Wednesday, March 25, 2009

‘ಯುಗಾದಿ’ಯ ಕವಿತೆಗಳು

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಬೇವು ಬೆಲ್ಲ ತಿಂದು, ಹೋಳಿಗೆಯ ಊಟ ಮಾಡಿ ಮುಂದಿನ ಯುಗಾದಿಯವರೆಗಿನ ಬದುಕಿಗೆ ಕನಸುಗಳ ತೋರಣ ಕಟ್ಟೋಣ. ಯುಗಾದಿಯಂದು ಕನ್ನಡ ಕವಿಗಳ ಯುಗಾದಿ ಕವಿತೆಗಳನ್ನು ಓದಿ ನಲಿಯೋಣ.
ಯುಗಾದಿ ಕವಿತೆಗಳಿಗಾಗಿ ಹುಡುಕಾಟ ನಡೆಸಿದಾಗ ನನಗೆ ಸಮ್ಮತವೆನಿಸಿದ ಕೆಲವು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಕೆಲವು ಕವಿತೆಗಳು ನೇರವಾಗಿ ಯುಗಾದಿ ದರ್ಶನವನ್ನು ನಮಗೆ ಮಾಡಿಸುತ್ತವೆ. ಇನ್ನು ಕೆಲವು ಕವಿತೆಗಳು ಯುಗಾದಿಯನ್ನು ನೆಪವಾಗಿಟ್ಟುಕೊಂಡು ಬದುಕಿನ ವಿವಿಧ ಮಜಲುಗಳನ್ನು ಕಾಣುವ ಪ್ರಕ್ರಿಯೆಯಂತೆ ಭಾಸವಾಗುತ್ತವೆ. ಇದು ನನ್ನ ಅನಿಸಿಕೆ. ನೀವೊಮ್ಮೆ ಓದಿ ನಿಮ್ಮ ಅನಿಸಿಕೆಗಳನ್ನು ನನಗೆ ತಿಳಿಸಿದರೆ ಸಂತೋಷ.
ಮತ್ತೊಮ್ಮೆ ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ವರಕವಿ ದ.ರಾ. ಬೇಂದ್ರೆಯವರ ‘ಯುಗಾದಿ’

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!
(ಕೃಪೆ: ಔದುಂಬರ ಗಾಥೆ, ಸಂಪುಟ-೪. ಸಂಪಾದಕರು: ವಾಮನ ಬೇಂದ್ರೆ)

ರಸಋಷಿ ಕುವೆಂಪು ಅವರ ‘ಯುಗಾದಿ’


ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!
(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)

ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ‘ಯುಗಾದಿ’
ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿ ಮಾಡಿ
ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;
ಉಟ್ಟ ಸೀರೆ ಸಾಗರ.
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ.

‘ಯುಗಾದಿ ‘೮೭’ ಕವನದ ಎರಡು ಪದ್ಯಗಳು

ಹೊಸ ವರುಷ ಬಂತು ಮಾಂದಳಿರಿನಲ್ಲಿ,
ಮುಗಿವಿರದ ಚೆಲುವಿನಲ್ಲಿ,
ಹೂಬಿಸಿಲಿನಲ್ಲಿ, ಉಪವನಗಳಲ್ಲಿ,
ಎದೆ ತುಂಬಿದೊಲವಿನಲ್ಲಿ.

ಹೊಸ ವರುಷ ಬಂತು! ನಾನಿಲ್ಲಿ ನಿಂತು
ಹಾಡೊಂದ ನೂಲುತಿಹೆನು.
ಅಲ್ಲೊಂದು ಹಕ್ಕಿ ಇಲ್ಲೊಂದು ಹೂವು!-
ನಾನವನು ನೋಡುತಿಹೆನು.
(ಕೃಪೆ: ಮಲ್ಲಿಗೆಯ ಮಾಲೆ)

ಪು.ತಿ.ನರಸಿಂಹಚಾರ್ ಅವರ ‘ಹೊಸ ವರುಷ ಬಹುದೆಂದಿಗೆ’ ಕವಿತೆಯ ಎರಡು ಪದ್ಯಗಳು
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ-

ಜಾಣ ಜಿತೇಂದ್ರಿಯ ಧಿರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ
(ಕೃಪೆ: ಪುತಿನ ಸಮಗ್ರ ಕವನಗಳು)

ಗೋಪಾಲಕೃಷ್ಣ ಅಡಿಗರ ‘ಯುಗಾದಿ’ ಕವಿತೆಯ ಎರಡು ಪದ್ಯಗಳು
ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;
ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ
ಕೊಳೆಯ ಬೆಳೆ;- ರಂಗಮಂದಿರವು!

ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ
ಮೊದಲಾಗುತ್ತಿದೆ ಯುಗವು, ನರನ ಜಗವು;
ವರುಷವರುಷವು ನಮ್ಮ ಪಯಣ ಮೊದಲಾಗುತ್ತಿದೆ;
ಇದಕು ಮಿಗಿಲಿಲ್ಲ, ಹಾ, ನರಗೆ ಸೊಗವು!
(ಕೃಪೆ: ಸಮಗ್ರ ಕಾವ್ಯ)

ಕೆ.ಎಸ್.ನಿಸಾರ್ ಆಹಮದ್ ಅವರ ‘ವರ್ಷಾದಿ’


ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.

ಹೊಸ ಬಟ್ಟೆಯ ತೊಟ್ಟು ಚೈತ್ರ
ಜಲದರ್ಪಣ ಮಗ್ನ ನೇತ್ರ
ಮುಗಿಲಿನ ಪಂಚಾಂಗ ತೆರೆಸಿ
ಕುಳಿತಿಹ ಫಲ ತಿಳಿಯ ಬಯಸಿ.

ಬೆವರ ಹೀರಿ ಬೆಳೆದ ಪೈರು
ಕಣಕಣದಲಿ ಹೊನ್ನ ತೇರು.
ಕಣಜ ತುಂಬಿ ತುಳುಕಿ ಹಿಗ್ಗಿ
ನಾಡಿಗೊದಗಿ ಬಂತು ಸುಗ್ಗಿ.

ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲವ ಗೀತೆ.

ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.

‘ಯುಗಾದಿ:೧೯೯೦’ ಕವಿತೆಯ ಎರಡು ಪದ್ಯಗಳು

ಹಳೆ ಯುಗಾದಿಯ ಹಾದಿ ಈ ಯುಗಾದಿಯು ಹಿಡಿದು
ಏರಿದೆ ಭವಾದ್ರಿಯನು ಏದಿ, ಏದಿ.
ಯಾವ ಉಡುಗೊರೆ ಜಗಕೆ ನೀಡಲಿಹುದೋ ಕಾಣೆ
ಪ್ರಮೋದೂತ ನಾಮದ ಸ್ವೈರತಾಮೋದಿ.

ಚೈತ್ರ ಮಾಂತ್ರಿಕ ಸ್ಪರ್ಶಕೆಲ್ಲ ಉದ್ಯಾನವನ
ಪಲ್ಲವಿಸಿ, ಕರೆಯೋಲೆ ಕಳಿಸುವಂತೆ-
ಸೌಭಾಂಗ್ಯ ಪಕ್ಷಿಕುಲ ಪ್ರತಿ ಬಾಳ್ವೆಯಲಿ ಸಂದು
ಹೊಸ ವರ್ಷ ನೆರೆಸಿರಲಿ ಸೊಗದ ಸಂತೆ.
(ಕೃಪೆ: ಸಮಗ್ರ ಕವಿತೆಗಳು)

ಜಿ.ಎಸ್.ಶಿವರುದ್ರಪ್ಪ ಅವರ ‘ಯುಗಾದಿಯ ಹಾಡು’


ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಟ್ಷಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರ ಚಿಗುರಿನಂದದ
ಮಂದಹಾಸವೆ ಉಳಿಯಲಿ.

‘ಯುಗಾದಿಯ ಪ್ರಶ್ನೆಗಳು’ ಕವಿತೆಯ ಒಂದು ಪದ್ಯ

ನಾನು, ನನ್ನಪ್ಪ, ಅವರಪ್ಪನಪ್ಪ,
ಮಗ, ಮೊಮ್ಮೊಗ, ಮರಿಮಗ, ಗಿರಿಮಗ
ಈ ಗಿರಿಗಿರಿ ತಿರುಗವೀ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ?
(ಕೃಪೆ: ಸಮಗ್ರ ಕಾವ್ಯ)

ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಯುಗಾದಿ’


ನಾವು ನಮ್ಮೂರಿಂದ
ನಿಮ್ಮ ಊರಿಗೆ ಹೊರಟ ದಾರಿಯಲ್ಲಿ
ಇದು ಒಂದು ಮೈಲಿಗಲ್ಲು!
ಸಿರಿವಂತ ಕಾರಿನಲಿ,
ಬಡವ ಬರಿಗಾಲಿನಲಿ
ನಡೆದು ಬಂದುದು ಇದೇ ದಾರಿಯಲ್ಲಿ!

ಇಂಥ ಒನ್ ವೇ ಟ್ರಾಫಿಕ್ಕಿನಲ್ಲಿ
ಕಲ್ಲು ಹೂಗಳ ಚೆಲ್ಲಿ,
ಮುಳ್ಳು ಮರಗಳ ನೆಟ್ಟು,
ಅದರ ನಡುವೆಯೆ ಮಧುರ ಸವಿಜೇನ ಹಲ್ಲೆಗಳ
ಜೋಲಿಯಾಡಲು ಬಿಟ್ಟು,
ದಾರಿಯಲಿ ಅಲ್ಲಲ್ಲಿ,
ಗುಂಡಿಗಳ ತೋಡಿ,
ಮೇಲೆ ಹುಲ್ಲನು ಹಾಸಿ
ಜೀವಿಗಳ ಖೇಡ್ಡಾ ನೋಡುವ ಸಾರಿಗೇ ಸಂಸ್ಥೆಯ ಒಡೆಯ
ಯಾರೆಂಬುದೇ ಯಾರೂ ಅರಿಯದಂತಹ ಗುಟ್ಟು!
ಅದು ರಟ್ಟಾಗದಂತೆ
ಮುಂದೆ ಇಬ್ಬನಿ ತುಂಬಿ ದಟ್ಟವಾಗಿದೆಯಂತೆ!

ಇಷ್ಟು ದೂರವ ಹೇಗೋ ನಡೆದು ಬಂದೆವು ನಾವು.
ನಮ್ಮ ಕಣ್ಣೆದುರಿಗೇ ಬಿದ್ದವರು ಬಿದ್ದರು.
ಬಿಸಿಲಿನಲಿ, ಮಳೆಯಲ್ಲಿ
ರಾತ್ರಿಯಲಿ ಹಗಲಲ್ಲಿ
ನಡೆದಿದ್ದೆ ನಡೆದಿದ್ದು
ಹತ್ತಿದ್ದು, ಇಳಿದಿದ್ದು,
ಮುಗ್ಗುರಿಸಿ ಬಿದ್ದು ಎದ್ದದ್ದು,
ಹೊಸ ಹೊಣೆಯ ಹೆತ್ತದ್ದು, ಹೊತ್ತದ್ದು,
ಮಳೆಯಲ್ಲಿ ನೆಂದು ಬಿಸಿಲಲ್ಲಿ ಒಣಗಿ

ಆದರೂ ಹೆಣಗಿ
ಮುಳ್ಳು ಮರದಡಿಯೇ ತುಸು ಮಲಗಿ
ಮಗುವಾಗಿ
ಆತ್ತು ನಕ್ಕಿದ್ದು!

-ಎಲ್ಲಾ ಇಂದು ಹೆಗಲ ಮೇಲಿನ ಗಟ್ಟಿ ಪೆಟ್ಟಿಗೆಯ ತಳದಲ್ಲಿ ನುಸಿ ಹಿಡಿದು ನವೆಯುತ್ತ
ಅಲ್ಲೊಂದು ಇಲ್ಲೊಂದು ಉಳಿದಿದ್ದು!
ಹಳೆಯ ಫೈಲಿನ ಮಸುಕು ಹಾಳೆಯಂತೆ.

ಮಂಜು ಆವರಿಸಿರುವ ಮುಂದಿರುವ ದಾರಿಯಲಿ
ನಡೆದವರೆ ಇಲ್ಲ!
ಇನ್ನು ನಡೆ-ನಡೆದಂತೆ ಹೆಜ್ಜೆ-ಹೆಜ್ಜೆಯ ಗುರುತು
ಹೂವಾಗಿ ಅರಳಬೇಕು!
ಅಥವಾ-
ಹಾವಾಗಿ ಹೊರಳಬೇಕು!

ಬಗೆಬಗೆಯ ಆ ಗುರುತ
ನನ್ನ ಕೈ ಕ್ಯಾಮರದಿ ಹಿಡಿಯಬೇಕು!
ಅದಕಾಗಿಯೇ ನೀವು, ನಾವು ಅವರೂ ಕೂಡ
ಮುಂದೆ ಸಿಗಬಹುದಾದ ಮೈಲುಗಲ್ಲಿನವರೆಗೆ
ನಡೆಯಬೇಕು!
(ಕೃಪೆ: ಮೂವತ್ತು ಮಳೆಗಾಲ, ಸಂಪುಟ-೧)

16 comments:

ತೇಜಸ್ವಿನಿ ಹೆಗಡೆ said...

ನಿಮಗೂ ಹಾರ್ದಿಕ ಶುಭಾಶಯಗಳು. ಯುಗಾದಿಗೆ ಅದ್ಭುತ ಕವಿತೆಗಳ ರಸದೌತಣವನ್ನೇ ಇತ್ತಿದ್ದೀರಿ ನಮಗೆಲ್ಲಾ. ತುಂಬಾ ಧನ್ಯವಾದಗಳು. ಎಲ್ಲಾ ಕವಿತೆಗಳೂ ಅಪೂರ್ವವಾಗಿವೆ. ಆದರೂ ಅದೇಕೋ ಎಂತೋ ಎಲ್ಲಕ್ಕಿಂತಲೂ ಹೆಚ್ಚು ಸುಲಲಿತ, ಸುನೀತ, ಸರಳ, ಆಪ್ತವೆನಿಸುವುದು ಬೇಂದ್ರೆಯವರ "ಯುಗ ಯುಗಾದಿ ಕಳೆದರೂ.." ಕವಿತೆಯೇ.
ಅಂದಹಾಗೆ ಈ ಕವಿತೆಯ ಮೊದಲ ಸಾಲಿನ ಮೊದಲ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿದೆ. ಗಮನಿಸಿ.

sunaath said...

ಕನ್ನಡ ಕವಿಗಳ ಯುಗಾದಿ ಸಂಭ್ರಮವನ್ನು ತೋರಿಸಿದ ನಿಮಗೆ ಅನೇಕ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಯುಗಾದಿಗೆ ನಮ್ಮ ಕವಿಗಳ ಅಮೃತ ವಾಣಿಯನ್ನು ನೀಡಿರುವಿರಿ. ಇದೇ ರೀತಿ ಪ್ರತಿ ಹಬ್ಬಕ್ಕೂ ನಮ್ಮ ಕವಿಗಳ ಕವನಗಳನ್ನು ಪ್ರಕಟಿಸಿ. ಒಂದೇ ವಿಷಯವನ್ನು ಕವಿಗಳು ಯಾವಯಾವ ರೀತಿ ಯೋಚಿಸುತ್ತಿದ್ದರೆಂದು ಅರಿವಾಗುತ್ತದೆ. ಆ ಮೂಲಕ ಕವಿಮನಸ್ಸುಗಳನ್ನು ಸ್ಪರ್ಶಿಸೋಣ.

ಸಾಗರದಾಚೆಯ ಇಂಚರ said...

ವಾರೆವಾ,
ಯುಗಾದಿಯ ವಿವಿಧ ಕವಿತೆಗಳನ್ನು ಉಣಿಸಿದ್ದಿರ, ಕೆಲವೊಂದು ಕವಿತೆಗಳನ್ನು ನಾನು ಹುಡುಕುತ್ತಿದ್ದೆ. ಎಲ್ಲ ಕವಿಉತೆಗಳನ್ನು ಓದಲು ಸಂತಸವಾಗುತ್ತದೆ. ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

ಬಿಸಿಲ ಹನಿ said...

ಸತ್ಯನಾರಾಯಣ ಸರ್,
ಯುಗಾದಿ ಹಬ್ಬದ ಬಗ್ಗೆ ಬೇಂದ್ರೆ ಮತ್ತು ಕುವೆಂಪುರವರು ಬರೆದಿರುವ ಪದ್ಯಗಳನ್ನು ಬಿಟ್ಟರೆ ಬೇರೆಯವರು ಬರೆದಿರುವ ಪದ್ಯಗಳು ನನಗೆ ಗೊತ್ತಿರಲಿಲ್ಲ! ಈ ನಿಮ್ಮ ಲೇಖನ ನನಗೆ ತಿಳಿಯಪಡಿಸಿತು. ಚೆಂದನೆಯ ಪದ್ಯಗಳನ್ನು ಹೆಕ್ಕಿ ತಂದಿರುವಿರಿ. ನಿಮಗೆ ನನ್ನ ಹ್ಯಾಟ್ಸಾಫ್! ಹಾಗೂ ಯುಗಾದಿ ಹಬ್ಬದ ಶುಭಾಶಯಗಳು.

guruve said...

ಸತ್ಯನಾರಾಯಣ್ ರವರೆ,

ಹಲವು ಕವಿಗಳು ಯುಗಾದಿಯ ಬಗ್ಗೆ ಬರೆದ ಕವನಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಿದ್ದು ಬಹಳ ಪ್ರಶಂಸನೀಯ ಕೆಲಸ.
ಧನ್ಯವಾದಗಳು.

guruve said...

ಸಾರ್,

"ನಲ್ಲೂರು ಪ್ರಸಾದ ರ" ಈ ’ಯುಗಾದಿ’ ಕವನ ಅವರ ’ನವಿಲ ಜಾಗರ’ ದಲ್ಲಿ ಓದಿದ್ದೆ. ನೆನಪಾಯಿತು. ಇಲ್ಲಿ ಬರೆಯುತ್ತಿದ್ದೇನೆ.

ಬಾ ಯುಗಾದಿ ಬಾ
ನೂರು ಬಣ್ಣಗಳನು ಹೀರಿ
ಮುಗಿಲಿನೂರ ಸಾರ ಹೀರಿ
ಕಪ್ಪುಮೋಡ ವರ್ಣವಾಗಿ
ಗಿಡದ ಟೊಂಗೆ ಎಲೆಯ ಸಂದಿ
ಬಳ್ಳಿ ಬಳ್ಳಿ ಸಂದಿ ಗೊಂದಿ
ಬೆಳ್ಳಂ ಬೆಳಗು ಹೊಳೆದು ಬಾ
ವನದ ಹೂವೆ ಅರಳಿ ಬಾ
ಬೇವು ಮಾವು ಕೂಡಿ ಹಾಡಿ
ಭುವಿಯ ಜನರ ಚೆಲುವ ಹಾದಿ
ಬಾ ಯುಗಾದಿ ಬಾ
ಜೊತೆ ಜೊತೆಯಲಿ ಸರಸವಾಡಿ
ಮನದ ಖುಷಿಗೆ ಬಾಯಿಯಾಗಿ
ಬಾಗಿಲಿಗೆ ತೋರಣವಾಗಿ
ದುಗುಡವೆಲ್ಲ ಆಚೆ ದೂಡಿ ಬಾ
ಸುಳಿವ ಗಾಳಿಯಾಗಿ ಬಾ
ಯುಗದ ಆದಿ ಬಾರ ನೀರ
ವರ್ಷವಿಡೀ ಹರ್ಷ ತಾರ
ನೀನೆ ಬೇವು ನೀನೆ ಬೆಲ್ಲ
ಜಗದ ಸುಖವು ನೀನೆ ಎಲ್ಲ
ನಗುತ ನಲಿದು ಹಾಡೀ ಬಾ
ಮನುಕುಲಕೆ ಮುದವ ತಾ
ಭುವಿಯ ಜನರ ಚೆಲುವ ಹಾದಿ
ಬಾ ಯುಗಾದಿ ಬಾ

Unknown said...

ಮೇಡಂ ತೇಜಸ್ವಿನಿಯವರೆ, ಥ್ಯಾಂಕ್ಸ್. ನೀವು ಹೇಳಿರುವುದು ಸರಿ. ಮೊದಲ ಸಾಲಿನ ಕಾಗುಣಿತವನ್ನು ಸರಿಪಡಿಸುತ್ತೇನೆ.

Unknown said...

guruve ಸಾರ್
ನೀವೊಂದು ಕವಿತೆ ಸೇರಿಸಿದ್ದಕ್ಕೆ ಥ್ಯಾಂಕ್ಸ್, ಕನ್ನಡದಲ್ಲಿ ಇನ್ನೂ ಅನೇಕ ಯುಗಾದಿ ಕವಿತೆಗಳಿರಬಹುದು. ನನಗೆ ಹೆಚ್ಚಿನ ಹುಡುಕಾಟಕ್ಕೆ ಸಮಯವಿರಲಿಲ್ಲ. ನನಗೆ ಅಂತಹ ಯೋಚನೆ ಬಂದಾಕ್ಷಣ, ನನಗೆ ನೆನಪಿದ್ದ ಹಾಗೂ ನನ್ನ ಸಂಗ್ರಹದಲ್ಲಿ ಮತ್ತು ನಮ್ಮ ಗ್ರಂಥಾಲಯದಲ್ಲಿ ಸಿಕ್ಕಿದ ಪುಸ್ತಕಗಳಿಂದ ಮಾತ್ರ ಸಂಗ್ರಹಿಸಿ ಕೊಟ್ಟಿದ್ದೆ. ನಲ್ಲೂರರ ಕವಿತೆಯನ್ನು ಸೇರಿಸಿದ್ದಕ್ಕೆ ಧನ್ಯವಾದಗಳು

shivu.k said...

ಸತ್ಯನಾರಾಯಣ ಸರ್,

ಈ ಕನ್ನಡ ಕವಿಗಳ ಎಲ್ಲಾ ಕವನವನ್ನು ನಿಮ್ಮ ಬ್ಲಾಗಿನಲ್ಲಿ ಓದಿದ್ದೆ. ಅದ್ರೆ ಕಾಮೆಂಟಿಸಲಾಗಿರಲಿಲ್ಲ...ಬೇಂದ್ರೆ ಮತ್ತು ಕುವೆಂಪು ಬೇರೆಯವರ ಯುಗಾದಿ ಕವನಗಳನ್ನು ಇಲ್ಲಿ ನಮಗಾಗಿ ಕೊಟ್ಟಿದ್ದೀರಿ...ಧನ್ಯವಾದಗಳು..

haage summane... said...

nimagoo Ugaadiya Shubhaashayagalu. Nimma blog inda ondu picture matte Nisaar Ahmedra onderdu saalu eravalu padediddene...
dhanyavaadagalu...

Unknown said...

ನವಸಂವತ್ಸರ ಕವಿಸಾಹಿತ್ಯ ಸಂಕಲನಕ್ಕೆ ನವಯುವ ಜಗದೆಡೆಯಿಂದ ಹೊಸತನದ ಹೃತ್ಪೂರ್ವಕ ಧನ್ಯವಾದಗಳು..

Unknown said...

ನವಸಂವತ್ಸರ ಕವಿಸಾಹಿತ್ಯ ಸಂಕಲನಕ್ಕೆ ನವಯುವ ಜಗದೆಡೆಯಿಂದ ಹೊಸತನದ ಹೃತ್ಪೂರ್ವಕ ಧನ್ಯವಾದಗಳು..

Suresh said...

Hosa varusha aha Kannada Harsha Sada...

Unknown said...

ಯುಗಾದಿ ಹಬ್ಬದ ಶುಭಾಶಯಗಳು ಸರ್ ಇನ್ನೂ ಬೇರೆ ಬೇರೆ ಕವಿಗಳ ಕವಿತೆ ಯನ್ನೂ ಪ್ರಕಟಿಸಿ

Unknown said...

👍