1
ದಟ್ಟವಾದ ಕಾಡಿನಲ್ಲಿ
ಪ್ರಾಣಿ ಪಕ್ಷಿ ಗೆಳೆಯರೆಲ್ಲ
ಸಭೆಯ ಸೇರಿಕೊಂಡು ಮಾತನಾಡುತ್ತಿದ್ದವು
ಕರಡಿ ಜಿಂಕೆ ಕೋಗಿಲೆ ಮೊಲ
ಕೋತಿ ಸಿಂಹ ಆನೆ ಹುಲಿಯು
ರೂಪವೆಂದರೇನು ಎಂದು ಹರಟುತ್ತಿದ್ದವು
2
ಯಾರು ಚೆಂದ ಯಾರು ಅಂದ
ಎಂಬ ಮಾತು ಬಂದು ನಾನು
ತಾನು ಎಂದು ಕೋಗಿ ಜಗಳವಾಡಿಕೊಂಡವು
ಆನೆ ಮರವನೆತ್ತಿ ಹುಲಿಯು
ಮರವನೇರಿ ಸಿಂಹ ನೆಗೆದು
ಕರಡಿ ಕುಣಿದು ಜಿಂಕೆ ಓಡಿ ಬರಿದೆ ಮೆರೆದವು
3
ಓಡಿ ಬಂದ ಚಿರತೆ ಗುಡುಗಿ
ನೋಡಿರೊಮ್ಮೆ ನನ್ನ ಓಟ
ನನ್ನ ಮುಂದೆ ನೀವು ಬರಿದೆ ಸೊನ್ನೆ ಎಂದಿತು
ಪಟ್ಟೆ ಹುಲಿ ನೆಗೆದು ನೆಗೆದು
ನೋಡಿರೊಮ್ಮೆ ನನ್ನ ಮೈಯ
ಮಾಟ ಆಗ ಹೇಳಿ ಯಾರು ಚೆಂದ ಎಂದಿತು
4
ಆನೆ ಬಂದು ಮರವನೆತ್ತಿ
ನೋಡಿರಿಲ್ಲಿ ನನ್ನ ಶಕ್ತಿ
ನನ್ನ ಮುಂದೆ ಯಾರು ಇಲ್ಲ ಎಂದು ಬೀಗಿತು
ಆನೆ ನಿನ್ನ ನಾನು ಎಷ್ಟು
ಬಾರಿ ಸೋಲಿಸಿಲ್ಲ ಎಂದು
ಸಿಂಹ ಗುಡುಗಿ ಪಂಜವೆತ್ತಿ ಹಲ್ಲು ಕಡಿಯಿತು
5
ಕೂಹು ಕೂಹು ಎಂದು ಕೋಕಿ-
ಲೊಂದು ಹಾಡಿ ನಾನೆ ಚೆಂದ
ನನ್ನ ದನಿಯು ಚೆಂದ ಎಂದು ಜಂಭವಾಡಿತು
ಮೋಟುಬಾಲ ಕುಣಿಸಿ ಮೊಲವು
ಕರಿಯ ಬಣ್ಣ ನಿಂದು ನೋಡು
ನನ್ನ ನಡಿಗೆ ಎಂದು ಕ್ಯಾಟು ವಾಕು ಮಾಡಿತು
6
ಕಾಡಿನಲ್ಲಿ ಹೀಗೆ ಯುದ್ಧ
ನಡೆಯೆ ನಿದ್ದೆಗೆಟ್ಟ ದೇವ
ಜಾಣ ಶಾರದೆಯನು ಕರೆದು ಆಜ್ಞೆಯಿತ್ತನು
ದೇವಿ ನೀನು ಏನೆ ಮಾಡು
ನಿನ್ನ ನವಿಲು ಅದನೆ ಕಳಿಸು
ಜಗಳವೊಮ್ಮೆ ನಿಂತರಷ್ಟೆ ಸಾಕು ಎಂದನು
7
ಕಾಡಿನಲ್ಲಿ ಇಳಿದ ನವಿಲು
ಜಗಳವೇಕೆ ನಿಮ್ಮಲೆಂದು
ಗರಿಯ ಬಿಚ್ಚಿ ಬಿಂಕದಿಂದ ನಾಟ್ಯವಾಡಿತು
ನಿಮ್ಮ ಮನಸು ಶುದ್ಧವಿರಲು
ಜಗದಿ ನೀವೆ ರೂಪವಂತ-
ರೆಂದು ಹೇಳಿ ನವಿಲು ಜಂಭ ಬೇಡವೆಂದಿತು
8
ಕಣ್ಣು ಬರಿದೆ ರೂಪವನ್ನು
ಕಂಡರಷ್ಟೆ ಸಾಲದಣ್ಣ
ಅರಿಯಬೇಕು ಅಂತರಂಗ ಮರೆಯಬೇಡಿರಿ
ಎಲ್ಲರಲ್ಲು ದೇವನಿಹನು
ಎಲ್ಲರಲ್ಲು ರೂಪವಿಹುದು
ಕಾಣುವಂತ ಕಣ್ಣು ಬೇಕು ತಿಳಿದುಕೊಳ್ಳಿರಿ
10 comments:
ಸತ್ಯನಾರಾಯಣರೆ....
ಬಹಳ ಸುಲಲಿತವಾಗಿ..
ಷಟ್ಪದಿಯಲ್ಲಿ ಬರೆದಿದ್ದೀರಿ...
ರಾಗವಾಗಿ ಹಾಡಿಕೊಳ್ಳಲೂ ಬಹುದು...
ಭಾವಾರ್ಥ ಕೂಡ ಚೆನ್ನಾಗಿದೆ...
ಅಭಿನಂದನೆಗಳು...
ತುಂಬಾ ಬ್ಯೂಸಿಯಾಗಿದ್ದೀರಾ...?
ಡಾ. ಸತ್ಯ ಅವರೇ..ಈ ಷಟ್ಪದಿಯ ವ್ಯಾಕರಣ ಸೂತ್ರವೇನಾದರೂ ಇದೆಯೇ..? ಕುತೂಹಲಕ್ಕೆ ಕೇಳಿದೆ...
ಪ್ರಾಣಿಗಳ ಮನದ ತುಮುಲದ ಸೂಚ್ಯಾಂತರಂಗವನ್ನು ಆಧಾರವಾಗಿಸಿ ಮಾನವರು..ಯಾವ ರೀತಿ ಒದ್ದಾಡುತ್ತಾರೆ ಎನ್ನುವುದನ್ನು ಸರಳ, ಪ್ರಾಸಭರಿತ ಮತ್ತು ಮಕ್ಕಳಿಗೆ ಬಹು ಸುಲಭವೆನಿಸುವ ಧಾಟಿಯಲ್ಲಿ ಬರೆದಿದ್ದೀರಿ...Hatsoff.
ಸತ್ಯನಾರಾಯಣ ಸರ್,
ಅಂತೂ ಒಳ್ಳೆಯ ಮಕ್ಕಳ ಪದ್ಯದ ಮೂಲಕ ಮತ್ತೆ ಬ್ಲಾಗಿಗೆ ಬಂದಿದ್ದೀರಿ...ಸ್ವಾಗತ,.
ಬಹಳ ಚೆನ್ನಾಗಿ ಷಟ್ಪದಿಯಲ್ಲಿ ಬರೆದಿದ್ದೀರಿ..ಅದಕ್ಕೊಂದು ಟ್ಯೂನ್ ಹಾಕಿದರೆ ಚೆನ್ನಾಗಿ ಹಾಡಬಹುದು ಅನ್ನಿಸುತ್ತೆ...
ಧನ್ಯವಾದಗಳು.
ಚೆನ್ನಾಗಿದೆ ಸಾರ್... ಈ ಷಟ್ಪದಿ ಮೂಲಕ ಒಳ್ಳೆ ನೀತಿಪಾಠ ಕಲಿಸಿದ್ದೀರಿ...ಧನ್ಯವಾದಗಳು..
<< ನನ್ನ ನಡಿಗೆ ಎಂದು ಕ್ಯಾಟು ವಾಕು ಮಾಡಿತು >>
ಮೊಲ "ಕ್ಯಾಟ್ ವಾಕ್" ಮಾಡಿಬಿಟ್ಟರೆ, ಕ್ಯಾಟ್ ಯಾವ ವಾಕ್ ಮಾಡಬೇಕು? :)
ಪದ್ಯ ತುಂಬಾ ಚೆನ್ನಾಗಿದೆ ಸರ್. ಮಕ್ಕಳಿಗೆ ಈ ರೀತಿಯ ನೀತಿಪಾಠ ಅಗತ್ಯ.
ಸತ್ಯ ಸರ್,
ಸರಳ ಸುಂದರ ಷಟ್ಪದಿ! ಬಹಳ ಇಷ್ಟವಾಯಿತು.
ಹಲೋ ಸರ್,
ತುಂಬಾ ಚೆನ್ನಾಗಿದೆ, ಅರ್ಥಗರ್ಭಿತವಾಗಿದೆ ಕೂಡಾ
ಅಭಿನಂದನೆಗಳು
fine...
ಚೆನ್ನಾಗಿದೆ ನಿಮ್ಮ ಹೊಸ ಪ್ರಯತ್ನ ಎಂದೋ ಕೇಳಿದ ಕಥೆಗಳು ಹೀಗೆ ಹಾಡಿನ ರೂಪದಲ್ಲಿ ನೋಡಿ ಮಜ ಆತು..
satya avare,
sogasaagide kavana haagu adara concept.
makkaLigaage baredantide.
Post a Comment