Monday, May 30, 2011

ನರ್ತಿಸುತಾಯೇ ಅಜಜಾಯೇ ಮಮ ಮಸ್ತಕ ನೀರೇಜದಲಿ!

ಸರಸ್ವತಿಯನ್ನು ಕುರಿತು ನಾನು ಪಿಹೆಚ್.ಡಿ. ಅಧ್ಯಯನ ಮಾಡುತ್ತಿದ್ದಾಗ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಂಬಂಧಪಟ್ಟ ಕವಿತೆಗಳ ಹುಡುಕಾಟ ನಡೆಸುತ್ತಿದ್ದೆ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ., ಪು.ತಿ.ನ., ಜಿ.ಎಸ್.ಎಸ್. ಮೊದಲಾದ ಕವಿಗಳೆಲ್ಲರೂ ಸರಸ್ವತಿಯ ಬಗ್ಗೆ ಬರೆದಿದ್ದಾರೆ. ನಮ್ಮ ಮೇಷ್ಟ್ರು ಕೆ.ಆರ್.ಜಿ. ಆಗ ನನಗೆ ಕುವೆಂಪು ಅವರ ’ನಾಟ್ಯ ಸರಸ್ವತಿಗೆ’ ಎಂಬ ಕವಿತೆಯ ಬಗ್ಗೆ ಹೇಳಿ, ಅದನ್ನು ಪರಿಶೀಲಿಸುವಂತೆ ಸೂಚಿಸಿದರು. ಅದು ನಾಟ್ಯಸರಸ್ವತಿಯ ವಿಗ್ರಹವೊಂದರ ಪ್ರೇರಣೆಯಿಂದಾಗಿ ರಚಿತವಾಗಿರುವ ಕವಿತೆ. “ನಾಗಮಂಗಲದ ಮಹಾಜನರು ಅರ್ಪಿಸಿರುವ ನಾಟ್ಯ ಸರಸ್ವತಿಯ ದಿವ್ಯಸುಂದರವಾದ ಪಂಚಲೋಹ ವಿಗ್ರಹವನ್ನು ನಿರ್ದೇಶಿಸಿ, ದೇವೀ ಮೂರ್ತಿಯನ್ನು ನಿರ್ಮಿಸಿದ ಅಜ್ಞಾತ ಶಿಲ್ಪಿಗೆ ಕವಿಯ ಅನಂತ ಕೃತಜ್ಞತೆಯ ಫಲರೂಪವಾಗಿ.” ಎಂದು ಕವಿತೆಗೆ ಅಡಿ ಟಿಪ್ಪಣಿ ನೀಡಲಾಗಿದೆ. ಈ ಕವಿತೆ ಸೃಷ್ಟಿಯಾದ ಹಿನ್ನೆಲೆಯನ್ನು ಶ್ರೀಮತಿ ತಾರಿಣಿಯವರು ’ಮಗಳು ಕಂಡ ಕುವೆಂಪು’ ಕೃತಿಯ ’ತಂದೆಯವರ ಸಂಗೀತಾಸಕ್ತಿ’ ಎಂಬ ಬರಹದಲ್ಲಿ ದಾಖಲಿಸಿದ್ದಾರೆ. ಅವರ ಬರಹವನ್ನೇ ಇಲ್ಲಿ ಇಡಿಯಾಗಿ ಉಲ್ಲೇಖಿಸುತ್ತೇನೆ.

ಒಂದು ಭಾನುವಾರ. ಆಕಾಶವಾಣಿಯಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಅವರ ವೀಣಾವಾದನ ಕಾರ್ಯಕ್ರಮ, ಒಂದು ಗಂಟೆ ಹೊತ್ತು ನೇರ ಪ್ರಸಾರವಾಗುತ್ತಿತ್ತು. ಹಿಂದಿನ ದಿನವೇ ಪತ್ರಿಕೆಯಲ್ಲಿ ಕಾರ್ಯಕ್ರಮ ನೋಡಿ ತಂದೆಯವರು 'ನನಗೂ ಭಾನುವಾರ ಒಂಬತ್ತುವರೆಗೆ ರೇಡಿಯೋ ಹಾಕಲು ನೆನಪಿಸು' ಎಂದು ಹೇಳಿದ್ದರು. ಭಾನುವಾರ ಸಂಗೀತ ಬರುವ ಮೊದಲೆ ರೇಡಿಯೋ ಹಾಕಿಕೊಂಡು ಹಾಲಿನಲ್ಲಿ ದೊಡ್ಡ ರೆಡಿಯೋ ಇಟ್ಟಿದ್ದ ಮೇಜಿನ ಎದುರು ಕುರ್ಚಿಯಲ್ಲಿ ಕುಳಿತು ವೀಣೆ ಕೇಳಲು ಸಿದ್ಧರಾದರು. ದೊಡ್ಡ ರೇಡಿಯೋ ಮೇಲೆ ಹೊಳೆಯುತ್ತಿದ್ದ, ನಾಗಮಂಗಲದ ಮಹಾಜನತೆ ಅರ್ಪಿಸಿದ್ದ ನಾಟ್ಯ ಸರಸ್ವತಿಯ ಸುಂದರ ವಿಗ್ರಹ ಇತ್ತು. ವೀಣಾವಾದನ ಪ್ರಾರಂಭವಾಯಿತು. ತಂದೆಯವರು ನಾದಮಗ್ನರಾಗಿ ಕೇಳುತ್ತಿದ್ದರು. ಆಗಾಗ್ಗೆ ಬಾಯಿಯಲ್ಲಿ ಏನೋ ಹೇಳಿಕೊಳ್ಳುತ್ತಿದ್ದರು. ವೀಣೆ ಕೇಳುತ್ತಾ ಕೇಳುತ್ತಾ ಬೇರೆ ಪ್ರಪಂಚದಲ್ಲಿ ಇದ್ದಂತೆ ಕಾಣುತ್ತಿದ್ದರು. ಕೆಲವು ಸಾರಿ ತಂದೆಯವರು ರೇಡಿಯೋ ತುಂಬ ಜೋರಾಗಿ ಕೇಳುವಂತೆ ಹಾಕಿಕೊಳ್ಳುವರು. ಆ ದಿನವೂ ಹಾಗೆಯೇ ಜೋರಾಗಿ ಕೇಳಿಸುತ್ತಿತ್ತು. ಮನೆಯ ಯಾವ ಮೂಲೆಯಲ್ಲಿದ್ದರೂ ವೀಣಾವಾದನ ಜೋರಾಗಿ ಕೇಳಿಸುತ್ತಿತ್ತು. ಭಾನುವಾರ ರಜದ ದಿನವಾಗಿ ಮಕ್ಕಳೆಲ್ಲಾ ಮನೆಯಲ್ಲಿದ್ದೆವು. ಅಣ್ಣ ತೇಜಸ್ವಿಗೂ ಕಾಲೇಜು ರಜ. ಅವನೂ ಮನೆಯಲ್ಲಿದ್ದನು. ಆಚೆ ಈಚೆ ಓಡಾಡುತ್ತಿದ್ದ ಅವನಿಗೂ ವೀಣೆ ಬಹಳ ಜೋರಾಗಿ ಕೇಳುತ್ತಿದೆ ಎನ್ನಿಸಿತು. ಧ್ವನಿ ಸ್ವಲ್ಪ ತಗ್ಗಿಸಲು ತಂದೆಯವರ ಹತ್ತಿರ ನಿಂತು 'ಸ್ವಲ್ಪ ಕಡಿಮೆ ಮಾಡುವುದೇ?' ಎಂದು ಕೇಳಿದ. ಆದರೆ ತಂದೆಯವರು ಇನ್ನಾವುದೋ ಗುಂಗಿನಲ್ಲಿದ್ದಂತೆ ತೋರುತ್ತಿತ್ತು. ತೇಜಸ್ವಿಯ ಮಾತು ಅವರ ಮನಸ್ಸಿಗೆ ಹೋದಂತಿಲ್ಲ. ತೇಜಸ್ವಿ ರೇಡಿಯೋ ಹತ್ತಿರ ಹೋಗಿ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿದ. ತಕ್ಷಣ ಅವರ ಭಾವಕ್ಕೆ ತೊಂದರೆಯಾದಂತೆ “ಬೇಡ ಬೇಡ ಏನೂ ಮಾಡಬೇಡ” ಎಂದು ಜೋರಾಗಿ ರಭಸವಾಗಿ ಹೇಳಿದರು. ಕೂಡಲೆ ತೇಜಸ್ವಿಗೂ ಅರ್ಥವಾಯಿತು. ಅವರು ಯಾವುದೋ ರಚನೆಯಲ್ಲಿದ್ದಾರೆ ಎಂದು. ಮತ್ತೆ ಮೊದಲಿನಂತೆ ಹೆಚ್ಚು ಮಾಡಿ ಅಲ್ಲಿಂದ ನಿರ್ಗಮಿಸಿದ. ತೇಜಸ್ವಿ ಕಡಿಮೆ ಮಾಡುವ ಮೊದಲು ನಾನೇ ತುಂಬ ಜೋರಾಗಿ ಕೇಳುತ್ತಿದ್ದ ರೇಡಿಯೋ ಸ್ವಲ್ಪ ಕಡಿಮೆ ಮಾಡಲೆ ಎಂದು ಯೋಚಿಸಿದ್ದೆ. ಆದರೆ ತಂದೆಯವರ ಭಾವಸ್ಥಿತಿ ನೋಡಿ ಕಡಿಮೆ ಮಾಡಲು ಧೈರ್ಯ ಬರಲಿಲ್ಲ. ಹೀಗೆ ಸಂಗೀತ ಕೇಳುತ್ತಾ ಅವರ ಬಾಯಿಯಿಂದ “ನರ್ತಿಸುತಾಯೆ ಅಜಜಾಯೆ” ಎಂದು ಹೇಳುವುದು ಆಗಾಗ ಕೇಳಿಸುತ್ತಿತ್ತು.

ವೀಣೆ ಮುಗಿಯಿತು. ತಂದೆಯವರು ರೇಡಿಯೋ ನಿಲ್ಲಿಸಿ ಎದ್ದು ತಾವು ಓದುವ ಕೊಠಡಿಗೆ ಹೋದರು. ಸ್ವಲ್ಪ ಹೊತ್ತು ಬರೆಯುತ್ತಾ ಕುಳಿತಿದ್ದರು. ಅನಂತರ ಎದ್ದು, ಸ್ನಾನ ಮುಗಿಸಿ ದೇವರ ಮನೆಗೆ ಪೂಜೆಗೆ ಹೋದರು. ದೇವರ ಮನೆಯಲ್ಲಿಯೂ ಪೂಜೆ ಮುಗಿಸಿ 'ನರ್ತಿಸುತಾಯೆ ಅಜಜಾಯೆ' ಎಂದು ಗುನುಗುತ್ತಿದ್ದುದು ಕ್ಷೀಣವಾಗಿ ಕೇಳಿಸುತ್ತಿತ್ತು. ಸಾಯಂಕಾಲದ ಹೊತ್ತಿಗೆ 'ನಾಟ್ಯ ಸರಸ್ವತಿಗೆ' ಎಂಬ ಕವನ ಹೊರಬಂದಿತ್ತು “ನರ್ತಿಸುತಾಯೇ ಅಜಜಾಯೇ ಮಮ ಮಸ್ತಕ ನೀರೇಜದಲಿ” (೧-೮-೧೯೬೦) 
ಆ ನಾಟ್ಯಸರಸ್ವತಿಯ ಶಿಲ್ಪ ಮತ್ತು ಕವಿತೆಯನ್ನು ಕುರಿತಂತೆ ತಾರಿಣಿಯವರು ಹೀಗೆ ಹೇಳಿದ್ದಾರೆ. “ನಾಗಮಂಗಲದ ಮಹಾಜನತೆ ತಂದೆಯವರಿಗೆ ಸನ್ಮಾನ ಮಾಡಿ ತುಂಬ ಸಂದರವಾಗಿ ಕೆತ್ತಿರುವ ಪಂಚಲೋಹದ ನಾಟ್ಯಸರಸ್ವತಿ ವಿಗ್ರಹ ಕೊಟ್ಟಿದ್ದರು. ಆ ಕಲೆಯ ಶಿಲ್ಪಿಗಳು ಇರುವುದು ನಾಗಮಂಗಲದಲ್ಲೇ. ನಾಟ್ಯ ಸರಸ್ವತಿಯನ್ನು ಸಾಮಾನ್ಯವಾಗಿ ತಂದೆಯವರ ಹುಟ್ಟಿದ ದಿನ ಡಿಸೆಬರ್ ೨೯ನೇ ತಾರೀಖು ಚೆನ್ನಾಗಿ ತೊಳೆದು ಹೊಳಪು ನೀಡಿ ಹಾಲಿನಲ್ಲಿ ರೇಡಿಯೋ ಮೇಜಿನ ಮೇಲೆ ಇಟ್ಟು ಹೂವಿನಿಂದ ಅಲಂಕರಿಸುತ್ತಿದ್ದೆವು. ಅಭಿಮಾನಿಗಳು ಶುಭಾಶಯ ಕೋರಲು ಬಂದಾಗ ಅವರು ತಂದಿರುವ ಹೂವನ್ನು ಸರಸ್ವತಿಗೆ ಅರ್ಪಿಸುವಂತೆ ತಂದೆಯವರು ಹೇಳುತ್ತಿದ್ದರು. ಸರಸ್ವತಿಯನ್ನು ಹದಿನೈದು ದಿನಗಳು ಅಲ್ಲೇ ಇಟ್ಟು ನಾನಾ ವಿಧದ ಹೂಮಾಲೆ ಹಾಕುತ್ತಿದ್ದೆವು. ಅನಂತರ ಅಲ್ಲಿಂದ ನಡುಮನೆ ವರಾಂಡದ ಷೋಕೇಸ್ ಮೇಲೆ ಇಡುತ್ತಿದ್ದೆವು. ಆ ದಿನವೂ ಹೊಳೆಯುವ ಸರಸ್ವತಿ ವಿಗ್ರಹವನ್ನು ಹಾಲಿನಲ್ಲಿಯೇ ಇಟ್ಟಿದ್ದೇನೆ. ಅದನ್ನು ನೋಡುತ್ತಾ ಸ್ಫೂರ್ತಿಗೊಂಡ ಕವಿಯ ಮನಸ್ಸಿನ ಭಾವನೆಗಳು ವೀಣಾವಾದನದ ನಾದ ಮಾಧುರ್ಯವನ್ನು ಆಸ್ವಾದಿಸುತ್ತಾ ಹೊರ ಹೊಮ್ಮಿತ್ತು ’ನಾಟ್ಯ ಸರಸ್ವತಿಗೆ’ ಎಂಬ ಕವನ. ಮುಂದೆ ಪ್ರತಿವರ್ಷವೂ ಡಿಸೆಂಬರ್ ೨೯ರಂದು ನಾಟ್ಯಸರಸ್ವತಿ ರೇಡಿಯೋ ಮೇಜಿನ ಮೇಲೆ ಇಟ್ಟಾಗ, ತಂದೆಯವರು ಅದರ ಎದುರು ಕುರ್ಚಿಯಲ್ಲಿ ಕುಳಿತು ಒಂದುಸಾರಿ ’ನರ್ತಿಸುತಾಯೆ’ ಕವನವನ್ನು ಹೇಳುವುದು ಅವರ ರೂಢಿಯಾಗಿತ್ತು. ಕವನ ಬರೆದ ನಂತರ ನಮ್ಮ ಸಂಗೀತ ಉಪಾಧ್ಯಾಯರಿಗೂ ಅದನ್ನು ಕೊಟ್ಟು ರಾಗ ಹಾಕಿ ನಮಗೆ ಹೇಳಿಕೊಡಲು ಹೇಳಿದ್ದರು. ನಾವು ಅದನ್ನು ಕಲಿತು ಆಗಾಗ್ಗೆ ತಂದೆಯವರ ಎದುರು ಹಾಡುತ್ತಿದ್ದೆವು. [ಮಗಳು ಕಂಡ ಕುವೆಂಪು, ಪುಟ ೩೧೮-೧೯]

ಕವಿತೆಯ ಪೂರ್ಣಪಾಠ ಇದು.

ನರ್ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
ಮಾನಸ ಅಧಿಮಾನಸಕೇರೆ
ಅತಿಮಾನಸ ಮೈದೋರೆ
ಆನಂದಾಮೃತ ರಸ ಸೋರೆ
ನರ್ತಿಸು, ತಾಯೆ, 
      ಅಜ ಜಾಯೆ,
      ಮಮ ಮಸ್ತಕ ನೀರೇಜದಲಿ !
ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
ನರ್ತಿಸು, ತಾಯೆ, 
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
`ಶಾಂತಿ’ಯ ಅವತಾರವಾಗಬೇಕೆದರೆ ವಿಜ್ಞಾನದ ಬೆಳಕು ಬೇಕು. ಅದು ಬೇಕೆಂದರೆ ಅಜ್ಞಾನದ ಗಡಿ ಉರುಳಬೇಕು. ಇದೆಲ್ಲ ಆಗುವುದಕ್ಕೆ ಸರಸ್ವತಿಯ (ವಿದ್ಯೆಯ, ಜ್ಞಾನದ) ಅಡಿ ಸೋಂಕಬೇಕು. ಅದಕ್ಕಾಗಿ ಸರಸ್ವತಿ ಎಲ್ಲರ ಮಸ್ತಕದಲ್ಲಿ ನರ್ತಿಸಬೇಕು. ’ವಿಜ್ಞಾನದ ಕಾಂತಿ ಅವತರಿಸಿ ಶಾಂತಿ ಬರುವಂತೆ ನರ್ತಿಸು ನಮ್ಮ ಮಸ್ತಕದಲ್ಲಿ’ ಎನ್ನುವ ನುಡಿ ಸೊಗಸಾಗಿ ಮೂಡಿ ಬಂದಿದೆ. ಅಭಿನವ ಪಂಪನಾದ ನಾಗಚಂದ್ರನಲ್ಲಿ ಆತನ ಕಾವ್ಯವು ’ವಿದ್ಯಾನಟಿಯ ನಾಟ್ಯವೇದಿಕೆ’ಯಾಗಿದ್ದರೆ (’ವಚಶ್ರೀನರ್ತಕೀನೃತ್ಯವೇದಿಕೆ’, 'ವಿದ್ಯಾನಟೀನಾಟ್ಯವೇದೀಕಲ್ಪಂ’), ಇಲ್ಲಿ ಸ್ವತಃ ಕವಿಯ ಮಸ್ತಕವೇ ನೃತ್ಯವೇದಿಕೆಯಾಗಿದೆ. ಸರ್ವರ ಮಸ್ತಕವೂ ಸರಸ್ವತಿಯ ನೃತ್ಯವೇದಿಕೆಯಾಗಬೇಕೆಂಬುದು ಪ್ರಸ್ತುತ ಕವಿತೆಯ ಆಶಯ.

Thursday, May 26, 2011

ರಾಜಭವನದಲ್ಲಿ ರಾಷ್ಟ್ರಕವಿ : ರಾಜ್ಯಪಾಲರು ಕಂಡಂತೆ ಕುವೆಂಪು-ಕರ್ನಾಟಕ

ಇಂದು ಬೆಳಿಗ್ಗೆ ರಾಜಭವನದಲ್ಲಿ ’ರಾಷ್ಟ್ರಕವಿ ಕುವೆಂಪು: ಎ ಡೈಲಾಗ್’ ಎಂಬ ಕಾರ್ಯಕ್ರಮ ನಡೆಯಿತು. ಸಾ-ಮುದ್ರ ಫೌಂಡೇಷನ್, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಈ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸ್ವತಃ ರಾಜ್ಯಪಾಲರ ಅಪೇಕ್ಷೆಯಂತೆ ಆಯೋಜಿಸಲಾಗಿತ್ತು. ಶ್ರೀಯುತರುಗಳಾದ ಜೀವಿ, ಚೌಟ, ಎಸ್.ಆರ್.ನಾಯಕ್, ಜಸ್ಟೀಸ್ ಸದಾಶಿವ, ಜಸ್ಟೀಸ್ ಜಗನ್ನಾಥಶೆಟ್ಟಿ, ಸಿದ್ಧಲಿಂಗಯ್ಯ ಮೊದಲಾದ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಯುತ H.R. ಭಾರದ್ವಾಜ್ ಅವರು ಸಿದ್ಧಪಡಿಸಿದ್ದ ಭಾಷಣವನ್ನು ಪಕ್ಕಕ್ಕಿಟ್ಟು, ಸುಮಾರು ನಲವತ್ತೈದು ನಿಮಿಷಗಳ ಕಾಲ ಕುವೆಂಪು, ಅವರ ಸಾಹಿತ್ಯ, ವೇದ-ಉಪನಿಷತ್ತುಗಳ ಮಹತ್ವ, ಭಾರತೀಯ ಸಂಸ್ಕೃತಿ, ಕನ್ನಡ ನಾಡಿನ ಹೆಚ್ಚುಗಾರಿಕೆ, ಬಾಹುಬಲಿ, ತುಲಸೀದಾಸ್, ಗಾಂಧಿ, ವಿಶ್ವೇಶ್ವರಯ್ಯ ಮೊದಲಾದವರ ಜೀವನದರ್ಶನವನ್ನು ಕುರಿತು ಮಾತನಾಡಿದರು. ರಾಜ್ಯಪಾಲರಾಗಿ ಬಂದ ಹೊಸತರಲ್ಲಿ ’ನಾಡಗೀತೆ’ಯ ಬಗ್ಗೆ ಕೇಳಿ ಆಶ್ಚರ್ಯಪಟ್ಟಿದ್ದ ಶ್ರೀಯುತರು ನ್ಯಾಯಾಧೀಶರೊಬ್ಬರು ಕೇಳಿಸಿದ ಸಂಪೂರ್ಣ ನಾಡಗೀತೆ ಮತ್ತು ಅವರ ವಿವರಣೆ ಕೇಳಿ ಏನೋ ಒಂದು ಅನಿರ್ವಚನೀಯ ಸಂತೋಷವನ್ನು ಅನುಭವಿಸಿದ್ದರಂತೆ. ಅದರಲ್ಲಿ ಬರುವ ’ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನುರುದ್ಯಾನ’ ಹಾಗೂ ’ಕಪಿಲ ಪತಂಜಲ ಗೌತಮ ಜಿನನುತ’ ಮೊದಲಾದ ಸಾಲುಗಳನ್ನು ಕೇಳಿ ಇದನ್ನು ಬರೆದವರ ಮನೋಶ್ರೀಮಂತಿಕೆಯ ಬಗ್ಗೆ ಯೋಚಿಸಿದ್ದರಂತೆ. ’ಭಾರತಜನನಿಯ ತನುಜಾತೆ’ ಎಂಬ ಭಾವದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ರಾಜ್ಯಪಾಲರು, ಕುವೆಂಪು ಅವರ ಬಗ್ಗೆ ಮೊದಲು ತಿಳಿದ ಸಂದರ್ಭವನ್ನು ನೆನಪಿಸಿಕೊಂಡರು. ಮೇಲುಕೋಟೆಯ ಪ್ರವಾಸಿಮಂದಿರದಲ್ಲಿದ್ದ ಕುವೆಂಪು ಅವರ ಪೋಟೋವನ್ನು ತೋರಿಸಿ, ಅಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ’ಯಾರಿದು? ಈ ಜಂಟ್ಲಮನ್’ ಎಂದು ಕೇಳಿದ್ದರಂತೆ. ಅಂದು ಅವರು ತಿಳಿಸಿದ ವಿಚಾರಗಳಿಂದ ಪ್ರೇರಿತರಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಬೇಟಿಕೊಟ್ಟಾಗ ಇನ್ನೂ ಹೆಚ್ಚಿನ ವಿವರಗಳನ್ನು ಕೇಳಿ ಕುವೆಂಪು ಅವರ ಬಗ್ಗೆ ಬಂದಿದ್ದ ಇಂಗ್ಲಿಷ್ ಪುಸ್ತಕಗಳನ್ನು ಓದಿದರಂತೆ. ನಂತರ ಕುವೆಂಪು ಅವರ ಕೆಲವು ಅನುವಾದಿತ ಕೃತಿಗಳನ್ನು ಓದಿ ಪ್ರಭಾವಿತರಾದೆ ಎಂದು ನೆನಪಿಸಿಕೊಂಡರು. ಗಾಂಧಿ ಪ್ರಣೀತ ವೈಷ್ಣವ ಭಕ್ತಿ ಹೇಗೆ ವಿಶ್ವಾತ್ಮಕವಾದುದು ಹಾಗೆಯೇ ಕುವೆಂಪು ಪ್ರತಿಪಾದಿಸಿದ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಕೂಡ ವಿಶ್ವಾತ್ಮಕವಾದುದು ಎಂದರು. ತಲಸಿರಾಮಾಯಣ ಮತ್ತು ಕುವೆಂಪು ರಾಮಾಯಣಗಳಲ್ಲಿ ಪ್ರತಿಪಾದಿತವಾಗಿರುವ ಜ್ಯಾತ್ಯಾತೀತ ಆಶಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂದಿನ ಸಂದರ್ಭದಲ್ಲಿ ಮನುಷ್ಯ ಎಷ್ಟೇ ರಿಲಿಜಿಯಸ್ ಆಗಿದ್ದರೂ ಜ್ಯಾತ್ಯಾತೀತನಾಗಿರಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಹೋಮರ್, ವ್ಯಾಸ, ವಾಲ್ಮೀಕಿ, ಮಿಲ್ಟನ್, ಫಿರ್ದೂಸ್, ತುಲಸೀದಾಸ್ ಮುಂತಾದವರ ಪರಂಪರೆಯಲ್ಲಿ ಕುವೆಂಪು ಮತ್ತು ಅವರ ದರ್ಶನವನ್ನು ತುಲನಾತ್ಮಕವಾಗಿ ನೋಡಿದರು. 
ಭಾರದ್ವಾಜ್ ಅವರ ವಾಗ್ವೈಖರಿ ನನಗೆ ದಂಗುಬಡಿಸಿತ್ತು. ಅವರ ರಾಜಕೀಯ ಜಂಜಾಟಗಳೇ ಏನೇ ಇರಲಿ, ಕರ್ನಾಟಕದ ರಾಜ್ಯಪಾಲರಾಗಿ ಅವರು ಕರ್ನಾಟಕವನ್ನು ಅರ್ಥಮಾಡಿಕೊಂಡಿರುವ, ಮಾಡಿಕೊಳ್ಳುತ್ತಿರುವ ರೀತಿ ಮಾತ್ರ ಅನನ್ಯ. ಮೊತ್ತಮೊದಲ ಬಾರಿಗೆ ರಾಷ್ಟ್ರಗೀತೆಯಲ್ಲಿ ದ್ರಾವಿಡ ಪದವನ್ನು ಕೇಳಿದ್ದಾಗ ಇದೇನಿದು? ಎಂದು ಗೊಂದಲಕ್ಕೊಳಗಾಗಿದ್ದರಂತೆ. ಆದರೆ ಇಂದು, ಇಡೀ ಭಾರತಕ್ಕೆ ದಕ್ಷಿಣಭಾರತದ ಕೊಡುಗೆಯ ಬಗ್ಗೆ, ದಕ್ಷಿಣ ಭಾರತದ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದರು. ಭಾರತೀಯತೆಗೆ ದಕ್ಷಿಣಭಾರತ, ವಿಶೇಷವಾಗಿ ಕರ್ನಾಟಕ ನೀಡಿದ ಕೊಡುಗೆ ಅನನ್ಯವಾದುದು ಎಂದರು. ಗುಲ್ಬರ್ಗ ಸುತ್ತಮುತ್ತಲಿನ ಅಲೆಮಾರಿ ಜನಾಂಗದಿಂದ ಹಿಡಿದು, ಬಹುಭಾಷಾ ಹಾಗೂ ಬಹುಧರ್ಮೀಯ ನೆಲೆಗಳಾಗಿರುವ ಕರಾವಳಿ ಪ್ರದೇಶದ ಅನನ್ಯತೆಯ ಬಗ್ಗೆ, ಶ್ರವಣಬೆಳಗೊಳದ ಬಾಹುಬಲಿಯ ಬಗ್ಗೆ ಅವರು ತನ್ಮಯವಾಗಿ ಮಾತನಾಡುತ್ತಿದ್ದರೆ ಇಡೀ ಸಭಾಂಗಣ ದಂಗಬಡಿದಂತೆ ನಿಶ್ಯಬ್ಧವಾಗಿ ಕುಳಿತು ಕೇಳಿಸಿಕೊಳ್ಳುತ್ತಿತ್ತು. ಅಲ್ಲಿ ನೆರೆದಿದ್ದ ವಿವಿಧ ಕ್ಷೇತ್ರಗಳ, ವಿವಿಧ ವಿಷಯಗಳ ತಜ್ಞರುಗಳನ್ನು ಉದ್ದೇಶಿಸಿ, ಈ ರಾಜಭವನ ನಿಮ್ಮದು, ನಾನು ಬಳಸುತ್ತಿರುವುದು ಕೇವಲ ಒಂದು ಕೊಠಡಿ. ನಿಮ್ಮ ಇಂತಹ ರಚನಾತ್ಮಕ ಕಾರ್ಯಕ್ರಮಕ್ಕೆ ರಾಜಭವನದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದಾಗ ದೊಡ್ಡ ಚಪ್ಪಾಳೆಯೊಂದಿಗೆ ಜನ ಹರ್ಷ ವ್ಯಕ್ತಪಡಿಸಿದರು. ಕುವೆಂಪು ಅವರ ಬಗ್ಗೆ ಒಂದು ಒಳ್ಳೆಯ ಇಂಗ್ಲಿಷ್ ಪುಸ್ತಕ ತರಲು ಬೇಕಾದ ಸಹಕಾರವನ್ನು ನೀಡುವುದಾಗಿಯೂ ಘೊಷಿಸಿದರು. ವಿಶ್ವೇಶ್ವರಯ್ಯ, ಕುವೆಂಪು ಮುಂತಾದವರಿಂದ ಕರ್ನಾಟಕ ಅಂದು, ಇಂದು ಮುಂದೆಯೂ ಒಂದು ಒಳ್ಳೆಯ ಪ್ರಗತಿಪರ ರಾಜ್ಯ ಎಂದು ಹೇಳಿ ತಮ್ಮ ಮಾತು ಮುಗಿಸಿದರು. 
ಬಹುಶಃ, ಅಲ್ಲಿದ್ದ ಎಲ್ಲ ಕನ್ನಡಿಗರಿಗಿಂತ ವಿಶೇಷವಾಗಿ ಒಂದು ಆರೋಗ್ಯಕರ ಅಂತರದಲ್ಲಿ ನಿಂತು ಕುವೆಂಪು ಅವರನ್ನು, ಕರ್ನಾಟಕವನ್ನು ಈ ರಾಜ್ಯಪಾಲರು ಅರ್ಥಮಾಡಿಕೊಂಡಿದ್ದಾರೆ ಅನ್ನಿಸಿತು. ಸುದೀರ್ಘ ಸಾರ್ವಜನಿಕ ಜೀವನದ ಅನುಭವ, ಹಿಂದಿ ಮತ್ತು ಇಂಗ್ಲಿಷ್ ಸಾಹಿತ್ಯ, (ಅವರು ಸ್ನಾತಕೋತ್ತರ ಪದವಿ ಮೊದಲು ಪಡೆದಿದ್ದು ಸಾಹಿತ್ಯದಲ್ಲಿ!) ತತ್ವಶಾಸ್ತ್ರದ ಅಧ್ಯಯನ ಅವರಿಗೆ ಇಂತಹ ಅವಕಾಶವನ್ನು ಒದಗಿಸಿಕೊಟ್ಟಿದೆ ಎನ್ನಬಹುದು.
ರಾಜ್ಯಪಾಲರು ಮಾತನಾಡುವ ಮೊದಲು ಪ್ರೊ.ಕೆ.ಇ.ರಾಧಾಕೃಷ್ಣ ಮತ್ತು ಹಂಪನಾ ಅವರು ಕ್ರಮವಾಗಿ, ’ರಾಮಾಯಣದರ್ಶನಂ’ ಮಹಾಕಾವ್ಯದ ದರ್ಶನ ಮತ್ತು ಕುವೆಂಪು, ವ್ಯಕ್ತಿ, ಕವಿ ಮತ್ತು ದಾರ್ಶನಿಕ ಎಂಬ ವಿಷಯಗಳ ಬಗ್ಗೆ ಅಧ್ಯಯನಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದರು. ಮಹಾರಾಜಾ ಕಾಲೇಜಿನಲ್ಲಿ ಕೇವಲ ಕುವೆಂಪು ಅವರನ್ನು ನೋಡಲು ಕಾದು ನಿಂತಿರುತ್ತಿದ್ದ ವಿದ್ಯಾರ್ಥಿಗಳ ಬಗ್ಗೆ ಹೇಳಿದ ಹಂಪನಾ, ಕುವೆಂಪು ಅವರ ದರ್ಶನವನ್ನು ತೆರೆದಿಟ್ಟರು. ಪ್ರೊ.ಕೆ.ಇ.ಆರ್. ಅವರು ರಾಮಾಯಣದರ್ಶನಂ ಕಾವ್ಯದ ಮಲೆನಾಡಿನ ಚಿತ್ರಣ, ಕೊನೆಯ ಅಧ್ಯಾಯದ ದರ್ಶನ, ಆದಿ ಅನಾದಿ ತತ್ವದ ಬಗ್ಗೆ ಮಾತನಾಡಿದರು. 
ರಾಜ್ಯಪಾಲರ ಭಾಷಣದ ನಂತರ ಮಾತನಾಡಿದ ಪ್ರೊ. ಮನುಚಕ್ರವರ್ತಿ ಅವರು ಕುವೆಂಪು ಅವರ ಸೌಂದರ್ಯ ಮತ್ತು ತತ್ವಮೀಮಾಂಸೆಯ ಬಗ್ಗೆ ವಿದ್ವತ್‌ಪೂರ್ಣ ಪ್ರಬಂಧವನ್ನು ಮಂಡಿಸಿದರು. ಡಾ. ಚಿದಾನಂದಗೌಡರು ಪಂಚಮಂತ್ರ-ಸಪ್ತಸೂತ್ರ ಎಂಬ ವಿಷಯದ ಮೇಲೆ ಸೋದಾಹರಣವಾಗಿ ಮಾತನಾಡಿದರು. ಒಂದೊಂದು ಮಂತ್ರಕ್ಕೂ ಅವರು ಹೇಳುತ್ತಿದ್ದ ಪುಟ್ಟ ಪುಟ್ಟ ಕಥೆಗಳು ಮನಸೆಳೆಯುವಂತಿದ್ದವು. ಕುವೆಂಪು ಪ್ರತಿಷ್ಠಾನದ ಶ್ರೀ ಕಡಿದಾಳ್ ಪ್ರಕಾಶ್ ಅವರು ವಂದನಾರ್ಪಣೆ ಸಲ್ಲಿಸಿ, ರಾಜ್ಯಪಾಲರನ್ನು ಕುಪ್ಪಳಿಗೆ ಆಹ್ವಾನಿಸಿದರು.
ಬೆಳಿಗ್ಗೆ ಹತ್ತೂವರೆಗೆ ಆರಂಭವಾಗಿ ನಿಗದಿತ ಒಂದು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಗಿಯಿತು. ಕಾರ್ಯಕ್ರಮ ಮುಗಿದ ಮೇಲೂ, ರಾಜ್ಯಪಾಲರು ಸುಮಾರು ಅರ್ಧಗಂಟೆಗಳ ಕಾಲ ಎಲ್ಲರೊಡನೆ (ಊಟದ ಸಮಯದಲ್ಲೂ) ಮಾತನಾಡುತ್ತಾ ನಿಂತಿದ್ದರು. ಔತಣಕೂಟದ ಆಯೋಜಕರು ಸ್ವತಃ ರಾಜ್ಯಪಾಲರೇ ಆಗಿದ್ದರು!
ಕೊನೆಯ ಮಾತು: ಊಟವಾದ ಮೇಲೆ ಶ್ರೀಮತಿ ತಾರಿಣಿಯವರ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ, ಒಬ್ಬ ವಯಸ್ಸಾದ ಮಹಿಳೆ ಮತ್ತು ಇನ್ನೊಬ್ಬರು (ಅವರ ಮಗನಿರಬಹುದು) ಬಂದು ಮಾತನಾಡಿಸಿದರು. ಆ ಮಹಿಳೆ ತಾರಿಣಿಯವರ ಕೈಹಿಡಿದು, ಕುವೆಂಪು ಅವರು ನಮಗೆ ದೇವರ ಸಮಾನ. ಅವರ ಬಗೆಗಿನ ನಮ್ಮ ಭಾವನೆ, ಪ್ರೀತಿ ಇವೆಲ್ಲವೂ ಅನಿರ್ವಚನೀಯ ಎಂದು ಭಾವುಕತೆಯಿಂದ ಹೇಳುತ್ತಿದ್ದರು. ನಿಮ್ಮಲ್ಲಿಯೇ ಅವರನ್ನು ಕಾಣುತ್ತಿದ್ದೇವೆ ಎಂದು ಅವರ ಮಗನೂ ಧ್ವನಿಗೂಡಿಸಿದರು. 
ಆಗ ನನಗನ್ನಿಸಿದ್ದು: ಕುವೆಂಪು ಅವರು ತಮ್ಮ ಸಂಪರ್ಕಕ್ಕೆ ಬಂದವರ ಮೇಲೆ ಪ್ರಭಾವ ಬೀರಿದಂತೆ, ನೇರವಾಗಿ ಅವರ ಸಂಪರ್ಕಕ್ಕೆ ಬರದವರ ಮೇಲೂ ಸಾಕಷ್ಟು ಪ್ರಭಾವ ಬೀರಿದ್ದಾರೆ. ’ರಾಮನಿಗಿಂತ ರಾಮತ್ವ ದೊಡ್ಡದು’ ಎಂಬ ಅವರ ಮಾತಿನಂತೆ, ಕುವೆಂಪು ಅವರಿಗಿಂತ ಅವರ ವ್ಯಕ್ತಿತ್ವ ಬಹುದೊಡ್ಡದು! ಕುವೆಂಪು ಇಂದು ವ್ಯಕ್ತಿಯಾಗಿ ನಮ್ಮೊಂದಿಗೆ ಇಲ್ಲದಿರಬಹುದು; ಆದರೆ ಶಕ್ತಿಯಾಗಿ ನಮ್ಮೊಂದಿಗಿದ್ದಾರೆ!

Tuesday, May 24, 2011

ಸರಸ್ವತಿ ಸಮ್ಮೋಹಿತೆಯಾದಳ್ ಅಗ್ಗಳೆಯಾದಳ್ ವಿಶ್ವಭೂಚಕ್ರದೊಳ್ - ಜನ್ನ

ಕವಿಚಕ್ರವರ್ತಿತ್ರಯರಲ್ಲಿ ಒಬ್ಬನಾದ ಜನ್ನನು ’ಯಶೋಧರ ಚರಿತ್ರೆ’ಯ ಪ್ರಾರಂಭದಲ್ಲಿ ಸರಸ್ವತಿಯನ್ನು ಸ್ತುತಿಸಿಲ್ಲ. ಆದರೆ, ಸರಸ್ವತಿಗೆ ತನ್ನ ಮೇಲೆ ವಿಶೇಷ ಪ್ರೀತಿ ಎಂದು ಹೇಳಿಕೊಂಡಿದ್ದಾನೆ.
ವಾಣಿ ಪಾರ್ವತಿ ಮಾಡಿದ
ಜಾಣೆಂತುಟೊ ಭಾಳಲೋಚನಂ ಕವಿಸುಮನೋ
ಬಾಣನ ಮಗನೆಂದಖಿಳ 
ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ||
ಸರಸ್ವತಿ ಮತ್ತು ಪಾರ್ವತಿಯರು ಸೇರಿ ಮಾಡಿದ ಜಾಣತನದಿಂದ ಭಾಳಲೋಚನನು (ಜನ್ನನು) ಕವಿಸುಮನೋಬಾಣನ ಮಗನೆಂದು ಅಖಿಲಕ್ಷೋಣಿಗೆ ಹೆಸರಾಯ್ತು; ಈ ಪ್ರೀತಿಗೆ ಆಶ್ಚರ್ಯವೇಕೆ? ಎನ್ನುತ್ತಾನೆ ಜನ್ನ.
’ಯಶೋಧರ ಚರಿತ್ರೆ’ಯ ಕೊನೆಯ ಪದ್ಯದಲ್ಲಿ ಆತ ಸರಸ್ವತಿಯನ್ನು ಪ್ರಾರ್ಥಿಸಿರುವ ರೀತಿ ಅನನ್ಯವಾಗಿದೆ.
ಪರಮಜಿನೇಂದ್ರಶಾಸನವಸಂತದೊಳೀ ಕೃತಿಕೋಕಿಲಸ್ವನಂ
ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಗೆ ಸಂತತಂ
ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್
ಸಿರಿ ನೆರೆದಿರ್ಕೆ ನಾೞ್ಪ್ರಭು ಜನಾರ್ದನದೇವನ ವಕ್ತ್ರಪದ್ಮದೊಳ್||
ಪರಮಜಿನೇಂದ್ರನ ಶಾಸನ ಅಂದರೆ ಮಾತು ಅಥವಾ ಆಜ್ಞೆ ಎಂಬ ವಸಂತದಲ್ಲಿ ಜನ್ನನ ಕಾವ್ಯವೆಂಬ ಕೋಗಿಲೆಯ ಧ್ವನಿ ಕೇಳಲಿ ಎಂಬುದು ಕವಿಯ ಆಶಯ. ’ನಾೞ್ಪ್ರಭು ಜನಾರ್ದನದೇವನ ವಕ್ತ್ರಪದ್ಮದೊಳ್ ಪರಿಮಳದಂತೆ ವಾಣಿ ನೆಲಸಿರ್ಕೆ’ ಎಂಬ ಮಾತು ನವೀನವಾಗಿದೆ. ಈಗಾಗಲೇ ನಾವು ಗಮನಿಸಿರುವಂತೆ ಕೆಲವು ಕವಿಗಳು ’ಸರಸ್ವತಿಯೇ ತಮ್ಮ ಮುಖಕಮಲದಲ್ಲಿ ನೆಲಸಲಿ’ ಎಂದು ಪ್ರಾರ್ಥಿಸಿರುವುದುಂಟು. ಅವುಗಳಿಗಿಂತ, ’ಸರಸ್ವತಿಯು ತನ್ನ ಮುಖಕಮಲದಲ್ಲಿ ಪರಿಮಳದಂತೆ ನೆಲಸಿರಲಿ’ ಎಂದು ಪ್ರಾರ್ಥಿಸಿರುವ ಜನ್ನನ ಕಲ್ಪನೆ ನವೀನವಾಗಿದೆ.
ಜನ್ನ ’ಅನಂತನಾಥಪುರಾಣ’ ಕಾವ್ಯದಲ್ಲಿ ಸರಸ್ವತಿಯನ್ನು ’ಜಿನೇಂದ್ರವಾಗ್ವನಿತೆ’ ಎಂದು ಸ್ತುತಿಸಿದ್ದಾನೆ. 
ಪದವಿನ್ಯಾಸ ವಿಶೇಷದೊಳ್ ಪದವಿಲಾಸಂ ಸೊಂಪುವೆತ್ತಿರ್ದ ಕಾ
ವ್ಯದ ಮೆಯ್ಯೊಳ್ ಸಮುದಾಯಶೋಭೆ ವಿನುತಸ್ಯಾದರ್ಥದೊಳ್ ಮಧ್ಯ ಭಾ
ಗದ ಕಾಶ್ಯಂ ನಯಯುಗ್ಮದೊಳ್ ನಯನಭಾವಂ ಭಂಗಿಯಂ ತಾಳ್ದಿ ಸ
ನ್ನಿಧಿಯಾಗಿರ್ದ ಜಿನೇಂದ್ರವಾಗ್ವನಿತೆ ನಿಲ್ಕಸ್ಮನ್ಮುಖಾಂಭೋಜದೊಳ್||
’ಜಿನೇಂದ್ರ ವಾಗ್ವನಿತೆ’ ಎಂಬುದು ಪಂಪನ ’ಪರಮಜಿನೇಂದ್ರವಾಣಿಯೆ ಸರಸ್ವತಿ’ ಎಂಬ ಪರಿಕಲ್ಪನೆಯಂತೆಯೇ ಇದೆ. ಪದಗಳ ವಿನ್ಯಾಸ ಮತ್ತು ವಿಶೇಷದಲ್ಲಿ ಪದಗಳ ವಿಲಾಸ ಮತ್ತು ಸಮೃದ್ಧಿಯಾಗಿರುವ ತನ್ನ ಕಾವ್ಯಕ್ಕೆ ಸಮುದಾಯ ಶೋಭೆಯನ್ನು ಸರಸ್ವತಿಯು ನೀಡಬೇಕೆಂದು ಪ್ರಾರ್ಥಿಸಿರುವುದು ಹೊಸದಾಗಿದೆ. ಕಾವ್ಯವು ಕವಿಯ ರಚನೆಯಾದರೂ, ಒಂದು ಜನಾಂಗದ ಸಮುದಾಯದ ಅಭಿವ್ಯಕ್ತಿಯಾಗಿರುತ್ತದೆ. ಆದ್ದರಿಂದ ಕಾವ್ಯಕ್ಕೆ ಸಮುದಾಯದ ಮನ್ನಣೆ ಅಗತ್ಯವಾಗಿರುತ್ತದೆ. ಈ ದೃಷ್ಟಿಯಿಂದ ಜನ್ನನ ಬೇಡಿಕೆ ನ್ಯಾಯಸಮ್ಮತವೂ ನವೀನವೂ ಆಗಿದೆ. ಹೊಸದಂಪತಿಗಳ ಕಣ್ಣಿನ ಭಾವಕ್ಕೂ ಭಂಗಿಗೂ ಆಶ್ರಯಸ್ಥಾನವಾಗಿರುವವಳು ಎಂಬುದಂತೂ ಅತ್ಯಂತ ಹೊಸ ಕಲ್ಪನೆ. ಅಂತಹ ಜಿನೇಂದ್ರವಾಗ್ವನಿತೆಯಾದ ಸರಸ್ವತಿಯು ತನ್ನ ನಗುಮುಖಕಮಲದಲ್ಲಿ ನಿಲ್ಲಬೇಕು ಎಂಬುದು ಜನ್ನನ ಪ್ರಾರ್ಥನೆ. ಗ್ರಂಥರಚನೆಯ ಕಾಲದ ದೃಷ್ಟಿಯಿಂದ, ಕ್ರಿ.ಶ.೧೨೦೯ರಲ್ಲಿ ರಚಿತವಾದ ’ಯಶೋಧರ ಚರಿತ್ರೆ’ಯಲ್ಲಿ, ವಾಣಿ ಪರಿಮಳದಂತೆ ತನ್ನ ಮುಖಕಮಲದಲ್ಲಿ ನೆಲಸಲಿ ಎಂದು ನವೀನ ಕಲ್ಪನೆಯನ್ನು ಸೃಷ್ಟಿಸಿದ್ದ ಜನ್ನ, ಕ್ರಿ.ಶ.ಸುಮಾರು ೧೨೩೦ರ ರಚನೆಯಾದ ’ಅನಂತನಾಥಪುರಾಣ’ದಲ್ಲಿ ’ವಾಗ್ದೇವಿಯು ತನ್ನ ಮುಖಕಮಲದಲ್ಲಿ ನೆಲಸಲಿ’ ಎಂಬ ಕವಿಸಮಯದ ಸಾಂಪ್ರದಾಯಿಕ ಜಾಡನ್ನೇ ಹಿಡಿದಿರುವುದು ಆಶ್ಚರ್ಯವಾಗಿದೆ. ’ವಾಗ್ದೇವಿಯು ತನ್ನ ಮುಖಕಮಲದಲ್ಲಿ ನೆಲಸಲಿ’ ಎಂದು ಪ್ರಾರ್ಥಿಸಿದ ಜನ್ನ ಮುಂದುವರೆದು, ತನ್ನ ಮುಖಕಮಲವನ್ನು ಸಮೀಪಿಸಿದ್ದರಿಂದಲೇ ಸರಸ್ವತಿಗೆ ವಿಶ್ವಭೂಚಕ್ರದಲ್ಲಿ ಸ್ಥಾನ ಸಿಕ್ಕಿತೆಂದು ಹೆಮ್ಮೆ ಪಟ್ಟುಕೊಳ್ಳುತ್ತಾನೆ.
ಚತುರಂ ನೀಱನುದಾರನುಜ್ವಲ ಯಶಂ ಸೌಭಾಗ್ಯಸಂಪನ್ನನೂ
ರ್ಜಿತ ಪುಣ್ಯೋದಯನೀ ಜನಾರ್ದನನ ವಕ್ತ್ರಾಂಭೋಜಮಂ ಸಾರ್ದು ಸು
ಸ್ಥಿತೆಯಾಗಿರ್ದುದಱಂದೆ ತಾ ಸೊಬಗೆಯಾದಳ್ ಜಾಣೆಯಾದಳ್ ಸರ
ಸ್ವತಿ ಸಮ್ಮೋಹಿತೆಯಾದಳಗ್ಗಳೆಯೆಯಾದಳ್ ವಿಶ್ವಭೂಚಕ್ರದೊಳ್||
ಚತುರನೂ ಸುಂದರನೂ ಉದಾರನೂ ಉಜ್ವಲನೂ ಯಶವಂತನೂ ಸೌಭಾಗ್ಯಸಂಪನ್ನನೂ ಏಳಿಗೆ ಹೊಂದಿದ ಪುಣ್ಯೋದಯನೂ ಆದ ಜನ್ನನ ಮುಖಕಮಲವನ್ನು ಸಮೀಪಿಸಿ, ಅಲ್ಲಿ ಸುಸ್ಥಿರವಾಗಿ ನಿಂತಿದ್ದರಿಂದಲೇ ಸರಸ್ವತಿಗೆ, ಈ ವಿಶ್ವಭೂಚಕ್ರದಲ್ಲಿ ಸೊಬಗು, ಜಾಣತನ ಹಾಗೂ ಆಕರ್ಷಣೆಯುಂಟಾಯಿತು ಮತ್ತು ಅವುಗಳಿಂದಾಗಿ ಅವಳ ಶ್ರೇಷ್ಠತೆ ಹೆಚ್ಚಿತು ಎಂಬುದು ಜನ್ನಕವಿಯ ಸ್ವಸ್ತುತಿ. ಆದರೆ, ಕಾವ್ಯದ ಇನ್ನೆರಡು ಪದ್ಯಗಳಲ್ಲಿ ಜನ್ನ, ಸಾಹಿತ್ಯನಟಿಯೂ ವಚಶ್ರೀಯೂ ತನ್ನ ಮುಖತಿಲಕವನ್ನು ಅಲಂಕರಿಸಲಿ ಎನ್ನುತ್ತಾನೆ. ’ಸಾಹಿತ್ಯನಟಿ’ ಎಂಬುದು ನಾಗಚಂದ್ರನ ’ವಿದ್ಯಾನಟಿ’ಯ ಇನ್ನೊಂದು ಅವತಾರದಂತಿದೆ.
ಕವಿಯು ಬೆಳೆದಂತೆ ಆತನ ಆತ್ಮವಿಶ್ವಾಸವೂ ಹೆಚ್ಚುತ್ತಾ ಹೋಗುತ್ತದೆ ಎಂಬುದಕ್ಕೆ ಜನ್ನನ ಸರಸ್ವತೀ ದರ್ಶನ ಒಂದು ಉತ್ತಮ ಉದಾಹರಣೆ. ಪ್ರಾರಂಭದಲ್ಲಿ, ಸರಸ್ವತಿಯು ತನ್ನ ಮುಖಕಮಲದಲ್ಲಿ ಪರಿಮಳದಂತೆ ವ್ಯಾಪಿಸಿರಲಿ ಎಂದಿದ್ದ ಜನ್ನ, ನಂತರ ನನ್ನ ಮುಖಕಮಲದಲ್ಲಿ ನೆಲಸಲಿ ಎನ್ನುತ್ತಾನೆ. ಕವಿಯ ಪ್ರೌಢಿಮೆ ಹೆಚ್ಚಿದಂತೆ, ಕೀರ್ತಿ ಶಿಖರವನ್ನು ಏರಿದಂತೆ, ಆತನ ಆತ್ಮವಿಶ್ವಾಸ ವೃದ್ಧಿಸಿದಂತೆ, ಜನ್ನ ’ತನ್ನಿಂದಲೇ ಸರಸ್ವತಿಗೆ ವಿಶ್ವಭೂಚಕ್ರದಲ್ಲಿ ಶ್ರೇಷ್ಠತೆ ಹೆಚ್ಚಾಗಿದೆ’ ಎಂದು ಭಾವಿಸುತ್ತಾನೆ. ಮೇಲ್ನೋಟಕ್ಕೆ ಇದು ಹುಂಬತವೆನಿಸಬಹುದು. ಆದರೆ ಅದು ಹುಂಬತನವಾಗಿರದೆ, ಬಡಾಯಿಯಾಗಿರದೆ, ಸಶಕ್ತ ಕವಿಯೊಬ್ಬನ ಆತ್ಮವಿಶ್ವಾಸದ ನುಡಿಗಳಾಗಿವೆ ಎಂಬುದನ್ನು ಗಮನಿಸಬೇಕು. ಪ್ರತಿಯೊಂದು ಶ್ರೇಷ್ಠ ಸಾಹಿತ್ಯಕೃತಿಯೂ ಸರಸ್ವತಿಯ ಅವತಾರವೇ ಆಗಿರುತ್ತದೆ. ಹೀಗೆ ಎತ್ತಿದ ಹೊಸ ಅವತಾರಗಳೆಲ್ಲವೂ ಸರಸ್ವತಿಯ ಶ್ರೇಷ್ಠತೆಯನ್ನು ಹೆಚ್ಚಿಸುತ್ತಲೇ ಇರುತ್ತವೆ. ಆತನ ಸಾಹಿತ್ಯನಟಿ ಎಂಬ ಕಲ್ಪನೆಯೂ ಅದನ್ನೇ ಪುಷ್ಟೀಕರಿಸುತ್ತದೆ. 

Monday, May 23, 2011

ನಿನಗಿಹುದು ಇಡಲು ಮುಡಿ! ಶ್ರೀಮಾತೆಯಲರ ಅಡಿ!

ಕುವೆಂಪು ಅವರ ಅರವತ್ತನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ, ಉದಯರವಿ ಮನೆಯ ಎಲ್ಲ ಕಿಟಕಿ ಬಾಗಿಲುಗಳಲ್ಲಿದ್ದ ಹಳೆಯ ಪರದೆಗಳನ್ನು ಬದಲಾಯಿಸಲು ಶ್ರೀಮತಿ ಹೇಮಾವತಿಯವರು ನಿರ್ಧರಿಸಿರುತ್ತಾರೆ. ಅವುಗಳಿಗೆ ತಾರಿಣಿಯವರೇ ಕೈಯ್ಯಾರೆ ಕಸೂತಿ ಹಾಕಲು ತೀರ್ಮಾನಿಸುತ್ತಾರೆ. ಅದರಂತೆ, ಅವರ ಚಿಕ್ಕಮ್ಮ ಜಯಲಕ್ಷ್ಮಿ ಎಂಬುವವರು ಬರೆದುಕೊಟ್ಟ ಹುಲಿ, ಜಿಂಕೆ, ಬೆಟ್ಟ-ಗುಡ್ಡ, ಗಿಡ-ಮರಗಳನ್ನೊಳಗೊಂಡ ಚಿತ್ರವನ್ನು ತದ್ವತ್, ಬಾಗಿಲ ಪರದೆಯೊಂದರ ಮೇಲೆ ತಾರಿಣಿಯವರು ಕಸೂತಿಯಲ್ಲಿ ಮೂಡಿಸಿರುತ್ತಾರೆ. ಅಕ್ಕ ಕಲಾ ಬರೆದುಕೊಟ್ಟಿದ್ದ ಜಪಾನ್ ಕಸೂತಿ ಚಿತ್ರವೊಂದನ್ನು ಇನ್ನೊಂದು ಬಾಗಿಲ ಪರದೆಗೂ ಹಾಕಿರುತ್ತಾರೆ. ಇವುಗಳನ್ನು ನೋಡಿ, ಸಂತೋಷಪಟ್ಟ ತೇಜಸ್ವಿಯವರು ಹಕ್ಕಿಗಳಿರುವ ಒಂದು ಕ್ಯಾಲೆಂಡರನ್ನು ತಂದು ಕೊಡುತ್ತಾರೆ. ಅದರಲ್ಲಿದ್ದ ಬೇರೆ ಬೇರೆ ಜಾತಿಯ ಕೆಲವು ಹಕ್ಕಿಗಳನ್ನು ಕಸೂತಿ ಮಾಡುತ್ತಾರೆ. ತಾರಿಣಿಯವರು ಇವೆಲ್ಲದರ ತಯಾರಿಯಲ್ಲಿ ತೊಡಗಿದ್ದನ್ನು ಗಮನಿಸುತ್ತಿದ್ದ ಕುವೆಂಪು, ’ಕಸೂತಿ ಕೆಲಸ ಎಲ್ಲಿಗೆ ಬಂತು?’, ’ಯಾವಾಗ ಹಾಕುವೆ?’ ಎಂದು ಕೇಳುತ್ತಿದ್ದರಂತೆ. ಹುಲಿಯ ಕಸೂತಿಯನ್ನು ನೋಡಿ, ’ಶಾಬಾಷ್. ಹುಲಿ, ಜಿಂಕೆ ಎರಡೂ ಚೆನ್ನಾಗಿ ಮೂಡಿ ಬಂದಿದೆ’ ಎಂದಿದ್ದರಂತೆ. 


ಕುವೆಂಪು ಅವರ ಅರವತ್ತನೆಯ ಹುಟ್ಟುಹಬ್ಬ ಎರಡು ದಿನವಿದೆ ಎನ್ನುವಾಗ ಈ ಎಲ್ಲಾ ಪರದೆಗಳನ್ನು ಹಾಕಲಾಯಿತು. ಅಂದು ವಾಕಿಂಗ್ ಮುಗಿಸಿ  ಬಂದ ಕುವಂಪು ಅದೆಲ್ಲವನ್ನು ನೋಡಿ ತುಂಬಾ ಸಂತೋಷ ಪಟ್ಟರು. ಹಕ್ಕಿಗಳ ಪರದೆಯ ಮುಂದೆ ನಿಂತು ನೋಡಿದರೂ ತಣಿಯದೆ, ಕುರ್ಚಿಯನ್ನೇ ಅಲ್ಲಿಗೆ ಎಳೆದು, ಕುಳಿತು ಸುಮಾರು ಒಂದ ಗಂಟೆಯ ಕಾಲ ಭಾವಪರವಶರಾಗಿದ್ದರಂತೆ. ಆಗ ಮನೆಗೆ ಬಂದ ಎಸ್.ವಿ.ಪರಮೇಶ್ವರಭಟ್ಟರು ’ಇದೇನು ಸಾರ್ ಹಕ್ಕಿ, ಹೂ, ಹುಲಿ, ಜಿಂಕೆ, ಮರ, ಗಿಡ, ಮಲೆನಾಡೆ ಬಂದಂತಿದೆ’ ಎಂದು ಸಂಭ್ರಮದಿಂದ ನುಡಿದಿದ್ದರಂತೆ. ಬಂದವರಿಗೆಲ್ಲಾ ’ತಾರಿಣಿಯೇ ಹಾಕಿದ್ದು, ಹಕ್ಕಿ ಕಸೂತಿ ಮಾಡಲು ಮೂರು ತಿಂಗಳು ಹಿಡಿಯಿತು’ ಎಂದು ಸಂತೋಷದಿಂದ, ಪ್ರತಿಯೊಂದು ಹಕ್ಕಿಯ ಹೆಸರನ್ನು ಹೇಳಿ ವಿವರಿಸುತ್ತಿದ್ದರಂತೆ.


ಅರವತ್ತು ವರ್ಷದ ಸಂದರ್ಭದಲ್ಲಿ ಅವರ ’ಷಷ್ಟಿನಮನ’ ಎಂಬ ಕವನ ಸಂಕಲನ ಅಚ್ಚಾಗಿತ್ತು. ಅಂದು (೨೯.೧೨.೧೯೬೪) ಮನೆಗೆ ಬಂದ ಸ್ನೇಹಿತರಿಗೆ, ಶಿಷ್ಯರಿಗೆ ಅದರ ಒಂದೊಂದು ಪ್ರತಿಯನ್ನು ಕೊಟ್ಟು ಕಳುಹಿಸುತ್ತಿದ್ದರಂತೆ. ಮುದ್ರಣವಾಗಿ ಬಂದ ದಿನವೇ ಒಂದು ಪ್ರತಿಯನ್ನು ತಾರಿಣಿಯವರಿಗೆ ’ಚಿ|| ಕೆ.ಪಿ. ತಾರಿಣಿಗೆ, ತಂದೆಯ ಷಷ್ಟಿಪೂರ್ತಿಯ ಆಶೀರ್ವಾದಸಹಿತ - ಕುವೆಂಪು ೨೯-೧೨-೧೯೬೪’ ಎಂದು ಬರೆದು ಕೊಟ್ಟಿದ್ದರಂತೆ. ಕಸೂತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ತಾರಿಣಿಯವರು ಒಮ್ಮೆ ಕಣ್ಣಾಡಿಸಿ, ಅಮೇಲೆ ಓದಿದರಾಯಿತು ಎಂದು ಅವರ ಪುಸ್ತಕಗಳಿದ್ದ ಪೆಟ್ಟಿಗೆಗೆ ಹಾಕಿಟ್ಟರಂತೆ.


ಹುಟ್ಟಿದ ಹಬ್ಬದ ಸಂಭ್ರಮ ಮುಗಿದ ಮೇಲೆ ಆ ಪುಸ್ತಕವನ್ನು ಓದಲೆಂದು ತಾರಿಣಿಯವರು ತೆಗೆದರೆ, ಅದರಲ್ಲಿ ’ತಾರಿಣಿಯ ಕಸೂತಿ’ ಎಂಬ ಶೀರ್ಷಿಕೆಯ ಪುಟ್ಟ ಕವಿತೆಯಿದೆ! ಕವಿತೆಯ ಕೊನೆಯಲ್ಲಿ ’ಕುವೆಂಪು ೨-೧-೬೫’ ಎಂದೂ ಬರೆದಿದ್ದರಂತೆ. ಅಂದರೆ ನಾಲ್ಕು ದಿನಗಳ ನಂತರ ಕುವೆಂಪು ಮತ್ತೆ ಆ ಪುಸ್ತಕವನ್ನು ಹುಡುಕಿ ಈ ಕವಿತೆಯನ್ನು ಬರೆದಿಟ್ಟಿದ್ದಾರೆ. ಕವನ ಹೀಗಿದೆ.


ತಾರಿಣಿಯ ಕಸೂತಿ
ಸಾಗರ ಸಾಗರ ರಸದ ನಯಾಗರ
ಧುಮ್ಮಿಕ್ಕಿದವೋಲಾಗುತಿದೆ!
ತಾರಿಣಿ ಕುಶಲ ಕಲಾ ಕಸೂತಿಗೆ
ಸೌಂದರ್ಯ ವಿಭೂತಿಗೆ
ಸ್ವರ್ಗಶ್ರೀ
ಮುಡಿ ಬಾಗುತಿದೆ!
ಆಗಿದೆ ಜಗಲಿಯೆ ಹಕ್ಕಿಯ ಕಾಶಿ!
ಆಗಿದೆ ಬಾಗಿಲೆ ಹೂವಿನ ರಾಶಿ!
ಹೊಂಗನಸಿಳಿದಿದೆ ನಿಜವನೆ ಮಾಸಿ,
’ಉದಯರವಿ’ಗೆ ನಂದನವನೆ ಬೀಸಿ!


ಮಗಳು ತನ್ನ ಹುಟ್ಟುಹಬ್ಬಕ್ಕೆಂದೇ ಸಿದ್ಧಪಡಿಸಿದ ಕಸೂತಿಯ ಮುಂದೆ ಕುಳಿತ ಕವಿಯ ಮನಸ್ಸಿಗೆ, ಆ ಕಸೂತಿಯ ಸೌಂದರ್ಯವಿಭೂತಿಗೆ ಸ್ವರ್ಗವೇ ಮುಡಿ ಬಾಗುತ್ತಿರುವಂತೆ ಭಾಸವಾಗಿದೆ! ಜಗಲಿ ಹಕ್ಕಿಯ ಕಾಶಿಯಾಗಿದ್ದರೆ ಬಾಗಿಲು ಹೂವಿನ ರಾಶಿಯಾಗಿದೆ. ಉದಯರವಿ ನಂದನವನವಾಗಿದೆ!


೧೮-೫-೧೯೭೦ರಲ್ಲಿ ಬರೆದ ಒಂದು ಅಪ್ರಕಟಿತ ಹನಿಗವನವನ್ನು ತಾರಿಣಿ ಉಲ್ಲೇಖಿಸಿದ್ದಾರೆ. ಅಂದಿಗೆ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡುವುದು ಹೆಮ್ಮಯ ವಿಚಾರವಾಗಿತ್ತಂತೆ. ಕಲಾವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರೆ ಮೂಗುಮುರಿಯುವುದು ಸಾಮಾನ್ಯ ಸಂಗತಿ. (ಅದು ಈಗಲೂ ಬದಲಾಗಿಲ್ಲ, ಕೆಲವರಲ್ಲಿ.) ಇಂದುಕಲಾ ಮತ್ತು ತಾರಿಣಿಯವರಿಬ್ಬರೂ ಕಲಾವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡಿದವರು. ಈ ವಿಷಯದ ಬಗ್ಗೆ ಯಾರೋ ಟೀಕೆ ಮಾಡಿದ್ದರಂತೆ. ಅದನ್ನು ಶ್ರೀಮತಿ ಹೇಮಾವತಿಯವರು ಕುವೆಂಪು ಅವರ ಗಮನಕ್ಕೆ ತಂದಾಗ, ಕುವೆಂಪು ಅಸಮಧಾನದಿಂದ, ’ಕಲಾತಾರಿಣಿಯರ ಸಂಸ್ಕಾರದ ನೂರರಲ್ಲಿ ಒಂದು ಪಾಲು ಹಾಗೆ ಟೀಕೆ ಮಾಡುವವರಿಗಿಲ್ಲ’ ಎಂದು ನುಡಿದಿದ್ದರಂತೆ. ನಂತರ ’ನೀನು ಮಹಾಕವಿಯೊಬ್ಬನಿಗೆ ಮಗಳು ಎಂದು ತಲೆ ಎತ್ತಿ ನಡೆ, ಅಭಿಮಾನದಿಂದ’ ಎಂದು ತಾರಿಣಿಯವರಿಗೆ ಹೇಳಿದ್ದರಂತೆ.


ಮುಂದೆ ಕುವೆಂಪು ಅವರ ಮರಣಾನಂತರ, ಅವರ ಪುಸ್ತಕಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಇಡುವಾಗ ಒಂದು ಚೀಟಿ ತಾರಿಣಿಯವರಿಗೆ ಸಿಗುತ್ತದೆ. ಅದರಲ್ಲಿ ೧೮-೫-೧೯೭೦ ಎಂಬ ದಿನಾಂಕವಿರುವ ಆರು ಸಾಲಿನ ಪದ್ಯವೊಂದಿತ್ತು.


ನೀ ಜಗತ್ತಿನ ಮಹಾಕವಿಯೊಬ್ಬನಿಗೆ ಪುತ್ರಿ
ಎಂಬ ಅಭಿಮಾನದಿಂ ನಡೆ, ಮಗಳೆ ತಲೆ ಎತ್ತಿ!
ಬೇಡ ಷೋಕಿ, ಇರಲಿ ಸೌಂದರ್ಯ;
ಬೇಡ ಗರ್ವ, ಇರಲಿ ಗಾಂಭೀರ್ಯ
ನಿನಗಿಹುದು ಇಡಲು ಮುಡಿ!
ಶ್ರೀಮಾತೆಯಲರ ಅಡಿ!


ಈ ಮೇಲಿನ ಎರಡು ಪುಟ್ಟ ಕವಿತೆಗಳನ್ನು ಅವುಗಳ ಸಂದರ್ಭದ ಹಿನ್ನೆಲೆಯನ್ನು ಅರಿತು ಓದಿದಾಗ ನನಗನ್ನಿಸಿದ್ದು: ಕುವೆಂಪು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಒಬ್ಬ ಸಜ್ಜನ ಮನುಷ್ಯನಾಗಿಯೂ, ಕವಿಯಾಗಿಯೂ ಸ್ಪಂದಿಸುತ್ತಿದ್ದರು!

Monday, May 16, 2011

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ!

ಒಮ್ಮೆ ಕುವೆಂಪು, ಅವರ ತಂಗಿ ರಾಜಮ್ಮನವರ ಆಹ್ವಾನದ ಮೇರೆಗೆ, ಮೂಡಿಗೆರೆ ಸಮೀಪದ ’ಕೊಳ್ಳಿಬೈಲು’ ಎಂಬ ಅವರ ತೋಟಕ್ಕೆ ಹೋಗುತ್ತಾರೆ. ತಾರಿಣಿಯವರು ’ನನಗೆ ಗೊತ್ತಿರುವಂತೆ ಮೊಟ್ಟಮೊದಲ ಬಾರಿಗೆ ತಂಗಿ ಮನೆಗೆ ಮಕ್ಕಳನ್ನೆಲ್ಲ ಕರೆದುಕೊಂಡು ಕಾರಿನಲ್ಲಿ ಅಪ್ಪ ಹೊರಟರು’ ಎಂದು ಆ ಘಟನೆಯನ್ನು ದಾಖಲಿಸಿದ್ದಾರೆ. ತಂಗಿಯ ಮನೆಯಲ್ಲಿ ಕುವೆಂಪು ಅನುಭವಿಸಿದ ಸಂತೋಷವನ್ನು ಕವಿತೆಯನ್ನಾಗಿಸಿದ್ದಾರೆ. ೧೨-೨-೧೯೫೮ರಂದು ಕವಿತೆ ದಾಖಲಾಗಿದೆ.
ತಂಗಿಮನೆ ! ಏನು ತಂಪು !
ಹೆಸರು ಏನೋ: ಕೊಳ್ಳಿಬೈಲು!
ಆದರೂ
ಮನಕೆ ಮೈಗೆ ಜೀವಕೆಲ್ಲ,
ನಡುಹಗಲಲಿ ಸುಡುಬಿಸಿಲಲಿ
ಹೊಂಗೆಯ ನೆರಳೆಂತೋ ಅಂತೆ,
ತಂಗಿಯ ಮನೆ - ತಂಪು!
ಅಣ್ಣನೊಬ್ಬ ತಂಗಿಯ ಮನೆಗೆ ಹೋದಾಗ, ಸುಖ, ಸಂತೋಷ, ನೆಮ್ಮದಿಯಿಂದ ಇರುವ ತಂಗಿಯ ಮನೆಯನ್ನು ಕಂಡು ಎಷ್ಟೊಂದು ಸಂತೋಷಪಡುತ್ತಾನೆ! ತಂಗಿಯ ಮನೆ - ತಂಪು ಎನ್ನುವುದರಲ್ಲೇ, ತಂಗಿ ನೆಮ್ಮದಿಯಾಗಿರುವುದು, ಅದನ್ನು ನೋಡಿ ತಾನು ಸಂತೋಷ ಪಟ್ಟಿರುವುದು ಎಲ್ಲಾ ವೇದ್ಯವಾಗುತ್ತದೆ. ಮಟಮಟ ಮಧ್ಯಾಹ್ನ, ಸುಡುಬಿಸಿಲಲ್ಲಿ ನಡೆದು ಸುಸ್ತಾಗಿ ಬಂದವನಿಗೆ, ಹೊಂಗೆಯ ತಂಪು ಎಂತಹ ಚೈತನ್ಯವನ್ನು ನೀಡುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತಾಗುವಂತದ್ದು. ತಂಗಿಯ ಒಲುಮೆಯ ತಂಪು ಅಂತಹದ್ದು. ಆದರೆ ತಂಗಿಯ ಮನೆಯಿದ್ದ ಜಾಗದ ಹೆಸರು ಮಾತ್ರ ಕೊಳ್ಳಿಬೈಲು! ಬಯಲು ಎಂಬುದೇ ಬಿಸಿ ಮತ್ತು ಸೆಖೆಯ ಸಂವೇದನೆಯನ್ನು ಮನಸ್ಸಿನಲ್ಲಿ ಸ್ಫುರಿಸುವಾಗ, ಕೊಳ್ಳಿಬೈಲು ಇನ್ನು ಹೇಗಿರಬೇಡ? ಆ ಕೊಳ್ಳಿಬೈಲಿನೊಳಗಿರುವ ತಂಗಿಯ ಮನೆ - ತಂಪು! ಎರಡನೆಯ ಸಾಲಿನಲ್ಲಿ ಕೊಳ್ಳಿಬೈಲು ಎನ್ನುವಲ್ಲಿ ಕಾಣಿಸಿಕೊಳ್ಳುವ ಸಣ್ಣ ಕಸಿವಿಸಿ ಕವಿತೆ ಮುಗಿದಾಗ ಮರತೇ ಹೋಗಿರುತ್ತದೆ. ಅಣ್ಣತಂಗಿಯರ ಬಾಂಧವ್ಯಕ್ಕೆ ಮೇರೆಯುಂಟೆ!?
ಸರ್ವೋದಯ ಸೂರ್ಯ ಶ್ರೀ ವಿನೋಬಾಜಿಯವರನ್ನು ನೋಡಿದರೆ ಯಾರಿಗೆ ತಾನೆ ಗೌರವ ಮೂಡುವುದಿಲ್ಲ. ಕುವೆಂಪು ಅವರು ವಿನೋಬಾಜಿಯವರನ್ನು ಗೌರವಿಸುತ್ತಿದ್ದರು. ಅವರನ್ನು ’ಸರ್ವೋದಯ ರವಿ’, ’ಸರ್ವೋದಯ ವಿಭೂತಿ’ ಎಂದೂ, ಅವರ ಪಾದಯಾತ್ರೆ ನಡೆಸಿದ ಮಾರ್ಗವನ್ನು ’ಅಮೃತರೇಖೆ’ ಎಂದು ಕುವೆಂಪು ಕರೆದಿದ್ದಾರೆ. ಭೂದಾನ ಚಳುವಳಿಯ ಅಂಗವಾಗಿ ಶ್ರೀ ವಿನೋಬಾಜಿಯವರು ಕೈಗೊಂಡಿದ್ದ ಪಾದಯಾತ್ರೆ ಐತಿಹಾಸಿಕ ಮಹತ್ವವುಳ್ಳದ್ದು. ಅವರ ಪಾದಯಾತ್ರೆ ಪಿರಿಯಾಪಟ್ಟಣದಿಂದ ಮೈಸೂರು ಮಾರ್ಗವಾಗಿ ಶ್ರೀರಂಗಪಟ್ಟಣದ ಮುಖಾಂತರ ಹೋಗುವ ಕಾರ್ಯಕ್ರಮವಿತ್ತು. ಪಿರಿಯಾಪಟ್ಟಣದ ಬಳಿ ಆನೆಚಾಕೂರಿನಲ್ಲಿ ಒಂದು ದಿವಸ (೧೩-೯-೧೯೫೭) ವಿನೋಬಾಜಿ ತಂಗಿದ್ದರು. ಆಗ ಅವರನ್ನು ಬೇಟಿಯಾಗಲು ಕುವೆಂಪು ಪೂರ್ವಾನುಮತಿಯೊಂದಿಗೆ ಹೋಗಿರುತ್ತಾರೆ. ಮನೆಯವರು ಸ್ನೇಹಿತರು ಜೊತೆಗೂಡಿರುತ್ತಾರೆ. ಆನೆಚಾಕೂರಿನಲ್ಲಿ ನಡೆದ ಭೇಟಿಯ ಸಮಯದಲ್ಲಿ ಕುವೆಂಪು ಅವರೊಂದಿಗೆ ನಡೆದ ಮಾತುಕತೆಯಿಂದ ವಿನೋಬಾಜಿ ಉಲ್ಲಸಿತರಾಗಿದ್ದರು. ಉದಯರವಿಗೆ ಕುವೆಂಪು ಆಹ್ವಾನವಿತ್ತಾಗ ವಿನೋಬಾಜಿ ಒಪ್ಪಿಕೊಂಡು, ೨೫-೯-೧೯೫೭ರಂದು ಉದಯರವಿಗೆ ಬಂದು ಹೋಗುತ್ತಾರೆ. ಆ ಎರಡು ದಿನಗಳ ಬಗ್ಗೆ ಕುವೆಂಪು ಅವರೇ ದಾಖಲಿಸಿದ್ದಾರೆ. ೧೩ನೇ ತಾರೀಖಿನಂದು ವಿನೋಬಾಜಿಯವರೊಂದಿಗಿನ ಪ್ರಥಮ ಭೇಟಿಯಲ್ಲಿ ವಿನೋಬಾಜಿಯವರಿಗೆ ನೀಡಿದ ’ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಪ್ರತಿಯಲ್ಲಿ ’ಅಗ್ನಿಶೀತ ಚರಣಕೆ’ ಎಂಬ ಕವಿತೆಯನ್ನು ಬರೆದಿದ್ದರಂತೆ. ಕವಿತೆಗೆ ಅಡಿ ಟಿಪ್ಪಣಿ ನೀಡಿ ಕುವೆಂಪು ಅವರೇ ಈ ವಿಷಯವನ್ನು ದಾಖಲಿಸಿದ್ದಾರೆ.
ಮನುಜ ರೂಪವ ಧರಿಸಿ ಧರೆಗಿಳಿದು ಬಂದಿರುವ
ದೇವಸೂರ‍್ಯಕರುಣ;
ಕವಿದಿರುವ ಕತ್ತಲೆಯೊಳೊಂದೆ ಸಂಚರಿಸುತಿದೆ
ಅಮೃತ ಚಂದ್ರಕಿರಣ:
ಪಾದಯಾತ್ರೆಯೊಳಿರುವ ಶ್ರೀ ವಿನೋಬನ ಅಮರ
ಅಗ್ನಿಶೀತಚರಣ! -
ಇಂದು ವಾಮನನಂತೆ ಬಂದೀ ತ್ರಿವಿಕ್ರಮಗೆ
ಕವಿಯ ನಮನ ಅನೃಣ!
ಮನುಷ್ಯರೂಪ ಧರಿಸಿ ಬಂದಿರುವ ಸೂರ‍್ಯನ ಕರುಣೆಯೇ ವಿನೋಬಾಜಿಯಾಗಿ ಕವಿಗೆ ಕಂಡಿದ್ದಾರೆ. ಜಗತ್ತಿನೆಲ್ಲಡೆ ಕತ್ತಲೆ ಕವಿದಿರುವಾಗ, ವಿನೋಬಾಜಿಯವರ ಪಾದಯಾತ್ರೆ ಅಮೃತಚಂದ್ರಕಿರಣದಂತೆ ಕಂಡಿದೆ. ಅಮರ ಅಗ್ನಿಶೀತಚರಣ ಎಂಬ ಮಾತು ಅಪಾರ ಧ್ವನಿಸಂಪತ್ತನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ವಿನೋಬಾಜಿಯವರ ಉದ್ದೇಶ ಶಾಶ್ವತ ಎಂಬುದನ್ನು ಅಮರ ಎಂಬುದು ಸೂಚಿಸುತ್ತಿದ್ದರೆ, ಅಗ್ನಿ-ಶೀತ ಎಂಬ ಎರಡು ವಿರುದ್ಧಾರ್ಥಕವಾದ ಪದಗಳು, ಆ ವಾಮನ ಮೂರ್ತಿಯ ಕೃಶವಾದ ಪಾದಗಳನ್ನು, ಅದೇ ಪಾದಗಳಿಂದ ನಡೆಯುತ್ತಿರುವ ಪಾದಯಾತ್ರೆಯ ಪರಿಣಾಮವನ್ನು ಸೂಚಿಸುತ್ತಿವೆ. ಹಾಗೆ ವಾಮನನಂತೆ ಬಂದಿರುವ ತ್ರಿವಿಕ್ರಮನಿಗೆ ಕವಿ ನಮಸ್ಕರಿಸುತ್ತಾರೆ. (ಈ ಸಂದರ್ಭದಲ್ಲಿ ರಾಮಾಯಣದರ್ಶನಂ ಕಾವ್ಯದ ಕೆಲವು ಭಾಗಗಳನ್ನು ಕನ್ನಡದಲ್ಲಿಯೇ ಓದಿಸಿ ಕೇಳುತ್ತಾರೆ. ಜೊತೆಗೆ ತಾವೂ ಕನ್ನಡದಲ್ಲಿ ಕೆಲವು ಸಾಲುಗಳನ್ನು ಓದುತ್ತಾರೆ. ಸ್ವತಃ ಕುವೆಂಪು ’ಇದಕ್ಕಿಂತ ನಾನೇನು ಓದಬಲ್ಲೆ?’ ಎಂದು ಉದ್ಘರಿಸುತ್ತಾರೆ. ಅದನ್ನು ಕೇಳಿ ವಿನೋಬಾಜಿ ಚೆನ್ನಾಗಿ ನಕ್ಕರಂತೆ)
೨೫.೯.೧೯೫೭ ಬುಧವಾರ ಅವರ ಪಾದಯಾತ್ರೆ ಮೈಸೂರು ತಲಪುತ್ತದೆ. ಅವರನ್ನು ಸ್ವಾಗತಿಸಲು, ಗೋಕುಲರಸ್ತೆಯಲ್ಲಿ ಕುವೆಂಪು ಮತ್ತು ಸ್ನೇಹಿತರೆಲ್ಲ ಕಾದು ನಿಂತಿರುತ್ತಾರೆ. ವಿನೋಬಾಜಿ ಬಂದವರೆ, ’ನೀವೆಲ್ಲಾ ನೆಟ್ಟಗೆ ಹೋಗಿ. ನಾನು ಪುಟ್ಟಪ್ಪನವರ ಮನೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಕುವೆಂಪು ಅವರ ಕೈ ಹಿಡಿದು ಉದಯರವಿಗೆ ಬರುತ್ತಾರೆ. ಒರಿಸ್ಸಾದ ಮಾಜಿಮುಖ್ಯಮಂತ್ರಿ ಕಮಲನಯನ ಬಜಾಜ್, ದಾಸಪ್ಪ ಜೊತೆಗಿರುತ್ತಾರೆ. ಇಂದುಕಲಾ ಹಾಕಿದ್ದ 'ಸ್ವಾಗತಂ ಶ್ರೀ ವಿನೋಬಾಜಿಗೆ' ಎಂಬ ರಂಗವಲ್ಲಿ ಸ್ವಾಗತಿಸುತ್ತದೆ. ಉದಯರವಿಯೊಳಗೆ ಬಂದು, 'ತುಂಬಾ ಶಾಂತವಾಗಿದೆ' ಎಂದು ಮೂರು ಬಾರಿ ಹೇಳುತ್ತಾರೆ. 'ನೀವು ಈ ಮನೆಯಲ್ಲಿ ಯಾವಾಗಿನಿಂದ ಇದ್ದೀರಿ? ರಾಮಾಯಣದರ್ಶನಂ ಬರೆದದ್ದು ಇಲ್ಲಿಯೇ? ಎಂಬ ವಿಚಾರಗಳನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತಾರೆ. ರಾಮಾಯಣದ ಹಸ್ತಪ್ರತಿಯ ಒಂದು ಫ್ಯಾಕ್ಸಿಮಿಲಿಯನ್ನು ಅದರೊಟ್ಟಿಗೆ ಅಚ್ಚು ಹಾಕಿಸುವಂತೆ ಸಲಹೆ ನೀಡುತ್ತಾರೆ. ಜೇನು ಮೊಸರು ಮೊದಲಾದುವುಗಳನ್ನು ನೀಡಿದಾಗ, ರಾಮಾಯಣದರ್ಶನಂ ಪುಸ್ತಕವನ್ನು ತೋರಿಸಿ 'ಈ ಪ್ರಸಾದ ಸಾಕು, ಅದು ಏಕೆ' ಎನ್ನುತ್ತಾರೆ. ಕಲಾ ಮತ್ತು ತಾರಿಣಿಯವರು ದಾಸರ 'ನರಕಭಯಗಳುಂಟೆ' ಕೀರ್ತನೆಯನ್ನೂ, ಕುವೆಂಪು ಅವರ ನಿನ್ನಡಿದಾವರೆಗಯಲಿ ಗೀತೆಯನ್ನೂ ಹಾಡುತ್ತಾರೆ. ಆಮೇಲೆ 'ನಿಮ್ಮ ದೇವರಮನೆಯನ್ನು ನೋಡಬೇಕು' ಎಂದು ಕೇಳಿ, ಹೋಗಿ ನೋಡಿ, 'ಇಲ್ಲಿ ಎಲ್ಲಾ ಇದ್ದಾರೆ' ಎಂಬರ್ಥದ ಮಾತುಗಳನ್ನಾಡಿ, ೧೫-೨೦ ನಿಮಿಷಗಳು ಅಲ್ಲಿದ್ದು ಹೊರಡುತ್ತಾರೆ. 28ನೆಯ ತಾರೀಕು ನಿಷಾದ್ ಬಾಗಿನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಉದಯರವಿಯ 'ದೇವರಮನೆ'ಯನ್ನು ವಿನೋಬಾಜಿಯವರು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ.
೨೯ನೆಯ ತಾರೀಖು ಅರಸು ಗರ್ಲ್ಸ್ ಸ್ಕೂಲಿನಲ್ಲಿ ಮತ್ತೆ ಬೇಟಿಯಾಗಿ ಅವರನ್ನು ಮೈಸೂರಿನಿಂದ ಬೀಳ್ಕೊಡುತ್ತಾರೆ. ಆ ಭೇಟಿಯಲ್ಲಿ ’ಅಗ್ನಿಹಂಸ’, ’ಸ್ವಾಮಿವಿವೇಕಾನಂದ’, ’ಶ್ರೀರಾಮಕೃಷ್ಣ ಪರಮಹಂಸ’ ಎಂಬ ಮೂರು ಪುಸ್ತಕಗಳನ್ನು ಕುವೆಂಪು ನೀಡುತ್ತಾರೆ. ’ಅಗ್ನಿಹಂಸ’ ಪುಸ್ತಕದಲ್ಲಿ ೨೫ರಂದು ವಿನೋಬಾಜಿ ಉದಯರವಿಗೆ ಬಂದ ದಿನ ಬರೆದಿದ್ದ ಕವಿತೆಯನ್ನು ಬರೆದು ಕೊಟ್ಟಿರುತ್ತಾರೆ. ’ಉದಯರವಿ’ಯಲ್ಲಿ ಸರ್ವೋದಯ ರವಿ! ಎಂಬ ಶೀರ್ಷಿಕೆಯ ಕವಿತೆ ಅದು ಹೀಗಿದೆ.
ಹೇ ಜಗದ್ ದೀನಬಂಧು,
ಮನೆಯೆ ಕ್ಷೇತ್ರವಾಯಿತಿಂದು
’ಉದಯರವಿ’ಗೆ ನೀನು ಬಂದು:
ಕೆರೆಯೆ ಆಯ್ತು ಮಹಾಸಿಂಧು,
ಪೂಜ್ಯ ಓ ತಪೋಧನ!
ಪಾದಯಾತ್ರೆಯಮೃತರೇಖೆ
ಮನೆಯ ಮೇಲೆ ಹಾಯ್ದುದಕ್ಕೆ
ನಿನಗನಂತ ವಂದನಾ,
ಮುಹುರನಂತ ವಂದನಾ!
ವಿನೋಬಾಜಿಯವರ ಪಾದಯಾತ್ರೆ ಅಮೃತಕಿರಣ! ಅದು ಉದಯರವಿಯ ಮೇಲೆ ಹಾಯ್ದು ಹೋಗಿದ್ದಕ್ಕೆ ಕವಿ ಸರ್ವೋದಯ ರವಿಗೆ ವಂದನೆಯನ್ನು ಸಲ್ಲಿಸುತ್ತಿದ್ದಾರೆ.
ಮುಂದೆ 1960ರ ಸುಮಾರಿನಲ್ಲಿ ಮಧ್ಯಪ್ರದೇಶದ ಕೊರಕು ದುರ್ಮಗ ಕಾಡಿನಲ್ಲಿ, ಚೆಂಬಲ್ ಕಣಿವೆಯಲ್ಲಿ ಪಾದಯಾತ್ರೆ ಸಾಗುವಾಗ, ಮನಪರಿವರ್ತನೆಗೊಂಡ ಡಕಾಯಿತರು ಗುಂಪುಗುಂಪಾಗಿ,  ಸಕಲಾಯುಧ ಸಮೇತರಾಗಿ, ಸಕುಟುಂಬ ಸಮೇತರಾಗಿ ವಿನೋಬಾಜಿಯವರಿಗೆ ಶರಣಾಗುತ್ತಿರುವ ಸುದ್ದಿ ಪತ್ರಿಕೆಯಲ್ಲಿ ಬರುತ್ತದೆ. ಆ ಪತ್ರಿಕಾ ವಾರ್ತೆಯನ್ನು ಗಮನಿಸಿ, 23.5.1960ರಂದು ಬರೆದಿರುವ ಕವಿತೆ 'ಇದು ಕಲಿಯ ಯುಗವೆ?' ಎಂಬುದು.
"ಅದೇನದಾ ಗಲಭೆ?"
"ಮುರಿದು ಬಿತ್ತಂತೆ ಶೃಂಗಸಭೆ!"
"ಹಾಳಾಯ್ತೆ ಶೃಂಗಸಭೆ?"
ಆದರಾಯಿತು; ಇತ್ತ ನೋಡು:
ಹೊಳೆಯುತ್ಇದೆ ಶ್ರೀಶಿಲುಬೆ, ನಮನಮಾಡು!"
"ಇದೇನಿದೀ ಬರಿ ಶಿಲುಬೆ? ಕ್ರಿಸ್ತನೆಲ್ಲಿ?"

"ಕಾಣಲ್ಲಿ:
ಸಂಚರಿಸುತಿಹನಾ ಡಕಾಯಿತರ ನಾಡಿನಲ್ಲಿ,
ಮಧ್ಯಪ್ರದೇಶದಾ ಕೊರಕು ದುರ್ಗಮದ ಕಾಡಿನಲ್ಲಿ;
ಒಳ್ಳಿತನೆ ಕಡೆದೆಬ್ಬಿಸುತ ಕೇಡಿನಲ್ಲಿ!
ಧರ್ಮಘಂಟಾನಾದ ಬಾಜಿಸಿದೆ, ಅದೊ ಕೇಳಿ,
ಲೋಕ ಲೋಕಕೆ ಮಿಂಚೆ ಮೋದರೋಮಾಂಚನ!
ಶ್ರೀವಿನೋಬರ ಪಾದಯಾತ್ರೆಯ ಧವಳಧೂಳಿ
ದೇವಚಕ್ಷುಗಳನುನ್ಮೀಲಿಸಿದೆ-ಜ್ಞಾನಾಂಜನ!

ಅಂದು ದುಷ್ಟವ್ಯಾಧ ವಾಲ್ಮೀಕಿಯಾಗಿ
ಮತ್ತೆ ಅಂಗುಲಿಮಾಲ ಭಿಕ್ಷುವಾಗಿ
ದಾರಿತೋರಿದರು ಸತ್ಯಯುಗಕೆ,
ಹೆಗಲನಿತ್ತರು ಧರ್ಮನೊಗಕೆ,
ಕಣ್ಣಾದರಯ್ ಕುರುಡು ಜಗಕ!
ಆ ಪವಾಡವನಿಂದು ಮತ್ತೆ
ಕಂಡ ಹಿಗ್ಗಿಗೆ... ಅತ್ತೆ!
ಹೇಳು, ಮಗುವೆ,
ಇದು ಕಲಿಯ ಯುಗವೆ?"
ವಾಲ್ಮೀಕಿ ಅಂಗುಲಿಮಾಲ ಮೊದಲಾದ ದುಷ್ಟರು, ತಪಃಪ್ರಭಾವದಿಂದ ಸತ್ಯ ಧರ್ಮದ ತೇರನೆಳೆಯಲು ಹೆಗಲು ಕೊಟ್ಟರು, ಪವಾಡವನ್ನೇ ಮೆರೆದರು. ಅಂತಹ ಪವಾಡ ಇಂದು ನಮ್ಮ ಕಣ್ಣೆದುರೇ ವಿನೋಬಾಜಿಯವರಿಂದ ನೆಡೆಯುತ್ತಿದೆ. ಅದನ್ನು ಕಂಡ ಕವಿ ರೋಮಾಂಚಿತರಾಗಿದ್ದಾರೆ;ಕಣ್ಣೀರುಗರೆದಿದ್ದಾರೆ! ದೇವರಿಲ್ಲದ ವಿಗ್ರಹಗಳನ್ನು (ಬರಿ ಶಿಲುಬೆ ಕ್ರಿಸ್ತನೆಲ್ಲಿ?) ಪೂಜಿಸುತ್ತಾ, ನೋಡುತ್ತಾ, ಪ್ರಾರ್ಥಿಸುತ್ತಾ ಕುಳಿತಿರುವ ಮಂದಮತಿಗಳು ದೇವರನ್ನು ಕಾಣಬೇಕಾಗಿರುವುದು ಇಲ್ಲಿಒ, ವಿನೋಬಾರಲ್ಲಿ ಎಂಬುದು ಕವಿಯ ಆಶಯ. ಕೃಶಕಾಯರಾಗಿದ್ದ ವಿನೋಬಾಜಿಯವರ ಚಿತ್ರಣ ಕ್ರಿಸ್ತನನ್ನು ನೆನಪಿಸುತ್ತದೆ. ದಯೆ ಪ್ರೇಮ ತ್ಯಾಗ ಮೊದಲಾದವುಗಳಲ್ಲಿ ವಿನೋಬಾ ಅವರು ನಿಜವಾದ ದೇವಮಾನವ!
ಈ ಕವಿತೆ ಬರೆಯುವ ನಾಲ್ಕು ದಿನಗಳ ಮೊದಲೇ ಈ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು ಎಂಬುದು 'ಮಹತ್ತರ ಸುದ್ದಿ' ಎಂಬ ಕವಿತೆಯಿಂದ ಸ್ಪಷ್ಟವಾಗುತ್ತದೆ. ಈ ಕವಿತೆಯ ವಸ್ತುವೂ ಮೂರು ಮಂದಿ ಡಕಾಯಿತರು ವಿನೋಬಾಜಿಯವರಿಗೆ ಶರಣಾದುದೇ ಆಗಿದೆ! 19.5.1960ರಂದು ರಚಿತವಾಗಿರುವ ಈ ಕವಿತೆಯಲ್ಲಿ ಪತ್ರಿಕೆಗಳ ಹೆಡ್ ಲೈನ್ ರಾಜಕಾರಣವನ್ನು ಕಂಡು ಕವಿ ಕಕ್ಕಾವಿಕ್ಕಿಯಾಗುತ್ತಾರೆ. (ಹೆಡ್ ಲೈನ್ ರಾಜಕಾರಣ ಇಂದಿಗೂ ಬದಲಾಗಿಲ್ಲ ಎಂಬುದು ಮಾತ್ರ ಕುಚೋದ್ಯವಲ್ಲ!) ಕವಿತೆ ಹೀಗಿದೆ:
ಇತ್ತ
ಡಕಾಯಿತರು ಮೂರು ಮಂದಿ
ಬಂದು ವಿನೋಬರ ಪ್ರಾರ್ಥನಾ ಸಭೆಗೆ
ಅವರ ಕಾಲುಮುಟ್ಟಿ ನಮಿಸಿ
ಶರಣಾದರಂತೆ!
ಪತ್ರಿಕೆಗಳು ಚಿಕ್ಕಕ್ಕರದಲಿ ಹ್ರಸ್ವವಾಗಿ ಮುದ್ರಿಸಿವೆ,
ಒಂದು ಮೂಲೆಯಲ್ಲಿ!

ಅತ್ತ
ಕ್ರುಶ್ಚೇವ್, ಐಕ್, ಮ್ಯಾಕ್ಮಿಲನ್, ಡಿಗಾಲ್
ಭಿನ್ನಾಭಿಪ್ರಾಯದಾ ಇಕ್ಕುಳಕೆ ಸಿಕ್ಕಿ
ಪ್ಯಾರಿಸ್ಸಿನ ಶೃಂಗಸಭೆ ವಿಫಲವಾಯಿತಂತೆ!
ಪತ್ರಿಕೆಗಳೆಲ್ಲ ದಪ್ಪಕ್ಕರದಲಿ ದೀರ್ಘವಾಗಿ
ವರದಿ ಮಾಡಿರುವ ಪ್ರಮುಖ ಸುದ್ದಿ!

ಕವಿಗೆ ಕಕ್ಕಾವಿಕ್ಕಿ:
ಯಾವುದು ಮಹತ್ತರ?...
ಅರ್ಥವಿಲ್ಲದ ಪ್ರಶ್ನೆಗೆ 
ಸುಮ್ಮನಿರುವುದೆ ಉತ್ತರ!

Thursday, May 12, 2011

ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು

ನಾನು ಚಿಕ್ಕವನಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಬೇಂದ್ರೆಯವರ ’ನೀ ಹೀಂಗ ನೋಡಬ್ಯಾಡ ನನ್ನ’ ಎಂಬ ಹಾಡನ್ನು ಅದೊಂದು ಪ್ರೇಮಗೀತೆ ಎನ್ನವಂತೆ ಭಾವಿಸಿದ್ದೆ. ಆಗಿನ್ನೂ ನನಗೆ ಇಡೀ ಕವಿತೆಯ ಪಾಠವನ್ನು ಗಮನಿಸುವ ವ್ಯವಧಾನವೂ ಇರಲಿಲ್ಲ. ಓದಿಯೂ ಇರಲಿಲ್ಲ. ನಂತರ ಆ ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ, ಪೂರ್ಣಪಾಠ ಮೊದಲಾದವುಗಳು ದೊರೆತ ಮೇಲೆ ಅದು ನನಗೆ ದಕ್ಕಿದ, ತಟ್ಟಿದ ರೀತಿಯೇ ಬೇರೆ!
ಇದನ್ನು ಏಕೆ ಹೇಳಿದೆನೆಂದರೆ, ಒಂದು ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ ಗೊತ್ತಿದ್ದಾಗ ಆ ಕವಿತೆ ನಮ್ಮ ಮೇಲೆ ಬೀರುವ ಪ್ರಭಾವವೇ ಬೇರೆ. ಏನೂ ಗೊತ್ತಿಲ್ಲದೆ ಒಂದು ಕವಿತೆಯನ್ನು ಓದಿದಾಗ ಆಗುವ ಪರಿಣಾಮವೇ ಬೇರೆ. ಅದು ಹುಟ್ಟಿದ ಸಂದರ್ಭವು ಗೊತ್ತಿರದ ಓದುಗನ ಮೇಲೆ ತೀವ್ರತರವಾದ ಬೇರೆ ಬೇರೆಯದೇ ಆದ ಪರಿಣಾಮವನ್ನು ಕವಿತೆ ಉಂಟು ಮಾಡುತ್ತದೆ, ನಿಜ. ಆದರೆ ಕವಿತೆ ಹುಟ್ಟಿದ ಸಂದರ್ಭ ಗೊತ್ತಿದ್ದಾಗ ಅದಕ್ಕೊಂದು ಹೆಚ್ಚುವರಿ ಸೊಬಗು ಇರುತ್ತದೆ ಎಂಬುದು ನಿಜ. ಅದಕ್ಕಿಂತ ಹೆಚ್ಚಾಗಿ ಆ ಕವಿತೆ ನಮ್ಮನ್ನು ತಡೆಹಿಡಿದು, ನಿಲ್ಲಿಸಿ, ಓದಿಸಿಕೊಳ್ಳುತ್ತದೆ. ಜೊತೆಗೆ ಚಾರಿತ್ರಿಕವಾಗಿ ಕವಿತೆಗೆ ಹೆಚ್ಚಿನ ಮಹತ್ವ ದೊರೆಯುತ್ತದೆ.
ಒಂದು ಕಲಾಕೃತಿ ಹೆಚ್ಚು ಪರಿಣಾಮಕಾರಿಯಾಗಲು ಚಾರಿತ್ರಿಕ ಅಂಶಗಳು ಕೆಲಸ ಮಾಡುತ್ತವೆ. ತೇಜಸ್ವಿ ತಮ್ಮ ’ವಿಮರ್ಶೆಯ ವಿಮರ್ಶೆ’ ಪುಸ್ತಕದಲ್ಲಿ ಒಂದು ಕಡೆ ಇದರ ಮಹತ್ವವನ್ನು ದಾಖಲಿಸಿದ್ದಾರೆ. ಅಬಚೂರಿನ ಪೋಸ್ಟಾಫೀಸು ಕಥಾಸಂಕನದಲ್ಲಿರುವ ’ಅವನತಿ’ ಮತ್ತು ’ತಬರನ ಕಥೆ’ ಎರಡು ಕಥೆಗಳಲ್ಲಿ ’ಅವನತಿ’ ಕಲಾತ್ಮಕವಾಗಿ ಶ್ರೇಷ್ಟಕೃತಿ. ಆದರೆ, ಚಾರಿತ್ರಿಕ ಸಂದರ್ಭಗಳಿಂದ ’ತಬರನ ಕಥೆ’ಗೆ ಹೆಚ್ಚು ಪ್ರಚಾರ, ಯಶಸ್ಸು ದೊರೆಯಿತು.
ನಾನು ಬಿ.ಎಸ್ಸಿ.ಯಲ್ಲಿದ್ದಾಗ, ನಮಗೆ ಕನ್ನಡ ಪಾಠ ಮಾಡುತ್ತಿದ್ದ ಟಿ.ಕೆ.ಶಿವಣ್ಣ ಎಂಬುವವರು, ಕೆ.ಎಸ್.ನರಸಿಂಹಸ್ವಾಮಿಯವರ ’ತುಂಗಭದ್ರೆ ಹೊಳೆಯಲ್ಲ, ಇವಳು ವರ್ಷದ ಮಗಳು’ ಕವಿತೆ ಪಾಠ ಮಾಡುವಾಗ ಸಾಂದರ್ಭಿಕವಾಗಿ, ಹೆಚ್ಚಿನ ಕವಿಗಳು ಹೆಣ್ಣುಮಗುವಿನ ಬಗ್ಗೆಯೇ ಕವಿತೆ ಬರೆಯುತ್ತಾರೆ. ಗಂಡು ಮಗುವಿನ ಬಗ್ಗೆ ಕವಿತೆ ಬರೆದಿರುವುದು ಕಡಿಮೆ. ಗಂಡುಮಗುವಿನ ವಿಷಯ ಬಂದಾಗ ಒಂದು ಸಾಲಿನಲ್ಲಿ ಮುಗಿಸಿಬಿಡುತ್ತಾರೆ. ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ’ಏಕಳುವೆ, ತೇಜಸ್ವಿ?’ ಎಂದು ಗಂಡುಮಗುವಿನ ಬಗ್ಗೆ ಒಂದೇ ಸಾಲು ಬರೆದಿದ್ದಾರೆ. ರಾಮಾಯಣದರ್ಶನಂ ಕಾವ್ಯದ ಹೊಸ ಸಂಚಿಕೆ ಬರವಣಿಗೆಯನ್ನು ಪ್ರಾರಂಭಿಸಲು ಕುಳಿತಿದ್ದ ಕವಿಗೆ ಹೇಗೆ ಪ್ರಾರಂಭ ಮಾಡಬೇಕೆಂದು ಎಷ್ಟು ಹೊತ್ತಾದರೂ ತೋಚಲೇ ಇಲ್ಲ. ತೊಟ್ಟಿಲಲ್ಲಿದ್ದ ಮಗು ತೇಜಸ್ವಿಯ ಅಳು ಜೋರಾಗಿ ಕೇಳಿಸಿತು. ಅತ್ತ ಅವರ ಹೆಂಡತಿ ಮಗುವಿನ ಅಳು ನಿಲ್ಲಿಸಲು ಯತ್ನಿಸುತ್ತಿದ್ದರೆ, ಇತ್ತ ಕವಿ ’ಏಕಳುವೆ, ತೇಜಸ್ವಿ? ಕಲ್ಪನೆಯೆರಂಕೆಯಂ ಏರಿ ಬಾ ನನ್ನೊಡನೆ’ ಎಂದು ಸಂಚಿಕೆಯ ಬರವಣಿಗೆಯನ್ನು ಪ್ರಾರಂಭಿಸಿಬಿಡುತ್ತಾರೆ. ಹೀಗೆ ಹಲವಾರು ಘಟನೆಗಳನ್ನು ಸ್ವಾರಸ್ಯಕರವಾಗಿ ಹೇಳಿದ್ದರು. ಅದುವರೆಗೆ ರಾಮಾಯಣದರ್ಶನಂ ಹೆಸರು ಮಾತ್ರ ಕೇಳಿದ್ದ ನನಗೆ ಮೇಲಿನ ಘಟನೆಯನ್ನು ಕೇಳಿದ ಮೇಲೆ ಆ ಕಾವ್ಯವನ್ನು ಓದಬೇಕು, ಅದರಲ್ಲಿ ಈ ಸಂದರ್ಭ ಬರುವ ಭಾಗವನ್ನು ಓದಬೇಕು ಎಂಬ ಒತ್ತಡ ಹೆಚ್ಚಾಯಿತು. ಹೇಗೋ ಕಾವ್ಯವನ್ನು ಸಂಪಾದಿಸಿ ಹುಡುಕಿ ಆ ಭಾಗದ ಜೊತೆಗೆ ಬೇರೆ ಬೇರೆ ಭಾಗಗಳನ್ನು ಓದಿದೆ. ಅಂದರೆ ಕಾವ್ಯದ ಸಂದರ್ಭ ನಮ್ಮ ಓದಿಗೂ ಪ್ರೇರಣೆ ಒದಗಿಸಬಲ್ಲದು ಎಂಬುದು ಇದರಿಂದ ವೇದ್ಯವಾಗುತ್ತದೆ.
ಅದಕ್ಕಿಂತ ಹೆಚ್ಚಾಗಿ ಕುವೆಂಪು ಅವರು ನಿತ್ಯದ ಬದುಕಿನಲ್ಲಿ ನಡೆವ ಸಣ್ಣಪುಟ್ಟ ಸಂಗತಿಗಳಿಗೂ ಕೆಲವೊಮ್ಮೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದರು. ’ಮಗಳು ಕಂಡ ಕುವೆಂಪು’ ಕೃತಿಯಲ್ಲಿ ಅಂತಹ ಘಟನೆಗಳು ಹಲವು ದಾಖಲಾಗಿವೆ. ಅಮೆರಿಕಾದಲ್ಲಿ ಕೆನಡಿ ಕೊಲೆಯಾದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದ ಕುವೆಂಪು, ’ಅಮೆರಿಕಾ ಅಮೆರಿಕಾ ಇಂದಾಗಿರುವೆ ನೀ ಲೋಕ ಕಂಟಕ’ ಎಂದು ಪ್ರತಿಕ್ರಿಯಿಸುತ್ತಾರೆ!
ಇನ್ನೊಂದು ಸಂದರ್ಭ ಹೀಗಿದೆ. ಮೈಸೂರಿನ ಸಿ.ಎಫ್.ಟಿ.ಆರ್.ಐ.ನವರು ಮ್ಯಾಕರೋನಿಯನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ. ಅದರಿಂದ ತಯಾರಿಸಿದ ಉಪ್ಪಿಟ್ಟು ತಿಂದ ಕುವೆಂಪು ಅವರು, ’ಮಾನವನಾಗಿ ಹುಟ್ಟಿದ ಮ್ಯಾಲೆ ಏನೇನ್ ತಿಂದೀ? ಜಾಮೂನು, ಜಿಲೇಬಿ, ಮ್ಯಾಕರೋನಿ ಬಾಸುಂದಿ ತಿಂದೀ’ ಎಂದು ಹಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಹುಟ್ಟಿದ ಚುಟುಕಗಳು ಯಾವುದೇ ಸಂಕಲನದಲ್ಲಿ ದಾಖಲಾಗಿಲ್ಲ.
ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಕುವೆಂಪು ಅವರ ಹಲವಾರು ಪ್ರಕಟಿತ ಕವಿತೆಗಳ ಸಂದರ್ಭಗಳು ನನಗೆ ಸಿಕ್ಕಿದ್ದು. ಕುವೆಂಪು ಅವರ ’ನೆನಪಿನದೋಣಿಯಲ್ಲಿ’ ಮತ್ತು ಅವರ ಮಗಳು ತಾರಿಣಿಯವರ ’ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿ ಅವರ ಹಲವಾರು ಕವಿತೆಗಳು ಹುಟ್ಟಿದ ಸಂದರ್ಭಗಳು ದಾಖಲಾಗಿವೆ. ಆ ಸಂದರ್ಭಗಳನ್ನು ಓದಿದಾಗ, ಮತ್ತೊಮ್ಮೆ ಮೂಲ ಕವಿತೆಯನ್ನು ಓದಬೇಕು ಎನ್ನಿಸುತ್ತದೆ. ಆಗ ಮೂಲಕವಿತೆಯ ಸೊಗಸು ಬೇರೆಯದೇ ಆಗಿ ಕಂಡಿದೆ.
ಕುಸಕಾ/2 (ಕುವೆಂಪು ಸಮಗ್ರ ಕಾವ್ಯ ಸಂಪುಟ 2) ಪುಟ 774ರಲ್ಲಿ ನಾಲ್ಕು ಸಾಲಿನ ಶಿಶುಪ್ರಾಸವೊಂದಿದೆ. 'ಇಂದುಕಲೆಗೆ' ಎಂಬುದು ಅದರ ಹೆಸರು. ಕುವೆಂಪು ಅವರ ಮಗಳು ಇಂದುಕಲಾ ತುಂಬಾ ಸಂಕೋಚದವರು. ಮಗುವಾಗಿದ್ದಾಗಲಿಂದಲೂ ಈ ಸಂಕೋಚ ಅವರನ್ನು ಬಿಟ್ಟಿದ್ದಿಲ್ಲವಂತೆ. ಅಮ್ಮ ಏನಾದರೂ ಗದರಿದರೆ, ಮಗು ತಂದೆಯ ರೂಮಿನ ಬಳಿ ಬಂದು, ಬಾಗಿಲ ಪರದೆಯ ಸಂದಿಯಿಂದ ಇಣುಕುತ್ತಾ ನಿಂತುಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ ಕುವೆಂಪು ಅವರು ಹಾಡಿದ್ದು,
ತಿಪ್ಪತಿಪ್ಪ ಹೆಜ್ಜೆ ಇಟ್ಟು!
ಬಂತು ಪುಟ್ಟ ತಂಟೆ!
ತಲೆಯನಿಂತೆ ಇಡುವುದಂತೆ
ಟೆಂಟೊಳರಬನೊಂಟೆ.
ಎಂದು. ಕವನದ ಕೊನೆಯ ಸಾಲು, ಟೆಂಟಿನಿಂದ ಕತ್ತನ್ನು ಮಾತ್ರ ಹೊರ ಚಾಚಿರುವ ಒಂಟೆಯ ಚಿತ್ರ, ಪರದೆಯ ಹಿಂದೆ ನಿಂತು ಕತ್ತನ್ನು ಮಾತ್ರ ಹೊರಹಾಕಿ ನಿಂತಿರುವ ಮಗುವಿನ ಚಿತ್ರವನ್ನು ಸೊಗಸಾಗಿ ಸೂಚಿಸಿದೆ. ಯಾವುದೇ ಪುಟ್ಟ ಮಗು ನಡೆಯುವುದನ್ನು ಕಲಿತು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುವೆಂಪು ಅವರ ಹತ್ತಿರ ಹೋದರೆ, ಅವರು ಇದೇ ಶಿಶುಪ್ರಾಸವನ್ನು ಹಾಡುತ್ತಿದ್ದರಂತೆ!
1-7-1975ರ ದಿನಾಂಕವಿರುವ 'ಆಪತ್ಕಾಲ' ಕವಿತೆ (ಕುಸಕಾ/2 ಪುಟ 312) ಹೀಗಿದೆ.
ಬಾಯ್ಗೆ ಬಟ್ಟೆ ತುರುಕಿ
ಬಿಗಿದು ಕೈಯ ಕಟ್ಟಿದ್ದಾರೆ!
ಗಂಟಲೊತ್ತಿ ಹಿಸುಕಿದ್ದಾರೆ!
ಸತ್ತೆ ಸತ್ತೆ ಅಯ್ಯೋ ಸತ್ತೆ:
ನಾ....ನು....ಪ್ರ....ಜಾ....ಸ....ತ್ತೆ!
ಈ ಕವಿತೆಯನ್ನು ಮೊದಲು ಓದಿದಾಗ ನನಗೇನನ್ನಿಸಿತ್ತು ಎಂಬುದು ಈಗ ನೆನಪಿಲ್ಲ. ಆದರೆ ಇಷ್ಟು ಪುಟ್ಟ ಕವಿತೆ ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿರುವ ರಹಸ್ಯ ಮಾತ್ರ ವಿಸ್ಮಯವಾದುದು. ತುರ್ತು ಪರಿಸ್ಥಿತಿ ದಿನಗಳಲ್ಲಿ ಪತ್ರಿಕಾ, ವಾಕ್ ಸ್ವಾತಂತ್ರದ ಮೇಲೂ ನಿಷೇಧ ಹೇರಲಾಗಿತ್ತು. ತುರ್ತು ಪರಿಸ್ಥಿತಿ ಹೇರಿರುವುದರ ಬಗ್ಗೆ ಕುವೆಂಪು ಅವರಿಗೆ ಅಸಮಾಧಾನವಿತ್ತು. ಅದನ್ನೇ ಈ ಐದು ಸಾಲುಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ.
ಈ ತರದ ಇನ್ನಷ್ಟು ಉದಾಹರಣೆಗಳು ಇವೆ, ಮುಂದಿನ ಭಾಗದಲ್ಲಿ.

Monday, May 02, 2011

ಮಲೆಗಳಲ್ಲಿ ಮದುಮಗಳ ಪ್ರಪಂಚ

’ಏನು ಕಾಫಿಗೆ ಬರುವುದಿಲ್ಲವೆ?’
’ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’
’ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’
ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ,
’ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’
’ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’
ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ’ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.
ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡು ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.
ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ’ಏನು?’ ಎಂದು ಕೇಳಿದಾಗ, ’ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ’ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.
ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ’ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.
(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮದುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸ್ಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!
ಅದನ್ನು ನೋಡಿದ ತಾರಿಣಿಯವರು ’ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’ ಎನ್ನುತ್ತಾರೆ. ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸಧ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ’ ಎನ್ನುತ್ತಾರೆ.
ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ...!?
ಮಲೆಗಳಲ್ಲಿ ಮದುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಆ ಭುವನದ ಭಾಗ್ಯವಲ್ಲವೆ!
ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ಮೊದಲ ಬಾರಿಗೆ ಓದುಗನನ್ನು ಬೆಕ್ಕಸಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಓಂದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ!
ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ಮೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಮೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!
ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲು ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!
ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಅರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮದುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.
ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು

  1. ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
  2. ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
  3. ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
  4. ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕೂಮದದಿಂದ ಎರಡು ಮೈಲಿ)
  5. ಬೆತ್ತದಸರ
  6. ಹುಲಿಕಲ್ಲು
  7. ಹಳೆಮನೆ (ಮೇಗರವಳ್ಳಿಯಿಂದ ಒಂದು ಹರಿದಾರಿ)
  8. ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
  9. ಬೆಟ್ಟಳ್ಳಿ
  10. ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
  11. ಬೆಟ್ಟಳ್ಳಿ ಹೊಲಗೇರಿ
  12. ಅರೆಕಲ್ಲು ಕಾರೇಮೆಟ್ಟು (ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
  13. ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ.        ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
  14. ಕೋಣೂರು
  15. ಭೂತದವನ (ಕೋಣುರು ಮನೆಗೆ ಸೇರಿದ್ದು)
  16. ಹಾಡ್ಯದ ಮಾರಮ್ಮನ ಗುಡಿ
  17. ಹಳೆಪೈಕದ ಯೆಂಕಯ ಮನೆ
  18. ಹೂವಳ್ಳಿ

ಗುತ್ತಿ ಓಡಾಡಿದ ಮಾರ್ಗ

  1. ಸಿಂಬಾವಿ 
  2. ಸೀತೂರುಗುಡ್ಡ 
  3. ಲಕ್ಕುಂದ 
  4. ಮೇಗರವಳ್ಳಿ 
  5. ಬೆತ್ತದಸರ
  6. ಹುಲಿಕಲ್ಲು
  7. ಹಳೆಮನೆ 
  8. ಅರೆಕಲ್ಲು 
  9. ಬೆಟ್ಟಳ್ಳಿ
  10. ಬೆಟ್ಟಳ್ಳಿ ಹಕ್ಕಲು 
  11. ಬೆಟ್ಟಳ್ಳಿ ಹೊಲಗೇರಿ
  12. ಅರೆಕಲ್ಲು ಕಾರೇಮೆಟ್ಟು 
  13. ಕಮ್ಮಾರಸಾಲೆ 
  14. ಕೋಣೂರು ದಾರಿ
  15. ಹುಲಿಕಲ್ಲು
  16. ಬೆತ್ತದ ಸರ
  17. ಲಕ್ಕುಂದ
  18. ಸೀತೂರುಗುಡ್ಡ
  19. ಸಿಂಬಾವಿ ಹೊಲಗೇರಿ
  20. ಸಿಂಬಾವಿ
  21. ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
  22. ಕಾಗಿನಹಳ್ಳಿ
  23. ಹಳೆಮನೆ ಸ್ಮಶಾಣ
  24. ಹಳೆಮನೆ ಹೊಲಗೇರಿ
  25. ಹಳೆಮನೆ ಶಂಕರ ಹಗ್ಗಡೆ ಮನೆ
  26. ಹುಲಿಕಲ್ಲು
  27. ಕೋಣುರು ಮನೆ
  28. ಕೋಣುರು ಐತನ ಬಿಡಾರ
  29. ಹುಲಿಕಲ್ಲು
  30. ಹೂವಳ್ಳಿ ಮನೆಯ ಹತ್ತಿರದವರೆಗೆ
  31. ಹುಲಿಕಲ್ಲು
  32. ತೀರ್ಥಹಳ್ಳಿ
  33. ತುಂಗಾನದಿ ದೋಣಿ ಗಿಂಡಿ
  34. ಕಾನೂರು

ಇತರೆ ಸ್ಥಳಗಳು

  1. ದೇವಂಗಿ
  2. ತೀರ್ಥಹಳ್ಳಿ ದೋಣಿಗಿಂಡಿ
  3. ಮಂಡಗದ್ದೆ
  4. ತೂದೂರು
  5. ಸಿದ್ಧರಮಠ
  6. ಸಿಂಧುವಳ್ಳಿ

ಕಾದಂಬರಿಯ ಹೊರ ವ್ಯಾಪ್ತಿಯಲ್ಲಿ ಪ್ರಸ್ತಾಪವಾಗುವ ಊರು/ನಗರ/ದೇಶಗಳು

  1. ಮೈಸೂರು
  2. ನಗರ
  3. ಕೆಳದಿ
  4. ಇಕ್ಕೇರಿ
  5. ಕೌಲೆದುರ್ಗ
  6. ತೀರ್ಥಹಳ್ಳಿ
  7. ಶಿವಮೊಗ್ಗ
  8. ಹೊನ್ನಾಳಿ
  9. ಉಡುಪಿ
  10. ಧರ್ಮಸ್ಥಳ
  11. ಶೃಂಗೇರಿ
  12. ಅಮೆರಿಕಾ
  13. ಚಿಕಾಗೋ
  14. ಕಲ್ಕತ್ತಾ
  15. ವರಾಹನಗರ
  16. ಕಾಶಿಪುರ
  17. ಸ್ವಾಮಿವಿವೇಕಾನಂದರು ಭಾಗವಹಿಸಿದ್ದ ಸರ್ವಧರ್ಮ ಸಮ್ಮೇಳನ ೧೧-೯-೧೮೯೩

ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಜಾತಿ/ಪಂಗಡಗಳು

  1. ಗೌಡರು
  2. ಹಸಲರು
  3. ಬಿಲ್ಲವರು
  4. ಸೆಟ್ಟರು
  5. ಕರಾದಿಗರು
  6. ಬೇಲರು
  7. ಹೊಲೆಯರು
  8. ದೀವರು
  9. ಗೋಸಾಯಿಗಳು 
  10. ಹಳೆಪೈಕದವರು

ಕಾದಂಬರಿಯ ಮುಖ್ಯಪಾತ್ರಗಳಲ್ಲದೆ ಪ್ರಸ್ತಾಪವಾಗುವ ಜನಸಮೂಹ

  1. ತೀರ್ಥಹಳ್ಳಿ ಆಗುಂಬೆ ಮುಖಾಂತರ ಓಡಾಡುವ ವ್ಯಾಪರಿಗಳು 
  2. ಸೇರೆಗಾರರು
  3. ಕೂಲಿಯಾಳುಗಳು
  4. ಗಂಧದ ಮರ ಕಡಿದು ಮಾರುವ ಗುಪ್ತ ದಳ್ಳಾಳಿಗಳು.

ಮುಖ್ಯ ಊರುಗಳು ಹಾಗೂ ವ್ಯಕ್ತಿಗಳು
ಸಿಂಬಾವಿ

  1. ಭರಮೈ ಹೆಗ್ಗಡೆ : ಸಿಂಬಾವಿ ಮನೆಯ ಯಜಮಾನ
  2. ದುಗ್ಗಣ್ಣಹೆಗ್ಗಡೆ : ಭರಮೈ ಹೆಗ್ಗಡೆಯ ದಿವಂಗತ ತಂದೆ
  3. ಜಟ್ಟಮ್ಮ : ಭರಮೈ ಹೆಗ್ಗಡೆಯ ಹೆಂಡತಿ, ಹಳೇಮನೆ ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗಳು, ಶಂಕರಹೆಗ್ಗಡೆಯವರ ತಂಗಿ
  4. ಲಕ್ಕಮ್ಮ : ಭರಮೈ ಹೆಗ್ಗಡೆಯವರ ತಂಗಿ. ಮದುವೆಯಾಗಬೇಕಾಗಿದೆ. ಹಳೇಮನೆ ದೊಡ್ಡಹೆಗ್ಗಡೆಯವರ ಕಿರಿಯಮಗ ತಿಮ್ಮಪ್ಪಹೆಗ್ಗಡೆಗೆ ಕೊಡುವ ಮಾತಿದೆ
  5. ಮರಾಟಿ ಮಂಜ : ಅಡುಗೆಯವನು
  6. ದೊಳ್ಳ : ಮನೆಗೆಲಸದವನು
  7. ಬುಲ್ಡ : ಹಳೆಪೈಕರವನು. ಭರಮೈಹೆಗ್ಗಡೆಗೆ ಹೆಂಡ ತಂದುಕೊಡುವವನು
  8. ಗುತ್ತಿ : ಭರಮೈ ಹೆಗ್ಗಡೆಯ ನೆಚ್ಚಿನ ಆಳು. ಹೊಲೆಯರವನು
  9. ಹುಲಿಯ : ಗುತ್ತಿಯ ನಾಯಿ
  10. ಕರಿಸಿದ್ಧ : ಗುತ್ತಿಯ ಅಪ್ಪ
  11. ಗಿಡ್ಡಿ : ಗುತ್ತಿಯ ಅವ್ವ, ಬೆಟ್ಟಳ್ಳಿ ದೊಡ್ಡಬೀರನ ತಂಗಿ.
  12. ? : ಹೊಲೇರ ಕುರುದೆ (ಹುಡುಗಿ)
  13. ? : ಹೊಲೇರ ಕುರುದೆ (ಹುಡುಗಿಯ ಅಣ್ಣ)

ಲಕ್ಕುಂದ ಹಳೇಪೈಕರ ಹಟ್ಟಿ

  1. ಸೇಸನಾಯ್ಕ : ಲಕ್ಕುಂದದ ಹಿರಿಯ, ಸೀತೂರು ತಿಮ್ಮನಾಯ್ಕರ ನೆಂಟಭಾವ
  2. ಹಮೀರನಾಯ್ಕ : ಸೇಸನಾಯ್ಕನ ಮಗ
  3. ಪುಟ್ಟನಾಯ್ಕ : ಸೇಸನಾಯ್ಕನ ತಮ್ಮ
  4. ಕಾಡಿ : ಪುಟ್ಟನಾಯ್ಕನ ಅತ್ತೆ (ಮಗಳು ಸತ್ತರೂ ಅಳಿಯನ ಮನೆಯಲ್ಲೇ ಉಳಿದಿದ್ದಾಳೆ. ಆಗ ಬಸುರಾಗಿ, ಬಸಿರು ಇಳಿಸಿಕೊಂಡ ಅಪವಾದ ಇದೆ)
  5. ರಂಗ : ಪುಟ್ಟನಾಯ್ಕನ ನೆರೆಮನೆಯವ
  6. ಚೌಡಿ : ರಂಗನ ಹೆಂಡತಿ
  7. ? : ರಂಗನ ತಾಯಿ

ಸೀತೂರು

  1. ತಿಮ್ಮನಾಯ್ಕ : ಸೀತೂರು ಸೀಮೆಯ ಹಳೇಪೈಕರ ಮುಖಂಡ, ಲಕ್ಕುಂದದ ಸೇಸನಾಯ್ಕನ ನೆಂಟಭಾವ
  2. ? : ತಿಮ್ಮನಾಯ್ಕರ ಮಗಳು

ಮೇಗರವಳ್ಳಿ

  1. ಕಣ್ಣಾಪಂಡಿತ : ಮಲೆಯಾಳಿ ನಾಟಿ ವೈದ್ಯ, 
  2. ಅಂತಕ್ಕ : ಸೆಟ್ಟಿಗಿತ್ತಿ, ಘಟ್ಟದ ಕೆಳಗಿನಿಂದ ಬಂದು ನೆಲೆನಿಂತವಳು
  3. ಸುಬ್ಬಯ್ಯಸೆಟ್ಟಿ : ಅಂತಕಸೆಟ್ಟಿಗಿತ್ತಿಯ ದವಂಗತ ಪತಿ. ಹಳೆಮನೆಯ ವಕ್ಕಲಾಗಿದ್ದವನು
  4. ಕಾವೇರಿ : ಅಂತಕ್ಕನ ಮಗಳು 
  5. ಕೊರಗಹುಡುಗ : ಅಂತಕಸೆಟ್ಟಿಯ ಮನೆಯ ಆಳು
  6. ಕಿಟ್ಟಯ್ಯ : ಅಂತಕ್ಕನ ಅಳಿಯನಾಗಲು ಬಂದವನು
  7. ಕಾಮತರು : ಮೇಗರವಳ್ಳಿಯ ಕೆಳಪೇಟೆಯಲ್ಲಿ ದಿನಸಿಮಳಿಗೆಯಿಟ್ಟುಕೊಂಡಿದ್ದವರು
  8. ಭಟ್ಟರು : ಮೇಗರವಳ್ಳಿಯ ಕೆಳಬೀದಿಯಲ್ಲಿ ಜವಳಿ ಅಂಗಡಿಯಿಟ್ಟುಕೊಂಡಿದ್ದವರು
  9. ಕರಿಮೀನು ಸಾಬಿ : ಮಾಪಿಳ್ಳೆ. ಮೂಲ ಹೆಸರು ಕರೀಂ ಸಾಬಿ. ಮೇಗರವಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ.
  10. ಪುಡಿಸಾಬಿ : ಕರಿಮೀನು ಸಾಬಿಯ ತಮ್ಮ
  11. ಅಜ್ಜಿಸಾಬು : ಅಜೀಜ್ ಮೂಲ ಹೆಸರು. ಚರ್ಮದ ವ್ಯಾಪಾರಿ, ಕರ‍್ಮೀನು ಸಾಬರ ಕಡೆಯವನು. ಹೊನ್ನಾಳಿ ಹೊಡ್ತ ಹೊಡೆಯುವವನು
  12. ಲುಂಗೀಸಾಬು : ಮೂಲ ಹೆಸರು ಬುಡನ್, ಹೊನ್ನಾಳಿ ಹೊಡ್ತ ಹೊಡೆಯುವವನು
  13. ಇಜಾರದಸಾಬು : ಹೊನ್ನಾಳಿ ಹೊಡ್ತ ಹೊಡೆಯುವವನು

ಹಳೆಮನೆ

  1. ಸುಬ್ಬಣ್ಣ ಹೆಗ್ಗಡೆ : ಹಳೆಮನೆಯ ಯಜಮಾನ, ಮನೆಗೆ ಸೋಗೆ ಹೊದೆಸಿರುವುದರಿಂದ ಸೋಗೆಮನೆಯವರು ಎನ್ನುತ್ತಾರೆ
  2. ? : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಹೆಂಡತಿ
  3. ತಿಮ್ಮಪ್ಪಹೆಗ್ಗಡೆ : ಸುಬ್ಬಣ್ಣ ಹೆಗ್ಗಡೆಯ ಕಿರಿಮಗ
  4. ಮಂಜಮ್ಮ : ಬುಚ್ಚಿ ಎಂಬುದು ಅವಳ ಇನ್ನೊಂದು ಹೆಸರು. ಸುಬ್ಬಣ್ಣ ಹೆಗ್ಗಡೆಯ ಮಗಳು (ಸಿಂಬಾವಿ ಭರಮೈಹೆಗ್ಗಡೆಯವರಿಗೆ ಎರಡನೇ ಹೆಂಡತಿಯಾಗಿ ಮದುವೆಯಾಗುವ ಪ್ರಸ್ತಾಪವಿದೆ)
  5. ದೊಡ್ಡಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ಹಿರಿಯಮಗ (ತಿರುಪತಿಗೆ ಹೋದವರು ತಿರುಗಿಬಂದಿಲ್ಲ)
  6. ರಂಗಮ್ಮ : ದೊಡ್ಡಣ್ಣಹೆಗ್ಗಡೆಯ ಹೆಂಡತಿ, ಕೋಣೂರು ಮನೆಯ ಕಾಗಿನಹಳ್ಳಿ ಅಮ್ಮನ ಮೊದಲನೇ ಮಗಳು, ರಂಗಪ್ಪಗೌಡರ ತಂಗಿ, ಮುಕುಂದಯ್ಯನ ಅಕ್ಕ (ಗಂಡ ಕಾಣೆಯಾಗಿರುವುದರಿಂದ ಮಾನಸಿಕವಾಗಿ ನೊಂದಿದ್ದಾಳೆ. ಜನ ಅವಳನ್ನು ಹುಚ್ಚುಹೆಗ್ಗಡತಿ ಎಂದೂ ಕರೆಯುತ್ತಾರೆ)
  7. ಧರ‍್ಮು : ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮನ ಮಗ. ಕೋಣೂರಿನ ಮಾವನ ಮನೆಯಲ್ಲಿರುವ ಐಗಳ ಶಾಲೆಯಲ್ಲಿ ಕಲಿಯುತ್ತಿದ್ದಾನೆ
  8. ಹಳೇಪೈಕದ ಹೂವಿ : ಸುಬ್ಬಣ್ಣಹೆಗ್ಗಡೆಯ ಮನೆಗೆಲಸದವಳು
  9. ದುಗ್ಗಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ
  10. ಶಂಕರಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗ, ಆಸ್ತಿ ಪಾಲಾಗಿ ಬೇರೆಯಿದ್ದಾನೆ. ಮನೆಗೆ ಹೆಂಚು ಹಾಕಿಸಿದ್ದರಿಂದ ಹೆಂಚಿನಮನೆಯವರು ಎನ್ನುತ್ತಾರೆ
  11. ಸೀತಮ್ಮ : ಶಂಕರಹೆಗ್ಗಡೆಯ ಹೆಂಡತಿ
  12. ರಾಮು : ಶಂಕರಹೆಗ್ಗಡೆಯ ಆರುವರ್ಷದ ಮಗ
  13. ? : ಶಂಕರಹೆಗ್ಗಡೆಯ ಮಗಳು ತೊಟ್ಟಿಲ ಕೂಸು
  14. ಕೆಂಪಿ : ಬಾಲೆಯಾಡಿಸುವವಳು, ಶಂಕರಹೆಗ್ಗಡೆಯ ಮನೆಯಲ್ಲಿರುತ್ತಾಳೆ

ಹಳೆಮನೆ ಹೊಲಗೇರಿ
ಹಳೆಮನೆ ಪಾಲಾದ ಮೇಲೆ ಸುಬ್ಬಣ್ಣಹೆಗ್ಗಡೆಯವರ ಕಡೆಗೆ ಬಂದ ಆಳುಗಳು

  1. ಮಂಜ
  2. ಸಿದ್ದಿ : ಮಂಜನ ಹೆಂಡತಿ
  3. ತಿಮ್ಮ
  4. ಗಿಡ್ಡಿ : ತಿಮ್ಮನ ಹೆಂಡತಿ
  5. ಸಣ್ಣ : ಹೊಲಗೇರಿಯ ಮುಖಂಡ, ಕುಳವಾಡಿ
  6. ಪುಟ್ಟಿ : ಸಣ್ಣನ ಮಗಳು. ಮೈನೆರೆದು ನಾಲ್ಕು ವರ‍್ಷವಾದರೂ ಮದುವೆಯಾಗಿಲ್ಲ
  7. ಗಂಗ : ಸಣ್ಣನ ರೋಗಿಷ್ಟ ಮಗ
  8. ಬೈರ : ಹಳೆಮನೆ ದನಕಾಯುವ ಆಳು
  9. ? : ಬೈರನ ದಿವಂಗತ ಹೆಂಡತಿ 
  10. ಮಂಜ
  11. ಸಿದ್ದ
  12. ಕರಿಸಿದ್ದ
  13. ಸಣ್ಣತಿಮ್ಮ

ಶಂಕರಹೆಗ್ಗಡೆಯವರ ಪಾಲಿಗೆ ಬಂದ ಆಳುಗಳು

  1. ಬಚ್ಚ
  2. ಪುಟ್ಟ

ಬೆಟ್ಟಳ್ಳಿ

  1. ಕಲ್ಲಯ್ಯಗೌಡರು : ಬೆಟ್ಟಳ್ಳಿ ಮನೆಯ ಯಜಮಾನ
  2. ದೊಡ್ಡಮ್ಮ ಹೆಗ್ಗಡತಿ : ಕಲ್ಲಯ್ಯಗೌಡರ ಹೆಂಡತಿ
  3. ದೇವಯ್ಯಗೌಡ : ಕಲ್ಲಯ್ಯಗೌಡರ ಹಿರಿಯ ಮಗ. ಕೋಣೂರು ಮನೆಯ ಅಳಿಯ. ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳ ಗಂಡ. ಕೋಣೂರು ರಂಗಪ್ಪಗೌಡರು ಮತ್ತು ಮುಕುಂದಯ್ಯನ ಭಾವ
  4. ? : ದೇವಯ್ಯಗೌಡರ ಹೆಂಡತಿ, ಕೋಣೂರಿನ ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳು
  5. ಕಾಡು : ಕಲ್ಲಯ್ಯಗೌಡರ ಕಿರಿಯ ಮಗ. ಕೋಣೂರಿನ ಮನೆಯ ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
  6. ಸುಬ್ಬಣ್ಣಸೆಟ್ಟಿ : ಬೆಟ್ಟಳ್ಳಿ ಮನೆಯ ಸೇರೆಗಾರ
  7. ಚೆಲುವಯ್ಯ : ದೇವಯ್ಯಗೌಡರ ಮಗ. ತೊಟ್ಟಲಕೂಸು
  8. ಸೆಟ್ಟಿಯಾಳು : ಬೆಟ್ಟಳ್ಳಿ ಮನೆಗೆಲಸದವನು
  9. ? : ಬಾಲೆಯಾಡಿಸುವ ಹುಡುಗಿ

ಬೆಟ್ಟಳ್ಳಿ ಹೊಲಗೇರಿ

  1. ದೊಡ್ಡಬೀರ : ಬೆಟ್ಟಳ್ಳಿ ಹೊಲಗೇರಿಯ ಹಿರಿಯ, ತಳವಾರ.
  2. ಸೇಸಿ : ದೊಡ್ಡಬೀರನ ಹೆಂಡತಿ. ಗುತ್ತಿಯ ತಂದೆ ಕರಿಸಿದ್ದನ ತಂಗಿ, ಗುತ್ತಿಯ ಸೋದರತ್ತೆ
  3. ತಿಮ್ಮಿ : ದೊಡ್ಡಬೀರ ಮತ್ತು ಸೇಸಿಯ ಮಗಳು. ಆದರೆ ಕಲ್ಲಯ್ಯಗೌಡರು ತಮ್ಮ ಹಟ್ಟಿಯ ಆಳು ಬಚ್ಚನನ್ನೇ ಮದುವೆಯಾಗಬೇಕೆಂದು ಆಜ್ಞಾಪಿಸಿದ್ದಾರೆ. ಗುತ್ತಿಯ ಮೇಲೆ ಪ್ರೀತಿ. ಕೊನೆಗೆ ಗುತ್ತಿಯ ಜೊತೆಯಲ್ಲಿ ಓಡಿ ಹೋಗುತ್ತಾಳೆ.
  4. ಸಣ್ಣಬೀರ : ದೊಡ್ಡಬೀರನ ಹಿರಿಯ ಮಗ
  5. ಲಕ್ಕಿ : ಸಣ್ಣಬೀರನ ಹೆಂಡತಿ
  6. ಪುಟ್ಟಬೀರ : ದೊಡ್ಡಬೀರನ ಎರಡನೇ ಮಗ
  7. ಚಿಕ್ಕಪುಟ್ಟಿ : ಪುಟ್ಟಬೀರನ ಹೆಂಡತಿ
  8. ಬಚ್ಚ : ಕಲ್ಲಯ್ಯಗೌಡ ಮತ್ತು ದೇವಯ್ಯಗೌಡರ ಬಂಟ. ಹೊಲೆಯನಾದರೂ ಎತ್ತಿನಗಾಡಿ ಹೊಡೆಯುವ ಅವಕಾಶವಿರುತ್ತದೆ.
  9. ? : ಕನ್ನಡ ಜಿಲ್ಲೆಯ ಆಳು. ಸೆಟ್ಟರವನು.

ಕೋಣೂರು

  1. ಕಾಗಿನಹಳ್ಳಿ ಅಮ್ಮ : ಮನೆಯ ಹಿರಿಯರು
  2. ರಂಗಪ್ಪಗೌಡ : ಕಾಗಿನಹಳ್ಳಿ ಅಮ್ಮನ ಹಿರಿಯ ಮಗ. ಮನೆಯ ಯಜಮಾನ
  3. ? : ರಂಗಪ್ಪಗೌಡರ ಹೆಂಡತಿ, ಹಳೆಮನೆ ಸುಬ್ಬಣ್ಣಹೆಗ್ಗಡೆಯ ಹಿರಿಯ ಮಗಳು
  4. ಮುಕುಂದಯ್ಯ : ರಂಗಪ್ಪಗೌಡರ ತಮ್ಮ. ಹೂವಳ್ಳಿ ಚಿನ್ನಮ್ಮನ ಮೇಲೆ ಪ್ರೀತಿ
  5. ತಿಮ್ಮು : ರಂಗಪ್ಪಗೌಡರ ಮಗ. ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
  6. ಅನಂತಯ್ಯ : ಐಗಳು. ಘಟ್ಟದ ಕೆಳಗಿನವರು
  7. ಹಳೇಪೈಕದ ಮುದುಕಿ : ಸೂಲಗಿತ್ತಿ
  8. ???? : ಐಗಳ ಶಾಲೆಯಲ್ಲಿದ್ದ ಇನ್ನೂ ನಾಲ್ಕು ಮಕ್ಕಳು
  9. ಕುದುಕ : ಹಸಲೋರ ಆಳು
  10. ? : ಹಸಲೋರ ಆಳು
  11. ? : ಕುದುಕನ ಹೆಂಡತಿ

ಕೋಣುರು ಮನಗೆ ಸೇರಿದ್ದ ಘಟ್ಟದ ಕೆಳಗಿನ ಬಿಲ್ಲವರ ಆಳುಗಳು

  1. ಚೀಂಕ್ರ : ಸೇರೆಗಾರನೆಂದು ಕರೆದುಕೊಳ್ಳುವ ವ್ಯಕ್ತಿ
  2. ದೇಯಿ : ಚೀಂಕ್ರನ ಹೆಂಡತಿ
  3. ??? : ಚೀಂಕ್ರ-ದೇಯಿಯ ಮೂರು ಮಕ್ಕಳು
  4. ಪಿಜಣ
  5. ಅಕ್ಕಣಿ : ಪಿಜಣನ ಹೆಂಡತಿ
  6. ಐತ
  7. ಪೀಂಚಲು : ಐತನ ಹೆಂಡತಿ
  8. ಮೊಡಂಕಿಲ
  9. ಬಾಗಿ : ಮೊಡಂಕಿಲನ ಹೆಂಡತಿ
  10. ಚಿಕ್ಕಿ

ಹೂವಳ್ಳಿ

  1. ವೆಂಕಟಣ್ಣ : ವೆಂಕಟಪ್ಪನಾಯಕ ಮೂಲಹೆಸರು. ಹಳೆಮನೆ ಸುಬ್ಬಣ್ಣಹೆಗ್ಗಡೆಯವರ ಒಕ್ಕಲು. ಈತನ ಅಜ್ಜನೋ ಮುತ್ತಜ್ಜನೋ ದುರ್ಗದ ಪಾಳೆಗಾರಿಕೆಯ ಕಾಲದಲ್ಲಿ ದಂಡನಾಯಕನಾಗಿದ್ದನು.
  2. ? : ವೆಂಕಟಣ್ಣನ ದಿವಂಗತ ಹೆಂಡತಿ
  3. ಚಿನ್ನಮ್ಮ : ವೆಂಕಟಣ್ಣನ ಮಗಳು. ಮುಕುಂದಯ್ಯನ ಬಗ್ಗೆ ಪ್ರೀತಿ.
  4. ? : ಚಿನ್ನಮ್ಮನನ್ನು ನೋಡಿಕೊಳ್ಳುತ್ತಿರುವ ಅಜ್ಜಿ. ಚಿನ್ನಮ್ಮನ ದಿವಂಗತ ತಾಯಿಯ ತಾಯಿ. ವೆಂಕಟಣ್ಣನ ಅತ್ತೆ.
  5. ಸುಬ್ಬಿ : ಮನೆಯ ಆಳು
  6. ಬೈರ : ಮನೆ ಆಳು
  7. ಬೀರಿ : ಚಿನ್ನಮ್ಮನ ಸಾಕುಬೆಕ್ಕು

ಕಮ್ಮಾರಸಾಲೆ

  1. ಪುಟ್ಟಾಚಾರಿ : ಕಮ್ಮಾರ

ಕಲ್ಲೂರು

  1. ಮಂಜಭಟ್ಟ : ಜೋಯಿಸ, ಸಾಹುಕಾರ
  2. ಕಿಟೈತಾಳ : ಕರಣಿಕ
  3. ನಾರಾಯಣಭಟ್ಟ : ಮಂಜಭಟ್ಟನ ಮಗ
  4. ? : ಕಿಟ್ಟೈತಾಳನ ಹೆಂಡತಿ
  5. ? : ನಾರಾಯಣಭಟ್ಟನ ಹೆಂಡತಿ
  6. ? : ಬೋಳು ಮಡಿ ಹೆಂಗಸು
  7. ? : ಅರ್ಚಕರು
  8. ಗಡ್ಡದಯ್ಯ

ಬಾವಿಕೊಪ್ಪ

  1. ? : ಸಿಂಬಾವಿ ಭರಮೈಹೆಗ್ಗಡೆಯ ದಿವಂಗತ ಆಳು. ನಾಗತ್ತೆ ಎನ್ನುವವಳಿಗೆ ಎರಡನೇ ಗಂಡ
  2. ನಾಗತ್ತೆ : ಸಿಂಬಾವಿ ಹೆಗ್ಗಡೆಯ ದಿವಂಗತ ಆಳಿನ ನಾಲ್ಕನೇ ಹೆಂಡತಿ
  3. ನಾಗಣ್ಣ : ನಾಗತ್ತೆಯ ದಿವಂಗತ ಮಗ
  4. ನಾಗಕ್ಕ : ನಾಗತ್ತೆಯ ಸೊಸೆ

ಹೊಸಕೇರಿ

  1. ಬಸಪ್ಪನಾಯಕರು : ಸಾಹುಕಾರರು. ಚಿನ್ನಮ್ಮನ ತಾಯಿ ವೆಂಕಟಪ್ಪನನ್ನು ಮದುವೆಯಾಗುವ ಮೊದಲು ಬಸಪ್ಪನಾಯಕರು ತಮ್ಮ ಮಗನಿಗೆ ತಂದುಕೊಳ್ಳಲು ಕೇಳಿದ್ದವರು. ಹಳೆಮೆನ ಸುಬ್ಬಣ್ಣಹೆಗ್ಗಡೆಯವರ ಹೆಂಡತಿಯ ಮಾತ್ಸರ‍್ಯದಿಂದಾಗಿ ಅದು ತಪ್ಪಿ ಕೊನೆಗೆ ವೆಂಕಟಣ್ಣನನ್ನು ಮದುವೆಯಾಗಬೇಕಾಯಿತು.

ತೀರ್ಥಹಳ್ಳಿ

  1. ದಾಸಯ್ಯ : ತೀರ್ಥಹಳ್ಳಿಯವನು. ಹಳೇಮನೆ ದೊಡ್ಡಣ್ಣಹೆಗ್ಗಡೆಯವರ ಜೊತೆ ತಿರುಪತಿ ಯಾತ್ರೆಗೆ ಹೋಗಿದ್ದವನು
  2. ಅಣ್ಣಪ್ಪಯ್ಯ : ತೀರ್ಥಹಳ್ಳಿಯಲ್ಲಿ ಕಾಫಿ ಹೋಟೆಲ್ ಇಟ್ಟುಕೊಂಡಿದ್ದವನು 
  3. ಜೀವರತ್ನಯ್ಯ : ಕಿಲಸ್ತರ ಪಾದ್ರಿ. ಶಿವಮೊಗ್ಗದಲ್ಲಿ ನೆಲೆಸಿರುತ್ತಾನೆ
  4. ಜ್ಯೋತಿರ್ಮಣಿಯಮ್ಮ : ಜೀವರತ್ನಯ್ಯನ ಮಗಳು
  5. ಮಾನನಾಯಕ : ದಫೇದಾರ
  6. ಮಯಿಂದಪ್ಪ : ಪೋಲೀಸು
  7. ತಮ್ಮಯ್ಯಣ್ಣ : ಅಂಬಿಗ
  8. ಪೋಲೀಸರು
  9. ಜಮಾದಾರ
  10. ಅಮುಲ್ದಾರರು
  11. ಡಾಕ್ಟರ್
  12. ಹಾರುವರು
  13. ಹೊಳೆ ದಾಟಲು ಬಂದವರು

ಕಾಗಿನಹಳ್ಳಿ

  1. ? : ಕಾಗಿನಹಳ್ಳಿ ಗೌಡರು, ಕೋಣೂರು ದಾನಮ್ಮನವರ ತಮ್ಮ
  2. ? : ಹಳೆಪೈಕದವನು

ಶಿವಮೊಗ್ಗ

  1. ರೆವರೆಂಡ್ ಲೇಕ್‌ಹಿಲ್ : ಹಿರಿಯ ಪಾದ್ರಿ. ಯುರೋಪೇನ್ ಬಿಳಿದೊರೆ

ಮಂಡಗದ್ದೆ

  1. ಮಿಸ್ ಕ್ಯಾಂಬೆಲ್ : ಮಿಷನ್ ಆಸ್ಪತ್ರೆಯ ಲೇಡಿ ಡಾಕ್ಟರ್


ಮಾಕಿಮನೆ

  1. ಈರಣ್ಣ : ಕೊಲೆಯಾಗಿ ಹೋಗಿರುವ ವ್ಯಕ್ತಿ

ಸೀತೆಮನೆ

  1. ಸಿಂಗಪ್ಪಗೌಡರು : ಸೀತೆಮನೆ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ

ಮತ್ತೂರು

  1. ಶಾಮಯ್ಯಗೌಡರು : ಮತ್ತೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ. ಕಾನೂರು ಹೆಗ್ಗಡತಿಯಲ್ಲಿ ಮುತ್ತಳ್ಳಿ ಎಂದಾಗಿದೆ.

ಕಾನೂರು
  1. ಚಂದ್ರಯ್ಯಗೌಡರು : ಕಾನೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಮುಖ್ಯಪಾತ್ರ