Monday, February 11, 2013

ಅಳಿದ ಮೇಲೆ : ನೀವು ಓದದೆ ಇರಬಹುದಾದ ಒಂದು ಕಥೆ!

-ಒಂದು-
ಪಡುವಣ ದಿಗಂತದಲ್ಲಿ ಸಂಜೆಯ ಸೂರ್ಯ ರಕ್ತದೋಕುಳಿಯಲ್ಲಿ ನಿರತನಾಗಿದ್ದ. ನಾನು ನನ್ನ ಎಂದಿನ ಸೋಮಾರಿತನದಿಂದಲೆ ಕಾಂಪೋಂಡಿನ ಮೇಲೆ ಕಾಲು ಚಾಚಿ ಕುಳಿತಿದ್ದೆ. ಮಧ್ಯಾಹ್ನ ಕಿಟ್ಟಿ ಬಂದು ಹೋದ ಮೇಲೆ ನನ್ನ ತಲೆಯೊಳಗೆ ದೊಡ್ಡ ಕೋಲಾಹಲವೆ ನಡೆದಿದೆ. ಎರಡು ವರ್ಷಗಳ ಕಾಲ ನನ್ನಕಡೆಗೆ ತಿರುಗಿ ನೋಡದೇ ಇದ್ದ ಕಿಟ್ಟಿ ಇಂದು ಸಂಜೆ ಮನೆಗೆ ಬರಲು ಒತ್ತಾಯ ಮಾಡಿ ಹೇಳಿ ಹೋಗಿದ್ದ. ಅದೂ ರಾಧ ಮೇಡಂ ಸತ್ತು ಹದಿನೈದು ದಿನಗಳಾದ ಮೇಲೆ. ಮೇಡಂ ಸತ್ತ ಸುದ್ದಿ ಪತ್ರಿಕೆಗಳಲ್ಲು ಒಳ್ಳೆ ಸುದ್ದಿ ಮಾಡಿತ್ತು. ಹಾಗೆ ನೋಡಿದರೆ ರಾಧ ಮೇಡಂ ಸಾಯೊ ವಯಸ್ಸಿನವರೇನು ಅಲ್ಲ. ಸುಮಾರು ಐವತ್ತು-ಐವತ್ತೆರಡು ವರ್ಷ ವಯಸ್ಸಿನ ಆಧುನಿಕ ಮಹಿಳೆ. ಯುನಿವರ್ಸಿಟಿಯಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾಗಿದ್ದಾಕೆ. ಆಕೆಯನ್ನು ಎಂತಹ ಅರಸಿಕ ನೋಡಿದರೂ ಅವರ ವಯಸ್ಸನ್ನು ಮುವತ್ತಕ್ಕಿಂತ ಹೆಚ್ಚಿಗೆ ಹೇಳುವಂತಿಲ್ಲ. ಸುಮಾರು ಒಂದು ವರ್ಷ ಕಾಲ ಹಾಸಿಗೆ ಹಿಡಿದು ಈಗ ಹದಿನೈದು ದಿನಗಳ ಕೆಳಗೆ ಕೊನೆಯುಸಿರೆಳೆದರು. ಅವರ ಬದುಕೊಂದು ಒಗಟಿನ ಸರಮಾಲೆ. ತನ್ನ ಬದುಕಿನ ಸುತ್ತ ಅಭೇದ್ಯವಾದ ಕೋಟೆಯನ್ನೆ ಕಟ್ಟಿಕೊಂಡು ಬಾಳುತ್ತಿದ ಮೇಡಂ, ಯಾವುದೋ ಒಂದು ದುರ್ಬಲ ಗಳಿಗೆಯಲ್ಲಿ ಕಿಟ್ಟಿಗೆ ತಮ್ಮ ಕೋಟೆಯ ಹೆಬ್ಬಾಗಿಲನ್ನೇ ತೆರೆದರು. ಅದೂ ತಮ್ಮ ಐವತ್ತನೆಯ ವಯಸ್ಸಿನಲಿ!
ಕಿಟ್ಟಿ ಮತ್ತು ನಾನು ಐದನೇ ತರಗತಿಯಿಂದಲೂ ಒಟ್ಟಿಗೆ ಓದುತ್ತದ್ದವರು. ಬಿ. ಎ. ಪಾಸಾದ ಮೇಲೆ, ಇಬ್ಬರೂ ಎಂ. ಎ. ನಲ್ಲಿ ಇಂಗ್ಲೀಷ್ ತಗೆದುಕೊಂಡಿದ್ದೆವು. ಅಲ್ಲಿ ನಮಗೆ ಮೊದಲಿಗೆ ರಾಧ ಮೇಡಂ ಪರಿಚಯವಾದಾಗ ಎಲ್ಲ ಲೆಕ್ಚರರಂತೆ ಅವರು ಒಬ್ಬರು ಎಂದುಕೊಂಡಿದ್ದೆವು. ಆದರೆ ಅವರಿಗೆ ಮದುವೆಯೇ ಆಗಿಲ್ಲವೆಂದಾಗ ನಮಗೂ ಅವರ ಬಗ್ಗೆ ಕುತೂಹಲವಿತ್ತು. ಮೇಡಂ ನಮಗೆ ಪೊಯೆಟ್ರಿ ತಗೆದುಕೊಳ್ಳುತ್ತಿದ್ದರು. ಅವರಿಗೆ ಅದರಲ್ಲಿ ಒಳ್ಳೆಯ ಪರಿಶ್ರಮವೂ ಇತ್ತು. ಅವರು ಇಂಗ್ಲೀಷಿನಲ್ಲಿ ಗುರುತಿಸಲ್ಪಟ್ಟ ಕವಯತ್ರಿಯಾಗಿದ್ದರು. ನಾಲ್ಕು ಕವನ ಸಂಕಲನಗಳು ಪ್ರಕಟವಾಗಿದ್ದವು. ಪ್ರಾರಂಭದಲ್ಲಿ ಅವರ ವಿಚಾರಗಳು ಚೂರುಪಾರು ನನ್ನ ಕಿವಿಯ ಮೇಲೂ ಬೀಳುತ್ತಿತ್ತು. ಅವರ ಮೊದಲಿನ ಹೆಸರು ರೋಜಾ ಎಂದಿತ್ತಂತೆ. ಅವರ ತಂದೆ ಈಗ್ಗೆ ಏಳೆಂಟು ವರ್ಷಗಳ ಕೆಳಗೆ ಸಾಯುವವರೆಗೂ ಅವರನ್ನು ರೋಸ್ ಎಂದೇ ಕರೆಯುತ್ತಿದ್ದರಂತೆ. ಆದರೆ ತಂದೆ ಸತ್ತ ಎರಡು ವರ್ಷಗಳ ನಂತರ ಅವರು ತಮ್ಮ ಹೆಸರನ್ನು ರಾಧ ಎಂದು ಬದಲಿಸಿಕೊಂಡರಂತೆ. ಇವುಗಳಲ್ಲಿ ಹೆಚ್ಚಿನ ವಿಚಾರಗಳನ್ನು ನನಗೆ ತಿಳಿಸಿದವನು ಕಿಟ್ಟಿಯೆ. ಅವುಗಳನ್ನು ಎಲ್ಲಿ ಸಂಪಾದಿಸುತ್ತಿದ್ದನೊ ಕಾಣೆ. ಇವುಗಳ ಜೊತೆಗೆ ನಮ್ಮ ಗಮನ ಸೆಳೆದ ಮತ್ತೊಂದು ವಿಚಾರವೆಂದರೆ ಅವರ ಬಹುತೇಕ ಕವಿತೆಗಳ ವಸ್ತು ಮತ್ತು ನಾಯಕ ಕೃಷ್ಣನೇ ಆಗಿದ್ದ ಎನ್ನುವುದು. ಇದಕ್ಕೆ ಪೂರಕವಾಗಿ, ಅವರ ಪಾಠದಲ್ಲಿ ಅಲ್ಲಲ್ಲಿ ಕೃಷ್ಣನ ವಿಚಾರಗಳು, ಮೀರಾ ಗೀತೆಯ ಸಾಲುಗಳು ಮತ್ತು ಜಯದೇವನ ಗೀತಗೋವಿಂದದ ಇಂಗ್ಲೀಷ್ ಅನುವಾದಿತ ಸಾಲುಗಳು ನುಸುಳಿ ಬರುತ್ತಿದ್ದುದು ಸಾಮಾನ್ಯವಾದ ವಿಚಾರವಗಿತ್ತು.
ರೋಜಾ ರಾಧ ಆಗಿದ್ದು ಮತ್ತು ಅವರ ಕೃಷ್ಣಪ್ರೇಮದಂತಹ ವಿಚಾರಗಳು ನನ್ನಲ್ಲಿ ಅವರ ಕವನ ಸಂಕಲನಗಳನ್ನು ಓದಲು ಪ್ರೇರೇಪಿಸಿದ್ದವು. ಅವರಿಂದಲೇ ಅವುಗಳನ್ನು ಪಡೆದು ಓದಿದ್ದೆ. ನಿಜವಾಗಿಯೂ ಅವರ ಕೃಷ್ಣಪ್ರೇಮ ಅಸಾದೃಶ್ಯವಾದುದು. ಬಹುತೇಕ ಕವಿತೆಗಳಲ್ಲಿ ಅವರು ಕೃಷ್ಣನನ್ನು ಬೇಡುತ್ತಿದ್ದರು. ಆತನ ಕಠಿಣತೆಯನ್ನು ಕಂಡು ಅಳುತ್ತಿದ್ದರು. ಆತನ ತುಂಟಾಟವನ್ನು ಕಂಡು ಸಿಟ್ಟಿಗೇಳುತ್ತಿದ್ದರು. ‘ಆತನನ್ನು ಸೇರಲು ತಾನು ತನ್ನ ವೈಕ್ತಿತ್ವವನ್ನೇ ಇಲ್ಲವಾಗಿಸಿಕೊಳ್ಳುತ್ತೇನೆ’ ಎಂದು ಒಂದು ಕವಿತೆಯಲ್ಲಿ ಸಂಕಲ್ಪ ಮಾಡಿದ್ದರೆ, ಇನ್ನೊಂದರಲ್ಲಿ ‘ಹೇ, ಭಗವಾನ್ ನೀನು ನನ್ನ ತಂದೆಯಾದರೆ ನಾನು ನಿನ್ನ ಮಡಿಲಿನ ಮಗುವಗುತ್ತೇನೆ. ಗುರುವಾದರೆ ನಿನ್ನ ಕೈಯಲ್ಲಿನ ಕೊಳಲಾಗುತ್ತೇನೆ ಮತ್ತು ಅದರ ನಾದವಾಗುತ್ತೇನೆ. ನನ್ನ ಪತಿಯಾಗುವದಾದರೆ ನನ್ನದೆಂಬುದನ್ನು ಇಲ್ಲವಾಗಿಸಿಕೊಂಡು ನೀನೇ ಆಗುತ್ತೇನೆ. ನೀನು ನನ್ನ ಮಗುವಾಗುವದಾದರೆ ಯಶೋದೆ ದೇವಕಿಯರೂ ಅಸೂಯೆ ಪಡುವಂತೆ ನಿನ್ನನ್ನು ಸಂತೋಷಪಡಿಸುತ್ತೇನೆ. ಯಾವ ರೂಪದಲ್ಲಾದರೂ ಸರಿಯೆ, ಯಾವ ಅರ್ಥದಲ್ಲಾದರೂ ಸರಿಯೆ ನನಗೆ ನಿನ್ನಲ್ಲಿ ಸ್ತಾನ ಕೊಡು’ ಎಂದು ಆರ್ತಳಾಗಿ ಗೋಗರೆಯುತ್ತಾರೆ. ಅವರ ಪುಸ್ತಕಗಳನ್ನು ಓದಿ ಮುಗಿಸಿದ ನನಗೆ, ಆ ಇಂಗ್ಲೀಷ್ ಪಂಡಿತೆಯ ಕೃಷ್ಣಪ್ರೇಮ ಒಂದು ಬಹು ದೊಡ್ಡ ಅಚ್ಚರಿ. ಆದರೆ ಆ ಸಮಯದಲ್ಲಿ ಕಿಟ್ಟಿಯ ಮನಸ್ಸಿನಲ್ಲಾಗಲಿ ಅಥವಾ ಆತನಿಗಿಂತ ಇಪ್ಪತ್ತೇಳು ವರ್ಷ ದೊಡ್ಡವರಾದ ರಾಧ ಮೇಡಂ ಮನಸ್ಸಿನಲ್ಲಾಗಲಿ ಏನಿತ್ತು ಎಂಬುದು ನನ್ನ ಅರಿವಿಗೆ ಮೀರಿದ ವಿಷಯವಾಗಿತ್ತು.
ನಾವು ಅಂತಿಮ ವರ್ಷದಲ್ಲಿ ಪ್ರವಾಸ ಹೋಗಿ ಬಂದಾಗಿನಿಂದ ಕಿಟ್ಟಿಯ ನಡುವಳಿಕೆಯಲ್ಲಿ ಎದ್ದು ಕಾಣುವಷ್ಟು ಬದಲಾವಣೆಯಾಗಿತ್ತು. ಆತ ನನ್ನ ಜೊತೆ ಮಾತನಾಡುವುದು ಕಡಿಮೆಯಾಗಿತ್ತು. ನನಗೆ ಮುಖ ಕೊಟ್ಟು ನಿಲ್ಲದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಮೊದಲಿಗೆ ನನಗೆ ಆತನ ನಡುವಳಿಕೆಯ ಬಗ್ಗೆ ಕುತೂಹಲವಿತ್ತಾದರು ಕೊನೆಗೆ ಮರೆತು ಬಿಟ್ಟೆ. ಆತ ಮೇಡಂ ರೂಮಿನಲ್ಲಿ ಹೆಚ್ಚು ಹೊತ್ತು ಕಳೆಯುವುದು, ಅವರ ಮನೆಗೆ ಹೋಗಿ ಬರುವುದು ಹೆಚ್ಚಾದಾಗ ಅಂತಿಮ ಪರೀಕ್ಷೆ ಹತ್ತಿರ ಬಂದಿದ್ದರಿಂದ ಈ ಬದಲಾವಣೆ ಇರಬಹುದು ಎಂದು ಕೊಂಡು ಸುಮ್ಮನಾದೆ. ಆದರೆ ಬೇರೆ ಹುಡುಗರು ಕಿಟ್ಟಿಯನ್ನು ನೋಡುವ ಮತ್ತು ಆತನ ಬಗ್ಗೆ ಮಾತನಾಡುವ ರೀತಿ ಮರ್ಯಾದೆಯನ್ನು ಮೀರಿದುದಾಗಿತ್ತು.
ಪರೀಕ್ಷೆಗಳು ಮುಗಿದು ಒಂದು ವಾರ ಕಳೆದಿರಬಹುದು. ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂದ ವಿಚಾರ ನಾನೊಬ್ಬನೆ ಅಲ್ಲ, ಬೇರೆ ಯಾರೂ ನಂಬಲು ಕಷ್ಟವಾಗಿತ್ತು. ರಾಧ ಮೇಡಂ ಮತ್ತು ಕಿಟ್ಟಿ ದೇವಾಲಯವೊಂದರಲ್ಲಿ ಮದುವೆ ಮಾಡಿಕೊಂಡಿದ್ದರು. ಮದುವಗೆ ಯಾರನ್ನು ಕರೆದಿರಲಿಲ್ಲ. ಬಾಲ್ಯ ಸ್ನೇಹಿತನಾದ ನನ್ನನ್ನು ಕೂಡ ಕರೆಯದ ಒತ್ತಡ ಅವನಿಗೇನಿತ್ತೊ ತಿಳಿಯಲಿಲ್ಲ. ಆತ ನನ್ನನ್ನು ಮದುವೆಗೆ ಕರೆಯಲಿಲ್ಲ ಎಂಬುದಕ್ಕೆ ನನಗೆ ನೋವಿರಲಿಲ್ಲ. ಆದರೆ ತನಗಿಂತ ಎರಡು ಪಟ್ಟು ದೊಡ್ಡ ವಯಸ್ಸಿನವರನ್ನು, ತನ್ನ ತಾಯಿಯ ವಯಸ್ಸಿನವರನ್ನು ಈ ರೀತಿ ಮದುವೆಯಾಗಿದ್ದು ನನಗೆ ದೊಡ್ಡ ಅಘಾತವನ್ನುಂಟು ಮಾಡಿತ್ತು. ಕೃಷ್ಣಪ್ರೇಮಿ ರಾಧ ಮೇಡಂ ಬಗ್ಗೆ ಇದ್ದ ಗೌರವವು ಕಡಿಮೆಯಾಗಿತ್ತು. ಕಿಟ್ಟಿಯ ಪೂರ್ಣ ಹೆಸರು ಕೃಷ್ಣಮೂರ್ತಿ ಎಂದು. ನೋಡಲು ಬಹಳ ಸುಂದರನಾಗಿದ್ದ. ಗೋದಿ ಬಣ್ಣದ ಮೈಕಟ್ಟು, ಟಮೊಟೊ ಹಣ್ಣಿನಂತೆ ತುಂಬಿದ್ದ ಕೆನ್ನೆಗಳು ಎಲ್ಲಕ್ಕಿಂತ ಹೆಚ್ಚಾಗಿ ಎಂತವರನ್ನು ಮರುಳುಗೊಳಿಸುವ ಅವನ ಮುಗುಳ್ನಗೆ ಇವುಗಳಲ್ಲಿ ರಾಧ ಮೇಡಂ ತನ್ನ ಕೃಷ್ಣನನ್ನು ಕಂಡುಕೊಂಡಿರಬೇಕು ಎಂಬ ಸಮಾಧಾನವೊಂದೆ ಆಗ ನನ್ನ ಪಾಲಿಗೆ ಉಳಿದಿದ್ದು.!
 * * * * * * * * * * * * * *

-ಎರಡು-
ಬೆಳಿಗ್ಗೆ ನನಗೆ ಎಚ್ಚರವಾಗುವಷ್ಟರಲ್ಲಿ ಎಂಟುಗಂಟೆಯಾಗಿತ್ತು. ರಾತ್ರಿ ಕಿಟ್ಟಿಯ(ರಾಧ ಮೇಡಂ) ಮನೆಯಿಂದ ಬಂದು ಮಲಗಿಕೊಳ್ಳುವಷ್ಟರಲ್ಲಿಯೆ ಮದ್ಯರಾತ್ರಿ ಎರಡು ಗಂಟೆಯಾಗಿತ್ತು. ಆದರೂ ಬೆಳಗಿನ ಜಾವದವರೆಗೂ ನಿದ್ದೆಯಿಲ್ಲದೆ ಹೊರಳಾಡಿ ಮೈಕೈಯೆಲ್ಲಾ ನೋಯುತ್ತಿದ್ದವು. ಏಳುವ ಮನಸ್ಸಿಲ್ಲದೆ ಹಾಗೆ ದಿಂಬಿಗೊರಗಿ ಕುಳಿತುಕೊಂಡೆ. ಕಿಟ್ಟಿ ಈಗ ವಿಧುರನಾಗಿದ್ದ. ಆತ ಮೇಡಂನನ್ನು ಮದುವೆಯಾದಾಗಲೇ ಅತನನ್ನು ಮನೆಯಿಂದ ಹೊರಹಾಕಿದ್ದರು. ಆದರೆ ಈಗ ಮೇಡಂ ಆಸ್ತಿಯೆಲ್ಲ ಆತನಿಗೆ ಬಂದಿತ್ತು. ಆದರೆ ಆತನಿಗೆ ನೆಮ್ಮದಿಯಿರಲಿಲ್ಲ. ಬಹಳ ಖಿನ್ನನಾಗಿದ್ದ. ಮೇಡಂ ಸಾವಿಗೆ ನಾನೆ ಕಾರಣ ಎಂದು ಬಡಬಡಿಸುತ್ತಿದ್ದನಾದರೂ ಕಾರಣವೇನೆಂದು ಹೇಳುತ್ತಿರಲಿಲ್ಲ. ಅದೊಂದನ್ನು ಬಿಟ್ಟು ಉಳಿದವೆಲ್ಲವನ್ನು ಗಂಟೆಗಟ್ಟಲೆ ಮಾತನಾಡಿದ. ಹೆಚ್ಚಿನ ವಿಷಯ ಮೇಡಂ ಜೀವನಕ್ಕೆ ಸಂಬಂಧಿಸಿದ್ದಾಗಿತ್ತು.
ಮೇಡಂ ತಂದೆ ಹೆಸರಾಂತ ವಕೀಲರಾಗಿದ್ದ ಶ್ಯಾಮರಾಯರು. ಅವರಿಗೆ ವಿಪರೀತ ಇಂಗ್ಲೀಷ್ ಹುಚ್ಚು. ಭಾಷೆಯೊಂದರಲ್ಲೆ ಅಲ್ಲದೆ ದಿನನಿತ್ಯದ ಜೀವನದಲ್ಲು ಇಂಗ್ಲೀಷ್ ರೀತಿನೀತಿಗಳನ್ನೆ ಅಳವಡಿಸಿಕೊಂಡಿದ್ದರು. ತಮಗೆ ಇಷ್ಟವಾದುದನ್ನು ತಮ್ಮ ಏಕೈಕ ಮಗಳ ಮೇಲೂ ಹೇರತೊಡಗಿದರು. ತಮ್ಮ ಪತ್ನಿ ರುಕ್ಮಿಣಿಯಮ್ಮನವರ ವಿರೋಧವಿದ್ದರೂ ಮಗಳಿಗೆ ರೋಜಾ ಎಂದು ಹೆಸರಿಟ್ಟರಲ್ಲದೆ, ಸಾಯುವವರೆಗೂ ಅವಳನ್ನು ರೋಸ್ ಎಂದೇ ಕರೆಯುತ್ತಿದ್ದರು. ಇತ್ತ ರುಕ್ಮಿಣಿಯಮ್ಮನವರ ಗೋಳು ಕೇಳತೀರದು. ಗಂಡ ಇಂಗ್ಲೀಷ್ ಸಂಸ್ಕೃತಿಗೆ ಅಂಟಿಕೊಂಡಿದ್ದರೆ ಅವರು ಭಾರತ ಸಂಸ್ಕೃತಿ, ಕೋಟ್ಯಾನುಕೋಟಿ ದೇವರುಗಳು, ರಾಮ ಕೃಷ್ಣ ಇವರಿಗೆ ಅಂಟಿಕೊಂಡಿದ್ದರು. ಇಬ್ಬರೂ ಮಗಳನ್ನು ಪ್ರೀತಿಸುತ್ತಿದ್ದರಿಂದ ಸಹಜವಾಗಿಯೇ ರೋಜಾ ಇಬ್ಬರನ್ನು ಗೌರವಿಸಿ ಇಬ್ಬರಿಗೂ ಇಷ್ಟವಾಗುವಂತೆ ನಡೆದುಕೊಳ್ಳಲಾರಂಬಿಸಿದಳು. ತಂದೆಯ ಆಸೆಯಂತೆ ಇಂಗ್ಲೀಷ್ ಎಂ. ಎ. ಮಾಡಿ ಉಪನ್ಯಾಸಕಿಯಾದಳು. ಆದರೆ ಅದಕ್ಕಿಂತ ಹೆಚ್ಚಾಗಿ ಆಕೆಗೆ ಇಷ್ಟವಾದುದ್ದು ತಾಯಿ ಹಾಡುತ್ತಿದ್ದ ದೇವರ ನಾಮಗಳು. ರುಕ್ಮಿಣಿಯಮ್ಮ ಮೊದಮೊದಲು ಗಂಡನಿಗೆ ತಿಳಿಯದಂತೆ ಮಗಳಿಗೆ ಭರತ ನಾಟ್ಯ, ಹಾಡುಗಾರಿಕೆ ಕಲಿಸಲು ಪ್ರಾರಂಭಿಸಿದರೂ ಕೊನೆಗೆ ಗಂಡನಿಗೆ ತಿಳಿಸಿ ಕಾಡಿ ಬೇಡಿ ಒಪ್ಪಿಸಿದ್ದರು. ಅಂದಿನಿಂದಲೂ ತಾಯಿಯ ಬಾಯಲ್ಲಿ ರಾಧಾಳಾಗಿ ತಂದೆಯ ಬಾಯಲ್ಲಿ ರೋಸ್ ಆಗಿ ಬೆಳೆದ ರೋಜಾಳಿಗೆ ಇಷ್ಟವಾದುದೆಂದರೆ ಕೃಷ್ಣನ ವಿಶ್ವಪ್ರೇಮ. ಆತ ಅವರ ಕನಸಿನ ನಾಯಕನಾದ, ಜೊತೆಗಾರನಾದ, ಸರ್ವಸ್ವವೂ ಆದ.
ತಮ್ಮ ಕನಸು ನನಸುಗಳನ್ನು, ನೋವು ನಲಿವುಗಳನ್ನು ಕೃಷ್ಣನೊಂದಿಗೆ ಸೇರಿ ತಮ್ಮದೇ ಮನೋಭೂಮಿಕೆಯಲ್ಲಿ ಅಭಿನಯಿಸಿಕೊಂಡು ಕೃಷ್ಣನನ್ನು ಆರಾಧಿಸತೊಡಗಿದ ರೋಜಾಳಿಗೆ ಮದುವೆ ಬೇಕೆನಿಸಲಿಲ್ಲ. ತಾಯಿ ಸತ್ತಾಗಲೂ ಕೃಷ್ಣನೇ ಸಮಾಧಾನ ಮಾಡಿದ್ದ. ಆದರೆ ತಂದೆ ಸತ್ತಾಗ ಮಾತ್ರಾ ತನ್ನ ತಾಯಿಯ ನೆನಪು ಬಹಳವಾಗಿ ಕಾಡಿ ಬದುಕು ಬೇಸರವಾಗತೊಡಗಿದಾಗ, ಕೋರ್ಟಿನಲ್ಲಿ ತನ್ನ ಹೆಸರನ್ನು ರಾಧ ಎಂದು ಬದಲಾಯಿಸಿಕೊಂಡು ಕೃಷ್ಣನನ್ನೇ ಪೂರ್ತಿಯಾಗಿ ನಂಬಿ ಬದುಕು ಪ್ರಾರಂಬಿಸಿದರು. ಬಹಳ ದಿನಗಳ ನಂತರ ಕಾಲಿಗೆ ಗೆಜ್ಜೆ ಕೆಟ್ಟಿಕೊಂಡು ಕೃಷ್ಣನ ವಿಗ್ರಹದ ಮುಂದೆ ತನ್ಮಯರಾಗಿ ನರ್ತಿಸಿದರು. ಇದು ನಿತ್ಯದ ದಿನಚರಿಯಾಯತು. ಆದರೆ ನರ್ತನ ಮುಗಿಯುವವರೆಗೂ ತನ್ನ ಜೊತೆಯಲಿಯೇ ಇದ್ದ ಕೃಷ್ಣನು ನೃತ್ಯ ಮುಗಿದ ಕೂಡಲೆ ವಿಗ್ರಹವಾಗಿ ನಿಲ್ಲುವುದನ್ನು ಕಂಡು ಮೌನವಾಗಿ ರೊದಿಸುತ್ತಿದ್ದರು, ‘ಕೃಷ್ಣಾ ನಿನೇಕೆ ಯಾವಾಗಲೂ ನನ್ನ ಜೊತೆಯಲ್ಲಿಯೇ ಇರಬಾರದು?’ ಎಂದು. ಕೃಷ್ಣನ ಬಗೆಗಿನ ಅವಳ ಈ ಪರಿಯಾದ ಹುಚ್ಚು ನಾಲ್ಕು ಗೋಡೆಯ ಮದ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಮನೆಯಿಂದ ಹೊರಗೆ ಆಕೆ ಯುನಿವರ್ಸಿಟಿಯ ಇಂಗ್ಲೀಷ್ ಉಪನ್ಯಾಸಕಿ. ಈ ಎರಡೂ ಪಾತ್ರಗಳನ್ನು ಯಶಸ್ವಿಯಾಗಿ ಅಭಿನಯಿಸುತ್ತಿದ್ದ ಮೇಡಂ ಅಂದುಕೊಳ್ಳುತ್ತಿದ್ದರಂತೆ, ‘ನಾನು ಹಾಡುವಾಗ, ನೃತ್ಯ ಮಾಡುವಾಗ ನನ್ನೊಂದಿಗೆ ಇರುವ ಕೃಷ್ಣ ನಂತರ ಮತ್ತದೇ ವಿಗ್ರಹವಾಗಿ ಹೋಗುತ್ತಾನೆ. ಯಾವಾಗಲೂ ನನ್ನ ಜೊತೆಯಲ್ಲಿರುವ ಜೀವಂತ ಕೃಷ್ಣನ ಅಗತ್ಯ ತನಗಿದೆ’ ಎಂದು.
ಹೀಗಿರುವಲ್ಲಿ ಒಂದು ದಿನ ಚಂದ್ರಶೇಕರನ ಬೇಟಿಯಾಗುತ್ತದೆ. ಕಂಡೊಡನೆ ವಿನಯದಿಂದ ನಮಸ್ಕರಿಸಿ ‘ಮನೆಗೆ ಬರಬೇಕು’ ಎಂದು, ‘ಈಗ ನೀವು ನನ್ನ ಮನೆಯ ಮುಂದೆಯೆ ನಿಂತಿದ್ದೀರಿ’ ಎಂದು ಅತಿವಿನಯದಿಂದ ನುಡಿಯುತ್ತಾನೆ. ಮನೆಯಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಪರಿಚಯ ಮಾಡಿಕೊಡುತ್ತಾನೆ. ಈತ ಮೇಡಂನ ಜೀವನದಲ್ಲಿ ಆಕೆಯ ತಿಳಿಗೊಳಕ್ಕೆ ಕಲ್ಲೆಸೆದ ಮೊದಲ ವ್ಯಕ್ತಿ. ಎಂ. ಎ. ಮಾಡಿ ಕೆಲಸಕ್ಕೆ ಸೇರಿದ ಮೊದಲ ವರ್ಷ. ಅದು ಒಂದು ಪದವಿ ಕಾಲೇಜಾಗಿದ್ದು, ಚಂದ್ರು ಅಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ. ಆತ ಬಾಯಿ ಬಿಟ್ಟು ‘ನೀವು ನನಗೆ ಇಷ್ಟವಾಗಿದ್ದೀರಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮನ್ನು ಮದವೆಯಾಗುತ್ತೇನೆ’ ಎಂದು ಒಂದು ದಿನವೂ ಹೇಳಲಿಲ್ಲ. ಅದರೆ ಬೇರೆಬೇರೆ ರೀತಿಯಲ್ಲಿ ಪ್ರಂiತ್ನಿಸಿದ. ನೋಡುವವರ ಕಣ್ಣಿಗೆ ತಾವಿಬ್ಬರು ಪ್ರೇಮಿಗಳೆಂಬಂತೆ ವರ್ತಿಸಿದ್ದ ಕೂಡ. ಇಂಗ್ಲೀಷ್ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದ ಅಪ್ಪನಿಗೆ ಅದು ತಪ್ಪೆಂದು ತೋರದಿದ್ದರೂ ಅಮ್ಮ ಗಮನಿಸಿದ್ದಳು. ಆತನ ಸಹವಾಸವನ್ನು ಬಿಡಿಸಿಕೊಳ್ಳಬೇಕಾದರೆ ಸಾಕು ಸಾಕಾಯಿತು. ‘ಗಂಡಸರಿಗೂ ನಾಯಿಗಳಿಗೂ ವ್ಯತ್ಯಾಸವಿಲ’ ಅಂದುಕೊಂಡಿದ್ದ ಮೇಡಂ ಕೊನೆಯ ದಿನಗಳಲ್ಲಿ ‘ನನ್ನ ಕೃಷ್ಣನೂ ಒಬ್ಬ ಗಂಡಸು’ ಎಂದು ನಗುತ್ತಿದ್ದರಂತೆ. 
ಚಂದ್ರಶೇಕರನನ್ನು, ಅವನ ಹೆಂಡತಿ ಮಕ್ಕಳನ್ನು ಬೇಟಿಯಾದಾಗಲೂ ‘ತನಗೊಬ್ಬ ಜೀವಂತ ಕೃಷ್ಣನ ಅಗತ್ಯವಿದೆ’ ಎನಿಸಿತು. ಅದೇ ಸಮಂiದಲ್ಲಿ ಪ್ರವಾಸದಲ್ಲಿ ಕಿಟ್ಟಿಯನ್ನು ಬಹಳ ಹತ್ತಿರದಿಂದ ಗಮನಿಸಿದ ಮೇಡಂ ತನ್ನ ಕೃಷ್ಣನನ್ನು ಕಿಟ್ಟಿಯಲ್ಲಿ ಕಂಡುಕೊಂಡರು. ಪ್ರವಾಸ ಪೂರ್ತಿ ಅವನೊಂದಿಗೆ ಸಲುಗೆಯಿಂದ ವರ್ತಿಸಿದ ಮೇಡಂ ಅಲ್ಲಿಂದ ಬಂದ ಮೇಲೆ ಕಿಟ್ಟಿಯನ್ನು ಒಂದು ದಿನ ಮನೆಗೆ ಕರೆದು ಕೈಹಿಡಿದು ಬೇಡಿಕೊಂಡರಂತೆ. ಅವರ ಎಲ್ಲಾ ವಿಚಾರಗಳನ್ನು ಹೇಳಿ, ‘ಕೃಷ್ಣಮೂರ್ತಿ ನೀವು ನನಗಾಗಿ ಪ್ರತಿದಿನ ನನ್ನ ಮನೆಗೆ ಬಂದು ಕೃಷ್ಣನ ವೇಷ ಧರಿಸಿ ಓಡಾಡಿಕೊಂಡಿರಬೇಕು’ ಎಂದು ಅಂಗಲಾಚಿದರಂತೆ. ಮೊದಲು ನಿರಾಕರಿಸಿದರೂ ಕಿಟ್ಟಿ ಕೊನೆಗೆ ಅವರ ಬಲವಂತಕ್ಕೆ ಒಪ್ಪಿಕೊಳ್ಳ ಬೇಕಾಯಿತು. ಪ್ರತಿದಿನ ಅವರ ಮನೆಗೆ ಹೋಗಿ ಕೃಷ್ಣನ ವೇಷ ಧರಿಸಿ ಗಂಟೆಗಟ್ಟಲೆ ಕುಳಿತಿರಬೇಕಾಯಿತು. ಕಿಟ್ಟಿಗೆ ಕೃಷ್ಣನ ವೇಷ ಹಾಕಿ ಅವನನ್ನು ಕಣ್ತುಂಬ ನೋಡುವುದಲ್ಲದೆ ಗಂಟೆಗಟ್ಟಲೆ ಹಾಡಿ ನರ್ತಿಸುತ್ತಿದ್ದರಂತೆ. ಅದೇ ವೇಷದಲ್ಲಿಯೆ ಅವನಿಗೆ ಊಟ ಮಾಡಿಸಿ ಉಯ್ಯಾಲೆಯಲ್ಲಿ ತೂಗುವುದಲ್ಲದೆ, ‘ನೀನು ನನ್ನನ್ನು ರಾಧ ಎಂದೇ ಕರೆಯಬೇಕು’ ಎಂದು ಒತ್ತಾಯಪಡಿಸುತ್ತಿದ್ದರಂತೆ. ಕಿಟ್ಟಿಗೂ ಮೊದಮೊದಲು ಕಷ್ಟವಾದರೂ ಕೊನೆಗೆ ಒಪ್ಪಿಕೊಂಡ. 
ಒಂದೆರಡು ತಿಂಗಳು ಕಳೆದಿರಬೇಕು. ಕಿಟ್ಟಿಗೂ ಮೇಡಂನ ಸಮೀಪ ಇಷ್ಟವಾಗತೊಡಗಿತು. ಇತ್ತ ಮೇಡಂ ಕಿಟ್ಟಿ ಕೃಷ್ಣ ವೇಷದಲ್ಲಿ ತಮ್ಮ ಮುಂದಿರುವವರಗೆ ಸಂತೋಷವಾಗಿದ್ದರೂ, ಅವುನು ಹೊರಟು ಹೋದ ಮೇಲೆ ಮತ್ತೆ ಒಂಟಿತನದಿಂದ ಬಳಲತೊಡಗಿಡದರು. ಮತ್ತೆ ಶೂನ್ಯತೆ ಅವರನ್ನು ಕಾಡತೊಡಗಿತು. ಮನೆಯೊಳಗಿರುವವರಗೆ ತನ್ನ ಜೊತೆಯಲ್ಲಿಯೇ ಇರುವಂತಹ ಕೃಷ್ಣನ ಅಗತ್ಯ ಅವರಿಗೆ ಕಾಣತೊಡಗಿತು. ಕಿಟ್ಟಿಯನ್ನೇ ಮನೆಯಲ್ಲಿ ಉಳಿಯಲು ಒತ್ತಾಯ ಮಾಡಿದರು. ಕಿಟ್ಟಿ ಒಪ್ಪಲಿಲ್ಲ. ಕಾಡಿ ಬೇಡಿದರು. ದುಡ್ಡಿನ, ಆಸ್ತಿಯ ಆಸೆ ತೋರಿದರು. ಕೊನೆಗೆ ಪರೀಕ್ಷೆಗಳು ಮುಗಿದ ನಂತರ ಮದುವೆಯಾಗಲು ಅವನನ್ನು ಒಪ್ಪಿಸುವಲ್ಲಿ ಸಫಲರಾದರು. ಕಿಟ್ಟಿಯ ಮನೆಯವರು ಅವನನ್ನು ಮನೆಯಿಂದ ಹೊರಹಾಕಿದಾಗ ತಾನು ಸತ್ತ ನಂತರ ತನ್ನ ಆಸ್ತಿಯೆಲ್ಲವು ಕಿಟ್ಟಿಗೆ ಸೇರುವಂತೆ ವಿಲ್ ಮಾಡಿ ಅವನನ್ನು ಸಮಾಧಾನ ಮಾಡಿದರು. 
ಅಂದಿನಿಂದ ಪ್ರಾರಂಭವಾಯಿತು ಅವರ ಕನಸಿನ ಜೀವನ. ನಿತ್ಯ ರಾತ್ರಿ ಕಿಟ್ಟಿಗೆ ಕೃಷ್ಣ ವೇಷವನ್ನು ಹಾಕಿಸಿ ಹಾಡಿ ಕುಣಿದು ಪೂಜಿಸತೊಡಗಿದರು. ಆತನಿಗೆ ಸ್ನಾನ ಮಾಡಿಸಿ ಊಟಮಾಡಿಸಿ ತಮ್ಮ ತೊಡೆಯ ಮೇಲೆಯೆ ತಟ್ಟಿ ಮಲಗಿಸುತ್ತಿದ್ದರು. ತಿಂಗಳೆರಡು ಕಳೆಯುವುದರಲ್ಲಿ ಕಿಟ್ಟಿಗೆ ಈ ಜೀವನ ಬೇಸರವಾಗತೊಡಗಿತು. ಮೇಡಂ ಎಷ್ಟೆಲ್ಲಾ ಅವನನ್ನು ಆರಾಧಿಸಿದರೂ ಆತನೊಂದಿಗೆ ದೈಹಿಕ ಸಂಬಂಧವನ್ನು ಬಯಸಲಿಲ್ಲ. ಆದರೆ ಕೃಷ್ಣ ಹದಿಹರೆಯದ ಯುವಕ. ಸಹಜವಾಗಿಯೆ ರತಿಸುಖವನ್ನು ಬಯಸಿದ. ಅದಕ್ಕಾಗಿ ಅವರಿಗೆ ಸೂಚನೆಯನ್ನೂ ಕೊಡತೊಡಗಿದ. ಆದರೆ ಅವರಿಗೆ ಅದಾವುದು ಬೇಕಿರಲ್ಲಿಲ್ಲ. ಅವರ ಬಯಕೆಗಳಿಗೆ ಕೃಷ್ಣ ಅಸಹಕಾರ ತೋರಿದ. ಇಬ್ಬರ ನಡುವೆ ಸಣ್ಣ ಅಡ್ಡಗೋಡೆ ಏಳತೊಡಗಿತು. ಮದುವೆಯ ಮೊದಲ ವಾರ್ಷಿಕೋತ್ಸವ ಹತ್ತಿರವಾಗುತ್ತಿದ್ದಂತೆ ಕಿಟ್ಟಿ ಆಕೆಯಿಂದ ಬಿಡುಗಡೆ ಬೇಡತೊಡಗಿದ.
ಮೊದಮೊದಲು ಕಿಟ್ಟಿಯ ಬೇಡಿಕೆಗೆ ಒಪ್ಪಲಿಲ್ಲ. ಅತ್ತು ಕರೆದು ಬೇಡಿದರು. ಕಿಟ್ಟಿ ಡೈವರ್ಸ್ ಬೇಕೆಬೇಕೆಂದು ಹಟಹಿಡಿದ. ವಿವಾಹ ವಾರ್ಷಿಕೋತ್ಸವ ಹತ್ತಿರಾವದಂತೆ ಮೇಡಂ ತಮ್ಮ ಕಟುನಿರ್ಧಾರವನ್ನು ಬದಲಿಸಲು ಒಪ್ಪಿಕೊಂಡರು. ಆದರೆ ಒಂದು ಕಂಡೀಷನ್ನಿನ ಮೇಲೆ ಆತನಿಗೆ ಡೈವರ್ಸ್ ಕೊಡಲು ಒಪ್ಪಿದರು. ಕಿಟ್ಟಿಯೂ ಅವರ ನಿಬಂಧನೆಯನ್ನು ಒಪ್ಪಿದ. 
ವಿವಾಹ ವಾರ್ಷಿಕೋತ್ಸವದ ದಿನ ಮೊದಲೆ ಮಾಡಿಕೊಂಡ ಒಪ್ಪಂದದಂತೆ ಕಿಟ್ಟಿ, ಮೇಡಂ ಆ ದಿನ ಬೆಂಗಳೂರಿಗೆ ಬಂದು ಹೋಟೆಲೊಂದರಲ್ಲಿ ಉಳಿದು ಆ ಇಡೀ ರಾತ್ರಿ ಮೇಡಂ ಹೇಳಿದಂತೆ ಕಿಟ್ಟಿ ಕೇಳಬೇಕಾಗಿತ್ತು. ಕಿಟ್ಟಿಯೂ ಒಂದು ರಾತ್ರಿಯಲ್ಲವೆ ಎಂದು ಒಪ್ಪಿಕೊಂಡಿದ್ದ. ಅಂತೆಯೆ ಆ ದಿನ ಬೆಂಗಳೂರಿಗೆ ಬಂದು ಫೈವ್ ಸ್ಟಾರ್ ಹೋಟೆಲೊಂದರಲ್ಲಿ ರೂಂ ಮಾಡಿ ಉಳಿದುಕೊಂಡರು. ರಾತ್ರಿ ಹನ್ನೊಂದು ಗಂಟೆಯ ನಂತರ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿದ ಮೇಡಂ ಕಿಟ್ಟಿಗೆ ಕೃಷ್ಣನ ವೇಷ ಧರಿಸುವುಂತೆ ಹೇಳಿದರು. ಕಿಟ್ಟಿ ಮರುಮಾತಾಡದೆ ಕೃಷ್ಣನಾದ. ಮೇಡಂ ರಾಧೆಯಾದರು. ಬೆಳೆಗಿನ ಜಾವದವರೆಗೂ ಹಾಡಿ ಕುಣಿದು ಸಂತೋಷ ಪಟ್ಟರು. ಚೆನ್ನಾಗಿ ನಿದ್ದೆಯನೂ ಮಾಡಿದರು. ಆದರೆ ಅಲ್ಲಿಂದ ಮರಳಿ ಬಂದ ಮಾರನೆಯ ದಿನವೇ ಹಾಸಿಗೆ ಹಿಡಿದು ಮಲಗಿದರು. ಯಾವ ಖಾಯಿಲೆಯೆಂದು ಯಾರಿಗೂ ಹೇಳಲಿಲ್ಲ. ಯಾವ ಡಾಕ್ಟರರೂ ಖಾಯಿಲೆ ಏನೆಂದು ತಿಳಿಸಲಿಲ್ಲ. ಒಂದು ವರ್ಷ ಪೂರ್ತಿ ಹಾಸಿಗೆಯಲ್ಲಿಯೇ ಕೊರಗಿ ಕೊರಗಿ ಪ್ರಾಣ ಬಿಟ್ಟರು. ಅವರ ಆ ಸ್ಥಿತಿಯನ್ನು ಕಂಡು ಎದರಿದ ಕಿಟ್ಟಿ ಡೈವರ್ಸ್ ವಿಷಯವನ್ನು ಮತ್ತೆ ಅವರ ಮುಂದೆ ಎತ್ತಲಿಲ್ಲ.
                                     * * * * * * * * * * * * * *

-ಮೂರು-
ಸಮಸ್ಯೆಗಳೇ ಹೀಗೆ. ಯಾರಿಗೆ ಯಾವಾಗ ಯಾವ ರೂಪದಲ್ಲಿ ಬರುತ್ತವೆ, ಬಂದು ಯಾವ ರೀತಿ ಕಾಡುತ್ತವೆ ಎಂದು ತಿಳಿಯುವುದಿಲ್ಲ. ಎರಡು ವರ್ಷಗಳಿಂದ ದೂರವಾಗಿದ್ದ ಕಿಟ್ಟಿ ಮೇಡಂ ಸತ್ತ ಮೇಲೆ ಬಂದು ಮನೆಗೆ ಕರೆದು ತನ್ನ ದುಖಃವನ್ನು ನನ್ನೊಂದಿಗೆ ಹೇಳಿಕೊಂಡಿದ್ದ. ಅದನ್ನು ಕೇಳಿ, ಮರೆತು ಸುಮ್ಮನಾಗಬೇಕಿದ್ದ ನಾನು ಅದೇ ಸಮಸ್ಯೆಗಳನ್ನು ಸುತ್ತಿಕೊಂಡು ತೊಳಲುವಂತಾಯಿತು. ಕಿಟ್ಟಿಯನ್ನು ನೋಡಿ ಒಂದು ವಾರಗಿತ್ತು. ನನ್ನಲ್ಲಿ ನೂರಾರು ಪ್ರಶ್ನೆಗಳು ಗೊತ್ತು ಗುರಿಯಿಲ್ಲದೆ ಸ್ಪಷ್ಟವಾದ ರೂಪವೂ ಇಲ್ಲದೆ ತಲೆ ತಿನ್ನತ್ತಿದ್ದವು. ಮೇಡಂ ತಮ್ಮ ಆಸೆಯೆಂತೆಯೇ ಬೆಂಗಳೂರಿಗೆ ಹೋಗಿ ಅವರು ಹೇಳಿದಂತೆ ಎಲ್ಲ ನೆಡೆದಿದ್ದರೆ, ಮಾರನೆಯ ದಿನವೇ ಅವರು ಖಾಯಿಲೆ ಏಕೆ ಬೀಳುತ್ತಿದ್ದರೆ? ಇವನೇಕೆ ‘ಮೇಡಂ ಸಾವಿಗೆ ನಾನೆ ಕಾರಣ’ ಎಂದು ಹಲುಬುತ್ತಿದ್ದ. ಕಿಟ್ಟಿ ನನಗೆ ಪೂರ್ತಿ ವಿಷಯ ಹೇಳಿದನೊ ಇಲ್ಲವೊ ಎಂಬ ಅನುಮಾನ ನನಗೆ ಮೊದಲ ಬಾರಿಗೆ ಬಂತು. ಇದರಲ್ಲಿ ಏನೋ ಅರೆಕೊರೆಯಿದೆ ಎಂದು ನನ್ನ ಮನಸ್ಸು ಹೇಳುತಿತ್ತು. ಕಿಟ್ಟಿಯೇ ನನಗೆ ಒಂದು ಸಮಸ್ಯೆಯಾಗಿ ಕಾಡತೊಡಗಿದ. ಅದಕ್ಕೆ ಪರಿಹಾರವೂ ಕಿಟ್ಟಿಯಲ್ಲಿಯೇ ಇದೆ ಎಂದು ಆತನ ಮನೆಯ ಕಡೆಗೇ ಹೊರಟೆ.
ಕಿಟ್ಟಿ ಮನೆಯಲ್ಲಿಯೇ ಇದ್ದ. ಆದರೆ ಅವನ ಸ್ಥಿತಿ ನನ್ನದಕ್ಕಿಂತ ಹದಗೆಟ್ಟಿತ್ತು. ಕುಡಿದು ಮತ್ತನಾಗಿದ್ದ ಕಿಟ್ಟಿ ಎದ್ದು ನಿಲ್ಲಲೂ ಶಕ್ತನಾಗಿರಲಿಲ್ಲ. ಊಟವನ್ನು ಮಾಡಿದ್ದನೊ ಇಲ್ಲವೊ? ನಾನು ಅವನನ್ನು ಎಬ್ಬಿಸಿ ರೂಮಿಗೆ ಕರೆದುಕೊಂಡು ಹೋದೆ. ಅಲ್ಲಿ ದೃಶ್ಯ ಇನ್ನೂ ಭಯಂಕರವಾಗಿತ್ತು. ಟಿಪಾಯಿಯ ಮೇಲೆ ಇಟ್ಟಿದ್ದ ಕೃಷ್ಣನ ವಿಗ್ರಹ ಒಡೆದು ಚಾರಾಗಿತ್ತು. ಕೃಷ್ಣನ ವೇಷಭೂಷಣಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ರೂಮಿಗೆ ಬಂದವನೆ ನನ್ನನ್ನು ತಬ್ಬಿಕೊಂಡು ಗಟ್ಟಿಯಾಗಿ ಅಳಲಾರಂಭಿಸಿದ ಕಿಟ್ಟಿಯನ್ನು ಸಮಾಧಾನ ಮಾಡುವ ಯಾವ ಯುಕ್ತಿಯೂ ನನಗೆ ತೋಚಲಿಲ್ಲ. ತಲೆಯ ಮೇಲೆ ಆಕಾಶವನ್ನೆ ಹೊತ್ತವನಂತೆ ಸುಮ್ಮನೆ ಕುಳಿತಿದ್ದೆ. ಅವನ ಅಳು ಬಡಬಡಿಕೆ ನಿಲ್ಲಲು ಹತ್ತು ನಿಮಿಷಗಳೆ ಬೇಕಾಯಿತು. ನಾನು ನನ್ನ ಮೊದಲ ಮಾತುಗಳನ್ನು ಆಡಿದ್ದೆ.
"ಕಿಟ್ಟಿ ಆಗಿದ್ದೆಲ್ಲ ಆಗಿ ಹೋಯಿತು. ಈಗ ಅತು ಪ್ರಯೋಜನವಿಲ್ಲ. ಸುಮ್ಮನೆ ಕುಡಿದು ಕುಡಿದು ಹಾಳಾಗಬೇಡ. ಇದರಲ್ಲಿ ನಿನ್ನ ತಪ್ಪೇನು ಇಲ್ಲದಿದ್ದ ಮೇಲೆ ಎಲ್ಲವನ್ನು ಮರೆತು ಹೊಸ ಜೀವನ ಆರಂಭಿಸು." ಆತ ಏನನ್ನೂ ಮಾತನಾಡದೆ ಸುಮ್ಮನೆ ನನ್ನನ್ನೆ ದುರುಗುಟ್ಟಿಕೊಂಡು ನೋಡತೊಡಗಿದ. ನಾನೆ ಮುಂದುವರೆದು, "ಮೇಡಂ ಬೆಂಗಳೂರಿನಿಂದ ಬಂದ ದಿನವೇ ಹಾಸಿಗೆ ಹಿಡಿದರು ಅನ್ನುತ್ತೀಯ. ಆದರೆ ಅಲ್ಲಿ ಎಲ್ಲವೂ ಅವರಿಷ್ಟದಂತೆ ನಡೆಯಿತು ಎಂದೂ ಹೇಳುತ್ತೀಯ. ಎಲ್ಲವೂ ಅವರಿಷ್ಟದಂತೆ ನಡೆದಿದ್ದರೆ ಹೀಗಾಗುತ್ತಿರಲಿಲ್ಲ ಅಲ್ಲವೆ?" ಎಂದೆ.
"ಹೌದೊ ಹೌದು ನಾನೆ ಅವಳನ್ನು ಕೊಂದೆ. ಅದನ್ನು ಪತ್ತೆ ಹಚ್ಚಲು ಬಂದವನಂತೆ ಪ್ರಶ್ನೆ ಕೇಳುತ್ತೀಯಲ್ಲ. ನಿನ್ನ ಮನಸ್ಸಿನಲ್ಲಿ ಏನಿದೆ ಅಂತ ಬೊಗಳು" ಎಂದು ಅಬ್ಬರಿಸಿದ.
ನನಗೆ ಒಂದು ಕ್ಷಣ ಗಾಬರಿಯಾದರೂ ತೋರಿಸಿಕೊಳ್ಳದೆ, "ಈಗ ಮನಸ್ಸಿನಲ್ಲಿ ಏನಿದೆ ಅಂತ ಹೇಳಬೇಕಾಗಿರೋದು ನೀನು. ಅದರಿಂದ ನಿನಗೆ ಒಳ್ಳೆದು. ನಿನ್ನ ಮನಸ್ಸಿನಲ್ಲಿ ಏನಿದೆ ಅಂತ ಬೇರೆಯವರ ಹತ್ತಿರ ಹೇಳಿಕೊಂಡರೆ ನಿನಗೂ ಮನಸ್ಸಿಗೆ ಹಗುರ ಆಗುತ್ತೆ." ಎಂದು ಅವನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದೆ.
ಸ್ವಲ್ಪ ಹೊತ್ತು ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದ ಕಿಟ್ಟಿ ನನ್ನತ್ತ ಬಾಗಿ "ಹೌದು, ಅವರಂದುಕೊಂಡಂತೆ ನಡೆಯಲಿಲ್ಲ. ಎಲ್ಲವನ್ನು ನಿನ್ನ ಹತ್ತಿರ ಹೇಳುವಷ್ಟು ಧೈರ್ಯ ನನ್ನಲ್ಲಿರಲಿಲ್ಲ. ಅಲ್ಲದೆ ನಾನು ಹೇಳುವುದನ್ನು ಪೂರ್ತಿ ಯಾಗಿ ನೀನು ಕೇಳುತ್ತೀಯ ಎಂಬ ನಂಬಿಕೆಯೂ ನನಗಿರಲಿಲ್ಲ. ಈಗಲೂ ಇಲ್ಲ." ಎಂದ.
"ನೀನು ಎರಡು ಗಂಟೆ ರಾತ್ರಿಯವರಗೆ ಹೇಳಿದ್ದೆಲ್ಲವನ್ನು ಕೇಳಲಿಲ್ಲವೆ? ಈಗಲೂ ಅಷ್ಟೆ ನೀನು ಹೇಳಿದರೆ ಕೇಳುತ್ತೇನೆ. ಅಲ್ಲಿ ನಿನ್ನದೇ ತಪ್ಪಿದ್ದರೂ ಅದಕ್ಕೆ ನನ್ನ ಪ್ರತಿಕ್ರಿಯೆ ಏನೂ ಇರುವುದಿಲ್ಲ" ಎಂದೆ.
"ಆಯಿತು. ಎಲ್ಲವನ್ನು ಹೇಳುತ್ತೇನೆ. ಪೂರ್ತಿಯಾಗಿ ಕೇಳು. ನಿನ್ನೆ ಅನುಮಾನವೆ ಸರಿ. ಆಕೆಯದು ಒಂದು ರೀತಿಯಲ್ಲಿ ಸಹಜ ಸಾವಲ್ಲ. ನೇರವಾಗಿ ನಾನೇ ಅವಳನ್ನು ಕೊಲೆ ಮಾಡದಿದ್ದರೂ, ಅವಳ ಸಾವಿಗೆ ನಾನೆ ಕಾರಣ" ಎಂದು ನಿಲ್ಲಿಸಿದ.
ನನಗೆ ಆಶ್ಚರ್ಯವೇನು ಆಗಲಿಲ್ಲ. ಇಂತದೊಂದು ಘಟನೆ ನಡೆದಿರಬಹುದು ಎಂಬ ಅನುಮಾನ ನನಗೆ ಮೊದಲೆ ಇದ್ದುದರಿಂದ ಸುಮ್ಮನೆ ಕುಳಿತೆ. ಆತ ಮುಂದುವರೆಸಿದ.
"ಅಂದು ಆಕೆ ನನ್ನನ್ನು ಬೆಂಗಳೂರಿಗೆ ಕರೆದಾಗ, ಅವಳು ಹೇಳಿದ ರೀತಿಯಿಂದಾಗಿ ಆಕೆ ತನ್ನ ನಿರ್ಧಾರವನ್ನು ಬದಲಿಸಿರಬಹುದೆಂದು ಭಾವಿಸಿದೆ. ಖುಷಿಯಿಂದಲೆ ಹೊರಟೆ. ರಾತ್ರಿ ಹೋಟೆಲ್ ರೂಮಿನಲ್ಲಿ ನನಗೆ ಮತ್ತೆ ಕೃಷ್ಣನ ವೇಷ ಹಾಕಿಸಿ ಅವಳು ರಾಧೆಯಾಗಿ ಬಹಳ ಹೊತ್ತಿನ ತನಕ ತನ್ಮಯಳಾಗಿ ನರ್ತಿಸಿದಳು. ಅವಳ ಒಂದು ವರ್ಷದ ಸಹವಾಸದಿಂದಾಗಿ ನಾನೂ ಒಂದೆರಡು ಹೆಜ್ಜೆ ಹಾಕುವುದನ್ನು ಕಲಿತಿದ್ದೆ. ಅಂದು ನಾನು ಕುಣಿದೆ. ಕುಣಿಯುತ್ತಲೆ ನಾನು ಉದ್ರೇಕಗೊಳ್ಳತೊಡಗಿದೆ. ಅದಕ್ಕೆ ಅವಳು ಸ್ಪಂದಿಸುತ್ತಿರುವಂತೆ ಭಾವಿಸಿದೆ. ಅವಳ ನೃತ್ಯವು ಅದಕ್ಕೆ ಪೂರಕವಾಗಿತ್ತು. ಅಂದು ಅವಳೆಷ್ಟು ಸುಂದರವಾಗಿ ಕಾಣುತ್ತಿದ್ದಳೆಂದರೆ, ನನ್ನೊಳಗೆ ವರ್ಣನೆಗೆ ಪದವಿಲ್ಲ. ಇರಲಿ ಬಿಡು. ‘ನೀನು ಅಂದು ಕಾಮುಕನಾಗಿದ್ದರಿಂದ ನಿನಗೆ ಹಾಗನ್ನಿಸಿರಬೇಕು’ ಎಂದುಕೊಳ್ಳಬೇಡ. ಈಗಲೂ ಹೇಳುತ್ತೇನೆ. ಅಂದು ಅವಳ ರೂಪವೆ ನನ್ನ ಬುದ್ಧಿಗೆ ಮಂಕು ಕವಿಸಿದ್ದು. ಸುಮಾರು ಎರಡು ಗಂಟೆಯಿರಬಹುದು. ನಾನು ಅವಳನ್ನು ಬಿಗಿಯಾಗಿ ಅಪ್ಪಿ ಅವಳ ತುಟಿಗಳನ್ನು ಚುಂಬಿಸಿದೆ. ಅವಳ ಕೊಸರಾಟವನ್ನು ಗಮನಿಸದೆ ಅದನ್ನು ದೀರ್ಘವಾಗಿಸಿದೆ. ಆದರೂ ನನಗೆ ತೃಪ್ತಿಯಾಗಲಿಲ್ಲ. ಅವಳ ಬಲವಾದ ಪ್ರತಿಭಟನೆಯನ್ನು ಗಮನಿಸದೆ, ಅವಳನ್ನು ಬೆತ್ತಲಾಗಿಸಿ ನಾನೂ ಬೆತ್ತಲಾಗಿ ಬಲವಂತವಾಗಿ ಭೋಗಿಸಿಬಿಟ್ಟೆ. ದೀರ್ಘ ಹೋರಾಟದ ನಂತರ ಅವಳು ಯಾವ ಪ್ರತಿಭಟನೆಯೂ ಇಲ್ಲದೆ ಸುಮ್ಮನೆ ಬಿದ್ದುಕೊಂಡಳು. ಸ್ಖಲನದ ನಂತರ ನನಗನ್ನಿಸಿದ್ದನ್ನು ನಿಜ ಹೇಳಿಬಿಡುತ್ತೇನೆ. ‘ನಾನು ಭೋಗಿಸಿದ್ದು ಹೆಣವನ್ನು’ ಅನ್ನಿಸಿಬಿಟ್ಟಿತ್ತು. ಅವಳು ಒಂದು ಮಾತನ್ನು ಆಡದೆ ಬಿದ್ದುಕೊಂಡಿದ್ದಳು. ನಾನೆ ಬೇರಡೆಗೆ ಹೋಗಿ ಮಲಗಿಕೊಂಡೆ. ಬೆಳಿಗ್ಗೆ ನನಗೆ ಎಚ್ಚರವಾದಾಗ ಅವಳು ಊರಿಗೆ ಹೊರಟು ನಿಂತಿದ್ದಳು. ನಾನು ಹೊರಟು ನಿಂತಾಗ ಆಕೆ ಆಡಿದ್ದು ಒಂದೇ ಮಾತು, ‘ಈ ವಿಷಯ ಮೂರನೆಯವರಿಗೆ ತಿಳಿಯುವುದು ಬೇಡ’ ಎಂದು. ಮನೆಗೆ ತಲುಪುವವರಗೆ ಒಂದು ಮಾತನ್ನು ಆಡಲಿಲ್ಲ. ಅವಳ ಮನಸ್ಸಿನಲ್ಲಿ ಎಂತಹ ಹೋರಾಟ ನಡೆಯುತಿತ್ತೊ? ಮನೆಯ ಬಾಗಿಲಿನ ಒಳಗೆ ಕಾಲಿಡುತ್ತಿದ್ದಂತೆ ಕಿಟ್ಟನೆ ಕಿರುಚಿ ‘ಕೃಷ್ಣ, ನೀನು ಒಬ್ಬ ಸಾಮನ್ಯ ಮನುಷ್ಯ, ನೀನು ಒಬ್ಬ ಸಾಮನ್ಯ ಮನುಷ್ಯ’ ಎಂದು ಹಲುಬತೊಡಗಿದಳು. ಅದು ಅಷ್ಟಕ್ಕೆ ನಿಲ್ಲಲಿಲ್ಲ. ನನ್ನನ್ನು ಕಂಡಾಗಲೆಲ್ಲ ಅದೇ ಮಾತುಗಳನ್ನು ಹೇಳತೊಡಗಿದಳು. ಆದರೆ ಬೇರೆ ಯಾರ ಮುಂದೆಯೂ ಅದನ್ನು ಆಡಲಿಲ್ಲ. ವೈದ್ಯರ ಎಲ್ಲ ಪ್ರಶ್ನೆಗಳಿಗು ಮೌನವೇ ಅವಳ ಉತ್ತರವಾಗಿತ್ತು. ಸೈಕಿಯಾಟ್ರಿಸ್ಟ್ ಕೂಡ ‘ಇದು ನನ್ನ ಕೈ ಮೀರಿದ್ದು’ ಎಂದು ಸುಮ್ಮನಾದರು..........
ನಾನು ಎದ್ದು ಓಡತೊಡಗಿದೆ. ಆಗಲೇ ನನ್ನ ಕಣ್ಣುಗಳು ಮಂಜಾಗುತ್ತಿವು ಈಗ ಪೂರ್ತಿ ಕಾಣಿಸದಾದವು. ಅವನ ಮಾತುಗಳು ಕೇಳಿಸದಾದವು. ನನ್ನ ಮೈಯೆಲ್ಲವು ಮಂಜುಗಡ್ಡೆಯಂತಾಗಿ ಯಾರೋ ಅದನ್ನು ಒಡೆಯುತ್ತಿರುವಂತೆ ಭಾಸವಾಗತೊಡಗಿ ಇನ್ನೂ ಜೋರಾಗಿ ಓಡಲು ಪ್ರಾರಂಭಿಸಿದೆ. ಆದರೆ ಕಾಲುಗಳು ಸೋಲುತ್ತಿವೆ. ಯಾರೋ ನನ್ನನ್ನು ಕತ್ತಿಯಿಂದ ಕೊಲ್ಲಲು ಬರುತ್ತಿದ್ದಾರೆ ಅನ್ನಿಸಿ ತಿರುಗಿ ನೋಡಿದೆ. ಅದು ಕಿಟ್ಟಿಯೆ ಆಗಿದ್ದ. ನನ್ನ ಕಾಲುಗಳು ಕೆಳಗಿನಿಂದ ಕರಗಿ ಹೋಗುತ್ತಿರುವಂತೆ ಭಾಸವಾಯಿತು. ಇನ್ನಾರೊ ಬೆತ್ತಲೆಯಾಗಿ ಹಿಂಬಾಲಿಸಿ ನನ್ನನ್ನು ಕಚ್ಚಲು ಬರುತ್ತಿದ್ದಾರೆ ಎನ್ನಿಸಿತು. ವಿಷಕನ್ಯೆ ಇರಬಹುದೆ? ಅಯ್ಯೋ ಅದರ ಮುಖ ಸ್ಪಷ್ಟವಾಗುತ್ತಿದೆ. ಅಯ್ಯೋ, ದೇವರೇ. ಅದು ಅದು ರಾಧಾ ಮೇಡಂ ಆಗಿರದಿರಲಿ. ನಾನು ಜೋರಾಗಿ ಕಿರುಚುತ್ತಿದ್ದೆ. ಆದರೆ ಅದು ನನಗೇ ಕೇಳಿಸುತ್ತಿರಲಿಲ್ಲ.
* * * * * * * * * * * * * * * * *