Wednesday, April 16, 2014

ಪೆಣ್ಗೆ ತನುವಲ್ತು ಹೃದಯಂ!

ಮೇಳ:   
ಇತ್ತ ಸುಗ್ರೀವಂಗೆ ಕಿಷ್ಕಿಂಧೆಯಂ ಕೊಟ್ಟು;
ವನವಾಸ ನೋಂಪಿಯಂ ಬಿಡದೆ,
ಬಳಿಯ ಪರ್ವತ ಮಾನ್ಯವಂತನ ಗುಹಾಗೃಹದಿ
ರಘೂದ್ವಹಂ ಲಕ್ಷ್ಮಣನೊಡನೆ ಮಳೆಯ ಮುಗಿವಂ ಪಾರುತಿರ್ದನ್;
ವಾಲಿಯ ಕೊಲೆಯ ಮೈಲಿಗೆಗೆ ತಪಂಬಡುವಂತೆವೋಲ್
ಧಗಿಸುತಿರಲಾತ್ಮಮಂ ಸೀತಾ ವಿರಹ ಚಿಂತೆ!
ರಘೂದ್ವಹಂ ಮಳೆಯ ಮುಗಿವಂ ಪಾರುತಿರ್ದನ್;

ಅತ್ತಲ್ ಆ ಪತ್ತುತಲೆ ಬಿರುದವೊತ್ತನ್,
ಮುಚ್ಚೆವೋದ ಇಳೆಗುವರಿಯಂ ಪೊತ್ತು,
ಕಾಡು ಹೊಳೆ ಕಡಲ್ ಬಿತ್ತರವನುತ್ತರಿಸಿ,
ತ್ರಿಕೂಟಗಿರಿ ಶೃಂಗ ಶೃಂಗಾರದಾ ಕನಕ ಲಂಕಾ ಲಕ್ಷ್ಮಿಯ ಅಂಕಂ
ಎನಲ್ ಎಸೆದಿರ್ದ ತನ್ನಾ ಸಿರಿಯರಮನೆಗೆ.
ಮಿಳ್ತುನೆಳಲಂತೆವೋಲ್ ಇಳಿದನ್
ನಿಧಿಯ ಬೈತಿಡುವಂತೆ ತಸ್ಕರಂ,
ಭಾಸ್ಕರಕುಲಪ್ರಾಣಹೃದಯೆಯಂ
ಮೈಥಿಲಿಯನಿಳುಹಿದನ್ ಗುಪ್ತಗೃಹಮಧ್ಯೆ.
ಮೇಣ್ ಕರೆಕಳುಹಿದನ್ ಚಂದ್ರನಖಿಗೆ;
ತಿಳುಹಿದನೆಲ್ಲಮಂ ವಾರ್ತೆಯಂ.

ದಶಶಿರ ಪ್ರಣಯ ಮಂತ್ರಣಕಾಕೆ ಸಚಿವಳ್?
ಅಣ್ಣನ ಬೇಟವೇಂಟೆಯಂ ಕಾಣುತಂ
ತನ್ನ ಬೇಟದ ಬೇಂಟೆಯುಂ ಸಫಲಮಹುದೆಂದು ಹಿಗ್ಗಿದಳ್.
ಮಿಂಚುತಿರೆ ನೂರು ಭಾವಗಳೊರ್ಮೆಯೆ
ಆ ಪ್ರಣಯ ತೃಷಿತೆಯ ಮನದ ಮೂಷೆಯೊಳ್,
ಹೆಬ್ಬಯಕೆ ಬಯಲಾಗದಂತೆ ಹುದುಗಿಸಿ ಹೃದಯ ಕಾಂಕ್ಷೆಯಂ
ರಾಕ್ಷಸೇಂದ್ರಂಗೆ ಒರೆದಳಿಂತು:

ಚಂದ್ರನಖಿ:   
    ಹೇ ದೈತ್ಯೇಂದ್ರ,
    ನಿನ್ನೊಲ್ಮೆಯಂ ಕದ್ದು ತಂದಾಯ್ತು.
    ಇನ್ನು ಅದಂ ಗೆದ್ದು ನಿನಗೀವ ಜಾಣ್ಮೆ, ನನಗಿರಲಿ.
    ಪೆಣ್ಣ ಬಗೆ ಪೆಣ್ಗಲ್ಲದೆ ಅರಿವಹುದೆ?
(ಮೈಮರೆತು ಬಿದ್ದಿದ್ದ ಸೀತೆಯನ್ನು ನೋಡಿ, ನಗುತ್ತ)
ಇನ್ನೆಗಂ ನೀಂ ಗೆಲಿದ, ನಿನ್ನನೊಲಿದ
ಅತ್ತಿಗೆಯರಂತೆ ಅಲ್ಲಂ ಈ ಪೆಣ್ ಕಣಾ!
ನಿನ್ನ ಛಲಕೆ ಇವಳ ಛಲ ಪಡಿಮಲೆಯೆ
ಗೆಲ್ವರಾರ್ ಅದನರಿಯೆನಯ್!
ಮೂರ್ಛೆಯೊಳುಂ ಎಂತು ದೃಢತೆ ಪಲ್ಗಚ್ಚಿದಂತಿದೆ, ನೋಡು,
ಕೋಮಲೆಯ ಮುಖದಿ!

ರಾವಣ:   
(ಮನಸ್ಸಿನ ಅಳುಕನ್ನು ಮುಚ್ಚಿಡುತ್ತ)
ನೀಂ ಪೇಳ್ವುದೇನ್, ತಂಗೆ?
ಗಂಡಹೆನ್ ನಾನಾದೊಡಂ ಪೆಣ್ಗಳೆರ್ದೆಯಾಳಮಂ ಮುಳುಗಿ ನೆಲೆಯರಿತನೆನ್.
ಲಂಕೆಯೊಡೆಯಂಗೆ ಸೋಲದಾ ಪೆಣ್ಣಿಲ್ಲಂ ಇನ್ನೆಗಂ ಈ ಕಮಲಭವ ಸೃಷ್ಟಿಯೊಳ್!...
ಏನಾನುಮಕ್ಕೆ ಆ ಮತಂ ಅದಿರ್ಕೆ...
ನನ್ನಿಚ್ಛೆ ಕಯ್ಗೂಡುವಂತೆಲ್ಲ ತೆರದೊಳುಂ ನೀಂ ಗೆಯ್ಯೆ, ಕೇಳ್,
ನಿನ್ನಾಸೆಯುಂ ಬಯಲಪ್ಪುದಲ್ತು; ತಿಳಿ, ತಂಗೆ!
(ರಾವಣ ನಿರ್ಗಮನ)
    (ಚಂದ್ರನಖಿ, ಸೀತೆಯನ್ನು ಮೆತ್ತನೆಯ ಹಾಸಿಗೆಗೆ ಎತ್ತಿ ಮಲಗಿಸಿ, ಲಂಕಾ ಲತಾಂಗಿಯರನ್ನು ಕರೆದು ಸೀತೆಗೆ ಶುಶ್ರೂಷೆಯನ್ನು ಮಾಡಿಸುತ್ತಾಳೆ)

ಸೀತೆ:   
(ನಿದ್ದೆಯಿಂದ ಗಾಬರಿಗೊಂಡು ಎಚ್ಚೆತ್ತು)
ಆತನಂ ಕಾಡೊಳುಳಿದು ಐತಂದೆವು,
ಸೌಮಿತ್ರಿ, ಕೇಡಾಯಿತಯ್ಯಯ್ಯೊ!
(ಏಳಲಾರದೆ ಎದ್ದು ಮತ್ತೆ ಬಿದ್ದು, ಪೂರ್ಣವಾಗಿ ಎಚ್ಚರಗೊಂಡ ಸೀತೆಯ ಕಣ್ಣಿಗೆ ಚಂದ್ರನಖಿ ಬೀಳುತ್ತಾಳೆ. ಅವಳನ್ನು ಕಂಡವಳೇ ಸೀತೆ ಮತ್ತೆ ಮೂರ್ಛೆ ಹೋಗುತ್ತಾಳೆ. ಶೂಶ್ರೂಷೆಯಿಂದ ಎಚ್ಚೆತ್ತವಳನ್ನು ಕುರಿತು)

ಚಂದ್ರನಖಿ:   
ಎರ್ದೆಗಿಡದಿರು ಆರ್ಯೆ;
ಸಂಸ್ಕೃತಿಯ ಮಡಿಲೊಳಗಿರ್ಪೆ; ಸರ್ವ ಪರಿಯಿಂ ಸುರಕ್ಷಿತಳೆ ನೀಂ.
ಮನ್ನಿಸೌ ಅಣ್ಣನ ಅಚಾತುರ್ಯಮಂ.
ರಾಜಕೀಯಮಂ ಸಾಧಿಸುವ ಸಾಸಕೆಸಗಿದನಿಂತು ಬಗೆದಪ್ಪಿ ನಿನ್ನೊಳಪರಾಧಮಂ.
ಮಾನಿನಿಯ ಮಾನಕ್ಕೆ ಕುಂದಿನಿತುಂ ಆಗದೊಲಾನೆ ಹೊಣೆ, ಸನ್ಮಾನ್ಯೆ.
ತಿರ್ದ್ದಿದಪೆನೆಂತಾದೊಡಂ ಅಣ್ಣನ್ ಗೈದುದಂ ಈ ಅವಿವೇಕಮಂ.
ತಾಳ್ಮೆಯಿಂದೆನ್ನ ಪೇಳ್ವಂತೆ ನೀನೆಸಗವೇಳ್ಕುಂ
ಎಂದು ಇದೊ ಬೇಡಿದಪ್ಪೆನಾಂ, ಹೇ ರಾಜರಾಜೇಶ್ವರಿ!

ಸೀತೆ:
(ಬೆರಗಿನಿಂದ)
ವಿನಯಶೀಲೆ, ಲಂಕಾ ಲಲಿತ ಬಾಲೆ,
ನೀನಿಂಗಿತಜ್ಞೆ ಅಪ್ಪೊಡೆ
ತೊಲಗಿಸು ಈ ಬಳಸಿ ಸುತ್ತಣಿರ್ಪ ಈ ಭೋಗಸರ್ಪ ಸುವಿಲಾಸಮಂ.
ಪತಿದೂರರಪ್ಪ ಆರ್ಯವನಿತೆಯರಿಗೆ ಈ ಪರಿಯ ಸುಖಜೀವನಂ ಹೇಯಮೌ.
ಬನದ ಬಾಳ್ತೆಯಂ ನೋಂಪಿಗೊಂಡೆನ್ ಪತಿಯ ಕೂಡೆ.
ನನಗದರಿಂದೆ, ನೋಂಪಿ ಮುಗಿವನ್ನೆಗಂ
ಕಾಡೆ ಮನೆ, ವಲ್ಕಂ ಉಡೆ, ಬೇರು ಬಿಳ್ಕೆಗಳೆ ಓಗರಂ.

ಚಂದ್ರನಖಿ:
ಪ್ರಭುವಾಜ್ಞೆಯಂ ಮೀರಲಾರೆನ್, ಮಹಿಳೆ.
ಚಕ್ರವರ್ತಿ ತನೂಜೆ ನೀಂ,
ನಿನಗುಚಿತಮಪ್ಪಂತೆವೋಲ್ ಸತ್ಕರಿಸಲೆಂದು ಎಮಗೆ ಕಟ್ಟಾಣೆ.
ನಿನ್ನಾಸೆಗಿನಿತು ಕೊರೆಯಾಗದೊಲ್ ನಿನ್ನಿಷ್ಟಮಂ ಸಲಿಸವೇಳ್ಕುಂ ಎಂದೆಮಗಾಜ್ಞೆ.
ನೀನರಿಯೆ ರಾವಣನ ಹೃದಯದ ಔದಾರ್ಯಮಂ.
ನಿನ್ನೊಳಾತಂಗೆ ಬಹುಗೌರವಂ.
ನಿನಗೋಸುಗಂ ತನ್ನ ಸರ್ವಸ್ವಮಂ ಯಜ್ಞಗೈಯಲ್ಕೆ ಅವಂ ಸಿದ್ಧನೆ ದಿಟಂ!

ಸೀತೆ:
(ನಿರ್ದಾಕ್ಷಿಣ್ಯವಾಗಿ)
ಸಾಕು, ಬಿಡು, ರಾಕ್ಷಸ ಸುಶೀಲೆ;
ನನ್ನಿಷ್ಟಮಂ ನಡೆ; ಕೃತಜ್ಞೆಯೆಂ.

ಮೇಳ:
ಮೇಲೊಂದುಮುಂ ನುಡಿದೋರದೆಯೆ ಸೀತೆಯಾದಳ್ ಶಿಲಾಮೌನಿ.
ಚಂದ್ರನಖಿಯೆಂದುದಕೆ ಕಿವಿಗೊಟ್ಟಳಿಲ್ಲಂತೆ ಮೇಣ್
ಬಳಸಿರ್ದ ಭೋಗಕ್ಕೆ ಕಣ್ಗೊಟ್ಟಳಿಲ್ಲಾಕೆ;
ಕಿವುಡಾಗಿ, ಕುರುಡಾಗಿ, ಮರವಟ್ಟವೋಲಾಗಿ,
ಹೊರಗಂ ಮರೆತು, ಮರುಗಿ ನೆನೆದಳೆರ್ದೆಯನ್ನನಂ
ಮೇಣ್ ಅವಂಗೆ ಒದಗಿದ ಅತಿ ಸಂಕಟದ ಬನ್ನಮಂ.

ಹಗಲು ಬಯ್ಗುಗಳ ಅರಿವನ್ ಅರಿಯಲಾರದ ಗುಪ್ತ ಗೃಹದಿ,
ಭೂಮಿಯೆ ಶಯ್ಯೆಯಾಗಿ, ಭೂಸುತೆ
ತನ್ನ ಜೀವಿತೇಶ್ವರನ ನೆನೆದನಶನವ್ರತೆಯಾಗಿ ಕಳೆದಳೇಳ್ಪಗಲ್ಗಳಂ.
ಮೀಯಲಿಲ್ಲ ಉಡಲಿಲ್ಲ:
ಪಂಚವಟಿಯಿಂದಂದಯೋಧ್ಯೆಗೆ ಮರಳಲೆಂದು
ಗೆಲುವಿನಿಂದುಟ್ಟುಕೊಂಡಿರ್ದ ನಾರುಡೆಯದಂ,
ದನುಜೇಂದ್ರನಿಂ ಬಿಡಿಸೆ ಮನುಜೇಂದ್ರಚಂದ್ರಮಂ ಬರ್ಪಿನಂ,
ತನ್ನ ರಕ್ಷೆಗೆ ಕೋಂಟೆಯಕ್ಕೆಂದು ಬೇರೆಯುಡಲಿಲ್ಲ?
ಮೇಣ್, ಪ್ರಿಯನ ಸಾನ್ನಿಧ್ಯಮಂ ಪಡೆವನ್ನೆಗಂ
ಪ್ರಿಯೆಗೆ ಮೈಲಿಗೆಯ ಮಡಿಯೆಂದು ಮಿಂದಳಿಲ್ಲ?
ಮೇಣ್, ಬಾಚದಾ ಮುಡಿಗೆ ಜಟೆಯೇರ್ದು
ಮುಕ್ತಿಯಂ ಪಾರುವ ಮುಮುಕ್ಷುವೋಲಿರ್ದಳ್ ಆ ಆರ್ಯೆ,
ಸೀತಾದೇವಿ, ದಿನಕರಕುಲನ ಹೃದಯ ಭಾರ್ಯೆ.

ದೈತ್ಯೇಂದ್ರನ್ ಈ ವಾರ್ತೆಯಂ ಕೇಳುತ್ತೆ ಕುದಿದನೆದೆಯಲಿ.
ನವ್ಯರತ್ನ ಕಾಂಚನ ಖಚಿತ ವಸನ ವೈಭವದಿಂದೆ
ಬಗೆಯ ತಳ್ಳಂಕಮಂ ಮರಸಿ ಬಂದನು ಸೀತೆಯಿರ್ದೆಡೆಗೆ,
ಕಂಡೊಡನೆ, ಮುಖಕೆ ಖಿನ್ನತೆ ಮೂಡಿ,
ಸುಯ್ವ ಕಿನಿಸಿಂ ತನ್ನ ತಂಗೆಯಂ ನೋಡಿ,
ತಿರುಗಿದನ್ ಜನಕಜೆಯೆಡೆಗೆ ಮತ್ತೆ:

ರಾವಣ:
ಸಲ್ಲದು, ದೇವಿ, ಶಠವರ್ತನಂ ನಿನ್ನಾರ್ಯ ಸಂಸ್ಕೃತಿಗೆ:
ಮೇಣ್ ಆತ್ಮಹತ್ಯೆ ತಾನ್ ಈ ನಿರಶನಂ.
ಸಲ್ಲಿಸಲ್ಕೆ ಆಗದಿರಲಾಶೆಯಂ ಕೊಲ್ಲುವರೆ?
ಪೇಳ್, ಕೊಂದ ಮಾತ್ರದೊಳಾಶೆ ಸಂದಂತೆ ತಿಳಿಯುವರೆ?
ನಿನ್ನಿಷ್ಟಮಂ ನಡೆಯಿಂ ಎಂದಾಣತಿಯನೊರೆದು ಪೋದೆನಾಂ.
ಮೀರ್ದರಾಣತಿಯನೀ ಮಂದಮತಿಗಳ್ ಮಂದಿ.
ಮನ್ನಿಸಿ ತಪ್ಪನ್ ಆಹಾರಮಂ ನಿನಗೆ ತಕ್ಕುದಂ ಕೊಂಡು,
ನಿನಗೊಪ್ಪುವ ಆವಾಸಮಂ ಪೊಕ್ಕು,
ನೋಂಪಿಗೆ ಮಾಡು ಯೋಗ್ಯಮಂ,
ಕೇಳ್, ಲಂಕೆಯಂ ಸುತ್ತಿದೆ ಮಹಾಶರಧಿ; ದುರ್‌ಲಂಘ್ಯಂ ಆರ್ಗೆಯುಂ.
ತೀರದೊಳ್ ಅಶೋಕವನಂ ಇರ್ದುದು ಒಂದೆತ್ತರದ ಮಲೆಯ ಕೋಡಿನಲಿ.
ನೀಮಿರ್ದ ಆಶ್ರಮಕ್ಕೆರಡು ಮಡಿ ಚೆಲ್ವೆಸೆವುದಲ್ಲಿ:
ಬನ ಚೆಲ್ವು, ಬಾನ್ ಚೆಲ್ವು. ನಿಚ್ಚಮುಂ ಮೊರೆವ ಬಿತ್ತರ ಕಡಲ ಕಡುನೀಲಿಯಾ ಚೆಲ್ವು!
ಸಮೆದಪುದಲ್ಲಿ ತೃಣಗೃಹಂ, ನಿನ್ನಾಸೆ;
ಮೇಣ್ ನನ್ನಾಜ್ಞೆ...

ಮೇಳ:
ನಾನಾ ತುಮುಲ ಭಾವ ಘರ್ಷಣೆಗೆ ರಣನಾದ ರಾವಣಂ,
ತಂಗೆಗೆ ರಹಸ್ಯಮಂ ಬೆಸಸಿ, ಪೋದನಲ್ಲಿಂ
ಪೂಜ್ಯೆ ಮಯನಂದನೆಯ ಮಂದಿರಕೆ.
(ಸೀತೆಯನು ಎತ್ತಿಕೊಂಡು ಹೋಗುವರು)

    ಆ ಕ್ಷಣಂ ಅವನಿಜೆಯನ್ ಕಡಲ ದಡದೆತ್ತರದ
    ಅಶೋಕವನದ ಎಲೆವನೆಗೆ ಸಾಗಿಸಿದರ್.

ಸಾಗರದ ನೀರ್‌ನೀಲಿಯಾಗಸದ ಸುರನೀಲಿ,
ದೂರ ವಿಸ್ತೀರ್ಣದಾ ಹರಿದಂತ ವಿಶ್ರಾಂತ
ಹರಿತ ಕಾನನ ಪರ್ಣದರ್ಣವ ಮೃದುಲ ನೀಲಿ
ಕಣ್ಣಾಲಿಗೆ ಇನಿಯನೊಡಲಿನ ವರ್ಣವನೆ ಹೋಲಿ ಶೋಭಿಸಿರೆ,
ಮೈಥಿಲಿಗೆ ಅಚ್ಚರಿಯೆನಲ್ಕೆ ಶಾಂತಿ ಸುಳಿದದು ಆತ್ಮಕ್ಕೆ.

ಬನವಕ್ಕಿಯಿಂಚರದೊಡನೆ,
ಸುಳಿವ ತಂಬೆಲರೊಡನೆ,
ಹೊಸ ಹಸುರನುಕ್ಕಿಸುತೆ ಹೊಮ್ಮಿದ ಗರುಕೆಯೊಡನೆ
ಮೂಡಿದುದು ಹೊಸನೆಚ್ಚು ಕೌಸಲೆಯ ಸೊಸೆಗೆ.

ಪರದೇಶದೊಳ್ ಪರಿಚಿತರ್ ಕಾಣಲೊಡಮಳಿದಾಸೆ
ತಾನುಸಿರೆಳೆದು ಮರುವುಟ್ಟು ಪಡೆಯದೇನಾರ್ಗಾದೊಡಂ?
ಮಿಂದಳಿಲ್ಲಾಕೆ ಮೇಣುಟ್ಟುದಂ ಬಿಟ್ಟು ಮಾರುಟ್ಟಳಿಲ್ಲಾಕೆ;
ಕೊಟ್ಟ ಪಣ್‌ಬೇರ್ಗಳಂ ವಿಶ್ವದೇವರ್ಕಳಿಗೆ
ನೈವೇದ್ಯಮಂ ಮಾಡುತ ಉಂಡಳ್ ಪ್ರಸಾದಮಂ,
ಪ್ರಾಣೇಶನ ಆಗಮನದಾಶೆಯಿಂದ
ಅನ್ನೆಗಂ ಪ್ರಾಣ ಸಂಧಾರಣಾರ್ಥಂ ಉಂಡಳ್ ಪ್ರಸಾದಮಂ,
ಮತ್ತಂ ಅನವರತಮಾ ರಾಮನಾಗಮನಕ್ಕೆ
ರಾವಣೋದ್ಧಾರಕ್ಕೆ ಮೇಣಾತ್ಮಮಂಗಳಕೆ
ವೈರಮಂ ಹಿಂಸೆಯಂ ತೊರೆಯಲೆಳಸುವ ತಪದ ಸಾಧನೆಗೆ
ಪ್ರಾರ್ಥನಾ ನಿರತಳಾದಳ್ ಶಿವದ ಸಫಲತೆಗೆ ಆ ದೇವಿ,:
ಪ್ರಾರ್ಥನಾ ತೀವ್ರತೆಯ ಸಾತ್ವಿಕ ತಪಶ್ಶಕ್ತಿ,
ತಾಂ ಸ್ವಯಂಕ್ರಿಯೆಯಾಗಿ ಚೋದಿಸದೆ ಸೃಷ್ಟಿಯಂ? ಪೇಳ್,
ಸೇತುಗಟ್ಟದೆ ಕಷ್ಟದಂಬುಧಿಗೆ? ಪೇಳ್,
ಮೇಣಂತೆ ತಾಂ ತಿರ್ದದೇನುಳಿಯುವುದೆ? ಪೇಳ್
ಇಂದಲ್ಲದಿರೆ ನಾಳೆ ಪಾಪಬುದ್ಧಿಯ ಜೀವಿತದ
ವಕ್ರರೇಖೆಯಂ ಪುಣ್ಯ ಋಜುಪಥಕೆ?

(ಇತ್ತ ಮಂಡೋದರಿಯ ಅರಮೆನಯ ದೇವಾಲಯದಲ್ಲಿ)
ಸುಯ್ಗಾಳಿಯಾಗಿ ಕಿವಿಯಿಂ ಕಿವಿಗೆ ಸುಳಿದುದು ಸುದ್ದಿಬೆಂತರಂ.
ತರತರದ ಭಾವನೋಚ್ಛ್ವಾಸದಿಂ
ಲಂಕಾ ಜನದ ಮನದ ವಾರ್ಧಿಯಂ
ಸಂಮಥಿಸುತ ಐತಂದುದಾ ಬೂತು
ಮಯನಂದನೆಯ ದೇವಮಂದಿರಕೆ.
ಕಂಡೊಡನೆ ಆ ಭೀಕರಾಕಾರಮಂ
ದೇವ ಪೂಜಾ ವ್ರತಂ ತನಗೆ ಪೊಳ್ಳಾದುದಾ ಎನುತೆ,
ಇಂದ್ರಜಿನ್ ಮಾತೆ ತಾಂ ಹಮ್ಮೈಸಿದಳ್.

ಬೂತು:
ಬೆಚ್ಚದಿರಂಬೆ, ನನ್ನ ಈ ವಿಕೃತಾಂಗಮಂ ನೋಡಿ.
ಹಿತಮೆನಿತೊ ಸೂಳ್ ಇಂತೆ ನನ್ನವೊಲ್ ಬರ್ಪುದಪ್ರಿಯತೆ ಆಕೃತಿವೆತ್ತು.
ಈಶಕೃಪೆಗಿಹುದು ನಾನಾ ಮುಖಂ.
ಸುಖದಂತೆ ದುಃಖಮುಂ ಋತಚಿತ್ ಕೃಪಾ ನೃಕೇಸರಿ ಸಖಂ.
ನಿನ್ನ ಪತಿಯ ಅಭ್ಯುದಯಕೆ ಏಣಿಯೊಡ್ಡಿದೆ ಬಿದಿಯ ಕರುಣೆ.
ಸೀತಾಹರಣಮದೆ ಮೊದಲ ಸೋಪಾನಂ.
ಶ್ರೀ ರಾಮನರ್ಧಾಂಗಿಯೊಡನೆ ನೀನೆರ್ದೆಗೂಡಿ ಬೇಡಿದೊಡೆ,
ಕೈಸಾರ್ವುದೌ ರಾವಣೋದ್ಧಾರ ಸತ್ಫಲಂ!

ಮೇಳ:
(ದೇವಮಂದಿರದೊಳಗೆ ರಾವಣನ ಆಗಮನ)
ಹೊಸ್ತಿಲ ದಾಂಟಿ ನಿಂದೊಮ್ಮೆ ಕಣ್ಣಟ್ಟಿ ನೋಡುತಾ
ಪೂಗಳಿಂ ಪಣ್ಗಳಿಂ ಪರಿಮಳದ್ರವ್ಯಂಗಳಿಂ ಭವ್ಯದಿಂ,
ಮೌನದಿಂ ಸಂಗ್ರಹಿಸಿದನು ಶಾಂತಿಯಂ.
ಇರ್ವರುಸಿರೆಳೆವ ಸದ್ದನಾಲಿಸಿದರ್ ಆ ಇರ್ವರುಂ.
ಒಯ್ಯೊಯ್ಯನೆಯೆ ಬಾಗಿದುದು ದೈತ್ಯೇಂದ್ರಮಸ್ತಕಂ.
ಕಯ್ಮುಗಿದನಯ್, ನಮಿಸಿದನ್ ಮನ್ಮಥಾರಿಗೆ ಮನ್ಮಥನ ಬಂಧಿ!

ರಾವಣ:
(ಮಂಡೋದರಿಯನ್ನು ಕುರಿತು)
ದೇವಿ, ನಿನ್ನರಕೆಯೇಂ?
ಬೆಂದಪಳಿಳಾರಮಣಿ ನಿನ್ನ ಬಿಸುಗಣ್ಬನಿಯ ಸೋಂಕಿಂಕೆ.

ಮಂಡೋದರಿ:   
(ಭಾವೋದ್ವೇಗದಿಂದ)
ಸತಿಗರಕೆಯೇಂ, ಜೀವೇಶ?
ಪತಿಹೃದಯಮಂ ಪಡೆವುದಲ್ಲದೆಯೆ ಬೇರಾವುದು ಅರಕೆ?

ರಾವಣ:   
ಲೇಸಲ್ತೆ; ಸೋಜಿಗದರಕೆ!

ಮಂಡೋದರಿ:   
ತನ್ನೊಡಲಿಚಳ ಕಣ್ಣ ಪನಿಗಿಡಿಗೆ ಬೆಂದ ತಾಯ್ ಮರವಟ್ಟಿಹಳ್;
    ನನ್ನ ಕಂಬನಿ ಬಿಸುಪನೆಂತು ಅವಳ್ ತಿಳಿವಳಿನ್?...

ರಾವಣ:   
ನಿನ್ನವನೆ ನಾನೇಗಳುಂ.

ಮಂಡೋದರಿ:   
ಅಯ್ಯೊ ಆ ಪುಣ್ಯಮೆಂದಿಂಗೊ!

ರಾವಣ:
ಮತ್ತೆಮತ್ತದೆ ಕೊರತೆ!
ಗ್ರಹದ ನಿಷ್ಠೆಯನೇಕೆ ನಿಷ್ಠೆಮಾಡುವೆ ರವಿಗೆ, ರಾಜ್ಞಿ?
ರಾವಣನೊಲ್ಮೆ ಸಂಪೂರ್ಣಂ ಏಗಳುಂ;
ಪಚ್ಚುಗೊಂಡುದರಿಂದಮೇಂ ಅದಕೆ ಇನಿತು ಅಪೂರ್ಣತೆಯ ಕೊರೆಯಿಲ್ಲ;
ಕರೆ ಸಲ್ಲ.

ಮಂಡೋದರಿ:  
(ರಾವಣನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕಠಿಣವಾಗಿ)
    ಉಸಿರುಸಿರಿನಲಿ ಬೆಸೆದು
    ಒಲಿದೆದೆಗಳಂ ಕಿಳ್ತೆಳೆದು ತಂದು
    ಯುಕ್ತಿಯನಿಂತು ಗಳಪುವರೆ, ನಿಶಿತಮತಿ?
    ಹದಿಬದೆಯ ಹೃದಯದುರಿ ಲಂಕೆಯಂ ದಹಿಸದೆ?
    ಕುಲಕ್ಷಯಕೆ ಕೂಣಿಯೊಡ್ಡಿದೆ ಮಿಳ್ತು!...

ರಾವಣ:   
     ಮತ್ತೆಮತ್ತದೆ ಮಾತು!
    ಹದಿಬದೆಯ ಹೃದಯದುರಿ?
    ಪುಸಿಮನೆಗೆ ಪುಸಿಗೋಡೆ!...

ಮಂಡೋದರಿ:   
ಪ್ರಾಣೇಶ, ದೈತ್ಯೇಂದ್ರ,
    ಮತ್ತೊರ್ವನಿದ್ದಿದ್ದರೆ ಈ ತೆರನ ರಾವಣಂ
    ನಿನಗೆ ಹದಿಬದೆಯರಿರ್ಪುದಂ,
    ಹದಿಬದೆತನದ ಹಿರಿಮೆಯಂ ತೋರುತಿರ್ದಳ್,
    ನಿನ್ನ ಈ ಮಯನ ಮಗಳಬಲೆ!

    (ಆ ದಿಟ್ಟ ನೋಟಕ್ಕೆ, ಆ ದನಿಯ ದಾರ್ಢ್ಯಕ್ಕೆ, ಆ ಧರ್ಮ ಧೈರ್ಯಕ್ಕೆ ದನುಜನೆದೆ ಇನಿತು ಅಳುಕಿ ಧಿಗಿಲೆಂದುದು. ಶಿವನ ಸನ್ನಿಧಿ ಮಹಿಮೆ ಶಿವಮಂ ಪ್ರಚೋದಿಸಿತ್ತು ಎನೆ)
ರಾವಣ:    ದೇವಿ, ಕರುಣಿಸು ಉಪಸಂಹರಿಸು ದಿಟ್ಟಿಸಿಡಿಲಂ.
    ರಾವಣಗೆ ಜಗಪಾಲ ದಿಗುಪಾಲರಾಟೋಪದಾಗ್ರಹಂ ಸೀರ್ಪುಲ್ಗೆ ಸಾಟಿ;
    ದಿಟಮಾದೊಡಂ, ನಿನ್ನೊಲ್ಮೆ ಹುಬ್ಬುಗಂಟಿಕ್ಕಿ ಧೈರ್ಯಚ್ಯುತಂ,
    ದೆಸೆಗೇಡಿ, ತಾನ್ ಪರದೇಶಿ, ಮೇಣ್ ಶೂನ್ಯಚಿತ್ತನ್!
    ನೀನೆನಗೆ ಶಾಂತಿ ಸತ್ತ್ವಂ ಆತ್ಮಂ;
    ನೀನೆನಗೆ ತುತ್ತತುದಿಯಾಸೆ, ನೆಲೆ, ನೆಚ್ಚು, ಸೈಪು!
    ದೇವನೆ ಪೇಸಿ ಬಿಟ್ಟೊಡಂ ಕೆಟ್ಟನಲ್ಲೆನ್;
    ಪ್ರೇಮಮಯಿ ನೀಂ ತೊರೆಯೆ, ಅಯ್ಯೊ ಶೂನ್ಯನೆಂ.
    ಬಲ್ಲೆ ಈ ಎನ್ನ ದೌರ್ಬಲ್ಯಮಂ.
    ಲೋಕಮಂ ಜಯಿಸಿದಾನ್
    ನನ್ನ ಇಂದ್ರಿಯಂಗಳಿಗೆ ದಾಸನೆಂದರಿವೆನ್ ಆನ್ ಇತರರೋಲ್.
    ಕೇಳಾದೊಡಂ,
    ನಿನ್ನ ಮುಂದಲ್ಲದೆ ಅನ್ಯರ ಮುಂದೆ ತಪ್ಪನೊಪ್ಪಲ್ ದೊರೆತನಕೆ ಕೀಳ್;
    ಮೇಣ್ ಪೆರ್ಮೆಗೆ ಅವಹೇಳನಂ;
    ನಿನ್ನೊಂದು ಪೆಂಪಿಗೆ ಅವಮಾನಮೆಂದು ಆಂ, ದೇವಿ,
    ಅನ್ಯರಿಂ, ಕೀಳ್ಗಳಿಂ, ನಾಯ್ಗಳಿಂ,
    ನನ್ನಾತ್ಮದ ಒಳತೋಟಿಯಂ ಹುದುಗಿಸಿಹೆನ್.
    ಪೇಳ್ವೆನಾಲಿಸಾ:
    ಸೀತೆಯಂ ತಂದಂದಿನಿಂ ಮನಕೆ ಕಳವಳಂ.
    ಹೆದರಿಕೆಯನ್ ಆನರಿಯೆನಾದೊಡಂ, ಮನಕೇನೊ ಅಶಾಂತಿ.
    ಒಮ್ಮೊಮ್ಮೆ ಕೆರಳುತ ಇಂದ್ರಿಯ ತೃಷ್ಣೆ ಕಾತರಿಸುತಿದೆ;
    ಮತ್ತಂ ಒಮ್ಮೊಮ್ಮೆ, ನಿನ್ನೊಂದು ತಪದ ಫಲಮೆಂಬಂತೆ,
    ತೃಷೆಯ ಮನ್ಮಥ ರಥದ ತೇರ್ಗಾಲಿಯಂ ಬಿರಿಯೊತ್ತಿ ತಡೆಯುತಿದೆ ಶಿವಮ್.
(ಮುಂದೆ ನುಡಿದೋರಲಾರದೆ ಮೌನದಿಂ ಬಾಗಿ ನಿಲ್ಲುತ್ತಾನೆ)

ಮಂಡೋದರಿ:   
(ಆತನಂ ಕರುಣೆಯಿಂ, ಪ್ರೀತಿಯಿಂ ಮತ್ತೆ ಪ್ರಾರ್ಥನಾಮಯ ನಯನದಿಂ ನೋಡುತ)
    ಜಾನಕಿಯೆಲ್ಲಿ? ನೋಳ್ಪೆನ್ ಆನ್ ಆಕೆಯಂ.

ರಾವಣ:
(ಬೆಚ್ಚಿ) ಆಗದಾಗದು!
ಮಂಡೋದರಿ:    ಏಕೆ?
ರಾವಣ:   
ನಿನ್ನ ದರ್ಶನದಿಂದೆ ಪಾಣ್ಬೆಗಕ್ಕುಂ ಮಹಾಪತಿವ್ರತೆಯ ದೃಢತೆ;
    ಸೀತೆಯ ಮಾತದಂತಿರ್ಕೆ!

ಮಂಡೋದರಿ:   
ಸತಿಯನಾರುಪಸೇವಿಪರ್?

ರಾವಣ:   
ತಂಗೆಯಿಹಳದಕೆ.

ಮಂಡೋದರಿ:   
(ಮಂಡೋದರಿಗೆ ಮೊಗಂ ಗಂಟಿಕ್ಕಿದುದು; ಸುಯ್ದು)
    ಸೊಸೆಯನಾದೊಡಂ ಅದಕೆ ನೇಮಿಸಿರ್ದೊಡೆ?

ರಾವಣ:   
ಏನೇನ್, ತಾರಾಕ್ಷಿಯನೆ?
    ಮರೆತೆಯೇನ್? ಆಕೆ ತಾನಿಂದ್ರಜಿತು ದಯಿತೆ!

ಮಂಡೋದರಿ:   
ಸೀತೆಯುಮವನಿಜಾತೆ; ರಾಮನ ದಯಿತೆ!

ರಾವಣ:   
(ಅನಿಷ್ಟಮಂ ಕೇಳ್ದವೋಲ್ ಅಸುರಂ ಮನಂ ಮುರಿದು ಕಡುಕಿನಿಸಿ)
    ನನ್ನಿಂದೆ ಕದ್ದೊಯ್ದಳಂ ಮರಳಿ ತಂದೆನಾಂ ಗೆಲ್ದು!

ಮಂಡೋದರಿ:   
ಪೆಣ್ಗೆ ತನುವಲ್ತು ಹೃದಯಂ!

ರಾವಣ:   
ತನುವಿನಂಶಮೆ ಹೃದಯಂ!
    ಅದರ ಬೆಂಬಳಿಯೊಳಿದು ಸೋಲ್ಪುದು ಇಂದಲ್ಲದಿರೆ ನಾಳೆ!

ಮಂಡೋದರಿ:   
ಶಿವಕೃಪೆಯಿಂದೆ, ಕೇಳ್, ಪುಸಿಗೈವಳಾ ಭ್ರಾಂತಿಯಂ ಸೀತೆ!

ರಾವಣ:   
ನನ್ನಿಚ್ಛೆ ಸೋಲ್ಗೆ;
    ಹದಿಬದೆ ಗೆಲ್ಗೆ; ನಿನ್ನಾಸೆಯುಂ ಸಲ್ಗೆ:
    ಬಲದಿನಲ್ಲದೆ ಸೋಲೆನಭ್ಯುದಯಕಾದೊಡಂ!
    (ಪ್ರಸಾದಮನಿತ್ತು ಕಯ್ಮುಗಿದಳಾಣ್ಮಂಗೆ ಮಂಡೋದರಿ. ಪಣೆಗೊತ್ತಿಕೊಂಡದಂ)
    ನೀಂ ಮಹಿಮಳಾನಲ್ಪನೆಂ, ದೇವಿ.
    ನಿನ್ನೊಳ್ಪು ಶಿಕ್ಷಿಸಲಿ ರಕ್ಷಿಸಲಿ ಧನ್ಯನಾಂ!
    ದೇವಂಗಾಂ ಕಯ್ಮುಗಿಸಿಕೊಳ್ವಂಗೆ ಕಯ್ಮುಗಿಸಿಕೊಳುವನಿರೆ
    ಲೇಸೋರ್ವನಾದೊಡಂ!
    (ಎಂದರ್ಧ ಹಾಸ್ಯಮಂ ನಟಿಸುತಿರ್ದೊಡಮಮಿತ ಗಂಭೀರ ಮುದ್ರೆಯಿಂ ದಿಂಡುಗೆಡೆದನ್ ದಂಡದೊಲ್ ಚಂದ್ರಚೂಡಂಗೆ.)

ಮೇಳ:   
ಆ ಜಗಜ್ಜಯಿ ದೈತ್ಯ ಚಕ್ರೇಶನಂತಲ್ಲಿ
    ಸಾಷ್ಟಾಂಗದಿಂ ನಮಸ್ಕರಿಸಿರ್ದ ದೃಶ್ಯಮಂ ಕಂಡು
    ಮಂಡೋದರಿಗೆ ಮೊಳೆತುದು ಮನಶ್ಶಾಂತಿ !
(ಕುವೆಂಪು ಶ್ರೀರಾಮಾಯಣ ದರ್ಶನಂ ಸಂಸ್ಕೃತಿ ಲಂಕಾ ಸಂಚಿಕೆಯ ಇನ್ನೊಂದು ಪ್ರಯೋಗಾರ್ಥ ರೂಪ)