Monday, February 22, 2010

ಮ.ಮ.ಮ. ಓದಿಗೊಂದು ಪೂರ್ವಸಿದ್ಧತೆ: ಭಾಗ-1


‘ಏನು ಕಾಫಿಗೆ ಬರುವುದಿಲ್ಲವೆ?’
‘ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’

‘ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’

ಅರ್ಧಗಂಟೆಯ ನಂತರ ಕಾಪಿ ಕುಡಿಯುತ್ತಾ,

‘ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’

‘ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’

ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ‘ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.

ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡ ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.

ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ‘ಏನು?’ ಎಂದು ಕೇಳಿದಾಗ, ‘ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ‘ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.

ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ‘ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.

(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮಧುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!

ಅದನ್ನು ನೋಡಿದ ತಾರಿಣಿಯವರು ‘ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’ ಎನ್ನುತ್ತಾರೆ.

‘ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸಧ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ’ ಎನ್ನುತ್ತಾರೆ.

ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ...!?

ಮಲೆಗಳಲ್ಲಿ ಮಧುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಭುವನದ ಭಾಗ್ಯವಲ್ಲವೆ!

ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ಮೊದಲ ಬಾರಿಗೆ ಓದುಗನನ್ನು ಬೆಕ್ಕಸಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಓಮದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ!

ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ಮೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಮೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!

ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲು ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!

ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಅರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮಧುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.
ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು

  1. ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
  2. ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
  3. ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
  4. ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕುಂದದಿಂದ ಎರಡು ಮೈಲಿ)
  5. ಬೆತ್ತದಸರ
  6. ಹುಲಿಕಲ್ಲು
  7. ಹಳೆಮನೆ (ಸುಬ್ಬಣ್ಣ ಹೆಗ್ಗಡೆಯವರ ಮನೆ. ಮೇಗರವಳ್ಳಿಯಿಂದ ಒಂದು ಹರಿದಾರಿ)
  8. ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
  9. ಬೆಟ್ಟಳ್ಳಿ (ಕಲ್ಲಯ್ಯಗೌಡರ ಮನೆ)
  10. ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
  11. ಬೆಟ್ಟಳ್ಳಿ ಹೊಲಗೇರಿ
  12. ಅರೆಕಲ್ಲು ಕಾರೇಮೆಟ್ಟು (ಬೆಟ್ಟಳ್ಳಿ ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
  13. ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ. ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
  14. ಕೋಣೂರು (ರಂಗಪ್ಪಗೌಡರ ಮನೆ)
  15. ಭೂತದವನ (ಕೋಣುರು ಮನೆಗೆ ಸೇರಿದ್ದು)
  16. ಹಾಡ್ಯದ ಮಾರಮ್ಮನ ಗುಡಿ
  17. ಹಳೆಪೈಕದ ಯೆಂಕಿಯ ಮನೆ
  18. ಹೂವಳ್ಳಿ (ವೆಂಕಟಣ್ಣ ನಾಯಕರ ಮನೆ)
ಗುತ್ತಿ ಓಡಾಡಿದ ಮಾರ್ಗ

ಗುತ್ತಿ ಯಾ ನಾಯಿಗುತ್ತಿ ಈ ಕಾದಂಬರಿಯ ಪ್ರಮುಖ ಪಾತ್ರ ಹಾಗೂ ಚಲನಶೀಲತೆಯ ಪ್ರತೀಕ. ಈಡೀ ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಬಹುತೇಕ ಸ್ಥಳಗಳಿಗೆ ಈ ಪಾತ್ರ ಭೇಟಿಕೊಡುತ್ತದೆ. ಅದು ಕೇವಲ ಬೇಟಿಯಲ್ಲ! ಆ ಬೇಟಿ ಕಾದಂಬರಿಯ ಮುಂದಿನ ಓಟಕ್ಕೆ ತೆರೆದುಕೊಳ್ಳಲು ಕಾರ್ಯಕಾರಣ ಸಂಬಂಧವನ್ನು ಸೃಷ್ಟಿಸುತ್ತದೆ. ವಿವಾದಗಳನ್ನೇ ಹುಟ್ಟು ಹಾಕುತ್ತದೆ. ಕೆಲವೊಮ್ಮೆ ಶಾಂತಿ ನೆಮ್ಮದಿಗೆ ಕಾರಣವಾಗುತ್ತದೆ. ಆರಂಭದಿಂದ ಕೊನೆಯವರೆಗೆ, ಸಿಂಭಾವಿಯಿಂದ ಕಾನೂರು ಚಂದ್ರಯ್ಯಗೌಡರ (ಕಾನೂರು ಹೆಗ್ಗಡತಿ ಕಾದಂಬರಿಯ ಪ್ರಮುಖ ಪಾತ್ರ) ಆಶ್ರಯಕ್ಕೆ ಬರುವವರೆಗೆ ಆ ಪಾತ್ರದ ಪ್ರಯಾಣವನ್ನು ಗಮನಿಸಿ.

  1. ಸಿಂಬಾವಿ
  2. ಸೀತೂರುಗುಡ್ಡ
  3. ಲಕ್ಕುಂದ
  4. ಮೇಗರವಳ್ಳಿ
  5. ಬೆತ್ತದಸರ
  6. ಹುಲಿಕಲ್ಲು
  7. ಹಳೆಮನೆ
  8. ಅರೆಕಲ್ಲು
  9. ಬೆಟ್ಟಳ್ಳಿ
  10. ಬೆಟ್ಟಳ್ಳಿ ಹಕ್ಕಲು
  11. ಬೆಟ್ಟಳ್ಳಿ ಹೊಲಗೇರಿ
  12. ಅರೆಕಲ್ಲು ಕಾರೇಮೆಟ್ಟು
  13. ಕಮ್ಮಾರಸಾಲೆ
  14. ಕೋಣೂರು ದಾರಿ
  15. ಹುಲಿಕಲ್ಲು
  16. ಬೆತ್ತದ ಸರ
  17. ಲಕ್ಕುಂದ
  18. ಸೀತೂರುಗುಡ್ಡ
  19. ಸಿಂಬಾವಿ ಹೊಲಗೇರಿ
  20. ಸಿಂಬಾವಿ
  21. ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
  22. ಕಾಗಿನಹಳ್ಳಿ
  23. ಹಳೆಮನೆ ಸ್ಮಶಾಣ
  24. ಹಳೆಮನೆ ಹೊಲಗೇರಿ
  25. ಹಳೆಮನೆ ಶಂಕರ ಹಗ್ಗಡೆ ಮನೆ
  26. ಹುಲಿಕಲ್ಲು
  27. ಕೋಣುರು ಮನೆ
  28. ಕೋಣುರು ಐತನ ಬಿಡಾರ
  29. ಹುಲಿಕಲ್ಲು
  30. ಹೂವಳ್ಳಿ ಮನೆಯ ಹತ್ತಿರದವರೆಗೆ
  31. ಹುಲಿಕಲ್ಲು
  32. ತೀರ್ಥಹಳ್ಳಿ
  33. ತುಂಗಾನದಿ ದೋಣಿ ಗಿಂಡಿ
  34. ಕಾನೂರು 
ಮುಂದುವರೆಯುವುದು . . . . . . . .  . .

Thursday, February 18, 2010

ಬೆಂಗಳೂರು ಸುತ್ತಮುತ್ತ ಜಮೀನು ಪಡೆಯುವುದು ಇಷ್ಟೊಂದು ಸುಲಭವೇ!? 'ಅಮ್ಮ'

ನೆನ್ನೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಸಂಜೆ ಪತ್ರಿಕೆಗಳಲ್ಲಿ ಮತ್ತು ಇಂದಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಒಂದು ಸುದ್ದಿ ಫೋಟೋ ಸಮೇತ ಪ್ರಕಟವಾಗಿದೆ. ‘ಅಮ್ಮ’ ರಾಯಚೂರಿನ ಬಳಿ ಡೊಂಗುಪುರದಲ್ಲಿ ಕಟ್ಟಿಸಿಕೊಟ್ಟಿರುವ 100 ಮನೆಗಳ ಬೀಗದ ಕೈಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ. ನೆರೆಪೀಡಿತರಿಗೆ ತತ್ತಕ್ಷಣವಾಗಿ ಮನೆಗಳ ಅವಶ್ಯಕತೆಯಿದ್ದು, ಅದನ್ನು ಆದಷ್ಟು ಭೇಗ ನೆರವೇರಿಸಿದ ‘ಅಮ್ಮ’ ಹಾಗೂ ಆ ಕಾರ್ಯಕ್ರಮಕ್ಕೆ ಅಲ್ಲಿಯವರೆಗೂ ಹೋಗಿ ಬಂದ ಮುಖ್ಯಂತ್ರಿಗಳನ್ನು ಮೊದಲು ಅಭಿನಂದಿಸೋಣ.

‘ಅಮ್ಮ’ ಈಗ ಕೇವಲ 100 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಮುಂದೆ ಇನ್ನೂ 600 ಮನೆಗಳನ್ನು ಕಟ್ಟಿಸಿಕೊಡುವವರಿದ್ದಾರಂತೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯಂತೆ ಸುಮಾರು ೨೫೦ ಚದುರ ಅಡಿಗಳಷ್ಟಿರುವ ಈ ಮನೆಗಳು ರೈತರ ಅನುಕೂಲಕ್ಕೆ ತಕ್ಕನಾಗಿ ಇವೆಯೇ ಇಲ್ಲವೇ ಎಂಬುದು ಬೇರೆ ಪ್ರಶ್ನೆ. ಆದರೆ ಒಂದು ಮನೆಗೆ ಸುಮಾರು 1 ಲಕ್ಷದ 45 ಸಾವಿರ ರೂಪಾಯಿಗಳನ್ನು ಖರ‍್ಚು ಮಾಡಲಾಗಿದೆಯಂತೆ. ಅಂದರೆ 100 ಮನೆಗಳಿಗೆ ಸುಮಾರು 1 ಕೋಟಿ 45 ಲಕ್ಷ ರೂಪಾಯಿಗಳನ್ನು ‘ಅಮ್ಮ’ ಆಶ್ರಮ ಖರ್ಚು ಮಾಡಿದೆ.

ಇನ್ನು ಮೊದಲು ಮಾತು ಕೊಟ್ಟಿದ್ದಂತೆ 700 ಮನೆಗಳಲ್ಲಿ ಉಳಿದ 600 ಮನೆಗಳನ್ನು ಮುಂದೆ ಕಟ್ಟಿಸಿಕೊಡಲಾಗುತ್ತದಂತೆ. ಅದಕ್ಕೆ ತಗುಲುವ ಅಂದಾಜು ವೆಚ್ಚ ಸುಮಾರು 8 ಕೋಟಿ 70 ಲಕ್ಷ ರೂಪಾಯಿಗಳು. ಭಲೇ ‘ಅಮ್ಮ’ ಎಂದು ಬಿಡೋಣ.

ಆದರೆ ನೆನ್ನೆಯ ಈ ಸುದ್ದಿಯ ಜೊತೆಗೆ ಇನ್ನೊಂದು ಸುದ್ದಿ ಮುಖ್ಯವಾಗಿ ಕೆಲವು ಪತ್ರಿಕೆಗಳಲ್ಲಿ ತಲೆಬರಹದಲ್ಲೂ ಕಾಣಿಸಿಕೊಂಡಿದೆ. ಅದೇನೆಂದರೆ, ರಾಜ್ಯ ಸರ‍್ಕಾರ ‘ಅಮ್ಮ’ಗೆ ಕೊಡುಗೆಯಾಗಿ ಬೆಂಗಳೂರಿನ ಹೊರವಲಯದಲ್ಲಿ ಕೆಂಗೇರಿ ಬಳಿ 15ಎಕರೆ ಸರ‍್ಕಾರಿ ಜಮೀನು ಮತ್ತು 5 ಕೋಟಿ ಹಣವನ್ನು ನೀಡಲಿದೆ ಎಂಬ ಸುದ್ದಿ. ಇಷ್ಟೆಲ್ಲಾ ಉಚಿತ ಕಾಣಿಕೆ ‘ಉಚಿತ’ ಆಸ್ಪತ್ರೆ ಕಟ್ಟಿಸುವುದಕ್ಕೆ ಎಂಬ ಸುದ್ದಿಯೂ ಬಂದಿದೆ.

ಅಮ್ಮ ಈಗ ಕಟ್ಟಿರುವ 100 ಮನೆಗಳು ಹಾಗೂ ಮುಂದೆ ಕಟ್ಟಿಕೊಡಲಿರುವ(?) 600ಮನೆಗಳಿಗೆ ಆಗುವ ಒಟ್ಟು ಖರ್ಚು 10 ಕೋಟಿ 15 ಲಕ್ಷ ರೂಪಾಯಿಗಳು ಮಾತ್ರ. ಅದಕ್ಕೆ ಪ್ರತಿಯಾಗಿ ಸರ್ಕಾರದಿಂದ ಗಿಟ್ಟಿಸಿರುವ ಕಾಣಿಕೆ 15 ಎಕರೆ ಜಮೀನು ಮತ್ತು 5 ಕೋಟಿ ರೂಪಾಯಿ ಹಣ. ಬೆಂಗಳೂರಿನ ಹೊರವಲಯದ ಕೆಂಗೇರಿ ಬಳಿ 15 ಎಕರೆ ಜಮೀನಿನ ಮುಕ್ತ ಮಾರುಕಟ್ಟೆ ಬೆಲೆಯನ್ನು ಕೋಟಿಗಳಲ್ಲಿ ನೀವೇ ಲೆಕ್ಕ ಹಾಕಿಕೊಳ್ಳಿ! ಇಷ್ಟು ಹಣವನ್ನು ನೆರೆ ಪೀಡಿತ ಪ್ರದೇಶದಲ್ಲಿ ಮನೆಕಟ್ಟಲು ಸರ್ಕಾರವೇ ಬಳಸಬಹುದಾಗಿತ್ತಲ್ಲವೆ?

ಇನ್ನು ರಾಜ್ಯದಲ್ಲಿ ಎಷ್ಟೊಂದು ಉಚಿತ ಆಸ್ಪತ್ರೆಗಳಿಗೆ ಜಮೀನು ಇತ್ಯಾದಿ ಸಹಾಯವನ್ನು ಸರ್ಕಾರಗಳು ಹಲವಾರು ವರ್ಷದಿಂದ ಮಾಡುತ್ತಾ ಬಂದಿವೆ. ಆದರೆ ಎಷ್ಟು ಆಸ್ಪತ್ರೆಗಳಲ್ಲಿ ಅವುಗಳ ಘೋಷಿತ ಉದ್ಧೇಶ ಈಡೇರಿದೆ ಹಾಗೂ ಈಡೇರುತ್ತಿದೆ? ಇದು ಚಿದಂಬರ ರಹಸ್ಯ.

ನಮ್ಮ ಊರಿನವರೊಬ್ಬರು ತಮ್ಮ ತಾಯಿಗೆ ಆಗಬೇಕಿದ್ದ ಉದರ ಸಂಬಂಧಿ ಶಸ್ತ್ರಚಿಕಿತ್ಸೆಗೆ ಯಾರದೋ ಮಾತು ಕೇಳಿಕೊಂಡು ವೈಟ್ ಫೀಲ್ಡಿನಲ್ಲಿರುವ ಉಚಿತ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮೂರು ತಿಂಗಳ ನಂತರದ ಒಂದು ದಿನಾಂಕ (ಆಪರೇಷನ್ ಮಾಡಿಸಿಕೊಳ್ಳಲು) ಹಾಗೂ ಒಂದಷ್ಟು ಮಾತ್ರೆಗಳ ಪ್ರಿಸ್ಕ್ರಿಪ್ಷನ್ ಬರೆದು ಕಳುಹಿಸಲಾಗಿತ್ತು. ಮೂರು ತಿಂಗಳು ಬಿಟ್ಟು ಆಪರೇಷನ್ ಮಾಡಿಸಿಕೊಳ್ಳುವವರೆಗೆ ಖಾಯಿಲೆಯಾಗಲೀ, ರೋಗಿಯಾಗಲೀ ಕಾಯುವುದಿಲ್ಲ ಎಂದು ಅದಷ್ಟು ಬೇಗ ಅರ್ಥ ಮಾಡಿಕೊಂಡು ಆ ಯೋಚನೆಯನ್ನೇ ಕೈಬಿಟ್ಟು ಬೇರೆ ಕಡೆ ಹೋದರು!

ಇದೆಲ್ಲವನ್ನೂ ಗಮನಿಸುತ್ತಿದ್ದರೆ, ಬೆಂಗಳೂರು ಸುತ್ತಮುತ್ತ ಜಮೀನು ಬೇಕಿದ್ದರೆ ನೆರೆಪೀಡಿತ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಡಬೇಕು ಎಂಬ ಒಳ ಒಪ್ಪಂದ ಏರ್ಪಟ್ಟಿರಬಹುದಾ ಎಂಬ ಗುಮಾನಿ ಬರುವುದಿಲ್ಲವೆ!?

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಮಾತಿದೆ. ಈಗ ಅದಕ್ಕೆ ಇನ್ನೊಂದನ್ನು ಸೇರಿಸಬಹುದಾ?

'ಎಡಗೈಯಲ್ಲಿ ತೆಗೆದುಕೊಂಡಿದ್ದು ಬಲಗೈಗೂ ಗೊತ್ತಾಗಬಾರದು' ಅಂತ.

ಹಗಲು ದರೋಡೆ ಎಂಬುದಕ್ಕೆ ತಾಜಾ ಉದಾಹರಣೆ.

ಹೆಸರು ಯಾರದೋ ಬಸಿರು ಇನ್ಯಾರದೋ?

ಜೈ‘ಅಮ್ಮ’; ಜೈ ಯಡಿಯೂರು‘ಅಪ್ಪ’

ಕೊಸರು: ಕೃಷ್ಣದೇವರಾಯನ ಪಟ್ಟಾಭಿಷೇಕಕ್ಕಾಗಿ 75 ಕೋಟಿ ಖರ್ಚು ಮಾಡಿರುವ ಸುದ್ದಿ ವಿ.ಕ.ದಲ್ಲಿ ಬಂದಿದೆ. 75 ಕೋಟಿ ಹಣದಲ್ಲಿ ಎಷ್ಟು ಮನೆ ಕಟ್ಟಿಕೊಡಬಹುದಿತ್ತು?

Monday, February 08, 2010

T20 = ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್

T20 = ತೇಜಸ್ವಿ ಟ್ವೆಂಟಿ! ಮಾಲಿಕೆಯಲ್ಲಿ ಈ ಬಾರಿ ಅವರ ‘ಸ್ವರೂಪ’ ಕಿರುಕಾದಂಬರಿಯ ಪಂಚಿಂಗ್ ಲೈನ್‌ಗಳನ್ನು ಆರಿಸಿದ್ದೇನೆ.
ಈಗಾಗಲೇ ‘ಸ್ವರೂಪ’ವನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ‘ಸ್ವರೂಪ’ವನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
ಪುನರಾವರ್ತನೆಯಾದರೂ ಓದುಗರಲ್ಲಿ ಈ ವಿನಂತಿಯನ್ನು ನಾನು ಮಾಡಿಕೊಳ್ಳಲೇ ಬೇಕಾಗಿದೆ. ಇಲ್ಲಿನ ಎಲ್ಲಾ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.

1. ಈ ಕೋರ್ಟುಕಚೇರಿಗಳಿಗೆ ತಿರುಗಾಡಿ ನೂರೆಂಟು ಕೇಸುಗಳನ್ನು ಮಾಡಿಕೊಳ್ಳುವ ಹೇಸಿಗೆ ಲೆಕ್ಕಾಚಾರ ಯಾರಿಗೆ ಬೇಕು?
2. ಆರ್ಥಿಕದಾಸ್ಯದಲ್ಲಿ ಆತ್ಮಸ್ವಾತಂತ್ರ್ಯದ ಸಿದ್ದಿ ಸಾಧ್ಯವೇ ಇಲ್ಲ. ದುಡ್ಡು, ದುಡ್ಡಿನಿಂದ ಬರುವ ಅಧಿಕಾರ, ಅದು ಬೇಕೆನಿಸಿದಾಗ ಕೊಡುವ ಸುಖ ಸಂತೋಷ ಇವನ್ನೆಲ್ಲಾ ತ್ಯಾಜ್ಯ ಎಂದು ನೀನು ಹೇಳಿದರೆ ನಿನ್ನನ್ನ ಪಂಚೇಂದ್ರಿಯಗಳಲ್ಲೇ ಏನೋ ಒಂದು ಊನವಿರಬೇಕು.
3. ಸೋಷಲಿಸಂ, ಶೋಷಣೆ ಎನ್ನುವ ಮೂರಕ್ಷರದ ಪದ ಹಣ ಕಂಡೊಡನೆ ದಿಗಿಲು ಬೀಳುವಂತೆ ಮಾಡುತ್ತದೆ. ಪ್ರತಿ ನೂರು ರೂಪಾಯಿ ನೋಟಿನ ಹಿಂದೂ ಒಂದು ಅಮಾನುಷ ಹೇಯತೆಯನ್ನು ಗುಮಾನಿಸುತ್ತದೆ.
4. ಸೋಷಲಿಸಂಮ್ಮಿಗೆ ಸಿಕ್ಕುವುದು ದುಡಿಸಿ ಉತ್ಪಾದನೆ ಮಾಡಿದವನ ಶೋಷಣೆ. ಇನ್ನೊಂದು ಅನ್ಯತರದ್ದು ಅದರ ಹಿಡಿತಕ್ಕೆ ಸಿಗುವುದಿಲ್ಲ.
5. ಶೋಷಣೆ ಒಂದಲ್ಲ ಒಂದು ರೀತಿಯಲ್ಲಿ ಅನಿವಾರ‍್ಯ. ಇಲ್ಲ ಉತ್ಪಾದಿಸಲು ಶೋಷಿಸಬೇಕು. ಇಲ್ಲ ಹಾಳುಮಾಡಲು ಶೋಷಿಸಬೇಕು.
6. ದುಷ್ಟದೇವತೆ ಆಗಿದ್ದರೆ ಅದು ಸದಾ ರಕ್ತಮಾಂಸಾದಿ ಹೊಲಸಿಗೆ ಹಂಬಲಿಸುವಂಥದಾದರೆ ನಿನ್ನ ಉಗುಳಿನಿಂದ ಮೈಲಿಗೆ ಆಗುತ್ತದೆ ಎನ್ನುವುದು ಸುಳ್ಳು. ಅದು ಒಳ್ಳೆಯ ದೇವತೆ ಆಗಿದ್ದರೆ ಕೇವಲ ಉಗಿದ ಮಾತ್ರಕ್ಕೆ ಕೋಪಿಸಿಕೊಳ್ಳಬೇಕೇಕೆ?
7. ಅವರ ನಂಬಿಕೆ ಬಟ್ಟೆಯ ಒಳಗೆ ಅಂತರಾಳದಲ್ಲಿ, ಕುಳಿತಾಗ ಎದ್ದಾಗ ಕೊರೆಯುವ ದಾರದ ನೋವನ್ನು ಸಹಿಸುವ ನಿಷ್ಠೆಯಾದಾಗ ಅದನ್ನು ಹೇಗೆ ಲೇವಡಿ ಮಾಡಲಿ?
8. ಇಬ್ಬರಲ್ಲೊಬ್ಬರು ಎಲ್ಲಾದರೂ ಒಂದು ಕಡೆ ಒಬ್ಬರ ಪ್ರಾಮಾಣಿಕತೆಯನ್ನು ನಂಬಬೇಕು.
9. ನನ್ನ ತಪೋಭಂಗಕ್ಕೆ ಮೇನಕೆಯೇ ಬೇಕೆಂದಿಲ್ಲ. ಅತಿ ಕುದ್ರವಾದುದೊಂದು ಹಲ್ಲಿ ಬಾಲವಲ್ಲಾಡಿಸಿದರೆ ಸಾಕು. ಹಲ್ಲಿ ಬಾಲ ಅಲ್ಲಾಡಿಸಿದ್ದೂ ಮೇನಕೆ ಮೊಲೆ ಅಲ್ಲಾಡಿಸಿ ಕುಣಿದದ್ದು ಬಿ.ಎ., ಎಂ.ಎ.ಗಳಂಥ ಒಂದಕ್ಕಿಂತ ಇನ್ನೊಂದು ಹೆಚ್ಚಿನ ಯೋಗ್ಯತೆ ಪಡೆದ ಪರೀಕ್ಷೆಗಳೆಂದು ಹೇಗೆ ಹೇಳೋಣ.
10. ನನ್ನಂಥವರು ಇನ್ನೊಂದಿಷ್ಟು ಜನ ಇದ್ದರೆ ಈ ಕರ್ನಾಟಕದಲ್ಲಿ ಮರ‍್ಯಾದಸ್ತರೇ ಉಳಿಯುವುದಿಲ್ಲ.
11. ಕನ್ನಡದ ಸಾಹಿತಿಯಾಗಬೇಕಾದವನು ಮೊದಲು ಬ್ರಾಹ್ಮಣದ್ವೇಷಿಯಾಗಬೇಕಾಗುವುದು ಅನಿವಾರ‍್ಯ ಹಾಗೂ ಅದು ನ್ಯಾಯ.
12. ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು! ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!
13. ಬದುಕು ಎಂದರೆ ನನಗೆ ಅನಂತವೂ ಬುದ್ಧಿಯುತವೂ ಆದ ತಂತ್ರ, ರಾಜತಂತ್ರ.
14. ಸ್ತಬ್ಧ ಮೌನದಲ್ಲಿ ದೂರದ ಸಾವಿನಲ್ಲಿ ಹೆಜ್ಜೆ ಸಪ್ಪಳ ಕೇಳುತ್ತದೆ - ಯೌವ್ವನ ಅಲೆ ಎದ್ದ ಕೊಳದಂತೆ.
15. ಕೇವಲ ಅಭಿವ್ಯಕ್ತಿ ಮಾಧ್ಯಮದ ದೆಸೆಯಿಂದ ನನ್ನ ಮಹತ್ವದ ಅರ್ಥವೆಲ್ಲಾ ನನ್ನೊಳಗೇ ಉಳಿದುಕೊಂಡಿದೆ ಎಂದು ನನ್ನ ನಂಬಿಕೆ.
16. ಶಿಕಾರಿ ಎಂದರೆ ಉವಿನ ಅಳಿವಿನ ಹೋರಾಟ.
17. ಶಿಕಾರಿ ಒಂದು ಅನಂತವಾದ ಜೂಜು.
18. ಶಿಕಾರಿ ಒಂದು ವ್ಯಸನ. ಅದೊಂದು ಆಲೋಚನೆಗೆ ಹತ್ತುವ ಚಟ. ಆದರೆ ಶಿಕಾರಿಯನ್ನು ಕಂಡರೆ ನನಗೆ ಇಷ್ಟ. ಏಕೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಮಾಂಸದಾಸೆಗಂತೂ ಅಲ್ಲ.
19. ಅವಿವಾಹಿತರಾಗಿ ಒಟ್ಟಿಗೆ ಮಲಗುವುದು ಅಧಾರ್ಮಿಕ ಎಂದಲ್ಲ. ಎಲ್ಲಿ ಗರ್ಭಿಣಿಯಾಗಿಬಿಡುತ್ತಾಳೋ ಎಂಬ ಭಯದಿಂದ.
20. ಸೃಷ್ಟಿಯ ಬಗ್ಗೆ, ಜೀವನದ ಬಗ್ಗೆ, ಆಲೋಚಿಸಿದಂತೆಲ್ಲಾ ನನ್ನ ಬಗ್ಗೆಯೇ ನನಗೆ ಒಂದು ತಿಳಿವು ಮೂಡತೊಡಗಿತು.

Tuesday, February 02, 2010

‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!

“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು ದೊಡ್ಡ ವಿಷಯ? ನಾನೇ ಸ್ವತಃ ಬೆಳಗ್ಗೆ ಮತ್ತು ಸಾಯಂಕಾಲ ಸ್ವಲ್ಪ ಹಾಲು ಕರೆದು, ಉಳಿಕೆಯ ಹಾಲನ್ನು ಕರುವಿಗೆ ಉಣ್ಣಲು ಬಿಡುತ್ತೇನೆ” ಎಂದೆ.

ಮರು ದಿನ ಬೆಳಗಾಗುತ್ತಲೇ ಎಳೇ ಕರುವಿನ ದನ ಕೆಂಪಿ ‘ಅಂಬಾ, ಅಂಬಾ!’ ಎಂದು ಅರಚುತ್ತಾ ಇತ್ತು. ನಾನು ನನ್ನ ನಿತ್ಯದ ಯೂನಿಫಾರ್ಮ್ ಆದ ಅರ್ಧ ಪ್ಯಾಂಟ್(ಶಾರ್ಟ್ಸ್), ಟೀ ಶರ್ಟ್, ಮಣಿಗಂಟಿನ ವರೆಗೆ ಕವರ್ ಮಾಡುತ್ತಾ ಇದ್ದ ಬಾಟಾ ಕಂಪನಿಯ ‘ಹಂಟರ್ ಬೂಟ್” ಹಾಗೂ ಬೆಂಗಳೂರಿನಲ್ಲಿ ನಾನು ಕೊಂಡಿದ್ದ ಅಗಲ ಬ್ರಿಮ್‌ನ ಹ್ಯಾಟು ಧರಿಸಿ ಹಟ್ಟಿಗೆ ಹೋದೆ.

ಹಿಂದಿನ ದಿನ ಸಾಯಂಕಾಲವೇ ಕೆಂಪಿ ದನವನ್ನು ಪ್ರತ್ಯೇಕವಾಗಿ ಕರುಗಳ ಕೋಣೆಯಲ್ಲೇ ಬಾಲು ಕಟ್ಟಿ ಹೋಗಿದ್ದ. ನಾನು ನನ್ನ ಬಿಡಾರದಿಂದ ಹಾಲು ಕರೆಯಲು ಒಂದು ಪಾತ್ರೆ. ಅದರಲ್ಲಿ ಅರ್ಧವಾಸಿ ತಣ್ಣೀರು ತೆಗೆದುಕೊಂಡು ಹಟ್ಟಿಯ ಕಡೆ ಹೊರಟೆ. ನನ್ನ ತಾಯಿಯವರು ದನಗಳನ್ನು ಕರೆಯುವ ಮೊದಲು ಅವಕ್ಕೆ ಆಹಾರ ಕೊಟ್ಟು ಅವುಗಳ ಕೆಚ್ಚಿಲನ್ನು ತೊಳೆದು ಹಾಲು ಹಿಂಡುತ್ತಾ ಇದ್ದುದು ನೆನಪಿನಲ್ಲಿ ಇತ್ತು. ನಾನು ಕೂಡಾ ಹಾಗೆಯೇ ಮಾಡಲು ಹೊರಟಿದ್ದೆ.

ನನಗೆ ಆ ದಿನಗಳಲ್ಲಿ ಹುಲಿಯ ಹಾಲನ್ನು ಕರೆಯುವ ಸ್ಥೈರ್ಯ ಹಾಗೂ ಹುಮ್ಮಸ್ಸು ಇತ್ತು. ’ಯಕಶ್ಚಿತ್ ಒಂದು ನಾಟಿದನದ ಹಾಲು ಕರೆಯುವದೇನು ಮಹಾ!’ ಎಂದು ಕೊಳ್ಳುತ್ತಾ ನಮ್ಮ ಕೆಂಪಿ ದನ ಮತ್ತು ಕರು ಇದ್ದ ಹಟ್ಟಿಯನ್ನು ಪ್ರವೇಶಿಸಿದೆ.

ಧೈರ್ಯವಾಗಿ ‘ಕೆಂಪಿ, ಕೆಂಪಿ!’ ಎನ್ನುತ್ತಾ ಅದರ ಬಳಿ ಹೋದೆ. ಎರಡು ಸಲ ದನದ ಹೆಸರು ಹಿಡಿದು ಕರೆದಾಗಲೇ ‘ಹಾಲುಕರೆಯುವ ಕೆಲಸ ಅರ್ಧ ಮುಗಿಸಿದೆ’ ಎಂಬ ಭಾವನೆ ನನ್ನಲ್ಲಿ ಮೂಡಿತ್ತು.

ಕೆಂಪಿ ದನ ತನ್ನ ಕರುವಿನ ಮೈ ನೆಕ್ಕುತ್ತಾ ನಿಂತಿತ್ತು. ಅದು ನನ್ನ ಕಡೆಗೆ ಗಮನ ಕೊಡಲೇ ಇಲ್ಲ. ಅಟ್ಟದ ಏಣಿ ಹತ್ತಿ ಅದರ ಎದುರಿಗೆ ಒಂದು ಕಟ್ಟು ಒಣ ಹುಲ್ಲು ತಂದು ಹಾಕಿದೆ. ಅದು ಖುಷಿಯಿಂದ ಆ ಹುಲ್ಲನ್ನು ತಿನ್ನ ತೊಡಗಿತು.

ಅದರ ಪುಟ್ಟ ಕರು ಆಗಲೇ ಹೊಟ್ಟೆತುಂಬಾ ಆಗಲೇ ಹಾಲು ಕುಡಿದಿದ್ದರಿಂದ ಸಂತೋಷವಾಗಿ ನನ್ನ ಕಡೆ ಪಿಳಿ ಪಿಳಿ ನೋಡುತ್ತಾ ಇತ್ತು.

ನಾನು ದನದ ಎಡ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ತಂಬಿಗೆಯಲ್ಲಿ ಇದ್ದ ತಣೀರನ್ನು ಅದರ ಕೆಚ್ಚಲಿಗೆ ಎರಚಿ ಕೆಚ್ಚಲನ್ನು ತೊಳೆಯಲು ಕೈ ಹಾಕುವ ಮೊದಲೇ ಮಿಂಚಿನ ವೇಗದಲ್ಲಿ ಏನೇನೋ ನಡೆದು ಬಿಟ್ಟಿತು.

ನನ್ನ ಕಣ್ಣಿನ ಇದುರು ಏನೋ ಕಪ್ಪಗಿನ ವಸ್ತು ಸುಳಿದಂತೆ ಆಯಿತು.

ಅದು ನನ್ನ ಮುಖದ ಮೇಲೆಯೇ ಬಂದು ಇಳಿಯಿತು.

ಲಟ್! ಎಂಬ ಶಬ್ದ ಕೂಡಾ ಆಯಿತು.

ನಾನು ಆ ಕ್ಷಣದಲ್ಲೇ ಆಯತಪ್ಪಿ ಹಟ್ಟಿಯ ಶಿಲೆ ಹಾಸಿದ ನೆಲದ ಮೇಲೆ ಬಿದ್ದುಬಿಟ್ಟಿದ್ದೆ.

ನೆಲದಲ್ಲಿ ಬಿದ್ದಿದ್ದ ಸೆಗಣಿ ನನ್ನ ಮೈಗೆ ಮೆತ್ತಿಕೊಳ್ಳುತ್ತಾ ಇತ್ತು.

ನನ್ನ ಕೈಯ್ಯಲ್ಲಿ ಇದ್ದ ಪಾತ್ರೆ ಎಲ್ಲೋ ಹಾರಿ ಹೋಗಿತ್ತು.

ನನ್ನ ತಲೆಯಲ್ಲಿ ಅಗಲ ಬ್ರಿಮ್ ಉಳ್ಳ ಹ್ಯಾಟು ಇದ್ದಿದ್ದರಿಂದ ತಲೆ ನೆಲಕ್ಕೆ ಹೊಡೆದ ವೇಗಕ್ಕೆ ನನ್ನ ತಲೆ ಒಡೆದು ಹೋಗಲಿಲ್ಲ. ಬಿದ್ದ ರಭಸಕ್ಕೆ ನನ್ನ ಹ್ಯಾಟ್ ತಲೆಯಿಂದ ಕಳಚಿ ಸೆಗಣಿಯ ಮೇಲೆ ಅಂಗಾತ ಬಿದ್ದಿತು.

‘ನಾನಗೆ ಏನಾಯಿತು?’ ಎಂದು ಊಹಿಸುವ ಮೊದಲೇ ನನ್ನ ಮುಖದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. ಹೇಗೋ ಸುಧಾರಿಸಿಕೊಂಡು ಎದ್ದೆ. ನನ್ನ ತಲೆ ‘ಧಿಂ!’ ಎನ್ನುತ್ತಿತ್ತು. ಬಲ ಕಣ್ಣಿನ ಕೆಳಗೆ ಕೆಳದವಡೆಯ ತನಕ ತಡೆಯಲಾರದ ನೋವು ಪಸರಿಸಿತು. ಮುಖ ಮುಟ್ಟಿ ನೋಡಿಕೊಂಡಾಗ ಮುಖದ ಬಲಭಾಗ ಊದಿಕೊಳ್ಳುತ್ತಾಇರುವುದು ಸ್ಪಷ್ಟವಾಯಿತು.

ಮೆಲ್ಲನೆ ಕೆಳಗೆ ಬಿದ್ದಿದ್ದ ಹ್ಯಾಟ್ ಎತ್ತಿಕೊಂಡೆ. ಎಲ್ಲಿಗೋ ಹಾರಿ ಹೋಗಿದ್ದ ಪಾತ್ರೆಯನ್ನು ಹುಡುಕದೇ ‘ಅದು ಹಾಳಾಗಿ ಹೋಗಲಿ!’ ಎಂದು ಶಪಿಸುತ್ತಾ ಮೇಲೆ ಎದ್ದೆ. ಮೈ ಮೇಲೆ ಪಸರಿಸಿದ್ದ ಹಸೀ ಸೆಗಣಿಯ ವಾಸನೆ ತಡೆಯಲು ಅಸಾಧ್ಯ ಎನಿಸಿತು.

ನಾನು ದನದ ಕಡೆ ನೋಡಿದೆ. ಅದು ಏನೂ ನಡೆದಿಲ್ಲವೇನೋ ಎಂಬಂತೆ ತನ್ನ ಕರುವನ್ನು ನೆಕ್ಕುತ್ತಾ ಇತ್ತು. ನನಗೆ ದನದ ಮೇಲೆ ಸಿಟ್ಟು ಉಕ್ಕಿಬಂದಿತ್ತು.

ಪೆಟ್ಟು ತಿಂದ ನೋವಿನಿಂದಾಗಿ ನನ್ನಲ್ಲಿ ನಿಧಾನವಾಗಿ ವಿವೇಕವೂ ಮೂಡಿ ಬರುತ್ತಿತ್ತು. ‘ಆ ಪುಟ್ಟ ಕರುವಿಗೆ ಸೇರಿದ ಹಾಲನ್ನು ಹಿಂಡಿ ತೆಗೆಯುವ ಅಧಿಕಾರ ನಿನಗೆಲ್ಲಿ?’ ಎಂದು ನನ್ನ ಒಳಮನಸ್ಸು ನನ್ನನ್ನು ಕೇಳುತ್ತಾ ಇತ್ತು.

ಮುಖವನ್ನು ಇನ್ನೊಮ್ಮೆ ಸವರಿಕೊಂಡು ನೋಡಿದೆ. ‘ಯಾವ ಹಲ್ಲೂ ಕಿತ್ತು ಹೋಗಿಲ್ಲ. ದವಡೆಯ ಎಲುಬು ಮುರಿದಿಲ್ಲ’ ಎಂದು ಖಾತ್ರಿ ಮಾಡಿಕೊಂಡೆ. ದಪ್ಪವಾಗಿ ಪೊದೆಯಂತೆ ಬೆಳೆದಿದ್ದ ಗಡ್ದದ ಕೂದಲುಗಳು ನನ್ನ ದವಡೆಯ ಎಲುಬು ಮತ್ತು ಹಲ್ಲುಗಳನ್ನು ಕಾಪಾಡಿದ್ದುವು.

‘ಕನ್ನಡಿ ನೋಡಿಕೊಳ್ಳೋಣ!’ ಎಂದರೆ, ಗಡ್ದ ಧಾರಿಯಾದ ನನ್ನ ಮನೆಯಲ್ಲಿ ಕನ್ನಡಿಯೇ ಇರಲಿಲ್ಲ. ಶೇವಿಂಗ್ ಅಗತ್ಯವೇ ಇಲ್ಲದ ಮುಖ! ತಲೆಯಲ್ಲಿ ಬಾಚಣಿಗೆ ಬೇಡದ "ಕ್ರೂ"ಕಟ್! ಗುಡಿಸಲಿಗೆ ಹೋಗಿ ಸ್ಟೈನ್‌ಲೆಸ್ ಸ್ಟೀಲಿನ ಊಟದ ತಟ್ಟೆಯಲ್ಲಿ ಮುಖ ನೋಡಿಕೊಂಡೆ. ಯಾರದೋ ಮುಖ ಬಲ ಬದಿ ಊದಿಕೊಂಡಂತೆ ಕಂಡಿತು. ಬಲಕಣ್ಣು ಊದಿಕೊಂಡು ಅರ್ಧ ಮುಚ್ಚಿತ್ತು.

ನಾನು ಮಾಮೂಲಿಯಾಗಿ ಸ್ನಾನಕ್ಕೆ ಉಪಯೋಗಿಸುತ್ತಾ ಇದ್ದ ಮಾರ್ಗೋ ಸೋಪ್ ಹಿಡಿದು ನೇರವಾಗಿ ನದಿಯ ಬದಿಗೆ ನಡೆದೆ, ಶೂ ಮತ್ತು ಹ್ಯಾಟ್ ಸಮೇತ ನೀರಿಗಿಳಿದು ಮೈಗೆ ಮೆತ್ತಿದ ಸೆಗಣಿ ತೊಳೆದುಕೊಂಡೆ. ಹರಿಯುವ ನೀರಿನಲ್ಲಿ ಹ್ಯಾಟ್ ಮತ್ತು ಬೂಟ್ ತೊಳೆದು ಬದಿಗೆ ಇರಿಸಿದೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದು ಬಟ್ಟೆ ಬದಲಾಯಿಸಿದೆ.

ಬೆಳಗ್ಗಿಗೆ ಇಟ್ಟುಕೊಂಡ ಹಿಂದಿನ ದಿನದ ಹಾಲು ಆಗಲೇ ಮುಂಜಾನೆಯ ಟೀ ಮಾಡಿದಾಗ ಖರ್ಚಾಗಿತ್ತು. ಬಿಸಿ ಬಿಸಿಯಾಗಿ ಒಂದು ಮಗ್ ಕಪ್ಪು ಚಹಾ ಮಾಡಿ ಕುಡಿದೆ.

ಹೊಳೆಯ ನೀರಿನ ಅಭಿಷೇಕದಿಂದ ಮುಖದ ಊತ ಕಡಿಮೆ ಆಗುತ್ತಾ ಇತ್ತು.

ಕೆಲಸದ ಆಳುಗಳು ಇನ್ನೂ ಬಂದಿರಲಿಲ್ಲ. ಗಂಟೆ ನೋಡಿದರೆ ಏಳೂವರೆ! ಅರೆ! ನನ್ನ ಕೈಯ್ಯಲ್ಲಿ ಇದ್ದ ಸ್ವಿಸ್ “ಎನಿಕಾರ್” ವಾಚ್ ಇನ್ನೂ ನಡೆಯುತ್ತಾ ಇತ್ತು! ಅದು ನೀರು ಕುಡಿದಿರಲೂ ಇಲ್ಲ!

ಪೆಟ್ಟು ತಿಂದ (ಒದೆಸಿಕೊಂಡ) ಮುನಿಸು ಇನ್ನೂ ಕಡಿಮೆ ಆಗಿರಲಿಲ್ಲ. ಆ ಕೆಂಪಿ ಎಂಬ ದನಕ್ಕೆ ಚೆನ್ನಾಗಿ ಹೊಡೆದು ಬಿಡೋಣಾಂತ ಒಮ್ಮೆ ಅನ್ನಿಸಿತು. ‘ಎಲೋ ಬುದ್ಧಿಯುಳ್ಳ ಮನುಷ್ಯ ಪ್ರಾಣಿಯೇ! ದನದ ಮೇಲೆ ಯಾಕೆ ಸಿಟ್ಟು ಮಾಡುತ್ತೀಯಾ? ತಪ್ಪು ನಿನ್ನದೇ ಅಲ್ಲವೇ? ನಿನಗೂ ಅದು ಹಾಲು ಹಿಂಡಲು ಬಿಡುತ್ತಿತ್ತೋ ಏನೋ? ನಿನ್ನ ವಿಚಿತ್ರ ವೇಷ! ಮುಖ ತುಂಬ ಗಡ್ಡ! ತಲೆಯ ಮೇಲೆ ಒಂದು ಅಗಲ ಹ್ಯಾಟು! ಅದರ ಮೇಲೆ, ಚಳಿಗಾಲದ ಈ ಹವಾಮಾನದಲ್ಲಿ ಅದರ ಕೆಚ್ಚಲಿಗೆ ಮಹಾ ಬುದ್ಧಿವಂತನಂತೆ ತಣ್ಣೀರು ಎರೆಚಿದೆ! ನೀನು ಮಾಡಿದ್ದು ತಪ್ಪಲ್ಲವೇ?’ ಎಂದಿತು ಸುಪ್ತ ಮನಸ್ಸು.

‘ಹೌದು! ನಾನು ಉಗುರು ಬೆಚ್ಚನೆಯ ನೀರು ಕೊಂಡೊಯ್ಯ ಬೇಕಿತ್ತು! ಹೊಳೆಯಲ್ಲೇ ದಿನಾ ತಣ್ಣೀರಲ್ಲಿ ಮುಳುಗಿ ಸ್ನಾನ ಮಾಡುವ ಈ ನರ ಪ್ರಾಣಿಗೆ, ಒಂದೆರಡು ದಿನಗಳ ಹಿಂದಷ್ಟೇ ಕರು ಹಾಕಿದ ಆ ದನಕ್ಕೆ ಚಳಿ ಆಗಬಹುದೆಂಬ ಪರಿಜ್ಞಾನವೇ ಇರಲಿಲ್ಲ! ಸರಿ! ನಾನು ತಪ್ಪೇ ಮಾಡಿರಬಹುದು. ಆದರೆ, ಆ ದನ ನನಗೆ ಅಷ್ಟು ಜೋರಾಗಿ ಒದೆಯಬೇಕಿರಲಿಲ್ಲ! ನಿಧಾನವಾಗಿ ಕಾಲು ಝಾಡಿಸಿ ಅದು ಹೆದರಿಸಿದ್ದರೆ ಸಾಕಿತ್ತು!’ ಅಂತ ನನ್ನೊಳಗೇ ಸ್ವಲ್ಪ ಸಮಾಧಾನ ಮಾಡಿಕೊಂಡೆ.

ನನ್ನ ಮನೆಯೊಳಗೆ ಒಂದು ಚಿಕ್ಕ ನೀಲಿ ಪೈಂಟ್‌ನ ಡಬ್ಬಿ ಮತ್ತು ಬ್ರಶ್ ಇತ್ತು. ಅದನ್ನು ಒಪಯೋಗಿಸಿ ನನ್ನ ಮನೆಗೆ K ಸ रि ಎಂಬ ಹೆಸರನ್ನು ಬರೆದಿದ್ದೆ. ಕೂಡಲೇ ಆ ಡಬ್ಬವನ್ನು ಹುಡುಕಿ ನಮ್ಮ ಹಟ್ಟಿಗೆ zoo ಎಂಬ ಹೆಸರನ್ನು ಬರೆದು ಅಂದು ತಿಂದ ಒದೆಗೆ ಸೇಡು ತೀರಿಸಿಕೊಂಡೆ.
 
ಆನಂತರ ನಾನು ಅಂದಿನ ಒದೆ ತಿಂದ ಪ್ರಸಂಗವನ್ನು ಬಲವಂತವಾಗಿ ಮರೆತೇ ಬಿಟ್ಟೆ!
 
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಹಲವಾರು ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ


(ಚಿತ್ರಗಳು: ಲೇಖಕರವು)