Monday, January 31, 2011

ಬರ್ತ್ ಡೇ ತಾತ ಬೇಂದ್ರೆ ನೆನಪಲ್ಲಿ


ಇಂದು (31 ಜನವರಿ) ಬೇಮದ್ರೆಯವರ ಹುಟ್ಟು ಹಬ್ಬ. ಅವರ ನೆನಪಲ್ಲಿ ಅವರ ಕವನಗಳಲ್ಲಿ ಕಂಡು ಬರುವ ಸರಸ್ವತಿಯ ದರ್ಶನವನ್ನು ಇಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ.

ಬೇಂದ್ರೆಯವರ ’ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ ಕಲ್ಪನೆಯ ಮಹಾಸರಸ್ವತಿಯನ್ನು ಕಾಣಲು ಸಾಧ್ಯವಿದೆ.

ಬಾರೆ ಬಾ ಮಹೇಶ್ವರೀ
ಬಾ, ಬಾ, ಬಾ, ಬಾ.
ಬಾರೆ ಬಾ ಮಹೇಶ್ವರೀ
ಮಹಾಕಾಳಿ, ಮಹಾಲಕ್ಷ್ಮಿ
ಬಾ ಮಹಾಸರಸ್ವತೀ
ಇಹುದು ನಿಮಗೆ ಶಾಶ್ವತಿ
’ಗಾಯತ್ರೀ ಸೂಕ್ತ’ ಕವನದಲ್ಲಿ ’ತಾಳಗತಿಯಲ್ಲಿ ವಿಶ್ವಗಳ ಗೀತ ಹಾಡಿದಾಕೆ’ ಎಂಬ ಸಾಲು ಇಡೀ ವಿಶ್ವಸಾಹಿತ್ಯಕ್ಕೇ ಸರಸ್ವತಿಯನ್ನು ಅಧಿದೇವತೆಯೆಂಬುದನ್ನು ಸೂಚಿಸುತ್ತದೆ. ’ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ’ ಎಂಬ ಸಾಲು ’ಕವಿಕುಲದೇವತೆ’ ಸರಸ್ವತಿಯನ್ನು ಮತ್ತು ದಶಭುಜ ಸರಸ್ವತಿಯ ಶಿಲ್ಪವನ್ನು ನೆನಪಿಸುತ್ತದೆ.
’ಸರಸ್ವತಿ’ ಎಂಬ ಕವನದಲ್ಲಿ, ವಿಷ್ಣುವಿನ ನಾಭಿಯಿಂದ ಹ್ಮಟ್ಟಿದ, ಕಮಲಾಸನದಲ್ಲಿ ಕುಳಿತ, ನಾಲ್ಕು ಮುಖದ ಬ್ರಹ್ಮ ನಾಲ್ಕು ವೇದಗಳನ್ನು ಸೃಷ್ಟಿಸಿ ಹಾಡತೊಡಗಿದಾಗ ’ಓಂ’ಕಾರ ಸ್ವರೂಪದ ಸರಸ್ವತಿಯು ಶಂಖವನೂದಿದಂತೆ ಹೊರಟಿತು ಎನ್ನುತ್ತಾರೆ. ಹಾಗೆ ಹೊರಟ ಸರಸ್ವತಿಯು ಸರ್ವವನ್ನೂ ವ್ಯಾಪಿಸುತ್ತಾ ಬಂದಾಗ ಕವಿ ಬೇಂದ್ರೆಯವರು,
ನಾಚು ಮಾಡುತ ಬಂದು ವರದ ಹಸ್ತವನಿಟ್ಟ ಬಾಗಿಸಿದ ತಲೆಯ ಮೇಲೆ
...............ಹಚ್ಚೆ ಸತ್ಯ ತತ್ವದ ದೀಪವಾನಂದವನ್ನು ಬೀರೆ
ಎಂದು ಸ್ವಾಗತಿಸುತ್ತಾರೆ.
’ಸರಸ್ವತೀ ಸೂಕ್ತ’ ಕವನದ
ಅಂಚೆ ಏರಿ ನೀರಿನಾಕೆ
ಗಾಳಿಯಲ್ಲಿ ಸುಳಿದಳೋ
ಬೆಳಕಿನಲ್ಲಿ ಬೆಳೆದಳೋ
ಎಂಬ ಸಾಲು ಸರಸ್ವತಿಯ ಸಾರ್ವತ್ರಿಕತೆಯನ್ನು ಮನಗಾಣಿಸುತ್ತದೆ. ನೀರಿನಾಕೆ ಎಂಬ ಪದ ಸರಸ್ವತೀ ನದಿಯನ್ನು, ಗಾಳಿಯಲ್ಲಿ ಸುಳಿದಳೋ ಎಂಬುದು ಉಸಿರಿನ ಸಹಾಯದಿಂದ ಉತ್ಪತ್ತಿಯಾದ ಮಾತನ್ನು, ಬೆಳಕಿನಲ್ಲಿ ಬೆಳೆದಳೋ ಎಂಬುದು ಭಾಷೆಯ ಚಾಕ್ಷುಷರೂಪವಾದ ಬರವಣಿಗೆಯನ್ನು ಸೂಚಿಸುತ್ತವೆ. ಸರಸ್ವತಿಗಿರುವ ನದಿದೇವತೆ, ವಾಗ್ದೇವತೆ ಮತ್ತು ಭಾಷಾ ಎಂಬ ವಿಶೇಷಣಗಳನ್ನು ಅನುಸರಿಸಿ ಮೇಲಿನ ಪರಿಕಲ್ಪನೆ ಮೂಡಿದೆ. ಸರಸ್ವತಿಯ ಪರಿಕಲ್ಪನೆ ವಿಕಾಸವಾದ ಮೂರು ಮುಖ್ಯ ಹಂತಗಳನ್ನು ಈ ಸಾಲುಗಳು ಧ್ವನಿಸುತ್ತವೆ.
’ನೀನಾದಿನೀ-ದೇವತಾ ಸರಸ್ವತಿ’ ಕವನದ
....... ಆ ಸ್ವಾದಿನೀ
ವಾಜಿನಿ
ಜೀವಾಜಿನೀ
ವಾಜಿನೀವತೀ
ಸರಸ್ವತೀ
ರಸಸಾರಸ
ಹಂಸೀ
ತಮಧ್ವಂಸೀ
ಉತ್ತಮಾ
ಆದಿಮಾ
ಮಾ
ಆದತೀ
ಎಂಬ ಸಾಲುಗಳು, ವೇದದಲ್ಲಿ ಕಂಡುಬರುವ ಸರಸ್ವತಿಯನ್ನು ಚಿತ್ರಿಸುತ್ತವೆ. ಋಗ್ವೇದದ ಏಳನೇ ಮಂಡಲದ ೯೫ ಮತ್ತು ೯೬ನೇ ಸೂಕ್ತಗಳು ಈ ಪದ್ಯಕ್ಕೆ ಪ್ರೇರಣೆಯಾಗಿರುವಂತೆ ತೋರುತ್ತದೆ. ವಾಜಿನೀವತೀ ಎಂದರೆ ಒಳ್ಳೆ ಅನ್ನವನ್ನು ಕೊಡುವವಳು ಎಂದರ್ಥ; ಅವಳೇ ನದಿದೇವತೆ ಸರಸ್ವತಿ.
ವೇದದಿಂದ ಪ್ರೇರಿತವಾಗಿರುವ ಮತ್ತೊಂದು ಕವಿತೆ ’ಶಾರದೆಯೇ!’ ಎಂಬುದು.
ವೇದದ ಮಂತ್ರವ ವಾದವ ಮಾಡುವ ತಲೆಯಲ್ಲಿ
ನೀರೋ ನೀರೆಯೋ ಎನುವೊಲು ಇಹೆ ರಸ ಶಿಲೆಯಲ್ಲಿ
ಇಲ್ಲಿ ’ನೀರೋ ನೀರೆಯೋ’ ಎಂಬುದು ನದಿಯೋ ನದೀದೇವತೆಯೋ ಎಂಬುದನ್ನು ಸೂಚಿಸುತ್ತದೆ. ಮುಂದುವರೆದು, ಬೇಂದ್ರೆಯವರು ತಮ್ಮನ್ನು ತಾವು ’ನಿನ್ನ ಉಪಾಸನೆ ಮಾಡುವ ಸಾರಸ್ವತ ಸುತನು’ ಎಂದು ಕರೆದುಕೊಂಡಿದ್ದಾರೆ. ಸಾರಸ್ವತನು ಕೆಲವೊಮ್ಮೆ ಸರಸ್ವತಿಯ ಪತಿಯಾಗಿಯೂ ಕೆಲವೊಮ್ಮೆ ಸುತನಾಗಿಯೂ ವೇದಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಇಲ್ಲಿ ಕವಿಗಳು ಸರಸ್ವತೀಸುತರು ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದರೆ, ಸಾರಸ್ವತನು ಸರಸ್ವತಿಗೆ ಪತಿ ಎಂದಾಗುತ್ತದೆ. ಇಲ್ಲದಿದ್ದರೆ, ’ಕವಿ ಬೇಂದ್ರೆ’ ಸರಸ್ವತಿಯ ಮೊಮ್ಮಗನಾಗಬೇಕಾಗುತ್ತದೆ!
’ರಾಣಿವಾಸದ ವಾಣಿಗೆ’ ಕವಿತೆ ಒಂದು ರೀತಿಯಲ್ಲಿ ಸರಸ್ವತಿಯ ನಿಂದನಾ ಸ್ತುತಿ.
ಸರಸೋತಿ ಅಂತ ನಿನ್ನ
ಅರಸೊತ್ತಿಗೆ ಒಪ್ಪಿಕೊಂಡೆ
ಬರಸೋ ಹೊತ್ತಿಗೆ, ಬರಸು ಇನ್ನ
ಪುರುಸೊತ್ತಿಲ್ಲಾ.
ಎಂದು ವಾಣಿಯ ಕೃಪೆಗಾಗಿ ಪ್ರೀತಿಪೂರ್ವಕ ಒತ್ತಾಯ ಮಾಡುತ್ತಲೇ,
ಆ ಗಾನ ಈ ಗಾನ ಸಾಕು ಮಾಡು
ವೇದಾನ ಹಾಳತ ಮಾಡಿ, ಅದನ್ನ ಹಾಡು
ಎಂದು ಆಜ್ಞಾಪಿಸುತ್ತಾರೆ. ಆದರೆ ಅದಕ್ಕೆ
ಸಂಬಳ ಕೊಡಲಾರೆ
ಸಂಭಾಳಿಸಿಕೋ ನೀನು
ಎಂದು ಕೈಚೆಲ್ಲುತ್ತಾರೆ. ನಿಜವಾಗಿಯೂ ಇದು ಪ್ರತಿಭಾಶಾಲಿಯಾದ ಕವಿಯ ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಮಹಾಕವಿಗಳದ್ದು ಯಾವಾಗಲೂ ಬೇಡುವ ಪ್ರತಿಭೆಯಾಗಿರದೆ, ಪಡೆಯುವ ಪ್ರತಿಭೆಯಾಗಿರುತ್ತದೆ. ಅಂತೆಯೇ ಬೇಂದ್ರೆಯವರದೂ ಸಹ.
ಸರಸ್ವತಿಯನ್ನು ಕಾವ್ಯದೇವತೆಯಾಗಿ ಚಿತ್ರಿಸಿರುವ ಕವಿತೆ ’ಓ ಹಾಡೇ!’.
ಭೋಗಯೋಗದ ಪದವೆ ಜೈನವಾಙ್ಮಯ ಮಧುವೆ
ಯೋಗ ಭೋಗದ ಹದವೆ ವಚನಬ್ರಹ್ಮನ ವಧುವೆ
ಮುದ್ದುವಿಠಲಗೆ ಮಾರಿಕೊಂಡ ದಾಸಿ!
ಮುದ್ದಣ್ಣನ ಲಲ್ಲೆವಾತಿನ ಪ್ರೇಮರಾಶೀ
ಜೀವ ಜೀವಾಳದಲಿ ಬೆರೆತು ಕೂಡೇ
ಕನ್ನಡ ಸಾಹಿತ್ಯ ವಾಙ್ಮಯ ಬೆಳೆದು ಬಂದ ದಾರಿಯನ್ನು ಸರಸ್ವತಿಯ ಸ್ತುತಿಯಲ್ಲಿಯೇ ತೋರಿಸುವ ಶಬ್ದಗಾರುಡಿಗತನ ಬೇಂದ್ರೆಯವರದ್ದು. ಮುದ್ದುವಿಠಲಗೆ ಮಾರಿಕೊಂಡ ದಾಸಿ ಎಂಬುದು, ದಾಸಸಾಹಿತ್ಯದ ಬೃಹತ್ತು-ಮಹತ್ತುಗಳನ್ನು ಸೂಚಿಸಿದರೆ, ಮುದ್ದಣನ ಲಲ್ಲೆವಾತಿನ ಪ್ರೇಮರಾಶಿ ಎಂಬುದು, ಮುದ್ದಣನ ಕಾವ್ಯಗಳ ಸರಸ-ಪ್ರೇಮವನ್ನು ಮನಗಾಣಿಸುತ್ತದೆ. ಪದ್ಯದ ನಾಲ್ಕನೇ ಚರಣದ ’ಮುಂಗೈಯ ಮೇಲೆ ಅಂಗಜನ ಅರಗಿಳಿಯಿರಿಸಿ’ ಎಂಬುದು ಶೃಂಗೇರಿ ಶಾರದೆಯನ್ನು ಚಿತ್ರಿಸಿದರೆ, ’ಚಾರುತಮ ಸರಸ ಅರಸಂಚೆಯನು ಹೂಡಿ, ಬಂದು ನನ್ನಿದಿರಲ್ಲಿ ನಾಟ್ಯವಾಡೆ’ ಸಾಲು ಸರಸ್ವತಿಯ ವಾಹನ ಹಂಸವನ್ನು ಸೂಚಿಸುತ್ತದೆ; ಜತೆಗೆ ನಾಟ್ಯಸರಸ್ವತಿಯನ್ನೂ ಚಿತ್ರಿಸುತ್ತದೆ. ಕೊನೆಯ ಚರಣದ ’ನನ್ನ ನಾಲಗೆ ನಿನ್ನ ಬರಿ ಸೂಲಗಿತ್ತಿ’ ಎಂಬುದು ’ವಾಕ್’ ಜನನಸ್ಥಾನ ನಾಲಗೆ; ನಾಲಗೆ ಬರಿ ಸೂಲಗಿತ್ತಿ ಮಾತ್ರ, ತಾಯಿಯಾಗಲಾರದು. ಆ (ವಾಕ್)ತಾಯಿ ನೀನೇ ಎಂಬ ನವೀನ ಕಲ್ಪನೆಯನ್ನು ಕಟ್ಟಿಕೊಡುತ್ತದೆ.
’ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು, ಭಾರತ ಹಮಾರ ಮುಂದಾಗಬೇಕು’ ಎನ್ನುವ ಆಶಯದ ’ಕವಿಗಳ ಕಾಣಿಕಿ’ ಕವನದ ಪ್ರಥಮ ಸಾಲಿನಲ್ಲಿಯೇ ’ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ’ ಎಂದು ಸರ್ವಭಾಷಾಮಯೀ ಸರಸ್ವತಿಗೆ ನಮಸ್ಕರಿಸುತ್ತಾರೆ. ’ಸಪ್ತಕಲಾ’ ಕವಿತೆ ಸಂಗೀತ, ಶಿಲ್ಪ, ನೃತ್ಯ, ನಾಟಕ, ಜೀವನ, ವಾಸ್ತು ಮತ್ತು ಸಾಹಿತ್ಯ ಎಂಬ ಏಳು ಕಲೆಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಅದರಲ್ಲಿ ಏಳನೆಯದು ಸರ್ವಾತ್ಮಕವಾದ ಸಾಹಿತ್ಯ. ಅದರಲ್ಲಿ, ’ಸಕಲಾs ಸಿದ್ಧಾs ಸರಸ್ವತಿ ವೀಣಾ ಪಾಣಿ ಪಶ್ಯಂತಿಯ ವಾಣಿ........’ ಹೀಗೆ ಸಾಹಿತ್ಯವನ್ನು ಸರಸ್ವತಿ ಎಂದೇ ಸ್ತುತಿಸಲಾಗಿದೆ. ಹಾಗೆ ನೋಡಿದರೆ ಬೇಂದ್ರೆಯವರು ಹೇಳಿರುವ ಸಪ್ತಕಲೆಗಳಲ್ಲಿ ಸಾಹಿತ್ಯದ ಜೊತೆಗೆ ಸಂಗೀತ, ಶಿಲ್ಪ, ನೃತ್ಯ, ನಾಟಕ ಇವೆಲ್ಲವೂ ಸರಸ್ವತಿಗೆ ಸಂಬಂಧಿಸಿದವುಗಳೇ ಆಗಿವೆ. ಮಂಗರಸನ ಮತ್ತು ಕವಿಕಾಮನ ’ಸಂಸಾರವಾರಿಧಿಗೆ ದ್ರೋಣಿ’ ಮತ್ತು ಕವಿಕಾಮನ ’ಸಂಸಾರ ಸಂಭಾವಿತಾತ್ಮೆ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸರಸ್ವತಿಯನ್ನು ಗ್ರಹಿಸಿದರೆ, ಜೀವನಕಲೆ ಕೂಡಾ ಸರಸ್ವತಿಗೆ ಸಂಬಂಧಿಸಿದ್ದಾಗಿದೆ. ಆದರೆ, ವಾಸ್ತು ಸಪ್ತಕಲೆಗಳಲ್ಲಿ ಸೇರಿದ್ದು ಹೇಗೆ ಎಂಬುದು ಅರ್ಥವಾಗುವುದಿಲ್ಲ. ಸರಸ್ವತಿಯು ’ಸಕಲಕಲಾಧಾರಿಣಿ’ ಎಂದರೂ, ವಾಸ್ತುವಿಗೇಕೆ ಈ ಪ್ರಾಮುಖ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಬೇಂದ್ರೆಯವರಿಗಿದ್ದ ಸಂಖ್ಯಾಶಾಸ್ತ್ರದ ಒಲವು ವಾಸ್ತುವನ್ನು ಸಪ್ತಕಲೆಗಳಲ್ಲಿ ಸೇರಿಸಲು ಕಾರಣವಿದ್ದಿರಬೇಕು.
[ ಪ್ರಕಟವಾಗಲಿರುವ ನನ್ನ 'ಸರಸ್ವತಿ : ವಿಸ್ಮಯ ಸಂಸ್ಕೃತಿ' ಕೃತಿಯ ಕೆಲವು ಪುಟಗಳು ಇವು]

Thursday, January 27, 2011

ರೈತನಾಗುವ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಸವಿನೆನಪುಗಳು

ದಿನಾಂಕ 25-11-2011 ಮಂಗಳವಾರ ಸಂಜೆ, ನಯನ ಸಭಾಂಗಣದಲ್ಲಿ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಪುಸ್ತಕ ಬಿಡುಗಡೆಯಾಯಿತು. ಸಮಾರಂಭದ ಚಿತ್ರಗಳು ನಿಮಗಾಗಿ.


ಮಿತ್ರರಾದ ಪರಾಂಜಪೆಯವರು ಅಂದಿನ ಸಮಾರಂಭದಲ್ಲಿ ಶ್ರೀ ನಾರಾಯಣರೆಡ್ಡಿಯವರು ಮಾಡಿದ ಭಾಷಣದ ಬಗ್ಗೆ ಬರೆದಿದ್ದಾರೆ. ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಅಂದಿನ ಸಮಾರಂಭದ ವರದಿ ಮತ್ತು ಚಿತ್ರಗಳು ಉದಯವಾಣಿ (ಪುಟ ಮೂರರಲ್ಲಿ) ಹಾಗೂ ಕನ್ನಡ ಪ್ರಭ (ಪುಟ 4)ರಲ್ಲಿ ಪ್ರಕಟವಾಗಿರುತ್ತವೆ. (ಲಿಂಕ್ ಕ್ಲಿಕ್ಕಿಸಿ, ಆ ಪುಟಗಳನ್ನು ನೋಡಬಹುದು). ಸಮಾರಂಭಕ್ಕೆ ಆಗಮಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು.

Tuesday, January 25, 2011

ರೈತನಾಗುವ ಹಾದಿಯಲ್ಲಿ ಸಂಪಾದನೆ : ಆಹ್ಲಾದಕರ ಅನುಭವ




ಪುಸ್ತಕ ಸಂಪಾದನೆಯ ಬಗ್ಗೆ ಹೇಳುವುದಕ್ಕೆ ಮೊದಲು, ಅವಾರ್ಯವಾಗಿ ನನ್ನ ಮತ್ತು ಶ್ರೀ ಎಸ್. ಮಧುಸೂದನ ಪೆಜತ್ತಾಯ ಅವರ ಪರಿಚಯದ ಬಗ್ಗೆ ಹೇಳಲೇಬೇಕೆನ್ನಿಸುತ್ತಿದೆ. ೨೦೦೮ರಲ್ಲಿ ಇರಬಹುದು. ತೇಜಸ್ವಿಯವರ ವೈಚಾರಿಕತೆ ಎನ್ನುವ ನನ್ನ ಲೇಖನ ಕನ್ನಡಧ್ವನಿ.ಕಾಂ ಆನ್ ಲೈನ್ ಪತ್ರಿಕೆಯಲ್ಲಿ ಎಂಟು ಕಂತುಗಳಲ್ಲಿ ಪ್ರಕಟವಾಗಿತ್ತು. ಅದಕ್ಕೆ ಬಂದು ಪ್ರತಿಕ್ರಿಯೆಗಳನ್ನು ಒಟ್ಟಾಗಿಸಿ ಶ್ರೀ ಗೋಪಿನಾಥ್‌ರಾವ್ ದೂರದ ದುಬೈನಿಂದ ನನಗೆ ಈ-ಮೇಲ್ ಕಳುಹಿಸಿದ್ದರು. ಅದರಲ್ಲಿ ಒಂದು ಪ್ರತಿಕ್ರಿಯೆ ಶ್ರೀ ಮಧುಸೂದನ ಪೆಜತ್ತಾಯ ಅವರದ್ದಾಗಿತ್ತು. ಕೇವಲ ನಾಲ್ಕೇ ಸಾಲಿದ್ದ ಅದು ನನಗೆ ವಿಶೇಷವಾಗಿ ಕಂಡಿದ್ದರಿಂದ, ಅವರಿಗೊಂದು ಈ-ಮೇಲ್ ತಕ್ಷಣ ಕಳುಹಿಸಿಬಿಟ್ಟೆ. ಆಶ್ಚರ್ಯ! ಕೇವಲ ಐದೇ ನಿಮಿಷದಲ್ಲಿ ಅದಕ್ಕೆ ಪ್ರತ್ಯುತ್ತರ ಬಂದಿತ್ತು. ಸ್ವತಃ ಪೆಜತ್ತಾಯ ಅವರೇ ತಮ್ಮ ಕಿರು ಪರಿಚಯ ಮಾಡಿಕೊಂಡು ಸ್ನೇಹಪೂರ್ವಕ ಈ-ಮೇಲ್ ಕಳುಹಿಸಿದ್ದರು.

ಹೀಗೆ ಅಂದು ಪ್ರಾರಂಭವಾದ ನಮ್ಮ ಈ-ಮೇಲ್ ಸ್ನೇಹ, ದಿನಕ್ಕೊಂದು ಒಮ್ಮೊಮ್ಮೆ ಎರಡು ಮೂರು ನಾಲ್ಕು ಈ-ಮೇಲ್‌ಗಳವರೆಗೂ ಬಂತು. ಅವರು ಬರೆದ ಇಂಗ್ಲಿಷ್ ಪುಸ್ತಕದ ನೂರಾರು ಪುಟಗಳನ್ನು ನನಗೆ ಈ-ಮೇಲ್ ಮುಖಾಂತರವೇ ಕಳುಹಿಸಿದ್ದರು. ನನ್ನ ಪುಸ್ತಕಗಳನ್ನು ಕೇಳಿ ಪಡೆದು ಓದಿ ಅದಕ್ಕೆ ತಮ್ಮ ಅನಿಸಿಕೆಯನ್ನೂ ಬರೆದರು. ಅತ್ಯಂತ ಸರಳ ನೇರ ಮಾತುಗಾರಿಕೆಯ ಮೂಲಕ ನನ್ನ ಆತ್ಮೀಯರಾದರು. ಕೃಷಿ ವ್ಯವಸಾಯ ಸಾಹಿತ್ಯ ಫೋಟೋಗ್ರಫಿ ಎಲ್ಲವುದರ ಬಗ್ಗೆಯೂ ತಮಗೆ ತಿಳಿದಿರುವುದನ್ನು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಪ್ರಸ್ತುತ ಪಡಿಸುವ ಅವರ ಶೈಲಿ ನನಗೆ ಅಚ್ಚುಮೆಚ್ಚಾಗಿತ್ತು. ನಂತರ ಅವರನ್ನು ಬೇಟಿ ಮಾಡದೇ, ಅವರ ತೋಟಕ್ಕೂ ಹೋಗಿ ಸುತ್ತಾಡಿಕೊಂಡು ಬರುವ ಯೋಗವೂ ಲಭಿಸಿತು. ಅಲ್ಲಿಂದ ಬಂದ ಮೇಲೆಯೇ ಅವರನ್ನು ಮುಖತಃ ಬೇಟಿಯಾಗಿದ್ದು. ನಮ್ಮಿಬ್ಬರ ನಡುವೆ ಇಪ್ಪತ್ತೈದು ವರ್ಷಗಳ ಅಂತರವಿದೆ. ಒಂದು ತಲೆಮಾರು ಆಗಿಹೋಗಿದೆ. ಆದರೆ ನಮಗೆಂದೂ ಆ ವಯಸ್ಸಿನ ಅಂತರ ಒಂದು ಸಮಸ್ಯೆಯೇ ಆಗಿಲ್ಲ.



ಅವರು ಸುಮ್ಮನೆ ಸಮಯ ಕಳೆಯಲು ಈ-ಮೇಲ್ ಕಳುಹಿಸುವುದಿಲ್ಲ. ಮಾಹಿತಿಯನ್ನು ಕೊಡಲು ಪಡೆಯಲು ಅದನ್ನು ಅವರು ಯಶಸ್ವಿಯಾಗಿ ಬಳಸುತ್ತಾರೆ. ಅವರಿಂದ ಬರುತ್ತಿದ್ದ ಕೆಲವೊಂದು ಈ-ಮೇಲ್ ಬರಹಗಳು ಒಳ್ಳೆಯ ಲೇಖನಗಳ ಕಚ್ಚಾರೂಪದಂತೆಯೇ ನನಗೆ ಕಾಣುತ್ತಿದ್ದವು. ಅದೊಂದು ದಿನ, ಹಾಗೆ ಬಂದ ಈ-ಮೇಲ್ ಬರಹವೊಂದನ್ನು ಲೇಖನದ ರೂಪಕ್ಕೆ ತಂದು ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಿದೆ. ತಕ್ಷಣ, ತುಂಬಾ ಚೆನ್ನಾಗಿದೆ. ನನ್ನ ಅಭಿಪ್ರಾಯ, ಭಾಷೆ ಯಾವುದಕ್ಕೂ ಧಕ್ಕೆ ಬಾರದ ಹಾಗೆ ಇಡೀ ಬರಹವನ್ನು ಲಲಿತಪ್ರಬಂದದಂತೆ ಬದಲಾಯಿಸಿರುವುದು ಖುಷಿಯಾಗಿದೆ ಎಂದರು. ನಾನು ಅದನ್ನು (ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!) ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ಕೇಳಿದೆ. ಸಂತೋಷದಿಂದಲೇ ಒಪ್ಪಿಗೆಯಿತ್ತರು. ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ಉತ್ತೇಜನಗೊಂಡು, ಇನ್ನೂ ಒಂದೆರಡು ಈ ಮೇಲ್‌ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಅವರ ಒಪ್ಪಿಗೆ ಪಡೆದು ಬ್ಲಾಗಿನಲ್ಲಿ ಹಾಕಿದ್ದೆ.

ಅದೊಂದು ದಿನ ಹೀಗೆ ಪ್ರಕಟವಾಗಿದ್ದ ಬರಹವೊಂದನ್ನು ನೋಡಿ, ಈ-ಮೇಲ್‌ನಲ್ಲಿ ತಮ್ಮ ಎಡಿಟಿಂಗ್ ಶಾಘನೀಯ. ನನ್ನ ಕನ್ನಡ ಬರಹಗಳೆನ್ನೆಲ್ಲಾ ತಮಗೆ ಒಪ್ಪಿಸುವ ಆಸೆ. ಜತೆಗೆ ಅವುಗಳ ಮೇಲಿನ ಸರ್ವ ಅಧಿಕಾರವನ್ನೂ! ಎಂದು ಬರೆದಿದ್ದರು. ನನಗೆ ಏನು ಹೇಳಬೇಕೆಂದು ತೋಚದೆ, ಅವರು ನನ್ನ ಮೇಲಿಟ್ಟ ನಂಬಿಕೆಗೆ ಮೂಕವಿಸ್ಮಿತನಾಗಿ ಸುಮ್ಮನಾಗಿಬಿಟ್ಟದ್ದೆ. ತಕ್ಷಣ ಬಂದ ಇನ್ನೊಂದು ಈ-ಮೇಲಿನಲ್ಲಿ ನನ್ನ ಎಲ್ಲಾ ಕನ್ನಡ ಬರಹಗಳ ಉತ್ತರಾಧಿಕಾರಿ ನೀವೆ! ನಿಮಗೆ ಹೇಗೆ ಬೇಕೋ ಹಾಗೇ ಅವನ್ನು ಬಳಸಿಕೊಳ್ಳಿ. ಅವುಗಳಲ್ಲಿ ನಾನು ಸತ್ಯವನ್ನು ಬಿಟ್ಟು ಬೇರೆ ಏನನ್ನೂ ಬರೆದಿಲ್ಲ. ಎಂದು ಬರೆದು ಅವರ ಕಂಪ್ಯೂಟರಿನಲ್ಲಿದ್ದ ಎಲ್ಲಾ ಕನ್ನಡ ಫೈಲುಗಳನ್ನು ಅಟ್ಯಾಚ್ ಮಾಡಿ ನನಗೆ ಕಳುಹಿಸಿದ್ದರು!

ನನಗೆ ಏನು ಮಾಡಬೇಕೆಂದು ತಕ್ಷಣಕ್ಕೆ ತೋಚಲಿಲ್ಲ. ಅವರ ಬರಹಗಳಟ್ಟುಕೊಂಡು ಏನು ಮಾಡುವುದು? ಇದೊಂದು ಯಕ್ಷಪ್ರಶ್ನೆಯಾಗಿಬಿಟ್ಟಿತ್ತು. ಅವರ ಎಲ್ಲಾ ಬರಹಗಳನ್ನು ಪುಸ್ತಕಕ್ಕೆ ಅಳವಡಿಸಲು ಸಾಧ್ಯವಿರಲಿಲ್ಲ. ಆಗಾಗಲೇ ಅವರ ಕಾಗದದ ದೋಣಿಯಲ್ಲಿ ಸಾಕಷ್ಟು ಪ್ರಕಟವಾಗಿದ್ದವೂ ಕೂಡಾ. ಒಂದೇ ವಿಷಯಕ್ಕೆ ಸಂಬಂಧಪಟ್ಟ ಕೆಲವನ್ನಾದರೂ ಆಯ್ದು ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಲ್ಲವೇ? ಎಂಬ ಯೋಚನೆ ನನಗೆ ಯಾವಾಗ ಬಂತೋ, ಆಗಲೇ ಕಾರ್ಯಪ್ರವೃತ್ತನಾಗಿಬಿಟ್ಟೆ. ನಾನು ಅಷ್ಟೊತ್ತಿಗಾಗಲೇ ಈ-ಮೇಲ್‌ನಲ್ಲಿ ಬಂದ ಐದಾರು ಬರಹಗಳನ್ನು ಲೇಖನ ರೂಪದಲ್ಲಿ ಸಂಪಾದಿಸಿದ್ದೆ. ಅವುಗಳಿಗೆ ಪೂರಕವಾಗಿಯೇ ವಿಷಯವನ್ನು ಅರಸುತ್ತಾ ಕಾಗದದ ದೋಣಿ ಪುಸ್ತಕದಲ್ಲಿ ಪ್ರಕಟವಾಗದಿರುವ ಬರಹಗಳನ್ನು ಒಂದು ಕಡೆ ಕಲೆ ಹಾಕಿದೆ. ಅದು, ಅವರು ತಮ್ಮ ಪ್ರಾರಂಭದ ದಿನಗಳಲ್ಲಿ, ತಮ್ಮ ಅಕ್ಕ ಮತ್ತು ಭಾವಗೋಸ್ಕರ, ತೋಟ ಮಾಡಲು ಶಿರೂರಿನಲ್ಲಿ ಕಳೆದ ಒಂದು ವರ್ಷದ ಜೀವನದ ಕಥೆಯಾಗಿತ್ತು! ಶಿರೂರಿನ ಒಂದು ವರ್ಷದ ಅವಧಿಯ ಅವರ ಬದುಕನ್ನು ತಮಗರಿವಿಲ್ಲದೇ ಅವರು ಅಕ್ಷರ ರೂಪಕ್ಕೆ ಇಳಿಸಿಬಿಟ್ಟಿದ್ದರು!



ಈ ಪುಸ್ತಕದಲ್ಲಿ ಇಪ್ಪತ್ತಮೂರು ಲೇಖನಗಳನ್ನು ಸಂಪಾದಿಸಿ, ಸಂಕಲಿಸಿದ್ದೇನೆ. ಮೊದಲ ಮತ್ತು ಕೊನೆಯ ಲೇಖನಗಳು ನೇರವಾಗಿ ಶಿರೂರಿನ ಬದುಕಿಗೆ ಸಂಬಂಧಿಸಿದವುಗಳಲ್ಲದಿದ್ದರೂ, ಪೂರಕ ಬರಹಗಳೇ ಆಗಿವೆ. ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ರೈತ, ಮಡ್ಡ, ದಡ್ಡ ಎಂದು ಹೇಳಿ ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು!

ಸಾಹಿತ್ಯಲೋಕದ ಪರಿಭಾಷೆಯ ಬಗ್ಗೆ ಪೆಜತ್ತಾಯರ ಬರಹಗಳನ್ನು ಇಟ್ಟು ನೋಡಲು ಆಗುವುದೇ ಇಲ್ಲ. ಜೀವನದ ಅನುಭವಗಳನ್ನು ಯಾವುದೇ ಸಾಹಿತ್ಯಕ ಮಾನದಂಡಗಳಿಲ್ಲದೇ ನೇರವಾಗಿ, ಸರಳವಾಗಿ, ಆದರೆ ಕುತೂಹಲಕಾರಿಯಾಗಿ ಪ್ರಸ್ತುಪಡಿಸುವುದರಲ್ಲೇ ಅವರ ಬರಹದ ಸೊಗಸಿದೆ. ಪ್ರತೀ ಬರಹದ ಹಿಂದೆ ಅವರ ಹುಡುಕಾಟದ ಗುಣವನ್ನು ನಾವು ಕಾಣಬಹುದಾಗಿದೆ.

ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು, ಒಡನಾಡಿದ ಜನಸಮೂಹ ಎಲ್ಲವೂ ಈ ಬರಹದಲ್ಲಿ ಬಂದು ಹೋಗುತ್ತವೆ. ಯಾವುದೇ ರಸವತ್ತಾದ ಕಾದಂಬರಿಗಳ ಪಾತ್ರವನ್ನೂ ಮೀರಿಸಬಲ್ಲಂತಹ ಪಾತ್ರಗಳು ಅವರ ನಿಜಜೀವನದಲ್ಲಿ ಬಂದು ಹೋಗಿರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಬದುಕಿನ ಸೊಗಡು ಸಹಜವಾಗಿಯೇ ನಮಗೆ ದಕ್ಕುವುದು ಅವರು ನೆನಪಿನಲ್ಲಿಟ್ಟುಕೊಂಡು ಚಿತ್ರಿಸಿರುವ ಆ ಮುಗ್ಧ ಹಳ್ಳಿಗರ ಪಾತ್ರಗಳಿಂದ! ಕುವೆಂಪು, ಕಾರಂತ, ಗೊರೂರು, ತೇಜಸ್ವಿ, ದೇವನೂರು ಮೊದಲಾದವರ ಕಥೆ ಕಾದಂಬರಿಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಂದು ಪುಟ್ಟ ಮೆರವಣಿಗೆ ಈ ಕೃತಿಯ ಓದುಗನ ಮನಸ್ಸಿನಲ್ಲಿ ನಡೆದು ಹೋದರೆ ಆಶ್ಚರ್ಯವೇಲ್ಲ.

ಪ್ರತಿಯೊಂದು ಬರಹಗಳ ಬಗ್ಗೆ ಪ್ರತ್ಯೇಖವಾಗಿ ಇಲ್ಲಿ ಹೇಳುವ ಅಗತ್ಯವಿಲ್ಲ. ಪೆಜತ್ತಾಯರ ಬರಹಗಳಿಗೆ ಅಂತಹ ದಿಕ್ಸೂಚಿಯ ಅಗತ್ಯವೂ ಇಲ್ಲ. ಅಷ್ಟು ಚೆನ್ನಾಗಿ ಓದಿಸಿಕೊಂಡು ಹೋಗುವ ಅವರ ಲೇಖನಗಳ ಬಗ್ಗೆ ಬರೆದು ಪರಿಚಯ ಮಾಡಿಕೊಡುವುದೆಂದರೆ ಅದು ಅವರ ಬರಹಗಳಿಗೆ ಅಪಚಾರ ಮಾಡಿದಂತೆ ಎಂಬ ಎಚ್ಚರ ನನಗಿದೆ.



ಸರ್ ನೀವು ರಿಟಾಯರ್ಡ್ ರೈತರಾದರೆ, ನಾನು ವೀಕೆಂಡ್ ರೈತ ಎಂದು ನಾನೊಮ್ಮೆ ಬರೆದಿದ್ದೆ. ಅದನ್ನು ಓದಿ ಹೌದು ನಾನು ದೈಹಿಕವಾಗಿ ರಿಟಾಯರ್ಡ್; ಆದರೆ ಮಾನಸಿಕವಾಗಿ ಎಂದೆಂದಿಗೂ ರೈತನೇ! ಈಗ ನೋಡಿ ಇಲ್ಲೇ ಕುಳಿತುಕೊಂಡು, ಕೃತಕವಾಗಿ ಕಾಫಿಯನ್ನು ಒಣಗಿಸುವ ಯಂತ್ರೋಪಕರಣವನ್ನು ನನ್ನ ತೋಟದಲ್ಲಿ ಹಾಕಿಸುತ್ತಿದ್ದೇನೆ ಎಂದು ಜೋರಾಗಿ ನಕ್ಕಿದ್ದರು. ವಯೋಸಹಜವಾದ ದೈಹಿಕ ನಿಶ್ಯಕ್ತಿಯಿಂದ ಬಳಲುತ್ತಿದ್ದರೂ, ಬೆಂಗಳೂರಿನಲ್ಲೇ ನೆಲೆಸಿದ್ದರೂ, ಅವರ ತೋಟದ ಒಂದಿಂಚೂ ಅವರ ಕಣ್ಣೆದುರಿನಿಂದ ಮರೆಯಾಗಿಲ್ಲ. ಅಷ್ಟೊಂದು ದೊಡ್ಡ ತೋಟದ ಪ್ರತಿಯೊಂದನ್ನೂ ಅವರು ನಿಭಾಯಿಸುವ ರೀತಿ ನನ್ನಂತಹ ಕಿರಿಯರಿಗೆ ಆದರ್ಶನೀಯ. ಅವುಗಳೆಲ್ಲದರ ನಡುವೆ ಈಗಲೂ, ಜ್ಞಾನದ ಹುಡುಕಾಟವನ್ನೂ ಬಿಟ್ಟಿಲ್ಲ. ಚೀನಾದ ಸಿಲ್ಕ್ ರೂಟ್ ಬಗ್ಗೆ ಬರೆಯುತ್ತಾರೆ. ಕಾಫಿಗಿಡದ ಖಾಯಿಲೆಯ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಿ ತೆಗೆದು ಲೇಖನ ಬರೆಯುತ್ತಾರೆ. ನೇಪಾಳ ಪ್ರವಾಸದ ನೆನಪನ್ನೂ ಬಿಚ್ಚಿಡುತ್ತಾರೆ. ಹೀಗೆ ಪೆಜತ್ತಾಯ ಅವರದು ದಣಿವರಿಯದ ದೊಡ್ಡ ಜೀವ. ತಾವು ರೈತರಾಗಿ, ತಮ್ಮ ರೈತ ಬದುಕಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ನನ್ನಂತಹ ಕಿರಿಯರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವ ಪೆಜತ್ತಾಯ ಅವರದು. ಅವರ ಪ್ರಭಾವದಿಂದಲೇ ನಾನು ಇಂದು ವಾರಾಂತ್ಯದ ರೈತನಾಗಿ, ತೋಟದಲ್ಲಿ ಬೆವರು ಸುರಿಸಿದಾಗ ಆಗುವ ಸಂತೋಷವನ್ನು ಅನುಭವಿಸುತ್ತಿದ್ದೇನೆ.



ನನ್ನ ಮೇಲಿನ ಅಭಿಮಾನದಿಂದ ತಮ್ಮೆಲ್ಲಾ ಕನ್ನಡ ಬರಹಗಳನ್ನು ನನ್ನ ಸುಪರ್ದಿಗೆ ಒಪ್ಪಿಸಿದ್ದಲ್ಲದೆ, ಅವುಗಳನ್ನು ಸಂಪಾದಿಸಲು, ಬ್ಲಾಗಿನಲ್ಲಿ ಪ್ರಕಟಿಸಲು, ಕೊನೆಗೆ ಪುಸ್ತಕ ರೂಪದಲ್ಲಿ ಪ್ರಕಟಸಲು ಅನುಮತಿಯಿತ್ತ ಶ್ರೀ ಎಸ್. ಮಧುಸೂದನ ಪೆಜತ್ತಾಯ ಅವರ ದೊಡ್ಡತನಕ್ಕೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ.

ಪುಸ್ತಕ ರೂಪದಲ್ಲಿ ಪೆಜತ್ತಾಯರ ಬರಹಗಳನ್ನು ಸಂಪಾದಿಸಿ, ಪ್ರಕಟಿಸಿ ತನ್ಮೂಲಕ ಹಿರಿಯ ರೈತರೊಬ್ಬರಿಗೆ ಗೌರವಿಸಬೇಕೆಂಬ ನನ್ನ ಆಸೆಗೆ ನೀರೆರೆದವರು ನನ್ನ ಗೆಳೆಯ ನಾಗೇಶ್. ಪೆಜತ್ತಾಯರ ವಿಷಯ ಕೇಳುತ್ತಲೇ, ಪುಸ್ತಕ ಪ್ರಕಟಣೆಗೆ ಒಪ್ಪಿ, ಅದನ್ನು ಸಾಕಾರಗೊಳಿಸಿದ ನಾಗೇಶ್ ಸಾಹಸ ನಿಜಕ್ಕೂ ಶ್ಲಾಘಯ.

ಇಂಗ್ಲೀಷ್ ಪುಸ್ತಕಕ್ಕೆ ಯತೀಶ್ ಸಿದ್ಧಿಕಟ್ಟೆ ಅವರಿಂದ ಬರೆಯಿಸಿದ್ದ ಚಿತ್ರಗಳಲ್ಲಿ, ಈ ಪುಸ್ತಕಕ್ಕೆ ಬೇಕಾದ ಕೆಲವು ಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿಯನ್ನಿತ್ತುದಲ್ಲದೆ, ಕೆಲವೊಂದು ಹೊಸ ಚಿತ್ರಗಳನ್ನು ಬರೆಯಿಸಿಕೊಟ್ಟು ಪೆಜತ್ತಾಯ ಅವರು ಆಶಿರ್ವದಿಸಿದ್ದಾರೆ. ಅತ್ಯಂತ ಸೊಗಸಾದ ಚಿತ್ರಗಳನ್ನು ಬರೆದುಕೊಟ್ಟ ಶ್ರೀ ಯತೀಶ್ ಸಿದ್ಧಿಕಟ್ಟೆಯವರಿಗೂ ನನ್ನ ನಮನಗಳು ಸಲ್ಲುತ್ತವೆ.

ಪೆಜತ್ತಾಯರ ಪುಸ್ತಕಕ್ಕೆ ಮುನ್ನುಡಿಯ ಹಂಗೇಕೆ? ಎನ್ನುತ್ತಲೇ, ಒಂದೇ ಬಾರಿ ಕುಳಿತು ಓದಿ, ಚಿಕ್ಕದಾದರೂ ಚೊಕ್ಕವಾದ, ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದುಕೊಟ್ಟ ಲೇಖಕ ಶ್ರೀ ಅಬ್ದುಲ್ ರಷೀದ್ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಪುಸ್ತಕದ ಕರಡನ್ನು ತಿದ್ದಿಕೊಟ್ಟಿದ್ದಲ್ಲದೆ, ಅದಕ್ಕೊಂದು ಚೆಂದದ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ ಶ್ರೀ ಜಿ.ಎಸ್.ಎಸ್.ರಾವ್ ಅವರನ್ನೂ ಇಲ್ಲಿ ನೆನೆಯುತ್ತೇನೆ. ಮುಖಪುಟ ಕಲಾವಿದ ಸಾಗರ್, ಮುದ್ರಕರಾದ ಸತ್ಯಶ್ರೀ ಪ್ರಿಂಟರ‍್ಸ್ ಅವರ ನೆರವಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಕೊನೆಯದಾಗಿ, ನನ್ನ ಮತ್ತು ಪೆಜತ್ತಾಯ ಅವರ ಸ್ನೇಹಕ್ಕೆ ಕೌಟಂಬಿಕ ಚೌಕಟ್ಟನ್ನು ಕಲ್ಪಿಸಿದ, ಪೆಜತ್ತಾಯ ಅವರ ಶ್ರೀಮತಿ ಸರೋಜಮ್ಮ, ಅವರ ಮಕ್ಕಳಾದ ರಚನಾ ಮತ್ತು ರಾಧಿಕಾ ಹಾಗೂ ನನ್ನ ಶ್ರೀಮತಿ ಶ್ವೇತಾ ಮತ್ತು ಮಗಳು ಈಕ್ಷಿತಾ, ಹಿರಿಯ ಮಿತ್ರರಾದ ಶ್ರೀ ಜಿ.ಎಸ್.ಎಸ್.ರಾವ್ ಹಾಗೂ ಸಂಧ್ಯಾ ರಾಮಚಂದ್ರ ಅವರ ಸಹಕಾರವನ್ನು ಸ್ಮರಿಸುತ್ತಾ, ರೈತನಾಗುವ ಹಾದಿಯಲ್ಲಿ ಕೃತಿಯನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಪ್ರೀತಿಯಿಂದ

ಡಾ. ಬಿ.ಆರ್. ಸತ್ಯನಾರಾಯಣ

ಸುರಾನ ಕಾಲೇಜು, ಬೆಂಗಳೂರು

(ಇಂದು 25-0102011 ಮಂಗಳವಾರ ಸಂಜೆ ಆರು ಗಂಟೆಗೆ ಪುಸ್ತಕ ಲೋಕಾರ್ಪಣೆಯಾಗಲಿದೆ)

ನಿರ್ಮೋಹಿ ಬರಹಗಾರನ ಮೋಹಕ ಪಾತ್ರ ಪ್ರಪಂಚ : ಅಬ್ದುಲ್ ರಶೀದ್

ಕೆಂಡಸಂಪಿಗೆ ಬಳಗದ ಹಿರಿಯ ಲೇಖಕ ಎಸ್.ಎಂ.ಪೆಜತ್ತಾಯರ ಬರಹಗಳ ಸಂಗ್ರಹ ‘ರೈತನಾಗುವ ಹಾದಿಯಲ್ಲಿ’ ಮಂಗಳವಾರ ಸಂಜೆ ಆರು ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.ಪೆಜತ್ತಾಯರ ಪುಸ್ತಕಕ್ಕೆ ಅಬ್ದುಲ್ ರಶೀದ್ ಬರೆದ ಮುನ್ನುಡಿ ಇಲ್ಲಿದೆ

ಹಿರಿಯರಾದ ಮಧುಸೂದನ ಪೆಜತ್ತಾಯರ ಈ ಪುಸ್ತಕದ ಮೊದಲಲ್ಲಿ ತುಂಬ ಪ್ರೀತಿ, ಅಪಾರ ಗೌರವ ಮತ್ತು ಸ್ವಲ್ಪ ಸಂಕಟದಿಂದ ಕೆಲವು ಸಾಲುಗಳನ್ನು ಬರೆಯುತ್ತಿರುವೆ. ತುಂಬ ಪ್ರೀತಿ ಅವರ ಬರಹದಲ್ಲಿರುವ ಜೀವ ಪ್ರೀತಿಗಾಗಿ. ಅಪಾರ ಗೌರವ ಅವರ ಜೀವನದ ಸಾಹಸಗಳಿಗಾಗಿ. ಸ್ವಲ್ಪ ಸಂಕಟ ಅವರ ಯೌವನದ ದಿನಗಳಲ್ಲಿ ಅವರ ಸಾಹಸಗಳ ಜೊತೆ ಇರಲಾಗದ ತಲೆಮಾರಿನವನಾಗಿ ಹುಟ್ಟಿದ್ದಕ್ಕಾಗಿ. ಇಷ್ಟು ಒಳ್ಳೆಯ ಮನಸ್ಸಿನ,ಇಷ್ಟು ತುಂಟ ಹಠಮಾರಿತನದ, ಇಷ್ಟು ಗಟ್ಟಿ ನಿರ್ಧಾರಗಳ, ಇಷ್ಟೊಂದು ಓದಿಕೊಂಡ, ಎಲ್ಲವನ್ನೂ ಮಾಡಿ ಮುಗಿಸಿ ಆಮೇಲೆ ಬರೆಯಲು ಕೂತ ನಿರ್ಮೋಹಿ ಬರಹಗಾರನೊಬ್ಬನ ಸಂಗದಲ್ಲಿ ಆತನ ಕರ್ಮಭೂಮಿಯ ದಿನಗಳಲ್ಲಿ ನಾನೂ ಇದ್ದಿದ್ದರೆ ಎಂದು ಯೋಚಿಸಿ ಕಣ್ಣು ತುಂಬಿಕೊಳ್ಳುತ್ತದೆ. ಈ ಪುಸ್ತಕದ ಕೊನೆಯಲ್ಲಿ ಮಲಯಾಳಿ ಕಣ್ಣನ್ ಮೇಸ್ತ್ರಿ ಎಂಬ ಮನುಷ್ಯನೊಬ್ಬ ಬರುತ್ತಾನೆ. ಮರದ ಕೂಪಿನ ಮೇಸ್ತ್ರಿ ಆತ. ಒಂಥರಾ ದೈವಾಂಶ ಸಂಭೂತನಂತೆ ಆತ ಕಾಣಿಸುತ್ತಾನೆ. ಆತನಿಂದ ಬೀಳ್ಕೊಳ್ಳುವಾಗ ಪೆಜತ್ತಾಯರ ಕಣ್ಣುಗಳು

ನನ್ನ ಮ್ಯಾನ್ ಫ್ರೈಡೇ ಚೀಂಪ!: ಪೆಜತ್ತಾಯರ ಪುಸ್ತಕದ ಕೆಲವು ಹಾಳೆಗಳು


ಎಸ್.ಎಂ. ಪೆಜತ್ತಾಯ

ಕೆಂಪಿಯಿಂದ ಬಲವಾದ ಒದೆ ತಿಂದ ಮೇಲೆ ನನಗೆ ಹಾಲು ಕರೆಯುವ ವಿಚಾರ ಎಂದರೆ ಭಯ! ದನಗಳನ್ನು ನೋಡಿಕೊಂಡು ಹಾಲು ಕರೆಯುವ ಕಾರ್ಯದಲ್ಲಿ ಸಹಾಯ ಮಾಡುವ ಮನುಷ್ಯನೊಬ್ಬ ಸಿಕ್ಕಿದ್ದರೆ? ಅಂತ ಆ ದಿನ ನಾನು ನಿಜವಾಗಲೂ ಹಂಬಲಿಸಿದೆ. ನಾನು ಫಾರ್ಮಿನಲ್ಲಿ ಏಕಾಂತ ವಾಸ ಶುರು ಮಾಡಿ ಅಂದಿಗೆ ಸುಮಾರು ನಾಲ್ಕು ತಿಂಗಳಾಗಿದ್ದುವು. ನನ್ನ ಅದೃಷ್ಟಕ್ಕೆ ಆ ದಿನವೇ ನನಗೊಬ್ಬ ಮ್ಯಾನ್ ಫ್ರೈಡೇ ಸಿಕ್ಕಿದ! ಹಾಲು ಹಿಂಡಲು ಹೋಗಿ, ಕೆಂಪಿ ದನದಿಂದ ಸಕತ್ತಾಗಿ ಒದೆ ತಿಂದು ಮುಖದ ಬಲ ಪಾರ್ಶ್ವವನ್ನು ಊದಿಸಿಕೊಂಡ ಸಂಗತಿ ಯಾರಿಗೂ ತಿಳಿದಿಲ್ಲ ಅಂತ ನಾನು ತಪ್ಪಾಗಿ ಊಹಿಸಿದ್ದೆ. ಬೆಳಗ್ಗೆ ನನಗೆ ಹಾಲು ತಂದುಕೊಟ್ಟ ದನ ಮೇಯಿಸುವ ಹುಡುಗ ಬಾಲು ನನ್ನೊಡನೆ ಆ ದಿನ ಮಾತನಾಡುವಾಗ ಉಕ್ಕಿಬರುತ್ತಾ ಇದ್ದ ನಗುವನ್ನು ಕಷ್ಟಪಟ್ಟು ತಡೆ ಹಿಡಿಯುತ್ತಾ ಇದ್ದುದು ನನ್ನ ಗಮನಕ್ಕೆ ಬಂದಿತು. ನಮ್ಮಲ್ಲಿ ಕೆಲಸಕ್ಕೆ ಬರುತ್ತಾ ಇದ್ದ ಎಲ್ಲ ಆಳುಗಳೂ ಅಂದು ನನ್ನ ಮುಖ ನೋಡಿದ ಕೂಡಲೇ ನಗುವನ್ನು ಕಷ್ಟಪಟ್ಟು ಅದುಮಿ ಇಟ್ಟುಕೊಳ್ಳುವುದು ನನಗೆ ಕಂಡು ಬಂತು. ಅವರು ನನ್ನನ್ನು ಕಂಡು ನಕ್ಕರೆ ನನಗೇನು ಅಂತ ನಾನು ನಿರ್ಲಿಪ್ತ ಭಾವದಿಂದ ಸುಮ್ಮನೆ ಇದ್ದೆ.


ಹಿರಿಯರಾದ ಪೆಜತ್ತಾಯರ ಕುರಿತು ಕಿರಿಯಳಾದ ನಾಗಶ್ರೀ


ನಾಗಶ್ರೀ ಶ್ರೀರಕ್ಷ
ಪೆಜತ್ತಾಯರನ್ನು ಕಂಡು ನನಗೆ ನಿಜಕ್ಕೂ ವಯಸ್ಸಾಗಿದೆ ಅನ್ನಿಸಿತು. ಅಥವಾ ವಯಸ್ಸಾಗುವುದು ಎಂದರೇನೆಂದು ಮರು ಮನನ ಮಾಡಿಕೊಳ್ಳ ಬೇಕು. ಆ ರೀತಿ ಟೊಂಕ ಕಟ್ಟಿಕೊಂಡು ಬದುಕನ್ನು ಗೇಯುವುದೆಂದರೆ ಆಗು ಹೋಗುವುದಲ್ಲ ಎಂದುಕೊಂಡೆ. ಸುಮ್ಮನೆ ಪ್ರಕೃತಿ, ಪ್ರೀತಿ ಪ್ರೇಮವೆಂದು ಕವಿತೆ ಗೀಚುವುದು ಫಿಲಾಸಫಿಯ ನಾಲ್ಕು ಸಾಲು ಓದಿಕೊಂಡು ಬದುಕು ಎಷ್ಟು ನಿರರ್ಥಕವೆಂದು ಮಂಕಾಗಿ ಕುಳಿತುಕೊಳ್ಳುವುದೆಲ್ಲಾ ಚಳಿ ಬಿಟ್ಟು ಓಡಿ ಹೋದಂತಾಯಿತು ಅವರನ್ನು ಓದಿ, ಅವರನ್ನು ನೋಡಿ. ಅವರ ಬಗ್ಗೆ ಬರೆಯಲೂ ಅವರಷ್ಟೇ ಲವಲವಿಕೆ ಬೇಕೆನಿಸಿತು.

ಕೈಯ್ಯಲ್ಲಿ ಕಾಫಿ ಲೋಟವನ್ನು ಹಿಡಿದುಕೊಂಡು, ಕೆನೆಕಟ್ಟಿದ್ದನ್ನು ಸರಿಸಿ, ಹಾಗೇ ಅಲ್ಲಿಲ್ಲಿ ನೋಡಿಕೊಂಡು ಮುದುರಿಕೊಳ್ಳುವ ಮುಜುಗರವೇ ಆಗಿರಲಿಲ್ಲ ಮೊದಲ ಬಾರಿ ಮನೆಗೆ ಹೋದಾಗ. ಹೆಜ್ಜೆ ಇಡಲು ಕಷ್ಟಪಡುತ್ತಿದ್ದ

Tuesday, January 18, 2011

ರೈತನಾಗುವ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ

ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ಕೇಸರಿ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ಕಾಗದದ ದೋಣಿ ಎಂಬ ಆತ್ಮವೃತ್ತಾಂತವೆಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ. ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ನಮ್ಮ ರಕ್ಷಕ ರಕ್ಷಾ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಇಂಗ್ಲಿಷ್ ಕೃತಿ Voyage of a Paper Boat ಪ್ರಕಟವಾಗಲಿದೆ. ಪ್ರಸ್ತುತ ಅವರ ಕನ್ನಡ ಪುಸ್ತಕ ರೈತನಾಗುವ ಹಾದಿಯಲ್ಲಿ ಲೋಕಾರ್ಪಣೆಯಾಗುತ್ತಿದೆ. ಹಿರಿಯರಾದ ಶ್ರೀ ಜಿ.ಎಸ್.ಎಸ್.ರಾವ್ ಅವರ ಬೆನ್ನುಡಿಯಿದ್ದರೆ ಮತ್ತು ಕಥೆಗಾರ ಅಬ್ದುಲ್ ರಷೀದ್ ಅವರ ಮುನ್ನುಡಿ ಪುಸ್ತಕಕ್ಕಿದೆ. ಯುವ ಹಾಗೂ ಉದಯೋನ್ಮುಖ ಕಲಾವಿದ ಶ್ರೀ ಯತೀಶ್ ಸಿದ್ದಕಟ್ಟೆ ಅವರ ಆಕರ್ಷಕ ರೇಖಾಚಿತ್ರಗಳನ್ನು ಪುಸ್ತಕ ಒಳಗೊಂಡಿದೆ. ಹಿರಿಯ ಪ್ರಗತಿ ಪರ ರೈತಯರಾದ ನೋಡೋಜ ಶ್ರೀ ನಾರಾಯಣರೆಡ್ಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಾರಾಯಣ ಗೌಡ, ಬರಹಗಾರ, ಪತ್ರಕರ್ತ ಹಾಗೂ ರಾಜಕೀಯ ಚಿಂತಕ ಶ್ರೀ ರವಿಕೃಷ್ಣಾ ರೆಡ್ಡಿ, ಹಾಗೂ ಯುವಬರಹಗಾರರಾದ ಶ್ರೀಮತಿ ಸಿಂಧು ಅವರು ಪುಸ್ತಕಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ, ಕಾರ್ಯಕ್ರಮಕ್ಕೆ ಬನ್ನಿ, ಜೊತೆಯವರನ್ನೂ ಕರೆತನ್ನಿ. 25.1.2011 ಮಂಗಳವಾರ ಸಂಜೆ ನಯದಲ್ಲಿ ಭೇಟಿಯಾಗೋಣ.

ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ'

ಮಿತ್ರರೇ,
ಹಿರಿಯ ರೈತರಾದ ಶ್ರೀ ಮಧುಸೂದನ ಪೆಜತ್ತಾಯ (ಕೇಸರಿ) ಅವರ ರೈತನಾಗುವ ಹಾದಿಯಲ್ಲಿ ಪುಸ್ತಕ ಮುಂದಿನ ಮಂಗಳವಾರ ಲೋಕಾರ್ಪಣೆಯಾಗಲಿದೆ. (ಆಹ್ವಾನ ಪತ್ರಿಕೆ ಸಧ್ಯದಲ್ಲೇ ಬರಲಿದೆ). ಆ ಹಿನ್ನೆಲಯೆಲ್ಲಿ ಈ ಹಿಂದೆ ನನ್ನ ಬ್ಲಾಗಿನಲ್ಲಿ ಪ್ರಕಟವಾಗಿದ್ದ ಅವರ ಬರಹಗಳ ಲಿಂಕುಗಳನ್ನು ಮತ್ತೊಮ್ಮೆ ಇಲ್ಲಿ ನೀಡುತ್ತಿದ್ದೇನೆ.
ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ! - ಶ್ರೀ ಮಧುಸೂದನ ಪೆಜತ್ತಾಯ
ಇಂದು ನಾನು ಮಣ್ಣಿನ ದಾಸನಾದೆ! - ಶ್ರೀ ಮಧುಸೂದನ ಪೆಜತ್ತಾಯ
ಪರಿಸರ ಪ್ರೇಮ ಬೆಳೆಸಿಕೊಳ್ಳಲು ಯಾರ ನಿರ್ಬಂಧವೂ ಇಲ್ಲ
‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!
ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!
ರೈತನಾಗುವ ಹಾದಿಯಲ್ಲಿ . . .
ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿರುವ ಅವರ ಲೇಖನಗಳಿಗೆ ಪ್ರವೇಶವನ್ನು ಈ ಲಿಂಕ್ ಮೂಲಕ ಪಡೆದುಕೊಳ್ಳಬಹುದು.
http://www.kendasampige.com/article.php?id=3943
ಪೆಜತ್ತಾಯರ ಈ ಪುಸ್ತಕವನ್ನು ಪ್ರಕಟಿಸುವುದರೊಂದಿಗೆ, ಅವರನ್ನು ಸನ್ಮಾನಿಸುವ ಕನಸನ್ನು ನನಸು ಮಾಡುತ್ತಿರುವ, ಆ ಮೂಲಕ ನಾಡಿನ ರೈತ ಸಮುದಾಯಕ್ಕೆ ಗೌರವ ಸೂಚಿಸುವ ಕಾರ್ಯಕ್ಕೆ ಮುಂದಾಗಿರುವ ದೇಸಿ ಪ್ರಕಾಶನದ ಶ್ರೀ ಸೃಷ್ಟಿ ನಾಗೇಶ್ (ದೂ: 98450 96668;  ಈ ಮೇಲ್: srushtinagesh@gmail.com ) ಅವರಿಗೆ ನನ್ನ ಅಭಿನಂದನೆಗಳು.
ಶ್ರೀ ಪೆಜತ್ತಾಯ ಅಂದು














ಪೆಜತ್ತಾಯ ಇಂದು







ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭಕ್ಕೆ ಬನ್ನಿ, ನಿಮ್ಮ ಮನೆಯವರನ್ನೂ ಸ್ನೇಹಿತರನ್ನೂ ಕರೆತನ್ನಿ
ದಿನಾಂಕ: 25 ಜನವರಿ 2011
ಸಮಯ: ಸಂಜೆ 5.30
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು

ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತರಾದ ನಾಡೋಜ ಶ್ರೀ ನಾರಾಯಣರೆಡ್ಡಿ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು ಭಾಗವಹಿಸಲಿದ್ದಾರೆ. ಬರಹಗಾರರಾದ ಶ್ರೀ ರವಿ ಕೃಷ್ಣಾರೆಡ್ಡಿ ಹಾಗೂ ಶ್ರೀಮತಿ ಸಿಂಧು ಉಪಸ್ಥಿತರಿರುತ್ತಾರೆ.
ಸರ್ವರಿಗೂ ಸುಸ್ವಾಗತ

Friday, January 14, 2011

ರೈತನಾಗುವ ಹಾದಿಯಲ್ಲಿ . . .

ಮಿತ್ರರೇ,
ನಾನು ಸಂಪಾದಿಸಿರುವ, ಶ್ರೀ ಮಧುಸೂದನ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಕೃತಿಯು ದಿನಾಂಕ 25.1.2011 ಮಂಗಳವಾರ ಸಂಜೆ 5.30ಕ್ಕೆ ಕನ್ನಡ ಭವನದ 'ನಯನ' ಸಭಾಂಗಣದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುವ ಮೂಲಕ, ನಾಡಿನ ಹಿರಿಯ ಸಜ್ಜನ ರೈತರೊಬ್ಬರನ್ನು ಸನ್ಮಾನಿಸಲು ತೀರ್ಮಾನಿಸಿಲಾಗಿದೆ. ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ ಪತ್ರಿಕೆ ಕಳುಹಿಸಲಾಗಿವುದು. ದಯಮಾಡಿ ಬನ್ನಿ. ನಾಡಿನ ರೈತಸುಮುದಾಯಕ್ಕೆ ಅರ್ಪಣೆಯಾಗಿರುವ ಈ ಪುಸ್ತಕದ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾವೂ ರೈತರ ಜೊತೆ ನಿಲ್ಲೋಣ. ಕಥೆಗಾರ ಅಬ್ದುಲ್ ರಷೀದ್ ಅವರ ಮುನ್ನುಡಿ ಪುಸ್ತಕಕ್ಕಿದೆ. ಶ್ರೀ ಜಿ.ಎಸ್.ಎಸ್.ರಾವ್ ಅವರು ಬೆನ್ನುಡಿಯನ್ನು ಬರೆದಿದ್ದಾರೆ.
ಪೆಜತ್ತಾಯ ಅವರನ್ನು ಬಲ್ಲವರು, ಬಂಧು-ಮಿತ್ರರು, ಅವರ ಬರಹಗಳ ಓದುಗರು, ಅಭಿಮಾನಿಗಳು, ಬ್ಲಾಗ್ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಾರ್ಥನೆ.
ರೈತನಾಗುವ ಹಾದಿಯಲ್ಲಿ . . .
ಯಶಸ್ವೀ ರೈತರೊಬ್ಬರು, ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ! ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜಜೀವನದ ಸಾಹಸಗಾಥೆಯನ್ನು ಕಥೆಯಾಗಿಸಿದ್ದಾರೆ ಪೆಜತ್ತಾಯರು. ತಾವು ನಡೆದ ಹಾದಿಯಲ್ಲಿ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡ ತಿಳಿಹಾಸ್ಯದ ಲೇಪವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು, ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು.
- ಜಿ.ಎಸ್.ಎಸ್.ರಾವ್