರು. ದೀನ ದಲಿತರ ಸೇವೆಯ ಮಹತ್ವವನ್ನು, ಅದರಿಂದ ದೊರಕುವ ಆತ್ಮತೃಪ್ತಿಯನ್ನು ಮೊದಲು ಕಲ್ಯಾಣಸುಂದರಂ ಅವರಿಗೆ ತೋರಿಸಿಕೊಟ್ಟವರು ಸ್ವತಃ ಅವರ ಮಾತೃಶ್ರೀಯವರೆ! ಅವರ ಪಾಲಿಗೆ ತಾಯಿಯೇ ಪೋಷಕ ಹಾಗೂ ಪ್ರೇರಕ!
ಬಡತನದಲ್ಲಿ ಅಮ್ಮನ ಪೋಷಣೆಯಲ್ಲಿ ವಿದ್ಯಾಭ್ಯಾಸ ನಡೆಯಿತು. ಗ್ರಂಥಾಲಯ ವಿಜ್ಞಾನ ಪದವಿಗಾಗಿ ಅವರು ಮಧುರೈ ಕಾಮರಾಜ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ ಅವರಿಗೆ ಅತ್ಯುನ್ನತ ಶ್ರೇಣಿಯ ಫಲಿತಾಂಶವನ್ನು ತಂದುಕೊಡುತ್ತದೆ. ಗ್ರಂಥಾಲಯ ವಿಜ್ಞಾನದಲ್ಲಿ ಚಿನ್ನದ ಪದಕದೊಂದಿಗೆ ಪದವಿ ಗಳಿಸುವುದರ ಜೊತೆಗೆ, ಸಾಹಿತ್ಯ ಮತ್ತು ಇತಿಹಾಸದಲ್ಲೂ ಸ್ನಾತಕೋತ್ತರ ಪದವಿ ಗಳಸಿದ್ದಾರೆ. ತಮಿಳುನಾಡಿನ ಟ್ಯುಟಿಕಾರಿನ್ ಜಿಲ್ಲೆಯ ಶ್ರೀವೈಕುಂಠಂ ಎಂಬಲ್ಲಿಯ ಕುಮಾರಕುರುಪಾರ ಆರ‍್ಟ್ಸ್ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ತಮ್ಮ ಇಡೀ ಬದುಕನ್ನು ಸವೆಸಿದವರು.
ಸುಂದರಂ ಅವರು ಕಾಲೇಜು ಸೇರಿದ್ದಾಗ, ಚೀನಾ-ಭಾರತ ಯುದ್ಧದ ಕಾರ್ಮೋಡ ಆವರಿಸಿಬಿಟ್ಟಿತ್ತು. ಯುದ್ಧಕ್ಕಾಗಿ, ಯುದ್ಧ ಸಂತ್ರಸ್ತರಿಗಾಗಿ ಸಾರ್ವಜನಿಕವಾಗಿ ನಿಧಿಸಂಗ್ರಹ ಮೊದಲಾದ ಕಾರ್ಯಗಳು ನಡೆಯುತ್ತಿದ್ದವು. ಆಗ ಸುಂದರಂ ಅವರು ತಮ್ಮ ಬಳಿಯಿದ್ದ ಚಿನ್ನದ ಸರವೊಂದನ್ನು, ಅಂದಿನ ತಮಿಳುನಾಡು ಮುಖ್ಯಮಂತ್ರ ಕಾಮರಾಜ್ ಅವರಿಗೆ ಯುದ್ಧನಿಧಿಯನ್ನಾಗಿ ನೀಡುತ್ತಾರೆ. ಆ ಸಂದರ್ಭದಲ್ಲಿ ’ಆನಂದ ವಿಕಟನ್’ ಪತ್ರಿಕೆಯ ಸಂಪಾದಕರಾಗಿದ್ದ ಬಾಲಸುಬ್ರಮಣಿಯನ್ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಆಗ ಸುಂದರಂ ಅವರು, ತಾವು ಚಿನ್ನದ ಸರವನ್ನು ಯುದ್ಧನಿಧಿಗೆ ದಾನ ನೀಡಿದ್ದನ್ನು ತಿಳಿಸಿ, ಅದರ ಬಗ್ಗೆ ಪತ್ರಿಕೆಯಲ್ಲಿ ಬರೆಯುವಂತೆ ಕೇಳಿಕೊಳ್ಳುತ್ತಾರೆ. ಆಗ ಬಾಲಸುಬ್ರಮಣಿಯನ್ ಅವರು ’ನಿನ್ನ ಸ್ವಂತ ಸಂಪಾದನೆಯ ಏನನ್ನಾದರೂ ದಾನ ಮಾಡಿದಾಗ ನಿನ್ನ ಬಗ್ಗೆ ಬರೆಯುತ್ತೇನೆ’ ಎಂದು ಸುಂದರಂ ಅವರನ್ನು ಕಳುಹಿಸಿಬಿಡುತ್ತಾರೆ. ಏಕೆಂದರೆ ಆ ಚಿನ್ನದ ಸರ ಅವರ ತಾಯಿಯ ಕೊಡುಗೆಯಾಗಿತ್ತು. ಬಾಲಸುಬ್ರಮಣಿಯನ್ ಅವರ ಮಾತು ಕಲ್ಯಾಣಸುಂದರಂ ಅವರೊಳಗಿದ್ದ ಚೇತನವನ್ನು ಬಡಿದೆಬ್ಬಿಸಿಬಿಟ್ಟಿತು. ಅಂದು ಒಂದು ಮಾತನ್ನೂ ಅವರು ಆಡುವುದಿಲ್ಲ. ಅವರ ಮಾತನ್ನು ತಮ್ಮ ಬದುಕಿನ ಸವಾಲು ಎಂಬಂತೆ ಸ್ವೀಕರಿಸಿಬಿಡುತ್ತಾರೆ. ಮುಂದೆ ಗ್ರಂಥಪಾಲಕರಾಗಿ ವೃತ್ತಿಜೀವನ ಆರಂಭಿಸಿದ ಮೊದಲ ದಿನದಿಂದಲೇ ಅವರ ದಾನದ ಪ್ರಕ್ರಿಯೆ ಆರಂಭವಾಗಿಬಿಡುತ್ತದೆ. ತಮ್ಮ ಗಳಿಕೆಯನ್ನು ಮಾತ್ರವಲ್ಲದೆ, ವಂಶಪಾರಂಪರ್ಯವಾಗಿ ತಮಗೆ ಬಂದ ಆಸ್ತಿಯೆಲ್ಲವನ್ನೂ ದಾನ ಮಾಡಿಬಿಡುತ್ತಾರೆ. ಬಂದ ಸಂಬಳವನ್ನೆಲ್ಲಾ ದಾನ ಮಾಡುತ್ತ, ಮುಂದೆ ೧೯೯೮ರಲ್ಲಿ ವೃತ್ತಿಯಿಂದ ನಿವೃತ್ತರಾದಾಗ ಬಂದ ಭವಿಷ್ಯನಿಧಿ, ನಿವೃತ್ತಿವೇತನ ಎಲ್ಲವನ್ನೂ ದಾನದ ಪಟ್ಟಿಗೆ ಸೇರಿಸಿಬಿಡುತ್ತಾರೆ! ಅವರ ವಿರೋಧವನ್ನು ಲೆಕ್ಕಿಸದೆ, ಅಂದಿನ ಜಿಲ್ಲಾಧಿಕಾರಿಗಳು ಅವರನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಯನ್ನು ಹೊರಜಗತ್ತಿಗೆ ಬಿಚ್ಚಿಡುತ್ತಾರೆ.
ಕಲ್ಯಾಣಸುಂದರಂ ಅವರ ಬದುಕಿನಲ್ಲೊಮ್ಮೆ ತರಗತಿಯಲ್ಲಿ ಗಾಂಧೀ ತತ್ವದ ಬಗ್ಗೆ ಉಪನ್ಯಾಸ ಮಾಡವ ಅವಕಾಶ ದೊರೆಯುತ್ತದೆ. ಗಾಂಧೀಜಿಯವರ ಸರಳತೆ, ತ್ಯಾಗ, ಸತ್ಯಪ್ರೇಮ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದ ಕಲ್ಯಾಣಸುಂದರಂ ಅವರಿಗೆ, ತಾವು ಧರಿಸಿರುವುದು ದುಬಾರಿಯಾದ ಉಡುಪು ಎನ್ನಿಸಿಬಿಡುತ್ತದೆ. ಅನುಕರಣೀಯ ಸತ್ಯಕ್ಕಿಂತ ಆಚರಣೀಯ ಸತ್ಯವೇ ಶ್ರೇಷ್ಠ ಎಂಬಂತೆ, ಅಂದೇ ಅವರು ಖಾದಿಧಾರಿಯಾಲು ನಿರ್ಧರಿಸಿಬಿಡುತ್ತಾರೆ. ಅಂದಿನಿಂದ ಸರಳತೆಯೆ ಮತ್ತೊಂದು ಹೆಸರಾದ ಖಾದಿ ಸುಂದರಂ ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಕಲ್ಯಾಣಸುಂದರಂ ಅವರಿಂದ ಪ್ರಭಾವಿತರಾಗಿರುವ ಬಹುದೊಡ್ಡ ವಿದ್ಯಾರ್ಥಿಸಮುದಾಯವೇ ಅವರೊಂದಿಗೆ ಇದೆ. ಪಾಲಂ ಸಂಸ್ಥೆ ಅತ್ಯಂತ ಯಶಸ್ವಿಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಲ್ಲಿ ಈ ವಿದ್ಯಾರ್ಥಿ ಸಮುದಾಯದ ಪಾಲೂ ಇದೆ. ಮಕ್ಕಳ ಮೇಲೆ ಅತ್ಯಂತ ಪ್ರಭಾವ ಬೀರುವ ಸಾಮರ್ಥ್ಯ ಶ್ರೀ ಕಲ್ಯಾಣಸುಂದರಂ ಅವರಿಗೆ ತಮ್ಮ ಅರ್ಥಪೂರ್ಣ ಬದುಕಿನಿಂದಲೇ ಲಭಿಸಿದೆ ಎನ್ನಬಹುದು.
ಕಲ್ಯಾಣಸುಂದರಂ ಅವರ ಪಾಲಂ ಸೇವಾಸಂಸ್ಥೆ, ದಾನಿಗಳ ಮತ್ತು ದಾನ ಪಡೆಯುವವರ ನಡುವಿನ ಸೇತುವಿನಂತೆ ಕೆಲಸ ಮಾಡುತ್ತಿದೆ. ಹಣ, ವಸ್ತುಗಳು ಹೀಗೆ ಬರುವ ದಾನಗಳೆಲ್ಲವನ್ನೂ ಸಂಗ್ರಹಿಸಿ, ಅದನ್ನು ಅಗತ್ಯವಿರುವ ಜನರಿಗೆ ಸೂಕ್ತವಾಗಿ ತಲುಪಿಸುವ ಫಲಾಪೇಕ್ಷೆಯಿಲ್ಲದ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳಿಂದ ನಿರ್ಗತಿಕರಾದವರಿಗೆ, ಪುನಃ ಅವರ ಬದುಕನ್ನು ಕಟ್ಟಿಕೊಳ್ಳಲು ಪಾಲಂ ಸಂಸ್ಥೆ ತನ್ನ ಸೇವೆಯನ್ನು ನೀಡಿದೆ. ಸರ್ವೋದಯ ತತ್ವದಲ್ಲಿ ನಂಬಿಕೆಯಿಟ್ಟಿರುವ ಕಲ್ಯಾಣಸುಂದರಂ ಅವರು, ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಮುಚ್ಚಿಹೋಗುವವರೆಗೆ ಯಾರೂ ಸುರಕ್ಷಿತರಲ್ಲ ಎನ್ನುತ್ತಾರೆ. ಆದ್ದರಿಂದ ಯಾವುದಾದರು ರೂಪದಲ್ಲಿ ನಮ್ಮ ಸಮಾಜಮುಖಿ ಸೇವೆ ಮುಂದುವರೆಯಬೇಕೆಂದು ಅವರು ಆಶಿಸುತ್ತಾರೆ. ತಮ್ಮ ಪಾಲಂ ಸಂಸ್ಥೆಯ ಬಗ್ಗೆ ಅವರಿಗೊಂದು ಕನಸಿದೆ. ಆ ಸಂಸ್ಥೆಯ ಮೂಲಕ ಅತ್ಯಂತ ಆಧುನಿಕ ಉಪಕರಣಗಳಿಂದ ಕೂಡಿದ ರಾಷ್ಟ್ರಮಟ್ಟದ ಡಿಜಿಟಲ್ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಅದು ಸಮಾಜದ ಎಲ್ಲ ಸ್ತರದ ಜನರಿಗೂ ಉಪಯೋಗವ ರೀತಿಯಲ್ಲಿರಬೇಕೆಂಬುದು ಅವರ ಆಸೆ. ಒಳ್ಳೆಯ ಗ್ರಂಥಪಾಲಕ ಎಲ್ಲದರ ಬಗ್ಗೆಯೂ ವಿಶಾಲವಾದ ಜ್ಞಾನವನ್ನು ಹೊಂದಿದವನಾಗಿರಬೇಕು, ಜ್ಞಾನದ ವಿಷಯದಲ್ಲಿ ತಾರತಮ್ಯವಿರಬಾರದು ಎಂದು ಅವರು ಬಯಸುತ್ತಾರೆ.
ತಮಿಳುನಾಡಿನಲ್ಲೊಂದು ಅಂತರಾಷ್ಟ್ರೀಯ ಮಟ್ಟದ ಮಕ್ಕಳ ವಿಶ್ವವಿದ್ಯಾಲಯವನ್ನು ಕಟ್ಟಬೇಕೆಂಬ ಅಪೇಕ್ಷೆಯೂ ಇದೆ. ಸಚ್ಚಾರಿತ್ರ್ಯಯವುಳ್ಳ ಜನರ ಪ್ರಯತ್ನದಿಂದ ಮಾತ್ರ ಮಹತ್ವವಾದುದನ್ನು ಸಾಧಿಸಲು ಸಾಧ್ಯ ಎಂಬುದು ಅವರ ನಂಬಿಕೆ. ಸರಿದಾರಿಯಲ್ಲಿ ಸಚ್ಚಾರಿತ್ರ್ಯದಿಂದ ಬದುಕುವ ವ್ಯಕ್ತಿಯ ಮೌನ ಮಾತಿಗಿಂತ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ನಿನ್ನನ್ನು ನೀನು ಕಂಡುಕೊಳ್ಳಬೇಕಾದರೆ ಪರರ ಸೇವೆಯಲ್ಲಿ ನಿನ್ನನ್ನು ನೀನು ಮೊದಲು ಕಳೆದುಕೊಳ್ಳಬೇಕು ಎಂಬ ಮಹಾತ್ಮ ಗಾಂಧಿಜಿಯವರ ನುಡಿಯ ಮೂರ್ತರೂಪವೇ ಶ್ರೀ ಕಲ್ಯಾಣಸುಂದರಂ.
ತಮ್ಮ ವಿಶಿಷ್ಟ ಸಾಧನೆಯಿಂದ ತೃಪ್ತರಾಗಿರುವ ಕಲ್ಯಾಣಸುಂದರಂ ಅವರು ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದಾರೆ. ತಮಿಳು ಸಿನಿಮಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುಂದರಂ ಅವರನ್ನು ತಮ್ಮ ತಂದೆಯಾಗಿ ದತ್ತು ತೆಗೆದುಕೊಂಡು ಇನ್ನೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಮಕ್ಕಳಿಲ್ಲದವರು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಮಾತ್ರ ನೋಡಿದ್ದವರಿಗೆ, ದತ್ತಕದ ರೂಪದಲ್ಲಿ ಬೇರೊಬ್ಬ ವ್ಯಕ್ತಿಯನ್ನೇ ತಂದೆಯನ್ನಾಗಿ ಸ್ವೀಕರಿಸಿದ ರಜನೀಕಾಂತರ ಈ ನಡೆ ವಿಶಿಷ್ಟವಾಗಿ ಕಂಡರೆ ಆಶ್ಚರ್ಯವೇನಿಲ್ಲ. ಅದಕ್ಕೆಲ್ಲಾ ಕಾರಣ ಕಲ್ಯಾಣಸುಂದರಂ ಅವರ ಅತ್ಯಂತ ಸರಳ, ನಿಷ್ಕಾಮ, ನಿಷ್ಕಳಂಕ, ನಿಷ್ಕಪಟ ಮನಸ್ಸು ಮತ್ತು ಬದುಕು!
ರಾಜಕಾರಣಿಗಳು, ಕಲಾವಿದರೂ, ಕೈಗಾರಿಕೋದ್ಯಮಿಗಳು, ಮಾದ್ಯಮದವರು, ಕ್ರೀಡಾಪಟುಗಳು, ಅಧಿಕಾರಿಗಳು, ರೈತರು, ವಿದ್ಯಾರ್ಥಿಗಳು ಹೀಗೆ ಪ್ರತಿಯೊಬ್ಬ ಭಾರತೀಯನೂ ಕಲ್ಯಾಣಸುಂದರಂ ಅವರ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕಾಗಿದೆ; ಅವರನ್ನು ಗೌರವಿಸಬೇಕಾಗಿದೆ. ಆದರೆ ’ಹಿತ್ತಲ ಗಿಡ ಮದ್ದಲ್ಲ’, ’ಮನೆ ಸಾರಿಗೆ ರುಚಿ ಕಮ್ಮಿ’ ಎಂಬ ಗಾದೆಗಳಂತೆ ಭಾರತೀಯನೊಬ್ಬನ ಈ ಅಪ್ರತಿಮ ಸಾಧನೆಯನ್ನು ಭಾರತೀಯರೇ ಗುರುತಿಸಲಿಲ್ಲ. ಹೀಗೆ ಗುರುತಿಸಿದ ಮೇಲೆಯೂ ಅವರನ್ನು ಗೌರವಿಸುವ ಸನ್ನಡತೆಯನ್ನು ನಾವು ತೋರಲಿಲ್ಲ ಎಂಬುದು ಮಾತ್ರ ವಿಷಾದನೀಯ. ಕೆಲವು ಸಿನಿಮಾಗಳಲ್ಲಿ ನಟಿಸಿದ ಆದರೆ ಹಲವಾರು ಕ್ರಮಿನಲ್ ಕೇಸುಗಳನ್ನು ಮೈಮೇಲೆಳೆದುಕೊಂಡಿರುವ ನಟನೊಬ್ಬನಿಗೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯನ್ನೇ ಕೊಡುವ, ನಟನೊಬ್ಬನ ವಿವಾಹ ವಿಚ್ಛೇಧನ ಸುದ್ದಿಯನ್ನೇ ದಿನವಿಡೀ ಸುದ್ದಿಯನ್ನಾಗಿಸುವ, ಸುಳ್ಳನ್ನೇ ಕಾಯಕ ಮಾಡಿಕೊಂಡಿರುವ ರಾಜಕಾರಣಿಗಳನ್ನೂ ಕರೆದು ಗೌರವ ಡಾಕ್ಟರೇಟ್ ನೀಡುವ, ಕೆಲವೇ ಸಿಕ್ಸರ್ ಬೌಂಡರಿ ಬಾರಿಸಿ ರಾತ್ರೋರಾತ್ರಿ ಹೀರೋಗಳಾದವರಿಗೆಲ್ಲಾ ರಾಷ್ಟ್ರೀಯ ಗೌರವವನ್ನು ನೀಡುವ ನಾವು, ಹೋಲಿಕೆಯೇ ಇಲ್ಲದ ಒಬ್ಬ ನಿಷ್ಕಾಮ ಕರ್ಮಯೋಗಿಗೆ ಮಾಡಿದ್ದಾದರು ಏನು? ಇದು ಪ್ರತಿಯೊಬ್ಬ ನಾಗರೀಕನೂ ತನಗೆ ತಾನೇ ಕೇಳಿಕೊಳ್ಳಬೇಕಾದ ಪ್ರಶ್ನೆಯೂ ಹೌದು; ಉತ್ತರಿಸಲೇಬೇಕಾದ ಪ್ರಶ್ನೆಯೂ ಹೌದು!
ಒಂದು ಮಾತಂತೂ ಸತ್ಯ: ನಮ್ಮ ಯಾವ ಪ್ರಶಂಸೆಯನ್ನೂ ಪ್ರಶಸ್ತಿಯನ್ನೂ ಮೀರಿದ ಬದುಕು ಕಲ್ಯಾಣಸುಂದರಂ ಅವರದ್ದು. ನಮ್ಮ ಪ್ರಶಸ್ತಿಗಳಿಂದ, ಪ್ರಶಂಸೆಯಿಂದ ಅವರಿಗೆ ಏನೂ ಆಗಬೇಕಿಲ್ಲ. ಆದರೆ ನಮಗೆ ನಾವೇ ಶುದ್ಧರಾಗಲು, ಕೊನೆಗೆ ಮನುಷ್ಯರಾಗಲು ಅದೊಂದು ಉತ್ತಮ ಅವಕಾಶವನ್ನು ಒದಗಿಸಬಲ್ಲುದು ಅಷ್ಟೆ!

Monday, March 11, 2013

ಪುಸ್ತಕಮನೆ ಹರಿಸಹರಪ್ರಿಯ : ಭಾಷಣ ಮತ್ತು ಸಂವಾದ

ಪುಸ್ತಕಮನೆ ಹರಿಹರಪ್ರಿಯ ಪ್ರಖರ ಭಾಷಣಕಾರರಲ್ಲಿ ಒಬ್ಬರು. ನೆನ್ನೆ ಶಿವರಾತ್ರಿಯ ದಿನ ರಾಜಾಜಿನಗರದ ಆಕೃತಿ ಪುಸ್ತಕಮಳಿಗೆಯಲ್ಲಿ ಅವರೊಂದಿಗೆ ಸಂವಾದ ಕಾರ್ಯಕ್ರಮವಿತ್ತು. ಮೊದಲು ಒಂದು ಗಂಟೆ ಪ್ರವೇಶಿಕೆಯ ರೀತಿಯಲ್ಲಿ ತಮ್ಮನ್ನು ತಾವು ಸಂವಾದಕ್ಕೆ ಹರಿಹರಪ್ರಿಯ ಅವರು ತೆರೆದುಕೊಂಡರು. ನವೋದಯೋತ್ತರ ಸಾಹಿತ್ಯ, ಸಾಹಿತಿಗಳ ಗೊಂದಲ, ಆತ್ಮವಂಚನೆ ಮೊದಲಾದವನ್ನು ನೇರಾ ನೇರಾ ಅವರು ತೆರದಿಟ್ಟ ರೀತಿ ಕೇಳುಗರ ಕಿವಿಗಳನ್ನು ನಿಮಿರಿಸುವಂತೆ ಮಾಡಿದ್ದಂತೂ ಸುಳ್ಳಲ್ಲ. ಆ ಇಡೀ ಕಾರ್ಯಕ್ರಮದ ಆಡಿಯೋವನ್ನು ಶ್ರೀಮತಿ ಲಕ್ಷ್ಮೀಪ್ರಸಾದ್ ಅವರು ತಮ್ಮ ಬ್ಲಾಗಿನಲ್ಲಿ ಹಾಕಿ ಉಪಕಾರ ಮಾಡಿದ್ದಾರೆ. ಪೂರ್ಣ ಭಾಷಣ ಮತ್ತು ಸಂವಾದ ಕೇಳಲು ಕೆಳಗಿನ ಲಿಂಕುಗಳನ್ನು ಬಳಿಸಿ.
ಶ್ರೀಮತಿ ಲಕ್ಷ್ಮೀಪ್ರಸಾದ್ ಅವರಿಗೆ ಧನ್ಯವಾದಗಳು


Audio recording and upload >>
http://laxmipras.blogspot.in/2013/03/an-interaction-with-pustaka-mane.html


Record music with Vocaroo >>
http://laxmipras.blogspot.in/2013/03/an-interaction-with-pustaka-mane_10.html

ಈ ಕಾರ್ಯಕ್ರಮದ ವಿಡಿಯೋಗಳನ್ನು ಯೂಟ್ಯೂಬಿನಲ್ಲಿ ನೋಡುವಂತೆ ಮಾಡಿದ, ಆಕೃತಿ ಗುರುಪ್ರಸಾದ್ ಅವರಿಗೆ ಧನ್ಯವಾದಗಳು.

ಭಾಗ - 1


ಭಾಗ - 2


ಭಾಗ - 3

Friday, March 01, 2013

ಚಂದ್ರಮಂಚಕೆ ಬಾ, ಚಕೋರಿ!

ಕುವೆಂಪು ಅವರ ಬಹು ಮಹತ್ವದ ಶೃಂಗಾರ ಗೀತೆಗಳಲ್ಲಿ ಚಂದ್ರಮಂಚಕೆ ಬಾ ಚಕೋರಿ ಎಂಬುದೂ ಒಂದು.
ಅದರ ಪೂರ್ಣಪಾಠ ಇದು.

ಚಂದ್ರಮಂಚಕೆ ಬಾ, ಚಕೋರಿ!

ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧು ಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನಾ!
ಬಾ, ಚಕೋರಿ! ಬಾ, ಚಕೋರಿ!
ಚಾತಕದೊಲು ಬಾಯಾರಿದೆ
ಚಕೋರ ಚುಂಬನ!


ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಚಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!


ಅದನ್ನು ಒಂದು ಬ್ಲಾಗಿನಲ್ಲಿ ಓದಿದ ಒಬ್ಬ ಸಹೃದಯ ಅದು ಅರ್ಥವಾಗಲಿಲ್ಲವೆಂದು ಗೋಳಾಡಿರುವುದು ಹೀಗೆ.

("""ಸುಮಾರು ವರುಷಗಳಿಂದ ಈ ಹಾಡನ್ನು ಕೇಳಿ ಆನಂದಿಸಿದ್ದೇನೆ. ಆದರೆ ಯಾವ ಸಾಲುಗಳು ಅರ್ಥವಾಗಿರಲಿಲ್ಲ ಅಲ್ಲೊಂದು ಇಲ್ಲೋಂದು ನುಡಿ ಬಿಟ್ಟು. ನನಗೆ ಕನ್ನಡ ಗೊತ್ತಿರುವುದೇ ಅಷ್ಟೇನೋ ಅಂದು ಕೊಂಡುಬಿಟ್ಟಿದ್ದೆ. ತುಂಬಾ ಜನಗಳಲ್ಲಿ ಅರ್ಥ ಕೇಳಿದರು ಸರಿಯಾರಿ ಯಾರಿಗೂ ಗೊತ್ತಿರಲಿಲ್ಲ. ಕುವೆಂಪು ಬರೆದಿರುವುದು, ತುಂಬಾ ಎತ್ತರದ ಕನ್ನಡದಲ್ಲಿದೆ ಅಂತ ಜಾರಿಕೆಯ ಮಾತು ಹೇಳಿಬಿಡುತಿದ್ದರು. ಒಂದು ದಿನ ನಾನೆ ನುಡಿಗಂಟು ಹಿಡಿದು ಕೂತೆ. ವೆಂಕಟ ಸುಬ್ಬಯ್ಯನವರ ನುಡಿಗಂಟಿನಲ್ಲಿ ಜಾಲಾಡಿದೆ, ಕಸ್ತೂರಿ ಕನ್ನಡದಲ್ಲಿ ಜಾಲಾಡಿದೆ. ಅಷ್ಟೂ ಕನ್ನಡ ನುಡಿಗಂಟಲ್ಲಿ ಎಷ್ಟೊಂದು ನುಡಿಗಳೇ ಸಿಗುತ್ತಿರಲಿಲ್ಲ. ತದನಂತರ ಒಂದು ದಿನ ಗೊತ್ತಾಯಿತು. ಈ ಹಾಡಲ್ಲಿ ಇರುವುದು ಕನ್ನಡ ನುಡಿಗಳಲ್ಲ ಬರಿ ಸಂಸ್ಕೃತ ನುಡುಗಳು ಅಂತ. ಹುಡುಕಿ ನೋಡಿದಾಗ ನೂರಕ್ಕೆ ತೊಂಬತ್ತು ನುಡಿಗಳು ಸಂಸ್ಕೃತ ನುಡಿಗಳೇ. ಹೇಗೆ ಅರ್ಥವಾಗಬೇಕು ಈ ಸಂಸ್ಕೃತ ನಮ್ಮಂತ ಹಳ್ಳಿ ಹೈದರಿಗೆ?? ಅಯ್ಯೋ ನನ್ನ ಕಸ್ತೂರಿ ಕನ್ನಡವೇ..ಅಯ್ಯೋ ಕನ್ನಡದ ರಸಕವಿಯೇ..ಯಾಕಪ್ಪ ಈಗೆ ಮಾಡಿದೆ ಅನ್ನಿಸಿಬಿಟ್ಟಿತು. ಗುರು ಅವತ್ತೆ ನನಗೆ ಕುವೆಂಪು ಮೇಲೆ ಇದ್ದ ಅಭಿಮಾನ ಕಿಂಚಿತ್ತಾದರು ಕಮ್ಮಿ ಆಯಿತು ನೋಡು.ಕನ್ನಡ ನಾಡಗೀತೆ ಜಯಭಾರತ ಜನನಿಯ ತನು ಜಾತೆ ಇದು ಕೂಡ ಸಂಸ್ಕೃತಮಯ ಗುರು. ಬರಿ ಹೋಳು. ನೇರವಾಗಿ ಕನ್ನಡದ ಬದಲು ಸಂಸ್ಕೃತನೆ ಓದಬಹುದಲ್ಲ!! ಅನಾನಿಮಸ್ ಹೇಳುವಂತೆ ಎಲ್ಲದು ಕಂಸ್ಕೃತವೆ. ತುಂಬಾನೆ ಬೌನ್ಸರ್.""" - ನನ್ನಿ ಸ್ವಾಮಿ)

ಅದಕ್ಕೆ ನನ್ನ ಸಮಾಧಾನ ಇದು.
ಇಲ್ಲಿನ ಕೆಲವರ ಗೋಳಾಟವನ್ನು ಗಮನಿಸಿದರೆ ಅಯ್ಯೊ ಎನ್ನಿಸುತ್ತದೆ. ತಮಗೆ ಅರ್ಥವಾಗಲಿಲ್ಲ ಎಂದ ಮಾತ್ರಕ್ಕೆ, ಕವಿ ಅದನ್ನು ಬರೆಯಲೇ ಬಾರದು ಎಂಬ ನಿಯಮವೆಲ್ಲಿದೆ ಸ್ವಾಮಿ? ಸ್ವಲ್ಪಮಟ್ಟಿನ ಭಾಷಾಶಾಸ್ತ್ರದ ಪರಿಚಯವಿದ್ದ ಯಾವನೇ ಆಗಲೀ ನಿಮ್ಮ ಮಾತನ್ನು ಒಪ್ಪುವುದಿಲ್ಲ. ಒಂದು ಭಾಷೆ ಬೆಳೆಯುವುದೇ ಅದರ 'ಸ್ವೀಕರಣ' ಮತ್ತು 'ಧಾರಣ' ಗುಣದ ಶಕ್ತಿಯಿಂದ. ಅದು ಹೆಚ್ಚಾಗಿರುವುದರಿಂದಲೇ ಇಂದು ಇಂಗ್ಲಿಷ್ ಪ್ರಪಂಚದ ಶಕ್ತ ಭಾಷೆಗಳಲ್ಲಿ ಒಂದಾಗಿದೆ' ಇದನ್ನು ಯಾರು ಒಪ್ಪಲಿ, ಬಿಡಲಿ! ಕನ್ನಡದ 'ಸ್ವೀಕರಣ' ಮತ್ತು 'ಧಾರಣ' ಗುಣ ಚೆನ್ನಾಗಿಯೇ ಇದೆ. ಉದಾ: 'ಬಸ್' BUS ಎಂಬ ಇಂಗ್ಲಿಷ್ ಪದವನ್ನು ನಾವು ಕನ್ನಡೀಕರಿಸಿಕೊಂಡಿರುವ ರೀತಿಯನ್ನೊಮ್ಮೆ ಗಮನಿಸಿ. ಬಸ್ಸು, ಬಸ್ಸಿಗೆ, ಬಸ್ಸಿನಿಂದ, ಬಸ್ಸಿನಲ್ಲಿ, ಬಸ್ಸಿಗಾಗಿ, ಬಸ್ಸಲ್ಲಿ, ಬಸ್ಸಿಗೋಸ್ಕರ... ಇತ್ಯಾದಿ... ಆದರೆ ಮಡಿವಂತಿಕೆ ಅದನ್ನು ವಿರೋಧಿಸುತ್ತದೆ. ಇದು ಕನ್ನಡಿಗರ ದೌರ್ಭಾಗ್ಯವೇ ಸರಿ!
ಇನ್ನು ಈ ಪದ್ಯದ ಪದಗಳ ಅರ್ಥಕ್ಕಾಗಿ ನೀವು ಹುಡುಕಾಡಿರುವ ನಿಘಂಟುಗಳು ಸೀಮಿತವಾಗಿವೆ ಎಂಬುದೇ ನಿಮಗೆ ಗೊತ್ತಿಲ್ಲ. ಕೇವಲ ಐದು ರುಪಾಯಿಯ 'ಕನ್ನಡ ಸಾಹಿತ್ಯ ಪರಿಷತ್ತಿ'ನ ನಿಘಂಟಿನಲ್ಲೇ ಈ ಪದ್ಯದ ಎಲ್ಲ ಪದಗಳಿಗೆ ಅರ್ಥ ಸಿಗುತ್ತದೆ. ಒಂದು ಪದಕ್ಕೆ (ನಿಕ್ವಣ) ಮಾತ್ರ ನೂರು ರುಪಾಯಿಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿಗೆ ಮೊರೆ ಹೋಗಬೇಕು ಅಷ್ಟೆ! ಏಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಎಂದು ಹೇಳುತ್ತಿದ್ದೇನೆಂದರೆ, ಅವೆಲ್ಲಾ ಬಹಳ ಹಿಂದೆಯೇ ಅಂದರೆ ಸುಮಾರು ಸಾವಿರಾರು ವರ್ಷಗಳೀಮದಲೇ ಕನ್ನಡಕ್ಕೆ ಬಂದು ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿವೆ. ಅದಕ್ಕೆ ಕನ್ನಡ ನಿಘಂಟನ್ನು ಸೇರಿವೆ ಎಂಬುದನ್ನು ಮನಗಾಣಿಸಲು. ಅಷ್ಟೊಂದು ನಿಕ್ಕಿಯಾಗಿ ನಾನು ಹೇಳಲು ಈ ಹಾಡನ್ನು ಬಹುದಿನಗಳ ಕಾಲದಿಂದಲೂ ಎಂಜಾಯ್ ಮಾಡಿಕೊಂಡು ಬರುತ್ತಿರುವವರಲ್ಲಿ ನಾನೂ ಒಬ್ಬ. ಅದನ್ನು ನಾನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ.
ಇನ್ನು ಒಂದು ಮಾತನ್ನು ಗಮನಿಸಬೇಕು. ಈ ಪದ್ಯದ ಭಾಷೆಯನ್ನು ಕನ್ನಡ ಸಾಹಿತ್ಯದ ಚರಿತ್ರೆಯ ಹಿನ್ನೆಲೆಯಲ್ಲಿ ಗಮನಿಸಬೇಕು. ಈ ಗೀತೆ ರಚನೆಯಾದಾಗ ಕುವೆಂಪು ಒಬ್ಬರೇ ಶೂದ್ರ ಬರಹಗಾರ. ಸಾಹಿತ್ಯ ಪರಂಪರೆಯಲ್ಲೇ ತನಗೆದುರಾದ ಎಲ್ಲವನ್ನೂ ಎದುರಿಸಿ, ಆದರೆ ನಿರಾಕರಿಸದೆ, ಅವಕಾಶ ಸಿಕ್ಕರೆ ಎಂತಹ ಪದ್ಯವನ್ನಾದರೂ ಬರೆಯುತ್ತೇನೆ ಎಂದು ಸಾಧಿಸಿ ತೋರಿಸಬೇಕಾದ ಅವಶ್ಯಕತೆ ಕುವೆಂಪು ಅವರಿಗೆ ಇತ್ತು. ಅದನ್ನು ಸಾಧಿಸಿ ತೋರಿಸಿದ್ದಾರೆ.
ಇನ್ನು ಪದ್ಯದ ವಸ್ತು: ಶೃಂಗಾರ. ಅದರ ಅಭಿವ್ಯಕ್ತಿಯಲ್ಲಿ ಒಂಚೂರು ಅಚೀಚೆಯಾದರೂ ಅಶ್ಲೀಲತೆಯೆಡೆಗೆ ವಾಲಿಬಿಡುತ್ತದೆ. ಸಂಸ್ಕಾರವಂತನಾದ ಕವಿಗೆ ಆ ಎಚ್ಚರವಿದ್ದುದರಿಂದಲೇ ಪದಗಳ ಬಳಕೆಯಲ್ಲಿ ಎಚ್ಚರವಹಿಸಿರುತ್ತಾನೆ.
ಇನ್ನು ಅದರ ಅರ್ಥವನ್ನು ಅಶ್ಲೀಲತೆಗೆ ಎಡೆ ಮಾಡಿಕೊಡದೆ ಸರಳವಾಗಿ ಹೇಳಬೇಕೆಂದರೆ, ಇಷ್ಟೆ.
"ಬೆಳದಿಂಗಳೆಂಬ ಜೇನಿಗಾಗಿ ಬಾಯಾರಿದೆ ಚಕೋರ
ಬೆಳದಿಂಗಳೆಂಬ ಜೇನನ್ನು ಸೇವಿಸಿ ಮದಿಸಿರುವ ದೊಡ್ಡ ಕಲಶದಂತಹ ಮೊಲೆಯನ್ನುಳ್ಳ ಎದೆಯನ್ನು ಆಲಂಗಿಸಿದ್ದರಿಂದ ನಾನು ನಿರಾವಲಂಬಿತನಾಗಿದ್ದೇನೆ. (ಆ ಸುಖದ ಮತ್ತಿನಲ್ಲಿ ಕಳೆದು ಹೋಗಿದ್ದೇನೆ)
ಮಳೆಹನಿಯನ್ನು ಕುಡಿದು ಬದುಕುತ್ತದೆ ಎಂದು ನಂಬಿರುವ ಕಾಲ್ಪನಿಕ ಪಕ್ಷಿಗೆ ಬಾಯಾರಿದ ಹಾಗೆ ನನಗೂ ಬಾಯಾರಿಕೆಯಾಗಿದೆ.

ಕಾಲಂದಿಗೆ ಕಿರುಗೆಜ್ಜೆಗಳ ಶಬ್ದ ಮನ್ಮಥ ಬಿಲ್ಲನ್ನು ಹೆದೆಯೇರಿಸಿದ್ದರಿಂದ ಉಂಟಾದ ಶಬ್ದದಂತಿದೆ. ಮನಸ್ಸನ್ನು ರಂಜಿಸುತ್ತಿರುವವಳೆ, ಇನ್ನು ತಡವಾಗುವುದು ಬೇಡ. ಬಾ ಚಂದ್ರಮಂಚಕೆ.


ಅಲೆಗಳನ್ನು ಚಿಮ್ಮಿಸಿ ನೊರೆಯನ್ನು ಹೊರಡಿಸಿ ಕ್ಷೀರಸಮುದ್ರದಲ್ಲಿ ತೇಲೋಣ ಬಾ ಚಂದ್ರಮಂಚಕೆ. ಎದೆ ಡವಗುಡುತ್ತಿದೆ; ಬಾಯಾರುತ್ತಿದೆ ಚುಂಬನಕ್ಕೆ ಕಾತರಿಸಿ ಬಾ ಚಂದ್ರಮಂಚಕೆ.

ಲತಾಗೃಹದಿಂದ ಕೂಡಿದ ರತಿಯ ತೋಟವು ಮನ್ಮಥನ ಯಾಗಕ್ಕೆ
ಅಮೂರ್ತವಾದ ಪ್ರೀತಿಯ ಮೂರ್ತ ಅನುಭವಕ್ಕೆ
ನಗ್ನಯೋಗವನ್ನು ಬಯಸುತ್ತಿದೆ. ಕಬ್ಬಿನ ಮಂಚದ ರಸವನ್ನುಳ್ಳ ಅಗ್ನಿ ಪಕ್ಷಿ(ಬಯಕೆ)ಯ ಅಚಂಚು (ಕೊಕ್ಕಿಲ್ಲದ, ನೋವಿಲ್ಲದ) ಚುಂಬನಕ್ಕಾಗಿ ಬಾ ಚಂದ್ರಮಂಚಕೆ.