Saturday, October 08, 2016

ಮರಳಿ ಹಳಿಗೆ ಕಾವೇರಿ ಹೋರಾಟ!

ಕಾವೇರಿ ವಿಚಾರದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ನ್ಯಾಯಾಂಗ ಹಾಗೂ ಶಾಸಕಾಂಗ ಪ್ರಕ್ರಿಯೆಯಲ್ಲಿ ಸಾಮಾನ್ಯ ನಾಗರಿಕನೊಬ್ಬನಿಗೆ ಕಾಡುವ ಅನುಮಾನಗಳು ಹಲವು. ನ್ಯಾಯಾಂಗ ವ್ಯವಸ್ಥೆಯೇ ರೂಪಿಸಿದ್ದ ಶಾಸನಬದ್ಧ ಸಮಿತಿ ನೀಡಿದ್ದ ಆದೇಶವನ್ನು ಲೆಕ್ಕಿಸದೆ, ನೀರಿನ ಪ್ರಮಾಣವನ್ನು ದ್ವಿಗುಣಗೊಳಿಸಿ ಮರು ಆದೇಶ ನೀಡಿದ್ದು, ಈಗಾಗಲೇ ತ್ರಿಸದಸ್ಯಪೀಠದ ಮುಂದಿರುವ ವಿಚಾರವನ್ನು ತಾನಾಗಿ ಪ್ರಸ್ತಾಪಿಸಿ, ಕೇವಲ ನಾಲ್ಕು ವಾರಗಳಲ್ಲಿ ‘ಕಾವೇರಿ ನಿರ್ವಹಣಾ ಮಂಡಳಿ’ಯನ್ನು (ಕಾ.ನಿ.ಮಂ.) ರಚಿಸುವಂತೆ ಆದೇಶಿಸಿದ್ದು, ಫೆಡರಲ್ ವ್ಯವಸ್ಥೆಯಯಡಿ, ರಾಜ್ಯವೊಂದು ತನ್ನ ವಿಧಾನ ಮಂಡಲದಲ್ಲಿ ತೆಗೆದುಕೊಂಡ ನಿರ್ಣಯವೊಂದನ್ನು ಲೆಕ್ಕಕ್ಕೂ ಇಡದೆ, ಮತ್ತೆ ನೀರು ಬಿಡುಗಡೆಯ ಆದೇಶ ನೀಡಿದ್ದು, ನಿಜವಾಗಿಯೂ ನ್ಯಾಯಾಂಗ ನಿಂದನೆಯಾಗಿದ್ದಲ್ಲಿ ಕಾನೂನು ಪ್ರಕಾರ ಶಿಕ್ಷೆ ವಿಧಿಸುವ ಸರ್ವ ಅವಕಾಶ ತನ್ನ ಮುಂದಿದ್ದರು ಅದನ್ನು ಪರಿಗಣಿಸದೆ, ಆದೇಶ, ಮರು ಆದೇಶಗಳನ್ನು (ಐದೂ ಆದೇಶಗಳಲ್ಲೂ) ನೀರು ಬಿಡುವಂತೆ ನೀಡಿರುವುದಂತೂ ಜನಸಾಮಾನ್ಯರಲ್ಲಿ ದಿಗಿಲು ಮೂಡಿಸಿದೆ. ತ್ರಿಸದಸ್ಯಪೀಠದ ಮುಂದಿದ್ದ ವಿಷಯವನ್ನು ಪ್ರಸ್ತಾಪಿಸಿದ್ದಲ್ಲದೆ, ಈ ಹಿಂದೆ ತಾನೇ ನೀಡಿದ್ದ ನಾಲ್ಕು ವಾರದ ಗಡುವನ್ನೂ ಉಲ್ಲಂಘಿಸಿ, ಕೇವಲ ಮೂರೇ ದಿನಗಳಲ್ಲಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ನೀಡಿದ ಆದೇಶ ಜೊತೆಗೆ ಶಿಕ್ಷೆಯೋ ಎನ್ನುವಂತೆ ಮತ್ತೂ ಆರುದಿನಗಳ ಕಾಲ ನಿತ್ಯ ಆರು ಸಾವಿರ ಕ್ಯೂಸೆಕ್ಸ್ ನೀರುಬಿಡುವಂತೆ ನೀಡಿದ ಆದೇಶ ಕರ್ನಾಟಕದ, ಕಾವೇರಿ ಕೊಳ್ಳದ ಜನರಲ್ಲಿ ತಬ್ಬಲಿಗಳಾದ ಭಾವನೆಯನ್ನು ಉಂಟು ಮಾಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ, ಕಾ.ನಿ.ಮಂ.ಯ ಸುಪ್ರೀಂ ಆದೇಶಕ್ಕೆ ಬ್ರೇಕ್ ಬಿದ್ದ ಹಾಗಿದೆ. ಪರಿಣಿತರ ತಂಡವೊಂದನ್ನು ಕಾವೆರಿ ಕಣಿವೆಗೆ ಕಳುಹಿಸಲು ಸುಪ್ರೀಂ ಒಪ್ಪಿಕೊಂಡಿದೆ. ಜೊತೆಗೆ ಕರ್ನಾಟಕ ಅಕ್ಟೋಬರ್ ಹದಿನೆಂಟರವೆಗೂ ನಿತ್ಯ 2000 ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ.
ಇನ್ನು ರಾಜ್ಯ ಸರ್ಕಾರದವರ ವಿಷಯಕ್ಕೆ ಬಂದರೆ ಕೆಲವು ಅನುಮಾನಗಳು ಕಾಡುತ್ತವೆ. ಮೊದಲ ಬಾರಿ, ಕಾ.ನಿ.ಮಂ.ಯನ್ನು ನಾಲ್ಕು ವಾರದಲ್ಲಿ ರಚಿಸುವಂತೆ ನೀಡಿದ ಆದೇಶವನ್ನು ಏಕೆ ಪ್ರಶ್ನಿಸಲಿಲ್ಲ? ಕೇವಲ ನೀರುಬಿಡುಗಡೆಯನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಆದೇಶ ಬಂದರೆ ಸಾಕು; ಬೀಸೋ ದೊಣ್ಣೆ ತಪ್ಪಿಸಿಕೊಂಡಂತೆ ಎಂದು ಭಾವಿಸಿದ ಸರ್ಕಾರ, ಕೇವಲ ತನ್ನ ಜಲಾಶಯಗಳಲ್ಲಿ ನೀರಿಲ್ಲದ್ದನ್ನು ಹಾಗೂ ಕುಡಿಯುವ ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ರಕ್ಷಣಾತ್ಮಕ ಆಟವಾಡಿತು. ಆದರೆ, ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸುವ ವಿಷಯದಲ್ಲಿ ಮಾತ್ರ ಆಕ್ರಮಣಕಾರಿಯಾಯಿತು. ಹಾಗೆ ನಿರ್ಣಯವನ್ನು ತೆಗೆದುಕೊಳ್ಳುವ ತನಗಿರುವ ಹಕ್ಕನ್ನು ಚಲಾಯಿಸುವಾಗ ಸ್ವಲ್ಪಮಟ್ಟಿನ ರಕ್ಷಣಾತ್ಮಕ ನಡೆಗೆ ಅವಕಾಶವಿತ್ತು. ನ್ಯಾಯಪೀಠ ಆಗ ನೀಡಿದ್ದ ಮೂರನೆಯ ಆದೇಶವನ್ನು ಪಾಲಿಸುವುದಕ್ಕೆ ಒಪ್ಪಿಕೊಂಡು, ‘ಇನ್ನುಮುಂದಿನ ದಿನಗಳಲ್ಲಿ ಜಲಾಶಯಗಳಲ್ಲಿರುವ ನೀರು ಕುಡಿಯುವುದಕ್ಕೆ ಮಾತ್ರ’ ಎಂಬ ನಿರ್ಣಯವನ್ನು ತೆಗೆದುಕೊಳ್ಳಬಹುದಿತ್ತು. ಆಗ ಸರ್ಕಾರಕ್ಕೆ ಇನ್ನಿಲ್ಲದಂತೆ ಕಾಡಿದ ನ್ಯಾಯಾಂಗ ನಿಂದನೆಯ ಭಯ ಇರುತ್ತಿರಲಿಲ್ಲ. ಜೊತೆಗೆ, ಕಾ.ನಿ.ಮಂ.ಯ ರಚನೆಯ ಬಗ್ಗೆಯೂ ತನ್ನ ವಿರೋಧವನ್ನು ವಿಧಾನಮಂಡಲದಲ್ಲಿ ದಾಖಲಿಸಬಹುದಿತ್ತು. ಪೀಠ ಬದಲಾವಣೆ ವಿಚಾರದಲ್ಲೂ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದುಕೊಳ್ಳಬಹುದಿತ್ತು. ತನ್ನ ನ್ಯಾಯವಾದಿಗಳು ನೀಡಿದ ಸಲಹೆಯನ್ನೂ ತಿರಸ್ಕರಿಸಿ ಕರ್ನಾಟಕ ಈ ಹಂತದಲ್ಲಿ ಆಕ್ರಮಣಕಾರಿಯಾದುದು ಸಹಜವಾಗಿಯೇ ನ್ಯಾಯಪೀಠದ ಕಣ್ಣು ಕೆಂಪಾಗಿಸಿತು. ರಾಜ್ಯದ ಪರ ನ್ಯಾಯವಾದಿಗಳನ್ನೇ ಬಾಯಿಗೆ ಬಂದಂತೆ ನಿಂದಿಸುವ ರಾಜ್ಯದ ಕೆಲವು ರಾಜಕಾರಣಿಗಳ ನಡತೆ ದಿಗಿಲು ಹುಟ್ಟಿಸುವಂಥದ್ದು. ಈಗ ಮತ್ತೆ ವಿಧಾನಮಂಡಳದಲ್ಲಿ ಕೋರ್ಟ್ ಆದೇಶ ಪಾಲಿಸಲು ನೆರವಾಗುವಂತೆ ನಿರ್ಣಯ ಅಂಗೀಕರಿಸಿರುವುದು, ಹೋರಾಟವನ್ನು ಮತ್ತೆ ಸರಿಯಾದ ಹಳಿಗೆ ತಂದು ನಿಲ್ಲಿಸಿದೆ ಎಂದು ಭಾವಿಸಬಹುದಾಗಿದೆ. ಅದರ ಪರಿಣಾಮವನ್ನು ಅಕ್ಟೋಬರ್ ನಾಲ್ಕರ ಸುಪ್ರೀಂ ಆದೇಶದಲ್ಲಿ ಗುರುತಿಸಬಹುದಾಗಿದೆ.
ಇಡೀ ಪ್ರಕ್ರಿಯೆಯಲ್ಲಿ, ಕೇಂದ್ರ ಸರ್ಕಾರವಂತೂ ಕೋಲೆಬಸವಣ್ಣನ ಪಾತ್ರ ನಿರ್ವಹಿಸಿತು. ಮೊದಲ ಬಾರಿಗೆ ಕಾ.ನಿ.ಮಂ.ಯ ಪ್ರಸ್ತಾಪವಾದಾಗಲೇ, ಕೇಂದ್ರ ಮಧ್ಯಪ್ರವೇಶಿಸಿ, ಅದು ಈಗಾಗಲೇ ತ್ರಿಸದಸ್ಯಪೀಠದ ಮುಂದಿರುವ ಮತ್ತು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ವಿಚಾರಣೆಗೆ ಬರುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ, ಆದೇಶವನ್ನು ಮರುಪರಿಶೀಲಿಸುವಂತೆ ಕೋರಬಹುದಿತ್ತು. ತಜ್ಞರ ಸಮಿತಿ ನೀಡಿದ ಆದೇಶವಷ್ಟೇ ಸಾಕು, ನೀರಿನ ಪ್ರಮಾಣ ದ್ವಿಗುಣಗೊಳಿಸುವುದು ಬೇಡ ಎನ್ನಬಹುದಿತ್ತು. ಎರಡನೆಯದಾಗಿ, ಕೋರ್ಟಿನ ಆದೇಶದಂತೆ ನಡೆಸಿದ ಮಧ್ಯಸ್ಥಿಕೆಯಲ್ಲಿ, ತಮಿಳುನಾಡು ಆಕ್ಷೇಪವೇನಿದ್ದರೂ ತಜ್ಞರ ತಂಡವನ್ನು ಕಳುಹಿಸುವ ತನ್ನ ಹಕ್ಕನ್ನು ಚಲಾಯಿಸಬಹುದಿತ್ತು. ವಾಸ್ತವ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅರಿತು ನಂತರ ಕೋರ್ಟಿಗೆ ತನ್ನ ತೀರ್ಮಾನವನ್ನು ತಿಳಿಸಬಹುದಿತ್ತು. ಆದರೆ ಅದು ತಾನು ನಡೆಸಿದ ಸಭೆಯ ವಿವರಗಳನ್ನಷ್ಟೇ ನೀಡಿ ಜಾರಿಕೊಂಡಿತು. ಮೂರನೆಯದಾಗಿ, ಕೇವಲ ಮೂರೇ ದಿನದಲ್ಲಿ ಕಾ.ನಿ.ಮಂ.ಯನ್ನು ರಚಿಸಬೇಕೆನ್ನುವ ನ್ಯಾಯಪೀಠದ ಮಾತಿಗೆ ವಸ್ತುಶಃ ಕೋಲೆಬಸವಣ್ಣನೇ ಆಯಿತು! ಮಾಜಿ ಪ್ರಧಾನಿ ನಡೆಸಿದ ಉಪವಾಸ ಸತ್ಯಾಗ್ತಹದ ಪ್ರತ್ಯಕ್ಷ ಪರಿಣಾಮವೊ ಅಥವಾ ಅಪ್ರತ್ಯಕ್ಷವೆನ್ನಬಹುದಾದ ಇನ್ನಾವ ನಿಲುವೋ ಅಂತೂ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ಅಫಿಡವಿಟ್ ಸಲ್ಲಿಸಿದೆ ಹಾಗೂ ತನ್ನ ಹಕ್ಕನ್ನು ಪ್ರಬಲವಾಗಿಯೇ ಪ್ರತಿಪಾದಿಸಿದೆ. ಇದು ಕರ್ನಾಟಕದ ಪಾಲಿಗಂತೂ ಸ್ವಾಗತಾರ್ಹ ನಡೆ.
ಒಂದೇ ಒಂದು ನದಿ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬ್ರಿಟೀಷರ ಅಧಿನದಲ್ಲಿದ್ದ, ಸ್ವಾತಂತ್ರ್ಯಪೂರ್ವದ ಎರಡು ಪ್ರದೇಶಗಳ ನಡುವಿನ ಒಪ್ಪಂದ. ನೂರಾರು ವರ್ಷಗಳ ಸಮಸ್ಯೆ. ಸ್ವಾತಂತ್ರ್ಯಾನಂತರ ನಾಲ್ಕು ರಾಜ್ಯಗಳ ಸಮಸ್ಯೆ ಹಾಗೂ ಅದಕ್ಕೂ ಎಪ್ಪತ್ತು ವರ್ಷಗಳ ಇತಿಹಾಸ. ಇವೆಲ್ಲವೂ ಕೇವಲ ಒಂದೇ ತಿಂಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಗೆಹರಿದರೆ ಯಾರು ಬೇಡವೆನ್ನುತ್ತಾರೆ? ಆದರೆ ಆ ಪರಿಹಾರ ನಿಷ್ಪಕ್ಷಪಾತವಾಗಿದ್ದು ನ್ಯಾಯಸಮ್ಮತವಾಗಿದ್ದರೆ ಮಾತ್ರ. ಒಂದೇ ತಿಂಗಳಲ್ಲಿ ಐದು ಬಾರಿ ಆದೇಶ. ಮೊದಲಿನೆರಡು ಪಾಲನೆ, ನಂತರದವೆರಡು ಉಲ್ಲಂಘನೆ. ಮತ್ತೆ ಐದನೆಯದನ್ನು ಭಾಗಶಃ ಪಾಲಿಸುವ ಚಿಂತನೆ... ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಇಷ್ಟೊಂದು ಶೀಘ್ರವಾಗಿ ಪ್ರಕರಣವೊಂದು ಯಾರೂ ಊಹಿಸದ ರೀತಿಯ ತಿರುವುಗಳನ್ನು ಪಡೆದುಕೊಂಡದ್ದು ಬಹುಶಃ ಇಲ್ಲವೇ ಇಲ್ಲ! ಕರ್ನಾಟಕದ ಕಾವೇರಿ ಹೋರಾಟ ಅಂತೂ ಸರಿದಾರಿಗೆ ಬಂದಿದೆ. ಈಗ, ಮತ್ತೆ ಎಲ್ಲರ ಚಿತ್ತ ಸುಪ್ರೀಂ ಕೋರ್ಟಿನತ್ತ ನೆಟ್ಟಿದೆ. ಶಾಸಕಾಂಗದ ಹಾಗೂ ನ್ಯಾಯಾಂಗದ ಘನತೆ ಹೆಚ್ಚಿಸುವಂತ ಆದೇಶಕ್ಕಾಗಿ ಜನತೆ ಕಾಯುತ್ತಿದೆ.

Thursday, January 28, 2016

ಸರ್ವೋದಯವಾಗಬೇಕೆ? ಮದ್ಯಪಾನ ನಿಷೇಧ ಮಾಡಿ!

ಜನವರಿ ೩೦, ಗಾಂಧೀಜಿ ಹುತಾತ್ಮರಾದ ದಿನವನ್ನು ಸರ್ವೋದಯ ದಿನವೆಂದು ಘೊಷಿಸಲಾಗಿದೆ. ಕ್ಯಾಲೆಂಡರಿನಲ್ಲೂ ನಮೂದಿಸಲಾಗಿದೆ. ಇತ್ತೀಚಿಗೆ ಮಾದ್ಯಮಗಳಲ್ಲಿ ವರದಿಯಾಗಿರುವಂತೆ ಅಂದು, ಎರಡು ನಿಮಿಷಗಳ ಕಾಲ ಮೌನ ಆಚರಿಸಿಬೇಕೆಂದು ಸರ್ಕಾರ ಆದೇಶಿಸಿದೆ. ಗಾಂಧೀಜಿ ತಮ್ಮ ಜೀವನವಿಡೀ, ರಾಜಕೀಯವಾಗಿ, ಆಧ್ಯಾತ್ಮಿಕವಾಗಿ ಹೋರಾಟ ನಡೆಸಿದ್ದು ಸರ್ವೋದಯಕ್ಕಾಗಿಯೆ! ಅವರ ಅಸ್ಪೃಷ್ಯತೆಯ ವಿರುದ್ಧದ ಹೋರಾಟವಾಗಲೀ, ಮದ್ಯಪಾನವಿರೋಧಿ ಹೋರಾಟವಾಗಲೀ ಎಲ್ಲವೂ ಸರ್ವೋದಯದತ್ತಲೇ ಮುಖಮಾಡಿಕೊಂಡಿದ್ದಂತವುಗಳು. ಆದರೆ, ಗಾಂಧೀಜಿಯ ಹೆಸರಿನಲ್ಲಿ, ಸರ್ವೋದಯ ದಿನಾಚರಣೆಯ ಹೊಣೆ ಹೊತ್ತ ಸರ್ಕಾರ, ರಾಜ್ಯದಾದ್ಯಂತ ಸುಮಾರು ೧೫೦೦ ಮದ್ಯದಂಗಡಿಗಳಿಗೆ ಲೈಸೆನ್ಸ್ ವಿತರಿಸಲು ತುದಿಗಾಲಲ್ಲಿ ನಿಂತಿರುವುದು ಆಘಾತವನ್ನುಂಟು ಮಾಡಿದೆ.
ಮದ್ಯಪಾನ ಮನುಕುಲಕ್ಕೇ ಪಿಡುಗಾಗಿ ಪರಿಮಿಸಿದೆ. ಕರ್ನಾಟಕವಂತೂ ಅತೀ ಹೆಚ್ಚು ಮದ್ಯ ಬಳಸುವ ಭಾರತದ ರಾಜ್ಯಗಳಲ್ಲಿ ಮೂರನೆಯ ಸ್ಥಾನದಲ್ಲಿದೆಯಂತೆ. ಬಳಸುವ ಮದ್ಯದಲ್ಲಿ ಮುಕ್ಕಾಲುಪಾಲು ಮದ್ಯಮ ಮತ್ತು ಕಳಪೆ ಗುಣಮಟ್ಟದ ಮದ್ಯವಂತೆ. (ವಿಷದಲ್ಲೂ ಉತ್ತಮ ಮದ್ಯಮ ಅಧಮ!).  ಮದ್ಯಪಾನದ ಚಟ ನಮ್ಮ ಸಾಮಾಜಿಕ ಪರಿಸರವನ್ನು ಹಾಳು ಮಾಡಿದೆ. ಚುನಾವಣೆ ವ್ಯವಸ್ಥೆಯನ್ನು ಅತ್ಯಂತ ಹೆಚ್ಚು ಭ್ರಷ್ಟವನ್ನಾಗಿಸಿದೆ. ಗ್ರಾಮೀಣ ಪ್ರದೇಶದ ಜನರನ್ನಂತೂ ಶಕ್ತಿಹೀನರನ್ನಾಗಿಸುತ್ತಿದೆ. ಅವರ ಯೋಚನಾಶಕ್ತಿಯನ್ನೇ ಕುಂದಿಸುತ್ತಿದೆ. ನಗರಪ್ರದೇಶಗಳಲ್ಲೂ ಮದ್ಯವ್ಯಸನಿಗಳು ರಸ್ತೆ ಬದಿಯಲ್ಲಿ ಬಿದ್ದಿರುವ ಚಿತ್ರಗಳು ನಿತ್ಯದ ನೋಟಗಳಾಗಿವೆ.  ಹೆಂಗಸರು-ಮಕ್ಕಳಲ್ಲೂ ಮದ್ಯಪಾನದ ಚಟ ಹೆಚ್ಚುತ್ತಿರುವುದು, ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಚಟಕ್ಕೆ ಬಲಿಯಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ರಸ್ತೆ ಅಪಘಾತಗಳಿಗೆ, ಅಪರಾಧ ಕೃತ್ಯಗಳಿಗೆ, ಕೌಟುಂಬಿಕ ದೌರ್ಜನ್ಯದ ಹೆಚ್ಚಳಕ್ಕೆ ಬಹುಪಾಲು ಮದ್ಯಪಾನವೇ ಕಾರಣವಾಗಿದೆ. ಮದ್ಯವ್ಯಸನಿಗಳ ಕುಟುಂಬದವರ ಗೋಳು ಹೇಳತೀರದು. ನಿಮ್ಹಾನ್ಸ್ ಆವರಣದಲ್ಲಿರುವ “ಸೆಂಟರ್ ಫಾರ್ ಡಿಅಡಿಕ್ಷನ್ ಮೆಡಿಸನ್” ಕೆಂದ್ರಕ್ಕೆ ಸಂಬಂಧಪಟ್ಟವರು ಒಮ್ಮೆ ಬೇಟಿಕೊಟ್ಟು ನೋಡಲಿ. ‘ಮದ್ಯಪಾನ ದೇಹವನ್ನು ಮಾತ್ರವಲ್ಲ ಆತ್ಮವನ್ನೇ ನಾಶ ಮಾಡುತ್ತದೆ’ ಎಂಬ ಗಾಂಧೀಜಿಯ ಮಾತುಗಳ ಮೂರ್ತರೂಪದ ದರ್ಶನವೂ ಆಗುತ್ತದೆ. ಅಲ್ಲಿರುವ ವ್ಯಸನಿಗಳ, ವ್ಯಸನಮುಕ್ತರಾಗ ಹೊರಟಿರುವವರ, ಅವರ ಕುಟುಂಬವರ್ಗದವರ ಗೋಳನ್ನು ಕೇಳಲಿ. ಆಗ, ನಿಜವಾಗಿಯೂ ಸಮಾಜದ ಒಳಿತನ್ನು ಬಯಸುವ, ‘ಸಮಗ್ರ ಅಭಿವೃದ್ಧಿ’ಯನ್ನು ಬಯಸುವ ಯಾವನೂ ಮದ್ಯದಂಗಡಿಗಳನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಲಾರ. ಅತ್ತ ಕೇರಳ ಮದ್ಯನಿಷೇದದತ್ತ ಹೆಜ್ಜೆಯಿರಿಸಿ ಸುಪ್ರೀಂ ಕೋರ್ಟಿನಿಂದ ಹಸಿರುನಿಶಾನೆ ಪಡೆದಿದೆ. ಬಿಹಾರ ರಾಜ್ಯವೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಮದ್ಯದಂಗಡಿಗಳಿಗೆ ಲೈಸೆನ್ಸ್ ಕೊಡಲು ತುದಿಗಾಗಲಲ್ಲಿ ನಿಂತಿರುವುದು ಆಶ್ಚರ್ಯ ತಂದಿದೆ.

ಗಾಂಧೀ ಕನಸಿನ ಸರ್ವೋದಯ ಸಾಧನೆಯ ನಿಟ್ಟಿನಲ್ಲಿ ಮದ್ಯಪಾನ ನಿಷೇಧ ಅಗತ್ಯವಾಗಿ ಆಗಬೇಕಿರುವ ಕೆಲಸ. ಅದನ್ನು ಸಾದಿಸಲು ಆಡಳಿತದ ಚುಕ್ಕಾಣಿ ಹಿಡಿದವರು ಅಗಾಧ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಆದರೆ, ಅದನ್ನೇ ಆದಾಯದ ಮೂಲವೆಂದು ಪ್ರತಿಪಾದಿಸುವವರಿಂದ ಆ ಇಚ್ಛಾಶಕ್ತಿಯ ನಿರೀಕ್ಷೆಯನ್ನಿಟ್ಟುಕೊಳ್ಳುವುದೇ? ಕನಿಷ್ಠ ಹತ್ತು ವರ್ಷಗಳ ಕಾಲಮಿತಿಯನ್ನು ಇಟ್ಟುಕೊಂಡು, ಪ್ರತಿವರ್ಷ ಶೇ. ೧೦ ಮದ್ಯದ ಉತ್ಪಾದನೆ ಮತ್ತು ಪೂರೈಕೆಯನ್ನು ಕಡಿಮೆ ಮಾಡುತ್ತಾ ಬರಬಹುದು. ಆ ಅವಧಿಯಲ್ಲಿ ಆದಾಯಕ್ಕೆ ಪರ್ಯಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬಹುದಲ್ಲವೆ? ಒಂದು ಸಾಮಾಜಿಕ ಪಿಡುಗನ್ನು ಜೀವಂತವಾಗಿಟ್ಟುಕೊಂಡು, ಅದರಿಂದ ಬಂದ ಹಣದಲ್ಲಿ ಅಭಿವೃದ್ಧಿಯ ಕನಸು ಕಾಣುವುದೇ ಒಂದು ದೊಡ್ಡ ದುರಂತ. ಹಿಂದೆ, ಬಾಲ್ಯವಿವಾಹ, ಸತಿಪದ್ಧತಿ, ಬೆತ್ತಲೆ ಸೇವೆ ಮುಂತಾದವುಗಳನ್ನು ಸಾಮಾಜಿಕ ಅನಿಷ್ಟಗಳೆಂದು ಭಾವಿಸಿ ಅವುಗಳನ್ನು ನಿಷೇದಿಸಿಲ್ಲವೆ? ಈಗಲೂ ಮಡೆಸ್ನಾನ, ಅಸ್ಪೃಷ್ಯತೆ, ವೇಶ್ಯಾವಾಟಿಕೆ ಮೊದಲಾದ ಅನಿಷ್ಟಗಳ ನಿವಾರಣೆಗಾಗಿ ಹೋರಾಡುತ್ತಿಲ್ಲವೆ? ಆಗಿದ್ದ ಮೇಲೆ ಆರೋಗ್ಯಕ್ಕೆ ಮಾರಕವಾಗಿರುವ, ಆ ಮೂಲಕ ಕೌಟುಂಬಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಿರುವ ಮದ್ಯಪಾನದ ಬಗ್ಗೆ ಯಾಕಿಷ್ಟು ಮೃದು ಧೋರಣೆ?

ಇಂದು ಹಲವಾರು ಮಠ-ಆಶ್ರಮಗಳು ಮದ್ಯವ್ಯಸನದಿಂದ ಮುಕ್ತರಾಗುವವರಿಗಾಗಿ ಕೆಲಸ ಮಾಡುತ್ತಿವೆ. (ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ನೆಪದಲ್ಲಿ ಪ್ಯಾಕೆಜುಗಳನ್ನು ಸೃಷ್ಟಿಸಿ ಹಣ ಮಾಡುವ ದಂಧೆಯೂ ಇದೆ) ಅವರ ಪ್ರಯತ್ನ ಶ್ಲಾಘನೀಯ. ಆದರೆ, ಅತ್ಯಂತ ಪ್ರಭಾವಿಗಳಾಗಿರುವ ಮಠ-ಆಶ್ರಮ-ದೇವಾಲಯಗಳು, ಸಂಘಸಂಸ್ಥೆಗಳು, ಶ್ರೀ ಶ್ರೀಗಳೂ, ಸ್ವಾಮೀಜಿಗಳೂ, ಗುರು-ಜಗದ್ಗುರುಗಳೂ ಇಂತಹ ಕೆಲಸದ ಜೊತೆಗೆ, ಮದ್ಯನಿಷೇದಕ್ಕೂ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನೂ ಮಾಡಬೇಕು. ಮೊದಲೆಲ್ಲಾ ಮದ್ಯಪಾನ ಮಾಡುವವರನ್ನು ಕೀಳಾಗಿ ಕಾಣುವ ಪರಿಸರ ಸಮಾಜದಲ್ಲಿತ್ತು. ಆದರೆ, ಈಗ ಅದನ್ನು ಸಮಾಜವೂ ಸ್ವೀಕರಿಸಿಬಿಟ್ಟಿದೆಯೇನೋ ಎಂಬ ವಾತಾವರಣ ನಿರ್ಮಾಣವಾಗಿರುವುದು ವಿಪರ್ಯಾಸ. ಮಾದ್ಯಮಗಳಲ್ಲೂ ಮದ್ಯಪಾನವನ್ನು ವೈಭವೀಕರಿಸಲಾಗುತ್ತಿದೆ. ಆಗಾಗ ಭ್ರಷ್ಟಾಚಾರದ ವಿರುದ್ಧ ಸದ್ದು ಮಾಡುವ ಗಾಂಧೀವಾದಿಗಳು ಈ ವಿಷಯದಲ್ಲಿ ಸೋತು ಸುಣ್ಣವಾದವರಂತೆ ಕಾಣುತ್ತಾರೆ. ಕುಡಿಯುವ ನೀರಿನ ಬ್ರಾಂಡುಗಳ ನೆಪದಲ್ಲಿ ಮದ್ಯದ ಬ್ರಾಂಡುಗಳನ್ನು ವೈಭವೀಕರಿಸಿ ಮಾರುಕಟ್ಟೆ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರವೇ ‘ಮದ್ಯಪಾನ ಸಂಯಮ ಮಂಡಳಿ’ಯನ್ನು ನಡೆಸುತ್ತಿರುವುದು ಮನುಕುಲದ ವ್ಯಂಗ್ಯದಂತೆ ಕಾಣುತ್ತದೆ.

ಏಕಾಏಕಿ ಮದ್ಯ ಸರಬರಾಜನ್ನು ನಿಲ್ಲಿಸಿಬಿಟ್ಟರೆ, ಅದರ ಮೇಲೆ ಅವಲಂಬಿತರಾಗಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವವರೂ ಇದ್ದಾರೆ. ಅದೊಂದು ದೊಡ್ಡ ಸಮಸ್ಯೆಯೇ ಅಲ್ಲ. ಈಗಾಗಲೇ ಹಲವಾರು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ವ್ಯಸನಮುಕ್ತರಾಗ ಬಯಸುವವರಿಗಾಗಿ ಕೇಂದ್ರಗಳನ್ನು ನೆಡೆಸುತ್ತಿದ್ದಾರೆ. ಅದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದರೆ ಖಂಡಿತಾ ಈ ಸಮಸ್ಯೆ ಬಗೆಹರಿಯುತ್ತದೆಯಲ್ಲವೆ? ಕನಿಷ್ಠ ಜಿಲ್ಲೆಗೊಂದಾದರೂ ಐವತ್ತು ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಧಿಷ್ಟ ಕಾಲಾವಧಿಗೆ ಈ ಉದ್ಧೇಶಕ್ಕೇ ನಡೆಸಿದರೆ ಸ್ವಸ್ಥಸಮಾಜದ ನಿರ್ಮಾಣಕ್ಕೆ ಸಹಾಯಕವಾಗುತ್ತದೆ. ಸ್ವಸ್ಥತೆಯಲ್ಲಿ ಕಾಣುವ ಅಭಿವೃದ್ಧಿಯ ಕನಸಿಗೆ ಅರ್ಥವೂ ಆಯಸ್ಸೂ ಇರುತ್ತದೆ!

ಕೇವಲ ಜನವರಿ ೩೦ ಮತ್ತು ಅಕ್ಟೋಬರ್ ೨ರಂದು ಮದ್ಯ ಮಾರಾಟವನ್ನು ನಿಷೇಧಿಸುವುದರಿಂದ, ಶಾಲಾಕಾಲೇಜುಗಳಿಂದ ಇನ್ನೂರು ಮೀಟರ್ ದೂರಕ್ಕೆ ಮದ್ಯದಂಗಡಿಗಳನ್ನು ಸ್ಥಳಾಂತರಿಸುವುದರಿಂದ, ’ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಬಾಟಮ್ ಲೈನ್ ಪ್ರಕಟಿಸುವುದರಿಂದ, ಕ್ಯಾಲೆಂಡರಿನಲ್ಲಿ ಸರ್ವೋದಯ ದಿನವೆಂದು ಮುದ್ರಿಸುವುದರಿಂದ, ರಾಜ್ಯದಾದ್ಯಂತ ಮೌನ ಆಚರಿಸುವುದರಿಂದ ಗಾಂಧೀಜಿಗೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಮದ್ಯಮುಕ್ತ ಸಮಾಜದ ನಿರ್ಮಾಣಕ್ಕೆ ಆಡಳಿತದ ಚುಕ್ಕಾಣಿ ಹಿಡಿದವರು ಒಂದಿಷ್ಟಾದರೂ ಮನಸ್ಸು ಮಾಡಬೇಕಿದೆ. ಸ್ಪಷ್ಟಗುರಿ, ಅಚಲ ವಿಶ್ವಾಸದಿಂದ ಇಡುವ ಒಂದು ಹೆಜ್ಜೆ, ಒಂದು ಮಹಾಜಿಗಿತವೂ ಆಗಬಹುದು. ಆಗ ಮಾತ್ರ ಮಹಾತ್ಮನಿಗೆ ನಿಜಗೌರವ ಸಲ್ಲಿಸಿದಂತಾಗುತ್ತದೆ. ಸರ್ವೋದಯ ದಿನಾಚರಣೆಗೆ ಅರ್ಥ ಬರುತ್ತದೆ.